ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಇತರೆ

ಓಲೆ ಮರೆತರೆ ನಿನ್ನ ಮಡಿವೆನು ಚಿನ್ನ!                                                    ಜಯಶ್ರೀ.ಜೆ. ಅಬ್ಬಿಗೇರಿ ಬೆಳದಿಂಗಳ ರಾತ್ರಿಯ ಪೂರ್ಣ ಚಂದಿರನ ಮೊಗ ನೋಡಿದಾಗೊಮ್ಮೆ ನಿನ್ನ ಮುಖವನ್ನೇ ನೋಡಿದಂತೆ ಅನಿಸುತ್ತದೆ. ನೀನೇನು ಚಂದಿರನ ಮಗಳಾ ಎನ್ನುವ ಸಂಶಯ ಮನದಲ್ಲಿ ಕಾಡುತ್ತದೆ. ನಿನ್ನ ಹತ್ತಿರ ಅದೇನೋ ಮಾಯಾ ಶಕ್ತಿ ಇದೆ ನಿನ್ನನ್ನೇ ನೋಡೋಕೆ ಮನಸ್ಸು ಕಾತರಿಸುತ್ತದೆ. ಈ ಹಿಂದೆ ನೂರು ನೂರು ಸುಂದರಿಯರನ್ನು ಕಂಡ ಕಣ್ಣು ಹೀಗೆ ಹಟ ಹಿಡಿದಿರಲಿಲ್ಲ. ಸ್ವಭಾವದಲ್ಲಿ ತುಂಬಾ ಮೌನಿ ನಾನು. ಮರುಭೂಮಿಯಲ್ಲಿ ಗುಲಾಬಿ ಹೂ ಅರಳಿದಂತೆ ಅರಳಿದ ನಿನ್ನ ಕೆಂದುಟಿಗಳ ಕಂಡಾಗಿನಿಂದ ಅರಳು ಹುರಿದಂತೆ ಮಾತಾಡ್ತಿದೀನಿ. ಇದನ್ನು ಕಂಡು ನನ್ನ ಗೆಳೆಯರೆಲ್ಲ ನನಗೆ ಏನೋ ಆಗಿದೆ ಅಂತ ಚುಡಾಯಿಸ್ತಿದಾರೆ. ನೀನು ಕೈಗೆ ಸಿಗುತ್ತಿಯೋ ಇಲ್ಲವೋ ಎನ್ನುವ ಚಿಂತೆಯ ನೂರಾರು ಹಕ್ಕಿಗಳು ಮೊಟ್ಟೆಯಿಡತೊಡಗಿವೆ. ಪ್ರೀತಿಯ ಗಾಳಕ್ಕೆ ಬಿದ್ದಿದ್ದೇನೆ. ಹಾಗಂತ ಮೊದಲ ಪ್ರಯತ್ನದಲ್ಲೇ ಪ್ರೀತಿ ಫಲಿಸುತ್ತದೆ ಅನ್ನೋ ಖಾತ್ರಿ ಇರಲಿಲ್ಲ. ಎಷ್ಟು ಕೋಟಿ ಕ್ಷಣಗಳನ್ನು ನಿನ್ನ ಒಲವಿನ ಕೊಳದಲ್ಲಿ ಎಸೆಯಬೇಕೋ ಗೊತ್ತಿಲ್ಲ. ನಾನೀಗ ಮತ್ತಷ್ಟು ಒಲವಿನ ಬಲೆಯಲ್ಲಿ ಬೀಳಲಿದ್ದೇನೆ ಎನ್ನುವುದಷ್ಟೇ ಸದ್ಯಕ್ಕೆ ಖಾತ್ರಿಯಿರುವ ಏಕ ಮಾತ್ರ ಸಂಗತಿ. ನಿನಗಾಗಿ ಕಾಯುವ ಈ ಸಮಯದಲ್ಲಿ ಗಡಿಯಾರ ಯಾರು ಕಂಡು ಹಿಡಿದರು ಅಂತ ಕೋಪಿಸಿಕೊಳ್ಳುತ್ತೇನೆ. ಅದಾವುದೋ ಗಳಿಗೆಯಲ್ಲಿ ಸೋಕಿದ ನಿನ್ನ ನವಿರಾದ ಬೆರಳುಗಳ, ತಾಕಿದ ಭುಜಗಳ ದೃಶ್ಯ ಕಣ್ರಪ್ಪೆಯಲ್ಲಿ ಜೋಕಾಲಿಯಂತೆ ಇಂದಿಗೂ ಓಲಾಡುತ್ತಿದೆ.      ಮಳೆಗಾಲದ ಒಂದು ದಿನ ತುಂಬಾ ಚಳಿಯಿತ್ತು. ಚಿಕ್ಕ ಮಲ್ಲಿಗೆ ಮಾಲೆಯ ನೀಳ ಜಡೆಯೊಡತಿ ನೀನು ಎದುರಾಗಿ ಕಾಲೇಜಿನ ಪಾರ‍್ಕಿನಲ್ಲಿ ಕುಳಿತಿದ್ದೆ. ಮೊದಲ ನೋಟದಲ್ಲೇ ನಿನ್ನ ಮೇಲೆ ಒಲವಿನ ಭಾವಕೋಶದ ಅಂಶವೊಂದು ಅಂಕುರಿಸಿತು. ಕಲ್ಪನೆಯ ಸುಂದರಿ ಒಮ್ಮೆಲೇ ಎದುರಾದರೆ ಈ ಬಡ ಹೃದಯದ ಗತಿ ಏನಾಗಬೇಡ?  ಜಡಿ ಮಳೆಯ ಮುನ್ಸೂಚನೆಯಂತೆ ಒಂದೊಂದೇ ತುಂತುರು ಹನಿ ಶುರುವಾಗಿತ್ತು.ಪಕ್ಕದಲ್ಲಿಯೇ ಇದ್ದ ಗೆಳೆಯನನ್ನು ಆತುರದಿಂದ ತಿವಿಯ ತೊಡಗಿದೆ. ನಾನು ತುಂಬಾ ತಳಮಳಕ್ಕೆ ದುಗುಡಕ್ಕೆ ಯೋಚನೆಗೆ ಒಳಗಾಗಿದ್ದೇನೆ ಎಂದು ತಿಳಿದ ಗೆಳೆಯ,’ಈ ಹಿಂದೆ ಎಂದೂ ನೀ ಹೀಗೆ ಆಡಿರಲಿಲ್ಲ. ನಿನಗೂ.. . . .’ ಎಂದು ಕಿಚಾಯಿಸಿ ಅಲ್ಲಿಂದ ಕಾಲ್ಕಿತ್ತ. ಮಲ್ಲಿಗೆ ಗಂಧ ಒಂದೆಡೆ ಬೆರೆಯಲು ಸಿಹಿ ಜೇನು ಮನಸ್ಸುಗಳು ಮಿಡಿಯಲು ಅನುವು ಮಾಡಿ ಹೋದನೇನೋ ಎನಿಸಿತು.ಈಗಲೇ ವಯಸ್ಸು ಇಪ್ಪತ್ತೈದಕ್ಕೆ ಮೂರು ಮೆಟ್ಟಿಲು ದೂರದಲ್ಲಿದೆ. ಇದೇ ಒಲವಿನ ಗಾನಕೆ ತಲೆದೂಗುವ ವಸಂತಕಾಲ ಎಂದು ನಕ್ಕಿತು ಒಳ ಮನಸ್ಸು. ಮೊದ ಮೊದಲು ನೋಟ್ಸ್ಗಾಗಿ ಮಾತು ಕತೆ ನಡೆಯುತ್ತಿತ್ತು. ನಂತರ ಅದು ಇದು ಮಾತು ಬೆಳೆಯಿತು. ಸಂಕೋಚವಿಲ್ಲದ ಮಾತುಗಳು ಶುರುವಾದವು. ಗೆಳತನವಾದ ಮೇಲೆ ಇಬ್ಬರೂ ಸಾಕಷ್ಟು ಆತ್ಮೀಯರಾಗ ತೊಡಗಿದೆವು. ತಂಪಾದ ದಿನವೊಂದರಲ್ಲಿ ಅನುರಾಗದ ಕೋರಿಕೆ ಮುಂದಿತ್ತಾಗ ನಗುವಿನಲ್ಲೇ ಒಪ್ಪಿಗೆ ಸೂಚಿಸಿದ್ದೆ. ಮನವು ಒಲವಿನ ಕಡಲಲ್ಲಿ ತೇಲಿದಂತೆನಿಸಿತು. ಬಾನೆತ್ತರಕ್ಕೆ ಹೃದಯ. ಹಾರಿತು ಆನಂದ ಕಂಬನಿ ಸುರಿಯಿತು. ‘ಬಿಡದಿರು ಎಂದೆಂದೂ ಈ ಕೈಯನು ಹೃದಯದ ಹಸಿರು ತೋಟದಲ್ಲಿ ಒಲವಿನ ವಿನಿಮಯಕೆ  ಕಾಯುವೆ.’ ಎಂದೆ ನೀನು. ಯಾವ ಕೋನದಲ್ಲೂ ನೀನಾಡಿದ ಮಾತು ನಾಟಕೀಯ ಅನಿಸಲೇ ಇಲ್ಲ. ಅಂದಿನಿಂದ  ನನ್ನೆದೆಯ ತೋಟದ ಹೂವಾದೆ. ಉಸಿರನು ನಿನ್ನ ಹೆಸರಿಗೆ ಬರೆದೆ.    ಅಕ್ಕನ ಮದುವೆಗಾಗಿ ಅಪ್ಪ ಮಾಡಿಟ್ಟ ಸಾಲ ತೀರಿಸುವುದು ನನ್ನ ತಲೆ ಮೇಲೆ ಬಿದ್ದಿತ್ತು. ಯಾರನ್ನು ಕೇಳುವುದು? ಗೆಳೆಯರ‍್ಯಾರು ಅಷ್ಟು ಹಣ ಕೊಡುವಷ್ಟು ಸ್ಥಿತಿವಂತರಲ್ಲ. ಸ್ಥಿತಿವಂತ ಬಂಧುಗಳನ್ನು ಕೇಳಬೇಕೆಂದರೆ ಹಣಕ್ಕಾಗಿ ಹಲ್ಲು ಗಿಂಜುತ್ತಾನೆ ಎನ್ನುತ್ತಾರೇನೋ ಎಂಬ ಸ್ವಾಭಿಮಾನ. ಬಾಯ್ತೆರೆದು ಕೇಳುವಂಥ ಆತ್ಮೀಯರೆದರು ನಿಲ್ಲಲು ಧರ‍್ಯ ಸಾಲುತ್ತಿಲ್ಲ.ಇನ್ನು ಬ್ಯಾಂಕ್ ಕೌಂಟರ್‌ಗಳಿಗೋ ಇಲ್ಲ ಫೈನಾನ್ಸ್ ಬಾಗಿಲಿಗೆ ಎಡತಾಕೋಣವೆಂದರೆ ಆ ಪಾಟಿ ಬಡ್ಡಿ ನನ್ನಿಂದ ಭರಿಸಲು ಸಾಧ್ಯವಿಲ್ಲ. ಹೀಗಾಗಿ ಈ ಚಿಂತೆಯ ಹೊದಿಕೆಯನ್ನು ಸರಿಸಿ ಹೊರ ಬರುವುದು ಹೇಗೆ ಎಂಬುದು ತಲೆಯಲ್ಲಿ ಕಟ್ಟಿಗೆ ಹುಳುವಿನಂತೆ ಕೊರೆಯುತ್ತಿತ್ತು. ಅಪ್ಪ ಕೊಡುತ್ತಿದ್ದ ಹಣದಲ್ಲಿ ಬದುಕುತ್ತಿದ್ದ ದಿನಗಳಿಗೆ ಕೊನೆಗೊಂಡು ಪೈಸೆ ಪೈಸೆಗೂ ಲೆಕ್ಕಾಚಾರ ಹಾಕುವ ಬದುಕು ಕಣ್ಮುಂದಿತ್ತು.ಕಾಡಿನಲ್ಲಿ ಕಳೆದು ಹೋದ ಒಂಟಿ ಸಣ್ಣ ಮಗುವಿನಂತಾಗಿತ್ತು ನನ್ನ ಸ್ಥಿತಿ. ಇದನ್ನೆಲ್ಲ ಸಣ್ಣನೆಯ ದನಿಯಲ್ಲಿ ಪರಿಹಾರಕ್ಕಾಗಿ ಕೊನೆಯ ಪ್ರಯತ್ನವೆಂಬಂತೆ ನಿನ್ನ ಮುಂದೆ ಒಂದೇ ಉಸಿರಲ್ಲಿ ಉಸಿರಿದೆ.  ‘ಸಂಯಮ ಮೀರಿದವನು ಜಡ ವಸ್ತುವಿಗೆ ಸಮ.’ ನನ್ನ ಮಾತಿನಿಂದ ನಿನಗೆ ಕೊಂಚ ನೋವಾಗಬಹುದು. ಅದನ್ನು ಭರಿಸುವ ಶಕ್ತಿ ನಿನ್ನಲ್ಲಿದೆ ಎಂದು ನನಗೆ ಗೊತ್ತು. ಆರ‍್ಥಿಕವಾಗಿ ಸುಭದ್ರವಾಗಿದ್ದರೆ ಸಂತಸದಲ್ಲಿರುತ್ತೇವೆ ಎನ್ನುವುದನ್ನು ಮನಸ್ಸಿನಿಂದ ತೆಗೆದು ಹಾಕು. ‘ಕಷ್ಟಗಳೇ ಮನುಷ್ಯನನ್ನು ಸಂತಸದ ಕಡಲಿಗೆ ನೂಕುತ್ತವೆ.’ಆರ‍್ಥಿಕ ಸಮಸ್ಯೆಗಳಿಗೆ ದುಡಿಮೆ ಬಿಟ್ಟು ಬೇರೆ ದಾರಿ ಯಾವುದೂ ಫಲಿಸುವುದಿಲ್ಲ. ಕಾಲೇಜು ಹೇಗಿದ್ದರೂ ಮಧ್ಯಾಹ್ನ ಒಂದು ಗಂಟೆಗೆ ಮುಗಿಯುತ್ತದೆ.ಅದರಾಚೆಗೆ ಅಲ್ಲಿ ಇಲ್ಲಿ ಹಾಳು ಹರಟೆ ಬಿಟ್ಟು ಪಾರ‍್ಟ್ ಟೈಂ ಕೆಲಸಕ್ಕೆ ಸೇರಿಕೋ.ನಿನ್ನಲ್ಲಿರೋ ಬುದ್ಧಿವಂತಿಕೆಗೆ ಒಳ್ಳೆಯ ಕೆಲಸ ಸಿಕ್ಕೇ ಸಿಗುತ್ತದೆಂದು ನನ್ನ ಮನಸ್ಸಿನ ಗೊಂಬೆಗೆ ಕೀಲಿ ಕೊಟ್ಟೆ. ಕೆಲಸ ಹುಡುಕುವ ಕೆಲ ಪ್ರಯತ್ನಗಳು ವಿಫಲವಾದಾಗ ಧೈರ‍್ಯವನ್ನೂ ತುಂಬಿದೆ.ಒಂದು ಶುಭ ದಿನ ಕೆಲಸ ಕೈಯಲ್ಲಿತ್ತು. ಪ್ರತಿಷ್ಟಿತ ಸಂಸ್ಥೆಯಾದ್ದರಿಂದ ಸಂಬಳವೂ ಚೆನ್ನಾಗಿಯೇ ಇತ್ತು. ಸಾಲ ಬರಬರುತ್ತ ಕರಗತೊಡಗಿತು. ನನ್ನ ಶ್ರದ್ಧೆಯ ದುಡಿಮೆಗೆ ಸಂಸ್ಥೆಯ ಯಜಮಾನರು ನೌಕರಿ ಖಾಯಂಗೊಳಿಸಿದರು. ಪ್ರೀತಿಸಿದವಳು ಬರೆದ ಜೀವನದ ಕಥೆಯಲ್ಲಿ ಮೂರು ವರ‍್ಷದಲ್ಲಿ ಬದುಕು ನಡೆಸುವ ನಾವಿಕನಾದೆ ಎನ್ನೋದೇ ಹೆಮ್ಮೆ.ಭದ್ರತೆ ಸಾಧಿಸಿದ ಬದುಕಿನ ಪ್ರತಿಬಿಂಬದಂತೆ ಬೀಗುತ್ತಿದ್ದೇನೆ. ಬಾಳ ದೀವಿಗೆ ಹಚ್ಚಿದ ಪ್ರೀತಿ ದೇವತೆ ನೀನು ಎಂದು ಉಲಿಯುತ್ತಿದ್ದೇನೆ.                  ಆ ಮೊಹಕ ಮುಸ್ಸಂಜೆ ನನಗಿನ್ನೂ ನೆನಪಿದೆ. ನಮ್ಮ ಮಾಮೂಲಿ ಪಾರ‍್ಕಿನಲ್ಲಿ ನಿನಗಾಗಿ ಕಾಯುತ್ತಿದ್ದೆ. ಕರಿ ಮೋಡಗಳು ವಿಚಿತ್ರ ಶಾಖದಲ್ಲಿ ಹನಿ ಹನಿ ಮಳೆ ಸುರಿಸತೊಡಗಿದ್ದವು.ಇದ್ದಕ್ಕಿದ್ದಂತೆ ಸುಮಧುರ ಘಮ ಸೂಸುತಿರುವಂತೆ ಭಾಸವಾಯಿತು.ಗಿಡದಂಚಿನಲ್ಲಿ ಮೈಬಿರಿಯಲು ಸಿದ್ಧವಾಗಿರುವ ಮೊಗ್ಗಿನಂತೆ ದೂರದಲ್ಲೇ ನಿಂತಿದ್ದ ನಿನ್ನ ಪಕ್ಕ ಬಂದು ನಿಂತೆ. ಇಷ್ಟು ಹೊತ್ತಿನಿಂದ ತಯಾರಿ ಮಾಡಿಕೊಂಡ ಮಾತೊಂದನ್ನು ನನಗಷ್ಟೇ ಕೇಳುವಂತೆ ‘ಮನೆಯಲ್ಲಿ ನನಗೆ ಗಂಡು ನೋಡುತ್ತಿದ್ದಾರೆ.’ ಎಂದು ಪಿಸುಗುಟ್ಟಿ  ನನ್ನ ಕೈ ಹಿಡಿದೆ. ನಿನ್ನ ಹಿತವಾದ ಸ್ಪರ್ಶ ಮೈಗೆ ವಿದ್ಯತ್ ಪುಳಕವನ್ನು ಕೊಟ್ಟಿತು.  ಸಟ್ಟನೆ ಹೆಗಲ ಮೇಲೆ ಕೈ ಹಾಕಿ ಇನ್ನೊಂದು ಕೈಯಿಂದ ಬಳಸಿದೆ. ಕೊರಳಿಗೆ ಎರಡೂ ಕೈಗಳನ್ನು ಜೋತು ಹಾಕಿದೆ. ಸ್ನೇಹದಿ ಸಮ್ಮೋಹಿಸಲು ಮುದ್ದಾಡಲು ಮುಂದಾದಾಗ ‘ತಂಟೆ ಮಾಡುವ ತುಂಟ ನೀನು.’ ಮನಸ್ಸು ಹೇಗೇಗೋ ಜಾರುವುದು ಅದರ ಕೈಗೊಂಬೆ ಆಗುವುದು ಬೇಡ ಚೆಲುವ. ಆತುರ ಬೇಡ ಅವಸರ ಬೇಡ ಪ್ರೀತಿಗೆ. ತುಟಿಗಳೆರಡು ಭಯದಲ್ಲಿ ನಿಂತು ಹೆಚ್ಚಿಸಲಿ ಹೃದಯಗಳ ವೇಗ ಎಂಬ ಕನಸಿನ ಚಿಗುರು ನನ್ನಲ್ಲೂ ಇದೆ. ಒಲವಿನ ಹೊನ್ನ ಹೊಳೆ ನನ್ನೆದೆಯಲ್ಲೂ ಹರಿಯುತಿದೆ. ಎನ್ನುತ್ತ ಕೈ ಬಿಡಿಸಿಕೊಂಡು ಓಡಿದೆ. ‘ಎಷ್ಟಾದರೂ ಹೆಣ್ಣು ಜೀವವಲ್ಲವೇ ನಾಚಿಕೆಯೇ ಆಭರಣ ಈ ಜೀವಕೆ.’ ಎಂದುಕೊಂಡೆ. ದೇವರ ಕೃಪೆಯಿರಬಹುದು ನೀ ನನಗಾಗಿ ಮೀಸಲಿರುವೆ. ನನ್ನತ್ತೆ ಮಾವನೊಂದಿಗೆ ಮಾತು ಕತೆ ಆಗಿದೆ. ಹಸಿರು ನಿಶಾನೆಯೂ ದೊರೆತಾಗಿದೆ. ಸಿಗುವೆ ಮದುವೆ ಮಂಟಪದಲ್ಲೇ ‘ಜನುಮದ ಗೆಳತಿ ಉಸಿರಿನಾ ಒಡತಿ ಮರೆತರೆ ನಿನ್ನ ಮಡಿವೆನು ಚಿನ್ನ.’ ಎಂಬುದು ಮನದ ಹಾಡಾಗಿದೆ. ನಿನ್ನ ಸ್ನಿಗ್ದ ಸೌಂದರ‍್ಯದ ಸುಮಧುರ ಪರಿಮಳದ ತನುವಿನೊಂದಿಗೆ ಪ್ರತಿ ಇರುಳು ಬಿಡದೇ ಒಲವಿನಾಟದಲಿ ಬೆರೆಯುವೆ.ಆ ಖುಷಿಯಲಿ ಒಂದಾಗಲು ನೀನೂ ಸಿದ್ಧಳಾಗಿರು ಚೆಲ್ವಿ.                                           ****************************************

ಇತರೆ Read Post »

ಇತರೆ

ನನ್ನ ಇಷ್ಟದ ಕವಿತೆ

ನನ್ನ ಇಷ್ಟದ ಕವಿತೆ ದ.ರಾ.ಬೇಂದ್ರೆ ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ ೧) ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ ಇನ್ನೂ ಯಾಕ………. ೨) ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ ೩) ಇರು ಅಂದರ ಬರತೇನಂತ ಎದ್ದು ಹೊರಡಾಂವಾ ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ ಇನ್ನೂ ಯಾಕ………. ೫) ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾ ಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾ ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ ಇನ್ನೂ (೬)   ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ ಹಾದಿ ಬೀದಿ ಹುಡುಕತೈತ್ರೇ ಬಿಟ್ಟು ಎಲ್ಲ ಹ್ಯಾಂವಾ ಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ? ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ? ಇನ್ನೂ ಯಾಕ ಬರಲಿಲ್ಲಾ ? ಇನ್ನೂ ಯಾಕೆ ಬರಲಿಲ್ಲಾವಾ ಹುಬ್ಬಳ್ಳಿಯಂವಾ ಕಾವ್ಯ ಗಾರುಡಿಗ ಬೇಂದ್ರೆಯವರ ಕವಿ ದೃಷ್ಟಿ ಬರೀ ಪ್ರಕೃತಿಯ ಬೆಡಗಿನ ಬಗ್ಗೆ  ಅಷ್ಟೇ ಅಲ್ಲ ಸಾಮಾಜಿಕ ಸ್ಥಿತ್ಯಂತರಗಳನ್ನು ಸೂಕ್ಷ್ಮ ದೃಷ್ಟಿಯಿಂದ ಪರಿಕಿಸುತ್ತಿತ್ತು ಎನ್ನುವುದಕ್ಕೆ ನಿದರ್ಶನ ಈ ಕವನ “ಇನ್ನೂ ಯಾಕೆ ಬರಲಿಲ್ಲಾ ಹುಬ್ಬಳ್ಳಿಯಂವಾ” ಅಂದಿನ ದಿನಮಾನದಲ್ಲಿ ಪ್ರಚಲಿತವಿದ್ದುದು ಜೋಗತಿ ಪದ್ಧತಿ . ಅಂತಹ ಜೋಗತಿ ಹೆಣ್ಣುಮಗಳಿಬ್ಬಳು ತನ್ನ ಗೆಣೆಕಾರನನ್ನು ನೆನೆಸಿ ಅವನು ಬಾರದಿರಲು ಹಲುಬುವ ಪ್ರಸಂಗವನ್ನು ಕವಿ ಇಲ್ಲಿ ಕವಿತೆಯಾಗಿಸಿದ್ದಾರೆ . ಹೆಣ್ಣೊಬ್ಬಳ ಅಂತರಂಗದ ಧ್ವನಿ ಹಾಗೆಯೇ ಅಂದಿನ ಸಾಮಾಜಿಕ ಸ್ಥಿತಿಯ ಕನ್ನಡಿ ಯಾಗಿಯೂ ಹೊರಹೊಮ್ಮಿರುವ ಈ ಕವನ ರಾಧೆ ಕೃಷ್ಣನಿಗಾಗಿ ಪರಿತಪಿಸುವ ಸಂದರ್ಭವನ್ನು ನೆನಪಿಸುತ್ತದೆ. ಹೋಲಿಕೆ ಅಸಮಂಜಸವೂ ಅನುಚಿತವೂ ಇರಬಹುದು. ಆದರೆ  ಬೇರೆಲ್ಲವನ್ನೂ ಒತ್ತಟ್ಟಿಗಿಟ್ಟು ಪ್ರೇಮಿಕೆಯೊಬ್ಬಳು ಪ್ರೇಮಿಗಾಗಿ ತನ್ನ ಆಂತರ್ಯ ತೆಗೆದಿಡುವ ಭಾವವನ್ನೇ ತೆಗೆದುಕೊಂಡಿದ್ದೇನೆ ತಪ್ಪಿದ್ದರೆ ಕ್ಷಮೆ ಇರಲಿ  ಆ ಜೋಗತಿಯ ಮನೆಗೆ ಸಾಮಾನ್ಯವಾಗಿ ವಾರಕ್ಕೆ ಮೂರು ಸಾರಿ ಭೇಟಿ ಕೊಡುವ ಅಭ್ಯಾಸವಿಟ್ಟುಕೊಂಡಿದ್ದ ಗೆಳೆಯ ಈ ಬಾರಿ ಬಂದೇ ಇಲ್ಲ ಎಂದು ದುಃಖಿಸುತ್ತಿದ್ದಾಳೆ.  ಏನೋ ಮುನಿಸು ಅಸಮಾಧಾನದಿಂದ ಅವನು ಬಾರದಿರಲು ಇವಳಿಗೆ ದುಮ್ಮಾನ.  ಮುಂದೆ ಅವನನ್ನು ಅವನ ವೇಷಭೂಷಣವನ್ನು ವರ್ಣಿಸುತ್ತಾ ಜರಿಯ ರುಮಾಲು ಸುತ್ತಿ ಕೊಂಡವನು ತುಂಬು ಮೀಸೆಯನ್ನು ತೀಡಿಕೊಳ್ಳುತ್ತಾ ನಗುನಗುತ್ತ ಹಾಸ್ಯ ಮಾಡಿ ನಗಿಸುತ್ತಾ ಮಾತಿಗೆ ಮಾತು ಸೇರಿಸುತ್ತಾ ಹಾಡು ಕಟ್ಟುವವನು ಎನ್ನುತ್ತಾಳೆ.  ಜರದ ರುಮಾಲಿನ ಶ್ರೀಮಂತ ಅಷ್ಟೇ ಅಲ್ಲ ಸ್ನೇಹಮಯಿ ರೂಪವಂತ ಹಸನ್ಮುಖಿ ಎಂದೆಲ್ಲಾ ಅವನ ವರ್ಣನೆ.  ಜೋಗತಿಯರು ಮದುವೆಯಾಗಿ ತಾಳಿ ಧರಿಸುವಂತಿಲ್ಲ ದೇವರ ಹೆಸರಲ್ಲಿ ಮುತ್ತು ಕಟ್ಟಿಕೊಳ್ಳುವ ಪದ್ಧತಿ ಆದರೆ ಅವನು ಅವಳಿಗೆ ಮದುವೆಯಾಗುವ ಆಹ್ವಾನವನ್ನಿತ್ತಿದ್ದಾನೆ.  ಹಾಗೆಯೇ ಜೋಗತಿಗೆ ಭಂಡಾರ ಅರಿಸಿನ ಕುಂಕುಮ ತುಂಬಾ ಅಮೂಲ್ಯ   ಬಂಗಾರದ ಹುಡಿಯಲ್ಲಿ ಭಂಡಾರ ಮಾಡಿಸುವೆ ಎಂದು ಹೇಳಿದ್ದನಂತೆ ಮತ್ತೆ ಮೂರನೆಯ ಸಾಲಿನಲ್ಲಿ ಅಂದಿನ ಕಾಲದ ಗಣಿಕೆಯರ ಸ್ತರವನ್ನು ಹೇಳುತ್ತಾರೆ . ಕಸಬೇರು ಒಂದು ಕೆಳಗಿನ ಸ್ತರ ಅದಕ್ಕಿಂತ ಮೇಲಿನದು ಬಸವಿ್ರು ಅದಕ್ಕೂ ಮೇಲಿನದ್ದು ಜೋಗತಿಯರು.  ಈಕೆ ಅಂತಹ ಜೋಗತಿ ಆ ಜೋಗತಿಯರಲ್ಲಿ ನೀನು ನನಗೆ ಮೂಗುತಿ ಅಂದರೆ ಶ್ರೇಷ್ಠ ಎಂದು ಅವಳನ್ನು ಹೊಗಳುತ್ತಾನೆ . ಅವನು ಹೊರಟಾಗ ಬೇಡ ಎಂದು ತಡೆದರೂ ಕೇಳುವುದಿಲ್ಲ.  ಆದರೆ ಮುಖ ಸಪ್ಪಗೆ ಮಾಡಿಕೊಂಡರೆ ಮತ್ತೆ ಉಳಿಯುತ್ತಾನೆ. ಕೈತುಂಬಾ ರೊಕ್ಕ ಕೊಡಲು ಬಂದು ಕೈಚಾಚಿದರೆ ಹಣ ಕೊಡದೇ ಕೈ ಹಿಡಿದೆಳೆದು ರಸಿಕತನ ತೋರಿಸುತ್ತಾನೆ ಎಂದು ನೆನೆಸುತ್ತಾಳೆ  ಏನಾದರೂ ಅಲ್ಲಿ ಸಾಮಾಜಿಕ ಔಚಿತ್ಯವನ್ನು ಮೀರದ ರೂಪಕ ಕಟ್ಟಿಕೊಡುತ್ತಾರೆ. ಚಹಾಕ್ಕೆ ಚೂಡಾ ಧಾರವಾಡದವರ ನೆಚ್ಚಿನ ಜೋಡಿ.  ನೀನು ನನಗೆ ಹಾಗೆ ಎನ್ನುತ್ತಾನೆ .ಅವಳನ್ನು ರಮಿಸಲು ನೀನು ಚೂಡಾಮಣಿ ಚೌಡಿ ಯಲ್ಲ ಎಂದು ಮೆರೆಸುತ್ತಾ ನೆ. ಅವಳಿಗೆ ಬೆರಳುಂಗುರ ಮೂಗಿನ ಬಟ್ಟು ಕೊಡಿಸುತ್ತಾನಂತೆ. ಅವೆರಡೂ ಮದುವೆಯಾಗುವ ಸೂಚನೆಗಳು ಆಭರಣಕ್ಕಿಂತ ಪ್ರೀತಿಯ ಮೆಚ್ಚುಗೆಯ ದ್ಯೋತಕವಾಗಿರು ತ್ತದೆ ಇಲ್ಲಿ . ಅಂತಹವನು ಬಾರದಿದ್ದರೆ ಸಂತಾಪವಲ್ಲದೆ ಇನ್ನೇನು?  (ನು ಹುಟ್ಟಿನಿಂದಲೇ ನಗುವೆಂಬ ಕೇದಗೆಯ ಗಂಧ ವಿರುವ ಸ್ನೇಹಮಯಿ .ಇವನ ಹಿಂದೆ ಹೆಣ್ಣುಗಳು ತಾವಾಗಿ ಬೀಳುತ್ತಾರೆ. ಆದರೆ ಇವನು ಮಾತ್ರ ನಿನ್ನ ಜನ್ಮ ಜನ್ಮಕ್ಕೂ ನಾನೇ ಗೆಳೆಯ ಎನ್ನುತ್ತಾನೆ .(ಇಲ್ಲಿಯೂ ಗಮನಿಸಿ ಗಂಡ ಪ್ರತಿ ಎನ್ನದೆ ಗೆಳೆಯ ಎಂದಿದ್ದಾರೆ) ನನ್ನನ್ನು ತನ್ನ ಎದೆಯಲ್ಲಿ ಇಟ್ಟುಕೊಂಡಿದ್ದಾನೆ ಎನ್ನುವುದೇ ಸಂತಸ ಅವಳಿಗೆ . ಕಡೆಯ ಪ್ಯಾರಾದಲ್ಲಿ ಹಾದಿ ಬೀದಿಗಳಲ್ಲಿ ಅವನನ್ನು ಹುಡುಕುತ್ತಾ ಮಲ್ಲಿ ತಾರಿ ಪಾರಿ ನಿಂಗಿ ಸಂಗೀ ಸಾವಂತರಿ ಅಂತ ಕಂಡವರನ್ನೆಲ್ಲ ತನ್ನ ಗೆಳೆಯನ ಕಂಡಿರಾ ಎಂದು ಕೇಳುತ್ತಾ ಹುಡುಕುವ ಚಿತ್ರಣ.  ಸಿಟ್ಟು ಮಾಡಿಕೊಂಡು ಹೋದ ಆ ಶೆಟ್ಟರ ಹುಡುಗನ್ನು ಅರಸುವ ಈ ಕ್ರಿಯೆಯಲ್ಲಿ ಪ್ರೀತಿಯೊಂದಿಗೆ ಅನಿವಾರ್ಯತೆಯ ಎಳೆಯನ್ನು ಕಾಣಬಹುದು . ಕವಿ ಇಲ್ಲಿ ಹತಾಶೆ ಅನಿವಾರ್ಯತೆ ಪ್ರೀತಿ ಎಲ್ಲವನ್ನೂ ಒಳಗೊಂಡ ಆರ್ಥಿಕವಾಗಿಯೂ ಮಾನಸಿಕವಾಗಿಯೂ ವ್ಯಕ್ತಿಯೊಬ್ಬನ ಮೇಲೆ ಭಾವುಕಳಾಗಿ ಅವಲಂಬಿತಳಾದ ಜೋಗತಿಯೊಬ್ಬಳ ಮನದಾಳದ ಮಾತುಗಳನ್ನು ಆಂತರ್ಯದ ಧ್ವನಿಯನ್ನು ಅಭಿವ್ಯಕ್ತಿಸಿದ್ದಾರೆ.  ಆ ಹುಡುಕುವಿಕೆಯ ತೀವ್ರತೆಯನ್ನು ಭಾವವಿಷಾದವನ್ನು ಕಟ್ಟಿಕೊಡಲು ಸಮರ್ಥರಾಗಿದ್ದಾರೆ .ಒಂದು ರೀತಿಯ ಸಂತಾಪವನ್ನು ಹುಟ್ಟಿಸುವ ಕವಿತೆ . ** ಸುಜಾತಾ ರವೀಶ್

ನನ್ನ ಇಷ್ಟದ ಕವಿತೆ Read Post »

ಇತರೆ

ಹಿರಿಯ ಕವಿಗಳಹಳೆಯ ಕವಿತೆಗಳು

ಇತರೆ ಹಿರಿಯ ಕವಿಗಳಹಳೆಯ ಕವಿತೆಗಳು ಡಾ.ಎಂ.ಗೋಪಾಲಕೃಷ್ಣ ಅಡಿಗ ಪ್ರಾರ್ಥನೆ ಪ್ರಭೂ,ಪರಾಕುಪಂಪನ್ನೊತ್ತಿಯೊತ್ತಿ ನಡ ಬಗ್ಗಿರುವಬೊಗಳುಸನ್ನಿಯ ಹೊಗಳುಭಟ್ಟ ಖಂಡಿತ ಅಲ್ಲ;ಬಾಲವಾಡಿಸಿ ಹೊಸೆದು ಹೊಟ್ಟಿ ಡೊಗ್ಗುಸಲಾಮುಬಗ್ಗಿ ಮಿಡುಕುವ ಸಂಧಿವಾತ ಪೀಡಿತನಲ್ಲ;ತನ್ನ ಮೋಂಬತ್ತಿ ನಂದಿಸಿ ಸಂದಿಬೆಳಕಲ್ಲಿಜುಮ್ಮನರಸುವ ಷಂಡ ಜಿಗಣೆಯಲ್ಲ;ಕಾಲಪುಷ್ಟರ ಪೃಷ್ಠಕೊಡ್ಡಿ ಬೆನ್ನ, ಕಠಾರಿಒರೆಗೆ ತುರುಕಿರುವ ಹೆಂಬೇಡಿಯಲ್ಲ. ಈ ಸಣ್ಣ ದೊಂದಿಯನ್ನೆತ್ತಿ ಹೊತ್ತಿನ ಮುಖಕ್ಕೆಬೆಳಕು ಹರಿದದ್ದು ತನ್ನಿಂದಲೇ ಎಂದು ತನ್ನೊಳಗೆಮುಖ ಕಿರಿವ, ನೆಣ ಬಿರಿವ, ಬಗ್ಗಲಾರದ ಬೊಜ್ಜ,ಕೋಲುನಡಿಗೆಕವಾತು ಕಲಿತ ಕೊಬ್ಬಿದ ಹುಂಜ:ವಾಸಿಮಾಡಯ್ಯ ಈ ಜಲೋದರದ ಭಾರದ ಜಡ್ಡ.ಕುಮರುತೇಗಿನ ಕಪಿಲೆಹೊಡೆದು ಹಗಲೂ ಇರುಳುತೇಗಿಗೊಂದು ಅಮೋಘ ಸ್ಫೂರ್ತಿಗೀತವ ಕರೆವರೋಗದ ಫಸಲನಾದಷ್ಟು ಸವರೋ ತಂದೆ!ತಿಂದದ್ದು ಸರಿಯಾಗಿ ರಕ್ತವಾಗುವ ಹಾಗೆಅನುಗ್ರಹಿಸು; ಅರಗದಂಥ ಕಚ್ಚಾ ಗಾಳಿಗೀಳುಗಳಕಾಗದದ ಮೇಲೆಲ್ಲ ಕಾರಿಕೊಳ್ಳದ ಹಾಗೆಏರ್ಪಡಿಸು ಸಹಜ ಹೊರದಾರಿಗಳ; ರಹದಾರಿಗಳಕೊಡು ಎಲ್ಲರಿಗು ತಮ್ಮ ತಮ್ಮ ಖಾಸಗಿ ಮನೆಗೆ.ಎಲ್ಲಕ್ಕಿಂತ ಹೆಚ್ಚಾಗಿಒಂದು ತುತ್ತನ್ನು ಮೂವತ್ತೆರಡು ಸಲ ಜಗಿದು, ನುರಿಸಿಜೊಲ್ಲಿಗೆ ಮಿಲಾಯಿಸುವಷ್ಟು ಆರೋಗ್ಯಶಾಸ್ತ್ರದ ಮೊದಲ ಪಾಠ ಕಲಿಸು. ಕಲಿಸದಿದ್ದರು ಕೂಡಕಲಿತಿಲ್ಲ ಎಂಬ ನೆನಪುಳಿಸು. ಉಳ್ಳಾಗಡ್ಡೆತಿಂದು ಕೊರಳೆಲ್ಲ ಕಸ್ತೂರಿಯಾಗುವುದೆಂಬಭ್ರಮೆಯ ಕಳೆ. ದೊಡ್ಡ ದೊಡ್ಡ ಮಾತು ಬೆಲೂನುಹಿಗ್ಗುವಾಗ್ಗೆಲ್ಲ ತಾಗಿಸು ನಿಜದ ಸೂಜಿಮೊನೆ ತೆಕ್ಕೆಗೊಗ್ಗದ ಹಗಲುಗನಸಿನ ದಢೂತಿ ತೊಡೆಸಿಕ್ಕದೇ ಸಿಕ್ಕಿದಂತಾಗಿ ತೂಬನು ತೆಗೆವಸ್ವಪ್ನೇಂದ್ರಿಯದ ಸ್ವಯಂಚಾಲಕಕೆ ತಡೆಹಾಕು;ಅಲ್ಲದೇ, ಗಾಳಿಯಲ್ಲಿ ಬತ್ತಲೆ ಸುಳಿವಅಪ್ಸರೆಯರ ಅನಂಗಸಂಘಟ್ಟನೆಗೆ ವೃಥಾಮಲುಷ್ಟಿಮೈಥುನದಹಂಕಾರ ಕೆರಳಿಸಬೇಡ.ಕಳುಹಿಸಯ್ಯಾ ಬಳಿಗೆ ಕೃಪೆತಳೆದು ಆಗಾಗ್ಗೆವಾಸ್ತವದ ಹೆಣ್ಣುಗಳ, ನಿಜದ ತೊಡೆಗಳ, ಆತ್ಮಹೊಕ್ಕು ತಿಕ್ಕಲು ತಕ್ಕ ಸುಕ್ಕಿರದ ಹೊಸ ತೊಗಲುಗಳ.ಹೊರಗೆ ಬೀಸಲದೊಳಕ್ಕೆ ಹಿಮ್ಮೆಟ್ಟಿದಾಗೆಲ್ಲ ಬರಿಪ್ರೇತಾತ್ಮಗಳ ಗೆರಿಲ್ಲಾಪಡೆಯ ಕಳಿಸದಿರುಇ.ಬೆಳೆಸಿಕೊಂಡೇ ತಮಗೆ ತಕ್ಕ ಮಾಂಸವ, ತೊಗಲಬರಲಿ ಅತಿಥಿಗಳೆಲ್ಲ ಮನೆಗೆ, ಬಂದವರಲ್ಲಿತೊಗಲನೊಲ್ಲದ ಅತಿಥಿತುರಿಕೆ ಕಳೆಯೋ ತಂದೆ.ಹಡಗ ತಾಗಿಸು ಪ್ರತೀ ಬಂದರಿಗು, ಯಾವೊಂದುತಿಮಿಂಗಿಲ ತೊಡೆಯು ಕೂಡ ನುಂಗಿ ಕೊಳಸದ ಹಾಗೆನಡಸು ಬಂದರಿನಿಂದ ಬಂದರಿಗೆ. ಆಮದು ರಫ್ತುಸಾಗುತ್ತಲಿರಲಿ ಕೊನೆವರೆಗೆ. ಆದರುಫರಂಗಿರೋಗ ತಗಲದ ಹಾಗೆಉಳಿಸು ಪೂರ್ವಾರ್ಜಿತದ ರತಿವಿವೇಕದ ಶಿಖೆಯ. ಗಾಳಿಗಲ್ಲಾಡುವುದು ದೊಂದಿ, ವಿದ್ಯುದ್ದೀಪವಾದರೂಬೀಸುದೊಣ್ಣೆಗೆ ಬಂದಿ. ನಿನ್ನ ಗಾಳಿಯ ಬೆಟ್ಟಘನಿಸಿ ಆಗುವ ಧಾತು ದುಡುಕಿ ಬಗೆವುದು ನೆಲದತೊಡೆಯ; ಚೆಲ್ಲುವುದೆಲ್ಲ ಕಡೆಯು. ದ್ರಾವಣಸುಖಕ್ಕೆವಿವಶ ಮುಳ್ಳೂ ಹುಲ್ಲು. ಕ್ಷಣದ ಸಾರ್ಥಕ ರತಿಗೆಮಾಸಗಳ, ವರ್ಷ ವರ್ಷ ಶತಮಾನಗಳವಿರತಿ, ಸಮರತಿ, ವಿಕೃತ ರತಿ. ತುಂಬಿ ನವಮಾಸಬರುವ ಜೀವಪವಾಡ ಕೆಲಸ ಕಲಿಸೋ ತಂದೆ. ಕಲಿಸು ಬಾಗದೆ ಸೆಟೆವುದನ್ನು, ಬಾಗುವುದನ್ನು;ಹೊತ್ತಿನ ಮುಖಕ್ಕೆ ಶಿಖೆ ತಿವಿವುದನ್ನೂ ಹಾಗೆಗಾಳಿಗಲ್ಲಾಡಿ ಬಳುಕಾಡಿ ತಾಳುವುದನ್ನು;ಕಲಿಸು ಸವಾರಿಕುದುರೆಯಾಗದ ಹಾಗೆಕಾಡುಕುದುರೆಯ ಕೆನೆತಕೊಬ್ಬನ್ನು, ಹಾಗೆಯೇಜಗಭಾರಗಾಳಿತೊಡೆ ತಾಳಿ ಹೊರುವಭ್ಯಾಸಕುದುರಿಸು; ನಿನ್ನಂತೆ ಊರ್ಧ್ವರೇತಸ್ಕನಾಗೊಬ್ಬಂಟಿಮೇಲುಮಾಳಿಗೆಯ ಕಿರುಕೋಣೆ ಮೈಮರೆವನ್ನು;ತಕ್ಕ ತೊಡೆನಡುವೆ ಧಾತುಸ್ಖಲನದೆಚ್ಚರವ. ಈ ಅರಿವು ಅರೆಹೊರೆದ ಮೊಟ್ಟೆ, ದೊರೆ; ಚಿಪ್ಪೊಡೆದುಬರಲಿ ಪರಿಪೂರ್ಣಾವತಾರಿ ವಿನತಾಪುತ್ರ –ಗಾಳಿ ಕಡೆಯಲು ಸೆಟಿದ ಬೆಳ್ಳಿ ಮಂತು,ನಿನ್ನ ತೊಡೆಹೊರೆ ಕೆಳಗೆ ಮೆತ್ತೆ – ಸಡಿಲು. **********************

ಹಿರಿಯ ಕವಿಗಳಹಳೆಯ ಕವಿತೆಗಳು Read Post »

ಇತರೆ, ಪ್ರಬಂದ

ಲಲಿತ ಪ್ರಬಂಧ

ಲಲಿತ ಪ್ರಬಂಧ ನನ್ನ ಲಿಯೋ ಸಮತಾ ಆರ್.   ಒಂದು ದಿನ ಎಂದಿನಂತೆ ಶಾಲೆಗೆ ಹೊರಟು ಸಿದ್ದಳಾಗಿ ಹೊರಬಂದು ಕಣ್ಣಾಡಿಸಿದರೆ, ಲಿಯೋ ಅವನಿರುವ ಜಾಗದಲ್ಲಿ ಇಲ್ಲ!”ಲಿಯೋ ರೆಡಿ ಏನೋ, ಎಲ್ಲಿದ್ದೀಯೋ’?”ಎಂದಾಕ್ಷಣ”ನಾನಾಗಲೇ ರೆಡಿಯಾಗಿ ನಿಂತಿದ್ದೀನಿ ಬಾರಕ್ಕ”ಎಂಬ ಉತ್ತರ ಕೇಳಿಸಿತು, ಆದರೆ ಕಾಣಲಿಲ್ಲ. “ಲೋ, ಎಲ್ಲೋ ಇದಿಯಾ, ಇರೋ ಜಾಗದಲ್ಲಿರೋಕೆ ನಿಂಗೇನೋ ಕಾಯಿಲೆ! ಈಗ್ಲೇ ಲೇಟಾಗಿದೆ ,ಇನ್ನು ನಿನ್ನನ್ನು ಹುಡುಕಿಕೊಂಡು ಬೇರೆ ಸಾಯ್ಬೇಕು” ಎಂದು ಸಿಟ್ಟಿನಿಂದ ಕಿರುಚಿದಾಗ,” ಅಕ್ಕ ಒಂಚೂರು ಈ ಕಡೆ ನೋಡು”ಎಂದು ನನ್ನ ಬಲಬದಿಯ ಹತ್ತು ಮಾರು ದೂರದಿಂದ ಉತ್ತರ ಬಂತು.”ಅಯ್ಯೋ ದೇವರೇ! ಯಾಕೆ ನಿಂತಿದ್ದೀಯ ಮರದ ಕೆಳಗೆ? ಯಾವುದಾದರೂ ಕಾಗೆ ನಿನ್ನ ಮೇಲೆ ಹೇತರೆ ಅದನ್ನು ತೆಗೆಯಲು ಇನ್ನೂ ಐದು ನಿಮಿಷ ಹಾಳು, ಈಗ್ಲೇ ಲೇಟಾಗಿದೆ, ಬಸ್ ಹೊರಟು ಹೋದರೆ ಸ್ಕೂಲಿಗೆ ಲೇಟಾಗ ಲ್ವೇನೋ? ಒಂದಿಷ್ಟಾದರೂ ಕಾಮನ್ ಸೆನ್ಸ್ ಇದೆಯಾ ನಿನಗೆ”, ಎಂದು ಗೊಣಗುತ್ತಾ ಅವನನ್ನು ಎಳೆದುಕೊಂಡು ಧಾವಿಸಿದೆ. “ಅಕ್ಕ, ನಾನೇನ್ ಮಾಡ್ಲಿ, ನಿನ್ನ ಗಂಡನೇ ನನ್ನ ಸುಮ್ಮನೆ ಇರೋ ಜಾಗದಲ್ಲಿ ಇರಲು ಬಿಡದೆ,’ ನಿಮ್ಮಕ್ಕ ಬರೋ ಗಂಟ ಬಿಸಿಲಲ್ಲಿ ಯಾಕೋ ಒಣಗುತ್ತಿಯಾ? ಮರದ ಕೆಳಗೆ ನೆರಳಿನಲ್ಲಿ ಇರಬಾರದ’ ಅಂತ ಅಲ್ಲಿ ನಿಲ್ಲಿಸಿದ, ನಂಗ್ಯಾಕೆ ಸುಮ್ಮನೆ ಬೈದೆ ನೀನು”, ಎಂದು ಗುರ್ ಗುಟ್ಟಿದ.      “ಲೋ, ಮೊದಲು ಸರಿಯಾಗಿ ರಸ್ತೆ ನೋಡಿಕೊಂಡು ಹೋಗೋದು ಕಲಿ, ಎಷ್ಟೊಂದು ಟ್ರಾಫಿಕ್ ಇದೆ, ನಿನ್ನತಂಟೆಗೆ ಹೋಗಬೇಡ ಅಂತ ನನ್ ಗಂಡಂಗೆ ನಾನು ಹೇಳಿಕೊಳ್ಳುತ್ತೇನೆ, ಈಗ ನನಗೆ ತೊಂದರೆ ಆಗದ ಹಾಗೆ ಸುಮ್ನೆ ಬಾ,” ಎಂದಿದ್ದಕ್ಕೆ” ಅಕ್ಕ ಇದೇನು ನಾನು ಕಾಣದೇ ಇರೋ ಟ್ರಾಫಿಕ್ ಅಲ್ಲ, ಹೆದುರ್ಕೋಬೇಡಾ ಬಾ, ನಾನೆಲ್ಲ ಮ್ಯಾನೇಜ್ ಮಾಡ್ತೀನಿ “ಎಂದು ನನ್ನನ್ನು ತನ್ನ ಹೆಗಲಿನಲ್ಲಿ ಹೇರಿಕೊಂಡು ಮುನ್ನುಗ್ಗಿದ.       ಬಸ್ ಸೇರುವ ಮುನ್ನ ಲಿಯೋನನ್ನ  ಮಾಮೂಲಿನಂತೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಅವನ ಬಾಯಿಗೆ ಬೀಗ ಹಾಕಿ, ಓಡೋಡುತ್ತ ,ಆಗಲೇ ಹೊರಟು ನಿಂತಿದ್ದ ಬಸ್ ಹತ್ತಿದ್ದಾಯಿತು. ಬಸ್ನಲ್ಲಿ ಕುಳಿತು ಒಂದಿಷ್ಟು ಸುಧಾರಿಸಿಕೊಂಡು ಯೋಚಿಸುತ್ತಿರುವಾಗ ಒಮ್ಮೆಗೆ ಲಿಯೋನ ಬಗ್ಗೆ ಅಪಾರ ಪ್ರೀತಿ ಉಕ್ಕಿಬಂತು .”ಅಯ್ಯೋ ಪಾಪ ಅವನಿಲ್ಲದೇ ಹೋಗಿದ್ದರೆ ನನ್ನ ಕಥೆ ಏನಾಗುತ್ತಿತ್ತು ?ಎಲ್ಲಿಗೆ ಕರೆದರೂ ಜೊತೆಯಲ್ಲಿ ಬರ್ತಾನೆ ,ಎಷ್ಟು ಭಾರ ಹೇರಿ ದರೂಸುಮ್ನೆ ಹೊರುತ್ತಾನೆ ,ಆಗಾಗ ಚೆನ್ನಾಗಿ ಹೊಟ್ಟೆ ತುಂಬಿಸಿ ,ಮೈತೊಳೆದು ಕೊಟ್ಟರೆ ಅದೇ ಅವನಿಗೆ ಸ್ವರ್ಗ. ಈ ಶನಿವಾರ ಅವನಿಗೊಂದು ಒಳ್ಳೆ ಸರ್ವಿಸ್ ಕೊಡಿಸ ಬೇಕು” ಅಂದುಕೊಂಡೆ.     ಅದರಂತೆ ಆ ಶನಿವಾರ ಲಿಯೋನನ್ನು ಹೊರಡಿಸಿ ಕೊಂಡು, ಗರಾಜಿಗೆ ಹೋಗಿ ಅಲ್ಲಿಯ ಮೆಕ್ಯಾನಿಕ್ ಕೈಗೆ ಒಪ್ಪಿಸಿದಾಗ ಆತ ,”ಪರ್ವಾಗಿಲ್ಲ ಮೇಡಂ ,ಸ್ಕೂಟಿ ಚೆನ್ನಾಗಿ ಇಟ್ಟುಕೊಂಡಿದ್ದೀರಾ, ಅಂತ ಏನು ತೊಂದರೆ ಕಾಣಿಸ್ತಿಲ್ಲ ,ನಾಳೆ ಬಂದ್ ತಗೊಂಡು ಹೋಗಿ ,ಸರ್ವಿಸ್ ಮಾಡಿ ಇಟ್ಟಿರುತ್ತೇನೆ ,ಇನ್ನೊಂದು ವರ್ಷ ಯಾವ ಯೋಚನೆ ಇರಲ್ಲ “ಎಂದ.     ಅಲ್ಲಿಂದ ಹೊರಟು ಮನೆಯ ಕಡೆಗೆ ಕಾಲೆಳೆದುಕೊಂಡು ಹೋಗುವಾಗಲೂ ಲಿಯೋನದೇ ಯೋಚನೆ. ನನ್ನ ಲಿಯೋನನ್ನು ಯಾರಾದರೂ ಸ್ಕೂಟಿ ಗೀಟಿ ಎಂದರೆ ನನಗೆಕೆಟ್ಟ ಕೋಪ ಬರುತ್ತದೆ. ಆತ ನನ್ನ ತಮ್ಮ ,ನನ್ನ ಆತ್ಮಬಂಧು, ನನ್ನೆಲ್ಲಾ ಗುಟ್ಟುಗಳ ಕಿವಿ, ಎಲ್ಲಿಗೆ  ಬೇಕಾದರೂ ಯಾವಾಗ ಬೇಕಾದರೂ ಕರೆದೊಯ್ಯುವ ವೀರ ,ಎಲ್ಲದಕ್ಕಿಂತ ಮುಖ್ಯವಾಗಿ ಪತಿಯ ಅವಲಂಬನೆಯನ್ನು ತಪ್ಪಿಸಿ ರುವ ಪರದೈವ.     ಈಗ ಒಂದೈದು ವರ್ಷಗಳ ಹಿಂದೆ, ಕೆಲಸಕ್ಕೆ ಸೇರಿ ಎಂಟು ವರ್ಷ ಸೇವೆ ಸಲ್ಲಿಸಿದ್ದ ಶಾಲೆಯಿಂದ ವರ್ಗವಾಗಿ ಮನೆಗೆ ಸಮೀಪದಲ್ಲಿದ್ದ ಶಾಲೆಗೆ ಬಂದದ್ದಾಯಿತು. ಮೊದಲಿದ್ದ ಶಾಲೆ ಮನೆಯಿಂದ ದೂರ ಎಂದು ದಿನವೂ ಬಸ್ಸಿನಲ್ಲೇ ಅಲೆದಾಡಿದ್ದೆ. ಈಗಿನ ಹೊಸ ಶಾಲೆ ಮನೆಗೆ  ಕಿಲೋಮೀಟರ್ ಗಳ ಲೆಕ್ಕದಲ್ಲಿ ಹತ್ತಿರವಿದ್ದರೂ , ಮನೆಯಿಂದ ದೂರವಾಗಿದ್ದ ಆಟೋ ನಿಲ್ದಾಣಕ್ಕೆ ನಡೆದುಹೋಗಿ ,ಅಲ್ಲಿ ನಿಮಿಷ ಗಟ್ಟಳೆ ಶಾಲೆ ಇರುವ ಏರಿಯಾಗೆ ಹೋಗುವ ಆಟೋವನ್ನು ಕಾಯಬೇಕಿತ್ತು. ಆಟೋ ಸಿಕ್ಕರೂ ಶಾಲೆಯಿಂದ 2 ಪರ್ಲಾಂಗು ದೂರದಲ್ಲಿ ಇಳಿದುಕೊಂಡು, ನಡೆದುಕೊಂಡು ಶಾಲೆ ತಲುಪುವಷ್ಟರಲ್ಲಿ ಸಾಕಾಗುತ್ತಿತ್ತು.ಇದೆಲ್ಲಾ ರಗಳೆಯೇ ಬೇಡವೆಂದು ಸಹೋದ್ಯೋಗಿಗಳಲ್ಲಿ  ಇಬ್ಬರುತಮ್ಮ ತಮ್ಮ ಸ್ಕೂಟಿ ಗಳನ್ನು ಏರಿ ಆರಾಮಾಗಿ ಓಡಾಡುತ್ತಿದ್ದರು.    ಸ್ವಲ್ಪ ದಿನ ಆಟೋದಲ್ಲಿ ಹೈರಾಣಾದ ನಂತರ ನನಗೂ ನಾನ್ಯಾಕೆ ಸ್ಕೂಟಿ ತಗೊಂಡು ಆರಾಮಾಗಿ ಸುಯ್ ಎಂದು ಶಾಲೆಗೆ ಬರಬಾರದು ಎನಿಸಿತು. ಜೊತೆಗೆ ಎಲ್ಲಿಗೆ ಹೋಗಬೇಕಾದರೂ ನನ್ನ ಗಂಡನನ್ನು” ರೀ “ಎನ್ನುತ್ತಾ ಅವನ ಹಿಂದೆಯೇ ಸುತ್ತ ಬೇಕಿತ್ತು. ಈಗ ನಾನೇ ನಾನಾಗಿ ,ನನಗೆ ಬೇಕಾದ ಕಡೆಗೆಲ್ಲ ಸುತ್ತುವ ಸಲುವಾಗಿ ಲೋನ್ ಮಾಡಿಸಿಕೊಂಡು ಸ್ಕೂಟಿ ಖರೀದಿಸಲು ನಿರ್ಧರಿಸಿದೆ.    ” ಇದೊಂದು ಅವತಾರ ಬೇರೆ ಬಾಕಿ ಇತ್ತು” ಎಂದ ಮಾತು ಕೇಳಿಸಲಿಲ್ಲ   ನಂತರ ಎದುರಾದದ್ದು ಆಯ್ಕೆಯ ಪ್ರಶ್ನೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ತರಹೇವಾರಿ ಮಾದರಿಯ, ಬೆಲೆಯ ,ಸ್ಕೂಟಿ ಗಳ ಲೋಕದಿಂದ ಯಾವುದನ್ನು ಮನೆಗೆ ತರುವುದು? ಶೋರೂಮ್ ನಿಂದ ಶೋ ರೂಂಗೆ ಅಲೆದಾಡಿ ,ನನ್ನ ಬಜೆಟ್ ಗೆ ಹೊಂದಬೇಕು, ಓಡಿಸಲು ಹಗುರವಾಗಿ ಇರಬೇಕು ಎಂದು ಹುಡುಕಾಡಿದೆ. ಆಗ ನನಗೆ ಶೋ ರೂಂ ಒಂದರಲ್ಲಿ ಹಳದಿ ಬಣ್ಣದ ಸುಂದರಾಂಗ ವಿದೇಶಿ ಸ್ಕೂಟಿ ಒಬ್ಬನ ಮೇಲೆ ಕಣ್ಣುಬಿತ್ತು. ಟೆಸ್ಟ್ ರೈಡ್ ಎಂದು ಓಡಿಸಿಯೂ ನೋಡಿಯಾಯಿತು. ಎಷ್ಟು ಹಗುರ !ಎಂತಹ ರೋಡ್ ಗ್ರಿಪ್! ಎಂತಹ ಚೆಲುವ! ಎಂದು ಅವನ ಮೇಲೆ ಆಸೆಯಾಯಿತು. ಆದರೆ ಅವನ ದರ ಕೇಳಿದಾಗ ಧರೆಗಿಳಿದು ಹೋಗಿ ,ಅವನೊಬ್ಬ ಕೈಗೆಟುಕದ ನಕ್ಷತ್ರ ಎಂದುಕೊಂಡು ಸುಮ್ಮನಾದೆ. ಹಾಗೆ ಹುಡುಕಿದಾಗ ಕಪ್ಪು ಬಣ್ಣದ, ಸಾಕಷ್ಟು ಸ್ಟೈಲಿಶ್ ಆಗಿದ್ದ ,ಹಗುರವಾಗಿ ತೇಲುವ ಹಾಗೆ ಓಡುವ, ಜೊತೆಗೆ ನನ್ನ ಪರ್ಸುನಲ್ಲೂ ಹಿಡಿಯುವಂತಹ ನನ್ನ ಲಿಯೋ ಒಂದು ಹೊಸ ಶೋರೂಂನಲ್ಲಿ ಸಿಕ್ಕ. ಸರಿ ,ಖರೀದಿಸಿ ಮನೆಗೆ ತಂದ ದಿನವೇ ಮಕ್ಕಳಿಬ್ಬರನ್ನು ಕೂರಿಸಿಕೊಂಡು ನಮ್ಮ ಬಡಾವಣೆಯಲ್ಲಿ ನಾಲ್ಕು ಐದು ಸುತ್ತುಸುತ್ತಿಸಿ ಖುಷಿ ಪಟ್ಟಿದ್ದಾಯಿತು.    ಚಿಕ್ಕಂದಿನಲ್ಲಿ ಶಾಲೆಗೆ ವರುಷಗಟ್ಟಲೆ ಸೈಕಲ್ ಹೊಡೆದದ್ದು ಈಗ ಬಳಕೆಗೆ ಬಂತು. ನೀರಿಗಿಳಿದ ಮೀನಿನಂತೆ ಸಲೀಸಾಗಿ ಲಿಯೋ ಎರಡೇ ದಿನಗಳಲ್ಲಿ ನನ್ನ ಹಿಡಿತಕ್ಕೆ ಬಂದ.ಸರಿ, ಮೊದಮೊದಲು ಇಪ್ಪತ್ತು ಮೂವತ್ತು ಕಿಲೋಮೀಟರ್ ಪ್ರತಿ ಗಂಟೆಗೆ ಸ್ಪೀಡಿನಲ್ಲಿಓಡಿಸಿದ್ದಾಯಿತು.ಸಹೋದ್ಯೋಗಿಗಳು ,”ಮೇಡಂ ನಿನ್ನೆ 1 ಸೈಕಲ್ ನಿಮ್ಮನ್ನು ಓವರ್ಟೇಕ್ ಮಾಡಿದ್ದು ನೋಡಿದೆ ಎಂದು ಕಿಚಾಯಿಸಿದರೂ “ಅರೆ, ಸ್ಪೀಡಾಗಿ ಓಡಿಸಿ ಎಲ್ಲೋ ಸೇರಿಕೊಳ್ಳುವ ಬದಲು, ನಿಧಾನವಾಗಿ ಓಡಿಸಿಮನೆಸೇರಿಕೊಳ್ಳುತ್ತೇನೆ ಬಿಡ್ರಿ” ಎಂಬ ಭಂಡತನದ ಉತ್ತರ ನನ್ನಿಂದ. ಲಿಯೋ ನನ್ನು ಏರಿದ ಬಳಿಕ ನನ್ನ ಮತ್ತು ಅವನ ಇಬ್ಬರ ಬೇರೊಂದು ಲೋಕತೆರೆದುಕೊಳ್ಳುತ್ತದೆ .ಮೊದಮೊದಲು ಮಾತನಾಡಲು ಹಿಂಜರಿದರೂ, ನಂತರ ನಿಧ ನಿಧಾನವಾಗಿ ನನ್ನನ್ನು ಕೇಳಲಾರಂಭಿಸಿದ. ಮನದಲ್ಲಿರುವ ಎಲ್ಲವೂ ,ಹೇಳಲಾಗದ್ದು ಹೇಳಬಾರದ್ದು,ಎಲ್ಲವನ್ನು ಲಿಯೋನ ಕಿವಿಗೆ ತುಂಬಿ ನಿರಾಳವಾಗುತ್ತೇನೆ.     ದಿನವೂ ಶಾಲೆಗೆ ಸರಿಯಾದ ಸಮಯಕ್ಕೆ ಹೋಗಬೇಕ? ಮಕ್ಕಳನ್ನು ಶಾಲೆಗೆ ಬಿಡಬೇಕ? ಡ್ಯಾನ್ಸ್ ಕ್ಲಾಸಿಂದ ಕರೆತರಬೇಕ? ಸುಮ್ಮನೆ ಊರು ಸುತ್ತಬೇಕ? ಆಸ್ಪತ್ರೆಯಲ್ಲಿರುವ ನೆಂಟರನ್ನು ನೋಡಬೇಕ?ಎಟಿಎಂನಿಂದ ಹಣ ತರಬೇಕ? ಎಲ್ಲದಕ್ಕೂ”ನಡಿಯಕ್ಕ” ಎಂದು ಈತ ಸಿದ್ಧ.ಒಂದು ದಿನ ಸಿಗ್ನಲ್ ನಲ್ಲಿ ಕೆಂಪುದೀಪ ಹಸಿರಾಗಿ ಇನ್ನೇನು ನುಗ್ಗಲು ಸಿದ್ಧರಾದಾಗ ಪಕ್ಕದ ಬೈಕ್ ನ ಪಿಲಿಯನ್ ನಲ್ಲಿದ್ದವ “ಗಾಡಿ ಒಳ್ಳೆ ಸಕ್ಕತ್ತಾಗಿದೆ”ಎನ್ನುತ್ತಾ ಹೋಗಬೇಕ!”ಲಿಯೋ ನಡಿಯೋ, ಆ ನನ್ ಮಗನ್ನ ಗುದ್ದಿ ಬೀಳಿಸಿ ,ಸರ್ಯಾಕ್ಬುದ್ಧಿ ಕಲಿಸೋಣ” ಎಂದರೆ “ಹೋಗ್ಲಿ ಬಿಡಕ್ಕ,  ಹುಡುಗರೇ ಹಂಗೆ ,ಯಾಕೆ ನೀನೇನು ಚೆನ್ನಾಗಿಲ್ವಾ ?”ಎಂದು ರೇಗಿಸಬೇಕೆ?    ಮತ್ತೊಂದು ದಿನ ರಾತ್ರಿ ಗಂಡನೊಂದಿಗೆ ಸಿಕ್ಕಾಪಟ್ಟೆಜಗಳವಾಡಿ ,”ಇನ್ನು,ನಾನಿರಲಾರೆ” ಎಂದು ಕೂಗಾಡಿ ಲಿಯೋಜೊತೆರಾತ್ರಿಯ ತಂಗಾಳಿಯಲ್ಲಿ ಮೈ ನೆನೆ ಸುತ್ತ ಹೋಗುತ್ತಿರುವಾಗ,” ಅಕ್ಕ ,ಮಕ್ಕಳಿಗೆ ಎನ್ ಅಡಿಗೆ ಮಾಡಿದ್ದೀಯ”ಎಂದ ಮಾತಿಗೆ ಮನೆಗೆ ಹಿಂದಿರುಗಿ ಮಕ್ಕಳನ್ನು ತಬ್ಬಿ ಕೊಂಡಿದ್ದಾಯಿತು.    ಹೀಗಿರುವಾಗ ಒಂದು ದಿನ ಹೋಗುವಾಗ “ಅಕ್ಕ ಒಂದು ಹಾಡು ಹೇಳಕ್ಕ” ಎಂದು ಕೇಳಿಕೊಂಡಾಗ ,ನನ್ನ ಕತ್ತೆರಾಗವನ್ನು ನಾನೇ ಮೆಚ್ಚಿಕೊಳ್ಳುತ್ತಾ, ಹಾಡುತ್ತ ,ತೇಲುತ್ತಾ ಹೋಗುತ್ತಿರುವಾಗ ಅದ್ಯಾವ ಮಾಯದಲ್ಲೋ ಹಿಂದಿನಿಂದ ಒಂದುಹೊಟ್ಟೆ ಡುಮ್ಮ ,ಕುಂಡಿ ಎತ್ತರದ ಬೈಕೊಂದು ಬಂದು, ಗುದ್ಧಿ ,ಮಿಂಚಿನಂತೆ ಪಕ್ಕದಲ್ಲೇ ಸುಳಿದು, ಕ್ಷಣಾರ್ಧದಲ್ಲಿ ನುಗ್ಗಿ ನುಸುಳಿ ಓಡಿ ಮಾಯವಾದ. ಗುದ್ದಿದ ಕ್ಷಣವೇ “ಅಯ್ಯೋ, ಅಕ್ಕ ಮೊದಲು ನನ್ನಿಂದ ದೂರ ನೆಗೆಯೇ” ಎನ್ನುತ್ತಾ ನನ್ನ ಲಿಯೋ ಹಾರಿ ಬಿದ್ದು ನೆಲಕಚ್ಚಿದ .ಅವನು ಹೇಳಿದಾಕ್ಷಣವೇನೆಗೆದಿದ್ದಕ್ಕೆನಾನುಬದುಕಿದೆ. ಆದರೆ ಅವನು ತನ್ನ ಕೈಕಾಲುಮುರಿದುಕೊಂಡು, ದೀಪದ ಕಣ್ಣೋಡಕೊಂಡು ಬಿದ್ದಿದ್ದನ್ನು ನೋಡಿದಾಗ ನನಗೆ ಅಳುವೋ ಅಳು.ಅಷ್ಟರಲ್ಲಿ ಸುತ್ತಮುತ್ತ ನೆರೆದ ಜನ ನಮ್ಮಿಬ್ಬರನ್ನು ಎತ್ತಿ ನಿಲ್ಲಿಸಿ ಸಾಂತ್ವನ ಹೇಳಿದರು.ನನಗೇನು ಹೆಚ್ಚು ಪೆಟ್ಟಾಗಿರಲಿಲ್ಲ. ಆದರೆ ತೀವ್ರವಾಗಿ ಜಖಂಗೊಂಡಿದ್ದ ಲಿಯೋ ರಿಪೇರಿಯಾಗಿ ಮನೆಗೆ ಬರುವಷ್ಟರಲ್ಲಿ ತಿಂಗಳು ಕಳೆದಿತ್ತು. ನಂತರವೂ ಅಪಘಾತದ ನೆನಪಿನಿಂದ ಹೊರಬರದ ನಾನು, ಲಿಯೋ ಎಷ್ಟೇ ಕರುಣಾಜನಕ ನೋಟವನ್ನು ನನ್ನತ್ತ ಬೀರಿದರೂ, ಅವನೆಡೆಗೆ ನೋಡದೆ, ನನ್ನ ಕಣ್ಣೀರು ಅವನಿಗೆ ಕಾಣದಂತೆ ಮುಖತಿರುಗಿಸಿ, ಹಲ್ಲು ಕಚ್ಚಿ, ನನ್ನ ನೋವು ನಾನು ನುಂಗಿದೆ. ಗಂಡನ ಸುಪರ್ದಿಗೆ ಅವನನ್ನು ಒಪ್ಪಿಸಿ ,ದಿನವೂ ಆಟೋದಲ್ಲಿ ಶಾಲೆಗೆ ತಿರುಗ ತೊಡಗಿದೆ. ಹಾಗಿದ್ದಾಗ ನನ್ನ ಗಂಡ ಹೊಸ ಕಾರ್ ಖರೀದಿಸಿ ಝುಮ್ಮೆಂದು ತಿರುಗಲು ಶುರುಮಾಡಿದರು.”ಸ್ಕೂಟಿಗಿಂತ ಕಾರ್ ಸೇಫ್ ಅಲ್ವಾ ,ಒಳಗೆ  ಕುತ್ಕೊಂಡು ಓಡಿಸುವುದಲ್ಲ, ಏನು ಆಗಲ್ಲ’ ಎಂದುಕೊಂಡು, ಕಾರ್ ಓಡಿಸಲು ಕಲಿಯುವ ಹಂಬಲದಿಂದ ಡ್ರೈವಿಂಗ್ ಕ್ಲಾಸ್ ಗೆ ಸೇರಿದ್ದಾಯ್ತು.ಡ್ರೈವಿಂಗ್ ಕ್ಲಾಸ್ ನಲ್ಲಿ ನನ್ನ ಟೀಚರ್ ಇನ್ನೂ ಚಿಕ್ಕ ವಯಸ್ಸಿನ ಒಬ್ಬ ಹುಡುಗ. ಡ್ರೈವಿಂಗ್ ಕಲಿಸುವುದರ ಜೊತೆಗೆ ಆತನ ಕುತೂಹಲದ 108 ಪ್ರಶ್ನೆಗಳ ಬಾಣ ಬೇರೆ! “ಮೇಡಂ ಏನ್ ಮಾಡ್ಕೊಂಡಿದ್ದೀರಾ? ಓಹ್ ಟೀಚರ! ಸ್ಕೂಲಿಗೆ ದಿನ ಹೇಗೆ ಹೋಗ್ತೀರಾ? ಸ್ಕೂಟಿ ಇಲ್ವಾ ಮನೇಲಿ? ಆಟೋದಲ್ಲಿ ಯಾಕೆ? ಕಾರ್ನಲ್ಲಿ ಸ್ಕೂಲಿಗೆ ಹೋಗ್ಬೇಕು ಅನ್ನೋ ಆಸೆನಾ?” ಇತ್ಯಾದಿ, ಇತ್ಯಾದಿ, ಕೇಳಿ ಕೇಳಿ ನಾನು ಸಾಕಾಗಿ ಲಿಯೋ ಮತ್ತು ನನ್ನ ಅಪಘಾತದ ಸುದ್ದಿಯನ್ನೆಲ್ಲ ಬಿಚ್ಚಿಟ್ಟೆ. ನಮ್ಮ ಕಥೆ ಕೇಳಿ ಅವನಿಗೆ ನಗುವೋ ನಗು.”ಅಲ್ಲಾ ಮೇಡಂ ಒಂದ್ಸಾರಿ ಬಿದ್ದಿದ್ದಕ್ಕೆ ಸ್ಕೂಟಿ ಓಡ್ಸೋದೆ ಬಿಟ್ ಬಿಡೋದೇ?ಎಡವಿ ಬೀಳ್ತಿವಿ ಅಂತ ನಡೆಯೋದೆನ್  ನಿಲ್ಲಿಸ್ತಿವ? ರಸ್ತೇಲಿ ಹೋಗೋ ವೆಹಿಕಲ್ ನವ್ರೆಲ್ಲ ‘ ಇವತ್ತು ಮೇಡಂ ಸ್ಕೂಟಿಏರಿ ಹೋಗ್ತಿರುವಾಗ ನಾವು ಅವ್ರನ್ನ ಗುದ್ದಿ ಬಿಳಿಸ್ಬೇಕು’ಅಂತ ಸ್ಕೆಚ್ ಏನಾದ್ರೂ ಹಾಕ್ಕೊಂಡು ಬರ್ತಾರ? ಸುಮ್ನೆ ಸ್ಕೂಟಿ ಆಚೆ ತಗೀರಿ “ಅಂತ ಧೈರ್ಯ ಕೊಟ್ಟ.  ಮತ್ತೆ ಮನೆಗೆ ಬಂದು” ಲಿಯೋ “ಎಂದು ಕರೆದಾಗ ಒಂದೇ ಕಿಕ್ ಗೆ ಹಾರಿ ನೆಗೆದು “ಅಕ್ಕ” ಎಂದ ಅವನನ್ನು ನೋಡಿ ಕಣ್ಣೀರು ಉಕ್ಕಿ ಬಂತು.ಹಲವು ದಿನಗಳಿಂದ ನೀರು ನಿಡಿ ಕಾಣದೇ,ತಲೆಕೂದಲುಕೆದರಿಕೊಂಡು, ಗೊಣ್ಣೇ ಸುರಿಸಿಕೊಂಡು ದಿಕ್ಕೆಟ್ಟು ನಿಂತಿರುವ ತಬ್ಬಲಿ ಮಗುವಿನಂತೆ ಕಂಡ ಆತನನ್ನು ನೋಡಿ ನನ್ನ ಹೃದಯ ಬಾಯಿಗೆ ಬಂತು.ಆತನನ್ನು ಚೆನ್ನಾಗಿ ತೊಳೆದು ಒಂದು ಒಳ್ಳೆ ಸರ್ವಿಸ್ ಮಾಡಿಸಿ, ಹೊಟ್ಟೆ ತುಂಬಾ ಪೆಟ್ರೋಲ್ ಹಾಕಿಸಿ ಒಂದು ದಾರಿಗೆ ತಂದೆ.   ಅಲ್ಲಿಂದ ಮತ್ತೆ ಶುರುವಾದ ನನ್ನ ಮತ್ತು ಅವನಒಡನಾಟಇನ್ನೂಮುಂದುವರೆದಿದೆ.ಅನಿವಾರ್ಯ ಕಾರಣಗಳಿಂದ ಶಾಲೆಯಿಂದ ಮನೆಗೆ ದೂರವಾಗಿ ,ದಿನವೂ ಬಸ್ ನಲ್ಲಿ ತಿರುಗುವ ಹಾಗಾದರೂ, ಬಸ್ ನಿಲ್ದಾಣದ ವರೆಗಾದರೂ ಜೊತೆಯಲ್ಲೇ ಬರುತ್ತಾನೆ.ಹೇಗಿದ್ದರೂ ಬೇರೆಲ್ಲೆಡೆಗೆ ತಿರುಗಾಡುವುದು ಇದ್ದೇ ಇದೆಯಲ್ಲ.ಆಗಾಗ್ಗೆ ದಾರಿಯಲ್ಲಿ ಕಾಣ ಸಿಗುವ ಆ ಹಳದಿ ಬಣ್ಣದ ಸುಂದರಾಂಗ

ಲಲಿತ ಪ್ರಬಂಧ Read Post »

ಇತರೆ

ನನ್ನ ತಂದೆ, ನನ್ನ ಹೆಮ್ಮೆ

ನೆನಪು ಶ್ರೀನಿವಾಸ ಖರೀದಿ ತಂದೆಯವರ ಹೆಸರು: ಶ್ರೀ ಕೆ.ಎನ್. ಶ್ರೀಧರಮೂರ್ತಿ ಭದ್ರಾವತಿ ಹುಟ್ಟಿ ಬೆಳೆದದ್ದು : ತರೀಕೆರೆ / ರಂಗೇನಹಳ್ಳಿ ವ್ಯವಹಾರ ಸ್ಥಳ : ಭದ್ರಾವತಿ ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ದದ ಹೋರಾಟದಲ್ಲಿ ಭಾಗಿಯಾಗಿದ್ದ ನನ್ನ ತಂದೆ ಭದ್ರಾವತಿಯ ದಿವಂಗತ ಶ್ರೀ ಕೆ. ಎನ್.ಶ್ರೀಧರಮೂರ್ತಿ ಯವರು. 1931ರಲ್ಲಿ ಜನಿಸಿದ ಇವರು, ತಮ್ಮ ಹತ್ತನೇ ವಯಸ್ಸಿನಲ್ಲಿ ಮಹಾತ್ಮ ಗಾಂಧೀಜಿ ರವರ ಪಾದಗಳ ಸ್ಪರ್ಷಿಸುವ ಮೂಲಕ ತನ್ನಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚು ರೂಡಿಸಿಕೊಂಡವರು. ಚಿಕ್ಕಂದಿನಲ್ಲೇ ನಾಯಕತ್ವಗುಣಗಳನ್ನು ಬೆಳೆಸಿಕೊಂಡಿದ ಇವರು, ತರೀಕೆರೆಯಲ್ಲಿ ತನ್ನ ಶಾಲಾದಿನಗಳಲ್ಲಿಯೇ ಸ್ವಾತಂತ್ರ ಹೋರಾಟಗಳಲ್ಲಿ ಭಾಗಿಯಾಗಿದ್ದರು.  ಅಪ್ರಾಪ್ತ ಬಾಲಕನಾಗಿ ಕ್ವಿಟ್-ಇಂಡಿಯಾ ಚಳುವಳಿ, ಸ್ವರಾಜ್ಯ ಚಳುವಳಿ, ಅಸಹಕಾರ ಚಳುವಳಿ, ಮೈಸೂರು ಚಲೋ ಚಳುವಳಿ ಮುಂತಾದ ಸ್ವಾತಂತ್ರ ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದರು. ತನ್ನ ಹದಿಹರೆಯ ವಯಸ್ಸಿನಲ್ಲಿ ಒಮ್ಮೆ ಪಟ್ಟಣ್ಣ-ಪಂಚಾಯ್ತಿ ಚುನಾವಣೆಗೆ ತನ್ನ ಉಮೇದುವಾರಿಕೆ ಸಲ್ಲಿಸಿ ಅವರ ಅಪ್ಪ ಇವರನ್ನು ಮನೆಯಿಂದ ಹೊರಹಾಕ್ಕಿದ್ದರಂತೆ. ಹೈಸ್ಕೂಲಿನ ವಿದ್ಸಾರ್ಥಿ ಸಂಘದ ನಾಯಕನಾಗಿ ತನ್ನ ಸ್ನೇಹಿತರೊಡನೆ ಅಸಹಕಾರ ಚಳುವಳಿ – ಸ್ವರಾಜ್ಯ ಚಳುವಳಿಗಳಲ್ಲಿ ಭಾಗವಹಿಸಿ, ಬ್ರಿಟೀಷರ ಕಛೇರಿಗಳಿಗೆ ದಾಳಿ ಮಾಡಿ ಅಲ್ಲಿನ ಕಾರ್ಯಕಲಾಪಗೆ ಅಡ್ಡಿಪಡಿಸುವುದು, ರೈಲು ತಡೆದು ಪ್ರತಿಭಟಿಸುವುದು,  ರಾತ್ರಿಯಲ್ಲಿ ಮನೆಮನೆಗಳ ಬಾಗಿಲುಗಳಿಗೆ ಕರಪತ್ರ ಅಂಟಿಸಿ ಸ್ವಾತಂತ್ರ ಹೋರಾಟದ ಸಭೆಗಳಿಗೆ ಬರುವಂತೆ ಅಲ್ಲಿನ ನಿವಾಸಿಗಳಿಗೆ ಸ್ಪೂರ್ತಿ ತುಂಬುತಿದ್ದರು. ಎಷ್ಟೊ ಬಾರಿ ಬಂಧನಗೊಳಗಾಗಿ ಕೋರ್ಟ್ ಗೆ ಹಾಜರುಪಡಿಸಿದರೂ ಚಿಕ್ಕ ಬಾಲಕನೆಂದು ಬಿಡುಗಡೆಗೊಂಡಿದುಂಟಂತೆ. ಹೀಗೆ ಓಮ್ಮೆ ತಿಪಟೂರಿನಲ್ಲಿ  ಅಸಹಕಾರ ಚಳುವಳಿಯಲ್ಲಿ ಭಾಗಿಯಾಗಿದ್ದಾಗ, ರೈಲ್ವೇ ನಿಲ್ದಾಣದಲ್ಲಿ ರೈಲನ್ನು ತಡೆಹಿಡಿದು ಬ್ರಿಟೀಷ್ ಸರ್ಕಾರಕ್ಕೆ ಸಂಭಂದಪಟ್ಟ ಅಂಚೆ ಟಪಾಲುಗಳನ್ನು ನಾಶಪಡಿಸಿ,  ರೈಲ್ವೇ ನಿಲ್ದಾಣ ದ್ವಂಸ ಪಡಿಸಿದ ಆರೋಪದಡಿ ಚಿಕ್ಕಮಗಳೂರಿನ ಜೈಲು ಪಾಲಾಗಿದ್ದರು. ಮೈಸೂರು ಚಲೋ ಚಳುವಳಿಯಲ್ಲಿ ಬಂದಿಸಲ್ಪಟ್ಟು ಬೆಂಗಳೂರಿನ ಕೆ.ಆರ್.ಪುರಂನ ಸೆಂಟ್ರಲ್ ಕಾರಾಗೃಹದಲ್ಲಿ 3ತಿಂಗಳ ಕಾಲ ಜೈಲುವಾಸ ಅನುಭವಿಸಿದರು. ಜೈಲುವಾಸದಲ್ಲಿ ಕಾಂಗ್ರೆಸ್ ನ ಹಲವು ಮುಂದಾಳುಗಳ  ಪರಿಚಯವು ಮುಂದೆ ಒಬ್ಬ ಪ್ರಭಾವಿ ಕಾಂಗ್ರೆಸ್ ದುರೀಣನಾಗಿ ಬೆಳೆಯಲು ಕಾರಣವಾಯಿತು. ರಾಜಕೀಯವಾಗಿ ಇವರಿಗೆ ಎಪ್ಪತ್ತರ ದಶಕದಲ್ಲಿ ಎಷ್ಟೇ ಪ್ರಭಾವವಿದ್ದರೂ ಯಾವುದೇ ಅಧಿಕಾರ ಸಿಗದದ್ದು ವಿಪರ್ಯಾಸವೇ ಸರಿ. ಓಮ್ಮೆ ಎಮರ್ಜೆನ್ಸಿ ಸಮಯದಲ್ಲಿ ಕಾಂಗ್ರೆಸ್ ನ ಬಿ-ಫಾರಂ ಮನೆ ಬಾಗಿಲಿಗೆ ಬಂದರೂ ಇಂದಿರಾ ವಿರೋಧಿ ಗಾಳಿ ಇರಬಹುದೆಂದು ಹೆದರಿ ಟಿಕೇಟ್ ನಿರಾಕರಿಸಿದರು. ಮತ್ತೊಮ್ಮೆ ಪರಿಷತ್ತಿಗೆ ನಾಮನಿರ್ದೇಶನವಾಗುವ ಕಡೇ ಗಳಿಗೆಯಲ್ಲಿ,  ಆಗಿನ ಮುಖ್ಯಮಂತ್ರಿ ಅರಸುರವರು ರಾಜಕೀಯ ಒತ್ತಡಕೊಳಲಾಗಿ  ಇವರಿಗೆ ಮೀಸಲಿಟ್ಟಿದ್ದ ಸ್ಥಾನವನ್ನ ಪರಭಾರೆ ಮಾಡಿದರು. ಇನ್ನ ಎಂಬತ್ತರ ದಶಕದಲ್ಲಿ ಆರೋಗ್ಯ, ವಯಸ್ಸು  ಒಂದೆಡೆಯಾದರೆ, ಜಾತಿ ಆಧಾರಿತ ರಾಚಕೀಯವು ಇವರ ವಿಧಾನಸಭೆ ಪ್ರವೇಶಿಸುವ ಆಸೆ, ಆಸೆಯಾಗಿಯೇ ಉಳಿಹಿತು. ಓಮ್ಮೆ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ, ಮತ್ತೊಮ್ಮೆ ಬಾಯಲಿದದ್ದು ಕಿತ್ತುಕೊಂಡರು. ತೊಂಬತ್ತರ ದಶಕದಲ್ಲಿ ನಮ್ಮ ಮನೆಗೆ ಬೇಟಿಕೊಟ್ಟಿದ್ದ ಮಾಜಿ ಮುಖ್ಯಮಂತ್ರಿ ಗುಂಡೂರಾಯರಿಗೆ ತಂದೆಯವರು ತಮಾಷೆ ಮಾಡುತ್ತ ಹೇಳಿದ ನೆನಪು : ‘ನೀವು “ಮಾಜಿ ಮುಖ್ಯಮಂತ್ರಿ”, ಆದರೆ ನಾವು ಸ್ವಾತಂತ್ರ ಹೋರಾಟಗಾರರು ಎಂದಿಗೂ “ಮಾಜಿ” ಯಾಗುವುದಿಲ್ಲ,’ ಎಂದು. 82 ವರುಷ ಬಾಳಿ ಬದುಕಿದ ಈ ಸ್ವಾತಂತ್ರ ಹೋರಾಟಗಾರ, 2013ರಲ್ಲಿ ತನ್ನ ಕೊನೆಯ ಉಸಿರೆಳೆದರು. ನನ್ನ ತಂದೆಯ ಬಗ್ಗೆ ಈ ವಿಷಯಗಳನ್ನು ಹಂಚಿಕೊಳ್ಳಲು ನನಗೆ ಹೆಮ್ಮೆ ಎನ್ನಿಸುತ್ತಿದೆ. *********************************

ನನ್ನ ತಂದೆ, ನನ್ನ ಹೆಮ್ಮೆ Read Post »

ಇತರೆ, ಮಕ್ಕಳ ವಿಭಾಗ

ಮಕ್ಕಳ ವಿಭಾಗ

ಬಾವುಟ ಪದ್ಯ ಮಲಿಕಜಾನ ಶೇಖ ಅತ್ತ ನೋಡು ಇತ್ತ ನೋಡು ಸುತ್ತ ನೋಡು ಎತ್ತ ನೋಡುಬೀದಿ ನೋಡು ಕೇರಿ ನೋಡುನೋಡು ನೀನು ಬಾವುಟ ಮಾಡು ನೀನು ಸೆಲ್ಯೂಟ್… ಕೆಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರ ಒಂದು ನೀಲಿ ನೋಡು ಸತ್ಯ ಶಾಂತಿ ನ್ಯಾಯ ಪ್ರೀತಿತ್ಯಾಗ ಶೌರ್ಯ ನೀತಿ ಮೌಲ್ಯಐಕ್ಯ ಒಂದು ಪ್ರತೀಕ ನೋಡು  ಪರತಂತ್ರವ ಕಳಚಿ ಬಿಟ್ಟುಸ್ವಾತಂತ್ರವ ಮೆರೆಸಿ ಕೊಟ್ಟುದೇಶದೊಂದು ಪ್ರತೀಕ ನೋಡು ಮೆಡಂ ಕಾಮಾ ಹಾರಿಸಿದಭಗತ ಗುರು ಪ್ರೇಮಿಸಿದಗಾಂಧೀನೆಹರು ಪ್ರೀತಿಸಿದ ಪ್ರತೀಕ ನೋಡು ಹಲವು ಭಾವ ಹಲವು ಭಾಷೆಹಲವು ಬಣ್ಣ ಹಲವು ವೇಷಎಲ್ಲರೊಂದು ಪ್ರತೀಕ ನೋಡು 

ಮಕ್ಕಳ ವಿಭಾಗ Read Post »

ಇತರೆ

ಸ್ವಾತಂತ್ರ್ರ್ಯೋತ್ಸವ ಆಚರಿಸುವ ಹೊತ್ತಿನಲ್ಲಿ.

ಲೇಖನ ಸ್ವಾತಂತ್ರ್ರ್ಯೋತ್ಸವ ಆಚರಿಸುವ ಹೊತ್ತಿನಲ್ಲಿ. ಸುನೀತಾ ಕುಶಾಲನಗರ ಶಾಲೆ ಸೇರಿದಾಗಿನಿಂದ ಈವರೆಗೂ ಪ್ರತಿವರ್ಷ ಆಗಸ್ಟ್ ಬಂತೆಂದರೆ ಅದೇನೋ ಸಂಭ್ರಮ.ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಸ್ವಾತಂತ್ರೋತ್ಸವದ ಸಡಗರ ಅದು ಹಾಗೆಯೇ ಉಳಿಯಲು  ಮತ್ತು ಬೆಳೆಸಲು ಶಿಕ್ಷಕ ವೃತ್ತಿಯಲ್ಲಿರುವುದರಿಂದ ಮತ್ತಷ್ಟು ಉತ್ಸಾಹಿಯಾಗಿ ನಿರ್ವಹಿಸುವ ಅವಕಾಶ. ವಿದ್ಯಾರ್ಥಿಗಳಾಗಿದ್ದಾಗ  ದೇಶಭಕ್ತಿ ಮೈಗೂಡಿಸುವ ಭಾಷಣದ  ಬಾಯಿಪಾಠ,ದೇಶಭಕ್ತಿ ಗೀತೆ ಹಾಡಿ ನಲಿದು  ಶಿಕ್ಷಕರು ಕೊಡುವ ಮಿಠಾಯಿ ಚೀಪುತ್ತಾ ಕೇಕೆ ಹಾಕಿ  ಆ ದಿನ ಸವಿದ ಖುಷಿಯನ್ನು ಮೆಲುಕಿಸುತ್ತಾ ಮನೆಗೆ ತೆರಳುತಿದ್ದ ನೆನಪು ಮೊನ್ನೆ ಮೊನ್ನೆಯೆಂಬಂತೆ.  ಸ್ವತಃ  ಶಿಕ್ಷಕಿಯಾಗಿರುವುದರಿಂದ ಪ್ರತಿವರ್ಷ ವಿದ್ಯಾರ್ಥಿಗಳ ತಯಾರಿ ಮಾಡುವಾಗ ಹೊಸತನ ಇದ್ದೇ ಇರುತ್ತದೆ. ಆ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ಹೊಸ ಸಾಧ್ಯತೆಗಳತ್ತ ಹೊರಳುವ ಯೋಜನೆ ಹಿಂದಿನ  ವರ್ಷದಿಂದಲೇ ಯೋಜಿಸಲಾಗಿರುತ್ತದೆ. ಆಗಸ್ಟ್ ಪ್ರಾರಂಭದ  ದಿನಗಳಿಂದಲೇ  ವಿದ್ಯಾರ್ಥಿಗಳಿಗೆ ಸಾಕಷ್ಟು ತಾಲೀಮು ನಡೆಸಿ ಆ ದಿನವನ್ನು ರಂಗು ರಂಗಾಗಿಸುವ ಕನಸು. ಧ್ವಜಕಟ್ಟೆ ತೊಳೆದು ರಂಗೋಲೆ ,ಹೂಗಳಿಂದ ಅಲಂಕರಿಸುವ ಕೇಸರಿ,ಬಿಳಿ,ಹಸಿರು ಬಣ್ಣಗಳ ಬ್ಯಾಂಡಗಳೂ,ಒಪ್ಪವಾಗಿ ಜೋಡಿಸಿ ತೊಟ್ಟ ಗಾಜಿನ ಬಳೆಗಳ  ಪುಟ್ಟ ಕೈಗಳ ಉತ್ಸಾಹದ ನಿನಾದಕ್ಕೆ ಶಾಲಾ ಗೇಟಿಗೆ ತೋರಣ ಕೊಡುವ ಕಲರವ ಹೀಗೆ ಸಾಲು ಸಾಲು ಸಂಭ್ರಮ. ಧ್ವಜಾರೋಹಣದ ತಕ್ಷಣ ಆಗಸದೆತ್ತರಕೆ ಏರಿ  ಹಾರಿದಂತೆ ಕಾಣುವ  ತ್ರಿವರ್ಣ ಪತಾಕೆಗೆ ನಮಿಸುತ್ತಲೇ ರಾಷ್ಟ್ರಗೀತೆ ಹಾಡುವಾಗ ಪ್ರತಿಯೊಬ್ಬ   ಭಾರತೀಯನ ನರನಾಡಿಗಳಲ್ಲಿ ನಾವೆಲ್ಲರೂ ಒಂದೇ ಎಂಬ ಘೋಷವಾಕ್ಯಗಳು ಮೊಳಗಿ  ನಮ್ಮೊಳಗೆ  ದೇಶಭಕ್ತಿಯ   ಸಂಚಲನದ  ವೇಗ ಹೆಚ್ಚುತ್ತಲೇ ವಿದ್ಯಾರ್ಥಿಗಳಲ್ಲೂ ಎಳವೆಯಿಂದಲೇ ರಾಷ್ಟ್ರ ಭಕ್ತಿ ಹಾಗೂ ಭಾವಾಕ್ಯತೆಯನ್ನು ಮೈಗೂಡಿಸಿ ಬಿಡುತ್ತದೆ. ಆದರೆ ಇದೀಗ  ಬೀಗಗಳೊಳಗೆ ಮೌನವಾದ   ಶಾಲಾ ಕೊಠಡಿಗಳೂ,ಬಿಕೋ ಎನ್ನುವ  ವಠಾರವೂ, ಮೌನವಾಗಿ ನಿಂತಿರುವ ಧ್ವಜ ಕಂಬವೂ ಈ ಎಲ್ಲವುಗಳ ಜೊತೆ ಶಿಕ್ಷಕರಷ್ಟೇ ಧ್ಜಜ ಹಾರಿಸುವಂತಹ ವಿಪರ್ಯಾಸವನ್ನು ಕಾಲವೇ ತಂದೊಡ್ಡಿದೆ. ಲಾಕ್ಡೌನ್,ಸೀಲ್ಡೌನ್,ಕ್ವಾರೈಂಟೈನ್,ಕಂಟೈನಮೆಂಟ್ ಜೋನ್, ಸೋಷಿಯಲ್ ಡಿಸ್ಟನ್ಸ್ ಎಂಬ ಕಂಡೂ ಕೇಳರಿಯದ ಪದಗಳೊಳಗನಿಂದ ಇಣುಕುತಿರುವ ವೈರಾಣು  ಅಂತರವೆಂಬ ಭಯದೊಳಗೆ ಧ್ಜಜದ ನಿರಾಳ ಉಸಿರನ್ನೂ ಕಸಿದುಕೊಂಡ ಈ ದಿನಗಳಲ್ಲಿ   ಸ್ವಾತಂತ್ರ್ಯ ಎಂಬ ಪದ ಕಾಡಿ  ಯೋಚನೆಗೆ ತಳ್ಳುತ್ತಿದೆ. ಸ್ವಾತಂತ್ರ್ಯ ಮತ್ತು ಬದುಕು: ಸ್ವಾತಂತ್ರ್ಯ ಎಂದರೇನು ?ನಿರಂತರ ಕಾಡುವ ಪ್ರಶ್ನೆಯಿದು.ದೇಶ ಸ್ವತಂತ್ರಗೊಂಡ ದಿನವನ್ನು ವರ್ಷಂಪ್ರತಿ ಸಂಭ್ರಮಿಸುತ್ತೇವೆ ನಿಜ.ಆದರೆ ಸ್ವಾತಂತ್ರ್ಯ ಮತ್ತು ಬದುಕನ್ನು ಸಮೀಕರಿಸಿದಾಗ  ಬಹುತೇಕರಿಗೆ ಬದುಕಿನಲ್ಲಿ ಸ್ವಾತಂತ್ರ್ಯ ಎಂಬ ಪದವೇ ಹತ್ತಿರ ಸುಳಿದಿರಲಾರದು. ಮನದಿಚ್ಛೆಯಂತೆ ಬದುಕುವ ಆಸೆಯಿದ್ದರೂ ಜವಾಬ್ದಾರಿ,ಕರ್ತವ್ಯ,ಭಯ ಹುಟ್ಚಿಸುವ ಸನ್ನಿವೇಶಗಳಿಂದ ಹೊರಬರಲಾಗದೆ ಸದಾ ಯಾವುದೋ ಹಂಗಿನಲ್ಲಿ ಜೀವನ ಸವೆಸುವ ಅಥವಾ ಬೇರೆಯವರ ಹಿತಕ್ಕಾಗಿಯಷ್ಟೇ ಬದುಕನ್ನು ಮೀಸಲಿಟ್ಟು  ಸ್ವಾತಂತ್ರ್ಯವೆಂಬ  ಪದದ  ಅರ್ಥ ತಿಳಿಯುವ ಗೋಜಿಗೆ ಹೋಗದ ಜೀವಗಳು  ನಮ್ಮ ನಿಮ್ಮೊಳಗೆಷ್ಟೋ ಇದ್ದಾರೆಂಬುದು ಕಟು ವಾಸ್ತವ. ಸ್ವಾತಂತ್ರ್ಯ ಮತ್ತು ಹೆಣ್ಣು: ಇಂದಿನ ದಿನಗಳಲ್ಲಿ  ಎಲ್ಲಾ ಕ್ಷೇತ್ರಗಳಲ್ಲೂ ದಿಟ್ಟ ಹೆಜ್ಜೆ ಇಡುತಿರುವವರಲ್ಲಿ ಧೀರ ನಾರಿಯರದ್ದೇ ಮೇಲುಗೈ ಎಂಬುದು ಹೆಮ್ಮೆಯ ವಿಚಾರ. ಎರಡೂ ಕಡೆ ನಿಭಾಯಿಸಬಲ್ಲಷ್ಟು  ಗಟ್ಟಿಗಿತ್ತಿಯರಾಗಿ  ಉದ್ಯೋಗದ ಜೊತೆಗೆ ಮನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಲೇ   ಅಧಿಕಾರದ ಚೌಕಟ್ಟಿನೊಳಗೆ ಸಿಲುಕಿ ತನ್ನ ತನವನ್ನು ತೆರೆದುಕೊಳ್ಳಲಾರದೆ ಬದುಕಿನಲ್ಲಿ ಸ್ವಾತಂತ್ರ್ಯ ವೂ ಇಲ್ಲದೆ  ಕಳೆದು ಹೋಗುವ ಜೀವಗಳು ಬದುಕಿನ ವ್ಯೆವಸ್ಥೆಯ ಹುದುಲಿಗೆ ಸದ್ದಿಲ್ಲದೆ ಹೊಂದಿಕೊಂಡಿದ್ದಾರೆ. ಭಾರತೀಯ ಸಂವಿಧಾನ ನೀಡಿದ  ಸಮಾನತೆಯ ಹಕ್ಕು ಪದೇ ಪದೇ ತಲೆಯ ಮೇಲೆ ಗಿರಕಿ ಹೊಡೆದು ವ್ಯಂಗ್ಯ ನಗುವೊಂದು ಕ್ಷಣ ಕ್ಷಣವೂ ಮೂಡಿ ಮರೆಯಾಗುವಾಗ ನಿಟ್ಟುರಿಸಿಡುತ್ತಲೇ ಅದೇನಾದರೂ ಆಗಲಿ’ ವ್ಯಕ್ತಿಗಿಂತ ನಾಡು ದೊಡ್ಡದು’ ಎಂದು ಮೈಗೊಡವಿ ನಿಲ್ಲುವಷ್ಟರಲ್ಲಿ ಕಾಲದೊಡನೆ ಪ್ರಕೃತಿಯೂ ಮುನಿಸಿಕೊಂಡು ಇನ್ನಿಲ್ಲದ ದುರಂತಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಭರವಸೆಯ ನಿರೀಕ್ಷೆ ಮುಂಬರುವ ವರ್ಷವಾದರೂ ಯಾವ ಕಾರಣಗಳೂ  ಬಾಧಿಸಿದೆ ಸ್ವಾತಂತ್ರ್ಯೋತ್ಸವಕ್ಕೆ ಸಂಭ್ರಮದ ಆಚರಣೆ ಯ  ಸೌಭಾಗ್ಯ ದಕ್ಕಲಿ.ಎತ್ತರೆತ್ತರಕೆ ಹಾರುವ ತ್ರಿವರ್ಣ ಧ್ವಜವನ್ನು ಯಾವುದೇ ಭಯ ಆಕ್ರಮಿಸದಿರಲಿ. ಜಾತಿ,ಧರ್ಮ, ಭಾಷೆ ,ಲಿಂಗ ಬೇಧವಿಲ್ಲದ ನಾವು ಭಾರತೀಯರು ಎಂಬ ಒಗ್ಗಟ್ಟಿನ ಹಾಗು ಸಮಾನತೆಯ ಆಶಾಕಿರಣ ನಮ್ಮೆಲ್ಲರನ್ನೂ ಆವರಿಸಿ ಆ ಮೂಲಕ ಭಾರತಾಂಬೆ ನೆಮ್ಮದಿಯ, ನಿರಾಳತೆಯ ಉಸಿರಾಡುವಂತಾಗಲಿ.ಪರಿಸ್ಥಿತಿಯ  ನಿರ್ಬಂಧಗಳಿಂದ ಸ್ವತಂತ್ರವಾಗಿ ,ಸ್ವಚ್ಛಂದವಾಗಿ ಹಾರಾಡುವ ರಾಷ್ಟ್ರಧ್ವಜವನ್ನು ಕಣ್ತುಂಬಿಕೊಳ್ಳಬಹುದೆಂಬ ಭರವಸೆಯಲ್ಲಿರೋಣ. *************************** : **********************

ಸ್ವಾತಂತ್ರ್ರ್ಯೋತ್ಸವ ಆಚರಿಸುವ ಹೊತ್ತಿನಲ್ಲಿ. Read Post »

ಇತರೆ

ಸ್ವಾತಂತ್ರೋತ್ಸವದ ವಿಶೇಷ

ಸಂವಿಧಾನ ಮತ್ತು ಮಹಿಳೆ. ನೂತನ ದೋಶೆಟ್ಟಿ  1)  ಅವಳು 23ರ ಹುಡುಗಿ. ಆಗಲೇ ಮದುವೆಯಾಗಿ ಎರಡು ಮಕ್ಕಳು. ಅಂದು ಮನೆಕೆಲಸಕ್ಕೆ ಬಂದಾಗ ಬಹಳ ಸಪ್ಪಗಿದ್ದಳು. ಬಾಯಿಯ ಹತ್ತಿರ ರಕ್ತ ಕರೆಗಟ್ಟಿತ್ತು.ಏನೆಂದು ಕೇಳುವುದು? ಇದೇನು ಹೊಸದಲ್ಲ. ಅವಳ ಕುಡುಕ ಗಂಡ ಹೊಡೆಯುತ್ತಾನೆ. ತನ್ನ ಕುಡಿತದ ದುಡ್ಡಿಗೆ ಅವಳನ್ನೇ ಪೀಡಿಸುತ್ತಾನೆ. ಪುಟ್ಟ ಇಬ್ಬರು ಮಕ್ಕಳ ಜೊತೆ ನಾಲ್ವರ ಸಂಸಾರದ ಹೊಣೆ ಅವಳ ಮೇಲಿದೆ. ವಾರದಲ್ಲಿ ಎರಡು ದಿನ ಗಂಡನಿಂದ  ಹೊಡೆಸಿಕೊಂಡು ಬರುತ್ತಿದ್ದವಳು ಈಗ ದಿನವೂ ಬಡಿಸಿಕೊಳ್ಳುತ್ತಿದ್ದಾಳೆ.  ಅವಳ ನೋವು ನೋಡಲಾಗದೆ,  ” ತೂರಾಡುವವನಿಂದ ಹೊಡೆಸಿಕೊಳ್ಳುತ್ತೀಯಲ್ಲ. ಒಂದು ದಿನ ತಿರುಗಿ ಒಂದು ಬಾರಿಸಿಬಿಡು”, ಎಂದರೆ. ಅವಳದು .        ” ಗಂಡನಿಗೆ ಹೇಗೆ ಹೊಡೆಯೋದು” ಎಂಬ  ಮರುಪ್ರಶ್ನೆ. 2) ಅವಳು ವಿದ್ಯಾವಂತೆ. ಒಳ್ಳೆಯ ಸರ್ಕಾರಿ ನೌಕರಿಯಲ್ಲಿದ್ದಾಳೆ. ಅವಳ ವಿದ್ಯಾವಂತ, ಸರ್ಕಾರಿ ನೌಕರಿಯ ಪತಿ ಆಕೆಯ ಹಿಂಬಾಲಕ. ಎಲ್ಲಿಗೂ ಆಕೆಯನ್ನು ಒಬ್ಬಳೇ ಕಳಿಸುವುದಿಲ್ಲ. ಅವಳಿಗೆ ಯಾವ ಸ್ವಾತಂತ್ರ್ಯವೂ ಇಲ್ಲ. ಕೊನೆಗೆ ತಾನು ದುಡಿಯುವ ಹಣಕ್ಕೂ ಅವಳಿಗೆ ಹಕ್ಕಿಲ್ಲ. ಅವಳು ಅವನಿಗೆ ಹಣದ ಥೈಲಿ. ಅವನು  ಕೈಯಲ್ಲಿಟ್ಟಷ್ಟು ಹಣವನ್ನು ಮಾತ್ರ  ಅವಳು ಖರ್ಚು ಮಾಡಬೇಕು. ಹಾಗೆಂದು ಅವಳಿಗೆ ತನ್ನ ಹಕ್ಕಿನ ಬಗ್ಗೆ ಜಾಗೃತಿ ಇಲ್ಲವೆಂದಲ್ಲ. ಆದರೆ ಗಂಡನೆದುರು ಅದು ಕೆಲಸ ಮಾಡುವುದಿಲ್ಲ. 3) ಅವಳಿಗೆ ತಾನು ಉದ್ಯೋಗ ಮಾಡುವುದರಲ್ಲಿ ಆಸಕ್ತಿ ಇಲ್ಲ. ಆದರೆ ಉದ್ಯೋಗ ಮಾಡುವ ಹೆಣ್ಣುಗಳ ಮನೆಯ ಪರಿಸ್ಥಿತಿ ಚೆನ್ನಾಗಿ ಇರದಿದ್ದರಿಂದಲೇ ಅವರು ಉದ್ಯೋಗ ಮಾಡುತ್ತಾರೆ ಎಂಬ ತಪ್ಪು ಕಲ್ಪನೆ. ಇವು ಮೂರು  ತೀರ  ಸಾಮಾನ್ಯ ಉದಾಹರಣೆಗಳು. ನಮ್ಮ ಸುತ್ತಮುತ್ತ  ದಿನನಿತ್ಯ ಕಾಣುವಂಥವುಗಳೇ. ಇಂಥ  ನೂರಾರು ಉದಾಹರಣೆಗಳನ್ನು ಕೊಡಬಹುದು. ಈ ಮೇಲಿನ ಮೂರನ್ನು ಈಗ ಗಮನಿಸೋಣ.  ನಮ್ಮ ಸಂವಿಧಾನ   ಸಾರ್ವತ್ರಿಕವಾಗಿ  ಆತ್ಮರಕ್ಷಣೆಯ ಹಕ್ಕನ್ನು ನೀಡಿದೆ. ಆರ್ಥಿಕ ಹಕ್ಕನ್ನು ನೀಡಿದೆ. ಉದ್ಯೋಗದ ಹಕ್ಕನ್ನು ನೀಡಿದೆ. ವಿದ್ಯಾಭ್ಯಾಸದ ಹಕ್ಕನ್ನು ನೀಡಿದೆ. ಇದರಲ್ಲಿ ಲಿಂಗಬೇಧವಿಲ್ಲ. ಹಾಗಿದ್ದರೆ ಈ ಮೂರು ಪ್ರಸಂಗಗಳು ನಮ್ಮೆದುರು ಬಂದುದಾದರೂ ಹೇಗೆ? ನಮ್ಮ ದೇಶದಲ್ಲಿ ಅನೇಕ ಸಾಮಾಜಿಕ ಕಟ್ಟುಪಾಡುಗಳನ್ನು, ಅಡೆ-ತಡೆಗಳನ್ನು ಅನಗತ್ಯವಾಗಿ ನಿರ್ಮಿಸಲಾಗಿದೆ. ಗಂಡನೆಂದರೆ ದೇವರಿಗೆ ಸಮಾನ. ಪತಿಯೇ ಪರದೈವ. ಅವನ ಅಡಿಯಾಳಾಗಿ ಇರುವುದರಲ್ಲಿಯೇ ಸತಿಯ ಸುಖವಿದೆ. ಅವನು ಬೈದರೆ ಬೈಸಿಕೊಳ್ಳುವುದು, ಹೊಡೆದರೆ ಹೊಡೆಸಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ ಎಂಬ ಸಾಮಾಜಿಕ ಬಿಂಬಿಸುವಿಕೆಯಲ್ಲಿ ಬಹುತೇಕ ಹೆಣ್ಣುಗಳು ಬೆಳೆಯುತ್ತಾರೆ. ವಿದ್ಯಾವಂತರೂ ಇದಕ್ಕೆ ಹೊರತೇನಲ್ಲ.  ಹಣೆಯ ಕುಂಕುಮವೆಂದರೆ ಗಂಡನ ಪ್ರತಿರೂಪವೆಂದು ನಂಬಿರುವ ಮಹಿಳೆಯರು ಇದ್ದಾರೆ. ಬೆಳಿಗ್ಗೆ ಏಳುವಾಗ ಅವರು ತಾಳಿಯನ್ನು ಕಣ್ಣಿಗೊತ್ತಿಕೊಂಡು ಏಳುತ್ತಾರೆ. ಕುಂಕುಮದ ಡಬ್ಬಿಯನ್ನು ಶುಕ್ರವಾರ ಬೇರೆಯವರ ಮನೆಯಲ್ಲಿ ಬಿಟ್ಟು ಬಂದೆ ಎಂದು ಗೋಳಾಡುವ ವಿಜ್ಞಾನ. ಪದವೀಧರರು ಕಾಣಸಿಗುತ್ತಾರೆ. ಇಂಥ ಸಾಮಾಜಿಕ ವಾತಾವರಣಕ್ಕೂ ವಿದ್ಯೆಗೂ ಯಾವುದೇ ಸಂಬಂಧವಿಲ್ಲ. ಅಂದು ಮೇಲೆ ಹಕ್ಕಿನ ಪ್ರಶ್ನೆಯೂ ಉದ್ಭವಿಸುವುದಿಲ್ಲ. ವಿದ್ಯಾವಂತರಲ್ಲೇ ಪರಿಸ್ಥಿತಿ ಹೀಗಿರುವಾಗ  ಮೊದಲ ಉದಾಹರಣೆಯಲ್ಲಿ ಬರುವ  ಅವಿದ್ಯಾವಂತ ಹುಡುಗಿಯ ಬಗ್ಗೆ ಏನು ಹೇಳುವುದು? ಹೆಣ್ಣೆಂದರೆ ಸಹನೆಗೆ ಇನ್ನೊಂದು ಹೆಸರು ಎಂದು ನಂಬಿಸಿರುವ ನಮ್ಮ ಪುರುಷ ಪ್ರಧಾನ ಸಮಾಜ ಅವಳು ತಗ್ಗಿ ಬಗ್ಗಿ ನಡೆಯುವಂತೆ ನೋಡಿಕೊಳ್ಳಲು ಅದಕ್ಕೆ ಧಾರ್ಮಿಕ ಬಣ್ಣವನ್ನೂ ನೀಡಿದೆ. ಕೌಟುಂಬಿಕ ಒತ್ತಡಗಳೂ ಇಲ್ಲಿ ಹೆಚ್ಚಿರುತ್ತವೆ. ಇದರಿಂದ ಇಂಥ ಪ್ರಕರಣಗಳು ಮನೆಯ ನಾಲ್ಕು ಗೋಡೆಗಳ ನಡುವೆ ಇತ್ಯರ್ಥವಾಗುತ್ತವೆ ಅಥವಾ ಬಂಧಿಯಾಗುತ್ತವೆ. ಸಂವಿಧಾನ ಕೊಡುವ ಜೀವಿಸುವ ಹಕ್ಕು, ಸಮಾನತೆಯ ಹಕ್ಕು ಮೊದಲಾದವು ಹಾಳೆಯ ಮೇಲೆ ಉಳಿದು ಬಿಡುತ್ತವೆ. ಎರಡನೇ ಉದಾಹರಣೆಯಲ್ಲಿ ದುಡಿಮೆಯ ಹಕ್ಕು, ಆರ್ಥಿಕ ಹಕ್ಕುಗಳು ಪ್ರಶ್ನೆಗೊಳಪಡುತ್ತವೆ. ವಿದ್ಯಾವಂತ ಪತಿಯಿಂದಲೇ ತಿಳಿದೂ ಶೋಷಣೆಗೊಳಗಾಗುವ ವಿದ್ಯಾವಂತ ಪತ್ನಿಗೆ ತಾನು ಶೋಷಿಸಲ್ಪಡುತ್ತಿದ್ದೇನೆ ಎಂದು ಅನ್ನಿಸುವುದೇ ಇಲ್ಲ. ಇದು ಸ್ವಂತ ಹಕ್ಕಿನ ಚ್ಯುತಿಯಾಗಿಯೂ ಕಾಣುವುದಿಲ್ಲ. ಮೂರನೇ ಉದಾಹರಣೆಯಲ್ಲಿ ಉದ್ಯೋಗದ ಹಕ್ಕಿನ ಪ್ರಶ್ನೆ ಇದೆ. ಉದ್ಯೋಗದ ಬಗ್ಗೆ ಇಂಥ ಮನೋಭಾವವಿರುವ ಹೆಣ್ಣುಗಳಂತೆ, ಅವಳು ಮನೆಯಲ್ಲಿದ್ದರೆ ಪುರುಷನೊಬ್ಬನಿಗೆ‌ ಉದ್ಯೋಗ ದೊರೆಯುವುದಲ್ಲವೇ ಎಂದು ಮಾತಾಡುವವರನ್ನೂ ನಾವು ನೋಡಿದ್ದೇವೆ. ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತಿನ ಪ್ರಯೋಗದ ಸಂದರ್ಭವೇನಿತ್ತೋ ತಿಳಿಯದು. ಆದರೆ ನಮ್ಮ ಸಮಾಜದಲ್ಲಿ ಇದರ ಬಳಕೆ ಸೀಮಿತ ಅರ್ಥದಲ್ಲೇ ಇದೆ. ಉದ್ಯೋಗ ನೀಡಬಹುದಾದ ಸಾಮಾಜಿಕ, ಆರ್ಥಿಕ, ನೈತಿಕ ಸ್ಥೈರ್ಯದ ಅರಿವು ತೀರ ಇತ್ತೀಚಿನವರೆಗೂ ಬಹಳ ಕಡಿಮೆ ಇತ್ತು. ಕಳೆದ ಕೆಲ ದಶಕಗಳಿಂದ  ಮಹಿಳೆ ಉದ್ಯೋಗ ಮಾಡುವುದು  ಅನಿವಾರ್ಯತೆಯಿಂದ ಸಹಜತೆಯತ್ತ ಹೊರಳಿದೆ ಎಂಬುದೇ ಸಮಾಧಾನ. ಅದರಂತೆ ದುಡಿಯುವ ಹೆಣ್ಣುಗಳನ್ನು ಹೀನವಾಗಿ ನೋಡುವ ಮನಸ್ಥಿತಿಯಿಂದ , ಗೌರವದ ಹಂತವನ್ನು ದಾಟಿ ಇಂದು ಸಹಜತೆಗೆ ತಿರುಗಿದ್ದುದರಲ್ಲಿ ಸಾಮಾಜಿಕ ಜಾಗೃತಿಯ ಪಾಲೇ ಹೆಚ್ಚಿದೆ. ಕೇವಲ ಮೂರು ಉದಾಹರಣೆಗಳ ಸೀಮಿತ ಪರಿಶೀಲನೆ ಇದು.   ಮಹಿಳಾ ಲೋಕವೆಂಬುದು ಅಗಾಧ. ಅದರಲ್ಲಿ ನೋವು, ಸಂಘರ್ಷ, ಹೋರಾಟ, ದೌರ್ಜನ್ಯ, ಹೇಳಿ ತೀರದ್ದು. ಕಾನೂನಿನ ಎಲ್ಲ ರಕ್ಷಣೆ ಇದ್ದರೂ ಸಾಮಾಜಿಕವಾಗಿ ಆಗಬೇಕಾಗಿರುವುದು ಬಹಳಷ್ಟಿದೆ. ನಮ್ಮ ಸಂವಿಧಾನದ ಬಗೆಗೆ ನನಗೆ ಅಪಾರ ಗೌರವವಿದೆ. ಸಂವಿಧಾನ ನೀಡಿರುವ ನಮ್ಮ ಹಕ್ಕುಗಳನ್ನು ಅರಿತು ಅವುಗಳ ಸರಿಯಾದ ಅನುಷ್ಠಾನವನ್ನು ಮಾಡಬೇಕಾಗಿರುವ ಗುರುತರವಾದ ಹೊಣೆ ನಮ್ಮೆಲ್ಲರ ಮೇಲಿದೆ.  ******

ಸ್ವಾತಂತ್ರೋತ್ಸವದ ವಿಶೇಷ Read Post »

ಇತರೆ, ಶಿಕ್ಷಣ

ಹೊಸ ಶಿಕ್ಷಣ ನೀತಿ

ಚರ್ಚೆ ಕಠಿಣ ಕಾಯಿದೆ ಅತ್ಯಗತ್ಯ ಡಿ.ಎಸ್.ರಾಮಸ್ವಾಮಿ ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆಯನ್ನು ಅಷ್ಟು ಸುಲಭದಲ್ಲಿ ಬದಲಿಸುವುದು ಅಸಾಧ್ಯದ ಕೆಲಸ. ಮೂಲತಃ ವರ್ಣವ್ಯವಸ್ಥೆಯೇ ಪುರಾತನ ಭಾರತೀಯ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸೇತುವಾಗಿತ್ತು. ಬ್ರಿಟಿಷರ ಅಪಭ್ರಂಶ ಅರ್ಥಾಂತರವೇ ಇವತ್ತಿನ ಜಾತಿ ಪದ್ಧತಿಯಾಗಿ ಬದಲಾಗಿ ಶ್ರೇಣೀಕೃತ ಸಮಾಜವನ್ನು ಜಾತಿ ಮೂಲಕ ಕಾಣಹೊರಟದ್ದೇ ಸದ್ಯದ ದುರಂತ. ಪುರಾತನ ಶಿಕ್ಷಣ ಗುರುಕುಲಗಳಲ್ಲಿ ಆಯಾ ವರ್ಣದ ಕಸುಬು ಮತ್ತು ಜೀವನ ನಿರ್ವಹಣೆಯ ಗುರಿಯಾಗಿ ರೂಪುಗೊಳ್ಳುತ್ತಿತ್ತು. ಪರಸ್ಪರ ಅವಲಂಬನೆ ಇದ್ದ ಕಾಲದಲ್ಲಿ ಪರಸ್ಪರ ಗೌರವ ಮತ್ತು ಕೊಡು ಕೊಳ್ಳುವಿಕೆ ಇರಲಿಕ್ಕೇ ಬೇಕು. ಆದರೆ ಮೆಕಾಲೆ ಸೃಷ್ಟಿಸಿದ್ದು ಕ್ಲೆರಿಕಲ್ ಶಿಕ್ಷಣ ವ್ಯವಸ್ಥೆಯನ್ನು. ಎಲ್ಲಕ್ಕೂ ಲೆಕ್ಕ ವರದಿ ಮತ್ತು ಉಸ್ತುವಾರಿ ಕಲಿಸಿತೇ ವಿನಾ ಕಸುಬನ್ನಲ್ಲ. ಜೊತೆಗೆ ಆಸಕ್ತ ವಿಷಯದ ಅಧ್ಯಯ‌ನವನ್ನು ಕೂಡ ನಿಷೇದ ಮಾಡಿತು. ವಿಜ್ಞಾನ ಮತ್ತು ಕಲೆ ಎರಡರಲ್ಲೂ ಆಸಕ್ತಿ ಇರುವವರನ್ನು ದೂರ ಇಟ್ಟಿತು. ಆನರ್ಸ್ ಇಲ್ಲದ ಬರಿಯ ತಿಳುವಳಿಕೆಯನ್ನೇ ಜ್ಞಾನ ಎಂದು ಬಿಂಬಿಸಿದ ಕಾರಣಕ್ಕೇ ಇವತ್ತು ಪರಸ್ಪರ ಅವಲಂಬನೆಗಿಂತ ಪರಸ್ಪರ ದ್ವೇಷ ಅಸೂಯೆ ತುಂಬಿಕೊಂಡಿದೆ. ಪಠ್ಯಪುಸ್ತಕ ಆಯ್ಕೆ ಸಮಿತಿಯು ಆಯಾ ಆಳುವ ಸರ್ಕಾರದ ಹುಕುಂಗಳನ್ನು ಅಂತಃ ಪಠ್ಯವಾಗಿ ಆರಿಸುವುದು ಕೂಡ ನಿಜದ ಚರಿತೆಯನ್ನು ಮುಚ್ಚಿಟ್ಟು ತಿದ್ದಿದ ಇತಿಹಾಸವನ್ನು ಕಲಿಸುವ ಮೂಲಕ ಪರಂಪರೆಯನ್ನು ದೂರ ಇರಿಸಿ ಆವಾಹಿತ ತಿಳುವಳಿಕೆಯನ್ನು ಜ್ಞಾನವೆಂದು ಬಿಂಬಿಸಲಾಯಿತು. ಈ ಕುರಿತು ಸಾದ್ಯಂತವಾದ ಅಧ್ಯಯನ ಮತ್ತು ಕಠಿಣ ಕಾಯಿದೆ ಅತ್ಯಗತ್ಯ *******************

ಹೊಸ ಶಿಕ್ಷಣ ನೀತಿ Read Post »

You cannot copy content of this page

Scroll to Top