ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ಹೊರಟು ನಿಂತವಳು ತಿರುಗೊಮ್ಮೆ ನೋಡಿಬಿಡು ಕಟ್ಟಿದ ಗಂಟಲಲ್ಲಿ ಒಮ್ಮೆ ದನಿಯೆತ್ತಿ ಹಾಡಿಬಿಡು ಸಂಜೆ ಕವಿಯುತ್ತಿದೆ ಉಳಿದಿಲ್ಲ ಬಹಳ ವೇಳೆ ವಿದಾಯದ ಈ ಹೊತ್ತು ಅಲೆಯೊಂದ ಹಾಯಬಿಡು ಬೆನ್ನಿಗೇಕೆ ಬೇಕು ಹೇಳು ಈ ಬೇಗುದಿ ಭಾರ ಮಂಕಾದ ಮುಖದಲ್ಲು ಒಮ್ಮೆ ನಕ್ಕು ನಡೆದುಬಿಡು ಮಾಯುತ್ತಿರುವ ಎದೆಗಾಯ ಮತ್ತೆ ಕೆಂಪಾಗಿದೆ ಸಾಧ್ಯವಾದರೆ ಒಮ್ಮೆ ಬೆರಳಿಂದ ಸವರಿಬಿಡು ನನ್ನ ಕನಸೊಂದು ಬಿಡದೆ ನಿನ್ನ ಹಿಂಬಾಲಿಸಿದೆ ಈಸು ಬೀಳುವ ಮುನ್ನ ಒಮ್ಮೆ ಮುದ್ದಿಸಿಬಿಡು ಮರುಳಿನಲಿ ಅಲೆವ ‘ಜಂಗಮ’ಗೆ ಏನು ಬೇಕಿದೆ ಮತ್ತೊಮ್ಮೆ ಮಡಿಲು ನೀಡಿ ಮಗುವಾಗಿಸಿಬಿಡು *********









