ಬಾಲ್ಯ ಮರುಕಳಿಸಿದಂತೆ
ಮೊದಲ ಕವಿತೆಯ ರೋಮಾಂಚನ ಶಿವಲೀಲಾ ಹುಣಸಗಿ . ಅದೊಂದು ಸಂಜೆ ನಮ್ಮ ಹೈಸ್ಕೂಲ್ ನ ಸಭಾಭವನದಲ್ಲಿ ಒಂದು ಕಾರ್ಯಕ್ರಮ.ಚುಟುಕು ಬ್ರಹ್ಮ ದಿನಕರ ದೇಸಾಯಿ ಯವರ ಸಾಹಿತ್ಯ ವಿಮರ್ಶೆ ಹಾಗೂ ಕವಿಗೋಷ್ಠಿ ಎರ್ಪಡಿಸಿದ್ದರು.ಆಸಕ್ತಿ ಇರುವವರು ಭಾಗವಹಿಸಲು ತಿಳಿಸಲಾಗಿತ್ತು.ನಾನು ಆಗ ಎಂಟನೇ ತರಗತಿ ವಿದ್ಯಾರ್ಥಿ. ನನ್ನ ತರಗತಿಯ ಗೆಳತಿಯರಿಗೆ ಪ್ರಾರ್ಥನೆ ಮಾಡಲು ಕರೆದಿದ್ದರು.ನನಗೆ ಹೊಸ ಅನುಭವ.ಹೇಗೆ ನಡೆಯುತ್ತದೆ ? ಎಂಬ ಕುತೂಹಲ.ಸಭಾಭವನದಲ್ಲಿ ಹಿರಿಯರು,ಕಿರಿಯರ ಇರುವುದನ್ನು ಖಾತ್ರಿಪಡಸಿಕೊಂಡು.ಒಳಹೋಗಲು ಧೈರ್ಯವಿರದೆ ಬಾಗಿಲ ಸಂದಿಯಿಂದ ನೋಡುತ್ತಿದ್ದೆ. ಆಗ ಯ್ಯಾರೋ ಏನಮ್ಮಾ…ಎನ್ ಮಾಡತಿದ್ದಿಯಾ? ಒಳಗೆ ಹೋಗಿ ಕುತಗೋ..ಸಾಹಿತ್ಯದ ವಿಚಾರ ತಿಳಿದುಕೋ ನಿನಗೆ ಓದಲು ಆಸಕ್ತಿ ಇದೆಯಾ? ಅಂದಾಗ ನಾನು ಒಂದು ಕ್ಷಣ ಹೆದರಿದ್ದೆ. ತಲೆಯೆತ್ತಿ ನೋಡಿದೆ ಅವರ ಪರಿಚಯ ನನಗಿಲ್ಲ. ನೀಳಕಾಯದ ವ್ಯಕ್ತಿ ನೀಳಕೂದಲು ಅಜಾನುಬಾಹು ಹೆದರಿಕೆಯಾಗಿತ್ತು.ಅವರು ಆಡಿದ ಮೃದು ಮಾತುಗಳಿಗೆ ತಲೆದೂಗಿ ಹೌದು ಸರ್ ಎಂದೆ.ನಡಿ ಒಳಗೆ ಹೊರಗೆ ನಿಂತು ಎನ್ಮಾಡತಿಯಾ? ಎಂದಾಗ ತಲೆಯಲ್ಲಾಡಿಸಿ ಮಾಸಿದ ಬಣ್ಣದ ಲಂಗ ಕುಪ್ಪುಸ ಧರಿಸಿದ್ದರಿಂದ ಒಳಬರಲು ಸಂಕೋಚವೆನಿಸಿ.ಹಿಂದಿನ ಬೆಂಚಲ್ಲಿ ಮೆಲ್ಲಗೆ ಕುಳಿತೆ.ನನ್ನೊಟ್ಟಿಗೆ ಬಂದ ವ್ಯಕ್ತಿಯನ್ನು ಎಲ್ಲರೂ ಬಲು ಪ್ರೀತಿಯಿಂದ ಸ್ವಾಗತಿಸಿ ಅವರನ್ನು ವೇದಿಕೆಗೆ ಆಹ್ವಾನ ನೀಡಿದ್ದನ್ನು ಕಂಡು ಇನ್ನು ಭಯವಾಯಿತು.ನಾನು ಹೊಸ ಅಂಗಿ ಹಾಕಿ ಬರಬಹುದಿತ್ತು ಅನ್ನಿಸಿತು. ಕಾರ್ಯಕ್ರಮ ಸುಂದರವಾಗಿ ನಡೆಯುತ್ತಿತ್ತು.ಕವಿಗೋಷ್ಠಿಗೆ ಬಂದ ಎಲ್ಲರ ಕವಿತೆಗಳನ್ನು ಆಸಕ್ತಿಯಿಂದ ಕೇಳುತ್ತ.ನಾನು ಅಲ್ಲೆ ಒಂದು ಕವನ ಗೀಚಿದ್ದೆ.ನಾನು ಬರೆಯುವುದನ್ನು ಆವ್ಯಕ್ತಿ ಗಮನಿಸುತ್ತಿದ್ದರು.ಅವರು ನಮ್ಮೂರಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀ ಮೋಹನ ಕುರುಡಗಿ ಅಂತ ಗೊತ್ತಾಯಿತು.ಅವರ ಮಾತುಗಳು ನನ್ನ ಮನದ ಮೇಲೆ ತುಂಬಾನೆ ಪ್ರಭಾವ ಬೀರಿತ್ತು.ಅವರ ಪ್ರೇರಣೆಯ ಮೂಲಕ ನನ್ನ ಭಾವನೆಗಳನ್ನು ಕವಿತೆಯಾಗಿಸುವ ಪ್ರಯತ್ನ ಮಾಡಲು ಹುರಿದುಂಬಿಸಿದ ವ್ಯಕ್ತಿ ಮೊದಲ ಗುರು ಎಂದರೆ ತಪ್ಪಾಗಲಾರದು.ನಾ ಬರೆದ ಮೊದಲ ಕವಿತೆಯನ್ನು ಅವರ ಮುಂದೆ ಹಿಡಿದಾಗ,ನನ್ನನ್ನೊಮ್ನೆ ನೋಡಿ ನಕ್ಕು ಓದಿ ಅವರು ಖುಷಿ ಪಟ್ಟಿದ್ದರು. ಅಡ್ಡಿಯಿಲ್ಲ ಪ್ರಯತ್ನ ಮಾಡಿರುವೆ.ಇನ್ನು ಚೆನ್ನಾಗಿ ಬರಿಯಲು ಹೆಚ್ಚು ಓದು ಎಂದರು. ನನಗೆ ಹಿಗ್ಗೊಹಿಗ್ಗು ನಾ ಬರೆದ ಸಾಲುಗಳು ಕವಿತೆಯಾದವಲ್ಲವೆಂದು ಮನಸಾರೆ ಅವರಿಗೆ ನಮಸ್ಕರಿಸಿ ಮನೆಕಡೆ ಓಡಿದ್ದೆ.ಅಪ್ಪ ಅಮ್ಮರಿಗೆ ಹೇಳಿದಾಗ ಅವರು ಹಿರಿಯರು ಹೇಳಿದ ಹಾಗೆ ಬರಿ ಮಗಾ ಅಂತ ಅಮ್ಮ ಮುದ್ದಿಸಿದ್ದ ಮರೆಯಲಾರೆ.ಆ ಕವಿತೆಯ ಹಾಳೆಯನ್ನು ದೇವರ ಮುಂದಿರಿಸಿ ನಮಿಸಿದ್ದೆ ಹುರುಪು. ಆ ಕವಿತೆ ಇನ್ನು ನನ್ನ ಸ್ಮೃತಿ ಪಟಲದಲ್ಲಿ…ಬಾಲ ಭಾಷೆಯ ಕವಿತೆ… ಖಾಲಿ ಕುರ್ಚಿ ಹೂವ ನೀಡುತಲಿ ಬಂದವರು ಹಾಡಿ ಹೊಗಳಿ ಹೋದರು ನಿಂತು ನುಡಿದವರೆಲ್ಲರ ಮಾತಿಗೆ ಮುಂದೆ ಕುಂತವರು ತೂಕಡಿಸಿದರು ಹಿಂದಿದ್ದವರೆಲ್ಲ ಮರೆಯಾದರು ಮುಂದೆ ಖಾಲಿ ಕುರ್ಚಿಗಳು ವೇದಿಕೆಯ ತುಂಬ ಜನರು ಕೇಳುಗರಿಲ್ಲದೆ ವಾಚಿಸಿದರು ನನ್ನದೊಂದು ಸಾಲು ಹೇಳಲೋ ಬಿಡಲೋ ಗೊತ್ತಿಲ್ಲ ಖಾಲಿ ಕುರ್ಚಿಗಳು ಹೇಳಿಬಿಡು ಕೇಳುವೆ ಅನ್ನುತ್ತವಲ್ಲ.. ಈ ಕವನವನ್ನು ಮೊದಲ ಬಾರಿ ವಾಚಿಸುವಾಗೆಲ್ಲ ನನಗೆ ನಡುಕ.ಬೆವರು,ನೀರಡಿಕೆ,ಮೈಕಿನ ಮುಂದೆ ಪ್ರಥಮ ಬಾರಿ ನಿಂತು ಗಟ್ಟಿಯಾಗಿ ಮುಂದಿದ್ದವರನ್ನು ನೋಡಲು ಧೈರ್ಯ ಸಾಲದೇ ಬಡಬಡ ಓದಿದಾಗ ಸುಸ್ತೊಸುಸ್ತು…ನನ್ನ ಗುರುಗಳು ನಿಧಾನವಾಗಿ ಓದು,ಗಡಿಬಿಡಿ ಮಾಡಬಾರದು.ಮೊದಲಿಗೆ ಹೀಗಾಗುತ್ತೆ ಎಂದು ಬೆನ್ನು ಚಪ್ಪರಿಸಿ ಚೆನ್ನಾಗಿ ಓದಿದೆ ಎಂದು ನೀರಿನ ಬಾಟಲಿ ನನ್ನ ಕೈಗೆ ನೀಡಿದರು. ನನಗೋ ನೆಮ್ಮದಿ ಓದಿದೆ ಎಂದು ಮನದಲ್ಲಿ ಖುಷಿಪಟ್ಟೆ. ಕವಿತೆಗಳ ಭಾವಗಳು ಚಿಗುರೊಡೆದಿದ್ದು,ಹೊಸ ಅಲೆಗೆ ದಾರಿ ತೋರಿದಂತಾಗಿತ್ತು.ನನ್ನ ಇನ್ನೊರ್ವ ಗುರುಗಳು ಶ್ರೀ ನಾ.ಸು.ಭರತನಳ್ಳಿ ಯವರು ನನ್ನ ಕವನ ವಾಚನಗಳಿಗೆ ಹಾಗೂ ಹೀಗೆ ಬರಿಯೆಂದು ಮಾರ್ಗದರ್ಶನ ನೀಡುತ್ತಿದ್ದರು.ಅದೇ ಸಂದರ್ಭದಲ್ಲಿ ದಿವಂಗತ ಶ್ರೀ ರಾಜಶೇಖರ ಹೈಸ್ಕೂಲ್ ಮುಖ್ಯಾಧ್ಯಾಪಕರು ನನಗೆ ಗೊತ್ತಿಲ್ಲದಂತೆ ಗಮನಿಸುತ್ತಿದ್ದರು.ಒಂದು ದಿನ ನನ್ನ ಕರೆದು ಪುಟ್ಟಾ ಮಂಚಿಕೇರಿಯಲ್ಲಿ ಕಾವ್ಯ ಶಿಬಿರವಿದೆ ಅದರಲ್ಲಿ ನೀನು ಭಾಗವಹಿಸು ನಾಡಿನ ಹೆಸರಾಂತ ಕವಿಗಳು ನಿನಗೆ ಮಾರ್ಗದರ್ಶನ ನೀಡುವರು.ಎಂದಾಗ ನನಗಾದ ಸಂತೋಷಕ್ಕೆ ಕೊನೆಯೇ ಇಲ್ಲ.ಆ ಗುರುಗಳೇ ಶಿಬಿರದ ಶುಲ್ಕ ಪಾವತಿಸಿ,ಅಲ್ಲಿ ಉಳಿದು ಕೊಳ್ಳಲು ವಸತಿ ವ್ಯವಸ್ಥೆ ಕೂಡ ಮಾಡಿ,ನಮ್ಮ ಮನೆಯಲ್ಲಿ ತಂದೆ ತಾಯಿಗೆ ಹೇಳಿ ಕರೆತಂದು ಶಿಬಿರಕ್ಕೆ ಬಿಟ್ಟಿದ್ದರು. ನನ್ನ ಪುಣ್ಯವೋ ಗೊತ್ತಿಲ್ಲ,ಅಲ್ಲಿ ಶ್ರೀ ಜಯಂತ ಕಾಯ್ಕಿಣಿ, ಎಚ್.ಎಸ್ ರಾಘವೆಂದ್ರರಾವ್…ದುಂಡಿ.ಹೀಗೆ ಹಲವಾರು ಗಣ್ಯರ ಪರಿಚಯದ ಜೊತೆ ಕಲಿಯಲು ಅವಕಾಶ ದೊರೆಯಿತು.ಪುಟ್ಟ ತಲೆ,ಎಳೆ ಮನಸು, ಮೆದುಳು, ಬಲಿಯದ ಹೃದಯ ಎಷ್ಟು ಸ್ವೀಕರಿಸಲು ಸಾಧ್ಯವೋ ಅಷ್ಟು ಮನಬಿಚ್ಚಿ ಸ್ವೀಕರಿಸಿದೆ.ನಿಂತು ಕವಿತೆ ವಾಚಿಸುವ ಕಲೆ ಅರಿತೆ.ವಸ್ತು, ವಿಷಯಗಳ ಮೇಲೆ ಹೇಗೆ ಕವಿತೆ ಕಟ್ಟಬೇಕು ಎಂಬುದನ್ನು ತಿಳಿಯಪಟ್ಟೆ.ನನ್ನ ಗುರುಗಳಿಗೊಂದು ಭರವಸೆ,ನನ್ನ ಮೇಲೆ. ಕವಿತೆ ಬರೆಯುವುದನ್ನು ನಿನ್ನದೇ ಆದ ಶೈಲಿಯಲ್ಲಿ ಪ್ರತಿಬಿಂಬಿಸೆಂದು ಪ್ರೋತ್ಸಾಹ. ಗುರು ಬಯಲಾದ ಬಾನಿಗೆ ಗುರುವೆ ಸರ್ವಸ್ವ ಮನವೆಂಬ ಬಾನಿಗೆ ಗುರುವೆಂಬ ಸಾರಥಿ ನಮ್ಮಂಥ ಶಿಷ್ಯರಿಗೆ ನಿಮ್ಮಂಥ ಗುರುವೆ ಮಾಣಿಕ್ಯ. ತಪ್ಪುಒಪ್ಪುಗಳ ಅಪ್ಪಿ ಬೆನ್ನ ತಟ್ಟುವವರು ನೀವಲ್ಲವೆ ಕವಿತೆ ಓದುವಾಗ ನನಗರಿವಿಲ್ಲದೇ ಕಣ್ಣೀರು ಜಾರಿದ್ದು,ಅಲ್ಲಿದ್ದ ನನ್ನ ಗುರುಗಳು ಕಣ್ಣೀರ ಒರೆಸಿದ್ದು. ಒಂದು ಕ್ಷಣ ನನ್ನ ನಾ ಮರೆತಂತೆ….ಮೊದಲಿನ ಅನುಭವಗಳು ನಿಜವಾಗಲೂ ಮರೆಯಲಾರದಂತಹ ಸವಿ ನೆನನಪುಗಳು.ಬಾಲ್ಯದ ಬರವಣಿಗೆಗಳು ಈಗಲೂ ಮನಸಿಗೆ ಆನಂದ ತರುತ್ತವೆ.ಮರೆಯಾದ ಜ್ಯೋತಿಗಳು ಅಂದು ನನ್ನ ಮನದಲ್ಲಿ ಹಚ್ಚಿದ ಹಣತೆ ಇಂದಿಗೂ ಅವರು ಬಿತ್ತಿದ ವಿಚಾರ ಧಾರೆಗಳು ನನ್ನ ಕವಿತ್ವಕ್ಕೆ ಪೂರಕವೆಂದರೆ ತಪ್ಪಾಗದು. ತಪ್ಪಲಿಲ್ಲ ನಮ್ಮ ಬೀದಿ ಹುಚ್ಚಣ ಬಳಿತಾನ್ರಿ ಬಣ್ಣ ನೋಡಿನಗತಾನ ಹುಚ್ಚನಾಂಗ ಅವ ಹಿಂದ ಇದ್ದನಂತ್ರಿ ರಾಜಾನಾಂಗ ರಾಜಕೀಯ ಪಕ್ಷದಾಗ ಹೀರೋ ಹಾಂಗ ಕಿತ್ತ ತಿನ್ನೊರಿಗೆ ಕುಡಿದು ಕುಪ್ಪಳಿಸೋರಿಗೆ ಹೊಲ ಮನಿ ಮಾರಿ ರಾಜಕೀಯದ ಪೋಷಾಕದಾಗ ಮರೆದಿದ್ದ ಬಂತು ಕೊನೆಗೂ ಟಿಕೇಟ್ ಸಿಕ್ಕಿಲ್ಲ ಬೀದಿಗೆ ಬೀಳೊದಂತು ತಪ್ಪಲಿಲ್ಲ… ಈ ಕವನ ನೈಜ ವ್ಯಕ್ತಿಯ ಬದುಕ ಕುರಿತಾಗಿತ್ತು.ಇದನ್ನು ಓದುವಾಗ ನನ್ನಲ್ಲಿ ಗಟ್ಟಿ ಮನಸ್ಸು ಬಂದಿತ್ತು.ಕೆಲವರಿಗೆ ಚೂರಿಚಿಚ್ಚಿದಾಂಗ ಆಗಿತ್ತು.ದಿವಂಗತ ಮೋಹನ ಕುರುಡಗಿ ಗುರುಗಳು ಮೆಚ್ಚಿ ಹೊಗಳಿದ್ದರು.ಬಂಡಾಯದ ಚಿಗುರು,ಚಿಗುರಿ ಹೆಮ್ಮರವಾಗಿ ಬೆಳೆಯಲೆಂದು ಆಶೀರ್ವದಿಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.ಇಂತಹ ಮಧುರ ನೆನಪುಗಳನ್ನು ಪುನಃ ಮೆಲುಕು ಹಾಕುವುದ ರೊಂದಿಗೆ.ಅಂತಹ ಹಿರಿಚೇತನಗಳನ್ನು ನೆನಪಿಸುವ ಸುಸಂದರ್ಭ ಒದಗಿದ್ದು ಸಂತಸ ತಂದಿದೆ.ಅಲ್ಲದೆ ಮೊದಲ ಕವಿತೆಗಳು ನೀಡಿದ ಖುಷಿ ಮರೆಯಲು ಸಾಧ್ಯವಿಲ್ಲ. ಸಾಹಿತ್ಯದ ಗಂಧ ತೇದಷ್ಟು ಪರಿಮಳ ಸೂಸುವುದು. ಮನಸ್ಸನ್ನು ಪುನಃ ಬಾಲ್ಯದತ್ತ ಹಿಂತಿರುಗಿದ್ದು ಕಾಮನ ಬಿಲ್ಲು ಮೂಡಿದಂತೆ. ************************
ಬಾಲ್ಯ ಮರುಕಳಿಸಿದಂತೆ Read Post »








