ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

GO BLUE- ಗೋ ಬ್ಲೂ

ಅಂಜಲಿ ರಾಮಣ್ಣ ಇವತ್ತು ರಾಷ್ಟ್ರೀಯ ಮಕ್ಕಳ ದಿನಾಚರಣೆ. ೨೦ ನವೆಂಬರ್ ಅಂತರಾಷ್ಟ್ರೀಯ ಮಕ್ಕಳ ದಿನಾಚರಣೆ. ಮಕ್ಕಳ ಹಕ್ಕುಗಳ ವಿಷಯದಲ್ಲಿ ಈ ವರ್ಷಕ್ಕೆ ತನ್ನದೇ ಆದ ಮಹತ್ವ ಇದೆ. ೧೯೫೯ ರ ನವೆಂಬರ್ ೨೦ರಂದು ವಿಶ್ವಸಂಸ್ಥೆಯು ಜೆನೆರಲ್ ಅಸೆಂಬ್ಲಿಯಲ್ಲಿ ಮಕ್ಕಳ ಹಕ್ಕುಗಳ ಘೋಷಣೆ ಮಾಡಿತ್ತು. ನಂತರ ೧೯೮೯ರಲ್ಲಿ  ಹಲವಾರು ರಾಷ್ಟ್ರಗಳು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿದವು. ಒಡಂಬಡಿಕೆಗೆ ಸಹಿ ಹಾಕಿರುವ ರಾಷ್ಟ್ರಗಳು, ಈ ವರ್ಷ ೧೪ ರಿಂದ ೨೦ನೆಯ ತಾರೀಕಿನವರೆಗೂ ಪ್ರಪಂಚದಾದ್ಯಂತ ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಪ್ರಜ್ಞ್ನೆ  ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಮಕ್ಕಳ ಸಹಾಯವಾಣಿಯ ಬಗ್ಗೆ ಸಾಮಾನ್ಯರಿಗೆ ತಿಳುವಳಿಕೆ ಮೂಡಿಸುವುದು, ಮಕ್ಕಳಿಗಾಗಿಯೇ ಇರುವ ಕಾನೂನುಗಳ ಜಾಗೃತಿ ಶಿಬಿರಗಳನ್ನು ಆಯೋಜಿಸುವುದು, ಮಕ್ಕಳಿಗೆ ಮನೋರಂಜನೆಯ ಮೂಲಕ  ಅವರ ಹಕ್ಕುಗಳ ಅರಿವು ಮೂಡಿಸುವುದು ಹೀಗೆ ಸಾಲು ಸಾಲು ಕಾರ್ಯಕ್ರಮಗಳು ನಮ್ಮ ಕರ್ನಾಟಕದಾದ್ಯಂತ ನಡೆಯುತ್ತಿವೆ. ಈ ಎಲ್ಲಾ ಕಾರ್ಯಕ್ರಮಗಳು “ UNCRC30 “  ಎನ್ನುವ ಉಪಸಾಲನ್ನು ಹೊತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ವಿಶ್ವಸಂಸ್ಥೆಯು ಈ ಬಾರಿಯ ಮಕ್ಕಳ ಹಕ್ಕುಗಳ ಸಪ್ತಾಹಕ್ಕಾಗಿ ಆಯ್ಕೆ ಮಾಡಿರುವ ಬಣ್ಣ ನೀಲಿ. ’GO BLUE ‘  ಈ ಘೋಷವಾಕ್ಯದಲ್ಲಿ ವಾರವಿಡೀ ಎಲ್ಲಾ ವಯಸ್ಕರು ನೀಲಿ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಲು ಮನವಿ ಮಾಡಲಾಗಿದೆ. ಕಚೇರಿಗಳನ್ನು, ಮನೆಗಳನ್ನು, ಸರ್ಕಾರಿ ಕಟ್ಟಡಗಳನ್ನು, ಮಾರುಕಟ್ಟೆಗಳನ್ನು ನೀಲಿ ಬಣ್ಣದ ದೀಪಗಳಿಂದ ಅಲಂಕರಿಸಲು ಕೇಳಿಕೊಳ್ಳಲಾಗಿದೆ. ಸುತ್ತಮುತ್ತಲೂ ತಮ್ಮ ಕಣ್ಣುಗಳಿಂದ ‘ ನೀಲಿನೀಲಿ ‘ ನೋಡುವ ಅಪ್ರಾಯಸ್ಥರು ’ಯಾಕೆ ಹೀಗೆ?’ ಎಂದು ಪ್ರಶ್ನಿಸುವಾಗ ಅವರುಗಳಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿಸಿಕೊಡುವ ಕೆಲಸವಾಗಲಿ ಎನ್ನುವ ಉದ್ದೇಶವಿದೆ ಈ ನೀಲಿ ಬಣ್ಣದ ಆಯ್ಕೆಗೆ. ಈ ವಾರವಿಡೀ ವಯಸ್ಕರೂ ಮಕ್ಕಳೆಡೆಗೆ ಸಂವೇದನಾಶೀಲರಾಗಲಿ, ಮಕ್ಕಳ ಸಮಾಜದೆಡೆಗೆ ಎಚ್ಚರಗೊಳ್ಳಲಿ ಎನ್ನುವ ನಿರೀಕ್ಷೆಯಿದೆ ಈ ನೀಲಿ ಬಣ್ಣಕ್ಕೆ. ನೀಲಿಯೇ ಯಾಕೆ ಬಣ್ಣಗಳ ಅಧ್ಯಯನದಲ್ಲಿ ನೀಲಿ ಬಣ್ಣ ನಂಬಿಕೆ ಮತ್ತು ವಿಶ್ವಾಸದ ಧ್ಯೋತಕವಾಗಿದೆ. ಧ್ವನಿಯ ಬಣ್ಣ ನೀಲಿ ಎಂದು ಗುರುತಿಸಲಾಗಿದೆ. ನಿಷ್ಠೆ, ಬುದ್ಧಿವಂತಿಕೆ, ಸತ್ಯ ಸಂಧತೆಗೆ ನೀಲಿ ಬಣ್ಣವನ್ನು ಪ್ರತಿನಿಧಿಸಲಾಗಿದೆ. ವೈದ್ಯಕೀಯವಾಗಿ ನೀಲಿ ಬಣ್ಣವು ಮನಸ್ಸು ಹಾಗು ದೇಹವು ಹೊಂದಾಣಿಕೆ ಸಾಧಿಸಲು ಸಾಕಷ್ಟು ಸಹಾಯಕಾರಿ ಎಂದು ಹೇಳಲಾಗಿದೆ. ಆಕಾಶ ನೀಲಿ, ಶರಧಿ ನೀಲಿ. ಅದಕ್ಕೇ ಆಳ ಮತ್ತು ಧೃಢತೆಯ ಸಂಕೀತವಾಗಿದೆ ನೀಲಿ. ಬೈಬಲ್‍ನಲ್ಲಿ ನೀಲಿ ಬಣ್ಣವನ್ನು ದೈವ ವಾಣಿಯ, ಸ್ವರ್ಗದ ಬಣ್ಣ ಎಂದು ಬಣ್ಣಸಲಾಗಿದೆ. ಯಹೂದಿಗಳು ನೀಲಿ ಬಣ್ಣವನ್ನು ದೈವತ್ವದ ಬಣ್ಣವೆಂದು ಭಾವಿಸುತ್ತಾರೆ. ಚಿತ್ತಸ್ಥಿಮಿತಕ್ಕೆ ನೀಲಿಯಾಕಾರ ಎನ್ನುತ್ತಾರೆ ಅವರು. ಹಿಂದು ದೇವರುಗಳಿಗೆ ನೀಲಿ ಬಣ್ಣವನ್ನು ಪರಿಕಲ್ಪಿಸಲಾಗಿದೆ. ಮಕ್ಕಳು ನರಳುತ್ತಿದ್ದಾರೆ. ಅವರ ನೋವಿನ ಕೂಗನ್ನು ಕೇಳಿಸಿಕೊಳ್ಳಲು ಸ್ವಲ್ಪವೇ ಸೂಕ್ಷ್ಮತೆಯೂ ಸಾಕು. UNCRC30 ಎನ್ನುತ್ತಾ ವಿಶ್ವಸಂಸ್ಥೆಯು ಕೊಟ್ಟಿರುವ ನೀಲಿ ಬಣ್ಣದಲ್ಲಿ ನಾವುಗಳೂ ತೊಡಗಿಕೊಳ್ಳೋಣ. ನಾವೂ ಎಲ್ಲೆಡೆಯಲ್ಲಿಯೂ ನೀಲಿಯಾಗೋಣ. ನಾವೇ ನಿರ್ಮಿಸಿದ ಧರ್ಮ, ಆಚರಣೆ, ನಂಬಿಕೆಗಳಿಂದ ನೀಲಿಗಟ್ಟುತ್ತಿರುವ ಮಕ್ಕಳಿಗೆ ಉಸಿರು ತುಂಬೋಣ. ಮನುಷ್ಯರಾಗೋಣ. ಜಗತ್ತಿಗೆಲ್ಲ ’GO BLUE’ ಎನ್ನೋಣ. ಅಂಜಲಿ ರಾಮಣ್ಣಅಧ್ಯಕ್ಷರು , ಮಕ್ಕಳ ಕಲ್ಯಾಣ ಸಮಿತಿ

GO BLUE- ಗೋ ಬ್ಲೂ Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಈ ಹೊಸ ಅಂಕಣ ಎರಡು ವಾರಕ್ಕೊಮ್ಮೆ ಪ್ರಕಟವಾಗುತ್ತದೆ. ಅವ್ಯಕ್ತ ಓದುವ ಮುನ್ನ ಮಕ್ಕಳು ಮುಂದಿನ ಸಮಾಜವನ್ನು ಕಟ್ಟುವಂತಹ ಶಿಲ್ಪಿಗಳು ಎಂದು ನಂಬಿರುವವಳು ನಾನು. ನಮ್ಮ ಸುತ್ತ ನೋಡಿದಾಗ ಎರಡು ತರಹದ ವ್ಯಕ್ತಿತ್ವಗಳನ್ನು ಕಾಣಬಹುದು ಎಜುಕೇಶನ್ ಎಂಬುದನ್ನು ಬರೀ ಅಂಕಪಟ್ಟಿಯಲ್ಲಿ ಹೆಚ್ಚಿನ ಅಂಕ ತೆಗೆಯಲು ಸೀಮಿತವಾಗಿರಿಸಿರುವುದು,ಹಣ ಮಾಡುವುದು, ಸ್ವಾರ್ಥ ಜೀವನ ನಡೆಸುವುದು…ಅಥವಾ ಎಜುಕೇಶನ್ ಎಂದರೆ ಒಂದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದು, ಸ್ವಾರ್ಥ ಹಾಗೂ ನಿಸ್ವಾರ್ಥ ಎರಡರನಡುವೆ ಸಮತೋಲನ ತರುವುದು, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು…ಮೊದಲನೆಯ ತರಹದ ವ್ಯಕ್ತಿಗಳು ಹಲವರಿದ್ದರೂ, ಎರಡನೆಯ ತರದವರು ಬೆರಳೆಣಿಕೆಯಷ್ಟು ಈ ನಿಟ್ಟಿನಲ್ಲಿ ನಾನು ನನ್ನ ಹೆಚ್ಚಿನ್ನ ಸಮಯವನ್ನುಮಕ್ಕಳೊಂದಿಗೆ ಕಳೆದಿದ್ದೇನೆ, ಮಕ್ಕಳ ಮನಸ್ಸನ್ನು ಅರಿಯಲು, ತೊಂದರೆಗಳನ್ನು ಪರಿಶೀಲಿಸುವುದುನನ್ನ ದಿನನಿತ್ಯ ಜೀವನದ ಒಂದು ಭಾಗ. ನಾವು ಕಲಿತ ರೀತಿಯಲ್ಲಿ ನಮ್ಮ ಮಕ್ಕಳಿಗೆ ಹೇಳಿ ಕೊಡಲಾಗುವುದಿಲ್ಲ ಏಕೆಂದರೆ ಇಂದಿನ ಸಮಾಜ ಹಾಗೆ ಉಳಿದಿಲ್ಲ… ಈ ನಿಟ್ಟಿನಲ್ಲಿ ನನ್ನ ಮಕ್ಕಳೊಂದಿಗಿನ ಅನುಭವಗಳನ್ನು ಸುಮ್ಮನೆ ಬರೆದಿಡಲು ಪ್ರಾರಂಭಿಸಿದೆ ಒಂದು ನಂಬಿಕೆ ಮನಸ್ಸಿನಲ್ಲಿ ಇತ್ತು ಎಂದಾದರೂಯಾರಾದರೂ ಅನುಭವಗಳನ್ನು ಮುಂದಿಟ್ಟುಕೊಂಡು ಇನ್ನಷ್ಟು ಮಕ್ಕಳಿಗೆ ಒಳ್ಳೆಯದಾಗಲಿ.. ಸಂಗಾತಿ ಪತ್ರಿಕೆಯು ಈ ಮೂಲಕ ನನ್ನ ಅನುಭವ ಹಾಗೂ ಬರವಣಿಗೆಯನ್ನು ಗುರುತಿಸಿಅದನ್ನು ಪ್ರಕಾಶಿಸಲು ಅವಕಾಶ ನೀಡಿದೆ.ಇದರಿಂದ ಹಲವು ಮಕ್ಕಳಿಗೆ, ಮಕ್ಕಳ ಬಗ್ಗೆ ಕಾಳಜಿ ಇರುವವರಿಗೆ ಸಹಾಯವಾಗಬಹುದು ಎಂದು ಆಶಿಸುತ್ತೇನೆ. ಸಮಾಜದ ಬೆಳವಣಿಗೆ ನಮ್ಮ ಜವಾಬ್ದಾರಿಯಾಗಿರುತ್ತದೆ ಒಟ್ಟಾಗಿ ಅದನ್ನು ಚಂದಗೊಳಿಸುವ ಬೆಳೆಸುವ! ಬದಲಾವಣೆ ಇನ್ನೆರಡು ದಿನಗಳಲ್ಲಿ ಶಿಕ್ಷಕರ ದಿನಾಚರಣೆ ಇದ್ದಿದ್ದರಿಂದ ಓದೋದು ಬಿಟ್ಟು ಕುಸುಕುಸು ಪಿಸಿಪಿಸಿ ಮಾತಾಡ್ಕೊಂಡು ಕೂತಿದ್ರು. ನಾನು ಪೀಠಿಕೆ ಹಾಕಿದೆ “ಎಷ್ಟು ದುಡ್ಡು ಕಲೆಕ್ಟ್ ಮಾಡ್ತಾ ಇದ್ದೀರಾ ಎಲ್ರೂ… ಟೀಚರ್ಸ್ ಡೇಗೆ?” ಮ್ಯಾಮ್1000, 500, 1500…ನನಗೆ ಕೇಳಿ ಆಶ್ಚರ್ಯ, ಕಸಿವಿಸಿಯಾಯಿತು ತೋರಿಸ್ಕೊಳ್ಲಿಲ್ಲ. ಎಲ್ರುನ್ನೂ ಸುಮ್ನೆ ಕೇಳ್ದೆ “ನಿಮ್ಮ ಇಷ್ಟದ  ಶಿಕ್ಷಕರ ಬಗ್ಗೆ ಒಬ್ಬೊಬ್ಬರುಎರಡೆರಡು ಸಾಲಿನಷ್ಟು ಹೇಳಿ”.ಎಲ್ಲರೂ ಪುಸ್ತಕ ಮುಚ್ಚಿಟ್ಟು ತಾಮುಂದು ನಾಮುಂದು ಅಂತ ಹೇಳಕ್ಕೆ ಶುರುಮಾಡಿದ್ರು…  ಒಂದು ನಿಮಿಷ ಬಿಟ್ಟು ಸ್ವಲ್ಪಸ್ವರ ಏರಿಸಿ “ಸಾಕು ಈಗ ನನ್ನ ಪ್ರಶ್ನೆಗಳಿಗೆ ಯೋಚಿಸಿ ಉತ್ತರ ಕೊಡಿ”ಅಂದೆ. ಎಲ್ಲರೂ ಅಶಕ್ತವಾಗಿ(ನಿಶ್ಯಬ್ಧವಾಗಿ) ಕೇಳತೊಡಗಿದರು. ನಾನು ಕೇಳಿದೆ “ ನಿಮ್ಮ ಗುರುಗಳು ಯಾವತ್ತಾದ್ರು ಹೀಗ್ ಹೇಳಿದ್ರಾ?“ನೀನು ಹಣವಂತನಾಗಬೇಕು, ನೀನು ನನಗೆ ಬಟ್ಟೆಬರೆ ಇತ್ಯಾದಿ ಕೊಡ್ಸು, ನೀನು ನನ್ನ ಹುಟ್ಟಿದ ಹಬ್ಬ ವಿಜ್ರಂಭಣೆಯಿಂದಆಚರ್ಸು, ನೀನು ನಂಗೆ ತಿಂಡಿ ತಿನಿಸು ಕೊಡ್ಸು, ನೀನು ದೊಡ್ಡ ಮನುಷ್ಯ ಆಗಿ ನನ್ನ ಹೆಸರನ್ನು ಹೊರಗಡೆ ಸಮಾಜಕ್ಕೆ ಹೇಳು, ನನಗೆ ತುಂಬಾ ಕಷ್ಟ ಇದೆ ನನಗೆ ಸಹಾಯ ಮಾಡು…???” ಮಕ್ಕಳು ತಟ್ಟನೆ ಹೇಳಿದ್ರು “ಇಲ್ಲ, ಯಾವತ್ತೂ ಹೇಳಿಲ್ಲ…” ಮನಸಲ್ಲಿನಗಾಡಿಕೊಂಡು “ಹೌದಾsssss! , ಹಾಗಾದ್ರೆ ಹೀಗ್ಹೇಳಿದ್ದಾರಾ?.. ನೀನು ಗುಣವಂತನಾಗು,  ಬೇಕೆಂದವರಿಗೆ ಸಹಾಯ ಮಾಡು, ನಕ್ಕು ನಗಿಸು ಯಾರನ್ನೂನೋಯಿಸ್ಬೇಡ , ಹಿರಿಯರನ್ನು ಪ್ರೀತಿ ಗೌರವದಿಂದ ನೋಡ್ಕೋ, ಕಿರಿಯರ ಮೇಲೆ ಕಾಳಜಿ ಇರ್ಲಿ,  ನಿನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸು, ದೇಶಕ್ಕೆ ಒಳ್ಳೆಯ ಪ್ರಜೆಯಾಗು,ಮನೆಗೆ ಒಳ್ಳೆಯ ಮಗುವಾಗು” ಎಲ್ರೂ “ಹೌದು ಹೌದು!” ಅಂತ ಇನ್ನಷ್ಟು ವಿಚಾರಗಳನ್ನಹಂಚ್ಕೊಂಡ್ರು. ಎರಡು ನಿಮಿಷ ನಿಶ್ಶಬ್ದವಾಗಿ ಇದ್ದು… “ನಿಮ್ಮ ಪ್ರಿಯ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಅತ್ಯಂತ ಒಳ್ಳೆ ಉಡುಗೊರೆ ಎಂದರೆ ಅವರು ಹೇಳ್ಕೊಟ್ಟಿರೋ ವಿಚಾರಧಾರೆನನಿಮ್ಮಲ್ಲಿ ಬೆಳೆಸಿಕೊಳ್ಳೋದಲ್ವೇ ಮಕ್ಳೇ?” “ACTIONS SPEAK my children”…ಅಂದೆ.. ಎಲ್ಲರೂ ಎರಡ್ನಿಮಿಷ ನಿಷಬ್ದರಾದ್ರು. ಅದ್ರಲ್ಲಿ ಒಬ್ಬಳು ಕೇಳಿದ್ಲು”ಈಗಇರೋ ಹಣದಲ್ಲಿ ನಾವು ಹೇಗೆ ಸಹಾಯ ಮಾಡದು? ನನ್ಟೀಚರ್ ಯಾವಾಗ್ಲೂಬೇರೆಯವರಿಗೆ ಸಹಾಯ ಮಾಡಿ, ಅಂತಾರೆ!” ನಾನು ಈ ಪ್ರಶ್ನೆಗೆ ಕಾಯುತ್ತಿದ್ದ್ನೇನೋ ಅನ್ನೋಹಾಗೆ ಥಟ್ಟನೆ ಹೇಳಿದೆ “ಯೋಚಿಸ್ನೋಡು! ನಿಮ್ಮ ಶಾಲೆಯಲ್ಲಿ ಬಡಮಕ್ಕಳಿರ್ಬೌದಲ್ವಾ?… ” ಅವಳು ಸಂಭ್ರಮದಿಂದ “ಹೌದು ಮಿಸ್, ಹಾಗಾದರೆ, ಈ ಸರಿ ನಾವು ಕಲೆಕ್ಟ್ ಮಾಡಿರೋ ಹಣಾದಲ್ಲಿನಾಲ್ಕೆದು ಚಾರ್ಜರ್ ಲೈಟ್ಗಳನ್ನತಂದುಅಕ್ಕನ ಮನೆಯಲ್ಲಿಕರೆಂಟ್ಟ್ಲಿಲ್ವಲ್ಲಾ… ಅವಳಿಗೆಕೊಡೋಣ. ಓದಕ್ಕೆ ಸಹಾಯಆಗುತ್ತೆ.!! “ ನಾನು “ಶಹ್ಬಾಶ್ ಮಗ್ಳ!ಇದು ನಿಜವಾದ ಶಿಕ್ಷಕರ ದಿನಾಚರಣೆ!” ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ರು. ಎಲ್ಲಾ ಮಕ್ಕಳಿಗೆ ಕುರಿತು ಹೇಳಿದೆ  “ಬದಲಾವಣೆಗೆ ಎಂದು ಕಾದು ಕುತ್ಕೋ ಬಾರದು ಮನಸ್ಸು ಮಾಡಿ ಬದಲಾವಣೆ ನಮ್ಮಿಂದಲೇ ಪ್ರಾರಂಭ ಮಾಡ್ಬೇಕು.”

ಅವ್ಯಕ್ತಳ ಅಂಗಳದಿಂದ Read Post »

ಇತರೆ

ಮಕ್ಕಳ ದಿನದ ಸಂಭ್ರಮ

ಅನು ಮಹಾಲಿಂಗ ಪುಟ್ಟ ನೀನು ಬಹಳ ಚೆಂದನಿನ್ನ ನಗುವ ಇನ್ನೂ ಅಂದ ಪುಟ್ಟ ಪುಟ್ಟ ಹೆಜ್ಜೆ ಇಟ್ಟು  ಬಂದಾಗಇಡುವೆ ನಿನಗೆ ದೃಷ್ಟಿ ಬೊಟ್ಟು ನಾನಗ ಬಿಸ್ಕೇಟ್ ಚಾಕೊಲೇಟ್ ಭಾರಿ ತರುವೆನೀನಿಗ ಬೇಗ ತಿನ್ನು ಊಟವನ್ನುಅ ಆ ಕಲಿಯೊ ಕಂದಾನಮ್ಮಯ ಭಾಷೆಯೆ ಚೆಂದ ಚೆಂದದಿ ನುಡಿಯೋ ಅಂದದಿ ಕುಣಿಯೊಚಂದ್ರವದನನೇ ಚುಕ್ಕಿ ಚಂದ್ರಮತಾರಲೋಕದ ಅಧಿಪತಿ ನೀನುತಾರ ಬಳಗದೀ ಹೋಳೆಯುವೆ ಏನು ನಿನ್ನಯ ಅಂಗಾಲು ಮುಂಗಾಲನೆಲ್ಲಮುದ್ದಿಸಿ ತೊಳೆದು ಮುತ್ತನ್ನು ಇಡುವೆನನ್ನಯ ಕನಸು ನಾಳೆಯ ನನಸುಜಗಕೆಲ್ಲ ಅಧಿಪತಿ ನೀನೆ ಕಂದಯ್ಯಾ —————————–

ಮಕ್ಕಳ ದಿನದ ಸಂಭ್ರಮ Read Post »

ಕಾವ್ಯಯಾನ

ಮಕ್ಕಳದಿನದ ಸಂಭ್ರಮ

ಮಕ್ಕಳ ಕವಿತೆಗಳು ಸಂತೆಬೆನ್ನೂರು ಫೈಜ್ನಾಟ್ರಾಜ್ ನಮ್ಮ ಚಂದ್ರ ನಮ್ಮ ಚಂದ್ರ ಬಾನಿಗೊಬ್ಬ ಚಂದಿರ ದೇಶಕ್ಕೊಬ್ಬ ಚಂದಿರ ಅವನೇ ಸುಭಾಸ್ ಚಂದಿರ//ಬಾ// ಶಕ್ತಿ ಕೊಡಿ ರಕ್ತ ಕೊಡಿ ಸ್ವತಂತ್ರ ಕೊಡುವೆ ಎಂದನು ಸ್ವಾರ್ಥ ಬಿಡಿ ನಿಸ್ವಾರ್ಥ ದುಡಿ ದೇಶಕದುವೆ ಹೆಮ್ಮೆ ಎಂದನು//ಬಾ// ಜೈ ಹಿಂದ್ ಜೈ ಹಿಂದ್ ಜೈಕಾರ ಕೂಗುತ ಎಂದಿಗೂ ಮುನ್ನುಗ್ಗಿ ಏನೇ ಬರಲಿ ಒಗ್ಗಟ್ಟಿರಲಿ ದೇಶಭಕ್ತರು ಒಂದಾದರೆ ಅದೇ ಸುಗ್ಗಿ //ಬಾ// ಒಂದೆ ನಾಡು ಒಂದೆ ತಾಯಿ ನಾವೆಲ್ಲರೂ ಭಾರತಾಂಬೆ ಮಕ್ಕಳು ಹಿಂದು-ಮುಸ್ಲಿಂ ಯಾರೇ ಇರಲಿ ದೇಶದಲ್ಲಿ ನಾವೆಲ್ಲ ಒಂದೆ ಒಕ್ಕಲು! //ಬಾ// ————————- ಸುಭಾಸ್ ಜೀ ನಿಮಗೆ ಸಲಾಂ ಸುಭಾಸ್ ಜೀ ನಿಮಗೆ ಸಲಾಂ ಭಾರತಮಾತೆಯ ಪುತ್ರನೇ ಸಲಾಂ //ಸು// ಆಜಾದ್ ಹಿಂದ್ ಕಟ್ಟಿದ ಸೇನಾನಿ ನೀನು ಜೈ ಹಿಂದ್-ಎಂದು ಅಬ್ಬರಿಸಿದ ಶೂರ ನೀನು ಮರೆಯಲಾರೆವು ನಾವು ನಿನ್ನ ಎಂದಿಗೂ ನಮ್ಮ ಹೃದಯದಲ್ಲಿರುವೆ ನೀನು ಎಂದಿಗೂ //ಸು// ಸ್ವತಂತ್ರಕ್ಕಾಗಿ ದೇಶ-ದೇಶ ತಿರುಗಿದೆ ನೀನು ಬ್ರಿಟಿಶರನ್ನು ಹೊರ ಹಾಕಲು ಹವಣಿಸಿದೆ ನೀನು ದೂರಾದೆ ಗೆಳೆಯ ನೀನು  ತಿಳಿಯದಂತೆ ಸುಮ್ಮನೆ ಅರ್ಪಿಸುವೆವು ನಿನಗೆ ಇದೋ ಇದೋ ನಮ್ಮನೆ! //ಸು// —————————————— ಹೊಸ ಲೆಕ್ಕ ಒಂದು ಎರೆಡು ಮೂರು ಬಾಳಲಿ ಕಷ್ಟ ನೂರಾರು ನಾಕು ಐದು ಆರು ಎಲ್ಲಾ ಮೆಟ್ಟಿಲ ನೀ ಏರು ಏಳು ಎಂಟು ಒಂಭತ್ತು ಗೆಲ್ಲು ಜೀವನದ ಆಪತ್ತು! ಹತ್ತು ಹನ್ನೊಂದು ಹನ್ನೆರೆಡು ಸಾಧನೆಯ ಬೆನ್ನತ್ತಿ ಹೊರಡು ಹದಿಮೂರು ಹದಿನಾಲ್ಕು ಹದಿನೈದು ಶಿಕ್ಷಣ ಕಲಿತರೆ ಅಪಾಯ ಏನೂ ಬರದು!—————————————————— ಬಳ್ಳಿ ಮತ್ತು ಮರದ ಮಾತುಕತೆ ಆಕಾಶಕ್ಕೆ ಮುಖ ಮಾಡಿ ಒಂದು ಮರ ನಿಂತಿತ್ತು ಮರದ ಮೈಗೆ ಫ್ರೆಂಡಾಗಿ ಬಳ್ಳಿ ಹಬ್ಬಿತ್ತು ಬಳ್ಳಿ ಜೊತೆ ಮರಕ್ಕಂತು ಗುಡ್ ಫ್ರಂ ಶಿಪ್ಪು ಇವರಿಬ್ಬರನ್ನು ನೋಡಿ ಉಳಿದವರು ಗಪ್ ಚಿಪ್ಪು! ಹಬ್ತಾ ಹಬ್ತಾ ಬಳ್ಳಿ ಮೇಲೆ ಹೋಗಿತ್ತು ಪಕ್ಕದಲ್ಲೇ ಇದ್ದ ಲೈಟ್ ಕಂಬ ಮುಟ್ಟಿತ್ತು ಅಯ್ಯೋ ಅಯ್ಯೋ ಬಳ್ಳಿ ಅದರಲ್ಲಿದೆ ಕರೆಂಟು ಹುಷಾರು ಹೆಚ್ಚು ಕಮ್ಮಿ ಆದರೆ ನೀನ್ ಜೊತೆ ನಾನು ಢಮಾರು ಇಲ್ಲಪ್ಪ ಮರ-ರಾಯ ಹೆದರಬೇಡ ಅರಾಮಾಗಿರು ಜೀವನ ಅಂದ್ರೆ ಎಲ್ಲಾ ಇರುತ್ತೆ ಖುಷಿಯಾಗಿರು ಆದ್ರೂ ಕರೆಂಟಂದ್ರೆ ಭಯ ಅಲ್ವಾ ನೀ ಯಾಕ್ ಅಪ್ಪಿದೆ? ನೀನು ನನ್ನ ಫ್ರೆಂಡ್ ನಿನ್ ಧೈರ್ಯ ನಾನ್ ಒಪ್ಪಿದೆ ನಾವು ಒಳ್ಳೆಯವರಾದ್ರೆ ಲೋಕನೆ ಒಳ್ಳೆದಂತೆ ಸ್ನೇಹದಿಂದ ಇದ್ದರಂತು ಎಲ್ಲಾನು ಗೆಲ್ಲಬಹುದಂತೆ!——————————————————

ಮಕ್ಕಳದಿನದ ಸಂಭ್ರಮ Read Post »

ಕಾವ್ಯಯಾನ

ಕಾವ್ಯಯಾನ

ಅಂಬೇಡ್ಕರ್ ಕೆಂಪಗೆ ಕಣ್ಣು ಬಿಟ್ಟಿದ್ದಾರೆ ! ಬಿದಲೋಟಿ ರಂಗನಾಥ್ ನಮ್ಮ ನಾಡಿಮಿಡಿತದಲ್ಲಿರುವ ಅಂಬೇಡ್ಕರ್ ಕೆಂಪಗೆ ಕಣ್ಣು ಬಿಟ್ಟಿದ್ದಾರೆ ಅವರೇ ಜನ್ಮವಿತ್ತ ಸಂವಿಧಾನದ ಕೂಸು ಅವರದಲ್ಲವೆಂದವರ ವಿರುದ್ಧ. ಅಲ್ಪತಿಳಿದವರ ಕುತಂತ್ರ ಬೆಳೆಯುವ ಮಕ್ಕಳ ಮನಸುಗಳ ನೆಲದ ಮೇಲೆ ವಿಷ ಬೀಜ ಕುದಿಯುವ ರಕ್ತದಲಿ ಅಂಬೇಡ್ಕರ್ ಕಣ್ಣೀರು.! ಸುಡುತ್ತದೆ ಕೋಮುವಾದಿಗಳ ಲೇಖನಿಯನ್ನು ಹೊಲಸು ಮನಸನ್ನು ನೀವೆ ತೋಡುವ ಖೆಡ್ಡಕ್ಕೆ ನೀವೆ ಮುಗ್ಗರಿಸುವಿರಿ ಭೀಮನು ನಡೆದ ನೆಲ ಬೆವರುತ್ತಿದೆ ಅಪಮಾನ ಅವಮಾನದ ಕರುಳು ಸುಡುತ್ತ ಮನದಲಿ ಕುಂತ ಶಾಂತಿಯ ಪಾರಿವಾಳಕ್ಕೆ ರಕ್ತಪಾತದ ಕನಸು ಬೀಳುತ್ತಿದೆ ಇತಿಹಾಸ ತಿರುಚುವ ನಿಮ್ಮಗಳ ಕೈಯಲ್ಲಿ ಎಲ್ಲೋ ಮುಳ್ಳುಗಳು ನೆಲೆಯೂರಿರಬೇಕು ನಾಲಿಗೆಯು ಹುಣ್ಣಾಗಿರಬೇಕು ಮನಸು ಕೊಳಕಾಗಿ ಗಬ್ಬೆದ್ದು ನಾರುತ್ತಿರಬೇಕು .! ಅವನುಂಡ ನೋವು ನಮ್ಮದು ಕರುಳು ಕಲೆತ ಮನಸುಗಳಿಗೆ ಬೆಂಕಿ ಯಾಕೆ ಸೂಡುತ್ತೀರಿ ನರವಿಲ್ಲದ ನಾಲಿಗೆ ಮೇಲಿರುವ ಸುಳ್ಳಿನ ಬೀಜ ಮೊದಲು ಸುಡಿ ಹಾಲುಗೆನ್ನೆಯ ಮಕ್ಕಳ ಬೆಳಕಿನ ಮನಸಿಗೆ ಕತ್ತಲನ್ನೇಕೆ ಮೆತ್ತುತ್ತೀರಿ ? ಅಂಬೇಡ್ಕರ್ ಸರ್ವಕಾಲಿಕ ನಾಯಕ ಅವನೇ ಬರೆದ ಸಂವಿಧಾನವಿಲ್ಲದೇ ಹೋಗಿದ್ದರೆ ನಿಮ್ಮ ಗರಿ ಗರಿ ಬಟ್ಟೆಗಳು ಮಣ್ಣು ಮೆತ್ತಿ ಗೆದ್ದಲಹುಳು ಮುಕುರುತ್ತಿದ್ದವು. ಭೀಮನು ತುಳಿದ ಮಣ್ಣಹೆಜ್ಜೆ ನೆರಳಿಗೂ ಯೋಗ್ಯತೆಯಿಲ್ಲದ ಕುಬ್ಜ ಮನಸುಗಳೇ ಯಾರೋ ಹಾಕಿದ ಹಾರ ಹಾವಾಗುವ ಮುನ್ನ ಹಿಂಪಡಿಯಿರಿ ನೀವು ಬಿತ್ತಿದ ಸುಳ್ಳಿನ ಕೈಪಿಡಿ ಇಲ್ಲವೋ ಈ ನೆಲದ ಮನಸುಗಳ ನಿಟ್ಟುಸಿರು ವಿಧಾನ ಸೌಧದ ಕಲ್ಲುಗಳ ಮೇಲೆ ಕೂತು ಕುರ್ಚಿ ಕಾಲುಗಳೇ ಮುಗುಚಿ ಊನಾಗಿ ಹುಣ್ಣಾಗಬಹುದು.!

ಕಾವ್ಯಯಾನ Read Post »

ಅಂಕಣ ಸಂಗಾತಿ

ನಾನು ಕಂಡ ಹಿರಿಯರು.

ಪ್ರೋ.ಎ.ಎನ್.ಮೂರ್ತಿರಾವ್ ಡಾ.ಗೋವಿಂದ ಹೆಗಡೆ ಪ್ರೊ ಎ ಎನ್ ಮೂರ್ತಿರಾವ್ (೧೯೦೦-೨೦೦೩) ೧೯೮೭ರ ಒಂದು ದಿನ. ಮೈಸೂರಿನಲ್ಲಿ ನಾನು ಎಂ ಬಿ ಬಿ ಎಸ್ ಓದುತ್ತಿದ್ದ ಸಮಯ. ಅಂದು ಕಾಲೇಜಿನ ವಿದ್ಯಾರ್ಥಿ ಸಂಘದ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದವು. ಉದ್ಘಾಟನೆಗೆ ಬಂದವರು ೮೭ರ ಹರೆಯದ ವಾಮನಮೂರ್ತಿ ಪ್ರೊ.ಎ ಎನ್ ಮೂರ್ತಿರಾವ್. ಬಿಳಿಯ ಪಂಚೆ, ತುಂಬುತೋಳಿನ ಸಾದಾ ಅಂಗಿಯಲ್ಲಿದ್ದರು. ಅವರು ೧೯೮೪ರ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂಬುದನ್ನು ಬಿಟ್ಟರೆ ನನಗೂ ಹೆಚ್ಚು ಗೊತ್ತಿರಲಿಲ್ಲ. ಕಾರ್ಯದರ್ಶಿ ಅವರನ್ನು ಸ್ವಾಗತಿಸಿ ಪರಿಚಯಿಸಿ ಮಾತನಾಡಲು ವಿನಂತಿಸಿದರು. ಒಂದೆರಡು ವಾಕ್ಯಗಳನ್ನು ಅವರು ನುಡಿಯುವಷ್ಟರಲ್ಲಿ ಹಿಂದಿನ ಸಾಲಿನ ಹುಡುಗರ ಗದ್ದಲ, ಶಿಳ್ಳೆ, ಕೇಕೆ. ನಿರುಪಾಯರಾಗಿ ಅವರು ಮಾತು ನಿಲ್ಲಿಸಬೇಕಾಯಿತು. ಹಿರಿಯರನ್ನು ಕರೆದು ಅವಗಣಿಸಿದ ಮುಜುಗರ,ವ್ಯಥೆ ನನಗಂತೂ ಆಯಿತು. ಅವರ ಮಾತುಗಳನ್ನು ಕೇಳಲು ನಾನು ೧೯೯೦ರವರೆಗೂ ಕಾಯಬೇಕಾಯಿತು. ಈ ನಡುವೆ ಅವರ ‘ಅಪರವಯಸ್ಕನ ಅಮೆರಿಕಾ ಯಾತ್ರೆ’, ‘ದೇವರು’ ಮೊದಲಾದ ಪುಸ್ತಕಗಳನ್ನು ಓದಿ ಅವರನ್ನು ತುಸು ಹೆಚ್ಚು ಪರಿಚಯಿಸಿಕೊಂಡಿದ್ದೆ. ೧೯೯೦ರ ಜುಲೈ ಇರಬೇಕು.. ಮಹಾರಾಜಾ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಅವರ ೯೦ನೇ ಜಯಂತಿಯ ಪ್ರಯುಕ್ತ ಸನ್ಮಾನ ಕಾರ್ಯಕ್ರಮವೊಂದು ಏರ್ಪಾಡಾಗಿತ್ತು. ಅಲ್ಲಿ ಅವರ ಬಗ್ಗೆ ಮತ್ತು ಅವರದೇ ನುಡಿಗಳನ್ನು ಕೇಳಿದೆ. ಅವರ ಬರಹಗಳಂತೆಯೇ ಮೆಲುಮಾತು, ತಿಳಿ ಹಾಸ್ಯ ಅವರದು. ಇಂಗ್ಲಿಷ್ ಅಧ್ಯಾಪಕರಾಗಿ,ಮೈಸೂರು ಆಕಾಶವಾಣಿಯ ಎ ಎಸ್ ಡಿ(ಉಪನಿರ್ದೇಶಕರು) ಆಗಿ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಅವರು ಮಾಡಿದ ಕಾರ್ಯಗಳು ಪ್ರಶಂಸನೀಯ. ಚಿತ್ರಗಳು-ಪತ್ರಗಳು,ಅಪರವಯಸ್ಕನ ಅಮೆರಿಕ ಯಾತ್ರೆ, ಅಲೆಯುವ ಮನ, ಸಂಜೆಗಣ್ಣಿನ ಹಿನ್ನೋಟ, ದೇವರು ಮೊದಲಾದವು ಅವರ ಕೃತಿಗಳು. ‘ಚಿತ್ರಗಳು-ಪತ್ರಗಳು’ ಒಂದು ವಿಶಿಷ್ಟ ಕೃತಿ. ಮೊದಲ ಭಾಗದಲ್ಲಿ ತಾವು ಕಂಡ ಅನೇಕ ಹಿರಿಯರ ಚಿತ್ರಣಗಳನ್ನು ಅವರು ಒದಗಿಸಿದ್ದಾರೆ ಎರಡನೆಯ ಭಾಗದಲ್ಲಿ ಸಾಹಿತಿಗಳೊಂದಿಗಿನ ಪತ್ರ ವ್ಯವಹಾರವನ್ನು ದಾಖಲಿಸುತ್ತಾರೆ. ಈ ಪುಸ್ತಕ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದು ಕೊಟ್ಟಿದೆ. ‘ಅಪರವಯಸ್ಕನ ಅಮೆರಿಕ ಯಾತ್ರೆ’ ಕನ್ನಡದಲ್ಲಿ ಬಂದ ಪ್ರವಾಸ ಕಥನಗಳ ಪೈಕಿ ಅಪೂರ್ವವಾದದ್ದು. ಇಂಗ್ಲಿಷ್ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾಗಿ, ಇಂಗ್ಲಿಷ್ ಪ್ರೊಫೆಸರ್ ಆಗಿ ಬದುಕಿದ ರಾಯರು ಬಿಡುಗಣ್ಣಿನ ಮೂಲಕ ತಾವು ಕಂಡ ಅಮೇರಿಕಾದ ನೆನಪುಗಳನ್ನು ದಾಖಲಿಸುತ್ತ, ಜೊತೆಗೆ ತಮ್ಮ ಓದಿನಿಂದ, ನೆನಪುಗಳಿಂದ ಅಪೂರ್ವ ಒಳನೋಟಗಳನ್ನು ನೀಡುತ್ತ ಮೌಲಿಕ ಗ್ರಂಥವನ್ನು ನಮಗೆ ನೀಡಿದ್ದಾರೆ. ‘ಸಂಜೆಗಣ್ಣಿನ ಹಿನ್ನೋಟ’ ಅವರ ಆತ್ಮಕಥನ. ಶತಾಯುಷಿ ರಾಯರು ತಮ್ಮ ನಿಡುಗಾಲದ ಬದುಕಿನಲ್ಲಿ ಕಂಡ ಹಲವು ಏಳುಬೀಳುಗಳನ್ನು ತುಂಬಾ ಸ್ವಾರಸ್ಯಕರವಾಗಿ ನಿರೂಪಿಸಿದ್ದಾರೆ. ‘ದೇವರು’ ಅತ್ಯಂತ ಚರ್ಚೆಗೊಳಗಾದ ವೈಚಾರಿಕ ಕೃತಿ. ನಾಸ್ತಿಕರಾದ ರಾಯರು ತಮ್ಮ ವಿಚಾರಧಾರೆಯನ್ನು ಓದುಗರ ಮೇಲೆ ಹೇರುವುದಿಲ್ಲ. ಬದಲಾಗಿ ದೇವರ ಬಗೆಗಿನ ನಮ್ಮ ಪರಿಕಲ್ಪನೆಗಳನ್ನು ವಿಸ್ತರಿಸುತ್ತಾರೆ, ಪ್ರಶ್ನಿಸುತ್ತಾರೆ. “ದೇವರು ಬೇಕು,ಆದರೆ ಅವನಿಲ್ಲ” ಎಂಬ ಕೊನೆಯ ಅಧ್ಯಾಯ ಅವರ ಮನೋಧರ್ಮದ ಪರಿಪಾಕವಾಗಿದೆ. ಈ ಪುಸ್ತಕ ಅವರಿಗೆ ಪಂಪ ಪ್ರಶಸ್ತಿಯನ್ನು ತಂದುಕೊಟ್ಟಿತು. ಅಲೆಯುವ ಮನ, ಹಗಲುಗನಸುಗಳು, ಮಿನುಗು- ಮಿಂಚು ಮೊದಲಾದ ಲಲಿತ ಪ್ರಬಂಧಗಳ ಸಂಕಲನಗಳಲ್ಲಿ ತಮಗೆ ವಿಶಿಷ್ಟವಾದ ನವಿರಾದ ಹಾಸ್ಯಪ್ರಜ್ಞೆ, ವಿಸ್ತಾರವಾದ ಓದಿನಿಂದ ನೀಡುವ ಮಾಹಿತಿ, ಲವಲವಿಕೆಯ ಶೈಲಿ,ಹೀಗೆ ಮೂರ್ತಿರಾಯರು ಕನ್ನಡ ಲಲಿತ ಪ್ರಬಂಧ ಪ್ರಕಾರದ ಶಿಖರ ಎನ್ನಬಹುದು. ಶೇಕ್ಸ್ಪಿಯರ್, ಬಿ ಎಂ ಶ್ರೀ, ಸಾಕ್ರೆಟೀಸನ ಕೊನೆಯ ದಿನಗಳು, ಪಾಶ್ಚಾತ್ಯ ಸಣ್ಣ ಕಥೆಗಳು ಜನತಾ ಜನಾರ್ದನ, ಯೋಧನ ಪುನರಾಗಮನ, ಗಾನ ವಿಹಾರ, ಪೂರ್ವಸೂರಿಗಳೊಡನೆ, ಆಷಾಡಭೂತಿ- ಹೀಗೆ ಜೀವನ ಚರಿತ್ರೆಗಳು, ನಾಟಕ ,ಅನುವಾದ ವೈಚಾರಿಕ ಬರಹ ಎಲ್ಲದರಲ್ಲೂ ಮೂರ್ತಿರಾಯರು ಪ್ರಥಮ ದರ್ಜೆಯ ವ್ಯವಸಾಯ ಮಾಡಿದ್ದಾರೆ. ಸಹಜವಾಗಿಯೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ೧೯೮೪ರಲ್ಲಿ ಅವರಿಗೆ ಒಲಿದು ಬಂತು. ೨೦೦೩ರಲ್ಲಿ ನಮ್ಮನ್ನು ಅಗಲಿದ ಮೂರ್ತಿರಾಯರು ಸಂಗೀತ ಪ್ರೀತಿ, ಸಾಹಿತ್ಯ ಪ್ರೀತಿ, ಜೀವನಪ್ರೀತಿ ಮುಪ್ಪುರಿಗೊಂಡು ಮಾಗಿದ ಜೀವ. ಮೊದಲ ಸಲ ಅವರನ್ನು ಕಂಡಾಗ ಮಾತು ಕೇಳಿಸಿಕೊಳ್ಳಲು ಆಗದ ಬಗ್ಗೆ ಮೇಲೆ ಬರೆದಿದ್ದೇನೆ. ತಮ್ಮ ಬರಹಗಳ ಮೂಲಕ ಮೂರ್ತಿರಾಯರು ಸದಾ ನಮ್ಮೊಡನೆ ಮಾತನಾಡುತ್ತಾರೆ. ನಾವು ಕೇಳಿಸಿಕೊಳ್ಳಬೇಕು ಅಷ್ಟೇ. ಪ್ರೊ ಎ ಎನ್ ಮೂರ್ತಿರಾವ್ ಅವರ ಕೃತಿಗಳು: ಆಷಾಡಭೂತಿ (ಅನುವಾದ) ದೇವರು ಅಲೆಯುವ ಮನ ಅಪರವಯಸ್ಕನ ಅಮೆರಿಕ ಯಾತ್ರೆ ಸಂಜೆಗಣ್ಣಿನ ಹಿನ್ನೋಟ ಹಗಲುಗನಸುಗಳು ಮಿನುಗು ಮಿಂಚು ಜನತಾ ಜನಾರ್ದನ ಮಹಾಭಾರತದಲ್ಲಿ ಕೇಡು ಎಂಬುದರ ಸಮಸ್ಯೆ ಗಾನ ವಿಹಾರ ಸಾಹಿತ್ಯ ಮತ್ತು ಸತ್ಯ ಹೇಮಾವತಿ ತೀರದ ತವಸಿ ಪೂರ್ವಸೂರಿಗಳೊಡನೆ ಶೇಕ್ಸ್ ಪಿಯರ್ ಬಿ ಎಂ ಶ್ರೀಕಂಠಯ್ಯ ಚಿತ್ರಗಳು- ಪತ್ರಗಳು ಸಾಕ್ರೆಟೀಸನ ಕೊನೆಯ ದಿನಗಳು ಯೋಧನ ಪುನರಾಗಮನ ಮತ್ತು ಅನೇಕ ಪ್ರಬಂಧ ಸಂಕಲನಗಳು.

ನಾನು ಕಂಡ ಹಿರಿಯರು. Read Post »

ಕಾವ್ಯಯಾನ

ಕಾವ್ಯಯಾನ

ಪಯಣ ಶಂಭುಗೌಡ.ಆರ್.ಗಂಟೆಪ್ಪಗೌಡ್ರ) ಬೆವರ ಬಸಿಯಬಹುದೇ ಹೇಳು ನೀನು ಶ್ರಮದ ಕವಾಟ ತಟ್ಟದೇ “ಬೆಳಕು” ಕತ್ತಲ ಸಮಾದಿಯ ಮೇಲೊಬ್ಬ ಗೊತ್ತಿಲ್ಲದೇ ಇಟ್ಟು ಹೋದ ಮೊಗ್ಗಲ್ಲದ ಹೂ “ಪ್ರೀತಿ” ಮುಚ್ಚಿದ ಕಣ್ಣೊಡಲೊಳಗಿನ ದಿವ್ಯ ಚೇತನ ಬೆಳಕು ಮತ್ತೆ ಪ್ರೀತಿ ಸಂಗತಿ ಎರಡಾದರೂ ಬೆಳಗುವ ತತ್ವವೊಂದೇ, ಬದುಕೊಂದು ಎರಡು ಬಾಗಿಲು ತೆರೆದರೊಂದು ಮುಚ್ಚುವುದು ಮತ್ತೊಂದು ತೆಗೆದು ಮುಚ್ಚುವ ಮಧ್ಯೆ ತನ್ನ ತನವ ಬಚ್ಚಿಟ್ಟು ಪರರ ಮೆಚ್ಚಿಸುವ ಬಣ್ಣದಾಟವೇನು ಬದುಕು ಹೇಳು ನೀನು ; ಕಾಣದವನ ಸೂತ್ರಗಳ ಬೀಜಾಕ್ಷರಗಳು ನಾವು ಒಬ್ಬರನ್ನೊಬ್ಬರು ಕೂಡಲೂ ಬಹುದು ಇಲ್ಲವೇ ಒಬ್ಬರೊಳಗೊಬ್ಬರು ಕಳೆದು ಹೋಗಲೂ ಬಹುದು “ಬದುಕು” ಯಾರೋ ಕಟ್ಟಿಟ್ಟ ಮತ್ಯಾರೋ ಜೀಕುವ ಜೋಕಾಲಿ

ಕಾವ್ಯಯಾನ Read Post »

ಕಥಾಗುಚ್ಛ

ಲಹರಿ

ಖಾಸಗಿ ಬಸ್ ಪಯಣ ಜಿ.ಹರೀಶ್ ಬೇದ್ರೆ ಇದು ನಿಮ್ಮ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಇದನ್ನು ಓದಿದ ಮೇಲಾದರೂ ಗಮನಿಸಿ, ನಾನು ಹೇಳಿದ್ದು ನಿಜವೆನಿಸಿ ನೀವು ನಗದಿದ್ದರೆ ಹೇಳಿ. ಅಂಥಹ ವಿಚಾರ ಏನೂ ಅಂತೀರಾ, ಅದೇ ಬಸ್ಸಗಳು ಹಾಗೂ ಅದರಲ್ಲಿನ ಸಂಚಾರ. ಅದರಲ್ಲಿ ಸಿಗುವ ವಿವಿಧ ರೀತಿಯ ಅನುಭವಗಳು. ನೋಡಿ ಸರ್ಕಾರಿ ಬಸ್ಸುಗಳು ತುಂಬಾ ಗೌರವಸ್ಥ ಹೆಣ್ಣಿನಂತೆ ನಿಲ್ದಾಣಕ್ಕೆ ಬಂದು ಊರಿಂದ ಊರಿಗೆ ಹೋದರೆ, ಖಾಸಗಿ ಬಸ್ಸುಗಳು ಆಗ ತಾನೇ ಪ್ರಾಯಕ್ಕೆ ಬಂದ ಹುಡುಗಿ ಎಲ್ಲರೂ ತನ್ನನೇ ನೋಡಲೆಂದು ವೈಯರ ಮಾಡುವಂತೆ, ನಿಲ್ದಾಣಕ್ಕೆ ಬರುವಾಗ ಅತೀ ವೇಗವಾಗಿ ಬರುತ್ತಾ, ಜೋರಾಗಿ ಹಾರನ್ ಮಾಡುತ್ತಾ, ಪ್ರತಿಯೊಬ್ಬರೂ ಗಮನಿಸುವಂತೆ ಬರುತ್ತವೆ. ನಾವೇನಾದರೂ ಅವು ಒಳಬಂದ ವೇಗವನ್ನು ಗಮನಿಸಿ, ಹೋಗಬೇಕಾದ ಸ್ಥಳಕ್ಕೆ ಬೇಗ ಸೇರುತ್ತೇವೆ ಅಂದುಕೊಂಡರೆ, ಅದು ನಮ್ಮ ಭ್ರಮೆ ಮಾತ್ರ. ನಂತರ ತಾನು ಸಾಗುವ ಮಾರ್ಗವಾಗಿ ಬರುವವರನ್ನು ಹತ್ತಿಸಿಕೊಂಡು, ಬಸ್ಸ್ ನಿಲ್ದಾಣದಿಂದ ಊರ ಹೊರಗಿನವರೆಗೂ ಹೊಸದಾಗಿ ಮದುವೆಯಾದ ಹುಡುಗಿ ಮದುವೆಯಾದ ನಂತರ ಮೊದಲಬಾರಿ ತವರು ಮನೆಗೆ ಬಂದು ಹೊರಹೊರಟಾಗ ಹೇಗೆ ನಿಧಾನವಾಗಿ ಹೆಜ್ಜೆ ಹಾಕುತ್ತಾ, ದಾರಿಯಲ್ಲಿ ಸಿಕ್ಕ ಪರಿಚಯದವರಿಗೆ ಮಾತನಾಡಿಸುತ್ತ ಸಾಗಿದಂತೆ, ಪ್ರಯಾಣಿಕರು ಕೈತೋರಿಸಿದ ಜಾಗದಲ್ಲೆಲ್ಲಾ ನಿಲ್ಲಿಸಿ, ಅವರನ್ನು ಹತ್ತಿಸಿಕೊಂಡು ಸಾಗುತ್ತವೆ. ತಾನು ಸಾಗುವ ಮಾರ್ಗ ಮಧ್ಯದಲ್ಲಿ ಸಿಗುವ ಊರುಗಳಲ್ಲಿ ಇಳಿಯುವ ಜನರನ್ನು ಇಳಿಸಿ, ಬರುವವರನ್ನು ಹತ್ತಿಸಿಕೊಂಡು ಮುಂದೆ ಸಾಗುತ್ತವೆ. ನಿಜ ಹೇಳಬೇಕೆಂದರೆ, ತಮ್ಮ ಗಮ್ಯವನ್ನು ತಲುಪುವ ಹೊತ್ತಿಗೆ ಬಸ್ಸಿನೊಳಗೆ ಹೆಜ್ಜೆ ಇಡಲು ಸಾಧ್ಯವಾಗದಷ್ಟು ಪ್ರಯಾಣಿಕರು ತುಂಬಿರುತ್ತಾರೆ. ಆಗ ತಾನೇತಾನಾಗಿ ಬಸ್ಸಿನ ವೇಗವೂ ಕಡಿಮೆಯಾಗಿರುತ್ತದೆ. ಇದನ್ನು ನೋಡಿದಾಗ ತುಂಬಿದ ಬಸುರಿ ಹೆಜ್ಜೆ ಹಾಕಲು ಸಾಧ್ಯವಾಗದೆ ನಿಧಾನವಾಗಿ ನಡೆದಂತೆ ಅನಿಸುತ್ತದೆ. ಬಸ್ಸಿನ ಒಳಗೆ ಜಾಗವಿಲ್ಲವೆಂದು ಯಾರನ್ನೂ ಬಿಟ್ಟು ಹೋಗುವಂತಿಲ್ಲ. ಹಾಗೇನಾದರು ಮಾಡಿದರೆ ಡ್ರೈವರ್, ಕಂಡಕ್ಟರ್ ಜೊತೆಗೆ ಬಸ್ಸಿಗೂ ಕಲ್ಲಿನ ಏಟು ಬೀಳಬಹುದು. ಅದಕ್ಕಾಗಿ ಕಂಡಕ್ಟರ್ ಯಾರನ್ನು ಬಿಟ್ಟು ಹೋಗುವ ಮನಸ್ಸು ಮಾಡುವುದಿಲ್ಲ. ಅಲ್ಲದೆ ತುಂಬಿದ ಬಸ್ಸಿನಲ್ಲಿ ಜಾಗ ಇರದಿದ್ದರೂ, ಮತ್ತೆ ಮತ್ತೆ ಪ್ರಯಾಣಿಕರನ್ನು ಒಳಗೆ ಹತ್ತಿಸಿಕೊಳ್ಳುವುದನ್ನು ನೋಡುವುದೇ ಚೆನ್ನ. ಅವನಿಗೆ ಗೊತ್ತಿರುತ್ತದೆ ಒಳಗಡೆ ಜಾಗವಿಲ್ಲವೆಂದೂ, ಹಾಗಿದ್ದೂ ಯಾರ್ರೀ ಅದೂ ಸ್ವಲ್ಪ ಒಳಗೆ ದಾಟಿ, ಪಾಪ ವಯಸ್ಸಾದ ಅಜ್ಜಿ ಜಾಗ ಬಿಡಿ, ಹೇ ಸಣ್ಣ ಮಕ್ಕಳು ಮಹಾರಾಯ ಹೆಚ್ಚುಕಮ್ಮಿಯಾದರೆ ಕಷ್ಟ ಒಳಗೆ ಕರೆದುಕೊಳ್ಳಿ ಮುಂತಾಗಿ ಹೇಳುತ್ತಾ ಇರದ ಜಾಗದೊಳಗೆ ಜಾಗ ಮಾಡುತ್ತಾನೆ. ಬಸ್ಸು ಹೊರಟಾಗ ಪ್ರಯಾಣಿಕರು ಎಲ್ಲಿಬೇಕೊ, ಹೇಗೆ ಬೇಕೋ ಹಾಗೆ ಕುಳಿತಿರಬಹುದು. ಪ್ರಯಾಣ ಸಾಗಿದಂತೆ ಮೊದಲು ಎಲ್ಲಾ ಅಸನಗಳು ರಾತ್ರಿಯಾಗುತ್ತದೆ. ಆಗ ಹತ್ತುವ ಜನರು ತಮಗೆ ಸರಿ ಎನಿಸಿದ ಅಸನವನ್ನೋ, ಕಂಬಿಯನ್ನೋ ಹಿಡಿದು ನಿಲ್ಲುತ್ತಾರೆ. ಅದು ತಾತ್ಕಾಲಿಕ, ಬರಬರುತ್ತ ನಿಂತವರು ಹಿಂದೆಮುಂದೆ ಸರಿಯಬೇಕಾಗುತ್ತದೆ. ಆಗ ಕುಳಿತವರಿಗೂ ನಿಂತವರಿಗೂ ಜಗಳವಾಗುವ ಸಾಧ್ಯತೆ ಇರುತ್ತದೆ. ಕುಳಿತವರು ಸರಿಯಾಗಿ ನಿಲ್ಲಿ ಎಂದರೆ, ನಿಂತವರು ಹೇಗೆ ನಿಲ್ಲಬೇಕು ಬನ್ನಿ ತೋರಿಸಿ, ನಮ್ಮ ಕಷ್ಟ ನಿಮಗೇನು ಗೊತ್ತು ಎಂದೊ, ಮುಂತಾಗಿ ಮಾತುಗಳಾಗುತ್ತವೆ. ಕೆಲವೊಮ್ಮೆ ಕಿಡಿಗೇಡಿಗಳು ಬೇಕೆಂದೇ ತೊಂದರೆ ಮಾಡಿದಾಗ ಇರದ ಜಾಗದಲ್ಲಿ ನಿಂತು ಪರಸ್ಪರ ಜಗಳವಾಡುವುದು ಅರ್ಜುನ ಮತ್ತು ಬಬ್ರುವಾಹನರ ‘ಯಾರು ತಿಳಿಯರು ನನ್ನ ಭುಜಬಲದ ಪರಕ್ರಾಮ’ ನೆನಪಿಸುತ್ತದೆ. ಇನ್ನೇನು ಇಬ್ಬರೂ ಕೈ ಮೀಲಾಯಿಸುತ್ತಾರೆ ಎಂದು ನಾವು ಕದನ ಕುತೂಹಲಿಗಳಾಗಿ ಕಾಯುವಾಗ ಅವರಿವರ ಮಧ್ಯಸ್ಥಿಕೆಯಿಂದ ತಣ್ಣಗಾಗಿ ಬಿಡುತ್ತದೆ. ಜಗಳವಾಡಿದವರಿಗೂ ಇದೇ ಬೇಕಾಗಿರುತ್ತದೆ ಎಂದು ನನ್ನ ಅನುಮಾನ. ಈ ಜಗಳ ಒಂದು ರೀತಿಯದಾದರೆ, ಹಿಂದೆ ಮುಂದೆ ನಿಂತ ಸ್ನೇಹಿತ, ಸ್ನೇಹಿತೆಯರು ಮಾತನಾಡಲು ಪರದಾಡುವುದು ನೋಡಲು ಬಹಳ ಖುಷಿಯಾಗುತ್ತದೆ. ಇದಕ್ಕಿಂತ ಯುವಕರು ತಮ್ಮ ತಮ್ಮ ಹುಡುಗ, ಹುಡುಗಿಯರನ್ನು ಕದ್ದು ನೋಡುವುದು ಒಂದೆಡೆಯಾದರೆ, ಪ್ರೇಮಿಗಳು ಒಂದೆಕಡೆ ಇದ್ದಾಗ ಸುತ್ತಲಿನ ಜನರನ್ನು ಮರೆತು ತಮ್ಮದೇ ಪ್ರಪಂಚದಲ್ಲಿರುವುದು, ಅಕಸ್ಮಾತ್ ಹಿಂದೆ ಮುಂದೆ ದೂರದಲ್ಲಿದ್ದರೆ ಪರಸ್ಪರ ನೋಡಲು, ಮಾತನಾಡಲು ಪಡುವ ಕಷ್ಟ ನೋಡಲು ಎರಡು ಕಣ್ಣು ಸಾಲದು. ತುಂಬಿದ ಬಸ್ಸಿನಲ್ಲಿ ಸೆಕೆಯಾಗಿ ಕಿಟಕಿ ತೆರೆದು ಕುಳಿತಿರುವಾಗ, ಮುಂದಿನ ಅಸನಗಳಲ್ಲಿ ಕುಳಿತವರು ಬಸ್ಸು ಚಲಿಸುವಾಗ ಎಲೆ ಅಡಿಕೆ, ಗುಟುಕ, ತಂಬಾಕು ಹಾಕಿಕೊಂಡವರು.ಉಗಿದರಂತು, ಹಿಂದೆ ಕುಳಿತವರ ಸ್ಥಿತಿ ದೇವರಿಗೆ ಪ್ರೀತಿ. ಅದೂ ಅವರೇನಾದರೂ ಯಾವುದಾದರೂ ಕಾರ್ಯಕ್ರಮಕ್ಕೊ, ಮುಖ್ಯವಾದ ಕೆಲಸಕ್ಕೂ ತಯಾರಾಗಿ ಹೊರಟಿರಬೇಕು, ಜೊತೆಗೆ ಬೇರೆ ಬಟ್ಟೆಯು ಅವರ ಬಳಿ ಇರಬಾರದು, ಅವರ ಪರಿಸ್ಥಿತಿ ಹೇಗಿರಬಹುದು ಯೋಚಿಸಿ. ವಾಂತಿಯಾದರಂತೂ ಗಲೀಜಿನ ಜೊತೆ ಆ ಕಮಟು ವಾಸನೆ ಹೇಗಿರಬಹುದೆಂದು ನೀವೇ ಊಹಿಸಿಕೊಳ್ಳಿ. ಒಂದೊಮ್ಮೆ ವಾಂತಿ ಬಸ್ಸಿನ ಒಳಗಡೆಯೇ ಮಾಡಿಕೊಂಡರೂ, ಎಷ್ಟೇ ತುಂಬಿದ ಬಸ್ಸಾದರೂ ಜನ ಅಷ್ಟು ಜಾಗ ಬಿಟ್ಟು ನಿಲ್ಲುವುದನ್ನು ನೋಡಿದರೆ, ಆ ಹೊಂದಣಿಕೆ ಸೋಜಿಗವೆನಿಸುತ್ತದೆ. ಇಷ್ಟೆಲ್ಲಾ ಅವಂತರಗಳ ಜೊತೆಗೆ, ನಿಲ್ಲಲೂ ಜಾಗವಿಲ್ಲದಿದ್ದರು ಜನ ಹತ್ತಿದಾಗ, ಕಂಕುಳಲ್ಲಿದ್ದ ಪುಟ್ಟ ಮಕ್ಕಳು ಕುಳಿತವರ ತೊಡೆ ಎರುತ್ತವೆ. ಅನ್ಯರೊಂದಿಗೆ ಮಗು ಕೂರದಿದ್ದಾಗ ಅನಿವಾರ್ಯವಾಗಿ ಕುಳಿತವರು ನಿಂತು ತಾಯಿ ಮತ್ತು ಮಗುವಿಗೆ ಜಾಗ ಬಿಟ್ಟುಕೊಡಬೇಕಾಗುತ್ತದೆ. ನಾವು ಪಯಣಿಸುವ ಸಮಯ ಶಾಲಾ ಕಾಲೇಜುಗಳ ಆರಂಭ ಅಥವಾ ಮುಕ್ತಾಯದ ವೇಳೆ ಆಗಿದ್ದರೆ, ಆ ಮಕ್ಕಳ ಹೆಣ ಭಾರದ ಚೀಲಗಳು ಕುಳಿತವರ ತೊಡೆಯನ್ನು ಅಲಂಕರಿಸುತ್ತವೆ. ಈ ಎಲ್ಲಾ ಅವಾಂತರಗಳ ಜೊತೆ ಮುಂದೆ ಸಾಗಿದ ಬಸ್ಸು ನಿಗದಿತ ಊರಿನ ನಿಲ್ದಾಣ ತಲುಪಿದಾಗ, ಮಗುವನ್ನು ಹೆತ್ತ ತಾಯಿ ನಿಟ್ಟುಸಿರು ಬಿಟ್ಟಂತೆ ಬಿಟ್ಟು ನಿಂತು ತನ್ನ ಒಡಲನ್ನು ಖಾಲಿ ಮಾಡಿಕೊಳ್ಳುತ್ತದೆ. ಅಷ್ಟು ಹೊತ್ತು ಬಸ್ಸಿನೊಳಗೆ ಇದ್ದ ಜನ ಇಳಿದು ತಮ್ಮ ಕಾಯಕದೆಡೆಗೆ ಹೆಜ್ಜೆ ಹಾಕಿದರೆ, ಅದೇ ಬಸ್ಸು ಹೊಸ ಪ್ರಯಾಣಿಕರನ್ನು ಹೊತ್ತು, ಹೊಸ ಅನುಭವ ನೀಡಲು ತನ್ನ ಮಾರ್ಗದಲ್ಲಿ ಸಾಗುತ್ತದೆ. ಇಂತಹ ಸುಂದರ ಅನುಭವ ಪಡೆಯಬೇಕೆಂದರೆ ನಾವು, ಖಾಸಗಿ ಬಸ್ಸುಗಳಲ್ಲಿ ಗ್ರಾಮಂತರ ಪ್ರದೇಶಗಳ ಕಡೆ ಹೋಗಬೇಕು. ……‌

ಲಹರಿ Read Post »

ಕಾವ್ಯಯಾನ

ಕಾವ್ಯಯಾನ

ಬಿಕರಿ ಡಾ.ಗೋವಿಂದ ಹೆಗಡೆ ಇಲ್ಲಿ ಪ್ರೀತಿ ಸಿಗುತ್ತದೆ’ ಬೋರ್ಡು ಹಾಕಿ ಕುಳಿತಿದ್ದೇನೆ ಯಾರೊಬ್ಬರೂ ಸುಳಿಯುತ್ತಿಲ್ಲ.. ಅದೇನು, ಕೋವಿಯಂಗಡಿ ಮುಂದೆ ಅಷ್ಟೊಂದು ಸರತಿಯ ಸಾಲು!

ಕಾವ್ಯಯಾನ Read Post »

ಅಂಕಣ ಸಂಗಾತಿ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

ಡಾ.ಸಣ್ಣರಾಮ ಹಿಂದಿನ ವಾರದ ಮುಂದುವರೆದ ಭಾಗ ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆ ವೈಶಿಷ್ಟ್ಯಪೂರ್ಣವಾದುದು. ಈ ಜಿಲ್ಲೆಯಲ್ಲಿ ಸದ್ಯ ಏಳು ತಾಲ್ಲೂಕುಗಳಿವೆ. ಅವುಗಳಲ್ಲಿ ನಾಲ್ಕು ಅತೀ ಹೆಚ್ಚು ಮಳೆಯಾಗುವ ತಾಲ್ಲೂಕುಗಳಾದರೆ, ಮೂರು  ಸಾಧಾರಣ ಮಳೆಯಾಗುವ ತಾಲ್ಲೂಕುಗಳು. ದಕ್ಷಿಣ ಭಾರತದ ‘ಚಿರಾಪುಂಜಿ’ ಎಂದು ಪ್ರಖ್ಯಾತವಾಗಿರುವ ಆಗುಂಬೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿದೆ. ದಟ್ಟ ಮಲೆನಾಡು ಅರೆಮಲೆನಾಡು ಭಾಗಗಳು ಜಿಲ್ಲೆಗೆ ಪ್ರಾಕೃತಿಕ, ಸಾಂಸ್ಕೃತಿಕ ವೈಶಿಷ್ಟತೆಯನ್ನು ತಂದುಕೊಟ್ಟಿದೆ. ಭಾಷೆಯ ಬಳಕೆಯಲ್ಲಿಯೂ ಈ ಏಳು ತಾಲ್ಲೂಕುಗಳು ಸೂಕ್ಷ್ಮವಾಗಿ ಭಿನ್ನತೆ ಕಂಡು ಬರುತ್ತದೆ. ಈ ಭಿನ್ನತೆ ಮತ್ತು ವೈಶಿಷ್ಟತೆ ಅಲ್ಲಿನ ಜನರಲ್ಲಿ ವೈಚಾರಿಕ ಶಕ್ತಿಯನ್ನು ಜಾಗ್ರತಗೊಳಿಸಿ ಚಿಂತನಾಶೀಲರನ್ನಾಗಿ, ಸಂವೇದನಾಶೀಲರನ್ನಾಗಿ ಮಾಡಿದೆ. ಸಾಹಿತ್ಯ ರಚನೆಯಲ್ಲಿಯೂ ಶಿವಮೊಗ್ಗ ಜಿಲ್ಲೆ ಇತರೆಲ್ಲಾ ಜಿಲ್ಲೆಗಳಿಗಿಂತ ಒಂದು ಕೈ ಮೇಲೆ ಎನ್ನಬಹುದು. ಇದುವರೆಗೆ ಕರ್ನಾಟಕಕ್ಕೆ ಲಭ್ಯವಾಗಿರುವ ಎಂಟು ಜ್ಞಾನಪೀಠಗಳಲ್ಲಿ ಮೂರು ಜ್ಞಾನಪೀಠಗಳನ್ನು ಕೊಟ್ಟ  ಶ್ರೇಯಸ್ಸು ಶಿವಮೊಗ್ಗ ಜಿಲ್ಲೆಯದು. ಈ ಎಲ್ಲಾ ಕಾರಣಗಳಿಂದಾಗಿ ಇಲ್ಲಿ ಜನಪರ ಚಳವಳಿಗಳು ಹುಟ್ಟಿವೆ. ಅಲ್ಲದೆ ಇಂದಿಗೂ ಕ್ರಿಯಾಶೀಲವಾಗಿದೆ.   ಶಿವಮೊಗ್ಗ ಜಿಲ್ಲೆಯ ಚಳವಳಿಗಳಿಗೆ ಸುದೀರ್ಘ ಇತಿಹಾಸವಿದೆ. ಕರ್ನಾಟಕದಲ್ಲಿ ಸಾಮಾಜಿಕ, ಸಾಹಿತ್ಯಕ ಕ್ರಾಂತಿಗೆ ನಾಂದಿ ಹಾಡಿದ ೧೨ನೇ ಶತಮಾನದ ಶರಣ ಚಳವಳಿಯಿಂದಲೇ ಶಿವಮೊಗ್ಗ ಚಳವಳಿಯ ಬೇರನ್ನು ಗುರುತಿಸಬಹುದು. ಶರಣ ಚಳವಳಿಯಲ್ಲಿ ತಮ್ಮ ಮೇರು ಸದೃಶ್ಯ ಚಿಂತನೆಯಿಂದ ಗಮನ ಸೆಳೆದ ಮಹಾಶರಣ ಎಂದರೆ ಅಲ್ಲಮ ಪ್ರಭುಗಳು. ಹರಿಹರನ ಕಾಲದಿಂದಲೂ ಅಲ್ಲಮಪ್ರಭುವಿನ ಜೀವನವನ್ನು  ಆಧರಿಸಿದ ನೂರಾರು ಕೃತಿಗಳು, ನಡುಗನ್ನಡ ಮತ್ತು ಆಧುನಿಕ ಕನ್ನಡ ಸಾಹಿತ್ಯದಲ್ಲಿವೆ. ಅಲ್ಲದೆ ಸ್ವತಃ ಪ್ರಭುದೇವರು ಬರೆದಿರುವ ವಚನಗಳು ಅವರ ಜೀವನ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಸಹಕರಿಸುತ್ತವೆ. ಇಂತಹ ವಿಶ್ವಮಾನ್ಯ ಶರಣ ಶಿವಮೊಗ್ಗ ಜಿಲ್ಲೆಯಲ್ಲಿದ್ದಾನೆಂಬುದು  ಹೆಮ್ಮೆಯ ಸಂಗತಿಯಾಗಿದೆ.    ಅಲ್ಲಮ ಪ್ರಭು ಹುಟ್ಟಿದ್ದು ಶಿವಮೊಗ್ಗ  ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ ಎಂಬ ಗ್ರಾಮದಲ್ಲಿ. ಹನ್ನೆರಡನೆ ಶತಮಾನದಲ್ಲಿ ಬಳ್ಳಿಗಾವಿ “ಬನವಸೆ ಹನ್ನೆರಡು ಸಾವಿರ” ಎಂಬ ಒಂದು ದೊಡ್ಡ ಆಡಳಿತ ವಿಭಾಗದ ಮುಖ್ಯ ಸ್ಥಳವಾಗಿತ್ತು. ವೀರಶೈವರ ಕಾಳಮುಖ ಪಂಥದ ಕೇಂದ್ರ ಸ್ಥಾನವಾಗಿತ್ತು. ಚಾಮರಸ ಹೇಳುವಂತೆ ಅಲ್ಲಮಪ್ರಭುವಿನ ತಂದೆ ತಾಯಿಯರ ಹೆಸರು ‘ನಿರಹಂಕಾರ ಸುಜ್ಞಾನಿ’ ದೇವಸ್ಥಾನದಲ್ಲಿ ಮದ್ದಳೆ ಸೇವೆಯನ್ನು ಸಲ್ಲಿಸುತ್ತಿದ್ದ ಪ್ರಭುಗಳು ಪ್ರಾಯಕ್ಕೆ ಬರುತ್ತಿದ್ದಂತೆ ಮದ್ದಳೆ ನುಡಿಸುವ ಕಲೆಯನ್ನು ತುಂಬಾ ಪ್ರಾವಿಣ್ಯ ಪಡೆದಿದ್ದ. ಅವನ ಮದ್ದಳೆ ಬಾರಿಸುವ ನೈಪುಣ್ಯಕ್ಕೆ ಮನಸೋತು ‘ಕಾಮಲತೆ’ ಎಂಬ ಸುಂದರ ಹೆಣ್ಣು ಮದುವೆಯಾಗುತ್ತಾಳೆ. ಪ್ರಭುವಿನದು ಸುಂದರ ದಾಂಪತ್ಯ, ಪ್ರಭು ದಾಂಪತ್ಯ ಜೀವನದ ರಸಾನಂದವನ್ನು  ಹೆಚ್ಚು ದಿನ ಸವಿಯಲಿಲ್ಲ. ಮದುವೆಯಾದ ಕೆಲವೇ ವರ್ಷಗಳಲ್ಲಿ ಕಾಮಲತೆಯು ಮರಣ ಹೊಂದಿತ್ತಾಳೆ. ಸತಿಯ ಮರಣದಿಂದ ಅಪಾರವೇದನೆ ಪಡುವ ಅಲ್ಲಮಪ್ರಭು ಸಂಸಾರದಲ್ಲಿ ನೊಂದು ಬದುಕಿನಲ್ಲಿ ಜುಗುಪ್ಸೆಯನ್ನು ಹೊಂದುತ್ತಾನೆ. ———————ಮುಂದುವರೆಯುತ್ತದೆ…

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು Read Post »

You cannot copy content of this page

Scroll to Top