ಕಾವ್ಯಯಾನ
ಗಝಲ್ ತೇಜಾವತಿ ಹೆಚ್. ಡಿ. ಸರಿರಾತ್ರಿಯ ನಿದಿರೆಯನ್ನು ಕಸಿದು ಮನವು ಕೇಳುತ್ತದೆ ನಿನ್ನನ್ನೆ ಒತ್ತಿದರು ಮುಚ್ಚದ ರೆಪ್ಪೆಯೊಳಗೆ ಕಂಗಳು ಅರಸುತ್ತವೆ ನಿನ್ನನ್ನೆ ಸಂತೆಯೊಳಗಿದ್ದರು ಏಕಾಂತದ ಭಾವ ಕವಿದು ವಿರಹ ಕಾಡಿದೆ ಬಂದಪ್ಪಿ ಬಿಡು ದಾಹ ತೀರುವಷ್ಟು ಬೆಳಗೊಳಗೆ ಬೇಡುತ್ತದೆ ನಿನ್ನನ್ನೆ ಹೃದಯದೊಳಗೆ ಅಡಗಿಸಿಟ್ಟ ಒಲವು ಹೊರಗಿಣುಕಿ ನೋಡುತ್ತಿದೆ ಎಲ್ಲಾದರು ಮಿಡಿಯಬಹುದೇ ಅಂತರಂಗ ತುಡಿತ ಕಾಯುತ್ತದೆ ನಿನ್ನನ್ನೆ ಸೆರೆಮನೆಯ ಬದುಕು ಸ್ವಚ್ಛಂದ ಹಾರಾಡಲು ಹಾತೊರೆಯುತ್ತಿದೆ ವಂಚನೆಯಿಂದ ನ್ಯಾಯ ಬಯಸಿ ನಂಬಿಕೆಯಲ್ಲಿ ಹಂಬಲಿಸುತ್ತದೆ ನಿನ್ನನ್ನೆ ಪ್ರತಿ ಇರುಳು ಹೊಂಗನಸಿನೊಡನೆ ಹತಾಶೆಗೊಳ್ಳುತ್ತಿವೆ ಭಾವನೆಗಳು ಅನುಕ್ಷಣವು ತೇಜಾಳ ಹೃದಯ ಭಕ್ತಿಯಿಂದ ಪ್ರಾರ್ಥಿಸುತ್ತದೆ ನಿನ್ನನ್ನೆ **********









