ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಉಷಾ ರವಿ ಅವರ ಕೃತಿ”ಆತ್ಮಾನುಸಂಧಾನ”ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ

ಪುಸ್ತಕ ಸಂಗಾತಿ ವರದೇಂದ್ರ ಕೆ ಮಸ್ಕಿ ಉಷಾ ರವಿ “ಆತ್ಮಾನುಸಂಧಾನ” “ಆತ್ಮಾವಲೋಕನಕ್ಕೆ ದಾರಿಯಾದ ಆತ್ಮಾನುಸಂಧಾನ”  ಆತ್ಮಾನುಸಂಧಾನಕೃತಿಕಾರರು : ಉಷಾರವಿಬೆಲೆ : 250/- “ಆತ್ಮಾವಲೋಕನಕ್ಕೆ ದಾರಿಯಾದ ಆತ್ಮಾನುಸಂಧಾನ”      ಕೃತಿ ಲೋಕಾರ್ಪಣೆಗೊಂಡು ತಿಂಗಳು ಕಳೆಯುವಷ್ಟರಲ್ಲೇ ಎರಡನೇ ಮುದ್ರಣ ಕಂಡ ಅಪರೂಪದ, ಅನುರೂಪವಾದ ಕಾದಂಬರಿ ಉಷಾರವಿ ಅವರ “ಆತ್ಮಾನುಸಂಧಾನ”.    ಮೊದಲ ಕೃತಿ “ಅಂತರಪಟ” ಕಾದಂಬರಿ ಮೂಲಕ ರಾಜ್ಯದ ಮನೆಮಾತಾಗಿದ್ದ ನನ್ನ ನೆಚ್ಚಿನ ಬರಹಗಾರ್ತಿ ಸಹೋದರಿ ಶ್ರೀಮತಿ ಉಷಾ ರವಿ ಅವರು ಈಗ ಎರಡನೇ ಕೃತಿ ಆತ್ಮಾನುಸಂಧಾನದ ಮುಖೇನ ರಾಜ್ಯದ ಓದುಗರ ಮನಮಾತಾಗಿದ್ದಾರೆ.   ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಆರಾಧಿಸುವ, ಪ್ರೀತಿಸುವ ಮೇರು ವ್ಯಕ್ತಿತ್ವದ ಪಾತ್ರಗಳ ಹೃದಯದೊಂದಿಗಿನ ಸಂಧಾನ ಈ ಕಾದಂಬರಿಯಲ್ಲಿ ಮುನ್ನೆಲೆಗೆ ಬರುತ್ತದೆ. ಇದನ್ನೆಲ್ಲಾ ನಾವು ಓದುತ್ತಾ ಹೋದರೆ ಅಕ್ಷರಶಃ ಪಾತ್ರಗಳೊಂದಿಗೆ ನಾವೂ ಆತ್ಮಾನುಸಂಧಾನ ಬೆಸೆದುಕೊಳ್ಳುತ್ತಾ ಸಾಗುತ್ತೇವೆ.    ನಾವು ಸಂಪೂರ್ಣ ಸಂಧಾನಕ್ಕೊಳಪಡಲು ಕೃತಿಯನ್ನು ತಾಂತ್ರಿಕ ಮನಸಿನಿಂದ ಓದದೆ ಪ್ರಾರ್ಥನೆಯಂತೆ, ತಪಸ್ಸಿನಂತೆ ಓದಬೇಕು. ಆಗ ಮಾತ್ರ ಈ ಸಂಧಾನ ಅನುಭವಕ್ಕೆ ಬಂದು ಸಂತುಷ್ಟತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಹೇಗೆ ಎಂಬುದನ್ನು ಕೃತಿಯ ಭಾವದೊಂದಿಗೆ ನಾನೂ ಸಂಧಾನಕ್ಕೊಳಪಟ್ಟು ಸಾಧ್ಯವಾದಷ್ಟು ತಮ್ಮ ಮುಂದೆ ಅಭಿವ್ಯಕ್ತಿಸಲು ಪ್ರಯತ್ನಿಸುತ್ತೇನೆ‌.                       ***     ಮನಸು ಎಂಬ ಅತ್ಯಮೂಲ್ಯವಾದ ಕಪ್ಪೆ ಚಿಪ್ಪಿನೊಳಗಿನ ಮುತ್ತನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಅದರೊಳಗಿನ ಮುತ್ತನ್ನು ಕೇವಲ ಕಾಮದ, ಧನದ ಮತ್ತಿರುವವರಿಗೆ ಎಟಕುವಂತೆ ಮಾಡಿದರೆ ಆಗುವ ಅನಾಹುತ ತುಂಬಾ ಘೋರವಾದುದು. ಇಂತಹ ಘೋರತೆಯನ್ನು ಜೀವನದಲ್ಲಿ ಅನುಭವಿಸಿದ ಹೆಣ್ಣಿನ ಬದುಕಿನ ಸುತ್ತ ಸುತ್ತಿರುವ ಈ ಆತ್ಮಾನುಸಂಧಾನ ಕಾದಂಬರಿ ವಿಶೇಷತೆಯಿಂದ ಕೂಡಿದೆ.     ಐಶ್ವರ್ಯ ಮತ್ತು ವಿಕಾಸ್ ಎಂಬ ಪಾತ್ರಗಳಿಂದ ಪ್ರಾರಂಭವಾಗುವ ಕಾದಂಬರಿ ನಿಜವಾಗಲೂ ನಮ್ಮೊಳಗೆ ಮೌಲ್ಯಗಳ ಐಶ್ವರ್ಯವನ್ನು ತುಂಬಿ ನಮ್ಮ ವ್ಯಕ್ತಿತ್ವ ವಿಕಸನಗೊಳಿಸಿ ಹೊಸ ಭಾವವನ್ನು ವಿಕಾಸಗೊಳಿಸುತ್ತದೆ.    ವಿಕಾಸ್ ಐಶ್ವರ್ಯಳನ್ನು ಪ್ರೇಮಿಸುತ್ತಿದ್ದರೆ ಐಶ್ವರ್ಯ ಅಜ್ಞಾತ ಕವಿಯ ಸಾಹಿತ್ಯಕ್ಕೆ ಮಾರು ಹೋಗಿ ಅಜ್ಞಾತ ಕವಿಯನ್ನು ಪ್ರೇಮಿಸುತ್ತಾಳೆ. ಪ್ರಾರಂಭದಲ್ಲಿ ಹರ್ಷ(ಐಶ್ವರ್ಯಳ ತಮ್ಮ)ನಿಗೆ ಅನ್ನಿಸಿದಂತೆ ವಿಕಾಸನೇ ಅಜ್ಞಾತ ಕವಿಯಾಗಿರಬಹುದೇ ಎಂದು ಓದುಗನಿಗೂ ಭಾಸವಾಗುತ್ತದೆ. ವಿಕಾಸನ ನಿಷ್ಕಲ್ಮಶ ಪ್ರೇಮದ ಪರಿ ಓದಿದ ನಮಗೆ ಎಲ್ಲಿ ಐಶ್ವರ್ಯ ವಿಕಾಸನಿಂದ ದೂರವಾಗುತ್ತಾಳೋ ಅಜ್ಞಾತ ಕವಿಯನ್ನು ವಿವಾಹವಾಗುತ್ತಾಳೋ ಎಂಬ ಬೇಸರವೂ ಮೂಡುತ್ತದೆ.     ಕಾದಂಬರಿ ಸಾಗಿದಂತೆ ಓದುಗರಿಗೆ ಅಜ್ಞಾತ ಕವಿಯ  ಪರಿಚಯವಾದಂತೆ ಕಾದಂಬರಿಯಲ್ಲಿ ಮುಖ್ಯ ಪಾತ್ರಗಳ  ಬದುಕು ಅನಾವರಣಗೊಳ್ಳುತ್ತದೆ.                   ***     ಹರೆಯದಲ್ಲಿ ಮನಸು ಬೇಡಿದ್ದನ್ನು ನಾವು ನಮ್ಮ ಬುದ್ಧಿಯನ್ನು ಉಪಯೋಗಿಸಿ ನೀಡಬೇಕು. ಅದರಲ್ಲೂ ಮನಸು ಪ್ರೇಮದ ಕಡೆಗೆ ವಾಲಿದರೆ, ನಮ್ಮ ಪ್ರೇಮವನ್ನು ಯೋಗ್ಯರಿಗೆ ಮಾತ್ರ ಧಾರೆ ಎರೆಯಬೇಕು. ಹೀಗೆ ಹರೆಯದಲ್ಲಿ ಈ ಕಾದಂಬರಿಯ ನಾಯಕಿ ಆರುಷಿ ರಶ್ಮಿ ಅನಾಮತ್ತಾಗಿ, ರಾಕ್ಷಸೀ ಪ್ರವೃತ್ತಿವುಳ್ಳ ವ್ಯಕ್ತಿಗೆ ತನ್ನ ಪ್ರೇಮವನ್ನು ಮತ್ತು ತನ್ನನ್ನು ಅರ್ಪಿಸಿದ ಪರಿಣಾಮವಾಗಿ ಎದುರಿಸಿದ ರೌರವ ನರಕದ ಬದುಕಿಗೆ ಸಾಕ್ಷಿಯಾಗಿ ಈ ಆತ್ಮಾನಂಧಾನ ಕೃತಿ ನಮ್ಮ ಕಣ್ಣ ಮುಂದೆ ಗೋಚರಗೊಳ್ಳುತ್ತದೆ.     ಕಾದಂಬರಿಯ ಶೀರ್ಷಿಕೆಗೆ ಸಹಸಂಬಂಧ ಕಲ್ಪಿಸಿಕೊಂಡು ಓದುವ ಓದುಗ ವರ್ಗಕ್ಕೆ, ಇಂತಹ ದುಸ್ಥಿತಿಯಲ್ಲಿ ಸಿಲುಕಿದ ಹೆಣ್ಣಿನ ಕಥೆಗೆ ಆತ್ಮಾನುಸಂಧಾನ ಹೆಸರು ಹೇಗೆ ಸರಿಹೊಂದುತ್ತದೆ? ಎಂಬ ಆಲೋಚನೆ ಹುಟ್ಟುತ್ತದೆ.     ಹೌದು ಇಲ್ಲಿ ಕಥಾ ನಾಯಕಿ ಸೂರ್ಯನೆಂಬ ಧೂರ್ತ ಹುಡುಗನನ್ನು ಮದುವೆಯಾಗಿ ತನ್ನ ವೈವಾಹಿಕ ಬದುಕಲ್ಲಿ ಎದುರುಗೊಂಡ ಎಲ್ಲ ತೊಡರುಗಳಲ್ಲಿ ಸಿಕ್ಕು, ಬಳಲಿ ಅದರಿಂದ ಹೊರಬಂದ ನಂತರ ಒಂದು ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ತಾನಷ್ಟೇ ಹೊಸ ಬದುಕನ್ನು ಕಟ್ಟಿಕೊಂಡಳು ಎಂದರೆ ತಪ್ಪಾದೀತು. ತನ್ನ ಬದುಕನ್ನು ಬರಹದ ರೂಪದಲ್ಲಿ ಲೋಕಾರ್ಪಣೆಗೊಳಿಸಿ ತಪ್ಪು, ಒಪ್ಪುಗಳನ್ನು ಅಕ್ಷರ ರೂಪದಲ್ಲಿ ಬಿತ್ತರಿಸಿ ಅನೇಕ ಓದುಗರ ಮನಃಪರಿವರ್ತನೆಗೆ ದಾರಿಯಾಗುತ್ತಾಳೆ.    ಅಕ್ಕನ ಮಗಳನ್ನೇ ವರಿಸುವ ಬಯಕೆಯಿಂದ ಯಾವಾಗಲೂ ಮಲ್ಲಿಗೆ ಹೂವಿಡಿದು ಬರುತ್ತಿದ್ದ ಕಥಾ ನಾಯಕ ರವಿಗೆ ಕಥಾ ನಾಯಕಿ ಆರುಷಿಯಿಂದ ಆದದ್ದು ಆಘಾತವಲ್ಲ, ಮೋಸವೂ ಅಲ್ಲ ಎಂದು ಓದುಗನಿಗೆ ಅನಿಸುತ್ತದೆಯಾದರೂ ಸೂರ್ಯನ ಬದಲಾಗಿ  ಸೋದರ ಮಾವ ರವಿಯನ್ನು ಕೈ ಹಿಡಿದಿದ್ದರೆ ನಮ್ಮ ಕಥಾ ನಾಯಕಿ ಹೇಗೆ ಸಂತೃಪ್ತಿಯಾಗಿ ಜೀವನ ನಡೆಸುತ್ತಿದ್ದಳು ಎಂದು ಮಧ್ಯೆ ಮಧ್ಯೆ ಅಪೇಕ್ಷಿತವಾಗಿ ಆಲೋಚಿಸುತ್ತಾನೆ.    ರವಿಯೊಂದಿಗೆ ದಾಂಪತ್ಯದ ಭಾವನೆಯನ್ನೇ ಬೆಳೆಸಿಕೊಳ್ಳದ ಆರುಷಿ ಸಹಜವಾಗಿಯೇ ಸೂರ್ಯನೊಂದಿಗೆ ಪ್ರೀತಿಯಲ್ಲಿ ಲೀನವಾಗುತ್ತಾಳೆ.ಆದರೆ ರವಿಗೆ ಆರುಷಿಯಲ್ಲಿ ಪ್ರೇಮವಿತ್ತು, ಅಕ್ಕರೆಯಿತ್ತು, ಕೃತಿಕಾರರೇ ಕೊನೆಯಲ್ಲಿ ಹೇಳುವಂತೆ ತಾಯಿಯ ಮಮಕಾರವೂ ಇತ್ತು. ಇದೆಲ್ಲದಕ್ಕೂ ಮಿಗಿಲಾಗಿ ಆತ್ಮ ಬಂಧನವಿತ್ತು ಎಂಬುದು ನಮ್ಮ ಗಮನಕ್ಕೂ ಬರುತ್ತದೆ.     ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬಂತೆ ಆರುಷಿಗೆ ಮದುವೆಯ ನಂತರವೇ ಸೂರ್ಯನ ನಿಜಮುಖ, ಸಂಸ್ಕಾರವಿಲ್ಲದ ನಡೆ ತಿಳಿಯುತ್ತದೆ. ರವಿ ಆರುಷಿಯನ್ನು ಹೃದಯಕ್ಕೆ ಹತ್ತಿರವಾಗಿಸಿಕೊಳ್ಳಲು ಬಯಸಿದರೆ ಸೂರ್ಯ ದೇಹಕ್ಕೆ ಹತ್ತಿರವಾಗಿಸಿಕೊಳ್ಳಲೆಂದೇ ಅವಳನ್ನು ಮದುವೆಯಾಗಿದ್ದು ಎಂದು ತಿಳಿದಾಗ ಓದುಗನ ರಕ್ತವೇ  ಕುದಿಯುತ್ತದೆ ಎಂದರೆ ಆರುಷಿಯ ಮನಸಿಗೆ ಎಷ್ಟು ಘಾಸಿಯಾಗಿರಬಹುದು ಎಂದು ಊಹಿಸಬಹುದಾಗಿದೆ.         ಈ ಕಾದಂಬರಿಯಲ್ಲಿ ಬರುವ ರವಿ, ಸೂರ್ಯ ಇಬ್ಬರೂ ಸಮಾನಾರ್ಥಕ ಹೆಸರನ್ನು ಹೊಂದಿದ್ದರೂ ಅವರ ವ್ಯಕ್ತಿತ್ವ, ನಡೆ, ನುಡಿ, ಪ್ರೇಮವನ್ನು ವ್ಯಕ್ತಪಡಿಸುವ ಪರಿ ಸಂಪೂರ್ಣ ತದ್ವಿರುದ್ಧವಾಗಿವೆ. ತ್ರಿಕೋನ ಪ್ರೇಮದ ಈ ಕಾದಂಬರಿಯ ನಾಯಕಿ ಆರುಷಿ ರಶ್ಮಿ ವಯೋಸಹಜದ ಆಕರ್ಷಣೆಗೊಳಗಾಗಿ ಅನ್ಯ ಮತದ ಸೂರ್ಯನನ್ನು, ಜಾತಿಯನ್ನೂ ಮೀರಿ ಪ್ರೀತಿಸಿ, ಎಂತದ್ದೇ ಕಷ್ಟ, ನಿಂದನೆ ಬಂದರೂ ಎದುರಿಸಲು ಸನ್ನದ್ಧವಾಗಿ ಮದುವೆಯಾಗುತ್ತಾಳೆ. ತಂದೆ, ತಾಯಿಯ ಪ್ರೀತಿಗಿಂತ ಪಕ್ಕದ ಮನೆಯ ಪ್ರೇಮಿ ಸೂರ್ಯನ ಪ್ರೀತಿಯೇ ಮಿಗಿಲು ಎಂದು ಸೂರ್ಯನನ್ನು ನಂಬಿ ಹಸ್ತ ಜೋಡಿಸುತ್ತಾಳೆ. ಈ ಸಂದರ್ಭದಲ್ಲಿ ಆರುಷಿ ಸೂರ್ಯ ಮದುವೆ ಆಗುವ ಕೊನೆಯ ಕ್ಷಣದವರೆಗೂ ಆರುಷಿ ಸೂರ್ಯನನ್ನು ಮದುವೆ ಆಗದೇ ಇರಲಿ ಎಂದು ಓದುಗ ಪ್ರತಿ ಹಂತದ ಓದಿನಲ್ಲೂ ಪ್ರಾರ್ಥಿಸುತ್ತಲೇ ಸಾಗುತ್ತಾನೆ‌. ಆದರೆ ರವಿ ಆರುಷಿಯ ವ್ಯಕ್ತಿತ್ವ ಲೋಕಕ್ಕೆ ಪರಿಚಯವಾಗಲೆಂದೇ ವಿಧಿ ಸೂರ್ಯ ಆರುಷಿಯ ವಿವಾಹವಾಗುವಂತೆ ಮಾಡಿದೆ ಅನಿಸುತ್ತದೆ.    ಸೂರ್ಯನ ಎಲ್ಲಾ ಆಟಾಟೋಪಗಳನ್ನು ಸಹಿಸಿಕೊಂಡೇ ಆರುಷಿ ಜೀವನ ಸಾಗಿಸುತ್ತಿದ್ದಳು. ಸೂರ್ಯ ಇವತ್ತಲ್ಲಾ ನಾಳೆ ಬದಲಾಗಬಹುದೆಂಬ ಆರುಷಿಯ ನಂಬಿಕೆ, ತಾಳ್ಮೆ ಕೊನೆಯವರೆಗೂ ಗೆಲ್ಲವುದೇ ಇಲ್ಲ. ಬದಲಿಗೆ ಆರುಷಿ ಮೆತ್ತಗಾದಷ್ಟು ಸೂರ್ಯ ಅಡ್ಡದಾರಿಯಲ್ಲಿ ಬಲಿಯುತ್ತಲೇ ಸಾಗುತ್ತಾನೆ. ವೈವಾಹಿಕೇತರ ಸಂಬಂಧದಲ್ಲೂ ಮುಂದುವರೆಯುತ್ತಾನೆ. ಇದನ್ನೆಲ್ಲಾ ಸಹಿಸಿಕೊಂಡ ಆರುಷಿಗೆ ಸೂರ್ಯನ ಅನುಮಾನದ ಮನ ಮಾತ್ರ ಬಹಳ ಬಾಧಿಸುತ್ತದೆ. ಎಲ್ಲಿ ಹೋದರೂ ಪರರ ಜೊತೆ ಸಂಬಂಧ ಕಲ್ಪಿಸಿ ಮಾತನಾಡುತ್ತಿದ್ದ ಸೂರ್ಯನ ನಡೆ ನಿಜಕ್ಕೂ ಓದಗನಿಗೂ ಕೂಡ ಅಸಹನೀಯವೆನಿಸುತ್ತದೆ.      ಅಂತೂ ಒಂದು ಸಮಯದಲ್ಲಿ ಸೂರ್ಯನ ಬದುಕು ಅಂತ್ಯವಾದರೆ, ಆರುಷಿಯ ಬದುಕು ಹೊಸ ಹಂತದತ್ತ ಸಾಗುತ್ತದೆ. ಅವಳ ಲೇಖನಿಯಿಂದ ಬಂದ ಅನೇಕ ಲೇಖನಗಳು ಪರರ ಬದುಕಿಗೆ ದಾರಿದೀಪವಾಗುತ್ತವೆ.     ಸೂರ್ಯ ಸಾಯುವ ಮುನ್ನ ತನ್ನ ಹೆಂಡತಿ, ಮಗಳನ್ನೇ ಮಾರುವಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾನೆ. ಮಾರುತ್ತಾನೆ ಕೂಡ. ಇತ್ತ ಬೆಂಕಿ ಅಪಘಾತದಲ್ಲಿ ಸೂರ್ಯ ಮತ್ತು ಸೂರ್ಯನೊಡನೆ ಅನೈತಿಕ ‌ಸಂಬಂಧ ಇಟ್ಟುಕೊಂಡ ಪರಿಮಳ ಅನ್ನೋ ಹೆಂಗಸು ಸಾಯುತ್ತಾಳೆ. ಲೋಕದ ದೃಷ್ಟಿಯಲ್ಲಿ ಸೂರ್ಯನೋಡನೆ ಆರುಷಿ ಮತ್ತು ಮಗಳು ರಶ್ಮಿಕಾ ಇಬ್ಬರೂ ಬೆಂಕಿಯಲ್ಲಿ ದಹಿಸಿಹೋದರು ಎಂಬಂತೆ ಭಾಸವಾಗುತ್ತದೆ.    ಮಾರಾಟಗೊಂಡು ದುಷ್ಟರ ಕೈಯಿಂದ ತಪ್ಪಿಸಿಕೊಂಡು ಬಂದ ಆರುಷಿ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ರವಿಯಿಂದನೂ ಅನೇಕ ವರ್ಷ ದೂರವಾಗಿ ಉಳಿಯುತ್ತಾಳೆ. ಆರುಷಿಯ ಮಗಳು ಆರುಷಿಗೆ ಸದಾ ಸಹಾಯಕಳಾಗಿದ್ದ ಸಾಕಮ್ಮಜ್ಜಿಯ ಸಹಾಯದಿಂದ ಬದುಕುಳಿದು ಆರುಷಿಯ ಗೆಳತಿ ಬೇಬಿಯ  ಸುಪರ್ದಿಯಲ್ಲಿ ಬೆಳೆಯುತ್ತಾಳೆ.      ರವಿ ಮುಂದೆ ಅಪ್ಪಾಜಿಯಾಗಿ ಎಲ್ಲರಿಗೂ ಬೇಕಾಗುತ್ತಾರೆ, ನಂತರ ಒಂದು ಸಂದರ್ಭದಲ್ಲಿ ಆರುಷಿಗೆ ರವಿಯ ಭೇಟಿ ಆಗುತ್ತದೆ. ಆರುಷಿ, ರವಿ, ವಿಕಾಸ್, ಐಶ್ವರ್ಯ, ಆತ್ಮಾರಾಮ ಎಲ್ಲರ ಒಡನಾಟದಲ್ಲಿ ಎಲ್ಲರಿಗೂ ಆರುಷಿಯ ಇತಿಹಾಸ ತಿಳಿಯುತ್ತದೆ. ಆರುಷಿಯ ತಂದೆ ತಾಯಿ ಎಲ್ಲರೂ ಆರುಷಿ ಸತ್ತಿದ್ದಾಳೆ ಎಂದು ಭಾವಿಸಿದರೆ ರವಿ ಮಾತ್ರ ಅದನ್ನು ನಂಬಿರಲಿಲ್ಲ. ಆರುಷಿ ಇಲ್ಲವಾದ ಸಂದರ್ಭದಲ್ಲಿ ನಾನೂ ಇಲ್ಲವಾಗುತ್ತೇನೆ ಎಂಬಷ್ಟು ಪ್ರೇಮಿಸಿದ್ದ ರವಿಯ ನಂಬಿಕೆ ನಿಜವಾಗುತ್ತದೆ.    ಪ್ರಸ್ತುತ ಆರುಷಿಯ ಎರಡನೇ ಮಗ ಕಿರಣ (ಸೂರ್ಯನಿಂದ ದೂರವಾಗುವ ಸಂದರ್ಭದಲ್ಲಿ ಸೂರ್ಯನಿಂದ ಗರ್ಭಿಣಿಯಾಗಿರುತ್ತಾಳೆ) ಐಶ್ವರ್ಯ, ವಿಕಾಸ ಎಲ್ಲರೂ ರವಿ ಆರುಷಿಗೆ ಮದುವೆ ಮಾಡಿಸಬೇಕೆಂದು ಹವಣಿಸುತ್ತಾರೆ. ಆದರೆ ಆರುಷಿ ರವಿಯ ಸಂಬಂಧ ಮದುವೆಗೂ ಮೀರಿದ್ದು, ದೈಹಿಕ ಸಂಬಂಧಕ್ಕೂ ಮಿಗಿಲಾದುದು ಎಂಬ ಅರಿವು ಎಲ್ಲರಿಗೂ ಕೊನೆಯಲ್ಲಿ ತಿಳಿಯುತ್ತದೆ.   ಅನೇಕ ತಿರುವನ್ನೊಳಗೊಂಡ ಕಾದಂಬರಿಯ ಕೊನೆಯಲ್ಲಿ ಓದುಗನಿಗೆ ಕೃತಿಕಾರರು ಅಚ್ಚರಿಯ ತಿರುವನ್ನು ನೀಡುತ್ತಾರೆ. ಸಾಕಮ್ಮಜ್ಜಿಯ ಸಹಾಯದಿಂದ ಬದುಕುಳಿದ ಆರುಷಿಯ ಮಗಳು ರಶ್ಮಿಕಾಳೇ ಈ ಐಶ್ವರ್ಯ, ಈಗಿನ ಆರುಷಿಯ ತಾಯಿ ಭಾರ್ಗವಿಯೇ ಆರುಷಿಯ ಗೆಳತಿ ಬೇಬಿ ಎಂದು ತಿಳಿದು ಓದುಗ ರೋಮಾಂಚನಗೊಳ್ಳುತ್ತಾನೆ.      ಸೂರ್ಯನ ಸಾವಿಗೆ ಆರುಷಿಯೇ ಕಾರಣ ಎಂದು ತಿಳಿದಿದ್ದ ಸೂರ್ಯನ ತಾಯಿ ‌ಸರೋಜಮ್ಮ ಕೊನೆಯಲ್ಲಿ ಆರುಷಿ ಬೆನ್ನಿಗೆ ಚೂರಿ ಹಾಕುತ್ತಾಳೆ. ರವಿಯ ತೊಡೆಯ ಮೇಲೆಯೇ ಆರುಷಿ ಕೊನೆ ಉಸಿರೆಳೆದರೆ ಆರುಷಿಯನ್ನು ಮಲಗಿಸಿಕೊಂಡ ರವಿ ಆರುಷಿ ಹಣೆಗೆ ಮುತ್ತಿಟ್ಟು ಅಲ್ಲೇ ಪ್ರಾಣ ಬಿಡುತ್ತಾನೆ. ಇಬ್ಬರ ನಡುವಿನ ಪ್ರೇಮದ ಸಂಧಾನ ಆತ್ಮಾನುಸಂಧಾನದಲ್ಲಿ ಮಿಲನವಾಗುತ್ತವೆ ಎನ್ನುವಲ್ಲಿ ಅಲ್ಲಿಯ ಪಾತ್ರಗಳ ಜೊತೆಗೆ ಓದುಗನ ಕಣ್ಣುಗಳೂ ತೇವವಾಗುತ್ತವೆ.     ತನ್ನ ಹೆತ್ತ ತಾಯಿ ಎಂದು ತಿಳಿದುಕೊಂಡ ಕೆಲವೇ ಕ್ಷಣಗಳಲ್ಲಿ ಐಶ್ವರ್ಯ ತಾಯಿಯನ್ನು ಮತ್ತೆ ಶಾಶ್ವತವಾಗಿ ಕಳೆದುಕೊಳ್ಳುತ್ತಾಳೆ.    ಬೇಬಿ ತನ್ನ ಆತ್ಮೀಯ ಗೆಳತಿಯನ್ನು ಕಳೆದುಕೊಂಡು ನೋವು ಪಟ್ಟರೆ, ಕಿರಣನಿಗೆ ತಾಯಿ ದೂರವಾದರೂ ತಾಯಿ ಸ್ಥಾನದಲ್ಲಿ ಒಡಹುಟ್ಟಿದ ಅಕ್ಕ, ಅಜ್ಜ, ಅಜ್ಜಿ ಎಲ್ಲರೂ ಸಿಗುತ್ತಾರೆ.    ರವಿಯ ಆದರ್ಶಗಳನ್ನೇ ತುಂಬಿಕೊಂಡಿದ್ದ ವಿಕ್ಕಿ, ಪ್ರೀತಿಯ ಅಭಿಮಾನದ ಅಪ್ಪಾಜಿಯನ್ನು ಕಳೆದುಕೊಂಡು ದುಃಖಿಸುತ್ತಾನೆ.                    ***   ಈ ಕಾದಂಬರಿಗೆ ಅಂತ್ಯವಿದೆ, ಕೃತಿಕಾರರೇನೋ ಕಾದಂಬರಿಗೆ ಮುಕ್ತಾಯ ಹಾಡಿ ಕಥೆ ಮುಗಿಸಿದರೂ ಕಾದಂಬರಿಯನ್ನು ಓದಿದ ಓದುಗನೆದೆಯಲ್ಲಿ ಪಾತ್ರಗಳು ಜೀವಂತಾವಾಗಿಯೇ ಉಳಿಯುತ್ತವೆ.    ರವಿಯ ಪ್ರೀತಿಸುವ ಪರಿ, ಪ್ರೀತಿ ಕೊಡಬೇಕು ಪ್ರತಿಯಾಗಿ ಬಯಸಬಾರದು ಎಂಬ ಸತ್ಯತೆ, ಆರುಷಿಯ ತಾಳ್ಮೆ, ಆತ್ಮಾರಾಮರ ಜೀವನ ದೃಷ್ಟಿಕೋನ ಎಲ್ಲವೂ ಓದುಗನಲ್ಲಿ ನಿರಂತರವಾಗಿ ಉಳಿಯುತ್ತವೆ.    ಶ್ರೀಮತಿ ಉಷಾ ರವಿ ಅವರ ಬರಹದ ವೈಖರಿ, ಕಥೆ ಕಟ್ಟುವ ವಿಧಾನಕ್ಕೆ ಓದುಗ ಖಂಡಿತ ಶರಣಾಗುತ್ತಾನೆ. ಇಡೀ ಕಾದಂಬರಿ ನನ್ನ ಹೃದಯದಲ್ಲಿದ್ದರೂ ಕೆಲ ಸಂದರ್ಭಗಳನ್ನು ಮಾತ್ರ ನಾನು ಇಲ್ಲಿ ಪರಿಚಯಿಸಲೆತ್ನಿಸಿದ್ದೇನೆ. ಅಜ್ಞಾತ ಕವಿಯನ್ನರಸಿ ಹೊರಟ ಐಶ್ವರ್ಯಳಿಗೆ ಸಿಕ್ಕಿದ್ದು ಯಾರು? ಕೊನೆಗೆ ಐಶ್ವರ್ಯ ಯಾರನ್ನು ಮದುವೆಯಾಗುತ್ತಾಳೆ? ಸೂರ್ಯನನ್ನು ಮದುವೆಯಾದ ಬಳಿಕ ಆರುಷಿ ಅನುಭವಿಸಿದ ಯಾತನೆ, ಮಗಳ ಈ ನಡೆಯಿಂದ ಆರುಷಿಯ ತಂದೆ, ತಾಯಿ, ಅಣ್ಣ ಪಟ್ಟ ಸಂಕಟ, ಆರುಷಿಯ ಜೀವನದ ಪ್ರತಿ ಹೆಜ್ಜೆಯಲ್ಲೂ ಅವಳ ಅರಿವಿಗೆ ಬಾರದಂತೆ ರವಿ ಹೇಗೆ ಸಾತಿಕೊಟ್ಟು ಅವಳ ಬದುಕನ್ನು ಗಟ್ಟಿಗೊಳಿಸುತ್ತಾನೆ. ಈ ಎಲ್ಲವೂ ನನ್ನ ಆತ್ಮದಲ್ಲಿ ಬಂಧನವಾಗಿವೆ ಅಲ್ಲದೆ ಈ ಕೃತಿಯ ಅನೇಕ ಸಾಲುಗಳು ಅನೇಕ ಬಾರಿ ನನ್ನನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆಯೂ ಮಾಡಿವೆ.    ನಿಮಗೂ ಈ ಆತ್ಮಾನುಸಂಧಾನದ

ಉಷಾ ರವಿ ಅವರ ಕೃತಿ”ಆತ್ಮಾನುಸಂಧಾನ”ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ Read Post »

ಪುಸ್ತಕ ಸಂಗಾತಿ

ಹೆಚ್. ಎಸ್.ಪ್ರತಿಮಾ ಹಾಸನ್ ರವರ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪೂರ್ಣಿಮಾ ರಾಜೇಶ್(ಬಸು ಮಲ್ಕಿ)

ಪುಸ್ತಕ ಸಂಗಾತಿ ಪೂರ್ಣಿಮಾ ರಾಜೇಶ್(ಬಸು ಮಲ್ಕಿ) ಹೆಚ್. ಎಸ್.ಪ್ರತಿಮಾ ಹಾಸನ್ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪ್ರತಿ ಬೋಧಪುಸ್ತಕದ ಪ್ರಥಮ ಮುದ್ರಣ-2024ಪುಸ್ತಕದ ಮುಖಪುಟ ವಿನ್ಯಾಸ –ಪ್ರಕಾಶನ -ಅನ್ನಪೂರ್ಣ ಪಬ್ಲಿಷಿಂಗ್ ಹೌಸ್.ಪುಸ್ತಕದ ಬೆಲೆ-250 ರೂ.ಪುಟಗಳ ಸಂಖ್ಯೆ-224ಮುನ್ನುಡಿ -ಖ್ಯಾತ ಹಿರಿಯ ಸಾಹಿತಿಗಳಾದ ಶ್ರೀ.ಹರಿನರಸಿಂಹ ಉಪಾಧ್ಯಾಯ ಅವರು ಈ ಲೇಖನ ಸಂಕಲನ ಕೃತಿಗೆ ಸೊಗಸಾದ ಮುನ್ನುಡಿಯನ್ನು ಬರೆದು ಶುಭ ಕೋರಿರುವರು  ಇತ್ತೀಚಿಗೆ ಎಲ್ಲೆಡೆಯೂ  ರಾಜ್ಯದ್ಯಂತ  ಹೆಸರು ಮಾಡುತ್ತಾ  ಶತಕಕ್ಕಿಂತ ಹೆಚ್ಚಿನ ಪ್ರಶಸ್ತಿಯನ್ನು ಪಡೆದಂತಹ ಹೆಮ್ಮೆಯ ಹಾಸನದ  ಮೂಲದವರಾದ  ಹಾಸನದ  ಹೆಮ್ಮೆಯ ಪುತ್ರಿ  ಶ್ರೀಮತಿ ಹೆಚ್ ಎಸ್ ಪ್ರತಿಮಾ  ಹಾಸನ್ ರವರುಮುಕ್ತಕ ಕವಯಿತ್ರಿ, ಶಿಕ್ಷಕಿ, ಸಮಾಜ ಸೇವಕಿ, ಸಂಘಟಕಿ,  ಪತ್ರಕರ್ತೆ, ಅಂಕಣಗಾರ್ತಿ, ಸಾಮಾಜಿಕ ಚಿಂತಕಿ, ಗಾಯಕಿ, ಸಾಹಿತಿ, ಬರಹಗಾರ್ತಿ,ಯಾಗಿ ಅಷ್ಟೇ ಅಲ್ಲದೆ  ಹಲವಾರು ಸಂಘ ಸಂಸ್ಥೆಗಳಲ್ಲಿ  ಜಿಲ್ಲೆ ಹಾಗೂ ರಾಜ್ಯ ಘಟಕಗಳಲ್ಲಿ ಪದಾಧಿಕಾರವನ್ನು ಪಡೆದು ಕಾರ್ಯ ಕಾರ್ಯನಿರ್ವಹಿಸುತ್ತಾ  ‘ ಬಹುಮುಖ ಪ್ರತಿಭೆ ‘ ಯಾಗಿ ಹೊರಹೊಮ್ಮಿದ್ದಾರೆ. ಇವರ ಬಹುಮುಖ ಪ್ರತಿಭೆಯನ್ನು ಕಂಡಾಗ ಉದಿಸಿ ಬಂದ ನುಡಿಗಳು ಹಲವಾರು.” ಆಗದು ಎಂಬ ಕಾರ್ಯವ ಆಗುವುದೆಂಬುದನ್ನು ತೋರಿದವಳು ಎಲ್ಲೆಡೆಯೂ ಪ್ರಸಿದ್ಧಿಯಾದವಳು   ಇಂದಿನ ಪೀಳಿಗೆಗೆ ಪ್ರೇರಣೆಯಾಗಿರುವಳು ಸದಾ ಕಾಲ ಸಮಾಜದ ಏಳಿಗೆಗಾಗಿ  ತುಡಿಯುವಂತಹ ಹೃದಯವ ಹೊಂದಿರುವ ಮಹಿಳಾ ಸಾಧಕಿ ಇವಳು “ಇವರ ಸಾಹಿತ್ಯ ಲೋಕದಲ್ಲಿನ ಸೇವೆಯು  ಇವರಿಂದ 11 ಕೃತಿಗಳು  ಸಾಹಿತ್ಯ ಲೋಕಕ್ಕೆ ಲೋಕಾರ್ಪಣೆಗೊಂಡಿದೆ. ಅದರಲ್ಲಿ ಪ್ರತಿ ಬೋಧವೂ ಒಂದು 224 ಪುಟಗಳನ್ನು ಒಳಗೊಂಡಿದೆ. 250 ರೂಪಾಯಿಯಾಗಿದ್ದು. ಬೆನ್ನುಡಿಯನ್ನು ಪ್ರೋ. ಸಮತಾ ದೇಶ ಮಾನೆ  ರವರು ಬರೆದಿದ್ದು  ಪ್ರೋತ್ಸಾಹವನ್ನು ನೀಡುತ್ತಾ  ಕಾರ್ಯವನ್ನು ಮಾಡಿದ್ದಾರೆ. ಇದು 2024ರ ಆವೃತ್ತಿಯಾಗಿದ್ದು. ಅರ್ಪಣೆಯನ್ನು ತನ್ನ ತಂದೆಯಾದಂತಹ ದಿವಂಗತ ಸುರೇಶ್ ರವರಿಗೂ ತಾಯಿ ನೀಲಮ್ಮ ಸುರೇಶ್ ರವರಿಗೆ ಹಾಗೂ ಅಚ್ಚುಮೆಚ್ಚಿನ ಪ್ರೋತ್ಸಾಹದಾಯಕರಾಗಿ ತನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಅಣ್ಣನಾದ ಶ್ರೀ ಹೆಚ್. ಎಸ್ ಮಂಜುನಾಥ್( ಆರೋಗ್ಯ ನಿರೀಕ್ಷಣಾಧಿಕಾರಿ ) ರವರಿಗೂ  ಅರ್ಪಿಸಿದ್ದಾರೆ. ಈ ಕೃತಿಯಲ್ಲಿ ನವಳಗುಳಿದವರು ಆಶಯ ನುಡಿಯ ಮೂಲಕ ಆಶೀರ್ವದಿಸಿದ್ದಾರೆ. ಅತ್ಯಂತ ಮುಖ್ಯವಾಗಿ  ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದಂತಹ  ಶ್ರೀ ಉದಯಕುಮಾರ್ ರವರು ಆಶಯ ನುಡಿಯನ್ನು  ಬರೆದಿದ್ದಾರೆ. ಆನಂತರದಲ್ಲಿ ಮನದಾಳದ ಮಾತಿನಲ್ಲಿ ತನ್ನ ಸಾಧನೆಯ ದಾರಿಯಲ್ಲಿ ಅಡೆತಡೆಯನ್ನು ನೀಡಿದಂತಹ ಹಾಗೂ ಪ್ರೋತ್ಸಾಹಿಸಿದಂತಹ  ಎಲ್ಲರಿಗೂ ಧನ್ಯವಾದಗಳನ್ನು ಲೇಖಕಿ ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ರವರು  ತಿಳಿಸಿದ್ದಾರೆ. ನಂತರದಲ್ಲಿ ಮುನ್ನುಡಿಯನ್ನು  ಹರಿ ನರಸಿಂಹ ಉಪಾಧ್ಯಾಯರು ಬರೆದಿದ್ದಾರೆ. ಆನಂತರದಲ್ಲಿ ಪರಿವಿಡಿಯಲ್ಲಿ 45 ಲೇಖನಗಳನ್ನು ಒಳಗೊಂಡಂತಹ  ಅ ಲೇಖನಗಳಲ್ಲಿ ಕಥೆ, ಪ್ರಸ್ತುತ ದಿನಮಾನಕ್ಕೆ ಹೋಲಿಕೆ ಮಾಡುವಂತಹ ಲೇಖನಗಳು, ಮಂಗಳಮುಖಿಯರ ಬಗ್ಗೆ  ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಂತಹ ಲೇಖನಗಳು ಇವೆ. ಇದರಲ್ಲಿ ಇರುವಂತಹ  ಪ್ರತಿಯೊಂದು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಕನ್ನಡ ಸಾಹಿತ್ಯವು ಇಂದು ಸೊರಗುತ್ತಿದೆ ಎಂಬ ಕೂಗು ಕೇಳಿ ಬರುವ ಹೊತ್ತಿನಲ್ಲಿ ಅದೆಷ್ಟೋ ಕವಿಗಳು, ಕವಯಿತ್ರಿಯರು, ಲೇಖಕ ಲೇಖಕಿಯರು ಕನ್ನಡದಲ್ಲಿ ಬರೆಯುತ್ತಿರುವುದು ಕಂಡು ಬರುತ್ತಿದೆ. ಇದನ್ನು ನೋಡಿದಾಗ ಕನ್ನಡದ ಜನರು ಕನ್ನಡವನ್ನು ಎಂದಿಗೂ ಹಿಂದೆ ಉಳಿಯಲು ಬಿಡುವ ಮಾತೇ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಅದರಂತೆ ಇಂದು ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬಂದು ತಮ್ಮ ಸಾಹಿತ್ಯ ಅಭಿರುಚಿಯನ್ನು ತೋರಿಸುತ್ತಿರುವುದು ಹೆಮ್ಮೆಯ ವಿಚಾರ. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಕೃಷಿ ಮಾಡುವಲ್ಲಿ  ಹೆಜ್ಜೆ ಹಾಕುವ ಅನೇಕರಲ್ಲಿ ಒಬ್ಬರು ಹಾಸನದ ಶ್ರೀಮತಿ ಪ್ರತಿಮಾ.ಹೆಚ್.ಎಸ್ ರವರು. ಈಗಾಗಲೇ ಹಲವು ಕೃತಿಗಳನ್ನು ಹೊರ ತಂದಿರುವ ಇವರು ಈಗ ಮುಕ್ತಕ ಸಂಕಲನ ಕೃತಿಯನ್ನು ತರುವಲ್ಲಿ ಆಸಕ್ತಿ ತೋರಿರುವುದು ಆ ಸಾಹಿತ್ಯ ಪ್ರಕಾರಕ್ಕೊಂದು ಹೆಚ್ಛಿನ ಗರಿಯಿಟ್ಟಂತಾಗುವುದು. ಶ್ರೀಮತಿ  ಹೆಚ್ ಎಸ್ ಪ್ರತಿಮಾ ಹಾಸನ್ ರವರು  ಈ ಮುಕ್ತಕ ಕೃತಿ *ಅಂತರಂಗ ಪ್ರತಿರವ* ದಲ್ಲಿ ಸುಮಾರು ನೂರು ಮುಕ್ತಕಗಳಿದ್ದು ಜೊತೆಗೆ ಓದಿ ಆರ್ಥೈಸಿಕೊಳ್ಳಲು ಸುಲಭವಾಗುವಂತೆ ಭಾವಾರ್ಥವನ್ನೂ ಬರೆದಿರುವುದನ್ನು ಕಾಣುತ್ತೇವೆ. ಕವಿಭಾವವನ್ನು ಅರ್ಥ ಮಾಡಿಕೊಳ್ಳುವುದು ಕೆಲವೊಮ್ಮೆ ಸುಲಭವಲ್ಲದ ಕಾರಣ ಓದುಗರು ಗೊಂದಲಕ್ಕೆ ಈಡಾಗಬಾರದು, ಓದಿದ ಪ್ರತಿಯೊಂದು ವಿಷಯಗಳೂ ಬೇಗ ಮನನವಾಗಲಿ ಎಂಬ ಉದ್ದೇಶದಿಂದ ಸರಳವಾಗಿ ಕೆಲವು ಸಾಲುಗಳಲ್ಲಿ ಅರ್ಥವನ್ನೂ ಇಲ್ಲಿ ನೀಡಿರುವುದು ಕೃತಿಯ ವಿಶೇಷತೆ.ಇಲ್ಲಿರುವ ಮುಕ್ತಕಗಳಲ್ಲಿ ಕೆಲವನ್ನು ನೋಡುವುದಾದರೆ…ಹೆಚ್. ಎಸ್.ಪ್ರತಿಮಾ ಹಾಸನ್ ರವರ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪೂರ್ಣಿಮಾ ರಾಜೇಶ್(ಬಸು ಮಲ್ಕಿ) ಸದ್ದಿರದೆ ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ ಕಪಿಲನಗರದರಸು ಗೌತಮಬುದ್ಧ ಮನೆಯನು ಬಿಟ್ಟು ಬೋಧಿವೃಕ್ಷದ ಕೆಳಗೆಸಿದ್ಧಿಗಳಿಸಲು ಕುಳಿತ ಲಕ್ಷ್ಮಿದೇವಿ  ಭಾವಾರ್ಥ:  ಪ್ರಪಂಚದಲ್ಲಿ ಎಲ್ಲರೂ  ಯಾವುದೇ ಶಬ್ದ ಮಾಡದೆ ರಾತ್ರಿ ವೇಳೆ ಶಾಂತಿಯಿಂದ ನಿದ್ದೆ ಮಾಡುತ್ತಿರುತ್ತಾರೆ. ಆದರೆ ಗೌತಮ ಕಪಿಲ ನಗರದ  ಅರಸ ಬೋಧಿವೃಕ್ಷದ ಕೆಳಗೆ  ಕುಳಿತು ಧ್ಯಾನ ಮಾಡುತ್ತ ಶಾಂತಿಯನ್ನು ಗಳಿಸುತ್ತಾನೆ . ಅದರಿಂದ ಸಿದ್ಧಿ ಪಡೆಯಬೇಕೆಂದು ಆಶಿಸುತ್ತಾನೆ. ಲೋಕದ ಸಾವು ನೋವುಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ನಡು ರಾತ್ರಿ ಮನೆ ಬಿಟ್ಟು ಹೋಗುತ್ತಾನೆ.  ಬೋಧಿವೃಕ್ಷದ ಕೆಳಗೆ  ಸಿದ್ದಿಗಳಿಸಲು ತಪಸ್ಸಿಗೆ ಕುಳಿತುಬಿಡುತ್ತಾನೆ.ಕನ್ನಡಕೆ ಕೈಯೆತ್ತು ಗೌರಿ ಶಿಖರದ ಹಾಗೆಕನ್ನಡಕೆ ಕೊರಳೆತ್ತು ಪಾಂಚಜನ್ಯಕನ್ನಡವ ನೆನೆಯುತ್ತ ಕನ್ನಡಾಂಬೆಗೆ ನಮಿಸುಕನ್ನಡವೆ ಚೆನ್ನುಡಿಯು ಲಕ್ಷ್ಮಿ ದೇವಿಭಾವಾರ್ಥ: ನಮ್ಮ ಕನ್ನಡ  ನಮ್ಮ ಆಸ್ತಿ. ಅದನ್ನು ಉಳಿಸಿಕೊಳ್ಳುವ ಕೆಲಸ ನಮ್ಮಿಂದಲೇ ಆಗಬೇಕೇ ಹೊರತು ಬೇರೆಯವರು ಅದನ್ನು ಉಳಿಸಲು ಬರುವುದಿಲ್ಲ. ಕನ್ನಡಕ್ಕೆ ಕೈ ಎತ್ತು  ಗೌರಿ ಶಿಖರದ ಹಾಗೆ  ಕನ್ನಡಕ್ಕೆ ಕೊರಳೆತ್ತು  ಪಾಂಚಜನ್ಯದ ರೀತಿಯಲ್ಲಿ ಎಂಬಂತೆ ಕನ್ನಡವನ್ನೇ ಉಸಿರಾಗಿಸಿಕೊಂಡು  ಕನ್ನಡವನ್ನೇ ಬೆಳೆಸಲು  ಹೋರಾಟವನ್ನು ಮಾಡಬೇಕಾಗುತ್ತದೆ. ಕನ್ನಡವ ನೆನೆಸುತಲಿ  ಕನ್ನಡಾಂಬೆಗೆ ನಮಿಸುತ್ತಲಿ  ತಾಯಿಯ ಋಣ ತೀರಿಸಲಾಗದೆಂದು  ನನ್ನ ಕನ್ನಡ ನನಗೆ ಹೆಮ್ಮೆ ಎಂದು ಹೇಳುತ್ತಾ ಸಾಗುವ ದಾರಿಯಲ್ಲಿ ಕನ್ನಡಾಂಬೆಯನ್ನು ನಮಿಸುತ್ತಾ ಕನ್ನಡವೇ ಚೆನ್ನುಡಿಯು ಎಂದು ಹೇಳುತ್ತಾ  ಎಲ್ಲೆಡೆಯೂ ಪ್ರೀತಿ ವಿಶ್ವಾಸದಲ್ಲಿ ಬಾಳಬೇಕಾಗಿದೆ. ಪ್ರತಿ ಮನೆ ಮನೆಗಳಲ್ಲೂ ಕನ್ನಡದ ಕಹಳೆಯನ್ನು ಕೂಗ ಬೇಕಾಗಿದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕನ್ನಡವೇ ನಮ್ಮಮ್ಮ, ಅವಳೇ ನಮ್ಮ ಉಸಿರಮ್ಮ ಎಂದು ಜೀವನದಲ್ಲಿ ಸಾಗ ಬೇಕಾಗುತ್ತದೆ.ಕೂಲಿನಾಲಿಯ ಮಾಡಿ ಮಕ್ಕಳಿಗೆ ಮುದನೀಡಿಪಾಲಿಸಿದ ತಾಯ್ತಂದೆ ನಿಜದೇವರುಹಾಲುಣಿಸಿ ತುತ್ತುಣಿಸಿ ಗೌರವವ ಹೆಚ್ಚಿಸಿದನೀಲಮ್ಮನಿಗೆ ಶರಣು ಲಕ್ಷ್ಮಿದೇವಿಭಾವಾರ್ಥ: ಯಾರೇ ಆಗಲಿ ಜನಿಸಿದ ಮಕ್ಕಳನ್ನು ಸಾಕುವಾಗ ತಮ್ಮ ಕುಡಿಗಳೆಂದು ಪ್ರೀತಿಯಿಂದ ಸಾಕುತ್ತಾರೆ.  ಯಾವುದೇ ಕಷ್ಟಗಳನ್ನು ತೋರಿಸಿಕೊಳ್ಳದಂತೆ ಕೂಲಿ ನಾಲಿ ಮಾಡಿ ಮಕ್ಕಳನ್ನು ಸಾಕುತ್ತಾರೆ. ಅವರೇ ನಿಜವಾದ ದೇವರು. ಅವರ ಕಷ್ಟಗಳು ಎಷ್ಟೇ ಇದ್ದರೂ  ನಗುನಗುತ ಪ್ರೀತಿಯಿಂದ ಊಟ ಮಾಡಿಸುತ್ತಾರೆ. ಅಂತಹ ದೇವರುಗಳನ್ನು  ಚೆನ್ನಾಗಿ ನೋಡಿಕೊಳ್ಳುವ ರೀತಿಯಲ್ಲಿ  ಕೃತಜ್ಞತೆಯನ್ನು ತೋರಬೇಕು.  ಅಂತಹ ನನ್ನ ತಾಯಿಯು ಸಹ ಎದೆ ಹಾಲು ನೀಡುತ್ತಾ ಗೌರವ ನೀಡುತ್ತ ಪ್ರೀತಿ ಪ್ರೇಮದಲಿ ಸಾಕು  ಹೂವಂತೆ ಸಂರಕ್ಷಿಸುತ  ನನ್ನ ಎಲ್ಲಾ ಕಾರ್ಯಗಳಲ್ಲಿ ಜೊತೆಯಾಗಿ ನಿಲ್ಲುತ್ತಾ ನನಗೆ ಯಶಸ್ಸನ್ನು ನೀಡುತ್ತಿರುವ  ನನ್ನ ತಾಯಿ ನೀಲಮ್ಮಗೆ ಶರಣು.        ಕೃತಿಯೊಳಗಿನ ಎಲ್ಲಾ ಮುಕ್ತಕಗಳಿಂದ ಆಯ್ದು ಬೆರಳೆಣಿಕೆಯಷ್ಟನ್ನು ಮಾತ್ರ ಇಲ್ಲಿ ಉದಾಹರಿಸಿದ್ದೇನೆ. ಈ ಎಲ್ಲ ರಚನೆಗಳನ್ನು ಕಂಡಾಗ ಕವಯಿತ್ರಿಯು ಎಷ್ಟು ವಿಶಾಲ ಚಿಂತನೆಯುಳ್ಳವರಾಗಿದ್ದಾರೆ ಎಂದು ಅರ್ಥವಾಗುತ್ತದೆ. ಪ್ರತಿಯೊಂದು ಮುಕ್ತಕಗಳಲ್ಲಿಯೂ ವಿವಿದ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸಾಹಿತ್ಯದ ವಿಸ್ತಾರವನ್ನು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಪ್ರೀತಿ, ಒಳಿತು ಕೆಡುಕು, ಬುದ್ಧಿವಾದ, ಅಮ್ಮ, ಸ್ನೇಹ ಮೊದಲಾದ ಸಾಕಷ್ಟು ವಿಷಯಗಳು ಹಾಸುಹೊಕ್ಕಾಗಿವೆ. ಬದುಕಿನ ಆಗು ಹೋಗುಗಳಿಗೆ ಸ್ಪಂದಿಸುತ್ತವೆ. ಸಂಬಂಧ, ಪರಿಸರ ಕಾಳಜಿ, ಕನ್ನಡದ ಹಿರಿಮೆ, ದುಃಖ, ಭಕ್ತಿ, ಕಲಿಕೆ, ತಾಳ್ಮೆಯ ಕುರಿತು ಬೆಳಕು ಚೆಲ್ಲುವ ಹಲವು ಮುಕ್ತಕಗಳು ಮನಸ್ಸಿಗೆ ನಾಟುತ್ತವೆ. ಆಧುನಿಕ ವಚನದಂತೆ ಕಂಗೊಳಿಸುವ ನಾಲ್ಕು ಸಾಲಿನ ಮುಕ್ತಕಗಳು ಲಕ್ಷ್ಮಿದೇವಿ ಅಂಕಿತದಿಂದ ಕೊನೆಗೊಳ್ಳುತ್ತವೆ. ಈಗಾಗಲೇ ನೀಲ ಪ್ರತಿಮಾನ ಮಂಜು ಕವನ ಸಂಕಲನ, ಪಂಚ ಮುಕ್ತಕ ಮಾಲೆ, ಹಾಗೂ ಮನದಾಳದ ಪ್ರತಿಬಿಂಬ ಲೇಖನ ಸಂಕಲನ, ಪ್ರತಿಮಾವಲೋಕನ (ಕೃತಿ ವಿಮರ್ಶನ ಸಂಕಲನ), ಭಾವನೆಗಳ ಪ್ರತಿಬಿಂಬ, ಬಣ್ಣದ ಪ್ರತಿ ಡಬ್ಬಿ (ಶಿಶು ಗೀತೆ), ಪ್ರತಿಮಾನತರಂಗ (ಸಮಗ್ರಲೇಖನ ಸಂಗ್ರಹ ), ಪ್ರತಿ ಮುಕ್ತ ಸಿರಿ, ಕೃತಿಗಳನ್ನು ಹೊರತಂದಿರುವ ಇವರು ಪ್ರತಿಮಾ ಸಾಮಾಜಿಕ, ಸಾಂಸ್ಕ್ರತಿಕ ಟ್ರಸ್ಟ್ (ರಿ)ರಾಜ್ಯ ಘಟಕ. ಹಾಸನ ಜಿಲ್ಲೆ. ಯ ಸಂಸ್ಥಾಪಕಿಯೂ ಹೌದು. ಈ ಪ್ರತಿಷ್ಠಾನದ ಮೂಲಕ ಅನೇಕ ಸಮಾಜ ಸೇವೆಯನ್ನು ಮಾಡಿ ಗೌರವಕ್ಕೆ ಪಾತ್ರರಾಗಿರುವುದು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿ. ಸಮಾಜ ಸೇವೆ ಹಾಗೂ ಸಾಹಿತ್ಯ ಸೇವೆಗೆ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ವಿಚಾರ. ಈಗ ಈ ಮತ್ತೊಂದು ಕೃತಿಯೂ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ಕೀರ್ತಿ, ಸಮ್ಮಾನಗಳು ಅರಸಿ ಬರಲಿ ಎಂದು ಆಶಿಸುತ್ತಾ ಈ ಕೃತಿಯಲ್ಲಿನ ಉತ್ತಮ ಜೀವನ ಮೌಲ್ಯಗಳನ್ನು ಸಂದೇಶಗಳು ಜನತೆಗೆ ದಾರಿ ದೀಪವಾಗಲಿ. ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ ರವರು ಇನ್ನಷ್ಟು ಹೆಚ್ಚು ವೈವಿಧ್ಯಮಯ ಸಾಹಿತ್ಯ ರಚನೆಯಾಗಲಿ, ತಾಯಿ ಭುವನೇಶ್ವರಿಯ ಆಶೀರ್ವಾದ ಸದಾ ಇವರಿಗೆ ಪ್ರಾಪ್ತವಾಗಲಿ ಎಂದು ಹೃನ್ಮನದಿಂದ ಹಾರೈಸುತ್ತೇನೆ. ಸಿರಿಗನ್ನಡಂ ಗೆಲ್ಗೆಸಿರಿಗನ್ನಡಂ ಬಾಳ್ಗೆ ಸಹೃದಯ ಓದುಗರು ಸಾಹಿತ್ಯಾಸಕ್ತರು ಪ್ರತಿಭೋದ ಲೇಖನ ಸಂಕಲನ ಕೃತಿಯ ಕೊಂಡು ಓದುವ ಮೂಲಕ ಸೃಜನಶೀಲ ಬರಹಗಾರ್ತಿಯಾದ ಬಹುಮುಖ ಪ್ರತಿಭೆಯ ಪ್ರತಿಭಾನ್ವಿತೆಯಾದ ಶ್ರೀಮತಿ ಪ್ರತಿಮಾ ಹಾಸನ ಇವರನ್ನು ಹರಸಿ ಹಾರೈಸಿ ಶುಭ ಕೋರಿ ಈ ಲೇಖನ ಸಂಕಲನ ಕೃತಿಯ ಕೊಂಡು ಕೊಳ್ಳಲು ಸಂಪರ್ಕಿಸಬೇಕಾದ ಲೇಖಕಿಯ ಮೊಬೈಲ್ ಸಂಪರ್ಕ ಸಂಖ್ಯೆ- +91 96115 34526 ಪೂರ್ಣಿಮಾ ರಾಜೇಶ್

ಹೆಚ್. ಎಸ್.ಪ್ರತಿಮಾ ಹಾಸನ್ ರವರ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪೂರ್ಣಿಮಾ ರಾಜೇಶ್(ಬಸು ಮಲ್ಕಿ) Read Post »

ಪುಸ್ತಕ ಸಂಗಾತಿ

“ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಕೆ ಎನ್ ಚಿದಾನಂದ

ಪುಸ್ತಕಸಂಗಾತಿ ಕೆ ಎನ್ ಚಿದಾನಂದ “ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಇತಿಹಾಸವು ಆಧಾರಗಳಿಂದಲೇ ಸೃಷ್ಟಿಯಾಗಿದೆ. ಆಧಾರಗಳಿಲ್ಲದೆ ಇತಿಹಾಸವಿಲ್ಲ. ಒಂದು ಸ್ಥಳದಲ್ಲಿ ದೊರೆತ ಸಾಹಿತ್ಯ, ನಾಣ್ಯ, ಶಾಸನ, ಸ್ಮಾರಕ, ದೇವಾಲಯ, ಮುಂತಾದವುಗಳು ತನ್ನದೇ ಚರಿತ್ರೆಯನ್ನು ಜಗತ್ತಿಗೆ ಸಾರುತ್ತವೆ. ಕಾಲ ಎಲ್ಲವನ್ನು ಮೆರೆಸುತ್ತದೆ ಮತ್ತು ಎಲ್ಲವನ್ನು ಮರೆಸುತ್ತದೆ. ಆದರೆ ಅಲ್ಲಿ ಉಳಿಯುವ ಸಾಕ್ಷಿಗಳು ಮತ್ತೆ ಮತ್ತೆ ನೆನಪುಗಳನ್ನು ಮರುಕಳಿಸುತ್ತದೆ. ಕಾಲದ ಹೆಜ್ಜೆ ಗುರುತುಗಳನ್ನು ಹುಡುಕುವುದು ಎಂದರೆ ಒಂದು ಅನ್ವೇಷಣೆಯೇ ಸರಿ. ​”ದೇಶ ಸುತ್ತು ಕೋಶ ಓದು” ಎಂಬ ಜನಜನಿತವಾದ ಗಾದೆ ಮಾತು ಕೇವಲ ಜ್ಞಾನಾರ್ಜನೆಯ ಮಾರ್ಗವಲ್ಲ; ಅದು ಮನುಷ್ಯನ ಅಸ್ತಿತ್ವದ ವಿಸ್ತರಣೆಯ ಸಂಕೇತವೂ ಹೌದು. ಇಡೀ ಪ್ರಪಂಚವನ್ನು ಒಂದು ಮಹತ್ತರವಾದ ಗ್ರಂಥವೆಂದು ಭಾವಿಸುವುವಾದರೆ, ಪ್ರೇಕ್ಷಣೀಯ ಸ್ಥಳಗಳು ಆ ಗ್ರಂಥದ ಒಂದೊಂದು ಅಮೂಲ್ಯವಾದ ಅಧ್ಯಾಯಗಳು ಎನ್ನಬಹುದು. ನಾಗರಿಕತೆಯ ಆರಂಭದಿಂದ ಇಂದಿನ ಆಧುನಿಕ ಯುಗದವರೆಗೆ, ಮನುಷ್ಯ ಹೊಸತನ್ನು ಹುಡುಕುತ್ತಾ, ಪ್ರಕೃತಿಯ ಸೊಬಗನ್ನು ಆರಾಧಿಸುತ್ತಾ ಮತ್ತು ಪೂರ್ವಜರು ಬಿಟ್ಟು ಹೋದ ಸ್ಮಾರಕಗಳ ಮೌನ ಸಂಭಾಷಣೆಯನ್ನು ಆಲಿಸುತ್ತಾ ಸಾಗಿದ್ದಾನೆ. ​ಪ್ರವಾಸವೆಂಬುದು ಹೊಸ ಚೇತನವನ್ನು ತುಂಬುವ ಪಯಣವಾಗಿದೆ. ​ಪ್ರವಾಸವೆಂದರೆ ಕೇವಲ ಒಂದು ಭೌಗೋಳಿಕ ಬಿಂದುವಿನಿಂದ ಮತ್ತೊಂದು ಬಿಂದುವಿಗೆ ಚಲಿಸುವುದಲ್ಲ. ಅದು ನಮ್ಮೊಳಗಿನ ಸಂಕುಚಿತ ಭಾವನೆಗಳನ್ನು ಕಿತ್ತೆಸೆದು, ವಿಶಾಲವಾದ ವಿಶ್ವದೊಂದಿಗೆ ಮೇಳೈಸುವ ಪ್ರಕ್ರಿಯೆಯಾಗಿದೆ. ಒಂದು ಕಲ್ಲಿನ ಕೆತ್ತನೆಯಲ್ಲಿ ಅಡಗಿರುವ ಶಿಲ್ಪಿಯ ಶ್ರಮ, ಗೋಪುರದ ಭವ್ಯತೆ ಅಥವಾ ಪ್ರಕೃತಿಯ ಮಡಿಲಲ್ಲಿ ಹರಿಯುವ ಜಲಪಾತದ ನಿನಾದ ಇವೆಲ್ಲವೂ ನಮಗೆ ಬದುಕಿನ ಅರ್ಥವನ್ನು ಹೊಸದಾಗಿ ಕಲಿಸಿಕೊಡುತ್ತವೆ. ನನ್ನ ಹಿತೈಷಿ  ಸ್ನೇಹಿತರಾದ ಗೊರೂರು ಅನಂತರಾಜು ಅವರು ಹೆಸರೇ ಹೇಳುವಂತೆ ಗೊರೂರಿನವರು. ಇವರ ಬರಹದ ಹವ್ಯಾಸ ನಿಲ್ಲದ ಪಯಣವಾಗಿದೆ. ತನಗೆ ಗೊತ್ತಿರುವ ವಿಷಯದೊಂದಿಗೆ ಮತ್ತಷ್ಟು ಅಧ್ಯಯನ, ವಿಷಯ ಸಂಗ್ರಹದ ಮೂಲಕ ಲೇಖನಗಳನ್ನು ಪ್ರಕಟಿಸುತ್ತಿರುವ ಇವರು ಅವೆಲ್ಲವನ್ನು ಒಟ್ಟಾಗಿಸಿ ಓದುಗರಿಗೆ ಒಂದೆಡೆ ಸಿಗುವಂತೆ ಮಾಡಿರುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದುದು. ಗೊರೂರು ಅನಂತರಾಜುರವರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಸುಮ್ಮನಾಗಲಿಲ್ಲ : ಬದಲಾಗಿ ಆ ಸ್ಥಳದ ಕುರಿತು ಮಾಹಿತಿ ಸಂಗ್ರಹಿಸಿ ಓದುಗ ಬಳಗಕ್ಕೆ ಉಣಬಡಿಸಿದ್ದಾರೆ. ಎಡತೊರೆ ಎನಿಸಿದ ಕಾವೇರಿ ನದಿಯ ತಟದಲ್ಲಿ ನಿರ್ಮಾಣಗೊಂಡಿರುವ ಅರ್ಕೇಶ್ವರ ದೇವಾಲಯ ಕುರಿತ ಮಾಹಿತಿ ನೀಡಿದ್ದಾರೆ. ಮೂಗೂರಿನ ತ್ರಿಪುರ ಸುಂದರಿ ದೇವಾಲಯದ ಕುರಿತ ಮಾಹಿತಿ ವಿಚಾರ ಪೂರ್ಣವಾಗಿದೆ. ತಲಕಾಡಿನಲ್ಲಿ ಪಂಚಲಿಂಗ ದರ್ಶನದ ಬಗೆಗೆ ನೀಡಿರುವ ಮಾಹಿತಿ, ಅಲಮೇಲಮ್ಮನ ವಿಚಾರ, ಕಾವೇರಿ ತಟದಲ್ಲಿನ ಮರಳರಾಶಿ, ಗಂಗ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿರುವರು. ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲೆಸಿರುವ ರಂಗನಾಥ ಸ್ವಾಮಿಯ ದೇವಾಲಯದ ಕುರಿತು ನೀಡಿರುವ ಮಾಹಿತಿ ಓದುಗರಿಗೆ ಅತ್ಯುಪಯುಕ್ತವಾಗಿದೆ. ಬೆಲಗೂರಿನ ಹಾಲು ರಾಮೇಶ್ವರ ದೇವಾಲಯದ ಐತಿಹ್ಯವನ್ನು ತಿಳಿಯುುತ್ತಾ ಓದು ಮುಂದುವರಿದಾಗ ಅನಂತರಾಜುರವರ ಹುಟ್ಟೂರಾದ ಗೊರೂರಿನ ತ್ರಿಕೂಟಲಿಂಗೇಶ್ವರ ದೇವಾಲಯ ಮಾಹಿತಿ ದೊರಕುತ್ತದೆ. ಪ್ರವಾಸಿ ತಾಣಗಳ ಕುರಿತು ತಿಳಿಯುವ ನಮ್ಮ ಓದುವ ಪಯಣ, ಗೊರೂರಿನ ರಥಚಕ್ರಗಳ ಕುರಿತಂತೆ ತಿಳಿಸುತ್ತದೆ. ಚುಂಚನಕಟ್ಟೆಯ ಕೋದಂಡರಾಮನ ದೇವಾಲಯದ ವಿಚಾರವನ್ನು ಲೇಖಕರಾದ ಗೊರೂರು ಅನಂತರಾಜು ರವರು ತುಂಬಾ ಚೆನ್ನಾಗಿ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ. ಈ ಪ್ರವಾಸ ಕಥನ ಕೇವಲ ಕರ್ನಾಟಕದ ಸ್ಥಳಗಳನ್ನು ಮಾತ್ರವಲ್ಲದೇ ತಮಿಳುನಾಡಿನ ಕುಂಭಕೋಣಂನ ನವಗ್ರಹ ದೇವಾಲಯಗಳವರೆಗೂ ಕರೆದೊಯ್ಯುತ್ತದೆ. ​ಒಟ್ಟಿನಲ್ಲಿ ಈ ಕೃತಿಯ ಆಶಯವೇನೆಂದರೆ, ಈ ಕೃತಿಯು ಕೇವಲ ಪ್ರವಾಸಿ ತಾಣಗಳ ಪಟ್ಟಿಯಲ್ಲ; ಇದು ಇತಿಹಾಸ ಮತ್ತು ವರ್ತಮಾನದ ನಡುವಿನ ಸೇತುವೆ. ನಮ್ಮ ನಾಡಿನ ಅಪ್ರತಿಮ ವಾಸ್ತುಶಿಲ್ಪ, ಪ್ರಕೃತಿಯ ಅಚ್ಚರಿಗಳು ಮತ್ತು ಧಾರ್ಮಿಕ ಕೇಂದ್ರಗಳ ಹಿಂದಿರುವ ತಾತ್ವಿಕ ಹಿನ್ನೆಲೆಯನ್ನು ಓದುಗರಿಗೆ ಮನದಟ್ಟು ಮಾಡುವ ಪ್ರಯತ್ನ ಇಲ್ಲಿ ನಡೆದಿದೆ. ಪ್ರತಿಯೊಂದು ಸ್ಥಳಕ್ಕೂ ತನ್ನದೇ ಆದ ಕಥೆಯಿದೆ, ತನ್ನದೇ ಆದ ನೋವು-ನಲಿವುಗಳಿವೆ. ಆ ಸ್ಥಳಗಳ ಮೌನದಲ್ಲಿ ಅಡಗಿರುವ ಇತಿಹಾಸದ ಚೀತ್ಕಾರವನ್ನು ಅಥವಾ ಶಾಂತಿಯನ್ನು ಗುರುತಿಸುವ ದೃಷ್ಟಿಕೋನವನ್ನು ಈ ಬರಹಗಳು ನೀಡುತ್ತವೆ. ಪ್ರವಾಸೀ ತಾಣಗಳು ಸಂಸ್ಕೃತಿಯ ಪ್ರತಿಬಿಂಬವಾಗಿವೆ.​ಒಂದು ಪ್ರೇಕ್ಷಣೀಯ ಸ್ಥಳವು ಒಂದು ಜನಾಂಗದ ಸಂಸ್ಕೃತಿ ಮತ್ತು ಕಲಾಪ್ರೌಢಿಮೆಯ ಕೈಗನ್ನಡಿಯಾಗಿರುತ್ತದೆ. ಹಳೇಬೀಡು-ಬೇಲೂರಿನ ಶಿಲ್ಪಕಲೆಗಳು ಕೇವಲ ಕಲ್ಲುಗಳಲ್ಲ, ಅವು ಅಂದಿನ ಕಾಲದ ಜನರ ಸೌಂದರ್ಯ ಪ್ರಜ್ಞೆಯ ಸಾಕಾರ ರೂಪಗಳು. ಹಾಗೆಯೇ, ಪಶ್ಚಿಮ ಘಟ್ಟಗಳ ಹಸಿರು ಕೇವಲ ಅರಣ್ಯವಲ್ಲ, ಅದು ನಮ್ಮ ಜೀವಸಂಕುಲದ ಅಸ್ತಿತ್ವದ ಮೂಲ. ಇವುಗಳನ್ನು ರಕ್ಷಿಸುವುದು ಮತ್ತು ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಹೊತ್ತಿಗೆಯು ಆ ಜವಾಬ್ದಾರಿಯನ್ನು ಪ್ರತಿಯೊಬ್ಬ ಓದುಗನಲ್ಲೂ ಜಾಗೃತಗೊಳಿಸುತ್ತದೆ ಎಂಬ ನಂಬಿಕೆ ನನಗಿದೆ.​ಪ್ರವಾಸವು ಮನುಷ್ಯನನ್ನು ವಿನಮ್ರನನ್ನಾಗಿ ಮಾಡುತ್ತದೆ. ಜಗತ್ತು ಎಷ್ಟು ವಿಶಾಲವಾಗಿದೆ ಮತ್ತು ಅದರ ಮುಂದೆ ತಾನು ಎಷ್ಟು ಸಣ್ಣವನು ಎಂಬ ಸತ್ಯದ ದರ್ಶನ ಪ್ರವಾಸಿಗನಿಗಾಗುತ್ತದೆ. ಈ ಕೃತಿಯ ಪುಟಗಳನ್ನು ತಿರುವಿದಾಗ ಓದುಗರು ಕೇವಲ ಮಾಹಿತಿಯನ್ನು ಪಡೆಯದೆ, ಆಯಾ ಸ್ಥಳಗಳ ಅನುಭೂತಿಯನ್ನು ಪಡೆಯಲಿ ಎಂಬುದು ನನ್ನ ಆಶಯ. ಆಗ ಮಾತ್ರ ಗೊರೂರು ಅನಂತರಾಜುರವರು ಹೊರತರುತ್ತಿರುವ ಈ ಕೃತಿಯ ಉದ್ದೇಶ ಸಾಧಿತವಾದಂತೆ. ಕಾಲದ ಪ್ರವಾಹದಲ್ಲಿ ಅಳಿಯದೆ ಉಳಿದಿರುವ ಈ ಐತಿಹಾಸಿಕ ಮತ್ತು ನೈಸರ್ಗಿಕ ತಾಣಗಳತ್ತ ಒಂದು ಅರ್ಥಪೂರ್ಣ ಪಯಣ ಬೆಳೆಸಲು ಈ ಕೃತಿ ನಿಮಗೆ ಪ್ರೇರಣೆಯಾಗಲಿ. ಕೆ. ಎನ್. ಚಿದಾನಂದಸಹ ಶಿಕ್ಷಕರುಜಿ. ಜಿ. ಜೆ. ಸಿ., ಪ್ರಧಾನ ಪ್ರೌಢಶಾಲಾ ವಿಭಾಗಆರ್. ಸಿ. ರಸ್ತೆ, ಹಾಸನ -573201

“ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಕೆ ಎನ್ ಚಿದಾನಂದ Read Post »

ಪುಸ್ತಕ ಸಂಗಾತಿ

“ಜಗತ್ತೇ ಒಂದು ರಂಗಮಂಟಪ ನಾವೆಲ್ಲ ನಟರು-ಶೇಕ್ಸಪಿಯರ್”ಪಾರ್ವತಿ ಎಸ್ ಬೂದೂರು

ಪುಸ್ತಕ ಸಂಗಾತಿ ಪಾರ್ವತಿ ಎಸ್ ಬೂದೂರು “ಜಗತ್ತೇ ಒಂದು ರಂಗಮಂಟಪ ನಾವೆಲ್ಲ ನಟರು-ಶೇಕ್ಸಪಿಯರ್” ಇಂಗ್ಲೆಂಡ್ ನ ಜಗತ್ಪ್ರಸಿದ್ಧ ನಾಟಕಕಾರ ಹಾಗು ಕವಿ ವಿಲಿಯಮ್ ಶೇಕ್ಸಪಿಯರವರು ಈ ದೇಹದಲಿ ಉಸಿರಿರುವ ತನಕ ಸವೆಯುವ ಗಳಿಗೆಗಳನೆ ನಾಟಕ ಎಂದಿರುವರು ಹಾಗಾದರೆ ಈ ನಾಟಕ (Drama) ಎನ್ನುವ ಪದದ ಆಳವನು ನೋಡಲೆತ್ನಿಸಿದಾಗ, ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಜೀವಂತಿಕೆಯಲ್ಲಿಯೆ ವಿಶಿಷ್ಟವಾದ ಮಾನವ ಸಂವೇದನೆಯ ಪ್ರತಿಬಿಂಬವಾಗಿದೆ.ಕವಿತೆ ಓದಿಸಿಕೊಂಡು ಹೋಗುತ್ತದೆ, ಕಾದಂಬರಿ ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡುತ್ತದೆ. ಆದರೆ ನಾಟಕವು ಕಣ್ಣೆದುರೇ ಘಟಿಸುವ ‘ವರ್ತಮಾನ’. ಸಂಸ್ಕೃತದ ಅಲಂಕಾರಿಕರು ನಾಟಕವನ್ನು ‘ದೃಶ್ಯಕಾವ್ಯ’ಎಂದಿರುವರು.ನಾಟಕವು ಕೇವಲ ಲೇಖಕನ ಕಲ್ಪನೆಯಲ್ಲ ಪ್ರೇಕ್ಷಕರ ಎದುರು ರಂಗಮಂಟಪದ ಮೇಲೆ ಸೃಷ್ಟಿಯಾಗುವ ಮಾಯಾ ಪ್ರಪಂಚ.ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ನಾಟಕಕ್ಕಿದೆ. ಮನುಷ್ಯನ ಅಂತರಂಗವನ್ನು ಶೋಧಿಸುವ, ಸಮಾಜದ ಮೌಲ್ಯಗಳನ್ನು ಪ್ರಶ್ನಿಸುವ ಮತ್ತು ಬದುಕುವ ಕಲೆಯನ್ನು ಕಲಿಸುವ ಒಂದು ಸತ್ವಯುತ ಕಲಾ ಪ್ರಕಾರವಾಗಿದೆ. ಅಕ್ಷರ ಮತ್ತು ಅಭಿನಯದ ಈ ಸಮಾಗಮವೇ ನಾಟಕವನ್ನು ಅಮರವಾಗಿಸಿದೆ.‘ನಾಟಕ’ ಎಂಬ ಪದವು ಸಂಸ್ಕೃತದ ‘ನಟ್’ (ನಟಿಸು ಅಥವಾ ಚಲಿಸು) ಎಂಬ ಧಾತುವಿನಿಂದ ಬಂದಿದೆ.ಭರತಮುನಿಯು ತನ್ನ ‘ನಾಟ್ಯಶಾಸ್ತ್ರ’ದಲ್ಲಿ ನಾಟಕವನ್ನು ‘ಪಂಚಮ ವೇದ’ ( ಋಗ್ವೇದದ ಪಠ್ಯ, ಸಾಮವೇದದ ಗಾಯನ, ಯಜುರ್ವೇದದ ಅಭಿನಯ, ಅಥರ್ವ ವೇದದ ರಸವನು ಪಡೆದುದೆ ನಾಟಕ ) ಎಂದು ಕರೆದಿದ್ದಾರೆ ಇದು ಸಮಾಜದ ಎಲ್ಲಾ ವರ್ಗದ ಜನರಿಗೂ ಜ್ಞಾನ ಮತ್ತು ಮನರಂಜನೆ ನೀಡುವ ಶಕ್ತಿಯನ್ನು ಹೊಂದಿದೆ.ನವರಸಗಳ ಮೂಲಕ ಪ್ರೇಕ್ಷಕನಲ್ಲಿ ಭಾವನಾತ್ಮಕ ಬದಲಾವಣೆ ತರುವುದು ಇದರ ಮುಖ್ಯ ಗುರಿ.ಪೌರಾಣಿಕ: ಐತಿಹಾಸಿಕ: ಸಾಮಾಜಿಕ: ದುರಂತ. ಸುಖಾಂತ, ಹಾಸ್ಯ ಇವೆಲ್ಲ ನಾಟಕದ ಪ್ರಾಕಾರಗಳು.ಮನುಷ್ಯನ ಸಂಘರ್ಷಗಳು ಸೋಲು-ಗೆಲುವುಗಳು ಮತ್ತು ಭಾವನೆಗಳನ್ನು ಅಭಿನಯದ ಮೂಲಕ ಮರುಸೃಷ್ಟಿಸುವ ಕಲೆ. “ಜಗತ್ತೇ ಒಂದು ರಂಗಮಂಟಪ, ನಾವೆಲ್ಲರೂ ನಟರು” ಎಂಬ ಶೇಕ್ಸ್‌ಪಿಯರ್‌ನ ಮಾತು ನಾಟಕದ ವ್ಯಾಪ್ತಿಯನ್ನು ಅದ್ಭುತವಾಗಿ ವರ್ಣಿಸುತ್ತದೆ. ನಮ್ಮ ಸಗರನಾಡಿನ ಸಾಹಿತಿ, ಸಂಶೋದಕ, ಶಿಕ್ಷಕರಾದ ಶ್ರೀಯುತ ಶ್ರೀ ನಿಂಗನಗೌಡ ದೇಸಾಯಿ ಅವರು ರಚಸಿದ ನಾಟಕ ಕೃತಿಯ ಅವಲೋಕನ. ಕಲಿಯಿರಿ ಕಲಿಸಿರಿ (ಸಾಮಾಜಿಕ ನಾಟಕ) ಲೇಖಕರು: ನಿಂಗನಗೌಡ ದೇಸಾಯಿ.ಪ್ರಥಮ ಮುದ್ರಣ: 2010.ಶಿಕ್ಷಣ ಎಂಬುದು ಕೇವಲ ಅಕ್ಷರ ಕಲಿಯುವುದಲ್ಲ, ಅದು ಬದುಕುವ ದಾರಿಯನ್ನು ತೋರಿಸುವ ಬೆಳಕು. ಈ ಆಶಯವನ್ನು ಹೊತ್ತು ಹೊರಬಂದಿರುವ ನಾಟಕವೇ ‘ಕಲಿಯಿರಿ ಕಲಿಸಿರಿ’. ಕಲ್ಬುರ್ಗಿಯ ಬಸವ ಪ್ರಕಾಶನದಿಂದ ಪ್ರಕಟಗೊಂಡ ಈ ಕೃತಿಗೆ ಖ್ಯಾತ ಮಕ್ಕಳ ಸಾಹಿತಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಂಗತ ಚಂದ್ರಕಾಂತ್ ಕರದಳ್ಳಿ ಅವರು ಮುನ್ನುಡಿ ಬರೆದಿದ್ದಾರೆ. ಸುರಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಾಂತಗೌಡ ಪಾಟೀಲ್ ಅವರ ಪ್ರೋತ್ಸಾಹ ಹಾಗೂ ಕಂಚ್ಯಾಣಿ ಶರಣಪ್ಪ ಅವರ ಬೆನ್ನುಡಿಯೊಂದಿಗೆ ಈ ನಾಟಕವು ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುತ್ತದೆ.ಇಂದಿನ ನಗರೀಕರಣದ ಅಬ್ಬರದಲ್ಲಿ ಯುವಜನತೆ ಹಳ್ಳಿಯನ್ನು ಮರೆತು ನಗರಗಳತ್ತ ಓಡುತ್ತಿದ್ದಾರೆ. “ಎಲ್ಲವನ್ನೂ ಸರ್ಕಾರವೇ ಮಾಡಲಿ” ಎಂಬ ಅಸಹಾಯಕ ಮನೋಭಾವದ ನಡುವೆ, ಈ ನಾಟಕದ ನಾಯಕ ರವಿ ಒಬ್ಬ ಆದರ್ಶ ಯುವಕನಾಗಿ ಕಾಣಿಸಿಕೊಳ್ಳುತ್ತಾನೆ. ಎಂ.ಎಸ್ಸಿ ಮುಗಿಸಿ ಬೆಂಗಳೂರಿನ ಪ್ರತಿಷ್ಠಿತ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ, ತನ್ನ ಹಳ್ಳಿಯ ಅಭಿವೃದ್ಧಿಯ ಬಗ್ಗೆ ಅವನಿಗೆ ಅಪಾರ ಕಾಳಜಿಯಿಂದ ಹಳ್ಳಿಗೆ ಬರುವನು.ಧರ್ಮಪ್ಪನವರ ಹಟ ಮತ್ತು ಕಹಿ ನೆನಪುಗಳುಗ್ರಾಮದ ಶ್ರೀಮಂತ ಹಿರಿಯರಾದ ಧರ್ಮಪ್ಪ ಅನಕ್ಷರಸ್ಥರಾದರೂ ತನ್ನ ಮಕ್ಕಳನ್ನು ಓದಿಸಿದವರು. ಆದರೆ ವಿಧಿಯಾಟ ಬೇರೆಯೇ ಇತ್ತು:ನೌಕರಿ ಹಿಡಿದ ಮಗ ಮತ್ತು ಸೊಸೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದುತ್ತಾರೆ.ಎಂ.ಎ ವರೆಗೆ ಓದಿದ ಮಗಳು ರಾಣಿ ಭಯದಿಂದ ಮನೆಯಲಿ ಪ್ರೇಮ ವಿಷಯ ತಿಳಿಸದೆ ಪ್ರೀತಿಸಿದವನ ಜೊತೆ ಹೋಗುತ್ತಾಳೆ. ಅಲ್ಲದೆ ಪಕ್ಕದ ಗ್ರಾಮದ ಪರುತಗೌಡ ಸಾಲ ಮಾಡಿ ಮಗನಿಗೆ ಶಾಲೆ ಕಲಿಸಿದರು ಮಗ ದಂಡಪಿಂಡನಾಗಿ ಊರಮುಂದೆ ಕುಳಿತ ವ್ಯರ್ಥ ಸಮಯ ಸವೆಸುವದು ಕಂಡ ಈ ಎಲ್ಲ ಘಟನೆಗಳಿಂದ ನೊಂದ ಧರ್ಮಪ್ಪ, “ಶಿಕ್ಷಣವೇ ಎಲ್ಲಾ ಅನಾಹುತಗಳಿಗೆ ಕಾರಣ” ಎಂದು ನಂಬಿ ಬಿಡುತ್ತಾರೆ. ತನ್ನ ಮೊಮ್ಮಕ್ಕಳಾದ ಶಂಕರನನ್ನು ದನಕಾಯಲು ಮತ್ತು ರಾಧಾಳನ್ನು ಅಡುಗೆ ಮಾಡಲು ಹಚ್ಚುತ್ತಾರೆ. ಶಾಲೆಗೆ ಕಳಿಸದ ಮೊಮ್ಮಗಳಿಗೆ ಓದಿದ ನೌಕರಿದಾರ ವರನನ್ನು ತಂದು ಮದುವೆ ಮಾಡುವ ಆಸೆ ಪಡುತ್ತಾರೆ ಆದರೆ ಅವಳ ಅನಕ್ಷರತೆ ಅದಕ್ಕೆ ಅಡ್ಡಿಯಾಗುತ್ತದೆ.ರವಿಯ ಜ್ಞಾನ ಮತ್ತು ತಾರ್ಕಿಕ ಉತ್ತರಗಳುರಜೆಯ ಮೇಲೆ ಊರಿಗೆ ಬಂದ ಅದೆ ಗ್ರಾಮದ ಶಿಕ್ಷಿತ ಯುವಕ ರವಿ, ಧರ್ಮಪ್ಪನವರ ಭೇಟಿಗೆ ಬಂದಾಗ ಗೌಡರ ಈ ಮೌಡ್ಯಯುತ ನಿರ್ಧಾರವನ್ನು ಕಂಡು ಪ್ರತಿಭಟಿಸುತ್ತಾನೆ. ಆಗ ಅವರ ನಡುವೆ ನಡೆಯುವ ಸಂಭಾಷಣೆ ಮಾರ್ಮಿಕವಾಗಿದೆ. “ಶಾಲೆ ಕಲಿತರೆ ಹೆಣ್ಣುಮಕ್ಕಳು ದಾರಿ ತಪ್ಪುತ್ತಾರೆ” ಎಂಬ ಧರ್ಮಪ್ಪನವರ ಮಾತಿಗೆ ರವಿ ಕೇಳುವ ಪ್ರಶ್ನೆಗಳು ಕಣ್ಣು ತೆರಿಸುವಂತಿವೆ:

“ಜಗತ್ತೇ ಒಂದು ರಂಗಮಂಟಪ ನಾವೆಲ್ಲ ನಟರು-ಶೇಕ್ಸಪಿಯರ್”ಪಾರ್ವತಿ ಎಸ್ ಬೂದೂರು Read Post »

ಪುಸ್ತಕ ಸಂಗಾತಿ

ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ ಅವರ ಕೃತಿ “ಅಂತರಂಗದ ಪ್ರಣತಿ” ಅವಲೋಕನ ಅಂಬಿಕಾ ಅವಟಿ ಚಡಚಣ

ಪುಸ್ತಕ ಸಂಗಾತಿ ಅಂಬಿಕಾ ಅವಟಿ ಚಡಚಣ ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ “ಅಂತರಂಗದ ಪ್ರಣತಿ” ಅವಲೋಕನ ಅಂತರಂಗದ ಪ್ರಣತಿ… ಅಲ್ಪಾಕ್ಷರಗಳಲ್ಲಿ ಅನಂತದರ್ಶನಕನ್ನಡ ಸಾಹಿತ್ಯ ಲೋಕಕ್ಕೆ ‘ತನಗ’  ಎಂಬ ಫಿಲಿಪೈನ್ಸ್ ಮೂಲದ ಕಾವ್ಯ ಪ್ರಕಾರವನ್ನು ಪರಿಚಯಿಸಿ, ಅದರಲ್ಲಿ ದೇಸೀ ಸೊಬಗನ್ನು ತುಂಬಿದವರು ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ (ಕನ್ನಡದ ಕಂದ). ಈ ಕೃತಿಯನ್ನು ಲೇಖಕರು ಅತ್ಯಂತ ಪ್ರೀತಿ ಮತ್ತು ಸ್ನೇಹಪೂರ್ವಕವಾಗಿ ನನಗೆ ಉಡುಗೊರೆಯಾಗಿ ಕಳಿಸಿಕೊಟ್ಟಿದ್ದು, ಇದನ್ನು ಓದಿದಾಗ ಮನಸ್ಸಿಗೆ ಅಪಾರ ಸಂತೋಷವಾಯಿತು. ಅವರ ‘ಅಂತರಂಗದ ಪ್ರಣತಿ’ ಸಂಕಲನವು ಕೇವಲ ನಾಲ್ಕು ಸಾಲುಗಳಲ್ಲಿ ಬದುಕಿನ ಮಹೋನ್ನತ ಸತ್ಯಗಳನ್ನು ಹಿಡಿದಿಡುವ ಅದ್ಭುತ ಪ್ರಯತ್ನವಾಗಿದೆ. “ಕಡಿಮೆ ಪದಗಳಲ್ಲಿ ಹೆಚ್ಚಿನ ಅರ್ಥ”  ಇದು ಆಲಮೇಲರ ಕಾವ್ಯದ ಮಂತ್ರ. ಸಾಗರದ ಅಲೆಗಳು ಮೌನವಾಗಿ ತೇರನ್ನು ಎಳೆಯುವಂತೆ, ಇವರ ತನಗಗಳು ಓದುಗರ ಮನಸ್ಸನ್ನು ಮೌನವಾಗಿ ಆವರಿಸಿಕೊಳ್ಳುತ್ತವೆ. ಇಲ್ಲಿ ಶಬ್ದಗಳ ಆರ್ಭಟವಿಲ್ಲ, ಬದಲಾಗಿ ಅರ್ಥದ ಗಾಂಭೀರ್ಯವಿದೆ. ಮುಂಜಾನೆಯ ಮಂಜಿನ ಚೆಲ್ಲಾಟದಿಂದ ಹಿಡಿದು ಋತುಮಾನಗಳ ಬದಲಾವಣೆಯವರೆಗೆ ಪ್ರಕೃತಿಯ ಪ್ರತಿ ಚಲನೆಯನ್ನು ಇವರು ಕಾವ್ಯವಾಗಿಸಿದ್ದಾರೆ. ಪ್ರಕೃತಿಯ ಸೌಂದರ್ಯವನ್ನು ಬಣ್ಣಿಸುತ್ತಲೇ, ಬದುಕಿನ **”ಹೊಸತನದ ಹಂದರ”**ವನ್ನು ಕವಿ ಇಲ್ಲಿ ಅನಾವರಣಗೊಳಿಸುತ್ತಾರೆ. ಜಗತ್ತು ಎಂಬ ಮಾಯಾಜಾಲದಲ್ಲಿ ಮನುಷ್ಯ ಅನುಭವಿಸುವ ಒದ್ದಾಟ, ದುಶ್ಚಟಗಳು, ಮೋಸ ಮತ್ತು ಅಸತ್ಯಗಳ ಕುರಿತು ಈ ತನಗಗಳು ಎಚ್ಚರಿಸುತ್ತವೆ.   ಗುರುವಿನ ಮಹತ್ವ ಮತ್ತು ಜ್ಞಾನದ ಅಗತ್ಯವನ್ನು ಶಕ್ತವಾಗಿ ಪ್ರತಿಪಾದಿಸಲಾಗಿದೆ.  ಜನನ ಮರಣಗಳ ನಡುವಿನ ಹೋರಾಟ, ನಂಬಿಕೆ ಮತ್ತು ವಿಶ್ವಾಸಗಳ ಮಹತ್ವವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಸೂರ್ಯ, ಚಂದ್ರ ಹಾಗೂ ಹೆಣ್ಣಿನ ಸೌಂದರ್ಯವನ್ನು ಕೇವಲ ನಾಲ್ಕು ಸಾಲುಗಳಲ್ಲಿ ಹಿಡಿದಿಡುವುದು ಒಂದು ಸವಾಲೇ ಸರಿ. ಆದರೆ ಆಲಮೇಲರು ಪ್ರೀತಿಯ ಉತ್ತುಂಗವನ್ನು ಮತ್ತು ಪ್ರಕೃತಿಯ ಚೆಲುವನ್ನು ಸೋಜಿಗವೆನಿಸುವಂತೆ ಅಲ್ಪ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಡಾ. ಮಲ್ಲಿಕಾರ್ಜುನ ಸರ್ ಅವರಿಗೆ ಒಂದೆರಡು ಚೆನ್ನುಡಿಗಳು. ಅಕ್ಷರಗಳ ಹಣತೆಯಲ್ಲಿ ಜ್ಞಾನದ ಎಣ್ಣೆ ಹೊಯ್ದು, ಸ್ನೇಹದ ಬತ್ತಿಯ ಮೂಲಕ ‘ಅಂತರಂಗದ ಪ್ರಣತಿ’ಯನ್ನು ಬೆಳಗಿದ್ದೀರಿ ಸರ್. ನಿಮ್ಮ ಈ ಕೃತಿ ಕೇವಲ ಕಾವ್ಯವಲ್ಲ, ಅದು ಬದುಕಿನ ದಾರಿದೀಪ. ತನಗ ಸಾಹಿತ್ಯದ ಮೂಲಕ ಕನ್ನಡದ ಕಣಜಕ್ಕೆ ಹೊಸ ಮೆರುಗು ನೀಡಿದ ನಿಮ್ಮ ಲೇಖನಿ ಹೀಗೆಯೇ ನಿರಂತರವಾಗಿ ಸಾಗಲಿ. ಒಟ್ಟಾರೆಯಾಗಿ ಹೇಳಬೇಕು ಅಂದರೆ‘ಅಂತರಂಗದ ಪ್ರಣತಿ’ ಕೃತಿಯು ಸಾಮಾಜಿಕ ಮತ್ತು ವೈಯಕ್ತಿಕ ಜೀವನದ ವಾಸ್ತವಗಳನ್ನು ಕನ್ನಡಿಯಂತೆ ಪ್ರತಿಫಲಿಸುತ್ತದೆ. ಫಿಲಿಪೈನ್ಸ್ ಮೂಲದ ಕಾವ್ಯ ಪ್ರಕಾರವನ್ನೇ ಬಳಸಿ ಕನ್ನಡ ಕಾವ್ಯದ ಕಣಜವನ್ನು ಶ್ರೀಮಂತಗೊಳಿಸಿರುವ ಡಾ. ಮಲ್ಲಿಕಾರ್ಜುನ ಆಲಮೇಲರ ಪ್ರಯತ್ನ ಶ್ಲಾಘನೀಯ. ಇದು ಅಂತರಂಗವನ್ನು ಬೆಳಗುವ ನಿಜವಾದ ಪ್ರಣತಿ… ಅಂಬಿಕಾ ಅವಟಿ ಚಡಚಣ.

ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ ಅವರ ಕೃತಿ “ಅಂತರಂಗದ ಪ್ರಣತಿ” ಅವಲೋಕನ ಅಂಬಿಕಾ ಅವಟಿ ಚಡಚಣ Read Post »

ಪುಸ್ತಕ ಸಂಗಾತಿ

ಗೊರೂರು ಅನಂತರಾಜು ಅವರ “ತಲಕಾಡು ಪಂಚಲಿಂಗ ದರ್ಶನ ಮತ್ತುಇತರೆ ಪ್ರವಾಸಿ ಲೇಖನಗಳು” ಅವಲೋಕನ ಮಧು ಮಾಲತಿ.

ಪುಸ್ತಕ ಸಂಗಾತಿ ಮಧು ಮಾಲತಿ. ಗೊರೂರು ಅನಂತರಾಜು ಅವರ “ತಲಕಾಡು ಪಂಚಲಿಂಗ ದರ್ಶನ ಮತ್ತುಇತರೆ ಪ್ರವಾಸಿ ಲೇಖನಗಳು” “ದೇಶ ಸುತ್ತು ಕೋಶ ಓದು”” ಎಂಬ ಜನಜನಿತ ನುಡಿಯಂತೆ ವಿವಿಧ ಪ್ರದೇಶಗಳನ್ನು ಸುತ್ತುವುದರಿಂದ ಅಲ್ಲಿಯ ಜನರ ನಡೆ-ನುಡಿ ˌಸಂಪ್ರದಾಯ ˌ ಆಚಾರ ವಿಚಾರಗಳೆಲ್ಲವನ್ನು ಅರಿತು ಅನುಭವಿಸಿ ರೂಢಿಸಿಕೊಳ್ಳುವಲ್ಲಿ ಈ ಪ್ರಯಾಣ ಯಶಸ್ವಿಯಾಗುತ್ತದೆ. ಅಂತೆಯೇ ದೇಶ ಸುತ್ತಲು ಅಸಾಧ್ಯವಾದವರೂ ಕೂಡ ಪ್ರವಾಸ ಕಥನಗಳನ್ನು ಓದಿ ದೇಶ ಸುತ್ತಿದಷ್ಟೇ ಅನುಭವವನ್ನು ರೋಮಾಂಚನವನ್ನು ಅನುಭವಿಸುವುದು ಖಂಡಿತ ಸಾಧ್ಯ .ಈ ನಿಟ್ಟಿನಲ್ಲಿ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಅಚ್ಚುಮೆಚ್ಚಿನದಾಗುತ್ತದೆ .ಅನೇಕ ಸಾಹಿತಿಗಳ ಪ್ರವಾಸ ಕಥನಗಳು ಸಹ ಸಾಹಿತ್ಯ ಲೋಕಕ್ಕೆ ಅವಿರತವಾಗಿ ಅರ್ಪಣೆಯಾಗುತ್ತಿವೆ. ಇವೆಲ್ಲವುಗಳ ಪೈಪೋಟಿಗಳ ನಡುವೆ ಅನುಭವಿ ˌಹಿರಿಯರು ˌ ಸಾಹಿತಿಗಳು ˌಅಂಕಣಕಾರರು ಆದ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಎಲ್ಲರ ಗಮನವನ್ನು ಹಿಡಿದಿಟ್ಟುಕೊಂಡು ಓದಿಸಿಕೊಂಡು ಹೋಗುತ್ತದೆ . ಇಲ್ಲಿ ಮೂಡಿ ಬಂದಿರುವ ಅನೇಕ  ಪ್ರಸಿದ್ಧ ಸ್ಥಳಗಳ ಬಗ್ಗೆ ಕೂಲಂಕುಶವಾಗಿ ಅಧ್ಯಯನಗೈದು ಓದುಗ ಪ್ರಭು ಅಲ್ಲಿಯೇ ಸ್ವತಹ ನಡೆದಾಡಿದಂತೆ ಭಾಸವಾಗುವಂತೆ ತಮ್ಮ ಅನುಭವಗಳನ್ನು ಇಲ್ಲಿ ಕಟ್ಟಿಕೊಡುವಲ್ಲಿ ಶ್ರೀಯುತರು ಯಶಸ್ವಿಯಾಗಿದ್ದಾರೆ. ಕಾವೇರಿ ತೀರದ ಅರ್ಕೇಶ್ವರನ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ ಕೆ. ಆರ್.ನಗರದ ಅರ್ಕೇಶ್ವರ ದೇವಾಲಯ ಜಗತ್ತಿನ ಎರಡನೇ ಸೂರ್ಯ ದೇವಾಲಯ. ಗಂಗ ˌ ಚೋಳˌ ಹೊಯ್ಸಳˌ ವಿಜಯನಗರ ಮುಂತಾದ ಅರಸರ ಆಡಳಿತಕ್ಕೆ ಒಳಪಟ್ಟ ಈ ಸ್ಥಳದಲ್ಲಿ ಅರ್ಕೇಶ್ವರ ಸ್ವಾಮಿ ಸೂರ್ಯದೇವನಿಂದ ಪ್ರತಿಷ್ಠಾಪಿಸಲ್ಪಟ್ಟು ಭತ್ತದ ನಾಡೆಂದೇ ಹೆಸರುವಾಸಿಯಾಗಿದೆ .ಶ್ರೀಯುತರು ಮುಂದುವರೆಯುತ್ತಾ ಮೂಗೂರು ತ್ರಿಪುರ ಸುಂದರಿ  ಮುಸ್ಲಿಂ ಪಾಳೇಗಾರ ನಿರ್ಮಿಸಿದ ಹಿಂದೂ ದೇವಾಲಯಕ್ಕೆ ಸದ್ದಿಲ್ಲದೆ ನಮ್ಮನ್ನು ಕರೆದೊಯ್ಯುತ್ತಾರೆ . ಆದಿಶಕ್ತಿ ಅವತಾರವಾದ ತ್ರಿಪುರ ಸುಂದರಿ ದೇವಿಯ ಕೃಪಾಕಟಾಕ್ಷಕ್ಕೆ ನಾವೆಲ್ಲರೂ ಒಳಗಾಗುವುದು ಖಚಿತ. ಎಲ್ಲೆಡೆ ಸುತ್ತಾಡಿ ತಲಕಾಡಿನ ಪಂಚಲಿಂಗೇಶ್ವರನ ದರ್ಶನ ಮಾಡಿಸದಿರುತ್ತಾರೆಯೇ ? ಪಂಚಲಿಂಗ ದೇವರ ಅದ್ಭುತ ಕಲಾಕೃತಿಗಳು ಶಿವನ ವಿಷ್ಣುವಿನ ಲೀಲೆಗಳ ವಿಗ್ರಹಗಳು ಎಲ್ಲರ ಮನ ಸೆಳೆಯುತ್ತವೆ . “ಕಾಶಿಗೆ ಹೋಗಿ ಪರಶಿವನ ಕಾಣದೆ ಬರಲಾದೀತೇ” ಅಂತೆಯೇ ತಲಕಾಡಿಗೆ ಹೋಗಿ ಪಂಚಲಿಂಗೇಶ್ವರನ ದರ್ಶನ ಮಾಡಿದರೆ  ಮುಕ್ತಿ ಎನ್ನುತ್ತಾರೆ.ಮುಂದುವರೆದು ಗುಂಜ ನರಸಿಂಹನನ್ನು ಕೂಡ ತಮ್ಮ ಕೃತಿಯಲ್ಲಿ ನಮಗೆ ದರ್ಶನ ಭಾಗ್ಯ ಕೊಡಿಸಿರುತ್ತಾರೆ. ಬಿಳಿಗಿರಿರಂಗನ ಬೆಟ್ಟದ ಸೌಂದರ್ಯವನ್ನೆಲ್ಲ ತಮ್ಮ ಅನುಭವದ ಈ ಕೃತಿಯಲ್ಲಿ ಹಿಡಿದಿಟ್ಟಿರುವುದು ಚಾರಣ ಪ್ರಿಯರಿಗೆ ರಸದೌತಣವನ್ನೇ ನೀಡುತ್ತದೆ .ಉದ್ಭವ ಗಂಗೆಯಿಂದೇ ಪ್ರಸಿದ್ಧಿ ಪಡೆದಿರುವ  ಹಾಲುರಾಮೇಶ್ವರ ಸನ್ನಿಧಾನದ ಗಂಗಾ ಕೊಳವೆಂದೇ ಪ್ರಸಿದ್ಧಿಯಾದ ಹಾಲು ರಾಮೇಶ್ವರ ಜನಸಾಮಾನ್ಯರಿಂದ ಹಿಡಿದು ಜನ ಪ್ರತಿನಿಧಿಗಳವರೆಗೂ ಇಲ್ಲಿನ  ಕೊಳದ ಪ್ರಸಾದವೇ ಬೇಡಿಕೆ ಈಡೇರಿಕೆಯ ಸಂಕೇತ. ಮುಂದೆ ತಮ್ಮ ಹುಟ್ಟೂರಾದ ಗೊರೂರಿನ ತ್ರಿಕೂಟೇಶ್ವರ ದೇವಾಲಯಕ್ಕೆ ನಮ್ಮನ್ನು ಸೆಳೆಯುತ್ತಾರೆ .ಹೊಯ್ಸಳರ ಕಾಲದ ಈ ತ್ರಿಕೂಟಲಿಂಗೇಶ್ವರ ದೇವಾಲಯ ಒಂದಷ್ಟು ಅಭಿವೃದ್ಧಿಯತ್ತ ಸಾಗಬೇಕಿದೆ. ಹೀಗೆ ಸಾಗುತ್ತಾ ಸಾಗುತ್ತಾ ಲೇಖಕರು  ಇತಿಹಾಸ ಪ್ರಸಿದ್ಧ ಚುಂಚನಕಟ್ಟೆಗೆ ಕರೆದೊಯ್ಯುತ್ತಾರೆ .ಚುಂಚ ಚುಂಚಿ ಎಂಬ ಬೇಡ ದಂಪತಿಗಳ ವಧೆಯಿಂದಾಗಿ ಬಂದ ಹೆಸರು ಚುಂಚಾರಣ್ಯವೆಂಬ ಐತಿಹಾಸ ಪಡೆದ ಇತಿಹಾಸವಿದೆ.  ತೇರು ಹರಿದಾವೋ ತಾನಕ್ಕೆ ನಿಂತಾವೋ ತಾರೋ ಚನ್ನಯ್ಯ ಜವನವಾ ತಾರೋ ಚೆನ್ನಯ್ಯ ಜವನವಾ ಬಾಳೆಹಣ್ಣುಬೇಡಿ ಕೊಳ್ಳೆ ಮಗಳೇ ಸೆರಗೊಡ್ಡಿ ಎನ್ನುತ್ತಾ ಗೊರೂರು ಶ್ರೀ ಯೋಗಾನರಸಿಂಹಸ್ವಾಮಿಯ ರಥೋತ್ಸವ ಅದ್ಧೂರಿಯಾಗಿ ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ .ಹೀಗೆ ಲೇಖಕರು ಬಸವನಹಳ್ಳಿ ಆಂಜನೇಯˌ ಹೊಳೆನರಸೀಪುರದ ಬನಶಂಕರಿ  ಮುಂತಾದ ದೇವಾಲಯಗಳ ಇತಿಹಾಸಗಳನ್ನು ಓದುಗರೆದುರು ಆಳವಾಗಿ ತೆರೆದಿಡುತ್ತಾರೆ .ನಂತರ ಲೇಖಕರು ತಮ್ಮ ಪದಗಳ ಚಮತ್ಕಾರದಿಂದ ಅರಸಿಕಟ್ಟೆ ಅಮ್ಮನ ನಕ್ಷತ್ರವನ, ಕಪ್ಪಡಿ ಕ್ಷೇತ್ರ ˌಉಮಾ ಮಹೇಶ್ವರನ ಕ್ಷೇತ್ರ ಎಲ್ಲವನ್ನು ದರ್ಶನ ಮಾಡಿಸಿ ಮಂತ್ರಮುಗ್ದರನ್ನಾಗಿಸುತ್ತಾರೆ. ಜೊತೆ ಜೊತೆಗೆ ಸಂಕಲಾಪುರದ ಮಠ, ದಸರಿಘಟ್ಟ ಶ್ರೀ ಚೌಡೇಶ್ವರಿ ದೇವಸ್ಥಾನ, ಅಡಿ ಬೈಲು ರಂಗನಾಥ ಸ್ವಾಮಿ ಬೆಟ್ಟˌಗಳನ್ನು ಸುತ್ತಿಸುತ್ತ  ರಂಗನಾಥ ಸ್ವಾಮಿಯ ಮದುವೆಗೆ ಭೂಮಿ ಚಪ್ಪರ ಮಾಡಿದಾಳಿಂಬೆ ಹಣ್ಣು ಹಸೆ ಮಾಡಿ ರಂಗಯ್ಯಸ್ವಾಮಿ ನಿನ್ನ ಮದುವೆ ಶನಿವಾರಎಂದು ಹಾಡಿ ಹೊಗಳುತ್ತಾರೆ.  ರಂಗಾನ ತೇಜಿಗೆ ಹೊಂಬಾಳೆ ಒಡ್ಯಾಣದುಂಡು ಮಲ್ಲಿಗೆ ಮಕರಂದಬೇಟ್ಗಾರರಂಗನೇರ್ಯಾನೆ  ಹೊಸ ತೇರು  ಹೀಗೆ ಹೇಳುತ್ತಾ ಕೆಂಡಗಣ್ಣೇಶ್ವರˌ ಮಂಟೆರಾಯಸ್ವಾಮಿ ˌಗೌಡಗೆರೆ ಚಾಮುಂಡೇಶ್ವರಿˌ ಕೊಂಡಜ್ಜಿ ˌಪುರದಮ್ಮˌ ಹೇಮಾವತಿ ತೀರದ ಹೇಮಗಿರಿ  ಹೀಗೆ ಹಲವಾರು ಕ್ಷೇತ್ರಗಳನ್ನು ಸುತ್ತಿಸಿ 48 ಪುಣ್ಯಕ್ಷೇತ್ರಗಳ ಮಾಹಿತಿ ನೀಡುತ್ತಾ ನೀಡುತ್ತಾ ನಾವು ಅದರೊಳಗೊಂದಾಗಿ  ಬಿಟ್ಟು ಬಿಡದಂತೆ ಪ್ರವಾಸಕ್ಕೆ ಕರೆದೊಯ್ಯುತ್ತಾರೆ .ಓದುತ್ತಾ ಓದುತ್ತಾ ಓದುಗ ಪ್ರಭು ಪ್ರವಾಸವನ್ನು ಸ್ವತಃ ಅನುಭವಿಸಿ ಸಂತಸಗೊಳ್ಳುತ್ತಾನೆ .ಈ ನಿಟ್ಟಿನಲ್ಲಿ ಇಂದು ಸಮಾಜಕ್ಕೆ ಅತ್ಯವಶ್ಯಕವಾದ ಕೃತಿಯೊಂದನ್ನು ಸಾರಸ್ವತ ಲೋಕಕ್ಕೆ ಕೊಡುಗೆ ಇತ್ತ ಶ್ರೀ  ಗೊರೂರು ಅನಂತರಾಜುರವರ ಈ ಕೃತಿ  ಸಾರಸ್ಪತಲೋಕ  ಉಪಯೋಗಪಡಿಸಿಕೊಳ್ಳಲ್ಲಿ ಎಂದು ಆಶಿಸುವೆ.  ಮಧುಮಾಲತಿ ರುದ್ರೇಶ್

ಗೊರೂರು ಅನಂತರಾಜು ಅವರ “ತಲಕಾಡು ಪಂಚಲಿಂಗ ದರ್ಶನ ಮತ್ತುಇತರೆ ಪ್ರವಾಸಿ ಲೇಖನಗಳು” ಅವಲೋಕನ ಮಧು ಮಾಲತಿ. Read Post »

ಪುಸ್ತಕ ಸಂಗಾತಿ

ಡಾ.ಮಂಜುನಾಥ್‌ ಬಮ್ಮನಕಟ್ಟಿಯವರ ಶಾಯರಿ ಸಂಕಲನ “ಕತ್ತಲು ಬೆಳಕು” ಅವಲೋಕನ ಡಾ.ವೈ ಎಂ ಯಾಕೊಳ್ಳಿ

ಪುಸ್ತಕ ಸಂಗಾತಿ ಡಾ.ಮಂಜುನಾಥ್‌ ಬಮ್ಮನಕಟ್ಟಿಯವರ ಶಾಯರಿ ಸಂಕಲನ “ಕತ್ತಲು ಬೆಳಕು” ಅವಲೋಕನ ಡಾ.ವೈ ಎಂ ಯಾಕೊಳ್ಳಿ ಪ್ರೀತಿ‌ಪ್ರೇಮದಾಚೆ ಲಂಘನ‌ ಮಾಡುವ ಶಾಯಿರಿ‌ಲೋಕಪ್ರೀತಿ‌ಪ್ರೇಮದಾಚೆ ಲಂಘನ‌ ಮಾಡುವ ಶಾಯಿರಿ‌ಲೋಕಡಾ.ಮಂಜುನಾಥ .ಬಮ್ಮನಕಟ್ಟಿಯವರ ನೂರಾರು ಶಾಯಿರಿಗಳುಕನ್ನಡಕ್ಕೆ ಶಾಹಿರಿ ಪ್ರಕಾರವನ್ನು ಪರಿಚಯಿಸಿದವರು ಇಟಗಿಈರಣ್ಣನವರು‌.ಗಜಲ ನ ಹಾಗೆ ಉರ್ದು ಸಾಹಿತ್ಯದಿಂದ ಕನ್ನಡಕ್ಕೆ ಬಂದ ಈ‌ ಕಾವ್ಯ‌ ಪ್ರಕಾರವನ್ನು , ಪ್ರೊ  ಭಿಕ್ಷಾವರ್ತಿಮಠ , ಶ್ರೀ ಅಸಾದುಲ್ ಬೇಗ್ ಮೊದಲಾದವರು ಬೆಳೆಸಿದರು .೧೯೭೬ರಲ್ಲಿ ಇಟಗಿ ಈರಣ್ಣನವರ  ಕನ್ನಡ ಶಾಹಿರಿ ಸಂಕಲನ‌ ಪ್ರಕಟವಾಯಿತು. ತದನಂತರದಲ್ಲಿ ಅವರ ಸ್ನೇಹಿತರೇ ಆದ ಪ್ರೊ. ಎಚ್.ಎ.ಭಿಕ್ಷಾವರ್ತಿ‌ಮಠ ಅವರು ೧೯೮೧ ರಲ್ಲಿ ತಮ್ಮ ಕನ್ನಡ ಶಾಯಿರಿ‌ಲೋಕ ಎಂಬ ಸಂಕಲನ ಪ್ರಕಟಿಸುವ ಮೂಲಕ ಈತನ ಕಾವ್ಯ ಪ್ರಕಾರದ ಬೆಳವಣಿಗೆಗೆ ಕಾರಣರಾದರು. ಈಗ ಹಲವರು ಶಾಯಿರಿ ಗಳನ್ನು  ಬರೆಯುತ್ತಿದ್ದಾರೆ. ಗದಗ,ಮತ್ತು‌ಕೊಪ್ಪಳ ಭಾಗದಲಿ ಇದು ವಿಶೇಷವಾಗಿ ರಚನೆಯಾಗುತ್ತಿದ್ದು  ಪರಮೇಶ್ವರಪ್ಪ‌ ಕುದರಿ, ಮರುಳಸಿದ್ದಪ್ಪ ದೊಡಮನಿ.ಯಲ್ಲಪ್ಪ ಹರ್ನಾಳಗಿ, ಕೊಟ್ರೇಶ ಜವಳಿ ,ಕಸ್ತೂರಿ ಡಿ.ಪತ್ತಾರ, ಡಾ ಸಿದ್ರಾಮ ಹೊನ್ಕಲ್ ಮೊದಲಾದವರು ಶಾಹಿರಿಗಳನ್ನು ಬರೆಯುತ್ತಿದ್ದಾರೆ‌.ಎಲ್ಲರಿಗೂ  ಇಟಗಿ ಈರಣ್ಣನವರ  , ಪ್ರೊ. ಭಿಕ್ಷಾವರ್ತಿಮಠ  ಅವರ ಶಾಹಿರಿಗಳೇ ಪ್ರೇರಣೆ ಎಂಬ ಮಾತನ್ನು ಮರೆಯಲಾಗದು. ಪತ್ರಕರ್ತರೂ,ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾಗಿ ಚಿಕ್ಕ ಮಗಳೂರಿನಲ್ಲಿ ಕೆಲಸ ಮಾಡುತ್ತಿರುವ ಡಾ. ಮಂಜುನಾಥ ಎಂ. ಬಮ್ಮನಕಟ್ಟಿ ಯವರು  ಪ್ರವೃತ್ತಿ ಯಿಂದ ಕವಿಗಳೂ ಪ್ರಬಂಧಕಾರರೂ, ಸಾಮಾಜಿಕ ಕ್ಷೇತ್ರ ದ ಸಂಶೋಧಕರೂ  ಆಗಿ ತುಂಬ ಚಟುವಟಿಕೆಯಿಂದ ಕೂಡಿರುವ ಬರಹಗಾರರು ಈವರೆಗೆ ಹನಿಗವನ, ಕವಿತೆ,  ಜೀವನ ಚರಿತ್ರೆ, ಪ್ರಬಂಧ ಸಂಕಲನ, ಮತ್ತು ಸಂಶೋಧನ ಕೃತಿಗಳು ಸೇರಿದಙತೆ ೧೮   ಕೃತಿಗಳನ್ನುರಚಿಸಿದ್ದಾರೆ. ಬಹಳ ವಿಶೇಷವಾದದ್ದು ಕರ್ನಾಟಕ ದ ಮಹಿಳಾ ಪೋಲಿಸ್  ಇಲಾಖೆಯ ಮೇಲೆ ಸಂಶೋಧನೆ ಮಾಡಿ ಅವರು ಬರೆದ ಕೃತಿ. ಹಾಗೆಯೆ ಬಹಳ ವಿಶಿಷ್ಟವಾದ ” ಗೋಕಾಕ ಚಳುವಳಿ ಮತ್ತು ಕನ್ನಡ ಅಭಿವೃದ್ದಿ” ಎಂಬ ಅಧ್ಯನ ಕೈಕೊಂಡು‌ ಪಿಎಚ್. ಡಿ‌ ಪದವಿ‌ ಪಡೆದ ಪ್ರತಿಭಾವಂತರು ಅವರು. ಈಗ  “ಕತ್ತಲು  ಬೆಳಕು” ಎಂಬ ನೂರಾರು ಶಾಯಿರಿಗಳ ಚಂದದ ಸಂಕಲನವನ್ನು ಪ್ರಕಟಿಸುವ ಮೂಲಕ ಮತ್ತೊಂದು ಮೈಲುಗಲ್ಲು ನೆಟ್ಟಿದ್ದಾರೆ. ಇದಕ್ಕೆ ಹಿರಿಯರಾದ ಪ್ರೊ‌ಭಿಕ್ಷಾವರ್ತಿಮಠ ಅವರ ಮುನ್ನುಡಿ ,ಇನ್ನೋರ್ವ ಖ್ಯಾತ‌, ಕವಿ  ,  ಕಾದಂಬರಿಕಾರ , ಪತ್ರಕರ್ತರಾದ ಡಾ . ಸರಜೂ ಕಾಟ್ಕರ್ ಅವರ ನಲ್ನುಡಿ ಇವೆ. ಶಾಯಿರಿ ಕ್ಷಣವೊಂದರ ಸ್ಮಾರಕ.ಹನಿಗವನ, ಚುಟುಕು, ತನಗ, ಹಾಯಕು ಇವುಗಳ ಹಾಗೆ ಓದಿದೊಡನೆ ಮನಸ್ಸು ಪ್ರಪುಲ್ಲಿತವಾಗಿ ವಾವ್ ಎಂಬ ಬೆರಗು ಹೊರಡಿಸಿವ ಚತುರತೆ ಅದರ ಗುಣ.ಈ ಕಾವ್ಯದ ಲಕ್ಷಣಗಳನ್ನು ನಲ್ನುಡಿಯಲ್ಲಿ ಹಿರಿಯರಾದ ಡಾ ಕಾಟ್ಕರ್ ಅವರು ವಿವರಿಸುತ್ತ ” ಶಾಯಿರಿಯ ಮುಖ್ಯ ಲಕ್ಷಣ ಕೆಲವೇ ಕೆಲವು ಸಾಲುಗಳಲ್ಲಿ ಬ್ರಹ್ಮಾಂಡವನ್ನು ಹೇಳುವದು.ನೋಡಿದ, ಕೇಳಿದ ಅನುಭವಿಸಿದ ಪ್ರಸಂಗಗಳಿಗೆ  ಕವಿಯಾದವನು ಕಾವ್ಯದ ಅಮರತ್ವವನ್ನು ನೀಡಬೇಕಾಗುತ್ತದೆ.ಆ ಶಬ್ದಗಳ ಜಾಲವು ಓದುಗನನ್ನು ಕೊನೆಯಲ್ಲಿ  ಥಕ್ಕಾಗಿಸುವಂತೆ ಮಾಡಿದರೆ  ಆ ಕಾವ್ಯವು ಸಾರ್ಥಕತೆಯನ್ನು ಪಡೆಯುತ್ತದೆ”  ಎನ್ನುತ್ತಾರೆ. ಅದು ಸಾಮಾನ್ಯವಾಗಿ ಪ್ರೇಮದ ಮುಗುಳು ಚಿಗುರಿಸುವ ಹೂವಿನ  ತೋಟ. ಶಾಯಿರಿ ರಚಿಸುವಾಗ ಪ್ರೇಮ ,ವಿರಹದಾಚೆಗೆ ಬಹಳ ಜನ ಕವಿಗಳು ದಾಟುವುದೆ ಇಲ್ಲ.ಆದರೆ ಡಾ ಬೊಮ್ಮನಕಟ್ಟಿಯವರ. ಓದಿನ ಮತ್ತು ಸೇವೆಯ ಹರಿವು ವಿಸ್ತಾರವಾದ್ದರಿಂದ ಬದುಕಿನ ಬೇರ ಬೇರೆ ಸಂಗತಿಗಳು ಇಲ್ಲಿ ಶಾಯಿರಿಗಳಾಗಿವೆ. ಡಾ ಸರಜೂ ಕಾಟ್ಕರ್ ಸರ್ ಹೇಳಿದಂತೆ ಇಲ್ಲಿನ ಶಾಯಿರಿಗಳಿಗೆ ಅಮರತ್ವದ ಗುಣ ಪ್ರಾಪ್ತವಾಗಿದೆ. ಶಾಯಿರಿಗಳೂ ಕೂಡ ತನಗ ಹೈಕು ಗಜಲ್ ಗಳ ಹಾಗೆ ಶೀರ್ಷಿಕೆಯಿಲ್ಲದ ಹೆಸರೊಲ್ಲದ ಚಿತ್ರಗಳೇ ಆಗಿವೆಇಲ್ಲಿನ ನೂರಾರು (೧೦೬) ಶಾಯಿರಿಗಳಲ್ಲಿ ಬದುಕಿನ ತಾತ್ವಿಕ ಚಿಂತನೆ ಪ್ರೀತಿ ಪ್ರೇಮಗಳ ಅನಂತ ನೋಟ ಎಲ್ಲವೂ ಇವೆ. ಮೊದಲ ಶಾಯಿರಿಯಲ್ಲಿಯೆ ಅದು ಕಾಣುತ್ತದೆ. ಮನುಷ್ಯ ಇರುವದರೊಳಗೆ ನಾಲ್ಕು ಮಂದಿಗೆ ಬೇಕಾಗುವಂಗ ಬದುಕಬೇಕು  ಎನ್ನುವದನ್ನು ಸಂಖ್ಯೆಗಳ ಚಮತ್ಕಾರದಲ್ಲಿ ಹಿಡಿದಿಡುವ ರೀತಿ ವಿಶಿಷ್ಟವಾಗಿದೆ . ಒಂದು ಎರಡು ಬಂದ ಬರತೈತಿಮೂರು ಆರುನಾಕ ಜನಕ್ಕ ಬೇಕ ಬೇಕು.ಅಷ್ಟರೋಳಗ ಈ ಬದುಕಬೆಳಗಬೇಕು ಬೆಳಗಸಬೇಕುಹತ್ತರ ಕೂಟ ಹನ್ನೊಂದು ಯಾಕ‌ ಆಗಬೇಕುಮನುಷ್ಯರಾಗಿ ಸುಮ್ಮನೆ ಬಂದವರಲ್ಲ, ಸಾಯುವದರೊಳಗೇ ಏನಾದರೂ  ಸಾಧಿಸದೆ ಇದ್ರೆ ಬದುಕಿ ಏನು‌ ಲಾಭ ? ಇದು ಕವಿಯ ಪ್ರಶ್ನೆ! ‘ಮೂರು ಆರು’ ಅಡಿ ಜಾಗ ಅಂತಿಮವಾಗಿ ಎಲ್ಲರಿಗೂ ಬೇಕೇ ಬೇಕು‌.ಮತ್ತು ಕೊನೆಯಲ್ಲಿ ಹೊತ್ತ ಒಯ್ಯಲು ನಾಲ್ಕು ಜನರ ಅಗತ್ಯನೂ ಇದೆ. ಇದಂತೂ ಪರಮ  ಸತ್ಯ.ಅಷ್ಟರೊಳಗೆ ನಮ್ಮ ಬದುಕು ಬೆಳಗಬೇಕು ,ಇತರರ ಬದುಕನ್ನು ಬೆಳಗಿಸಬೇಕು ಎನ್ನುವದನ್ನು ಶಾಯಿರಿ ಸಾರುತ್ತದೆ. ಜೀವನದ ತಾತ್ವಿಕತೆಯನ್ನು ಚಿಂತಿಸು ವ ಶಾಯಿರಿಗಳು ಗಮನ ಸೆಳೆಯುತ್ತವೆ. ಬದುಕನ್ನು‌ಬೇರೆ ಬೇರೆ ಮಾತುಗಳಲ್ಲಿ ವತ್ಣಿಸುವದಕ್ಕಿಂತ ,  ಬದುಕಿನ ನಿಜವಾದ ಅರ್ಥ ಎಂದರೆ ಅದನ್ನು ಸರಿಯಾಗಿ‌ ಬದುಕಿ ತೋರಿಸುವುದೆ ಆಗಿದೆ. ಅದನ್ನೇ ಬೊಮ್ಮನಕಟ್ಟಿಯವರ ಶಾಯಿರಿ ಬದುಕಂದ್ರಹಂಗಲ್ಲ, ಹಿಂಗಲ್ಲಬದುಕೊದಂದರ ಸಾಮಾನ್ಯ ಅಲ್ಲಬದುಕು ಬಳ ದೊಡ್ಡದುಅದಕ$ ನೀ ಬದುಕುಈ ಬದುಕು ಬದುಕು ಎನ್ನುವ ಪದ ಮತ್ತೆ ಮತ್ತೆ ಬಂದು‌ ಕೊಡುವ ಅರ್ಥ ವಿಶೇಷವಾದದ್ದು.ಈ ಬದುಕಿನಲ್ಲಿ ಕಪ್ಪೂ ಇದೆ . ಬಿಳಿಯೂ ಇದೆ.ಅಂದರೆ ಪಾಸಿಟಿವ್ ,ನೆಗೆಟಿವ್ ಎರಡೂ ಇವೆ. ಛಾಯಾಚಿತ್ರದ ರೂಪಕವನ್ನು ಬಳಸುವ ಕವಿ “ಪೊಸಿಟಿವ್, ನೆಗೆಟಿವ್   ಎರಡೂ ಸೇರಿದ್ರನ ಪೋಟೊ ಆಗತೈತಿ” ಎನ್ಜುವದು ಸರಿಯಾಗಿಯೆ ಇದೆ.ಅದನ್ನೆ ಒಂದು ಶಾಯಿರಿಯ ಭಾಗ ವಿವರಿಸುತ್ತಾ ಬೆಳಕು ಕತ್ತಲು ಹಗಲ ರಾತ್ರಿ ಇದ್ದಂಗಜೀವನದಾಗ ಸುಖ ದುಃಖ ಬಂದಾಂಗಇವು ಬ್ಯಾರೆ ಬ್ಯಾರೆ ಅಲ್ಲಒಂದಕ್ಕೊಂದು ಬಿಟ್ಟ ಇರೊದು ಹೆಂಗಎನ್ನುತ್ತಾರೆ. ಕತ್ತಲು ಬೆಳಕು ಎರಡೂ ಸೇರಿಯೇ ಬದುಕಾಗುತ್ತದೆ ಎನ್ನುವದನ್ನು ಅವರ ಶಾಯಿರಿ ಸಾರುತ್ತವೆ.ಈ ಮನಸ್ಸು ಬೇಲಿ ಹಾಕದಿದ್ದರೆ ಅದುವೆತ್ತ ಬೇಕು ಅತ್ತ ಓಡುತ್ತದೆ.ಅದಕ್ಕೆ ಬೇಲಿಹಾಕಬೇಕು ಎನ್ನುವ ಕವಿ ಕಾವಲು ಇರದೆ ಮನಸ್ಸು ಓಡಾಡಿದರೆ ಕಷ್ಟ ಎನ್ನುತ್ತಾರೆ.ಮನುಷ್ಯನ ಎದೆಎನ್ನುವದು ಬೆಳಗುವ ದೀಪವೂ ಹೌದು.ನಿಗಿ ನಿಗಿ ಉರಿವ ಕುಲಮೆಯೂ ಹೌದು‌‌. ಅದರಿಂದ ದೀಪವನ್ನು ಹಚ್ಚಬಹುದು.ಎದೆಯನ್ನು ಸುಡಬಹುದು . ಎರಡೂ ನಮ್ಮ‌ ಕೈಯಲ್ಲಿವೆ.ವಿವೇಚನೆ ಅಗತ್ಯ ಎಂದು ಒಂದು ಶಾಯಿರಿ ಸಾರುತ್ತದೆ. ಈ ಜಗತ್ತಿನಲ್ಲಿ ಎಲ್ಲವೂ ನನ್ನದೆ ಎಂದು ಸಾರಿದವರಾರೂ ಉಳಿದೆ ಇಲ್ಲ.  ಭೂಮಿಯನ್ನು ಗೆದ್ದು ಭೂಮಿಪ ಎನಿಸಿಕೊಂಡ ಅರಸರೆಲ್ಲ ಸತ್ತಿದ್ದಾರೆ.ಭೂಮಿ‌ ಮಾತ್ರ ಶಾಸ್ವತ ಎನ್ನುತ್ತಾನೆ ಕವಿ ಕುಮಾರವ್ಯಾಸ.ಕವಿ‌ಪಂಪನಲ್ಲಿ  ಜಗತ್ತು ಗೆದ್ದೆನೆಂದು ಮೆರೆವ ಭರತ ಚಕ್ರಿಯ ಅಹಂಕಾರ ರಸ ಕೊಳೆಗೊಂಡು ಸೋರುತ್ತದೆ ಎಂಬ‌ ಮಾತು ಬರುತ್ತದೆ.ಯಾವಬಕಾಲದ ಕಾವ್ಯ ವಾಗಲಿ ಸಾರುವದು ಇದನ್ನೇ .ಶಾಯಿರಿಯಂಥ ಸದ್ಯಕಾಲದಲ್ಲಿ ಬದುಕುವ ವರ್ತಮಾನದ ಕವಿತೆ ಕೂಡ ಸಾರ್ವತ್ರಿಕ ವಾದುದನ್ನು ಸಾರುತ್ತದೆ ಎನ್ನುವದಕ್ಕೆ ಸಾಕ್ಷಿ ಈ‌ ಮೂರೇ  ಸಾಲಿನ ಶಾಯಿರಿ.ಕವಿ ನಂದು ನಂದೂನಾನು‌ ನಾನೂಅಂದವರು ಯಾರೂ  ಉಳದೇ ಇಲ್ಲ ಎನ್ನುತ್ತಾನೆ.ಇಷ್ಟೇ ಕವಿತೆ .ಹೆಚ್ಚಿಗೆ ಹೇಳುವದಿಲ್ಲ. ಅದರಲ್ಲಿಯೆ ನೂರು ಸಾಲಿನ ಅರ್ಥ ಅಡಗಿದೆ. ಇಂಥ‌ ಪದ್ಯಗಳೇ ಈ ಕವಿಯ  ಸಂಕಲನವನ್ನು  ಬಹುಕಾಲ ನಿಲ್ಲಿಸುತ್ತವೆ. ಜಾತಿ ಇಲ್ಲವಾಗಿದೆ ಎಂಬ‌ ಮಾತನ್ನು‌ ಕೆಲವರು ವೇದಿಕೆಯ‌ ಮೇಲಿಂದ ಮುತ್ತಿನಂತೆ ಉದುರಿಸುತ್ತಾರೆ.ಆದರೆ ನಿಜವಾಗಿಯೂ ಜಾತಿ ವ್ಯವಸ್ತೆ ಹೋಗಿದೆಯೇ? ಎಂದು ಪ್ರಶ್ನಿಸುವ ಕವಿ  ನಿಜಕ್ಕೂ ಜಾತಿ ವ್ಯವಸ್ಥೆ ಇಲ್ಲವಾಗಿದೆ ಎಂಬುದನ್ನು ಒಪ್ಪುವದಿಲ್ಲ‌. ಏಕೆಂದರೆ‌ ಇಂದು‌ ಬದುಕಿನ ರೀತಿ ಅದಕ್ಕೆ ಪೂರಕವಾಗಿಲ್ಲ.ನಾವು ಜಾತಿ ಎಂಬ ಪಿಡುಗನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡೇ ಬಂದಿದ್ದೇವೆ ಈ ಸತ್ಯವನ್ನು ಅವರ ಶಾಯಿರಿ ಸಾರುತ್ತದೆ. ಜಾತಿ ಇಲ್ಲದಂಗಾತು ಅಂತ ಕೇಳಿಎದಿಯಾಗಿನ ಬೆಂಕಿ ದೀಪ  ಆತುದೀಪ ಬೆಳ ಚಲ್ಲುದರೊಳಗಹುಟ್ಟಿದ ಈ ಜಾತಿ ಸಾಯೊವಲ್ಕದುಅಂತ ಮೈಯೆಲ್ಲ ಧಗಧಗ ಹೊತ್ತಿ ಉರಿತುಕಡೆಯ ಸಾಲೇ ಸತ್ಯವಾಗಿ ಪ್ರಾಮಾಣಿಕ‌ ಪ್ರಜ್ಞಾವಂತರ ಎದೆ ಹೊತ್ತಿ ಉರಿಯುವ ಸ್ಥಿತಿ ಬಂದಿರುವದನ್ನು ಕವಿತೆ ಸಾರುತ್ತದೆ. ಇಡೀ ಸಂಕಲನವೇ ಬೆಳಕು‌ ಕತ್ತಲೆಯ ನಡುವಿನ ಜಿಜ್ಞಾಸೆ ನಡೆಸುತ್ತದೆ.ಇಲ್ಲಿ ಬೆಳಕು ಮತ್ತು ಕತ್ತಲೆ ಮತ್ತೆ ಮತ್ತೆ ಮುಖಾಮುಖಿಯಾಗುತ್ತವೆ..ಆದರೆ ಕವಿ ಯಾವುದೆ ಒಂದರ ಪರ ನಿಲ್ಲುವದಿಲ್ಲ ಕತ್ತಲೆ ಮತ್ತು ಬೆಳಕಿನ ಹಿತವಾದ ಹೊಂದಿಕೊಳ್ಳುವದರಲ್ಲಿಯೆ ನಿಜವಾದ ಬದುಕಿದೆ ಎಂಬುದು‌ ಕವಿಗೆ ಗೊತ್ತಿದೆ. ಕತ್ತಲೆ ಬೆಳಕು ಇಲ್ಲಾಂದ್ರೆಬದುಕು ಇರಾಂಗಿಲ್ಲ ಎಂದು ಒಂದು ಶಾಯಿರಿ ಹೇಳಿದರೆ ಇನ್ನೊಂದು ಶಾಯಿರಿ ಬೆಳಕಿಗೆ ಅದರ ಕೂಡಹಿಟ್ಟಿದ ಕತ್ತಲುಶಡ್ಡು ಹೊಡದೈತಿನನ್ನ‌ ಜನಕ ನೀನ ..ನೀನ ಅಂತಎನ್ನುತ್ತದೆ .ಆದರೆ ಇಲ್ಲಿ ಬೆಳಕು ಮತ್ತು‌ ಕತ್ತಲೆ ಒಂದರ ಕೂಡ ಒಂದು ಹುಟ್ಟಿದರೂ ಅವುಗಳ‌ ನಡುವೆ ಸ್ಪರ್ದೆ ಇರುವದನ್ನು ಹೇಳುವ ಕವಿ ಅವು ತಂದೆ‌ ಮಗನ‌ ಸಂಬಂಧ ಹೊಂದಿದವು ಎನ್ನುವಂತೆ ಚಿತ್ರಿಸುತ್ತಾನೆ.ಅಂದರೆ ಬೆಳಕಿನಲ್ಲಿ ಕತ್ತಲೆ ಹುಟ್ಟಿದೆ ಎನ್ನುವಲ್ಲಿ ಹೊಂದಾಣಿಕೆ ಇರಬೇಕಾಗಿತ್ತು .ಆದರೆ ಶಡ್ಡು ಹೊಡೆದಿದೆ ಎನ್ನುವ ನುಡಿಗಟ್ಟು ಯಾಕೊ ಅಷ್ಟು ಸರಿಯಲ್ಲವೇನೋ ಎಂದು ಅನಿಸುತ್ತದೆ. ಇದು ಜಿಜ್ಞಾಸೆಯ ವಿಷಯ. ಕವಿ ಲೌಕಿಕದಲ್ಲಿ  ಚಿಂತಿಸುತ್ತಲೇ ಅಲೌಕಿಕದತ್ತ ,ಅನುಭವ ದಿಂದ ಅನುಭಾವದತ್ತ ಸಾಗುವ‌ ಪರಿ ಅನನ್ಯವಾದುದು.ಉದಾಹರಣೆಗೆ ಆಕಿ ಎರಡಕ್ಕ ಕರಿತಾಳಬಲದಿಂದ ಆವರಿಸಿಕೊಳ್ಳಾಕಆಕಿ ಕರದಾಗೆಲ್ಲಈ ಬಲಾ ಎಡಕಾಡತಾವುಇವುಗಳದ್ದೂ ಬಿಡದ ಹಟಸಾಮಾನ್ಯರಿಗೆ ತಿಳಿಯದ ಗಂಟು  ಇಲ್ಲಿ ಬಳಸಿದ ನುಡಿಗಟ್ಟುಗಳು ಸಾಮಾನ್ಯ ಬದುಕಿನವೇ ಆದರೆ ಕಡೆಯಲ್ಲಿ ಧ್ವನಿಸುವ ಅರ್ಥ ಮಾತ್ರ ಕೈ ಗೆಟುಕದ್ದು. ಹೀಗೆ‌ ಲೌಕಿಕದ ಈ‌ ಕಾವ್ಯ ಅಲೌಕಿಕದ ಚಿಂತನೆ ಮಾಡುವದು ವಿಶೇಷವಾಗಿದೆ. ಕವಿ ಸಂಕಲನಕ್ಕೆ “ಕತ್ತಲು ಬೆಳಕು” ಎಂಬ ಹೆಸರಿರಿಸಿದ್ದಾರೆ. ಜೀವನವೇ ಕತ್ತಲು ಬೆಳಕಿನ ಸಂಗಮ ಒಂದಾದ‌ ಮೇಲೊಂದು ,ಒಂದರೊಳಗೊಂದು ಸೇರಿಕೊಂಡು ಬದುಕಿಗೆ ಅರ್ಥ ಕಲ್ಪಿಸುವ ಕಾರ್ಯ‌ಮಾಡುತ್ತವೆ. ಅವರಿಗೆ ಅವಳ ಪ್ರೀತಿ ಅಂದರೇನೆ ಬೆಳಕು,ಅವರಡೂ ನೇರೆ ಬೇರೆ ಅಲ್ಲವೇ ಅಲ್ಲ ಅದನ್ನೇ  ಶಾಯಿರಿ ೯೬ ರಲ್ಲಿ ಕತ್ತಲ ಬೆಳಕಿನ ಒಡಕ ಬ್ಯಾಡಈ ಒಂದ ಬದುಕಿಗೆ ಎರಡೂ ಬೇಕಎಂದರೆ೯೫ ರಲ್ಲಿ ಬೆಳಕಿನೊಳಗ ಕತ್ತಲುಕತ್ತಲಿನೊಳಗ ಬೆಳಕುತಮ್ಮ ತಮ್ಮ ಹೊಳಪು ತೋರಸ್ತಾವಎನ್ನುವ ಸಾಲಿವೆ . ಶಾಹಿರಿ ೮೮ ರಲ್ಲಿ ಬೆಳಕು ಬರಿ‌ಬೆಳಕಲ್ಲಕತ್ತಲು ಹೊತ್ತು ತರೋ ವ್ಯಾಪಾರಿಕತ್ತಲು ಬರಿ‌ಕತ್ತಲಲ್ಲಬೆಳಕಿಗೆ ಬೆಲೆ ತರೋ ಸರಕು  ಎನ್ನುತ್ತಾರೆ. ಇಂಥ ಸಾಲುಗಳು‌ ಇಲ್ಲಿ‌ ಮತ್ತೆ ಮತ್ತೆ ಎದುರಾಗುತ್ತವೆ.ಕವಿಗೆ ಅವರ ಪ್ರೀತಿ‌ ಕೂಡ ಕತ್ತಲ ಬೆಳಕಿನ ಆಟವೇ..ಬೆಳಕು ಕತ್ತಲಿನೊಡನೆ ತಮ್ಮ ಪ್ರೇಮ ಸಮೀಕರಣ ಮಾಡುವ ಕವಿ ಬೆಳಕ ನೋಡಿಕತ್ತಲು ಯಾವತ್ತೂ ಸಿಟ್ಟಾಗಿಲ್ಲಕತ್ತಲ ನೋಡಿಬೆಳಕು ಯಾವತ್ತೂ ಸಿಟ್ಟ ಮಾಡಿಕೊಂಡಿಲ್ಲನಾನು-ನೀನು ಹೀಂಗ ಇದ್ದರನಮ್ಮ ಪ್ರೀತಿ ಹಾಲು ಬೆಲ್ಲ ಎಂದು ಎರಡಕ್ಕೂ ಹೊಂದಾಣಿಕೆ ಇರುವದನ್ನು ಸಾರುತ್ತಾರೆ.ಈ  ಸಾಲು ಬರೆದ ಕವಿಯೆ ಇನ್ನೊಂದು ಕಡೆ ಕತ್ತಲೆ ಬೆಳಕಿನ ನಡುವೆ ಸವತಿ ಮಾತ್ಸರ್ಯ ಇದೆ ಎನ್ನುವದು ಅಷ್ಟೇನೂ ಹಿತಕರವಾಗಿ ಕಾಣಿಸುವದಿಲ್ಲ  (ಶಾಯಿರಿ ೮೯) ಎನ್ನಿಸದೆ ಇರದು. ಇಲ್ಲಿನ ಒಂದೆರಡು ಶಾಯಿರಿ ಗಳು ಬಹಳ ವಿಶೇಷ ವಸ್ತುವನ್ನು ಒಳಗೊಂಡಿವೆ ಎನಿಸುತ್ತದೆ.ಅವೆಂದರೆ ಕನ್ನಡದ ಸ್ವಾಮಿಜಿಗಳೆಂದೇ ಹೆಸರಾದ ಲಿಂ.ತೋಟದ ಸಿದ್ದಲಿಂಗ ಮಹಾಸ್ವಾಮಿಗಳವರ ಕುರಿತಾದ ಶಾಯಿರಿಗಳು. ಒಂದು ಶಾಯಿರಿ ಅವರು “ನಡೆದದ್ದೆಲ್ಲಾ ಬೆಳಕು”  ಎಂದು ಅವರನ್ನು ಬಹಳ ಸುಂದರವಾಗಿ‌ ಬಣ್ಣಿಸಿದೆ.ಶಾಯಿರಿ ಎಂದರೆ ಬಹುತೇಕ ಗಂಡು ಹೆಣ್ಣಿನ ನಡುವಿನ‌ ಪ್ರೇಮದ ಮಧುರ ಭಾವಗಳನ್ನೊ ,ಅವರು ಅಗಲಿದ ವಿರಹದ ನೋವನ್ನೋ ವ್ಯಕ್ತ‌ ಮಾಡುವ ಕಾವ್ಯ ಎಂಬುದು ಸಾಮಾನ್ಯ ಸಂಗತಿ ಯಾಗಿತ್ತು. ಆದರೆ ಡಾ. ಬಮ್ಮನಕಟ್ಟಿಯವರ  ಶಾಯಿರಿ ಕತ್ತಲೆ ಬೆಳಕಿನ ಸಂದರ್ಭವನ್ನು ಪೂಜ್ಯರ ವ್ಯಕ್ತಿತ್ವ ಕಟ್ಟಿಕೊಡಲು ಬಳಸಿಕೊಂಡಿರುವದು  ವಿಶೇಷವಾಗಿದೆ. ದೀಪದ ಬುಡಕ ಕತ್ತಲುದೀಪದ ಬುಡದಾಗ‌ ಕತ್ತಲು ಅನ್ನೋದುಅಜ್ಜಾ ನಿನ್ನ‌ ನೋಡಿದಾಗsಮರೆತುs ಹೋಗಿತ್ತುಆದರ ಅಜ್ಜಾ ನೀ ಹೋದ ಮ್ಯಾಲೆಈ ಕತ್ತಲು ಮತ್ ಮತ್ ಕಾಡೇತಿ ಬೆಳಕೇ ತಾವಾಗಿದ್ದ  ಪೂಜ್ಯರು ಹೋದ ಮೇಲೆ ಇಲ್ಲೀಗ ಕತ್ತಲು ಮತ್ತೆ ಮತ್ತೆ ಕಾಡುವದು ಕವಿಯನ್ನು

ಡಾ.ಮಂಜುನಾಥ್‌ ಬಮ್ಮನಕಟ್ಟಿಯವರ ಶಾಯರಿ ಸಂಕಲನ “ಕತ್ತಲು ಬೆಳಕು” ಅವಲೋಕನ ಡಾ.ವೈ ಎಂ ಯಾಕೊಳ್ಳಿ Read Post »

ಪುಸ್ತಕ ಸಂಗಾತಿ

“ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ”ಅವಲೋಕನ,ಡಾ.ಬಸವರಾಜ ಗೌಡನಬಾವಿ

ಪುಸ್ತಕ ಸಂಗಾತಿ ಡಾ.ಬಸವರಾಜ ಗೌಡನಬಾವಿ “ಬರಗೂರು ರಾಮಚಂದ್ರಪ್ಪನವರ  ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ”ಅವಲೋಕನ,   ಮನುಷ್ಯನನ್ನು ಪ್ರೀತಿಸಿದರೆ ಮಾತ್ರ ಮಾನವೀಯತೆಗೆ ಅರ್ಥ ಬರುತ್ತದೆ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ. ಇಂದು ಭಾರತದ ಸೌಹಾರ್ದ ವಾತಾವರಣ ಕದಡುತ್ತಿದೆ. ಇಂತಹ ವಾತಾವರಣದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿಯೂ ಮನುಷ್ಯ ಸಂಬಂಧಗಳ ಬೆಸೆಯುವ ಕನಸನ್ನು ಹೊತ್ತು ಬರುತ್ತಿದೆ. ಬರಗೂರು ರಾಮಚಂದ್ರಪ್ಪನವರು ತಮ್ಮ ಕೃತಿಯ ಮೂಲಕ ದೇಶದಲ್ಲಿರುವ ತಾರತಮ್ಯ, ಅಸಮಾನತೆ, ಮೂಲಭೂತವಾದಿತನ, ದ್ವೇಷ, ಈರ್ಷ್ಯೆಗಳು ಸಮಾನತೆ, ಸೌಹಾರ್ದತೆಯ ಆಶಯಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು  ವಿಷಾದಿಸುತ್ತಾರೆ. ಬರಗೂರು ರಾಮಚಂದ್ರಪ್ಪನವರು ವಿವಿಧ ಸಂದರ್ಭದಲ್ಲಿ ಬರೆದ ಮಹತ್ವದ ಲೇಖನಗಳನ್ನು ಈ ಕೃತಿಯಲ್ಲಿ ಜೊಡಿಸಿಕೊಟ್ಟಿದ್ದಾರೆ. ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಎನ್ನುವ ಈ ಕೃತಿ ಒಟ್ಟು ಹತ್ತು ಲೇಖನಗಳನ್ನು ಒಳಗೊಂಡಿದೆ. ಸೌಹಾರ್ದತೆ ಮತ್ತು ಸಮಾನತೆ ಭಾರತದ ಎರಡು ಕಣ್ಣುಗಳು. ಸೌಹಾರ್ದತೆ ಎಂದರೆ ಪಕ್ಷಪಾತವಲ್ಲ, ಪೂರ್ವಗ್ರಹವಲ್ಲ, ಯಾವುದರ ಪರವೂ, ವಿರೋಧವೂ ಅಲ್ಲ. ಎಲ್ಲ ಅವಿವೇಕಗಳನ್ನು ಮೀರಿದ ವಿವೇಕ ಹಾದಿ. ಇಲ್ಲಿ ನಾವು ವಿವೇಕಾನಂದರ ಧೀರೋದಾತ್ತ ನಿಲುವನ್ನು ಕಾಣುತ್ತವೆ. ಅವರ ಪ್ರಖರ ಸಾಮಾಜಿಕ ವ್ಯಕ್ತಿತ್ವ, ದೀನ, ದಲಿತರ ಉದ್ಧಾರವೇ ಧರ್ಮದ ಮೂಲತತ್ವ ಎನ್ನುವಲ್ಲಿ ಅವರ ವೈಚಾರಿಕತೆ ಸತ್ಯದ ಅನಾವರಣವಾಗುತ್ತದೆ. ಗಾಂಧೀಜಿಯು ಪರಧರ್ಮ ಸಹಿಷ್ಣುತೆಯ ಪ್ರತೀಕ. ಧರ್ಮವು ರಾಷ್ಟ್ರೀಯತೆಯ ಮಾನದಂಡವಲ್ಲ. ಅದೇನಿದ್ದರೂ ಮನುಷ್ಯ ಮತ್ತು ದೇವರ ನಡುವಿನ ವೈಯಕ್ತಿಕ ಸಂಬಂಧ ಎಂದು ಹೇಳುವ ಮೂಲಕ ಪರಧರ್ಮ ಸಹಿಷ್ಣುತೆಯನ್ನು ಪ್ರಬಲವಾಗಿ ಪ್ರತಿಪಾದಿಸುವ ಗಾಂಧೀಜಿಯ ವಿಚಾರಧಾರೆ ರಾಷ್ಟ್ರೀಯತೆಗೂ ಧರ್ಮನಿಷ್ಠೆಗೂ ಸಂಬಂಧವನ್ನು ಕಲ್ಪಿಸುತ್ತಿರುವ ಈ ಸಂದರ್ಭದಲ್ಲಿ ತುಂಬಾ ಅಗತ್ಯವೆಂದು ತಿಳಿಸುತ್ತದೆ. ಅವರ ಸತ್ಯನಿಷ್ಠೆ, ಪರಧರ್ಮ ಸಹಿಷ್ಣುತೆ, ಪ್ರಾಮಾಣಿಕತೆ ಯಾರಿಗೂ, ಯಾವತ್ತಿಗೂ ಆದರ್ಶವೇ, ಅನುಕರಣೀಯವೇ ಆಗಿದೆ. ಗಾಂಧಿ ಎಲ್ಲಾ ಧರ್ಮಿಯರಿಗೂ ಪರಧರ್ಮ ಸಹಿಷ್ಣುತೆ ಉಳ್ಳವರಿಗೂ ಸಾಂಕೇತಿಕ ದಾರಿದೀಪವಾಗಿದ್ದಾರೆ.  ಸಾಮಾಜಿಕ ಪ್ರಜಾಪ್ರಭುತ್ವವನ್ನು ಕುರಿತಂತೆ ಅಂಬೇಡ್ಕರರ ವಿಚಾರಗಳನ್ನು ಕೃತಿ ದಾಖಲಿಸುತ್ತದೆ. ಸಾಮಾಜಿಕ ಪ್ರಜಾಪ್ರಭುತ್ವ ಎಂದರೇನು ಎನ್ನುವ ಪ್ರಶ್ನೆಗೆ ಅದೊಂದು ಜೀವ ಕ್ರಮ. ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಗಳನ್ನು ಜೀವನ ತತ್ವವನ್ನಾಗಿಸಿಕೊಂಡ ಕ್ರಮ. ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆ ಎಂಬ ಮೂಲತತ್ವಗಳಿಗೆ ಧರ್ಮವು ಮನ್ನಣೆ ನೀಡಲೇಬೇಕು. ಇಲ್ಲದಿದ್ದರೆ ಧರ್ಮವು ನಾಶವಾಗುತ್ತದೆ. ನಿಜವಾದ ಧರ್ಮವಿರುವುದು ಮಾನವನ ಹೃದಯದಲ್ಲೇ ಹೊರತು ಶಾಸ್ತ್ರಗಳಲ್ಲಿ ಅಲ್ಲ ಎನ್ನುವುದು ಮನುಷ್ಯ ಬದುಕಿನ ವಾಸ್ತವದ ಮಾತು. ಈ ಮಾತು ಕುವೆಂಪು ಅವರ ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿವುದೇನು? ಎಂಬ ಸಾಲನ್ನು ನೆನಪಿಸುವುದಲ್ಲದೇ ಬದುಕಿನ ವಾಸ್ತವ ಮತ್ತು ಭಾವನಾತ್ಮಕತೆಯ ವೈರುಧ್ಯಗಳನ್ನು ತೆರೆದಿಡುತ್ತದೆ.  ಮನುಷ್ಯರನ್ನು ಹುಡುಕುತ್ತಾ ಹೊರಡುವ ಕೃತಿ ಮನುಷ್ಯರ ಬದಲು ಜಾತಿ ಧರ್ಮಗಳ ಲೆಕ್ಕ ಕೊಡುವ ಸಮಾಜವನ್ನು ಕಂಡು ವ್ಯಥೆಪಡುತ್ತದೆ. ಕನ್ನಡತ್ವದಲ್ಲಿ ಮನುಷ್ಯತ್ವದ ಪರಂಪರೆಯನ್ನು ಕಂಡುಕೊಂಡು ಭವಿಷತ್ತಿನ ಆಶಾವಾದವನ್ನು ಪ್ರಕಟಿಸುತ್ತದೆ. ಅದೇ ಸಮಯದಲ್ಲಿ ತಾಯ್ತನವನ್ನು ಕಳೆದುಕೊಳ್ಳುತ್ತಿರುವ ಸಮಾಜದ ಬಗ್ಗೆಯೂ ಮರುಕಪಡುತ್ತದೆ. ಈ ಕೃತಿಯನ್ನು ಸ್ವೀಕರಿಸುವ ಜನಕ್ಕೆ ತಾಯ್ತನದ ಕರುಳು ಇಲ್ಲದೇ ಹೋದರೂ ಕನಿಷ್ಠ ತಾಯ್ತನದ ಹಂಬಲವಾದರೂ ಹುಟ್ಟಲಿ ಎನ್ನುವ ಆಶಯವನ್ನು ಕೃತಿ ವ್ಯಕ್ತಪಡಿಸುತ್ತದೆ. ಡಾ.ಬಸವರಾಜ ಗೌಡನಬಾವಿ

“ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ”ಅವಲೋಕನ,ಡಾ.ಬಸವರಾಜ ಗೌಡನಬಾವಿ Read Post »

ಪುಸ್ತಕ ಸಂಗಾತಿ

ಚಂದಕಚರ್ಲ ರಮೇಶ್ ಬಾಬು ಅವರ ಅಂಕಣ ಬರಹಗಳ ಸಂಕಲನ- “ಆಚೀಚಿನ ಆಯಾಮಗಳು”ಸುಮತಿ ನಿರಂಜನ

ಪುಸ್ತಕ ಸಂಗಾತಿ ಸುಮತಿ ನಿರಂಜನ್ ಚಂದಕಚರ್ಲ ರಮೇಶ್ ಬಾಬು ಅಂಕಣ ಬರಹಗಳ ಸಂಕಲನ- “ಆಚೀಚಿನ ಆಯಾಮಗಳು” “ಮಧ್ಯಮಗತಿಯ ಸುಗಮ ಗದ್ಯ” ಮೂಲತಃ ಬಳ್ಳಾರಿಯವರಾದ ಚಂದಕಚರ್ಲ ರಮೇಶ್ ಬಾಬು ಅವರು ಹೈದರಾಬಾದ್ ಕನ್ನಡಿಗರು. ಹೊರನಾಡಿನ ಕನ್ನಡ ಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಇವರು ಕನ್ನಡ ನಾಟ್ಯ ರಂಗದ ಕಾರ್ಯಕಾರಿ ಸಮಿತಿಯ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್, ತೆಲಂಗಾಣ ಘಟಕದ ಸಂಘಟನಾ ಕಾರ್ಯದರ್ಶಿಯೂ ಆಗಿರುವರು. ಇವರು ತೆಲುಗು, ಕನ್ನಡ ಎರಡರಲ್ಲೂ ಪ್ರವೀಣರು. ಕವಿತೆ, ಲಘು ಬರಹಗಳು, ಅಂಕಣಗಳು, ಅನುವಾದ ಕೃತಿಗಳು (ತೆಲುಗಿನಿಂದ ಕನ್ನಡಕ್ಕೆ, ಕನ್ನಡದಿಂದ ತೆಲುಗಿಗೆ)- ಹೀಗೆ ಒಟ್ಟು ಮೂವತ್ತು ಕೃತಿಗಳನ್ನು ರಚಿಸಿದ್ದಾರೆ. ಆಚೀಚಿನ ಆಯಾಮಗಳು ಸಂಕಲನದಲ್ಲಿ ಒಟ್ಟು ಮೂವತ್ತನಾಲ್ಕು ಲೇಖನಗಳಿವೆ. ಈ ಅಂಕಣ ಗೊಂಚಲಿನಲ್ಲಿ ಬಗೆಬಗೆಯ ಹೂವುಗಳು. ಎಲ್ಲವೂ ದಿನ ನಿತ್ಯ ನಮ್ಮ ತೋಟಗಳಲ್ಲಿ ಸಾಮಾನ್ಯವಾಗಿ ಕಾಣುವಂತಹವು. ಅವುಗಳ ಮೇಲೆ ತುಂತುರು ಹನಿ ಚೆಲ್ಲಿದಂತೆ ತೆಳು ಹಾಸ್ಯ. ಕೆಲವಕ್ಕೆ ವೈಚಾರಿಕತೆಯ ಘಮವಿದ್ದರೆ, ಕೆಲವಕ್ಕೆ ಅಧ್ಯಾತ್ಮದ ಅಗರುಬತ್ತಿಯ ಪರಿಮಳ, ಸಣ್ಣಕ್ಕೆ- ಯಾವುದೂ ಮೂಗಿಗೆ ಬಡಿಯುವಂತದಲ್ಲ. ಹಿತ ಮಿತ, ನವಿರು. ಶ್ರೀಸಾಮಾನ್ಯನ ದೈನಂದಿನ ಜೀವನದಲ್ಲಿ ಬರುವ ಚಿಕ್ಕ ಪುಟ್ಟ ಸವಾಲುಗಳು, ಅನಿವಾರ್ಯತೆಗಳ ಮೇಲೆ ಬರೆದ ಕಿರು ವ್ಯಾಖ್ಯಾನಗಳು- ಮನೆಯನ್ನು ಹೊಕ್ಕ ಇಲಿಯಿಂದ ಹಿಡಿದು ನೆರೆ ಹೊರೆ, ಗತಕಾಲದ ಟೂ ಇನ್ ಒನ್, ಗಾಂಧಿವಾದದ ಪ್ರಸ್ತುತತೆ ವರೆಗೆ – ಇಲ್ಲಿಯ ಬರಹದ ವಸ್ತುಗಳ ಹರವು ವಿಶಾಲ. ದಿಟ್ಟತನದಿಂದ ತನ್ನದೇ ಆದ ಧೋರಣೆಯನ್ನು ಅಭಿವ್ಯಕ್ತಿಸುತ್ತದೆ- “ಮೇರಾ ಭಾರತ್ ಮಹಾನ್”. ಬಯೋಪಿಕ್ ಬಗ್ಗೆ ಹೇಳುವಾಗ- ಚಲನಚಿತ್ರಗಳಲ್ಲಿ ಪುರಾಣ ಪುರುಷರ ಚಿತ್ರಣದಿಂದ ಹಿಡಿದು, ಕ್ರೀಡಾಪಟುಗಳ ರಾಜಕಾರಣಿಗಳ ಮೇಲಣ ಚಲನಚಿತ್ರಗಳನ್ನು ವಿಶ್ಲೇಷಿಸುವ ಬಗೆ ಇವರ ಅಧ್ಯಯನಶೀಲತೆಗೆ ಕನ್ನಡಿ. ಭಾಷೆ, ಅದರಲ್ಲೂ ಕನ್ನಡದ ಮೇಲಿನ ಲೇಖನಗಳಲ್ಲಿ ಕನ್ನಡಾಭಿಮಾನ ತುಂಬಿ ತುಳುಕುವುದು ಮಾತ್ರವಲ್ಲ ಉತ್ತಮ ಸಲಹೆಗಳೂ ಕಾಣುವುವು. ಸ್ವಂತ ಅನುಭವದ ಕುರಿತಾದ “ಆಕಾಶಯಾನವೂ…”, “ನಾವು ಇಲಿಯನ್ನು ಹೊರಗಟ್ಟಿದೆವು…”, “ನೋ ಪಾರ್ಕಿಂಗ್”- ಇತ್ಯಾದಿಗಳು ನಮ್ಮೆಲ್ಲರ ಅನುಭವವನ್ನು ಪ್ರತಿಫಲಿಸುವ ಆಪ್ತತೆ ಹೊಂದಿವೆ. ನನ್ನ ಮೆಚ್ಚಿನವು- ಶ್ವಾನೋಪಾಖ್ಯಾನ, (ಗ್ರೇಟ್ ಡೇನ್ ಗೆ “ಕಾಲಭೈರವ”, ಪೊಮರೇನಿಯನ್- ಭೂಮಿಗೆ ಸಮಾನಾಂತರವಾಗಿರುವ “ಕುಳ್ಳ ಕುನ್ನಿ” !), ಫೇಸ್ಬುಕ್ ಪ್ರಭಂಜನ, ಬೀಗರು (ಗಟ್ಟಿತನವಿರುವುದರಿಂದ ಬೀಗ ಎಂಬ ಹೆಸರು ಬಂದಿರಬಹುದು ಎಂಬ ಊಹೆ !), ನಿರೂಪಕರ ಪಾತ್ರ – ಕಬಡ್ಡಿ ಆಟಗಾರರಂತೆ ನಿರ್ದಿಷ್ಟ ಮಿತಿಯಲ್ಲಿ ನಡೆಯಬೇಕಾದ ಪರಿಸ್ಥಿತಿ, ಮನೆಕೆಲಸದ ಸಾಮ್ರಾಜ್ಞಿ -(ಮನೆಯೊಡೆಯನನ್ನೆ ರೂಮಿನಿಂದ ಹೊರಗೋಡಿಸಲು ಕೋಲುಧಾರಿಣಿಯಾಗಿ ಒರೆಸಲು ನಿಂತ ಮಹಿಷಾಸುರ ಮರ್ದಿನಿ!), ವಜ್ರದಂತಕ್ಕೊಂದು ಕ್ಷತಿ ( ದಂತಸ್ಥ- ಹಲ್ಕಟ್ ಡಾಕ್ಟರ್!) – ಚಿಕ್ಕ ಚಿಕ್ಕ ಕುಂಚಕಾರಿತನದಿಂದ ಮನ ಸೆಳೆದ ಉದಾಹರಣೆಗಳು. ಭಾರವೆನಿಸದ ಈ ಲಲಿತ ಕಿರು ( ಯಾವುದೂ ೩-೪ ಪುಟ ಮೀರಿಲ್ಲ) ಪ್ರಬಂಧಗಳಲ್ಲಿ ಅಬ್ಬರವಿಲ್ಲ, ವ್ಯಂಗ್ಯದಲ್ಲಿ ಮೊನಚಿಲ್ಲ, ಹಾಸ್ಯದಲ್ಲಿ ಕಹಿಯಿಲ್ಲ, ಭಾಷೆಯಲ್ಲಿ ಶಬ್ದ ಪ್ರದರ್ಶನವಿಲ್ಲ. ನನಗೆ ಥಟ್ಟಂತ ನೆನಪಾದದ್ದು ಆರ್ .ಕೆ. ಲಕ್ಷ್ಮಣರ ಶ್ರೀಸಾಮಾನ್ಯನ ವ್ಯಂಗ್ಯ ಚಿತ್ರಗಳು. ಅಷ್ಟೇ ಖುಷಿ ಕೊಡುವಂತಹವು. ಸುಮತಿ ನಿರಂಜನಹೈದರಾಬಾದ್

ಚಂದಕಚರ್ಲ ರಮೇಶ್ ಬಾಬು ಅವರ ಅಂಕಣ ಬರಹಗಳ ಸಂಕಲನ- “ಆಚೀಚಿನ ಆಯಾಮಗಳು”ಸುಮತಿ ನಿರಂಜನ Read Post »

ಪುಸ್ತಕ ಸಂಗಾತಿ

ವಿಶ್ವಾಸ್‌ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?”ಒಂದು ಅವಲೋಕನ, ಮಧು ಮಾಲತಿ

ಪುಸ್ತಕ ಸಂಗಾತಿ ವಿಶ್ವಾಸ್‌ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?” ಒಂದು ಅವಲೋಕನ, ಮಧು ಮಾಲತಿ ಪತ್ರಕರ್ತ ˌ ಸಾಹಿತಿ ಹಾಗೂ ಅಂಕಣಕಾರರಾದ ಶ್ರೀ ವಿಶ್ವಾಸ್  ಡಿ ಗೌಡರ “”ನೆಮ್ಮದಿಯ ವಿಳಾಸವೆಲ್ಲಿದೆ”” ಕೃತಿಯನ್ನು ಖಂಡಿತಾ ಒಂದೊಮ್ಮೆ ಓದಲೇಬೇಕು .ಈ ಕೃತಿಯ ಶೀರ್ಷಿಕೆಯೇ ಬಹಳ ಆಪ್ತವಾಗುತ್ತದೆ. ಏಕೆಂದರೆ ಪ್ರತಿಯೊಬ್ಬರೂ ಸಹ ಎಷ್ಟೇ ಸುಖಿಯಾಗಿದ್ದರೂ ಈ ನೆಮ್ಮದಿಯನ್ನು ಕ್ಷಣವೂ ಅರಸುವವರೇ .ಈ ನೆಮ್ಮದಿಯ ವಿಳಾಸವ ಹುಡುಕಿ ಹುಡುಕಿ ಸೋತವರೇ ಹೆಚ್ಚು. ಅದರ ವಿಳಾಸವನ್ನು ಅರಸುವವರಿಗಾಗಿಯೇ ವಿಶ್ವಾಸ್ ಗೌಡರು ಈ ಕೃತಿಯನ್ನು ಬರೆದಿರಬಹುದು. ಏಕೆಂದರೆ ಇಲ್ಲಿರುವ ಪ್ರತಿ ಕಥೆಯು ಮನಸ್ಸಿಗೆ ತುಂಬಾ ಹತ್ತಿರವಾದಂತೆ ತೋರುತ್ತದೆ .ಪ್ರತೀ ಕಥೆಯಲ್ಲೂ ಓದುಗ ತನ್ನನ್ನೇ ಅಲ್ಲಿ ಬಿಂಬಿಸುತ್ತ ಹೋದಂತಿದೆ. ಇಲ್ಲಿರುವ ಪ್ರಸಂಗಗಳು ಒಂದಿಲ್ಲೊಂದು ರೀತಿಯಲ್ಲಿ ಎಲ್ಲರ ಜೀವನದಲ್ಲೂ ಘಟಿಸಿಯೇ ಇರುತ್ತದೆ .ಇಂತಹ ಘಟನೆಗಳನ್ನೇ ಕಥೆಯ ಜೀವಾಳವಾಗಿಸಿಕೊಂಡು ಸರಳ ಸುಂದರವಾಗಿ ಹೆಣೆಯುತ್ತಾ ಓದುಗನೆದೆಗೆ ಶಾಶ್ವತವಾಗಿ ಇಳಿಸುವಲ್ಲಿ ವಿಶ್ವಾಸ್ ಗೌಡರ ಪ್ರಭುದ್ಧತೆ ಎದ್ದು ಕಾಣುತ್ತದೆ.ಇಲ್ಲಿ ಬರುವ ಅಪ್ಪ ಮಕ್ಕಳ ಭಾವನಾತ್ಮಕ ಸಂಬಂಧಗಳ ಬರಹಗಳು ಓದುಗನ ಕಣ್ಣೆವೆಗಳನ್ನು ತುಂಬದೇ ಇರಲಾರದು .ಮಗಳಿಗಾಗಿ ಜೀವನವನ್ನೇ ಮುಡಿಪಿಡುವ ಅಪ್ಪ ˌಇಹಲೋಕ ತ್ಯಜಿಸಿಯು ಮಗನ ನೌಕರಿಗಾಗಿ ಅದೃಶ್ಯದಲ್ಲೂ ದೃಶ್ಯದಂತೆ ಗೋಚರಿಸಿ ಕಚೇರಿಗೆ ಅಲೆವ ಅಪ್ಪ ˌಖಾಯಿಲೆಯಿಂದ ಮೂಗನಾದ ಮಗನಿಗಾಗಿ ಮಾತಿದ್ದರೂ ಮೌನಕೋಟೆಯೊಳಗೆ ಬಂಧಿಯಾಗಿ ಜೀವಮಾನವಿಡೀ ಮೂಗನಾಗಿ ಬದುಕಿದ ಅಪ್ಪ ಹೀಗೆ ಅಪ್ಪನ ವ್ಯಕ್ತಿತ್ವ ಪ್ರತೀಕಥೆಯಲ್ಲೂ ಹಿಮಾಲಯಕ್ಕಿಂತ ಎತ್ತರದ ಸ್ಥಾನದಲ್ಲೇ ನಿಲ್ಲುತ್ತದೆ.ಈ ಕಾರಣಗಳಿಗಾಗಿ ಈ ಕೃತಿ ಮತ್ತಷ್ಟು ಆಪ್ತವಾಗುತ್ತಾ ಸಾಗುತ್ತದೆ .ಪ್ರೇಮ ಪ್ರಸಂಗಗಳ ಕಥೆಗಳಿಗೆ ಒಳಹೊಕ್ಕರೆ ಪ್ರೀತಿಯ  ಶರಧಿಯಲ್ಲಿ ಮಿಂದೆದ್ದವರೇ ನಾವೆಲ್ಲರೂ. ಅತೀ ನವಿರಾದ ನಾಜೂಕಾದ ಪದಪುಂಜಗಳು ಮತ್ತೆ ಮತ್ತೆ ಸೆಳೆಯುತ್ತವೆ . ಪ್ರತೀ ಓದುಗನೂ ಓದುತ್ತಿದ್ದಂತೆ ತನ್ನದೇ ಪ್ರೇಮ ಕಥೆ ಎಂಬಷ್ಟು ಅಲ್ಲಿ ಕಳೆದು ಹೋಗುತ್ತಾನೆ. ಇಲ್ಲಿ ಬರುವ ಪ್ರೀತಿಯ ಸೆಳೆತಗಳು ˌ ಮೊದಲ ಪ್ರೇಮ ˌ ಪ್ರೇಮ ನಿವೇದನೆಗೆ ತಲ್ಲಣ ಗೊಳ್ಳುವ ಮನಸ್ಸು ˌಸಿಕ್ಕಿಯೂ ಸಿಗದ ಪ್ರೇಮ ಇವೆಲ್ಲದರ ನಡುವೆ ಒಂದಷ್ಟು ಹೊತ್ತು ಓದುಗ ಪ್ರಭು ತನ್ನ ಜೀವನವನ್ನೇ ಅಲ್ಲಿ ಪ್ರತಿಬಿಂಬಿಸಿಕೊಳ್ಳುತ್ತಾನೆ. ಓದುತ್ತಾ  ಓದುತ್ತಾ ಆಧ್ರಗೊಳ್ಳುತ್ತಾನೆ . ನೆಮ್ಮದಿಯ ವಿಳಾಸವನ್ನು ಅರಸುತ್ತ ಅರಸುತ್ತ ಮತ್ತೆ ಮತ್ತೆ ಕೃತಿಯ ಮೇಲೆ ಕಣ್ಣಾಡಿಸುವಷ್ಟು ಬರಹಗಳು ಸೆಳೆಯುತ್ತವೆ.ಎಂದೋ ಅನುಭವಿಸಿದ ನೋವು ˌನಲಿವು ˌ ಸಂಕಟಗಳು ˌ ನಮ್ಮವರನ್ನೇ ಅರಿಯಲಾಗದ ಸ್ಥಿತಿ ˌ  ದಕ್ಕಿಯೂ ದಕ್ಕದ ಪ್ರೀತಿ ಇವೆಲ್ಲವುಗಳ ಸುತ್ತ ನಮ್ಮ ಬದುಕು ಗಿರಕಿ ಹೊಡೆಯುತ್ತಿರುತ್ತದೆ .ಇಂತಹ ಘಟನೆಗಳೇ ವಿಶ್ವಾಸ್ ಗೌಡರ ಬರಹದ ಕೇಂದ್ರ ಬಿಂದು.  ಸುಮ್ಮನೇ  ಕೈಗೊತ್ತಿಕೊಂಡರೂ ಕೃತಿಯನ್ನು ಸಂಪೂರ್ಣ ಓದುವವರೆಗೂ ಅದು ತನ್ನತ್ತ ಸೆಳೆಯುತ್ತಲೇ ಇರುತ್ತದೆ. ಸಾಹಿತ್ಯದಲ್ಲಿ ಅಭಿರುಚಿ ಇರುವವರು ಒಮ್ಮೆಯಾದರೂ ಈ ಕೃತಿಯನ್ನು ಪಡೆದು ಓದಲೇಬೇಕೆನ್ನುವಷ್ಟು ಕೃತಿ ಸಿದ್ಧಗೊಂಡಿದೆ .ಈ ಮೂಲಕ ವಿಶ್ವಾಸ ಡಿ ಗೌಡರಿಗೆ ಶುಭಾಶಯಗಳನ್ನು ಕೋರುತ್ತಾ  ಓದುವೆಡೆಗೆ ಸಾಗೋಣ. ಮಧು ಮಾಲತಿ‌ ರುದ್ರೇಶ್

ವಿಶ್ವಾಸ್‌ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?”ಒಂದು ಅವಲೋಕನ, ಮಧು ಮಾಲತಿ Read Post »

You cannot copy content of this page

Scroll to Top