ಗಝಲ್
ಗಝಲ್ ಸಹದೇವ ಯರಗೊಪ್ಪ ಎದೆ ಎತ್ತರ ಬೆಳೆದು ನಿಂತ ಪೀಕಿನಲಿ ಕಣ್ಣು ತಪ್ಪಿಸಿ ಎಲ್ಲಿ ಹೋದೆ|ಬತ್ತಿದೆದೆಯ ಬಾವಿಗೆ ಕಣ್ಣೀರು ಕುಡಿಸಿ ಎಲ್ಲಿ ಹೋದೆ|| ಬಿತ್ತಿದ ತಾಕುಗಳಿಗೆ ಉಳಿ ನೀರು ಉಣಿಸದೆ ಸೆರಗ ಜಾಡಿಸಿದೆ|ಮಣ್ಣಿನ ಹೊಕ್ಕಳಿಂದ ಅನ್ನದ ಬೇರು ಕತ್ತರಿಸಿ ಎಲ್ಲಿ ಹೋದೆ|| ತೂಗಿ ತೊನೆವ ಬೆವರ ತೆನೆಗಳಿಗೆ ಕವಣೆ ಬೀಸಲೆ ಇಲ್ಲ|ನೇಸರನ ಕಾಯುವ ಸೂರ್ಯಕಾಂತಿ ದಿಕ್ಕು ಬದಲಿಸಿ ಎಲ್ಲಿ ಹೋದೆ| ಬಿರುಕು ಬಿಟ್ಟ ನೆಲದ ಕೆಂಡಕ್ಕೆ ಬೆವರ ದೂಪದ ಬೆರಕೆ|ತೀರದ ಸಾಲಕ್ಕೆ ಉಳುವ ನೇಗಿಲ ಅಡಾ ಇರಿಸಿ ಎಲ್ಲಿ ಹೋದೆ|| ಸಗಣಿ ಬಳೆದ ಅಂಗೈಗೆ ಮದರಂಗಿ ಬಣ್ಣದ ಕಾಂತಿ|ಬೆವರ ಗಂಧ ತುಂಬಿದ ಉಡಿಯನು ಗಾಯಗೊಳಿಸಿ ಎಲ್ಲಿ ಹೋದೆ|| ಜತಿಗೆ ಸುಡುವ ಬಿಸಿಲಲಿ ಸಾಚಿ ಮೈ ಸುಟ್ಟು ಮಾಯವಾದೆ|ಕಾಳಿನ ಕೊರಳಿಗೆ ನುಶಿಗಳ ಮಾಲೆ ಪೋಣಿಸಿ ಎಲ್ಲಿ ಹೋದೆ|| *******









