ಕಾವ್ಯಯಾನ
ರಥ ಸಪ್ತಮಿ ಹೊಸ ಪಥದಿ ಮೂಡಿ ಬಂದ ಮಂಜಿನ ತೆರೆ ಸರಿಸಿ ನಕ್ಕಳಿವಳು ಎಳ್ಳು ಬೆಲ್ಲವ ನೀಡಿ ‘ಒಳ್ಳೆಯ ಮಾತಾಡು’ಅಂದಳು ಸೂರ್ಯ ನಕ್ಕಿದ್ದುಂಟೇ! ಸಿಡಿ ಮಿಡಿ ಅನ್ನುತ್ತಲೇ ಬಿಸಿ ತೋಳುಗಳ ಬಳಸಿ ಅಪ್ಪಿಕೊಂಡ. ******** ಪ್ರೇಮಲೀಲಾ ಕಲ್ಕೆರೆ
ಪರಿವರ್ತನೆಯ ಪರ್ವಕಾಲ ಅವ್ಯಕ್ತ ಅನಂತ ಆಗಸದಿ ಸ್ವಚ್ಛಂದ ಕ್ರಮಿಸುವನು, ಆದಿತ್ಯ ಸ್ನೇಹರಾಶಿಗಳ ಮನೆಯಿಂದ ಮನೆಗೆ, ಧನುವಿಗೆ ಕೈಬೀಸಿ ಮಕರನಿಗೆ ಕೈಚಾಚುತಲಿ, ಕಾಯದ ನಾಡಿಗಳಿಗೆ ಉತ್ತರಾಯಣಾಗಮನದ ಸಂಭ್ರಮ… ಜೀವಲೋಕದ ದಿನಕರನ ಕಣಕಣದ ಆಟದ ಪರಿಯೋ ! ರಾತ್ರಿ ಮಾಗಿ ಹಗಲು ಹಿಗ್ಗಿ, ವಿರಸ ಕಳೆದು ಸರಸ ಬೆಳೆದು, ಶೀತ ಕರಗಿ ಶಾಖವರಳಿ, ಬಂಜೆ ಬಾಡಿ ಭೂ ರಮೆಯಾಗಿರಲು, ರವಿತೇಜನ ತಂಪಿಗೆ ಹಬ್ಬಿತೆಲ್ಲೆಡೆ ಸಂಕ್ರಮಣದ ಸಡಗರ… ಸ್ವಾಗತಿಸುವ ಸಂಭ್ರಮದಿ ಸಂತಸವ ಹಂಚುತಲಿ, ಎಳ್ಳು ಬೆಲ್ಲ ಕಡಲೆ ಕೊಬ್ಬರಿ ಕಬ್ಬು ಬಾಳೆ ಅಚ್ಚು ಮೆಚ್ಚು, ವೃದ್ಧಿಸಲು ನಾಲಿಗೆಗೆ ಸವಿರುಚಿ ಆರೋಗ್ಯದ ಅಭಿರುಚಿ, ಮುತ್ತಿನ ಮಾತುಗಳು ಮಾಗಿಸುತಲಿ ಮನದ ದುಗುಡವ… ಪಂಜಾಬಲಿ ಲೋರಿ, ಆಂದ್ರದ ಭೋಗಿ, ತಮಿಳರ ಪೊಂಗಲ್, ಅಸ್ಸಾಮಿನ ಮಾಗಬಿಹು, ಝಾರ್ಖಂಡಲಿ ಸಂಕ್ರಾತ್, ಉತ್ತರಪ್ರದೇಶದ ಕಿಚರಿ, ಗುಜರಾತಿಯರ ಉತ್ತರಾಯಣ್, ರಾಜಸ್ಥಾನಿಯರಿಗೆ ಪಟದ ಹಬ್ಬ, ಕನ್ನಡಿಗರಿಗೆ ಸಂಕ್ರಮಣದ ಹಬ್ಬ. ಬನ್ನಿ ಎಲ್ಲರೂ ಒಂದುಗೂಡಿ ಎಳ್ಳು ಬೆಲ್ಲ ಹುಗ್ಗಿಯ ಹಂಚಿ, ಸದ್ಭಾವನೆಯ ಅಮೃತವ ಲೋಕದೆಲ್ಲೆಡೆ ಹರಡುವ, ಒಳಿತಿನ ಪಥದಲಿ ಶುಭವ ಅರಸುತ ಹಾರೈಸುವ, ಸಾಧನೆ ಸಹನೆ ಸರಸ ಸಾಮರಸ್ಯದ ಬಾಂಧವ್ಯ ಮೆರೆಯುವ… ********
ಸಂಕ್ರಾಂತಿ ಪ್ರಮಿಳಾ ಎಸ್.ಪಿ. ಪಥ ಬದಲಿಸುವ ನೇಸರನನ್ನು ಶರಶೆಯ್ಯಯ ಮೇಲೆ ಮಲಗಿ ಕಾದಿದ್ದನಂತೆ ಗಾಂಗೇಯ…. ಪುಣ್ಯಕಾಲಕ್ಕಾಗಿ! ಪೃಥ್ವಿಯ ತಿರುಗುವಿಕೆಯಲಿ ದಿನಕರನ ಮೇಲಾಟದಲಿ ಋತುಗಳ ಓಡಾಟದಲಿ ಇಳೆಯ ಜೀವಿಗಳ ಹೊಸ ವರುಷದ ಹುರುಪಿನಲಿ ವರುಷಕ್ಕೊಮ್ಮೆ ಬರುವುದೇ ಸಂಕ್ರಾಂತಿ ಉಳುವ ಯೋಗಿಯು ಬೆಳೆದ ಹುಲುಸಾದ ಫಸಲು ಮನ ತುಂಬಿ ಮನೆ ತುಂಬುವ ತವಕದಲಿರೆ ದುಡಿದ ದನಕರುಗಳ ಮಜ್ಜನಕ್ಕಿಳಿಸಿ ಮೈದಡವಿ ಹಿಗ್ಗು ತರುವುದೇ ಸಂಕ್ರಾಂತಿ ಕುಗ್ಗಿದ ಕೊರಗಿದ ಅಹಂ ಒಳಗೆ ಬೀಗಿದ ಮನಗಳು ಎಳ್ಳು ಬೆಲ್ಲ ನೀಡಿ-ಪಡೆದು ಹಗುರಾಗುವ ಘಳಿಗೆಯೇ ಸಂಕ್ರಾಂತಿ ಮೇಲೇರಿದವ ಕೆಳಗಿಳಿಯಲೇ ಬೇಕೆಂಬುದ ಆಡದೇ ತೋರಿಸುವ ಉದಯನು ತಂಪುಣಿಸುವ ಗಾಳಿ ನಿಲ್ಲಿಸಿ ಬಿರುಬಿಸಿಲಿಗೆ ಮುನ್ನುಡಿ ಬರೆಯುವ ದಿನವೇ ಸಂಕ್ರಾಂತಿ. *********
ಸುಗ್ಗಿಯ ಸಂಭ್ರಮ ರತ್ನಾ ಬಡವನಹಳ್ಳಿ ಬಂದಾನೋ ಭಾಸ್ಕರ ಬೆಳ್ಳಿಯಾ ರಥವೇರಿ ಬುವಿಗೆ ಚೆಲ್ಲುತ ಬೆಳಕ ಹೊನ್ನಕಿರಣಗಳ ಕಾಂತಿ ದಿಕ್ಕು ಬದಲಿಸು ದೆಸೆಯ ತಿರುಗಿಸುತ ಸವಾರಿ ತಂದು ಧರೆಯಲಿ ಮಕರ ಸಂಕ್ರಾಂತಿಯ ಸಂಭ್ರಮ ಊರ ಬಾಗಿಲಿಗೆ ಹಸಿರು ತೋರಣವ ಕಟ್ಟಿ ತಲೆಗೊಂದು ಚೌಕದಾ ಪೇಟವಾ ಧರಿಸಿ ಎಳ್ಳು,ಬೆಲ್ಲ,ಕೊಬ್ಬರಿ ಕಬ್ಬಿನ ಸವಿಯ ಸವಿಯುತ ಬೆಳೆದ ಧಾನ್ಯಗಳ ರಾಶಿಯ ಮಾಡುವ ಸಂಭ್ರಮ ಎತ್ತುಗಳ ಅಲಂಕರಿಸಿ ಮೆರವಣಿಗೆ ಮಾಡುತಾ ಸುಗ್ಗಿಯ ಸಡಗರದಿ ಹುಗ್ಗಿಯನು ತಿನ್ನುತಾ ಕುಣಿ ಕುಣಿದು ನಲಿ ನಲಿದು ಹೆಜ್ಜೆ ಹಾಕುತ ಆಚರಿಸಿ ಹಬ್ಬದಾ ಸಂಭ್ರಮ ವಕ್ಕಲು ಮಕ್ಕಳಿಗೆ ವರುಷವೆಲ್ಲ ದುಡಿದ ದಣಿವು ಒಳ್ಳೆಯ ಫಸಲು ಬಂದರೆ ಜೀವಕೆ ಗೆಲುವು ತಂದಿತೋ ಎಲ್ಲರ ಮನಸಿಗೂ ಚೈತನ್ಯದ ನಲಿವು ನಗುತ ಬೆರೆತ ಊರಿನ ಜನರ ಕೊನೆಯಿರದ ಸಂಭ್ರಮ *******
ಹಳ್ಳಿಯ ಸಂಕ್ರಾಂತಿ ಸಂಭ್ರಮ ಸುಜಾತ ರವೀಶ್ ಹಬ್ಬಿದ ಮಬ್ಬು ಕಾವಳ ಹರ್ಯೋ ಹೊತ್ತು ನೇಸರ ತನ್ನ ರಥ್ವಾ ಹೊರಳ್ಸೋ ಹೊತ್ತು ಆರಂಬದ ಕೆಲ್ಸ ಮುಗಿದು ಇನ್ನ ಸ್ವಲ್ಪ ಪುರುಸೊತ್ತು ಪಟ್ಟ ಕಷ್ಟಕ್ಕೆ ಪ್ರತಿಫಲ ಎಣಿಸೋ ಹೊತ್ತು . ಭೂಮ್ತಾಯಿ ನಮ್ನೆಲ್ಲಾ ಹರಸ್ತಾ ನಿಂತವಳೇ ಕಾಳ್ಕಡ್ಡಿ ರೂಪ್ದಾಗೆ ಕಣಜಕ್ಕೆ ಬರ್ತೌಳೆ ಕಣದಾಗೆ ರಾಸಿ ರಾಸಿ ತುಂಬೈತೆ ನೆಲ್ಲು ಆಳೆತ್ತರ ಪೇರ್ಸೈತೆ ಮೇವಿಗೆ ಒಣಹುಲ್ಲು . ಬನ್ನಿ ಎಲ್ಲ ಸಂತೋಸ್ವಾಗಿ ಹಬ್ಬ ಮಾಡೋಣ ಹಸಿರು ತಂದು ತಲ್ಬಾಗ್ಲಿಗೆ ತೋರ್ಣಾವಾ ಕಟ್ಟೋಣ ತಲೆದೂಗಿ ಆಡ್ತ್ಯಾವೆ ತೆಂಗು ಕಂಗು ಬಾಳೆ ತನ್ನಿ ಕಲಸ ಕಟ್ಟೋಕೆ ಬಿರ್ನೆ ಒಂದು ಹೊಂಬಾಳೆ. ಕೇರಿ ಕೇರೀನಾಗೆ ಅರಳಿ ನಿಂತ್ಯಾವೆ ರಂಗೋಲಿ ಹೆಂಗೇಳೇರು ಹಾಕವ್ರೆ ಒಬ್ರಿಗೊಬ್ರು ಪೈಪೋಟೀಲಿ ಚುಕ್ಕಿ ಎಳೆ ಹೂಗೋಳು ಸೇರಿ ಆಗವೆ ಚಿತ್ತಾರ ಒಡ್ಲಾಗೆ ರಂಗು ತುಂಬಿಸ್ಕೊಂಡೂ ಮಾಡ್ತಿವೆ ವಯ್ಯಾರ. ಹಾದಿಬೀದೀ ಪೂರಾ ಹೂರ್ಣದ ಹೋಳ್ಗೆ ಘಮಲೂ ಮೈಮನ ಆವರಿಸೈತೆ ಹಿಗ್ಗಿನಾ ಅಮಲೂ ಬೀಗರು ಬಿಜ್ಜರು ಭಾವ್ನೆಂಟ್ರು ಮನೇಕ್ ಬಂದಿರಲು ನಗೆಸಾರಕ್ಕೇನ್ ಕಮ್ಮಿ ಇಲ್ಲˌ ಮಾಡ್ತೌವ್ರೆ ಕುಸಾಲು. ಒಸ್ಬಟ್ಟೆ ಅಲಂಕಾರ ಹುಡ್ಗೀರ್ ಓಡಾಟ ಸರಭರ ಗಂಡೈಕ್ಳ ಎದೇಲಿ ಏನೋ ಮಿಂಚು ಸಂಚಾರ ಎಳ್ಳು ಬೀರೋಕ್ ಹೋಗೋರ್ನ ನೋಡೋದೇ ಹಬ್ಬ ದಿನಾ ದಿನಾ ಸಿಕ್ತಾದಾ ಕಣ್ಗೋಳ್ಗಿಂತಾ ಹಬ್ಬಾ. ಎತ್ತು ಗಿತ್ತು ರಾಸ್ಗೋಳಿಗೆ ಮಾಡಿಸ್ಬಿಟ್ಟು ಮಜ್ಜನ ಟೇಪು ರಿಬ್ಬನ್ ಸುತ್ತಿ ಮಾಡ್ತಾರಲಂಕಾರಾವಾ ಕೊಂಡ ಹಾಕಿ ಕಿಚ್ಚು ಹಾಯ್ಸಿ ಓಡ್ಸೋದ ನೋಡಿ ಬಿಟ್ಟೋಗ್ತೈತೆ ಕೆಟ್ ದೃಸ್ಟಿ ಇನ್ನೂ ಏನೇನೋ ಹಾವ್ಳಿ. ವರ್ಸಪೂರಾ ಜಂಜಡದಿಂದ ಖುಸಿ ಕೋಡೋದಿದು ರೈತಾಪಿ ಜನಗೋಳ ಅಚ್ಮೆಚ್ಚಿನ್ ಅಬ್ಬಾ ಇದು ಬನ್ನಿ ಎಲ್ಲಾ ಮಾಡೋಣ್ಕಂತೆ ಸಡ್ಗರದಾ ಸಂಕ್ರಾಂತಿ ಕೊಚ್ಚಿ ಓಗ್ಲಿ ರೋಸ ದ್ವೇಸ ಸಾಸ್ವತ್ವಾಗ್ಲಿ ಪ್ರೀತಿ. ****************************
ಗಝಲ್ ಸಂಕ್ರಾಂತಿ ವಿಶೇಷ ಎ.ಹೇಮಗಂಗಾ ಹೊಸ ವರುಷದೊಡೆ ಹರುಷವಿನ್ನೂ ಮೂಡಲಿಲ್ಲ ಬಂದರೇನು ಸಂಕ್ರಾಂತಿ? ದುರ್ದಿನಗಳ ಕರಾಳ ನೆನಪಿನ್ನೂ ಮಾಸಲಿಲ್ಲ ಬಂದರೇನು ಸಂಕ್ರಾಂತಿ? ದಕ್ಷಿಣದಿಂದ ಉತ್ತರದೆಡೆಗೆ ನಿಶ್ಚಿತ ಪಥದಲಿ ಸೂರ್ಯನ ಚಲನ ಸ್ವಾರ್ಥದ ಪಥವ ಮನುಜನಿನ್ನೂ ಬದಲಿಸಲಿಲ್ಲ ಬಂದರೇನು ಸಂಕ್ರಾಂತಿ ? ಯಾಂತ್ರಿಕ ಬದುಕಲ್ಲಿ ತುಂಬುವುದು ಸುಗ್ಗಿಯ ಸಂಭ್ರಮ ಅಲ್ಪಕಾಲ ಬಡವನೊಡಲ ಬಡಬಾಗ್ನಿಯಿನ್ನೂ ತಣಿಯಲಿಲ್ಲ ಬಂದರೇನು ಸಂಕ್ರಾಂತಿ? ಸೃಷ್ಟಿಕರ್ತನ ದೃಷ್ಟಿಯಲಿ ಯಾರು ಮೇಲು, ಯಾರು ಕೀಳು ಇಲ್ಲಿ? ಅಸಮಾನತೆಯ ಗೋಡೆಯನಿನ್ನೂ ಕೆಡವಲಿಲ್ಲ ಬಂದರೇನು ಸಂಕ್ರಾಂತಿ ? ಮಂದಿರ, ಮಸೀದಿ, ಚರ್ಚುಗಳ ದೇವನೊಬ್ಬನೇ ನಾಮಗಳು ಹಲವು ಜಾತಿ, ಮತದ ಭೇದ ಭಾವವಿನ್ನೂ ಅಳಿಯಲಿಲ್ಲ ಬಂದರೇನು ಸಂಕ್ರಾಂತಿ? ಕಾಮಪಿಪಾಸುಗಳ ಕಿಚ್ಚಿಗೆ ಬಲಿಯಾದ ಮುಗ್ಧ ಹೆಣ್ಣು ಜೀವಗಳೆಷ್ಟೋ ! ರಣಹದ್ದುಗಳ ಕೊರಳನ್ನಿನ್ನೂ ಮುರಿಯಲಿಲ್ಲ ಬಂದರೇನು ಸಂಕ್ರಾಂತಿ ? ಪರರ ಸಮಾಧಿಯ ಮೇಲೆ ಬದುಕು ಕಟ್ಟಿಕೊಳ್ಳುವ ಹುನ್ನಾರವೇಕೆ ? ಮಾನವತೆ ಸತ್ತ ಸೂತಕವಿನ್ನೂ ಮುಗಿಯಲಿಲ್ಲ ಬಂದರೇನು ಸಂಕ್ರಾಂತಿ ? ಹುಟ್ಟು ಸಾವಿನ ನಡುವಿನ ಪಯಣಕೆ ಕೊನೆ ಇಹುದು ಕಾಲನ ಕರೆಯಲ್ಲಿ ನಿತ್ಯಸತ್ಯವಿದು ದುರುಳರಿಗಿನ್ನೂ ಅರಿವಾಗಲಿಲ್ಲ ಬಂದರೇನು ಸಂಕ್ರಾಂತಿ ? ******
ಹೆದರುವುದಿಲ್ಲ ವಿಜಯಶ್ರೀ ಹಾಲಾಡಿ ಹೆದರುವುದಿಲ್ಲನಿಸರ್ಗದೊಂದಿಗೆ ದುಡಿಯುವುದುಬೆವರಿನ ತುತ್ತು ತಿನ್ನುವುದುಇದೇ ಬದುಕೆಂದು ತಿಳಿದನನ್ನ ಪೂರ್ವಜರ ಕಾಲವದುನನಗಾಗಲಿ ನನ್ನ ಓರಗೆಯಮಂದಿಗಾಗಲಿ ಜನನ ಪತ್ರಗಳಸರಕಾರಿ ದಾಖಲೆಗಳಹೊಳಹೂ ತಿಳಿದಿರಲಿಲ್ಲ ಇಲ್ಲದ ಪ್ರಮಾಣ ಕಾಗದಗಳತಂದುಕೊಡಿರೆಂದು ಆಜ್ಙಿಸುವವರೆಹೂವು ಅರಳಿದ್ದಕ್ಕೆ ಸಾಕ್ಷಿಹೇಳಲು ಒತ್ತಾಯಿಸದಿರಿಶತಮಾನಗಳಿಂದ ಇದೇನೀರು ಮಣ್ಣು ಗಾಳಿಉಸಿರಾಡಿದ್ದೇವೆ- ಇನ್ನೂ ಇಲ್ಲೇಇದ್ದು, ಸತ್ತು ನೆಲದಋಣವ ಸಲ್ಲಿಸುತ್ತೇವೆ…ನೀವು ಬಂದೂಕಿಗೆಮಾತು ಕಲಿಸಿರುವಿರಿಲಾಠಿ ಬಡಿಗೆ ದೊಣ್ಣೆಗಳಕೆತ್ತಿ ಹರಿತಗೊಳಿಸಿರುವಿರಿಆದರೆರಕ್ತದ ಹಾದಿಯಲ್ಲಿ ಬೀಜ– ಮೊಳೆಯುವುದಿಲ್ಲ ಮಳೆಬೀಳುವುದಿಲ್ಲ- ಹಸಿವಿಗೆಅನ್ನ ಬೆಳೆಯುವುದಿಲ್ಲ ಇಲ್ಲದ ಕಾಗದಪತ್ರಗಳಜಾಗದಲ್ಲಿ ನಮ್ಮ ದೇಹಗಳಿವೆಈ ನೆಲದ ಸಾರಹೀರಿದ ಜೀವಕೋಶಗಳಿವೆಮನಸ್ಸುಗಳಿವೆಆತ್ಮಗಳಿವೆಕನಸುಗಳಿವೆನಂಬಿ….ಇದಕ್ಕೂ ಮೀರಿಬದುಕಿಬಾಳಿದ ಹೊಲ- ಮನೆ-ಗಳ ಅಗಲಿ ಯಾವ ಕ್ಯಾಂಪು-ಗಳಿಗೂ ನಾವು ಬರುವುದಿಲ್ಲಕೋಲೂರಿಕೊಂಡು ನಡೆವಾಗಲೂಭುಜಕ್ಕೆ ಆತುಕೊಳ್ಳದಅಜ್ಜ ಅಜ್ಜಿಯರಮೊಮ್ಮಕ್ಕಳು ಮರಿಮಕ್ಕಳು ನಾವುದಂಡಿಗೆ ದಾಳಿಗೆ ಹೆದರುವುದಿಲ್ಲಕೇಳಿಕೊಳ್ಳಿ !
ಅಹಂ ಜ್ಞಾನಿಗಳು ಹರೀಶ್ ಗೌಡ ಗುಬ್ಬಿ ಅಹಂ ಜ್ಞಾನಿಗಳು ತನ್ನವರ ಏಳ್ಗೆಯಂ ಸಹಿಸದವರು ನೀವು ಬಿದ್ದವರ ಕಂಡೊಡನೆ ನಕ್ಕವರು ನೀವು ಅವರಿವರ ಕಾಲ್ಗೆಳಗೆ ಕಾಲೆಳೆದವರು ನೀವು ಉದ್ದುದ್ದ ಬೀಗುತ್ತ ಉದ್ಗಾರ ಮಾತಿನಲಿ ಪರನಿಂದೆ ಗೈದವರು ನೀವಲ್ಲವೇ. ನೀ ನುಡಿದುದಂ ನಡೆಯಬೇಕೆನುತಲಿ ಅಡ್ಡಡ್ಡ ದಾರಿಗಳಂ ತುಳಿದವರು ನೀವು ಸರಿ ಮಾರ್ಗದ ದಾರಿಹೊಕನಂ ಕರೆದು ಗೊಟರಿನೊಳಗೆ ನೂಕಿದವರು ನೀವು ಅಹಂ ಜ್ಞಾನವಂ ಮೈತುಂಬಿದವರು ನೀವಲ್ಲವೆ. ಗಳಿಸಿದ ಹೆಸರಂ ಬಳಸಿ ಆತ್ಮದೊಳು ಕಸವಂ ತುಂಬಿ ಅಮಾಯಕರ ನೋವಾಗಿ ಕುಳಿದು ಕುಪ್ಪಳಿದವರು ನೀವು ಅವರಿವರ ಅವಮಾನಗಳಂ ಕಿರೀಟ ಮಾಡಿ ಮೇರೆದವರು ಭೂಮಿಯೊಳು ನೀವಲ್ಲವೆ. ಸತ್ತ ಹೆಣವಂ ಕಾಡುವವರು ನೀವು ನಿಮ್ಮ ನಂಬಿ ನಿಮ್ಮಿಂದೆ ಬಂದವರು ನಾವು ನಮಗಿಲ್ಲವಂ ನಿಮ್ಮಗಳ ಸಹಾಯ ಹಸ್ತ ಸ್ವಾರ್ಥ ತುಂಬಿರುವ ಜ್ಞಾನಿಗಳಂತೆ ನಿಸ್ವಾರ್ಥವಂ ಬಿಟ್ಟ ಅಜ್ಞಾನಿಗಳು ನೀವಲ್ಲವೆ. ******
ಆನಿ ಜಯಾ ಮೂರ್ತಿ ಪಂಜರದ ಹಕ್ಕಿ ಅಲ್ಲ ನೀನು ಸ್ವತಂತ್ರ ಹಕ್ಕಿ ನೀ ಹಾರುವೆ ಎಲ್ಲಿಬೇಕಲ್ಲಿ ಒಡೆಯ ನ ಭುಜದಲ್ಲಿ ಒಡತಿಯ ಕೈಯಲ್ಲಿ ಮನೆಯ ಮೂಲೆಯಲ್ಲಿ ನೀನು ಸಾಮಾನ್ಯ ಹಕ್ಕಿಯಲ್ಲ ಎಲ್ಲಿಂದ ಧರೆಗಿಳಿದೆ ವಾಸಿಸಲು ಇಲ್ಲಿ? ಇಂದ್ರನ ಸ್ವರ್ಗದಿಂದ ಇಳಿದೆಯಾ? ಅಪ್ಸರೆ ಗಂಧರ್ವರಿಂದ ಹಾಡಲು ಕಲಿತೆಯ? ನಾರದರ ತಂಬೂರಿ ಶ್ರುತಿ ಜೊತೆಯ? ನಿನ್ನ ಹಾಡಿನ ಶೈಲಿ ಪುರಂದರ ತ್ಯಾಗರಾಜ ಶಯ್ಲಿ ನಿನ್ನ ಸ್ವರ ಹೋಲುವುದಿಲ್ಲಿ ಆಲಾಪನೆ, ಪಲ್ಲವಿ, ಚರಣ ದಲ್ಲಿ ಸ್ವರ ಆ ದೇವನ ಪ್ರಾರ್ಥನೆ ರೀತಿಯಲ್ಲಿ ಒಮ್ಮೊಮ್ಮೆ ಹಾಡುವೆ ದೊ, ರೆ, ಮಿ, ಫಾ, ಸೊಲ್, ಲ, ಸಿ ಪಾಶ್ಚತ್ಯ ಸಂಗೀತ ಶ್ಯಲಿಯಲ್ಲಿ ಹೌದು, ಎಲ್ಲಿದೆ ಸಂಗೀತಕ್ಕೆ ಎಲ್ಲೆ ನಿನ್ನ ಮಧುರ ಕೋಗಿಲೆ ಕಂಠ ಹೋಲುವುದು ಲತಾ, ಸುಬ್ಬಲಕ್ಷ್ಮಿಯರ ನೀನು ಸರಸ್ವತಿಯ ವರಪುತ್ರಿ, ನಿನ್ನ ಏಳು ಬಣ್ಣಗಳು ಸಪ್ತ ಸ್ವರಗಳಂತೆ ಆ ಕನಕಾಂಬರಿ ಚಿಹ್ನೆ ನಿನ್ನ ಪವಿ ತ್ರತೆಯ ಚಿಹ್ನೆ ಒಡೆಯ ಒಡತಿಯರ ಮುದ್ದಿನ ಗಿಳಿ ನೀನು ನಿನ್ನ ದನಿ ಕೇಳುವ ಸೌಭಾಗ್ಯ ನಮಗೂ ನೀಡು ‘ ಆನಿ ‘ *********
ಗ್ರಹಣಕ್ಕೆ ಮುನ್ನ ಪ್ರಮಿಳಾ ಎಸ್.ಪಿ ಗ್ರಹಣಕ್ಕೆ ಮುನ್ನ ಕೋಣೆ ಕಿಟಕಿಯ ಸರಳುಗಳ ನಡುವೆ ಚಂದ್ರಮನ ಚಿತ್ರ ಮನದಲ್ಲಿ ಆತುರದ ಕಾವು… ಗ್ರಹಣ ಪ್ರಾರಂಭ ಆಗುವುದಕ್ಕೆ ಮುನ್ನ ಮನೆ ಮಂದಿಗೆಲ್ಲಾ ಊಟ ಬಡಿಸಬೇಕಿದೆ.. ಎದೆಯೊಳಗಿನ ನೋವುಗಳ ಬಚ್ಚಿಟ್ಟು…ಪರದೆ ಮುಂದೆ ಕುಳಿತು ಪುಂಗಿ ಮಾತು ಆಲಿಸಿ ಆಕಳಿಸುವ ಅರಮನೆಯ ಮನಸ್ಸುಗಳ ನಡುವೆ ಆತುರಕ್ಕೆ ಆಟ ವಾಡ ಬೇಕಿದೆ ನಾನು… ಬಳಲಿದ ಕಾಲುಗಳ… ಮೇಲೆ ನಿಂತು ನಿಟ್ಟುಸಿರು ಸೆರಗು ಸುತ್ತಿ ಪ್ರತಿ ಕ್ಷಣಕ್ಕೂ ಬೇಡುತಿದ್ದೇನೆ ಹೊರಗೆ ಹೋದವರು ಹುಷಾರಾಗಿ ವಪಸ್ಸಾಗಲಿ.. ಪರದೆಯಲ್ಲಿ ಕಂಡ ರಾಶಿ ಭವಿಷ್ಯ ದ ಮಾತುಗಳು ಮಂಕಾಗಲಿ… ಅವನಿತ್ತ ಆಯಸ್ಸು ಇಮ್ಮಡಿಗೊಳ್ಳಲಿ .. ಕರುಳಕುಡಿಗಳಿಗೆ ಮಂತ್ರದ ಸೋಕು ತಾಗದಿರಲೆಂದು… ಬಡಿಸಬೇಕಿದೆ ಅನ್ನ ಗ್ರಹಣ ಕ್ಕೆ ಮುನ್ನ… ******
You cannot copy content of this page