ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಹೊತ್ತಾರೆ.

(ಅಮ್ಮನೂರಿನ ನೆನಪುಗಳು) ಅಮೇರಿಕಾದಿಂದ ಅಶ್ವಥ್ ಬರೆಯುತ್ತಿದ್ದಾರೆ….. ಅಶ್ವಥ್ ಮೂಗು ಹಿಡಿದುಕೆನ್ನೆಗೆ ಹೊಡಿ! ಕಾನ್ವೆಂಟೆನ್ನುವಶಾಲೆಯನ್ನು ಸೇರಿಯೂ ಆಯ್ತು, ಮೂರ್ನಾಲ್ಕು ತಿಂಗಳು ಉರುಳಿದ್ದೂ ಆಯ್ತು. ಈ ಸಮಯದಲ್ಲಿ ಯಾವುದೇ ನೆಪ ಹೇಳಿ ತಪ್ಪಿಸಿಕೊಳ್ಳಲಾಗುವುದಿಲ್ಲ; ಒಂದು ವರ್ಷ ಪೂರೈಸಲೇ ಬೇಕು. ಹಾಗಾಗಿ ಕೆಜಿ ಕ್ಲಾಸು ಯಾಂತ್ರಿಕವಾಗಿ ಸಾಗುತ್ತಿತ್ತು. ಹೊಸದೇನೂ ಕಲಿಯಲು ಇಲ್ಲದೇ ಬೋರು ಹೊಡೆಯುತ್ತಿತ್ತು. ಶಾಲೆ ಮುಗಿದ ಮೇಲೆರಾಣಿ ಮೇಡಮ್ ಮನೆಯೂ ಬಂದ್ ಆಗಿದ್ದರಿಂದ ಒಂದು ದಿನ ಮಧ್ಯಾಹ್ನ ಶಾಲೆ ಮುಗಿಸಿ ನಿತ್ಯವೂ ಕರೆತರುತ್ತಿದ್ದ ಅಕ್ಕನ ಶಾಲೆಯ ಬಗ್ಗೆ ಅಲ್ಲೇ ರಸ್ತೆಯಲ್ಲಿ ನಿಂತಿದ್ದವರ ಬಳಿ ಕೇಳುತ್ತಾ ಅವಳ ಶಾಲೆಯ ಕಾಂಪೌಂಡಿನೊಳಗೆ ಬಂದು ಹುಡುಕುತ್ತಿದ್ದೆ. ಸೈಕಲ್ ಮೇಷ್ಟ್ರು ಅವರ ಹೆಸರು, ಪಕ್ಕಾ ನೆನಪಿದೆ. ಅವರ ಹೆಸರು ಶೇಖರ್ ಮೇಷ್ಟ್ರಂತೆ, ಸೈಕಲ್ಲೇರಿ ಬರುತ್ತಿದ್ದರಿಂದ ಸೈಕಲ್ ಮೇಷ್ಟ್ರು ಅಂತಲೇ ಅವರ ಹೆಸರನ್ನು ಬದಲಾಯಿಸಿಬಿಟ್ಟಿದ್ದರಂತೆ. ಹಿರಿಯ ಪ್ರಾಥಮಿಕ ಶಾಲೆಯ ಮೇಷ್ಟರು ಇನ್ನೂ ಕಿರಿಯ ಪ್ರಾಥಮಿಕವೂ ಆಗಿಲ್ಲದ ನನ್ನನ್ನು ಕಂಡು, ʼಯಾರೋ ನೀನು? ಇಲ್ಲೇನ್ ನೋಡ್ತಿದ್ದೀಯಾ?ʼ ಅನ್ನುತ್ತಾ ಹತ್ತಿರ ಬಂದರು. ನನ್ನ ಅಕ್ಕನನ್ನು ಹುಡುಕುತ್ತಿದ್ದೇನೆಂದಾಗ ಒಳಗೆ ಕರೆದುಕೊಂಡು ಹೋಗಿ ಯಾರು ಅಕ್ಕ? ಅಂದಿದ್ದಕ್ಕೆ ಅಕ್ಕನೇ ಎದ್ದು, ʼನಮ್ ಚಿಕಪ್ಪನ ಮಗ ಸಾʼ ಅನ್ನುತ್ತಾ ನನ್ನ ಮತ್ತು ನನ್ನ ಕೆಜಿಸ್ಕೂಲಿನ ವಿವರ ತಿಳಿಸಿದಳು. ಸರಿ ಅಂದು ಅವಳ ಪಕ್ಕದಲ್ಲಿ ಕೂತ್ಕೊಳ್ಳಲು ನನಗೆ ಅವಕಾಶ ಕೊಟ್ಟ ಸೈಕಲ್ ಮೇಷ್ಟರು, ಮಕ್ಕಳಿಗೆ ಕಾಗುಣಿತ ಹೇಳಿಸುವಾಗ, ನಾನೂ ಹೇಳ್ತೀನಿ ಅಂದೆ. ಹೇಳು ನೋಡನಾ, ಅಂದು ಕಾಗುಣಿತ ಶುರು ಮಾಡಿ ಹಾಗೇ ನನಗೆ ಗೊತ್ತಿದ್ದ ಎಲ್ಲವನ್ನೂ ಕೆದಕುತ್ತಾ ಕೇಳಿ, ಮಗ್ಗಿಯನ್ನೂ ಹೇಳಿಸಿ, ನೋಡಿಲ್ಲಿ ಇವ್ರಿಗೆಲ್ಲಮಗ್ಗಿ ಕಾಗುಣಿತ ಹೇಳೋದಿಕ್ಕೇ ಬರೋದಿಲ್ಲ ಅಂದಿದ್ದೇ, ಮೂಗು ಹಿಡಿದು ಕೆನ್ನೆಗೆರೆಡು ಬಾರಿಸೋ ಮರಿ ಅಂದರು. ಗೊತ್ತಾಗದೇ ಸುಮ್ಮನೇ ನಿಂತಿದ್ದವನಿಗೆ ಮೇಷ್ಟರೇ ಪಕ್ಕದಲ್ಲಿದ್ದ ಅಕ್ಕನನ್ನು ತೋರಿಸಿಕೊಡಲು ಹೇಳಿದರು. ಎಡಗೈಯಲ್ಲಿ ಅವರ ಮೂಗು ಹಿಡಿದು ಬಲಗೈಯಿಂದ ಆಕಡೆ ಕೆನ್ನೆಗೊಂದು ಈ ಕಡೆ ಕೆನ್ನೆಗೊಂದು, ಹಾಂ ಹಂಗೇ!! ಎಲ್ಲರಿಗೂ ಬಾರಿಸು ನೋಡಾಣಾ ಅಂದರು. ಅವತ್ತು ಶಾಲೆಯ ಬೇಸರವೆಲ್ಲ ಹೋಗಿ ಎಲ್ಲರಿಗೂ ಮೂಗು ಹಿಂಡಿ ಒಂದು ಸುತ್ತು ಕೆನ್ನೆ ಸವರಿ ಬಂದಿದ್ದಾಯ್ತು. ನನ್ನ ಎರಡುಪಟ್ಟು ಎತ್ತರವಿದ್ದ ಮಾಧ್ಯಮಿಕ ಶಾಲೆಯ ಎಲ್ಲರೂ ಸ್ವಯಂಪ್ರೇರಣೆಯಿಂದ ತಲೆಬಾಗಿಸಿ ನಾನು ಮೂಗು ಹಿಂಡುವುದಕ್ಕೂ, ಕೆನ್ನೆ ಸವರುವುದಕ್ಕೂ ಸಹಾಯ ಮಾಡಿದ್ದರು. ದೊಡ್ಡಪ್ಪನ ಮಗಳು ಈಗಲೂ ಆ ಸ್ಕೂಲಿನ ಘಟನೆಯನ್ನು ಮರೆತಿಲ್ಲ! ದಿನಾ ಹೊತ್ಕಂಡ್ ಹೋಗದಲ್ಲದೇ ಕೆನ್ನೆಗೆ ಏಟೂ ಕೊಟ್ಟಿದ್ದ ಗುಂಡೂರಾಯ ಅಂತಾಳೆ ಸಿಕ್ಕಾಗಲೆಲ್ಲಾ.   ದಿನವಿಡೀ ನನಗೆ ಶಾಲೆಯಲ್ಲಿ ಉಪ್ಪಿಟ್ಟಿನದೇ ನೆನಪು. ಅದೇ ನೆನಪನ್ನು ಉಳಿಸಿಕೊಂಡು ಸಂಜೆ ಖುಷಿಯಾಗಿ ಮನೆಗೆ ಬಂದೆ. ಎಲ್ಲಿ ಉಪ್ಪಿಟ್ಟು? ಅಕ್ಕನನ್ನು ಕೇಳಿದರೆ ತಕ್ಷಣ ಬಂದು ರಾಗಿ ಮುದ್ದೆಯನ್ನು ಮುಂದೆ ಹಿಡಿದು ತುತ್ತು ತಿನಿಸಲು ಪ್ರಯತ್ನಿಸಿದರು. ʼಅದಿರಲಿ, ಉಪ್ಪಿಟ್ಟು ಎಲ್ಲಿ?ʼ ನನ್ನ ಪ್ರಶ್ನೆ.  ತಿಂದು ನೋಡು ಇದನ್ನ ಅನ್ನುತ್ತಾ ಅಕ್ಕ ಒಂದು ತುತ್ತು ಬಾಯಲ್ಲಿ ಇರಿಸಿಯೇ ಬಿಟ್ಟರು. ರಾಗಿ ಮುದ್ದೆಯೇ ಆದರೂ ಬರೀ ಮುದ್ದೆಯಲ್ಲ. ಅದಕ್ಕೆ ಉಪ್ಪು ಮೆಣಸಿನಕಾಯಿ, ಹುಣಸೆ, ಜೀರಿಗೆ ಬೆಳ್ಳುಳ್ಳಿ ಸೇರಿಸಿ ಅಡುಗೆ ಮನೆಯ ಒರಳುಗಲ್ಲಿನಲ್ಲಿ ಕುಟ್ಟಿ ಪುಡಿ ಮಾಡಿ ಅದಕ್ಕೆ ಬೆಳಿಗ್ಗೆಯೇ ಮಾಡಿಟ್ಟು ತಣ್ಣಗಾಗಿದ್ದ ತಂಗುಳು ಮುದ್ದೆಯನ್ನೂ ಸೇರಿಸಿ ರುಬ್ಬಿದ್ದರು. ಹೊಸ ರುಚಿ ಅನಿಸಿದ್ದರಿಂದ ಅದನ್ನೇ ತಿನ್ನುತ್ತಾ ಮುಂದುವರಿದೆ. ʼಮತ್ತೆ ಉಪ್ಪಿಟ್ಟು?ʼ ಅಂದೆ.  ಈಗ ತಿಂದಿದ್ದೇ ಉಪ್ಪಿಟ್ಟು, ಹಿಂದೆಲ್ಲಾ ರಾತ್ರಿ ಅಡುಗೆ ಮಾಡುವಾಗಲೇ ಜಾಸ್ತಿ ಮುದ್ದೆ ಮಾಡಿಟ್ಟು, ಬೆಳಗಿನ ಹೊತ್ತು ಹಿಂಗೇ ಉಪ್ಪಿಟ್ಟು ಮಾಡ್ತಿದ್ದರು, ಅದೇ ಆಗೆಲ್ಲಾ ತಿಂಡಿ, ಗೊತ್ತಾ?  ಹಿಟ್ಟು ತಿಂದವರು ಗಟ್ಟಿಯಾಗ್ತಾರಂತೆ ಅಂದರು ಅಕ್ಕ. ಅದು ಹೇಗೋ ಆ ಒಂದು ಶೈಕ್ಷಣಿಕ ವರ್ಷ ಕಳೆಯಿತು. ಸೋದರ ಮಾವ ಒಬ್ಬರು ಬಂದು ಮತ್ತೆ ಅಮ್ಮನ ಊರಿಗೆ ಕರೆದುಕೊಂಡು ಬಂದರು. ಆಮೇಲೆ ಅಕ್ಕನೂರಿನ ಕೆಜಿ ಕ್ಲಾಸು ಬೇಡವೇ ಬೇಡವೆಂದು ನನ್ನದೇ ಸ್ವಂತದ್ದಾಗಿದ್ದ ಅಮ್ಮನೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೇ ಸೇರಿಕೊಂಡೆ. ಅಕ್ಕನ ಊರಿನಲ್ಲಿ ಎಲ್ ಕೆಜಿ ಕ್ಲಾಸಿಗೆಂದು ಇದ್ದ ಒಂದು ವರ್ಷದಲ್ಲಿ ಹೆಚ್ಚು ಹಿತವೆನಿಸಿದ್ದು ರಾಣಿ ಮೇಡಮ್ ಮತ್ತೆ ಅಕ್ಕನ ಈ ಉಪ್ಪಿಟ್ಟು ಎರಡೇ! ಈಗ ಮಗಳಿಗೆ ಇವತ್ತು ಅಡುಗೆ ಏನ್ ಮಾಡೋದಮ್ಮಾ ಅಂತ ಕೇಳಿದರೆ ಸಾಕು. ತಕ್ಷಣ “ಮುದ್ದೆ!” ಅಂತ ಏರುದನಿಯಲ್ಲಿ ಚೀರುತ್ತಾ ಒತ್ತಾಯಿಸ್ತಾಳೆ. ರಾಗಿಹಿಟ್ಟಿನ ಸರಬರಾಜು ಇರದೇ, ಅವಳಿಗೆ ಅಡುಗೆಗೆ ಏನು ಅಂತ ಕೇಳುವುದನ್ನೇ ಕಡಿಮೆ ಮಾಡಿಬಿಟ್ಟಿದ್ದೇವೆ. ಇಲ್ಲಾಂದ್ರೆ  ತಿಂಗಳಿಗೆ ಮೂರು ಟ್ರಿಪ್ಪು ಪಿಟ್ಸ್ ಬರ್ಗಿಗೊ, ನ್ಯೂಯಾರ್ಕಿಗೋ ಇಂಡಿಯನ್ ಸ್ಟೋರ್ ಹುಡುಕಿ ಪ್ರಯಾಣ ಮಾಡಬೇಕಾಗುತ್ತೆ! ****** (ಮುಂದುವರಿಯುವುದು)

ಹೊತ್ತಾರೆ. Read Post »

ಅಂಕಣ ಸಂಗಾತಿ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

 (ಶಿವಮೊಗ್ಗ ಜಿಲ್ಲೆ ಹಲವಾರು ಚಳವಳಿಗಳ ಉಗಮಸ್ಥಾನವಾಗಿದೆ. ಇವತ್ತಿಗೂ ಶಿವಮೊಗ್ಗ ಜಿಲ್ಲೆಯ ಜನರ ಮನಸ್ಸುಗಳು ಪ್ರಗತಿಪರವಾಗಿಯೇ ಆಲೋಚಿಸುತ್ತಿವೆ. ಈ ಪ್ರಗತಿಪರ ಮನಸ್ಸುಗಳ ಮೂಲ ಬೇರು ಜಿಲ್ಲೆಯಲ್ಲಿ ಹುಟ್ಟಿದ ಚಳವಳಿಗಳಲ್ಲಿ ಅಡಗಿದೆ. ಈ ಕುರಿತು “ ಶಿವಮೊಗ್ಗ ಜಿಲ್ಲೆಯ ಚಳವಳಿಗಳು” ಎಂಬ ಹೆಸರಿನಲ್ಲಿ ಡಾ.ಸಣ್ಣರಾಮರವರು ಸವಿಸ್ತಾರವಾಗಿ ಪತ್ರಿಕೆಗೆ ಬರೆಯಲಿದ್ದಾರೆ.) ಡಾ.ಸಣ್ಣರಾಮ ಭಾಗ-ಒಂದು.     ಮನುಷ್ಯ ವಿಕಾಸದ ಹಂತದಿಂದಲೇ ಒಬ್ಬ ಮತ್ತೊಬ್ಬನಂತಿಲ್ಲ, ಆಲೋಚನ ರೀತಿ, ಗ್ರಹಿಕೆ, ಪ್ರತಿಕ್ರಿಯೆ, ದೈಹಿಕ ಸ್ವರೂಪ, ಬಣ್ಣ ಹೀಗೆ ಎಲ್ಲಾ ಬಗೆಯಲ್ಲಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಇರುತ್ತದೆ. ಒಂದೇ ತಂದೆ-ತಾಯಿಯ ಮಕ್ಕಳು ಸಹ ಒಬ್ಬ ಮತ್ತೊಬ್ಬನಂತಿರುವುದಿಲ್ಲ. ಭಿನ್ನತೆಯೇ ಮನುಷ್ಯನ ವೈಶಿಷ್ಟವೂ ಹೌದು. ಮನುಷ್ಯನ ಭಿನ್ನ ಆಲೋಚನಾ ಕ್ರಮಗಳೇ ಭಿನ್ನ ಅಭಿಪ್ರಾಯ, ಭಿನ್ನ ಸಿದ್ದಾಂತಗಳ ಉಗಮಕ್ಕೆ ಕಾರಣ. ಒಂದು ಅಂದಾಜಿನ ಪ್ರಕಾರ ಜಗತ್ತಿನಲ್ಲಿ ದಿನ ಒಂದಕ್ಕೆ ೬೦೦ ಸಿದ್ದಾಂತ ಹುಟ್ಟುತ್ತವೆ ಮತ್ತು ಸಾಯುತ್ತಿವೆಯಂತೆ. ಭಿನ್ನತೆಯೇ ವ್ಯಕ್ತಿ ವ್ಯಕ್ತಿಯ ನಡುವೆ ಪೈಪೋಟಿ ಘರ್ಷಣೆಗಳು ಏರ್ಪಡಲು ಕಾರಣವಾಗಿದೆ. ಮನುಷ್ಯನಲ್ಲಿರುವ ಭಿನ್ನ ಆಲೋಚನಾ ಕ್ರಮಗಳೇ ಜಗತ್ತಿನಾದ್ಯಂತ ಚಳವಳಿಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.     ಮನುಷ್ಯ ಗುಹ ವಾಸಿಯಿಂದ ಗ್ರಾಮ ವಾಸಿ, ನಗರ ವಾಸಿಯಾಗುತ್ತಾ ಬಂದಂತೆ ಆತನ ಸಾಮಾಜಿಕ ರೂಪುರೇಷಗಳು ಬದಲಾಗುತ್ತಾ ಬಂದಿವೆ. ಜಗತ್ತಿನ ಯಾವ ಸಮಾಜವು ಒಂದು ಮತ್ತೊಂದರಂತಿಲ್ಲ. ಸಾಮಾಜಿಕ ರಚನಾ ವಿನ್ಯಾಸವೂ ಭಿನ್ನವೇ ಆಗಿರುತ್ತದೆ. ಅಂತೆಯೇ ಸಾಮಾಜಿಕ ವ್ಯವಸ್ಥೆಯೂ ಸಹ ಭಿನ್ನವೇ ಆಗಿರುತ್ತದೆ. ಯಾವುದೇ ಸಮಾಜ ರೂಪಿತ ವ್ಯವಸ್ಥೆಯನ್ನು  ಆ ಸಮಾಜದ ಸಮಸ್ತ ಜನರು ಒಪ್ಪಿಕೊಂಡಿರುತ್ತಾರೆಂದು ಹೇಳಲಾಗುವುದಿಲ್ಲ. ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ವ್ಯವಸ್ಥೆಯ ರೂಢಿಗತ ವಿಚಾರಧಾರೆಯನ್ನು ಒಪ್ಪದ ಜನರು ಒಟ್ಟಾಗಿ ಪ್ರಶ್ನಿಸಲು ಪ್ರಾರಂಭಿಸಿದಾಗ ಚಳವಳಿ ಸ್ಪೋಟಗೊಳ್ಳುತ್ತದೆ.    ಚಳವಳಿ ಎಂದರೇನು? ಎಂಬುದನ್ನು ವ್ಯಾಖ್ಯಾನಿಸುವುದು, ನಿರ್ಧಿಷ್ಟವಾಗಿ ಹೇಳುವುದು ಸುಲಭವಲ್ಲ, ಏಕೆಂದರೆ ಚಳವಳಿ ಎಂಬುದು ತುಂಬಾ ಸಂಕೀರ್ಣವಾದ ಅಷ್ಟೇ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಪ್ರಕ್ರಿಯೆ. ‘ಸಾಮಾಜಿಕ ವ್ಯವಸ್ಥೆಯ ವೈರುಧ್ಯಗಳ ಘರ್ಷಣೆಯನ್ನು ವ್ಯವಸ್ಥೆಯ ಸಮಗ್ರ ಬದಲಾವಣೆಗಾಗಿ ಬಳಸಲು ನಡೆಸುವ ನಿರಂತರ ರಾಜಕೀಯ ಪ್ರಕ್ರಿಯೆಯೇ ಚಳವಳಿ’ (ಕನ್ನಡ ಸಾಹಿತ್ಯ ಮತ್ತು ಜನಪರ ಚಳವಳಿ; ಸಂ;ರಂಗರಾಜ ವನದುರ್ಗ, ಲೇಖನ; ಬಿ.ಎಂ.ಪುಟ್ಟಯ್ಯ ಪು-೫) ಎಂದಿದ್ದಾರೆ. ಚಳವಳಿಯನ್ನು ಕುರಿತು ಆಧಾರ ಸಹಿತ ಚರ್ಚಿಸುವ ಲೇಖಕರು ಸರಿಯಾಗಿಯೇ ವ್ಯಾಖ್ಯಾನಿಸಿದ್ದಾರೆ. ಈ ವ್ಯಾಖ್ಯಾನವನ್ನು ವಿಸ್ತರಿಸಿ ಹೇಳುವುದಾದರೆ ಚಳವಳಿ ಎಂದರೆ ‘ವ್ಯವಸ್ಥೆಯೊಂದು ಸಾಮಾಜಿಕ, ರಾಜಕೀಯ, ಆರ್ಥಿಕ ವಿಚಾರಗಳನ್ನು ಆಚರಣೆಗೆ ತಂದಾಗ ಅವು ಬಹು ಸಮುದಾಯಗಳ ಹಿತಕ್ಕೆ ದಕ್ಕೆಯನ್ನುಂಟು ಮಾಡುವಂತಿದ್ದರೆ ಆ ಸಮುದಾಯಗಳ ಆಂತರ್ಯದಲ್ಲಿ ನಿರಂತರವಾಗಿ ಗುಪ್ತಗಾಮಿನಿಯಂತೆ ಪ್ರವಹಿಸುತ್ತಿರುವ ಶಕ್ತಿಯು ಒಮ್ಮೆಲೆ ಜ್ವಾಲಾಮುಖಿಯಂತೆ ಸ್ಪೋಟಗೊಂಡು ನಿರ್ದಿಷ್ಟ ಗುರಿಯತ್ತ ಚಲಿಸುವ ಪ್ರಕ್ರಿಯೆ’ ಎಂದು ಹೇಳಬಹುದು. ಚಳವಳಿಯಲ್ಲಿ ಬಹುಸಮುದಾಯಗಳು ಒಗ್ಗೂಡುವಿಕೆ ಮತ್ತು ಅವುಗಳ ಆಂತರ್ಯದಲ್ಲಿ ಮಡುಗಟ್ಟಿದ ಪ್ರಶ್ನಿಸುವ ನಿರಂತರ ಚಲನೆಯು ಮುಖ್ಯವಾಗುತ್ತದೆ. ಆದ್ದರಿಂದಲೇ ಚಳವಳಿ ಅಪಾರವಾದ ಶಕ್ತಿಯ ಸಂಚಯವೂ ಆಗಿರುತ್ತದೆ     ಚಳವವಳಿ ಸಮುದಾಯಗಳ ಆಂತರ್ಯದಲ್ಲಿ ನಿರಂತರ ಚಲನಶೀಲೆಯಾಗಿರುವುದರಿಂದ ಇಂದು ಹುಟ್ಟಿ ನಾಳೆ ಅಂತ್ಯಗೊಳ್ಳುವ ಕ್ರಿಯೆಯಲ್ಲ. ಭಾರತೀಯ ಸಮಾಜವನ್ನೇ ಅನುಲಕ್ಷಿಸಿ ಹೇಳುವುದಾದರೆ ಭಾರತದಲ್ಲಿ ಆದಿಮ ಕಾಲದಲ್ಲಿ ರೂಪಿತಗೊಂಡಿರುವ ವಿಚಾರಧಾರೆಯನ್ನೇ ಒಪ್ಪುವ ಸಮುದಾಯಗಳು ಒಂದೆಡೆ ಇದ್ದರೆ ಅವುಗಳನ್ನು ಪ್ರಶ್ನಿಸುವ ಮನಸ್ಸುಗಳಿಗೂ ಅಷ್ಟೇ ಪ್ರಾಚೀನತೆ ಇದೆ. ಸನಾತನ ವಾದವನ್ನು ಪ್ರಶ್ನಿಸುತ್ತಿದ್ದ ಪಂಥವನ್ನು ಪ್ರಕೃತಿವಾದಿಗಳಿಗೂ ಅಷ್ಟೇ ಪ್ರಾಚೀನತೆ ಇದೆ. ಮುಂದೆ ಚಾರ್ವಾಕ ಪಂಥವೆಂದು ಪ್ರಸಿದ್ದವಾಗಿತ್ತು. ಸನಾತನ ವಾದವನ್ನು ಧಿಕ್ಕರಿಸುವ ಮನಸ್ಸುಗಳೇ ಚಳವಳಿಗಳಿಗೆ ಮೂಲ ಪ್ರೇರಣೆ. ಮನುಷ್ಯ ಆಂತರ್ಯದಲ್ಲಿ ಅಂತರ್ಗತವಾಗಿರುವ ಪ್ರಶ್ನಿಸುವ ಗುಣ ಎಲ್ಲಿವರೆಗೂ ಇರುತ್ತದೆಯೋ ಅಲ್ಲಿಯವರೆಗೆ ಚಳವಳಿಯು ನಿರಂತರವಾಗಿರುತ್ತದೆ. ಆ ಗುಣ ಮಾನವನ ಉಗಮದಷ್ಟೆ ಪ್ರಾಚೀನ. ಆದ್ದರಿಂದಲೇ ಚಳವಳಿಗೆ ಆದಿ-ಅಂತ್ಯಗಳಿಲ್ಲ ಎಂದು ಹೇಳಲಾಗಿದೆ.     ಯಾವುದೇ ಚಳವಳಿ ಎಲ್ಲಾ ಕಾಲದಲ್ಲಿ ಏಕ ಪ್ರಕಾರವಾಗಿರುವುದಿಲ್ಲ. ಹಾಗೆಯೇ ಇರಲು ಸಾಧ್ಯವೂ ಇಲ್ಲ. ಚಳವಳಿ ಒಂದು ರೀತಿಯಲ್ಲಿ ಜ್ವಾಲಾಮುಖಿಯಂತೆ, ಜ್ವಾಲಾಮುಖಿ ಭೂಮಿಯ ಒಳಗೆ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದು, ಒಮ್ಮಿಂದೊಮ್ಮೆಲೆ ಸ್ಪೊÃಟಗೊಂಡು ಆಕಾಶಕ್ಕೆ ಲಾವಾರಸವನ್ನು ಚಿಮ್ಮಿ ತನ್ನ ತೆಕ್ಕೆಗೆ ಸಿಕ್ಕಿದಷ್ಟನ್ನು ನುಂಗಿ ನೊಣೆಯುವಂತೆ ಚಳವಳಿ ಸಮುದಾಯದ ಒಳಗೆ ಗುಪ್ತಗಾಮಿನಿಯಾಗಿದ್ದು ತಮ್ಮ ಮೇಲಿನ ದೌರ್ಜನ್ಯಗಳು ಉಗ್ರ ರೂಪ ತಳೆದಾಗ ಉಗ್ರ ರೂಪವನ್ನು ತಾಳುತ್ತದೆ. ಗುರಿ ಮುಟ್ಟಿದ ಮೇಲೆ ಮತ್ತೆ ತಟಸ್ಥವಾಗುತ್ತದೆ. ಚಳವಳಿಯ ಆದಿ ರೂಪ ಗ್ರಹಿಕೆ ಹೇಗೆ ಸಿಗುವುದಿಲ್ಲವೋ ಹಾಗೆಯೇ ಅದು ಸ್ಪೊÃಟಗೊಂಡಾಗ ತಳೆಯ ರೂಪಗಳನ್ನು ಹೇಳಲಾಗುವುದಿಲ್ಲ. ಸ್ವಾತಂತ್ರö್ಯ ಚಳವಳಿ, ದಲಿತ ಚಳವಳಿ, ಭಾಷಾ ಚಳವಳಿ, ರೈತ ಚಳವಳಿ ಈ ಎಲ್ಲಾ ಚಳವಳಿಗಳ ಹಿನ್ನಲೆಯು ಹಾಗೆಯೇ. movement ಇಂಗ್ಲಿಷಿನ ಪದ. ಇದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಚಳವಳಿ ಪದವನ್ನು ಬಳಸುತ್ತೇವೆ.. movement ಎಂದರೆ ಇಂಗ್ಲಿಷಿನಲ್ಲಿ an act the process of moving, a group of people who share same aims or ideas a trend or development ಇತ್ಯಾದಿ ಅರ್ಥಗಳಿವೆ. ಕನ್ನಡದಲ್ಲಿ movement ಪದಕ್ಕೆ ಚಲನೆ ಅಲುಗಾಟ ಚಲಿಸುವುದು, ಸ್ಥಳದಿಂದ ಸ್ಥಳಕೆ ಹೋಗುವುದು, ಮುಂದುವರಿಕೆ, ಸಾಗುವುದು ಇತ್ಯಾದಿ ಅರ್ಥಗಳಿವೆ. ‘ಚಳವಳಿ’ ಪದಕ್ಕೆ ಕನ್ನಡದಲ್ಲಿ ಆಂದೋಲನ ವಿಶೇಷ ಉ್ದೇಶಕ್ಕಾಗಿ ಒಟ್ಟುಗೂಡಿದ ಜನಗಳ ತಂಡ, ಆ ತಂಡ ಕೈಗೊಳ್ಳುವ ಕಾರ್ಯಗಳು ಹಾಗೂ ಚಟುವಟಿಕೆಗಳು ಇತ್ಯಾದಿ ಅರ್ಥಗಳಿವೆ. ಕನ್ನಡದ ಚಳುವಳಿ ಪದವು ಇಂಗೀಷ್ನ movement ಪದ ಅರ್ಥವ್ಯಾಪ್ತಿಯನ್ನು ಹೊಂದಿರುವುದರಿಂದ ಚಳವಳಿ ಪದದ ಬಳಕೆ ಸೂಕ್ತವಾಗಿದೆ. ಇಷ್ಟು ವ್ಯಾಪಕ ಅರ್ಥವ್ಯಾಪ್ತಿಯನು ಹೊಂದಿರುವ ಚಳವಳಿ ಪದವನು ಇಂದು ನಮ್ಮ ನಡುವೆ ತುಂಬಾ ಸಂಕೂಚಿತವಾಗಿ ಬಳಕೆ ಮಾಡಲಾಗುತ್ತಿದೆ. ಯಾವ ಗೊತ್ತು ಗುರಿ ಇಲ್ಲದೆ ಯಾರದೊ ಹಿತಕಾಗಿ ನಡೆಯುವ ಪತಿಭಟನೆ, ಹೋರಾಟ, ಸಂಘರ್ಷ, ಆಕ್ರೊÃಶ, ಜಗಳ ಇವೆಲ್ಲವನ್ನು ಚಳವಳಿ ಎಂದು ಕರೆಯುವುದು ಸಾಮಾನ್ಯವಾಗಿದೆ. ಈ ಪದಗಳ ಅರ್ಥ ವ್ಯಾಪ್ತಿ ಕಡಿಮೆ. ಇಲ್ಲಿ ಸಾರ್ವಜನಿಕರ ಹಿತಾಶಕ್ತಿ ಇರುವುದಿಲ್ಲ. ನಿರ್ದಿಷ್ಟ ಗೊತ್ತು ಗುರಿ ಇರುವುದಿಲ್ಲ. ಯಾರೋ ಒಬ್ಬ ವ್ಯಕ್ತಿಯ ಪರೋಕ್ಷ ಅಥವಾ ಪ್ರತ್ಯಕ್ಷ ಸ್ವಾರ್ಥತೆ ಮುಖವಾಗಿರುತ್ತದೆ. ಕ್ಷÄಲ್ಲಕÀ ವಿಚಾರವನ್ನಿಟ್ಟುಕೊಂಡು ನಡೆಯುವ ಹೋರಾಟ, ಪ್ರತಿಭಟನೆಗಳು ಚಳವಳಿ ಹೇಗಾದೀತು. ಚಳುವಳಿ ಸ್ಪೊÃಟಗೊಂಡು ವಿಶ್ವವ್ಯಾಪಿಯಾಗಬಹುದು, ರಾಷ್ಟç-ರಾಜ್ಯ ಅಥವಾ ಜಿಲ್ಲೆಯ ವ್ಯಾಪ್ತಿಗೆ ಸೀಮಿತವಾಗಿರಬಹುದು. ಅದೇನೇ ಇದ್ದರು ಅವುಗಳ ಅಧ್ಯಯನ ನಡೆಯುವುದು ಸೂಕ್ತವಾದುದು. ಏಕೆಂದರೆ ಕಳೆದ ತಲೆಮಾರುಗಳ ವಿದ್ಯಮಾನಗಳು ಮುಂದಿನ ತಲೆಮಾರಿಗೆ ತಲುಪುವ ಅಗತ್ಯವಿರುತ್ತದೆ. ಆದರೆ ಚಳವಳಿಗಳ ಅಧ್ಯಯನ ಮಾಡುವುದು ತುಂಬಾ ಕಷ್ಟ. ಚಳವಳಿಯ ನಡೆ ತುಂಬಾ ಸಂಕೀರ್ಣವಾಗಿರುತ್ತದೆ. ಎಲ್ಲೆಲ್ಲಿ ಯಾರ ಯಾರ ನೇತೃತ್ವದಲ್ಲಿ ಚಳವಳಿ ನಡೆಯಿತು, ಆದರ ರೂಪ ರೇಷೆಗಳೇನು ಎಂಬುವುದನು ಕ್ಷೆÃತ್ರಕಾರ್ಯದ ಮೂಲಕವೇ ಸಂಗ್ರಹಿಸಿ ದಾಖಲಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಚಳವಳಿಗಳ ತವರೂರಾದ ಶಿವಮೊಗ್ಗ ಜಿಲೆಯನ್ನು ಕೇಂದ್ರಿಕರಿಸಿಕೊಂಡು ಇಲ್ಲಿ ಜನತಳೆದ ಚಳವಳಿಗಳನ್ನು ಕುರಿತ ಕೃತಿ ರಚನೆ ಮಾಡುತ್ತಿದೇನೆ. ಈ ಕೃತಿ ಕಾಲಿಕವಾಗಿದ್ದರಿಂದ ಇದರ ವ್ಯಾಪ್ತಿಯೂ ಸೀಮಿತವಾಗಿದೆ. (ಮುಂದುವರೆಯುತ್ತದೆ)    ============== ಪರಿಚಯ: ಡಾ.ಸಣ್ಣರಾಮ ಅವರು ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಪ್ರಾದ್ಯಾಪಕರು.ಇದೀಗ ಶಿವಮೊಗ್ಗೆಯ್ಲಿ ನೆಲೆಸಿದ್ದಾರೆ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು Read Post »

ಅಂಕಣ ಸಂಗಾತಿ

ಶಾನಿಯ ಡೆಸ್ಕಿನಿಂದ….

ಹನ್ನೆರಡು ರಾಶಿಯೊಳಗೊಂದು ರಾಶಿ ಚಂದ್ರಾವತಿ ಬಡ್ಡಡ್ಕ ಧನ ಲಾಭ, ಮಿತ್ರರಿಂದ ಸಂತಸ, ಮೇಲಧಿಕಾರಿಯಿಂದ ಪ್ರಶಂಸೆ – ಹೀಗೆ ಪತ್ರಿಕೆಗಳಲ್ಲಿ ಬರೆದಿರುವ ನನ್ನ ದಿನ ಭವಿಷ್ಯ ಓದಿ ನಾನೇದರೂ ನನ್ನ ದಿನವನ್ನು, ಆಹಾ! ಬಹಳ ಒಳ್ಳೆಯ ದಿನವೆಂದು ತುಂಬ ಸಂತೋಷ ಮತ್ತು ಸಮಾಧಾನದಿಂದ ಆರಂಭಿಸಿದೆನೆಂದಾದರೆ ಕೆಟ್ಟೆ. ಯಾಕೆಂದರೆ ಒಂದೇ ಒಂದು ದಿನವೂ ನನ್ನ ಭವಿಷ್ಯ ಸರಿ ಇರುವುದಿಲ್ಲ. ಧನಲಾಭ ಅಂತ ಬರೆದಿದ್ದ ದಿನ, ಇರೋ ದುಡ್ಡೆಲ್ಲ ಖರ್ಚಾಗುತ್ತದೆ. (ಬಹುಶಃ ನಿನ್ನಿಂದಾಗಿ ಇತರರಿಗೆ ಧನಲಾಭ ಎಂದಾಗಬೇಕೋ…) ಮಿತ್ರರಿಂದ ಸಂತರ ಎಂದಿದ್ದರೆ ಗೆಳೆಯ – ಗೆಳತಿಯರೊಂದಿಗೆ ಶರಂಪರ ಜಗಳ. ಇಲ್ಲವಾದರೆ ಕನಿಷ್ಠಪಕ್ಷ ಮಾತಿನಲ್ಲಿ ಭಿನ್ನಾಭಿಪ್ರಾಯ ಹತ್ತಿ ಮೂಡು ಕೆಡುವಷ್ಟಾದರೂ ಆಗೇ ಆಗುತ್ತೆ. ಮೇಲಧಿಕಾರಿಗಳಾಗಿದ್ದವರಂತೂ ಚಂದಗೆ ಭವಿಷ್ಯ ಬರೆದಿದ್ದ ದಿನವನ್ನೇ ಆಯ್ದುಕೊಂಡವರಂತೆ ನಾನು ತಪ್ಪು ಮಾಡಿದ್ದರೂ, ಮಾಡದಿದ್ದರೂ ನಾಲ್ಕು ಜನರ ಮುಂದೆಯೇ ಮಂಗಳಾರತಿ ಮಾಡಿ ನನ್ನ ಉತ್ಸಾಹ, ಸ್ವಾಭಿಮಾನವನ್ನು ಚರಂಡಿಗೆಸೆಯುತ್ತಿದ್ದರು. ಹಾಗಾಗಿ ನಾನು ನನ್ನ ಅನುಭವದಿಂದ ಕಲಿತಿದ್ದೇನೆಂದರೆ ಯಾವದಿನ ಭವಿಷ್ಯ ಚೆನ್ನಾಗಿ ಬರೆಯಲ್ಪಟ್ಟಿದೆಯೇ ಆ ದಿನವಿಡೀ ಜಾಗರೂಕಳಾಗಿರಬೇಕು! ನಾವು ಎಮ್ಮೆ ಓದುವಾಗ, ನಮ್ಮ ಔದಾಸೀನ್ಯವನ್ನು ಮಾತ್ರ ಗಮನಿಸಿದ ನಮ್ಮ ಅಧ್ಯಾಪಕರುಗಳೆಲ್ಲ ನಾವು ಗುಡ್‌ ಫಾರ್ ನಥಿಂಗ್‌ಗಳೆಂದೂ, ನಮಗೆ ಭವಿಷ್ಯವೇ ಇಲ್ಲ ಎಂದು ಒಕ್ಕೊರಲಿನಿಂದ ನುಡಿದಿದ್ದರು. ಅಲ್ಲಿಂದ ನನಗೆ ಭವಿಷ್ಯ (ದಿನ, ವಾರ, ವರ್ಷ)  ನೋಡುವ ಅಭ್ಯಾಸ. ಬಳಿಕ ಕ್ರಮೇಣ ಇದೊಂದು ಚಟವಾಯಿತು. ಅಂದ ಹಾಗೆ ನಿನ್ನ ರಾಶಿ ಯಾವುದು ಅಂತ ಕೇಳ್ತೀರಾ? ಸತ್ಯವನ್ನೇ ಹೇಳಬೇಕೆಂದರೆ ನನಗೇ ಗೊತ್ತಿಲ್ಲ. ಮತ್ತೆ ಏನಿದು ನಿನ್ನ ಗೋಳು, ಇಷ್ಟೆಲ್ಲ ಹೇಳಿದ್ದು ಸುಳ್ಳೇ ಎಂದು ತೀರ್ಮಾನಿಸಿ ಇವಳು ಬರೀ ಸುಳ್ಳು ಬುರ್ಕಿಯೆಂಬ ತೀರ್ಮಾನಕ್ಕೆ ಬರಬೇಡಿ. ಒಟ್ಟಾರೆ ಹನ್ನೆರಡು ರಾಶಿಯಲ್ಲಿ (ಹದಿಮೂರನೆಯ ರಾಶಿಯೊಂದು ಗೋಚರವಾಗಿದೆ ಎಂಬುದಾಗಿ ಆರೇಳು ವರ್ಷದ ಹಿಂದೆ ಸುದ್ದಿಯಾಗಿತ್ತು. ಒಂದು ವೇಳೆ ಅದೂ ಇದ್ದರೆ ಅದೂ ಸೇರಿದಂತೆ) ಒಂದು ನನ್ನದು ಆಗಿರಲೇ ಬೇಕಲ್ಲಾ? ಹಾಗಾಗಿ ನಾನು ಎಲ್ಲಾ ರಾಶಿಯನ್ನೂ ಓದುತ್ತೇನೆ. ಚೆನ್ನಾಗಿ ಭವಿಷ್ಯ ಬರೆದ ರಾಶಿ ನನ್ನದೆಂದು ಅಂದುಕೊಳ್ಳುತ್ತೇನೆ. ನಿಜವೆಂದರೆ, ನನ್ನ ಹುಟ್ಟಿದ ದಿನಾಂಕವೇ ನನಗೆ ಸರಿಯಾಗಿ ಗೊತ್ತಿಲ್ಲ. ನನ್ನ ಹೆತ್ತವರು ಬರೆದಿಡಲಿಲ್ಲ ಎಂದು ನಾನವರನ್ನು ದೂಷಿಸುವಂತಿಲ್ಲ. ನಿರಕ್ಷರಿಗಳಾಗಿದ್ದ ಮತ್ತು ಅವರಿದ್ದ ಪರಿಸ್ಥಿತಿಯಲ್ಲಿ ಅದನ್ನು ನಿರೀಕ್ಷಿಸುವುದೂ ತಪ್ಪೇ. ನನ್ನ ದೊಡ್ಡಅಕ್ಕ ಎಲ್ಲೋ ಬರೆದಿಟ್ಟ ದಿನಾಂಕವನ್ನೇ ಗಟ್ಟಿಮಾಡಿಕೊಳ್ಳೋಣವೆಂದರೆ, ನನ್ನ ಅಮ್ಮನ ಹೇಳಿಕೆ ಅದಕ್ಕೆ ಅಡ್ಡ ಬರುತ್ತದೆ. ನಾನು ಹುಟ್ಟಿದ ದಿನ ಭಯಂಕರ ಕತ್ತಲಿತ್ತು, ಧಾರಾಕಾರ ಮಳೆ ಸುರಿಯುತ್ತಿತ್ತು ಎನ್ನುತ್ತಾ ನೆನಪಿಸಿಕೊಳ್ಳುತ್ತಿದ್ದರು. ಅವರು ಹೇಳುವ ತುಳು ತಿಂಗಳ ಲೆಕ್ಕಾಚಾರಕ್ಕೂ ಅಕ್ಕ ಬರೆದಿಟ್ಟಿರುವ ಇಂಗ್ಲೀಷು ತಿಂಗಳ ಲೆಕ್ಕಾಚಾರಕ್ಕೂ ತಾಳೆ ಆಗುವುದಿಲ್ಲ. ಕೂಡಿ, ಗುಣಿಸಿ, ಕಳೆದು, ಭಾಗಿಸಿ ಎಲ್ಲಾ ಮಾಡಿ ನನ್ನಕ್ಕ ಬರೆದಿಟ್ಟ ದಿನಾಂಕ ಯಾವ ವಾರ ಬರುತ್ತದೆ ಎಂದು ನೋಡಿದರೆ ಅದಕ್ಕೂ ಅಮ್ಮ ಹೇಳಿದ ವಾರಕ್ಕೂ ವ್ಯತ್ಯಾಸ. ಈ ಮಧ್ಯೆ, ನಿನ್ನ ಜನ್ಮ ನಕ್ಷತ್ರಕ್ಕನುಗುಣವಾಗೇ ನೆರೆಮನೆಯ ಕಲ್ಲೂರಾಯರು ಹೆಸರು ಸೂಚಿಸಿದ್ದು ಎಂಬ ಇನ್ನೊಂದು ಅಂಶವನ್ನು ನನ್ನ ಮುಂದಿಟ್ಟು ಮತ್ತೂ ಗೊಂದಲವಾಗುವಂತೆ ಮಾಡಲಾಗಿದೆ. ಹೆಸರು ಜನ್ಮ ನಕ್ಷತ್ರದ್ದೇ ಆಗಿದ್ದರೆ, ಆ ನಕ್ಷತ್ರಕ್ಕೂ, ಅಕ್ಕ ಬರೆದಿಟ್ಟ ಇಂಗ್ಲೀಷ್ ತಿಂಗಳ ದಿನಕ್ಕೂ, ಅಮ್ಮನ ತುಳು ತಿಂಗಳ ದಿನಕ್ಕೂ ತಾಳೆ ಇಲ್ಲ. (ಹಾಗಾದ್ರೆ ಶಾಲಾ ದಾಖಲಾತಿಯಲ್ಲಿ ಏನಿದೆ ಎಂಬುದು ನಿಮ್ಮ ಪ್ರಶ್ನೆಯೇ? ಅದನ್ನು ನೋಡಿದರೆ ಇನ್ನೂ ಗಮ್ಮತ್ತಿದೆ. ನಮ್ಮ ಐದೂ (ನಾನು ಮತ್ತು ನನ್ನ ಒಡ ಹುಟ್ಟಿದವರು) ಮಂದಿಯ ಜನ್ಮ ದಿನಾಂಕವೂ ಜೂನ್ ತಿಂಗಳೆಂದೇ ದಾಖಲಾಗಿದೆ. ಯಾಕೆಂದರೆ ಶಾಲೆಗೆ ಸೇರಿಸಲು ಕನಿಷ್ಠ ಎಷ್ಟು ವರ್ಷವಾಗಬೇಕೋ, ಅದಕ್ಕೆ ತಕ್ಕಂದೆ ದಾಖಲೆಗಳಲ್ಲಿ ಬರೆಯಲಾಗಿದೆ.) ಹಾಗಾಗಿ ಈ ಮೇಲಿನ ಆಧಾರದನ್ವಯ  ಯಾವ್ಯಾವ ದಿನಕ್ಕೆ ಯಾವ್ಯಾವ ರಾಶಿ ಬರುತ್ತೋ ಅವು ನನ್ನವೇ ಅಂದು ಕೊಂಡಿದ್ದೇನೆ. ಇದರ ಮಧ್ಯೆ ವೆಸ್ಟರ್ನೂ, ಈಸ್ಟರ್ನೂ ಅಂತ ಇನ್ನೂ ಒಂದೆರಡು ರಾಶಿಗಳೂ ಸಹ ನಂದಾಗಿರಬಹುದೋ ಎಂಬ ಸಂಶಯ. ಈ ಐದಾರು ರಾಶಿಗಳಲ್ಲಿ ಯಾವುದಕ್ಕೆ ಚೆನ್ನಾಗಿ ಬರೆದಿದೆಯೋ ಅದೇ ನನ್ನ ರಾಶಿ ಎಂಬುದು ಅಂತಿಮ ನಿರ್ಧಾರ. ಟಪ್ಪಂತ ಮುಖಕ್ಕೆ ರಾಚಿದಂತೆ ಮಾತಾಡುವ ನನ್ನ ಗುಣ ಕಂಡವರು ನನ್ನದು ಧನು ರಾಶಿ ಇರಬಹುದೆಂದೂ, ಮಾತಿನಲ್ಲಿ ಕೆಲವೊಮ್ಮೆ ಕಟಕುವುದನ್ನು ಕಂಡ ಕೆಲವರು ಕಟಕ ರಾಶಿಯೆಂದು ಇನ್ನು ಕೆಲವರು ವೃಶ್ಚಿಕ ರಾಶಿಯೆಂದೂ, ಸಿಟ್ಟು ಬಂದಾಗ ಸುನಾಮಿ ಬಡಿದಂತೆ ಘರ್ಜಿಸುವ ಪರಿ ಮತ್ತು ಅಗತ್ಯ ಮೀರಿದ ಔದಾರ್ಯವನ್ನು ಕಂಡ ಕೆಲವರು ಸಿಂಹ ರಾಶಿ ಇರಬಹುದು ಎಂಬುದಾಗಿ ಆರೋಪಿಸಿದ್ದಾರೆ. ಮದುವೆಯಾಗುವ ಹೊತ್ತಿನಲ್ಲಿ ನನಗೆ ಜಾತಕ – ಗೀತಕ ಎಲ್ಲಾ ಇಲ್ಲ ಎಂದು ಮಾತುಕತೆಗೆ ಮೊದಲೇ ಸ್ಪಷ್ಟವಾಗಿ ಹೇಳಿದ್ದೆ. ನನ್ನ ಗಂಡ ಆ ಬಗ್ಗೆ ತಲೆ ಕೆಡಿಸಿಕೊಳ್ಳುವ ಪೈಕಿಯಲ್ಲ. ಜಾತಿ, ವಿದ್ಯೆ, ಸಂಬಳ, ಮನೋಭಾವ ಎಲ್ಲವನ್ನೂ ಜಾತಕ ಮೀರಿಸಿದ್ದ ಕಾರಣ ಈ ಹಿಂದೆ ಹಲವು ಸಂಧಾನಗಳು ಅಂತಿಮ ಹಂತದ ತನಕ ಬಂದು ಬಳಿಕ ರದ್ದಾಗಿದ್ದವು. ನನ್ನ ಅತ್ತೆಮ್ಮನಿಗೆ ಜಾತಕದ ಗೀಳು. (ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡಿರುವ ಅವರಿಗೆ ಬಳಿಕ ಜಾತಕ ಅಧ್ಯಯನದ ಆಸಕ್ತಿ ಹುಟ್ಟಿತಂತೆ. (ಅರೆಬರೆ ತಿಳಿದುಕೊಂಡಿರುವ ಅವರು, ಸಪ್ತಮಾಧಿಪತಿ ಚಂದ್ರ…. ಅಂತ ಶುರುವಿಕ್ಕಿದರೆ, ನಾನಲ್ಲಿಂದ ಪರಾರಿ!) ಮದುವೆ ಆದ ಶುರವಿನಲ್ಲಿ ಅತ್ತೆಮ್ಮ “ಸರಿ ನಿನ್ನ ಅಂದಾಜಿನ ಹುಟ್ಟಿದ ದಿನವನ್ನೇ ಹೇಳು” ಅಂದಿದ್ದರು. ನಿನ್ನ ಅಕ್ಕನವರು ಸಾಯಂಕಾಲ ಶಾಲೆಯಿಂದ ಬರುವ ವೇಳೆಗೆ ನೀನು ಹುಟ್ಟಿದ್ದೆ ಅಂತ ಅಮ್ಮ ಹೇಳಿದ್ದನ್ನೇ ಅವರಿಗೆ ಹೇಳಿದ್ದೆ. ಅವರು ಹಳೆಯ ಪಂಚಾಂಗವನ್ನೆಲ್ಲ ತೆಗೆದು – ಬಗೆದು; ಯಾವುದಕ್ಕೋ ಯಾವುದನ್ನೋ ಥಳುಕು ಹಾಕಿ, ನಾನು ವರಮಹಾಲಕ್ಮ್ಮಿ ವೃತ ದಿವಸ ಹುಟ್ಟಿದೆಂದು ಶೋಧಿಸಿ ಪ್ರಚಾರ ಮಾಡುತ್ತಿದ್ದಾರೆ. ಅದಲ್ಲದೆ, ಅವರ ಮಗನ ಜಾತಕಕ್ಕೆ ಅತ್ಯಂತ ಪ್ರಶಸ್ತವಾಗಿ ಹೊಂದುವ ಜಾತಕ ನನ್ನದಂತೆ! ಸ್ನೇಹಿತೆಯೊಬ್ಬಳ ಮೂಲಕ ಫೋನಲ್ಲೇ ಪರಿಚಿತರಾಗಿ ಮಾತಾಡಿಕೊಂಡಿದ್ದ ನಾವು ಪರಸ್ಪರ ಮುಖತ ಭೇಟಿಯಾಗುವ ಮುನ್ನ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದೆವು. “ನನ್ನಮ್ಮ ಆರು ವರ್ಷದವರಾಗಿದ್ದಾಗ ಅವರ ಅಮ್ಮ ತೀರಿಕೊಂಡರು, ಮೂವತ್ತಾರು ವರ್ಷಕ್ಕೆ ಗಂಡ ತೀರಿದರು. ಅವರು ಬದುಕಿನಲ್ಲಿ ತುಂಬ ನೊಂದ ಜೀವ, ಅವರಿಗೆ ನೋವಾಗದಂತೆ ಇರಬೇಕೆಂಬುದು ಮಾತ್ರ ನನ್ನ ನಿರೀಕ್ಷೆ, ಮಿಕ್ಕಂತೆ ನೀನು ಹೇಗಿದ್ದರೂ ಪರ್ವಾಗಿಲ್ಲ” – ಇದೊಂದೇ ಅವರು ಕೇಳಿಕೊಂಡಿದ್ದು. (ನನ್ನ ಹೆತ್ತಮ್ಮ ತೀರಿಕೊಂಡಿದ್ದರಿಂದ ನನಗೂ ಒಂದು ಅಮ್ಮನ ಅವಶ್ಯಕತೆ ಇತ್ತು.) ಮಿಕ್ಕಂತೆ ಜಾತಿ, ವಯಸ್ಸು, ವಿದ್ಯೆ, ಚಿನ್ನ, ಜಾತಕ, ಅಂತಸ್ತು, ಸಂಬಳ, ಉಳಿತಾಯ ಯಾವುದನ್ನೂ ಕೇಳಿರಲೇ ಇಲ್ಲ. ನಮ್ಮದು ಹುಟ್ಟಿನಿಂದ ವಿಭಿನ್ನ ಜಾತಿ. ಸಹಜವಾಗೇ ಕೆಲವು ಸಂಪ್ರದಾಯ, ನಂಬಿಕೆ, ಸಂಸ್ಕೃತಿಗಳಲ್ಲಿ ಭಿನ್ನತೆ ಇದೆ. ನನ್ನ ಅತ್ತೆಮ್ಮನ ತಾಳಕ್ಕೆ ತಕ್ಕಂತೆ ನನ್ನ ಮೇಳ ಇರುವ ಕಾರಣ ನಂಗೆ ಯಾವುದೇ ಸಮಸ್ಯೆ ಇಲ್ಲ. ಅಯ್ಯೋ ಅವಳ ಜಾತಕ – ಸ್ವಭಾವ ನನ್ನಂತೆಯೇ ಎಂಬುದಾಗಿ ಅತ್ತೆಮ್ಮ ಹೇಳುವಾಗ ಮಾತ್ರ ಮನದಲ್ಲಿ ಮುಸಿ ನಗು! ಜನ್ಮ ದಿನಾಂಕ ಸರಿಯಾಗಿ ತಿಳಿಯದಿರುವುದು ನನಗೆ ಎಷ್ಟೋ ಅನುಕೂಲವಾಗಿದೆ. ಜಾತಕ ನೋಡಿಸಿ ಜಾತಕದಲ್ಲಿ ಕೆಟ್ಟದಿದೆ ಎಂಬುದಾಗಿ ಅಳುವವರನ್ನು, ಶಾಂತಿ ಮಾಡಿಸುವವರನ್ನು, ಪೂಜೆ-ಪುನಸ್ಕಾರ ಮಾಡಿಸುವ ಪುರೋಹಿತರ ಉದ್ಧಾರಕರನ್ನೂ ಕಂಡಿದ್ದೇನೆ. ಇಷ್ಟನೇ ವರ್ಷಕ್ಕೆ ಇಂತಾದ್ದು ಆಗುತ್ತದೆ ಎಂಬ ಲೈಫ್ ಲೀಸ್ಟ್ ಇಲ್ಲದ ಕಾರಣ ನಾನು ಎಷ್ಟೋ ಆರಾಮ ಮತ್ತು ನಿರಾತಂಕಳಾಗಿ ಇದ್ದೇನೆ. ಆ ಮಟ್ಟಿಗೆ ನಾನು ತುಂಬಾ ಅದೃಷ್ಟವಂತಳೇ.

ಶಾನಿಯ ಡೆಸ್ಕಿನಿಂದ…. Read Post »

ಅಂಕಣ ಸಂಗಾತಿ

ಕಾಡುವ ಹಾಡು

ಈ ಬಾರಿ ರಾಜ್ಯೋತ್ಸವ ವಿಶೇಷಕ್ಕೆ ಕಾಡುವ ಹಾಡು “ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ” ಸುಜಾತ ರವೀಶ್ ಕನ್ನಡ ಭಾಷೆ ನಾಡು ಸಂಸ್ಕೃತಿಯನ್ನು ಹೊಗಳುವ ವರ್ಣಿಸುವ ಬಿಂಬಿಸುವ ಹಾಡುಗಳು ಸಾವಿರಾರು. ಆದರೂ ಚಿಕ್ಕಂದಿನಲ್ಲಿ ಆಕಾಶವಾಣಿಯಲ್ಲಿ ಕೇಳುತ್ತಿದ್ದ ಈ ಹಾಡು ಅಂದಿನಿಂದಲೂ ಮನದಲ್ಲಿ ಬೇರೂರಿದೆ. ನಿಜವಾದ ಅರ್ಥದಲ್ಲಿ ಕಾಡುವ ಹಾಡಾಗಿದೆ .ಯಾವುದು ಅಂತೀರಾ ?ಅದೇ ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ ಸಂಗಮ ಚಿತ್ರದ ಈ ಹಾಡನ್ನು ವಿವಿ ಶ್ರೀನಿವಾಸ್ ಮತ್ತು ಸಿಕೆ ರಾದವರು ಹಾಡಿದ್ದಾರೆ ಬರೆದವರು ಸಿವಿ ಶಿವಶಂಕರ್ ಮತ್ತು ಸಂಗೀತ ಕೆಪಿ ಸುಖದೇವ್ ಚಿತ್ರ ಅಷ್ಟೇನೂ ಯಶಸ್ವಿಯಾಗಲಿಲ್ಲ ಅನ್ನಿಸುತ್ತೆ ಆದರೆ ಹಾಡು ಅಬ್ಬಾ ಸೂಪರ್ ಡೂಪರ್ !!!!!! ಸಿರಿವಂತ/ತೆ ಆದರೂ ಭಿಕ್ಷುಕ/ಕಿ ಯಾದರೂ ಕನ್ನಡ ನಾಡಲ್ಲೇ ಇರುವ ಅಭೀಷ್ಟ ವ್ಯಕ್ತಪಡಿಸಿ ಅದನ್ನು ವಿವಿಧ ರೀತಿಗಳಲ್ಲಿ ವರ್ಣಿಸುತ್ತಾ ಹೋಗುತ್ತದೆ ಈ ಹಾಡು .ವೀಣೆಯ ಗೆ ಶೃಂಗೇರಿ ಶಾರದೆಯ ಕೈಯಲ್ಲಿ ನಲಿವ ವೀರ ಖಡ್ಗ ವಾಗಿ ಚಾಮುಂಡಿಯ ಕೈಯಲ್ಲಿ ಹೊಳೆವ ಅಭಿಲಾಷೆ ಶರಣರ ವಚನದ ಗಾನ ಮಾಧುರ್ಯ ಹಂಪೆಯ ಕಲ್ಲುಗಳ ಗಾಂಭೀರ್ಯ ಇಲ್ಲಿ ನೆನೆಯ ಪಟ್ಟಿಗೆ ದಾಸ ಸಾಹಿತ್ಯವೇ ಮೊದಲಾದ ಕನ್ನಡ ಸಾಹಿತ್ಯವೇ ನನ್ನ ಆಸ್ತಿ ಎನ್ನುತ್ತದೆ ಪಾತ್ರ ಮೀರುವುದಿದೆ ಕಾವೇರಿ ತುಂಗೆಯ ಮಡಿಲಲ್ಲಿ ಎಂದು ಸಾರುತ್ತದೆ ಇಡೀ ಗೀತೆಯ ಮುಕುಟ ಪ್ರಾಯವೇ ಕಡೆಯ ಸಾಲುಗಳು ಮೈ ಜುಮ್ಮೆನ್ನಿಸಿ ಪರವಶಗೊಳಿಸುವ ಕಣ್ಣಂಚಿನಲ್ಲಿ ಹನಿಯುತ್ತದೆ ಭಾವೋತ್ಕಟತೆ ದಾರಿ ಮಾಡುತ್ತದೆ ಮರುಜನ್ಮ ಪಡೆಯುವುದಾದರೆ ಕನ್ನಡದ ಮಣ್ಣಲ್ಲಿ ಮಣ್ಣಾಗುವ ಮಹದಾಸೆ ಎಂತಹ ಉದಾತ್ತ ಚಿಂತನೆ ಇದಕ್ಕಿಂತ ಮಿಗಿಲು ಇನ್ನೇನಾದರೂ ಇದೆಯೇ ಇಂದಿನ ಪೀಳಿಗೆಯ ಬಹಳ ಜನ ಈ ಹಾಡು ಕೇಳಿರುವುದಿಲ್ಲ ಹೀಗಾಗಿ ನನ್ನ ಮೆಚ್ಚಿನ ಹಾಡಿನ ಪೂರ್ಣ ಸಾಹಿತ್ಯ ಹಾಗೂ ಲಿಂಕ್ ನಿಮಗಾಗಿ . ಓದಿ ಕೇಳಿ ನಿಮ್ಮ ಅಮೂಲ್ಯ ಅಭಿಪ್ರಾಯ ವ್ಯಕ್ತಪಡಿಸುತ್ತೀರ ಅಲ್ವಾ? ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ. ಸಂಗೀತ ಕಲೆ ಮೆಚ್ಚಿ ವೀಣೆಯ ಪಿಡಿದೊಡೆ ಶೃಂಗೇರಿ ಶಾರದೆ ಮಡಿಲಲ್ಲಿ ನಲಿದೆ ವೀರ ಖಡ್ಗವ ಝಳುಪಿಸುವ ಧೀರ ನಾನಾದರೆ ಚಾಮುಂಡಾಂಬೆಯ ಕರದಲ್ಲಿ ಹೊಳೆವೆ. ಶರಣಗೆ ವಂದಿಪ ಶರಣೆ ನಾನಾದೊಡೆ ವಚನವೆ ಬದುಕಿನ ಮಂತ್ರವೆನುವೆ. ವೀರಗೆ ವಂದಿಪ ಶೂರ ನಾನಾದೊಡೆ ಕಲ್ಲಾಗಿ ಹಂಪೆಯಲ್ಲಿ ಬಹುಕಾಲ ನಿಲ್ಲುವೆ . ದಾಸರಿಗೆ ವಂದಿಪ ಅಭಿಮಾನಿಯಾದೊಡೆ ಕನ್ನಡ ಸಾಹಿತ್ಯ ನನ್ನಾಸ್ತಿ ಎನ್ನುವೆ ಪುಣ್ಯ ನದಿಯಲ್ಲಿ ಮೀಯುವೆನಾದೊಡೇ ಕಾವೇರಿ ತುಂಗೆಯರ ಮಡಿಲಲ್ಲಿ ಮೀಯುವೆ. ಇನ್ನೊಮ್ಮೆ ಮರುಜನ್ಮ ಪಡೆಯುವೆನಾದರೆ ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲ್ಲುವೆ. https://youtu.be/ycZUf5IbNug ===========================

ಕಾಡುವ ಹಾಡು Read Post »

ಅಂಕಣ ಸಂಗಾತಿ

ಕಾಡುವ ಹಾಡು!

ಒಲವೇ ಜೀವನ ಸಾಕ್ಷಾತ್ಕಾರ ಸುಜಾತ ರವೀಶ್ ಒಲವೇ ಜೀವನ ಸಾಕ್ಷಾತ್ಕಾರ ಒಲವೇ ಮರೆಯದ ಮಮಕಾರ ಚಿತ್ರ ಸಾಕ್ಷಾತ್ಕಾರ (೧೯೭೧) ಅಭಿನಯ ರಾಜಕುಮಾರ್ ಜಮುನಾ ಪೃಥ್ವಿರಾಜ್ ಕಪೂರ್ ಸಾಹಿತ್ಯ ಕೆ ಪ್ರಭಾಕರ ಶಾಸ್ತ್ರಿ ಸಂಗೀತ ಎಂ ರಂಗರಾವ್ . ಚಿತ್ರದ ನಾಯಕ ನಾಯಕಿ ಇನ್ನೇನು ಮದುವೆಯಾಗಲಿರುವವರು. ಅವರ ಮನದ ತುಂಬಾ ಪ್ರೀತಿಯ ಕನಸು ತುಂಬಿರುತ್ತದೆ. ಕಂಡದ್ದೆಲ್ಲ ಪ್ರೇಮದ ಪ್ರತಿರೂಪ ಆಗಿರುತ್ತದೆ .ಅಂತಹ ಸಂದರ್ಭದಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡು ಕನ್ನಡದ ಚಿತ್ರ ರಸಿಕರ ಮನಸೂರೆಗೊಂಡಿದ್ದು ಆಶ್ಚರ್ಯವಲ್ಲ. ಪ್ರೇಮಿಗಳ ಪಾಲಿನ ಅಮರ ಗೀತೆಯಾಗಿಯೂ ಬಿಟ್ಟಿದೆ . ಪ್ರಕೃತಿಯ ವಿವಿಧ ಬಗೆಗಳಲ್ಲಿ ಒಲವಿನ ಸಾಕ್ಷಾತ್ಕಾರವನ್ನು ಕಾಣುತ್ತಾರೆ ಧುಮ್ಮಿಕ್ಕಿ ಹರಿಯುವ ಜಲಪಾತ ದುಂಬಿಯ ಹಾಡಿನ ಝೇಂಕಾರ ಘಮ್ಮನೆ ಹೊಮ್ಮುವ ಹೊಸ ಹೂವಿನ ಪರಿಮಳ ಎಲ್ಲದರಲ್ಲೂ ಒಲವೇ ಒಲವು .ಆದಿ ಹಾಗೂ ಅಂತ್ಯ ಪ್ರಾಸಗಳನ್ನು ಹೊಂದಿರುವ ಮೊದಲ ಮೂರು ಸಾಲುಗಳ ಮಾಧುರ್ಯವನ್ನು ಸವಿಯಲೇಬೇಕು. ಮುಂದೆ ವಸಂತನ ಕೋಗಿಲೆಯ ಇಂಚರ ಗಾಂಧಾರ ಭಾಷೆಯಲ್ಲಿ ಹಾಡುತ್ತಿರುವ ಹಕ್ಕಿಗಳ ಕಲರವ ಮತ್ತು ಮಲೆನಾಡಿನ ನಿಸರ್ಗ ಸೌಂದರ್ಯದಲ್ಲಿ ಪ್ರೇಮವನ್ನು ಕಾಣುತ್ತಾರೆ .ಎಲ್ಲಕ್ಕಿಂತ ಪ್ರಿಯವಾದದ್ದು ಕಡೆಯ ಪ್ಯಾರ. ಆಗ ಆಕಾಶವಾಣಿಯಲ್ಲಿ ಈ ಪ್ಯಾರಾವನ್ನು ಕತ್ತರಿಸಿ ಹಾಕುತ್ತಿದ್ದರು .ಹಾಗಾಗಿ ಈ ಸಾಲುಗಳು ಅಪರೂಪವೇ . ಒಲವಿನ ಪೂಜೆಗೆ ಒಲವೇ ಮಂದಾರ ಒಲವೇ ಬದುಕಿನ ಬಂಗಾರ ಒಲವಿನ ನೆನಪೇ ಹೃದಯಕೆ ಮಧುರ ಒಲವೇ ದೈವದ ಸಾಕ್ಷಾತ್ಕಾರ . ಈ ಸಾಲುಗಳು ಗೀತೆಗೆ ದೈವೀಕತೆಯನ್ನು ಒದಗಿಸಿ ಕೊಟ್ಟಿದೆ ಎಂದರೆ ತಪ್ಪಾಗಲಾರದು .ಉತ್ತಮ ಸಾಹಿತ್ಯ ಸಂಗೀತ ಇರುವ ಯಾವುದೇ ಗೀತೆ ಕನ್ನಡ ಜನರನ್ನು ಸೆಳೆಯುತ್ತಿದೆ ಎನ್ನುವುದಕ್ಕೆ ಇದು ಒಂದು ಉದಾಹರಣೆ. ಪಿಬಿ ಶ್ರೀನಿವಾಸ್ ಹಾಗೂ ಪಿ ಸುಶೀಲಾ ಅವರ ಮಧುರ ಕಂಠದಲ್ಲಿ ಹೊಮ್ಮಿರುವ ಈ ಸುಂದರ ಗೀತೆ ಎಷ್ಟು ಕೇಳಿದರೂ ತೃಪ್ತಿಯಾಗುವುದಿಲ್ಲ .ಮುಂಚೆ ಬರೀ ರೇಡಿಯೋ ಆಕಾಶವಾಣಿಯಲ್ಲಿ ಕೇಳಿ ನಂತರ ಧ್ವನಿ ಸುರುಳಿಗಳಲ್ಲಿ ತದನಂತರ ಸಿಡಿಗಳಲ್ಲಿ ಹಾಗೂ ಈಗ ಮೊಬೈಲ್ನಲ್ಲಿ ಸೇವ್ ಆಗಿರುವ ನನ್ನ ಅಚ್ಚುಮೆಚ್ಚಿನ ಗೀತೆ ಇದು .ನಮ್ಮ ಹಳೆಯ ಚಿತ್ರಗೀತೆಗಳ ಸೊಗಡೇ ಹಾಗೆ ಚಿನ್ನದ ಮಲ್ಲಿಗೆಗೆ ಪರಿಮಳ ಬೆರೆಸಿದ ಹಾಗೆ .

ಕಾಡುವ ಹಾಡು! Read Post »

ಅಂಕಣ ಸಂಗಾತಿ

ಶಾನಿಯ ಡೆಸ್ಕಿನಿಂದ…….

ನನ್ನ ಬಾಲ್ಯದ ದೀಪಾವಳಿ ಚಂದ್ರಾವತಿ ಬಡ್ಡಡ್ಕ ನನ್ನ ಪ್ರೀತಿಯ ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭ ಆಶಯಗಳು. ತಮ್ಮೆಲ್ಲರ ಬದುಕಲ್ಲಿ ನೆಮ್ಮದಿ, ಸುಖ-ಸಂತೋಷ ಸಮೃದ್ಧಿಗಳು ದೀಪಗಳ ಆವಳಿಯಂತೆ ಬೆಳಗಲಿ.) ಒಂದು ತಿಂಗಳ ಮುಂಚಿತವಾಗಿ ಬಾಳೆ ರೆಂಬೆಗಳನ್ನು ಒಣಹಾಕುವಲ್ಲಿಂದ ಆರಂಭವಾಗುತ್ತಿತ್ತು ದೀಪಾವಳಿ ತಯ್ಯಾರಿ. ಅದಾದ ಬಳಿಕ ಕಾಡುಮೇಡು ಅಲೆದು ಎಲ್ಲಿ ಯಾವ ಹೂವು ಅರಳಿದೆ, ಹೂವಿನಂದದ ಬಳ್ಳಿ ಹೊರಳಿದೆ ಎಂಬ ಹುಡುಕಾಟ. ಇವೆಲ್ಲವನ್ನು ಮನಸ್ಸಿನಲ್ಲೇ ಗಟ್ಟಿ ಮಾಡಿಕೊಂಡು ಬಲಿಯೇಂದ್ರನನ್ನು ಹೇಗೆ ಸಿಂಗಾರಮಾಡಬೇಕು ಎಂಬ ವಾದ-ವಿವಾದ, ವಾಗ್ವಾದೊಂದಿಗೆ ಆಗಿನ ನಮ್ಮ ಬಹುದೊಡ್ಡ ಆಚರಣೆಯ ದೀಪಾವಳಿ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಕೃಷಿಕ ಕುಟುಂಬದ ನಮಗಾಗ ಹಬ್ಬ ಅಂದರೆ ಅದು ದೀಪಾವಳಿ. ಕಾಡಿನಿಂದ ಹಾಲೆಮರವನ್ನು (ಇದನ್ನು ನಾವು ಬಲಿಯೇಂದ್ರ ಮರವೆಂದೇ ಹೇಳುವುದು) ದೀಪಾವಳಿ ಅಮವಾಸ್ಯೆಯಂದು ಬೆಳಗ್ಗೆ ಅಪ್ಪ ಕಡಿದು ತರುತ್ತಿದ್ದರು. ಅಂದು ರಾತ್ರಿ ಮರವನ್ನು ಮನೆಯೆದುರು ಅಂಗಳದಲ್ಲಿ ತುಳಸಿ ಕಟ್ಟೆಯ ಪಕ್ಕ ನೆಟ್ಟು ಪ್ರತಿಷ್ಠಾಪಿಸುವಲ್ಲಿಂದ ನಮ್ಮ ಹಬ್ಬ ಶುರು. ಈ ಮರವೇ ನಮ್ಮನಮ್ಮಗಳ ಶಕ್ತ್ಯಾನುಸಾರ, ಚಾಕಚಕ್ಯತೆಗನುಗುಣವಾಗಿ ಶೃಂಗಾರಗೊಂಡು ಬಲಿಯೇಂದ್ರನಾಗಿ ನಮ್ಮ ಮನೆ-ಮನದಂಗಳದಲ್ಲಿ ಹಬ್ಬದ ಮೂರ್ನಾಲ್ಕು ದಿನ ರಾರಾಜಿಸುತ್ತಿದ್ದುದು. ಕೆಲವು ಮನೆಗಳಲ್ಲಿ ಒಂಟಿ ಮರದ ಬಲಿಯೇಂದ್ರ. ಆದರೆ ನಮ್ಮದು ಜೋಡಿಮರಗಳ ಬಲಿಯೇಂದ್ರ. ಪುಟ್ಟದಾದ ಮರ (ಕೊಂಬೆ) ಒಂದು ದನದಹಟ್ಟಿಯ ಎದುರು. ಅದೇ ಗಾತ್ರದ ಇನ್ನೊಂದು ಮರ ಗದ್ದೆಯಲ್ಲಿ. ನೆಡುವ ಮರಗಳ ಮೇಲ್ತುದಿಯಲ್ಲಿ ರೆಂಬೆ ಒಡೆದ ಕವಲುಗಳನ್ನು ಅಲ್ಲಿ ಹಣತೆ ಕುಳಿತುಕೊಳ್ಳುವಂತೆ ಚೆನ್ನಾಗಿ ಕತ್ತರಿಸಿಯೇ ತರಲಾಗುತ್ತಿತ್ತು. ಮರದಲ್ಲಿ ಹಬ್ಬದ ಎಲ್ಲ ದಿನಗಳೂ ದೀಪ ಇರಿಸುತ್ತಿದ್ದದು ರೂಢಿ. ಮನೆಗಳೆದುರು ಪ್ರತಿಷ್ಠಾಪನೆಗೊಳ್ಳುವ ಬಲಿಯೇಂದ್ರಗಳ ಸಿಂಗಾರದ ವಿಚಾರದಲ್ಲಿ ನಾವು ನೆರೆಹೊರೆಯ ಮಕ್ಕಳಲ್ಲಿ ಅಘೋಷಿತ ಸ್ಫರ್ಧೆ. ಎಲ್ಲ ಮನೆಗಳಲ್ಲೂ ಬಲಿಯೇಂದ್ರನ ಸಿಂಗಾರಕ್ಕಾಗೇ ಹೂ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದೆವು. ಮೇಲೆ ಹೇಳಿದ್ದೇನಲ್ಲಾ ಬಾಳೆಯ ರೆಂಬೆಗಳನ್ನು ಒಣಹಾಕುವ ವಿಚಾರ; ಇದ್ಯಾಕೆಂದರೆ, ಕಾಡಿನ, ಊರಿನ ಹೂವುಗಳನ್ನು ಅಂದವಾಗಿ ಪೋಣಿಸಲು ಹಗ್ಗ(ನಾರು) ತಯಾರಿಸಲು. ಹೀಗೆ ಒಣಗಿದ್ದ ರೆಂಬೆಯನ್ನು ಸಪೂರಕ್ಕೆ ಸೀಳಿ, ನೀರಿನಲ್ಲಿ ಅದ್ದಿ ದಟ್ಟವಾಗಿ ಬಣ್ಣಬಣ್ಣದ ವಿವಿಧ ಗಾತ್ರಗಳ ಹೂ ಮಾಲೆಕಟ್ಟಿ ಬಲಿಯೇಂದ್ರನಿಗೆ ಅರ್ಪಿಸುತ್ತಿದ್ದೆವು. ಅಪ್ಪನದ್ದು ಬೇರೆಯೇ ಟ್ರಿಕ್. ಬಾಳೆಯನ್ನು ಕಡಿದು ದಿಂಡಿನೊಳಗಿನ ಬಿಳಿಬಿಳಿ ಪದರಗಳನ್ನು (ನಾವಿದಕ್ಕೆ ಬಾಳೆರಂಬೆ ಅಂತೇವೆ) ತೆಗೆದು ಒಂದು ಭಾಗವನ್ನು ಹಲ್ಲುಹಲ್ಲಾಗಿ ಕತ್ತರಿಸಿ ಬಿದಿರನ್ನು ಸೀಳಿ ಮಾಡಿದ ಸಲಾಕೆಗಳ ಆಧಾರದೊಂದಿಗೆ ಎರಡೂ ಬಲಿಯೇಂದ್ರ ಮರಕ್ಕೆ ಜೋಡಿಸಿ ಕಟ್ಟಿದಾಗ ಶ್ವೇತವರ್ಣದ ಅದರ ಗೆಟಪ್ಪೇ ಗೆಟಪ್ಪು. ಇದರ ಮೇಲೆ ಬಣ್ಣಬಣ್ಣದ ವಿವಿಧ ಪುಷ್ಪಗಳ ಮಾಲೆಗಳು ಕಂಗೊಳಿಸುತ್ತಿದ್ದವು ನೋಡಿ, ಪಕ್ಕದ ಮನೆಯ ಬಲಿಯೇಂದ್ರಗಳೆಲ್ಲ ನಮ್ಮ ಬಲಿಯೇಂದ್ರನೆದುರು ಸಪ್ಪೆಸಪ್ಪೆ. ಹಂದಿಬಳ್ಳಿ ಕಾಯಿ, ಕೇನೆ ಹೂವು,  ಕೋಳಿ ಜುಟ್ಟು, ಪಿಂಗಾರ(ಹೊಂಬಾಳೆ) ಹಬ್ಬಲ್ಲಿಗೆ, ಗೋರಟೆ, ದಾಸವಾಳ, ತೇರು ಹೂವು, ಚೆಂಡು ಹೂವು (ಇವುಗಳೆಲ್ಲ ಕಾಡಿನಲ್ಲಿ ಬೆಳೆಯುವ, ಊರಲ್ಲಿ ಬೆಳೆಸುವ ಸುಂದರ ಪುಷ್ಪಗಳು. ಇವುಗಳ ವೈಜ್ಞಾನಿಕ ಹೆಸರು ಗೊತ್ತಿಲ್ಲ, ಕ್ಷಮಿಸಿ)ಎಲ್ಲದರ ಮಾಲೆಯೊಂದಿಗೆ ಬಲಿಯೇಂದ್ರ ಜಿಗಿಜಿಗಿಯೊಂದಿಗೆ ಘಮಘಮ! ಬಲಿಯೇಂದ್ರನಿಗೆ ಪ್ರಭಾವಳಿಯನ್ನೂ ಇರಿಸುತ್ತಿದ್ದೆವು. ಅದು ನಮ್ಮ ಭಾಷೆಯಲ್ಲಿ ಪರ್ಬಾಳೆ ಆಗಿತ್ತು. ಬೆತ್ತದಲ್ಲಿ ನೇಯ್ದಿರುವ ಯು ಶೇಪಿನ ಪರ್ಮನೆಂಟ್ ಪ್ರಭಾವಳಿಯದು. ಹಬ್ಬವೆಲ್ಲ ಮುಗಿದು ಬಲಿಯೇಂದ್ರನ ವಿಸರ್ಜನೆಯ ವೇಳೆಗೆ ತಲೆಯಾಗಿದ್ದ ಪ್ರಭಾವಳಿಯನ್ನು ಮಾತ್ರ ಎತ್ತಿಟ್ಟು ಜೋಪಾನ ಮಾಡುತ್ತಿದ್ದೆವು. ತಲೆಯ ಭಾಗಕ್ಕೆ ಮಾತ್ರ ಹಳದಿ ಕೇಸರಿ ಮುಂತಾದ ವಿವಿಧ ಬಣ್ಣಗಳ ಚೆಂಡು(ಗೊಂಡೆ) ಹೂವು. ಇಷ್ಟು ಜತನದಿಂದ ಸಿಂಗರಿಸಿದ ಬಲಿಯೇಂದ್ರ ಬಿಸಿಲು-ಮಳೆಗೆ ನರಳಿದರೆ ನಮ್ಮ ಕರುಳು ಚುಳ್ ಎನ್ನುವುದಿಲ್ಲವೇ? ಈ ಕಾರಣಕ್ಕೂ ಮತ್ತು ಬಲಿಯೇಂದ್ರನ ಅಂದವನ್ನು ಹೆಚ್ಚಿಸಲೂ ಅರಳಿಸಿದ ಕೊಡೆಯ ಕಡ್ಡಿಗಳ ತುತ್ತತುದಿಯಲ್ಲಿ ತಾಜಾತಾಜಾ ಕೆಂಪಡಿಕೆಯನ್ನು ನೂಲಿನಲ್ಲಿ ಸುರಿದು ಕಟ್ಟಿ ಹ್ಯಾಂಗಿಂಗ್ ಥರ ಇಳಿಬಿಡುತ್ತಿದ್ದೆವು. ಆಹಾ….. ಇಂತಿಪ್ಪ ಬಲಿಯೇಂದ್ರನ ಸೌಂದರ್ಯವನ್ನು ತುಂಬಿಕೊಳ್ಳಲು ಆಗಿನ ಪುಟ್ಟ ಕಂಗಳು ಸಾಕಾಗುತ್ತಿರಲಿಲ್ಲ. (ಈಗವಾದರೆ ಕನ್ನಡಕವೂ ಸೇರ್ಪಡೆಗೊಂಡು ಕಣ್ಣು ನಾಲ್ಕಾಗಿದೆ, ಆದರೆ ಬಲಿಯೇಂದ್ರನಿಲ್ಲ!) ಅದೊಂದು ವರ್ಷ ಹೂವಿನ ಅಭಾವ ತೋರಿತ್ತು. ಆಗ ನಮ್ಮ ದೊಡ್ಡಕ್ಕನ ಐಡಿಯಾದಂತೆ ಬಣ್ಣದ ಕಾಗದವನ್ನು ಹೂವಿನ ಮಾಲೆಯಂತೆ ನೆರಿಗೆನೆರಿಗೆಯಾಗಿ ಹೊಲಿದು ಮಾಡಿದ್ದ ಸಿಂಗಾರ ನಮ್ಮೂರಲ್ಲಿ ಸೂಪರ್ ಹಿಟ್ ಆಗಿತ್ತು. ನಮ್ಮ ಬಲಿಯೇಂದ್ರನ ಸಿಂಗಾರ ಮುಗಿಸಿ ಪಕ್ಕದ ಸಿಂಗಮಾಮನ ಮನೆ ಬಲಿಯೇಂದ್ರನ ವೀಕ್ಷಣೆಗೆ ತೆರಳುತ್ತಿದ್ದೆವು. ಅವರ ಪುತ್ರ ಬೆಂಗಳೂರಿನಲ್ಲಿ ಇಂಜಿನೀಯರ್. ಆಗ ನಮಗೆ ಬೆಂಗಳೂರೆಂದರೆ ಅದು ಭಾರೀ ದೂರದ ದೇಶ. ಅವರು ಹಬ್ಬಕ್ಕೆಂದೇ ಸ್ಪೆಷಲ್ ಆಗಿ ಬರುವಾಗ ಪಟಾಕಿ, ತಿಂಡಿ ತಿನಿಸುಗಳನ್ನು ಖಡ್ಡಾಯ ತರುತ್ತಿದ್ದರು. ಗೆಳತಿ ಕುಮ್ಮಿ (ಅವರ ತಂಗಿ, ನನ್ನ ಜೀವನದ ಪ್ರಪ್ರಥಮ ದೋಸ್ತಿ) ಬೇರೆ ಅಣ್ಣ ನೂ……..ರು ರೂಪಾಯಿ ಪಟಾಕಿ ತಂದಿದ್ದಾರೆ ಎಂದಾಗ ಆಸೆ ಚಿಗುರದಿರುತ್ತದಾ? ನಮ್ಮಮನೆಯಲ್ಲೋ, ಅಪ್ಪ ಒಂದು ಬಾರಿ ಕಣ್ಣು ಕೆಕ್ಕರಿಸಿದರೆಂದರೆ ನಮ್ಮ ಪಟಾಕಿ(ಬೇಡಿಕೆಯ) ಸದ್ದು ಅಲ್ಲೇ ಅಡಗುತ್ತಿತ್ತು. ಅದು ಹೇಗೋ ಸಿಂಗತ್ತೆಗೆ ನನ್ನ ಪಟಾಕಿ ಆಸೆ ಗೊತ್ತಾಗಿ ಅವರ ಶಿಫಾರಸ್ಸಿನ ಮೇಲೆ ನಂಗೊಂದಿಷ್ಟು ಪಟಾಕಿ, ಒಂದು ಪ್ಯಾಕ್ ನಕ್ಷತ್ರ ಕಡ್ಡಿ ಸಿಗುತ್ತಿತ್ತು. ಆದರೆ ನನ್ನ ಗಾಯತ್ರಕ್ಕಳಿಗೆ ಮಾತ್ರ ನಮ್ಮ ಅಂಗಳದಿಂದಲೂ ಪಟಾಕಿ ಸದ್ದು ಸಿಡಿಯಬೇಕೆಂಬ ಆಸೆ. (ಈಗ ಯಾರಾದರೂ ಅವಳ ಬಳಿ ಹಬ್ಬಕ್ಕೆ ಪಟಾಕಿ ತಗೊಂಡ್ರಾ ಅಂದ್ರೆ; ಇಲ್ಲ, ನಮ್ಮ ಮನೆಯಲ್ಲಿ ತಂಗಿ ಇದ್ದಾಳೆ ಅಂತಾಳೆ) ಅದಕ್ಕಾಗಿ ನಾವು ನಾಡ ಪಟಾಕಿ ತಯ್ಯಾರಿಸುತ್ತಿದ್ದೆವು. ನಾವು ಮಾತ್ರವಲ್ಲ, ನಮ್ಮ ಮನೆಯ ಉತ್ತರಕ್ಕಿದ್ದ ವೆಂಕಪ್ಪಣ್ಣನ ಮನೆ, ಎದುರಿಗಿದ್ದ ಚಿಕ್ಕಪ್ಪನ ಮನೆ, ಆಚೆಗಿದ್ದ ಮಾಲಿಂಗಣ್ಣ- ಎಲ್ಲರ ಮನೆಯಲ್ಲೂ ಇದೇ ಪಟಾಕಿ. ಚೆನ್ನಾಗಿ ಬೆಳೆದ ಹಸಿ ಬಿದಿರಿನ ಒಳಗಿನ ಗಂಟುಗಳನ್ನು ಹಾರಿಸಿ, ಎರಡೂ ಬದಿ ಬಂದ್ ಇರಿಸಿ ಮೇಲೆ ಒಂದು ಕಡೆಯಲ್ಲಿ ತೂತು ಮಾಡಿ ಅದರ ಒಳಭಾಗಕ್ಕೆ ಸೀಮೆ ಎಣ್ಣೆ ಚಿಮುಕಿಸಿ ಬೆಂಕಿ ತೋರಿಸುವ ಮೂಲಕ ಚೆನ್ನಾಗಿ ಬಿಸಿ ಮಾಡಬೇಕು. ಬಿದಿರು ಕಾದ ಬಳಿಕ ಸಣ್ಣದಾಗಿ ಮೇಲ್ಮುಖವಾಗಿ ಮಾಡಿದ ತೂತಿನಲ್ಲಿ ಚೆನ್ನಾಗಿ ಊದಿ, ಒತ್ತಡ ತುಂಬಿ ಬೆಂಕಿಯ ಜ್ವಾಲೆಯನ್ನು ಹಾಯಿಸಿದರೆ ಭಯಂಕರ ಸದ್ದು ಹೊರಡುತ್ತಿತ್ತು. (ನಿಮ್ಮ ಈಗಿನ ಮಾಲೆ ಪಟಾಕಿಗಿಂತ ಒಳ್ಳೆಯ ಶಬ್ದವೇ ಹೊರಡುತ್ತಿತ್ತು) ಪಟಾಕಿ ಸದ್ದಿನೊಂದಿಗೆ ವಿವಿಧ ಮನೆಗಳಲ್ಲಿ ಬಿದಿರನ್ನು ಊದುವ ಶಬ್ದವೂ ಅನುರಣಿಸುತ್ತಿತ್ತು. ಇದರಲ್ಲೂ ಕಾಂಪಿಟೇಶನ್. ಬಿದಿರು ಊದಿದವರ ಪುಪ್ಪುಸದ ಕಥೆ ಬಲಿಯೇಂದ್ರನಿಗೇ ಪ್ರೀತಿ. ಮರುದಿನದ ಕಿವಿನೋವು ಹಬ್ಬದ ಸಡಗರದಲ್ಲಿ ಲೆಕ್ಕಕ್ಕೇ ಇರುತ್ತಿರಲಿಲ್ಲ. ಮುಸ್ಸಂಜೆ ಕಳೆದು ಕತ್ತಲಾಗುತ್ತಿರುವಂತೆ ಬಲಿಯೇಂದ್ರ ಕೂಗುವುದು ಇನ್ನೊಂದು ಸಂಭ್ರಮ. ಅದೇನು ಕಟ್ಟುಕಟ್ಟಳೆಯ ಶಬ್ದಗಳೋ ಅಂತು ಕೊನೆಯಲ್ಲಿ ‘ಹರಿಯೇ ಸಿರಿಯೇ ಕೂ….’ ಎಂಬುದು ಮಾತ್ರ ಸರಿಯಾಗಿ ಅರ್ಥವಾಗುತ್ತಿತ್ತು. ಒಟ್ಟಿನಲ್ಲಿ ಅದರ ತಾತ್ಪರ್ಯವೆಂದರೆ, ಕೆಟ್ಟದನ್ನು ಕೊಂಡೊಯ್ದು ಸಿರಿಯನ್ನು ತಾ ಎಂಬುದು ಬಲಿಯೇಂದ್ರನೊಡನೆ ಅರಿಕೆ. ಅರಿಕೆ ಮಾಡಿಕೊಳ್ಳುವುದು ಯಜಮಾನನ ಕರ್ತವ್ಯವಾದರೆ, ಕೊನೆಯಲ್ಲಿ ಕೂ…. ಎಂಬುದು ಮಾತ್ರ ಮನೆಯವರೆಲ್ಲರ ಕೋರಸ್. ಇದರಲ್ಲೂ ಯಾವ ಮನೆಯ ಕೂ….. ಎಂಬ ಕೂಗು(ಕಿರುಚು) ಹೆಚ್ಚು ಶಕ್ತಿಶಾಲಿ ಎಂಬ ಬಹುಮಾನರಹಿತ ಸ್ಫರ್ಧೆ. ಬಲಿಯೇಂದ್ರನ ಬಳಿ ಅರಿಕೆ ಮಾಡಿದ ಬಳಿಕ ಮನೆಯವರೆಲ್ಲರೂ ಸಾಲಾಗಿ ನಿಂತು ಪ್ರತಿಷ್ಠಾಪಿತ ಬಲಿಯೇಂದ್ರನಿಗೆ ಅವಲಕ್ಕಿ ಎರಚಿ ಅಥವಾ ಚಿಮ್ಮಿ ಪ್ರಾರ್ಥಿಸುವುದು ಕ್ರಮ. ನಾನಾಗ ನಾಲ್ಕೋ ಇಲ್ಲ ಐದರ ಹರೆಯದವಳು. ಅಪ್ಪ ಎಲ್ಲರ ಕೈಗೆ ಅವಲಕ್ಕಿ ಕೊಟ್ಟಿದ್ದರು. ಆಗೀಗ ನಮ್ಮಲ್ಲಿ ಅಗತ್ಯ ತೋಟದ ಕೆಲಸವೇನಾದರೂ ಇದ್ದರೆ ಬಂದು ಸಹಕರಿಸುತ್ತಿದ್ದ, ನೆರೆಮನೆಯ ಮೇಸ್ತ್ರಿ ಚೋಮಣ್ಣ ವಿಶೇಷ ಆಹ್ವಾನಿತರಾಗಿದ್ದರು. ಅಪ್ಪ ಅವರೊಂದಿಗೆ ಕಟ್ಟುಪಾಡಿನ ಮಾತುಗಳನ್ನು ಹೇಳುತ್ತಾ ಬಲಿಯೇಂದ್ರನಿಗೆ ಅರಿಕೆ ಮಾಡುತ್ತಿದ್ದರು. ಚೋಮಣ್ಣ ‘ಆಂ, ಹೌದೌದು, ಸರಿ’ ಎಂದೆಲ್ಲ ಹೇಳುತ್ತಾ ಅಪ್ಪನಿಗೆ ಸಾಥ್ ನೀಡುತ್ತಿದ್ದರು. ನಾನು ಆ ಸಮಯವನ್ನು ವ್ಯರ್ಥ ಮಾಡುವುದೇಕೆ ಎಂಬ ಉದ್ದೇಶದಿಂದಲೋ, ಅಥವಾ ಅದನ್ನು ತಿನ್ನಲು ಕೊಟ್ಟಿದ್ದಾರೆಂದೋ, ಸದ್ದಿಲ್ಲದೆ ಕೈಯಲ್ಲಿದ್ದ ಅವಲಕ್ಕಿಯನ್ನು ಮೆದ್ದಿದ್ದೆ. (ಅದು ಮನೆಯಲ್ಲೇ ಅಮ್ಮ ಕುಟ್ಟಿ ಮಾಡುತ್ತಿದ್ದ ರುಚಿಯಾದ ಅವಲಕ್ಕಿ) ಕೊನೆಯಲ್ಲಿ ಕೂ…. ಹೇಳುವ ವೇಳೆಗೆ ಎರಚಲು ನನ್ನ ಕೈಯಲ್ಲಿ ಅವಲಕ್ಕಿ ಇಲ್ಲದೆ, ಇಂಗು(ಅವಲಕ್ಕಿ)ತಿಂದ ಮಂಗಿಯಾಗಿದ್ದೆ. ಇನ್ನೊಂದು ಘಟನೆಯನ್ನೂ ಹೇಳಲೇ ಬೇಕು. ಮೂರು ದಿವಸ ಶೃಂಗಾರ ಪೂಜೆ ಎಲ್ಲ ಆದ ಮೇಲೆ ಕೊನೆಯ ದಿವಸ ಮುಂಜಾನೆಯೇ ಬಲಿಯೇಂದ್ರನ ವಿಸರ್ಜನೆ. ಅಂದರೆ ಮನೆಯ ಮುಂದೆ ರಾರಾಜಿಸುತ್ತಿದ್ದ ಜೋಡಿಮರವನ್ನು ಶೃಂಗಾರ ಸಮೇತ ಕಿತ್ತು ಹರಿಯುವ ನೀರಿನ ಬಳಿಯಲ್ಲಿ ಇರಿಸಲಾಗುತ್ತದೆ. ನಮ್ಮ ಬಲಿಯೇಂದ್ರನನ್ನು ಕೆಳಗಿನ ತೋಟದಲ್ಲಿ ಹರಿಯುವ ತೊರೆಯ ಬದಿಯಲ್ಲಿ ಇರಿಸುವುದು ವಾಡಿಕೆ. ಮೂರು ದಿವಸಗಳ ಕಾಲ ಬಲಿಯೇಂದ್ರನೇ ಸರ್ವಸ್ವವಾಗಿದ್ದು, ಅವಿನಾಭಾವ ನಂಟು ಉಂಟಾಗಿರುತ್ತಿದ್ದ ನನಗೆ ಬಲಿಯೇಂದ್ರನನ್ನು ಅಗಲುವುದು ಬಹಳ ಕಷ್ಟಕರ ವಿಚಾರವಾಗಿತ್ತು. ಬಲಿಯೇಂದ್ರ ವಿಸರ್ಜನೆಯ ಮಾತುಕತೆ ನಡೆಯುತ್ತಿದ್ದ ವೇಳೆ, ನಾನು ಅಪ್ಪನನ್ನು ಬಲಿಯೇಂದ್ರ ವಿಸರ್ಜನೆ ಬೇಡವೇ ಬೇಡವೆಂಬ ಹಠದೊಂದಿಗೆ ವಿನಂತಿಸಿಕೊಂಡಿದ್ದೆ. ಆ ಕ್ಷಣಕ್ಕೆ ‘ಆಯ್ತು ಮಗಾ, ಈಗ ನಿದ್ದೆ ಮಾಡು’ ಎಂದು ಸಮಾಧಾನಿಸಿದ್ದರು. ಆದರೆ, ಅದೇನೋ ಸಿಕ್‌ಸ್ತ್ ಸೆನ್ಸ್ ಇರಬೇಕು. ಮರುದಿನ ನಸುಕಿನಲ್ಲಿ ಎಚ್ಚರವಾಗಿತ್ತು. (ಇಲ್ಲವಾದರೆ ನಾನು ಕುಂಭಕರ್ಣಿ) ಎದ್ದ ತಕ್ಷಣ ಆಗ ನೇರ ಬಲಿಯೇಂದ್ರನ ಬಳಿಸಾರಿಯೇ ಕಣ್ಣು ಬಿಡುತ್ತಿದ್ದದ್ದು. ಅಂದು ಎದ್ದು ನೋಡುತ್ತಿರಬೇಕಿದ್ದರೆ, ಅಪ್ಪ ಮರವನ್ನು ಕೀಳುತ್ತಿದ್ದಾರೆ. ಪುಟ್ಟ ಹೃದಯಕ್ಕೆ ಎಷ್ಟು ನೋವಾಯಿತೆಂದರೆ, ಅದನ್ನಿಲ್ಲಿ ಹೇಳಲಾಗುತ್ತಿಲ್ಲ. ಪ್ರತಿಭಟಿಸಿದೆ. ಊಹೂಂ… ಪರಿಣಾಮ ಸಾಲದಾಯಿತು. ಅಪ್ಪ ಅವರ ಪಾಡಿಗೆ ಬಲಿಯೇಂದ್ರನನ್ನು ಬೆನ್ನ ಮೇಲಿರಿಸಿ ಶೋಭಾಯಾತ್ರೆ(ಒಬ್ಬರೇ) ಹೊರಟರು. ನಾನೂ ಸದ್ದಿಲ್ಲದೆ ಕಣ್ಣಲ್ಲಿ ನೀರು ಸುರಿಸುತ್ತಾ ಅವರ ಹಿಂದೆಯೇ ನಡೆದಿದ್ದೆ. ತೊರೆಬದಿಯಲ್ಲಿ ಮರವಿಳಿಸಿ ಹಿಂತಿರುಗಿ ನೋಡುವ ವೇಳೆ ನಿಯಂತ್ರಿಸಲಾಗದ ದುಃಖ ಉಮ್ಮಳಿಸುತ್ತಾ, ಬಿಕ್ಕುತ್ತಾ ನಿಂತಿದ್ದ ನನ್ನನ್ನು ಅಪ್ಪ ಹೆಗಲ ಮೇಲೆ ಕೂರಿಸಿ ಕರೆತಂದಿದ್ದರು (ಅವರಿಗೂ ದುಃಖವಾದದ್ದು ತಿಳಿಯುತ್ತಿತ್ತು). ಈ ಕತೆ ನಮ್ಮ ಮನೆಯಲ್ಲಿ ಎವ್ವರ್ ಗ್ರೀನ್. ಪ್ರತೀ ದೀಪಾವಳಿ ವೇಳೆ ಒಬ್ಬರಿಲ್ಲವಾದರೆ ಒಬ್ಬರು ನೆಪಿಸಿಯೇ ಸಿದ್ಧ. ನನ್ನ ಮೋಡರ್ನ್ ಮಕ್ಕಳಿಗೆ(ಅಕ್ಕನ) ಅದೊಂದು ನಗೆ ಸರಕು. ಕಾಡಿಗೆ ತೆರಳಿ ಮರತರಲು ಅಪ್ಪನಿಲ್ಲ. ಅಣ್ಣನಿಗೆ ಇಂಟರೆಸ್ಟ್ ಇಲ್ಲ. ಭತ್ತದಗದ್ದೆ ಇದ್ದಲ್ಲಿ ಅಡಿಕೆ ತೋಟವಿದೆ. ಹಟ್ಟಿ ತುಂಬ ಇರುತ್ತಿದ್ದ ದನಗಳ ಸಂಖ್ಯೆ ಕಮ್ಮಿಯಾಗಿದೆ. ಇಚ್ಚೆಯಂತೆ ನಮಗೆ ಹಬ್ಬಕ್ಕೆ ತೆರಳಲಾಗುತ್ತಿಲ್ಲ. ಹಬ್ಬಬಂದಾಗೆಲ್ಲ ಆ ಸಂಭ್ರಮ, ಹರ್ಷೋತ್ಕರ್ಷದ ನೆನಪಿನ ಹೂವುಗಳು ಮನದೊಳಗೆ ಬಿರಿಯುತ್ತವೆ, ಮುದಗೊಳ್ಳುತ್ತೇನೆ. ==============================================

ಶಾನಿಯ ಡೆಸ್ಕಿನಿಂದ……. Read Post »

ಅಂಕಣ ಸಂಗಾತಿ

ಅಂಕಣ

ನೋಟ! ಕಮಲಾ ಹೆಮ್ಮಿಗೆ ಮೂರು ಬೆಟ್ಟದ ತಪ್ಪಲ ಮದ್ಯದಲ್ಲಿ ಆಡುವ ಹಿಡಿದು ಮೇಯಿಸುತ್ತಿರಲಾಗಿ ಅಡ್ಡ ಬೆಟ್ಟದಲ್ಲಿ ದೊಡ್ಡ ಹುಲಿ ಹುಟ್ಟಿ ಹಾಯಿತ್ತು ಹಸುವ ಉದ್ದಿಹ ಬೆಟ್ಟದಲ್ಲಿ ಭದ್ರ ಗಜ ಬಂದು ಎಸೆದಿತ್ತು ಎತ್ತ ಮಧ್ಯದ ಬೆಟ್ಟದಲ್ಲಿತೋಳ ಕೋದಿತ್ತು  ಕರುವಿನ ಕರುಳ ಕಿತ್ತು ಹುಲಿ,ಗಜ,ತೋಳನ ಉಡ ನುಂಗಿದ್ದ ಕಂಡೆ ಗೋಪತಿನಾಥ ವಿಶ್ವೇಶ್ವರ ಲಿಂಗವನರಿಯಲಾಗಿ……      ಹನ್ನೆರಡನೆಯ ಶತಮಾನದ ತಳಮಟ್ಟದಿಂದ ಬಂದು ಜ್ಞಾನ ಪ್ರಸಾರ ಮಾಡಿದ  ಅಂಬಿಗರ ಚೌಡಯ್ಯ,ನುಲಿಯ ಚಂದಯ್ಯ,ಹೆಂಡದ ಮಾರಯ್ಯ, ಉರಿಲಿಂಗ ಪೆದ್ದಿ,ಕದಿರ  ರೇಮವ್ವೆ, ಕಾಳವ್ವೆ ಮುಂತಾದವರ ಗುಂಪಿನಲ್ಲಿ ಎದ್ದು ಕಾಣುವ ಹೆಸರು. ಈ ವಚನಕತೃ,ತುರುಗಾಹಿ ರಾಮಣ್ಣನವರದು ಒಂದರ್ಥದಲ್ಲಿ ಶರಣಚಳುವಳಿಯ ಮೊದಲ ದಲಿತ ಚಳುವಳಿಯೇ ಆಗಿದೆ ಎಂಬ ಡಾ.ಅರವಿಂದ ಮಾಲಗತ್ತಿಯವರ ಮಾತು ಅರ್ಥಪೂರ್ಣವಾಗಿದೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಕಲ ಜಾತಿಯವರೂ ಇದ್ದರು. ತಂತಮ್ಮ ಕಾಯಕ ಮಾಡುತ್ತಲೇಅನುಭಾವಿಗಳೂ ಆಗಿದ್ದುದು ವಿಶೇಷ. ಈ ವಚನದತಿರುಳು: ಕುರುಬ ರಾಮಣ್ಣ  ಎಂದಿನಂತೆ ಕುರಿಮಂದೆಯಲ್ಲಿದ್ದಾನೆ. ಮೂರು ಬೆಟ್ಟದ ತಪ್ಪಲು ಅವನಿರುವ ಸ್ಥಾನ.ಹಸು,ಎತ್ತು, ಕರುಗಳೂ ಹಸಿರ ಮೇಯುತ್ತಿವೆ ಒಂದು ಗುಡ್ಡದಿಂದ ನೆಗೆದ ಹುಲಿ ಹಸುವನ್ನು ತಿಂದು ಬಿಡುತ್ತದೆ.ಇನ್ನೊಂದು ಗುಡ್ಡದಿಂದಿಳಿದು ಬಂದ ಆನೆ ಎತ್ತನ್ನು ಎತ್ತಿಬಿಸಾಕುತ್ತದೆ.ನಡುವಿನ ಬೆಟ್ಟದ ತೋಳ ಕರುವಿನ ಕರುಳು ಹಿಡಿದು ಎತ್ತಿಒಯ್ದು ಬಿಡುತ್ತದೆ. ಇಂತಹ ದಾರುಣ, ಭೀಷಣ ಚಿತ್ರಕಂಡ ಕುರಿಗಾಹಿ ತನ್ನನ್ನು ಸಂತೈಸಿಕೊಳ್ಳುತ್ತಾನೆ: ಗೋಪತಿನಾಥನ ವಿಶ್ವೇಶ್ವರಲಿಂಗ ಅರಿವುಂಟಾದಾಗ,ಹುಲಿ, ಆನೆ. ತೋಳಗಳನ್ನುಅರಿವೆಂಬ ಉಡವು ನುಂಗುತ್ತದೆ. ಮೇಲಿನ ಶಬ್ದ ಚಿತ್ರವನ್ನುಬಿಡಿಸಿದರೆ-ತನುವು ಹುಲಿ,ಮನ ಸಾಧುಹಸು,ಮದಗಜ ಅಹಂನ ಸಂಕೇತ. ಎತ್ತಿನಂತ ದುರ್ಬಲ ಪ್ರಾಣಿಯನ್ನು ಸುಖಾಸುಮ್ಮನೆ ಎತ್ತಿಎಸೆಯುತ್ತದೆ.ನಮ್ಮಲ್ಲೇ ಇರುವ ಲೋಭವು, ನಮ್ಮಲ್ಲೇ ಇರುವ ಮುಗ್ದತೆಯ ಮೇಲೆ ದಾಳಿ ಮಾಡವುದು, ತೋಳಕರುವಿನ ದೃಶ್ಯವನ್ನು ಸಂಕೇತಿಸುತ್ತದೆ.  ಜ್ಞಾನದ ಸಂಕೇತವಾದ ‘ಉಡ’ವು ಮೇಲೆ ಹೇಳಿದ ಎಲ್ಲಪ್ರಾಣಿಗಳನ್ನೂ ನಿಯಂತ್ರಿಸುತ್ತದೆ.. ಕ್ರೋಧ,ಮದ, ಲೋಭ ಈ ಮೂರೂ ಅವಗುಣಗಳ್ನು ಜ್ಞಾನಿ ಮಾಡುವುದು ಅನುಭಾವದಿಂದ ಎಂಬುದು ಸರಳವಾದ ಈ ವಚನದ ಅರ್ಥ! ಇವೆಲ್ಲ ಮನದ ಕಾಳಿಕೆಗಳು. ‘ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ’ ಎಂದುಬಸವಣ್ಣನವರು     ಆರ್ತರಾಗಿಪ್ರಾರ್ಥಿಸಿದ್ದನ್ನು ಇಲ್ಲಿ ನೆನೆಯಬಹುದು. ಮಾನವ ಮನಸ್ಸು   ‘ಅರಿಷಡ್ವರ್ಗ’ ಗಳಿಂದತುಂಬಿ ತುಳುಕುತ್ತಿರುತ್ತದೆ.(ಕಾಮ,ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ) ಅರಿವಿನ ಶಸ್ತ್ರದಿಂದ,ಅವನ್ನು ಹೆರೆದು ಹಾಕಬೇಕು.ಧ್ಯಾನದಿಂದ ಅದನ್ನು ಸಾದಿಸಬಹುದು ಎಂಬುದು ಶರಣರ  ಇಂಗಿತ. ಇವೆಲ್ಲ ಸೆರಗಿನ ಕೆಂಡದಂತೆ-ನಮ್ಮಲ್ಲಿದ್ದು ನಮ್ಮನ್ನೇ ಸುಡುವಂತಹವು.ಋಜು ಮಾರ್ಗದಲ್ಲಿ ನಡೆವುದೊಂದೆ ಇದಕ್ಕೆ ಮದ್ದು. ಪಾಪವೆಸಗಿದರೂ ಪಶ್ಚಾತ್ತಾಪದ ಬೆಂಕಿಯಿಂದ ಅದನ್ನು ಸುಡಬಹುದು.ಕುರುಬ ವೃತ್ತಿಯ ತುರುಗಾಹಿ ರಾಮಣ್ನ ಕಂಡುಕೊಂಡ ಸತ್ಯವಿದು.. ಹನ್ನೆರಡನೆಯ ಶತಮಾನ, ಕನ್ನಡದ ‘ಕ್ರಾಂತಿಯುಗ’ ವೇ ಸರಿ. ಅಲ್ಲಮಪ್ರಭು, ಬಸವೇಶ್ವರರ ದಿವ್ಯ ಮಾರ್ಗದರ್ಶನದಲ್ಲಿ ಲೌಕಿಕವನ್ನು ಬಿಡದೆ, ಅಲೌಕಿಕದೊಟ್ಟಿಗೆ ಅನುಸಂಧಾನ  ಮಾಡಿದ ಶರಣರ  ಒಳಹೊರಗಿಲ್ಲದ ಬದುಕು, ವಿಸ್ಮಯ ಹುಟ್ಟಿಸುವಂತದ್ದು! ಓರ್ವ ಕುರಿಗಾಹಿಯ ಎದೆಯಲ್ಲಿ ಅರಿವಿನಬೆಳಕು ಕಂಡು, ಅದನ್ನಾತ,ತನಗೆ ಪರಿಚಿತವಾದ, ಆವರಣವನ್ನುಬಳಸಿಕೊಂಡು, ವಚನ ಕಟ್ಟಬೆಕೆಂದರೆ ಅದಕ್ಕೆಷ್ಟು ಸಾಧನೆ ಬೇಕು! ಅವನು, ಕಾಯದ ವೃತ್ತಿಯನ್ನುತಾತ್ವಿಕನೆಲೆಯಲ್ಲಿ ನೋಡಿದ್ದಾನೆ.ಬೆಡಗಿನ ಮಾತುಗಳಲ್ಲಿ ‘ನೀತಿ’ ಯನ್ನು ಹೇಳಿದ್ದಾನೆ.ಇದನ್ನಾತ ಜಪತಪ ಮಾಡದೆ ತನ್ನ ದೈನಂದಿನ ಕಾಯಕದಿಂದಲೇ ನಿರೂಪಿಸಿ ಉತ್ತಮ ಸಂದೇಶ ನೀಡಿರುವುದು ಮಹತ್ವದ ಸಂಗತಿ. ಡಾ.ಕಮಲಾ ಹೆಮ್ಮಿಗೆ                                                                               ಲೇಖಕರ ಪರಿಚಯ: ಕಮಲಾ ಹೆಮ್ಮಿಗೆಯವರು ಆಕಾಶವಾಣಿ, ದೂರದರ್ಶನದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.ಕನ್ನಡ ಸಾಹಿತ್ಯದ ಬಹುತೇಕೆ ಎಲ್ಲ ಪ್ರಭೇದಗಳಲ್ಲಿಯೂ ಕೈಯಾಡಿಸಿರುವ ಇವರು ಜನಪದ,ಅನುವಾದ,ವಿಮರ್ಶೆ,ಕಾವ್ಯ,ಕಥೆ ಕಾದಂಬರಿಗಳನ್ನು ರಚಿಸಿದ್ದಾರೆ.ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆಅನೇಕ  ಮನ್ನಣೆಗಳಿಗೆ ಬಾಜನರಾಗಿದ್ದಾರೆ.ಸವದತ್ತಿ ಎಲ್ಲಮ್ಮ ಹಾಗು ದೇವದಾಸಿಯರ ಕುರಿತಾದ ಸಂಶೋದನೆಗೆ ಪಿ.ಹೆಚ್.ಡಿ. ಪಡೆದಿದ್ದಾರೆ.ಸದ್ಯ ಕೇರಳದ ತಿರುವನಂತಪುರದಲ್ಲಿ ನೆಲೆಸಿದ್ದಾರೆ.

ಅಂಕಣ Read Post »

ಅಂಕಣ ಸಂಗಾತಿ

ಶಾನಿಯ ಡೆಸ್ಕಿನಿಂದ…

ಚಂದ್ರಾವತಿ ಬಡ್ಡಡ್ಕ ನಾನು- ಛೇ ನೀವು ಎಲ್ಲಿ ಹೋದ್ದು? ಸಚಿನ್ ಸರೀ ಹೊಡ್ದ, ನೋಡ್ಬೇಕಿತ್ತು… ಅಮ್ಮ- ಹೊಡ್ದನಾ…. ಯಾರಿಗೆ ಹೊಡ್ದಾ? ಆಚೆ ಪಾರ್ಟಿಯವನಿಗೆ ಹೊಡ್ದದ್ದದ್ದಾ…. ಯಾಕೆ ಹೊಡ್ದದ್ದು…? ಶ್ರೀಪತಿ- ಅಲ್ಲಮ್ಮಾ ರನ್ ಬಾರಿಸಿದ. ಅಮ್ಮ- ಹ್ಞಾ.. ಹಾಗಾ…. ನಾನು ಆಚೆ ಪಾರ್ಟಿಗೆ ಹೊಡ್ಡದ್ದದ್ದಾ ಅಂತ ನೆನ್ಸಿದೆ. ನಾನು- ಹ್ಹೋ…. ವೋ….. ವಿಕೆಟ್…. ಇಲ್ಲ ಥರ್ಡ್ ಅಂಪಾಯರ್ ಅಮ್ಮ- ಏನಾಯ್ತು….ಏನಾಯ್ತು… ನಾನು- ಸ್ವಲ್ಪ ಇರಿ…. ಧರ್ಡ್ ಅಂಪಾಯರ್‌ಗೆ ಹಾಕಿದ್ದಾರೆ ಅಮ್ಮ- ಅದ್ಯಾರು? ನಾನು- ವಿವರಿಸಿ ಎಂಬಂತೆ ಇವರತ್ತ ನೋಡಿದೆ. ಶ್ರೀಪತಿ- ಥರ್ಡ್ ಅಂಪಾಯರ್ ಅಂದ್ರೇ….(ಸಾಗಿತು ವಿವರಣೆ) ನಾನು- ಅಬ್ಬಾ… ನಾಟೌಟ್! ಅಮ್ಮ- ಇಲ್ವಾ ಸದ್ಯ. ಸ್ವಾಮೀ ದೇವರೇ… (ಮಿಕ್ಕಂತೆ ದೇವರನ್ನು ನಂಬದವರು) ಶ್ರೀಪತಿ- ಆಹಾ…. ಆರ್ರ್ಹಾ…… ಫೋರ್… ಯೇ… ಇಲ್ಲಲ್ಲ ಸಿಕ್ಸ್ ಅಮ್ಮ- ಅದೆಂಥ? ನಾನು- ಫೋರ್ ಅಂದ್ರೇ…..(ಫೋರ್- ಸಿಕ್ಸ್ ಬಗ್ಗೆ ಸಣ್ಣ ಉಪನ್ಯಾಸ) ನಾನು- ವ್ಹಾವ್….. ಹ್ಯೂಜ್ ಸಿಕ್ಸ್! ಶ್ರೀಪತಿ- ಮತ್ತೊಂದು ಸಿಕ್ಸ್ (ಅಷ್ಟರಲ್ಲಿ ನಾನು ಎದ್ದು ಟಾಯ್ಲೆಟ್‌ಗೆ ಹೋದೆ) ಅಮ್ಮ- ನೀನು ಎಲ್ಲಿ ಹೋದ್ದು…? ಅಂವ ಸುಮಾರು ಬೌಂಡರಿ ಹೊಡ್ದ. ಆದ್ರೆ ಆಚೆಯ ಹಸಿರು ಡ್ರೆಸ್ ಹಾಕಿದವರು ಗೆರೆ ದಾಟಲು ಬಿಡುವುದೇ ಇಲ್ಲ…… ಶ್ರೀಪತಿ- ಅಯ್ಯೋ ಅದು ಅವರ ಆಟ ಅಮ್ಮಾ. ಇವರು ಬೌಂಡರಿ ಹೊಡೆಯದಂತೆ ತಡೆಯೋದೆ ಅವರ ಕೆಲಸ ಮತ್ತು ಚಾಕಚಕ್ಯತೆ. ಅಮ್ಮ- ಹೌದಾ….. ಹಾಗಾ.. (ಅಷ್ಟರಲ್ಲಿ ಮೈದುನನ ಅಗಮನ) ಅಮ್ಮ-  ಹೇ… ನೀನು ಯಾಕೆ ಊಟಕ್ಕೆ ಬರ್ಲಿಲ್ಲಾ….. ಆಞ… ಅದೆಂಥ ಕೈಯಲ್ಲಿ….. ಈಗ ಊಟ ಮಾಡ್ತಿಯಾ…. ರಾತ್ರಿ ಊಟಕ್ಕಿದ್ದಿಯಾ….. ಬೇಗ ಬಾ ಮನೆಗೆ…. (ಹೀಗೆ ಮೈದುನ ಹಿಂದೆ ಹೋಗಿ ಒಂದು ಹದ್ನೈದು ನಿಮಿಷ ಹೋಯ್ತು) ಶ್ರೀಪತಿ: ಹೇ…. ನೋಡ್ನೋಡ್ನೋಡು ಹೇಗೆ ಡೈವ್ ಹೊಡ್ದ. ಎಕ್ಸೆಲಂಟ್ ಕ್ಯಾಚ್……. (ಅವರಿಗೆ ಇಷ್ಟವಾಗಿದ್ದ ಹಳೆಯ ಕ್ಯಾಚ್‌ಗಳ ವಿವರಣೆ…..) ಅಮ್ಮ: ಮರಳಿ ಬಂದು ಅವರ ಜಾಗದಲ್ಲಿ ಕುಳಿತು, ಏನಾಯ್ತು, ಎಷ್ಟಾಯ್ತು…? ನಂಗೆ ಟೆನ್ಷನ್ ಆಗ್ತದೆ… ನಾನು:  ಯಾಕೆ? ಅಮ್ಮ: ಇಂಡಿಯಾ ಸೋತರೇ….? ನಾನು: ಸೋತರೆ ಏನಾಯ್ತು? ಆಟವನ್ನು ಆಟವಾಗಿ ನೋಡಿ, ಯಾರು ಚೆನ್ನಾಗಿ ಆಡ್ತಾರೋ ಅವರೇ ಗೆಲ್ತಾರೆ. ಅಮ್ಮ: ನಂಗೆ ಟೆನ್ಷನ್ ಆಗ್ತದೆ…. ಶ್ರೀಪತಿ: ಈ ಅಮ್ಮನಿಗೆ ಹೀಗೆ ಬೇಡದ ವಿಷಯಕ್ಕೆ ಟೆನ್ಷನ್ ಮಾಡೇ ಬಿಪಿ ಜಾಸ್ತಿ ಆಗೋದೂ…….. ಅಮ್ಮ: ಲಲಿತ್ಮಾಯಿಗೆ ಫೋನ್ ಮಾಡ್ತೇನೆ…. ನಾನು:  ಯಾಕೆ? ಅಮ್ಮ: ಅವಳಿಗೆ ಕ್ರಿಕೆಟ್ ಚೆನ್ನಾಗಿ ಗೊತ್ತು. ಭಾರತ ಸೋಲ್ತದ ಗೆಲ್ತದಾಂತ ಅವಳು ಹೇಳ್ತಾಳೆ. ನಾನು ಇವರು ಮುಖ-ಮುಖ ನೋಡ್ಕೊಂಡೆವು (ವರ್ಷಗಳ ಹಿಂದೆ ಕ್ರಿಕೆಟ್ ನೋಡ್ತಿದ್ದಾಗ ಬರೆದಿದ್ದೆ. ಅರ್ಧಕ್ಕೆ ಬರೆದಿದ್ದ ಇದು ಭೂ(ಕಂಪ್ಯೂಟರ್)ಗತ ವಾಗಿತ್ತು. ಮತ್ತೆ ಹೇಗೆ ಮುಂದುವರಿಸಬೇಕಿದ್ದೆ ಎಂಬುದ ನಂಗೆ ಈಗ ಮರೆತು ಹೋಗಿದೆ. ಹೇಗಿತ್ತೋ ಹಾಗೇ ಪೋಸ್ಟ್ ಮಾಡೋಣ ಅನ್ನಿಸಿತು, ಹಾಗೇ ಮಾಡುತ್ತಿದ್ದೇನೆ) ಚಂದ್ರಾವತಿ ಬಡ್ಡಡ್ಕ. ಲೇಖಕರ ಪರಿಚಯ: ಚಂದ್ರಾವತಿ ಬಡ್ಡಡ್ಕ, ಪತ್ರಿಕೆ ಗಳಲ್ಲಿ ಪೋರ್ಟಲ್ ಗಳಲ್ಲಿ ಕೆಲಸ ಮಾಡಿ ಅನುಭವ . ಸದ್ಯಕ್ಕೆ ವೃತ್ತಿಪರ ಅನುವಾದಕಿ

ಶಾನಿಯ ಡೆಸ್ಕಿನಿಂದ… Read Post »

You cannot copy content of this page

Scroll to Top