ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬೀಳದ ಗಡಿಯಾರ. ಕೃತಿಯ ಹೆಸರು: ಬೀಳದ ಗಡಿಯಾರ.ಪ್ರಕಟಣೆ: 2018ಬೆಲೆ: 90ರೂ.ಪ್ರಕಾಶಕರು: ಪ್ರೇಮ  ಪ್ರಕಾಶನ, ಮೈಸೂರು-570029 ಡಾ. ಬಸು ಬೇವಿನಗಿಡದ ಅವರ “ಬೀಳದ ಗಡಿಯಾರ” ಹಿಂದೆಲ್ಲ ಕೆಲವು ಮನೆಗಳಲ್ಲಿ ಎಷ್ಟು ಗಂಟೆಯಾಗಿದೆಯೋ ಅಷ್ಟುಸಲ ಢಣ್ ಢಣ್ ಎಂದು ಗಂಟೆ ಹೊಡೆಯುವ ಗಡಿಯಾರಗಳಿದ್ದವು. ಅಂತಹ ಗಡಿಯಾರ ಆಗ ಮಕ್ಕಳಾಗಿದ್ದ ನಮಗೆ ಆಕರ್ಷಣೆಯ ಕೇಂದ್ರವಾಗಿತ್ತು. ಹನ್ನೆರಡು ಗಂಟೆಯಾಗುವಾಗ ಅದು ಹನ್ನೆರಡುಸಾರಿ ಗಂಟೆ ಬಾರಿಸುವುದರಿಂದ ಅದನ್ನು ಕೇಳಲು ಗಡಿಯಾರದ ಮುಂದೆ ಕಾತುರದಿಂದ ನಿಂತಿರುತ್ತಿದ್ದುದೂ ಇದೆ. ಆದರೆ ಹಾಗೇ ಮುಂದುವರಿದು ಹದಿಮೂರು, ಹದಿನಾಲ್ಕು ಹೀಗೆ ಗಂಟೆ ಹೊಡೆಯುತ್ತ ದಿನದ ಮುಕ್ತಾಯದಲ್ಲಿ ಇಪ್ಪತ್ನಾಲ್ಕು ಗಂಟೆ ಹೊಡೆಯುವ ಗಡಿಯಾರವಿದ್ದರೆ… ಚನ್ನಾಗಿತ್ತು ಎಂದೆಲ್ಲಾ ಅನಿಸಿದ್ದಿದೆ. ಆದರೆ ನಾನು ಇಲ್ಲಿ ಹೇಳ ಹೊರಟಿರುವುದು “ಬೀಳದ ಗಡಿಯಾರದ” ಮಕ್ಕಳ ಕಥಾ ಸಂಕಲನದ ಕುರಿತು. ಬೀಳದ ಗಡಿಯಾರ ಹಾಗಂದರೇನು, ಅದು ಹೇಗೆ ಬೀಳದೇ ಇರಲು ಸಾಧ್ಯ… ಎಂದೆಲ್ಲಾ ಮಕ್ಕಳಾದವರು ಯೋಚಿಸಿಯೇ ಯೋಚಿಸುತ್ತಾರೆ. ಅಂತಹ ಕುತೂಹಲದ ಶೀರ್ಷಿಕೆಯ ಕಥಾಸಂಕಲನ ರೂಪಿಸಿದವರು ಡಾ. ಬಸು ಬೇವಿನಗಿಡದ ಅವರು. ಬಸು ಬೇವಿನಗಿಡದ ಅವರು ಈಗ ಧಾರವಾಡ ಆಕಾಶವಾಣಿಯ ಮುಖ್ಯಸ್ಥರು. ಅವರ ಮಕ್ಕಳ ಸಾಹಿತ್ಯದ ಕುರಿತಾದ ಅಧ್ಯಯನ, ಮಕ್ಕಳಿಗಾಗಿ ಅವರು ಬರೆದ “ನಾಳೆಯ ಸೂರ್ಯ” ಹಾಗೂ “ಓಡಿ ಹೋದ ಹುಡುಗ” ಮಕ್ಕಳ ಕಾದಂಬರಿಗಳು ಗಳಿಸಿದ ಜನಪ್ರಿಯತೆ, ಮಕ್ಕಳ ಮೇಲಿನ ಪ್ರೀತಿ ಇವೆಲ್ಲ ನಮಗೆ ಹೆಚ್ಚು ಆಪ್ತತೆಯನ್ನು ಉಂಟು ಮಾಡುತ್ತದೆ. ನಾಡಿನ ನಾಮಾಂಕಿತ ಕಥೆಗಾರ, ಕವಿ, ವಿಮರ್ಶಕರಾಗಿರುವ ಬಸು ಅವರು ಮಕ್ಕಳಿಗಾಗಿಯೂ ಬರೆಯುತ್ತ ಎಲ್ಲರೊಂದಿಗೆÀ ಸ್ನೇಹ ಪರತೆಯನ್ನು ವಿಸ್ತರಿಸಿಕೊಂಡಿದ್ದಾರೆ. ಹಾಂ, ನಾನು ಬೀಳದ ಗಡಿಯಾರದ ಕುರಿತು ಹೇಳುತ್ತಿದ್ದೆ. ಗಡಿಯಾರ ಬೀಳದಂತೆ ಮೊಳೆ ಜಡಿದಿದ್ದಾರಾ, ಮಕ್ಕಳು ಬೀಳಿಸಲು ಸಾಧ್ಯವಾಗದ ಹಾಗೆ ಅವರಿಗೆ ಸಿಗದಂತೆ ಮೇಲೆ ಇಟ್ಟಿದ್ದಾರಾ, ಏನದು ಎಂಬುದು ಮಕ್ಕಳ ಪ್ರಶ್ನೆ. ನಮ್ಮದೂ ಆಗಬುದು. ಮೊಬೈಲ, ನೀರಿನ ಜಗ್ಗು ಒಡೆದು ಹಾಕಿರುವ, ಪಾಟಿ ಚೀಲ ರೊಂಯ್… ಎಂದು ಎಸೆದುಬಿಡುವ ಗಂಗಾಧರ ಎನ್ನುವ ಹುಡುಗ ಬೀಳದ ಗಡಿಯಾರ ಕಥೆಯಲ್ಲಿ ಇದ್ದಾನೆ. ಅವನು ಏನೆಲ್ಲಾ ಮಾಡಿದ ಹಾಗೂ ಅವನ ಜಗತ್ತಿನ ಸುತ್ತ ಮಕ್ಕಳ ಬಾಲ್ಯ ಹಾಗೂ ಹಿರಿಯರ ಕಷ್ಟ ಮತ್ತು ಖುಷಿ ಹೇಗೆಲ್ಲಾ ಹರಡಿಕೊಂಡಿದೆ ಎಂಬುದನ್ನು ನಾವು ಕಥೆ ಓದಿಯೇ ತಿಳಿಯ ಬೇಕು. ಬಸು ಅವರು ಕಥೆಗಳ ಟೈಟಲ್ ಒಂದುರೀತಿ ಕುತೂಹಲ ಕೆರಳಿಸುವಂತೆ ಇಡುವುದರಲ್ಲಿ ಸಹಜತೆಯನ್ನು ಗಳಿಸಿದ್ದಾರೆ. ಅದು ಕಥೆಗಳಿಗೆ ಸರಿಯಾಗಿಯೇ ಇರುತ್ತದೆ. ಎರಡನೇ ಕಥೆ ‘ಮಾತಾಡದ ಮರ’. ಮರ ಮಾತಾಡದು ಎಂದು ನಮಗೆ ಗೊತ್ತು. ಆದರೆ ಆರೀತಿ ಏಕೆ ಬರೆದರು, ಮರ ಮಾತಾಡುತ್ತಿತ್ತೆ ಎಂಬೆಲ್ಲ ಪ್ರಶ್ನೆಗಳು ಏಳ ತೊಡಗುತ್ತವೆ. ಮುಗ್ಧ ಬಾಲಕನೊಬ್ಬ ಅಮ್ಮನೊಂದಿಗೆ ಜಗಳ ಮಾಡಿ ಕಾಣೆಯಾಗಿದ್ದ ತನ್ನ ಅಪ್ಪನನ್ನು ಹುಡುಕುತ್ತ ಸಾಗುವುದು ಈ ಕಥೆಯಲ್ಲಿ ಇದೆ. ಅಪ್ಪ ಕಲ್ಲಾಗಿ ಕುಳಿತಿರುವುದನ್ನು ಕಾಣುವ ಬಾಲಕನ ಮುಂದೆ ಅಪ್ಪ ಅಥವಾ ಬುಟ್ಟಿ ತುಂಬಿದ ಬಂಗಾರದ ಆಯ್ಕೆ ತೆರೆದುಕೊಳ್ಳುವ ಸಂದರ್ಭ ಇದೆ. ಆದರೆ ತನಗೆ ಅಪ್ಪ ಅಮ್ಮನೇ ಮುಖ್ಯ ಎನ್ನುವ ಶುದ್ಧ ಹೃದಯದ ಬಾಲಕ ಬಂಗಾರವನ್ನು ತಿರಸ್ಕರಿಸುತ್ತಾನೆ. ಜೀವ ಪಡೆದ ಅಪ್ಪ ಬಂಗಾರದ ಆಸೆಯಲ್ಲಿ ಮಗನನ್ನು ಕಳೆದುಕೊಳ್ಳುವ ಸಂಗತಿ ಇದೆ. ಇಲ್ಲೆಲ್ಲಾ ಮಕ್ಕಳ ಮುಗ್ಧತೆ, ಜೀವ ಪ್ರೀತಿ, ಮನದ ವಿಶಾಲತೆ ಜೊತೆಗೆ ದೊಡ್ಡವರ ಆಸೆ ಹಾಗೂ ಸ್ವಾರ್ಥಪರತೆ ಅನಾವರಣವಾಗುತ್ತದೆ. ಹಳ್ಳಿಯ ಬದುಕಿನ ಚಿತ್ರಣದೊಂದಿಗೆ ಬಂದ ‘ದನಗಳು ಮಾತಾಡಿದ್ದು’ ಕಥೆ ಆಪ್ತವಾಗುತ್ತದೆ. ಇಲ್ಲಿ ಬಾಲಕನೊಬ್ಬ ತಾದಾತ್ಮ್ಯತೆಯಿಂದ ದನಗಳನ್ನು ಕಾಯುತ್ತ, ಪ್ರೀತಿಸುತ್ತ, ಅವರ ನಡೆಗಳಿಗೆ ಪ್ರತಿಕ್ರಿಯಿಸುತ್ತ ಸಂವಹನ ನಡೆಸುದೆಲ್ಲ ಇದೆ. ಮಕ್ಕಳಿರಲಿ ದೊಡ್ಡವರಿರಲಿ ತಾವು ಪರಿಸರದೊಂದಿಗೆ ಎಷ್ಟೋ ಸಾರಿ ಸಂವಾದ ನಡೆಸುತ್ತಾರೆ. ಬೆಕ್ಕು-ನಾಯಿಗಳೊಂದಿಗೆ, ದನಗಳೊಂದಿಗೆ, ತಮ್ಮ ಹೊಲ-ತೋಟಗಳೊಂದಿಗೆ ಮಾತಾಡುತ್ತ ಅದರ ಭಾವ ಮನಸ್ಸಿಗಿಳಿಸಿಕೊಳ್ಳುದೆಲ್ಲವನ್ನು ಈ ಕಥೆ ನಮಗೆ ಪರೋಕ್ಷವಾಗಿ ಹೇಳುತ್ತ ಆಪ್ತವಾಗಿ ಬಿಡುತ್ತದೆ. ‘ಅಲ್ಲಪ್ಪ’ ಕಥೆಯಲ್ಲಿ ತನ್ನ ಹೆಸರಿನಿಂದಾಗಿ ಮುಜುಗರಕ್ಕೊಳಗಾಗುವ ಬಾಲಕನ ತುಮುಲ ವ್ಯಕ್ತವಾಗಿದೆ. ಹಳ್ಳಿಗಳಲ್ಲಿ ಇಡುವ ಗ್ರಾಮೀಣ ಸೊಗಡಿನ ಹೆಸರುಗಳಿಂದಾಗಿ ಕೆಲವೊಂದುಸಾರಿ ಮಕ್ಕಳ ಮಧ್ಯದಲ್ಲಿ ಕೀಟಲೆಗೆ, ಅಪಹಾಸ್ಯಕ್ಕೆ ಒಳಗಾಗುವ ಸಂದರ್ಭಗಳಿರುತ್ತವೆ. ಇಲ್ಲೂ ಅಲ್ಲಪ್ಪ ಎನ್ನುವ ಬಾಲಕ ಅಂತಹುದೇ ನೋವು ಅನುಭವಿಸುತ್ತಾನೆ. ಆದರೆ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದಾಗ ಅಲ್ಲಪ್ಪ ಪ್ರಸಿದ್ಧನಾಗಿ ಅವನ ಹೆಸರೂ ಎಲ್ಲರ ಪ್ರೀತಿಯ ಹೆಸರಾಗಿ ಮಾರ್ಪಡುತ್ತದೆ. ಹೆಸರಿನ ಕುರಿತು ಚಿಂತಿಸುವುದಕ್ಕಿಂತ ನಾವು ಮಾಡುವ ಕಾರ್ಯವೇ ಮುಖ್ಯವಾಗುತ್ತದೆ ಹಾಗೂ ಹೆಸರಿನ ಕುರಿತು ಚಿಂತೆಪಡುವ, ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ ಎಂಬುದನ್ನು ಕಥೆ ಸೊಗಸಾಗಿ ನಿರೂಪಿಸಿದೆ. ‘ಬೆಳದಿಂಗಳು ಬೇಡಿದ ಬಾಲಕ’ ಇನ್ನೊಂದು ಕಥೆ. ಇಲ್ಲಿ ಹಳ್ಳಿಯ ಬದುಕು ಅನುಭವಗಳೆಲ್ಲ ಹೇಗೆ ಮಕ್ಕಳಲ್ಲಿ ಸಕಾರಾತ್ಮಕ ಬೆಳವಣಿಗೆ ಉಂಟಾಗಲು ಕಾರಣವಾಗುತ್ತವೆ ಎನ್ನುವುದನ್ನು ಹೇಳಲಾಗಿದೆ. ಹಿಟ್ಟು ಮುಕ್ಕುವ ಹುಡುಗ, ದೊಡ್ಡವರ ಹೋಮವರ್ಕ ಕಥೆಗಳು ಕೂಡಾ ಮಕ್ಕಳ ಸುತ್ತಲಿನವೇ ಆಗಿದ್ದು ಮಕ್ಕಳ ಲೋಕ ಹೇಗೆಲ್ಲ ವಿಸ್ತರಿಸಿಕೊಂಡಿವೆ ಎಂಬುದೇ ಆಗಿವೆ. ಅಜ್ಜನೊಬ್ಬ ಬ್ಯಾಗ ರಿಪೇರಿ ಮಡುವ ಹುಡುಗನೊಂದಿಗೆ ಹೊಂದಿದ್ದ ಸಂಬಂಧ, ಆ ಬಡ ಹುಡುಗನಿಗೆ ಉಂಟಾಗುವ ತೊಂದರೆ, ಅಜ್ಜ ಅವನಿಗಾಗಿ ಪರಿತಪಿಸುವುದು, ವೃದ್ಧಾಪ್ಯದಲ್ಲಿಯ ನಮ್ಮ ನಡವಳಿಕೆಗಳು ಸುತ್ತಲಿನವರಿಗೆ ಹೇಗೆಲ್ಲಾ ಅನಿಸುತ್ತದೆ ಎಂಬುದೆಲ್ಲ ಹೇಳುವ ‘ಬ್ಯಾಗ ರಿಪೇರಿ’ ಕಥೆ ಮನಸ್ಸಿನಲ್ಲಿ ಉಳಿಯುತ್ತದೆ. ಬಸು ಅವರು ಚಿತ್ರಿಸುವ ಗ್ರಾಮೀಣ ಚಿತ್ರಣವಾಗಲಿ, ಪೇಟೆಯ ಬಡ ಮಕ್ಕಳ ಬದುಕಾಗಲಿ, ಮುದುಕರ ಸಂಕಷ್ಟಗಳಾಗಲಿ, ಮಕ್ಕಳ ಮುಗ್ಧತೆಯಾಗಲಿ ಎಲ್ಲವೂ ಸಹಜವೆಂಬಂತೆ ಹೇಳುವ ನಿರೂಪಣೆ ಬಹಳ ಆಪ್ತವಾಗುತ್ತದೆ. ಅಲ್ಲಿ ಬರುವ ಫ್ಯಾಂಟಸಿ ಕೂಡಾ ನಮ್ಮ ಮುಂದೆ ನಡೆಯುತ್ತಿರುವ ಘಟನೆಯಂತೇಯೇ ಕಾಣುತ್ತದೆ. ಪಂಚ ತಂತ್ರ, ನೀತಿ ಕಥೆ, ಜನಪದ ಕಥೆಗಳಿಂದ ಆವರಿಸಿಕೊಂಡಿದ್ದ ಕನ್ನಡ ಮಕ್ಕಳ ಕಥಾ ಲೋಕ ಹೊಸ ಹರಿವನ್ನು ಕಾಣುತ್ತಿದೆ. ಬಸು ಅವರ ಕಥೆಗಳು ಈ ಹೊಸ ಹರಿವಿನ ಬಹು ಮುಖ್ಯ ಕಥೆಗಳಾಗಿವೆ. ವಾಸ್ತವ ಹಾಗೂ ಗ್ರಾಮೀಣ ಬದುಕಿನ ಬಹು ಸುಂದರ ಮಕ್ಕಳ ಲೋಕದೊಂದಿಗೆ ಬಸು ಅವರು ಅನುಸಂಧಾನ ಹೊಂದುವುದೇ ನಮಗೆಲ್ಲ ಬಹಳ ಖುಷಿ. ಹೊಸ ಸಂವೇದನೆಯ ಈ ಕಥೆಗಳನ್ನು ತಾವೆಲ್ಲ ಓದ ಬೇಕು, ಡಾ. ಬಸು ಬೇವಿನಗಿಡದ ಅವರು ಮತ್ತಷ್ಟು ಕಥೆಗಳನ್ನು ಬಿಚ್ಚಿಕೊಳ್ಳುತ್ತ ಕನ್ನಡದ ಮಕ್ಕಳ ಕಥಾಲೋಕ ವಿಸ್ತರಿಸುವ ಪಾಲುದಾರರಾಗಿಯೇ ಇರಬೇಕು ಎನ್ನುವುದು ನಮ್ಮ ಆಶಯ. ***************************************** –ತಮ್ಮಣ್ಣ ಬೀಗಾರ.

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹುಳುಕ ಹೂರಣದ ಹೋಳಿಗೆ ತೋರಣ ‘ರಾಯಕೊಂಡ’ ಕರಣಂ ಪವನ ಪ್ರಸಾದರ ಬಹುನಿರೀಕ್ಷಿತ ಕಾದಂಬರಿ. ಕಾನ್ಕೇವ್ ಪ್ರಕಾಶನ ಇದನ್ನು ಪ್ರಕಟಿಸಿದೆ. ನನ್ನಿ, ಗ್ರಸ್ತ, ಕರ್ಮ ಕಾದಂಬರಿಗಳನ್ನು, ಕರಣಂ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದವರು. ಅವರೇ ಹೇಳಿಕೊಂಡಂತೆ ಇದು ಡಾರ್ಕ್ ಹ್ಯೂಮರ್ ಪ್ರಕಾರಕ್ಕೆ ಸೇರುವ ಕಾದಂಬರಿ. ಈ ವಿಭಾಗವು ಸಾಮಾನ್ಯವಾಗಿ ನಿಷೇಧವೆಂದು ಭಾವಿಲ್ಪಡುವ ವಿಷಯದ ಬೆಳಕನ್ನು ಚೆಲ್ಲುತ್ತದೆ. ವಿಶೇಷವಾಗಿ ಗಂಭೀರ ಅಥವಾ ವಿಷಾದದಿಂದ ಕೂಡಿದ ವಿಷಯಗಳನ್ನು ಕಪ್ಪು ಹಾಸ್ಯದ ಮಾದರಿಯಲ್ಲಿ ಚರ್ಚಿಸುತ್ತದೆ. ಎಂ. ವ್ಯಾಸರ ಕಪ್ಪು ದರ್ಶನದ ಕಥೆಗಳೇ ಬೇರೆ, ಅದನ್ನು ಇಲ್ಲಿ ಚರ್ಚಿಸದೇ ಮುಂದಕ್ಕೆ ಹೋಗೋಣ ( ಕಾದಂಬರಿಯಲ್ಲಿಯೂ ನಿರೂಪಕರು ಇದೇ ಧಾಟಿಯಲ್ಲಿ ಸಾಗುತ್ತಾರೆ). ಈ ಕಾದಂಬರಿಯ ಕೊನೆಕೊನೆಗೆ ಸ್ವಲ್ಪ ಈ ಡಾರ್ಕ್ ಹ್ಯೂಮರ್ ನ ಫೀಲಿಂಗ್ ಆಗುತ್ತದೆ. ಅದೇನೇ ಇರಲಿ, ಒಟ್ಟು ಹತ್ತು ಅಧ್ಯಾಯಗಳಲ್ಲಿ ಈ ಕೃತಿ ಹರಡಿಕೊಂಡಿದೆ. ಕಥೆಗಳ ತೋರಣಕ್ಕೂ ಮುನ್ನ ಪಾತ್ರಗಳ ಸಂಬಂಧ ಸೂಚಿಯಿದೆ. ಗೋಪಾಲಕೃಷ್ಣ ಪೈಗಳ ಸ್ವಪ್ನ ಸಾರಸ್ವತ ಮತ್ತು ನಾ. ಮೊಗಸಾಲೆ ಅವರ ‘ ಉಲ್ಲಂಘನೆ’ ಕಾದಂಬರಿಯಲ್ಲಿ ಇದನ್ನು ನಾವು ಕಾಣಬಹುದು. ಮಿರ್ಜಿ ಅಣ್ಣಾರಾಯರ ‘ ನಿಸರ್ಗ’ , ಎಸ್. ಎಲ್ ಭೈರಪ್ಪನವರ ‘ಅನ್ವೇಷಣೆ’ ಆಗಾಗ ನೆನಪಾಗುತ್ತದೆ. ಭೈರಪ್ಪನವರು ಪರ್ವದಲ್ಲಿ ಪಾತ್ರಗಳ ಮುಖೇನ ಮಹಾಭಾರತವನ್ನು ಹೇಳುವ ಧಾಟಿಯಲ್ಲಿ ರಾಯಕೊಂಡದ ನಿರೂಪಣೆಯಿದೆ. ರಾಯಕೊಂಡದ ಮೂಲಕ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದ ಪ್ರಾದೇಶಿಕ ಸೊಗಡನ್ನು ತುಂಬಾ ಚೆನ್ನಾಗಿ ಪವನ ಪ್ರಸಾದರು ಕಟ್ಟಿಕೊಟ್ಟಿದ್ದಾರೆ. ಆದರೆ ತೆಲುಗು ಲವಲೇಶವೂ ಗೊತ್ತಿಲ್ಲದವರಿಗೆ ಸಂಭಾಷಣೆಗಳು ತೊಂದರೆಕೊಡುತ್ತವೆ. ಅಮ್ಮಿ ಅತ್ತೆ, ಕಿಟ್ಟಪ್ಪ, ಚಿರತೆ ಪದ್ದಣ್ಣ ಪಾತ್ರಗಳ ಪೋಷಣೆ ಅಚ್ಚುಕಟ್ಟಾಗಿ ಮೂಡಿಬಂದಿದೆ. ಗುಂಡ ಮತ್ತು ಸೂಜಿ ; ಅದೇ ಅದೇ ಸಲಿಂಗ ಕಾಮ ಮತ್ತು ಅನೈತಿಕ ಸಂಬಂಧಗಳ ಕಥೆಗಳು. ಮತ್ತೆ ಮಧು ಪಾತ್ರ ಅದೇ ಕೆಲಸ ಮಾಡುತ್ತದೆ. ಪಾತ್ರಗಳ ಮೂಲಕ ಹೇಳಿಸಲಾಗದ ಅಭಿಪ್ರಾಯ, ನಿಲುವನ್ನು ನಿರೂಪಕ ಮುಂದೆ ನಿಂತು ಹೇಳುವುದು ಅಭಾಸ ಎನ್ನಿಸುತ್ತದೆ. ಮದುವೆಯಾಗದ ಹೆಣ್ಣುಮಕ್ಕಳನ್ನು ಕಾದಂಬರಿಯುದ್ದಕ್ಕೂ ಚಿತ್ರಿಸಿರುವ ರೀತಿಯ ಬಗ್ಗೆ ವಿಮರ್ಶಕರೇ ಬೆಳಕು ಚೆಲ್ಲುವುದು ಉಚಿತವೇನೋ! ಹೆಣ್ಣಿನ ಕುರಿತು ಕೆಲವು ಸಾಲುಗಳು ಡಿಸ್ಟ್ರಿಕ್ಟಿವ್ ಧಾಟಿಯಲ್ಲಿವೆ ಎಂಬ ಭಾವನೆ ಮೂಡದಿರದು. ತೆಲುಗು ರಾಜಕೀಯದ ರಕ್ತಸಿಕ್ತ ಅಧ್ಯಾಯ ಕಟ್ಟಿಕೊಡುವ ಪ್ರಯತ್ನ ಕೂಡ ಗಾಢವಾಗಿಲ್ಲ ಎಂದು ಪುಸ್ತಕ ಕೆಳಗಿಟ್ಟ ಮೇಲೆ ಭಾಸವಾಗುತ್ತದೆ. ಆದರೂ ಕರಣಂ ಅವರ ಹೊಸ ಪ್ರಯತ್ನವನ್ನು ಶ್ಲಾಘಿಸಲು ಭಾಷೆಯ ಪ್ರಯೋಗ, ಪಾತ್ರ ಚಿತ್ರಣ, ಕುಟುಂಬದ ಮಜಲುಗಳನ್ನು ತೆರೆದಿಡುವ ರೀತಿ ಸಾಕು. ಒಟ್ಟಾರೆ ಕಾದಂಬರಿಯಾಗಿ ಸರಾಗವಾಗಿ ಓದಿಸಿಕೊಳ್ಳುವುದಿಲ್ಲವಾದರೂ, ಒಂದೆಡೆ ಸಿಗುವ ಕಥಾಗುಚ್ಛದ ಪರಿಣಾಮವನ್ನು ಬೀರಲು ಕಾದಂಬರಿಯು ಯಶಸ್ವಿಯಾಗುತ್ತದೆ.ಭೂಪತಿ ಶ್ರೀನಿವಾಸನ್ ಉತ್ತಮ ಮುಖಪುಟ ವಿನ್ಯಾಸ ಮಾಡಿದ್ದಾರೆ. ಪ್ರಕಾಶಕರು ಎರಡನೇ ಮುದ್ರಣಕ್ಕೆ ಮುನ್ನ ಸಾಕಷ್ಟಿರುವ ಅಕ್ಷರ ದೋಷಗಳನ್ನು ತಿದ್ದುಪಡಿ ಮಾಡಿಸುವುದು ಒಳ್ಳೆಯದು. ಕಾದಂಬರಿ ಪ್ರಕಾರವನ್ನು ಇಷ್ಟಪಡುವ, ಧಾರಾವಾಹಿಗಳನ್ನು ಮೆಚ್ಚುವ ಜನರು ಒಮ್ಮೆ ಓದಲೇಬೇಕಾದ ಪುಸ್ತಕವಿದು. *********************** – ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

Anyone but the Spouse ವಾಸ್ತವ ಸಂಗತಿಗಳ ಯಥಾವತ್ ನಿರೂಪಣೆ ಪುಸ್ತಕ:Anyone but the Spouse ಸಣ್ಣ ಕಥೆಗಳು ಲೇಖಕಿ:ಪೂರ್ಣಿಮಾ ಮಾಳಗಿಮನಿ Anyone but the Spouse ಪೂರ್ಣಿಮಾ ಮಳಗಿಮನಿಯವರು ಇಂಗ್ಲಿಷ್ ನಲ್ಲಿ ಬರೆದು ಪ್ರಕಟಿಸಿರುವ ಸಣ್ಣ ಕಥಾ ಸಂಕಲನ. ಪಾಶ್ಚಾತ್ಯ ಸಂಸ್ಕೃತಿಯ ನೇರ ಪ್ರಭಾವಕ್ಕೊಳಗಾಗಿರುವ ಆಧುನಿಕ ಭಾರತೀಯ ಸಮಾಜದಲ್ಲಿ ಗಂಡು- ಹೆಣ್ಣುಗಳ ನಡುವಣ ಸಂಬಂಧ, ವೈವಾಹಿಕ ವ್ಯವಸ್ಥೆ ಮತ್ತು ಕೌಟುಂಬಿಕ ಬದುಕುಗಳಲ್ಲಿ ಆಗಿರುವ ಬದಲಾವಣೆಯ ಯುಕ್ತಾಯುಕ್ತತೆಯ ಕುರಿತು ಈ ಕಥೆಗಳು ತಣ್ಣಗೆ ಸಂಶೋಧನೆ ನಡೆಸುವಂತಿವೆ.   ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳು ೧೮೭ ಪುಟಗಳನ್ನು ಆವರಿಸಿಕೊಂಡಿವೆ. ಮೊದಲ ಕಥೆ The Travel Blogger ಮೂರು ಬಾರಿ ಪ್ರೇಮ ವಿಫಲಳಾಗಿ ನಿರಾಶಳಾದ ದೀಪಿಕಾ ಎಂಬ ಕಥಾನಾಯಕಿ ನಾಲ್ಕನೆಯ ಬಾರಿ ಪ್ರದೀಪ ಎಂಬ ಒಬ್ಬ ವಿವಾಹಿತ ವ್ಯಕ್ತಿಯನ್ನು ಆಕಸ್ಮಿಕವಾಗಿ ಭೇಟಿಯಾಗಿ ಪ್ರೀತಿಯೊಳಗೆ ಬೀಳುವುದರ ಕುರಿತಾದ  ಕಥೆ. ಅದು ಪರಸ್ಪರ ಪ್ರೀತಿಯೇ ಆದರೂ ಪ್ರದೀಪನ   ಮನಸ್ಸಿನ ತುಂಬಾ ಅಂಜಿಕೆ ಹಿಂಜರಿಕೆಗಳಿರುತ್ತವೆ. ತನ್ನ ಹೆಂಡತಿಯೊಂದಿಗೆ ಒಳ್ಳೆಯ ಸಂಬಂಧವನ್ನೇ ಇಟ್ಟುಕೊಂಡಿರುವ ಆತ ಕಥಾನಾಯಕಿಯೊಂದಿಗೆ ಕೂಡುವ ಮುಕ್ತ ಅವಕಾಶ ಸಿಕ್ಕಿದರೂ ಮುಂದೆ ಹೆಜ್ಜೆ ಇಡಲಾಗದೆ ಮಗನಿಗೆ ಹುಷಾರಿಲ್ಲವೆಂದು ಫೋನ್ ಬಂದ ಕೂಡಲೇ ಹಿಂದಿರುಗಿ ಮನೆಗೆ ಹೋಗುತ್ತಾನೆ. ಕೆಲವು ದಿನಗಳ ತನಕ ಅವನ ಸುದ್ದಿಯೇ ಇಲ್ಲದಾಗ ಕಥಾನಾಯಕಿ ಅವನ ಆಫೀಸಿಗೆ ಹೋಗಿ ವಿಚಾರಿಸಿದಾಗ ಅವನ ಗೆಳೆಯ ಅವನು ಬೈಕ್ ಅಪಘಾತದಲ್ಲಿ ಸತ್ತು ಹೋಗಿರುವ ಸುದ್ದಿ ತಿಳಿಸುತ್ತಾನೆ.ಕಥೆಯ ಕೊನೆಯ ಪಂಚ್ ಏನೆಂದರೆ ಪ್ರದೀಪನ ಗೆಳೆಯ ತಾನು ಮಾಡಿದ ತಪ್ಪಿನ ಬಗ್ಗೆ ದೀಪಿಕಾಳಲ್ಲಿ ಹೇಳಿಕೊಳ್ಳುವುದು.ಕಥಾನಾಯಕ ತಾನು ದೀಪಿಕಾಳ ಬಳಿಗೆ ಹೊಗಲೇ ಎಂದು ಕೇಳಿದಾಗ ತಾನು ಅವನನ್ನು ಒತ್ತಾಯಿಸಿ ಕಳುಹಿಸಲು ಕಾರಣ ಕಥಾನಾಯಕನ ಮಗ ತನ್ನ ಮಗನೇ ಆಗಿರುವುದು. ತನ್ನ ಅಪರಾಧಿ ಪ್ರಜ್ಞೆಯಿಂದ ಬಿಡುಗಡೆ ಹೊಂದುವುದು ಅವನ ಉದ್ದೇಶ. ಜೀವನವೆಂಬ ಯಾತ್ರೆಯಲ್ಲಿ ಇಂಥ ಬ್ಲಾಗುಗಳು ಸದಾ ಸೃಷ್ಟಿಯಾಗುತ್ತಲೇ ಇರುತ್ತವೇನೋ ಎಂಬ ಧ್ವನಿ ಇಲ್ಲಿದೆ. Take no logical love ಅನ್ನುವ ಕಥೆ ಗಂಡು ಹೆಣ್ಣುಗಳ ನಡುವಣ ಸಂಬಂಧದ ವಿಚಾರದಲ್ಲಿ ಆಧುನಿಕ ಜಗತ್ತಿನಲ್ಲಿ ಹೊಸ ತಲೆಮಾರಿನ ಹದಿಹರೆಯದವರ ಮನಸ್ಥಿತಿಯನ್ನು ಚಿತ್ರಿಸುತ್ತದೆ. ವಿವಾಹಪೂರ್ವದ ಲೈಂಗಿಕ ಸಂಬಂಧವನ್ನು ನಿಷೇಧಿಸಿರುವ ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿನಿಧಿಸುವ ಕಥಾನಾಯಕಿ ಶೆಹರ್ ಒಂದೆಡೆಯಾದರೆ ನಿಸರ್ಗದ ಕೂಗನ್ನು ಸ್ವೀಕರಿಸಿ ಸರಿಯಾದ ಸಮಯದಲ್ಲಿ ಪ್ರತಿಕ್ರಿಯಿಸುವುದೇ ಆರೋಗ್ಯಕರವೆಂದು ಹೇಳುವ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಯುವ ವರ್ಗವನ್ನು ಪ್ರತಿನಿಧಿಸುವ ಟೀನಾ ಇನ್ನೊಂದೆಡೆ. ಬಾಯ್ ಫ್ರೆಂಡ್ಸ್‌ ಇಲ್ಲದಿರುವ ಶೆಹರಳನ್ನು ಲೈಂಗಿಕ ವಿಚಾರದಲ್ಲಿ ಏನೂ ತಿಳಿಯದ ಪೆದ್ದಿಯೆಂದು ಗೇಲಿ ಮಾಡಿ ಅವಳನ್ನು ನೋಯಿಸುವವರೇ ಇರುವ ಗುಂಪಿನಲ್ಲಿ ಇರಲಾಗದೆ ಬದಲಾಗಲು ಪ್ರಯತ್ನಿಸುವ ಶೆಹರ್ ಕೊನೆಗೂ ತಾನು ಕಂಡುಕೊಳ್ಳುವ ಬಾಯ್ ಫ್ರೆಂಡಿನಿಂದ ಬಯಸುವುದು ಲೈಂಗಿಕ ಸುಖದ ಜತೆಗೆ ಹೃದಯದ ಪ್ರೀತಿಯನ್ನು. ಆದರೆ ಆಗಲೇ ಸಾಕಷ್ಟು ಲೈಂಗಿಕ ಬಯಕೆಗಳನ್ನು ತೀರಿಸಿಕೊಂಡಿರುವ ಆ ಹುಡುಗ ಅವಳಿಗೆ ಮಾನಸಿಕವಾದ ಪ್ರೀತಿ ಕೊಡುವಲ್ಲಿ ವಿಫಲನಾಗುತ್ತಾನೆ. ವಿವಾಹಿತ ಸ್ತ್ರೀಯೊಬ್ಬಳಲ್ಲಿ ಅನುರಕ್ತನಾಗಿ ಅವಳಿಗಾಗಿ ಹಂಬಲಿಸುವ ವಿವಾಹಿತನಾದ ಒಬ್ಬ ವ್ಯಕ್ತಿಯು ಪ್ರೇಮ ನಿವೇದನೆ ಮಾಡಲು ಹೊರಟಾಗ .ತನ್ನ ಗಂಡ ಕಾಯಿಲೆಯಿಂದ ನರಳುತ್ತ ಮಲಗಿರುವುದರಿಂದ ಈತ ತನ್ನ ಮೇಲೆ ಸಹಾನುಭೂತಿ ತೋರಿಸುತ್ತಿದ್ದಾನೆಂದು ಅನುಮಾನಿಸಿ ಆಕೆ ಅವನನ್ನು ತಿರಸ್ಕರಿಸುವ ಕಥೆ Lift. ಸುಖೀಸಂಸಾರವೆಂದು ನೋಡಿದವರು ತಿಳಿದುಕೊಳ್ಳುವ ಲಾವಣ್ಯ, ರಂಜಿತರ ಬದುಕಿನಲ್ಲಿ ಬಿರುಕು ಮೂಡುವುದು ರಂಜಿತನಿಂದಾಗಿಯೇ. ಸುಂದರಿಯೂ ಪ್ರತಿಭಾವಂತೆಯೂ ಆದ ಹೆಂಡತಿಯ ಬಗ್ಗೆ ಒಳಗೊಳಗೇ ಮೆಚ್ಚುಗೆಯಿದ್ದರೂ ಅದನ್ನು ತೆರೆದ ಮನಸ್ಸಿನಿಂದ ಹೇಳಲು ಅವನ ‘ಮೇಲ್ ಈಗೋ’ ಬಿಡುವುದಿಲ್ಲ. ಹೆಂಡತಿ ಕಟ್ಟಿಕೊಟ್ಟ ಬುತ್ತಿಯಿಂದ ರುಚಿಯಾದ ಪದಾರ್ಥಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡು ತಿಂದಾಗ ಅವರು ಎಷ್ಟು ಹೊಗಳಿದರೂ ಅದನ್ನು ಹೆಂಡತಿಯಲ್ಲಿ ಹೇಳದವನು. ಆಫೀಸಿನಿಂದ ಪತ್ರಿಕೆಗೊಂದು ಜಾಹಿರಾತು ಕೊಡಲು ಸುಂದರಿಯೊಬ್ಬಳ ಚಿತ್ರ ಬೇಕೆಂದು ಹೇಳಿದಾಗ ಲಾವಣ್ಯಳಿಗೆ ಹೇಳದೆಯೇ ಅವಳ ಚಿತ್ರ ಬರೆದು ಬೇರೆ ಹೆಸರಿನಲ್ಲಿ ಪ್ರಕಟಿಸುವ ರಂಜಿತ್ ಹೆಂಡತಿಯ ಮುಂದೆ ಮಾತ್ರ ಭಾವೋನ್ಮಾದಕ ಭಂಗಿಯಲ್ಲಿರುವ ಆ ಚಿತ್ರವನ್ನು ಯಾರು ಬರೆದಿರಬಹುದು ಎಂದು ಸಂದೇಹ ವ್ಯಕ್ತ ಪಡಿಸುತ್ತಾನೆ. ಆದರೆ ಅವನು ನಿರೀಕ್ಷಿಸಿದ್ದಕ್ಕೆ ವ್ಯತಿರಿಕ್ತವಾಗಿ   ಲಾವಣ್ಯ ಆ ಚಿತ್ರಕಾರನ ಬಗ್ಗೆ ಭಾವುಕಳಾಗಿ ಕನಸು ಕಾಣುತ್ತಿರುವುದನ್ನು ಗಮನಿಸಿದ ರಂಜಿತ್ ನಿಜವನ್ನು ಹೇಳಿ ತನ್ನ ತಪ್ಪುಗಳನ್ನು ಒಪ್ಪಿಕೊಂಡಾಗ ಲಾವಣ್ಯ ಸಂತುಷ್ಟಳಾಗುತ್ತಾಳೆ.   ಹೀಗೆಯೇ ವೈವಾಹಿಕ ಬದುಕಿನಲ್ಲಿ ಗಂಡ ಹೆಂಡತಿಯರ ನಡುವೆ ಸಂಬಂದ ಸೌಹಾರ್ದಯುತವಾಗಿಯೇ ಇದ್ದರೂ ಸಣ್ಣ ಪುಟ್ಟ ಕಾರಣಗಳಿಗಾಗಿ ಅಥವಾ    ಬದುಕಿನ ಏಕತಾನತೆಯಿಂದ ಬದಲಾವಣೆಯನ್ನು ತಮಗರಿವಿಲ್ಲದೆಯೇ ಒಳಮನಸ್ಸಿನಿಂದ ಬಯಸುವುದು,ಒಂದಷ್ಟು ಕಾಲ ದೂರಾಗಿ ಅನಂತರ ಮತ್ತೆ ಒಂದಾಗುವುದು – ಇಂಥ ವಸ್ತುಗಳುಳ್ಳ ಒಟ್ಟು ಹತ್ತು ಕಥೆಗಳು ಇಲ್ಲಿವೆ.(Dull Student  ಎಂಬ ಒಂದು  ಪುಟ್ಟ   ಕತೆಯ ಹೊರತಾಗಿ).ಒಟ್ಟಿನಲ್ಲಿ ಮುಕ್ತ ಲೈಂಗಿಕತೆ, ವಿವಾಹ ಪೂರ್ವ ಮತ್ತು ವಿವಾಹ ಬಾಹಿರ ಸಂಬಂಧಗಳು ಮನುಷ್ಯ ಸಹಜವೆಂಬ ಭಾವನೆ ಇಲ್ಲಿದ್ದರೂ ಅವು ಕ್ಷಣಿಕವೆಂದೂ, ಭಾರತೀಯ ಸಮಾಜವು ಇದುವರೆಗೆ ಪಾಲಿಸಿಕೊಂಡು ಬಂದ ವೈವಾಹಿಕ ವ್ಯವಸ್ಥೆಯ ವಿರುದ್ಧ ಹೋಗದೆ ಕುಟುಂಬದೊಳಗಿನ ಪ್ರೀತಿಯ ಸಂಬಂಧಗಳನ್ನು ಗಟ್ಟಿಯಾಗಿ ಇಟ್ಟುಕೊಳ್ಳುವು  ದರಲ್ಲೇ ಬೆಚ್ಚಗಿನ ಸುರಕ್ಷೆಯಿರುವುದೆಂದೂ ಈ ಎಲ್ಲ ಕಥೆಗಳು ಧ್ವನಿಸುತ್ತವೆ. ಪೂರ್ಣಿಮಾ ಅವರು ಬಳಸುವ ಕಥನ ತಂತ್ರದಲ್ಲಿ ಹೇಳಿಕೊಳ್ಳುವಂಥ ಹೊಸತನವಿಲ್ಲದಿದ್ದರೂ ಅವರ ನಿರೂಪಣಾಶೈಲಿ ಅತ್ಯಂತ ಸೊಗಸಾಗಿದೆ. ಭಾಷೆಯು ಸರಳವೂ ಸುಂದರವೂ ಆಗಿದ್ದು ಕಥೆಗಳು ಸುಖವಾಗಿ ಓದಿಸಿಕೊಂಡು ಹೋಗುತ್ತವೆ. ಅಮೆರಿಕನ್ ಇಂಗ್ಲಿಷ್ ನ ಮೂಲಕ ಇವತ್ತಿನ ಯುವಜನತೆಯ ಶಬ್ದ ಭಂಡಾರದೊಳಗೆ ಸರ್ವೇಸಾಮಾನ್ಯವಾಗಿರುವ, ಹಳಬರಿಗೆ ಅಪರಿಚಿತವೆಂದು ಅನ್ನಿಸಬಹುದಾದ ಅನೆಕ ಪದಗಳು, ಪದಪುಂಜಗಳು, ಮತ್ತು ಸಂಕ್ಷಿಪ್ತ      ಮೊಬೈಲ್ ಮೆಸೇಜ್ ಭಾಷೆಗಳು ಇಲ್ಲಿ ಯಥೇಷ್ಟವಾಗಿವೆ. ಯಾವುದೇ ಘೋಷಿತ  ಸಿದ್ದಾಂತಗಳಿಗೆ ಅಂಟಿಕೊಳ್ಳದೆ ವಾಸ್ತವ ಸಂಗತಿಗಳನ್ನು ಯಥಾವತ್ತಾಗಿ ನಿರೂಪಿಸಿ ಕುತೂಹಲವನ್ನು ಹಿಡಿದಿಟ್ಟುಕೊಂಡೇ ಸಾಗುವ ಈ ಕಥೆಗಳು ಒಂದೇ ಓಟಕ್ಕೆ ಓದಿಸಿಕೊಂಡು ಹೋಗುತ್ತವೆ.. **************************************** ಡಾ.ಪಾರ್ವತಿ ಜಿ.ಐತಾಳ್

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಕೂರಿಗಿ ತಾಳು

ಪುಸ್ತಕ ಪರಿಚಯ ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವಾ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು.ಕಾವ್ಯವೆನ್ನುವುದು ಹುಡುಕಾಟವಲ್ಲ, ಅದೊಂದು ಮಿಡುಕಾಟ. ಕಾವ್ಯದಲ್ಲಿ ಮನರಂಜನೆ, ಶ್ರೀಮಂತಿಕೆ ಮತ್ತು ಉದಾತ್ತತೆ ಇರಬೇಕು. ಅದನ್ನು ಓದಿದವರು ಮೊದಲಿಗಿಂತ ಬೇರೆಯದ್ದೇ ವ್ಯಕ್ತಿತ್ವ ಹೊಂದಿದವರಾಗಿರಬೇಕು. ಅಂತಹ   ಕಾವ್ಯ ಶ್ರೇಷ್ಠ ಕಾವ್ಯ ಎನಿಸಿಕೊಳ್ಳುತ್ತದೆ .  ಕಾವ್ಯದಲ್ಲಿ ಭಾವದ ಅತೀ ಸಾಮಾನ್ಯತೆ ಇದ್ದರೆ ಅದು ಕಾವ್ಯದ ದೋಷ. ಇದರ ಸೀಮೋಲ್ಲಂಘನ ಮಾಡಬೇಕು. ಅಂತೆಯೇ ಕಾವ್ಯದಲ್ಲಿ ಅಲಂಕಾರ ಅತಿಯಾದರೆ ಅದೂ ಕೂಡ ದೋಷ. ಧ್ವನಿ ಅತಿಯಾದರೆ ಕಾವ್ಯದ ಪ್ರಭಾವ ಕುಗ್ಗುತ್ತದೆ. ಈ ವಾಸ್ತವತೆಯ ಅರಿವು ಪ್ರತಿಯೊಬ್ಬ ಕವಿಗೂ ಇರಲೇ ಬೇಕಾಗುತ್ತದೆ.                ಅತಿಯಾದ ಕಾವ್ಯಪ್ರೀತಿ ,ಭೂಮಿ ಪ್ರೀತಿ, ಮನುಷ್ಯ ಪ್ರೀತಿ ಹೊಂದಿರುವ ರಾಮಣ್ಣ  ಅಲ್ಮರ್ಸಿಕೇರಿಯವರು’ಕೂರಿಗೆ ತಾಳು’ ಅನ್ನುವ ವಿಶಿಷ್ಟವಾದ ಹಾಗು ಅಪ್ಪಟ ಗ್ರಾಮ್ಯ ಭಾಷೆಯ ಸೊಗಡು ಇರುವ ಕಾವ್ಯ ಸಂಕಲನ ಹೊರತಂದಿದ್ದಾರೆ. ಸಂಕಲನದ ಹೆಸರೇ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಡಿ.ರಾಮಣ್ಣ ಅಲ್ಮರ್ಸಿಕೇರಿಯವರ ಈ ಸಂಕಲನ ಅವರ ಅನುಭವ, ಕೃಷಿ ಬದುಕಿನ ಒಡನಾಟ, ತನ್ನೂರಿನ ಅದಮ್ಯ ಪ್ರೇಮ,ಭವಬಂಧನದ ರೀತಿನೀತಿಗಳನ್ನು ತಮ್ಮ ಕವಿತೆಗಳಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.ಕೊಯ್ದು,ಕೊರೆದು,ಕೂಡಿಟ್ಟುಒಕ್ಕಲಿಮಾಡಿ,ಸುಗ್ಗಿ ಮಾಡುತಹಂತಿ ಹಾಡು ಹಾಡಿಬಂಡಿಗೆ ಬಲವಾದ ಹೋರಿ ಹೂಡಿನೂರು ಚೀಲದ ಹಗೇವು ತುಂಬಿಸಿಗರ್ವದಿಂದ ಬೀಗುತ್ತಿದ್ದರು ನನ್ನೂರಿನ ಜನರು”ಅಂತ ತನ್ನೂರಿನ ಜನರ ಬಗ್ಗೆ ಅಭಿಮಾನದಿಂದ ಕವಿ ಹೇಳಿದ್ದಾರೆ. ಜನ್ಮಕ್ಕೆ ಕಾರಣನಾದ ಅಪ್ಪನೆಂದರೆ ಎಲ್ಲಾ ಮಕ್ಕಳಿಗೂ ಅಪ್ಯಾಯಮಾನ. ತೋಳುಗಳಲ್ಲಿ ಅಪ್ಪಿ ಬದುಕಿನಲಿ ಭದ್ರತೆಯ ಭಾವ ಬಿಂಬಿಸಿ, ಕೈ ಹಿಡಿದು ತಪ್ಪು ಹೆಜ್ಜೆಯ ಜೊತೆ ಹೆಜ್ಜೆ ಬೆರೆಸಿ ಹೊರ ಜಗತ್ತಿಗೆ ತಮ್ಮನ್ನು ಪರಿಚಯಿಸುವ ಅಪ್ಪನೆಂದರೆ ಪುಳಕ, ಅಪ್ಪನೆಂದರೆ ಜಗದ ಸಿರಿಯನ್ನೆಲ್ಲ ಬೊಗಸೆ ಬೊಗಸೆಯಲಿ ಮೊಗೆದು ಕೊಟ್ಟವನು. ಅಪ್ಪನೆಂದರೆ ಬದುಕಿನಲಿ ಚೈತನ್ಯ ತುಂಬಿದವನು. ಅಪ್ಪನೆಂದರೆ ಬೆರಗುಗಣ್ಣಿನಲಿ ಪ್ರಪಂಚ ನೋಡುವಂತೆ ಮಾಡಿದವನು , ತಪ್ಪು ತಪ್ಪು ಹೆಜ್ಜೆ ಇರಿಸುವಾಗ ಕೈ ಹಿಡಿದು ನಡೆಸಿದವನು, ಹೆಗಲ ಮೇಲೆ ಕೂರಿಸಿಗೊಂಡು ಹಾದಿಯುದ್ದಕ್ಕೂ ನಡೆದವನು, ಬಿದ್ದು ಗಾಯ ಗೊಂಡಾಗ ಮೈ ದಡವಿ ರಮಿಸಿದವನು, ಹೊಳೆಯಲ್ಲಿ ಈಜು ಕಲಿಸಿದವನು, ಮಳೆಯಲ್ಲಿ ನೆನೆದು ಜ್ವರ ಬರಿಸಿಕೊಂಡಾಗ ಅಮ್ಮನಂತೆ ಸೇವೆ ಮಾಡಿದವನು ಹೀಗೆ ಬದುಕಿನ ಒಂದೊಂದು ಮಜುಲುಗಳಲ್ಲೂ ತನ್ನ ಛಾಪು ಮೂಡಿಸಿ “ನಿನ್ನಂತ ಅಪ್ಪ ಇಲ್ಲಾ” ಅಂತ ಅನ್ನಿಸಿಕೊಂಡಂತಹ ಅಪ್ಪ ಕವಿಯ ಬದುಕಿನಲ್ಲು ಮಹತ್ವದ ಸ್ಥಾನ ಪಡೆದು ಗೆಳೆಯನಂತೆ, ತಾಯಿಯಂತೆ, ಗುರುವಂತೆ, ಮಾರ್ಗದರ್ಶಿಯಂತೆ, ಹಿತೈಷಿಯಂತೆ ಮಕ್ಕಳ ಬಾಳಿನಲ್ಲಿ ಬೆಳಕಾಗಿ ಬೆಳಕು ತಂದವರು.ಮಗನಿಗಾಗಿ ಏನೆಲ್ಲಾ ಕಷ್ಟಪಟ್ಟ ಅಪ್ಪ ಕೊನೆಗೆ“ಹೂಡುವ ಎತ್ತು ಮಾರಿ ಮನೆಯ ಹೊಸ್ತಿಲುದಾಟುವಾಗ ಎಡವಿ ಬಿದ್ದು ನಿಟ್ಟುಸಿರು ಬಿಟ್ಟುಕಣ್ಣು ಮುಚ್ಚಿ ನನ್ನ ಮಗ ಚೆನ್ನಾಗಿ ಓದಬೇಕೇಂದುಕನವರಿಸುತ್ತಾ ಜೀವಬಿಟ್ಟ ಅಪ್ಪನಹತ್ತಾರು ಪ್ರಶ್ನೆಗಳಿಗೆಮಗ ಮಾತ್ರ ಉತ್ತರ”ಹೃದಯ ವಿದ್ರಾವಕ ಈ ಸನ್ನಿವೇಶ,ಸಂದರ್ಭ ಓದುಗರ ಮನಸ್ಸನ್ನು ಕರಗಿಸಿ ಕಣ್ತುಂಬಿಸಿ ಬಿಡುತ್ತದೆ.ಛಲಗಾತಿ ಗೆಳತಿಯೆಂದರೆ ಕವಿಗೆ ಪ್ರೀತಿಯ ಕಡಲು,ಚಂದ್ರಮಾನ ಬೆಳಕು ಚೆಲ್ಲಿದವಳು,ಎದೆ ಸೆಟೆದು ನಿಂತ ಛಲಗಾತಿ ಗೆಳತಿ , ಹೀಗೆಲ್ಲ ಇರುವ ಗೆಳತಿಗೆ ಹೀಗೆ ಹೇಳುತ್ತಾರೆ.ಬೆಳೆದು ಬೆಟ್ಟವಾಗಬೇಕೆಂಬಮಹದಾಸೆಯ ಕನಸು ಹೊತ್ತುನಡೆವ ಅವಳು ನಿಗಿನಿಗಿಕೆಂಡದಂತಹ ಸೂರ್ಯನಾಗುವಾಸೆಕಡುಕಷ್ಟ ಪೊರೆದು ಸುಖದೆಡೆಗೆಹೆಜ್ಜೆ ಹಾಕುವ ಗಳಿಗೆನಾ ಸಾಕ್ಷಿ ಆಗಬೇಕೆಂಬ ಆಸೆ ಹೊತ್ತವನು ಎಂದು ಬಯಸುತ್ತಾರೆ.ಜಾತಿ ಭೂತದ ಬಗ್ಗೆಯು ಕವಿಗೆ ತೀವ್ರ ಅಸಮಾಧಾನವಿದೆ.ಮುಗ್ಧಮನಸ್ಸುಗಳನ್ನು ಒಡೆಯುವ ಮತಾಂಧರನ್ನು ಕಂಡಾಗ ಕೆರಳಿ ಕೆಂಡವಾಗುವ ಕವಿಹಗಲೆಲ್ಲ ನಮ್ಮನ್ನಗಲದಹಾಲು ಬಾನುಂಡು ಅಕ್ಕರೆಯ ಮಾತಾಡಿದಿನವಿಡಿ ದುಡಿಸಿಕೊಂಡುಕತ್ತಲ ರಾತ್ರಿಯಲ್ಲಿ ಜಾತಿ ಲಾಬಿ ಮಾಡುವರಾಕ್ಷಸರನ್ನು ಕಂಡು ನಡುಗಿ ಹೋಗಿದ್ದೇನೆಎಂದು ಭೀತರಾಗಿ ಸ್ವಾರ್ಥ ಅವಕಾಶವಾದಿಗಳ ಕಂಡು ದಂಗು ಬಡಿದು ನಯವಂಚಕರ ವಂಚನೆಗೆ ರೋಸಿಹೋಗಿದ್ದಾರೆ.ಬರೀ ನಿರಾಸೆ,ಸಂಕಟ ನೋವು ಮಾತ್ರ ತೋರಿದೆ ಆಶಾವಾದಿಯಾಗುತ್ತಾ ಹೋಗುತ್ತಾರೆ. ಈ ಪ್ರಪಂಚದ ಎಲ್ಲಾ ದ್ವೇಷ, ಅಸೂಯೆ, ಸ್ವಾರ್ಥ,ಮೋಹ , ಮತ್ಸರ ಮಾಯವಾಗಿ, ಕೋಮುಗಲಭೆ,ಜಾತಿಸಂಘರ್ಷಗಳ ದುರಂತ ದೂರಾಗಿ ಪ್ರೀತಿ ,ಮಮತೆ ಮಾನವೀಯತೆ ಹೊಳೆಯಾಗಿ ಹರಿದುಅಣ್ವಸ್ತ್ರಗಳು ಸುಟ್ಟು ಬೂದಿಯಾಗಿಬಂದೂಕಿನ ಬಾಯಿಯ ಸದ್ದಡಗಿಯಾರಿಗೂ ಬೇಕಿಲ್ಲದ ಯುದ್ಧಗಳು ಕೊನೆಯಾಗಿ ಅನ್ನ ನೀರು ಅರಿವೆ ಅಕ್ಷರಸೂರು ಸರ್ವರಿಗೂ ಸಿಗುವಂತಾಗಲಿಎಂದು ಕವಿ ಆಶಿಸುತ್ತಾರೆ.ಮಾನವೀಯತೆ, ಮಾನವೀಯ ಜೀವ ಸೆಲೆ ಬತ್ತಿಹೋದ ವರ್ತಮಾನದ ಮರುಭೂಮಿಯಲ್ಲಿ ಮನುಷ್ಯ ಸಂಬಂಧಗಳನ್ನು ಹುಡುಕಿ ಕಾವ್ಯದ ಮೂಲಕ ಪ್ರೀತಿಯನ್ನು ಹಂಚಿ ಮನಸುಗಳ ಬೆಸೆಯುವ ಬಯಕೆ ಕವಿ ರಾಮಣ್ಣನವರದು .ಪ್ರತಿಯೊಬ್ಬ ಕವಿಯು ಪ್ರೀತಿ, ವಿಶ್ವಾಸ ಹಾಗೂ ಮನುಷ್ಯ ಪ್ರೀತಿಯನ್ನು ಎದೆಯಲ್ಲಿ ಕಾಪಿಟ್ಟುಕೊಳ್ಳುವ ಮನೋಧರ್ಮ ಹೊಂದಬೇಕಾಗಿದೆ ಎನ್ನುವ ಇವರ ವಿಶ್ವಪ್ರೇಮದ ಭಾವ ಆದರ್ಶ ಹಾಗೂ ಅನುಕರಣೀಯವಾಗಿದೆ.ದೀರ್ಘ ಕವಿತೆ ಬರೆಯುವ ಶಕ್ತಿ ಹೊಂದಿರುವ ಕವಿ ರಾಮಣ್ಣ ರವರಿಗೆ ಕಂಡುಕೊಂಡ ಎಲ್ಲವನ್ನೂ ಕವಿತೆಯಾಗಿಸುವ ತವಕ, ಹಾಗಾಗಿ ಕೆಲವೊಮ್ಮೆ ವಾಚ್ಯವಾಗುವ ಲಕ್ಷಣಗಳು ಕಂಡರೂ ಅವರ ಅನುಭವ, ನಿರಂತರ ಅಧ್ಯಯನ,ಕಾವ್ಯ ಶ್ರದ್ಧೆ, ಆಸಕ್ತಿ ಇವೆಲ್ಲವೂ ಅವರನ್ನು ಕವಿಯ ಸಾಲಿನಲ್ಲಿ ನಿಲ್ಲಿಸಲಡ್ಡಿ ಮಾಡದು.ಇವರ ಈ ಉತ್ಸಾಹ, ಧ್ಯಾನಸ್ಥತೆ, ಅಧ್ಯಯನ ಶೀಲತೆ ಮತ್ತಷ್ಟು ಹೆಚ್ಚಾಗಿ ಶ್ರೇಷ್ಠ ಕಾವ್ಯದ ಕೊಡುಗೆ ಸಾಹಿತ್ಯ ಕ್ಷೇತ್ರಕ್ಕೆ ದಕ್ಕಲಿ ಎಂದು ಆಶಿಸುತ್ತೇನೆ. ****** ಎನ್ ಶೈಲಜಾ ಹಾಸನ

ಕೂರಿಗಿ ತಾಳು Read Post »

ಪುಸ್ತಕ ಸಂಗಾತಿ

ಮೌನಯುದ್ಧ

ಪುಸ್ತಕ ಪರಿಚಯ ಮೌನ ಯುದ್ದ(ಕವನಸಂಕಲನ) ಕವಿ: ಸುರೇಶ್ ಎಲ್. ರಾಜಮಾನೆ ಪ್ರಕಾಶನ: ವಿಶ್ವ ಖುಷಿ ಪ್ರಕಾಶನ, ನವನಗರ ಬಾಗಲಕೋಟ. ಪುಟಗಳು: 92  ಬೆಲೆ: 120/- ಪ್ರಕಟಿತ ವರ್ಷ: 2018 ಕವಿಯ ಸಂಪರ್ಕ ಸಂಖ್ಯೆ: 8105631055          ಗಂಭೀರ ಕಾವ್ಯಾಧ್ಯಯನ ಮೂಲಕ ನಿರಂತರ ಅನುಸಂಧಾನದಲ್ಲಿ ತೊಡಗಿ ಕಾವ್ಯ ರಚನೆ ಕೃಷಿಗೆ ಮುಂದಾಗಿರುವ ರನ್ನಬೆಳಗಲಿಯ ಯುವಕವಿ ಸುರೇಶ್ ರಾಜಮಾನೆಯವರು “ಸುಡುವ ಬೆಂಕಿಯ ನಗು” ಎನ್ನುವ ಕೃತಿಯನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. ಈಗ “ಮೌನಯುದ್ಧ”ದ ಮೂಲಕ ನಮ್ಮೊಂದಿಗೆ ಮಾತಿಗಿಳಿದಿದ್ದಾರೆ.          ಇಲ್ಲಿ ಕವಿ ಹೇಳುವಂತೆ ‘ನನ್ನ ಭಾವನೆಗಳೊಂದಿಗೆ ಮತ್ತೊಬ್ಬರ ಭಾವನೆಗಳನ್ನು ಮನಸ್ಸಿಗೆಳೆದುಕೊಂಡು ಮಾತಾಗುತ್ತೇನೆ, ಕವಿತೆಯ ಜೊತೆ ನಾನು ನಾನಾಗಿ ಹೋಗುತ್ತೆನೆ. ಭಾವವನ್ನು ಪ್ರೀತಿಸುವಷ್ಟೆ ಭಾವೊದ್ವೇಗವನ್ನು, ಸಂತೋಷವನ್ನು ಪ್ರೀತಿಸುವಷ್ಟೆ ಸಂಕಟವನ್ನು ಪ್ರೀತಿಸಬೇಕೆಂದು’ ಹೇಳುವ ಕವಿಯ ಮಾತು ಹೃದಯಸ್ಪರ್ಶಿಯಾಗಿದೆ. ‘ಬಾಚಿದಷ್ಟು ಅಗಲವಾದ ಹೆಗಲು ಬಗೆದಷ್ಟು ಭಾರವಾದ ಭಾವನೆಗಳ ಒಡಲು ನನ್ನ ಕವಿತೆ’ ಎನ್ನುವ ಕವಿ ಮನಸ್ಸು ‘ಅಂಗಳದಿ ಮಲ್ಲಿಗೆ ಬಾಡಿ ನಿಂತಿದೆ ಮೆಲ್ಲಗೆ ವಿಷದ ನೀರೆರೆದವರು ಯಾರು?’ ಎಂದು ಪ್ರಶ್ನಿಸುತ್ತದೆ. ‘ಬೆಳಗಲಿ ದೀಪ ಬಡವರ ಬಾಗಿಲಲಿ ಗುಡಿಸಲಿನಲಿ’ ಎಂದು ನಿರೀಕ್ಷಿಸುತ್ತದೆ.          “ಮೌನಯುದ್ಧ” ಕವನ ಸಂಗ್ರಹದಲ್ಲಿ ಓಟ್ಟು 56 ಕವಿತೆಗಳಿವೆ. ಕವಿ ಡಾ. ಟಿ. ಯಲ್ಲಪ್ಪ ಅವರ ಮೌಲಿಕವಾದ ಮುನ್ನುಡಿ ಹಾಗೂ ಗುರುಮಾತೆ ಲಲಿತಾ ಹೊಸಪ್ಯಾಟಿ ಅವರ ಬೆನ್ನುಡಿ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ದಮನಿತರ ನೋವು, ನಿರಾಶೆ, ಹಸಿವು, ಬಡತನ, ಪ್ರೀತಿ-ಪ್ರೇಮ ಹಾಗೂ ಮಾನವೀಯ ಸಂವೇದನೆಗಳು ಕವಿಯ ಜೀವನ ಸಂಗ್ರಾಮದ ಏರಿಳಿತಗಳು ಇಲ್ಲಿನ ಕವಿತೆಗಳ ವಸ್ತು-ವಿಷಯಗಳಾಗಿವೆ.           ವರಕವಿ ಬೆಂದ್ರೆ ಅವರ ಗಾಢ ಪ್ರಭಾವಕ್ಕೆ ಒಳಗಾದ ಎಲ್ಲಾರ್ ಸೂರ್ಯ ಅವರು ‘ನನ್ನೊಳಗಿನ ನಾನು’ ಕವಿತೆಯಲ್ಲಿ ಅಪ್ಪನ ಹಸಿವು ಬಡತನದ ನೆನಪುಗಳನ್ನು ಕವಿತೆಯಾಗಿ ಹಸಿರಾಗಿಸಿದ್ದಾರೆ. ‘ಮಗುವಿನ ನಗುವಿನ ಗೆದ್ದಷ್ಟು ಖುಷಿ ಹಸಿವಿನ ಹೊಟ್ಟೆಗೆ ಉಂಡಷ್ಟು ಖುಷಿ’ ಎನ್ನುವ ಕವಿ ನೈಜ ಬದುಕಿನ ವಾಸ್ತವಿಕತೆಯನ್ನು ಓದುಗರೆದುರು ಬಿಚ್ಚಿಡುತ್ತಾರೆ. ಹಾಗೆಯೇ ನೀರಾಭರಣ ಸುಂದರಿ, ಸ್ವರಭಾರ, ಹೊಟ್ಟೆಯೊಳಗಿನ ಉರಿ ಹಾಗೂ ನನ್ನವ್ವ ಕವಿತೆಗಳು ಓದುಗರನ್ನು ಚಿಂತನೆಗೆ ತೊಡಗಿಸುತ್ತವೆ.          ಸಾಮಾಜಿಕ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯ ವಿರುದ್ಧ ಕವಿಹೃದಯ “ಮೌನಯುದ್ಧ”ಕ್ಕೆ ಸಿದ್ಧವಾಗಿದೆ. ‘ಸಾಹಸ ಭೀಮ ಶಕ್ತಿಯನು ಸಾಗರವಾಗಿಸಿ ವಿಜಯದ ಕಹಳೆಯ ಮುಗಿಲ ಮುಟ್ಟಿಸಿ’ ಎನ್ನುವಲ್ಲಿ ಶಕ್ತಿಕವಿ ರನ್ನನ ಪ್ರಭಾವ ಎದ್ದು ಕಾಣುತ್ತದೆ.‍          ಕಾವ್ಯದ ಅಂತಃಸತ್ವವನ್ನು ಹೀರಿ ಮೌಲಿಕ ಕವಿತೆಗಳನ್ನು ಬರೆಯುವ ಕವಿ ಸುರೇಶ್ ರಾಜಮಾನೆಯವರಿಗೆ ಬರುವ ನಾಳೆಗಳಲ್ಲಿ ಉಜ್ವಲ ಭವಿಷ್ಯವಿದೆ. ************************ ಬಾಪು ಖಾಡೆ

ಮೌನಯುದ್ಧ Read Post »

ಪುಸ್ತಕ ಸಂಗಾತಿ

ಕಣ್ಣ ಮುಂದಿನ ಎರಡು ಮೌಲ್ಯಗಳು -ಎರಡು ದಾರಿಗಳು

ಪುಸ್ತಕ ವಿಮರ್ಶೆ ನಾಗರಾಜಹರಪನಹಳ್ಳಿ ಬಹಳ ದಿನಗಳಿಂದ ನನ್ನ ಕಾಡುತ್ತಿರುವ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವೆ. ಒಂದು ದೇವನೂರು ಮಹಾದೇವ ಅವರ `ಎದೆಗೆ ಬಿದ್ದ ಅಕ್ಷರ’ ಕೃತಿ ಹಾಗೂ ಇನ್ನೊಂದು ಸಾರ್ವಜನಿಕರ ಕವಿ ಎಂದೇ ಹೆಸರಾಗಿದ್ದ ಡಾ.ಸಿದ್ದಲಿಂಗಯ್ಯ ಅವರ `ನನ್ನ ಜನಗಳು ಮತ್ತು ಇತರೆ ಕವಿತೆಗಳು’. ಕನ್ನಡದಲ್ಲಿ ಬಹಳ ಮಹತ್ವದ ಎರಡು ಕೃತಿಗಳ ಹೆಸರು ಹೇಳಿ ಅಂತ ಯಾರಾದರೂ ನನ್ನ ಪ್ರಶ್ನಿಸಿದರೆ ನಾನು ಮೊದಲು ಹೇಳುವ ಕೃತಿಗಳ ಹೆಸರು `ಎದೆಗೆ ಬಿದ್ದ ಅಕ್ಷರ’, `ನನ್ನ ಜನಗಳು’ ಕವಿತಾ ಸಂಕಲನ. ಯಾಕೆ ಈ ಎರಡು ಕೃತಿಗಳು ಮಹತ್ವದವು ? ಯಾಕೆ ಈ ಕೃತಿಗಳನ್ನು ಓದಬೇಕು ? ಎಂಬುದಕ್ಕೆ ಒಂದಿಷ್ಟು ಹಿನ್ನೆಲೆ ಕಾರಣಗಳನ್ನು ನೋಡಬೇಕಾಗುತ್ತದೆ. ಹಾಗೆಯೇ ದೇವನೂರು ಮತ್ತು ಡಾ.ಸಿದ್ದಲಿಂಗಯ್ಯ ಇಬ್ಬರಲ್ಲಿ ಯಾರು ಇಷ್ಟ ಎಂದು ಪ್ರಶ್ನಿಸಿದರೆ, ದೇವನೂರು ನನ್ನ ಮೊದಲ ಉತ್ತರ. ಕಾರಣ ಇದೆ. ವಿವರಿಸುವೆ. ಇಬ್ಬರದೂ ಒಂದೊಂದು ದಾರಿ. ಇಬ್ಬರೂ ಬದುಕಿರುವಾಗಲೇ ಇತಿಹಾಸ ಸೃಷ್ಟಿಸಿದವರು. ಇಬ್ಬರಲ್ಲೂ ಅಗಾಧ ಪ್ರತಿಭೆ ಇದೆ. ಇಬ್ಬರೂ ಕರ್ನಾಟಕದ ಜನ ಜೀವನದ ಮೇಲೆ, ಶೋಷಿತರ ಮೇಲೆ, ದುಡಿಯುವ ಜನರ, ದಲಿತ ಸಮುದಾಯದ ಅಕ್ಷರಸ್ಥರ  ಆಲೋಚನೆಗಳ ಮೇಲೆ ಪ್ರಭಾವ ಬೀರಿದವರು. ಒಬ್ಬರು ಅಧಿಕಾರದ ಬೆನ್ನು ಹತ್ತಿದವರು. ಇನ್ನೊಬ್ಬರು ಅಧಿಕಾರ ಕೇಂದ್ರವೇ ತಮ್ಮ ಮನೆಯ ಬಳಿಗೆ ಬರುವಂತೆ ಬದುಕಿದವರು. ಮುಖ್ಯಮಂತ್ರಿಯೇ ಮನೆಬಾಗಿಲಿಗೆ ಬಂದು ಮಾತಾಡಿಕೊಂಡು, ಸಲಹೆ ಕೇಳಿಕೊಂಡು ಹೋಗುವಂತೆ ಬದುಕಿದವರು. ಒಬ್ಬರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ತಾತ್ವಿಕ ಕಾರಣಕ್ಕೆ ನಿರಾಕರಿಸಿದವರು. ಮತ್ತೊಬ್ಬರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷ ಸ್ಥಾನವನ್ನು ಅಪ್ಪಿಕೊಂಡವರು. ಒಬ್ಬರು ಸಮಾಜದ ಮತ್ತು ಸರ್ಕಾರದ ನಡೆಗಳಿಗೆ ಪ್ರತಿಕ್ರಿಯಿಸುತ್ತಾ ಸಾಗಿದವರು. ಮತ್ತೊಬ್ಬರು ಎಲ್ಲಾ ಘಟನೆಗಳಿಗೂ ಪ್ರತಿಕ್ರಿಯಿಸಿದೇ ಮೌನಿಯಾದವರು. ಇದೆಲ್ಲಾ  ಸಿದ್ಧಲಿಂಗಯ್ಯ ಮತ್ತು ದೇವನೂರು ಸಮಕಾಲೀನರಿಗೆ ಗೊತ್ತಿದೆ. ಆದರೆ ಅವರ ನಂತರದ ತಲೆಮಾರಿಗೆ, ಇವತ್ತಿನ ಯುವ ಜನಾಂಗಕ್ಕೆ ಈ ಇಬ್ಬರು ಬರಹದ ಬಗ್ಗೆ ಸ್ವಲ್ಪವಾದರೂ ಗೊತ್ತಿರಬಹುದು, ಆದರೆ ಅವರ ಬದುಕಿನ ದಾರಿಯ ಬಗ್ಗೆ, ನಿಲಯವುಗಳ ಬಗ್ಗೆ, ಸವೆಸಿದ ಬದುಕಿನ ವಿವರಗಳು ಗೊತ್ತಿರಲಿಕ್ಕಿಲ್ಲ.ಜೊತೆಗೆ  ಕೆಲ ಸಂಗತಿಗಳು ಮರೆತು ಹೋಗಬಾರದು ಎಂಬ ಕಾರಣಕ್ಕೆ ಇಲ್ಲಿ ಪ್ರಸ್ತಾಪಿಸುವೆ. ಕಾರಣ ನಮ್ಮ ಕಣ್ಣ ಮುಂದಿರುವ ಎರಡು ಭಿನ್ನ  ದಾರಿಗಳ ಆಯ್ಕೆಯಲ್ಲಿ ಯಾವ ಹಾದಿಯಲ್ಲಿ ಸಾಗಬೇಕು ಎಂಬ ಸ್ಪಷ್ಟತೆ ಇದ್ದರೆ ಒಳಿತು. ಇವತ್ತಿನ ಆಧುನಿಕ ಯುಗದಲ್ಲಿ ವೇಗವಾಗಿ ಪ್ರಸಿದ್ಧಿ ಪಡೆವ  ಮನಸ್ಥಿತಿಯಲ್ಲಿ ಕಠಿಣ ಹಾದಿಯನ್ನು, ಆದರ್ಶದ ಮೌಲ್ಯದ ಹಾದಿಯನ್ನು ಹಿಡಿಯುವವರು ಎಷ್ಟು ಜನ ಇದ್ದಾರೆ ? ಯಾರಿಗೆ ಬೇಕಾಗಿದೆ ಕಠಿಣ ಹಾದಿ ?  ಈಗ ಕಠಿಣ ಹಾದಿ ಬೇಕೋ,  ಅವಕಾಶವಾದಿ ದಾರಿ ಬೇಕೋ ಎಂಬ ನಿರ್ಣಯ ಹೊಸ ತಲೆಮಾರಿಗೆ ಬಿಟ್ಟದ್ದು. ದೇವನೂರು ಮಹಾದೇವ ಅವರ ಹೆಸರನ್ನು ನಾನು ಮೊದಲು ಕೇಳಿದ್ದು ೧೯೯೧ರಲ್ಲಿ. ಅವರ ನೀಳ್ಗತೆ ಒಡಲಾಳ ಎಂ.ಎ.ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು. ಹಸಿವು ಮತ್ತು ಆಸ್ತಿತ್ವದ ಪ್ರಶ್ನೆಯನ್ನು ಕಟ್ಟಿಕೊಡುವ ಹಾಗೂ ದಲಿತರ ಹಸಿವಿನ ಹೋರಾಟವನ್ನು ಒಡಲಾಳದ  ಸಾಕವ್ವನ ಧ್ವನಿಯ ಮೂಲಕ ಕಟ್ಟಿಕೊಡುವ ಲೇಖಕ ಹೊಸ ಲೋಕವನ್ನು ಕನ್ನಡಿಗರ ಮುಂದೆ ಇಟ್ಟಿದ್ದರು. ಇದಕ್ಕೂ ಮುನ್ನ ದ್ಯಾವನೂರು ಕಥಾ ಸಂಕಲನ ಕನ್ನಡ ಸಾಹಿತ್ಯದಲ್ಲಿ ಸಂಚಲನ ಮೂಡಿಸಿತ್ತು. ಕುಂಬಾರ ವೀರಭದ್ರಪ್ಪನವರು ಆ ಹೊತ್ತಿಗಾಗಲೇ ದಲಿತರ ಹಸಿವಿನ ಕತೆಯನ್ನು ಠೊಣ್ಣಿ  ಮತ್ತು ಕತ್ತಲನು ತ್ರಿಶೂಲ ಹಿಡಿದ ಕತೆ ಹಾಗೂ  ಇತರ ಕತೆಗಳಲ್ಲಿ ಕಟ್ಟಿಕೊಟ್ಟಿದ್ದರು. ಕುಂವೀ ಕತೆಗಳಲ್ಲಿ ಬರುವ ಆಕ್ರೋಶ, ದೇವನೂರು ಕತೆಗಳಲ್ಲಿ ಭಿನ್ನವಾಗಿದ್ದರೂ, ಭಾಷಾ ಬಳಕೆ ಮತ್ತು ಕತೆ ಕಟ್ಟುವ ಮತ್ತು ಪ್ರಾಮಾಣಿಕ ಅಭಿವ್ಯಕ್ತಿಯಿಂದ ದ್ಯಾವನೂರು ಕತೆಗಳು ಕನ್ನಡದಲ್ಲಿ ಮೈಲಿಗಲ್ಲಾದವು. ದೇವನೂರು ಅವರ “ಎದೆಗೆ ಬಿದ್ದ ಅಕ್ಷರ” ಕೃತಿಯಂತೂ ಕನ್ನಡ ಬರುವವರೆಲ್ಲಾ ಓದಲೇ ಬೇಕಾದ ಕೃತಿ. ಎದೆಗೆ ಬಿದ್ದ ಅಕ್ಷರದಲ್ಲಿ ಬರುವ ಆರಂಭದ  ಲೇಖನಗಳಾದ  ನಾನು ಚಿತ್ರಿಸಿದಂತೆ ನನ್ನ ದೇವರು, ನನ್ನ ದೇವರು, ಮನವ ಕಾಡುತಿದೆ, ದಯೆಗಾಗಿ ನೆಲ ಒಣಗಿದೆ, ಮೂರ್ಛಾವಸ್ಥೆಯಲ್ಲಿ ಕಾರುಣ್ಯ, ಕೇವಲ ಮನುಷ್ಯನಾಗುವುದೆಂದರೆ, ಅಸ್ಪೃಶ್ಯತೆ ನಿನ್ನ ಮೂಲ ಎಲ್ಲಿ? ಎಂಬ ಪುಟ್ಟ ಪುಟ್ಟ ಬರಹಗಳನ್ನು ಓದಲೇ ಬೇಕು. ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು…ಎಂಬ ಆಶಾವಾದ ದೇವನೂರು ಅವರದು. ನನ್ನದು ಕೂಡಾ.  ಅತ್ಯಂತ ಕಡಿಮೆ ಬರೆದು ಅಂತರಾಷ್ಟ್ರೀಯ ಮಟ್ಟದಲ್ಲಿ ದೇವನೂರು ಭಾರತೀಯ ಸಾಹಿತ್ಯಕ್ಕೆ ಹೆಸರು ತಂದು ಕೊಟ್ಟಿದ್ದರು. ಮೈಸೂರಿನ ಸಿಐಐಎಲ್ ನಲ್ಲಿ ಕೆಲಸ ಮಾಡುತ್ತಿದ್ದ ದೇವನೂರು ಕೆಲಸಕ್ಕೆ ರಾಜೀನಾಮೆ ನೀಡಿ ಕೃಷಿಯನ್ನು ಆಯ್ಕೆ ಮಾಡಿಕೊಂಡರು. ಶ್ರವಣಬೆಳಗೋಳದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಅವರು ಆಯ್ಕೆಯಾಗಿದ್ದರು. ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುವುದಿಲ್ಲವಾದರೆ, ಅಧ್ಯಕ್ಷತೆ ವಹಿಸಿ ಮಾತನಾಡುವುದು ವ್ಯರ್ಥ ಎಂದು ಅವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವಹಿಸಲು ನಿರಾಕರಿಸಿದರು. ಹೀಗೆ ಆದರ್ಶದ ಹಾದಿಯನ್ನು ದೇವನೂರು ಆಯ್ಕೆ ಮಾಡಿಕೊಂಡರು. ದಲಿತ ಚಳುವಳಿಯನ್ನು ಪ್ರಭಾವಿಸಿದರು. ನಾಡಿನ ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಲು ಯತ್ನಿಸಿದರು. ಈಗಲೂ ಚಲನಶೀಲ ರಾಜಕೀಯ ಪಕ್ಷ ಕಟ್ಟಲು ಅವರ ಪ್ರಯತ್ನ ನಿಂತಿಲ್ಲ. ಇನ್ನು ಸಿದ್ಧಲಿಂಗಯ್ಯ ೧೯೭೫ ರಲ್ಲಿ ಹೊಲೆ ಮಾದಿಗರ ಹಾಡು ಬರೆದರು. ೧೯೭೯ರಲ್ಲಿ ಸಾವಿರಾರು ನದಿಗಳು ಕಾವ್ಯವನ್ನು ಕನ್ನಡಕ್ಕೆ, ಕರ್ನಾಟಕಕ್ಕೆ ನೀಡಿದರು. ಆಗ ಸಿದ್ದಲಿಂಗಯ್ಯ ಕರ್ನಾಟಕದ ಸಾರ್ವಜನಿಕ ಕವಿ ಎಂದೇ ಹೆಸರಾಗಿದ್ದರು. “ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತವರು,ವದೆಸಿಕೊಂಡು ವರಗಿದವರು ನನ್ನ ಜನಗಳು.ಹೊವಲನುತ್ತು ಬಿತ್ತೋರು ಬೆಳೆಯ ಕುಯ್ದು ಬೆವರೋರು, ಬಿಸಿಲಿನಲ್ಲಿ ಬೇಯೋರು ನನ್ನ ಜನಗಳು”.  “ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು ಕಪ್ಪು ಮುಖದ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು ಹಗಲ ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು ಕ್ರಾಂತಿಯ ಬಿರುಗಾಳಿಯಲ್ಲಿ ಕೈ ಬೀಸಿದ ನನ್ನ ಜನ ಛಡಿಯ ಏಟು ಹೊಡೆದವರ ಕುತತಿಗೆಗಳ ಹಿಡಿದರು ಪೊಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು  ವೇದಶಾಸ್ತ್ರ ಪುರಾಣ ಬಂದೂಕದ ಗುಡಾಣ, ತರಗೆಲೆ ಕಸಕಡ್ಡಿಯಾಗಿ ತೇಲಿ ತೇಲಿ ಹರಿದವು  ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು… ಹೀಗೆ… ಸಿದ್ಧಲಿಂಗಯ್ಯನವರ  ಕವಿತೆಯನ್ನು ದಲಿತರ ಹೋರಾಟಕ್ಕೆ ಬಳಸಿದರು. ರೈತ ಹೋರಾಟಗಳಿಗೆ, ಕಾರ್ಮಿಕರ ಹೋರಾಟಗಳಿಗೆ ಸಹ ಸಿದ್ಧಲಿಂಗಯ್ಯನವರ ಕಾವ್ಯ ಬಳಕೆಯಾಯಿತು. ಯಾರಿಗೆ ಬಂತು, ಎಲ್ಲಿಗೆ ಬಂತು, ನಾಲ್ವತ್ತೇಳರ ಸ್ವಾತಂತ್ರ್ಯ ಕವಿತೆಯಂತೂ ಹೋರಾಟಗಾರರ ನಾಲಿಗೆಯ ಶಕ್ತಿಯಾಗಿತ್ತು. ೧೯೭೫ ರಿಂದಾಚೆಗೆ ದಲಿತರು ಹೊಸ ಪ್ರಜ್ಞಾವಂತ ಜನಾಂಗವಾಗಿ ಕರ್ನಾಟಕದಲ್ಲಿ ಸಿದ್ಧಲಿಂಗಯ್ಯನವರ ಕವಿತೆಗಳ  ಎರಕದಲ್ಲಿ ರೂಪುಗೊಂಡರು. ಅದಕ್ಕಾಗಿಯೇ ದಲಿತರ ಮೆರವಣಿಗೆ ಬೀದರ್ ನಿಂದ ಕೋಲಾರದತನಕ ಯಾವುದೇ ಮೂಲೆಯಲ್ಲಿ ನಡೆದರೂ ಅಲ್ಲಿ ಕವಿಯ ಹಾಡುಗಳನ್ನು ಹಾಡುತ್ತಿದ್ದರು. ಅದಕ್ಕಾಗಿಯೇ ಇದು ಸಾರ್ವಜನಿಕ ಕಾವ್ಯದ ಅಂತಿಮ ಯಶಸ್ಸು ಎನ್ನುತ್ತಾರೆ ಕನ್ನಡದ ಖ್ಯಾತ ವಿಮರ್ಶಕ ಡಿ.ಆರ್.ನಾಗರಾಜ್. ಕುತೂಹಲದ ಸಂಗತಿಯೆಂದರೆ ಕವಿ ಸಿದ್ಧಲಿಂಗಯ್ಯನವರ  ಮೊದಲ ಕವಿತೆಗಳಲ್ಲಿ  ಅಂಬೇಡ್ಕರ್,ಮಾರ್ಕ್ಸವಾದ  ಕಾಣುವ ಭಾವನೆಗಳ ಖಾಚಿತ್ಯ  ಅವರ ಎರಡನೇಯ ಹಂತದ ಕಾವ್ಯದಲ್ಲಿಲ್ಲ ಎಂದು ಡಿ.ಆರ್.ನಾಗರಾಜ್ ಗುರುತಿಸಿದ್ದಾರೆ. ಹೌದು. ಮುಂದೆ ರಾಮಕೃಷ್ಣ ಹೆಗಡೆ ಅವರ ಸ್ನೇಹದಿಂದ ವಿಧಾನ ಪರಿಷತ್ತನ್ನು ಸಹ ಸಿದ್ಧಲಿಂಗಯ್ಯ ಪ್ರವೇಶಿಸಿದರು. ಬಿಜೆಪಿ ಅಧಿಕಾರದ ಅವಧಿಯಲ್ಲಿ ಸಹ ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದರು.  ಅನೇಕ ಪ್ರಚಲಿತ ವಿದ್ಯಮಾನಗಳಿಗೆ ಮೌನಿಯಾದರು. ಪಂಪ ಪ್ರಶಸ್ತಿ ಸಹ ಪಡೆದರು. ೨೦೨೦ ಫೆಬ್ರುವರಿಯಲ್ಲಿ ಬನವಾಸಿಯಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಿದ ಸಿದ್ಧಲಿಂಗಯ್ಯ ಪ್ರಭುತ್ವವನ್ನು ಹೊಗಳಿದರು. ಮುಖ್ಯಮಂತ್ರಿಯ ಕಾರ್ಯವೈಖರಿ ಪ್ರಶಂಸಿದರು. ಪ್ರಭುತ್ವದ ಜೊತೆಗಿದ್ದೇ, “ಅರಸರನ್ನು ಒಲೈಸಿ ಬಾಳುವುದು ಕಡು ಕಷ್ಟ” ಎಂದ ಪಂಪನ ಹೆಸರೆತ್ತಲಿಲ್ಲ ನಮ್ಮ ಸಿದ್ಧಲಿಂಗಯ್ಯನವರು.  ಪಂಪನ ಕಾವ್ಯದ ಒಂದೇ ಒಂದು ಸಾಲನ್ನು ಅವರ ಪ್ರಸ್ತಾಪಿಸಲಿಲ್ಲ. ಸಾಹಿತ್ಯದ ಕುರಿತು ಮಾತೇ ಆಡಲಿಲ್ಲ. ದಲಿತ ಚಳುವಳಿಗೆ ದಿಕ್ಕು ತೋರಿಸಿಬೇಕಿದ್ದ ಕ್ರಾಂತಿಕಾರಿ ಕವಿ ಮೌನಕ್ಕೆ ಜಾರಿದರು. ಇದೇ ಕಾಲದ ವಿಪರ್ಯಾಸ. ಎರಡು ಧ್ರುವಗಳು : ಈಗಲೂ ಸರ್ಕಾರಗಳು ಎಡವಿದಾಗ ಅದಕ್ಕೆ ಪ್ರತಿಕ್ರಿಯಿಸುತ್ತಾ ಪ್ರತಿರೋಧವನ್ನು ಕಾಲ ಕಾಲಕ್ಕೆ  ದೇವನೂರು ಮಹಾದೇವ ಎತ್ತುತ್ತಲೇ ಬಂದಿದ್ದಾರೆ. ತಾವು ನಡೆದ ದಾರಿಯಲ್ಲಿ ಉತ್ತರ ಧ್ರುವ, ದಕ್ಷಿಣ ಧ್ರುವಗಳಿಂತಿರುವ ದೇವನೂರು ಮತ್ತು ಸಿದ್ಧಲಿಂಗಯ್ಯ ನಾಡಿನ ಯುವ ಜನತೆಗೆ ಏನು ಸಂದೇಶವನ್ನು ತಮ್ಮ ಬದುಕಿನ ಮೂಲಕ ಹೇಳಿದ್ದಾರೆ ಎಂಬುದು ನಮ್ಮ ಕಣ್ಣಮುಂದಿದೆ. ಆಯ್ಕೆ ಮಾತ್ರ ನಮ್ಮದು… ******************

ಕಣ್ಣ ಮುಂದಿನ ಎರಡು ಮೌಲ್ಯಗಳು -ಎರಡು ದಾರಿಗಳು Read Post »

ಪುಸ್ತಕ ಸಂಗಾತಿ

ನಾಡಿ ಮಿಡಿತದ ದಾರಿ

ಪುಸ್ತಕಪರಿಚಯ ಪುಸ್ತಕ : ನಾಡಿ ಮಿಡಿತದ ದಾರಿ 🩺(ವೈದ್ಯಲೋಕದ ಅನುಭವ ಕಥನಗಳು) ಲೇಖಕರು: ಡಾ|| ಶಿವಾನಂದ ಕುಬಸದಪ್ರಕಾಶನ: ನೀಲಿಮಾ ಪ್ರಕಾಶನಬೆಂಗಳೂರುಪುಟಗಳು: 160ಬೆಲೆ: ರೂ. 130/-ಪ್ರಕಟಿತ ವರ್ಷ: 2019ಲೇಖಕರ ದೂರವಾಣಿ: 9448012767 ವೃತ್ತಿಯಿಂದ ಪರಿಣತ ಶಸ್ತ್ರ ಚಿಕಿತ್ಸಕರಾಗಿ, ಜನಾನುರಾಗಿ ವೈದ್ಯರಾಗಿ, ವಿವಿಧ ವ್ಯಾಧಿಗಳ ಕುರಿತು ಜನತೆಗೆ ಮಾಹಿತಿ ನೀಡುವ ವಕ್ತಾರರಾಗಿ, ಗ್ರಾಮೀಣರ ಮೂಡನಂಬಿಕೆಗಳನ್ನು ಹೋಗಲಾಡಿಸಿ ವೈಜ್ಞಾನಿಕ ಮನೋಭಾವ ಮೂಡಿಸುವ ಆಪ್ತ ಬಂಧುವಾಗಿ, ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣುವ ಕಾಯಕ ಯೋಗಿಯಾಗಿ, ಸೃಜನಶೀಲ ಕವಿ, ಲೇಖಕರಾಗಿ ಒಂದು ಪ್ರದೇಶದ ಒಂದು ಕಾಲಗಟ್ಟದ ಇತಿಹಾಸಕಾರರಾಗಿ, ಎಲ್ಲರನ್ನು ಪ್ರೀತಿ, ಗೌರವ, ವಿಶ್ವಾಸದಿಂದ ಕಾಣುವ ವೈದ್ಯ ಸಾಹಿತಿಯಾಗಿರುವ ಮುಧೋಳದ ಡಾ|| ಶಿವಾನಂದ ಕುಬಸದ ಅವರು ಕಳೆದ ವರ್ಷ ಪ್ರಕಟಿಸಿದ “ನಾಡಿ ಮಿಡಿತದ ದಾರಿ” ಇಂದಿನ ಕೃತಿ ಪರಿಚಯ. ವೈದ್ಯಲೋಕದ ಜೀವನಾನುಭವಗಳ ಸುಂದರ ಇಪ್ಪತ್ನಾಲ್ಕು ಕಥನಗಳು ಇಲ್ಲಿ ದೃಶ್ಯಕಾವ್ಯಗಳಾಗಿವೆ. ಸಂವೇದನಾಶೀಲತೆ, ಮಾನವೀಯತೆ, ಸಾಮಾಜಿಕ ಜಾಡ್ಯಗಳಿಗೆ ಪರಿಹಾರೋಪಾಯ ಇಲ್ಲಿನ ವಿಷಯ ವಸ್ತು. ಲೇಖಕಿ ವೀಣಾ ಬನ್ನಂಜೆ ಅವರ ಅನುಭಾವದ ಮುನ್ನುಡಿ ಹಾಗೂ ಖ್ಯಾತ ಕಥೆಗಾರರಾದ ಕುಂ. ವೀರಭದ್ರಪ್ಪ ಅವರ ಆತ್ಮೀಯತೆಯ ಮಾತುಗಳು ಇಲ್ಲಿ ಮನೋಜ್ಞವಾಗಿ ಮೂಡಿ ಬಂದಿವೆ. ಇಲ್ಲಿರುವ ಎಲ್ಲ ಅನುಭವಾಮೃತದ ಕಥೆಗಳು ಉದಯವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿವೆ. ವರ್ತಮಾನದ ಸಾಂದರ್ಭಿಕ ಸಮಸ್ಯೆಗಳ ಮೇಲೆ ಸ್ಟೆಥಸ್ಕೋಪ್ ಆಡಿಸಿ, ಸಮಾಜದ ಸಾಕ್ಷಿಪ್ರಜ್ಞೆಯನ್ನು ಪೋಷಿಸಿ ರೋಗಿಗಳ ಮನೋಜ್ಞ ಚಿತ್ರಣ ನೀಡಿದ್ದಾರೆ. ಇಲ್ಲಿನ ಅಂಕಣ ಬರಹಗಳಿಗೆ ಕಥೆಗಳ ಜೀವದ್ರವ್ಯವಿದೆ. ಜಾತಕ, ಕುಂಡಲಿ ನಕ್ಷತ್ರಗಳಿಗಿಂತಲೂ ಆಸ್ತಿಕನಾಗಿ ರಕ್ತಪರೀಕ್ಷೆ, ನಾಡಿ ಮಿಡಿತ ಹಾಗೂ ಸೂಕ್ತ ಚುಚ್ಚು ಮದ್ದಿನ ಮೂಲಕ ರೋಗಿಯನ್ನು ಗುಣಪಡಿಸಬೇಕು ಎಂಬುದು ವೈದ್ಯರ ಆಶಯ. ವೃತ್ತಿ ಧರ್ಮದಲ್ಲಿ ದೇವರನ್ನು ಕಾಣುವ ಇವರು ‘ದಯವೇ ಧರ್ಮದ ಮೂಲ’ ಎನ್ನುತ್ತಾರೆ. ಇಲ್ಲಿನ ಕಥೆಗಳು ನೈಜ ಬದುಕಿನ ಅಭಿವ್ಯಕ್ತಿಯಾಗಿದ್ದು ಯಾವುದೂ ಸಹ ಕಾಲ್ಪನಿಕವಾಗಿಲ್ಲ. ‘ವೃತ್ತಿ ಸಾರ್ಥಕ್ಯದ ಆ ದಿನ’ ಎಂಬ ಬರಹ ಹೃದಯಸ್ಪರ್ಶಿಯಾಗಿದ್ದು ಹೆರಿಗೆ ಸಮಯದಲ್ಲಿ ಹೆಣ್ಣುಮಗಳೊಬ್ಬಳು ಜೀವನ್ಮರಣದೊಡನೆ ಹೋರಾಡುತ್ತಿರುವಾಗ ವೈದ್ಯರೇ ಸ್ವತಃ ರಕ್ತದಾನ ನೀಡಿ, ನಿರಂತರ ಒಂದು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಅವಳ ಪ್ರಾಣ ಉಳಿಸಿದ ರೋಚಕ ಅನುಭವಗಾಥೆ ಓದುಗರಲ್ಲಿ ಧನ್ಯತಾ ಭಾವ ಮೂಡಿಸುತ್ತದೆ. ‘ಅವ್ವನೆಂಬ ಆಧಾರಸ್ತಂಭಕ್ಕೆ ಆಸರೆಯಾಗಿ’ ಎಂಬ ಲೇಖನದಲ್ಲಿ ತಾಯಿಯೇ ಸರ್ವಸ್ವ ಎಂದು ನಂಬಿದ ವೈದ್ಯಮಿತ್ರರೊಬ್ಬರು ಆಕಸ್ಮಿಕವಾಗಿ ಅನಾರೋಗ್ಯಕ್ಕೊಳಗಾದ ತಾಯಿಯನ್ನು ಏಳು ವರ್ಷಗಳ ಕಾಲ ಮಗುವಿನಂತೆ ಉಪಚರಿಸಿದ ಸಂಗತಿ ಎಲ್ಲರಿಗೂ ಆದರ್ಶಪ್ರಾಯ ಹಾಗೂ ಅನುಕರಣಿಯ. ‘ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ’ ಎನ್ನುವ ಕವಿವಾಣಿಯಂತೆ ಇಲ್ಲಿ ರೋಗಿಯೊಬ್ಬ ತನಗೆ ಕ್ಯಾನ್ಸರ್ ಕಾಯಿಲೆ ಇದ್ದರೂ ಸಹ ಮನೆಯವರಿಗೆ ಹೇಳದೆ ತಾನೇ ಅನುಭವಿಸುವ ಸ್ಥಿತಿ ಕಂಡ ವೈದ್ಯರು ಅವನಲ್ಲಿ ಯೋಗಿಯ ಗುಣವನ್ನು ಕಾಣುತ್ತಾರೆ. ‘ಗುಟಕಾ ಎಂಬ ಹೊಗೆಯಿಲ್ಲದ ಬೆಂಕಿ’ ಎಂಬ ಕಥೆಯಲ್ಲಿ ಇಂದಿನ ಸಮಾಜದಲ್ಲಿ ಯುವಜನಾಂಗ ದುಶ್ಚಟಗಳಿಗೆ ದಾಸರಾಗುವುದನ್ನು ಕಂಡು ಖೇದ ವ್ಯಕ್ತಪಡಿಸುತ್ತಾರೆ. ಒಂದು ದಿನ ವೈದ್ಯರು ಆಸ್ಪತ್ರೆಗೆ ಬರದೇ ಮರುದಿನ ಬಂದಾಗ ಸಿರಿವಂತ ರೋಗಿ ಒಬ್ಬ ಕೋಪಗೊಂಡು ಬೈದಾಗಲೂ ಸಹ ಸ್ಥಿತಪ್ರಜ್ಞರಾಗಿ ಉಪಚರಿಸಿದ್ದು ಶ್ಲಾಘನೀಯ. ನೇಣು ಹಾಕಿಕೊಂಡು ಬದುಕುಳಿದವನ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಆಪ್ತ ಗೆಳೆಯನಂತೆ ತಿಳಿಸಿದ್ದಾರೆ. “ಮಡದಿ ಎಂಬ ಮಹಾಗುರು” ಎಂಬ ಅಧ್ಯಾಯದಲ್ಲಿ ಮದ್ಯಪಾನ ವ್ಯಸನಕ್ಕೆ ಒಳಗಾದ ಗಂಡನನ್ನು ಪತ್ನಿಯೊಬ್ಬಳು ಮದ್ಯವ್ಯಸನದಿಂದ ಮುಕ್ತನಾಗಿ ಮಾಡಿದ ಕಥೆ ಮಾರ್ಮಿಕವಾಗಿದೆ. ಮದ್ಯ ಸೇವನೆಯಿಂದ ಶರೀರದ ಮೇಲಾಗುವ ದುಷ್ಪರಿನಾಮಗಳ ಬಗ್ಗೆ ವಿವರಿಸುವಾಗ ಇಲ್ಲಿ ವೈದ್ಯರು ಶಾಲಾ ಅಧ್ಯಾಪಕನಂತೆ ಗೋಚರಿಸುತ್ತಾರೆ. ಅಪ್ಪ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಪಿಯುಸಿಯಲ್ಲಿ ರಾಜ್ಯಕ್ಕೆ ಹತ್ತನೇ ಸ್ಥಾನ ಪಡೆದಾಗ ಅಪ್ಪನ ಮೊಗದಲ್ಲಿ ಮೂಡುವ ಗೆಲುವಿನ ಗೆರೆ, ಮಗ ವೈದ್ಯನಾದಾಗ ಕಣ್ಣಂಚಲ್ಲಿ ಹೊಮ್ಮಿದ ಸಾರ್ಥಕತೆ, ಕೈಬೆರಳು ಹಿಡಿದು ನಡೆಸಿದ ಅಪ್ಪ ಕೈಬಿಟ್ಟು ಹೋದಾಗ ಉಂಟಾಗುವ ಶೂನ್ಯತೆ. ಇವೆಲ್ಲವೂ “ಅಪ್ಪ ನೆನಪಾಗುತ್ತಾನೆ” ಎಂಬ ಅಧ್ಯಾಯದಲ್ಲಿ ಸಿನಿಮಾ ರೀಲಿನಂತೆ ಅಪ್ಪನ ನೆನಪುಗಳು ಬಿಚ್ಚಿಕೊಳ್ಳುತ್ತವೆ. ಹೀಗೆ ಇಲ್ಲಿರುವ ಎಲ್ಲ ಬರಹಗಳ ಹಿಂದೆ ಸ್ವಾರಸ್ಯಕರ ಅನುಭವ ಅವಿಸ್ಮರಣೀಯ ಸಂಗತಿಗಳು ಕಥಾವಸ್ತುಗಳಾಗಿವೆ. ವಾಸ್ತವ ಸಮಾಜಕ್ಕೆ ಕೈಗನ್ನಡಿಯಾಗಿ, ಸ್ವಸ್ಥ ಸಮಾಜಕ್ಕೆ ಮಾರ್ಗದರ್ಶಿಯಾಗಿ ನಿಲ್ಲುವ ಈ ಕೃತಿ ಸಾರಸ್ವತ ಲೋಕಕ್ಕೆ ಒಂದು ಅಮೂಲ್ಯ ಕೊಡುಗೆ. ಈಗಾಗಲೇ “ಇಷ್ಟು ಮಾಡಿದ್ದೇನೆ” ಎಂಬ ಕವಿತಾ ಸಂಕಲನ ಹಾಗೂ “ಗಿಲೋಟಿನ್” ಎನ್ನುವ ಯುರೋಪ್ ಪ್ರವಾಸ ಕಥನ ಪ್ರಕಟಿಸಿ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರಿಂದ ಇನ್ನಷ್ಟು ಮೌಲಿಕ ಕೃತಿಗಳು ಮೂಡಿ ಬರಲಿ ಎಂಬುದು ನಮ್ಮೆಲ್ಲರ ಬಯಕೆ. **** ಬಾಪು ಖಾಡೆ

ನಾಡಿ ಮಿಡಿತದ ದಾರಿ Read Post »

ಪುಸ್ತಕ ಸಂಗಾತಿ

ಪ್ರೀತಿ ಮತ್ತು ಪ್ರೀತಿ ಮಾತ್ರ

ಪ್ರೀತಿ ಮತ್ತು ಪ್ರೀತಿ ಮಾತ್ರಲೇಖಕರು – ಜ್ಯೋತಿ ಗುರು ಪ್ರಸಾದ್ ಆರಂಭದ ಲೇಖನದಲ್ಲಿ ಪರಿಸರ ಹೋರಾಟಗಾತಿಯಾದ ದಿವಂಗತ ಕುಸುಮಾ ಸೊರಬ ಅವರ ಬಗ್ಗೆ ತಿಳಿಸುತ್ತಾ ಲೇಖಕಿಯು ಅವರ ಈ ಮಾತುಗಳನ್ನುಉಲ್ಲೇಖಿಸುತ್ತಾರೆ ಗಮನಿಸಿ – ” ಗಿಡ ಬೆಳೆಸಿದೆವನಿಗೆ ನರಕವಿಲ್ಲ” ಎಂಬ ಅಂಶ ಗರುಡ ಪುರಾಣದಿಂದಲೇ ಆರಂಭವಾಗಿ ಅಂದಿನ ಜನಜೀವನದ ದಿನನಿತ್ಯ ಕಾರ್ಯಕ್ರಮವಾಗಿತ್ತು. ಪರಿಸರ ರಕ್ಷಣೆ ಹಾಗೆಂದು ತಿಳಿದುಕೊಳ್ಳದೆಯೇ ಜೀವನದ ಆಂಗ ಆಗಿತ್ತು. ಈಗ ಮಾತ್ರ ಇದು ಫ್ಯಾಶನ್. ಮಳೆ – ಇಳೆ ಎಂಬ ಪೃಥ್ವಿಯನ್ನು ರಕ್ಷಣೆ ಮಾಡುವುದೇ ಎಂದರೆ ತನ್ನನ್ನು ತಾನೆ ರಕ್ಷಣೆ ಮಾಡಿಕೊಳ್ಳುವುದೇ ಮಹಿಳೆಯ ರಕ್ಷಣೆ. ಮದುವೆ ಮುಂಜಿಗಳಿಗೆ ಹೋಗಲು ಅನುಮತಿ ಬೇಕಾಗಿಲ್ಲ. ಆದರೆ ಯಾವುದೆ ಪರಿಸರ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಮಹಿಳೆಗೆ ‘ ಅನುಮತಿ’ ಬೇಕಾಗಿದೆ. ಎಷ್ಟೊಂದು ಸತ್ಯವಿದೆ ! ಇಂತಹ ಮಾತುಗಳನ್ನು ಪ್ರಾಮುಖ್ಯ ಮಾಡುತ್ತ ಹೋಗುವಲ್ಲಿ ಲೇಖನ ಹೆಚ್ಚುಪರಿಣಾಮಕಾರಿಯಾಗಿದೆ.ದಾಂಪತ್ಯದ ಬಗ್ಗೆ ಸೊಗಸಾಗಿ ಹೀಗೆ ವ್ಯಾಖ್ಯಾನಿಸುತ್ತಾರೆ “ಕಾಮ ಪ್ರೇಮವಾಗಿ ವಾತ್ಸಲ್ಯವಾಗಿ ಹರಿಯುವುದೇ ದಾಂಪತ್ಯ ನಿಷ್ಠೆ”.ಗೊಮ್ಮಟನ ಎತ್ತರವನ್ನು ಕಣ್ಮುಂದೆ ನಿಲ್ಲಿಸಲು ಬರೆದ ಈ ಸಾಲುಗಳು ಲೇಖನದ ಮೌಲ್ಯವನ್ನು ಹೆಚ್ಚಿಸುವಲ್ಲಿ ಸಫಲ“ಭೂಮಿಯ ತಾಳ್ಮೆಯನ್ನು ಆಕಾಶಕ್ಕೆ ಮುಟ್ಟಿಸಲು ಹೊರಟಿರುವಂಥ ಸಂತ. ಮನುಷ್ಯ ಕುಲದಲ್ಲಿ ಎತ್ತರದ ಮೌಲ್ಯಗಳಿಗೆ ಎಲ್ಲಿಯವರೆಗೆ ಪ್ರಾಶಸ್ತ್ಯಇರುವುದೋ ಅಲ್ಲಿಯವರೆಗೆ ನಮ್ಮ ಬಾಹುಬಲಿ ಬೆಳಯುತ್ತಿರುತ್ತಾನೆಶುದ್ಧ ಮನಸುಗಳ ಭಾಗವಾಗುತ್ತಾನೆ ಬಾಹುಬಲಿಯ ನಗ್ನತೆಯು ನಮ್ಮ ತೆರೆದ ಮನಸ್ಸಿನ ದಿಟ್ಟತನವಾಗಿ ನಮ್ಮ ಹೃದಯದ ಸೌಂದರ್ಯವನ್ನು ಕಾಯ್ದುಕೊಳ್ಳಲಿ” ಎಂಬಮಾತುಗಳು ಗೊಮ್ಮಟನ ಎತ್ತರವನ್ನು ಸಹೃದಯಿಗಳ ಕಣ್ಮುಂದೆ ನಿಲ್ಲಿಸುವಲ್ಲಿ ಯಶಸ್ವಿಯಾಗಿವೆ.ತುಮಕೂರಿನ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಮೊಗಳ್ಳಿ ಗಣೇಶ್ ರವರು ‘ ಪುಣ್ಯಕೋಟಿ ‘ ಪದ್ಯದ ಬಗ್ಗೆ ಎತ್ತಿದ ಪ್ರಶ್ನೆಯನ್ನು ಪ್ರಸ್ತಾಪಿಸುತ್ತ ಓದುಗರನ್ನು ಯೋಚನೆಗೆ ಹಚ್ಚುತ್ತಾರೆ.ಪೂ.ಚಂ.ತೇಜಸ್ವಿಯವರ ವ್ಯಕ್ತಿತ್ವವನ್ನು ಸಂಪೂರ್ಣವಾಗಿತೆರೆದಿಡಲು ಲೇಖಕಿಯು ಹೇಳುವ ಮಾತುಗಳು ಅವರ ಆಆಶಯವನ್ನು ನೆರವೇರಿಸುತ್ತ ಲೇಖಕಿಯ ಪ್ರೌಢ ಭಾಷಾ ಶೈಲಿಗೆ ಸಾಕ್ಷಿಯಾಗುತ್ತವೆ. ಕೆಳಗಿನ ಸಾಲುಗಳನ್ನು ಓದಿರಿ-೧. ತೇಜಸ್ವಿಯವರ ಬಗ್ಗೆ ಬರೆಯುವುದೆಂದರೆ ಜೀವನದಸರಳ ಸತ್ವಗಳನ್ನು ನಮಗೆನಾವೇ ಸಂಶೋಧಿಸಿಕೊಂಡಂತೆತೋರಿಕೆಯ ಯಾವುದೇ ಭಾರವಿಲ್ಲದೆ ಅವರ ಆತ್ಮಸಾಕ್ಷಿಗೆಅನುಗುಣವಾಗಿ ಅನಾವರಣವಾಗುವ ತೇಜಸ್ವಿ ಕುವೆಂಪುಅವರು ಆಶಯಗಳಿಗೆಲ್ಲಾ ರೂಪಕದಂತಿದ್ದಾರೆ.೨. ಕೀರ್ತಿ ಶನಿ ತೊಲಗಾಚೆ ದೂರ’ ಎನ್ನುವ ತಂದೆಯ ಕವಿವಾಣಿಗೆ ತಾವೇ ದನಿಯಾಗಿ,ತಮ್ಮ ಸ್ವತಂತ್ರ ವ್ಯಕ್ತಿತ್ವದಿಂದತಮ್ಮ ಕೃಷಿ ಆಸಕ್ತಿಯಲ್ಲಿ ತೊಡಗಿಸಿಕೊಂಡು ನಶ್ವರದ ಈಪುಟ್ಟ ಜೀವನದಲ್ಲಿ ಯಾವ ಸೋಗೂ ಇಲ್ಲದೆ ಒಬ್ಬ ‘ಸರಳ ಮನುಷ್ಯ’ ನಾಗಿ ಹೇಗೆ ಸಲ್ಲ ಬಹುದು ಎಂಬುದಕ್ಕೆ ತೇಜಸ್ವಿಖಂಡಿತ ಮಾದರಿಯಾಗಿದ್ದಾರೆ.೩. ಯಾವ ವಶೀಲಿ ಬಾಜಿಗಳಿಗೂ ಒಳಗಾಗಿದೆ ಪರಿಸರದಮುಖ್ಯ ಜೀವವಾಗಿ ಹಕ್ಕಿಯಂತೆ, ಮರದಂತೆ ಜೀವಿಸುತ್ತಾ ಇರುವ ಅವರ ಜೀವನ ತೆರೆದ ಪುಸ್ತಕದಂತಿದೆ.ವೀಚಿ (ಚಿಕ್ಕ ವೀರಣ್ಣನವರು )ಯವರ ಏನೂ ತಿಳಿಯದಓದುಗನಿಗೂ ಸಹ ಅವರ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಲು “ಇರುವ ಬದುಕನೆತ್ತರಿಸಲು, ಉತ್ತರಿಸಲು ಧ್ಯಾನಿಸು”,“ಪ್ರೀತಿಗೊಂದೇ ಮುಖವು ದ್ವೇಷಕ್ಕೆ ಹಲವಾರು”,“ಮುದವೆಂದರೇನನ್ನೋ ಕಲಿಯುವುದಿಲ್ಲ ತಾನೇ ಅದಾಗುವುದು” ಎಂಬ ಸಾಲುಗಳನ್ನು ಗುರುತಿಸಿದ್ದಾರೆ.ಹಾಗೆ ” ಕನ್ನಡಿಯೋ ಅಥವಾ ದೀಪವೋ ಆಗದ ಸಾಹಿತ್ಯ ಚಿಂತನೆ ವ್ಯರ್ಥ” ಎಂಬ ಡಿ. ಆರ್. ನಾಗರಾಜರವರ ಉಕ್ತಿಯನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸಿದ ಲೇಖಕರಾದ ಮುರಾರಿ ಬಲ್ಲಾಳರ ಬರಹದ ಬಗ್ಗೆ ಓದುಗರ ಕುತೂಹಲ ಮೂಡಿಸುವಲ್ಲಿ ಲೇಖಕಿಯು ಸಫಲರಾಗಿದ್ದಾರೆ.ಪ್ರೇಮವನ್ನು ಕುರಿತು ಲೇಖಕಿ ನೀಡಿರುವ ವ್ಯಾಖ್ಯಾನವುಎಷ್ಟು ಅರ್ಥಪೂರ್ಣ.”ಪ್ರೇಮ ನಮ್ಮ ಪ್ರಬುದ್ಧ ಆಯ್ಕೆಯ ಒಂದು ಸ್ಥಾಯಿಯಾದ ಶೋಧ. ಅದನ್ನು ಎಳೆದು ತಂದುಗಂಟು ಹಾಕಲಾಗುವುದಿಲ್ಲ”ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಬಗ್ಗೆ ಲೇಖಕಿಯು ಹೇಳಿದ ಮಾತು ಹದಿನಾರು ವರ್ಷಗಳು ಕಳೆದರೂ ಪ್ರಸ್ತುತವಾಗಿದೆಸ್ತ್ರೀವಾದದ ಬಗ್ಗೆ ಜ್ಯೋತಿಯವರ ಪ್ರತಿಪಾದನೆ ಹೀಗಿದೆ _ “ಸ್ತ್ರೀವಾದವೆಂದರೆ ಹೆಣ್ಣಿನ ನೈಸರ್ಗಿಕ ಅಸ್ತಿತ್ವವನ್ನು ಉಳಿಸಿ ಕೊಂಡು ಆ ಸವಿಯ ಸ್ವಾತಂತ್ರದಲ್ಲೇ ಕಂಡು ಕೊಳ್ಳುವ ವ್ಯಕ್ತಿತ್ವದ ಪೂರ್ಣದೃಷ್ಟಿಯೆ ಹೊರತು ಬರಿಯ ವಾದಕ್ಕಾಗ ವಾದ ಮಾಡುವ ಒಣವಾದವಲ್ಲ” ಎಂಬ ಲೇಖಕಿಯವರ ಅಭಿಪ್ರಾಯ ಪರಿಪಕ್ವವಾಗಿದೆ. ಭಾರತದ ಸಾಂಸ್ಕೃ,ತಿಕ ಅನನ್ಯತೆಯನ್ನು ಪ್ರಸ್ತಾಪಿಸಿ “ತಲೆಬಾಗುವ ವಿನಯವೇ,ಕೈ ಜೋಡಿಸುವ, ಆಕಾಶಕ್ಕೆ ಕೈಯೊಡ್ಡಿಪ್ರಾರ್ಥಿಸುವ, ಎದೆ ಮುಟ್ಟಿ ದೇವರನ್ನು ಸ್ಪರ್ಶಿಸುವ ಅಂತರಂಗದ ಆಲಾಪವೇ ನನಗೆ ನಮ್ಮ ದೇಶದ ಮಹತ್ವ ಸಾಂಸ್ಕೃತಿಕ ಅನನ್ಯತೆ” ಈ ಮಾತು ನೈಜ ದೇಶಪ್ರೇಮದ ಪ್ರತೀಕ.ಬದುಕು ಬರಹದ ನಡುವೆ ಅಂತರಉಳಿಸಿಕೊಂಡ ಲೇಖಕ ಲಂಕೇಶ್ ರವರನ್ನು ಕಂಡಾಗ ಆದ ಭ್ರಮನಿರಸನ ಕುರಿತು ತಿಳಿಸಿದ್ದಾರೆಕೆಲವೊಂದು ಚಲನೆ ಚಿತ್ರಗೀತೆಗಳ ವಿಮರ್ಶೆ, ಮೆಚ್ಚಿನನಟರ ಬಗ್ಗೆ ಬರೆಯುವಂತೆ ಬಿ. ಆರ್. ಲಕ್ಷ್ಮಣ್ ರಾವ್ ರವರ ಪ್ರೇಮದ ಕುರಿತು ಪಂದ್ಯವನ್ನು ಟೀಕಿಸುತ್ತಾ.”ಆಕ್ಟ್ಆಫ್ ಲಿವಿಂಗ್” ಬಗ್ಗೆ ಹೇಳವಲ್ಲಿ ವಿಶೇಷ ಹೊಳಹುಗಳಿವೆಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯನ್ನು ನೆನೆಯುವಕೃತಜ್ಞತೆಯ ಮಹಾಪೂರದಲ್ಲಿ “ಸೂರ್ಯ ನಮಸ್ಕಾರ’ದ,‘ ಸಂಧ್ಯಾವಂದನೆ’ ಯು ‘ಗಾಯತ್ರಿ ಮಂತ್ರ’ದ ಎಲ್ಲಾ ಫಲಸಿದ್ಧಿಸುತ್ತವೆ. ಮುಖ್ಯ ಬೇಕಾಗಿರುವುದು ಒಳನೋಟ – ನಿಜದ ಸಂತಸವೆನ್ನವ ಲೇಖಕರ ಈ ಮಾತುಗಳು ಮನದಆಳಕ್ಕೆ ಇಳಿಯುತ್ತವೆ ಎಂಬುದು ಅಷ್ಟೇ ನಿಜ.ಮತಾಂಧರ ಕಣ್ಣಿಗೆ ಅಂಜನ ಹಾಕುವ ಅಂಜನೆ ಬೇಕಾಗಿದೆ ಎಂಬ ಸತ್ಯದ ಬೆಳಕಿನಲ್ಲಿ ಆಂಜನೇಯನ ಕಲ್ಪನೆಯಿದೆ.ಒಟ್ಟಾರೆ ಈ ಕೃತಿಯು ಲೇಖಕರ ಪ್ರಬುದ್ಧ ಚಿಂತನೆ ಹಾಗೂ ಪ್ರತಿಭೆಯ ಭಾರಕ್ಕೆ ಬಾಗಿದ ಕೃತಿಯೆನ್ನಬಹುದು. ಪ್ರೀತಿಗೆ ಪಾತ್ರರಾದವರ, ಪ್ರೀತಿಯ ಹಾಡುಗಳು ಹಾಗೂ ಪ್ರೀತಿಯ ವಸ್ತುಗಳೊಂದಿಗೆ ಪ್ರೀತಿಯ ಸೋಜಿಗವನ್ನು ನೋಡುತ್ತಾ ಬದುಕಿನ ಪ್ರೀತಿಗೆ ಬೇಕಾದ ಒಳನೋಟವನ್ನು ಒದಗಿಸುವ ಈ ಕೃತಿಯ ಶೀರ್ಷಿಕೆಯು ಸಮಂಜಸವಾಗಿದೆ ********** ಎಂ. ಆರ್. ಅನಸೂಯ

ಪ್ರೀತಿ ಮತ್ತು ಪ್ರೀತಿ ಮಾತ್ರ Read Post »

ಪುಸ್ತಕ ಸಂಗಾತಿ

ಒಂದು ಮರ ನೂರು ಸ್ವರ

ಪುಸ್ತಕಸಂಗಾತಿ ಒಂದು ಮರ ನೂರು ಸ್ವರಭಾರತೀಯ ಸಣ್ಣಕಥೆಗಳುಎನ್ ಎಸ್ ಶಾರದಾಪ್ರಸಾದ್ಸಂಚಯ ಪ್ರಕಾಶನ ಈ ಪುಸ್ತಕ ಮುದ್ರಣದ ಹಂತದಲ್ಲಿದ್ದಾಗ ಶಾರದಾಪ್ರಸಾದರು ತೀರಿಕೊಂಡಿದ್ದು ದುಃಖದ ವಿಷಯ. ಅವರು ತಮ್ಮ ಬರವಣಿಗೆಯ ಬದುಕಿನುದ್ದಕ್ಕೂ ಆಯ್ದು ಪೋಣಿಸಿದ ಕಥೆಗಳಿವು. 1981 ರಿಂದ 2014 ರ ತನಕದ ಅವರ ಎಲ್ಲಾ ಅನುವಾದಿತ ಚೆಂದದ ಕತೆಗಳು ಇಲ್ಲಿವೆ. ರಾಜಾಜಿ (ಚಕ್ರವರ್ತಿ ರಾಜಗೋಪಾಲಾಚಾರಿ) ಅವರ, ಲೋಕನಾಯಕ ಜಯಪ್ರಕಾಶ ನಾರಾಯಣ್ ಅವರ ಅಪರೂಪದ ಕತೆಗಳೂ ಇಲ್ಲಿವೆ. ಒಟ್ಟೂ 51 ಕತೆಗಳು ಇಲ್ಲಿ ಕನ್ನಡಿಸಿವೆ‌.ಅಷ್ಟೇನೂ ಪರಿಚಿತರಲ್ಲದವರ ಕತೆಗಳೂ ಇಲ್ಲಿವೆ. ಕಳೆದ ಶತಮಾನದ ಭಾರತೀಯ ಬದುಕಿನ ವಿವರಗಳನ್ನು, ಸಾಂಸ್ಕೃತಿಕ ಪಲ್ಲಟಗಳನ್ನು, ನೋವು- ನಲಿವು, ಹತಾಶೆ, ಸಾವು, ಯಶಸ್ಸು… ಹೀಗೆ ಆಯಾ ಪ್ರದೇಶದ, ಭಾಷೆಯ ಆವರಣದಲ್ಲಿ ಮೈಪಡೆದ ಮನುಷ್ಯ ಜಗತ್ತಿನ ಚಿತ್ರಣ ಈ ಕೃತಿಯಲ್ಲಿದೆ. ಇಲ್ಲಿನ ಕತೆಗಳ ಆಯ್ಕೆಯ ಹಿಂದೆ ಶಾರದಾಪ್ರಸಾದರ ಸೂಕ್ಷ್ಮತೆ ಮತ್ತು ಭಾವುಕತೆ ಎದ್ದು ಕಾಣುತ್ತದೆ.ಯಾವ ಸಾಹಿತ್ಯ ಫ್ಯಾಷನ್ನುಗಳಿಂದ ಪ್ರಭಾವಿತರಾಗದ ಅವರ ಆಯ್ಕೆ, ತಮ್ಮ ಮನಸ್ಸಿಗೆ ತಟ್ಟಿದ ಕಥೆಗಳನ್ನು ಅವರು ಕನ್ನಡಿಗರ ಓದಿಗೆ ಬಡಿಸಿದ್ದಾರೆ. ಇವು ಅಂತಃಕರಣದ ಕತೆಗಳು. ವೈವಿಧ್ಯಮಯ ಕಥೆಗಳಿಗಾಗಿ ಒಮ್ಮೆ ಓದಲೇಬೇಕಾದ ಕೃತಿಯಿದು. ******** ಡಾ.ಅಜಿತ ಹರೀಶಿ

ಒಂದು ಮರ ನೂರು ಸ್ವರ Read Post »

ಪುಸ್ತಕ ಸಂಗಾತಿ

ಅವ್ವ ಮತ್ತು ಅಬ್ಬಲಿಗೆ

ನನಗೆ  ಅವ್ವ ಮತ್ತು ಅಬ್ಬಲಿಗೆ  ಇಡೀ ಕವನ ಸಂಕಲನದಲ್ಲಿ ಲಂಕೇಶರ ಅವ್ವ ಆಧುನಿಕ, ನಗರವಾಸಿ ಅವ್ವನಾಗಿ  ಕಾಣುತ್ತಿದ್ದಾಳೆ.   ಅಬ್ಬಲಿಗೆಯಲ್ಲಿನ ಆಧುನಿಕ ಅವ್ವ  ನೌಕರಿ ಮಾಡುತ್ತಾ, ಗಂಡನ ಸಂಭಾಳಿಸುತ್ತಾ , ತವರು ಮನೆಯ ನೆನಪ ಮೆಲುಕು ಹಾಕುತ್ತಾ ,  ಆಧುನಿಕ ವೈರುದ್ಧ್ಯಗಳಿಗೆ ಮುಖಾಮುಖಿಯಾಗುತ್ತಾ ನಡೆಯುತ್ತಾಳೆ.  ಅನ್ಯಾಯಕ್ಕೆ ಕವಿತೆಯ ಮೂಲಕ ಸಣ್ಣ ಧ್ವನಿಯಲ್ಲಿ ಅತ್ಯಂತ ಖಚಿತವಾಗಿ ವ್ಯವಸ್ಥೆಯನ್ನು ಟೀಕಿಸುತ್ತಾಳೆ. ದೇವರು, ದೇವಾಲಯ,ಯುದ್ಧ ಗಳ ನಿರರ್ಥಕತೆಯನ್ನು  ಬಿಡಿಸಿಡುತ್ತಾಳೆ. ಹೆಣ್ಣಿನ ಅಂತರಂಗದ ತಳಮಳಕ್ಕೆ ಭಾಷ್ಯ ಬರೆಯುತ್ತಾಳೆ. ಆಧುನಿಕ ಯಶೋಧರೆಯ ಅಂತರಂಗವನ್ನು ಇವತ್ತಿನ ಅಕ್ಷರಸ್ಥ ಮಹಿಳೆಯಲ್ಲಿ ಕಾಣುತ್ತಲೇ ಪ್ರಶ್ನೆ ಎಸೆಯುತ್ತಾಳೆ. ರಾಮಾಯಣದ ಶಬರಿಯನ್ನು ಎಳೆದು ತಂದು ಇವತ್ತಿನ ಸಮಾಜದೆದರು ನಿಲ್ಲಿಸಿ ತಕರಾರು ತೆಗೆಯುತ್ತಾಳೆ. ದನಗಳ ತಾಯ್ತನಕ್ಕೆ ಮತ್ತು ಅವಕ್ಕೆ  ವಯಸ್ಸಾದ ಮೇಲೆ ಮಾರುವವರ,ಕೊಳ್ಳುವವರ ಕಟುಕುತನವನ್ನು ಭಂಜಿಸುತ್ತಾಳೆ.ಹಾಗೂ ಬೀದಿ ನಾಯಿಯಲ್ಲಿನ ತಾಯ್ತನಕ್ಕೆ , ಅದು ತನ್ನ ಹೆತ್ತ ಮರಿಗಳನ್ನು ಅನಾಥವಾಗಿಸುವಲ್ಲಿ ತನ್ನ ಒಂಚೂರು ಪಾಲಿದೆ ಎಂದು ಕೊರಗುತ್ತಾಳೆ. ಹಾಗೂ ಬೀದಿ ನಾಯಿ ಪಾಡಿಗೆ ಕಾರಣವಾದ  ನಿರ್ಲಜ್ಜ ,ನಿರ್ಲಕ್ಷ ಗಂಡು ನಾಯಿಯ ಬಗ್ಗೆ ತಣ್ಣನೆಯ ಕೋಪವನ್ನು ದಾಖಲಿಸುತ್ತಾಳೆ ಕವಯಿತ್ರಿ ಶೋಭಾ. ಇನ್ನು ಅವ್ವ ಅಬ್ವಲಿಗೆಯಲ್ಲಿ ರಾಜಕೀಯ ಪ್ರಜ್ಞೆ ಪ್ರಖರವಾಗಿಯೇ ನಾಲ್ಕಾರು ಪದ್ಯಗಳಲ್ಲಿ ಕಾಣಿಸಿಕೊಂಡಿದೆ. ಗುರ್ ಮೆಹರ್ ಅಂತರಂಗ, ಖುರ್ಚಿಗಾಗಿ ಯುದ್ಧ ಪ್ರಚೋದಕತೆಯ ಪ್ರಶ್ನಿಸಿದರೆ,  “ಸುಮ್ಮನಿರುವೆ  ಏಕೆ ಹೇಳು? ”  ಕವಿತೆ  ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಕರೆ ನೀಡುತ್ತದೆ ಹಾಗೂ  ಶ್ರಮಿಕನೋರ್ವ , ಓಟು ಕೇಳಲುಬಂದವನಿಗೆ ಪ್ರಶ್ನಿಸುವುದು (ಓಟು ಬೇಡುವ ಸಮಯ) ಕವಿತೆ ಯಲ್ಲಿದೆ. ‘ಬಡವನಳಲು’  ಕವಿತೆ ಬೆವರಿಗಿಲ್ಲದ ಬೆಲೆಯು ನನ್ನ ಓಟಿಗೇತಕೆ ಒಡೆಯಾ ಎಂದು ಪ್ರಶ್ನಿಸಿದರೆ, ‘ದೇವನಳಲು’  ಕವಿತೆಯಲ್ಲಿ ದೇವರು ಭಕ್ತರಿಗೆ ಪ್ರಶ್ನಿಸುವ ಅಪರೂಪದ ನಡೆಯಿದೆ. ನಾನೇನು ಬಡವನೇ ನಿಮ್ಮಲ್ಲಿ ಬೇಡುವಷ್ಟು ಎನ್ನುವ ದೇವರು ; ನಾನು ತಿರುಕನಲ್ಲ, ಕಟುಕನಲ್ಲ, ದುರ್ಬಲನಲ್ಲ, ಹೆರುವಶಕ್ತಿಯಿಲ್ಲ,ಬಡವನಲ್ಲ ಎಂದು ದೇವರೇ ಭಕ್ತರಿಗೆ ಸ್ಪಷ್ಟೀಕರಣ ಕೊಡುವ ಬಗೆ ಕನ್ನಡಕ್ಕೆ ಹೊಸತು. ಇದು ಕವಯಿತ್ರಿ ಶೋಭಾ ನಾಯ್ಕರ ಕಾವ್ಯ ಕಟ್ಟುವ ವಿಶಿಷ್ಟ ನಡೆಯಾಗಿದೆ. ದೇವರು ಮತ್ತು ಧರ್ಮದ ಕುರಿತ ಕವಿತೆಗಳನ್ನು ಹೊಸೆದ ಕನ್ನಡ ಕೆಲವೇ ಕೆಲವು ಕವಯಿತ್ರಿಯರಲ್ಲಿ ಶೋಭಾ ಸಹ ಒಬ್ಬರು. ದೇವರು ಧರ್ಮದ ವಿಚಾರ ಬಂದಾಕ್ಷಣ ಮೌನತಾಳುವ ಮತ್ತು ಸಂಪ್ರದಾಯದ ಮುಸುಕು ಹಾಕಿ ಸೇಫರ್ ಝೋನ್ ನಲ್ಲಿ ನಿಲ್ಲುವ  ಸಾಹಿತಿಗಳಿಗಿಂತ ; ಭಿನ್ನವಾಗಿ ನಿಲ್ಲುವ ಶೋಭಾ ಹಿರೇಕೈ ; ಈ ಕಾರಣದಿಂದ ಅವರು ಕನ್ನಡದಲ್ಲಿ ವಿಶಿಷ್ಟ ಕವಯಿತ್ರಿ ಎನಿಸುತ್ತಾರೆ. ಕುವೆಂಪು ಮತ್ತು ಲೋಹಿಯಾ ಪ್ರಭಾವ : ಮುಗ್ದತೆಯಿಂದ ಕವಿತೆಗಳನ್ನು ಶೋಭಾ ಕಟ್ಟಿದರೂ ಅವರ ವೈಚಾರಿಕ ಓದು ಸಹ ಅವರ ಕವಿತೆಗಳನ್ನು ಪ್ರಭಾವಿಸಿದೆ.  ವೈಚಾರಿಕ ಕ್ರಾಂತಿಗೆ ಯುವಕರಿಗೆ ಆಹ್ವಾನ ನೀಡಿದ ಕುವೆಂಪು ಅವರನ್ನು ಓದಿರುವ ಅವರು ದೇವರು ಮತ್ತು ಧರ್ಮದ ವಿಚಾರದಲ್ಲಿ ಸ್ಪಷ್ಟತೆ ಇರುವವರು. ದೇವರು ಸದಾ ಹುಡುಕಾಡುವ, ಧರ್ಮ ಸದಾ ಕಾಡುವ ಸಂಗತಿ ಯೆಂದು ಕವಯಿತ್ರಿ ೨೦೨೦ ಮಾರ್ಚ ೨೬ ರಂದು ಕಡಲವಾಣಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮನೋಧರ್ಮವನ್ನು ಗಮನಿಸಿ ಅವರ ಕವಿತೆಗಳನ್ನು ಓದಿದಾಗ ಹೊಸ ಆಯಾಮವೊಂದು ಸಹಜವಾಗಿ ಪ್ರಾಪ್ತವಾಗಿ ಬಿಡುತ್ತದೆ. ಸಂಪ್ರದಾಯಸ್ಥ ಕುಟುಂಬದಿಂದ ಬಂದ ಮಹಿಳೆಯಾಗಿಯೂ, ಅವರನ್ನು ವೈಚಾರಿಕ ಓದು ಹೇಗೆ ರೂಪಿಸಿದೆ ಎಂಬುದು ಸಹ ಮುಖ್ಯ.  ಸಮುದಾಯ ಮತ್ತು ಕುಟುಂಬದ ನಿಯಂತ್ರಣಗಳ ನಡುವೆಯೂ ಮಾನವೀಯ ನಡೆಯೊಂದನ್ನು ಕಾಯ್ದುಕೊಳ್ಳುವ ಪರಿ ಅದ್ಭುತವಾದುದು. ಕವಿ ಹೆಚ್ಚು ಮಾತನಾಡದೆಯೂ , ತಣ್ಣಗೆ ಹೇಗೆ ಕ್ರಾಂತಿಕಾರಿಯಾಗಬಲ್ಲಳು  ಎಂಬುದನ್ನು ಗಮನಿಸಬೇಕು. ಸ್ತ್ರೀವಾದ ಮತ್ತು ಪುರುಷ ಪ್ರಧಾನ ಸಮಾಜದ ಕಟ್ಟಳೆಗಳನ್ನು, ಬಂಧನಗಳನ್ನು ಸದ್ದಿಲ್ಲದೇ  ಮನೆಯ ಹಿತ್ತಲಿನಲ್ಲಿನ ಹಂಡೆಯ ಬಿಸಿನೀರು ಕಾಯಿಸುವ ಒಲೆಗೆ ಒಣಕಟ್ಟಿಗೆಯನ್ನು ಇಟ್ಟು ಬೆಂಕಿ ಹಚ್ಚಿದಂತೆ, ಹಚ್ಚಿಬಿಡುತ್ತಾರೆ. ಬೆಂಕಿಯನ್ನು ಬೆಳಕಾಗಿಸಿ ಬಿಸಿನೀರು ಕಾಯಿಸಿಕೊಳ್ಳುವ ಪ್ರಕ್ರಿಯೆ ಇದ್ದಂತೆ, ಕವಿತೆ ಕಟ್ಟುವ ಬಗೆ. ಇದನ್ನು ಶೋಭಾ ಅವರ ಕವಿತೆ ಗಳಲ್ಲಿ ಕಾಣಬಹುದು. ಅವ್ವ ಮತ್ತು ಅಬ್ಬಲಿಗೆ ಇಷ್ಟವಾಗಲು ನನಗೆ  ಹದಿನಾಲ್ಕು‌  ಕಾರಣಗಳಿವೆ. ಇವುಗಳನ್ನು ಹೀಗೆ ಪಟ್ಟಿ ಮಾಡಬಹುದು. ಶೋಭಾ ಅವರ ಮೊದಲ ಸಂಕನಲದಲ್ಲಿ  ಕಾವ್ಯದ ತುಂಬಾ ತಾಯ್ತನ ತುಂಬಿರುವುದು. ದೇವರನ್ನು ಪ್ರಶ್ನಿಸಿರುವುದು. ಯುದ್ಧ ವಿರೋಧಿ ನಿಲುವುಗಳಿರುವುದು . ಗುರ್ ಮೆಹರ್ ಕವಿತೆಯಲ್ಲಿ ಸೈನಿಕನ ಮಗಳ ತಳಮಳ ಹಿಡಿದಿಟ್ಟು, ಆಕೆಯ ಪರಕಾಯ ಪ್ರವೇಶ ಮಾಡಿ ಕವಿತೆ ಕಟ್ಟಿರುವುದು. ಹೆಣ್ಣಿನ ತಳಮಳ ದಾಖಲಿಸಿರುವುದು. ಹಳ್ಳಿಯನ್ನು ಮರೆಯದಿರುವುದು. ಅಲ್ಲಿಯ ಮಣ್ಣು ತಂದು ನಗರದ  ಕುಂಡದಲ್ಲಿ ಹೂ ಬೆಳಸಿರುವುದು. ಹೆಣ್ಣಿನ ಮನದ ಸ್ವಾತಂತ್ರ‍್ಯದ ಬಯಕೆಯ ಮುಂದಿನ ತಲೆಮಾರಿಗೆ ದಾಟಿಸಿರುವುದು. ಪ್ರೇಮಧರ್ಮದ ಹುಟ್ಟಲಿ ಎಂಬ ಕನಸ ಕಟ್ಟಿಕೊಡುವುದು.ಜಾತಿ ಧರ್ಮ ಮೀರಿದ ಮನುಷ್ಯತ್ವ ಪ್ರತಿಪಾದಿಸುವುದು. ಪ್ರಕೃತಿಯೊಡನೆ ಮನದ ತಲ್ಲಣ ,ಬಯಕೆ ಹೇಳುತ್ತಾ ಕನಸು ಹೆಣೆಯುವುದು. ಪ್ರೇಮದ ನವಿರು ಭಾವಗಳನ್ನು ಕಟ್ಟಿಕೊಡುವುದು.ಬುದ್ಧನನ್ನು ನೆನೆಯುತ್ತಲೇ ಯಶೋಧರೆಯ ತಳಮಳವನ್ನು ಕಣ್ಣೆದುರಿನ ಮಗನಿಗೆ ನಿವೇದಿಸುವುದು. ತವರಿನ ತಾರಸಿಯಲ್ಲಿ ಅಟ್ಟ ಸೇರಿದ ಕನಸುಗಳ ಮೆಲುಕು ಹಾಕುವುದು. ಶ್ರಮಿಕರನ್ನು, ರೈತರನ್ನು ಕಾವ್ಯದಲ್ಲಿ ಶ್ರದ್ಧೆಯಿಂದ ಸ್ಮರಿಸುವುದು. ಅಸಮಾನತೆಯ ವಿರುದ್ಧ ಧ್ವನಿ: ಶೋಭಾ ಅವರ ಕವಿತೆಗಳಲ್ಲಿ ಜಾತಿ ವ್ಯವಸ್ಥೆ ಮತ್ತು ಸ್ಥಗಿತ ವ್ಯವಸ್ಥೆಯ ವಿರುದ್ಧ ತಣ್ಣನೆಯ ಬಂಡಾಯವಿದೆ. ಮಣ್ಣು ಮತ್ತು ಹೆಣ್ಣನ್ನು ಸಾಂಪ್ರದಾಯಿಕ ಪುರುಷ ಪ್ರಧಾನ ವ್ಯವಸ್ಥೆ ಹೇಗೆ ಬಳಸಿಕೊಂಡಿದೆ ಎಂಬುದನ್ನು ಅವರು ಮೆಲುದನಿಯಲ್ಲಿ ದಾಖಲಿಸುತ್ತಾರೆ. ದೇವರು ಮತ್ತು ದೇವಸ್ಥಾನ ವ್ಯವಸ್ಥೆ ವಿಡಂಬಿಸುವ ಕವಿತೆಗಳು, ರಾಜಕೀಯ ಪ್ರಜ್ಞೆಯ ಕವಿತೆಗಳು , ಶ್ರಮಿಕರು ಓಟಿನ ದಿನ ಮಹತ್ವ ಪಡೆಯುವ ವ್ಯಂಗ್ಯವೂ ಅವರ ಸಂಕಲನದ ಕೆಲ ಕವಿತೆಗಳಲ್ಲಿ ಇವೆ. “ಹೆಚ್ಚೆಂದರೇನು ಮಾಡಿಯೇನು”  ಎಂಬ ಕವಿತೆಯಲ್ಲಿ ದೇವರು ತಾಯಿಯ ಮಗ ಎಂದು ಹೇಳುತ್ತಾರೆ. ತಾಯಿಯೇ ಇಲ್ಲಿ ಪ್ರಧಾನ ಕೇಂದ್ರ. ಹೆಣ್ಣು ಮತ್ತು ಮಣ್ಣಿನ ಸುತ್ತ ಹೆಣೆದ ಕವಿತೆಗಳು ಕನ್ನಡದಲ್ಲಿ ಪ್ರಧಾನ ಧಾರೆಯೊಂದನ್ನು ನೆನಪಿಸುತ್ತವೆ. ಆಧುನಿಕ ಕನ್ನಡ ಮಹಿಳಾ ಕಾವ್ಯದ ವಸ್ತುಗಳನ್ನು ನೆನಪಿಸಿಕೊಂಡಾಗ ಶೋಭಾ ದಿಟ್ಟತನದಿಂದ ವಸ್ತುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. `ಋಣಮುಕ್ತೆ’ಯಲ್ಲಿ ಮಳೆ ಮತ್ತು ಭೂಮಿಯ ಸಂಬಂಧವಿದೆ. `ಒಡಲ ಬಂಧ’ ಕವಿತೆಯಲ್ಲಿ ಮುಟ್ಟು ಮೂಢನಂಬಿಕೆ ಹಾಗೂ ಕನಸು ಕುಡಿಯೊಡೆವ, ಚಿಗುರೊಡೆವ ಹೊತ್ತಿನ , ಕಾಮನಬಿಲ್ಲು ಕಂಗಳಲ್ಲಿ ಅರಳುವ ಚಿತ್ರವಿದೆ. ಹೆಣ್ತನ ಹೂವಾಗಿ ಅರಳುವ ಸಮಯವನ್ನು ಬಣ್ಣಿಸುವ ಕವಯಿತ್ರಿ ಗರ್ಭಗುಡಿಯ ಪೂರ್ಣಕುಂಭದ ಕೆನ್ನೀರಿದು ಎನ್ನುತ್ತಾಳೆ. ಪೂರ್ಣಕುಂಭದ ಕೆನ್ನೀರು ಖಾಲಿಯಾಗಬಾರದು ಎನ್ನುವಾಗ ಭೂಮಿ ಬಂಜೆಯಾಗಬಾರದು ಎಂಬ ಧ್ವನಿಯೂ ಇದೆ. “ಉಯಿಲೊಂದ ಬರೆದಿಡುವೆ”  ಈ ಸಂಕಲನದ ಅತ್ಯುತ್ತಮ ಕವಿತೆಗಳಲ್ಲಿ ಒಂದು. ಕವಯಿತ್ರಿಯ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಪ್ರಜ್ಞೆಗೆ ಈ ಕವಿತೆ ಸಾಕ್ಷಿ. “ಹೊಟ್ಟೆ ತುಂಬಿದ ಜನಗಳಿಗೆ ಮಾತ್ರ ಒಡೆಯುವುದರ ಕುರಿತೇ ಚಿಂತೆ” ಎಂಬ ಸಾಲುಗಳು ಕವಯಿತ್ರಿ ಯಾವತ್ತೂ ಸತ್ಯದ ಕಡೆಗೆ ಸಾಗುವವಳು ಮತ್ತು ಸಮಾಜದ ಒಳಿತಿಗೆ, ಮಾನವೀಯತೆಯ ಕಡೆಗೆ ನಿಲ್ಲುವವಳು ಎಂಬುದು ಸ್ಪಷ್ಟವಾಗಿದೆ. `ಕವನ ಹುಟ್ಟುವ ಹೊತ್ತು’ ಕವಿತೆಯಲ್ಲಿ ಅಸ್ತಿತ್ವದ ಹುಡುಕಾಟವೂ,ಸ್ವಾತಂತ್ರ್ಯದ ಹುಡುಕಾಟವೂ ಇದೆ. ಮಗ, ಅತ್ತೆ, ಅವ್ವ ಇವರ ನಡುವೆ ಕವನಗಳು ಕಳೆಯುತ್ತವೆ ರಾತ್ರಿಯಲ್ಲಿ !! ಎಂಬ ನೋವು ಇದೆ.  ಹಾಗೆ `ನನ್ನ ಕವಿತೆ’ಯಲ್ಲಿ ಕವಿತೆ ಅಪ್ಪ, ಅವ್ವ,ಅಣ್ಣ,ನನ್ನಕ್ಕ ತಂಗಿಯರಿಗಾಗಿ, ಮಣ್ಣಲ್ಲಿ ಹೊಸ ಟಿಸಿಲು ನನ್ನ ಕಾವ್ಯ, ಹುಡುಕಿ ಕೊಡುವ ಪತ್ರ ಫಲಕಗಳಿಗೂ ಅಲ್ಲ ಎನ್ನುತ್ತಾರೆ, ಸಾಹಿತ್ಯಲೋಕದ ರಾಜಕಾರಣದ ಬಗ್ಗೆ ಸಹ ಅವರ ನೈತಿಕ ಕೋಪ ಈ ಕವಿತೆಯಲ್ಲಿದೆ. `ನಲವತ್ತರಂಚಿವ ಸ್ವಗತ’ದಲ್ಲಿ ಸಹ ಅದೇ ಅಸ್ತಿತ್ವದ ಹುಡುಕಾಟ. ಕಾಲಕ್ಕೊಂದು ಕೀಲಿ ತೋಡಿಸಿ, ಕಾಲವನ್ನು ಕೂಡಿಹಾಕುವಂತಿದ್ದರೆ ಎಂಬ ಪ್ರಶ್ನೆಯನ್ನು ಮಹಿಳೆಯರ ಪ್ರತಿನಿಧಿಯಾಗಿ ತನಗೆ ತಾನೇ ಹಾಕಿಕೊಳ್ಳುತ್ತಾಳೆ. ಕಾಲದ ಹಕ್ಕಿ ಹಗಲು ಇರಳುಗಳ ರೆಕ್ಕೆಗಳನ್ನು ಹೊತ್ತು ಹಾರುವುದನ್ನು ಬೇಂದ್ರೆ ಹಿಡಿದಿಟ್ಟಂತೆ, ಚಲಿಸುವ ಕಾಲ ಕನ್ನಡ ಕವಿಗಳನ್ನು ಕಾಡಿರುವ ಬಗೆ ಅನನ್ಯವಾದುದು. “ನಲವತ್ತರಂಚಿನ ಸ್ವಗತ” ದ ಜೊತೆ “ಮುಸುಕಾಗುವ ಸಂಕಟ” ಕವಿತೆಯನ್ನು ಸಹ ಗಮನಿಸಿಬೇಕು. ಸೀರೆಯನ್ನು ಅವರ ಬಣ್ಣವನ್ನು ಅದ್ಭುತ ಪ್ರತಿಮೆಯಾಗಿಸಿದ್ದಾರೆ ಶೋಭಾ, ಒಂದೊಂದು ಬಣ್ಣ, ಒಂದೊಂದು ಸಮಯದ ಮಹತ್ವದ ಜೊತೆ ಕುಟುಂಬದಲ್ಲಿ ಒಬ್ಬಬ್ಬೊರಿಗೆ ಇಷ್ಟವಾಗುವ ಬಣ್ಣದ ಸೀರೆಯುಡುವುದು. “ಹಳದಿ ಮಕ್ಕಳಿಗೆ, ನೀಲಿ ನನಗೆ ದೊಡ್ಡ ಬಾರ್ಡರ್ ಸೀರೆ ಗಂಡನಿಗೆ ತಿಳಿ ಗುಲಾಬಿ ಅವ್ವನಿಗೆ ” ಹೀಗೆ ಬರೆಯುತ್ತಾ `ಎದೆಗಿಳಿದ ಸೀರೆಗಳು ಸುಕ್ಕಾಗಿರಬಹುದು, ಒಂದೊಂದು ಬಣ್ಣ, ಒಂದೊಂದು ಕನಸು, ಬಣ್ಣ ಮಾಸಿದ ಮೇಲೆ ?? ಹೆಣ್ಣಿನ ತಳಮಳವನ್ನು, ಭಿನ್ನ ಧ್ವನಿಯಲ್ಲಿ, ಸೀರೆ ಹೆಣ್ಣು ಮತ್ತು ಮುಪ್ಪನ್ನು ಧ್ವನಿಸುವ ಕ್ರಮ ಕಾವ್ಯದ ಶಕ್ತಿಯನ್ನು ಹೇಳುತ್ತದೆ. “ನಾವು ಮತ್ತು ಅವರು” ಎಂಬ ಕವಿತೆಯಲ್ಲಿ ಶ್ರಮಿಕರ ಬಗ್ಗೆ ಇರುವ ಕಾಳಜಿ ಹಾಗೂ ದುಡಿದುಣ್ಣುವ ವರ್ಗದ ಬಗ್ಗೆ ಕವಿಯ ಚಿತ್ತ ಹರಿದಿದೆ. ಈ ಕವಿತೆಯಲ್ಲಿ ಸಾಮಾಜಿಕ ಜವಾಬ್ದಾರಿಯ ಜೊತೆ ವರ್ಗಗಳ ಆಲೋಚನ ಕ್ರಮವನ್ನು ಸಹ ವ್ಯಂಗ್ಯವಾಗಿ ಹೇಳಿದ್ದಾಳೆ ಕವಯಿತ್ರಿ. “ನಾವೋ ದಿಂಬಿನ ಜೊತೆಗೆ ನಿದ್ದೆಯನ್ನು ಮಾರುವವರಿಗಾಗಿ ಬರ ಕಾಯುತ್ತಿದ್ದೇವೆ ಈ ಮಹಡಿಯ ಮನೆಯಲ್ಲಿ ” ಹೊಸ ಕಾರಿಗೆ ಗೀರು ಬಿದ್ದಾಗ ಆದ ಸಣ್ಣ ನೋವನ್ನೇ ಇಟ್ಟುಕೊಂಡು ಕವಿತೆಯಾಗಿಸುವ ಕವಯಿತ್ರಿ “ಎದೆಯ ಮೇಲೆ ನೀನೆಳೆದು ಬಿಟ್ಟ, ಆ ಬರೆಗೆಷ್ಟು ನೋವಾಗಿರಬೇಡ? ಹೀಗೆ ಪ್ರಶ್ನಿಸುವ ಎದೆಗಾರಿಕೆ ಸಹ ಇದೆ. ಸೂಕ್ಷ್ಮ ಮನಸ್ಸಿನವರಿಗೆ ಆದ ಅತೀ ಚಿಕ್ಕ, ಮರೆತುಹೋಗಬಹುದಾದ ಘಟನೆಯೂ ಕವಿತೆಯ ವಸ್ತುವಾಗುತ್ತದೆ ಎಂಬುದಕ್ಕೆ ಕಾರು-ಗೀರು ಕವಿತೆ ಸಾಕ್ಷಿ. ಹಳ್ಳಿ, ಹಳ್ಳಿಗೆ ಆಧುನಿಕತೆ ಪ್ರವೇಶಿಸಿದ ನಂತರ ಹಳ್ಳಿಯ ಮುಗ್ಧತೆ ಮತ್ತು ನಗು ಮಾಸಿರುವುದು “ನನ್ನೂರು” ಕವಿತೆಯಲ್ಲಿ ದಾಖಲಾಗಿದೆ. ಹೊಸ ಬದುಕಿನತ್ತ ಕವಿತೆಯಲ್ಲಿ ಬಹುದೊಡ್ಡ ಆಶಯಗಳನ್ನು ಮಹಿಳಾ ಸಮುದಾಯಕ್ಕೆ  ಕವಯಿತ್ರಿ ಬಿತ್ತಿದ್ದಾರೆ. ಕಿಡಿಕಿ, ಜೀತಗಳನ್ನು ಸಂಕೇತವಾಗಿ ಹೇಳುತ್ತಾ ಮಾನಾಪಮಾನ, ಅಡೆತಡೆ,ಎಳೆದ ಬರೆ, ಸ್ವರಸತ್ತ ಕೊರಳು, ನಂಜನಿತ್ತವರ ಮೀರೋಣ ಎನ್ನುತ್ತಾ….ಹೊಸ ಬೆಳಕಿನ ಹುಡುಕಾಟ ಮಾಡೋಣ. ಹೊಸಗೀತೆ, ಹೊಸಬಟ್ಟೆ, ಹೊಸ ಭಾಷ್ಯ ಬರೆಯೋಣ. ಹಸಿರಾಗಿ ಹುಟ್ಟೊಣ,ದನಿಯಾಗಿ ನಿಲ್ಲೋಣ ಎನ್ನುತ್ತಾಳೆ. “ಋಣದ ಪತ್ರ” ದಲ್ಲಿ ಹರಿದ ಚಂದ ಕೌದಿಯ ಹೊಲಿಯ ಬೇಕಿದೆ ಎಂದು ಸಮಾಜದ ಬಿರುಕುಗಳಿಗೆ, ಸಂಬಂಧಗಳಿಗೆ ಬೆಸುಗೆ ಹಾಕುವ ಕೆಲಸವನ್ನು ಕವಯಿತ್ರಿ ಮಾಡುತ್ತಾರೆ.  ‘ ‘ ‘ನಾನು’ ಎಂಬ ಕವಿತೆಯಲ್ಲಿ ನೋವಲ್ಲೂ ನಗುವ ಆಶಯಕ್ಕೆ, ಎದೆ ಬಾರವ ಹಗುರಾಗಿಸಿ ಉಸಿರಾಗುವ ಹಂಬಲಕ್ಕೆ ಕಸನು ಬಿತ್ತುವುದು ಎನ್ನುತ್ತಾ…ಪ್ರೀತಿಸಿಯೇ ತೀರುತ್ತೆನೆಂದಲ್ಲ, ಜನ್ಮಜನ್ಮಗಳ ಋಣಭಾರವೊಂದರ ಸಂದಾಯಕ್ಕೆ ನಾನು ಇದ್ದೇನೆ ಎಂಬ ಹಂಬಲವ ತೋಡಿಕೊಳ್ಳುತ್ತಾಳೆ ಕವಯಿತ್ರಿ. ” ನೀ ಬರುವುದು ಖಾತ್ರಿಯಾದಾಗಿನಿಂದ ಕನಸುಗಳು ಬಣ್ಣ ಹಚ್ಚಿಕೊಳ್ಳುತ್ತಿವೆ” ಎಂಬುದು ಬದುಕಿನ ದೊಡ್ಡ ಆಶಾವಾದವಾಗಿದೆ. *********** ನಾಗರಾಜ ಹರಪನಹಳ್ಳಿ

ಅವ್ವ ಮತ್ತು ಅಬ್ಬಲಿಗೆ Read Post »

You cannot copy content of this page

Scroll to Top