ಕಾವ್ಯಯಾನ
ಕವಿತೆ ಚೈತ್ರಾ ಶಿವಯೋಗಿಮಠ ಕವಿ ಕೆ.ಎಸ್.ಎನ್ ಕ್ಷಮೆ ಕೋರುತ್ತಾ….. ಬರೆದ ಕವಿತೆಯ ಬಿಚ್ಚಿ, ತುಂಡರಿಸಿ ಕೊಯ್ವರು, ಬರೆದುದರೆಲ್ಲದರಲಿ ಬರಿ ತಪ್ಪ ಕಾಣ್ವರು ಯಾವುದೂ ಸರಿ ಇಲ್ಲ ಎಂದಿವರ ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ!! ಭಾವ ಚಂದವಿರಲು, ಈ ಪದವು ಯಾಕೆ? ಪದಗಳೆಲ್ಲವುಕೆ ಸಮ್ಮತಿಯು ಇರಲು, ಭಾವ ತೀವ್ರತೆಯು ಸಾಕೆ? ಎಲ್ಲದಕೂ ಬರಿ ಕೊಂಕು ಎಲ್ಲದಕು ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ!! ಓದೋಕೆ ಲಯವಿರೆ, ಛಂದೋಬದ್ಧ ಇಲ್ಲಂತೆ! ಪ್ರಾಸವಿಲ್ಲದಿರೆ ಓದಲು ತ್ರಾಸಂತೆ.. ಪ್ರಾಸವಿರೆ, ಪ್ರಾಸಕ್ಕೆ ತ್ರಾಸೆಂದು ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ! ಅರ್ಥವಾಗದಿರೆ, ಅರೆ ಇದೆಂಥ ಕವಿತೆ? ಅರ್ಥವಾದರೆ, ಧ್ವನಿಯಿಲ್ಲ ಅದು ಬರಿ ವಾಚ್ಯವಂತೆ! ಎಲ್ಲದಕು ಇವರದು ಅರ್ಥವಿಲ್ಲದ ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ! ಪತ್ರಿಕೆಗೆ ಕಳಿಸಿ ಪ್ರಕಟಿಸಿದರೆ, ಕೀರ್ತಿಯ ಹುಚ್ಚಂತೆ ಈಗೆಲ್ಲ ಬರೆಯುವವರ ಇವರು ಮೆಚ್ಚರಂತೆ! ಬರೆದುದೆಲ್ಲದಕು ಬರೀ ಟಿಪ್ಪಣಿ-ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ! **********









