ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಸಜ್ಜನರ ಸಂಗ ಲೇಸು ಕಂಡಯ್ಯಾ…!

ಲೇಖನ ಸಜ್ಜನರ ಸಂಗ ಲೇಸು ಕಂಡಯ್ಯಾ…! ಬಾಲಾಜಿ ಕುಂಬಾರ, ಹನ್ನೆರಡನೇ ಶತಮಾನದ ಬಸವಣ್ಣನವರ ಸಮಕಾಲೀನ ಪ್ರಮಥರಲ್ಲಿ ವೀರಗೊಲ್ಲಾಳ ಎನ್ನುವ ತತ್ವನಿಷ್ಠೆಯ ವಚನಕಾರ ಹಾಗೂ ಅನುಭಾವಿ ಶರಣನಾಗಿದ್ದನು. ಈತನ ಮೂಲತಃ ಇಂದಿನ ವಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಗೊಲಗೇರಿ ಗ್ರಾಮ. ಈತನನ್ನು ‘ಕಾಟಕೋಟ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಕುರಿ ಕಾಯುವುದು ಈತನ ಕಾಯಕವಾಗಿತ್ತು.ಕುರಿಯ ಹಿಕ್ಕೆಯನ್ನೇ ಲಿಂಗವೆಂದು ಪೂಜಿಸಿ ಆತ್ಮಜ್ಞಾನ ಪಡೆದುಕೊಂಡು ಶರಣತತ್ವ ಪರಿಪಾಲಕನಾಗಿದ್ದನು.ತನ್ನ ವೃತ್ತಿ ಪರಿಭಾಷೆಯನ್ನು ಹಾಗೂ ತತ್ವಪರಿಭಾಷೆಯನ್ನು ಬಳಸಿಕೊಂಡು ರಚಿಸಿರುವ ಬಹುಚಿಂತನೆಯ 10 ವಚನಗಳು ಪ್ರಸ್ತುತವಾಗಿ ಲಭ್ಯವಾಗಿವೆ. ಅನುಭಾವಿ ವಚನಕಾರ, ವೀರಗೊಲ್ಲಾಳ ಒಬ್ಬ ಮುಗ್ಧ ಚಿಂತಕ, ಕಾಯಕ ಸಿದ್ಧಾಂತ ಮೈಗೂಡಿಸಿಕೊಂಡು ಸಾತ್ವಿಕ ಜೀವನ ಸಾಗಿಸಿದನು. “ವೀರಬೀರೇಶ್ವರ ಲಿಂಗಾ” ಎನ್ನುವ ವಚನಾಂಕಿತದಲ್ಲಿ ರಚಿಸಿದ ಈತನ ವಚನಗಳಲ್ಲಿ ‌ಲೌಕಿಕ ಬದುಕಿನ ಮೌಲ್ಯಗಳ ಅನಾವರಣಗೊಂಡಿದೆ. ಕುರಿ ಕಾಯುವ ವೃತ್ತಿ ಜೀವನದ ಅನುಭವದ ನುಡಿಗಳೇ ವಚನಗಳಾಗಿ ರೂಪಾಂತರ ಪಡೆದಿರುವುದು ಗಮನಿಸಬಹುದು. ಇದು ಕಾಯಕ ನಿಷ್ಠೆಯ ಬದ್ಧತೆಗೆ ಸಾಕ್ಷಿಯಾಗಿದೆ. ಆತ್ಮಜ್ಞಾನ ಪರಿಶುದ್ಧತೆ, ಸಾರ್ಥಕ ಬದುಕಿನ ಮೌಲ್ಯಗಳನ್ನು ಹೇಗೆ ಸಂಪಾದಿಸಿಬೇಕು ಎನ್ನುವ ‘ಜೀವನ ಸಂದೇಶ’ ವೀರಗೊಲ್ಲನು ತುಂಬಾ ಮಾರ್ಮಿಕವಾಗಿ ಪ್ರತಿಪಾದಿಸಿದ್ದಾನೆ. “ಕಂಥೆಯ ಕಟ್ಟಿ, ತಿತ್ತಿಯ ಹೊತ್ತು, ಮರಿಯ ನಡಸುತ್ತ ,ದೊಡ್ಡೆಯ ಹೊಡೆವುತ್ತ,ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವತಿಟ್ಟುತ್ತ, ಹಿಂಡನಗಲಿ ಹೋಹ ದಿಂಡೆಯಮಣೆಘಟ್ಟನ ಅಭಿಸಂದಿಯ ಕೋಲಿನಲ್ಲಿಡುತ್ತ.ಈ ಹಿಂಡಿನೊಳಗೆ ತಿರುಗಾಡುತಿದ್ದೇನೆ.ಈ ವಿಕಾರದ ಹಿಂಡ ಬಿಡಿಸಿ,ನಿಜ ನಿಳಯ ನಿಮ್ಮಂಗವ ತೋರಿ,ಸುಸಂಗದಲ್ಲಿರಿಸು, ಎನ್ನೊಡೆಯ ವೀರಬೀರೇಶ್ವರಲಿಂಗಾ.” ಸಾರ್ಥಕ ಬದುಕಿನ ಬಗ್ಗೆ ಸಲಹೆ ನೀಡುವ ಈ ಮೇಲಿನ ವಚನ ಸಾಲುಗಳು ಪ್ರಸ್ತುತ ಎನಿಸುತ್ತವೆ. ಹಾಗಾಗಿಯೇ ಇಂದಿಗೂ ಈತನು ಜನಪದರ ಹೃದಯದೊಳಗೆ ಅಚ್ಚಳಿಯದೇ ಉಳಿದುಕೊಂಡಿದ್ದಾನೆ. ವೀರಗೊಲ್ಲಾಳ ವಚನದಲ್ಲಿ ಮನುಷ್ಯನ ಅಂತರಂಗ ಮತ್ತು ಬಹಿರಂಗದ ತೊಳಲಾಟದ ಕುರಿತು ವಿಶ್ಲೇಷಿಸುತ್ತಾನೆ. ಲೋಕಿಕ ಬದುಕಿನ ಗಂಟು ಹಾಕಿ, ಚಿಂದಿಯ ಬಟ್ಟೆ ತೊಟ್ಟು, ಚರ್ಮವನ್ನು ಹೊದಿಕೆ ಮಾಡಿಕೊಂಡಿದ್ದೇನೆ, ಚರ್ಮದ ಚೀಲವನ್ನು ಹೊತ್ತು, ಕುರಿ – ಮರಿಗಳ ಹಿಂಡು ನಡೆಸುತ್ತಿದ್ದೇನೆ. ಕುರಿಯ ಹಿಂಡಿನಲ್ಲಿ ದೊಡ್ಡ ಕುರಿಗಳು ಮತ್ತು ಚಿಕ್ಕ ಕುರಿಗಳು ಇರುತ್ತವೆ, ಅವುಗಳನ್ನು ತಾಳ್ಮೆಯಿಂದ ಹೊಡೆದುಕೊಂಡು ಮುನ್ನಡೆಸುತ್ತಿದ್ದೇನೆ ಎಂದು ಹೇಳುತ್ತಾನೆ. ಇಲ್ಲಿ ‘ದೊಡ್ಡ ಕುರಿ, ಚಿಕ್ಕ ಕುರಿ’ ಎಂಬುದು ಆತನ ವೃತ್ತಿಪರಿಭಾಷೆಯ ಪದಗಳು, ಆದರೆ ಅದನ್ನು ಮಾನವನ ಬದುಕಿಗೆ ಹೋಲಿಕೆಯ ನುಡಿಗಳು ಎಂಬುದು ನಾವು ಅರಿತುಕೊಳ್ಳಬೇಕಾಗಿದೆ. ಮಾನವನ ಜೀವನದಲ್ಲಿ ಆಸೆ, ದುರಾಸೆ, ಅಪೇಕ್ಷೆ, ಆಕಾಂಕ್ಷೆ, ಕನಸುಗಳು ಇರುವುದು ಸಹಜ. ಸಣ್ಣ ಪುಟ್ಟ ತೊಂದರೆಗಳು ಎದುರಾದಾಗ ಅವೆಲ್ಲವೂ ಹಿಮ್ಮೆಟಿಸಿ ಮುನ್ನುಗ್ಗುವ ಪ್ರಯತ್ನ ಮಾಡಬೇಕು, ಬದುಕಿನ ಎಲ್ಲಾ ತೊಡಕುಗಳನ್ನು ಪ್ರೀತಿಯಿಂದ ಬಿಡಿಸಿಕೊಳ್ಳಬೇಕೆಂಬುದು ವಚನಕಾರ ವೀರಗೊಲ್ಲಾಳ ನೀಡುವ ಅನುಭವ. ದೊಡ್ಡ ಕೆಲಸಗಳು ಕೈಗೊಂಡಾಗ ದೊಡ್ಡ ಸವಾಲುಗಳು ಎದುರಾಗುವುದು ಸರ್ವೇಸಾಮಾನ್ಯ. ಅವುಗಳಿಗೆ ಹೆಚ್ಚು ಒತ್ತು ಕೊಟ್ಟು ಮುಂದಿನ ದಾರಿ ಹುಡುಕಬೇಕಾಗುತ್ತದೆ. ಹಾಗೇ ಸಣ್ಣ ಕುರಿಗಳು ಸಾಲಾಗಿ ಸರಿದಾರಿಗೆ ನಡೆದರೆ, ದೊಡ್ಡ ಕುರಿಗಳು ಅಡ್ಡದಾರಿ ಹಿಡಿಯುತ್ತವೆ. ಅವುಗಳಿಗೆ ಸರಿದಾರಿಗೆ ತರಲು ಜ್ಞಾನ ಎಂಬ ಕೋಲು ಅವಶ್ಯವಾಗಿದೆ ಎನ್ನುವ ಚಿಂತನೆ ವಚನಕಾರರು ಪ್ರತಿಪಾದಿಸುತ್ತಾರೆ. . ಸರಿದಾರಿ ಬಿಟ್ಟು ಅಡ್ಡದಾರಿ ಹಿಡಿಯುವ ಚುಕ್ಕಿ ಚುಕ್ಕಿ ಬಣ್ಣದ ಕುರಿಗಳನ್ನು ಬಯ್ಯುತ್ತೇನೆ, ಕೋಲಿನಿಂದ ಹೊಡೆದು ತಿದ್ದುತ್ತೇನೆ. ಅಂದರೆ ಸತ್ಯ, ನಿಷ್ಠೆ, ಸನ್ಮಾರ್ಗದಲ್ಲಿ ಹೋಗುವ ಮಾನವನು ಒಮ್ಮೊಮ್ಮೆ ಅಡ್ಡದಾರಿ ಹಿಡಿಯುತ್ತಾನೆ. ಅರಿವಿಲ್ಲದೆ ತಂತಾನೆ ಅಜ್ಞಾನದ ಕೂಪದಲ್ಲಿ ಮುಳುಗುತ್ತಾನೆ. ಅಂತಹ ಮಾನವರಿಗೆ ಅರಿವಿನ ಕೊರತೆ ಇರುತ್ತದೆ ಎಂದು ಹೇಳುತ್ತಾನೆ. ಕುರಿಗಳಲ್ಲಿ ಒಂದೇ ರೀತಿಯ ಕುರಿಗಳು ಇರುವುದಿಲ್ಲ. ಹಾಗೇ ಮನುಷ್ಯರಲ್ಲಿಯೂ ಕೂಡ ಒಂದೇ ವಿಚಾರಧಾರೆದವರು ಇರಲು ಸಾಧ್ಯವಿಲ್ಲ. ಒಬ್ಬರು ಸತ್ಯ ಶುದ್ಧ ಶಾಂತಿ ಪ್ರೀಯರು, ಇನ್ನೂ ಕೆಲವರು ಅಹಂಕಾರ ಭಾವನೆದವರು, ಮತ್ತೆ ಕೆಲವರು ದುಷ್ಟರು, ಅಜ್ಞಾನಿಗಳು ಇರುತ್ತಾರೆ. ಮನುಜ ಪಥ ಬಿಟ್ಟು ಅವಗುಣ ಬೆಳೆಸುಕೊಂಡು ಹೋಗುವರನ್ನು ನ್ಯಾಯಪಥಕ್ಕೆ ಬರುವಂತೆ ಸೂಚಿಸುತ್ತಾನೆ. ಕುರಿಯ ಹಿಂಡು ತೊರೆದು ಅಡ್ಡದಾರಿ ಹಿಡಿದು ಹೋಗುವ ಸೊಕ್ಕೇರಿದ ಟಗರನ್ನು ಕೋಲಿನಿಂದ ಬಾರಿಸಿ ಸತ್ಪಥದಲ್ಲಿ ಹೋಗುವಂತೆ ತಿರುಗಿಸುತ್ತೇನೆಂದು ಹೇಳುತ್ತಾನೆ. ಹಾಗೇ ಮನುಷ್ಯ ಕೂಡ ಸಾರ್ಥಕ ಜೀವನಕ್ಕೆ ಅವಶ್ಯವಾದ ಸದ್ಗುಣಗಳಿಗೆ ಒಳಗೊಳ್ಳದ ಕಾರಣ ಒಮ್ಮೊಮ್ಮೆ ಕೆಟ್ಟ ಪ್ರವೃತ್ತಿಗಳಿಗೆ ದಾಸನಾಗುತ್ತಾನೆ. ಅಂತಹ ದಾರಿಬಿಟ್ಟವರನ್ನು ಸರಿಪಡಿಸಲು ಪ್ರಜ್ಞಾವಂತರ ಅಗತ್ಯವಿದೆ. ಎಲ್ಲಿ ಕತ್ತಲೆ ಆವರಿಸುತ್ತದೆಯೋ ಅಲ್ಲಿ ಸುಜ್ಞಾನದ ಬೆಳಕು ಹರಿಯಬೇಕು, ಅಂತಹ ಕೋಲು ನಮ್ಮ ಕೈಯಲ್ಲಿ ಇರಬೇಕು ಎನ್ನುವ ರೂಪಕದ ನುಡಿಗಳು ಶರಣರು ಹೇಳುತ್ತಾರೆ. ಜೀವನದ ಸತ್ಪಥ ಕಂಡುಕೊಳ್ಳದವರು ಮದ, ಮತ್ಸರ, ಅಹಂಕಾರ ಎಂಬ ವ್ಯಸನಗಳಿಗೆ ಒಳಪಡುತ್ತಾರೆ. ಸೊಕ್ಕೇರಿದ ಟಗರು ಹಾಗೇ ಮನುಷ್ಯ ಕೂಡ ಒಮ್ಮೊಮ್ಮೆ ತನ್ನ ನೀಚ ಬುದ್ಧಿ, ಕೌರ್ಯ, ಹಿಂಸೆ, ಶೌರ್ಯ ಪ್ರದರ್ಶಿಸಲು ಮುಂದಾಗುತ್ತಾನೆ.ಇಂತಹ ದುರ್ಗುಣ, ದುರ್ಬುದ್ಧಿಯನ್ನು ಸರಿಪಡಿಸಲು ಶರಣರ ಮಾರ್ಗದರ್ಶನ, ಒಡನಾಟ, ತೀರ ಅಗತ್ಯವಿದೆ. ಇಂದು ಸಮಾಜದಲ್ಲಿ ಜೀವಪರ, ಜನಪರ ವಿಚಾರಧಾರೆಯ ವ್ಯಕ್ತಿತ್ವಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಮದವೇರಿದ ಟಗರುಗಳ ಸೊಕ್ಕು ಮುರಿಯಲು ಅಹಿಂಸೆಯೇ ಪರಮ ಅಸ್ತ್ರವಾಗಿದೆ. ಅದನ್ನು ಸಂಪ್ರೀತಿ, ಸುಜ್ಞಾನದ ದಾರಿ ಎಂದು ಕರೆಯುತ್ತೇವೆ. ಕುರಿಗಳ ಹಿಂಡಿನೊಳಗೆ ತಿರುಗಾಡುವ ಅನುಭಾವಿ ವಚನಕಾರ ವೀರಗೊಲ್ಲನು ಕುರಿಗಳ ಜೊತೆಗಿನ ತನ್ನ ಒಡನಾಟದ ಅನುಭವ ತತ್ವಸಾರ ಮನುಷ್ಯನ ಬದುಕಿಗೆ ಕೇಂದ್ರಿಕರಿಸಿ ಬೋಧಿಸಲು ಪ್ರಯತ್ನಿಸುತ್ತಾನೆ. ಈ ವಿಕಾರ ಬಿಡಿಸಿ ನನ್ನೊಳಗೆ ಅಡಗಿರುವ ಘನಜ್ಞಾನ ಕರುಣಿಸು, ನಿನ್ನ ನಿಜ ಸ್ವರೂಪ ತೋರುವ ಮೂಲಕ ನನ್ನ ಅರಿವಿನ ಬೆಳಕು ತೋರಯ್ಯಾ ಎಂದು ಬೇಡುತ್ತಾನೆ. ದೇವರ ದಿವ್ಯ ಜ್ಞಾನಕ್ಕಾಗಿ ‘ಶರಣ ಮಾರ್ಗ’ದಲ್ಲಿ ಇರಿಸು ನನ್ನೊಡೆಯನೇ ಎಂದು ಆಧ್ಯಾತ್ಮ ಗುರು ವೀರಬೀರೇಶ್ವರನಲ್ಲಿ ಬಿನ್ನಹಿಸಿಕೊಳ್ಳುತ್ತಾನೆ. ಬಸವಣ್ಣನವರ ಸ್ಥಾಪಿಸಿದ ಶರಣಮಾರ್ಗ ಸಾತ್ವಿಕ ಬದುಕಿನ ಸತ್ಪಥ ತೋರಿಸುತ್ತದೆ. ಶರಣರು ಕಾಯಕದ ಮೂಲಕ ಆತ್ಮಜ್ಞಾನ ಪಡೆದುಕೊಂಡು ದೈನಂದಿನ ಜೀವನಕ್ಕೆ ಒಳಗೊಳ್ಳುವಂತೆ ಸೂಚಿಸುತ್ತಾರೆ. ಜೀವನದಲ್ಲಿ ಎದುರಾಗುವ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇದ್ದೆ ಇರುತ್ತದೆ. ಆದರೆ ಪರಿಹಾರ ಕಂಡುಕೊಳ್ಳಲು ಬಹುತೇಕರು ವಿಫಲರಾಗುತ್ತಾರೆ. ಅದಕ್ಕೆ ಜ್ಞಾನ, ತಾಳ್ಮೆ, ಕಾಲ, ಸತ್ಯ ಮತ್ತು ಧೈರ್ಯದ ಅಗತ್ಯವಿದೆ. ಕಾಯಕದ ಅನುಭಾವದ ಮೂಲಕ ಜ್ಞಾನ ಚೈತನ್ಯ ವೃದ್ಧಿಸಿಕೊಳ್ಳಲು ಸಾಧ್ಯವಾಗಿದೆ. ಈ ದಿಸೆಯಲ್ಲಿ ಬಸವಾದಿ ಶರಣರು ಜೀವನ ಚೈತನ್ಯರಾಗಿ, ವಿಶ್ವಮಾನವರಾಗಿ ಜಗತ್ತಿಗೆ ಮಾದರಿಯಾಗಿದ್ದಾರೆ. ಶರಣರ ಜೀವನ ದರ್ಶನದ ಅನುಭಾವ ಸಾರ್ವಕಾಲಿಕ ಸತ್ಯವಾಗಿದೆ‌. ಶರಣರ ವಚನ ಅನುಭವದ ಮಾನವೀಯ ಮೌಲ್ಯಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿವೆ. “ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು.” ಶರಣ ವೀರಗೊಲ್ಲಾಳ ಮತ್ತೊಂದು ವಚನದಲ್ಲಿ ಕಲ್ಲು, ಮಣ್ಣು, ಮರ ದೇವರಲ್ಲ, ಕಲ್ಲು ದೇವರು ಉಳಿಗೆ ಹೆದರಿತು, ಮರ.ದೇವರು ಉರಿಗೆ ಬೆಂದಿತು, ಮಣ್ಣು ದೇವರು ನೀರಿನಲ್ಲಿ ಕರಗಿತು. ಇಂತಹ ದೇವರು ದೇವರಲ್ಲ ಎನ್ನುವ ತಾತ್ವಿಕ ಚಿಂತನೆ ಶರಣ ವೀರಗೊಲ್ಲನು ದಾಖಲಿಸುತ್ತಾನೆ. ಒಬ್ಬ ಸಾಮಾನ್ಯ ಕಾಯಕ ಜೀವಿ, ಇಂತಹ ಅನನ್ಯವಾದ ತತ್ವಪರಿಭಾಷೆಯ ವಚನಗಳು ರಚಿಸಿರುವುದು ಈ ನೆಲದ ಹೆಮ್ಮೆ ಎಂದಷ್ಟೇ ಹೇಳಬಹುದು. ಶರಣರ ಸಂದೇಶಗಳನ್ನು ಮತ್ತೆ ಮುನ್ನೆಲೆಗೆ ಬಂದರೆ ಈ ನೆಲ ಶಾಂತಿ, ಸೌಹಾರ್ದತೆ ಹಾಗೂ ಕಲ್ಯಾಣ (ಸಮ ಸಮಾಜ) ರಾಜ್ಯವಾಗಿ ರೂಪುಗೊಳ್ಳಲು ಸಾಧ್ಯವಿದೆ. *****************************

ಸಜ್ಜನರ ಸಂಗ ಲೇಸು ಕಂಡಯ್ಯಾ…! Read Post »

ಇತರೆ, ಪ್ರಬಂದ

ಪಾತ್ರೆಗಳ ಲೋಕದಲ್ಲಿ..

ಲಲಿತ ಪ್ರಬಂಧ ಪಾತ್ರೆಗಳ ಲೋಕದಲ್ಲಿ.. ಜ್ಯೋತಿ ಡಿ.ಬೊಮ್ಮಾ. ಹಬ್ಬಗಳಲ್ಲೆ ದೊಡ್ಡ ಹಬ್ಬ ದಸರಾ .ನಮ್ಮ ಉತ್ತರ ಕರ್ನಾಟಕದಲ್ಲಿ ಮತ್ತು ಮಹಾರಾಷ್ಟ್ರದ ಕೆಲವು ಕಡೆ ಈ ಹಬ್ಬವನ್ನು ಅಂಬಾ ಭವಾನಿಯ ಹೆಸರಿನಲ್ಲಿ ಆಚರಿಸಲಾಗುತ್ತದೆ.ಪ್ರತಿಯೊಬ್ಬರ ಮನೆಗಳು ದಸರಾ ಹಬ್ಬಕ್ಕೆ ಸುಣ್ಣ ಬಣ್ಣ ಬಳಿದುಕೊಂಡು ದೇವಿಯ ಪ್ರತಿಷ್ಟಾಪನೆಗೆ ಸಜ್ಜುಗೊಳ್ಳುತ್ತವೆ. ನಾವು ಚಿಕ್ಕವರಿದ್ದಾಗ ಮನೆಗೆ ಸುಣ್ಣ ಬಣ್ಣ ಮಾಡುವ ಸಂದರ್ಭ ತುಂಬಾ ಸಂತೋಷದಾಯಕವಾಗಿರುತಿತ್ತು.ಆ ಸಂದರ್ಭ ದಲ್ಲಿ ಮನೆಯೊಳಗಿನ ಎಲ್ಲಾ ವಸ್ತುಗಳು ಅಂಗಳಕ್ಕೆ ಬಂದು ಬೀಳುತಿದ್ದವು. ಮನೆಯ ಹಿರಿಯರು ಡಬ್ಬದೊಳಗಿನ ದವಸ ಧಾನ್ಯಗಳನ್ನು ಒಣಗಿಸಿ ಪಾತ್ರೆಗಳನ್ನು ತೊಳೆಯುವಲ್ಲಿ ವ್ಯಸ್ತರಾದರೆ , ಚಿಕ್ಕವರು ಕೈ ಕಾಲಿಗೆ ತೊಡರುವ ಪಾತ್ರೆಗಳ ನಡುವೆ ಸಂಭ್ರಮ ದಿಂದ ಓಡಾಡುತ್ತ ಎನೋ ಖುಷಿ ಅನುಭವಿಸುತ್ತಿದ್ದೆವು.ತಮ್ಮ ಮುರಿದ ಹೋದ ಆಟಿಕೆಗಳು ಹಳೆ ಪುಸ್ತಕಗಳು ಎಂದೋ ಕಳೆದು ಹೋದ ಪೆನ್ನು ಪೆನ್ಸಿಲ್ ಗಳು ಸಿಕ್ಕಾಗ ಅವನ್ನು ಹೆಕ್ಕಿ ತೆಗೆದು ಜೋಪಾನವಾಗಿ ಎತ್ತಿಕ್ಕಿಕೊಂಡು ಸಂಭ್ರಮಿಸುತಿದ್ದೆವು.ಆಗ ಆ ಹಳೆಯ ಮುರಿದ ವಸ್ತುಗಳಲ್ಲಿ ಕಂಡುಕೊಳ್ಳುತ್ತಿದ್ದ ಖುಷಿ ಈಗಿನ ಯಾವ ವಸ್ತುವಿನಲ್ಲು ದೊರಕದು. ಮನೆ ಕ್ಲೀನ್ ಮಾಡುವ ಸಂದರ್ಭದಲ್ಲಿ ಹಿರಿಯರು ಕಿರಿಯರು ಎಲ್ಲರೂ ಸಕ್ರಿಯವಾಗಿ ಭಾಗವಹಿಸುವವರೆ.ಕೆಲಸದ ಒತ್ತಡದ ನಡುವೆಯೂ ಏನೋ ಸಂಭ್ರಮ. ಮನೆಯ ಮೂಲೆ ಮೂಲೆಗಳನ್ನೆಲ್ಲ ಸ್ವಚ್ಛಗೊಳಿಸಿ ಮನೆಗೆ ಸುಣ್ಣದ ಬಿಳಿಯ ಹೊಳಪು ಕೊಟ್ಟಾಗ ಮನೆಯೊಂದಿಗೆ ಮನೆಯವರಲ್ಲೂ ಹೊಸತನದ ಅನುಭೂತಿ ಮೂಡುತಿತ್ತು. ಅಟ್ಟದ ಮೇಲಿನ ಬಳಸದೆ ಇರುವ ತಾಮ್ರ ಹಿತ್ತಾಳೆ ಪಾತ್ರೆಗಳನ್ನೆಲ್ಲ ತೆಗೆದು , ಉಪ್ಪು ಹುಣಸೆಹಣ್ಣಿನಿಂದ ತಿಕ್ಕಿ ಹೊಳಪು ಬರಿಸಿ ಬಿಸಿಲಿಗೆ ಒಣಗಿಸಿ ಮತ್ತೆ ಅಟ್ಟದಲ್ಲೆ ವಿರಾಜಮಾನವಾಗಿಸುವದು ಒಂದು ಮಹತ್ಕಾರ್ಯವೆ .ಮನೆಯೊಳಗಿನ ಹೊಸ ಹಳೆ ಪಾತ್ರೆಗಳನ್ನು ತಿಕ್ಕುತ್ತ ಅಮ್ಮ ಅಜ್ಜಿಯರು ತಮ್ಮ ಜೀವಮಾನದೊಂದಿಗೆ ಸಾಗಿ ಬಂದ ಪಾತ್ರೆಗಳ ಲೋಕದಲ್ಲಿ ವಿಹರಿಸುತಿದ್ದರು. ಎಷ್ಟೊ ವರ್ಷದಿಂದ ಬಳಸಿ ಸವಕಲಾದ , ಹಿಡಿಕೆ ಮುರಿದ ,ನೆಗ್ಗು ಬಡಿದ ಪಾತ್ರೆಗಳು ಉಪಯೋಗಕ್ಕೆ ಬರದಿದ್ದರು ಬಿಸಾಡುವ ಮನಸ್ಸಾಗದೆ ಒಂದು ದೊಡ್ಡ ಡಬ್ಬದಲ್ಲಿ ತುಂಬಿಡಲಾಗುತಿತ್ತು.ಜೀವಮಾನದ ಇಡುಗಂಟಿನಂತೆ. ನನಗೆ ತಿಳುವಳಿಕೆ ಬಂದ ನಂತರ ಮನೆಯ ಅನುಪಯುಕ್ತ ಪಾತ್ರೆಗಳನ್ನೆಲ್ಲ ಗುಜರಿಗೆ ವರ್ಗಾಯಿಸಿದಾಗ ನನಗೂ ಅಮ್ಮನಿಗೂ ರಂಪಾಟವೆ ಆಗಿತ್ತು.ಹಳೆತನವೆಂದರೆ ಹಾಗೆ ಎನೋ ,ಇಟ್ಟುಕೊಳ್ಳಲು ಆಗದೆ ಬಿಸಾಡಲು ಆಗದೆ ಇಬ್ಬಂದಿತನ.ಆದರೂ ವಸ್ತುಗಳೆ ಆಗಲಿ ವ್ಯಕ್ತಿಯೆ ಆಗಲಿ ಹಳತಾದಂತೆ ನಮ್ಮೊಂದಿಗೆ ಬೆಸೆದು ಬಿಡುತ್ತವೆ.ನಮ್ಮೊಂದಿಗೆ ಒಂದಾಗಿ ಬಿಡುತ್ತವೆ. ನಿರ್ಜೀವ ಪಾತ್ರೆಗಳು ಒಂದೊಂದು ಪದಾರ್ಥಗಳ ಹೆಸರಿನಿಂದ ಕರೆಸಿಕೊಳ್ಳುತ್ತವೆ.ಹಾಲಿನ ಪಾತ್ರೆ ಮೊಸರಿನ ಗಿಂಡಿ ,ಮಜ್ಜಿಗೆ ಗ್ಲಾಸ್ , ಅನ್ನದ ತಪ್ಪಲೆ ,ಸಾರಿನ ಬೋಗುಣಿ ,ಪಲ್ಯದ ಕಡಾಯಿ ಇನ್ನೂ ಅನೇಕ..ಪ್ರತಿ ಮನೆಯಲ್ಲೂ ಪಾತ್ರೆಗಳು ಕೇವಲ ಪಾತ್ರೆಗಳಾಗಿರದೆ ಆ ಮನೆಯ ಗೃಹಿಣಿಯರ ಒಡನಾಡಿಗಳಾಗಿರುತ್ತವೆ.ಮನೆಯವರ ಹಸಿವು ತಣಿಸುವ ಅಕ್ಷಯ ಪಾತ್ರೆಗಳಾಗಿರುತ್ತವೆ. ಮನೆಯಲ್ಲಿರುವ ಹಣ ಒಡವೆಯ ನಿಖರವಾದ ಸಂಖ್ಯೆಯ ನೆನಪು ಇರದಿರಬಹುದು.ಆದರೆ ತಮ್ಮ ಮನೆಯಲ್ಲಿರುವ ಪಾತ್ರೆಗಳ ತಟ್ಟೆ ಲೋಟಗಳು ಎಷ್ಟಿವೆ ಎಂದು ನೆನಪಿರದ ಗೃಹಿಣಿ ಇರಲಿಕ್ಕಿಲ್ಲ.ಸಾಕಷ್ಟು ಪಾತ್ರೆಗಳಿದ್ದರು ಅದರಲ್ಲಿ ಒಂದು ಕಾಣೆಯಾದರು ಅಥವಾ ಪಕ್ಕದ ಮನೆಯವರಿಗೆ ಕೊಟ್ಟಿದ್ದರು ಅವರು ವಾಪಸು ಕೊಡುವದು ಸ್ವಲ್ಪ ತಡವಾದರು ನೆನಪಿಸಿ ಪಡೆದುಕೊಳ್ಳುವದರಲ್ಲಿ ಮುಜುಗುರ ಪಟ್ಟುಕೊಳ್ಳಲಾರೆವು. ನಾಗರಿಕತೆ ಬದಲಾದಂತೆಲ್ಲ ಪಾತ್ರೆಗಳು ಬದಲಾದವು.ಈಗ ಇರುವ ನಾನ್ ಸ್ಟಿಕ್ ಪಾತ್ರೆಗಳು ಮುಟ್ಟಿದರೆ ಜರುಗುವಂತಹವು.ನನಗೆ ಸ್ಟೀಲ್ ಮತ್ತು ಅಲೂಮಿನಿಯಮ್ ಪಾತ್ರೆಗಳ ಮೇಲೆ ಇರುವ ಮಮತೆ ಈ ನಾನ್ ಸ್ಟಿಕ್ ಪಾತ್ರೆಗಳ ಮೇಲೆ ಮೂಡಲೆ ಇಲ್ಲ. ಈಗ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಆಹಾರ ಹೊರಗಿನಿಂದ ಕಟ್ಟಿಸಿಕೊಂಡು ಬಂದು ಬಿಚ್ಚಿ ಅದರಲ್ಲೆ ಊಟ ಮಾಡುವ ಧಾವಂತದ ಜನರಿಗೆ ಪಾತ್ರೆಗಳ ಅವಶ್ಯಕತೆಯು ಅಷ್ಟಾಗಿ ಕಾಣದು. ಹಿಂದಿನವರಂತೆ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಬೇಯಿಸುವ ಅವಿಭಕ್ತ ಕುಟುಂಬಗಳು ಕಾಣೆಯಾಗಿವೆ .ಇಬ್ಬರು ನಾಲ್ವರು ಇರುವ ಮನೆಗಳಲ್ಲಿ ಇರುವ ಪಾತ್ರೆಗಳು ಅವರ ಎರಡರಷ್ಟೆ. ಕೆಲವರು ಪಾತ್ರೆಗಳನ್ನು ತೊಳೆಯುವ ತಾಪತ್ರಯ ತಪ್ಪಿಸಿಕೊಳ್ಳಲು ಬಳಸಿ ಬಿಸಾಡುವ ತಟ್ಟೆ ಲೋಟಗಳನ್ನೆ ದಿನಾಲು ಉಪಯೋಗಿಸುವರು. ಕೆಲಸದ ಹೊರೆ ಕಡಿಮೆಯಾದಷ್ಟೂ ಮಾಲಿನ್ಯ ಹೆಚ್ಚುತ್ತಲೆ ಇದೆ. ಮಹಿಳೆಯರಿಗೂ ಮತ್ತು ಪಾತ್ರೆಗಳಿಗೂ ಇರುವ ನಂಟು ನಿರಂತರ ಬೆಸೆದಿರುವದು.ಬೆಳಗಾದರೆ ಗೃಹಿಣಿಯರ ಕೈಯಲ್ಲಾಡುವ ಪಾತ್ರೆಗಳ ಟಿನ್ ಟಿನಿ ನಾದ ಪ್ರತಿ ಮನೆಯ ಸುಪ್ರಭಾತ.ಅದರೊಂದಿಗೆ ಮನೆಯವರ ಮತ್ತೊಂದು ಭರವಸೆಯ ಬೆಳಕಿನ ಉದಯ. ******************************************************

ಪಾತ್ರೆಗಳ ಲೋಕದಲ್ಲಿ.. Read Post »

ಇತರೆ, ಜೀವನ

ಖುಷಿ ನಮ್ಮಲ್ಲೇ!!!

ಲೇಖನ ಖುಷಿ ನಮ್ಮಲ್ಲೇ!!! ಮಾಲಾ ಅಕ್ಕಿಶೆಟ್ಟಿ  ಕೈಯಲ್ಲಿ10 ರ ನೋಟು ಹಿಡಿದುಕೊಂಡು ಬಡ ಹುಡುಗ ರೋಡ್ ಮೇಲೆ ಇರುವ ಭಜಿ ಅಂಗಡಿಗೆ ಬಂದಿದ್ದ. ಆಸೆ ಕಂಗಳಿಂದ ಮೂರು ತರಹದ ಭಜಿ, ‌ಅಂದರೆ ‌ಕಾಂದಾ, ‌ಮಿರ್ಚಿ ‌ಮತ್ತು ‌ಮೈಸೂರ ‌ಭಜಿಯನ್ನು ‌‌ಒಂದೇ ‌ಸಮನೇ ನೋಡಿದ. ‌ಆ ‌ಅಂಗಡಿಯಲ್ಲಿ 4 ‌ಭಜಿಗಳ ‌ಪ್ಲೇಟ್ಗೆ 20 ‌ರೂಪಾಯಿ.ಒಂದು ಭಜಿಯನ್ನು ಕೊಡುವ ಸೌಲಭ್ಯವಿರುವದರಿಂದ 5ರೂಪಾಯಿಗೆ ‌ಯಾವುದಾದರು ‌ಭಜಿ ‌ತಿನ್ನಬಹುದು.ಆತ ‌ಡಿಸೈಡ್ ‌ಮಾಡಿ 5 ರೂ ‌ಕೊಟ್ಟು ‌ಮಿರ್ಚಿ ‌ಭಜಿಯನ್ನು ಸವಿದ.ಬಸಿಯಾಕಾರದಲ್ಲಿ ಕಣ್ಣು ತೆರೆದು, ಬಾವಿಯಂಥ ಬಾಯಲ್ಲಿ ಹಾಕಿ ಸುತ್ತಲೂ ನೋಡುತ್ತಾ ‌‌ಭಜಿಯನ್ನು ‌ಆತ್ಮೀಯತೆಯಿಂದ ಅನುಭವಿಸಿದ. ಹೊರಗೆ ‌ಧೋ ‌ಧೋ ಅನ್ನುವ ಎಡಬಿಡದ ಮಳೆ, ಅಲ್ಲಲ್ಲಿ ಛತ್ರಿಗಳ ಸಹಾಯದಿಂದ ಜನರ ಓಡಾಟ,‌ ‌ಜೋರ ‌ಮಳೆಯಲ್ಲಿ,ರೋಡ ‌ಖಾಲಿಯಾದ್ದರಿಂದ, ‌ಬುರ್ ಬುರ್ ಎಂದು ಹೋಗುವ ವಾಹನಗಳು ಮಳೆಗೆ ಕಳೆ ತಂದಿದ್ದವು.ಆ ಚಿಕ್ಕ ಅಂಗಡಿಯಲ್ಲಿ ಎಲ್ಲರೂ ಜಮಾಯಿಸಿ ಮಳೆ ನಿಂತರಾಯ್ತು,‌‌ ಹೊರಗೆ ಕಾಲಿಡುವಾ ಅನ್ನುವ ಸಾಂದರ್ಭಿಕ ನಿರ್ಣಯ. ಇನ್ನೂ 5 ‌ರೂಪಾಯಿ ಉಳಿದಿತ್ತಲ್ಲ, ‌ಅದರಿಂದ ಮೈಸೂರು ‌ಭಜಿ ತೆಗೆದುಕೊಂಡು ಬೇಕಾದಷ್ಟು ಸಾಸ್ ‌ಮೆತ್ತಿಸಿ,‌ ಮತ್ತೆ ಆನಂದದಿಂದ ಸವಿದ.ಇವನೊಂದಿಗೆ ಬಂದ ಇನ್ನುಳಿದ ಎರಡು ಹುಡುಗರೂ ‌ಥೇಟ್ ‌ಇವನಂಗೆ ‌ಸಂತೋಷ. ಅಬ್ಬಾ!!! ‌‌5 ರೂನಲ್ಲಿ ಒಂದು ‌ಭಜಿ ಕೊಡುವ ಆನಂದ ಯಾವ ಫೈವ್ ‌ಸ್ಟಾರ್ ಹೋಟೆಲ್ ನಲ್ಲಿ ಸಿಗುತ್ತೆ?                            ರೋಡಿನಲ್ಲಿಯ ಗೂಡಂಗಡಿಗಳಲ್ಲಿ ಆಹಾರ ಸರಿಯಿರಲ್ಲ,‌low quality ಎಣ್ಣೆ, ಕಾಳು, ಹಿಟ್ಟು ಬಳಸಿರುತ್ತಾರೆ, ಸ್ವಚ್ಛತೆ ಕಡಿಮೆ, ಆರೋಗ್ಯಕ್ಕೆ ಹಾನಿ ಎನ್ನುವುದೇನೋ ಸರಿ. ಆದರೆ ದೊಡ್ಡ ದೊಡ್ಡ ಹೋಟೆಲ್ಗಳಲ್ಲಿಯ ಎಣ್ಣೆ, ಕಾಳು, ಹಿಟ್ಟು ಸ್ವಚ್ಛತೆಯನ್ನು ಸಾಮಾನ್ಯನು ‌ಪರೀಕ್ಷಿಸಲಾಗುತ್ತಾ? ಹೊರಗಡೆ ಲಕಲಕ ಹೊಳೆದು ಒಳಗೆ ರೋಡ್ ಅಂಗಡಿಗಿಂತ  ‌ಕೀಳಿದ್ದರೆ ವ್ಯತ್ಯಾಸವೇನು? 5 ರೂ ನಲ್ಲಿ ಸಿಗುವ ಇಂಥದ್ದೇ ‌ಭಜಿ, ದೊಡ್ಡ ಹೋಟೆಲ್ ನಲ್ಲಿ ‌ಸುಮಾರು ‌20 ರೂಪಾಯಿ‌ಯಾದರೂ ಇರುತ್ತೆ. ಲೋ ಕ್ವಾಲಿಟಿ ಎಂದು ಬಡ ಹುಡುಗ ನಿಂತರೆ, ಎಂದು ‌ಆತ ಒಂದು ‌ಭಜಿ ‌ತಿಂದಾನು? ರೋಡ್ ನಲ್ಲಿ ತಿಂದ ಎಲ್ಲರ ಆರೋಗ್ಯ ಹಾಳಾಗುವುದರೆ, ಹೋಟೆಲ್ನಲ್ಲಿ ತಿಂದವರಿಗೆ ರೋಗವೇ ಬರಲ್ಲವೇ? ಅಥವಾ ದೊಡ್ಡ ಹೋಟೆಲ್ ನಲ್ಲಿ ತಿಂದವರ ಆರೋಗ್ಯ ಎಂದೂ ಕೊಡುವುದಿಲ್ಲವೇ? ಒಟ್ಟಾಗಿ ಹೇಳುವ ತಾತ್ಪರ್ಯ ಅವರವರ ಇಮ್ಯೂನಿಟಿ ಪವರ್ ಮೇಲೆ ಆರೋಗ್ಯ ನಿಂತಿದೆ.          ಬಡವನೊಬ್ಬ ಒಳ್ಳೆ ಹೋಟೆಲ್ ನಲ್ಲೇ ತಿನ್ನಬೇಕೆಂದರೆ ಎಷ್ಟು ಜನ್ಮ ಆತ ಕಾಯಬೇಕು? ಯಾರಿಗ್ಗೊತ್ತು? ರೋಡ್ ನಲ್ಲಿಯ ‌ಅಂಗಡಿಗಳಿಂದ ಎಟ್ಲೀಸ್ಟ್ ಈ ‌ಈ ತಿನಿಸುಗಳು ಹೀಗೆಯೇ ಇರುತ್ತವಪ್ಪಾ  ಎನ್ನುವ ಕಲ್ಪನೆಯಾದರೂ ಬಡವರಿಗೆ ಬಂದೀತು. ಇಲ್ಲಾದರೆ ರುಚಿ ಕೂಡ ‌ಬರೀ ಕಲ್ಪನೆಯಲ್ಲಿ ಅನುಭವಿಸಬೇಕಾಗಬಹುದು.ದೊಡ್ಡ ಹೋಟೆಲ್ ನಲ್ಲಿ ಇಬ್ಬರ ನಾಷ್ಟಾ ಸುಮಾರು 600 ರೂಪಾಯಿ.‌ಇದು ಬಡವನ ‌ತಿಂಗಳ ‌ಸಂಬಳವೂ ಹೌದು.        ಈ ‌ದೊಡ್ಡ ಹೋಟೆಲ್ ನಲ್ಲಿ ಇದನ್ನು ತಿಂದೇ, ಇಷ್ಟು ಬಿಲ್ ‌ಬಂತು, ‌ಆದ್ರೂ ಎಂಜಾಯ್ ಮಾಡಿದೆ ಎನ್ನುವ, ಅದೇ ಒಂದು ಸಿನಿಮಾ ಸಾಮಾನ್ಯ ಥೇಟರ್ನಲ್ಲಿ ನೋಡಲು ಸಿಕ್ಕಾಗೂ ಆ ದೊಡ್ಡ ಥಿಯೇಟರ್ನಲ್ಲಿ ನೋಡಿದೆ, ಫಸ್ಟ್ ಡೇ, ಫಸ್ಟ್ ಶೋ ಎಂದು ಒಂದು ಟಿಕೆಟ್ಗೆ ಇಷ್ಟು ದುಡ್ಡಿತ್ತು ಗೊತ್ತಾ? ಆದ್ರೂ ಸಂತೋಷ ಆತು ಅಂತ ಹೇಳುವ ಮನುಜರು ಇದ್ದಾರೆ. ಇರಲಿ, ಅವರಿಗೆ ಇರುವ ಆದಾಯದ ಮೇಲೆ ಅವರು ಆಯಾ ಹೋಟೆಲ್ ಹಾಗೂ ಥಿಯೇಟರ್ಗಳಿಗೆ ಹೋಗುತ್ತಾರೆ ಎನ್ನೋಣ. ಆದರೆ ತಾವು ಮಾಡಿದ್ದೇ ಶ್ರೇಷ್ಠ, ಬೇರೆಯವರದು ಕನಿಷ್ಠ ಅಂದರೆ ಹೇಗೆ? ಎಷ್ಟೋ ಶ್ರೀಮಂತರ ಮನೆಯಲ್ಲಿ ಲಕ್ಷ್ಮಿ ಕಾಲುಮುರಿದುಕೊಂಡು ಬಿದ್ದಿದ್ದರೂ ದುಂದು ವೆಚ್ಚ ಮಾಡಿಲ್ಲ. ದೊಡ್ಡ ಹೋಟೆಲ್ ಅಥವಾ ಥೇಟರ್ ಗಳ ವಿರೋಧ ಇಲ್ಲಿ ಇಲ್ಲ. ಆದರೆ ಅಂಥದ್ದೇ ವಾತಾವರಣ ಸಾಮಾನ್ಯ ಸ್ಥಿತಿಯಲ್ಲಿ ಬಡವರಿಗೆ ಸಿಕ್ಕಾಗ ಅದನ್ನು ಶ್ಲಾಘೀಸೋಣ ಎನ್ನುವ ಕಳಕಳಿ.ಅದು ಅವರ ದುಡ್ಡು, ಹೇಗಾದರೂ ಖರ್ಚು ಮಾಡಿಕೊಳ್ಳಲಿ                           ಸಾಮಾನ್ಯರಿಗೆ ಸಾಮಾನ್ಯವಾದ ವಸ್ತುಗಳು ಈ ಜಗತ್ತಿನಲ್ಲಿ ಸಿಗುತ್ತಿರುವುದರಿಂದಲೇ ಅವರಿಗೂ ಎಲ್ಲದರ ರುಚಿ ಗೊತ್ತಾಗಿದೆ. ಬಡವರಿಂದಲೇ ನಡೆಸಲ್ಪಡುವ ಅಂಗಡಿಗಳು ಬಡವರ ಜೀವಾಳ. ಬಡ ಅಂಗಡಿ ಮಾಲೀಕನಿಗೆ ಹೆಚ್ಚಿನ ಆದಾಯದ ಚಿಂತೆಯಿಲ್ಲ. ತನ್ನಂತೆ ಜನ ಅಂದು ಇದ್ದದ್ದರಲ್ಲೇ ತುಸು ಲಾಭ ಗಳಿಸುವ ಆಸೆ. ಇದರಿಂದ ತನಗೂ ಲಾಭ ಜೊತೆಗೆ ತನ್ನಂಥವನಿಗೆ ಹೊಟ್ಟೆ ತುಂಬಿಸಿದೆ ಅನ್ನುವ ಧನ್ಯತಾ ಭಾವ. ಇಷ್ಟಿಷ್ಟರಲ್ಲೇ ಇಷ್ಟಿಷ್ಟದ ಖುಷಿಯನ್ನು ಹುಡುಕುವ ತವಕ. ಸಂತೃಪ್ತಿ ಜೀವನದ ಸೆಲೆ. ಇವುಗಳನ್ನು ಸ್ವೀಕರಿಸಿ ದೋಷಗಳನ್ನು ಬಹಿರಂಗಪಡಿಸದೇ ಆನಂದಿಸುವ ಘಳಿಗೆ. ಬಹುಶಃ ಇದಕ್ಕೇನೆ ವಿಶಾಲ ಮನೋಭಾವ ಅಂತ ಕರೀಬಹುದು. *************************************

ಖುಷಿ ನಮ್ಮಲ್ಲೇ!!! Read Post »

ಇತರೆ

ನಾವು ಕನ್ನಡಿಗರು’ – ಜಾಗತಿಕ ಸರಪಳಿಯ ಒಂದು ಕೊಂಡಿ

ಲೇಖನ ನಾವು ಕನ್ನಡಿಗರು’ ಜಾಗತಿಕ ಸರಪಳಿಯ ಒಂದು ಕೊಂಡಿ ಗಣೇಶ ಭಟ್ಟ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ಉದ್ದೇಶದಿಂದ ಭಾಷೆ , ಸಂಸ್ಕೃತಿ, ಪರಂಪರೆಯ ಭಾವಧಾರೆಯನ್ನು ಬಳಸಿಕೊಂಡು ಒಗ್ಗಟ್ಟು ಮೂಡಿಸುವ ಪ್ರಯತ್ನವನ್ನು ಪ್ರಾದೇಶಿಕತೆಯನ್ನು ಪ್ರೋತ್ಸಾಹಿಸಿ, ದೇಶವನ್ನು ದುರ್ಬಲಗೊಳಿಸುವ ಕಾರ್ಯವೆಂದು ಕೆಲವರು ಅಕ್ಷೇಪಿಸುತ್ತಾರೆ. ಹಲವು ವಿಧದ ಹೂವುಗಳನ್ನು ಬಳಸಿ ಹಾರ ತಯಾರಿಸಿದಾಗ ಅದರ ಸೌಂದರ್ಯ ಹಾಳಾಗುತ್ತದೆಂದು ಗೊಣಗುವುದು ಸಮಂಜಸವೆನಿಸಲಾರದು. ಪ್ರತಿಯೊಂದು ಹೂವಿಗೂ ಅದರದ್ದೇ ಆದ ಸ್ವರೂಪ, ವೈಶಿಷ್ಟತೆ, ಸೌಂದರ್ಯ ಇದ್ದರೂ ಎಲ್ಲಾ ವಿಧದ ಹೂಗಳನ್ನು ಸಮರ್ಪಕವಾಗಿ ಪೋಣಿಸಿ ಹಾರವನ್ನು ಸುಂದರವಾಗಿಸಲು ಸಾಧ್ಯ. ಅದೇ ರೀತಿಯಲ್ಲಿ ಪ್ರಾದೇಶಿಕ ವೈವಿಧ್ಯತೆಯನ್ನು ಕಾಪಾಡಿಕೊಂಡು ಸಧೃಡ ಮಾನವ ಸಮಾಜ ನಿರ್ಮಾಣ ಸಾಧ್ಯ. ಇತರ ದೇಶದ ಪ್ರಜೆಗಳನ್ನು ದ್ವೇಷಿಸುವುದರಿಂದಲೇ ತಮ್ಮ ದೇಶದ ಅಸ್ತಿತ್ವ ಉಳಿಯುತ್ತದೆಂಬಂತೆ ವರ್ತಿಸುವವರು ಮಾನವತೆಯ ವಿರೋಧಿಗಳು. ಪ್ರಾದೇಶಿಕತೆಗೆ ಪ್ರಾಶಸ್ತ್ಯ ನೀಡುವುದರಿಂದ ದೇಶದ ಐಕ್ಯತೆ ಹಾಳಾಗುತ್ತದೆಂದು ವಾದಿಸುವವರಿಗೆ ಮಾನವನ ಸ್ವಭಾವ ಮತ್ತು ದೇಶಾಭಿಮಾನದ ನೈಜತೆಯ ಅರಿವು ಇರುವುದಿಲ್ಲ ಅಥವಾ ಜಾತಿ, ಮತಗಳ ಭಾವೋದ್ವೇಗಕ್ಕೆ ಒಳಗಾಗಿರುತ್ತಾರೆ. ‘ ನಾವು ಕನ್ನಡಿಗರು’ ಎಂಬ ಮನೋಭಾವ ಕನ್ನಡ ನಾಡಿನಲ್ಲಿ ವಾಸಿಸುವ ಸಕಲರನ್ನೂ ಒಳಗೊಳ್ಳುವ, ಒಗ್ಗೂಡಿಸುವ ಸೈದ್ಧಾಂತಿಕ ನೆಲೆಗಟ್ಟಿನ ವ್ಯವಸ್ಥಿತ ಪ್ರಯತ್ನ. ಜಗತ್ತಿನ ಪ್ರತಿಯೊಂದು ಮೂಲೆಯಲ್ಲೂ ಆರ್ಥಿಕ ಸಾಮಾಜಿಕ ಅಭಿವೃದ್ಧಿಯಾಗಬೇಕು. ಪ್ರತಿಯೋರ್ವ ವ್ಯಕ್ತಿಗೂ ಉನ್ನತ ಬದುಕಿನ ಅವಕಾಶಗಳು ಲಭ್ಯವಾಗಬೇಕು ಎಂಬ ಆಶಯದ ಈಡೇರಿಕೆಗಾಗಿ ವಿಕೇಂದ್ರಿಕೃತ ಅರ್ಥನೀತಿಯ ಅನುಷ್ಠಾನ ಅನಿವಾರ್ಯ. ಇದಕ್ಕಾಗಿ ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಿ ರೂಪುಗೊಳ್ಳಬಲ್ಲ ಪ್ರದೇಶಗಳನ್ನು ಗುರ್ತಿಸಿ, ಅಲ್ಲಿನ ಭಾಷೆ ಸಂಸ್ಕೃತಿ ಬದುಕಿನ ರೀತಿ ನೀತಿಗಳ ಸಾಮ್ಯತೆಯ ಆಧಾರದ ಮೇಲೆ ಜನರಲ್ಲಿ ಒಗ್ಗಟ್ಟನ್ನು ಮೂಡಿಸುವುದು ಅವಶ್ಯಕ. ಈ ಹಿನ್ನಲೆಯಲ್ಲಿ ಜಗತ್ತಿನಾಧ್ಯಂತ ೨೪೩ ಸ್ವಯಂ ಸ್ವಾವಲಂಬಿ ಸಧೃಡ ಸಾಮಾಜಾರ್ಥಿಕ ಘಟಕಗಳನ್ನು ಗುರ್ತಿಸಲಾಗಿದೆ. ‘ನಾವು ಕನ್ನಡಿಗರು’ ಎಂಬುದು ಸರಪಳಿಯ ಒಂದು ಕೊಂಡಿ. ವಿಶ್ವೈಕ್ಯ ದೃಷ್ಟಿಕೋನದ ಪ್ರಾದೇಶಿಕ ಅಭಿವ್ಯಕ್ತಿಯಾಗಿರುವ ಭಾರತದ ೪೪ ಹೂವುಗಳ ಹಾರದಲ್ಲಿ ‘ನಾವು ಕನ್ನಡಿಗರು’   ಕೂಡ ಒಂದು. ****************************************

ನಾವು ಕನ್ನಡಿಗರು’ – ಜಾಗತಿಕ ಸರಪಳಿಯ ಒಂದು ಕೊಂಡಿ Read Post »

ಇತರೆ

ಸಂತೆಯಲ್ಲಿ ನಿಂತ ಅವಳು

ಲೇಖನ ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು) ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು) ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು)             ಪ್ರಾಚೀನ ಕಾಲದಿಂದ ಇಂದಿನವರೆಗೂ ಮಾರುಕಟ್ಟೆಗೆ ಒಂದು ಆರೋಗ್ಯಕರವಾದ ನೀತಿ ಸಂಹಿತೆಯನ್ನು ರೂಪಿಸುವ ವಿವೇಕ ಮತ್ತು ವ್ಯವಧಾನ ಸಾಮುದಾಯಿಕ ಜವಾಬ್ದಾರಿಯಾಗಿ ಯಾವ ಕಾಲದಲ್ಲಿ ಯಾರಲ್ಲಿಯೂ ಕಾಣಿಸಿಕೊಂಡಿಲ್ಲ. ಆರೋಗ್ಯಕರ ಸಮಾಜಕ್ಕೆ ಲಾಭಗಳಿಕೆಯ ವ್ಯವಹಾರಿಕತೆಯನ್ನು ನಿಯಂತ್ರಿಸುವ ಶಕ್ತಿಯಿಲ್ಲದಿದ್ದರೆ ಇಡೀ ವ್ಯವಸ್ಥೆಯೇ ನರಳಬೇಕಾಗುತ್ತದೆ. ಮಾರುಕಟ್ಟೆ ಸಂಸ್ಕೃತಿ ಗಳಿಕೆಯ ತೂಗು ಕತ್ತಿಯನ್ನು ನಿರಂತರ ಗ್ರಾಹಕನ ಮೇಲೆ ಬೀಸುತ್ತಿರುತ್ತದೆ. ಇದರಿಂದ ವ್ಯಕ್ತಿ ಸಮಾಜಗಳು ಹಲವಾರು ಅಪಾಯಗಳಿಗೆ ಒಳಗಾಗಬೇಕಾಗುತ್ತದೆ.             ಭಾರತೀಯ ಸಮಾಜದಲ್ಲಿ ಹೆಣ್ಣನ್ನು ವ್ಯಕ್ತಿಯೆಂದು ಪರಿಗಣಿಸಿದ ಉದಾಹರಣೆಗಳಿಲ್ಲ. ಚರಿತ್ರೆಯುದ್ದಕ್ಕೂ ಹೆಣ್ಣನ್ನು ವಸ್ತು ಮುಖೇನವೆ ಗುರುತಿಸುವುದು ಯಾವ ಮಹಾತ್ಮರಿಗೂ ಅಪರಾಧವಾಗಿ ಕಾಣಿಸಿಲ್ಲ. ಗಂಡಸು ಸಂಪಾದಿಸಬಹುದಾದ ನಿರ್ಜೀವ ಭೌತಿಕ ವಸ್ತುವಿನಲ್ಲಿ ಹೆಣ್ಣನ್ನು ಪ್ರಭುತ್ವ ಮತ್ತು ಧರ್ಮ ಸತ್ತೆಗಳು ನಿರ್ಲಜ್ವವಾಗಿ ಸೇರಿಸಿಕೊಂಡು ಬಂದಿರುವ ಬಗ್ಗೆ ಯಾವ ಸಮಾಜ ಸುಧಾರಕನ ಸಂಕಟಕ್ಕೆ ನಿಲುಕದ ಹಾಗೇ ಉಳಿದಿದೆ.             ಸರಕು ಸಂಸ್ಕೃತಿಯ ವಿಶೇಷತೆ ಮತ್ತು ಹಿತ ಅಡಗಿರುವುದು ಹೆಣ್ಣನ್ನು ಬಳಸಿಕೊಳ್ಳುವ ವಿಧಾನದಲ್ಲಿ . ಸಾಮಾಜಿಕವಾಗಿ ಹೆಣ್ಣನ್ನು ಬದುಕಿನುದ್ದಕ್ಕೂ ಅನ್ಯರ ಹಂಗಿನಲ್ಲಿರುವ ಬೆಲೆಯುಳ್ಳ ಪ್ರಾಣಿ, ವಸ್ತುವಾಗಿಸಿರುವ ಸಾಮಾಜಿಕ ಬದುಕಿನ ಸಂರಚನೆಯಲ್ಲಿಯೇ ಅಫೀಮಿನಂತಹ ಧರ್ಮ ಮತ್ತು ಹಿಂಸಾವಾದದ ಪ್ರಭುತ್ವದ ಕೌರ್ಯ ಗಟ್ಟಿಗೊಂಡಿದೆ. ಇದನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಸ್ತ್ರೀಯ ಬದುಕಿನ ಸಂಕಥನವನ್ನು ಕಟ್ಟಿಕೊಳ್ಳಲು ಸಾಧ್ಯ. ಮಾರುಕಟ್ಟೆಯಲ್ಲಿ ಮಹಿಳೆ ಕಳೆದು ಹೋಗುತ್ತಿರುವ ಸಂಗತಿ ನಮಗೇನೂ ಹೊಸ ಸಂಗತಿಯಲ್ಲ. ನಮ್ಮ ಪುರಾಣ ಪುಣ್ಯ ಪುರುಷರ ಬೆನ್ನ ಹಿಂದೆ, ಕಣ್ಣ ಮುಂದೆ, ಕಾಲ ಕೆಳಗೆ, ಕಾಲ ಮೇಲೆ ಹೆಣ್ಣನ್ನು ಇಟ್ಟುಕೊಂಡು ದಮನಿಸಿದ ಸಂಗತಿಗಳು ನಮ್ಮ ಸಾಮಾಜಿಕ ಮೌಲ್ಯಗಳೆಂದು ಧರ್ಮ ಮುದ್ರೆಯ ಮೂಲಕ ನಿರಂತರ ಭಕ್ತಿಪೂರ್ವಕವಾಗಿ ಪಠಿಸುವ ಪರಿಪಾಠ ಇಂದಿಗೂ ನಿಂತಿಲ್ಲ.             ಮಹಾಭಾರತದಲ್ಲಿ ಧರ್ಮರಾಯ ಕೈ ಹಿಡಿದ ಹೆಂಡತಿ ದ್ರೌಪದಿಯನ್ನು ಹಿರಿಯರ ಸಮ್ಮುಖದಲ್ಲಿ ಜೂಜಿನಲ್ಲಿ ಪಣಕ್ಕಿಟ್ಟು ಸೋಲುವುದರ ಮೂಲಕ ಧರ್ಮವನ್ನು  ಎತ್ತಿ ಹಿಡಿದ ಕಥೆಯನ್ನು ರಸವತ್ತಾಗಿ ಹೇಳುವ ಮುಂದೆ ದ್ರೌಪದಿಯ ಅಸಹಾಯಕತೆ ನೆನಪಾಗುವುದೇ ಇಲ್ಲ. ಸಪ್ತಪದಿ ತುಳಿದು ಸುಖ-ದುಃಖದಲ್ಲಿ ಸಮವಾಗಿರೆಂದು ಕೈ ಹಿಡಿದು ಬಂದ ಹೆಂಡತಿಯನ್ನು ತುಂಬಿದ ಸಭೆಯಲ್ಲಿ ನಿಲ್ಲಿಸಿ ಪಾತಿವ್ರತ್ಯ ಪರೀಕ್ಷಿಸುವ ರಾಮ ಮಹಾತ್ಮನೆಂದು ಕರೆಯಿಸಿಕೊಂಡಿದ್ದರ ಹಿಂದೆ ಸೀತೆಯ ದಯನೀಯತೆ ಮರೆತು ಹೋಗುತ್ತದೆ. ಸತ್ಯಕ್ಕಾಗಿ ಹರಿಶ್ಚಂದ್ರ ಹೆಂಡತಿಯನ್ನು ಮಾರುವಾಗ ಚಂದ್ರಮತಿ ಅನುಭವಿಸಿದ ಸಂಕಟದ ಅರಿವು ಯಾರ ಹೃದಯಕ್ಕೂ ತಟ್ಟುವುದಿಲ್ಲ. ಯಯಾತಿ ಮಹಾರಾಜ ತನ್ನ ಸ್ತ್ರೀಯರಿಗೆ ಹೆಸರುಳಿಸಿಕೊಳ್ಳುವ ಸಲುವಾಗಿ ದಾನವಾಗಿ ಕುದುರೆ ಕೇಳಿದ ಗಾವಲನಿಗೆ ಹೊಟ್ಟೆಯಲ್ಲಿ ಹುಟ್ಟಿದ ಮಗಳು ಮಾಧವಿಯನ್ನು ದಾನವಾಗಿ ನೀಡಿದ್ದು ಉಳಿದಿರುವುದೇ ಹೊರತು ಮಾಧವಿಯ ಛಿದ್ರಗೊಂಡ ಕನಸುಗಳು ಮರೆತು ಹೋಗಿವೆ.  ಗುರುವಿಗೆ ದಕ್ಷಿಣೆ ಕೊಟ್ಟು ಗುರು ಭಕ್ತಿಯನ್ನು ಮರೆಯುವ ಸಲುವಾಗಿ ಗಾಲವ ರಾಜರಿಂದ ರಾಜರಿಗೆ ಮಾಧವಿಯನ್ನು ಹೆತ್ತು ಕೊಡುವ ಯಂತ್ರದಂತೆ ಮಾರಿ ಕುದುರೆ ಪಡೆಯುತ್ತ ಹೋದ ಸಂಗತಿ ನಮಗೆ ಮಾರಿದ ದಾಖಲೆ ಕಡತಗಳಲ್ಲಿ ಮಿಂಚುತ್ತಿದೆ. ಇಂದಿಗೂ ಗಂಡಸಿನ ಅಹಮ್ಮಿಗೆ ಪೆಟ್ಟು ಬೀಳುವುದೆಲ್ಲ ಆತನ ಒಡೆತನದಲ್ಲಿರುವ ಹೆಂಗಸರನ್ನು ಕುರಿತು ಮಾತನಾಡಿದಾಗ ಮಾತ್ರ.             ನಮ್ಮ ಸುತ್ತ ಮುತ್ತಲೂ ನಡೆಯುತ್ತಿರುವ ಘಟನೆಗಳಿಗೆ ಒಂದಿಲ್ಲಾ ಒಂದು ರೀತಿಯಲ್ಲಿ ಹೆಣ್ಣನ್ನು ತಳುಕು ಹಾಕಲಾಗಿರುತ್ತದೆ. ಹೆಣ್ಣನ್ನು ಮಾರುವ, ಕೊಳ್ಳುವ, ಪಣಕ್ಕಿಡುವ, ಕದ್ದು ಪರಾರಿಯಾಗುವ ವಿಷಯಗಳೆಲ್ಲ ಮಾರುಕಟ್ಟೆಯ ಸಂಸ್ಕೃತಿಯ ಇನ್ನೊಂದು ರೂಪ. ಅಷ್ಟೇ ಅಲ್ಲ ಹೆಣ್ಣನ್ನು ನಿರ್ಜೀವ  ವಸ್ತುವಾಗಿ ಸಂಭೋದಿಸುವುದನ್ನು ಕಾಣಬಹುದು. ಇಂದಿಗೂ ಅದು, ಇದು ಎಂದೇ  ಕರೆಯಲಾಗುತ್ತದೆ. ಅಷ್ಟೇ ಅಲ್ಲ ಎತ್ತು ಕತ್ತೆಗಳನ್ನು ಓಡಿಸಿಕೊಂಡು ಹೋದರು ಎನ್ನುವಂತೆ ಹೆಣ್ಣನ್ನು ಓಡಿಸಿಕೊಂಡು ಹೋಗಲಾಯಿತೆಂದು ಕರೆಯುವುದನ್ನೆಲ್ಲ ನೋಡಿದಾಗ ಹೆಣ್ಣಿನ ಇರುವಿಕೆಯನ್ನು ಸಾಂಸ್ಕೃತಿಕವಾಗಿ ಹೇಗಿದೆಯೆಂಬುದನ್ನು ಮತ್ತೇ ಮತ್ತೇ ವೇದಪುರಾಣಗಳನ್ನು ಉದಾಹರಣೆಗೆ ಬಳಸಬೇಕಾಗಿಲ್ಲ.             ಇಂದು ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಕಾರಣಗಳಿಂದ ಅಭಿವೃದ್ಧಿ ಶೀಲ ದೇಶಗಳು ತಮ್ಮ ಬಹುಮುಖ ಅಸ್ತಿತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿವೆ. ವ್ಯಾಪಾರಿ ಉದ್ದೇಶದಿಂದ ಬರುವ ವ್ಯಕ್ತಿ ಸಂಗತಿಗಳೆಲ್ಲ ಬರಿ ಲಾಭದ ಮೇಲೆ ಕಣ್ಣಿಟ್ಟಿರುತ್ತವೆ. ಲಾಭ ಗಳಿಕೆಗಾಗಿ ಜೀವ ವಿರೋಧಿ ತಂತ್ರಗಳನ್ನೆಲ್ಲ ಯಥೇಚ್ಛವಾಗಿಯೇ ಬಳಸುತ್ತೇವೆ. ಐವತ್ತು ವರ್ಷದ ಹಿಂದೆ ಭಾರತಕ್ಕೆ ಕಾಲಿಟ್ಟ ಬ್ರಿಟಿಷರ ಕೈಯಲ್ಲಿ ತಕ್ಕಡಿ ಉದಾಹರಣೆಗೆ ಮಾತ್ರವಿತ್ತೆಂಬುದನ್ನು  ನೆನಪಿಸಿಕೊಳ್ಳಬೇಕಾಗಿದೆ. ಇಂದು ಮತ್ತೆ ಅದೇ ಅಪಾಯದಲ್ಲಿ ದೇಶ ಸಿಲುಕುತ್ತಿದೆ. ವ್ಯಕ್ತಿ ಹಿತಾಸಕ್ತಿಯ ರಾಜಕಾರಣಕ್ಕೆ ಯಾವುದೇ ತಾತ್ವಿಕ ಬದ್ಧತೆಯಿಲ್ಲದೆ ಇರುವುದರಿಂದ ಏನೆಲ್ಲ ಆಪತ್ತುಗಳನ್ನು ಆಹ್ವಾನಿಸಿದ್ದೇವೆ. ವಿಶ್ವ ವಾಣಿಜ್ಯ ನೀತಿಗೆ ಒಪ್ಪಿಗೆ ನೀಡುವಾಗ ನಮ್ಮ ದೇಶದ ಆರ್ಥಿಕ, ಸಾಮಾಜಿಕ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಧಕ್ಕೆ ಭವಿಷ್ಯತ್ತಿನಲ್ಲಿ ಬರಬಹುದೆಂಬ ಮುಂಜಾಗರೂಕತೆ, ಮುಂದಾಲೋಚನೆಗಳಿಲ್ಲದೆ ವಧಾಸ್ಥಾನಕ್ಕೆ ಬಂದು ನಿಂತಿರುವೆವು. ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿಯನ್ನು ಹಾಸಿ ನಡುಮನೆಗೆ ಕರೆದುಕೊಂಡಿದ್ದೇವೆ. ಹೀಗೆ ಬಂದವರಿಗೆ ನಮ್ಮ ಮನೆಯ ಹೆಂಗಸರಿಂದ ರಾಜೋಪಚಾರ ನೀಡಲು ಭ್ರಮೆ ಮತ್ತು ದುರಾಸೆಯ ಒತ್ತಡಗಳನ್ನು ಹೇರಿದ್ದೇವೆ.             ಈ ಜಾಗತೀಕರಣ ಪ್ರಕ್ರಿಯೆಯಿಂದ ಬಹುಸಂಖ್ಯಾತ ದುಡಿವ ವರ್ಗ ಮತ್ತು ಮಹಿಳೆಯರು ಅಗ್ಗದ ವಸ್ತುಗಳಾಗಿ ಬಳಕೆಗೊಳ್ಳುತ್ತಿರುವ ಶೋಚನೀಯ ವಾತಾವರಣ ದೇಶದುದ್ದಕ್ಕೂ ಕಾಣಿಸುತ್ತಿದೆ. ಧಾರ್ಮಿಕವಾಗಿಯೇ ಹೆಣ್ಣನ್ನು ಭೋಗಪ್ರದ ಜೀವವೆಂದು ಸಾರಿದ್ದಷ್ಟೇ ಅಲ್ಲ ಅದನ್ನು ಸಂಸ್ಕೃತಿಯಾಗಿಯೂ ಬೆಳಸಿಕೊಂಡು ಬರುತ್ತಿರುವೆವು. ಈ ಹಳೆಯ ಪುರಾಣ ಮೂಲದ ಸ್ತ್ರೀ ಮಾದರಿಗಳು ಇಂದು ಸಾಣೆ ಹಿಡಿಯಲ್ಲಿಟ್ಟು ಹೊಸ ರೂಪದಲ್ಲಿ ತಳಕು ಬಳುಕಿನಿಂದ ನಾವು ಕೊಳ್ಳುವ ವಸ್ತುಗಳಿಗೆ ಕಿರುನಗೆ ಬೀರಲು ನಿಂತಿರುವಳು. ಬಂಡವಾಳ ಹೂಡುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸ್ವದೇಶಿ ಬಂಡವಾಳ ಶಾಹಿಗಳು ರಾಷ್ಟ್ರದ ಆರ್ಥಿಕ ಸ್ವಾಯತ್ತತೆ, ಸಾವಲಂಬನೆಯ ನೆಲೆಗಳನ್ನು ಕ್ರಮೇಣ ನಿಷ್ಕ್ರಿಯಗೊಳಿಸುತ್ತಿವೆ. ಇದಕ್ಕಾಗಿ ರಾಜಕೀಯ ಅರಾಜಕತೆಯನ್ನು ಹುಟ್ಟು ಹಾಕುತ್ತದೆ. ಪ್ರಜ್ಞಾವಂತರ ಗಮನ ತನ್ನ ಮೇಲೆ ಬೀಳದಿರುವಂತೆ ಮತೀಯ ಭಯೋತ್ಪಾದಕತೆಯನ್ನು ಪ್ರಚೋದಿಸುತ್ತದೆ. ಜನ ಸಾಮಾನ್ಯರನ್ನೊಳಗೊಂಡ ಹಾಗೇ ಇಡೀ ಜನ ಸಮುದಾಯಗಳಲ್ಲಿ ಪರಸ್ಪರ ಸಂದೇಹ, ಅಪನಂಬುಗೆಯನ್ನುಂಟು ಮಾಡಿ ಆಂತರಿಕ ನೆಮ್ಮದಿಯನ್ನು ಕಿತ್ತುಕೊಳ್ಳತ್ತದೆ. ಇದಕ್ಕೆಲ್ಲ ಸ್ತ್ರೀಯನ್ನು ಒಂದಲ್ಲಾ ಒಂದು ರೀತಿಯಲ್ಲಿ ತಳುಕು ಹಾಕಿರುತ್ತದೆ.             ಇಲ್ಲಿಯ ಭೌದ್ಧಿಕ ಮತ್ತು ಭೌತಿಕ ಸಂಪತ್ತಿನ ಮೇಲೆ ಆಕ್ರಮಣಕಾರಿ ನೀತಿಯನ್ನು ಹೇರುತ್ತದೆ. ಮಹಿಳೆಯರಲ್ಲಿ ಉಪಭೋಗಪ್ರದವಾದ ಮನೋವೃತ್ತಿಯನ್ನು ಉದ್ದೀಪಿಸುತ್ತದೆ. ದುಡಿಯುವ ವರ್ಗದ ದುಡಿಯುವ ಅವಕಾಶಗಳನ್ನು ಯಂತ್ರಗಳ ಬಾಯಿಗೆ ಒಡ್ಡುತ್ತದೆ. ಹೀಗೆ ಆರ್ಥಿಕ ಅಸಹಾಯಕತೆಯಿಂದ ಬಳಲುವ ಜನವರ್ಗ ವ್ಯಾಪಾರಿ ತಂತ್ರಗಳಿಗೆ ಹೊಸ ಹೊಸ ರೂಪದಲ್ಲಿ ಬಲಿಯಾಗುತ್ತದೆ.             ಮುಂದುವರೆದ ದೇಶಗಳು ಉತ್ಪಾದಿಸುತ್ತಿರುವ ಕಾಂಡೋಂನಿಂದ ಹಿಡಿದು ಮಕ್ಕಳು ತಿನ್ನುವ ಚಾಕೋಲೇಟ್‌ನವರೆಗೂ ನಮ್ಮ ದೇಶದಲ್ಲಿ ಮಾರುಕಟ್ಟೆ ಕಳೆದುಕೊಂಡಿರುವ ಕಾರಣಕ್ಕಾಗಿ ಜಾಗತಿಕ ಮಾರುಕಟ್ಟೆಯನ್ನು ಮುಕ್ತವಾಗಿಟ್ಟಿದೆ. ಎಲ್ಲ ರೀತಿಯಿಂದಲೂ ಹಸಿದು ಕುಳಿತಿರುವ ಹಿಂದುಳಿದ ದೇಶಗಳು ದಿಢೀರನೆ ಈ ವ್ಯಾಪಾರಿ ಜಾಲಕ್ಕೆ ಬಿದ್ದು ದೇಶೀಯ ಸಾರ್ವಜನಿಕ ಉದ್ಯಮ ವ್ಯವಹಾರಗಳೆಲ್ಲ ಕುಸಿದು ಹೋಗಿವೆ. ಸರಕಾರಿ, ಸಾರ್ವಜನಿಕ ಉದ್ಯಮಗಳು ಕೃತಕ ನಷ್ಟದ ಕಾರಣಕ್ಕಾಗಿ ಶಾಶ್ವತವಾಗಿ ಬೀಗ ಜಡಿದು ಖಾಸಗಿಯವರ ಕೈಯಲ್ಲಿ ಬೀಗ ನೀಡುತ್ತಿರುವೆವು. ಇದರಿಂದ ಮಾರುಕಟ್ಟೆಯ ನೀತಿ ಹೇಗೆ ರೂಪಿಸಲ್ಪ ಡುತ್ತಿದೆಯೆಂದರೆ ‘ಅಕ್ಕನನ್ನು ತೆಗೆದುಕೊಂಡರೆ ತಂಗಿ ಫ್ರೀ’ ಎಂದು ರಸ್ತೆ ಬದಿಯಲ್ಲಿ ನಿಂತು ಕೂಗಿ ಕೂಗಿ ಕರೆಯುವಂತಾಗಿದೆ.             ಹೀಗೆ ಗ್ರಾಹಕನಲ್ಲಿ ಅಗ್ಗದರ ಮತ್ತು ಫ್ರೀ ಎನ್ನವುದರ ಆಮಿಷ ತೋರಿಸಿ ತನ್ನ ಉತ್ಪಾದನಾ ವಸ್ತುಗಳನ್ನು ಬಳಸುವಂತೆ ಮಾನಸಿಕ ರೋಗಕ್ಕೆ ಒಳಪಡಿಸಿದರೆ ಮುಗಿದೇ ಹೋಯಿತು. ಮಾನಸಿಕವಾಗಿ ಗುಲಾಮನಾದ ಗ್ರಾಹಕನನ್ನು ನಿರಂತರ ಶೋಷಿಸುವ ವಿಧಾನ ಬಂಡವಾಳಿಗರಿಗೆ ಚೆನ್ನಾಗಿ ತಿಳಿದಿರುತ್ತದೆ. ಹೀಗೆ ತಾನು ಉತ್ಪಾದಿಸಿದ ವಸ್ತುವಿಗೆ ಗ್ರಾಹಕನ ಮನೆಯ ಬಾಗಿಲನ್ನು ತಟ್ಟಲು ಅಗ್ಗದ ಕೂಲಿಯಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ಏಕ ಕಾಲದಲ್ಲಿ ನಮ್ಮ ಮಹಿಳೆಯರು ಮತ್ತು ನಮ್ಮ ಗಂಡಸರ ಜೇಬಿನ ಭಾರ ಹಗುರವಾಗುವುದು. ಹೆಣ್ಣಿನ ಸೌಂದರ್ಯ ಬಹುಕಾಲದಿಂದ ಬಲಿಷ್ಠ ಗಂಡಸಿನ ಉಪಭೋಗಕ್ಕಾಗಿ ವೃದ್ಧಿಯಾಗುತ್ತಿತ್ತು. ಅದಕ್ಕಾಗಿಯೇ ಒಂದು ವರ್ಗದ ಹೆಣ್ಣನ್ನು ಸಿದ್ಧಗೊಳಿಸಲಾಗುತ್ತಿತ್ತು. ಇಂದು ಸಹ ವಿಶ್ವ ಮಾರುಕಟ್ಟೆಯಲ್ಲಿ ಒಂದು ವಸ್ತುವಿನ ಅಸ್ತಿತ್ವವನ್ನು ಸ್ಥಾಪಿಸಬೇಕಾದರೆ ಹೆಣ್ಣಿನ ಸೌಂದರ್ಯ ದೇಹವೊಂದು ಮುಖ್ಯ ಪಾತ್ರವಹಿಸುತ್ತದೆ. ಈ ಶತಮಾನದ ಅಂತ್ಯದಲ್ಲಿ ವಿಶ್ವ ಸುಂದರಿಯರ ಸ್ಪರ್ಧೆ ಗಲ್ಲಿ-ಗಲ್ಲಿಗಳಲ್ಲಿ ನಡೆಯುತ್ತಿದೆ. ಬಹು ಜನಪ್ರಿಯತೆಯನ್ನು ಗಳಿಸಿಕೊಂಡಿರುವ ವಿಶ್ವ ಸುಂದರಿ ಸ್ಪರ್ಧೆಯ ಹಿಂದೆ ಬಂಡವಾಳ ಶಾಹಿಗಳ ಕೈಗಳಿವೆ. ಸಾವಿರಾರು ವರ್ಷಗಳಿಂದ ಪುರಾಣಗಳ ಮೂಲಕ ನಮ್ಮ ನೆತ್ತಿಯ ಮೇಲೆ ಕುಣಿಯುತ್ತಿದ್ದ ಮೇನಕೆ, ತಿಲೋತ್ತಮೆ, ಊರ್ವಶಿಯರು ಪಾಯಿಖಾನೆಗಳನ್ನು ಬಿಡದೆ ಹಾಗೆ ಎಲ್ಲೆಂದರಲ್ಲಿ ತಳವೂರಿರುವರು. ಇಷ್ಟು ಶತಮಾನಗಳಲ್ಲಿ ಹುಟ್ಟಿದ ಸುಂದರಿಯರು ದಿಢೀರನೆ ಈ ಶತಮಾನದ ಅಂಚಿನಲ್ಲಿ ನಮ್ಮಂತಹ ದೇಶದಲ್ಲಿ ದಿಢೀರನೆ ಕಾಣಿಸಿಕೊಂಡಿರುವುದರ ಬಗ್ಗೆ ಅಶ್ಚರ್ಯಪಡುವುದೇನೂ ಇಲ್ಲ.             ಬೆಂಗಳೂರಿನಂತಹ ನಗರಗಳಲ್ಲಿ ಮಧ್ಯಮ ವರ್ಗದ ಜನ ಸಂಪತ್ತಿನ ಗಳಿಕೆಗಾಗಿ ಮನೆಯ ಮಕ್ಕಳನ್ನು ಅನಾರೋಗ್ಯದ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿರುವರು. ಸ್ಥಳೀಯ ವಸ್ತುವನ್ನು ಒಳಗೊಂಡ ಹಾಗೇ ವಿದೇಶ ಉತ್ಪಾದಿತ ವಸ್ತುಗಳಿಗೆ ಮಹಿಳೆಯರನ್ನು ರೂಪದರ್ಶಿಯರನ್ನಾಗಿ ಬಳಸಿಕೊಳ್ಳುವುದನ್ನು ಹೆಮ್ಮೆಯ ಸಂಗತಿ ಎಂದು ಕಾಣುತ್ತಿರುವೆವು.             ಜಾಹೀರಾತುಗಳಿಗೂ ವಸ್ತುಗಳಿಗೂ ಕಾರ್ಯಕಾರಣ ಸಂಬಂಧ ಏನೆಂಬುದನ್ನು ಕಾಣುತ್ತಿಲ್ಲ. ಮನೋ ವಿಕಾರಕ್ಕೆ ಆಸ್ಪದ ನೀಡುವ, ಸಾಮಾಜಿಕ ಸ್ವಾಸ್ಥ್ಯ ಕೆಡಿಸಬಹುದಾದ ಜಾಹೀರಾತುಗಳ ಮೇಲೆ ಕನಿಷ್ಠ ಪ್ರಮಾಣದ ನಿಯಂತ್ರಣ ಸಮಾಜ ಮತ್ತು ಸರಕಾರಕ್ಕಿಲ್ಲದಾಗಿದೆ. ದುಡಿಯುವ ವರ್ಗದ ಬದುಕಿನ ಸಂದೇಶದ ಮೇಲೆ ಜಾಹಿರಾತುಗಳು ದಾಳಿಗಿಳಿದಿವೆ. ನಮ್ಮ ದೇಶೀ ಪಾರಂಪರಿಕ ನಂಬಿಕೆ ಮತ್ತು ಸಂಸ್ಕೃತಿಯನ್ನು ಕ್ರಮೇಣ ವಿನಾಶಗೊಳಿಸುವ ಎಲ್ಲ ಹುನ್ನಾರಗಳು ಈ ಜಾಹಿರಾತುಗಳ ಮೂಲಕ ನಮ್ಮ ಮನೆ ಮನೆಯ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿರುವುದರ ಕಡೆ ನಮ್ಮ ಗಮನ ಕೇಂದ್ರಿಕರಿಸಬೇಕಾಗಿದೆ. ಉದಾಹರಣೆಗೆ: ನಮ್ಮ ಕೌಟುಂಬಿಕ ಬದುಕಿನ ಸೌಹಾರ್ದ ಸಂಬಂಧದ ಪ್ರತೀಕವಾಗಿದ್ದ ಮನೆಗೆ ಬಂದವರ ಬಾಯಾರಿಕೆ ನೀರು ಕೊಡುವ ಸ್ಥಾನದಲ್ಲಿ ಚಹಾ, ಕಾಫಿಗಳು ಹಲವು ವರ್ಷಗಳ ಅಧಿಪತ್ಯ ಸ್ಥಾಪಿಸಿದ್ದವು. ಇಂದು ಅದರ ಸ್ಥಾನದಲ್ಲಿ ಕೊಕೋ ಕೋಲಾ, ಪೆಪ್ಸಿ, ಸೆವೆನ್ ಅಫ್, ಲಿಮ್ಕಾ ಮಿಂಚುತ್ತಿವೆ. ಅದು ಹೇಗೆಂದರೆ ನಮ್ಮ ರೂಪದರ್ಶಿಯರನ್ನು ಜನಪ್ರಿಯ ನಟ-ನಟಿಯರನ್ನು ಬಳಸಿಕೊಂಡು ಮಾಡುತ್ತಿರುವ ಜಾಹಿರಾತು ಇಡೀ ನಮ್ಮ ಕೃಷಿ ಸಂಸ್ಕೃತಿಯನ್ನೆ ನಾಶ ಮಾಡುವಂತಿದೆ. ಹೊಲಕ್ಕೆ ಹೋಗಿ ಬಾಯಾರಿದೆ ಎಂದು ಯಾರಾದರೂ ಕೇಳಿದರೆ ಬಾವಿಯ ನೀರನ್ನು ಸೇದಿ ಬಾಯಾರಿಕೆಯನ್ನು ನೀಗುವ ನಮ್ಮ ಮಾನವ ಸಹಜತೆಯೇ ಮರೆಯಾಗಿ ಅದರ ಸ್ಥಾನದಲ್ಲಿ ಒಬ್ಬ ನಟನು ರೈತರ ವೇಷದಲ್ಲಿ ಬಂದು ಬಾವಿಯಿಂದ ಸೇದಿ ನೀರು ಕೇಳಿದ ಬೆಡಗಿಯರಿಗೆ ನೀಡುವುದೇನೆಂದರೆ ಪೆಪ್ಸಿ, ಕೊಕೋ ಕೋಲಾದ ಬಾಟಲಿಗಳನ್ನು. ಅಷ್ಟೇ ಅಲ್ಲ ಆ ಬೆಡಗಿಯರು ಅದನ್ನು ಕುಡಿದು ಆತನಿಗೆ ಮುತ್ತಿಕ್ಕಿ ಮೂರ್ಛೆ ಗೊಳಿಸುವುದು. ಇದು ಏಕಕಾಲದಲ್ಲಿ ನಮ್ಮ ನೆಲದ ಸಂಸ್ಕೃತಿಯನ್ನು ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಮುಂದಿಟ್ಟೆ ಮಾಡುವುದು. ಹೀಗೆ ಮಾರುಕಟ್ಟೆಯ ಸಂಸ್ಕೃತಿ ತಮ್ಮ ಪಾರಂಪರಿಕ ನಂಬಿಕೆ, ನಡತೆ, ವಿಚಾರಗಳನ್ನು ಕ್ರಮೇಣ ನಾಶಗೊಳಿಸುವುದು. ಇಂತಹದ್ದನ್ನು ದಿನ-ದಿನವು ನೋಡುವ ಮಕ್ಕಳು ಬಾವಿಯಲ್ಲಿ ತೆಂಗಿನ ಕಾಯಿಗಳಲ್ಲಿ ಬಾಯಾರಿಕೆಗೆ ನೀರಿರುವುದು ಎಂಬುದನ್ನು ಮರೆತು ಬಾಯಾರಿಕೆ ಎಂದರೆ ಕೊಕೋ ಕೋಲಾ, ಪೆಪ್ಸಿ, ಸೆವೆನ್ ಅಪ್ ಎಂದು ಭಾವಿಸುವ ಅಪಾಯಗಳು ನಮ್ಮೆದುರಿಗಿದೆ ನಮ್ಮ ಸಾಮಾಜಿಕ ಪಿಡುಗಾದ ವರದಕ್ಷಿಣೆ, ವರೋಪಚಾರಗಳ ಬಗ್ಗೆ ಕಾನೂನು ಬದ್ಧವಾಗಿ ತಡೆಯುವ ಕ್ರಮವನ್ನು ಬಿಗಿಗೊಳಿಸುವಷ್ಟರಲ್ಲಿಯೇ ಅದು ನುಣುಚಿಕೊಂಡು ಹೊಸ ರೂಪದಲ್ಲಿ ಯುವ ಜನತೆಯ ಮನಸ್ಸಿನಲ್ಲಿ ಬೇರೂರಿದೆ. ಸಾಂಪ್ರದಾಯಿಕವಾಗಿ ಮದುವೆಯಲ್ಲಿ ಸ್ಥಿತಿವಂತರು ವರನನ್ನು ಎದುರುಗೊಳ್ಳಲು, ಬೀಳ್ಕೊಡಲು ಕುದುರೆ, ಎತ್ತಿನಬಂಡಿ, ಟಾಂಗಾ, ತೆರೆದ ಜೀಪುಗಳನ್ನು ಬಳಸಿ ತಮ್ಮ ಸಂತೋಷ, ಸಂಭ್ರಮ ಯೋಗ್ಯತೆ, ಅಂತಸ್ತುಗಳನ್ನು ಪ್ರದರ್ಶಿಸುತ್ತಿದ್ದರು. ಇಂದು ಕುದುರೆಗಾಡಿ, ಎತ್ತಿನ ಬಂಡಿಯ ಸ್ಥಾನದಲ್ಲಿ ಹೀರೋ

ಸಂತೆಯಲ್ಲಿ ನಿಂತ ಅವಳು Read Post »

ಇತರೆ, ಲಹರಿ

ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ

ಲಹರಿ ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ ಸ್ಮಿತಾ ಭಟ್ ತವರು ಎನ್ನುವದು ಮುಗಿಯಲಾರದ ಸೆಳೆತ ಮತ್ತದು ಹೆಣ್ಮಕ್ಕಳಿಗೆ ಮಾತ್ರ ಸೀಮಿತ. ತಲೆ ತಲಾಂತರಗಳಿಂದಲೂ ತವರು ಮತ್ತು ಹೆಣ್ಣು ಸಯಾಮಿಯಂತೆ ಬದುಕುತ್ತ ಬಂದಿದ್ದಾರೆ. ಹೆಣ್ಣಿನೊಳಗೆ ತವರಿನ ಸೆಳೆತ,ಪುಳಕ,ಅಪ್ಯಾಯ ಭಾವಗಳು ಶುರುವಾಗುವದೇ ಮದುವೆಯೆಂಬ ಬಂಧನದಲಿ,ಭಾವದಲಿ,ಸಿಲುಕಿ ತವರ ತೊರೆದು ಹೊರನಡೆದಾಗಲೇ. ಅಲ್ಲಿಯವರೆಗೆ ಸುಪ್ತವಾಗಿದ್ದ ನಯ ನಾಜೂಕಿನ ಭಾವನೆಗಳೆಲ್ಲ ಕಟ್ಟೆಯೊಡೆದು ಹೃದಯವನ್ನು ತಲ್ಲಣಗೊಳಿಸಿಬಿಡುತ್ತವೆ. ಎಂತಹ ಐಶಾರಾಮಿ ಗಂಡನಮನೆಯೇ ಸಿಗಲಿ ತವರಿನಿಂದ ಬರುವ ಪುಟ್ಟ ಉಡುಗೊರೆಗಾಗಿ  ಹೆಣ್ಣು ಕಾತರದಿಂದ ಕಾಯುತ್ತಾಳೆ. ತವರೂರಿನ ಹೆಸರು ಹೇಳಿ ಯಾರೇ ಬಂದರೂ ಮುಖದಭಾವಕ್ಕೆ ಬೇರೆಯದೇ ಕಳೆಗಟ್ಟುತ್ತದೆ. “ನಿನ್ನ ತವರು ಮನೆಗೆ ಹೋಗಿದ್ದೆ ತಂಗೀ” ನಿನ್ನ ಅಮ್ಮನಿಗೂ ಈತರದ್ದು ಎರಡು ಡಜನ್ ಬಳೆ ಕೊಟ್ಟು ಬಂದಿದ್ದೀನಿ, ಅನ್ನುವಾಗ ನನಗೂ ಅದೇ ಇರಲಿ ಎನ್ನುವ ಮಾತು ಅರಿವಿಲ್ಲದೆ ಬರುತ್ತದೆ. ಅಲ್ಲಿಂದ ಬರುವ ಕೆಲಸದ ಆಳುಗಳೇ ಇರಲಿ, ನೆಂಟರೇ ಇರಲಿ, ಹಿಂದೊಂದು ತವರೂರಿನ ಹೆಸರು ಸೇರಿಕೊಂಡರೆ ವಿಶೇಷ ಅಕ್ಕರೆ, ಹಾಗಂತ ಅದು ಬೇದ ಭಾವದ್ದಲ್ಲ. ರಕ್ತಗತವಾಗಿ ಬಂದದ್ದು.  ದಾರಿಯಲ್ಲಿ ತವರೂರಿಗೆ ಹೊರಟ ಬಸ್ಸಿನ ಬೋರ್ಡ ಕಂಡರೂ ಸಾಕು ಆ ಬಸ್ಸಿನ ಮೇಲೆ ಡ್ರೈವರ್ ನ ಮೇಲೆ ಎಲ್ಲ ಪ್ರೀತಿ ಉಕ್ಕತ್ತದೆ. ತುಪ್ಪ ಬಡಿಸುವಾಗ ತವರ ಸುದ್ದಿ ಕೇಳಿದರೆ ಎರಡ್ಹುಟ್ಟು ತುಪ್ಪ ಹೆಚ್ಚಿಗೆ ಬೀಳುವದು. ಎಂದು ಛೇಡಿಸುವಿಕೆಯಾದರೂ ಸತ್ಯವೇ, ಸ್ವಲ್ಪ ನಕ್ಕರೂ ,ಅಡುಗೆಯಲ್ಲಿ ವೀಶೇಷವಾದದನ್ನು ಸಜ್ಜು ಗೊಳಿಸುತ್ತಿದ್ದರೂ ಏನಿದು !!ಇಂದು ತವರಿಂದ ಏನಾದರೂ ವಿಶೇಷ ಸುದ್ದಿ ಇದೆಯಾ? ಯಾರಾದರೂ ಬರುತ್ತಿದ್ದಾರಾ? ಎಂದು ಕಾಲೆಳೆಯುವ ಪತಿರಾಯರಿಗೇನೂ ಕಡಿಮೆಯಿಲ್ಲ. ಆದರೆ ತಕರಾರು ಅದರದ್ದಲ್ಲ. ಇಷ್ಟೆಲ್ಲ ಬದುಕಿನ ಜೊತೆಗೇ ಅಂಟಿಕೊಂಡು ಬಂದಿರುವ ಭಾವವನ್ನು ಸಂಬಂಧವನ್ನು ಮದುವೆಯಾಗುತ್ತಿದ್ದಂತೆ ಬಿಡಲಾಗಲಿ ಆ ಭಾವದೊಳಗೆ ಬದಲಾವಣೆ ತಂದುಕೊಳ್ಳಲಾಗಲಿ ಸಾಧ್ಯವೇ!? ತವರು ಹೆಣ್ಣಿನ ಹಕ್ಕು ಮತ್ತು ಆಸ್ತೆಯ ವಿಷಯ. ತವರಿನ ಬಗ್ಗೆ ಸ್ವಲ್ಪವೇ ಸ್ವಲ್ಪ ಮೂಗು ಮುರಿದರೂ ಆಗುವ ಯಾತನೆ ಹೇಳತೀರದ್ದು.  ತವರು ನಗುತಿದ್ದರೆ,ಮನೆಯಾಕೆಯೂ  ನಗುತ್ತಿರುತ್ತಾಳೆ ಎನ್ನುವ ಅರಿವಿದ್ದೂ ಅಹಂಕಾರದಿಂದ ಅದೆಷ್ಟೋ ಗಂಡಸರು ಹೂಂಕರಿಸುವದನ್ನು ನೋಡಿದ್ದೇನೆ. ಸುಕಾ ಸುಮ್ಮನೇ ತವರ ದೂರುವುದು. ಅಪ್ಪ, ಅಮ್ಮ, ಅಣ್ಣ,ತಮ್ಮ ,ಯಾರೇ ಇದ್ದರೂ ಅವರಡೆಗೊಂದು ಅಸಡ್ಡೆಯ ಮಾತೊಗೆಯುವದು. ಗೊತ್ತಿದೆ ಬಿಡೆ ನಿನ್ನ ತವರು ಎನ್ನುವ ಅನಾಧರ. ಈಗೇನು ನಿನ್ನ ತವರಿನ ದೊಡ್ಡಸ್ತಿಕೆ,ಒಂದು  ನಯಾ ಪೈಸಾ ತಗೊಳ್ದೆ ನಿನ್ನ ಮದುವೆ ಮಾಡ್ಕೊಂಡು ಬಂದಿದ್ದೀನಿ. ಆಗ ಬಡತನವಿತ್ತು ಬಿಡು,ಈಗ ಹಬ್ಬಕ್ಕೆ ಏನು ಕೊಟ್ರೋ!? ಕರೆಯುವಲ್ಲಿ, ಕೇಳುವಲ್ಲಿ,ಹೇಳುವಲ್ಲಿ, ಕೊಂಚ ವ್ಯತ್ಯಾಸ ವಾದರೂ, ಕೃಷ್ಣ ಕದ್ದನೆಂದ ಶ್ಯಮಂತಕಮಣಿಯಂತೆ ಅಪವಾದ ಹೆಗಲೇರುತ್ತದೆ. ಹೇಗೆ ತೊರೆಯುವದು ಹೇಳಿ ತವರಿನ ಸೆಳೆತವ. ನೋವುಂಡು ನಗುವ ಮೂರ್ತಿಯನ್ನು ಮಾಡಿದ ಒಲವ. ಅಲ್ಲಿ ಮುಗಿಯದ ನಗುವಿದೆ, ಆಗಾದ ನೆನಪಿದೆ,ಅಪ್ಯಾಯ ಭಾವವಿದೆ, ತೀರದ ಬಂಧವಿದೆ. ನಿನಗೆ ನನಗಿಂತ ತವರೇ ಹೆಚ್ಚು ಎಂದು ಮೂದಲುಸುವಿಕೆಗಾದರೂ  ಒಂದು ಅರ್ಥ ಬೇಡವೇ? ಇಲ್ಲಿ ಹೆಚ್ಚು ಕಡಿಮೆ ಏನಿದೆ!?  ಜತನವಾಗಿ ಸಾಕಿದ ಪ್ರೀತಿಯನ್ನು ,ಜೀವವನ್ನೇ ಎರಡು ಭಾಗ ಮಾಡಿಕೊಟ್ಟ ವೇದನೆಯಲ್ಲಿ ಕೈ ಹಿಡುದು ಇನ್ನೊಂದು ಕೈಗೆ ಕೊಡುವಾಗ ಅಸಹಾಯಕ ತಂದೆ  ಕಣ್ಣೊಳಗೆ ಉಕ್ಕಿದ ಭಾವಕ್ಕೆ ವಿವರಣೆ ಕೊಡಲು ಸಾಧ್ಯವೇ? ತುಟಿ ಕಚ್ಚಿ ತಡೆದ ಅಮ್ಮನ ಕಣ್ಣ ಹನಿಗೆ ಋಣದ ಮಾತಾಡಲು ಸಾಧ್ಯವೇ? ಕೊಟ್ಟ ಹೆಣ್ಣು ಕುಲದ ಹೊರಗೆ ಎನ್ನುವುದಕ್ಕೆ ವಿವರಣೆ ಏನು ಕೊಟ್ಟು ಸಮರ್ಥಿಸುತ್ತಾರೋ ಅರಿಯೆ. ಆದರೆ ಎಂದಿಗೂ ಸಮ್ಮತವಲ್ಲದ ವಿಷಯ ಇದು ಹೆಣ್ಮನಸಿಗೆ. ಹಾಗೆ ನೋಡಿದರೆ ಗಂಡು ಕೂಡಾ ಹೆಣ್ಣು ಕೊಟ್ಟ ಮನೆಗೆ ಸದಾ ಋಣಿಯಾಗಿರಬೇಕು. ತವರಬಗ್ಗೆ ಸದಾ ತಕರಾರೆತ್ತುವ ಗಂಡನಮನೆಯಲ್ಲಿ ಹೆಣ್ಣು ತುಟಿ ಕಚ್ಚಿ ನಗುತ್ತಿರುತ್ತಾಳಷ್ಟೇ. ಗಂಡ ತನ್ನ ತವರನ್ನು ಗೌರವಿಸಲಿ. ಪ್ರೀತಿಸಲಿ,ಎನ್ನುವದು ಹೆಣ್ಣಿನ ಸಹಜ ಬಯಕೆ, ಗಂಡನಾದವ ಹೆಂಡತಿ ತನ್ನ ಮನೆಯವರನ್ನೆಲ್ಲ ಪ್ರೀತಿ ಆದರಗಳಿಂದ ಕಾಣಲಿ ಎಂದು  ಬಯಸುತ್ತಾನೋ  ಹಾಗೇ,  ತನ್ನ ಅಕ್ಕ ತಂಗಿಯರು ತವರನ್ನು ಪ್ರೀತಿಸುವದರ ಬಗ್ಗೆ ಖುಷಿ ಪಡುವವ, ತನ್ನ ಹೆಂಡತಿ ತವರನ್ನು ಪ್ರೀತಿಸತೊಡಗಿದರೆ ಸಿಡಿದೇಳುವ ವರ್ತನೆಗೆ ಅರ್ಥವುಂಟೇ!? ಅದೇನೆ ಹೊಂದಾಣಿಕೆಯ ಕೊರತೆ ಇದ್ದರೂ ತವರಿನೆಡೆಗಿನ ಹೆಣ್ಮನಸಿನ ಭಾವ ಅರಿತ ಗಂಡಸಿನೊಳಗೆ ಹೆಚ್ಚು ಯಶಸ್ಸಿದೆ. ಅದೆಷ್ಟೇ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡಾ ಗಂಡ ತನ್ನ ತವರನ್ನು ಪ್ರೀತಿಸುತ್ತಾನೆಂದರೆ, ಹೆಂಡತಿ ಗಂಡನ ಮನೆ ಕುರಿತು ತಕರಾರು ಎತ್ತುವದೇ ಇಲ್ಲ. ಎಲ್ಲಿ ತವರಿಗೆ ಬೆಲೆ ಇದೆಯೋ ಅಲ್ಲೇ ತನ್ನ ಅಸ್ತಿತ್ವ ಎನ್ನುವದನ್ನು ಅವಳು ಎಂದೋ ನಿರ್ಧರಿಸಿದ್ದಾಳೆ. ಅದು ಪ್ರಕೃತಿ ಮಾತೆ ಪಾರ್ವತಿದೇವಿಯಿಂದಲೇ ಒಲಿದು ಬಂದ ಬಳುವಳಿ ಹೆಣ್ಣಿಗೆ.  ಪರಮ ಅಹಂಕಾರಿ,ಕಠೋರ ಸ್ವರೂಪಿ ದಕ್ಷ , ಶಿವನನ್ನು ಅವಮಾನಿಸಿದ ನಿದರ್ಶನಗಳಿಗೆ ಲೆಕ್ಕವೇ ಇಲ್ಲ, ಆದರೆ ಶಿವ, ಅರ್ಧಾಂಗಿನಿಯಾದ ಸತಿಯ ತವರಿನ ಗೌರವದ ಬಗ್ಗೇಯೇ ಸದಾ ಯೋಚಿಸುತ್ತಿದ್ದ.ಮತ್ತಿ ಕಾಪಾಡುತ್ತಿದ್ದ. ಸಕಲ ಅವಮಾನಗಳನ್ನು ಸತಿಗಾಗಿ ಸಹಿಸಿದ. ಮನಸು ಮಾಡಿದರೆ ಪರಶಿವನಿಗೆ ದಕ್ಷನ ಅಹಂಕಾರ ಮುರಿಯುವುದು ಕ್ಷಣದ ಕೆಲಸವಾಗಿತ್ತು, ಅಪಾರವಾಗಿ ತಂದೆಯನ್ನು ಪ್ರೀತಿಸುವ ಸತಿಗೆ ಎಲ್ಲಿಯೂ ನೋವಾಗಬಾರದೆಂದು,ಅವಳ ಭಾವಕ್ಕೆ ಧಕ್ಕೆಯಾಗಬಾರದೆಂದು ನೊಂದ, ಬೆಂದ,ಪರಿತಪಿಸಿದ. ತಂದೆಯ ತಪ್ಪುಗಳು ಸತಿಗೆ ಅರಿವಾಗಲೆಂದು ವರುಷಗಳೇ ಕಾದ. ಕೊನೆಗೆ ತವರನ್ನೇ ತೊರೆಯಲು ನಿರ್ಧಸಿದ ಸತಿಯ ಕುರಿತು ಹೇಳುತ್ತಾನೆ. ಹೆಣ್ಮಕ್ಕಳಿಗೆ ತವರು ಎಂದರೆ ದೇಹದ ಉಸಿರು. ಅದನ್ನು ನೀನು ತೊರೆದು ಬದುಕಲಾಗದು. ನಿನ್ನ ಅಂತರಂಗದ ನೋವು ವೇದನೆ ನಾನು  ಸಹಿಸಲಾರೆ. ಅಲ್ಲದೇ ಉಸಿರು ತೊರೆದು ಬಂದ ನಿನ್ನ ದೇಹಕ್ಕೆ ಲಕ್ಷಣವಿರಲಾರದು. ತಂದೆಯನ್ನು ತಿದ್ದುವ ಪ್ರಯತ್ನಮಾಡುವದಾಗಿ ವಚನವನ್ನೂ ಕೊಡುತ್ತಾನೆ. ಇದೇ ಕಾರಣಕ್ಕಾಗಿ ಸತಿ ದೇಹತ್ಯಾಗವನ್ನೂ ಮಾಡುತ್ತಾಳೆ. ಶಿವ ತನ್ನ ಬದುಕಿನುದ್ದಕ್ಕೂ ಅರ್ಧಾಂಗಿನಿಯ ಮುಖಾಂತರ ತವರು ಮತ್ತು ಹೆಣ್ಣಿನ ಅವಿನಾಭಾವ ಸಂಬಂಧದ ಬಗ್ಗೆ ಹೇಳುತ್ತಲೇ ಬಂದಿದ್ದಾನೆ. ಪರ್ವತ ರಾಜನ ಮಗಳು ಪಾರ್ವತಿಯಾಗಿ ಶಿವನ ವರಿಸಿದಮೇಲೂ ತನ್ನ ಹಿಂದಿನ ಜನ್ಮದ ತಂದೆ ತಾಯಿಯಿದ್ದಲ್ಲಿ ಹೋಗಿ ಶಿವನ ಕೋಪಕ್ಕೆ ಬಲಿಯಾದ ದಕ್ಷನ ತಲೆಗೆ ಮೊದಲಿನ ರೂಪ ನೀಡಲು ಶಿವನನ್ನು ಕೇಳಿಕೊಳ್ಳುತ್ತಾಳೆ. ಆಗ ಶಿವ ಹೇಳುತ್ತಾನೆ. ನೋಡಿದೆಯಾ ದೇವೀ..  ಹೆಣ್ಮಕ್ಕಳ ಈ ಮನಸ್ಥಿತಿಯೇ ಸದಾ ತವರು ನಗುತ್ತಿರಲು ಸುಖವಾಗಿರಲು ಕಾರಣ. ಜಗತ್ತಿನ ಎಲ್ಲ ಹೆಣ್ಮಕ್ಕಳೂ ನಿನ್ನ ಗುಣವನ್ನೇ ಹೊಂದಲಿ ಎಂದು ವರ ನೀಡುತ್ತಾನೆ. ಶಿವನ ಹಾರೈಕೆಯ ಪರಿಣಾಮವೋ ಏನೋ ಪ್ರಕೃತಿಯ ಈ ಸ್ವರೂಪವೇ ಮುಂದುವರಿದು ಪ್ರತೀ ಹೆಣ್ಣು ಪಾರ್ವತಿಯೇ ಆಗಿದ್ದಾಳೆ. ಆದರೆ ಸಹನಾಮೂರ್ತಿ ಶಿವ ಯಾವ ಗಂಡಸಿನೊಳಗೂ ಇಲ್ಲವೇನೋ!? ಅಕಸ್ಮಾತ್ ಇದ್ದರೆ ಆ ಹೆಣ್ಣು ಪಾರ್ವತಿದೇವಿ ಯಷ್ಟೇ ಖುಷಿಯಾಗಿ ಬದುಕುತ್ತಿದ್ದಾಳೆ ಎಂದೇ ಅರ್ಥ.

ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ Read Post »

ಇತರೆ

ಶಾಂತಲಾ ಮಧು ಬಹುಮುಖ ಪ್ರತಿಭೆ

ಶಾಂತಲಾ ಮಧು ಬಹುಮುಖ ಪ್ರತಿಭೆ ಶಾಂತಲಾ ಮಧು ಅವರ ಪರಿಚಯ ಶಾಂತಲಾ ಮಧು ಅವರು ಅಂತಾರಾಷ್ಟ್ರೀಯ ಯೋಗ ಗುರುವಾಗಿ ಕೆಲಸ ಮಾಡುತ್ತಿದ್ದಾರೆ. ಉಸ್ತಾದ್ ಬಾಲೇಖಾನ್ ಶಿಷ್ಯೆಯಾಗಿ ಸಿತಾರ್ ವಾದನ ಕಲಿತಿದ್ದಾರೆ. ಬಯಲು ಕವನ ಸಂಕಲನ ಪ್ರಕಟಿಸಿದ್ದಾರೆ. ಚಿತ್ರಕಲಾವಿದೆ ಸಹ . ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ . ಪತಿ ಮಧು ಅವರು ಯಾರ್ಡ್ಲಿ ಸಂಸ್ಥೆಯ ಉಪಾಧ್ಯಕ್ಷರು. ಪುತ್ರಿ ರಶ್ಮಿ ಅವರು ವೈದ್ಯೆ . ಮಗ ಗೌತಮ್ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಶಾಂತಲಾ ಅವರು ಕನ್ನಡ ಸಾಹಿತ್ಯ ಸ್ನಾತಕೋತ್ತರ ಪದವೀಧರೆ . ಕುವೆಂಪು ವಿಶ್ವವಿದ್ಯಾನಿಲಯದ ಎಲ್. ಬಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿರುವ ಇವರು ‘ಬಯಲು’ ಎಂಬ ಕವನ ಸಂಗ್ರಹವನ್ನು ಪ್ರಕಟಿಸಿದ್ದಾರೆ . ೨೦ ವರ್ಷಕ್ಕೂ ಮೇಲ್ಪಟ್ಟು ಯೋಗ ಗುರುಗಳಾಗಿ ಅನುಭವ ಹಾಗೂ ಭಾರತ ಮತ್ತು ಅಮೆರಿಕ ಸೇರಿದಂತೆ ಸಾವಿರಕ್ಕೂ ಹೆಚ್ಚು ಜನಕ್ಕೆ ಯೋಗ ಕಲಿಸಿದ್ದಾರೆ . ಭಾರತ ಸರ್ಕಾರ ಅನುಮೋದಿತ ರಾಷ್ಟ್ರಮಟ್ಟದ ಯೋಗ ಶಿಕ್ಷಕ ಪ್ರಮಾಣಪತ್ರ ಗಳಿಕೆ. ” ಶ್ರೀ ಯೋಗ ಸೆಂಟರ್” ನ ಡೈರೆಕ್ಟರ್__ ಹದಿನೈದು ವರ್ಷಗಳಿಂದ ಬಿಎಂ ವೇರ್ ನಲ್ಲಿ ಎಂಟು ವರ್ಷದಿಂದ ಯೋಗ ಶಿಕ್ಷಣ ನೀಡಿಕೆ . ಹಲವಾರು ಯೋಗ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರಗಳ ನಿರ್ವಹಣೆ . “ಮಿಸೆಸ್ ಇಂಡಿಯಾ ಮೈ ಐಡೆಂಟಿಟಿ” ೨೦೧೯ ರಲ್ಲಿ ಸಾಮಾಜಿಕ ಪ್ರಭಾವ …. ಕಿರೀಟ… ” ಸಮಾಧಾನ ಸಲಹಾ ಕೇಂದ್ರದಲ್ಲಿ ಪ್ರಮಾಣೀಕೃತ ಸಲಹೆಗಾರ್ತಿ ರಾಷ್ಟ್ರಮಟ್ಟದ ಚಿತ್ರಕಲೆಗಾರ್ತಿ ವಿಪಸ್ಯನಾ ಧ್ಯಾನ ಪರಿಣತೆ ಸಿತಾರ್ ವಾದ್ಯಗಾರ್ತಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ಯಾರ್ಥಿನಿ . ವಿವರಗಳು ಶಾಂತಲಾ ಅವರು ಬಾಲ್ಯದಿಂದ ಹಠಯೋಗ ಅಭ್ಯಸಿಸುತ್ತಿದ್ದಾರೆ . ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಯೋಗದಲ್ಲಿ ಪ್ರಾಥಮಿಕ ಶಿಕ್ಷಣ. ನಂತರ ಪುಣೆಯಲ್ಲಿ ಬಿ.ಕೆ.ಎಸ್ ಅಯ್ಯಂಗಾರ್ ಸಂಸ್ಥೆಯಲ್ಲಿ ಪರಿಣತ ಯೋಗಾಭ್ಯಾಸ . ಈಗ ಸುಮಾರು ಇಪ್ಪತ್ತು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಯೋಗ ಶಿಕ್ಷಕಿಯಾಗಿ ಭಾರತ ಮತ್ತು ಅಮೆರಿಕದಲ್ಲಿ ಯೋಗ ಕಲಿಸುತ್ತಿದ್ದಾರೆ. ಏಷಿಯನ್ ಫೆಸ್ಟಿವಲ್ (ಓಹಿಯೋ ) A. T. & T ಬೆಲ್ ಲ್ಯಾಬ್ಸ್ (ಕೊಲಂಬಿಯಾ) ಭಾರತೀಯ ಸಾಂಸ್ಕೃತಿಕ ಉತ್ಸವಗಳು ಮುಂತಾದ ಅಮೆರಿಕದ ಪ್ರತಿಷ್ಠಿತ ಸಂಸ್ಥೆ ಸಮಾರಂಭಗಳಲ್ಲಿ ಯೋಗ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ . ಭಾರತದಲ್ಲಿ ಪುಣೆ ಹೈದರಾಬಾದ್ ಮತ್ತು ಬೆಂಗಳೂರುಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಬೆಂಗಳೂರಿನಲ್ಲಿ ೧೫ ವರ್ಷಗಳ ಹಿಂದೆ ಶ್ರೀ ಯೋಗ ಸೆಂಟರ್ ಸ್ಥಾಪಿಸಿದ್ದಾರೆ. ಅದರ ಮೂಲಕ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಯೋಗದ ಮೂಲಕ ಆರ್ಥೈಟಿಸ್ ಮಧುಮೇಹ ರಕ್ತದ ಒತ್ತಡ ಸಂತಾನಹೀನತೆ ಅಸಿಡಿಟಿ ಅಸ್ತಮಾ ಬೆನ್ನುನೋವು ತಲೆನೋವು ಮೈಗ್ರೇನ್ ಇನ್ನೂ ಮುಂತಾದ ಕಾಯಿಲೆಗಳಿಂದ ನರಳುವ ರೋಗಿಗಳಿಗೆ ಗುಣಮುಖರಾಗಲು ನೆರವು ನೀಡಿದ್ದಾರೆ. ಯೋಗ ಮತ್ತು ಒತ್ತಡ ನಿವಾರಣೆಯ ಕ್ರಮಗಳಾದ ಪ್ರಾಣಾಯಾಮ ಮತ್ತು ಧ್ಯಾನಗಳನ್ನು ವಿ.ಎಂ .ವೇರ್ ಮೊದಲಾದ ಸಾಫ್ಟ್ವೇರ್ ಕಂಪನಿಗಳಲ್ಲಿ ಬೋಧಿಸಿದ್ದಾರೆ. ಶಾಂತಲಾ ಅವರದು ಬಹುಮುಖ ಪ್ರತಿಭೆ. ಚಿಕ್ಕಂದಿನಿಂದಲೇ ಕಲೆಯ ಹಲವಾರು ಪ್ರಕಾರಗಳಲ್ಲಿ ಅವರಿಗೆ ಆಸಕ್ತಿ.ಚಿತ್ರಕಲೆಯ ಸಾಂಪ್ರದಾಯಿಕ ಶಿಕ್ಷಣವನ್ನು ಪ್ರತಿಷ್ಠಿತ ಸಂಸ್ಥೆ ಮತ್ತು ವ್ಯಕ್ತಿಗಳಲ್ಲಿ ಪಡೆದಿದ್ದಾರೆ . ಮಿ. ಕೂಪರ್ ಸ್ಕೂಲ್ ಆಫ್ ಆರ್ಟ್ಸ್ ಓಹಿಯೋ ಯುಎಸ್ಎ (ಲ್ಯಾಂಡ್ಸ್ಕೇಪ್ ಮತ್ತುಪೋರ್ಟ್ರೈಟ್) ಶ್ರೀಮತಿ ಕಾರ್ಲೆ ಪುಣೆ (ಮಿನಿಯೇಚರ್ ಮತ್ತು ಮೊಘಲ್ ಕಲೆ) ಮಿ. ಶಂಸುದ್ದೀನ್ (ಮ್ಯೂರಲ್)ತೈಲ ಚಿತ್ರ ಸೆರಾಮಿಕ್ ಪೆಂಟಿಂಗ್ ಮೊದಲಾದ ಪ್ರಕಾರಗಳಲ್ಲಿ ವಿಶೇಷ ಪರಿಣತಿ ಹೊಂದಿರುವ ಶಾಂತಲಾ ಅವರ ಕಲಾಕೃತಿಗಳು ಜಮ್ಮು ಕಾಶ್ಮೀರ ರಾಜಸ್ಥಾನ ಹೈದರಾಬಾದ್ (ಚಿತ್ರಮಯಿ ಆರ್ಟ್ ಗ್ಯಾಲರಿ) ಪಂಜಾಬ್ ಬೆಂಗಳೂರು (ಚಿತ್ರಕಲಾ ಪರಿಷತ್) ಮತ್ತು ಯುಎಸ್ಎ ನಲ್ಲಿನ ಪ್ರತಿಷ್ಠಿತ ಆರ್ಟ್ ಗ್ಯಾಲರಿಗಳಲ್ಲಿ ಪ್ರದರ್ಶಿತವಾಗಿದೆ ಶಾಂತಲಾ ಅವರಿಗೆ ಪ್ರಕೃತಿಯೇ ಸ್ಫೂರ್ತಿ. ಉದ್ಯಾನವನಗಳು ಸಮುದ್ರ ತೀರ ಹಾಗೂ ಕಾಡುಗಳಿಗೆ ಭೇಟಿ ಕೊಟ್ಟು ಅಲ್ಲಿನ ದೃಶ್ಯಗಳನ್ನು ಕ್ಯಾನ್ವಾಸ್ಗೆ ತರಲು ಇಷ್ಟಪಡುತ್ತಾರೆ. ದೇವನ ಸೃಷ್ಟಿಯದು ಅತ್ಯದ್ಭುತ ಹಾಗೂ ತಾನು ಅದನ್ನು ಚಿತ್ರಿಸುವುದು ಮೆಚ್ಚುಗೆಯ ಒಂದು ವಿನಯಶೀಲ ಪ್ರಯತ್ನ ಮಾತ್ರ ಎನ್ನುತ್ತಾರೆ. ಶಾಂತಲಾ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ ಸಿತಾರ್ ವಾದನವನ್ನು ಧಾರವಾಡದ ಉಸ್ತಾದ್ ಬಾಲೆ ಖಾನ್ ಅವರ ಬಳಿ ಅಭ್ಯಸಿಸಿದ್ದಾರೆ . ಶಾಂತಲಾರವರೊಂದಿಗೆ ಸಂಗಾತಿ ಮಾತಾಡಿದಾಗ ಸಂಗಾತಿ-ನಮಸ್ಕಾರ,ಸಂಗೀತ,ಚಿತ್ರಕಲೆ,ಯೋಗ,ಸಾಹಿತ್ಯ ಈ ನಾಲ್ಕೂ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ನಿಮಗೆ ಮೂಲಸ್ಪೂರ್ತಿ ಯಾರು? ಮಲೆನಾಡಿನ ಮಗಳಾದ ನನಗೆ -ಪ್ರಕೃತಿ ಮೂಲ ಪ್ರೇರಣೆ ಮತ್ತು ಸ್ಪೂರ್ತಿ ಸಂಗಾತಿ -ಮೇಲಿನ ನಾಲ್ಕು ಕ್ಷೇತ್ರಗಳಲ್ಲಿನಿಮ್ಮ ಹೃದಯಕ್ಕೆ ಹತ್ತಿರವಾದದು ಯಾವುದು? ಯೋಗ ಮತ್ತು ಧ್ಯಾನ ಸಂಗಾತಿ-ಸದ್ಯ ಯಾವ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದೀರಿ? ೧ ಯೋಗ ( I am teaching also) ೨ ಚಿತ್ರಕಲೆ ( I am participating online exhibition s)೩ ಸಿತಾರ್ ೪ ಬರಹ . ಸಂಗಾತಿ-ಈಗ ನಿಮ್ಮ ಮುಂದಿರುವ ಹೊಸ ಯೋಜನೆಗಳೇನು? ನನ್ನ ಯೋಗ ಮತ್ತು Counselling ಕಲೆಯ ಮೂಲಕ ಇನ್ನು ಹೆಚ್ಚು ಸಮಾಜ ಸೆೇವೆಗೆ ನನ್ನನ್ನು ನಾನು ತೊಡಗಿಸಿ ಕೊಳ್ಳಬೇಕು೨ ಇನ್ನು ಹೆಚ್ಚು ಓದುವ ಮೂಲಕ ನನ್ನ ಬರಹ ಶಕ್ತಿ ಹೆಚ್ಚಿಸಿ ಕೊಳ್ಳಬೇಕುಕಥೆ ಬರೆಯುವ ಕನಸೂ ಇದೆ.೩ ಸಿತಾರ್ ಮತ್ತು ಚಿತ್ರಕಲೆ ಯ ಅಭ್ಯಾಸ ನಿದಾನವಾಗಿ ಸಾಗುತ್ತಲೆ ಬರುತ್ತಿದೆ. ಸಂಗಾತಿ-ಕೊನೆಯ ಪ್ರಶ್ನೆ ನಿಮ್ಮ ಸಾದನೆಗಳು ನಿಮಗೆ ತೃಪ್ತಿತಂದಿವೆಯಾ? ಇಲ್ಲ ಸಾರ್ಆದರೆ ಅದಕ್ಕಾಗಿ ಶೋಕಿಸುವುದು ಬಿಟ್ಟಿರುವೆ, ಕೆಲವೊಮ್ಮೆ ಅನ್ನಿಸುತ್ತದೆ ಯಾವುದಾದರು ಒಂದೇ ಕಲೆ ಯ ಪ್ರಕಾರ ಇಟ್ಟು ಕೊಳ್ಳ ಬೇಕಿತ್ತು ಸಾಧನೆಗೆ ಎಂದುಆದರೆ ನನಗೆ ಎಲ್ಲವೂ ಅತ್ಯಂತ ಪ್ರಿಯ ಅವು ನನ್ನ ಜೀವನ ಸಂಗಾತಿಗಳು ನಾನು Vipasana Meditation ಅಭ್ಯಾಸ ಮಾಡುತ್ತಿರುವೆ ‘ ಅನಿಚ್ಚ’ಎನ್ನುವುದು ನನ್ನ ಮಂತ್ರ ಈ ಕ್ಷಣದ ಬದುಕುಯನ್ನು ನಂಬುತ್ತೆನೆ, ಶಾಂತಲಾ ಮಧುರವರ ಚಿತ್ರಗಳು ಶಾಂತಲಾ ಮಧುರವರ ಪುಸ್ತಕ ************************************************************************

ಶಾಂತಲಾ ಮಧು ಬಹುಮುಖ ಪ್ರತಿಭೆ Read Post »

ಇತರೆ

ಹುಯಿಲಗೋಳ ನಾರಾಯಣರಾಯ..!

ಲೇಖನ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ವಿನ ಹುಯಿಲಗೋಳ ನಾರಾಯಣರಾಯ..! ಇಂದು ಹುಯಿಲಗೋಳ ನಾರಾಯಣರಾಯರ ಜನ್ಮದಿನ. ಆ ನೆನಪಲ್ಲಿ ಈ ಬರಹ… ಹುಯಿಲಗೋಳ ನಾರಾಯಣರಾಯರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಗೀತೆಯನ್ನು ರಚಿಸಿದವರು. ೧೮೮೪ ಅಕ್ಟೋಬರ್ ೪ ರಂದು ಗದಗದಲ್ಲಿ ಜನಿಸಿದವರು. ಇವರ ತಂದೆ ಕೃಷ್ಣರಾಯರು, ತಾಯಿ ರಾಧಾಬಾಯಿ(ಬಹಿಣಕ್ಕ). ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗೂ ಧಾರವಾಡಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು (ಮುಂಬೈ ವಿಶ್ವವಿದ್ಯಾಲಯ) ಸೇರಿದರು. ೧೯೦೭ ರಲ್ಲಿ ಬಿ.ಎ. ಪದವಿಯನ್ನು ಪಡೆದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ, ಕಾನೂನು ಪದವಿಯನ್ನು ಪಡೆದು ೧೯೧೧ರಲ್ಲಿ ವಕೀಲಿ ವೃತ್ತಿಯನ್ನು ಗದಗದಲ್ಲಿಯೇ ಆರಂಭಿಸಿದವರು. ಇಂತಹ ಹುಯಿಲಗೋಳ ನಾರಾಯಣರಾಯರು ‘ಕರ್ನಾಟಕ ಏಕೀಕರಣ’ದಲ್ಲಿ ಪ್ರಮುಖ ಪಾತ್ರ ವಹಿಸದವರಲ್ಲಿ ಒಬ್ಬರು. ಅಲ್ಲದೇ ಧಾರವಾಡದ ವಿದ್ಯಾವರ್ಧಕ ಸಂಘದ ಸ್ಥಾಪನೆಯಲ್ಲೂ ಪ್ರಮುಖರಲ್ಲೊಬ್ಬರಾಗಿದ್ದವರು. ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದವರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ‘ಜೈ ಕರ್ನಾಟಕ ವೃತ್ತ’ , ‘ಪ್ರಭಾತ’ , ‘ಧನಂಜಯ’ ಮೊದಲಾದವುಗಳಲ್ಲಿ ಪ್ರಕಟವಾದವು. ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನೂ ರಚಿಸಿದರು. ನಾರಾಯಣರಾಯರು ‘ಮೂಡಲು ಹರಿಯಿತು’ ಎಂಬ ಕಾದಂಬರಿಯನ್ನೂ ಬರೆದಿದ್ದರೆಂದು ತಿಳಿದು ಬರುತ್ತದೆ. ಆದರೆ ಈ ಕಾದಂಬರಿಯ ಹಸ್ತಪ್ರತಿ ಈಗ ಲಭ್ಯವಿಲ್ಲ. ನಾಟಕಗಳು– ಹುಯಿಲಗೋಳ ನಾರಾಯಣರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ನಾಟಕಗಳನ್ನು ರಚಿಸಿದವರು. ಅವುಗಳು ಕೆಳಕಂಡಂತಿವೆ– # ಕಾಲ್ಪನಿಕ ವಜ್ರಮುಕುಟ (೧೯೧೦) ಕನಕವಿಲಾಸ (೧೯೧೩) # ಐತಿಹಾಸಿಕ ಪ್ರೇಮಾರ್ಜುನ(೧೯೧೨) ಮೋಹಹರಿ(೧೯೧೪) ಅಜ್ಞಾತವಾಸ(೧೯೧೫) ಪ್ರೇಮವಿಜಯ(೧೯೧೬) ಸಂಗೀತ ಕುಮಾರರಾಮ ಚರಿತ(೧೯೧೭) ವಿದ್ಯಾರಣ್ಯ(೧೯೨೧) # ಪೌರಾಣಿಕ ಭಾರತ ಸಂಧಾನ(೧೯೧೮) ಉತ್ತರ ಗೋಗ್ರಹಣ(೧೯೨೨) # ಸಾಮಾಜಿಕ ಸ್ತ್ರೀ ಧರ್ಮ ರಹಸ್ಯ(೧೯೧೯) ಶಿಕ್ಷಣಸಂಭ್ರಮ(೧೯೨೦) ಪತಿತೋದ್ಧಾರ(೧೯೫೨) ಅವರಿಗೆ ಸಂದ ಪ್ರಶಸ್ತಿ ಹಾಗೂ ಗೌರವಗಳು ಹೀಗಿವೆ– ಆಗಿದ್ದ ಮುಂಬಯಿ ಸರಕಾರವು ಪತಿತೋದ್ಧಾರ ನಾಟಕಕ್ಕೆ ೧೯೫೪ರಲ್ಲಿ ಬಹುಮಾನ ನೀಡಿತು. ಕಲೋಪಾಸಕ ಮಂಡಳಿಯಿಂದ ಸನ್ಮಾನ – ೧೯೫೨ ಗದಗ – ಬೆಟಗೇರಿ ನಾಗರಿಕರಿಂದ ಸನ್ಮಾನ – ೧೯೩೫ ಗದಗ ವಕೀಲರ ಸಂಗದಿಂದ – ೧೯೫೫ ಕರ್ನಾಟಕ ಸರ್ಕಾರ ಪ್ರಥಮ ರಾಜ್ಯೋತ್ಸವ – ೧೯೫೬ ಕನ್ನಡ ಸಾಹಿತ್ಯ ಪರಿಷತ್ತು – ೧೯೬೧ ಇನ್ನಿತರ ವಿಷಯಗಳು– ಹುಲಗೋಳ ನಾರಾಯಣರಾಯರ ಸಂಗಡಿಗರು ಅಥವಾ ನಾಟ್ಯವಿಲಾಸಿಗಳು ಆಡಿದ ಇವರ ನಾಟಕಗಳ ಸಂಪಾದನೆಯನ್ನು ಸಮಾಜಶಿಕ್ಷಣ ಮತ್ತು ಸುಧಾರಣೆಗೆ ವಿನಿಯೋಗಿಸಲು ಇವರು ಉದ್ದೇಶಿಸಿದ್ದರು. ಅದರಂತೆಯೇ ಗದಗಿನಲ್ಲಿ ವಿಧ್ಯಾದಾನ ಸಮಿತಿಯಿಂದ ಪ್ರೌಢಶಾಲೆಯೊಂದು ನಿರ್ಮಾಣವಾಯಿತು. ನಾರಾಯಣರಾಯರು ಅನೇಕ ಸಾಮಾಜಿಕ ಸಂಘಟನೆಗಳಲ್ಲಿಯೂ ಸೇವೆ ಸಲ್ಲಿಸಿದ್ದರು… ‘ಉದಯವಾಗಲಿ’ ಗೀತೆ ರಚಿಸಿದರು. ಇಂತಹ ಹುಯಿಲಗೋಳ ನಾರಾಯಣರಾಯರು ೪, ಜುಲೈ ೧೯೭೧ರಂದು ಹುಬ್ಬಳ್ಳಿಯಲ್ಲಿ ನಿಧನರಾದರು… ಇಂತಹ ಹುಯಿಲಗೋಳ ನಾರಾಯಣರಾಯರ ಪುಸ್ತಿಕೆಗಳನ್ನ ಮುಂದೆ ಕನ್ನಡ ಪುಸ್ತಕ ಪ್ರಾಧಿಕಾರವು “ಹುಯಿಲಗೋಳ ನಾರಾಯಣರಾಯರು ಜೀವನ ಸಾಧನೆ”ಯನ್ನು ಪುಸ್ತಕದಲ್ಲಿ ಪ್ರೊ.ಸಂಪದಾ ಸುಭಾಷ್‌, ಕನ್ನಡ ಪುಸ್ತಕ ಪ್ರಾಧಿಕಾರ, ೨೦೧೨.ರಲ್ಲಿ ಪ್ರಕಟಿಸಿತು. ಹೀದ್ದರು ಹುಯಿಲಗೋಳ ನಾರಾಯಣರಾಯರು. ಮತ್ತು ಹೀಗಿತ್ತು ಹುಯಿಲಗೋಳ ನಾರಾಯಣರಾಯರ  ಸಾಹಿತ್ಯ ಸಾಧನೆ… **************************** ಕೆ.ಶಿವು.ಲಕ್ಕಣ್ಣವರ

ಹುಯಿಲಗೋಳ ನಾರಾಯಣರಾಯ..! Read Post »

ಇತರೆ, ಜೀವನ

ಯಾಕೆ ನೆಗೆಟಿವಿಟಿ?

ಲೇಖನ ಯಾಕೆ ನೆಗೆಟಿವಿಟಿ? ಮಾಲಾ.ಮ. ಅಕ್ಕಿಶೆಟ್ಟಿ.  “ಆಕೆ ಯಾವಾಗಲೂ ಹಾಗೆಯೇ ಬಿಡಿ. ಏನ್ ಹೇಳಿದ್ರು ನೆಗೆಟಿವ್ ಆಗಿ ಯೋಚಿಸಿ, ಅದರಲ್ಲೇ ಮುಳುಗಿರುತ್ತಾಳೆ. ಇದ್ದ ಗಳಿಗೆಯನ್ನು ಆನಂದಿಸಲು ಬರಲ್ಲ. ಬರೀ ನೆಗೆಟಿವ್. ಜೀವನವನ್ನು ಆನಂದಿಸುವುದೂ ಒಂದು ಕಲೆ. ಅದು ಆಕೆಗೆ ಗೊತ್ತಿಲ್ಲ. ಎಲ್ಲರದೂ ಒಂದೊಂದು ಸಮಸ್ಯೆ ಇದ್ದೇ ಇರುತ್ತೆ. ಯಾರಿಗೂ ಸಮಸ್ಯೆ ತಪ್ಪಿದ್ದಿಲ್ಲ. ಜೀವನ ಇದ್ದ ಹಾಗೆ ನಡೆದುಕೊಂಡು ಹೋಗಬೇಕು. ಅದು ಬಿಟ್ಟು ಸತತ ಇಪ್ಪತ್ತನಾಲ್ಕು ಗಂಟೆಯೂ ನಕಾರಾತ್ಮಕವಾಗಿ ಯೋಚಿಸಿದರೆ ಹೇಗೆ? ಅದೇನೊ ಅಂತಾರಲ್ಲ ಪ್ರತಿ ಪರಿಹಾರಕ್ಕೂ ಇಂಥವರು ಸಮಸ್ಯೆಯನ್ನು ಹುಟ್ಟಿಸಿಬಿಡತಾರೆ ಅನ್ನೊ ಗುಂಪಿನಲ್ಲಿ ಇವಳೂ ಒಬ್ಬಳು”  ಎಂದು ನಾವು, ನೀವು ಹೀಗಿರುವವರನ್ನು ಭಾರಿ ಬಾರಿ ಟೀಕಿಸಿ ಮಾತನಾಡಿರಬಹುದು.ಕೊರೊನಾ ರೋಗದ ಬೆನ್ನಲ್ಲೇ ಎಲ್ಲಾ ವಯಸ್ಸಿನವರನ್ನೂ ಈ ನಕಾರಾತ್ಮಕತೆ ಕಾಡುತ್ತಿದೆ.ಆದರೆ ಎಲ್ಲರೂ ಮಾಡುವ ತಪ್ಪು ಇಲ್ಲೇ ಇದೆ. ಹೌದು ಸಕಾರಾತ್ಮಕವಾಗಿ ಇರಬೇಕು, ಯೋಚಿಸಬೇಕು… ಎಲ್ಲಾ ಸರಿ. ಆದರೆ ಯಾಕೆ ವ್ಯಕ್ತಿ ಇಷ್ಟೊಂದು ನಕಾರಾತ್ಮಕವಾಗಿ ಯೋಚಿಸುತ್ತಾನೆ ಅನ್ನುವುದನ್ನು ನಾವು, ಅಂದರೆ ಅಂತ ಅಂಥ ವ್ಯಕ್ತಿಗಳಿಗೆ ಉಪದೇಶ ಮಾಡುವಾಗ ಯೋಚಿಸಬೇಕಾಗುತ್ತದೆ.ಪೊಜಿಟಿವ್ ಥಿಂಕ್ ಮಾಡಿ, ಮಾಡಿ, ಎಂದು ಒತ್ತಾಯಿಸಿದಾಗ ಅತೀವ ದುಃಖದಲ್ಲಿದ್ದ ವ್ಯಕ್ತಿ ಹೇಗೆ ತಾನೇ ಪೊಜಿಟಿವ್ ಆಗಿ ಯೋಚಿಸಬಲ್ಲ! ಆದ್ದರಿಂದ ನೆಗೆಟಿವ್ ವ್ಯಕ್ತಿಗಳ ಹಿಂದಿರುವ ಕಾರಣಗಳನ್ನು ವಿಶ್ಲೇಷಿಸಬೇಕಾಗುತ್ತದೆ.               ತಾನು ಅತಿಯಾಗಿ ಪ್ರೀತಿಸಿದ ವ್ಯಕ್ತಿ ಮರಣ ಹೊಂದಿದಾಗ, ಆತ್ಮೀಯರಿಂದ ಬೇರ್ಪಟ್ಟ ನೋವು ಅಪಾರ.ಈ ಆತ್ಮೀಯರು.. ತಂದೆ ,ತಾಯಿ, ಅಕ್ಕ, ಅಣ್ಣ, ತಂಗಿ, ತಮ್ಮ, ತಂಗಿ, ಗೆಳೆಯ,ಗೆಳತಿ ಅಥವಾ ತನ್ನದು ಅಂದುಕೊಂಡ ಯಾವುದೇ ಜೀವ, ಇತ್ಯಾದಿಗಳ ಯಾದಿಯನ್ನು ಹೊಂದಿರುತ್ತದೆ. ಜೀವನವೇ ಅವರು ಎಂದಾಗ ಅವರಿಲ್ಲದ ಜೀವನಕ್ಕೆ ಅರ್ಥವೇ ಇಲ್ಲ ಎನ್ನಿಸುವುದು ತೀರ ಸ್ವಾಭಾವಿಕ. ಅನುಭವಗಳು ಜೀವನಕ್ಕೆ ಪಾಠ ಕಲಿಸುತ್ತಾ ಎನ್ನುವುದೇನೋ ಸರಿ. ಆದರೆ ಆದ ಕೆಟ್ಟ ಅನುಭವಗಳು ಮನುಷ್ಯನನ್ನು ನೆಗೆಟಿವ್ ಕೂಪಕ್ಕೆ ತಳ್ಳುವುದೂ ಅಷ್ಟೇ ಸತ್ಯವಾಗಿದೆ. ಕೆಟ್ಟ ಅನುಭವಗಳು  ಒಬ್ಬನನ್ನು ಮೇಲೆತ್ತುವಂತೆ ಮಾಡಿದರೆ, ಇನ್ನುಳಿದವರಿಗೆ ಅಂಥ ಘಟನೆಗಳಿಂದ ಹೊರಬಾರದಂತೆ ಮಾಡಿರುತ್ತವೆ. ಪೆಟ್ಟು ತಿಂದ ವ್ಯಕ್ತಿ ಪೆಟ್ಟನ್ನು ಚಾಲೆಂಜ್ ಆಗಿ ತೆಗೆದುಕೊಂಡು ನಾಗಾಲೋಟದಲ್ಲಿ ಮುಂದುವರಿದು ಪ್ರಗತಿಯನ್ನು ಸಾಧಿಸಬಹುದು… ಆದರೆ ಅದು ಎಲ್ಲರ ಜೀವನದಲ್ಲೂ ಸಾಧ್ಯವಿಲ್ಲ.          ಎಷ್ಟೇ ಪೊಜಿಟಿವ್ ಆಗಿ ಇರಲು ಬಯಸಿದರೂ ಬರುವ ಸಂದರ್ಭಗಳು ಮನುಷ್ಯನನ್ನು ಕುಗ್ಗಿಸಿ ನೆಲಕಚ್ಚುತ್ತವೆ. ಅಂಥ ಸಂದರ್ಭ ಎಂದರೆ ಭಯ ಪೀಡಿತರಾಗುವ ಅನುಭವಗಳು ಅವರಲ್ಲಿ ಬೇರೂರಿ ಬಿಡುತ್ತವೆ.ಇನ್ನೊಂದೆಡೆ, ಮರಳಿ ಪ್ರಯತ್ನ ಮಾಡು ಎನ್ನುವ ಸಿದ್ಧಾಂತವನ್ನು ಕಟ್ಟಾ ನಿರ್ವಹಿಸಿದಾಗಲೂ ಮಾಡಿದ ಪ್ರಯತ್ನಗಳಿಗೆ ಬೆಲೆಯೇ ಇರಲ್ಲ; ಎಲ್ಲ ವಿಫಲವಾಗುತ್ತವೆ ಅಥವಾ ಪ್ರಯತ್ನಕ್ಕೆ ಫಲವೇ ಇರೋದಿಲ್ಲ. ಇನ್ನಷ್ಟು ಸಂದರ್ಭಗಳಲ್ಲಿ ಒಳ್ಳೆಯದೇ ಆಗುತ್ತೆ ಎಂದು ಕಾದು ಕಾದು ಕುಳಿತಿರುತ್ತಾರೆ. ಆದರೆ ಕಾಯುವಿಕೆಗೆ ಸಫಲತೆ ಸಿಕ್ಕಿರಲ್ಲ. ಒಳ್ಳೆಯ ಗಳಿಗೆ ನಿರೀಕ್ಷೆಯಲ್ಲಿ ದಿನ, ತಿಂಗಳು ವರ್ಷಗಳನ್ನು ಸವೆಸಿದರೂ ಸಾಧನೆ ಆಗಿರಲ್ಲ.ಕಾದು ಬರೀ ಸುಣ್ಣವಾಗುತ್ತಾರೆ ಅಷ್ಟೇ. ಕೆಲವು ಸಲ ಮನೆಯವರಿಂದ ಅಥವಾ ಸ್ನೇಹಿತರಿಂದ ನಿರೀಕ್ಷಿಸಿದ ಮಟ್ಟದ ಸಹಾಯ, ಸಹಕಾರಗಳು, ವ್ಯಕ್ತಿಗೆ ಸಿಕ್ಕಿರಲ್ಲ. ಒಂದು ಕಿರುಬೆರಳಷ್ಟೇ ಸಹಾಯ, ಸಹಕಾರ, ಉತ್ತೇಜನದ ಲಾಲಸೆಯನ್ನು ಇಟ್ಟುಕೊಂಡ ವ್ಯಕ್ತಿ ಒಮ್ಮೆಲೇ ಮೇಲಿಂದ ಕೆಳಗೆ ಬಿದ್ದಿರುತ್ತಾನೆ. ಇದಕ್ಕೆ ವಿರುದ್ಧವಾದ ಸಂದರ್ಭಗಳಲ್ಲಿ ವ್ಯಕ್ತಿಯ ಸಹಾಯ, ಪ್ರೋತ್ಸಾಹ, ಕೆಲಸಕ್ಕೆ ಬಂದಿರಲ್ಲ. ಕಾರಣ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಚಿಮ್ಮುತ್ತಿರುತ್ತದೆ. ತಮ್ಮ ಮೇಲೆ ತಮಗೆ ವಿಶ್ವಾಸವಿಲ್ಲ. ಈ ಕೆಲಸದಲ್ಲಿ ನಾನು ಸೋತರೆ ಹೇಗೆ? ಜನ ಏನೆಂದಾರು? ಎಂಬುದರಲ್ಲಿ ಕಾಲಹರಣವಾಗುತ್ತದೆ. ಇಂಥದ್ದೇ ಸಂದರ್ಭಗಳು ವ್ಯಕ್ತಿಯನ್ನು ಜಿಗುಪ್ಸೆ ಹೊಂದುವಂತೆ ಮಾಡುತ್ತವೆ. ಈ ಜಿಗುಪ್ಸೆ ಜೀವನದುದ್ದಕ್ಕೂ ಮುಂದುವರಿದು ಜನ ಎಲ್ಲ ಆತ ಬರೀ ನೆಗೆಟಿವ್ ಬಿಡು ಎಂಬ ನೇಮಪ್ಲೇಟ್ ತಯಾರಿಸಿ, ಹಾಕುವುದರಲ್ಲಿ ಉತ್ಸುಕರಾಗಿರುತ್ತಾರೆ.                               ಆದರೆ ನಿಜಸಂಗತಿ ಇರೋದೇ ಇಲ್ಲಿ. ಒಬ್ಬ ವ್ಯಕ್ತಿ ಯಾವ ಕಾರಣಗಳಿಂದ ನೆಗೆಟಿವ್ ಆಗಿ ಯೋಚಿಸುತ್ತಾನೆ ಎಂಬುದನ್ನು ಅರಿಯಬೇಕಾಗಿದೆ. ಮೂಲ ಸಮಸ್ಯೆಗಳಿಗೆ ಪರಿಹಾರಗಳು ಸೃಷ್ಟಿಯಾದಾಗ ಸ್ವಾಭಾವಿಕವಾಗಿ ಪೊಜಿಟಿವ್ ಎಡೆಗೆ ಮನುಷ್ಯ ವಾಲಬಹುದು. ಇಲ್ಲಾದರೆ ಎಂದೂ ಆಗಲ್ಲ. ಪಾಸಿಟಿವ್ ಆಗಿ ಆಗಿ ಎಂದರೆ ನಾಟಕೀಯ ನಗುವನ್ನು ಹೊದ್ದು ಹೃದಯದಲ್ಲಿ ನೋವು ತುಂಬಿಕೊಂಡು ಸಾಗಬೇಕಾಗುತ್ತದೆ. ಇಂಥವರಿಗೆ ನಿಜವಾಗಿಯೂ ಸಹಾಯ ಮಾಡುವ ಮನಸ್ಸಿದ್ದರೆ ಅವರೊಂದಿಗೆ ಒಂದು ಆಪ್ತ ಸಮಾಲೋಚನೆಯ ಅಗತ್ಯವಿದೆ.ಸಮಸ್ಯೆಯ ಆಳ ಅರಿತು, ಪರಿಹಾರ ಒದಗಿಸಿ.ಇಲ್ಲಾ ಅವರಿಗೆ ಸಾಂತ್ವನ ನೀಡುವ ವ್ಯಕ್ತಿಗಳ ಹತ್ತಿರವಾದರೂ ಕರೆದುಕೊಂಡು ಹೋಗಿ. ಅವರಂಥದ್ದೇ ಸಮಸ್ಯೆಯಿಂದ ಬಳಲಿ, ಅವುಗಳನ್ನು ಮೆಟ್ಟಿನಿಂತ ವ್ಯಕ್ತಿಗಳ ಪರಿಚಯ ಮಾಡಿರಿ.ಅತೀಯಾದ negativity ಯಿಂದ ದೇಹಾರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಿ.ನೀವು ಕೊಡುವ ಸಲಹೆಗಳು ಅಥವಾ ಕ್ರಮಗಳು ನೈಜವಾದಲ್ಲಿ, ಖಂಡಿತ ವ್ಯಕ್ತಿ ತನ್ನ ನೆಗೆಟಿವಿಟಿಯಿಂದ ಹೊರಬರಬಹುದು.ಹೀಗೆ ಮಾಡಿದಾಗ ಒಳ್ಳೆಯ ಮಾರ್ಗದರ್ಶನ ಹಾಗೂ ಸಹಾಯ ಮಾಡಿದ ಆತ್ಮ ಸಂತೋಷ ನಿಮಗೂ ಇರುತ್ತದೆ. **************************************

ಯಾಕೆ ನೆಗೆಟಿವಿಟಿ? Read Post »

ಇತರೆ

‘ಜೈ ಜವಾನ್, ಜೈ ಕಿಸಾನ್’

ಲೇಖನ ‘ಜೈ ಜವಾನ್, ಜೈ ಕಿಸಾನ್’ ಜಯಘೋಷದ ಲಾಲ್ ಬಹಾದ್ದೂರ್ ಶಾಸ್ತ್ರಿ ಇಂದು ಮಹಾತ್ಮ ಗಾಂಧಿ ಹುಟ್ಟಿದ ದಿನವೂ ಹೌದು. ಹಾಗೆಯೇ ಲಾಲ್ ಬಹಾದ್ದೂರ್ ಶಾಸ್ತ್ರೀಯ ಹುಟ್ಟು ಹಬ್ಬವೂ ಹೌದು. ಗಾಂಧಿ ಸ್ಮರೀಸಿ, ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಸ್ಮರಣೆ ಮಾಡದೇ ಬಿಟ್ಟರೆ ಅದು ಮಹಾ ತಪ್ಪಾಗುತ್ತದೆ. ಇಬ್ಬರೂ ರಾಷ್ಟ್ರದ ಹಿತ ಚಿಂತಕರು, ಆ ಕಾರಣಕ್ಕೆ ಈ ಇಬ್ಬರ ಒಂದೇ ದಿನದ ಹುಟ್ಟು ಹಬ್ಬದ ಸ್ಮರಣೆಯನ್ನು ಮಾಡೋಣ… ಇತರರಿಗೆ ಹೋಲಿಸಿದರೆ, ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಹೊಸಬರಾಗಿದ್ದರೂ ಸಹ, 1965ರಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ಜರುಗಿದ ಯುದ್ಧದಂತಹ ವಿಷಮ ಪರಿಸ್ಥಿತಿಯಲ್ಲಿಯೂ ಶಾಸ್ತ್ರೀಯವರು ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದವರು. ದೇಶದ ಪ್ರಧಾನಿಯಾಗಿದ್ದರೂ ಕೂಡ ಜನಸಾಮಾನ್ಯನಂತೆ ಇರುತ್ತಿದ್ದರು. ಜೀವನುದುದ್ದಕ್ಕೂ ಗಾಂಧೀ ಅನುಯಾಯಿಯಾಗಿ ಸತ್ಯ, ಅಹಿಂಸೆಯನ್ನು ಪ್ರತಿಪಾದಿಸಿ “ಶಾಂತಿದೂತ’ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಇಂದಿನ ಯುವಕರಿಗೆ ಐಕಾನ್‌ ಆಗಬಲ್ಲ ಬದುಕು ಶಾಸ್ತ್ರೀಜಿ ಅವರದು. ಸರಳತೆ, ನೇರ ನಡೆನುಡಿ, ಶಿಸ್ತು, ಕರ್ತವ್ಯ ನಿಷ್ಠೆ ಹೀಗೆ ಮುಂತಾದ ಅವರ ಸನ್ಮಾರ್ಗಗಳು ನಮ್ಮ ಜೀವನಕ್ಕೆ ದಾರಿದೀಪವಾಗುತ್ತವೆ. ಒಂದು ಸದೃಢ ರಾಷ್ಟ್ರ ನಿರ್ಮಾಣದ ದಿಶೆಯಲ್ಲಿ, ಸ್ವಪೋಷಣೆ ಮತ್ತು ಸ್ವಾವಲಂಬನೆಗಳನ್ನು ಆಧಾರಸ್ತಂಭಗಳೆಂದು ಭಾವಿಸುವ ಆವಶ್ಯಕತೆಯನ್ನು ಮನಗಂಡು ಶಾಸ್ತ್ರೀಯವರು ಜೈ ಜವಾನ್‌ ಜೈ ಕಿಸಾನ್‌ಎಂಬ ಘೋಷವಾಕ್ಯವನ್ನು ಜನಪ್ರಿಯಗೊಳಿಸಿದರು. ಶಾಸ್ತ್ರೀಜಿ ಅವರ ಇಡೀ ಜೀವನವೇ ನಮಗೆ ಪ್ರೇರಣೆ. ಬಾಲ್ಯದಿಂದಲೇ ಸ್ವಾಭಿಮಾನ ಮತ್ತು ಅಚಲ ವ್ಯಕ್ತಿತ್ವದ ಶಿಖರವೆನಿಸಿದ ಶಾಸ್ತ್ರೀಜಿ, ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಹಿಡಿದು, ರಾಷ್ಟ್ರ ರಾಜಕೀಯದಲ್ಲಿ ವಿವಿಧ ಸ್ತರದ ಜವಾಬ್ದಾರಿಗಳನ್ನು ನಿರ್ವಹಿಸುವವರೆಗೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ನಿರಾಡಂಬರವಾದ ಅವರ ನಿಲುವುಗಳ ಮೂಲಕ ಜನರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ. ಶಾಸ್ತ್ರೀಜಿ ಅವರು ಕೇಂದ್ರ ರೈಲ್ವೇ ಸಚಿವರಾದ ಸಂದರ್ಭ ತೋರಿದ ನೈತಿಕ ಜವಾಬ್ದಾರಿ ಪ್ರಸ್ತುತದ ವರೆಗೂ ರಾಜಕಾರಣಿಗಳಿಗೆ ಆದರ್ಶವಾಗುವಂತದ್ದು. 1956ರಲ್ಲಿ ಆಗಿನ ಆಂಧ್ರ ಪ್ರದೇಶದ ಅರಿಯಳೂರಲ್ಲಿ ಜರುಗಿದ ರೈಲ್ವೆ ಅಪಘಾತದಿಂದಾಗಿ 144 ಜನ ಸಾವನ್ನಪ್ಪಿದರು. ಇದರಿಂದ ಹತಾಶರಾದ ಶಾಸ್ತ್ರೀಜಿ ನೈತಿಕ ಜವಾಬ್ದಾರಿಯ ಕಾರಣ ನೀಡಿ ರಾಜೀನಾಮೆ ನೀಡಿದರು. ಇಂತಹ ಆದರ್ಶವನ್ನು ಮೆರೆದ ಅಪರೂಪದ ವ್ಯಕ್ತಿತ್ವ ಅವರದು. ಆದರೆ ಈಗಿನವರಲ್ಲಿ ಇಂತಹ ನಿರ್ಧಾರಗಳನ್ನು ನಾವು ಎದುರು ನೋಡಬಹುದೆ? ರಕ್ಷಣಾ ನಿಧಿಗೆ ವೈಯಕ್ತಿಕ ವ್ಯಕ್ತಿಯೋರ್ವನ ಅತ್ಯಧಿಕ ಕೊಡುಗೆ ಸಾಕ್ಷಿ– ಪ್ರಧಾನಿಯಾದ ಅನಂತರ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸುವ, ಭಾರತೀಯ ಸೇನೆಯನ್ನು ಸಶಕ್ತಗೊಳಿಸುವ ಮತ್ತು ಕೃಷಿ ಕ್ಷೇತ್ರವನ್ನು ಸ್ವಾವಬಂಭಿಯನ್ನಾಗಿಸುವ ಕಾರ್ಯದಲ್ಲಿ ನಿರತರಾದರು. ಕ್ಷೀರ ಕ್ರಾಂತಿ ಮತ್ತು ಹಸುರು ಕ್ರಾಂತಿಗೆ ಮುನ್ನುಡಿ ಬರೆದರು. ಸೇನಾ ಅಭಿವೃದ್ಧಿಗಾಗಿ ಹಗಲಿರುಳು ದುಡಿದರಲ್ಲದೆ ಹೈದರಾಬಾದ್‌ನ ನಿಜಾಮನ ಬಳಿ ಸಹಾಯ ಕೇಳಿದಾಗ ಆತ 5 ಸಾವಿರ ಕೆ.ಜಿ. ಚಿನ್ನವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ನೀಡುತ್ತಾನೆ. ಇಲ್ಲಿಯವರೆಗೂ ಇದು ರಾಷ್ಟ್ರೀಯ ರಕ್ಷಣಾ ನಿಧಿಗೆ ವ್ಯಕ್ತಿಯೋರ್ವನ ಅತ್ಯಧಿಕ ಕೊಡುಗೆಯಾಗಿದೆ ಎನ್ನುವುದು ವಿಶೇಷ. ಇದು ರಾಷ್ಟ್ರದ ಹಿತಕ್ಕಾಗಿ ನೀಡಿದ ದೇಣಿಗೆ ಮಾತ್ರವಲ್ಲದೆ ಪ್ರಧಾನಿಯ ಮಾತಿಗೆ ಕೊಟ್ಟ ಗೌರವವಲ್ಲದೆ ಮತ್ತೇನು. ಶಾಂತ ಸ್ವರೂಪಿ ಶಾಸ್ತ್ರೀಜಿ ಜನತೆಗೆ ಹೆಚ್ಚು ಆಪ್ತವಾದದ್ದು ತಮ್ಮ ಕಾರ್ಯವೈಖರಿಯ ಮೂಲಕ ಮಾತನಾಡಿದಾಗ! ಜಗತ್ತು ನಿಬ್ಬೆರಗಾಗುವಂತಹ ನಿರ್ಣಯಗಳನ್ನು ಕೈಗೊಂಡಾಗ! 1962ರಲ್ಲಿ ಚೀನ ವಿರುದ್ಧದ ಯುದ್ಧದಲ್ಲಿ ಭಾರತ ಸೋಲಬೇಕಾಯಿತು. 1947-48ರ ಯುದ್ಧದಲ್ಲಾದ ಮುಖಭಂಗಕ್ಕೆ ಪರಿಹಾರವನ್ನು ಪಡೆದುಕೊಳ್ಳಲೋ ಅಥವಾ ಶಾಂತ ಮತ್ತು ವಾಮನಾಕಾರನಾದ ಪ್ರಧಾನಿ ಇರುವುದನ್ನು ಕಂಡೋ ಪಾಕಿಸ್ಥಾನ ಭಾರತದ ಮೇಲೆ 1965ರಲ್ಲಿ ಯುದ್ಧ ಸಾರಿತು. ಜಮ್ಮು-ಕಾಶ್ಮೀರಕ್ಕೆ ಮುತ್ತಿಗೆ ಹಾಕಿದ ಪಾಕಿಸ್ಥಾನಕ್ಕೆ ಅಚ್ಚರಿಯ ರೀತಿಯಲ್ಲಿ ಲಾಹೋರ್‌ ಅತಿಕ್ರಮಣದ ಮೂಲಕ ಉತ್ತರಿಸಿದರು. ಅಷ್ಟೇ ಅಲ್ಲದೆ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಿ, ಗಡಿ ದಾಟುವ ಆವಶ್ಯಕತೆ ಬಿದ್ದರೆ ಹಿಂಜರಿಯದೆ ಒಳನುಗ್ಗಿ, ಅಂತಾರಾಷ್ಟ್ರೀಯ ಸಂಬಂಧದ ಕುರಿತು ಚಿಂತಿಸಬೇಡಿ ಎಂದು ಧೈರ್ಯ ತುಂಬಿದರು. ಅದರ ಪರಿಣಾಮವಾಗಿ ಲಾಹೋರ್‌, ಹಾಜಿ ಪಿರ್‌ ಪಾಸ್‌ ಮತ್ತು ಸಿಯಾಲ್‌ ಕೋಟ್‌ನಲ್ಲಿ ನಮ್ಮ ಸೇನೆ ಪಾಕಿಸ್ಥಾನವನ್ನು ಹಿಮ್ಮೆಟ್ಟಿಸಿತ್ತು. ಅಮೆರಿಕದಿಂದ ಗೋಧಿಯ ಸರಬರಾಜು ನಿಂತಿತು ಈ ಯುದ್ಧದ ಸಂದರ್ಭ ಶಾಸ್ತ್ರೀಜಿಗೆ ಎದುರಾದ ಸವಾಲುಗಳು ಒಂದೆರಡಲ್ಲ. ಪಾಕಿಸ್ಥಾನದ ವಿರುದ್ಧ ತಿರುಗಿಬಿದ್ದ ಕಾರಣಕ್ಕಾಗಿ ಅಮೆರಿಕದಿಂದ ಬರಬೇಕಾದ ಗೋಧಿಯ ಸರಬರಾಜು ನಿಂತಿತು. ಶಾಸ್ತ್ರೀಜಿ ಹಸುರು ಕ್ರಾಂತಿಗೆ ಕರೆಕೊಟ್ಟಿದ್ದು ಆಗಲೇ. ಅಲ್ಲಿಯವರೆಗೂ ಆಹಾರದ ಕೊರತೆಯನ್ನು ನೀಗಿಸುವುದಕ್ಕಾಗಿ ರಾಷ್ಟ್ರದ ಜನತೆಗೆ ಸೋಮವಾರದ ಉಪವಾಸವನ್ನು ಆಚರಿಸುವಂತೆ ಭಿನ್ನಹ ಮಾಡಿದರು. ಅದಕ್ಕೆ ಇಡೀ ರಾಷ್ಟ್ರ ಸ್ಪಂದಿಸುವುದರ ಹಿಂದಿದ್ದ ಆ ವ್ಯಕ್ತಿಯ ನೈತಿಕ ಮೌಲ್ಯ ಎಂಥಹದು ಯೋಚಿಸಿ. ಕೇವಲ ನುಡಿದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಬದಲಾಗಿ ಹೇಳಿದ್ದನ್ನು ಪಾಲಿಸಿದ್ದರಿಂದ ರಾಷ್ಟ್ರವ್ಯಾಪಿ ಬೆಂಬಲ ವ್ಯಕ್ತವಾಯಿತು. ಶಾಸ್ತ್ರೀಜಿ ಎಲ್ಲರಿಗೂ ಹತ್ತಿರವಾಗುವುದು ಏಕೆ?– ಈ ಪ್ರಶ್ನೆಗೆ ಉತ್ತರ ಅವರ ಸರಳತೆ ಎನ್ನುವ ಪ್ರಭಾವಲಯ ಎಲ್ಲರನ್ನು ಸರಳವಾಗಿಯೇ ಆಕರ್ಷಿಸುತ್ತದೆ ಎನ್ನುವುದು. ಭಾರತದ ಅತ್ಯಂತ ಹೆಚ್ಚು ಜನಸಂಖ್ಯೆವುಳ್ಳ ರಾಜ್ಯದ ಗೃಹಮಂತ್ರಿಯಾಗಿದ್ದರೂ ಅವರಿಗೆ ಸ್ವಂತ ಮನೆ ಇರಲಿಲ್ಲ! ಆದ್ದರಿಂದಲೇ ಅವರನ್ನು Homeless Home Minister ಎಂದೂ ಇತರೆ ನಾಯಕರು ಕರೆಯುತ್ತಿದ್ದರು. ರಾಷ್ಟ್ರದ ಪ್ರಧಾನಿಯಾದಾಗಲೂ ಸ್ವಂತದೊಂದು ವಾಹನ ಇರಲಿಲ್ಲ! ಸರಕಾರಿ ವಾಹನವನ್ನು ಮನೆಯ ಕೆಲಸಕ್ಕಾಗಿ ಬಳಸುತ್ತಿರಲಿಲ್ಲ! ಮನೆಯವರೆಲ್ಲರ ಒತ್ತಾಯದಿಂದಾಗಿ ಕಾರು ಖರೀದಿಸಲು ನಿರ್ಧರಿಸಿದ ಶಾಸ್ತ್ರೀಜಿ ಪಿ.ಎನ್‌.ಬಿ. ಬ್ಯಾಂಕ್‌ನಲ್ಲಿ 5,000 ರೂ. ಲೋನ್‌ ಮಾಡಬೇಕಾಯಿತು! ಆದರೆ ದುರ್ದೈವದ ಸಂಗತಿ ಎಂದರೆ ಆ ಲೋನ್‌ ತೀರಿಸುವ ಮುಂಚೆಯೇ ಶಾಸ್ತ್ರೀಜಿ ಸಾವನ್ನಪ್ಪಿ ರಾಷ್ಟ್ರವನ್ನು ಅಗಲಿದರು. ನದಿ ಈಜಿದ್ದ ಶಾಸ್ತ್ರೀಜಿ– ಲಾಲ್‌ ಬಹದ್ದೂರ್‌ ಶಾಸ್ತ್ರೀಜಿ ಅವರು ಹುಟ್ಟು ಧೈರ್ಯವಂತ. ಇದೇ ಧೈರ್ಯದೊಂದಿಗೆ ಪಾಕಿಸ್ಥಾನದೊಂದಿಗೆ ಯುದ್ಧಕ್ಕಿಳಿದಿದ್ದರು. ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ತಮ್ಮ ಸ್ನೇಹಿತನ ಮನೆಗೆ ನದಿ ದಾಟಿ ಹೋಗಬೇಕಾಗಿರುತ್ತದೆ. ದೋಣಿಯಲ್ಲಿ ಹೋಗಿದ್ದ ಅವರು ವಾಪಸು ಆಗುವಾಗ ದೋಣಿಯಲ್ಲಿ ಬರಲು ಅವರಲ್ಲಿ ದುಡ್ಡು ಇರುವುದಿಲ್ಲ. ಆಗ ಅವರು ದೋಣಿಗಾಗಿ ಕಾಯದೇ, ದುಡ್ಡಿಗಾಗಿ ಇನ್ನೊಬ್ಬರನ್ನು ಕೇಳದೇ ತುಂಬಿ ಹರಿಯುತ್ತಿದ್ದ ನದಿಗೆ ಧುಮುಕುತ್ತಾರೆ. ನದಿಯನ್ನು ಈಜಿ ದಡ ಸೇರುತ್ತಾರೆ. ಸೆಳೆತ, ಸುಳಿ, ನೀರಿನ ರಭಸ ಯಾವುದನ್ನು ಲೆಕ್ಕಿಸದೇ ಧೈರ್ಯದಿಂದ ನದಿ ದಾಟಿದ್ದರು. ಪರಿಸ್ಥಿತಿಯಲ್ಲಿ ಒದಗಿಬರುವ ಸಮಸ್ಯೆಗಳಿಗೆ ನಮ್ಮ ಅಚಲ ಧೈರ್ಯವೇ ಉತ್ತರ ನೀಡುತ್ತದೆ ಎಂಬುದಕ್ಕೆ ಶಾಸ್ತ್ರೀಜಿ ಅವರ ಈ ಘಟನೆ ನಮಗೆ ಸ್ಫೂರ್ತಿಯಾಗಬಲ್ಲದು. ನೇರ ನಡೆತೆ, ನಿಷ್ಠೆ– ಶಾಸ್ತ್ರೀಜಿ ಅವರು ಪ್ರಧಾನಿಯಾದರು ಉಡುಗೆ, ನಡೆಯಲ್ಲೂ ಸರಳವಾಗಿರುತ್ತಿದ್ದರು. ಒಮ್ಮೆ ಅವರ ಹೆಂಡತಿಗೆಂದು ಸೀರೆ ತರಲು ಅಂಗಡಿಗೆ ಹೋದಾಗ ಅಂಗಡಿಯವರು ಸೀರೆಯನ್ನು ಉಚಿತವಾಗಿ ಕೊಡಲು ಬಂದಾಗ ಅದನ್ನು ತೆಗೆದುಕೊಳ್ಳದೇ ದುಡ್ಡು ನೀಡಿ, ಹೆಂಡತಿಗೆ ಸೀರೆ ತೆಗೆದುಕೊಂಡು ಕೊಡುತ್ತಾರೆ. ಎಂದಿಗೂ ತಾನು ಪ್ರಧಾನಿ ಎಂಬ ಹಮ್ಮು-ಬಿಮ್ಮು ಇಲ್ಲದೇ, ಅಧಿಕಾರ ದುರುಪಯೋಗ ಮಾಡಿಕೊಳ್ಳದೇ ನೇರ, ನಿಷ್ಠೆಯಿಂದ ಇದ್ದವರು ಶಾಸ್ತ್ರೀಜಿ. ****************************************** ಕೆ.ಶಿವು.ಲಕ್ಕಣ್ಣವರ

‘ಜೈ ಜವಾನ್, ಜೈ ಕಿಸಾನ್’ Read Post »

You cannot copy content of this page

Scroll to Top