ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪಯಣ

ಸಂಜಯ ಮಹಾಜನ್ ಅಳಿದು ಹೋಗುವ ಮಾನವ ನಿರ್ಮಿತ ಕಟ್ಟಡಗಳ ಮಧ್ಯ ಅಳಿಯದೆ ಮುಂದೆ ಸಾಗಿದೆ ಹಸಿರೆಲೆಗಳ ಪಯಣ ಸದ್ದಿಲ್ಲದೆ ಮಾಸಿ ಹೋಗುವ ದೇಹಕ್ಕೆ ಚೈತನ್ಯ ತುಂಬುವ ಹೃದಯಾಂತರಾಳದ ನೆನಪುಗಳ ಪಯಣ ಪಚ್ಚೆಯಾಗಸದಿ ಸುರಿವ ಮಳೆಹನಿ ಕಪ್ಪು ಹಂಚಿನ ಹಸಿರ ಹಾಸಿನ ಮಧ್ಯ ಮಳೆಹನಿಗಳ ಪಯಣ ಮೊಳಕೆಯೊಂದು ಬೇರೂರಿ ಆಗಸಕ್ಕೆ ಕೈಚಾಚಲು ಗಟ್ಟಿ ಕಾಂಕ್ರೀಟು ಮೇಲೆ ನಡೆಸಿದೆ ಸೆನಸಾಟದ ಪಯಣ ಭೂವಿಯಲ್ಲಿ ಹೆಜ್ಜೆಯುರಿದ ಕಬ್ಬಿಣದ ಸರಳುಗಳು ಬಿಡುಗಡೆಗೆ ನಡೆಸಿವೇ ಕನಸುಗಳ ಪಯಣ ಈ ಪಯಣಗಳ ಮಧ್ಯ ಚಂಚಲ ನನ್ನ ಮನಸೊಂದು ಬಯಸಿದೆ ಎರಡು ಹೆಜ್ಜೆಯ ಪಯಣ.

ಪಯಣ Read Post »

ಇತರೆ

ಅನಿಸಿಕೆ

ಹೆಣ್ಣಿನ ಮೇಲಿನ ನಿರಂತರ ಅತ್ಯಾಚಾರ ಐಶ್ವರ್ಯ ತನ್ನ ಮೂರು ವರ್ಷದ ಹೆಣ್ಣು ಮಗುಗೆ ಮನೆಯಿಂದಾಚೆ ಕಳಿಸ್ಬೆಕಾದ್ರೆ ಒಬ್ಬ ತಾಯಿ ಹಾಕಿದ್ದ ಕಾಲ್ ಗೆಜ್ಜೆ, ಕೈಬಳೆ, ಹೂವೆಲ್ಲ ತೆಗೆದು ಗಂಡ್ಮಕ್ಕಳ ತರ ತಲೆಗೆ ಎಣ್ಣೆ ಹಾಕಿ ಕ್ರಾಪ್ ಬಾಚಿ ಹುಡ್ಗುರ ಬಟ್ಟೆ ಹಾಕಿದ್ದು ನೋಡಿ ನಾನ್ ಅನ್ಕೊಂಡೆ ಅವರಿಗೆ ಪಾಪ ಗಂಡ್ಮಗು ಅಂದ್ರೆ ಇಷ್ಟ ಅನ್ಸತ್ತೆ ಅವರಿಗೆ ಗಂಡು ಮಗು ಇಲ್ಲ ಅನ್ಕೊಳ್ತಿದ್ದ ಹಂಗೆನೆ ಮನೆಯಿಂದ ಆಚೆ ಅಳುತ್ತ ಅವರ ಮಗ ಬಂದು ನನ್ ಬಟ್ಟೆ ಯಾಕೆ ಅವಳಿಗೆ ಹಾಕಿದೆ ಅಂಥ ಹಠ ಮಾಡೋದು ನೊಡಿ ಕೂತುಹಲ ಸ್ವಲ್ಪ ಜಾಸ್ತಿನೆ ಆಯ್ತು. ಆದ್ರೆ ಆ ತಾಯಿ ಹೇಳಿದ್ದು ಕೇಳಿ ಒಂದು ಕ್ಷಣ ಮೈ, ಮನಸೆಲ್ಲ ನಿಸ್ತೇಜವಾಗಿ ಹೋಯ್ತು. ಹೆಣ್ಣು ಅಂತ ಹೆಮ್ಮೆ ಪಡೋಕು ಆಗ್ದೆ ಇರುವಷ್ಟು ಹೀನಾಯ ಪರಿಸ್ಥಿತಿಲಿ ಬದುಕ್ತಿದಿವಾ ಅನ್ನಸ್ತು. ಮಗನ್ನ ಸಮಾಧಾನ ಮಾಡ್ತ ಆ ತಾಯಿ ಹೇಳಿದ್ದು ಒಂದೇ ಮಾತು ನಂಗೂ ಅವಳಿಗೆ ಹೆಣ್ಣಿನ ಬಟ್ಟೆ ಹಾಕಿ ಗೆಜ್ಜೆ ಬಳೆ ಹಾಕಿ ನೋಡೋಕೆ ಇಷ್ಟ ಆದ್ರೆ ಅವಳು ಅದೆಲ್ಲ ಹಾಕಿದ್ನ ನೋಡಿ ಅವಳು ಹೆಣ್ಣು ಅಂತ ಗೊತ್ತಾದ್ರೆ ಚಿಕ್ಕ ಮಗು ಅಂತಾನೂ ನೋಡ್ದೆ ಎಲ್ಲಿ ನಾಯಿಗಳ ತರ ಅವಳನ್ನ ಕಿತ್ತಾಡ್ಕೊಂಡು ಹಂಚ್ಕೊಳ್ತಾರೊ ಅನ್ನೊ ಭಯ ಅಂದ್ರು. ಹುಟ್ಟಿಂದ ಹೂಳೊವರೆಗು ಹೆಣ್ಣು ಹುಣ್ಣಾಗದೆ ಬದುಕೋದೆ ಜೀವಮಾನದ ದೊಡ್ಡ ಸಾಧನೆ ಅನ್ನಸ್ತಿದೆ ಇತ್ತಿಚೆಗೆ…. ಇವತ್ತು ಪ್ರಿಯಾಂಕ, ಅವತ್ತು ನಿರ್ಭಯ, ಮೊನ್ನೆ ಮಧು, ಮತ್ತೆ ನಾಳೆ..? ನಮ್ಮಗಳಲ್ಲೆ ಇನ್ಯಾರದ್ದೊ ಮನೆಯ ಹೆಣ್ಣು.ಇದೇ ತರ ಚಿಕ್ಕ ಮಕ್ಕಳು, ಮುದುಕಿಯರು, ಮಾನಸಿಕ ಅಸ್ವಸ್ಥರು ಅನ್ನೊದನ್ನು ನೋಡದೆ ಸಿಕ್ಕ ಸಿಕ್ಕ ಹೆಣ್ಣು ಮಕ್ಕಳ ಮೇಲೆ ನಿಮ್ಮ ಕಾಮ ತೃಷೆನ ತೀರಿಸ್ಕೊಳ್ತ ಹೋದ್ರೆ ನಾಳೆ ರೋಡಲ್ಲಿ ಅಡ್ಡಾಡೊ ಹೆಣ್ಣು ನಾಯಿನೂ ನಿಮ್ಮಗಳ ಹತ್ರ ಸುಳಿಯಲ್ಲ. ದೇವರಿಗೆಲ್ಲ ಹರಕೆ ಹೊತ್ತು, ಮಕ್ಕಳನ್ನ ಪಡೆದು ಅವರನ್ನ ಮುದ್ದಾಗಿ ಸಾಕಿ ಇನ್ಯಾವನ್ದೊ ತೀಟೆಗೆ ಬಲಿ ಕೊಡುವ ಬದಲು, ಇದೆಲ್ಲ ನೋಡ್ತಿದ್ರೆ ಮೊದಲಿದ್ದ ಭ್ರೂಣ ಲಿಂಗ ಪತ್ತೆ ಆವಿಷ್ಕಾರವೇ ಚೆಂದವಿತ್ತು ಮೊದಲೆ ಹೆಣ್ಣು ಅಂತ ತಿಳ್ಕೊಂಡು ಹುಟ್ಟಿಗೆ ಕಾರಣರಾದವರ ಕೈಕಲ್ಲಿ ಸಾಯೋದೆ ನೆಮ್ಮದಿ. ಮೊದಲೆಲ್ಲ ಮನೆ ತುಂಬಾ ಮಕ್ಳಿರ್ತಿದ್ರು, ಬರ್ತಾ ಬರ್ತಾ ಭ್ರೂಣ ಲಿಂಗ ಪತ್ತೆ ನಿಷೇಧದಿಂದ ಗಂಡೊ ಹೆಣ್ಣೊ ಮನೆಗೊಂದು ಅನ್ನೊ ಹಾಗಾಯ್ತು ಆದ್ರೆ ಇವಾಗಿರೊ ಕಾಲಮಾನ ನೋಡಿದ್ರೆ ಹೆಣ್ಣು ಬಂಜೆಯಾಗೇ ಉಳಿದ್ರು ಪರವಾಗಿಲ್ಲ ಮತ್ತೊಂದು ಹೆಣ್ಣು ಹುಟ್ಟೊದೆ ಬೇಡ ಅನ್ಸ್ತಿದೆ….. ಹೆಣ್ಣಿನ ಉಬ್ಬು ತಗ್ಗಾದ ಮಾಂಸದ ಮುದ್ದೆಯ ದೇಹವಿರೋದೆ ನಿಮ್ಗಳಿಗೆ ಜನ್ಮ ಕೋಡೊಕೆ ಹಾಲಿಣಿಸಿ ಬೆಳೆಸೋಕೆ ಆದ್ರೆ ನೀವುಗಳು ಹೆಣ್ಣಿನ ಅದೇ ಎರಡು ಅಂಗಗಳಿಗೆ ಆಸೆ ಪಟ್ಟು ಅತ್ಯಾಚಾರ ಕೊಲೆ ಮಾಡ್ತಿರ, ಅಲ್ಲ ನಂಗೆ ಒಂದು ವಿಷಯ ಅರ್ಥ ಆಗ್ತಿಲ್ಲ ಕಂಡವರ ಮನೆ ಹೆಣ್ಮಕ್ಕಳ ಎದೆ ಸೀಳು ಕಂಡು ಕಣ್ಮುಚ್ಚದೆನೆ ಎದೆ ಕಡೆ ನೋಡೋವಾಗ ನಿಮ್ಗೆ ಹಾಲುಣಿಸಿ ಬೆಳೆಸಿದ ನಿಮ್ಮ ಅಮ್ಮ ನೆನಪಾಗಲ್ವ? ಬೀದಿಲಿ ಹೋಗೊ ಹೆಣ್ಣನ್ನ ಬೆತ್ತಲೆ ಮಾಡಿ ಹಿಗ್ಗಿ ಹಿಂಸಿಸುವಾಗ ಅವಳ ಅಣ್ಣ ಅನ್ನೊ ಕೂಗು ನಿಮ್ಗೆ ಕೇಳ್ಸಲ್ವ? … ಅಥವಾ ಅವಳಲ್ಲಿ ನಿಮ್ಮ ಅಕ್ಕ ತಂಗಿಯರು ಕಾಣಲ್ವ?..ದೇಹದ ಬಿಡಿ ಭಾಗಗಳ ಕಲಿಯೊ ವಯಸ್ಸಿನ ಮಕ್ಕಳ ಮೈ ಮೇಲೆಲ್ಲಾ ಮೃಗಗಳ ತರ ಬೀಳ್ತಿರಲ್ವ ಇದೇನ ನಿಮ್ಮ ಗಂಡಸ್ತನ?….ಥೂ… ಇಂಥವರನ್ನೆಲ್ಲ ಮೃಗಗಳಿಗೆ ಹೋಲ್ಸಿದ್ರೆ ಪಾಪ ಅವಕ್ಕೂ ಅವಮಾನ ಆಗಬಹುದು. ಮಕ್ಕಳಿಂದ ಹಿಡಿದು ಮುದುಕಿಯರ ಮೇಲೆಲ್ಲಾ ಗಂಡಸ್ತನ ತೊರ್ಸೊ ಗಂಡ್ಸು ಸಮಾಜದಲ್ಲಿ ಗಂಡ್ಸು ಅಂತ ಅನ್ಸ್ಕೊಳೋದು ನಾಮಾಕಾವಸ್ಥೆಗಷ್ಟೆ…. ಯಾರದ್ದೊ ಮನೆಯ ಹೆಣ್ಮಕ್ಳಿಗೆ ಹಿಂಗಾಗಿ, ಬೆಂಕಿಲಿ ಸುಟ್ಟು, ಕರಕಲಾದರೂ ಕೊನೆಗೆ ನಾವ್ ಮಾತ್ರ ಸುಡೋದು ಸತ್ತ ಆ ಜೀವಾನ ಜೊತೆಗೊಂದು ಕ್ಯಾಂಡಲ್ ನ.‌ ಕ್ಯಾಂಡಲ್ ಸುಟ್ಟು ಶಾಂತಿ ಕೋರುವ ಬದಲು ಸುಟ್ಟವನನ್ನೆ ಸುಟ್ಟರೆ ಬದಲಾಗಬಹುದೆನೊ ಮುಂದೆ ಕಾಲ. ಅತ್ಯಾಚಾರಕ್ಕೊಳಗಾದ ಹೆಣ್ಣು ನ್ಯಾಯ ಕೇಳಿದ್ರೆ ನ್ಯಾಯ ಕೊಡೊ ಕಾನೂನುಗಳೇ ಮತ್ತೆ ಮತ್ತೆ ಪ್ರಶ್ನೆ ಮಾಡಿ ಮತ್ತಷ್ಟು ಮಾನಸಿಕವಾಗಿ ಅತ್ಯಾಚಾರ ಮಾಡ್ತವೆ. ಆದ ಬಸಿರಿಗೊಂದಿಷ್ಟು ಸಾಂತ್ವಾನ ನೀಡಿ ಕೈ ತೊಳ್ಕೊತಾವೆ. ಇನ್ನು ಸ್ವಲ್ಪ ಮುಂದುವರೆದ್ರೆ ನಾಲ್ಕೈದು ವರ್ಷ ಜೈಲು ಒಂದಿಷ್ಟು ದುಡ್ಡು ಅಂತ ಹಾಕ್ತಾರೆ. ಮತ್ತೈದು ವರ್ಷದಲ್ಲಿ ಅಂಥದ್ದೆ ಕೃತ್ಯಗಳು ನಡಿತಾನೇ ಇರತ್ತೆ. ಈಗಲಾದರೂ ಕಾನೂನುಗಳು ಬದಲಾಗದಿದ್ದರೆ ಮುಂದೊಂದು ದಿನ ಜನರ ಮನಸ್ಸಲ್ಲಿ ರಾಷ್ಟ ಧ್ವಜ ಕೇವಲ ಒಂದು ಬಟ್ಟೆಯಾಗಿ, ಕೋರ್ಟಗಳು ಕಟ್ಟಡಗಳಾಗಿ, ಸಂವಿಧಾನಗಳು ಬರೀ ಪುಸ್ತಕಗಳಾಗಿ ಉಳ್ಕೊಳೊದ್ರಲ್ಲಿ ಸಂಶಯವೇ ಇಲ್ಲ…… ಅರಬ್ ನಂತಹ ದೇಶಗಳಲ್ಲಿ ಅತ್ಯಾಚಾರವಿರಲಿ ಪರ ಪುರುಷನ ಹೆಂಡತಿಯನ್ನು ಕೂಡ ಕಣ್ಣೆತ್ತಿ ನೋಡುವಂತಿಲ್ಲ. ಅದ್ಯಾವುದೊ ಹಮ್ಮುರಬಿ ರಾಜ ಅಂತೆ ಅವರ ನ್ಯಾಯವೇ ಸರಿ ಇತ್ತು. ಕಳ್ಳತನ ಮಾಡಿದ್ರೆ ಕೈ, ನೋಡಿದ್ರೆ ಕಣ್ಣು ಕಿಳೋದು, ಕೈಯಿಗೆ ಕೈಯಿ ಅನ್ನುವಂತೆ. ಜೀವಕ್ಕೆ ಜೀವ ಕೊಟ್ಟಾಗಲೇ ಜೀವದ ಬೆಲೆ ತಿಳಿಯೋದು. ಹೆಲ್ಮೆಟ್ ಹಾಕಿಲ್ಲ ಅಂದ್ರೆ ಗಲ್ಲಿಗಳಲ್ಲಿ ನಿಂತು ಪೈನ್ ಹಾಕೊ ಸರ್ಕಾರ, ಅತ್ಯಾಚಾರ ಮಾಡಿದವರನ್ನ ನಡು ರೋಡಲ್ಲಿ ನಿಲ್ಸಿ ಗಲ್ಲಿಗೇರಿಸಿದ್ರೆ ಇಂಥ ಕೃತ್ಯಗಳು ಕಡಿಮೆಯಾಗಬಹುದು. ಅದ್ರೆ ಇಂಥ ಕಾನೂನುಗಳು ಬರೋದಿಕ್ಕೆ ಮತ್ತೆ ಹಮ್ಮುರಬಿಯಂತ ರಾಜನೇ ಹುಟ್ಟಿ ಬರಬೇಕೆನೋ?…. ಹೆಣ್ಣೆಂದರೆ ನಿಮ್ಮ ಕಾಮ ತೃಷೆ ತೀರಿಸುವ ಮಷೀನಲ್ಲ, ನಿಮ್ಗೆ ಜನ್ಮ ನೀಡೋ ತಾಯಿ, ನಿಮಗಾಗಿಯೇ ಜನ್ಮ ಪಡೆದ ಹೆಂಡತಿ, ನಿಮ್ಮಿಂದ ಜನ್ಮ ಪಡೆದ ಮಗಳು, ನಿಮ್ಮೊಟ್ಟಿಗೆ ಜನ್ಮ ಪಡೆದ ಅಕ್ಕ ತಂಗಿ, ಅವಳನ್ನು ಬದುಕಲು ಬಿಡಿ ನಿಮ್ಮೊಳಗೊಬ್ಬಳಾಗಿ ಅವಳೊಂದು ಹೆಣ್ಣಾಗಿ. ಮೊದಲೇ ಹೆಣ್ಮಕ್ಕಳ ಸಂಖ್ಯೆ ಕಡಿಮೆ ಆಗ್ತಿದೆ, ಅದ್ರಲ್ಲಿ ನೀವು ಇರೊ ಬರೊ ಹೆಣ್ಮಕ್ಕಳನ್ನ ಹೀಗೆ ಮಾಡ್ತಿದ್ರೆ, ನೀವು ಈಗೆಲ್ಲ ತಮಾಷೆಗೆ ಸಿಂಗಲ್ ಸಿಂಗಲ್ ಅಂತ ಹೆಳ್ಕೊಂಡು ಅಡ್ಡಾಡೋದು ನಿಜವಾಗೋ ಕಾಲ ತುಂಬಾ ದೂರ ಉಳಿದಿಲ್ಲ……ಒಂಟಿ ಹೆಣ್ಣು ಯಾವತ್ತು ನಿಮ್ಮ ಅವಕಾಶಕ್ಕೆ ಸಿಕ್ಕ ಹಣ್ಣಲ್ಲ ನಿಮ್ಮ ಜವಾಬ್ದಾರಿಯ ಅಕ್ಕ ತಂಗಿಯರು ನಿಮ್ಮ ಮನೆಯ ಹೆಣ್ಣು ಮಕ್ಕಳಂತೆಯೇ ಅವರು….

ಅನಿಸಿಕೆ Read Post »

ಇತರೆ

ಪ್ರೀತಿಯೆನಲು ಹಾಸ್ಯವೇ

ಚಂದ್ರಪ್ರಭ ಅದು ಜಗಳವೆ.. ಕದನವೆ.. ಶೀತಲವೆ.. ಮುಕ್ತವೆ? ಯಾವುದೂ ಅಲ್ಲ. ಆದರೆ ಅವರು ಕಾಯಂ ಗುದ್ದಾಡುವುದಂತೂ ಸತ್ಯ. ಒಮ್ಮೊಮ್ಮೆ ತೆರೆದ ಗುದ್ದಾಟ.. ಒಮ್ಮೊಮ್ಮೆ ಮುಸುಕಿನ ಗುದ್ದಾಟ.. ಕಾಲನ ಪ್ರವಾಹದ ಬಿಸಿ. ಭಿನ್ನ ಭಿನ್ನ ತೀರಗಳಲ್ಲಿದ್ದೇ ದಿನ ದೂಡುವುದು ಸಹಜ ರೂಢಿಯಾಗಿದೆ ಅವರಿಗೆ. ಅದನ್ನು ಆಧುನಿಕತೆ ತಂದ ವಿಪತ್ತು, ನೀವು ಬಲಿಪಶು ಎಂದರೆ ಅವರಿಗೆ ಬೇಸರಾಗುತ್ತದೆ.. ಮಾಡರ್ನ್ ಯುಗದ ಪ್ರೊಡಕ್ಟ್ ಅಂದಾಗ ಕೊಂಚ ಸಮಾಧಾನ. ಸಂತಾನದೆದುರು ಮಾದರಿಯಾಗಿರಲು ಹರಸಾಹಸಪಡುತ್ತಾರೆ ಅವರು.. ಆದರೂ ಎಳೆಯ ಜೀವಗಳಿಗೆ ಇವರ ಜಗ್ಗಾಟದ ವಾಸನೆ ಬಡಿಯುತ್ತದೆ. ವಿರುದ್ಧ ದಿಕ್ಕಿನಲ್ಲಿ ಯೋಚಿಸುವಾಗಲೂ ಅವರು ‘… ಒಲವೆ ನಮ್ಮ ಬದುಕು’ ತರಹದ ಸಾಲುಗಳನ್ನು ಗುನುಗುತ್ತಾರೆ. ಆಗೀಗ ತಾವು ಆಸ್ಥೆಯಿಂದ ಕಟ್ಟಿದ ಮನೆಯಲ್ಲಿ ಒಟ್ಟು ಸೇರಿ ಸಂಭ್ರಮಿಸುತ್ತಾರೆ. ಕರ್ತವ್ಯದ ಕರೆಯಾಲಿಸಿ ನಾಲ್ವರು ನಾಲ್ಕು ದಿಕ್ಕಾಗುವ ಅವರು ಜಾಲ ತಾಣಗಳಲ್ಲಿ ಇಂಟರ್ ಕನೆಕ್ಟೆಡ್ ಆಗುತ್ತಾರೆ. ಸಾಹಿತ್ಯ, ರಾಜಕಾರಣ, ಸಿನಿಮಾ, ಪ್ರಚಲಿತ ವಿದ್ಯಮಾನ ಎಲ್ಲವುಗಳ ಮೇಲೆಯೂ ಕಮೆಂಟಿಸುತ್ತಾರೆ.. ಭೇಟಿಗಳಲ್ಲಿ ಒಮ್ಮೊಮ್ಮೆ ಅಭಿಪ್ರಾಯ ಭೇದ ಕಾಡುವಾಗ ಮುನಿದು ಮುಖ ತಿರುವಿಕೊಳ್ಳುತ್ತಾರೆ. ಉದ್ವಿಗ್ನತೆಯಲ್ಲೂ ನೆನಪಾಗುತ್ತದೆ ಅವರಿಗೆ ಕವಿ ಸಾಲು – ‘… ಹತ್ತಿರವಿದ್ದರೂ ದೂರ ನಿಲ್ಲುವೆವು.. ಕೋಟೆಯಲಿ.. ‘ ತಂತಮ್ಮ ಕೋಟೆಯಲ್ಲಿ ನಿಂತುಕೊಂಡೇ ಕವಿತೆ ಕುರಿತು ಅವರು ವಿಮರ್ಶೆ ಮಾಡುತ್ತಾರೆ..ಆದರೂ ಕೋಟೆ ಒಡೆಯುವ ದಾರಿಗಾಣದೇ ಪರಸ್ಪರ ಬೀಳ್ಕೊಡುವಾಗ ಎಲ್ಲದಕ್ಕೂ ಮುಸುಕೆಳೆದು ನಕ್ಕು ಬಿಡುತ್ತಾರೆ. ಜೀವನ ಪ್ರವಾಹ ತಮ್ಮನ್ನು ಜೊತೆಯಾಗಿ ಕರೆದೊಯ್ಯುತ್ತಿದೆ ಎಂದವರಿಗೆ ಮನವರಿಕೆಯಾಗುತ್ತದೆ.. ಕ್ವಚಿತ್ತಾಗಿ ಸಿಗುವ ಅವಕಾಶಗಳಲ್ಲಿ ಅವರು ಫೋಟೋಕ್ಕೊಂದು ಚಂದದ ಪೋಜು ಕೊಡುತ್ತಾರೆ.. ಅದು ನೀಡುವ ಪುರಾವೆಯಲ್ಲಿ ಜೀವನೋತ್ಸಾಹವನ್ನು ಬಚ್ಚಿಟ್ಟುಕೊಳ್ಳುತ್ತಾರೆ.. ನಿಮ್ಮ ಅಕ್ಕಪಕ್ಕದಲ್ಲೆಲ್ಲೋ ಇವರು ಇದ್ದಾರು.. ಸುಮ್ಮನೆ ಆಚೀಚೆ ಒಮ್ಮೆ ಕಣ್ಣು ಹಾಯಿಸಿ ಬಿಡಿ.. ನನಗೇಕೊ ಕೆ. ಎಸ್. ನ. ಸಾಲು ಗುನುಗುವ ಮನಸ್ಸಾಗುತ್ತಿದೆ… ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಾಣದೊಂದ ಕನಸ ಕಂಡು ಮಾತಿಗೊಲಿಯದಮೃತವುಂಡು ದುಃಖ ಹಗುರವೆನುತಿರೆ ಪ್ರೀತಿಯೆನಲು ಹಾಸ್ಯವೆ?

ಪ್ರೀತಿಯೆನಲು ಹಾಸ್ಯವೇ Read Post »

ಇತರೆ

ಕಾಡುವ ಹಾಡು

ಮೈಸೂರು ದಸರಾ ಚಿತ್ರ-ಕರುಳಿನ ಕರೆ ಗೀತರಚನೆ- ಆರ್.ಎನ್.ಜಯಗೋಪಾಲ್ ಸಂಗೀತ-ಎಂ.ರಂಗರಾವ್ ಗಾಯಕರು-ಪಿ.ಬಿ.ಶ್ರೀನಿವಾಸ್ ಸುಜಾತ ರವೀಶ್ ಕಾಡುವ ಹಾಡು ಮೈಸೂರು ದಸರಾ ಮೈಸೂರು ಎಂದರೆ ದಸರಾ ಜಂಬೂ ಸವಾರಿ ಮೊದಲು ನೆನಪು ಬರುವುದು. ನಂತರ ಮೈಸೂರು ಪಾಕ್ ಮೈಸೂರು ಮಲ್ಲಿಗೆ ಮೈಸೂರು ರೇಷ್ಮೆ ಸೀರೆ ಮೈಸೂರು ಚಿಗುರು ವೀಳ್ಯದೆಲೆ ಹಾಗೂ ಶ್ರೀಗಂಧದ ಉತ್ಪನ್ನಗಳು ಮೈಸೂರು ವೀರನಗೆರೆ ಬದನೆಕಾಯಿ. ಅಂದಿನಿಂದ ಇಂದಿನವರೆಗೂ ಚುನಾವಣೆಯಲ್ಲಿ ಕೈಗೆ ಹಚ್ಚುವ ಮಸಿ ತಯಾರಾಗುವುದು ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಯಲ್ಲೇ. ರಾಜ್ಯದ ರಾಜಧಾನಿ ಬೆಂಗಳೂರು ಆದರೂ ಸಾಂಸ್ಕೃತಿಕ ರಾಜಧಾನಿ ಮಾತ್ರ ನಮ್ಮ ಅರಮನೆ ನಗರಿಯೇ. ನಮ್ಮೂರು ಮೈಸೂರು ವೈಭವ ಹೊಗಳುತ್ತಾ ಕೂತರೆ ಪುಟಗಟ್ಟಲೆ ತುಂಬುತ್ತದೆ . ಬೇಡ ಈಗ ಹಾಡಿನಬಗ್ಗೆ ಮಾತ್ರ ಬರೀಬೇಕು. ಚಿಕ್ಕಂದಿನಿಂದ ಕಿವಿ ಮೇಲೆ ಬೀಳುತ್ತಿದ್ದ ಈ ಹಾಡಲ್ಲದೆ ನನ್ನನ್ನು ಕಾಡುವುದು ಬೇರ್ಯಾವುದು?”ಮೈಸೂರು ದಸರಾ ಎಷ್ಟೊಂದು ಸುಂದರ” ಕರುಳಿನ ಕರೆ ಚಿತ್ರದ ಪಿಬಿ ಶ್ರೀನಿವಾಸ್ ಅವರ ಮಧುರ ಕಂಠದ ಆರ್ ಎನ್ ಜಯಗೋಪಾಲ್ ರಚಿಸಿದ ಎಂ ರಂಗರಾವ್ ಸಂಗೀತದ ಈ ಹಾಡು ಮೈಸೂರು ಅಂದರೆ ದಸರಾ ಎನ್ನುವ ಮಾತಿಗೆ ಸುಂದರ ಪ್ರತಿಮೆ.ಪ್ರತಿ ನವರಾತ್ರಿಯ ಗೊಂಬೆ ಆರತಿಯ ದಿನ ಮಕ್ಕಳೆಲ್ಲ ಈ ಹಾಡನ್ನು ಕೋರಸ್ ಹಾಡೇ ಹಾಡುತ್ತಿದ್ದೆವು . ಕೇಳುತ್ತಿದ್ದವರ ಕಿವಿಯ ಗತಿ ಪಾಡು ನಿಮ್ಮ ಊಹೆಗೆ ಬಿಟ್ಟಿದ್ದು.😁😁😁😁😁 ಆ ನನ್ನ ಪ್ರೀತಿಯ ಹಾಡಿನ ಬಗ್ಗೆ ಬರೆಯಲು ಸಿಕ್ಕ ಸುವರ್ಣಾವಕಾಶಕ್ಕೆ ಸಾಹಿತ್ಯೋತ್ಸವಕ್ಕೆ ತುಂಬಾ ತುಂಬಾ ಧನ್ಯವಾದಗಳು . ಡಾಕ್ಟರ್ ರಾಜಕುಮಾರ್ ಕಲ್ಪನಾ ಮತ್ತು ಸಂಗಡಿಗರು ಸೇರಿ ದಸರೆಯ ಸಡಗರವನ್ನು ಸಂಭ್ರಮಿಸಿ ಹಾಡಿ ಕುಣಿವ ಹಾಡು ಇದು. ಮೊದಲಿಗೆ ಧಾರ್ಮಿಕ ಹಿನ್ನೆ ವಿವರಿಸುವ ಹಾಡು ಮಧ್ಯಮ ವರ್ಗದವರ ಹಬ್ಬದ ಆಚರಣೆಯ ರೀತಿಯನ್ನು ಕಣ್ಣಿಗೆ ಕಟ್ಟಿಕೊಡುತ್ತದ .ಮೈಸೂರು ನಗರ ಅಧಿದೇವತೆ ಚಾಮುಂಡಿಯ ಮಹಿಮೆಯನ್ನು ವರ್ಣಿಸುತ್ತದೆ . ನಂತರ ಮಹಾನವಮಿಯ ಬಗ್ಗೆ ಹೇಳುತ್ತಾ ಆ ತಾಯಿಯ ವರ್ಚಸ್ಸು ಅವಳಿಗೆ ಶರಣಾಗೋಣ ಎಂಬ ಆಶಯವನ್ನು ಬಿಂಬಿಸುತ್ತದೆ. ಕಡೆಗೆ ಚರಣದಲ್ಲಿ ಶತ್ರುವನ್ನು ಅಳಿಸಿ ಧರ್ಮ ಸಂಸ್ಥಾಪಿಸಿದ ನಾವು ಶಸ್ತ್ರ ಹೂಡಬೇಕು. ಬಡತನವನ್ನು ಅಳಿಸಲು ಪರಸ್ಪರ ಸಹಕಾರದಿಂದ ಆ ತಾಯಿಯ ಹೆಸರಲ್ಲಿ ಒಂದಾಗಿ ದುಡಿಯಬೇಕು ಎಂಬ ಸಂದೇಶವನ್ನು ಕೊಡುತ್ತದೆ. ಮುಖ್ಯವಾಗಿ ಎಲ್ಲ ಧಾರ್ಮಿಕ ಆಚರಣೆಗಳು ಸಾಮಾಜಿಕ ಉತ್ಸವದ ರೂಪ ತಾಳಿ ಆಚರಿಸಲ್ಪಡುವ ಉದ್ದೇಶವೇ ಅದು. ಸಾಮಾಜಿಕ ಸಮಾನತೆಯ ಸ್ಥಾಪನೆ ಪರಸ್ಪರ ಸಹಕಾರ ಮನೋಭಾವನೆ ಒಂದಾಗಿ ದುಡಿಯುವ ಸೇರಿ ನಲಿಯುವ ಈ ಉದ್ದೇಶ ಇಂತಹ ಹಾಡುಗಳಿಂದ ನೆರವೇರುತ್ತದೆ. ಪುಟ್ಟಣ್ಣ ಕಣಗಾಲರಂತಹ ಧೀಮಂತ ನಿರ್ದೇಶಕರು ಈ ತರಹದ ಸಾಮಾಜಿಕ ಕಳಕಳಿಯನ್ನು ಸಂದೇಶವನ್ನು ಈ ಹಾಡಿನ ಮೂಲಕ ಎತ್ತಿ ಹಿಡಿದಿದ್ದಾರೆ. ಹಿಂದಿನ ಚಿತ್ರಗಳಲ್ಲಿ ಇರುತ್ತಿದ್ದ ಒಳ್ಳೆಯ ವಿಷಯಗಳು ಇವೇ. ಮನರಂಜನೆಯ ಮೂಲಕ ಒಳಿತು ಕೆಡುಕಿನ ಬೋಧನೆ ಹಾಗೂ ಕೂಡಿ ದುಡಿಯುವ ಒಂದಾಗಿ ನಲಿಯುವ ಪಾಠ. “ಸ್ವಾಮಿ ಕಾರ್ಯದೊಂದಿಗೆ ಸ್ವಕಾರ್ಯ” ಎಂಬಂತೆ ಇಂತಹ ಚಿತ್ರಗಳು ಹಾಡುಗಳು ಈಗ ಮರೆಯಾಗಿರುವುದು ಕಾಲ ಧರ್ಮ ಪ್ರಭಾವ ಎನ್ನೋಣವೇ? ಕಾಲಾಯ ತಸ್ಮೈ ನಮಃ!

ಕಾಡುವ ಹಾಡು Read Post »

ಇತರೆ

ಲೇಖನ

ಆಧ್ಯಾತ್ಮಕ್ಕೂ, ಅರ್ಥಶಾಸ್ತ್ರಕ್ಕೂ ಬಿಡಲಾರದ ನಂಟು….. ಗಣೇಶ ಭಟ್ ಶಿರಸಿ . ಆಧ್ಯಾತ್ಮದ ವಿಚಾರಗಳನ್ನು ಚರ್ಚಿಸುವಾಗ ದೈನಂದಿನ ಬದುಕಿನ ವಿಚಾರಗಳ ಕುರಿತು ಹೇಳುವದು, ಅರ್ಥಶಾಸ್ತ್ರದೊಡನೆ ಸಂಬಂಧ ಜೋಡಿಸುವದು ಸರಿಯಲ್ಲವೆಂದು ಹಲವರು ಅಭಿಪ್ರಾಯ ಪಡುತ್ತಾರೆ. ಭಾರತದ ದರ್ಶನಶಾಸ್ತ್ರದ, ಬದುಕಿನ ರೀತಿನೀತಿಗಳ ರಕ್ಷಣೆಯ ಗುತ್ತಿಗೆ ಪಡೆದವರಂತೆ ವರ್ತಿಸುವ ಹಲವರು ಆಧ್ಯಾತ್ಮಕ್ಕೂ , ಅರ್ಥಶಾಸ್ತ್ರಕ್ಕೂ ಸಂಬಂಧವೇ ಇಲ್ಲವೆಂದು ಬೊಬ್ಬೆ ಹೊಡೆಯುತ್ತಾರೆ. ಅವರ ಅರಿವಿನ ವ್ಯಾಪ್ತಿಯ ಸೀಮಿತತೆಯೇ ಇದಕ್ಕೆ ಕಾರಣ. ಮಾನವನ ಬದುಕಿನ ಗುರಿಯನ್ನು ಧರ್ಮ, ಅರ್ಥ, ಕಾಮ , ಮೋಕ್ಷಗಳೆಂಬ ಚತುರ್ವರ್ಗಗಳಾಗಿ ಗುರ್ತಿಸುತ್ತಾರೆ. ದೈಹಿಕ, ಮಾನಸಿಕ, ಆಧ್ಯಾತ್ಮಿಕ ಹೀಗೆ ಮೂರು ಸ್ತರಗಳಲ್ಲಿ ಅಸ್ತಿತ್ವವನ್ನು ಹೊಂದಿರುವ ಮಾನವರು ವಿಕಾಸ ಪಥದಲ್ಲಿ ಕ್ರಮಿಸುತ್ತಿರುವಾಗ ಯಾವ ಸ್ತರವನ್ನೂ ನಿರ್ಲಕ್ಷಿಸಲು ಸಾಧ್ಯವಾಗದು. ಪರಿಪೂರ್ಣತೆಯಿಂದ ಬಂದು ಪರಿಪೂರ್ಣತೆಯಲ್ಲಿ ಒಂದಾಗುವ ಸೃಷ್ಟಿ ಚಕ್ರದಲ್ಲಿ ಮಾನವ ಜೀವನ ಅಮೂಲ್ಯವಾದುದು. ಮಾನವನ ಭೌತಿಕ ಅಸ್ತಿತ್ವದ ಅವಶ್ಯಕತೆಗಳನ್ನು ಕಾಮ ಎಂದು ಸಂಸ್ಕೃತದಲ್ಲಿ ಹೇಳುತ್ತಾರೆ. ಮಾನಸಿಕ ತವಕ, ಚಡಪಡಿಕೆಗಳ ನಿವಾರಣೆಯಾಗುವುದು ಅರ್ಥದಿಂದ. ಮನೋ- ಆಧ್ಯಾತ್ಮಿಕ ಹಂಬಲದ ಪೂರೈಕೆಯ ಪ್ರಯತ್ನ ಧರ್ಮ. ಆಧ್ಯಾತ್ಮದ ಉತ್ಕಟ ಆಕಾಂಕ್ಷೆಯ ಪೂರ್ತಿಯೇ ಮೋಕ್ಷ. ಈ ನಾಲ್ಕು ವರ್ಗಗಳ ಅನುಸರಣೆ ಮಾನವ ಜೀವನದಲ್ಲಿ ಅನಿವಾರ್ಯ. ಸೀಮಿತತೆಯಿಂದ ಅನಂತತೆಯೆಡೆಗಿನ ಪಯಣವೇ ಜೀವನ ಎನ್ನುತ್ತಾರೆ. ಸಾಂತವೇ ಅನಂತವಾಗುವ ಪ್ರಕ್ರಿಯೆ ಮೋಕ್ಷ. ಇದು ಮಾನವ ಜೀವನದ ಅಂತಿಮ ಗುರಿ. ಮೋಕ್ಷದ ಹಲವು ಅವೈಜ್ಞಾನಿಕ , ಅತಾರ್ಕಿಕ ಕಲ್ಪನೆಗಳು ಪ್ರಚಾರದಲ್ಲಿವೆ. ಯಾವುದೋ ನದಿಯಲ್ಲಿ ಮುಳುಗು ಹಾಕುವುದರಿಂದ ಮೋಕ್ಷ ಪ್ರಾಪ್ತಿಯೆಂದು ಹಲವರನ್ನು ನಂಬಿಸಲಾಗಿದೆ. ವ್ಯಕ್ತಿ ಮರಣ ಹೊಂದಿದ ನಂತರ ಅವರ ಮಕ್ಕಳು ಅಥವಾ ಹತ್ತಿರದ ಸಂಬಂಧಿಗಳು ಪ್ರಾರ್ಥಿಸುವುದರಿಂದ ಅಥವಾ ನಿರ್ದಿಷ್ಟ ಪೂಜೆ, ಆಚರಣೆಗಳ ಮೂಲಕ ಮೃತರಿಗೆ ಮೊಕ್ಷ ಪ್ರಾಪ್ತಿಯಾಗುತ್ತದೆ ಎಂದು ಮುಂತಾದ ವಿವಿಧ ರೀತಿಯಲ್ಲಿ ಹಲವರು ನಂಬಿಕೊಂಡಿದ್ದಾರೆ. ಮೋಕ್ಷ ಎಂದರೆ ಆತ್ಮ-ಪರಮಾತ್ಮನಲ್ಲಿ ಒಂದಾಗುವುದು ಎಂದು ದರ್ಶನಶಾಸ್ತ್ರ ಹೇಳುತ್ತದೆ. ಹುಟ್ಟು- ಸಾವಿನ ಚಕ್ರದಿಂದ ಬಿಡುಗಡೆ ಪಡೆಯುವ ಹಂತವಿದು. ಬಿಂದು ಸಿಂಧುವಿನಲ್ಲಿ ಒಂದಾಗಿ ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿ. ವೈಜ್ಞಾನಿಕವಾಗಿ ವಿವರಿಸುವುದಾದರೆ ಜೀವ ವಿಕಾಸದ ಕೊನೆಯ ಹಂತವೇ ದಾರ್ಶನಿಕರು ವಿವರಿಸುವ ಮೋಕ್ಷ. ಏಕಕೋಶ ಜೀವಿಯಿಂದ ಬಹುಕೋಶ ಜೀವಿಯಾಗಿ ಸಸ್ಯ, ಗಿಡ, ಮರ, ಕ್ರಿಮಿ, ಕೀಟ, ಪಶು, ಪಕ್ಷಿ, ಪ್ರಾಣಿ, ಸಸ್ತನಿ, ಮಂಗ ಹಾಗೂ ಮಾನವನಾಗಿ ವಿಕಾಸ ನಡೆಯಿತೆಂದು ವಿಜ್ಞಾನ ಹೇಳುತ್ತದೆ. ಮಾನವನ ಹುಟ್ಟಿನೊಂದಿಗೆ ವಿಕಾಸ ಕ್ರಿಯೆ ನಿಂತು ಹೋಯಿತೇ? ಮಾನವನ ಹಂತದಿಂದ ಮುಂದೆ ವಿಕಾಸ ಇಲ್ಲವೇ? ವಿಕಾಸ ಪಥದಲ್ಲಿ ಕಾಣಿಸಿಕೊಂಡ ವಿವಿಧ ಜೀವಿಗಳ ನಡುವಿನ ಕೊಂಡಿ ಯಾವುದು ಮತ್ತು ವಿವಿಧ ಜೀವಿಗಳ ದೈಹಿಕ, ಮಾನಸಿಕ, ಬದಲಾವಣೆಗೆ ಕಾರಣಗಳೇನು? ಜೀವೋದ್ಭವ ಹೇಗಾಯಿತು? ಮನಸ್ಸು ಎಂದು, ಹೇಗೆ ಹುಟ್ಟಿಕೊಂಡಿತು? ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ವಿಜ್ಞಾನಿಗಳು ಇನ್ನೂ ತಿಣುಕಾಡುತ್ತಿದ್ದಾರೆ. ಆದರೆ ಭಾರತೀಯ ದರ್ಶನ ಶಾಸ್ತ್ರದಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ತಾರ್ಕಿಕ ಉತ್ತರವಿದೆ. ಪರಮಪ್ರಜ್ಞೆ ಅಥವಾ ಅನಂತತೆಯ ಇಚ್ಛೆಯಿಂದಲೇ ವಿಶ್ವಮನದ ರಚನೆಯಾಗಿ ಸೂಕ್ಷ್ಮದಿಂದ ಸ್ಥೂಲೀಕರಣ ಪ್ರಾರಂಭವಾಯಿತು. ಪಂಚ ಮಹಾಭೂತಗಳೆಂದು ಕರೆಯಲ್ಪಡುವ ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ , ತತ್ವಗಳ ಸೃಷ್ಟಿಯಾಯಿತು. ಅನಂತತೆಯ ಅತ್ಯಂತ ಜಡ ಸ್ಥಿತಿಯೇ ಪೃಥ್ವಿ ಅಥವಾ ಘನ ತತ್ವ. ಈ ಸ್ಥಿತಿಯೂ ಅದೇ ಅನಂತತೆಯ ಒಂದು ರೂಪವಾಗಿರುವುದರಿಂದಲೇ ಅದರಲ್ಲಿಯೂ ಚೇತನವಿದೆ, ಮನಸ್ಸು ಸುಪ್ತಾವಸ್ಥೆಯಲ್ಲಿದೆಯೆಂದು ಭಾರತೀಯ ಚಿಂತನೆ ಹೇಳುತ್ತದೆ. ಆದ್ದರಿಂದಲೇ ಅಣು, ರೇಣು, ತೃಣ, ಕಾಷ್ಠಗಳಲ್ಲಿಯೂ ಪರಮಾತ್ಮನನ್ನು ಕಾಣುವುದು ಈ ನೆಲೆದ ಸ್ವಭಾವ. ಕಲ್ಲಿನಲ್ಲಿಯೂ ಪರಮಾತ್ಮನಿದ್ದಾನೆ ಎಂಬುದನ್ನು ತಿರುಚಿ ಕಲ್ಲಿನಲ್ಲೇ ಪರಮಾತ್ಮನಿದ್ದಾನೆಂದು ನಂಬಿಸುವವರು ಆಧ್ಯಾತ್ಮ ರಂಗದ ಶೋಷಕರು. ಎಲ್ಲೆಡೆ ಪರಮಾತ್ಮನಿದ್ದಾನೆ ಎನ್ನುವುದು ತಾರ್ಕಿಕ. ಪರಮಾತ್ಮ ಇಲ್ಲೇ ಇದ್ದಾನೆ ಎನ್ನುವುದು ಅತಾರ್ಕಿಕ. ಜಡ ವಸ್ತುವಿನಲ್ಲಿ ಸುಪ್ತವಾಗಿರುವ ಚೈತನ್ಯ ಶಕ್ತಿಯೇ ಸೂಕ್ತ ಪರಿಸರ ದೊರಕಿದಾಗಿ ಏಕಕೋಶ ಜೀವಿಯಾಗಿ ರೂಪ ತಾಳುತ್ತದೆ. ಅದರಲ್ಲಿ ಕೂಡಾ ಸುಪ್ತ ಮನಸ್ಸಿರುತ್ತದೆ. ಇಡೀ ವಿಕಾಸ ಪ್ರಕ್ರಿಯೆಯ ಮೂಲ ಉದ್ದೇಶವೇ ಮನಸ್ಸಿನ ವಿಕಾಸ ಪರಮ ಪ್ರಜ್ಞೆ ಅಥವಾ ಅನಂತತೆಯ ಪ್ರತಿಫಲನದ ಸಾಮಥ್ರ್ಯ ವೃದ್ಧಿಯೇ ವಿಕಾಸದ ದಾರಿ. ವಿಕಸಿತವಾಗುತ್ತಿರುವ ಮನಸ್ಸಿಗೆ ಆಧಾರ ನೀಡುವ ಸಲುವಾಗಿ ಭೌತಿಕ, ಜೈವಿಕ ಬದಲಾವಣೆಗಳಾಗಿ ವಿವಿಧ ಜೀವಿಗಳು ರೂಪುಗೊಂಡವು. ಏಕಕೋಶ ಜೀವಿಯ ಮನಸ್ಸೇ ವಿಕಾಸ ಹೊಂದುತ್ತಾ ತನ್ನ ಮುಂದಿನ ವಿಕಾಸದ ಪಥದಲ್ಲಿ ಸಾಗಲು ಮಾನವ ದೇಹದಲ್ಲಿ ಆಶ್ರಯ ಪಡೆಯುತ್ತದೆ. ಇಂದಿನ ಮಾನವ ಹಿಂದೆ ಎಂದೋ ಒಂದು ಕಾಲದಲ್ಲಿ ಏಕಕೋಶ ಜೀವಿಯಾಗಿದ್ದು, ವಿಕಾಸದ ಎಲ್ಲ ಹಂತಗಳಲ್ಲಿ ಹಾದು ಬಂದಿರುವುದನ್ನು ವಿಜ್ಞಾನವೂ ದೃಢಪಡಿಸುತ್ತದೆ. ಕೋಟಿ, ಕೋಟಿ ಜನ್ಮಗಳ ನಂತರ ಮಾನವ ಜೀವನ ಲಭ್ಯವಾಗುತ್ತದೆಂದು ಭಾರತೀಯ ತತ್ವಶಾಸ್ತ್ರದಲ್ಲಿ ಹೇಳಿರುವುದು ಈ ಕಾರಣಕ್ಕಾಗಿ. ಮಿದುಳು ಮನಸ್ಸಿನ ಆಶ್ರಯ ತಾಣವೇ ಹೊರತು ಅದೇ ಮನಸ್ಸಲ್ಲ. ವ್ಯಕ್ತಿಯ ಮರಣದ ನಂತರವೂ ಆ ಮನಸ್ಸು ಅಸ್ತಿತ್ವದಲ್ಲಿರುತ್ತದೆ. ಮುಂದಿನ ವಿಕಾಸಕ್ಕಾಗಿ ಪುನರ್ಜನ್ಮ ತಾಳಲೇ ಬೇಕಾಗುತ್ತದೆ. ( ಟಿವಿಗಳಲ್ಲಿ ತೋರಿಸುವ ಪುನರ್ಜನ್ಮದ ಕಥೆ ಭಾರಿ ಬೊಗಳೆ ಹಾಗೂ ಅತಾರ್ಕಿಕ). ಸೂಕ್ಷ್ಮದಿಂದ ಜಡವಾಗುವ ಪ್ರಕ್ರಿಯೆಯನ್ನು ಸಂಚರ ಎಂದೂ ಜಡದಿಂದ ಸೂಕ್ಷ್ಮತೆಯೆಡೆಗಿನ ಚಲನೆಯನ್ನು ಪ್ರತಿ ಸಂಚರ ಎಂದೂ ಹೇಳುತ್ತಾರೆ. ಸಂಚರ- ಪ್ರತಿ ಸಂಚರಗಳೆರಡೂ ಸೇರಿ ಸೃಷ್ಟಿ ಚಕ್ರವಾಗುತ್ತದೆ. ಮಾನವನಾಗುವ ಹಂತದವರೆಗೆ ವಿಕಾಸದ ದಾರಿ ಪ್ರಕೃತಿ ನಿಯಂತ್ರಿತ. ಇದಕ್ಕೂ ಮುಂದಿನ ವಿಕಾಸದ ಪಥದಲ್ಲಿ ಸ್ವಪ್ರಯತ್ನದಿಂದಲೂ ಸಾಗುವ ಸಾಮಥ್ರ್ಯ ಮಾನವನಿಗೆ ಇದೆ. ಮನಸ್ಸನ್ನು ಏಕಾಗ್ರಗೊಳಿಸಿ ನಡೆಸುವ ಆಧ್ಯಾತ್ಮ ಸಾಧನೆಯಿಂದಲೇ ಮುಂದಿನ ವಿಕಾಸ ಸಾಧ್ಯ. ಆಧ್ಯಾತ್ಮವೆಂದರೆ ಜೀವನದಿಂದ ವಿಮುಖರಾಗಿ ಪಲಾಯನ ಮಾಡುವುದಲ್ಲ. ಆಧ್ಯಾತ್ಮದ ದಾರಿಯಲ್ಲಿ ಸಾಗಲು ಸಂಸಾರ ಬಿಟ್ಟು, ಖಾವಿ ತೊಟ್ಟು ಸನ್ಯಾಸಿಯಾಗಬೇಕೆಂಬುದು ತಪ್ಪು ಕಲ್ಪನೆ. ಮೂಲೆ ಸೇರಿ ಮೂಗು ಹಿಡಿದು, ಕಣ್ಮುಚ್ಚಿ ಕುಳಿತುಕೊಳ್ಳುವುದೇ ಆಧ್ಯಾತ್ಮ ಸಾಧನೆಯಲ್ಲ. ಬಾಹ್ಯ ಮತ್ತು ಆಂತರಿಕ ಪ್ರಪಂಚವನ್ನು ಒಂದೇ ಅಸ್ತಿತ್ವದ ಅಭಿವ್ಯಕ್ತಿಯ ವಿವಿಧ ರೂಪಗಳೆಂದು ಗ್ರಹಿಸಿ, ತನ್ನಂತೆಯೇ ಇತರರು ಎಂದು ಭಾವಿಸಿ, ಯೋಚಿಸಿ, ವ್ಯವಹರಿಸುವ ಮನಸ್ಥಿತಿಯೊಂದಿಗೆ ಮನಸ್ಸನ್ನು ಏಕಾಗ್ರಗೊಳಿಸಿ ಅನಂತತೆಯನ್ನು ಆರೋಹಿಸಿದಾಗ ಆಧ್ಯಾತ್ಮ ಸಾಧನೆಯಾಗುತ್ತದೆ. ಈ ಪ್ರಕ್ರಿಯೆ ಧರ್ಮಾಚರಣೆ ಎನಿಸಿಕೊಳ್ಳುತ್ತದೆ. ಧರ್ಮ ಎಂದರೆ ಸ್ವಭಾವ. ವಿಕಾಸ ಹೊಂದುವದು ಮಾನವನ ಸ್ವಭಾವ. ಮಾನವರ ಧರ್ಮ. ಆದ್ದರಿಂದಲೇ ಮಾನವರೆಲ್ಲರ ಧರ್ಮ ಒಂದೇ. ನಾವು ಧರ್ಮವೆಂದು ಕರೆಯುತ್ತಿರುವ ವಿವಿಧ ಆಚರಣೆ ಆಧಾರಿತ ನಂಬಿಕೆಗಳು ಮತ. ಉದಾ: ಹಿಂದೂ, ಕ್ರಿಶ್ಚಿಯನ್, ಇಸ್ಲಾಂ, ಬುದ್ಧ, ಜೈನ ಇತ್ಯಾದಿಗಳೆಲ್ಲವೂ ಮತಗಳೇ ಹೊರತು ನೈಜ ಅರ್ಥದಲ್ಲಿ ಧರ್ಮ ಎನಿಸಿಕೊಳ್ಳುವುದಿಲ್ಲ. ಧರ್ಮದ ಆಚರಣೆಗೆ ಬಾಹ್ಯ ಪರಿಕರಗಳ , ಬಾಹ್ಯ ಆಡಂಬರಗಳ ಅಗತ್ಯವಿಲ್ಲ. ಧರ್ಮಾಚರಣೆ ಅರ್ಥಾತ್ ಆಧ್ಯಾತ್ಮ ಸಾಧನೆ ಪ್ರತಿಯೋರ್ವ ಮಾನವನ ಹಕ್ಕು ಮತ್ತು ಕರ್ತವ್ಯ. ಇದರಲ್ಲಿ ಸ್ತ್ರೀ – ಪುರುಷ ಎಂಬ ಭೇದವಿಲ್ಲ. ಆಧ್ಯಾತ್ಮಿಕ ಸಾಧನೆಯ ಮೂಲ ಅವಶ್ಯಕತೆ ಮಾನವ ದೇಹ. ಆದ್ದರಿಂದ ದೇಹದ ಪಾಲನೆ, ಪೋಷಣೆಯನ್ನು ನಿರ್ಲಕ್ಷಿಸಲಾಗದು. ‘ಬ್ರಹ್ಮ ಸತ್ಯಮ್’ ಎನ್ನುವುದು ಸರಿ. ಆದರೆ ನಾವು ಬದುಕುತ್ತಿರುವ ಜಗತ್ತನ್ನು ಮಿಥ್ಯೆಯೆಂದು ನಿರಾಕರಿಸುವುದು ನಮ್ಮನ್ನೆ ನಾವು ಮೋಸಗೊಳಿಸಿಕೊಳ್ಳುವದಾಗಿದೆ. ದೇಹದಲ್ಲಿ ಜೀವ ಇರುವವರೆಗೂ ಆ ವ್ಯಕ್ತಿಯ ಪಾಲಿಗೆ ಬಾಹ್ಯ ಜಗತ್ತು ಕೂಡಾ ಹೋಲಿಕೆಯ ಸತ್ಯ ಅಥವಾ ಸಾಪೇಕ್ಷಿತ ಸತ್ಯ. ‘ಬ್ರಹ್ಮ ಸತ್ಯಂ ಜಗದಪಿ ಸತ್ಯಮಾಪೇಕ್ಷಿಕಂ’ ( ಆನಂದ ಸೂತ್ರಮ್ 2-14) ಎನ್ನುವುದೇ ಸಮಂಜಸ. ಆದ್ದರಿಂದ ಆಧ್ಯಾತ್ಮ ಸಾಧನೆಗೆ ಪೂರಕವಾದ ವಾತಾವರಣ ಎಲ್ಲರಿಗಾಗಿ ಕಲ್ಪಿಸುವುದು ಸಮಾಜದ ಹೊಣೆಗಾರಿಕೆ. ಒಪ್ಪತ್ತಿನ ಊಟಕ್ಕಾಗಿ ಪರದಾಡುವ, ಜೀವನದ ಕನಿಷ್ಠ ಅಗತ್ಯತೆಗಳನ್ನು ಪೂರೈಸಿಕೊಳ್ಳಲೋಸುಗವೇ, ದಿನವಿಡೀ ದುಡಿಯಲೇಬೇಕಾದ ಜನರಿಗೆ ಆಧ್ಯಾತ್ಮ ಸಾಧನೆಯ ಕುರಿತು ಭೋದಿಸುವದು ಕ್ರೂರ ವ್ಯಂಗ್ಯ. ಪ್ರತಿಯೋರ್ವ ವ್ಯಕ್ತಿಗೂ ಆಹಾರ, ಬಟ್ಟೆ, ವಸತಿ, ಶಿಕ್ಷಣ , ಔಷದೋಪಚಾರಗಳು ಲಭ್ಯವಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಕಾದುದು ಸಮಾಜದ ಹಿತಚಿಂತಕರ ಕರ್ತವ್ಯ. ಇಂತಹ ವ್ಯವಸ್ಥೆಯನ್ನು ರೂಪಿಸುವ ಚಿಂತನೆ, ಕಾರ್ಯವಿಧಾನವೇ ಅರ್ಥಶಾಸ್ತ್ರ. ಅರ್ಥಶಾಸ್ತ್ರವೆಂದರೆ ಇಕೊನಿಮಿಕ್ಸ್ ( ಧನ ಶಾಸ್ತ್ರ) ಅಲ್ಲ. ಅರ್ಥ ಶಬ್ದಕ್ಕೆ ಎರಡು ವಿವರಣೆಗಳಿವೆ. ಮಾನವನ ಭೌತಿಕ ಅಸ್ತಿತ್ವದ ತೊಂದರೆಗಳನ್ನು ನಿವಾರಣೆ ಮಾಡುವ ಮಾಧ್ಯಮವೇ ಅರ್ಥ. ಈ ಸಂದರ್ಭದಲ್ಲಿ ಅರ್ಥಕ್ಕೆ ಹಣವೆನ್ನುವ ವಿವರಣೆ ಸಲ್ಲುತ್ತದೆ. ಮಾನಸಿಕ ಬೇಗುದಿಯನ್ನು , ತೋಳಲಾಟವನ್ನು ಪರಿಹರಿಸುವುದಕ್ಕೂ ಅರ್ಥ ಎನ್ನುತ್ತಾರೆ. ಅದು ಕೇವಲ ಹಣದಿಂದಲೇ ಆಗುವಂತಹುದಲ್ಲ. ಮಾನಸಿಕ ನೆಮ್ಮದಿಯನ್ನು ತಾತ್ಕಾಲಿಕವಾಗಿ ನೀಡುವುದು ಅರ್ಥ. ಶಾಶ್ವತವಾಗಿ ನೀಡುವುದು ಪರಮಾರ್ಥ. ಮಾನವನ ಭೌತಿಕ ಅಸ್ತಿತ್ವವನ್ನು ರಕ್ಷಿಸಿ ಉಳಿಸುವದು ಮತ್ತು ಮಾನಸಿಕ ಹಸಿವನ್ನು ನೀಗಿಸುವದು ಅರ್ಥಶಾಸ್ತ್ರದ ಗುರಿ. ಇಂದು ಪ್ರಚಲಿತವಿರುವುದು ಧನಶಾಸ್ತ್ರ; ಬೇಕಿರುವುದು ಅರ್ಥಶಾಸ್ತ್ರ. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಣಗಳನ್ನು ಮಾನವರು ಪಾಲಿಸಬೇಕೆಂದು ಭಾರತದ ದಾರ್ಶನಿಕರು ತಿಳಿಸಿದ್ದು ಈ ಅರ್ಥದಲ್ಲಿ. ಭೌತಿಕ ಅಸ್ತಿತ್ವವನ್ನು ಕಾಪಾಡಿಕೊಂಡು ಧರ್ಮಾಚರಣೆ ಮಾಡಲು ಅವಕಾಶ ಕಲ್ಪಿಸಿಕೊಡುವುದು ಅರ್ಥಶಾಸ್ತ್ರ. ಧರ್ಮಾಚರಣೆಯಿಂದ ಮೋಕ್ಷ ಪ್ರಾಪ್ತಿಯಾಗುತ್ತದೆಂದು ಅನುಭಾವಿಗಳು ಅರಿತಿದ್ದರು. ಹಣದಿಂದಲೇ ಧರ್ಮಾಚರಣೆ ಮಾಡುತ್ತೇವೆಂಬ ಭ್ರಮೆಗೆ ಹಲವರು ಸಿಲುಕಿದ್ದಾರೆ. ಬಡವರಿಗೆ, ದೇವಾಲಯ, ಚರ್ಚು, ಮಸೀದಿಗಳಿಗೆ ದೇಣಿಗೆ ನೀಡುವುದು, ಆಡಂಬರದ ಪೂಜೆಗಳನ್ನು ನೆರವೇರಿಸುವುದು, ಖಾವಿ ತೊಟ್ಟವರ ಸೇವೆ ಮಾಡುವುದೇ ಧರ್ಮಾಚರಣೆಯೆಂದು ಜನಸಾಮಾನ್ಯರನ್ನು ನಂಬಿಸಲಾಗಿದೆ. ಆಧ್ಯಾತ್ಮವೆಂದರೆ ಬದುಕಿನ ವಾಸ್ತವದ ನಿರಾಕರಣೆಯೆಂದು ತಪ್ಪಾಗಿ ಬಿಂಬಿಸಿ ಅದಕ್ಕಿಷ್ಟು ನಿಗೂಢತೆಯ ಲೇಪವನ್ನು ಹಚ್ಚಿ ಜನರನ್ನು ಭಯಭೀತರನ್ನಾಗಿಸಲಾಗಿದೆ. ಧನ ಗಳಿಕೆ ಮತ್ತು ಸಂಗ್ರಹಣೆಯೇ ಜೀವನದ ಗುರಿಯೆಂದು ನಂಬಿರುವವರ ಜೀವನದ ಬಹುಪಾಲು ಸಮಯ ಅದರಲ್ಲೇ ಕಳೆದು ಹೋಗುತ್ತದೆ. ಶ್ರೇಷ್ಠ ವಿಚಾರಗಳನ್ನು ಅರಿಯುವ, ಅಧ್ಯಯನ ಮಾಡುವ , ಆಧ್ಯಾತ್ಮ ಸಾಧನೆಯ ಆನಂದವನ್ನು ಅನುಭವಿಸುವುದರಿಂದ ಅವರು ವಂಚಿತರಾಗುತ್ತಿದ್ದಾರೆ. ಸ್ವಾರ್ಥ ಮತ್ತು ಸ್ವ ಕೇಂದ್ರಿತ ಧನಶಾಸ್ತ್ರದ ಚಿಂತನೆಗಳಿಂದ ಪ್ರಭಾವಿತವಾದ ಆರ್ಥಿಕ ವ್ಯವಸ್ಥೆಯಲ್ಲಿ ಸಿಲುಕಿ ಅಸಹಾಯಕತೆ ಅನುಭವಿಸುತ್ತಿರುವವರಿಗೆ ಆಧ್ಯಾತ್ಮದ ಕುರಿತು ಚಿಂತಿಸಲೂ ಸಮಯವಿಲ್ಲವಾಗಿದೆ. ಬಾಹ್ಯಾಡಂಬರ, ಬಾಹ್ಯ ಪೂಜೆ, ಪ್ರಾರ್ಥನೆಗಳಿಂದ ತಮ್ಮ ಕಷ್ಟಗಳು ಪರಿಹಾರ ತಮ್ಮ ಭೌತಿಕ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಸಾಧ್ಯವಾದಿತೆಂಬ ನಿರೀಕ್ಷೆಯಲ್ಲಿ ಅವರು ಇನ್ನಷ್ಟು ಮೌಢ್ಯಾಚರಣೆಗಳಿಗೆ ಬಲಿಯಾಗುತ್ತಿದ್ದಾರೆ. ಧನಶಾಸ್ತ್ರದ ಶೋಷಣಾ ಕುಣಿಕೆಗಳನ್ನು ಹರಿದೊಗೆಯಲು ಅರ್ಥಶಾಸ್ತ್ರದ ಅನುಷ್ಠಾನದಿಂದ ಮಾತ್ರ ಸಾಧ್ಯ. ಪ್ರತಿಯೋರ್ವ ವ್ಯಕ್ತಿಗೂ ಜೀವನದ ಕನಿಷ್ಠ ಅಗತ್ಯತೆಗಳನ್ನು ಪೂರೈಸುವ ಹೊಣೆಗಾರಿಕೆ ಸಮಾಜ ಅಂದರೆ ಸರ್ಕಾರಕ್ಕೆ ಇದೆ. ಸರ್ಕಾರದ ಅಥವಾ ಧನವಂತರ ಔದಾರ್ಯದ ಭಿಕ್ಷೆಯಿಂದ ಇದು ಆಗಬೇಕಿಲ್ಲ. ದುಡಿಯುವ ಸಾಮಥ್ರ್ಯವುಳ್ಳ ಪ್ರತಿಯೋರ್ವ ವ್ಯಕ್ತಿಗೂ ದುಡಿಮೆಯ ಅವಕಾಶ ನೀಡುವುದು, ದುಡಿಮೆಯ ಪ್ರತಿಫಲದಿಂದ ದುಡಿಮೆಗಾರ ಹಾಗೂ ಅವರ ಅವಲಂಬಿತರ ಜೀವನದ ಮೂಲಭೂತ ಅವಶ್ಯಕತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಔಷಧೋಪಚಾರಗಳ ಅಗತ್ಯತೆಗಳನ್ನು ಪೂರೈಸಿಕೊಳ್ಳುವಂಥ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದು ಸರ್ಕಾರದ ಹೊಣೆಗಾರಿಕೆ. ಇಂತಹ ವ್ಯವಸ್ಥೆಯ ನಿರ್ಮಾಣ ಬರೀ ಕನಸಲ್ಲ. ವಾಸ್ತವವಾಗಿಸಲು ಸಾಧ್ಯ. ಇಂದಿನ ಸ್ವಾರ್ಥ ಕೇಂದ್ರಿತ ವ್ಯವಸ್ಥೆಯನ್ನು ತೊಲಗಿಸಿ, ಆರ್ಥಿಕ ವಿಕೇಂದ್ರೀಕರಣವನ್ನು ಜಾರಿಗೊಳಿಸಿದಾಗ ಸಂಪನ್ಮೂಲಗಳ ಹತೋಟಿ ಜನಸಾಮಾನ್ಯರಿಗೆ ಸಿಗುತ್ತದೆ. ಲಾಭ ಗಳಿಕೆ, ಲಾಭ ಹೆಚ್ಚಳದ ಉದ್ದೇಶದಿಂದಲೇ ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳ ಬದಲಿಗೆ, ಎಲ್ಲರಿಗೂ ಉದ್ಯೋಗ ನೀಡುವ, ಎಲ್ಲರಿಗೂ ಉತ್ತಮ ಬದುಕು ಕಟ್ಟಿಕೊಡುವ ಉದ್ದೇಶದಿಂದ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಖಾಸಗಿ ರಂಗವು ಸಹಕಾರಿ ರಂಗಕ್ಕೆ ಸ್ಥಾನ ಮಾಡಿಕೊಡುವುದು ಅನಿವಾರ್ಯವಾಗಲಿದೆ. ಇದು ಜನಾಧಿಕಾರ ಅರ್ಥ ವ್ಯವಸ್ಥೆ. ಇದರ ಉದ್ದೇಶ ಎಲ್ಲರ ಸುಖ ಮತ್ತು ಎಲ್ಲರ ಹಿತ. ಸಮಾಜದ ಪ್ರತಿಯೋರ್ವ ವ್ಯಕ್ತಿಗೂ ನೈಜ ಅರ್ಥದ ಧರ್ಮಾಚರಣೆಯಿಂದ ಆಧ್ಯಾತ್ಮದ ಪಥದಲ್ಲಿ ಸಾಗಿ ಯಶ ಪಡೆಯುವ ಅವಕಾಶ ಸೃಷ್ಟಿಸುವುದು. ಮಾನವನ ಅಸ್ತಿತ್ವದ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕವೆಂಬ ಮೂರು ಸ್ತರಗಳಲ್ಲಿ ಉನ್ನತಿ ಸಾಧಿಸಲು ಅವಕಾಶ ನೀಡುವ ಅರ್ಥವ್ಯವಸ್ಥೆಯೇ ಜನಾಧಿಕಾರ ವ್ಯವಸ್ಥೆ.

ಲೇಖನ Read Post »

ಇತರೆ

ಸ್ಮರಣೆ

ಅರು #ಪ್ರಕಾಶನ ಸಹಯೋಗದಲ್ಲಿ ಶರೀಫರನ್ನು ಅವರ ೨೦೦ ನೇ ಜಯಂತಿ ಸಂದರ್ಭದಲ್ಲಿ ನೆನಪಿಸಿಕೊಳ್ಳುವ ಒಂದು ಪ್ರಯತ್ನ ನಿನ್ನೆ ನೆರವೇರಿತು. ಕನ್ನಡದ ಅಪರೂಪದ ಆಶು ಕವಿ ಶರೀಫರ ವ್ಯಕ್ತಿತ್ವ.. ಜೀವನಗಳ ಕುರಿತು ಒಂದಷ್ಟು ಮಾತು. ಜನಮಾನಸದಲ್ಲಿ ನೆಲೆಗೊಂಡಿರುವ ಅವರ ಆಯ್ದ ೧೦ ತತ್ವ ಪದಗಳನ್ನು ಗಾಯನ ತಂಡದವರಿಂದ ಸುಶ್ರಾವ್ಯವಾಗಿ ಪ್ರಸ್ತುತಪಡಿಸುವಿಕೆ.. ಜೊತೆಗೆ ಆ ಪದಗಳ ತಾತ್ವಿಕ ವಿಶ್ಲೇಷಣೆ.. ಕೊನೆಯಲ್ಲಿ ಪುಟ್ಟದೊಂದು ಉಪಹಾರದ ರೀತಿಯ ಪ್ರಸಾದ ಸೇವನೆ.. ಇಷ್ಟು ಕಾರ್ಯಕ್ರಮದ ಒಟ್ಟು ರೂಪುರೇಷೆ.

ಸ್ಮರಣೆ Read Post »

ಇತರೆ

ಅನುಭವ

ಬೆಳಗಿನ ಚಹಾ ಹೀರುತ್ತಾ…. ಎನ್.ಶಂಕರ್ ಗೌಡ ಶರತ್ಕಾಲದ ಕಾತೀ೯ಮಾಸವಿದು. ಆರಂಭಿಕ ಚಳಿಗಾಲವಾದರೂ ನಿಧಾನವಾಗಿ ತಣ್ಣನೆಯ ಸುಳಿಗಾಳಿಯನ್ನು ಕೂಡ ತರುತ್ತದೆ.ಸಾದಾರಣ ಆಹ್ಲಾದಕರ ಹವಾಮಾನ ಹೊಂದಿದ ದಿನಗಳಿವು. ದೈಹಿಕವಾಗಿ ಹಿಮ್ಮೆಟ್ಟಿಸುವ ಸಮಯವಿದು.ರಾತ್ರಿ ದೀರ್ಘ, ಹಗಲು ಕಡಿಮೆ.ಕೆಲವರಿಗೆ ಸೋಮಾರಿತನವನ್ನು ಹೆಚ್ಚಿಸುವ ಈ ಚಳಿಗಾಲ ,ಬೆಚ್ಚಗಿನ ನೆನಪುಗಳನ್ನು ಹೊಂದಿದವರವನ್ನು ತಂಪಾಗಿರಿಸುತ್ತದೆ. ವೃದ್ಧಾಪ್ಯರಿಗೆ ಪಾಪ ಚಳಿ ಹೊರೆಯಾದರೆ,ನವ ವಧು-ವರರಿಗೆ ವರವಿದು. ಹಿಮ ಭರಿತ ಪ್ರದೇಶಗಳು ಕವಿಗಳನ್ನು ಆಕಷಿ೯ಸುತ್ತವೆ.ಜಿ.ಪಿ.ರಾಜರತ್ನಂ ರವರ ಭೂಮಿ ತಬ್ಬಿದ್ ಮೋಡ್ ಇದ್ದಂಗೆ, ಬೆಳ್ಳಿ ಬಳಸಿದ್ ರೋಡ್ ಇದ್ದಂಗೆ…..”ಮಡಿಕೇರೀಲಿ ಮಂಜು”ಗ್ರಾಮ್ಯ ಸೊಗಡಿನ ಮನಸೆಳೆವ ಪದ್ಯ ನಾವು ಕೇಳಿದ್ದೀವಲ್ಲವೆ. ಚಳಿಗಾಲದ ಹಿಮ ಸೂಯೋ೯ದಯವನ್ನು ಕೊಂಚ ಹೊತ್ತು ಕಾಡಿದರೂ ನಂತರ ರವಿಯ ಕಿರಣಗಳು ಎಷ್ಟೊಂದು ಬೆಚ್ಚಗಿನ ಅನುಭವ ಕೊಡುತ್ತವೆ.ನಮ್ಮ ಮನೆಯ ಮುಖ್ಯ ದ್ವಾರದಿಂದ ಬರುವ ಸೂಯೋ೯ದಯದ ಕಿರಣಗಳಿಗೆ ಮೈಯೊಡ್ಡಿ, ಕನ್ನಡ ಪತ್ರಿಕೆಯನ್ನು ಓದುತ್ತಾ..ಅಧಾ೯ಂಗಿ ಕೊಟ್ಟ ಚಹಾವನ್ನು ಹೀರುವ ಕ್ಷಣವನ್ನು ವಣಿ೯ಸಲಸಾಧ್ಯವಾದುದು.ಗೈರುಹಾಜ ರಾಗದಂತೆ ಪ್ರತಿನಿತ್ಯ ಸವಿಯಬೇಕೆನಿಸಿತು.ಕವಿ ಬೇಂದ್ರೆಯವರು “ಬೆಳಗು ಜಾವ”ಕವನದಲ್ಲಿ “ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯ ಕಣ್ಣ….. ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿ ನಿದ್ದೆಗಿದ್ದೆ ಸಾಕು, ಈ ತುಂಬಿ ಬಾಳು ತುಂಬಿರುವ ತನಕ, ತುಂತುಂಬಿ ಕುಡಿಯಬೇಕು.. ಹೀಗೆ ಬೆಳಗಿನ ಸೌಂದರ್ಯವನ್ನು ವಣಿ೯ಸುತ್ತಾ ಸೂಯೋ೯ದಯ ಸುಂದರ ಸೊಬಗನ್ನು ಸವಿದು ಬದುಕನ್ನು ಸಾಥ೯ಕ ಪಡಿಸಿಕೊಳ್ಳಿ ಎಂದು ಕರೆ ಕೊಡುವರು. ಈ ಸೊಬಗಿನ ಸೌಂದರ್ಯಕ್ಕೆ ಮನಸೋಲದವರಿಲ್ಲ. ಈ ಸೌಂದರ್ಯವನ್ನು ಕೊಂಚ ಹೊತ್ತು ಬದಿಗಿಟ್ಟು ಚಳಿಗಾಲದ ಬಾಲ್ಯದ ನೆನಪುಗಳ ಹಿಂತಿರುಗಿದರೆ ಸರಿಯಾದ ಬೆಚ್ಚಗಿನ ಹೊದಿಕೆಗಳಿಲ್ಲದೆ ನಿದ್ರೆ ಬರದೆ ಅಬ್ಬಬ್ಬಾ…ಚಳಿ ಎಂದು ನಡುಗಿ “ನಿ”ಆಕಾರದಲ್ಲಿ ಮೈ ಮುದುರಿಕೊಂಡು ಮಲಗಿದ್ದು ಇನ್ನೂ ಅಚ್ಚ ಹಸಿರು.ತೀವ್ರ ಚಳಿಗೆ ಅಪ್ಪ ತಾಳಲಾರದೆ ಬೀಡಿಯನ್ನು ಚೂರು ಬಿಡದಂತೆ ಅಂಚಿನವರೆಗೂ ಸೇದಿ ಸೇದಿ ಬಿಸಾಡಿದ್ದು, ಅಮ್ಮ ಹಚ್ಚಿದ ಒಲೆ ಮುಂದೆ ಕೈಗಳನ್ನು ಬಿಸಿ ಮಾಡಿ ಕೆನ್ನೆಗಳನ್ನು ಬೆಚ್ಚಗೆ ಸವರಿಕೊಂಡಿದ್ದ ನೆನಪುಗಳು ಈಗಲೂ ಬೆಚ್ಚಗೆ ಕಾಡುತ್ತಲೇ ಇವೆ. ಕೆ, ಎಸ್, ನ ರವರ “ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು, ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು….. ಹೀಗೆ ಜೀವನಪೂತಿ೯ ನಮ್ಮ ಗೊಣಗಾಟ ವಿದ್ದದ್ದೆ ಅಲ್ಲವೇ! ಏನೇ ಇರಲಿ ಪ್ರಕೃತಿಯ ಎಲ್ಲಾ ಕಾಲಮಾನಗಳ ಜತೆ ಹೊಂದಿಕೊಂಡು ಅದರ ಅನುಭವವನ್ನು ಸವಿದು ಬದುಕಿದಾಗಲೇ ಜೀವನಕ್ಕೆ ಒಂದು ಅಥ೯ವಿರುವುದು. (ಭಾನುವಾರ ನಮಗೆ ಬಿಡುವಾದರೂ “ಭಾನು”ರಜೆ ಪಡೆಯುವಂತಿಲ್ಲ.ಪೂತಿ೯ ರಜೆ ಹಾಕಿದರೆ ಅದರ ಪರಿಣಾಮವೇ ಬೇರೆ) ರಜೆ ಇದ್ದುದರಿಂದ ಬೆಳಗಿನ ಸೂಯೋ೯ದಯವನ್ನು ಸವಿಯುತ್ತಾ ಚಹಾ ಹೀರುತ್ತಾ ಒಂದಷ್ಟು ನೆನಪಿನ ಸಾಲುಗಳು.

ಅನುಭವ Read Post »

ಇತರೆ

ಮಕ್ಕಳು ಮತ್ತು ಸಾಹಿತ್ಯ

ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದು. ಎನ್.ಶೈಲಜಾ ಹಾಸನ ಅಮ್ಮ ತನ್ನ ಮಗುವನ್ನು ಮಲಗಿಸುವಾಗ ತೊಟ್ಟಿಲು ತೂಗುತ್ತಾ ಹಾಡು ಹೇಳಿ ಮಗುವನ್ನು ಮಲಗಿಸಲು ಅನುವಾಗುತ್ತಾಳೆ. ” ಅತ್ತಿತ್ತ ನೋಡಿದಿರು, ಅತ್ತು ಹೊರಳಾಡದಿರು, ಕದ್ದು ಬರುವದು ನಿದ್ದೆ, ಮಲಗು ಮಗುವೇ, ಜೋ ಜೋಜೋ ” ಅಂತ ಲಾಲಿ ಹಾಡು ಹೇಳಿ ಮಲಗಿಸುತ್ತಾಳೆ. ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ಅಮ್ಮನ ಲಾಲಿ ಹಾಡು ಕೇಳುತ್ತಲೇ ಬೆಳೆದಿರುತ್ತಾರೆ. ಅಮ್ಮನ ಲಾಲಿ ಹಾಡು ಕೇಳುತ್ತಾ ಕೇಳುತ್ತಾ ಹಾಡು, ಕವಿತೆ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಆಸಕ್ತಿ ಬೆಳೆದು ಬಂದಿರುತ್ತದೆ. ನಂತರ ಶಾಲೆಗೆ ಹೋದ ಮೇಲೆ ಮಕ್ಕಳು ಪಠ್ಯ ಪುಸ್ತಕದಲ್ಲಿರುವ ಪದ್ಯಗಳನ್ನು ಕಲಿತು ಹಾಡುತ್ತಾ ಕವಿತೆಗಳ ಬಗ್ಗೆ ತಿಳಿದುಕೊಂಡಿರುತ್ತಾರೆ. ಆ ಪದ್ಯಗಳ ಮೂಲಕ,ಕಥೆಗಳ ಮೂಲಕ ಮಕ್ಕಳಿಗೆ ಸಾಹಿತ್ಯದ ಸವಿ ಹತ್ತಿರುತ್ತದೆ. ಪುಟ್ಟ ಪುಟ್ಟ ಹಾಡು,ಕವಿತೆ ಹೇಳಿ ಕೊಡುವುದರ ಈ ಮೂಲಕವೂ ಮಕ್ಕಳಿಗೆ ಸಾಹಿತ್ಯದ ಪರಿಚಯವನ್ನು ,ಆಸಕ್ತಿಯನ್ನು ಪ್ರತ್ಯಕ್ಷವಾಗಿ ಮೂಡಿಸಬಹುದು.ಮಕ್ಕಳು ತಾವೇ ಪುಟ್ಟ ಪುಟ್ಟ ಪದ್ಯಗಳನ್ನು ಬರೆಯಲು ,ಅದನ್ನು ಹಾಡಲು ಪ್ರೇರೇಪಿಸುವ ಮೂಲಕ ಸಾಹಿತ್ಯಾಸಕ್ತಿ ಮೂಡಿಸಿದರೆ ಕವಿತೆ ಬರೆಯಲು ಬುನಾದಿ ಹಾಕಿದಂತಾಗುತ್ತದೆ.ಶಾಲೆಯಲ್ಲಿ ಕಲಿತ “ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ ಸರಿಗಮ ಪದನಿಸ ಊದಿದನು” ಈ ಕವಿತೆ ಮಕ್ಕಳಿಗೆ ಇಷ್ಟವಾಗುವ ತುತ್ತೂರಿ ಬಗ್ಗೆ ಇರುವ ಮನಸೆಳೆಯುವ ಪದ್ಯವಾಗಿದ್ದು, ಹಾಡಿನ ಪರಿಚಯ ಮಾಡಿಸಿ ಕೊಡುತ್ತದೆ. ಮಕ್ಕಳ ಅಚ್ಚುಮೆಚ್ಚಿನ ಮುದ್ದಿನ ಪ್ರಾಣಿಯಾದ ನಾಯಿಮರಿ ಬಗ್ಗೆ ಇರುವ ಪದ್ಯ ಯಾರಿಗೆ ಗೊತ್ತಿಲ್ಲ. “ನಾಯಿಮರಿ ನಾಯಿಮರಿ ತಿಂಡಿ ಬೇಕೆ ತಿಂಡಿ ಬೇಕು ತೀರ್ಥ ಬೇಕು ಎಲ್ಲಾ ಬೇಕು ನಾಯಿಮರಿ ನಿನಗೆ ತಿಂಡಿ ಏಕೆ ಬೇಕು ತಿಂಡಿ ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು” ಈ ಪದ್ಯವಂತೂ ಎಲ್ಲಾ ಮಕ್ಕಳಿಗೂ ತುಂಬಾ ಇಷ್ಟವಾಗಿರುವ ಪದ್ಯ. ಬೆಕ್ಕಿನ ಬಗ್ಗೆ ಇರುವ ಈ ಪದ್ಯ ಹೇಳಿಯೇ,ಕೇಳಿಯೇ ಮಕ್ಕಳೆಲ್ಲ ಬೆಳೆದವರು. “ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ ಕರೆದರೂ ಇಲ್ಲ ಹಾಲು ಬೆಲ್ಲ ಕಾಯಿಸಿ ಇಟ್ಟಿದ್ದೆ” ಮಕ್ಕಳು ಮುದ್ದು ಮಾಡುವ ಪ್ರಾಣಿಗಳು ಇವು.ಮೇಲಿನ ಪದ್ಯಗಳ ಕಲಿತಿರುವ,ಅದನ್ನು ಹಾಡುವ ಮಕ್ಕಳಿಗೆ ಕವಿತೆ ಬರೆಯಲು ಇವು ಪ್ರೇರಣೆ ನೀಡುವಂತೆ ಮಾಡಿದರೆ ಮಕ್ಕಳಿಂದ ಸಾಹಿತ್ಯ ರಚನೆ ಸಾಧ್ಯವಾಗಬಹುದು.ಮೊದಲು ಕವಿತೆಗಳನ್ನು ಕೇಳಿಸಿಕೊಳ್ಳಲು ಅನುವಾಗ ಬೇಕು.ನಂತರ ಪುಟ್ಟ ಪುಟ್ಟ ಕವನವಿರುವ ಪುಸ್ತಕಗಳನ್ನು ಓದಲು ಪ್ರಯತ್ನ ನಡೆಸ ಬೇಕು.ಓದುತ್ತಾ ಓದುತ್ತಾ ಹಾಡಿಕೊಳ್ಳುತ್ತಾ ಹೋದರೆ ಕಾವ್ಯದ ರುಚಿ ಹತ್ತುತ್ತದೆ. ಆಗ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬಹುದು. ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳೆವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರಚಿತವಾದ ಸಾಹಿತ್ಯವನ್ನು ಮಕ್ಕಳ ಸಾಹಿತ್ಯವೆನ್ನಬಹುದು. ಮಕ್ಕಳ ಸಾಹಿತ್ಯ ಕಿವಿಯ ಮೂಲಕ ಗ್ರಹಿಸುವ ಲಾಲಿ ಹಾಡುಗಳಿಂದಲೇ ಮೊದಲಿಟ್ಟಿರಬಹುದು. ಅನಂತರ ಕಥೆಗಳಿಂದ ಬೆಳೆದಿರಬಹುದು. ಹಾಡುವ ಹಾಗೂ ಕಥೆ ಹೇಳುವವರ ಹಾವ ಭಾವಗಳನ್ನು ನೋಡಿಯೂ ಮಗು ಗ್ರಹಿಸಿರಬಹುದು. ಈ ಕಾರಣದಿಂದ ಮಾನವನ ಸಾಹಿತ್ಯದ ಬುನಾದಿ ಇದಾಗಿದೆ ಎಂದರೆ ತಪ್ಪಾಗಲಾರದು. ಇದರ ಮೂಲ ಜಾನಪದವಾಗಿರಬಹುದು. ಜಗತ್ತಿನಲ್ಲಿ ಇದು ಹೇಗೇ ಪ್ರಾರಂಭವಾಗಿರಲಿ ಮಕ್ಕಳಿಗೆ ಅತ್ಯಗತ್ಯವಾದುದು, ಉಪಯುಕ್ತವಾದುದು ಎನ್ನುವುದಕ್ಕೆ ಎರಡನೆಯ ಮಾತಿಲ್ಲ. ಹಿರಿಯರೂ ಇದನ್ನು ಸವಿಯಬಹುದು ಎನ್ನುವುದು ಇದರ ಒಂದು ವಿಶೇಷ ಲಕ್ಷಣ. ಮಕ್ಕಳು ಕವಿತೆ ರಚನೆ ಮಾಡಲು ಅನುಕೂಲವಾದ ವಾತಾವರಣ ಕಲ್ಪಿಸಿದರೆ ಮಕ್ಕಳಿಂದ ಕವಿತೆ ಸೃಷ್ಟಿ ಸಾಧ್ಯವಾಗುತ್ತದೆ. ತಮ್ಮ ಸುತ್ತಲಿನ ವಸ್ತುಗಳ ಮೇಲೆ ಸರಳ ಪದಗಳನ್ನು ಬಳಸಿ ಪುಟ್ಟ ಪುಟ್ಟ ಕವಿತೆಗಳನ್ನು ಬರೆಯಲು ಪ್ರಯತ್ನಿಸಬೇಕು.ಚಿಟ್ಟೆ, ಶಾಲೆ,ಮರ,ಅಪ್ಪ ,ಅಮ್ಮ ,ತಮ್ಮ , ತಂಗಿ ,ಗೊಂಬೆ, ನಾಯಿ,ಬೆಕ್ಕು,ಗಿಣಿ ,ಹಸು,ಕರು ಹೀಗೆ ತಮಗೆ ಪ್ರಿಯವಾದ,ತನಗೆ ಗೊತ್ತಿರುವ ,ತಿಳಿದಿರುವ ವಸ್ತುಗಳ ಮೇಲೆ ,ಪ್ರಾಸ ಹಾಕಿ ಆಕರ್ಷಣೆಯವಾಗಿ ಬರೆಯುವ ಪ್ರಯತ್ನ ನಡೆಸಿದರೆ ಮಕ್ಕಳಿಗೆ ಆಸಕ್ತಿ ಹುಟ್ಟುತ್ತಾ ಹೋಗುತ್ತದೆ. ಸಾಹಿತ್ಯವು ಮಕ್ಕಳಿಗೆ ನಲಿವು, ತಿಳಿವು ಎರಡನ್ನೂ ಕೊಡಬೇಕು. ಸಂಸ್ಕೃತಿ, ಶಿಕ್ಷಣ, ಕುಟುಂಬ, ಪರಿಸರ ಈ ನಾಲ್ಕರ ಪ್ರಭಾವವ ಅದರಲ್ಲಿ ಬರಬೇಕು. ಮಕ್ಕಳ ಮಾನಸಿಕ, ಬೌದ್ಧಿಕ, ಸಾಮಾಜಿಕ ಮತ್ತು ಭಾಷಿಕ ಬೆಳೆವಣಿಗೆಗೆ ಸಹಾಯಕವಾಗಬೇಕು ಮೊದಲಾದ ಅನೇಕ ಅಭಿಪ್ರಾಯಗಳು ಈ ಸಾಹಿತ್ಯ ಕುರಿತು ವ್ಯಕ್ತವಾಗಿವೆ. ಒಟ್ಟಾರೆ ಮಕ್ಕಳ ಸಾಹಿತ್ಯ ಮಕ್ಕಳಿಗೆ ಸಂತೋಷ ನೀಡಬೇಕು, ಭಾಷೆಯನ್ನು ಕಲಿಸಬೇಕು, ಆಲೋಚನಾ ಶಕ್ತಿಯನ್ನು ಬೆಳೆಸಬೇಕು, ಜೊತೆಗೆ ಬದುಕುವ ವಿವೇಕವನ್ನು ಹೊಳೆಯಿಸಬೇಕು. ಆಗ ಅದು ಸಾರ್ಥಕವಾದೀತು . ಮಕ್ಕಳು ಸಾಹಿತ್ಯ ರಚನೆ ಮಾಡುವಾಗ, ಹಿರಿಯರ,ತಂದೆ ,ತಾಯಿಯರ,ಶಿಕ್ಷಕರ, ಸಾಹಿತಿಗಳ ಮಾರ್ಗದರ್ಶನ, ಸಲಹೆ ,ಸೂಚನೆಗಳಿರುತ್ತವೆ. ಮಕ್ಕಳು ಕಥೆ, ಕವನ, ಲೇಖನಗಳು, ನಗೆ ಹನಿಗಳನ್ನು ಬರೆಯಬಹುದು. ಮಕ್ಕಳು ಕವಿಗಳ ಹಾಗೂ ಸಾಹಿತಿಗಳ ಪುಸ್ತಕಗಳನ್ನು ಓದಬೇಕು. ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲವಾಗಿದ್ದು, ಮಕ್ಕಳ ವಿಚಾರ ಮತ್ತು ಕಲ್ಪನಾ ಲೋಕದ ಸಾಹಿತ್ಯಕ್ಕೆ ಪ್ರೋತ್ಸಾಹ ಬೆಂಬಲ ನೀಡಬೇಕು . ಮಕ್ಕಳು ಬರೆದ ಕಾವ್ಯ ಸಾಹಿತ್ಯಕ್ಕೆ ಸೂಕ್ತ ಮಾರ್ಗದರ್ಶನದೊಂದಿಗೆ ಪ್ರೋತ್ಸಾಹ ನೀಡಿದಲ್ಲಿ ಬೆಳೆದ ಮನಸ್ಸುಗಳಿಂದ ಉತ್ತಮ ಸಾಹಿತ್ಯ ಹೊರಹೊಮ್ಮಲು ಸಾಧ್ಯವಿದೆ. ಮಕ್ಕಳ ಸಾಹಿತ್ಯವನ್ನು ಟೀಕಾತ್ಮಕವಾಗಿ ನೋಡುವ, ಮಕ್ಕಳ ಸಾಹಿತ್ಯವನ್ನು ವಿಮರ್ಶಾ ದಷ್ಠಿಯಿಂದ ನೋಡುವ ಬದಲು ಮಕ್ಕಳ ಸಾಹಿತ್ಯದಲ್ಲಿ ಹೊಸತನ್ನು ಕಾಣುವ ಕಾವ್ಯ ಗುಣಬೇಕು. ಅವರು ಏನೇ ಬರೆದರೂ ಉತ್ತೇಜಿಸಿ ಮತ್ತಷ್ಟು ಬರೆಯಲು ಪ್ರೇರೇಪಣೆ ನೀಡಿದ್ದಲ್ಲಿ ಅವರಿಂದ ಉತ್ತಮವಾದ ರಚನೆಯನ್ನು ನಿರೀಕ್ಷಿಸಬಹುದು. ಮಕ್ಕಳು ಪಠ್ಯಪುಸ್ತಕವಲ್ಲದೆ ಸಾಹಿತ್ಯ ಕೃತಿಗಳನ್ನು ಓದಬೇಕು.ಕೊಂಡು ಓದುವ ಹವ್ಯಾಸ ಮಕ್ಕಳಿಗೆ ಬೆಳಸಬೇಕು.ಹಬ್ಬಗಳಲ್ಲಿ, ಹುಟ್ಟು ಹಬ್ಬದ ಕಾಣಿಕೆಯಾಗಿ ಮಕ್ಕಳಿಗೆ ಪುಸ್ತಕಗಳನ್ನು ಕೊಡುವ ಸಂಸ್ಕೃತಿ ಬೆಳಸಬೇಕು.ಆಗ ಮಕ್ಕಳಿಗೆ ಓದುವ ಅಭಿರುಚಿ ಬೆಳೆಯುವುದರ ಜೊತೆಗೆ ,ಪುಸ್ತಕಗಳ ಸಂಗ್ರಹಿಸುವ ಹವ್ಯಾಸ ಕೂಡ ಮಕ್ಕಳಲ್ಲಿ ಉಂಟಾಗುತ್ತದೆ. ಕೆಲವು ಮಕ್ಕಳಿಗೆ ಪುಸ್ತಕಗಳನ್ನು ಕೊಂಡು ಕೊಳ್ಳಲು ಹಣವಿರುವುದಿಲ್ಲ. ಆಗ ಅವರು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಓದಬಹುದು. ನಮಗೆ ಬೇಕಾದ ವಿಷಯಗಳನ್ನು ಗ್ರಂಥಗಳಿಂದ ಅರಿತುಕೊಳ್ಳಬಹುದು. ಗ್ರಂಥಾಲಯವು ಜ್ಞಾನಾಭಿವೃದ್ಧಿಯ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಕ್ಕಳು ಹಿರಿಯರ ಪುಸ್ತಕ ಓದಬಾರದು ಎಂಬ ನಿಯಮವೇನು ಇಲ್ಲಾ ಕೆಲವೊಮ್ಮೆ ದೊಡ್ಡವರ ಪುಸ್ತಕಗಳು ಮಕ್ಕಳಿಗೆ ಬೇಕಾಗುವ ಸಾಧ್ಯತೆಗಳಿವೆ ಹೀಗಾಗಿ ಇವು ಜ್ಞಾನ ಬಿತ್ತರಿಸುವ ವಿಸ್ತರಿಸುವ ಘಟ್ಟಗಳಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ. ಒಟ್ಟಿನಲ್ಲಿ ಮಕ್ಕಳಿಗೆ ಸಾಹಿತ್ಯ ಓದುವ ಮತ್ತು ಬರೆಯುವ ಸಾಮಾರ್ಥ,ಆಸಕ್ತಿ ,ಅಭಿರುಚಿ ಬೆಳೆಸಿ ಆ ಮೂಲಕ ಸಾಹಿತ್ಯವನ್ನು ಶ್ರೀಮಂತಗೊಳಿಸಿಲು ಪ್ರಯತ್ನ ಮಾಡಬಹುದು ಕಿರು ಪರಿಚಯ: ಎನ್.ಶೈಲಜಾ ಹಾಸನ ರಾಜ್ಯದ ಪ್ರಮುಖ ಕಾದಂಬರಿಗಾರ್ತಿಯಾಗಿದ್ದು ಇವರ ಅನೇಕ ಕಾದಂಬರಿಗಳು ಸುಧಾ,ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ಯಶಸ್ವಿಯಾಗಿ ತಲುಪಿ ಅಪಾರ ಮೆಚ್ಚುಗೆ ಪಡೆದಿವೆ.ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ. ಇವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ,ಸಾವಯುವ ಕೃಷಿ ,ಅದರ ಮಹತ್ವ,ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಹದಿಹರೆಯದ ಮಕ್ಕಳ ಸಮಸ್ಯೆಗಳು,ಮಾನಸಿಕ ಅಸ್ವಸ್ಥರ ಬಗ್ಗೆ, ಹೆಣ್ಣು ಮಕ್ಕಳ ಶಿಕ್ಷಣ,ಭ್ರೂಣ ಹತ್ಯೆಯಂತಹ ಪ್ರಸ್ತುತ ವಿಚಾರದ ಬಗ್ಗೆ, ಸರಳ ವಿವಾಹ,ಹೆಣ್ಣು ಮಕ್ಕಳ ಸಬಲೀಕರಣ ಹೀಗೆ ಹಲವಾರು ಗಂಭೀರ ವಿಚಾರಗಳ ಬಗ್ಗೆ ಕಾದಂಬರಿಯ ವಸ್ತುವಾಗಿಸಿ ಬರೆದಿರುವ ಶೈಲಜಾ ಹಾಸನ ಅವರ ಸಾಹಿತ್ಯ, ಸಮಾಜವನ್ನು ಬದಲಾವಣೆ ತರುವ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಮಕ್ಕಳು ಮತ್ತು ಸಾಹಿತ್ಯ Read Post »

You cannot copy content of this page

Scroll to Top