ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಹಾಸ್ಯ

ಮದಿರಾ ಪ್ರಿಯರ ಹಳವಂಡಗಳು ಗೌರಿ.ಚಂದ್ರಕೇಸರಿ      ಸಾವಿನಂತಹ ಘೋರಾತಿ ಘೋರ ಪರಿಸ್ಥಿತಿಯಲ್ಲೂ ತಮಾಷೆಗಳನ್ನು ಹುಟ್ಟು ಹಾಕಬಲ್ಲಂತಹ ಎದೆಗಾರಿಕೆ, ಹಾಸ್ಯ ಪ್ರಜ್ಞೆ ಇರುವುದು ನಮ್ಮ ಜನರಿಗೇನೇ ಎಂಬುದು ನನ್ನ ಅಭಿಪ್ರಾಯ. ಕಳೆದ ವರ್ಷ ಬಂದು ಹೋದ ಜಲ ಪ್ರಳಯ, ಈಗಿನ ಕೊರೋನಾದ ಬಗ್ಗೆ ದಿನಕ್ಕೆ ನೂರಾರು ಟಿಕ್ ಟಾಕ್, ಟ್ರೋಲುಗಳು ಬಂದು ಬೀಳುತ್ತವೆ ಮುಖ ಪುಸ್ತಕ, ವಾಟ್ಸಾಪ್ನಲ್ಲಿ. ನೊಂದು ಬೆಂದ ಮನಸುಗಳಿಗೆ ಇವುಗಳಿಂದ ಸ್ವಲ್ಪವಾದರೂ ಉಪಶಮನ ದೊರೆಯುವುದಂತೂ ಹೌದು.      ಕೊರೋನಾದ ರುದ್ರ ತಾಂಡವಕ್ಕೆ ಕಡಿವಾಣ ಹಾಕಲು ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆಯೇ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹಳವಂಡಗಳು ಆರಂಭವಾದವು. ದಿನವಿಡೀ ಅಡುಗೆ ಮನೆಯಲ್ಲೇ ಬೇಯಿಸುತ್ತ, ತಾವೂ ಬೇಯುವ ಸಂಕಟ ಹೆಂಗಸರಿಗೆ. ಬೆಳಗಾಗುತ್ತಿದ್ದಂತೆಯೇ ಮನೆಯಿಂದ ಕಾಲ್ಕಿತ್ತು ಹುಡುಗಿಯರ ಕಾಲೇಜಿನತ್ತ ಠಳಾಯಿಸುತ್ತಿದ್ದ ಹುಡುಗರಿಗೆ  ಕ್ಷಣವೊಂದು ಯುಗವಾಗಿ ಹೋದಂತಾಗಿತ್ತು. ಅಲ್ಪ ಸ್ವಲ್ಪ ಅನುಕೂಲವಾಗಿರುವುದು ಮಕ್ಕಳಿಗೆ. ಕಣ್ಣಿ ಬಿಚ್ಚಿದ ಕರುಗಳಂತಾಗಿ ಹೋಗಿವೆ ಮಕ್ಕಳು. ಆದರೆ ಈ ಗಂಡಸರು ಮಾತ್ರ ಜೀವನದಲ್ಲಿ ಏನನ್ನೋ ಕಳೆದುಕೊಂಡವರಂತೆ ಜಿಗುಪ್ಸೆಗೆ ಒಳಗಾಗಿದ್ದರೆಂಬುದು ನಮ್ಮ ಹೆಂಗಸರ ಅಂಬೋಣ. ಲಾಕ್ ಡೌನ್ ಜೊತೆ ಜೊತೆಗೆ ಮದ್ಯದಂಗಡಿಗಳಿಗೂ ಬೀಗ ಬಿದ್ದಾಗ ಗಂಡಸರೆಲ್ಲ ಅಕ್ಷರಶ: ಹತಾಶರಾಗಿ ಹೋಗಿದ್ದರು. ಮದಿರಾ ಪ್ರಿಯರ ಸ್ಥಿತಿಯನ್ನು ನೆನೆದರೆ ಕರುಳು ಹಿಂಡಿದಂತಾಗುತ್ತಿದೆ. ಬಡವ ಬಲ್ಲಿದರೆನ್ನದೇ ಮದಿರೆಯೊಂದೇ ತಮ್ಮ ಜೀವನದ ಥ್ರಿಲ್ ಎಂದುಕೊಂಡವರಿಗೆ ಜೀವನವೇ ನೀರಸವಾಗಿ ಹೋಗಿತ್ತು. ಈ ಕೊರೋನಾ ಎನ್ನುವ ಹೆಮ್ಮಾರಿಗೆ ಶಾಪ ಹಾಕುತ್ತಿರುವ ನಾಲಿಗೆಗಳೆಷ್ಟೋ, ಮದಿರೆಯ ಸರಬರಾಜನ್ನು ಮುಂದೂಡುತ್ತಾ ಹೋದ ಸರ್ಕಾರವನ್ನು ತೆಗಳಿದವರೆಷ್ಟೋ ಬಲ್ಲವರಾರು? ಇಂಥ ಪರಿಸ್ಥಿತಿಯನ್ನು ಹಿಂದೆಂದೂ ಕಂಡಿರದ ಹನಿ ನೀರಾವರಿ ಮಾಡುವವರು ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟಿದ್ದರು. ನಿತ್ಯ ಬರುವ ವಾರ್ತೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಎಣ್ಣೆ ಅಂಗಡಿಗಳೇನಾದರೂ ಬಾಗಿಲು ತೆರೆಯುವ ವಿಚಾರವನ್ನು ಹೇಳುತ್ತಾರೇನೋ ಎಂದು ಬಕ ಪಕ್ಷಿಗಳಂತೆ ಕಾಯುತ್ತಿದ್ದರು. ಆದರೆ ಎಣ್ಣೆ ಅಂಗಡಿಗಳಿಗೂ ಲಾಕ್ ಡೌನ್ ಎಂದು ಗೆರೆ ಕೊರೆದಂತೆ ಹೇಳಿದಾಗ ಮದಿರಾ ಪ್ರಿಯರ ಅಂತರಂಗದ ಅಳಲು ಏನೆಂಬುದು ಅವರಿಗಷ್ಟೇ ಗೊತ್ತು.      ಲಾಕ್‌ಡೌನ್ ಸಮಯದಲ್ಲಿ ಒಮ್ಮೆ ಹೀಗೇ ಆಯಿತು. ಹಿಂದಿನ ವಠಾರದಲ್ಲಿ ಗಲಾಟೆಯಾಗುತ್ತಿತ್ತು. ಕುತೂಹಲಕ್ಕೆಂದು ಹೋಗಿ ನೋಡಿದಾಗ ವ್ಯಕ್ತಿಯೊಬ್ಬನನ್ನು ನಾಲ್ಕು ಜನರು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಆ ವ್ಯಕ್ತಿಯ ಮೇಲೆ ಬಂದಿರುವುದು ದೇವರೋ, ದೆವ್ವವೋ ಎಂದು ಪ್ರಶ್ನಿಸಲಾಗಿ ಅವನಿಗೆ ಬಡಿದುಕೊಂಡಿರುವುದು ಬಾಟಲಿಯ ದಯ್ಯ ಎಂದು ತಿಳಿದಿತ್ತು. ಪ್ರತಿನಿತ್ಯ ವಾರ್ತೆಗಳನ್ನು ನೋಡುವಾಗ ಕೈಯ್ಯಲ್ಲೊಂದು ಹಗ್ಗವನ್ನು ಹಿಡಿದುಕೊಳ್ಳುವುದು, ವಾರ್ತಾ ವಾಚಕರು ಇನ್ನೂ ಒಂದು ವಾರ ಎಣ್ಣೆ ಅಂಗಡಿಗಳಿಗೆ ಬೀಗ ಎನ್ನುತ್ತಲೇ ಇವನು ಹಗ್ಗವನ್ನು ಹಿಡಿದುಕೊಂಡು ನೇಣು ಬಿಗಿದುಕೊಳ್ಳಲು ಕೋಣೆಗೆ ಓಡುವುದು. ಮನೆಯವರೆಲ್ಲ ಓಡಿ ಹೋಗಿ ಅವನನ್ನು ಹಿಡಿದುಕೊಳ್ಳುವುದು. ಮದಿರೆ ಇಷ್ಟೊಂದು ಅನಿವಾರ್ಯವೆ ಮನುಷ್ಯನಿಗೆ ಎನ್ನಿಸಿತು. ಪ್ರಿಯತಮ/ಮೆ ಕೈ ಕೊಟ್ಟಾಗಲೋ ಸಾಲದ ಶೂಲ ಇರಿಯುವಾಗಲೋ ಆತ್ಮಹತ್ಯೆಗೆ ಮೊರೆ ಹೋಗುತ್ತಾರೆಂದರೆ ಇರಬಹುದೇನೋ ಎಂದು ಅಂದುಕೊಳ್ಳುಬಹುದು. ಆದರೆ ಯಕಶ್ಚಿತ್ತ್ ಒಂದು ಕಾಲು ಲೋಟದಷ್ಟು ಕಹಿ ಒಗರಿನ, ಗಂಟಲಲ್ಲಿ ಕೊಳ್ಳಿಯನ್ನು ಇಟ್ಟಂತಾಗುವ ದ್ರವಕ್ಕೋಸ್ಕರ ಜೀವನವನ್ನೇ ಕಳೆದುಕೊಳ್ಳಲು ಮುಂದಾಗುವುದಾ? ಎಂದುಕೊಂಡಿದ್ದೆ.      ಇನ್ನು ಕೆಲ ಮದಿರಾ ಭಕ್ತರು ಒಂದು ಹೆಜ್ಜೆ ಮುಂದೆ ಹೋಗಿ ಎಣ್ಣೆಯಂಗಡಿಗಳಿಗೇ ಕನ್ನ ಕೊರೆದರು. ಅಂದರೆ ಮದಿರಾ ಪ್ರಿಯಾಣಾಂ ನ ಲಜ್ಜಾ ನ ಭಯಂ ಅನ್ನಬಹುದೇನೋ. ಕೆಲ ಹೆಣ್ಣು ಮಕ್ಕಳೂ ಇದಕ್ಕೆ ಹೊರತಾಗಿಲ್ಲವೇನೋ. ಇಂಥ ಬಿಗಿ ಪರಿಸ್ಥಿತಿಯಲ್ಲೂ ಇಬ್ಬರು ಹುಡುಗಿಯರು ಹೇಗೋ ಎಣ್ಣೆಯನ್ನು ಹೊಂಚಿಕೊಂಡು ಪೋಲೀಸರ ಕಾರ್ಯಕ್ಕೆ ಅಡ್ಡಿ ಮಾಡಿದ್ದು ಕೇಳಿ ಹೆಂಗಸರು ಗಂಡಸರಿಗಿಂತ ಚಾಲಾಕಿಗಳು ಎಂಬುದನ್ನು ಸಾಬೀತು ಪಡಿಸಿದರು.ಕುಡಿತಕ್ಕೆ ಅನಿವಾರ್ಯಗಳನ್ನು ಸೃಷ್ಠಿಸಿಕೊಳ್ಳುವವರಿಗೆ ಕಾರಣಗಳಿಗೆ ಕೊರತೆಯೇ? ನಿತ್ಯ ಗಂಟಲಲ್ಲಿ ಎಣ್ಣೆ ಇಳಿಯದಿದ್ದರೆ ಮನೆಗೆ ಹೋಗಲು ಭಯವಂತೆ. ಘಟವಾಣಿ ಹೆಂಡತಿಯರ ಜೊತೆ ಏಗಲು, ಆಫೀಸಿನ ಕೆಲಸದ ಒತ್ತಡವನ್ನು ನೀಗಲು, ಆದ ಸಂತೋಷವನ್ನು ಸಂಭ್ರಮಿಸಲು, ದು:ಖವನ್ನು ಭರಿಸಲು ಹೀಗೆ ಕುಡಿತಕ್ಕೆ ಕಾರಣಗಳ ಸರಮಾಲೆಯೇ ಬಿಚ್ಚಿಕೊಳ್ಳುತ್ತದೆ. ಈಗ ಹಾಲಿ ಒಕ್ಕರಿಸಿರುವ ಕೊರೋನಾದ ಭಯ ಇವರಿಗಿಲ್ಲ. ಅದನ್ನು ಮೀರಿದ ಭಯವೆಂದರೆ ಎಣ್ಣೆ ಅಂಗಡಿಗಳನ್ನು ಬ್ಯಾನ್ ಮಾಡಿ ಬಿಡುವರೇನೋ ಎಂಬ ಚಿಂತೆ.      ಮದ್ಯ ಪ್ರಿಯರ ಹಳವಂಡಗಳೇನೇ ಇರಲಿ ಆದರೆ ಅವರ ಹೆಂಡಂದಿರು ಮಾತ್ರ  ಇಷ್ಟು ದಿನ ನಿರಾಳವಾಗಿದ್ದರು. ಮನೆಯ ಒಂದು ದಿನದ ಖರ್ಚಿಗಾಗುವಷ್ಟು ದುಡ್ಡು ಗಂಡಸರ ಕುಡಿತಕ್ಕೇ ಹೋಗುತ್ತಿತ್ತು. ಅದು ಲಾಕ್‌ಡೌನ್ ಸಮಯದಲ್ಲಿ ಮಿಕ್ಕಿತು.. ಪರಮಾತ್ಮ ಒಳಗೆ ಇಳಿಯುತ್ತಿದ್ದಂತೆಯೇ ಹೆಂಡತಿಯ ಮೇಲೆ ರೋಪು ಹಾಕುತ್ತಿದವರೆಲ್ಲ ಆಗ ಮೆತ್ತಗಾಗಿ ಬಿಟ್ಟಿದ್ದರು. ಲಾಕ್ ಡೌನ್‌ನಿಂದಾಗಿರುವ ಲಾಭಗಳು ಯಾರಿಗುಂಟು ಯಾರಿಗಿಲ್ಲ? ಅಡುಗೆ ಮನೆಯ ಕೆಲಸವೊಂದು ಹೆಚ್ಚಾಗಿದೆ ಎನ್ನುವುದೊಂದನ್ನು ಬಿಟ್ಟರೆ ಆದದ್ದೆಲ್ಲ ಒಳಿತೇ ಆಗಿದೆ ಹೆಣ್ಣು ಮಕ್ಕಳಿಗೆ. ಫಲವತ್ತಾಗಿ ಬೆಳೆದಿದ್ದ ಗಂಡಸರ ಗಡ್ಡ-ಮೀಸೆ ಕ್ರಾಪುಗಳ ಜೊತೆಗೇ ಮದಿರೆ ಇಲ್ಲದೆ ಸೋತು ಹೋಗಿರುವ ಅವರ ಹ್ಯಾಪು ಮೋರೆಯನ್ನು ಕಂಡು ಅಯ್ಯೋ ಎನ್ನಿಸಿದರೂ ಒಳಗೊಳಗೇ ಇವರಿಗೆ ಇದು ಆಗಬೇಕಾದ್ದೇ ಎಂದುಕೊಂಡವರೇ ಹೆಚ್ಚು.      ರಾಮಾಯಣ. ಮಹಾಭಾರದ ಕಾಲದಿಂದಲೂ ಎಲ್ಲದಕೂ ಕಾರಣಳು ಹೆಣ್ಣೇ ಎಂದು ಹೇಳುತ್ತ ಬಂದಿದ್ದಾರೆ ನಮ್ಮ ಗಂಡಸರು. ಈಗ ಹೇಳಲಿ ನೋಡೋಣ, ಅವರ ಕುಡಿತಕ್ಕೆ ಕಲ್ಲು ಬಿದ್ದಿದ್ದು ಹೆಣ್ಣಿನಿಂದಲೇ ಅಂತ? ಅದಕ್ಕೆ ಕಾರಣ ಕೊರೋನಾ ಆಗಿರುವಾಗ ಹೇಗೆ ತಾನೇ ಹೇಳಿಯಾರು? ಯಾರಿಗೆ ಗೊತ್ತು? ಕೊರೋನಾ ಕೂಡ ಹೆಣ್ಣೇ ಅಂದರೂ ಅಂದಾರು ಗಂಟಲಾರಿದವರು.                                    ********

ಹಾಸ್ಯ Read Post »

ಇತರೆ

ಕಾವ್ಯ ಕುರಿತು

ಕಬ್ಬಿಗರ ಅಬ್ಬಿ-೧ ಮಹಾದೇವ ಕಾನತ್ತಿಲ ಹ್ಞಾ, ಹೀಗೆ ಬನ್ನಿ!, ತೋಟದ ಮಧ್ಯೆ ನಡೆಯೋಣ, ನೋಡಿದಿರಾ, ಎಷ್ಟೊಂದು ಹೂವು ಹಣ್ಣುಗಳು,ಈ ತೋಟದಲ್ಲಿ!. ಅಲ್ನೋಡಿ, ಗುಡ್ಡದಿಂದ ಹರಿದು ಬರುವ ನೀರ ಧಾರೆ! ತೋಟದ ಬದಿಯಲ್ಲಿ ಎತ್ತರದ ಕಲ್ಲು ಬಂಡೆಯ ತುದಿಯಿಂದ ಜಾರಿ ಧಾರೆ ಧಾರೆಯಾಗಿ ಬೀಳುತ್ತಿದೆಯಲ್ಲ, ಅದೇ ಅಬ್ಬಿ! ಇದೇನು ಸಾಧಾರಣ ಅಬ್ಬಿ ಅಂದುಕೊಂಡಿರಾ! ಇದು ಕಬ್ಬಿಗರ ಅಬ್ಬಿ..ಈ ಅಬ್ಬಿಯ ಧಾರೆಗೆ ತಲೆ ಕೊಟ್ಟು, ಎದೆ ಬಿಚ್ಚಿ ನಿಂತು ನೋಡಿ!. ನೀವೂ ಕಾವ್ಯವಾಗುತ್ತೀರಿ, ಕಾವ್ಯ ನಿಮ್ಮಿಂದ ಹರಿಯುತ್ತೆ. ‌ನೀವು ಯಾವುದು, ಕಾವ್ಯ ಯಾವುದು ಅಂತ ಬೇರ್ಪಡಿಸಲಾಗದಷ್ಟು ನೀವು ಡಿಸ್ಸಾಲ್ವ್ ಆಗುತ್ತೀರಿ.ಬೇಂದ್ರೆಅಜ್ಜ ,ಈ ಅಬ್ಬಿ ಜಲಪಾತಕ್ಕೆ ಮೈಯೊಡ್ಡಿ, “ಕುಣಿಯೋಣು ಬಾರಾ” ಅಂತ ಕುಣಿದೂ ಕುಣಿದೂ ಕವಿತೆಯಾದರು!. ಪಂಪ,ಕುಮಾರವ್ಯಾಸ, ಬಸವಣ್ಣ, ಮುದ್ದಣ, ಕುವೆಂಪು,ಅಡಿಗರೆಲ್ಲಾ,ಇದರಲ್ಲಿ ತಣ್ಣಗೆ ಮಿಂದು ಕವಿತೆಯಾದವರು. .ಹಾಗೆ ಮೀಯುತ್ತಾ, ನೀವು ಕವಿತೆಯಾಗಿ ಹರಿಯ ಬಹುದು, ಅಥವಾ, ಮಿಂದು ಬಂದು ಈ ತೋಟದಲ್ಲಿ ನಿಮಗಿಷ್ಟದ ಹಣ್ಣಿನ ಗಿಡ, ಹೂವಿನ ಬಳ್ಳಿ ನಡಬಹುದು.. ಒಮ್ಮೆ ಅಬ್ಬಿಯಲ್ಲಿ ಮಿಂದಿರಾ!, ನೀರು ಆರುವ ತನಕ ನೀವು ನೆಟ್ಟ ಗಿಡಗಳಿಂದ ಸಾಹಿತ್ಯ, ಹೂ ಹಣ್ಣಾಗಿ ಬೆಳೆಯುತ್ತೆ. ಹಲೋ! ಎಲ್ಲಿದ್ದೀರಿ, ಸರ್, ಸುಮ್ನೆ ಫಾನ್ಟಸೈಜ್ ಮಾಡಬೇಡಿ, ಮೊದಲು ಕಾವ್ಯ ಅಂದರೇನು?, ತಿಳಿಸಿ!! ಸ್ವಲ್ಪ ಇಂಗ್ಲಿಷ್ ಮಾತಾಡಿ ಮಾರ್ರೆ.. ಸರಿ, ವರ್ಡ್ಸ್‌ವರ್ತ್ ಹೀಗೆ ಹೇಳ್ತಾನೆ ನೋಡಿ ಕವಿತೆಯೆಂದರೆ.. “The spontaneous overflow of powerful feelings: it takes its origin from emotion recollected in tranquility“ ಅಂದ್ರೆ, ಸ್ವಯಂಪ್ರೇರಿತವಾಗಿ ಉಕ್ಕಿ ಹರಿದ ಭಾವನೆಗಳನ್ನು,  ಪಾಕಬರಿಸಿ, ಧ್ಯಾನಸ್ಥ ಮೌನದಲ್ಲಿ  ನೆನೆನೆನೆದು ಭಾವಪರವಶತೆಯ ಕೇಂದ್ರದಿಂದ ಸಂಗ್ರಹಿಸಿದ ಕೆನೆ!, ಅದು ಕವಿತೆ ಅಂತ. ಕವಿತೆ ಬಗ್ಗೆ Britannica ದಲ್ಲಿ ಹೀಗೆ ಬರೆದಿದ್ದಾರೆ “Poetry, literature that evokes a concentrated imaginative awareness of experience or a specific emotional response through language chosen and arranged for its meaning, sound, and rhythm”. ಕವಿತೆಯ ಮೂಲದ್ರವ್ಯ,  ಘಟನಾ ವಿಶೇಷಕ್ಕೆ , ಸೃಜನಶೀಲ ಮನಸ್ಸಿನ ಸ್ಪಂದನೆ. ನಿಜಜೀವನದಲ್ಲಿ ಸೃಜನಶೀಲ, ಸೂಕ್ಷ್ಮ ಮನಸ್ಸು ಪ್ರತಿಯೊಂದು ಘಟನೆಗೆ ಸ್ಪಂದಿಸುತ್ತೆ. ನಿಮ್ಮ ಮನಸ್ಸಲ್ಲಿ ಭಾವನಾತ್ಮಕ, ತಾತ್ವಿಕವಾದ, ರಚನಾತ್ಮಕವಾದ ಐಡಿಯಾ ಹೊಳೆದರೆ ಅದು ಕವಿತೆಯ ಬೆನ್ನೆಲುಬು. ಆ ಐಡಿಯಾವನ್ನು ನೀವು ನೇರವಾಗಿ ಹೇಳಿದರೆ ಅದು ಮಾತು,ಸಂಭಾಷಣೆ. ಅದನ್ನೇ ಒಂದು ಉಪಮೆಯ ಮೂಲಕವೋ, ಪ್ರತಿಮೆಯ ಮೂಲಕವೋ, ರೂಪಕದ ಮೂಲಕವೋ,ಸೂಕ್ಷ್ಮವಾಗಿ ಹೇಳುವುದು, ಕಾವ್ಯದ ಭಾಷೆ. ಹೀಗೆ ರೂಪುಗೊಂಡ ರಸಪಾಕವನ್ನು ಅಚ್ಚೆರೆಯಲು ಬಳಸುವ ಹಂದರ ಪದಪುಂಜಗಳು. ಪದಪುಷ್ಪದ ಹಾರವನ್ನು ಐಡಿಯಾದ ದಾರದಲ್ಲಿ ಹೆಣೆಯಬೇಕು. ಸೂಕ್ತವಾಗಿ ನವಿರಾಗಿ ಅಭಿವ್ಯಕ್ತಿಸುವ ಕುಸುರಿಯೂ ಬೇಕು. ಪದಗಳನ್ನು ಉಪಯೋಗಿಸುವಾಗ ಪದಗಳು ರಿಪೀಟ್ ಆಗದ ಹಾಗೆ ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಹಾಡಿ ಹಾಡಿ ಸಂಗೀತ, ಕುಣಿದು ಕುಣಿದು ನಾಟ್ಯ ಅಂತ ನಿಮಗೆ ತಿಳಿದದ್ದೇ. ಹಾಗೆಯೇ ಬರೆದು ಬರೆದು ಹೆಣೆದು ಹೆಣೆದು ಕಾವ್ಯ. ” _ಪದಗಳು ಸಾಲಾಗಿ ಶಿಸ್ತಲ್ಲಿ ನಿಂತರೆ ಗದ್ಯ ಗೆಜ್ಜೆ ಕಟ್ಟಿ ಹುಚ್ಚೆದ್ದು ಕುಣಿದರದು ಪದ್ಯ ವಾಚ್ಯವಾದರೆ ಗದ್ಯ ಸೂಚ್ಯವಾದರೆ ಪದ್ಯ ತೆರೆದು ಹೇಳಿ ಮುಗಿಸಿದರೆ ಗದ್ಯ ಮುಚ್ಚಿಟ್ಟು ಹೇಳಿ ಉಳಿದುದು ಪದ್ಯ ಶಬ್ದಗಳ ನಡುವಿನ ನಿಶ್ಶಬ್ದ ಪದ್ಯ” ( ಸುಮತಿ ನಿರಂಜನ, ಯಕ್ಷಲೋಕಕ್ಕೆ ಏಣಿ ಪುಸ್ತಕದಲ್ಲಿ) ಸುಮತೀಂದ್ರ ನಾಡಿಗ್ ಅವರು, ತಮ್ಮ ‘ ಕಾವ್ಯವೆಂದರೇನು’ ಎಂಬ ಪುಸ್ತಕದಲ್ಲಿ ಕವಿತೆಯ ಆತ್ಮಕಥೆ ಬರೆದಿದ್ದಾರೆ. ಕವಿತೆಗೆ ಅಗತ್ಯವಾದ, ಭಾವನೆ, ಲಯ, ಧಾಟಿ,ಧೋರಣೆ, ವ್ಯುತ್ಪತ್ತಿ, ವಸ್ತು ಪ್ರತಿರೂಪ, ಪ್ರತಿಮೆ, ಕ್ರಮಬದ್ಧತೆ ಮತ್ತು ಸೌಂದರ್ಯ, ಭಾವೋತ್ಕರ್ಷ, ರಸಾವಿಷ್ಕಾರ, ಇತ್ಯಾದಿ ಕಾವ್ಯಾಂಗಗಳಿಗೆ ಸಂವಿಧಾನ ಅದು. ಕೊನೆಗೆ ಒಂದು ಅಗತ್ಯ ಮಾತು. ರುಚಿಯಾದ ಹಲ್ವಾ ಜಗಿಯುವಾಗ, ನಾಲಿಗೆ ಹೇಗೆ ತಿರುಗುತ್ತೆ, ದವಡೆಯ ಹಲ್ಲುಗಳು ಯಾವಾಗ ದೂರ ಮತ್ತು ಯಾವಾಗ ಹತ್ತಿರ ಇತ್ಯಾದಿ ,machanism ನ್ನು ಯೋಚಿಸುತ್ತಾ ಹಲ್ವ ತಿಂದರೆ, ನಾಲಿಗೆಯನ್ನು ಹಲ್ಲು ಕಡಿಯುತ್ತೆ!. ಅದಕ್ಕೇ, ಕವಿತೆಯ ಮೂಲ ಸ್ವಭಾವ ಮತ್ತು ಸಂರಚನೆಯ ಹೋಲಿಸ್ಟಿಕ್ ಅರ್ಥ ಮನಸ್ಸಿಗಾದ ಮೇಲೆ, ಬಿಂದಾಸ್ ಆಗಿ ಕವಿತೆ ಬರೆಯಿರಿ. ಕವಿತೆಗೆ ತನ್ನನ್ನು ತಾನೇ ಬರೆಯುವಾಗ ಗೈಡ್ ಮಾಡುವ ಶಕ್ತಿಯಿದೆ. ನಿಮ್ಮ ಮನಸ್ಸಿಗೆ ಕನ್ನಡಿಯಾಗಿ ಬಿಂಬವನ್ನು ಗರ್ಭಿಸುವ ಶಕ್ತಿ ಕವಿತೆಗೆ ಸ್ವಯಂ ಇದೆ. ಬೇಕಾದದ್ದು ನಿಮ್ಮ ಅನ್-ಕಂಡಿಶನಲ್ ಸಮರ್ಪಣಾ ಭಾವ ಮಾತ್ರ. ಹಾಗಿದ್ದರೆ, ನಾವೆಲ್ಲಾ ಈ ಕಾವ್ಯದ ಅಬ್ಬಿಯಲ್ಲಿ ಸ್ವಚ್ಛಂದವಾಗಿ ಮೀಯೋಣವೇ!! **************

ಕಾವ್ಯ ಕುರಿತು Read Post »

ಇತರೆ, ಜೀವನ

ಪ್ರಸ್ತುತ

ಗುರು-ಶಿಷ್ಯ ಸಂಬಂದ ಪ್ರಜ್ಞಾ ಮತ್ತಿಹಳ್ಳಿ ಕೇವಲ ತರಗತಿಯ ನಾಕು ಗೋಡೆಗಳ ನಡುವೆ ವೇಳಾಪಟ್ಟಿಯ ಚೌಕಗಳ ಮಧ್ಯದಲ್ಲಿ ಸಿಲೆಬಸ್ ಎಂಬ ಅಕ್ಷರದ ಅಂಗಡಿ ಇಟ್ಟುಕೊಂಡ ಇವತ್ತಿನ ಗುರು, ಅಕ್ವೇರಿಯಂನ ಮೀನಿನಂತೆ ಅಸಹಾಯಕನಾಗಿದ್ದಾನೆ. ಅವನಿಗೆ ಸಮಯಮಿತಿ ಹಾಗೂ ವಿಷಯಮಿತಿ. ದಿನಕ್ಕೊಂದೊಂದೇ ಗುಳಿಗೆ ಆಹಾರ ನುಂಗಿ ಗಾಜಿನ ಗೋಡೆಗೆ ಮೂತಿ ಗುದ್ದುತ್ತ ಬುಳುಕ್ ಬುಳುಕ್ ಮುಳುಗುತ್ತಿದ್ದಾನೆ.  ಗುರು-ಶಿಷ್ಯರು ಈ ಚರಾಚರದ ಎಲ್ಲ ಎಲ್ಲೆಗಳನ್ನು ಮೀರಿ ಬೆಳೆಯಬಲ್ಲ ಸಂಬಂಧವನ್ನು ಹೊಂದಿರುತ್ತಾರೆ. ತರಗತಿಯ ಕರಿಹಲಗೆಯ ಮೇಲೆ ಬಿಳಿ ಸೀಮೆ ಸುಣ್ಣಕ್ಕೆ ನೋವಾಗದಂತೆ ಭೂಮಿಯ ಚಿತ್ರ ತೆಗೆಯುವವನು ಗುರುವೇ. ತನ್ನ ಜ್ಞಾನದ ಕಿರಣಗಳಿಂದ ಶಿಷ್ಯನ ಚಿತ್ತಬಿತ್ತಿಯ ಮೇಲೆ ಆಕಾಶಗಂಗೆಯ ಹಾಲುಹಾದಿ ತೆರೆಯುವವನೂ ಗುರುವೇ. ಹಾಗಾಗಿ ಗುರು-ಶಿಷ್ಯರ ಸಂಬಂಧ ಎನ್ನುವುದು ಯಾವುದೇ ಗೋಡೆ,ಛಾವಣಿಗಳ ಹಂಗಿಲ್ಲದ ಮಂದಿರದಂತೆ. ಕೊಡುವ ಗುರುವಿನ ಅಂತ:ಸತ್ವದ ಅಗಾಧತೆ ಹಾಗೂ ತೆಗೆದುಕೊಳ್ಳುವ ಶಿಷ್ಯನ ಧಾರಣ ಶಕ್ತಿಗಳನ್ನು ಅವಲಂಬಿಸಿ ಈ ಸಂಬಂಧದ ವ್ಯಾಖ್ಯೆ ಬದಲಾಗುತ್ತದೆ. ಮಮತೆ ಕರುಣೆಗಳ ವಾರಿಧಿಯಂಥ ಗುರು ಸಾಕ್ಷಾತ ಅಮ್ಮನಾಗುತ್ತಾನೆ. ಅವನ ಮಡಿಲಲ್ಲಿ ಶಿಶುವಾಗುವ ಶಿಷ್ಯ ವಾತ್ಸಲ್ಯದ ಗುಟುಕು ಗುಟುಕರಿಸಿ ಅಮೃತಂಗಮಯನಾಗುತ್ತಾನೆ. ಜ್ಞಾನದ ದಾಹದ ಶಿಷ್ಯ ರೋಗಿಯಂತೆ ನರಳುವಾಗ ಗುರು ವೈದ್ಯನಾಗಿ ಸಲಹುತ್ತಾನೆ. ಸಮಾನ ಮನಸ್ಕ-ಸಮಾನ ಆಸಕ್ತ ವಿಷಯಗಳಲ್ಲಿ ಅವರಿಬ್ಬರೂ ಸ್ನೇಹಿತರೇ ಆಗಿಬಿಡುತ್ತಾರೆ. ಆಧ್ಯಾತ್ಮ ಹಾಗೂ ಸಂಗೀತಗಳಲ್ಲಿ ಗುರು ಶಿಷ್ಯರು ಪರಸ್ಪರರಿಗೆ ಕೊಟ್ಟು ಕೊಳ್ಳುವ ಸಂಗತಿಗಳಿಗೆ ಎಣೆಯಾಗಲೀ, ಎಣಿಕೆಯಾಗಲಿ, ಎಲ್ಲೆಯಾಗಲೀ ಇಲ್ಲವೇ ಇಲ್ಲ. ರಾಗದ ದಾರಿಯಲ್ಲಿ ಸಾಗುತ್ತ ಸಾಗುತ್ತ ಅವರು ಅಮರರಾಗುತ್ತಾರೆ ನಾದದ ಸಾಧನೆಯಲ್ಲಿ ಲೀನವಾಗುತ್ತ, ಲೀನವಾಗುತ್ತ ಈ ಲೋಕದ ಸೀಮೆಗಳನ್ನು ದಾಟುತ್ತಾರೆ. ಅಲೌಕಿಕವನ್ನು ಅರಸುತ್ತ, ಅರಸುತ್ತ ಪರಸ್ಪರರಿಗೆ ದಾರಿಯಾಗಿ ತೆರೆದುಕೊಳ್ಳುತ್ತಾರೆ.  ಗುರು-ಶಿಷ್ಯಂದಿರು ಪರಸ್ಪರರನ್ನು ಬೆಳೆಸಬಲ್ಲರು. ಶಿಷ್ಯನ ಇಲ್ಲಗಳನ್ನು ತುಂಬುವುದಕ್ಕಾಗಿ ಗುರು ತಾನು ಮೊದಲು ತುಂಬಿಕೊಳ್ಳುತ್ತಾನೆ. ಹೀಗೆ ಇಬ್ಬರೂ ಬೆಳೆಯುತ್ತಾರೆ. ನಿಜವಾದ ಗುರು “ಮಲಗಿ ಪರಮಾದರದಿ ಕೇಳಲು ಕುಳಿತು ಕಲಿಸುವ, ಕುಳಿತು ಕೇಳಲು ನಿಲುವ, ನಿಂತು ಕೇಳಿದರೆ ನಲಿದು ಕಲಿಸುವ” ಉತ್ಸಾಹಿಯಾಗಿರುತ್ತಾನೆ. ಗುರು-ಶಿಷ್ಯರ ನಡುವೆ ಜಾತಿ-ಲಿಂಗ-ವಯಸ್ಸು-ಹಣ ಗಳ ಅಂತರ ಬರುವುದಿಲ್ಲ. ಆಸಕ್ತಿ ಶ್ರದ್ದೆ ಅರಿವಿನ ಎಚ್ಚರಗಳು ಮಾತ್ರ ಪರಿಗಣಿಸಲ್ಪಡುತ್ತವೆ. ಗುರು-ಶಿಷ್ಯರ ಸಂಬಂಧ ಮನುಕುಲದ ಎಲ್ಲ ಸಂಬಂಧಗಳಿಂದಲೂ ಒಂದೊಂದು ರಂಗು ಪಡೆದು ಅರಳುವ ಕಾಮನಬಿಲ್ಲಿನ ಹಾಗೆ. ಅರಳುತ್ತರಳುತ್ತಲೇ ಹಗುರಾಗಿ ಹಂಗು ಕಳಚಿ ಮೇಲೆ ಹಾರುವ ಸ್ವರ್ಗೀಯ ಕುಸುಮದ ಹಾಗೆ. ಅಲ್ಲಮ-ಗುಹೇಶ್ವರ, ಸಂತ ಶಿಶುನಾಳ ಶರೀಫ-ಗೋವಿಂದಭಟ್ಟರು ವಿವೇಕಾನಂದ-ಪರಮಹಂಸರು, ಬುದ್ದ ಮತ್ತವನ ಅಸಂಖ್ಯಾತ ಶಿಷ್ಯರು ಸಾವಿರ ಸಾವಿರ ಮಾದರಿಗಳನ್ನು ಬಿಟ್ಟು ಹೋಗಿದ್ದಾರೆ. ಭಾರತೀಯ ಗುರು ಏನೂ ಆಗಬಲ್ಲ ಎಂದು ಜಗತ್ತಿಗೆ ತೋರಿಸಿದ್ದೇವೆ. ಆದರೂ ಕಲ್ಲು ಗೋಡೆಯ ಪಡಕಿನಲ್ಲಿ ಘಿಲ್ಲನೆ ಅರಳುವ ಗರಿಕೆಯ ಹಾಗೆ ಅಲ್ಲೊಂದು ಇಲ್ಲೊಂದು ಪುಟಾಣಿ ಅನುಬಂಧಗಳು ಪಿಳಿ ಪಿಳಿ ನಗುತ್ತವೆ. ಕ್ರೀಡಾ ಜಗತ್ತಿನಲ್ಲಿ ಅನೇಕ ಗುರುಗಳುತಮ್ಮ ಶಿಷ್ಯರನ್ನು ತಾರೆಗಳಾಗಿ ಬೆಳೆಸಿದ ಉದಾಹರಣೆಗಳಿವೆ. ಅನೇಕ ತಾರೆಗಳು ಬಾನೇರಿ ಜಗಮಗಿಸುವಾಗ ಗುರು ನೇಪಥ್ಯದ ಕತ್ತಲಲ್ಲೇ ಮುಳುಗಿರಲೂಬಹುದು. ಪತ್ರಿಕಾರಂಗದಲ್ಲೂ ಅನೇಕರು ಉತ್ತಮ ಶಿಷ್ಯರನ್ನು ಬೆಳೆಸಿದ್ದಾರೆ. ಕೆಲವರು ತಾವು ತಮ್ಮನ್ನು ಗುರುವಾಗಿ ಗುರುತಿಸದಿದ್ದರೂ ಅವರ ಬದುಕನ್ನು ಸಮೀಪದಿಂದ ಕಂಡವರು ಆಂತರ್ಯದ  ಶಿಷ್ಯತ್ವದಿಂದ ಅವರಿಂದ ಕಲಿತು ಬೆಳೆದಿದ್ದಾರೆ.  ಕಲಿಯುವ ಹಂಬಲವುಳ್ಳ ಮನುಜನಿಗೆ ಕಲಿಸುವ ಸಂಗತಿಗಳೆಲ್ಲ ಗುರುವೇ. ನದಿ-ನದ-ಬಾನು-ಬಯಲು-ಹೂ-ದುಂಬಿ-ಸಾಗರ-ಚುಕ್ಕಿ-ಚಂದ್ರಮರೆಲ್ಲ ಹಲವು ಸಂಗತಿಗಳನ್ನು ಕಲಿಸುತ್ತಲೇ ಇದ್ದಾವೆ. ಪ್ರಕ್ರತಿಯಂತಹ ದೊಡ್ಡ ಗುರು ಇನ್ನೊಂದಿಲ್ಲ. ಬಡವನಿಗೆ ಅವನ ಹಸಿವೇ ಗುರು. ದರಿದ್ರನಿಗೆ ಅವನ ಕೊರತೆಯೇ ಗುರು. ದೀನನಿಗೆ ಅವನ ನೋವೇ ಗುರು. ಹುಟ್ಟಿನಿಂದ ಚಟ್ಟದ ತನಕ ನಾವು ಕಾಣುವ ಸಂಗತಿಗಳೆಲ್ಲ ನಮಗೆ ಗುರುವಾಗಬಲ್ಲವು. ಕಲಿಯುವ ವಿಧೇಯತೆ ನಮಗಿದ್ದರೆ ಮಾತ್ರ.  ತರಣಿ ದರ್ಶನಕ್ಕಿಂತ ಕಿರಣಾನುಭವ ಸುಲಭ  ಪರಮ ಶಾಸ್ತ್ರಕ್ಕಿಂತ ಸರಿಯುದಾಹರಣೆ  ಪರಮ ತತ್ವವ ಕಂಡ ಗುರುವನರಸುವುದೆಲ್ಲಿ?  ದೊರೆತಂದು ನೀಂ ಧನ್ಯ-ಮಂಕುತಿಮ್ಮ  ಸೂರ್ಯನನ್ನು ನೋಡುವುದಕ್ಕಿಂತ ಅವನ ಕಿರಣಗಳನ್ನು ಅನುಭವಿಸುವುದು ಸುಲಭವಾದದ್ದು. ಶ್ರೇಷ್ಠ ಶಾಸ್ತ್ರಗಳನ್ನು ತಿಳಿದುಕೊಳ್ಳುವುದಕ್ಕಿಂತ ಒ೦ದು ಉದಾಹರಣೆಯನ್ನು ಅರಿಯುವುದು ಸುಲಭ. ಆದರೆ ಪರಮ ತತ್ವವನ್ನು ಕಂಡಿರುವ ಗುರುವನ್ನು ಹುಡುಕುವುದು ಕಷ್ಟ. ಅಂತಹ ಗುರು ಸಿಕ್ಕ ದಿನ ನೀನು-ನಾವು ಎಲ್ಲರೂ ಧನ್ಯರು. ಹೀಗೆ ಕತ್ತಲೆಯಿಂದ ಬೆಳಕಿನ ಕಡೆಗೆ ಅಸತ್ಯದಿಂದ ಸತ್ಯದ ಕಡೆಗೆ ಸಾಗುತ್ತಿರುವ ಈ ಪ್ರಯಾಣ ಕೇವಲ ಒಬ್ಬ ಗುರುವಿನಿಂದ ಮುಗಿಯುವುದಿಲ್ಲ. ನಾವೆಲ್ಲರೂ ನಮಗೆಲ್ಲರಿಗೂ ಕಲಿಸುತ್ತ ಕಲಿಯುತ್ತ ಸಾಗುವುದೇ ಬದುಕು. *****************************  

ಪ್ರಸ್ತುತ Read Post »

ಇತರೆ

ಕಾವ್ಯ ವಿಶ್ಲೇಷಣೆ

ಟಿ . ಎಸ್. ಏಲಿಯಟ್ ನ ಕವನ “ಜೆ.ಆಲ್ಫ್ರೆಡ್  ಪ್ರುಫ಼್ರಾಕ್ ನ ಪ್ರೇಮ ಗೀತೆ “ ಆಂಗ್ಲ ಸಾಹಿತ್ಯದಲ್ಲಿ ಸ೦ತೃಪ್ತಿಯ ( ಸ್ಯಾಚುರೇಶನ್ ಪಾಯಿ೦ಟ್ ) ಎಲ್ಲೆಯನ್ನು ಮೀರಿ ಏಕತಾನವಾಗುತ್ತಿದ್ದ ರೊಮ್ಯಾಂಟಿಕ್ ಕಾವ್ಯ ಪ್ರಕಾರವನ್ನು ಸ೦ಪೂರ್ಣವಾಗಿ ನಿರಾಕರಿಸಿ ಮಾಡರ್ನಿಸಂನ ಹಾದಿಯಲ್ಲಿ ಸಾಗುತ್ತಾ ಜಗತ್ತಿನ ಸಾಹಿತ್ಯಕ್ಕೇ ಒಂದು ಹೊಸ ತಿರುವನ್ನು ತಂದುಕೊಟ್ಟದ್ದು ಟಿ.ಏಸ್.ಏಲಿಯಟ್. ಅವನಿಗೆ ಬೆಂಬಲವಾಗಿ ನಿ೦ತವನು ಎಜ಼್ರಾಪೌ೦ಡ್. ಏಲಿಯಟ್ ನ ಪ್ರಾರಂಭಿಕ ಕವನಗಳಲ್ಲಿ ಪ್ರಸಿದ್ಧವಾದ ಒಂದು ಕವನ “ಜೆ.ಆಲ್ಫ್ರೆಡ್ ಪ್ರುಫ್ರಾಕ್ ನ ಪ್ರೇಮ ಗೀತೆ ( ಲವ್ ಸಾಂಗ್ ಆಫ್ ಜೆ.ಆಲ್ಫ್ರೆ ಡ್ ಪ್ರುಫ಼್ರಾಕ್). ೧೯೧೫ ರಲ್ಲಿ ಷಿಕಾಗೋದ “ಪೊಯೆಟ್ರಿ”ಪತ್ರಿಕೆಯಲ್ಲಿ ಈ ಕವನ ಪ್ರಕಟಗೊಂಡಾಗ ಸಾಹಿತ್ಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬಂದವು. ಕೆಲವರು, ಹಿಂದೆಂದೂ ಓದಿರದ ಹೊಸ ಶೈಲಿಯ, ಅರ್ಥವಾಗದಿದ್ದರೂ ಮಿಂಚಿನಂತಹ ಕೆಲವು ಸಾಲುಗಳಿಂದ ಆಕರ್ಷಿಸುತ್ತಿದ್ದ ಕವಿತೆಯನ್ನು ಓದಿ ಆಶ್ಚರ್ಯ ಚಕಿತರಾಗಿ ಹುಬ್ಬು ಮೇಲೇರಿಸಿದರು. ಕೆಲವರು ಅದೊಂದು ಪದ್ಯವೇ ಅಲ್ಲವೆಂದು ಅಲ್ಲಗಳೆದರು. ಆರ್ಥರ್ ವಾ ಎಂಬ ವಿಮರ್ಷಕ “ದಿ ಕ್ರಿಟಿಕಲ್ ಕ್ವಾರ್ಟರ್ಲಿ” ಎಂಬ ಪತ್ರಿಕೆಯಲ್ಲಿ ಕವಿತೆಯನ್ನು ಕುರಿತು ” ಲಯದ ಶಿಸ್ತನ್ನೇ ಅರಿಯದ “ಇದೊಂದು ಅರ್ಥಹೀನ ಪ್ರಲಾಪ” ವೆಂದು ಬರೆದ. ಮುಂದುವರಿದು ಏಲಿಯಟ್ ನನ್ನು ” ಎ.ಡ್ರಂಕನ್ ಹೆಲಾಟ್” ಎ೦ದು ಜರೆದ. ಮುಂದೆ ಏಜ಼್ರಾ ಪೌಂಡ್ ಈ ಕವಿತೆಯನ್ನು ವಿಮರ್ಷಿಸುತ್ತಾ ಕವಿತೆಯ ಶಿಲ್ಪದಲ್ಲಿರುವ ನಾವೀನ್ಯತೆಯನ್ನ ಹೊಸ ವಸ್ತು ವಿನ್ಯಾಸವನ್ನ ಎತ್ತಿ ಹಿಡಿದ. ಮುಂದೆ ಏಲಿಯಟ್ ನೋಬೆಲ್ ಪಾರಿತೋಷಕಕ್ಕೆ ಭಾಜನನಾದ. “ಜೆ. ಆಲ್ಫ್ರೆಡ್ ಪ್ರುಫ್ರಾಕ್ ನ ಪ್ರೇಮ ಗೀತೆ” ಒಂದು ವಿಡಂಬನಾತ್ಮಕ ಕವಿತೆ. ಶೀರ್ಶಿಕೆಯಲ್ಲಿರುವಂತೆ ಇದೊಂದು ಪ್ರೇಮ ಗೀತೆಯಲ್ಲ. ಬದಲಿಗೆ ಒಬ್ಬ ಅಳ್ಳೆದೆಯ,ಹ್ಯಾಮ್ಲೆಟ್ ನ ಹಾಗೆ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳಲಾಗದೇ ಸದಾ ತೊಳಲಾಟದಲ್ಲಿರುವ ವ್ಯಕ್ತಿಯೊಬ್ಬನ ಸ್ವಗತವಾಗಿದೆ. ಷಿಕಾಗೋ ದ “ಪೊಯೆಟ್ರಿ” ಎಂಬ ಪತ್ರಿಕೆಯಲ್ಲಿ ಈ ಕವನ ಮೊದಲು ಪ್ರಕಟವಾದಾಗ ಆ ಪತ್ರಿಕೆಯ ಸಂಪಾದಕಿ “ಹ್ಯಾರಿಯೆಟ್ ಮನ್ರೋ” ಗೆ ಬರೆದ ಪತ್ರದಲ್ಲಿ ಕವಿ ತನ್ನ ಕವಿತೆಗೆ “ಪ್ರೇಮ ಗೀತೆ” ಎನ್ನುವ ಶೀರ್ಷಿಕೆ ಯಾವ ರೀತಿಯಲ್ಲೂ ಹೊಂದಾಣಿಕೆಯಾಗದೆಂದು ತನಗೆ ಗೊತ್ತಿದ್ದರೂ “ರುಡ್ಯಾರ್ಡ್  ಕಿಪ್ಲಿಂಗ್” ನ ಕವಿತೆ “ಲವ್ ಸಾಂಗ್ ಆಫ್ ಹರ್-ದಯಾಲ್” ತನ್ನ ಮನಸ್ಸಿನಲ್ಲಿ ನಿ೦ತು ಬಿಟ್ಟಿದ್ದರಿ೦ದ ಅದರ ಆಕರ್ಷಣೆಗೆ ಒಳಗಾಗಿ ಈ ಶೀರ್ಷಿಕೆಯನ್ನು ತನ್ನ ಕವಿತೆಗೆ ನೀಡಿರುವುದಾಗಿ ತಿಳಿಸಿದ್ದಾನೆ. ಕವಿತೆಯಲ್ಲಿ ಬರುವ ಎಲ್ಲ ಪ್ರತಿಮೆಗಳೂ ಪ್ರುಫ್ರಾಕ್ ನ ಇಬ್ಬಂದಿ ತನದ, ತೊಳಲಾಟದ ಪ್ರತೀಕಗಳೇ ಆಗಿವೆ. ಅವನು ಮುಖ್ಯವಾದ ವಿಚಾರವೊಂದನ್ನು ಹೇಳ ಬೇಕೆಂದು ಕೊಳ್ಳುತ್ತಾನೆ. ಆದರೆ ಹೇಳುವುದಿಲ್ಲ. ಅದು ಯಾರಿಗೆ ಎಂಬುದೂ ಸ್ಪಷ್ಟವಾಗಿಲ್ಲ. ಬಹುಶಃ ಅವನು ಪ್ರೀತಿಸುವ ಹುಡುಗಿಗೆ ಇರಬಹುದು ಎನ್ನುವುದು ಕೆಲವರ ಅಭಿಪ್ರಾಯವಾದರೆ ಮತ್ತೆ ಕೆಲವರು ಅವನು ಯಾವುದೋ ತಾತ್ವಿಕ ಒಳನೋಟವನ್ನೋ ಅಥವಾ ಸಮಾಜದಿಂದ ಉಂಟಾದ ಭ್ರಮನಿರಸನವನ್ನೋ ಹೇಳಲಿಚ್ಛಿಸುತ್ತಿದ್ದಾನೆ ಎಂದು ಅಭಿಪ್ರಾಯ ಪಡುತ್ತಾರೆ. ಒಟ್ಟಿನಲ್ಲಿ ಪ್ರುಫ್ರಾಕ್ ನ ದ್ವಂದ್ವದ ತೊಳಲಾಟ ಆಧುನಿಕ ಸಮಾಜದಲ್ಲಿ ಅರ್ಥಪೂರ್ಣ ಅಸ್ತಿತ್ವದ ಬದುಕನ್ನು ಬದುಕಲಾಗದ ಅಸಹಾಯಕತೆಯನ್ನು ಬಿಂಬಿಸುತ್ತದೆ. ಪ್ರುಫ್ರಾಕ್ ಒಬ್ಬ ಸೂಕ್ಷ್ಮ ಸಂವೇದನೆಯ ವ್ಯಕ್ತಿಯಾಗಿದ್ದು ಪ್ರತಿಯೊಂದನ್ನೂ ತಾರ್ಕಿಕವಾಗಿ ನೋಡುವ, ಜಿಜ್ಞಾಸೆಗೆ ಒಳಪಡುವ, ಹಾಗೆಯೇ ಹಿಂಜರಿಕೆಯ ವ್ಯಕ್ತಿತ್ವವುಳ್ಳವನಾಗಿದ್ದಾನೆ. ಹಾಗಾಗಿ ಯಾವ ತೀರ್ಮಾನವನ್ನೂ ಅವನು ತೆಗೆದುಕೊಳ್ಳಲಾರ. ಅವನ ಪ್ರಪಂಚದಲ್ಲಿ ಸುಂದರವಾದ,ಮನಸ್ಸನ್ನು ಅರಳಿಸುವ ಯಾವ ವಸ್ತುಗಳೂ ಅಥವಾ ಸ್ಥಳಗಳೂ ಇಲ್ಲ. ಅವನಿಗೆ ಸ೦ಜೆಯೆನ್ನುವುದು ಕ್ಲೋರೋ ಫಾರ್ಮಿನ ಪ್ರಭಾವಕ್ಕೆ ಒಳಗಾದ ವ್ಯಕ್ತಿ ಆಪರೇಷನ್ ಟೇಬಲ್ಲಿನ ಮೇಲೆ ಮಲಗಿದ ಹಾಗೆ ಕಾಣಿಸುತ್ತದೆ. ಅವನು ಕರೆದೊಯ್ಯುವುದು ಹೊಲಸು ರೆಸ್ಟೋರೆಂಟ್ಗಳಿಂದ ಹೊಮ್ಮುವ ಗಬ್ಬು ವಾಸನೆಯ ಬೀದಿಗಳ ಮೂಲಕ. ವಯಸ್ಸು ಮಿರುತ್ತಿರುವ ಪ್ರುಫ್ರಾಕ್ ಹೋಗ ಬೇಕಾಗಿರುವುದು ಒ೦ದು ದೊಡ್ಡ ಮಹಲಿನಲ್ಲಿರುವ ಸುಂದರಿಯರನ್ನು ಭೇಟಿ ಮಾಡಲು. ಆ ಸುಂದರಿಯರು ತಮ್ಮ ಪ್ರತಿಷ್ಠೆಯನ್ನು ಮೆರೆಯಲು ಒಂದು ಕೋಣೆಯಿ೦ದ ಮತ್ತೊಂದಕ್ಕೆ ವೈಯಾರದಿಂದ ನಡೆದಾಡುತ್ತಾ, ಶ್ರೇಷ್ಠ ಫ್ರೆಂಚ್ ಕಲೆಗಾರ, ಶಿಲ್ಪಿ, ಕವಿ ಮೈಖೆಲೇಂಜಲೋನ ಬಗ್ಗೆ, ತಮಗೆ ಅಷ್ಟಾಗಿ ಗೊತ್ತಿರದಿದ್ದರೂ ಬಹಳ ಗೊತ್ತಿರುವವರ ಹಾಗೆ ಮಾತನಾಡುತ್ತಿರುತ್ತಾರೆ.ಅಲ್ಲಿಗೆ ಈ ಅಳ್ಳೆದೆಯ ಪ್ರುಫ್ರಾಕ್ ಹೋಗಿ ಅವರನ್ನು ಭೇಟಿಯಾಗಬೇಕಾಗಿದೆ ಮತ್ತು ವಿಷಯವೊಂದನ್ನು( ಬಹುಶಃ ಪ್ರೇಮ ನಿವೇದನೆಯಿರ ಬಹುದು) ಪ್ರಸ್ತಾಪಿಸ ಬೇಕಾಗಿದೆ. ಆದರೆ ಆ ಹೆಣ್ಣುಗಳು ತನ್ನನ್ನು ನಿರಾಕರಿಸಿಬಿಟ್ಟರೆ ಎ೦ಬ ಭಯದಿಂದ ಅವನು ಕೊನೆಯವರೆಗೂ ತನ್ನ ಮನದ ಇಂಗಿತವನ್ನು ಹೇಳುವುದೇ ಇಲ್ಲ. ಕವನದಲ್ಲಿ ಸೊಗಸಾಗಿ ಮೂಡಿ ಬಂದಿರುವ ಮಹಲಿನ ಕಿಟಕಿ ಗಾಜುಗಳಿಗೆ ಬೆನ್ನುಜ್ಜುವ ಹಳದಿ ಮಂಜು ಮತ್ತು ಹಳದಿ ಗಾಳಿ, ಅದು ಕೊಳಚೆ ಗಟಾರಗಳ ಮೇಲೆ ಸುಳಿದಾಡಿ ಸುಸ್ತಾಗಿ ಸುರುಳಿ ಸುತ್ತಿಕೊಂಡು ಮಲಗುವ ಚಿತ್ರ ಪ್ರುಫ್ರಾಕ್ ನ ಕಲ್ಪನಾ ಲೋಕ ಅಂತ್ಯವಾಗುವ ರೀತಿಯನ್ನು ಸಾರುತ್ತದೆ. ಪ್ರುಫ್ರಾಕ್ ನಿಗೆ ಆಧುನಿಕ ಸಮಾಜದ ಬದುಕು ನೀರಸವೆನಿಸುತ್ತಿದೆ. ಇಂಥ ಸಮಾಜದಿಂದ ದೂರ ಹೋಗಿಬಿಡಬೇಕೆಂಬುದು ಅವನ ಬಯಕೆ. ಅದಕ್ಕಾಗಿ “ ಮೌನ ಶರಧಿಯ ಮೇಲೆ ಸಲೀಸು ಜಾರಬಲ್ಲಂಥ ಜೋಡಿ ಪಂಜಗಳುಳ್ಳವನು ನಾನಾಗಿದ್ದರೆ” ಎಂದುಕೊಳ್ಳುತ್ತಾನೆ. ಹಿಂಜರಿಕೆಯ ಸ್ವಭಾವದ ಪ್ರುಫ್ರಾಕ್ ತನ್ನ ಪ್ರೇಮ ನಿವೇದನೆಯನ್ನು ಕೊನೆಯವರೆಗೂ ಮಾಡಿಕೊಳ್ಳ ಲಾರದವನಾಗಿ ತನ್ನನ್ನೇ ತಾನು ಹೀಗೆ ಪ್ರಶ್ನಿಸಿ ಕೊಳ್ಳುತ್ತಾನೆ : “ ಆ ಗಳಿಗೆಯನ್ನು ಅದರ ಉತ್ತುಂಗಕ್ಕೆ ಕೊಂಡೊಯ್ಯಬಲ್ಲ ಬಲ ಇದೆಯೇ ನನಗೆ”?. ಅದನ್ನು ಹೇಳುವುದು ಅವನಿಗೆ ಎಷ್ಟು ಕಷ್ಟವೆಂದರೆ “ ಮಾಯಾ ಲಾಂದ್ರವೊಂದು ಸ್ಕ್ರೀನಿನ ಮೇಲೆ ನರಗಳ ವಿವಿಧ ವಿನ್ಯಾಸಗಳನ್ನು” ಮೂಡಿಸಿದ ಹಾಗೆ! ಇಷ್ಟೆಲ್ಲಾ ತೊಳಲಾಟಗಳಿದ್ದರೂ, ಡೋಲಾಯಮಾನ ಸ್ವಭಾವದವನಾಗಿದ್ದರೂ ತಾನು ಮಾತ್ರ ರಾಜಕುಮಾರ ಹ್ಯಾಮ್ಲೆಟ್ ಅಲ್ಲ, ಬದಲಿಗೆ ತಾನು ಅವನ ಪರಿಚಾರಕನೆನ್ನುತ್ತಾನೆ. ತನಗೆ ಅವನಾಗುವ ಯಾವ ಯೋಗ್ಯತೆಯೂ ಇಲ್ಲ ಎಂದು ತನ್ನನ್ನು ತಾನು ವಿಡಂಬನಾತ್ಮಕ ವಿಷ್ಲೇಶಣೆಗೆ ಒಳಪಡಿಸಿಕೊಳ್ಳುತ್ತಾ; ತಾನು ಕೆಲವೊಮ್ಮೆ ಹಾಸ್ಯಾಸ್ಪದ ವ್ಯಕ್ತಿ ಮತ್ತು ಕೆಲವೊಮ್ಮೆ ಪೂರ್ಣ ವಿದೂಷಕ ಎನ್ನುತ್ತಾನೆ. ಪ್ರುಫ್ರಾಕನಿಗೆ ತಾನು ಮುದುಕನಾಗುತ್ತಿದ್ದೇನೆ ಎ೦ಬ ಅರಿವು ಇದೆ. ತನ್ನ ಕಲ್ಪನೆಯ ಕಡಲ ಕಿನಾರೆಯಲ್ಲಿ ನಡೆಯುವಾಗ ಮತ್ಸ್ಯ ಕನ್ಯೆಯರು ಹಾಡುವುದನ್ನು ಕೇಳಿಸಿಕೊಳ್ಳುವ ಪ್ರುಫ್ರಾಕ್ನಲ್ಲಿ ಕಡಲ ಕನ್ಯೆಯರು ತನಗಾಗಿ ಹಾಡಲಾರರು ಎ೦ಬ ಅರಿವೂ ಇದೆ. ತಾನು ಹೇಳಬೇಕಾದ್ದನ್ನು ಹೇಳಲಾಗದ ಪ್ರುಫ್ರಾಕ್ ವಾಸ್ತವವನ್ನು ಎದುರಿಸಲಾಗದೇ ತನ್ನ ಕಲ್ಪನಾ ಸಾಮ್ರಾಜ್ಯದ ಕಡಲ ಕೋಣೆಯಲ್ಲಿ ಮತ್ಸ್ಯ ಕನ್ಯೆಯರ ಜತೆಯಲ್ಲಿ ಕಲ್ಪನಾವಿಹಾರದಲ್ಲಿ ಮುಳುಗಿ ಹೋಗುವುದರೊ೦ದಿಗೆ ಕವಿತೆ ಮುಕ್ತಾಯವಾಗುತ್ತದೆ. ಕವಿತೆಯ ಪ್ರಾರ೦ಭಕ್ಕೆ ಮುನ್ನ ಏಲಿಯಟ್ ಡಾ೦ಟೆಯ “ಡಿವೈನ್ ಕಾಮಿಡಿ” ಯಲ್ಲಿ ಡಾ೦ಟೆ ಮತ್ತು ಗ್ಯಿಡೋಡಾ ಮಾಂಟೆಫೆಲ್ಟ್ರೋರ ಭೇಟಿಯ ಸ೦ದರ್ಭದಲ್ಲಿ ಪೋಪ್ ನ ಮಾರ್ಗದರ್ಶಕ ನಾಗಿದ್ದ ಮಾಂಟೇಫೆಲ್ಟ್ರೋ ಡಾ೦ಟೆಗೆ ಹೇಳುವ ಮಾತುಗಳನ್ನು ಬಳಸಿಕೊ೦ಡಿದ್ದಾನೆ. ಪೋಪ್ ಬೋನಿಫೇಸ್ VIII ಗೆ ಸಲಹೆಗಾರನಾಗಿದ್ದ ಗ್ಯಿಡಾಡೋ ಮಾ೦ಟೆ ಫೆಲ್ಟ್ರೋ ನೀಡಿದ ಸಲಹೆಯ ಮೇರೆಗೆ ಪೋಪ್ ದುಷ್ಟ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾನೆ. ಇದರಿ೦ದಾಗಿ ಮಾಂಟೇ ಫೆಲ್ಟ್ರೋ ನರಕದ ನಾಲ್ಕನೆಯ ವೃತ್ತದಲ್ಲಿ ಶಿಕ್ಷೆ ಅನುಭವಿಸ ಬೇಕಾಗುತ್ತದೆ. “ಲಾಜರಸ್ ನಾನು, ಸತ್ತವರ ನಡುವಿ೦ದ ಎದ್ದು ಬ೦ದಿದ್ದೇನೆ……” ಎನ್ನುವ ಸಾಲುಗಳಲ್ಲಿ ಉದ್ದ್ರತವಾಗಿರುವ “ಲಾಜರಸ್” ಬೈಬಲ್ಲಿನಲ್ಲಿ ಬರುವ ಒಬ್ಬ ಭಿಕ್ಷುಕ. ಇನ್ನೊಬ್ಬ ಶ್ರೀಮಂತ ಡೈವ್ಸ್ . ಸತ್ತ ಮೇಲೆ ಲಾಜರಸ್ ಸ್ವರ್ಗಕ್ಕೂ, ಡೈವ್ಸ್ ನರಕಕ್ಕೂ ಹೋಗುತ್ತಾರೆ. ನರಕ ಹೇಗಿದೆ ಎಂದು ತನ್ನ ನಾಲ್ಕು ಜನ ಸೋದರರಿಗೆ ತಿಳಿಸಿ ಅವರನ್ನು ಎಚ್ಚರಿಸಲು ಬಯಸುವ ಡೈವ್ಸ್ ಇದಕ್ಕಾಗಿ ಲಾಜರಸ್ನನ್ನು ಭೂಮಿಗೆ ಕಳಿಸಬೇಕೆ೦ದು ಅಬ್ರಾಹಂನನ್ನು ಕೇಳಿಕೊಳ್ಳುತ್ತಾನೆ. ಅದಕ್ಕೆ ಅಬ್ರಾಹಂ ಒಪ್ಪುವುದಿಲ್ಲ. ಮೋಸೆಸ್ ಮತ್ತು ಪ್ರವಾದಿಗಳ ಉಪದೇಶವನ್ನು ಕೇಳದ ಹೊರತು ಸತ್ತವನು ಎದ್ದು ಬಂದು ಹೇಳಿದರೂ ನಿನ್ನ ಸೋದರರು ಬದಲಾಗುವುದಿಲ್ಲ ಎ೦ದು ಅಬ್ರಾಹ್ ಹೇಳುತ್ತಾನೆ. ಅಲ್ಲದೆ ಕವಿತೆಯಲ್ಲಿ ಬರುವ “ಅಮರ ಪರಿಚಾರಕ ನನ್ನ ಕೋಟನ್ನು ಎಳೆದು ಕುಚೋದ್ಯ ಮಾಡಿದ್ದನ್ನು ನೋಡಿದ್ದೇನೆ “ಎನ್ನುವ ಸಾಲುಗಳಲ್ಲಿ ಬರುವ “ಅಮರ ಪರಿಚಾರಕ ಸಾವಿನ ಮೂರ್ತ ರೂಪ. ನಾನು ಮಾಡಿದ ಕವಿತೆಯ ಕನ್ನಡಾನುವಾದ ಇಲ್ಲಿದೆ: ಜೆ.ಆಲ್ಫ್ರೆಡ್ ಪ್ರಫ್ರಾಕ್ ನ ಪ್ರೇಮ ಗೀತೆ ನನ್ನ ಉತ್ತರ ಭೂ ಲೋಕಕ್ಕೆ ಎ೦ದೂ ಮರಳದವನಿಗೆ ಎ೦ದು ಯೋಚಿಸಿದ್ದರೆ, ಈ ಜ್ವಾಲೆ ನಿಶ್ಚಲವಾಗುತ್ತಿತ್ತು. ಆದರೆ ನರಕದ ಈ ಕೂಪದಿ೦ದ ಯಾರೂ ಹಿ೦ದಿರುಗಿಲ್ಲವೆಂಬ ನಾನು ಕೇಳಿದ ಮಾತು ನಿಜವೇ ಆಗಿದ್ದರೆ ಯಾವ ಅಪಕೀರ್ತಿಯ ಭಯವೂ ಇಲ್ಲದೇ ನಾನು ಉತ್ತರಿಸ ಬಲ್ಲೆ…. ( ಪೋಪ್ ಬೋನಿಫೇಸ್ VIII ನ ಸಲಹೆಗಾರ ಗ್ಯಿಡೋಡಾ ಮಾ೦ಟೆ ಫೆಲ್ಟ್ರೋ ಡಾ೦ಟೆ ಗೆ ನರಕದಲ್ಲಿ ಹೇಳಿದ್ದು) ಹಾಗಿದ್ದರೆ ನಡಿ ನಾವಿಬ್ಬರೂ ಹೊರಡೋಣ ಇನ್ನು ಟೇಬಲ್ಲಿನ ಮೇಲೆ ಅರಿವಳಿಕೆ ಔಷಧಿಗೆ ಮೈ ಮರೆತು ಮಲಗಿರುವ ರೋಗಿಯಂತೆ ಸಂಜೆ ಹರಡಿರುವಾಗ ಬಾನಿನ ತುಂಬ ಹಾದು ಹೋಗೋಣ ನಡಿ ಅರ್ಧ ಬರಿದಾದ ಬೀದಿಗಳನ್ನ, ಅಶಾಂತ ರಾತ್ರಿಗಳ ಪಿಸುಮಾತಿನ ಅಡಗು ತಾಣಗಳಾದ ಒಂದು ರಾತ್ರಿಯ ಕಳಪೆ ಹೋಟೆಲುಗಳನ್ನ, ಮೃದ್ವಂಗಿ ಕಪ್ಪೆ ಚಿಪ್ಪುಗಳ ಕೊಳಕು ರೆಸ್ಟೋರಂಟುಗಳನ್ನ ಚಕಿತಗೊಳಿಸುವ ಪ್ರಶ್ನೆಗಳೆಡೆಗೆ ನಿನ್ನನ್ನು ಕರೆದೊಯ್ವ ಕುಟಿಲ ವಾದಗಳ ಹಾಗೆ ನಿನ್ನನ್ನು ಬಳಲಿಸುವ ಬೀದಿಗಳನ್ನ. ಓಹ್! ಕೇಳ ಬೇಡ ಇದೇನೆಂದು ಖುದ್ದಾಗಿ ಹೋಗಿ ನೋಡೋಣ ಬಾ. ಕೋಣೆಯೊಳಗೆ ಹೆಂಗಸರು ಬಂದು ಹೋಗುತ್ತಿದ್ದಾರೆ ಮೈಖೆಲೇಂಜಲೋನ ಬಗ್ಗೆ ಮಾತನಾಡುತ್ತಾ. ಹಳದಿ ಮಂಜು ಬೆನ್ನುಜ್ಜುತ್ತಿದೆ ಕಿಟಕಿ ಗಾಜಿನ ಮೇಲೆ ಹಳದಿ ಹೊಗೆ ಮೂತಿ ಉಜುತ್ತಿದೆ ಕಿಟಕಿ ಗಾಜಿನ ಮೇಲೆ ನಾಲಿಗೆಯಿಂದ ನೆಕ್ಕಿತದು ಸ೦ಜೆಯ ಮೂಲೆ ಮೂಲೆಗಳನ್ನ. ಸುಳಿದಾಡಿತದು ಕೊಳಕು ನೀರು ಮಡುಗಟ್ಟಿನಿ೦ತ ಚರಂಡಿಗಳ ಮೇಲೆ ತಾರಸಿಯಿಂದ ಕಾಲು ಜಾರಿ ಅನಿರೀಕ್ಷಿತ ನೆಗೆಯಿತದು ಕೆಳಗೆ ಅಕ್ಟೋಬರಿನ ಹಿತಕರ ಸಂಜೆಯನ್ನು ನೋಡಿ ಸುತ್ತಿ ಕೊಂಡಿತದು ಮತ್ತೆ ಮನೆಯ ಸುತ್ತಾ. ಹಾಗೆಯೇ ನಿದ್ದೆ ಹೋಯಿತು. ನಿಜಕ್ಕೂ ಕಾಲವಿದೆ ಮು೦ದೆ ಕಿಟಕಿ ಗಾಜುಗಳಿಗೆ ಬೆನ್ನುಜ್ಜುತ್ತಾ ಬೀದಿಯಲ್ಲಿ ಹಾಯ್ದು ಹೋಗುವ ಹಳದಿ ಹೊಗೆಗೆ ಕಾಲವಿದೆ ಮುಂದೆ, ಖಂಡಿತಾ ಕಾಲವಿದೆ ಮುಂದೆ ನೀನು ಭೇಟಿ ಮಾಡುವ ಮುಖಗಳನ್ನು ಭೇಟಿ ಮಾಡುವ ಮುಖವೊಂದನ್ನು ಸಜ್ಜುಗೊಳಿಸಲು ಕಾಲವಿದೆ ಮುಂದೆ ಹತ್ಯೆಗಯ್ಯಲು ಮತ್ತು ಸೃಷ್ಟಿಸಲು ಕಾಲವಿದೆ, ಧುತ್ತನೇ ಪ್ರಶ್ನೆಯೊಂದನ್ನೆತ್ತಿ ನಿನ್ನ ತಟ್ಟೆಗೆ ಹಾಕುವ ಕೈಯ ಕೆಲಸಗಳಿಗೆ ಮತ್ತು ಅದರ ದಿನಗಳಿಗೆ. ನಿನಗೂ ಸಮಯವಿದೆ , ನನಗೂ ಸಮಯವಿದೆ ಮತ್ತು ಸಮಯವಿದೆ ಇನ್ನೂ ನೂರು ಅನಿಶ್ಚತತೆಯ ತೊಳಲಾಟಗಳಿಗೆ ಮತ್ತು ನೂರು ದಾರ್ಶನಿಕತೆಗೆ, ಮತ್ತು ಪುನರಾವಲೋಕನಕ್ಕೆ ಕಾಲವಿದೆ ಎಲ್ಲದಕ್ಕೂ ಚಹ ಮತ್ತು ಟೋಸ್ಟ್ ಗಳನ್ನು ಸೇವಿಸುವ ಮೊದಲು. ಕೋಣೆಯಲ್ಲಿ ಹೆಂಗಸರು ಬ೦ದು ಹೋಗುತ್ತಿದ್ದಾರೆ ಮೈಖೆಲೇಂಜಲೋನ ಬಗ್ಗೆ ಮಾತನಾಡುತ್ತಾ. ನಿಜಕ್ಕೂ ಕಾಲವಿದೆ ಮು೦ದೆ ನನಗೆ ಎದೆಗಾರಿಕೆ ಇದೆಯೇ? ಇದೆಯೇ ನನಗೆ ಎದೆಗಾರಿಕೆ! ಎಂದು ಅಚ್ಚರಿ ಪಡಲು. ಕಾಲವಿದೆ, ಕೂದಲುಗಳ ನಡುವೆ ಇಷ್ಟಗಲ ಬೋಳಾದ ತಲೆ ಹೊತ್ತು ಹಿಂದಿರುಗಿ ಮೆಟ್ಟಿಲುಗಳನ್ನಿಳಿಯಲು. ( ಹೇಳುತ್ತಾರವರು : ಅವನ ತಲೆಗೂದಲು ಎಷ್ಟು ತೆಳುವಾಗುತ್ತಿದೆ ! ) ನನ್ನ ಬೆಳಗಿನ ಕೋಟು, ಗದ್ದಕ್ಕೆ ತಗುಲುವ೦ತೆ ಸೆಟೆದು ನಿ೦ತ ನನ್ನ ಕಾಲರ್, ದುಬಾರಿ ಬೆಲೆಯ ಆದರೆ ಸರಳವಾದ, ಸಾಧಾರಣ ಪಿನ್ ನಿಂದ ಧೃಡವಾಗಿ ನಿ೦ತ ನನ್ನ ನೆಕ್ ಟೈ ( ಹೇಳುವರು ಅವರು : ಅವನ ಕೈ ಕಾಲುಗಳು ಅದೆಷ್ಟು ಬಡಕಲಾಗಿವೆ!) ಎದೆಗಾರಿಕೆ ಇದೆಯೆ ನನಗೆ ಲೋಕವನ್ನೇ ಅಲ್ಲೋಲ ಕಲ್ಲೋಲ ಗೊಳಿಸಲು? ಕ್ಷಣದಲ್ಲೇ ಕಾಲವಿದೆ ತೆಗೆದು ಕೊಳ್ಳುವ ತೀರ್ಮಾನಗಳಿಗೆ ಮತ್ತು ಪುನರ್ವಿಮರ್ಷಿತ ಮರು ತೀರ್ಮಾನಗಳಿಗೆ ಮತ್ತು ಮರುಕ್ಷಣವೇ ಅವುಗಳ ಬದಲಾವಣೆಗೆ. ಲಾಗಾಯ್ತಿನಿಂದಲೇ ಗೊತ್ತಿದ್ದಾರೆ ಅವರೆಲ್ಲ ನನಗೆ. ಗೊತ್ತಿದ್ದಾರೆ ಅವರೆಲ್ಲ. ನಾ ಬಲ್ಲೆ ಸಂಜೆಗಳನ್ನು , ಬೆಳಗುಗಳನ್ನು, ಮಧ್ಯಾಹ್ನಗಳನ್ನು.

ಕಾವ್ಯ ವಿಶ್ಲೇಷಣೆ Read Post »

ಇತರೆ, ಜೀವನ

ಲಹರಿ

ಹಾಡುಗಳು ಹೀಗೆ…. ಜಿ.ಲೋಕೇಶ್ ಈ ಬದುಕಿನ ಒತ್ತಡಗಳನ್ನು ನಿಭಾಯಿಸುವವರು ತಾವು ಅದರಿಂದ ಮುಕ್ತರಾಗಲು ತಾವು ತಾವಾಗಿಯೇ ಇರಲು ಹಲವು ದಾರಿಗಳನ್ನು ಕಂಡುಕೊಳ್ಳುತ್ತಾರೆ.ಅದರಲ್ಲಿ ಸಂಗೀತವಂತು ಮನಸ್ಸಿಗೆ ಹಬ್ಬ ನೀಡುವ ಬೆಳಕು.ಹಾಡುಗಳನ್ನು ಗುನುಗುತ್ತಾ ಅವುಗಳೊಡನೆ ದಿನ ದೂಡುವ ಎಷ್ಟೋ ಮನಸ್ಸುಗಳಿವೆ. ಕೆಲವು ಹಾಡುಗಳಂತು ಎಷ್ಟು ಕಾಡುತ್ತವೆ ಅಂದರೆ ಬಹುಶಃ ಅವು ನಮ್ಮ ಬದುಕಿನುದ್ದಕ್ಕೂ ಜೊತೆಗೆ ಇದ್ದು ಬಿಡುತ್ತವೆ.ನಮ್ಮೊಂದಿಗೆ, ನಮ್ಮೊಡನೆ,ನಮ್ಮ ಜೀವನದ ಘಟನೆಗಳೊಡನೆ ತಳಕು ಹಾಕಿಕೊಂಡಿರುತ್ತವೆ.ಅದರಲ್ಲಿ ಪ್ರೇಮಿಗಳಿಗಂತು ಹಾಡುಗಳು ವರದಾನ. ಅಂತಹ ಪ್ರೇಮಿ ಹೀಗೆ ತನ್ನ ಜೀವನವನ್ನು ತನ್ನ ಪ್ರಿಯತಮೆಗಾಗಿ ಮೀಸಲಿಡಬಹುದು. “ತೇರೆ ಮೇರೆ ಸಪ್ನೆಅಬ್ ಏಕ್ ರಂಗ್ ಹೈ!”ವಾಹ್ ಎಂತಹ ಅದ್ಭುತ ಸಾಲುಗಳು ಅವಳ ಕನಸುಗಳು, ಇವನ ಕನಸುಗಳು ಒಂದೇ ಬಣ್ಣದಲ್ಲಿವೆ. ಸಾಕಲ್ಲವೇ?ಮನಸ್ಸಿಗೆ ಇನ್ನೇನು ಬೇಕು? ಸರ್ವ ಋತುವು ವಸಂತವೇ, ಚಿಗುರೆಲೆಯ ಘಮಲೇ!” “ದೂರ ಬೆಟ್ಟದಲ್ಲಿ ಒಂದು ಮನೆಯಿರಬೇಕು,ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು”ಈ ಹಾಡಿನ ಸಾಲುಗಳು ಅವನು ಅವಳು ಕಂಡ ಕನಸುಗಳನ್ನು ಪ್ರತಿ ಕ್ಷಣವನ್ನು ನೆನಪಿಸುತ್ತಿರುತ್ತದೆ .ಅವರದೇ ಕನಸಿನ ಮನೆಯನ್ನು ಈ ಸಮಾಜದ ಗೊಡವೆಯೇ ಇರದ ದೂರದ ಬೆಟ್ಟದಲ್ಲಿ ಮನೆ ನಿರ್ಮಿಸಿ ಹಾಸಿ ಹೊದಿಯಲು ಕನಸುಗಳು. ಇವನಿಗೆ ಅವಳು, ಅವಳಿಗೆ ಇವನು .ಹಾಸಿ ಹೊದಿಯಲು ಕನಸುಗಳು. ಮುದಿತನದ ದಿನಗಳವರೆಗೂ ಇಬ್ಬರೇ! ಮಕ್ಕಳು ಬೇಡವೇ ಎನ್ನುತ್ತಾಳೆ ಅವಳು ಹಾಡುಗಳನ್ನು ಕೇಳಿ, ಕೇಳಿ ಇವನೆ ಒಂದು ಸಾಲು ಹೇಳುತ್ತಾನೆ “ಮಗುವಿನಂತೆ ನೀನಿರಲುಮಕ್ಕಳು ಬೇಕೆ? ಜೊತೆಗಿರಲು”ಮನೆಯ ಸುತ್ತಲೂ ಹೂವು ರಾಶಿ ಹಾಸಿಕೊಂಡು ದಿನವು ಇವರನ್ನು ನೋಡಿ ನಗುತಿರಬೇಕು. ಮನೆಯ ಮುಂದೆ ಹೊಂಡ ನಿರ್ಮಿಸಿ ಅದರಲ್ಲಿ ಕಮಲದ ಹೂಗಳು ಬಾತುಕೋಳಿಗಳು ಒಂದಷ್ಟು ವಿವಿಧ ಜಾತಿಯ ಹಕ್ಕಿಗಳು. ಹೊಸ ಪ್ರಪಂಚವನ್ನೇ ನಿರ್ಮಾಣ ಮಾಡಿ ಬದುಕು ಸಾಗಬೇಕು.ಆಕಸ್ಮಾತ್ ಅವಳಿಗೆ ನೋವಾದರೆ ಹೇಳುತ್ತಾನೆ “ನೀನ್ಯಾತಕೆ ಬಾಡುವೆ ಸೊರಗಿನಾನಿಲ್ಲವೇ ಆಸರೆಯಾಗಿ”ಅವಳನ್ನು ತೊಡೆಯ ಮೇಲೆ ಇರಿಸಿ ತಲೆ ನೇವರಿಸುತ್ತಾ ಕಂಗಳ ಹನಿಗಳನ್ನು ತಡೆಯುವನು ಕೊನೆಗೆ ಅವಳ ಅನುಪಸ್ಥಿತಿ ಕಾಡಿ ಹೇಳುತ್ತಾನೆ “ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಿಅದರ ಮಧುರ ಸ್ಮೃತಿಯ ನಾನುಹೇಗೆ ತಾನೇ ಮರೆಯಲಿ.”ಎಂದು ನೋವು ತಡೆದು ಪ್ರತಿದಿನವೂ ಬದುಕು ದೂಡುತ್ತಾನೆ. ಅವನ ಬದುಕಿನ ಪುಟವು ಕೊನೆಯಾಗ ಬಂದಾಗ “ಒಲವೇ ಜೀವನ ಸಾಕ್ಷಾತ್ಕಾರಒಲವೇ ಮರೆಯದ ಮಮಕಾರ.”ಎಂದು ಜಗವು ಇವರ ರೀತಿಯ ಪ್ರೀತಿ ಕಂಡಿಲ್ಲದಂತೆ ಅಮರವಾಗಿಸುತ್ತಾನೆಕೊನೆಗೆ ಒಂದು ಉಯಿಲು ಬರೆದಿಡುತ್ತಾನೆ. ದಿನವೂ ನಮ್ಮ ಸಮಾಧಿಯ ಮುಂದೆ ಹೂಗಳು ನಲಿಯುತ್ತಿರಲಿ. ನಮ್ಮ ಕನಸುಗಳು ಮುಂದುವರಿಯಲು ಮತ್ತೊಂದು ಜೀವಾತ್ಮಗಳು ಮನೆಯನ್ನು ಸಿಂಗರಿಸಲಿಅವರ ಬೆಳಗುಗಳು ಮತ್ತಷ್ಟು ಹೊಸ ಹಾಡುಗಳೊಂದಿಗೆ ಪ್ರಾರಂಭವಾಗಲಿ ಎಂದು! ************* ಜಿ.ಲೋಕೇಶಶಿಕ್ಷಕರುಸ.ಹಿರಿಯ ಪ್ರಾಥಮಿಕ ಶಾಲೆ ಮೈಲಾಪುರಚಿಂತಾಮಣಿ ತಾಲೂಕುಚಿಕ್ಕಬಳ್ಳಾಪುರ ಜಿಲ್ಲೆ563125# 9731549945

ಲಹರಿ Read Post »

ಇತರೆ

ಶಿಶು ಗೀತೆ

ಪುಟ್ಟನ ಮನೆ ತೇಜಾವತಿ ಹೆಚ್.ಡಿ. ಒಮ್ಮೆ ಪುಟ್ಟಅಮ್ಮನೊಡನೆಸಾಗರ ನೋಡಲೋದರಾಶಿ ರಾಶಿಉಸುಕು ಕಂಡುಕುಣಿದು ಕುಣಿದು ಹಿಗ್ಗಿದ || ಪುಟ್ಟ ನುಣುಪುಉಸುಕಿನಲ್ಲಿಚಂದ ಮನೆಯ ಕಟ್ಟಿದಅಲೆಯು ಬಂದುಕೊಚ್ಚಿ ಹೊಯ್ದುಅಮ್ಮಾ! ಎಂದು ಕೂಗಿದ || ಅಮ್ಮ ಬಂದುಹೇಳು ಕಂದಏಕೆ ಅಳುವೆ ಎನ್ನಲುನೋವಿನಿಂದಉರುಳಿ ಬಿದ್ದಮನೆಯ ತೋರಿ ಹಲುಬಿದ || ಕೇಳು ಮಗನೆಏಕೆ ಅಳುವೆಮರಳ ಮನೆಯು ಕ್ಷಣಿಕವುನೀನು ಕಟ್ಟುಮನದ ಮನೆಯಆತ್ಮ ಛಲವು ಜೊತೆಗಿದೆ || ಒಡನೆ ಪುಟ್ಟಎದ್ದು ನಿಂತುಅಮ್ಮನಪ್ಪಿ ಹೇಳಿದಬಿಡೆನು ನಾನುನಿನ್ನ ಮಾತಒಪ್ಪಿಕೊಂಡೆ ಎಂದನು || ಮಗನ ನುಡಿಯಕೇಳಿ ಅಮ್ಮಪ್ರೀತಿ ಧಾರೆ ಎರೆದಳುಮಿಂದ ಪುಟ್ಟಮಡಿಲ ಸುಖದಿಹೊಸತು ಕನಸ ಕಂಡನು || ಊರಿನಲ್ಲಿಗೆಳೆಯರೊಡನೆಜೀವ ಭಾವ ಹುಡುಕಿದತಂದು ಎಲ್ಲಕೂಡಿ ಕಳೆದುಮನದ ಮನೆಯ ಕಟ್ಟಿದ || ಅಮ್ಮ ನೀನುಬಂದು ನೋಡುಎಂದು ಮುದದಿ ಓಡಿದನೋಡಿ ಅವಳುಶ್ರಮದ ಫಲವು  ದೊರೆವುದೆಂದು ನುಡಿದಳು || ಅಂದಿನಿಂದಪುಟ್ಟ ತಾನುಕೋಟಿ ಕನಸ ಕಂಡನುಬಿಡದೆ ಹಿಡಿದುತನ್ನ ಛಲವದೊಡ್ಡ ಜಾಣನಾದನು || ***********

ಶಿಶು ಗೀತೆ Read Post »

ಇತರೆ

ಪ್ರಬಂಧ

ಸ್ವಚ್ಛ ಭಾರತ ನಂದಿನಿ ಹೆದ್ದುರ್ಗ ಇದು ಸುಮಾರು ಮುವ್ವತ್ತು-ಮುವ್ವತ್ತೈದು ವರ್ಷಗಳ ಹಿಂದಿನ ಮಾತು.ಆಗೆಲ್ಲಾ ಹಳ್ಳಿಗೊಂದು ಪ್ರಾಥಮಿಕ ಶಾಲೆ ಇರುತ್ತಿದ್ದೇ ಹೆಚ್ಚು . ಇನ್ನೂ ಶೌಚಾಲಯ, ಬಿಸಿಯೂಟ ಕನಸಲ್ಲೂ ಯೋಚಿಸುವ ಹಾಗಿಲ್ಲ.ನಾವು ಮೂರೂ ಮಕ್ಕಳು ನಾಲ್ಕನೆ ತರಗತಿ ಮುಗಿದಾಗ ಹತ್ತು ಕಿಮಿ ಆಚೆ ಇರುವ ಸಣ್ಣ ಪಟ್ಟಣಕ್ಕೆ ಮಿಡಲ್ ಸ್ಕೂಲ್ ಗೆ ಹೊಗುತ್ತಿದ್ದೇವೆ.ನಾವು ಮಾತ್ರವಲ್ಲ..ಪ್ರತಿ ಜಿಲ್ಲೆಯ ಸಣ್ಣಸಣ್ಣ ಹಳ್ಳಿಗಳಮಕ್ಕಳದ್ದೂ ಇದೇ ಪಾಡು.ಆಗೆಲ್ಲಾ ದಾರಿಯಲ್ಲಿ ಅವಸರವಾದರೆ ಗಂಡು ಹುಡುಗರನ್ನ ಕಾವಲಿಗೆ ನಿಲ್ಲಿಸಿ ನಾವು ಪಕ್ಕದ ಕಾಫಿ ತೋಟದಲ್ಲಿ ನೀರಾವರಿ ಮುಗಿಸಿ ಬರ್ತಿದ್ದೆವು.ವ್ಯವಸ್ಥೆ ಇರದಿದ್ದರೂ ಸಂಕೀರ್ಣತೆ ಇರಲಿಲ್ಲ.ಯಾವ ಆನೆ ಚಿರತೆಗಳೂ ಆಗ ದಾಳಿ‌ಮಾಡುತ್ತಿರಲಿಲ್ಲ.ಕಾಮದ ಹಸ್ತಗಳು ಪುಟ್ಟ ಮಕ್ಕಳನ್ನು ಮುಟ್ಟುತ್ತಿರಲಿಲ್ಲ.ಯಾವ ರೋಗಗಳೂ ಅಷ್ಟು ಹರಡುತ್ತಿರಲಿಲ್ಲ.ಅಥವಾ ಈಗಿನಷ್ಟು ವಿಪರೀತ ಆಗಿರಲಿಲ್ಲ.ಹಾಗಾಗಿಯೇ ಕಾಡಹಾದಿಯಲ್ಲಿ ಒಬ್ಬಿಬ್ಬರು ಮಕ್ಕಳೂ ಧೈರ್ಯವಾಗಿ ಶಾಲೆಗೆ ಹೋಗಿಬರುತ್ತಿದ್ದರು.ಬಿಡಿ.ಅದಲ್ಲ ವಿಷಯ. ಇಡೀ ದೇಶಾದ್ಯಂತ ಸ್ವಚ್ಚತೆಯೇ ಪರಮೋಚ್ಚ ಗುರಿ ಎನ್ನುವ ಗುರಿಯೂ ದೊರೆಯೂ ಬಂದ‌ಮೇಲೆ ಪ್ರತಿ ಪುಟ್ಟ ಹಳ್ಳಿಯ ಶಾಲೆಗಳಿಗೂ ಒಂದೋ ಎರಡೋ ಶೌಚಾಲಯ, ನೀರಿನ ವ್ಯವಸ್ಥೆ, ಬಿಸಿಯೂಟ ವ್ಯವಸ್ಥೆ ಎಲ್ಲವೂ ಆಗಿ ಇನ್ನೇನು ಹಳ್ಳಿಯ ಮಕ್ಕಳು ಕೆರೆ ಬದಿಗೆ,ಪೊದೆಯ ಹಿಂದುಗಡೆ, ಮರೆ ಅರಸಿ ಶೌಚಕ್ಕೆ ಕೂರುವ ಕರ್ಮ ಕೊನೆಯಾಗಿ ಹೆಣ್ಣುಮಕ್ಕಳ ಆರೋಗ್ಯವೂ ಮರ್ಯಾದೆಯೂ ಸುಧಾರಿಸಿತೆಂಬ ಭರವಸೆಯಲಿದ್ದಾಗಲೇ ಪಕ್ಕದ ತಾಲೂಕಿನ ಪುಟ್ಟ ಹಳ್ಳಿಯ ಶಾಲಾ ಕಾರ್ಯಕ್ರಮವೊಂದಕ್ಕೆ ಆಹ್ವಾನ ಬಂತು. ಹೋದೆ. ಸಣ್ಣ ಕುರುಚಲು ಕಾಡಿನಂತ ಒಂದು ಸರಕಾರಿ ಜಮೀನಿನ ಮಧ್ಯಭಾಗವನ್ನು ಸಪಾಟು ಗೊಳಿಸಿ ಶಾಲಾ ಕಟ್ಟಡ ನಿರ್ಮಾಣವಾಗಿತ್ತು.ಶಾಲೆ ಪಕ್ಕದಲ್ಲೇ ಶೌಚಾಲಯ, ಗಂಡು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ವ್ಯವಸ್ಥೆ. ನೀರಿನ ತೊಟ್ಟಿ, ಬಿಸಿಯೂಟದ ಕೋಣೆ ಎಲ್ಲವೂ ವ್ಯವಸ್ಥಿತವಾಗಿತ್ತು. ಹಳೆಯ ಶಾಲೆಗಳನ್ನು ‌ನೆನಪಿಸಿಕೊಂಡು ಹೊಸ ವ್ಯವಸ್ಥೆಗಳ ಅಚ್ಚುಕಟ್ಟುತನ ಪ್ರಸ್ಥಾಪಿಸುವಾಗಲೇ ಪುಟ್ಟ ಹುಡುಗಿಯೊಂದು ತನ್ನ ಕಿರುಬೆರಳ ಮೇಲಕ್ಕೆತ್ತಿ ನಿಂತುಕೊಂಡಳು.ಮೇಷ್ಟ್ರು ಗದರುತ್ತಲೇ ದೊಡ್ಡ ಹುಡುಗಿ ಜೊತೆಮಾಡಿ ಕಳಿಸಿದರು. ಅವರಿಬ್ಬರೂ ಶಾಲೆಯ ಹಿಂಬದಿಯ ಸಣ್ಣ ಪೊದೆಯ ಬಳಿ ಹೋದರು..ಅಚ್ಚರಿಯಾಯ್ತು.ಕಾರ್ಯಕ್ರಮ ‌ಮುಗಿಸಿ ಊಟಮಾಡುವ ಮೊದಲು ಕೈ ತೊಳೆಯಲು ಟ್ಯಾಂಕಿನ ನಲ್ಲಿ ತಿರುಗಿಸ ಹೋದವಳಿಗೆ ಅದು ಬಹಳ‌ ಪುರಾತನ ಕಾಲದಲ್ಲೇ ಚಲನೆ ನಿಲ್ಲಿಸಿ ಸ್ತಬ್ಧವಾಗಿರುವುದರ ಕುರುಹು ಅಲ್ಲೆಲ್ಲ ಗೋಚರಿಸಿದ್ದು‌ ನೋಡಿ ಸುತ್ತ ನೋಡಿದೆ. ಮಕ್ಕಳು ಸಣ್ಣಸಣ್ಣ ಗುಂಪಿನಲ್ಲಿ ಶಾಲೆಯ ಹಿಂಬದಿಯ ಕುರುಚಲು ಕಾಡಿಗೆ ಹೋಗಿ‌ಬರ್ತಿರೋದು ನೋಡಿದಾಗ ಏನೋ ಸರಿಯಿಲ್ಲವೆನಿಸಿತು.ಆಗಲೆ ಅಲ್ಲಿ ಬಂದ ಟೀಚರಮ್ಮ ‘ಅಲ್ಲಿ‌ನೀರು ಬರ್ತಿಲ್ಲ .ಬನ್ನಿ. ಇಲ್ಲೇ ಬಾಟಲಿ ನೀರಿನಲ್ಲಿ ಕೈ ತೊಳೆಯಿರಿ ಎಂದಾಗ ಅಚ್ಚರಿ ಯಿಂದಹಾಗಾದರೆ ಟಾಯಲೆಟ್ ಗೆ‌ ನೀರು.?ಎಂದೆ.ಇಲ್ಲಿ ಯಾವುದಕ್ಕೂ ನೀರಿಲ್ಲ ಮೇಡಮ್.ಕೇವಲ ಟ್ಯಾಂಕಿದೆ ಅಷ್ಟೆ.ಮೊದಮೊದಲು ಸ್ವಲ್ಪ ಬಿಡ್ತಿದ್ರು .ಈಗ ಅದೂ ಇಲ್ಲ.ಹಾಗಾಗಿ‌‌ ಮಕ್ಕಳು ಹಿಂಬದಿಯ ಪೊದೆಗೇಹೋಗ್ತಾರೆ.ಇದೂ ಒಂಥರ ಸರಿಯೇಆಯ್ತು.ಸ್ವಲ್ಪ ನೀರು ಬಿಡ್ತಿದ್ದಾಗಟಾಯ್ಲೆಟ್ ಬಳಸಿ ಸರಿಯಾಗಿ ಸ್ವಚ್ಛ ವಾಗದೇ ಶಾಲೆಯ ಪರಿಸರವೇ ಹಾಳಾಗಿತ್ತು.ಹಳ್ಳಿ ಮಕ್ಕಳು.ಎಷ್ಟೇ ಹೇಳಿಕೊಟ್ಟರೂ ಶೌಚಾಲಯ ಬಳಕೆ ಅವರಿಗೆ ಕಷ್ಟವೂ ಆಗಿತ್ತು..ಇನ್ನೇನು ಈ ಅಭ್ಯಾಸ ರೂಢಿಸಿಕೊಳ್ತಾರೆ ಎನ್ನುವಾಗ ನೀರು‌ ಬಂದ್ ಆಯ್ತು.ಹೆಣ್ಣಮಕ್ಕಳನ್ನ ದೂರಕ್ಕೆ ಕಳಿಸುವಾಗ ತುಸು ಭಯವೂ ಇರ್ತದೆ.ಆದರೆ ಏನ್ಮಾಡೋದು‌ ಹೇಳಿ.ಯಾರನ್ನೂ ದೂರಿ ‌ಫಲವಿಲ್ಲ.ಇಲ್ಲಿನ ಸ್ಥಳೀಯ ಜನ ಪ್ರತಿನಿಧಿ ಬೇರೆ ಪಕ್ಷ .ಸರ್ಕಾರಕ್ಕೆ ಸಮಸ್ಯೆ ತಲುಪಿಸುವುದರಲ್ಲಿ ಅಂತಹ ಆಸಕ್ತಿಯೂ ಇಲ್ಲ. ತಲುಪಿಸಿದರೂ ಪಕ್ಷ ಬೇರೆ ಇರುವುದರಿಂದ ಈಡೇರುವ ಭರವಸೆಯೂ ಇಲ್ಲ.ಒಮ್ಮೆ ಇಲ್ಲೇ ಬೋರವೆಲ್ ತೆಗೆಸುವುದಕ್ಕೆ ಬಂದ ಫಂಡ್ ಯಾವ ಯಾವುದೋ ಕಾರಣಕ್ಕೆ ಸದುಪಯೋಗ ಆಗಲೇ ಇಲ್ಲ.ಶಾಲೆ, ಮೀಟಿಂಗು,ಓಡಾಟದಲ್ಲೇ ನಾವು ಕಳೆದುಹೋಗುವುದರಿಂದ ನೀರಿಗಾಗಿ ಅಧಿಕಾರಿಗಳನ್ನು ಸಂಪರ್ಕಿಸುವುದು ಕಷ್ಟವಾಗ್ತಿದೆ.ಈಗ ಊಟ ತಯಾರಿಸಲು ಸಹ ಕೊಡದಲ್ಲಿ ತರಬೇಕು ಅಂತ ಅಸಹಾಯಕತೆ ಹೇಳಿಕೊಂಡರು.ಅಷ್ಟರಲ್ಲಿ ಶೌಚ ಮುಗಿಸಿ ಮಕ್ಕಳು ಬಂದರು.ಮನೆಯಿಂದ ತಂದಿದ್ದ ಬಾಟಲಿ ನೀರು ತಟ್ಟೆ ತೊಳೆಯಲೂ ಬೇಕಿರೋದ್ರಿಂದ ಕೈ ತೊಳೆಯದೇ ಊಟಕ್ಕೆ ಕುಳಿತರು. ಶೌಚಾಲಯದ ‌ಮೇಲೆ ಸ್ವಚ್ಛ ಭಾರತ ಅನ್ನುವ ಪದಗಳಿದ್ದವು.ಯಾಕೊ ಸ್ವಚ್ಛವೊಂದು ಕಡೆ,ಭಾರತವೊಂದು ಕಡೆ ಇರಬೇಕಾ ಅನಿಸಿತು. ************

ಪ್ರಬಂಧ Read Post »

ಇತರೆ, ಜೀವನ

ಇತರೆ

ಮರುಕ ಹುಟ್ಟುತ್ತದೆ ವಿದ್ಯಾ ಶ್ರೀ ಎಸ್ ಅಡೂರ್ ಕೆಲವು ಸಮಯದ ಹಿಂದೆ ನಾನು ಪಟ್ಟಣದಲ್ಲಿರುವ ನನ್ನ ಗೆಳತಿಯ ಮನೆಗೆ ಹೋಗಿದ್ದೆ. ಬಾಲ್ಯದ ಗೆಳತಿ.ನಾನು ಮದುವೆಯಾಗಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಶಿಫ್ಟ್ ಆಗಿದ್ದರೆ, ಆಕೆಯೋ ನನ್ನೊಂದಿಗೆ ಹಳ್ಳಿಯಲ್ಲಿ ನನ್ನೆಲ್ಲ ತುಂಟತನಗಳಿಗೆ ಜತೆಯಾಗಿದ್ದವಳು, ಮದುವೆಯಾಗಿ ಮಹಾನಗರವನ್ನು ಸೇರಿ “ಸಿಟಿವಂತ“ಳಾಗಿದ್ದಳು. ಅನೇಕ ವರ್ಷಗಳಿಂದ ಭೇಟಿಯಾಗಿರದಿದ್ದ ನನಗೆ ಮಜಬೂತು ಖಾತರ‍್ದಾರಿಯ ಪ್ಲಾನ್ಮಾಡಿಕೊಂಡಿದ್ದಳು.ಆತ್ಮೀಯತೆಯಿಂದ ನನ್ನನ್ನು ಬರಮಾಡಿಕೊಂಡು ಮಾತಿನಲ್ಲಿ ಮೈಮರೆತಿದ್ದವಳು ಅಚಾನಕ್ಕಾಗಿ ನಾಲಿಗೆ ಕಚ್ಚಿಕೊಂಡು ತನ್ನ ಏಳೆಂಟು ವರ್ಶದ ಮಗಳನ್ನು ಬಳಿಗೆ ಕರೆದು ಕಿವಿಯಲ್ಲಿ ಏನೋ ಪಿಸುಗುಟ್ಟಿದಳು. ಮರುಕ್ಷಣವೇ ಆ ಹುಡುಗಿ ಮನೆಯಿಂದ ಹೊರಗೋಡಿ ಸ್ವಲ್ಪ ಹೊತ್ತಿಗೆ ವಾಪಾಸಾಗಿದ್ದನ್ನು ನಾನು ಕಡೆಗಣ್ಣಿನಲ್ಲಿ ಗಮನಿಸಿದೆ. ಇಡೀದಿನ ಗೆಳತಿಯ ಆದರಾಥಿತ್ಯವನ್ನು ಸ್ವೀಕರಿಸಿ ದಣಿದಿದ್ದ ನಾನು, ಸ್ವಲ್ಪ ಹೊತ್ತು ಆರಾಮಾಗಿ ಕೂತಿರುವಾಗ ಆಕೆಯ ಮಗಳು ನನ್ನ ಜತೆಗೆ ಬಂದು ಕುಳಿತಳು.ನನಗೋ ತಡೆಯದೆ, “ಆಗ ಅಮ್ಮ ನಿನ್ನ ಬಳಿ ಏನು ಹೇಳಿದುದಕ್ಕೆ ನೀನು ಹೊರ ಹೋಗಿಬಂದೆ?” ಎಂದು ಕೇಳಿದೆ. ಮಾತು ತಪ್ಪಿಸಲರಿಯದ ಮುಗ್ಧಮಗು ”ನಮ್ಮ ಮನೆಯ ಫ್ರಿಜ್ಜಿನಲ್ಲಿ ಹಾಲು ಖಾಲಿಯಾಗಿ ಅಮ್ಮನಿಗೆ ತರುವುದು ಮರೆತಿತ್ತು. ಅದಕ್ಕೆ ಪಕ್ಕದ ಮನೆಯ ಆಂಟಿಯ ಫ್ರಿಜ್ಜಿನಿಂದ ಹಾಲು ಇಸಿದುಕೊಂಡು ಬರಲು ಅಮ್ಮ ಕಳಿಸಿದ್ಲು“ ಎಂದು ಹೇಳಿತು. ನಾನು ಪುನಃ ಕುತೂಹಲ ತಡೆಯದೆ ಫ್ರಿಜ್ಜಿಗೆ ಹಾಲು ಎಲ್ಲಿಂದ ಬರುತ್ತೆ ಎಂದು ಕೇಳಿದೆ. ಅದಕ್ಕೆ ಮಗು ”ರಾತ್ರಿ ಮಲಗುವಾಗ ಬಾಗಿಲು ಹತ್ರ ಚೀಟಿ ಹಾಕಿದ್ರೆ, ಬೆಳಿಗ್ಗೆ ಬಾಗಿಲು ತೆಗೆಯುವಷ್ಟರಲ್ಲಿ ಹಾಲು ಬಂದಿರುತ್ತೆ “ಎಂದು ಹೇಳಿತು. ಮನದಲ್ಲಿ ಇನ್ನೂ 2-3 ಪ್ರಶ್ನೆಗಳಿದ್ದರೂ,ಅವುಗಳು ಆ ಮಗುವಿನ ಜ್ಞಾನಕ್ಕೆ ನಿಲುಕದ್ದು ಎಂದು ಸುಮ್ಮನಾದೆ. ಗೆಳತಿಯ ಜತೆ ಬಾಲ್ಯದ ನೆನಪುಗಳನ್ನು ಪುನಃ ಒಮ್ಮೆ ಹಸಿರಾಗಿಸಿ ಸಂಜೆಗೆ ನಮ್ಮೂರಿನ ಬಸ್ಸು ಹತ್ತಿದವಳಿಗೆ “ಫ್ರಿಜ್ಜಿನಹಾಲಿನಮೂಲ” ಮನದಾಳದಲ್ಲಿ ದಾರಿ ಹುಡುಕತೊಡಗಿತ್ತು. ಸರಿಯಾಗಿ ನೆನಪಿಲ್ಲವಾದರೂ ಅಂದಾಜು ನಾನು 2-3ನೇ ತರಗತಿಯಲ್ಲಿರುವಾಗಲೊಮ್ಮೆ ನಮ್ಮ ತಾತ ನಮ್ಮ ಮನೆಗೆ ಬಂದಿದ್ದಾಗ,ಅವರಿಗೆ ಕಾಫಿ ಮಾಡಲೂ ನಮ್ಮ ಮನೆಯಲ್ಲಿ ಹಾಲಿರಲಿಲ್ಲ. ಬಡತನದ ಅಂದಿನ ದಿನಗಳಲ್ಲಿ ಮೂರು ಮಕ್ಕಳ ತಾಯಿಯಾದ ನಮ್ಮಮ್ಮ, ಕೊಂಡು ತಂದು ನಮಗೆ ಹಾಲು ಕುಡಿಸುವಷ್ಟು ಸಿರಿವಂತೆಯಾಗಿರಲಿಲ್ಲ. ಪರಿಸ್ಥಿತಿಯನ್ನು ಅರ‍್ಥ ಮಾಡಿಕೊಂಡ ನಮ್ಮ ತಾತ ಅಮ್ಮನಿಗೆ “ನೀನು ಮದುವೆಗೂ ಮುಂಚೆ ಹಟ್ಟಿ ತುಂಬಾ ದನಕರುಗಳನ್ನು ಕಟ್ಟಿ, ಸಾಕಿ,ಹಾಲನ್ನುಮಾರಿ,ಮನೆಯಲ್ಲಿ ಹಾಲು, ಮಜ್ಜಿಗೆ, ತುಪ್ಪ ಎಂದು ಸಮೃದ್ಧಿಯನ್ನು ಉಂಟುಮಾಡಿದ್ದವಳು. ಈಗ ನಿನ್ನ ಮಕ್ಕಳಿಗೆ ಹಾಲಿಲ್ಲವೆಂದು ಕೊರಗಬೇಡ. ನಿನ್ನಿಷ್ಟದ ಕರು ಈಗ ಹಸುವಾಗಿ ಯಥೇಚ್ಚ ಹಾಲನ್ನು ನೀಡುತ್ತಿದೆ. ಅದನ್ನು ನಿನ್ನಲ್ಲಿಗೆ ಕಳಿಸಿಕೊಡುತ್ತೇನೆ. ಮಕ್ಕಳು ಹಾಲು, ಮಜ್ಜಿಗೆಯ ಬಣ್ಣ ನೋಡಲಿ ಎಂದಾಗ ಅಮ್ಮ ಮತ್ತು ಅಜ್ಜನ ಕಣ್ಣಾಲಿಗಳು ತುಂಬಿದ್ದವು. ಮಾತಿಗೆ ತಪ್ಪದೇ ಅಜ್ಜ ಹಸುವನ್ನೂ ಅದರ ಕರುವನ್ನೂ ನಮ್ಮಲ್ಲಿಗೆ ಕಳುಹಿಸಿಯೇಬಿಟ್ಟರು .ಅನೇಕ ವರ‍್ಷಗಳಿಂದ ಅಮ್ಮನನ್ನು ನೋಡಿರದಿದ್ದ ಅಮ್ಮನೇ ಸಾಕಿದ್ದಹಸು, ಅಮ್ಮನನ್ನು ನೋಡಿ ಬಾಲ ನಿಮಿರಿಸಿ ಕುಣಿದು ಕುಪ್ಪಳಿಸಿತು .”ಬಂದೆಯಾ ಕುಂಟಿಮಾಚಕ್ಕ” ಎಂದು ಅಮ್ಮ ಹಸುವನ್ನು ಸ್ವಾಗತಿಸಿದಾಗ., ಇದೆಂತ ಹೆಸರು ಎಂಬ ನಮ್ಮ ಪ್ರಶ್ನೆಗೆ, ಕುಳ್ಳಗಿನ ಮಾಚಕ್ಕ ಎಂಬ ಹಸು ಕೊಂಡಾಟದಲ್ಲಿ ಕುಂಟಿಮಾಚಕ್ಕ ಎಂದಾಗಿದೆ ಎಂದರು.ನಮಗಂತೂ ಅದಕ್ಕಾಗಿ ಕಟ್ಟಿದ ಸಣ್ಣ ಹಟ್ಟಿಗೆ ದಿನಕ್ಕೊಂದು ಐವತ್ತು ಸಲ ಹೋಗಿ ಹಸು ಕರುವನ್ನು ನೋಡಿಕೊಂಡು ಬರುವುದೇ ಒಂದು ಸಂಭ್ರಮವಾಯಿತು .ಅಲ್ಲಿಂದ ಮುಂದೆ ನಮಗೆ ಕುಡಿಯಲು ಮಾತ್ರವಲ್ಲದೆ ಮಾರಾಟ ಮಾಡುವುದಕ್ಕೂ ಹಾಲು ಒದಗತೊಡಗಿತು. ಅನಂತರ ಹುಟ್ಟಿದ ಕರುಗಳಿಗೆ ಹೆಸರಿಡುವುದೇ ನಮಗೊಂದು ಸಂಭ್ರಮ. ಮೊದಲು ಹುಟ್ಟಿದವಳೇ ”ಚಿನ್ನಿ”. ಹೆಸರಿಗೆ ತಕ್ಕಂತೆ ಚಿನ್ನದಂತಹ ಹಸು. ನಮ್ಮಿಂದ ಹೆಚ್ಚಿನ ಕೊಂಡಾಟವನ್ನು ಅಪೇಕ್ಷಿಸದ ಅವಳಿಗೆ ತನ್ನ ಕಣ್ಣುಗಳಲ್ಲಿ ಉಕ್ಕುವ ಪ್ರೀತಿಯನ್ನು ಮರೆಮಾಚಲು ಗೊತ್ತಿರಲಿಲ್ಲ. ಅನಂತರ ಪುಟ್ಟಿ…ಬಂಗಾರಿ …ಹೀಗೆ ಸುಮಾರು ಕರುಗಳಾದವು. ಮೊದಲ ಎರಡು ತಿಂಗಳು ಕರುಗಳೆಲ್ಲ ಮನೆಯ ಒಳಗೇ ವಾಸ. ಮನೆಯೊಳಗೆ ಅವಕ್ಕೆ ಬೇಕಾದಲ್ಲಿ ಹೋಗಿ ಕೂರುವುದು, ಮಲಗುವುದು ಮಾಡುತ್ತಿದ್ದವು. ಮುಸ್ಸಂಜೆಗೆ ಎಲ್ಲರೂ ಕೂತು ದೇವರ ಭಜನೆ, ಶ್ಲೋಕ ಹೇಳುವಾಗ ನಮ್ಮ ಬಳಿಯೇ ಬಂದು ಅಂಟಿ ಕೂರುತ್ತಿದ್ದವು. ರಾತ್ರಿ ಚಾಪೆ ಹಾಸಿ ಮಲಗುವಾಗ ನಮ್ಮ ಚಾಪೆಯಲ್ಲೇ ಬಂದು ಮಲಗುತ್ತಿದ್ದವು. ಆದರೆ ಅಸಲಿ ಆಟ ಶುರುವಾಗಿದ್ದೇ ಚಿನ್ನಿ ಕರು ಹಾಕಿದ ನಂತರ.ಆವರೆಗಿನ ಎಲ್ಲಾ ಕರುಗಳೂ ಊರಿನ ತಳಿಯವಾಗಿದ್ದರೆ, ಚಿನ್ನಿ ಹಾಕಿದ ಕರು ಬೇರೆ ತಳಿ. ಉದ್ದಉದ್ದ ಕೈ..ಕಾಲಿನ, ದೊಡ್ಡ ದೊಡ್ಡ ಕಿವಿಯ, ನೀಲಿಕಣ್ಣಂಚಿನ, ಇಟ್ಟಿಗೆಬಣ್ಣದ, ಹಣೆಯ ಮೇಲೆ ಎರಡು ಬಿಳಿಯ ಬೊಟ್ಟುಳ್ಳ, ಬೆಣ್ಣೆಯಂತೆ ನುಣುಪಾದ ಕೂದಲಿನ, ಮುದ್ದು ಮುದ್ದಾಗಿ ಓಡಾಡುತ್ತ ನಮ್ಮ ಮಡಿಲಿನಲ್ಲೇ ಎಂಬಂತೆ ಬಂದು ಕೂರುತ್ತಿದ್ದ ಸುಂದರಿ ಕರುವಿಗೆ ನಾವೆಲ್ಲರೂ ಒಮ್ಮತದಿಂದ ಇಟ್ಟ ಹೆಸರು “ಸಿಂಗಾರಿ”.ನಾವೆಲ್ಲರೂ ಆಕೆ ಧರೆಗಿಳಿದ ಶಾಪಗ್ರಸ್ತ ಅಪ್ಸರೆಯೇನೋ ಎಂಬಂತೆ ಅವಳ ಮೋಹಕ್ಕೆ ಒಳಗಾಗಿದ್ದೆವು. ಸಂಜೆ ಶಾಲೆ ಬಿಟ್ಟಾಗ ಎಲ್ಲಿಯೂ ನಿಲ್ಲದೆ ಓಡೋಡಿ ಬಂದು ಅವಳ ಜೊತೆ ಆಟಕ್ಕೆ ಬೀಳುತ್ತಿದ್ದೆವು. ಸ್ವಲ್ಪ ಸಮಯದ ನಂತರ ಮನೆ ಬಿಟ್ಟು ಆಕೆ ಹಟ್ಟಿಗೆ ಶಿಫ್ಟ್ ಆದಮೇಲೆ ನಾವೆಲ್ಲ ನಮ್ಮ ನಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳತೊಡಗಿದರೆ ಕೊನೆಯವನಾದ ನನ್ನ ತಮ್ಮ, ಅವಳ ಜೊತೆ ಹಟ್ಟಿಗೇ ಶಿಫ್ಟ್ ಆಗಿಬಿಟ್ಟಿದ್ದ. ಸಂಜೆ ಹೊತ್ತು ಶಾಲೆ ಮುಗಿಸಿ ಬಂದು, ತಿನ್ನಲು ಹಾಳುಮೂಳುಗಳೆಲ್ಲಾ ಇರದ ಆ ದಿನಗಳಲ್ಲಿ, ಬೆಲ್ಲ ತಿನ್ನುವುದು ಅಭ್ಯಾಸ ಮಾಡಿಕೊಂಡಿದ್ದ ಆತ,ತನ್ನ ಅಂಗಿಯ ಕಿಸೆ ತುಂಬಾ ಬೆಲ್ಲದ ಚೂರುಗಳನ್ನು ತುಂಬಿಕೊಂಡು ಹೋಗಿ ದನಗಳಿಗೆ ಹುಲ್ಲು ಹಾಕುವ ಬೈಪಣೆಯಲ್ಲಿ ಮಲಗಿಬಿಡುತ್ತಿದ್ದ. ಅವನ ಕೆನ್ನೆ,ಮುಖ, ಕೈಯನ್ನೆಲ್ಲಾ ನೆಕ್ಕುತ್ತಿದ್ದ ಚಿನ್ನಿ ಮತ್ತು ಸಿಂಗಾರಿ ಬೆಲ್ಲದ ಪರಿಮಳಕ್ಕೆ ಕಿಸೆಯೊಳಗೇ…… ನಾಲಿಗೆ ಹಾಕಿ ಬೆಲ್ಲ ಖಾಲಿ ಮಾಡುತ್ತಿದ್ದವು. ಕಾಲ ಸರಿದಂತೆ ಕರುವಾಗಿದ್ದ ಸಿಂಗಾರಿ ದನವಾಗಿ ತಾನೇ ಕರು ಹಾಕತೊಡಗಿದಾಗ, ನಮಗೋ ಅವುಗಳಿಗೆ ಹೆಸರಿಡುವುದೇ ಒಂದು ಸಂಭ್ರಮ. ರಾಜ…ಭೋಜ ಇನ್ನೂ ಏನೇನೋ.. ನಮ್ಮ ಮೂರು ಜನ ಮಕ್ಕಳ ಬದುಕು ರೂಪಿಸುವ ಜವಾಬ್ದಾರಿ ಹೊತ್ತ ನಮ್ಮ ಅಮ್ಮನ ಹೊರೆ ಹೆಚ್ಚಾಗಿದ್ದುದರಿಂದ ಖರ್ಚಿನ ನಿರ‍್ವಹಣೆಗೂ ನಾವು ಜಾನುವಾರುಗಳನ್ನು ಅವಲಂಬಿಸಿದ್ದೆವು. ಮೂರು ಹೊತ್ತೂ ಹುಲ್ಲು ಹೆರೆದು ಹಾಕಿ ಸಾಕಲು ಕಷ್ಟವಾಗುತ್ತಿದ್ದರಿಂದ ಹಗಲು ಹೊತ್ತು ಗುಡ್ಡೆಗೆ ಹೋಗಿ ತಾವೇ ಮೇಯಲು ಬಿಟ್ಟುಬಿಡುತ್ತಿದ್ದೆವು. ದಿನವಿಡೀ ಮೇದು ಸಂಜೆಗೆ ಮನೆಗೆ ಮರಳುತ್ತಿದ್ದವು. ನಮ್ಮ ಚಿನ್ನಿ ನಾಯಕತ್ವದ ದನಗಳ ಗುಂಪು. ಆದರೆ ಎಲ್ಲರಂತಲ್ಲದ ನಮ್ಮ ಸಿಂಗಾರಿ ಈ ವಿಷಯದಲ್ಲಿ ಹೇಗೆ ಎಲ್ಲರಂತೆ ಆದಾಳು?ಹಗಲು ಮೇಯುವಾಗ ಅವಳಿಗೆ ಹೊಟ್ಟೆತುಂಬುತ್ತಿರಲಿಲ್ಲವೋ,..ಅಲ್ಲ ಬೇಕೆಂದೇ ಚೇಷ್ಟೆ ಮಾಡುತ್ತಿದ್ದಳೋ…..?ಕೆಟ್ಟಬುಧ್ಧಿಯೊಂದು ಕಲಿತುಬಿಟ್ಟಳು. ಸಂಜೆ ಎಲ್ಲರೊಂದಿಗೆ ಮನೆಗೆ ಬರದೆ, ಎಲ್ಲಾದರೂ ಮರೆಯಲ್ಲಿ ಕಾದಿದ್ದು, ಹಗಲು ಗುರುತು ಮಾಡಿಕೊಂಡಿರುವ ಜಾಗಕ್ಕೆ ರಾತ್ರಿ ಹೋಗಿ ಮೇದು,ನಡುರಾತ್ರಿಯಲ್ಲಿ ವಾಪಾಸಾಗುತ್ತಿದ್ದಳು.ಅದೂ ಇಡೀ ಊರಿಗೇ ಕೇಳುವಂತೆ ಶಂಖ ಊದಿದಂತೆ ಕೂಗಿಕೊಂಡು. ಕ್ರಮೇಣ ದಿನ ಕಳೆದಂತೆ ಫಸಲು ಕಳೆದುಕೊಂಡ ಒಬ್ಬೊಬ್ಬರೇ ಬಂದು ಅಮ್ಮನಲ್ಲಿ ದೂರು ಹೇಳಲು ಸುರುಮಾಡಿದರು. ಕಟ್ಟಿ ಹಾಕಿ ಸಾಕುವ ಸಾಧ್ಯತೆಗಳೇ ಇಲ್ಲದೆ ಅಮ್ಮ ಒಳಗಿಂದೊಳಗೇ ಪೇಚಾಡತೊಡಗಿದರು. ಕಡೆಗೂ ಅವಳನ್ನು ಯಾರಾದರೂ ಸಾಕಿಕೊಳ್ಳುವವರಿಗೆ ಕೊಡುವುದು ಎಂದು ತೀರ‍್ಮಾನವಾದಾಗ ಹೊಟ್ಟೆಯೊಳಗೆ ಆದ ಸಂಕಟವನ್ನು ನಾನು ಇವತ್ತಿಗೂ ಅನುಭವಿಸಬಲ್ಲೆ. ಪೇಟೆಯಲ್ಲಿ ಅಪ್ಪನ ಅಂಗಡಿ ಸಮೀಪದ ಮನೆಯವರು ಬಂದು ಅವಳನ್ನು ಕರೆದೊಯ್ಯುವಾಗ ನಾವು ಮನೆಯಲ್ಲಿರಲಿಲ್ಲಮರುದಿನ ಅಂಗಡಿಗೆ ಹೋದ ಅಪ್ಪ ರಾತ್ರಿ ಮರಳುವಾಗ ಮಾಮೂಲಿನಂತಿರಲಿಲ್ಲ. ಏನೆಂದು ವಿಚಾರಿಸಿದಾಗ ಅವರು ಹೇಳಿದ್ದು, “ಸಿಂಗಾರಿ ಅಂಗಡಿ ಬಳಿ ಬಂದವಳು ಸಂಜೆವರೆಗೂ ಹೋಗಲೇಇಲ್ಲ. ಅಂಗಡಿ ಬಾಗಿಲಲ್ಲೇ ಮಲಗಿದ್ದಳು”ಎಂದು.ನಮಗೆಲ್ಲ ಹೃದಯ ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಅನುಭವ. ಹೊಟ್ಟೆಯಲ್ಲಿ ಅದೇನೋ ಕಿಚಿಪಿಚಿ.ಮರುದಿನ ಅಪ್ಪ ಅಂಗಡಿಗೆಹೊರಟಾಗ, ಆವತ್ತಿನ ತಿಂಡಿಯದೊಂದು ಪೊಟ್ಟಣ ಕಟ್ಟಿ ಅಮ್ಮ, ಅಪ್ಪನ ಕೈಗಿತ್ತು”ಸಿಂಗಾರಿಗೆ ತಿನ್ನಿಸಿ “ಎಂದಾಗ ಆಕೆಯ ಕಣ್ಣಂಚಿನಲ್ಲಿ ನೀರು ಜಿನುಗಿದ್ದನ್ನು ಆಕೆಗೆ ನಮ್ಮಿಂದ ಮರೆಮಾಚಲಾಗಲಿಲ್ಲ ಎಂಬುವುದು ನನಗೆ ಇಂದಿಗೂ ನೆನಪಿದೆ. ಇವತ್ತಿನ ಆಧುನಿಕತೆಯ ನಾಗಾಲೋಟದ ನಡುವೆಯೂ ಹಟ್ಟಿಯಲ್ಲಿರುವ ಹಸುಕರುಗಳಿಗೆ ಹೆಸರಿಟ್ಟು, ಅವುಗಳ ಜೊತೆಗೆ ಕುಣಿದು ಸಂಭ್ರಮಿಸುವ ನನ್ನ ಮಗಳನ್ನು ನೋಡಿದರೆ, ಸಧ್ಯ ನಾನೂ ನನ್ನ ಗೆಳತಿಯಂತೆ ಸಿಟಿವಂತಳಾಗದೇ ಉಳಿದೆನಲ್ಲಾ ಎಂದು ಸಮಾಧಾನವಾದರೂ…….ಕಾಮನ್ಸೆನ್ಸ್ ಇಲ್ಲದ, ಹಳ್ಳಿಗರು ಎಂದರೆ ತಾತ್ಸಾರ ಮಾಡುವ ಸಿಟಿಯವರನ್ನು ನೆನೆದರೆ ಮರುಕ ಹುಟ್ಟುತ್ತದೆ.*************

ಇತರೆ Read Post »

ಇತರೆ, ಜೀವನ

ಪ್ರಸ್ತುತ

ಮತ್ತೆ ಕಾಣಬಲ್ಲೆವೇ ಆ ದಿನಗಳನು..? ಮಲ್ಲಿಕಾರ್ಜುನ ಕಡಕೋಳ ದುರಿತಕಾಲ ಎಂಬ ಪದ ನಾವೆಲ್ಲ ಬರಹಗಳಲ್ಲಿ ಸೂಕ್ಷ್ಮತೆಯಿಂದ ಬಳಕೆ ಮಾಡಿದ ಪರಿಚಯವಿತ್ತು. ಪ್ರಸ್ತುತ ನಾವು ಅನುಭವಿಸುತ್ತಿರುವ ಖರೇ, ಖರೇ ದುರಿತಕಾಲದ ಈ ದಿನಗಳಿಗೆ ಕೊನೆಯೆಂಬುದು ಯಾವಾಗ ಎಂಬ ದುಗುಡ ನಮ್ಮನ್ನೀಗ ಘೋರವಾಗಿ ಬಾಧಿಸುತ್ತಿದೆ. ಅಷ್ಟಕ್ಕೂ ಕೊರೊನಾದ ಈ ಕಾಲಘಟ್ಟಕ್ಕೆ ಕೊನೆಯೆಂಬುದು ಇದೆಯೋ, ಇಲ್ಲವೋ ಎಂಬ ಕ್ರೂರ ಆತಂಕ. ಹಗಲು ರಾತ್ರಿಗಳೆನ್ನದೇ ಕಿವಿ, ಕಣ್ಣು, ಬಾಯಿ, ಮೂಗು, ಮನಗಳ ತುಂಬೆಲ್ಲ ಸೋಂಕಿತರು, ಶಂಕಿತರು, ರೆಡ್ ಝೋನ್, ಎಲ್ಲೋ ಝೋನ್, ಪೋಲಿಸರು, ವೈದ್ಯರಿಗೇ ಸೋಂಕು ಪದಗಳ ರಕ್ಕಸ ಕುಣಿತ. ಇವುಗಳ ಜೊತೆಗೆ ಜಾಗತಿಕ ಮಟ್ಟದ ಲಕ್ಷ ಲಕ್ಷ ಸಂಖ್ಯೆಯ ಸಾವು ನೋವಿನ ಅಂಕಿ ಅಂಶಗಳ ರುದ್ರನರ್ತನ. ಹುಟ್ಟೂರಿಗೆ ಹೋಗಿಯೇ ಸಾಯಬೇಕೆಂಬ “ಬದುಕಿಗಾಗಿ” ರಹದಾರಿಗಳಿಲ್ಲದೇ ಸಾವಿರಾರು ಮಂದಿ ನೂರಾರು ಹರದಾರಿ ನಡಕೊಂಡೇ ಹೋದವರು. ಹಾಗೆ ನಡಕೊಂಡು ಹೋಗುವ ನಡುದಾರಿಯಲ್ಲೇ ನೀರು – ಕೂಳಿಲ್ಲದೇ ಪ್ರಾಣಬಿಟ್ಟ ಬಸುರಿ – ಬಾಣಂತಿ, ತಾಯಿಮಕ್ಕಳ ಸಂಕಟದ ಸಾಲು ಸಾಲು ಸರಗಥೆಗಳು. ಹೀಗೆ ಅರಣ್ಯ ರೋದನವಾಗುತ್ತಿರುವ ಒಂದೆರಡಲ್ಲ ನಿತ್ಯವೂ ನೂರಾರು ಸಂಕಟಗಳ ಕರುಳು ಹಿಂಡಿ ಹಿಪ್ಪೆಮಾಡುವ ದೃಶ್ಯಗಳಿಗೆ ಕೊನೆಯೆಂಬುದಿದೆಯೇ ? ಇದ್ದರೆ ಯಾವಾಗ..? ಕೊರೊನಾ ಸಂದರ್ಭದಲ್ಲಿ ಮನುಷ್ಯ, ಮನುಷ್ಯರ ನಡುವಿನ ದೈಹಿಕ ದೂರ ಕಾಪಾಡಬೇಕೆಂಬುದು ವೈಜ್ಞಾನಿಕ ಸತ್ಯ. ವಿದೇಶಗಳಲ್ಲಿ ಸೋಶಿಯಲ್ ಗ್ಯಾದರಿಂಗ್ ಹಿನ್ನೆಲೆಯಲ್ಲಿ ಸೋಶಿಯಲ್ ಡಿಸ್ಟನ್ಸ್ ಎಂದು ಕರೆದಿರಬಹುದು. ಆದರೆ ಬಹುತ್ವ ಭಾರತದ ಸಂದರ್ಭದಲ್ಲಿ ಅದನ್ನು ಸಾಮಾಜಿಕ ಅಂತರ ಎಂಬ ಹೆಸರಿಂದ ಕರೆಯುವ ಮೂಲಕ ಅದು ಭಯ ಮೂಲದ್ದು ಎಂಬುದು ಮಾತ್ರವಲ್ಲದೇ ಜನಸಂಸ್ಕೃತಿ ವಿರೋಧಿಜನ್ಯ ಭಾವಕ್ಕೆ ಹತ್ತಿರವಾಗಿದೆ. ಅದು ವ್ಯಕ್ತಿಗತ ಅಥವಾ ದೈಹಿಕ ಅಂತರ – ದೂರ ಎಂಬುದು ವಾಸ್ತವವೇ ಆದರೂ ಹಾಗೇಕೆ ಕರೆಯುತ್ತಿಲ್ಲ.? ಮಡಿ – ಮೈಲಿಗೆ ಎಂಬಂತೆ ಸಾಮಾಜಿಕ ಅಂತರ ಎಂದು ಕರೆಯುವ ಮೂಲಕ ಅದು ಹುಟ್ಟುಹಾಕುತ್ತಿರುವ ಭಯ ಮಾತ್ರ ಭಯಂಕರ. ಕೊರೊನಾಗಿಂತ ಕೊರೊನಾ ಕುರಿತು ಹುಟ್ಟಿಕೊಂಡಿರುವ ಈ ತೆರನಾದ ಆತಂಕಕಾರಿ ಜೈವಿಕ ಸಂಸ್ಕೃತಿ (Bio Culture) ಬಣ್ಣಿಸಲಸದಳ. ಈ ಕೊರೊನಾಮಾರಿ ಮನುಷ್ಯ ಮನುಷ್ಯರ ನಡುವಿನ ಜೀವ ಸಂಬಂಧಗಳನ್ನು ನಿರ್ನಾಮಗೊಳಿಸುತ್ತಿದೆ. ಜೀವ ಕಕುಲಾತಿಯ ಸಹಬಾಳ್ವೆ, ಸಹಿಷ್ಣುತೆ, ಸಮಷ್ಟಿ ಪ್ರಜ್ಞೆಯ ಸಾಮೂಹಿಕ ಬದುಕು ಮತ್ತೆ ಮರಳಿ ಬರುವುದೇ ಎಂಬ ಶಂಕೆ. ಒಡೆದು ಹೋಗುತ್ತಿರುವ ಸಹಮತದ ಜೀವಗನ್ನಡಿ ಹರಳು ಮತ್ತೆ ಬೆಸೆದೀತೇ.? ಎಲ್ಲವೂ ಸರಿಯಾಗುವವರೆಗೆ ಲಾಕ್ ಡೌನ್, ಸೀಲ್ ಡೌನ್ ಪ್ರಕ್ರಿಯೆಗಳು ಮುಂದುವರೆದರೆ ನಾವೆಲ್ಲ ಬದುಕುಳಿಯಬಹುದೇ.? ಹೀಗೆ ಏನೇನೋ ಜೀವದುಸಿರು ಸೂತಕದ ಆಲೋಚನೆಗಳು. ಸಣ್ಣದೊಂದು ಸಮಾಧಾನದ ಸಂಗತಿಯೆಂದರೆ ಟೀವಿಗಳಲ್ಲಿ ಗಂಟೆಗಟ್ಟಲೇ ಕೊರೆಯುತ್ತಿದ್ದ, ಮನುಕುಲದ ಉದ್ದಾರಕ್ಕಾಗಿಯೇ ಹುಟ್ಟಿ ಬಂದವರಂತೆ ತರಹೇವಾರಿ ಫೋಸು ಕೊಡುತ್ತಿದ್ದ ದೇವಮಾನವ ನಾಮಾಂಕಿತ ಜೋತಿಷಿಗಳು ನಾಪತ್ತೆಯಾಗಿದ್ದಾರೆ. ಕೊರೊನಾ ಹೋದಮೇಲೂ ಅವರು ಮತ್ತೆ ಬಾರದಿರಲಿ. ಆಯುರ್ವೇದ, ಅಲೋಪತಿ, ಸಿದ್ಧ, ಹೋಮಿಯೋಪಥಿ ಯಾವುದರಲ್ಲಿ ಇದಕ್ಕೆ ನೆಟ್ಟಗಾಗುವ ಮದ್ದಿದೆ ? ದಿನಕ್ಕೊಂದಲ್ಲ ಹತ್ತಾರು, ನೂರಾರು ತರಹೇವಾರಿ ಸುದ್ದಿಗಳಿಂದ ಬದುಕು ಅಕ್ಷರಶಃ ಗದ್ಗದಿತವಾಗಿದೆ. ಸಾವಿಗಿಂತಲೂ ಸಾವಿನ ಕುರಿತಾದ ಸಾವಿನಪ್ಪನಂತಹ ಸುದ್ದಿಗಳನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ತಿಂಗಳೊಪ್ಪತ್ತಿನಿಂದ ನಾಗಾಲೋಟದಲ್ಲಿ ನೂರಿನ್ನೂರನೇ ಪ್ರಯೋಗದಲ್ಲಿ ಮುನ್ನುಗ್ಗುತ್ತಿರುವ ಪ್ರಸಿದ್ಧ ಕಂಪನಿ ನಾಟಕಗಳ ಪ್ರಯೋಗಗಳಂತೆ. ಆದರಿದು ಕುಪ್ರಸಿದ್ಧವಾಗುತ್ತಿರುವ ಕೊರೊನ ಎಂಬ ಮಹಾರಾಕ್ಷಸತ್ವದ ಕರಾಳ ಕಥೆ. ಮನುಷ್ಯರ ಬದುಕು ಬರ್ಬರಗೊಳ್ಳುತ್ತಿರುವ ದುಃಖಸಾಗರದ ಕಥೆ. ಜನರ ಜೀವನ ಅಕ್ಷರ ಅಕ್ಷರಶಃ ತತ್ತರಿಸಿ ಹೋಗಿದೆ. ಆದರೆ ಇಂತಹ ಸಂಕಟಗಳನ್ನು ಹಾಡು, ರೂಪಕ, ಸಣ್ಣಾಟ, ಜಾನಪದ, ಪ್ರಹಸನ, ಕವನ ಮುಂತಾದ ಪ್ರಕಾರಗಳಲ್ಲಿ ಜನಕಲಾವಿದರು ತೋರಿಸುವ ಕ್ರಿಯಾಶೀಲತೆ ಮಾತ್ರ ತುಂಬಾ ಚುರುಕಾಗಿದೆ. ಬಡವರು ಸತ್ತಾರ ಸುಡಲಾಕ ಸೌದಿಲ್ಲ ! ಶಿವನೇ ಬಡವರಿಗೆ ಸಾವು ಕೊಡಬೇಡ !! ಸಾವಿನ ಘನಘೋರ ಸಂದರ್ಭದಲ್ಲೂ ನಮ್ಮ ಜನಪದರ ಕರುಳಿನ ಸಂಕಟ ಕೊರಳ ಸಿರಿಕಂಠದ ಮೂಲಕ ಜೀವದ ಹಾಡಾಗಿ, ಪಾಡಾಗಿ ಹೊರಹೊಮ್ಮುತ್ತದೆ. ಅದು ನಮ್ಮ ಜೀವಪರ ಜನಸಂಸ್ಕೃತಿ. ಅದು ಶಿವಸಂಸ್ಕೃತಿ. ಸಾವಿನ ಬಗ್ಗೆ ಅವರಿಗೆ ಭಯವಿಲ್ಲ. ಆದರೆ ಸತ್ತರೆ ಸುಡಲು ಸೌದೆಇಲ್ಲ. ಅದಕ್ಕೆಂದೇ ಶಿವನೆ ಬಡವರಿಗೆ ಸಾವು ಕೊಡಬೇಡವೆಂದು, ಅವರು ಬಡತನದ ಬೇಗೆಯಲ್ಲೇ ಬೆಂದುಹೋಗುವ ಸತ್ಯದ ಮೊರೆತ ಅವರದು. ಒಡಲುಗೊಂಡವ ಹಸಿವ, ಒಡಲುಗೊಂಡವ ಹುಸಿವ, ಒಮ್ಮೆ ನೀನು ಒಡಲುಗೊಂಡು ನೋಡಾ ರಾಮನಾಥ., ಎಂದು ದೇವರ ದಾಸಿಮಯ್ಯ ದೇವರಿಗೆ ಹಾಕುವ ಒಡಲಿನ ಸವಾಲು, ಪ್ರಪಂಚದ ಯಾವ ವೇದಾಂತ, ಸಿದ್ದಾಂತ, ಸಾಹಿತ್ಯ ಹೇಳಿಲ್ಲ. ಇಂತಹ ಪರಮಸತ್ಯದ ಸವಾಲು ನಮ್ಮ ಸಂಸ್ಕೃತಿ. ಈಗ ಅವುಗಳಿಗೆ ಸಾಮಾಜಿಕ ಜಾಲತಾಣಗಳೇ ಬಹುದೊಡ್ಡ ಮಾಧ್ಯಮ. ಜನಸಮೂಹದ ನೆಲೆದಾಣಗಳಲ್ಲಿ ಸಾರ್ವತ್ರಿಕ ಅವಕಾಶಗಳಿಲ್ಲವಾದ್ದರಿಂದ ಸಧ್ಯಕ್ಕೀಗ ಸಾಮಾಜಿಕ ಅಂತರ ಕಾಪಾಡಿಕೊಂಡಿರುವ ಸಾಮಾಜಿಕ ಜಾಲತಾಣಗಳೇ ಏಕೈಕ ಸಂವಹನ ಸಾಧನಗಳು. ನಾಕೈದು ತಿಂಗಳುಕಾಲ ಅಂದರೆ ಬೇಸಿಗೆಯ ಆರಂಭದ ಒಂದೆರಡು ವಾರ ಮೊದಲೇ ಆರಂಭಗೊಂಡು ಮಿರುಗ (ಮೃಗಶಿರ)ದ ಮಳೆಯವರೆಗೂ ನಾಡಿನ ತುಂಬಾ ಜರುಗುವ ಜಾತ್ರೆ, ಸಾಂಸ್ಕೃತಿಕ ಹಬ್ಬ ಹರಿದಿನಗಳದ್ದೇ ಸಂಭ್ರಮ, ಸಡಗರ. ಜನವರಿ ತಿಂಗಳು ಬಹುಪಾಲು ಸಂಕ್ರಮಣಕ್ಕೆ ಮೊದಲೇ ಆರಂಭಗೊಳ್ಳುವ, ಜನಜೀವಾಳವೇ ಆಗಿರುವ ರೈತಾಪಿ ಬದುಕಿನ ಸುಗ್ಗಿ, ದೇವರು ದಿಂಡರ ಪರಿಷೆ, ಜನಪದರ ಜಾತ್ರೆ, ಸಾರ್ವಜನಿಕ ಪ್ರೀತಿ ಹುಟ್ಟಿಸುವ ಹತ್ತು ಹಲವು ಮಹೋತ್ಸವಗಳ ಸಾಂಸ್ಕೃತಿಕ ಸುಗ್ಗಿಯಕಾಲ. ಜನವರಿಯಿಂದ ಮೇ, ಜೂನ್ ಮುಗಿಯೋಮಟ ಜನಸಂಸ್ಕೃತಿಯ ಕಲಾಪ್ರದರ್ಶನಗಳಿಗೆ ಹೇಳಿ ಮಾಡಿಸಿದ ಕಾಲ. ರೈತಾಪಿ ಕೆಲಸಗಳು ಮುಗಿದು ಜನರ ಬದುಕಿನ ಸಾಹಿತ್ಯ, ಹಾಡು, ಕುಣಿತ ಒಟ್ಟು ಎಲ್ಲ ಕಲಾಪ್ರಕಾರ ಪ್ರದರ್ಶನಗಳ ಸಂಭ್ರಮಕಾಲ. ಸಡಗರದ ಕಾಲ. ಈ ಸಡಗರ ಸಂಭ್ರಮಗಳಿಗೆ ಈ ಬಾರಿ ಅವಕಾಶವೇ ಇಲ್ಲವಾಯಿತು. ಕೊರೊನಾ ಇಲ್ಲದಿದ್ದರೆ ಇದು ತಿಂಗಳುಗಳ ಕಾಲ ಜಾತ್ರೆಗಳು ಜರುಗುವ ಸಮಯ. ಜಾತ್ರೆಗಳಲ್ಲಿ ನಾಟಕ ಕಂಪನಿಗಳಿಗೆ ರಂಗನಾಟಕಗಳ ಬಂಪರ್ ಸುಗ್ಗಿಯ ಸಂಭ್ರಮ. ಪುಣ್ಯಕ್ಕೆ ನಾಟಕಗಳ ಜಾತ್ರೆಯೆಂದೇ ಪ್ರಸಿದ್ದವಾದ ಬನಶಂಕರಿ ಜಾತ್ರೆಯ ಸದುಪಯೋಗ ಹನ್ನೊಂದು ನಾಟಕ ಕಂಪನಿಗಳು ಮಾಡಿಕೊಂಡವು. ಆ ನಂತರ ಮಾರ್ಚ್ ಮೊದಲ ವಾರದಿಂದ ಜಾತ್ರೆಯ ಕ್ಯಾಂಪುಗಳದ್ದು ನೋವಿನ ಮಜಕೂರ. ಕಲಾವಿದರ ನಿತ್ಯದ ಬದುಕಿಗೂ ತತ್ವಾರ. ನಾಟಕ ಕಂಪನಿಗಳ ಕಲಾವಿದರೆಲ್ಲ ಮನೆ ಸೇರಿದ್ದಾರೆ. ಹಳ್ಳಿಯ ಜಾತ್ರೆಗಳಲ್ಲಿ ಜರುಗುವ ವೃತ್ತಿರಂಗ ನಾಟಕಗಳಲ್ಲಿ ಅಭಿನಯಿಸುವ ನೂರಾರು ಮಂದಿ ಹವ್ಯಾಸಿ ಕಲಾವಿದೆಯರು ನಿರುದ್ಯೋಗದ ನಿಟ್ಟುಸಿರು ಬಿಡುತ್ತಿದ್ದಾರೆ. ಮುಖ್ಯವಾಗಿ ಮದುವೆಗಳ ಸೀಜನ್ ಇದಾಗಿತ್ತು. ಮಂಗಳವಾದ್ಯ ನುಡಿಸುವ ಕಲಾವಿದರಿಗೆ ಅಗ್ನಿಪರೀಕ್ಷೆಯಂತಹ ಬದುಕಿನ ಪ್ರಶ್ನೆಯ ಸಮಯ. ಅವರ ಕುಟುಂಬ ನಿರ್ವಹಣೆ ಅಕ್ಷರಶಃ ಸಂಕಟಮಯ. ಸಿನೆಮಾ, ಧಾರಾವಾಹಿಗಳಲ್ಲಿ ಕೆಲಸ ಮಾಡುವ ಕಲಾವಿದರು, ತಂತ್ರಜ್ಞರ ಜೀವನ ಸಂಕಷ್ಟಕ್ಕೀಡಾಗಿದೆ. ಪುಸ್ತಕಗಳ ಪ್ರಕಟಣೆ ಸ್ಥಬ್ಧಗೊಂಡಿದೆ. ಹೀಗೆ ವಿರಮಿಸಿರುವ ಸಂಸ್ಕೃತಿ ಸಂಬಂಧಿತ ಬಹುದೊಡ್ಡ ಪಟ್ಟಿಯೇ ಇದೆ. ಹಳ್ಳಿ, ಪಟ್ಟಣ, ನಗರಗಳೆನ್ನದೇ ಬೇಸಿಗೆ ಶಿಬಿರಗಳು ಸಂಸ್ಕೃತಿಯ ಸಮೃದ್ಧತೆಯನ್ನು ಮಕ್ಕಳಿಗೆ ಉಣ ಬಡಿಸುತ್ತಿದ್ದವು. ಮಕ್ಕಳಿಗೆ ಅಭಿನಯ, ಸಂಗೀತ, ಅಜ್ಜಿಹೇಳುವ ಕಥೆ, ಚಿತ್ರಕಲೆ ಕಲಿಕೆ ಹೀಗೆ ಹೊಸತನದ ಸೃಜನಶೀಲತೆಗಳಿಗೆ ಮಕ್ಕಳನ್ನು ಸಿದ್ಧಗೊಳಿಸುವ ಎಲ್ಲಕ್ಕೂ ಕೊರೊನಾ ಕಲ್ಲು ಬಿದ್ದಿದೆ. ಸರಕಾರದ ರಂಗಾಯಣಗಳು ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನು ನಡೆಸುತ್ತಿದ್ದವು. ಖಾಸಗಿಯಾಗಿ ಸಂಘ ಸಂಸ್ಥೆಗಳು ಅಲ್ಲಲ್ಲಿ ಜರುಗಿಸುತ್ತಿದ್ದ ಇಂತಹ ನೂರಾರು ಶಿಬಿರಗಳು ಸಂಸ್ಕೃತಿಯ ವಿವಿಧ ಮಜಲುಗಳ ಬೃಹತ್ ಕಾರ್ಯಾಗಾರ, ಕಮ್ಮಟ, ಸಮಾವೇಶಗಳು ನಾಡಿನ ಸಂಸ್ಕೃತಿ ಬಿಂಬಿಸುವ ಅವಕಾಶಗಳಾಗಿದ್ದವು. ಅಲ್ಲದೇ ಸರಕಾರದ ಹತ್ತು ಹಲವು ಸಂಸ್ಕೃತಿ ಉತ್ಸವಗಳು ಜರುಗುತ್ತಿದ್ದವು. ಅವೆಲ್ಲವುಗಳನ್ನು ಕೊರೊನಾ ಎಂಬ ಕರಾಳ ಕಾಳಿ ನುಂಗಿ ನೊಣೆಯುತ್ತಿದೆ. ಲಾಕ್ ಡೌನ್ ಮತ್ತು ಸೀಲ್ ಡೌನ್ ಗಳಿಂದ ಸಾಂಸ್ಕೃತಿಕ ಲೋಕವಿರಲಿ ಸಾಮಾನ್ಯ ಜನಜೀವನ ಸಹಜಸ್ಥಿತಿಗೆ ಮತ್ತೆ ಮರುಳತ್ತದೆಯಾ.? ಮತ್ತೆ ಕಾಣಬಲ್ಲೆವೇ ಆ ದಿನಗಳನು ಎಂಬ ಸಹಸ್ರಮಾನದ ನಿರೀಕ್ಷೆ ನಿತ್ಯವೂ ನಮ್ಮೆಲ್ಲರನ್ನು ಕಾಡುತ್ತಿದೆ. ***********

ಪ್ರಸ್ತುತ Read Post »

ಇತರೆ

ಪ್ರಸ್ತುತ

ವಾಟ್ಸ್ಯಾಪ್ ಮತ್ತು ಫೇಸ್ ಬುಕ್ ಗುಂಪುಗಳು ಗಂಗಾಧರ ಬಿ ಎಲ್ ನಿಟ್ಟೂರ್ ವಾಟ್ಸ್ಯಾಪ್ ಮತ್ತು ಫೇಸ್ ಬುಕ್ ಗುಂಪುಗಳು ಅವಲೋಕಿಸಲೇಬೇಕಾದ ಕೆಲ ಅಂಶಗಳು  //    ಪರಸ್ಪರ ಪರಿಚಯ, ವಿಚಾರ ವಿನಿಮಯ, ಆರೋಗ್ಯಕರ ಚರ್ಚೆ, ಪ್ರತಿಭೆಯ ಅನಾವರಣ ಹಾಗೂ ಹೊಸ ಕಲಿಕೆಯ ಮೂಲ ಉದ್ದೇಶದಿಂದ ಇಂದು ಎಲ್ಲ ಕ್ಷೇತ್ರದಲ್ಲೂ ಸಾಮಾಜಿಕ ಜಾಲತಾಣವನ್ನು ಮಾಧ್ಯಮವನ್ನಾಗಿಸಿಕೊಂಡು ಒಂದಲ್ಲ ಒಂದು ವಾಟ್ಸಾಪ್ ಅಥವಾ ಫೇಸ್‌ಬುಕ್ ಗುಂಪು ರಚನೆಯಾಗಿರುವುದು ಸರ್ವರಿಗೂ ತಿಳಿದ ಸಾಮಾನ್ಯ ಸಂಗತಿ. ಯಾರು ಯಾರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ, ಅಭಿರುಚಿ ಇದೆಯೋ ಅಂಥವರು ತಮ್ಮಿಷ್ಟದ ಆಯಾ ಕ್ಷೇತ್ರದ ಒಂದು ಅಥವಾ ಹಲವು ಗುಂಪುಗಳಲ್ಲಿ ಸಕ್ರಿಯ ಸದಸ್ಯರಾಗಿ ಗುಂಪಿನ ಸದ್ಭಳಕೆಯಲ್ಲಿ ತೊಡಗಿದ್ದಾರೆ.       ಸದಾ ಒಂದಿಲ್ಲೊಂದು ಕ್ರಿಯಾತ್ಮಕ ಚಟುವಟಿಕೆ ರೂಪಿಸಿ ಸರ್ವ ಸದಸ್ಯರನ್ನು ಹುರಿದುಂಬಿಸಿ ಸೃಜನಶೀಲತೆ ಮತ್ತು ಕ್ರಿಯಾಶೀಲತೆಗೆ ವೇದಿಕೆ ಕಲ್ಪಿಸುತ್ತಿರುವ ವಿವಿಧ ಬಳಗಗಳ ಸಂಚಾಲಕರು ಅಥವಾ ಅಡ್ಮಿನ್ ಗಳ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ.    ಆಯಾ ಕ್ಷೇತ್ರದ ಬಳಗಗಳು ತಮ್ಮ ಬಳಗದ ಸದಸ್ಯರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ನಾನಾ ಪ್ರಕಾರಗಳನ್ನು ಪರಿಚಯಿಸುವ ಮತ್ತು ಅದರಲ್ಲಿ ತೊಡಗಿಸುವ ವಿವಿಧ ಸ್ಪರ್ಧೆಗಳನ್ನು ನಡೆಸಿ ಸಲಹೆ ಸೂಚನೆಗಳೊಂದಿಗೆ ಜ್ಞಾನಾರ್ಜನೆಗೆ ಇಂಬು ನೀಡುತ್ತಿರುವುದಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಫರ್ಧಾಥಿಗಳಿಗೆ ಪುಸ್ತಕ ಅಥವಾ ನಗದು ರೂಪದ ಪುರಸ್ಕಾರ ಇಲ್ಲವೇ 3 ಬಹುಮಾನಗಳ ಘೋಷಣೆ ಮಾಡುವ ಮೂಲಕ ಪ್ರೋತ್ಸಾಹಿಸುತ್ತಿವೆ. ಕೆಲವೇ ಕೆಲ ಬಳಗಗಳು ಮಾತ್ರ ಭಾಗವಹಿಸುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸ್ಥಾನ ನೀಡಿ ಉತ್ತೇಜಿಸುವ ಜತೆ ಅಭಿನಂದನಾ ಪತ್ರ ನೀಡಿ ಗೌರವಿಸುವ ಸಂಪ್ರದಾಯ ರೂಢಿಸಿಕೊಂಡಿವೆ. ಇದು ಸ್ತುತ್ಯಾರ್ಹ ಮತ್ತು ಮಾದರಿ ಕಾರ್ಯ. ಇತರೆ ಗ್ರೂಪ್ ಗಳ ಚಟುವಟಿಕೆಗಳಿಗಿಂತಲೂ ವಿಭಿನ್ನ, ವಿಶೇಷ ನಡೆ ಎಂದು ಬಣ್ಣಿಸುವ ಜತೆ ಇದು ಆಯಾ ಬಳಗದ ಮುಖ್ಯಸ್ಥರ ಸಹೃದತೆಗೆ ಸಾಕ್ಷಿಯೂ ಸಹ ಆಗಿದೆ ಎಂದರೂ ಅತಿಶಯೋಕ್ತಿ ಏನಲ್ಲ.        ಆದಾಗ್ಯೂ ಈ ಪ್ರೋತ್ಸಾಹ – ಪ್ರೇರಣೆಗೆ ಮೌಲ್ಯ – ಘನತೆ ಇಮ್ಮಡಿಸುವ ನಿಟ್ಟಿನಲ್ಲಿ, ಬಳಗದ ಚಟುವಟಿಕೆಗಳು ಮತ್ತು ನಿರ್ವಾಹಕ ಮಂಡಳಿಯ ಬಗ್ಗೆ ಈಗಾಗಲೇ ಸದಸ್ಯರಲ್ಲಿರುವ ಅಭಿಮಾನವನ್ನು ಚಿರಕಾಲ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಹಾಗೂ ಬಳಗದ ಸರ್ವ ಸದಸ್ಯರ ಸೌಹಾರ್ದತೆಯನ್ನು ಸದಾ ಕಾಪಾಡುವ ದಿಸೆಯಲ್ಲಿ ವಾಟ್ಸಾಪ್ ಗುಂಪು / ಬಳಗದ ಅಡ್ಮಿನ್ ಗಳು ಅಥವಾ ಸಂಚಾಲಕರು ತಂತಮ್ಮ ಗುಂಪಿನ ಚಟುವಟಿಕೆಗಳನ್ನು ಮತ್ತು ಸ್ಪರ್ಧೆಯನ್ನು ಆಯೋಜಿಸುವ ವೇಳೆ ಈ ಕೆಳಕಂಡ ಕೆಲ ಅಂಶಗಳನ್ನು ಅವಶ್ಯವಾಗಿ ಅವಲೋಕಿಸುವುದು ಅಥವಾ ಪಾಲಿಸುವುದು ಅವಶ್ಯ  ಎನಿಸುತ್ತದೆ …. * ಸಾಮಾನ್ಯವಾಗಿ ಯಾವುದೇ ಬಳಗಗಳಲ್ಲಿ ಪ್ರಮುಖವಾಗಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಹಳೆಯ ಮತ್ತು ಹೊಸ ಹೊಸ ಆವಿಷ್ಕಾರ – ಸಂಶೋಧನೆಗಳ ಕುರಿತು ಹಾಗೂ ಆಯಾ ಕ್ಷೇತ್ರದ ಸಾಧಕರುಗಳ ಕುರಿತು ಪರಸ್ಪರ ವಿಚಾರ ವಿನಿಮಯ, ಮಾಹಿತಿಯ ಹಂಚಿಕೆಯ ಕಾರ್ಯವಾಗಬೇಕು ಎಂಬುದು ಹಿರಿಯರ, ಅನುಭವಿ ಪರಿಣಿತರ ಮತ್ತು ತಜ್ಞರ ಅಭಿಪ್ರಾಯ. * ಎರಡನೆಯದಾಗಿ ಆಯಾ ಬಳಗದ ಸದಸ್ಯರ ಪ್ರತಿಭೆ, ಸಾಧನೆ, ಸಂಶೋಧನೆ, ಆರೋಗ್ಯಕರ ಚರ್ಚೆ, ಜ್ಞಾನಾನುಭವಗಳ ಅನಾವರಣಕ್ಕೆ ಅವಕಾಶ ಕಲ್ಪಿಸುವ ಕಾರ್ಯ ನಡೆಯಬೇಕು. * ವಾಟ್ಸಾಪ್ ಅಥವಾ ಫೇಸ್ ಬುಕ್ ಗುಂಪು ಎಂಬುದು ಒಂದು ರೀತಿ ಸಾರ್ವಜನಿಕ ವಲಯವಿದ್ದಂತೆ. ಅಲ್ಲಿ ಕೇವಲ ನಮ್ಮ ಪರಿಚಿತರಷ್ಟೇ ಅಲ್ಲ, ನಮಗೆ ಪರಿಚಯವಿಲ್ಲದ ನಮ್ಮ ಸ್ನೇಹಿತರ ಸ್ನೇಹಿತರು, ವಿವಿಧ ವಯೋಮಾನದವರು, ಹೊಸಬರು, ಕಲಿಕಾರ್ಥಿಗಳು ಮತ್ತು ಪರಿಣಿತರು ಸಹ ಇರುತ್ತಾರೆ. ಹಾಗಾಗಿ ವೈಯಕ್ತಿಕ / ವ್ಯಕ್ತಿಗತ ವಿಚಾರಗಳ ವಿನಿಮಯ, ಅನಗತ್ಯ ಚರ್ಚೆ, ಹಾಯ್ ಬಾಯ್ ಮೆಸೆಜ್, ವೈಯಕ್ತಿಕ ಅಥವಾ ಸಾಮುದಾಯಿಕವಾಗಿ ಯಾವುದೇ ರೂಪದ ಅವಮಾನ, ನಿಂದನೆ, ಅವಹೇಳನ, ಮನಸ್ತಾಪಕ್ಕೆ ಕಾರಣವಾಗುವಂತಹ ಸಂದೇಶಗಳ ರವಾನೆ ಮಾಡದೆ ಜ್ಞಾನ ವೃದ್ಧಿ, ಪರಸ್ಪರ ಪ್ರೀತಿ, ವಿಶ್ವಾಸ, ಗೌರವಾದರ ಮೂಲಕ ಬಾಂಧವ್ಯ ಬೆಸೆಯುವುದಕ್ಕೆ ಮಾತ್ರ ಆದ್ಯತೆ ನೀಡಬೇಕು. *  ಸುಲಭವಾಗಿ ವಿವಿಧ ರೂಪದಲ್ಲಿ ಹಣ ವಸೂಲಿ, ವೈಯಕ್ತಿಕ ಲಾಭ ಇತ್ಯಾದಿ ಸ್ವಾರ್ಥ ಪರ ಧೋರಣೆಯ / ದುರುದ್ದೇಶದಿಂದ ಕೂಡಿದ ಕೆಲವು ಬಳಗಗಳು ಸಹ ರಚನೆಯಾಗುತ್ತಿವೆ. ಸದಸ್ಯರು ಇಂತಹ ಬಳಗಗಳ ಬಗ್ಗೆ ಎಚ್ಚರದಿಂದಿರಬೇಕು. * ಸಾಮಾನ್ಯವಾಗಿ ಶಿಕ್ಷಣ, ಸಾಹಿತ್ಯ, ಸಂಗೀತ, ವಿಜ್ಞಾನ, ಕಲೆ ಮತ್ತು ಸಾಂಸ್ಕೃತಿಕ ಬಳಗಗಳಲ್ಲಿ ಸ್ಪರ್ಧೆಗಳನ್ನು ನಡೆಸುವ ಪರಂಪರೆ ಅತಿ ಹೆಚ್ಚು ರೂಢಿಯಲ್ಲಿದೆ. ಸ್ಪರ್ಧೆಗಳನ್ನು ನಡೆಸುವುದು ಅತ್ಯಂತ ಸೂಕ್ಷ್ಮ ಕಾರ್ಯ. ಹಾಗಾಗಿ ಅನಿವಾರ್ಯ ಮತ್ತು ತೀರಾ ಅಗತ್ಯ ಎಂದಾದಲ್ಲಿ ಮಾತ್ರ ಸ್ಪರ್ಧೆಗಳನ್ನು ಆಯೋಜಿಸಬೇಕು. ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ಅಥವಾ ಆಯಾ ಕ್ಷೇತ್ರದ ಒಳ ಪ್ರಕಾರಗಳ ಸ್ಪರ್ಧೆ ನಡೆಸುವಾಗ ಆಯಾ ಪ್ರಕಾರದಲ್ಲಿ ಆಳವಾಗಿ ಅಧ್ಯಯನ ನಡೆಸಿರುವ ಅಥವಾ ಈಗಾಗಲೇ ಆ ಕ್ಷೇತ್ರದಲ್ಲಿ ಕೃಷಿ ಮಾಡಿ ಹೆಸರಾಗಿರುವ ಬಳಗದ ಸದಸ್ಯರಲ್ಲದ ಹೊರಗಿನ ಪರಿಣಿತರನ್ನು  ಮಾತ್ರವೇ ತೀರ್ಪುಗಾರರನ್ನಾಗಿ ನೇಮಿಸುವುದು ಸೂಕ್ತ. * ಸ್ಪರ್ಧೆಗಳನ್ನು ನಡೆಸುವ ವೇಳೆ ಯಾವುದೇ ಕಾರಣಕ್ಕೂ ಆಯಾ ಬಳಗದ ಸದಸ್ಯರನ್ನು ತೀರ್ಪುಗಾರರನ್ನಾಗಿ ನೇಮಿಸಲೇಕೂಡದು. ಇದರಿಂದಾಗಿ ಸದಸ್ಯರ ನಡುವಿನ ಸೌಹಾರ್ದತೆಗೆ ಧಕ್ಕೆ ಉಂಟಾಗಬಹುದು. ಇಲ್ಲವೇ ಒಬ್ಬೊಬ್ಬರೇ ಆ ಗುಂಪಿನಿಂದ ವಿದಾಯ ಹೇಳುವ ಪ್ರಸಂಗ ಸೃಷ್ಟಿಯಾದರೂ ಅಚ್ಚರಿಯೇನಿಲ್ಲ. ಆರಂಭದಲ್ಲಿ ತುಂಬಾ ವೇಗವಾಗಿ ಚಟುವಟಿಕೆಗಳು ನಡೆದು ಕ್ರಮೇಣ ಕ್ಷೀಣಿಸಬಹುದು ಅಥವಾ ನಿಂತೇ ಹೋಗಬಹುದು. ಇದು ಕಟ್ಟು ಕಥೆಯಲ್ಲ. ಯೋಚಿಸಲೇಬೇಕಾದ ವಾಸ್ತವ ಸಂಗತಿ * ಪ್ರಥಮ, ದ್ವಿತೀಯ, ತೃತೀಯದ ಹೊರತಾಗಿ ಉತ್ತಮ, ಅತ್ಯುತ್ತಮ ಎಂಬ ಬಹುಮಾನಗಳ ಘೋಷಣೆ ಇರಲೇಕೂಡದು. ಎಲ್ಲರಿಗೂ ಒಂದಲ್ಲ ಒಂದು ಬಹುಮಾನ ನೀಡಲೇಬೇಕೆಂಬ ಔದಾರ್ಯ ತೋರುವುದಾದಲ್ಲಿ ಅದೇ 3 ಬಹುಮಾನಗಳ ಪಟ್ಟಿಯಲ್ಲೇ ಎಲ್ಲರನ್ನೂ ಸೇರಿಸಬಹುದಲ್ಲವೇ. * ಪ್ರಥಮ, ದ್ವಿತೀಯ ಎಂಬಿತ್ಯಾದಿ ಬಹುಮಾನ ಘೋಷಣೆ ಬದಲು ಭಾಗವಹಿಸುವ ಎಲ್ಲರಿಗೂ ಅಭಿನಂದನಾ ಪತ್ರ ನೀಡಿ ಸುಮ್ಮನಿರುವುದು ಒಳಿತು ಅಥವಾ ಪ್ರತಿಭೆಗೆ ಅನುಗುಣವಾಗಿ ಅದಕ್ಕೊಪ್ಪುವ ಗೌರವ ಸೂಚಕ ವಿಶೇಷಣ ಪದ ನೀಡುವ ಮೂಲಕ ಅಭಿನಂದನಾ ಪತ್ರ ವಿತರಿಸಬಹುದು. ಹೇಗೂ ಭಾಗವಹಿಸದೆ ಇರುವ ಸದಸ್ಯರಿಗಂತೂ ಅಭಿನಂದನಾ ಪತ್ರ ವಿತರಿಸುವುದಿಲ್ಲವಲ್ಲ. ಹಾಗಾಗಿ ಭಾಗವಹಿಸುವ ಆಯಾ ಬಳಗದ ಸದಸ್ಯರಿಗೆ ಇದೇ ಒಂದು ದೊಡ್ಡ ಪ್ರೋತ್ಸಾಹ – ಪುರಸ್ಕಾರವೆಂದು ಪರಿಗಣಿಸಲ್ಲಡುತ್ತದೆ ಅಲ್ಲವೆ. * ಪ್ರತಿಭೆಗೆ ಬಹುಮಾನವೇ ಎಂದಿಗೂ ಮಾನದಂಡವಾಗಲಾರದು. ಅದರಲ್ಲೂ ಸರ್ಕಾರಿ ಸಂಸ್ಥೆಗಳ ಹೊರತಾಗಿ ಅನ್ಯ ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿ – ಪುರಸ್ಕಾರ ಅಥವಾ ಅಭಿನಂದನಾ ಪತ್ರಗಳು ಯಾವುದೇ ರೀತಿಯ ಸರ್ಕಾರಿ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣನೆಗೆ ಬಾರದಿರುವುದರಿಂದ ಅವು ಕೇವಲ ಪ್ರೋತ್ಸಾಹದ ಉದ್ದೀಪನಗಳು ಮಾತ್ರ. ಭಾಗವಹಿಸುವ ಸ್ಪರ್ಧಾರ್ಥಿಗಳು ಸಹ ಇದನ್ನು ಮನಗಂಡು ಅವುಗಳ ಬೆನ್ನ ಹಿಂದೆ ಬೀಳುವುದಾಗಲಿ ಅಥವಾ ಬಹುಮಾನ ದೆಸೆಯಿಂದಲೇ ಭಾಗವಹಿಸಲು ಮುಂದಾಗುವುದು ತರವಲ್ಲ. * ಎಲ್ಲಾ ಬಳಗಗಳಲ್ಲಿ ಅಲ್ಲದೆ ಇದ್ದರೂ ಸಾಮಾನ್ಯವಾಗಿ ಬಹುತೇಕ ಬಳಗಗಳಲ್ಲಿ ನಡೆಯುವ ಎಲ್ಲರನ್ನೂ ಓಲೈಸುವ ತಂತ್ರಗಾರಿಕೆಯ ಪರಿಣಾಮವಾಗಿ ಬಹುಮಾನಗಳ ಘೋಷಣೆಯಲ್ಲಿಯೂ ಸಹಜವಾಗಿಯೇ ವೈರುದ್ಯಗಳು ಸಂಭವಿಸುತ್ತವೆ. ಇದರಿಂದಾಗಿ ನೈಜ ಪ್ರತಿಭೆಗೆ ಧಕ್ಕೆ ಉಂಟಾಗಬಹುದು, ನಿರಾಸಕ್ತಿ ಮೂಡಬಹುದು, ಕಮರಬಹುದು, ತುಳಿತಕ್ಕೆ ಒಳಗಾಗಬಹುದು ಅಥವಾ ವಾಮಮಾರ್ಗದ ಹಾದಿ ತುಳಿಯಲು ಕಾರಣವಾಗಬಹುದು ಇಲ್ಲವೇ ನಿಜ ಪ್ರತಿಭೆ ಸತ್ತು ಹೋಗಲೂಬಹುದು. * ಸ್ಪರ್ಧೆಯಲ್ಲಿ ಭಾಗವಹಿಸುವ ಸದಸ್ಯರಲ್ಲೇ ಒಬ್ಬರು ಮತ್ತೊಬ್ಬರ ರಚನೆ ಕುರಿತು ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳಲು ಸೂಚಿಸುವುದು ಮತ್ತೊಂದು ಎಡವಟ್ಟಿಗೆ ಕಾರಣ. ಅದರ ಬದಲು ತೀರ್ಪುಗಾರರೇ ಬಹುಮಾನಿತ ರಚನೆಗಳ ಆಯ್ಕೆಯ ಕುರಿತು ತಮ್ಮ ಅನಿಸಿಕೆ ಬರೆಯುವಂತೆ ವ್ಯವಸ್ಥೆ ಮಾಡುವುದು ಹೆಚ್ಚು ಸೂಕ್ತ. * ಸಾಹಿತ್ಯ ಬಳಗಗಳಲ್ಲಿ ಒಬ್ಬರು ಮತ್ತೊಬ್ಬರ ರಚನೆಯ ಕುರಿತು ಅಭಿಪ್ರಾಯಿಸುವ ಅನಿಸಿಕೆಯನ್ನು “ವಿಮರ್ಶೆ” ಎಂದು ಕರೆಯಲೇಬಾರದು. ಏಕೆಂದರೆ ವಿಮರ್ಶೆ ಎಂಬ ಶಬ್ಧದ ಅರ್ಥ, ವ್ಯಾಪ್ತಿ, ವಿಸ್ತಾರ ಪರಿಧಿ ಮತ್ತು ಹಿರಿಮೆ – ಗರಿಮೆ ಬಹಳವೇ ದೊಡ್ಡದು. ಕಲಿಕಾರ್ಥಿಗಳ ಅನಿಸಿಕೆ ಎಂದಿಗೂ ವಿಮರ್ಶೆಯಾಗಲಾರದು. ಅದು ವಿಮರ್ಶಾ ಲೋಕದಲ್ಲಿ ಪಳಗಿದ ಬಹು ದೊಡ್ಡ ದೊಡ್ಡ ವಿದ್ವಾಂಸರು ಮಾಡುವ ಕಾರ್ಯ. ಹಾಗಾಗಿ ” ವಿಮರ್ಶೆ ” ಎಂಬ ಪದ ಬಳಕೆ ಸರ್ವಥಾ ಸಲ್ಲದು.     ಗುಂಪುಗಳು ಮೂಲ ಸ್ವರೂಪ ಮತ್ತು ಮೂಲ ಉದ್ದೇಶ ಮರೆತಲ್ಲಿ ಪರಿಶ್ರಮ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗಿ ದಿಕ್ಕು ದೆಸೆಯಿಲ್ಲದೆ ಮೂಲ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು ಅಥವಾ ಕಳಂಕಕ್ಕೆ ತುತ್ತಾಗಬಹುದು.         ಹಾಗಾಗಿ ಇಂತಹ ಹತ್ತು ಹಲವು ಸೂಕ್ಷ್ಮ ಸಂಗತಿಗಳ ಕುರಿತು ಬಳಗಗಳ ಅಡ್ಮಿನ್ ಗಳು / ಸಂಚಾಲಕರು ಎಚ್ಚರಿಕೆ ವಹಿಸಿ ಗುಂಪುಗಳ ರಚನೆ ಮತ್ತು ಚಟುವಟಿಕೆಗಳ ಆಯೋಜನೆ ಮಾಡಲು ಮುಂದಾಗಬೇಕು. ಆಗ ಮಾತ್ರ ಅಂತಹ ಬಳಗಗಳು ಚಿರಕಾಲ ಉಳಿಯುತ್ತವೆ, ಬೆಳೆಯುತ್ತವೆ, ಮಾದರಿಯಾಗುತ್ತವೆ ಮತ್ತು ಜನಮಾನಸದಲ್ಲಿ ಹೆಸರಾಗಿ ಹಸಿರಾಗುತ್ತವೆ. ಆ ದಿಕ್ಕಿನಲ್ಲಿ ಗುಂಪುಗಳ ರಚನೆಯಾಗಲಿ ಎಂಬುದಷ್ಟೇ ಈ ಲೇಖನದ ಆಶಯ. ********** –

ಪ್ರಸ್ತುತ Read Post »

You cannot copy content of this page

Scroll to Top