ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಗಝಲ್ ಪ್ರತಿಮಾ ಕೋಮಾರ ಗಜಲ್ ಕರವೆರಡು ಕೊರಡಾದರೂ ಸೋಲುವುದಿಲ್ಲ  ಅವನು ಉಳಿ ಮೇಲೆ ಉಳಿ ಬಿದ್ದರೂ ಎದೆಗುಂದುವುದಿಲ್ಲ ಅವನು ಕತ್ತಲೇ ಮನೆಯಾದರೂ ಕೊರಗುವುದಿಲ್ಲ ಅವನು ಎಲ್ಲರಿಗೂ ಬೆಳಕನ್ನೇ ಹಂಚಿದರೂ ಬೀಗುವುದಿಲ್ಲ ಅವನು ಒಡಲಾಳದಲ್ಲಿ ಹರಿದರೂ ಲಾವಾ, ಹೇಳಿಕೊಳ್ಳುವುದಿಲ್ಲ ಅವನು ಉಳ್ಳವರು ತುಳಿಯುತ್ತಲಿದ್ದರೂ ಚಕಾರವೆತ್ತುವುದಿಲ್ಲ ಅವನು ಮಳೆ,ಬಿಸಿಲು ,ಚಳಿ ಏನೇ ಇದ್ದರೂ ಅಳುಕುವುದಿಲ್ಲ  ಅವನು ಕಾಯಕದಲ್ಲಿ ಮೇಲು ಕೀಳೆಂಬ ಭಾವ ತೋರುವುದಿಲ್ಲ ಅವನು ಆಲಸ್ಯದಿ ದುಡಿಯದೇ ಕುಳಿತು ಉಣ್ಣುವುದಿಲ್ಲ ಅವನು ಕಾಯಕವೇ ಕೈಲಾಸ ಎಂಬ ತತ್ವ ಮರೆಯುವುದಿಲ್ಲ ಅವನು ( ಶ್ರಮಿಕರಿಗೆ ನಮನ , ಮೇ ಕಾಮಿ೯ಕರ ದಿನ )

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ನಾವು ಮತ್ತು ಅವರು ಶೋಭಾ ನಾಯ್ಕ. ಹಿರೇಕೈಕಂಡ್ರಾಜಿ. ನಾವು ಮತ್ತು ಅವರು ಇಲಿ ಕೊರೆದ ಮನೆ ಗೋಡೆಗೆ ಮಣ್ಣ ಮೆತ್ತಿಯೇ ಬಂದಿದ್ದಾರಿಲ್ಲಿ ಮಹಡಿ ಮನೆಗೆರಡು ಕಂಬ ಎಬ್ಬಿಸಲು ಅವರ ಮೈ ಬೆವರಿಗಷ್ಟು ಕೂಡಿಸಿ, ಕಳೆದು ಲೆಕ್ಕಹಾಕಿ ಕೂಲಿ ಕೊಡುವ ನಾವುಗಳು ನಮ್ಮ ಮೈ ಬೆವರನ್ನು ಹೇಳಿದಷ್ಟು ಕಟ್ಟಿ ಇಳಿಸಿ ಬರುತ್ತೇವೆ. ಸಂಜೆ ಮೀನು ಮತ್ತು ಮಾರುದ್ದ ಜಡೆಯ ಮಗಳಿಗೆರಡು ರಿಬ್ಬನ್ನು ಒಯ್ಯುವಾಗ ನಗುತ್ತವೆ ಅವರ ಕೈಯಲ್ಲಿ ನಾವೇ ಕೊಟ್ಟ ನೋಟುಗಳು ಇಲ್ಲಿನ ಬರಕತ್ತಿನ ಬದುಕ ಕಂಡು ಕೊನೆಗೂ ಕಂಡದ್ದೇನು ಇಲ್ಲಿ? ಮುಚ್ಚಿದ ಬಾಗಿಲ ಒಳಗಡೆ ಕೋರೈಸುವ ಗ್ಲಾಸು, ಹೊಳೆಯುವ ಟೆರೇಸು ಬಿಟ್ಟರೆ, ಹಸಿರ ಕೊಂದು ಜಾರುವ ನೆಲ ಹಾಸು ದುಡಿದು ರಾತ್ರಿ ಮನೆ ಸೇರಿದ ಅವರೋ.. ಜೋಗುಳ ಕೇಳಿಸಿಕೊಂಡಂತೆ ನಿದ್ದೆ ಹೋಗುತ್ತಾರೆ ಜೋಪಡಿಯಲ್ಲಿ ನಾವೋ… ದಿಂಬಿನ ಜೊತೆಗೆ, ನಿದ್ದೆಯನ್ನೂ ಮಾರುವವರಿಗಾಗಿ ಬರ ಕಾಯುತ್ತಿದ್ದೇವೆ ಇಲ್ಲಿ ಈ ಮಹಡಿ ಮನೆಯಲ್ಲಿ. *******

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ನಾವು ಕಾರ್ಮಿಕರು ಸಾಯಬಣ್ಣ ಮಾದರ ನಾವು ಕಾರ್ಮಿಕರು ನಮ್ಮಗರಿವಿಲ್ಲದೆ ಹಗಲು ಇರುಳು ಚಲಿಸುತ್ತಿವೆ ಕಷ್ಟಕಾರ್ಪಣ್ಯಕೆ ಬರವಿಲ್ಲದೆ ಚಲಿಸುತ್ತಿದೆ ಜೀವ ಮುಸುಕು ಹೊದ್ದು ಹಸುರನುಟ್ಟು ನಾಳೆ ಎಂಬುವುದು ಭಯವಿಲ್ಲದೆ! ತಲೆಯೊಡೆದು ಬದಕುವವರು ನಾವಲ್ಲ ಬರಿ ದುಡಿದು ತಿನ್ನುವರು ನಾವೆಲ್ಲ ! ನಿಮ್ಮ ಗೋಪುರ ಮೀನಾರಗಳಿಗೆ ನಮ್ಮ ಎಲುಬುಗಳೆ ಹಂದರವಾಗಿ ನಿಮ್ಮ ತೆವಳುವ ಕನಸುಗಳಿಗೆ ನಮ್ಮ ಸ್ವಪ್ನದೆಲೆಗಳಾಗಿ ಚಲಿಸುತ್ತಿದ್ದೇವೆ ಮಾಸಿದ ಬಣ್ಣ ಬಳಿದುಕೊಂಡು ನಿಮ್ಮ ಭಾಷೆ-ಭಾವಗಳು ನುಂಗಿ ಹಾಕಿವೆ ಎಷ್ಟೊಂದು ಜೀವಗಳು ಉಸಿರಿನ ಸಮಾಧಿಗಳ ಮೇಲೆ ಆಕಾಶದಲ್ಲಿ ಹಾರಾಡಿ ನೀರಿನಲ್ಲಿ ತೇಲಾಡಿ ಭೂಮಿಯಲ್ಲಿ ಹುಂಕರಿಸುವವರೆ ಕಣ ಕಣದ ಕೆಂಬಣ್ಣ ಸುರಿಸಿ ದೇಶ ಕಟ್ಟಲು ಜೀವ ತೆತ್ತವರು ನಾವು ! ಚಿಗುರಿದ ಹೂವ ಮಾಲೆ ಮಾಡಿಕೊಂಡವರು ನೀವು! ಮಲಹೊತ್ತು ಚಪ್ಲಿ ಹೊಲೆದು ಚರಂಡಿ ಬಳಿದು ರೋಡಿಗೆ ಟಾರು ಹೊತ್ತವರು ನಿಮ್ಮ ಶವಕ್ಕೆ ಮುಕ್ತಿದಾತರು ನಾವು ! ಬರಿ ಸ್ವಚ್ಛ ಭಾರತ ವಾರಸದಾರರು ನೀವು ಮಳೆ ಬಿಸಿಲಿಗೆ ಮೈಯೊಡ್ಡಿ ದಬ್ಬಾಳಿಕೆ ಅವಮಾನಕ್ಕೆ ಕಲ್ಲಾಗಿ ದುಡುಮೆಯೇ ದೇವರೆಂದು ಹೊಟ್ಟೆ ತುಂಬುವ ಕನಸಿಗಾಗಿ ಕಲ್ಲಿಗು ಕಣ್ಣೀರಾದ ಬದಕು ನಮ್ಮದು ಬೆನ್ನು ಬಾಗಿಸಿ ಕಣ್ಣು ಪಿಳುಕಿಸಿ ಚರ್ಮ ಸುಟ್ಟು ನೆರಿಗೆ ಬಿದ್ದವರು ಆಸೆಗೋಪುರ ಕಳಚಿ ಆಕಾಶವೆ ಚಪ್ಪರ ಹೊದ್ದು ಭೂಮಿಯೇ ಹಾಸಿಗೆ ಮಾಡಿಕೊಂಡು ಬದುಕುವ ನಮ್ಮ ಬಾಳೆ ಬೆಂಗಾಡು ನಾವು ಇರದಿದ್ದರೆ ನಿಮ್ಮ ಬಾಳು ಬರಿ ಗೋಳು !! ******

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾರ್ಮಿಕರ ಕೂಗು ಈರಪ್ಪ ಬಿಜಲಿ ಕಾರ್ಮಿಕರ ಕೂಗು” ಚೋಟುದ್ದದ ಹೊಟ್ಟೆಚೀಲವ ತುಂಬಿಸಲು ಮನುಜ ಮಾಡುವನು ಕೂಲಿ ಕೆಲಸಗಳನು ಕಟ್ಟಡ,ಬಡಗಿತನ,ವೆಲ್ಡಿಂಗ್ ,ಪೈಪ್ಲೈನಗಳು ಪೇಂಟರ್,ಪೌರ,ಸಿಂಪಿಗಕಮ್ಮಾರಿಕೆ,ಅನೇಕ ಕರ್ಮಗಳು।।1।। ನಮ್ಮಿ ಕಾರ್ಮಿಕರಿಗಿಲ್ಲ ಜೀವನದ ಭದ್ರೆತೆ ಅವರ ಜೀವನವಿರುವುದು ಬಲು ವಿಭಿನ್ನತೆ ಬಂಡ್ವಾಳಷಾಹಿ,ಕಾರ್ಮಿಕರಲ್ಲಿನ ತಾರತಮ್ಯತೆ ದೂರಾಗಿ ಮೂಡಿಬರಲಿ ಎರಡೂಗುಂಪಲಿ ಸರಿಸಮಾತೆ।।2।। ಕಾರ್ಮಿಕರ ಕೂಗು ನೊಂದ ಮನಗಳ ಕೂಗು ಕೇಳುತ ಧನಿಕರು ಹಿಗ್ಗಿಸುವರು ತಮ್ಮಯ ಮೂಗು ಹೃದಯಸಿರಿವಂತಿಕೆಲಿ ಕಾರ್ಮಿಕರ ಮನಸ್ಸದು ಮಗು ವೇತನದ ದಿನದಂದು ಇವರ ಮುಖದಲಿ ಕಿಲಕಿಲ ನಗು।।3।। ಜೀವದ ಅಂಗುತೊರೆದು ಅವಿರತ ದುಡಿವವರು ನಿರ್ಭಯವಾಗಿ ಬಹುಅಂತಸ್ತಿನ ಕಟ್ಟಡಗಳ ಕಟ್ಟುವವರು। ನಗರದ ಕಾರ್ಮಿಕರ ಮಕ್ಕಳಿಗೆ ವಿದ್ಯೆಯಕೊರತೆ ಕಾರ್ಮಿಕರಿಗೆ ಶಾಶ್ವತವಾದ ಆಶ್ರಯಸ್ಥಳಗಳ ಕೊರತೆ ।।4। ಕೂಲಿಗಾಗಿ ವಲಸೆ ಹೋಗುವ ಕಾರ್ಮಿಕರು ಕೆಲಸದ ಮೇಲೆ ದುರ್ಘಟನೆಗೆ ತುತ್ತಾಗಿ ಬಲಿಯಾಗುವರು ಬಲಿಯಾಗುವ ಕುಟುಂಬಗಳಿಗೆ ದೊರಕಲಿ ಉತ್ತಮ ಪರಿಹಾರ ಧನಿಕರ ಮೂಲಕ ದೊರಕಿಸಲಿ ನಮ್ಮಿಘನ ಸರ್ಕಾರ।।5।। ***** ಕಟ್ಟಡ ಕೆಲಸಗಳ ಮಾಡುವ ನಮ್ಮೀ ಕಾರ್ಮಿಕರು ನವ ನಗರಗಳ ನಿರ್ಮಿಸುವ ಹೆಮ್ಮೆಯ ನಿರ್ಮಾಪಕರು। ಆಲಿಸಲಿ ಕಾರ್ಮಿಕರ ಕೂಗನು ಮಾಲೀಕರು ಹೃದಯವಂತಿಕೆಯನು ಮೆರೆವಂತಾಗಲಿ ಸಿರಿವಂತರು ।।6।।

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ -ಕವಿತೆ

ಕವಿತೆ ಬಿಸಿಲ ಹೂಗಳ ಬದುಕು ಲಕ್ಷ್ಮಿ ಪಾಟೀಲ್ ಬಿಸಿಲ ಹೂಗಳ ಬದುಕು ನನಗೆ ನೆರಳಿಗಿಂತಲೂ ಬಿಸಿಲೇ ಇಷ್ಟ ಒಳಗಿನ ಬೆಂಕಿ ಹೊರಗೆ ನೀರಾಗಿ ಹರಿಯುವ ವಿಸ್ಮಯಕ್ಕೆ ಕಾವುಗಳನ್ನೆಲ್ಲ ಕರಗಿಸಿ ನೀರಾಗುವುದನ್ನು ಕಲಿಸುತ್ತವಲ್ಲ ಅದೆಷ್ಟು ಸಲೀಸು… ಬಿಸಿಲನ್ನು ಹಾಸಿ ಹೊದೆದು, ಶ್ರಮದಲ್ಲಿ ಬೆವರಿಳಿಸಿ ಬಿಸಿಲ ಹಾಡುಗಳನ್ನು ಕಟ್ಟಿ ಜೀವನೋತ್ಸಾಹ ಹೇರಿಕೊಂಡು ಹೊರಟವರನ್ನು ಕಂಡು ನಾನೀಗ ದುಃಖಿಸುವುದಿಲ್ಲ ಭಾವಕೋಶಗಳನು ಅರಳಿಸಿ ಬಿಡುವ ಬಾಡದ ಹೂವಾಗಿ ಉಳಿದು ಬಿಡುವ ಬದುಕಿನರ್ಥಗಳನ್ನು ಹಿಗ್ಗಿಸುವ ಇವರನ್ನು ಕಂಡು ಹಿಗ್ಗುತ್ತೇನೆ ಬೆವೆರಿಳಿಸುವ ಕಸಬಿಗೆ ಜೀವ ತುಂಬುತ್ತೇನೆ… ತಮ್ಮಷ್ಟಕ್ಕೆ ತಾವು ತಣ್ಣಗೆ ಬದುಕುವ ಇವರು ಥೇಟ್ ಮಣ್ಣಿನ ಬಣ್ಣದವರು ನೋವುಗಳನ್ನೆಲ್ಲ ಧಗೆಯಲ್ಲಿ ಆವಿಯಾಗಿಸಲು ಅವರು ಬಿಸಿಲ್ಲನ್ನೇ ಪ್ರೀತಿಸುವರು ಉಪ್ಪು ನೀರಿನ ಕಡಲಾಗುವರು ಬೆವರುಬಸಿದು, ತಮ್ಮ ದಣಿವಿಗೆ ತಮ್ಮ ಸೋಲಿಗೆ ತಮ್ಮ ಉಪವಾಸಗಳಿಗೆ ತಣಿಸುವ ಪಾಠ ಕಲಿತುಕೊಂಡವರು… ಅನ್ಯರ ಹೊರೆ ಹೊತ್ತು ಭಾರವೆಂದು ನರಳದವರು ಹಡಗು ಕಟ್ಟಿಕೊಂಡು ಹಾಯಾಗಿರುವವರಿಗೆ ನಿತ್ಯ ತುತ್ತಾಗುವವರು ಈ ಪೊರೆವ ಜನಗಳೇ ಭೂಮಿಯ ತುಂಬಾ ಬಿಸಿಲ ಹೂವಾಗಿ ಅರಳಿ ನಿಲ್ಲುವರು….. ಇವರ ವಡಲ ವಡಬಾಗ್ನಿಯಲ್ಲಿ ತಮ್ಮ ಹಡಗು ತೇಲಿಸಿಕೊಂಡು ಅವರಲ್ಲಿ ಹಾಯಾಗಿ ಬದುಕುವರು ನೆರಳನ್ನೇ ಪ್ರೀತಿಸುವರು ನೆರಳಾದವರನ್ನು ಮರೆಯುವರು…. ಪಾಪಕ್ಕೆ ಪಕ್ಕಾಗಿ ಬಿಸಿಲಿಗೆ ಬಿದ್ದರೆ ಸತ್ತೇ ಹೋಗುವರು… ಅರಳದೆ ಅರಳಿಸದೆ ಮಣ್ಣಿನಲ್ಲಿ ಮಣ್ಣಾಗದೆ ಚಿತಾಗಾರದಲ್ಲಿ ಬೂದಿಯಾಗುತ್ತವೆ ಈ ಶವಗಳು ಹುಡುಕಿದರಲ್ಲಿಲ್ಲ ಜೀವಾಮೃತದ ಕಣಗಳು, ಬಿಸಿಲ ಹೂಗಳ ತಳಕೆ ಗೊಬ್ಬರವೆಂದು ಚೆಲ್ಲಲು…. *********

ಕಾರ್ಮಿಕ ದಿನದ ವಿಶೇಷ -ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಇದ್ದಲ್ಲೆ ಇದ್ದು ಬಿಡಿ. ಜ್ಯೋತಿ ಡಿ.ಬೊಮ್ಮಾ. ಇದ್ದಲ್ಲೆ ಇದ್ದು ಬಿಡಿ. ಇದ್ದಲ್ಲೆ ಇದ್ದು ಬಿಡಿ ನೀವು ಆರಾಮವಾಗಿ ನಿಮ್ಮೂರಿಗೆ ನಿಮ್ಮ ಮನೆಗೆ ಕರೆಸಿಕೊಳ್ಳಲು ಸರ್ಕಾರದ ಬಳಿ ಸೌಲಬ್ಯಗಳಿಲ್ಲ. ವಿದೇಶದಿಂದ ಮರಳುವವರಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯುತ್ತಿರುವವರಿಗೆ ಬಸ್ ,ಏರೋಪ್ಲೇನ್ ಗಳೆಲ್ಲ ಮೀಸಲಾಗಿವೆ. ನೀವು ಇದ್ದಲ್ಲೆ ಇದ್ದುಬಿಡಿ ಕಾರು ಜೀಪುಗಳಿದ್ದವರು ಬರಲಿ ಅವರವರ ಊರಿಗೆ ಚೆಕ್ ಪೋಸ್ಟ್ ನಲ್ಲಿರುವವರಿಗೆ ಚಳ್ಳೆಹಣ್ಣು ತಿನ್ನಿಸಿ ಹೊತ್ತು ಹರಿಯುವ ಮೊದಲು. ನೀವು ಇದ್ದಲ್ಲೆ ಇದ್ದು ಬಿಡಿ ಕೆಲಸವಿಲ್ಲ ,ತಿನ್ನಲು ಆಹಾರವಿಲ್ಲದಿದ್ದರೂ ಹಿಡಿ ಅನ್ನಕೊಟ್ಟು ಕೈತೊಳೆದುಕೊಳ್ಳುವವರ ದೊಡ್ಡಸ್ತಿಕೆಯ ಮುಂದೆ ಹಿಡಿಯಾಗುತ್ತ. ಗೃಹ ಬಂಧನದಲ್ಲಿರುವವರು ಸಂಭ್ರಮಿಸಲಿ ತಮ್ಮ ತಮ್ಮ ಸಂಸಾರದೊಂದಿಗೆ ನೀವು ಇದ್ದಲ್ಲೆ ಇದ್ದು ಬಿಡಿ ಸೂರಿಲ್ಲದೆ ,ಕೂಳಿಲ್ಲದೆ ದಿನಗಳು ದೂಡುತ್ತ. ಪರ್ಪ್ಯೂಮ್ ಹಾಕಿಕೊಂಡು ವಿದೇಶದಿಂದ ಬಂದು ಸೋಂಕು ಹಬ್ಬಿಸುವವರನ್ನು ಬಿಟ್ಟು ಬಿಡಿ ಕಾರ್ಮಿಕರ ಮೇಲೆ ಕ್ರಿಮಿನಾಶಕ ಸಿಂಪಡಿಸಿ ವೈರಾಣುವನ್ನು ಓಡಿಸಿಬಿಡಿ. ತುತ್ತಿನ ಚೀಲ ತುಂಬಿಕೊಳ್ಳಲು ರಾಜ್ಯ ಗಡಿಗಳನ್ನು ದಾಟಿಹೋದ ಕಾರ್ಮಿಕರು ತಮ್ಮವರ ಸೇರಬಯಸಿದ್ದು ತಪ್ಪೆ..! ನೂರು ರಹದಾರಿ ಕಾಲ್ನಡಿಗೆಯಲ್ಲಿ ಕ್ರಮಿಸಿ ಬಸವಳಿಯುತ್ತಿರುವ ನಿಮಗೆ ನಿಮ್ಮ ಗೂಡು ಸೇರಿಸಲಾಗುತ್ತಿಲ್ಲ..ಕ್ಷಮಿಸಿ. ****** (ಕಾಯಕದಲ್ಲಿ ದೇವರನ್ನು ಕಾಣುತ್ತಿರುವ ಶ್ರಮಜೀವಿಗಳಿಗೆಲ್ಲ ಕಾರ್ಮಿಕ ದಿನಾಚರಣೆಯ ಶುಭಾಷಯಗಳು ).

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕದಿನದ ವಿಶೇಷ-ಕವಿತೆ

ಕವಿತೆ ಮೇ ಕವಿತೆ ಲಕ್ಷ್ಮೀ ದೊಡಮನಿ ಮೇ ಕವಿತೆ ನೆನಪಾಗುವಿರಿ ನೀವಿಂದು ಬಂದಿದೆ ಮೇ ಒಂದು ಹೊಗಳುವೆವು ನಾವಿಂದು ಬಂದಿದೆ ಮೇ ಒಂದು ಬಸವರಸರ ತತ್ವದ ತೆರದಿ ಕೈಲಾಸದಲಿ ಇರುವಿರಿ ಬರೆಯಿಸಿಕೊಳ್ಳುವಿರಿ ನೀವಿಂದು ಬಂದಿದೆ ಮೇ ಒಂದು ಕಣ್ಣ ಗಾರೆ,ಬಸವಳಿದ ಮೊಗ,ತನು ಎಲುಬು ಹಂದರ ಅರಿವಿಗೆ ಬರುವಿರಿ ನಮಗಿಂದು ಬಂದಿದೆ ಮೇ ಒಂದು ನಿಮ್ಮನ್ನು ವಿಭಜಿಸಿ ದುಡಿಸಿಕೊಳ್ಳುವ ಧೂರ್ತರಿಂದ ಅಣಗಿಸಿಕೊಳ್ಳುವಿರಿ ನೀವಿಂದುಬಂದಿದೆ ಮೇ ಒಂದು ನಿಮ್ಮಕಾರ್ಯ,ತ್ಯಾಗ,ಬಲಿದಾನಗಳ ಸಂದರ್ಶನ ನಡೆದು ಪ್ರೇರಣೆಯಾಗುವಿರಿ ನಮಗೆಂದು ಬಂದಿದೆ ಮೇ ಒಂದು ಒಂದೇ ದಿನದ ಸ್ಮರಣೆ,ಆಚರಣೆ ಬೇಡ ‘ಚೆಲುವೆ’ ಅವರಂತೆ ಕಾಯಕಯೋಗಿಯಾಗಲಿ ನಾವೆಂದೆಂದು ಬಂದಿದೆ ಮೇ ಒಂದು **********

ಕಾರ್ಮಿಕದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾರ್ಮಿಕರ ದಿನದಂದು ಹಾಲು ಉಕ್ಕಿದ್ದು ಅಂಜನಾ ಹೆಗಡೆ ಕಾರ್ಮಿಕರ ದಿನದಂದು ಹಾಲು ಉಕ್ಕಿದ್ದು ವಾಟ್ಸಾಪ್ ಫೇಸ್ ಬುಕ್ ಗಳಲ್ಲಿ ಕಾರ್ಮಿಕ ದಿನದ ಶುಭಾಶಯ! “ಕಾಯಕವೇ ಕೈಲಾಸ” ನೆನಪಾಗಿ ಮೈ ನಡುಗಿತು ಕೈಲಾಸ ಕೈತಪ್ಪಿದ ನೋವು ಬಾಧಿಸಿ ಬಾತ್ ರೂಮನ್ನಾದರೂ ತೊಳೆಯಲಿಕ್ಕೆಂದು ಟೊಂಕಕಟ್ಟಿ ನಿಂತೆ ಎಲ್ಲ ಬ್ರ್ಯಾಂಡ್ ಗಳ ಕ್ಲೀನರುಗಳ ಒಂದುಗೂಡಿಸಿ ಬ್ರಶ್ ಗಳನ್ನೆಲ್ಲ ಗುಡ್ಡೆ ಹಾಕಿ ತಲೆಗೊಂದು ಷವರ್ ಕ್ಯಾಪ್ ಹಾಕಿ ಸೈನಿಕಳಾದೆ ಹೊಳೆವ ಟೈಲ್ಸು ಕಾಮೋಡುಗಳೆಲ್ಲ ಜೈಕಾರ ಕೂಗಿದಂತಾಗಿ ಒಳಗೊಳಗೇ ಸಂಭ್ರಮಿಸಿದೆ ವಾಷಿಂಗ್ ಮಷಿನ್ನಿನ ಹೊಟ್ಟೆಗಷ್ಟು ಬಟ್ಟೆ ತುರುಕಿ ಮೇಲಷ್ಟು ನೀಲಿಬಣ್ಣದ ಲಿಕ್ವಿಡ್ ಹಾಕಿ ತಿರುಗಲು ಬಿಟ್ಟೆ ಒಲೆಮೇಲಿಟ್ಟ ಹಾಲು ಮರೆತೆ ಮೊಬೈಲ್ ತೆರೆದರೆ ಮತ್ತಷ್ಟು ಸ್ಟೇಟಸ್ ಅಪ್ ಡೇಟ್ ಗಳು; ಕೈಲಾಸದ ಹೊರೆ ಹೊತ್ತವರೆಲ್ಲ ಸೋಷಿಯಲ್ ಆದಂತೆನ್ನಿಸಿ ಪೊರಕೆ ಹಿಡಿದೆ ಕಸ ಗುಡಿಸಿ ನೆಲ ಒರೆಸಿದೆ ದೇವರನ್ನೂ ಬಿಡಲಿಲ್ಲ ಸಿಲ್ವರ್ ಡಿಪ್ ಇದೆಯಲ್ಲ! ಸ್ವರ್ಗ ನರಕದ ಹೊಣೆ ಹೊತ್ತ ದೇವರು ಅಂಗೈ ಮೇಲೆ ಹೊಳೆಯುತ್ತಿದ್ದಾನೆ ಒಲೆಮೇಲೆ ಮರೆತ ಹಾಲು ಉಕ್ಕಿ ಹರಿಯುತ್ತಿದೆ ********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾಯಕದ ದಿನ ನಗರ ಸತ್ತು‌ ಹೋಗಿದೆ ನಾಗರಾಜ ಹರಪನಹಳ್ಳಿ ಕಾಯಕದ ದಿನ ನಗರ ಸತ್ತು‌ ಹೋಗಿದೆ ಕಾಯಕ‌ ಜೀವಿಗಳ ದಿನ ನಗರ ಸತ್ತು‌ ಹೋಗಿದೆ ಬೆವರು ಸುರಿಸಿ‌ ಬದುಕುವ ಜನರ‌ ಹೊರದಬ್ಬಿದೆ ಮಹಲುಗಳ ಕಟ್ಟಿ ಗುಡಿಸಲಲಿ ಬದುಕಿದ ಜನ ಗುಳೆಬಂದ ನಾಡಿಗೆ ಹಸಿವು ಹೊತ್ತು ಮರಳಿದ್ದಾರೆ ಮಡಲಲ್ಲಿ ಕಣ್ಣೀರು ನಿಟ್ಟುಸಿರು ತುಂಬಿಕೊಂಡು ಭೂಮಿ ಬಿಟ್ಟು ಬಂದದ್ದಕ್ಕೆ ಪರಿತಪಿಸಿದ್ದಾರೆ ಈ‌ ಬಿಸಿಲಿಗೂ ಕರುಣೆಯಿಲ್ಲ ಕಾಯಕದ ಮಂತ್ರ ಕೊಟ್ಟ ಬಸವಣ್ಣ, ದುಡಿಮೆಯಲ್ಲಿ ಪಾಲು ಕೇಳಿದ ಕಾರ್ಲಮಾರ್ಕ್ಸ ಮಣ್ಣಲ್ಲಿ ಮಣ್ಣಾಗಿ ಮಲಗಿದ್ದಾರೆ ಸಮಾನತೆ , ಸ್ವಾಭಿಮಾನ ಕಲಿಸಿದ ಕರುಣೆಯ ಬಾಬಾ ಸಾಹೇಬ ಕಲ್ಲಾಗಿದ್ದಾರೆ ಅತ್ತ ಹಳ್ಳಿ ,ಭೂಮಿ ತೊರೆದು ಬಂದವರ ನಗರ ತಳ್ಳಿದ ಕ್ಷಣ ತಲ್ಲಣಗೊಂಡಿದೆ ಒಡಲು ತಾಯಿ‌ನೆಲ ಕಂಗೆಟ್ಟಿದೆ ಹಂಗಿನ‌ ನಗರ ಹೊರತಳ್ಳಿದೆ ಎತ್ತ ಹೋಗಲಿ ಬದುಕೇ ನಡುವಿನ ದಾರಿ ನಿಟ್ಟುಸಿರು‌ ಬಿಟ್ಟಿದೆ ನೆತ್ತಿಯ ಸೂರ್ಯ ಮತ್ತಷ್ಟು ನೆತ್ತಿ‌ಸುಟ್ಟಿದ್ದಾನೆ ಸೋತ ಕಾಲುಗಳು ಹೆಜ್ಜೆ‌ಯಿಡಲು‌ ಸೋಲುತ್ತಿರಲು ಹೊಸ ಆಶಾಕಿರಣ ಮೂಡಿದೆ ಮುಗಿಲಿಗೆ ದಿಗಿಲು ಬಡಿದಂತೆ ಮೋಡಗಳು ದಟ್ಟೈಸಿವೆ ನೆಲ‌ ಹನಿ ಪ್ರೀತಿಗಾಗಿ ಕಾದಿದೆ ಊರ ನೆಲ ತನ್ನ ಜನರ ತಬ್ಬಿಕೊಳ್ಳಲು‌ ಕಾದಿದೆ *********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾರ್ಮಿಕರು ನಾವು ಡಾ.ಪ್ರಸನ್ನ ಹೆಗಡೆ ಕಾರ್ಮಿಕರು ನಾವು ಕಾರ್ಮಿಕರು ನಾವು ಯಂತ್ರದ ವೀಣೆಯ ತಂತಿಯ ಮೀಟುವ ವೈಣಿಕರು ನಾವು ಕಾರ್ಮಿಕರು ನಾವು ಆರ್ಥಿಕ ದೋಣಿಯ ಚಂದದಿ ನಡೆಸುವ ನಾವಿಕರು ನಾವು ಕಾರ್ಮಿಕರು ನಾವು ಒಡೆಯನ ಕನಸಿನ ಬೀಜವ ಬಿತ್ತುವ ಜೀವಿಗಳು ನಾವು ಕಾರ್ಮಿಕರು ನಾವು ಹಗಲಿರುಳೆನ್ನದೆ ನಿಲ್ಲದೆ ನಡೆಯುವ ಕಾಲನ ಕಾಲುಗಳು ನಾವು ಕಾರ್ಮಿಕರು ನಾವು ಮಳೆಬಿಸಿಲೆನ್ನದೆ ಕಾರಣ ಒಡ್ಡದೆ ದುಡಿಯುವ ಜನ ನಾವು ಕಾರ್ಮಿಕರು ನಾವು ಗಣಿಯೊಳಗಿಳಿದು ಕುಲುಮೆಯೊಳ್ಬೆಂದು ಹೊನ್ನಾಗುವ ಜನ ನಾವು ಕಾರ್ಮಿಕರು ನಾವು ಹೊಗೆಯಂಗಳದೊಳಗೆ ಹಗೆಯನು ಎಣಿಸದೆ ಹೂ ನಗೆ ಬೀರುವ ಜನ ನಾವು *********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

You cannot copy content of this page

Scroll to Top