ಭಾಷೆ
ಭಾಷಾ ಮಾಧ್ಯಮವಲ್ಲ, ಶೈಕ್ಷಣಿಕ ವ್ಯವಸ್ಥೆಯೇ ಬದಲಾಗಬೇಕು! ಡಿ.ಎಸ್.ರಾಮಸ್ವಾಮಿ ಕರ್ನಾಟಕವನ್ನು ಕಾಡುತ್ತಿರುವ ಹಲವು ಸಮಸ್ಯೆಗಳ ನಡುವೆ ಭಾಷೆ, ಭಾಷಾ ಮಾಧ್ಯಮ, ಭಾಷೆಯ ಬಳಕೆ ಮತ್ತು ಕನ್ನಡ ಭಾಷೆಯ ಅಭಿವೃದ್ಧಿಯ ಮಾತುಗಳ ಸುತ್ತ ಹಬ್ಬಿಕೊಂಡಿರುವುದು ಭಾವನಾತ್ಮಕ ಅಂಶಗಳಾಗಿರುವುದರಿಂದ ಈ ವಿಷಯವನ್ನು ಕುರಿತಂತೆ ಹೊಸ ಚಿಂತನೆಗಳೇ ಸಾಧ್ಯವಾಗದ ಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮನ್ನು ಕಾಡುತ್ತಿರುವ ನದಿ ನೀರಿನ ವಿಚಾರವೂ ಭಾವನಾತ್ಮಕವಾಗಿಯೇ ನಮ್ಮನ್ನು ಇಕ್ಕಟ್ಟಿಗೆ ತಳ್ಳಿರುವ ಸತ್ಯ ನಮ್ಮ ಮುಂದೆ ಢಾಳಾಗಿಯೇ ಇದೆ. ಈ ನೆಲದಲ್ಲಿ ತೀವ್ರ ಸ್ವರೂಪದ ಆಂದೋಲನಗಳೇನಾದರೂ ನಡೆಯುವುದಾದರೆ ಅದು ಕನ್ನಡ-ಕನ್ನಡತನ ಮತ್ತು ಕನ್ನಡ-ಕನ್ನಡಿಗರ ಉಳಿವು ಈ ವಿಷಯಗಳ ನಡುವೆಯೇ ನಡೆದಿದೆ, ನಡೆಯುತ್ತಿರುತ್ತದೆ. ಇಂದಿಗೂ ಕಾಗೋಡು ಸತ್ಯಾಗ್ರಹವನ್ನು ಹೊರತುಪಡಿಸಿದರೆ ಕನ್ನಡಿಗರಿಗೆ ನೆನಪಾಗುವುದು ಗೋಕಾಕ್ ಚಳುವಳಿ ಮಾತ್ರ. ೧೯೭೦ರ ದಶಕದ ದಲಿತ, ಬಂಡಾಯ ಮತ್ತು ಎಡಪಂಥೀಯ ಚಳುವಳಿಗಳು ಎಷ್ಟೇ ಪ್ರಖರವಾಗಿ ನಮ್ಮ ಮೇಲೆ ಪ್ರಭಾವಿಸಿದ್ದರೂ ಅವುಗಳು ನಮ್ಮ ಮನಸ್ಸಿನಿಂದ ಈಗಾಗಲೇ ಮಾಸಿಹೋಗುತ್ತಿವೆ. ಆದರೆ ಕನ್ನಡಪರ ಹೋರಾಟಗಳ ಕಾವು ಸದಾ ಕಾಡುತ್ತಲೇ ಇರುತ್ತದೆ. ಭಾಷೆಯ ಬಾಂಧವ್ಯದ ಸುತ್ತ ನಾವು ನಿರ್ಮಿಸಿಕೊಂಡಿರುವ ವಲಯದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಭಾಷೆಯ ವಿಭಿನ್ನ ಆಯಾಮಗಳನ್ನು ಹಾಗೂ ಭಾಷೆಯ ಬಳಕೆಯ ಸುತ್ತಲಿನ ಭಾವನಾತ್ಮಕ ಪ್ರಪಂಚವನ್ನು ಬಳಸಿಕೊಳ್ಳುತ್ತಿರುವ ಸಂಘಟನೆಗಳ ಸಂಖ್ಯೆ ನೂರಾರು. ಕನ್ನಡ ಭಾಷೆ ಅವಸಾನ ಹೊಂದುತ್ತಿದೆ ಎಂಬ ಮಿಥ್ಯೆಯನ್ನು, ಕನ್ನಡ ಭಾಷೆಯ ಬಳಕೆ ಕ್ಷೀಣ ಸುತ್ತಿದೆ ಎಂಬ ಭ್ರಮೆಯನ್ನು ಜನಮಾನಸದಲ್ಲಿ ಸೃಷ್ಟಿಸಿ ತಮ್ಮ ಕನ್ನಡತನವನ್ನು ಅಥವಾ ವೀರ ಕನ್ನಡಿಗ ಪರಂಪರೆಯನ್ನು ವೈಭವೀಕರಿಸಿಕೊಳ್ಳುವ ವೇದಿಕೆ-ಸಂಘ-ಸಂಸ್ಥೆಗಳೇ ಈ ಕಾಲದ ಗೊಂದಲಗಳ ಮೂಲ ಕಾರಣ. ಕನ್ನಡ ಮಾಧ್ಯಮ-ಆಂಗ್ಲ ಮಾಧ್ಯಮದ ನಡುವಿನ ಚರ್ಚೆ ಇಂದು ನೆನ್ನೆಯದಲ್ಲ. ಮೈಸೂರು ರಾಜ್ಯದ ನಂತರ ಉದಯವಾದ ಅಖಂಡ ಕರ್ನಾಟಕದ ಕಾಲದಿಂದಲೂ ಇದು ನಡೆಯುತ್ತ ಬಂದಿದೆ. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬೋಧಿಸುವ ಸರ್ಕಾರದ ದೃಢ ನಿರ್ಧಾರಕ್ಕೀಗ ಉಚ್ಛ ನ್ಯಾಯಾಲಯದ ತಪರಾಕಿ ತಟ್ಟಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಕರ್ನಾಟಕದಲ್ಲಿ ಕನ್ನಡವನ್ನಷ್ಟೇ ಮಾತೃ ಭಾಷೆಯೆಂದು ಪರಿಗಣಿಸಲಾಗದೆಂಬ ನ್ಯಾಯಾಲಯದ ಮಾತಿಗೆ ಸಹಜವಾಗಿಯೇ ಕನ್ನಡ ಪರ ಮನಸ್ಸುಗಳು ಕೆರಳಿವೆ. ಏಕೆಂದರೆ ಇಲ್ಲಿ ಭಾವನೆಗಳಷ್ಟೇ ಸಕ್ರಿಯವಾಗಿವೆಯೇ ವಿನಾ ವಾಸ್ತವತೆ ಹಿಂದೆ ಸರಿದಿದೆ. ಈ ಹಿಂದೆ ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಬಗ್ಗೆ ಯೋಚಿಸಿದಾಗಲೂ ಕನ್ನಡ ಪರ ದನಿಗಳು ಇದೇ ರೀತಿಯ ಕೂಗು ಹಬ್ಬಿಸಿದ್ದವು. ಇಲ್ಲಿ ಪ್ರಶ್ನೆ ಇರುವುದು ಮತ್ತು ಇರಬೇಕಾದದ್ದು ಭಾಷೆಯ ಉಳಿವು-ಅಳಿವಿನ ಬಗ್ಗೆ ಅಲ್ಲ. ಬದಲಿಗೆ ಅದು ನಮ್ಮ ಭವಿಷ್ಯದ ಜನಾಂಗವನ್ನು ಸೃಷ್ಟಿಸುವ ಶೈಕ್ಷಣಿಕ ವ್ಯವಸ್ಥೆಯದ್ದು. ಶಿಕ್ಷಣ ಮಾಧ್ಯಮಕ್ಕೂ ಒಂದು ಭಾಷೆಯ ಉಳಿವಿಗೂ ಇರುವ ಸೂಕ್ಷ್ಮಸಂಬಂಧಗಳನ್ನು ಭಾವನಾತ್ಮಕ ದೃಷ್ಟಿಯಿಂದ ನೋಡುವುದಕ್ಕಿಂತಲೂ ಸಮಕಾಲೀನ ಸಂದರ್ಭದ ಅನಿವಾರ್ಯತೆ ಮತ್ತು ಭವಿಷ್ಯದ ಅವಶ್ಯಕತೆಗಳ ದೃಷ್ಟಿಯಿಂದ ನೋಡಬೇಕಾಗುತ್ತದೆ. ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು ಎನ್ನುವ ವಾದ ಸಮಂಜಸ. ಈ ನೆಲೆಯಲ್ಲಿ ಹಮ್ಮಿಕೊಳ್ಳುವ ಹೋರಾಟಗಳೂ ಸಮರ್ಥನೀಯ. ಆದರೆ ಪ್ರಸಕ್ತ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸನ್ನಿವೇಶದಲ್ಲಿ ಮಧ್ಯಮ ಮತ್ತು ಬಡವರ್ಗದ ಜನತೆಗೆ ಅನಿವಾರ್ಯ ಎನಿಸಿರುವ ಅಂಗ್ಲ ಭಾಷೆಯನ್ನು ಬೋಧಿಸಿದಲ್ಲಿ ಅಪಾಯ ಏನಿದೆ? ಹಿರಿಯ ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮ ಜಾರಿಗೊಳಿಸಿದರೆ ಕನ್ನಡ ಭಾಷೆಯ ಬೆಳವಣಿಗೆ ಹೇಗೆ ಕುಂಠಿತವಾಗುತ್ತದೆ ? ಸರ್ಕಾರ ಕಡ್ಡಾಯ ಕನ್ನಡ ಕಲಿಕೆಯ ತನ್ನ ನಿರ್ಧಾರದಿಂದ ಹಿಂದೆ ಸರಿದ ಕೂಡಲೇ ಕನ್ನಡ ಮಾಧ್ಯಮ ಬಯಸುವವರ ಸಂಖ್ಯೆ ಕಡಿಮೆಯಾಗುವುದೇ ? ಆಂಗ್ಲ ಮಾಧ್ಯಮದ ಶಾಲೆಗಳನ್ನು ತೆರೆಯುವುದರಿಂದ ಕನ್ನಡ ಭಾಷೆಗೆ ಧಕ್ಕೆ ಉಂಟಾಗುತ್ತದೆ ಎನ್ನುವುದಾದರೆ, ಕರ್ನಾಟಕದಾದ್ಯಂತ ನಾಯಿಕೊಡೆಗಳಂತೆ ಬೆಳೆದಿರುವ ಆಂಗ್ಲ ಮಾಧ್ಯಮದ ಶಾಲೆಗಳ ಭರಾಟೆಯಲ್ಲಿ ಕನ್ನಡ ಎಂದೋ ನಶಿಸಿಹೋಗಬೇಕಿತ್ತು. ಹಾಗಾಗಿಲ್ಲವಲ್ಲ. ಅಥವಾ ಕನ್ನಡಪರ ಸಂಘಟನೆಗಳು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ವಿರೋಧಿಸುವುದಾದರೆ ಖಾಸಗಿ ಶಾಲೆಗಳಲ್ಲಿ ಮಾತ್ರ ಆಂಗ್ಲ ಮಾಧ್ಯಮದಲ್ಲಿ ಓದಲಿಚ್ಚಿಸುವ ಮಕ್ಕಳೆಲ್ಲರೂ ಅನಿವಾರ್ಯವಾಗಿ ಖಾಸಗಿ ಶಾಲೆಗಳನ್ನೇ ಆಶ್ರಯಿಸಬೇಕಾಗುತ್ತದೆಂಬ ಅರಿವು ಇವರಿಗಿಲ್ಲವೆ? ಮತ್ತು ಖಾಸಗಿ ಶಾಲೆಗೆ ಹೋಗುವ ಸಾಮರ್ಥ್ಯವಿಲ್ಲದ ಬಡ ಮಕ್ಕಳು ಕನ್ನಡ ಮಾಧ್ಯಮಕ್ಕೇ ಜೋತು ಬೀಳಬೇಕೇ ? ಇಲ್ಲಿ ಉದ್ಭವಿಸುವ ಪ್ರಶ್ನೆ ಆಯ್ಕೆಯ ಸ್ವಾತಂತ್ರದ್ದು. ಆಂಗ್ಲ ಮಾಧ್ಯಮವನ್ನೇ ವಿರೋಧಿಸುವುದಾದರೆ ಕನ್ನಡ ಪರ ಸಂಘಟನೆಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಖಾಸಗಿ ಶಾಲೆಗಳ ವಿರುದ್ಧವೇ ತಮ್ಮ ಆಂದೋಲನ ಹಮ್ಮಿಕೊಳ್ಳಬೇಕಾಗುತ್ತದೆಯೇ ವಿನಾ ಸರ್ಕಾರದ ವಿರುದ್ಧವಲ್ಲ! ಅಲ್ಲಿಗೆ ಜನಸಾಮಾನ್ಯರ ಹಿತಾಸಕ್ತಿಯ ವಿರುದ್ಧ ಗುಡುಗುವ ಈ ಸಂಘಟನೆಗಳಿಗೆ ನಿಷೇದದ ಪ್ರಸ್ತಾಪ ಬರುವ ಕಾಲವೂ ದೂರವಿಲ್ಲ. ಇದರ ಜೊತೆಗೆ ಇಂದು ಎಷ್ಟು ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿವೆ ಎಂಬ ಸಮೀಕ್ಷೆಯನ್ನೇನ್ನಾದರೂ ಮಾಡಲಾಗಿದೆಯೇ ? ಅಥವಾ ರಾಜ್ಯದ ಜನತೆ ಯಾವ ಮಾಧ್ಯಮವನ್ನು ಬಯಸುತ್ತಾರೆ ಎಂಬ ಸಮೀಕ್ಷೆ ನಡೆಸಲಾಗಿದೆಯೇ ? ಸಂಘಟನಾತ್ಮಕ ಭಾವನೆಗಳು ಜನತೆಯ ಸಮಗ್ರ ಧೋರಣೆಗಳನ್ನು ಪ್ರತಿಬಿಂಬಿಸುತ್ತವೆ ಎಂಬ ಅಹಮಿಕೆಯನ್ನು ಬದಿಗಿಟ್ಟು ಯೋಚಿಸಿದಾಗ ಒಂದು ನಿರ್ದಿಷ್ಟ ವಿದ್ಯಮಾನವನ್ನು ಕುರಿತು ಆಂದೋಲನ ರೂಪಿಸುವ ಸಂಘಟನೆಗಳು ಜನತೆಯ ನೈಜ ಆಶಯಗಳನ್ನು ಅರಿಯಲು ಯತ್ನಿಸಿವೆಯೇ ಅನ್ನುವುದೂ ಮುಖ್ಯವಾಗುತ್ತದೆ. ಈ ಕೆಲಸವನ್ನು ಕನ್ನಡ ಪರ ಸಂಘಟನೆಗಳು ಇಂದಿನವರೆಗೂ ಮಾಡಿಲ್ಲ ಎನ್ನುವುದು ವಿಷಾದನೀಯ ಸಂಗತಿ. ಕನ್ನಡದ ಉಳಿವಿಗಾಗಿ ಶ್ರಮಿಸುವುದು ಇಂದಿನ ತುರ್ತು ಅಗತ್ಯತೆಯೇ ಇರಬಹುದು. ಆದರೆ ಕನ್ನಡ ಅಳಿಸಿಹೋಗುತ್ತಿದೆ ಎಂಬ ಕೂಗು ಅನವಶ್ಯಕ. ಭಾಷೆ ಎಂದಿಗೂ ಅಳಿಯುವುದಿಲ್ಲ. ಕನ್ನಡದಂತಹ ಪ್ರಾಚೀನ ಭವ್ಯ ಪರಂಪರೆಯುಳ್ಳ ಭಾಷೆ ಕ್ಷೀಣಿಸುವುದೂ ಇಲ್ಲ. ಸಮಕಾಲೀನ ಕಾಲಘಟ್ಟದಲ್ಲಿ, ಸಾಮಾಜಿಕ ಸ್ಥಿತ್ಯಂತರಗಳಿಗೆ ಅನುಗುಣವಾಗಿ ಭಾಷೆಯ ಬಳಕೆಯಲ್ಲಿ ವ್ಯತ್ಯಯ ಉಂಟಾಗಿರಬಹುದು ಅಷ್ಟೆ. ಆದರೆ ಅದು ಮೇಲ್ನೋಟಕ್ಕೆ ಕಾಣುವ ಚಿತ್ರಣ. ನಗರೀಕೃತ ಮನಸ್ಸುಗಳು ಯೋಚಿಸುವ ರೀತಿಯೇ ಕೆಲವೊಮ್ಮೆ ತಳಮಟ್ಟದ ವಾಸ್ತವಗಳನ್ನು ಮರೆಮಾಚಿಸಿ ಬಿಟ್ಟಿರುತ್ತವೆ. ಕನ್ನಡ ಪರ ಕೂಗಿಗೂ ಇದು ಅನ್ವಯಿಸುತ್ತದೆ. ಭಾಷೆಯ ಉಳಿವು ಎಂದರೆ ಗ್ರಂಥಗಳಲ್ಲಡಗಿರುವ ಭಾಷಾ ಪಾಂಡಿತ್ಯದ ರಕ್ಷಣೆ ಮಾತ್ರವಲ್ಲ. ಭಾಷಿಕರ ಹಿತಾಸಕ್ತಿಗಳ ರಕ್ಷಣೆಯೂ ಹೌದು. ಕನ್ನಡ ಭಾಷಿಕರೆಂದರೆ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿ ಉನ್ನತ ವ್ಯಾಸಂಗಕ್ಕೆ ಅಡಿಪಾಯ ಹಾಕುವ ಆರ್ಥಿಕ ಸಾಮರ್ಥ್ಯ, ಸಾಮಾಜಿಕ ಸ್ಥಾನಮಾನ ಮತ್ತು ಸಾಂಸ್ಕೃತಿಕ ಅವಕಾಶಗಳುಳ್ಳ ಮಧ್ಯಮ-ಮೇಲ್ ಮಧ್ಯಮ ವರ್ಗಗಳು ಅಥವಾ ಮೇಲ್ಜಾತಿಯವರು ಮಾತ್ರವಲ್ಲ. ನವ ಉದಾರವಾದ ಸೃಷ್ಟಿಸಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿಂದುಳಿದ ವರ್ಗಗಳಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಆಂಗ್ಲ ಭಾಷಾ ಶಿಕ್ಷಣ ಒಂದು ಅನಿವಾರ್ಯತೆಯಾಗಿರುವುದು ಒಪ್ಪಲೇಬೇಕಾದ ಸತ್ಯ . ಈ ಅನಿವಾರ್ಯತೆಯನ್ನು ಪೂರೈಸುವ ಹೊಣೆಗಾರಿಕೆ ನಮ್ಮನ್ನಾಳುತ್ತಿರುವವರ ಮೇಲಿದೆ. ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮ ಲಭ್ಯವಾಗುವುದಾದರೆ ಕನ್ನಡ ಭಾಷೆ ನಶಿಸುವುದಿಲ್ಲ ಬದಲಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ಬಡವಿದ್ಯಾರ್ಥಿಗಳು ಕನ್ನಡದ ಮತ್ತು ಕರ್ನಾಟಕದ ಪ್ರತಿಷ್ಠೆಯನ್ನು ಹೆಚ್ಚಿಸುತ್ತಾರೆ. ಇಲ್ಲಿ ಉಜ್ವಲ ಭವಿಷ್ಯಕ್ಕಾಗಿ ಆಂಗ್ಲ ಭಾಷೆ ಅಗತ್ಯ ಎಂದು ಭಾವಿಸಬೇಕಿಲ್ಲ. ಶೈಕ್ಷಣ ಕ ಪಯಣದಲ್ಲಿ ಮುನ್ನಡೆಯಲು ಲಭ್ಯವಿರುವ ಹಾರುಮಣೆಗಳಲ್ಲಿ ಆಂಗ್ಲ ಭಾಷೆಯೂ ಒಂದು ಎಂಬ ವಾಸ್ತವವನ್ನು ಗ್ರಹಿಸಬೇಕಷ್ಟೆ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮನ್ನಣೆ ನೀಡುವುದೇ ಆದರೆ ಈ ವಿಚಾರದಲ್ಲಿ ಜನಾಭಿಪ್ರಾಯ ಸಂಗ್ರಹಿಸುವುದೇ ಸೂಕ್ತ. ಭಾಷಾ ಮಾಧ್ಯಮದ ವಿಚಾರವನ್ನು ಅಸ್ತಿತ್ವಗಳ ನೆಲೆಗಟ್ಟಿನಲ್ಲಿ ನೋಡಿದಾಗ ಭಾವನೆಗಳು ಮೇಲುಗೈ ಸಾಧಿಸುತ್ತವೆ. ವಾಸ್ತವಗಳು ದೂರಾಗುತ್ತವೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸಾಂವಿಧಾನಿಕ ದೃಷ್ಟಿಕೋನದಿಂದ ಕೂಡಿದೆ. ಸಾಂವಿಧಾನಿಕ ಹಕ್ಕುಗಳನ್ನು ಪ್ರತಿಪಾದಿಸುವ, ಸಮರ್ಥಿಸುವ ದನಿಗಳು ಈ ತೀರ್ಪಿಗೆ ತಲೆಬಾಗಲೇಬೇಕಾಗುತ್ತದೆ. ಹಾಗಾದರೆ ಕನ್ನಡದ ಪ್ರಶ್ನೆ ಬಗೆಹರಿಯುವುದು ಹೇಗೆ ? ಆಡಳಿತ ವ್ಯವಸ್ಥೆಯ ಇಚ್ಚಾಶಕ್ತಿ ಮತ್ತು ಕನ್ನಡಪರ ದನಿಗಳ ಪ್ರಬುದ್ಧತೆ ಎರಡೂ ಇಲ್ಲಿ ಅಗ್ನಿಪರೀಕ್ಷೆಗೊಳಗಾಗಿರುವುದು ಸ್ಪಷ್ಟ. ಇಂಗ್ಲಿಷ್ ಭಾಷೆಯನ್ನು ಯಾವ ತರಗತಿಯಿಂದ ಕಲಿಸಬೇಕು ಮತ್ತು ಕಲಿಕೆಯ ಮುಖ್ಯ ಮಾಧ್ಯಮ ಯಾವ ಭಾಷೆಯಲ್ಲಿರಬೇಕು ಎಂಬ ಚರ್ಚೆಗೆ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಭಾಷಾ ಬೋಧನೆಯ ಸಾಧ್ಯತೆ ಮತ್ತು ಮಿತಿಗಳನ್ನು ಅರಿತವರಿಗಿಂತ ಹೆಚ್ಚಾಗಿ ಇಡೀ ವಿಷಯವನ್ನು ಭಾವನಾತ್ಮಕವಾಗಿ ಗ್ರಹಿಸಿದವರು ಮಾತ್ರ ಈ ವಿಷಯದ ಚರ್ಚೆಯ ಮುಂಚೂಣಯಲ್ಲಿದ್ದಾರೆ. ಪರಿಣಾಮವಾಗಿ ಯಾವುದು ಚರ್ಚೆಯಾಗಬೇಕಿತ್ತೋ ಅದು ಚರ್ಚೆಯಾಗದೆ ಕನ್ನಡದ ಬಳಕೆ ಎಂಬುದು ವರ್ಗ, ವರ್ಣ, ಜಾತಿ ಮುಂತಾದುವುಗಳ ಚರ್ಚೆಯಾಗಿ ಬದಲಾಗುತ್ತಿದೆ. ಭಾಷೆಯೊಂದರ ಕಲಿಕೆಯ ಹಿಂದೆ ಈ ಎಲ್ಲಾ ಸಾಮಾಜಿಕ ಅಸಮಾನತೆಗಳು ಪರಿಣಾಮ ಬೀರುತ್ತವೆಯಾದರೂ ಕೇವಲ ಅವುಗಳನ್ನಷ್ಟೇ ಪರಿಗಣಿಸಿ ಭಾಷೆಯೊಂದರ ಕಲಿಕೆಗೆ ಸಂಬಂಧಿಸಿದ ನೀತಿ ರೂಪಿಸಲು ಸಾಧ್ಯವಿಲ್ಲವಲ್ಲ. ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವುದರಿಂದ ಮಕ್ಕಳಿಗೆ ಹೊರೆಯಾಗುತ್ತದೆ. ಕನ್ನಡಕ್ಕೆ ಅಪಾಯ, ಕನ್ನಡ ಸಂಸ್ಕೃತಿಗೆ ಅಪಾಯ ಎಂದು ಒಂದು ಗುಂಪಿನವರು ವಾದಿಸುತ್ತಿದ್ದರೆ ಮತ್ತೊಂದು ಗುಂಪಿನವರು ಇಂಗ್ಲಿಷ್ ಸಾಮಾಜಿಕ ಅಸಮಾನತೆಯ ನಿವಾರಣೆಗೆ ಅತಿ ಅವಶ್ಯ. ಆಧುನಿಕ ಉದ್ಯೋಗ ಮಾರುಕಟ್ಟೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಇಂಗ್ಲಿಷ್ ಇಲ್ಲದಿದ್ದರೆ ಸಾಧ್ಯವಿಲ್ಲ. ಶೋಷಿತ ವರ್ಗಗಳಿಗೆ ಇಂಗ್ಲಿಷ್ನಿಂದಲೇ ವಿಮೋಚನೆ ಎನ್ನುತ್ತಿದ್ದಾರೆ. ದುರಂತವೆಂದರೆ ಈ ಎರಡೂ ವಾದಗಳನ್ನು ಮಂಡಿಸುತ್ತಿರುವವರೆಲ್ಲರೂ ತಮ್ಮ ಮಕ್ಕಳಿಗೆ ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಲ್ಲಿ ಪ್ರವೇಶಗಿಟ್ಟಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಈ ಎರಡೂ ವಾದಗಳೂ ವಿತಂಡವಾದಗಳೇ ಸರಿ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕನ್ನಡ ಸಂಸ್ಕೃತಿ ಇಷ್ಟೂ ವರ್ಷಗಳಿಂದ ಉಳಿದುಕೊಂಡು ಬಂದಿದೆ. ಈ ಕನ್ನಡ ಸಂಸ್ಕೃತಿ ಎಂಬುದು ಇತರ ಎಲ್ಲಾ ಸಂಸ್ಕೃತಿಗಳಂತೆ ಚಲನಶೀಲವೇ ಆಗಿರುವುದರಿಂದ ಆಯಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ತನ್ನನ್ನು ಉಳಿಸಿಕೊಂಡಿದೆ. ಹೈದರ್, ಟಿಪ್ಪು ಬಹಮನಿ ಸುಲ್ತಾನರ ಆಡಳಿತದ ಅವಧಿಯಲ್ಲಿ ದಖ್ಖನಿ ಆಡಳಿತ ಭಾಷೆಯಾಗಿತ್ತು. ಹಾಗೆಂದು ಕನ್ನಡ ಮರೆಯಾಗಲಿಲ್ಲ. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಇಂಗ್ಲಿಷ್ ಆಳುವವರ ಭಾಷೆಯಾಗಿತ್ತು. ಆಗಲೂ ಕನ್ನಡ ಮರೆಯಾಗಲಿಲ್ಲ. ಈ ಸವಾಲುಗಳನ್ನು ಎದುರಿಸಿ ಅದು ಉಳಿದುಕೊಂಡಿತು. ಈಗಲೂ ಅಷ್ಟೆ ಜಾಗತೀಕರಣದ ಎಲ್ಲ ಸವಾಲುಗಳನ್ನೂ ಅದು ಎದುರಿಸಿ ಉಳಿದುಕೊಳ್ಳುತ್ತದೆ. ಈ ಸವಾಲುಗಳನ್ನು ಎದುರಿಸಲು ನಮ್ಮ ಭಾಷೆಯನ್ನು ಸಿದ್ಧಗೊಳಿಸಬೇಕು. ಅಂದರೆ ಹೊಸ ಪರಿಕಲ್ಪನೆಗಳನ್ನು ನಮ್ಮ ಭಾಷೆಯಲ್ಲಿ ಚರ್ಚಿಸಬೇಕು. ಇದರ ಬದಲಿಗೆ ಕಂಪ್ಯೂಟರನ್ನು `ಗಣಕ ಯಂತ್ರ’ ಎಂದರೆ ಇಂಜಿನಿಯರನ್ನು ‘ಅಭಿಯಂತರ’ ಎಂದ ಮಾತ್ರಕ್ಕೆ ಕನ್ನಡ ಉದ್ಧಾರವಾಗುತ್ತದೆ ನಂಬಿದರೆ ಕನ್ನಡವನ್ನು ಶಿಶುವಿಹಾರದಿಂದ ಸ್ನಾತಕೋತ್ತರ ಮಟ್ಟದವರೆಗೆ ಕಡ್ಡಾಯ ಮಾಡಿದರೂ ಅದು ಉಳಿಯಲಾರದು. ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿತವರೆಲ್ಲರೂ ಇಂಗ್ಲಿಷ್ ಪಂಡಿತರಾಗಿ ಬಿಡುವುದಿಲ್ಲ. ನನ್ನ ತಲೆಮಾರಿನ ಹಾಗೂ ಅದಕ್ಕೂ ಹಿಂದಿನವರೆಲ್ಲರೂ ಹಳ್ಳಿಯ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಕಲಿತು ಬಂದು ಕಾಲೇಜು ಮಟ್ಟದಲ್ಲಿ ಇಂಗ್ಲಿಷಿಗೆ ತೆರೆದುಕೊಂಡವರು. ನಾವೆಲ್ಲರೂ ಇಂಗ್ಲಿಷನ್ನು ಸಲೀಸಾಗಿ ಬಳಸುತ್ತಿಲ್ಲವೇ? ಹೌದು, ಕೆಲ ಸಂದರ್ಭಗಳಲ್ಲಿ ಇಂಗ್ಲಿಷ್ ಒಂದು ಸವಾಲು ಎನಿಸಿತ್ತು. ಆದರೆ ಅದೇನೂ ಮೀರಲಾರದ ಸವಾಲಾಗಿರಲಿಲ್ಲ. ಏಕೆಂದರೆ ನಮ್ಮ ಇಂಗ್ಲಿಷ್ ಈಗಿನವರ ಇಂಗ್ಲಿಷಿಗಿಂತ ಚೆನ್ನಾಗಿಯೇ ಇದೆ! ಈಗ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವವರೆಲ್ಲ ಸರ್ವಜ್ಞರಾಗಿಬಿಡುವುದಿಲ್ಲ. ಏಕೆಂದರೆ ನಮಗಿರುವ ಸವಾಲು ಕಲಿಯುವ ಮಾಧ್ಯಮದ್ದಲ್ಲ. ಶಿಕ್ಷಣದ್ದು. ಈ ಸವಾಲನ್ನು ಎದುರಿಸುವ ಬದಲಿಗೆ ಅದರಿಂದ ತಪ್ಪಿಸಿಕೊಳ್ಳುವ ಹಾದಿಯಾಗಿ ಮಾಧ್ಯಮದ ಕುರಿತ ಚರ್ಚೆಯನ್ನು ಅನವಶ್ಯಕವಾಗಿ ಬೆಳಸುತ್ತಿದ್ದೇವೆ. ನಮ್ಮ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣಗಳೆರಡೂ ಈ ಕಾಲದ ಅಗತ್ಯವನ್ನು ಪೂರೈಸುತ್ತಿಲ್ಲ. ಜಗತ್ತು ಹಳ್ಳಿಯಾಗಿರುವ ಈ ಹೊತ್ತಿನಲ್ಲಿಯೂ ನಮ್ಮ ಜ್ಞಾನದ ಎಲ್ಲೆಗಳನ್ನು ವಿಸ್ತರಿಸಿಕೊಳ್ಳಲು ಅಗತ್ಯವಿರುವ ಪರಿಕರಗಳನ್ನು ಇವು ಒದಗಿಸುತ್ತಿಲ್ಲ. ಈ ಮೂಲಭೂತ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೆ ಮಾಧ್ಯಮ ಯಾವುದಾಗಿರಬೇಕು ಎಂಬುದರ ಕುರಿತು ಚರ್ಚಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಬದುಕಿಗೆ ಪ್ರಸ್ತುತವಾಗದ ಶಿಕ್ಷಣವನ್ನು ಯಾವ ಮಾಧ್ಯಮದಲ್ಲಿ ಒದಗಿಸಿದರೂ ಅದು ವ್ಯರ್ಥವೇ. ಮಕ್ಕಳ ಬೌದ್ಧಿಕ ವಿಕಸನಕ್ಕೆ ತಾಯ್ನುಡಿಯಲ್ಲೇ ಕಲಿಕೆಯಾಗಬೇಕು ಅನ್ನುವುದನ್ನು ಜಗತ್ತಿನ ವಿಜ್ಞಾನಿಗಳು, ಮನಶಾಸ್ತçಜ್ಞರು, ಕಲಿಕೆ ತಜ್ಞರು, ವಿಶ್ವಸಂಸ್ಥೆ ಸೇರಿದಂತೆ ಸಾವಿರಾರು ಜನರು ಪ್ರತಿಪಾದಿಸುತ್ತಾರೆ. ವಿಶ್ವಸಂಸ್ಥೆಯAತೂ









