ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯಾರಿಗೆ ಯಾರು ಸಂಗಾತಿ?

ವಿನುತಾ ಹಂಚಿನಮನಿ

ಬಾಳಿನ ಬಂಡಿ ಎಳೆಯುವ ಕನಸಿನ ಕುದುರೆಗಳೇ ಯೋಚಿಸಿ ಹೇಳಿ

ನಾಲ್ಕು ದಿನದ ಬದುಕಿನಲಿ ಯಾರಿಗೆ ಯಾರು ಸಂಗಾತಿ ಹೇಳಿ

ಮರಕೆ ಕೋಮಲ ಲತೆಯೇ ಸಂಗಾತಿ

ಹೃದಯಕೆ ಮಧುರ ಭಾವನೆಗಳೆ ಸಂಗಾತಿ

ಲತೆಯ ಭಾವನೆ ಮರ ಅರಿಯದಾದರೆ

ಹೃದಯದ್ದೇನು ತಪ್ಪು ಹೇಳಿ

ಚಂದಿರನಿಗೆ ಹೊಳೆವ ತಾರೆಗಳೆ ಸಂಗಾತಿ

ಸುಂದರ ತನುವಿಗೆ ನಿರ್ಮಲ ಮನವೇಸಂಗಾತಿ

ನಕತ್ರಗಳಿಲ್ಲದ ಆಗಸದಲ್ಲಿ ಚಂದ್ರ ಏಕಾಂಗಿಯಾದರೆ

ನಿಷ್ಟೆಯಿಲ್ಲದ ಮನದ ಮಾಲಿಕ ಕುರೂಪಿಯಲ್ಲವೇ ಹೇಳಿ

ಹೂವಿಗೆ ಹಾರುವ ದುಂಬಿಯೇ ಸಂಗಾತಿ

ನೋವಿಗೆ ಸುರಿವ ಕಂಬನಿಯೇ ಸಂಗಾತಿ

ನಂಬಿದ ಹೂವಿಂದ ದುಂಬಿ ದೂರವಾದರೆ

ಕಂಬನಿ ಒರೆಸುವವರು ಯಾರು ಹೇಳಿ

ವಾರಿಧಿಗೆ ಭೋರ್ಗರೆವ ತೆರೆಗಳೆ ಸಂಗಾತಿ

ಹರೆಯಕೆ ಸಂಭ್ರಮದ ಕನಸುಗಳೆ ಸಂಗಾತಿ

ಅಲೆಗಳಿಲ್ಲದ ಕಡಲಲಿ ನಾವೆ ತೇಲದಾದರೆ

ಕನಸುಗಳು ನನಸಾಗುವ ಬಗೆ ಹೇಳಿ

ಹರಿವ ನದಿಗೆ ದಡವೇ ಸಂಗಾತಿ

ಮರೆವ ಮನಕೆ ರೂಡಿಯೇ ಸಂಗಾತಿ

ದಡದ ಗೊಡವೆ ನದಿಗೆ ಬೇಡವಾದರೆ

ವಿನೂತನ ಮರೆತ ಮನಕೆ ಗತಿಯಾರು ಹೇಳಿ.


About The Author

Leave a Reply

You cannot copy content of this page

Scroll to Top