ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಒಡಲಾಳ ದೇವನೂರು ಮಹಾದೇವ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕೆಲವು ಕಥೆಗಳು ಸಾರ್ವಕಾಲಿಕ. ಈ ಕೊರೋನಾ ರಜೆಯಲ್ಲಿ ನಾನು ಓದಿದ ಈ ಕಥೆ ತನ್ನ ಒಡಲಾಳದ ಬದುಕನ್ನ ತುಂಬ ಅದ್ಭುತವಾಗಿ ಹೇಳುವ ‘ದೇವನೂರು ಮಹಾದೇವ’ ಅವರ ರಚಿತ ‘ಒಡಲಾಳ’. ನಾನು ಚಿಕ್ಕವಳಿದ್ದಾಗ ಅಜ್ಜಿ ಮನೆ ಮೂಡಿಗೆರೆಯ ಹತ್ತಿರದ ಹೊಸಮನೆಯಲ್ಲಿ ಕೆಲಕಾಲ ಇದ್ದೆ. ನಾವು ಅವರನ್ನು ‘ಹೊಸಮನೆ ಅಜ್ಜಿ’ ಎಂದೇ ಸಂಬೋಧಿಸುತ್ತಿದ್ದದ್ದು. ಆಗ ಅಜ್ಜಿ ಅವರ ಕಷ್ಟ ಕಾಲದ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು. ಒಂದೊತ್ತಿನ ಊಟಕ್ಕೂ ಕಷ್ಟಪಡುವಂತ ಕಾಲ ಅದು. ಅವ್ರ ಮನೆಯಲ್ಲಿ ತುಂಬ ಜನ ಇದ್ರಂತೆ. ಅವ್ರ ಅಪ್ಪ, ಅಂದ್ರೆ ನನ್ನ ತಾತ. ಹಲಸಿನ ಹಣ್ಣು ಬಿಡುವ ಸಮಯದಲ್ಲಿ ಮನೆಗೆ ದಿನಾಲೂ ಹಣ್ಣು ತರುತ್ತಿದ್ದರಂತೆ.ಆ ಹಣ್ಣನ್ನು ಮಕ್ಳು ಎಷ್ಟೇ ಕೇಳಿಕೊಂಡರೂ ಆ ಕ್ಷಣ ಕಟ್ ಮಾಡದೆ,ಊಟಕ್ಕೆ ಇನ್ನೇನು ೫-೧೦ ನಿಮಿಷ ಇದೆ ಅನ್ನೋವಾಗ ಹಲಸಿನ ಹಣ್ಣನ್ನು ಕಟ್ ಮಾಡಿ ಮಕ್ಕಳಿಗೆಲ್ಲ ತಿನ್ನಲು ಕೊಡ್ತಿದ್ರಂತೆ. ಕಾರಣ ಅವರ ಉದ್ದೇಶ ಎಲ್ಲರೂ ಸ್ವಲ್ಪ ಸ್ವಲ್ಪ ಊಟ ಮಾಡಲೀ ಎಂದಾಗಿತ್ತಂತ್ತೆ. ನನಗೆ ಈ ‘ಒಡಲಾಳ’ದ ಕಡಲೆಕಾಯಿ ತಿನ್ನುವ ಸನ್ನಿವೇಶದಲ್ಲಿ ಅದೆಲ್ಲಾ ನೆನಪಾಗುತ್ತಿತ್ತು. ಒಡಲ ಹಸಿವಿನ ಬೆಂಕಿಗೆ ಎಷ್ಟೊಂದು ದಾಹ! ಈ ಕಥೆಯನ್ನು ಓದುವಾಗ ನಂಗೆ ನಮ್ಮೂರಿನ ಹಳ್ಳಿಯ ಚಿತ್ರಣ, ಅಲ್ಲಿನ ಜನರ ಬದುಕು ಎಲ್ಲ ಕಣ್ಮುಂದೆ ಬರುತ್ತಿತ್ತು. ಪ್ರತಿಯೊಂದು ಸಣ್ಣ ಸಣ್ಣ ಪ್ರಸಂಗವನ್ನೂ ಅಷ್ಟೇ ಅಚ್ಚುಕಟ್ಟಾಗಿ ಕಟ್ಟಿ, ಅದೇ ನಾಜೂಕಿನಿಂದ ಕಣ್ಣ ಮುಂದೆ ನಡೆಯುವಂತೆ ಲೇಖಕರು ಬರೆದಿದ್ದಾರೆ. ಅಲ್ಲಿ ಬರೋ ‘ಸಾಕವ್ವನ ಪಾತ್ರ,ಆಕೆಯ ಅಂತ್ಹ್ಕರಣ ಮನಸೂರೆಗೊಳ್ಳುತ್ತದೆ. ಕೊನೆಗೆ ಕೋಳಿ ಸಿಗಲಿಲ್ಲ ಎಂದಾಗ ನನ್ನ ಮನಸ್ಸಿನಲ್ಲೂ ಬೇಜಾರು. ಅನನ್ಯವಾದ ಭಾಷಾ ಶೈಲಿ ತುಂಬ ಅದ್ಭುತವಾಗಿದೆ. ಬೈಗುಳಗಳು,ಶಪಿಸುವಿಕೆ ಎಲ್ಲವೂ ಅಲ್ಲಿನ ಭಾಷೆಯ ಸೊಗಡನ್ನು ಬಿಂಬಿಸುತ್ತವೆ. ವಿನೋದದ ನಡುವೆಯೂ ಕ್ರೌರ್ಯದ ಅನಾವರಣವಿದೆ. ನಂಗೆ ಈ ಕಥೆಯ ಕೆಲವು ಪ್ರಸಂಗಗಳು ತುಂಬಾ ವಿಶೇಷವಾಗಿ ಕಾಣಿಸುತ್ತದೆ ಅಂತೇನೂ ಅನ್ನಿಸಲಿಲ್ಲ. ಯಾಕೆಂದರೆ ನಾನು ಕೂಡ ಹೆಚ್ಚು ಕಡಿಮೆ ಅದೇ ರೀತಿಯ ವಾತಾವರಣದಲ್ಲಿ ಬೆಳೆದ ಹುಡುಗಿ. ಹೆಚ್ಚೆಂದರೆ ಮಲೆನಾಡು. ಅಲ್ಲಿನ ವ್ಯಥೆ ಬೇರೆ ಆಯಾಮಗಳುಳ್ಳದ್ದು. ಸಾಕಮ್ಮ ಬೆಳಿಗ್ಗೆ ಅವಳ ಮಕ್ಕಳು,ಸೊಸೆಯಂದಿರ ಜೊತೆ ಜಗಳವಾಡಿ, ರಾತ್ರಿ ಅದನ್ನು ಮರೆತು (ಅಥವಾ ಬಡತನ ಅಂತದ್ದನ್ನೆಲ್ಲ ಮರೆಸಿ) ಅವರೆಲ್ಲರೊಟ್ಟಿಗೆ ಕೂತು, ಕದ್ದ ಕಡಲೇಕಾಯಿಯನ್ನ ಹಂಚಿ ತಿನ್ನುತ್ತಾಳೆ. ಈ ಉದಾರತೆಯನ್ನು ನಾವು ಕಥೆಯಲ್ಲಿ ಕಾಣಬಹುದು.ಇದು ಹಳ್ಳಿಯ ಹಟ್ಟಿಗಳ ಬದುಕು. ಈ ಕಥೆಯಲ್ಲಿ ಬರೋ ಗೌರಮ್ಮನ ಮಗ ‘ದುಪ್ಟಿಕಮೀಷ್ನರ್’ ಹೆಸರು ಇಷ್ಟವಾಯಿತು. ಈ ಹಳ್ಳಿ ಜನರು ಆಕಾರ,ಅಂದ,ಚಂದಗಳಿಗೆ ಅನುಗುಣವಾಗಿ ಅನ್ವರ್ಥ ನಾಮಗಳನ್ನು ಒಳ್ಳೆ ಇಟ್ಟಿರುತ್ತಾರೆ.ಅದರಲ್ಲಿ ಅವರದು ಪಿಎಚ್ಡಿ ಪ್ರೌಢಿಮೆ! ಕಡ್ಲೇಕಾಯಿಯ ತಿನ್ನುವ ಪ್ರಸಂಗ ನಮಗೆ ಆಗಿನ ಬಡವರ ಬದುಕನ್ನು, ಅಲ್ಲಿನ ಕಷ್ಟಗಳನ್ನು ತುಂಬ ಚೆನ್ನಾಗಿ ಅರ್ಥೈಸುತ್ತದೆ. ‘ಒಂದೊಂತ್ತಿನ ಊಟಕ್ಕೂ ಕಷ್ಟಪಡುವಂತ ಬದುಕು ಅದು ಅಲ್ವಾ’? ಅಂತ ಅನ್ನಿಸಿತು. ಮತ್ತೆ ಕೊನೆಯಲ್ಲಿ ಸಾಕವ್ವನ ಮನೆಗೆ ಪೋಲಿಸರು ಬಂದಾಗ, ಆ ಮುಗ್ಧ ಜನ ಭಯಪಡುವ ರೀತಿ ಓದುಗರಿಗೆ ಅವರ ಮೇಲೆ ಅನುಕಂಪ ಹುಟ್ಟಿಸುತ್ತದೆ. ಇದು ಬರೀ ಸಾಕವ್ವನ ಮನೆ ಕತೆಯಲ್ಲ. ಇದು ಹಳ್ಳಿಗಳ ಬಹುತೇಕ ಮುಗ್ಧ ಕುಟುಂಬಗಳ ಬದುಕೂ ಹೀಗೆಯೇ ಇರುತ್ತದೆ ಎಂಬುದು ನನ್ನ ಊಹೆಗೂ ನಿಲುಕದ ವಿಚಾರ. ************** ಶಾದ್ವಲೆ ಭಾಗ್ಯ. ಎಚ್. ಸಿ.

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಹಾಣಾದಿ ಕಪಿಲ ಪಿ.ಹುಮನಾಬಾದ ಕೆಚ್ಚೆದೆಯ ಹೋರಾಟ “ಹಣಾದಿ”. ಹೌದು ಕೆಲವು ದಿನಗಳ ಹಿಂದೆ ಅಬ್ದುಲ್ ಹೈ (ಹೈ.ತೋ) ರವರ ಕಾವ್ಯಮನೆ  ಪ್ರಕಾಶನದಲ್ಲಿ ಮುದ್ರಿತವಾಗಿ ಲೇಖಕರು ಮಿತ್ರರಾದ “ಕಪಿಲ್ ಹುಮನಾಬಾದಿ” ರವರ “ಹಣಾದಿ” ಕಿರು ಕಾದಂಬರಿ ಲೋಕಾರ್ಪಣೆ ಗೊಂಡು ಓದುಗರನ್ನು ತನ್ನತ್ತ ಸೆಳೆದಿದೆ ಅದರಲ್ಲಿ ನಾನು ಒಬ್ಬ. ಅತಿ ಚಿಕ್ಕ ವಯಸ್ಸಿನಲ್ಲಿ ಅನುಭವಿ ಲೇಖಕನಂತೆ ಅದ್ಭುತವಾಗಿ ಹೆಣೆದಿದ್ದಾರೆ. ಬಾದಾಮು ಗಿಡದ  ಸುತ್ತ ಕತೆ ಹೆಣೆದ ರೀತಿ ವಿಶೇಷ ಎನ್ನವಂತಿದೆ. ಅಪ್ಪನನ್ನು ನೋಡಲು ಹಳ್ಳಿಗೆ ಮರಳಿದ ಮಗನಿಗೆ ಕಂಡಿದ್ದು ವಿಚಿತ್ರವಾದ ಊರ ಚಿತ್ರಣ. ಒಂಟಿಯಾದ ಅವನ ಮನೆಯಲ್ಲಿ ಭೂತಕಾಲದ ಚಿತ್ರಣ ಬರೆಯಲು ಉಳಿದಿದ್ದು ಗುಬ್ಬಿ ಆಯಿ ಸಂದರ್ಭಕ್ಕನುಸಾರವಾಗಿ ಅವನ ಪ್ರಶ್ನೆಗಳಿಗೆ ಉತ್ತರಿಸುವ ರೀತಿ ಸುತ್ತಲು ಮೋಡವಾದಾಗ ಮಳೆಸುರಿಸುವಂತಿದೆ. ತಲ್ಲಣಗೊಂಡ ಅವನ ಮನಸ್ಸು ಭಯದಲ್ಲೂ ಅಪ್ಪನನ್ನು ಕಾಣುವ ಹಂಬಲ ಎಳ್ಳಷ್ಟು ಕ್ಷೀಣಿಸದೆ ಗುಬ್ಬಿ ಆಯಿಯನ್ನು ಬೆಂಬಿಡದೆ ನೆಡೆದಿದ್ದು ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಉತ್ತರ ಸಿಗದ ಅವನ ಪ್ರಶ್ನೆಗಳು ಹತಾಶನಾಗದೆ ಕುತುಹಲ ಕೆರಳಿಸುವಂತಿವೆ. ಬಾದಾಮು ಗಿಡವನ್ನು ಉಳಿಸಿಕೊಳ್ಳಲು ಅಂದರೆ ಪರೋಕ್ಷವಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ರೀತಿ ಹಾಗೂ ಸ್ವತಂತ್ರವಾಗಿ ಬದುಕುವ ಹಕ್ಕಿಗಾಗಿ ಇಡೀ ಊರನ್ನೆ ಎದುರು ಹಾಕಿಕೊಂಡು ನೆಡೆಸಿದ ಹೋರಾಟ ಓದುಗನ ಮನಸ್ಸಿನಲ್ಲಿ ಅಚ್ಚುವತ್ತಿದೆ. ಊರಲ್ಲಿ ಯಾವುದಾದರು ಹೆಣ ಹೂಳಿದರೆ ಮಾತ್ರ ಹೊಟ್ಟೆ ತುಂಬಾ ಊಟ ಇಲ್ಲವಾದರೆ ಅರೆಹೊಟ್ಟೆ ಊಟ ಮಾಡುವ ಕಂಠಿಯ ಜಾತಿಯನ್ನು ತಿರಸ್ಕರಿಸಿ ಬದುಕು ಮತ್ತು ವೃತ್ತಿಯನ್ನು ಗೌರವಿಸುವ ರೀತಿ, ಅದಕ್ಕೆ ಅವನ ಅಪ್ಪನ ಕಾಳಜಿ, ಹಾಗೂ ಬದುಕಿನ ಹೋರಾಟಕ್ಕೆ ಕಂಠಿ ನೀಡಿದ ಸಾಥ್ ಚೆನ್ನಾಗಿ ಹೆಣೆಯಲಾಗಿದೆ.               ಅಪ್ಪನ ಈ ಹೋರಾಟದಲ್ಲಿ ಜಾತಿ, ಧರ್ಮ, ದೇವರು ಮತ್ತು ಸಿರಿತನ ವಿರುದ್ಧ ಗಟ್ಟಿಯಾಗಿ ನಿಂತಿರುವುದು ಬದುಕು. ಸೊಗಸಾಗಿ ಹೆಣೆದ ಕಥೆಯಲ್ಲಿ ವಿಶೇಷವಾದ ಆಕರ್ಷಣೆಯಾಗಿದೆ ಸ್ಥಳೀಯ ಭಾಷೆ. ಒಟ್ಟರೆಯಾಗಿ ಕಿರು ಕಾದಂಬರಿಯಲ್ಲಿ ಲೇಖಕರು ಸಮಾಜದಲ್ಲಿ ಬದುಕನ್ನು ಗಟ್ಟಿಗೊಳಿಸುವ ರೀತಿ ಹಾಗೂ ಅಸ್ತಿತ್ವ ಉಳಿಸಿಕೊಳ್ಳಲು ಹೆಣೆದಿರುವ ಹೋರಾಟದ ದಾರಿ ಓದುಗನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗೂ ವಿಶಾಲವಾದ  ಸಮಾಜದಲ್ಲಿ ಹಣಾದಿಯಲ್ಲೂ (ಬಂಡಿ ಜಾಡಿನಂತ ಚಿಕ್ಕ ಹಾದಿಯಲ್ಲಿ) ಪ್ರಾಮಾಣಿಕವಾದ ಉತ್ತಮ ಬದುಕು ಕಟ್ಟಿ ಕೊಳ್ಳಬಹುದು ಮತ್ತು ಬದುಕು ನಿರಂತರ ಎನ್ನುವ ಒಳ್ಳೆಯ  ಸಂದೇಶವನ್ನು ನೀಡಿದ್ದಾರೆ.       ಜೀವನದ ಮಹತ್ವ ತಿಳಿಸುವ ಹಾಗೂ ಸಮಾಜಕ್ಕೆ ಸಂದೇಶ ಸಾರುವ ಹೊಸ ಲೇಖಕರ ಹೊಸ ಹೊಸ ವಿಚಾರಗಳು ಹೊರ ಹೊಮ್ಮಲಿ ಎನ್ನುವುದು ಮತ್ತು ಬರಹದ ಮೂಲಕ ಸಮಾಜವನ್ನು ತಿದ್ದುವ ಕೆಲಸಗಳು ಸದಾ ಜಾರಿಯಲ್ಲಿರ ಬೇಕು ಎನ್ನುವುದು ಆಶಯ… ************************ ನಾಗರಾಜ ಮಸೂತಿ…      

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ನಕ್ಷತ್ರ ಸೂಕ್ತ  ಡಾಕ್ಟರ್ ಅನಸೂಯಾದೇವಿ  ನಕ್ಷತ್ರ ಸೂಕ್ತ  ಲೇಖಕಿ ಡಾಕ್ಟರ್ ಅನಸೂಯಾದೇವಿ  ಪ್ರಕಾಶಕರು ಶ್ರೀ ಅನ್ನಪೂರ್ಣ ಪ್ರಕಾಶನ ಅಗ್ರಹಾರ ದಾಸರಹಳ್ಳಿ ಬೆಂಗಳೂರು ೫೦೦೦೭೯  ಮೊದಲ ಮುದ್ರಣ ೨೦೧೪ ಬೆಲೆ ರೂ.೧೫೦/ ಮೂರು ಪ್ರಬುದ್ಧ ಮುಖ್ಯಪಾತ್ರಗಳ ಸುತ್ತ ತಿರುಗುವ ಕಥೆ .ಅಡಿ ಟಿಪ್ಪಣಿ ಹೇಳುತ್ತದೆ “ನನಗೊಂದು ಮಗು ಬೇಕು” ನಾಯಕಿ ಮಾರ್ದವಿ ಸಂಗೀತಗಾರಳು ವಿದ್ಯಾವಂತೆ ಹಾಗೂ ಸೌಮ್ಯ ಸ್ವಭಾವದ ರೂಪಸಿ .ಅವಳ ಪ್ರತಿ ಮಧುಕರ ಕಾಲೇಜು ಉಪನ್ಯಾಸಕನಾಗಿದ್ದವನು  ಹಾಗೂ ದೇವಾಲಯದ ಅರ್ಚಕ ಸಂಸ್ಕೃತ ವಿದ್ವಾಂಸ ಹಾಗೂ ಪಿ.ಎಚ್.ಡಿ. ಬರೆಯುತ್ತಿರುವ ಭಾಸ್ಕರ ಸೋಮಯಾಜಿ. ಅವರ ಕಥೆಗೆ ಹಿರಿಯರ ಕಾಲದ ಶಾಪದ ವೃತ್ತಾಂತ ಆಸ್ತಿಗಾಗಿ ಅಣ್ಣತಮ್ಮಂದಿರ ದ್ವೇಷ ಕಲಹಗಳ ಹಿನ್ನೆಲೆ ತೆಗೆದುಕೊಂಡು ವಿವರಿಸುತ್ತಾ ಹೋಗುವ ಕಥೆಯ ಎಳೆ. ಇತ್ತೀಚಿನ ದಿನಗಳಲ್ಲಿ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದ ಕಾದಂಬರಿ ಇದು.  ಬಾಲವಿಧವೆ ರಾಧಜ್ಜಿಯ ಹಕ್ಕಿಗಳೊಡನಿನ ಸಂಭಾಷಣೆ, ಅಣ್ಣನ ಮೋಸಕ್ಕೆ ಬಲಿಯಾದ ಶಾಂತಾರಾಮಜ್ಜ, ಅನ್ಯಾಯಕ್ಕೆ ಈಡಾಗಿ ವಿಷ ಕುಡಿದು ವಂಶಕ್ಕೆ ಶಾಪ ಕೊಟ್ಟ ಶಾಂತಾರಾಮನ ಪತ್ನಿ ಜಯಲಕ್ಷ್ಮಿ ಈ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ. ಪ್ರತಿಯೊಂದು ಮನೆತನದಲ್ಲಿ ಹುಡುಕಿದರೆ ಇಂತಹ ಕಥೆಗಳು ಸಿಗಬಹುದೇನೋ. ಆದರೆ ತಮ್ಮ ಪಾಪದ ಫಲ ಇಂದಿನ ತಮ್ಮ ಅವಸ್ಥೆ ಎಂದರಿಯುವವರು ಮಾತ್ರ ಇರುವುದಿಲ್ಲ.   ಪೂರ್ಣ ಕಥೆಯನ್ನು ವಿವರಿಸಿ ನಿಮ್ಮ ಕುತೂಹಲಕ್ಕೆ ಭಂಗ ತರುವುದಿಲ್ಲ ನಾನು.  ಓದಿಯೇ ತೀರಬೇಕು ಅದರ ಆಸ್ವಾದ ಅರಿಯಲು. ಮುನ್ನುಡಿಯಲ್ಲಿ ಡಾಕ್ಟರ್ ಟಿ ಎ ಬಾಲಕೃಷ್ಣ ಅಡಿಗರು ಹೇಳಿರುವಂತೆ ” ಭಾವ ಬೆಳಕು ಭಾವಲೋಕ, ಭಾವವಲಯ, ಭಾವಸಂಗಾತಿ ಭಾವ ತೇವತೆ ಭಾವ ಜಟಿಲತೆ ಈ ಎಲ್ಲಾ ಪದಗಳನ್ನು ಲೇಖಕಿಯು ಬಳಸುವಲ್ಲಿ ಅವರು ಸೃಷ್ಟಿಸಿರುವ ಭಾವಜಗತ್ತನ್ನು ಅರ್ಥೈಸಿಕೊಳ್ಳುವಲ್ಲಿ ಈ ಕಾದಂಬರಿಯ ಓದುಗನಿಗೂ ಕೂಡ ವಿಶೇಷ ಭಾವ ಸಂಸ್ಕಾರವಿದ್ದರೆ ಒಳಿತು “. ನಿಜ ತಮ್ಮ  ಭಾವ ತೀವ್ರತೆ ಇರುವ ಬರವಣಿಗೆಯಿಂದ ಲೇಖಕಿ ನೇರ ಓದುಗನ ಹೃದಯದಾಳಕ್ಕೆ ಲಗ್ಗೆಯಿಡುತ್ತಾರೆ . ಬಳಸಿರುವ ಭಾಷೆಯ ಮೇಲಿನ ಹಿಡಿತ ಜೊತೆಯಾಗಿರುವ ಸಂಗೀತ ಸಾಹಿತ್ಯ ಉದ್ದರಣೆಗಳು ಕಥೆಯ ಓಘಕ್ಕೆ ಇಂಬು ಕೊಡುತ್ತ ಹೋಗುತ್ತದೆ. ಪ್ರಾಚೀನ ಹಾಗೂ ಅರ್ವಾಚೀನ ಸಂಗತಿಗಳ ನಡುವಣ ಸಾಮರಸ್ಯ ,ಉದಾಹರಣೆಗೆ ನಿಯೋಗ ಪದ್ಧತಿ ಮತ್ತ ಐವಿಎಫ್, ವೇದ ಕಾಲದ ಸೂಕ್ತಗಳು ಹಾಗೂ ಮೊಹೆಂಜದಾರೋ ಮುದ್ರೆಗಳ ನಡುವಣ ಸಾಮ್ಯತೆ ಹಾಗೂ ಅಧ್ಯಯನ ಎಲ್ಲವೂ ಕಥೆಗೆ ಪೂರಕವಾಗುತ್ತಾ ಸಾಗುತ್ತದೆ . ಲೇಖಕಿ ಸ್ವತಃ ಗಾಯಕಿಯೂ ಹೌದು. ಆದ್ದರಿಂದ ನಾಯಕಿಯ ಗಾಯನ ಆಗಿನ ಅವಳ ಮನಃಸ್ಥಿತಿಗಳನ್ನು ಕಣ್ಣಿಗೆ ಕಟ್ಟುವಂತೆ ಮನಕ್ಕೆ ನಾಟುವಂತೆ ಚಿತ್ರಿಸಿದ್ದಾರೆ.  ಹೆಣ್ಣಿನ ಜನ್ಮದ ಸಾಫಲ್ಯ ತಾಯ್ತನ .ಪ್ರತಿ ಹೆಣ್ಮನವೂ “ನನಗೊಂದು ಮಗು ಬೇಕು” ಎಂದು ಹಂಬಲಿಸುತ್ತಲೇ ಇರುತ್ತದೆ.  ಆ ತುಡಿತ ಮಿಡಿತದ ಹಪಾಹಪಿ ಹಾಗೂ ಅದನ್ನು ಪೂರೈಸಿಕೊಳ್ಳುವ ವಿಧಾನ ಇದು ಕಥಾವಸ್ತು. ಆದರೆ ಅದನ್ನು ಹಿಡಿದಿಟ್ಟಿರುವ ಲೇಖಕಿಯ ಅನನ್ಯತೆಗೆ ಶರಣು ಅನ್ನಲೇಬೇಕು. ಚರ್ವಿತ ಚರ್ವಣವಾಗದೆ ಹೀಗೆ ಆಗಬಹುದು ಎಂದು ಊಹಿಸಲಾಗದ, ಹೀಗೂ ಆಗಬಹುದು ಎಂದು ನಿರೂಪಿಸಿರುವ ಶೈಲಿ ತುಂಬಾ ಮನಕ್ಕೆ ಮುಟ್ಟಿತು ಆಪ್ಯಾಯವಾಯಿತು ಆಪ್ತವಾಯಿತು . ಕಾದಂಬರಿಯ ಈ ಸಾಲುಗಳು  ಸ್ತ್ರೀ ಸಮಾನತೆ ಸ್ವಾತಂತ್ರ್ಯ  ಪರವಾದವರಿಗೆ ಸಮಾಧಾನವನ್ನೂ ನೀಡಬಹುದು.  “ಬೀಜವೊಂದನ್ನೇ ವಂಶ ಮೂಲವೆಂದು ಗುರುತಿಸುವುದೇಕೆ?  ಕ್ಷೇತ್ರವನ್ನೇಕೆ ವಂಶ ಪಾರಂಪರಿಕೆಯಾಗಿ ಪರಿಗಣಿಸಬಾರದು? ಕ್ಷೇತ್ರವಿಲ್ಲದೆ ಬೀಜವೊಂದರಿಂದಲೇ ವಂಶ ಬೆಳೆಯುತ್ತದೆಯೇ ?” ಮಾರ್ದವಿ ಬೆಟ್ಟಕ್ಕೆ ತೆರಳುವ ಸಂದರ್ಭದಲ್ಲಿ ಕೋತಿಗಳು ಎದುರಾಗುವ ಸಂದರ್ಭವನ್ನು ತುಂಬಾ ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ.  ಹಾಗೆಯೇ ಮಾರ್ದವಿಗೆ ಬೀಳುವ ಕನಸಿನ ವಿವರವೂ ಸಹ . ಮಧ್ಯೆ ಬರುವ ಭಾವ ಗೀತೆಗಳ ಸಾಲುಗಳು ರಾಗಗಳ ವರ್ಣನೆ ಅಬ್ಬಾ ಒಂದು ಸಂಪೂರ್ಣ ಭಾವಮಯ ಭಾವುಕ ಜೀವಿಗಳ ಭಾವ ಬಣ್ಣನೆ! . ಶಿಥಿಲಗೊಳ್ಳುತ್ತಿರುವ ಕೌಟುಂಬಿಕ ಸಂಬಂಧಗಳು,ಹೆಚ್ಚುತ್ತಿರುವ ವಿಷಮ ಸಂಸಾರಗಳು ವಿವಾಹೇತರ ಸಂಬಂಧಗಳ ಮಧ್ಯದಲ್ಲಿ ಇಂತಹ ಕಾದಂಬರಿಗಳು ಹೆಚ್ಚು ಮೌಲಿಕವಾಗುತ್ತದೆ. ಸಮಾಜಕ್ಕೆ ಮಹತ್ವದ ಸಂದೇಶವನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ ಸಫಲವೂ ಆಗುತ್ತವೆ . ********* ಸುಜಾತಾ ರವೀಶ್

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ನೂರ್ ಇನಾಯತ್ ಖಾನ್ ಚಂದ್ರಶೇಖರ್ ಮಂಡೆಕೋಲು ಮೂರು ದಿನಗಳ ಕಾಲ ನನ್ನನು ಈ ಕೊರೋನಾ ರಜೆ ‘ನೂರ್ ಇನಾಯತ್ ಖಾನ್’ ನಾಝಿ ಹೋರಾಟದ ಆರ್ದ್ರ ಕಾವ್ಯವನ್ನು ಓದಲು ಹಚ್ಚಿತು. ನನ್ನ ಓದಿನ ಮಿತಿಯಲ್ಲಿ ನಾನು ಗ್ರಹಿಸಿದ ಕಿರು ಬರಹವಿದು.      ಧರ್ಮ ಹಾಗೂ ಜನಾಂಗ ಶ್ರೇಷ್ಠತೆಯ ಭ್ರಷ್ಠ ಸಿಂಡ್ರೋಮ್ ಇಂದು ನಿನ್ನೆಯದಲ್ಲ.ನಾಳೆ ಹೋಗುತ್ತದೆಂಬ ಖಾತ್ರಿಯೂ ಇಲ್ಲ;ಆ ಮಾತು ಬೇರೆ.ಎರಡನೇ ಜಾಗತಿಕ ಮಹಾಯುದ್ಧದಲ್ಲಿ ನಾಝಿಗಳ ನಡೆಸಿದ  ಮಾರಣ ಹೋಮಕ್ಕೆ ಯಾವತ್ತೂ ಕ್ಷಮೆ ಇಲ್ಲ.ಅತ್ಯಾಚಾರಕ್ಕೊಳಪಡಿಸಿ ಸಜೀವ ದಹಿಸುವ ಅವರ ಕ್ರೌರ್ಯವೊಂದು ಹಿಂಸೆಯೆಂಬ ಸಣ್ಣ ಪದದಲ್ಲಿ ನೋಡಲಾಗದಷ್ಟು ಭಯಂಕರ.ಇವುಗಳನ್ನೆಲ್ಲ ತಲಸ್ಪರ್ಶಿ ಅಧ್ಯಯನಗಳೊಡನೆ ಕೃತಿಕಾರ ನಮ್ಮ ಮುಂದಿಡುತ್ತಾರೆ ನೂರ್ ಳ ಬಾಲ್ಯದಲ್ಲಿ ಆಕೆಯ ತಂದೆತಾಯಿಯರು ಪ್ರಭಾವಿಸಿದ್ದನ್ನು ನಾನು ವಿಶೇಷವಾಗಿ ಗ್ರಹಿಸಿರುವೆ.ಭಾರತೀಯನಾದ ತಂದೆಯಿಂದ ಬಳುವಳಿಯಾಗಿ ಬಂದ ಸಂಗೀತ,ಕಲೆ,ಸಾಹಿತ್ಯ,ಓದು,ಬರಹಗಳು,ಸೂಫಿ ತತ್ವ ಮತ್ತು ಪ್ರವಚನಗಳು ಆಕೆಯ ಅಂತರಂಗಿಕ ವ್ಯಕ್ತಿತ್ವವನ್ನು ವಿಕಸಿಸಿದ್ದರೆ ತಾಯಿಯ ಪ್ರಭಾವದಿಂದ ಬಂದ ಪ್ರತಿರೋಧದ ಮಧ್ಯೆಯೂ ಕೆಚ್ಚಿನಿಂದ ಬದುಕುವ ಛಲ,ಕಷ್ಟಗಳನ್ನು ಎದುರಿಸುವ ಧೈರ್ಯ ಇವೆಲ್ಲವನ್ನು ತಾಯಿಯಿಂದ ಬಂದದ್ದೆಂದು ಗುರುತಿಸಬಹುದು.ಆ ಕಾರಣಕ್ಕಾಗಿಯೇ ಮುನ್ನುಡಿಯಲ್ಲಿ ಡಾ.ರಹಮತ್ ತರೀಕೆರೆ ಯವರು ತಾಯಿ ನೋರಾ ಬೇಕರ್ ಅವರನ್ನು ‘ಅದೃಶ್ಯ ನಾಯಕಿ’ ಎಂದೇ ಕರೆದಿದ್ದಾರೆ.ಅತ್ಯಂತ ಪ್ರಜ್ಞಾವಂತ ನಾಗರಿಕರೆಂದು ಕರೆಯಲ್ಪಡುವ ಫ್ರೆಂಚ್ ಜನರ ಒಡನಾಟ,ಅಲ್ಲಿಯ ಶಿಕ್ಷಣ,ಬ್ರಿಟನ್ ಕಲಿಸಿಕೊಟ್ಟ ಅನೇಕ ಅನುಭವಗಳು,ಸೂಕ್ಷ್ಮ ಹಾಗೂ ಸಂವೇದನಪೂರ್ಣವೂ ಅತ್ಯಂತ ಪ್ರ್ಯಾಕ್ಟಿಕಲ್ ಆಗಿ ಬದುಕುವ ಚಾಕಚಕ್ಯತೆಯನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾದದ್ದು ಅವಳಿಗೆ ದೊರೆತ ಶಿಕ್ಷಣದಿಂದ ಎಂದು ಗ್ರಹಿಸಬಹುದು.ಭಾವನಾತ್ಮಕ ಹಿನ್ನೆಲೆಯಲ್ಲಿ ನೋಡಿದರೆ ಈಕೆ ಟಿಪ್ಪು ವಂಶಸ್ಥಳಾಗಿರುವುದರಿಂದ ನಮ್ಮ ನೆಲದವಳೆಂಬ ಹೆಮ್ಮೆ ಸಹಜ.ಆದರೆ ಆ ವಂಶಸ್ಥರ ಗುಣವೊಂದೇ ಈಕೆಯನ್ನು ಹೋರಾಟಗಾರ್ತಿಯನ್ನಾಗಿ ರೂಪಿಸಿತೆ?ಆ ಹಿನ್ನೆಲೆಯಲ್ಲಿ ಈ ಕೃತಿಯನ್ನೋದುವಾಗ ಆಕೆಯ ವಿದೇಶಿ ಶಿಕ್ಷಣ, ತಾಯಿಯ ಪ್ರಭಾವ,ವಿದೇಶಿ ಪರಿಸರ ಸಾಕಷ್ಟು ಪ್ರಭಾವಿಸಿ ಅವಳನ್ನು ಒಬ್ಬ ಧೀರೆಯನ್ನಾಗಿ ರೂಪಿಸಿದ್ದವೆನ್ನುವುದನ್ನು ಕೃತಿಕಾರರು ಇನ್ನಷ್ಟು ವಿವರಗಳನ್ನು ದಾಖಲಿಸಬಹುದಿತ್ತೇನೊ ಅನಿಸಿತು. ನಾಝಿಗಳ ಕ್ರೌರ್ಯ,ಯುದ್ಧ ಷಡ್ಯಂತ್ರಗಳು,ಯುದ್ಧಕಾಲದ ಭೀಬತ್ಸ ಇವನ್ನೆಲ್ಲ ಯುದ್ಧಭೂಮಿಕೆಯಲಿರುವಂತೆಯೇ ಬರೆದ ಮಂಡೆಕೋಲು ಅವರು  ಮನುಷ್ಯರನ್ನು ಕೊಲ್ಲಲೆಂದೇ ಕಟ್ಟಿದ ಕಾರ್ಖಾನೆಗಳ ನಾಡು ಎಂದು ಕರೆದಿರುವುದು ಸರಿ ಎನಿಸುತ್ತದೆ.   ಕೃತಿಯು ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಚಾರಿತ್ರಿಕ ಪಠ್ಯವು ಆಗಿರುವುದು ಕೃತಿಕಾರನ ಜಾಣ್ಮೆಯನ್ನು ತೋರಿಸುತ್ತದೆ. ಮಂಡೆಕೋಲ ಅವರು ೨೩ ತಲೆಬರಹಗಳನ್ನು ಕೊಟ್ಟು ಪ್ರತಿಯೊಂದೂ ನಮ್ಮೊಳಗೊಂದು ಚಂದದ ಒಳನೋಟಗಳನ್ನು ಗ್ರಹಿಸುವ ಮನೋಭೂಮಿಯನ್ನು ಸಿದ್ಧಗೊಳಿಸುತ್ತವೆ.ಚರಿತ್ರೆಯ ಅಧ್ಯಯನವಾದರೂ ಭಾಷಾ ಪ್ರಯೋಗ ಸೃಜನಶೀಲ ಲೇಖಕನಂತಿದೆ.ಕೆಲವು ಸಾಲುಗಳನ್ನು ಹೈಲೈಟರ್ ನಿಂದ ಮಾರ್ಕಿಸುತ್ತ ಓದಬೇಕೆನಿಸುತ್ತದೆ. ಈ ತವರು ನೆಲದ ನೂರ್ ಟಿಪ್ಪುವಿನ ವಂಶಜಳೆಂದು ಗುರುತಿಸುವಷ್ಟೇ ಪ್ರಬಲವಾಗಿ ನೂರ್ ಳ ಅಜ್ಜ ಟಿಪ್ಪು ಎಂದು ಹೇಳಲೇಬೇಕಾದಷ್ಟು ಧೀರ ನೀರೆ ನೂರ್.ಯುದ್ಧಗಳೆಂದರೆ ಸಾಮ್ರಾಜ್ಯ ವಿಸ್ತರಣೆ ಮಾತ್ರವಲ್ಲ,ಧರ್ಮದ ಅಹಮ್ಮಿನ ಕೋಟೆಯನೆತ್ತರಿಸುವುದು ಮಾತ್ರವಲ್ಲ,ಅಸಾಧಾರಣ ಪ್ರತಿಭೆಗಳನ್ನು,ಅಸಾಮಾನ್ಯ ವ್ಯಕ್ತಿತ್ವಗಳನ್ನು,ಸಾಮಾನ್ಯರ ಬದುಕನ್ನು,ಒಂದರ್ಥದಲ್ಲಿ ಜನಾಂಗಗಳನ್ನೇ ಧ್ವಂಸಿಸಿ ಸಂಭ್ರಮಿಸುವ ಉನ್ಮಾದವೆಂದು ಅನಿಸುತ್ತದೆ. ನೂರ್ ಕುರಿತಾಗಿ ಓದಲು ಇದೊಂದು ಸುಸಂದರ್ಭ.ಜೀವಾಣುಯುದ್ಧಗಳು ನಡೆಯಬಹುದಾದ ಸಾಧ್ಯತೆಯ ಶಂಕೆಗಳನ್ನು ತಳ್ಳಿ ಹಾಕುವಂತಿಲ್ಲವೆಂಬುದನ್ನರಿಯುತ್ತ ಸ್ವಾತಂತ್ರ್ಯದ ಮಹತ್ವ ಮತ್ತು ಹೋರಾಟದ ಧೀಶಕ್ತಿಗೆ ನೂರ್ ನಮಗೆ ಬೆಳಕ ದೀಪ ಹಿಡಿದು ನಿಂತಿದ್ದಾಳೆ. ಡಾ.ರಹಮತ್ ತರೀಕೆರೆ ಅವರ ಅದ್ಭುತ ಮುನ್ನುಡಿಯಲ್ಲಿ ಹಲವು ಚಾರಿತ್ರಿಕ ವಿದ್ಯಮಾನಗಳನ್ನು ಜೋಡಿಸಿ ಕೊಟ್ಟಿದ್ದಾರೆ.ಬೆನ್ನುಡಿಯ ಕಿರು ಬರಹವಾಗಿ ಡಾ.ಪುರುಷೋತ್ತಮ ಬಿಳಿಮಲೆಯವರು ಚಂದದ ಬೆಳಕನ್ನು ರಾಷ್ಟ್ರೀಯ ಪ್ರಜ್ಞೆಯಲ್ಲಿ ಗ್ರಹಿಸಿಕೊಂಡು ಓದುವ ವರ್ತಮಾನದ ತಲ್ಲಣಗಳಿಗೆ ಎದೆಯೊಡ್ಡುವ ಬೆನ್ಬರಹವನ್ನು ಬರೆದಿದ್ದಾರೆ.ಒಟ್ಟಂದದಲಿ ಪ್ರತಿಯೊಬ್ಬರೂ ಓದವಂತಹ ಅಪರೂಪದ ಕೃತಿ.ಮಹಿಳೆಯರಂತೂ ಓದಲೇಬೇಕಾದ ಕೃತಿಯೆಂದರೆ ತಪ್ಪೆನಿಸದು.ಆದರೆ ಧೂಳು ಒರೆಸಿದ ಕನ್ನಡಕ ಧರಿಸಬೇಕಷ್ಟೆ. ಇನ್ನು ಕೃತಿಕಾರರ ಕುರಿತಾಗಿ ನಾಲ್ಕು ವಿಚಾರಗಳು.. ಒಬ್ಬ ಜೀವಪರ ಮಾತ್ರ ಮನುಷ್ಯಪ್ರೇಮದ ಒಳಹೊಕ್ಕು ಸಂವೇದನೆಗಳನ್ನು ಸಂಯೋಜಿಸಿ ಕೃತಿ ರಚಿಸಬಲ್ಲ.ಕೃತಿಕಾರ ಈ ವಿಚಾರದಲ್ಲಿ ಅಭಿನಂದನಾರ್ಹ. ಕೆಲವು ಸಾಲುಗಳಂತೂ ಕರುಳನ್ನು ತಟ್ಟುತ್ತವೆ.ಕಣ್ತೇವಗೊಳಿಸುತ್ತವೆ.ಗಂಟಲುಬ್ಬಿ ವಿಷಮಯಗೊಳಿಸಿ ಸಂಕಟಕ್ಕೆ ತಳ್ಳುತ್ತವೆ.ಇದು ನಾನು ಅನುಭವಿಸಿದ್ದು .. ಜಾಗತಿಕ ಇತಿಹಾಸದ ನಾಯಕಿ ನೂರಳಿಗೆ ಬದುಕುಳಿದಿದ್ದರೆ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವ ಅದಮ್ಯ ಬಯಕೆ ಇತ್ತು.  ನೂರ್ ಕುರಿತು ಮಹತ್ವದ ದಾಖಲೆಗಳೊಡನೆ,ಶೋಧದ ಹಾದಿಯಲ್ಲಿ ಹಲವನ್ನು ಹೆಕ್ಕಿ,ಮಾಹಿತಿ ಸಂಗ್ರಹಿಸಿ ನಮ್ಮ ಮನಸ್ಸಿನಾಳಕ್ಕಿಳಿಯುವಂತೆ  ನಿಲುಕಿಸಿರುವುದು ಮಂಡೆಕೋಲು ಸರ್ ಭಾಷೆಯೊಳಗೊಂದು ಜೀವಂತಿಕೆ ಇದೆ ಎಂಬುದನ್ನು ತೋರಿಸುತ್ತದೆ.ಓದು ಮುಗಿಯುತ್ತ ಬಂದಂತೆಲ್ಲ ಕಣ್ಹನಿಗಳೊಡನೆ ಹೆಚ್ಚು ವಿನೀತ ಹಾಗೂ ಹೆಚ್ಚು ಮನುಷ್ಯಳನ್ನಾಗಿ ಮಾಡುವ ಕೃತಿಯೆಂದು ನಾನು ಅಂದುಕೊಂಡಿರುವೆ. ಗೆಳೆಯ,ಗೆಳತಿಯರೆ ತುಂಬ ಚಂದದ ನಿರೂಪಣೆಯಿಂದ ಬಹಳಷ್ಟು ಸೂಕ್ಷ್ಮ ಅಧ್ಯಯನದೊಂದಿಗೆ ಹೆಣೆದುಕೊಂಡಿರುವ ಈ ಕೃತಿಯನ್ನು ನೀವೂ ಓದಬೇಕೆಂದು ಬಯಸುವೆ. ಕೃತಿಕಾರನಿಗೊಂದು ಸಲಾಮ್.. ********** ದಾಕ್ಷಾಯಿಣಿ ವಿ.ಹುಡೇದ

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ನಾ ಮೆಚ್ಚಿದ ಪುಸ್ತಕ

ಯಾದ್ ವಶೇಮ್ ನೇಮಿಚಂದ್ರ ನಾ ಮೆಚ್ಚಿದ ಪುಸ್ತಕ, ಶ್ರೀಮತಿ ನೇಮಿಚಂದ್ರ ಅವರು ಬರೆದ ಯಾದ ವಶೇಮ್’. ಈ ಪುಸ್ತಕ ಕನ್ನಡ ಸಾಪ್ತಾಹಿಕದಲ್ಲಿ ಧಾರಾವಾಹಿಯಾಗಿ ಬಂದಾಗ ಇದರ ಹೆಸರು ‘ನೂರು ಸಾವಿರ ಸಾವಿನ ನೆನಪು’ ಆಗಿತ್ತು. ಹಿಟ್ಲರನ ರಕ್ತದಾಹದ, ಅಶಾಂತಿಯ ನೆಲದಿಂದ ಗಾಂಧಿಯ ಅಹಿಂಸೆಯ ನೆಲಕ್ಕೆ ರಕ್ಷಣೆ ಮತ್ತು ಶಾಂತಿಯನ್ನು ಅರಸಿ ಬಂದ ಪುಟ್ಟ ಯಹೂದಿ ಬಾಲೆಯ ನೈಜ ಕತೆಯಿದು. ನಾನು ಈ ಪುಸ್ತಕವನ್ನು ಮೆಚ್ಚಿಕೊಳ್ಳಲು ಮೂಲ ಕಾರಣ ಕೆಳಗೆ ಬರೆದ ಐದು ಅಂಶಗಳು. ಇವು ಯಾವುದೇ ಶ್ರೇಷ್ಠ ಸಾಹಿತ್ಯ ರಚನೆಗೆ ಬೇಕಾದ ಅವಶ್ಯಕ ಅಂಶಗಳು ಕೂಡ. ೧. ದೃಷ್ಯೀಕರಣ : ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಬರೆಯುವುದು. ಬೆಂಗಳೂರಿನ ಗೋರಿಪಾಳ್ಯದ ಸ್ಮಶಾನದಿಂದ ಹೊರಟು ಜರ್ಮನಿ, ಇಂಗ್ಲೆಂಡ್, ಅಮೇರಿಕಾ ಕೊನೆಗೆ ಇಸ್ರೇಲ್ ಮುಟ್ಟಿದ ನಿರಂತರ ಪ್ರವಾಸ, ಅಧ್ಯಯನ ಮತ್ತು ಆ ಕಾಲದ ಆಗುಹೋಗುಗಳ, ರಣಘಟನೆಗಳ ಸಂಶೋಧನೆಗಳನ್ನು ಎದುರಿಗೆ ತೋರಿಸುವಂತೆ ಬರೆದದ್ದು, ಚಿತ್ತದಲ್ಲಿ ಕೊರೆದು ಮನಸ್ಸಿನಲ್ಲಿ ಉಳಿಯುತ್ತದೆ. ನಾನೂ ಕೂಡ ಲೇಖಕಿಯ ಜೊತೆಗೆ ಪ್ರಯಾಣಿಸಿದ್ದೆನೇನೋ ಅನ್ನುವ ಭ್ರಾಂತಿ ಉಂಟಾಗುವಂತೆ ಬರೆದ ಅದ್ಭುತ ಶೈಲಿ. ೨. ಭಾವನೆಗಳನ್ನು ತಟ್ಟುವುದು : ಯಾದ್ ವಶೇಮ್ ಓದುವಾಗ, ಯಹೂದಿ ಬಾಲಿಕೆ ಮತ್ತವಳ ತಂದೆಯನ್ನು ಬೆನ್ನಟ್ಟಿದ ನಾಜಿಗಳ ದುಷ್ಕ್ರತ್ಯ, ಕ್ರೂರತೆ, ಹಿಂಸೆ ಹೃದಯವನ್ನು ಹಿಂಡಿಬಿಡುತ್ತದೆ. ಹೆದರಿಕೆ, ಸಂಕಟ ತಂತಾನೇ ಉಂಟಾಗಿ ಒಂದು ರೀತಿಯ ಆರ್ದ ಭಾವ ಮನದಲ್ಲಿ ಸ್ರವಿಸಿ ಕರುಣಾರಸ ಗೊತ್ತಾಗದೇ ಹರಿಯತೊಡಗುತ್ತದೆ. ಗುರಿ ತಲುಪಿ ತನ್ನವರನ್ನು ಹುಡುಕಿ ತೆಗೆದು ಶತಮಾನದಿಂದ ದೂರಾಗಿದ್ದ ಹೃದಯ ಒಂದಾದಾಗ ನಾಯಿಕೆಯ ಮತ್ತು ಲೇಖಕಿಯ ಕನಸು ನೆನಸಾಗುತ್ತದೆ. ಅವರಿಗಾದಷ್ಟೇ ಸಂತೋಷ, ಆತ್ಮತೃಪ್ತಿ ಓದುಗರೂ ಅನುಭವಿಸುತ್ತಾರೆ. ದುಃಖ ಕೊಡವಿ ಮೇಲೆದ್ದಂತೆ ಮನ ಹಗುರಾಗುತ್ತದೆ. ೩. ಭವಿಷ್ಯದ ಚಿಂತನೆ : ಯಾದ ವಶೇಮ್ ಗತಕಾಲವನ್ನು ಹೇಳುವದರೊಂದಿಗೆ ಭವಿಷ್ಯದ ಚಿಂತನೆ ಮಾಡುತ್ತದೆ. ಲೇಖಕಿಯೇ ಬರೆದಂತೆ “ಅಂದು ಹೊತ್ತಿ ಉರಿಯುತ್ತಿತ್ತು ಜರ್ಮನಿ. ನಿಂತು ನೋಡಿತ್ತು ಜಗತ್ತು. ಇಂದು ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಲ್ಲ, ಅಮೇರಿಕೆಯಲ್ಲಿ, ಇಸ್ರೇಲದಲ್ಲಿ, ಯುರೋಪದಲ್ಲಿ. ‘ಅಹಿಂಸೆಯೇ ಪರಮ ಧರ್ಮ’ ಎಂದು ಜಗತ್ತಿಗೆ ಸಾರಿದ ಭಾರತದಲ್ಲೂ ಕೂಡ. ನಮ್ಮ ನಡುವೆ ಎಲ್ಲಿ ಬೇಕಾದರೂ ಹುಟ್ಟಿ ಬಿಡಬಲ್ಲದು ಈ ಪೈಶಾಚಿಕ ಮನೋಭಾವದ ಉಗ್ರತಾಂಡವ. ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರ್ ನನ್ನು ತಡೆಹಿಡಿಯುವ ಹೊಣೆ ನಮ್ಮದು”. ಮನುಷ್ಯನ ಪಾಶವೀ ಕೃತ್ಯದ ಬಗೆಗೆ ಈ ಮಾತು ನೇಮಿಚಂದ್ರರ ಹೃದಯದಿಂದ ಬಂದದ್ದು. ಈಗ ನಡೆಯುತ್ತಿರುವ ವಿದ್ಯಮಾನಗಳಿಗೆ ಈ ಪುಸ್ತಕ ಕನ್ನಡಿಯಾಗಬಲ್ಲದು. ೪. ಸಮಾಜಕ್ಕೆ ಹಿಡಿದ ಕನ್ನಡಿ : ಸೋಲನ್ನು ಸವಾಲಾಗಿ ಸ್ವೀಕರಿಸಿ ಹೋರಾಡುವದರ ಬಗೆಗೆ, ಗುರಿಯನ್ನು ಮುಟ್ಟುವದರ ಬಗೆಗೆ ಈ ಕೃತಿ ಆದರ್ಶಪ್ರಾಯ. ಓದುಗರಿಗೆ ಅನುಸರಿಸುವ ಹಂಬಲ, ಆತ್ಮವಿಶ್ವಾಸ ಮತ್ತು ಧೈರ್ಯ ತುಂಬುತ್ತದೆ. ಸಮಾಜದಲ್ಲ ನಡೆಯುವ ವಿದ್ಯಮಾನಗಳನ್ನು ಮುಲಾಜಿಲ್ಲದೆ ಚರ್ಚಿಸುವ ಧೈರ್ಯವನ್ನು ತೋರುತ್ತದೆ ಈ ಪುಸ್ತಕ. ೫. ಬರೆಯುವ ಶೈಲಿ ಮತ್ತು ಭಾಷೆ : ಉಪಯೋಗಿಸಿದ ಶಬ್ದಗಳು ಅತೀ ಸೂಕ್ತವಾದುವು. ಸಮಾನಾರ್ಥದ ಇಷ್ಟು ಸರಿಯಾದ ಇನ್ನೊಂದು ಪರ್ಯಾಯ ನುಡಿ ಇರಲಿಕ್ಕಿಲ್ಲ ಎನ್ನುವ ಭಾವನೆ ಬರುತ್ತದೆ. ಉದಾಹರಣೆಗೆ ಕೆಟ್ಟ ಸಂಬಂಧದ ಬಗೆಗೆ ಹೀಗೆ ಬರೆದಿದ್ದಾರೆ, ” ನನ್ನ ಅವನ ನಡುವೆ ಸಪ್ತಸಾಗರದ ಉಪ್ಪಿತ್ತು” ಅಂತ. ಎಷ್ಟೊಂದು ಆಳವಾದ ಅರ್ಥ. ಗಹನ ಅಧ್ಯಯನ, ಸಂಶೋಧನೆಗಳಿಂದ ಮಾತ್ರ ಇಂಥ ಕೃತಿ ರಚಿಸಲು ಸಾಧ್ಯ ಅಲ್ಲದೆ ಹೃದಯದ ಉಕ್ಕು ಭಾವನೆಗಳಲ್ಲಿ ಎದ್ದಿ ತೆಗೆದ ಭಾಷೆ ಉಪಯೋಗಿಸಿದಾಗ ಹೊರಬಂದ ಪುಸ್ತಕ ಯಾದ ವಶೇಮ್. ಬೆಂಗಳೂರಿನಲ್ಲಿ ಆಶ್ರಯ ಪಡೆದಿರುವ ಕಥಾನಾಯಕಿ ಕೊನೆಗೆ ಇಸ್ರೇಲದಲ್ಲಿ ತನ್ನ ಅಕ್ಕನನ್ನು ಹುಡುಕುವ ಪ್ರಯತ್ನದಲ್ಲಿ ಯಶ ಕಾಣುತ್ತಾಳೆ. ಆದರೆ ತಾಯಿ ಮತ್ತು ತಮ್ಮ ಹಿಟ್ಲರ್ ಸೃಷ್ಟಿಸಿದ ನರಕದಲ್ಲಿ ಅಂತ್ಯ ಕಂಡಿರುತ್ತಾರೆ. ಅವರು ಅನುಭವಿಸಿದ ನರಕಯಾತನೆಯಷ್ಟೇ ನಾಯಕಿಗೆ ಲಭ್ಯ. ಒಟ್ಟಿನಲ್ಲಿ ಕರುಳ ಕಲಕುವ ಇತಿಹಾಸ ಮಾನವ ನಿರ್ಮಿತ. ಅದು ಎಂದೂ ಭವಿಷ್ಯದಲ್ಲಿ ಪುನರಾವರ್ತನೆ ಆಗಬಾರದೆಂದು ಎಲ್ಲರ ಆಶಯ. ******* ವಿನುತಾ ಹಂಚಿನಮನಿ

ನಾ ಮೆಚ್ಚಿದ ಪುಸ್ತಕ Read Post »

ಪುಸ್ತಕ ಸಂಗಾತಿ

ನಾನು ಓದಿದ ಕಾದಂಬರಿ

ಮಲೆಗಳಲ್ಲಿ ಮದುಮಗಳು ಕುವೆಂಪು ಇದು ಬರಿ ಅನಿಸಿಕೆ ಅಷ್ಟೇ ವಿಮರ್ಶೆ ನನಗೆ ತಿಳಿಯದು. ನಾನು ಇತ್ತೀಚಿಗೆ ಓದಲ್ಪಟ್ಟ ಮತ್ತು ಮೊದಲ ಕಾದಂಬರಿ ಕನ್ನಡದ ಮನೆ ಮಾತಾಗಿರುವ, ಕನ್ನಡ ಸಾಹಿತ್ಯ ಲೋಕದಲ್ಲೇ ತನ್ನದೇ ಆದ ಛಾಪನ್ನು ಮೂಡಿಸಿರುವ ಅದ್ಬುತವಾದ, ಸುದೀರ್ಘವಾದ ಕಾದಂಬರಿ “ಮಲೆಗಳಲ್ಲಿ ಮದುಮಗಳು” ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ರವರ ಕನಸಿನ ಕೂಸುಮಗಳು ಈ ಮಲೆಗಳಲ್ಲಿ ಮದುಮಗಳ ಓದಿದ ನಂತರ ನನ್ನ ಮನಸಲ್ಲಿ ಅಳಿಯದೆ ಉಳಿದ ವಿಷಯಗಳ ಬಗ್ಗೆ ಬರೆಯುತ್ತೇನೆ “ಮಲೆಗಳಲ್ಲಿ ಮದುಮಗಳು” ಸುದೀರ್ಘವಾದ, ಹೆಚ್ಚು ದೃಶ್ಯಗಳಿರುವ, ಹತ್ತಾರು ಮನೆತನಗಳು ನೂರಾರು ಕಥೆಗಳೇ ಒಳಗೊಳಗೇ ನೆಡೆದುಕೊಂಡಿರುವ ಕಾದಂಬರಿ ಇದು ಇನ್ನೂರು ವರ್ಷದ ಹಿಂದಿನ ಕಥೆಯಾದರು ಇಂದಿಗೂ ಕೂಡ ಪ್ರಸ್ತುತವೆನಿಸುವ ಘಟನೆಗಳು ಇಲ್ಲಿ ಬಂದು ಹೋಗುತ್ತದೆ. ಇಲ್ಲಿ ಯಾರೂ ಮುಖ್ಯರಲ್ಲ, ಯಾರು ಅಮುಖ್ಯರಲ್ಲ ಎಂದು ಮೊದಲೇ ಬರೆದಿರುವ ಕುವೆಂಪುರವರು ಇಲ್ಲಿನ ವಿಷಯ, ಘಟನೆ, ಸ್ಥಳ, ವ್ಯಕ್ತಿ, ವಿಶೇಷ ಯಾವುದು ಕೂಡ ಮುಖ್ಯವಲ್ಲ ಹಾಗೇ ಯಾವುದು ಕೂಡ ಮುಖ್ಯವಲ್ಲ ಎನ್ನುವಂತೆ ಬರೆದಿದ್ದಾರೆ. ಇಲ್ಲಿ ಯಾರೂ ಮುಖ್ಯರಲ್ಲ ಅಂದ್ರೆ ಹಣವಿರುವ ಯಜಮಾನರು ಹಳೆಮನೆ ಸುಬ್ಬಣ್ಣ ಹೆಗ್ಗಡೆಯಾಗಲಿ, ಸಿಂಭಾವಿ ಭರಮೈಹೆಗ್ಗಡೆ, ಬೆಟ್ಟಳ್ಳಿ ಕಲ್ಲಯ್ಯ ಗೌಡರಾಗಲಿ, ಹೂವಳ್ಳಿ ವೆಂಕಣ್ಣನಾಗಲಿ, ಕೋಣೂರು ಗೌಡರಾಗಲಿ ಹೀಗೆ ಅನೇಕ ದಣಿಗಳು ಪಾದ್ರಿ ಜೀವರತ್ನಯ್ಯರಾಗಲಿ ಯಾರು ಮುಖ್ಯರಲ್ಲ. ಹಾಗೆಯೇ ಇಲ್ಲಿ ಯಾರೂ ಅಮುಖ್ಯರಲ್ಲ ಹೊಲೆಯ ಸಿಂಭಾವಿ ನಾಯಿ ಗುತ್ತಿಯಾಗಲಿ, ಕೋಣೂರು ಐತ-ಪೀಂಚಲು, ಆ ಪುಡಿಸಾಬೀಗಳು, ಸೆರೆಗಾರ ಚಿಂಕ್ರ, ಅಕ್ಕಣಿ-ಪಿಜಿಣ, ತಿಮ್ಮಪ್ಪ ಹೆಗ್ಗಡೆ ಹೀಗೆ ಇನ್ನು ಹತ್ತಿಪ್ಪತ್ತು ಪಾತ್ರಗಳು ಅಮುಖ್ಯರಲ್ಲ. ಹಾಗೇ ಇಲ್ಲಿ ಯಾವುದು ಯಃಕಶ್ಚಿತವಲ್ಲ! ಗುತ್ತಿಯ ನಾಯಿ ಹುಲಿಯ ಆಗಲಿ, ಕಾವೇರಿ ದುರಂತಕ್ಕೆ ಕಾರಣವಾದ ಹಾಗೂ ಕಥೆಗೆ ಹಲವು ತಿರುವು ಕೊಡ ಉಂಗುರವಾಗಲಿ, ಚಿಂಕ್ರ ಬಿಟ್ಟು ಹೋದ ಲ್ಯಾಟಿನ್ ಆಗಲಿ, ಜೀವರತ್ನಯ್ಯ ಪರಿಚಯಿಸಿದ ಬೀಸೆಕಲ್ಲು(ಬೈಸಿಕಲ್) ಆಗಲಿ, ಹುಲಿಕಲ್ ನೆತ್ತಿ ಆಗಲಿ, ಹಾಗೇ ಕಾದಂಬರಿ ಅಲ್ಲಿ ಬರುವ ಸಣ್ಣ ಮಕ್ಕಳ ಪಾತ್ರವಾಗಲಿ ಯಾವುದು ಯಃಕಶ್ಚಿತವಲ್ಲ ಇಲ್ಲಿ ಎಲ್ಲಕ್ಕೂ ಇದೇ ಅರ್ಥ, ಯಾವುದು ಅಲ್ಲ ವ್ಯರ್ಥ ಅನ್ನೋ ಹಾಗೇ ಪ್ರತೀ ಸನ್ನಿವೇಶಗಳು ತಿಳಿಸುತ್ತಾ ಹೋಗುತ್ತೇ ಈ ಕಾದಂಬರಿ ಅಲ್ಲಿ ಹೇಳೋ ವಿಷಯಗಳು ಸಾಕಷ್ಟಿವೆ ಕುವೆಂಪುರವರೇ ಸಾಕಷ್ಟು ವಿಷಯಗಳನ್ನ ಬರೆದು ಒಂದು ದೊಡ್ಡ ಕಾದಂಬರಿ ಬರೆದು ಬಿಟ್ಟಿದ್ದಾರೆ, ಅದರಲ್ಲಿ ಇರುವ ಅಂಶಗಳನ್ನ ನನಗೆ ತೋಚಿದ ಹಾಗೆ ತಿಳಿಸುವೆ! ಕಾದಂಬರಿ ಅಲ್ಲಿ ನಾವು ಕಾಣದಿದ್ದ ಅದೆಷ್ಟೋ ಸಾಮಾಜಿಕ ಪಿಡುಗುಗಳು, ಮೂಢನಂಬಿಕೆಗಳು, ಜಾತಿವ್ಯವಸ್ಥೆ, ಧರ್ಮ ಪ್ರಚಾರ ಹಾಗೂ ಆ ಧರ್ಮ ಪ್ರಚಾರಕ್ಕೋಡ್ಡುವ ಆಮಿಷ, ಉಳ್ಳವರ ದರ್ಪ, ಹೆಣ್ಣಿನ ದೇಹದ ಮೇಲಿನ ಮೋಹಕ್ಕೆ ಏನೆಲ್ಲಾ ಮಾಡುತ್ತಾರೆ ಕೊಲೆ,ಅತ್ಯಾಚಾರ ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ಚಿತ್ರಿತವಾಗುತ್ತ ಹೋಗುತ್ತೆ ಮಲೆನಾಡಿನಂತ ಆ ಕಾಡಿನ ಸುತ್ತಮುತ್ತಣದಲ್ಲಿ ಇದ್ದ ಗೌಡಿಕೆ ಯಜಮಾನಿಕೆ ಮೇಲೆ ಬೆಳಕು ಚೆಲ್ಲುತ್ತೆ, ತಮ್ಮ ಸ್ವಾರ್ಥಕ್ಕಾಗಿ ಹಾಗೂ ತಮ್ಮ ಮನೆತನದ ಗೌರವಕ್ಕಾಗಿ ಏನೂ ಬೇಕಾದರೂ ಮಾಡುವ ಅಂದಿನ ಕಾಲದ ದುಡ್ಡು ಇರುವರ ದರ್ಪ, ಗತ್ತು ಹಾಗೇ ಮೋಸದ ರೀತಿಯಲ್ಲಿ ಕಪಟವಾಗಿ ಆಸ್ತಿ ಸಂಪಾದನೆ ಮಾಡೋ ಮಂಜಯ್ಯ ಭಟ್ಟರಂತ ವ್ಯಕ್ತಿಗಳ ಪರಿಚಯ ಮಾಡುತ್ತೆ ಅಷ್ಟೇ ಅಲ್ಲದೆ ಅಂದಿನ ಕಾಲದಲ್ಲಿ ಇದ್ದ ಬ್ರಾಹ್ಮಣ, ಹೆಗ್ಗಡೆ , ಗೌಡ, ಹೊಲೆಯ-ಬಿಲ್ಲ-ನಾಯಕ-ಬೆಸ್ತ ಹೀಗೆ ಇನ್ನೂ ಅನೇಕ ಜಾತಿವ್ಯವಸ್ಥೆ ಬಗ್ಗೆ ತಿಳಿಸಿದರೆ, ಮೇಲಿನ ವರ್ಗದವರು ಕೆಳಗಿನ ವರ್ಗದವರನ್ನ ಓದು ಬರದ ಜನರನ್ನ ಹೇಗೆಲ್ಲಾ ಅನ್ಯಾಯ, ಶೋಷಣೆ ಹಾಗೂ ತಾರತಮ್ಯ ಮಾಡ್ತಾ ಇದ್ರು ಅನ್ನೋದರ ಬಗ್ಗೆ ಆಗಲೇ ತಿಳಿಸಿದ್ದಾರೆ. ಉಳ್ಳವರು, ದುಡ್ಡಿರುವರು ಮಾಡಿದ್ದು ಏನೇ ಮಾಡಿದರೂ ಸರಿ ತಮ್ಮ ಜೀತದಾಳುಗಳು ಮಾಡೋದು ತಪ್ಪು ಅನ್ನೋ ಸಿದ್ಧಾಂತ ಎದ್ದು ಕಾಣುತ್ತೆ….. ಮಲೆಗಳಲ್ಲಿ ಮದುಮಗಳು ಹೆಚ್ಚು ಪ್ರೇಮಕಥೆಯನ್ನ ಹೊಂದಿರುವ ಒಂದು ಸುಂದರ ಕಾದಂಬರಿ ಓದುತ್ತಿದ್ದರೆ ಮಜಾ ಕೊಡೋ ಪ್ರೇಮ ಕಥನ ಅಂದ್ರೆ ಗುತ್ತಿ-ತಿಮ್ಮಿ, ಐತಾ-ಪೀಂಚಲು, ಹಾಗೆಯೇ ಮಲೆನಾಡಿನ ದೊಡ್ಡವರ ಪ್ರೇಮಕಥೆ ಮುಕುಂದಯ್ಯ-ಚೆನ್ನಮ್ಮ ಪ್ರೇಮಕಥೆ ಇದರಲ್ಲಿ ಸಾಹಸಮಯ ಪ್ರೇಮಕಥನ ಅಂದ್ರೆ ಗುತ್ತಿ ಮತ್ತು ತಿಮ್ಮಿಯರದ್ದು ಹೊಲೆಯರಾದ ಗುತ್ತಿ ತನ್ನ ಅತ್ತೆಯ ಮಗಳನ್ನ ಪ್ರೇಮಿಸಿ ಅವಳನ್ನ ಸಂಧಿಸಿ, ಅಪಹರಿಸಿ ಹೇಗೋ ಮದುವೆಯಾಗಿ ಮತ್ತೇ ತನ್ನ ಹೆಂಡತಿಯಿಂದ ದೂರ ಆಗಿ ಈ ಗೌಡರ, ಪೊಲೀಸರ ಹೆದರಿಕೆಯ ಮದ್ಯೆ ಊರನ್ನೇ ಬಿಟ್ಟು ದೇಶಾಂತರ ಹೋಗುವ ಇವನ ಜೀವನದ ಬದುಕು ಅಷ್ಟೇ ಸಾಹಸವು ಸ್ವಾರಸ್ಯಕರವು ಹೌದು ಇಲ್ಲಿ ಗುತ್ತಿಯ ಮನೋಬಲ ಹಾಗೇ ಅವರ ನಿಜವಾದ ಪ್ರೇಮ ಬದುಕನ್ನ ಎಲ್ಲೆಲ್ಲೋ ಕರೆದುಕ್ಕೊಂಡು ಹೋಗಿ ಎಲ್ಲ ಸವಾಲುಗಳನ್ನು ಎದುರಿಸುವ ಇವರ ಜೋಡಿ ಕೊನೆಗೆ ಒಂದಾಗಿ ತಮ್ಮ ಬದುಕಿಗಾಗಿ ಊರನ್ನೇ ಬಿಡುವ ಹಾಗೇ ಆಗುತ್ತೆ ಇನ್ನಾ ಐತಾ ಮತ್ತು ಪೀಂಚಲು ದಂಪತಿಯ ಪ್ರೇಮಕಥೆ ಗಂಡ-ಹೆಂಡತಿಯ ಇರಬೇಕಾದ ಮುಗ್ದತೆ, ಸರಸ-ವಿರಸ ಓದುಗುರನ್ನ ಸೆಳೆಯುತ್ತೆ, ಗಂಡನ ಅನುಮಾನ ಮುನಿದ ಗಂಡನನ್ನ ಸಮಾಜಯಿಸುವ ಹೆಂಡತಿಯ ಜಾಣತನ ಇವರಿಬ್ಬರ ಜೋಡಿಯಲ್ಲಿ ಚೆನ್ನಾಗಿ ಮೂಡಿ ಬಂದಿದೆ ಹಾಗೆಯೇ ಸ್ವಾಮಿ ಭಕ್ತಿ ಕೂಡ ಈ ದಂಪತಿ ಪಾತ್ರದಲ್ಲಿ ಕಂಡು ಬರುತ್ತೆ ಇನ್ನಾ ಮುಕುಂದಯ್ಯ-ಚೆನ್ನಮ್ಮ ಪ್ರೇಮಕಥೆ ಇಲ್ಲಿ ಹೆಣ್ಣಿನ ದಿಟ್ಟತನ ಹಾಗೂ ಗಂಡು ತನ್ನ ಪ್ರೇಮವನ್ನ ಉಳಿಸಿಕೊಳ್ಳಲು ಮಾಡಬೇಕಾದ ಸಾಹಸ ಎಲ್ಲಾ ಸಮ್ಮಿಳಿತವಾಗಿದೆ, ಚಿಕ್ಕಂದಿನಿಂದ ಇರೋ ಪ್ರೇಮಕಥೆ ಅದೂ ಇಲ್ಲದೆ ಹಿಂದಿನ ಜನುಮದ ನಂಟು ಇರೋ ಜೋಡಿ (ಏಳೇಳು ಜನ್ಮದ ನಂಟು) ಪ್ರೀತಿ ಅಜ್ಜಿಯನ್ನ ಮನೆಯವರನ್ನ ಬಿಟ್ಟು ಬರೋ ಚಿನ್ನಕ್ಕ ಕಾಡಿನ ದಾರಿಯಲ್ಲಿ ನಡೆದು ಹುಲಿಕಲ್ ನೆತ್ತಿ ಹತ್ತಿ ತನ್ನ ಭಾವನ ಕೈ ಹಿಡಿಯುವ ಆಸೆ ತನ್ನವರ ಬಿಟ್ಟು ಬಂದೇ ಅನ್ನೋ ಹೆಣ್ಣಿನ ಸಹಜ ನೋವು ಚೆನ್ನಮ್ಮನ ಪಾತ್ರದಲ್ಲಿ ಅನಾವರಣ ಆಗುತ್ತೆ, ತಾನು ಪ್ರೀತಿಸಿದ ಹುಡುಗಿಯ ಕೈ ಹಿಡಿಯಲು ಎದುರಾಗುವ ಸವಾಲುಗಳನ್ನು ಎದುರಿಸಲು ಏನೇನೋ ತಂತ್ರ, ಸಾಹಸ ಮಾಡಿ ಮುಕುಂದಯ್ಯ ಕೊನೆಗೆ ತಾನು ಬಯಸಿದ್ದನ್ನೇ ದಕ್ಕಿಸಿಕೊಳ್ಳುವ ಅವನ ದೃಢ ಸಂಕಲ್ಪ ಇಷ್ಟ ಆಗುತ್ತೆ ಮನುಷ್ಯ-ಮನುಷ್ಯರ ನಡುವಿನ ಪ್ರೀತಿ ಅಷ್ಟೇ ಅಲ್ಲದೆ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಬಂಧ, ಪ್ರೀತಿ ತ್ಯಾಗ ಗುತ್ತಿ ಮತ್ತು ಹುಲಿಯ(ನಾಯಿ) ಓದುಗರನ್ನ ಕಾಡುತ್ತೆ ಕಾಮದಿಂದ ಆಚೆಗೆ ಪ್ರೀತಿಯನ್ನ ಗೆಲ್ಲುವ ಸನ್ನಿವೇಶಗಳು ಒಂದು ಕಡೆ ಆಗರೆ ಆ ಕಾಮದಾಸೆಗೆ ಬಲಿ ಆಗೋ ಕಾವೇರಿಯ ದುರಂತ ಕಥೆ ಇನ್ನೊಂದು ಕಡೆ, ಕಾವೇರಿಯ ಮೇಲೆ ನಡೆಯುವ ಅತ್ಯಾಚಾರ ಇತ್ತೀಚಿನ ದೇಶದ ಪರಿಸ್ಥಿತಿ ಹಿಡಿದ ಕೈಗನ್ನಡಿ ಅನ್ನೋ ಹಾಗೇ ಇದೆ ಅಂದಿನ ಆ ಕಾವೇರಿಯ ಕಣ್ಣೀರಿನ ಕಥೆ…. ಈಗಲೂ ಕೂಡ ಅಂತಹ ದುಷ್ಟ ಚಿಂಕ್ರ-ಸಾಬೀಗಳ ಜನರು ನಮ್ಮ ನಡುವೆ ಇಬ್ಬರೇ ಅನ್ನೋದೇ ಶೋಚನೀಯ….! ಇನ್ನೂ ನಾಗಕ್ಕನ ಪಾತ್ರ ಸ್ವಲ್ಪ ಹತ್ತಿರ ಆಯ್ತು ಯಾಕಂದ್ರೆ ತನ್ನದು ಏನೇ ದುರಂತ ಕಥೆ ಇದ್ರೂ ತನ್ನ ಬದುಕೇ ಮುಳ್ಳಿನ ಮೇಲಿನ ನಡೆಯಾಗಿದ್ರು ಇನ್ನೊಬ್ಬರ ಅಂದ್ರೆ ಚಿನ್ನಮ್ಮನ ನಲಿವಿನಲ್ಲೇ ತನ್ನ ನೋವ ಮರೆತು ಅವಳಿಗಾಗಿ ಪಡಿಸೋ ಅವಳ ಮನಸುಇಷ್ಟ ಆಗುತ್ತೆ ಈ ಕಾದಂಬರಿ ಒಳಗೆ ನೋವು-ನಲಿವು, ಮದುವೆ-ಸಾವು, ಪ್ರೀತಿ-ಫಜೀತಿ, ಹಣ-ದರ್ಪ-ಅಧಿಕಾರ-ಮೋಹ, ಆಶ್ಚರ್ಯ-ಭವಿಷ್ಯ-ಶಿಕ್ಷಣ ಹೀಗೆ ಅನೇಕ ಮಜಲುಗಳಿಂದ ಕೂಡಿದೆ……. ಯಾವುದು ಮುಖ್ಯ ಅಲ್ಲ, ಅಮುಖ್ಯ ಅಲ್ಲ ಅನ್ನೋ ಹಾಗೆ ಎಷ್ಟೋ ವಿಷಯಗಳಿವೆ ಹೇಳಲು ಆದರೂ ನನಗೆ ಓದಿದ ಅನುಭವ ನನ್ನ ಗ್ರಹಿಕೆಯೇ ಬಂದ ಅಂಶಗಳು ಇದರಲ್ಲಿವೆ ಧನ್ಯವಾದಗಳು ಸಂಗಾತಿ ಪತ್ರಿಕೆಗೆ ಮತ್ತು ಸಂಪಾದಕರಿಗೆ ನಾನು ಓದಿದ್ದನ್ನ ನೆನೆದು ಬರೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ….. ******************** ಮದನ್ ಕುಮಾರ್

ನಾನು ಓದಿದ ಕಾದಂಬರಿ Read Post »

ಪುಸ್ತಕ ಸಂಗಾತಿ

ನಾನು ಓದಿದ ಕಾದಂಬರಿ

ತುಂಗಭದ್ರ ಶ್ರೀಮತಿ ಎಂ.ಕೆ.ಇಂದಿರಾ ಮನುಷ್ಯನಿಗೆ ಯಾವ ದುಃಖವೂ ಶಾಶ್ವತವಲ್ಲ! ಆಘಾತ ಸಿಡಿಲಿನಂತೆರಗಿದಾಗ ಅದನ್ನ ತಡೆದುಕೊಳ್ಳುವ ಶಕ್ತಿ ಒಬ್ಬೊಬ್ಬರಿಗೆ ಒಂದೊಂದು ರೀತಿ! ಅದು ಪ್ರತಿಯೊಬ್ಬರಿಗೂ ಅವರ ಮನೋಬಲದ ಮೇಲೆ ಅವಲಂಬಿತವಾಗಿರುತ್ತೆ! ಅದೇ ರೀತಿ ಸುಖವನ್ನ ಕೂಡ ಸ್ವೀಕರಿಸೋದು ಅಷ್ಟು ಸುಲಭವಲ್ಲ. ಎಲ್ಲವೂ ಮನೋಭಿಲಾಷೆಯಂತೆಯೇ ಇಡೇರಿ ಸಕಲ ಸಿರಿ ಸಂಪತ್ತು ದೊರೆತಾಗ ಸ್ಥಿತಪ್ರಜ್ಞೆಯಿಂದ ಸ್ವೀಕರಿಸೋದು, ಚಿತ್ತ ತಣ್ಣಗಿರಿಸೋದು ಅಷ್ಟು ಸುಲಭವಲ್ಲ! ಕಷ್ಟ ಬಂದಾಗ, ಪ್ರಕೃತಿ ವೈಪರಿತ್ಯಗಳಿಂದಾಗಿ ಜೀವನವೇ ಡೋಲಾಯಮಾನವಾದಾಗ ಅದನ್ನ ಸ್ವೀಕರಿಸುವುದು ಹೇಳಿದಷ್ಟು ಸುಲಭವಂತೂ ಅಲ್ಲ! ಆದರೆ ಜರುಗುವ ಕೆಲ ಘಟನೆಗಳಿಗೆ ಮನಸ್ಸು ತೆರೆದುಕೊಂಡರೆ ಮತ್ತೆ ಜೀವನ ಹಸನಾಗಬಹುದು. ಕವಿದ ಕಾರ್ಮೋಡಗಳು ಸರಿದು ಶುಭ್ರ ನಿಲಾಗಸದಂತಾಗಬಹುದು ಜೀವನ. ಕಷ್ಟಕಾಲದಲ್ಲಿ ರವಷ್ಟು ಸಹನೆಯೇ ದೊಡ್ಡ ಕುತ್ತಿನಿಂದ ಪಾರುಮಾಡಬಹುದು. ಹಾಗೆಯೇ ಪ್ರೀತಿಸುವ ಸ್ನೇಹಿತರು – ಕುಟುಂಬವಿದ್ದರೆ ಎಂತಹುದೇ ಕಷ್ಟದ ಸಮಯದಲ್ಲೂ ಜೀವ ಉಳಿದು, ಅದು ಪುನರ್ಜನ್ಮವಾದೀತು! ಇದಷ್ಟು ಅನಿಸಿದ್ದು, ೧೯೬೩ರಲ್ಲೇ ಬರೆದ ಪುಸ್ತಕ “ತುಂಗಭದ್ರ”, ಕನ್ನಡದ ಖ್ಯಾತ ಲೇಖಕಿ ಶ್ರೀಮತಿ ಎಂ.ಕೆ.ಇಂದಿರಾ ಅವರ ಮೊದಲ ಕಾದಂಬರಿಯನ್ನ ಓದಿದಾಗ! ಅಚನಕ್ಕಾಗಿ ಈ ಕಾದಂಬರಿ ಹಿಂದಿನ ಕಥೆಯನ್ನ ಯಾವುದೋ ಜಾಲತಾಣದಲ್ಲಿ ಓದಿದಾಗ ರೋಮಾಂಚನವೆನಿಸಿತು! ಪ್ರಕಾಶಕರು ಹಸ್ತಪ್ರತಿಯನ್ನು ಇಟ್ಪ ಬ್ಯಾಗು ಮುಂಬಯಿಯ ಮಾಯಾನಗರಿಯಲ್ಲಿ ಕಳೆದು ಬಹಳಷ್ಟು ಹಳಹಳಿಸುವಂತಾದಾಗ, ಬೇರೆ ಯಾವುದೇ ರೀತಿಯ ಪ್ರತಿಗಳು ಇಲ್ಲದೆ, ಪ್ರತಿ ಮಾಡಲೂ ಯಾವುದೇ ಅನುಕೂಲವಿಲ್ಲದಂತಹ ಕಾಲಘಟ್ಟದಲ್ಲಿ ಇಂದಿರಾರವರು ಎದೆಗುಂದದೆ ಕೇವಲ 15 ದಿನಗಳಲ್ಲಿ ಪುನಃ ಸಂಪೂರ್ಣ ಕಾದಂಬರಿಯನ್ನ ಬರೆದು ಕೊಡುತ್ತಾರೆ. ಪ್ರಕಟಣೆಯಾಗುತ್ತಿದ್ದಂತೆ ಅಪಾರ ಮೆಚ್ಚುಗೆ ಪಡೆಯುತ್ತೆ. ತಕ್ಷಣವೇ ತಡ ಮಾಡದೆ ಅಮೇಜಾನ್ ನಲ್ಲಿ ಖರೀದಿಸಿ ಒಂದೇ ಏಟಿಗೆ ಇಡೀ ರಾತ್ರಿ ಓದಿ ಮುಗಿಸಿದೆ! ಕೃಷ್ಣ ವೇಣಿ, ಮುದ್ದುರಾಮ, ರಾಘು, ತುಂಗಾ-ಭದ್ರ ರೆಂಬ ಹುಟ್ಟು ಕುರುಡು ಅವಳಿಗಳು, ಶಂಭು, ಭಾಗಮ್ಮ, ಮಂದಾ, ದುಗ್ಗಾಭಟ್ಟರು, ನಾಗಾಭಟ್ಟರು, ಮೂಕಮ್ಮ, ಮಧುರಾ, ಶೇಷಾಚಾರರು, ತುಳಸಿ, ರಾಘುವಿನ ಅತ್ತೆ.. ಹೀಗೇ ಎಲ್ಲಾ ಪಾತ್ರಗಳೂ ಮನದಲ್ಲಿ ಅಚ್ಚಳಿಯದಂತಿವೆ!… ಸಂಬಂಧಗಳು, ಪ್ರೀತಿ ಇವೆಲ್ಲವೂ ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲು! ನಾಗಾಲೋಟದಲ್ಲೋಡುವ ಕಾಲಘಟ್ಟದಲ್ಲಿರುವ ನಮಗೆ ಈ ಕಾದಂಬರಿ ಓದಿದಾಗ ಇವರಿಗೆಲ್ಲ ಜೀವನವನ್ನ ನಿಧಾನಗತಿಯಲ್ಲಿ ಅನುಭವಿಸೋ ತಾಳ್ಮೆ ಅದೆಷ್ಟಿದ್ದೀತು ಅನ್ನಿಸದಿರಲಾರದು! 60ರ ದಶಕದಲ್ಲಿ ಬರೆದ ಕಾದಂಬರಿ. ಓದಿಸಿಕೊಂಡು ಹೋಗುತ್ತೆಯೇ ಅನ್ನುವುದೇ ನನ್ನ ಅನುಮಾನವಾಗಿತ್ತು. ಅದರೆ ಆದು ಯಾವ ಕಾಲಘಟ್ಟದಲ್ಲಿಯಾದರೂ ಓದಿಸಿಕೊಳ್ಳುವಂತಹದು ಎಂದು ಓದಿ ಮುಗಿಸುವಾಗ ಕಣ್ಣಂಚಿನ ತೇವ ಸಾಬೀತು ಪಡಿಸಿತು! ಹೆಣ್ಣಿಗೆ ಶಿಕ್ಷಣದ ಅಗತ್ಯವೇ ಇಲ್ಲವೆಂದುಕೊಂಡಿದ್ದ ಕಾಲಮಾನದಲ್ಲಿ, ಮಲೆನಾಡಿನ ಹಳ್ಳಿಗಾಡಿನ ಜೀವನ, ಅಲ್ಲಿನ ಪರಿಸರ, ಹೆಣ್ಣು-ಗಂಡಿನ ತುಮುಲಗಳು, ಆಗಿನ ಮೂಢತೆ ಮತ್ತು ಪ್ರಕೃತಿಯ ಚೆಲುವು ಕಣ್ಣಿಗೆ ಕಟ್ಪುವಂತೆ ಬರೆದಿದ್ದಾರೆ ಶ್ರೀಮತಿ ಇಂದಿರಾರವರು. ಖಂಡಿತವಾಗಿಯೂ ಓದಲೇಬೇಕಾದಂತಹ ಕಾದಂಬರಿ! “ಓಲ್ಡ್ ಇಸ್ ಗೋಲ್ಡ್” ಅನ್ನುವಂತಹ ಕೃತಿಯಿದು! ***************************** ಚೈತ್ರಾ ಶಿವಯೋಗಿಮಠ

ನಾನು ಓದಿದ ಕಾದಂಬರಿ Read Post »

ಪುಸ್ತಕ ಸಂಗಾತಿ

ನಾನು ಓದಿದ ಕಾದಂಬರಿ

ಹರಿಚಿತ್ತ ಸತ್ಯ ವಸುಧೇಂದ್ರ ಹರಿಚಿತ್ತ ಸತ್ಯ ವಸುಧೇಂದ್ರ ಅವರ ಮೊದಲ ಕಾದಂಬರಿ. ಅದರ ಮುದ್ರಣ ಪ್ರತಿ ಲಭ್ಯವಿಲ್ಲದೇ ಓದಲಾಗಿರಲಿಲ್ಲ. ಈ ದುರಿತ ಕಾಲದಲ್ಲಿ ರಿಯಾಯಿತಿ ದರದಲ್ಲಿ ಈ ಕೃತಿ ಲಭ್ಯವಿದೆ. ಸರಳ, ಸುಂದರವಾದ ಸಾಮಾಜಿಕ ಕಾದಂಬರಿಯಿದು. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆಯ ಸಮೃದ್ಧ ಚಿತ್ರಣ ಈ ಕೃತಿಯಲ್ಲಿದೆ. ದಿ. ಸುಬ್ಬರಾಯರು ಮತ್ತು ರಂಗಮ್ಮನವರ ಏಕಮಾತ್ರ ಪುತ್ರಿ ಪದ್ದಿ. ಪದ್ದಿ ಸ್ವಲ್ಪ ಚೆಲ್ಲು ಸ್ವಭಾವದವಳು. ಅವಳನ್ನು ಬಳ್ಳಾರಿಯಿಂದ ಸಂಡೂರಿಗೆ, ವರನಾದ ರಾಘವೇಂದ್ರನಿಗೆ ತೋರಿಸಲು ಹೊರಟಿರುವ ಸನ್ನಿವೇಶದಿಂದ ಕತೆ ಆರಂಭವಾಗುತ್ತದೆ. ವಕೀಲ ಬಿಂಧುಮಾದವರು ವಿಧವೆ ರಂಗಮ್ಮನವರ ಕುಟುಂಬಕ್ಕೆ ಆಶ್ರಯವಾಗಲು ಕಾರಣವಾಗುವ ಸನ್ನಿವೇಶ ತಮಾಶೆಯಾಗಿದೆ. ಆಚಾರ್ಯನಾಗಿ ಸಾಧನೆ ಮಾಡುವ ಕರಿಹನುಮನ ಹಿನ್ನೆಲೆ, ರಂಗಮ್ಮನವರೊಂದಿಗೆ ಆತ್ಮೀಯತೆ, ಪದ್ದಿಯ ಜಾತಕ ತೋರಿಸಿದಾಗ ಅವರು ಹೇಳುವ ಭವಿಷ್ಯ ಕಾದಂಬರಿಯಲ್ಲಿ ಕೊನೆಯಲ್ಲಿ ನಿಜವಾಗುವುದು ಕುತೂಹಲಕಾರಿಯಾಗಿದೆ. ಎಲ್ಲೆಂದರಲ್ಲಿ ನಿದ್ದೆ ಮಾಡುವ ಶ್ರೀಪತಿ ಹನುಮಂತನ ಪ್ರತಿರೂಪವಾದ ಕೋತಿಗಳಿಗೆ ಕೈಮುಗಿಯುವ ಮನುಷ್ಯ. ಅವನ ಹೆಂಡತಿ ಸುಭದ್ರಮ್ಮನ ಗೋಟಾವಳಿ ನಗೆ ತರಿಸುತ್ತಿದೆ. ಪದ್ಮಾವತಿ ಮತ್ತು ಅವಳ ಗೆಳತಿ ಪಂಕಜಳ ಸ್ನೇಹ, ಅವರ ಸಾಹಸಗಳು ಕಚಗುಳಿಯಿಡುತ್ತವೆ. ಪಂಕಜಳ ದುಬಾಯಿ ಗಂಡ ವಿಮಾನ ಯಾನದಲ್ಲಿ ಭಸ್ಮವಾಗಿದ್ದು ಕಾಡುತ್ತದೆ . ಮೋಟಾರು ರಾಮರಾಯರು, ವನಮಾಲಾಬಾಯಿ ಮತ್ತು ರಾಘವೇಂದ್ರನ ಪಾತ್ರಗಳು ಸಶಕ್ತವಾಗಿ ಮೂಡಿಬಂದಿವೆ. ವಧು ಪರೀಕ್ಷೆ ಮಾಡುವ ಗುಡೇಕೋಟಿ ಗೋವಿಂದಾಚಾರ್ಯ ಮನಸೆಳೆಯುತ್ತಾರೆ. ರಾಘುವನ್ನು ಪದ್ದಿಯೇ ತಿರಸ್ಕರಿಸಲು ಇರುವ ಕಾರಣ ಪದ್ದಿಯ ಗುಣಧರ್ಮವನ್ನು ಸರಿಯಾಗಿ ಬಿಂಬಿಸುತ್ತದೆ. ಮುಂದೆ ರಾಘು ರಾಮಸಾಗರದ ಸುಧಾಳ ಜೊತೆ ಮದುವೆಯಾಗುತ್ತಾನೆ. ಪ್ರತಿಭಾ, ಪ್ರಮೀಳಾ ಮತ್ತು ಪ್ರಕಾಶನ ಜನನ ಮತ್ತು ಪ್ರಕಾಶನ ಅಂಧತ್ವ ಗೊತ್ತಾದಾಗ ನಮಗೂ ಸಂಕಟವಾಗುತ್ತದೆ. ಆದರೆ ಪ್ರಕಾಶನ ಚುರುಕುತನ ಅದನ್ನು ಮರೆಸುತ್ತದೆ. ಸಿರೇಕೊಳ್ಳದ ಆಚಾರ್ಯರು ಮತ್ತು ಅವರು ಸೂಚಿಸುವ ಡಾ. ಥಾಮಸ್ ರಿಂದ ಪದ್ದಿಯ ಮನೋರೋಗ ವಾಸಿಯಾಗುತ್ತದೆ.ಆನೆಗೊಂದಿ ದ್ವೀಪದ ನವವೃಂದಾವನದಲ್ಲಿ ಒಂದು ದುರಂತ ಅಂತ್ಯದೊಂದಿಗೆ ಕಾದಂಬರಿ ಮುಗಿಯುತ್ತದೆ. ಉಪಸಂಹಾರದಲ್ಲಿ ನಾವು ಊಹಿಸಿದ ತಿರುವಿನೊಂದಿಗೆ ಕತೆ ಅಂತ್ಯಗೊಳ್ಳುತ್ತದೆ. ಹರಿಚಿತ್ತ ಸತ್ಯ, ಹಲವು ಕಥಾಸಂಕಲನಗಳನ್ನು ಓದಿ ಅನಂತರ ವಸುಧೇಂದ್ರರ ತೇಜೋ ತುಂಗಭದ್ರಾ ಕಾದಂಬರಿ ಓದಿದರೆ ಅವರ ಸಾಹಿತ್ಯದ ಹಾದಿಯ ಅರಿವು ನಮಗಾಗಬಹುದು. ಒಮ್ಮೆ ಓದಬೇಕಾದ ಕೃತಿಯಿದು. ** ಅಜಿತ್ ಹರೀಶಿ ಡಾ.ಅಜಿತ್ ಹರೀಶಿ

ನಾನು ಓದಿದ ಕಾದಂಬರಿ Read Post »

ಪುಸ್ತಕ ಸಂಗಾತಿ

ನಾನು ಓದಿದ ಕಾದಂಬರಿ

ಅಶ್ವತ್ಥಾಮನ್ ಜೋಗಿ ನನ್ನ ಪ್ರಕಾರ ಒಂದು ಬರವಣಿಗೆ ಅಥವಾ ಪುಸ್ತಕ “ಚೆನ್ನಾಗಿದೆ” ಎನ್ನುವುದಕ್ಕೆ ಬರವಣಿಗೆಯ ಪ್ರಪಂಚದಲ್ಲಿ ಕ್ರಾಂತಿಯನ್ನು ಉಂಟುಮಾಡುವಂತಹ ಅಥವಾ ಇತಿಹಾಸವನ್ನು ಸೃಷ್ಟಿ ಮಾಡುವಂತಹ ಯಾವುದೋ ಕಾರಣದ ಅಗತ್ಯವಿಲ್ಲ. ನಾವು ದಿನಸಿ ಅಂಗಡಿಯಲ್ಲೋ, ತರಕಾರಿ ಕೊಳ್ಳುವಾಗಲೋ ಅಪರೂಪಕ್ಕೆ ಎದುರಾಗುವ ಮುಖವೊಂದು ಅಥವಾ ಬಿಡುವಾದಾಗ ನಮ್ಮನ್ನ ನಾವು ವಿಮರ್ಶಿಸಿಕೊಂಡಾಗ ಸಿಗುವ ಪಾತ್ರವೊಂದು ಕತೆಯೋ ಕಾದಂಬರಿಯೋ ಆಗಿ ನಮ್ಮೆದುರು ನಿಂತಾಗ ಸಿಗುವ ಸಣ್ಣದೊಂದು ಆಶ್ಚರ್ಯಚಕಿತ ಸಂತೋಷವಿದೆಯಲ್ಲ ಅದು ಒಂದು ಓದಿಗೆ ಸಿಗಬೇಕಾದ ಸಕಲ ಸಮಾಧಾನವನ್ನೂ ಒದಗಿಸಬಲ್ಲದು. ಅಂತಹ ಪುಸ್ತಕಗಳಲ್ಲೊಂದು ಜೋಗಿಯವರ ಕಾದಂಬರಿ “ಅಶ್ವತ್ಥಾಮನ್”. ಕಾದಂಬರಿಯ ಹೆಸರೇ ಹೇಳುವಂತೆ ಮೇಲ್ನೋಟಕ್ಕೆ ಇದೊಂದು ವ್ಯಕ್ತೀಕೇಂದ್ರಿತ ಕೃತಿ. ಅಶ್ವತ್ಥಾಮ ಎಂಬ ಜಿಗಟು ವ್ಯಕ್ತಿತ್ವವೊಂದು ಅಶ್ವತ್ಥಾಮನ್ ಎಂಬ ಹೆಸರಿನ ಜನಪ್ರಿಯ ನಟನಾಗಿ, ನಟನೆಯನ್ನೂ ಜನಪ್ರಿಯತೆಯನ್ನೂ ಅಹಂಕಾರವನ್ನಾಗಿಸಿಕೊಂಡು, ಅಹಂಕಾರವನ್ನೇ ಶಕ್ತಿಯಾಗಿಸಿಕೊಂಡು ಬದುಕುವ ಪಾತ್ರ ನಮಗೇ ಅರಿವಿಲ್ಲದಂತೆ ನಮ್ಮದಾಗುತ್ತ ಹೋಗುವುದು ಈ ಕೃತಿಯ ಅಹಂಕಾರ. ಈ ಪಾತ್ರವನ್ನು ಪೋಷಿಸಲೂ ಆಗದೇ, ದ್ವೇಷಿಸಲೂ ಆಗದೇ, ಕೊನೆಗೆ ನಮ್ಮೊಳಗೆಲ್ಲೋ ಅಡಗಿ ಕುಳಿತಿರುವ ಅಶ್ವತ್ಥಾಮನನ್ನು ಕಾದಂಬರಿಯುದ್ದಕ್ಕೂ ಅನುಭವಿಸುತ್ತ ಹೋಗುತ್ತೇವೆ. ಪಾರ್ಶ್ವವಾಯುವಿಗೆ ಬಲಿಯಾದ ಅಶ್ವತ್ಥಾಮನ್ ತನ್ನ ಆತ್ಮಚರಿತ್ರೆ ಬರೆಸಬೇಕೆಂಬ ಆಶಯದಲ್ಲಿ ಕೊಂಚ ಸಿನಿಮೀಯವಾಗಿ ಆರಂಭವಾಗುವ ಈ ಕಾದಂಬರಿ, “ಎದುರಾಳಿ ಸೋತ ಮೇಲೆ ನಾನು ಯಾರ ಜೊತೆಗೆ ಆಡಲಿ, ನನ್ನ ಆಟ ಮುಗಿಯಿತು” ಎನ್ನುವ ಮಾತಿನಿಂದ ಅಲ್ಲೊಂದು ತಾತ್ವಿಕ ವಾತಾವರಣವನ್ನು ಸೃಷ್ಟಿ ಮಾಡಿ, ಓದುಗ ಅಶ್ವತ್ಥಾಮನೊಂದಿಗೆ ಮುಖಾಮುಖಿಯಾಗತೊಡಗುತ್ತಾನೆ. ಎದುರಾಗುವ ಪಾತ್ರಗಳಲ್ಲಿ, ದೃಶ್ಯಗಳಲ್ಲಿ ಅಶ್ವತ್ಥಾಮನಿದ್ದಾನೋ, ಅಶ್ವತ್ಥಾಮನ್ ಇರುತ್ತಾನೋ ಅಥವಾ ನಮ್ಮೊಳಗಿರುವ ನಾವು ಒಬ್ಬರಿಗೊಬ್ಬರು ಎದುರಾಗಿ ಕಣ್ಣು ತಪ್ಪಿಸುತ್ತೇವೋ ಎನ್ನುವುದು ನಮ್ಮ ಅನುಭವಕ್ಕೆ ಮಾತ್ರ ದಕ್ಕುವ ವಿಷಯ. “ಮಾತು” ಇಲ್ಲಿ ಕೇವಲ ಮಾತಾಗದೇ, ಕಳೆದುಹೋಗದೇ ಅನುಭಾವವಾಗಿ ಜೀವ ತಳೆದಿದೆ; ಸರಳವಾಗಿ, ಕೆಲವೊಮ್ಮೆ ಸಿನಿಮೀಯವಾಗಿ ತಾತ್ವಿಕವಾದ ನೆಲೆಗಟ್ಟಿನಲ್ಲಿ “ಕಾಲ”ವನ್ನು ಕಟ್ಟಿಕೊಟ್ಟಿದೆ. ಅಶ್ವತ್ಥಾಮನ ಪಾತ್ರ ಅನಾವರಣಗೊಳ್ಳುತ್ತ ಹೋಗುವುದು ಅವನ ಅಹಂಕಾರವನ್ನು ಜೀವಂತವಾಗಿರಿಸುವ ಹೆಣ್ಣುಪಾತ್ರಗಳ ಮೂಲಕ. ದೀಪಾವಳಿಯ ದಿನ ಎಣ್ಣೆ ಹಚ್ಚಲು ಬಂದ ಸುಲೋಚನಾ ತನ್ನನ್ನು ಸಾಯಿಸಲೇ ಬಂದವಳೆಂದು ಕಣ್ಣುಮುಚ್ಚಿ, ಹಸಿದ ಗಂಡಸಿನ ಪಾತ್ರವನ್ನು ಎಷ್ಟು ಚೆನ್ನಾಗಿ ನಟಿಸಿದೆ ಎನ್ನುವ ನಟ, ನಮ್ಮ ಕಣ್ಣೆದುರಿಗೊಂದು ಹೊಸ ಪ್ರಪಂಚವನ್ನು ತೆರೆದಿಡುವಲ್ಲಿ ಯಶಸ್ವಿಯಾಗುತ್ತಾನೆ. ಪ್ರತೀ ಕ್ಷಣದ ಬದುಕು ಒಂದಿಲ್ಲೊಂದು ಬಗೆಯ ನಟನೆಯೇ ಆದಾಗ, ಕಣ್ಣುಮುಚ್ಚಿ ನಾವು ನಾವಾಗಿ ನಟಿಸುವುದು ಸರಳವೆನ್ನುವಂಥ ವಿಲಕ್ಷಣ ಸತ್ಯಗಳೆಲ್ಲ ನಮ್ಮ ಸೈದ್ಧಾಂತಿಕ ನಿಲುವುಗಳನ್ನು ಪ್ರಶ್ನಿಸದೇ ಬಿಡುವುದಿಲ್ಲ. ಮೊದಲನೇ ಹೆಂಡತಿ ಶುಭಾಂಗಿನಿ ತನ್ನ ಪಾಲಿನ ದೇವತೆ ಎಂದು ಗೌರವಿಸುವ ಅಶ್ವತ್ಥಾಮ, ಎರಡನೇ ಹೆಂಡತಿ ಸರೋಜಿನಿ ತನ್ನನ್ನು ಪಳಗಿಸಲು ಯತ್ನಿಸುತ್ತಿದ್ದಾಳೆ ಎನ್ನುವ ಕಾರಣಕ್ಕೆ ಬಿಡುಗಡೆ ಬಯಸಿ, ದಾಂಪತ್ಯದ ನೀತಿ ನಿಲುವುಗಳನ್ನೇ ಇಕ್ಕಟ್ಟಿಗೆ ಸಿಲುಕಿಸುವ ಹುಚ್ಚು ಮನಸ್ಥಿತಿಯಂತೆ ಭಾಸವಾಗಿಯೂ ಪರಿಹಾರವಿಲ್ಲದ ಗೊಂದಲದಂತೆ ಮನಸ್ಸಲ್ಲಿ ಉಳಿದುಬಿಡುತ್ತಾನೆ. “ನಿಜವಾದ ನೋವು ಕೊಡುವುದಕ್ಕೂ ಶಕ್ತಿ ಬೇಕು; ನನ್ನಲ್ಲಿ ನೋವಿಲ್ಲದೇ ಹೋದರೆ ನಾನು ಮತ್ತೊಬ್ಬರಿಗೆ ಎಲ್ಲಿಂದ ಕೊಡ್ಲೊ” ಎನ್ನುವಂತಹ ಅಸಹಜ ಮಾತುಗಳು ಸತ್ಯಾಸತ್ಯತೆಯ ವಿಮರ್ಶೆಗಳನ್ನೆಲ್ಲ ಮೀರಿ ನೆನಪಲ್ಲಿ ಉಳಿದುಕೊಳ್ಳುತ್ತವೆ. “ನಾನು ಅವಳಿಂದ ಬಿಡಿಸಿಕೊಳ್ಳಲು ಹವಣಿಸಲಿಲ್ಲ, ಅವಳಾಗಿಯೇ ನನ್ನಿಂದ ದೂರ ಹೋಗುವಂತೆ ಮಾಡುವ ಉಪಾಯಗಳನ್ನು ಹುಡುಕುತ್ತಿದ್ದೆ” ಎಂದು ಮೂರನೇ ಹೆಂಡತಿಯಿಂದಲೂ ಬಿಡುಗಡೆಗೆ ತವಕಿಸುವ ಅಶ್ವತ್ಥಾಮ ವಿಕೃತ ಮನಸ್ಸಿನ ಪ್ರತಿರೂಪವಾಗಿ ಹೊರನೋಟಕ್ಕೆ ಭಾಸವಾದರೂ , ನಟಿಸುತ್ತಲೇ ನೈಜವಾಗುವ ಅಸಹಾಯಕ ಅಲೆದಾಟದ ಮನುಷ್ಯನ ಸಹಜ ಮನಸ್ಥಿತಿಯ ತಲ್ಲಣಗಳಾಗಿ ನಮ್ಮೊಳಗೊಂದಾಗುತ್ತಾನೆ. “ದುರದೃಷ್ಟವಶಾತ್ ನನ್ನ ಸ್ಥಾಯೀಭಾವ ನಟನೆ” ಎನ್ನುವಂತಹ ಹೇಳಿಕೆಗಳು ಕೇವಲ ಹೇಳಿಕೆಗಳಾಗದೇ, ಓದುಗನೊಬ್ಬನ ಹಳವಳಿಕೆಗಳನ್ನು ಬರೆಯುವವ ಹೇಳುತ್ತಾ ಹೋದಂತೆ ಎದೆಗಿಳಿಯುತ್ತವೆ. ಪಾತ್ರಗಳ ಸೃಷ್ಟಿಯ ಜೊತೆಗೆ ಭಾಷಪ್ರಯೋಗ ಮತ್ತು ನಿರೂಪಣಾ ವಿಧಾನವೂ ಕೂಡಾ ಈ ಕೃತಿಯನ್ನು ಸುಂದರವಾಗಿಸಿರುವುದರಲ್ಲಿ ಸಂಶಯವಿಲ್ಲ. ಯಾವುದೇ ಆಡಂಬರವಿಲ್ಲದ, ಅನಗತ್ಯ ಅಲಂಕಾರಗಳಿಲ್ಲದ ಶಬ್ದಗಳ ಬಳಕೆ ಹಾಗೂ ಪಾತ್ರಕ್ಕೆ ತಕ್ಕ ಭಾಷಾಪ್ರಯೋಗ ಈ ಕೃತಿಯ ಆಕರ್ಷಣೆ. “ನನ್ನ ಅಹಂಕಾರವೇ ನನ್ನ ಶಕ್ತಿ” ಎನ್ನುವ ಮಾತು ಅದನ್ನು ಆಡಿದವನ ಸಂಪೂರ್ಣ ವ್ಯಕ್ತಿತ್ವದ ಪರಿಚಯ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತದೆ. ಹಾಗೆಯೇ ನಿರೂಪಣೆಯಲ್ಲೂ ಲೇಖಕರೇ ಹೇಳುವಂತೆ ಸಿದ್ಧಪ್ರಕಾರಗಳಿಂದ ಆಚೆ ನಿಲ್ಲುವ ಈ ಕೃತಿ “ಮಾತುಕತೆ”ಯ ಮಾದರಿಯಲ್ಲಿದ್ದೂ ವಾಚಾಳಿಯಾಗದೇ ವಿಶಿಷ್ಟವಾಗುಳಿಯುತ್ತದೆ. “ಇದನ್ನು ಕಬೀರ ಬರೆದನೋ ನಾನೇ ಬರೆದೇನೋ ನೆನಪಿಲ್ಲ. ನಾನು ಕಬೀರನಾದಾಗ ಬರೆದಿರಬಹುದೇನೋ?” ಎನ್ನುವ ಮಾತಿನಲ್ಲಿ ಅಸ್ಪಷ್ಟತೆಯೇ ಪಾತ್ರಸೃಷ್ಟಿಯ ಸೂಕ್ಷ್ಮತೆಗೆ ಒದಗಿಬಂದಿರುವುದನ್ನು ಅಲ್ಲಗಳೆಯುವಂತಿಲ್ಲ. ಹೀಗೆ ಉದಾಹರಿಸುತ್ತ ಹೋಗುವಂತಹ ಸಾಕಷ್ಟು ಭಾಷಪ್ರಯೋಗ ಹಾಗೂ ವಿಶಿಷ್ಟ ನಿರೂಪಣೆ ಕಾದಂಬರಿಯುದ್ದಕ್ಕೂ ಕಾಣಬಹುದು. ಕಾದಂಬರಿಯ ಅಂತ್ಯ ನಾಟಕೀಯವೆನಿಸಿದರೂ ಕೃತಿಯ ಆಶಯವನ್ನು ಹಾನಿ ಮಾಡಿಲ್ಲ. ಹೀಗೆ ತಾನೇ ಪಾತ್ರವಾಗುತ್ತ, ಪಾತ್ರದುದ್ದಕ್ಕೂ ನಟಿಸುತ್ತಾ, ಓದುಗನನ್ನು ನಟನಾಗಿಸುತ್ತ ತಳಮಳಕ್ಕೆ ತಳ್ಳುವ ಅಶ್ವತ್ಥಾಮ ನಟನಾಗಿ, ಪಾತ್ರವಾಗಿ, ನಟನೆಯಾಗಿ, ಓದುಗನ ನೆನಪಲ್ಲಿ ಉಳಿಯುವ ಚಿತ್ರವಾಗಿ ನಿಲ್ಲುತ್ತಾನೆ ****************************** ಅಂಜನಾ ಹೆಗಡೆ

ನಾನು ಓದಿದ ಕಾದಂಬರಿ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಸಂಕೋಲೆಗಳ ಕಳಚುತ್ತ ಕೃತಿ: ಸಂಕೋಲೆಗಳ ಕಳಚುತ್ತ ಕವಿ: ಕು.ಸ.ಮಧುಸೂದನ ಪ್ರಕಾಶಕರು: ಕಾವ್ಯಸ್ಪಂದನ ಪ್ರಕಾಶನ, ಬೆಂಗಳೂರು ಪುಸ್ತಕ ದೊರೆಯುವ ವಿವರಗಳು ಸಂಕೋಲೆಗಳ ಕಳಚುತ್ತ ಪುಸ್ತಕತರಿಸಿಕೊಳ್ಳುವ ವಿವರಗಳು ಪುಸ್ತಕದ ಬೆಲೆ=150=00 ಬ್ಯಾಂಕ್ ವಿವರಗಳು IFSC CODE-CNRB0002698 AC/NO=1145101036761 Bhadravathiramachari Canara bank,rajajinagar 2nd block***********

ಪುಸ್ತಕ ಪರಿಚಯ Read Post »

You cannot copy content of this page

Scroll to Top