ಗಜಲ್
ಗಜಲ್ ಪ್ರಭಾವತಿ ಎಸ್ ದೇಸಾಯಿ ಮಲ್ಲಿಗೆಯಿಲ್ಲ ಮುಡಿಯಲಿ ಘಮವಾದರೂ ಇರುಳಿಗೆ ಇರಲಿಶಶಿಯಿಲ್ಲ ನಭದಲಿ ನಕ್ಷತ್ರ ವಾದರೂ ಇರುಳಿಗೆ ಇರಲಿ ಬತ್ತಿ ಎಣ್ಣೆ ಕುಡಿದು ಖುಷಿಯಲಿ ಹರಡಿತು ಬೆಳಕು ಕೋಣೆಯಲಿಅಮಲೇರಲು ಪ್ರೀತಿಯ ಮಧುವಾದರೂ ಇರುಳಿಗೆ ಇರಲಿ ಮೌನ ಚೂರಿಯಿಂದ ಇರಿದು ಗಾಯಗೊಳಿಸಿದೆ ಒಲಿದ ಹೃದಯಎದೆಯ ಉರಿ ಆರಲು ಲಾಲಿ ಹಾಡಾದರೂ ಇರುಳಿಗೆ ಇರಲಿ ಬಯಕೆಯ ಮೃಗಜಲದ ಬೆನ್ನಹಿಂದೆ ಓಡಿ ಓಡಿ ಬಳಲಿದೆಅನುರಾಗದ ಬದುಕಾಗಲು ಕನಸಾದರೂ ಇರುಳಿಗೆ ಇರಲಿ ಏಕಾಂಗಿಯ ಬೇಸರದ ಉಸಿರು ಎಣಿಸುತಿದೆ ತಾರೆಗಳನೊಂದ ಜೀವಿಗೆ ಸುಖದ “ಪ್ರಭೆ” ಯಾದರೂ ಇರುಳಿಗೆ ಇರಲಿ ******************************************************









