ಶುಭ ದೀಪಾವಳಿ
ಕವಿತೆ ಶುಭ ದೀಪಾವಳಿ ಮುರಳಿ ಹತ್ವಾರ್ ಒಣಗುವ ಮುನ್ನವೇ ಉದುರಿದ ಹಸಿ-ಹಸಿಯ ಎಲೆಗಳ ರಾಶಿ ಇಬ್ಬನಿಯ ತಬ್ಬಿದ ನೆಲವ ತುಂಬಿದೆ ಯಾವ ಹಸಿವಿನ ಹೊಟ್ಟೆಯ ಹೊಂಚೋ? ನಡುಗುತ ಸೊರಗಿವೆ ಬೋಳು ಮರಗಳು ಆಳದ ಬೇರಿಗೂ ಕರಗಿ ಹೋಗುವ ಚಿಂತೆಯಾವ ಕಾರಿರುಳ ರಕ್ಕಸ ಸಂಚೋ ? ಹಣತೆ ಹಣತೆಗಳ ಕಿರಣಗಳ ಬಾಣ ಬಂಧಿಸಲಿ ಭಯದ ಎಲ್ಲ ನೆರಳುಗಳ, ಹೊಸೆದ ಬೆಳಕಿನ ಶರ ಪಂಜರದಲಿ ಒಲುಮೆಯ ಅಭಯದ ಆ ಬಯಲಲಿ ಮತ್ತೆ ಚಿಗುರಲಿ ಬಯಕೆಯ ಹಸಿರು ಹೊಸ ನಗೆಯ ತುಂಬಿ ಮುಖ ಪಂಕಜದಲಿ *******************









