ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾಯುವವರು ಹಲವರಾದರೆ ಕೊಲುವವ ಒಬ್ಬನೇ !

Image result for auto rickshaw on road photos

ಗೌರಿ.ಚಂದ್ರಕೇಸರಿ

         ಕೆಲ ದಿನಗಳ ಹಿಂದೆ ಮಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ಪೇಟೆಗೆಂದು ಹೊರಟಿದ್ದೆ. ಸ್ವಲ್ಪ ದೂರ ಕ್ರಮಿಸುವುದರಲ್ಲಿ ರಸ್ತೆಯ ಮಧ್ಯದಲ್ಲಿ ಹಾವೊಂದು ಕಂಡಿತು. ಆ ಬದಿಯಿಂದ ಈ ಬದಿಯ ರಸ್ತೆಯನ್ನು ಅದು ದಾಟುತ್ತಿತ್ತು. ತಕ್ಷಣವೇ ಸ್ಕೂಟಿಯನ್ನು ಬದಿಗೆ ನಿಲ್ಲಿಸಿದ್ದೆವು. ಎದುರು ಬದುರಿನಿಂದ ಬರುತ್ತಿದ್ದ ವಾಹನ ಸವಾರರು ಹಾವಿನ ಮೇಲೆ ವಾಹನಗಳನ್ನು ಹತ್ತಿಸದಂತೆ ಮಗಳು ಎಲ್ಲರ ಗಮನವನ್ನು ಹಾವಿನತ್ತ ಸೆಳೆಯುತ್ತಿದ್ದಳು. ಅದನ್ನು ಕಂಡ ವಾಹವ ಸವಾರರೆಲ್ಲ ತಮ್ಮ ವಾಹನಗಳ ವೇಗವನ್ನು ತಗ್ಗಿಸಿ ಹಾವಿಗೆ ಯಾವುದೇ ಹಾನಿಯಾಗದಂತೆ ಬದಿಯಿಂದ ಹೋಗುತ್ತಿದ್ದರು. ಇನ್ನು ಕೆಲವರು ಹಾವು ರಸ್ತೆ ದಾಟುವುದನ್ನು ಕುತೂಹಲದಿಂದ ವೀಕ್ಷಿಸುತ್ತ ನಿಂತಿದ್ದರು. ಅಷ್ಟರಲ್ಲಿ ಪ್ರಯಾಣಿಕರನ್ನು ಹೊತ್ತ ಆಟೋ ರಿಕ್ಷಾವೊಂದು ಅತೀ ವೇಗದಲ್ಲಿ ಬರುತ್ತಿತ್ತು. ತಕ್ಷಣ ಪರಿಸ್ಥಿತಿಯನ್ನು ಊಹಿಸಿದ ಆಟೋಚಾಲಕ ತನ್ನ ಸಮಯ ಪ್ರಜ್ಞೆಯನ್ನು ಮೆರೆದು ಆಟೋವನ್ನು ಅದೇ ವೇಗದಲ್ಲಿ ರಸ್ತೆಯಿಂದ ಕೆಳಗಿಳಿಸಿದ. ಆದರೆ ನಿಯಂತ್ರಣ ತಪ್ಪಿದ ಆಟೋ ರಸ್ತೆಯ ಪಕ್ಕಕ್ಕೆ ವಾಲಿಕೊಂಡು ಬಿಟ್ಟಿತು. ಆಟೋದಲ್ಲಿದ್ದ ಪ್ರಯಾಣಿಕರಿಗೆ ಹಾಗೂ ಚಾಲಕನಿಗೂ ಸಣ್ಣ ಪುಟ್ಟ ಗಾಯಗಳಾದವು. ಅಲ್ಲಿದ್ದ ಕೆಲವರು ಆಟೋವನ್ನು ಮೇಲಕ್ಕೆತ್ತಿ ಅದರಲ್ಲಿದ್ದವರನ್ನು ಉಪಚರಿಸುತ್ತಿದ್ದರು. ಅಷ್ಟರಲ್ಲಿ ಆ ಹಾವು ರಸ್ತೆಯ ಮುಕ್ಕಾಲು ಭಾಗವನ್ನು ದಾಟಿತ್ತು. ಅಷ್ಟರಲ್ಲಿ ವೇಗವಾಗಿ ಬಂದ ಬೈಕ್ ಸವಾರನೊಬ್ಬ ಇನ್ನೇನು ರಸ್ತೆಯಿಂದ ಕೆಳಗಿಳಿಯುತ್ತಿದ್ದ ಹಾವಿನ ಹಿಂಭಾಗದ ಮೇಲೆ ಬೈಕನ್ನು ಹತ್ತಿಸಿಕೊಂಡು ವೇಗವಾಗಿ ಹೋಗಿಬಿಟ್ಟ. ಗಾಯಗೊಂಡ ಹಾವು ಸ್ವಲ್ಪ ಹೊತ್ತು ಜೀವನ್ಮರಣದ ಜೊತೆ ಹೋರಾಡಿ ತನ್ನ ಪ್ರಾಣವನ್ನು ಬಿಟ್ಟಿತ್ತು. ಅಪಾಯವನ್ನೂ ಲೆಕ್ಕಿಸದೇ ಹಾವನ್ನು ಉಳಿಸಲೆಂದು ಆಟೋ ಸಮೇತ ಬಿದ್ದು ಗಾಯಗೊಂಡ ಚಾಲಕ ಒಂದು ಕಡೆಯಾದರೆ ಕಂಡೋ ಅಥವಾ ಕಾಣದೆಯೋ ಹಾವಿನ ಸಾವಿಗೆ ಕಾರಣನಾದ ಆ ಬೈಕ್ ಸವಾರ ಇನ್ನೊಂದು ಕಡೆ. ಒಂದು ಜೀವವನ್ನು ಕಾಯುವವರು ಹಲವರಾದರೆ ಅದೇ ಜೀವವನ್ನು ಕೊಲುವವ ಇನ್ನೊಬ್ಬ. ಅದಕ್ಕೇ ಹೇಳುವುದೇನೋ. ಕಾಯುವವ ಒಬ್ಬನಾದರೆ ಕೊಲುವವ ಇನ್ನೊಬ್ಬ ಎಂದು. ಕಾಪಾಡುವ ದೇವರುಗಳು ಎಷ್ಟೇ ಇದ್ದರೂ ಕುಣಿಕೆ ಹಾಕುವವ ಮಾತ್ರ ಒಬ್ಬನೇ ಎಂದು ಮನಸ್ಸು ಹೇಳುತ್ತಿತ್ತು. ಆ ಹಾವು ಸುರಕ್ಷಿತವಾಗಿ ರಸ್ತೆಯನ್ನು ದಾಟಲು ಅಲ್ಲಿದ್ದವರೆಲ್ಲ ಮಾಡಿದ ಪ್ರಯತ್ನವೆಲ್ಲ ನಿರರ್ಥಕವಾಗಿತ್ತು.


About The Author

Leave a Reply

You cannot copy content of this page

Scroll to Top