ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಚಿಂತನೆ

ಅರಿಷಡ್ಬರ್ಗಗಳನು  ದಾಟಿ….. ಅಶ್ವಥ್ ಕಳೆದ ವಾರ ಗೆಳೆಯನೊಬ್ಬನಿಗೆ ಏನೋ ಗೊಂದಲವಾಗಿ ಕೆಲವು ಪ್ರಶ್ನೆಗಳನ್ನು ಒಂದಕ್ಕೊಂದು ಪೋಣಿಸಿ ಪ್ರಶ್ನೆಗಳ ಒಂದು ಮಾಲೆಯನ್ನೇ ಮಾಡಿಟ್ಟುಕೊಂಡಿದ್ದ. ನಾವು ಕತೆ ಕೇಳ್ತೇವೆ, ಇತಿಹಾಸ ಅಧ್ಯಯನ ಮಾಡ್ತೇವೆ, ಪುರಾಣ ಪುಣ್ಯಕತೆಗಳನ್ನು ಓದುವುದು ಕೇಳುವುದು ನೋಡುವುದು ಇದ್ದೇ ಇದೆ. ಇಷ್ಟೇ ಅಲ್ಲದೇ ನಮ್ಮ ತಲೆಮಾರಿನವರಿಗೆ ಬಾಲ್ಯದಲ್ಲಿ ಪೌರಾಣಿಕ ನಾಟಕಗಳು, ಹರಿಕತೆಗಳು, ಬೀದಿನಾಟಕ, ಗೊಂಬೆನಾಟಕ ಹೀಗೆ ಹತ್ತು ಹಲವು ರೀತಿಯಲ್ಲಿ ನಮ್ಮ ಹೊರಗನ್ನು ತಿಳಿಯುವ ಸಾಮಾನ್ಯ ಸಾಧ್ಯತೆಗಳಿದ್ದವು. ಈಗ ಹಳೆಯ ಈ ಮಾಧ್ಯಮಗಳೆಲ್ಲ ಹಿನ್ನೆಲೆಗೆ ಸರಿದು, ಸಿನಿಮಾ, ಅಥವಾ ಕಿರುತೆರೆ (ಟಿವಿ, ಅಮೇಜಾನ್, ನೆಟ್ಫ್ಲಿಕ್ಸ್, ಯೂಟ್ಯೂಬ್ ಆದಿಯಾಗಿ ಮೊಬೈಲ್ಗಳನ್ನೂ ಸೇರಿಸಬಹುದು) ಇವೇ ವಿಜೃಂಭಿಸುವ ಕಾಲದಲ್ಲಿ ನಾವಿದ್ದೇವೆ. ಓದುವುದು ಒಂದು ಹವ್ಯಾಸ ಆಗಿರುವವರಿಗೆ ಕಾಲಾತೀತವಾಗಿ ವರ್ತಮಾನವನ್ನು ಗ್ರಹಿಸಿಕೊಳ್ಳುವುದು ಸಾಧ್ಯ. ಆದರೆ ಓದು ಅಂದರೆ ಪರೀಕ್ಷೆಯಲ್ಲಿ ಪಾಸಾಗುವುದಕ್ಕೆ, ಪುಸ್ತಕಗಳನ್ನೋ, ಅಥವಾ ಮೇಷ್ಟರು ಬರೆಸಿದ ನೋಟ್ಬುಕ್ಗಳನ್ನೋ ಓದುವುದಕ್ಕೆ ಮೀಸಲಾದರೆ ಅದರಿಂದ ಏನೂ ಪ್ರಯೋಜನವಾಗಲಾರದು. ಆ ರೀತಿಯದ್ದಲ್ಲದ ವಿಷಯ, ವಿದ್ಯಮಾನಗಳ ಗ್ರಹಿಕೆಯ ಓದು ಒಂದು ಹವ್ಯಾಸವಾದವರಿಗೆ ಯಾವ ಮಾಧ್ಯಮ ಹಿನ್ನೆಲೆಗೆ ಸರಿದರೂ, ಯಾವ ಹೊಸ ಮಾಧ್ಯಮ ಚಾಲನೆಗೆ ಬಂದರೂ ಅಂತಹವುಗಳಿಂದ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ನಮ್ಮಂತಹವರು ಅಂದರೆ ಸಾಮಾನ್ಯವಾಗಿ ಹೈಸ್ಕೂಲು, ಆನಂತರ ಎರಡು ಮೂರು ವರ್ಷ ಕಾಲೇಜು ಅಥವಾ ಒಂದು ಪದವಿ ಮುಗಿಸಿಕೊಂಡವರು ಅತ್ತ ಹಳೇಕಾಲದ ಗ್ರಹಿಕೆಯ ಮಾಧ್ಯಮದ ಅವಕಾಶಗಳೂ ಇಲ್ಲದೇ, ಇತ್ತ ಹೊಚ್ಚ ಹೊಸ ಆಕರ್ಷಣೀಯ ಮಾಧ್ಯಮಗಳ ಕಡೆ ಹೊರಳಿಕೊಂಡು ಸಿನಿಮಾ ಹೀರೋಗಳ ಡೈಲಾಗುಗಳಿಗೋ, ಅಥವಾ ಹೆಚ್ಚು ಕಡಿಮೆ ಇದೇ ರೀತಿಯಲ್ಲೇ ಡೈಲಾಗು ಬರೆದುಕೊಂಡು (ಬಹುತೇಕ ಬರೆಯಿಸಿಕೊಂಡು) ಭಾಷಣಭೀರುಗಳ ದಾಳಿಗೆ ಒಳಪಟ್ಟು, ಅವರವರ ಅಭಿಮಾನಿ ಸಂಘಗಳಿಗೆ ಸದಸ್ಯರುಗಳಾಗಿ, ಅಂತಹ ಡೈಲಾಗುಗಳನ್ನೊಂದಿಷ್ಟು ಕರತಲಾಮಲಕ ಮಾಡಿಕೊಂಡು ನಮ್ಮ ಗ್ರಹಿಕೆ ಹಿಗ್ಗಿದೆ ಅಂದುಕೊಂಡಿರ್ತೇವೆ. ಮೊನ್ನೆ ಪ್ರಶ್ನೆ ಮಾಡಿದ ಗೆಳೆಯನನ್ನು ಕಾಡಿದ ಆ ಗೊಂದಲಗಳು ಅವನೊಬ್ಬನವೇ ಅಲ್ಲ; ಬಹುತೇಕ ನಮ್ಮೆಲ್ಲರವೂ ಹೌದು. ಅದಕ್ಕೆ ಉತ್ತರ ಹುಡುಕಲು ಹೊರಡುವುದು ಅಂದರೆ ಬದುಕೆಂದರೆ ಏನು ಅನ್ನುವುದನ್ನೆಲ್ಲ ಕ್ರೋಢೀಕರಿಸಲು ಹೊರಟಂತಹ ಸಾಹಸವಾಗಬಹುದು. ಆದರೂ ಸಂಕ್ಷಿಪ್ತವಾಗಿ ಕಡಿಮೆ ಹೊತ್ತಿನ ಆಲೋಚನೆಗೆ ಹೊಳೆದ ಕೆಲವು ಹೊಳಹುಗಳನ್ನು ಹಿಡಿದಿಡುವ ಪ್ರಯತ್ನ ಇದು. ಆ ಪ್ರಶ್ನೆಗಳ ಸರಮಾಲೆಯನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಬದುಕು ಹೇಗಿರಬೇಕು. ಎಲ್ಲರಂತೆ ಬದುಕುವುದು ಅಂದರೆ ಈಗ ಕಿತ್ತಾಡಿಕೊಂಡೇ ಬದುಕಬೇಕಾದ ಅನಿವಾರ್ಯತೆಯಿದೆ. ಹೇಗೋ ಬದುಕುವುದಾದರೆ ಈ ಪ್ರಶ್ನೆಗಳು ಮೂಡುವುದೇ ಇಲ್ಲ. ಅಂತಃಕರಣದಲ್ಲಿ ಏನೋ ಸರಿಯಿಲ್ಲವೆನ್ನುವ ಭಾವನೆಯಿಂದಲೇ ಈ ಪ್ರಶ್ನೆಗಳ ಅಲೆಗಳು ಶುರುವಾಗುವಂತಹದ್ದು. ಹೈಸ್ಕೂಲಲ್ಲಿ “ಹೃದಯವಂತಿಕೆಯ ಸಮಸ್ಯೆಗಳು” (ವಿ.ಕೃಗೋಕಾಕರದ್ದು) ಅಂತ ನಮಗೊಂದು ಪಾಠ ಇತ್ತು . ಅಂತಹ ಹೃದಯವಂತಿಕೆ ಕಿಂಚಿತ್ತು ಇದ್ದಾಗ ನಮ್ಮ ತಪ್ಪುಗಳ ಬಗ್ಗೆ ನಾವೇ ಯೋಚಿಸುವ, ಪ್ರಶ್ನೆ ಮಾಡಿಕೊಳ್ಳುವ ಆ ಮೂಲಕ ಬದುಕು ಕಾಲದ ಹರಿವಿನೊಟ್ಟಿಗೇ ಕೊಚ್ಚಿಕೊಂಡು ಹೋಗಲು ಬಿಡದೇ, ಅಂಬಿಗನು ನಡೆಸುವ ಹರಿಗೋಲಿನ ಹಾಗೆ ಮುನ್ನಡೆಸುವುದು ಸಾಧ್ಯವಾಗಬಹುದು. ಮಾನವನಿಗೆ ನೆಮ್ಮದಿಯಾಗಿರುವುದಕ್ಕೆ ಅನ್ನ, ಅರಿವು, ಉಡುಪು, ಆರೋಗ್ಯಮತ್ತು ವಸತಿ (ಮನೆ) ಈ ಐದು ಮೂಲಭೂತ ಸೌಕರ್ಯಗಳು ಅತ್ಯಗತ್ಯವಾದವು. ಈ ಐದನ್ನೇ ಸಂಪಾದಿಸಲು ಅಲ್ಲವೇ ಆ ಲಕ್ಷಾಂತರ ವಲಸೆ ಕಾರ್ಮಿಕರು; ಕಾಲಿಗೆ ಚಪ್ಪಲಿಯಿಲ್ಲದೆ, ಅನ್ನ ನೀರಿನ ಏರ್ಪಾಡೂ ಇಲ್ಲದೇ ನಡೆದವರು; ತಮ್ಮ ಸ್ವಂತ ಊರುಗಳನ್ನು ಬಿಟ್ಟು ಸಾವಿರಾರು ಮೈಲಿ ದೂರದಿಂದ ಅವಕಾಶಗಳನ್ನು ಅರಸಿಕೊಂಡು ಬಂದಿದ್ದು? ಈ ಐದು ಸೌಲಭ್ಯಗಳಿಗಾಗಿಯೇ ಬಹುತೇಕ ತೊಂಭತ್ತಕ್ಕೂ ಹೆಚ್ಚು ಶೇಕಡಾ ಜನ ಹೋರಾಡುವುದು. ಇದರಲ್ಲಿ ಕೆಲವು ಶೇಕಡಾ ಜನ ಮಾತ್ರ ಈ ನೆಮ್ಮದಿಯ ಟಾನಿಕ್ಕುಗಳಾಚೆಗೆ, ಕೆಲಸದ ಸುರಕ್ಷತೆ, ಭವಿಷ್ಯಕ್ಕೆಂದು ಒಂದಿಷ್ಟು ಗಂಟು, ಸಮಾಜದಲ್ಲಿ ಅಂತಸ್ತು, ಅಸ್ವಾಭಾವಿಕ ಮನ್ನಣೆ ಗಳಿಸುವ ಸರ್ಕಸ್ಸು, ಇಂಗ್ಲೀಷಿನಲ್ಲಿ ʼಲೈಮ್ಲೈಟ್ʼನ್ನುವ ನಿಂಬೆಹುಳಿಬೆಳಕಿನಲ್ಲಿ ಹೊಳೆಯುವ ವಿಲಕ್ಷಣ ಬಯಕೆ ಇತ್ಯಾದಿಗಳ ಮೊರೆಹೋಗಿ ತಾವು ನೆಮ್ಮದಿಯ ಆಚೆ ಒದ್ದಾಡುವುದರ ಜೊತೆಜೊತೆಯಲ್ಲೇ ತಮಗೆ ಬೇಕಾದ್ದಕ್ಕೆ ಬೇರೆ ಬಡ, ಮಧ್ಯಮ ವರ್ಗದ ಒಂದಿಷ್ಟು ಮಂದಿಯನ್ನೂ ಸೇರಿಸಿಕೊಂಡು ಗೌಜಿ ಸೃಷ್ಟಿ ಮಾಡ್ತಾರೆ. ಈ ರೀತಿಯ ಗೌಜಿಯೇ ಈ ಕಾಲದ ವಿಶೇಷ. ಕಾಂಟ್ರಾವರ್ಸಿ ಎಲ್ಲಿದೆ ಅಂದರೆ ?ಎಲ್ಲಿಲ್ಲ ಅಂತ ಕೇಳಿಕೊಳ್ಳಬೇಕಾದ ಪರಿಸ್ಥಿತಿ ಈಗ ಇದೆ ಅನಿಸಲ್ವೇ? “ರಾಮನುಕಾಡಿಗೆಹೋದನು”.  ಕನ್ನಡದ ಕಾಪಿರೈಟಿಂಗ್ ಪುಸ್ತಕದಲ್ಲಿ ಸಾಮಾನ್ಯವಾಗಿ    ಇದು ಮೊದಲ ವಾಕ್ಯ. ಅಲ್ಲೊಂದು ಕುತೂಹಲ ಮೂಡಿಸುವ ಉದ್ದೇಶವಿದ್ದಿರಬಹುದು ಅನಿಸತ್ತೆ. ಪ್ರೈಮರಿ ಸ್ಕೂಲಿನ ಮಗುವೊಂದಕ್ಕೆ ರಾಮನು ಕಾಡಿಗೆ ಹೋದನು ಅಂದರೆ ರಾಮ ಯಾರು? ಕಾಡು ಅಂದರೆ ಏನು? ರಾಮ ಕಾಡಿಗೆ ಯಾಕೆ ಹೋಗಿದ್ದು? ಈ ರೀತಿಯ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದರೆ ಕಾಪಿರೈಟಿಂಗಿನ ಜೊತೆಯಲ್ಲೇ ರಾಮಾಯಣ ತಿಳಿಯುವುದಕ್ಕೆ ಮಗುವಿಗೆ ಮಾರ್ಗಸೂಚಿ ಆಯ್ತು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಗ್ಗಾಗ್ಗೆ ನಾವು ಇದೇ ರೀತಿ ಪ್ರಶ್ನಿಸಿಕೊಳ್ಳುವ, ಕೆಲವು ಕುತೂಹಲಗಳನ್ನು ಮೂಡಿಸಿಕೊಳ್ಳುವ, ಅಂತಹ ಕುತೂಹಲಗಳಿಗೆ ಉತ್ತರಗಳನ್ನು ಹುಡುಕಿಕೊಳ್ಳುವ ಒಂದಿಷ್ಟು ಅಭ್ಯಾಸ ಮಾಡುತ್ತಾ ಹೋಗುವುದು ವೈಯಕ್ತಿಕ ಮಟ್ಟದಲ್ಲಿ ಆರೋಗ್ಯಕರ. ಸಧ್ಯ  ಸಮೂಹ ಮಾಧ್ಯಮಗಳಲ್ಲೆಲ್ಲ, ಬೂಟಾಟಿಕೆಗಳೇ ತುಂಬಿ ಹೋಗುವ ಮಟ್ಟಕ್ಕೆ ನಮ್ಮನ್ನು ನಾವೇ ತಂದು ನಿಲ್ಲಿಸಿಕೊಂಡಿರುವ ಈ ಕಾಲದಲ್ಲಿ ಗೆಳೆಯನ ಗೊಂದಲಗಳ್ಯಾವೂ ಬೇರೆ ಯಾರಿಗೂ ಹೊಳೆಯದ ವಿಚಾರಗಳಲ್ಲ. ಆದರೂ ಅಂತಹ ಪ್ರಶ್ನೆಗಳು ಮೂಡುತ್ತಿವೆ ಅಂದರೆ ಕನಿಷ್ಟಪಕ್ಷ ಬೂಟಾಟಿಕೆಗಳನ್ನು ಮೀರಿ ಬದುಕುವ ಸಹಜದಾರಿಯೊಂದನ್ನು ಹುಡುಕುವ ಪ್ರಯತ್ನವೊಂದು ಮನಸ್ಸಿನೊಳಗೆ ನಡೆಯುತ್ತಿದೆ ಎಂದರ್ಥ. ಸನಾತನ ಅಂತ ಕರೆಯುವ ಅನಾದಿಕಾಲದಿಂದಲೂ ಮನುಷ್ಯ ಹೀಗೇನೇ ಬದುಕಬೇಕು ಅನ್ನುವ ಚೌಕಟ್ಟು ಕಾಲಕಾಲಕ್ಕೆ ಕಟ್ಟಿಕೊಳ್ಳುತ್ತಾ ಕಾಲಾಂತರದಲ್ಲಿ ಸವೆತಕ್ಕೆ ಸಿಕ್ಕಿ ನವೀಕರಣಗೊಳ್ಳುತ್ತಾ ಬಂದಿರುವುದರಿಂದಲೇ ಸಾವಿರಾರು ವರ್ಷಗಳ ಹಿಂದೆ ಬದುಕಿದ್ದ ದಶರಥನ ಮಗ ರಾಮನೂ, ದೇವಕಿ-ಯಶೋಧೆಯರ ಮಗ ಕೃಷ್ಣನೂ, ಪಾಂಡವರೂ ಕೌರವರೂ ನಮಗೆ ಈಗಲೂ ಕತೆಗಳ ರೂಪದಲ್ಲಿ ಸಿಕ್ಕಿರುವುದು, ಸಿಗುತ್ತಿರುವುದು. ಆದರೆ ಕತೆ ಹರಿಯುವಾಗ ಯಥಾರೂಪಕ್ಕೆ ವೈಭವೀಕರಣವೆಲ್ಲ ಸೇರಿಕೊಂಡು ಅವೆಲ್ಲ ಅವತಾರಗಳು ಪೌರುಷಗಳು ಪವಾಡಗಳೆಲ್ಲ ಮಿಶ್ರಣವಾಗಿ ಮಾನವನ ಬದುಕಿಗೆ ಒಂದೊಳ್ಳೆ ಮಾರ್ಗದರ್ಶಿ ಆಗುವ ಅವಕಾಶಗಳೇ ಹೊರಟುಹೋಗಿವೆ. ಉದಾಹರಣೆಗೆ ಗಮನಿಸಿ, ಕುರುಕ್ಷೇತ್ರ ಅಂತ ಸಿನಿಮಾ ಮಾಡಿದ್ದಾರಲ್ಲ, ನಿತ್ಯದ ಬದುಕಿನಲ್ಲಿ ಆ ಸಿನಿಮಾ ಕುರುಕ್ಷೇತ್ರದ ಯಾವ ಭಾಗವನ್ನು ಅಳವಡಿಸಿಕೊಳ್ಳಲು ಸಾಧ್ಯವಾದೀತು? ಹಾಗೆ ಮಾಡಲೇಬೇಕೆಂದರೆ ನಾವೂ ಒಂದು ಸೆಟ್ ನಿರ್ಮಿಸಿಕೊಂಡು ನಾಟಕ ಆಡುವುದಾಗುತ್ತೆ ಅಷ್ಟೇ! ಅಥವಾ ಅವೆಲ್ಲ ಕೇವಲ ಮನರಂಜನೆಗೋಸ್ಕರ ಇರುವ ಪಾತ್ರಗಳೆಂದೂ, ಪಾತ್ರಗಳ ಮೂಲಕ ವರ್ಗಾವಣೆಯಾಗಬೇಕಾದ ನೀತಿ, ಮಾನವೀಯತೆಯ ಅಂಶಗಳೆಲ್ಲವೂ ಸಣ್ಣಗೆ ಸದ್ದುಮಾಡಿ ಮರೆಯಾಗಿ ಹೋಗುತ್ತವೆ. ಆಧ್ಯಾತ್ಮ ಮಾನವನ ಒಳಜಗತ್ತಿನ ಆವಿಷ್ಕಾರಕ್ಕೆ, ವಿಹಾರಕ್ಕೆ ಆ ಮೂಲಕ ಮಾನಸಿಕ ನೆಮ್ಮದಿಗೆ ಒಂದು ಸಾಧನವಾಗಬೇಕು. ಆಧ್ಯಾತ್ಮ ಪ್ರತಿವ್ಯಕ್ತಿಗೂ ವೈಯಕ್ತಿಕವಾದದ್ದು. ಪ್ರತಿಯೊಬ್ಬರೂ ತಮಗೆ ಒಪ್ಪುವ ದೈವಿಕತೆಯನ್ನು ತಾವೇ ತಮ್ಮ ವಿಚಾರವಂತಿಕೆಯಿಂದ ಸಿದ್ಧಿಸಿಕೊಳ್ಳುವ ಹಾದಿ ತೆರೆದುಕೊಳ್ಳಬೇಕು, ಈ ದಾರಿಯಲ್ಲಿ ಪರಮಹಂಸರು, ವಿವೇಕಾನಂದರೂ ಕೆಲಸ ಮಾಡಿದ್ದಾರೆ. ಅದು ಬಿಟ್ಟು ಎಲ್ಲೋ ಯಾರೋ ಗುನುಗಿದ ಮಂತ್ರಕ್ಕೆ ಕಿವಿಯೊಡ್ಡುವ, ಯಾರೋ ಕೊಡುವ ತೀರ್ಥ ಪ್ರಸಾದಗಳೊಳಗಷ್ಟೇ ಭಕ್ತಿ ತೋರಿಸಿ ಅದನ್ನೇ ಆಧ್ಯಾತ್ಮ ಅಂದುಕೊಂಡು ಭ್ರಮೆಯಲ್ಲಿರುವುದು ಸೂಕ್ತ ಅಲ್ಲ.ವ್ಯಕ್ತಿ,   ವ್ಯಕ್ತಿತ್ವಗಳ ವಿಕಸನಕ್ಕೆ ಬೇಕಾದ ಪರಿಸರವನ್ನು ರೂಢಿಸುವುದಕ್ಕಾಗಿ ಪುರಾಣದ ಪಾತ್ರಗಳಿದ್ದರೆ, ಅವುಗಳ ಉಪಯೋಗ ಮಾತ್ರ ರಾಜಕಾರಣಕ್ಕೆ, ಮುಜರಾಯಿ ಇಲಾಖೆಯ(ಮುಜರಾಯಿಗೆ ಒಳಪಡದ ಖಾಸಗಿ ಸಂಸ್ಥೆಗಳನ್ನೂ ಸೇರಿಸಿಕೊಳ್ಳಬಹುದು) ಆದಾಯಕ್ಕೆ ಸೀಮಿತವಾಗಿಬಿಟ್ಟಿವೆ. ಅಂತಹವು ಬದಲಾಗಬೇಕು ಅಂತ ಕುವೆಂಪು ತರದ ನಮ್ಮ ಕಾಲದ ದಾರ್ಶನಿಕರು ಎಷ್ಟೇ ಪ್ರಯತ್ನಪಟ್ಟರೂ ಈ ಮೊದಲು ಹೇಳಿದ ಗೌಜಿಯ ಕಾರಣದಿಂದಾಗಿ ಅವರ ದರ್ಶನ, ಮಾರ್ಗದರ್ಶನಗಳೆಲ್ಲ ಹೊಳೆಯಲ್ಲಿ ಹುಣಸೆ ಕಲಸಿದ ಹಾಗೆ. ಯಾವ ಮೂಲೆಗೂ ಸಾಲುವುದಿಲ್ಲ. ಹಾಗಾಗಿ ಗೆಳೆಯನಿಗೆ ಇಷ್ಟೇ ಹೇಳಬೇಕು ಅಂದುಕೊಂಡೆ. ನೆಮ್ಮದಿಗೆ ಬೇಕಾಗಿರುವುದನ್ನು ಸಂಪಾದಿಸಲು ಸಮಾಜದಲ್ಲಿರುವ ಸರಿಯಾದ, ನೈತಿಕವಾದ ದಾರಿ ಯಾವುದಿದೆಯೋ ಆ ಮೂಲಕ ಬದುಕು ಕಟ್ಟಿಕೊಳ್ಳಲು ಏನು ಬೇಕೋ ಅದು ಮಾಡೋಣ. ಇಲ್ಲಿ ನೆಮ್ಮದಿಯ ಅಗತ್ಯಗಳನ್ನು ಇಲ್ಲಿ ಹೇಳಿರುವ ಕ್ರಮದಲ್ಲಿಯೇ ಆದ್ಯತೆಯಾಗಿ ತೆಗೆದುಕೊಳ್ಳೋಣ.  ೧. ಅನ್ನ  ೨. ಅರಿವು .೩ಅರಿವೆ (ಬಟ್ಟೆ). ೪. ಆರೋಗ್ಯ (ದೈಹಿಕಹಾಗೂಮಾನಸಿಕ) ೫. ವಸತಿ. (ಹೇಳ್ಕಾಳಾಕ್ಒಂದೂರುತಲೆಮ್ಯಾಲೆಒಂದ್ಸೂರು). ಇದರಾಚೆಗೆ ಏನೇ ಬಂದರೂ ಬರದಿದ್ದರೂ ಅಡ್ಡದಾರಿಯ ಕಡೆ ಯೋಚನೆಯನ್ನು ಹರಿಯಗೊಡದಿದ್ದರೆ, ಇದ್ದುದ್ದರಲ್ಲಿ ನೆಮ್ಮದಿ ಕಾಣುವುದು ಸಾಧ್ಯ ಇದೆ. ಹೀಗೇ ಇದ್ದಾಗಲೂ ಗೌರವ, ಮನ್ನಣೆ, ಅಂತಸ್ತು ಇತ್ಯಾದಿಗಳೆಲ್ಲವೂ ಬಂದರೂ ಸಹ ಮತ್ತೆ ನಿಂಬೆಹುಳಿಬೆಳಕಿನ ಕಡೆ (ನನ್ನ ಪ್ರಕಾರ ಇದನ್ನ ʼಹುಸಿಬೆಳಕುʼ ಅನ್ನಬಹುದು) ಜಿಗಿಯುವ ಮಿಡತೆಯಂತಾಗದೇ ನಮ್ಮ ಸ್ವಕರ್ಮವನ್ನು ಬಿಟ್ಟುಕೊಡದೇ ಇದ್ದರೆ ಅಷ್ಟು ಸಾಕು. ಈಗಿರುವ ತಲೆಮಾರಿನವರಿಗೂ, ಮುಂದೆ ಬರುವ ತಲೆಮಾರಿನವರಿಗೂ ಇದರಿಂದ ನಾವು ಗಳಿಸಿ ಗುಡ್ಡೆಹಾಕಿದ್ದು ಏನನ್ನೂ ತೋರ್ಪಡಿಸುವುದು ಸಾಧ್ಯವಾಗದೇ ಇದ್ದರೂ, ಯಾರನ್ನೂ, ಏನನ್ನೂ ನಾಶಮಾಡಿ ನಾವು ಬದುಕು ಕಟ್ಟಿಕೊಂಡಿಲ್ಲ ಅನ್ನುವ ನೆಮ್ಮದಿಯ ಮುಂದೆ ಬೇರೆ ಯಾವ ಗುಡ್ಡೆ ಐಶ್ವರ್ಯಗಳೂ   ನಗಣ್ಯ. ಇಷ್ಟರ ಬಗ್ಗೆ ಯೋಚಿಸಿ ಮುಂದುವರಿಯುವ ಆತ್ಮಶಕ್ತಿ ಬರಲಿ. ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ? ಸತ್ಯವಾದ ಘನತೆ ಸೋಲೇ ಕಾಣದಂತೆ. ************

ಚಿಂತನೆ Read Post »

ಇತರೆ, ಜೀವನ

ಅನುಭವ

                      ಮನೆ……. ಹಕ್ಕಿ ಮನೆ ಅನುಪಮಾ ರಾಘವೇಂದ್ರ                       ಮನೆ……. ಹಕ್ಕಿ ಮನೆ        ಈ ಮರೆವು  ಅನ್ನೋದು ಮನುಷ್ಯರಿಗೆ ಮಾತ್ರವೋ….? ಅಲ್ಲಾ ಪ್ರಾಣಿ ಪಕ್ಷಿಗಳಿಗೂ ಇರುತ್ತೋ…..? ನನಗೀ ಸಂಶಯ ಬರಲು ಕಾರಣವೇನೋ ಇದೆ. ಕೆಲವು ದಿನಗಳ ಹಿಂದಿನ ಘಟನೆ……          ಸಂಜೆ ವೇಳೆ ಹಟ್ಟಿ ಬಳಿಗೆ ಹೋದಾಗ ಹಟ್ಟಿಯ ಒಳಗಿನಿಂದ ಹಕ್ಕಿಯೊಂದು ಪುರ್ರನೆ ಹಾರಿ ಹೋಯ್ತು. ಮರುದಿನ ಬೆಳಗ್ಗೆಯೂ ಅದೇ ರೀತಿ ಹಕ್ಕಿ  ಹಾರುವುದು ಕಂಡಿತು. ಹಕ್ಕಿಗಳ ಕಿಚ ಪಿಚ ಸುಮಧುರವಾದ ಸಂಗೀತ…… ನಾನು ಹೋದ ಕ್ಷಣದಲ್ಲಿ ನಿಂತು ಬಿಡುತ್ತದೆ. ನಾನು ಹೋಗುವುದನ್ನು ದೂರದಿಂದಲೇ ಕಂಡು  ಹಾರಿ ಹೋಗುತ್ತದೆ. ಪದೇ ಪದೇ ಘಟನೆ ಮರುಕಳಿಸಿದಾಗ ಏನೋ ಕುತೂಹಲ……. ಅಡಗಿ ನಿಂತು ಗಮನಿಸಿದೆ. ಹಟ್ಟಿಯ ಗೋಡೆಯಲ್ಲಿ ಹಲವಾರು ಕಿಂಡಿಗಳಿವೆ.  ಒಂದು ಕತ್ತಲಿನ ಮೂಲೆಯ ಕಿಂಡಿಯಲ್ಲಿ ಹಕ್ಕಿಯೊಂದು ಮನೆ ಕಟ್ಟಿಕೊಂಡಿದೆ.        ಹುಲ್ಲಿನ ಮನೆಯೋ….., ಹಂಚಿನ ಮನೆಯೋ…..,ತಾರಸೀ ಮನೆಯೋ….. ವ್ಯತ್ಯಾಸವೇ ಇಲ್ಲ. ಮಣ್ಣಿನ ನೆಲವೋ…. , ಸಿಮೆಂಟ್ ನೆಲವೋ…., ಗ್ರಾನೈಟ್ ನೆಲವೋ….. ಸಂಶಯವೂ ಇಲ್ಲ.  ಆಹಾ…… ಬೇರು ನಾರುಗಳನ್ನು ಸೇರಿಸಿ ನಿರ್ಮಿಸಿದ ಸುಂದರವಾದ ಮನೆ. ಮನೆ ಅನ್ನುವುದಕ್ಕಿಂತಲೂ ಪುಟ್ಟ ಗೂಡು ಎನ್ನುವುದೇ ಸೂಕ್ತವಲ್ಲವೇ…..  ಗೂಡಿನ ಸುತ್ತಮುತ್ತ ಸೂಕ್ಷ್ಮವಾಗಿ ಗಮನಿಸಿದೆ. ಒಂದು ಕಿಂಡಿಯಲ್ಲಿ ಗೂಡು , ಪಕ್ಕದ ಎರಡು ಕಿಂಡಿಗಳಲ್ಲಿ ಅಲ್ಪ ಸ್ವಲ್ಪ ಬೇರು ನಾರುಗಳು , ಅರೆಬರೆ ಕಟ್ಟಿದ ಗೂಡು….! ಇದೇಕೆ ಹೀಗೆ….? ಗೂಡು ಕಟ್ಟುವಾಗ ಯಾವ ರೀತಿಯ ನಾರುಗಳು ಬೇಕು ಎಂಬ ಆಯ್ಕೆಗಾಗಿ ತಂದು ಇಟ್ಟಂತೆಯೂ ಕಾಣುವುದಿಲ್ಲ.  ಗೂಡು ಕಟ್ಟಲು ಆರಂಭಿಸಿದ ಹಕ್ಕಿಗೆ ತಾನು ಯಾವ ಕಿಂಡಿಯಲ್ಲಿ ಗೂಡು ಕಟ್ಟುತ್ತಿರುವೆ ಎಂಬುದು ಮರೆತು ಹೋಗಿರಬಹುದೇ….? ‘ಮರೆವು ಎಂಬುದು ಮನುಷ್ಯರಿಗೆ ಮಾತ್ರವೇ…? ಪ್ರಾಣಿ ಪಕ್ಷಿಗಳಿಗೂ ಇದೆಯೇ…..?’ ಎಂಬ ಸಂಶಯ ನನಗೆ ಬಂದದ್ದು ಈ ಕಾರಣಕ್ಕಾಗಿ.         ದಿನದಲ್ಲಿ ಕಡಿಮೆಯೆಂದರೆ ನಾಲ್ಕು ಬಾರಿಯಾದರೂ ಹಟ್ಟಿಗೆ ಹೋಗಿ ನೋಡುವ ಹುಚ್ಚು. ಇಷ್ಟಾದರೂ ಹಕ್ಕಿ ನನ್ನ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸಿಕೊಳ್ಳಲೇ ಇಲ್ಲ.  ಆ ದಿನ ಗೂಡಿನಲ್ಲಿ ಕಂಡದ್ದು ಮೂರು ಮೊಟ್ಟೆ! ತವರಿಗೆ ಬಂದವಳ ಬಾಣಂತನ ಮಾಡಿಸಿ ಕಳುಹಿಸುವ ಜವಾಬ್ದಾರಿ ಇಲ್ಲವೇ….. ಪ್ರತಿದಿನ ಹಟ್ಟಿಯ ಒಂದು ಮೂಲೆಯಲ್ಲಿ ಒಂದಿಷ್ಟು  ಗೋಧಿ, ಭತ್ತ, ಅಕ್ಕಿಕಾಳುಗಳನ್ನು ಇಟ್ಟೆ. ಹಕ್ಕಿ ಮೊದಲೆರಡು ದಿನ ನಾನಿಟ್ಟ ಕಾಳುಗಳ ಕಡೆ ತಿರುಗಿಯೂ ನೋಡದ್ದು ನನ್ನ ಮನಸಿಗೇಕೋ ಬೇಸರ. ಮತ್ತೆರಡು ದಿನ ಕಳೆದಾಗ ನಾನಿಡುವ ಕಾಳುಗಳನ್ನು ಆಸೆಯಿಂದ ಆರಿಸಿಕೊಂಡದ್ದು ಸುಳ್ಳಲ್ಲ. ಮೊಟ್ಟೆಯೊಡೆದು ಮರಿಗಳು ಹೊರ ಬರುವ ಕ್ಷಣಕ್ಕಾಗಿ ತಾಯಿ ಹಕ್ಕಿಗಿಂತ ಹೆಚ್ಚು ಕಾತರದಿಂದ ಕಾದುಕೊಂಡಿರುವವಳು ನಾನೇ ಏನೋ……?    ಅದೊಂದು ದಿನ ಗೂಡನ್ನು ಇಣುಕಿ ನೋಡುವಾಗ ಮುದ್ದು ಮುದ್ದಾದ ಮೂರು ಪುಟಾಣಿಗಳು. ನಾನು ಅಲ್ಲಿಗೆ ಹೋಗುತ್ತಿದ್ದಂತೆ ಇನ್ನೂ ಕಣ್ಣು ಬಿಡದ ಪಾಪಚ್ಚಿಗಳು ಕೊಕ್ಕನ್ನು ದೊಡ್ಡದಾಗಿ ತೆರೆದು , ಚಿಂವ್ ಚಿಂವ್ ದನಿಯೊಂದಿಗೆ ತಲೆ ಎತ್ತಿದವು. ಪಾಪ…. ಅಮ್ಮ ಬಂದಿರಬಹುದೆಂಬ ಭಾವ. ಅಮ್ಮ ಎಲ್ಲೋ ಆಹಾರದ ಅನ್ವೇಷಣೆಯಲ್ಲಿರಬಹುದು. ಅವುಗಳಿಗೇನು ನಮ್ಮಂತೆ ಎಣ್ಣೆ- ನೀರೇ…… ಬಾಣಂತನವೇ…. ನನಗೆ ಮಗ ಹುಟ್ಟಿದ ಸಮಯದಲ್ಲಿ ಎರಡು ತಿಂಗಳು ಕೋಣೆಯೊಳಗೆ ಬಂಧಿಯಾಗಿದ್ದು, ಎಣ್ಣೆ ಹಚ್ಚಿ , ಬಿಸಿ ನೀರು ಸ್ನಾನ , ಪಥ್ಯದ ಊಟ , ವಿಶ್ರಾಂತಿ ಎಲ್ಲ  ನೆನಪುಗಳೂ ಮರುಕಳಿಸಿದವು. ಅಷ್ಟೊತ್ತಿಗಾಗಲೇ ಒಂದು ಹಕ್ಕಿ ಬಾಯಿಯಲ್ಲಿ ಏನನ್ನೋ ಕಚ್ಚಿಕೊಂಡು ಹಾರಿ ಬರುವುದು ಕಂಡೆ. ಅದರ ಅಮ್ಮನೋ …. ಅಪ್ಪನೋ ಅರಿಯೆ . ನನ್ನನ್ನು ಕಂಡು ದೂರದಲ್ಲೇ ಕುಳಿತುಕೊಂಡಿತು. ನನ್ನಿಂದಾಗಿ ಪುಟಾಣಿಗಳು ಹಸಿದುಕೊಂಡಿರುವುದು ಬೇಡವೆಂದು ದೂರ ಸರಿದೆ. ಮಕ್ಕಳಿಗೆ ತಿನ್ನಿಸಿ ಪುರ್ರನೆ ಹಾರಿ ಹೋಯಿತು.       ಮನೆಯೊಳಗಿದ್ದರೂ ನನ್ನ ಮನಸೆಲ್ಲ ಪುಟ್ಟ ಕಂದಮ್ಮಗಳ ಕಡೆಗೇ ಇತ್ತು. ಮೂರು ಮಕ್ಕಳಲ್ಲಿ ಎಷ್ಟು ಹೆಣ್ಣು….?  ಎಷ್ಟು ಗಂಡು …?ಎಂಬ ಯೋಚನೆ ಒಂದು ಕಡೆ .  ಪ್ರಾಣಿ ಪಕ್ಷಿಗಳು ಹೆಣ್ಣು ಗಂಡೆಂಬ ಬೇಧ ಭಾವ ಮಾಡುತ್ತವೆಯೇ…? ಅದೇನಿದ್ದರೂ ನಮ್ಮಂತಹ ಮನುಷ್ಯರಿಗೇ ಎಂಬ ಯೋಚನೆ ಇನ್ನೊಂದು ಕಡೆ. ನಮಗೆ ಮನೆಯೊಳಗೆ ಗಂಡು ಬೇಕು . ಹಟ್ಟಿಯಲ್ಲಿ ಹೆಣ್ಣೇ ಬೇಕು. ಎಲ್ಲದರಲ್ಲಿಯೂ ತನ್ನ ಲಾಭವನ್ನೇ ನೋಡುವ ಸ್ವಾರ್ಥಿಗಳು….!       ಆಗಾಗ ಹೋಗಿ ಗೂಡನ್ನು ಇಣುಕಿ ನೋಡುವುದು ಅಭ್ಯಾಸವಾಯ್ತು. ಸಣ್ಣ ಸದ್ದಾದರೂ  ತಿನ್ನಲು ಬಂದಿರಬಹುದೆಂದು ಬಾಯಿ ತೆರೆಯುವುದು, ಉಳಿದ ಸಮಯದಲ್ಲಿ ನಿದ್ದೆ ಮಾಡುವುದು ಈ ಮರಿಗಳಿಗೆ ಇಷ್ಟೇ ಕೆಲಸವೋ….. ನನ್ನ ಕಲ್ಪನೆಗೆ ನನಗೇ ನಗು ಬಂತು. ಚಿಕ್ಕ ಮಗುವಿನ ಮೂಗು, ತುಟಿಗಳನ್ನು ಮುಟ್ಟಿದರೆ ತಿನ್ನಲು ಬಾಯಿ ತೆರೆಯುತ್ತದೆ. ಉಳಿದ ಸಮಯದಲ್ಲಿ ಮಲಗಿ ನಿದ್ರಿಸುತ್ತದೆ. ಇದು ಸಹಜ ತಾನೇ…. ಎಲ್ಲಾ ಜೀವಿಗಳೂ ಅದರದರ ಕಾಲಕ್ಕೆ ಆಯಾ ಕೆಲಸ ಕಾರ್ಯಗಳನ್ನು ಕಲಿತು ನಡೆಸಿಕೊಂಡು ಹೋಗುತ್ತವೆ.            ನನ್ನ ಹೆಜ್ಜೆಯ ಸದ್ದಿಗೆ ಎಚ್ಚರಗೊಳ್ಳುವ ಮರಿಗಳು ಚಿಂವ್ ಚಿಂವ್ ಎನ್ನುತ್ತಾ ದೊಡ್ಡದಾಗಿ ಬಾಯಿ ಅಗಲಿಸುವುದನ್ನು ನೋಡುವುದೇ ಚಂದ.  ನನಗೆ ಇದೊಂದು ಆಟ. ಆ ಮರಿಗಳಿಗೆ ಎಷ್ಟು ಸಂಕಟವಾಗಿತ್ತೋ ಆ ದೇವರೇ ಬಲ್ಲ. ಈ ದೃಶ್ಯಗಳನ್ನು ಮೊಬೈಲಿನಲ್ಲಿ ಸೆರೆ ಹಿಡಿಯುವ ಬಯಕೆಯಾಗಿ ಮೊಬೈಲ್ ಹಿಡಿದು ಹಟ್ಟಿಯ ಕಡೆಗೆ ನಡೆದೆ. ಎಲ್ಲಿದ್ದನೋ ನನ್ನ ಮಗ…! ಕಣ್ಣೆದುರು ಪ್ರತ್ಯಕ್ಷ. ನನ್ನನ್ನು ತಡೆದು ನಿಲ್ಲಿಸಿ “ಏನು ಆಪುಟಾಣಿಗಳ ವಿಡಿಯೋ ಮಾಡುವ ಯೋಚನೆಯಾ…..?” ಕೇಳಿದ. “ಹೌದು ಎಷ್ಟು ಸುಂದರ ಮರಿಗಳು . ಅವುಗಳ ಚಿಂವ್ ಚಿಂವ್ ಕೂಗು, ಬಾಯಿ ಅಗಲಿಸುವ ದೃಶ್ಯ ಎಲ್ಲವೂ ಅದ್ಭುತ” ಎಂದೆ. “ಇನ್ನೂಕಣ್ಣು ಬಿಡದ ಮರಿಗಳಿಗೆ ಯಾಕೆ ಹಿಂಸೆ ಕೊಡುತ್ತೀ…? ಅವುಗಳಿಗೆ ನಿನ್ನಿಂದಾಗಿ ತೊಂದರೆ “ ಎಂದ. “ತೊಂದರೆ ಏನಿಲ್ಲ. ನಾನು ಅವುಗಳನ್ನು ಮುಟ್ಟುವುದೇ ಇಲ್ಲ. ಸುಮ್ಮನೆ ನೋಡಿ ವಿಡಿಯೋ ಮಾಡಿ ಬರುವೆ” ಎಂದೆ. “ ನಿನ್ನಿಂದಾಗಿ ಆ ಮರಿಗಳ ನಿದ್ರೆ ಹಾಳಾಗಲೂ ಬಹುದು. ನಿನ್ನನ್ನು ಅಲ್ಲಿ ಕಂಡು ಅದರ ಅಮ್ಮ ಹತ್ತಿರ ಬರದೇ ಇರಲೂ ಬಹುದು. ನಿನಗೆ ನೆಮ್ಮದಿಯಲ್ಲಿರುವವರನ್ನು ಕಂಡರೆ ಹೊಟ್ಟೆ ಉರಿಯಾ…? ನಾನು ಬೆಳಗ್ಗೆ ಒಳ್ಳೆ ನಿದ್ದೆಯಲ್ಲಿರುವಾಗಲೂ ಹೀಗೇ ಕಿರಿಕಿರಿ ಮಾಡ್ತಾ ಇರ್ತೀಯ….” ಅಂದ. ಅವನ ಮಾತಿಗೆ ಬೆಲೆ ಕೊಟ್ಟು ಆ ದೃಶ್ಯಗಳನ್ನು ಸೆರೆ ಹಿಡಿಯುವ ಯೊಚನೆ ಬಿಟ್ಟೆ. ಆದರೂ ಸಮಾಧಾನವೇ ಇಲ್ಲ. ಒಂದೆರಡು ಸಲ ಮೊಬೈಲ್ ತರುವ ಪ್ರಯತ್ನ ಮಾಡಿ ಸಿಕ್ಕಿ ಬಿದ್ದದ್ದೂ ಆಯ್ತು. ಮಗನ ಹದ್ದಿನ ಕಣ್ಣನ್ನು ತಪ್ಪಿಸಲು ಸಾಧ್ಯವಾಗಲೇ ಇಲ್ಲ. ಕೊನೆಗೆ ,  ಫ್ಲ್ಯಾಷ್ ಲೈಟ್ ಹಾಗೂ ಮೊಬೈಲ್ ಕಿರಣಗಳು ಪ್ರಾಣಿ ಪಕ್ಷಿಗಳಿಗೆ ಎಷ್ಟು ಹಾನಿಕಾರಕ .ಅದರಲ್ಲೂ ಇನ್ನೂ ಕಣ್ಣು  ಬಿಡದ ಮರಿಗಳಿಗೆ ಎಷ್ಟು ಮಾರಕ. ಇದು ಅಪರಾಧ ಕೂಡಾ….  ಎಂಬುದನ್ನು ಇಂಟರ್ ನೆಟ್ಟಿನಲ್ಲಿ ತೋರಿಸಿಕೊಟ್ಟ. ಮಕ್ಕಳಿಂದಲೂ ನಾವು ಕಲಿಯುವುದು ಸಾಕಷ್ಟಿದೆ ಎಂಬುದನ್ನು ಅರಿತುಕೊಂಡೆ. ಇದಾದ ಮೇಲೆ ಮನಸ್ಸು ಹಟ್ಟಿಯ ಕಡೆಗೆ ಸೆಳೆದರೂ ದೇಹಕ್ಕೆ ಕಡಿವಾಣ ಹಾಕಿ ನಿಲ್ಲಿಸಿದೆ. ದಿನಕ್ಕೊಂದೆರಡು ಬಾರಿ ದೂರದಿಂದಲೇ ನೋಡಿ ಸಮಾಧಾನ ಪಟ್ಟುಕೊಂಡೆ.     ಆ ಹಕ್ಕಿಯ ಹೆಸರೇನೆಂದು ತಿಳಿಯುವ ಕುತೂಹಲದಿಂದ ಗೂಗಲಣ್ಣನಲ್ಲಿ ಜಾಲಾಡಿದೆ. ಹಕ್ಕಿಯನ್ನು ಸ್ಪಷ್ಟವಾಗಿ ನೋಡದ ಕಾರಣ ಗೂಗಲಣ್ಣ ಸರಿಯಾದ ಮಾಹಿತಿ ನೀಡಲಿಲ್ಲ.  ಅಲ್ಲೂ ಒಂದೇ ರೀತಿಯ ಹಕ್ಕಿಗಳು ಹಲವಾರು. ನಮ್ಮ ಆತ್ಮೀಯರೊಬ್ಬರಲ್ಲಿ ವಿಚಾರಿಸಿದಾಗ ,ಈ ಹಕ್ಕಿ ಕೆಂಪು ಕೊರಳಿನ ನೊಣ ಹಿಡುಕ (Tickle’s Blue flycatcher) ಎಂದು ತಿಳಿಯಿತು. ದಿನ ನಿತ್ಯ ನವಿಲು, ಕಾಗೆ , ಕೊಕ್ಕರೆ , ಮರಕುಟಿಗ , ಮಡಿವಾಳ ಹಕ್ಕಿಗಳನ್ನು ನೋಡಿ ಪರಿಚಯವಿದ್ದರೂ ಈ ಹೆಸರು ನನಗೆ ಹೊಸದು.        ಕೊನೆಗೂ ಆ ದಿನ ಬಂದೇ ಬಂತು…….. ನಾನು ಹಟ್ಟಿಯ ಕಡೆಗೆ ಹೋಗುವಾಗ ದೊಡ್ಡ ಹಕ್ಕಿ ಅಲ್ಲೇ ಪಕ್ಕದಲ್ಲಿದ್ದ ಮರದಲ್ಲಿ ಕುಳಿತು ಜೋರಾಗಿ ಚೀರುತ್ತಿತ್ತು. ಆಶ್ಚರ್ಯವೆಂದರೆ ಯಾವತ್ತೂ ನನ್ನನ್ನು ಕಂಡ ಕೂಡಲೇ ಹಾರಿ ಹೋಗುತ್ತಿದ್ದ ಹಕ್ಕಿ ಇಂದು ಜಾಗ ಬಿಟ್ಟು ಕದಲಲೇ ಇಲ್ಲ. ಗೂಡಿನ ಕಡೆಗೆ ನೋಡಿದೆ . ಮರಿಗಳಿಲ್ಲ. ನನ್ನೆದೆ ಧಸಕ್ಕೆಂದಿತು. ಏನಾಗಿರಬಹುದು…..?  ಬೇರೆ ಯಾವುದಾದರೂ ಹಕ್ಕಿಗಳು ಧಾಳಿ ಮಾಡಿರಬಹುದೇ…….? ಹಾವೋ… ಬೆಕ್ಕೋ…… ಇನ್ಯಾವುದಾದರೂ ಪ್ರಾಣಿಗಳೋ ಆಕ್ರಮಣ ಮಾಡಿರಬಹುದೇ….? ನನ್ನ ಕೈ ಕಾಲುಗಳಲ್ಲಿ ಸಣ್ಣ ನಡುಕ. ನನಗೇ ಇಷ್ಟು  ಭಯವಾಗಿದೆ. ಇನ್ನು ಆ ಕಂದಮ್ಮಗಳ  ಅಪ್ಪ ಅಮ್ಮನ ಪರಿಸ್ಥಿತಿ …….. ಅಯ್ಯೋ…. ಯಾರಿಗೂ ಬೇಡಪ್ಪಾ…… ಆದರೂ ನನ್ನ ಕಣ್ಣುಗಳು ಸುತ್ತ ಮುತ್ತ ಹುಡುಕುತ್ತಲೇ ಇದ್ದವು. ಮರದ ಮೇಲಿದ್ದ ಹಕ್ಕಿಯ ಚೀರಾಟವನ್ನು ಗಮನಿಸಿದೆ. ಅದರ ದೃಷ್ಟಿ ಅಲ್ಲೇ ಕೆಳಗೇ ಇತ್ತು. ಆ ಕಡೆಗೆ ನೋಡಿದೆ. ಅಬ್ಬಾ…..ಮರಿ ಅಲ್ಲೇ ಇದೆ. ಹಾಗಿದ್ದರೆ ಹಕ್ಕಿಯ ಕಿರುಚಾಟ ಯಾಕಾಗಿ…..? ಆ ಮರಿ ಗೂಡಿನಿಂದ ಅಲ್ಲಿವರೆಗೆ ಹೇಗೆ ಬಂತು…? ಹೋ…… ಮಗ ಮೊತ್ತ ಮೊದಲ ಬಾರಿಗೆ ಅಂಬೆಗಾಲಿಟ್ಟು ಮುಂದೆ ಮುಂದೆ ಬರುವಾಗ ಮುಗ್ಗರಿಸಿದ್ದು , ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯಲು ಅಪ್ಪನ ಕೈಯ ಆಸರೆ ಬಯಸಿದ್ದು ಒಂದೊಂದಾಗಿ ಕಣ್ಣ ಮುಂದೆ ಬಂತು. ಅಂದರೆ ಈ ಮರಿಯೂ ಹಾರಲು ಕಲಿಯುತ್ತಿದೆ. ಮರದಲ್ಲಿದ್ದ ಹಕ್ಕಿ ಹುರಿದುಂಬಿಸುತ್ತಿದೆ. ಇನ್ನಷ್ಟು ಹತ್ತಿರದಿಂದ ಮರಿಯ ಫೊಟೋ ತೆಗೆಯಲು  ಹತ್ತಿರ ಹತ್ತಿರ ಹೋಗುತ್ತಿದ್ದಂತೆ ಆ ಮರಿಯೂ ಪುರ್ರನೆ ಹಾರಿ ಹೋಯ್ತು. ಅಷ್ಟು ಹೊತ್ತು ಚೀರಾಡುತ್ತಿದ್ದ ಹಕ್ಕಿ ಸಂತೋಷದಿಂದ ಹಾಡುತ್ತಾ ಹಾರಿತು. ಹಕ್ಕಿ ಮನೆಯೊಂದಿಗೆ ನನ್ನ ಮನವೂ ಬರಿದಾಯ್ತು.       ಆ ಗೂಡು ಹಕ್ಕಿ ಜೋಡಿಯ ನಿರೀಕ್ಷೆಯಲ್ಲಿದೆಯೋ……. ಇಲ್ಲವೋ….  ನಾನರಿಯೆ. ನಾನಂತೂ ಇನ್ನೊಂದು ಹಕ್ಕಿ ಜೋಡಿಯ ನಿರೀಕ್ಷೆಯಲ್ಲಿರುವೆ. ************

ಅನುಭವ Read Post »

ಇತರೆ

ಪ್ರಸ್ತುತ

ಕೊರೊನಾ ಕಾಲದ ರಂಗಸಂಸ್ಕೃತಿ ಚಿಂತನೆಗಳು ಮಲ್ಲಿಕಾರ್ಜುನ ಕಡಕೋಳ ಕೊರೊನಾ ಎಂಬ ಕರಾಳ ರಾಕ್ಷಸ ಹಾವಳಿಯಿಂದಾಗಿ ಮನುಷ್ಯರ ಬದುಕು ತೀವ್ರ ಸ್ವರೂಪದ ಆಘಾತವನ್ನು ಎದುರಿಸುವಂತಾಗಿದೆ. ಸಾಂಸ್ಕೃತಿಕ ಬದುಕಿಗೂ ತೀವ್ರವಾದ ಪೆಟ್ಟು ಬಿದ್ದಿದೆ. ನಿಸ್ಸಂದೇಹವಾಗಿ ಅದನ್ನು ಯಾರೂ ಅಲ್ಲಗಳೆಯಲಾರರು. ಹಾಗಂತ ಕೊರೊನಾ ಪೂರ್ವದಲ್ಲಿ ನಮ್ಮ ಸಾಹಿತ್ಯ, ಸಂಗೀತ, ನಾಟಕ ಹೀಗೆ ಎಲ್ಲಾ ಕಲೆಗಳಿಗೆ ಸಿಗುತ್ತಿದ್ದ ಪ್ರೋತ್ಸಾಹ, ಸಹಾಯ, ಸಹಕಾರ, ಅಭಿವ್ಯಕ್ತಿ ಸ್ವಾತಂತ್ರ್ಯ ಅಮೋಘವಾಗಿತ್ತು. ಅದರಿಂದಾಗಿ ಅತ್ಯಂತ ಸಮೃದ್ಧವಾದ ಸಾಂಸ್ಕೃತಿಕ ಬದುಕು ಮೈಮನ ತುಂಬಿ ಚೆಂಗುಲಾಬಿಯಂತೆ ಅರಳಿಕೊಂಡಿತ್ತೆಂದು ಭ್ರಮಿಸಬೇಕಿಲ್ಲ. ಈಗ ಕೊರೊನಾ ಬಂದಮೇಲೆ ಅಂತಹ ಸಾಂಸ್ಕೃತಿಕ ವೈಭವ, ಅನನ್ಯತೆಗಳನ್ನೆಲ್ಲ ಕೊರೊನಾ ಇಡಿಯಾಗಿ ನುಂಗಿ ನೊಣೆಯಿತು, ಎಂಬ ಸೋಂಕಿತನೆಪ ಹುಡುಕಿ ವರ್ತಮಾನದ ವೈರಾಣು ಹಳಿಯಮೇಲೆ ನಿಂತು ಹಳೆಯ ಹಂಬಲಿಕೆಗಳನ್ನು ತೋಡಿಕೊಳ್ಳುವ ಹೊಸದೊಂದು ಪ್ಯಾಸಿನೆಟಿಂಗ್ ಹಳಹಳಿಕೆ ಹುಟ್ಟಿಕೊಂಡಿದೆ. ಯಾವುದೇ ಸಾಹಿತ್ಯ, ಕಲೆ, ಸಂಗೀತ, ನಾಟಕ, ಜನಸಂಸ್ಕೃತಿಯು ಇಂತಹ ವೈರಸ್, ಬ್ಯಾಕ್ಟೀರಿಯಾಗಳಿಗೆ ಬಲಿಯಾಗುವಷ್ಟು ದುರ್ಬಲವಾಗಿರುವುದಿಲ್ಲ ಎಂಬುದನ್ನು ಮರೆಯಬಾರದು. ವೈರಾಣುಗಳು ಮನುಷ್ಯರಜೀವ ಕೊಲ್ಲಬಹುದು. ಆದರೆ ಅವಕ್ಕೆ ಮನುಷ್ಯನೊಳಗಿನ ಸಾಂಸ್ಕೃತಿಕ ಬದುಕನ್ನು, ಅದರ ಮೌಲ್ಯಗಳನ್ನು ಕೊಲ್ಲಲಾಗದು. ಸಾಂಸ್ಕೃತಿಕ ಬದುಕು ಮನುಷ್ಯರ ನಿತ್ಯದಜೀವ ಬದುಕಿಗಿಂತ ಹೆಚ್ಚು ಗಟ್ಟಿಮುಟ್ಟು. ಪ್ಲೇಗ್, ಕಾಲರಾ, ಇನಫ್ಲುಯೆಂಜಾ ಮೊದಲಾದ ಸಾಂಕ್ರಾಮಿಕ ರೋಗಗಳ ಆಪತ್ತಿನ ಕಾಲದಲ್ಲಿ ಹುಟ್ಟಿಕೊಂಡ ಕಲೆ, ಸಾಹಿತ್ಯ ಕೃತಿಗಳಿಗೆ ಸಾವಿಲ್ಲ. ಆದರೆ ಆ ಕಾಲದ ರೋಗಗಳಿಗೆ ಸಾವುಬಂತು. ರೋಗಕಾಲದಲ್ಲಿ ಜನ್ಮತಾಳಿದ ಕೃತಿಗಳು ಅಜರಾಮರ. ಹೀಗೆಯೇ ಇಂದಲ್ಲ ನಾಳೆ ಕೊರೊನಾ ಹೋಗಿಯೇ ಹೋಗುತ್ತದೆ. ಆದರೆ ಅದೀಗ ಸೃಷ್ಟಿಸುತ್ತಿರುವ ” ಭೀಕರತೆ ” ನಮಗೆಲ್ಲ ಸವಾಲು ಆಗಬೇಕಿದೆ. ಅದು ಸಾಂಸ್ಕೃತಿಕ ಸೇನಾನಿಗಳು ಎದುರಿಸಬೇಕಾದ ನಿಜವಾದ ಸವಾಲು. ಸಾಂಸ್ಕೃತಿಕ ಚಟುವಟಿಕೆಗಳು ಸ್ಥಗಿತಗೊಂಡ ಮಾತ್ರಕ್ಕೆ ಅದು ಜನಸಂಸ್ಕೃತಿಯ ಸ್ಥಗಿತತೆ ಮತ್ತು ಸಾವು ಎಂದರ್ಥವಲ್ಲ. ಸಂಸ್ಕೃತಿಯ ಜೀವಬೇರುಗಳು ಆಳದಲ್ಲಿ ಅಂತರ್ಜಲದಂತೆ ನಿರಂತರ ಹರಿಯುತ್ತಿರುತ್ತವೆ. ಹಾಗೆಯೇ ಭೂಮಿಯೊಳಗೊಂದು ರಂಗಭೂಮಿಯ ಜುಳುಜುಳು ನೀರಧಾರೆ ಅಂತಃಶ್ರೋತವಾಗಿ ಹರಿಯುತ್ತಿರುತ್ತದೆ. ಅದೊಂದು ಹಾಳತವಾಗಿ ಹರಿಯುವ ರಂಗಧಾರೆ. ವೃತ್ತಿನಿರತರ ಅಸಡ್ಡೆತನದಿಂದ ವೃತ್ತಿಪರತೆ ಮುಕ್ಕಾಗುತ್ತಿದೆ ಎಂಬುದು ನೆನಪಿಸಿಕೊಳ್ಳಬೇಕಿದೆ. ಬೇಕಾದರೆ ಹವ್ಯಾಸಿಗಳು ಗುಣಾತ್ಮಕ ವೃತ್ತಿಪರತೆ ಮರೆತರಡ್ಡಿಯಿಲ್ಲ. ನಾಟಕವನ್ನೇ ವೃತ್ತಿ ಮಾಡಿಕೊಂಡಿರುವ ವೃತ್ತಿನಿರತರು ವೃತ್ತಿಪರತೆಯ ಗುಣಗ್ರಾಹಿ ರಂಗಭೂಮಿ ಕಟ್ಟದಿದ್ದರೇ ಅದು ಅಕ್ಷಮ್ಯವಾದೀತು. ರಂಗಭೂಮಿ ಕುರಿತಾದ ತಮ್ಮ ಹತ್ತಿಪ್ಪತ್ತು ವರ್ಷಗಳ ಕೆಲಸ ತೃಪ್ತಿಕರವಾಗಿಲ್ಲ ಎಂಬುದನ್ನು ಕೊರೊನಾ ಕಾಲದ ಸಾಮಾಜಿಕ ಜಾಲತಾಣದ ಚಿಂತನ, ಚರ್ಚೆಗಳು ಒಪ್ಪುತ್ತವೆ. ಇಷ್ಟು ವರ್ಷಗಳ ಕಾಲ ಇದಕ್ಕಾಗಿ ವ್ಯಯವಾಗಿರುವ ಸರಕಾರದ ಕೋಟಿ, ಕೋಟಿ ಹಣ ಜನರ ಹಣವೇ ಆಗಿರುವುದರಿಂದ ಅದನ್ನು ಸಾರ್ವಜನಿಕವಾಗಿ ದುರುಪಯೋಗ ಎಂತಲೇ ಭಾವಿಸಬೇಕಾಗುತ್ತದೆ. ಹಾಗಾದರೆ ಜನಪರ ರಂಗಭೂಮಿ, ಗುಣಾತ್ಮಕ ಮೌಲ್ಯದ ರಂಗಭೂಮಿ ಗಗನ ಕುಸುಮವೇ.? ಕಡೆಯಪಕ್ಷ ಎಪ್ಪತ್ತು ಎಂಬತ್ತರ ದಶಕಗಳಲ್ಲಿ ಕಲಾತ್ಮಕತೆಯೊಂದಿಗೆ ರಂಗಸಂಸ್ಕೃತಿಯು ಜನಚಳವಳಿಯಾಗಿ ರೂಪುಗೊಂಡಿತ್ತು. ಅಂದಿನ ಎಲ್ಲಾ ಪ್ರಗತಿಪರ ಚಳವಳಿಗಳಿಗೆ ಸಮಷ್ಟಿಪ್ರಜ್ಞೆಯ ವಿಚಾರಗಳು ಸಂವೇದನಾಶೀಲ ಆಶಯಗಳಾಗಿದ್ದವು. ಎಚ್ಚರಗಳಾಗಿದ್ದವು. ಅಂತಹ ಚಾರಿತ್ರಿಕ ಸಂಗತಿಗಳನ್ನು ನೆನೆಯುವುದು ಈಗಿನ ಕೆಲವರಿಗೆ ಅಲರ್ಜಿ. ಒಂದುಬಗೆಯ ಎಸಿಡಿಟಿ. ಹಾಗಾದರೆ ಇನ್ನುಮುಂದೆ ಸಾಂಸ್ಕೃತಿಕ ಬದ್ಧತೆ, ಆಶಯಗಳ ಅಗತ್ಯವಿಲ್ಲವೇ.? ಕಾರ್ಪೊರೇಟ್ ಬೀಜಗಣ್ಣುಗಳಿಂದ ಸಂಸ್ಕೃತಿ ನಿರ್ಮಾಣ ಕಾರ್ಯದ ಬಿತ್ತುಣಿಕೆ ಸಾಧುವೇ.? ಸಾಧ್ಯವೇ.? ಹಾಗೆ ನೋಡಿದರೆ ಇದು ಕೇವಲ ಕನ್ನಡ ಸಂದರ್ಭದ ವಿದ್ಯಮಾನ ಆಗಿರದೇ ಬಹುಪಾಲು ವರ್ತಮಾನ ಭಾರತದ ಸಾಂಸ್ಕೃತಿಕ ಸಂದರ್ಭವೂ ಇದೇ ಆಗಿದ್ದೀತು.? ಸರಕಾರದ ನಾಲ್ಕು ರಂಗಾಯಣಗಳು ಮತ್ತು ಆರಂಭ ಹಂತದಲ್ಲಿರುವ ಕೊಂಡಜ್ಜಿ ವೃತ್ತಿ ರಂಗಭೂಮಿ ಕೇಂದ್ರ ಹೊರತುಪಡಿಸಿ, ರಾಜ್ಯದಲ್ಲಿ ಅಜಮಾಸು ಎಪ್ಪತ್ನಾಲ್ಕು ರೆಪರ್ಟರಿಗಳು ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನ ಪಡೆಯುತ್ತಿವೆ. ಒಬ್ಬೊಬ್ಬ ಕಲಾವಿದನಿಗೆ ಮಾಸಿಕ ಆರುಸಾವಿರ. ಪ್ರಾಚಾರ್ಯನಿಗೆ ಅದರ ಎರಡರಷ್ಟು ಪಗಾರ. ಹೀಗೆ ಒಂದೊಂದು ರೆಪರ್ಟರಿಯಲ್ಲಿ ಹದಿನೈದಿಪ್ಪತ್ತು ಮಂದಿಯ ಲೆಕ್ಕದಲ್ಲಿ ಅನುದಾನ ಪಡೆಯುತ್ತಿವೆ. ರೆಪರ್ಟರಿ ನಡೆಸುತ್ತಿದ್ದೇವೆಂದು ನಟಿಸುತ್ತಿರುವವರು ಇಲ್ಲದಿಲ್ಲ. ಹೀಗೆ ಫೇಕ್ ರೆಪರ್ಟರಿಗಳಂತೆ ಕೆಲವು ವೃತ್ತಿನಾಟಕ ಕಂಪನಿಗಳು ಸರಕಾರದ ಹಣ ಪೋಲು ಮಾಡುತ್ತಿರುವ ರಂಗಸಂಸ್ಕೃತಿಯ ಬದ್ಧತೆ, ಬನಾವಟಿ ಎಂತಹುದೆಂದು ಬಿಚ್ಚಿ ಹೇಳಬೇಕಿಲ್ಲ. ವರ್ತಮಾನದ ಕೆಲವರ ಈ ಅಡ್ಡಹಾದಿ ರಂಗನಡೆಯನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವವರಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಶಾಹಿ ಹಾಗೂ ಮಧ್ಯವರ್ತಿಗಳ ನೇಪಥ್ಯ ಹುನ್ನಾರ ಬಣ್ಣಿಸಲಸದಳ. ಇದೊಂದು ಸಾಂಸ್ಕೃತಿಕ ದಲ್ಲಾಳಿಗಳ ದೊಡ್ಡಜಾಲ. ಈ ಜಾಲ, ಹುನ್ನಾರಗಳ ಒಳಮರ್ಮ ಹೊರ ಬರಬೇಕಿದೆ. ಆಗ ಸರಕಾರಿ ಸಾಹಿತಿ, ಕಲಾವಿದರ ಸಂಸ್ಕೃತಿಯ ಚಿಂತನಕೋರ ಅಸಲಿ ಬಣ್ಣಗಳು ಬಟಾ ಬಯಲಾಗುತ್ತವೆ. ರಂಗಸಂಸ್ಕೃತಿಯ ಚಿಂತನೆಗಳೆಂದರೆ ಬಹುಪಾಲು ಬುದ್ದಿಜೀವಿ ರಂಗತಜ್ಞರಿಗೆ ಆಧುನಿಕ ರಂಗಭೂಮಿಯದೇ ಅಗಾಧ ನೆನಹು. ಆಧುನಿಕೋತ್ತರದ ಗಿಳಿಪಾಠಗಳ ಪಾಂಡಿತ್ಯ ಪ್ರದರ್ಶನ. ನಾಟಕಗಳೂ ಸರಳತೆಯಿಂದ ಸಾವಿರ ಮೈಲುದೂರ. ಅವು ಜನಸಾಮಾನ್ಯರಿಗೆ ಅಲ್ಲವೇಅಲ್ಲ ಎನ್ನುವುದು ಅತಿಶಯೋಕ್ತಯೇನಲ್ಲ. ಆದರೆ ಇವತ್ತಿಗೂ ಪ್ರಜಾಸತ್ತಾತ್ಮಕ ಬಾಹುಳ್ಯದ ಪ್ರೀತಿ ಉಳಿಸಿಕೊಂಡಿರುವ ನಾಡಿನ ಹಳ್ಳಿ ಹಳ್ಳಿಗಳಲ್ಲೂ ಲೋಕಮೀಮಾಂಸೆಗೆ ಭಾಜನವಾದುದು ಕಂಪನಿಶೈಲಿ ನಾಟಕಗಳು. ನೂರೈವತ್ತು ವರ್ಷಗಳ ರಂಗಸಂಸ್ಕೃತಿಯ ಅನನ್ಯತೆ ಬದುಕಿದ ಇಂತಹ ವೃತ್ತಿರಂಗಭೂಮಿಯ ದ್ಯಾಸವೇ ಸೋಕಾಲ್ಡ್ ಬುದ್ದಿಜೀವಿಗಳಿಗೆ ಇರುವುದಿಲ್ಲ. ಅಷ್ಟಕ್ಕೂ ಸಂಸ್ಕೃತಿಯ ನಿರ್ಮಾಪಕರಂತೆ ಫೋಜು ಕೊಡುವವರು ಟೀವಿಗಳಲ್ಲಿ, ಯು ಟ್ಯೂಬುಗಳಲ್ಲಿ ಪಾಂಡಿತ್ಯಪೂರ್ಣ ಚರ್ಚೆಮಾಡುವವರು ಸಧ್ಯದ ಕೊರೊನಾ ನಿವಾರಣೆಯಲ್ಲಿ ತಮ್ಮ ಪಾತ್ರವೇನೆಂದು ತಮಗೆ ತಾವೇ ಪ್ರಶ್ನಿಸಿಕೊಳ್ಳುವ ಬದಲು ರಂಗನಾಟಕಗಳ ಪ್ರದರ್ಶನಗಳಿಲ್ಲ, ಕೂಡಲೇ ಸರಕಾರ ನೆರವಾಗಬೇಕೆಂದು ಇನ್ನೂ ಮುಂತಾಗಿ ಪಾಂಡಿತ್ಯದ ಒಣತೌಡು ಕುಟ್ಟುತ್ತಿದ್ದಾರೆ ಅನಿಸುತ್ತಿದೆ. ಹಾಗೆಂದು ಸರಕಾರದಲ್ಲಿ ನೆರವು ಯಾಚಿಸಬಾರದೆಂಬುದು ನನ್ನ ಉದ್ದೇಶವಲ್ಲ. ಕೊರೊನಾ ಕಾಲದಲ್ಲಿ ಕೋಟಿ ಕೋಟಿ ವಲಸಿಗ ಕೂಲಿಕಾರರು, ವೃದ್ಧರು, ಸಣ್ಣಸಣ್ಣ ಮಕ್ಕಳು, ಬಸುರಿ, ಬಾಣಂತಿಯರು ನೂರಾರು ಮೈಲುಗಟ್ಟಲೇ ಕಾಲ್ನಡಿಗೆಯಲ್ಲಿ ನಡಕೊಂಡು ಹೋದವರು. ಅವರ ಅಂಗಾಲುಗಳು ಕೆಂಡದಂತೆ ಕಾದ ಹಂಚಿನ ಮೇಲಿನ ರೊಟ್ಟಿಯಾದುದು, ಆದರೆ ಹಸಿವಿನಿಂದ ಸುಡುವ ಹೊಟ್ಟೆಗೆ ರೊಟ್ಟಿಯಿಲ್ಲದೇ ನಡುದಾರಿಯಲ್ಲೇ ಪ್ರಾಣ ಬಿಟ್ಟವರೆಷ್ಟೋ..!? ಇವರೆಲ್ಲರಿಗೂ ತಮ್ಮ ಹುಟ್ಟೂರುಗಳನ್ನು ಮುಟ್ಟಲೇಬೇಕೆಂಬ ನೆಲಧರ್ಮಪ್ರೀತಿಯ ಗುರಿಯಿತ್ತು. ಹಾಗೆ ಹುಟ್ಟೂರು ಮುಟ್ಟಿದಮೇಲೆ ಅಲ್ಲಿಯೇ ಬದುಕು ಕಟ್ಟಿಕೊಳ್ಳುವ ಬದುಕಿನ ಯಥಾರ್ಥ ಕನಸುಗಳಿದ್ದವು. ಕೋಟಿ ಕೊಟ್ಟರೂ ಮರಳಿ ಪೇಟೆಗೆ ಬರುವುದು ಬೇಡವೆಂಬ ಕಣ್ಣೀರಿನ ಸಂಕಟಗಳಿದ್ದವು. ಕಡೆಯಪಕ್ಷ ಇಂತಹ ಸಹಸ್ರಾರು ಸಂಕಟಗಳನ್ನು ಕತೆ, ಕಾದಂಬರಿ, ನಾಟಕಗಳಲ್ಲಿ ಹೇಗೆ ತರುವುದೆಂಬ ಗಂಭೀರ ಚರ್ಚೆಗಳು ಜರುಗುತ್ತಿಲ್ಲವೆಂಬ ಇರಾದೆ ನನ್ನದು. ಇನ್ನು ಈ-ಪಂಡಿತರು ಸಾಮಾನ್ಯ ಜನರ ಸಂಕಷ್ಟಗಳಿಗೆ ಪ್ರಾಣಮಿತ್ರರಂತೆ ಸ್ಪಂದಿಸಿದ್ದು, ನೆರವು ಮಾಡಿದ್ದು ಅಷ್ಟಕ್ಕಷ್ಟೇ. ಹಾಗೆ ಮಾಡಿದ ಕೆಲವರಿಗೆ ನೆರವಿಗಿಂತ ಬೆಂಕಿಬಿದ್ದ ಮನೆಯಲ್ಲಿ ಗಳಗಳನ್ನು ಹಿರಿದಂತೆ ತಮ್ಮ ಇಮೇಜಿಗೆ ಸಿಗಬೇಕಾದ ಕೀರ್ತಿಕಾಮನೆಯ ತಲಬು. ದುಃಸ್ಥಿತಿಯಲ್ಲಿರುವ ಕಲಾವಿದರಿಗೆ ಸರಕಾರ ನೀಡುವ ಎರಡುಸಾವಿರ ರುಪಾಯಿಗಳಿಗೂ ದೇಹಿ ಎಂದು ಅರ್ಜಿಗುಜರಾಯಿಸಿದ ಕಾರು, ಬಂಗಲೆಗಳುಳ್ಳ ಅನುಕೂಲಸ್ಥ ಕೆಲವು ರಂಗಕರ್ಮಿಗಳು ನಮ್ಮನಡುವಿದ್ದಾರೆ. ಇಂಥವರು ಹತ್ತಾರು ವರ್ಷಕಾಲ ರಂಗಭೂಮಿಯಲ್ಲಿ ಹೆಸರು ಮಾಡಿದವರು. ರೆಪರ್ಟರಿಗಳಲ್ಲಿ ಕಲಿತು ಬಂದವರು. ಕಡೆಯಪಕ್ಷ ಅಲ್ಲಿ ಇವರು ಮಾನವೀಯತೆಯ ಪಾಠ ಕಲಿಯಲಿಲ್ಲವೇ.? ಅಥವಾ ಸೋಕಾಲ್ಡ್ ರೆಪರ್ಟರಿಗಳು ಇಂತಹ ಕೆಲವರಿಗೆ ಅಂತಃಕರಣದ, ನಿಸ್ವಾರ್ಥದ ಪಾಠ ಹೇಳಿ ಕೊಡಲಿಲ್ಲವೇ.? ಕೊರೊನಾ ಕೇವಲ ದೈಹಿಕ ಬಾಧೆಯಾಗಿ ಮನುಷ್ಯರ ಜೀವ ಹೊತ್ತೊಯ್ಯುತ್ತಿಲ್ಲ. ಅದು ಮನುಷ್ಯ ಮನುಷ್ಯರ ನಡುವೆ ಸೃಷ್ಟಿಸುತ್ತಿರುವ ಅಂತರ ಕೇವಲ ದೈಹಿಕ ಅಂತರವಾಗಿರದೇ ಸಾಮಾಜಿಕ ಅಂತರ ಎಂದು ಅಪಾರ್ಥದ ಹೆಸರಿಂದ ಕರೆಸಿಕೊಂಡಿತು. ಹೀಗೆ ಮಾಡುವ ಮೂಲಕ ಕೆಲಮಟ್ಟಿಗೆ ನೇಪಥ್ಯದಲ್ಲಿದ್ದ ಹಲವು ಭಾರತಗಳು ಬಯಲುರಂಗಕ್ಕೆ ಬಂದವು. ಮುಖ್ಯವಾಗಿ ಬಾಲ್ಕನಿ ಭಾರತ, ನೆಲಭಾರತಗಳು ಬಹಳ ಸ್ಪಷ್ಟವಾಗಿ ಗೋಚರಗೊಂಡವು. ಯಾರನ್ನೋ ಸಂಪ್ರೀತಗೊಳಿಸಲು ಬಾಲ್ಕನಿ ಭಾರತದಲ್ಲಿ ನಿಂತು ಬೆಳಕಿನ ಹಣತೆ ಹಚ್ಚಿದ ಕಣ್ಣುಗಳಿಗೆ ಕತ್ತಲೆಯ ನೆಲದಲ್ಲಿ ನಡೆದುಕೊಂಡು ಹೋಗುತ್ತಿರುವ ನೆಲಭಾರತದ ಕೋಟಿ, ಕೋಟಿ ಮಂದಿ ಕಾಣಿಸಲೇಇಲ್ಲ. ಹಾಗೆಯೇ ಎಂದಿನಂತೆ ಗ್ರಾಮಭಾರತ ಮತ್ತು ನಗರ ಭಾರತ, ಸ್ಲಂಭಾರತ, ಹಸಿವಿನ ಭಾರತ, ಹೊಟ್ಟೆತುಂಬಿದ ಭಾರತ ಹೀಗೆ ಹತ್ತುಹಲವು ಭಾರತಗಳನ್ನು ತುಂಬಾ ನಿಚ್ಚಳವಾಗಿ ಕೊರೊನಾ ವಿಂಗಡಿಸಿ ತೋರಿಸಿತು. ಇನ್ನೊಂದು ಅಪಾಯದ ಮತ್ತು ಸುಳ್ಳು ಸಂಗತಿಯೆಂದರೆ ಕೊರೊನಾದ ಮೂಲವೇ ಒಂದು ಅಲ್ಪಸಂಖ್ಯಾತ ಸಮುದಾಯ. ಹಾಗಂತ ಕೆಲವು ಖಾಸಗಿ ಟೀವಿಗಳು ಕುತ್ಸಿತ ನಿರ್ಧಾರದ ಸುದ್ದಿಗಳನ್ನು ಬಿತ್ತರಿಸಿದವು. ಅವಕ್ಕೆ ತಮ್ಮ ಜಾಣತನದ ಬಿತ್ತರಿಕೆಯ ಖುಷಿಯ ಮುಂಚೂಣಿ. ಕೊರೊನಾದ ಈ ತೆರನಾದ ವಿಭಜನೆಗಳು ಸ್ವಾತಂತ್ರ್ಯೋತ್ತರ ಭಾರತದ ಕ್ಷಣಗಳನ್ನು ನೆನಪಿಸುವ ಸಾಮಾಜಿಕ ಅಸ್ವಸ್ಥತೆಗಳನ್ನು ನಿರ್ಮಿಸಿತು. ಕೊರೊನಾಕಿಂತಲೂ ಅಪಾಯಕಾರಿಯಾದ ಕೋಮು ದ್ವೇಷದಕ್ರಿಮಿಗಳು ಅವಕಾಶ ಬಳಸಿಕೊಂಡವು. ಸಣ್ಣದೊಂದು ಸಮಾಧಾನದ ಸಂಗತಿಯೆಂದರೆ ಮಂದಿರ, ಮಸೀದೆ, ಚರ್ಚುಗಳಿಗೆ ಕೆಲವು ತಿಂಗಳ ಮಟ್ಟಿಗಾದರೂ ಬೀಗ ಜಡಿಸಿ ಪವಾಡ ಮಾಡಿದ ಕೀರ್ತಿ ಕೊರೊನಾಕ್ಕೆ ಸಲ್ಲಬೇಕು. ಕೊರೊನೋತ್ತರ ಭಾರತ, ಅದರ ಸಾಂಸ್ಕೃತಿಕ ಬದುಕಿನ ಚಿಂತನೆಗಳು ಹೇಗಿರಬೇಕೆಂಬ ಸಿದ್ದತೆಗಳನ್ನು ಕೆಲವು ಸ್ಥಾಪಿತ ಸಂಘಟನೆಗಳು ಈಗಾಗಲೇ ನೀಲನಕ್ಷೆ ರೂಪಿಸತೊಡಗಿವೆ. ಸಾವು ನೋವಿನ ಸೂತಕದ ಮನೆಯಲ್ಲಿ ಸಡಗರ, ಸಂಭ್ರಮಗಳು ಸಾಧ್ಯವೇ.? ಇಂಥದರ ನಡುವೆ ಗಡಿಯಲ್ಲಿ ಯುದ್ಧದ ಕಾರ್ಮೋಡಗಳು ಗಸ್ತು ಹೊಡೆಯುತ್ತಿವೆ. ದೀಪವು ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕು ಎಂಬ ಹಾಡಿನ ಪಾಡು ಜನಸಾಮಾನ್ಯರದು. ತಾತ್ಪೂರ್ತಿಕವಾಗಿ ಸ್ಥಗಿತಗೊಂಡ ಸಂಸ್ಕೃತಿಯ ಜೀವಧಾರೆ ಮತ್ತೆ ಉಕ್ಕಿ ಹರಿಯುವುದು ಕಾಣಬಲ್ಲೆನೆಂಬ ಕನಸುಗಳು ನನ್ನಲ್ಲಿ ಯಾವತ್ತೂ ಬತ್ತುವುದಿಲ್ಲ.ಮಲ್ಲಿಕಾರ್ಜುನ ಕಡಕೋಳ

ಪ್ರಸ್ತುತ Read Post »

ಇತರೆ

ಪ್ರಸ್ತುತ

ಅಪ್ಪ ರಾಘವೇಂದ್ರ ಈ ಹೊರಬೈಲು “ಮಾತೃದೇವೋಭವ ಪಿತೃದೇವೋಭವ ಆಚಾರ್ಯ ದೇವೋಭವ” ಭೂಮಿಯ ಮೇಲೆ ಕಣ್ಣಿಗೆ ಕಾಣುವ, ಜೊತೆಯಲ್ಲಿಯೇ ಇರುವ, ಕಷ್ಟವೆಂದಾಗ ಮರುಗುವ, ದಾರಿಗೆಡದಂತೆ ಮಾರ್ಗದರ್ಶನ ಮಾಡುವ ಮೂರು ದೈವಗಳೆಂದರೆ ತಂದೆ, ತಾಯಿ ಮತ್ತು ಗುರು. ಇಡೀ ಭೂಮಂಡಲದ ಪ್ರತಿಯೊಬ್ಬರಿಗೂ ಇವರೇ ನಿಜವಾದ ತ್ರಿಮೂರ್ತಿಗಳು. ಮಗುವನ್ನು ಸದ್ಗತಿಗೆ ತರುವಲ್ಲಿ ಮೂವರ ಪಾತ್ರವೂ ಬಹುಮುಖ್ಯವಾದುದು. ತಾಯಿಯಾದವಳು ಕರುಣಾಮಯಿಯಾಗಿ, ಮುದ್ದು ಮಾಡುತ್ತಾ, ಸದಾ ಮಗುವಿನ ಹಿತಕ್ಕಾಗಿಯೇ ಬದುಕುವವಳು. ಗುರುವಾದವನು ಮಗುವು ದಾರಿ ತಪ್ಪದಂತೆ ಮಾರ್ಗದರ್ಶನ ನೀಡಿ, ಜಗತ್ತಿನ ಪರಿಚಯ ಮಾಡಿಕೊಡುವವನು. ಆದರೆ ತಂದೆಯಾದವನು ತಾಯಿಯಷ್ಟು ಮುದ್ದು ಮಾಡದೆ ಒರಟೊರಟಾಗಿ ಇದ್ದರೂ, ಹೃದಯದ ತುಂಬಾ ಪ್ರೀತಿಯನ್ನೇ ಹೊದ್ದು, ಮಗುವಿನ ಏಳ್ಗೆಗಾಗಿ ಹಗಲಿರುಳು ಶ್ರಮಿಸುವವನು. ಅಮ್ಮ ಭೂಮಿಯಂತೆ ಸಹಿಷ್ಣುವಾದರೆ, ಅಪ್ಪ ಆಕಾಶದಂತೆ ವಿಶಾಲವಾದವನು. ನನ್ನಪ್ಪಾಜಿಯೂ ಕೂಡಾ ಮಗನಾದ ನನ್ನ ವಿಷಯದಲ್ಲಿ ಒರಟುತನಕ್ಕೆ, ಆಕಾಶದಂತಹ ಮನಸ್ಥಿತಿಗೆ ಹೊರತಾಗದವರು. ಚಿಕ್ಕವನಿದ್ದಾಗ ಅಪ್ಪಾಜಿಯಿಂದ ಕುಳಿತರೂ ಏಟು, ನಿಂತರೂ ಏಟು  ತಿಂದಿದ್ದರಿಂದ ಹಿಟ್ಲರನ ಬಗ್ಗೆ ಶಾಲೆಯಲ್ಲಿ ಓದಿ, ನಮ್ಮಪ್ಪಾಜಿಯನ್ನು ನೋಡಿದಾಗಲೂ ಹಿಟ್ಲರನನ್ನು ಕಂಡಂತೆಯೇ ಹೆದರಿ ಓಡುತ್ತಿದ್ದ ಘಳಿಗೆಗಳಿಗೆ ಲೆಕ್ಕವಿಲ್ಲ. ತೀರಾ ಸಣ್ಣ ತಪ್ಪು ಮಾಡಿದಾಗಲೂ ಬಾರುಕೋಲು ಹಿಡಿದು, ಬೀದಿಯಲ್ಲೆಲ್ಲ ಓಡಾಡಿಸಿ ಹೊಡೆದಿದ್ದರಿಂದ ಅವರಲ್ಲಿರುವ ಒಂದಿಷ್ಟು ಶಿಸ್ತು, ಬದ್ಧತೆ ನನಗೂ ಬಂತೆಂದರೆ ತಪ್ಪಿಲ್ಲ. ತಪ್ಪನ್ನು ಮಾಡಲು ಅವಕಾಶವನ್ನೇ ಕೊಡದಂತೆ ತಪರಾಕಿ ಕೊಡುತ್ತಿದ್ದರಿಂದ, ತಪ್ಪು ಮಾಡುವ ಆಲೋಚನೆಯೇ ಬರದಂತೆ ಮಾಡಿದವರು ನನ್ನಪ್ಪಾಜಿ. ಕೇವಲ ಸದಾ ಬಾರುಕೋಲು ಬೀಸಿ, ಬಡಿದಿದ್ದರೆ ನಾನಿಂದು ಒರಟು ಮನುಷ್ಯನಾಗಿ, ತಂದೆಯ ವಿರುದ್ದವೇ ತಿರುಗಿಬಿದ್ದು, ದಾರಿ ತಪ್ಪಿದ ಮಗನಾಗುತ್ತಿದ್ದೆನೇನೋ? ಆದರೆ ಪ್ರತೀ ಹೊಡೆತದ ಹಿಂದೆ ಅಪ್ಪಾಜಿಯ ಅಂತಃಕರಣ ಕಂಡಿದ್ದೇನೆ. ಹೊಡೆದ ದಿನ ರಾತ್ರಿ ಮಲಗಿ ನಿದ್ರಿಸುವಾಗ ನೋವಾದ ಜಾಗಕ್ಕೆ ಮುಲಾಮು ತಿಕ್ಕಿ, ತಾನೇಕೆ ಮಗನಿಗೆ ಹೊಡೆದುಬಿಟ್ಟೆ ಎಂದು ಮಮ್ಮಲ ಮರಗಿದ್ದನ್ನು ಕಂಡಿದ್ದೇನೆ. ದಾರಿ ತಪ್ಪಲು ಬಿಡದೆ ಹೊಡೆದು ಬುದ್ಧಿ ಕಲಿಸಿದರೆ, ಮುಂದೆ ತನ್ನ ಮಗ ತನ್ನಂತೆ ಅನಕ್ಷರಸ್ಥನಾಗದೇ ದೊಡ್ಡ ವ್ಯಕ್ತಿಯಾಗಬೇಕೆಂದು ಅಮ್ಮನೊಡನೆ ಹೇಳುತ್ತಿದ್ದುದನ್ನು ಮಲಗಿದಲ್ಲಿಂದಲೇ ಆಲಿಸಿದ್ದೇನೆ. ಮನೆಯಲ್ಲಿ ಕಡುಬಡತನವಿದ್ದರೂ ಮಕ್ಕಳಾದ ನಮ್ಮ ಹಂತಕ್ಕೆ ತಾಕದಂತೆ, ಯಾರ್ಯಾರದೋ ಕೈಕಾಲು ಹಿಡಿದಾದರೂ, ನಾವು ಕೇಳಿದ್ದೆಲ್ಲವನ್ನೂ ಅದೆಷ್ಟೆಷ್ಟೋ ಕಷ್ಟಪಟ್ಟಾದರೂ ಒದಗಿಸಿ ನಿಟ್ಟುಸಿರು ಬಿಟ್ಟಿದ್ದನ್ನು ನೋಡಿದ್ದೇನೆ. ಕಾಯಕವೇ ಕೈಲಾಸವೆಂಬ ಬಸವಣ್ಣನ ವಚನ ಗೊತ್ತಿಲ್ಲದಿದ್ದರೂ, ಇರುವ ಒಂದೆಕರೆ ಭೂಮಿಯಲ್ಲೇ ಹಗಲು-ರಾತ್ರಿಗಳ ವ್ಯತ್ಯಾಸವರಿಯದೆ, ಕಾಯಕವೇ ತನ್ನ ಜೀವನವೆನ್ನುವಂತೆ ದುಡಿದು, ಬಂಗಾರದ ಬೆಳೆ ತೆಗೆದು, ಅಕ್ಕಪಕ್ಕದವರು ಹುಬ್ಬೇರಿಸುವಂತೆ ಮಾಡಿದ್ದನ್ನು ಕಂಡಿದ್ದೇನೆ. ಕಾಲಿನಲ್ಲಿ ದೊಡ್ಡ ಹುಣ್ಣಾಗಿ, ನಡೆಯಲೂ ಹರಸಾಹಸಪಡುವಂತಿದ್ದರೂ, ಸುಮ್ಮನೆ ಕುಳಿತರೆ ದುಡಿಯುವರ್ಯಾರು, ಸಂಸಾರ ನಡೆಯುವುದು ಹೇಗೆಂದು ಕಾಲಿಗೆ ಬಟ್ಟೆ ಕಟ್ಟಿಕೊಂಡು, ಕೆಸರಿನಲ್ಲಿಯೇ ದುಡಿದದ್ದನ್ನು ಕಂಡು ಮರುಗಿದ್ದೇನೆ.  ಕಾಯ ವಾಚಾ ಮನಸಾ ಪ್ರತಿಯೊಂದೂ ಶುದ್ಧವಾಗಿರಬೇಕೆಂಬ ಅಪ್ಪಾಜಿಯ ಶುದ್ಧತೆಯ ಬದ್ಧತೆಯನ್ನು ಕಂಡು ನಿಬ್ಬೆರಗಾಗಿದ್ದೇನೆ. ಒಮ್ಮೆ ಮೈಮೇಲೆ ಧರಿಸಿದ ಬಟ್ಟೆಯನ್ನು ಶುಚಿಗೊಳಿಸದೇ ಇನ್ನೊಮ್ಮೆ ಧರಿಸಿದ ಉದಾಹರಣೆಯನ್ನೇ ನಾನು ಕಂಡಿಲ್ಲ. ಹಾಗಂತ ಮನೆಯಲ್ಲಿ ಕೈಗೊಂದು ಕಾಲಿಗೊಂದು ಆಳುಗಳಿದ್ದು, ಬಟ್ಟೆ ತೊಳೆಯುತ್ತಿದ್ದರೆಂದಲ್ಲ. ಹೊಲದಲ್ಲಿ, ಮನೆಯಲ್ಲಿ ಮೈಮುರಿಯುವಂತೆ ದುಡಿದು ಬಂದರೂ, ಅಮ್ಮನಿಗೊಬ್ಬಳಿಗೇ ಎಲ್ಲಾ ಬಟ್ಟೆಗಳನ್ನು ತೊಳೆಯುವುದು ಕಷ್ಟವಾಗುವುದೆಂದು ತನ್ನ ಬಟ್ಟೆಗಳನ್ನು ತಾನೇ ತೊಳೆದುಕೊಂಡಿದ್ದನ್ನು ನೂರಾರು ಬಾರಿ ನೋಡಿ, ತನಗೆಷ್ಟೇ ಕಷ್ಟವಾದರೂ ಬೇರೆಯವರಿಗೆ ನೋವು ಕೊಡಬಾರದೆಂದು ಬದುಕುವ ರೀತಿಯನ್ನು ಕಂಡು, ಮಹಾತ್ಮಾ ಗಾಂಧೀಜಿಯವರನ್ನು ನೆನಪಿಸಿಕೊಂಡಿದ್ದೇನೆ. ಮನೆಯಲ್ಲಿ ಒಂದೊಂದು ರೂಪಾಯಿಗೂ ಕಷ್ಟವೆನ್ನುವ ಪರಿಸ್ಥಿತಿಯಿದ್ದರೂ ಭಿಕ್ಷೆ ಕೇಳಿ ಬರುವವರಿಗೆ ಸೇರುಗಟ್ಟಲೆ ಅಕ್ಕಿಯನ್ನೋ, ಭತ್ತವನ್ನೋ, ಕೆಲವೊಮ್ಮೆ ಕೈಯಲ್ಲಿದ್ದ ಹತ್ತು, ಇಪ್ಪತ್ತು, ಐವತ್ತರ ನೋಟುಗಳನ್ನು ಕೊಟ್ಟಿದ್ದನ್ನು ಗಮನಿಸಿದ್ದೇನೆ. ದೇವ-ದೈವಗಳ ಬಗ್ಗೆ ಅಪಾರ ಭಕ್ತ ಹೊಂದಿ, ಅದೆಷ್ಟೋ ವರ್ಷಗಳಿಂದ ದೂರದೂರದ ದೇವಸ್ಥಾನಗಳಿಗೆ ಎಂದೂ ತಪ್ಪಿಸದೇ ಪ್ರತೀ ವರ್ಷವೂ ಹೋಗಿ, ಕಾಣಿಕೆ ಸಲ್ಲಿಸಿ, ಹರಕೆ ತೀರಿಸಿ ಬಂದಿದ್ದನ್ನು, ಹೋಗಲಾಗದ ಇನ್ನೂ ಕೆಲವು ತೀರ್ಥಕ್ಷೇತ್ರಗಳಿಗೆ ಅಂಚೆಯ ಮೂಲಕ ಹಣ ಕಳುಹಿಸಿ, ಪ್ರಸಾದ ತರಿಸಿಕೊಂಡು ಧನ್ಯತಾಭಾವ ಹೊಂದಿದ್ದನ್ನು ಕಂಡು “ಕೈಯಲ್ಲಿ ಕಾಸಿಲ್ಲದಿದ್ದರೂ ಹೀಗೆ ಸಿಕ್ಕ ಸಿಕ್ಕ ದೇವರಿಗೆಲ್ಲ ಹರಕೆ- ಪೂಜೆ ಯಾಕೆಂದು” ಕೋಪಗೊಂಡು ಅಪ್ಪಾಜಿಯ ವಿರುದ್ಧವೇ ಹರಿಹಾಯ್ದಿದ್ದೇನೆ. ಅದಕ್ಕೂ ಕೋಪಗೊಳ್ಳದೆ “ದೇವರನ್ನು ನಂಬಿದರೆ ಒಳ್ಳೆಯದಾಗೇ ಆಗುತ್ತೆ ಇದು ನನ್ನ ನಂಬಿಕೆ, ನಿನಗೆ ನಂಬಿಕೆಯಿದ್ದರೆ ನಂಬು, ಇಲ್ಲದಿದ್ದರೆ ಬಿಡು, ನಾನಿರುವವರೆಗೆ ನಡೆಸಿಕೊಂಡು ಹೋಗುತ್ತೇನೆ” ಎಂಬ ಅವರ ವಿಶ್ವಾಸವನ್ನು ಕಂಡು ದಂಗಾಗಿದ್ದೇನೆ. ಒಟ್ಟಿನಲ್ಲಿ ಒಂದೆರೆಡು ಮಾತುಗಳಲ್ಲಿ ಅಪ್ಪನನ್ನು ಕುರಿತು ಬರೆದು ಮುಗಿಸಿಬಿಡುವುದು, ಅಪ್ಪನಿಗೆ ಮಾಡುವ ಅವಮಾನ. ಯಾಕೆಂದರೆ ಅವನು ಪದಗಳಿಗೆ, ಶುಷ್ಕ ಪದಗಳ ವರ್ಣನೆಗೆ ನಿಲುಕದ ಎತ್ತರದ ವ್ಯಕ್ತಿತ್ವದವನು. ಅವನು ಅದೆಷ್ಟೇ ಒರಟನಾದರೂ, ಅವನೊಳಗೂ ಒಂದು ಅಂತಃಕರಣವಿರುವದನ್ನು ಮಕ್ಕಳಾದವರು ಮರೆಯಬಾರದು. ಹಾಗಾಗಿ ಅಪ್ಪನನ್ನು ಪ್ರೀತಿಸದವನು ಪಾಪಿಯೇ ಸರಿ. ಏನೇ ಆಗಲಿ ನನಗಾಗಿ ಹಗಲಿರುಳು ದುಡಿದು, ತಾನು ನಂಬಿದಂತೆಯೇ ನಡೆಯುತ್ತಾ, ನನಗೊಂದು ದಾರಿ ತೋರಿದ ನನ್ನಪ್ಪನಿಗೊಂದು ಧೀರ್ಘ ನಮನ. ******************

ಪ್ರಸ್ತುತ Read Post »

ಇತರೆ

ಪ್ರಸ್ತುತ

ಶಿಕ್ಷಣದ ಬದಲಾವಣೆ ಅನಿವಾರ್ಯ ರೇಷ್ಮಾ ಕಂದಕೂರ ಶಿಕ್ಷಣದ  ಬದಲಾವಣೆ ಅನಿವಾರ್ಯ ಶಾಲೆ ಎಂಬುದು ಗಾರೆ ತುಂಬಿದ ಕಟ್ಟಡವಲ್ಲ ಜೀವಕೆ ಜೀವನ ನೀಡುವ ಸಂಗ್ರಹಾಗಾರ .ಕಾಲ ಘಟ್ಟದೊಂದಿಗೆ ಸದಾ ಹರಿವ ನೀರಿನಂತೆ ಬದಲಾಗುವ ರೀತಿಯ ಅರಿತು ಮಕ್ಕಳ ಮನವ ಅರಿತು ಬದಲಾಗುವ ಶೈಲಿಯ ರೂಢಿಸಿಕೊಂಡು ಮುಗ್ಧ ಮನಸುಗಳ ವಿಕಾಸಕ್ಕೆ ದಾರಿ ದೀಪವಾಗ ಬೇಕೆ ವಿನಃ ಕಟ್ಟುಪಾಡುಗಳಿಂದ ಚೌಕಟ್ಟಿನಲಿ ಜೋತು ಬೀಳಬಾರದು. ಅಂಕ ಶ್ರೇಣಿಯ ಹೊರತಾಗಿಯೂ ಬದುಕುವ ಜೀವನ ಶೈಲಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಸಾಗಬೇಕು.             ಮಾನವ ಜನಾಂಗದ ಪ್ರಗತಿಗೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ.ಮಾನವ ಶಕ್ತಿಯನ್ನು ರಾಷ್ಟ್ರವನ್ನು ಬೆಳೆಸುತ್ತಿರುವ ಅಮೂಲ್ಯ ಸಂಪನ್ಮೂಲಗಳಿಗೆ ಸರಿಯಾದ ಮಾರ್ಗದರ್ಶನ ನೀಡುತ್ತದೆ ಶಿಸ್ತು ಸಂಯಮ ಮತ್ತು ಉತ್ಪಾದಕ ಮಾನವ ಶಕ್ತಿಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಶಿಕ್ಷಣ ಮಾನವನ ಸಹಜ ಗುಣಗಳನ್ನು ಅಡೆತಡೆಯಿಲ್ಲದ ಮಾರ್ಪಾಡು ಮಾಡಿ ವ್ಯಕ್ತಿತ್ವ ವಿಕಸನಕ್ಕೆ ಎಡೆ ಮಾಡಿ ಕೊಡಬೇಕು.           ದೇಶದ ಕಲ್ಯಾಣಕ್ಕೆ ತಾತ್ವಿಕವಾಗಿ ಆರ್ಥಿಕವಾಗಿ ಸಾಮಾಜಿಕ ವಲಯಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುತ್ತದೆ. ಸಮಾನವಾಗಿ ಸಮನ್ವಯದೊಂದಿಗೆ ವಾಸ್ತವದ ನೆಲೆಗಟ್ಟು ಕಂಡುಕೊಳ್ಳಲು ಸಹಕಾರಿ ಜೀವನೋಪಾಯದ ಹಲವು ಮಜಲುಗಳನ್ನು ತಿಳಿಸುವ ಏಕೈಕ ಮಾರ್ಗ ಶಿಕ್ಷಣ.             ಶಿಕ್ಷಣ ಆಸಕ್ತಿದಾಯಕ ಸೃಜನಶೀಲತೆಗೆ ಹೆಚ್ಚು ಒತ್ತುಕೊಟ್ಟಾಗ ಅವುಗಳ ಅನುಷ್ಠಾನಕ್ಕೆ  ಪ್ರಚೋದಿಸಿ ಸಂತೃಪ್ತ ಮನೋಭಾವ ತುಂಬಿ ಹತಾಷೆ,ನಿರಾಸಕ್ತಿಗಳನ್ನು ತಿದ್ದಿ ಹೊಸತೊಂದು ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ.ಆದರೆ ಇಂದಿನ ಶಿಕ್ಷಣದ ವ್ಯಾಪಾರೀಕರಣ ಮಾಡುವುದು ಸಲ್ಲದು.ಮಾನವ ಇಂದು ವೈಜ್ಞಾನಿಕವಾಗಿ ಪ್ರಗತಿ ಹೊಂದಿದ್ದರೂ ಸುಖಶಾಂತಿಗಳಿಲ್ಲದೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ.ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞ ಡಾ.ರಾಧಾಕೃಷ್ಣನ್ ಹೇಳುವಂತೆ ಮಾನವ ಹಕ್ಕಿಯಂತೆ ಹಾರುವುದನ್ನು ಮೀನಿನಂತೆ ಈಜುವುದನು ಕಲಿತ ಆದರೆ ಮಾನವ ಮಾನವನಾಗಿ ಬಾಳುವುದನು ಮಾತ್ರ ಕಲಿಯಲಿಲ್ಲ.  ಇದರ ಅರ್ಥ ಮಾನವ ಬರೀ ಸಂಪತ್ತು ಗಳಿಕೆಗೆ ಒತ್ತು ಕೊಟ್ಟು ವೈಜ್ಞಾನಿಕ ಸಂಶೋಧನೆ ಮಾಡಿದ. ತಂತ್ರಜ್ಞಾನದಲ್ಲಿ ಕೊಡುಗೆ ನೀಡಿದ ಮಾನವ ಮಾನವನಾಗಿ ಬಾಳಿ ಬದುಕುವುದನು ಮರೆತ.       ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಮೌಲ್ಯಯುತ ಅಂಶಗಳನ್ನು ಕಲಿಸುವುದು ಇಂದಿನ ದಿನಮಾನಕ್ಕೆ ಅವಶ್ಯಕ.ಓದು ಹುದ್ದೇಯೇರುವ ಹಂಬಲ ಹೆಚ್ಚಾದರೆ ಅದನ್ನು ಸಾಧಿಸದಾದಾಗ ಆತ್ಮಹತ್ಯೆ ಎಂಬ ಮಾರಕತೆಗೆ ಒಳಗಾಗಿ ಜೀವ ನಷ್ಟ ವಾಗುತ್ತದೆ.          ಜೀವನ ಮಾಡಲು ದೊಡ್ಡ ಹುದ್ದೆಯೇ ಬೇಕೆಂದಲ್ಲ.ಇನ್ನಿತರ ಮಾರ್ಗಗಳನ್ನು ಇಂದಿನ ಶಿಕ್ಷಣ ನೀಡಬೇಕಾದುದು ಅವಶ್ಯಕ‌        ಸಮಾಜದ ಹಿತಕಾಯ್ದುಕೊಳ್ಳಲು ಆರೋಗ್ಯಕರವಾದ ವಾತಾವರಣವನ್ನು ಸಂರಕ್ಷಿಸುವ ಉದ್ದೇಶ ಹೊಂದಿರಬೇಕಾಗುತ್ತದೆ.ಶಿಕ್ಷಣದ ಗುರಿಗಳು ಶಾರೀರಿಕ ಬೆಳವಣಿಗೆಯೊಂದಿಗೆ ಸಚ್ಛಾರಿತ್ರ್ಯ ಬದುಕುವ ಕೌಶಲಗಳನ್ನು ನೀಡುವುದು ಅವಶ್ಯಕ.        ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕಾಗಿದೆ.  ಇದನ್ನು ಪ್ರತಿಯೊಬ್ಬ ಪ್ರಜೆ ಪಡೆಯಲೇಬೇಕು.        ಶಿಕ್ಷಣ ಉರು ಹೊಡೆದು ಪರೀಕ್ಷೆ ಬರೆದು ಅಂಕ ಪಡೆದರೆ ಸಾಲದು ಅನುಭವ,ಪ್ರಾಯೋಗಿಕವಾಗಿ ಪಡೆದು ಜೀವನ ನಡೆಸುವ ಕೌಶಲ್ಯಗಳನ್ನು ಧಾರೆ ಎರೆಯಬೇಕಾಗಿದೆ.ಸದೃಢ ದೇಹ ಮನಸು,ಮೌಲ್ಯಯುತ ಬದುಕು ಸಾಗಿದಾಗ ಜೀವನಕೊಂದು ಅರ್ಥ ಬರುತ್ತದೆ.  *******

ಪ್ರಸ್ತುತ Read Post »

ಇತರೆ

ಹರಟೆ

ಮರೆವು ಅನುಪಮಾ ರಾಘವೇಂದ್ರ        ಅರಿತೋ…ಮರೆತೋ…ಒಂದೊಮ್ಮೆ ದಾರಿ ತಪ್ಪಿದರೂ ಕೂಡ ಮತ್ತೆ ಎಚ್ಚರಗೊಂಡು ಮೈಕೊಡವಿ ನಿಲ್ಲಬೇಕು. ಆಗ ಮರೆವು ಮರೆಯಾಗಿ ಅರಿವಿನ ಜ್ಯೋತಿ ಬೆಳಗುತ್ತದೆ ಎಂದಿದ್ದಾರೆ ವಿದ್ವಾಂಸರು. ಮರೆವು ದೇವರು ಕೊಟ್ಟ ವರ. ಆದರೆ ಯಾವುದನ್ನು ಮರೆಯಬೇಕು, ಯಾವುದನ್ನು ಮರೆಯಬಾರದು ಎಂಬ ಅರಿವು ನಮ್ಮಲ್ಲಿರಬೇಕು.         ಅದೇನೋ ಸರಿ…….. ಆದರೆ ಮೊನ್ನೆ ನಾನು ಅಡಿಗೆ ಮಾಡುತ್ತಿರುವಾಗ ಬೇರೇನೋ ನೆನಪಾಗಿ ಸ್ಟೋರ್ ರೂಮಿನ ಒಳ ಹೊಕ್ಕಾಗ ಯಾವ ಕಾರಣಕ್ಕೆ ಅಲ್ಲಿಗೆ ಹೋದೆ ಎಂಬುದೇ ಮರೆತು ಹೋಗಿತ್ತು. ಮತ್ತೆ ಮೊದಲಿದ್ದಲ್ಲಿಗೇ ಹೋದ ಕ್ಷಣದಲ್ಲಿ ಸ್ಟೋರ್ ರೂಮಿಗೆ ಹೋದ ಕಾರಣ ನೆನಪಾಗಿತ್ತು. ಇಂತಹ ಘಟನೆಗಳು ಅದೆಷ್ಟೋ……         ಒಲೆಯಲ್ಲಿ ಹಾಲಿಟ್ಟು ಧಾರಾವಾಹಿ ನೋಡುತ್ತಾ ಮೈ ಮರೆತು ಹಾಲು ಉಕ್ಕಿ ಚೆಲ್ಲಿ ಹೋಗುವುದೋ…….. ಫೋನಿನಲ್ಲಿ ಮಾತನಾಡುತ್ತಾ  ಇರುವಾಗ ತಳ ಹಿಡಿದು ಕರಟಿದ ವಾಸನೆ ಮೂಗಿಗೆ ಬಡಿದಾಗಲೇ ಒಲೆಯಲ್ಲಿ ಪಲ್ಯ ಬೇಯಿಸಲು ಇಟ್ಟಿದ್ದೇನೆಂಬ ನೆನಪು ಮರುಕಳಿಸುವುದೋ……. ಇನ್ನೊಂದು ರೀತಿಯ ಮರೆವು.          ಮದುವೆ , ಸಮಾರಂಭಗಳಿಗೆ ಹೋದಾಗ ಯಾರೋ ಬಂದು ನವಿರಾಗಿ ಬೆನ್ನು ತಟ್ಟಿ “ನಮಸ್ಕಾರ .ನನ್ನ ನೆನಪಿದೆಯಾ…?” ಎಂದಾಗ ಅವರನ್ನು ಎಲ್ಲೋ ನೋಡಿದ ನೆನಪು….. ಆದರೆ ಯಾರೆಂಬ ಸ್ಪಷ್ಟತೆ ಇಲ್ಲ….. ನೆನಪಿಲ್ಲವೆಂದು ಹೇಳಿದರೆ ತನಗೇ ಕೊರತೆ ಎಂಬ ಭಾವದಲ್ಲಿ “ಹೋ…. ಏನು ನೆನಪಿಲ್ಲದೆ. ಧಾರಾಳ ನೆನಪಿದೆ.” ಎಂದು ಹಲ್ಲು ಕಿಸಿದು ಮೆಲ್ಲನೆ ಅಲ್ಲಿಂದ ಜಾರಿಕೊಂಡ ಸಂದರ್ಭ ಅದೆಷ್ಟೋ…. ಆದರೆ ಕೆಲವೊಮ್ಮೆಅವರು “ಹಾಗಾದರೆ ನಾನು ಯಾರು ? ಹೇಳು ನೋಡುವ” ಎಂದಾಗ “ಬ್ಬೆ ಬ್ಬೆ ಬ್ಬೆ” ಎಂದು ಹೇಳಿ ಕಕ್ಕಾಬಿಕ್ಕಿಆದದ್ದೂ ಇದೆ. ಅವರ ಪರಿಚಯದ ಒಂದು ಎಳೆ ಸಿಕ್ಕಿದರೂ ಇಡೀ ಜಾತಕವನ್ನು ಜಾಲಾಡುವಷ್ಟು ಮಾಹಿತಿ ಸಂಗ್ರಹ ನಮ್ಮ ಬಳಿ ಇದ್ದರೂ ಆ ಎಳೆ ಸಿಕ್ಕದೆ ಒದ್ದಾಡುವ ಪ್ರಸಂಗ ಯಾರಿಗೂ ಬೇಡಪ್ಪಾ…          ಕೆಲವೊಂದು ವ್ಯಕ್ತಿಗಳ ಕಪಿ ಮುಷ್ಟಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ  ಪರಿಚಯವೇ ಇಲ್ಲದಂತೆ ನಡೆದುಕೊಳ್ಳುವುದನ್ನು ಏನೆನ್ನಬೇಕೋ…..? ಅದು ಜಾಣ ಮರೆವು ತಾನೇ…. ಜೀವನದ ಅನೇಕ ವಿಚಿತ್ರ ಸಂದರ್ಭಗಳಲ್ಲಿ ನಮ್ಮನ್ನು ಪಾರು ಮಾಡುವುದೂ  ಜಾಣ ಮರೆವು.  ಈ ಜಾಣ ಮರೆವಿನಿಂದ ಲಾಭ ಮಾಡಿಕೊಳ್ಳುವ ಕೆಟ್ಟ ಮನಸ್ಸಿನ ದುಷ್ಟ ಜನರೂ ಅದೆಷ್ಟೋ……    ಇವೆಲ್ಲಕ್ಕಿಂತಲೂ ಮುಖ್ಯವಾದ ಮರೆವು ರೋಗ ಅಲ್ಜ಼ೀಮರ್. ತಾನು ಯಾರು…? ತನ್ನವರು ಯಾರು ….? ತನ್ನ ಇರವಿನ ಅರಿವೇ ಇಲ್ಲದ ಪರಿಸ್ಥಿತಿ. ಹಸಿವು , ಬಾಯಾರಿಕೆ ಇಲ್ಲ . ಬಹಿರ್ದೆಸೆಯ ಪರಿಜ್ಞಾನ ಇಲ್ಲ. ಹಗಲು – ರಾತ್ರಿಗಳ ಪರಿವೇ ಇಲ್ಲ. ಉಟ್ಟ ಅರಿವೆಯ ಗೊಡವೆಯೇ ಇಲ್ಲ. ಅಬ್ಬಾ…..! ಕಲ್ಪನೆಯೇ ಭಯಂಕರ. ಮರೆವು ಒಂದು ವರ ಎಂದವರೆಲ್ಲಾ ಈ ಮರೆವು ಎಂಬುದು ದೊಡ್ದ ಶಾಪ ಎನ್ನದಿರುವರೇ……. ********

ಹರಟೆ Read Post »

ಇತರೆ

ಲಹರಿ

ಮಾಸ್ಕಿನ ಮುಸುಕಿನಲಿ ಮುಂಗಾರು ಶಾಲಿನಿ ಆರ್. ಮತ್ತೆ ಮುಂಗಾರು. ಆದರೆ ಇದು ಕೊರೋನಾ ಮುಂಗಾರು. ಜೀವನದಲ್ಲಿ ಮೊದಲ ಬಾರಿ‌ ಮಳೆ ಮತ್ತು ನಾನು, ನನ್ನ ಗಾಡಿ ಮತ್ತೆ ನಿನ್ನ ಮೌನ, ಒಂದಕ್ಕೊಂದು ಸಂಬಂಧ ಇಲ್ಲದ ಹಾಗೆ ಲಾಕ್ ಡೌನ್ ಆಗಿರೋದು.  ಪ್ರತಿ ಸಾರಿ ಕಾಯೋ ಹಾಗೆ ಈ ಸಾರಿ ಮುಂಗಾರು ಅನುಭವಿಸಲಿಕ್ಕೆ ಮನಸ್ಸು ಹಿಂದೆ ಮುಂದೆ ನೋಡ್ತಿದೆ.ಇಳೆಯೇನೋ ತೋಯ್ತಾ, ಅದರ ಸಿರಿ ಸಂಭ್ರಮನ ಅದು ಸಂಭ್ರಮಿಸ್ತಿದೆ. ಯಾಕಂದ್ರ ಬಾಳ ವರುಷದ ಮ್ಯಾಲ ಅದಕ್ಕೆ ತನ್ನದೇ ಆದ ಸಮ್ಮಾನ ಅಭಿಮಾನ ತುಂಬಿ ತುಳುಕುತಿದೆ‌ ಅಲ್ವಾ ಅದಕ್ಕೆ.         ಯಾಕೋ ಮುಂಗಾರು ನನಗೆ ಈ ಬಾರಿ ಮುದ ಕೊಡ್ತಿಲ್ಲ ? ಅಥವಾ ಅನುಭವಿಸಲಿಕ್ಕೆ ಮನಸ್ಸೇ ಆಗ್ತಿಲ್ಲವೋ ?.   ಪ್ರತಿ ಬಾರಿ ಮಳೆಯ ಪ್ರತಿ ಹನಿಯ ಅನುಭವವನ್ನ  ಅನುಭವಿಸೋಕೆ ನಾನೇ ಅವಕಾಶ  ಮಾಡಕೋತಿದ್ದೆ. ಆಗೆಲ್ಲ ಮನಸ್ಸು ನವಿಲಾಗತಿತ್ತು.ವಾವ್ಹ್ ! ಎಂಥ ಸೋಜಿಗದ ಮುದ ಇದು ಅಂತ ಮಳೆನಲ್ಲಿನೇ ಗಾಡಿಲಿ ಹೋಗ್ತಿದ್ದೆ.ಒಂದು ರೇಂಜಿಗೆ ಒದ್ದೆ ಆದ ಮೇಲೆ ಮತ್ತೇನೂಂತ, ಮಳೆನಲ್ಲಿ ನಿಲ್ಲದೇ ಗಾಡಿನಲ್ಲಿ ಹೋಗತ್ತಿದ್ದೆ. ಮನಸ್ಸಲಿ ನೀ ಬೆಚ್ಚಗಿರ್ತಿದ್ಯಲ್ಲ, ಒಂದು ರೀತಿ ಭಂಡ ಧೈರ್ಯ ನಂಗೆ. ಹಾಗೆ ಹೋಗುವಾಗ ತುಟಿ ಬಿಗಿಹಿಡಿದರು ಹನಿಗಳು ನನ್ನೊಡಲಿಗೆ ಕ್ಷಣಮಾತ್ರದಲ್ಲಿ ನೇರವಾಗಿ ಒಳಗೆ ಹೋಗಿರೋದು ಅಮೃತದಂತಹ ಮಳೆಹನಿಗಳು. ಅದನ್ನ ಸವಿತ ನಾನು ನನ್ನ ದ್ವಿಚಕ್ರವಾಹನ ಇಬ್ಬರು ಖುಷಿಯಾಗಿ ಅನುಭವಿಸ್ತಿದ್ವಿ.     ಪ್ರತಿ ಮಳೆಗಾಲಾನು ನೆನಪಿನ ಹೂರಣನೆ. ಎಲ್ಲ ಖುಷಿಯ ಕ್ಷಣಗಳು, ದುಃಖದ ಕರಿಮುಗಿಲು, ಎಲ್ಲ ಈ ಮುಂಗಾರಿನ ಮಳೆಹನಿಲಿ ಬೆರೆತು ಹೋಗ್ತಿತ್ತು  ಅರಿವಿಗೂ ಬಾರದ್ಹಾಂಗೆ.     ಯಾವಾಗಲೂ  ಈ ಮಳೆ ನಂಗೆ ನನ್ನ ಭಾವನೆಗೆ ಸಾಥ್ ಕೊಡ್ತಿತ್ತು.ಎಂಥ ಉತ್ಸಾಹಭರಿತವಾಗಿರತಿತ್ತು. ನಿನ್ನ ನೆನಪ ಕವನ ಕೂಡ, ಮಳೆಗಾಲ ಮುಗಿಯೋದ್ರೊಳಗೆ ಕಾವ್ಯವಾಗಿಬಿಡತಿತ್ತು.ಆ ನೆನಪುಗಳ ಕಚಗುಳಿಗೆ.ಪ್ರತಿ ಭಾರಿ ಅನ್ನಕೊಳ್ಳತಿದ್ದೆ ನಾನು ನೀನು ಈ ಮಳೆ ಜೊತೆ ಜೊತೆಯಲಿ ಇನ್ನುಳಿದೆಲ್ಲ ಮುಂಗಾರೂಂತ.   ಆದರೆ ಈಗ ಬರಿ ಆತಂಕ. ಗಾಡಿಲಿ ಹೋದ್ರು.ಮುಖಕ್ಕೆ ಮಾಸ್ಕ ಇರತ್ತೆ ಅನುಭವಿಸಲಾರದ್ಹಾಂಗ ಈ ಸೋನೆ ಮಳೆನಾ. ಮುಂಗಾರಿನ ಮೋಡದಾಟ ಕೂಡ ಈ ಭಾರಿ ನೋಡೋಕಾಗ್ತಿಲ್ಲ. ನೆಪಗಳಿಗೂ ಕ್ವಾರೆಂಟೈನ್ ಮುಂಗಾರಿನ ಸಂಗಡ ಆಡಲಿಕ್ಕೆ.  ಯಾಕೆಂದರೆ ಪಕ್ಕದ ಏರಿಯಾ ರವಿನಗರದಲ್ಲೇ ಕೊರೋನಾ ಪಾಸಿಟಿವ್ . ನಾವು ಸೀಲ್ ಡೌನ್.     ಬೈ ಛಾನ್ಸ ಇವತ್ತು ಮಾಸ್ಕ ಮರೆತು ಹೋದೆ .ಅರ್ಧ ದಾರಿ ಹೋದ ಮೇಲೆ ನೆನಪಾಯಿತು  ಮಾಸ್ಕ ಹಾಕದೆ ಇರೋದು ನಿಜದ ಆತಂಕ ಮನೆ ಮಾಡ್ತು. ಸೀದ ಕೆಲ್ಸ ಮುಗ್ಸಿ ಅಲ್ಲಿ ಇಲ್ಲಿ ನೋಡದೆ ಮತ್ತೆ ಗೂಡು ಸೇರಿದಾಯ್ತು ನಾನು ಮತ್ತು ನನ್ನ ಗಾಡಿ. ಮಳೆ ಇತ್ತು ಸಣ್ಣಗೆ, ಆದರೆ ಆರಾಧಿಸೋ ಮನಸ್ಸೇ ಇರಲಿಲ್ಲ.ಜೊತೆಗೆ ನೆನೆಪುಗಳು ಈಗ ನಿನ್ನ ಅಡಿಯಾಳಗಿರುವಾಗ , ಪುರುಸೊತ್ತಾದಾಗ ಮಾತ್ರ ನನ್ನ ಬಳಿ ಬರುವ ನೆಪ  ಅವಕ್ಕೆ. ಒಂದು ರೀತಿಲಿ ಅನಾಥ ಭಾವದಂಚು ತಾಗಿದೆ ಗೊತ್ತಾ.      ಇದೆಲ್ಲ ಮತ್ತೊಂದು ಮುಂಗಾರಿನವರೆಗೆ ಮುಂದುವರಿದೆ ಇದ್ರೆ ಸಾಕು . ಎಲ್ಲ ಮೊದಲಿನ ಸಹಜ ಬದುಕು ಮರಳಿ ನಿಲ್ಲಲಿ,  ಅನುವ ಹರಕೆ , ಹಾರೈಕೆ ಈ ಮಾಸ್ಕಿನ ಮುಂಗಾರು ಮಳೆಗೆ…   *********************************

ಲಹರಿ Read Post »

ಇತರೆ

ಶಿಶುಗೀತೆ

ಇರುವೆ ತೇಜಾವತಿ ಹೆಚ್.ಡಿ. ಇರುವೆ ಇರುವೆ ಎಲ್ಲಿರುವೆಎಲ್ಲಾ ಕಡೆಯಲು ನೀನಿರುವೆಶಿಸ್ತಿಗೆ ನೀನೇ ಹೆಸರಾಗಿರುವೆಹೆಚ್ಚಿನ ಭಾರವ ನೀನೊರುವೆ ಇರುವೆ ಇರುವೆ ಕೆಂಬಿರುವೆಕೋಪದಿ ಏಕೆ ನೀನಿರುವೆಅರಿಯದೆ ನಿನ್ನ ಮುಟ್ಟಿದರೆಚುರುಚುರು ಅಂತ ಕಚ್ಚಿರುವೆ ಇರುವೆ ಇರುವೆ ಕಟ್ಟಿರುವೆದಾರಿಲಿ ಏಕೆ ನಡೆದಿರುವೆಅರಿಯದೆ ಪಾದವ ಮೆಟ್ಟಿದರೆಸಾಲನು ಬಿಟ್ಟೇ ಚುಚ್ಚಿರುವೆ ಇರುವೆ ಇರುವೆ ಚಗಳಿರುವೆಕೊಟ್ಟೆಯ ಎಲ್ಲಿ ಕಟ್ಟಿರುವೆಚಟ್ನಿಗೆ ನೀನು ಚಂದಿರುವೆಮಲ್ನಾಡ ಸೀಮೆಲಿ ನೀನಿರುವೆ ಇರುವೆ ಇರುವೆ ಕಪ್ಪಿರುವೆತತ್ತಿಯ ಎಲ್ಲಿ ಬಿಟ್ಟಿರುವೆಬೆಲ್ಲವ ನೀನು ಮುತ್ತಿರುವೆಹಿಡಿಯ ಹೋದ್ರೆ ಬುಳುಗುಡುವೆ ***********

ಶಿಶುಗೀತೆ Read Post »

ಇತರೆ

ಲಹರಿ

ಮಳೆಗಾಲದ ಹಸಿ ಪ್ರೇಮಪತ್ರ… ಆಶಾಜಗದೀಶ್ ಯಾರೋ ಹುಡುಗ ಹೇಳಿದನಂತೆ ತನ್ನ ಹುಡುಗಿಗೆ, “ಹೋಗಿ ಮಳೆಯ ಹನಿಗಳನ್ನು ಎಣಿಸು.. ನಾ ನಿನ್ನನ್ನು ಅಷ್ಟು ಪ್ರೀತಿಸುತ್ತೇನೆ” ಎಂದು. ನನ್ನ ಅದೆಷ್ಟೋ ಸಂದರ್ಭಗಳ ಪ್ರೇಮದ ಉತ್ಕಟತೆಗೆ ಮಾತಾಗಿ ನಿಂತಿತ್ತು ಈ ಕಥೆ. ಏನೊಂದು ಹೇಳದೆಯೂ “ನನ್ನ ಪ್ರೀತಿ ಇದು” ಎಂದು ಹೇಳಿದ ಮೌನ ಮಾತಾಗಿತ್ತು ಈ ಕಥೆ. ಅರೆ… ಆ ಹೆದ್ದಾರಿಯ ಮಗ್ಗುಲ ಕಾಲುದಾರಿಯ ಪೊದೆಗೆ ಎಲ್ಲ ಗೊತ್ತಿದೆ. ನಾವು ಹೃದಯವನ್ನು  ಹಂಚಿಕೊಳ್ಳುತ್ತಾ ನಮ್ಮ ಆತ್ಮಗಳನ್ನು ಒಂದಾಗಿಸಿದ್ದನ್ನು ಕಂಡಿದೆ ಅದು. ನೋಯಿಸುವಷ್ಟು ತೀವ್ರ ಮಳೆಯಲ್ಲಿ ಕಂಗಾಲಾಗಿ ಅಳುತ್ತಾ ನಮ್ಮ ತೆಕ್ಕೆಗಳನ್ನು ಬಿಡಿಸಿಕೊಂಡು ಮನೆದಾರಿ ಹಿಡಿದಿದ್ದಕ್ಕೆ ಸಾಕ್ಷಿಯಾಗಿದೆ ಅದು. ಮತ್ತೆ ಒಂದಾಗುವ ತೀವ್ರ ಭಾವದಲ್ಲಿದ್ದೂ ಇನ್ನೊಂದೇ ಒಂದು ಹೆಜ್ಜೆಯನ್ನು ಬೇಕಂತಲೇ ಮರೆತು ನಡೆದದ್ದು ಅದರ ಮುಂದೆಯೇ. ನನ್ನ ಸಿಂಧೂರ ಹಣೆಯ ಮೇಲಿಂದ ಅತ್ತು ಇಳಿದದ್ದು ಇಂಥದೇ ಒಂದು ಹುಚ್ಚು ಮಳೆಯಲ್ಲಿ. ಹೇಳಲು ಮರೆತ ಮಾತೊಂದನ್ನು ಉಸುರಲು ನಿಂತ ಕಣ್ಣಂಚಿನ ಹನಿಯೊಂದನ್ನು ತೊಳೆದು ಅಳಿಸಿಬಿಟ್ಟಿದೆ ಈ ಮಳೆ. ಮತ್ತೆ ನಮ್ಮ ಕಣ್ಣುಗಳು ಆಡಿಕೊಳ್ಳುತ್ತಿದ್ದ ಮಾತುಗಳೆಷ್ಟೋ ಕೊಚ್ಚಿ ಹೋದದ್ದೂ ಇದೇ ಮಳೆಯಲ್ಲಿ… ಹಾಗಾಗಿ ಸುಮ್ಮನೇ ಮಳೆಯೊಂದರ ಮುಂದೆ ಕೂತು ಬಿಟ್ಟರೂ ಸಾಕು ನಿನ್ನ ಮಿಸುಗಾಟವೂ ನೆನಪಾಗತೊಡಗುತ್ತದೆ ನನಗೆ. ಮತ್ತೆ ಮಳೆಯೆನ್ನುವ ಮಾಯಾವಿಯ ಮುಂದೆ ಮಂಡಿಯೂರಿ ಸೆರಗೊಡ್ಡಿ ನಿನ್ನ ಪ್ರೇಮದ ತುಣುಕೊಂದನ್ನು ಬೇಡಿದ ಘಳಿಗೆ ಮತ್ತೆ ಮತ್ತೆ ನೆನಪ ಮೂಟೆ ಹೊತ್ತು ತರುವ ಮಹಾನ್ ಮಳೆರಾಯನ ಆಗಮನದಿಂದ ಮತ್ತೆ ಮತ್ತೆ ನವೀಕರಣಗೊಳ್ಳುತ್ತಾ ಬಂದಿದೆ… ಆದರೆ ನಮ್ಮ ನಿಲುವುಗಳು ಯಾವ ಗಟ್ಟಿ ಬುನಾದಿಯ ಮೇಲೆ ನಿಂತಿರುತ್ತವೋ, ಅವೇ ನಮ್ಮ ಬದುಕಿನ ದಿಕ್ಕನ್ನು ನಿರ್ಧರಿಸುತ್ತವೆ. ಅಂತಹ ಒಂದು ಗಟ್ಟಿ ನಿಲುವೇ ನಮ್ಮ ಆಯ್ಕೆಗಳ ವಿಷಯದಲ್ಲೂ ಕೆಲಸ ಮಾಡಿರುವುದು. ಪ್ರೀತಿಯೂ ತನ್ನ ನಿಲುವಿನ ಮೇಲೆ ತಾನು ನಿಲ್ಲುತ್ತದೆ. ಹೃದಯದ ಬುನಾದಿಯ ಮೇಲೆ ಸೌಧ ಕಟ್ಟುತ್ತದೆ. ಕೆಸರಿನಲ್ಲಿ ನಾಟಿದ ಭತ್ತದ ಸಸಿಯ ತಪಸ್ಸಿನಷ್ಟೇ ಘೋರ ತಪಸ್ಸೊಂದು ಪ್ರೇಮವನ್ನು ಇನ್ನಿಲ್ಲದಂತೆ ಪೊರೆಯುತ್ತಿರುತ್ತದೆ. ದೈಹಿಕ ಆಸೆಯೊಂದೇ ಇಷ್ಟು ದೂರ ಪೊರೆದು ನಡೆಸಲಿಕ್ಕೆ ಹೇಗಾದರೂ ಸಾಧ್ಯ!  ಜಗತ್ತನ್ನು ಎತ್ತಿ ನಿಲ್ಲಿಸಿರುವ, ಜೀವಿ ಜೀವಿಗಳ ಬೆಸೆವ ಪ್ರೇಮ, ಭೂಮಿಯನ್ನು ತಲುಪದೇ ಪೈರು ಪಚ್ಚೆಯಾಗುವುದಾದರೂ ಹೇಗೆ?! ಜೀವದ ಹಂಗು ತೊರೆದು ಹೆಣೆದ ಹೆಜ್ಜೆಗಳ ಸಾಲು, ಅವನ ಮನೆಯ ಕದ ತಟ್ಟಬೇಕಿದೆ. ಮನೆಯ ಕದದಷ್ಟೇ ಅವನ ಎದೆ ಕದವೂ ಕದಲುವುದನ್ನು ಕಂಡು ಹುಚ್ಚೆದ್ದು ಕುಣಿಯಬೇಕಿದೆ. ಕಾರ್ಮೋಡ ಕಂಡು ಗರಿ ಬಿಚ್ಚಿ ಕುಣಿವ ನವಿಲಿನಂತೆ. ಪ್ರತಿ ಗಂಡೂ ಭೂಮಿಯಂತೆ ಎದೆಸೆಟೆಸಿ ನಿಲ್ಲುತ್ತಾನೆ, ಕಣ್ಣೀರ ನುಂಗಿ ನಸು ನಗುತ್ತಾನೆ. ಪ್ರತಿ ಹೆಣ್ಣೂ ಮಳೆಯಂತೆ ನವಿರಾಗಿ, ಕೋಮಲವಾಗಿ ಸ್ಪರ್ಷಿಸುತ್ತಾಳೆ, ನೋವನ್ನು ಮರೆಸುತ್ತಾಳೆ, ಭೂಮಿಯುದರದಲ್ಲಿ ಜೀವದ ಫಲವಾಗಿ ಫಲಿಸುತ್ತಾಳೆ. ಇಳೆ ಮಳೆಯ ನಂಟು ತನ್ನ ಮಜಲುಗಳನ್ನು ಹಾಯುತ್ತಾ ಸಾಗುತ್ತಲೇ ಹೋಗುತ್ತದೆ. ಬಹುಶಃ ಇದರಿಂದಲೇ ಪ್ರೇಮವೆನ್ನುವುದು ಹುಟ್ಟಿದ್ದಿರಬೇಕು. ಬತ್ತದ ಪ್ರೇಮದ ತಿಳಿಕೊಳವೊಂದು ಪ್ರೇಮಿಗಳ ಉಡಿ ತುಂಬಿ ಕಳಿಸುತ್ತಿರಬೇಕು. ನಾವು ನಮ್ಮ ಕೈಗಳ ಮೇಲೆ ಅಚ್ಚೆ ಹೊಯ್ಸಿಕೊಳ್ಳುವಾಗಲೂ ಹೃದಕ್ಕಿಳಿಯುವ ಬಣ್ಣಕ್ಕಾಗಿ ಹುಚ್ಚು ಮಳೆಯಲ್ಲಿ ಹುಡುಕಾಡಿದ್ದೆವು. ಹುಡುಕಾಟದ ಕೊನೆಯಲ್ಲಿ ಬರಿಗೈ! ಕೊನೆಗೆ ಅರ್ಥವಾದ ಸತ್ಯವೆಂದರೆ ಅವು ಅಗೋಚರ ಬಣ್ಣಗಳು ಎಂದು. ಆದರೆ ಕಾಣುವ ಕಾಮನ ಬಿಲ್ಲಿನ ಚೂರುಗಳು ನಿನ್ನ ಕಾಮನೆಗಳ ಫಲ ಎನಿಸುವಾಗೆಲ್ಲ ನೀನು ನಡುರಸ್ತೆಯಲ್ಲಿ ಕೊಟ್ಟ ಮುತ್ತುಗಳ ಲೆಕ್ಕ ತಪ್ಪುತ್ತಲೇ ಇದೆ. ಮತ್ತೆ ಅವನ್ನೆಲ್ಲ ಈ ಹಸಿ ಮಣ್ಣಿನ ವಾಸನೆಯಲ್ಲಿ ಜೋಪಾನವಾಗಿ ಬಚ್ಚಿಟ್ಟಿದ್ದೇನೆ.  ಮತ್ತೆ ನಿನಗೆ ಗೊತ್ತಾ… ಮಳೆಗಾಲದ ಹಸಿ ನೆಲದಲ್ಲಿ ಇದ್ದಕ್ಕಿದ್ದಂತೆ ಎನ್ನುವ ಹಾಗೆ ಕಾಣಿಸಿಕೊಳ್ಳುವ ನಂಜುಳಗಳು ಆ ಮುತ್ತುಗಳ ಮೇಲೆಲ್ಲಾ ಪುಳುಪುಳು ಓಡಾಡುತ್ತಾ ಕಚಗುಳಿ ಇಡುತ್ತಿವೆಯಂತೆ. ನನಗೆ ಸುಮ್ಮಸುಮ್ಮನೇ ನಗು ಬರುತ್ತದೆ. ಯಾರನ್ನೂ ಕಣ್ಣಿಟ್ಟು ನೋಡಲಾಗದು. ದೃಷ್ಟಿ ನೆಲ ನೋಡುತ್ತದೆ. ಕಾಲ ಹೆಬ್ಬೆರಳ ರಂಗೋಲಿಯಲೂ ನಿನ್ನದೇ ಹೆಸರು. ಚಡಪಡಿಸುವ ಕೈಬೆರಳ ತುದಿಯಲ್ಲಿ ನನ್ನ ಕೂದಲೆಳೆ. ಹಗಲುಗನಸಿಗೆಳೆಸುವ ಕೆಂಪು ನಾಚಿಕೆ. ಹೇಳು ನೀನ್ಯಾರು? ಪ್ರೇಮವೆನ್ನುವುದು ಪ್ರಕೃತಿಗೆಷ್ಟು ಸಹಜವೋ ಅದರದೇ ಭಾಗವಾದ ನಮ್ಮಂತಹ ಹುಲು ಮಾನವರಿಗೂ ಸಹ. ಅದು ನೆನ್ನೆ ಇತ್ತು, ಇಂದು ಇದೆ, ಮತ್ತೆ   ನಾಳೆ ಇರುತ್ತದೆ. ಆದರೆ ಅದನ್ನು ಮೀರಿದವನು ನೀನು. ಹೇಳು ನೀನ್ಯಾರು? ಭಾಷೆಯೊಂದು ನಿನ್ನ ಮುಂದೆ  ಸೋತು ಶರಣಾಗುತ್ತಿದೆ. ಅದಕ್ಕೆ ನಿಲುಕುತ್ತಿಲ್ಲ ನೀನು. ಹೇಳೋ ಪ್ಲೀಸ್ ನೀನ್ಯಾರೋ??? ನಿನ್ನ ಅನಾಮಿಕತನವೂ ಆಪ್ಯಾಮಾನವಾಗಿದೆ. ಮತ್ತು ಸೋಲುವುದರ ರುಚಿ ಉಣಿಸುತ್ತಿದೆ. ಆದರೆ ನನಗೆ ಅಂದು ನೀನು ಬಯಲ ಏಕಾಂತದಲಿ ಮಳೆಯ ಹೊಡೆತಕ್ಕೆ ಎದೆಯೊಡ್ಡಿ ನಿಂತು, ನೀನು ನೀನಾಗಲ್ಲದೆ, ನಿನ್ನನ್ನು ಇಂಚಿಂಚೇ ಕಳೆದುಕೊಳ್ಳುತ್ತಾ ಅತ್ತದ್ದು ನೆನಪಾಗುತ್ತದೆ. ಖಾಲಿ ಇರುವ ನಿನ್ನ ಎದೆಯ ತೋರಿಸುತ್ತಾ ಅಲ್ಲಿ ನನ್ನನ್ನು ಆ ಕ್ಷಣವೇ  ಪ್ರತಿಷ್ಟಾಪಿಸಿ ಆವಾಹಿಸಿಕೊಳ್ಳುವ ನಿನ್ನ ಉಳಿವಿನ ತುರ್ತನ್ನು  ಅಳುವಿನ ಭಾಷೆಯಲ್ಲಿ ಹೇಳುತ್ತಿದ್ದುದ್ದನ್ನು ಕಂಡೂ ಅಸಹಾಕಳಾಗಿ ನಿಂತ ನನಗೆ, ಭೂಮಿ ಬಾಯ್ಬಿಡುವುದೇ ಸೂಕ್ತ ಎನಿಸಿತ್ತು. ಅವತ್ತು ನಾವಿಬ್ಬರೂ ಆಡಿದ್ದ ಮಾತುಗಳಷ್ಟೂ ಸತ್ತು ಹೋಗಿದ್ದವು. ಕಡು ವಿಷಾದ ಮಾತ್ರ ಹೆಪ್ಪುಗಟ್ಟಿತ್ತು. ಆದರೆ ಒಂದಾಗುವ ಸಮಯಕ್ಕೆ ಕಾಯುತ್ತಿದ್ದ ನಮ್ಮ ದಾರಿಗಳು, ಸಧ್ಯ ನಾವು ಮರಳಬೇಕಿರುವ ನಮ್ಮ ನಮ್ಮ ಪ್ರತ್ಯೇಕ ದಿಕ್ಕು ದಿಸೆಗಳನ್ನು ನೆನಪಿಸುತ್ತಿದ್ದವು. ನಾವಿಬ್ಬರೂ ಕ್ಷಣಗಳನ್ನು ಮುಂಗಾರಿನ ಹನಿಗಳಂತೆ ನಮ್ಮ ನಮ್ಮ ಬೊಗಸೆಯಲ್ಲಿ ತುಂಬಿಕೊಂಡು ವಿರುದ್ಧ ದಿಕ್ಕಿನಲ್ಲಿ ಹೊರಟುಹೋಗಿದ್ದೆವು. ಒಮ್ಮೆಯೂ ಹಿಂತಿರುಗಿ ನೋಡದೆ. ಆದರೆ ಬೆನ್ನುಗಳಲ್ಲಿ ಕಣ್ಣು ಮೂಡಿದ್ದು ಇಬ್ಬರಿಗೂ ತಿಳಿದಿದ್ದ ಆದರೆ ಒಬ್ಬರಿಂದೊಬ್ಬರು ಮುಚ್ಚಿಟ್ಟ ವಿಚಾರವಷ್ಟೇ… ಇದೆಲ್ಲವನ್ನೂ ನೆನೆಯುತ್ತ ಕೂತಿರುವ ನನ್ನ ಮುಂದೆ ಏನೊಂದೂ ಕಾಣಿಸದಷ್ಟು ಜೋರು ಸುರಿಯುತ್ತಿದೆ ಮಳೆ. ಮಳೆಯ ನೀಳ ಸಮತಲದ ಮೇಲೆ ನಿನ್ನ ಚಹರೆಯನ್ನೊಮ್ಮೆ ಹುಡುಕುತ್ತೇನೆ. ಕಾಣಿಸದಾಗ ಮಳೆಯ ಬಿರುಸಿನ ನಡುವೆ ನಿನ್ನ ಮುಖವನ್ನು ಕಾಣಲೇ ಬೇಕೆಂದು ರಚ್ಚೆ ಹಿಡಿಯಬೇಕೆನಿಸುತ್ತದೆ. ಹುಚ್ಚಿಯಂತೆ ಅಲೆಯುತ್ತಾ ಹೊರಟುಬಿಡಬೇಕು ಎನಿಸುತ್ತದೆ. ನೀನು ಸಿಕ್ಕಲ್ಲದೇ ಮರಳಲೇ ಬಾರದು ಎನಿಸುತ್ತದೆ. ಮಳೆಯ ಈ ದಿನಗಳು ಮುಗಿಯುವುದರೊಳಗಾಗಿ ನಾವಿಬ್ಬರೂ ಮತ್ತೆ ಯಾಕೆ ಎದುರು ಬದರಾಗಬಾರದು?! ತಬ್ಬಿ ನಿಲ್ಲಬಾರದು?! ಮತ್ತೆ ನಮ್ಮ ಹಾದಿಗಳನ್ನು ದಿಕ್ಕುಗಳನ್ನು ಏಕೆ ಒಂದಾಗಿಸಬಾರದು?! ನಮ್ಮನ್ನು ಸದಾ ಹಿಡಿದಿಡುವ ಸಾಂಗತ್ಯ, ಸಹಚರ್ಯವೊಂದನ್ನು ಮಳೆಯ ಹನಿಗಳಲ್ಲಿ ಏಕೆ ಹರಳುಗಟ್ಟಿಸಬಾರದು?! ಪರಿಣಾಮ ನಿನ್ನ ನಗು ಸಹಜವಾಗುತ್ತದೆ. ನನ್ನ ಒಂದೊಂದು ಸೆಕೆಂಡುಗಳ ಅರ್ಥ ಮರಳುತ್ತದೆ. ನಿನ್ನ ಎದೆ ಸಮಾಧಾನದ ಸಾಗರವಾಗುತ್ತದೆ. ನನ್ನ ಅಂತಃಕರಣ ಹಸಿಯಾಗುತ್ತದೆ. ಮುಂಗಾರು ಕಳೆಯುವುದರೊಳಗಾಗಿ ಅಲ್ಲೊಂದು ಪುಟ್ಟ ಹಾಲು ಗಲ್ಲದ ಸಸಿ ತಂದು ನೆಟ್ಟು ಅದರ ಬೆಳವಣಿಗೆಯಲ್ಲಿ ನಮ್ಮ ಪ್ರೇಮದ ಯಶೋಗಾಥೆ ಬರೆಯೋಣ. ಏನಂತಿ? ಅಲ್ಲ ಕಣೋ ಮಾರಾಯ್ನೇ… ಯಾವ ಬೇಲಿಯೂ ಶಾಶ್ವತವಲ್ಲ. ಬೇಲಿಯನ್ನು ದಾಟುವುದು ಸುಲಭವೂ ಅಲ್ಲ. ಆದರೆ ಪ್ರೇಮಕ್ಕೆ ಬೇಲಿ ಕಟ್ಟಲು ಹೊರಟವರು ಸೋಲಬೇಕಲ್ಲದೆ ಪ್ರೇಮವೆಂದಾದರೂ ಸೋಲುತ್ತದಾ? ಮತ್ತೆ ನಮ್ಮ ಪ್ರೇಮದ ಮುಂದೆ ಬೇಲಿಯೆನ್ನುವ ತೃಣಮಾತ್ರದ ಅಡೆತಡೆಗೆ ನಮ್ಮ ಓಟವನ್ನು ಕಟ್ಟಿಹಾಕುವ ಶಕ್ತಿ ಎಲ್ಲಿಂದಾದರೂ ಬರಬೇಕು?! ದೈಹಿಕ ನೋವಿಗೆ ನಮ್ಮನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಇಲ್ಲ. ನಾವು ಸಾಯುವ ಕೊನೆ ದಿನದವರೆಗೂ ಪ್ರತಿದಿನ ನನ್ನ ಪ್ರೀತಿಯಲ್ಲಿ ನೀನು, ನಿನ್ನ ಪ್ರೀತಿಯಲ್ಲಿ ನಾನು ಬೀಳುವಂಥವರು ಎನ್ನುವುದನ್ನು ಯಾರಿಗಾದಗೂ ಋಜುವಾತು ಮಾಡಿ ತೋರಿಸಬೇಕಿಲ್ಲ. ಜಗತ್ತಿನ ಮುಂದೆ ಅದು ಬಂದು ನಿಂತಾಗ ಯಾರಿಗೇ ಆಗಲಿ ನಂಬದೆ ವಿಧಿ ಇರುವುದಿಲ್ಲ. ಇಂದು… ಈಗ… ಈಗಲೇ… ನಾ ನಿನ್ನ ಮುಂದೆ ಬಂದು ನಿಲ್ಲುತ್ತೇನೆ. ನಿನ್ನ ಬೊಗಸೆಯಲ್ಲಿ ನನ್ನನ್ನು ತೆಗೆದುಕೋ. ಒಂದು ಕ್ಷಣ ತುಂಬಿದ ಕಂಗಳಿಂದ ದಿಟ್ಟಿಸುತ್ತಾ ಮೆಲ್ಲಗೆ ಬೊಗಸೆಯನ್ನು ಮೇಲೆತ್ತಿ, ತುಟಿಗೆ ಸೋಕಿಸಿ, ಒಮ್ಮೆ ಮೆಲುವಾಗಿ ಚುಂಬಿಸಿ, ಬಿಗಿಯಾಗಿ ಕಣ್ಮುಚ್ಚಿ, ಕುಡಿದುಬಿಡು. ಕಪೋಲಗಳ ದಾಟಿ ಕತ್ತಿನ ಗುಂಟ ಹರಿದು ಹೃದಯದ ಮಡುವಿಗೆ ಜಾರಿದ ಕಣ್ಣೀರ ಹನಿಯೊಂದು ನಿನ್ನ ಎದೆಬಡಿತವಾಗಲಿ. ಮತ್ತದರ ಶಬ್ಧ ನನ್ನ ಹೆಸರಾಗಲಿ… ಇದೋ ಬಂದೆ… ನಿನ್ನವಳು ನಿನ್ನವಳು ಮಾತ್ರ… *********

ಲಹರಿ Read Post »

ಇತರೆ

ಲಹರಿ

ಒಂದು ಪತ್ರ ಜಯಶ್ರೀ ಜೆ.ಅಬ್ಬಿಗೇರಿ ಕಾಲೇಜಿನಂಗಳದಿ ಕಾಲಿಟ್ಟ ದಿನದಂದೇ ನೀ ಕಣ್ಣಿಗೆ ಬಿದ್ದೆ. ಸುರಿವ ಸೋನೆ ಮಳೆಗೆ ಹಾಡೊಂದ ಗುಣುಗುಣಿಸುತ ಕಣ್ಮುಂದೆ ನಿಂದೆ. ತುಸುವೇ ತುಸು ದೂರದ ರಸ್ತೆಯಂಚಿನಲ್ಲಿ ನಿಂತು ಹರಿವ ಸಿಹಿ ಝರಿಯಂತೆ ನನ್ನೆಡೆ ಕಣ್ಣೋಟ ಹರಿಸಿದೆ. ಬೀಸುವ ತಂಗಾಳಿಯ ಜತೆ ನಿನ್ನ ಮೈಯ ಸುಗಂಧ ತೇಲಿ ಬಂದು ನನ್ನ ಮೈಯ ಸವರಿದಂತೆನಿಸಿ ನಿಂತಲ್ಲೇ ಒಮ್ಮೆ ನಡುಗಿದೆ.ಒಮ್ಮಿಂದೊಮ್ಮೆಲೇ ಬೀಸಿದ ಜೋರಾದ ಗಾಳಿಗೆ ಬಲು ದೂರದ ತನಕ ಹಾರಿದ ನಿನ್ನೆದೆಯ ಅಂದದ ಆಕಾರ ಮುಚ್ಚಿದ್ದ ದುಪ್ಪಟ್ಟಾ ತಂದು ಕೈಗಿತ್ತೆ.ಕೋಮಲವಾದ ನಿನ್ನ ಬೆರಳುಗಳಿಗೆ ಬೆರಳು ಸೋಕಿ ಪುಳಕಗೊಂಡೆ. ಆ ಹೊಸ ಸ್ಪರ್ಷ ಪ್ರೇಮ ಲೋಕವೊಂದನ್ನು ತೆರೆದಂತಿತ್ತು. ಬಾನಂಗಳದಿ ನೇಸರ ಕಂಗೊಳಿಸುತ್ತ ಇಳಿಯುತ್ತಿದ್ದ. ಸದ್ದಿಲ್ಲದೇ ನೀ ನನ್ನೆದೆಗೆ ಇಳಿಯುತ್ತಿದ್ದೆ. ನೋಟದಲ್ಲಿ ನೋಟ ಬೆರೆಸಿ ಸ್ವಲ್ಪ ದೂರ ನನ್ನೊಡನೆ ನಡೆದು ಬಂದೆ ನೀನು, ನನ್ನೊಡನೆ ಒಂದಾಗಿ ಹೋದಂತೆ ಅನಿಸಿತು. ಇಬ್ಬರೂ ಜೊತೆಗೂಡಿ ರಸ್ತೆ ಬದಿಯಲಿರುವ ಜರ್ಝರಿತವಾದ ಬಂಡೆಗಲ್ಲಿನ ಮೇಲೆ ಕೂತು ಸೂರ್ಯಾಸ್ತ ಸವಿದೆವು.ಕ್ರಮೇಣ ಮಳೆ ನಿಂತಿತು. ಕತ್ತಲೆಯಾಯಿತು.ಮರದಡಿ ನಿಂತವರೆಲ್ಲ ಮನೆಗೆ ಮರಳಿದರು. ಯಾರೋ ನೀನು ಯಾರೋ ನಾನು ಆದರೂ ಕಣ್ಣಲ್ಲೇ ಮಾತನಾಡಿ ಮನದಲ್ಲೇ ಒಂದಾಗಿದ್ದೆವು. ನೋಡು ನೋಡುವಷ್ಟರಲ್ಲಿ ನನ್ನ ಹೃದಯ ಇದ್ದ ಜಾಗದಲ್ಲಿರಲಿಲ್ಲ. ಮರುದಿನ ನಿನ್ನ ವಿಳಾಸ ಹುಡುಕುತ ಗಲ್ಲಿ ಗಲ್ಲಿಗಳನು ದಾಟಿ ನೀನಿದ್ದ ಗಲ್ಲಿ ಹುಡುಕಿದ್ದಾಯಿತು. ದಿನೇ ದಿನೇ ನಿನ್ನ ಮನೆ ಹತ್ತಿರ ಬಂದು ನಿನ್ನ ಮನಸ್ಸಿಗೆ ಹತ್ತಿರವಾದದ್ದೂ ಆಯಿತು. ಪದೇ ಪದೇ ಭೇಟಿಯಾದ್ದರಿಂದ ಸ್ನೇಹ ಪ್ರೀತಿಗೆ ತಿರುಗಿದ್ದೂ ಆಯಿತು.ನಿನ್ನೆ ಮೊನ್ನೆಯವರೆಗೂ ಯಾರೂ ಹೀಗೆ ನನ್ನ ಕಾಡಿರಲಿಲ್ಲ. ಕೂತಲ್ಲೂ ನಿಂತಲ್ಲೂ ನಿನ್ನದೇ ಗುಂಗು.ಒಲವಿನ ರಂಗು ಏನೇನೋ ಆಗ್ತಿದೆ.ನನ್ನ ಸ್ಥಿತಿ ಸವಿ ಬೆಲ್ಲ ತಿಂದ ಮೂಗನ ಸ್ಥಿತಿಯಂತಾಗಿತ್ತು. ಹೇಳಲೂ ಆಗ್ತಿಲ್ಲ ಬಿಡಲೂ ಆಗ್ತಿಲ್ಲ. ಹಿಂದೆಂದೂ ಹೀಗೇನೂ ಆಗಿರಲಿಲ್ಲ. ಮನಸಾರೆ ನಿನಗೆ ಮನಸೋಲುವ ಮನಸಾಗಿತ್ತು. ಅಚ್ಚರಿಯೆನಿಸಿದರೂ ನಿಜ ಕಣೆ. ನೀ ಬರೋ ದಾರಿಯ ಕಾಯುತ ಕುಳಿತು ಕೊಳ್ಳುವುದರಲ್ಲಿಯೂ ಅದೇನೋ ಆನಂದವಿತ್ತು. ನಿನ್ನ ನನ್ನ ಹೆಸರನು ಕೂಡಿಸಿ ಕೂಡಿಸಿ ಬರೆಯುವುದರಲ್ಲಿಯೂ, ಮೆಲ್ಲಗೆ ನಿನ್ನ ಹೆಸರು ಕರೆಯುವುದರಲ್ಲಿಯೂ ಹೇಳ ತೀರದ ಸಂತಸವಿತ್ತು.ಕಣ್ಮುಚ್ಚಿದರೂ ನೀನೇ ತೆರೆದರೂ ನೀನೇ. ನೋಡುವ ಎಲ್ಲ ಹುಡುಗಿಯರಲ್ಲೂ ನಿನ್ನನ್ನೇ ಕಾಣತೊಡಗಿದೆ. ರಾತ್ರಿ ಕನಸುಗಳ ಮಳಿಗೆಯಲ್ಲಿ ಭರಾಟೆಯೂ ನಿನ್ನದೇ.ನೀ ಸನಿಹವಿದ್ದರೆ ಸಾಕು ಹಸಿವಿಲ್ಲ. ನೀರು ನಿದಿರೆ ಬೇಕಿಲ್ಲ. ಇದೆಲ್ಲವೂ ನನಗೆ ಹೊಸತು ಹೊಸತು ಅನುಭವ. ಎಂತೆಂಥ ಚೆಲುವು ಕಣ್ಮುಂದೆ ಸುಳಿದರೂ ಒಲವು ಚಿಗುರಿಕೊಂಡಿರಲಿಲ್ಲ. ನಿನ್ನ ಮೊದಲ ಸಲ ಕಂಡಾಗಲೇ ಮನಸ್ಸು,ಕಣ್ಣು ರೆಪ್ಪೆಯಲ್ಲಿ ಭದ್ರವಾಗಿ ಮುಚ್ಚಿಡಲು ತುಸು ನಾಚುತ್ತಲೇ ಹೇಳಿತ್ತು. ಅಂದಿನಿಂದ ಮನದ ಹಾಡಿಗೆಲ್ಲ ನಿನ್ನುಸಿರೇ ರಾಗವಾಗಿತ್ತು.ರಾಣಿಯಾದೆ ನೀ ನನ್ನೆದೆಗೆ. ನನ್ನೆದೆಗೆ ನಿನ್ನೆದೆ ತಾಕುವ ಸಮಯ ಅದಾವಾಗ ಕೂಡಿ ಬರುವುದೋ ಎಂದು ಮನಸ್ಸು ಲೆಕ್ಕ ಹಾಕುವಾಗ ದೇಹವೆಲ್ಲ ಸಣ್ಣಗೆ ಕಂಪಿಸಿದ ಅನುಭವಹರೆಯದ ಎದೆಯ ಇಣುಕಿ ಹೊರೆಯ ಇಳಿಸುವ ಕಲೆ ನೀನು ಅದ್ಯಾವ ಪಾಠಶಾಲೆಯಿಂದ ಕಲಿತಿಯೋ ಗೊತ್ತಿಲ್ಲ. ಕಾರ್ಮೋಡ ಹೊತ್ತ ಮುಗಿಲಿಗಿಂತ ಮಿಗಿಲು ನಿನ್ನ ಅಮಲು. ಒಂದೇ ಒಂದು ನಿಮಿಷ ನೀ ದೂರವಾದರೂ ತಡೆದುಕೊಳ್ಳುತ್ತಿರಲಿಲ್ಲ ಹೃದಯ. ದೂರವಿರುವ ನಿನ್ನ ಹೃದಯಕ್ಕೆ ದೂರವಾಣಿಯಿಂದ ದೂರನ್ನು ಸಲ್ಲಿಸುತ್ತಿತ್ತು.ಆಗ ನೀನು ತಡ ಮಾಡದೇ ಕಣ್ಣೆದುರಲ್ಲಿ ಹಾಜರಿ ಹಾಕುತ್ತಿದ್ದೆ ಕಳ್ಳ ನೋಟದಲ್ಲಿ. ಮನೆಯಂಗಳದಲ್ಲಿ ರಂಗೋಲಿ ಬಿಡಿಸುವಾಗ ನನ್ನತ್ತ ಒಲವ ಮಿಡಿವ ನಿನ್ನ ಬಟ್ಟಲುಗಣ್ಣು ಕಂಡು ಮೈ ಮರೆತು ನಿಂತು ಬಿಡುತ್ತಿದ್ದೆ. ನಿನ್ನ ಬೆನ್ನ ಹಿಂದೆ ನಿಂತು, ತುಂಬಾ ಮುದ್ದು ಉಕ್ಕಿ ಬಂದು ತೋಳಲ್ಲಿ ಬಳಸಿ ಕೆಂಪು ಕೆನ್ನೆ ಹಿಂಡಿ ಮತ್ತುಷ್ಟು ಕೆಂಪು ಮಾಡಲು ಕಾದು ನಿಂತು ಬಿಡುತ್ತಿದ್ದೆ. ಕದ್ದು ನೋಡುವ ಕಣ್ಣಿಗೆ ಜೇನ ಹನಿ ಸವರುವ ಆಸೆ ಹೊತ್ತು ಸುಮಾರು ಹೊತ್ತು ಕಾಯುತ್ತಿದ್ದೆ. ನಿನ್ನಿಂದ ನೀನೇ ನನ್ನ ಕಾಪಾಡ ಬೇಕು ಇಲ್ಲದಿರೆ ನನಗೆ ಉಳಿಗಾಲವಿಲ್ಲ ಎಂದು ಮನಸ್ಸಲ್ಲೇ ನಿನ್ನ ಬೇಡುತ್ತಿದ್ದೆ. ಹಗಲುಗನಸಿನಲ್ಲಿ ನಾ ಮುಳುಗಿರುವಾಗ ಚೆಂದದೊಂದು ಮುಗುಳುನಗೆ ಚೆಲ್ಲಿ ನೀ ಮಾಯವಾಗಿರುತ್ತಿದ್ದೆ. ಇದು ಪ್ರತಿ ಅರುಣೋದಯದ ಪ್ರೀತಿ. ಕತ್ತಲ ರಾತ್ರಿಯ ಮರೆಸುವ ಚಂದಿರನಂತೆ ನನ್ನೆಲ್ಲ ನೋವ ಮರೆಸಿ ಬದುಕು ಚೆಂದಗಾಣಿಸಿದ ಅಧಿದೇವತೆ.ನಿನಗೆ ನನ್ನದೇನು ಕಾಣಿಕೆ? ಎಂದೆಲ್ಲ ಯೋಚಿಸಿದಾಗೆಲ್ಲ ನಿನ್ನ ಮರೆತ ಮರುಕ್ಷಣವೇ ನಾನಿಲ್ಲ ಎಂದು ಉಸುರುತ್ತಿತ್ತು ಮನವೆಲ್ಲ.ಈಗೀಗ ಹೊಸದೊಂದು ಜನುಮ ಪಡೆದಂಥ ಖುಷಿ ಈ ಪ್ರಾಣ ನಿನ್ನ ಹೆಸರಲ್ಲೇ ಇದೆ. ಈ ದೇಹವೂ ನಿನ್ನದೇ ಕೈ ವಶ. ಪ್ರಾಣ ಹೋದರೂನೂ ನಾ ನಿನ್ನವನು ನೀ ನನ್ನವಳು ಎಂಬುವದಂತೂ ನೂರಕ್ಕೆ ನೂರು ನಿಜ. ನೀನೇ ಬೇಕೆನ್ನುವ ಪ್ರಾಯದ ಒಳಗಾಯ ಮಾಯ ಮಾಡುವ ಮುದ್ದಿನ ಮದ್ದು ನಿನ್ನ ಅಧರದ ಅಂಚಿನಲ್ಲಿ ಬಿಟ್ಟರೆ ಬೇರೆಲ್ಲೂ ಇಲ್ಲ. ನಿನ್ನ ಸಹವಾಸದಲ್ಲಿರುವಾಗ ಸಾವು ಬಂದರೂನೂ ನಿಮಿಷ ಕಾಯದೇ ಹರುಷದಿಂದಲೇ ಅಪ್ಪಿಕೊಂಡು ಬಿಡುವೆ. ಆದರೆ ಕೇಳದಿರು ಇಸಿದುಕೊಂಡ ಹೃದಯವನ್ನು. ಒಲವಲಿ ಒಮ್ಮೆ ಕಸಿ ಮಾಡಿದ ಹೃದಯವನು ಮರಳಿಸು ಅಂದರೆ ಜೀವ ಹಿಂಡಿದಂತಾಗುತ್ತೆ. ಜಾತಿಯ ಹೆಸರಲಿ ನಾವಿಬ್ಬರೂ ಬೇರೆಯಾಗಿ ಬಾಳದೇ ದಾರಿಯಿಲ್ಲ ಅಂದ ನಿನ್ನಣ್ಣ. ಬೀಸುವ ಗಾಳಿಗೆ, ದಾಹ ನೀಗುವ ಗಂಗೆಗೆ, ಬೆಳಕನೀವ ನೇಸರನಿಗೆ ಜಾತಿಯ ಹಂಗಿಲ್ಲ. ಒಲವ ಹಂಚಿಕೊಳ್ಳುವ ಒಲವಿನ ಹೂಗಳಿಗೆ ಅಡ್ಡಲಾಗಿ ಜಾತಿಯ ಮುಳ್ಳುಗಳೇಕೆ? ಮೇಲು ಕೀಳಿಲ್ಲ ಒಲವಿಗೆ. ವಿಶ್ವವೇ ಮಂದಿರ ಒಲವಿನೊಲವಿಗೆ.ಜಾತಿಯ ಬಿಸಾಕಿ ಬಂದು ಬಿಡು ನನ್ನೆಡೆಗೆ. ಐದಂಕಿಯ ಸಂಬಳದಲಿ ಅರಗಿಣಿಯಂತೆ ಸಾಕಿ ಸಲುಹುವೆ.ಕೂಡಿ ಬಾಳೋಣ ನನ್ನವ್ವ ಅಪ್ಪನೊಂದಿಗೆ.ಸರ ಸರ ಸರಸಕೆ ಸಲ್ಲಾಪಕೆ ಬರುವೆ ನಿನ್ನ ಹತ್ತಿರವೆ. ಅವಸರವೇ ಅಪಘಾತಕ್ಕೆ ಕಾರಣವೆನ್ನುತ ನೀ ದೂರ ತಳ್ಳುವೆ.ತಡ ಮಾಡದೇ ಹ್ಞೂಂ ಅನ್ನು ಜೊತೆಗಾತಿಯಾಗಲು. ಸಂದೇಹ ಬೇಡ ಇನ್ನು ಬದುಕೆಲ್ಲ ರಾಣಿಯಂತೆ ಹಾಯಾಗಿ ಬಾಳುವೆ ಸೊಗಸಾಗಿ.ನನ್ನ ಜೊತೆಯಾಗಿ. ಒಳಗೊಳಗೆ ಮನವು ಕಾಡುತಿದೆ. ಮನ ಬಿಚ್ಚಿ ಹೇಳಿ ಬಿಡು ಒಮ್ಮೆ ಮನದಾಸೆಯ ಮನವು ಕೇಳುತಿದೆ. ನಿನ್ನ ತನುವ ಬೇಡುತಿದೆ.ಗಂಟೆಯ ಲೆಕ್ಕವಿಲ್ಲದೆ ಗಂಟೆಗಟ್ಟಲೇ ನಿನ್ನದೇ ಮಾತು ಕತೆ ಗೆಳೆಯರ ಮುಂದೆ. ಇಳಿ ಬಿಟ್ಟ ನಿನ್ನ ನಾಗರ ಹಾವಿನ ಜಡೆಗೆ ತಣ್ಣನೆ ಬೆಳದಿಂಗಳಲಿ ಹೂ ಮುಡಿಸುವಾಸೆ. ತೋರ ಬೆರಳ ತುದಿ ಸಾಕು ನಂಗೆ ನಿನ್ನೊಲವಿನ ಗುಂಗು ಹಿಡಿಸೋಕೆ. ಚಳಿ ತಡೆಯಲಾಗುತ್ತಿಲ್ಲ ಚೆಲುವೆ. ಹೊದ್ದ ಹೊದಿಕೆ ಸರಿಸಿ ನುಗ್ಗಿ ಬಿಡು ಒಳಗೆ. ಹೊದಿಕೆ ಹೊಂದಿಸಿಕೊಳ್ಳುತ್ತೆ ನಿನ್ನ ನನ್ನೊಳಗೆ. ಸತಾಯಿಸದೇ ಬಂದು ಬಿಡು ಬೇಗ.ಕಾಯುತಿರುವೆ ನಿನಗಾಗಿ ಜರ್ಝರಿತ ಬಂಡೆಗಲ್ಲಿನ ಮೇಲೆ ಕೂತು ಅರಿಷಿಣ ಕೊಂಬಿನ ದಾರ ಹಿಡಿದು. ಹೆದರದಿರು ಗೆಳತಿ ಬಿಡದಂತೆ ನಾ ಹಿಡಿವೆ ನಿನ್ನ ಕೈಯನು! ಚೆಲುವೆ ಚೆಲ್ಲುವೆ ಹಿಡಿ ಒಲವನು!!ಇತಿನಿನ್ನೊಲವಿನ ಚೆಲುವ

ಲಹರಿ Read Post »

You cannot copy content of this page

Scroll to Top