ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ

ಅನುಭವ ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ ಮಮತಾ ಅರಸೀಕೆರೆ ಬಯಸಿ ಬಂದದ್ದಲ್ಲ. ಹಂಬಲಿಸಿ ಪಡೆದದ್ದಲ್ಲ. ಒಂದು ಬಗೆಯ ಓರೆ ನೋಟದ ಕಸಿವಿಸಿಯ ಬಿಗುವಿನೊಡನೆ ಅನಿಚ್ಛಾಪೂರ್ವಕವಾಗಿ ಇಲಾಖೆಗೆ ಕಾಲಿಟ್ಟದ್ದು. ನಂತರ ಜರುಗಿದ್ದು ಬರೋಬ್ಬರಿ ಇಪ್ಪತ್ತು ವರ್ಷಗಳ ಅನಿಯಮಿತ ಅಡೆತಡೆಯಿಲ್ಲದ ಪ್ರಯಾಣ. ಇದೇ ಅಕ್ಟೋಬರ್ ೨೫ ಕ್ಕೆ ನಾನು ಶಿಕ್ಷಣ ಇಲಾಖೆಯ ಸದಸ್ಯಳಾಗಿ ಎರಡು ದಶಕಗಳೇ ಆಗುತ್ತಿದೆ. ನನ್ನಮ್ಮ ಕೂಡ ಇದೇ ಇಲಾಖೆಯಲ್ಲಿದ್ದವರು.ಅಪ್ಪ ಅಂಚೆ ಇಲಾಖೆ ಉದ್ಯೋಗಿ.ಅದೇಕೋ ತನ್ನ ಇಲಾಖೆ ಬಗ್ಗೆ ಅಸಡ್ಡೆಯಿದ್ದಬಅಪ್ಪನ ಉದ್ಯೋಗಕ್ಕಿಂತ ಸುಲಭವಾಗಿ ಸರಳವಾಗಿ ನಿರ್ವಹಿಸಬಹುದಾದ ಶಿಕ್ಷಕ ವೃತ್ತಿಯನ್ನೇ ನಾನೂ ಪಡೆಯಲಿ ಅಂತ ಅಮ್ಮ ಹಂಬಲಿಸಿದ್ದು ಅದರಂತೆಯೇ ಆದದ್ದು ಈಗ ಭೂತಕಾಲ. ಇಬ್ಬರಿಗೂ ದೊಡ್ಡ ದೊಡ್ಡ ಆಸೆ ಹಂಬಲಗಳಿಲ್ಲ. ಆದರೆ ನನ್ನ ಆಲೋಚನೆ ಸರಳವಾಗಿರಲಿಲ್ಲ. ಪೂರ್ಣವಾಗಿ ಗ್ರಾಮೀಣ ಪ್ರದೇಶದಲ್ಲಿಯೇ ಓದಿದ ನನಗೆ ಯಾರೂ ಮಾರ್ಗದರ್ಶಕರಿಲ್ಲದ್ದು, ಮುಂದಿನ ಹಂತದ ವಿದ್ಯೆ, ಉದ್ಯೋಗಗಳ ಪರಿಚಯವಿಲ್ಲದ್ದು ಹಿನ್ನಡೆ. ಸಣ್ಣಪುಟ್ಟ ಅವಕಾಶದಲ್ಲಿಯೇ ತುಂಬಾ ಪುಸ್ತಕಗಳನ್ನು ಓದುತ್ತಿದ್ದ ನನಗೆ ಪ್ರಾಥಮಿಕ ಪ್ರೌಢ ಹಂತ ಮುಗಿಯುತ್ತಿದ್ದಂತೆ ಶಿಕ್ಷಣ ಕ್ಷೇತ್ರ ಬೇಡವೆನಿಸತೊಡಗಿ ಬೇರೆ ಬೇರೆ ಸಾಧ್ಯತೆಗಳ ಕ್ಷೀಣ ಪರಿಚಯವಾಗತೊಡಗಿತ್ತು. ಶತಾಯ ನಿರಾಕರಿಸಿದರೂ ಮನೆಯ ಬಲವಂತಕ್ಕೆ ಕಡೆಗೂ ತರಬೇತಿಗೆ ಸೇರಿದ ಎರಡು ವರ್ಷಗಳು ಪಟ್ಟ ಹಿಂಸೆ ಮತ್ತು ಅಲ್ಲಿನ ಪರಿಸರ, ಸ್ನೇಹಿತರ ಒಲವಿನ ದಿನಗಳು ನನ್ನ ಮೇಲೆ ಅಧ್ಯಾಪಕರ ಕರುಣೆ, ಮೆಚ್ಚುಗೆ ಪ್ರೋತ್ಸಾಹ ಎಲ್ಲವೂ ನೆನಪಿನಲ್ಲಿವೆ. ಸದಾ ಚಡಪಡಿಸುತ್ತಿದ್ದ ನನ್ನ ಅಳಲಾಟವನ್ನು ಮನೆಯವರು ಕೇಳಿಸಿಕೊಳ್ಳದಿದ್ದರೂ ನನ್ನ ಅಧ್ಯಾಪಕರೂ ಸಹಿಸಿದ್ದು ಈಗಲೂ ಸೋಜಿಗ ನನಗೆ. ಶಿಕ್ಷಕ ವೃತ್ತಿ ಬೇಡವೆನಿಸದಿರಲೂ ಕಾರಣವಿತ್ತು. ಶೈಕ್ಷಣಿಕ ಸಾಮಾನ್ಯಜ್ಞಾನವನ್ನ  ಗಳಿಸಲು ತುಂಬಾ ಪ್ರಯತ್ನ ಪಡುತ್ತಿದ್ದ ನನಗೆ ಯಾವುದೇ ಸಾಮಾನ್ಯಜ್ಞಾನ ಸ್ಪರ್ಧೆಯಲ್ಲಿ ಯಾವತ್ತೂ ಪ್ರಥಮ ಸ್ಥಾನ. ಸ್ಥಳೀಯ, ಜಿಲ್ಲೆ, ರಾಜ್ಯ ಮಟ್ಟದ ಬಹಳಷ್ಟು ಸ್ಪರ್ಧೆಗಳಲ್ಲಿ ಬಹುಮಾನಗಳನ್ನ ಗಿಟ್ಟಿಸಿದ್ದರಿಂದಲೂ ತುಂಬಾ ಓದುತ್ತಿದ್ದುದರಿಂದಲೂ ಕೆ.ಎ.ಎಸ್‌ ಅಥವಾಐ.ಎ.ಎಸ್. ಮಾಡಬೇಕೆಂಬ ಹುಚ್ಚು ಹತ್ತಿತ್ತು. ಅದಾವುದೂ ಸಾಧ್ಯವಾಗದೇ ಖಿನ್ನತೆಗೆ ಬಿದ್ದೆ.ಖಿನ್ನತೆಯ ಪರ್ವ ಆರಂಭವಾದದ್ದು ಅಲ್ಲಿಂದಲೇ.ಕೆಲಸ ಸಿಕ್ಕ ಮೇಲೆ ಒಂದೆರಡು ಸಲ ಕೆ.ಎ.ಎಸ್. ಪರೀಕ್ಷೆ ಬರೆದು ಒಮ್ಮೆ ಮಾತ್ರ ಪ್ರಿಲಿಮಿನರಿಯಲ್ಲಿ ಯಶಸ್ವಿಯಾಗಿ ನಂತರ ಸಾಧ್ಯವಾಗದೇ ಪ್ರಯತ್ನವನ್ನೇ ಬಿಟ್ಟುಬಿಟ್ಟೆ. ಉದ್ಯೋಗವದಕ್ಕಿದ ಆಲಸ್ಯ ಜೊತೆಗೆತಿ ರುಗಾಟ, ಸಂಘಟನೆಯ ರುಚಿಯೂ ಕಾರಣ. ಇಷ್ಟವಿಲ್ಲದೇ ಬಹಳವೆಂದರೆ ಬಹಳ ಚಿಕ್ಕ ವಯಸ್ಸಿನಲ್ಲೇ ಉದ್ಯೋಗ ಹಿಡಿದು ನಂತರ ಓದುವುದು ಮುಂದುವರೆಸಿ ಬಿ.ಎ.  ಬಿ.ಎಡ್. ಎಂ.ಎ. ಮಾಡುವ ವೇಳೆಗೆ ಓದುವುದು ಸಾಕೆನಿಸಿತ್ತು.ರಂಗಭೂಮಿ, ಸಾಹಿತ್ಯ, ವಿಜ್ಞಾನ ಪರಿಷತ್ ಗೀಳು ಹಿಡಿದಿತ್ತು. ಒಂದಂತೂ ನಿಜ ನನ್ನ ಬೇರೆ ಬೇರೆ ಚಟುವಟಿಕೆಗೆ ನನ್ನ ಉದ್ಯೋಗ ಆತ್ಮವಿಶ್ವಾಸದ ದೀವಿಗೆ ಹಿಡಿದಿತ್ತು.ಸ್ವಾವಲಂಬನೆ ಬದುಕಿಗೆ ದಾರಿಯಾಗಿಯೂ, ಮನೆಯ ಆರ್ಥಿಕತೆಗೆ ಸಹಕಾರಿಯಾಗಿಯೂ ಒದಗಿಬಂತು. ಸತತ ೧೫ ಕ್ಕೂ ಹೆಚ್ಚು ವರ್ಷ ನನ್ನ ಓಡಾಟ, ರಂಗಭೂಮಿ ಚಟುವಟಿಕೆ, ಮೊದಲ ಬಾರಿಗೆ ಒಂದು ತಿಂಗಳು ರಜೆ ಪಡೆದು ನಾಟಕದಲ್ಲಿ ಅಭಿನಯಿಸಿದ್ದು, ಆ ಮೂಲಕ  ಶಿಕ್ಷಣದಲ್ಲಿ ರಂಗಕಲೆಯೆಂಬ ಎನ್.ಎಸ್.ಡಿ.ಯ ಮೂರು ತಿಂಗಳ ತರಬೇತಿ, ನಾಟಕ ನಿರ್ಮಾಣ, ಅಭಿನಯ, ಕಾಲೇಜುಗಳಲ್ಲಿ ಸತತವಾಗಿ ಸೆಮಿನಾರ್‌ಗಳು, ವಿಜ್ಞಾನ ಜಾಥಾಗಳು ಮೊದಲಾದ ಕ್ರಿಯಾತ್ಮಕತೆಗೆ ರಹದಾರಿಯೂ ಆಯಿತು.ಸುಮಾರು ಮೂರು ನಾಲ್ಕು ಬಾರಿ ಕರ್ನಾಟಕ ಸುತ್ತಿದ ಓಡಾಟದ ಹುಚ್ಚನ್ನ ಬೆಂಬಲಿಸಿದ್ದು ಇದೇ ಉದ್ಯೋಗ.ಯಾವುದೇ ಕೆಲಸಕ್ಕೂ ದಿಟ್ಟತನದಿಂದ ಮುನ್ನುಗ್ಗುವ ಪ್ರಕ್ರಿಯೆಯಿಂದ ಆರ್ಥಿಕ ಸ್ವಾವಲಂಬನೆ ಹೆಣ್ಣುಮಕ್ಕಳಿಗೆ ಅದೆಷ್ಟು ಮುಖ್ಯವೆಂಬುದನ್ನೂ ತಿಳಿಸಿಕೊಟ್ಟಿತ್ತು. ಇನ್ನು ನನ್ನ ನೌಕರಿಯ ಸ್ವರೂಪ ಸಹಜವಾಗಿ ವಯಸ್ಸಿನಲ್ಲಿ ಚಿಕ್ಕ ಮಕ್ಕಳೊಂದಿಗೆ ಒಡನಾಡುವುದು.ಅಷ್ಟೊತ್ತಿಗಾಗಲೇ ಈ ಹುದ್ದೆಗೂ ತೀವ್ರ ಪೈಪೋಟಿ ಏರ್ಪಟ್ಟಿದ್ದರೂ ಜಿಲ್ಲೆಗೆ ಆರನೇ ಸ್ಥಾನ ಪಡೆದು ಶಾಲೆಯೊಂದನ್ನು ಆರಿಸಿಕೊಂಡು ತಾಲೂಕು ಕೇಂದ್ರದಿಂದ ೫ ಕಿ.ಮೀ. ಇದ್ದ ನಾಗತೀಹಳ್ಳಿ ಎಂಬ ಆ ಗ್ರಾಮವನ್ನು ತಲುಪಿದಾಗ ನಿಜಕ್ಕೂ ಖುಷಿಯಾಗಿತ್ತು.ಒಂದಿಷ್ಟು ಒಳ ಪ್ರದೇಶ, ಸುತ್ತ ತೋಟ, ಹಸಿರಿನ ನಡುವಿನ ಹೆಂಚಿನದಾದರೂ ಸುಸಜ್ಜಿತ ಕಟ್ಟಡ.ಸೊಗಸೋ ಸೊಗಸು. ಮತ್ತು ಆ ಕಾಲಕ್ಕೆ ಆಧುನಿಕವೇ ಆಗಿದ್ದಂತಹ ಶಾಲೆಯದು ಸ್ಥಾಪನೆಯಾಗಿ ಸರಿಯಾಗಿ ೫೦ ವರ್ಷವಾಗಿತ್ತು.ಆಶ್ಚರ್ಯವೆಂದರೆ ಆ ಶಾಲೆಯಲ್ಲಿ ಎಲ್ಲಾ ಬಗೆಯ ಸೌಲಭ್ಯಗಳಿದ್ದವು. ಮೂರು ಕೊಠಡಿಗಳು, ಅಡುಗೆಮನೆ, ಶೌಚಾಲಯ, ಆಟದ ಮೈದಾನ, ಪೀಠೋಪಕರಣ, ನೀರಿನ ವ್ಯವಸ್ಥೆ, ಕಲಿಕೋಪಕರಣಗಳು, ಸಂಗೀತೋಪಕರಣಗಳು, ಆಟದ ಸಾಮಗ್ರಿಗಳು, ಮತ್ತೂ ವಿಸ್ಮಯವೆಂದರೆ ವಿಜ್ಞಾನದ ಉಪಕರಣಗಳು ಇದ್ದವು..ಉದಾ. ಟೆಲಿಸ್ಕೋಪ್, ಮೈಕ್ರೋಸ್ಕೋಪ್, ಪ್ರಯೋಗಾಲಯದಲ್ಲಿ ಉಪಯೋಗಿಸುವ ಸಾಮಗ್ರಿಗಳು, ಎಲ್ಲವೂ..ಏನುಂಟು ಏನಿಲ್ಲ.. ಅದು ಗ್ರಾಮವಾದರೂ ಇಡೀ ಗ್ರಾಮ ಒಂದೇ ಜನಾಂಗದವರು ಮತ್ತು ಎಲ್ಲರೂ ವಿದ್ಯಾವಂತರು, ಆರ್ಥಿಕವಾಗಿ ಸಬಲರು.ಅಷ್ಟರಲ್ಲಾಗಲೇ ಅಲ್ಲಿಗೂ “ಕಾನ್ವೆಂಟ್ ಶಿಕ್ಷಣದ ಬಿಸಿಗಾಳಿ ಸೋಕಿತ್ತು. ಕೆಲವರು ಇಂಗ್ಲೀಷ್ ಮಾಧ್ಯಮ ಆರಿಸಿಕೊಂಡು ಸಮೀಪದ ಆಂಗ್ಲ ಮಾಧ್ಯಮ ಶಾಲೆಗೆ ಆಟೋಗಳಲ್ಲಿ ಓಡಾಡುತ್ತಿದ್ದರೆ ಅಷ್ಟೇ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗೂ ಬರುತ್ತಿದ್ದರು.ಸ್ವಚ್ಛವಾಗಿ, ಮುದ್ದಾಗಿ ಕಾಣುತ್ತಿದ್ದ ಬುದ್ದಿವಂತ ಮಕ್ಕಳವರು.ವೈವಿಧ್ಯ ಆಚರಣೆಗಳೂ ಆ ಗ್ರಾಮದಲ್ಲಿದ್ದವು. ವರ್ಷಕ್ಕೊಮ್ಮೆಕೆಂಡ ತುಳಿಯುವ ಅದ್ದೂರಿ ಜಾತ್ರೆ, ಹುಣ್ಣಿಮೆ ಅಮಾವಾಸ್ಯೆಗೆ ಕಟ್ಲೆಗಳು, ಮಾದೇಶ್ವರ ಮೊದಲಾದವು.ಶ್ರಾವಣದಲ್ಲಿ ಪ್ರತಿ ಸೋಮವಾರ ಮನೆಮನೆಗೆ ಹೋಗಿ ಕಂತೆಭಿಕ್ಷೆ ಎತ್ತಿ ಒಟ್ಟಿಗೆ ಊಟ ಮಾಡುವುದು ಮತ್ತು ಆ ಸಮಯದಲ್ಲಿ ಯಾವುದೇ ಅನ್ಯಜಾತಿಯವರಿಗೆ ಊರಿನೊಳಗೆ ಪ್ರವೇಶವಿಲ್ಲ. ಮರುಳಸಿದ್ದೇಶ್ವರ ಗ್ರಾಮದೇವರಾದ್ದರಿಂದ ಅನ್ಯರ ಪ್ರವೇಶ ನಿಷಿದ್ಧ.ಊರಿನೊಳಗೆ ಮಾಂಸ, ಮದ್ಯ ಕೂಡ ತರುವಂತಿರಲಿಲ್ಲ ಮಾತ್ರವಲ್ಲ ಸೇವಿಸಿಯೂ ಬರುವಂತಿರಲಿಲ್ಲ.ನಮ್ಮಲ್ಲಿದ್ದ ಒಬ್ಬ ಮುಸ್ಲಿಂ ಮೇಷ್ಟಿಗೆ ಆ ದಿನ ಅಲಿಖಿತ ರಜೆ. ಮಾದೇಶ್ವರ ಹಾಗೂ ಕಟ್ಲೆಗಳಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ಹೀಗೆ ಸಣ್ಣಪುಟ್ಟ ನಿರ್ಬಂಧಗಳಿದ್ದ ಊರದು.ಮುಖ್ಯವಾಗಿ ಆ ಊರಿನ ಮಂದಿ ವೀರಗಾಸೆಯಲ್ಲಿ ಪರಿಣತರು. ಕಾರ್ಯಕ್ರಮಗಳಿಗಾಗಿ ದೇಶ ವಿದೇಶ ಸುತ್ತಿದ್ದರು.ಈ ಎಲ್ಲವನ್ನೂ ಸಾಂಸ್ಕೃತಿಕ ದೃಷ್ಟಿಕೋನದಿಂದ ನೋಡಲು ಕಲಿಯಲು ಸಾಧ್ಯವಾಯಿತು. ಒಂದಿಷ್ಟು ಮುನಿಸಿನಲ್ಲಿಯೇ ನವಂಬರ್ ೧ ರಂದು ಹುದ್ದೆ ಸ್ವೀಕರಿಸಲು ತೆರಳಿದೆ.ಅಲ್ಲಿನ ವಾತಾವರಣಕಂಡು ಮನಸ್ಸಾಗಲೇ ಅರಳಿತ್ತು.ಅಮ್ಮನ ಶ್ರಮದ ಫಲ ಈ ನೌಕರಿ.ಅವರಿಗಂತೂ ಹಿಗ್ಗು. ಆ ದಿನ ಅವರೂ ಜೊತೆಗಿದ್ದರು.ಅಕ್ಟೋಬರ್ ೨೫ ರಂದು ಆದೇಶ ಸ್ವೀಕರಿಸಿದರೂ ೫ ದಿನಗಳ ತರಬೇತಿ ಮುಗಿಸಿ ಶಾಲೆಗೆ ಪಾದವಿಟ್ಟದ್ದು ನವಂಬರ್ ೧ ನೇ ತಾರೀಕು.ಏಳನೇ ತರಗತಿಯವರೆಗೆ, ನಾಲ್ಕು ಮಂದಿ ಶಿಕ್ಷಕರಿದ್ದ ಶಾಲೆ. ವಿದ್ಯಾರ್ಥಿಗಳ ಸಂಖ್ಯೆಯೂ ಪರವಾಗಿಲ್ಲ ಎನ್ನುವಷ್ಟು.ಏಳನೇ ತರಗತಿಯವರಂತೂ ನನ್ನ ಎತ್ತರವೇ ಇದ್ದರು.ನಂತರ ಗೆಳೆಯರಾದರು.ಸಹೋದ್ಯೋಗಿಗಳ ಸಹಕಾರವಂತೂ ಬಹಳ ಸ್ಮರಣೀಯ.ಪರಸ್ಪರ ಸಹಕಾರ.ಪ್ರಬುದ್ಧ ನಡೆ, ಏನೇ ಕೆಲಸ ಮಾಡಬೇಕಿದ್ದರೂ ಮಾತನಾಡಿಕೊಂಡು ಆಚರಣೆಗೆ ತರುವುದು, ಸುಖ-ದುಃಖಗಳಲ್ಲಿ ಪಾಲ್ಗೊಳ್ಳುವಿಕೆ ಮೊದಲಾದ ಸ್ನೇಹ ಸೌಹಾರ್ದತೆಯಿತ್ತು.ಊರಿನ ಮಂದಿಯೂ ಅಷ್ಟೆ,  ಆ ಊರಲ್ಲಿದ್ದಷ್ಟೂ ದಿನ ಸಂಪರ್ಕ-ಸಹಕಾರಕ್ಕೇನೂ ಕೊರತೆಯಿರಲಿಲ್ಲ. ಬರೋಬ್ಬರಿ ೧೯ ವರ್ಷಗಳು ಒಂದೇ ಶಾಲೆಯಲ್ಲಿ ಸೇವೆ ನಿರ್ವಹಿಸಿದರೂ ಒಂದೇ ಒಂದು ಕಪ್ಪುಚುಕ್ಕಿಯಿಲ್ಲದೇ ಕೆಲಸ ಮಾಡಿದೆ. ಇವತ್ತಿಗೂ ಅಲ್ಲಿನ ಮನೆಮಗಳು ನಾನು.೧೫೦ ಮನೆಗಳಿರುವ ಗ್ರಾಮದಲ್ಲಿ ಯಾರ ಮನೆಗೆ ಕಾಲಿಟ್ಟರೂ ಆತಿಥ್ಯಕ್ಕೇನೂ ಬರವಿಲ್ಲ. ಕಾಲಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಇಬ್ಬರು ಶಿಕ್ಷಕರಾಗಿ ತರಗತಿಗಳೂ ಕಡಿಮೆಯಾದವು.ಊರೊಳಗೆ ನಾಲ್ಕೈದು “ಕಾನ್ವೆಂಟ್” ಬಸ್ಸುಗಳು ಕಾಲಿಟ್ಟವು. ನಾವು ಏನೇ ಆಶ್ವಾಸನೆಕೊಟ್ಟರೂ ಪೋಷಕರ ಅಕ್ಕ ಪಕ್ಕದ ಮನೆಗಳ ಮಕ್ಕಳೊಡನೆ  ಹೋಲಿಕೆ ಪ್ರಾರಂಭವಾಗಿ ನಮ್ಮ ಮಕ್ಕಳೆಲ್ಲರೂ ಆಂಗ್ಲಮಾಧ್ಯಮ ಆರಿಸಿಕೊಂಡು ಸರ್ಕಾರಿ ಶಾಲೆಯ ಕೊಠಡಿಗಳಿಗೆ ಬೀಗ ಹಾಕಿಸಿಯಾಯಿತು. ಅದಕ್ಕೂ ಮೊದಲು ಅಲ್ಲಿನ ಕರ್ತವ್ಯದ ಅವಧಿ ನಿಜಕಕೂ ಮರೆಯಲಾರದಂತದ್ದು.ವಿದ್ಯಾರ್ಥಿಗಳೊಂದಿಗೆ ಸಾಕಷ್ಟು ಪ್ರಯೋಗ ಮಾಡಿದೆ.ಪಠ್ಯಕ್ರಮವಲ್ಲದೇ ಬೇರೆ ಬೇರೆ ವಿಷಯಗಳನ್ನು ತಿಳಿಸಿ ಹೇಳುತ್ತಿದ್ದುದೇ ಹೆಚ್ಚು.ನನ್ನ ವಿಜ್ಞಾನ,ರಂಗಭೂಮಿಯ ಸಂಪರ್ಕ ಬಳಸಿಕೊಂಡು ಸಾಕಷ್ಟು ಕೆಲಸ ಮಾಡಿದೆ.ಪಠ್ಯಗಳನ್ನೆಲ್ಲ ರಂಗಕಲೆಯ ಮೂಲಕವೇ ಬೋಧನೆ ಮಾಡುತ್ತಿದ್ದುದು.ವಿಜ್ಞಾನ ಯೋಜನೆಗಳನ್ನು ತಯಾರಿಸಿಕೊಂಡು ಮಕ್ಕಳು ಬೇರೆ ಬೇರೆ ಕಡೆ ಪ್ರದರ್ಶನ ಕೊಟ್ಟವು. ವಿಜ್ಞಾನ ನಾಟಕಗಳನ್ನು ಮಾಡಿಸಿದೆ. ಪಠ್ಯೇತರ ಪರೀಕ್ಷೆಗಳನ್ನು ಕಟ್ಟಿಸಿದೆ.ಶಾಲೆಯಲ್ಲಿದ್ದ ವಿಜ್ಞಾನದ ಸಾಮಗ್ರಿಗಳನ್ನು ಬಳಸಿ ಪ್ರಯೋಗಗಳನ್ನು ಕೈಗೊಂಡೆವು.ಆಟದ ವಸ್ತುಗಳು, ಸಂಗೀತೋಪಕರಣಗಳು, ಗಣಿತ ಕಿಟ್‌ಗಳನ್ನು ಸಮರ್ಥವಾಗಿ ಬಳಸಿದೆವು.ಸಾಮಾನ್ಯಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿ ಸತತವಾಗಿ ೫-೬ ವರ್ಷ ಬಹುಮಾನ ಗಳಿಸಿದರು.ಪ್ರತಿಭಾಕಾರಂಜಿಯಲ್ಲಿ ಪ್ರಶಂಸೆ ಗಿಟ್ಟಿಸಿದರು.ವಾರಕ್ಕೊಮ್ಮೆ ಪರಿಸರದೆಡೆಗೆ ಯಾತ್ರೆ ಸಾಗುತ್ತಿತ್ತು.ಅನೇಕ ಗಿಡಗಳನ್ನು ನೆಟ್ಟು ವಿದ್ಯಾರ್ಥಿಗಳೇ ಬೆಳೆಸಿದರು. ವಿಜ್ಞಾನ ಪರಿಷತ್ ಸಹಯೋಗದಲ್ಲಿ ಶಾಲೆಯ ಪಕ್ಕದಲ್ಲಿದ್ದ ಬಯಲಿನಲ್ಲಿ ನೂರಾರುಗಿಡ ನೆಟ್ಟೆವು. ಕೈತೋಟ ಮಾಡಿದೆವು.ಜನಗಳಿಗಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆವು.ಮಕ್ಕಳೊಂದಿಗೆ ಸಿನೆಮಾ ನೋಡಿದೆವು.ಪಿಕ್‌ನಿಕ್ ಹೋದೆವು.ಪಠ್ಯ ಹಾಗೂ ಪಠ್ಯೇತರ ವಿಷಯಗಳೆರಡೂ ಯಶಸ್ವಿಯಾಗಿ ಜತೆಜತೆಗೇ ಸಾಗಿತ್ತು.ಅಕ್ಷರದಾಸೋಹ ಆರಂಭವಾದಾಗ ಶುಚಿ ರುಚಿ ಆಹಾರ ಪೂರೈಸಿದೆವು.ಮಕ್ಕಳ ಆರೋಗ್ಯತಪಾಸಣೆ ಮಾಡಿಸಿದೆವು.ಬಡ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸಿದೆವು. ಎರಡು ಬಾರಿ ಬೇಸಿಗೆಯಲ್ಲಿ ಶಿಬಿರವನ್ನೂ ಏರ್ಪಡಿಸಿ ಊರಿನ ಮಕ್ಕಳನ್ನು ಸೇರಿಸಿ ರಂಗತರಬೇತಿಯನ್ನೂ ಕೊಡಿಸಿದ್ದಾಗಿತ್ತು.ವಿದ್ಯಾರ್ಥಿಗಳು ಅದ್ಭುತವಾಗಿ ಪ್ರದರ್ಶನ ನೀಡಿದ್ದರು.ಅಷ್ಟೇ ಅಲ್ಲದೇ ತೀರಾ ಇತ್ತೀಚೆಗೆ ಶಾಲೆಯನ್ನು ಮುಚ್ಚುವ ಮುನ್ನ ಹೊರಗಿನ ರಂಗ ತಂಡಗಳನ್ನು ಕರೆಸಿ ನಾಟಕೋತ್ಸವವನ್ನೂ ಆಯೋಜಿಸಿದ್ದೆವು.  ಈ ಎಲ್ಲಾ  ಚಟುವಟಿಕೆಗಳಿಗೂ ನಮ್ಮ ಮೇಷ್ಟುಗಳ  ಸಹಕಾರವಿತ್ತು. ಮಹತ್ವದ ವಿಷಯವೆಂದರೆ ಬಹಳಷ್ಟು ಮಂದಿ ಖ್ಯಾತನಾಮರು ಶಾಲೆಗೆ ಕಾಲಿಟ್ಟದ್ದು.ಅರಸೀಕೆರೆ ಮೂಲಕ ಹಾದು ಹೋಗುವ ಗೆಳೆಯರು, ಹಿರಿಯ ಲೇಖಕರು.ಸಾಹಿತಿಗಳು, ರಂಗಕರ್ಮಿಗಳು, ಸಂಗೀತಗಾರರು, ಅಧಿಕಾರಿಗಳು ನನ್ನನ್ನು ಸಂಪರ್ಕಿಸಿ ಕರೆ ಮಾಡಿ ಶಾಲೆಗೆ ಭೇಟಿಕೊಟ್ಟು ಹೋಗುತ್ತಿದ್ದದು ಸ್ಮರಣೀಯ ಸಂಗತಿ. ಹೆಸರು ಪಟ್ಟಿ ಮಾಡಿದರೆ ಅನೇಕವಾದೀತು. ಅವರಿಗೆಲ್ಲಾ ಶಾಲೆಯ ಆತಿಥ್ಯದಕ್ಕುತ್ತಿತ್ತು.ಸರಳ ಸಾಮಾನ್ಯರಂತೆ ಅವರೂ ಮಕ್ಕಳೊಂದಿಗೆ ಬೆರೆಯುತ್ತಿದ್ದaರು. ಧನಾತ್ಮಕ ಅಂಶಗಳನ್ನಷ್ಟೇ ದಾಖಲಿಸಿದೆನೇನೋ. ಋಣಾತ್ಮಕವಾಗಿ ವಿಷಯಗಳು ಸಾಕಷ್ಟು ಕಾಡಿದರೂ ಸಂತೋಷದ ಸಂಗತಿಗಳೆದುರು ಅವು ಕಾಲಕ್ರಮೆಣ ಮಾಸಿಹೋಗುವಂತವು.ಕೆಲವು ಕಿರಿಕಿರಿಗಳಾದವು. ನಾನೂ ಸಹ ಈ ಕೆಲಸದ ವಿಷಯಕ್ಕೆ ಕೆಲವೊಮ್ಮೆ ಉದಾಸೀನ ಮಾಡಿದ್ದಿದೆ.ಚಿಕ್ಕ ಪ್ರಾಯದಲ್ಲಿ ಕೆಲವು ತಪ್ಪು ಮಾಡಿದ್ದಿದೆ. ನೂರಕ್ಕೆ ನೂರಷ್ಟೇನೂ ಪ್ರಾಮಾಣಿಕವಾಗಿ ಕೆಲಸ ಮಾಡದಿದ್ದರೂ ವಿದ್ಯಾರ್ಥಿಗಳ ವಿಷಯದಲ್ಲಿ ಮಾತ್ರ ಯಾವುದೇ ತಾರತಮ್ಯಅಥವಾ ಅಸಡ್ಡೆ ಮಾಡಿದ್ದಿಲ್ಲ. ನನ್ನ ಕನಸುಗಳನ್ನು ಕೊಂದು ಹಾಕಿದ ಉದ್ಯೋಗವಿದೆಂದು ಅನೇಕ ಬಾರಿ ತೀರಾ ಖಿನ್ನತೆಗೆ ಬಿದ್ದು ಕೆಲಸ ಬಿಟ್ಟುಬಿಡುತ್ತೇನೆಂದಿದ್ದು ಅದೆಷ್ಟು ಸಲವೋ.ಅಸಾಧ್ಯ ನೆನಪಿನ ಶಕ್ತಿ ಕುಂದಿತೆಂದು ಪರಿತಾಪ ಪಟ್ಟಿದದೆಷ್ಟೋ.ಉದ್ವೇಗಕ್ಕೊಳಗಾಗಿ ಸಂಘಟನೆಯೆಡೆ ತೀವ್ರ ತೊಡಗಿಸಿಕೊಂಡು ತಾತ್ಕಾಲಿಕವಾಗಿ ಮರೆತದ್ದಿದೆ.ಸ್ವಾಭಿಮಾನಿತನವನ್ನು ದಕ್ಕಿಸಿದ ಉದ್ಯೋಗವೆಂದು ಸಮಾಧಾನ ಪಟ್ಟಿದ್ದಿದೆ.ಈಗಂತೂ ನಿರ್ಲಿಪ್ತ. ಶಾಲೆ ಮುಚ್ಚಿದ್ದು ನನ್ನ ಪಾಲಿಗೆ ಹಿನ್ನಡೆ.ಕನ್ನಡ ಮಾಧ್ಯಮದಲ್ಲಿ ಭವಿಷ್ಯವಿಲ್ಲವೆಂದು ಆಂಗ್ಲ ಮಾಧ್ಯಮ ಅರಸಿ ಹೋದ ಪೋಷಕರನ್ನು ಮನವೊಲಿಸಲು ಪ್ರಯತ್ನಿಸಿದರೂ ನನ್ನ ಮನೆ ಮಕ್ಕಳು ಅದೇ ಆಂಗ್ಲ ಮಾಧ್ಯಮದಲ್ಲಿ ಭವಿಷ್ಯ ಅರಸುವಾಗ, ಪೋಷಕರು ಆ ಕುರಿತು ಪ್ರಶ್ನಿಸುವಾಗ ಉತ್ತರ ತೋಚದೇ ಸುಮ್ಮನಾಗಿದ್ದೇನೆ. ಇಂಗ್ಲೀಷ್‌ನ ಪ್ರಭಾವಕ್ಕೆ ಸಿಲುಕಿದ ಮತ್ತು ಅಲ್ಲಿಯೇ ಮಕ್ಕಳ ಉಜ್ವಲ ಬೆಳಗನ್ನು ನಿರೀಕ್ಷಿಸುವ ತಂದೆತಾಯಿಗಳ ಮಹತ್ವಾಕಾಂಕ್ಷೆಯೂ ತಪ್ಪೆಂದು ಹೇಳಲಾಗದು. ಸತತ ಇಪ್ಪತ್ತು ವರ್ಷಗಳ ಶಿಕ್ಷಣ ಇಲಾಖೆ ನೀಡಿದ ಅಪಾರ ಅನುಭವದ ಅನೇಕ ದಿನಾಂಕ ಹಾಗೂ ದಿನಗಳು ಇಲ್ಲಿ ಸಂಕ್ಷಿಪ್ತವಾಗಿ ದಿನಚರಿಯಂತೆ ಮಾಹಿತಿ ದಾಖಲಿಸಿವೆ. ಸದ್ಯಕ್ಕೆ ಸಿ.ಆರ್.ಪಿ.ಯಾಗಿ ನನ್ನ ವಲಯಕ್ಕೆ ಸೇರಿರುವ  ಸರ್ಕಾರಿ ಶಾಲೆಗಳಲ್ಲಿ  ಬಹಳಷ್ಟು ಕೆಲಸ ಮಾಡಬೇಕೆಂಬ ಆಶಯವಿದೆ.ಇಲ್ಲೀವರೆಗಿನ ಸಹಾಯ ಸಹಕಾರಕ್ಕಾಗಿ ಗ್ರಾಮಸ್ಥರಿಗೂ, ಇಲಾಖೆಯ ಸಹದ್ಯೋಗಿಗಳಿಗೂ, ಸಹೃದಯ ಅಧಿಕಾರಿಗಳಿಗೂ, ಶಿಕ್ಞಣ ಇಲಾಖೆಗೂ ಆಭಾರಿ. **************************************

ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ Read Post »

ಇತರೆ, ಜೀವನ

ಬದಲಾದ ಕಾಲಕ್ಕೆ ಹಳ್ಳಿಯ ಬದುಕು

ಲೇಖನ ಬದಲಾದ ಕಾಲಕ್ಕೆ ಹಳ್ಳಿಯ ಬದುಕು ಸರಿತಾ ಮಧು ಹಳ್ಳಿಗಳ ದೇಶವೇ ನಮ್ಮದು. ಮೊದಲಾದರೆ ಸುಂದರ ಸ್ವರ್ಗದಂತೆ ಇದ್ದವು. ಕೂಡು ಕುಟುಂಬ, ಅದಕ್ಕೆ ಹೊಂದಿಕೊಂಡಂತೆ ಗದ್ದೆ- ತೋಟಗಳು, ರಕ್ತ ಸಂಬಂಧಗಳು ಹಾಗೂ ಮಾನವೀಯ ನೆಲೆಯಲ್ಲಿ ಒಟ್ಟಿಗೆ ಸೇರಿ ನಲಿಯುತ್ತಿದ್ದ ಸಂದರ್ಭಗಳು. ಮೂರು – ನಾಲ್ಕು ತಲೆಮಾರಿನ ಅನುಭವಗಳ ಬೆರೆತ ಸಂಸಾರ. ಮನೆಗಳಲ್ಲಿ ಆಡಂಬರವಿರಲಿಲ್ಲ ಮನಸಿನಲ್ಲಿ ಆತ್ಮೀಯತೆ ಇತ್ತು. ಅವಿಭಕ್ತ ಭಾವ ರಕ್ತಗತವಾಗಿ ಮುಂದುವರೆಯುತ್ತಿತ್ತು. ಹಣಕಾಸಿಗೆ ಅಡಚಣೆಯಿತ್ತು ಅದರ ಹೊರತು ಪರಿಶುದ್ಧವಾದ  ಬದುಕಿಗಲ್ಲ. ನಗರ ಜೀವನಕ್ಕೆ ಮನಸೋತ ಕೆಲವು ವ್ಯಕ್ತಿಗಳು ಮಾತ್ರ ಈ ವ್ಯವಸ್ಥೆಯ ವಿರೋಧಿಸಿ ಹೊರನಡೆದಿರಬಹುದು. ಶಾಲಾ ಶಿಕ್ಷಣದ ಜೊತೆ ಜೊತೆಗೆ ಹಿರಿಯರ ಮೂಲಕ ಅನೌಪಚಾರಿಕವಾಗಿ ಜೀವನ ಮೌಲ್ಯಗಳು ಒಟ್ಟುಗೂಡಿ ಮುಂದಿನ ಬದುಕಿಗೆ ಮೆರುಗು ತರುತ್ತಿದ್ದವು.ಹಳ್ಳಿಯ ಶಾಲೆಯಲ್ಲಿ ಕಲಿತ ನನ್ನನ್ನೂ ಒಳಗೊಂಡಂತೆ ಸಾವಿರಾರು ಕನಸುಗಳಿಗೆ ರೆಕ್ಕೆ ಹಚ್ಚಿದ್ದು ನಮ್ಮ ಹಳ್ಳಿಯೇ . ಇಲ್ಲಿಗೆ ಸುಮಾರು ಐವತ್ತು – ಅರವತ್ತು ವರ್ಷಗಳ ಹಿಂದಿನ ಜೀವನ ಬಹಳ ಕಠಿಣವಾಗಿತ್ತು. ಹೀಗಂತ ನನ್ನ ಅಪ್ಪ ಲೆಕ್ಕವಿಲ್ಲದಷ್ಟು ಸಲ ನಮ್ಮ ಬಳಿ ಹೇಳಿದ್ದಾರೆ. ಅವರು ವಾಸಿಸುತ್ತಿದ್ದ ಮನೆಯಲ್ಲಿ ಕನಿಷ್ಟ ಮೂವತ್ತು ಮಂದಿ ಇರುತ್ತಿದ್ದರು. ಊಟವೆಂದರೆ ಅವರಿಗೆ ಮೂಲಭೂತ ಅವಶ್ಯಕತೆ ಆಗಿತ್ತು. ಕಾರಣ ಈಗಿನಷ್ಟು  ಸುಖ ಸಮೃದ್ಧಿಯ ಭೋಜನವಿರುತ್ತಿರಲಿಲ್ಲ. ಅನ್ನದ ಊಟವೆಂದರೆ ಅದು ಹಬ್ಬ ಹರಿದಿನಗಳಿಗೆ ಮಾತ್ರವಂತೆ. ರಾತ್ರಿ ರೊಟ್ಟಿ ಊಟವಾದರೆ ಒಂದೆರಡು ರೊಟ್ಟಿಗಳನ್ನು ಪಲ್ಯದ ಸಮೇತ ಸುತ್ತಿ ಜೋಡಿಸಿಟ್ಟ  ಜೋಳದ ಚೀಲಗಳ ನಡುವೆ ಬಚ್ಚಿಡುತ್ತಿದ್ದರಂತೆ.ಅದು ರಹಸ್ಯವಾಗಿ ಬೆಳಗಿನ ತಿಂಡಿಗಾಗಿ.ಶಾಲೆಗೆ ಹೋಗುವಾಗ ತಿನ್ನುವುದಕ್ಕಾಗಿ. ಕಾರಣ ಈಗಿನಂತೆ ಮಕ್ಕಳ ಕೈತಿಂಡಿ ಇರುತ್ತಿರಲಿಲ್ಲ. ಹಾಗಾಗಿಯೇ ಅವರು ಸದೃಢ ವಾಗಿದ್ದಿರಬೇಕು. ಬಟ್ಟೆಗಳೂ ಕೂಡ ಅತಿ ಕಡಿಮೆ . ಆದರೆ ನಮ್ಮ ಈಗಿನ ಬದುಕು ವಿಭಿನ್ನವಾದ ನೆಲೆ ಕಂಡುಕೊಂಡಿದೆ. ಎಲ್ಲವೂ ಕೈಗೆಟುಕುವ ಅಂತರದಲ್ಲೇ ಇವೆ . ಸಾವೂ ಕೂಡಾ ಅಲ್ಲವೇ? ನಮ್ಮ ಹಿಂದಿನ ಹಳ್ಳಿ ಹಾಡು ಪಾಡು ಕಷ್ಟಕರ ವಾಗಿದ್ದಿರಬಹುದು. ಆದರೆ ಈಗಿನಂತೆ ಇರಲಿಲ್ಲ. ಎಲ್ಲವೂ ನಗರೀಕರಣದ   ಪ್ರಭಾವ . ಅನುಕರಿಸಿದ್ದು ತುಸು ಹೆಚ್ಚೇ ಆಯಿತಲ್ಲವೇ? ಆಧುನಿಕತೆಯ ಸೋಗಿಗೆ ಮುಗ್ಧ ಜನರು ಗುರುತೇ ಸಿಗದಷ್ಟು ಬದಲಾದರು. ಕುಟುಂಬಗಳು ಒಡೆದವು ಹಾಗೆಯೇ ಭಾವನೆಗಳೂ. ಮೊದಲೆಲ್ಲ ಬೀದಿಯಲ್ಲಿ ಜಗಳಗಳು ಸಾಮಾನ್ಯವಾಗಿ ಇದ್ದವು. ಅಲ್ಲಿಗೆ ಮಾತು ನೇರವಾಗಿ ಮುಗಿಯುತ್ತಿದ್ದವು. ಆದರೆ ಈಗ ಮುಸುಕಿನೊಳಗಿನ ಗುದ್ದಾಟ. ಮಾತುಗಳಿಲ್ಲದ ಒಳಗೊಳಗಿನ ಕಿಚ್ಚುಗಳು, ಸಲ್ಲದ ಮಾತುಗಳು. ನಿಜಕ್ಕೂ ಹಳ್ಳಿಗಳು ಬದಲಾಗಬಾರದಿತ್ತು. ಸೌಕರ್ಯಗಳಿಗೆ ಮನಸೋತ ಮಂದಿ ನೆಮ್ಮದಿಯನ್ನು ಬಲಿನೀಡಿದ್ದಾರೆ. ಹೊಲಗದ್ದೆಗಳು ಕ್ರಮೇಣ ತೋಟಗಳಾದವು. ಆಹಾರ ಬೆಳೆಗಳು ಮರೆಯಾಗಿ ವಾಣಿಜ್ಯ ಬೆಳೆಗಳಿಗೆ ಹೆಚ್ಚು ಆದ್ಯತೆ ನೀಡಲಾಯಿತು. ಮೊದಲಾದರೆ ವಸ್ತುಗಳ ವಿನಿಮಯದ ಮೂಲಕವೇ ಜೀವನ ನಡೆಯುತ್ತಿತ್ತು. ಮನೆಯಲ್ಲಿ ಎಲ್ಲವೂ ಚೀಲದಲ್ಲಿ , ಹಗೇವು ಅಥವಾ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದವು‌. ಆದರೆ ಈಗ ಹಳ್ಳಿಗಳಲ್ಲಿ ಭತ್ತ, ರಾಗಿ, ಜೋಳ, ಅವರೆ, ಉದ್ದು, ಕಡಲೆ ಹೀಗೆ ಬೆಳೆಗಳೇ ಇಲ್ಲ. ಮನೆಯಲ್ಲಿ ದನಕರುಗಳೂ ಇಲ್ಲ. ಸಾಕುವವರಿಲ್ಲದೇ ಎಲ್ಲವೂ ಮಾರಲ್ಪಟ್ಟವು. ಸ್ವಂತಿಕೆಯೂ ಬಿಕರಿಯಾಯಿತು ಈ ನಡುವೆ. ಎತ್ತುಗಳಿಲ್ಲದ ಜಾಗಕ್ಕೆ ಟ್ರ್ಯಾಕ್ಟರ್ಗಳು, ಎತ್ತಿನ ಬಂಡಿಯ ಜಾಗಕ್ಕೆ ಕಾರುಗಳು ಮನೆಯನ್ನು ಸೇರಿದವು. ಎಲ್ಲವೂ ಬಹಳ ಬೇಗ ಬದಲಾಗಿ ಬಿಟ್ಟಿತು. ಜೀವನ ಶೈಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಕರೆದೊಯ್ದಿತು. ಬಣ್ಣ ಬಣ್ಣದ ಬಟ್ಟೆಗಳಂತೆ ಹೊದಿಕೆ ಮಾತ್ರ ಬದಲಾಗಲಿಲ್ಲ ಮನುಷ್ಯನೇ ಬದಲಾವಣೆಗೆ ಒಳಪಟ್ಟನು. ಕಾರಣ ಬದಲಾವಣೆ ಜಗದ ನಿಯಮ , ಏನಂತೀರಿ? ಆಹಾರ – ವಿಹಾರ , ಉಡುಗೆ- ತೊಡುಗೆ, ಮನೆ- ಸಂಸಾರ ಎಲ್ಲವೂ ಸಾರ್ವಜನಿಕವಾಗಿ ಪ್ರದರ್ಶನಗೊಂಡವು. ನಾಲ್ಕು ಗೋಡೆಗಳ ನಡುವಣ ಬದುಕು ನಾಲ್ಕು ದಿಕ್ಕುಗಳಲ್ಲಿ ಪ್ರಸಾರವಾಗಿದ್ದು ನಮ್ಮ ಸಾಧನೆಯೇ? ಹಳ್ಳಿಗಳಾದ್ರೂ ಮೊದಲಿನಂತೆ ಇರಬೇಕಿತ್ತು ಅಂತ ನನಗೆ ತುಂಬಾ ಸಲ ಅನಿಸಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಅಮ್ಮನ ಅಡುಗೆಯ ವಿಷಯದಲ್ಲಿ ನಾನೂ ತುಂಬಾ ಮಿಸ್ ಮಾಡಿಕೊಳ್ಳಲು ಕಾರಣ ಇದೆ. ಅಮ್ಮ ಒಲೆಯಲ್ಲಿ ಅಡುಗೆ  ಮಾಡುತ್ತಿದ್ದ ದಿನಗಳವು. ಎಷ್ಟು ರುಚಿಯಾಗಿರುತ್ತಿತ್ತು ಅಂದರೆ ಈಗಲೂ ಬಾಯಿಯಲ್ಲಿ ನೀರೂರುತ್ತದೆ.ನಮ್ಮ ಮನೆಗೆ ಸದಾ ಬರುತ್ತಿದ್ದ ನನ್ನ ಅಪ್ಪನ ಸೋದರಮಾವ ಕೇವಲ ಸಾಂಬಾರನ್ನೇ ಸೊರ್ ಎಂದು ಕುಡಿದುಬಿಡುತ್ತಿದ್ದರು. ಇದಲ್ಲವೇ ಹಳ್ಳಿಯ ಊಟದ ಗಮ್ಮತ್ತು‌. ಈಗೆಲ್ಲಿದೆ ನಮಗೆ ಒಲೆ ಹಚ್ಚಿ ಅಡುಗೆ ಮಾಡುವ ಸಮಯ ಗ್ಯಾಸ್ ಮೇಲೆ ಕುಕ್ಕರ್ ಸೀಟಿ ಒಡೆಸಿ , ರುಬ್ಬುವ ಯಂತ್ರದಲ್ಲಿ ನುಣ್ಣಗೆ ಮಾಡಿ  ಜಠರಕ್ಕೆ ಕೆಲಸವನ್ನು ನೀಡದೇ ಬೊಜ್ಜು ಬರಿಸಿಕೊಂಡಿದ್ದು. ಬರೆಯುತ್ತಾ ಹೋದರೆ ಹಳ್ಳಿಯ ಜೀವನದ ಸೊಗಸಿಗೆ ಪದಗಳೇ ಕಡಿಮೆ. ನನಗಂತೂ ಹೀಗೆ ಹಲವಾರು ಬಾರಿ ಅನಿಸಿದ್ದು ಹೋದವರೆಲ್ಲ ಪುಣ್ಯಮಾಡಿದ್ದಿರಬೇಕು. ಸಂಪೂರ್ಣ ಜೀವನವನ್ನು ಅನುಭವಿಸಿದ್ದಾರೆ‌. ಮೊದಲ ಹಳ್ಳಿಯ ಬದುಕು ಮತ್ತೊಮ್ಮೆ ಬಾರದೇ? ******************************

ಬದಲಾದ ಕಾಲಕ್ಕೆ ಹಳ್ಳಿಯ ಬದುಕು Read Post »

ಇತರೆ

ಪ್ರಕೃತಿಯ ವಿಕೋಪಗಳು ಮತ್ತು ಪರಿಸರ ಸಂರಕ್ಷಣೆ

ಲೇಖನ ಪ್ರಕೃತಿಯ ವಿಕೋಪಗಳು ಮತ್ತು  ಪರಿಸರ ಸಂರಕ್ಷಣೆ ಶ್ರೀನಿವಾಸ. ಎನ್.ದೇಸಾಯಿ ಪ್ರಕೃತಿಯ ವಿಕೋಪಗಳು ಮತ್ತು  ಪರಿಸರ ಸಂರಕ್ಷಣೆಯ ಮುನ್ನೆಚ್ಚರಿಕೆಯ ಕ್ರಮಗಳು.. ನಾವು ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳುತ್ತೇವೆಯೋ ಹಾಗೇಯೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕೂಡಾ ಕ್ರಮಬದ್ಧವಾಗಿ, ಕಾಳಜಿಯಿಂದ, ಜವಾಬ್ದಾರಿಯುತವಾಗಿ ರಕ್ಷಣೆ ಮಾಡಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಯಾಕೆಂದರೆ ಇತ್ತೀಚೆಗೆ ಆಗುತ್ತಿರುವ ಪ್ರಕೃತಿಯ ವಿಕೋಪಗಳಿಂದ ನಾವು ಅಕ್ಷರಶಃ ತತ್ತರಸಿ ಹೋಗಲು ಮುಖ್ಯ ಕಾರಣ ನಾವು ಮಾಡಿರುವ ಮತ್ತು ಮಾಡುತ್ತಿರುವ ಪರಿಸರ ನಾಶಕ್ಕೆ ಇಡೀ ಭೂಮಂಡಲದ ಚಿತ್ರಣವೇ ಬದಲಾಗುತ್ತಿದೆ. ನಾವಿಲ್ಲಿ ಗಮನಿಸಬೇಕಾದ ಒಂದು ಅಂಶವೇನೆಂದರೆ, ಸುಮಾರು ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಇದಕ್ಕಿಂತಲೂ ಹೆಚ್ಚೆಚ್ಚು ಜೋರಾಗಿ ಮಳೆ ಬರುತ್ತಿತ್ತು. ಅಂದು ವಾರಗಟ್ಟಲೆ ನಿರಂತರವಾಗಿ ಒಂದು ಘಳಿಗೆಯೂ ಬಿಡದೆ ಮಳೆ ಸುರಿಯುತ್ತಿದ್ದರೂ ಮಳೆಯ ಕಾರಣದಿಂದ ಊರಿಡೀ ಮುಳುಗುವುದಾಗಲಿ, ಮನೆಗಳು ಬೀಳುವುದಾಗಲಿ, ಪ್ರಾಣ ಕಳೆದುಕೊಳ್ಳುವುದಾಗಲಿ, ಕಿಲೋಮೀಟರ್‌ಗಳಷ್ಟು ನಡೆಯುವ ದೂರ ಇದ್ದರೂ ಶಾಲೆಗಳಿಗೆ ರಜೆ ಸಿಗುವುದಾಗಲಿ ಯಾವುದೂ ಇರಲಿಲ್ಲ. ಆದರೆ ಈಗ ಯಾಕೆ ಹೀಗೆ..? ಹತ್ತು ತಾಸು ಬಂದ ಮಳೆಗೆ ಇಡೀ ಊರಿಗೆ ಊರೇ ಮುಳುಗಿ ನಾಶವಾಗಲು ಕಾರಣ ನಾವೇ ಅಲ್ಲವೇ.! ನೀರು ನಿಲ್ಲಬೇಕಾದ ಜಾಗದಲ್ಲಿ ಗಗನಚುಂಬಿ ಕಟ್ಟಡಗಳು ನಿರ್ಮಾಣ ಮಾಡಿದೆವು, ನೀರು ಹರಿಯಬೇಕಾದ ಜಾಗವನ್ನೆಲ್ಲಾ ರಸ್ತೆಗಾಗಿ ಡಾಂಬರೀಕರಣ ಹಾಗೂ ಕಾಂಕ್ರೀಟ್ ಮಾಡಿದೆವು. ಮಳೆ ನೀರನ್ನು ಹೀರಿಕೊಳ್ಳುವ ಭೂಮಿಯ ಎಲ್ಲಾ ದಾರಿಗಳನ್ನು ಮನುಷ್ಯರು ಮುಚ್ಚಿದಾಗ ರಸ್ತೆಗಳು ನದಿಗಳಂತಾದವು, ಮನೆಯ ಅಂಗಳ ಈಜು ಕೊಳದ ರೂಪ ಪಡೆದು ಮನೆಯ ಒಳಗೂ ನೀರು ಹರಿದು ಬಂತು. ಮನುಷ್ಯನ ಹೆಚ್ಚಿನ ಸೌಕರ್ಯಕ್ಕಾಗಿ ಪರಿಸರವನ್ನು ನಾಶಪಡಿಸಿದ ಪರಿಣಾಮ ಬೇಕಾದಷ್ಟು ಮಳೆ ಬರದಂತಾಯಿತು, ಮಳೆ ಬಂದರೂ ಇಡೀ ಊರೇ ಮುಳುಗಿ ಹೋಗುವಂತ ಪರಿಸ್ಥಿತಿ ನಿರ್ಮಾಣ ಮಾಡಿಟ್ಟಿದ್ದು ನಾವೇ ಅಲ್ಲವೇ.! ಪ್ರಕೃತಿಯನ್ನು ನಾವು ನಾಶ ಮಾಡಿದ ಕಾರಣ ಪ್ರಕೃತಿ ನಮ್ಮನ್ನು ನಾಶ ಮಾಡುತ್ತಿದೆ. ಮನುಷ್ಯನ ಅತೀ ಆಸೆ, ಏರುತ್ತಿರುವ ಜನಸಂಖ್ಯೆ, ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳುಮಾಡುತ್ತಿವೆ. ನಮ್ಮ ಸುತ್ತಮುತ್ತಲಿನ ನೀರು, ಗಾಳಿ, ಭೂಮಿ ಎಲ್ಲವೂ ಇಂದು ಅತೀ ಹೆಚ್ಚು ಕಲುಷಿತಗೊಳ್ಳುತ್ತಿವೆ. ಪರಿಸರ ಪ್ರೇಮಿಗಳು, ವಿದ್ಯಾವಂತರು, ಸರ್ಕಾರಗಳು ಕಾಲದಿಂದ ಕಾಲಕ್ಕೆ ಅನೇಕ ಕ್ರಮಗಳನ್ನು ಕೈಗೊಂಡು ಪರಿಸರವನ್ನು ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಹಾಗಿದ್ದರೂ ಮಲೀನವಾಗುತ್ತಿರುವ ಪರಿಸರ ಇಂದು ಕೇವಲ ಮನುಕುಲಕ್ಕಷ್ಟೇ ಅಲ್ಲದೆ ಇಡೀ ವಿಶ್ವದ ಜೀವಸಂಕುಲಕ್ಕೆ ಮಾರಕವಾಗುತ್ತಲೇ ಇದೆ. ಆರೋಗ್ಯಕರ ಜೀವನಕ್ಕೆ ಅತೀ ಅಗತ್ಯಗಳಾದ ಗಾಳಿ, ನೀರು, ಆಹಾರ ವಿಷಪೂರಿತವಾಗುತ್ತಿವೆ.  ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪರಿಸರವಾದಿಗಳೆಲ್ಲ ಒಟ್ಟಿಗೆ ಸೇರಿ ಮುಂದಿನ ಪೀಳಿಗೆಗೆ ಈ ಭೂಮಂಡಲದ ರಕ್ಷಣೆಯನ್ನು ಅರಿತುಕೊಂಡು ಪರಿಸರದ ಬಗ್ಗೆ ಅರಿವು ಮೂಡಿಸುವ ಹಾಗೂ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ  ವಿಶ್ವ ಪರಿಸರ ದಿನಾಚರಣೆ ಯನ್ನು ಆಚರಿಸಲು ಸನ್ನದ್ಧರಾದರು.ಈ  ಒಂದು ಆಚರಣೆಯ ಫಲಶೃತಿಯಾಗಿ ಇಂದು ಜಗತ್ತಿನಾದ್ಯಂತ ಪರಿಸರದ ರಕ್ಷಣೆಯಾಗುತ್ತಿದೆ, ಪರಿಸರದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿ ಗಿಡಮರಗಳನ್ನು ನೆಟ್ಟು ಸ್ವಲ್ಪ ಮಟ್ಟಿಗಾದರೂ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಬೇಕು. ಕೇವಲ‌ ವರ್ಷಕ್ಕೆ ಒಂದೇ ದಿನ ಪರಿಸರ ರಕ್ಷಣೆಯೆಂಬುದು ಸೀಮಿತವಾಗಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರ ನಮ್ಮ‌ ಜೀವನದ ಅವಿಭಾಜ್ಯ ಅಂಗ. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು‌ ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಅಡಿಯಿಡೋಣ. ಅಂದಾಗ ಮಾತ್ರ ನಾವು ಸುಖ ಸಂತೋಷದಿಂದ ಬದುಕಲು ಸಾದ್ಯ. ಅದಕ್ಕಾಗಿ ನಾವೆಲ್ಲರೂ ಇಂದೇ ಪರಿಸರ ಸಂರಕ್ಷಣೆಗೆ ಕಂಕಣಬದ್ಧರಾಗಿ ನಿಲ್ಲೋಣ ಬನ್ನಿ…. ಎಲ್ಲರೂ ಒಂದಾಗಿ ಮುಂದಿನ ಪೀಳಿಗೆಯ ಉಳುವಿಗಾಗಿ ಎಲ್ಲರನ್ನೂ ಉಳಿಸೋಣ, ಬೆಳೆಸೋಣ. ಗಿಡಮರಗಳನ್ನು ಸಮೃದ್ಧವಾಗಿಸಲು ಇಂದೇ ಶಪಥ ಮಾಡೋಣ ಬನ್ನಿ…! *****************************************************

ಪ್ರಕೃತಿಯ ವಿಕೋಪಗಳು ಮತ್ತು ಪರಿಸರ ಸಂರಕ್ಷಣೆ Read Post »

ಇತರೆ, ವರ್ತಮಾನ

ಮಣ್ಣಿನ ಕಣ್ಣು ವರ್ತಮಾನದ ರಾಜಕೀಯ,ಸಾಮಾಜಿಕ, ಆಗುಹೋಗುಗಳ ಬಗೆಗಿನ ಬರಹಗಳು ರೈತರ ಆತ್ಮಹತ್ಯೆ: ತಡೆಯಬಲ್ಲಂತಹ ಒಂದಷ್ಟು ಯೋಜನೆಗಳ ಬಗ್ಗೆ!          ರೈತನ ಆತ್ಮಹತ್ಯೆ ಎನ್ನುವುದು ಈಗೀಗ ಮಾಮೂಲಿಯಾದ ಸುದ್ದಿಯಾಗಿಬಿಟ್ಟಿದೆ ಪ್ರತಿ ವರ್ಷವೂ ಒಂದೋ ಬರಗಾಲ ಎದುರಾಗುತ್ತದೆ, ಇಲ್ಲ ಅತಿವೃಷ್ಠಿಯ ಭೂತ ಬಂದೆರಗುತ್ತದೆ. ಬೆಳೆನಷ್ಟವಾಗಿ ಬೀದಿಗೆ ಬೀಳುವ ರೈತ ವಿಧಿಯಿಲ್ಲದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ.. ವಿರೋಧಪಕ್ಷಗಳು ಆಡಳಿತ ಪಕ್ಷದವರ ವೈಫಲ್ಯದ ಬಗ್ಗೆ ಹೇಳಿಕೆ ನೀಡಿ, ತೀರಾ ಮನಸ್ಸು ಬಂದರೆ  ಸದರಿ ರೈತನ ಮನೆಗೆ ಟಿ.ವಿ.ಕ್ಯಾಮೆರಾದೊಂದಿಗೆ ಬೇಟಿ ನೀಡಿ ಒಂದಿಪ್ಪತ್ತು ಸಾವಿರದ ಚೆಕ್ ನೀಡಿ ಮುಂದಿನ ಚುನಾವಣೆಗೆ ಒಂದಿಷ್ಟು ಮತಗಳು ನಿಕ್ಕಿಯಾದವೆಂದು ಸಂಭ್ರಮಿಸುತ್ತಾರೆ.  ಸರಕಾರವೂ ಒಂದಿಷ್ಟು ಪರಿಹಾರ ಘೋಷಿಸಿ ತನಿಖೆಗೆ ಒಂದು ಸಮಿತಿ ನೇಮಿಸಿ ಮುಂದಿನ ವರ್ಷ ಇಂತಹ ಆತ್ಮಹತ್ಯೆಗಳು ನಡೆಯದಂತೆ ನೋಡಿಕೊಳ್ಳುವುದು ತಮ್ಮ  ಉದ್ದೇಶವೆಂದೆ ಘೋಷಿಸಿ ಮತ್ತೆ ಮಲಗುತ್ತವೆ.ಪ್ರತಿ ವರ್ಷ ಇಂತಹ ರಾಜಕೀಯ ಕೃಪಾಪೋಷಿತ ನಾಟಕಗಳು ನಡೆಯುತ್ತಲೇ ಇರುತ್ತವೆ. ನಾವೂ ಕೂಡ ಯಾವುದೋ ನಾಟಕದ ಪ್ರೇಕ್ಷಕರಂತೆ ನೋಡುತ್ತ ಕೂರುತ್ತೇವೆ. ತೊಂಭತ್ತರ ದಶಕದವರೆಗೂ ರೈತರ ಆತ್ಮಹತ್ಯೆಗಳು ವಿರಳವಾಗಿದ್ದವು. ಆದರೆ ಜಾಗತೀಕರಣದ ನಂತರ ನಮ್ಮ ಪ್ರಗತಿಯ ಹಾದಿಯನ್ನು ಬದಲಾಯಿಸಿಕೊಂಡ ನಾವು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಬಿಟ್ಟೆವು. ಇದರ ಪರಿಣಾಮವಾಗಿ ಮೊದಲು ಶೇಕಡಾ 72ರಷ್ಷಟಿದ್ದ ನಮ್ಮ ಕೃಷಿ ಆದಾಯ ಇದೀಗ ಕೇವಲ ಶೇಕಡಾ 12ಕ್ಕೆ ಇಳಿಯುವಂತಾಗಿದೆ. ಕೈಗಾರಿಕೆಗಳಿಗೆ ನೀಡುವ ಯಾವ ಸೌಲಭ್ಯವೂ ಕೃಷಿ ಕ್ಷೇತ್ರಕ್ಕೆ ದೊರೆಯದಂತಾಗಿ ಈ ಕ್ಷೇತ್ರ ಸೊರಗತೊಡಗಿದೆ. ಸಮಯಕ್ಕೆ ಸರಿಯಾಗಿಬರದ ಮಳೆ, ಒಮ್ಮೆಲೆ ಬಂದೆರಗುವ ಅತಿವೃಷ್ಠಿ, ದೊರೆಯದ ಬ್ಯಾಂಕುಗಳ ಸಾಲ, ಉತ್ತಮ ಗುಣಮಟ್ಟದ ಬೀಜ ಗೊಬ್ಬರಗಳ ಕೊರತೆ, ಬೆಳೆದ ಬೆಳೆಗೆ ದೊರೆಯದ ನ್ಯಾಯಯುತ ಮಾರುಕಟ್ಟೆ ಬೆಲೆಗಳು ರೈತನನ್ನು ಅಸಹಾಯಕತೆಯಿಂದ ಹತಾಶೆಗೆ ದೂಡಿ ಅವನನ್ನು ಆತ್ಮಹತ್ಯೆಗೆ ಪ್ರಚೋದಿಸುತ್ತಿವೆ. ಇವೆಲ್ಲವುಗಳ ಅರಿವಿದ್ದೂ ಸರಕಾರಗಳು ರೈತರ ಬಗ್ಗೆ ಕಾಳಜಿ ತೋರದೆ ದಪ್ಪ ಚರ್ಮವನ್ನು ಬೆಳೆಸಿಕೊಂಡು ಅವನನ್ನು ಮತ್ತಷ್ಟು ಹತಾಶೆಗೆ ದೂಡುತ್ತಿವೆ.      ಪ್ರತಿವರ್ಷ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಇದಕ್ಕೊಂದು ಶಾಶ್ವತವಾದ ಪರಿಹಾರ ಕಂಡುಕೊಳ್ಳುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಆದ್ದರಿಂದ ಇಂತಹದೊಂದು ಸಮಸ್ಯೆಗೆ ಸರಕಾರ ಒಂದು ಶಾಶ್ವತವಾದ ನೀತಿಯೊಂದನ್ನು ಅಳವಡಿಸಿಕೊಂಡು ಮುಂದುವರೆದರೆ ಮಾತ್ರ ಭವಿಷ್ಯದಲ್ಲಿ ರೈತನ ಆತ್ನಹತ್ಯೆಗಳನ್ನು ತಡೆಯಬಹುದು ಜೊತೆಗೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸಬಹುದಾಗಿದೆ. ಈ ದಿಸೆಯಲ್ಲಿ ಸರಕಾರವೊಂದು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ  ಒಂದಿಷ್ಟು ಸಲಹೆ ಸೂಚನೆಯನ್ನು ಈ ಲೇಖನದ ಮೂಲಕ ನೀಡಲು ಪ್ರಯತ್ನಸಿದ್ದೇನೆ. ಬೆಳೆ ವಿಮೆ ಯೋಜನೆ:      ಈಗಿರುವ ಬೆಳೆ ವಿಮಾ ಯೋಜನೆ ಯಾವುದೇ ವೈಜ್ಞಾನಿಕ ಮಾನದಂಡವನ್ನೂ ಹೊಂದಿಲ್ಲ  ಮತ್ತು ಇಂತಹ ವಿಮೆಯ ಬಗ್ಗೆ ರೈತರಿಗೂ ಸಂಪೂರ್ಣ ಅರಿವಿಲ್ಲ.  ಆದ್ದರಿಂದ ಬೆಳೆಯುವ ಬೆಳೆಯ ಆಧಾರದಲ್ಲಿ  ಇಡೀ ರಾಜ್ಯವನ್ನು ಒಂದಷ್ಟು ವಿಭಾಗಗಳಾಗಿ ವಿಂಗಡಿಸಬೇಕು. ಆಯಾ ಪ್ರದೇಶದಲ್ಲಿ ಬೆಳೆಯುವ ಮುಖ್ಯ ಬೆಳೆಯ ಬಗ್ಗೆ ತಜ್ಞರು ಅದ್ಯಯನ ಮಾಡಿ  ಒಂದು ಏಕರೆಯಲ್ಲಿ ಆ ಬೆಳೆ ಬೆಳೆಯಲು  ತಗುಲಬಹುದಾದ ಅಂದಾಜು ವೆಚ್ಚವನ್ನು  ಮತ್ತು ಬರಬಹುದಾದ ಆದಾಯದ ಪ್ರಮಾಣವನ್ನು  ನಿಗದಿ ಪಡಿಸಬೇಕು. ತದನಂತರ ಒಂದು ಏಕರೆಗೆ ಇಷ್ಟು ಎಂದು ವಿಮಾಕಂತನ್ನು ನಿಗದಿಪಡಿಸಬೇಕು. ಹೀಗೆ ನಿಗದಿಪಡಿಸುವ ಮೊತ್ತ ರೈತನಿಗೆ ಹೊರೆಯಾಗುವಂತಿರಬಾರದು. ಆಯಾ ಪಂಚಾಯಿತಿ ವ್ಯಾಪ್ತಿಯ ವ್ಯವಸಾಯ ಸೇವಾ ಸಹಕಾರಸಂಘ(ಸೊಸೈಟಿ)ಗಳಲ್ಲಿ ಗ್ರಾಮಲೆಕ್ಕಿಗರ ಮೇಲುಸ್ತುವಾರಿಯಲ್ಲಿ  ರೈತರು ವಿಮಾ ಕಂತು ಪಾವತಿ ಮಾಡುವ ಮತ್ತು ಹಾಗೆ ಕಂತು ಪಾವತಿ ಮಾಡಿದ 24 ಗಂಟೆಗಳ ಒಳಗೆ ಕೃಷಿಬಾಂಡ್ ನೀಡುವ ವ್ಯವಸ್ಥೆ ಮಾಡಬೇಕು. ಸಣ್ಣ ರೈತರಿಗೆ ಈ ವಿಮಾ ಮೊತ್ತವನ್ನು ಕಟ್ಟುವುದು ಹೊರೆಯಾಗುವುದರಿಂದ ಗುರುತಿಸಿದ ಸಣ್ಣ ರೈತರ ವಿಮಾ ಮೊತ್ತವನ್ನು ಸರಕಾರದ ಕೃಷಿ ಇಲಾಖೆಯೇ ಭರಿಸುವ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಪ್ರತಿ ಬಜೆಟ್ಟಿನಲ್ಲೂ ಸದರಿ ಇಲಾಖೆಗೆ ಇಂತಿಷ್ಟೆಂದು ಅನುದಾನ ಬಿಡುಗಡೆ ಮಾಡಬೇಕು.  ಇಂತಹ ಬೆಳೆ ವಿಮೆಯನ್ನು ಸರಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕು.ಅಕಸ್ಮಾತ್ ಬೆಳೆ ನಾಶವಾದರೆ  ವಿಮೆಯ ಪರಿಹಾರ ಮೊತ್ತವನ್ನು ಮೊದಲೇ ಅಂದಾಜಿಸಿದರೀತಿಯಲ್ಲಿ  ರೈತನ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಮಾಡಬೇಕು. ಬೆಳೆನಷ್ಟದ ಬಗ್ಗೆ ಅಧಿಕೃತವಾಗಿ ಪ್ರಮಾಣ ಪತ್ರ ನೀಡುವುದಕ್ಕೆ  ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ತಜ್ಞರುಗಳ ಒಂದು ಸಮಿತಿ ಮಾಡಿ  ಗರಿಷ್ಠ ಮೂರುದಿನಗಳಲ್ಲಿ ಈ ವರದಿ ನೀಡುವ ಕಾನೂನು ಜಾರಿಗೊಳಿಸಬೇಕು. ಹೀಗೆ ವರದಿ ನೀಡಲು ವಿಫಲವಾದರೆ ಆ ಸಮಿತಿಗಳವರೆ ಪರಿಹಾರದ ಹಣವನ್ನು ನೀಡಬೇಕೆನ್ನುವ ಷರತ್ತನ್ನು ವಿದಿಸಬೇಕು. ಅಂತಹ ಸಮಿತಿಯಲ್ಲಿ ಸ್ಥಳೀಯ ಗ್ರಾಮಲೆಕ್ಕಿಗ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಆ ಪಂಚಾಯಿತಿ ವ್ಯಾಪ್ತಿಯ ಎಲ್ಲ ಇಲಾಖೆಗಳ ಮುಖ್ಯಸ್ಥರು ಇರುವಂತೆ ನೋಡಿಕೊಂಡು ತಹಶೀಲ್ದಾರ್ ಇಂತಹ ಸಮಿತಿಯ ಅದ್ಯಕ್ಷರಾಗಿರುವಂತೆ ನಿಯಮ ರೂಪಿಸಬೇಕು.ಹೀಗೆ ಬೆಳೆ ನಷ್ಟದ ಪರಿಹಾರ ನೀಡಲು ಬೇಕಾದ ಮೊತ್ತವನ್ನು ವಿಮಾ ಕಂತುಗಳಿಂದ ಸಂಗ್ರಹಿಸುವುದರ ಜೊತೆಗೆ ಸರಕಾರವೂ ಆಯವ್ಯಯದಲ್ಲಿ ಸಾಕಷ್ಟು ಅನುದಾನ ಒದಗಿಸ ಬೇಕು.  ಅಗತ್ಯವೆನಿಸಿದರೆ ಕೃಷಿ ಇಲಾಖೆಯಲ್ಲಿಯೇ ಇದಕ್ಕೊಂದು ಪ್ರತ್ಯೇಕ ವಿಭಾಗವನ್ನು ರಚಿಸಿ, ಕೃಷಿಯಲ್ಲಿ ಪಧವೀದರರಾಗಿರುವವರನ್ನು ನೇಮಕ ಮಾಡಬಹುದು. ತನ್ಮೂಲಕ ಕೃಷಿ ಪಧವೀದರರಿಗೆ ಉದ್ಯೋಗಾವಕಾಶವನ್ನೂ ಒದಗಿಸಬಹುದಾಗಿದೆ. ಇಂತಹದೊಂದು ಬೆಳೆವಿಮಾ ಯೋಜನೆಯನ್ನು ಜಾರಿಗೆ ತಂದಲ್ಲಿ ಶೇಕಡಾ ತೊಂಭತ್ತೈದರಷ್ಟು ಆತ್ಮಹತ್ಯೆಗಳನ್ನು ನಿಲ್ಲಿಸಬಹುದಾಗಿದೆ. ಇಲ್ಲಿ ನಾನು ಪ್ರಸ್ತುತ ಪಡಿಸಿದ ಯೋಜನೆಯ ವಿವರಗಳಲ್ಲಿ ಕೆಲವೊಂದು ತಾಂತ್ರಿಕ ಅಡಚಣೆಗಳು ಇರಬಹುದಾರೂ ತಜ್ಞರುಗಳ ಸಮಿತಿಯೊಂದು ಇಂತಹ ಯೋಜನೆಯನ್ನು ಇನ್ನೂ ಸರಳೀಕರಿಸಿ ತಳಮಟ್ಟದಲ್ಲಿ ಜಾರಿಗೆ ತರಬಹುದಾಗಿದೆ.ಇದಕ್ಕಾಗಿ ಸರಕಾರ ಕೃಷಿಯನ್ನು ನಿಜವಾದ ಅರ್ಥದಲ್ಲಿ ಅದ್ಯಯನ ಮಾಡಿರುವ ವಿದ್ವಾಂಸರುಗಳನ್ನು, ವಿಮಾ ಕ್ಷೇತ್ರದಲ್ಲಿನ ಅನುಭವಿಗಳನ್ನು, ರೈತ ಮುಖಂಡರುಗಳನ್ನು ಒಳಗೊಂಡ ಒಂದು ಸಮಿತಿಯನ್ನು ರಚಿಸಿ ಇಂತಹದೊಂದು ಬೆಳೆವಿಮೆಯ ಯೋಜನೆಯನ್ನು ರೂಪಿಸಿಕೊಡುವಂತೆ ಹೇಳಬಹುದಾಗಿದೆ. ಒಂದು ಪ್ರಜಾಸತ್ತಾತ್ಮಕ ಸರಕಾರಕ್ಕೆ ಇದೇನು ತೀರಾ ದೊಡ್ಡವಿಚಾರವಲ್ಲ, ನಿಜ. ಆದರೆ ನಮ್ಮ ಸರಕಾರಗಳನ್ನು ನೆಸುವ ರಾಜಕಾರಣಿಗಳಿಗೆ ಈ ಬಗ್ಗೆ ಇಚ್ಚಾಶಕ್ತಿ ಇರಬೇಕಾಗುತ್ತದೆ. ರೈತರಿಗೆ ನೀಡುವ ಬೆಳೆಸಾಲ    ಇವತ್ತು ನಮ್ಮ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ಖಾಸಗಿಯವರಿಂದ ಪಡೆದ ಸಾಲದ ಬಡ್ಡಿ ಕಟ್ಟಲಾಗದೆ ಹೋಗುವುದಗಿದೆ. ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಸಾಲ ನೀಡುವ ವಿಚಾರದಲ್ಲಿ ಮುಕ್ತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಸರಕಾರವೇ ಮುಂದೆ ನಿಂತು ರೈತರ ಬೆಳೆವಿಮೆಯಿಂದ ಸಿಗಬಹುದಾದ ಪರಿಹಾರವನ್ನು ಅದು ನೀಡುವ ಸಾಲಕ್ಕೆ ಗ್ಯಾರಂಟಿಯಾಗಿ ನೀಡುವ ಪದ್ದತಿಯನ್ನು ಅಳವಡಿಸಿಕೊಂಡು ಈ ಬಗ್ಗೆ ರಾಷ್ಟ್ರೀಕೃತ ಬ್ಯಾಂಕುಗಳ ಜೊತೆ ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ. ಎಷ್ಟು ಸಾಲ ನೀಡಬೇಕು ಎನ್ನುವುದರ ಬಗ್ಗೆಯೂ ಬೆಳೆವಿಮೆ ಮಾಡುವಾಗ ಅಂದಾಜಿಸಿದ್ದ ವೆಚ್ಚದ ಆಧಾರದ ಮೇಲೆಯೇ ಬ್ಯಾಂಕುಗಳು ಸಾಲ ನೀಡುವುದನ್ನು ಕಡ್ಡಾಯಗೊಳಿಸಬೇಕು. ಹೀಗೆ ನೀಡುವ ಸಾಲಗಳು ಸದುಪಯೋಗವಾಗುವಂತೆ ರೈತರು ಖರೀಧಿಮಾಡುವ ಬೀಜ ಗೊಬ್ಬರಗಳನ್ನು ಪೂರೈಸುವವರಿಗೆ ಚೆಕ್ ರೂಪದಲ್ಲಿಯೇ ಬ್ಯಾಂಕಿನಿಂದ ಹಣ ಸಂದಾಯವಾಗುವಂತೆ ನೋಡಿಕೊಳ್ಳಬೇಕು. ಇದರಿಂದ ರೈತರು ದೊರೆತ ಹಣವನ್ನು ಬೇರೆ ಉದ್ದೇಶಗಳಿಗೆ ವ್ಯಯಿಸುವುದು ತಪ್ಪಿದಂತಾಗುತ್ತದೆ.    ಇವೆಲ್ಲವುಗಳಿಗೆ ಪೂರಕವಾಗುವಂತೆ ಪ್ರತಿ ಗ್ರಾಮದ ಕೃಷಿ ಸಹಕಾರ ಸಂಘಗಳಲ್ಲಿಯೂ ರೈತರ ಭೂಮಿ ಬೆಳೆ ಇತ್ಯಾದಿಗಳನ್ನು ಕಂಪ್ಯೂಟರಿಕರಣಗೊಳಿಸಬೇಕು. ಸ್ಥಳೀಯವಾಗಿ ಕಂಪ್ಯೂಟರ್ ಕಲಿತ ಯುವಕ ಯುವತಿಯರನ್ನು ಇದಕ್ಕೆ ನೇಮಕ ಮಾಡಿಕೊಳ್ಳುವುದರಿಂದ ರೈತರ ನಿರುದ್ಯೋಗ ನಿವಾರಣೆಯು ನಿವಾರಣೆಯಾದಂತಾಗುತ್ತದೆ.     ರೈತರ ಆತ್ಮಹತ್ಯೆ ತಪ್ಪಿಸಲು ನಾನು ಹೇಳಿದ ಮೇಲಿನ ಅಂಶಗಳಿಂದಲೇ ಸಾದ್ಯವಿಲ್ಲವಾದರೂ, ರೈತರ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಂತೂ ಆಗುವುದರಲ್ಲಿ ಅನನುಮಾನವಿಲ್ಲ.  ನಮ್ಮ ರೈತ ಸಂಘಟನೆಗಳು ಇಂತಹ ಯೋಜನೆಗಳ ಬಗ್ಗೆ ಕರಡು ಪ್ರತಿಯೊಂದನ್ನು ರಚಿಸಿ ಸರಕಾರದ ಮುಂದಿಟ್ಟು ಅದನ್ನು ಅನುಷ್ಠಾನಗೊಳಿಸುವಂತೆ ಹೋರಾಡಬೇಕಿದೆ. ಈ ವಿಚಾರದಲ್ಲಿಯಾದರು ನಮ್ಮ ರೈತ ಮುಖಂಡರುಗಳು ತಮ್ಮ ಪ್ರತಿಷ್ಠೆಯನ್ನು ಮರೆತು ಒಂದಾಗಿ ಹೋರಾಡಬೇಕಾಗಿದೆ. ಇಲ್ಲದೇ ಹೋದರೆ ಭವಿಷ್ಯದಲ್ಲಿ ರೈತ ಹೋರಾಟಗಳೆಂದರೆ  ಜನರ ದೃಷ್ಠಿಯಲ್ಲಿ ಅಣಕು ಪ್ರದರ್ಶನಗಳಾಗಿ ಪರಿವರ್ತನೆಗಳಾಗಲಿವೆ. ಸರಕಾರಗಳು ಅಷ್ಟೆ ಅನ್ನ ನೀಡುವ ರೈತರನ್ನು ನಿರ್ಲಕ್ಷಿಸದೆ ಇಂತಹ ರೈತಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ  ಯೋಚಿಸಬೇಕಾಗಿದೆ. ********* ಕುಸಮ

Read Post »

ಇತರೆ

ಎರಡು ಪತ್ರಗಳು

ಎರಡು ಪತ್ರಗಳು ಪತ್ರ ಒಂದು [6:27 pm, 18/10/2020] NAGRAJ HARAPANALLY: ಸಂಗಾತಿಯ ನೆನೆಯುತ್ತಾ…. ಹಿರಿಯ ಸಂಗಾತಿ ಮಧುಸೂದನ್ ಸರ್ ಗೆ ನಮಸ್ಕಾರಗಳು.. ಸಂಗಾತಿ ಕನ್ನಡ ವೆಬ್ ಒಂದು ವರ್ಷ ಪೂರೈಸಿ, ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ನಾನು ಸಂಗಾತಿಯ ಭಾಗವಾದುದು ಈ ವರ್ಷದ ಮಾರ್ಚನಲ್ಲಿ. ಮಧುಸೂದನ್ ಸರ್ ನನ್ನ fb ಗೆಳೆಯರು.ಹಿರಿಯರು‌ .‌ಆದರೆ ಕನ್ನಡ ವೆಬ್ ಮಾಡಿದ್ದು ಗೊತ್ತಿರಲಿಲ್ಲ. ನನ್ನ ಪತ್ರಿಕೆ ಕೆಲಸ ,ಪತ್ರಕರ್ತ ವೃತ್ತಿ ಕಾರಣವಾಗಿ‌ .ಗೆಳೆಯ ಮೋಹನ್ ಗೌಡನ ಬರಹ ಸಂಗಾತಿಯಲ್ಲಿ ಪ್ರಕಟವಾಗಿತ್ತು. ಕುತೂಹಲದಿಂದ ಅವನ ಬರಹ ಓದಿದೆ. ವಿಳಾಸ ಹುಡುಕಿದೆ. ಮೋಹನ್ ನನಗೆ ಸಂಗಾತಿಯ ಪರಿಚಯಿಸಿದ. ಹಾಗೂ ಮಧುಸೂದನ್ ಸರ್ ನಂಬರ್ ಪಡೆದು ಕವಿತೆ ಕಳಿಸಲು ಪ್ರಾರಂಭಿಸಿದೆ. ನಂತರ ನಮ್ಮ ಸ್ನೇಹ ಗಾಢವಾಯಿತು.‌ಚರ್ಚೆಗಳಾದವು. ರಹಮತ್ ತರಿಕೆರೆ ಸರ್ ಅವರನ್ನು ಕರೆತಂದೆವು. ನಂತರ ” ದುರಿತಕಾಲದ ದನಿ ” ತಲುಪಿತು. ಅದನ್ನು ಓದಿದ ಮೇಲೆ ಕನ್ನಡದ ಸಾಂಸ್ಕೃತಿಕ ಲೋಕ ಮಧುಸೂದನ್ ಅವರಂತಹ ಆಗ್ನಿ ಕುಂಡದ ಕವಿಯನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಿರುವುದು ತಿಳಿಯಿತು.‌ ನಂತರ ನನ್ನ ಕಾಯಕ ನಾ ಮಾಡುತ್ತಲೇ…ಮಧುಸೂದನ್ ಸರ್ ಮತ್ತೂ ಹತ್ತಿರವಾದರು. ಮುಖಾಮುಖಿ ಅಂಕಣ ಪ್ರಾರಂಭಿಸಲು ಅವಕಾಶ ನೀಡಿದರು. ಕವಿಗಳ ಮನಸ್ಥಿತಿ, ಅವರ ಒಲವು ನಿಲುವು ನಿಷ್ಠುರತೆ ತಿಳಿಯಲು ಮುಖಾಮುಖಿ ಸಹಾಯವಾಯಿತು. ಇದರಿಂದ ಸಂಗಾತಿಗೆ ಕನ್ನಡ ಕಾವ್ಯಲೋಕದ ನಡೆ ಏನು ಎತ್ತ ಎಂದು ಅರಿಯಲು ಸಹಾಯ.‌ಮುಂದೆ ಸಾಹಿತ್ಯದ ವಿದ್ಯಾರ್ಥಿಗಳು ನಮ್ಮ ಕವಿಗಳ ರಾಜಕೀಯ ನಿಲುವು ಏನು? ಅವರಿಗೆ ದೇವರು ಧರ್ಮ ದೇಶ ಜನರ ಬಗ್ಗೆ ಏನು ನಿಲುವು ಇದ್ದವು ಎಂಬ ಸಂಗತಿ ಅಧ್ಯಯನ ಮಾಡಿದರೆ ಸಂಗಾತಿ ವೆಬ್ ಹುಡುಕಬೇಕು. ಇದು ನಮ್ಮ ಉದ್ದೇಶ. ಸಂಗಾತಿ ಸಂಪಾದಕರು ಈ ಸೂಕ್ಷ್ಮ ಅರಿತೇ ಈ ಅಂಕಣಕ್ಕೆ ಅವಕಾಶ ನೀಡಿದರು ಎಂಬುದು ನನ್ನ ಗ್ರಹಿಕೆ.‌ಸಂಗಾತಿ ನೂರಾರು ಹೊಸ ಲೇಖಕರಿಗೆ ವೇದಿಕೆಯಾಗಿದೆ. ಎಲ್ಲ ಪಂಥದವರು ಇದ್ದಾರೆ. ಜೀವವಿರೋಧಿ ನಿಲುವು ಬಿಟ್ಟು ಉಳಿದೆಲ್ಲಾ ಬರಹ ಇಲ್ಲಿ ಪ್ರಕಟವಾಗಿವೆ. ಆಗುತ್ತಿವೆ. ಅದೇ ಸಂಗಾತಿ ವೆಬ್ ಹೆಚ್ಚುಗಾರಿಕೆ. ಇದನ್ನು ವಿನಯದಿಂದ ಇಲ್ಲಿ ಸ್ಮರಿಸುವೆ. ಸಂಗಾತಿ ವೆಬ್ ಕನ್ನಡ ಸಾಹಿತ್ಯ ಲೋಕದ ಬೆಳಕಾಗಲಿ. ———————————————-ನಾಗರಾಜಹರಪನಹಳ್ಳಿ ಪತ್ರ-ಎರಡು ಪ್ರೀತಿಯ ಕ.ಮ.ಮಧುಸೂದನ್ ಸರ್ ಅವರಿಗೆ ನಮಸ್ಕಾರ..ಮೊದಲಿಗೆ ಯಶಸ್ವಿ ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ನಮ್ಮೆಲ್ಲರ ಹೆಮ್ಮೆಯ “ಸಂಗಾತಿ” ಗೆ ಅದರ ಸಾರಥ್ಯ ವಹಿಸಿರುವ ಮಧುಸೂದನ್ ಸರ್ ಅವರಿಗೂ ಅಭಿನಂದನೆಗಳು.ಗೆಳೆಯ ಮೋಹನ್ ಗೌಡ ಹೆಗ್ರೆ ಅವರ ಮೂಲಕ ಪರಿಚಯವಾದ ‘ಸಂಗಾತಿ’ ನಮ್ಮ ಮನಸು ಭಾವನೆಗಳ ಭಾಗವಾಗಿ ನಮ್ಮೆಲ್ಲರ ಅಭಿವ್ಯಕ್ತಿಯ ವೇದಿಕೆಯಾಯಿತು.ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿ (ಪ್ರಜಾವಾಣಿ ಹೊರತು ಪಡಿಸಿ) ನಿಂತು ಹೋಗಿ ಕವಿತೆಗಳು ಪ್ರಕಟವಾಗುವುದೆಲ್ಲಿ ಎಂದು ಯೋಚಿಸುತ್ತಿರುವಾಗ ಓಯಾಸಿಸ್ ನಂತೆ ಬಂದು ನಮ್ಮೆಲ್ಲರ ಆವರಿಸಿಕೊಂಡು ನಮ್ಮ ಸಾಹಿತ್ಯದ ಅಂತರ್ಜಲ ಬತ್ತದಂತೆ ಜೀವಂತವಾಗಿರಿಸಿದ್ದು ನಮ್ಮ ಸಂಗಾತಿ ಎಂದರೆ ಅತಿಶಯೋಕ್ತಿಯಲ್ಲ.ಈ ಮೂಲಕ ಹಲವಾರು ಹೊಸ ಕವಿಗಳು ಉದಯವಾದರು.ಕನ್ನಡದ ಪ್ರಬುದ್ಧ ವಿಮರ್ಶಕರಾದ ರಹಮತ್ ತರಿಕೆರೆಯಂತವರು ಬರೆಯಲು ತೊಡಗಿ ನಮಗೆ ಇನ್ನಷ್ಟು ಸುಪರಿಚಿತವಾಯಿತು.ಆಮೇಲೆ ಮಧುಸೂದನ್ ಸರ್ ಅವರ ಅದ್ಭುತ ಕವಿತೆಗಳನ್ನು ಓದಿ ಪ್ರತಿಕ್ರಿಯಿಸುವ ಅವಕಾಶ ನನಗೆ ಸಿಕ್ಕಿತು. ಒಬ್ಬ ಸಂಪಾದಕರಾಗಿ ತಮ್ಮ ಕವಿತೆಗಳನ್ನು ಪ್ರಕಟಿಸಿ ವೈಭವೀಕರಿಸದೇ ಗ್ರೂಪ್‌ನಲ್ಲಿ ಓದುವ ಅವಕಾಶ ನೀಡಿದ್ದು ನಿಮ್ಮ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಯಿತು.’ಸಂಗಾತಿ’ ಯನ್ನು ನಿರ್ವಹಿಸಿದ ರೀತಿ ನಿಜಕ್ಕೂ ಓದುಗರ ಮೆಚ್ಚುಗೆ ಪಡೆಯಿತು.ಈ ಒಂದು ವರ್ಷದ ನೆನಪಿಗೆ ಪತ್ರಿಕೆಯ ಓದುಗರಿಗಾಗಿ ಕವನ,ಕಥಾ ಸ್ಪರ್ಧೆ ಮಾಡವಹುದೇನೋ..ವೈಶಿಷ್ಟ್ಯಪೂರ್ಣ ಚಿತ್ರ ಲೇಖನಗಳು,ಬುಡಕಟ್ಟು ಜನಾಂಗಗಳ ಸಾಂಸ್ಕೃತಿಕ ವೈವಿಧ್ಯಗಳು,ವೈಜ್ಞಾನಿಕ,ವೈಚಾರಿಕ ಲೇಖನಗಳನ್ನು ಹಿರಿಯ ಲೇಖಕರಿಂದ ಆಹ್ವಾನಿಸಿ ಪತ್ರಿಕೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬುದು ನನ್ನ ಪ್ರೀತಿಯ ಸದಾಶಯ..’ಸಂಗಾತಿ’ಗೆ ಅಭಿನಂದನೆಗಳು ಫಾಲ್ಗುಣ ಗೌಡ ಅಚವೆ

ಎರಡು ಪತ್ರಗಳು Read Post »

ಇತರೆ, ಪ್ರಬಂಧ

ಹೊರಗೋಡೆ

ಪ್ರಬಂಧ ಹೊರಗೋಡೆ ಗೋಡೆ ಎಂಬುದು ಹಲವಾರು ವಸ್ತುಗಳು, ವಿಶೇಷಗಳು ಹಾಗೂ ವಿಷಯಗಳನ್ನು ಮುಚ್ಚಿಡಬಹುದಾದ ಇಟ್ಟಿಗೆ, ಮರಳು, ಸುಣ್ಣ, ಬೆಲ್ಲ, ಸಿಮೆಂಟುಗಳಿಂದ ಕಟ್ಟಿದ ಒಂದು ರಚನೆ ಎಂದುಕೊಳ್ಳುವುದು ಒಂದು ಬಗೆಯಲ್ಲಿ ಒಪ್ಪಬಹುದಾದ ವಿಷಯವಾದರೂ, ಹಲವಾರು ಕಾರಣಗಳಿಂದ ಗೋಡೆಗಳು ನಮ್ಮನ್ನು ಪೂರ್ವಜರೊಂದಿಗೆ ಬೆಸೆಯುತ್ತಲೇ ಪ್ರಸ್ತುತ ಜೀವನದಲ್ಲಿ ಆಸಕ್ತಿ ಮೂಡಿಸುತ್ತಾ ಹೋಗುತ್ತವೆ. ಪ್ರತಿಯೊಂದು ಗೋಡೆಯನ್ನು ಕಟ್ಟಲು ಆರಂಭಿಸಿದ ಕೂಡಲೇ ಹೊರಗೋಡೆ ಹಾಗೂ ಒಳಗೋಡೆ ಎರಡೂ ಜೊತೆ ಜೊತೆಗೆ ನಿರ್ಮಾಣವಾಗುತ್ತಾ ಸಾಗುತ್ತದೆ. ನಾಗರೀಕತೆಯ ಆರಂಭವನ್ನು ನಾವು ಅರಿಯಲು ಹಾಗೂ ನಮ್ಮ ಪೂರ್ವಜರ ಇರುವನ್ನು ನಂಬಲು ಅವರುಗಳು ಕಟ್ಟಿ, ಬಿಟ್ಟು ಹೋಗಿರುವ ಗೋಡೆಗಳೇ ಸಾಕ್ಷಿ. ಅಂತೆಯೇ ಶತಮಾನಗಳೇ ಕಳೆದರೂ ಇನ್ನೂ ಸುಸ್ಥಿತಿಯಲ್ಲಿರುವಂಥಹ ಗೋಡೆಗಳಿಗೆ ಸ್ಥಳೀಯವಾಗಿ ದೊರೆಯುವ ಕಚ್ಚಾವಸ್ತುಗಳನ್ನೇ ಬಳಸಿಕೊಂಡು, ಸಾವಿರಾರು ವರ್ಷಗಳಷ್ಟು ದೀರ್ಘಕಾಲ ಬಾಳಿಕೆ ಬರುವಂತೆ ನಿರ್ಮಿಸಿರುವುದು ಮಾತ್ರ ಒಟ್ಟೊಟ್ಟಿಗೇ ಭೂಮಿಯ ಗುಣ ಹಾಗೂ ನಮ್ಮ ಪೂರ್ವಜರ ಬುದ್ಧಿವಂತಿಕೆಯನ್ನು ಅನಾವರಣಗೊಳಿಸುತ್ತದೆ. ತಮ್ಮ ವೈಯಕ್ತಿಕ ಜೀವನವನ್ನು ಅನ್ಯರಿಗೆ ಕಾಣಿಸುವ ಅಗತ್ಯವಿಲ್ಲದಾಗ ಸುರಕ್ಷತೆಯ ಹಾಗೂ ಸಂರಕ್ಷಿಸಿಕೊಳ್ಳುವ ದೃಷ್ಟಿಯಿಂದ ಸಿಂಧೂ ನಾಗರೀಕತೆಯ ಕಾಲದಲ್ಲಿಯೇ ಗೋಡೆಗಳನ್ನು ಕಟ್ಟಿರುವ ಸಾಕ್ಷಿ ಇಂದಿಗೂ ಹರಪ್ಪಾ ಹಾಗೂ ಮೊಹಾಂಜದಾರೋ ರೂಪದಲ್ಲಿ ನಮ್ಮ ಕಣ್ಣ ಮುಂದಿದೆ ಎನ್ನುವುದು, ಮಾನವರಿಗೆ ಗೋಡೆಗಳ ಅಗತ್ಯ ಹಾಗೂ ಅವರುಗಳು  ಅನಾದಿಕಾಲದಿಂದಲೂ ಗೋಡೆಗಳಿಗೆ ನೀಡುತ್ತಿದ್ದ ಮಹತ್ವ ಹಾಗೂ ಪ್ರಾಮುಖ್ಯತೆಯನ್ನು ಅರಿಯಲು ಸಹಕಾರಿಯಾಗಿದೆ. ಅಂತೆಯೇ ಕೋಟೆಯ ಗೋಡೆಗಳೂ ಸಹ ಸಾವಿರಾರು ವರ್ಷಗಳೇ ಕಳೆದರೂ, ಕೆಲವು ಅವಶೇಷ ಸ್ಥಿತಿ ತಲುಪಿ ಇಂದಿಗೂ ನೋಡಬಹುದಾದ ಗೋಡೆಗಳು ಎಂಥಹವರಲ್ಲೂ ಭೂಮಿಯ ಮೇಲೆ ಬಾಳಿ, ಆಳಿದ ನಂತರ ಅಳಿದ ಪ್ರತಿಯೊಂದು ಪರಂಪರೆಯನ್ನು ನಮ್ಮ ಕಣ್ಮುಂದೆ ತರುವ ಒಂದು ಅದ್ಭುತವೇ ಸರಿ. ಈಜಿಪ್ಟಿನ ಪೂರ್ವಜರು ನಿರ್ಮಿಸಿರುವ ಪಿರಾಮಿಡ್ಡುಗಳೂ, ಚೈನಾ ಗೋಡೆಗಳೂ ಸಹ ಇದನ್ನು ಸಾಕ್ಷೀಕರಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಯಾವುದೋ ಕಾಲದಲ್ಲಿ ಕಟ್ಟಿದ ಗೋಡೆಯನ್ನು ಇಂದಿಗೂ ಹೊಡೆದುಹಾಕುವುದೋ ಅಥವಾ ಇನ್ನಷ್ಟು ಬೆಳೆಸುವುದೋ ಸಾಧ್ಯವಾಗದೇ ಯಥಾಸ್ಥಿತಿ ಕಾಪಾಡಿಕೊಂಡು, ಇಂದು ದೇಶ ದೇಶಗಳ ನಡುವೆ ಸ್ವಾಭಿಮಾನ ಹಾಗೂ ಪ್ರತಿಷ್ಠೆಯ ಪ್ರತೀಕವಾಗಿಯೂ ಉಳಿದುಕೊಂಡು ಬಂದಿರುವ ಅನೇಕ ಉದಾಹರಣೆಗಳು ಸಹಾ ಇಲ್ಲದೆ ಇಲ್ಲ. ವೈರಿಗಳು ಗಡಿ ನುಸುಳದಂತೆ ಹಾಗೂ ಒಂದು ದೇಶದಲ್ಲಿ ನಡೆಯುವ ವಿಷಯಗಳನ್ನು ಗುಟ್ಟಾಗಿಡುವ ಉದ್ದೇಶದಿಂದ ಯಾವ ದೇಶವೇ ಗೋಡೆಯನ್ನು ಕಟ್ಟಿದರೂ, ಉಭಯ ದೇಶಗಳಿಗೂ ಗೋಡೆಯಾಚಿನ ಪ್ರದೇಶ “ಹೊರಗೋಡೆ” ಆಗಿರುತ್ತದೆ. ಇಂದಿಗೂ ನೋಡಲು ಲಭ್ಯವಿದ್ದು, ಗೋಡೆಗಳೇ ಹೇಳುವ ಕಥೆಯನ್ನು ತಿಳಿಯುತ್ತಲೇ, ಪ್ರಸ್ತುತ ನಾಗರೀಕರು ಗೋಡೆಯನ್ನು ಕಟ್ಟುವ ಹಾಗೂ ನಿರ್ವಹಿಸುವ ಅದರಲ್ಲಿಯೂ ಹೊರಗೋಡೆಯ ಬಗ್ಗೆ ತಿಳಿಯಬೇಕಾಗುತ್ತದೆ. ಬಹುತೇಕ ಹೊರ ಪ್ರಪಂಚದಿಂದ ನಮ್ಮನ್ನು ಬೇರ್ಪಡಿಸುವ ಗೋಡೆಗಳು ಕೆಲವರಿಗೆ ಸ್ವಂತದ್ದಾದರೆ ಹಲವರಿಗೆ ಬಾಡಿಗೆ ಅಥವಾ ಭೋಗ್ಯದವು. ಗೋಡೆಗಳನ್ನು ಕೂಡಿಸಿ, ಕೋಣೆಗಳನ್ನು ಬೇರ್ಪಡಿಸಿದ ಮನೆಗೆ ಸೇರಿಕೊಂಡು ಬಾಗಿಲು ಹಾಕಿದರೆ ಗೋಡೆಯಾಚೆ ನಡೆಯಬಹುದಾದ, ನಡೆದುಹೋದ ಹಾಗೂ ನಡೆಯುತ್ತಿರುವ ಎಷ್ಟೋ ವಿಷಯಗಳು ತಮ್ಮ ಗಣನೆಗೆ ಬರುವುದಾಗಲೀ ಅಥವಾ ತಮ್ಮ ಕಲ್ಪನೆಗೆ ಎಟುಕುವುದಾಗಲೀ ಸಾಧ್ಯವೇ ಇರುವುದಿಲ್ಲ. ಒಬ್ಬ ಕಳ್ಳನು ಕದ್ದ ವಸ್ತುಗಳನ್ನು ತಂದು ಒಂದು ಬಂಗಲೆಯ ಹಿಂಭಾಗದಲ್ಲಿ ಶೇಖರಿಸಿಟ್ಟು, ಗೋಡೆಗೆ ಒಲೆ ನಿರ್ಮಿಸಿ, ಅಡುಗೆ ಮಾಡಿಕೊಂಡು ದಿನ ಕಳೆಯುತ್ತಿದ್ದ ಘಟನೆಯು ಒಂದೊಮ್ಮೆ ಬೆಂಗಳೂರಿನ ಒಂದು ಪ್ರತಿಷ್ಠಿತ ಬಡಾವಣೆಯ ನಾಗರಿಕರ ನಿದ್ದೆ ಕೆಡುವಂತೆ ಮಾಡಿತ್ತು. ಆ ಮಟ್ಟಿಗೆ ನಮ್ಮದೇ ಮನೆಯ ಹೊರಗೋಡೆಯಲ್ಲಿ ನಡೆಯುವ ಹಲವಾರು ವಿಷಯಗಳು ನಮ್ಮ ಗಮನಕ್ಕೆ ಬಂದೇ ಇರುವುದಿಲ್ಲ ಎನ್ನುವುದು ವಿಪರ್ಯಾಸ. ಮೊದಲೆಲ್ಲಾ ನಮ್ಮ ಹೊರ ಗೋಡೆಯಲ್ಲಿ ನಡೆಯುವ ಹಲವಾರು ಘಟನೆಗಳು ಬೇರೆಯವರಿಗೆ ಕಾಣಬಹುದಿತ್ತಾಗಲೀ, ನಮಗೆ ತಿಳಿಯಬೇಕಿದ್ದರೆ, ಸ್ವತಃ ನಾವು ಹೊರ ಬಂದು ನೋಡಬೇಕಿತ್ತು. ಆದರೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಂತ್ರಜ್ಞಾನವು ನಮ್ಮದೇ ಗೋಡೆಯಾಚೆ ನಡೆಯುವ ವಿದ್ಯಮಾನಗಳ ಮಾಹಿತಿಯನ್ನು ಮನೆಯೊಳಗೆ ಕುಳಿತು ಯಾರಾದರೂ ಗೋಡೆ ಹತ್ತಿ ಮಹಡಿ ತಲುಪುವುದನ್ನೂ ತಿಳಿದುಕೊಳ್ಳುವಷ್ಟು ಬೆಳೆದಿದೆ. ಮನೆಯ ಹೊರಗೋಡೆಗೆ ವಿಶೇಷವಾದ ಹೆಸರಿರುವುದಿಲ್ಲವಾಗಿ, ಕಟ್ಟಿಗೆ ಒಟ್ಟಿದ್ದರೆ ಕಟ್ಟಿಗೆಗೋಡೆ, ಹಿತ್ತಲಿಗೆ ತೆರೆದುಕೊಂಡಿದ್ದರೆ ಹಿತ್ತಲಗೋಡೆ, ಬೀದಿಕಡೆಗಿದ್ದರೆ ಬೀದಿಗೋಡೆ, ಅಡಿಗೆಮನೆಯ ಹೊರಗೋಡೆ ಹೀಗೆ ಕರೆಯುವುದು ಸಾಮಾನ್ಯ. ಕಾಂಪೌಂಡಿನ ಹೊರ ಗೋಡೆಯಾದರಂತೂ ನಾವೇ ಕಟ್ಟಿಸಿದ ಗೋಡೆಯನ್ನೇ ಅಕ್ಕಪಕ್ಕದವರ ಮನೆಯವರ ಹೆಸರಿನೊಂದಿಗೆ ಗುರುತಿಸುತ್ತೇವೆ. “ಮಾಚಿ ಮನೆ ಕಂಪೌಂಡಿನ ಒಳಗೆ ಇಲಿ ಸತ್ತುಹೋಗಿದೆ” ಅನ್ನುವುದು. ಅಥವಾ “ಮಂಜು ಮನೆ ಕಂಪೌಂಡಿನಲ್ಲಿ ಮಲ್ಲಿಗೆ ಹೂ ಬಿಟ್ಟಿದೆ” ಎಂದು ಆ ಬದಿ ಯಾರಿದ್ದರೆ ಅವರದೇ ಹೆಸರಿನೊಂದಿಗೆ ಕಂಪೌಂಡಿನ ಹೊರಗೋಡೆಗೆ ನಾಮಕರಣವಾಗುತ್ತದೆ. ಅಥವಾ ಪಕ್ಕದ ಮನೆಯವರು ಹಣ ಖರ್ಚು ಮಾಡಿ  ಕಂಪೌಂಡ್ ಕಟ್ಟಿಸಿದ್ದರೂ ನಮ್ಮನ್ನು ಕುರಿತು “ರೀ ನಿಮ್ಮ ಕಂಪೌಂಡ್ ಒಳಗೆ ನಮ್ಮ ಬಟ್ಟೆ ಬಿದ್ದಿದೆ” ಅನ್ನುವುದೋ ಅಥವಾ “ಪೋಸ್ಟ್ ಮಾಸ್ಟರ್ ಲೆಟರನ್ನ ನಿಮ್ಮ ಕಂಪೌಂಡ್ ಕಡೆ ಹಾಕಿದ್ದಾನೆ” ಎಂದು ಅವರು ಕಟ್ಟಿಸಿದ ಕಂಪೌಂಡಿಗೆ ನಮ್ಮನ್ನು ಒಡೆಯರನ್ನಾಗಿಸುತ್ತಾರೆ. ಹೀಗೆ ಹೊರಗೋಡೆಯು ಒಬ್ಬರಿಂದ ಖರ್ಚುಮಾಡಿಸಿ ಮತ್ತೊಬ್ಬರಿಗೆ ರಕ್ಷಣೆ ಹಾಗೂ ಒಡೆತನವನ್ನು ನೀಡುತ್ತದೆ. ಇದು ಹೊರಗೋಡೆಗಲ್ಲದೆ ಭೂಮಿ ಮೇಲಿನ ಯಾವುದೇ ಮಾನವ ರಚನೆಗೆ ಸಾಧ್ಯವಿರಲಾರದು ಎನ್ನುವುದು ಇಲ್ಲಿ ಪ್ರಸ್ತುತ. ಸಾಮಾನ್ಯವಾಗಿ ಮನೆ ಕಟ್ಟುವವರು, ತಮ್ಮ ಮನೆಯನ್ನು ಎಲ್ಲರಿಗಿಂತಲೂ ವಿಶೇಷ ಹಾಗೂ ಪ್ರತ್ಯೇಕವಾಗಿ ಕಾಣಿಸುವ ದಿಸೆಯಲ್ಲಿ ಬೀದಿಗೆ ಕಾಣುವ  ಹೊರಗೋಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ನಗರದಲ್ಲಿಯ ಸ್ಥಿತಿವಂತರ ಮನೆಯ ಹೊರಗೋಡೆಗಳು ಮನೆಯಿಂದ ಮನೆಗೆ ಸಾಧ್ಯವಾದಷ್ಟು ವಿಭಿನ್ನ ಅಭಿರುಚಿಯಿಂದ ಕೂಡಿದ್ದು, ತಮ್ಮ ವಿಚಾರಧಾರೆಗೆ ತಕ್ಕಂತೆ ವಿನ್ಯಾಸಗೊಳಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇತ್ತೀಚೆಗೆ ನಗರೇತರ ಪ್ರದೇಶಗಳಲ್ಲಿಯೂ ಹೊರಗೋಡೆಗಳನ್ನು ಅಂದಗಾಣಿಸುವ ಹವ್ಯಾಸ ಬೆಳೆಯುತ್ತಿದೆ. ಹೊರಗೋಡೆಗೆ ಹೆಚ್ಚಿನ ಆಸಕ್ತಿ ತೋರುವ ಮಾಲೀಕರು ತಮ್ಮದೇ ಮನೆಯ ಅಕ್ಕಪಕ್ಕದ ಗೋಡೆಗಳನ್ನು ಚೂರುಪಾರು ಅಲಂಕರಿಸಿದರೆ, ಹಿಂದಿನ ಗೋಡೆಯದಂತೂ ಗೌಣಗಣನೆ ಅಂತೆಯೇ ಅದನ್ನು ಅಂದಗೊಳಿಸುವ ಅಗತ್ಯವೂ ಇರುವುದಿಲ್ಲ.  ವಿನ್ಯಾಸಕಾರರ ವಿಶೇಷತೆ ಹಾಗೂ ನಿರಂತರ ಆವಿಷ್ಕಾರದೊಂದಿಗೆ ಅರಳುವ ಮನೆಯ ಮುಂದಿನ ಹೊರಗೋಡೆ ವಿನ್ಯಾಸವನ್ನು ನೋಡಿಯೇ ರಸ್ತೆಯಲ್ಲಿ ಓಡಾಡುವ ಜನರು, ಮನೆಯಲ್ಲಿರುವವರ ಆರ್ಥಿಕ ಸ್ಥಿತಿ ಹಾಗೂ ಅಭಿರುಚಿಯನ್ನು ಅಳಿಯಬಹುದಾಗಿದೆ. ಇಂತಿರುವ ಹೊರಗೋಡೆಯ ಪುರಾಣವು ಇಲ್ಲಿಗೇ ಮುಗಿಯುವುದಿಲ್ಲ. ಸಾಮಾನ್ಯವಾಗಿ ಸರಕಾರೀ ಕಟ್ಟಡಗಳು, ಸಮುದಾಯ ಭವನಗಳು, ಸರಕಾರಿ ಸಿಬ್ಬಂದಿ ಕ್ವಾರ್ಟರ್ಸಿನ ಗೋಡೆಗಳಲ್ಲಿ ಮೊದಲೇ ಕಳಪೆ ಕಾಮಗಾರಿಯಿಂದ ಹಲವೆಡೆ ಹೊರಗೋಡೆಗಳಲ್ಲಿ ಬಿರುಕು ಉಂಟಾಗಿದ್ದರೆ, ಅದೇ ಗೋಡೆಯಲ್ಲಿ ಜೇಡರಬಲೆ ಜಾಳುಜಾಳಾಗಿ ನೇತಾಡುವುದನ್ನು ಕಾಣಬಹುದು. ಆಲ, ಗಸಗಸೆ, ಔದಂಬರ, ಅರಳಿ, ಕ್ಯಾಕ್ಟಸ್ ಹಾಗೂ ಮುಂತಾದ ಗಿಡಗಳು ಹುಟ್ಟಿ ಮರವಾಗುವ ಹಂತ ತಲುಪಿದ್ದರೂ ಅದನ್ನು ಕಿತ್ತೆಸೆಯುವ ಗೋಜಿಗೇ ಹೋಗದೇ ತಮಗೆ ಸಂಬಂಧಿಸಿದ ವಿಷಯವೇ ಅಲ್ಲವೆಂಬಂತೆ ವರ್ತಿಸಿ, ಸಾರ್ವಜನಿಕರ ಹಣವನ್ನು ಪೋಲು ಮಾಡುವುದರಲ್ಲಿ ಹಲವರ ಉದಾಸೀನ ಭಾವನೆ ಎದ್ದು ಕಾಣುತ್ತದೆ. ನೌಕರರು ಬಿಟ್ಟಿಯಾಗಿರಲು ಕಟ್ಟಿದ ಕಟ್ಟಡವೆಂದು ಸರ್ಕಾರವೂ, ತಾವು ಕೇವಲ ತಂಗುವವರು ಮಾತ್ರವಾದ್ದರಿಂದ ನಿರ್ವಹಣೆಯ ಉಸ್ತುವಾರಿಯನ್ನು ಸರ್ಕಾರವೇ ನೋಡಿಕೊಳ್ಳಲಿ ಎನ್ನುವ ಧೋರಣೆ ತೋರುವ ನಿವಾಸಿಗಳು, ಹೀಗೆ ಹಲವರ ತಾಕಲಾಟದಲ್ಲಿ ಹೊರ ಗೋಡೆಯಿಂದ ಹಾಳಾಗಳಾರಂಭಿಸಿ ಪೂರ್ತಿ ಕಟ್ಟಡವೇ ಪಾಳು ಬೀಳುವ ಹಂತದಲ್ಲಿರುವ ಅಸಂಖ್ಯಾತ ಕಟ್ಟಡಗಳನ್ನು ನಾವು ನಮ್ಮ ಅಕ್ಕಪಕ್ಕದಲ್ಲಿಯೇ ಕಾಣಬಹುದು. ಸರ್ಕಾರಿ ಕಟ್ಟಡಗಳಲ್ಲಿ ತಾನಾಗಿಯೇ ಗೂಡುಕಟ್ಟಿ ನೆಲೆ ನಿಂತು ಸಂತಾನಾಭಿವೃದ್ಧಿ ಮಾಡಿಕೊಳ್ಳುವ ಹಲವು ಹಕ್ಕಿಗಳು, ಈಗೀಗ  ಮಾಲೀಕರು ತಮ್ಮ ಮನೆಯ ಹೊರಗೋಡೆಯಲ್ಲಿ ಹಕ್ಕಿಗಳಿಗಾಗಿಯೇ ನಿರ್ಮಿಸಿರುವ ಗೂಡುಗಳಲ್ಲಿ ಸೇರಿಕೊಂಡು ಚಿಲಿಪಿಲಿಗುಟ್ಟುತ್ತಿವೆ. ******************************* ಶಾಂತಿವಾಸು

ಹೊರಗೋಡೆ Read Post »

ಇತರೆ, ವಾರ್ಷಿಕ ವಿಶೇಷ

ಸಂಗಾತಿಯೊಡನೆ ನನ್ನ ಪಯಣ

ಸಂಗಾತಿಯ ಇಬ್ಬರು ಲೇಖಕರುಬರೆದ ಅನಿಸಿಕೆಗಳು ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಮಹತ್ವ ಪ್ರತ್ಯೇಕವಾಗಿ ಉಲ್ಲೇಖಿಸುವ ಅವಶ್ಯಕತೆಯೇ ಇಲ್ಲ . ಮೊದಲಿನಿಂದ ಪ್ರಸಾರ ಮಾಧ್ಯಮ ಎಂದರೆ ಪತ್ರಿಕೆ ಮತ್ತು ಆಕಾಶವಾಣಿ. ಈಗ ದೂರದರ್ಶನ ಹಾಗೂ ಅಂತರ್ಜಾಲಗಳು ಈ ಪರಿಧಿಗೆ ಸೇರಿವೆ.  ದಿನಪತ್ರಿಕೆ ಓದದೇ ಬೆಳಗು ಆರಂಭವಿಲ್ಲ  ಎಂಬಂಥ ಕಾಲ ಹೋಗಿ ಎಲ್ಲವನ್ನೂ ದೃಶ್ಯ ಮಾಧ್ಯಮಗಳಲ್ಲಿ ಕಂಡುಕೊಳ್ಳುವ ಈ ಯುಗದಲ್ಲಿ ಮುದ್ರಿತ ಓದಿನ ಪತ್ರಿಕೆ, ನಿಯತ ಕಾಲಿಕೆಗಳು ತಮ್ಮ ಮೊದಲಿನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ.  ಈ ಪ್ರಚಲಿತ ವಿದ್ಯಮಾನದಲ್ಲಿ ಸುದ್ದಿ ತಿಳಿಯಲು ದಿನಪತ್ರಿಕೆಯೇ ಬೇಕೆಂದೇನಿಲ್ಲ.  ಎಲ್ಲೋ ಕೆಲವರಿಗಷ್ಟೇ ಈ ವಿದ್ಯುನ್ಮಾನದ ಓದುವಿಕೆಗಿಂತ ಅಚ್ಚಾದ ಕಪ್ಪು ಬಿಳುಪಿನ ಸುದ್ದಿಗಳ ಮೇಲೆ ಮಮಕಾರ.  ಹೀಗಿರುವಾಗ ವೆಬ್ ಮ್ಯಾಗಜಿನ್ಗಳು ಪತ್ರಿಕೆಗಳು ಮುಂಚೂಣಿಗೆ ಬರುತ್ತಿರುವುದು ವಿಶಿಷ್ಟವೂ ಅಲ್ಲ ವಿಶೇಷವೂ ಅಲ್ಲ . “ಕಾಲಾಯ ತಸ್ಮೈ ನಮಃ”  ಎನ್ನುವ ಬದಲಾದ ಪ್ರಪಂಚ ದೆಡೆಗೆ ಸಹಜ ನಡೆ . ಸಂಗಾತಿ ಪತ್ರಿಕೆಯ ಆರಂಭದ ಸಂಪಾದಕೀಯದಲ್ಲಿ ಸಂಪಾದಕರಾದ ಶ್ರೀ ಮಧುಸೂದನ ರಂಗೇನಹಳ್ಳಿ ಅವರು ಹೇಳುವ ಈ ಮಾತುಗಳು ಸಕಾಲಿಕ ಹಾಗೂ ಸಂದರ್ಭೋಚಿತ .. “ಮೊದಲಿನ ಹಾಗೆ ಪುಸ್ತಕವೊಂದನ್ಮು ಕೈಲಿ ಹಿಡಿದು ಕೂತಲ್ಲೇ ಬೇರು ಬಿಟ್ಟು ಓದುವ ಪುರುಸೊತ್ತು ಯಾರಿಗೂ ಇಲ್ಲ. ಆದರೆ ತಮ್ಮ ಟ್ಯಾಬ್,  ಫೋನುಗಳ ಮೂಲಕ ಪ್ರಯಾಣ ಮಾಡುತ್ತಾ, ಮನೆ ಕೆಲಸ ಮಾಡುತ್ತಾ, ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡಿರುತ್ತಲೆ ಓದುವ ಅಭ್ಯಾಸಕ್ಕೆ ಜನ ಒಗ್ಗಿ ಹೋಗುತ್ತಿದ್ದಾರೆ.  ಜನರ ಇಂತಹ ಸಾಹಿತ್ಯ ಓದಿನ ಅಗತ್ಯಕ್ಕಾಗಿಯೇ ಸಂಗಾತಿ ಪತ್ರಿಕೆಯನ್ನು ರೂಪಿಸಲಾಗಿದೆ” ಹೀಗೆ ರೂಪು ತಳೆದ ಸಂಗಾತಿ ಪತ್ರಿಕೆಗೀಗ ಒಂದು ವರ್ಷ.  ಈ ಸಂತಸದ ಸಂದರ್ಭದಲ್ಲಿ ಪತ್ರಿಕೆ ನಡೆದುಬಂದಿರುವ ಹಾದಿಯನ್ನು ಓದುಗಳಾಗಿ ನಾನು ಗುರುತಿಸಿರುವುದು ಹೀಗೆ.  ಮೊದಲಿಗೆ ನೂರಾರು (ಅಥವಾ ಸಾವಿರ?) ಉದಯೋನ್ಮುಖ ಕವಿಗಳಿಗೆ ಲೇಖಕರಿಗೆ ಗಜಲ್ ಕಾರರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ.  ಸಂಗಾತಿಯಲ್ಲಿ ನಮ್ಮ ಕವಿತೆ ಬಂದಿದೆ ಎಂದು ಹೆಮ್ಮೆಯಿಂದ ಲಿಂಕ್ ಪ್ರದರ್ಶಿಸುವವರ ದಂಡೇ ಇದೆ ನನ್ನನ್ನು ಸೇರಿಸಿ.  ನಂತರ ಅಂಕಣ ಬರಹಗಳು . ಹಳೆ ಬೇರು ಹೊಸ ಚಿಗುರು ಎಂಬಂತೆ ಪಾರ್ವತಿ ಐತಾಳರಂತಹ ಹಿರಿಯ ಸಾಹಿತಿಗಳ ಬರಹದ ಸವಿ ಉಣಿಸಿದಂತೆ ಮತ್ತೆ ಹಲ ಕೆಲವರಿಗೆ ಪ್ರಥಮ ಬಾರಿ ಅಂಕಣ ಬರೆಯುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ . ಹೊಸ ತರಹದ  ಕಥೆ ಕವಿತೆಗಳ ಪ್ರಕಟಣೆ, ವಿಚಾರಪೂರ್ಣ ಲೇಖನಗಳಿಂದ ಪುಸ್ತಕ ಪರಿಚಯಗಳವರೆಗೆ ಪ್ರತಿಭಾನ್ವಿತರ ಪರಿಚಯ, ಸಂದರ್ಶನ ,ಸಂದರ್ಭಾನುಸಾರ ವಿಶೇಷ ಸಂಚಿಕೆಗಳು (ಅಂಬೇಡ್ಕರ್ ಗಾಂಧಿ ಜಯಂತಿ )ಇತ್ಯಾದಿ…… ಏನುಂಟು ಏನಿಲ್ಲ?  ಮೊಗೆದಷ್ಟು ಸಾಹಿತ್ಯದ ಸವಿ ಎಳನೀರು  ಉಣಿಸುವ ಶರಧಿ ನಮ್ಮ ಸಂಗಾತಿ ಪತ್ರಿಕೆ . ಇಲ್ಲಿನ ಅಂಕಣ ಬರಹಗಳ ವಿಶೇಷಗಳನ್ನು ಇಲ್ಲಿ ಹಂಚಿಕೊಳ್ಳ ಬಯಸುವೆ. ಕವಿತೆ ಕಾರ್ನರ್ _ಶ್ರೀ  ಮಧುಸೂಧನ ರಂಗೇನಹಳ್ಳಿ ಎಲ್ಲಕ್ಕಿಂತ ಹೆಚ್ದು ಕಾದು ಕುಳಿತು ಓದುವ ಈ ಕವಿತೆಯ ಅಡ್ಡಾ ನನಗೆ ತುಂಬಾ ಇಷ್ಟದ್ದು.  ಶ್ರೀ ಮಧುಸೂಧನ ಅವರ ವಿಶಿಷ್ಟ ಕವನಗಳ ರಸಾಸ್ವಾದನೆಯ ಅವಕಾಶ ಕಲ್ಪಿಸುವ ಕವಿತೆ ಕಾರ್ನರ್ ನನ್ನಂತೆ ಇನ್ನಷ್ಟು ಅವರ ಅಭಿಮಾನಿಗಳ ಮೆಚ್ಚಿನ ಮೂಲೆ . ಹೊತ್ತಾರೆ  _  ಅಮೆರಿಕದ ಇಂಜಿನಿಯರ್ ಅಶ್ವತ್ಥ್ ಅವರ ಅಂಕಣ ನನಗೆ ನೆನಪಿರುವಂತೆ  ಸಂಗಾತಿಯಲ್ಲಿ ಮೊಟ್ಟ ಮೊದಲ ಅಂಕಣ ಹೊತ್ತಾರೆ . ಹೆಸರಲ್ಲೇ ಒಂಥರಾ ಸೆಳೆತವಿದ್ದ ಈ ಅಂಕಣದಲ್ಲಿ ಲೇಖಕರು ತಮ್ಮ ಬಾಲ್ಯದ ನೆನಪುಗಳ ಖಜಾನೆಯನ್ನೇ ಮೊಗೆಮೊಗೆದು ಸುರಿದು ಬಿಟ್ಟಿದ್ದಾರೆ.  ಹೆಚ್ಚಿನ ಅಂಶಗಳ ಸಾಮ್ಯವಿದ್ದ ವಿಷಯಗಳಿಂದ ಅಪ್ಯಾಯವೆನಿಸಿದ ನಮ್ಮದೇ ಅನುಭವಗಳ ನೆನಪಿನೂರಿಗೇ ಹೋಗಿ ಬಂದಂತೆ ಆಗಿತ್ತು . ಚೆಂದದ ಅಂಕಣದಿಂದ ಸಂಗಾತಿ ಅಂಕಣ ಬರಹಗಳ ಯಾನದ ಮುನ್ನುಡಿಯಾದ ಹೊತ್ತಾರೆ ತುಂಬಾ ಆತ್ಮೀಯವಾಗಿತ್ತು ಎಂದರೆ ಅತಿಶಯೋಕ್ತಿ ಏನಲ್ಲ . ಶಿವಮೊಗ್ಗ ಜಿಲ್ಲೆಯ ಚಳವಳಿಗಳು ಡಾಕ್ಟರ್ ಸಣ್ಣರಾಮ ಈ ಅಂಕಣವೂ ತುಂಬಾ ಮಾಹಿತಿಪೂರ್ಣ ಹಾಗೂ ವಿಚಾರ ಪ್ರಚೋದಕವಾಗಿದ್ದು ಅನೇಕ ಕುತೂಹಲಕಾರಿ ಮಾಹಿತಿಗಳನ್ನು ತೆರೆದಿಟ್ಟಿತ್ತು ದಿಕ್ಸೂಚಿ _  ಜಯಶ್ರೀ ಅಬ್ಬಿಗೇರಿ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವಂತಹ ವಿಚಾರಪೂರ್ಣ ಲೇಖನಗಳ ಮಾಲೆ.  ಹೆಸರಿಗೆ ತಕ್ಕಂತೆ ದಿಕ್ಸೂಚಿಯೇ ಸರಿ ವ್ಯಕ್ತಿತ್ವ ವಿಕಸನದ ಒಂದೊಂದೇ ಅಂಶಗಳನ್ನು ಸುಲಭ ಸರಳ ಭಾಷೆಯಲ್ಲಿ ಮನಸ್ಸಿಗೆ ಮುಟ್ಟುವಂತೆ ವಿವರಿಸುವ ಈ ಅಂಕಣದಿಂದ ತುಂಬಾ ಅನುಕೂಲ ಪಡೆದುಕೊಂಡೆ ನಾನಂತೂ.  ತುಂಬಾ ಇಷ್ಟವಾದ ಕೆಲ ಮಾಲಿಕೆಗಳು “ಆಗದು ಎಂದು ಹೇಳಲು ಕಲಿಯಿರಿ ಕಲಿಸಿರಿ”,  “ಸೋಲಿನ ಸುಳಿಯಲ್ಲಿ ಗೆಲುವಿನ ಹಾದಿ ಇದೆ” , “ತೊಂದರೆ ಕೊಡಬೇಡಿ ಎಂದು ಹೇಳಿಬಿಡಿ” ಎಲ್ಲಾ ಎಷ್ಟೋ ಬಾರಿ ಕೇಳಿದ ವಿಷಯಗಳೇ ಆದರೂ ಇಲ್ಲಿ ಓದುವಾಗ’  “ಹೌದಲ್ವಾ ಇಷ್ಟು ಸುಲಭವಾಗಿ ಮಾಡುವಂಥದ್ದನ್ನು ನಾವೇಕೆ ಪಾಲಿಸಲ್ಲ” ಅನ್ನಿಸುತ್ತೆ. ಎಲ್ಲೋ ನನ್ನ ಹಾಗೆ ಯೋಚಿಸುವವರೂ ಇದಾರಲ್ಲ ಆದರೆ ಮಾಡಬಹುದು ತಪ್ಪಲ್ಲ ಅನ್ನುವ   ಭಾವವನ್ನು ತರುತ್ತೆ. ಸಂಗಾತಿ ಓದುಗರ ಮನ ಸೆಳೆದಿರುವ ಮಾಲಿಕೆಯಿದು.  ಸಂಪ್ರೋಕ್ಷಣ _  ಅಂಜನಾ ಹೆಗಡೆ ಸುಂದರ ಭಾವಗಳನ್ನು ಅಂಕಣದ ಚೌಕಟ್ಟಿಗೆ ಹಿಡಿಸುವಂತೆ ಬಂಧಿಸಿ ಚೆಲುವಿನ ಚಿತ್ತಾರದ ರಂಗವಲ್ಲಿ ಹಾಕಿ ಮನ ಮುದಗೊಳಿಸುವ ಭಾವ ಪುಳಕದ ಸಿಂಚನದ ಸಂಪ್ರೋಕ್ಷಣ ಮಾಡಿಸುವುದು ಅಂಜನಾ ಹೆಗಡೆಯವರ ಈ ಅಂಕಣ . ಸಂಗಾತಿಗಾಗಿಯೇ ಮೊದಲ ಬಾರಿ ಅಂಕಣ ಬರೆದ ವಿಶೇಷತೆ ಇವರದು .ಸಂಗಾತಿಯ ಕೊಡುಗೆ ಎಂದರೆ ತಪ್ಪಾಗಲಾರದು.  ಬಣ್ಣದ ಕನಸುಗಳ ಮೋಹಕ ಲೋಕ ತೆರೆದಿಡುವ ಇವರು ಬಣ್ಣಗಳೇ ಇರದಿದ್ದರೆ ಲೋಕ ಹೇಗಿರುತ್ತಿತ್ತು ಎಂಬ ಯೋಚನೆಗೆ ಪ್ರಚೋದಿಸುತ್ತಾರೆ ಇವರ ಬರಹಗಳ ಸುಂದರ ಲೋಕದಲ್ಲಿ ವಿಹರಿಸುವುದೇ ಸಂಭ್ರಮದ ವಿಷಯ. ಸಂಗಾತಿಯ ಸಾನ್ನಿಧ್ಯದ ಹಿತ ಹೆಚ್ಚಿಸುವ ಸಂಪ್ರೋಕ್ಷಣ ಸಂಗಾತಿಯ ಆಕರ್ಷಣೆಗಳಲ್ಲೊಂದು ಮೂರನೇ ಆಯಾಮ _ ಶ್ರೀದೇವಿ ಕೆರೆಮನೆ ಈಗಾಗಲೇ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿ ಪ್ರಸಿದ್ಧ ಅಂಕಣ ಕರ್ತೆಯಾಗಿರುವ ಶ್ರೀದೇವಿ ಕೆರೆಮನೆಯವರ ಅಂಕಣ ಆರಂಭವಾಗಲಿದೆ ಎಂದಾಗ ಸ್ವಾಭಾವಿಕವಾಗಿಯೇ ನಿರೀಕ್ಷೆ ಹೆಚ್ಚಿತ್ತು . ಅದನ್ನು ಸುಳ್ಳು ಮಾಡದೆಯೇ ವಾರವಾರವೂ ಹೊಸ ಪುಸ್ತಕಗಳ ಸರಕು ತಂದು ನಮ್ಮ ಮುಂದೆ ಜೋಡಿಸಿಡುವ ಈ ಅಂಕಣ ಓದಿನ ಆಸಕ್ತಿಯ ಹರಿವಿಗೆ ದಿಶೆ ತೋರಿಸುತ್ತಿದೆ ಎಂದರೆ ತಪ್ಪಾಗಲಾರದು ಕವಿತೆಗಳಿರಲಿ ಕಥೆ ಇರಲಿ ಇವರ ವಿಮರ್ಶೆಯ ನಿಕಷದಲ್ಲಿ ಮತ್ತಷ್ಟು ಹೊಳೆಯುವ ಪರಿ ಓದಿಯೇ ಆಸ್ವಾದಿಸಬೇಕು ಇವರ ಬರಹದಿಂದ ಪ್ರೇರೇಪಿತಳಾಗಿ ಕೆಲ ಪುಸ್ತಕಗಳನ್ನು ಕೊಂಡು ಓದಿದ್ದೇನೆ . ಬೌದ್ಧಿಕ ಹಸಿವಿಗೆ ಬುತ್ತಿ ಒದಗಿಸುವ ಅಂಕಣ ಇದು ಅನುವಾದಿತ ಕೃತಿ ಪ್ರಪಂಚ ಪ್ರವೇಶ ಪಾರ್ವತಿ ಐತಾಳ ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡ ಪುಸ್ತಕಗಳ ಪರಿಚಯ ಮಾಡಿಸುವ ಅಂಕಣ.  ಉತ್ತಮ ಅನುವಾದಿತ ಹಾಗೂ ಓದಲೇ ಬೇಕಾದ ಕೃತಿಗಳನ್ನು ಸಂಗಾತಿಯ ಓದುಗರ ಗಮನಕ್ಕೆ ತರುವ ಈ ಅಂಕಣಕಾರ್ತಿ ನಿಜಕ್ಕೂ ಅಭಿನಂದನಾರ್ಹರು . ಶ್ರೇಷ್ಠ ಲೇಖಕಿ ಹಾಗೂ ಅನುವಾದಕಿಯಾದ ಇವರಿಂದ ಮತ್ತಷ್ಟು ಕೃತಿಗಳು ಸಂಗಾತಿಯ ಓದುಗರಿಗೆ ದಕ್ಕಲಿ ಎಂಬ ಅಭಿಲಾಷೆ ಹೊಸದನಿ ಹೊಸ ಬನಿ _ ಡಿ ಎಸ್ ರಾಮಸ್ವಾಮಿ ಹೆಸರಾಂತ ಕವಿಗಳು ಲೇಖಕರು ಆಗಿರುವ ನಮ್ಮ ಜೀವ ವಿಮಾ ಕುಟುಂಬದವರೇ ಆದ ಶ್ರೀ ಡಿ ಎಸ್ ರಾಮಸ್ವಾಮಿಯವರು ಬರೆಯುವ ಈ ಪುಸ್ತಕ ವಿಮರ್ಶೆಯ ಅಂಕಣ ತುಂಬಾ ಸ್ವಾರಸ್ಯಕರ . ಹಾಗೂ ಅವರ ವಿಮರ್ಶೆಯ ಹೊಳಹುಗಳನ್ನು ಅವಲಂಬಿಸಿ ನಡೆದರೆ ಹೊಸ ಬರಹಗಾರರಿಗಂತೂ ಉತ್ತಮ ಮಾರ್ಗದರ್ಶನ .ಉದಯೋನ್ಮುಖ ಕವಿ ಲೇಖಕರ ಪುಸ್ತಕ ಪರಿಚಯ ಮಾಡಿಕೊಡುವ ಈ ಅಂಕಣವಂತೂ ತಪ್ಪದೇ ಓದಿಸಿಕೊಂಡು ಹೋಗುವ ಗುಣ ಹೊಂದಿದೆ . ಮುಂದೊಂದು ದಿನ ನನ್ನ ಕವನ ಸಂಕಲನವೂ ಈ ಅಂಕಣದಲ್ಲಿ ವಿಮರ್ಶೆಯಾಗುವ ಪುಣ್ಯ ಪಡೆಯಲಿ ಎಂಬ ದೂ(ದು)ರಾಸೆಯೂ ಇದೆ . ಕಬ್ಬಿಗರ ಅಬ್ಬಿ_  ಮಹಾದೇವ ಕಾನತ್ತಿಲ ವೃತ್ತಿಯಲ್ಲಿ ವಿಜ್ಞಾನಿ ಪ್ರವೃತ್ತಿಯಲ್ಲಿ ಸಾಹಿತ್ಯ ಸಂಗೀತದ ಅಭಿಮಾನಿಯಾಗಿ ಮೆಟೀರಿಯಲ್ ಸೈನ್ಸ್ ನ ತತ್ವಗಳೊಂದಿಗೆ ರಸಾನುಭೂತಿಯ ಸ್ವಾದವನ್ನು ಪ್ರತಿವಾರ ಉಣಬಡಿಸಿ ಕಬ್ಬಿಗರ ಅಬ್ಬಿಯಲ್ಲಿ ಮೀಯುವ ಅವಕಾಶ ಮಾಡಿಕೊಡುವ ಈ ಅಂಕಣ ನಾನು ತಪ್ಪದೆ ಓದುವ ಅಂಕಣಗಳಲ್ಲೊಂದು . ವಾಸ್ತವದ ವಿದ್ಯಮಾನಗಳೊಂದಿಗೆ ಕವಿಕಲ್ಪನೆಯ ಬೆಸುಗೆಯನ್ನು ಮಾಡಿ ಅದಕ್ಕೆ ತಕ್ಕ ಕಾವ್ಯ ಕವನ ಪರಿಚಯದೊಂದಿಗೆ ಹೊಸ ವಿಸ್ಮಯ ಪ್ರಪಂಚದ ಅನಾವರಣ ಮಾಡುವುದಷ್ಟೇ ಅಲ್ಲ ಕವಿ ಮನಸ್ಸುಗಳನ್ನು ಆ ವಿಶ್ವ ಪರ್ಯಟನೆಗೆ ಜೊತೆಯಲ್ಲೇ ಕೊಂಡೊಯ್ಯುವ ಅದ್ಭುತ ಅನನ್ಯ ಬರವಣಿಗೆ ಇವರದು.  ಕವಿತೆ ಬರೆಯಬೇಕೆನ್ನುವವರೆಲ್ಲಾ  ಓದಲೇಬೇಕಾದ ಲೇಖನ ಮಾಲೆ ಇದು. ಒಂದು ಲಕ್ಷ ಓದುಗರನ್ನು ತಲುಪಿರುವ ಸಂಗಾತಿಯನ್ನು ಮತ್ತಷ್ಟು ಜನರಿಗೆ ತಲುಪಿಸುವ ಕಾರ್ಯ ನಡೆಯಬೇಕು. ಸಂಗಾತಿಯ ಪೋಸ್ಟ್ಗಳಿಗೆ  ಕಾಮೆಂಟ್ಸ್ ಮಾಡುವರು ಇನ್ನಷ್ಟಿ ಹೆಚ್ಚಾಗಬೇಕು .ತಮ್ಮ ತಮ್ಮ ಸಾಮಾಜಿಕ ಜಾಲತಾಣದ ವರ್ಗಗಳಲ್ಲಿ ಸಂಗಾತಿಯನ್ನು ಹೆಚ್ಚೆಚ್ಚು ಪರಿಚಯಿಸಿ ಎಂಬುದು ಓದುಗಳಾಗಿ ನನ್ನ ಕಳಕಳಿಯ ಮನವಿ. ಇನ್ನು ಪತ್ರಿಕೆ ಹೆಚ್ಚು ಜನರನ್ನು ಮುಟ್ಟಬೇಕಾದರೆ ಇನ್ನಷ್ಟು ವೈವಿಧ್ಯಮಯ ಸಾಹಿತ್ಯ ಪ್ರಕಾರಗಳ ಅಂದರೆ ಕಥೆಗಳು ಕಾದಂಬರಿಗಳು ಥೀಮ್ ಬರಹ ಕವಿತೆಗಳು ಸ್ಪರ್ಧೆಗಳು ಆಯೋಜಿಸಬಹುದು ಎಂದು ನನ್ನ ವೈಯಕ್ತಿಕ ಅಭಿಪ್ರಾಯ.  ಓದುಗರ ಒಳ್ಳೆಯ ಕಾಮೆಂಟ್ಗಳನ್ನು ಪ್ರಕಟಿಸಬಹುದು . ಕುವೆಂಪು ಅವರು ಒಂದೆಡೆ ಹೇಳುತ್ತಾರೆ “ಪತ್ರಿಕೋದ್ಯಮ ಉದ್ಯೋಗದ ಅಥವಾ ಲಾಭದ ಮಟ್ಟಕ್ಕಿಳಿದು ‘ಪತ್ರಿಕೋದ್ಯೋಗಿ’ಯಾಗದಿರುವುದೊಂದು ಶುಭ ಚಿಹ್ನೆ.. ಉದ್ಯೋಗದ ಅಥವಾ ಲಾಭದ ಯೋಚನೆ ಸುಳಿಯಿತೆಂದರೆ ಶಾಸ್ತ್ರೀಯವಾಗಿ ನಿಷ್ಪಕ್ಷಪಾತವಾಗಿ ಉದ್ಯಮವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ” (ಕುವೆಂಪು _ ಲೇಖನ ಪತ್ರಿಕಾ ಮನೋಧರ್ಮ). ಈ ಮಾತನ್ನು ಪುಷ್ಟೀಕರಿಸುವಂತಹ ಕಾರ್ಯ ಸಂಗಾತಿಯದು.  ಸಾಹಿತ್ಯ ಬೆಳೆಸುವ ಹಾಗೂ ಕನ್ನಡ ಪರ ಸೇವೆಯೊಂದನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡಿರುವ ನಿಸ್ವಾರ್ಥ ಮನೋಭಾವದ ಸಂಗಾತಿಗೆ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಹಾರ್ದಿಕ ಅಭಿನಂದನೆಗಳು  . ಸಂಗಾತಿಯ ಸಾಹಿತ್ಯ ಸಾಂಗತ್ಯ ಕನ್ನಡಿಗರೆಲ್ಲರಿಗೂ ಹೆಚ್ಚಾಗಲಿ, ಎಲ್ಲರ ಹೃದಯ ಮುಟ್ಟಲಿ . ಪತ್ರಿಕೆಯ ಪರಿಧಿ ಇನ್ನಷ್ಟು ವಿಸ್ತಾರಗೊಳ್ಳಲಿ ಮೇರು ಮುಟ್ಟಲಿ ಎಂಬ ಆಶಯ .  ಈ ರಥದ ಸಾರಥಿಯಾಗಿರುವ ಶ್ರೀ  ಮಧುಸೂದನ್ ಅವರಿಗೆ ಹೃದಯಾಂತರಾಳದ ವಂದನೆ ಮತ್ತು ಅಭಿನಂದನೆಗಳು.                         ಸಂಗಾತಿಯ ಆಭಿಮಾನಿ ಓದುಗಳು                              ಸುಜಾತಾ ರವೀಶ್ .                                 ಸಂಗಾತಿ ಎಂಬ ಪದವು ಸಾಂಗತ್ಯದಿಂದ ಬಂದಿತೆಂದು ಕಾಣುತ್ತದೆ.  ಸ್ನೇಹಕ್ಕೂ ಸಾಂಗತ್ಯಕ್ಕೂ ತುಂಬಾ ವ್ಯತ್ಯಾಸವಿದೆ. ಸ್ನೇಹದ ವ್ಯಾಪ್ತಿ ಚಿಕ್ಕದು. ಸಾಂಗತ್ಯದ್ದು ಹಾಗಲ್ಲ. ಅದರ ನಿಘಂಟುವಿನ ಅರ್ಥ ಹೊಂದಾಣಿಕೆ, ಸಾಮರಸ್ಯ ಎಂದು ಕಾಣುತ್ತದೆ. ಅಂದರೆ ಒಂದು ತರದ ಪರಸ್ಪರ ಗೌರವ, ಮರ್ಯಾದೆ ಕೊಟ್ಟು ತೊಗೊಳ್ಳುವುದು. ಅದು ಸಂಪಾದಕರ ಸಂದೇಶಗಳಲ್ಲಿ ಕಾಣುತ್ತದೆ. ಬರಹಗಾರರ ಬಗ್ಗೆ ಅವರು ತೋರುವ ಸೌಜನ್ಯವೇ ಸಂಗಾತಿಯ ಉಸಿರು. ನಾನು ಈ ಒಂದೆರಡು ತಿಂಗಳಿಂದ ಮಾತ್ರ ಸಂಗಾತಿಯ ಸಂಗಾತಿಯಾಗಿದ್ದರೂ, ನನ್ನ ಬಗ್ಗೆ ಪತ್ರಿಕೆಯವರು ತೋರಿದ ಆದರ ಮರೆಯಲಾರದ್ದು. ಅದೇ ಪತ್ರಿಕೆಯ ಜನಾನುರಾಗದ ಅಡಿಪಾಯವಾಗಿದೆ. ಮುಂದೆ ಪತ್ರಿಕೆಯ ಅಂತರ್ವಸ್ತು. ಅನೇಕ ಸಾಹಿತ್ಯದ ವಿಷಯಗಳನ್ನುಣ ಬಡಿಸುವ ಪತ್ರಿಕೆಯವರ ತವಕ ಪತ್ರಿಕೆಯನ್ನು ಸಾಹಿತ್ಯದ ಕಾಮನಬಿಲ್ಲಾಗಿಸಿದೆ ಎಂದರೆ ತಪ್ಪಗಲಾರದು. ನಿಜಕ್ಕೂ ಪತ್ರಿಕೆಯ ಮೊದಲನೆಯ ವಾರಿಷಿಕೋತ್ಸವ ಈ ತಿಂಗಳ ಇಪ್ಪತ್ತರಂದು ಅಂತ ನೋಡಿದಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಒಂದು ವರ್ಷದ ಈ ಕೂಸಿನಲ್ಲಿ ಅದೆಷ್ಟು ಪ್ರಬುದ್ಧತೆ ಕಾಣುತ್ತದೆ ಎನ್ನಿಸಿದ್ದಂತೂ ಹೌದು. ನಮ್ಮ ಹೈದರಾಬಾದಿನಲ್ಲಿ ಈ ವಾರ ಸುರಿದು ಜನಜೀವನವನ್ನು ಮತ್ತು ನಮ್ಮ ನೆಂಟರಿಷ್ಟರಿಗೆ ಕೊಟ್ಟ ಅನಾನುಕೂಲತೆಯಿಂದ ನನ್ನ ಲೇಖನ ಸ್ವಲ್ಪ ಮೊಟುಕುಗೊಳಿಸಬೇಕಾಗಿ ಬಂದಿದೆ ಬಿಟ್ಟರೆ ಇಲ್ಲಾಂದರೆ ಇನ್ನೂ ತುಂಬಾ ಬರೆಯುವುದಿತ್ತು. ಕರ್ನಾಟಕದಲ್ಲಿಯ ಕನ್ನಡ ಪತ್ರಿಕೆಗಳಲ್ಲಿ ಹೊರನಾಡ ಕನ್ನಡಿಗರ ಪರವಾಗಿ ನನ್ನದೊಂದು ವಿನಂತಿ ಇದೆ. ಹೊರನಾಡಲ್ಲಿದ್ದು ನಾವು ಕನ್ನಡಮ್ಮನ ಸೇವೆ ಮಾಡುತ್ತಿರುವವರು.

ಸಂಗಾತಿಯೊಡನೆ ನನ್ನ ಪಯಣ Read Post »

ಇತರೆ, ಮಕ್ಕಳ ವಿಭಾಗ

ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ

ಲೇಖನ ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ ವಿಜಯಶ್ರೀ ಹಾಲಾಡಿ ಕರ್ನಾಟಕದ ಸಾಹಿತ್ಯ ಜಗತ್ತಿನಲ್ಲಿ `ಮಕ್ಕಳ ಸಾಹಿತ್ಯ’ ಎಂಬೊಂದು ಪ್ರಕಾರ ಹೇಗಿದೆ ಎನ್ನುವ ಕಡೆಗೆ ಯೋಚನೆ ಹರಿಸಿದರೆ ಬಹಳ ಖೇದವೂ, ಆಶ್ಚರ್ಯವೂ ಉಂಟಾಗುತ್ತದೆ. ಖೇದ ಏಕೆಂದರೆ ಏಕಕಾಲದಲ್ಲಿ ನಮ್ಮ ವರ್ತಮಾನವೂ, ಭವಿಷ್ಯವೂ ಆಗಿರುವ ಮಕ್ಕಳಿಗಾಗಿ ಇರುವ ಸಾಹಿತ್ಯ ಅಲಕ್ಷ್ಯವಾಗಿರುವುದಕ್ಕೆ. ಆಶ್ಚರ್ಯವೇಕೆಂದರೆ ಇಂತಹ ತಿರುಳನ್ನೇ ನಿರ್ಲಕ್ಷಿಸಿ ಇಡೀ ಸಾಹಿತ್ಯಲೋಕ ನಿಶ್ಚಿಂತೆಯಿಂದ ಇದ್ದು ಬಿಟ್ಟಿರುವುದಕ್ಕೆ! ಸಾಹಿತ್ಯ ವಲಯದ ಹಲವರೂ, ಸಂಸ್ಥೆ-ಅಂಗಸಂಸ್ಥೆಗಳೂ, ಸ್ವತಃ ಬರಹಗಾರರೂ, ಓದುಗರು ಎಲ್ಲರೂ ಸೇರಿ ಪಕ್ಕಕ್ಕೆ ಎತ್ತಿಟ್ಟು ಮರೆತುಬಿಟ್ಟ ಒಂದು ಸೃಜನಶೀಲ ಮಾಧ್ಯಮವಿದು. ಆದರೆ ಈ ಸಾಹಿತ್ಯ ಪ್ರಕಾರವನ್ನು ಅಲಕ್ಷಿಸಿದರೆ ನಮ್ಮ ಬದುಕಿನ ಆಶಾವಾದವಾದ ಮಕ್ಕಳನ್ನು, ಅವರ ಕನಸುಗಳನ್ನು ತುಳಿದಂತೆ ಎನ್ನುವುದಂತೂ ಸತ್ಯ!  ಶಿಶುಸಾಹಿತ್ಯದ ಕುರಿತು ಚಿಂತಿಸುವಾಗ ಏಳುವ ಬಹುಮುಖ್ಯ ಪ್ರಶ್ನೆಗಳೆಂದರೆ ಮಕ್ಕಳ ಸಾಹಿತ್ಯ ಕಡಿಮೆಯಾಗುತ್ತಿದೆಯೇ? ಗುಣಮಟ್ಟದ ಮಕ್ಕಳ ಸಾಹಿತ್ಯ ಕಡಿಮೆಯಾಗುತ್ತಿದೆಯೆ? ಈ ಸಾಹಿತ್ಯವನ್ನು ಓದುವವರು ಕಡಿಮೆಯೆ ಅಥವಾ ಗಾಂಭೀರ್ಯದ ಹೆಸರಲ್ಲಿ ಮಕ್ಕಳ ಸಾಹಿತ್ಯವನ್ನು ಮೂಲೆಗುಂಪಾಗಿಸಲಾಗಿದೆಯೆ? ಇಷ್ಟಕ್ಕೂ `ಮಕ್ಕಳ ಸಾಹಿತ್ಯ’ ಎನ್ನುವುದಕ್ಕೆ ವ್ಯಾಖ್ಯೆ ಏನು? ಮುಂತಾದವು. ಇಂತಹ ಹತ್ತಾರು ಪ್ರಶ್ನೆಗಳನ್ನಿಟ್ಟುಕೊಂಡು ಯೋಚಿಸುತ್ತ ಹೊರಟರೆ ಕನಿಷ್ಟ ಉತ್ತರದ ಹಾದಿಗಾದರೂ ತಲುಪಿಕೊಳ್ಳಬಹುದು ಎಂಬ ಆಶಯ ನನ್ನದು.    `ಮಕ್ಕಳ ಸಾಹಿತ್ಯ’ ಎಂದರೆ ಪ್ರೌಢ ಬರಹಗಾರರು ಮಕ್ಕಳಿಗಾಗಿಯೇ ಬರೆದ ಸಾಹಿತ್ಯ. ನಮ್ಮ ಮಕ್ಕಳಿಗೆ ಏನನ್ನು ಕೊಡಬೇಕು ಎಂಬ ದೃಷ್ಟಿಯನ್ನಿಟ್ಟುಕೊಂಡು ಅವರಿಗೆ ಇಷ್ಟವಾಗುವಂತೆ ಹಿರಿಯರು ಬರೆಯುವ ಕವಿತೆ, ಕತೆ ಇನ್ನಿತರ ಗದ್ಯ ಪ್ರಕಾರವೇ ಮಕ್ಕಳ ಸಾಹಿತ್ಯ. ಹಾಗಾದರೆ ಮಕ್ಕಳೇ ಬರೆದ ರಚನೆಗಳಿವೆಯಲ್ಲ; ಅವು ಏನು ಎನ್ನುವುದಕ್ಕೆ ಉತ್ತರ – ಅದು `ಸಾಹಿತ್ಯ’. ಮಗುವೊಂದು ಬರೆದದ್ದು ಇತರ ಮಕ್ಕಳಿಗಾಗಿ ಬರೆದ ಸಾಹಿತ್ಯವಾಗಿರಬಹುದು ಅಥವಾ ಅಲ್ಲದೆಯೂ ಇರಬಹುದು. ಈ ವಿಷಯದ ಕುರಿತು ಈಗಾಗಲೇ ಚರ್ಚೆಗಳಾಗಿವೆ ಮತ್ತು ಸಂವಾದಗಳು ನಡೆಯುತ್ತಲೂ ಇವೆ. ಏನೇ ಆದರೂ `ಮಕ್ಕಳಿಗಾಗಿ ಹಿರಿಯರು ಬರೆದದ್ದು’ ಮತ್ತು `ಮಕ್ಕಳೇ ಬರೆದದ್ದು’ ಈ ಎರಡು ಬಗೆಯ ಬರಹಗಳನ್ನೂ ಪ್ರತ್ಯೇಕವಾಗಿ ಪರಿಗಣಿಸುವುದು ಒಳ್ಳೆಯದು.   ಮುಖ್ಯವಾಗಿ ನಮ್ಮ ವ್ಯವಸ್ಥೆಯಲ್ಲಿ ಮಕ್ಕಳು ಅಲಕ್ಷಿತರು. ಪ್ರಸ್ತುತ ದಿನಗಳಲ್ಲಿ ಅವರವರ ಒಂದೋ, ಎರಡೋ ಮಕ್ಕಳಿಗೆ ಜನರು ಬಹಳ ಪ್ರಾಮುಖ್ಯತೆ ಕೊಡುತ್ತಿದ್ದಾರೆ ಎಂದು ನಮಗನ್ನಿಸಿದರೂ ಹೀಗಿಲ್ಲದ ಪೋಷಕರೂ ಬಹು ಸಂಖ್ಯೆಯಲ್ಲಿದ್ದಾರೆ. ಅದಲ್ಲದೇ ಊಟ, ವಸತಿ, ಪ್ರೀತಿ ಎಲ್ಲದರಿಂದ ವಂಚಿತರಾಗಿ ಅಕ್ಷರಶಃ ತಬ್ಬಲಿಗಳಾದ ಮಕ್ಕಳ ಸಂಖ್ಯೆಯೂ ನಾವು ಗಾಬರಿಬೀಳುವ ಪ್ರಮಾಣದಲ್ಲಿದೆ! ಪ್ರಾಮುಖ್ಯತೆ ಕೊಡುತ್ತಿರುವ ಪಾಲಕರಾದರೂ ತಮ್ಮ ಮಕ್ಕಳ ಬೇಕು-ಬೇಡಗಳನ್ನು ಗಮನಿಸುತ್ತಾರೋ ಅಥವಾ ತಮ್ಮ ಇಷ್ಟ ಅನಿಷ್ಟಗಳನ್ನು ಮಕ್ಕಳ ಮೇಲೆ ಹೇರುತ್ತಿದ್ದಾರೋ ಎಂದು ಗಮನಿಸಿದರೆ ಎರಡನೆಯ ಅಂಶವೇ ಉತ್ತರವೆಂಬುದು ಕಣ್ಣಿಗೆ ರಾಚುತ್ತದೆ. ತಮ್ಮ ಆಸೆಯಂತೆ ತಮ್ಮ ಮಕ್ಕಳನ್ನು `ತಿದ್ದುವುದೇ’ ಹೆಚ್ಚಿನ `ಪ್ರಜ್ಞಾವಂತ’ರ ಕಾಳಜಿ! ಈ ಕಾಳಜಿಯಲ್ಲಿ ಮಕ್ಕಳ ವಿದ್ಯಾಭ್ಯಾಸ ಕೂಡ ಭವಿಷ್ಯದ ದೊಡ್ಡ ಹುದ್ದೆ, ದೊಡ್ಡ ಹಣದ ಮೇಲೆ ಅವಲಂಬಿತವಾಗಿದೆ ಎಂದಾಗ ಮಕ್ಕಳ ಹವ್ಯಾಸ, ಆಸಕ್ತಿಯ ಕುರಿತಾದ ಜಾಗ್ರತೆ ಬಹುತೇಕ ಶೂನ್ಯ! ತಮ್ಮ ಮಕ್ಕಳು ಅವರಿಷ್ಟದ ಸೃಜನಶೀಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿ; ಕತೆ, ಕವಿತೆ, ಕಾದಂಬರಿಗಳನ್ನು ಓದಲಿ ಎನ್ನುವವರು ಪ್ರಜ್ಞಾವಂತರಲ್ಲೂ ವಿರಳ. ಪರಿಸ್ಥಿತಿ ಹೀಗಿರುವಾಗ ಇನ್ನುಳಿದ ಮಂದಿ ಇಂಥವರ ಅನುಕರಣೆಯನ್ನು ಮಾತ್ರ ಮಾಡುವುದು ತಪ್ಪೆನ್ನಲಾಗದು! ಇದಕ್ಕೆ ಹೊರತಾಗಿ ಪೋಷಕರ ಆಸರೆಯೇ ಇಲ್ಲದೆ ಬದುಕುತ್ತಿರುವ ದೊಡ್ಡ ಸಂಖ್ಯೆಯ ಮಕ್ಕಳ ಅಭಿರುಚಿ, ಭಾವನೆಗಳನ್ನು ಕೇಳುವವರಾರು? ಹೀಗಾಗಿ ಮಕ್ಕಳ ಸಾಹಿತ್ಯ ಅಲಕ್ಷಿತವಾಗುವುದಕ್ಕೂ ಮಕ್ಕಳು ಅಲಕ್ಷಿತರಾಗಿರುವುದಕ್ಕೂ ಬಹು ಮುಖ್ಯ ಸಂಬಂಧವಿದೆ. ಇನ್ನು, ಮಕ್ಕಳ ಸಾಹಿತ್ಯವೇ ಕಡಿಮೆಯಾಗುತ್ತಿದೆಯೇ ಅಥವಾ ಗುಣಮಟ್ಟದ ಬರಹಗಳು ಕಡಿಮೆಯಾಗುತ್ತಿದೆಯೆ? ಎಂಬ ಎಳೆಯನ್ನಿಟ್ಟುಕೊಂಡು ಹೊರಟರೆ ಎರಡಕ್ಕೂ ‘ಹೌದು’ ಎನ್ನುವ ಉತ್ತರವೇ ದೊರಕುತ್ತದೆ. ಇದಕ್ಕೆ ಕಾರಣ, ಪರಿಸ್ಥಿತಿ, ಸಂದರ್ಭಗಳು ಹಲವು. ಈ ಕುರಿತುಅಧ್ಯಯನ ಮಾಡಿದ ವಿದ್ವಾಂಸರ ಪ್ರಕಾರ ನಮ್ಮರಾಜ್ಯದಲ್ಲಿ ಮಾತ್ರವಲ್ಲದೆ ಇತರ ಕಡೆಯೂ ಮಕ್ಕಳ ಸಾಹಿತ್ಯದ ಸ್ಥಿತಿ ಹೀಗೆಯೇ ಇದೆ. ಮಲಯಾಳಂ ಮತ್ತು ಹಿಂದಿಯಲ್ಲಿ ಬೇರೆಲ್ಲ ಭಾಷೆಗಿಂತ `ಅಡ್ಡಿಲ್ಲ’ ಎನ್ನುವ ವಾತಾವರಣಇದೆ ಅಷ್ಟೇ. ಅಮೇರಿಕಾದಂತಹ ದೇಶದಲ್ಲಿ ಮಕ್ಕಳ ಸಾಹಿತ್ಯಕ್ಕೆ ಬಹು ಬೇಡಿಕೆ, ಜನಪ್ರಿಯತೆ ಇರುವುದು ಹೌದಾದರೂ ಪ್ರೌಢ ಸಾಹಿತ್ಯಕ್ಕೆ ಹೋಲಿಸಿಕೊಂಡರೆ ಅಲ್ಲೂ ಮಕ್ಕಳ  ಸಾಹಿತ್ಯ ಒಂದು ಹೆಜ್ಜೆ ಹಿಂದೆಯೇ! ನಮ್ಮಲ್ಲಿ ಶಿಶು ಸಾಹಿತ್ಯದ ಪ್ರಮಾಣ ಪ್ರೌಢ ಸಾಹಿತ್ಯಕ್ಕಿಂತ ಕಮ್ಮಿ ಹೌದು. ಆದರೆ ಬರವಣಿಗೆ ಕಡಿಮೆ ಎನ್ನುವುದಕ್ಕಿಂತ ಗುಣಮಟ್ಟದ ಬರಹಗಳು ಕಮ್ಮಿ ಎಂಬ ಮಾತು ಮತ್ತಷ್ಟು ಸರಿಯೆನಿಸುತ್ತದೆ. ಮಕ್ಕಳ ಸಾಹಿತ್ಯವೆಂದರೆ `ಲಘು ಸಾಹಿತ್ಯ, ಯಾರೂ ಬರೆಯಬಹುದಾದದ್ದು, ಪಾಂಡಿತ್ಯ ತಿಳುವಳಿಕೆ ಬೇಡದಿರುವುದು’ ಎಂಬ ಅಭಿಪ್ರಾಯ ಸರ್ವೇಸಾಮಾನ್ಯವಾಗಿದೆ. ಹಾಗಾಗಿ ಹೊಸತನವೇ ಇಲ್ಲದ, ಅದೇ ಹಳೆಯ ಪ್ರಾಸಗಳಿಗೆ ಜೋತುಬಿದ್ದ, ಸಾಂಪ್ರಾದಾಯಿಕ ವಸ್ತು- ನಿರೂಪಣೆಗೆ ನಿಷ್ಠವಾದ ಶಿಶುಸಾಹಿತ್ಯ ಧಂಡಿಯಾಗಿ ರಚನೆಯಾಗುತ್ತಿದೆ. ಇಂತಹ ಸವಕಲು ಸರಕೇ ಈಚೆ ಯಾರೂ ಕಣ್ಣೆತ್ತಿ ನೋಡದಿರುವುದಕ್ಕೆ ಒಂದು ದೊಡ್ಡ ಕಾರಣವೂ ಆಗಿದೆ! `ಮಕ್ಕಳಿಗಾಗಿ ಪ್ರಕಟಿಸಿದ ಪುಸ್ತಕಗಳು ಮಾರಾಟವಾಗುವುದಿಲ್ಲ’  ಎಂದು ಪ್ರಕಾಶಕರು ಚಿಂತೆ ವ್ಯಕ್ತಪಡಿಸುವುದಕ್ಕೂ ಇದೊಂದು ಪ್ರಮುಖ ಕಾರಣ. ಆದರೆ ಈ ಹೊತ್ತಲ್ಲೇ ಹೇಳಬೇಕಾದ ಮಾತೆಂದರೆ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಕ್ಕಳ ಸಾಹಿತ್ಯ ಬದಲಾವಣೆಗೆ ತೆರೆದುಕೊಳ್ಳುತ್ತಿದೆ; ಅನೇಕ ಹೊಸಬರ, ಸೃಜನಶೀಲ ಬರಹಗಾರರ ಕಲ್ಪನೆಯ ಮೂಸೆಯಲ್ಲಿ ರೂಪು ಪಡೆಯುತ್ತಾ ಸಾಗಿದೆ ಎಂಬುದು. ಮಕ್ಕಳಿಗಾಗಿ ಫ್ರೆಶ್‌ ಆದ ಗದ್ಯ, ಪದ್ಯಗಳನ್ನು ಕೊಡಬೇಕೆಂಬ ತುಡಿತದಲ್ಲಿ ಇಂತವರು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ನವೋದಯದ ಕಾಲದಲ್ಲಿ ಪಂಜೇ ಮಂಗೇಶರಾಯರು, ಕುವೆಂಪು, ಶಿವರಾಮ ಕಾರಂತ, ಹೊಯ್ಸಳ, ಜಿ.ಪಿ ರಾಜರತ್ನಂ, ಸಿದ್ದಯ್ಯ ಪುರಾಣಿಕರು ಮೊದಲಾದ ಹಿರಿಯರನೇಕರು ಬಹಳ ಆಸ್ಥೆಯಿಂದ ಮಕ್ಕಳಿಗಾಗಿ ಬರೆದಿದ್ದರು. ಅದರ ನಂತರ ಸುದೀರ್ಘಕಾಲದ ಬಳಿಕ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಮತ್ತೊಮ್ಮೆ ಮಕ್ಕಳ ಸಾಹಿತ್ಯ ಚಿಗುರಿತು. ಈಗ ಪುನಃ ಅಂತಹ ದಿನಗಳು ಬರಲಾರಂಭಿಸಿವೆ ಎಂಬ ಆಶಾವಾದವನ್ನು ಮಕ್ಕಳ ಕ್ಷೇತ್ರದಲ್ಲಿ ತೊಡಗಿಕೊಂಡ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬೇಕಾಗಿದೆ.    ಮಕ್ಕಳ ಸಾಹಿತ್ಯಕ್ಷೇತ್ರದ ವಿಕಾಸಕ್ಕೆ ತಡೆಯಾಗಿರುವ ಇನ್ನೊಂದು ಮುಖ್ಯ ಸಮಸ್ಯೆ `ಶ್ರೇಷ್ತ್ರತೆಯ ವ್ಯಸನ’! ಬಹಳ ಓದಿಕೊಂಡವರು, ಚಿಂತಕರು, ಗಂಭೀರ ಸಾಹಿತ್ಯ ಬರೆಯುವವರು ಮಕ್ಕಳ ಸಾಹಿತ್ಯಕೃಷಿ ಮಾಡಿದರೆ ಬೆಲೆ ಕಮ್ಮಿ ಎಂಬ ಒಂದು ಮನಸ್ಥಿತಿ ಪ್ರಚಲಿತದಲ್ಲಿದೆ. ಇದರಿಂದಾಗಿ ಮಕ್ಕಳ ಸಾಹಿತ್ಯಕ್ಕೆ ನಷ್ಟವಾಗಿದೆ ಎಂದೇ ಹೇಳಬಹುದು. ಅಂತಹ ಬರಹಗಾರರ ಸೃಜನಶೀಲತೆ, ಯೋಚನೆಗಳು ನಮ್ಮ ಮಕ್ಕಳಿಗೆ ದೊರಕಲಿಲ್ಲ. ನವೋದಯಕಾಲದ ಹಿರಿಯ ಕವಿಗಳನ್ನು ನೆನಪಿಸಿಕೊಂಡು ಈ ವಿಷಯದಲ್ಲಿ ಇನ್ನಾದರೂ ನಾವು ಬದಲಾಗಬೇಕಾದ ತುರ್ತಿದೆ. ಮಕ್ಕಳಿಗಾಗಿ ಬರೆಯುವುದು, ಮಕ್ಕಳ ಸಾಹಿತ್ಯ ಓದುವುದು ಇವೆರಡೂ ಬದುಕಿನ ಪ್ರೀತಿ, ಸರಳ ಖುಷಿ ಎಂದು ಪರಿಗಣಿಸಬೇಕಾಗಿದೆ. “ಮಕ್ಕಳಿಗಾಗಿ ಬರೆಯಬೇಕೆಂದರೆ ಮಕ್ಕಳ ಮಟ್ಟಕ್ಕೆ ನಾವು ಏರಬೇಕು” ಎನ್ನುತ್ತಾರೆ. ಏರುವುದೋ, ಇಳಿಯುವುದೋ ಒಟ್ಟಿನಲ್ಲಿ ಬರಹಗಾರನೇ/ಳೇ ಮಗುವಾಗಬೇಕಾದದ್ದು ಮೊದಲ ಅಗತ್ಯ. ಮಗುವಿನ ಮುಗ್ಧತೆ, ಕುತೂಹಲ, ಪ್ರಾಮಾಣಿಕತೆ ಮೊದಲಾದವು ಈ ಬರಹಗಾರರಲ್ಲಿ ಹುದುಗಿರಬೇಕಾದ ಬಹು ಮುಖ್ಯ ಅಂಶ. ಹೀಗೆ ಮಗುವೇ ಆಗಿ ಪರಕಾಯ ಪ್ರವೇಶ ಮಾಡಿದಾಗ ಮಾತ್ರ ಒಂದೊಳ್ಳೆ ಪದ್ಯವೋ, ಕತೆಯೋ ಬರೆಯಲು ಸಾಧ್ಯ. ದಿನನಿತ್ಯದ ದಂದುಗದಲ್ಲಿ ಏಗಿ ಸೂಕ್ಷ್ಮತೆಯನ್ನು, ಮಗುತನವನ್ನು ಕಳೆದುಕೊಂಡು ಜಡ್ಡುಬಿದ್ದಿರುವ ನಮ್ಮಂತಹ ದೊಡ್ಡವರಿಗೆ ಇದು ಕಷ್ಟವೆ! ಈ ಕಾರಣಕ್ಕಾಗಿಯೂಗುಣಮಟ್ಟದ ಮಕ್ಕಳ ಸಾಹಿತ್ಯ ಕಡಿಮೆಯಾಗಿರಬಹುದು. ಇಲ್ಲಿಯೇ ಚರ್ಚಿಸಬೇಕಾದ ಮತ್ತೊಂದು ಅಂಶವೆಂದರೆ ಮಕ್ಕಳ ಸಾಹಿತ್ಯಎಂದೊಡನೆ ಅದು `ಸರಳ’ ಆಗಿರಬೇಕು ಎಂಬ ತೀರ್ಮಾನಕ್ಕೆ ಬಂದುಬಿಡುವುದು! ಕೇಳಿ ಕೇಳಿ ಬೇಸರ ತರಿಸಿರುವ ಮಾದರಿಯನ್ನೇ ಆಯ್ದುಕೊಂಡು ಸರಳತೆಯ ಹೆಸರಲ್ಲಿ ಏನೋ ಬರೆದು ಬಿಡುವುದು! ಪುಟಾಣಿ ಮಗುವಿನಿಂದ ಹಿಡಿದು ಹದಿನೈದು-ಹದಿನಾರು ವರ್ಷದವರೆಗಿನ ಮಕ್ಕಳೂ ಈ ಸಾಹಿತ್ಯದ ವ್ಯಾಪ್ತಿಯಲ್ಲಿ ಪರಿಗಣಿತವಾಗುವುದರಿಂದ ರಚನೆಗಳಲ್ಲೂ ವೈವಿಧ್ಯತೆ ಇರಬೇಕಾದದ್ದು ಸಹಜ. ಆದರೆ ಯಾವ ವಯಸ್ಸಿನ ಮಕ್ಕಳಿಗೆ ಬರೆದದ್ದೇ ಇರಲಿ; ಗುಣಮಟ್ಟದ್ದಾಗಿದ್ದರೆ ಅದು ದೊಡ್ಡವರೂ ಓದಿ ಖುಷಿಪಡುವಂತಿರುತ್ತದೆ! ಹೀಗಾಗಿ ಮಕ್ಕಳ ಸಾಹಿತ್ಯ ಎಂದು ಪ್ರತ್ಯೇಕಿಸುವುದು ಸಾಹಿತ್ಯದ `ಪ್ರಕಾರ’ ಗುರುತಿಸುವುದಕ್ಕಾಗಿ, ವಿಮರ್ಶೆಯ ಸವಲತ್ತಿಗಾಗಿ ಮತ್ತೂ ಹೆಚ್ಚೆಂದರೆ ಪ್ರಶಸ್ತಿಗಳ ಪ್ರವೇಶಾತಿಗಾಗಿ ಅಷ್ಟೇ. ಪೂರ್ಣಚಂದ್ರ ತೇಜಸ್ವಿ ಅವರ ವಿಸ್ಮಯ, ದೇಶ-ವಿದೇಶ ಸರಣಿಯ ಪುಸ್ತಕಗಳು, ಅಮೇರಿಕಾದ ಲಾರಇಂಗಲ್ಸ್ ವೈಲ್ಡರ್ ಬರೆದ ಕಾದಂಬರಿ ಸರಣಿ ಇಂತಹ ಸಾಹಿತ್ಯವನ್ನು ಗಮನಿಸಿದರೆ ದೊಡ್ಡವರು-ಮಕ್ಕಳು ಎಂಬ ಭೇದವಿಲ್ಲದೆ ಓದುವಿಕೆ ಇರುತ್ತದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಮಕ್ಕಳ ಸಾಹಿತ್ಯವೆಂದರೆ ಬರೀ ಪಂಚತಂತ್ರದ ಕತೆಗಳು, ಪ್ರಾಸಪದ್ಯಗಳು, ಕಥನಕವನಗಳು, ರಾಜರಾಣಿಯ ಕತೆಗಳು, ಪೌರಾಣಿಕ ವಿಷಯಗಳು ಅಲ್ಲ; ಇದರಾಚೆಗೆ ಅನೇಕ ವಸ್ತು-ವಿಷಯ-ನಿರೂಪಣೆಯ ಮಾಧ್ಯಮವಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಅಳಿಲು, ಬೆಕ್ಕು, ನಾಯಿ, ಇರುವೆ, ಗೂಬೆ, ಬಸವನ ಹುಳು, ಇಲಿ, ಹೂವು, ಗಿಡಮರಗಳು, ಬದಲಾದ ಈ ಕಾಲದ ಮಗುವೊಂದರ ಖುಷಿ-ಸಂಕಷ್ಟಗಳು ಹೀಗೆ… ವಿಫುಲ ವಿಷಯಗಳಿವೆ. ಲಲಿತ ಪ್ರಬಂಧ, ಕಾದಂಬರಿ, ಪುಟಾಣಿಕತೆ, ಅನುಭವಕಥನ, ಫ್ಯಾಂಟಸಿಗಳು ಹೀಗೆ ವಿವಿಧ ಅಭಿವ್ಯಕ್ತಿಯ ಪ್ರಕಾರಗಳಿವೆ…..  ಈ ಸಂದರ್ಭದಲ್ಲಿ ಒಂದು ಮುಖ್ಯ ಪ್ರಶ್ನೆಯನ್ನು ಎತ್ತಿ ಈ ಬರಹವನ್ನು ಮುಗಿಸುತ್ತೇನೆ. `ಮಕ್ಕಳ ಸಾಹಿತ್ಯ’ ಒಂದು ಸಾಹಿತ್ಯ ಪ್ರಕಾರವಲ್ಲವೆ? ಸಣ್ಣಕತೆ, ಕವಿತೆ, ನಾಟಕ, ಕಾದಂಬರಿ, ಆತ್ಮಕಥೆ, ಜೀವನಚರಿತ್ರೆ, ವಿಚಾರಸಾಹಿತ್ಯ, ಪ್ರಬಂಧ ಹೀಗೆ ಇವೆಲ್ಲವೂ ವಿಮರ್ಶೆಗೆ, ಓದಿಗೆ, ಮರುಓದಿಗೆ ಒಳಪಡುತ್ತಿರುವ ಈ ಹೊತ್ತಿನಲ್ಲಿ ಮಕ್ಕಳ ಸಾಹಿತ್ಯವನ್ನೇಕೆ ಮೂಲೆಗುಂಪಾಗಿಸಲಾಗಿದೆ? ಕನಿಷ್ಠ ಒಂದು ಓದು, ವಿಮರ್ಶೆ, ಒಂದು ಗಮನಿಸುವಿಕೆಯನ್ನಾದರೂ ಈ ಸಾಹಿತ್ಯ ಕೃತಿಗಳು ಬಯಸಬಾರದೇ? ಕನಿಷ್ಠ ಒಂದು ಮೆಚ್ಚುಗೆಯ ಮಾತಾದರೂ ಮಕ್ಕಳ ಸಾಹಿತಿಗೆ ದೊರಕಬಾರದೆ? ಪ್ರೌಢ ಸಾಹಿತ್ಯದ ಮನ್ನಣೆಯ ಅಬ್ಬರದಲ್ಲಿ ನಿರ್ಲಕ್ಷಿತ ಮಕ್ಕಳ ಸಾಹಿತ್ಯ ಕೊಚ್ಚಿಹೋಗಬೇಕೆ? ಇದು ಖಂಡಿತಾ ಸರಿಯಲ್ಲ. ಪ್ರಜ್ಞಾವಂತ ಓದುಗರು, ವಿಮರ್ಶಕರು ಈ ಕುರಿತು ಗಮನ ಹರಿಸಲೇಬೇಕು. (ಪ್ರೋತ್ಸಾಹದದೃಷ್ಟಿಯಿಂದ ಸಾಹಿತ್ಯಅಕಾಡಮಿಯಿಂದ ತೊಡಗಿಇತರ ಕೆಲವು ಸಂಸ್ಥೆಗಳು ಕೊಡಮಾಡುವ ಕೆಲ ಪ್ರಶಸ್ತಿ, ಪುರಸ್ಕಾರಗಳು ಮಕ್ಕಳ ಸಾಹಿತ್ಯಕ್ಕಿವೆ ಎಂದು ಇಲ್ಲಿ ನೆನಪಿಸಿಕೊಳ್ಳುವೆ). ಮಕ್ಕಳ ಸಾಹಿತ್ಯ ಅಲಕ್ಷಿತವಾದರೆ ನಮ್ಮ ಮಕ್ಕಳು ಅಲಕ್ಷಿತವಾದಂತೆ, ಅವರು ಮೂಲೆಗುಂಪಾದರೆ ಇಡೀ ಸಮಾಜವೇ ಮೂಲೆಗುಂಪಾದಂತೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕಾದದ್ದು ಅತ್ಯಗತ್ಯ.  ಪ್ರೌಢ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಎರಡರಲ್ಲೂ ಗಂಭೀರವಾಗಿ ತೊಡಗಿಕೊಂಡು ಉತ್ತಮ ಕೃತಿಗಳನ್ನು ನೀಡುತ್ತಿರುವ ಬರಹಗಾರರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸಂತಸದ ಸಂಗತಿ. ಹಾಗೇ ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿಯೂ ಬೆಳೆಯಲಿ. ಮಕ್ಕಳ ಸಾಹಿತ್ಯ ಕೃತಿಗಳನ್ನು ಮಕ್ಕಳು, ದೊಡ್ಡವರು ಸಮಾನವಾಗಿ ಓದಬಲ್ಲ ಪೂರಕ ವಾತಾವರಣ ಸೃಷ್ಟಿಯಾಗಲಿ ಎನ್ನುವುದು ಪ್ರಜ್ಞಾವಂತರೆಲ್ಲರ ಆಶಯ. **************************************************

ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ Read Post »

ಇತರೆ

ಕೊಂಕಣಿ ಕವಿ ಪರಿಚಯ

ಕೊಂಕಣಿ ಕವಿ ಪರಿಚಯ ಫೆಲ್ಸಿ ಲೋಬೊ ಶ್ರೀಮತಿ ಫೆಲ್ಸಿ ಲೋಬೊಶಿಕ್ಷಕಿ, ಸಂತ ಎಲೋಶಿಯಸ್ ಪ್ರೌಢಶಾಲೆ, ಮಂಗಳೂರು.ಹವ್ಯಾಸ: ಕವನ, ಲೇಖನ ಬರಹಕನ್ನಡ, ಕೊಂಕಣಿ, ತುಳು ಭಾಶೆಗಳಲ್ಲಿ.ಕೊಂಕಣಿಯ, ರಾಕ್ಣೊ, ಉಜ್ವಾಡ್, ಸೆವಕ್, ಮುಂತಾದ ಪತ್ರಿಕೆಗಳಲ್ಲಿ, ವೀಜ್ ಪಾಕ್ಶಿಕ ದಲ್ಲಿ, ಕವಿತಾ ಡಾಟ್ ಕಾಮ್ ಗಳಲ್ಲಿ ಬರಹಗಳ ಪ್ರಕಟವಾಗಿದೆ. ಕವಿಗೋಶ್ಟಿಗಳಲ್ಲಿ ಭಾಗವಹಿಸುವಿಕೆ, ವಿವಿಧ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಲಾಗಿದೆ. ಆಕಾಶವಾಣಿ ಮಂಗಳೂರು ರೇಡಿಯೊ ಹಾಗೂ ಸಾರಂಗ್ ರೇಡಿಯೊ ದಲ್ಲಿ ಕಾರ್ಯಕ್ರಮಗಳು ಪ್ರಸಾರ ಕಂಡಿವೆ. ” ಗರ್ಜೆತೆಕಿದ್ ಗಜಾಲಿ” ಎಂಬ ಚೊಚ್ಚಲ ಲೇಖನ ಪುಸ್ತಕ ಪ್ರಕಟವಾಗಿದೆ. ವಿದ್ಯಾರ್ಥಿಗಳನ್ನು ಸಾಹಿತ್ಯಾಸಕ್ತಿ ಬೆಳೆಸಲು ವಿವಿಧ ಸ್ಪರ್ಧೆಗಳಿಗೆ ಪ್ರೋತ್ಸಾಹಿಸಿ ಕಳುಹಿಸಲಾಗಿದೆ. ಸೃಜನಾತ್ಮಕ ಬರಹಗಳಿಗೆ ಪ್ರೋತ್ಸಾಹಿಸಿ, ಚುಟುಕುಗಳ ಸಂಗ್ರಹ” ಝೇಂಕಾರ” ಪ್ರಕಟಗೊಂಡಿದೆ. ಜೆಸಿಐ ಮಂಗಳೂರು, ಲಾಲ್ ಭಾಗ್ ರವರು ಶಿಕ್ಷಕರ ದಿನದಂದು, ಬಹುಮುಖ ಪ್ರತಿಭಾ ಶಿಕ್ಷಕಿ ಸನ್ಮಾನ ನೀಡಿ ಗೌರವಿಸಿರುತ್ತಾರೆ. ಫೆಲ್ಸಿ ಲೋಬೊ ಅವರು ಬರೆದ ಕೊಂಕಣಿ ಮತ್ತು ಕನ್ನಡ ಕವಿತೆಗಳು ನಿಮ್ಮೆಲ್ಲರಿಗಾಗಿ. ತಾಂಚೆ ಫಾತರ್ ಆನಿ ಹಾಂವ್~~~ ಕೊಣಾಯ್ಚ್ಯಾ ಹೆಳ್ಕೆ ವಿಣೆಕಿರ್ಲೊನ್ ವಾಡ್ಲೆಲ್ಯಾ ದೆಣ್ಯಾಂರುಕಾರ್ ಕಾಳಾ ತೆಕಿದ್ಕೊಂಬ್ರೆ, ಫಾಂಟೆ ವಿಸ್ತಾರ್ಲೆಸೊಪ್ಣಾಂಚ್ಯಾ ಪಿಶ್ಯಾ ಫುಲಾಂನಿದೆಖ್ತೆಲ್ಯಾಕ್ ಪಿಶ್ಯಾರ್ ಘಾಲೆಂ ಬರಿಂ ಫುಲಾಂ ಘೊಸ್ ಭಾಂದ್ತಾನಾಫಳಾಂನಿ ಆಸ್ರೊ ಸೊದ್ಲೊಫಳಾ ರುಚಿಂನಿ ಗರ್ಜೊಥಾಂಭಯ್ತಾನಾ, ತಾಣಿಂಫಾತರ್ ವಿಂಚ್ಲೆ ಸುರ್ವೆರ್ ಹಳ್ತಾಚೆ ಮಾರ್ವಾಡಾತ್ತ್ ಗೆಲೆ ವರ್ಸಾಂಭರ್ಮಾರ್ಲೆಲ್ಯಾ ಹರ್ ಫಾತ್ರಾಂಕಿಹಗೂರ್ ವಿಂಚುನ್ ಪೆಳಿ ಭಾಂದ್ಲಿ ತುಮಿ ಮಾರ್ಲೆಲ್ಯಾ ಹರ್ ಫಾತ್ರಾಂಕಿಮೋಲ್ ಭಾಂದ್ಲಾಂವೆಂಪೆಳಿಯೆರ್ ಬಸೊನ್ಲಿಖ್ತಾಂ ಆಜ್ ಯಾದಿಂಚ್ಯೊ ವೊಳಿ ತುಮಿ ಛಾಪ್ಲೆಲ್ಯಾ ಪಯ್ಲ್ಯಾ ಪಾನಾಕ್ಆಜ್ ಹಾಂವೆ ಲಿಖ್ಚ್ಯಾ ಹರ್ ಪಾನಾಂಕ್ಫರಕ್ ಇತ್ಲೊಚ್ಫಾತ್ರಾಂ ಪೆಳಿಯೆ ಥಾವ್ನ್ ಖಾಂತ್ಚ್ಯಾಉತ್ರಾಂ ಪಾಟ್ಲ್ಯಾನ್ ನಾಂವ್ ಆಸಾಅನಾಮಿಕ್ ನೈಂ ನಿಮ್ಮ ಕಲ್ಲ ಬೆಂಚು~~~~ನನಗರಿವಿಲ್ಲದೆಯೆ ಬೆಳೆದುಹೆಮ್ಮರವಾದ ಸದ್ಗುಣದ ಮರದಎಳೆ ಚಿಗುರು, ಕೊಂಬೆಬಲಿತ ರೆಂಬೆಗಳೆಡೆಯಲಿಅದಾಗಲೆ ಹುಚ್ಚು ಹೂಗಳ ಸರದಿ ಹೀಚು ಕಾಯದು ಬೆಳೆದುಕಾಯಾಗಿ ಬಲಿತು ಬಲು ರುಚಿಯಿಂದ ನಿಮ್ಮ ಒಲಿದಾಗಕಲ್ಲೆಸೆದು ಕೊಯ್ದವರೆತುಸು ತಾಳಿ ಎಸೆದ ಒಂದೊಂದು ಕಲ್ಲತಾಳ್ಮೆಯಿಂ ಶೇಖರಿಸಿ ಬೆಂಚೊಂದಕಟ್ಟಿರುವೆನುಅಲ್ಲೆ ಕುಳಿತು ತಿರುಚುವ ಒಂದೊಂದುಕಾಗುಣಿತಕ್ಕು ಎತ್ತಣಿಂದೆತ್ತ ಸಂಬಂಧ ! ಪ್ರಹಾರಗಳ ನೋವು ಆರಿಕಲ್ಲು ಬೆಂಚು ಬೆಳೆದಿದೆ ಹೆಗಲೇರಿನಿಮ್ಮ ಹಾಳೆಯಂತಲ್ಲಇಲ್ಲಿ ಪೋಣಿಸುವ ಒಂದೊಂದುಅಕ್ಷರದ ಹಿಂದೊಂದು ಹೆಸರಿದೆಇದು ಅನಾಮಿಕವಲ್ಲ ಪ್ರಶಸ್ತಿ ನಾತ್ಲೆಲೆ ಪಾತ್ರ್ # ಜಿವಿತಾಚ್ಯೆ ರಂಗ್ ಮಾಂಚಿಯೆರ್ಉಂಚ್ಲೆ ಪಾತ್ರ್ ತುಜೆಪಾಳ್ಣ್ಯಾ ಥಾವುನ್ ಪೆಟೆ ಪರ್ಯಾಂತ್ವಿಚಾರ್ ಖೂಬ್ ಗರ್ಜೆಚೆ ರಂಗಾಳ್ ಆಂಗ್ಲಿಂ ನ್ಹೆಸೊನ್ಆಂಗಣ್ ಭರ್ ಚರ್ಲೆಲಿಂ ಪಾವ್ಲಾಂವಾಡೊನ್ ಎತಾಂ ಭಂವ್ತಿಲ್ಯಾ ದೊಳ್ಯಾಂಚಿಭುಕ್ ಥಾಂಭಂವ್ಚೆಂ ಆಹಾರ್ ಜಾತಾತ್ ಘರ್ಚ್ಯಾ ಚಲಿಯೆ ಖಾತಿರ್ಸೆಜ್ರಾ ಉಠ್ತಾ ಆಕಾಂತ್ದೊಳೆಚ್ಚ್ ಕೆಮರಾ ಜಾವುನ್ ಬಾಬಾಚಾರ್ ಕುಶಿಂ ಥಾವುನ್ ರಾಕೊನ್ ಥಕ್ತಾತ್ ಪಾಯ್ಜಾಣಾಂಗೊ ತುಜಿಂ ಆವಾಜಾವಿಣ್ಝಳ್ಜಳಿತ್ ವಸ್ತ್ರಾಂ ಬಾವ್ಲ್ಯಾಂತ್ ರಂಗ್ ಉಬೊವ್ನ್ದಿವ್ಳಾ ಭಿತರ್ ವೆಶಿ ದೇವ್ ಕೊಪ್ತಾ ಮಣ್ತಾತ್ವಚಾನಾ ಜಾಶಿ ಬುರ್ಬುರೆಂ ವೊಡುನ್ದೆವಾ ಹುಜ್ರಿಂಚ್ ಮಾನ್ ಲುಟ್ತಾತ್ ದೇವಿ ತೂಂ , ನಾ ತುಕಾ ಪೂಜಾ ಸನ್ಮಾನ್ಉಜ್ವಾಡ್ ತೂಂ , ನಾ ತುಕಾ ಸಂಭ್ರಮ್ಕಾಂಪಿಣ್ ಮಾರ್ತೆಲ್ಯಾ ಪೂಜಾರಿಕ್ ಯಿಗುಪ್ತಿಂ ಲಿಪ್ತಿಂ ಗರ್ಜ್ ತೂಂಬಗ್ಲೆ ನಿದ್ತೆಲ್ಯಾಚ್ಯಾ ನಿಳ್ಯಾ ಪಿಂತುರಾಂಕ್ ಯಿಸಂಪನ್ಮೂಳ್ ತೂಂ ಕೆನ್ನಾ ಪಾಪ್ಸುಂಕ್ ತುಕಾ ದಾವ್ಲ್ಯೊ ರಾಕ್ತಾತ್ಪ್ರತಿಭಾ ಪಿಸ್ಡುಂಕ್ ಸುಣಿಂ ವಾಗ್ಟಾಂ ವಾವುರ್ತಾತ್ಗುಡ್ಡಾಯ್ತೆಲ್ಯಾಂ ಮಧೆಂ ಮಿಲಾವಾಚಿ ಪುತ್ಳಿ ಜಾ — ರಾವ್ ಉಭೆಂತುಜ್ಯಾ ವೆಕ್ತಿತ್ವಾಚಿ ವಳಕ್ ತರಿ ಜಾಯ್ತ್ ? ಉಭಾರುನ್ ವರ್ ಪರ್ವತಾಚೆರ್ ತುಜೊ ತಾಳೊಕಿಂಕ್ರಾಟೆಂತ್ ಆಸೊಂ ಜಯ್ತಾಚೊ ವ್ಹಾಳೊಅಬಲ್ ನೈಂ ತುಂ , ಪೌರುಷಾಚ್ಯೆ ನದ್ರೆಂತ್ಲೆಂಅಬಲ್ಪಣಾಚೆಂ ಕೂಸ್ ಹುಮ್ಟಿಲಾಂಯ್ ತೆಂ ಪಾಚಾರ್ ಕುಟ್ಮಾ ಸಂಸಾರ್ ಸೆಜ್ ಸಾಮಾರಾಂತ್ಖೂಬ್ ಜಾಗ್ ಉಠಯ್ತಾಂ ತುಜಿ ಹಾಜ್ರಿಮೆಲ್ಲ್ಯಾ ಮೊಡ್ಯಾಂಕ್ ಕಳಾತ್ ಕಶಿ ಶಾಥಿ ತುಜಿ?ಸಾಧನೆಚ್ಯಾ ಧಾಂವ್ಣೆಂತ್ ಥಾಂಭ್ಚಿ ಗರ್ಜ್ ನಾಕಾ ಆಜಿ , ಆವಯ್ , ಧುವ್ , ಸುನ್ , ಭಯ್ಣ್ವಿಭಿನ್ನ್ ಪಾತ್ರಾಂನಿ ಭರ್ಪೂರ್ ಜೀವ್ ಭರ್ತಾಯ್ಆಧಾರ್ ಗರ್ಜ್ ಆಸ್ಚ್ಯಾ ನಾಸ್ಚ್ಯಾಂಕಿತೆಂಕೊ ದಿಲಾಯ್ಪ್ರಶಸ್ತಿ ನಾಸ್ಲೆಲೆ ಪಾತ್ರ್ ತುಜೆ ನಿಮ್ಣೆಂ ಪಯ್ಣ್ ಸಂಪ್ತಚ್ಆವಯ್ ಗರ್ಭಾಂತ್ ಆಸ್ರೊ ಘೆತಾಯ್ಮಾತಿಯೆ ವಾಸ್ ಚಡಂವ್ಕ್ಜರೂರ್ ಕಾಡ್ತಾಂ ಯಾದ್ ತುಜಿಪಯ್ಲ್ಯಾ ಪಾವ್ಸಾ ಥೆಂಬ್ಯಾಚ್ಯಾ ಪರ್ಮೊಳಾಂತ್ ಪ್ರಶಸ್ತಿಗಳಿಲ್ಲದ ಪಾತ್ರಗಳು ಬಾಳ ರಂಗಮಂಚದಲಿ ನಿನ್ನ ಪಾತ್ರಗಳೆಲ್ಲವು ಉನ್ನತವೆತೊಟ್ಟಿಲಿನಿಂದ ಶವದ ಪೆಟ್ಟಿಗೆಯ ತನಕವಿಚಾರಗಳು ಮನಮುಟ್ಟುವಂತವೆ ಬಣ್ಣದಂಗಿಯ ತೊಟ್ಟು ಅಂಗಳದೆಲ್ಲೆಡೆಓಡಾಡಿದ ಪುಟ್ಟಪಾದಗಳುಬೆಳೆದಂತೆಲ್ಲ ಸುತ್ತಲ ಹಸಿದ ಕಂಗಳಿಗೆಆಹಾರವಾಗುವವು ಅರಿಯದೆಯೆ. ಈ ಮನೆಯ ಮಗಳಿಗಾಗಿ ನೆರೆಮನೆಗಳಲಿ ಯಾತಕೋ ಆತಂಕ!ತೆರೆದ ಕಣ್ಣೇ ಕ್ಯಾಮೆರಾಗಳಾಗುತನಾಲಕ್ಕು ದಿಕ್ಕುಗಳಲೂ ಕಾವಲು ಝಣ್ ಗುಡುವ ಗೆಜ್ಜೆಗಿಂದು ವಿಶ್ರಾಂತಿಝಗಮಗಿಸುವ ಉಡುಗೆಗಿಲ್ಲ ಕಳೆಗುಡಿಯೊಳಗ ಹೋದೆಯೆಂದುಕೋಪಿಸುವ ಜನಹೋಗದಿರೆ ಧರಧರನೆಳೆದು ನಿನ್ನದೇವನೆದುರೆ ಮಾನಗೆಡಿಸುವರಣ್ಣಾ ದೇವಿಯಲ್ಲವೆ ನೀ ನಿನಗೇತಕೊಪೂಜೆ ಸನ್ಮಾನ?ಬೆಳಕಂತೆ ನೀ ಏತಕೋ ಸಂಭ್ರಮವು?ಗುಡಿಯ ದೇವನ ತೊಳೆತೊಳೆದುಪೂಜೆಗೈವ ಪೂಜಾರಿಗೂಗುಟ್ಟಿನಲಿ ಬೇಕಲ್ಲ ನೀನೆನೀಲಿ ಚಿತ್ರಗಳಿಗು ಸಂಪನ್ಮೂಲ? ಕೆನ್ನಾಲಗೆಯಾಗಿ ಸುಡಲುಪ್ರತಿಭೆಗಳ ದಮನಿಸಲು ಕಾದಿವೆನರಿ ತೋಳಗಳ ಹಿಂಡು ಹಸಿದುಕಂಚಿನ ಪ್ರತಿಮೆಯಾಗಿ ನಿಂತುಬಿಡುಒದ್ದು ತುಳಿವವರ ಮಧ್ಯೆಭವ್ಯ ವ್ಯಕ್ತಿತ್ವದ ಅರಿವಾಗಲವರಿಗೆ ! ಉತ್ತುಂಗಕೇರಿಸು ಪರ್ವತಗಳ ಸೀಳಿಪ್ರತಿಧ್ವನಿಸಲಿ ನಿನ್ನುಲಿಯುಪ್ರತಿ ಚೀರಾಟದಲೂ ಬೆಸೆದಿರಲಿಜಯದ ಹರಿವುಅಬಲೆಯಲ್ಲ ನೀನು ಪೌರುಷದ ದಿಟ್ಟಿಯಲ್ಲಡಗಿದ ಅಪನಂಬಿಕೆಯ ಬೇರಕಿತ್ತು ಜಗಕೆ ಸಾರು ಕುಟುಂಬ ನೆರೆಯ ವಠಾರದಿ ಬೀರುವಸಾಂತ್ವನದ ಎಚ್ಚರದ ಹಾಜರಿಯಲಿನಿನ್ನಿರುವ ಲಕ್ಷಣದ ಅರಿವಾದರುಎಲ್ಲಿಹುದು ಸತ್ತ ಹೆಣಗಳಿಗೆ?ಸಾಧನೆಯ ಹಾದಿಯಲಿ ಹಿಂದೆನೋಡದಿರು, ತಂಗದಿರು ಅಜ್ಜಿ, ತಾಯಿ, ಮಗಳುಸೊಸೆ, ತಂಗಿಯಂದದಿ ವಿಭಿನ್ನಪಾತ್ರಗಳ ಜೀವವಾಗಿಬೇಡಿದ, ಬೇಡದವಗೂ ಆಸರೆಯನೀಡಿದ ನಿನ್ನೆಲ್ಲ ಪಾತ್ರಗಳಿಗೆಪ್ರಶಸ್ತಿಗಳಿಲ್ಲ ಕಾಣು ! ಬಾಳಪಯಣವು ಅಂತ್ಯವಾದಂತೆಭುವಿಯ ಗರ್ಭದೊಳು ಲೀನವಾಗಿರುವನಿನ್ನ ಸ್ಮರಣೆಯೆ ಪುನರಪಿ ಎನಗೆಮೊದಲ ಹೂಮಳೆಯು ಸೂಸ್ವ ಕಂಪಿಗೆಊರೆಲ್ಲ ಪಸರಿಸುವ ತಂಪಿಗೆ. *************************************** ಶೀಲಾ ಭಂಡಾರ್ಕರ್

ಕೊಂಕಣಿ ಕವಿ ಪರಿಚಯ Read Post »

ಇತರೆ, ಜೀವನ

ಕಡಿವಾಣವೂ ಪ್ರೀತಿಯೇ!!!!!

ಲೇಖನ ಕಡಿವಾಣವೂ ಪ್ರೀತಿಯೇ!!!!! ಮಾಲಾ ಅಕ್ಕಿಶೆಟ್ಟಿ   ಕೊರೊನಾ ಲಾಕಡೌನ್ ಕ್ಕಿಂತ ಮುಂಚೆ ನಡೆದ ಮಾತಿದು.ಆತ್ಮೀಯರೊಬ್ಬರು ಚರ್ಚಿಸಿದ ವಿಚಾರ.ಅವರು ವಿವರಿಸಿದ ಹಾಗೆ ಈಗ ಒಂದು ವರ್ಷದಿಂದ ಶಾಲೆಗೆ ಹೋಗುವ ನಾಲ್ಕು ವರ್ಷದ ಮಗಳು ದಿನಾಲು ಒಂದಿಲ್ಲೊಂದು ವಸ್ತುಗಳನ್ನು ಶಾಲೆಯಲ್ಲಿ ಕಳೆದುಕೊಂಡು ಬಂದು ತಾಯಿಗೆ ಮತ್ತೆ ಹೊಸ ವಸ್ತುಗಳನ್ನು ಕೊಡಿಸುವಂತೆ ಪೀಡಿಸುತ್ತಿದ್ದಳು. ಮಗಳು ದಿನವೂ ಪೆನ್ಸಿಲ್, ರಬ್ಬರ್, ಶಾರ್ಪನರ್, ಕ್ರೆಯಾನ್ಸ್ ಗಳನ್ನು ಕಳೆದುಕೊಂಡು ಬರುವುದು ತಾಯಿಗೆ ತಲೆನೋವಾಗಿ ಪರಿಣಮಿಸಿತ್ತು. ಬೇಸತ್ತ ತಾಯಿ ಒಂದು ದಿನ ಮಗಳಿಗೆ ಸ್ಟ್ರಿಕ್ಟಾಗಿ ಎಚ್ಚರಿಕೆ ಕೊಟ್ಟಳು. ದಿನಾಲೂ ಶಾಲೆಯಿಂದ ಬಂದ ತಕ್ಷಣ ತನ್ನಲ್ಲಿರುವ ಪೆನ್ಸಿಲ್, ರಬ್ಬರ್, ಶಾರ್ಪನರ್ ಮತ್ತು ಕ್ರೆಯಾನ್ಸ್ ಗಳನ್ನು ತಪ್ಪದೇ ತನಗೆ ತೋರಿಸಬೇಕು, ಕಳೆದುಕೊಂಡು ಬಂದರೆ ಹೊಸ ವಸ್ತುಗಳನ್ನು ಕೊಡುವುದಿಲ್ಲವೆಂದು.ಈ ನಿಯಮವನ್ನು ತಲೆಯಲ್ಲಿ ಇಟ್ಟುಕೊಂಡ ಮಗಳು ದಿನಾಲೂ ತಪ್ಪದೆ ವಸ್ತುಗಳನ್ನು ತೋರಿಸತೊಡಗಿದಳು. ಕಳೆದುಕೊಂಡು ಅಥವಾ ಶಾಲೆಯಲ್ಲಿ ಎಲ್ಲೋ ಇಟ್ಟು ಮರೆತು ಬರುವ ಪದ್ಧತಿ ಕೊನೆಗೊಂಡಿತು.           ಈಗಿನ ಪಾಲಕರು ಮಕ್ಕಳಿಗೆ ಬೇಕೆಂದು ಎಲ್ಲವನ್ನೂ ಮಕ್ಕಳು ಕೇಳುವ ಮೊದಲೇ ಬಹುವಾಗಿ ತಂದು ಬಿಡುವ ಸಂಪ್ರದಾಯ ರೂಢಿಸಿಕೊಂಡು ಬಿಟ್ಟಿದ್ದಾರೆ. ವರ್ಷದುದ್ದಕ್ಕೂ ಒಂದು ಪೆನ್ಸಿಲ್, ಒಂದು ರಬ್ಬರ್, ಒಂದು ಶಾಪ್ ನರ್, ಒಂದು ಕ್ರೆಯಾನ್ ಬಾಕ್ಸ್ ಇದ್ದರೆ ಸಾಕು. ಆದರೆ ಪಾಲಕರು ಡಜನ್ಗಟ್ಟಲೆ ವಸ್ತುಗಳನ್ನು ತಂದಿಟ್ಟಿರುತ್ತಾರೆ. ಅವು ಎಲ್ಲಿಟ್ಟಿರುತ್ತಾರೆಂದು ಮಕ್ಕಳಿಗೂ ಗೊತ್ತು. ದಿನವೂ ಯಾವುದಾದರೂ ವಸ್ತುವನ್ನು ಕಳೆದುಕೊಂಡು ಬಂದು ಪಾಲಕರಿಗೆ ಹೇಳದೆಯೇ ಹೊಸದನ್ನು ಪ್ಯಾಕೆಟ್ ನಿಂದ ಒಡೆದು ಉಪಯೋಗಿಸಲು ಪ್ರಾರಂಭಿಸುತ್ತಾರೆ. ತಿಂಗಳೊಪ್ಪತ್ತಿನಲ್ಲಿ ಡಜನ್ ಡಜನ್ ವಸ್ತುಗಳು ಮಾಯವಾಗಿರುತ್ತವೆ. ಮತ್ತೆ ಬೇಕು ಎಂದು ಹಟ ಹಿಡಿದಾಗ ಮಾತ್ರ, ಸಾಮಾನು ಖಾಲಿಯಾಗಿದೆ ಎಂಬ ಅರಿವು ಪಾಲಕರದ್ದಾಗುತ್ತದೆ. ಅಲ್ಲಿಯವರೆಗೂ ಎಷ್ಟಿತ್ತು?ಹೇಗೆ ಖಾಲಿಯಾಯಿತು? ಎಂಬುದು ಗೊತ್ತೇ ಆಗಿರುವುದಿಲ್ಲ.        ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ಹಟ ಎನ್ನುವ ಶಬ್ದ ಎಂದೂ ಶಬ್ದಕೋಶದಲ್ಲಿ ಇರಲೇ ಇಲ್ಲ. ಪಾಲಕರು ಕೊಡಿಸಿದ ವಸ್ತುಗಳನ್ನು ಅವು ಇನ್ನೂ ಉಪಯೋಗಕ್ಕೆ ಬರಲ್ಲ ಎನ್ನುವವರಿಗೆ ಬಳಸಲಾಗುತ್ತಿತ್ತು. ಜೂನ್ ತಿಂಗಳಲ್ಲಿ ಸಾಮಾನುಗಳನ್ನು ಕೊಡಿಸಿದರೆ ಮುಗಿಯಿತು ಮುಂದೆ ಮುಂದಿನ ಜೂನ್ನಲ್ಲಿ ಶಾಲೆಯ ವಸ್ತುಗಳನ್ನು ಖರೀದಿಸಲಾಗುತ್ತಿತ್ತು. ಕಳೆದುಕೊಂಡು ಬಂದ ಉದಾಹರಣೆಗಳು ತುಂಬಾ ಕಡಿಮೆ. ಜೊತೆಗೆ ವೆರೈಟಿ,ವೆರೈಟಿ ಅಥವಾ ಪ್ರತಿದಿನಕ್ಕೆ ಹೊಸದನ್ನು ಉಪಯೋಗಿಸಬೇಕೆಂಬ ಹಟವೂ ಇರಲಿಲ್ಲ. ಮೇಲಾಗಿ ಆಗಿನ ಪಾಲಕರು ಎಷ್ಟು ಬೇಕೋ ಅಷ್ಟೇ ತಂದು ಮಕ್ಕಳಿಗೆ ಕೊಡುತ್ತಿದ್ದರು. ಡಜನ್ಗಟ್ಟಲೆ ತಂದ ರೂಢಿಯೇ ಇರಲಿಲ್ಲ. ವರ್ಷಕ್ಕೆ ಇಂತಿಷ್ಟೇ ಎಂಬ ಕಟ್ಟುನಿಟ್ಟು ಇದ್ದುದರಿಂದ ವಸ್ತುಗಳ ಉಪಯೋಗ ಮತ್ತು ರಕ್ಷಣೆ ಸರಿಯಾಗಿಯೇ ಆಗುತ್ತಿತ್ತು.           ಕಾಲ ಬದಲಾದಂತೆ ಪಾಲಕರ ಮನಸ್ಥಿತಿಯೂ ಬದಲಾಗಿದೆ. ಮಕ್ಕಳು ಬೇಡಿದ್ದೆಲ್ಲವನ್ನು ಕೊಡಿಸುವುದು ತಮ್ಮ ಧರ್ಮ ಎಂದು ತಿಳಿದು, ಕೇಳಿದ್ದು ಕೇಳದೆ ಇದ್ದದ್ದನ್ನೆಲ್ಲ ಕೊಡಿಸುವುದನ್ನು ಪಾಲಕರು ಅನುಸರಿಸುತ್ತಿದ್ದಾರೆ. ಅವಶ್ಯಕತೆಗೆ ತಕ್ಕಂತೆ ಕೊಡಿಸುವುದು ಉತ್ತಮ. ಜೊತೆಗೆ ಅದರ ಉಪಯೋಗ ಸರಿಯಾಗಿ ಆಗುತ್ತದೆಯೋ ಇಲ್ಲವೋ ಅನ್ನುವುದನ್ನು ಪರೀಕ್ಷಿಸುತ್ತಿರಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ದುಡ್ಡಿನ ಮಹತ್ವ ತಿಳಿಯುವಂತೆ ಮಾಡಬೇಕು.            ಇಗೀಗ ಡ್ರಗ್ಸ ಜಾಲದಲ್ಲಿ ಸಿಕ್ಕಿಕೊಂಡವರನ್ನ ನೋಡಿದರೆ ಇವರಿಗೆ ದುಡ್ಡು ಸಿಕ್ಕುವುದು ಎಷ್ಟು ಸಲೀಸು!!!ಮೈಯೊಳಗಿನ ರಕ್ತವನ್ನು ಬೆವರಿನಂತೆ ಸುರಿಸಿದರೂ ಬಡವನಿಗೆ ಎರಡು ಹೊತ್ತಿನ ಕೂಳು ದುರ್ಲಭ.ಇಂಥ ಬಡತನವನ್ನು ಉಂಡುಟ್ಟವರಿಗೆ,ಉತ್ತಮ ನೌಕರಿ, ತಮ್ಮದೊಂದು ಮನೆ,ಮಕ್ಕಳಿಗೆ ವಿದ್ಯಾಭ್ಯಾಸ ಕೊನೆಗೆ ಸಾಧ್ಯವಾದರೆ ಕಾರ್ ಒಂದು ಖರೀದಿ.ಇವಷ್ಟೇ ಕನಸುಗಳು.ಶ್ರೀಮಂತಿಕೆಯಲ್ಲೇ ಹುಟ್ಟಿದವರಿಗೆ, ಇಲ್ಲಾ ಇಗೀಗ ಶ್ರೀಮಂತ ಆದವರಿಗೆ ಅಥವಾ ತಾವಾಗಿಯೇ ದುಡ್ಡು ಗಳಿಸಿ ಪ್ರಾಥಮಿಕ ಹಂತದ ಎಲ್ಲಾ ಆಸೆಗಳು ಸಂಪೂರ್ಣಗೊಂಡವರಿಗೆ ದುಡ್ಡು ಕಷ್ಟವಲ್ಲ.ಇಂಥವರೇ ವ್ಯಸನಿಗಳಾಗುತ್ತಾರೆ.        ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸುವುದು ಪ್ರೀತಿ ಎಂದುಕೊಂಡಿದ್ದಾರೆ ಕೊಡಿಸದಿದ್ದರೆ ಪ್ರೀತಿ ಇಲ್ಲ ಅಥವಾ ಕಡಿಮೆ ಎಂದು ಮಕ್ಕಳು ತಿಳಿದಾರು ಎಂಬ ಭಯದಲ್ಲೇ ಕೊಡಿಸುತ್ತಾರೆ. ಬೇಡಿದ್ದೆಲ್ಲವನ್ನೂ ಕೊಡಿಸುವುದು ಪ್ರೀತಿಯೇ? ಹಟ ಯಾವಾಗಲೂ ಗೆಲ್ಲಬೇಕೆ? ಇಲ್ಲ ಬೇಡಿದ್ದೆಲ್ಲವನ್ನೂ ಕೊಡಿಸದಿರುವುದು ಪ್ರೀತಿ ಎಂಬುದನ್ನು ಪಾಲಕರು ತೋರಿಸಬೇಕು.ಕಡಿವಾಣವೂ ಪ್ರೀತಿಯ ಸಂಕೇತ. ಯಾವ ವಸ್ತುವೂ ಜಗತ್ತಿನಲ್ಲಿ ಪುಗ್ಗಟ್ಟೇ ಸಿಗಲ್ಲವೆಂದು ತಿಳಿಹೇಳಬೇಕಾಗಿದೆ.ಹಣದ, ದುಡಿತದ ಮಹತ್ವವನ್ನು ಹೇಳಿಕೊಡಬೇಕು. ಬೇಕಾಬಿಟ್ಟಿ ವಸ್ತುಗಳನ್ನು ತೆಗೆದುಕೊಂಡು, ಒಂದು ದಿನವೂ ಉಪಯೋಗಿಸದೇ ಮತ್ತೆ ಹೊಸದು ಬೇಕೆನ್ನುವುದಕ್ಕೆ ಲಗಾಮ ‌ಮತ್ತು ‌ಹಟ ‌ಒಳ್ಳೆಯದಲ್ಲವೆಂದು ತಿಳಿಹೇಳಬೇಕು.  ***********************************************************

ಕಡಿವಾಣವೂ ಪ್ರೀತಿಯೇ!!!!! Read Post »

You cannot copy content of this page

Scroll to Top