ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ -ಕವಿತೆ

ಕವಿತೆ ಬಿಸಿಲ ಹೂಗಳ ಬದುಕು ಲಕ್ಷ್ಮಿ ಪಾಟೀಲ್ ಬಿಸಿಲ ಹೂಗಳ ಬದುಕು ನನಗೆ ನೆರಳಿಗಿಂತಲೂ ಬಿಸಿಲೇ ಇಷ್ಟ ಒಳಗಿನ ಬೆಂಕಿ ಹೊರಗೆ ನೀರಾಗಿ ಹರಿಯುವ ವಿಸ್ಮಯಕ್ಕೆ ಕಾವುಗಳನ್ನೆಲ್ಲ ಕರಗಿಸಿ ನೀರಾಗುವುದನ್ನು ಕಲಿಸುತ್ತವಲ್ಲ ಅದೆಷ್ಟು ಸಲೀಸು… ಬಿಸಿಲನ್ನು ಹಾಸಿ ಹೊದೆದು, ಶ್ರಮದಲ್ಲಿ ಬೆವರಿಳಿಸಿ ಬಿಸಿಲ ಹಾಡುಗಳನ್ನು ಕಟ್ಟಿ ಜೀವನೋತ್ಸಾಹ ಹೇರಿಕೊಂಡು ಹೊರಟವರನ್ನು ಕಂಡು ನಾನೀಗ ದುಃಖಿಸುವುದಿಲ್ಲ ಭಾವಕೋಶಗಳನು ಅರಳಿಸಿ ಬಿಡುವ ಬಾಡದ ಹೂವಾಗಿ ಉಳಿದು ಬಿಡುವ ಬದುಕಿನರ್ಥಗಳನ್ನು ಹಿಗ್ಗಿಸುವ ಇವರನ್ನು ಕಂಡು ಹಿಗ್ಗುತ್ತೇನೆ ಬೆವೆರಿಳಿಸುವ ಕಸಬಿಗೆ ಜೀವ ತುಂಬುತ್ತೇನೆ… ತಮ್ಮಷ್ಟಕ್ಕೆ ತಾವು ತಣ್ಣಗೆ ಬದುಕುವ ಇವರು ಥೇಟ್ ಮಣ್ಣಿನ ಬಣ್ಣದವರು ನೋವುಗಳನ್ನೆಲ್ಲ ಧಗೆಯಲ್ಲಿ ಆವಿಯಾಗಿಸಲು ಅವರು ಬಿಸಿಲ್ಲನ್ನೇ ಪ್ರೀತಿಸುವರು ಉಪ್ಪು ನೀರಿನ ಕಡಲಾಗುವರು ಬೆವರುಬಸಿದು, ತಮ್ಮ ದಣಿವಿಗೆ ತಮ್ಮ ಸೋಲಿಗೆ ತಮ್ಮ ಉಪವಾಸಗಳಿಗೆ ತಣಿಸುವ ಪಾಠ ಕಲಿತುಕೊಂಡವರು… ಅನ್ಯರ ಹೊರೆ ಹೊತ್ತು ಭಾರವೆಂದು ನರಳದವರು ಹಡಗು ಕಟ್ಟಿಕೊಂಡು ಹಾಯಾಗಿರುವವರಿಗೆ ನಿತ್ಯ ತುತ್ತಾಗುವವರು ಈ ಪೊರೆವ ಜನಗಳೇ ಭೂಮಿಯ ತುಂಬಾ ಬಿಸಿಲ ಹೂವಾಗಿ ಅರಳಿ ನಿಲ್ಲುವರು….. ಇವರ ವಡಲ ವಡಬಾಗ್ನಿಯಲ್ಲಿ ತಮ್ಮ ಹಡಗು ತೇಲಿಸಿಕೊಂಡು ಅವರಲ್ಲಿ ಹಾಯಾಗಿ ಬದುಕುವರು ನೆರಳನ್ನೇ ಪ್ರೀತಿಸುವರು ನೆರಳಾದವರನ್ನು ಮರೆಯುವರು…. ಪಾಪಕ್ಕೆ ಪಕ್ಕಾಗಿ ಬಿಸಿಲಿಗೆ ಬಿದ್ದರೆ ಸತ್ತೇ ಹೋಗುವರು… ಅರಳದೆ ಅರಳಿಸದೆ ಮಣ್ಣಿನಲ್ಲಿ ಮಣ್ಣಾಗದೆ ಚಿತಾಗಾರದಲ್ಲಿ ಬೂದಿಯಾಗುತ್ತವೆ ಈ ಶವಗಳು ಹುಡುಕಿದರಲ್ಲಿಲ್ಲ ಜೀವಾಮೃತದ ಕಣಗಳು, ಬಿಸಿಲ ಹೂಗಳ ತಳಕೆ ಗೊಬ್ಬರವೆಂದು ಚೆಲ್ಲಲು…. *********

ಕಾರ್ಮಿಕ ದಿನದ ವಿಶೇಷ -ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಇದ್ದಲ್ಲೆ ಇದ್ದು ಬಿಡಿ. ಜ್ಯೋತಿ ಡಿ.ಬೊಮ್ಮಾ. ಇದ್ದಲ್ಲೆ ಇದ್ದು ಬಿಡಿ. ಇದ್ದಲ್ಲೆ ಇದ್ದು ಬಿಡಿ ನೀವು ಆರಾಮವಾಗಿ ನಿಮ್ಮೂರಿಗೆ ನಿಮ್ಮ ಮನೆಗೆ ಕರೆಸಿಕೊಳ್ಳಲು ಸರ್ಕಾರದ ಬಳಿ ಸೌಲಬ್ಯಗಳಿಲ್ಲ. ವಿದೇಶದಿಂದ ಮರಳುವವರಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯುತ್ತಿರುವವರಿಗೆ ಬಸ್ ,ಏರೋಪ್ಲೇನ್ ಗಳೆಲ್ಲ ಮೀಸಲಾಗಿವೆ. ನೀವು ಇದ್ದಲ್ಲೆ ಇದ್ದುಬಿಡಿ ಕಾರು ಜೀಪುಗಳಿದ್ದವರು ಬರಲಿ ಅವರವರ ಊರಿಗೆ ಚೆಕ್ ಪೋಸ್ಟ್ ನಲ್ಲಿರುವವರಿಗೆ ಚಳ್ಳೆಹಣ್ಣು ತಿನ್ನಿಸಿ ಹೊತ್ತು ಹರಿಯುವ ಮೊದಲು. ನೀವು ಇದ್ದಲ್ಲೆ ಇದ್ದು ಬಿಡಿ ಕೆಲಸವಿಲ್ಲ ,ತಿನ್ನಲು ಆಹಾರವಿಲ್ಲದಿದ್ದರೂ ಹಿಡಿ ಅನ್ನಕೊಟ್ಟು ಕೈತೊಳೆದುಕೊಳ್ಳುವವರ ದೊಡ್ಡಸ್ತಿಕೆಯ ಮುಂದೆ ಹಿಡಿಯಾಗುತ್ತ. ಗೃಹ ಬಂಧನದಲ್ಲಿರುವವರು ಸಂಭ್ರಮಿಸಲಿ ತಮ್ಮ ತಮ್ಮ ಸಂಸಾರದೊಂದಿಗೆ ನೀವು ಇದ್ದಲ್ಲೆ ಇದ್ದು ಬಿಡಿ ಸೂರಿಲ್ಲದೆ ,ಕೂಳಿಲ್ಲದೆ ದಿನಗಳು ದೂಡುತ್ತ. ಪರ್ಪ್ಯೂಮ್ ಹಾಕಿಕೊಂಡು ವಿದೇಶದಿಂದ ಬಂದು ಸೋಂಕು ಹಬ್ಬಿಸುವವರನ್ನು ಬಿಟ್ಟು ಬಿಡಿ ಕಾರ್ಮಿಕರ ಮೇಲೆ ಕ್ರಿಮಿನಾಶಕ ಸಿಂಪಡಿಸಿ ವೈರಾಣುವನ್ನು ಓಡಿಸಿಬಿಡಿ. ತುತ್ತಿನ ಚೀಲ ತುಂಬಿಕೊಳ್ಳಲು ರಾಜ್ಯ ಗಡಿಗಳನ್ನು ದಾಟಿಹೋದ ಕಾರ್ಮಿಕರು ತಮ್ಮವರ ಸೇರಬಯಸಿದ್ದು ತಪ್ಪೆ..! ನೂರು ರಹದಾರಿ ಕಾಲ್ನಡಿಗೆಯಲ್ಲಿ ಕ್ರಮಿಸಿ ಬಸವಳಿಯುತ್ತಿರುವ ನಿಮಗೆ ನಿಮ್ಮ ಗೂಡು ಸೇರಿಸಲಾಗುತ್ತಿಲ್ಲ..ಕ್ಷಮಿಸಿ. ****** (ಕಾಯಕದಲ್ಲಿ ದೇವರನ್ನು ಕಾಣುತ್ತಿರುವ ಶ್ರಮಜೀವಿಗಳಿಗೆಲ್ಲ ಕಾರ್ಮಿಕ ದಿನಾಚರಣೆಯ ಶುಭಾಷಯಗಳು ).

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕದಿನದ ವಿಶೇಷ-ಕವಿತೆ

ಕವಿತೆ ಮೇ ಕವಿತೆ ಲಕ್ಷ್ಮೀ ದೊಡಮನಿ ಮೇ ಕವಿತೆ ನೆನಪಾಗುವಿರಿ ನೀವಿಂದು ಬಂದಿದೆ ಮೇ ಒಂದು ಹೊಗಳುವೆವು ನಾವಿಂದು ಬಂದಿದೆ ಮೇ ಒಂದು ಬಸವರಸರ ತತ್ವದ ತೆರದಿ ಕೈಲಾಸದಲಿ ಇರುವಿರಿ ಬರೆಯಿಸಿಕೊಳ್ಳುವಿರಿ ನೀವಿಂದು ಬಂದಿದೆ ಮೇ ಒಂದು ಕಣ್ಣ ಗಾರೆ,ಬಸವಳಿದ ಮೊಗ,ತನು ಎಲುಬು ಹಂದರ ಅರಿವಿಗೆ ಬರುವಿರಿ ನಮಗಿಂದು ಬಂದಿದೆ ಮೇ ಒಂದು ನಿಮ್ಮನ್ನು ವಿಭಜಿಸಿ ದುಡಿಸಿಕೊಳ್ಳುವ ಧೂರ್ತರಿಂದ ಅಣಗಿಸಿಕೊಳ್ಳುವಿರಿ ನೀವಿಂದುಬಂದಿದೆ ಮೇ ಒಂದು ನಿಮ್ಮಕಾರ್ಯ,ತ್ಯಾಗ,ಬಲಿದಾನಗಳ ಸಂದರ್ಶನ ನಡೆದು ಪ್ರೇರಣೆಯಾಗುವಿರಿ ನಮಗೆಂದು ಬಂದಿದೆ ಮೇ ಒಂದು ಒಂದೇ ದಿನದ ಸ್ಮರಣೆ,ಆಚರಣೆ ಬೇಡ ‘ಚೆಲುವೆ’ ಅವರಂತೆ ಕಾಯಕಯೋಗಿಯಾಗಲಿ ನಾವೆಂದೆಂದು ಬಂದಿದೆ ಮೇ ಒಂದು **********

ಕಾರ್ಮಿಕದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾರ್ಮಿಕರ ದಿನದಂದು ಹಾಲು ಉಕ್ಕಿದ್ದು ಅಂಜನಾ ಹೆಗಡೆ ಕಾರ್ಮಿಕರ ದಿನದಂದು ಹಾಲು ಉಕ್ಕಿದ್ದು ವಾಟ್ಸಾಪ್ ಫೇಸ್ ಬುಕ್ ಗಳಲ್ಲಿ ಕಾರ್ಮಿಕ ದಿನದ ಶುಭಾಶಯ! “ಕಾಯಕವೇ ಕೈಲಾಸ” ನೆನಪಾಗಿ ಮೈ ನಡುಗಿತು ಕೈಲಾಸ ಕೈತಪ್ಪಿದ ನೋವು ಬಾಧಿಸಿ ಬಾತ್ ರೂಮನ್ನಾದರೂ ತೊಳೆಯಲಿಕ್ಕೆಂದು ಟೊಂಕಕಟ್ಟಿ ನಿಂತೆ ಎಲ್ಲ ಬ್ರ್ಯಾಂಡ್ ಗಳ ಕ್ಲೀನರುಗಳ ಒಂದುಗೂಡಿಸಿ ಬ್ರಶ್ ಗಳನ್ನೆಲ್ಲ ಗುಡ್ಡೆ ಹಾಕಿ ತಲೆಗೊಂದು ಷವರ್ ಕ್ಯಾಪ್ ಹಾಕಿ ಸೈನಿಕಳಾದೆ ಹೊಳೆವ ಟೈಲ್ಸು ಕಾಮೋಡುಗಳೆಲ್ಲ ಜೈಕಾರ ಕೂಗಿದಂತಾಗಿ ಒಳಗೊಳಗೇ ಸಂಭ್ರಮಿಸಿದೆ ವಾಷಿಂಗ್ ಮಷಿನ್ನಿನ ಹೊಟ್ಟೆಗಷ್ಟು ಬಟ್ಟೆ ತುರುಕಿ ಮೇಲಷ್ಟು ನೀಲಿಬಣ್ಣದ ಲಿಕ್ವಿಡ್ ಹಾಕಿ ತಿರುಗಲು ಬಿಟ್ಟೆ ಒಲೆಮೇಲಿಟ್ಟ ಹಾಲು ಮರೆತೆ ಮೊಬೈಲ್ ತೆರೆದರೆ ಮತ್ತಷ್ಟು ಸ್ಟೇಟಸ್ ಅಪ್ ಡೇಟ್ ಗಳು; ಕೈಲಾಸದ ಹೊರೆ ಹೊತ್ತವರೆಲ್ಲ ಸೋಷಿಯಲ್ ಆದಂತೆನ್ನಿಸಿ ಪೊರಕೆ ಹಿಡಿದೆ ಕಸ ಗುಡಿಸಿ ನೆಲ ಒರೆಸಿದೆ ದೇವರನ್ನೂ ಬಿಡಲಿಲ್ಲ ಸಿಲ್ವರ್ ಡಿಪ್ ಇದೆಯಲ್ಲ! ಸ್ವರ್ಗ ನರಕದ ಹೊಣೆ ಹೊತ್ತ ದೇವರು ಅಂಗೈ ಮೇಲೆ ಹೊಳೆಯುತ್ತಿದ್ದಾನೆ ಒಲೆಮೇಲೆ ಮರೆತ ಹಾಲು ಉಕ್ಕಿ ಹರಿಯುತ್ತಿದೆ ********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾಯಕದ ದಿನ ನಗರ ಸತ್ತು‌ ಹೋಗಿದೆ ನಾಗರಾಜ ಹರಪನಹಳ್ಳಿ ಕಾಯಕದ ದಿನ ನಗರ ಸತ್ತು‌ ಹೋಗಿದೆ ಕಾಯಕ‌ ಜೀವಿಗಳ ದಿನ ನಗರ ಸತ್ತು‌ ಹೋಗಿದೆ ಬೆವರು ಸುರಿಸಿ‌ ಬದುಕುವ ಜನರ‌ ಹೊರದಬ್ಬಿದೆ ಮಹಲುಗಳ ಕಟ್ಟಿ ಗುಡಿಸಲಲಿ ಬದುಕಿದ ಜನ ಗುಳೆಬಂದ ನಾಡಿಗೆ ಹಸಿವು ಹೊತ್ತು ಮರಳಿದ್ದಾರೆ ಮಡಲಲ್ಲಿ ಕಣ್ಣೀರು ನಿಟ್ಟುಸಿರು ತುಂಬಿಕೊಂಡು ಭೂಮಿ ಬಿಟ್ಟು ಬಂದದ್ದಕ್ಕೆ ಪರಿತಪಿಸಿದ್ದಾರೆ ಈ‌ ಬಿಸಿಲಿಗೂ ಕರುಣೆಯಿಲ್ಲ ಕಾಯಕದ ಮಂತ್ರ ಕೊಟ್ಟ ಬಸವಣ್ಣ, ದುಡಿಮೆಯಲ್ಲಿ ಪಾಲು ಕೇಳಿದ ಕಾರ್ಲಮಾರ್ಕ್ಸ ಮಣ್ಣಲ್ಲಿ ಮಣ್ಣಾಗಿ ಮಲಗಿದ್ದಾರೆ ಸಮಾನತೆ , ಸ್ವಾಭಿಮಾನ ಕಲಿಸಿದ ಕರುಣೆಯ ಬಾಬಾ ಸಾಹೇಬ ಕಲ್ಲಾಗಿದ್ದಾರೆ ಅತ್ತ ಹಳ್ಳಿ ,ಭೂಮಿ ತೊರೆದು ಬಂದವರ ನಗರ ತಳ್ಳಿದ ಕ್ಷಣ ತಲ್ಲಣಗೊಂಡಿದೆ ಒಡಲು ತಾಯಿ‌ನೆಲ ಕಂಗೆಟ್ಟಿದೆ ಹಂಗಿನ‌ ನಗರ ಹೊರತಳ್ಳಿದೆ ಎತ್ತ ಹೋಗಲಿ ಬದುಕೇ ನಡುವಿನ ದಾರಿ ನಿಟ್ಟುಸಿರು‌ ಬಿಟ್ಟಿದೆ ನೆತ್ತಿಯ ಸೂರ್ಯ ಮತ್ತಷ್ಟು ನೆತ್ತಿ‌ಸುಟ್ಟಿದ್ದಾನೆ ಸೋತ ಕಾಲುಗಳು ಹೆಜ್ಜೆ‌ಯಿಡಲು‌ ಸೋಲುತ್ತಿರಲು ಹೊಸ ಆಶಾಕಿರಣ ಮೂಡಿದೆ ಮುಗಿಲಿಗೆ ದಿಗಿಲು ಬಡಿದಂತೆ ಮೋಡಗಳು ದಟ್ಟೈಸಿವೆ ನೆಲ‌ ಹನಿ ಪ್ರೀತಿಗಾಗಿ ಕಾದಿದೆ ಊರ ನೆಲ ತನ್ನ ಜನರ ತಬ್ಬಿಕೊಳ್ಳಲು‌ ಕಾದಿದೆ *********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾರ್ಮಿಕರು ನಾವು ಡಾ.ಪ್ರಸನ್ನ ಹೆಗಡೆ ಕಾರ್ಮಿಕರು ನಾವು ಕಾರ್ಮಿಕರು ನಾವು ಯಂತ್ರದ ವೀಣೆಯ ತಂತಿಯ ಮೀಟುವ ವೈಣಿಕರು ನಾವು ಕಾರ್ಮಿಕರು ನಾವು ಆರ್ಥಿಕ ದೋಣಿಯ ಚಂದದಿ ನಡೆಸುವ ನಾವಿಕರು ನಾವು ಕಾರ್ಮಿಕರು ನಾವು ಒಡೆಯನ ಕನಸಿನ ಬೀಜವ ಬಿತ್ತುವ ಜೀವಿಗಳು ನಾವು ಕಾರ್ಮಿಕರು ನಾವು ಹಗಲಿರುಳೆನ್ನದೆ ನಿಲ್ಲದೆ ನಡೆಯುವ ಕಾಲನ ಕಾಲುಗಳು ನಾವು ಕಾರ್ಮಿಕರು ನಾವು ಮಳೆಬಿಸಿಲೆನ್ನದೆ ಕಾರಣ ಒಡ್ಡದೆ ದುಡಿಯುವ ಜನ ನಾವು ಕಾರ್ಮಿಕರು ನಾವು ಗಣಿಯೊಳಗಿಳಿದು ಕುಲುಮೆಯೊಳ್ಬೆಂದು ಹೊನ್ನಾಗುವ ಜನ ನಾವು ಕಾರ್ಮಿಕರು ನಾವು ಹೊಗೆಯಂಗಳದೊಳಗೆ ಹಗೆಯನು ಎಣಿಸದೆ ಹೂ ನಗೆ ಬೀರುವ ಜನ ನಾವು *********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾವ್ಯಯಾನ

ಸುರಿಮಳೆ ವೀಣಾ ರಮೇಶ್ ಧೋ ಎಂದಿದೆ ನಗುಮಳೆ ಮನಸಿನ ಸುಂದರ ನಗರಿಯಲಿ ನಿನ್ನ ನಸುನಗುವಿನ ಸಿಹಿ ಸಿಂಚನದ ಕಳೆ ಬಿಸಿಯೇರಿದ ವಿರಹದ ಕಾವಿಗೆ ಒಂದಷ್ಟು ತಂಪು ನೀಡಿದೆ,,ಎಡಬಿಡದೆ ಸುರಿವ ನಿನ್ನ ನಗುವಿನ ನರ್ತನದಲಿ ಮನದ ಇಳೆ ನನ್ನ ಮೈ ಮನಗಳು ಒದ್ದೆಯಾಗಿವೆ ತುಸು ಮೆಲ್ಲ ಬೀಸಿದೆ ನೆನಪಿನ ತಂಗಾಳಿ ಕತ್ತಲೆಯ ಮೌನವಷ್ಟೇ ಸೀಳಿದೆ ತಬ್ಬಿ ಈ ಸುಳಿಗಾಳಿ ಮತ್ತದೇ ಸಿಹಿ ಹನಿಗಳು ಆಳಕೆ ಸುರಿದಿದೆ, ನಾ ತೇಲಿ ಹೋಗುವಷ್ಟು ಹರ್ಷ ಧಾರೆಯಲಿ ನೆನೆಯದಂತೆ ಬಚ್ಚಿಟ್ಟು ಕೊಂಡಿರುವೆ ನೆನಪುಗಳು ನನ್ನೊಳಗೆ ತೋಯದಂತೆ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸ್ವರ ಮಾಧುರ್ಯ ಬಿ ಅರುಣ್ ಕುಮಾರ್ ಹೃದಯ ವೀಣೆ ನಾದ ಅಲೆ ಅಲೆಯಾಗಿ ಮನ ಕಡಲಿಗೆ ತಾಕುತಿದೆ ನೋಡು ಒಳಗೆ ಒಮ್ಮೆ ಕಡಲತೀರ ತೆರೆ ತಾಕಲಾಟ ಭಾವಕೋಶ ಪತಂಗದಾಟ ಬಾನುಲಿ ದಿಗಂತ ಮುಟ್ಟಲು ಹಕ್ಕಿಗಳುಲಿಯುತ ಪುಟ ನೆಗೆತ ಪಂಚ ಇಂದ್ರಿಯ ನಿಗ್ರಹಿಸಿ ಒಂದೊಮ್ಮೆ ಕೇಳಿ ನೋಡು ಕರ್ಣಾನಂದ ಉಕ್ಕಿ ಹರಿದು ಆನಂದಬಾಷ್ಪ ಹೊಮ್ಮುವುದು ಒಲವಿನಾಲಿಂಗನ ಮಿಲನ ನಿಸರ್ಗ ಸ್ತನಪಾನ ಚೈತನ್ಯ ಏಳು ಸಾಗರಗಳ ಎಲ್ಲೆ ಮೀರಿ ಕೋಗಿಲೆ ಕಳಕಂಠ ಬೆರೆಸಿದೆ ನಾಕು ತಂತಿಯಲಿ ಹುಟ್ಟಿದ ಸಪ್ತ ಸ್ವರಗಳ ಮಾಧುರ್ಯ ಮಧುರ ರಾಗ ಸಂಭವಿಸಿ ಅಂತರಂಗ ಗಂಗೆ ಹರಿದಿದೆ ಜಗದ ಜಂಜಾಟ ಜರಿದು ಬಾಳಿನ ಸಂಕಟ ಹಿಸುಕಿ ನೋಡು ಒಳಗೆ ಒಮ್ಮೆ ನಾದಮಯ ದೇಹ ದೇಗುಲ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ತೇಜಾವತಿ ಹೆಚ್.ಡಿ. ಮೌನದ ಮಾತು ಅರ್ಥವಾಯಿತು ನಿನ್ನಿಂದ ಕಾಣದ ಕನಸು ಗೋಚರವಾಯಿತು ನಿನ್ನಿಂದ ಹದವಾದ ಭೂಮಿ ಬಂಜರಾಗಿತ್ತು ನೀನಿಲ್ಲದೆ ಉತ್ತುವ ಕಾರ್ಯ ಅರ್ಥವಾಯಿತು ನಿನ್ನಿಂದ ಪ್ರೀತಿ ಹೃದಯದಿಂದ ಒಸರುತ್ತಿತ್ತು ರಸಜೇನಾಗಿ ಸವಿಯ ಸವಿವುದು ಶುರುವಾಯಿತು ನಿನ್ನಿಂದ ನೆರಳೂ ಹಿಂಬಾಲಿಸಲು ಅದುರುತ್ತಿತ್ತು ನನ್ನನ್ನು ಕಣ್ಣಲ್ಲಿ ಬೆಳಕು ಒಮ್ಮೆಲೇ ಪ್ರಜ್ವಲಿಸಿತು ನಿನ್ನಿಂದ ಕಾಯಕ್ಕೂ ಆತ್ಮಕ್ಕೂ ಹೊಂದಿಕೆ ಇರಲಿಲ್ಲ ಎನ್ನಲ್ಲಿ ಮನದೊಳಗೆ ತೇಜಸ್ಸಿರುವುದು ತಿಳಿಯಿತು ನಿನ್ನಿಂದ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನ್ನೂರಿನಲ್ಲಿ ಎಸ್.ಕಲಾಲ್ ನೀ ಬರಲೆಂದೆ ಮರುಭೂಮಿ ಹಸಿರಾಗಿದೆ ನನ್ನೂರಿನಲ್ಲಿ.. ನೀ ನೋಡಲೆಂದೆ ಕಲ್ಲು-ಕಗ್ಗಲ್ಲು ಶಿಲೆಯಾಗಿದೆ ನನ್ನೂರಿನಲ್ಲಿ. ಪಾಳು ಮಸಣದ ಮಲ್ಲಿಗೆಯರಳಿ ಪಾವನವಾಗಿದೆ ನಿನ್ನ ಮುಡಿ ಸೇರಲೆಂದೆ ನನ್ನೂರಿನಲ್ಲಿ.. ಇತಿಹಾಸದ ರಾಜ-ಮಹಾರಾಜರು ಮೆರೆದ ನೆಲ ನಿನ್ನ ಹೆಜ್ಜೆಗೆ ಕಾಯುತ್ತಿದೆ ನನ್ನೂರಿನಲ್ಲಿ.. ಆ ಆಗಸದ ಚಂದಿರನನ್ನು ಗಲ್ಲಿಗೆರಿಸಿದ್ದೇನೆ ನಿನ್ನ ಕದಿಯದಿರಲೆಂದು ನನ್ನೂರಿನಲ್ಲಿ.. ನನ್ನ ಸಾವಿರ ಕನಸಿನ ಹೆಬ್ಬಾಗಿಲು ನೆಟ್ಟಿದ್ದೇನೆ ಬಲಗಾಲಿಟ್ಟು ಬಂದುಬಿಡು ನನ್ನೂರಿನಲ್ಲಿ.. ನೀ ಬರುವ ಹಾದಿಯ ಕಾದು ಕಾದು ಬೀದಿಯಲ್ಲಿ ಹೆಣವಾಗಿವೆ ಮೈಲುಗಲ್ಲುಗಳು ನನ್ನೂರಿನಲ್ಲಿ.. ನಿನ್ನ ಗೆಜ್ಜೆಯ ನಾದವ ಕೇಳಲು ಸಿಟ್ಟಾಗಿ ಮಳೆಯೆ ಸುರಿಸಿಲ್ಲ ಮೋಡ ನನ್ನೂರಿನಲ್ಲಿ.. ಶತ-ಶತಮಾನದ ಶಾಸನ ತಾಮ್ರಪಟಗಳು ಕೂಗುತ್ತಿವೆ ನಿನ್ನ ಹೆಸರು ನನ್ನೂರಿನಲ್ಲಿ.. ತಾಯಿಯಿಲ್ಲದ ಕಂದಮ್ಮಗಳು ಹಸಿದಿವೆಯಂತೆ ನಿನ್ನ ಕೈ ತುತ್ತಿಗೆ ನನ್ನೂರಿನಲ್ಲಿ.. ಮತ್ತೆ ಮರಳಿ ಮರುಗಿ ನಾ ಸಾಯಲಾರೆ ನನಗಾಗಿ ಅಳುವವರಿಲ್ಲ ನನ್ನೂರಿನಲ್ಲಿ.. ಮುರಿದ ಜೋಪಡಿಯ ಜಗುಲಿಯಲಿ ಒಲವಿನ ದೇವತೆಯಾಗಿ ನಿಲ್ಲು ನನ್ನೂರಿನಲ್ಲಿ.. **********

ಕಾವ್ಯಯಾನ Read Post »

You cannot copy content of this page

Scroll to Top