ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ಏಕೆ ಓದಬೇಕು? ನಾಗಸ್ವಾಮಿ ಮುತ್ತಿಗೆ ನಾನೆeಕೆ? ಲಂಕೇಶ್. ಅವರನ್ನು. ಒದಬೆeಕು….ಮಾನವ.ಸಹಜ.ನೊeವು. ಹತಾಶೆ. ಸಿಟ್ಟು. ಕಿeಳರಿಮೆಗಳಿಂದ.ಕುಗ್ಗಿ.ಹೊeಗಿದ್ದ.ನನ್ನಂಥವರಿಗೆ.ಬೆಳಕಾಗಿ. ಬಂದು.ಕನಸುಗಳ ನ್ನು.ಬಿತ್ತಿದರು..ನಮ್ಮ. ಗ್ರಹಿಕೆ ಗಳನ್ನು. ವಿಸ್ತರಿಸಿ.ಹೊಸ. ಹೊಸ. ಲೊeಕಗಳ..ಜ್ಞಾನದ. ಸವಿಯನ್ನು.ಉಣಬಡಿಸಿದರು..ಸುತ್ತಲಿನ.ಆಗುಹೊeಗುಗಳಿಗೆ.ಚಿಕಿತ್ಸಕ.ನೊeಟ.ಬಿeರುವಂತೆ.ಮಾಡಿದರು…. ನಾವು. ಏನಾದರೂ. ತಪ್ಪು. ಮಾಡಿದರೆ…ಲಂಕೇಶ್. ಸರ್.ನಮಗೆ.ಉಗಿದಂತಾಗುತ್ತದೆ..ನೈತಿಕತೆ..ಕಳೆದುಕೊಂಡು. ಮಾತಾಡಿದರೆ..ಅದೊಂದು. ಕ್ಷುಲ್ಲಕ .ವ್ಯಕ್ತಿತ್ವದ.ಗಟಾರದ ಬದುಕು. ಅನ್ನಿಸುಷ್ಟರ.ಮಟ್ಟಿಗೆ..ಅವರ.ಸಾಹಿತ್ಯ.ನಮ್ಮನ್ನು.ಎಚ್ಚರದಲ್ಲಿಡುತ್ತದೆ……ಬಹುಶಃ.. ಅವರ. ಸಾಹಿತ್ಯದ. ಸೊಬಗಿಲ್ಲದಿದ್ದರೆ..ನಾನು. ಈರಿeತಿ.ಬರೆಯಲು.ಆಗುತಿರಲಿಲ್ಲವೆeನೊ…ನನ್ನ.ಮಟ್ಟಿಗೆ. ಗೌರವ.ಘನತೆ ಯಿಂದ.ತಾಯಕರಣೆಯಿಂದ.ಬದುಕಲು..ಆಳವಾದ.. ಸೂಕ್ಷ್ಮ ಸಂವೆeದನೆಯಂದ..ಜಗತ್ತನ್ನು. ಅರ್ಥ ಮಾಡಿಕೊಂಡು. ಇನ್ನಷ್ಟು. ಕಾಲ. ಮಾನವಿeಯ ವಾಗಿರಲು.ಮೆeಷ್ಟ್ರ.ಚಿಂತನೆ. ಬೆeಕು…….ಅಮೂಲ್ಯ. ಮಾನವ. ಸಂಪತ್ತನ್ಬು ಉಳಿಸಿ.ಬೆಳೆಸಲು.ಅವರ.ಟಿeಕೆ.ಟಿಪ್ಪಣಿ.. ಬೆeಕe.ಬೆeಕು.. ಬದುಕಿನ. ಪುಳಕ.ಅನುಭವಿಸಲು.ಅವರ. ಮರೆಯುವ.ಮುನ್ನ. ಅನನ್ಯ.ಕಾಣ್ಕೆ…ಬದುಕಿನ.ಸಡಗರಕ್ಕೆ.ನಿಮ್ಮಿ.ಕಾಲಂ.ಅಂತೂ…ಅದ್ವಿತೀಯ…. ಮಾನವ.ಬದುಕಿನ. ಅರ್ಥ. ನಿರ್.ಅರ್ಥ ಕತೆ.ಮನಸ್ಸಿನ.ನಿಗೂಢ.ಶಕ್ತಿ.ಯ.ವಿಸ್ಮಯ ದ.ಅನುಭವ. ಪಡೆಯಲು.. ನಿeಲುವಿನ..ಕಾವ್ಯಾಂತರಂಗದ.ವೈಯಾರವಂತೂ.ಅವಿಚ್ಛಿನ್ನ ವಾದದ್ದು…ಅಷ್ಟೇ. ಏಕೆ? ಈಗಿನ. ಜನಮಾನಸ.ಅರಿತು.ಮುನ್ನಡೆಸಲು…ಇಡಿe…ಲಂಕೇಶ್. ಸರ್.ಅವರ.ಸಮಗ್ರ..ಸಾಹಿತ್ಯ.ವನ್ನು.ಮತ್ತೆ.ಮತ್ತ…ಓದುತ್ತಲೆeಇರಭeಕು.ಅಲ್ಲವೆe?.

ಲಂಕೇಶರನ್ನು ಏಕೆ ಓದಬೇಕು? Read Post »

ಇತರೆ

ಪಾಟೀಲ ಪುಟ್ಟಪ್ಪ

ಪ್ರಪಂಚ ತೊರೆದ ಪಾಪು ನಾಡೋಜ, ಟಿಎಸ್ಆರ್ ಪ್ರಶಸ್ತಿ ಪುರಸ್ಕೃತ, ಡಾ.ಪಾಟೀಲ ಪುಟ್ಟಪ್ಪ ಅಸ್ತಂಗತ..! ಹಿರಿಯ ಪತ್ರಕರ್ತ, ರಾಜ್ಯಸಭೆ ಮಾಜಿ ಸದಸ್ಯ ನಾಡೋಜ ಡಾ.ಪಾಟೀಲ ಪುಟ್ಟಪ್ಪ (102) ಅವರು ವಿಧಿವಶರಾಗಿದ್ದಾರೆ… ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಕಳೆದ ಫೆ.10 ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದಾರೆ… ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪಾಪು ಅವರ ಆರೋಗ್ಯ ವಿಚಾರಿಸಿದ್ದರು. ಬಳಿಕ ಮಾತನಾಡಿದ್ದ ಸಿಎಂ, ರಾಷ್ಟ್ರೀಯ ಬಸವ ಪುರಸ್ಕಾರದೊಂದಿಗೆ ಹತ್ತು ಲಕ್ಷ ರೂ. ನಗದು ನೀಡಲಾಗುವುದು. ಅಲ್ಲದೇ ಡಾ.ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದರು… ನಾಡೋಜ ಪಾಪು ಅವರು, ವಿಪರೀತ ಜ್ವರ, ಉಸಿರಾಟ ತೊಂದರೆ ಹಾಗೂ ಆಯತಪ್ಪಿ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ ದೀರ್ಘಕಾಲದ ಪುಪ್ಪಸ ತೊಂದರೆ ಹಾಗೂ ತಲೆಯಲ್ಲಿ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಮಾಡಲಾಗಿತ್ತು. ಕಿಡ್ನಿ ತೊಂದರೆ, ರಕ್ತ ಹೀನತೆ ಹಾಗೂ ಸೋಂಕು ಕಂಡು ಬಂದಿದ್ದು, ಈ ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗಿತ್ತು… ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ಶಸ್ತ್ರಚಿಕಿತ್ಸೆ ನಂತರ ಆರೋಗ್ಯ ಗಂಭೀರವಾಗಿತ್ತು. ಬಳಿಕ ಕೃತಕ ಉಸಿರಾಟ ಯಂತ್ರ (ವೆಂಟಿಲೇಟರ್) ಅಳವಡಿಸಲಾಗಿತ್ತು. ದೀರ್ಘಕಾಲ ಹಾಸಿಗೆ ಹಿಡಿದ ಪರಿಣಾಮ ಪಲ್ಮನರಿ ಥ್ರಂಬೋ ಎಂಬೋಲಿಸಂ ಆಗಿದೆ ಎಂದು ತಜ್ಞ ವೈದ್ಯ ಪ್ರೊ.ಡಿ.ಎಂ.ಕಬಾಡಿ ತಿಳಿಸಿದ್ದರು… ಹೀಗೆಯೇ ಕೊನೆಗೂ ಅಸ್ತಂಗತರಾದರೂ ಡಾ. ಪಾಟೀಲ ಪುಟ್ಟಪ್ಪನವರು..! ಡಾ.ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’..!– ಕನ್ನಡ ನಾಡಿಗೆ ಕೀರ್ತಿ ತಂದವರು ಪುಟ್ಟಪ್ಪದ್ವಯರು. ಸಾಹಿತ್ಯ ಲೋಕಕ್ಕೆ ಕುವೆಂಪು. ಪರ್ತಕರ್ತರಾಗಿ ಪ್ರಪಂಚ ಖ್ಯಾತಿಯ ಪಾಟೀಲ ಪುಟ್ಟಪ್ಪ ಅಥವಾ ಪಾ.ಪುರವರು. ಡಾ.ಪಾಪು ಹುಟ್ಟಿದ್ದು ಹಾವೇರಿ ತಾಲ್ಲೂಕಿನ ಕುರುಬಗೊಂಡ ಹಳ್ಳಿಯಲ್ಲಿ. ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ… ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದ ಊರು ಮತ್ತು ಹಾವೇರಿಯಲ್ಲಿ ಮುಗಿಸಿದರು. ಲಿಂಗರಾಜ ಕಾಲೇಜ ಸೇರಿ ಕಾನೂನು ಪದವಿ ಗಳಿಸಿದರು. ಬಿಜಾಪುರದಲ್ಲಿ ವಕೀಲ ವೃತ್ತಿ ಆರಂಭ ಮಾಡಿದರು. ಕಕ್ಷಿಗಾರರಿಲ್ಲದೇ ಸಂಪಾದನೆ ಖೋತವಾಯಿತು. ಊಟಕ್ಕೂ ತತ್ವಾರ. ಉದ್ಯೋಗಕ್ಕಾಗಿ ಮುಂಬೈಗೆ ಪಯಣ ಬೆಳೆಸಿದರು. ಅವರು ಕೋರ್ಟಿಗಿಂತ ಪತ್ರಿಕಾ ಕಚೇರಿಗಳಿಗೆ ಹೋದದ್ದೇ ಹೆಚ್ಚು. ಫ್ರೀ ಪ್ರೆಸ್ ಜರ್ನಲ್‌ದ ಸದಾನಂದ, ಬಾಂಬೆ ಕ್ರಾನಿಕಲ್ ಪತ್ರಿಕೆಯು ಸೈಯದ್ ಅಬ್ದುಲ್ಲಾ ಮತ್ತು ಎ.ಜಿ.ತೆಂಡೂಲ್ಕರ್ ಸ್ನೇಹ, ಪತ್ರಿಕೋದ್ಯಮದ ಹುಚ್ಚು ಹಿಡಿಸಿತು… ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದ ಎಂ.ಎಸ್‌ಸಿ. ಗಳಿಸಿ ಹಿಂದಿರುಗಿ ಬಂದು ಪತ್ರಿಕಾರಂಗ ಪ್ರವೇಶ ಮಾಡಿದರು… ೧೯೪೭ರಲ್ಲಿ ವಿಶಾಲ ಕರ್ನಾಟಕ, ೧೯೫೨ರಲ್ಲಿ ನವಯುಗ, ೧೯೫೪ರಲ್ಲಿ ಪ್ರಪಂಚ ಸಾಪ್ತಾಹಿಕ, ೧೯೫೬ರಲ್ಲಿ ಸಂಗಮ ಮಾಸಿಕ, ೧೯೫೯ರಲ್ಲಿ ವಿಶ್ವವಾಣಿ ದೈನಿಕ, ೧೯೬೧ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, ೧೯೬೪ರಲ್ಲಿ ಸ್ತ್ರೀ ಮಾಸಿಕ ಮುಂತಾದ ಹಲವಾರು ಪತ್ರಿಕೆಗಳ ಸಂಪಾದಕತ್ವ‌ ವಹಿಸಿದ್ದರು… ಮೊನಚಿನ ಬರಹಕ್ಕೆ ಬೆರಗಾಗಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಪದವಿ ಪಡೆದರು. ಯಾವುದೇ ಕಚೇರಿ ನೇರಪ್ರವೇಶ, ಕನ್ನಡ ಬಳಕೆಗೆ ಆಗ್ರಹ. ಕನ್ನಡ ದುರವಸ್ಥೆ ಕಂಡು ಖಂಡನೆ ಇತ್ಯಾದಿ ಇದ್ದೇ ಇತ್ತು… ಅಧಿಕಾರಿಗಳಿಗೆ ಚಾಟಿ ಪ್ರಹಾರವೂ‌ ನಡದೇ ಇತ್ತು. ಇವರು ಕನ್ನಡಕ್ಕೆ ಗಳಿಸಿಕೊಟ್ಟ ಸ್ಥಾನಮಾನ ಅಪಾರ. ಚರಿತ್ರಾರ್ಹ ಕಾರ‍್ಯ ಸಾಧನೆಯಾಗಿತ್ತು… ಹಲವಾರು ಸಾಹಿತ್ಯ ಕೃತಿಗಳ ರಚನೆಯೂ ನಡೆದೇ ಇತ್ತು. ಸಾವಿನ ಮೇಜುವಾನಿ, ಗವಾಕ್ಷ ತೆರೆಯಿತು, ಶಿಲಾಬಾಲಿಕೆ ನುಡಿಗಳು-ಕಥಾಸಂಕಲನಗಳು ; ಸರ್ ಸಿದ್ದಪ್ಪ ಕಂಬಳಿ, ಹೊಸಮನಿ ಸಿದ್ದಪ್ಪನವರು- ಜೀವನ ಚರಿತ್ರೆ ; ನನ್ನೂರು ಈ ನಾಡು, ಹೊಸದನ್ನ ಕಟ್ಟೋಣ, ಬದುಕುವ ಮಾತು-ಪ್ರಬಂಧ ಸಂಕಲನಗಳು ಮುಖ್ಯವಾದ ಅವರ ಕೃತಿಗಳು… ಡಾ.ಪಾಟೀಲ ಪುಟ್ಟಪ್ಪನವರನ್ನು ಅರಸಿಬಂದ ಪ್ರಶಸ್ತಿಗಳು ಹಲವಾರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ರಾಜ್ಯಸಭಾ ಸದಸ್ಯತ್ವ, ೨೦೦೩ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಸವಶ್ರೀ ಪ್ರಶಸ್ತಿ, ಟಿ.ಎಸ್.ಆರ್. ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದುವುಗಳು. ಅಭಿಮಾನಿಗಳು ಅರ್ಪಿಸಿದ ಗೌರವಗ್ರಂಥ ‘ಪ್ರಪಂಚದ ಪಾಪು’ ಮತ್ತು ‘ನಾನು ಪಾಟೀಲ ಪುಟ್ಟಪ್ಪ.’ ಮುಂತಾದವುಗಳು..! ಇಷ್ಟು ಹೇಳಿ ಡಾ.ಪಾಟೀಲ ಪುಟ್ಟಪ್ಪನವರ ಬಗೆಗೆ ಮಾತು ಮುಗಿಸುತ್ತೇನೆ… ‌ ‌‌‌‌‌‌ ‌ — ಕೆ.ಶಿವು.ಲಕ್ಕಣ್ಣವರ

ಪಾಟೀಲ ಪುಟ್ಟಪ್ಪ Read Post »

ಇತರೆ

ಪರಿಚಯ

ಹನುಮಾಕ್ಷಿ ಗೋಗಿ. ಅನನ್ಯ ಶಾಸನ ಸಂಶೋಧಕಿ, ಸಾಹಿತಿ, ಪ್ರಕಾಶಕಿ ಹನುಮಾಕ್ಷಿ ಗೋಗಿ..! ಸಂಶೋಧಕಿ ಹನುಮಾಕ್ಷಿ ಗೋಗಿಯವರು ನನಗಷ್ಟೇಯಲ್ಲ ನಮ್ಮ ಗೆಳೆಯರಿಗೆ ಪರಿಚಯವಾಗಿದ್ದು ಇದೇ ಧಾರವಾಡದಲ್ಲಿ ನೆಲಸಿದ್ದ ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದವರಾಗಿದ್ದ ನನ್ನ ಅಷ್ಟೇ ಅಲ್ಲ ಅನೇಕಾನೇಕ ನಮ್ಮ ಗೆಳೆಯರ ಮಾರ್ಗದರ್ಶಕರಾಗಿದ್ದ ಮೋಹನ ನಾಗಮ್ಮನವರ ಮೂಲಕ. ಮೋಹನ ನಾಗಮ್ಮನವರಿಗೆ ಇದ್ದ ಅನೇಕಾನೇಕ ಶಿಷ್ಯ ಬಳಗದಲ್ಲಿ ನಾನು, ರೈತ ಕವಿಯಾದ ಚಂಸು ಅಂದರೆ ಚಂದ್ರಶೇಖರ ಪಾಟೀಲ ಮತ್ತು ರೈತ, ನ್ಯಾಯವಾದಿ ಮತ್ತು ಲೇಖಕ ವಿಜಯಕಾಂತ ಪಾಟೀಲಗಳು ತೀರಾ ಹತ್ತಿರದ ಶಿಷ್ಯರಾಗಿದ್ದೆವು. ಆ ಸಮಯದಲ್ಲಿ ಸಿಕ್ಕವರು ಅಂದರೆ ನಮಗೆ ತೀರಾ ಪರಿಚಿತವಾದರು ಸಂಶೋಧಕಿ ಹನುಮಾಕ್ಷಿ ಗೋಗಿಯವರು… ಹನುಮಾಕ್ಷಿ ಗೋಗಿಯವರು ಬರೀ ಸರ್ಕಾರಿ ಅಧಿಕಾರಿಗಳು ಮಾತ್ರ ಆಗಿರಲಿಲ್ಲ. ಅವರೊಬ್ಬ ಅನನ್ಯ ಲೇಖಕಿಯಾಗಿದ್ದರು. ಅದರಲ್ಲೂ ಅವರೊಬ್ಬ ಶಾಸನಗಳ ಸಂಶೋಧಕಿಯಾಗಿದ್ದರು. ಅವರ ಸಂಶೋಧನೆ ತೀರಾ ಹಸಿವಿನಿಂದ ಕೂಡಿತ್ತು, ಅಂದರೆ ಅವರು ಶಾಸನ ಅಧ್ಯಯನದಲ್ಲಿ ಅಷ್ಟೊಂದು ತೀರಾ ಚಿಕಿತ್ಸಕರಾಗಿದ್ದರು. ಶಾಸನಗಳ ಹುಡುಕಾಟದಲ್ಲಿ ಭಾರೀ ಹಸಿವು ಉಳ್ಳವರು ಆಗಿದ್ದರು ಹನುಮಾಕ್ಷಿ ಗೋಗಿಯವರು… ಮಹಿಳಾ ಸಾಹಿತ್ಯದಲ್ಲಿ ಹೆಸರು ಮಾಡಿದವರೂ ಆಗಿದ್ದರು. ಹಾಗಾಗಿಯೇ ಹನುಮಾಕ್ಷಿ ಗೋಗಿಯವರು ‘ಮಹಿಳಾ ಸಾಹಿತ್ಯಕಾ’ ಎಂಬ ಪ್ರಕಾಶನವನ್ನೂ ತೆರೆದು ನಾಡಿನ ಪ್ರಮುಖ ಲೇಖಕಿಯರ ಸಾಹಿತ್ಯವನ್ನು ಪ್ರಚುರಪಡಿಸಿದವರು ಮತ್ತು ಈಗಲೂ ಆ ನಿಟ್ಟಿನ ಕೆಲಸದಲ್ಲಿ ತೊಡಗಿಕೊಂಡವರು. ಇವರ ಪ್ರಕಾಶನದಿಂದ ಅಮೂಲ್ಯ ಸಾಹಿತ್ಯ ಒಡಮೂಡಿದೆ. ಹಾಗಾಗಿಯೇ ತಾವೊಬ್ಬ ಸಾಹಿತಿಯಾಗಿಯೂ ಇತರ ಪ್ರಮುಖ ಮಹಿಳಾ ಸಾಹಿತಿಗಳನ್ನೂ ಹೊರತಂದವರು ಹನುಮಾಕ್ಷಿ ಗೋಗಿಯವರು… ಮುಖ್ಯವಾಗಿ ಇವರೊಬ್ಬ ಶಿಲಾ ಶಾಸನಗಳ ಸಂಶೋಧಕಿಯಾಗಿ ಮಾಡಿದ ಕೆಲಸ ಅಮೂಲ್ಯ ಮತ್ತು ಅನನ್ಯವಾದದು. ಇಂತಹ ಹನುಮಾಕ್ಷಿ ಗೋಗಿಯವರ ಬಗೆಗೆ ಒಂದು ಕಿರು ಟಿಪ್ಪಣಿ ಹೀಗಿದೆ… ಹನುಮಾಕ್ಷಿ ಗೋಗಿ ಅವರು ೧೯೫೫ ಜೂನ ೧ ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೈಚಬಾಳ ಗ್ರಾಮದಲ್ಲಿ ಜನಿಸಿದರು… ಇವರು ಮೂಲತಃ ಅವಿಭಜಿತ ಗುಲ್ಬರ್ಗಾ ಅಥವಾ ಕಲಬುರ್ಗಿ ಜಿಲ್ಲೆಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅದೇ ವಿಶ್ವ ವಿದ್ಯಾಲಯದಿಂದ ಶಾಸನ ಶಾಸ್ತ್ರದಲ್ಲಿಯೂ ಅವರು ಪ್ರಥಮ ಶ್ರೇಣಿಯೊಂದಿಗೆ ಪ್ರಥಮ ಸ್ಥಾನವನ್ನೂ ಪಡೆದುಕೊಂಡರು. ಸದ್ಯ ಕರ್ನಾಟಕ ರಾಜ್ಯ ಸರಕಾರದ ಸಹಕಾರ ಇಲಾಖೆಯ ಸೇವೆಯಲ್ಲಿದ್ದಾರೆ. ಈಗ ಧಾರವಾಡದಲ್ಲಿ ನೆಲೆಸಿರುವ ಹನುಮಾಕ್ಷಿ ಗೋಗಿಯವರು, ಲೇಖಕಿ, ಸಂಶೋಧಕಿ ಹಾಗೂ ಪ್ರಕಾಶಕಿಯಾಗಿಯೂ ಇದ್ದಾರೆ… ಇವರು ‘ಮಹಿಳಾ ಸಾಹಿತ್ಯಿಕಾ’ ಎನ್ನುವ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ಅದರ ಮೂಲಕ ಅನೇಕಾನೇಕ ಲೇಖಕಿಯರ ಸಾಹಿತ್ಯದ ವಿವಿಧ ಪ್ರಕಾರಗಳ ೪9ಕ್ಕೂಹೆಚ್ಚು ಕೃತಿಗಳನ್ನು ಪ್ರಕಟಗೊಳಿಸಿದ್ದಾರೆ… ಶಾಸನಗಳ ಆಕರ ಸಂಶೋಧಕಿಯಾಗಿರುವ ಇವರ ಕೃತಿಗಳು ಹೀಗಿವೆ– ವ್ಯಾಸಂಗ (೧೯೮೩). ಮುದ್ನೂರು ಮತ್ತು ಯಡ್ರಾಮಿ ಶಾಸನಗಳು (೧೯೯೩) (ಡಾ. ಬಿ. ಆರ್. ಹಿರೇಮಠ ಜೊತೆಯಲ್ಲಿ). ಸುರಪುರ ತಾಲೂಕಿನ ಶಾಸನಗಳು (೧೯೯೪). ಕಲಬುರ್ಗಿ ಜಿಲ್ಲೆಯ ಶಾಸನಗಳು (೧೯೯೫). ಕರ್ನಾಟಕ ಭಾರತಿ ಸೂಚಿ (೨೦೦೨). ಅನುಶಾಸನ (೨೦೦೨). ಉಪ್ಪಾರ ಹಣತೆ (೨೦೦೨). ಬೀದರ ಜಿಲ್ಲೆಯ ಶಾಸನಗಳು (೨೦೦೫). ಕಾಳಾಮುಖ ಮತ್ತು ಪಾಶುಪತ ದೇವಾಲಯಗಳು (೨೦೦೭). ಲಕ್ಕುಂಡಿ ಶಾಸನಗಳು (೨೦೦೮). ಡಂಬಳ: ಸಾಂಸ್ಕೃತಿಕ ಅಧ್ಯಯನ (೨೦೦೮) (ಡಾ. ಪಿ. ಕೆ. ರಾಥೋಡರ ಜೊತೆಯಲ್ಲಿ). ಜಗದ್ಗುರು ತೋಂಟದಾರ್ಯ ಮಠದ ದಾಖಲು ಸಾಹಿತ್ಯ (೨೦೦೯) (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ). ನವಿಲುಗುಂದ ಸಿರಿ (ಶತಮಾನೋತ್ಸವ ಸ್ಮರಣ ಸಂಚಿಕೆ) (೨೦೦೯). ಅಣ್ಣಯ್ಯ ತಮ್ಮಯ್ಯಗಳ ಪುರಾಣ (೨೦೧೦) (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ). ಚೈತನ್ಯಶೀಲೆ ( ಸರೋಜಿನಿ ಚವಲಾರ ಅವರ ಸಂಭಾವನಾ ಗ್ರಂಥ) (೨೦೧೧). ಹುಬ್ಬಳ್ಳಿ ತಾಲೂಕಿನ ಶಾಸನಗಳು (೨೦೧೩). ಡಾ.ಆರ್.ಎನ್.ಗುರವ ಸಂಪ್ರಬಂಧಗಳು (೨೦೧೪). ರಾಜಮನೆತನದ ಚರಿತ್ರೆಗಳು (೨೦೧೪). ಲಕ್ಷ್ಮೇಶ್ವರದ ಶಾಸನಗಳು (೨೦೧೫). ದಂಡಿನ ದಾರಿ (೨೦೧೬). ಯಾದಗಿರಿ ಜಿಲ್ಲೆಯ ಶಾಸನಗಳು (೨೦೧೬). ಇವರ ಸಂಶೋಧನೆಗೆ ಸಂದ ಸನ್ಮಾನ ಮತ್ತು ಪುರಸ್ಕಾರಗಳು-– ೧೯೯೧ – ಆಡಳಿತಾತ್ಮಕ ಸೇವೆಗೆ ಸನ್ಮಾನ. ೪ನೆಯ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ನರಗುಂದದ ಪುರಸ್ಕಾರ. ೧೯೯೫ – ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ, ಬೆಂಗಳೂರು. ೧೯೯೬ – ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಬೆಂಗಳೂರು. ೨೦೦೪ – ಮಾತೋಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ. ೨೦೦೫ – ಡಾ. ಜ. ಚ. ನಿ. ಪ್ರಶಸ್ತಿ, ರಾಜೂರು. ೨೦೦೫ – ಬಾಲಕೃಷ್ಣ ಪ್ರಶಸ್ತಿ, ನರೇಗಲ್ಲ. ೨೦೦೫ – ಲೇಪಾಕ್ಷಸ್ವಾಮಿ ಪ್ರಶಸ್ತಿ, ಬೆಂಗಳೂರು. ೨೦೦೬ – ಡಾ. ಶೈಲಜ ಉಡಚಣ ಪ್ರಶಸ್ತಿ, ಕಲಬುರ್ಗಿ. ೨೦೦೬ – ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ, ಬೆಂಗಳೂರು. ೨೦೦೭- ಡಾ. ದ. ರಾ. ಬೇಂದ್ರೆ ಪ್ರಶಸ್ತಿ, ಅಡ್ನೂರು. ೨೦೦೯ – ಡಾ. ಬಾ. ರಾ. ಗೋಪಾಲ ಪ್ರಶಸ್ತಿ, ಇತಿಹಾಸ ಅಕ್ಯಾಡಮಿ, ಬೆಂಗಳೂರು. ೨೦೧೪ – ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ ಇನ್ಫೋಸಿಸ್ ಫೌಂಡೇಶನ್ ಪ್ರಶಸ್ತಿ. ೨೦೧೪ – ಚಂದ್ರಗಿರಿ ಮಹೋತ್ಸವ ಸಮಿತಿ ವತಿಯಿಂದ ಶಾಸನ ಸಾಹಿತ್ಯ ಪ್ರಶಸ್ತಿ. ೨೦೧೫ – ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ೨೦೧೨ರ ಗೌರವ ಪ್ರಶಸ್ತಿ. ೨೦೧೫ – ಕರ್ನಾಟಕ ಲೇಖಕಿಯರ ಸಂಘದಿಂದ ಪುಸ್ತಕಕ್ಕೆ ಜಯಮ್ಮ ಕರಿಯಣ್ಣ ದತ್ತಿ ಬಹುಮಾನ. ೨೦೧೫ – ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನದಲ್ಲಿ ಲೋಪಾಮುದ್ರಾ ಪ್ರಶಸ್ತಿ. ೨೦೧೫ – ಜಗದ್ಗುರು ತೋಂಟದಾರ್ಯ ಮಠದಿಂದ ಸನ್ಮಾನ. ೨೦೧೫ – ಕಸಾಪದಿಂದ ಟಿ.ಗಿರಿಜಮ್ಮ ಸಾಹಿತ್ಯ ಪ್ರಶಸ್ತಿ. ೨೦೧೬ – ಮಲ್ಲೆಪುರಂ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ. ೨೦೧೭ – ಬೇಲೂರು ಬಸವಕಲ್ಯಾಣದ ಉರಿಲಿಂಗ ಪೆದ್ದಿ ಸಾಹಿತ್ಯ ಪ್ರಶಸ್ತಿ. ಹೀಗೆಯೇ ವಿವಿಧ ಪುರಸ್ಕಾರ ಮತ್ತು ಪ್ರಶಸ್ತಿಗಳು ಬಂದಿವೆ ಹನುಮಾಕ್ಷಿ ಗೋಗಿಯವರಿಗೆ… ಹೀಗೆಯೇ ಒಬ್ಬ ಸರ್ಕಾರಿ ಅಧಿಕಾರಿಯಾಗಿಯೂ ಶಾಸನ ಸಾಹಿತ್ಯ ಮತ್ತು ಇತರೆ ಸಾಹಿತ್ಯದ ಕೃಷಿಯಲ್ಲಿ ತೊಡಗಿಸಿಕೊಂಡರು ಹನುಮಾಕ್ಷಿ ಗೋಗಿಯವರು..! *********** — ಕೆ.ಶಿವು.ಲಕ್ಕಣ್ಣವರ

ಪರಿಚಯ Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ಏಕೆ ಓದಬೇಕು? ಸುಪ್ರಿಯಾ ನಟರಾಜ್ ನಾನೇಕೆ ಲಂಕೇಶರನ್ನು ಓದುತ್ತೇನೆ ಪಿಯುಸಿ ಯಿಂದಲೂ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನನಗೆ, ಕನ್ನಡ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿ ಇತ್ತು. ಆದರೆ, ಪುಸ್ತಕಗಳನ್ನು ಸಂಗ್ರಹಿಸುವುದು ನನ್ನ ಹವ್ಯಾಸವಾಗಿತ್ತೇ ಹೊರತು, ಓದುವುದು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ನನಗೆ ಪುಸ್ತಕಗಳ ಮೇಲೆ ಪ್ರೀತಿ ಇತ್ತು. ಆದರೆ ಅವುಗಳನ್ನು ಓದುವ ಚಟವಿರಲಿಲ್ಲ.  ಆದರೂ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವುದು ನನ್ನ ಆಸ್ಥೆಯಾಗಿದ್ದರಿಂದ ಕನ್ನಡ ರತ್ನ ಪರೀಕ್ಷೆ ಯಲ್ಲಿ ಉತ್ತೀರ್ಣಳಾಗಿ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವಾಗ, ನನ್ನ ಸಂಗ್ರಹದಲ್ಲಿ ಹಲವಾರು ವರ್ಷಗಳಿಂದ ಬೆಚ್ಚಗೆ ಕುಳಿತಿದ್ದ ಮಲೆಗಳ ಮದುಮಗಳನ್ನು, ಮೂಕಜ್ಜಿಯನ್ನು ಭೇಟಿಯಾದ ಮೇಲೆ ನನ್ನಲ್ಲಿದ್ದ ‘ಓದುಗ’ ಪ್ರಜ್ಞೆ ಜಾಗೃತವಾಯಿತು. ಈ ಪ್ರಜ್ಞೆ, ನನ್ನಿಂದ ಕುವೆಂಪು, ಶಿವರಾಮ ಕಾರಂತ, ಕೆ.ಪಿ ಪೂರ್ಣಚಂದ್ರ ತೇಜಸ್ವಿ, ಯು.ಆರ್ ಅನಂತಮೂರ್ತಿ, ಎಸ್.ಎಲ್.ಭೈರಪ್ಪ, ಪಿ.ಲಂಕೇಶ್ ಅವರ ಪರಿಚಯ ಮಾಡಿಸಿ, ಸಾಹಿತ್ಯದ ರೂಪುರೇಷೆಗಳನ್ನು ಮನಸ್ಸಿನಲ್ಲಿ ಮೂಡಿಸಿತು. ನನಗೆ ಪಿ.ಲಂಕೇಶ್ ಅವರ ಪರಿಚಯ ವಾಗಿದ್ದು ಅವರ ಅವ್ವ ಎಂಬ ಕಾವ್ಯದಿಂದ. ಈ ಕವನದಲ್ಲಿ ಲಂಕೇಶರು, ಕೃಷಿ ಸಂಸ್ಕೃತಿಯ ತಾಯಿ ಮತ್ತು ಮಗುವಿನ ಸಂಬಂಧವನ್ನು ರೂಪಕವಾಗಿ ವರ್ಣಿಸಿದ್ದಾರೆ. ಲಂಕೇಶರ ಅವ್ವ ನಮ್ಮ ನಾಡಿನ  ಸಾವಿರಾರು ಹೆಣ್ಣುಮಕ್ಕಳಂತೆ ಮಣ್ಣಿನ ಮಗಳು. ಅವಳ ಉರುಟು ಬದುಕಿನಂತೆ, ಇಲ್ಲಿ ಬಳಸಿದ ಭಾಷೆಯೂ ಉರುಟು. ಲಂಕೇಶರು ತಮ್ಮ ತಾಯಿಗೆ ಕೊಡುವ ಹೋಲಿಕೆಗಳಂತೂ ಓದುಗನನ್ನು ದಿಗ್ಭ್ರಾಂತಿಸುತ್ತದೆ. ಅವಳ ಕಪ್ಪು ನೆಲಸತ್ವ, ಬನದ ಕರಡಿ, ನೊಂದ ನಾಯಿ, ಪೇಚಾಡುವ ಕೋತಿಯ ಗುಣಗಳು, ಹೆಣ್ಣುಮಗಳೊಬ್ಬಳ ಒಂಟಿ ಹೋರಾಟದ ಬದುಕಿನ ಅನಿವಾರ್ಯ ಲಕ್ಷಣಗಳು. ನನಗೆ ಈ ಕವಿತೆ, ‘ಹೊತ್ತುಹೊತ್ತಿಗೆ ತುತ್ತನಿಟ್ಟು ಸಲುಹಿದಾಕೆ, ನಿನಗೆ ಬೇರೆ ಹೆಸರು ಬೇಕೇ, ಸ್ತ್ರೀ ಎಂದರೆ ಅಷ್ಟೇ ಸಾಕೇ’  ಎಂಬ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಸಾಲುಗಳನ್ನು ನೆನಪಿಸಿತು. ಲಂಕೇಶರು, ತಮ್ಮ ತಾಯಿಯನ್ನು ಕೃತಕವಾಗಿ ಹೊಗಳದೇ ಅಭಿನಂದಿಸಿದ್ದಾರೆ. ನೀರಿನಲ್ಲಿ ಹಿಟ್ಟನ್ನು ಕಲಿಸಿ, ಹದಮಾಡಿ, ತಟ್ಟುತ್ತಾ ಹೋದಂತೆ ಸಿದ್ಧವಾಗುವ ರೊಟ್ಟಿ ತಯಾರಿಸುವುದು ಎಲ್ಲರಿಗೂ ಸಿದ್ಧಿಸುವಂತದಲ್ಲ. ಆದರೆ ಲಂಕೇಶರು ತಟ್ಟಿರುವ ರೊಟ್ಟಿ,ವಿಭಿನ್ನ.  ಈ ಮಹತ್ವದ ಕತೆ, ಮನುಷ್ಯನ ಸೂಕ್ಷ್ಮ ಸಂವೇದನೆಗಳನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ. ರೊಟ್ಟಿಯಲ್ಲಿ ರೈತನ ದುಡಿಮೆ,ಪರಿಶ್ರಮ, ಅಮ್ಮನ ಪ್ರೀತಿ ಇದೆ. ಹಸಿದವರ ಒಡಲನ್ನು ತಣಿಸುವ ಗುಣ ಇದೆ. ಆದರೆ, ಲಂಕೇಶರ ರೊಟ್ಟಿಯಲ್ಲಿ, ಹರಕು ಬಟ್ಟೆಯ ಹಸಿದ ವ್ಯಕ್ತಿ, ವಿಚಿತ್ರ ವ್ಯಕ್ತಿತ್ವದ ಹೆಣ್ಣು, ಪೊಲೀಸ್ ಅವ್ಯವಸ್ಥೆ, ಹಸಿವು, ಭಯ, ಕೋಪ, ಅಸಹಾಯಕತೆಯ ಅಂಶಗಳು ಕಾಣಸಿಗುತ್ತದೆ. ಇನ್ನು ಲಂಕೇಶರನ್ನು ಭೇಟಿಮಾಡಲು ನನಗೆ ಸಿಕ್ಕ ಮತ್ತೊಂದು ಕೊಂಡಿ, ‘ಸಂಕ್ರಾಂತಿ’ ನಾಟಕ. ‘ಕ್ರಾಂತಿ’ ಎಂದರೆ ಸುಗ್ಗಿಯ ಸಂಭ್ರಮ. ಸೂರ್ಯ ತನ್ನ ಪಥವನ್ನು ಬದಲಾಯಿಸುವ ದಿನ. ಅಂತಹ ದಿನದಂದು, ಒಂದು ಸಾಮಾಜಿಕ ವಿನ್ಯಾಸದಲ್ಲಿ, ಅದೂ ದಲಿತರ ಕೇರಿಯಲ್ಲಿ, ಕಾಣುವ ವಿಚಿತ್ರ ತಿರುವು ಈ ನಾಟಕದಲ್ಲಿ ಚಿತ್ರಣಗೊಂಡಿದೆ. ಬೇರೆ ಎಲ್ಲಾ ಲೇಖಕರು ತಮ್ಮನಾಟಕಗಳಲ್ಲಿ ಕ್ರಾಂತಿಯ ಸಾಧ್ಯತೆ ಹೇಳಿದ್ದರೆ, ಲಂಕೇಶರು ಇಲ್ಲಿ ‘some ಕ್ರಾಂತಿ’ಯನ್ನುಂಟು ಮಾಡಿದ್ದಾರೆ. ಹನ್ನೆರಡನೇ ಶತಮಾನದ ಬಸವಣ್ಣನ ನೇತೃತ್ವದ ವಚನಕಾರರ ಚಳವಳಿ ಸಮಾಜದಲ್ಲಿ ನಿಜವಾಗಲೂ ಬದಲಾವಣೆ ತಂದಿತ್ತೇ? ತಂದಿದೆಯೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿ, ಸಮಾಜದ ಬದಲಾವಣೆ ಸಂಕೀರ್ಣ ಎಂಬ ಕಹಿ ಸತ್ಯವನ್ನು ಕಕ್ಕುತ್ತದೆ. ಈ ನಾಟಕವನ್ನು ಹರಳಯ್ಯ ಮಧುವರಸರ ಪ್ರಕರಣದಿಂದ  ಸ್ಪೂರ್ತಿ ಹೊಂದಿರುವುದಾಗಿ ಸ್ವತಃ  ಲಂಕೇಶರೇ ಹೇಳಿದ್ದಾರೆ. ‘ಜಾತಿ ಎಂಬ ಸೂತಕ’ ಎಂಬಂತ ಈ ನಾಟಕಕ್ಕೆ ಸಂವಾದಿಯಾಗಿ ‘ಮುಟ್ಟಿಸಿಕೊಂಡವನು’ ಎಂಬ ಇವರದೇ ಮತ್ತೊಂದು ಕತೆಯನ್ನು ಗಮನಿಸಬಹುದು. ಬಸಲಿಂಗನ ಇಲ್ಲಿನ ಜಾತಿ ಧರ್ಮಗಳ ಇಕ್ಕಟ್ಟಿನ ಸ್ಥಿತಿ, ಅಂಧ ಅನಿಸಿಕೆಗಳು, ಈಗಿನ ತಲೆಮಾರಿಗೂ ದಾಟಿಸಿದೆ, ದಾಟಿಸುತ್ತಿದೆ. ಜಾತಿ ಪದ್ಧತಿಯಿಂದ ಕಲುಷಿತಗೊಂಡ ಸಮಾಜ ಸುಧಾರಿಸುವುದು,ಮನುಷ್ಯ ಬಸಲಿಂಗನಂತೆ ಮುಗ್ಧತೆಯಿಂದ ಬದಲಾಗಿ ಜಾತಿ ಎಂಬುದನ್ನು ಧಿಕ್ಕರಿಸಿದಾಗ…ಈ ಕತೆಯನ್ನು ಓದುತ್ತಿರುವಾಗ ನನಗೆ ಯು.ಆರ್. ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯಲ್ಲಿ ಬರುವ ಪಾತ್ರಧಾರಿಯೊಂದು, ತನ್ನ ಮಡಿ ಬಿಟ್ಟು, ಗುಟ್ಟಾಗಿ ಮತ್ತೊಬ್ಬರ ಮನೆಯಲ್ಲಿ ಉಪ್ಪಿಟ್ಟು, ಅವಲಕ್ಕಿ ತಿಂದ ಪ್ರಸಂಗ ನೆನಪಾಯಿತು. ನನ್ನ ಪ್ರಕಾರ ಲಂಕೇಶರು, ವ್ಯಕ್ತಿಯೊಬ್ಬ ಹೇಗೆ ಬದುಕಬಲ್ಲ ಆದರೆ ಹೇಗೆ ಬದುಕುತ್ತಿದ್ದಾನೆ  ಎಂಬುದನ್ನು ತಮ್ಮ ಕಾದಂಬರಿಗಳಲ್ಲಿ,ಕತೆಗಳಲ್ಲಿ, ನಾಟಕಗಳಲ್ಲಿ ಹೇಳುತ್ತಾರೆ.ಇವರ ಕಾದಂಬರಿಗಳು ನನ್ನನ್ನು ಸಕ್ರಿಯವಾಗಿ ಓದಿಸಿಕೊಂಡು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಸಾಮಾನ್ಯವಾಗಿ ನಾ ಕಂಡ ಲಂಕೇಶರು, ದಲಿತ ಲೇಖಕರು ಗ್ರಹಿಸಿರುವುದಕ್ಕಿಂತಲೂ ಹೆಚ್ಚು ಸೂಕ್ಷ್ಮವಾಗಿ ದಲಿತ ಪ್ರಜ್ಞೆಯನ್ನು ಗಮನಿಸುತ್ತಾರೆ. ಆದ್ದರಿಂದ ನನಗೆ ಲಂಕೇಶರನ್ನು ಓದಬೇಕು, ಮತ್ತಷ್ಟು ಓದಬೇಕು ಎಂದೆನಿಸುತ್ತದೆ *********

ಲಂಕೇಶರನ್ನು ಏಕೆ ಓದಬೇಕು? Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ಏಕೆ ಓದಬೇಕು? ನವೀನ್ ಮಂಡಗದ್ದೆ ಲಂಕೇಶ್ ಅವರನ್ನು ನಾನೇಕೆ ಓದುತ್ತೇನೆ.. ಲಂಕೇಶ್ ನನ್ನ ಹಾಗೆ ದಮನಿತ, ಅನಕ್ಷರಸ್ಥ, ಗ್ರಾಮೀಣ ಪ್ರದೇಶದಿಂದ ಬಂದವರು, …ಇಷ್ಟೆಲ್ಲ ಮಿತಿಗಳಿದ್ದಾಗಲೂ ಅವರು ಸಾಹಿತ್ಯ, ಸಿನಿಮಾ, ಪತ್ರಿಕೆ ಎಂದೆಲ್ಲ ಕೆಲಸ ಮಾಡಿದರು.. ಈ ಹಿನ್ನೆಲೆಯಲ್ಲಿ ನಮಗೀಗ ಕೆಲಸ‌ ಮಾಡಲು ಸಾಕಷ್ಟು ‘ ಸ್ಪೇಸ್’ ಇದೆ ಹಾಗಾಗಿ ಲಂಕೇಶ್ ನನಗೆ ಸ್ಪೂರ್ತಿ.. ಗ್ರಾಮೀಣ ಪ್ರದೇಶಗಳಿಂದ ನಗರ ಕಡೆಗೆ ಮುಖ ಮಾಡುವ ಯುವಕರು ಅಲ್ಲಿನ ಹುಸಿವೈಭವಕ್ಕೆ ಮಾರು ಹೋಗಿ ನಗರಗಳಲ್ಲಿ ಉಳಿದು ಬಿಡುತ್ತಾರೆ.. ಲಂಕೇಶ್ ನಗರದ ಕಡೆ ಮುಖ ಮಾಡಿದರೂ ತನ್ನ ಹಳ್ಳಿಯನ್ನು ಮರೆಯಲಿಲ್ಲ, ಅವರೊಬ್ಬ ಅಕ್ಷರಸ್ತ ವ್ಯಕ್ತಿಯಾಗಿ ಅನಕ್ಷರಸ್ಥ ಸಮುದಾಯದ ಜೊತೆ ನಿಂತರು  ಅವರ ಊರಾದ ಕೊನಗವಳ್ಳಿಯಲ್ಲಿ ಕೌದಿಗಳನ್ನು ಹೊಲಿಸಿ ಬೆಂಗಳೂರಿನಲ್ಲಿ ತೆಗೆದುಕೊಂಡು ಹೋಗಿ ಮಾರಿ ಅದರ ಹಣವನ್ನು ಕೌದಿ ನೇಯ್ದವರಿಗೆ ತಂದುಕೊಡುತ್ತಿದ್ದರಂತೆ ಸಾಹಿತ್ಯ ಕಲಿಸುವ ಬದ್ದತೆ ಏನು ಅದರ ಪ್ರತಿಫಲ ಏನಾಗಿರಬೇಕು ಎಂಬುದಕ್ಕೆ ಸ್ಪಷ್ಟ ಉದಾಹರಣೆ ಲಂಕೇಶ್. ಜಾತಿ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುವವರು ಓದಲೇಬೇಕಾದ ಕತೆ ಮುಟ್ಟಿಸಿಕೊಂಡವನು, ನನ್ನ ಎಚ್ಚರದ ಧ್ವನಿಯಾಗಿ ಆ ಕತೆಯನ್ನು ಓದುತ್ತೇನೆ. ಬಿರುಕು ಕಾದಂಬರಿಯ ಬಸವರಾಜನ ಪಾತ್ರ ನನ್ನನ್ನು ಕಾಡುತ್ತಿರುತ್ತದೆ. ಅದರಲ್ಲಿ ಅವನು ಆಗಾಗ ತನ್ನ ಅಂಗಿಯನ್ನು ಬದಲಿಸುತ್ತಾನೆ, ಅದು ವ್ಯಕ್ತಿತ್ವ ಬದಲಾವಣೆಯ ಸಂಕೇತ, ಆಧುನಿಕೋತ್ತರ ಕಾಲದಲ್ಲು ಇದು ಸಹಜವಾಗಿ ರೂಪುಗೊಂಡಂತೆ ಇದೆಯಲ್ಲ ಅನಿಸುವ ಕಾರಣಕ್ಕಾಗಿ ಆ ಕಾದಂಬರಿಯನ್ನು ಮತ್ತೆ ಮತ್ತೆ ಓದುತ್ತೇನೆ, ಒಟ್ಟಾರೆ ಲಂಕೇಶ್ ಅನುಭವಿಸಿದಷ್ಟು ಕಷ್ಟಗಳನ್ನು ಅನುಭವಿಸದ ನಾವು ಅವರನ್ನು ಸ್ಪೂರ್ತಿಯಾಗಿ ಭಾವಿಸಲು ಸಾಧ್ಯವಿದೆ.

ಲಂಕೇಶರನ್ನು ಏಕೆ ಓದಬೇಕು? Read Post »

ಇತರೆ

ಪ್ರಸ್ತುತ

‘ಜಾಲ’ತಾಣ ಸ್ಮಿತಾ ರಾಘವೇಂದ್ರ ಹೆಸರೇ ಹೇಳುವಂತೆ ಇದೊಂದು “ಜಾಲ” ಮತ್ತೆ ನಾವೆಲ್ಲ ಅಲ್ಲಿ “ತಾಣ” ಪಡೆದವರು ಜಾಲದೊಳಗೆ ಸಿಲುಕಿಕೊಂಡ ಕೀಟದಂತಾಗಿದ್ದೇವೆ.. ಆದರೂ ನಾವಿಲ್ಲಿ ತಂಗಿದ್ದೇವೇ ತಂಗುತ್ತೇವೆ ಇಂದೂ ಮುಂದೂ ಸದಾ ತಂಗಲೇ ಬೇಕಾದ ಜಾಲದಲ್ಲಿ ಒಂದಿಷ್ಟು ಜಾಗೃತೆಯೂ ಮುಖ್ಯ ಅಂಶವಾಗುತ್ತದೆ. ಹೌದು.. ಸಾಮಾಜಿಕ ಜಾಲತಾಣವು ಸಂಬಂಧಗಳನ್ನು ಕಸಿಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಎಂಬುದು ಜನ ಜನಿತವಾದ ಮಾತು ಮತ್ತು ಸತ್ಯದ ಮಾತುಕೂಡಾ.. ಯಾಕೆ!? ಎಂದು ಸ್ವಲ್ಪವೇ ಸ್ವಲ್ಪ ವಿಚಾರಮಾಡುವದಕ್ಕೂ ನಮಗಿಂದು ಸಮಯವಿಲ್ಲ.. ಯಾಕೆಂದರೆ ನಮ್ಮ ಅಳಿದುಳಿದ ಸಮಯವನ್ನು ಜಾಲತಾಣ ನುಂಗಿಹಾಕಿದೆ. ಚಕ್ರವ್ಯೂಹದಲಿ ಸಿಕ್ಕಿಕೊಂಡ ಅಭಿಮನ್ಯುವಿನಂತಾಗಿದ್ದೇವೆ. ಯಾಕೆ ಎಂದು ಯೋಚಿಸಿದರೆ ಹಲವಾರು ವಿಷಯಗಳು ಅನಾವರಣವಾಗುತ್ತಲೇ ಹೋಗುತ್ತದೆ. ಈ ಜಾಲತಾಣ ನಮ್ಮ ವಯಕ್ತಿಕ ವಿಷಯಗಳಿಗೆ, ಸಂಬಧಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ನಿರಂತರವಾಗಿ ಹೆಚ್ಚು ಸಮಯಗಳಕಾಲ ಜಾಲತಾಣದಲ್ಲಿ ತೊಡಗುವುದು ಸ್ಥಿರ ಸಂಬಂಧಗಳಿಗೆ ಅಂದರೆ ಅಣ್ಣ- ತಮ್ಮ, ಗಂಡ- ಹೆಂಡತಿ, ಅಪ್ಪ -ಅಮ್ಮ, ಅಕ್ಕ -ತಂಗಿ, ಹೀಗೇ ಹಲವು ಸಬಂಧಗಳಿಗೆ ಸಮಸ್ಯೆಯನ್ನು ಉಂಟುಮಾಡುತ್ತಿದೆ.ಅವರೊಂದಿಗಿನ ಸಂವಹನ ಕಡಿಮೆಯಾಗುತ್ತಿದೆ. ಬೇಕಾದ,ಮತ್ತು ಬೇಡದ ಎಲ್ಲ ಸಂಗತಿಗಳೂ ಇಲ್ಲಿ ಅಡಕವಾಗಿರುವಕಾರಣ,ಹೆಚ್ಚು ಹೆಚ್ಚು ಸಮಯ ಜಾಲತಾಣದಲ್ಲಿ ಮುಳುಗುವದರಿಂದ ಅವಶ್ಯಕತೆ ಗಿಂತ ಹೆಚ್ಚು ವಿಷಯ ಸಂಗ್ರಹಣೆ ಹವ್ಯಾಸವಾಗಿ ಹೋಗುತ್ತದೆ. ಬಿಟ್ಟೆನೆಂದರೂ ಬಿಡದ ಮಾಯೆ ಇದು. ಸಂಬಂಧಗಳ ಮೂಲಭೂತ ಅಂಶ ನಂಬಿಕೆ. ಜಾಲತಾಣದ ಕಾರಣದಿಂದ ನಂಬಿಕೆ ಎನ್ನುವದು ಗೋಡೆಯ ತುದಿಯಲ್ಲಿ ಇಟ್ಟ ತಕ್ಕಡಿಯಂತಾಗಿದೆ ಸಾಮಾಜಿಕ ಜಾಲತಾಣದಲ್ಲಿ ವಯಕ್ತಿಕ ಅಭಿಪ್ರಾಯಗಳು ಮತ್ತು ಮಾಹಿತಿ ಹಂಚಿಕೆ ಹೆಚ್ಚು ದುರ್ಬಲವಾಗಿರುತ್ತದೆ. ಅದು ಯಾವಕಾರಣಕ್ಕೂ ಸೇಪ್ ಕೂಡ ಅಲ್ಲ. ನಮ್ಮ ಇಡೀ ವ್ಯಕ್ತಿತ್ವವನ್ನೇ ಸೆರೆಹಿಡಿದು ಅಳೆದು ತೂಗಿಬಿಡುತ್ತದೆ ಈ ಜಾಲತಾಣ ಈಗೀಗ ಹ್ಯಾಕರ್‌ಗಳ ಹಾವಳಿಯಿಂದಾಗಿ ನಮ್ಮ ಎಲ್ಲಾ ಮಾಹಿತಿಗಳು ಸೋರಿಕೆಯಾಗುವ ಸಂಭವವು ಜಾಸ್ತಿಯಾಗಿರುತ್ತದೆ ಮತ್ತು ಮೊಬೈಲ್‌ನಲ್ಲಿ ನಾವು ಬ್ರೌಸ್ ಮಾಡುವಾಗ ಕೊಡುವ ನಮ್ಮ ಮಾಹಿತಿಗಳೇ ಆಗಲಿ, ಫೋಟೋಗಳೇ ಅಗಲಿ ದುರ್ಬಳಕೆಯಾಗುತ್ತಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಅಲ್ಲದೇ ನಮ್ಮ ಮೊಬೈಲ್‌ಗಳಲ್ಲಿರುವ ಮಾಹಿತಿಯನ್ನು ಸುಲಭವಾಗಿ ಕದಿಯುವಂತ ಇತರ ಸ್ವಾಫ್ಟವೇರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಣ ಯಾವುದಕ್ಕೂ ಮೊಬೈಲ್‌ಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸದಿರುವುದು ತೀರಾ ಸೂಕ್ತ. ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಾ ಬೇಡದ ನೊವುಗಳಿಗೆ ದುರ್ಘಟನೆಗಳಿಗೆ ನಾವೇ ಎಡೆಮಾಡಿಕೊಳ್ಳುತ್ತಿದ್ದೇವೆ.. We all went to Goa with the family” ಅಂತ ಯುವತಿಯೊಬ್ಬಳು ಕುಟುಂಬದ ಜೊತೆಗಿನ ಫೋಟೋ ಶೇರ್ ಮಾಡಿದ್ದಳು ಅದನ್ನು ನೋಡಿದ ಯಾರೊ ಒಬ್ಬ ಅಸಾಮಿ ತಿರುಗಿ ಬರುವದರೊಳಗೆ ಮನೆ ದರೋಡೆಮಾಡಿ ಹೋಗಿದ್ದ. ಎಲ್ಲೇ ಹೋದರೂ ಏನೇ ತಿಂದರೂ ಎಲ್ಲವನ್ನೂ ಜಾಲತಾಣದಲ್ಲಿ ಅಪ್ಡೇಟ್ ಮಾಡುವ ನಾವು ಎಷ್ಟು ಅಜಾರೂಕರಾಗುತ್ತಿದ್ದೇವೆ. ಅವಶ್ಯಕತೆಗಿಂತ ಹೆಚ್ಚಾಗಿ ಬಳಸಿದಾಗಲೇ ಇವೆಲ್ಲ ಅವಾಂತರಗಳು ಆಗೋದು. ” ಯಾರಾದರೂ ಏನನ್ನಾದರೂ ಹಂಚಿಕೊಂಡಾಗ ಫೋಟೋಗಳನ್ನು ಲೈಕ್‌ ಮಾಡಿದಾಗ ನಂತರ, ಅವರು ಯಾರು , ಎಲ್ಲಿಂದ, ಎಂಬಿತ್ಯಾದಿ ವಯಕ್ತಿಕ ಚಾಟ್‌ ನಡೆಯುತ್ತದೆ. ಅದು ಅಲ್ಲಿಗೇ ಮುಗಿಯದೇ ಇನ್ಬಾಕ್ಸನಲ್ಲಿ ಇಣುಕಿ ಸಂಪರ್ಕ ಸಾಧಿಸಲು ಹಾತೊರೆಯುತ್ತಾರೆ. ಸಹಜ ಮಾತಾದರೆ ಎಲ್ಲವೂ ಓಕೆ ಕೆಲವರಿರುತ್ತಾರೆ ಜೊಲ್ಲು ಪಂಡಿತರು, ಅಂತವರು ಹಿಂದೆ ಮುಂದೆ ನೋಡುವದಿಲ್ಲ ನೀನು ನನಗೆ ಬಹಳ ಇಷ್ಟ, ಸಕತ್ ಆಗಿ ಕಣ್ತೀಯಾ, ನಾನು ನಿನ್ನ ಲವ್ ಮಾಡ್ತೀನಿ, ಅಂತೆಲ್ಲ ಒಂದೇ ಸಮನೇ ಮಾತೊಗೆದು ಬಿಡುತ್ತಾರೆ.. ಅದರ ವಿವರಣೆ ಕೇಳುವ ಸಂಯಮ ಇಲ್ಲದ ಸಂಬಂಧಗಳಿಗೆ ಇಷ್ಟು ಸಾಕಲ್ಲವಾ? ಅದೆಷ್ಟೋ ಸುಂದರ ಸಂಬಂಧಗಳು ಸಂಸಾರಗಳು ಇದರಿಂದ ಘಾಸಿಗೊಳಗಾಗಿರುವದು ಎಲ್ಲರಿಗೂ ತಿಳಿದ ವಿಚಾರ. ತಪ್ಪುಗಳೇ ನಮ್ಮಿಂದ ಘಟಿಸಬೇಕೆಂದೇನೂ ಇಲ್ಲ. ಬಳಕೆಯ ಅಜ್ಙಾನದಿಂದಲೇ ಹೆಚ್ಚು ತೊಂದರೆಗಳು ಆಗುವದು. ಹಳ್ಳಿಗಳಲ್ಲಿ ಹೆಚ್ಚೆಚ್ಚು ಘಟನೆಗಳು ಹೇಗೆ ಜರುಗುತ್ತವೆ ಗೊತ್ತಾ?!ಸ್ವಲ್ಪ ವಯಸ್ಸಾದವರು, ಹೆಣ್ಮಕ್ಕಳು,ಪ್ರಪಂಚಕ್ಕೆ ತೆರೆದುಕೊಳ್ಳದ ಹಲವು ಮನಸುಗಳು ಇರುತ್ತವೆ. ಅವರು ಯಾವತ್ತೂ ಜಗತ್ತೇ ನಮ್ಮ ಕೈಯೊಳಗೆ ಎಂಬ ಮಾಯೆಯನ್ನು ಕೈಯಲ್ಲಿ ಹಿಡಿದು ನೋಡುರುವದಿಲ್ಲ. ಏನೋ ಸಮಯ ಕಳೆಯಲಿ ಎಂದೋ ಎಲ್ಲರ ಹತ್ತಿರವೂ ಇದೆ ಎಂದೋ ಒಂದು ಹೊಸ ಮೊಬೈಲ್ ಕೈಗೆ ಬಂದಿರುತ್ತದೆ.. ಅದರ ತಂತ್ರಜ್ಞಾನದ ಅರಿವಿನ ಕೊರತೆ ಸಾಕಷ್ಟು ಇರುವಕಾರಣ,ಯಾರೋ ಒಬ್ಬರು ಪೇಸ್ಬುಕ್ ವಾಟ್ಸಪ್ ಅಕೌಂಟ್ ಒಂದನ್ನು ಮಾಡಿಕೊಟ್ಟು ಬಿಡುತ್ತಾರೆ. ಅದರ ಉಪಯೋಗದ ಬಗ್ಗೆ ಮಾಹಿತಿ ನೀಡುವದಿಲ್ಲ. ಜಾಲತಾಣವೆಂದರೆ ಹಂಚಿಕೊಳ್ಳುವದು ಅಂತಷ್ಟೇ ಅವರಿಗೆ ತಿಳಿದಿರುವ ವಿಚಾರ.. ಶೆರ್ ಮಾಡಲು ಹೋಗಿ ಟ್ಯಾಗ್ ಮಾಡುವದು..ಕಂಡಿದ್ದಕ್ಕೆಲ್ಲ ಕಮೆಂಟ್ ಮಾಡುವದು. ಎಲ್ಲರೊಂದಿಗೆ ಸಂವಹನ ನಡೆಸುವದು. ಎಲ್ಲರೂ ಮಾಡಿದಂತೆಯೇ ತಾವೂ ಮಾಡಬೇಕೆಂಬ ತುಡಿತಕ್ಕೆ ಬೀಳುತ್ತಾರೆ. ಇವುಗಳಿಂದ ಅವರಿಗೆ ಅರಿಯದಂತೆ ಎದುರಿಗಿನ ವ್ಯಕ್ತಿ ಇಂತವರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುತ್ತಾನೆ. ಕ್ರಮೇಣ ಇವರೇ ಅರಿಯದ ಜಾಲದೊಳಗೆ ಬಿದ್ದು ಒದ್ದಾಡುತ್ತಾರೆ.. ನಿಭಾಯುಸುವ ಜಾಣತನವಿಲ್ಲದೇ ಸಂಸಾರವನ್ನು ತೊರೆದು ಹೋಗುವದು,ಆತ್ಮಹತ್ಯೆ ಮಾಡಿಕೊಳ್ಳುವದು, ಇಂತಹ ಕಠಿಣ ನಿರ್ಧಾರಕ್ಕೆ ಬರುತ್ತಾರೆ.. ಇಡೀ ಸಂಸಾರದ ನೆಮ್ಮದಿಯೇ ನಾಶವಾಗುವ ಹಂತಕ್ಕೆ ಒಂದು ಮುಗ್ಧ ಸಂಸಾರವೊಂದು ಬಂದು ನಿಲ್ಲುತ್ತದೆ. ಇದಕ್ಕೆಲ್ಲ ತಿಳುವಳಿಕೆಯ ಕೊರತೆಯೇ ಕಾರಣ. ಕೆಲವರು ಗೊತ್ತಿದ್ದು ಇನ್ನು ಕೆಲವರು ಗೊತ್ತಿಲ್ಲದೇ ಹಗಲು ಕಂಡ ಬಾವಿಗೆ ರಾತ್ರಿ ಬಂದು ಬೀಳುತ್ತಿದ್ದಾರೆ.. ಕಣ್ಣಿಗೆ ಕಾಣದ ಎಂದೂ ನೋಡದ ಸ್ನೇಹಿತರಿಗೆ ಹುಟ್ಟಿದ ದಿನದ ಶುಭಾಶಯ ತಪ್ಪದೇ ಕೋರುವ ನಾವು, ಮನೆಯೊಳಗಿನ ಸಂಬಂಧ ಮರೆತೇ ಬಿಡುತ್ತೇವೆ. ಅತಿಯಾದ ಸಾಮಾಜಿಕ ಜಾಲತಾಣವು ನಮ್ಮ ಸ್ವಭಾವವನ್ನೇ ಬದಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಾತೇ ಮರೆತುಹೋಗಿದೆ. ಒಬ್ಬರೇ ನಗುವ ಹುಚ್ಚರಂತಾಗಿದ್ದೇವೆ.. ಕಿವಿಯೊಳಗಿನ ಇಯರ್ ಪೋನ್ ಯಾರು ಕಿವುಡರು ಎನ್ನುವದು ತಿಳಿಯದಾಗಿದೆ. ಸೋಶಿಯಲ್‌ ಮಿಡಿಯಾ ಬಳಕೆಯಿಂದ ತಮ್ಮನ್ನು ತಾವು ಸ್ವಭಾವದಲ್ಲಿ ಹೇಗೆ ನಿಯಂತ್ರಿಸಿಕೊಳ್ಳಬೇಕು ಎಂದು ಎಚ್ಚರವಹಿಸಿಕೊಳ್ಳಬೇಕಾದುದು ಸದ್ಯದ ತುರ್ತಿನ ಪರಿಸ್ಥಿತಿ. ಕೇವಲ ಜಾಲತಾಣದಲ್ಲಿಯೇ ಎಲ್ಲವನ್ನೂ ಸೃಷ್ಟಿಸಿ ಕೊಳ್ಳುವ ಹಂಬಲ ಹಪಾಹಪಿತನ ತೋರುತ್ತಿದ್ದೇವೆ. ಈ ಗ್ಯಾಜೆಟ್ ಲೋಕ ಎಲ್ಲವನ್ನೂ ಕೊಡಲು ಎಂದಿಗೂ ಸಾದ್ಯವಿಲ್ಲ. ಮದರ್ಸ ಡೇ ಪೋಷ್ಟ ಹಾಕಲು ಒಬ್ಬಾತ ಅಮ್ಮನ ಪೋಟೋ ಹುಡುಕುತ್ತಿದ್ದ ಅವನ ಹತ್ತಿರ ಒಂದೇ ಒಂದು ಫೋಟೋ ಕೂಡ ಇರಲಿಲ್ಲ. ಅಮ್ಮ ಅನಾಥಾಶ್ರಮದಲ್ಲಿ ಇದ್ದಳು. ಏನಂತ ಹೇಳೋದು ಈ ನಡತೆಗೆ??! ನಮ್ಮೊಳಗಿನ ಸಂಬಂಧಗಳನ್ನು ಮರೆತು ಇನ್ನೆಲ್ಲೋ ಆಪ್ತತೆಯನ್ನು ಹುಡುಕುತ್ತೇವೆ.. ಮುಖಕ್ಕೆ ಮುಖತೀಡಿಕೊಂಡು ಹಾಕುವ ಪೋಟೊಗಳೆಲ್ಲ ರಾತ್ರಿ ಮುಖತಿರುಗುಸಿ ಮಲಗುತ್ತವೆ ಎನ್ನುವದು ಅರಿವಾಗಬೇಕಿದೆ. ತೋರಿಕೆಯ,ಪ್ರದರ್ಶನದ ಬದುಕು ಪರಿತಪ್ಪಿಸುವತ್ತ ಸಾಗುತ್ತಿದೆ. ಮಕ್ಕಳಿಗೆ ಹೇಳಬೇಕಾದ ದೊಡ್ಡವರೇ ಮೊಬೈಲ್ ಎಂಬ ಲೋಕದಲ್ಲಿ ಮುಳುಗಿ ಹೋಗಿದ್ದಾರೆ.. ತಂದೆ ತಾಯಿಯರೇ ಮಗು ನಮ್ಮ ಮೊಬೈಲ್ ಅನ್ನು ಪದೇ ತೆಗೆದುಕೊಳ್ಳುತ್ತದೆ ನಮಗೆ ಸಿಗುವದೇ ಇಲ್ಲ ಎಂದು,ಅವರಿಗಾಗಿಯೇ ಬೇರೆ ಮೊಬೈಲ್ ಕೊಡಿಸುವಷ್ಟು ಬುದ್ಧಿವಂತರಾಗಿದ್ದಾರೆ. ಕೇವಲ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಜಾಲತಾಣಗಳು ಅಷ್ಟೇ ಅಹಿತಕರ ಎಂದು ಅರಿವಾಗಬೇಕಿದೆ. ಎಲ್ಲ ಅರಿತ ದೊಡ್ಡವರೇ ಮೊಬೈಲ್ ಎಂಬ ಮಾಯೆಯ ದಾಸರಾದರೆ ಚಿಕ್ಕಮಕ್ಕಳು ಆಗದೇ ಇರುತ್ತಾರೆಯೇ.. ಎಲ್ಲಿ ನೋಡಿದರೂ ಮಕ್ಕಳನ್ನು ಮೊಬೈಲ್ ಇಂದ ದೂರವಿಡಿ ಎಂಬ ಮಾತು ಕೇಳಿಬರುತ್ತದೆ. ಕೇವಲ ಹೇಳುವದರಿಂದ ಮಕ್ಕಳು ಕಲಿಯಲಾರು ನಮ್ಮ ನಡೆಯನ್ನು ಅನುಸರಿಸುತ್ತಾರೆ. , ರಸ್ತೆಬದಿಯಲ್ಲಿ ಭಿಕ್ಷೆ ಬೇಡುವವರು,ಅಂಗವಿಕಲರು,ಅಪಘಾತಕ್ಕೆ ಒಳಗಾದವರು,ಇಂತಹ ಹತ್ತು ಹಲವು ಫೋಟೋ ಗಳನ್ನು ನೋಡಿ ಮರುಗುವ ಕಣ್ಣೀರ ದಾರೆಯೇ ಇಮೊಜಿಗಳಲ್ಲಿ ಉಕ್ಕಿಸುವ ನಾವು. ನಿಜವಾಗಿ ಇಂತವರು ನಮ್ಮ ಎದುರು ಬಂದಾಗ ಕಂಡೂ ಕಾಣದಂತೆ ಹೋಗುತ್ತೇವೆ. ಇಲ್ಲ ಮತ್ತೊಂದು ಫೋಟೋವನ್ನು ತೆಗೆದು ಹಂಚಿ ಲೈಕು ಕಮೆಂಟ್ ಗಿಟ್ಟಿಸಿಕೊಳ್ಳುವತ್ತ ಚಿತ್ತ ಹರಿಸುತ್ತೇವೆ. ಎಷ್ಟೊಂದು ಕಠಿಣ ಅಜಾಗರೂಕ ಬುದ್ಧಿಹೀನರಾಗುತ್ತಿದ್ದೇವೆ ನಾವುಗಳು. ಒಮ್ಮೆ ಚಿಂತನೆ ಮಾಡಿ ಮೊಬೈಲ್ ಕೆಳಗಿಟ್ಟು ಪ್ರಪಂಚ ನೋಡಿ. ಸಾಕಷ್ಟು ಸಂಗತಿಗಳು ನಮ್ಮ ಕಣ್ಣು ತೆರೆಸುತ್ತವೆ. ತೀರಾ ವಯಕ್ತಿಕ ಬದುಕಿನ ಒಳಮನೆಗೆ ಮೊಬೈಲ್ ಎಂಬ ಮಾಯೆ ತನ್ನ ಆಟಾಟೋಪ ಮೆರೆಯದಂತೆ ಜಾಗ್ರತೆ ವಹಿಸುವದು ಇಂದಿನ ದಿನಗಳಲ್ಲಿ ತುಂಬಾ ಅವಶ್ಯ.ಸಂಬಂಧಗಳು ಮುರಿಯುತ್ತಿರುವದೇ ಮೊಬೈಲ್ ಗಳಿಂದ. ತಲೆ ತಗ್ಗಿಸಿ ನನ್ನ ನೋಡು, ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ” ಎಂದು ಪುಸ್ತಕ ಹೇಳಿದರೆ, “ತಲೆ ತಗ್ಗಿಸಿ ನನ್ನ ನೋಡು, ಮತ್ತೆ ತಲೆ ಎತ್ತದಂತೆ ಮಾಡುತ್ತೇನೆ” ಎಂದು ಮೊಬೈಲ್ ಹೇಳಿತಂತೆ. ಈ ಎಲ್ಲಾ ಮಾತುಗಳು ನಮಗೆ ನಗುತರಿಸುತ್ತದೆ ಎನ್ನುವುದು ಎಷ್ಟು ಸತ್ಯವೋ ಇದೇ ನಿಜವಾದ ವಾಸ್ತವ ಸತ್ಯ ಎನ್ನುವುದು ಈಗಲಾದರೂ ನಾವು ಒಪ್ಪಿ ಕೊಳ್ಳದೇ ಹೋದರೆ ನಾವು ತೆಗೆದ ಗುಂಡಿಯಲ್ಲಿ ನಾವು ಬೀಳುವದಲ್ಲದೇ ನಮ್ಮ ಎಲ್ಲ ಸಂಬಂಧಗಳನ್ನು ಎಳೆದು ಮಣ್ಣು ಮುಚ್ಚಲೇಬೇಕಾಗುತ್ತದೆ. ಅದರ ಬದಲು ಹೀಗೂ ಮಾಡಿನೋಡಬಹುದು. *ಇಂತಿಷ್ಟು ಸಮಯ ಅಂತ ನಿಗದಿ ಮಾಡಿಕೊಂಡು ಆ ಸಮಯದಲ್ಲಿ ಮಾತ್ರ ಜಾಲತಾಣ ತರೆಯಿರಿ *ಗಂಡ ಹೆಂಡತಿಯ ನಡುವೆ ಪಾಸ್ವರ್ಡಿನ ಬೀಗದ ಕೀಲಿ ಇಬ್ಬರಲ್ಲಿಯೂ ಇರಲಿ. *ಮಲಗುವ ಮನೆಗೆ ಮೊಬೈಲ್ ಒಯ್ಯಬೇಡಿ *ಬೆಳಿಗ್ಗೆ ಏಳುತ್ತಲೇ ಜಾಲತಾಣದ ಒಳಹೊಕ್ಕುವದನ್ನು ನಿಷೇಧಿಸಿ. *ಮನೆಯವರು ಮಾತನಾಡುವಾಗ ಮೊಬೈಲ್ ಮುಟ್ಟಬೇಡಿಮೊಬೈಲ್ ಗೆ ಮೀಸಲಿಟ್ಟ ಸಮಯವನ್ನು ಪ್ರೀತಿ ಪಾತ್ರರಿಗೊಂದಿಷ್ಟು ಅವಷ್ಯವಾಗಿ ಕೊಡಿ. *ಮಕ್ಕಳ ಎದುರು ಮೊಬೈಲ್ ಹಿಡಿಯಲೇಬೇಡಿ. *ಆಗಾಗ ಡಾಟಾ ಹಾಕಿಸುವದನ್ನೇ ನಿಲ್ಲಿಸಿ ಉಳಿತಾಯದ ಜೊತೆಗೆ, ನೆಮ್ಮದಿ ಮತ್ತು ಬೇರೆ ವಿಚಾರಗಳಿಗೆ ತರೆದುಕೊಳ್ಳಲು ಸಮಯವೂ ಸಿಗುತ್ತದೆ.ಅಲ್ಲವೇ!? ***********

ಪ್ರಸ್ತುತ Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ರಾಜೇಶ್ವರಿ ಬೋಗಯ್ಯ ಜಾಣ ಜಾಣೆಯರೆ , ಎನ್ನುತ್ತಾ ದಿಕ್ಕು ,ದೆಸೆಯಿಲ್ಲದೆ  ಓದುವುದಕ್ಕೂ ,ಬರೆಯುವುದಕ್ಕೂ ಒಂದು ಗುರಿ ಇಲ್ಲದೆ ಸಿಕ್ಕಿದ್ದೇ ಓದುತ್ತಾ ಅಲೆಯುತ್ತಿದ್ದ ಅತ್ರಪ್ತ ಬ್ಯೂಟಿಫುಲ್ ಮನಸ್ಸುಗಳನ್ನು ಸೆಳೆದು ಕೂರಿಸಿದ್ದೇ ನಮ್ಮ ಜಾಣರಲ್ಲಿ ಜಾಣರು ಲಂಕೇಶರು. ಲಂಕೇಶರನ್ನು ನಾನ್ಯಾಕೆ ಓದಬೇಕು ? ಅಥವಾ ನಾನೇಕೆ ಲಂಕೇಶರನ್ನು ಓದುತ್ತೇನೆ ? ಎರಡೂ ಪ್ರಶ್ನೆಗಳು ಬೇರೆ ಬೇರೆ ಅನ್ನಿಸಿದರೂ ಉತ್ತರ ಮಾತ್ರ ಒಂದೇ. ಲಂಕೇಶರನ್ನಲ್ಲದೆ ಇನ್ಯಾರನ್ನು ಓದಬೇಕು ? ಇದು ನನ್ನ ಮರು ಪ್ರಶ್ನೆ. ಲಂಕೇಶರಿಗಿಂತ ಮೊದಲು ಯಾರ್ ಯಾರನ್ನೋ ಓದಿ ,ಅರಿವೆಗೆಟ್ಟು ,ಬುದ್ದಿಗೆಟ್ಟು ಅವರು ಬರೆದದ್ದೇ ನಿಜವೆಂದು ನಂಬಿ ಅವುಗಳನ್ನೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಆ ದಿಕ್ಕಿನಲ್ಲಿ ಹೆಜ್ಜೆ ಇಟ್ಟಾಗಿತ್ತು. ಕುಳಿತು ತೂಕಡಿಸುವಾಗ ಕತ್ತು ಬಲಪಕ್ಕಕ್ಕೇ ವಾಲುವಂತೆ ,ನಾನೂ ಆ ಕಡೆಯೇ ವಾಲುತ್ತಿದ್ದಾಗ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಬಲಕ್ಕೆ ವಾಲಿದ್ದ ಕತ್ತನ್ನು ಸರಿಯಾಗಿಸಿ ಎಚ್ಚರಗೊಳ್ಳುವಂತೆ ಮಾಡಿದವರು ಲಂಕೇಶರು.ಆಗ ಎಚ್ಚರಗೊಂಡ ಮಿದುಳು ಮತ್ತೆ ತೂಕಡಿಸಲಿಲ್ಲ. ಗಿಡವಾಗಿದ್ದಾಗಲೇ ಬಗ್ಗಿಸಬೇಕು ಎಂಬಂತೆ ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲೇ ಎಚ್ಚರಗೊಳ್ಳಬೇಕೆಂದರೆ ಲಂಕೇಶರನ್ನು ಓದಬೇಕು. ಆ ವಿಶ್ವವಿದ್ಯಾಲಯದಲ್ಲಿ ಏನುಂಟು , ಏನಿಲ್ಲ ? ಸಾಣೆ ಹಿಡಿಯುವ ಚಕ್ರಕ್ಕೆ ಸಿಕ್ಕಿದ ಏನೇ ಆಗಲಿ ಹೊಳೆಯುವಂತೆ ತನ್ನ ತನ್ನ ಮಡಿಲಿಗೆ ಬಂದು ಬೀಳುವ ಎಲ್ಲರನ್ನೂ ತನ್ನ ಅರಿವಿನ ಸ್ನಾನ ಮಾಡಿಸಿ ಹೊಳೆಹೊಳೆಯುವಂತೆ ಮಾಡುವ ಶಕ್ತಿ ಲಂಕೇಶರ ಬರವಣಿಗೆಯಲ್ಲಿತ್ತು. ಏನುಂಟು , ಏನಿರಲಿಲ್ಲ ಲಂಕೇಶರಲ್ಲಿ. ಪೂಜಿಸಲು ಹರಿವಾಣದಲ್ಲಿರುವ ಎಲ್ಲಾ ಹಣ್ಣುಗಳಿರುವಂತೆ ಅವರ ಅರಿವಿನ ಹರಿವಾಣದಲ್ಲಿ ಇಲ್ಲದಿರುವ ವಿಷಯಗಳೇ ಇರಲಿಲ್ಲಿ. ಸಣ್ಣ ಹುಡುಗರಿಂದ ಹಿಡಿದು ವಯೋವೃದ್ಧರಿಗೂ ಏನಾದರೊಂದು ತಿಳುವಳಿಕೆ ನೀಡುವ ಪ್ರತಿಯೊಂದು ಹಾಳೆಯೂ ಬೆಲೆಬಾಳುವಂತಾದ್ದು. ಏನಾದರೊಂದು ಸಂದೇಶ ಇರುತ್ತಿದ್ದ ನೀಲು ,ಇರುತ್ತಿದ್ದ ಎಂಟತ್ತು ಪದಗಳಲ್ಲೇ ಓದುಗರಲ್ಲಿ ಕಚಗುಳಿ ಮೂಡಿಸುವ ,ಗಾಢ ಚಂತನೆಗಚ್ಚುವ ,ಅಬ್ಬಾ ನಮಗ್ಯಾಕೆ ಇದೆಲ್ಲಾ ಕಾಣಿಸುವುದಿಲ್ಲ ಎಂದೆನ್ನಿಸುವಂತೆ ಕಾಡಿಸುತ್ತಿದ್ದ ನೀಲು ಇವತ್ತಿಗೂ ಎಲ್ಲರ ಡಾರ್ಲಿಂಗ್. ಇನ್ನು ಮರೆಯುವ ಮುನ್ನ , ನನ್ನ ಅಚ್ಚುಮೆಚ್ಚಿನದು.ಯಾಕೆಂದರೆ   ಅದರಲ್ಲಿ ಲಂಕೇಶರ ವೈಯಕ್ತಿಕ ಬರಹ ಸಾಕಷ್ಟು ಇರುತ್ತಿದ್ದರಿಂದ. ಯಾವೊಂದು ಚಿತ್ರ ನಟರ ವಿಷಯಕ್ಕಾಗಿ ಅತ್ಯಂತ ಕುತೂಹಲದಿಂದ ಪೇಪರ್ ಮತ್ತು ಮ್ಯಾಗಜಿನ್ಗಳನ್ನು ಓದುತ್ತಿದ್ದೆವೋ ಹಾಗೆಯೇ ಲಂಕೇಶರ , ಆ ವಾರದಲ್ಲಿ ಆಫೀಸಿಗೆ ಬಂದವರ ,ಹೋದವರ ,ಬೈದವರ ,ಸಣ್ಣತನವ ಕಂಡುಹಿಡಿದಿದ್ದರ , ಇಸ್ಪೀಟ್ ಆಡಿದ್ದರ ,ಕುಡಿದಿದ್ದರ ,ರೇಸಿಗೆ ಹೋಗಿ ದುಡ್ಡು ಕಳೆದಿದ್ದರಾ , ಹಾಗೇ ದುಡ್ಡಿನ ಬಗ್ಗೆ ಎಚ್ಚರವಿರಲಿ ಎಂದು ಹೇಳಿದ್ದರ , ಮುನಿಸಿಕೊಂಡಿದ್ದರ ,ನಕ್ಕರಾ ,ಬರೆದರಾ ಎಂಬ ಎಲ್ಲಾದರ ವಿವರಗಳು ಅಲ್ಲಿರುತ್ತಿದ್ದರಿಂದ ,ಅದನ್ನೆಲ್ಲ ಓದಿ ಆತ್ಮ ತ್ರಪ್ತಿಗೊಳ್ಳುತ್ತಿತ್ತು.ಹಾಗೇ ಅವರನ್ನು ಅನುಕರಿಸಿ ಒಳಗೊಳಗೇ ಹೆಮ್ಮೆ ಪಡುತ್ತಿದ್ದುದೂ ಉಂಟು. ಇನ್ನು ರಾಜಕೀಯವೋ , ಅವರ ರಕ್ತದಲ್ಲೇ ಸದಾ ಹರಿದಾಡುತ್ತಾ ಬಿಸಿಯಾಗಿಸುತ್ತಿದ್ದ ವಿಷಯವಾಗಿತ್ತು.ಅವರ ತೀಕ್ಷ್ಣ ಬರವಣಿಗೆಯಿಂದಲೇ ಕರ್ನಾಟಕ ರಾಜಕೀಯ ಏನೆಲ್ಲಾ ತಿರುವು ಪಡೆದಿತ್ತೆಂಬುದು ಎಲ್ಲರಿಗೂ ತಿಳಿದಿದೆ.ಎಲ್ಲಾ ಮಂತ್ರಿ,ಕಂತ್ರಿಗಳನ್ನು ಹದ್ದುಬಸ್ತಿನಲ್ಲಿಟ್ಟು ಗಡಗಡ ನಡುಗಿಸಿದ್ದರಲ್ಲ.ಭ್ರಷ್ಟರು ಲಂಚಮುಟ್ಟುವಾಗ ದೇವರನ್ನು ನೆನೆಯದೆ (ದೇವರು ಯಾವಾಗ ಹೇಗೆ ಕಾಪಾಡುತ್ತಿದ್ದನೋ ಗೊತ್ತಿಲ್ಲ ) ಲಂಕೇಶರನ್ನು ನೆನೆದು ಹೆದರುತ್ತಿದ್ದರಲ್ಲ.ಚಾಟಿ ಏಟಿನಂತಿರುತ್ತಿದ್ದ ಅವರ ಬರಹಗಳಿಂದಲೇ ಚುರುಕು ಮುಟ್ಟಿಸಿಕೊಂಡು ಸುಮಾರಾಗಿ ಕೆಲಸ ಮಾಡಿದವರಿದ್ದಾರೆ.ಲಂಕೇಶರೆಂದರೆ ಕನಸಲ್ಲೂ ಬೆಚ್ಚಿಬೀಳುತ್ತ , ಅವರು ತೀರಿದಾಗ ಬೆಳಿಗ್ಗೆದ್ದು ಹಾಲು ಕುಡಿದವರಿದ್ದಾರೆ.ಒಬ್ಬ ಲೇಖಕನೆಂದರೆ ಹಾಗೇ ಇರಬೇಕಲ್ಲವೇ .ತಿದ್ದುತ್ತಾ ,ತೀಡುತ್ತಾ ,ಚಾಟಿಬೀಸುತ್ತಾ , ಕರ್ನಾಟಕದ ಜನರಿಗೆ ಒಂದಷ್ಟು ವರ್ಷಗಳ ಕಾಲ ನೆಮ್ಮದಿ ಕಾಣಿಸಿದ ಲಂಕೇಶ್ ಅವರು ಈಗ ಇರಬೇಕಿತ್ತು. ಈಗ ಇಡೀ ದೇಶದಲ್ಲಿ ನಡೆಯುತ್ತಿರುವ ಕ್ರೌರ್ಯ , ದೌರ್ಜನ್ಯ ನೋಡಿ ಏನೇನು ಬರೆಯುತ್ತಿದ್ದರೋ , ಹೇಗೆಲ್ಲಾ ಎಚ್ಚರಿಸುತ್ತಿದ್ದರೋ , ಎಷ್ಟೆಲ್ಲಾ ಸಿಡುಕುತ್ತಿದ್ದರೋ , ಜೊತೆಯಲ್ಲಿ ಬೀದಿಗಿಳಿಯುತ್ತಿದ್ದರೋ ,ಕಣ್ಣೊರೆಸಿ ಸಮಾಧಾನ ಮಾಡುತ್ತಿದ್ದರೋ…        ಸಿನಿಮಾದ ಮೋಹವನ್ನು ಮೀರಿದವರಾರಿದ್ದಾರೆ.ತಮ್ಮ ಬಿಡುವಿರದ ಸಮಯದಲ್ಲೂ ಸಿನಿಮಾದ ಮಾಯಾಲೋಕದೊಳಗೆ ಹೊಕ್ಕು ,ನಟಿಸಿ , ಸಾಹಿತ್ಯ ರಚಿಸಿ, ನಿರ್ದೇಶಿಸಿ,ಏನೂ ಪೆಟ್ಟುತಿನ್ನದೆ ಈಚೆಬಂದವರು ಲಂಕೇಶ್ ಅವರು.ಅದರಲ್ಲಿರುವ ಕಷ್ಟ, ನಷ್ಟ ಸಣ್ಣತನ ,ಮೋಹ ಎಲ್ಲವನ್ನೂ ವಿವರಿಸಿ ಬರೆದು ಹಾಗೇ ಎಚ್ಚರಿಕೆಯನ್ನೂ ಕೊಟ್ಟರು.ಸಿನಿಮಾ ಎಂದರೆ ಸಿನಿಕತನವೇ ಎಂದು ವಿವರಿಸಿದರು .ಯಾರನ್ನೂ ಬಿಡದ ಸಿನಿಮಾ ಮೋಹ ,ಯಾಕೆ ಬಿಡಬೇಕೆಂದು ಕೇಳಿದರು.ನಾವಂದುಕೊಂಡಿರುವ ಸಿನಿಮಾ ಎಂದರೆ ರಂಗು,ರಂಗಿನ ಲೋಕ ಎನ್ನುವ ಮಿಥ್ಯವನ್ನು ತೆಗೆದರು.ರಂಗೂ ಇದೆ ಆದರೆ ಮಂಗನಾಗಬೇಡಿ ಎಂದು ಹೇಳುತ್ತಲೇ , ದೇಶ ವಿದೇಶದ ನಟನಟಿಯರನ್ನು ಕರೆತಂದು ಪರಿಚಯಿಸಿದರು.ಕತೆಗಳನ್ನು ಹೇಳಿ ಹೇಗೆ ಅದರೊಳಗೆ ಹೊಕ್ಕುವುದು , ಚಕಿತಗೊಳ್ಳುವುದು ಮುಂತಾದವನ್ನು ಬರೆದು ಚಲನಚಿತ್ರ ಪ್ರಿಯರಿಗೆ ಸಮಾಧಾನ ನೀಡಿದರು.ಬರೆದಿದ್ದ ಕಾಲಂಗಳೆಲ್ಲ ಸೇರಿ ಒಂದು ಪುಸ್ತಕದ ಸಂಗ್ರಹವಾಗಿದೆ ಈ ನರಕ ,ಈ ಪುಲಕ ಎಂದು.ಯಾವುದೂ ಬರೀ ಒಣಬರಹವಾಗಿರದೆ ರಸಭರಿತವಾಗಿ ,ಕೊಂಕು ,ಗಿಂಕು ಸೇರಿಸಿ ಚಪ್ಪರಿಸಿ ಓದುವಂತಿರುತ್ತಿತ್ತು.ಸಿನಿಮಾದ ಓದು ಓದಿದ ಮೇಲೆ ಒಂದು ಮಧುರವಾದ ರೋಮಾಂಚನ ,ಕಚಗುಳಿಯ ಸವಿಯಿಲ್ಲದೆ ಇರದೇ ಇರಲಿಲ್ಲ. ಸಿನಿಮಾದವರ ಜೀವನ ಶೈಲಿಯ ಬಗ್ಗೆ ಹೇಳುತ್ತಾ ಒಂದು ಕಡೆ ಬರೆಯುತ್ತಾ , ಹಿಂದಿ ನಟಿಯರಾದ ,ಅಕ್ಕ ತಂಗಿಯರಾದ ತನುಜಾ ಮತ್ತು ನೂತನ್ , ಅವರಿಬ್ಬರೂ ಹೇಗೆ ವಿಭಿನ್ನ ಎಂದು , ನೂತನ್ ಅವರು ಬಹಳ ಮಡಿವಂತಿಕೆಯಿಂದ ಬದುಕಿದ್ದು ,ಬಹಳ ಬೇಗ ಸಾವನ್ನಪ್ಪಿದ್ದು ,ಆದರೆ ತನುಜಾರು  ಜೀವನದ ಎಲ್ಲಾ ಜೀವಂತಿಕೆಯನ್ನು  ,ಚಂದದ ಕ್ಷಣಗಳನ್ನು ಅನುಭವಿಸಿ ಈಗಲೂ ಎಷ್ಟು ಲವಲವಿಕೆಯಿಂದಿದ್ದಾರೆ ಎಂದಿದ್ದಾರೆ. ಎಂತಹ ಗೂಢಾರ್ಥ ಇದೆ ಇದರಲ್ಲಿ. ಯುವಜನರು ನಟನಟಿಯರನ್ನು ಆರಾಧಿಸುವುದನ್ನು  ಬಿಟ್ಟು ಲಂಕೇಶರನ್ನು ಆರಾಧಿಸಲಿ, ಆಗ ನೋಡಲಿ ಅವರಲ್ಲಾಗುವ ಬದಲಾವಣೆ. ಬದುಕುವ ದಾರಿ ಸಿಗದೇನು ಅಲ್ಲಿ ? ಒಂದು ಆದರ್ಶ ರೂಪುಗೊಳ್ಳದಿದ್ದರೆ ಕೇಳಿ  ಅಲ್ಲಿ ?ಸಿನಿಕತನದಿಂದ ಹೊರಬರದಿದ್ದರೆ ನೋಡಿ. ಮೋಹಿಸುವುದಿದ್ದರೆ ಲಂಕೇಶರನ್ನೇ ಮೋಹಿಸಲಿ, ನಂತರ ಅವರೇ ಒಂದು ರೂಪಕವಾಗುವುದಿಲ್ಲವೇನು ಪರೀಕ್ಷಿಸಲಿ !! ಯಾರೊಬ್ಬರ ಮೇಲಾದರೂ ಹುಚ್ಚು ಬೆಳೆಸಿಕೊಳ್ಳುವುದಿದ್ದರೆ ಲಂಕೇಶರ ಪುಸ್ತಕದ ಮೇಲೆ ಬೆಳೆಸಿಕೊಳ್ಳಲಿ.ರೂಪಾಂತರಗೊಳ್ಳಲಿ. ನಂದಿ ನೋಡದವರು ಹಂದಿಗೆ ಸಮವಂತೆ ಎನ್ನುವಂತೆ , ಲಂಕೇಶ್ರನ್ನು ಓದದವರು ….. ಏನು ಹೇಳುವುದು ಅವರ ದುರಾದೃಷ್ಟಕ್ಕೆ… ಈಗಿನ ವಿದ್ಯಾರ್ಥಿಗಳೋ, ಹೊಸದಾಗಿ ಓದುವುದಕ್ಕೆ ಸಾಹಿತಿಯನ್ನು ಹುಡುಕುತ್ತಿರುವವರೋ ಸುಮ್ಮನೆ ಲಂಕೇಶರನ್ನು ಹಿಡಿಯಲಿ ,ಆ ಹಿಡಿದ ಬೆರಳನ್ನು ತನ್ನ ಮುಷ್ಟಿಯಲ್ಲಿ ಇಟ್ಟು ಬೆಚ್ಚಿಗಿನ ಅನುಭವವನ್ನು ನೀಡುವುದು ಲಂಕೇಶರ ಮಮತಾಮಯಿ ಬರವಣಿಗೆಯಲ್ಲಿದೆ. ಅವರ ಕಾದಂಬರಿ ಮುಸ್ಸಂಜೆ ಕಥಾ ಪ್ರಸಂಗದಲ್ಲಿ ಬರುವ ಆಣೆಬಡ್ಡಿ ರಂಗಮ್ಮನ ಪಾತ್ರ ಎಷ್ಟು ಜೀವನ್ಮುಖಿಯದ್ದು.ಆಕೆ ಎಲ್ಲಾ ಸೋಗಲಾಡಿಗಳ ಒಳಹೊಕ್ಕು ಹಿಂದೂ ಮುಂದೂ ನೋಡದೆ ಮುಖವಾಡ ಕಳಚುವ ರೀತಿ ಇದೆಯಲ್ಲ … ಅದರಲ್ಲೂ ಮೇಟ್ರ ಎಂದು ಕೂಗಿ ಅವರಿಗೆ ಬೈಯ್ಯುವುದು ,ಅಣಕಿಸುವುದು ,ಮಾಡಿದರೆ ಮೇಷ್ಟ್ರು ಎಂದರೆ ದೇವರೆಂದೇ ಭಾವಿಸಿರುವ , ಭಯಭಕ್ತಿಯ ಭಾವ ಉದಯಿಸುವವರನ್ನು ,ಪೂಜಿಸುವಂತವರಿಗೂ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ನಾವೂ ಅಲ್ಲಿಂದ ಕಾಲು ಕೀಳಬೇಕೆನಿಸುವಂತೆ ಕಟ್ಟಿದ್ದಾರೆ. ನಾಗರಹಾವು ಕಥೆಯ ಮೇಷ್ಟೇ ಎಂದು ಹೇಳಿ ಅವರನ್ನು ಉಪ್ಪರಿಗೆಯ ಮೇಲೆ ಕೂರಿಸಿದ್ದನ್ನೂ ನೋಡಿದಾಗ ,ಅವೆರಡೂ ಪಾತ್ರಗಳು ಹೇಗೆ ವಿರುದ್ಧವಾದ ಪಾತ್ರ ಪೋಷಣೆಯಿದ್ದರೂ ಮನಸ್ಸಿನಲ್ಲುಳಿಯುತ್ತವೆ. ಆಣೆಬಡ್ಡಿ ರಂಗಮ್ಮನಂತ ಹೆಣ್ಣು ಮಗಳು ಕೊನೆಯಲ್ಲಿ ತೆಗೆದುಕೊಳ್ಳುವ ತೀರ್ಮಾನ ತೀರಾ  ಅನಿರೀಕ್ಷಿತ.ಆದರೆ ಬಹಳ ಅವಶ್ಯ.ಊರಿನ ಜನರನ್ನು ಎದುರಿಸಿ ನಿಂತ ರೀತಿ …. ನಾವೆಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆಯುವಂತಾದ್ದು.ಈಗಿನ ಪ್ರತಿ ಊರಿಗೂ , ಒಂದೊಂದು ಮನೆಯಲ್ಲೂ ಇರಬೇಕಾಗಿರುವ ಸುಂದರ ಮನಸ್ಸು. ಎಲ್ಲಿ ನೋಡಿದರಲ್ಲಿ ಮಿತಿ ಮೀರಿ ನಡೆಯುತ್ತಿರುವ ದೌರ್ಜನ್ಯ ,ಮೋಸ , ಅಂತರ್ಜಾತೀಯ ಮದುವೆಗಳ ನಂತರದ ಕೊಲೆಗಳಿಗೆ ಉತ್ತರವೆಂಬಂತಿದೆ. ಹಾಗೆಯೇ ಅಕ್ಕ ಕಾದಂಬರಿಯಲ್ಲಿ ಅನಾಥ ಅಕ್ಕತಮ್ಮನ ಅನುಬಂಧ ಹೇಗಿರುತ್ತದೆ ಎಂಬುದನ್ನು ಕರುಳು ಕಿವುಚುವಂತೆ ಬರೆದಿದ್ದಾರೆ.ಒಬ್ಬರಿಗೊಬ್ಬರು ಹೇಗೆ ಆತುಕೊಂಡು , ಆವರಿಸಿಕೊಂಡು ಬೈದುಕೊಂಡು ,ತಳಮಳಿಸಿಕೊಂಡು ,ಹಂಬಲಿಸಿಕೊಂಡು ….. ಅಬ್ಬಾ ಬಡವರಾದರೇನು ಭಾವನೆಗಳಿಗೆ ಬಡತನವೇ ? ಪುಸ್ತಕದ ಕೊನೆಯಲ್ಲಿ ಬರೀತಾರೆ , ಸುತ್ತಲಿನ ಪ್ರಪಂಚವನ್ನು ಹಾಗೇ ನೋಡಿದರೆ ಎಲ್ಲವೂ ಕಾಣುವುದು.ಅದನ್ನೆಲ್ಲಾ ಗ್ರಹಿಸುವ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು. ದಾರಿಹೋಕ ನೋಡುವ, ಚಿಂತಿಸುವ ,ಸ್ವವಿಮರ್ಶೆ ಮಾಡಿಕೊಳ್ಳುವ ತರಹದವನಾಗಿದ್ದರೆ ಅವನಿಗೆ ಒಂದಲ್ಲ ಒಂದು ದಿನ ಈ ಅಕ್ಕ ತಮ್ಮ ಸಿಗುತ್ತಾರೆ.ಕ್ಯಾತನ ಹಟ್ಟಿ ,ಅವನ ಅಕ್ಕ , ಅವರಿಬ್ಬರನ್ನು ಸುತ್ತುವರಿದ ರಾಜಕೀಯ ಎಲ್ಲವೂ ಆ ದಾರಿಹೋಕನಲ್ಲಿ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತದೆ… ರಾಜಕೀಯ ಹೇಗೆ ಒಂದಕ್ಕೊಂದು ತಕ್ಕೆ ಹಾಕಿ ಬದುಕನ್ನು ಛಿದ್ರ ಮಾಡುತ್ತದೆ ಎಂದು ಬಹಳ ಸಂಕ್ಷಿಪ್ತವಾಗಿ ಹೆಣೆದಿದ್ದಾರೆ.  ಮೇಲಿನೆರಡು ಉದಾಹರಣೆಗಳೇ ಸಾಕು ಜಗತ್ತಿನ ಅತೀ ಹೆಚ್ಚು ಬಾಧಿಸಲ್ಪಡುತ್ತಿರುವ ಸಮಸ್ಯೆಗಳ ಆಳಹೊಕ್ಕು ನೋಡುವುದಕ್ಕೆ ಮತ್ತು ಪರಿಹಾರವಿದೆ ಎಂದು ಹೇಳುವುದಕ್ಕೆ‌.ಒಂದು ಒಳಕಣ್ಣನ್ನು ಯಾವಾಗಲೂ ತೆರೆದಿಟ್ಟುಕೊಂಡಿರಿ ಎಂದು ,ಮನಸ್ಸಿನಾಳದಿಂದ ಮಿಡಿಯಿರಿ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.  ಅಯ್ಯೋ ಅವರು ಈಗ ಇರಬೇಕಿತ್ತು ಎಂದು ಹಳಹಳಿಸುವುದು ಬಹುಶಃ ಲಂಕೇಶ್ ಎಂಬ ಸಾಹಿತಿಯೊಬ್ಬರಿಗೆ ಮಾತ್ರವೇ ಇರಬಹುದು.ಈಗಲಂತೂ ಅವರ ಕೊರತೆ ಬಹುವಾಗಿ ಕಾಡಿಸುತ್ತಿದೆ.ಈ ದುಷ್ಟ ಜಗತ್ತಿನಲ್ಲಿ ನಡೆಯುತ್ತಿರುವ ಕ್ರೌರ್ಯ ನೋಡಿ ಏನೇನೆಲ್ಲಾ ಬರೆಯುತ್ತಿದ್ದರೋ , ಹೇಗೆಲ್ಲಾ ಧೈರ್ಯ ತುಂಬುತ್ತಿದ್ದರೋ.ತೂಕಡಿಸುವವರು ಎಚ್ಚರಗೊಳ್ಳುವಂತೆ ಮಾಡುತ್ತಿದ್ದರೋ. ಇದುವರೆಗೂ ಲಂಕೇಶರನ್ನು ಓದದವರು ಒಮ್ಮೆ ಓದಲಿ ,ಮುಂದೆ ಬರೆಯಬೇಕೆಂದುಕೊಂಡವರು ವಾಸ್ತವವಾಗಿ  ಬರೆಯುವುದು ಹೇಗೆಂಬುದನ್ನು ತಿಳಿಯಲಿ. ಇಷ್ಟಕ್ಕೇ ಮುಗಿಯದು ಲಂಕೇಶರ ದೈತ್ಯಾಕಾರದ ಫ್ರತಿಭೆಯ ಅವಲೋಕನ.ಹೇಳಲು ಇನ್ನೂ ನೂರಾರು ವಿಷಯಗಳಿವೆ. ಆದರೆ ನನಗೆ ದಕ್ಕಿರುವುದು ಇಷ್ಟು. ಅವರು ನಮ್ಮನ್ನು ಪೊರೆದ ರೀತಿ ,ಎಚ್ಚರಗೊಳಿಸಿದ ವೇಳೆ ,ತಿದ್ದಿದ ಪರಿ … ಒಂದು ತಂದೆ ,ಗೆಳೆಯ ,ಅಧ್ಯಾಪಕ ,ಪ್ರೇಮಿ  ,ಎಲ್ಲಾ ಪಾತ್ರವನ್ನೂ ಜವಾಬ್ದಾರಿಯಿಂದ ನಿರ್ವಹಿಸಿ ಹೆಮ್ಮೆಯಿಂದ ನಿರ್ಗಮಿಸಿದರು.  ಒಂದು ವಿಧದಲ್ಲಿ ದಂತಕಥೆಯಾಗಿದ್ದ ಲಂಕೇಶರನ್ನು ನೆನೆದರೆ ಅವರ ಜೀವಿತ ಕಾಲದಲ್ಲೇ ನಾನೂ ಇದ್ದೆನಾ ಎಂದು ರೋಮಾಂಚನಗೊಳ್ಳುವೆ.ಬಹುಶಃ ಈಗಿನ ಜನಾಂಗ ಅದರ ರೋಚಕತೆಯನ್ನನುಭವಿಸದೆ ಬಹಳ ನಷ್ಟವನ್ನುಭವಿಸಿದ್ದಾರೆ.ಬದುಕಿದ್ದಾಗ ದಂತಕಥೆಯಾಗಿದ್ದ ಲಂಕೇಶರು ಈಗ ಪ್ರತಿಪುಟದಲ್ಲೂ ,ಒಂದೊಂದು ಓದಿನಲ್ಲೂ ಜೀವಂತವಿದ್ದಾರೆ.ಮನೆಯ ಎಲ್ಲಾ ಕೋಣೆಗಳಲ್ಲೂ ಒಂದೊಂದು ಅವರ ಪುಸ್ತಕವನ್ನಿಟ್ಟು ಐದು ನಿಮಿಷ ಸಮಯ ಸಿಕ್ಕಿದರೂ ಸಾಕು ,ನಾಲ್ಕು ಹಾಳೆ ಓದಿದರೂ ಸಾಕು ಅಲ್ಲೇನೋ ತಿಳುವಳಿಕೆ ,ಒಂದು ಸಮಾಧಾನ ಸಿಕ್ಕಿರುತ್ತದೆ. ಯಾವ ಲೇಖಕ ಎಲ್ಲಾ ರಂಗದಲ್ಲೂ ಕೈ ಆಡಿಸಿದ್ದಾರೆ ? ಬರೆದ ಒಂದೊಂದು ಪದವೂ ಪ್ರಾಮಾಣಿಕವಾಗಿ ಬರೆದದ್ದರಿಂದಲೇ ,ಆತಂಕವಾದಾಗ ಈಗಲೂ ದಿನಕ್ಕೊಮ್ಮೆ ಯಾದರೂ ಲಂಕೇಶ್ ಕೈಗೆ ಬರಲೇಬೇಕು.  ಮಾರ್ಚ್ ಎಂಟು , ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಲಂಕೇಶ್ ಅವರ ಹುಟ್ಟಿದ ದಿನ ಒಂದೇ ಆದದ್ದು ಕಾಕತಾಳೀಯವೇ ಇರಬಹುದು.ಆದರೆ ಒಂದಕ್ಕೊಂದು ಪೂರಕವಾಗಿ ಬೆಸೆದಿದೆ. ಮಹಿಳೆಯರ ಶಕ್ತಿಯ ಬಗ್ಗೆ ಅವರಿಗಿದ್ದ ನಂಬಿಕೆಯನ್ನು ಯಾವ ಮಹಿಳೆಯೂ ಹುಸಿಗೊಳಿಸಲಿಲ್ಲ. ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಮೇಲೆ ಯಾವ ಮಹಿಳೆಯೂ ಬೆನ್ನು ತಿರುಗಿಸಿ ಹೋಗಿದ್ದಿಲ್ಲ. ಮಹಿಳೆಯರನ್ನು ಹುರುಪು ಗೊಳಿಸಿದ ರೀತಿಯಿಂದ ಎಲ್ಲಾ ಮಹಿಳೆಯರು ಲಂಕೇಶ್ ಪತ್ರಿಕೆ ಎಂಬ ನಿರಂತರ ಇಪ್ಪತ್ತೈದು ವರ್ಷಗಳ ಕಾಲ ನಡೆದ ಜಾತ್ರೆಯಲ್ಲಿ ಅತೀ ಉತ್ಸಾಹದಿಂದ ಪಾಲ್ಗೊಂಡರು. ಅದರಲ್ಲೂ ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೆ ಲಂಕೇಶ್ ಅವರ ವಿಶೇಷ ಪ್ರೀತಿಗೆ ಕಾರಣರಾಗಿ ಎಷ್ಟೆಲ್ಲಾ ಅದ್ಭುತ ಕಥೆಗಳನ್ನು ಬರೆದ ಸಾರಾ ಅಬೂಬಕ್ಕರ್ ಅವರನ್ನು ಯಾವ ಓದುಗರೂ ಮರೆಯಲು ಸಾಧ್ಯವಿಲ್ಲ.ಅವರ ಧರ್ಮದವರಿಂದಲೇ ಬಹಿಕ್ಷಾರದ ಬೆದರಿಕೆ , ನಿರಂತರ ಅವಹೇಳನಕಾರಿ ಮಾತುಗಳು ಬಂದಾಗಲೂ ಈಗಲೂ ಗಟ್ಟಿಯಾಗಿ ತನ್ನ ನಿಲುವನ್ನು ಪ್ರಕಟಿಸುತ್ತಿದ್ದಾರೆ. ನಾವೆಲ್ಲ ಹಿಂದೆ ಸಾಮಾಜಿಕ ,ಪ್ರಣಯ , ಪತ್ತೇದಾರಿ ಕಾದಂಬರಿಗಳಲ್ಲೇ ಮುಳುಗೇಳುತ್ತಿದ್ದ ಸಮಯದಲ್ಲಿ ಮುಸ್ಲಿಂ ಸಮುದಾಯದ ಕಥೆ ಮತ್ತು ಅವರಲ್ಲಿರುವ ನಾನಾ ತರಹದ ,ನಮಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿರದ ಪ್ರಪಂಚಕ್ಕೆ ಎಳೆದೊಯ್ದರು.ಆ ಮೂಲಕ ಆ ಧರ್ಮದವರ

ಲಂಕೇಶರನ್ನು ಏಕೆ ಓದಬೇಕು? Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ನಾನೇಕೆ ಲಂಕೇಶರನ್ನು ಓದುತ್ತೇನೆ ಬ ಬಸವರಾಜ ಕಹಳೆ ನೀಲವ್ವ ಓದಿದಷ್ಟು ವಿಸ್ತಾರ ಜನಸಾಮಾನ್ಯನ ಮೂಕ ಅಳಲಿನಲ್ಲಿ ಸಾಮ್ರಾಜ್ಯಗಳ ಬೀಳಿಸುವ ತಪಃಶಕ್ತಿ ಇದೆ ತಿಣುಕಾಡಿ ಬರೆದ ಕಗ್ಗಾವ್ಯಗಳ ಮಧ್ಯೆ ಮುದ್ದೆ ಮುರಿದಷ್ಟು ಸಲೀಸಾಗಿ ಓದಿಸಿಕೊಂಡು, ಕೆಲ ಕ್ಷಣಗಳಲ್ಲೇ ಮಿಂಚುವ ಮಿಂಚು ಹುಳುವಿನಂತಹ ಜೀವನದ ಹೊಳವುಗಳಿಗಾಗಿ ರಾವಣ ಪ್ರತಿಭೆಯನ್ನು ಓದಬೇಕು. ಈ ನೀಲಿ ಒಮ್ಮೊಮ್ಮೆ ಹುಳಿಮಾವಿನಮರದಂತೆಯೇ ಬಯಕೆ ಹುಟ್ಟಿಸುವ ಪ್ರೇಯಸಿ. ಆಲದಮರದಂತೆಯೇ ದಾರಿ ತೋರುವ ಗೆಳತಿ. ಥಟ್ಟನೆ ಇಷ್ಟವಾಗಿಬಿಡಬಲ್ಲ ಪಕ್ಕದ ಮನೆ ಹುಡುಗಿ. ಬದುಕುವ ಆಸೆಯಿಲ್ಲದವನಿಗೆ ಜೀವನೋತ್ಸಾಹವನ್ನು ತುಂಬುವಂತವಳು. ಆಗಸದ ಕೆನ್ನೆಯನ್ನು ರಮ್ಯತೆಯಿಂದ ಚಿವುಟಿದ ಸಿಹಿ ಗುರುತಿನಂತೆ ಕಾಣುವ ನೀಲಿ ಸಾಲು. ಆದಿ ಅನಂತವನ್ನೂ ಹೇಳುವ ನೀಲು ಕಾಳಿ ಮಾರಿ ಮಸಣಿಯಂತೆಯೂ ಕಾಣುತ್ತಾಳೆ. ಈ ಬನದ ಕರಡಿ ಭಗವದ್ಗೀತೆಯನ್ನೂ ಹೇಳುತ್ತಾಳೆ. ಅವುಡುಗಚ್ಚಿದ ಸಾವಿತ್ರಿ, ಜಾನಕಿ, ಊರ್ಮಿಳೆ ಮಂಡೋದರಿ, ಪಂಚಾಲಿಯ ಅರೆಗನಸ್ಸನ್ನೂ ಗಟ್ಟಿಯಾಗಿ ಹೇಳುತ್ತಾಳೆ. ಇವಳ ಆತ್ಮವಿಶ್ವಾಸ ಸೃಷ್ಟಿಸಿದ ಬ್ರಹ್ಮನಿಗೂ ಇತ್ತೋ ಇಲ್ಲವೋ? ಅವ್ವ ಕವನದ  ಸುಟ್ಟಷ್ಟು ಕಸುವು ಅನ್ನೋ ಸಾಲಿನ ಹಾಗೆ ನೀಲು ಪದ್ಯ ಓದಿದಷ್ಟು ವಿಸ್ತಾರವಾಗಿ ಕಾಣುತ್ತದೆ. ನನ್ನ ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ ಈ ಸಾಲಿನಲ್ಲಿ ಬಹುಪಾಲು ಹಳ್ಳಿಗ ಮಕ್ಕಳು ತಮ್ಮ ತಾಯಂದಿರನ್ನು ಕಾಣುತ್ತಾರೆ. ನನ್ನವ್ವ ಫಲವತ್ತಾದ ಕಪ್ಪು ನೆಲ ಅನ್ನೋ ಸಾಲು, ನನ್ನ ಪಾಲಿಗೆ ಲಂಕೇಶರೇ ಜಗದ್ಗುರುವನ್ನಾಗಿ ಮಾಡಿದೆ. ಕಲಿಸಿದ ಗುರುವನ್ನೂ ಝಾಡಿಸೋ ಮನುಷ್ಯ ನಿಂತ ನೀರಲ್ಲ ಅನ್ನೋದು ರುಜುವಾತು ನೀಡುತ್ತದೆ. ಕವಿ ಅಡಿಗರ ಅರ್ಥ ಭೂತದಲ್ಲಿ ಅಡಗಿ ತಿಳಿಯದೆ ತೊಡೆಯ ನಡುವೆ ನಗುತ್ತಿದ್ದಳು ಹುಡುಗಿ ಒಂದು ವೈಜ್ಞಾನಿಕ ಸತ್ಯದಷ್ಟೇ ಖಚಿತವಾಗಿ ನಿಜವನ್ನು ಹೇಳದಿದ್ದರೆ ಕವಿ ಬರೆಯುವುದನ್ನು ನಿಲ್ಲಿಸಬೇಕು ಅನ್ನುವಂತಹ ವಾದ ಕವಿಯಾಗಿ ಗುರು ಲಂಕೇಶರಲ್ಲಿತ್ತು. ಒಬ್ಬ ಓದುಗನನ್ನು ಬೆಚ್ಚಿ ಬೀಳಿಸದ ಬರಹ ಬರಹವೇ ಅಲ್ಲ ಅಂತ್ಲೂ ನಂಬಿದ್ದರು ಮೇಷ್ಟ್ರು. ಹಾಗಾಗಿಯೇ ಮೇಷ್ಟ್ರು ಇಷ್ಟವಾಗುತ್ತಾರೆ. ಹೊಗಳಿಕೆಯ ಹೊನ್ನಶೂಲಕ್ಕೇರುತ್ತಿದ್ದ ಮಲ್ಲಿಗೆ ಜುಟ್ಟಿಡಿದು ಎಳೆದಿದ್ದು ನನಗೆ ರಾವಣ ತೃಪ್ತಿಯಷ್ಟೇ ಖುಷಿಯನ್ನು ಈ ಕ್ಷಣಕ್ಕೂ ನನಗೆ ನೀಡುತ್ತದೆ. ನನ್ನ ಹಸಿದ ಹಲ್ಲಿಗೆ ಇವಳ ಮೈಸೂರು ಮಲ್ಲಿಗೆ ಇದು ನನಗೆ ಅಣಕದಂತೆ ಕಾಣೋದಿಲ್ಲ. ಇದೂ ಸಹ ಪಂಪನೊಣಗಿಸದಷ್ಟೇ.. ಹಾಳೆ ಪವಿತ್ರವಲ್ಲ.. ಅಕ್ಷರ ಪವಿತ್ರ ಕೃಷ್ಣ, ಕೃಷ್ಣೆಯರಂತೆ ಕರಿಯ, ಕಾಳಿಯರತ್ತ ನಮ್ಮ ಗಮನ, ನಮ್ಮ ಶ್ರದ್ಧೆ ಹರಿಯಬೇಕಾಗಿದೆ. ಇದನ್ನು ಹಟದಿಂದ ಮತ್ತು ಪ್ರೀತಿಯಿಂದ, ಧೈರ್ಯದಿಂದ ಮತ್ತು ವಿನಯದಿಂದ ಸಾಧಿಸಬೇಕಾಗಿದೆ. ಈ ಸಂಕೇತ ಮತ್ತು ವಾಸ್ತವತೆಯ ಸಂದರ್ಭದಲ್ಲೇ ನಮ್ಮ `ಪಾಂಚಾಲಿ ಮತ್ತು `ಒಕ್ಕೂಟದ ಅಸ್ತಿತ್ವ ಇದೆ. 46 ವರ್ಷಗಳ ಹಿಂದೆ ಪಾಂಚಾಲಿ ವಿಶೇಷಾಂಕ ಸಂಚಿಕೆಯ ಮುನ್ನಡಿಯಲ್ಲಿ ಬರೆದ ಸಾಲುಗಳಿವು. 46 ವರ್ಷಗಳ ಹಿಂದಿನ ಸಾಲಿನಲ್ಲೂ ದೇಶದ ಸದ್ಯದ ಸ್ಥಿತಿಯ ಭ್ರೂಣವೊಂದು ಇನ್ನೂ ಅಲುಗಾಡುತ್ತಿದೆಯೇನೋ ಅನಿಸುತ್ತದೆ. ಈ ಕ್ಷಣಕ್ಕೂ ಅವರ ಅಕ್ಷರಗಳು ಪಾವಿತ್ರ್ಯತೆಯಿಂದ ಉಳಿದಿವೆ ಅಂದ್ರೆ ಅದಕ್ಕೆ ಕಾರಣ ಲಂಕೇಶ್ ಅನ್ನೋ ನೈತಿಕ ಎಚ್ಚರ ಹಾಗೂ ಸಾಕ್ಷಿ ಪ್ರಜ್ಞೆ.  ಇನ್ನೂ ಇನ್ನೂ ಹಲವು ತಲೆಮಾರುಗಳನ್ನ ನಿರಂತರ ಕಾಡುವ ತಳಮಳ. ಕನ್ನಡದ ಎಲ್ಲ ಆಯಾಮಗಳಿಗೆ ಹೊಸತನದ ಹಿಗ್ಗು ತಂದ ಸಂಕ್ರಾಂತಿ. ಸಾಹಿತ್ಯದಿಂದ ರಾಜಕೀಯದವರೆಗೆ ಎಲ್ಲವುಗಳಲ್ಲೂ ವಿಜೃಂಭಿಸಿದ ರಾವಣ ಪ್ರತಿಭೆ. ಹುಳಿಮಾವಿನ ಮರವಲ್ಲ.. ಆಲದಮರ ವಿಶಿಷ್ಟ ಬರಹಗಾರ ಭ್ರಷ್ಟನಲ್ಲದ ರಾಜಕಾರಣಿ ಅತಿಸಹಜ ನಟ ನೆನಪಿನಲ್ಲುಳಿವ ನಾಟಕಕಾರ ಹರಿತ ಮಾತಿನ ವಿಮರ್ಶಕ ವಿಭಿನ್ನ ನಿರ್ದೇಶಕ ಮುಲಾಜಿಗೆ ಒಳಗಾಗದ ಪತ್ರಕರ್ತ ಧರ್ಮದ ಸೋಂಕಿಲ್ಲದ ದಾರ್ಶನಿಕ ಇಷ್ಟು ವಿಭಿನ್ನ ಆಯಾಮಗಳನ್ನ ಹೊಂದಿರುವ ದೊಡ್ಡ ಆಲದ ಮರ ಪಿ. ಲಂಕೇಶ್. ಆದ್ರೆ ತಮ್ಮನ್ನವ್ರು ಕರೆದುಕೊಂಡಿದ್ದು ಹುಳಿಮಾವಿನ ಮರ ಅಂತ. ಯಾಕಂದ್ರೆ ಅವ್ರೊಂಥರಾ ಹುಳಿ, ಸಿಹಿ, ಒಗರಿನ ಮಿಶ್ರಣ. ಅದು ನಿಜಕ್ಕೂ ಇಷ್ಟವಾಗುತ್ತದೆ. ಯಾಕಂದ್ರೆ ಅವರ ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಯಾವುದೇ ಆಗಿರಲಿ ಅಲ್ಲಿ ಕಾಣಿಸೋದು ತುಂಬು ಜೀವನಪ್ರೀತಿ ಮತ್ತು ಮನುಷ್ಯ ಸಹಜ ಭಾವಗಳು. ಸೃಜನಶೀಲನೊಬ್ಬನ ಬರೆಯಲೇಬೇಕಾದ ಒತ್ತಡದಲ್ಲಿ ಹುಟ್ಟಿದ ಕನಸಿನ (ಅಸಲಿ) ಕೂಸು ಇವತ್ತಿಗೂ ಖುಷಿಯಿಂದ ಓದಿಸಿಕೊಳ್ಳುತ್ತದೆ. ಲಂಕೇಶ್ ಪತ್ರಿಕೆ ಅನ್ನೋ ಆಲದ ಮರದ ಕೆಳಗೆ ಓದಿದ ಜಾಣೆಯರ ಸಾಲಿನಲ್ಲಿ ನಾನು ಇದ್ದೀನಿ ಅನ್ನೋದು ಸಂತಸದ ಸಂಗತಿ. ಇದೇ ಪತ್ರಿಕೆಯ ಆಲದ ಮರಲ್ಲಿ ಅದೆಷ್ಟೋ ಹಕ್ಕಿಗಳು ಗೂಡು ಕಟ್ಟಿವೆ. ಅದೆಷ್ಟೋ ಮಂದಿ ತಮ್ಮ ವ್ಯಕ್ತಿತ್ವಗಳನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಅದೆಷ್ಟೋ ಆಶಯಗಳಿಗೆ, ಬರಹಗಾರರಿಗೆ ವೇದಿಕೆಯಾಗಿದೆ. ಹೋರಾಟಗಳ ಪ್ರಣಾಳಿಕೆಯಾಗಿದೆ. ಈ ಪೈಕಿ ನನ್ನಲ್ಲೂ ಓದುವ ತುಡಿತವನ್ನು ಮೇಷ್ಟ್ರ ಬರಹ ತಾಯಿ ಎದೆಹಾಲಿನಂತೆಯೇ ಆಕರ್ಷಿಸುತ್ತದೆ. ಲಂಕೇಶ್ ಮೇಷ್ಟ್ರು ಯಾಕಿಷ್ಟವಾಗುತ್ತಾರೆ ಅಂತ ಹೇಳುತ್ತಾ ಹೋದ್ರೆ ಇದೊಂದು ಎಂದಿಗೂ ಮುಗಿಯದ ಕವಿತೆಯಂತದ್ದು. ಅವರು ಅವರ ಬರಹ ಸಮಸ್ತರನ್ನೂ ಸರ್ವಕಾಲಕ್ಕೂ ನಿರಂತರ ಕಾಡುವ ನೆನಪು. ನನಗೆ ಮೇಷ್ಟ್ರು ಎಷ್ಟು ಇಷ್ಟ ಅಂದ್ರೆ ನನ್ನ ಬ್ಲಾಗ್ ಹೆಸರೇ ಗುರು ಲಂಕೇಶ್. ********

ಲಂಕೇಶರನ್ನು ಏಕೆ ಓದಬೇಕು? Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ನಾನೇಕೆ ಲಂಕೇಶರನ್ನು ಓದುತ್ತೇನೆ ಧನಂಜಯ್ ಎನ್ ಲಂಕೇಶರೇ ನಾನೇಕೆ ನಿಮ್ಮನ್ನು ಓದುತ್ತೇನೆ..? ಈ ರೀತಿಯ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡರೂ ಅಂತಹ ಆಶ್ಚರ್ಯವೇನೂ ಇಲ್ಲ. ತೇಜಸ್ವಿಯಿಂದ ಶುರುವಾದ ನನ್ನ ಮೊದಲ ಓದು ಕುವೆಂಪು , ಕಾರಂತರನ್ನು ಬಳಸಿ, ಭೈರಪ್ಪನವರ ತನಕವೂ ಬಂದು ನಿಂತಿತ್ತು. ಇವರೆಲ್ಲರ ಮಧ್ಯೆ ನಿಮ್ಮ ಹೆಸರು ಹಾಗೊಮ್ಮೆ ಹೀಗೊಮ್ಮೆ ಬಂದು ಹೋಗಿತ್ತಾದರೂ, ಹಲವು ಟೀಕೆ ಟಿಪ್ಪಣಿಗಳ ನಡುವೆ ‘ ನೋಡಿಕೊಂಡರಾಯಿತು ಎಂದು ಸುಮ್ಮನಿದ್ದುಬಿಡುತ್ತಿದ್ದೆ. ಭೈರಪ್ಪನವರ ” ಕವಲು ” ಕಾದಂಬರಿ ಓದಿದ ತರುವಾಯ, ಕನಿಷ್ಠ 20 ರಿಂದ 30 ದಿನಗಳ ವರೆಗಾದರೂ ಯಾವ ಹೆಂಗಸರನ್ನು ಕಂಡರೂ ಹೆದರುತ್ತಿದ್ದೆ, ಹೆಂಗಸರಿಗಿರುವ ಅವಕಾಶಗಳೆಲ್ಲಾ ಗಂಡಸರನ್ನು ತುಳಿಯಲೆಂದೇ ಇರುವ ಅಸ್ತ್ರಗಳು ಎಂದು ನಂಬಿಕೊಂಡು ಬೇರೆ ದಾರಿ ಇಲ್ಲದೆ, ಗಂಡೆಂಬ ದರ್ಪವನ್ನು ಹೇಗಾದರೂ ಪ್ರದರ್ಶನ ಮಾಡಬೇಕು ಎಂದು ಹಠ ತೊಟ್ಟಿದ್ದೆ. ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಅನ್ನಭಾಗ್ಯ ಯೋಜನೆ ತಂದಾಗ , ” ಬಡವರಿಗೆ ಅನ್ನ ಕೊಟ್ಟು ಸೋಂಬೇರಿಗಳನ್ನಾಗಿ ಮಾಡುತ್ತಿದ್ದೀರಿ ” ಎಂದು ಹೇಳಿಕೆ ಕೊಟ್ಟ ಭೈರಪ್ಪನವರ ಮಾತನ್ನ ಕೇಳಿ, ಇದೇ ಸತ್ಯ ಎಂದು ನಂಬಿ ಮಾನವೀಯತೆಯನ್ನು ಮರೆತು  ವಾದಕ್ಕೆ ಇಳಿಯುವ ಅರೆಬುದ್ಧಿವಂತರನ್ನು ಎದುರುಗೊಳ್ಳುವವರೆಗೂ…. ನನಗೆ ಈ ಸಾಹಿತಿಗಳ ಮಹತ್ವ ಏನು , ಅವರ ಆಲೋಚನೆಗಳು ಸಮಾಜದ ಮೇಲೆ  ಎಂತಹಾ ಪರಿಣಾಮವನ್ನು ಬೀರುತ್ತಿದೆ ಎನ್ನುವ ಸಂಪೂರ್ಣ ಚಿತ್ರಣ ತಲೆಗೆ ಬಂದಿರಲಿಲ್ಲ. ಇಂಥಹಾ ಅಸಹ್ಯ ಸಾಹಿತಿಗಳು ಮತ್ತು ಅವರು ಮಾಡುವ ರಾಜಕೀಯಗಳ ಮತ್ತದರ ಸಾಧ್ಯತೆಗಳ ಮುಂದೆ ನಿಮ್ಮ ಗಟ್ಟಿ ಸಾಹಿತ್ಯ ವಿಭಿನ್ನವಾಗಿ ನಿಂತಿದೆ. ಕವಿತೆಗಳಲ್ಲಿ  ಬರಿಯ ಕಾಮ, ಮೋಹ, ಮಂಚದ ಸುತ್ತ ಸುತ್ತುತ್ತಾ ಹೆಣ್ಣನ್ನು/ಗಂಡನ್ನು, ರಂಜಿಸುವುದೇ ಕವಿತೆಯ ಉದ್ದೇಶ ಎಂದು ತಿಳಿದ ಸೋ ಕಾಲ್ಡ್ ಕವಿಗಳ ಕವಿತಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ, ನಿಮ್ಮ ನೀಲು ಕಾವ್ಯದ ನಾಲ್ಕೆ ನಾಲ್ಕು ಸಾಲುಗಳನ್ನ ಯಾರದೋ ಮೊಬೈಲಿನಲ್ಲಿ ಕಂಡಾಗ, ಇದೇನು ಹೀಗೆ ಎಂದು ಉಬ್ಬೇರಿಸಿ ಅಮಾಯಕನಂತೆ ಕಣ್ಣು ಬಿಟ್ಟ ನೆನಪು ನನಗೀಗಲೂ ಇದೆ. ಅಲ್ಲಿಂದಲೇ ನನ್ನ ನೋಟ ನಿಮ್ಮ ವಿಭಿನ್ನ ಬರಹಗಳೆಡೆಗೆ ತಿರುಗಿದ್ದು ಎಂದು ಹೇಳಬಹುದು. ಸ್ಟೆಲ್ಲಾ ಎಂಬ ಹುಡುಗಿಯ ರಂಗರೂಪವನ್ನ ಬೆಂಗಳೂರಿನ ಕಲಾಗ್ರಾಮದಲ್ಲಿ ನೋಡುತ್ತಿದ್ದಾಗ , ಪಕ್ಕದಲ್ಲಿ ಕೂತಿದ್ದ ಮತ್ತೊಬ್ಬ ಪ್ರೇಕ್ಷಕ, ಇದೇನು ನಾಟಕವೋ ಅಥವಾ ದೊಂಬರಾಟವೋ,,, ಅದೇನು ಪಾತ್ರಗಳು ತಂದಿದಾರಪ್ಪ ಇವ್ರು ?? ಅರೆ ಥತ್ ಎಂದು ಉಗುಳು ನುಂಗಿಕೊಂಡು ಬೈಗುಳ ಪೂರ್ಣವಾಗುವ ಮುನ್ನವೇ ,,, ಯಾರು ಬರೆದದ್ದು ಈ ನಾಟಕ ? ಎಂದು ಕೇಳಿದ್ದ. ಲಂಕೇಶ್, ಪಿ ಲಂಕೇಶ್ ಬರೆದದ್ದು ಎಂದು ನನ್ನ ಉತ್ತರ ಕೇಳಿದ ತಕ್ಷಣ , ಓಹ್ ಆ ಮಹಾನುಭಾವನೋ,,, ಅವನಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ !!! ಎಂದು ಗೊಣಗುತ್ತಲೇ ಅರ್ಧ ನಾಟಕ ಬಿಟ್ಟು ಹೋದ. ಆ ವ್ಯಕ್ತಿಯನ್ನು ನೋಡಿ, ನಿಮ್ಮ ಬರಹದ ಪರಿಣಾಮ ಎಂಥಾದ್ದು ಎನ್ನುವ ಅಂದಾಜು ಸಿಕ್ಕಿದ್ದು. ಅಲ್ಲಿ ನಾಟಕದಲ್ಲಿ, ಅಸಹಾಯಕ ಹೆಣ್ಣು ಮಗಳನ್ನ ನಾವೇ ಕಟ್ಟಿಕೊಂಡ  ಸಮಾಜ ಹೇಗೆಲ್ಲಾ ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತಾ, ವಿವರಣೆಗಾಗಿ ಅಲ್ಲಿಯತನಕ ಕಾಮದಿಂದಲೂ ಮೋಹದಿಂದಲೂ ಕಾಣುತ್ತಿದ್ದ ಪ್ರೇಯಸಿಯನ್ನ ಸಮಾಜದ ಮುಂದೆ ತನ್ನ ಸಂಗಾತಿ ಎಂದು ಹೇಳಿಕೊಳ್ಳಲು ಹಿಂಜರಿಯುವ ಯುವಕ ಆ ಕ್ಷಣದ ಪಾಲಾಯನಕ್ಕೆ ಈಕೆ ನನ್ನ ಸೋದರಿ ಇದ್ದಂತೆ ಎಂದು ಹೇಳಿಬಿಡುವ ಗಂಡಸಿನ ಲಜ್ಜೆಗೆಟ್ಟ ಬುದ್ಧಿಯನ್ನು ನೀವು ತೋರಿಸಿದ್ದಕ್ಕೊ ಏನೋ, ಬಹುಶಃ ಆ ಸಹ ಪ್ರೇಕ್ಷಕಕನ ಗಂಡು ಬುದ್ದಿ  ಕುಪಿತಗೊಂಡಿರಬೇಕು. ಇದಕ್ಕೂ ಮುಂಚೆ ಮಲೆಗಳಲ್ಲಿ ಮದುಮಗಳು ನಾಟಕ ನೋಡುವಾಗ ಈ ಥರದ ಪ್ರತಿಕ್ರಿಯೆಗಳನ್ನ ಕಂಡಿದ್ದೆ, ಕೇಳಿದ್ದೆ. ಪ್ರತಿಕ್ರಿಯೆಗಳು ಧನಾತ್ಮಕವೋ ಋಣಾತ್ಮಕವೋ, ಒಟ್ಟಿನಲ್ಲಿ ಕೃತಿ ಎದುರುಗೊಂಡಾಗ ಒಂದು ಧ್ವನಿ ಹುಟ್ಟುತ್ತದೆ ಎಂದರೆ, ಆ ಕೃತಿಯ ನಿರೂಪಕ ಗೆದ್ದಿದ್ದಾನೆ ಎಂದು ಅರ್ಥವಲ್ಲವೇ. ಈಗಿನ ಅಸಹ್ಯ ರಾಜಕೀಯ ಸನ್ನಿವೇಶಗಳನ್ನು ಗಮನಿಸಿದರೆ ಭಯವಾಗುತ್ತಿದೆ. ಮೊನ್ನೆ ಮೊನ್ನೆ, ಪ್ರಭುತ್ವವನ್ನು ಪ್ರಶ್ನಿಸಿ ರೂಪಕವಾಗಿ ಕಟ್ಟಿದ್ದ ಪದ್ಯವನ್ನು ಬರೆದು ವಾಚಿಸಿದ್ದಕ್ಕೆ ಸಿರಾಜ್ ಬಿಸರಳ್ಳಿ ಎಂಬ ಕವಿಯನ್ನು ಅರೆಸ್ಟ್ ಮಾಡಿದ್ದರಂತೆ. ಈ ಅಭಿವ್ಯಕ್ತಿ ಸ್ವತಂತ್ರ ಕಿತ್ತುಕೊಂಡ ಪ್ರಕ್ರಿಯೆಯನ್ನ ನಮ್ಮ ಮೀಡಿಯಾ ಬಾಂಧವರಿಂದ ಹಿಡಿದು, ಟ್ರೋಲ್ ಮಾಡುವ ಸಣ್ಣ ಪುಟ್ಟ ಚಿಲ್ಲರೆಗಳೂ ಸಹ ಸಂಭ್ರಮಿಸಿದ್ದರು. ಇಂಥಹ ಸಿರಾಜ್ ಬಿಸರಳ್ಳಿ ಯವರು ನಿಮ್ಮ್ ಲಂಕೇಶ್ ಪತ್ರಿಕೆಯಲ್ಲಿ ಪ್ರತಿ ದಿನ ಹುಟ್ಟುತ್ತಿದ್ದರು ಎಂದು ಕೇಳಿದಾಗ, ರೋಮಾಂಚನವಾಗುವುದಿಲ್ಲವೇ…!!! ಕನ್ನಡ ಹೋರಾಟಗಳು ಅಂಧಕಾರದ ರೂಪ ಪಡೆದ ಸಮಯದಲ್ಲಿ, ನಿಮ್ಮ ಲಂಕೇಶ್ ಪತ್ರಿಕೆಯಲ್ಲಿ ಬಂದ ವರದಿಯನ್ನು ಗಮನಿಸಿದ ಕನ್ನಡ ಪರ ಹೋರಾಟಗಾರರು ನಿಮ್ಮನ್ನು ಹಿಡಿದು ಥಳಿಸಿದ್ದರಂತೆ. ಆದರೆ ಅದಾವಕ್ಕೂ ಎದೆಗುಂದದೆ ಮುಂದಿನ ದಿನವೂ ನಿಮ್ಮ ಬರಹದ ಹೋರಾಟ ಕಮ್ಮಿಯಾಗದೇ ಉಳಿದದ್ದನ್ನು ಕಂಡು ಅವರೇ ಸುಮ್ಮನಾದರಂತೆ. ಪ್ರಶಸ್ತಿಗಳಿಗೆ ಹಾತೊರೆದು ಸಮಯಸಾಧನೆಯಲ್ಲಿ ಮುಳುಗಿರುವ ನಮ್ಮ ಈ ಕಾಲದ ಹೊಸ ಸಾಹಿತಿಗಳನ್ನ ಕಂಡಾಗ , ನಿಮ್ಮ ನೇರ ನಿಷ್ಟುರವಾದ ಆ ಮಾತುಗಳೆಲ್ಲಾ ನೆನಪಿನಲ್ಲಿ ಉಳಿಯುತ್ತಿವೆ. ಮನೆ ಬಾಗಿಲಿಗೆ ಬಂದ ಪ್ರಶಸ್ತಿಯನ್ನು ಹಿಂದೆ ಕಳುಸಿದ ತೇಜಸ್ವಿಯಂಥವರು ನಿಮ್ಮೊಡನೆ ಉತ್ತಮ ಸ್ನೇಹವನ್ನು ಹೊಂದಿದ್ದರು, ಎಂದಾಗಲಂತೂ…. ನಿಮ್ಮಗಳ ಆ ಒಗ್ಗಟ್ಟಿನ ಕಾಲದ ಮುಂದೆ ನಮ್ಮ ಕಾಲ ತೀರಾ ಸಪ್ಪೆ ಎನಿಸುತ್ತಿದೆ. ಅಧಿಕಾರವಿಲ್ಲದೆ ಏನೂ ಮಾಡಲಾಗುವುದಿಲ್ಲ, ಎಂದು ನಿಮ್ಮ ಕಾಲದ ಸಾಹಿತಿಗಳು ಆಗಲೇ ತಿಳಿದಿದ್ದರು ಅಲ್ಲವೇ.. ??? ವಿರುದ್ಧ ಅಭಿಪ್ರಾಯ ಹೊಂದಿದ ಸಂಘ ಪರಿವಾರದ ಪರವಾಗಿ ನಿಂತು ಸೋತು ಸುಣ್ಣವಾಗಿದ್ದ ಅಡಿಗರನ್ನ ಸಂತೈಸುತ್ತಲೇ , ಲೋಹಿಯಾ ತತ್ವಗಳನ್ನು ಒಪ್ಪಿಕೊಂಡು ಒಂದು ಸ್ವಂತ ಕರ್ನಾಟಕದ ಬಲಕ್ಕಾಗಿ ಸಾಹಿತ್ಯ ಲೋಕದಿಂದ ರಾಜಕೀಯ ಕ್ಷೇತ್ರದ ಕಡೆ ಅಲೋಚಿಸಿದ್ದ ನಿಮ್ಮ ಕರ್ನಾಟಕ ಪರ್ಯಟನೆ, ರಾಜಕೀಯವಾಗಿ ಸಾಹಿತಿಗಳು ಎಷ್ಟು ಮುಖ್ಯ ಎಂಬುದಾಗಿ ನಮಗೆಲ್ಲಾ ಮಾದರಿಯಾಗಿದೆ. ದೃಶ್ಯ ಮಾಧ್ಯಮ ಬೀರುವ ಪ್ರಭಾವವನ್ನು ಸೂಕ್ಷ್ಮವಾಗಿ ಅರಿತಿದ್ದ ನೀವು, ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಅಲ್ಲದೇ, ಯಶಸ್ಸನ್ನು ಪಡೆದ ಬಗೆಗೆ ಏನು ತಾನೇ ಹೇಳಲಿ… ??? ಟೀಕಿಸಿದರೆ ಸಾಲದು ಮಾಡಿ ತೋರಿಸಿ ಎಂದು ಫಟಾಪತ್ ಕಾಲೆಳೆಯುವ ಜನರ ಬಾಯನ್ನ ನಿಮ್ಮ ಪ್ರಯತ್ನಗಳು ಉತ್ತರ ನೀಡಿ ಮುಚ್ಚಿಸಿದ ಗೆಲುವಿಗೆ ನಾನೆಂದಿಗೂ ಅಭಿಮಾನಿಯಾಗಿಯೇ ಉಳಿಯುತ್ತೇನೆ. ಲಂಕೇಶರೇ …. ನಿಮ್ಮನ್ನು ನಾನೇಕೆ ಓದುತ್ತೇನೆ ಎಂಬುದು, ಇಂಥಹ ಮತ್ತಷ್ಟು ಕಾರಣಗಳಿಗೆ ಮುಂದುವರಿಯುತ್ತಲೇ ಇದೆ. **************************

ಲಂಕೇಶರನ್ನು ಏಕೆ ಓದಬೇಕು? Read Post »

You cannot copy content of this page

Scroll to Top