ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕೊಂಕಣಿ ಕವಿ ಪರಿಚಯ

ಕೊಂಕಣಿ ಕವಿ ಪರಿಚಯ ಜೊಸೆಫ್ ಸಿದ್ದಕಟ್ಟೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಗ್ರಾಮದ ಶ್ರೀ ಜೊಸೆಫ್ ಸಿದ್ದಕಟ್ಟೆಯವರು ಮಂಗಳೂರಿನ ಕಾರ್ಮೆಲ್ ಚರ್ಚಿನ ಫಾದರ್ ಆಗಿ ಸೇವೆ ಸಲ್ಲಿಸುತಿದ್ದಾರೆ. ಬಹಳ ಚಿಕ್ಕ ವಯಸ್ಸಿನಿಂದಲೇ ಬರವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡು, ಕೊಂಕಣಿಯ ಯುವ ಕವಿ ಜೊಸಿ ಸಿದ್ದಕಟ್ಟೆ ಎಂಬ ಕಾವ್ಯನಾಮದಿಂದ ಅತ್ಯಂತ ಪ್ರಭಾವಶಾಲಿಯಾಗಿ ಹೊರಹೊಮ್ಮಿದ್ದಾರೆ. ಕಿಟಾಳ್ ಪತ್ರಿಕೆಯ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ “ಕಿಟಾಳ್ ಯುವ ಪರಸ್ಕಾರ್” 2011 ರಲ್ಲಿ, ಇನ್ನೊಂದು ಪ್ರತಿಷ್ಠಿತ ಪ್ರಶಸ್ತಿಯಾದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ್, 2013 ರಲ್ಲಿ ಜೊಸಿ ಸಿದ್ದಕಟ್ಟೆಯವರಿಗೆ ಲಭಿಸಿದೆ. ಸಾಹಿತ್ಯ ರಚನೆಗಳು: “ಪಾವ್ಸಾದೋಣು” ಕವಿತಾ ಸಂಕಲನ (2008) “ಮೋರಾನ್ ಸಾಂಡ್ಲೆಲಿ ಪಾಕಾಂ” ಕವಿತಾ ಸಂಕಲನ (2011) “ಉಜ್ಯಾ ತುಜ಼ೆ ವೇಂಗೇಂತ್” ಕವಿತಾ ಸಂಕಲನ (2015) ಯೂಟರ್ನ್ ( ಅಂಕಣ ಬರಹಗಳ ಸಂಕಲನ) ಕಾಜುಲೊ ( ನ್ಯಾನೋ ಕತೆಗಳ ಸಂಕಲನ) ಕಲ್ವಾರಿರ್ ರಾಜಿ ಸಂಧಾನ. ಇವಿಷ್ಟೂ ಪುಸ್ತಕಗಳು ಪ್ರಕಟಗೊಂಡು ಓದುಗ ವಲಯದೊಳಗೆ ಪ್ರಸಿದ್ಧಿಯನ್ನು, ಅಪಾರ ಮನ್ನಣೆಯನ್ನು ಪಡೆದಿವೆ. ನಾಟಕ ರಚನೆ , ನಿರ್ದೇಶನಗಳಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಫಾ| ಜೊಸಿ ಸಿದ್ದಕಟ್ಟೆಯವರು ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ  ಕೈಯಾಡಿಸಿ ಪರಿಣಿತಿಯನ್ನು ಪಡೆದಿದ್ದಾರೆ. ಉದಾ: ಹೈಕು, ಗಝಲ್, ಇತ್ಯಾದಿ. ಜೊಸಿ ಸಿದ್ದಕಟ್ಟೆಯವರ ಎರಡು ಕವಿತೆಗಳು ನಿಮ್ಮ ಓದಿಗಾಗಿ: ಮೊರಾನ್ ಸಾಂಡ್ಲಲಿಂ ಪಾಕಾಂ – ಕುಮೆರಿಂತ್ ಮೊರಾನ್ ಸಾಂಡ್ಲಲಿಂ ಪಾಕಾಂ ಆರಾವ್ನ್ ಆರಾವ್ನ್ ಹಾಡ್ಲಿಂ ಥೊಡಿಂ ಧಾಕ್ಟಿಂ, ಕಾಂಯ್ ಥೊಡಿಂ ವ್ಹಡ್ಲಿಂ ಆನಿ ತಾಣಿಂಚ್ ಆಮ್ಚಿಂ ಮನಾಂ ಫೊಡ್ಲಿಂ ಬಬ್ಲಾನ್ ಏಕ್ ಪಾಕ್ ಚೊರುನ್ ವೆಲೆಂ ಮಿತ್ರಾಂಕ್ ದಾಕವ್ನ್ ಹರ್ಧೆಂ ಫುಲಂವ್ಕ್ ಬಯ್ಯಾನ್ ವಿಚಾರಿನಾಸ್ತಾಂ ಲಿಪಯ್ಲೆಂ ಏಕ್ ಬುಕಾಪಾನಾಂ ಇಡ್ಯಾಂತ್ ಪಿಲಾಂ ಕಾಡುಂಕ್ ದಾಟ್ಟುಕೀ ಏಕ್ ಜಾಯ್ ಆಸ್ಲೆಂ ಚಾಂಪ್ಯಾವನಾಂತ್ ಆಪೊವ್ನ್ ಗುಪ್ತಿಂ ‘ತಾಕಾ’ ದೀವುಂಕ್ ವರದಕ್ಕ ವಿಚಾರಿ ಮ್ಹಣ್ ಮಾಮ್ಮಿನ್ ದಿಲೆಂ ಕಿಸ್ಣಾಚ್ಯಾ ಮಾತ್ಯಾಕ್ ಖೊವಂವ್ಕ್ ಮಾಗೀರ್ ಉರಲ್ಲಿಂ ಮ್ಹಾಕಾ ಮೊಡ್ಕುರಿಂ ಆನಿ ರಡ್ಕುರಿಂ ಖಂಯ್ಚ್ಯಾ ಕರ್ಮಾಕ್? ಕೊಣೆಂ ಫಾರ್ಲಿಂ, ಕೊಣೆಂ ಲಿಪಯ್ಲಿಂ ತಾಚೆರ್ ಸೊಧ್ ಹಾಂವೆಂ ಚಲಯ್ಲೊ ‘ಹಾಂವೆಂ ಹಾಡಲ್ಲಿಂ ಪಾಕಾಂ ತುಮಿ ಕಶಿಂ ಚೊರ್ಲಿಂ?’ ಬಯ್ಯಾ ಹಾಸ್ಲೆಂ ‘ಹಾಡಲ್ಲಿಂ ವ್ಹಯ್, ಪುಣ್ ಮೊರಾನ್ ಸಾಂಡ್ಲಲಿಂ!’ ದೊಳ್ಯಾ ಖಾಂಚಿಂತ್ಲಿಂ ದುಕಾಂ ಪುಸುನ್ ಭಾಯ್ರ್ ಯೆತಾನಾ ಬೋಳ್ ರುಕಾರ್ ಭಿಜಲ್ಲೊ  ಕಾವ್ಳೊ ಆಂಗ್ ಪಾಪ್ಡುಂಕ್ ಲಾಗ್ಲೊ ಥೆಂಬೆ ಉಸಾಳ್ಳೆಚ್ ತೊ ಸುಶೆಗಾತ್ ಉಬ್ಲೊ -ಜೊ. ಸಿ. ಸಿದ್ದಕಟ್ಟೆ “ನವಿಲು ತೊರೆದ ಗರಿಗಳು” ಬಯಲಲ್ಲಿ ನವಿಲು ತೊರೆದ ಗರಿಗಳನ್ನು ಆರಿಸಿ ಆರಿಸಿ ತಂದಿದ್ದೆ. ಕೆಲವು ಚಿಕ್ಕವು, ಇನ್ನು ಕೆಲವು ದೊಡ್ಡವು, ಆಮೇಲೆ .. ಅವೇ ನಮ್ಮ ಮನಗಳನ್ನು ಒಡೆದವು. ಬಬ್ಲು ಒಂದು ಕದ್ದೊಯ್ದ ಅವನ ಗೆಳೆಯರಿಗೆ ತೋರಿಸಿ ಎದೆ ಉಬ್ಬಿಸಲು, ಅಕ್ಕ ಕೇಳದೆ ಎತ್ತಿಟ್ಟಳು ಪುಸ್ತಕದ ನಡುವೆ ಮುಚ್ಚಿಟ್ಟು ಮರಿ ಮಾಡಲು, ಅಣ್ಣನಿಗೂ ಒಂದು ಗರಿ ಬೇಕಿತ್ತು ಸಂಪಿಗೆ ವನದ ಮರೆಯಲ್ಲಿ “ಅವಳಿಗೆ” ಕೊಡಲು, ವರದಕ್ಕ ಕೇಳಿದರೆಂದು ಅಮ್ಮ ಕೊಟ್ಟಳು ಅವರ ಕೃಷ್ಣನ ತಲೆಗೆ ಸಿಕ್ಕಿಸಲು, ಇನ್ನು ನನಗೆ ಉಳಿದದ್ದು ಬರೀ ಹರಿದವು ಮತ್ತು ಮುರಿದವು …. ಯಾವ ಕರ್ಮಕ್ಕೆ?? ಯಾರ‍್ಯಾರೋ  ಮುಚ್ಚಿಟ್ಟರು, ಎತ್ತಿಟ್ಟರು, ಕದ್ದೊಯ್ದರು.. ಜೋರಾಗಿ ಗದರಿಸಿದೆ ಕೋಪ ತಡೆಯದೆ “ನಾನು ತಂದ ಗರಿಗಳವು.. ಹೇಗೆ ಕದ್ದಿರಿ ನೀವು?” ಅಕ್ಕ ನಗುತ್ತ… “ನೀನು ತಂದಿದ್ದು ಹೌದು.. ಆದರೂ… ನವಿಲು ತಾನೇ ತೊರೆದಿದ್ದು..?” ಕಣ್ಣಂಚಿನ ದುಃಖವನ್ನು ಒರೆಸಿ ಹೊರಗೆ ಬಂದಾಗ ಬೋಳು ಮರದಲ್ಲಿ ಕೂತ ಕಾಗೆಯೊಂದು ಪಟಪಟನೆ ರೆಕ್ಕೆ ಬಡಿಯುತ್ತ ಹನಿಗಳುದುರಿಸಿ ಹಾರಿಹೋಯಿತು…. ನಿರಾಳವಾಗಿ. —ಶೀಲಾ ಭಂಡಾರ್ಕರ್. ರಾಜಿನಾಮೊ ಪಿಕ್ಕಾಸ್ ಆನಿ ಖೊರೆಂ ನವ್ಯಾನ್ ಡ್ಯೂಟೆಕ್ ಹಾಜಿರ್ ಜಾಲಿಂ, ಫುಲಾ ತೊಟಾಂತ್. ಡ್ಯೂಟೆಕ್ ಲಾಗ್‍ಲ್ಲ್ಯಾ ಪಿಕ್ಕಾಸಾನ್ ಮೋವ್ ಆಸ್ಲೆಕಡೆ ಖೊಂಡುಂಕ್ ಸುರು ಕೆಲೆಂ ಖೊಂಡ್ಚ್ಯಾ ಹುಮೆದಿನ್ ಆಡ್ ಮೆಳ್‍ಲ್ಲೊ ಉದ್ಕಾ ಪೈಪ್‍ಯೀ ಉಕ್ಲುನ್ ಘಾಲೊ ದುಸ್ರೆದಿಸಾ ‘ಚತ್ರಾಯೆಸಂಗಿಂ’ ಪಿಕ್ಕಾಸಾಕ್ ಮುರೊ ಖೊಂಡುಂಕ್ ‘ಡ್ಯೂಟಿ’ ಘಾಲಿ, ಎಕೆಕ್ ಘಾಸಾಕೀ ದಾಂತಾಥಾವ್ನ್ ಕಿಟಾಳಾಂ ಉಸ್ಳೊನ್ ಹಿಂಸಾ ಜಾತಾಲಿ, ತಿತ್ಲ್ಯಾಕ್‍ಚ್ ಪಿಕ್ಕಾಸಾನ್ ‘ರಾಜಿನಾಮೊ’ ದಿಲೊ. ಪಿಕ್ಕಾಸಾನ್ ಖೊಂಡುನ್ ಗೆಲ್ಲೆಕಡೆ ಖೊರ್‍ಯಾಕ್ ಡ್ಯೂಟಿ ಲಾಗ್ಲಿ ಮಾತಿ ವೊಡ್ಚಿ, ಹದಾ ಕರ್‍ಚಿ ಮ್ಹೆಳೆಂ ಶೆಣ್ ವೊಡುನ್ ಘಾಲ್ಚೆಂ.. ತಿಕಾಯ್ ಹಿಂಸಾ ಜಾತಾಲಿ ತೆಂ ವಾತಾವರಣ್‍ಚ್ ನಾಕಾ ಆಸ್ಲೆಂ.. ತರೀ, ಆಪ್ಣಾಕುಶಿಕ್‍ಚ್ ಯೇವ್ನ್ ಪಡ್ಚ್ಯಾ ಮೆಳ್ಯಾಮದೆಂಯ್ ಖೊರೆಂ ರಾವ್ಲೆಂ, ‘ಗುಲೊಬಾಚ್ಯಾ ಪರ್ಮಳಾಕ್ ಲಾಲೆವ್ನ್’ ರಾಜಿನಾಮೆ ಹಾರೆ ಮತ್ತು ಗುದ್ದಲಿಗಳೆರಡೂ ಹೊಸದಾಗಿ ಡ್ಯೂಟಿಗೆ ಸೇರಿದವು ಹೂವಿನ ತೋಟದೊಳಗೆ. ಡ್ಯೂಟಿಯಲ್ಲಿ ತೊಡಗಿದ ಹಾರೆಯು ಮೆತ್ತಗಿರುವಲ್ಲಿ ಅಗೆಯಲು ಆರಂಭಿಸಿತು. ಅಗೆಯುವ ಹುಮ್ಮಸ್ಸಿನಲ್ಲಿ ಅಡ್ಡ ಬಂದ ನೀರಿನ ಪೈಪನ್ನೂ ಬಗೆದು ಹಾಕಿತು. ಮರುದಿನ ಮತ್ತೆ ಹಾರೆಗೆ ಎಚ್ಚರದಿಂದ ಕೆಲಸಮಾಡಲು ಎಚ್ಚರಿಸಿ ಕಲ್ಲಿರುವ ಕಡೆ ಅಗೆಯುವ ಡ್ಯೂಟಿ ಬಿತ್ತು. ಒಂದೊಂದು ತುತ್ತಿಗೊಂದೊಂದು ಕಿಡಿಗಳು ಹಲ್ಲಿನಿಂದ ಸಿಡಿಯುವಾಗ ಭಾರೀ ಹಿಂಸೆ ಅನಿಸಿತು. ಅಷ್ಟಕ್ಕೇ ಹಾರೆಯು ರಾಜಿನಾಮೆ ಕೊಟ್ಟಿತು. ಹಾರೆ ಅಗೆದು ಹೋಗಿದ್ದ ಕಡೆ ಈಗ ಗುದ್ದಲಿಯ ಡ್ಯೂಟಿ ಬಂತು. ಮಣ್ಣು ಅಗೆಯುವುದು ಹದಗೊಳಿಸುವುದು, ಸೆಗಣಿ ಹಾಕಿ ಮಟ್ಟ ಮಾಡುವುದು. ಅದಕ್ಕೂ ಹಿಂಸೆಯೇ ಇದು. ಈ ವಾತಾವರಣವೇ ಬೇಡ ಅನಿಸುತಿತ್ತು. ಆದರೂ.. ತನ್ನ ಬುಡಕ್ಕೆ ಬಂದು ಅಂಟುವ ಗಲೀಜಿನ ನಡುವೆಯೂ ಗುದ್ದಲಿ ಅಲ್ಲಿಯೇ ನಿಂತಿತ್ತು.. “ಗುಲಾಬಿಯ ಪರಿಮಳದ ಹಂಬಲದಿಂದ” ಕನ್ನಡಕ್ಕೆ: ಶೀಲಾ ಭಂಡಾರ್ಕರ್. ——————————————————— ಫೋಟೊ ಆಲ್ಬಂ ***************************************************************** ಚಿತ್ರ-ಬರಹ ಶೀಲಾ ಭಂಡಾರ್ಕರ್

ಕೊಂಕಣಿ ಕವಿ ಪರಿಚಯ Read Post »

ಇತರೆ

ಚಂಸು ಪಾಟೀಲ ಎಂಬ ‘ರೈತಕವಿ’

ಚಂಸು ಪಾಟೀಲ ಎಂಬ ‘ರೈತಕವಿ’ ಚಂಸು ಪಾಟೀಲ ಎಂಬ ‘ಪತ್ರಕರ್ತ’, ‘ರೈತಕವಿ’ಯೂ..!ಮತ್ತವನ ‘ಬೇಸಾಯದ ಕತಿ’ಯೂ.!! ನನ್ನ ಪ್ರೀತಿಯ ಗೆಳೆಯ ಚಂಸು ಪಾಟೀಲ ಮೊನ್ನೆ ಭೇಟಿಯಾಗಿದ್ದ ಹಾವೇರಿಯಲ್ಲಿ. ಚಂಸು ತನ್ನ ಇತ್ತೀಚಿನ ಪುಸ್ತಕವಾದ ‘ಬೇಸಾಯದ ಕತೆ’ ಓದಲು ನನಗೆ ಕೊಟ್ಟ. ನನಗೆ ಈ ‘ಬೇಸಾಯದ ಕತಿ’ ಓದುತ್ತಿದಂತೆ ಇದರ ಬಗೆಗೇನೆ ಒಂದು ಬರಹ ಮಾಡೋಣವೆನಿಸಿ ಒಂದು ಈ ಬರಹವನ್ನು ಮಾಡಿದೆ.ಈ ಚಂಸು ‘ರೈತಕವಿ’ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.ಅಷ್ಟೇ ಅಲ್ಲ ಈ ಚಂಸು ಪತ್ರಕರ್ತನೂ ಹೌದು. ಈ ಇವನ ಬಗೆಗಿನ ಮಾಹಿತಿ ಮತ್ತು ಬರಹ ಇಲ್ಲಿದೆ ನೋಡಿ… ಈ ಚಂಸುನು ಬೇಸಾಯದ ಬಗೆಗೆ ಲೇಖಕನಾಗಿ ದೂರದಿಂದ ಕಂಡು ಬರೆದಿಲ್ಲ. ಅದರ ಒಂದು ಭಾಗವಾಗಿಯೇ ಬರೆಯುತ್ತಾ ಹೋಗುತ್ತಾನೆ. ಸ್ವಯಂ ಕೃಷಿಗಿಳಿದಿರುವ ಈ ಚಂಸು ಬೇಸಾಯದ ಲಾಭ-ನಷ್ಟಗಳನ್ನು ಒಂದೆಡೆ ಹೇಳುತ್ತಾನೆ. ಹಾಗೆಯೇ ಕೃಷಿ ಬದುಕಿನ ಜೊತೆಗೆ ಸುತ್ತಿಕೊಂಡಿರುವ ಬೇರೆ ಬೇರೆ ಹಬ್ಬ, ಉತ್ಸವ ಇತ್ಯಾದಿಗಳನ್ನು ವಿವರಿಸುತ್ತಾನೆ. ಹಾಗೆಯೇ ಕೃಷಿಯ ಜೊತೆಗೆ ಅಂಟಿಕೊಂಡ ಸಂಬಂಧಗಳನ್ನೂ ತೆರದಿಡುವ ಪ್ರಯತ್ನ ಮಾಡುತ್ತಾನೆ. ಅಂದರೆ ಬೇಸಾಯದ ಬೇರೆ ಬೇರೆ ಮಗ್ಗುಲುಗಳು ಈ ಲೇಖಕನಿಂದ ಪರಿಚಯವಾಗುತ್ತಾ ಹೋಗುತ್ತದೆ. ಇದೇ ಸಂದರ್ಭದಲ್ಲಿ ನಾವಿಂದು ಯಾವ ಹಬ್ಬ ಹರಿದಿನ, ಉತ್ಸವಗಳನ್ನು ಆಚರಿಸುತ್ತಿದ್ದೇವೆಯೋ ಅವೆಲ್ಲವೂ ಬೇಸಾಯದಿಂದ ತನ್ನ ನಂಟನ್ನು ಕಳೆದುಕೊಂಡು ಸ್ವತಂತ್ರವಾಗುತ್ತಿರುವುದು, ಮತ್ತು ಕೃತಕ ಆಚರಣೆಯಾಗಿ‌ ಮುಂದುವರಿಯುತ್ತಿರುವುದನ್ನೂ ಈ ‘ಬೇಸಾಯದ ಕತಿ’ ಕೃತಿಯು ಚರ್ಚಿಸುತ್ತದೆ.ಶ್ರಾವಣದಿಂದ ಮಹಾನವಮಿಯವರೆಗಿನ ಹಬ್ಬಗಳಲ್ಲಿ ಮಣ್ಣನ್ನು ಪೂಜಿಸುವಂಥವೇ. ಮಣ್ಣೆತ್ತಿನ ಅಮವಾಸೆಗೆ ಮಣ್ಣೆತ್ತು ಮಾಡಿ ಪೂಜಿಸುವುದು. ನಾಗರ ಪಂಚಮಿಗೆ ಹುತ್ತಕ್ಕೆ ಹಾಲೆರೆಯುವುದು. ಗಣಪ ಕೂಡ ಮಣ್ಣೆ. ನಮ್ಮ ಅಡುಗೆ, ಉಡುಗೆ, ತೊಡುಗೆಗಳಿಗೆ ಬೇಕಾದ ಮೂಲ ಪದಾರ್ಥ, ಪರಿಕರಗಳನ್ನು ಒದಗಿಸುವ ಮಣ್ಣನ್ನು ಪೂಜಿಸುವ, ಮಣ್ಣಿನ ಋಣಕ್ಕೆ ಕೃತಜ್ಞತೆ ಸಲ್ಲಿಸುವ ಅರ್ಥಪೂರ್ಣ ಆಚರಣೆ. ಇಂತಹ ಹಲವು ಚಿಂತನೆಗಳು ಈ ಕೃತಿಯಲ್ಲಿದೆ… ಚಂಸು ಪಾಟೀಲ ಕೃಷಿಯನ್ನೇ ಜೀವನ ವಿಧಾನವಾಗಿ ಸ್ವೀಕರಿಸಿರುವ ಲೇಖಕ. ಚಂಸು ಪಾಟೀಲನು (ಚಂದ್ರಶೇಖರ ಸುಭಾಶಗೌಡ) ಮೂಲತಃ ರಾಣೇಬೆನ್ನೂರು ತಾಲೂಕಿನ ಕೂನಬೇವು (ಅಂಚೆ: ಕಜ್ಜರಿ) ಗ್ರಾಮದವನು. ಬಿ.ಎ. ಪದವೀಧರನು. ಕೆಲವು ಕಾಲ ನಾನು ಮೊದಲೇ ಹೇಳಿದಂತೆ ‘ಸಂಯುಕ್ತ ಕರ್ನಾಟಕ, ‘ಕ್ರಾಂತಿ’ ದಿನಪತ್ರಿಕೆಯಲ್ಲಿ ಹಾಗೂ ‘ನೋಟ’ ವಾರಪತ್ರಿಕೆಯಲ್ಲಿ ಸಹ ಸಂಪಾದಕರಾಗಿದ್ದವನು. ಕೃಷಿ ಸಮಸ್ಯೆ ಕುರಿತು ಬರೆದ ಕೃತಿಯಾದ ‘ಬೇಸಾಯದ ಕತಿ’ಯು ನನ್ನ ತೀರಾ ಮನಮುಟ್ಟಿದ ಕೃತಿಯಾಗಿದೆ. ಈ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ 2018 ರ ಸಾಲಿನ ಸಿಂಪಿ ಲಿಂಗಣ್ಣ ದತ್ತಿ ಪ್ರಶಸ್ತಿಯೂ ಲಭಿಸಿದೆ. ಇತನ ಇನ್ನುಳಿದ ಕೃತಿಗಳಾದ ‘ಗೆಳೆಯನಿಗೆ’ (1995), ‘ಕೆಂಪುಕಂಗಳ ಹಕ್ಕಿ ಮತ್ತದರ ಹಾಡು’ (2004), ‘ಅದಕ್ಕೇ ಇರಬೇಕು’ (2009) ಅಲ್ಲದೇ ಇವನ ಕವನ ಸಂಕಲನಗಳೂ ಓದಿಸಿಕೊಂಡು ಹೋಗುವ ಕೃತಿಗಳಾಗಿವೆ.ಪ್ರಸ್ತುತವಾಗಿ ಸದ್ಯ ತನ್ನ ಕುನಬೇವ ಗ್ರಾಮದಲ್ಲೇ ಕೃಷಿಕರಾಗಿನಾಗಿದ್ದಾನೆ. ಸ್ವಯಂ ರೈತಕವಿಯಾಗಿ ರೈತಾಪಿ ಜಗತ್ತಿನ ಕೃಷಿ ಜಾಗೃತಿಯಲ್ಲಿ ತೊಡಗಿಕೊಂಡಿದ್ದಾನೆ. ಇರಲಿ ಈಗ ಇವನ ಅತ್ಯುತ್ತಮ ಕೃತಿಯಾದ ಅಲ್ಲದೇ ನನಗೆ ತೀರಾ ಹಿಡಿಸಿದ ಕೃತಿಯಾದ ‘ಬೇಸಾಯದ ಕತಿ’ ಬಗೆಗೆ ನೋಡೋಣ… ‘ಬೇಸಾಯದ ಕತಿ’… ಚಂಸು ಪಾಟೀಲ ಎಂಬ ಯುವ ಲೇಖಕನ ತವಕ ತಲ್ಲಣಗಳ ಲೇಖನ ಸಂಗ್ರಹವಿದು ‘ಬೇಸಾಯದ ಕತಿ’. ಬಾಲಕನಾಗಿದ್ದಾಗ ಶಾಲೆಯಲ್ಲಿ ಇದ್ದಾಗಲೇ ಕವಿತೆ ಬರೆದ ಪಾಟೀಲ ಎಂಬತ್ತು-ತೊಂಬತ್ತರ ದಶಕದಲ್ಲಿ ಕನ್ನಡದ ಪ್ರಮುಖ ಬರಹಗಾರರನ್ನು ಓದಿ ಕೊಂಡಿದ್ದ ಕವಿ ಹೃದಯಿಗೆ ತಮ್ಮ ತಂದೆ ಆಧುನಿಕ ಕೃಷಿ ಪದ್ದತಿಯಿಂದ ಸಾಲದ ಸುಳಿಯಲ್ಲಿ ಬಿದ್ದು ವಿಲವಿಲ ಒದ್ದಾಡುವುದು ಕಂಡು ತಲ್ಲಣಿಸಿ ಹೋಗುತ್ತಾನೆ. ತನ್ನಜ್ಜನ ಪಾರಂಪರಿಕ(ಕೃಷಿ) ಕಮತದಿಂದ ನಿರುಮ್ಮಳವಾಗಿದ್ದು ಕಂಡ ಈ ತರುಣನಿಗೆ ತಾನು ಪಾರಂಪರಿಕ ಕಮತಕ್ಕೆ ಇಳಿದು ತನ್ನಪ್ಪನನ್ನು ಸಾಲದ ಸುಳಿಯಿಂದ ಹೊರತರಲು ಯತ್ನಿಸುತ್ತಾನೆ. ಇನ್ನು ಓದು ಓದಿಸುವೆ ಯಾವುದಾದರೂ ಕೆಲಸ ಹಿಡಿದು ಸುಖವಾಗಿರು ಎನ್ನುವ ತಂದೆ..!ಆದರೆ ನಿರಂತರ ಪರಿಶ್ರಮ, ಪ್ರಯತ್ನ ಮತ್ತು ಅಚಲವಾದ ಆತ್ಮವಿಶ್ವಾಸವೇ ಕೃಷಿ, ಇಂಥ ಕೃಷಿಯಿಂದಲೇ ಮೊದಲಾದದ್ದು ನಾಗರೀಕತೆ, ಸಂಸ್ಕೃತಿ ಇತ್ಯಾದಿ, ಹಾಗಾಗಿಯೇ ಕೃಷಿಗೂ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆವೆನ್ನುವ ಚಂಸು. ಕೃಷಿ ಹೊರತುಪಡಿಸಿದ ಸಂಸ್ಕೃತಿ ಪ್ರೇತವೆನ್ನುವ ಚಂಸುನು ಕೃಷಿಯಲ್ಲೇ ಉಜ್ವಲ ಮತ್ತು ಅರ್ಥಪೂರ್ಣ ಬದುಕು ಕಾಣಲು ಹಂಬಲಿಸಿ ಆ ಪ್ರಯತ್ನದಲ್ಲಿ ಸಫಲನೂ ಆಗುತ್ತಾನೆ..! ಸಂಸ್ಕೃತಿಯನ್ನು ಹೊರತುಪಡಿಸಿದ ಕೃಷಿ ಹೆಣಭಾರವೆನ್ನುವ ರೈತಕವಿ ಚಂಸು..! ಅಂದಂತೆಯೇಈಗ ಆಗಿರುವುದು ಹೀಗೆಯೇ.ಇಪ್ಪತ್ತು ವರ್ಷಗಳ ಹಿಂದೆ ಹೋದರೆ ಆಗ ಕೃಷಿ ಮತ್ತು ಸಂಸ್ಕೃತಿ ಯ ಸಂಬಂಧ ಅವಿನಾಭಾವ ಬಂಧವಿತ್ತು. ಅಲ್ಲಿಂದೀಚೆಗೆ ಇವೆರಡೂ ಪರಸ್ಪರ ವಿರುದ್ಧ ದಿಕ್ಕಿನತ್ತಲೇ ಸಾಗಿವೆ, ಈ ವೈರುಧ್ಯದ ಬದುಕೆ ಇವತ್ತು ನಮ್ಮ ರೈತರನ್ನು ಅಸಹಾಯಕರನ್ನಾಗಿಸಿದೆ. ಇನ್ನಿಲ್ಲದಷ್ಟು ಹತಾಶರನ್ನಾಗಿಸಿದೆ. ಶ್ರಾವಣದಿಂದ ಮಹಾನವಮಿವರಿಗಿನ ಹಬ್ಬಗಳೆಲ್ಲ ಮಣ್ಣನ್ನು ಪೂಜಿಸುವಂಥವೇ. ಮಣ್ಣೆತ್ತಿನ ಅಮಾವಾಸ್ಯೆಗೆ ಮಣ್ಣೆತ್ತು ಮಾಡಿ ಪೂಜಿಸುವುದು. ನಾಗರ ಪಂಚಮಿಗೆ ಹುತ್ತಕ್ಕೆ ಹಾಲೆರೆಯುವುದು. ಗಣಪ ಕೂಡಾ ಮಣ್ಣೆ..! ಇದು ಉಂಡುಟ್ಟು ಸಂಭ್ರಮಿಸಲಿಕ್ಕೇ ಮಾತ್ರ ಬೆಳೆದುಬಂದ ಪರಂಪರೆಯಲ್ಲ. ನಮ್ಮ ಅಡುಗೆ, ಉಡುಗೆ, ತೊಡುಗೆಗಳಿಗೆ ಬೇಕಾದ ಮೂಲ ಪದಾರ್ಥ..! ಪರಿಕರಗಳನ್ನು ಒದಗಿಸುವ ಮಣ್ಣನ್ನು ಪೂಜಿಸುವ, ಮಣ್ಣಿನ ಋಣಕ್ಕೆ ಕೃತಜ್ಞತೆ ಸಲ್ಲಿಸುವ ಅರ್ಥಪೂರ್ಣ ಆಚರಣೆ. ಈ ಆಚರಣೆಗಳನ್ನು ಬಿಟ್ಟಿಲ್ಲ. ಆದರೆ, ಇಂದು ನಂಬಿಕೆಗಳಿಗೆ ಮಣ್ಣು ಕೊಟ್ಟಿದ್ದವೆಂದು ‘ಬೇಸಾಯದ ಕತಿ’ಯಲ್ಲಿ ಹೇಳುವ ಚಂಸು ಒಬ್ಬ ಮಣ್ಣಿನ ಆರಾಧಕ, ರೈತಕವಿ ಅಂತಲೇ ನನ್ನ ಅಭಿಪ್ರಾಯ ಮಾತ್ರವಲ್ಲ ಈತನನ್ನು ತೀರ ಹತ್ತಿರದಿಂದ ಕಂಡ ಬಹು ಜನರ ಅನುಭವವೂ ಆಗಿದೆ. ಇನ್ನು ಮಣ್ಣಿನ ಸಂಸ್ಕೃತಿಯಿಂದ ದೂರ ಹೋಗಿರುವ ನಗರ ಪಟ್ಟಣಗಳಲ್ಲಿ ಈ ಹಬ್ಬಗಳು ಇನ್ನೂ ವಿಜೃಂಭಣೆಯಿಂದ, ವೈಭವದಿಂದ ಜರಗುವುದನ್ನು ನೋಡಿದರೆ ಇದೆಲ್ಲ ಹಾಸ್ಯಾಸ್ಪದ ಎನ್ನಿಸುತ್ತದೆ. ನಾವು ಇವತ್ತು ಮಾಡುವುದು ಸರಿ ಎಂದಿಟ್ಟುಕೊಳ್ಳೋಣ. ಮತ್ತೇಕೆ ಬೇಕು ನಮ್ಮೀ ಮಣ್ಣಿನ ದೇವರಿಗೆ ಹೋಳಿಗೆ. ಕಡುಬು ಪಾಯಸ..? ಎಂದು ಕೇಳುವ ಚಂಸು ಅವರಿಗೂ ಮೊನೋಕ್ರೋಟೋಫಾಸೋ, ಇಮಿಡಾಕ್ಲೋರಿಫೈಡೋ, ಯೂರಿಯಾವನ್ನೊ, ಡಿಎಪಿಯನ್ನೋ ನೈವೇದ್ಯವಾಗಿ ಅರ್ಪಸಬಹುದಲ್ಲವೆಂದು ಕೇಳುತ್ತಾನೆ..! ಹೀಗೆ ಕೇಳುವ ಈತನ ಪ್ರಶ್ನೆ ನಿಜಕ್ಕೂ ವಾಸ್ತವವಾದ ಪ್ರಾಕೃತಿಕ ಬದುಕಿನ ಪ್ರಶ್ನೆಯೇ ಆಗಿದೆ. ಇಷ್ಟೆಲ್ಲಾ ತಿಳುವಳಿಕೆ ಇರುವ ವ್ಯಕ್ತಿಗೇ ದಳ್ಳಾಳಿಗಳು ಮೋಸ ಮಾಡುತ್ತಾರೆ ಅಂದರೆ ನೀವು ನಂಬಲಿಕ್ಕಿಲ್ಲ!ಆ ಮೋಸಗಾರನಿಗೆ ಮೆಟ್ಟಿನಲ್ಲಿ ಹೊಡೆದು. ಪಟ್ಟಭದ್ರ ಹಿತಾಸಕ್ತಿಗಳ ನ್ಯಾಯ ಪಂಚಾಯಿತಿಯಲ್ಲಿ ಚಂಸು ಪಾಟೀಲನು ಗೆದ್ದು ಎದ್ದು ಬಂದಿದ್ದ ರೋಮಾಂಚಮಕಾರಿ ಅಧ್ಯಾಯವನ್ನು ನೀವು ಈ ‘ಬೇಸಾಯದ ಕತಿ’ ಕೃತಿಯನ್ನು ಓದಿಯೇ ತಿಳಿಯಬೇಕು. ಹಸಿರು ಕ್ರಾಂತಿ ನಮ್ಮ ಕೃಷಿಯನ್ನು ಮಾತ್ರ ಬದಲಿಸಿಲ್ಲ. ನಮ್ಮ ಆಚಾರ-ವಿಚಾರಗಳನ್ನು ಬದಲಿಸಿದೆ. ನಮ್ಮ ಬದುಕಿನ ನಂಬಿಕೆಗಳನ್ನು ನಮಗರಿವಿಲ್ಲದಂತೆಯೇ ಬುಡಮೇಲು ಮಾಡಿದೆ. ಈ ದ್ವಂದ್ವದ ಬದುಕು. ಆಧುನಿಕತೆಯ ಅತೀ ವ್ಯಾಮೋಹವೇಯಾಗಿದೆ. ಲಾಭ ಬಡುಕರ ಲಗಾಮಿನಲ್ಲಿ ಓಡುತ್ತಿರುವ ತಂತ್ರಜ್ಞಾನದ ಸುಳಿಯಲ್ಲಿ ನಾವು ನಮ್ಮತನವನ್ನು ಕಳೆದುಕೊಂಡಿದ್ದೆವೆಂದು ಪರಿತಪಿಸುವ ಚಂಸು ನಾವು ಹಬ್ಬಕ್ಕೆ ತಂದ ಹರಿಕೆಯ ಕುರಿಗಳಾಗಿದ್ದೆವೆಂದೇ ಪರಿತಪಿಸುತ್ತಾನೆ.ಮತ್ತೆ ಮತ್ತೆ ಮಾರ್ಕೆಟ್‌ ನ ತಳಿರಿಗೆ ಹಾತೊರೆಯುತ್ತಲೇ ಇದ್ದವೆಂದು ಗೋಳಿಡುತ್ತಾನೆ. ರೋಹಿಣಿ ಅಥವಾ ಮೃಗಶಿರಾ ಮಳೆ ಆಯಿತೆಂದರೆ ಮೆಣಸಿನ ಅಗಿ ಹಚ್ಚುವ ಹೊಲಕ್ಕೆ ಈರುಳ್ಳಿ ಚೆಲ್ಲಿ ಎರಡು ಎರಡೂವರೆ ಅಡಿ ಅಂತರದಲಿ ಸಾಲು ಎಬ್ಬಿಸುತ್ತಿದ್ದರು. ಅರಿದ್ರಾ ಮಳೆ ಬರುವಷ್ಟರಲ್ಲಿ ಎರಡು ದೊಡ್ಡ ಮಳೆ ಬಂದಿರೋದು ಭೂಮಿಯೂ ತಂಪಾಗಿ ವಾತಾವರಣದಲ್ಲಿ ತಂಪು ಸೂಸುತ್ತಿರುವ ಸಮಯವದು. ಜುಲೈ ತಿಂಗಳಿಗೆ ಆಗಲೇ ಮುಂಗಾರು ಆರಂಭವಾಗಿ ಪೂರ್ವಾಭಿಮುಖವಾಗಿ ಚಲಿಸುವ ನೈರುತ್ಯ ಮಾರುತದ ಮೋಡಗಳ ಪರಿಣಾಮ ದಿನಗಳಲ್ಲಿ ಆಗಾಗ ಮಳೆ ಸೆಳಕುಗಳು ಓಡಾಡುತ್ತಲೇ ಇರುತ್ತಿದ್ದವು. ಗಿಡ ಹಚ್ಚಲು ಇದು ಸೂಕ್ತ ಕಾಲ. ‘ಆದ್ರಿ ಮಳೆಗೆ ಹಚ್ಚಿದರೆ ಆರು ಕಾಯಿ ಹೆಚ್ಚು’ ಎಂಬ ಗಾದೇನೇ ಇದೆ .ಅರಿದ್ರಾ ಮಳೆ ಶುರುವಾಗುತ್ತಲೆ ಈರುಳ್ಳಿ ಚೆಲ್ಲಿದ ಹೊಲಕ್ಕೆ ಮೆಣಸಿನ ಕಾಯಿ ಅಗಿ ಹಚ್ಚುತ್ತಿದ್ದರು ಆಗ ಮತ್ತೇ ಆ ಹೊಲಕ್ಕೆ ಹುಬ್ಬಿ ಮಳೆ ಬಂದಾಗ ಸಣ್ಣ ಹತ್ತಿ ಅಂದರೆ ನಮ್ಮ ದೇಸಿ ಜೈಧರ ಹತ್ತಿ ಬೀಜ ಊರುತ್ತಿದ್ದರು. ಹೀಗೆ ಒಂದೇ ಹೊಲದಲ್ಲಿ ಬೇರೆ ಬೇರೆ ಕಾಲಮಾನಕ್ಕೆ ಮತ್ತು ಹವಾಮಾನಕ್ಕೆ ಬೆಳೆವ ಪ್ರಮುಖ ಮೂರು ಬೆಳೆಗಳನ್ನು ಅವರು ಅಂದರೆ ನಮ್ಮ ಹಿರಿಕರು ಬೆಳೆಯುತ್ತಿದ್ದರು. ಈಗ ಹೈಬ್ರಿಡ್ ಬಂದು ಮಿಶ್ರ ಬೆಳೆ ಹಾಳಾಯಿತು. ಹೈಬ್ರಿಡ್ ಹಾಗೂ ಬಿಟಿ ಬಂದ ಮೇಲೆ ಈ ಅಪೂರ್ವವಾದಂತಹ ಮಿಶ್ರ ಬೆಳೆ ಪದ್ದತಿಯೇ ಮೂಲೆಗುಂಪಾಯಿತು. ಏಕಬೆಳೆ ಪದ್ದತಿಯೇ ಸಾರ್ವಭೌಮವಾಯಿತು. ಬಂದರೆ ಸರಿ ಇಲ್ಲದಿದ್ದರೆ ಬರೆ ಬೀಳುವುದೂ ಸಾಮಾನ್ಯವಾಯಿತು ಎಂದು ರೈತಕವಿ ಚಂಸು ಪರಿತಪಿಸುತ್ತಾನೆ. ನಲವತ್ತು ವರ್ಷಗಳ ಹಿಂದೆ ಸುರುವಾದ ಬಾವಿ ನೀರಾವರಿಯ ಸಂದರ್ಭದಲ್ಲಿಯೇ ಹಸಿರು ಕ್ರಾಂತಿಯ ಘೋಷಣೆ ಮೊಳಗಿತು. ಆಗ ನನ್ನೂರಲ್ಲಿ ಸುಮಾರು ಇಪ್ಪತ್ತು-ಇಪ್ಪತ್ತೈದು ಬಾವಿಗಳಿದ್ದವು. ಆರಂಭದಲ್ಲಿ ಬಾವಿ ತುಂಬ ನೀರು ಇರುತ್ತಿತ್ತು. ಹಗಲಿಡೀ ವಿದ್ಯುತ್ ಇರುತ್ತಿತ್ತು. ಹೊಲಗಳೆಲ್ಲ ಹಸಿರಿನಿಂದ ಕಂಗೊಳಿಸುತ್ತಿದ್ದವು. ಸಂಜೆಗೆ ಬಾವಿ ಖಾಲಿಯಾದರೂ ಬೆಳಕು ಹರಿಯುವಷ್ಟರಲ್ಲಿ ಬಾವಿಗಳು ತುಂಬಿಕೊಳ್ಳುತ್ತಿದ್ದವುವೆನ್ನುವ ಚಂಸುನ ಈ ಮಾತು ಬರೀ ಚಂಸು ಊರಿಗೆ ಮಾತ್ರ ಸೀಮಿತವಾಗಿಲ್ಲ. ಕೃಷಿವೆನ್ನುದು ಎಲ್ಲಿದೆಯೋ ಅಲ್ಲಲ್ಲಿಲ್ಲೆಲ್ಲಾ ಸಂಬಂಧಿಸಿದ್ದೇಯಾಗಿದೆ. ಹಸಿರು ಕ್ರಾಂತಿ ಅಥವಾ ಆಧುನಿಕ ಕೃಷಿ ಅಮೇರಿಕೆಯ ಕುರುಡು ಅನುಕರಣೆಯೇ ಹೊರತು ಅದರಲ್ಲಿ ಬೇರೆ ಹುರುಳಿಲ್ಲ ಎಂಬುವುದ್ದಕ್ಕೆ ಇವತ್ತು ಪ್ರತಿ ದಿನವೂ ಸಂಭವಿಸುತ್ತಿರುವ ರೈತರ ಆತ್ಮಹತ್ಯೆಗಳೇ ಸಾಕ್ಷಿ. ಹಸಿರು ಕ್ರಾಂತಿಯನ್ನು ಜಾರಿಗೊಳಿಸುವಾಗ ಆದನ್ನು ಕನಿಷ್ಟ ನಮ್ಮತನಕ್ಕೆ ಹಾಗೂ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಹೇಗೆ ಕಾರ್ಯಗತಗೊಳಿಸಬಹುದೆಂಬ ಕುರಿತು ಯೋಚಿಸಿ ಬೇಕಿತ್ತು.ಸಾವಿರ ಶತಮಾನಗಳ ಕೃಷಿ ಪರಂಪರೆಯ ನಾಡು ನಮ್ಮದು ಎಂಬ ಸಂಗತಿಯಾದರೂ ನೆನಪಿಗೆ ಬರಬೇಕಿತ್ತು. ಪರಿಸರ ನೈರ್ಮಲ್ಯ. ಜಲ ಸಂರಕ್ಷಣೆ. ಅರಣ್ಯ ರಕ್ಷಣೆಯ ಜೊತೆ ಜೊತೆಗೇನೇ ಕೃಷಿಯಲ್ಲಿ ಹೆಚ್ಚು ಇಳುವರಿಯ ಪಡೆಯುವ ಸಾದ್ಯತೆಗಳನ್ನು ಕಂಡುಕೊಳ್ಳಬಹುದಿತ್ತು. ಇವತ್ತು ದೇಶಕ್ಕೆ ಆಹಾರಭದ್ರತೆ ಇದೆ, ಆದರೆ ಅದನ್ನು ಬೆಳೆದು ಕೊಟ್ಟ ಕೃಷಿಕರ ಜೀವಕ್ಕೆ, ಜೀವನಕ್ಕೆ ಬೆಲೆ ಇಲ್ಲ ಅಂದ್ರೆ ಏನು ಅರ್ಥ? ಒಂದು ದೇಶ. ಅಲ್ಲಿನ ಸರ್ಕಾರ ಮತ್ತು ಆ ಸಮುದಾಯದ ಕೃತಘ್ನತೆಯ ವಿರಾಟ್ ಸ್ವರೂಪವಲ್ಲದೇ ಇದು ಮತ್ತೇನು..? ಎಂದು ಚಂಸು ಪಶ್ನಿಸುತ್ತಿರುವುದು ಸಕಾಲಿಕ ಸತ್ಯವೇ ಆಗಿದೆ. ಫುಕುವೋಕಾರ ‘ಒಂದು ಹುಲ್ಲಿನ ಕ್ರಾಂತಿ’ ಪ್ರಕಟವಾಗಿದ್ದು 1975ರಲ್ಲಿ. ಅದು ಕನ್ನಡಕ್ಕೆ ಬಂದಿದ್ದು 1988ರಲ್ಲಿ. ಫುಕುವೋಕಾ ಸಹಜ ಕೃಷಿಯ ಬಗ್ಗೆ ಮಾತಾಡಿ ೪೦ ವರ್ಷಗಳಾದವು. ಈ ನಲವತ್ತು ವರ್ಷಗಳ ನಂತರವೂ ನಾವು ಆಧುನಿಕ ಕೃಷಿಯನ್ನೇ ಅನಿವಾರ್ಯ ಎಂದುಕೊಂಡು, ಪ್ರಕೃತಿಗೆ ಮಾರಕವಾದ ಅದನ್ನೇ ಮುಂದುವರಿಸಿಕೊಂಡು ಹೊರಟಿದ್ದೇವೆ. ಇದು ಇರುಳು ಕಂಡ ಬಾವಿಗೆ ಹಗಲು ಬಿದ್ದರೆಂಬ ಗಾದೆಯನ್ನು ನೆನಪಿಸುವಂತದಾಗಿದೆ. ಇವತ್ತಿನ ಕೃಷಿಯಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಬಹುಶಃ ಸರ್ಕಾರದ ಉದ್ದೇಶವೂ ಇದೆ ಎಂದು ಹೇಳಲಾಗುತ್ತಿದೆ. ಕಾರ್ಪೊರೇಟ್ ವಲಯದ ನಿಯಂತ್ರಣಕ್ಕೆ ಬರುವ ರೀತಿಯಲ್ಲಿ ಕೃಷಿಯನ್ನು ಬಗ್ಗಿಸಲಾಗುತ್ತಿದೆ. ಅಥವಾ ಹಿಗ್ಗಿಸಲಾಗುತ್ತಿದೆ. ಸಂಪೂರ್ಣ ಯಾಂತ್ರೀಕರಣದ ನಂತರ ಕೃಷಿಯಲ್ಲಿ ಪಾಲ್ಗೊಳ್ಳುವ ಜನಸಂಖ್ಯೆಯನ್ನು ಶೇ 25 ರೊಳಗೆ ತರುವ ಪ್ರಯತ್ನಗಳ ಕುರಿತ ವರದಿಗಳಿವೆ. ಕೃಷಿಯಿಂದ ಹೊರಬಂದ ಶೇ 40ಕ್ಕೂ ಹೆಚ್ಚು ಜನರಿಗೆ ಬೇರೆ ಬೇರೆ ವಲಯಗಳಲ್ಲಿ ಸ್ಥಿರವಾದ ಉದ್ಯೋಗಗಳ ಲಭ್ಯತೆ ಸಾದ್ಯವೆ..? ಎಂದು ಚಂಸು ಪ್ರಶ್ನಿಸುತ್ತಾನೆ. ಆಗ ಊಟದ ವೇಳೆ ಎಂದರೆ ಹಿಂದಿ ವಾರ್ತಾ ಸುರುವಾಗುವ ಸಮಯ. ಅಲ್ಲಿಗೆ ರೇಡಿಯೋ ಬಂದ್ ಮಾಡಿ ಉಂಡು ಮಲಗಿಬಿಡುತ್ತಿದ್ದೆವು.ಟಿವಿ ಬಂದ ಮೇಲೆ ಅಪ್ಪ ಅವರಿವರ ಮನೆಗೆ ಹೋಗುವುದನ್ನು ನಿಲ್ಲಿಸಿಬಿಟ್ಟ. ಯಾರಾದರೂ ಮನೆಗೆ ಬಂದರೆ ಹಾಂ ಹೂಂ ಅಷ್ಟೇ ಮಾತುಕತೆ. ಎಲ್ಲರ ಕಣ್ಣು, ಮನಸು ಟಿವಿ

ಚಂಸು ಪಾಟೀಲ ಎಂಬ ‘ರೈತಕವಿ’ Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಕಸಾಪಗೆ ಮಹಿಳಾ ಅಧ್ಯಕ್ಷರು ಒಂದು ಚರ್ಚೆ ಇವತ್ತಿನ ಚರ್ಚೆಯಲ್ಲಿಅನಿಸಿಕೆ ತಿಳಿಸಿರುವವರು ಸುಧಾ ಆಡುಕಳ ಕ. ಸಾ. ಪ. ಕ್ಕೆ ,ಮಹಿಳಾ ಅಧ್ಯಕ್ಷರು ಯಾಕಿಲ್ಲ!!? ಕ. ಸಾ. ಪ. ಕ್ಕೆ ,       ಮಹಿಳಾ ಅಧ್ಯಕ್ಷರು ಯಾಕಿಲ್ಲ!!? ಸ್ಥಾಪನೆಯಾಗಿ ಶತಮಾನಗಳಾದರೂ ಇನ್ನೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳಾ ಅಧ್ಯಕ್ಷರು ಯಾಕಿಲ್ಲ!?          ಇಂಥದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಚರ್ಚೆಯನ್ನಾರಂಭಿಸಿದ ಸಂಗಾತಿ ಪತ್ರಿಕೆಯ ನಿಲುವನ್ನು ತುಂಬು ಹೃದಯದಿಂದ ವಂದಿಸುತ್ತಲೇ, ನನ್ನ ಕೆಲವು ವಿಚಾರಗಳನ್ನು ಸ್ಪಷ್ಟಗೊಳಿಸಬಯಸುತ್ತೇನೆ. ಸಮಾನತೆಯೆಂಬುದು ಸುಲಭವಾಗಿ ರೂಢಿಸಿಕೊಳ್ಳುವ ವಿಷಯವಾಗಿದ್ದರೆ ಮಾನವ ಜನಾಂಗ ನಾಗರಿಕತೆಯ ಉತ್ಕೃಷ್ಟ ಹಂತವನ್ನು ತಲುಪಿದ ಇಂದಿನ ದಿನಗಳಲ್ಲಿಯೂ ಅಸಮಾನತೆಯ ಭಾರದಿಂದ ಕುಸಿಯುತ್ತಿರಲಿಲ್ಲ. ದಿನನಿತ್ಯದ ಸಣ್ಣಪುಟ್ಟ ಅವಕಾಶಗಳಲ್ಲೆಲ್ಲ ಸಮಾನತೆಯನ್ನು ಪ್ರತಿಪಾದಿಸುತ್ತ ಅದನ್ನು ಸಾಧಿಸಿಯೇ ಬಿಟ್ಟೆವು ಎಂಬ ಭ್ರಮೆಯಲ್ಲಿ ತೇಲಾಡಿಸುವುದು ಅಸಮಾನತೆಯ ಲೋಕರೂಢಿಯೇ ಆಗಿದೆ.        ನಿಜವಾದ ಸಮಾನತೆಯ ಪರೀಕ್ಷೆಯಾಗಬೇಕಾದದ್ದು ಅಧಿಕಾರದ ಹಂಚಿಕೆಯ ವಿಷಯದಲ್ಲಿ ಎಂಬುದನ್ನು ಉಪಾಯವಾಗಿ ಮರೆಮಾಚುತ್ತಾ ಅಥವಾ ಅದಕ್ಕೆ ತನ್ನದೇ ಅನೇಕ ಸಮಜಾಯಿಸಿಗಳನ್ನು ನೀಡುತ್ತಾ ಹೋಗುವುದು ಅನೂಚಾನವಾಗಿ ನಮ್ಮ ಸಮಾಜದ ನಡೆಯೇಆಗಿದೆ.       ಯಾವುದೇ ಅಧಿಕಾರಯುತವಾದ ಹುದ್ದೆಯ ಆಯ್ಕೆ ಚುನಾವಣಾ ರಾಜಕೀಯಕ್ಕಿಂತ ಭಿನ್ನವೇನಲ್ಲ. ಗ್ರಾಮ ಪಂಚಾಯಿತಿಯಲ್ಲಿ ಹೆಣ್ಣು ಮಕ್ಕಳಿಗೆ ಮೀಸಲಾತಿ ನೀಡಲು ತೆರೆದ ಮನಸ್ಸನ್ನು ಹೊಂದಿರುವ ವ್ಯವಸ್ಥೆ ಶಾಸಕ ಮತ್ತು ಸಂಸದರನ್ನು ಆಯ್ಕೆ ಮಾಡುವಾಗ ತೋರುವ ಅಸಮಾನತೆಯನ್ನು ಗಮನಕ್ಕೆ ತಂದುಕೊಂಡರೆಸಾಕು, ನಮ್ಮ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ದೊರಕುತ್ತದೆ. ಜಾತಿತಾರತಮ್ಯವನ್ನು ಅಳಿಸಿಬಿಟ್ಟಿದ್ದೇವೆಂದು ಭಾಷಣಮಾಡುತ್ತ, ಮನೆಗೆ ಬಂದವರಿಗೆ ತಮ್ಮದೇ ಪಕ್ಕದಲ್ಲಿ ಊಟವಿಕ್ಕುವ ಮಂದಿ ಮಕ್ಕಳ ಮದುವೆಯ ವಿಚಾರಕ್ಕೆ ಬಂದಾಗ ನಡೆದುಕೊಳ್ಳುವ ರೀತಿಯನ್ನು ಗಮನಿಸದರೂ ಸಾಕು. ಇವೆಲ್ಲವೂ ಸಮಾನತೆಯೊಳಗಿನ ಪೊಳ್ಳುತನವನ್ನು ಬಯಲಿಗೆಳೆಯುತ್ತಲೇ ಇರುತ್ತವೆ. ಸಮಾಜದಲ್ಲಿ ಪುರುಷ ಪ್ರಾಧಾನ್ಯವು ಅಳಿದು ಸಮಾನತೆಯ ತಂಗಾಳಿ ಬೀಸುತ್ತಿದೆ ಎಂಬ ಭ್ರಮೆಯಲ್ಲಿರುವ ನಮಗೆ ಅಧಿಕಾರದ ಪ್ರಶ್ನೆಗಳು ಬಂದಾಗಲೆಲ್ಲ ವಾಸ್ತವದ ಬಿಸಿಧಗೆ ಸೋಕುತ್ತಲೇ ಇರುತ್ತದೆ. ಆದರೆ ಇದು ನಮ್ಮ ದೇಶಕ್ಕೋ ಅಥವಾ ಒಂದು ಲಿಂಗಕ್ಕೋ ಸೀಮಿತವಾದ ವಿಷಯವೆಂದು ಅನಿಸುತ್ತಿಲ್ಲ. ಪ್ರಮಾಣದಲ್ಲಿ ಹೆಚ್ಚು ಕಡಿಮೆಯಿದ್ದರೂ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಸ್ರ್ತೀಯರು ಇಡಿಯ ಪ್ರಪಂಚದಲ್ಲಿ ಪಡೆದಿರುವ ಅಧಿಕಾರಯುತ ವಾದಸ್ಥಾನವನ್ನು ಲೆಕ್ಕ ಹಾಕಿದರೆ ನಾಚಿಕೆಯಿಂದ ತಲೆತಗ್ಗಿಸುವಂತಾಗುತ್ತದೆ. ರಾಹುಲಸಾಂಕೃತ್ಯಾಯನರವೋಲ್ಗಾ-ಗಂಗಾ ದಂತಹ ಪುಸ್ತಕವನ್ನು ಓದಿದರೆ ಅಧಿಕಾರದ ಹಂಬಲಕ್ಕಾಗಿ ತಾಯಿಯನ್ನೇ ಪ್ರವಾಹಕ್ಕೆ ದೂಡುವ ನಿಶೆಯರನ್ನು ಕಾಣುತ್ತೇವೆ ಮತ್ತು ಸಂತಾನೋತ್ಪತ್ತಿಯ ಕಾರಣಕ್ಕಾಗಿಯೇ ಇಡಿಯ ಗಣದ ಮುಖ್ಯಸ್ಥಳಾಗಿರುವ ಹೆಣ್ಣನ್ನು ಅವಳ ಆ  ಶಕ್ತಿಯನ್ನೇ ನಿಧಾನವಾಗಿ ದೌರ್ಬಲ್ಯವಾಗಿಸಿ ಮನೆಯ ಗೋಡೆಗಳ ನಡುವೆ ಬಂಧಿಸಿದ ಚರಿತ್ರೆಯನ್ನು ನಾವು ಅರ್ಥಮಾಡಿಕೊಳ್ಳಬಹುದು. ಇಷ್ಟೆಲ್ಲವನ್ನು ಯಾಕೆ ಪ್ರಸ್ತಾಪಿಸಿದೆನೆಂದರೆ ಈ ಶಕ್ತಿರಾಜಕೀಯ ಎಂಬುದು ದೇಶ, ಕಾಲಗಳನ್ನು ಮೀರಿ ಸಮಾಜಕ್ಕೆ ಹಿಡಿದ ವ್ಯಾಧಿಯಾಗಿದೆ, ಎಂಬುದನ್ನು ತಿಳಿಸುವಕಾರಣಕ್ಕಾಗಿ ಅಷ್ಟೆ.           ಯಾರೇನೇ  ಹೇಳಿದರೂ ಹೆಣ್ಣು ಎಂಬ ಗೋಡೆಯೊಳಗಿನ ಜೀವ ಒಂಚೂರು ತನ್ನದೇ ಸಮಯವೆಂಬ ಬಿಡುವನ್ನು ಕಂಡುಕೊಂಡದ್ದು ವಿಜ್ಞಾನದ ಆವಿಷ್ಕಾರಗಳಿಂದಾಗಿ ಹುಟ್ಟಿಕೊಂಡ, ದೈನಂದಿನ ಕೆಲಸಗಳನ್ನು ಸುಲಭಗೊಳಿಸುವ ಅನೇಕ ಯಂತ್ರಗಳಿಂದ ಮಾತ್ರ. ಇಲ್ಲವಾದಲ್ಲಿ ಎಂಥಹ ಶಿಕ್ಷಣವೂ ಅವಳನ್ನು ಸಾಹಿತ್ಯ ರಚನೆಯೆಡೆಗೆ ಸೆಳೆಯುತ್ತಿತ್ತೆಂದು ನನಗನಿಸುತ್ತಿಲ್ಲ. ಹಾಗೆ ಸಿಕ್ಕಿದ ಬಿಡುವಿನ ವೇಳೆಯಲ್ಲಿ, ಅವಳ ಗಮ್ಯದ ಜಗತ್ತಿನ ಬಗ್ಗೆ ಬರೆಯುತ್ತಲೇ ಸ್ತ್ರೀಯರು ಇಂದು ಅದ್ಭುತವಾದ ಸಾಹಿತ್ಯದ ಕೃತಿಗಳನ್ನು ರಚಿಸಿದ್ದಾರೆ. ತಮ್ಮದೇ ಸಾಹಿತ್ಯಿಕ ಗುಂಪುಗಳನ್ನು ಮಾಡಿಕೊಂಡು ಇನ್ನಷ್ಟು ಜನರನ್ನು ತೆಕ್ಕೆಗೆ ಸೆಳೆದುಕೊಳ್ಳುತ್ತಿದ್ದಾರೆ. ಹೆಣ್ಣೊಬ್ಬಳು ಬರವಣಿಗೆಯಲ್ಲಿ ತೊಡಗಿರುವಳೆಂದು ಮನೆಯನ್ನು ಶಬ್ದಮುಕ್ತವಾಗಿಡುವ, ಅವಳ ಕೋಣೆಯಬಾಗಿಲನ್ನು ಶಬ್ದವಾಗದಂತೆ ದೂಡಿ ಕಾಲಕಾಲಕ್ಕೆ ಕಾಫಿತಿಂಡಿಗಳನ್ನು ಪೂರೈಕೆ ಮಾಡುವ, ಅವಳು ಬರೆದುದೆಲ್ಲವನ್ನು ಚಂದವಾಗಿ ಕೈಬರಹದಲ್ಲಿ ಅಥವಾ ಕಂಪ್ಯೂಟರ್ನಲ್ಲಿ ಕಾಪಿ ಮಾಡಿಕೊಡುವ ಎಷ್ಟು ಜನ ಸಂಗಾತಿಗಳಿದ್ದಾರೆಂದು ಚೂರು ಆತ್ಮ ವಿಮರ್ಶೆ ಮಾಡಿಕೊಂಡರೂ ಸಾಕು, ಮಹಿಳಾ ಸಾಹಿತ್ಯದ ಘನತೆ ತನ್ನಷ್ಟಕ್ಕೆ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತದೆ. ತಮ್ಮ ಎಲ್ಲ ಕರ್ತವ್ಯಗಳನ್ನು ಮುಗಿಸಿ ರಾತ್ರಿಯನ್ನು ಕರಗಿಸಿ ಸಾಹಿತ್ಯವಾಗಿಸಿರುವವರ ಸಂಖ್ಯೆಯೇ ಹೆಚ್ಚಿದೆ. ಇವೆಲ್ಲವನ್ನೂ ನಾನು ಮಹಿಳಾ ಸಾಹಿತ್ಯಕ್ಕೆ ಮೀಸಲಾತಿ ಬೇಕೆಂಬ ನೆಲೆಯಲ್ಲಿ ಪ್ರಸ್ತಾಪಿಸುತ್ತಿಲ್ಲ. ಇಷ್ಟಾಗಿಯೂ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಛಾಪನ್ನು ಸರಿಸಮಾನವಾಗಿ ಸ್ಥಾಪಿಸಿಕೊಳ್ಳುತ್ತಿರುವ ಮಹಿಳೆಯರು ಅಧಿಕಾರದ ವಿಷಯಕ್ಕೆ ಬಂದಾಗ ಪ್ರಸ್ಥಾಪವೇ ಆಗದಿರುವ ವಿಷಾದದ ಬಗೆಗಷ್ಟೆ ಈ ಮಾತು.          ನಿಜವಾಗಿ ನೋಡಿದರೆ ಇಂಥದೊಂದು ಪ್ರಸ್ತಾಪ ಪುರುಷ ಸಾಹಿತಿಗಳಿಂದಲೇ ಒಕ್ಕೊರಲಿನಿಂದ ಬರಬೇಕಾದುದು ಇಂದಿನ ತುರ್ತು.  ಮಹಿಳೆಯೊಬ್ಬರನ್ನು  ಕ. ಸಾ. ಪ. ದ  ಅಧ್ಯಕ್ಷಸ್ಥಾನದಲ್ಲಿ ಈ ಸಲವಾದರೂ ನಾವು ಕಾಣಬೇಕು ಎಂದು ಎಲ್ಲರಿಗೂ ಅನಿಸಲೇಬೇಕು. ಚುನಾವಣೆಯ ಹಂಗೇಕೆಂದು ಬಲಾವಣೆಗಾಗಿ ಅವಿರೋಧವಾಗಿ ಮಹಿಳಾ ಅಧ್ಯಕ್ಷರನ್ನು ಆರಿಸಬಹುದು. ಒಬ್ಬರಿಗಿಂತ ಹೆಚ್ಚು ಮಹಿಳಾ ಸ್ಪರ್ಧಿಗಳಿದ್ದರೆ ಅದೂ ಒಳಿತೆ. ಚುನಾವಣೆ ನಡೆಯಲಿ. ಮಹಿಳಾ ಸ್ಪರ್ಧಿಗಳ ನಡುವೆ ನಡೆವ ಸ್ಪರ್ಧೆಯಲ್ಲಿ ಆಯ್ಕೆಯಾದವರು ಅಧ್ಯಕ್ಷರಾಗಲಿ. ಶತಮಾನದಿಂದ ನಡೆದು ಬಂದಿರುವ ಗಂಡಾಳ್ವಿಕೆಯನ್ನು ಬಿಡುವುದರಲ್ಲಿರುವ ಸುಖವನ್ನು ನಮ್ಮ ಪುರುಷರು ಒಮ್ಮೆ ಅನುಭವಿಸಲಿ ಎಂಬುದು ನನ್ನಾಸೆ.ಅದರ ಬದಲು ಮಹಿಳೆಯರ ಆಯ್ಕೆಗೆಂದು ಮೀಸಲಾತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ತರುವುದು ಬೇಡ. ಹಾಗೆ ತರಲೇಬೇಕೆಂದಾದಲ್ಲಿ ಅದು ಮೊದಲು ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಬರಲಿ.ಪ್ರಜ್ಞಾವಂತರೆಂದು ಜನರಿಂದ ಗುರುತಿಸಲ್ಪಡುವ ಸಾಹಿತ್ಯ ಕ್ಷೇತ್ರವೂ ಯಾಕೆ ಮೀಸಲಾತಿಯ ಹೇರಿಕೆಯಿಂದ ಸಮಾನತೆಯನ್ನು‌ ಸಾಧಿಸಬೇಕು?        ತೀರ ಮುಜುಗರದಿಂದಲೇ ನಾನಿದನ್ನು ಪ್ರಸ್ತಾಪಿಸುತ್ತಿರುವೆ. ಶಾಲಾ, ಕಾಲೇಜುಗಳ ಹಂತದಿಂದ ಹಿಡಿದು ನಡೆಯುವ ಸಭೆ, ಸಮಾರಂಭಗಳನ್ನು ಗಮನಿಸಿದರೂ ಸಾಕು. ಸಾರ್ವಜನಿಕ ಕಾರ್ಯಕ್ರವಗಳಲ್ಲಿ ಸ್ರ್ತೀ ಯರಿಗೆ ನಾವು ಕೊಡುವ ಪ್ರಾಧಾನ್ಯತೆಯ ಅರಿವಾಗುತ್ತದೆ. ಎಲ್ಲೋ ಸಭೆಯ ಮೂಲೆಯಲ್ಲೊಂದು ಕುರ್ಚಿಯಲ್ಲಿ ಮಹಿಳೆಯೊಬ್ಬರು ಕುಳಿತಿದ್ದರೆ ಹೆಚ್ಚು. ನಡುವೆ ಕುಳಿತಿದ್ದಾರೆಂದರೆ ಅದು ಅವರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಸಫಲತೆಯ ಕಾರಣದಿಂದ ಮಾತ್ರ. ಆದರೆ ಸಾಹಿತ್ಯದಂತಹ ಸೃಜನಶೀಲ ಮತ್ತು ಭಿನ್ನ ಶಾಖೆಗಳನ್ನೊಳಗೊಂಡ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದೂ ಅಷ್ಟು ಸಮಂಜಸವೆನಿಸದು. ಬಾಲ್ಯದಿಂದಲೂ ಪುರುಷ ಪ್ರಾಧಾನ್ಯದ ಛತ್ರದಡಿಯಲ್ಲಿಯೇ ಬೆಳೆದು ಬಂದ ನಮ್ಮ ತಲೆಮಾರಿನಲ್ಲಿ ಅಧ್ಯಕ್ಷ ಆಯ್ಕೆಯ ಬಗೆಗೂ ಆಂದೋಲನವೇ ನಡೆಯಬೇಕೇನೊ?ಆಸ್ತಿ ಮತ್ತು ಅಧಿಕಾರ ತಮ್ಮ ಹಕ್ಕು ಎಂಬುದನ್ನು ಮೈಗೂಡಿಸಿಕೊಳ್ಳದ ಈ ತಲೆಮಾರಿನ ಸ್ತ್ರೀ ಯರಿಂದ ಅದನ್ನು ನಿರೀಕ್ಷಿಸುವುದೂ ಅತಿ ಮಹತ್ವಾಕಾಂಕ್ಷೆಯೆನಿಸುತ್ತದೆ.   ಆದರೆ ಖಂಡಿತವಾಗಿಯೂ ಕೆಲವು ಪುರುಷರಾದರೂ ಈ  ಆಂದೋಲನಕ್ಕೆ ಜೊತೆಯಾಗುವರೆಂಬ ನಿರೀಕ್ಷೆಯೂ ಬೆಳಕಿನ ಕೋಲಿನಂತೆ ಮಿಂಚುತ್ತದೆ.       ಇಂದಿನ ಯುವ ತಲೆಮಾರು ನಿಜಕ್ಕೂ ಲಿಂಗಸೂಕ್ಷ್ಮತೆಯನ್ನು ಹೊಂದಿದೆಯೆಂದು ಪದೇ ಪದೇ ಸಾಬೀತುಗೊಳ್ಳುತ್ತಿದೆ. ತಮ್ಮ ಸಹ ಬರಹಗಾರರನ್ನು ಹೆಣ್ಣು ಗಂಡುಗಳೆಂಬ ಬೇಧವಿಲ್ಲದೇ ಪರಿಗಣಿಸುವ ಮತ್ತು ಅಧಿಕಾರದಿಂದ ಹಿಡಿದು ಎಲ್ಲವನ್ನೂ ಸಮಾನವಾಗಿ ಪ್ರೀತಿಯಿಂದ ಹಂಚಿಕೊಳ್ಳುವ ವಿಶಾಲ ಮನೋಭಾವವನ್ನು ಇಂದಿನ ಯುವ ಸಾಹಿತಿಗಳು ಹೊಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಹೀಗೆಯೇ ಮುಂದುವರೆದಲ್ಲಿ ಕೆಲವೇ ವರ್ಷಗಳಲ್ಲಿ ಸಾಹಿತ್ಯದ ಎಲ್ಲ ಶಕ್ತಿ ಕೇಂದ್ರಗಳಲ್ಲಿ ಲಿಂಗತ್ವದ ಗೆರೆ ಅಳಿಸಿ ಹೋಗಲಿದೆ. ಅದು ಸಂಭವಿಸುವ ಮೊದಲೇ ನಮ್ಮ ತಲೆಮಾರು ಎಚ್ಚೆತ್ತುಕೊಂಡರೆ ಮುಂದಿನ ಪೀಳಿಗೆಗೆ ನಾವು ಮಾರ್ಗದರ್ಶಕರೆನಿಸಿಕೊಳ್ಳುತ್ತೇವೆ. ಏನೇ ಬರೆದರೂ ಅಧಿಕಾರವೆಂಬುವುದು ಅಮಲಾಗಿರುವಾಗ ಅಮಲಿನಲ್ಲಿರುವವರನ್ನು ಎಚ್ಚರಿಸುವುದು ಕಠಿಣ ಕೆಲಸವೆ.          ಮಹಿಳಾ ಶಕ್ತಿಯೆಂಬುದು ಇಂದು ಕಟ್ಟೆಯೊಡೆದ ಪ್ರವಾಹ. ಎಂತಹ ತಡೆಯೇ ಬಂದರೂ ಅದರ ಮುನ್ನುಗ್ಗುವಿಕೆಯನ್ನು ಪ್ರತಿಬಂಧಿಸಲಾಗದು. ಅಧಿಕಾರದ ಚುಕ್ಕಾಣಿ ಹಿಡಿಯಲು ನೀವು ಹೋರಾಡುತ್ತಲೇ ಇರಿ. ನಾವು ಸಾಹಿತ್ಯದ ಹಸಿರುಕ್ಕಿಸುತ್ತಲೇ ಸಾಗುತ್ತೇವೆ. ನಮ್ಮ ತೆಕ್ಕೆಯಲ್ಲಿ ಮುಂದಿನ ಜನಾಂಗವನ್ನು ಕಾಪಿಟ್ಟುಕೊಳ್ಳುತ್ತಲೇ ಅರಿವಿನ ಹಣತೆಯನ್ನು ಬೆಳಗುತ್ತೇವೆ. ಕೈಯಲ್ಲಿ ಬೀಜ ಹಿಡಿದವರಷ್ಟೇ ಕಾಡಿನ ಕನಸು ಕಾಣಬಲ್ಲರು. ಇಂದು ನೀವು ಕೇಳಿದ ಪ್ರಶ್ನೆ ಸ್ವಲ್ಪವೇ ವರ್ಷಗಳಲ್ಲಿ ಉತ್ತರ ಪಡೆದುಕೊಂಡೀತು. ಚುನಾವಣೆಯ ಮೂಲಕವೇ ಅಧ್ಯಕ್ಷ ಸ್ಥಾನ ಮಹಿಳೆಯರಿಗೊಲಿಯಲಿ. *****************************************                                                                     ***********************                                                                     –

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

ಇತರೆ, ಜೀವನ

ವಿವಾಹ ವ್ಯವಸ್ಥೆ- ಒಂದು ಚರ್ಚೆ

ಚರ್ಚೆ ವಿವಾಹ ವ್ಯವಸ್ಥೆ- ಒಂದು ಚರ್ಚೆ ಚಂದಕಚರ್ಲ ರಮೇಶ ಬಾಬು ಹೊಸ ತಲೆಮಾರಿನ ವಿವಾಹಗಳು ವೈವಿಧ್ಯತೆ ಸಂತರಿಸಿಕೊಂಡಿರುವುದರಿಂದ ಈಗ ನಮ್ಮ ಸಮಾಜದಲ್ಲಿನ ವಿವಾಹ ವ್ಯವಸ್ಥೆಯ ಬಗ್ಗೆ ಒಂಚೂರು ಚರ್ಚೆ ಮಾಡುವ ಎಂತಾಗಿದೆ. ನಮಗೆ ಕಾಣುವ ಹಾಗೆ ವಿವಾಹಗಳಲ್ಲಿ ಎರಡು ರೀತಿಯ ಪ್ರಭಾಗಗಳು ಕಾಣುತ್ತವೆ. ಗಂಡು ಹೆಣ್ಣು ಪ್ರೀತಿಸಿ ತಾವೇ ನಿರ್ಣಯಿಸಿಕೊಂಡು ಮದುವೆ ಯಾಗುವುದು (ಪ್ರೇಮ ವಿವಾಹ)  ಮತ್ತೊಂದು ಸಾಂಪ್ರದಾಯಿಕವಾಗಿ ನಡೆದು ಬಂದ ರೀತಿಯಲ್ಲಿ ಮನೆಗೆ ದೊಡ್ಡವರು ಹೆಣ್ಣು ನೋಡಿ ನಿಶ್ಚಯಿಸಿ ಮದುವೆ ಮಾಡುವುದು ( ಅರೇಂಜ್ಡ್ ಮ್ಯಾರೇಜ್) ನಮ್ಮ ವಿವಾಹ ಪದ್ಧತಿಗಳಲ್ಲಿ ಗಾಂಧರ್ವ ವಿವಾಹ, ರಾಕ್ಷಸ ವಿವಾಹ ಅಂತ ಮತ್ತೆ ಸುಮಾರು ತರಗಳಿವೆ. ಆದರೆ ನಾವು ಪ್ರಸಕ್ತ ಸಮಾಜದಲ್ಲಿ ನಡೆಯುತ್ತಿರುವ ರೀತಿ ನೀತಿಗಳಿಗೆ ಸಂಬಂಧಪಟ್ಟಂತೆ ನಡೆಯುವ ವಿವಾಹಗಳ ಬಗ್ಗೆ ಮಾತ್ರ ಮಾತಾಡೋಣ. ಸದ್ಯದ ದಿನಗಳಲ್ಲಿ ಬಳಕೆಯಲ್ಲಿರುವ ಈ ’ಪ್ರೇ’ ಎನ್ನುವ ಪದದ ಅರ್ಥ ನಿಘಂಟುವಿನ ಪ್ರಕಾರ  “ಪ್ರೀತಿ, ಸ್ನೇಹ, ಅನುರಾಗ, ಮಮತೆ” ಅಂತೆಲ್ಲ ಇದೆ. ಸಂಸಾರದಲ್ಲಿಯ ಸದಸ್ಯರ ನಡುವೆ ಪ್ರೀತಿ, ಪ್ರೇಮ ಇರುತ್ತವೆ. ಆದರೆ ಅಲ್ಲಿಯ ಪ್ರೇಮಕ್ಕೂ, ವಿವಾಹ ಸಂಬಂಧೀ ಪ್ರೇಮಕ್ಕೂ ವ್ಯತ್ಯಾಸವಿದೆ. ವಿವಾಹ ಸಂಬಂಧದ ಪ್ರೇಮ ಎಂದರೆ ಗಂಡು ಹೆಣ್ಣಿನ ನಡುವಣ ಪ್ರೀತಿ ಮಾತ್ರ ಅಂತ ಸಿನಿಮಾಗಳಲ್ಲಿ ಬಳಸುವ ಅರ್ಥದಿಂದಲೇ ಹುಟ್ಟಿ ಬಂದಿದೆ. ಇನ್ನೂ ಹೇಳ ಬೇಕೆಂದರೆ ಬೇರೇ ಜಾತಿ, ಬೇರೇ ಪಂಗಡ, ಬೇರೇ ಧರ್ಮದ ಹುಡುಗ, ಹುಡುಗಿಯರ ನಡುವಿನ ಪ್ರೀತಿಗೆ ಮಾತ್ರವೇ ಪ್ರೇಮ ಎನ್ನುವ ಹಾಗೆ ಬಳಕೆ ಯಾಗುತ್ತಿದೆ. ಪ್ರೇಮ ವಿವಾಹ ಎಂದರೆ ಇದೇ ರೀತಿಯ ಮದುವೆ. ಒಂದೇ ಜಾತಿಯ ಹುಡುಗ ಹುಡುಗಿ ಇಷ್ಟಪಟ್ಟು ಮದುವೆಯಾದರೇ ಅದು ಪ್ರೇಮ ವಿವಾಹದ ಕೆಳಗೆ ಬರುತ್ತದಾ ? ಇದಕ್ಕೆ ಉತ್ತರವಿಲ್ಲ. ಮತ್ತೊಂದು ರೀತಿ ಮದುವೆಯ ಬಗ್ಗೆ ಜಾಸ್ತಿ ಹೇಳಬೇಕಿಲ್ಲ. ದೊಡ್ಡವರ ಅನುಭವಕ್ಕೆ ಮಣೆ ಹಾಕಿ, ಅವರು ನಮ್ಮ ಒಳಿತನ್ನೇ ನೋಡುತ್ತಾರೆ ಅಂತ ನಂಬಿ, ಅವರು ನಿರ್ಣಹಿಸಿದ ಹೆಣ್ಣು/ಗಂಡನ್ನು ತಾವೂ ನೋಡಿ, ಒಪ್ಪಿ ಮದುವೆಯಾಗುವುದು.. ಲವ್ ಮ್ಯಾರೇಜ್ ( ಈಗಿನ ಪ್ರೇಮ ವಿವಾಹಗಳ ತುಂಬಾ ಕೇಳಿ ಬರುವ ಹೆಸರು) ಮಾಡಿಕೊಳ್ಳ ಬಯಸುವ ಜೋಡಿಯ ವಾದನೆ “ ದೊಡ್ಡವರು ನೋಡಿ ನಿಶ್ಚಯಿಸಿದ ಮದುವೆಗಳಲ್ಲಿ ಪ್ರೀತಿ ಎಲ್ಲಿರುತ್ತದೆ ?” ಅಂತ. ಯಾಕಿರಬಾರದು ಅಂತ ಅವರಿಗೆ ಅನಿಸುವುದಿಲ್ಲ. ಆ ವಯಸ್ಸೇ ಹಾಗೆ. ದುಡುಕುತನ ತುಂಬಿದ ಪ್ರಾಯ. ತಾವು ಬಲೆಗೆ ಬಿದ್ದ ಆಕರ್ಷಣೆಗೆ ಒಂದು ವಾದನೆಯನ್ನು ಹುಟ್ಟಿಸಿಕೊಂಡು ಅದಕ್ಕೇ ಜೋತು ಬೀಳುವ ಕ್ರಮ. ಆದರೆ ಅದೊಂದೇ ವಾಸ್ತವವಲ್ಲ. ಕೆಲ ಹುಡುಗ/ಹುಡುಗಿಯರು ತಮ್ಮ ಶಾಲೆ ಕಾಲೇಜುಗಳಲ್ಲಿ ತಾವು ರುಚಿ ನೋಡಿದ ಮಧುರ ಗಳಿಗೆಗಳನ್ನು ಬರೀ ಮಕ್ಕಳ ಆಟಿಕೆಯ ಆಕರ್ಷಣೆ ಎಂದು ಮರೆತು ತಮ್ಮ ತಂದೆ ತಾಯಿ ನೋಡಿದ ಮದುವೆಗಳಿಗೆ ಒಪ್ಪುತ್ತಾರೆ. ಮತ್ತೆ ಕೆಲವರು ಅತ್ತ ಪ್ರೀತಿಸಿದವಳನ್ನು ಮದುವೆಯಾಗಲಾರದೇ ಭಗ್ನ ಪ್ರೇಮಿಗಳಾಗುತ್ತಾರೆ. ಅಥವಾ ದೊಡ್ಡವರು ಹೇಳಿದ ಮದುವೆಗೆ ಒಪ್ಪಿ ಬೇರೇ ಯಾರನ್ನೋ ಮದುವೆಯಾಗಿ ಆ ಬಂಧದಲ್ಲಿಯ ಆತ್ಮೀಯ ಭಾವನೆಗೆ ದೂರವಾಗುತ್ತಾರೆ. ಎರಡೂ ಪದ್ಧತಿಗಳಲ್ಲೂ ಒಳಿತುಗಳಿವೆ, ಕೆಡಕುಗಳಿವೆ. ಯಾವುದನ್ನೂ ನಾವು ಇದೇ ಸರಿಯೆಂದು ಹೇಳಲಾಗುವುದಿಲ್ಲ. ಯಾವುದನ್ನೂ ಬೇಡದ್ದೆಂದು ತೆಗೆದು ಹಾಕಲಾಗುವುದಿಲ್ಲ. ಪ್ರೇಮ ವಿವಾಹ ( ಲವ್ ಮ್ಯಾರೇಜ್ ) ಗಳು ಮಾತ್ರ ಇಷ್ಟು ದಶಕಗಳು  ಕಳೆದರೂ ತಂದೆ ತಾಯಿಗಳ ಮನಸ್ಸಿಗೆ ಬೆಂಕಿ ಹಚ್ಚುವ ಮದುವೆಗಳೇ. ತಾವು ಬೆಳೆಸಿದ ಮಕ್ಕಳು ತಮ್ಮ ಕಣ್ಣೆದುರಲ್ಲೇ ತಮ್ಮನ್ನು ಎದುರಿಸಿ ತಮ್ಮ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ತಮಗೆ ತಿಳಿದ ಹಾಗೆ ಮಾಡುವುದು ಯಾವ ತಂದೆ ತಾಯಿಗೂ ರುಚಿಸುವುದಿಲ್ಲ. ಮತ್ತೆ ಅವರ ಅಂತಸ್ತು, ಸಮಾಜದಲ್ಲಿ ಅವರಿಗಿರುವ ಮಾನ ಮರ್ಯಾದೆ ಮತ್ತೆ ಒಮ್ಮೊಮ್ಮೆ ಬರೀ ಅಹಂಕಾರ. ಇವೆಲ್ಲ ಅಡ್ಡ ಬರುತ್ತವೆ. ಕೆಲ ಸೌಮ್ಯ ಸ್ವಭಾವದ ತಂದೆ ತಾಯಿಯರು ತಮ್ಮ ಮಕ್ಕಳ ಆಯ್ಕೆ, ಭವಿಷ್ಯ ನೋಡಿ ಒಪ್ಪುತ್ತಾರೆ. ಅವರ ನಿಲುವು ಇಷ್ಟೇ “ ಮದುವೆಯಾಗಿ ಒಟ್ಟಿಗೆ ಜೀವನ ಮಾಡುವವರು ಅವರಿಬ್ಬರೂ. ನಾವು ಇಂದು ಇದ್ದೇವೆ, ನಾಳೆ ಇಲ್ಲ. ಅವರ ಆಯ್ಕೆಗೆ ನಾವೇಕೆ ಅಡ್ಡಿ ಹೇಳುವುದು “ಅಂತ.  ಈ ತರದ ನಿಲುವಿನಲ್ಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅವರಿಗಿರುವ ದೂರದೃಷ್ಟಿ ಮತ್ತು ಅವರ ವೈರಾಗ್ಯ ಕಾಣುತ್ತದೆ. ಆದರೆ ಇಲ್ಲಿ ಬಹುಭಾಗ ನಮಗೆ ಕಾಣ ಸಿಗುವುದು ಮಧ್ಯ ತರಗತಿಯ ಕುಟುಂಬಗಳೇ. ಇವರಿಗಿಂತ ಒಂದು ಮೆಟ್ಟಿಲು ಮೇಲಿರುವ ವರ್ಗದವರು ಆಷ್ಟು ಬೇಗ ಪ್ರೇಮ ವಿವಾಹಕ್ಕೆ ಒಪ್ಪುವುದಿಲ್ಲ. ತಮಗಿರುವ ಎಲ್ಲ ರೀತಿಯ ದಾರಿಗಳಿಂದ ಮಕ್ಕಳನ್ನು ಒಪ್ಪಿಸುವ ಪ್ರಯತ್ನ ಮಾಡುತ್ತಾರೆ. ಒಪ್ಪದಿದ್ದಲ್ಲಿ ಹಿಂಸೆಗೂ ಹೇಸುವುದಿಲ್ಲ. ಇವರಿಗೆ ಸಮಾಜದ ನೋಟ ಮುಖ್ಯ. ಉತ್ತರ ಭಾರತದ ಕೆಲ ಭಾಗಗಳಲ್ಲಿ ಈ ರೀತಿಯ ಪ್ರೇಮ ವಿವಾಹಗಳಾದಲ್ಲಿ ಹೆಣ್ಣು ಕುಟುಂಬದ ಕಡೆಯವರು “ ಆನರ್ ಕಿಲ್ಲಿಂಗ್ ’ ಹೆಸರಲ್ಲಿ ಹುಡುಗನನ್ನು ಅಥವಾ ಇಬ್ಬರನ್ನೂ ಕೊಂದ ಪ್ರಕರಣಗಳು ಸಾಕಷ್ಟಿವೆ. ಅವರನ್ನು ತಮ್ಮ ಮನೆಗೆ ಬರಗೊಡದಿರುವುದು ಮುಂತಾದವುಗಳಿಂದ ಆ ದಂಪತಿಗಳಿಗೆ ಸಾತ್ವಿಕ ಹಿಂಸೆ ಕೊಡುತ್ತಾರೆ. ಪ್ರೇಮ ವಿವಾಹ ಮಾಡಿಕೊಂಡ ಜೋಡಿಗಳು ಒಮ್ಮೊಮ್ಮೆ ಭಿನ್ನ ಹಿನ್ನೆಲೆಗಳಿಂದ ಹೊಂದಾಣಿಕೆ ಕಾಣದೆ ಕಷ್ಟ ಪಡುತ್ತಾರೆ. ತಮ್ಮ ತಂದೆ ತಾಯಿಯರನ್ನು ಮತ್ತು ಬಂಧುವರ್ಗದವರ ಸಾನ್ನಿಹಿತ್ಯ ಕಳೆದುಕೊಂಡು ಮಾನಸಿಕ ದೌರ್ಬಲ್ಯಕ್ಕೊಳಗಾಗುತ್ತಾರೆ. ಈಗ ಎರಡೂ ಕಡೆಯ ವಾದಗಳನ್ನು ಒಮ್ಮೆ ತೂಗಿ ನೋಡೋಣ. ಪ್ರೇಮಿಗಳ ವಾದ: ನಾವು ಯುಕ್ತವಯಸ್ಕರಾಗಿದ್ದೇವೆ. ನಮ್ಮ ಬೇಕು ಬೇಡಗಳು ನಮಗೆ ಗೊತ್ತು. ನಮ್ಮ ವೈವಾಹಿಕ ಜೀವನ ಹೇಗಿರಬೇಕು ಎಂಬುದರ ಬಗ್ಗೆ ನಮಗೆ ಅರಿವಿದೆ. ನೀವೇನೋ ತ್ಯಾಗ ಮಾಡಿದ್ದೇವೆ ಎನ್ನುವುದು ಬೇಡ. ನಮ್ಮ ಬಾಲ್ಯದ ಮಧುರಕ್ಷಣಗಳನ್ನು ನಾವು ನಿಮಗೆ ಕೊಟ್ಟಿಲ್ಲವೇ ? ನನಗೆ ಆ ಹುಡುಗನ/ಹುಡುಗಿಯ ಪರಿಚಯವಿದೆ. ಅವಳ/ಅವನ ಜೊತೆ ನನ್ನ ಬಾಳು ಹಸನಾಗಿರುತ್ತದೆ. ಸಮಾಜ ಬದಲಾಗುತ್ತಿದೆ. ನೀವು ಸಹ ಆಗಿ. ಇನ್ನೆಷ್ಟು ದಿನ ನೀವು ನಿಮ್ಮ ಇಷ್ಟಾಯಿಷ್ಟಗಳನ್ನು ನಮ್ಮ ಮೇಲೆ ಹೇರುತ್ತೀರಿ? ಅಮೆರಿಕ, ಯೂರೋಪ್ ದೇಶಗಳ ಜನರನ್ನು ನೋಡಿ. ತಮಗೆ ಬೇಕಾದವರನ್ನು ಡೇಟಿಂಗ್ ಗಳ ಮೂಲಕ ತಾವೇ ಆರಿಸಿಕೊಳ್ಳುತ್ತಾರೆ. ಹುಡುಗಿಯರಾದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀವು ಯಾರೋ ನೋಡಿದ ಅಪರಿಚಿತ ಹುಡುಗನಿಂದ ಕತ್ತು ಬಗ್ಗಿಸಿ ತಾಳಿ ಕಟ್ಟಿಸಿಕೊಳ್ಳಲು ನಾನು ತಯಾರಿಲ್ಲ ಅಂತಲೂ ಹೇಳುವುದಿದೆ. ದೊಡ್ಡವರ ವಾದಃ ನೀವೆಷ್ಟೇ ದೊಡ್ಡವರಾದರೂ ಸಮಾಜದಲ್ಲಿನ ಒಳಿತು ಕೆಡಕುಗಳ ಪರಿಚಯವಿರುವುದಿಲ್ಲ. ಅದಕ್ಕೆ ನಾವು ಹಿನ್ನೆಲೆ ಎಲ್ಲ ವಿಚಾರಿಸಿ, ನೋಡಿ ಮದುವೆ ಮಾಡುತ್ತೇವೆ. ಅದಕ್ಕೆ ಏಕೆ ಆಕ್ಷೇಪಣೆ? ನಾವೇನು ನಿಮ್ಮ ಶತ್ರುಗಳೇ ? ನಿಮ್ಮ ಒಳಿತು ಕೆಡುಕು ನಮಗೆ ಗೊತ್ತಾಗೋದಿಲ್ವಾ ? ನಾವದೆಷ್ಟು ನಮ್ಮ ಸುಖಗಳನ್ನು ತ್ಯಾಗ ಮಾಡಿ ನಿಮ್ಮನ್ನು ಬೆಳೆಸಿದ್ದೇವೆ ಗೊತ್ತಾ? ಕೊನೆಗೆ ಈ ತರನಾ ಮಾಡೋದು? ನಾವೆಲ್ಲ ಈ ತರದ ಮದುವೆ ಆದವರೇ. ನಾವೇನಾಗಿದ್ದೇವೆ ? ನಮ್ಮ ಜಾತಿಯವರಲ್ಲಿ ನಮ್ಮ ಮರ್ಯಾದೆ ಉಳಿಯುತ್ತದೆಯೇ ? ನಾಲ್ಕು ಜನದ ನಡುವೆ ಜೀವನ ನಡೆಸುವುದು ಹೇಗೆ ? ನಿಮ್ಮ ತಂಗಿಯ ಮದುವೆ ಹೇಗಾದೀತು ನೀನು ಈ ರೀತಿ ಮಾಡಿದರೆ ? ಎರಡೂ ಕಡೆಯ ವಾದಗಳಲ್ಲಿ ನಿಜಾಂಶಗಳಿಲ್ಲ ಅಂತ ಹೇಳಲಾಗದು. ೨೦ನೆಯ ಶತಮಾನದ ಕೊನೆಯಲ್ಲಿ ಪ್ರಾರಂಭವಾದ ತಂತ್ರಜ್ಞಾನದ ಸ್ಫೋಟ ಇಡೀ ಜಗತ್ತಿನ ಜೊತೆಗೆ ಭಾರತದ ಸಮಾಜಕ್ಕೂ ತನ್ನ ಪ್ರಭಾವ ತೋರಿತು. ಹೆಣ್ಣುಮಕ್ಕಳಿಗೆ ಕೆಲಸ ಸಿಗಲು ಆರಂಭವಾಯಿತು. ಕೈತುಂಬಾ ಸಂಬಳ ಬರಲು ಶುರುವಾಯಿತು. ಕೆಲಸದ ಸಲುವಾಗಿ ನಗರಗಳಿಗೆ ಹೋಗುವುದು ನಡೆಯಿತು. ಅಲ್ಲಿಯ ವರೆಗೆ ನೆಂಟರಿಷ್ಟರ ಮನೆಗಳಲ್ಲಿ ಇರುತ್ತಿದ್ದ ಹೆಣ್ಣು ಮಕ್ಕಳು ಪೇಯಿಂಗ್ ಗೆಸ್ಟ್ ಗಳಾಗಿ ಇರುತ್ತ ಸ್ವತಂತ್ರವಾಗಿ ಇರಲು ಶುರುವಾಯಿತು. ಇತರೆ ರಾಜ್ಯಗಳ, ಪ್ರದೇಶಗಳ ಹುಡುಗರ ಜೊತೆ ಬೆರೆಯುವುದು ಪ್ರಾರಂಭವಾಯಿತು. ಇದೆಲ್ಲದರ ಜೊತೆ ಅಂತರ್ಜಾಲ ತುಂಬಾ ಸುಲಭದಲ್ಲಿ ಸಿಗುವಂತಾಗಿ ಜಗತ್ತಿನ ಬೇರೇ ಬೇರೇ ಸಮಾಜಗಳ ರೀತಿ ನೀತಿ, ಆಚಾರ ವ್ಯವಹಾರ ಗೊತ್ತಾಗಲು ಮೊದಲಾಯಿತು. ಒಂದು ರೀತಿ ಹೇಳ ಬೇಕೆಂದರೆ ಅಲ್ಲಿಯ ವರೆಗಿದ್ದ ಸಮಾಜದ ಮುಖವೇ ಬದಲಾಯಿತು. ಆಗಲೇ ಈ ರೀತಿಯ ಪ್ರೇಮ ವಿವಾಹಗಳು ಸಹ ಹೆಚ್ಚುತ್ತ ಹೋದವು. ತನಗೆ ಮೆಚ್ಚುಗೆಯಾದ ಹುಡುಗ/ಹುಡುಗಿಯರಲ್ಲಿ ಗುಣ ನೋಡಲಾರಂಭಿಸಿದ ಯುವ ಪೀಳಿಗೆ, ತಾವಿರುವ ಸಮಾಜದ ಕಟ್ಟಳೆಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ಪ್ರಾರಂಭವಾಯಿತು. ಅಲ್ಲಿಂದ ಪ್ರಾರಂಭವಾದ ಈ ಪ್ರೇಮ ವಿವಾಹದ ರಭಸ ದೊಡ್ಡವರು ನೋಡಿ ಮಾಡುವ ವಿವಾಹ ವ್ಯವಸ್ಥೆಯನ್ನು ಮತ್ತು ಅದರಲ್ಲಿಯ ಪ್ರೀತಿಯನ್ನು ಪ್ರಶ್ನಿಸುವ ಮಟ್ಟಕ್ಕೆ ಬಂದಿದೆ. ಹೀಗೆ ಬದಲಾದ ದೃಷ್ಟಿಕೋನಕ್ಕೆ ಪೂರಕವಾಗಿ ನಮ್ಮ ಚಲನ ಚಿತ್ರಗಳು ಸಹ ಪ್ರೇಮದ ಕತೆಗಳನ್ನು ತೆಗೆದು ಅವುಗಳ ಪರವಾಗಿ ತಮ್ಮ ವಾದವನ್ನು ಮಂಡಿಸುವ ಸಂದೇಶಗಳನ್ನು ನೀಡಲಾರಂಭಿಸಿದವು. ಇದರಿಂದ ಯುವಲೋಕವೆಲ್ಲ ಒಂದು ತರವಾದ ರೆಬೆಲ್ ಮನಸ್ತತ್ವವನ್ನು ಅಳವಡಿಸುಕೊಂಡಿತು. ತಂದೆ ತಾಯಿಯರ ಮಾತು ಲಕ್ಷ್ಯವಿಲ್ಲದಾಯಿತು. ತಮಗೊಂದು ಸ್ಪೇಸ್ ಎಂಬ ಹೊಸ ಪದವನ್ನು ಹುಟ್ಟು ಹಾಕಿಕೊಂಡು ತಾವು ಮಲಗುವ ಕೋಣೆಗೆ ಬಾಗಿಲು ಜಡಿತು ತಮ್ಮದೇ ಲೋಕದಲ್ಲಿ ಇರಲು ಆರಂಭಿಸಿತು. ಅಮ್ಮ ಅಡಿಗೆ ಮಾಡುವುದಕ್ಕೆ, ಅಪ್ಪ ಎಟಿಎಂ ಕಾರ್ಡಿಗೆ ಹಣ ಹಾಕುವುದಕ್ಕೆ ಎನ್ನುವ ಧೋರಣೆ ಜಾಸ್ತಿಯಾಯಿತು. ಸಾಮಾಜಿಕ ಜಾಲತಾಣಗಳು ಬಳಕೆಗೆ ಬಂದ ಮೇಲಂತೂ ಯುವ ಪೀಳಿಗೆ ತಮ್ಮದೇ ಆದ ಲೋಕದಲ್ಲಿ ಸಂಚರಿಸಲಾರಂಭಿಸಿತು. ಇವರಿಗೆ ಮಾಧ್ಯಮಗಳಲ್ಲಿಯ ತಮ್ಮ ಸ್ನೇಹಿತರು ಹೇಳಿದ್ದೇ ವೇದವಾಕ್ಯ, ಅವರು ಮಾಡಿದ್ದೇ ಅನುಕರಣೆಗೆ ಯೋಗ್ಯ. ಹೀಗಿರುವ ಇವರಿಗೆ ಅರೇಂಜ್ಡ್ ಮದುವೆಗಳಲ್ಲಿ ಪ್ರೀತಿ ಇರುವುದಿಲ್ಲ ಎನಿಸುವುದು ಸ್ವಾಭಾವಿಕವಾಯಿತು. ನಮ್ಮ ದೇಶದಲ್ಲಿಯ ಅಂಕೆ ಸಂಖ್ಯೆಗಳ ಪ್ರಕಾರ ಪ್ರೇಮ ವಿವಾಹಗಳು ಶೇಕಡಾ ೧೮ ಮಾತ್ರ. ಇದರರ್ಥ ಇನ್ನೂ ೮೨% ಹುಡುಗರು ತಮ್ಮ ತಂದೆತಾಯಿಯ ಮಾತಿಗೆ ಬೆಲೆ ಕೊಡುತ್ತಿದ್ದಾರೆ ಅಂತಾಯಿತು. ಅವರು ತಮಗೆ ತೋರುವ ಪ್ರೀತಿ, ಭದ್ರತಾ ಭಾವಕ್ಕೆ ತಮ್ಮ ಮತ ಎಂದು ತೋರಿಸುತ್ತಿದ್ದಾರೆ ಅಂತಾಯಿತು. ಮತ್ತೆ ನಗರಗಳಲ್ಲಿ ಬಿಟ್ಟರೆ ನಮ್ಮ ಸಮಾಜದಲ್ಲಿ ಮದುವೆ ವಿಚ್ಛೇದನೆ ಸಹ ತುಂಬಾ ಕಮ್ಮಿ. ಇನ್ನೂ ಮದುವೆ ಎನ್ನುವ ವ್ಯವಸ್ಥೆಗೆ ಗೌರವ, ಮರ್ಯಾದೆ ತೋರುತ್ತಿದ್ದಾರೆ ಅಂತಾಯಿತು. ಏನೇ ಇರಲಿ ಎರಡೂ ಕಡೆಯವರು ಅರ್ಥ ಮಾಡಿಕೊಳ್ಳ ಬೇಕಾದ ಕೆಲ ವಿಷಯಗಳ ಕಡೆ ಗಮನ ಕೊಟ್ಟಲ್ಲಿ ಎರಡೂ ತರದ ವಿವಾಹಗಳು ಸಫಲವಾಗಿ ನಿಲ್ಲುತ್ತವೆ. ೧. ಮಕ್ಕಳು ತಮ್ಮ ತಂದೆ ತಾಯಿಯರ ಬಗ್ಗೆ ಗೌರವ ಹೊಂದಿರ ಬೇಕು. ಅವರು ತಮಗೆ ಒಳ್ಳೆಯ ಭಾಗಸ್ವಾಮಿಯನ್ನು ಹುಡುಕುತ್ತಾರೆ ಎನ್ನುವ ಭರವಸೆ ಇಡಬೇಕು. ತಮ್ಮ ಸ್ನೇಹಿತರು ಪ್ರೇಮದಲ್ಲಿ ಸಿಲುಕಿದಾರೆ ಎಂದು ತಾವು ಅನುಕರಿಸ ಬಾರದು. ೨. ಮಕ್ಕಳು ತಾವು ಪ್ರೇಮಿಸಿದ ವ್ಯಕ್ತಿಯನ್ನು ಮದುವೆಯಾಗ ಬೇಕೆಂದು ತಿಳಿಸಿದಾಗ ದೊಡ್ಡವರು ಸಹ ಅವರು ಆರಿಸಿದವರನ್ನು ಪರಿಶೀಲಿಸಿ ಒಪ್ಪಬೇಕು. ಮುಂದಿನ ಜೀವನ ಅವರದ್ದೇ ಅಲ್ಲವೇ ! ಸಮಾಜದಲ್ಲಿ ತಮ್ಮ ಅಹಂ, ಮರ್ಯಾದೆಯ ಬಗ್ಗೆ ಜಾಸ್ತಿ ಕಾಳಜಿ ಮಾಡಿ ಅವರ ಜೀವನಕ್ಕೆ ಕುತ್ತಗಬಾರದು. ೩. ದೊಡ್ಡವರು ನೋಡಿ ಮಾಡುವುದು ನಿಯಂತೃತ್ವ ಧೋರಣೆ ಎಂದು ಇವರು, ಪ್ರೇಮ ವಿವಾಹಗಳು ನಿಲ್ಲಲಾರವು ಎಂದು ದೊಡ್ಡವರು ನಿರ್ಣಯಿಸುವುದನ್ನು ಬಿಡಬೇಕು. ಎರಡೂ ಕಡೆಯವರು ತಮ್ಮ ಮುಂದಿನ ಪೀಳಿಗೆಗಳ ಭವಿತವ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾರಿಗೂ ನೋವಾಗದಂತೆ ಮದುವೆಗಳು ನಡೆಸ ಬೇಕು. ಬದಲಾಗುತ್ತಿರುವ ಸಮಾಜದ ಬಗ್ಗೆ ಗೌರವವಿಟ್ಟುಕೊಳ್ಳ ಬೇಕು. ಹಠಕ್ಕೆ ಬಿದ್ದು ಕುಟುಂಬಗಳಲ್ಲಿ ನೋವು, ಹಿಂಸೆ ತಂದುಕೊಳ್ಳಬಾರದು. ಮದುವೆ ಎನ್ನುವ ನಮ್ಮ ಸಂಸ್ಕೃತಿಯ ವ್ಯವಸ್ಥೆಯನ್ನು ಮುಂದಿನ ಕೆಲ ಪೀಳಿಗೆಗಳ ವರೆಗೂ ಮುಂದುವರೆಸುವಂತಾಗಬೇಕು. *********************************************************

ವಿವಾಹ ವ್ಯವಸ್ಥೆ- ಒಂದು ಚರ್ಚೆ Read Post »

ಇತರೆ

ಅಮ್ಮನ ಸೆರಗ ಬಿಡಿಸಿದ ಬೆರಳುಗಳು

ಅಮ್ಮನ ಸೆರಗ ಬಿಡಿಸಿದ ಬೆರಳುಗಳು ಶಿಶುವಿಹಾರ ಮತ್ತು ಅಂಗನವಾಡಿಗಳ ಅಮ್ಮನಂತಹ ಶಿಕ್ಷಕಿಯರಿಗೊಂದು ಸೆಲ್ಯೂಟ್ ಪ್ರಜ್ಞಾ ಮತ್ತಿಹಳ್ಳಿ ಎಳೆಬಿಸಿಲು ಹಾಕಿದ ರಂಗೋಲಿಯ ಚಿತ್ತಾರಗಳು ಅಂಗಳ ತುಂಬಿದ ಹೂಬಳ್ಳಿಗಳೊಂದಿಗೆ ಪೈಪೋಟಿಗಿಳಿದಿದ್ದಾವೆ. ಎಸಳು ಮೊಗ್ಗಿನಂತಹ ಪುಟಾಣಿಗಳ ದಂಡೊಂದು ಗೇಟಿನ ಬಳಿ ಬಂದು ರಾಗವಾಗಿ ಕರೆಯುತ್ತಿದೆ. “ಪುಟ್ಟೂ ಶಾಲೀಗ್ ಬಾ” ನಿದ್ದೆ ಬಿಟ್ಟೇಳದ ಕಣ್ಣಿನ ಮಗುವೊಂದನ್ನು ಅಳುವಿನ ರಾಗಾಲಾಪದ ಹಿನ್ನೆಲೆ ಸಂಗೀತದೊಂದಿಗೆ ಎತ್ತಿಕೊಂಡು ತಂದರು. “ಯಾಕೆ ಅಳೂದ್ಯಾಕೆ? ಜಾಣಲ್ಲ ನೀನು” ಎನ್ನುತ್ತ ಅಮ್ಮನ ಸೆರಗ ಬಿಗಿಯಾಗಿ ಹಿಡಿದುಕೊಂಡ ಬೆರಳುಗಳ ಮೆತ್ತಗೆ ಬಿಡಿಸುತ್ತ ಪುಸಲಾಯಿಸುವ ಮಾತುಗಳಿಂದ ಸಂತೈಸುತ್ತ ಹೊರಟವರು ಅಮ್ಮನಲ್ಲದ ಆದರೆ ಅಮ್ಮನಂತೆಯೇ ಇರುವ ಅಕ್ಕೋರು. (ಟೀಚರು) ಶಾಲೆಯ ಬಾಗಿಲ ಬೀಗ ತೆಗೆದು ಚಿಲಿಪಿಲಿ ಹಿಂಡನ್ನು ಒಳಗೆ ಸಾಲಾಗಿ ಕೂರಿಸಿ, ಏರುದನಿಯಲ್ಲಿ ಅವರನ್ನೆಲ್ಲ ನಿಯಂತ್ರಿಸುತ್ತ, ಅಳುವ ಕೂಸುಗಳ ಎತ್ತಿಕೊಳ್ಳುತ್ತ, ಪುಂಡಾಟದವರ ಗದರಿಸುತ್ತ, ತಮ್ಮ ತಾಯಂದಿರಿಂದ ಸಂಭಾಳಿಸಲಾಗದೇ ಅವರನ್ನು ಸುಸ್ತು ಮಾಡುವ ಪ್ರತಿ ಮನೆಯ ಮುದ್ದು ರಕ್ಕಸರನ್ನು ಒತ್ತಟ್ಟಿಗೆ ಸೇರಿಸಿಕೊಂಡು ಬಾಲವಾಡಿ ಅಥವಾ ಶಿಶು ವಿಹಾರ ಎಂಬ ಚಿಲಿಪಿಲಿ ಕೇಂದ್ರ ನಡೆಸುವ ಸಹನೆಯ ಕಡಲೊಡತಿಯರಿಗೆ ಎಲ್ಲ ಮುದ್ದು ಮಕ್ಕಳ ವತಿಯಿಂದ ಹಾಗೂ ಪಾಲಕರ ವತಿಯಿಂದ ಶಿಕ್ಷಕರ ದಿನದ ಶುಭಾಶಯಗಳು. ಹೂಹೂವಿನ ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ನೀಲಿಚುಕ್ಕೆಯ ಬಳೆಗಳನ್ನು ಹಿಂದಕ್ಕೆ ಸರಿಸಿ ಕೈ ತಿರುಗಿಸುತ್ತ ಏರುದನಿಯಲ್ಲಿ ರಾಗವಾಗಿ ಹಾಡುತ್ತಿದ್ದಾರೆ. ಅಳು, ಗದ್ದಲ, ಕೇಕೆ ನಇಲ್ಲಿಸಿದ ಕಂದಮ್ಮಗಳು ಮಂತ್ರದ ಮೋಡಿಗೆ ಸಿಕ್ಕಿದ ಹಾವುಗಳಂತೆ ಬಟ್ಟಲು ಕಣ್ಣರಳಿಸಿ ತಾವೂ ಹಾಡುತ್ತಿವೆ. “ಪೊಂ ಪೊಂ ಗಾಡಿ, ಯಾರು ಬಂದಾರವ್ವ, ಮಾಮಾ ಬಂದಾನವ್ವ, ಏನ್ ತಂದಾನವ್ವ, ಹಂಡಿಯಂಥ ಹೊಟ್ಟೆ ಬಿಟ್ಕೊಂಡು ಹಾಂಗ ಬಂದಾನವ್ವ” ಹೊಟ್ಟೆಯ ಅಭಿನಯ ಮಾಡುವಾಗ ತರಗತಿಯಿಡೀ ಕ್ಕಿಕ್ಕಿಕ್ಕಿ ನಗೆಯ ಕಡಲಲ್ಲಿ ತೇಲುತ್ತದೆ. ಹಾಡುಗಳು ಹಾಗೆಯೇ ಅವ್ಯಾಹತವಾಗಿ ಮುಂದುವರೆಯುತ್ತವೆ. “ಬಾ ಬಾರೆ ಕಂದ ಬಾರೆ ಸುನಂದ ಬೇಸರ ಬಂದೈತಿ ಆಡೋಣ” ಹಾಡಿನ ಹಾದಿ ಹಿಡಿದು ಹೊರಟ ಹಸುಮನಸುಗಳೆಲ್ಲ ಮನೆ, ಅಳು, ರಗಳೆ ಮರೆತು ತರಗತಿಯಿಡೀ ಒಂದೇ ಶೃತಿಗೆ ಹದಗೊಂಡಾದ ಮೇಲೆ ಶುರುವಾಗುತ್ತದೆ “ಅ ಅಗಸ, ಆ ಆನೆ, ಇ ಇಲಿ” ಅದರ ಜೊತೆಗೆ ಒಂದು ಎರಡು ಬಾಳೆಲೆ ಹರಡು ಎಂಬ ಒಕ್ಕೊರಲಿನ ರಾಗ ಕೇಳಿದೊಡನೆ ರಸ್ತೆಯಲ್ಲಿ ಹೊರಟವರು ಕೂಡ ಒಮ್ಮೆ ತಿರುಗಿ ನೋಡುತ್ತಾರೆ. ಹೊತ್ತು ಮದ್ಯಾಹ್ನಕ್ಕೆ ತಿರುಗಿದ್ದೇ ತಿಂಡಿಯ ಸಮಯ. ಎಳೆ ಬಾಳೆ ಸುಳಿಯಂತಹ ಕೈಗಳಿಂದ ಉಪ್ಪಿಟ್ಟು, ದೋಸೆ ತಿನ್ನಲು ನೆರವಾಗುತ್ತಾರೆ ಟೀಚರ್. ಡಬ್ಬಿಯ ಮುಚ್ಚಳ ತೆಗೆದು ಕೊಡಬೇಕು. ಟಣ್ಣನೆ ಡಬ್ಬಿ ಬೀಳಿಸಿಕೊಂಡವರಿಗೆ ಎತ್ತಿ ಕೊಡಬೇಕು. ಒಂದು ಮಗುವಿಗೆ ತಿನ್ನಿಸಿ, ಒಂದಕ್ಕೆ ಬಾಯಿ ಒರೆಸಿ, ಇನ್ನೊಂದಕ್ಕೆ ಕೈ ತೊಳೆಸಿ ಮುಗಿಸುವುದರಲ್ಲಿ ಶುರುವಾಗುತ್ತದೆ ಒಂದಕ್ಕೆ ಕಾರ್ಯಕ್ರಮ. ಮತ್ತೆ ಟೀಚರ್ ಓಡಬೇಕು. ಗುಂಡಿ ಬಿಚ್ಚಿಕೊಡು, ಲಾಡಿ ಕಟ್ಟಿಕೊಡು ಇತ್ಯಾದಿ. ಅಷ್ಟರಲ್ಲಿ ಅವನು ಬಿದ್ದ, ಇವನು ಹೊಡೆದ ಇತ್ಯಾದಿ ಜಗಳ-ರಗಳೆಗಳು ಶುರು. ಯಾಕೆಂದು ಕಾರಣವೇ ಗೊತ್ತಿಲ್ಲದೇ ಒಂದು ಅಳುತ್ತದೆ, ಒಂದು ಕೂಗುತ್ತದೆ. ಚೈತ್ರ ಮಾಸದ ಮಾಮರದಂತೆ ಸದಾ ಸದ್ದಿನ ಜಾತ್ರೆ ತುಂಬಿದ ಸ್ವರ್ಗದ ತುಣುಕು ಈ ಶಿಶುವಿಹಾರ. ಅವರ ಕೈ ಹಿಡಿದು ಅಳುತ್ತ ಅಂಗಳ ಇಳಿದ ಚಿಣ್ಣರೆಲ್ಲ ಅರಿವಿನ ಅರಮನೆಯ ನೂರು ಬಾಗಿಲುಗಳ ಬೀಗ ತೆರೆದು ಜ್ಞಾನದಾರೋಗಣೆಯಲ್ಲಿ ಸೀಕರಣೆ ಸುರಿದುಂಡು ದೊಡ್ಡ ಹುದ್ದೆಗಳ ಹೂ ಮಾಲೆಗೆ ಕೊರಳೊಡ್ಡಿದ್ದಾರೆ. ಅವರ ಮಾನ-ಸನ್ಮಾನದ ಕ್ಷಣಗಳಲ್ಲಿ ತಪ್ಪದೇ ಹೆತ್ತವರ ಹೆಸರು ಹೇಳಿ, ಕಾಲಿಗೆರಗಿ, ಗದ್ಗದಗೊಳಿಸಿ ಪಿತೃಋಣ ತೀರಿಸಿದ್ದಾರೆ. ರ್ಯಾಂಕು-ಮೆಡಲು ಹಿಡಿದುಕೊಂಡಾಗಲೆಲ್ಲ ನನಗೆ ಲೆಕ್ಕ ಕಲಿಸಿದವರು, ಸಾಹಿತ್ಯ ಓದಿಸಿದವರು ಅಂತ ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಕರ ಹೆಸರು ಹೇಳಿ ಪುಳಕಗೊಳಿಸಿ ಗುರುಋಣವನ್ನೂ ತೀರಿಸಿದ್ದಾರೆ. ಆದರೆ ತೀರಾ ಚಿಕ್ಕ ವಯಸ್ಸಿನಲ್ಲಿ ಎಲ್ಲವೂ ಮಂಜು ಮುಸುಕಿದಂತಹ ಬಾಲ್ಯದಲ್ಲಿ ನಡೆದದ್ದು ಯಾರಿಗೂ ನೆನಪಿರುವುದಿಲ್ಲ. ಆ ನಂತರ ನಮ್ಮ ತಂದೆ-ತಾಯಿಗಳು ನೀನು ಚಿಕ್ಕವನಿದ್ದಾ ಹಾಗಿದ್ದಿ, ಹೀಗಿದ್ದಿ ಅಂತೆಲ್ಲ ಹೇಳಿದ ಕತೆಗಳಿಂದ ನಮ್ಮ ನಸ್ಮರಣೆಯ ಜಗತ್ತು ತುಂಬಿಕೊಳ್ಳುವಾಗ ಈ ಬಡಪಾಯಿ ಶಿಶುವಿಹಾರದ ಶಿಕ್ಷಕಿಗೆ ಯಾವ ಪಾತ್ರವೂ ಇರುವುದಿಲ್ಲ. ಪಾಪ ಇವರೆಲ್ಲ ಸರ್ಕಾರಿ ನಿಯುಕ್ತಿ-ಸಂಬಳ-ಸವಲತ್ತುಗಳನ್ನು ಕಂಡವರಲ್ಲ. ಹೆಚ್ಚಿನ ವಿದ್ಯೆಯೂ ಇಲ್ಲದ, ದೊಡ್ಡ ಕನಸುಗಳೂ ಇಲ್ಲದ ಈ ಬಡಜೀವಿಗಳು ಯಾರಿಂದ ಏನನ್ನೂ ನಿರೀಕ್ಷಿಸದೇ ತಮ್ಮ ಹೊಟ್ಟೆಪಾಡಿನ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿರುತ್ತಾರೆ. ಶಿಕ್ಷಕ ದಿನಾಚರಣೆಯಾಗಲೀ, ಶಿಕ್ಷಣ ಇಲಾಖೆ ಕೊಡುವ ಆದರ್ಶ ಶಿಕ್ಷಕ ಪ್ರಶಸ್ತಿಯಾಗಲೀ ಇವರಿಗೆ ಬಾನೆತ್ತರದ ನಕ್ಷತ್ರ. ತಮ್ಮ ಎದುರಿಗಿನ ಮಗುವಿನಿಂದಲೂ ಇವರು ಒಂದು ದಿನವೂ ನಮಸ್ತೆ ಟೀಚರ್ ಅಂತ ಅನ್ನಿಸಿಕೊಂಡಿರುವುದಿಲ್ಲ. ಸರಿಯಾಗಿ ಮಾತಾಡಲು ಬರದಿರುವ ವಯಸ್ಸಿನಲ್ಲಿ ಎತ್ತಿ ಆಡಿಸಿದ ಈ ಅಮ್ಮನಲ್ಲದ ಅಮ್ಮಂದಿರನ್ನು ಯಾರು ಎಷ್ಟು ನೆನಪಿಟ್ಟುಕೊಂಡಿರುತ್ತಾರೆ? ಪೊಮೊಶನ್, ಟ್ರಾನ್ಸಫರ್ ಇಂತಹುದು ಏನೊಂದೂ ಇಲ್ಲದ ಅವರು ಅದೇ ನಾಲ್ಕು ಗೋಡೆಗಳ ನಡುವೆ ಚಿಣ್ಣರೆದುರು ಕುಣಿಯುತ್ತಲೇ ಮುದುಕರಾಗುತ್ತಾರೆ. ಕೆಲವು ಕಡೆ ತಾಯಿಗೆ ಕಲಿಸಿದ ಟೀಚರ್ ಮಗಳಿಗೂ ಕಲಿಸುತ್ತಾರೆ. ಅಲ್ಪ ಸಂಬಳದ, ಸವಲತ್ತು ರಹಿತ ಟೀಚರು ಅಕ್ಕರೆಯಿಂದ ಕೈ ಹಿಡಿದು ಅಕ್ಷರ ಜಗತ್ತಿಗೆ ನಮ್ಮನ್ನು ಪರಿಚಯಿಸಿದ ಜಾಗ ನಮ್ಮ ಸ್ಮರಣೆಯಲ್ಲೇ ಇರುವುದಿಲ್ಲ. ತಮ್ಮ ತಾಯಂದಿರ ಸೆರಗಲ್ಲಿ ಮುಖ ಮರೆಸಿಕೊಂಡ ಮಗುವನ್ನು ಹಗೂರಕೆ ಎತ್ತಿಕೊಂಡು ಹಾಡು, ಹಕ್ಕಿ, ಆಟ, ಪಾಠಗಳ ಕಲಿಕೆಯ ರುಚಿ ತೋರಿಸುತ್ತ ಬೆಳವಣಿಗೆ ದಾರಿಯಲ್ಲಿ ಮೊದಲ ಹೆಜ್ಜೆ ಹಾಕಿಸಿದ ತಾಣವಿದು. ಅಮ್ಮನ ಸೆರಗಿನಾಚೆಗೂ ಒಂದು ಜಗತ್ತಿರುತ್ತದೆ ಎಂಬ ಸತ್ಯವನ್ನು ಅರಿವಿನ ಆಲ್ಬಂ ದಲ್ಲಿ ಮೂಡಿಸಿದ ಜಾಗ. ಇಲ್ಲಿ ಅತ್ತು ಇವರ ಸೆರಗಲ್ಲಿ ಕಣ್ಣೊರೆಸಿಕೊಂಡ ಮಗು ಶಾಲೆ-ಕಾಲೇಜು-ವಿಶ್ವವಿದ್ಯಾಲಯ ಎಂದು ಆಕಾಶದ ಅನಂತದಲ್ಲಿ ಹಾರಾಡುತ್ತಿದ್ದರೆ ಈ ಟೀಚರ್ ಇನ್ನೂ ಇಲ್ಲೇ ಬಾ ಬಾ ಗಿಳಿಯೇ ಬಣ್ಣದ ಗಿಳಿಯೇ ಎಂದು ಕುಣಿಯುತ್ತಿದ್ದಾರೆ. ಅಳುವ ಕಂದನನ್ನು ಸೊಂಟಕ್ಕೆ ಸಿಗಿಸಿಕೊಂಡು ಗೇಟಿನ ಹತ್ತಿರ ಕರೆಯುತ್ತಿದ್ದಾರೆ. “ಬಾರೆ ಪುಟ್ಟೂ, ಶಾಲೆಗೆ ಹೋಗ್ವಾ” ಶಿಕ್ಷಕರ ಸ್ನ್ಮಾನ ಪಟ್ಟಿಯಲ್ಲಿ ಹೆಸರೇ ಇಲ್ಲದ ಆ ಎಲ್ಲ ಮುಗ್ಧ ಅಮ್ಮನಂತಹ ಶಿಕ್ಷಕಿಯರಿಗೆ ಹೃದಯ ತುಂಬಿದ ಅಕ್ಷರ ನಮನಗಳು. **********************************

ಅಮ್ಮನ ಸೆರಗ ಬಿಡಿಸಿದ ಬೆರಳುಗಳು Read Post »

ಇತರೆ, ಲಹರಿ

ಭರವಸೆಯ ಹೊರತು ಬೇರೇನೂ ಉಳಿದಿಲ್ಲ’

ಲಹರಿ ಭರವಸೆಯ ಹೊರತು ಬೇರೇನೂ ಉಳಿದಿಲ್ಲ’ ವಸುಂಧರಾ ಕದಲೂರು                             ಕವಚಿ ಹಾಕಿದ್ದ ಖಾಲಿ ಮಂಕರಿಯನ್ನು ಬೋರಲಾಕಿದಂತೆ, ಎಲ್ಲಾ ಖಾಲಿಖಾಲಿಯಾದ ಭಾವ. ಹಾಗೆಂದು ನಿರಾಳ ಅಂತೇನಲ್ಲ. ಮನಸ್ಸು ಭಾರವಾಗಿದೆ. ಏನೆಲ್ಲಾ ಇದೆ. ಆದರೂ ಏನೇನೂ ಇಲ್ಲ ಎನ್ನುವ ಒಂಟಿತನ ಹಿಂಡಿಹಿಪ್ಪೆ ಮಾಡುತ್ತಿದೆ. ಬಿಸಿಲಿಗೆ ಒಣ ಹಾಕಿದ ಬಟ್ಟೆ ಒಣಗೀ ಒಣಗೀ ಅಲ್ಲೇ ಇದ್ದು ಕೊನೆಗೆ ಬಣ್ಣಗೆಟ್ಟಂತೆ…      ಸದಾ ಗಿಜಿಗಿಜಿ ಗಜಿಬಿಜಿಯಲ್ಲಿ ಸುತ್ತಾಡುತ್ತಿದ್ದ ಮೈ ಮನಸ್ಸೆಲ್ಲಾ ಒಂದು ಕ್ಷಣಕ್ಕೆ  ಥಟ್ ಎಂದು ಏಕಾಂತ ವಾಸಕ್ಕೆ ಹೋಗಿ ನಿರ್ಜನ ಕಾಡ ಮಧ್ಯದಲ್ಲಿ ವಿರಮಿಸಿದಂತೆ ಭಾಸವಾಯಿತು. ಆಹಾ.!! ಇದೇ ಬೇಕಾಗಿತ್ತು ನನಗೆ ಎನಿಸಿ ಎಷ್ಟು ಖುಷಿಪಟ್ಟಿತೋ ಮನಸ್ಸು ಗೊತ್ತಿಲ್ಲ. ಆದರೆ ದಿನ ಕಳೆದ ಮೇಲೆಯೇ ಗೊತ್ತಾದದ್ದು ಅದು ವಿಶ್ರಮಿಸುವ ಏಕಾಂತವಲ್ಲ ಭಯ ಹುಟ್ಟಿಸುವ ಸೆರೆವಾಸದ ನರಕವೆಂದು.       ಏನೇನೋ ಕಸರತ್ತುಗಳು. ಸಮಾಧಾನಕ್ಕೆ, ಸ್ಫೂರ್ತಿಗೆ, ಭರವಸೆಗೆ ಯತ್ನಿಸುತ್ತಾ ನಾನೂ ನನ್ನವರೂ ಹೀಗೆ ಎಲ್ಲರನ್ನೂ ಹುರಿದುಂಬಿಸಲು ಪ್ರಯತ್ನಿಸುತ್ತಲೇ ಇರುವುದು.     ಇದೇ ಸರಿಯಾದ ಸಮಯ. ನಿನ್ನೊಳಗೆ ನೀನೇ ಇಣುಕಿ ನೋಡು. ನೀನು ಯಾರೆಂಬುದೇ ಮರೆತಿದ್ದೆಯಲ್ಲಾ. ಮನೆ, ಮಕ್ಕಳು, ಮನೆಯವರು… ಇನ್ನಾದರೂ ಗಮನಕೊಡು. ಆಂತರ್ಯದ ಕೂಗು ಇನ್ನಿಲ್ಲದಂತೆ ಎಬ್ಬಿಸಲು ಪ್ರಯತ್ನಿಸಿತು. ಹೌದು ನಿಜ. ನಮ್ಮ ಬದುಕು ಈಗ ಮತ್ತೆ ನಮಗೇ ಸಿಕ್ಕಿದೆ. ನಮ್ಮ ಇಷ್ಟದ ತಿನಿಸು, ಮನೆಯವರಿಷ್ಟದ ಉಣಿಸು, ಸಿನೆಮಾ, ಪುಸ್ತಕ…     ಇಷ್ಟಯೇ… ಸಾಕೇ..?!    ಇಲ್ಲ, ಸ್ನೇಹವಿಲ್ಲದೇ, ಸುತ್ತಾಟವಿಲ್ಲದೇ ಇರಲಾಗದು, ಇರಲಾಗದು. ನಾವೇನು ಹಳೆಯ ಕಾಲದವರೇ? ಹೊಲ -ಮನೆ ತೋಟ-ತುಡಿಕೆ ಎಂದು ದಿನ ಮುಗಿಸಲು? ನಗರದಲ್ಲಿ ವಾಸಿಸಲು ಬಂದ ಮೇಲೆ ಗದ್ದೆ ತೋಟಗಳ ಮಾತಾದರೂ ಎಲ್ಲಿಂದ ಬರಬೇಕು? ಪ್ರತಿ ದಿನವೂ ಎಂಟರಿಂದ ಹತ್ತು ಗಂಟೆ ಕಾಲ ಮನೆಯ ಹೊರಗೇ ಕಾಲನ್ನು ಇಟ್ಟವರು ನಾವು. ಈಗ ಕಾಲಿನ ಚಲನೆಯೂ ಇಲ್ಲದಂತೆ, ಕಾಲದ ಚಲನೆಯೂ ಕಾಣದಂತೆ ಉಳಿದುಬಿಡುವುದು ಹೇಗೆ ಸಾಧ್ಯ?     ಎಷ್ಚೆಂದು ಟಿ.ವಿ ನೋಡುವುದು? ಪುಸ್ತಕ ಸಾಂಗತ್ಯ ಮಾಡುವುದು? ಮನೆ ಮಂದಿಯೊಡನೆ ಹರಟುವುದು?  ಅವರಿಗೂ ಬೇಸರವೇ…    ಮಕ್ಕಳಂತೂ ಜೊತೆಗಾರರಿಲ್ಲದೆ ಮೊಬೈಲ್, ಲ್ಯಾಪ್ಟಾಪು, ಟಿ.ವಿ. ಗಳ ಸಾಂಗತ್ಯದಲ್ಲಿ  ರೊಬೋಟುಗಳೇ ಆಗಿಬಿಡುತ್ತಾರೇನೋ ಎಂಬ ಆತಂಕ. ಮಡದಿಯೊಡನೆ ಹೇಳಿಕೊಳ್ಳಲಾರದ ಆಡಲಾರದ ಮಾತುಗಳಿಗೆ ಗಂಡನಿಗೆ ಗೆಳೆಯನ ಕಿವಿ ಬೇಕು. ಹೃದಯದ ಸಾಂತ್ವಾನಕೆ ಸ್ನೇಹದ ಕೈ ಕುಲುಕುವಿಕೆ ಬೇಕು. ಪತಿಯನ್ನು ಪ್ರತಿ ದಿನವೂ ಕೆರಳಿಸಲಾಗದೆ, ಅರಳಿಸಲಾಗದೆ, ಸಮಾಧಾನಿಸಲಾಗದ ಹೆಂಡತಿಯ ಸಂಕಟಕೆ ಸ್ನೇಹಿತೆ ಬೇಕು. ಆಕೆಯೊಡನಾಡುವ ನಾಕಾರು ಮಾತುಗಳು, ಹೊಸ ಪಾಕದ ಪಾಠ, ತವರು, ನೆಂಟರಿಷ್ಟರ ಮನೆ, ಕಾರ್ಯಕ್ರಮ, ಸಂಭ್ರಮ ನಲಿವು , ಧಾರಾವಾಹಿಯ ಕಂತುಗಳ ಕುರಿತ ವಿಮರ್ಶೆ, ಬಿರುಸಾಗಿ ಪಾರ್ಕುಗಳಲ್ಲಿ ಒಂದರ್ಧ ಗಂಟೆ ಸುತ್ತಾಡುವ ಸ್ವಾತಂತ್ಯ್ರ ಮತ್ತೆ ಇವೆಲ್ಲವೂ ಅವಶ್ಯ ಬೇಕು.        ಪ್ರತಿ ದಿನವೂ ಕೈ ಗಾಡಿಯಲಿ ಸೊಪ್ಪು ತರಕಾರಿ ಹಣ್ಣುಗಳನ್ನಿಟ್ಟುಕೊಂಡು ಕುಳಿತಿರುತ್ತಿದ್ದ ಅಜ್ಜನೋ, ಯುವಕನೋ, ಅಕ್ಕ – ತಂಗಿಯಂತಹವರೋ ತಮ್ಮತಮ್ಮ ಊರದಾರಿ ಹಿಡಿದಿದ್ದಾರೆ. ಅವರಿಗಲ್ಲಿ ಏನಾಗಿದೆಯೋ..? ಪ್ರತಿದಿನದ ಒಂದು ಸಣ್ಣ ನಗೆಯ ವಿನಿಮಯ ಈಗ ಕಡಿತಗೊಂಡಿದೆ. ಮೊಬೈಲ್ ನಂಬರೂ ಪಡೆದಿಲ್ಲ. ದಿನಂಪ್ರತಿ ಸಿಗುವ ಭರವಸೆಯಿದ್ದಾಗ ಮೊಬೈಲ್ ನಂಬರ್ ಪಡೆದು ದೂರಕರೆ ಮಾಡುವ ಜರೂರೇನಿತ್ತು?           ವಾರಕ್ಕೊಮ್ಮೆ ಹೆಚ್ಚು ಖಾರ, ಈರುಳ್ಳಿ, ಕ್ಯಾರೆಟ್ಟು ಹಾಕಿಸಿಕೊಂಡು ತಿನ್ನುತ್ತಿದ್ದ ಮೈಸೂರು ಚುರುಮುರಿಯವನ ಗಾಡಿಯ ಸದ್ದು ಈಗ ಅಡಗಿ ಹೋಗಿದೆ.     ದಿನಪತ್ರಿಕೆಗಳ ಜೊತೆಗೆ ಬರುತ್ತಿರುವ ಜಾಹೀರಾತುಗಳಲ್ಲಿ ಒಂದು ಕರೆ ಮಾಡಿದರೆ ಸಾಕು ಅರ್ಧ ಗಂಟೆಯೊಳಗೆ ನೀವು ಬಯಸಿದ್ದೆಲ್ಲಾ ಮನೆ ಬಾಗಿಲಿಗೆ ಬಂದು ಡೆಲಿವರಿಯಾಗುತ್ತದೆ ಎಂಬುದನ್ನು ನೋಡೀ ನೋಡೀ ಸಾಕಾಗಿದೆ.      ಮನೆಗೆ ಸ್ನೇಹಿತರನ್ನೂ ಬಂಧುಗಳನ್ನೂ ಆರ್ಡರ್ ಮಾಡಿಸಿ ತರಿಸಿಕೊಳ್ಳಬಹುದೇ….?! ಕಾಲ ಇಷ್ಟು ನಿರ್ದಯಿಯಾಗಿ ಹೀಗೆ ಎಲ್ಲವನ್ನೂ ಕಡಿತ ಮಾಡಬಾರದಿತ್ತು… ನಿಜ, ಆದರೆ ಈಗ ಭರವಸೆಯ ಹೊರತು ಬೇರೇನೂ ಉಳಿದಿಲ್ಲ.  *******************************************

ಭರವಸೆಯ ಹೊರತು ಬೇರೇನೂ ಉಳಿದಿಲ್ಲ’ Read Post »

ಇತರೆ

ಗುರುವಿನ ಋಣ

ಗುರುವಿನ ಋಣ ಜಯಶ್ರೀ ಜೆ.ಅಬ್ಬಿಗೇರಿ         ಆಗ ನಾನಿನ್ನೂ ಪುಟ್ಟ ಫ್ರಾಕು  ಧರಿಸಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಕಾಲ. ಸದಾ ನನ್ನ ಕೈಯಲ್ಲಿ ಬಿಳಿ ಚೌಕಟ್ಟಿನ ಕರಿ ಪಾಟಿ ಹಿಡಿದು, ಬೆರಳಲ್ಲಿ ಪೆನ್ಸಿಲ್ ಸಿಕ್ಕಿಸಿಕೊಂಡು ದೊಡ್ಡ ಪಂಡಿತರಂತೆ ಗಂಭಿರವಾಗಿ ಬರೆಯುವದನ್ನು ಕಂಡು ನನ್ನಪ್ಪ, ನಮ್ಮವ್ವ ಎಷ್ಟು ಶ್ಯಾನೆ ಅದಾಳ ನೋಡು ಎನ್ನುತ್ತ ಪ್ರೀತಿಯಿಂದ ಹಣೆಗೆ ಹೂ ಮುತ್ತನ್ನಿಕ್ಕಿ ಅಕ್ಷರವನ್ನು ತೀಡಿಸುತ್ತಿದ್ದರು.ಆಗಿನಿಂದ ನನ್ನ  ಅಕ್ಷರದ ಹುಚ್ಚು ಮತ್ತಷ್ಟು ಹೆಚ್ಚಿತು. ಅಣ್ಣನ ಜೊತೆ ನಾನೂ ಶಾಲೆಗೆ ಹೋಗಲೇಬೇಕು ಎಂಬ ಹಟಕ್ಕೆ ಮಣಿದು,  ನನ್ನ ಕಾಟ ತಾಳಲಾರದೇ ಅಪ್ಪ ನನ್ನ ಕಿರುಬೆರಳು ಹಿಡಿದು ಶಾಲೆಯ ಮೆಟ್ಟಿಲು ಹತ್ತಿಸಿದ್ದರು.         ಸಂಪೂರ್ಣ ಬಿಳಿವಸ್ತ್ರಧಾರಿಯಾಗಿ ಬಿಳಿ ಟೋಪಿ ಧರಿಸಿದ್ದ ಹೆಡ್ ಮಾಸ್ಟರ್ ನನ್ನನ್ನೇ ದಿಟ್ಟಿಸುತ್ತ ಬಲಗೈಯನ್ನು ತಲೆಯ ಮೇಲೆ ಹಾಯಿಸಿ ಎಡಗಿವಿಯ ತುದಿಯನ್ನು ಮುಟ್ಟಲು ಸೂಚಿಸಿದರು.ನನ್ನ ಬಲಗೈಗೆ ಎಡಗಿವಿ ತುದಿಯನ್ನು ಮುಟ್ಟಲಾಗಲಿಲ್ಲ. ನಿಮ್ಮ ಹುಡುಗಿಗೆ ಇನ್ನೂ 5 ವರ್ಷ 10 ತಿಂಗಳಾಗಿಲ್ಲ ಎಂದು ಕರಾರುವಕ್ಕಾಗಿ ನುಡಿದರು.ಅದಕ್ಕೆ ಅಪ್ಪ ಹೌದ್ರಿ ಸರ್ ಆದ್ರ ಇಕಿಗೆ ಕಲಿಯುವ ಹುಚ್ಚು ಬಾಳ ಐತಿ ಈಗಾಗಲೇ ಅಕ್ಷರ ಅಂಕಿ ಎಲ್ಲಾ ಕಲ್ತಾಳ ಅಂದ. ಹೆಡ್ ಮಾಸ್ಟರ್  ವಿಸ್ಮಯದಿಂದ ಹುಬ್ಬೇರಿಸಿ ನನ್ನ ಅಕ್ಷರ ಅಂಕಿ ಜ್ಞಾನವನ್ನು ನಾನಾ ರೀತಿಯಲ್ಲಿ ಪರೀಕ್ಷಿಸಿ, ಶಹಬ್ಬಾಸಗಿರಿ ಕೊಟ್ಟು, ಒಂದು ವರ್ಷ ಮೊದಲೇ ಹುಟ್ಟಿದ್ದೀನೆಂದು ದಾಖಲಿಸಿ, ಒಂದನೇ ಕ್ಲಾಸ್ ಕಡೆ ಬೊಟ್ಟು ಮಾಡಿದರು.        ಊರಿಗೊಂದೇ ಸರಕಾರಿ ಶಾಲೆ. ಊರಿನ ಎಲ್ಲ ವರ್ಗದ ಮಕ್ಕಳಿಗೆ ಅಲ್ಲಿಯೇ ಶಿಕ್ಷಣ. ಮೆಸ್ಟ್ರು ಎಲ್ಲರಿಗೂ ಕಂಪಲ್ಸರಿ  ಕಲಿಸಲೇಬೇಕೆಂದು ಹಟ ತೊಟ್ಟು ಆಲಸ್ಯತನ ತೋರಿದವರಿಗೆ ಬೆನ್ನಿನ ಮೇಲೆ ಕೋಲಿನಿಂದ ಬಾಸುಂದೆ ಮೂಡಿಸುತ್ತಿದ್ದರು.ಕೋಲಿನ ಭಯಕ್ಕೆ ಎಲ್ಲ ಮಕ್ಕಳು ಪುಸ್ತಕ ಮುಖದ ಮುಂದೆ ಹಿಡಿಯುತ್ತಿದ್ದರು. ಕೋಲಿನ ಸುದ್ದಿ ಮನೆಯಲ್ಲಿ ಹೇಳಿದರೆ ಬೋನಸ್ಸಾಗಿ ಅಲ್ಲಿಯೂ ಬೆತ್ತದ ರುಚಿ ನೋಡಬೇಕಿತ್ತು. ಹೀಗಾಗಿ ಓದು ಬರಹ ಅನಿವಾರ್ಯವಾಗಿತ್ತು.         ಊರ ಹೊರಗಿನ ದೊಡ್ಡ ಆಲದ ಮರದ ಕೆಳಗೆ ಶಿಸ್ತಿನ ಸಿಪಾಯಿಯಂತೆ ನಿಂತ ಗುರುಗಳು ಪದ್ಯ ಲೆಕ್ಕ ಕಲಿಸುತ್ತ, ಪ್ರಶ್ನೆ ಕೇಳಿದರೆ ನಾ ಮುಂದು ತಾ ಮುಂದು ಎಂದು ಉತ್ತರಿಸಿ, ಆಟದ ಪಿರಿಯಡ್ಗೆ ಬೆಲ್ ಹೊಡೆದ ತಕ್ಷಣ ಹೋ! ಎಂದು ಜೋರಾಗಿ ಕೂಗುತ್ತ ಮೈದಾನಕ್ಕೆ ಲಗ್ಗೆಯಿಟ್ಟು, ಮೈ ಕೈ ಜೊತೆಗೆ ಬಟ್ಟೆಗೂ ಕೆಂಪು ಮಣ್ಣು ಮೆತ್ತಿಸಿಕೊಳ್ಳುವದರಲ್ಲಿ ಎಲ್ಲಿಲ್ಲದ ಖುಷಿ. ರಾಷ್ಟ್ರೀಯ ಹಬ್ಬಗಳ ರಿಹರ್ಸಲ್ಲಿನಲ್ಲಿ ಗುರು ಬಳಗ ಪಡುವ ಶ್ರಮಕ್ಕೆ ಸೆಲ್ಯೂಟ್ ಹೊಡೆಯಬೇಕೆನಿಸುತ್ತಿತ್ತು. ಹಬ್ಬಗಳಂದು ಹಾಡು ಭಾಷಣ ರೂಪಕ ನಾಟಕಗಳಲ್ಲಿ ಭಾಗವಹಿಸಿ ಪೆಪ್ಪರಮೆಂಟ್ ಚೀಪುತ್ತ ಕುಣಿದು ಕುಪ್ಪಳಿಸುತ್ತಿದ್ದೆವು.              1ನೇ ಕ್ಲಾಸಿನಿಂದ 7ನೇ ಕ್ಲಾಸಿನವರೆಗೆ ಫುಲ್ ಸಿಲ್ಯಾಬಸ್ನ್ನು ಹೋಲ್ ಸೇಲಾಗಿ ಒಬ್ಬರೇ ಗುರುಗಳು ಬೋಧಿಸುತ್ತಿದ್ದುದರಿಂದ ಅವರಿಗೆ ನಮ್ಮ ಶಕ್ತಿ ದೌರ್ಬಲ್ಯ ಪ್ರತಿಭೆಗಳು ಚೆನ್ನಾಗಿ ಗೊತ್ತಿರುತ್ತಿತ್ತು. ತಾಲೂಕಾ ಮಟ್ಟದಲ್ಲಿ ಅತ್ಯಧಿಕ ಪ್ರಶಸ್ತಿ ಪತ್ರ ಬಾಚಿಕೊಂಡು ಬಂದ ನನ್ನನ್ನು ಮೇಸ್ಟ್ರು ತಮ್ಮ ಕುಂಕಿಯ (ಹೆಗಲ) ಮೇಲೆ ಕೂಡ್ರಿಸಿಕೊಂಡು ಸಂಭ್ರಮಿಸುತ್ತ ಹೆಡ್ ಮಾಸ್ಟರ್ ಕಡೆಯಿಂದ 5 ಪೇನೆ(ಪೆನ್ಸಿಲ್) ಗಳನ್ನು ಬಹುಮಾನವಾಗಿ ಕೊಡಿಸಿದ್ದನ್ನು ನೆನೆದಾಗಲೊಮ್ಮೆ ಕಣ್ಣಲ್ಲಿ ನೀರು ಜಿನುಗುತ್ತೆ. ನಮ್ಮ ಕಲಿಕೆಯಲ್ಲಿ ಸಂತೃಪ್ತ ಭಾವ ಕಂಡ  ಗುರುಗಳದು ಅದೆಂಥ ನಿಸ್ವಾರ್ಥ, ಸಾರ್ಥಕ ಸೇವೆ ಎಂದೆನಿಸಿತ್ತದೆ..         ನಮ್ಮ ಕ್ಲಾಸ್ ಸರ್ ಎಂದರೆ ಎಲ್ಲ ಮಕ್ಕಳಿಗೆ  ಎಲ್ಲಿಲ್ಲದ ಭಯ. ಅವರ ಹೆಜ್ಜೆಯ ಸಪ್ಪಳಕ್ಕೆ ಕ್ಲಾಸಿಗೆ ಕ್ಲಾಸೇ ಬೆಚ್ಚಿ ಬೀಳುತ್ತಿತ್ತು.ಅವರು ಎಂದೂ ಯಾರಿಗೂ ತಮ್ಮ ಬೆತ್ತದ ರುಚಿ ತೋರಿಸಿರಲಿಲ್ಲ. ಅವರದೇನಿದ್ದರೂ ಕಣ್ಣಿನಲ್ಲಿಯೇ ಹೆದರಿಸುವ ಪರಿ. ಕ್ಲಾಸ್ ಮುಗಿದ ಮೇಲೂ ಕಾಸು ತೆಗೆದುಕೊಳ್ಳದೇ ತಮ್ಮ ಮನೆಯಲ್ಲಿ ಬದಾಮು ಹಾಲು ಕೊಟ್ಟು ಹೇಳಿ ಕೊಟ್ಟ ಪಾಠಗಳು ಇಂದಿಗೂ ಮನದಲ್ಲಿ ಅಚ್ಚೊತ್ತಿವೆ.        ಕೈಯಲ್ಲಿ ಮಾರುದ್ದದ ಕೋಲು ಹಿಡಿದೇ ಕ್ಲಾಸಿಗೆ ಬರುತ್ತಿದ್ದ ಇಂಗ್ಲೀಷ್ ಸರ್ ಭಾಷೆ ಕಲಿಸುವ ರೀತಿ ಬ್ರಿಟೀಷರನ್ನೂ ದಂಗು ಬಡಿಸುವಂತಿರುತ್ತಿತ್ತು. ಹಳೆಗನ್ನಡದ ಕವಿತೆ ರಾಮಾಯಣ ಮಹಾಭಾರತದ ಪ್ರಸಂಗಗಳನ್ನು ಕನ್ನಡ ಗುರುಗಳ ಬಾಯಲ್ಲಿ ಕೇಳುತ್ತಿದ್ದರೆ ಎಂಥವರಿಗೂ ರೊಮಾಂಚನವಾಗುತ್ತಿತ್ತು. ಬೋಧಿಸುವದು ಗಣಿತವಾದರೂ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ಹೇಗೆ ಸಿದ್ಧಗೊಳಿಸಬೇಕೆಂಬುದನ್ನು  ಗಣಿತ ಶಿಕ್ಷಕರ ಗರಡಿಯಲ್ಲಿಯೇ ತಿಳಿಯಬೇಕು.ವಿಜ್ಞಾನದ ಮೆಸ್ಟ್ರಂತೂ  ದಿನ ನಿತ್ಯ ಹೊಸ ಹೊಸ ಪ್ರಯೋಗಗಳನ್ನು ಮಾಡಿ ತೋರಿಸಿ  ಜ್ಞಾನದ ದಾಹ ಹೆಚ್ಚಿಸುತ್ತಿದ್ದರು. ರಾಷ್ಟ್ರೀಯ ಭಾವೈಕ್ಯತೆಯನ್ನು ಹಿಂದಿ ಭಾಷೆಯಿಂದ ಸಾಧಿಸಲು ಸಾಧ್ಯವಿದೆಯೆಂದು ತೋರಿಸಿಕೊಟ್ಟವರು ಹಿಂದಿ ಭಾಷಾ ಶಿಕ್ಷಕರು . ಮಕ್ಕಳು ಕೀಟಲೆ ಮಾಡಿದರೆ ಚೆನ್ನ ಎನ್ನುತ್ತ ದೇಶಭಕ್ತಿಯ ಮೊಳಕೆಯೊಡಿಸಿದವರು  ಇತಿಹಾಸ ಗುರುಗಳು. ಆಟ ಆಡಿಸಿ ಮೈ ಕೈ ಗಟ್ಟಿ ಮಾಡಿಸಿದ ದೈಹಿಕ ಶಿಕ್ಷಕರನ್ನು ಕೈಯಲ್ಲಿ ಕುಂಚ ಹಿಡಿಸಿ ಬಣ್ಣ ಬಳಿಸಿ, ಬದುಕಿನ ರಂಗು ಹೆಚ್ಚಿಸಿದ ಡ್ರಾಯಿಂಗ್ ಶಿಕ್ಷಕರನ್ನು ನೆನಸದೇ ಇರುವದಾದರೂ ಹೇಗೆ?          ಕ್ವಿಜ್ದಲ್ಲಿ ಭಾಗವಹಿಸುವದು ನನಗೆ ಇಷ್ಟದ ಸಂಗತಿ.ಯಾವುದೇ ಸಂಘಗಳು ಕ್ವಿಜ್ ಸ್ಪಧರ್ೆ ಏರ್ಪಡಿಸಿದಾಗಲೂ ರಸಪ್ರಶ್ನೆಯಲ್ಲಿ ಅತ್ಯಧಿಕ ಪ್ರಶಸ್ತಿ ಪಡೆದ ದಾಖಲೆ ಇದ್ದ ನನ್ನ ಹೆಸರನ್ನೇ ಗೆಳೆತಿಯರು ಸೂಚಿಸಿ ಇದನ್ನು ನೀನು ಗೆಲ್ಲಲೇಬೇಕೆಂದು ತಾಕೀತು ಮಾಡುತ್ತಿದ್ದರು. ಹುಡುಗರೆಲ್ಲ ಕೇಕೆ ಸೀಟಿ ಹಾಕಿ ಅನುಮತಿಸುತ್ತಿದ್ದರು.        ಅದು ಓಪನ್ ಕ್ವಿಜ್ ಕಾಂಪಿಟೇಶನ್ ಆಗಿದ್ದರಿಂದ ಯಾವುದೇ ವಯೋಮಾನದವರು, ವೃತ್ತಿಯಲ್ಲಿರುವವರು  ಭಾಗವಹಿಸಬಹುದಿತ್ತು ಬಹುಮಾನವಾಗಿಟ್ಟ ಸಂಚಾರಿ ಫಲಕವನ್ನು ಸತತ 3 ವರ್ಷ ಪ್ರಥಮ ಬಂದವರಿಗೆ ಶಾಶ್ವತವಾಗಿ ತಮ್ಮದಾಗಿಸಿಕೊಳ್ಳಬಹುದು ಎಂಬ ಷರತ್ತು ಹೊಂದಿತ್ತು. ಎರಡು ವರ್ಷ ಸಂಚಾರಿ ಫಲಕ ಪಡೆದು ಫೈನಲ್ ಘಟ್ಟ ತಲುಪಿದ್ದೆ. ಈ ವರ್ಷ ಏನಾಗುತ್ತೋ ಎನ್ನುವ ಭಯ ಕಾಡುತ್ತಿತ್ತು. ಪ್ರೇಕ್ಷಕರಾಗಿ ನಿಂತ ಸಹಪಾಠಿಗಳೆಲ್ಲ ನನ್ನ ಹೆಸರು ಕೂಗಿ ಉತ್ತೇಜಿಸುತ್ತಿದ್ದರು. ರಸ ಪ್ರಶ್ನೆ ಹುಚ್ಚು ಹಿಡಿಸಿದ್ದ ಮಾರ್ಗದರ್ಶಕರು ಪ್ಲೀಸ್ ಇದೊಂದನ್ನು ಗೆದ್ದು ಬಿಡು ಹೆದರ ಬೇಡ ಗೆಲ್ಲುವ ತಾಕತ್ತು ನಿನ್ನಲ್ಲಿದೆ. ಎಂದು ಧೈರ್ಯ ತುಂಬಿದ್ದರು.ಅದು ನಮ್ಮ ಕಾಲೇಜಿನ ಪ್ರತಿಷ್ಟೆಯ ವಿಷಯವಾಗಿತ್ತು.          ಸಿಕ್ಕ ಸಿಕ್ಕ ಪೇಪರ್ ಚೂರುಗಳನ್ನೆಲ್ಲ ಓದುವ ನನ್ನ ಚಟಕ್ಕೆ ಅಂದು ಅದೃಷ್ಟ ಖುಲಾಯಿಸಿತ್ತು. ಇಡೀ ಕಾಲೇಜು ನನ್ನ ಗೆಲುವಿನಿಂದ ಬೀಗಿತ್ತು. ಶೀಲ್ಡ್ಗೆ ನಾನು ಮುತ್ತಿಟ್ಟಾಗ ಮಾರ್ಗದರ್ಶಕರಾಗಿದ್ದ ಮೇಸ್ಟ್ರು ದೂರದಿಂದಲೇ ತಮ್ಮೆರಡು ಥಮ್ಸ್ ಅಪ್ ಮಾಡಿ ನನ್ನೆಡೆಗೆ ಹೆಮ್ಮೆಯಿಂದ ನೋಡಿದ ರೀತಿ ಇಂದಿಗೂ ಕಣ್ಮರೆಯಾಗಿಲ್ಲ.      .       ಇವೆಲ್ಲ ನಡೆದು ದಶಕಗಳೇ ಕಳೆದರೂ ಈಗ ತಾನೆ ಬಿಮ್ಮನೆ ಬಿರಿದ ಮಲ್ಲಿಗೆ ಹೂವಿನಂತೆ ಸುವಾಸನೆ ಬೀರಿ ನನ್ನನ್ನು ಕಾಡುತ್ತವೆ. ಒಂದೇ ಒಂದು ಬಾರಿ ಆ ಮಹಾನುಭವರನ್ನೆಲ್ಲ ಮತ್ತೆ ಕಾಣುವಂತಾದರೆ ಎಂದು ಮನಸ್ಸು ಹಂಬಲಿಸುತ್ತದೆ. ದೀಪದಂತೆ ತಾನುರಿದು ನಮಗೆ ಜ್ಞಾನದ ಬೆಳಕು ನೀಡುವ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ತಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.. ತಮಗೆ ಕಲಿಸಿದ ಶಿಕ್ಷಕರ ನೆನಪು ಇನ್ನೂ ಹಸಿರಾಗಿದೆಯಲ್ಲವೆ? ಹಾಗಿದ್ದರೆ ಅವರಿಗೊಂದು ವಿಶ್ ಮಾಡಿ.ದೊಡ್ಡವರಾದ ಮೇಲೆ ಅಥವಾ ಜೀವನದಲ್ಲಿ ಸೆಟ್ಲ್ ಆದ ಮೇಲೆ ಅವರನ್ನು ಕಂಡು ಕೃತಜ್ಞತೆ ಸಲ್ಲಿಸಲೇ ಇಲ್ಲವಲ್ಲಾ ಎಂಬ ಭಾವ ಕಾಡುತ್ತಿದ್ದರೆ  ಅವರನ್ನೊಮ್ಮೆ ಕಂಡು ಅವರ ಕಂಗಳಲ್ಲಿ ಹೊಳೆಯುವ ಖುಷಿ ನೋಡಿ ಆನಂದಿಸಿ. ಸಾಧ್ಯವಾಗದಿದ್ದರೆ ಅಪರೋಕ್ಷವಾಗಿ ನೂರಾರು ಬಾರಿ ಆ ಕಾಣುವ ದೇವರಿಗೆ ಕೃತಜ್ಞತೆ ಅಪರ್ಿಸಿ.     ನಮ್ಮ ತಪ್ಪುಗಳನ್ನು ತಿದ್ದಿ ತೀಡಿ, ಮೆಚ್ಚುಗೆಯ ಮಾತುಗಳನ್ನಾಡಿ, ಬೆನ್ನು ತಟ್ಟಿ, ಪ್ರೀತಿ ಕಾಳಜಿ ಹರಿಸಿ, ಅಕ್ಷರ ಕಲಿಸಿ ಅರಿವು ಮೂಡಿಸಿದ ಗುರುಗಳ ಬಗ್ಗೆ  ಹೇಳುತ್ತ ಸಾಗಿದರೆ, ಮನದಲ್ಲಿ ಹೆಮ್ಮೆಯ ಭಾವ ಮೂಡುತ್ತೆ. ಇಂಥವರ ಕೈಯಲ್ಲಿ ಕಲಿತು ಬಾಳು ಬೆಳಗಿಸಿಕೊಂಡಿದ್ದೇವೆಲ್ಲ ಎಂದು  ಖುಷಿ ನೂರ್ಮಡಿಯಾಗುತ್ತೆ. ಇವರ ಋಣವ ತೀರಿಸುವದೆಂತು? ಎಂಬ ಪ್ರಶ್ನೆಯೂ ದೊಡ್ಡದಾಗಿ ಕಾಡುತ್ತೆ. ಬಾಳು ಬೆಳಗಿಸುವ ಗುರುಗಳು ಹೇಳಿಕೊಟ್ಟ ಸಲಹೆ ಸೂಚನೆ ಜೀವನ ಮೌಲ್ಯಗಳನ್ನು ನಾವು  ಚಾಚೂ ತಪ್ಪದೇ ಪಾಲಿಸುತ್ತ ಇತರರಿಗೂ ಆ ಬೆಳಕಿನಲ್ಲಿ ನಡೆಯಲು ನೆರವಾಗುತ್ತಾ ಸಾಗಿದರೆ ಅವರ ಋಣವನ್ನು ಸ್ವಲ್ಪ ಮಟ್ಟಿಗಾದರೂ ತೀರಿಸಬಹುದೇನೋ? ಬನ್ನಿ ನಮಗೆಲ್ಲ ಅರಿವು ನೀಡಿದ ಗುರುಗಳಿಗೆ ನೂರೆಂಟು ನಮನ ಸಲ್ಲಿಸಿ ಇಂದಿನಿಂದಲೇ ತೀರಿಸಲಾಗದ ಗುರುವಿನ ಋಣವನು ತೀರಿಸಲು ಯತ್ನಿಸೋಣ. ************

ಗುರುವಿನ ಋಣ Read Post »

ಇತರೆ

ಓ ನಮ್ಮ ಶಿಕ್ಷಕ ನೀ ನಮ್ಮ ರಕ್ಷಕ

ಓ ನಮ್ಮ ಶಿಕ್ಷಕ ನೀ ನಮ್ಮ ರಕ್ಷಕ ವಿಭಾ ಪುರೋಹಿತ್ ಓ ನಮ್ಮ ಶಿಕ್ಷಕನೀ ನಮ್ಮ ರಕ್ಷಕ ಮರೆಯಲೆಂತು ನಿನ್ನ ಸೇವೆಕರೆವ ಜ್ಞಾನ ಹಾಲ ಗೋವೆನಿನಗೆ ನಮ್ಮ ನಮನವುನಿನ್ನ ಅಡಿಗೆ ಸುಮನವು————ಧಾರವಾಡದ ಜಿ. ಎಸ್. ಕುಲಕರ್ಣಿ ಧಾರವಾಡದ ಜಿ.ಎಸ್ . ಕುಲಕರ್ಣಿ ಅವರ ಸಾಲುಗಳು ಇಲ್ಲಿ ನೆನೆಯಬಹುದು ಮನಃಪಟಲಕ್ಕೆ ಬಂದು ಅಚ್ಚೊತ್ತಿದ ಕೆಲವು ಘಟನೆಗಳನ್ನು ಬರೆಯದೇ ಇರಲಾಗುವುದಿಲ್ಲ.ಎಲ್ಲಿಂದಲೋ ಬಂದ ದಿವ್ಯ ಚೇತನ ಬೆನ್ನುತಟ್ಟಿ ಬರೆಯಲಾರಂಭಿಸಿತು.ಮೂವತ್ತು ವ ರ್ಷಗಳ ಹಿಂದೆ ಓಡಾಡಿದ ಜಾಗ,ಆಟವಾಡಿದ ಸ್ಥಳ,ಮಣ್ಣಿ ಗೆ,ಕಲ್ಲಿಗೆ ಅಕ್ಕರೆಯಿಂದ ಮುತ್ತಿಟ್ಟು ಆಡುತ್ತಿದ್ದ ಕುಂಟಾಟ ಒಂದಾದ ಮೇಲೊಂದು ನೆನಪಿನ ಪರದೆಯ ಮೇಲೆ ಮೂಡಿ ಬಂದವು.ನಾವು ಕಲಿತ ಶಾಲೆ,ಶಾಲಾಪ್ರಾಂಗಣ,ಆಟದ ಮೈದಾನಗಳೆಲ್ಲವು ನಮ್ಮನ್ನು ಕೈಬೀಸಿ ಕರೆಯುತ್ತಿದ್ದಂತೆ ಭಾಸ.ಅದೇ ಧ್ವಜಸ್ತಂಭ,ಹಿಂದೆ ರಾಷ್ಟ್ರೀಯ ಹಬ್ಬಗಳಂದು ಎದೆ ಉಬ್ಬಿಸಿ ನಿಂತು ಅತ್ತಿತ್ತ ಅಲ್ಲಾಡದೆ ‘ ಜನಗಣ ಮನ ‘ ಹಾಡಿ ಸೆಲ್ಯುಟ್ ಮಾಡಿದ್ದು .ಗೆಳೆಯ ಗೆಳತಿಯರೊಡನೆ ತುಂಟಾಟವಾಡಿದ ದಿನಗಳು ಕಣ್ಮುಂದೆ ತೇಲಿ ಹೋದವು. ಜ್ಞಾನಕ್ಕೆ ಹ್ಯಾಗೆ ಜಾತಿ ಮತ ಭಾಷೆಗಳ ತಾರತಮ್ಯವಿಲ್ಲ ವೋ,ಅದೇ ರೀತಿ ಬಾಲ್ಯ.ಬಾಲ್ಯ ಜೀವನಾವಸ್ಥೆಯ ಒಂದು ಅದ್ಭುತವಾದ ಘಟ್ಟ.ಎಲ್ಲರೊಡನೆ ಬೆರೆತು ಬಾಳಿದ,ಆಡಿ ದ ಸವಿ ಸವಿ ನೆನಪಿದೆ.ಈರ್ಷೆ,ಮತ್ಸರ ಎಂಬ ಪದಗಳೇ ಗೊತ್ತಿಲ್ಲದ ನಿರ‍್ಮಲ ಮನೋಭಾವ. ಮುಗ್ಧಮನ ಶುದ್ಧ ಮ ನ. ಅಂದಿನ ಪರಿಸರ ಎಷ್ಟೊಂದು ಸಕಾರಾತ್ಮಕ !ಸುತ್ತ ಮುತ್ತಲು ಧಾರ್ಮಿಕವಾಗಿ,ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿ ಕವಾಗಿ ಬೆಳವಣಿಗೆಯಾಗಲು ಸಂಪೂರ್ಣ ಹೇಳಿ ಮಾಡಿಸಿ ದಂತಹ ವಾತಾವರಣ. ಸರ್ವಸದ್ಗುಣಗಳನ್ನು ಹೊಂದಿದಂಥ ನನ್ನ ಬಾಲ್ಯ ಭೂಮಿ ಕೃಷ್ಣಾಪುರ,ಜಿ|| ಯಾದಗಿರಿ. ಮುಂದೊಂದುದಿನ ಅಲ್ಲಿಗೆ ಭೇಟಿ ಕೊಡುತ್ತೇನೆಂದು ನಾನು ಅಂದುಕೊಂಡಿರಲೇ ಇಲ್ಲ. ಫೆಬ್ರವರಿ ೧೫,೨೦೧೯ ಆ ಪುನರ್ಮಿಲನದ ಸುಸಂಧಿ.ಇಂಥಹ ಸದಾವಕಾಶವನ್ನು ಕಲ್ಪಿಸಿಕೊಟ್ಟ ಹಳೆಯ ವಿದ್ಯಾರ್ಥಿ ಸಂಘದ ರೂವಾರಿಗಳಿಗೆ ಮನದಲ್ಲಿ ಕೃತಜ್ಞತಾ ಭಾವವಿತ್ತು. ಬೆಂಗಳೂರಿನಿಂದ ಆ ಪುಣ್ಯ ಭೂಮಿಗೆ ಕಾಲಿಟ್ಟ ಕೂಡಲೇ ತಿರುಪತಿಗಿರಿವಾಸ ಶ್ರೀವೆಂಕ ಟೇಶನಂತೆ ಮೊದಲು ದರುಶನ ನೀಡಿದ್ದು ನಮ್ಮ ಸಮಾಜ ಪಾಠದ ಗುರುಗಳಾದ ರಾಮರೆಡ್ಡಿಯವರು.ಮನದಲ್ಲಿ ಉ ಲ್ಲಾಸ,ರೋಮಾಂಚನದೊಂದಿಗೆ ಪುಳಕಿತಗೊಂಡು ಅವರ ಪಾದಗಳಿಗೆ ನಮಸ್ಕರಿಸಿದೆ. ಹಳೆಯ ವಿದ್ಯಾರ್ಥಿ ಸಂಘದಿಂದ ಹಮ್ಮಿಕೊಂಡಿದ್ದ ಕಾರ‍್ಯ ಕ್ರಮದ ರೂಪುರೇಷೆಯಂತೆ ಪ್ರಥಮವಾಗಿ ಗುರುವೃಂದ ವನ್ನು ಬಿಜಾಸ್ಪೂರ ಶಾಲೆಯಿಂದ ಕೃಷ್ಣಾಪುರ ಕ್ಯಾಂಪ್ ಶಾಲೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.ನೂರಾರು ವಿ ದ್ಯಾರ್ಥಿಗಳು,ಊರಿನಜನರು ಹಾಗೂ ಗುರುಗಳು,ಕಡು ಬಿಸಿಲಿನ ಶಾಖವನ್ನು ಮರೆತು ಗುರುವಂದನೆಯ ಧನ್ಯತೆ ಯ ತಂಪನ್ನು ಸವಿಯುತ್ತ ಹೆಜ್ಜೆಹಾಕಿದರು.ಇದರೊಂದಿಗೆ ಗ್ರಾಮೀಣ ಸೊಗಡಿನ ಡೊಳ್ಳು ಕುಣಿತವು ಸರ್ವರಕಣ್ಮನ ತಣಿಸಿತು. ವಿಶಾಲವಾದ ಶಾಲಾ ಪ್ರಾಂಗಣ ಗುರುವಂದನಾ ಕಾರ‍್ಯಕ್ರ ಮದ ಮೆರವಣಿಗೆಗೆ ಹಾತೊರೆಯುತ್ತಿದ್ದಂತೆ ಕಂಡಿತು. ಪ್ರತಿ ಯೊಬ್ಬರಿಗೂ ಮಂದಹಾಸ ಬೀರಿ ಮಡಿಲಲ್ಲಿ ಕೂರಿಸಿಕೊಂ ಡಿತು ನಮ್ಮ ತರಗತಿಗೆ ಕಲಿಸಿದ ಗುರುಗಳು ಕೇವಲ ನಾಲ್ಕು ಜನ ಮಾತ್ರ ಹಾಜರಿದ್ದರು.ಉಳಿದವರು ನಮ್ಮನ್ನಗಲಿದ್ದಾ ರೆಂದು ತಿಳಿದು ತುಂಬ ನೋವಾಯಿತು.ಇನ್ನೊಮ್ಮೆ ಅವರ ದರ್ಶನ ಸಾಧ್ಯವಾಗಲಿಲ್ಲವೆಂದು ಮನ ಕೊರಗಿತು.ಗುರು ವೃಂದಕ್ಕೆ ಸನ್ಮಾನಿಸಲಾಯಿತು.ನಂತರ ಗುರುಗಳೆಲ್ಲರು ತಾವು ಅನು ಭವಿಸಿದ ಬದುಕಿನ ಸತ್ವಯುತ ನುಡಿಗಳನ್ನಾಡಿ ಸಭೆಯನ್ನು ಮೂಕ ವಿಸ್ಮಿತಗೊಳಿಸಿದರು. ಅಪಾರ ಜೀವನಾನುಭವ ವುಂಡವ ಅವರ ಕಣ್ಣುಗಳು ಒದ್ದೆಯಾದವು. ಹನಿ ಹನಿ ನೆನ ಪಿನ ಬುತ್ತಿಯನ್ನು ಸವಿಸವಿಯಾಗಿ ಹೃದಯ ತುಂಬಿ ಹಂಚಿಕೊಂಡರು. ಈ ವೇದಿಕೆಯಲ್ಲಿ ಮತ್ತೊಂದು ಅಪರೂಪದ ಕ್ಷಣ ನಮಗೆಲ್ಲ ಕಾದಿತ್ತು.ನಮ್ಮ ಹಿರಿಯ ಗುರುಗಳಾದ ಶ್ರೀ ರಾಮರೆಡ್ಡಿಯ ವರ ಪುಸ್ತಕದ ಬಿಡುಗಡೆ ಸಮಾರಂಭ. ಪುಸ್ತಕದ ಹೆಸರು“ ಚೌಚೌಇಂಗ್ಲೀಷ “.ಇದರಲ್ಲಿ ನಾನು ಗ್ರಹಿಸಿದಂತೆ ಮೂರು ವಿಶೇಷತೆಗಳಿವೆ.ಮೊದಲನೆಯದಾಗಿ ಪುಸ್ತಕದ ಮುನ್ನುಡಿ ಶಿಷ್ಯನಿಂದ ಬರೆಯಲ್ಪಟ್ಟಿರುವುದು.ಎರಡನೇಯದಾಗಿ ಪುಸ್ತಕವು ಲೋಕಾರ್ಪಣೆಗೊಂಡಿದ್ದು ಅವರ ವಿದ್ಯಾರ್ಥಿಗಳ ಹಸ್ತದಿಂದಲೇ,ಹಾಗೂ ಮೂರನೇಯದು ಆಂಗ್ಲಭಾಷೆ ಯನ್ನು ‘ ಕಬ್ಬಿಣದಕಡಲೆ ‘ ಎಂದು ಭಾವಿಸುವ ಸರಕಾರಿ ಕನ್ನಡ ಶಾಲೆಯ ಮಕ್ಕಳಿಗೆ ನೀರುಕುಡಿದಷ್ಟೇ ಸುಲಭವಾಗಿ ತಿಳಿಯುವಂತಿರುವ ವಿವರಣಾ ಶೈಲಿ. ಇಳಿವಯಸ್ಸಿನಲ್ಲೂ ರಾಮರೆಡ್ಡಿ ಗುರುಗಳ ಉತ್ಸಾಹ ಮೆಚ್ಚುವಂಥದ್ದು.ಇಂಥ ಗುರುಗಳಿಗೆ ಶಿಷ್ಯರಾದ ನಾವೇ ಧನ್ಯರು. ಭಾವಸಾಗರದಲ್ಲಿ ತೇಲಿ ಹೋದ ನಮ್ಮನ್ನು ಹೊಟ್ಟೆಯು ತಾಳ ಹಾಕಿ ಬಡಿದೆಬ್ಬಿಸಿತು.ಹಸಿವನ್ನು ತಣಿಸಲು ‘ಜಲೀಲ ಮತ್ತು ತಂಡದವರು’ ಸಜ್ಜಾಗಿನಿಂತಿದ್ದರು.ಶಾಲೆಯ ಪವಿತ್ರ ಮಂದಿರದಲ್ಲಿಯಾವತಾರತಮ್ಯವಿಲ್ಲದೇ ಸಾಲಾಗಿ ಕುಳಿತು ಒಟ್ಟಾಗಿಊಟಮಾಡಿದೆವು.ತಾಯಿಯ ಮಡಿಲಲ್ಲಿ ಕೂತು ಉಂಡಂತೆ ಅನುಭವವಾಯಿತು.ಇದು ಬರಿ ಶಾಲೆಯಲ್ಲ ಮಾತೃಶಾಲೆಯೆಂದೆನಿಸಿತು.ಬಾಲ್ಯದ ಶಾಲಾದಿನಗಳನ್ನು ಮೆಲುಕು ಹಾಕಿಸುವ ಇಂಥ ಗುರುವಂದನಾ‌ ಕಾರ‍್ಯಕ್ರಮ ‘ನ ಭೂತೋ ನ ಭವಿಷ್ಯತಿ’ ಅಂದರೆ ಅತಿಶಯೋಕ್ತಿಯಾಗ ಲಾರದು. ಕನ್ನಡಮಾದ್ಯಮ ಸರಕಾರಿ ಶಾಲೆ ಎಂದು ಕಡೆಗೆಣಿಸುವವರಿಗೆ ಕೃಷ್ಣಾಪುರ (ಬಿಜಾಸ್ಪೂರ) ಶಾಲೆ ಆದರ್ಶಪ್ರಾಯವಾ ಗಿದೆ.ಈ ಶಾಲೆಯಿಂದಕಲಿತ ವಿದ್ಯಾರ್ಥಿಗಳು ಪ್ರತಿಯೊಂದು ರಂಗದಲ್ಲಿ ಉನ್ನತಿ ಪಡೆದ್ದಿದ್ದಾರೆ.ಅಭಿಯಂತರರು,ವೈದ್ಯ ರು,ಉಪನ್ಯಾಸಕರು,ಶಿಕ್ಷಕರು,ಪತ್ರಕರ್ತರು,ಸಾಹಿತಿಗಳು,ಆರಕ್ಷಕರು,ಸಮಾಜಸೇವಕರು,ಸೈನಿಕರು ಇತ್ಯಾದಿ ಹೀಗೆ ದೇಶ ಕಾಯುವ ಮತ್ತು ದೇಶ ಕಟ್ಟುವ ಕ್ಷೇತ್ರದಲ್ಲಿ ಸೇವೆ ಸ ಲ್ಲಿಸುತ್ತಿದ್ದಾರೆ.ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಬದುಕನ್ನು ತಾ ವೇ ಸಮರ್ಥವಾಗಿ ಸಾಗಿಸಲು ದೃಢವಾದ ನೆಲೆಯನ್ನು ಕಂ ಡುಕೊಂಡಿದ್ದಾರೆ.ಇಂಥ ಸರಕಾರಿ ಶಾಲೆಗಳೇ ಸಮಾಜದ ಇಂದಿನ ಅವಶ್ಯಕತೆಯೂ ಸಹ. . **************************************************

ಓ ನಮ್ಮ ಶಿಕ್ಷಕ ನೀ ನಮ್ಮ ರಕ್ಷಕ Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಚರ್ಚೆ ಕಸಾಪಗೆ ಮಹಿಳಾ ಅಧ್ಯಕ್ಷರು ಒಂದು ಚರ್ಚೆ ಮೆಲ್ಕಂಡವಿಷಯವಾಗಿ ಸಂಗಾತಿ ಪತ್ರಿಕೆ ಕನ್ನಡದ ಬರಹಗಾರರಿಗೆ ಕೆಲವು ಪ್ರಶ್ನೆಗಳನ್ನು ಹಾಕಿತ್ತು ಅದಕ್ಕೆ ಬಂದ ಉತ್ತರಗಳನ್ನು ಇಲ್ಲಿ ಒಂದೊಂದಾಗಿಪ್ರಕಟಿಸಲಾಗುತ್ತಿದೆ. ಸಂಗಾತಿ ಕೇಳಿದ ಪ್ರಶ್ನೆಗಳು ಪ್ರಶ್ನೆ ಒಂದು,ಇದಕ್ಕಿರುವ ಕಾರಣಗಳೇನು?ಇದನ್ನು ಹೇಗೆ ವಿಶ್ಲೇಷಿಸುತ್ತೀರಿ? ಪ್ರಶ್ನೆ ಎರಡು,ಸಮಾನತೆಯ ಈ ಯುಗದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗುವುದು ಸಾದ್ಯವೆಂದು ನಂಬುವಿರಾ?ಸಾದ್ಯವೆಂದಾದರೆ ಹೇಗೆ? ಪ್ರಶ್ನೆ ಮೂರು,ಮಹಿಳೆಯೊಬ್ಬರು ಅಧ್ಯಕ್ಷರಾಗದಂತೆ ತಡೆಯುವ ಶಕ್ತಿಗಳನ್ನು ಹೇaaಗೆ ಎದುರಿಸಬಹುದು? ಪ್ರಶ್ನೆ ನಾಲ್ಕು, ಮಹಿಳೆಗೆ ಈ ಅಧ್ಯಕ್ಷಸ್ಥಾನ ಮೀಸಲಾತಿ ರೂಪದಲ್ಲಿ ಸಿಗಬೇಕೆಂದು ಬಯಸುವಿರಾ ಇಲ್ಲ ಚುನಾವಣೆಯ ಮೂಲಕವೇ ದೊರೆಯಬೇಕೆಂದು ಬಯಸುವಿರಾ? ಪ್ರಶ್ನೆ ಐದು, ಈ ನಿಟ್ಟಿನಲ್ಲಿ ಮಹಿಳಾ ಅಧ್ಯಕ್ಷರ ಪರ ಒಲವಿರುವ ಪುರುಷ ಮತ್ತು ಮಹಿಳೆಯರು ಯಾವ ರೀತಿಯ ಹೆಜ್ಜೆಗಳನ್ನು ಇಡಬೇಕು ವಿನುತಾ ಹಂಚಿನಮನಿ ಸ್ಥಾಪನೆಯಾಗಿ ಶತಮಾನಗಳಾದರು ರಾಜ್ಯ ಕಸಾಪಗೆ ಮಹಿಳೆಯೊಬ್ಬರು ಇದುವರೆಗು ಅದ್ಯಕ್ಷರಾಗಿಲ್ಲ‌. ಪ್ರಶ್ನೆ ಒಂದು,ಇದಕ್ಕಿರುವ ಕಾರಣಗಳೇನು?ಇದನ್ನು ಹೇಗೆ ವಿಶ್ಲೇಷಿಸುತ್ತೀರಿ? ಮಹಿಳೆಯರ ಅನಾಸಕ್ತಿ, ಹಿಂಜರಿತ ಮೊದಲನೆಯದಾದರೆ, ಪುರುಷರ ಅಧಿಕಾರಿಶಾಹಿ ಪ್ರವೃತ್ತಿ ಎರಡನೆಯದು. ಮಹಿಳೆ ಯಾವತ್ತೂ ಹೋರಾಟ ಮಾಡಿಯೇ ಹಕ್ಕುಗಳನ್ನು ಪಡೆದಿರು ಇತಿಹಾಸವಿರುವಾಗ ಈಗ ಈ ಕ್ಷೇತ್ರದಲ್ಲಿ ಅಂತಹ ಕಾಲ ಬಂದಿದೆ. ಮನೆ ಮಕ್ಕಳು ಅಂತ ತನ್ನ ಚಿಪ್ಪಿನಲ್ಲಿ ಜವಾಬ್ದಾರಿಯನ್ನು ನಿರ್ವಹಿಸುವವಳು ಹೊರಗಿನ ಲೋಕದಲ್ಲಿಯೂ ಸಮಾನತೆಯನ್ನು ಕೇಳುತ್ತಿರುವುದು ಒಳ್ಳೆಯ ಬೆಳವಣಿಗೆ. ಪ್ರಶ್ನೆ ಎರಡು,ಸಮಾನತೆಯ ಈ ಯುಗದಲ್ಲಿ ಮಹಿಳೆಯೊಬ್ಬರು ಅದ್ಯಕ್ಷರಾಗುವುದು ಸಾದ್ಯವೆಂದು ನಂಬುವಿರಾ?ಸಾದ್ಯವೆಂದಾದರೆ ಹೇಗೆ? ಸಮಾನತೆಯ ಈ ಯುಗದಲ್ಲಿ ಮಹಿಳೆ ಅಧ್ಯಕ್ಷೆಯಾಗುವುದು ಹೆಚ್ಚು ಸೂಕ್ತ. ಸಾಹಿತ್ಯದಂತಹ ಸೃಜನಶೀಲ ಕ್ಷೇತ್ರದಲ್ಲಿ ಮಹಿಳೆಯ ಭಾವನಾತ್ಮಕ ವ್ಯಕ್ತಿತ್ವ ಹೆಚ್ಚು ಕ್ರಿಯಾಶೀಲತೆಯನ್ನು ಪಡೆಯಬಹುದು. ಅವಳ ಹೋರಾಟದ ಮನೋಭಾವ, ಪ್ರಾಮಾಣಿಕತೆ ಕನ್ನಡ ಸಾಹಿತ್ಯ ಲೋಕದ ಸ್ತ್ರೀಯರಿಗೆ ನ್ಯಾಯ ಒದಗಿಸಬಹುದು. ಪ್ರಶ್ನೆ ಮೂರು,ಮಹಿಳೆಯೊಬ್ಬರು ಅದ್ಯಕ್ಷರಾಗದಂತೆ ತಡೆಯುವ ಶಕ್ತಿಗಳನ್ನು ಹೇಗೆ ಎದುರಿಸಬಹುದು? ಮಹಿಳೆ ಅಧ್ಯಕ್ಷೆಯಾಗದಂತೆ ತಡೆಯುವ ಸ್ವಾರ್ಥಶಕ್ತಿಗಳಿಗೆ ಮಹಿಳೆಯರ ಕೃತ್ತುತ್ವ ಶಕ್ತಿಯನ್ನು ಮನವರಿಕೆ ಮಾಡಿಕೊಡಬೇಕು. ಅವಳ ಸಾಹಿತ್ಯದ ಜ್ಞಾನ, ಸಂಘಟನಾ ಶಕ್ತಿ, ನ್ಯಾಯಪರತೆಗಳನ್ನು ಸಾಕ್ಷ್ಯಸಹಿತ ತೋರಿಸಿಕೊಡಬೇಕು. ಅದಕ್ಕಾಗಿ ಮಹಿಳೆ ತನ್ನ ಸಮಯ ಮೀಸಲಾಗಿಡಬೇಕು. ಪ್ರಶ್ನೆ ನಾಲ್ಕು, ಮಹಿಳೆಗೆ ಈ ಅದ್ಯಕ್ಷಸ್ಥಾನ ಮೀಸಲಾತಿ ರೂಪದಲ್ಲಿ ಸಿಗಬೇಕೆಂದು ಬಯಸುವಿರಾ ಇಲ್ಲ ಚುನಾವಣೆಯ ಮೂಲಕವೇ ದೊರೆಯಬೇಕೆಂದು ಬಯಸುವಿರಾ? ಮಹಿಳೆಗೆ ಅಧ್ಯಕ್ಷ ಸ್ಥಾನ ಚುನಾವಣೆಯ ಮೂಲಕ ದೊರೆಯಬೇಕು. ಮಹಿಳೆ ಸಮಾನತೆಗಾಗಿ ಕೇಳುತ್ತಿರುವಾಗ ಮೀಸಲಾತಿಯ ಭಿಕ್ಷೆ ಅವಮಾನಕರ. ನಮ್ಮ ಪ್ರತಿಭೆ ನಮ್ಮ ಗುರುತಾಗಿರುವಾಗ ಮೀಸಲಾತಿಯಂತಹ ದಯಾಭಿಕ್ಷೆ ಯಾಕೆ ಬೇಕು? ಪ್ರಶ್ನೆ ಐದು, ಈ ನಿಟ್ಟಿನಲ್ಲಿ ಮಹಿಳಾ ಅದ್ಯಕ್ಷರ ಪರ ಒಲವಿರುವ ಪುರುಷ ಮತ್ತು ಮಹಿಳೆಯರು ಯಾವ ರೀತಿಯ ಹೆಜ್ಜೆಗಳನ್ನು ಇಡಬೇಕು ಸರಿಯಾದ ವ್ಯಕ್ತಿಯನ್ನು ಹುಡುಕಿ ಪ್ರೇರಪಿಸಬೇಕು. ಅವರ ಸಾಧನೆಯ ದಾರಿಗೆ ದೀಪವಾಗಬೇಕು, ಕಣ್ಣಾಗಬೇಕು.ಸ್ವಲ್ಪ ಮಟ್ಟಿಗೆ ತ್ಯಾಗ ಹೊಂದಾಣಿಕೆಯನ್ನು ಮನೆಯವರೊಂದಿಗೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ಜನ ಮನದ ಧ್ವನಿಯಾಗಿ ಆಗು ಹೋಗುಗಳ ಮೇಲೆ ಬೆಳಕು ತೂರಿ ಸಾಹಿತ್ಯಲೋಕದಲ್ಲಿ ನಡೆಯುತ್ತಿರುವ ಪಕ್ಷಪಾತದಂತ ಅನ್ಯಾಯಗಳ ವಿರುದ್ಧ ಸೆಣಸಾಡುವ ಶಕ್ತಿಯನ್ನು ಗುಂಪುಗಳ ಅಂದರೆ ಸಂಘ ಸಂಸ್ಥೆಗಳ ಮೂಲಕ ಸಂಬಂಧ ಪಟ್ಟವರ ಗಮನಕ್ಕೆ ತರಬೇಕು. ಸಮಾಜಸೇವೆಯಲ್ಲಿ ತೊಡಗಿರುವ ಸಾಹಿತಿ, ಲೇಖಕಿ ಅಥವಾ ನ್ಯಾಯಾಂಗದಲ್ಲಿ ಇಲ್ಲವೆ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜಪರ ಕೆಲಸಗಳಲ್ಲಿ ತೊಡಗಿರುವ ಮಹಿಳೆ ಇದಕ್ಕೆ ನ್ಯಾಯ ಒದಗಿಸಬಲ್ಲರು. ಈ ಕ್ಷೇತ್ರದ ಜನ ಅವಳನ್ನು ಅವಳ ಚಟುವಟಿಕೆ, ಬರವಣಿಗೆಗಳ ಮೂಲಕ ಗುರುತಿಸುವಂತಿರಬೇಕು. *****************************************************

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

ಇತರೆ, ಪ್ರಬಂಧ

ಫ್ಲೈಟ್ ತಪ್ಪಿಸಿದ ಮೆಹೆಂದಿ

ಪ್ರಬಂಧ    ಫ್ಲೈಟ್ ತಪ್ಪಿಸಿದ  ಮೆಹೆಂದಿ ಸುಮಾ ವೀಣಾ                                         ಫ್ಲೈಟ್  ರಾತ್ರಿ ಹತ್ತು ಗಂಟೆಗೆ ಅಂದುಕೊಂಡು ಬೆಳಗ್ಗೆ 6 ಗಂಟೆಗೆಎದ್ದು  ವಿದೇಶೀ ಲಲನೆಯರಿಗಿಂತ ನಾವೇನು ಕಡಿಮೆ ನಾವೂ ಹೇರ್ ಕಲರ್ ಮಾಡಿಕೊಳ್ಳೋಣ  ಎನ್ನುತ್ತಲೇ ನಾನು ನನ್ನ ತಮ್ಮನ ಹೆಂಡತಿ ಶಾಲಿನಿ ಇಬ್ಬರೂ ಮೆಹೆಂದಿ ಕಲೆಸಿ ತಲೆಗೆ ಮೆತ್ತಿಕೊಂಡೆವು.  ಫಿಲ್ಟರ್ ಕಾಫಿ ಹೀರುತ್ತಾ   ಹರಟುತ್ತಿರಬೇಕಾದರೆ ನಮ್ಮ ಮೊಬೈಲಿಗೆ ಮೆಸೇಜ್  ಮಹಾಶಯ ಬಂದು “ನನ್ನನ್ನು ಒಮ್ಮೆ ನೋಡುವಿರಾ! ನೋಡುವಿರಾ!” ಎಂದು ವಿನಂತಿಸಿಕೊಳ್ಳಲಾರಂಭಿಸಿದ. ಹಾಗೆ  ತಲೆಯನ್ನೊಮ್ಮೆ ನೇವರಿಸಿಕೊಂಡರೆ ಮೆಹೆಂದಿ ಕೈಗೆಲ್ಲಾ ತಾಗಿ ಇರಿಸು ಮುರಿಸಾಯಿತು.  ಆದರೂ ಬಿಡದೆ ಮೊಬೈಲನ್ನೊಮ್ಮೆ ತೀಡಿದೆವು. ಆ ಮೆಸೇಜ್  ಮಹಾಶಯ ನಮ್ಮನ್ನೇ ಗುರಾಯಿಸುವಂತಿದ್ದ. ಅವನನ್ನು ಓದಿದರೆ ಅವನು ನಮ್ಮ ಫಾರಿನ್ ಟೂರ್ ಕುರಿತೇ ಎಚ್ಚರ  ನೀಡಿದಂತೆ ಇತ್ತು. ಫ್ಲೈಟ್  ಬೆಳಗ್ಗೆ ಹತ್ತು ಗಂಟೆಗೇ ಎಂದಿತ್ತು.   ನಾನು ಶಾಲಿನಿ ಇಬ್ಬರೂ ತಡಬಡಾಯಿಸಿಕೊಂಡು ಕಾಫಿಮಗ್ ಅನ್ನು ಕೆಳಕ್ಕೆ  ಕುಕ್ಕರಿಸಿ  “ಇನ್ನು ಹೊರಡಲು ಹೆಚ್ಚಿಗೆ ಸಮಯವೇನು ಉಳಿದಿಲ್ಲ! ಹೊರಡೋಣ! ಹೊರಡೋಣ!” ಎಂದು ಕೈ ಸನ್ನೆ ಮಾಡಿಕೊಂಡೆವು. ಮಾತನಾಡುವುದಕ್ಕೆ ಸಮಯವಿರಲಿಲ್ಲ ರಾತ್ರಿಯೇ ಲಗೇಜ್ ಪ್ಯಾಕ್  ಮಾಡಿಕೊಂಡಿದ್ದರೆ ಬಹುಶಃ ಗಾಬರಿಯಾಗುತ್ತಿರಲಿಲ್ಲವೇನೋ…..?? “ರಾತ್ರಿ ಹತ್ತು ಗಂಟೆಗಲ್ಲವ ಫ್ಲೈಟ್” ಎಂದು ಹರಟುತ್ತಿದ್ದೆವು. ಮೆಸೇಜ್ ಮಹಾಶಯ ಎಚ್ಚರಿಸದೇ ಇರದಿದ್ದರೆ ನಾವು ಇನ್ನೂ ಹಾಗೆ ಇರುತ್ತಿದ್ದವೋ ಏನೋ??  ಏರ್ಪೋರ್ಟಿಗೆ ಟ್ಯಾಕ್ಸಿಯಲ್ಲೇ ಹೋಗೋಣ  ಎಂದು ಟ್ಯಾಕ್ಸಿಯನ್ನೂ ಬುಕ್ ಮಾಡಿ ಕರೆಸಿಕೊಂಡೆವು. ಸೂಟ್ಕೇಸ್ನಲ್ಲಿ ಬಟ್ಟೆಗಳನ್ನು , ಟ್ರಾವಲಿಂಗ್  ಬ್ಯಾಗ್ನಲ್ಲಿ ತಿಂಡಿತೀರ್ಥಗಳನ್ನು ತುರುಕಿಕೊಂಡು ಟ್ಯಾಕ್ಸಿ ಹತ್ತಿ ಹೊರಟೆವು. ಟ್ಯಾಕ್ಸಿ  ಏರ್ಪೋರ್ಟ್ ಪ್ರವೇಶಿಸಿದೊಡನೆ ದಢಕ್ಕನೆ ನಿಂತಿತು. ಸಧ್ಯ! ವಾರಕ್ಕೆ ಮೊದಲೇ ಟಿಕೇಟ್ ಪ್ರಿಂಟ್ ಅವ್ಟು, ಪಾಸ್ಪೋರ್ಟ, ವೀಸಗಳನ್ನು ಬೇರೊಂದು ಬ್ಯಾಗಿಗೆ ತುರುಕಿ ಇಟ್ಟಿದ್ದೆವು.  ಅದನ್ನೇ ಕ್ಯೂನಲ್ಲಿ ನಿಂತು ಬೀಗುತ್ತಾ ತೋರಿಸಿ “ನಮಗೆ ವಿಂಡೋ ಸೈಡ್ ಸಿಕ್ಕರೆ ಸಾಕು ವಿಂಗ್ ಹತ್ತಿರ ಬೇಡ” ಎಂದುಕೊಂಡೆವು. ಅಲ್ಲೇ ಏಕೋ ಕಸಿವಿಸಿಯಾಗಲು ಪ್ರಾರಂಭವಾಯಿತು.  ಅದಕ್ಕೆ ಕಾರಣ ಅಲ್ಲಿದ್ದವರು ಸೆಲಿಬ್ರಿಟಿಗಳನ್ನಲ್ಲ ಅಪರಾಧಿಗಳನ್ನು ಗಮನಿಸುವಂತೆ, ನೋಡುವಂತೆ, ಧಿಕ್ಕರಿಸುವಂತೆ ರೆಪ್ಪೆ ಬಡಿಯದೆ ನಮ್ಮನ್ನೇ ನೋಡುತ್ತಿದ್ದರು. ನಾನು ಶಾಲಿನಿ “ ನಾವು ಈಗಷ್ಟೆ  ಫಾರಿನ್  ಟೂರ್ ಹೊರಟಿರುವುದು.  ಇನ್ನು ಫಾರಿನ್ನವರಾಗಿಲ್ಲವಲ್ಲ “ಏಕೆ ಹೀಗೆ ನೋಡುತ್ತಾರೆ” ಅಂದುಕೊಂಡೆವು.      ಹಾಗೆ ಎರಡು ಹೆಜ್ಜೆ ಮುಂದೆ ಇಡುವಷ್ಟರಲ್ಲಿ ಯುವತಿಯೊಬ್ಬಳ ಭಾರೀ ಕನ್ನಡಕದಿಂದ  ಪ್ರೇರಿತರಾದ ನಾವು ತಂಪು ಕನ್ನಡಕವನ್ನು ಹುಡುಕಿ ಹಾಕಿಕೊಂಡವು. ತಲೆಯನ್ನೊಮ್ಮೆ ನೇವರಿಸಿಕೊಳ್ಳಬೇಕೆಂದಾಗಲೇ ನಮಗೆ ಹೊಳೆದದ್ದು ನಮ್ಮ  ತಲೆಯ ಮೆಹೆಂದಿಗೆ ಜಲಭಾಗ್ಯ ಕರುಣಿಸಿಲ್ಲವೆಂದು.  ಅಷ್ಟರಲ್ಲಾಗಲೇ ನಮ್ಮ ಕೈಗೆ ಬೋರ್ಡಿಂಗ್ ಪಾಸ್ ದೊರೆಯಿತು,. ಯಾವ ಲೌಂಜಿನಲ್ಲಿ ಕುಳಿತುಕೊಳ್ಳಬೇಕೆಂಬ ವಿವರ ಪಡೆದುಕೊಂಡೆವು. ಹಾಗೆ ಅತ್ತಿಗೆ ನಾದಿನಿಯರಿಬ್ಬರೂ  ಒಬ್ಬರ ಮುಖವನ್ನೊಮ್ಮೆ ನೋಡಿಕೊಂಡೆವು ನಗು ಬರಲಿಲ್ಲ. ನಮ್ಮ ಅವಾಂತರಕ್ಕೆ  ನಮ್ಮಿಬ್ಬರಿಗೂ ಸಿಟ್ಟು ಬರುತ್ತಿತ್ತು .ಲೌಂಜಿನಲ್ಲೊಮ್ಮೆ ನಮ್ಮ ಲಗೇಜನ್ನು ಕುಕ್ಕರಿಸಿ ವಾಶ್ ರೂಮಿಗೆ ದೌಡಿಟ್ಟೆವು  ಮೆಹೆಂದಿ ವಾಶ್ ಮಾಡಲೆಂದು.  ಎಲ್ಲರ ಕಣ್ಣು ನಮ್ಮ ಮೇಲೆಯೇ.  ಮನೆ ಅಲ್ಲವಲ್ಲ ಬೇಕಾದ ಹಾಗೆ ತಲೆತೊಳೆದುಕೊಳ್ಳಲು, ಇನ್ನು ಜನ್ಮಾಪಿ ಮೆಹೆಂದಿ ಸಹವಾಸ ಮಾಡುವುದಿಲ್ಲ ಎಂದು ಶಪಥ ಮಾಡಿ ಒಬ್ಬರ ತಲೆಯನ್ನು ಒಬ್ಬರು ಪರಸ್ಪರ ತೊಳೆದುಕೊಂಡು ತಕ್ಷಣ ಲೌಂಜಿನ ಕಡೆಗೆ ಓಡಿಬಂದೆವು . ನಮ್ಮ ಸಹಪ್ರಾಯಣಿಕರೆಲ್ಲಾ ಫ್ಲೈಟ್ ಹತ್ತಿದ್ದರು. ಸಮಯ ಹತ್ತಾಗುವ ಹಾಗಿತ್ತು  ನಮಗೆ ಮತ್ತೆ ಪ್ರಯಾಣಕ್ಕೆ ಅವಕಾಶವಿರಲಿಲ್ಲ. ಕೈಕೈ ಹಿಡಿದುಕೊಂಡು ಲಗೇಜ್ ಕಡೆ ಗಮನ  ಹರಿಸಿದೆವು ಅದೂ ಅಲ್ಲಿರಲ್ಲಿಲ್ಲ . ಫಾರಿನ್ ಪ್ರಯಣಕ್ಕೆ ವಿಘ್ನ ಬಂತು ! ಅಲ್ಲಿರುವವರೆಲ್ಲರೂ ನಮ್ಮನ್ನೇ ನೋಡುತ್ತಿದ್ದರು.  ನಮ್ಮ ಕೋಪ ನೆತ್ತಿಗೇರಿತ್ತು.  ಎಲ್ಲರನ್ನು ಸುಟ್ಟುರಿಯುವಂತೆ ನೋಡುವ ಹಾಗಾಯಿತು ಏರ್ಪೋರ್ಟ್ ಸಿಬ್ಬಂದಿಯ ಮೇಲೂ ರೇಗಾಡಲೂ ಪ್ರಾರಂಭಿಸಿದೆವು. ನೀರಿಗಿಳಿದ ಮೇಲೆ ಚಳಿಯೇನು? ಎಂಬಂತೆ ಕೈಗಳನ್ನು ಜೋರಾಗಿಯೇ ಬೀಸಿಕೊಂಡು ಕಿರುಚಾಡಲು ಪ್ರಾರಂಭಿಸಿದೆವು. ಆದರೆ ನನಗೆ ಗಂಟಲಲ್ಲಿ ಏನೋ ಹಿಡಿದ ಅನುಭವ ಆಗುತ್ತಿತ್ತು.  “ಮಮ್ಮಿ! ಮಮ್ಮಿ!  ನಾನು ಎದ್ದು ಹೊರಗೆ ಹೋಗ್ತೀನಿ ನೀವೇ ಲೈಟ್ ಆಫ್ ಮಾಡಿಕೊಳ್ಳಿ” ಎಂದು ಅಲ್ಲೇ ಇದ್ದ ಚಿನ್ನು ಎರಡೆರಡು ಬಾರಿ ಕಿರುಚಿದಾಗ ನನಗೆ ದೂರದಲ್ಲಿ ಯಾರೋ ಕರೆದಂತಾಯಿತು. ಮೂರನೆಯ ಬಾರಿ ಕಿರುಚಿದಾಗ ಎದ್ದು ಕುಳಿತೆ “ ಅಯ್ಯೋ ಫ್ಲೈಟ್ ಮಿಸ್ ಆಗಲಿಲ್ವ”, “ಫ್ಲೈಟ್ ಹೋಯ್ತು”, ಲಗೇಜ್” , ಮೆಹಂದಿ,  ಶಾಲಿನಿ…. ಮತ್ತೆ ಆ ಜಗಳ ಇತ್ಯಾದಿ ಇತ್ಯಾದಿ ನೆನಪು ಮಾಡಿಕೊಂಡು ಲೈಟ್ ನೋಡಿದ ಬಳಿಕ ನನಗೆ ಅರಿವಾಯ್ತು “ಅಯ್ಯೋ! ನಾನು ಕನಸು ಕಂಡಿದ್ದು! “ಎಂದು ಮತ್ತೆ ಮತ್ತೆ ಕನಸನ್ನು ನೆನಪು ಮಾಡಿಕೊಂಡು  ಹಾಗೆ ಮಲಗಿದ್ದೆ. ಮತ್ತೆ ಚಿನ್ನು “ವ್ಯಾನ್ ಬೇಗ ಬರುತ್ತೆ” ಎಂದು ಎಚ್ಚರಿಸಿದಳು.  ಮನಸ್ಸಿಲ್ಲದೆ ಎದ್ದು  ಕನಸಿನಲ್ಲಿ ಮಿಸ್ ಮಾಡಿಕೊಂಡ ಫ್ಲೈಟನ್ನು ನೆನಪಿಸಿಕೊಂಡು ಸ್ನಾನ ,ಪೂಜೆ ಮುಗಿಸಿ  ದೋಸೆ ಹಾಕಿ ತಿರುವಿ ಮತ್ತೆ ಬೇಯಿಸುತ್ತಾ ಹಾಟ್ ಬಾಕ್ಸ್ನೊಳಗೆ ಹಾಕುವಾಗಲೆ ಇನ್ನೂ ಹಳೆಯ ನೆನಪುಗಳು ,ಮರುಕಳಿಸುತ್ತಾ ಹೋದವು.  ಹೊಟ್ಟೆ ಹುಣ್ಣಾಗುವಂತೆ ನಗಲಾರಂಭಿಸಿದೆ. “ಯಾಕೆ? ಮಮ್ಮಿ ಒಬ್ಬರೇ ನಗುವುದು” ಎಂದು ಚಿನ್ನು ಕೇಳಿದಳು. “ಏನೋ ನೆನಪಾಯಿತು” ಅಂದೆ. “ಅದೇ ನಮ್ಮ ಸೋದರ ಮಾವ ಶ್ರೀನಿವಾಸ ತಾತ ಇದ್ರಲ್ಲ ಅವರು ನೆನಪಾದರು” ಎಂದು ಘಟನೆಯನ್ನು ಚುಟುಕಾಗಿ ಹೇಳಿದೆ.  “ನಯನನ ಮದುವೆ ಇನ್ನೆರಡು  ವಾರವಿತ್ತು ಮನೆಯಲ್ಲಿ ಎಲ್ಲರೂ ಮದುವೆ ಸಾಮಾಗ್ರಿ ಖರೀದಿಗೆಂದು ಹೋಗಿದ್ದರು, ಕಾಲಿಂಗ್ ಬೆಲ್ ಸದ್ದಾಯಿತು. ಸರಿ ಬಾಗಿಲು ತೆಗೆದರೆ ಶ್ರೀನಿವಾಸ ತಾತ ಅಲ್ಲಿದ್ದರು “ಬನ್ನಿ ಬನ್ನಿ” ಎಂದು ಅವರನ್ನು ಕೂರಿಸಿ ತಿಂಡಿಕಾಫಿ ಕೊಟ್ಟೆ ಆದರೆ ಅವರು  ತೆಗೆದುಕೊಳ್ಳುವ ಸ್ಥಿತಿಯಲ್ಲಿ  ಇರಲಿಲ್ಲ ಅವರ  ಮುಖದಲ್ಲಿ ಗಾಬರಿಯಿತ್ತು “ಮದುವೆಮುಂದಕ್ಕೆ ಹೋಯ್ತ’?   ಎಂದರು “ಇಲ್ಲ ಎಂದೆ ಮದುವೆ ನಿಂತು ಹೋಯ್ತ?”  ಎಂದರು “ಇಲ್ಲ!” ಎಂದೆ ಅಷ್ಟರಲ್ಲಿ  ಅಲ್ಲೇ ಟೇಬಲ್ ಮೇಲೆ ಇದ್ದ  ನಯನಳ ಮದುವೆ ಆಮಂತ್ರಣ ಪತ್ರಿಕೆ ನೋಡಿ ತಂತಾನೆ ನಗಲಾರಂಭಿಸಿದರು. ನನಗೆ ಗಾಬರಿ ಇದೇಕೆ ಹೀಗೆ” ಹುಷಾರಾಗೇ  ಇದ್ರಲ್ಲ ಅಂದುಕೊಂಡೆ ಸರಿ ! ನಾನು ಹೊರಡುವೆ  ಎಂದು ಎದ್ದು ನಿಂತು ಮನೆಯವರನ್ನೆಲ್ಲಾ ನಾನು ಕೇಳಿರುವುದಾಗಿ ತಿಳಿಸು ನಾನು ಇವತ್ತೆ ವರಪೂಜೆ ಅಂದುಕೊಂಡು ಬಂದೆ ಸರಿಯಾಗಿ ದಿನಾಂಕ ನೋಡಿರಲಿಲ್ಲ ಎಂದು ನಗುತ್ತಲೇ ಅವರಿಗಾದ ಮದುವೆ ದಿನಾಂಕ ಕುರಿತ ಗೊಂದಲವನ್ನು  ವಿವರಿಸಿದರು. ಪರವಾಗಿಲ್ಲ ಬಿಡಿ ಬರುವ ವಾರ  ಅತ್ತೆಯನ್ನೂ ಕರೆದುಕೊಂಡು ಬನ್ನಿ       ಎಂದೆ. ಇಲ್ಲ!  ಇಲ್ಲ! ನಾನು ಹೇಗೂ ಬಂದಿದ್ದೇನಲ್ಲಾ ಅವಳೇ ಮದುವೆಗೆ ಬರುತ್ತಾಳೆ   ಮದುವೆಗೆ ಎನ್ನುತ್ತಾ ನಗುತ್ತಲೇ ಹೊರಟರು” ಎಂದು ಹೇಳಿ ಮುಗಿಸಿಲ್ಲ. ಚಿನ್ನು ಮತ್ತೆ ಜೋರಾಗಿ ನಗಲಾರಂಭಿಸಿದಳು ಅರೆ…..!! ಅವರ್ಬಿಟ್ ಇವರ್ಬಿಟ್ ಅವರ್ಯಾರು ಅನ್ನೋಹಂಗೆ ನಿನಗೇನಾಯ್ತು? ಎಂದೆ.” ನಾನು ಮಧು ಬರ್ತಡೆ ಆದ ಮೇಲೆ ಅವರ ಮನೆಗೆ ಗಿಫ್ಟ್ ತೆಗೆದುಕೊಂಡು ಹೋಗಿದ್ದೆ ಅಲ್ವ” ಎಂದಳು. ಗಿಫ್ಟ್ ಹಿಡಿದುಕೊಂಡು ಅವರ ಮನೆ ಬಾಗಿಲು ಬಡಿದರೆ “ನಿನ್ನೆ ಕರೆದರೆ ಇವತ್ತು ಬಂದಿದ್ದೀಯ ಬಾ” ಎಂದು ಕರೆದು ಕೂರಿಸಿ ಸ್ವೀಟ್, ಕೇಕ್  ತಂದು ನನ್ನ ಮುಂದೆ  ಹಿಡಿದ. ತನ್ನ ತಪ್ಪನ್ನ ಇನ್ನೊಮ್ಮೆ ಹೇಳಲಾರದೆ ,ಮುರುಕು ಡಿಲೇಟೆಡ್ ವಿಶಸ್   ಹೇಳಿ  ಮನೆಗೆ ಬಂದೆ “  ಹೇಗ್ ಮಿಸ್ ಮಾಡಿಕೊಳ್ತಿವಿ ಅಲ್ವ? ಪರೀಕ್ಷೆ  ಟೈಮಲ್ಲಿ ಹೀಗಾದರೆ …..! ಎಂದು ಉದ್ಗಾರ  ಎಳೆದಳು.  “ ಅನುಭವವೇ ಗುರು ಅಂತ ಅದಕ್ಕೆ ಹೇಳೋದು” ಎಂದು ನಾನು ಹೇಳಿದೆ. ಇನ್ನು  ಮುಂದೆ ಯಾವುದೇ ಪರೀಕ್ಷೆ, ಪೂಜೆ, ವೃತ ಫಂಕ್ಷನ್ಗಳೇ ಇರಲಿ ಪಂಕ್ಚುವಲ್ ಆಗಿ ಹೋಗಬೇಕು, ಮೊಬೈಲ್ನಲ್ಲಿ  ಅಲರಾಂ ಸೆಟ್ ಮಾಡಿ ಆದರೂ ಸರಿ,  ಕ್ಯಾಲೆಂಡರ್ ನಲ್ಲಿ  ಗುರುತು ಮಾಡಿಯಾರೂ ಸರಿ, ವಾರ್ಡ್ರೋಬ್ಗಳ ಮೇಲೆ ಚೀಟಿ ಅಂಟಿಸದರೂ ಸರಿ” ಎಂದೆ  ಅದಕ್ಕೆ ಅವಳು” ಕ್ಯಾಲೆಂಡರಿನಲ್ಲೂ ಸರಿಯಾಗಿ ಬರೆಯಬೇಕು ಸೆಪ್ಟೆಂಬರ್ನಲ್ಲಿ ಹೋಗಬೇಕಾದ ಕಾರ್ಯಕ್ರಮದ  ವಿವರವನ್ನು ಅಕ್ಟೋಬರ್ನಲ್ಲಿ ಬರೆಯಬಾರದಷ್ಟೇ” ಎಂದಳು. ಇಬ್ಬರೂ ನಕ್ಕೆವು ಗಡಿಯಾರ ನೋಡಿದರೆ ಸ್ವಲ್ಪ ಹೆಚ್ಚೇ ಮುಂದೇ ಓಡಿದಂತಿತ್ತು. ನೆನಪಿನ ಮಡಿಕೆಗಳನ್ನು  ತೆರೆಯಲು ಈಗ ಸಮಯವಿಲ್ಲ ಎಂದು ಹೇಳುತ್ತಾ ನೆನಪಿನ ಬುತ್ತಿಯನ್ನು, ಚಿನ್ನುವಿಗೆ ಮದ್ಯಾಹ್ನಕ್ಕೆ ಬೇಕಾದ  ಬುತ್ತಿಯನ್ನು ಮುಚ್ಚಿ ಯಥಾಪ್ರಕಾರ ನಿತ್ಯದ ಕೆಲಸಗಳಲ್ಲಿ ನಿರತಳಾದೆ. ಆದರೆ ಕಂಡ ಕನಸು, ಫಾರಿನ್  ಹೋಗುವ ಆತುರದ ಕನಸು ಮತ್ತೆ ಮತ್ತೆ ನನ್ನನ್ನು ಪ್ರಶ್ನಿಸುತ್ತದೆ.  ಯಾವಾಗ   ಇನ್ನೊಮ್ಮೆ ಫ್ಲೈಟ್ ಹತ್ತುವುದು ಎಂದು? **************************************   

ಫ್ಲೈಟ್ ತಪ್ಪಿಸಿದ ಮೆಹೆಂದಿ Read Post »

You cannot copy content of this page

Scroll to Top