ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಲಹರಿ

“ಒಂಟಿ ಚಪ್ಪಲಿಯ ಗೋಳಾಟ”ಕಲ್ಪನಾ ಎಸ್‌ ಪಾಟೀಲ್‌ ಅವರ ಒಂದು ಲಹರಿ ಬರಹ

ಲಹರಿಸಂಗಾತಿ ಕಲ್ಪನಾ ಎಸ್‌ ಪಾಟೀಲ್‌ “ಒಂಟಿ ಚಪ್ಪಲಿಯ ಗೋಳಾಟ” ನಾಲ್ಕು ದಿನ ಅಂತ ಊರಿಗೆ ಹೋಗಿದ್ದೆಮರಳಿದಾಗ ಅನಿಸ್ತಿತ್ತು ಏನೋ ಇಲ್ಲಲಾಮನೆ ಮುಂದ ಅಂಗಳದಾಗ,ಏನಿಲ್ಲ,?ಏನಿಲ್ಲ ಅಂತ ಒಳಗ ಕಾಲಿಡೊದ್ರಾಗ ಒಂಟಿ ಚಪ್ಪಲಿ ಗೋಳಾಡತಿತ್ತು.ಗೊಳೋ ಅಂತ ಅಳತಿತ್ತು  ಕುಂಯ್ಯೋss ಮರೋss ಅಂತ ಆಗಾಗ ನಿಟ್ಟುಸಿರು ಬಿಡತಾನೆ ಇತ್ತು. ನಾ ಏಕಾಂಗಿ ಆಗೇನಿ ಅಂತ ಬಿಕ್ಕಿ ಬಿಕ್ಕಿ ಅಳೋದನ್ನ  ನೋಡಿ.. ಏನಾಯಿತು? ಯಾಕೆ ಈ ರೋದನೆ? ಬಿಸಿಲ ಜಾಸ್ತಿ ಆಯಿತಾ?ಮನಸ್ಸು ಪ್ರಶ್ನೆ ಹಾಕಿತು,ತಕ್ಷಣ ನೆರಳಲ್ಲಿ ಬಿಡೋಕ ಬಲಕಾಲು ಮುಂದೆ ಬಂದು, ಗಬಕ್ಕನ ಹಿಂದೆ ಸರಿದು ಸುಮ್ನ ನಿಲ್ಲತು.ಯಾಕ ನಿನಗೇನಾತು? ನೀ ಯಾಕ ನಿಂತಿ ನೆರಳಾಗ ಬಿಡಾಕತ್ತಿದ್ದ್ಯಲ್ಲ.?ಅಲ್ಲಿವರೆಗೂ ಅದು ಎಡಗಾಲಿನ ಚಪ್ಪಲಿ, ಅಂತ ನನ್ನ ತಲೆಗೆ ಹೊಳದಿರಲಿಲ್ಲ. ಹೌದಲ್ಲ.ಹೌದು, ಎಲ್ಲಿ ನನ್ನ ಜೊತೆಗಾರ? ನೀನು ಹೋದಾಗಿನಿಂದ ನಾನು ಒಂಟಿಯಾಗಿದ್ದೀನಿ ಅಂತ ಗೋಳಾಡಾಕತ್ತು. ನಾವಿಬ್ಬರೂ ಎಂದೂ ಅಗಲತಿರಲಿಲ್ಲ,  ಎಲ್ಲಿ ಹೋದರೂ ಇಬ್ಬರೂ ಜೊತೆಯಾಗೆ ಹೋಗತಿದ್ದವಿ. ಒಟ್ಟಿಗೆ ಇರತಿದ್ದವಿ.ಅದ ಯಾವ ನಾಯಿ ನಮ್ಮನ್ನ ಬ್ಯಾರೆಮಾಡಿದೆಯೋ? ಮುಗಿತಿನ್ನು ನನ್ನ ಕತಿ,ನೀನು ನನ್ನ ದೂರ ಮಾಡತಿ.ಕಸದಾಗ ಎಸಿತಿ?ನನ್ನ ನೋವು ನಿನಗೆಲ್ಲಿ ಕಾಣಿಸಬೇಕು.  ನನ್ನ ನೀನ ತಯಾರ ಮಾಡಿ, ಆದ್ರೂ ನನಗ ಮಾತು ಬರುದಿಲ್ಲ.ಅದೇನೋ ಅಂತೀರಲ್ಲ ನೀವು ಮಿಸ್ ಮ್ಯಾಚಂತ ಹಂಗ ಮಾಡಕೊ.ನಾ ಎಲ್ಲಿ ಹೋಗುದಿಲ್ಲ ಅಂತು.ಹುಂ, ಆಯಿತ ಆಯಿತ ಸರಿ ನೋಡತಿನಿ ತಡೆ.ಮಿಸ್ ಮ್ಯಾಚಂತ,ಆಹಹಹಾ…ಈ ನಮ್ಮ ಕರಿಯಗ ಚಪ್ಪಲಿಯಂದ್ರ ಬಾಳ  ಪ್ರೀತಿ. ನನಗ ಅವನ ಮ್ಯಾಲ ಸಂಶಯ ಬರಾಕತ್ತಿತ್ತು.ನನ್ನ ನೋಡಿ ಎದೆ ಎತ್ತರಕ್ಕ ಜಿಗಿದ, ಮುಖ ನೆಕ್ಕಿ ಅರಿವಿ ಜಗ್ಗಿ ನನ್ನ ಯಾಕ ಬಿಟ್ಟ ಹೋಗಿದ್ದೆ? ಅಂತ ಕೇಳತಿತ್ತು.ಲೇ ಕರಿಯ ಚಪ್ಪಲಿ ಎಲ್ಲ್ಯಲೇ? ನಾ ನೋಡಿಲ್ಲ ಅಂತ ವರದಿ ಒಪ್ಪಿಸಿತು.ಬಾಳಷ್ಟು ಓಣ್ಯಾಗ ಹೋಗವ್ರನ್ನ ಸ್ನೇಹಿತರನ್ನ ಮಾಡಿಕೊಂಡಿದ್ದ. ಮನಿಯೆಲ್ಲ ಹುಡಕಾಡಿ, ಒಳಗ ಎಲ್ಲ ಹುಡಕಾಡಿದೆ.ಈಗರ ಬಂದಿ, ಕುಂಡರು, ನೀರು  ಕುಡಿ ಅಂದಳು ಆಯಿ. ಸಿಗತೈತಿ ಇಲ್ಲೆ, ಎಲ್ಲ್ಯರ ಬಿದ್ದಿರತೈತಿ.ನನಗೂ ಅದ ಸಿಗೂತನ ಸಮಾಧಾನ ಇರಲಿಲ್ಲ. ಯಾಕೋ ಬಾಳ ಕೆಟ್ಟ ಅನಿಸಾಕತ್ತಿ,  ನಾನು- ನನ್ನ ಸ್ನೇಹಿತರಿಂದ ದೂರಾದಂಗ ಅನಿಸಾಕತ್ತ.ಹೊರಗಡೆ ಹೋಗಿ ಮನೆಯ ಹಿಂದೆ, ಅಗ್ಗಲ-ಮಗ್ಗಲ ಒಂದು ಸುತ್ತ ಹೊಡೆದು ಸ್ವಲ್ಪ ದೂರ ಹೊದಾಗ ಅಲ್ಲಿ ಒಂದು ಚಪ್ಪಲಿ ಕಾಣಿಸಿತು, ಹತ್ತಿರ ಹೋಗಿ ನೋಡಿದ್ರ ಬಲಗಾಲಿನ ಚಪ್ಪಲಿ ಅನಾಥವಾಗಿ ಬಿದ್ದಿತ್ತು. ಇದರದು ಅದ ಗೋಳು. ಅಯ್ಯೋ, ಯಾರಿಗೆ ಹೇಳಲಿ ನನ್ನ ಗೋಳು? ನಮಗೂ ಮನುಷ್ಯರ ತರ ಮಾತಾಡೋಕ ಬರತಿದ್ರ, ಕೂಗಬಹುದಿತ್ತು. ಚೀರಿ ಹೇಳಬಹುದಿತ್ತು.  ಗಂಟಲೆ ಇಲ್ಲ. ತಮ್ಮ ಪಾದಗಳನ್ನ ಸುರಕ್ಷಿತವಾಗಿಟ್ಟುಕೊಳ್ಳಾಕ ನಮ್ಮನ್ನ ಸೃಷ್ಟಿ ಮಾಡಿಕೊಂಡ ಮನ್ಷ್ಯಾ ಆವಾಗವಾಗ, ಕಳೆದುಕೊಂಡಾಗಲೂ “ಹೋಗಲಿ ಬಿಡ ಪೀಡಾ ಹೋತಂತ” ಅಂತಿರಿ. ನೀವು ಕಳೆದು ನಮ್ಮನ್ನ ಪೀಡಾ ಅಂತಿರಿ. ಇದು ಖರೇನ, ಹಿಂಗ ಎಷ್ಟ ಸಲ ನಮ್ಮ ಮನ್ಯಾನವ್ರು, ಮದುವೆಗೆ, ಮಣ್ಣಿಗೆ ಹೋದಾಗ, ಯಾರೋ ಹಳೆಯ ಹರಿದ,ಸವೆದ,ಬಣ್ಣ ಮಾಸಿದ, ಉಂಗುಟ ಕಿತ್ತಿದ ಜೋಡುಗಳನ್ನ ಬಿಟ್ಟು ಇವರ ಹೊಸ ಜೋಡನ್ನ ಧರಿಸಿ ಹೋಗಿದ್ದಾಗ ಬರಿಗಾಲಲ್ಲಿ ಮನೆಗೆ ಬಂದಾಗ ಹಂಗ ಹೇಳಿದ್ದ ನೆನಪಾಯಿತು. ಅಷ್ಟರಾಗ, ಇದು ಓsss ನೀವೇನು ನನ್ನ ಹುಡಕ್ಕೊಂಡ ಬಂದ್ರಾ ಅಂತ ಕೇಳತು.ಹುಂ ಅಂದೆ..ನೀವು ಊರಗೆ ಹೋಗಬೇಕಾದ್ರ ನಮ್ಮನ್ನ ಎತ್ತಿಟ್ಟು ಹೋಗೊದಲ್ಲ! ನಮಗೇನು ಎದ್ದ ಹೋಗಾಕ ನಿಮ್ಮ ತರಹ ಕಾಲಿದ್ದಾವಾ… ನಮಗ ಜೀವ ಇಲ್ಲದಂಗ ಸೃಷ್ಟಿ ಮಾಡಿರಿ.ಬೇರೆ ಬೇರೆ ದೇಶದಾಗ ಮಕ್ಕಳಿಂದ ಹಿಡಿದು ದೊಡ್ಡವರು ಧರಿಸೊ ಜೋಡಗಳೊಳಗ ಬಣ್ಣ ಬಣ್ಣದ ವಿದ್ಯುತ್ ಲೈಟ್ , ಮ್ಯುಜಿಕ್ ಹಾಕತಾರ. ನಮ್ಮನ್ನ ಇಡಾಕ ಚಂದ ಚಂದ ಕಪಾಟ ಮಾಡಸ್ತಾರ. ನೀವು ಅದಿರಿ ಕೋಟಿಗಟ್ಟಲೆ ರೊಕ್ಕ ಖರ್ಚ ಮಾಡಿ ಮನೆ ಕಟ್ಟಸ್ತಿರಿ, ಹೊರತು ನಮಗ ಜಾಗ ಮಾತ್ರ ಇರುದಿಲ್ಲ. ಹಾಂ, ಇನ್ನೊಂದೇನದ ಹೊರಗಿನಿಂದ ಬರುವವರಗೆ ನಾವು ಮೊದಲ ಕಾಣಿಸಬಾರದಂತಿರಿ. ಹೇಳಿ ಮಾಡಸಿದ ಜೋಡಿ ಸಿಗುದಂದ್ರ ನಾವ ಅಲ್ಲೇನ,  ಮತ್ತೇನ ಸಿಗತೈತಿ ನಿಮಗ?ಅಂದಾಗ ನನಗ “ಹೇಳಿ ಮಾಡಿಸಿದ ಜೋಡು ಸಿಗುವುದು ಚಪ್ಪಲಿಯಲ್ಲಿ ಮಾತ್ರ ಉಳಿದೆಲ್ಲ ಹೊಂದಾಣಿಕೆ” ಅಂತ ಎಲ್ಲೋ ಓದಿದ್ದ ನೆನಪಾಯಿತು. ನಾನಂದೆ ಹೋಗಲಿ ಬಿಡು, ಈಗ ಸುಮ್ಮನ ನಡಿ ಅಂತ ಒಂಟಿಯಾದ ಜೋಡನ್ನ ಧರಿಸಿ ಮನೆಗೆ ಬಂದು ಒಂಟಿಯಾಗಿದ್ದರ ಪಕ್ಕ ಬಿಟ್ಟಾಗ, ಎರಡು  ಬಾಳ ಖುಷಿ ಪಟ್ಟಂತೆ ಭಾಸವಾಗತಿತ್ತು. ಎರಡು ಕೋಪ,ಇರಿಸುಮುರಿಸನ್ನ ಬಿಟ್ಟು ಎಲ್ಲ ಬೇಗ ಮರೆತು ಶಾಂತ ಅದವು. ನನ್ನ ಮನಸ್ಸು ಹೇಳಿತು, ನೋಡು ನೀವು ನರಮಾನವರು ಇರತಿರಿ, ಎನಾದ್ರೂ ಆದ್ರ ಲಗೂ ಮರೆಯೊದಿಲ್ಲ,  ದುಃಖಿಸ್ತಿರಿ,  ಮತ್ತ ಮತ್ತ ನೆನೆಸಿಕೊಂಡು ಅಳತಿರಿ. ಏನೋ, ಆದರೂ ಮನುಷ್ಯ ಅನ್ನೋ ವಿಚಿತ್ರ ಪ್ರಾಣಿನ ಆ ಭಗವಂತ ಅದೆಷ್ಟು ತಾಳ್ಮೆಯಿಂದ ಸೃಷ್ಟಿ ಮಾಡಿದ್ದಾನಲ್ಲ ಅಂತು. ಹುಂ, ಅದಕ್ಕ ಅಲ್ಲ ನನ್ನಲ್ಲಿ ಅಷ್ಟ ತಾಳ್ಮೆ ಐತಿ ಅಂದೆ, ಅದು ಶಾಂತವಾಗಿ ನಸುನಕ್ಕಿತು. ನನಗೂ ಖುಷಿ ಆಯಿತು. “ಹುಂ, ಚಪ್ಪಲಿ ಸಿಕ್ಕಿತಲ್ಲ, ಬಾ ಇನ್ನsss  ಒಳಗ, ಬಿಸಿಲ ಬಾಳೈತಿ ಹೊರಗ” ಅಂತ ಆಯಿಯ ಕೂಗು ಕೇಳಿಸಿ ಒಳ ನಡೆದೆ. ಕಲ್ಪನಾ ಎಸ್ ಪಾಟೀಲ ಕಾವ್ಯಧರೆ

“ಒಂಟಿ ಚಪ್ಪಲಿಯ ಗೋಳಾಟ”ಕಲ್ಪನಾ ಎಸ್‌ ಪಾಟೀಲ್‌ ಅವರ ಒಂದು ಲಹರಿ ಬರಹ Read Post »

ಇತರೆ, ಲಹರಿ

“ಒಡಲಿನ ನೋವಿಗೆ ಮಡಿಲಿನ  ಸಾಂತ್ವನ”        ಜಯಶ್ರೀ.ಜೆ.ಅಬ್ಬಿಗೇರಿ

ಲಹರಿ ಸಂಗಾತಿ “ಒಡಲಿನ ನೋವಿಗೆ ಮಡಿಲಿನ  ಸಾಂತ್ವನ”        ಜಯಶ್ರೀ.ಜೆ.ಅಬ್ಬಿಗೇರಿ  ಮೊನ್ನೆ ಪೇಟೆಯಲ್ಲಿ ಗೆಳತಿ ಸುಮತಿ ಬಹಳ ದಿನಗಳ ನಂತರ  ತನ್ನ ಮಗಳೊಂದಿಗೆ ಭೇಟಿಯಾದಳು. ಮುಖದಲ್ಲಿ ಮೊದಲಿದ್ದ ಗೆಲುವು ಕಾಣಲಿಲ್ಲ. ನಗೆಯೂ ಮುಖದಿಂದ ದೂರವೇ ಉಳಿದಿತ್ತು. ನಾನೇ ಒತ್ತಾಯಿಸಿ ಹೊಟೆಲ್ಲಿಗೆ ಕರೆದೊಯ್ದೆ. ಸದಾ ಉತ್ಸಾಹದ ಕಾರಂಜಿಯoತೆ ಚಿಮ್ಮುತ್ತಿದ್ದ ನೀನು ಇದೇಕೆ ಇಷ್ಟು ಸಪ್ಪಗಾಗಿ ಬಿಟ್ಟಿದ್ದಿಯಾ? ಎಂದಾಗ ಕಣ್ಣಂಚಿನಲ್ಲಿ ನೀರು ತಂದು ತನ್ನ ಪ್ರವರ ಬಿಚ್ಚಿಟ್ಟಳು. ಇಬ್ಬರೂ ದುಡಿತೀವಿ ಹೀಗಾಗಿ ಮನೆಯಲ್ಲಿ ಎಲ್ಲದಕ್ಕೂ ಆಳು. ಹಣಕ್ಕಂತೂ ಕೊರತೆಯಿಲ್ಲ.ಮುದ್ದಾದ ಮಗಳು ಮನೆಯಂಗಳದಲ್ಲಿ ನಲಿದಾಡ್ತಾಳೆ. ಇವರದೇ ಸಮಸ್ಯೆ ಆಗಿದೆ.ಎಂದಳು.  ಇಷ್ಟೆಲ್ಲಾ ಇರೋವಾಗ ನಿಮ್ಮ ಪತಿದೇವರದು ಏನು ಸಮಸ್ಯೆ  ಎಂದು ಕುತೂಹಲದಿಂದ ಪ್ರಶ್ನಿಸಿದೆ. ಅದಕ್ಕೆ ಸುಮತಿ,ಮೊದಲೆಲ್ಲ ಚೆನ್ನಾಗಿಯೇ ಇದ್ದ ರಮೇಶ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು  ಪಾರ್ಟಿ ಕ್ಲಬ್ ಪಬ್‌ನ್ನು ಮನರಂಜನೆಗೆoದು  ರೂಢಿಸಿಕೊಂಡು ಇತ್ತೀಚಿಗೆ ಅತಿಯೆನಿಸುವಷ್ಟು ಕುಡಿದು ಮನೆಗೆ ತಡರಾತ್ರಿ  ಬಂದು ಸುಮ್ಮನೆ ಮಲಗಿ ಬಿಡ್ತಾರೆ. ಮೊದಲೇ ಮಾತು ಕಮ್ಮಿ ಈಗಂತೂ ಮನೆಯಲ್ಲಿ ಮಾತಿಲ್ಲ ಕತೆಯಿಲ್ಲ.ದಿನಕ್ಕೆ ಒಂದೊ ಎರಡೊ ಮಾತನಾಡಿದರೆ ಹೆಚ್ಚು  ನಾನಾಗಲೇ ಮೇಲೆ ಬಿದ್ದು ಮಾತನಾಡಿಸಿದಾಗ ಹೂಂ ಹಾಂ ಅಷ್ಟೆ, ಸಿಟ್ಟಿಗೆದ್ದು ಜೋರಾಗಿ ಕಿರುಚಿದರೆ ಏನೂ ಪ್ರಯೋಜನವಿಲ್ಲ. ನನಗೇನಾಗಿಲ್ಲ ನಾನು ಇರೋದೆ ಹೀಗೆ ಮೊದಲಿನಿಂದ ಹೀಗೆ ಇದ್ದೀನಿ ನಿನಗೆ ಹಾಗೆನಿಸ್ತಿದೆ ಅಂತ ಹೇಳುತ್ತ ಜಾಗ ಖಾಲಿ ಮಾಡ್ತಾರೆ.ಸಂಬoಧಿಕರ ಮದುವೆ ಮುಂಜವಿಗoತೂ ಜಪ್ಪಯ್ಯ ಅಂದರೂ ಬರೋದಿಲ್ಲ.  ಮಗಳ ಜೊತೆ ಮಾತು ಅಷ್ಟಕ್ಕಷ್ಟೆ. ದೈಹಿಕ ಸುಖ ಬೇಕೆಂದಾಗ ಬಳಿ ಬರುತ್ತಾರೆ. ಇಂಥ ಮದುವೆಯಿಂದ ಪಡೆಯುತ್ತಿರುವದು ಏನೂ ಇಲ್ಲ. ನನ್ನಲ್ಲಿರುವ ಪ್ರೀತಿಯ ಭಾವನೆಗಳೆಲ್ಲ ಬತ್ತಿ ಹೋಗುತ್ತಿವೆ. ದಿನ ದಿನಕ್ಕೆ ಬದುಕು ಕ್ರೂರವೆನಿಸುತ್ತಿದೆ. ಏನು ಮಾಡಲೂ  ತೋಚುತ್ತಿಲ್ಲ. ಕೋರ್ಟ್ ಕಛೇರಿ ಮೆಟ್ಟಿಲು  ಹತ್ತಿದರೆ ಮನೆ ಮರ್ಯಾದೆ ಪ್ರಶ್ನೆ.ದಿನವೂ ವಿಷ ನುಂಗತಿದಿನಿ. ಮಗಳ ಮುಖ ನೋಡಿ ಅವರೊಂದಿಗೆ ದಿನ ದೂಡತಿದಿನಿ. ಎಂದಾಗ  ಮಗಳು ಸುಮತಿಯ ಕಣ್ಣೊರೆಸುತ್ತ ಅವ್ವಾ ,ಅಪ್ಪ ಮೊದಲಿನಿಂತೆ ಆಗ್ತಾರೆ ಬಿಡವ್ವ ನೀ ಆಳಬೇಡ ಎಂದಳು. ಸುಮತಿ ಮಗಳ ಕೆನ್ನೆಗೆ ಮುತ್ತಿಕ್ಕಿ ಕಿರುನಗೆ ಬೀರಿದಳು. ತಾಯಿಯ ಖಾಸಗಿ ಜಗತ್ತು ಹೆಣ್ಣುಮಕ್ಕಳಿಗೆ ಹೆಚ್ಚು ಅರ್ಥವಾಗುತ್ತದೆ.ತಾಯಿ ಮಗಳ  ನಡುವಿರುವ ಸಲುಗೆ, ಮುಕ್ತವಾಗಿ ಹಂಚಿಕೊಳ್ಳುವ ಮನದಾಳದ ಮಾತುಗಳು ಹೆಣ್ಣು ಹೆತ್ತ ತಾಯಂದಿರಿಗೆ ಅದರ ಸೌಖ್ಯ ತಿಳಿಯೋದು. ಹೆಣ್ಣು ಅಂದರೆ ಹುಣ್ಣು ಅಂತ ತಿಳಿಯೋ ಜನರೇ ಜಾಸ್ತಿ ಆದರೆ ಹೆಣ್ಣು ಮಕ್ಕಳು ತೋರುವ ಆತ್ಮೀಯತೆ ಆಪ್ತತೆ ಮನಸ್ಸಿಗೆ ಅತಿಯಾದ ಆನಂದ ಮತ್ತು ಹಿತ ನೀಡುವದಂತೂ ಖಚಿತ. ಎಷ್ಟೊ ಬಾರಿ ಗಂಡನೊoದಿಗೆ ಹಂಚಿಕೊಳ್ಳಲಾಗದ ಮನದ ದುಗುಡಗಳನ್ನುಅವ್ವನೊಂದಿಗೆ ಹಂಚಿಕೊoಡು ನಿರಾಳವಾಗಿ ಮತ್ತೆ ಜೀವನೋತ್ಸಾಹ ತುಂಬಿಕೊಳ್ಳುತ್ತಾಳೆ.  ರಶ್ಮಿಗೆ ತಾಯಿಯೇ ಜಗತ್ತು. ಮಗಳ ಬದುಕು ಹಸನಾಗಿರಲೆಂದು ಬಯಸುವ ತಾಯಿ ಮಗಳ ಬದುಕಿನಲ್ಲಿ ಸಣ್ಣ ಬಿರುಕು ಬಿಡುತ್ತಿದೆ ಎಂದು ತಿಳಿದರೆ ಎದೆ ಒಡೆದುಕೊಳ್ಳುತ್ತಾಳೆಂದು ರಶ್ಮಿ ಅತ್ತೆಯ ಮನೆಯಲ್ಲಿ ಕೊಡುವ ಕಿರುಕುಳಗಳನ್ನು ಗಂಡನ ವರ್ತನೆಯಲ್ಲಾದ ಬದಲಾವಣೆಯನ್ನು ಬಾಯಿಮುಚ್ಚಿ ಸಹಿಸಿಕೊಳ್ಳುತ್ತಿದ್ದಾಳೆ.ಕತ್ತಲ ಕೋಣೆಯಲ್ಲಿ ಕಣ್ಣಿರು ಹರಿಸುತ್ತಿದ್ದಾಳೆ. ಇದು ರಶ್ಮಿಯ ತಾಯಿಗೆ ತಿಳಿದಾಗ ದೇವರು ಒಳ್ಳೆಯವರನ್ನೇ ಪರೀಕ್ಷಿಸುತ್ತಾನೆ ಅಂತ ನೀನೇ ಹೇಳತಿದ್ದೆಲ್ಲವ್ವಾ ಈಗ ಕಷ್ಟದ ಕಾಲ ಮುಂದೊoದು ದಿನ ಸುಖ ಬಂದೇ ಬರುತ್ತದೆ. ಎಂದು ನೊಂದ ತಾಯಿಗೆ ಸಾಂತ್ವನದ ಮಾತುಗಳನ್ನಾಡುತ್ತ ಉಕ್ಕಿ ಬರುವ ದುಃಖವನ್ನು  ತಡೆಯುತ್ತಾಳೆ. ಹೆಣ್ಣಿಗೆ ತವರೆಂದರೆ ಪಂಚ ಪ್ರಾಣ ಅದರ ನಂಟನ್ನು ಕಳೆದುಕೊಳ್ಳಲು ಅವಳಿಷ್ಟ ಪಡುವದಿಲ್ಲ. ಮಗಳನ್ನು ತಮ್ಮನಿಗೋ ಅಣ್ಣನ ಮಗನಿಗೋ ಧಾರೆಯೆರೆದು ತವರನ್ನು ಉಳಿಸಿಕೊಳ್ಳಲು ಹಂಬಲಿಸುತ್ತಾಳೆ. ಹೀಗೆ ತವರನ್ನು ಉಳಿಸಿಕೊಳ್ಳಲು ಶಾಂತಮ್ಮ ಮಗಳನ್ನು ಅಣ್ಣನ ಮಗನಿಗೆ ಕೊಟ್ಟು ತನ್ನ ತವರನ್ನು ಉಳಿಸಿಕೊಳ್ಳುವಲ್ಲಿ ಗೆದ್ದಿದ್ದಳು. ಅಳಿಯ ಬೇರೊಬ್ಬಳೊಂದಿಗೆ ಅನೈತಿಕ ಸಂಬoಧದಲ್ಲಿ ತೊಡಗಿ ಮಗಳಿಗೆ ಕೊಡುವ ಚಿತ್ರ ಹಿಂಸೆ ಕಂಡು ಕಂಗಾಲಾಗಿದ್ದಾಳೆ. ತನ್ನ ಮಗಳ ಬಾಳನ್ನು ತಾನೇ ಹಾಳು ಮಾಡಿದನೆಂದು ನಿಂತ ನೆಲವೇ ಬಾಯಿ ಬಿಟ್ಟರೆ ಎಲ್ಲಿ ಹೋಗೋದು? ಎಂದು ಹಾಸಿಗೆ ಹಿಡಿದು ಕೊರಗುತ್ತಿರುವ ತಾಯಿಗೆ ಮದುವೆ ಅನ್ನೋದು ಸ್ವರ್ಗದಲ್ಲಾಗಿರುತ್ತದೆ ಇದರಲ್ಲಿ ನಿನ್ನದೇನು ತಪ್ಪಿಲ್ಲವ್ವಾ ಎಂದು ಶಾಂತಮ್ಮನಿಗೆ ಮಗಳು ಸವಿತಾ ತನ್ನ ದುಃಖವನ್ನೆಲ್ಲ ಮರೆಮಾಚಿ ಸುಖ ದುಃಖಗಳನ್ನು ಸಮನಾಗಿ ನೋಡಬೇಕೆಂದು, ಇಂದು  ದುಃಖವಾದರೆ ನಾಳೆ ಸುಖ ಎಂದು ತತ್ವಜ್ಞಾನಿಯಂತೆ ಮಾತನಾಡುತ್ತ ಬೇಗನೆ ಹುಷಾರಾಗುವಂತೆ ಸೂಚಿಸುತ್ತಾಳೆ. ಒಬ್ಬಳೇ ಮಗಳೆಂದು ತುಂಬಾ ಪ್ರೀತಿಯಿಂದ ಸಾಕಿ ಸಲುಹಿ ಮದುವೆ ಮಾಡಿ ಅಳಿಯನನ್ನು ಮನೆಗೆ ಕರೆ ತಂದ ರತ್ನಮ್ಮ ಅಳಿಯನಿಗೆ ದಿನನಿತ್ಯ ಹಾಲು ತುಪ್ಪ ಸುರಿದರೂ ಆತನ ದರ್ಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಮನೆಗೆ ಸಂಬoಧಿಕರು ಆಪ್ತ ಸ್ನೇಹಿತರು ಬಂದರoತೂ ದರ್ಪ ಅತಿರೇಕಕ್ಕೇರುತ್ತೆ. ಇದು  ಮಗಳಿಗೂ ನುಂಗಲಾರದ ತುತ್ತಾಗಿದೆ. ಎಷ್ಟೋಸಾರಿ ಆತನ ವರ್ತನೆಗೆ ತಾಯಿ ಮಗಳ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಅಪ್ಪ ದುರ್ವ್ಯಸನದಲ್ಲಿ ಮುಳುಗಿರದಿದ್ದರೆ ಅಳಿಯನ ದರ್ಪಕ್ಕೆ ಕಡಿವಾಣ ಹಾಕಬಹುದಿತ್ತೆನೋ ಎಂದು ಮನದಲ್ಲೇ ಮರ ಮರ ಮರಗುತ್ತಾಳೆ. ತನ್ನ ಒಡಲಿನಲ್ಲಿ ಬೆಂಕಿ ಇಟ್ಟುಕೊಂಡು ಕತ್ತಲಾದ ಬಾಳಿಗೆ ಬೆಳಕು ಬಂದೇ ಬರುತ್ತದೆಯೆಂದು ಭರವಸೆಯ ಮಾತನಾಡಿ ಅವ್ವನಿಗೆ ಸಂತೈಸುತ್ತಾಳೆ. ಚೈನಿ ಚೆನ್ನಪ್ಪನ ಹಾಗೆ ಡ್ರೆಸ್ ಮಾಡಿಕೊಂಡು ಮೈ ತುಂಬ ಧಿಮಾಕು ತುಂಬಿಕೊoಡು ನಯಾಪೈಸೆ ದುಡಿದು ತರಲಾರದೆ ಹೆಂಡತಿ ಕೂಲಿ ಮಾಡಿ ತಂದ ಹಣವನ್ನು ಲಪಟಾಯಿಸಿ ತನ್ನ ಶೋಕಿಗೆ ಬಳಸುತ್ತಾನೆ. ಭೀಮಪ್ಪ. ಓದೋ ಮಕ್ಕಳಿಗೆ ಊರೆಲ್ಲ ಸಾಲ ಮಾಡಿ ಸಾಲ ತೀರಿಸೋ ಚಿಂತೆಗೆ ಗಂಗವ್ವನ ಕೈಯಲ್ಲಿ ಬಿರುಕು ಬಿಟ್ಟ ಗಾಯಗಳಾಗಿದ್ದರೂ ದಿನ ಬೆಳಗಾದರೆ ಕೂಲಿ ತಪ್ಪುವದಿಲ್ಲ. ಅವ್ವನ ಪಾಡು ಕಂಡು ಮಮ್ಮಲ ಮರಗುವ ಹದಿನಾಲ್ಕರ ಪೋರಿ ಗೌರಿ ನಾನು ಓದಿ ನಿನ್ನ ಕಷ್ಟವನ್ನು ನೀಗಿಸುತ್ತೇನೆಂದು ತಾಯಿಯ ಕಂಗಳಲ್ಲಿ ಆಶಾ ಕಿರಣ ಮೂಡಿಸಿ ಮುಖದಲ್ಲಿ ನಗು ತುಂಬುತ್ತಾಳೆ. ಇವು ಕೆಲವು ಉದಾಹರಣೆಗಳಷ್ಟೆ ಇಂಥ ಒಡಲಿನ ನೋವುಗಳು ಸಮಾಜದಲ್ಲಿ ಭರಪೂರ ಎನ್ನುವಂತೆ ತುಂಬಿವೆ. ತಾನುರಿದು ಇತರರಿಗೆ ಬೆಳಕು ನೀಡುವ  ದೀಪದಂತೆ ದುಃಖದ ಬೆಂಕಿಯನ್ನು ತನ್ನ ಸೆರಗಲ್ಲಿ ಕಟ್ಟಿಕೊಂಡು ಒಡಲಲ್ಲಿ ಹುಟ್ಟಿ ಮಡಿಲಲ್ಲಿ ಬೆಳೆದ ಮಗಳು ತಾಯಿಗೆ ತಾಯಿಯಾಗಿ ಸಂತೈಸುವ ಪರಿ ಮಾನವ ಕುಲದ ಮನ ಕಲುಕುವಂಥದ್ದು . ತನ್ನಲ್ಲಿ  ನೋವಿದ್ದರೂ ಒಡಲಿನ ನೋವಿಗೆ ಮಡಿಲಿನ ಸಾಂತ್ವನ ಹೇಳುತ್ತ  ನಲಿವಿನ ಸಂತಸದ ಭರವಸೆ ತುಂಬುವ ಪರಿ ಮೆಚ್ಚುವಂಥದ್ದು. ಜಯಶ್ರೀ.ಜೆ.ಅಬ್ಬಿಗೇರಿ

“ಒಡಲಿನ ನೋವಿಗೆ ಮಡಿಲಿನ  ಸಾಂತ್ವನ”        ಜಯಶ್ರೀ.ಜೆ.ಅಬ್ಬಿಗೇರಿ Read Post »

ಇತರೆ, ಲಹರಿ

“ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..”ಪ್ರೇಮಾ ಟಿ ಎಂ ಆರ್‌ ಅವರ ಲಹರಿ

ಲಹರಿ ಸಂಗಾತಿ ಪ್ರೇಮಾ ಟಿ ಎಂ ಆರ್‌ ಅವರ ಲಹರಿ “ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..” ಒಂದು ಕಪ್ ಕೊಫಿ ಹೊಯ್ಕೊಂಡು ಬಿಡೋಣ ಅನ್ನುವ ಮನಸಿನ ಗಿಂಜಾಟಕ್ಕೆ  ಕಭಿಕಭಿ ರಾಜಿಯಾಗುವದು. ಕಿಚನ್ನಿನ ಪುಟ್ಟ ಗ್ಲಾಸ್ ಶೋಕೇಸಿನ ಬಾಗಿಲು ತೆರೆದರೆ ಮಣ್ಣಿನ ಬಣ್ಣದ ದೊಡ್ಡ  ಕಾಫಿ ಮಗ್ ಕೈಗೆ ತಗಲಿತು.‌ ಹಾಗೇ ಎತ್ತಿಕೊಂಡು ಮೈ ಸವರಿದೆ. ಕ್ಷಣ ಎಲ್ಲೋ ಜಾರಿತು ಮನ.. ಈಗ ಹೇಗಿರಬಹುದು…? ಯಾವುದೋ ನೆನಪಿಗೆ ಮನ ಬಿರಿಯಿತು.. ಆ ಕೊಫಿಮಗ್ ಬರೀ ಆಗಾಗ ಸವರಿ ಒಳಗಿಡೋಕೆ ಮಾತ್ರ… ಅದ್ರಲ್ಲಿ ನಾನ್ಯಾವತ್ತೂ ಕುಡಿದಿಲ್ಲ, ಕುಡ್ಯೋದಿಲ್ಲ. ಅಂಥದ್ದೊಂದು ಎದೆ ಕರಗುವ ನೆನಪು ಥಳಕುಗೊಂಡಿದೆ ಅದರಲ್ಲಿ.. ಕೈಲಿದ್ದ ಕೊಫಿಮಗ್ ಒಳಕ್ಕೆ ನೂಕಿ, ಬೇರೊಂದನ್ನು ಎತ್ತಿಕೊಂಡು, ಕುದಿದಹಾಲು ಕಾಫಿಪುಡಿ ಸಕ್ಕರೆ ಸುರಿದುಕೊಂಡು  ಕಲಕುತ್ತ ಮತ್ತೆ ಅಂಗಳಕ್ಕೆ  ಬಂದೆ. ಎಲ್ಲಿದ್ದವೋ ಪುಟ್ಟಪುಟ್ಟ ಎರಡು ಬಿಳಿ ಚಿಟ್ಟೆ ಮರಿಗಳು ಆಗಷ್ಟೇ ಅರಳುವ ಕಾಯಕದಲ್ಲಿರುವ ಗೂಡುಮೊಗ್ಗುಗಳ ಬಳಿಯಲ್ಲಿ ಸುಳಿದಾಡುತ್ತಿದ್ದವು. ಈಗ ಮನಸ ಹಿಡಿದಿಡೋಕೆ ಸಾಧ್ಯವಾಗಲಿಲ್ಲ.. ಎರಡೂವರೆ ದಶಕಗಳ ಹಿಂದಕ್ಕೆ ಜಿಗಿದು ಗಡಕ್ಕನೆ ಬ್ರೇಕ್ ಒತ್ತಿಕೊಂಡು ನಿಂತಿತು ಮನಸೆಂಬ ಮಂಗ್ಯ..        ಇದೇ ಚಳಿಗಾಲ ಡಿಸೆಂಬರ್ ತಿಂಗಳ ಕೊನೆಯ ದಿನಗಳಿರಬಹುದು, ಕರಾವಳಿ ಉತ್ಸವ ಮುಗಿದಿತ್ತು. ಎಲ್ಲೆಲ್ಲಿಂದಲೋ  ಬಂದ ಬಯಲ ವ್ಯಾಪಾರೀ ಅಲೆಮಾರಿಗಳು ಕಡಲದಂಡೆಯ ಮೇಲೆಯೇ ಬೀಡು ಬಿಟ್ಟಿದ್ದರು. ಬೆಳಗಿನ ಹೊತ್ತು ಇಂದಿನಂತೆಯೇ ಹೊರಗಿನ ಮೆಟ್ಟಿಲಮೇಲೆ ಕೂತು ಎಳೆ ಬಿಸಿಲಿಗೆ ಮೈಯೊಡ್ಡಿದ್ದೆ.. ಕಪ್ಪು ಬಸೀರಿ.. ಕಪ್ಪುಬಸಿ.. ಕೂಗುತ್ತ ಬಂದ ಹೆಣ್ಣೊಂದು ಗೇಟಲ್ಲಿ ನಿಂತಿತ್ತು. ಪಕ್ಕದಲ್ಲೊಂದು  ಪುಟ್ಟಮ್ಮ..‌ ಬೇಡ ಹೋಗವ್ವ… ಅಂದೆ “ಯವ್ವಾ ಸೆನ್ನಾಗೈತೆ ಒಂದ್ಕಿತಾ ನೋಡ್ರವ್ವ” ಪಿರಿಪಿರಿಗುಟ್ಟಿದಳು… ಸರಿ ಬಾ.. ಅವಳ ಕಪ್ಪುಬಸಿಗಿಂತ ಪಕ್ಕದಲ್ಲಿ ನಿಂತ ಪಾದರಸದಂತೆ ನಿಂತಲ್ಲಿ ನಿಲ್ಲದ ಕಪ್ಪು ಹುಡುಗಿ ನನ್ನ ಸೆಳೆದಿದ್ದಳು.‌ ಬುಟ್ಟಿ ಇಳಿಸಿದಳು. ಪೂರಾ ಗುಂಜಾಡಿದೆ.. “ಬ್ಯಾಡವ್ವೋ, ಒಂಚೂರು ಚೆನ್ನಾಗಿಲ್ಲ ಬಿಡು, ಸುಮ್ನೆ ನಿನ್ನ ಟೇಮು ಹಾಳು, ನಂಗೂ ಹೊತ್ತಾತು, ತಿಂಡಿಯಾಗಿಲ್ಲ ಇನ್ನೂ..” ಅಂದೆ.. “ಅವ್ವಾ, ಒಂದಾರ ತಗಳವ್ವ, ಇನ್ನ ಬೋಣಿ ಆಗಿಲ್ಲ, ಮೊದಲ್ಕ ನಿನ್ಮನಿ ಹೊಕ್ಕೀನೀ” ಅಂದ್ಲು.. “ಇಲ್ಲವ್ವ, ಪಸಂದಾಗಿಲ್ಲ, ವಸಿ ನಿಲ್ಲು” ಎಂದು ಒಳಹೋದೆ. ಇಡ್ಲಿ ಪಾತ್ರೆ ಘಮ್ಮನೆ ಸುಂಯ್ಗುಡುತ್ತಿತ್ತು. ಎರಡು ಬಿಸಿಬಿಸಿ ಹಬೆಯಾಡುವ ಇಡ್ಲಿ ತಟ್ಟೆಗೆ ಹಾಕಿಕೊಂಡು ಮೇಲೊಂದಷ್ಟು ಚಟ್ನಿ ಹಾಕ್ಕೊಂಡು, ಒಂದ್ಹಿಡಿ ಒಣದ್ರಾಕ್ಷಿ ಇಟ್ಕೊಂಡು ಬಂದು ಬೊಗಸೆಗೆ ಹಾಕಿ, “ದ್ರಾಕ್ಷಿ ಮಗೀಗೆ ತಿನ್ಸು, ಇಡ್ಲಿ ನೀನು ತಿನ್ನು ಅಂದೆ..‌ ಎಳೆಕೂಸನ್ನ ನೋಡ್ತಾ ಅಲ್ಲೇ ತುಸು ದೂರ ಕೂತೆ. ಗೋಲಮುಖದಲ್ಲಿ ಕಡುನೀಲಿ ಮಿಂಚುಗಣ್ಣು, ಚೂಪು ಮೂಗು, ಕಪ್ಪುಕಂಚಿನ ಬಣ್ಣ, ಸರ್ರನೆ ಜಾರುವ ನುಣ್ಪುಗೂದಲು.. ಅವಳಿಗೆ ನನ್ನಲ್ಲಿ ಆಸಕ್ತಿಯಿಲ್ಲ. ಬೊಗಸೆಗೆ ಬಿದ್ದ ಒಣ ದ್ರಾಕ್ಷಿಯನ್ನು ಕೊಳಕು ಫ್ರಾಕಿನ ಬದಿಯ ಕಿಸೆಗೆ ತುಂಬುವ ಪ್ರಯತ್ನ ಮಾಡುತ್ತಿದ್ದಳು.. ದ್ರಾಕ್ಷಿ ಬದ್ದೀತೆಂಬ ಕಾಳಜಿಗೆ ಬೊಗಸೆ ಮುಚ್ಚಿಟ್ಟುಕೊಂಡೇ ಕಿಸೆಯೆಡೆಗೆ ಬಾಗುವ ಸರ್ಕಸ್ ನೋಡಿ ಕಳ್ಳು ಚುಳ್ಳೆಂತು. ಆಗಷ್ಟೇ ಸ್ನಾನಮಾಡಿ ಬಂದಿದ್ದೆ. ಪೂಜೆ ಮುಗಿದಿರಲಿಲ್ಲ. ಅವಳನ್ನು ಮುಟ್ಟಿದ್ರೆ ಮತ್ತೆ ಸ್ನಾನ ಮಾಡ್ಬೇಕು… ಅಷ್ಟು ಕೊಳಕಾಗಿದ್ದಳು.  ಮಾರುದೂರ ನಿಂತವಳು ಬುಗ್ಗನೆ ವಾಸನೆ ಬಡಿಯುತ್ತಿದ್ದಳು.. ಅವಳೊಳಗೆ ತುಂಟ ಕೃಷ್ಣ ಕಾಣುತ್ತಿದ್ದ ನನಗೆ.  ಕೈತೊಳ್ಕೊಂಡ್ರಾಯ್ತು, ಬಾಗಿ ಅವಳ ಅಂಗಿ ಹಿಡಿದು ಬಳಿಗೆಳೆದುಕೊಂಡು ಒಣದ್ರಾಕ್ಷಿ ಕಾಳುಗಳನ್ನು ಕಿಸೆಗೆ ತುಂಬಿಸಿದೆ.  ಇಷ್ಟಗಲ ಕಣ್ಣುಗಳು ಇನ್ನಷ್ಟು ಅರಳಿದವು. ನನ್ನ ಹಿಡಿತದಿಂದ ನುಣುಚಿಕೊಂಡು ಅಷ್ಟುದೂರ ನಿಂತು ಉಬ್ಬಿದ ಕಿಸೆಯಮೇಲೆ‌ ಕೈಯಾಡಿಸಿಕೊಂಡವಳು ಕಿಸಕ್ಕನೆ  ನಕ್ಕಳು. ಎರಡೂ ಕೆನ್ನೆಯ ನಡುವೆ ಸುಳಿಗುಳಿ ಅರಳಿಕೊಂಡಿತು. ನಾನದರಲ್ಲಿ  ಕರಗುವ ಮೊದಲೇ ಹೂಗಳ ಮೇಲೆ ಹರಿದಾಡುವ ಬಿಳಿಚಿಟ್ಟೆಯ ಮರಿಗಳ ಹಿಂದಿಂದೆ ಓಡಿ ಹಿಡಿಯಲು ಕೈಚಾಚಿದಳು. ಹಾರುವ  ಚಿಟ್ಟೆ ಮರಿಗಳ ಜೊತೆಗೆ ತಾನೂ ಪಾದರಸದಂತೆ ಹರಿದಾಡತೊಡಗಿದಳು. ಅವಳ ತೊಡೆಮುಚ್ಚದ ಪುಟ್ಟ ಸ್ಕರ್ಟ್ ಅವಳೊಂದಿಗೆ ಚಿಮ್ಮುತ್ತಿತ್ತು.. ಮತ್ತೆಮತ್ತೆ ಮುಖಕ್ಕೆ ಮುತ್ತುವ ತುಂಡುಗೂದಲುಗಳನ್ನು ಗತ್ತಿನಿಂದ ಹಿಂದಕ್ಕೆ ನೂಕುತ್ತಿದ್ದಳು. ಯಾಕೋ ಅಕ್ಕರೆಯುಕ್ಕಿತು..  ಮಣ್ಣು ಮೆತ್ತಿಕೊಂಡ ಹಿಮ್ಮಡಿ ತುಂಬು ಪಾದ  ಗಮನ ಸೆಳೆದವು. “ಎಷ್ಟು ದಣಿದವೋ ಪಾದಗಳು. ಒಂದಷ್ಟು ಎಣ್ಣೆಯುಜ್ಜಿ ಬಿಸಿಬಸಿ ನೀರಲ್ಲಿ ಮೈತೊಳೆದರೆ ಪರಿಯಂತೆ ಹೊಳೆದಾಳು ಪುಟ್ಟವ್ವ..” ನನ್ನ ಯೋಚನೆಗೆ ನಗು ಬಂತು. ‘ಯಾರದೋ ಕೂಸು ಆಸೆನೋಡು?’ ತಲೆಮೇಲೊಂದು ಮೊಟಕಿಕೊಂಡೆ..  ಇಡ್ಲಿ ತಿಂದು ಮುಗಿಸಿದ ಹೆಣ್ಣು “ಅವ್ವಾ ನೀರ್ಕೊಡ್ರಿ ವಸಿ ಗಂಗಾಳ ತೊಕ್ಕೊಡ್ತೀನಿ”  ತಟ್ಟೆ ತೊಳ್ಸೋಕೆ ಅವ್ಸರ ಮಾಡಿದ್ಲು. “ಏನೂಬೇಡ, ಕೊಡವ್ವ  ನನ್ಕೈಯ್ಯಲ್ಲಿ, ನಾನೇ ತೊಳ್ಕೊಂತೇನೆ ಅಂದೆ. “ಅಯ್ಯೋ ಬ್ಯಾಡವ್ವ, ನಮ್ಮೆಂಜ್ಲು ನೀ ತೊಳಿತೀಯಾ? ನಮ್ಗೆ ಪಾಪ ಬತ್ತೈತೆ.” ಕೊಸರಿದಳು. “ಸರಿ ನಾನ್ಯಾವಾಗಾದ್ರೂ ಕಾಲ್ತಪ್ಪಿ ನಿನ್ ಜೋಪ್ಡೀತಾವ ಬಂದ್ರೆ, ನೀನೇನಾರ ಒಂದ್ಗುಟ್ಗಿ ನೀರು ಕೊಟ್ಟೀ ಅಂದ್ಕೊ, ತಟ್ಟೆ ತೊಳಿಸ್ತೀಯಾ ನನ್ಕಡೆ!” ಕೇಳಿದೆ. ‘ಯವ್ವಾ ನೀಯಾಕ್ಬಂದಿ ನಮ್ಮ ಗುಡ್ಸಲ್ಕೆ’ ಎಂದು ಕೆನ್ನೆಗೆ ಹೊಡ್ಕೊಳ್ಳುತ್ತಲೇ ಎಂಜಲು ತಟ್ಟೆ ನನ್ಕೈಲಿಟ್ಟು ನಿನ್ನ ಹೊಟ್ಟೆ ತಣ್ಣಗಿರ್ಲಿ ಅವ್ವ.” ಹರಸಿದಳು. “ಏಟ್ ವರ್ಷಾತು ಮಗೀಗೆ? ಚಂದದಾಳ. ಕಾಲಿಗೊಂದು ಚಪ್ಲೀನೂ ಹಾಕಿಲ್ವಲ್ಲ, ಈ ಎಳೆಕೂಸನ್ನ ಯಾಕೆ ಹಿಡ್ಕೊಂಡು ಬರೋಕೋದೆ?” ಅಲ್ಲೇ ಕೂತು ಮಾತಿಗಿಳಿದೆ. “ಮತ್ತೆಲ್ಬಿಡ್ಬೇಕ್ರಿ ಮಗೀನ.?” “ನಿನ್ಗಂಡ ಏನ್ಮಾಡ್ತಾನ.. ಜೋಪ್ಡಿ ಒಳ್ಗ ಕುಡ್ದ ಬಿದ್ದಾನಾ..? ತಲಿಮ್ಯಾಲ ಒಂದ್ಗಡ್ಗಿ ತಣ್ಣೀರ್ ಸುರ್ದು ಎಬ್ಸಿ ಮಗೀನ ಅವನ್ತಾವ ಬಿಟ್ಟ ಬರ್ಬೇಕು ತಾನೇ..” ಕೋಪ ಕಾರಿದೆ… “ನನ್ನ ಕೂಸಲ್ರಿ ಅವ್ವಾ, ಮೊಮ್ಮಗ್ಳೂರೀ.” ನಾನು ಮಿಕಿಮಿಕಿ ಅವ್ಳನ್ನೇ ನೋಡಿದೆ. ಇನ್ನೂ ಮೂವತ್ತೈದರೊಳಗಿನ ಕೆಂಚು ದೇಹದ ಹೆಣ್ಣು, ಆಗ್ಲೇ ಮೊಮ್ಮಗ್ಳಾ..?ಹುಬ್ಬೇರಿಸಿದೆ.. “ಹೂಂನ್ರವ್ವಾ.. ಇದ್ರವ್ವ ಹೆರ್ಗಿ ಕಾಲಕ್ಕೆ ಸತ್ತೋತ್ರಿ..” ಕಣ್ಣೊರಸಿಕೊಂಡಳು. “ಇವ್ಳ ಅಪ್ಪ ಏನ್ಮಾಡ್ತಾನೆ? ಮತ್ತೆ ನಿನ್ಗಂಡ?” “ಯವ್ವ ಅದ್ನೆಲ್ಲ ನೀವು ಕೇಳ್ಬಾರ್ದು, ನಾವು ಹೇಳ್ಬಾರ್ದೂರಿ.. ನಾನೂ ಅಪ್ನ ಮುಖ ಕಂಡಿರ್ಲಿಲ್ರಿ  ನನ್ಮಗ್ಳೂ ಅಪ್ಪ್ನ ಮುಖ ಕಂಡಿಲ್ರೀ… ಇದ್ಕೂ ಅಪ್ಪನ್ನಾಕ ಯಾರಿಲ್ರೀ..” ನಿಸ್ಸಂಕೋಚದ ನುಡಿ. ಒಮ್ಮೆ ನನ್ನ ಮೈ ನಡುಗಿತು. ಅವಳ ಮುಖದಲ್ಲಿನ ಭಾವನೆಗಳನ್ನು ಓದೋಕಾಗ್ಲಿಲ್ಲ ನನಗೆ..ನಿರ್ಭಾವವಾಗಿದ್ದಳು…  ಹೊಕ್ಕುಳಲ್ಲಿ ಹುಟ್ಡಿದ ಚಳಿ ಇಡೀ ಎದೆಯ ಆವರಿಸಿ ಕ್ಚಣ ನಡುಗಿದೆ.. “ನಮ್ಮವ್ವ ಅದಾಳ್ರೀ…‌ ಆಕೀನೂ ಕಪ್ಪ ಬಸೀ ಮಾರಾಕಂತ ಹೊಂಟೋಯ್ತಾಳೆ..‌ ಹಾಂಗಾಗಿ ಕೂಸ್ನ ನನ್ಜೊತೀನ ಕಟ್ಗೊಂಡ್ ಬತ್ತೀನ್ರಿ.” ಅಂದ್ಲು.  ಯಾಕೋ ಅಂಗಾಂಗಗಳೆಲ್ಲ ಮರಗಟ್ಟಿದಂತೆ ಮಿಸುಕಾಡಿದೆ..  “ಯವ್ವಾ ಬತ್ತೀವ್ರಿ, ಬುಟ್ಟಿಗ್ ಒಸಿ ಕೈಹಚ್ರಿ, ಭಾರೈತ್ರಿ” ಅಂದ್ಲು.. ಈಗ ಸಾವರಿಸಿಕೊಂಡೆ..                 “ಅವ್ವಾ, ನಿಮ್ಗೊಂದು ಕೇಳ್ತೇನೆ ಬೈಯ್ಬ್ಯಾಡ” ಅಂದೆ..  ತಡೆದು ನಿಂತಳು.  ಮಗೀನ ನನಗ್ ಕೊಟ್ಬಿಡವ್ವಾ.. ಚಂದಾಗಿ ಸಾಕೊಂತೀನಿ, ನಿನಗ್ ನೆನ್ಪಾದಾಗ ಯಾವಾಗ್ಬೇಕೋ ಅವಾಗ್ಬಂದು ನೋಡ್ಕೊಂಡೋಯ್ತಾ ಇರು,  ಇಕೀಗ ಸಾಲಿ ಕಲ್ಸಿ ದೋಡ್ಡ ನೌಕ್ರೀ ಮಾಡಿಸ್ತೀನಿ, ನನ್ನ ಮಗನ್ಮೇಲೆ ಆಣಿ ಮಾಡ್ತೀನಿ. ನನ್ಮಗಾ ಬ್ಯಾರೆ ಈ ಮಗೀ ಬ್ಯಾರೆ  ಯಾವತ್ತೂ ಮಾಡಂಗಿಲ್ಲವ್ವ, ಕೊಟ್ಬಿಡು” ಅಂದೆ. ಒಂದು ಕ್ಷಣ ಅವಳ ದೃಷ್ಟಿ ಕ್ರೂರವಾಯಿತು, “ಕೂಸ್ಬೇಕಿದ್ರ ಒಂದ್ಹೆತ್ಕೊಳ್ಳಾಕ ಏನ್ಬಂದಿತ್ತ ಬ್ಯಾನಿ, ಬ್ಯಾರೆದವ್ರ ಕೂಸಿಗೆ ಬಾಯ್ಬಿಡ್ತಿ.. ಯವ್ವಾ ಹೆಂತಾಕಿ ನೀನು? ” ದುರುಗುಟ್ಟಿದವಳು ಮತ್ತೆ ಮೆದುವಾದಳು.. ಯವ್ವಾ, ಅದೊಂದ ಕೇಳ್ಬ್ಯಾಡವ್ವ.. ಕೂಸಿನ್ಮ್ಯಾಲ  ನನ್ ಜೀವಾನೇ ಮಡಿಕಂಡೀನಿ, ಮುನ್ಸಕಬ್ಯಾಡವ್ವ” ದೈನ್ಯವಾಗಿ ಹೇಳಿದವಳು, ದೊಗ್ಗಾಲುಕೊಟ್ಟು ಹೆಣಗಿ ಭಾರದ ಬುಟ್ಟಿ ತಲೆಮೇಲೆ ಹೊತ್ತು, “ಲೇ  ಕಾವೇರಿ ಬಾರಿತ್ತಾಗ.. ಹೋಗಾನ” ಗೇಟಿನತ್ತ ನಡೆದಳು.. ಕಾವೇರಿ ಮರಿಜಿಂಕೆಯಂತೆ ಜಿಗಿದು ಅಜ್ಜಿಯ ಬೆನ್ನಟ್ಟಿದಳು.. ಅವಳು ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಳು.. ನಾನು ಸರಿಯೆಂದು ದೃಢಪಡಿಸಲು ನನ್ನಲ್ಲಿ ಮಾತುಗಳಿರಲಿಲ್ಲ..  ಹಿಂದ್ಹಿಂದೇ ನಡೆದು ಬಂದಿದ್ದೆ.. ಗೇಟು ದಾಟುವ ಮುನ್ನ ಏನನ್ನಿಸಿತೋ..ಹಿಂತಿರುಗಿದಳು.. ಕಂಪೌಂಡ್ ವಾಲಿನ ಮೇಲೆ ಬುಟ್ಟಿಯೂರಿ ಹೆಗಲ ಚೀಲಕ್ಕೆ ಕೈಹಾಕಿ ಚಂದದ ಮಣ್ಣುಬಣ್ಣದ ದೊಡ್ಡ ದೊಡ್ಡ ಕಾಫಿ ಮಗ್ ಗಳ ಆರರ ಸೆಟ್ ಹೊರತೆಗೆದಳು, “ತಗಳ್ರವ್ವ  ಇದ್ನ.. ಇದ್ ಪಸಂದಾಗೈತಾ ಯೋಳಿ” ಅಂದ್ಲು…. ಯಾಕೋ ನಿರಾಕರಿಸಲು ಮನಸು ಬಾರದೇ ‘ಎಷ್ಟಾಗ್ತೈತೆ?’ ಅಂದೆ. “ಕೊಡವ್ವ, ನಿಂಗ್ ಯೋನ್ ಕೊಡ್ಬಕನ್ಸತೈತಿ ಅದ್ನ ಕೊಡು” ಅಂದ್ಲು… ಐದ್ನೂರು ತಂದು ಕೈಲಿಟ್ಟೆ… ಮುನ್ನೂರು ಸಾಕು ಅಂದ್ಲು.. ಇಟ್ಕಳವ್ವ ಕಾವೇರಿಗೆ ಚಪ್ಲಿ ಕೊಡ್ಸು ಅಂದೆ. “ಬತ್ತೀನವ್ವಾ, ನಿನ್ಮನ್ಸು ನಾ ಬಲ್ಲೆ, ತೆಪ್ಪಾತು ಕಣವ್ವಾ, ಮತ್ಯಾವಾಗ್ಲೋ ಕಾಲ್ತೆಪ್ಪಿ ಈ ಊರಿಗ್ಬಂದ್ರ ಮತ್ತ ಮಗೀನ ತೋರಿಸ್ಕೊಂಡು ಹೋಕ್ಕೀನಿ.. ಆದ್ರ ಇದೇ ಕೊನಿ, ಮಗೀನ ಬೇಡ್ಬ್ಯಾಡ” ಕಪ್ಪುಬಸೀರಿ ಒದರುತ್ತ ಸಾಗಿದಳು.. ತಿರುಗಿ ತಿರುಗಿ ನನ್ನೇ ನೋಡುತ್ತ ಅಜ್ಜಿಯ ಕೈಹಿಡಿದು ಕುಣಿಕುಣಿದು ಸಾಗಿದ ಕಾವೇರಿಯನ್ನು ದೇವಸ್ಥಾನದ ಮುರ್ಕಿ ತಿರುಗುವತನಕ ನೋಡುತ್ತ ನಿಂತೆ… ಈ ಪುಟ್ಟ ಕಾವೇರಿಗೊಂದು ಅಪ್ಪನಿಲ್ಲದ ಕೃಷ್ಣೆ ಹುಟ್ಟದ ಹಾಗೇ ಇವಳನ್ನು ನಿನ್ನ ಕಣ್ಣಲ್ಲಿಟ್ಕೊಂಡು ತಲೆ ಕಾಯುವದು ತಂದೆ… ಎದೆ ರೋಧಿಸುತ್ತಿತ್ತು…. ಮತ್ತೆ ಅವಳು ಈ ಬೀದಿಗೆ ಬಂದಿಲ್ಲ. ನಾನವಳ ಮರೆತಿಲ್ಲ…. ಒಂದು ನೋವಿನ ನಗೆಯಾಗಿ ಸದಾ ನನ್ನೊಳಗೆ ಇದ್ದಾಳೆ ಕಾವೇರಿ…. ನಿಮ್ಮ ಪ್ರೇಮಾ… ಪ್ರೇಮಾ ಟಿ ಎಂ ಆರ್

“ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..”ಪ್ರೇಮಾ ಟಿ ಎಂ ಆರ್‌ ಅವರ ಲಹರಿ Read Post »

ಇತರೆ, ಲಹರಿ

“ಮರಗಳ ಜೀವಕೆ ಮರುಗುತಿದೆ ಜೀವ”ಜಯಶ್ರೀ. ಜೆ. ಅಬ್ಬಿಗೇರಿ.

ಲಹರಿ ಸಂಗಾತಿ ಜಯಶ್ರೀ. ಜೆ. ಅಬ್ಬಿಗೇರಿ. “ಮರಗಳ ಜೀವಕೆ ಮರುಗುತಿದೆ ಜೀವ”       ಹಸಿರು ಸೀರೆ ಹೊದ್ದು ನಿಂತ ದಟ್ಟಡವಿಯನ್ನು ಕಂಡಾಗ ಪಿಳಿಪಿಳಿ ಕಣ್ನು ಬಿಡುತ್ತ ವಿಸ್ಮಯ ಕಂಡಂತೆ ನೋಡುತ್ತ ನಿಂತು ಬಿಡುತ್ತೇನೆ ಹಾಗಂತ ಮಲೆನಾಡಿನಲ್ಲಿ ಹುಟ್ಟಿ ಬೆಳೆದವಳಲ್ಲ ನಾನು. ಪಕ್ಕಾ ಬಯಲು ಸೀಮೆ ನನ್ನದು. ಕಣ್ಣು ಹಾಯಿಸಿದುದ್ದಕ್ಕೂ ಬಯಲೇ ಬಯಲು. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಗಿಡ ಗಂಟೆ ಪೊದೆಗಳ ಸಮೂಹ ಕ್ವಚ್ಛಿತ್ತಾಗಿ ಕಾಣಸಿಗುತ್ತದೆ. ನನ್ನಪ್ಪನ ಮನೆಯ ಹಿತ್ತಲಲ್ಲಿ ಆಳವಾಗಿ ಬೇರು ಚಾಚಿ ಆಕಾಶದೆತ್ತರಕ್ಕೆ ಬೆಳೆದ ತೆಂಗಿನ ಮರವೊಂದಿತ್ತು. ಅದನ್ನು ಬಾಚಿ ತಬ್ಬಿಕೊಳ್ಳಲು ಹವಣಿಸುತ್ತಿದ್ದ ಅಚ್ಚ ಮಲ್ಲಿಗೆ ಹೂವಿನ ಕಂಟಿ, ಅವ್ವ ಪೂಜೆಗೆಂದೇ ಬೆಳೆಸಿದ ಬಟ್ಟಲು ಹೂಗಳು ಕೆಂಪು ದಾಸವಾಳ ಹೂಗಳಿಗೆ ಮನಸೋತು ಮೊಗ್ಗು ಹೇಗೆ ಹಿಗ್ಗಿ ಹಿಗ್ಗಿ ಹೂವಾಗುತ್ತೆ ಎಂಬುದನ್ನು ಕಾಣಲು ಕಾತರಿಸಿ ಗಿಡ ಏಳುವ ಮೊದಲೇ ಎದ್ದು ನಿದ್ದೆಗಣ್ಣಿನಲ್ಲಿ ಕಣ್ಣು ತಿಕ್ಕುತ್ತ ಅದೆಷ್ಟೋ ದಿನಗಳು ನಿಂತರೂ ತುಟಿ ಬಿರಿದ ಮೊಗ್ಗು ತನ್ನ ಗುಟ್ಟು ಬಿಟ್ಟು ಕೊಡಲೇ ಇಲ್ಲ. ನಮ್ಮ ವಂಶದ ಬಹಳಷ್ಟು ಕುಡಿಗಳು ಈ ತೆಂಗಿನ ಮರದ ಕೆಳಗೆ ಆಡಿ ಬೆಳೆದವರು ಹೀಗಾಗಿ ನಮಗೆಲ್ಲ ಇದು ಅಚ್ಚು ಮೆಚ್ಚು. ನಮ್ಮ ಸೋದರತ್ತೆ ಇದನ್ನು ಬಹು ವರ್ಷಗಳ ಹಿಂದೆ ನೆಟ್ಟಿದ್ದರಂತೆ ಎಂದು ನಮ್ಮ ಅಪ್ಪ ಮೇಲಿಂದ ಮೇಲೆ ಬಲು ಹೆಮ್ಮೆಯಿಂದ ಹೇಳುತ್ತಿರುತ್ತಾರೆ. ತೀರಾ ಇತ್ತೀಚಿನವರೆಗೂ ನಮಗೆಲ್ಲ ಕಾಯಿ ಎಳೆನೀರು ಕೊಟ್ಟು ಪ್ರೀತಿಸುತ್ತಿತ್ತು. ಮೊನ್ನೆ ಮಳೆಗಾಲದಲ್ಲಿ ನಮ್ಮ ತೆಂಗಿನ ಮರವನ್ನೇ ಗುರಿಯಾಗಿಸಿಕೊಂಡು ಸಿಡಿಲೊಂದು ಹೊಡೆದು ಅದರ ಕತ್ತು ಹಿಸುಕಿದಾಗ ಮನೆಯ ಮಂದಿಯ ಕಣ್ಣುಗಳೆಲ್ಲ ತೇವವಾದವು. ಮನೆಯ ಅತ್ಯಂತ ಪ್ರೀತಿಯ ಸದಸ್ಯನನ್ನು ಕಳೆದುಕೊಂಡವರಂತೆದುಃಖಿಸಿದೆವು.  ಆಗಷ್ಟೇ ಅಭಿವೃದ್ಧಿಯಾಗುತ್ತಿರುವ ಊರಿಗೆ ದೂರವಾಗಿರುವ ಏರಿಯಾದಲ್ಲೊಂದು ನಿವೇಶನವನ್ನು ಕೊಂಡು ಮನೆ ಕಟ್ಟಿಸಿ ಗೃಹ ಶಾಂತಿಗೆ ಸ್ನೇಹಿತ ಬಂಧು ಬಳಗದವರನ್ನು ಕರೆದಾಗ ಮನಿ ಬಾಳ ಚಂದ ಕಟ್ಟಿಸಿರಿ ಆದರ ಇದು ಊರಿಗೆ ಬಾಳ ದೂರಾಗೈತಿ ಇದ ಊರಾಗ ಆಗಿದ್ರ ಇನ್ನು ಚುಲೋ ಆಗತ್ತಿತ್ತು. ಅನ್ನೋದು ಎಲ್ಲರ ಸಾಮಾನ್ಯ ದೂರಾಗಿತ್ತು. ಮಾಲಿನ್ಯ, ಟ್ರಾಫಿಕ್‌ನಿಂದ ದೂರವಾಗಿ ಪ್ರಶಾಂತವಾಗಿರುವ ಸ್ಥಳವನ್ನು ಆರಿಸಿಕೊಂಡು ಸ್ವಂತ ಮನೆಯ ಭಾಗ್ಯ ಪಡೆದಿದ್ದೆ. ಸುತ್ತ ಇರುವ ಹಸಿರು ಗಿಡಗಳಿಂದ ಆಹ್ಲಾದಕರ ಪರಿಸರ ಪ್ರತಿ ದಿನ ಪ್ರತಿಕ್ಷಣ ನನ್ನ ಮನಸ್ಸನ್ನು ಉಲ್ಲಸಿತವಾಗಿರುವಂತೆ ಮಾಡಿತ್ತು. ಎದುರಿಗಿರುವ ಪರಿಚಯದ ಶಾಂತಕ್ಕನ ಮನೆಯ ಕಾಂಪೌoಡ್ ಗೋಡೆಗೆ ತಗುಲಿದಂತಿರುವ ಗುಲಾಬಿ ಬಣ್ಣದ ಕಾಗದ ಹೂಗಳು ಕಣ್ಮನ ತಣಿಸುತ್ತಿದ್ದವು. ಚಳಿಗಾಲದ ಮುಂಜಾವುಗಳಲ್ಲಿ ಬೀದಿಯೆಲ್ಲ ಮಂಜಿನ ತೆರೆ ಹೊದ್ದುಕೊಂಡಾಗ ಶಾಂತಕ್ಕನ ಮನೆಯ ಕಾಗದ ಹೂಗಳು ಅಸ್ಪಷ್ಟವಾಗಿ ಕಣ್ಣಿಗೆ ಬಿದ್ದು ಹೊಸ ಆನಂದವನ್ನು ತರುತ್ತಿದ್ದವು. ಬಲಗಡೆ ನನ್ನ ಪತಿದೇವರ ಸಹೋದ್ಯೋಗಿಯ ನಿವಾಸದ ಮುಂದೆ ವಿಧ ವಿಧ ಹೂಗಳು ತರಾವರಿ ಗುಲಾಬಿ ಹೂಗಳು ಸದಾ ನಗುತ್ತ ನಿಂತಿರುವ ರೀತಿಗೆ ಎಂಥವರು ಮನಸೋತು ತಮಗೂ ಬೇಕೆಂದು ಹೂವಿನ ಕಂಟಿಗಳನ್ನು ಬಲು ಆಸೆಯಿಂದ ಕೇಳಿ ಪಡೆಯುತ್ತಿದ್ದರು. ಮಲ್ಲಿಗೆ ಮಲ್ಲಮ್ಮನೆಂದೇ ಹೆಸರಾಗಿದ್ದ ಮಲ್ಲಮ್ಮನ ಮನೆ ಎಡಕ್ಕಿದೆ. ಗಗನದೆತ್ತರಕ್ಕೆ ಬೆಳೆದು ನಿಂತ ಬೇವಿನ ಮರದ ಪಕ್ಕಕ್ಕಿರುವ ಮಲ್ಲಿಗೆ ಗಿಡ.ಇಡೀ ಏರಿಯಾದಲ್ಲೆಲ್ಲ ತನ್ನ ಪರಿಮಳದ  ಘಮ ಹಿಡಿಸಿರುತ್ತೆ.  ರಜೆಯ ದಿನಗಳಲ್ಲಂತೂ ಹಬೆಯಾಡುವ ಕಾಫಿಯನ್ನು ಆಸ್ವಾದಿಸುತ್ತ ಮಲ್ಲಿಗೆ ಸುವಸನೆಯನ್ನು ಆಘ್ರಾಣಿಸುತ್ತ ದಿನಪತ್ರಿಕೆಯ ಮೇಲೆ ಕಣ್ಣಾಡಿಸುವದು ನನಗೆ ತುಂಬಾ ಇಷ್ಟ. ರಾತ್ರಿ ಮಗಳನ್ನು ಕಾಂಪೌoಡ್ ಕಟ್ಟೆಯ ಮೇಲೆ ಕೂರಿಸಿ ಬೆಳದಿಂಗಳ ಬೆಳಕಲ್ಲಿ ತುತ್ತು ತಿನ್ನಿಸಿ ಲಾಲಿ ಹಾಡಿದ್ದೂ ಈ ಪರಿಮಳಕ್ಕೋಸ್ಕರವೆ! ಮನೆ ಕಟ್ಟುವ ಮೊದಲೇ ಸೋದರತ್ತೆಯಂತೆ ತೆಂಗಿನ ಮರದ ಸಸಿ ನೆಟ್ಟು ಫಲಕ್ಕಾಗಿ ಕಾಯುತ್ತಿದ್ದೆ. ವಸಂತ ಕಾಲದಲ್ಲಿ ಮಲ್ಲಕ್ಕನ ಬೇವಿನ ಗಿಡದಲ್ಲಿ ಶುಭೋದಯಕ್ಕೂ ಮುನ್ನವೇ ಕೋಗಿಲೆಯ ಇಂಚರ ಕೇಳಿ ಮಗಳು ಕಣ್ಣುಜ್ಜುತ್ತ ಕೋಗಿಲೆಯ ಕಾಣಲು ಅವರ ಮನೆಯ ಕಾಂಪೌoಡಿಗೆ ಜಿಗಿಯುತ್ತಿದ್ದಳು.  ಹಲವು ಬಾರಿ ಗಿಳಿಗಳ ಹಿಂಡು ಬೇವಿನ ಮರದ ಮೇಲೆ ತಮ್ಮ ಬಿಡಾರ ಹೂಡಿದಾಗ ಓಣಿಯ ಮಕ್ಕಳ ಹಿಂಡು ಅಲ್ಲಿಂದ ಕಾಲು ಕೀಳುತ್ತಿರಲಿಲ್ಲ. ಗೀಜಗ ತನ್ನ ಗೂಡನ್ನು ಬೇವಿನ ಮರದಲ್ಲಿ ಕಟ್ಟಿ ನಮ್ಮಂಥ ದೊಡ್ಡವರ ಕಣ್ಣುಗಳನ್ನು ದೊಡ್ಡದಾಗಿ ತೆರೆಯುವಂತೆ ಮಾಡಿತ್ತು. ಎಷ್ಟೋ ತರಹದ ಹಕ್ಕಿಗಳಿಗೆ ಆಶ್ರಯ ನೀಡಿ ನಮ್ಮ ಕಿವಿಗಳನ್ನು ಪಕ್ಷಿಗಳ ಕಲರವದಿಂದ ತುಂಬಿಸಿತ್ತು. ಗಾಳಿ ಕಾಲದಲ್ಲಿ ಎಲೆಗಳೆಲ್ಲ ಉದುರಿ ಕಸ ಬುಟ್ಟಿ ಬುಟ್ಟಿಯಗಿ ಬರುತ್ತೆ ಕಸ ಉಡುಗಿ ಉಡುಗಿ ನನ್ನ ರಟ್ಟಿ ಸೋತಾವೆನ್ನುವದು ಮಲ್ಲಕ್ಕನ ಮೇಲ್ಮಾತಿನ ಬೇಜಾರು. ಹೊಸ ಚಿಗುರು ಬಂದು ಶೋಭಾಯಮಾನವಾಗಿ ಕಂಡಾಗ ಮುಗುಳ್ನಗುತ್ತ ಉಗಾದಿ ಹಬ್ಬಕ್ಕ ನಮ್ಮ ಬೇವಿನ ಮರದ ಎಲಿ ಹಾಕ್ಕೊಂಡು ಜಳಕ ಮಾಡ್ರಿ. ಬೇವು ಬೆಲ್ಲಕ್ಕ ಇದ  ಹೂವು ಬಳಸ್ರಿ ಅಂತ ಸುತ್ತ ಮುತ್ತಲಿನ ಮನೆಯವರಿಗೆಲ್ಲ ತಾನೇ ಖುಷಿಯಿಂದ ಹಂಚಿ ಬರುತ್ತಿದ್ದಳು.  ಮೊನ್ನೆ ನನ್ನ ಮಗಳು ಅವ್ವಾ ಅವ್ವಾ ಎಂದು ಅರಚುತ್ತಾ ನೋಡ ಬಾ ಇಲ್ಲೆ ಬೇವಿನ ಮರ ಕಡದು ಹಾಕಾಕತ್ತರ. ಹೇಳ ಬಾ ಅವರಿಗೆ ಕಡಿಬ್ಯಾಡ ಅಂತ ಅಡುಗೆ ಮನೆಯಲ್ಲಿದ್ದ ನನ್ನ ಕೈ ಹಿಡಿದು ದರ ದರ ಎಳೆಯುತ್ತ ಮಲ್ಲಕ್ಕನ ಕಾಂಪೌಡಿಗೆ ತಂದು ನಿಲ್ಲಿಸಿದ್ದಳು. ವಿಚಾರಿಸಿದಾಗ, ಬೇವಿನಗಿಡ ಈ ದಿಕ್ಕಿನ್ಯಾಗ ಇರಬಾರದಂತ. ಇದು ಇಲ್ಲಿದ್ದದ್ದಕ್ಕ ನಮಗ ಸಮಸ್ಯೆ ಹೆಚ್ಚಾಗತಾವು ಅಂತ ವಾಸ್ತು ತಜ್ಞರು ಹೇಳಿದ್ರು ಅದಕ್ಕ ನಿರ್ವಾ ಇಲ್ಲದ ಕಡಸಾಕ ಹತ್ತೆವ್ರಿ ಅಂದಳು.  ಮರಕ್ಕೆ ಕೊಡಲಿ ಪೆಟ್ಟು ಹಾಕಿದಾಗಲೊಮ್ಮೆ ನನಗೇ ಹಾಕಿದಷ್ಟು ನೋವಾಗುತಿತ್ತು. ನಮಗೆಲ್ಲ ಶುದ್ಧ ಉಸಿರು ನೀಡಿದ ಮರ ವಾಸ್ತು ಹೆಸರಿನಲ್ಲಿ ನಿಸ್ಸಹಾಯಕವಾಗಿ ತನ್ನ ಉಸಿರು ಕಳೆದುಕೊಳ್ಳುತ್ತಿರುವದನ್ನು ಕಂಡು ಓಣಿಯ ಮಕ್ಕಳು ದೊಡ್ಡವರೆಲ್ಲ ಮನದಲ್ಲೇ ವಾಸ್ತು ತಜ್ಞರನ್ನು ಶಪಿಸುತ್ತಿದ್ದರು. ಮನೆಗೆ ತೆರಳುವಾಗ ಮಗಳು, ಅವ್ವಾ ಇನ್ನ ಮ್ಯಾಲೆ ಕೋಗಿಲೆ ಗಿಳಿ ಬರೂದಿಲ್ಲ ಅಲ್ಲ ಎಂದು ಬೇಜಾರಿನಿಂದ ಕೇಳಿದಳು. ನಮ್ಮ ತೆಂಗಿನ ಮರ ದೊಡ್ಡದಾಗತ್ತಲ್ಲಾ ಈ ಸಲ ಅಲ್ಲೆ ಕೋಗಿಲೆ ಗಿಳಿಗಳು  ಇರ‍್ತಾವು ನೋಡ್ತಾ ಇರು ಎಂದೆ. ನಿಜಾನಾ ಅವ್ವಾ ಎಂದು  ಕೊಂಚ ಸಾವರಿಸಿಕೊಂಡು ಮುಖ ಅರಳಿಸಿದಳು. ಬರೋ ಯುಗಾದಿಗೋಸ್ಕರ ಮಗಳು ಸಾವಿರ ಕಣ್ಣುಗಳಲ್ಲಿ ಎದುರು ನೋಡುತ್ತಿದ್ದಾಳೆ. ಅವಳೊಂದಿಗೆ ನಾನೂ ಕೂಡ. ಸಸಿಗಳನ್ನು ನೆಡಿ ಮರಗಳನ್ನು ಕಾಪಾಡಿ ಅರಣ್ಯಗಳನ್ನು ರಕ್ಷಿಸಿ ಕಾಡಿದ್ದರೆ ನಾಡು ಅಂತೆಲ್ಲ ಘೋಷಣೆಗಳ ಅಬ್ಬರ ಎಲ್ಲೆಲ್ಲೂ ಕೇಳುತ್ತಲೇ ಇರುತ್ತೆ. ಸಬೆ ಸಮಾರಂಭಗಳಲ್ಲಿ ಉಪನ್ಯಾಸ ಮಾಲಿಕೆಗಳು ಕೇಳುಗರ ಕಿವಿಯ ಬಾಗಿಲಲ್ಲಿ  ನಿಂತು ಸರದಿಯ ಪ್ರಕಾರ ಒಂದಾದ ಮೇಲೊಂದು ಬರುತ್ತಿರುತ್ತವೆ. ಹೀಗಿದ್ದಾಗಲೂ ರಸ್ತೆಯಂಚಿನಲ್ಲಿರುವ ಮರಗಳು ಕರೆಂಟ್ ವಾಯರಿಗೆ ಅಡ್ಡಿ ಪಡಿಸುತ್ತವೆಂದು ತಮ್ಮ ಕೊಂಬೆಗಳನ್ನು ಕಳೆದುಕೊಂಡರೆ ಇನ್ನೂ ಕೆಲವು ರಸ್ತೆ ಅಗಲೀಕರಣದ ಹೆಸರಿನಲ್ಲಿ ಕಟ್ಟಡ ಅಡುಗೆ ಸೌದೆ ಫ್ಯಾಕ್ಟರಿಗೊಸ್ಕರ  ಮನುಷ್ಯನ ದುರಾಸೆಗೋಸ್ಕರ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿರುವ ಮರಗಳನ್ನು ಕಂಡು ಮರ ಮರ ಮರಗುತ್ತದೆ ಜೀವ. ಹಂಚಿಕೊಳ್ಳದಿರೋಕೆ ನನ್ನ ಕೈಲಿ ಆಗಲಿಲ್ಲ. ಮರಗುವ ಜೀವಕೆ ಸಂತೈಸಲು ಸಸಿಗಳನು ಸಾಲು ಸಾಲಾಗಿ ನೆಟ್ಟು ನೀರೆರೆಯುತ್ತಿದ್ದೇನೆ. ಮತ್ತೆ ನೀವು—-? ಜಯಶ್ರೀ. ಜೆ. ಅಬ್ಬಿಗೇರಿ.

“ಮರಗಳ ಜೀವಕೆ ಮರುಗುತಿದೆ ಜೀವ”ಜಯಶ್ರೀ. ಜೆ. ಅಬ್ಬಿಗೇರಿ. Read Post »

ಇತರೆ, ಲಹರಿ

“ಹಾಗೆ ಸುಮ್ನೆ,,,,” ಹೀಗೊಂದು ಲಹರಿ,ವಾಣಿ ಯಡಹಳ್ಳಿ ಮಠ ಅವರಿಂದ

“ಹಾಗೆ ಸುಮ್ನೆ,,,,” ಹೀಗೊಂದು ಲಹರಿ,ವಾಣಿ ಯಡಹಳ್ಳಿ ಮಠ ಅವರಿಂದ

“ಹಾಗೆ ಸುಮ್ನೆ,,,,” ಹೀಗೊಂದು ಲಹರಿ,ವಾಣಿ ಯಡಹಳ್ಳಿ ಮಠ ಅವರಿಂದ Read Post »

ಇತರೆ, ಲಹರಿ

ಬಯಕೆಗಳ ಬೆನ್ನೇರಿ. . . . .ಜಯಶ್ರೀ.ಜೆ.ಅಬ್ಬಿಗೇರಿ‌ ಅವರ ಲಹರಿ

ತನ್ನ ಬಂಧನದಲ್ಲಿರಿಸಿಕೊಂಡ ಬಯಕೆಗಳ ಹಾಗೆಯೇ ಬದುಕು ಸಾಗುವುದಿಲ್ಲ ಎಂಬುದು ಸತ್ಯ. ಬಯಸಿದ್ದೆಲ್ಲ ಇಲ್ಲಿ ಸಿಗುವುದಿಲ್ಲ ಎಂದು ತಿಳಿದಾಗ ಬಯಕೆಗಳದ್ದು ಇಲ್ಲಿ ಎಲ್ಲವೂ ನಡೆಯುವುದಿಲ್ಲ ಎಂಬುದು ಅರ್ಥವಾಗುತ್ತದೆ. 

ಬಯಕೆಗಳ ಬೆನ್ನೇರಿ. . . . .ಜಯಶ್ರೀ.ಜೆ.ಅಬ್ಬಿಗೇರಿ‌ ಅವರ ಲಹರಿ Read Post »

ಇತರೆ, ಲಹರಿ

́ಶುಚಿ-ರುಚಿಯಾದ ಜಗತ್ತಾಗಲು…!́ಉಪ್ಮಾಕಥೆ-ರಾಜು ಪವಾರ್‌ ಅವರಿಂದ

ಲಹರಿ ಸಂಗಾತಿ

ರಾಜು ಪವಾರ್‌

́ಶುಚಿ-ರುಚಿಯಾದ ಜಗತ್ತಾಗಲು…!́

́ಶುಚಿ-ರುಚಿಯಾದ ಜಗತ್ತಾಗಲು…!́ಉಪ್ಮಾಕಥೆ-ರಾಜು ಪವಾರ್‌ ಅವರಿಂದ Read Post »

ಇತರೆ, ಲಹರಿ

“ಮಣ್ಣು” ಒಂದು ಲಹರಿ -ಶೋಭಾ ಮಲ್ಲಿಕಾರ್ಜುನ್ ಅವರ ಬರಹ

ಲಹರಿ ಸಂಗಾತಿ

ಶೋಭಾ ಮಲ್ಲಿಕಾರ್ಜುನ್

“ಮಣ್ಣು”

ಒಂದು ಲಹರಿ
ನಿಮ್ಗೆ ಆಹಾರ ಬೆಳೆಯೋಕೆ ನಾನು ಬೇಕು,ನನ್ನಲ್ಲಿ ಪೌಷ್ಟಿಕಾಂಶ ಇದ್ದು,ನಾನು ಫಲವತ್ತಾಗಿದ್ದರೆ ತಾನೆ ನೀವು ಎಲ್ಲವನ್ನೂ ಬೆಳೆಯಲು ಸಾಧ್ಯ

“ಮಣ್ಣು” ಒಂದು ಲಹರಿ -ಶೋಭಾ ಮಲ್ಲಿಕಾರ್ಜುನ್ ಅವರ ಬರಹ Read Post »

ಇತರೆ, ಲಹರಿ

“ರೆಕ್ಕೆ ಬಲಿತ ಮೇಲೆ….” ತಮ್ಮ ಮನೆಯಲ್ಲಿ ಗೂಡು ಕಟ್ಟಿದ ಪಕ್ಷಿಗಳ ಲೋಕದ ಬಗ್ಗೆ ಬರೆಯುತ್ತಿದ್ದಾರೆ ಮಡಿಕೇರಿಯ ಜಯಲಕ್ಷ್ಮಿ ಕೆ.

“ರೆಕ್ಕೆ ಬಲಿತ ಮೇಲೆ….” ತಮ್ಮ ಮನೆಯಲ್ಲಿ ಗೂಡು ಕಟ್ಟಿದ ಪಕ್ಷಿಗಳ ಲೋಕದ ಬಗ್ಗೆ ಬರೆಯುತ್ತಿದ್ದಾರೆ ಮಡಿಕೇರಿಯ ಜಯಲಕ್ಷ್ಮಿ ಕೆ.

“ರೆಕ್ಕೆ ಬಲಿತ ಮೇಲೆ….” ತಮ್ಮ ಮನೆಯಲ್ಲಿ ಗೂಡು ಕಟ್ಟಿದ ಪಕ್ಷಿಗಳ ಲೋಕದ ಬಗ್ಗೆ ಬರೆಯುತ್ತಿದ್ದಾರೆ ಮಡಿಕೇರಿಯ ಜಯಲಕ್ಷ್ಮಿ ಕೆ. Read Post »

ಇತರೆ, ಲಹರಿ

“ದೇವರಂಥ ಗೆಳೆಯ ಸದ್ದಿಲ್ಲದೆ ಎದ್ದು ನಡೆದ.”ಲಹರಿ ಬರಹ ಜಯಶ್ರೀ ಭಂಡಾರಿ ಅವರಿಂದ

“ದೇವರಂಥ ಗೆಳೆಯ ಸದ್ದಿಲ್ಲದೆ ಎದ್ದು ನಡೆದ.”
ಲಹರಿ ಸಂಗಾತಿ

“ದೇವರಂಥ ಗೆಳೆಯ

ಸದ್ದಿಲ್ಲದೆ ಎದ್ದು ನಡೆದ.”

ಜಯಶ್ರೀ ಭಂಡಾರಿ

“ದೇವರಂಥ ಗೆಳೆಯ ಸದ್ದಿಲ್ಲದೆ ಎದ್ದು ನಡೆದ.”ಲಹರಿ ಬರಹ ಜಯಶ್ರೀ ಭಂಡಾರಿ ಅವರಿಂದ Read Post »

You cannot copy content of this page

Scroll to Top