‘ಅಲ್ಲಾ ಗುರೂಜಿ, ಇದೇನಿದು..? ಇಷ್ಟು ವರ್ಷಗಳ ಕಾಲ ಬೊಂಬೈಯಲ್ಲಿದ್ದು ಬಂದವರು ನೀವು ಏನೂ ಮಾಡಲಿಲ್ಲವಾ!?’ ಎಂದು ಬಾಯಿ ತಪ್ಪಿ ಅಂದವನು ತಕ್ಷಣ ನಾಲಗೆ ಕಚ್ಚಿಕೊಂಡ. ಆದರೆ ಬಳಿಕ ಅದನ್ನೇ ಸಮರ್ಥಿಸಿಕೊಂಡಂತೆ ಅವರನ್ನು ದಿಟ್ಟಿಸಿದ. ಅಷ್ಟು ಕೇಳಿದ ಏಕನಾಥರಿಗೆ ಅಲ್ಲೇ ಸತ್ತವಷ್ಟು ಹಿಂಸೆಯಾಯಿತು.
ಶಾಲೆಯಲ್ಲಿ ಸಿಹಿ-ಕಹಿ
ಮಕ್ಕಳ ಅನುಭವ ಕಥನ ಶಾಲೆಯಲ್ಲಿ ಸಿಹಿ-ಕಹಿ ವಿಜಯಶ್ರೀ ಹಾಲಾಡಿ ವಿಜಿಯ ಬಾಲ್ಯದ ಆ ದಿನಗಳಳ್ಲಿ ಮತ್ತು ಅದಕ್ಕೂ ಹಿಂದೆಲ್ಲ ಮಕ್ಕಳನ್ನು ಶಾಲೆಗೆ ಕಳಿಸಿಯೇ ತೀರಬೇಕೆಂಬ ದೊಡ್ಡ ಆಸೆ ಮನೆಯವರಿಗೆ ಇರಲಿಲ್ಲ. ಹೆಚ್ಚು ಕೇಳಿದರೆ, ಮಕ್ಕಳು ಶಾಲೆಗೆ ಹೋಗುವುದೇ ಬೇಡ, ಮನೆಯಲ್ಲೇ ಕೆಲಸ ಮಾಡಿಕೊಂಡಿರಲಿ ಎಂದು ಬಹುತೇಕ ಹಿರಿಯರ ಅಭಿಪ್ರಾಯವಾಗಿತ್ತು. ಅವರ ಹಳ್ಳಿಯಲ್ಲಿ ದೂರ ದೂರ ಮನೆಗಳು. ರಸ್ತೆಯಿಂದ, ಬಸ್ಸಿನ ಸಂಪರ್ಕದಿಂದ ಬಹು ದೂರ ಕಾಡು, ಗುಡ್ಡ, ಬಯಲುಗಳಲ್ಲಿ ಹುದುಗಿದ ಮನೆಗಳೇ ಜಾಸ್ತಿ. ಶಾಲೆಗಳ ಸಂಖ್ಯೆಯೂ ಆಗ ಕಡಿಮೆಯಿತ್ತು. ಹಾಗಾಗಿ ಶಾಲೆಗೆ ಹೋಗಿಬರಲು ಸಣ್ಣ ಸಣ್ಣ ಮಕ್ಕಳಿಗೆ ತೊಡಕಾಗಿತ್ತು. `ಕಡ್ಡಾಯ ಶಿಕ್ಷಣ’ ಎಂಬ ಸರ್ಕಾರದ ಕಾನೂನೇ ಆಗ ಇರಲಿಲ್ಲ! ಇದೆಲ್ಲದರಿಂದಾಗಿ ಅಂದಿನ ದಿನಗಳಲ್ಲಿ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾದರು. ಇದು ನಿಜವಾಗಿಯೂ ಅಂತವರ ಬದುಕಿನಲ್ಲಾದ ನಷ್ಟ. ವಿಜಿಯ ಮನೆಯಲ್ಲಿ ಅವಳು ಶಾಲೆಗೆ ಹೋಗುವುದು ಬೇಡ ಎಂದೇನೂ ಅಜ್ಜಿ, ಅಪ್ಪಯ್ಯ, ಅಮ್ಮ ಯಾರ ಮನಸ್ಸಿನಲ್ಲಿಯೂ ಇರಲಿಲ್ಲ. ಆದರೆ ಎಲ್ಲಾ ಮನೆಗಳಂತೆಯೇ ಅವರ ಮನೆಯಲ್ಲಿಯೂ ಶಾಲೆ, ಮಾರ್ಕ್ಸ್ ಎಂದೆಲ್ಲ ಹಿರಿಯರ‍್ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಒಂದು ಲೆಕ್ಕಕ್ಕೆ ಇದು ಒಳ್ಳೆಯದೇ ಆಯಿತು. ಬೇಕಾದಷ್ಟು ಆಡಬಹುದಿತ್ತು; ಕಾಡು ಗುಡ್ಡಗಳಲ್ಲಿ ಓಡಿಯಾಡಬಹುದಿತ್ತು. ಬಿಸಿಲು, ಮಳೆಯೆನ್ನದೆ ಮನೆ ಸುತ್ತಮುತ್ತ ನಿಸರ್ಗದ ಮಧ್ಯೆ ಹೊಸ ಹೊಸ ಅನುಭವಗಳನ್ನು ಪಡೆಯಬಹುದಿತ್ತು. ಹಾಗೆ ವಿಜಿ ಮತ್ತು ಅವಳ ವಯಸ್ಸಿನ ಮಕ್ಕಳೆಲ್ಲ ಬೇಕಾದಷ್ಟು ಆಡಿ, ಓಡಿ, ದಣಿದು, ಮನೆಕೆಲಸಗಳನ್ನು ಮಾಡಿ ಕೊನೆಗೆ ಸಮಯ ಉಳಿದರೆ ಓದುತ್ತಿದ್ದರು! ಹೆಚ್ಚಿನ ಎಲ್ಲಾ ಮಕ್ಕಳೂ ಮೈಲಿಗಟ್ಟಲೆ ನಡೆದೇ ಶಾಲೆಗೆ ಬರುತ್ತಿದ್ದರು. ಹೈಸ್ಕೂಲಿನ ದಿನಗಳಲ್ಲಿ ಹೋಗಿ-ಬರುವ ಒಟ್ಟು ದೂರ ದಿನಕ್ಕೆ ಐದು ಮೈಲಿ ನಡಿಗೆಯಾದರೆ, ಬಸ್ಸಿನಲ್ಲಿ ಹತ್ತು ಕಿಲೋಮೀಟರ್ ಪ್ರಯಾಣಿಸಬೇಕಿತ್ತು ವಿಜಿ. ಅದೂ ಆ ಬಸ್ಸುಗಳಲ್ಲಿ ನಿಲ್ಲಲು ಜಾಗ ಸಿಕ್ಕಿದರೇ ಪುಣ್ಯ! ಇದ್ದದ್ದೇ ಕೆಲವು ಬಸ್. ಆ ಬಸ್ಸುಗಳೂ ಶಾಲೆಯ ಮಕ್ಕಳನ್ನು ಹತ್ತಿಸಿಕೊಳ್ಳದೆ ಬಿಟ್ಟುಹೋಗುತ್ತಿದ್ದವು. ಶಾಲೆ ಮಕ್ಕಳು ಟಿಕೆಟ್ಟಿಗೆ ಕೊಡುವ ದುಡ್ಡು ತೀರಾ ಕಡಿಮೆಯಾದ್ದರಿಂದ ಬಸ್ ಕಂಡಕ್ಟರ್‌ಗಳು ಇವರು ಹತ್ತುವ ಮುಂಚೆಯೇ `ರೈಟ್’ ಹೇಳುತ್ತಿದ್ದರು. ಹೀಗೆ ಶಾಲೆಗೆ ಹೋಗಿ ಬರುವುದೇ ಒಂದು ಸಾಹಸವಾಗಿತ್ತು. ಇದರಿಂದ ದೈಹಿಕವಾಗಿ ಹೆಚ್ಚು ಆಯಾಸವಾಗುತ್ತಿದ್ದುದರಿಂದರಾತ್ರಿ ಎಂಟು ಗಂಟೆಗೆಲ್ಲ ನಿದ್ದೆ ಎಳೆಯುತ್ತಿತ್ತು. ಹತ್ತನೇ ಕ್ಲಾಸಿನ ಪಬ್ಲಿಕ್ ಪರೀಕ್ಷೆಗೆ ಮಾತ್ರ ಮಕ್ಕಳು ಜಾಸ್ತಿ ಓದುತ್ತಿದ್ದರು. ಅಲ್ಲಿಯವರೆಗಿನ ಕ್ಲಾಸ್‌ಗಳಲ್ಲಿ ಓದುವ ಒತ್ತಡ ಅಷ್ಟಾಗಿ ಇದ್ದಿರಲಿಲ್ಲ. ನಮ್ಮ ವಿಜಿ ಓದುವುದರಲ್ಲಿ ಚುರುಕೇ. ಆದರೆ ಹಿರಿಯ ಪ್ರಾಥಮಿಕ ಶಾಲೆಗೆ ಹೋದಾಗ ಐದನೇ ತರಗತಿಗೆ ಇಂಗ್ಲಿಷ್ ಹೊಸದಾಗಿ ಸೇರಿಕೊಂಡಿತು. ಇಂಗ್ಲಿಷ್ ಪಾಠ ಚೆನ್ನಾಗಿ ಮಾಡಲಿಲ್ಲವೋ ಅಥವಾ ಇವಳಿಗೆ ಅರ್ಥವಾಗಲಿಲ್ಲವೋ ಒಟ್ಟಿನಲ್ಲಿ ಆ ವಿಷಯದಲ್ಲಿ ಸ್ವಲ್ಪ ಹಿಂದಿದ್ದಳು. ಆರನೆ ತರಗತಿಯಲ್ಲಿ ಹಿಂದಿ ಇತ್ತು. ಆ ಕ್ಲಾಸಿನಲ್ಲಿಯೂ ಅಷ್ಟೇ. ಹಿಂದಿ ಅಕ್ಷರಗಳನ್ನು ಬರೆಯುವುದು ಕಷ್ಟವೆನಿಸುತ್ತಿತ್ತು. ಏಳನೇ ತರಗತಿಗೆ ಹೋದ ಹೊಸದರಲ್ಲಿ ಒಂದಿನ ಯಾಕೋ ಏನೋ ಅಮ್ಮ ಚೆನ್ನಾಗಿ ಬಯ್ದರು. “ಆಟವೇ ಜಾಸ್ತಿ ಆಯಿತು ಇವಳದ್ದು, ಓದುವುದಿಲ್ಲ, ನೆಟ್ಟಗೆ ಮನೆಕೆಲಸ ಮಾಡುವುದಿಲ್ಲ” ಎಂದೆಲ್ಲ ಅವರು ನಿಜವನ್ನೇ ಹೇಳಿದ್ದರೂ, ವಿಜಿಗೆ ಅವಮಾನವಾದಂತಾಗಿ ಕಣ್ಣೀರು ಬಂತು. `ಈ ಸಲ ಚಂದ ಓದಿಯೇ ಓದಬೇಕು’ ಎಂದು ಮನಸ್ಸಿನಲ್ಲೇ ಚಾಲೆಂಜ್ ಹಾಕಿದಳು. ಅದಕ್ಕೆ ಸರಿಯಾಗಿ ಆ ವರ್ಷ ಹಿಂದಿ ಮೇಷ್ಟು ಚೆನ್ನಾಗಿ ಕಲಿಸುತ್ತಿದ್ದರು. ಆಗ ಕಿರುಪರೀಕ್ಷೆ ಬಂತು. ವಿಜಿ ಸವಾಲಾಗಿ ತೆಗೆದುಕೊಂಡು ಹಿಂದಿಯನ್ನು ಓದಿದಳು. ಮಾಷ್ಟು ಪೇಪರ್ ತಿದ್ದಿ ಕೊಟ್ಟಾಗ ಅವಳಿಗೆ ಹಿಂದಿಯಲ್ಲಿ ಇಪ್ಪತೈದಕ್ಕೆ ಇಪ್ಪತೈದು ಮಾರ್ಕ್ಸ್ ಬಂದಿತ್ತು! ಅವಳಿಗಾದ ಖುಷಿಗೆ ಲೆಕ್ಕವೇ ಇರಲಿಲ್ಲ. ನಾಲ್ಕೈದು ಜನರಿಗೆ ಇಪ್ಪತ್ತನಾಲ್ಕೂವರೆ ಮಾರ್ಕ್ಸ್ ಬಂದಿತ್ತು. ಆಗ ಮಾಷ್ಟು ಒಂದು ಮಾತು ಹೇಳಿದರು. “ವಿಜಯಶ್ರೀಗೆ ಅರ್ಧ ಅಂಕ ಕೂಡಾ ಕಳೆಯಲು ಆಗಲಿಲ್ಲ ನನಗೆ, ಯಾಕೆಂದರೆ ಅವಳು ಒಂದೂ ತಪ್ಪು ಮಾಡಿಲ್ಲ” ಎಂದು. ಈ ಮಾತು, ಸನ್ನಿವೇಶ ದೊಡ್ಡವಳಾದ ನಂತರವೂ ಅವಳಿಗೆ ಮರೆಯಲಿಲ್ಲ. ಅದಲ್ಲದೆ ಅಮ್ಮ ಬಯ್ದದ್ದು ಒಳ್ಳೆಯದೇ ಆಯಿತು ಅನಿಸಿತು. ಏಳನೇ ತರಗತಿಯಲ್ಲಿ ಅವಳು ಆ ವರ್ಷ ಕ್ಲಾಸಿಗೇ ಪ್ರಥಮ ಸ್ಥಾನದಲ್ಲಿ ಪಾಸಾದಳು. ಆದರೆ ಮತ್ತೆ ಹೈಸ್ಕೂಲಿಗೆ ಹೋದಾಗ ಅಲ್ಲಿನ ಹೊಸ ಪರಿಸರ ಹೊಂದಿಕೆಯಾಗದ್ದಕ್ಕೋ ಅಥವಾ ಉದಾಸೀನದಿಂದಲೋ ಎಂಟು, ಒಂಬತ್ತನೇ ತರಗತಿಯಲ್ಲಿ ಹೆಚ್ಚೇನೂ ಓದುತ್ತಿರಲಿಲ್ಲ. ಅವಳಿಗೆ ಶಾಲೆ ಎಂದರೆ ಸಾಕಷ್ಟು ಹೆದರಿಕೆಯೂ ಇತ್ತು. ಆದರೆ ಹತ್ತನೇ ತರಗತಿಯಲ್ಲಿದ್ದಾಗ ಮಾತ್ರ ಬೆಳಗಿನ ಜಾವ ಮೂರು ಗಂಟೆಗೆಲ್ಲ ಎದ್ದು ಚಿಮಣಿದೀಪ ಹತ್ತಿಸಿಕೊಂಡು ಹೊಗೆ ಕುಡಿಯುತ್ತಾ ಓದುತ್ತಿದ್ದಳು! ಕನ್ನಡ ಅವಳ ಪ್ರೀತಿಯ ವಿಷಯವಾಗಿತ್ತು. ನಾಲ್ಕನೇ ತರಗತಿಯಿಂದಲೇ ಮನೆಯಲ್ಲಿದ್ದ ಸಾಹಿತ್ಯದ ಪುಸ್ತಕಗಳನ್ನು ಓದಿದ್ದಳು. ಅದಲ್ಲದೆ ದೊಡ್ಡ ದೊಡ್ಡ ಕಾದಂಬರಿಗಳನ್ನೂ ಓದಿಬಿಟ್ಟಿದ್ದಳು! ಒಂದು ಸಲ ತರಗತಿಯಲ್ಲಿ ಕನ್ನಡ ಮಾಷ್ಟು ಈಗೊಂದು ಪದ್ಯ ಹೇಳುತ್ತೇನೆ, ಇದಕ್ಕೆ ಸರಿಯಾಗಿ ಅರ್ಥ ಹೇಳಿದವರಿಗೆ ನಾಕಾಣೆ (ಇಪ್ಪತೈದು ಪೈಸೆ) ಬಹುಮಾನ ಎಂದು ಘೋಷಿಸಿದರು. ಆ ಪದ್ಯ ಹೀಗಿತ್ತು. “ಮೇಲಕೆ ಹತ್ತಿರಿ ಮುಂದಕೆ ಬನ್ನಿರಿ ಎನ್ನುತ ಕಂಡಕ್ಟರ ಕರೆಯೇ; ಉಳಿದೆಲ್ಲ ಕಡೆಯೊಳು ಹಿಂದಕೆ ತಳ್ಳಿಸಿಕೊಂಡವನಾನಂದಕೆಣೆಯೆ!” ಸುಮಾರು ಮಕ್ಕಳು ಪ್ರಯತ್ನಿಸಿದರಾದರೂ ಸರಿಯಾದ ಅರ್ಥ ಹೇಳಲಾಗಲಿಲ್ಲ. ವಿಜಿ ಮಾತ್ರ ಸರಿಯಾದ ಉತ್ತರ ಕೊಟ್ಟಳು. ಆಗ ಅವಳಿಗೆ ಬಹುಮಾನವಾಗಿ ನಾಕಾಣೆ ದೊರಕಿತು. ಆ ದುಡ್ಡಿಗಿಂತ ಅಷ್ಟು ಬುದ್ಧಿವಂತ ಮಕ್ಕಳಿದ್ದ ತರಗತಿಯಲ್ಲಿ ತಾನೊಬ್ಬಳೇ ಉತ್ತರಿಸಿದ್ದು ವಿಜಿಗೆ ಹೆಮ್ಮೆಯೆನಿಸಿತ್ತು. ನಿಜವಾಗಿಯೂ ಅವರ ಶಾಲೆ ಸುತ್ತಲೆಲ್ಲ ಪ್ರಸಿದ್ಧವಾದ ಶಾಲೆಯಾಗಿತ್ತು. ಎ ಮತ್ತು ಬಿ ಎರಡು ವಿಭಾಗವಿದ್ದ ಅವರ ತರಗತಿಯಲ್ಲಿ ಬಹಳ ಬುದ್ಧಿವಂತ ವಿದ್ಯಾರ್ಥಿಗಳಿದ್ದರು. ಆಗೆಲ್ಲ ಖಾಸಗಿ ಶಾಲೆಗಳೆಂದರೆ ಏನೆಂದು ಜನರಿಗೆ ಗೊತ್ತೇ ಇರಲಿಲ್ಲ. ಇದ್ದದ್ದು ಸರ್ಕಾರಿ ಶಾಲೆಗಳು ಮಾತ್ರ. ಹತ್ತನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಬರೆದು ವಿಜಿ ತರಗತಿಗೆ ಐದನೇ ಸ್ಥಾನ ಪಡೆದುಕೊಂಡಿದ್ದಳು. ಹತ್ತನೇ ತರಗತಿಯಲ್ಲಿದ್ದಾಗ ನಡೆದ ಮತ್ತೊಂದು ಖುಷಿಯ ಘಟನೆ ಮರೆಯಲಾರದ್ದು. ಪ್ರತೀ ವರ್ಷದಂತೆ ಆ ವರ್ಷವೂ ಸ್ಪರ್ಧೆಗಳಿದ್ದವು. ಇಷ್ಟು ವರ್ಷ ಪ್ರಬಂಧ ಮುಂತಾದ ಬರವಣಿಗೆ ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಿದ್ದ ವಿಜಿ ಈ ವರ್ಷ ಭಾಷಣಕ್ಕೆ ಸೇರಿದಳು. ಕೊಟ್ಟ ವಿಷಯಕ್ಕೆತಾನೇ ಭಾಷಣ ಬರೆದುಕೊಂಡು ಮನೆಯಲ್ಲಿ ಪ್ರಾಕ್ಟೀಸ್ ಮಾಡಿಕೊಂಡು ಹೋದಳು. ಮೊದಲೆಲ್ಲ ಅವಳಿಗೆ ಭಾಷಣ ಎಂದರೇ ಭಯವಾಗುತ್ತಿತ್ತು. ಈ ಸಲ “ನನಗೆ ಭಯವೇನೂ ಇಲ್ಲ, ನಾನು ಚೆನ್ನಾಗಿ ಮಾತಾಡಬಲ್ಲೆ, ಗೆದ್ದು ತೋರಿಸುತ್ತೇನೆ” ಎಂದೆಲ್ಲ ತನಗೆ ತಾನೇ ಪುಸಲಾಯಿಸಿಕೊಂಡು ಹೆದರಿಕೆಯನ್ನು ಮೆಟ್ಟಿ ತುಂಬಾ ಚೆನ್ನಾಗಿ ಎದುರು ಕುಳಿತವರೆಲ್ಲರ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡಿದಳು. ಅವಳಿಗೇ ಮೊದಲ ಬಹುಮಾನ ಬಂತು. ಇಡೀ ಕಾಲೇಜಿನಲ್ಲಿ ಅವಳನ್ನು ಎಲ್ಲರೂ ಗಮನಿಸುವಂತಾಯಿತು. ಪಿ.ಯು.ಸಿ.ಯಲ್ಲಿ ಓದುತ್ತಿದ್ದ ಅವಳ ಊರಿನ ಗೆಳತಿಯರೂ ಕೂಡಾ “ವಿಜಯಶ್ರೀ ಅಡ್ಡಿಲ್ಲೆ. ಹೀಗೇ ಮಾತಾಡುವುದು ಕಮ್ಮಿ. ಆದರೆ ಸ್ಟೇಜ್ ಮೇಲೆ ಚಂದ ಮಾತಾಡ್ತಾಳೆ.” ಎಂದು ಅವಳೆದುರಿಗೇ ಹೇಳಿದಾಗ ಸಂಕೋಚವೆನಿಸಿದರೂ ಖುಷಿಯಾಯಿತು. ಈ ಪ್ರಸಂಗದಿಂದಾಗಿ ಮುಂದೆ ಅವಳಿಗೆ ಎಲ್ಲರೆದುರು ನಿಂತು ಮಾತಾಡಲು ಧೈರ‍್ಯ ಬಂದಿತು. ಆಗೆಲ್ಲ ಕೆಲವು ಶಿಕ್ಷಕರು ಮಕ್ಕಳಿಗೆ ವಿಪರೀತ ಹೊಡೆಯುತ್ತಿದ್ದರು. ಮಕ್ಕಳನ್ನು ಶಿಕ್ಷಿಸುವುದು ಅಪರಾಧ ಎಂಬ ಕಾನೂನು ಆಗ ಇತ್ತೋ ಇಲ್ಲವೋ ಗೊತ್ತಿಲ್ಲ. ಇಂತಹ ಕಹಿ ಘಟನೆಗಳು ವಿಜಿಗೆ ಎಂದಿಗೂ ಮರೆಯಲು ಸಾಧ್ಯವಾಗಿಲ್ಲ. ಅವಳ ಕಿರಿಯ ಪ್ರಾಥಮಿಕ ಏಕೋಪಾಧ್ಯಾಯ ಶಾಲೆಯ ಮಾಷ್ಟು ತುಂಬಾ ಒಳ್ಳೆಯವರು, ಶಿಸ್ತುಗಾರರು; ಆದರೆ ಅವರಿಗೆ ವಿಪರೀತ ಸಿಟ್ಟು. ಓದಲು, ಬರೆಯಲು ಬಾರದ ಮಕ್ಕಳಿಗೆ ಕೋಲಿನಿಂದ ಸರಿಯಾಗಿ ಹೊಡೆಯುತ್ತಿದ್ದರು. ಅದೂ ಅಲ್ಲದೆ ಅಂತಹ ಮಕ್ಕಳ ತಲೆಯನ್ನು ಹಿಡಿದು ಗೋಡೆಗೆ ಜಪ್ಪುವುದು, ಸ್ಲೇಟಿನಲ್ಲಿ ತಲೆಗೆ ಹೊಡೆಯುವುದನ್ನೂ ಮಾಡುತ್ತಿದ್ದರು. ಹಾಗೆ ಬೇರೆಯವರಿಗೆ ಹೊಡೆಯುವಾಗಲೇ ವಿಜಿಗೆ ತುಂಬಾ ಹೆದರಿಕೆಯಾಗಿ ಎದೆ ವೇಗವಾಗಿ ಹೊಡೆದುಕೊಳ್ಳುತ್ತಿತ್ತು; ಮುದುರಿ ಕೂರುತ್ತಿದ್ದಳು. ಹಾಗೆ ಹೊಡೆಸಿಕೊಂಡ ಮಕ್ಕಳ ಕುರಿತು “ಅಯ್ಯೋ ಪಾಪ” ಅಂದುಕೊಳ್ಳುತ್ತ ಕಣ್ಣು ಒರೆಸಿಕೊಳ್ಳುತ್ತಿದ್ದಳು. ಹಾಗೆ ಹೊಡೆಸಿಕೊಂಡ ಮಕ್ಕಳ ಅಸಹಾಯಕ ಸ್ಥಿತಿ ಕನಸಿನಲ್ಲೂ ಬಂದು ಕೆಲವೊಮ್ಮೆ ಕಾಡುತ್ತಿತ್ತು. ಹೈಸ್ಕೂಲಿನಲ್ಲಿ ರೇಖಾಗಣಿತ ಮಾಡುತ್ತಿದ್ದ ಕನ್ನಡ ಲೆಕ್ಚರರ್ ಕೂಡಾ ತುಂಬಾ ಸಿಟ್ಟಿನವರು. ಪಾಠವನ್ನು ಬಹಳ ಚೆನ್ನಾಗಿ ಮಾಡುತ್ತಿದ್ದರು; ಅವರ ಪಾಠದಿಂದಾಗಿಯೇ ರೇಖಾಗಣಿತ ಸುಲಭವಾಗಿತ್ತು ವಿಜಿಗೆ. ಆದರೆ ಅವರಿಗೆ ಎಷ್ಟು ಸಿಟ್ಟೆಂದರೆ, ಅವರು ತರಗತಿಗೆ ಬಂದೊಡನೆ ಮಕ್ಕಳೆಲ್ಲ ಗಪ್‌ಚಿಪ್ ಕೂರುತ್ತಿದ್ದರು. ವಿಜಿ ಮತ್ತು ಅವಳ ಕೆಲ ಗೆಳತಿಯರಂತೂ ಜೋರಾಗಿ ಉಸಿರಾಡಲೂ ಹೆದರುತ್ತಿದ್ದರು. ಅವರು ಹುಡುಗರಿಗೆ ಅಂದರೆ ಗಂಡುಮಕ್ಕಳಿಗೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರಾದರೂ ಹೆಣ್ಣುಮಕ್ಕಳು ತಪ್ಪು ಮಾಡಿದರೆ ಎಲ್ಲರೆದುರು ವ್ಯಂಗ್ಯವಾಗಿ ಏನಾದರೂ ಹೇಳಿ ಕಣ್ಣೀರು ಬರುವ ಹಾಗೆ ಮಾಡಿ ಸುಮ್ಮನಾಗುತ್ತಿದ್ದರು. ಒಂದು ಸಲ ಒಬ್ಬ ಹುಡುಗ ಸರಿಯಾಗಿ ಉತ್ತರಿಸದ ಕಾರಣಕ್ಕೆ ಭಯಂಕರ ಕೋಪಗೊಂಡು ಕೋಲಿನಲ್ಲಿ ಅವರು ಯಾವ ತರ ಹೊಡೆದರೆಂದರೆ ಉಳಿದ ಮಕ್ಕಳೆಲ್ಲ ಹೆದರಿಕೊಂಡರು. ಆ ಹುಡುಗನ ಕೈ ಕಾಲಿನಲ್ಲಿ ರಕ್ತ ಬರಲಾರಂಭಿಸಿತು. ಆ ದಿನ ಇಡೀ ಶಾಲೆಯಲ್ಲಿ ಇದೇ ವಿಷಯ ಒಳಗೊಳಗೇ ಗುಸುಗುಸು ಚರ್ಚೆಯಾಯಿತು. ಜೋರಾಗಿ ಮಾತಾಡುವ ಧೈರ್ಯ ಮಕ್ಕಳಿಗೆ ಇರಲಿಲ್ಲ. ಆ ಹುಡುಗನಿಗೆ ಮನೆಗೆ ನಡೆದುಕೊಂಡು ಹೋಗುವುದೇ ಕಷ್ಟವಾಯಿತು! ಆಮೇಲೆ ಸುಮಾರು ದಿನ ಅವನು ಶಾಲೆಗೆ ಬರಲಿಲ್ಲ. ಈ ಪ್ರಸಂಗ ವಿಜಿಗೆ ತುಂಬಾ ಕೆಡುಕೆನಿಸಿತು. ಶಾಲೆ ಎಂದರೆ ಏನೋ ಭಯ, ಆತಂಕ ಅವಳೊಳಗೆ ಸೇರಿಕೊಂಡಿತು. ಆಟದ ಬಯಲಲ್ಲಿ ಮಾತ್ರ ವಿಜಿ ಯಾವತ್ತೂ ಹಿಂದೆಯೇ ಇದ್ದಳು. ಅವಳು ತುಂಬಾ ಸಪೂರವಾಗಿ ದೇಹದಲ್ಲಿ ಶಕ್ತಿಯೂ ಕಮ್ಮಿ ಇದ್ದುದರಿಂದಲೋ ಏನೋ ಆಟವಾಡಿದರೆ, ಓಡಿದರೆ ಆಯಾಸವಾಗುತ್ತಿತ್ತು. ಥ್ರೋ ಬಾಲ್ ಆಡುವಾಗ ಚೆಂಡು ನೆಟ್‌ಪಾಸ್ ಆಗುತ್ತಿರಲಿಲ್ಲ. ಇದಂತೂ ತುಂಬಾ ಅವಮಾನವೆನಿಸುತ್ತಿತ್ತು ಅವಳಿಗೆ. ರಿಂಗ್ (ಟೆನ್ನಿಕಾಯ್ಟ್) ಮಾತ್ರ ಚೆನ್ನಾಗಿ ಆಡುತ್ತಿದ್ದಳು. ಸ್ವಲ್ಪ ಸಮಾಧಾನವೆಂದರೆ ಅವಳಂತೆಯೇ ಆಟಗಳಲ್ಲಿ ಹಿಂದೆ ಇದ್ದ ಹುಡುಗಿಯರೂ ಕೆಲವರಿದ್ದರು ಎಂಬುದು! ತುಂಬಾ ಚೆನ್ನಾಗಿ ಆಟವಾಡುವ ಕೆಲವು ದೊಡ್ಡಕಿದ್ದ ಹುಡುಗಿಯರನ್ನು ನೋಡಿ ಅವಳಿಗೆ ಆಶ್ಚರ್ಯ, ಮೆಚ್ಚುಗೆ ಎರಡೂ ಆಗುತ್ತಿತ್ತು. ತಾನು ಎಂದಿಗೂ ಅವರಷ್ಟು ಬಲಿಷ್ಠಳಾಗಲು ಸಾಧ್ಯವಿಲ್ಲ ಅನಿಸುತ್ತಿತ್ತು. ಹಾಗಾಗಿ ಚೆನ್ನಾಗಿ ಓದುವುದರ ಮೂಲಕ ಈ ಕೊರತೆಯನ್ನು ತುಂಬಿಕೊಳ್ಳಬೇಕು ಎಂದುಕೊಂಡು ಅದಕ್ಕಾಗಿ ಪ್ರಯತ್ನಿಸುತ್ತಿದ್ದಳು. ಒಂಬತ್ತನೆ ಕ್ಲಾಸಿನ ನಂತರ ದ್ವಿತೀಯ ಪಿ.ಯು.ಸಿ.ಯವರೆಗೆ ವಿಜಿ ಎದುರಿಸಿದ ಒಂದು ಸಮಸ್ಯೆಯೆಂದರೆ ಅದು ಉಡುಪಿನದ್ದು. ಅವರ ಊರು ಹಳ್ಳಿಯಾಗಿದ್ದಕ್ಕೋ ಅಥವಾ ಅವಳ ಪರಿಚಿತ ಹೆಣ್ಣುಮಕ್ಕಳ್ಯಾರೂ ಉಡುಗೆ ತೊಡುಗೆಯ ಬಗ್ಗೆ ಮಾತಾಡದೇ ಇದ್ದುದಕ್ಕೋ ಆ ಕುರಿತು ಹೆಚ್ಚಿನ ಜ್ಞಾನವೇ ಇರಲಿಲ್ಲ ಅವಳಿಗೆ. ಇದಲ್ಲದೆ ಅವರ ಊರಿನಲ್ಲಿ ಹೆಣ್ಣುಮಕ್ಕಳೇನಾದರೂ ಸ್ವಲ್ಪ ಆಧುನಿಕವಾಗಿ ಫ್ಯಾಷನ್ ಮಾಡಿಕೊಂಡರೆ ಆಡಿಕೊಂಡು ನಗುತ್ತಿದ್ದರು. ಮತ್ತು ಮೈಕೈ ತುಂಬಿಕೊಂಡು ದಪ್ಪ ಉದ್ದಕ್ಕಿರುವ ಹೆಣ್ಣುಮಕ್ಕಳಿಗೂ ವ್ಯಂಗ್ಯ ಮಾಡುತ್ತಿದ್ದರು! ಹಾಗಾಗಿ ತಾನು ತೋರ ಆಗುವುದು ಬೇಡವೆಂದು ವಿಜಿ ಆಗಾಗ ದೇವರಲ್ಲಿ ಪ್ರಾರ್ಥಿಸುತ್ತಿದ್ದಳು! ಆರಂಭದಲ್ಲಿ ಮಿಡಿ ಹಾಕುತ್ತಿದ್ದ ಅವಳು ಆಮೇಲೆ ಸ್ಕರ್ಟು ಹಾಕಿದರೂ ಅದರಿಂದ ಬೇಗನೆ ಉದ್ದಲಂಗಕ್ಕೆ ಜಿಗಿದಳು. ಏಕೆಂದರೆ ಒಂಬತ್ತನೇ ತರಗತಿಯ ಸಮಯಕ್ಕೆ ಆದ ದೈಹಿಕ ಬದಲಾವಣೆ ಅವಳಿಗೆ ಬಹಳಷ್ಟು ತೊಂದರೆ ತಂದುಕೊಟ್ಟಿತ್ತು. ಹಾಗೆ ಅವಳು ದೊಡ್ಡವಳಾದ ನಂತರದ ದಿನಗಳಲ್ಲಿ ಉದ್ದ ಲಂಗ ಹಾಕಿಕೊಳ್ಳುವುದೇ ಅತ್ಯಂತ ಸುರಕ್ಷಿತ ಅನಿಸುತ್ತಿತ್ತು. ಮಸುಕು ಬಣ್ಣದ ಪುಟಾಣಿ ಹೂಗಳಿರುವ, ಕಲೆಯಾದರೆ ಕೂಡಲೇ ಗೊತ್ತಾಗದ ಬಟ್ಟೆಯನ್ನು ಆರಿಸಿಕೊಳ್ಳುತ್ತಿದ್ದಳು! ಜಾಸ್ತಿ ನೆರಿಗೆಗಳನ್ನಿಡುವಂತೆ ಟೈಲರ್‌ಗೆ ಹೇಳಿ ಉದ್ದಲಂಗ ಮತ್ತು ಸಡಿಲ ಸಡಿಲವಾಗಿರುವ ಬ್ಲೌಸ್ ಹೊಲಿಸುತ್ತಿದ್ದಳು. ಆ ಉಡುಪು ಹೆಚ್ಚು ಆರಾಮದಾಯಕವೆನಿಸುತ್ತಿತ್ತು. ಹತ್ತನೇ ತರಗತಿ ಮುಗಿದ ನಂತರದ ರಜೆಯಲ್ಲಿ ಅಪ್ಪಯ್ಯ, ಅಮ್ಮನೊಂದಿಗೆ ಅವಳು
ಶಾಲೆಯಲ್ಲಿ ಸಿಹಿ-ಕಹಿ Read Post »
ವಾರದ ಕಥೆ ಅರಿವು ಮಧುರಾ ಕರ್ಣಮ್ ಮೊದಲೇ ಹೇಳಿಬಿಡುತ್ತೇನೆ. ನಾನೊಬ್ಬ ಗುಮಾಸ್ತ. ಪ್ರೆöÊವೇಟ್ ಕಂಪನಿಯಲ್ಲಿ ಕಾರಕೂನ. ಮಧ್ಯಮ ವರ್ಗದ ಬದುಕು. ತೀರಾ ಕೆಳ ಮಧ್ಯಮ ವರ್ಗದ ಜೀವನವನ್ನು ಮಧ್ಯಮ ವರ್ಗದ ಸನಿಹಕ್ಕೆ ಅಪ್ಪ-ಅಮ್ಮ ಎಳೆದು ತಂದು ನಿಲ್ಲಿಸಿದರೆಂದರೂ ತಪ್ಪಿಲ್ಲ. ಪುಟ್ಟ ಗುಡಿಸಲಿನಂತಿದ್ದ ಮನೆಯಲ್ಲಿದ್ದು, ಪೈಸೆಗೆ ಪೈಸೆ ಲೆಕ್ಕ ಹಾಕಿ, ತುತ್ತಿಗೆ ತಾತ್ವಾರ ಮಾಡಿಕೊಂಡು ಈ ಮನೆ ಕಟ್ಟಿ, ನನಗೆ ಶಿಕ್ಷಣ ಕೊಡಿಸಿ ಒಂದು ಮಟ್ಟಕ್ಕೆ ಬಂದರು. ಹಾಗೆಂದು ಹೇಳಿಕೊಳ್ಳುವ ಹಾಗೆ ದೊಡ್ಡದಲ್ಲ ಮನೆ. ಎರಡು ಬೆಡ್ ರೂಮ್‌ಗಳೆಂದು ಕರೆಸಿಕೊಳ್ಳುವ ಪುಟ್ಟ ಕೋಣೆಗಳು, ಸುಮಾರಾದ ಹಾಲು, ಚಿಕ್ಕ ಅಡಿಗೆಮನೆ, ಪಕ್ಕದಲ್ಲೊಂದು ಬಾಥ್‌ರೂಮು. “ಇದೇನು ಮಹಾ?” ಎನ್ನಬಹುದು ನೀವು. ಆದರೆ ಪಟಾಕಿ ಕಾರಖಾನೆಯಲ್ಲಿ ನೂರು ರೂಪಾಯಿಯ ಸಂಬಳದಿAದ ಕೆಲಸವನ್ನಾರಂಭಿಸಿದ ಅಪ್ಪನಿಗೆ, ಹುಳಿಪುಡಿ, ಸಾರಿನಪುಡಿ ಮಾಡಿ ಮಾರುವ ಅಮ್ಮನಿಗೆ, ನನ್ನ ಪಾಲಿಗೆ ಅದು “ತಾಜ್ ಮಹಲ್” ಎಂದೇ ಹೇಳಬಹುದು. `ಒಂದೇ ಸಂತಾನ ಸಾಕು’ ಎನ್ನುತ್ತ ನನ್ನನ್ನು ಯಾವುದಕ್ಕೂ ಕಡಿಮೆಯಾಗದಂತೆ ಬೆಳೆಸಿ, ಜೋಪಾನ ಮಾಡಿ, ಜತನದಿಂದ ಕಾಯ್ದು…..ಹೀಗೆ ಒಮ್ಮೆಲೆ……ನಡುನೀರಲ್ಲಿ ಕೈ ಬಿಟ್ಟು ಹೋಗಿಬಿಡುವುದೇ? ಅದೂ ಇಬ್ಬರೂ ಒಟ್ಟಿಗೆ…… ಹೋಗಲು ಏನಾಗಿತ್ತು? ಒಂದು ಕಾಯಿಲೆಯಿಲ್ಲ. ಕಸಾಲೆಯಿಲ್ಲ. ಗಟ್ಟಿ ಮುಟ್ಟಾದ ದೇಹ. ಮುಪ್ಪು ಈಗ ಮೊದಲನೇ ಮೆಟ್ಟಿಲೇರತೊಡಗಿತ್ತು. ಅರವತ್ತೆöÊದೇನು ಸಾಯುವ ವಯಸ್ಸೇ? ಅದಾವ ಮಾಯದಲ್ಲಿ ಗಾಡಿ ಬಂದು ಹೊಡೆಯಿತೋ. ಮಾಮೂಲಿನಂತೆ ತರಕಾರಿ ತರಲು ಇಬ್ಬರೂ ಯಶವಂತಪುರದ ಮಾರ್ಕೆಟ್ಟಿಗೆ ಹೋಗಿದ್ದರು. ಮಕ್ಕಳು ಚಿಕ್ಕವರೆಂದು ನನ್ನ ಹೆಂಡತಿ ಸುಧಾ ಹೋಗಿರಲಿಲ್ಲ ಬಿಡಿ. ನಾನಂತೂ ಫ್ಯಾಕ್ಟರಿ ತಪ್ಪಿದರೆ ಮನೆ ಅಂತಿದ್ದವ. ಹಾಗಿದ್ದರೂ ನಾನು ತಂದರೆ “ಎಷ್ಟು ದುಡ್ಡು ಕೊಟ್ಟೆ? ಸೊಪ್ಪಿನ ಕಟ್ಟು ಸಣ್ಣದು” ಎಂದೆಲ್ಲ ತಕರಾರು ಆರಂಭವಾಗುತ್ತಿತ್ತು. ನನಗೆ ಕಿರಿಕಿರಿ. ಸುಧಾಳಿಗೂ ಸಹ. ಹೀಗಾಗಿ ಸಂತೆ-ಕೊAತೆಯೆಲ್ಲ ಅವರದೇ. ತರುವ ಬರುವ ವ್ಯವಹಾರವನ್ನೆಲ್ಲ ಅಪ್ಪನಿಗೇ ಬಿಟ್ಟಿದ್ದೆ. ಬೇಕಾದಷ್ಟು ಚೌಕಾಸಿ ಮಾಡಿ ತರಕಾರಿಗಳನ್ನೆಲ್ಲ ಹೊತ್ತುಕೊಂಡು ಬರುವಾಗ ಬೂದುಗುಂಬಳಕಾಯಿ ಹೊತ್ತಿದ್ದ ಮೋಟಾರು ವ್ಯಾನೊಂದು ಎದುರಿಗೆ ಬಂದಿತAತೆ. ಭಾರವಾದ ಚೀಲಗಳನ್ನು ಹೊತ್ತು ಇವರಿಬ್ಬರೂ ಅತ್ತಿತ್ತ ಸರಿದು ತಪ್ಪಿಸಿಕೊಳ್ಳುವಷ್ಟರಲ್ಲಿ ಮೈಮೇಲೆ ಹರಿಯಿತಂತೆ. ಬ್ರೇಕ್ ಫೇಲಾಗಿತ್ತೋ ಏನೋ ಹಾಳಾದದ್ದು. ಅವರಿಬ್ಬರ ಪಾಲಿಗೆ ಯಮಸ್ವರೂಪಿಯಾಗಿತ್ತು. ಎಲ್ಲಾ ಕುಂಬಳಕಾಯಿಗಳೂ ಅಪ್ಪನ ಮೇಲೆ. ಇವರ ಕೈಚೀಲದಲ್ಲಿದ್ದ ತರಕಾರಿಗಳೆಲ್ಲ ಕೆನ್ನೀರ ಹೊಳೆಯಲ್ಲಿ ಮಿಂದು ರಸ್ತೆ ಪಾಲಾದವಂತೆ. ಡ್ರೈವರ್ ಪರಾರಿಯಾದ. ಮಾಲೀಕ ನಾಪತ್ತೆ. ಆಸ್ಪತ್ರೆಗೆ ಸೇರಿಸುವಷ್ಟೂ ವ್ಯವಧಾನವಿಲ್ಲದೆ ಮೊದಲು ಅಮ್ಮ ಕಣ್ಮುಚ್ಚಿದಳಂತೆ. ಬಳಿಕ ಅಪ್ಪ. ನನಗೆ ಸುದ್ದಿ ಬಂದಾಗಲೇ ಮಧ್ಯಾಹ್ನವಾಗಿತ್ತು. ಆಕಾಶವೇ ಕಡಿದು ಬಿದ್ದಂತೆ ದಿಗ್ಮೂಢನಾಗಿ ನಿಂತೆ. ನಾನೇನು ತೀರ ಚಿಕ್ಕವನಲ್ಲ. ಮದುವೆಯಾಗಿ ಎರಡು ಮಕ್ಕಳಿರೋನೆ. ಆದರೆ ಅಪ್ಪ-ಅಮ್ಮನ ಶ್ರೀರಕ್ಷೆಯಲ್ಲಿ ಗೂಡಿನಲ್ಲಿದ್ದ ಮರಿಯಂತೆ ಬೆಚ್ಚಗಿದ್ದೆ. ಹೊರಗಿನ ವ್ಯವಹಾರ ಒಂದೂ ಗೊತ್ತಿಲ್ಲ. ಜಗತ್ತಿನ ಕಪಟ, ಮೋಸಗಳ ಮುಖವಾಡದ ಬದುಕು ಸ್ವಲ್ಪ ದೂರವೇ. ಉದ್ಯೋಗದಲ್ಲೂ ಅಷ್ಟೇ. ಕೆಲಸವೇ ಮಾತಿಗಿಂತ ಮುಖ್ಯ. ಹೀಗಾಗಿ ಮಾಲೀಕರು ನನ್ನ ಮೇಲೆ ವಿಶ್ವಾಸವನ್ನಿಟ್ಟಿದ್ದರು. ಉಳಿದವರ ಹೊಟ್ಟೆ ಉರಿದು ಹೋದರೂ ನನ್ನ ಪಾಡಿಗೆ ನಾನಿರುತ್ತಿದ್ದೆ. ಈಗ ಏಕಾಏಕಿ ಬಯಲಿಗೆ ತಂದು ಬಿಟ್ಟಂಥ ಸ್ಥಿತಿ. ಗೂಡಂತೂ ದೂರ, ಮೇಲೆ ಚಪ್ಪರವೂ ಇಲ್ಲ. ಕೆಳಗಡೆ ಭೂಮಿಯೂ ಇಲ್ಲ. ಸುದ್ದಿ ತಿಳಿದದ್ದೇ ತಡ, ಎಲ್ಲೆಲ್ಲಿಂದಲೋ ನೆಂಟರು ಬಂದಿಳಿದರು. ಸೋದರತ್ತೆ, ದೊಡ್ಡಮ್ಮ ಎಂದೂ ಬರದವರು “ಅಯ್ಯೋ! ಸಾವಿಗಾದ್ರೂ ಬರದಿದ್ರೆ ಹ್ಯಾಗೆ?” ಎನ್ನುತ್ತ ಬಂದಿದ್ದರು. ನನಗೋ, ಜವಾಬ್ದಾರಿ ಒಮ್ಮೆಲೆ ಮೈಮೇಲೆ ಬಿದ್ದಂಥ ಪರಿಸ್ಥಿತಿ. ಏನು ಹೇಳಲೂ ಬಾಯಿಲ್ಲ. ಏನೂ ಮಾಡಲೂ ತೋಚುತ್ತಿಲ್ಲ. ದು:ಖ ಇಡಿಯಾಗಿ ಆವರಿಸಿಬಿಟ್ಟಿತ್ತು. ಮುಖ್ಯ ನಿಧಿಗಳಂತಿದ್ದ ಅಪ್ಪ-ಅಮ್ಮರನ್ನೇ ಕಳೆದುಕೊಂಡ ಮೇಲೆ ಉಳಿದಿದ್ದು ಇದ್ದರೆಷ್ಟು? ಬಿಟ್ಟರೆಷ್ಟು? ಎನ್ನುವ ವೈರಾಗ್ಯ ಮನವನ್ನು ಪೂರ್ತಿಯಾಗಿ ಆಕ್ರಮಿಸಿತ್ತು. ಯಾರೋ ಪೋಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಅದು ಎಳ್ಳಷ್ಟೂ ಉಪಯೋಗವಾಗಲಿಲ್ಲವೆಂಬುದು ಬೇರೆ ಮಾತು. “ಗೋಪಿ, ಅನಾಥನಾದೆ ಅನ್ಕೋಬೇಡ. ನಾವೆಲ್ಲ ಹಿರೀಕರಿದ್ದೀವಿ ಇನ್ನೂ. ಈ ಸಮಯದಲ್ಲಿ ಅವರಿಗೆ ಉತ್ತಮ ಗತಿ ಪ್ರಾಪ್ತಿಯಾಗಲು ಬೇಕಾದದ್ದನ್ನೆಲ್ಲ ಸರಿಯಾಗಿ ಮಾಡಬೇಕಪ್ಪ. ಒಮ್ಮೊಮ್ಮೆ ಮಾಡೋದಿರುತ್ತೆ. ಅಂತ್ಯಕಾಲದ ಎಲ್ಲಾ ಶಾಸ್ತ್ರಗಳನ್ನು…….”ಎನ್ನುತ್ತ ಬಿಕ್ಕಳಿಸಿದರು ಸೋದರತ್ತೆ. “ಇರುವಾಗ ಕಾಸಿಗೆ ಕಾಸು ಲೆಕ್ಕ ಹಾಕಿದ ಪುಣ್ಯಾತ್ಮ. ನಿನ್ನನ್ನು ಈ ಸ್ಥಿತಿಗೆ ತಂದ. ಅವಳಂತೂ ಮುತ್ತೆöÊದೆಯಾಗಿ ಹೋದಳು. ಪುಣ್ಯವಂತೆ. ಅವರಿಬ್ಬರಿಗೂ ಸರಿ ದಾರಿ ತೋರಿಸು.”ಎಂದು ಕಣ್ಣೊರೆಸಿಕೊಂಡರು ದೊಡ್ಡಮ್ಮ. ಇಂಥ ಸಮಯದಲ್ಲಿ `ಇಲ್ಲ’ವೆನ್ನಲಾದೀತೆ? ಇನ್ನು ಸುಧಾಳ ತಾಯಿ ನನ್ನತ್ತೆ ಕೂಡ ಪರಮ ಆಸ್ತಿಕಳು. “ಒಮ್ಮೊಮ್ಮೆ ಮಾಡೋದೆಲ್ಲ ವಿಧಿವತ್ತಾಗಿ ಮಾಡಿ. ಖರ್ಚಿನ ಚಿಂತೆ ಮಾಡಬೇಡಿ” ಎಂದು ಸೆರಗು ಬಾಯಿಗೆ ತುಂಬಿದರು. ಅಮ್ಮ ಹಾಕಿದ ಗೆರೆ ದಾಟದ ನನ್ನವಳು ಅದನ್ನು ಯಥಾವತ್ ಅನುಮೋದಿಸಿದಳು. ಮಾವ, ಸೋದರಮಾವ ಮೋಹನ, ಅಪ್ಪನ ಗೆಳೆಯ ಗೋವಿಂದ ರಾಜು ಸೂಕ್ಷö್ಮವಾಗಿ “ನೋಡಿಕೊಂಡು ಮಾಡು. ಸುಮ್ಮನೆ ಅತೀ ಖರ್ಚು ಮಾಡಬೇಡ”ಎಂದು ಹೇಳಿದ್ದೂ ಇತ್ತು. ಯಾರ ಮಾತು ಕೇಳಬೇಕೆನ್ನುವುದೇ ಧರ್ಮಸಂಕಟ. ಆದರೆ ಅಪ್ಪನಿಗಿತ್ತಿದ್ದ”ಜಿಪುಣ”ಎಂಬ ಬಿರುದು ನನಗೂ ಬರಬಾರದೆಂಬ ಆಸೆ ಪ್ರಬಲವಾಗಿತ್ತೋ ಅಥವಾ ಅಮಾಯಕನಾಗಿದ್ದೆನೋ ಗೊತ್ತಿಲ್ಲ. ಅವರು ಹೇಳಿದ್ದಕ್ಕೆಲ್ಲ ಕೋಲೆ ಬಸವನಂತೆ ತಲೆಯಾಡಿಸಿದ್ದೆ. ಕಾಮಾಕ್ಷತ್ತೆಯ ಭಾವಮೈದನೇ ಇವೆಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದನಂತೆ. “ಕರೆಸಲೇ”ಎಂದಾಗ ಯಾರು ಹಿತವರು ತಿಳಿಯದೇ “ಹ್ಞೂಂ” ಎಂದಿದ್ದೆ. ಇವುಗಳ ಬಗ್ಗೆ ನನ್ನ ಜ್ಞಾನವೂ ಅಷ್ಟಕ್ಕಷ್ಟೆ. ಯಾರೋ ಎಲ್ಲ ನೋಡಿಕೊಂಡರೆ ಒಳಿತು ಅನ್ನಿಸಿದ್ದುಂಟು. ದಿನಕರ್ಮಗಳಿಗೆ ಪುರೋಹಿತರನ್ನು ಗೊತ್ತು ಮಾಡುವುದರಿಂದ ಹಿಡಿದು ಪ್ರಣತಿ ತಂದು ದೀಪವಿಡುವದು, ನೀರಿಡುವದು, ಬೆಳೆ ಹಾಕುವದೂ ಇತ್ಯಾದಿ ಇತ್ಯಾದಿಗಳನ್ನೆಲ್ಲ ಕಾಮಾಕ್ಷತ್ತೆಯ ಭಾಮೈದ ಅಣ್ಣಯ್ಯ ನೋಡಿಕೊಂಡಿದ್ದ. ನಾನು ಬರೀ ಅವನ ಹಿಂಬಾಲಕನಷ್ಟೇ. “ನೀನು ಸುಮ್ಮನಿದ್ದು ಬಿಡಪ್ಪ. ಏನೇನು ಮಾಡಬೇಕೋ, ಎಲ್ಲೆಲ್ಲಿ ಹೋಗಬೇಕೋ ಎಲ್ಲಾ ಹೇಳಿ ಮಾಡಿಸ್ತೇನೆ.”ಎಂದಿದ್ದ. ಅಮ್ಮನಿಗೆ ಮುತತ್ತತೈದೆಯ, ಬಳೆ, ಕರಿಮಣಿ, ಮೊರದ ಬಾಗಿನ ತೌರಿನವರೇ ತಂದಿದ್ದರು. ಇವೆಲ್ಲ ರೀತಿಗಳನ್ನು ನೋಡರಿಯದಲ್ಲ, ಕೇಳೂ ಅರಿಯದವ ಮೂಕನಾಗಿದ್ದೆ. ಅವರೇನೇನು ಹೇಳುತ್ತಾರೋ ಮಾಡುತ್ತ ಗಡಿಗೆ ಹಿಡಿದು ಮುಂದೆ ಹೋಗಿದ್ದೆ. ಯಾವ ಊರಿನ ನೆಂಟರೋ ನನಗೇ ಗೊತ್ತಿಲ್ಲ. ಅವರನ್ನು ಒಮ್ಮೆಯೂ ನೋಡಿದ ನೆನಪಿಲ್ಲ. ತಂಡೋಪತಂಡವಾಗಿ ಸಂತಾಪ ಸೂಚಿಸಲು ಬಂದಿಳಿದರು. ಅಪ್ಪ-ಅಮ್ಮನ ಗುಣಗಾನ ನಡೆಯುತ್ತಿತ್ತು. ಇದ್ದಾಗ ಕವಡೆ ಕಿಮ್ಮತ್ತಿಲ್ಲದಿದ್ದರೂ ಸರಿಯೇ. ಸತ್ತ ಎಮ್ಮೆಗೆ ಸೇರು ತುಪ್ಪವಂತೆ. ಕಾಮಾಕ್ಷತ್ತೆಯ ಪತಿ, ಇಬ್ಬರು ಹೆಣ್ಣು ಮಕ್ಕಳು ಲಲಿತಾ, ಸುವರ್ಣಾ, ದೊಡ್ಡಮ್ಮನ ಮಗ, ಸೊಸೆ, ಚಿಕ್ಕಮ್ಮ ಹೀಗೆ ಪಟ್ಟಿ ಬೆಳೆಯುತ್ತಾ ಹೋಗಿ ಮೂವತ್ತೆöÊದು ಜನರಾಗಿದ್ದರು. ಬಂದ ಗಂಡಸರೆಲ್ಲ ಸಂತಾಪ ಸೂಚಿಸಿ ಹೊರಟು ಬಿಟ್ಟರೆ ಹೆಂಗಳೆಯರನ್ನು ಅತ್ತೆ, ದೊಡ್ಡಮ್ಮ ಉಳಿಸಿಕೊಳ್ಳುತ್ತಿದ್ದರು. “ಎಳೆ ಮಕ್ಕಳನ್ನಿಟ್ಟುಕೊಂಡು ಬರೋದು, ಹೋಗೋದು ಮಾಡಕ್ಕಾಗುತ್ತಾ? ಈ ದು:ಖದ ಸಮಯದಲ್ಲಿ ನಮ್ಮೋರು ತಮ್ಮೋರೂಂತ ಬ್ಯಾಡ್ವ? ಇರಿ, ಕರ್ಮಾಂತರ ಮುಗಿಸಿಕೊಂಡೇ ಹೊರಟು ಬಿಡೋಣ” ಎಂದು ಹೇಳಿದಾಗಲೆಲ್ಲ ಸುಧಾ”ಹ್ಞೂಂ”ಗುಟ್ಟುತ್ತ ಕಣ್ಣೀರು ಹಾಕುತ್ತಿದ್ದಳು. ಮೊದಲನೇ ದಿನ ಸುಧಾಳ ತೌರಿನಿಂದ ಊಟ, ತಿಂಡಿ ಎಲ್ಲಾ ಬಂತು. ಮುಂದೆರಡು ದಿನಗಳೂ ನೆರೆಕೆರೆಯವರೇ ನೋಡಿಕೊಂಡಿದ್ದರು. ಮೂರನೇ ದಿನ ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆಯಾದ ನಂತರ ಅಣ್ಣಯ್ಯ “ಇಲ್ನೋಡಪ, ನೀವಂತೂ ಮೈಲಿಗೆಯವರು. ಒಳಗೆ ಮುಟ್ಟುವಂತಿಲ್ಲ. ಇಷ್ಟು ಜನರಿಗೆ ಅಡಿಗೆ,ಪಡಿಗೆ ಹೇಗೇಂತ? ನಮ್ಮೋರೊಬ್ರಿದ್ದಾರೆ. ಅಡಿಗೆ, ತಿಂಡಿ ಮಾಡಿ ತಂದು ಬಡಿಸಿ ತೊಗೊಂಡ್ಹೋಗ್ತಾರೆ. ನೆಂಟರಿಗೆಲ್ಲ “ಮಾಡಿ” ಎನ್ನುವದಕ್ಕಿಂತ ಸುಮ್ನೆ ಒಂದು ಹುಳಿಯನ್ನ, ಮೊಸರನ್ನ….ಅಲ್ಲವಾ?” ಎಂದಾಗ `ಸರಿ’ ಎನಿಸಿತ್ತು. ಸಲಿಗೆ ಇಲ್ಲದ ನೆಂಟರಿಗೆ “ಅಡಿಗೆ ಮಾಡಿ” ಅಂತ ಹೇಳಕ್ಕಾಗುತ್ತಾ? ಆದರೆ ಬರೀ ಸಾರನ್ನ, ಮೊಸರನ್ನದಿಂದ ಆರಂಭವಾದದ್ದು ಪುಳಿಯೋಗರೆ, ವಾಂಗೀಭಾತು, ಚಿತ್ರ‍್ರಾನ್ನ, ಹಪ್ಪಳ, ಪಕೋಡ ಎಂದು ಬೆಳೆಯುತ್ತಲೇ ಹೋಯಿತು. ‘ಬೇಡ ಎನ್ನಲಾರದ ಸ್ಥಿತಿಯಲ್ಲಿ ನಾನಿದ್ದೆನಲ್ಲ….ಎಲ್ಲವನ್ನೂ ಅಣ್ಣಯ್ಯನಿಗೊಪ್ಪಿಸಿ…. ಮೋಹನ ಮಾವ ಸೂಕ್ಷö್ಮವಾಗಿ “ಬೇಡ ಗೋಪಿ, ಖರ್ಚು ವಿಪರೀತ ಬರುತ್ತೆ. ಕೂತು ಉಣ್ಣುವವರಿಗೇನು? ಬಂದವರೂ ಮನೆಯವರೇ. ಅಡಿಗೆ ಮಾಡ್ತಾರೆ ಬಿಡು” ಎಂದಾಗ “ಛೆ”ಎನ್ನುತ್ತ ತಲೆ ಕೊಡವಿದ್ದೆ. ಅಮ್ಮನ ಹಿರಿಯಕ್ಕ “ನಾನು ಮಾಡುತ್ತೇನೆ” ಎಂದು ಹೊರಟವಳನ್ನೂ ಸುಮ್ಮನಾಗಿಸಿದ್ದಾಯಿತು. ಮುಂದೆ ಮೋಹನ ಮಾವ ಮಾತಾಡಲೇ ಇಲ್ಲ.”ಇಂಥ ಸಮಯದಲ್ಲಿ ದುಡ್ಡಿನ ಮುಖ ನೋಡೋಕಾಗುತ್ತಾ?” ಎಂದು ಯಾರೋ ಹೇಳಿದ್ದನ್ನು ಅನುಮೋದಿಸಿದ್ದೆ. ಒಂಬತ್ತನೇ ದಿನದಿಂದ ಕರ್ಮಗಳು ಆರಂಭವಾದವು. ಅಣ್ಣಯ್ಯ ಎಲ್ಲಿ ಹೇಗಂತಾನೋ ಹಾಗೆ. ಹತ್ತನೇ ದಿನ `ಮಲ್ಲೇಶ್ವರಂ’ನ ವೈದಿಕ ಸಭೆಯಲ್ಲಿ ಧರ್ಮೋದಕ ಬಿಟ್ಟು ಐವತ್ತು ಜನ ಊಟ ಮಾಡಿ ಬಂದೆವು. ಕಾಯಿಪಿಂಡ ಏನೂ ತೊಂದರೆ ಇಲ್ಲದೆ ಆಗಿತ್ತು. ಅವರಿಗೇನು ಆಸೆಯಿತ್ತೋ, ಇಲ್ಲವೋ ಬ್ರಹ್ಮನೇ ಬಲ್ಲ. “ಎಷ್ಟಾಯಿತು ಅಣ್ಣಯ್ಯ?” ಎಂದು ಕೇಳಿದ್ದೇ ತಡ “ನೀನು….ಒಂಚೂರೂ ಚಿಂತೆ ಮಾಡ್ಬೇಡ ಮಹಾರಾಯ. ಒಂದು ದಮ್ಮಡೀನೂ ಬಿಚ್ಚಬೇಡ. ನಾನೆಲ್ಲ ನೋಡ್ಕೋತೇನೆ. ಆಮೇಲೆ ಎಷ್ಟೂಂತ ಹೇಳಿ ಲೆಕ್ಕ ಕೊಡ್ತೀನಿ.”ಎಂದ. ಸುಧಾ “ನಿಮ್ಮಂತವರು ಸಿಕ್ಕದ್ದು ನಮ್ಮ ಪುಣ್ಯ” ಎನ್ನುತ್ತ ಹನಿಗಂಗಳಾಗಿದ್ದಳು. ಹನ್ನೆರಡನೇ ದಿನ ಎಲ್ಲ ಸಾಂಗವಾಗಿ ನಡೆಯಿತು. ಕಾಮಾಕ್ಷತ್ತೆಯ ನಿರ್ದೇಶನದಂತೆ ಪೂರ್ವ ಪಂಕ್ತಿಗೆ ಊಟಕ್ಕೆ ಕುಳಿತ ಮೂವರು ಬ್ರಾಹ್ಮಣರಿಗೆ ಬೆಳ್ಳಿ ದೀಪ, ಚೊಂಬು, ಲೋಟ ನೀಡಲಾಯಿತು. ಖರೀದಿಯೆಲ್ಲ ಅಣ್ಣಯ್ಯನದೇ. ಉಳಿದ ಬ್ರಾಹ್ಮಣರಿಗೆ ಪಂಚೆ, ಉತ್ತರೀಯ ಜೊತೆಗೆ ದಕ್ಷಿಣೆ. “ನಿಮ್ಮ ತಂದೆ, ತಾಯಿ ಬಂದು ಕುಳಿತಿದ್ದಾರೆ. ಅವರಿಗೆ ಆಸನ ಕೊಡಿ. ಅರ್ಘ್ಯ, ಪಾದ್ಯ ಕೊಡಿ. ಹಾರ ಹಾಕಿ. ಹೊಸ ವಸ್ತç ಕೊಡಿ. ಗಾಳಿ ಹಾಕಿ, ಸೇವೆ ಮಾಡಿ.”ಎಂದು ಹೇಳುತ್ತ ಹೋದಂತೆ ನಾನು ಮಾಡುತ್ತ ಹೋದೆ. “ಜಗನ್ನಾಥ ನಾಮೇಣ…..ವಸು ರೂಪೇಣ….”ಎಂದು ಹೇಳುತ್ತಿದ್ದಂತೆ ಮತ್ತೆ ಮತ್ತೆ ಕಣ್ಣು ತುಂಬುತ್ತಿದ್ದವು. ಅಣ್ಣಯ್ಯ ಮನೆಯಲ್ಲೇ ಮಡಿಯಲ್ಲಿ ಅಡಿಗೆ ಮಾಡಿಸಿ ಬಡಿಸಲು ಸುಧಾಳನ್ನೂ, ದೊಡ್ಡಮ್ಮನನ್ನೂ, ಕರೆದಿದ್ದ. ಏನೇನೋ ಪಕ್ವಾನ್ನಗಳು. ಭಟ್ಟರಿಗೆ ದಕ್ಷಿಣೆಗಳನ್ನೂ ಅವನೇ ನನ್ನ ಕೈಯಿಂದ ಕೊಡಿಸಿದ. ಅಮ್ಮನ ಸ್ಥಾನಕ್ಕೆ ಕುಳಿತ ಮುತ್ತತೈದೆಗೆ ಸೀರೆ ಸಹಿತ ಮೊರದ ಬಾಗಿನ ನೀಡಲಾಯಿತು. ನೂರು ಜನರ ಊಟವಾಗಿತ್ತು. ಮರುದಿನ ವೈಕುಂಠ ಸಮಾರಾಧನೆಗೆ ಇನ್ನೂ ಜನ ಹೆಚ್ಚಾಗಿದ್ದರು. ನೆರೆ ಕೆರೆಯವರೂ ಸೇರಿದ್ದರು. ಮುತ್ತೈದೆಗೆ ಸಂತೃಪ್ತಿಯಾಗಲೆಂಂದು ಕಾಮಾಕ್ಷತ್ತೆಯ ಸಲಹೆಯಂತೆ ಹನ್ನೆರೆಡು ಜೊತೆ ಅರಿಸಿಣ ಕುಂಕುಮದ ಬಟ್ಟಲುಗಳು, ಬಂದ ನೆಂಟರಿಷ್ಟರಿಗೆಲ್ಲ ಸೀರೆ ಅಣ್ಣಯ್ಯನೇ ತಂದಿದ್ದ. ನೆಂಟರೆಲ್ಲ ನಾಮುಂದು, ತಾಮುಂದು ಎಂದು ಬಣ್ಣಗಳನ್ನಾರಿಸಿದರು. ಬಂದ ಹೆಂಗಳೆಯರಿಗೆಲ್ಲ ಕವರಿನಲ್ಲಿ ಪ್ರಸಾದದ ರವೆಯುಂಡೆ,ಬಳೆ, ರವಿಕೆ ಬಟ್ಟೆ ನೀಡಲಾಯಿತು. ಯಥಾಶಕ್ತಿ ಸುವರ್ಣದಾನ, ಬೆಳ್ಳಿ, ಗೋದಾನ, ಭೂದಾನ, ಶಯ್ಯಾದಾನ, ದೀಪದಾನ, ಉದಕ ಕುಂಭ, ಚಪ್ಪಲಿ, ಛತ್ರಿ, ಪುಸ್ತಕ, ರುದ್ರಾಕ್ಷಿ ಮಣಿ, ವಸನ ಇತ್ಯಾದಿಗಳನ್ನೆಲ್ಲ ಅತ್ತೆ, ದೊಡ್ಡಮ್ಮನ ನಿರ್ದೇಶನದಂತೆ ಕೊಟ್ಟು ಕೃತಾರ್ಥನಾದೆ. ಎಲ್ಲರ ಬಾಯಲ್ಲಿ “ಮಗ ಇದ್ದರೆ ಹೀಗಿರಬೇಕು. ಎಲ್ಲ ಸಾಂಗ, ಸಾಂಪ್ರತವಾಗಿ ಮಾಡ್ದ. ಪುಣ್ಯಾತ್ಮರಿಬ್ಬರೂ ಉತ್ತಮ ಲೋಕ ಸೇರಿದ್ರು.”ಎಂಬ ಹೊಗಳಿಕೆ ಕೇಳಿ ಉಬ್ಬಿದೆ. ಬಂದವರೆಲ್ಲ ಅಮ್ಮ, ಅಪ್ಪನ ಗುಣಗಳನ್ನು ಹೊಗಳುತ್ತ ತೃಪ್ತರಾದರು. ನನ್ನ ಮಾವ ಆಗಲೇ ಹತ್ತಿರ ಬಂದು “ಇಷ್ಟು ವೈಭವ ಬೇಕಿರಲಿಲ್ಲ ಅನ್ಸುತ್ತೆ. ನಿಮ್ಮ ತಂದೆ, ತಾಯಿ ಬಹಳ ಸರಳ ಮನುಷ್ಯರು.” ಎಂದಾಗ ಸುಧಾಳ ತಾಯಿ “ಎಲ್ಲಾ ಮಾಡ್ಬೇಕಾದ ಶಾಸ್ತçಗಳೇ. ಸುಮ್ನಿರಿ” ಎಂದವರ ಬಾಯಿ ಮುಚ್ಚಿಸಿದರು. ಕಾಮಾಕ್ಷತ್ತೆ”ಇವರಪ್ಪ ನಮ್ಮಪ್ಪನ ತಿಥೀನೆ ಸರಿಯಾಗಿ ಮಾಡ್ಲಿಲ್ಲ. ಲೆಕ್ಕ ಹಾಕಿದ್ದೂ ಹಾಕಿದ್ದೆ. ಏನ್ ಕೇಳಿದ್ರೂ `ಇದ್ದಾಗ ಚೆನ್ನಾಗಿ ನೋಡ್ಕೊಂಡು ಬೇಕಾದಷ್ಟು ಸೇವೆ ಮಾಡಿದೀನಿ ಬಿಡು.’ ಅಂತ ನನ್ನ ಬಾಯಿ ಬಡಿದ. ಸದ್ಯ! ಮಗ ಹಾಗ್ಮಾಡ್ದೆ ನನ್ಮಾತು ಕೇಳಿ ಎಲ್ಲ ಸಾಂಗವಾಗಿ ಮಾಡ್ದ.”ಎಂದಾಗ ನನಗೆ ಜಿಪುಣನೆಂಬ ಬಿರುದು ಕೊಡಲಿಲ್ಲವಲ್ಲ ಎಂದು ಉಬ್ಬಿದ ಮನ ಅಪ್ಪನ ತೆಗಳಿಕೆ ಕೇಳಿ ನೊಂದಿತು. ಮೈಲಿಗೆ ಬಿಡಿಸಿದ ಎಲ್ಲರನ್ನೂ ಕಂಬನಿ
ನಿಘಂಟು ತಜ್ಞ, ಶತಾಯುಷಿ ಸಾಹಿತಿ ಪ್ರೊ.ಜಿ.ವೆಂಕಟಸುಬ್ಬಯ್ಯ
ನಿಘಂಟು ತಜ್ಞ, ಶತಾಯುಷಿ ಸಾಹಿತಿ ಪ್ರೊ.ಜಿ.ವೆಂಕಟಸುಬ್ಬಯ್ಯ ಜಿ.ವೆಂಕಟಸುಬ್ಬಯ್ಯನವರ ಬಗೆಗೆ ಮೊನ್ನೆಯೇ ಬರೆಯಬೇಕಿತ್ತು. ಆದರೆ ಕೆಲ ಕಾರಣಗಳಿಂದ ಬರೆಯಲಾಗಿರಲಿಲ್ಲ. ಆ ಬರಹವನ್ನು ಈಗ ಬರೆಯುತ್ತಿದ್ದೇನೆ… 108 ವರ್ಷ ವಯಸ್ಸಾಗಿದ್ದ ನಿಘಂಟು ತಜ್ಞರಾದ ಮತ್ತು ಸಾಹಿತಿಗಳಾದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಏಪ್ರಿಲ್ 18-19 ಮಧ್ಯರಾತ್ರಿ ಬೆಂಗಳೂರಿನಲ್ಲಿ ತೀರಿದರು. ಅವರು ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮೊನ್ನೆ ಮಧ್ಯರಾತ್ರಿ 1:30 ಕ್ಕೆ ಜಯನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ಕೊನೆಯುಸಿರೆಳೆದರು. ಅವರು 1913 ರ, ಆಗಸ್ಟ್ 23 ರಂದು ಮಂಡ್ಯ ಜಿಲ್ಲೆಯ ಶ್ರಿರಂಗಪಟ್ಟಣದ ಗಂಜಾಮ್ನಲ್ಲಿ ಜನಿಸಿದವರು. ಪ್ರೊ.ಜಿ.ವೆಂಕಟಸುಬ್ಬಯ್ಯ ಕನ್ನಡದ ಅಪ್ರತಿಮ ಭಾಷಾ ತಜ್ಞರು, ಸಂಶೋಧಕರು, ಬರಹಗಾರರು ಹಾಗೂ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಾಚೀನ ಸಾಹಿತ್ಯ ಅಧ್ಯಯನ ಹಾಗೂ ಅನುವಾದ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರವಾಗಿದೆ. ಎಲ್ಲಕ್ಕಿಂತಲೂ ಅವರ ಹೆಚ್ಚು ಕೊಡುಗೆ ಇರುವುದು ಕನ್ನಡ ನಿಘಂಟು ಕ್ಷೇತ್ರಕ್ಕೆನೇ. ಅವರು ಕನ್ನಡ ನಿಘಂಟು ತಜ್ಞರೆಂದೇ ಖ್ಯಾತರಾಗಿದ್ದರು. ಅವರಿಗೆ ಪದ್ಮಶ್ರೀ, ನಾಡೋಜ, ಪಂಪ, ಭಾಷಾ ಸನ್ಮಾನ್ ಪ್ರಶಸ್ತಿಗಳ ಗೌರವಗಳು ಬಂದಿದ್ದವು. ವೆಂಕಟಸುಬ್ಬಯ್ಯ ಅವರು ಎಂಟಕ್ಕೂ ಹೆಚ್ಚು ನಿಘಂಟುಗಳನ್ನು ರಚಿಸಿದ್ದಾರೆ. ಇವರ ಕನ್ನಡ ನಿಘಂಟು ಶಾಸ್ತ್ರ ಪರಿಚಯ ಎಂಬ ಪುಸ್ತಕ ಸಾಹಿತ್ಯಾಸಕ್ತರಿಗೆ ಈಗಲೂ ಅಧ್ಯಯನ ಯೋಗ್ಯವೆನಿಸಿದೆ. ಇವರ ಇಗೋ ಕನ್ನಡ ಎಂಬುದು ಅತ್ಯಂತ ಜನಪ್ರಿಯ ನಿಘಂಟುಗಳಲ್ಲಿ ಒಂದೆನಿಸಿದೆ. ವೆಂಕಟಸುಬ್ಬಯ್ಯ ಅವರ ತಂದೆ ಗಂಜಾಮ್ ತಿಮ್ಮಣ್ಣಯ್ಯ ಅವರೂ ಕೂಡ ಕನ್ನಡ ಮತ್ತು ಸಂಸ್ಕೃತ ಭಾಷೆಯ ವಿದ್ವಾಂಸರಾಗಿದ್ದವರು. ಸರ್ಕಾರಿ ನೌಕರಿಯಲ್ಲಿದ್ದವರು. ಜಿ.ವೆಂಕಟಸುಬ್ಬಯ್ಯ ಅವರು ಹೆಚ್ಚಾಗಿ ಓದಿದ್ದು ಮೈಸೂರಿನಲ್ಲಿ. 1938 ರಲ್ಲಿ ಇವರು ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದವರು. ಮಂಡ್ಯದ ಸರ್ಕಾರಿ ಶಾಲೆ ಹಾಗೂ ಬೆಂಗಳೂರಿನ ಬಿ.ಎಚ್.ಎಸ್ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕರಾಗಿದ್ದ ಇವರು ವಿಜಯಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿಯೂ ಕೆಲಸ ಮಾಡಿದವರು. ಇವರು ನಿವೃತ್ತರಾಗುವ ಮುನ್ನ ಪ್ರೊಫೆಸರ್ ಹಾಗೂ ಪ್ರಾಂಶುಪಾಲರಾಗಿ ಸೇವೆ ನಿಭಾಯಿಸಿದ್ದವರು. ಇಂತಹ ಜಿ.ವೆಂಕಟಸುಬ್ಬಯ್ಯ ಅವರ ಬದುಕು ಮತ್ತು ಸಾಹಿತ್ಯ ಕೆಲಸ ಹೀಗಿದೆ ನೋಡಿ… ನಿಟಘಂಟು ತಜ್ಞರಾದ ವೆಂಕಟಸುಬ್ಬಯ್ಯನವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ. ತಂದೆ ಗಂಜಾಂ ತಿಮ್ಮಣ್ಣಯ್ಯ, ಅರಮನೆಯ ವಿದ್ವಾಂಸರು. ತಾಯಿ ಸುಬ್ಬಮ್ಮನವರು. ಇವರ ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ಇವರು ಹೈಸ್ಕೂಲಿಗೆ ಸೇರಿದ್ದು ಮಧುಗಿರಿಯಲ್ಲಿ. ಇವರು ಇಂಟರ್ ಮೀಡಿಯೆಟ್ ಮತ್ತು ಆನರ್ಸ್ ಓದಿದ್ದು ಮೈಸೂರು ಮಹಾರಾಜ ಕಾಲೇಜಿನಲ್ಲಿ.1937 ರಲ್ಲಿ ಎಂ.ಎ., 1939ರಲ್ಲಿ ಬಿ.ಟಿ. ಪದವಿ ಪಡೆದು ಉದ್ಯೋಗಕ್ಕಾಗಿ ಸೇರಿದ್ದು ಮಂಡ್ಯದ ಪುರಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ನಂತರ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಬೆಂಗಳೂರಿನ ಹೈಸ್ಕೂಲಿನಲ್ಲಿ ಕೆಲಕಾಲ ಅಧ್ಯಾಪಕರಾಗಿ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, 1972ರಲ್ಲಿ ಸಂಜೆ ಕಾಲೇಜಿನ ಪ್ರಿನ್ಸಿಪಾಲರಾಗಿ 1973ರಲ್ಲಿ ನಿವೃತ್ತಿಯಾದರು ಜಿ.ವೆಂಕಟಸುಬ್ಬಯ್ಯನವರು. ಜಿ.ವೆಂಕಟಸುಬ್ಬಯ್ಯ.ಗೆ ಸಾಹಿತ್ಯಾಭಿರುಚಿ ಬಳುವಳಿಯಾಗಿ ಬಂದುದು ಅವರ ತಂದೆಯಿಂದಲೇ. ತಿಮ್ಮಣ್ಣಯ್ಯನವರು ವೇದ ಉಪನಿಷತ್ತುಗಳಲ್ಲಿ ಪಾರಂಗತರಾಗಿದ್ದರು. ಅಷ್ಟಾದಶ ಪುರಾಣಗಳ ಅನುವಾದ ಕಾರ‍್ಯದಲ್ಲಿ ಇವರು ನೀಡಿದ ಸಹಾಯ ಹಸ್ತ ಅಪಾರವಾದದ್ದು. ಆದರೆ ಜಿ. ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯವನ್ನು ಬೆಳೆಸುವ ಕೈಂಕರ್ಯದಲ್ಲಿ ಎಂದಿದೂ ಮುಂದು ಇದ್ದವರು. ಮಹಾರಾಜಾ ಕಾಲೇಜಿನ ಪ್ರಚಾರೋಪನ್ಯಾಸ ಪುಸ್ತಕ ಮಾಲೆಯಲ್ಲಿ ಹಲವಾರು ಕೃತಿ ರಚನೆ ಮಾಡಿದವರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ‘ಬಾಲ ಕರ್ನಾಟಕ’ ಸಂಘ ಸ್ಥಾಪನೆ ಮಾಡಿದವರು. ಎಚ್.ಎಂ.ಶಂಕರ ನಾರಾಯಣರಾಯರು ಹೊರತಂದ ‘ರೋಹಿಣಿ’ ಕೈ ಬರಹದ ಪತ್ರಿಕೆಗೆ ನೀಡಿದ ಸಹಾಯವೂ ಅಮುಲ್ಯವಾದದು. ಬೆಂಗಳೂರಿಗೆ ಬಂದ ನಂತರ ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದರು ಜಿ.ವೆಂಕಟಸುಬ್ಬಯ್ಯ. 1954 ರಿಂದ 56 ರವರೆಗೆ ಸಾಹಿತ್ಯ ಪರಿಷತ್ತಿನ ಕಾರ‍್ಯದರ್ಶಿ, 1975 ರಿಂದ-79ರವರೆಗೆ ಅಧ್ಯಕ್ಷರಾಗಿ, ಪರಿಷತ್ತಿನ ನಿಘಂಟು ಸಮಿತಿಯ ಸದಸ್ಯರಾಗಿ, 1965 ರಿಂದ 67 ರವರೆಗೆ ವಿಶ್ವಕೋಶದ ಸಮಿತಿಯ ಸದಸ್ಯರಾಗಿ, ವಿಶ್ವವಿದ್ಯಾಲಯದ ಅಕೆಡಮಿಕ್ ಕೌನ್ಸಿಲ್, ಸೆನೆಟ್, ಪಠ್ಯಪುಸ್ತಕ ಸಮಿತಿ, ಪರೀಕ್ಷಾ ಸಮಿತಿಯ ಸದಸ್ಯರಾಗಿಯೂ ಸಲ್ಲಿಸಿದ ಸೇವೆ ಸಲ್ಲಿಸಿದವರು ಜಿ.ವೆಂಕಟಸುಬ್ಬಯ್ಯ. ಇವರು ರಚಿಸಿದ ಕೃತಿಗಳೆಂದರೆ ವಿಮರ್ಶೆ-ನಯಸೇನ, ಅನುಕಲ್ಪನೆ. ಸಂಪಾದಿತ (ಇತರರೊಡನೆ)- ವಿಕಾಸ, ಕಾವ್ಯಲಹರಿ, ಕಾವ್ಯಸಂಪುಟ. ಅನುವಾದ-ಶಂಕರಾಚಾರ‍್ಯ, ಕಬೀರ, ಲಿಂಡನ್ ಜಾನ್ಸನ್. ಮಕ್ಕಳಿಗಾಗಿ-ರಾಬಿನ್ ಸನ್ ಕ್ರೂಸೋ, ಕವಿಜನ್ನ, ಚಾವುಂಡರಾಯ.0 ಇವರ ಕಾವ್ಯಕೃತಿಗಳು ಹೀಗಿವೆ– ನಳಚಂಪು ಸಂಗ್ರಹ, ಅಕ್ರೂರ ಚರಿತ್ರೆ ಸಂಗ್ರಹ, ಕರ್ಣ ಕರ್ಣಾಮೃತ. ಇತರ-ಕನ್ನಡ ಶಾಸನ ಪರಿಚಯ, ಭಾಷಾಂತರ ಪಾಠಗಳು, ಕಾಲೇಜು ಭಾಷಾಂತರ, ಇಗೋ ಕನ್ನಡ ಸಾಮಾಜಿಕ ನಿಘಂಟು, ೬೦ಕ್ಕೂ ಹೆಚ್ಚು ಕೃತಿ ರಚನೆ ಮಾಡಿದವರು ಜಿ.ವೆಂಕಟಸುಬ್ಬಯ್ಯನವರು. ಇವರಿಗೆ ಹಲವಾರು ಪ್ರಶಸ್ತಿಗಳು-ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಪುರಸ್ಕಾರ, ರಾಜ್ಯ ಪತ್ರಿಕಾ ಅಕಾಡಮಿ ವಿಶೇಷ ಪ್ರಶಸ್ತಿ, ಅಂಕಣಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೊರೂರು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಅ.ನ.ಕೃ. ಪ್ರತಿಷ್ಠಾನ ಪ್ರಶಸ್ತಿ ಮುಂತಾದುವುಗಳು ಸಂದಿದವು. ಇಷ್ಟು ಹೇಳಿ ಜಿ.ವೆಂಕಟಸುಬ್ಬಯ್ಯನವರ ಬಗೆಗಿನ ಈ ಬರಹ ಸದ್ಯಕ್ಕೆ ಮುಗಿಸುತ್ತೇನೆ..! ************************************************ ಕೆ.ಶಿವು.ಲಕ್ಕಣ್ಣವರ
ನಿಘಂಟು ತಜ್ಞ, ಶತಾಯುಷಿ ಸಾಹಿತಿ ಪ್ರೊ.ಜಿ.ವೆಂಕಟಸುಬ್ಬಯ್ಯ Read Post »
ಭಗತ್ ಸಿಂಗ್ ಮಾತೆ ಮೈಸೂರಿನಲ್ಲಿ
ನೆನಪು ಭಗತ್ ಸಿಂಗ್ ಮಾತೆ ಮೈಸೂರಿನಲ್ಲಿ ಡಾ. ಅರಕಲಗೂಡು ನೀಲಕಂಠ ಮೂರ್ತಿ ಸರಿಸುಮಾರು ಐದು ದಶಕಗಳ ಹಿಂದಿನ ಸಮಾಚಾರ. ಸಾವಿರದ ಎಪ್ಪತ್ತು ಎಪ್ಪತ್ತೊಂದರ ಸಮಯ. ನನಗೆ ಕರಾರುವಾಕ್ಕಾಗಿ ದಿನಾಂಕ ಮತ್ತು ಮಾಹೆ ಸದ್ಯ ಜ್ಞಾಪಕ ಇಲ್ಲ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ನಾನು ನಾಲ್ಕನೇ ವರ್ಷದಲ್ಲಿ ಓದುತ್ತಿದ್ದಾಗ. ಆ ಕಾಲಕ್ಕೆ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಹಾಗೂ, ಅದರಿಂದಾಗಿ ಸಾಂಸ್ಕೃತಿಕ ಚಟುವಟಿಕೆಗಳು ಉತ್ತುಂಗಕ್ಕೆ ಏರಿದ್ದ ಕಾಲ. ಈಗ ಹೇಗೋ ನಾ ಕಾಣೆ. ವಾಸ್ತವವಾಗಿ ವಾರ್ಷಿಕೋತ್ಸವದಲ್ಲಿ ನಾಟಕ ನಿರ್ದೇಶನಕ್ಕೆ ಸಿನಿಮಾ ಹಿರಿಯ ನಟರಾಗಿದ್ದ ಸಂಪತ್ ಅವರೇ ಸ್ವತಃ ಬರುತ್ತಿದ್ದುದು ವಿಶೇಷ; ನಾವು ದಿನಾಂಕ ಮಾತ್ರ ಮುಂಚಿತ ತಿಳಿಸಬೇಕಿತ್ತು. ಅವರ ಮನೆ ಮತ್ತು ಪ್ರಿಂಟಿಂಗ್ ಪ್ರೆಸ್ ನಮ್ಮ ಕಾಲೇಜಿಗೆ ಸನಿಹವೇ ಇವೆ. ಅದೇನೋ ಕಾಣೆ ಸಂಪತ್ ಅವರಿಗೆ ನಮ್ಮ ಕಾಲೇಜಿನ ಬಗ್ಗೆ ಬಹಳ ಅಭಿಮಾನ ಇತ್ತು. ಆ ಸಮಯದಲ್ಲಿ ನಾನು ಲಿಟರರಿ ಕಾರ್ಯದರ್ಶಿಯಾಗಿದ್ದೆ. ಎಲ್ಲ ಥರದ ಸಾಂಸ್ಕೃತಿಕ ಚಟುವಟಿಕೆಗಳೂ ಲಿಟರರಿ ಕಾರ್ಯದರ್ಶಿಯ ಜವಾಬ್ದಾರಿಯಾಗಿತ್ತು. ಜನರಲ್ ಸೆಕ್ರೆಟರಿಯಾಗಿ, ಅತ್ಯಂತ ಕ್ರಿಯಾಶೀಲರಾಗಿದ್ದ ಡಾ. ಉಮೇಶ್ ಕಾಮತ್ (ಸದ್ಯ ಅವರು ಮೈಸೂರಿನ ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆಯ ಮೇಲ್ವಿಚಾರಕರಾಗಿ ಸೇವೆಯಲ್ಲಿದ್ದಾರೆ) ಆವರು ಚುನಾಯಿತರಾಗಿದ್ದರು. ಶಹೀದ್ ಭಗತ್ ಸಿಂಗ್ ಅವರ ಮಾತೆ, ವಿದ್ಯಾವತಿ ಅವರು, ಮೈಸೂರಿಗೆ ಬರುವ ವಿಷಯ ನಮಗೆ ತಿಳಿಯಿತು. ಪತ್ರಿಕೆಗಳಲ್ಲಿ ಸಹ ಅದರ ಸುದ್ದಿ ಪ್ರಾಮುಖ್ಯ ಪಡೆದಿತ್ತು. ಹಾಗಾಗಿ ಅವರಿಗಾಗಿ ನಮ್ಮ ಕಾಲೇಜಿನಲ್ಲೂ ಕಾರ್ಯಕ್ರಮ ಒಂದನ್ನು ಏರ್ಪಾಡು ಮಾಡಲು ತೀರ್ಮಾನಿಸಿ, ಡಾ.ಕಾಮತ್ ಮತ್ತು ನಾನು ಒಪ್ಪಿಗೆಗಾಗಿ ನಮ್ಮ ಡೀನ್ ಅವರ ಕಛೇರಿಗೆ ಹೋಗಿದ್ದಾಗ, “ರಾಜಕೀಯದವರನ್ನೆಲ್ಲ ಕಾಲೇಜಿಗೆ ಕರೆಯುವುದು ಬೇಡ” ಅಂದು ಆರಂಭಕ್ಕೇ ತಣ್ಣೀರು ಎರಚಿದ್ದರು. ಅವರಿಗೆ ಭಗತ್ ಸಿಂಗ್ ಅವರ ವಿವರ ಇತ್ತ ಮೇಲೆ, “ಇಂತಹ ಕಾರ್ಯಕ್ರಮಕ್ಕೆ ಯಾರು ಬರ್ತಾರೋ ನಾ ಕಾಣೆ” ಅಂತಲೇ ಮನಸ್ಸಿಲ್ಲದೆ ಒಪ್ಪಿದ್ದರು. ನಮಗಷ್ಟೇ ಸಾಕಾಗಿತ್ತು. ಆಹ್ವಾನ ಒಂದನ್ನು ತಯಾರಿಸಿ, ಡೀನ್ ರವರ ಸಹಿ ಪಡೆದು ನಾನು ಮತ್ತು ಕಾಮತ್ ನೇರ ಭಗತ್ ಸಿಂಗ್ ಅವರ ತಾಯಿ ವಾಸ್ತವ್ಯದಲ್ಲಿದ್ದ ಮೈಸೂರಿನ ಸರಕಾರದ ಅಥಿತಿಗೃಹಕ್ಕೆ ಹೋಗಿದ್ದೆವು. ಎಂಭತ್ತು ವರ್ಷ ವಯಸ್ಸು ಮೀರಿದ ಆ ಮಾತೆ ತಮ್ಮ ಕೊಠಡಿಯಿಂದ ಹೊರಬಂದಾಗ ನಮಗೆ ರೋಮಾಂಚನ. ದೇವತೆಯೊಬ್ಬರ ದರ್ಶನ ಆದಂತಹ ಖುಷಿಯಲ್ಲಿ, ನಾನು ಕಾಮತ್ ಇಬ್ಬರೂ ಸಾಷ್ಟಾಂಗಪ್ರಣಾಮ ಮಾಡಿದ್ದೆವು. ಆ ವಿದ್ಯುತ್ ಕ್ಷಣ ನಮ್ಮ ಬದುಕಿನ ಅಮೋಘ ಘಳಿಗೆ! ಇಂದಿಗೂ ಅದನ್ನು ನೆನೆದಾಗ ಮೈನವಿರೇಳುವುದರ ಜೊತೆಗೆ ಕಣ್ಣುಗಳೂ ತೇವವಾಗುತ್ತವೆ! ಮಾತೆ ವಿದ್ಯಾವತಿಯವರ ಸಂಗಡ ಅವರ ಪುತ್ರ ಕುಲ್ಬೀರ್ ಸಿಂಗ್ ಹಾಗೂ ಅವರ ಪತ್ನಿ ಬಂದಿದ್ದರು. ನಮ್ಮ ಆಹ್ವಾನವನ್ನು, ಅವರಿಗೆ ಇನ್ನೂ ಅನೇಕ ಕಾರ್ಯಕ್ರಮಗಳು ಇದ್ದರೂ, ಕಿಂಚಿತ್ತೂ ತಕರಾರಿಲ್ಲದೆ ಒಪ್ಪಿದ್ದರು. ಮಾರನೇ ದಿನವೇ ಅವರು ಬರುವವರಿದ್ದರು. ಹಾಗಾಗಿ ನಮಗೆ ತರಾತುರಿ. ಭಗತ್ ಸಿಂಗ್ ಅವರ ಬಗ್ಗೆ ತಿಳಿಯದೆ ಇರುವವರು ವಿರಳ ಅನಿಸುತ್ತೆ. ಆದರೂ ಆ ವಿರಳರಿಗಾಗಿ ಸಂಕ್ಷಿಪ್ತ: ಭಗತ್ ಸಿಂಗ್ ಜನನ ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ, ಫೈಸಲಾಬಾದ್ ಜಿಲ್ಲೆಯ, ಬಂಗ (Banga) ಠಾಣೆಯ, ಐತಿಹಾಸಿಕ ಗ್ರಾಮ, ಖಾಟ್ಕರ್ ಕಲನ್ (Khatkar Kalan) ಎಂಬ ಗ್ರಾಮದಲ್ಲಿ, 1907ನೇ ಇಸವಿಯ ಸೆಪ್ಟೆಂಬರ್ ತಿಂಗಳಿನಲ್ಲಿ. ತಾಯಿ ವಿದ್ಯಾವತಿ, ತಂದೆ ಕಿಷನ್ ಸಿಂಗ್. ಒಡಹುಟ್ಟಿದವರು ಐವರು ಸಹೋದರರು ಮತ್ತು ಮೂವರು ಸಹೋದರಿಯರು. ತಮ್ಮ ಹದಿಮೂರನೇ ವಯಸ್ಸಿಗೇ ಓದಿಗೆ ತಿಲಾಂಜಲಿ ಹೇಳಿ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುತ್ತಾರೆ. ಬಹಳ ಚಿಕ್ಕ ವಯಸ್ಸಿನಲ್ಲೇ, ಇನ್ನೂ ಯೌವನದ ಇಪ್ಪತ್ತಮೂರರ ವಯಸ್ಸಿಗೇ, ಮಾರ್ಚ್ 23, 1931ರಂದು, ತಮ್ಮ ಸಹ ಹೋರಾಟಗಾರರಾಗಿದ್ದ ರಾಜಗುರು ಹಾಗೂ ಸುಖದೇವ್ ಅವರೊಡನೆ ಬ್ರಿಟಿಷರಿಂದ ನೇಣುಗಂಬಕ್ಕೆ ಶರಣಾಗುತ್ತಾರೆ, ಈಗಿನ ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ. (ಲಾಲ ಲಜಪತ್ ರಾಯ್ ಅವರ ಸಾವಿಗೆ ಕಾರಣನಾಗಿದ್ದ ಪೋಲೀಸ್ ಮುಖ್ಯಸ್ಥನನ್ನು ಕೊಲ್ಲಲು ಹೋಗಿ, ಬದಲಿಗೆ ಜೆ. ಪಿ. ಸಾಂಡರ್ಸ್ ಅವರ ಕೊಲೆಗೆ ಕಾರಣವಾಗಿದ್ದುದಕ್ಕಾಗಿ). ಹುಟ್ಟಿನಿಂದ ಸಿಖ್ ಧರ್ಮೀಯರೇ ಆಗಿಯೂ ಸಹ, ಭಗತ್ ಅವರು ತಲೆ ಕೂದಲ ಕ್ಷೌರವೇ ಅಲ್ಲದೆ, ಮುಖದ ಶೇವ್ ಸಹ ಮಾಡಿಸಿಕೊಳ್ಳುತ್ತಿದ್ದರು; ತಮ್ಮ ಗುರುತು ಸಿಗಬಾರದೆಂದು. “ಇಂಕಿಲಾಬ್ ಜಿಂದಿಬಾದ್” ಎಂಬ ವೀರಘೋಷಣೆಯನ್ನು ಪ್ರಖ್ಯಾತ ಗೊಳಿಸಿದ್ದು ಅವರು. ಅವರು ಶಹೀದ್ ಭಗತ್ ಸಿಂಗ್ ಎಂದೇ ಪ್ರಸಿದ್ಧರಾದರು – ಇಂದಿಗೂ ಸಹ. ಅಂತಹ ಧೀರ ಪುತ್ರನನ್ನು ದೇಶಕ್ಕೆ ಕೊಡುಗೆ ಕೊಟ್ಟ ಮಹಾತಾಯಿಯ ದರ್ಶನ ಭಾಗ್ಯ ನಮ್ಮ ಹೆಮ್ಮಯಾಗಿತ್ತು. ಮತ್ತು ಅಂತಹ ತಾಯಿಯ ದರ್ಶನ ಭಾಗ್ಯ ನಮ್ಮ ಕಾಲೇಜಿನ ಎಲ್ಲರಿಗೂ ಅಂದು ದೊರಕುವಂತೆಯೂ ಆಗಿತ್ತು! ನಾಳೆಯೇ ಕಾರ್ಯಕ್ರಮ. ನಮ್ಮ ಡೀನ್ ಬೇರೆ ಕಷ್ಟದಿಂದ ಒಪ್ಪಿದ್ದರು. ಅಂದಮೇಲೆ ಜಯಭೇರಿಯ ಜವಾಬ್ದಾರಿ ನಮ್ಮ ಹೆಗಲ ಮೇಲೆ. ನಮ್ಮ ಕಾಲೇಜಿನವನೇ ಆದ, ನನಗೆ ಪರಿಚಯವಿದ್ದ, ಬ್ರಿಜ್ ಮೋಹನ್ ಕುಮಾರ್ ಎಂಬ ವಿದ್ಯಾರ್ಥಿಯೊಬ್ಬ, ಮೆಡಿಕಲ್ ಎಕ್ಸಿಬಿಷನ್ ನಡೆದಿದ್ದ ಸಮಯದಲ್ಲಿ ದೊಡ್ಡ ಕಟೌಟ್ ಮಾಡಿದ್ದು ನೋಡಿದ್ದೆ. ಆತನಿಗೇ ಮನವಿ ಮಾಡಿಕೊಂಡು ಒಪ್ಪಿಸಿ, ಅರ್ಧರಾತ್ರಿಯವರೆಗೂ ಎಚ್ಚರ ಆಗಿದ್ದು, ಕಲರ್ ಕಾಗದದಲ್ಲಿ ಇಡೀ ಗೋಡೆಯಷ್ಟು ಎತ್ತರವಿದ್ದ ಭಗತ್ ಸಿಂಗ್ ಮುಖದ ಚಿತ್ರ ಮಾಡಿಸಿದ್ದೆ. ಅರ್ಧಂಬರ್ಧ ನಿದ್ದೆ ಆದರೂ ಆ ಹುಮ್ಮಸ್ಸು ಮತ್ತು ಮಾರನೆ ದಿನದ ಸಂಭ್ರಮ ಎಲ್ಲವನ್ನೂ ಮರೆಸಿತ್ತು. ಮತ್ತು ಆ ಮಾರನೆಯ ದಿನ ದಿಢೀರ್ ಬಂದೇಬಿಟ್ಟಿತ್ತು… ಮಾತೆ ವಿದ್ಯಾವತಿಯವರ ಆಗಮನ ಇನ್ನೂ ಆಗಿರಲಿಲ್ಲ. ಆಗಲೇ ಜನಜಂಗುಳಿ! ಬರೀ ವಿದ್ಯಾರ್ಥಿಗಳೇ ಅಲ್ಲ; ಹೊರಗಿನವರೂ ಬರತೊಡಗಿದ್ದಾಗ ಹೊರಗೆ ಸ್ಪೀಕರ್ ಗಳನ್ನು ಅಳವಡಿಸಬೇಕಾಗಿತ್ತು. ನಮ್ಮ ಡೀನ್ ಅವರಿಗೆ ಜಾತ್ರೆ ಆಗಿದ್ದ ಪ್ರೇಕ್ಷಕರನ್ನು ಕಂಡು ಅಚ್ಚರಿ! ಅಂತೂ ವಯೋವೃದ್ಧ ಮಾತೆ, ಜೊತೆಯಲ್ಲಿ ಭಗತ್ ರವರ ಸಹೋದರ ಕುಲ್ಬೀರ್ ಸಿಂಗ್ ಮತ್ತವರ ಪತ್ನಿ ಬಂದಿಳಿದಾಗ, ಸಮಗ್ರ ವಾತಾವರಣದಲ್ಲಿ ಹಾಗೂ ಬೀಸುವ ಗಾಳಿಯಲ್ಲಿಯೂ ಸಹ ಹಿಂದೆ ಎಂದೂ ಕಂಡರಿಯದಂಥ ಪುಳಕ! ಇಡೀ ಸಮೂಹದಲ್ಲಿ ಸಾಕ್ಷಾತ್ ಭಗತ್ ಸಿಂಗ್ ಅವರ ದರ್ಶನ ಆದಷ್ಟೇ ಆನಂದ ಮತ್ತು ಅಂಥ ಪುಣ್ಯ ದೊರಕಿದ್ದಷ್ಟು ಅನಂತ ಸಂತುಷ್ಟತೆ! ನಮ್ಮ ಕಾಲೇಜಿನಲ್ಲಿ ಸಾಮಾನ್ಯವಾಗಿ ವಾರ್ಷಿಕೋತ್ಸವ ಬಿಟ್ಟು, ಎಲ್ಲ ಸಮಾರಂಭಗಳು ಜರುಗುತ್ತಿದ್ದುದು ವಿಶಾಲವಾಗಿದ್ದ ಪೆಥಾಲಜಿ ಹಾಲ್ ನಲ್ಲಿ. ಅಂದು ಒಳಹೊರಗಲ್ಲ ಜನರೋ ಜನ! ನನಗಂತೂ ಅಂದು ಅತ್ಯಂತ ಆನಂದ ಕೊಟ್ಟ ಕ್ಷಣವೆಂದರೆ, ಆ ಮಹಾತಾಯಿಯ ಕೊರಳಿಗೆ ಹಾರ ಹಾಕುವ ಕಾಯಕ ನನ್ನದಾಗಿ ಒದಗಿ ಬಂದದ್ದು. (ಆ ಫೋಟೋ ಅಂದಿನ ಪತ್ರಿಕೆಗಳಲ್ಲೂ ಅಚ್ಚಾಗಿದ್ದು, ನನ್ನ ಪತ್ನಿ, ಕಮಲ, ಅದರ ಪ್ರತಿ ಒಂದನ್ನು ಬಹಳ ಜತನದಿಂದ ಇಟ್ಟಿದ್ದರು. ಅದೀಗ ಕಾಣದಾಗಿರುವುದು ವಿಶಾದ). ಎಂಭತ್ತು ಮೀರಿದ ಮಾತೆ ಕೂತಲ್ಲೇ ತುಂಬುಸಭೆಯನ್ನು ಉದ್ದೇಶಿಸಿ, ತಮ್ಮ ಪುತ್ರ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದನ್ನು ನೆನೆದಿದ್ದರು. ಅವರ ಇಡೀ ವಂಶವೇ ದೇಶಕ್ಕಾಗಿ ಹೋರಾಡಿದ್ದುದನ್ನು ಸಹ ಜ್ಞಾಪಕ ಮಾಡಿಕೊಂಡಿದ್ದರು. ಕುಲಬೀರ್ ಸಿಂಗ್ ಕೂಡ ಕೆಲ ಕ್ಷಣಗಳು ಮಾತನಾಡಿದ್ದರು. ಅಧ್ಯಕ್ಷ ಭಾಷಣವನ್ನೂ ನಮ್ಮ ಡೀನ್ ಸಾಹೇಬರು ಸಂಕ್ಷಿಪ್ತ ಮಾಡಿದ್ದರು. ಅಂದು ಮಾತಿಗಿಂತ ಆ ಅಥಿತಿಗಳ ನೋಡಿ ಕಣ್ಣು ತುಂಬಿಸಿಕೊಳ್ಳುವುದೇ ಎಲ್ಲರ ಉದ್ದೇಶ ಆಗಿದ್ದ ಹಾಗೆ! ಒಟ್ಟಿನಲ್ಲಿ ಕಾಲೇಜಿನ ಸುತ್ತಮುತ್ತ ಆ ದಿನ ನೂತನ ಹಬ್ಬವೊಂದರ ವಾತಾವರಣ ಸೃಷ್ಟಿಯಾಗಿದ್ದುದು ಅತಿಶಯೋಕ್ತಿ ಅಲ್ಲ… ಮಾರನೇ ದಿನ ನಮ್ಮ ಡೀನ್ ನಮ್ಮಕಾರ್ಯಕ್ರಮದ ಆಯೋಜನೆ ಬಗ್ಗೆ ಅತ್ಯಂತ ಖುಷಿಯಿಂದ ಮಾತನಾಡಿದ್ದಾಗ ನಮಗೆ ಸಾರ್ಥಕ ಎನಿಸಿತ್ತು! ಇಂದಿಗೂ, ಈ ಕ್ಷಣಕ್ಕೂ ನನ್ನ ಬದುಕಿನ ಒಂದು ಶ್ರೇಷ್ಠ ದಿನ…ಆ ದಿನ…! ಮತ್ತು ಆ ಮಹಾತಾಯಿಯ ಕಾಲಿಗೆ ದೀರ್ಘದಂಡ ನಮಸ್ಕಾರ ಮಾಡಿದ್ದ …ಆ ಘಳಿಗೆ…! ***************************************** .
ಭಗತ್ ಸಿಂಗ್ ಮಾತೆ ಮೈಸೂರಿನಲ್ಲಿ Read Post »
ಚೆಗುವೆರ ಎಂಬ ಮುಗಿಯದ ಪಯಣ
ಕವಿತೆ ಚೆಗುವೆರ ಎಂಬ ಮುಗಿಯದ ಪಯಣ ಚೆ ಗುವೆರ ೧೯೨೮ ಲ್ಲಿ ರೊಸಾರಿಯೋ,ಅರ್ಜೆಂಟೀನದಲ್ಲಿ ಹುಟ್ಟಿದರು. ಇವರು ಜನಪ್ರಿಯವಾಗಿ ಚೇ ಗುವಾರ, ಎಲ್ ಚೇ ಅಥವ ಬರಿ ಚೇ ಎಂದು ಕರೆಯಲ್ಪಡುತ್ತಾರೆ. ಅರ್ಜೆಂಟೀನಾದಲ್ಲಿ ಹುಟ್ಟಿದ ಮಾರ್ಕ್ಸ್ ವಾದಿ, ಕ್ರಾಂತಿವಾದಿ, ರಾಜಕೀಯ ವ್ಯಕ್ತಿ, ಮತ್ತು ಕ್ಯೂಬ ಮತ್ತು ಅಂತರರಾಷ್ಟ್ರೀಯ ಗೆರಿಲ್ಲಾಗಳ ನಾಯಕ. ಅವರು ಬ್ಯೂನಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪಡೆದರು. ವೈದ್ಯನಾಗಲು ಕನಸುಕಂಡಿದ್ದ ಆತ ತನ್ನ ರಜಾದಿನಗಳಲ್ಲಿ ಲ್ಯಾಟಿನ್ ಅಮೆರಿಕದ ಉದ್ದಕ್ಕೂ ಪ್ರವಾಸ ಕೈಗೊಂಡಿದ್ದ. ಈ ಸಮಯದಲ್ಲಿ ಆತನಲ್ಲಿ ಆದ ಅನುಭವಗಳು ಮತ್ತು ವೀಕ್ಷಣೆಗಳು ಆತನಲ್ಲಿ ಒಂದು ಪ್ರಬಲವಾದ ನಿರ್ಣಯಕ್ಕೆ ಕಾರಣವಾಯಿತು ಅದೇನೆಂದರೆ ಆ ಪ್ರದೇಶದಲ್ಲಿ ಬೇರುಬಿಟ್ಟ ಆರ್ಥಿಕ ಅಸಮಾನತೆ ,ಬಂಡವಾಳಶಾಹಿ, ಏಕಸ್ವಾಮ್ಯತೆ, ತತ್ತ್ವ , ಸಾಮ್ರಾಜ್ಯಶಾಹಿ ಮತ್ತಿತರ ಆಂತರಿಕ ಬಿಕ್ಕಟ್ಟುಗಳು ತೊಲಗಬೇಕಾದರೆ ಇರುವ ಒಂದೇ ಒಂದು ಮಾರ್ಗವೆಂದರೆ ಅದೇ ಕ್ರಾಂತಿ. ಈ ನಂಬಿಕೆಯೇ ಅಧ್ಯಕ್ಷ ಜಾಕೋಬ್ ಅರ್ಬೆಂಜ್ನ ಗ್ವಾಟೆಮಾಲಾ ಸಾಮಾಜಿಕ ಸುಧಾರಣೆಯ ಪಕ್ಷ ಸೇರಲು ಪ್ರೇರೇಪಿಸಿತು. ನಂತರ, ಮೆಕ್ಸಿಕೋ ಸಿಟಿಯಲ್ಲಿ ವಾಸಿಸುತ್ತಿರುವಾಗಲೇ ರೌಲ್ ಮತ್ತು ಫಿಡೆಲ್ ಕ್ಯಾಸ್ಟ್ರೋರ ಭೇಟಿಯಾಗಿ ಅವರ ಜುಲೈ ೨೮ರ ಚಳುವಳಿಯನ್ನು ಸೇರಿದನು ನಂತರ US ಬೆಂಬಲಿತ ಕ್ಯೂಬಾದ ಸರ್ವಾಧಿಕಾರಿ ಫಲ್ಜೆಂಸಿಯೋ ಬಟಿಸ್ಟಾ ನನ್ನು ಅಧಿಕಾರದಿಂದ ಕಿತ್ತುಹಾಕುವ ಉದ್ದೇಶದಿಂದ ಗ್ರನ್ಮ ಎಂಬ ಹಡಗಿನಲ್ಲಿ ಕ್ಯೂಬಾ ತಲುಪಿದನು. ಗುವೆರಾ ಅತೀ ಶೀಘ್ರದಲ್ಲೇ ಬಂಡುಕೋರರ ನಡುವೆ ಪ್ರಸಿದ್ಧಿಯನ್ನು ಪಡೆದಕಾರಣವಾಗಿ ಎರಡನೆಯ ಅಧಿಕಾರಿಯಾಗಿ ಬಡ್ತಿ ನೀಡಲಾಯಿತು ಮತ್ತು ಬಟಿಸ್ಟಾ ಆಡಳಿತ ಪದಚ್ಯುತಗೊಂಡನಂತರ ತನ್ನ ವಿಜಯದ ಎರಡು ವರ್ಷದ ಗೆರಿಲ್ಲಾ ಅಭಿಯಾನದಲ್ಲಿ ಪ್ರಮುಖ ಪಾತ್ರವಹಿಸಿದ್ದನು ,೧೯೬೪ರಲ್ಲಿ ಗುವೇರಾ ತನ್ನ ಕ್ರಾಂತಿಯನ್ನು ಉತ್ತೇಜಿಸುವ ಉದ್ದೇಶದಿಂದ ಕ್ಯೂಬಾವನ್ನು ಬಿಟ್ಟು ವಿದೇಶ ಪ್ರವಾಸನ್ನು ಕೈಗೊಂಡಿದ್ದ. ಅಕ್ಟೋಬರ್ ೯, ೧೯೬೭ರಂದು CIA ನೆರವಿನಿಂದ ಬೊಲಿವಿಯದಲ್ಲಿ ಸೆರೆಹಿಡಿದು ಅಧಿಕಾರಿಗಳ ಕಟ್ಟಪ್ಪಣೆಯಿಂದ ಗುವೇರನನ್ನು ಗುಂಡುಹೊಡೆದು ಕೊಲ್ಲಲಾಯಿತು. ಗುವೇರ ಪ್ರಬಲ ಬರಹಗಾರ, ದಿನಚರಿಗಾರನೂ ಕೂಡ ಆಗಿದ್ದ ಆತನ ಗೆರಿಲ್ಲಾ ಸಮರ ಕೈಪಿಡಿ ಮತ್ತು ತನ್ನ ಲ್ಯಾಟಿನ್ ಅಮೆರಿಕಾದ ಪ್ರವಾಸದ ಘಟನಾವಳಿಗಳನ್ನು ಒಳಗೊಂಡ ದ ಮೋಟರ್ ಸೈಕಲ್ ಡೈರೀಸ್ ಉತ್ತಮವಾಗಿ ಮಾರಾಟಗೊಂಡ ಕೃತಿಗಳು. ೨೦೦೪ರಲ್ಲಿ ಸ್ಪೇನ್ ಭಾಷೆಯಲ್ಲಿ ಚಲನಚಿತ್ರವಾದ ‘ದ ಮೋಟರ್ ಸೈಕಲ್ ಡೈರೀಸ್’ ವಿಮರ್ಶಕರಿಂದ ಉತ್ತಮ ವಿಮರ್ಶೆಯನ್ನು ಪಡೆದು ಯಶಸ್ವಿಚಿತ್ರವೆನಿಸಿತು. ಗುವೇರ ತನ್ನ ಹುತಾತ್ಮದ ಪರಿಣಾಮವಾಗಿ ಒಂದು ಐತಿಹಾಸಿಕ ಪಾತ್ರವಾಗಿ ಬಹುಸಂಖ್ಯೆಯ ಜೀವನಚರಿತ್ರೆ, ಪ್ರಬಂಧ, ಸಾಕ್ಷ್ಯಚಿತ್ರ, ಹಾಡುಗಳು, ಮತ್ತು ಚಿತ್ರಗಳಾಗಿ ಇನ್ನೂ ಬದುಕಿದ್ದಾನೆ. ಟೈಮ್ ನಿಯತಕಾಲಿಕವು ಈತನನ್ನು ೨೦ನೇ ಶತಮಾನದ ೧೦೦ ಅತ್ಯಂತ ಪ್ರಭಾವಿಶಾಲಿ ವ್ಯಕ್ತಿಗಳಲ್ಲಿ ಒಬ್ಬ ಎಂದು ಪ್ರಕಟಿಸಿತ್ತು. Guerrillero Heroico ಎಂಬ ಈತನ ಚಿತ್ರವನ್ನು ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಛಾಯಾಚಿತ್ರ ಎಂದು ಕರೆಯಲಾಗುತ್ತದೆ. ಗುವೇರನನ್ನು ಎರ್ನೆಸ್ಟಿಲೋ ಎಂದೇ ಕರೆಯಲಾಗುತ್ತಿತ್ತು, ತೀವ್ರವಾದಿ ಪ್ರವೃತ್ತಿಗಳ ಕುಟುಂಬದಿಂದ ಬೆಳೆದುಬಂದಿದ್ದ ಗುವೇರನಿಗೆ ಬಾಲ್ಯದಿಂದಲೇ ರಾಜಕೀಯ ದೃಷ್ಠಿಕೋನಗಳು ಅಘಾಧವಾಗಿ ಬೆಳೆಯತೊಡಗಿತ್ತು. ಅವನ ತಂದೆ ಸ್ಪಾನಿಷ್ ಗಣರಾಜ್ಯದ ನಾಗರಿಕ ಯುದ್ಧದ ಧೃಡಬೆಂಬಲಿಗರಾಗಿದ್ದರು ಸಾಮಾನ್ಯವಾಗಿ ಅನೇಕ ಪರಿಣಿತರಿಗೆ ಗುವೇರನ ಮನೆಯಲ್ಲೆ ಔತಣಕೋಟದ ಆತಿಥ್ಯವನ್ನು ಏರ್ಪಡಿಸಲಾಗುತ್ತಿತ್ತು. ತನ್ನ ಜೀವನದುದ್ದಕ್ಕೂ ಅಸ್ತಮ ರೋಗದಿಂದ ಬಳಲುತ್ತಿದ್ದರೂ ಆತ ಒಬ್ಬ ಉತ್ತಮ ಕ್ರೀಡಾಪಟು,ಈಜುಗಾರ,ಫುಟ್ಬಾಲ್,ಗಾಲ್ಫ್ ಹಾಗು ಅತ್ಯುತ್ತಮ ಸೈಕಲ್ ಸವಾರನಾಗಿದ್ದ ಮತ್ತು ಅತ್ಯಾಸಕ್ತ ರಗ್ಬಿ ಯೂನಿಯನ್ ಆಟಗಾರನೂ ಆಗಿದ್ದ ಆತನ ಆಟದ ಶೈಲಿ ಅವನಿಗೆ Fuser(ಸಂಯೋಜಕ) ಎಂಬ ಅಡ್ಡಹೆಸರನ್ನು ತಂದಿತ್ತು. ೨೨ ವರ್ಷದ ಚೆ ಗುವೆರ,೧೯೫೧ ಗುವೇರ ತಂದೆಯಿಂದ ಚೆಸ್ ಆಡುವುದನ್ನು ಕಲಿತನು ತನ್ನ ೧೨ನೇ ವಯಸ್ಸಿನಲ್ಲೇ ಸ್ಥಳೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದನು. ಪ್ರೌಢಾವಸ್ಥೆಯಲ್ಲಿ ಮತ್ತು ಜೀವನದುದ್ದಕ್ಕೂ ಕಾವ್ಯದ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ್ದನು,ವಿಶೇಷವಾಗಿ ಪಬ್ಲೊ ನೆರುಡ,ಜಾನ್ ಕೀಟ್ಸ್,ಆಂಟೋನಿಯೊ ಮಕಾಡೋ,ಫೆಡೆರಿಕೋ ಗಾರ್ಸಿಯಾ ಲೋರ್ಕಾ,ಗಾಬ್ರಿಯೆಲ ಮಿಸ್ಟ್ರಲ್,ಸೀಜರ್ ವ್ಯಾಲೆಜೊ, ಮತ್ತು ವಾಲ್ಟ್ ವಿಟ್ಮನ್ ಅವರ ಕಾವ್ಯಗಳು ಅತ್ಯಂತ ಇಷ್ಟವಾದವುಗಳು,ರುಡ್ಯಾರ್ಡ್ ಕಿಪ್ಲಿಂಗ್ ಅವರ “If—” ಹಾಡು ಬಾಯಿಪಾಟವಾಗಿ ಹೋಗಿತ್ತು. ಗುವೇರನ ಮನೆಯಲ್ಲಿ ೩೦೦೦ಕ್ಕಿಂತ ಹೆಚ್ಚು ಪುಸ್ತಕಗಳಿದ್ದವು ಇದೇ ಅವನನ್ನು ಉತ್ಸಾಹಿ ಮತ್ತು ವಿಶಾಲದೃಷ್ಟಿಯ ಓದುಗನನ್ನಾಗಿ ಮಾಡಿತ್ತು .ಕಾರ್ಲ್ ಮಾರ್ಕ್ಸ್, ವಿಲಿಯಂ ಫಾಲ್ಕ್ನರ್, ಆಂಡ್ರೆ ಗೈಡ್, ಎಮಿಲಿಯೊ ಸಲ್ಗಾರಿ ಮತ್ತು ಜೂಲ್ಸ್ ವರ್ನೆ ಜೊತೆಗೆ ಜವಾಹರಲಾಲ್ ನೆಹರು, ಫ್ರ್ಯಾನ್ಝ್ ಕಾಫ್ಕ, ಆಲ್ಬರ್ಟ್ ಕ್ಯಾಮಸ್, ವ್ಲಾಡಿಮಿರ್ ಲೆನಿನ್, ಮತ್ತು ಜೀನ್ ಪಾಲ್ ಸಾರ್ತ್ರೆ; ಹಾಗೆಯೇ ಅನಾಟೊಲೆ ಫ್ರಾನ್ಸ್, ಫ್ರೆಡ್ರಿಕ್ ಎಂಗೆಲ್ಸ್, HG ವೆಲ್ಸ್, ಮತ್ತು ರಾಬರ್ಟ್ ಫ್ರಾಸ್ಟ್ ಅವರ ಕೃತಿಗಳನ್ನು ಆನಂದಿಸಿ ಓದುತ್ತಿದ್ದ. ಬೆಳೆದಂತೆಲ್ಲಾ ಲ್ಯಾಟಿನ್ ಅಮೆರಿಕನ್ ಬರಹಗಾರರಾದ ಹೊರಾಸಿಯೊ ಕ್ವಿರೋಗಾ, ಸಿರೊ ಅಲ್ಜಿರಿಯಾ, ಜೋರ್ಜ್ ಇಖಾಜಾ, ರುಬೆನ್ ಡರಿಯೊ ಮತ್ತು ಮಿಗುಯೆಲ್ ಆಸ್ಟೂರಿಯಸ್ ರವರ ಬರಹಗಳ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡ ಈ ಲೇಖಕರ ಪರಿಕಲ್ಪನೆಗಳನ್ನು ಮತ್ತು ಸಿದ್ಧಾಂತಗಳನ್ನು ತನ್ನ ಕೈ ಬರಹದ ಪುಸ್ತಕದಲ್ಲಿ ದಾಖಲಿಸತೊಡಗಿದ. ಇವುಗಳಲ್ಲಿ ಬುದ್ಧ ಮತ್ತು ಅರಿಸ್ಟಾಟಲ್‌ನ ವಿಶ್ಲೇಷಣಾತ್ಮಕ ರೇಖಾಚಿತ್ರಗಳು ಬರ್ಟ್ರಾಂಡ್ ರಸ್ಸೆಲ್ ನ ಪ್ರೀತಿ ಮತ್ತು ದೇಶಭಕ್ತಿ, ಜಾಕ್ ಲಂಡನ್ ನ ಸಮಾಜದ ಮೇಲೆ, ನೀತ್ಸೆಯ ಸಾವಿನ ಕಲ್ಪನೆ ಸಿದ್ಧಾಂತಗಳನ್ನು ತನ್ನದೇ ಆದ ರೀತಿಯಲ್ಲಿ ಪರೀಕ್ಷಿಸುವುದು ಒಳಗೊಂಡಿದ್ದವು. ಶಾಲೆಯಲ್ಲಿ ಈತನ ನೆಚ್ಚಿನ ವಿಷಯಗಳೆಂದರೆ ತತ್ವಶಾಸ್ತ್ರ,ಗಣಿತಶಾಸ್ತ್ರ,ರಾಜಕೀಯ ವಿಜ್ಞಾನ,ಸಮಾಜಶಾಸ್ತ್ರ,ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ. ವರ್ಷಗಳ ನಂತರ, ಫೆಬ್ರವರಿ ೧೩, ೧೯೫೮ರಂದು ಬಹಿರಂಗಗೊಂಡ CIA ಜೀವನಚರಿತ್ರೆ ಮತ್ತು ವ್ಯಕ್ತಿತ್ವ ವರದಿ ಯಲ್ಲಿ ಅವನ ಶೈಕ್ಷಣಿಕ ಆಸಕ್ತಿಗಳನ್ನು ಮತ್ತು ಬುದ್ಧಿಶಕ್ತಿಯನ್ನು ಗಮನಿಸಿ ಆತನನ್ನು ಒಬ್ಬ ಬುದ್ದಿವಂತ ಲ್ಯಾಟಿನ್ ಅಮೇರಿಕದ ನಿವಾಸಿ ಎಂದು ಹೇಳಲಾಗಿದೆ. ೧೯೪೮ರಲ್ಲಿ ಗುವೇರ ಔಷಧ ಅಧ್ಯಯನಕ್ಕಾಗಿ ಬ್ಯೂನಸ್ ವಿಶ್ವವಿದ್ಯಾಲಯ ಪ್ರವೇಶಿಸಿದನು. ಜಗತ್ತನ್ನು ಅನ್ವೇಶಿಸುವ ತನ್ನ ಮಹದಾಸೆ ಮೂಲಭೂತವಾಗಿ ಲ್ಯಾಟಿನ್ ಅಮೆರಿಕಾದ ಸಮಕಾಲೀನ ಆರ್ಥಿಕ ಪರಿಸ್ಥಿತಿಗಳನ್ನು ಎರಡು ದೀರ್ಘ ಆತ್ಮಶೋಧಕ ಪ್ರಯಾಣದ ಜೊತೆಗೆ ಅನ್ವೇಷಿಸಿದರು. ೧೯೫೦ರಲ್ಲಿ ಮೊದಲ ದಂಡಯಾತ್ರೆ, ಒಂದು ಸಣ್ಣ ಮೋಟರ್ ಒಳಗೊಂಡಿರುವ ಸೈಕಲ್ ಮೇಲೆ ಉತ್ತರ ಅರ್ಜೆಂಟೀನಾ ಗ್ರಾಮೀಣ ಪ್ರಾಂತ್ಯಗಳಲ್ಲಿ ಒಂಟಿಯಾಗಿ ಪ್ರವಾಸಕೈಗೊಂಡನು ಪ್ರಯಾಣದ ಉದ್ದವು ೪,೫೦೦ ಕಿಲೋಮೀಟರ್ ಆಗಿತ್ತು. ನಂತರದ ಪ್ರವಾಸ ೧೯೫೧ರಲ್ಲಿ ದಕ್ಷಿಣ ಅಮೆರಿಕಾದಾದ್ಯಂತ, ಇದು ೯ ತಿಂಗಳು ಮತ್ತು ೮,೦೦೦ ಕಿಲೋಮೀಟರ್ ಒಳಗೊಂಡ ಯಾತ್ರೆಯಾಗಿತ್ತು. ಎರಡನೆಯದಕ್ಕೆ ಒಂದು ವರ್ಷಗಳ ಕಾಲ ವಿಧ್ಯಾಭ್ಯಾಸಕ್ಕೆ ವಿರಾಮ ತೆಗೆದುಕೊಂಡನು ತನ್ನ ಗೆಳೆಯ ಆಲ್ಬರ್ಟೊ ಗ್ರನಡೋ ಜೊತೆಗೂಡಿ ಅಮೆಜಾನ್ ನದಿಯ ಮೇಲೆ, ಪೆರುವಿನಲ್ಲಿ SAN PABLO ಕುಷ್ಠರೋಗಿಗಳ ಕಾಲೋನಿಯಲ್ಲಿ ಸ್ವಯಂ ಸೇವಕರಾಗಿ ಕೆಲವು ವಾರಗಳವರೆಗೆ ಸೇವೆಸಲ್ಲಿಸುವುದು ಅಂತಿಮ ಗುರಿಯಾಗಿತ್ತು. ಚಿಲಿಯಲ್ಲಿ ಅನಕೊಂಡಾದ ಚುಕ್ವಿಕೆಮೇಟಾ ತಾಮ್ರದ ಗಣಿಯಲ್ಲಿ ಗಣಿಗಾರರ ಕೆಲಸದ ಸ್ಥಿತಿಗತಿಗಳು ಗುವೇರನನ್ನು ಕೆರಳಿಸಿತು, ಅಟಾಕಾಮಾ ಮರುಭೂಮಿಯ ರಾತ್ರಿಯಲ್ಲಿ ಒಂದು ಹೊದಿಕೆಯನ್ನು ಸಹ ಹೊಂದಿರದ ಕಮ್ಯುನಿಸ್ಟ್ ದಂಪತಿಗಳ ಜೊತೆ ರಾತ್ರಿಯನ್ನು ಕಳೆದ ಮತ್ತವರನ್ನು ಬಂಡವಾಳಶಾಹಿ ಶೋಷಣೆಯ ಬಲಿಪಶುಗಳು ಎಂದು ಅವರ ನಿಜಸ್ಥಿತಿಯನ್ನು ವಿವರಿಸಿದ. ಮಚ್ಚು ಪಿಚ್ಚು ಗೆ ಹೋಗುವ ದಾರಿಯಲ್ಲಿ ಆಂಡ್ಸ್ ಪರ್ವತದ ಮೇಲ್ಭಾಗದಲ್ಲಿ ದೂರದ ಗ್ರಾಮೀಣ ಪ್ರದೇಶಗಳಲ್ಲಿ ಶ್ರೀಮಂತ ಭೂಮಾಲೀಕರು ತಮ್ಮ ಒಡೆತನದ ಭೂಮಿಯನ್ನು ಅಲ್ಲಿನ ಬಡರೈತರಿಂದ ಕೃಷಿಮಾಡಿಸುತ್ತಿರುವುದನ್ನು ಕಂಡನು. ನಂತರ ತನ್ನ ಪ್ರಯಾಣದಲ್ಲಿ ಕುಷ್ಠರೋಗದ ಕಾಲೋನಿಯಲ್ಲಿ ವಾಸಿಸುವ ಜನರ ನಡುವೆ ಇರುವ ನಿಕಟಸ್ನೇಹವನ್ನು ಕಂಡು ಪ್ರಭಾವಿತನಾದ, ಮಾನವ ಐಕಮತ್ಯ ಮತ್ತು ನಿಷ್ಠೆ ಅತ್ಯಧಿಕವಾಗಿ ಒಂಟಿಯಾಗಿರುವ ಮತ್ತು ಹತಾಶರಾದ ಜನರಲ್ಲಿ ಕಾಣಸಿಗುತ್ತದೆ ಎಂದು ಹೇಳಿಕೆ ನೀಡಿದ್ದ. ಗುವೇರ ತನ್ನ ಪ್ರವಾಸದಲ್ಲಿ ಬಳಸಿದ್ದ ಟಿಪ್ಪಣಿಗಳು ‘ದ ಮೋಟರ್ ಸೈಕಲ್ ಡೈರೀಸ್’ ಎಂಬ ಹೆಸರಿನೊಂದಿಗೆ ಪ್ರಕಟವಾಯಿತು ನಂತರ ನ್ಯೂಯಾರ್ಕ್ ಟೈಮ್ಸ್ ನ ಉತ್ತಮ ಮಾರಾಟವಾದ ಪುಸ್ತಕವೂ ಆಯಿತು. ೨೦೦೪ರಲ್ಲಿ ಸ್ಪಾನಿಷ್ ಭಾಷೆಯಲ್ಲಿ ಅದೇ ಹೆಸರಿನ ಪ್ರಶಸ್ತಿ ವಿಜೇತ ಚಿತ್ರವಾಗಿ ಹೊರಹೊಮ್ಮಿತು. ತನ್ನ ಮನೆ ಬ್ಯೂನಸ್ ಏರ್ಸ್ಗೆ ಮರಳುವ ಮುನ್ನ ಗುವೇರ ಒಟ್ಟು ಅರ್ಜೆಂಟೀನಾ, ಚಿಲಿ, ಪೆರು, ಈಕ್ವೆಡಾರ್, ಕೊಲಂಬಿಯಾ, ವೆನೆಜುವೆಲಾ, ಪನಾಮ ಮತ್ತು ಮಿಯಾಮಿಯೆಲ್ಲೆಡೆ ಸುತ್ತಾಡಿಬಂದಿದ್ದ, ಪ್ರವಾಸದ ಕೊನೆಯಲ್ಲಿ ಅವನ ಕಲ್ಪನೆಯಲ್ಲಿ ಲ್ಯಾಟಿನ್ ಅಮೇರಿಕವು ಮಿತಿಯಿಲ್ಲದ ಸಾಮಾನ್ಯ ಲ್ಯಾಟಿನ್ ಪರಂಪರೆಯನ್ನೊಳಗೊಂಡ ಪ್ರತ್ಯೇಕ ರಾಷ್ಟ್ರಗಳ ಸಂಗ್ರಹವಲ್ಲ ಬದಲಿಗೆ ವಿಮೋಚನೆಯಾಗಬೇಕಾಗಿರುವ ಭೂಖಂಡದ ವಿಶಾಲ ಘಟಕವೆಂಬಂತೆ ಕಾಣಿಸಿತು. ಅರ್ಜೆಂಟೀನಾಗೆ ಮರಳಿದ ನಂತರ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿ ಜೂನ್ ೧೯೫೩ರಲ್ಲಿ ವೈದ್ಯಕೀಯ ಪದವಿಯನ್ನು ಪಡೆದರು ಮತ್ತು ಅಧಿಕೃತವಾಗಿ ಡಾ||ಎರ್ನೆಸ್ಟೋ ಗುವೇರನಾದರು. ನಂತರ ತನ್ನ ಪ್ರಯಾಣದ ಅನುಭವದಲ್ಲಿ ಲ್ಯಾಟಿನ್ ಅಮೇರಿಕಾವನ್ನು ಟೀಕಿಸಿದರು ಲ್ಯಾಟಿನ್ ಅಮೇರಿಕಾದಲ್ಲಿ ಬಡತನ, ಹಸಿವು ಮತ್ತು ರೋಗದ ಚಿಕಿತ್ಸೆಗೆ ಹಣದ ಕೊರತೆ, ನಿರಂತರ ಹಸಿವು ಮತ್ತು ಜಡ ಸ್ಥಿತಿ ಎದ್ದು ಕಾಣುತ್ತದೆ ಈ ಜನರಿಗೆ ಸಹಾಯ ಮಾಡಬೇಕಾದರೆ ವೈದ್ಯಕೀಯ ಪದವಿ ಬಿಟ್ಟು ಪರಿಪೂರ್ಣ ಸಶಸ್ತ್ರ ಹೋರಾಟದ ಅಗತ್ಯವಿದೆ ಎಂದು ಮನಗಂಡರು. ಜುಲೈ 7, 1953 ರಂದು, ಗುವೇರ ಸವಾರಿ ಮತ್ತೆ ಹೊರಟಿತು ಈ ಬಾರಿ ಬಲ್ಗೇರಿಯಾ, ಪೆರು, ಈಕ್ವೆಡಾರ್, ಪನಾಮ, ಕೋಸ್ಟಾ ರಿಕಾ, ನಿಕರಾಗುವಾ, ಹೊಂಡುರಸ್ ಮತ್ತು ಎಲ್ ಸಾಲ್ವಡಾರ್. ಡಿಸೆಂಬೆರ್ ೧೦ರಂದು ಗ್ವಾಟೆಮಾಲಾ ಬಿಟ್ಟು ಹೊರಡುವ ಮುನ್ನ ಸ್ಯಾನ್ ಜೋಸ್, ಕೋಸ್ಟ ರಿಕಾದಿಂದ ತನ್ನ ಚಿಕ್ಕಮ್ಮ ಬೀಟ್ರಿಜ್ಗೆ ಒಂದು ಸಂದೇಶವನ್ನು ಕಳುಹಿಸಿದ, ಆ ಪತ್ರದಲ್ಲಿ United Fruit Company ಆಡಳಿತದ ಬಗ್ಗೆ ಮತ್ತು ಬಂಡವಾಳಶಾಹಿಗಳ ಕ್ರೂರತನದ ಬಗ್ಗೆ ಮನವರಿಕೆಮಾಡಿದ್ದ . ಗ್ವಾಟೆಮಾಲಾ ನಗರದಲ್ಲಿ, ಗುವೇರ ಪೆರುವಿಯನ್ ಅರ್ಥಶಾಸ್ತ್ರಜ್ಞ “ಹಿಲ್ಡಾ ಗಡಿಯ ಅಕೋಸ್ಟಾ ಳನ್ನು” ಆಶ್ರಯಿಸಿದ್ದ, ಆತ “APRA, American Popular Revolutionary Alliance” ಸಂಗದ ಉತ್ತಮ ರಾಜಕೀಯ ಸದಸ್ಯನಾಗಿದ್ದಳು.ಆಕೆಯಿಂದ Arbenz ಸರ್ಕಾರದ ಉನ್ನತ ಮಟ್ಟದ ಹಲವಾರು ಅಧಿಕಾರಿಗಳ ಪರಿಚಯವಾಯಿತು. ನಂತರ ಕ್ಯೂಬಾದ ಬಹಿಷ್ಕೃತರ ಸಮೂಹ ಸಂಪರ್ಕದಿಂದ ಫಿಡೆಲ್ ಕ್ಯಾಸ್ಟ್ರೋನ ಪರಿಚಯವಾಯಿತು, ಈ ಅವಧಿಯಲ್ಲಿ ಗುವೇರ “ಚೆ” ಎಂಬ ಅಡ್ಡಹೆಸರಿನಿಂದ ಪ್ರಸಿದ್ಧಿಗಳಿಸಿದನು. ಈ ಅವಧಿಯಲ್ಲಿ ಸಶಸ್ತ್ರ ಹೋರಾಟ ಮತ್ತು ಶಿಕ್ಷೆಯ ಮೂಲಕವೇ ಮಾತ್ರ ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧ ಜನಸಾಮಾನ್ಯರ ರಕ್ಷಣೆ ಮತ್ತು ಬಲಪಡಿಸುವುದು ಸಾಧ್ಯ ಎಂದು ಗುವೇರನಿಗೆ ಮನವರಿಕೆ ಮಾಡಿಕೊಟ್ಟಿದ್ದು ಗ್ವಾಟೆಮಾಲ ನಗರ ಎಂದು “ಗಡೆಯ” ತಾನು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದ. ************************************ ಆಶಾ ಸಿದ್ದಲಿಂಗಯ್ಯ
ಚೆಗುವೆರ ಎಂಬ ಮುಗಿಯದ ಪಯಣ Read Post »
ಲಾಕ್ಡೌನ್ ಕಾಲಘಟ್ಟದ ದಾಂಪತ್ಯ
ಲೇಖನ ಲಾಕ್ಡೌನ್ ಕಾಲಘಟ್ಟದ ದಾಂಪತ್ಯ ಅಂಜಲಿ ರಾಮಣ್ಣ ಬೆಳಗಿನಲ್ಲಿ ಅವನು ಬಲು ಸುಭಗ. ರಾತ್ರಿಯಾಯಿತೆಂದರೆ ಕೀಚಕನೇ ಮೈಯೇರಿದ್ದಾನೆ ಎನ್ನುವಂತೆ ಇರುತ್ತಿದ್ದ. ಅವಳ ಮೈಮೇಲಿನ ಹಲ್ಗುರುತು, ಉಗುರ್ಗೆರೆ, ಸಿಗರೇಟಿನ ಬೊಟ್ಟು ಕತ್ತಲಲ್ಲೂ ಮಿರಮಿರ ಉರಿಯುತ್ತಿತ್ತು. ಸಹಿಸುತ್ತಲೇ ಅವಳ ದಾಂಪತ್ಯಕ್ಕೆ ಮೂರು ವರ್ಷ ಕಳೆದುಹೋಗಿತ್ತು. ಸ್ನಾನದ ನೀರು ಬಿದ್ದರೆ ಧಗಧಗ ಎನ್ನುವ ದೇಹ ದಹನಕ್ಕೆ ಹೆದರಿದ್ದ ದಾಕ್ಶಾಯಣಿ ಅವಳು ಅದೆಷ್ಟೋ ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಿದ್ದಳು. ಕತ್ತಲಲ್ಲಿ ಅವಳಾತ್ಮವನ್ನು ಹೀಗೆ ಚರ್ಮದಂತೆ ಸಂಸ್ಕರಿಸುತ್ತಿದ್ದವ ಬೆಳಕಿನಲ್ಲಿ ಬೆಕ್ಕಿನ ಮರಿಯಂತೆ ಆಗುತ್ತಿದ್ದ. ಆಫೀಸಿನಲ್ಲಿ ಬಹಳವೇ ಪ್ರಾಮಾಣಿಕ. ನೆಂಟರಿಷ್ಟರ ಗೋಷ್ಠಿಯಲ್ಲಿ ಇವನೇ ಗೋಪಾಲಕೃಷ್ಣ. ಸಹಿಸಿದಳು, ಸಹಿಸಿದಳು ಅವಳು. ಸಹನೆ ಖಾಲಿಯಾಯ್ತು. ಉಪಾಯ ಒಂದು ಯಮಗಂಡಕಾಲದಂತೆ ಅವಳ ತಲೆ ಹೊಕ್ಕಿತು. ನಿತ್ಯವೂ ಅವನ ರಾತ್ರಿ ಊಟದಲ್ಲಿ ಬೇಧಿ ಮಾತ್ರೆ ಬೆರಸಿಕೊಡಲು ಶುರುವಿಟ್ಟಳು. ಆರು ತಿಂಗಳು ಮೈಯ್ಯಿನ ನೀರು ಆರಿ ಅವನು ಹೈರಾಣಾದ. ಸ್ಕ್ಯಾನಿಂಗ್ ಸೆಂಟರ್ಗಳಿಂದ ತಿಮ್ಮಪ್ಪನ ದರುಶನದವರೆಗೂ ಎಡುಕಾಡುತ್ತಾ ಮೆತ್ತಗಾದ. ಇವಳ ಮನಸ್ಸು ಉಸಿರಾಡಲು ಶುರುವಿಟ್ಟಿತು, ಶರೀರದ ಮೇಲಿನ ಗಾಯ ಒಣಗುವತ್ತ ಮುಖ ಮಾಡಿತ್ತು. ಅವಳು ಈ ಕಥೆಯನ್ನು ಮತ್ತ್ಯಾರದ್ದೋ ಜೀವನದ ಘಟನೆಯಂತೆ ಏರಿಳಿತವಿಲ್ಲದೆ ಹೇಳಿದಾಗ ಸಂಬಂಧಗಳ ನಡುವಿನ ಥಣ್ಣನೆಯ ಕ್ರೌರ್ಯಕ್ಕೆ ದಂಗಾಗಿ ಹೋಗಿದ್ದೆ. ದೌರ್ಜನ್ಯಕ್ಕೆ ದಶಕಂಠ ಎಂದರಿವಿದ್ದವಳಿಗೆ ಅದು ಮುಖವಿಹೀನ ಎನ್ನುವುದು ಅರಿವಿಗೆ ಬಂದಿತ್ತು. ಹೀಗೆ ಗಂಡಹೆಂಡಿರು ಅವರ ಸಮಸ್ಯೆಗಳನ್ನು ಹೇಳಿಕೊಂಡಾಗಲೆಲ್ಲಾ ಟೆಬಲ್‍ನ ಈ ಬದಿಯಲ್ಲಿ ಕುಳಿತ ನನ್ನದು ಸಾಧಾರಣವಾಗಿ ಒಂದು ಸಿದ್ಧ ಉತ್ತರ ಇರುತ್ತಿತ್ತು “ಒಟ್ಟಿಗೆ ಕುಳಿತು ಮಾತನಾಡಿ” ಅಥವಾ “ಹೆಚ್ಚು ಸಮಯವನ್ನು ಒಬ್ಬರ ಜೊತೆ ಒಬ್ಬರು ಕಳೆಯಿರಿ” ಎನ್ನುತ್ತಿದ್ದೆ. ಉದ್ಯೋಗ, ಹಣ ಇವುಗಳ ಬೆನ್ನ ಮೇಲೆ ತಮ್ಮ ವಿಳಾಸವನ್ನು ಕೆತ್ತಿಡಬೇಕು ಎನ್ನುವ ಧಾವಂತದಲ್ಲಿಯೇ ಶ್ವಾಸಕೋಶ ತುಂಬಿಕೊಳ್ಳುವ ಅವನು-ಅವಳು ಇವರ ಮಧ್ಯೆ ಸಮಯ ಮತ್ತು ಮಾತು ಇವುಗಳನ್ನುಳಿದು ಇನ್ನೆಲವೂ ಇರುವುದನ್ನು ಕಂಡಿದ್ದರಿಂದ, ಬಂದವರಿಗೆಲ್ಲಾ “ಟೈಮ್ ಕೊಟ್ಟು ಟೈಮ್ ಕೊಳ್ಳಿ” ಎನ್ನುತ್ತಿದ್ದೆ. ಇದನ್ನು ಕೇಳಿಸಿಕೊಂಡಿತೇನೋ ಎನ್ನುವ ಹಾಗೆ ಬಂದು ಬಿಟ್ಟಿತು ಕರೋನ ಸಾಂಕ್ರಾಮಿಕ ಪಿಡುಗು. ನಾನೊಂದು ತೀರ ನೀನೊಂದು ತೀರ ಎಂದು ಹಾಡುತ್ತಿದ್ದವರೆಲ್ಲಾ, ನೀನೆಲ್ಲೋ ನಾನಲ್ಲೇ ರಾಗವಾಗುವಂತೆ ಆಯಿತು. ಆಹಾ, ಇನ್ನು ಎಲ್ಲರ ದಾಂಪತ್ಯ ಕೆ.ಎಸ್.ನ ಅವರ ಕವಿತೆಗಳಂತೆ ಎಂದು ಭಾವಿಸುವ ಹೊತ್ತಿನಲ್ಲಿ ವಿಶ್ವಸಂಸ್ಥೆಯಾದಿಯಾಗಿ, ಸಚಿವಾಲಯ ಮತ್ತು ಪ್ರಪಂಚದಾದ್ಯಂತ ಹಲವಾರು ವಿಶ್ವವಿದ್ಯಾಲಯಗಳು “ ಲಾಕ್ಡೌನ್ ಸಮಯದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಗಣನೀಯ ಏರಿಕೆ” ಎನ್ನುವ ಕ್ಷಾರ ಸತ್ಯವನ್ನು ಒಮ್ಮೆಲೆ ಅಂಕಿಅಂಶಗಳ ಸಹಿತ ಹೊರಹಾಕಿರುವುದು ದಾಂಪತ್ಯ ಎನ್ನುವ ಪರಿಕಲ್ಪನೆಯನ್ನು ಮೂಕವಾಗಿಸಿದೆ. ಮನೆಯಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಹೆಚ್ಚಿದೆ. ಅದೆಷ್ಟೋ ಮನೆಗಳಲ್ಲಿ ನಿರುದ್ಯೋಗ ಎನ್ನುವ ವೈರಸ್ ಕಣ್ಣೀರಾಗಿ ಹರಿಯುತ್ತಿದೆ. ಶಾಲೆಗಳಿಲ್ಲದೆ ಮಕ್ಕಳು ಬಳ್ಳಿಗೆ ಭಾರ ಎನ್ನುವಂತಾಗಿದೆ. ಹೆಣ್ಣು-ಗಂಡಿನ ನಡುವಲ್ಲಿ ಮಾಧುರ್ಯ ಕುರುಡಾಗಿದೆ, ಸಂಯಮ ಮನೆಬಿಟ್ಟು ಹೊರಟಿದೆ. ಅಹಂ ಅಸಹನೆಯಲ್ಲಿ ಮಾತಾಗುತ್ತಿದೆ. ಮೌನ ನೋವು ನುಂಗುತ್ತಿದೆ. “ಮೇಡಂ ನಿಮ್ಮನ್ನು ಮೀಟ್ ಮಾಡಬೇಕು” ಎಂದು ಫೋನ್‍ನಲ್ಲಿದ್ದವಳು ಕೇಳಿದಾಗ “ಈಗ ಕಷ್ಟ, ಲಾಕ್ದೌನ್ ಇದೆಯಲ್ಲ” ಎಂದೆ. “ನೀವೇ ಏನಾದರೂ ಸಲಹೆ ಕೊಡಿ, ನನ್ನಿಂದ ಇನ್ನು ಈ ಮದುವೆಯನ್ನು ತಡೆದುಕೊಳ್ಳಲು ಆಗುತ್ತಿಲ್ಲ” ಎಂದವಳ ಮದುವೆಗೆ ಮೂವತ್ತಾರು ತಿಂಗಳಷ್ಟೇ. “ಏನಾಯ್ತು?” ಎನ್ನುವ ಚುಟುಕು ಪ್ರಶ್ನೆಗೆ ಅವಳು “ ಮೇಡಂ ಆಫೀಸಿಗೆ ಹೋಗುತ್ತಿದ್ದಾಗ ಹೇಗೊ ಎರಡೆರಡು ಶಿಫ್ಟ್ ಹಾಕಿಸಿಕೊಂಡು ಮ್ಯಾನೇಜ್ ಮಾಡ್ತಿದ್ದೆ. ಆದರೆ ಈಗ ನಮ್ಮ ಆಫೀಸಿನಲ್ಲಿ ಇನ್ನೊಂದು ವರ್ಷ ಮನೆಯಿಂದಲೇ ಕೆಲಸ ಮಾಡಿ ಎಂದು ಬಿಟ್ಟಿದ್ದಾರೆ. ನನ್ನ ಗಂಡನಿಗೂ ಮನೆಯಿಂದಲೇ ಕೆಲಸ. ಜೊತೆಲಿರೋದು ಬಹಳ ಕಿರಿಕಿರಿ” ಎಂದು ಮುಂದುವರೆದಳು. “ ಹತ್ತು ನಿಮಿಷಕೊಮ್ಮೆ ನನ್ನ ಅತ್ತೆ ಊರಿನಿಂದ ಮಗನಿಗೆ ಫೋನ್ ಮಾಡ್ತಾರೆ. ಅವರಿಗೆ ನಾವಿಬ್ಬರು ಮನೆಲಿದ್ದೀವಿ ಒಟ್ಟಿಗೆ ಎಂದರೆ ಏನೋ ಇನ್ಸೆಕ್ಯುರಿಟಿ. ಏನೇನೋ ಮಗನ ಕಿವಿಗೆ ಊದುತ್ತಾರೆ. ಅದನ್ನು ಕೇಳಿಕೊಂಡು ನನ್ನ ಗಂಡ ಇಲ್ಲಸಲ್ಲದ್ದಕ್ಕೆ ಜಗಳ ಮಾಡ್ತಾನೆ. ಪ್ಲೀಸ್ ಏನಾದರು ಲೀಗಲ್ ರೆಮಿಡಿ ಹೇಳಿ ಮೇಡಂ” ಎಂದು ನನ್ನ ಕಿವಿ ತುಂಬಿಸಿದಳು. ಒಳ್ಳೆ ಅಡುಗೆ ಮಾಡಿಕೊಂಡು ತಿನ್ನಿ, ಪುಸ್ತಕ ಓದಿ, ಒಟ್ಟಿಗೆ ಟಿವಿ ನೋಡಿ, ರಾತ್ರಿಗಳನ್ನು ರಂಗಾಗಿಸಿಕೊಳ್ಳಿ ವಗೈರೆ ವಗೈರೆ ಸಲಹೆಗಳು ಲಾಕ್ಡೌನ್ ಕಾಲಘಟ್ಟದ ದಾಂಪತ್ಯಕ್ಕೆ ಅದೆಷ್ಟು ಪೇಲವ. ಒಂದೇ ಮುಖವನ್ನು ಸದೊಂಭತ್ತು ಕಾಲವೂ ನೋಡುತ್ತಿದ್ದರೆ ಆಕ್ಸಿಟೋಸಿನ್ ಹಾರ್ಮೋನ್ ತನ್ನ ಫ್ಯಾಕ್ಟರಿಯನ್ನು ಬಂದು ಮಾಡಿಬಿಡುತ್ತದೆ ಎನ್ನಿಸುತ್ತೆ. ಅಥವಾ ಸೈರಣೆಗೂ ಕೋವಿಡ್-19 ಆಕ್ರಮಣ ಮಾಡಿದೆಯೇನು? ಪರಸ್ಪರ ವಿಶ್ವಾಸ , ಗೌರವಗಳು ಆಷಾಢಕ್ಕೆ ತವರಿಗೆ ಹೋದವೇನು?! ಮನೆವಾರ್ತೆ ಸಹಾಯಕಿಯ ಹೆಸರು ರಾತ್ರಿ ಹತ್ತು ಗಂಟೆಗೆ ಮೊಬೈಲ್‍ನಲ್ಲಿ ಸದ್ದಾದಾಗ “ಓಹೋ ನಾಳೆ ಪಾತ್ರೆ ತೊಳೆಯಬೇಕಲ್ಲಪ್ಪಾ” ಎಂದು ಗೊಣಗಿಕೊಂಡು “ಏನು” ಎಂದೆ. ಅವಳು ಜೋರಾಗಿ ಅಳುತ್ತಾ “ಅಕ್ಕಾ ನಂಗೆ ಜೀವ್ನ ಸಾಕಾಯ್ತಕ್ಕ, ಏನಾರಾ ಮಾಡ್ಕೊಳವಾ ಅನ್ದ್ರೆ ಮಕ್ಕ್ಳ್ಮುಕ ಅಡ್ಡ ಬತ್ತದೆ” ಎಂದು ಗೋಳಾದಳು. “ ಮೊದ್ನಾಗಿದ್ದ್ರೆ ಬೆಳಗೆಲ್ಲಾ ಗಾರೆ ಕೆಲ್ಸುಕ್ಕ್ ಓಗಿ ಎನ್ಗೋ ಸನ್ಜೆಗೆ ಬಾಟ್ಲೀ ತಂದು ಕುಡ್ಕೊಂಡು, ಉಣ್ಣಕ್ಕಿಕ್ದಾಗಾ ಉಣ್ಣ್ಕೊಂಡು ಮನೀಕೊಳೋನು. ಈಗ ಮನೇಲೆ ಇರ್ತಾನೆ ಅಕ್ಕ. ಕುಡ್ಯಕ್ಕೂ ಸಿಂಕ್ತಿಲ್ಲ. ಸುಮ್ಕೆ ಇಲ್ಲ್ದಕೆಲ್ಲಾ ಕ್ಯಾತೆ ತಗ್ದು ಒಡಿತಾನೆ ಅಕ್ಕ. ಮೈಯಲ್ಲಾ ಬಾಸುಂಡೆ ಬಂದೈತೆ” ಅವಳು ಅಳುತ್ತಿದ್ದಳು. “ಅಳ್ಬೇಡ ಸುಮ್ಮ್ನಿರು. ಪೋಲಿಸ್ ಕಂಪ್ಲೇಂಟ್ ಕೊಡ್ತೀನಿ ಅನ್ನು” ಎನ್ನುವ ಸಲಹೆ ಕೊಟ್ಟೆ. “ ಉಂ, ಅಕ್ಕ ಅಂಗೇ ಏಳ್ದೆ ಅದ್ಕೆ ಈಗ ಲಾಕ್ಡೋನು ಯಾವ ಪೋಲೀಸು ಏನು ಮಾಡಲ್ಲ. ಅದೇನ್ ಕಿತ್ಕೋತೀಯೋ ಕಿತ್ಕೋ ಓಗು ಅಂದ ಕಣಕ್ಕ” ಎಂದು ಮುಸುಗುಟ್ಟಿದಳು. ಕರೋನಾದ ಕರಾಳ ಮುಖ ಕಾಣುತ್ತಿರುವುದು ಬರೀ ಆಸ್ಪತ್ರೆಗಳಲ್ಲಿ ಅಲ್ಲ ಅದೆಷ್ಟು ಗುಡಿಸಲು, ಶೆಡ್ಡುಗಳಲ್ಲೂ ವೆಂಟಿಲೇಟರ್ಗಳನ್ನು ಬಯಸುತ್ತಿದೆ ಬದುಕು. ವಿವಾಹ ಆಪ್ತಸಮಾಲೋಚನೆ ಎನ್ನುವ ವಿಷಯವನ್ನೇ ವಿದೇಶದ ಕಾಲೇಜುಗಳಲ್ಲಿ ಕಲಿಸಲಾಗುತ್ತದೆ. ಮದುವೆಗೆ ಮೊದಲೇ ವಧು-ವರ ಇಬ್ಬರಿಗೂ ಸಂಸಾರ ಎಂದರೆ ಏನು ಎಂದು ಹೇಳಿಕೊಡುವ, ಹೊಂದಾಣಿಕೆಯ ಪಾಠ ಮಾಡುವ ತರಬೇತಿ ಶಿಬಿರಗಳು ಈಗ ನಮ್ಮ ದೇಶದಲ್ಲೂ ವ್ಯಾಪಾರ ಮಾಡುತ್ತಿವೆ. ಮದುವೆಯಾದವಳಿಗೆ ಸ್ತ್ರೀಧನ ಹಕ್ಕು ತಿಳಿ ಹೇಳುತ್ತೆ ಕಾನೂನು. ದೇಹಗಳ ಸಮಾಗಮದ ಬಗ್ಗೆ, ಲೈಂಗಿಕ ಆರೋಗ್ಯದ ಬಗ್ಗೆ ಖುಲ್ಲಂಖುಲ್ಲಾ ವಿವರಿಸಲು ತಜ್ಞರಿದ್ದಾರೆ. ಗಂಡಹೆಂಡತಿಯರ ಜಗಳ ಉಂಡು ಮಲಗುವ ತನಕ ಎಂದು ಕಂಡುಕೊಂಡಿದ್ದ ಮನೆ ಹಿರೀಕರೂ ’ಸಲಹೆಕೋರ’ರಾಗಿದ್ದಾರೆ. ಕೌಟುಂಬಿಕ ನ್ಯಾಯಾಲಯ ಇದೆ, ಸಹಾಯವಾಣಿ ಕೆಲಸ ಮಾಡುತ್ತಿದೆ. ಸ್ನೇಹಿತರಿದ್ದಾರೆ. ಮನೆ ಕಟ್ಟುವವರಿದ್ದಾರೆ. ಮನಮುರುಕಿದ್ದಾರೆ. ಹಳೆ ಹುಡುಗಿ ನೆನಪೂ ಇದೆ ಹೊಸಗೂಸ ತೊಟ್ಟಿಲು ತೂಗುತ್ತಿದೆ. ಇಬ್ಬರಿಗೂ ಆಸ್ತಿ ಜಗಳವಿದೆ, ಮುನಿಸು ಕದನವೂ ಇದೆ. ಶಾಂತಿ ನೆಮ್ಮದಿ ಕುಂಟಿದರೂ ಮನೆ ಮೂಲೆಯಲ್ಲಿ ಇನ್ನೂ ಇದೆ. ಹೀಗೆ ’ಇರುವ’ ಇವರುಗಳು ಯಾರೂ ಊಹೆ ಮಾಡಿದ್ದಿರದ ಒಂದೇ ವಿಷಯ “ ಗಂಡ ಹೆಂಡತಿ ಹೆಚ್ಚು ಸಮಯ ಜೊತೆಯಲ್ಲಿ ಇದ್ದರೆ ಕೌಟುಂಬಿಕ ದೌರ್ಜನ್ಯ ಹೆಚ್ಚುತ್ತದೆ” ಎನ್ನುವುದು. ಮುಂದಿನ ವರ್ಷ ತಮ್ಮ ಮದುವೆಯ ಅರವತ್ತನೆಯ ವಾರ್ಷಿಕೋತ್ಸವಕ್ಕೆ ಖುಷಿಯಿಂದಲೇ ತಯಾರಿ ಮಾಡಿಕೊಳ್ಳುತ್ತಿದ ಆ ಯಜಮಾನನಿಗೆ ನಿತ್ಯವೂ ಕ್ಲಬ್‍ಗೆ ಹೋಗಿ ಒಂದು ಪೆಗ್ ಜೊತೆ ನಾಲ್ಕು ಸುತ್ತು ಇಸ್ಪೀಟಾಟ ಮುಗಿಸಿ ಸ್ನೇಹಿತರ ಜೊತೆ ಹರಟಿ ಬರುವುದು, ಮೂವತ್ತು ವರ್ಷಗಳಿಂದ ರೂಢಿಸಿಕೊಂಡಿದ್ದ ಹವ್ಯಾಸ. ಈಗಾತ ಹಿರಿಯ ನಾಗರೀಕ. ಕರೋನ ಹೊಸಿಲಲ್ಲೇ ಕುಳಿತಿದೆ. ಕ್ಲಬ್‍ಗೆ ಹೋಗುವುದು ಇನ್ನು ಕನಸಿನಂತೆಯೇ. ಯಜಮಾನನಿಗೆ ಈಗ ಜುಗುಪ್ಸೆ. ಸಿಟ್ಟು ತೋರಿಸಲು ಮನೆಯಲ್ಲಿ ಇರುವುದು ಎಂಭತ್ತರ ಹೆಂಡತಿ ಮಾತ್ರ. ಆಕೆ ಈಗ ದೂರದೇಶದ ಮಗಳು ಅಳಿಯನಿಗೆ ನಿತ್ಯವೂ ಫೋನ್ ಮಾಡಿಕೊಂಡು ಅಳುತ್ತಾರೆ. “ಇವರ ಬೈಗುಳ ತಡೆಯಕ್ಕಾಗ್ತಿಲ್ಲ” ಎಂದು ಗೋಳಿಡುತ್ತಾರೆ. ವಯಸ್ಸು ನಡೆದಂತೆ ಮನಸ್ಸು ಕೂರುವುದು ಎಂನ್ನುವ ನಂಬಿಕೆ ಇದ್ದ ದಾಂಪತ್ಯಗಳಲ್ಲಿ ಈಗ ಕರೋನ ಮಾಗುವಿಕೆಯನ್ನು ಅನಿರ್ಧಿಷ್ಟ ಕಾಲಕ್ಕೆ ಮುಂದೂಡಿದೆ. ಅದೆಷ್ಟೋ ವರ್ಷಗಳ ಹಿಂದೆಯೇ ಹಳ್ಳಿ ಬಿಟ್ಟು ಪಟ್ಟಣ ಸೇರಿದ ಇವನು ಈ ಊರಿನಲ್ಲಿಯೇ ಟ್ಯಾಕ್ಸಿ ಓಡಿಸುತ್ತಲೇ ಒಂದು ಸೈಟು, ವಾಸಕ್ಕೆ ಮನೆ ಮತ್ತು ಮದುವೆಯನ್ನೂ ಮಾಡಿಕೊಂಡ. ಈಗ ಒಂದು ವರ್ಷದಲ್ಲಿ ತಮ್ಮನನ್ನು ಅವನಾಕೆಯನ್ನೂ ಕರೆಸಿಕೊಂಡು ತನ್ನ ಬಳಿಯೇ ಇರಿಸಿ ಕೊಂಡಿದ್ದಾನೆ. ತಮ್ಮನಿಗೆ ಅಪಾರ್ಟ್‍ಮೆಂಟ್ ಒಂದರಲ್ಲಿ ಸೆಕ್ಯುರಿಟಿ ಕೆಲಸ ನಾದಿನಿಗೆ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಕೊಡಿಸಿ ನೆಮ್ಮದಿಯ ಮೀಸೆ ತಿರುವುತ್ತಾ ಸುಖದಿಂದ ಇದ್ದ. ಬಸುರಿ ಹೆಂಡತಿ ಮೊದಲ ಮಗುವಿನೊಡನೆ ಊರಿಗೆ ಹೋದೊಡನೆ ಲಾಕ್ಡೌನ್ ಬಂತು. ಮನೆಯಲ್ಲಿನ ಮೂವರೂ ಈಗ ಬರಿಗೈಯಾಗಿದ್ದಾರೆ. ಹತ್ತಿದ ಜಗಳ ಹರಿಯುತ್ತಿಲ್ಲ. ಅಣ್ಣತಮ್ಮರ ಜಗಳದ ನಡುವೆ ಬಿಡಿಸಲು ಹೋದವಳ ತಲೆಗೆ ಹಾರೆಯೇಟು ಬಿದ್ದಿದೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಅಜ್ಞಾವಸ್ಥೆಯಲ್ಲಿ ಬಿದ್ದಿದ್ದಾಳೆ. ಮದುವೆ ಇಲ್ಲದ ಮೂವರು ಅಕ್ಕಂದಿರು ಅವರ ಹಾಸಿಗೆ ಹಿಡಿದ ತಾಯ್ತಂದೆಯರು ನಡುವೆ ಮನೆಗೊಬ್ಬನೇ ಕುಲೋದ್ಧಾರಕ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾನೆ. ಬಾಲ್ಯದಿಂದಲೂ ಅಕ್ಕಂದಿರ ಮಾತಿಗೆ, ಬಿರುಸಿಗೆ ನಲುಗಿದ್ದವ ಒಂದ್ನಾಲ್ಕು ವರ್ಷವಾದರೂ ಎದೆ ಪೂರ್ತಿ ಉಸಿರು ತುಂಬಿಕೊಳ್ಳಲು ಬಯಸಿದ್ದ. ಮೊನ್ನೆ ಜನವರಿಯಲ್ಲಿ ಅವನ ಕಂಪನಿಯವರು ಒಂದು ಪ್ರಾಜೆಕ್ಟಿಗೆ ಇವನನ್ನು ಮುಖ್ಯಸ್ಥನನ್ನಾಗಿಸಿ ಸಿಂಗಾಪೂರಿಗೆ ವರ್ಗಾವಣೆ ನೀಡಿದ್ದರು. ಉತ್ಸಾಹದಲ್ಲಿ ಹೊರಟಿದ್ದವನೀಗ ವರ್ಗಾವಣೆಯ ರದ್ದತಿ ಪತ್ರ ಮಾತ್ರ ಹಿಡಿದಿಲ್ಲ, ಕೆಲಸ ಕಳೆದುಕೊಳ್ಳುವ ಭಯವನ್ನೂ ಹೊತ್ತು ಕುಳಿತಿದ್ದಾನೆ. ಹೌದು, ಕುಟುಂಬ ಎಂದರೆ ಕೇವಲ ಗಂಡ ಹೆಂಡಿರಲ್ಲ ಅದಕ್ಕೇ ದೌರ್ಜನ್ಯ ಎಂದರೂ ಅವರಿಬ್ಬರ ನಡುವಿನದ್ದು ಮಾತ್ರವಲ್ಲ. ಭೂಗೋಳದ ಈ ಭಾಗ “ಸಂಬಂಧಗಳು ಋಣದಿಂದ ಆಗುವುದು” ಎಂದು ನಂಬಿದ್ದರೆ ಆ ಭಾಗ “ಮದುವೆಗಳು ಸ್ವರ್ಗದಲ್ಲಿ ನಿರ್ಧಾರವಾಗುತ್ತವೆ” ಎಂದು ನೆಚ್ಚಿದೆ. ಆದರೆ ಬಂದೆರಗಿರುವ ವೈರಸ್ ಮಾತ್ರ ಜಗತ್ತು ದುಂಡಗಿದೆ ಮತ್ತು ಮನುಷ್ಯ ಮೂಲಭೂತವಾಗಿ ಒಂದು ಪ್ರಾಣಿ ಮಾತ್ರ ಎನ್ನುವ ಸತ್ಯವನ್ನು ಬೇಧವಿಲ್ಲದೆ ಪುನಃಪ್ರಸಾರ ಮಾಡುತ್ತಿದೆ. ಅರ್ಥಶಾಸ್ತ್ರಜ್ಞರು ಕೋವಿಡ್-19ಗಾಗಿಯೇ ಇನ್ಸ್ಯೂರೆನ್ಸ್ ತೆಗೆದುಕೊಳ್ಳಿ ಎನ್ನುತ್ತಿದ್ದಾರೆ. ಸೀಲ್‍ಡೌನ್ ಆಗಿರುವ ಸಂಬಂಧಗಳು ಕೌಟುಂಬಿಕ ದೌರ್ಜನ್ಯದಲ್ಲಿ ನೊಂದವರಿಗೆ ಯಾವುದಾದರೂ ವಿಮೆ ಇದೆಯೇ ಎಂದು ಹುಡುಕುತ್ತಿವೆ. ಅವಳಿಗೆ ಹದಿಮೂರುಹದಿನಾಲ್ಕು ವರ್ಷ ವಯಸ್ಸಿರಬೇಕು. ಮೂಕಿ ಕಿವುಡಿ ಹುಡುಗಿ. ಸಣ್ಣ ಕೋಣೆಯ ಮನೆಯಲ್ಲಿ ಕೆಲಸ ಕಳೆದುಕೊಂಡ ಹನ್ನೊಂದು ಜನ ಇರಬೇಕಾದ ಪ್ರಸ್ತುತತೆ. ಭಾರ ಕಳಚಿಕೊಳ್ಳಲು ಇವಳ ಕೈಮೇಲೆ ಹೆಸರು, ಊರಿನ ಹಚ್ಚೆ ಹಾಕಿಸಿ ಯಾವುದೋ ರೈಲು ಹತ್ತಿಸಿ ಮನೆಯವರೇ ಕಳುಹಿಸಿಬಿಟ್ಟಿದ್ದಾರೆ. ಪ್ರೀತಿ, ಸಾಹಚರ್ಯ ಎಲ್ಲಾ ಅನಿವಾರ್ಯದ ಕೈಗೆ ಸಿಕ್ಕಿ ವಿರುದ್ಧ ದಿಕ್ಕಿನಲ್ಲಿ ಪ್ರಯಾಣ ಬೆಳಿಸಿವೆ. ಮೊದಲೆಲ್ಲಾ ಇವುಗಳಿಗೆ ಯಾರೋ ತುತ್ತುಣಿಸಿ ಮತ್ತ್ಯಾರೋ ನೀರು ಹನಿಸುತ್ತಿದ್ದರು. ಆದರೀಗ ಸಹಾಯ ಹಸ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದೆ. ಅಮ್ಮನಿಗೆ ಅಪ್ಪ ಬೇಡವಾಗಿದ್ದಾನೆ, ಅವನಿಂದ ಮಕ್ಕಳು ದೂರವಾಗಿದ್ದಾರೆ, ಅಣ್ಣತಮ್ಮಂದಿರ ಫೋನ್ ಕರೆನ್ಸಿ ಖಾಲಿಯಾಗಿದೆ. ವಾರೆಗಿತ್ತಿ ನಾದಿನಿಯರು ತಮ್ಮತಮ್ಮ ಸ್ಥಿತಿಗಳನ್ನು ತಕ್ಕಡಿಯಲ್ಲಿ ತೂಗುತ್ತಿದ್ದಾರೆ. ಸಚಿವ, ವೈದ್ಯ, ಉಪಾಧ್ಯಾಯ, ಪೋಲೀಸ್, ಪುರೋಹಿತ ಯಾರನ್ನೂ ಬಿಟ್ಟಿಲ್ಲ ಎಂದು ಕೂಗುತ್ತಿದ್ದ ಮಾಧ್ಯಮಗಳಿಗೂ ಕರೋನ ಆಸ್ಪತ್ರೆಯಲ್ಲಿ ವಾರ್ಡ್ ಖಾಲಿ ಇಲ್ಲ ಎನ್ನುವ ಬೋರ್ಡ್ ಎದುರಾಗುತ್ತಿದೆ. ಇವರೆಲ್ಲರಿಗೂ ಕುಟುಂಬ ಇದೆ. ನಾಲ್ಕು ಗೋಡೆಗಳ ಮಧ್ಯೆ ದೌರ್ಜನ್ಯ ವಲಸೆ ಹೋಗಲೂ ಆಗದೆ ಕಾರ್ಮಿಕನಂತೆ ನೋಯುತ್ತಿದೆ, ನೋಯಿಸುತ್ತಿದೆ. ಆದರೂ ಪ್ರಪಂಚ ಕುಟುಂಬವನ್ನು ಹಿಡಿದಿಡುವ ಪ್ರಯತ್ನ ಬಿಟ್ಟಿಲ್ಲ. ಅದಕ್ಕೇ ಮಾನಸಿಕ ತಜ್ಞರು ತಾವು ಸಹಾಯ ಮಾಡಲು ತಯಾರಿದ್ದೇವೆ ಎಂದು ಸಹಾಯವಾಣಿಗಳ ಮೂಲಕ ಕೂಗಿ ಹೇಳುತ್ತಿದ್ದಾರೆ. ಸಹಾಯ ಬೇಕಿದ್ದವರು ನೆವ ಹೇಳದೆ ಪಡೆಯಬೇಕಿದೆ ಅಷ್ಟೆ. ******************************** ಲೇಖನ ಕೃಪೆ:ಮೈಸೂರಿನ ಆಂದೋಲನ ಪತ್ರಿಕೆ ಮತ್ತು ಅಸ್ಥಿತ್ವ ಲೀಗಲ್ ಬ್ಲಾಗ್
ಲಾಕ್ಡೌನ್ ಕಾಲಘಟ್ಟದ ದಾಂಪತ್ಯ Read Post »
ಪರಿಣಾಮ
ಲೇಖನ ಪರಿಣಾಮ ಡಾ. ಅರಕಲಗೂಡು ನೀಲಕಂಠ ಮೂರ್ತಿ ಮನುಷ್ಯ ಸಾಮಾನ್ಯವಾಗಿ ಯಾವುದೇ ಕೆಲಸ ಮಾಡಬೇಕಾದರೆ, ಅಥವ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು, ಅದರ ಪರಿಣಾಮದ ಬಗ್ಗೆ ಖಂಡಿತ ಕೂಲಂಕುಷವಾಗಿ ಚಿಂತಿಸುತ್ತಾನೆ. ಆದರೆ ಎಂಥ ಸಂದರ್ಭಗಳಲ್ಲೂ ಸಹ ಕೆಲವರು, ಉಡಾಫೆ ಬದುಕಿನವರು, ಪ್ರಪ್ರಥಮವಾಗಿ ಆಳವನ್ನೂ ಅಂದಾಜಿಸದೆ, ನೇರ ಭಾವಿಗೇ ದಿಢೀರಂತ ಧುಮಿಕಿಬಿಡುತ್ತಾರೆ. ನಂತರ ಪರಿಣಾಮದತ್ತ ಗಮನ ಹರಿಸಿದ ಹಾಗೆ, ಕೈಕಾಲುಗಳನ್ನು ಆತುರಾತುರವಾಗಿ ಬಡಿಯತೊಡಗುತ್ತಾರೆ. ಆಗ ತುಂಬ ತಡವಾಗಿ ಪಶ್ಚಾತ್ತಾಪ ಪಟ್ಟು ಸಂಕಟದ ಕೆಸರೊಳಗೆ ಒದ್ದಾಡುತ್ತಾರೆ. ಬಹಳ ಒಳ್ಳೆಯ, ಆದರೆ ದಿನನಿತ್ಯದ ನಮ್ಮನಿಮ್ಮೆಲ್ಲರ ನಿದರ್ಶನದಿಂದಲೇ ಆರಂಭಿಸೋಣ. ನಾವೆಲ್ಲ ಆಗಾಗ್ಗೆ ಕ್ಷೌರಕ್ಕಾಗಿ ಹೋಗುತ್ತೇವೆ. ತನ್ನ ಕಾಯಕದಲ್ಲಿ ನೈಪುಣ್ಯ ಇಲ್ಲದ ಯಡವಟ್ಟನ ಹತ್ತಿರ ಅಕಸ್ಮಾತ್ ಹೋದರೆ, ನಿಮ್ಮ ಕೂದಲನ್ನು ಕುರಿಯ ಉಣ್ಣೆ ಕೆರೆದಂತೆ, ಜೋಕರ್ ಕಟಾವು ಮಾಡಿ ಎಲ್ಲರೆದುರು ನಗೆಪಾಟಲಿಗೆ ಕಾರಣ ಮಾಡುತ್ತಾನೆ. ಏಕೆ? ನೀವು ಅಂಥ ಕಡೆ ಹೋದ ಪರಿಣಾಮ! ಆದ್ದರಿಂದ ಈ ಪರಿಣಾಮ ಎಂಬುದು ಯಕಃಶ್ಚಿತ್ ಪದವೇ ಆಗಿದ್ದರೂ, ಅದರ ಪ್ರಭಾವ ಮಾತ್ರ ಅಗಾಧ. ಎಂಥ ಅಲ್ಲೋಲಕಲ್ಲೋಲ ಸೃಷ್ಟಿಸಿ ಮುಜುಗರಕ್ಕೆ ನೂಕುತ್ತದೆ ಅಲ್ಲವೇ? ಅಲ್ಲಾರೀ, ಅದು ನೀವೇ ದಿನ ಶೇವ್ ಮಾಡುವಾಗ, ಸೈಡ್ ಬರ್ನ್ಸ್ ಅಕಸ್ಮಾತ್ ವ್ಯತ್ಯಾಸ ಆದರೆ ನಿಮಗೇ ಹಿಂಸೆ ಅಲ್ಲವೇ, ಹಾಗೆ…”Patriotism is the last refuge of a scoundrel”. “ದೇಶಭಕ್ತಿ ಅಥವ ರಾಷ್ಟ್ರಪ್ರೇಮ ಎಂಬುದು ಒಬ್ಬ ದುಷ್ಟ ಮನುಷ್ಯನ ಅಂತಿಮ ಆಶ್ರಯ”.(Scoundrel = ನೀಚ, ಲುಚ್ಚ, ದುಷ್ಟ, ದಗಾಕೋರ, ದಗಲ್ಬಾಜಿ…New Modern Dictionary; Eglish-English-Kannada) ಎಂಬ ಪ್ರಸಿದ್ಧವಾದ ಹೇಳಿಕೆ ಘೋಷಿಸಿದ್ದು ಡಾ. ಸ್ಯಾಮ್ಯುಯಲ್ ಜಾನ್ಸನ್ ಅವರು. ಅಂತಹ ವ್ಯಕ್ತಿ ಹೇಳಿದ್ದರ ಪರಿಣಾಮ ಜಗತ್ತಿನಾದ್ಯಂತ ದೇಶಭಕ್ತರು ಇಲ್ಲವೇ ಇಲ್ಲವಾಗಿಬಿಟ್ಟರೆ? ಹಾಗೇನೂ ಖಂಡಿತ ಇಲ್ಲವಲ್ಲ! ವಾಸ್ತವ ಏನೆಂದರೆ ಇನ್ನೂ ವಿಪುಲ, ಬಣ್ಣಬಣ್ಣದ ಭಕ್ತ ಶಿರೋಮಣಿಗಳೇ ಜನ್ಮ ತಾಳಿದ್ದಾರೆ; ಈಗಲೂ ಸಹ ದಿಢೀರನೆ ಕಂಡಕಂಡಲ್ಲೆಲ್ಲ ಪ್ರತ್ಯಕ್ಷ ಆಗುತ್ತಲೇ ಇದ್ದಾರೆ/ಇರುತ್ತಾರೆ. ಎಲ್ಲೆಲ್ಲೂ ಭಕ್ತಿಯ ಹೆಸರಿನ ನಾಮ ಹಚ್ಚಿಕೊಂಡ ಭಾರಿ ಭಕ್ತಿಯ “ಭುಕ್ತ”ರೂ ಅನಂತವಾಗಿದ್ದಾರೆ. ಮುಂದೂ ಇದ್ದೇ ಇರುತ್ತಾರೆ — ಭಕ್ತಿ ಅಲ್ಲವೇ? ಅದೂ ದೇಶಕ್ಕಾಗಿ! ಪರಿಣಾಮ…?ಆ ಪ್ರಸಿದ್ಧ ಡಾ. ಜಾನ್ಸನ್ ಅವರು ಹಾಗೆ ಹೇಳಿದ್ದು ಉಪಯೋಗ ಇಲ್ಲ ಅಂತಲೇ ಅಥವ ಅಂಥ ಕೆಲಸಕ್ಕೆ ಬಾರದ ಹೇಳಿಕೆಗಳು ಯಾರಿಗೆ ಬೇಕು; ಉಪ್ಪು ಕಾರ ಹುಳಿ ಇಲ್ಲದ ಮೇಲೆ ಅಂತಲೇ? ಹಾಗಾದರೆ ಅವರ ನಂತರ ಬಂದ ಇನ್ನೊಬ್ಬ ಮಹನೀಯರಾದ ಜಾರ್ಜ್ ಬರ್ನಾರ್ಡ್ ಷಾ ಅವರು ಜಾನ್ಸನ್ ಹೇಳಿದ್ದನ್ನೇ ಇನ್ನೂ ಉತ್ತಮ ಪಡಸಿ,”Politics is the last refuge of a scroundrel” ಅಂತ, ಅಂದರೆ, “ಒಬ್ಬ ದಗಾಕೋರನ ಅಂತಿಮ ಆಶ್ರಯ ರಾಜಕೀಯ” ಅಂದಿದ್ದರು. ಪರಿಣಾಮ! ಬರ್ನಾರ್ಡ ಷಾ ಅಂತಹ ಮಹಾನ್ ವ್ಯಕ್ತಿಯ ಉವಾಚ, ರಾಜಕೀಯಕ್ಕೇ ಯಾರೂ ಬರದ ಹಾಗೇನೂ ಮಾಡಿಲ್ಲವಲ್ಲ! ಬದಲಿಗೆ ಸ್ಕೌಂಡ್ರೆಲ್ ಗಳಿಗಾಗಿಯೇ ಮತ್ತೊಂದು ನವೀನ ನಮೂನೆಯ ಶ್ರೇಣಿಯನ್ನೇ ಸೃಷ್ಟಿಸಲಾಗಿದೆ, ಬಹುಷಃ! ಅದರಲ್ಲಿಯೂ ಅತ್ಯಂತ ಕೆಳ ಸ್ತರದ, ಅಂದರೆ ಸ್ಕೌಂಡ್ರೆಲ್ ಗಳಲ್ಲೇ ಅತ್ಯಂತ ಕೊನೆ ಬೆಂಚಿನ ಹಂತದಲ್ಲೇ ಕೂರುವ ಸ್ಕೌಂಡ್ರೆಲ್ ಅಂಥವರೇ ಈಗ ಅಧಿಕ! ಕೌರವರೊಳ್ ಕೆಳದರ್ಜೆ ಕೌರವರಾಗಿ, ಇನ್ನೂ ಭಯಂಕರ ಆಯುಧಗಳನ್ನು ಹೆಗಲುಗಳಲ್ಲಿ ಹೊತ್ತುಕೊಂಡೇ ರಾಜಕೀಯ ಎಂಬ ಕುರುಕ್ಷೇತ್ರಕ್ಕೆ ಧುಮುಕುತ್ತಿಲ್ಲವೇ? ಪರಿಣಾಮ? ಪಾಪ ನೊಬೆಲ್ ಪಾರಿತೋಷಕ ಪಡೆದೂ ಬರ್ನಾರ್ಡ್ ಷಾ ಅವರ ಬೆಲೆ ಕುಲಗೆಟ್ಟ ನೀರಿನಲ್ಲಿ ಅದ್ದಿ ಬಿಸಾಡಿದ ಕಳಪೆ ಡಿಗ್ರಿಗಳ ಹಾಗೇನು? ಖಂಡಿತ ಇಲ್ಲ.ಅಂದಮೇಲೆ ಈ ಪರಿಣಾಮ ಎಂಬ ಮಹಾನ್ ಮಾಂತ್ರಿಕ ‘ದಂಡ’ಕ್ಕೆ ಬೆಲೆ ಕಿಂಚಿತ್ತೂ ಇಲ್ಲ ಅಂತಲೇ? ಇದ್ದರೆ ಅದಕ್ಕೂ ಒಂದು ‘ಪರಿಮಾಣ’ ಅಂತ ಇರಬೇಕಲ್ಲವೇ?ಇಂದಿನ ಕಾಲಖಂಡದಿಂದ ಏಕದಂ ಅಂದಿನ ಮಹಾಭಾರತ ಸಂದರ್ಭದ ಶಕುನಿ ಮಹಾಶಯನ ಕೃತ್ರಿಮ ಮಾಯಾದಂಡ ಎಂಬ ಆ ಪಗಡೆ ಮತ್ತು ಅದರ ಆಟದ ಕಡೆ ಸ್ವಲ್ಪ ಹೊರಳೋಣ. ದುರ್ಯೋಧನ ತನ್ನ ಸಾಮ್ರಾಜ್ಯದ ಮತ್ತು ಚಕ್ರಾಧಿಪತ್ಯದ ದುರಾಸೆಗೆ, ಮತ್ತದನ್ನು ಪೋಷಿಸುವ ತನ್ನ ಮಾವನ ಕುಟಿಲ ಮಾತಿಗೆ ಬದ್ಧನಾಗಿ ಪಗಡೆ ಆಟ ಆಡಲು ಪಾಂಡವರಿಗೆ ಆಹ್ವಾನ ಕಳಿಸಿದ. ಅದನ್ನು ತಿರಸ್ಕರಿಸುವ ಅಧಿಕಾರ ಸಾಮ್ರಾಟನಾಗಿದ್ದ ಧರ್ಮರಾಯನಿಗೆ ಖಂಡಿತ ಇತ್ತು. ಹಾಗಾಗಿದ್ದರೆ, ಆ ‘ಪರಿಣಾಮ’ವೇ ಬೇರೆ ಆಗುತ್ತಿತ್ತು. ಬಹುಷಃ ಯುದ್ಧ ಇಲ್ಲದೇ ಇದ್ದಿದ್ದರೆ ಆಗ ಅದು ಮಹಾಭಾರತ ಹಾಗಿರಲಿ, ಬದಲಿಗೆ ಒಂದು ಸಣ್ಣ ಭಾರತ ಕತೆಯೂ ಆಗುತ್ತಿರಲಿಲ್ಲ, ಅಲ್ಲವೇ? ಜನ ಈಗ ಹೇಗೆ ಕಪ್ಪುಬಿಳುಪು ಸಿನಿಮಾ ನೋಡಲು ನಿರಾಕರಿಸುತ್ತಾರೋ, ಹಾಗೆ ಯಾರೂ ಅದನ್ನು ರಾತ್ರಿಯೆಲ್ಲ ಕಣ್ಣಿಗೆ ಎಣ್ಣೆ ಸುರಿದುಕೊಂಡು ನೋಡುತ್ತಿರಲಿಲ್ಲ ಅಲ್ಲವೇ. ಅಷ್ಟೇ ಅಲ್ಲ; ಫೈಟಿಂಗೇ ಇಲ್ಲ ಅಂದಮೇಲೆ ಅಂಥ ಸಿನಿಮಾ ತಾನೆ ಯಾರು ಮೂಸುತ್ತಾರೆ ಅನ್ನುವ ಹಾಗೆ (ಅದು ಕನ್ನಡ ಸಿನಿಮಾದ ನಿರ್ಮಾಪಕರ ತರ್ಕ ಅನ್ನುವುದೇ ವಿಪರ್ಯಾಸ!); ಅದೇ ನೋಡಿ ಆ ಪಗಡೆಯ ‘ಮಹಾಪರಿಣಾಮ’! ಶಕುನಿಮಾವ, ದುರ್ಯೋಧನ, ದೃತರಾಷ್ಟ್ರ ಮುಂತಾದ ಇನ್ನೂ ಅನೇಕರೆಲ್ಲ ಪರಿಣಾಮಗಳ ಒಡೆಯರು! ಕುರುಕ್ಷೇತ್ರ ಯುದ್ಧದ ಫಲಿತಾಂಶವೇ ಒಡೆತನ! ಅದೇ ರೀತಿಯ ಒಡೆಯರು/ಒಡೆತನಗಳು ಪುಂಖಾನುಪುಂಖವಾಗಿ ಕಾಲಕಾಲಕ್ಕೆ ಜನುಮ ಅಂತ ತಳೆದರೆ ತಾನೆ ಇತಿಹಾಸದ ಸೃಷ್ಟಿ! ಅನೇಕ ಬಾರಿ ಅಂತಹ ಇತಿಹಾಸ ‘ಮಹಾಹಾಸ್ಯ’ ಆಗುವುದೂ ಅಥವಾ ಸುಳ್ಳುಗಳನ್ನೇ ಪೋಣಿಸಿದ ಸರಪಟಾಕಿ ಕೂಡ ಆಗುವುದು ಇರಬಹುದು… ಪರಿಣಾಮ ಅನ್ನೋದು ಬಹುಷಃ ಮಾಯಾಚಾಪೆ ಥರ. ಮೇಲಕ್ಕೆ ಏರಿಸಲೂಬಹುದು, ಕೆಳಕ್ಕೆ ಧೊಪ್ಪಂತ ಎತ್ತಿ ಹಾಕಲೂಬಹುದು. ಹಾಗಾಗಿ ಪ್ರತಿ ಕೆಲಸದಲ್ಲೂ, ಪ್ರತಿ ಹಂತದಲ್ಲೂ ಒಂದೊಂದು ರೀತಿ ಪರಿಣಾಮದ ಪರಿಮಾಣ ಇದ್ದೇ ಇರುತ್ತದೆ. ಹಾಗಾಗಿ ಈ ಪರಿಣಾಮದ ತಕ್ಕಡಿಯಲ್ಲಿ ಯಾವುದಾದರೂ ಒಂದು ಕಡೆಗೆ ಯಕಃಶ್ಚಿತ್ ಜಾಸ್ತಿ ಆದರೂ ಆ ತಕ್ಕಡಿಯ ಪರಿಮಾಣ ವ್ಯತ್ಯಾಸವಾಗಿ ಆ ಒಂದು ಕಡೆಯ ತಟ್ಟೆ ಅಷ್ಟು ಕೆಳಕ್ಕೆ ಕುಸಿಯುತ್ತದೆ. ಆದರೆ ಅಲ್ಲಿ, ಅಂದರೆ ಆ ತಕ್ಕಡಿಯ ವಿಷಯದಲ್ಲಿ ಅದು ಕೆಳಕ್ಕಿಳಿದಷ್ಟೂ ಬೆಲೆ! “ಬೇಡ ಬೇಡ ಅಂದರೂ ಕೇಳಲಿಲ್ಲ. ನಿಮ್ಮಂಥ ಗಂಡಸರೇ ಹಾಗೆ. ಎಲ್ಲಿ ಹೆಂಡತಿ ಮಾತು ಕೇಳಿ ಬಿಟ್ಟರೆ ತಮ್ಮ ತಲೆಮೇಲಿರೋ ಕೋಡಿಗೆ ಧಕ್ಕೆ ಆಗುತ್ತೋ ಅಂತ. ಜೊತೆಗೆ ದುರಾಸೆ ಬೇರೆ. ಹಣ ಹಣ ಹಣ ಅಂತ ಮತ್ತು ಹತ್ತಿರದ ನಂಟುಕಣೇ ಅಂತೆಲ್ಲಾ ಒಗ್ಗರಣೆ ಹಾಕಿ, ಮಗನಿಗೆ ಈ ಬೊಂಬಾಯಿ ತಂದು ಕಟ್ಟಿದಿರಿ. ಪರಿಣಾಮ ನೀವೇ ಉಣ್ಣುತ್ತಾ ಇದ್ದೀರಿ…!” ಇದು ಒಂದು ಮನೆಯ ಕಥೆ ಪರಿಣಾಮ. ಇನ್ನೊಬ್ಬರ ಮನೇಲಿ: “ಕನ್ನಡ ಕನ್ನಡ ಅಂತ ಕನ್ನಡ ಭಕ್ತರ ಥರ ಮೇಲೆ ಕೆಳಗೆ ಕುಣಿದಿರಿ; ಈ ಸರ್ಕಾರಿ ಸ್ಕೂಲಿಗೆ ಅಷ್ಟು ಚನ್ನಾಗಿ ಓದೋ ಮಗೂನ ಸೇರಿಸಿದಿರಿ. ಪರಿಣಾಮ ನಿಮ್ಮೆದುರಿಗೇ ನರ್ತನ ಮಾಡ್ತಾ ಇದೆ ಕಣ್ತುಂಬ ನೋಡ್ಕೊಳಿ! ಕಾನ್ವೆಂಟಿಗೆ ಸೇರಿಸಿದರೆ ದುಡ್ಡು ಖರ್ಚು ಅಂದರಿ. ನೀವು ದುಡಿಯೋದಾದರೂ ಯಾರಿಗಾಗಿ…ಛೆ!” ಮತ್ತೊಂದು ಕಡೆ: “ಸ್ವಲ್ಪ ಲಂಚ ಅಂತ ಕೊಟ್ಟರೂ ಪರವಾಗಿಲ್ಲ, ಮಗನಿಗೆ ಒಳ್ಳೆ ಕೆಲಸ ಕೊಡಿಸಿ ಅಂತ ಬೇಡ್ಕೊಂಡೆ. ಕೇಳಿದ್ರಾ, ಊಹ್ಞು! ಹರಿಶ್ಚಂದ್ರನ ಮೊಮ್ಮಗನ ಥರ ಒಂದೇ ಒಂದು ಗೆರೆ ಅಷ್ಟೂ ಮುಂದುವರೀಲಿಲ್ಲ. ಪರಿಣಾಮ ನೋಡಿ ನಿಮಗೇನೂ ಹೊಟ್ಟೇನೇ ಉರಿಯೋಲ್ಲವೆ? ಎಲ್ಲೆಲ್ಲಿಯೋ ಕೆಲಸ ಕೆಲಸ ಅಂತ ಅಲೆದೂ ಅಲೆದೂ ಸೋತು ಹೋದ ಮಗ. ನಿಮ್ಮ ಮಗಾನೇ ರೀ ಅವನು…!” ಇಂತಹ ಪರಿಣಾಮಗಳಿಂದಾದ ಅನಂತ ವಿಧವಿಧದ ಪ್ರಭಾವಗಳು ಎಲ್ಲರ ಬದುಕಿನಲ್ಲೂ ಯಥೇಚ್ಛ! ಈಗ ಸ್ವಲ್ಪ ವಿರುದ್ಧ ದಿಕ್ಕಿನತ್ತಲೂ ಹೊರಳೋಣ. ಅಕಸ್ಮಾತ್ ಗಂಡಸರ ಬದಲು ಹೆಂಗಸರು ದುಡಿಯುತ್ತಿದ್ದರೆ ಮತ್ತು ಮನೆಯ ರಥ ಉರುಳಿಸುವ ಕಾಯಕ ಅವರ ಕೈಲಿ ಇದ್ದಿದ್ದರೆ…ರೆ? ಆಗ! ಒಂದು ರೀತಿಯಲ್ಲಿ ಅದು ಒಳ್ಳೆಯದೇ ಆಗುತ್ತಿತ್ತು; ಬಹುಷಃ. ಮೊದಲಿಗೆ ದಿನದಿನವೂ ‘ಬಾರ್’ ಗಾಗಿ ಅಂತ ಅಥವ ಒಂದೆರಡು ಪೆಗ್ಗು, ಗಡಂಗಿಂದ ತಂದು ಮನೆಯಲ್ಲೇ ಅಂತಲೋ, ಆ ಗಂಡು ಎಂಬ ದೈನಾಸ ಹೇಗೆ ತಾನೆ ಕುಗ್ಗಿ ಕುಗ್ಗಿ ಹೆಂಡತಿಯನ್ನ ಬೇಡುವುದು? ಮತ್ತು ಬೀಡಿ ಸಿಗರೇಟು ಮುಂತಾದ ಗತಿ? ಪೆಗ್ಗೇ ಭಿಕ್ಷೆ; ಇನ್ನು ಅದರ ಮೇಲೆ ದಮ್ಮು ಅಂತ ಬೇರೆ! ಯಾವ ಯಜಮಾನಿ ತಾನೆ ಕೊಟ್ಟುಬಿಡ್ತಾಳೆ? ಪರಿಣಾಮ ಅಲ್ಲಿ ಆಗಾಗ ಉಳಿತಾಯ – ಅದು ಎಷ್ಟೇ ಕನಿಷ್ಠ ಇರಲಿ. ಅಷ್ಟೇ ಅಲ್ಲ; ಕಳಸಪ್ರಾಯದಂತೆ ಯಾವ ಯಜಮಾನಿ ಹೆಣ್ಣು ತಾನೆ ಬಾರಿಗೆ ಹೋಗುವಳು? ಅಲ್ಲೂ ಉಳಿತಾಯ! ಇತ್ತೀಚೆಗೆ ಈ ಸ್ತರದಲ್ಲಿ ಸಹ ವಿಮೋಚನೆಯ ಹವಾ ಬೀಸಿ ಬೀಸಿ ಆನಂದ ಆಗ್ತಾ ಇದೆ! ಅದು ಬೇರೆ ಮಾತು; ಲಿಬರೇಷನ್ ಕಾಂಡ! ಆದರೆ…ಹೌದು, ಹಾಗಂತ ಅವರೇನೂ ಅವರ ಗಂಡುಮಕ್ಕಳ ಮದುವೆಯ ವರದಕ್ಷಿಣೆಗೆ ಕೈ ಒಡ್ಡುತ್ತಿರಲಿಲ್ಲವೇ? ಮಿಲಿಯನ್ ಡಾಲರ್ ಪ್ರಶ್ನೆ! ಹೆಣ್ಣಾದರೇನು ಗಂಡಾದರೇನು ದುಡ್ಡು ಇಬ್ಬರಿಗೂ ದೊಡ್ಡ ಡ್ಯಾಡೀನೇ ತಾನೇ! ಅಂತೆಯೇ ಮಕ್ಕಳ ಕೆಲಸಕ್ಕೆ ಲಂಚ, ಪ್ರೈವೇಟ್ ಶಾಲೆ ಫೀಸು, ಮುಂತಾಗಿಯೂ ಖಂಡಿತ ಇದ್ದರೂ ಇರಬಹುದು. ಉತ್ತಮತೆಗಾಗಿ ಈಗ ಹೆಂಗಸು ಸದಾ ಸನ್ನದ್ಧ! ಹಾಗಂತ ಅವರಿಗಾಗಿ ಒಳ್ಳೊಳ್ಳೆ ಬಟ್ಟೆ, ಚಿನ್ನಗಿನ್ನ, ವೈನಾದ ಲಿಪ್ ಸ್ಟಿಕ್ಕು, ಅತ್ಯುತ್ತಮ ವಾಸನೆಯ ಇಂಪೋರ್ಟೆಡ್ ಪರ್ಫ್ಯೂಮ್, ಸಾಕಷ್ಟು ಎತ್ತರಕ್ಕೆ ಎತ್ತುವ ಹೈ ಹೀಲ್ಡ್ ಎಕ್ಕಡಗಳು ಇನ್ನೂ ಮುಂತಾಗಿ ಕೊಳ್ಳುತ್ತಿರಲಿಲ್ಲವೇ… ಮನೆ ಯಜಮಾನಿ ಬೇರೆ, ಅಲ್ಲದೆ ಹೊರಗೆ ದುಡಿಯೋ ಹಂಗಸು ಅಂದಮೇಲೆ ಎದ್ದು ಕಾಣೋ ಥರ, ಬೇರೆ ಬೇರೆ ಭುಜಗಳ ಮೀರಿ ನಡೆಯೋ ಥರ ಇರಲಿಲ್ಲ ಅಂದರೆ ಆ ಮನೆಯ ಗಂಡಸಿಗೇ ಅವಮಾನ ಅಲ್ಲವೇ…? ನೋಡಿ ಇಲ್ಲೂ ಸಹ ಪರಿಣಾಮ ಎಂಥದ್ದು ಅಂತ ತೋರಿಸಿಕೊಟ್ಟಿದೆ. ಇಲ್ಲಿ ಸಹ ತಮ್ಮ ಗಂಡಸರ ಮರ್ಯಾದೆ ಬಗ್ಗೆ ಕಾಳಜಿ! ಹ್ಞಾ, ಇನ್ನೊಂದು ಮಾತು; ಮಕ್ಕಳ ಬಟ್ಟೆ ಮತ್ತು ಅವರ ಮೇಕಪ್ ಕಡೆ ಕೂಡ ಹೆಂಗಸರದೇ ಮಿತಿಮೀರಿದ ಮುತುವರ್ಜಿ…!ಕೊನೆಯಲ್ಲಿ ಪರಿಣಾಮ ಎಂಬ ನಾಣ್ಯದ ಮತ್ತೊಂದು, ಕಾರಾಳ ಹಾಗೂ ರಕ್ಕಸ ಮುಖದತ್ತ: ಹೌದು ನಮ್ಮ ನಮ್ಮ ಬದುಕಿನಲ್ಲಿ ಬಂದೊದಗುವ ನತದೃಷ್ಟ ದುಷ್ಪರಿಣಾಮಗಳ ಹಾಗೆಯೇ ಜಗತ್ತಿಗೂ, ಹಾಗಾಗಿ ಆ ಮೂಲಕ ಜಗದೆಲ್ಲ ಜೀವಿಗಳ ಮೇಲೂ, ಸಸ್ಯ, ಮತ್ತಿತರ ಪ್ರಾಣಿ, ಜಂತುಗಳ ಮೇಲೂ, ದುರ್ಘಟನೆಗಳಿಂದ ಅಸಂಖ್ಯ ರೀತಿಯಲ್ಲಿ ಹಾನಿಕಾರಕ ಪರಿಣಾಮಗಳು ಆಗಾಗ ಜರುಗುತ್ತಲೇ ಬಂದಿವೆ…ಸಾವಿರದ ಒಂಭೈನೂರ ಹದಿನೆಂಟರಿಂದ ಇಪ್ಪತ್ತರಲ್ಲಿ ಜಗತ್ತನ್ನು ಆವರಿಸಿದ್ದ ಸ್ಪ್ಯಾನಿಷ್ ಫ್ಲೂ ಸರಿಸುಮಾರು ಐದು ಕೋಟಿಯಷ್ಟು ಜನರ ಬಲಿ ತೆಗೆದುಕೊಂಡಿತ್ತು ಎಂದು ಅಂದಾಜಿಸಲಾಗಿದೆ. ಎಂಥ ಸಂಕಷ್ಟದ ಪರಿಣಾಮವನ್ನು ಅಂದಿನ ಜನ ಅನುಭವಿಸಿರಬಹುದು! ಹೀಗೆಯೇ ಪ್ಲೇಗ್ ಮಹಾಮಾರಿಗಳು, ಪಶ್ಚಿಮ ಆಫ್ರಿಕಾದ ಎಬೋಲೋ ವೈರಸ್, ನಂತರದ ಜೀಕಾ ವೈರಸ್! ಇವುಗಳ ಜೊತೆಜೊತೆಗೇ ಆಳುವವರ ದರ್ಪದ ಕಠಿಣ ಶಿಕ್ಷೆಗಳು, ಯುದ್ಧಗಳು, ಒಂದ ಎರಡ… ಮಹಾಯುದ್ಧಗಳಲ್ಲದೆ ಇನ್ನೂ ಅನೇಕ! ಇದೀಗ ನಮ್ಮನ್ನು ಅರೆಯುತ್ತಿರುವ ಈ ಕರೋನ ಮಹಾಮಾರಿ! ಅದರ ಪರಿಣಾಮ ನಾವು ದಿನನಿತ್ಯ ಕಾಣುತ್ತಿರುವ ಈ ಸಾವು ನೋವು. ಈಗ ಶವಗಳೂ ಕ್ಯೂ ನಲ್ಲಿ ಮಲಗಿ ಅಂತಿಮ ಘಳಿಗೆಗಾಗಿ ಕಾಯುವ ವಿಪರ್ಯಾಸ! ಇಷ್ಟಾದರೂ ಯಾವ ಪರಿಣಾಮಕ್ಕೂ ತಲೆ ಕೆಡಿಸಿಕೊಳ್ಳದೆ ಮಾಸ್ಕ್ ಇಲ್ಲದೇ ಓಡಾಡುವ ಅನಂತ ಬೇಜವಾಬ್ದಾರಿ ಜನ! ಇಂಥವರಿಗೆ ಆಸ್ಪತ್ರೆಗಳ, ಮಸಣಗಳ ದರ್ಶನ ಮಾಡಿಸಬೇಕು; ಅಮೆರಿಕದಲ್ಲಿ ದೊಡ್ಡದೊಂದು ಗುಂಡಿ ಅಗೆದು ಹೆಣಗಳ ರಾಶಿ ರಾಶಿ ಬಿಸಾಡಿದ ಕಂಡರಿಯದಿದ್ದಂತಹ ದೃಷ್ಯ ತೋರಿಸಬೇಕು…ಕನಿಷ್ಠ ತಮ್ಮ ಸಹಜೀವಿಗಳ ಇರುವಿಕೆಯ ಕಾಳಜಿಗಾಗಿ! ಇಂಥವರ ಮಧ್ಯೆ ಬದುಕು ಎಷ್ಟು
ದಾರಾವಾಹಿ- ಅದ್ಯಾಯ-12 ತನ್ನ ಕುತಂತ್ರಕ್ಕೆ ಬಲಿಯಾಗಿ ಬೀದಿ ಬಿಕಾರಿಯಾದ ಸಂತಾನಪ್ಪ, ಇಂದಲ್ಲ ನಾಳೆ ರಾತ್ರೋರಾತ್ರಿ ಊರು ಬಿಟ್ಟೇ ಓಡಿ ಹೋಗುತ್ತಾನೆ ಅಥವಾ ಮುಂಚಿನಂತೆಯೇ ಬಾಲ ಮುದುರಿ ಕೂಲಿನಾಲಿ ಮಾಡಿಕೊಂಡು ಬದುಕುತ್ತಾನೆ ಎಂದು ಭಾವಿಸಿದ್ದ ಶಂಕರನ ಯೋಚನೆಯು ಪರಮೇಶನ ಬಿಸಿಬಿಸಿ ಸುದ್ದಿಯಿಂದ ಪೂರ್ತಿ ತಲೆಕೆಳಗಾಗಿಬಿಟ್ಟಿತು. ಬಯಲುಸೀಮೆಯ ಒಣಹವೆಯನ್ನೂ ಖಡಕ್ ಜೋಳದ ರೊಟ್ಟಿಯೊಂದಿಗೆ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯಂಥ ವ್ಯಂಜನವನ್ನು ಜಜ್ಜಿ ಜಗಿದುಣ್ಣುತ್ತ ಒರಟು ಮಂದಿಯ ನಡುವೆ ಹುಟ್ಟಿ ಬೆಳೆದ, ಆರಡಿ ಎತ್ತರದ ಆಜಾನುಬಾಹು ಸಂತಾನಪ್ಪ ಬಡತನದ ಬೇಗೆಯಿಂದ ಮುಗ್ಧ ಪ್ರಾಣಿಯಂತೆ ವಿನಯದ ಮುಖವಾಡ ತೊಟ್ಟು ಬದುಕುತ್ತಿದ್ದನೇ ಹೊರತು ಅಸಾಮಾನ್ಯ ಧೈರ್ಯ ಕ್ರೌರ್ಯಗಳು ಅವನ ರಕ್ತದಲ್ಲೇ ಮಡುಗಟ್ಟಿದ್ದವು ಎಂಬ ಸಂಗತಿಯನ್ನು ತಿಳಿಯುವ ಚಾತುರ್ಯ ಶಂಕರನಲ್ಲಿರಲಿಲ್ಲ. ಒಬ್ಬಿಬ್ಬರು ಗಟ್ಟಿಯಾಳುಗಳಿಂದ ಸದೆಬಡಿಯಲಾಗದಷ್ಟು ಬಲಿಷ್ಠ ಆಸಾಮಿಯಾಗಿದ್ದ ಸಂತಾನಪ್ಪನಿಗೆ ತನ್ನ ಶಕ್ತಿ ಸಾಮಥ್ರ್ಯದ ಮೇಲೆ ಸಂಪೂರ್ಣ ವಿಶ್ವಾಸವಿತ್ತು. ಹಾಗಾಗಿಯೇ ಇಂದು ಒಬ್ಬಂಟಿಯಾಗಿ ಶಂಕರನ ಹುಟ್ಟಡಗಿಸಲು ಹೊರಟಿದ್ದ. ಅದಕ್ಕೆ ಸರಿಯಾಗಿ ಅಂದು ರಾತ್ರಿ ಹತ್ತು ಗಂಟೆಯ ಹೊತ್ತಿಗೆ ತನ್ನಿಬ್ಬರು ಆಳುಗಳಿಂದ, ‘ಶಂಕರಣ್ಣ, ಅವನ ಒಬ್ಬ ಸ್ನೇಹಿತನೊಂದಿಗೆ ಸಿಟಿ ಬಸ್ಸು ನಿಲ್ದಾಣ ಸಮೀಪದ ಪಾಳು ಬಿಲ್ಡಿಂಗ್‍ನ ಅಡ್ಡಾವೊಂದರಲ್ಲಿ ಕುಳಿತು ಸಾರಾಯಿ ಕುಡಿಯುತ್ತಿದ್ದಾನೆ!’ ಎಂಬ ಸಿಹಿ ಸುದ್ದಿಯೂ ಸಿಕ್ಕಿದ್ದರಿಂದ ಅವನು ತಟ್ಟನೆ ಚುರುಕಾದ. ‘ಅವ್ನೊಂದಿಗೆ ಒಟ್ಟು ಎಷ್ಟು ಮಂದಿ ಅದಾರಾ ಅಂತ ಸರಿಯಾಗಿ ನೋಡಿದ್ರಲಾ…?’ ಎಂದು ಆಳುಗಳನ್ನು ಗದರಿಸಿಯೇ ವಿಚಾರಿಸಿದ. ‘ಹೌದು ಧಣೇರಾ, ಅವ್ನ್ ಕೋಣೆಯಾಗ ಅವ್ನ್ ಕೂಡಿ ನಮಗಾ ಇಬ್ರೇ ಕಂಡವ್ರೀ…!’ ಎಂದರು ಅವರು. ಸಂತಾನಪ್ಪ ಮತ್ತೆ ತಡಮಾಡಲಿಲ್ಲ. ಕೂಡಲೇ ಶಂಕರನ ಅಡ್ಡಾಕ್ಕೆ ಧಾವಿಸಿದ. ಆ ಹೊತ್ತು ಬಸ್ಸು ನಿಲ್ದಾಣದಲ್ಲಿ ಒಂದೆರಡು ಸಿಟಿ ಬಸ್ಸುಗಳು ಕೊನೆಯ ಟ್ರಿಪ್ಪಿನ ಪ್ರಯಾಣಿಕರನ್ನು ಕಾಯುತ್ತ ನಿಂತಿದ್ದವು. ವಿದ್ಯುತ್ ಕಂಬಗಳ ಅಡಿಯಲ್ಲಿ ಅಲ್ಲೊಂದು ಇಲ್ಲೊಂದು ಗೂಡಂಗಡಿಗಳು ಆಮ್ಲೇಟ್, ಬ್ರೆಡ್ ಮಸಾಲೆಗಳಂಥ ತಿಂಡಿ ತಿನಿಸುಗಳನ್ನು ತಯಾರಿಸಲು ಮೊಟ್ಟೆ ಕಲಕುವ ಮತ್ತು ಬಾಣಲಿಯ ಠಣಠಣ ಸದ್ದು, ಗದ್ದಲಗಳು ಹಗಲಿಡೀ ಕರ್ಕಶ ಶಬ್ದ ಮಾಲಿನ್ಯದಿಂದಲೂ, ವಾಯು ಮಾಲಿನ್ಯದಿಂದಲೂ ಬೆಂದು ಬಸವಳಿದು ಈಗಷ್ಟೇ ವಿರಮಿಸಲು ಹವಣಿಸುತ್ತಿದ್ದ ಆ ಇಡೀ ಪ್ರದೇಶದ ನೀರವ ಮೌನವನ್ನು ಕದಡುತ್ತಿದ್ದವು. ಸಂತಾನಪ್ಪ ಬಸ್ಸು ನಿಲ್ದಾಣದ ಮೇಲೆ ಎಡಭಾಗದಲ್ಲಿರುವ ಪ್ರೇಮ ಬೇಕರಿಯ ಎದುರು ಬಂದು ಕಾರು ನಿಲ್ಲಿಸಿದ. ಥಳಥಳ ಹೊಳೆಯುವ ಅಗಲವಾದ ಮಚ್ಚನ್ನು ಪೇಪರಿನಿಂದ ಸುತ್ತಿ ಬೆನ್ನ ಹಿಂದೆ ಪ್ಯಾಂಟಿನೊಳಗೆ ತುರುಕಿಸಿ ಮರೆಮಾಚಿದ. ಶಂಕರನ ರಹಸ್ಯ ತಾಣಕ್ಕೆ ತಾನು ಸಾಕಷ್ಟು ಬಾರಿ ಬಂದು ಕೆಲಸಕಾರ್ಯಗಳ ಬಗ್ಗೆ ಚರ್ಚಿಸುತ್ತ ಪೆಗ್ಗು ಹೀರುತ್ತ ಕುಳಿತಿರುತ್ತಿದ್ದವನಿಗೆ ಆ ಜಾಗವು ಚಿರಪರಿಚಿತವಿತ್ತು . ಹಾಗಾಗಿ ಧೈರ್ಯದಿಂದ ಅಡ್ಡಾದ ಹತ್ತಿರ ಹೋದ. ಶಂಕರನ ಕೋಣೆಯ ಬಾಗಿಲು ಮುಚ್ಚಿತ್ತು. ನಿಶ್ಶಬ್ದವಾಗಿ ನಿಂತು ಒಳಗಿನ ಶಬ್ದವನ್ನು ಆಲಿಸಿದ. ಯಾರದೋ ಗುಸುಗುಸು ಮೆಲುಧ್ವನಿ ಅಸ್ಪಷ್ಟವಾಗಿ ಕೇಳುತ್ತಿತ್ತು. ಹೌದು, ತನ್ನ ಕಡೆಯವರು ಹೇಳಿದ್ದು ನಿಜ. ಒಳಗೆ ಇಬ್ಬರೇ ಇರುವುದು ಎಂದುಕೊಂಡು ಬಾಗಿಲು ತಟ್ಟಿದ. ಕೆಲಕ್ಷಣದಲ್ಲಿ ಚಿಲಕ ತೆಗೆದ ಸದ್ದಾಯಿತು. ಶಂಕರನೇ ಬಾಗಿಲು ತೆರೆದ. ಆದರೆ ಸಂತಾನಪ್ಪ ಅವಕ್ಕಾದ. ಏಕೆಂದರೆ ಶಂಕರ ಇನ್ನೂ ಮತ್ತನಾಗಿರಲಿಲ್ಲ ಮಾತ್ರವಲ್ಲದೇ ಒಳಗೆ ಇನ್ನಿಬ್ಬರು ವಿಲಕ್ಷಣ ಗಡ್ಡಾಧಾರಿಗಳೂ ಇದ್ದುದು ಅವನಿಗೆ ಕಾಣಿಸಿತು. ಕೋಣೆಯ ಮಂದ ಬೆಳಕಿನಲ್ಲಿ ಆ ಆಗಂತುಕರು ತನ್ನನ್ನು ಕ್ರೂರವಾಗಿ ದಿಟ್ಟಿಸುತ್ತಿರುವಂತೆ ಅವನಿಗೆ ಭಾಸವಾಯಿತು. ಕೆಲವುಕ್ಷಣ ಏನೂ ತೋಚದೆ ನಿಂತುಬಿಟ್ಟ. ಆದರೆ ಶಂಕರ ಏನೂ ನಡೆದಿಲ್ಲವೆಂಬಂತೆ ನಗುತ್ತ, ‘ಓಹೋ…ಏನೋ ಸಂತಾನಪ್ಪ ಇಷ್ಟೊತ್ನಲ್ಲಿ…?’ ಎನ್ನುತ್ತ ಸ್ನೇಹದಿಂದ ಆಹ್ವಾನಿಸಿದ. ಅಷ್ಟೊತ್ತಿಗೆ ಸಂತಾನಪ್ಪನೂ ಹತೋಟಿಗೆ ಬಂದಿದ್ದವನು ಶಂಕರನ ಕುಟಿಲ ಆತ್ಮೀಯತೆಯನ್ನು ಕಂಡು ಕೋಪದಿಂದ ಕುದಿದ. ‘ನೋಡ್ ಶಂಕರಣ್ಣ, ನನ್ನ ಜೊತೆ ಹುಡುಗಾಟ ಆಡ್ ಬ್ಯಾಡ. ನೀನೆಣಿಸಿದಷ್ಟು ಛಲೋ ಮನ್ಷ ನಾನಲ್ಲ ತಿಳ್ಕೋ!’ ಎಂದ ಒರಟಾಗಿ. ‘ಅದು ನನಗೂ ಗೊತ್ತಿದೆ ಮಾರಾಯಾ. ಅದಿರಲಿ ನೀನೀಗ ಇಷ್ಟೊಂದು ಸಿಟ್ಟಾಗುವಂಥದ್ದು ಏನಾಯ್ತು ಅಂತ ಹೇಳಬೇಕಲ್ವಾ…?’ ಎಂದು ಶಂಕರ ವ್ಯಂಗ್ಯವಾಗಿ ನಗುತ್ತ ಪ್ರಶ್ನಿಸಿದ. ಸಂತಾನಪ್ಪನಿಗೆ ಉರಿದು ಹೋಯಿತು. ‘ಏನಲೇ ಹೈವಾನ್! ಮೊನ್ನೆ ನನ್ನಿಂದ ಹೆಬ್ಬೆಟ್ ಒತ್ತುಸ್ಕೊಂಡು ಓಡ್ ಬಂದಿಯಲ್ಲ ಆ ಪತ್ರಗಳು ಎಲ್ಲದಾವಂತ ತೋರ್ಸಲೇ…?’ ಎಂದು ಗುಡುಗಿದ. ‘ಯಾಕೆ ಮಾರಾಯಾ, ಅದರಿಂದೇನಾಯ್ತು? ಅಚ್ಚಡಪಾಡಿಯಲ್ಲಿ ಖರೀದಿಸಿದ ಜಮೀನಿನ ಪತ್ರಗಳೆಂದು ಹೇಳಿದ್ದೆನಲ್ಲಾ!’ ಎಂದ ಶಂಕರ ಅಸಡ್ಡೆಯಿಂದ. ಆದರೀಗ ಸಂತಾನಪ್ಪ ಅದನ್ನು ನಂಬುವಷ್ಟು ಮೂರ್ಖನಾಗಲಿಲ್ಲ. ‘ಓಹೋ, ಹೌದಾ? ಸರಿ ಹಂಗಾದ್ರೆ ನಾನೂ ಅದ್ನ ನೋಡಬೇಕಲೇ?’ ‘ಅರೇ, ಅದೀಗ ಇಲ್ಲೆಲ್ಲಿದೆ ಮಾರಾಯಾ! ಕನ್ವರ್ಶನ್‍ಗೆ ಕೊಟ್ಟಾಯಿತು. ಬೇಕಿದ್ದರೆ ನಾಳೆ ಬೆಳಿಗ್ಗೆ ಫ್ಲಾಟ್‍ಗೆ ಬಾ ಝೆರಾಕ್ಸ್ ಕಾಪಿಗಳಿವೆ, ತೋರಿಸುತ್ತೇನೆ’ ಎಂದ ಶಂಕರ ಉಡಾಫೆಯಿಂದ. ಆಗ ಸಂತಾನಪ್ಪನಿಗೆ ಚಿಂತೆಗಿಟ್ಟುಕೊಂಡಿತು. ಆ ಸಂಪತ್ತು ತಾನು ಬೆವರು ಸುರಿಸಿ ಸಂಪಾದಿಸಿದ್ದಲ್ಲವಾದರೂ ತನ್ನ ಅದೃಷ್ಟದಿಂದಲೇ ತನಗೆ ದಕ್ಕಿದ್ದು. ತನ್ನ ಎರಡು ಸಂಸಾರಗಳೂ ಅದನ್ನೇ ನಂಬಿಕೊಂಡಿವೆ ಮತ್ತು ಅದರಿಂದಾಗಿಯೇ ತನ್ನ ಊರಲ್ಲೂ ತಾನು ಭಾರಿದೊಡ್ಡ ಕುಳವೆಂಬ ಹೆಗ್ಗಳಿಕೆಗೆ ಪಾತ್ರನಾಗಿರುವುದು. ಹೀಗಿರುವಾಗ ಅಂಥ ಆಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಎಂಥ ಎಡವಟ್ಟು ಮಾಡಿಕೊಂಡೆನಲ್ಲ! ಈ ಹಾದರಕ್ ಹುಟ್ಟಿದ ನನ್ಮಗ ಖಂಡಿತವಾಗಿಯೂ ಅವೇ ಪತ್ರಗಳಿಗೆ ತನ್ನಿಂದ ರುಜು ಹಾಕಿಸಿಕೊಂಡು ಮಸಲತ್ತು ಮಾಡ್ತಿದ್ದಾನೆ ಎಂದು ಯೋಚಿಸಿದವನ ಆತಂಕ ಇಮ್ಮಡಿಯಾಯಿತು. ‘ನಾಳೆಯವರೆಗೆ ಕಾಯಲು ಸಾಧ್ಯವಿಲ್ಲ ಶಂಕರಣ್ಣಾ. ನಡೆ, ಈಗಲೇ ಫ್ಲಾಟಿಗೆ ಹೋಗೋಣ!’ ಎಂದ ಸಿಡುಕಿನಿಂದ. ಅದಕ್ಕೆ ಶಂಕರ ವ್ಯಂಗ್ಯವಾಗಿ ನಗುತ್ತ ತನ್ನ ಗೆಳೆಯರತ್ತ ದಿಟ್ಟಿಸಿದವನು ಅವರಿಗೇನೋ ಕಣ್ಸನ್ನೆ ಮಾಡಿದ. ಆ ಮುಖಗಳು ಕೂಡಲೇ ಕಠೋರವಾದವು. ‘ಆಯ್ತು ಮಾರಾಯಾ ನಡೆ. ಯಾರೋ ದರವೇಶಿಗಳು ನನ್ನ ಬಗ್ಗೆ ನಿನ್ನಲ್ಲಿ ಸಂಶಯ ಹುಟ್ಟಿಸಿದ್ದಾರೆಂದು ಕಾಣುತ್ತದೆ. ಪರ್ವಾಗಿಲ್ಲ ನಿನ್ನ ಅನುಮಾನ ನಿವಾರಿಸುವ!’ ಎಂದು ಅದೇ ವ್ಯಂಗ್ಯ ನಗುವಿನೊಂದಿಗೆ ಹೇಳಿದವನು ಗೆಳೆಯರತ್ತ ತಿರುಗಿ, ‘ಇವರು ನನ್ನ ಸ್ನೇಹಿತರು. ಅಪರೂಪಕ್ಕೆ ಬಂದಿದ್ದಾರೆ ಮಾರಾಯಾ. ಅವರೊಂದಿಗೆ ಸ್ವಲ್ಪ ಡ್ರಿಂಕ್ಸ್ ಮಾಡುತ್ತ ಮಾತಾಡುವುದಿದೆ. ಬೇಕಿದ್ದರೆ ನಮ್ಮೊಂದಿಗೆ ನೀನೂ ಸೇರಿಕೋ. ನಂತರ ಹೊರಡುವ’ ಎಂದ ಶಂಕರ ನಯವಾಗಿ. ಸಂತಾನಪ್ಪನಿಗೆ ಅವನ ಮಾತು ನಂಬಬೇಕೋ ಬಿಡಬೇಕೋ ಎಂದು ಗೊಂದಲವಾಯಿತು. ಹಾಗಾಗಿ ಶಂಕರ ತೋರಿಸಿದ ಕುರ್ಚಿಯಲ್ಲಿ ಕುಳಿತುಕೊಂಡ. ಶಂಕರನೂ ಗಂಭೀರವಾಗಿ ಸಾರಾಯಿ ಸುರಿದು ಸ್ನೇಹಿತರೊಂದಿಗೆ ಇವನಿಗೂ ಕೊಟ್ಟ. ಸಂತಾನಪ್ಪ ಒಲ್ಲದ ಮನಸ್ಸಿನಿಂದ ಕುಡಿಯತೊಡಗಿದ. ಎರಡು ಪೆಗ್ಗು ಹೊಟ್ಟೆಗಿಳಿಯುವ ಹೊತ್ತಿಗೆ ಅವನ ದೇಹ, ಮನಸ್ಸುಗಳೆರಡೂ ಹುಗುರವಾಗಿ ಬಿಗುಮಾನ ಮಾಯವಾಯಿತು. ಆದರೂ ಯಾರೊಡನೆಯೂ ಮಾತಾಡದೆ ಮೌನವಾಗಿ ಸಾರಾಯಿ ಹೀರತೊಡಗಿದ. ಶಂಕರ ಮಾತ್ರ ಬೇಕೆಂದೇ ಇವನ ಇರುವನ್ನು ಕಡೆಗಣಿಸಿ ಇವನಿಗೆ ಅರ್ಥವಾಗದ ವಿಷಯಗಳನ್ನೆತ್ತಿ ಸ್ನೇಹಿತರೊಂದಿಗೆ ಚರ್ಚಿಸುತ್ತ, ಸೂರು ಕಿತ್ತು ಹೋಗುವಂತೆ ನಗುತ್ತ ಬಾಟಲಿ ಖಾಲಿ ಮಾಡುತ್ತಿದ್ದ. ಇತ್ತ ಸ್ವಲ್ಪಹೊತ್ತಿನಲ್ಲಿ ಐದನೆಯ ಪೆಗ್ಗು ಸಂತಾನಪ್ಪನ ಹೊಟ್ಟೆ ಸೇರುತ್ತಲೇ ಶಂಕರನ ಮೇಲಿನ ಶಂಕೆ ಮತ್ತೆ ಅವನಲ್ಲಿ ಹೆಡೆಯೆತ್ತಿತು. ಜೊತೆಗೆ ತಾನು ಮೊನ್ನೆಯೂ ಇವನ ಇಂಥ ಮೋಡಿಯ ಮಾತುಗಳಿಗೆ ಮೋಸ ಹೋಗಿ ಅನಾಹುತ ಮಾಡಿಕೊಂಡಿದ್ದು ಎಂದನ್ನಿಸುತ್ತಲೇ ಮರಳಿ ಅವನ ತಾಳ್ಮೆ ಕುಸಿಯಿತು. ‘ನಡೆ ಶಂಕರಣ್ಣ ಹೋಗೋಣ. ನನಗೀಗಲೇ ಆ ಪತ್ರಗಳನ್ನು ನೋಡಬೇಕು!’ ಎಂದು ಎದ್ದು ನಿಂತ. ಶಂಕರ ಆಗಲೂ ಅವನ್ನು ಕುಳ್ಳಿರಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಆಗ ಮಾತ್ರ ಸಂತಾನಪ್ಪನ ಕೋಪ ನೆತ್ತಿಗೇರಿತು. ‘ಲೇ, ಹಡಿ ಸೂಳೀಮಗನಾ…ನಿನ್ ದಗಲ್ಬಾಜಿನೆಲ್ಲ ನನ್ ಹತ್ರ ಬಿಚ್ಬೇಡಲೇ…! ಪತ್ರಗಳ್ನ ಈಗ್ಲೇ ತಂದೊಪ್ಪಿಸಿದ್ದಿಯೋ ಬಚಾವಾದಿ ಮಗನಾ! ಇಲ್ಲಾ, ನಿನ್ನನ್ ಕಂಬಿ ಎಣಿಸುವಂತೆ ಮಾಡದೆ ಬಿಡಕ್ಕಿಲ್ವೋ ಹೈವಾನ್!’ ಎಂದು ಗುಡುಗಿದ. ಆದರೆ ಆಗ ಶಂಕರನೂ ಹದವಾದ ಮತ್ತಿನಲ್ಲಿದ್ದ. ಅವನ ಮುಖದಲ್ಲೂ ತೀಕ್ಷ್ಣ ಕೋಪ ವಿಜೃಂಭಿಸಿತು. ‘ಓಹೋ ಹೌದಾ ಮಗನೇ…! ಪರ್ವಾಗಿಲ್ಲವಾ ನೀನೂ ಭಾರೀ ಅರ್ಜೆಂಟಿನಲ್ಲಿದ್ದಿ. ಹಾಗಾಗಿ ಇನ್ನು ಟೈಮ್‍ವೇಸ್ಟ್ ಮಾಡುವುದು ನನಗೂ ಸರಿ ಕಾಣುವುದಿಲ್ಲ. ಆಯ್ತು ಹೋಗುವ!’ ಎಂದು ದಢಕ್ಕನೆದ್ದವನು ಗೆಳೆಯರತ್ತ ತಿರುಗಿ ಮತ್ತೇನೋ ಸಂಜ್ಞೆ ಮಾಡಿ ಧುರಧುರನೇ ಹೊರಗೆ ನಡೆದ. ಸಂತಾನಪ್ಪನೂ ಬಿರುಸಿನಿಂದ ಅವನನ್ನು ಹಿಂಬಾಲಿಸಿದ. ಆದರೆ ತನ್ನ ಸೊಂಟದಲ್ಲಿದ್ದ ಕತ್ತಿಯನ್ನೊಮ್ಮೆ ಮೆಲ್ಲನೆ ಸ್ಪರ್ಶಿಸಿ ನೋಡಿ ಸೆಟೆದುಕೊಂಡು ಮುನ್ನಡೆದ. ಶಂಕರ, ಸಂತಾನಪ್ಪನಿಗೆ ಏನೂ ಹೇಳದೆ ಮೂತ್ರ ವಿಸರ್ಜಿಸಲೆಂಬಂತೆ ಸಮೀಪದ ಸಾರ್ವಜನಿಕ ಶೌಚಾಲಯದತ್ತ ಹೊರಟ. ಸಂತಾನಪ್ಪನಿಗೆ ಅನುಮಾನವಾಯಿತು. ‘ಆ ಕಡೆ ಎಲ್ಲಿಗೇ…?’ ಎಂದ ಜೋರಿನಿಂದ. ‘ಮೂತ್ರ ಹುಯ್ಯಬೇಕು ಮಾರಾಯಾ…!’ ಎಂದ ಶಂಕರ ನಗುತ್ತ. ‘ನಾನೂ ಬರುತ್ತೇನೆ!’ ಎಂದ ಸಂತಾನಪ್ಪ ಅವನ ಬೆನ್ನು ಹತ್ತಿದ. ಶಂಕರನೂ ಅದನ್ನೇ ನಿರೀಕ್ಷಿಸಿದ್ದವನು ಸಂತಾನಪ್ಪನ ಹುಂಬತನವನ್ನು ನೆನೆದು ಕತ್ತಲಲ್ಲಿ ಭುಜ ಕುಣಿಸಿ ನಗುತ್ತ ನಡೆದ. ಆದರೆ ಶೌಚಾಲಯಕ್ಕೆ ಹೋಗದೆ ಕಟ್ಟಡದ ಹಿಂದೆ ಕುರುಚಲು ಪೊದೆಗಳು ತುಂಬಿದ್ದ ಪಾಳು ಜಾಗವೊಂದಕ್ಕೆ ಹೋದ. ಸಂತಾನಪ್ಪ ಅಲ್ಲಿಗೂ ಹಿಂಬಾಲಿಸಿದ. ಆ ಪ್ರದೇಶದಲ್ಲಿ ದಟ್ಟ ಕತ್ತಲೆ ಗೌವ್ವ್ ಗುಡುತ್ತಿತ್ತು. ಸಂತಾನಪ್ಪನ ಹಿಂದುಗಡೆ ಮತ್ತೆರಡು ಆಕೃತಿಗಳು ಮೆತ್ತಗೆ ಬಂದು ನಿಂತಿದ್ದನ್ನು ಅವನ ಸಾರಾಯಿ ಪ್ರಜ್ಞೆಯು ಗ್ರಹಿಸಲಿಲ್ಲ. ಅತ್ತ ಶಂಕರ ಮೂತ್ರ ಹುಯ್ಯಲು ನಿಂತಂತೆ ನಟಿಸಿದ. ಅಷ್ಟರಲ್ಲಿ ಸಂತಾನಪ್ಪನ ಹಿಂದಿದ್ದವನೊಬ್ಬ ಅವನ ಕೊರಳಿಗೆ ಬಲವಾಗಿ ಹೊಡೆದ. ಸಂತಾನಪ್ಪ, ‘ಯಾವ್ವಾ…!’ ಎಂದು ಚೀರಿ ಧೊಪ್ಪನೆ ಕುಸಿದ. ‘ಏನಲೇ ಬೇವರ್ಸಿ… ನಮ್ಮೂರಿಗೆ ಕೂಲಿಗೆ ಬಂದಂಥ ನಾಯಿ ನೀನು! ನಮ್ಮವರ ಆಸ್ತಿಯನ್ನೇ ಲಪಟಾಯಿಸಿ ಮಜಾ ಉಡಾಯಿಸಬೇಕೆಂದಿದ್ದಿಯೇನೋ…? ಅದನ್ನು ನೋಡಿಯೂ ನನ್ನಂಥವನು ಸುಮ್ಮನಿರುತ್ತಾನೆಂದು ಅದ್ಹೇಗೆ ಭಾವಿಸಿದೆಯೋ? ಮರ್ಯಾದೆಯಿಂದ ನಾಳೆ ಬೆಳಗಾಗುವುದರೊಳಗೆ ನಿನ್ನ ಎರಡು ಸಂಸಾರಗಳನ್ನು ಕಟ್ಟಿಕೊಂಡು ಇಲ್ಲಿಂದ ಜಾಗ ಖಾಲಿ ಮಾಡಿದೆಯೋ ಬಚಾವಾದೆ. ಇಲ್ಲಾ, ನಿನ್ನ ಹೆಣ ಮಸಣದ ಗುಡ್ಡೆಯಲ್ಲೇ ಸುಟ್ಟು ಬೂದಿಯಾಗುವುದು ಗ್ಯಾರಂಟಿ ಬೋಳಿಮಗನೇ!’ ಎಂದು ಕೋಪದಿಂದ ಗುಡುಗಿದ ಶಂಕರ, ಸಂತಾನಪ್ಪನಿಗೆ ಬೀಸಿ ಬೀಸಿ ಒದೆಯತೊಡಗಿದ. ಆದರೆ ಒಂದೆರಡು ಒದೆತಗಳು ಬೀಳುತ್ತಿದ್ದಂತೆಯೇ ಸಂತಾನಪ್ಪನೂ ಗೂಳಿಯಂತೆ ಉಸಿರುದಬ್ಬುತ್ತ ಎದ್ದು ನಿಂತ. ಅವನ ಬಲಗೈ ರಪ್ಪನೆ ಬೆನ್ನ ಹಿಂದೆ ಸರಿದು ಮಚ್ಚನ್ನು ಎಳೆದುಕೊಂಡಿತು. ಸಂತಾನಪ್ಪನ ರೌದ್ರಾವತಾರವನ್ನೂ ಮತ್ತು ಆ ಕತ್ತಲನ್ನೂ ಮೀರಿ ಮಿರಮಿರನೇ ಮಿಂಚುತ್ತಿದ್ದ ಮಚ್ಚನ್ನೂ ಕಂಡ ಶಂಕರ ದಿಗ್ಭ್ರಾಂತನಾದ. ಅದೇ ಹೊತ್ತಿಗೆ ಸಂತಾನಪ್ಪ ಶಂಕರನ ಕೊರಳಿಗೆ ಗುರಿಯಿಟ್ಟು ಮಚ್ಚು ಬೀಸಿದ. ಆದರೆ ಶಂಕರ ನೂಲಿನೆಳೆಯಷ್ಟು ಅಂತರದಲ್ಲಿ ತಪ್ಪಿಸಿಕೊಂಡ. ಅದರ ಬೆನ್ನಿಗೆ ಸಂತಾನಪ್ಪ ಅವನ ಕಿಬ್ಬೊಟ್ಟೆಗೆ ಜಾಡಿಸಿ ಒದ್ದ. ಶಂಕರ, ‘ಅಯ್ಯಮ್ಮಾ…!’ ಎಂದು ಕಿರುಚುತ್ತ ಅಷ್ಟು ದೂರಕ್ಕೆ ಎಗರಿ ಬಿದ್ದ. ಮರುಕ್ಷಣ ಸಂತಾನಪ್ಪ ಮಿಂಚಿನವೇಗದಲ್ಲಿ ಅತ್ತ ನೆಗೆದವನು ಶಂಕರನ ಕೊರಳನ್ನು ಕಡಿದೇ ಹಾಕುತ್ತಾನೆ ಎಂಬಷ್ಟರಲ್ಲಿ ಶಂಕರನ ಬಾಡಿಗೆ ಗೂಂಡಾಗಳು ಕ್ಷಣದಲ್ಲಿ ಮುನ್ನುಗ್ಗಿ ಸಂತಾನಪ್ಪನನ್ನು ಮಿಸುಕಾಡದಂತೆ ಬಲವಾಗಿ ಹಿಡಿದುಕೊಂಡರು. ಶಂಕರ ತನ್ನ ಜೀವವಮಾನದಲ್ಲಿ ಅಂಥದ್ದೊಂದು ಒದೆತವನ್ನು ಯಾರಿಂದಲೂ ತಿಂದವನಲ್ಲ. ಆದರೆ ಇಂದು ತನ್ನ ಕೂಲಿಯಾಳಿನಿಂದಲೇ ಅಂಥ ದುರ್ದುಸೆ ತನಗೆ ಬಂದುದನ್ನು ನೆನೆದವನಿಗೆ ಅವಮಾನದಿಂದ ಸತ್ತಂತಾಯಿತು. ಎದ್ದು ನಿಲ್ಲಲಾಗದಷ್ಟು ನೋವಿದ್ದರೂ ಕಷ್ಟಪಟ್ಟು ಎದ್ದು ನಿಂತ. ಅವನ ರಕ್ತದ ಕಣಕಣದಲ್ಲೂ ಕ್ರೋಧವು ಪ್ರಜ್ವಲಿಸಿತು. ಸಂತಾನಪ್ಪನ ಕತ್ತಿನ ಪಟ್ಟಿಯನ್ನು ಒರಟಾಗಿ ಎಳೆದು ಹಿಡಿದವನು, ‘ಹಲ್ಕಟ್ ನನ್ಮಗನೇ… ನನ್ನ ಮೇಲೆಯೇ ಕೈಮಾಡುವಷ್ಟು ಸೊಕ್ಕಾ ನಿಂಗೆ…!?’ ಎಂದು ಕ್ಯಾಕರಿಸಿ ಅವನ ಮುಖಕ್ಕೆ ಉಗಿದವನು, ಕಾಲ ಮೊಣಗಂಟಿನಿಂದ ಅವನ ಮರ್ಮಾಂಗಕ್ಕೆ ಬೀಸಿ ಬೀಸಿ ನಾಲ್ಕೈದೇಟು ಜಾಡಿಸಿ ಒದ್ದುಬಿಟ್ಟ. ‘ಯಾವ್ವಾ ಸತ್ತೆನವ್ವಾ…!’ ಎಂದು ಉಸಿರುಗಟ್ಟಿ ಅರಚಿದ ಸಂತಾನಪ್ಪ ಕಡಿದ ಬಾಳೆಯಂತೆ ನೆಲಕ್ಕುರುಳಿದ. ಅವನ ಕೈಯಿಂದ ಮಚ್ಚು ತನ್ನಿಂದ ತಾನೇ ಕಳಚಿಬಿತ್ತು. *** ಮರುದಿನ ಮುಂಜಾನೆ, ‘ಈಶ್ವರಪುರದ ಸಾರ್ವಜನಿಕ ಶೌಚಾಲಯದಲ್ಲಿ ಉತ್ತರ
ಮಕ್ಕಳಿಗಾಗಿ ಅನುಭವ ಕಥನ ಕಾಡಂಚಿನಊರಿನಲ್ಲಿ….. ವಿಜಯಶ್ರೀ ಹಾಲಾಡಿ ವಿಜಿ ಸಣ್ಣವಳಿರುವಾಗ, ಅಜ್ಜಿ ಅಂದಿಗೆ ಸುಮಾರು ಐವತ್ತೈದು-ಅರವತ್ತು ವರ್ಷಗಳ ಹಿಂದೆ (ಅಂದರೆ ಇವತ್ತಿಗೆ ತೊಂಬತ್ತು-ತೊಂಬತ್ತೈದು ವರ್ಷಗಳ ಹಿಂದೆ) ನಡೆದ ಘಟನೆಯನ್ನು ಹೇಳುತ್ತಿದ್ದರು. ಅಜ್ಜಿಯ ಮಾವ ಮುಂತಾದ ಹಿರಿಯರಿದ್ದ ಸಮಯವದು. ಆಗ ನಮ್ಮೂರು `ಮುದೂರಿ’ಯ ಸುತ್ತಲಿನ ಕಾಡುಗಳಲ್ಲಿ ಹುಲಿಯಿತ್ತಂತೆ! ಎಷ್ಟು ಹುಲಿಗಳಿದ್ದವೋ, ತಿಳಿಯದು, ಆದರೆ ಊರಿಗೆ ಬಂದು ದನಗಳನ್ನು ಕೊಂಡೊಯ್ದ ಅನೇಕ ಪ್ರಸಂಗಗಳಿದ್ದವು. ಹಟ್ಟಿಯ ಗೋಡೆಯನ್ನು ಮಣ್ಣಿನಿಂದ ಗಟ್ಟಿಯಾಗಿ ನಿರ್ಮಿಸಿ ಬಂದೋಬಸ್ತು ಮಾಡಿದ್ದರೂ ಬಾಗಿಲು ಸ್ವಲ್ಪ ಸದರ ಇದ್ದರೆ ಅದರ ಮೂಲಕ ಹಟ್ಟಿಗೆ ನುಗ್ಗಿ ರಾತ್ರೋರಾತ್ರಿ ದನಗಳನ್ನು ಹೊತ್ತೊಯ್ಯುತ್ತಿತ್ತು. ಹಾಗೊಂದು ಸಲ ಹತ್ತಿರದಲ್ಲೇ ಹುಲಿಯ ಭೀಕರ ಘರ್ಜನೆ ಕೇಳಿ ಮನೆಯವರೆಲ್ಲ ನಡುಗಿ ಕುಳಿತಿದ್ದಾಗ ಹಟ್ಟಿಯಿಂದ ಒಂದು ದನವನ್ನು ಕೊಂಡೊಯ್ದಿತ್ತು ಎಂಬ ಭೀಕರ ಘಟನೆಯನ್ನುಅಜ್ಜಿ ಹೇಳಿದರು. ಮೇಯಲು ಬಿಟ್ಟಾಗಲೂ ದನಕರುಗಳನ್ನು ಕದ್ದುಕೊಂಡು ಹೋಗುತ್ತಿತ್ತು ಎಂದರು. ಈ ಘಟನೆಗಳನ್ನು ಕೇಳಿದ ನಂತರ ವಿಜಿಗೆ ಸುಮಾರು ಸಲ ಹುಲಿ ಬಂದು ತಮ್ಮ ದನಗಳನ್ನು ತೆಗೆದುಕೊಂಡು ಹೋದಂತೆ; ತಡೆಯಲು ಹೋದ ಊರಿನವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದಂತೆ ಕನಸು ಬೀಳುತ್ತಿತ್ತು! ಅಜ್ಜಿ ಹೇಳಿದ ಹಳೆಯ ಕಾಲದಲ್ಲಿ ಹುಲಿಗಳು ಜನರಿಗೆ ಬಹಳಷ್ಟು ಕಾಟ ಕೊಟ್ಟಿದ್ದರೂ ವಿಜಿ ಸಣ್ಣವಳಿರುವಾಗ ಅಂತದ್ದೇನೂ ಇರಲಿಲ್ಲ. ಆದರೆ ಹುಲಿಯ ಬದಲಿಗೆ `ಕುರ್ಕ’ ಎಂದು ಕರೆಯುವ ಸಣ್ಣ ಚಿರತೆ ಇತ್ತು. ಇದು ನಾಯಿಗಳನ್ನು ಕದ್ದೊಯ್ಯುತ್ತಿತ್ತು. ಕಾಡಿನೊಳಗೇ ಇರುವ ಕೆಲ ಮನೆಗಳ ನಾಯಿಗಳನ್ನು ಕೊಂಡೊಯ್ಯುತ್ತಿತ್ತು. ಪ್ರೀತಿಯ ನಾಯಿಗಳನ್ನು ಕಳೆದುಕೊಂಡ ಅಂತಹ ಮನೆ ಜನರ ನೋವಿನ ಪ್ರಕರಣಗಳನ್ನು ರುಕ್ಮಿಣಿಬಾಯಿ ಆಗಾಗ ಹೇಳುತ್ತಿದ್ದರು. ಆದರೆ ವಿಜಿಯ ಮನೆ ಕಾಡಿನಿಂದ ಹೊರಗೆ ತೋಟದ ಪಕ್ಕದಲ್ಲಿದ್ದುದರಿಂದ ಇಂತಹ ಅನುಭವ ಆಗಿರಲಿಲ್ಲ. ಅವರೂರಿಗೆ ಸಮೀಪದಲ್ಲೇ ಇದ್ದ `ಹರಿನ್‌ಗುಡ್ಡೆ’ ಎಂಬ ದೊಡ್ಡ ಬೆಟ್ಟದಲ್ಲಿ ಹುಲಿ ಇದೆ ಎಂದು ಜನ ಹೇಳುತ್ತಿದ್ದರು. ಅದು ಸುತ್ತಮುತ್ತಲಿನ ದಟ್ಟ ಕಾಡುಗಳಲ್ಲಿ ರಾತ್ರಿ ತಿರುಗುತ್ತದೆ ಎಂದು ಮಾತಾಡಿಕೊಳ್ಳುತ್ತಿದ್ದರು. ಹಾಗಾಗಿ ರಾತ್ರಿ ಹೊತ್ತುಅಂತಹ ಜಾಗಗಳಿಗೆ ಯಾರೂ ಕಾಲು ಹಾಕುತ್ತಿರಲಿಲ್ಲ. ಮುದೂರಿನಲ್ಲಿಕಬ್ಬಿನಾಲೆ (ಅಲೆಮನೆ) ಪ್ರತೀ ವರ್ಷ ನಡೆಯುತ್ತಿತ್ತು. ಸುತ್ತಮುತ್ತ ಕಬ್ಬು ಬೆಳೆದವರು ಅಲೆಮನೆಗೆ ಸಾಗಿಸಿ ಬೆಲ್ಲ ಮಾಡುತ್ತಿದ್ದರು. ಈ ಕಬ್ಬಿನಾಲೆ ಆಗುತ್ತಿದ್ದುದು ಚಳಿಗಾಲದಲ್ಲಿ. ಆಗ ರಾತ್ರಿಯೆಲ್ಲ ಆಲೆಮನೆಯಲ್ಲಿ ಕೋಣಗಳನ್ನು ಓಡಿಸುತ್ತ ಹಾಡುತ್ತಿದ್ದ ಹಾಡು ಕಿವಿಗೆ ಬೀಳುತ್ತಿತ್ತು. ಇಂತಹ ಸಿಹಿ ಕಬ್ಬಿನಗದ್ದೆಗೆ ನರಿಗಳು ಬರುತ್ತಿದ್ದವು. ರಾತ್ರಿ ಬಂದು ಕಬ್ಬು ತಿಂದು ಹೋಗುತ್ತಿದ್ದವು. ಬಹುಶಃ ಕಬ್ಬು ತಿಂದ ಖುಷಿಯಲ್ಲೋ ಏನೋ ಕೂಕೂಕೂ ಎಂದು ಜೋರಾಗಿ ಊಳಿಡುತ್ತಿದ್ದವು. ಈ ಕೂಗಂತೂ ಮನುಷ್ಯರದ್ದೇ ಸ್ವರ ಎಂಬಷ್ಟರಮಟ್ಟಿಗೆ ಹೋಲಿಕೆಯಾಗುತ್ತದೆ! ಮನೆಯಲ್ಲಿ ಬೆಚ್ಚಗೆ ಮಲಗಿದ ವಿಜಿಗೆ ಈ ಕೂಗು ಕೇಳಿದೊಡನೆ ಕಬ್ಬು, ಸೌತೆಕಾಯಿ ತಿನ್ನುವ ವಿಚಿತ್ರ ಪ್ರಾಣಿ ನರಿ ಇಷ್ಟವೆನಿಸಿ ಅದನ್ನು ನೋಡಬೇಕೆನಿಸುತ್ತಿತ್ತು. ಆದರೆ ಅದನ್ನು ಕಾಡಿನಲ್ಲಿ ನೋಡಿದ್ದು ಒಂದೇ ಸಲ. ಉಳಿದಂತೆ ಝೂಗಳಲ್ಲಿ ನೋಡಿದ್ದಷ್ಟೇ. ಕತೆಗಳಲ್ಲಿ ಓದಿದಂತೆ ನರಿ ಮೋಸ ಮಾಡುವ ಪ್ರಾಣಿ ಎಂದು ಒಪ್ಪಿಕೊಳ್ಳಲು ಅವಳಿಗೆಂದೂ ಸಾಧ್ಯವಾಗಲೇಇಲ್ಲ. “ಮೋಸ ಮಾಡುವುದು ಮನುಷ್ಯರು ಮಾತ್ರ, ಪ್ರಾಣಿಗಳಲ್ಲ” ಎನಿಸುತ್ತಿತ್ತು. ನರಿಗಳ ಕುರಿತು ಅವರೂರಿನ ಜನರು ಒಂದು ಮಾತು ಹೇಳುತ್ತಿದ್ದರು. ಅದು ತಮಾಷೆಯಾಗಿ ಕಂಡರೂ ಜನಕ್ಕೆ ಅದು ನಿಜವೆಂದೇ ನಂಬಿಕೆಯಿತ್ತು. ಕಬ್ಬು ತಿನ್ನುವಾಗ ನಡುನಡುವೆ ಕೆಲಭಾಗ ಕೆಂಪಾಗಿ ಬಿರುಕುಬಿಟ್ಟು ಹಾಳಾಗಿರುತ್ತದಲ್ಲ; `ನರಿ ಪೂಂಕಿ ಬಿಟ್ಟು ಹಾಗಾದದ್ದು’ ಎಂದು ಜನ ಹೇಳುತ್ತಿದ್ದರು! ರಾತ್ರಿ ಕಬ್ಬಿನಗದ್ದೆಗೆ ಇಳಿದು ಚೆನ್ನಾಗಿ ತಿಂದು ಆಮೇಲೆ ಹೀಗೆ ಕಿಡಿಗೇಡಿತನ ಮಾಡಿ ನರಿಗಳು ವಾಪಸ್ಸಾಗುತ್ತವಂತೆ! ವಿಜಿ ಕೂಡಾ ಇದು ನಿಜವೆಂದೇ ತಿಳಿದುಕೊಂಡಿದ್ದಳು. ಆಮೇಲೆ ಸ್ವಲ್ಪ ದೊಡ್ಡವಳಾದ ನಂತರ ಅದು ಕಬ್ಬಿಗೆ ಬರುವ ಎಂತದೋ ರೋಗ ಎಂದು ಗೊತ್ತಾಯಿತು. ಆದರೂ ಪ್ರತೀ ಸಲ ಕಬ್ಬು ತಿನ್ನುವಾಗ ಹಾಳಾದ ಭಾಗವನ್ನು ನೋಡಿದಾಗ ನರಿಯ ಈ ಪ್ರಕರಣ ನೆನಪಾಗದೇ ಹೋಗುವುದಿಲ್ಲ! ಬಿಸಿಲು-ಮಳೆ ಒಟ್ಟಾಗಿ ಬಂದರೆ “ಹಾ ನರಿಯಣ್ಣನ್ ಮದಿ ಆತ್ತ್ಕಾಣಿ ಮಕ್ಳೇ ಈಗ” ಎನ್ನುತ್ತಿದ್ದರು ಅಜ್ಜಿ ಮತ್ತು ಆಚೆಮನೆ ದೊಡ್ಡಮ್ಮ. ಬಿಸಿಲು-ಮಳೆ ಬಂದಾಗಷ್ಟೇ ನರಿಗಳ ಮದುವೆ ನಡೆಯುತ್ತದೆ ಎಂದು ವಿಜಿಯಂತಹಾ ಮಕ್ಕಳು ಕಲ್ಪಿಸಿಕೊಂಡೂ ಇದ್ದರು! ನರಿಗಳು ‘ಕೂಕೂಕೂ’ ಎಂದು ಗುಂಪಾಗಿ ಕೂಗುತ್ತವಲ್ಲ; ಅದು ರಾತ್ರಿ ಹೊತ್ತು ಮಾತ್ರ. ಕಗ್ಗತ್ತಲಲ್ಲಿ ಕೇಳುವ ಆ ವಿಚಿತ್ರ ಕೂಗು ಬಾಲ್ಯದ ಸಿಹಿನೆನಪುಗಳಲ್ಲಿ ಒಂದು. ವಿಶೇಷವೆಂದರೆ ದೀಪಾವಳಿ ಹಬ್ಬದ ದಿನ ಗದ್ದೆಗೆ ದೀಪವಿಟ್ಟ ನಂತರ ಮನುಷ್ಯರೂ ನರಿಗಳಂತೆ ಕೂಕೂಕೂ ಎಂದು ಕೂಗು ಹಾಕುತ್ತಿದ್ದರು! ಇದಾದರೆ ಭೂಮಿಯ ರಾಜ ಬಲೀಂದ್ರನನ್ನು ಕರೆಯುವ ಸಲುವಾಗಿ ವರ್ಷಕ್ಕೊಮ್ಮೆ ಹಬ್ಬ ಮಾಡಿ ಕರೆಯುವುದು. ಆದರೆ ನರಿಗಳು ಯಾರನ್ನು ಕರೆಯಲು ಕೂಗುತ್ತವೋ ವಿಜಿಗೆ ಗೊತ್ತಿರಲಿಲ್ಲ. ಕಬ್ಬು ತಿಂದ ಖುಷಿಯಲ್ಲಿ ಅವು `ದಿಗಣ’ ಹಾರಿ ಕೂಗುವುದು ಎನ್ನುತ್ತಿದ್ದರು ಅಜ್ಜಿ! ಅದೇ ನಿಜವೆಂದು ಅವಳೂ ನಂಬಿದ್ದಳು. ಆದರೆ ಕತೆಗಳಲ್ಲಿ ಓದಿದ ಕಳ್ಳನರಿ, ಸುಳ್ಳನರಿ, ಕುತಂತ್ರಿ ನರಿ, ಮೋಸಗಾರ ನರಿಯ ಪಾತ್ರ ಎಂದೂ ವಿಜಿಯೊಳಗೆ ಇಳಿಯಲೇ ಇಲ್ಲ. ನರಿಯೆಂದರೆ ಮುದ್ದಿನಪ್ರಾಣಿ ಅವಳಿಗೆ! ಗಾಢ ರಾತ್ರಿಗಳಲ್ಲಿ ಕಬ್ಬು, ಸೌತೆ ತಿಂದು ಹಾಡು ಹೇಳುವ ಜೀವನಪ್ರೀತಿಯ ನರಿ ಅವಳಿಗೆ ಸದಾ ಇಷ್ಟ. ಮನೆ ಎದುರಿನ ಗದ್ದೆಯಲ್ಲಿ ಬಸಳೆ ಚಪ್ಪರವನ್ನು ಹಾಕುತ್ತಿದ್ದರು. ಮಳೆಗಾಲದ ಮೂರ್ನಾಲ್ಕು ತಿಂಗಳುಗಳನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಬಸಳೆ ಚಪ್ಪರ ಇದ್ದೇ ಇರುತ್ತಿತ್ತು. ಉಳಿದ ತರಕಾರಿಗಳೂ ಇರುತ್ತಿದ್ದವು. ಕಾಡುಹಂದಿ ರಾತ್ರಿ ಬಂದು ಈ ಗಿಡಗಳ ಬುಡವನ್ನು ಒಕ್ಕಿ ಹೋಗುತ್ತಿತ್ತು. ಬೆಳಿಗ್ಗೆ ಹೋಗಿ ನೋಡುವಾಗ ಅಗೆದು ಹಾಕಿದ ಮಣ್ಣು; ಕೆಲವು ಗಿಡಗಳು ಬುಡಮೇಲಾಗಿ ಬಿದ್ದದ್ದು ಕಾಣುತ್ತಿತ್ತು. ರಾತ್ರಿ ಯಾವ ಮಾಯಕದಲ್ಲೋ ಬಂದು ಹೀಗೆಲ್ಲ ಕರಾಮತ್ತು ಮಾಡಿಹೋದ ಆ ಹಂದಿಗೆ ಅಜ್ಜಿ ಬಯ್ಯುತ್ತಿದ್ದರು. ಕಾಡುಹಂದಿ ಹೀಗೆ ಅಗೆದು ಹೋಗುವುದು ಯಾಕೆ ಎಂದು ವಿಜಿ ಕೇಳಿದಾಗ ಅದು ಗಿಡದ ಗಡ್ಡೆ ಹುಡುಕುವುದುಎಂದು ಅಜ್ಜಿ ಹೇಳುತ್ತಿದ್ದರು. ಅಂದರೆ ಬಸಳೆಯನ್ನು ಗೆಣಸೋ, ಮರಸಣಿಗೆಯೋ, ಕೆಸವೋ, ಮರಗೆಣಸೋ ಎಂದು ಭ್ರಮಿಸಿ, ಅಗೆದು ನೋಡುತ್ತಿತ್ತೇನೋ ಪಾಪದ್ದು! ‘ಕಾಡುಹಂದಿಗೆ ದೊಡ್ಡ ಕೊಂಬಿದೆ, ಅದರಿಂದ ನೆಲ ಅಗೆಯುತ್ತದೆ’ ಎಂದು ವಿಜಿ ಕಲ್ಪಿಸಿಕೊಂಡಿದ್ದಳು. ಆದರೆ ಮತ್ತೆ ಗೊತ್ತಾಯಿತು; ಕೊಂಬಲ್ಲ, ಅದಕ್ಕಿರುವುದು ಬಾಯಿಂದ ಹೊರಹೊರಟ ಬಲಿಷ್ಠ ಹಲ್ಲು ಎಂದು. ಕೆಲವೊಮ್ಮೆ ಸುಮ್ಮ ಸುಮ್ಮನೆ ಗದ್ದೆಯಕಂಟ(ಬದು)ಗಳನ್ನೆಲ್ಲ ಅಗೆದುಹಾಕಿ ಹೋಗುತ್ತಿತ್ತು. ಅಲ್ಲಿ ಹುಳಗಳನ್ನು ಹುಡುಕುತ್ತಿತ್ತೋ ಏನೋ! “ಈ ಹಂದಿಯಿಂದ ಇರಸ್ತಿಕೆ ಇಲ್ಲ” ಎಂದು ಅಜ್ಜಿ ಗೊಣಗುತ್ತಿದ್ದರು. ಇಂತಹ ಹಂದಿ ಮತ್ತು ಇತರ ಪ್ರಾಣಿಗಳ ಬೇಟೆಗಾಗಿ ಅವರೂರಿನ ಜನ ವರ್ಷಕ್ಕೊಂದು ಸಲ ಹೋಗುತ್ತಿದ್ದರು. ನಾಯಿಗಳನ್ನು ಕರೆದುಕೊಂಡು ವಿವಿಧ ರೀತಿಯ ಬಲೆಗಳನ್ನೆಲ್ಲ ಹಿಡಿದು ಹುರುಪಿನಿಂದ ಅವರೆಲ್ಲ ಬೇಟೆಗೆ ಹೋಗುವುದನ್ನು ನೋಡಿ ಅದೇನೋ ಸಂಭ್ರಮವಿರಬೇಕು ಎಂದು ವಿಜಿ ಮೊದಮೊದಲು ಊಹಿಸಿದ್ದಳು. ನಾಯಿಗಳಂತೂ ಕಿವಿಗೆ ಗಾಳಿ ಹೊಗ್ಗಿದಂತೆ ಹತ್ತು ದಿಕ್ಕಿಗೆ ಮೂಗುಗಾಳಿ ಹಿಡಿಯುತ್ತಾ ನೆಗೆದು ಬಿಡುತ್ತಿದ್ದವು. ಅವುಗಳ ಕಾತುರ, ಉದ್ವೇಗ, ಚುರುಕುತನ ವರ್ಣಿಸಲಸಾಧ್ಯ. ಆದರೆ ಬೇಟೆ ಎಂದರೆ ಹೇಗಿರುತ್ತದೆಂದು ವಿಜಿಗೆ ಗೊತ್ತಿರಲಿಲ್ಲ. ಕ್ರಮೇಣ, ಜನರು ಹೆಗಲ ಮೇಲೆ ತೂಗುಹಾಕಿಕೊಂಡು ಬರುವ ಮೊಲ, ಹಂದಿ ಮತ್ತಿತರ ಸತ್ತ ಪ್ರಾಣಿಗಳನ್ನು ನೋಡಿ ಬೇಟೆಯೆಂದರೆ ಏನೆಂದು ತಿಳಿಯಿತು. ವಿಜಿಯ ಮನೆ ಮೆಟ್ಟಿಲಿನಿಂದ ಮುಂದಿನ ಹೆಜ್ಜೆ ಇಟ್ಟರೆ ಅದೇ ಗದ್ದೆ! ಮಳೆಗಾಲದಲ್ಲಂತೂ ನೀರು, ಕೆಸರು ಅಥವಾ ಬತ್ತದ ಸಸಿಗಳನ್ನು ಒಳಗೊಂಡ ಈ ಗದ್ದೆ ಹಲವು ರೂಪಗಳಲ್ಲಿ ಕಾಣಿಸುತ್ತಿತ್ತು. ಗದ್ದೆಯಲ್ಲಿದ್ದ ಕಪ್ಪೆಗಳೆಲ್ಲ ಮಳೆಗಾಲದ ರಾತ್ರಿ ಕೂಗುತ್ತಾ ಅದೇ ಒಂದು ದೊಡ್ಡ ಶ್ರುತಿ ಹಿಡಿದ ಸಂಗೀತ ಸಭೆಯಂತೆ ಕೇಳುತ್ತಿತ್ತು. ಈ ಕಪ್ಪೆಗಳಿಗೂ ವಿಜಿಯ ಮನೆ ಸದಸ್ಯರಿಗೂ ಹತ್ತಿರದ ಸಂಬಂಧ! ‘ಗೋಂಕ್ರಕಪ್ಪೆ’ ಎಂದು ಕರೆಯುವ ದೊಡ್ಡ ಕಪ್ಪೆಯನ್ನು ಕಂಡರಂತೂ ವಿಜಿಯಂತಹ ಮಕ್ಕಳು ಎರಡು ಹೆಜ್ಜೆ ಹಿಂದೆ ಹಾರಿ ಹೆದರಿಕೊಳ್ಳುತ್ತಿದ್ದವು. ದೊಡ್ಡ, ಉರುಟು ಕಣ್ಣಿನ ಗ್ವಾಂಕ್ರ ಕಪ್ಪೆಗಳು ತೆಂಗಿನಕಟ್ಟೆಯಲ್ಲಿ, ಹೂವಿನ ಗಿಡಗಳ ಅಡಿಯಲ್ಲಿ ಹುಲ್‌ಕುತ್ರೆಯ ಅಡಿಯಲ್ಲಿ ಎಲ್ಲೆಲ್ಲೋ ಕುಳಿತುಕೊಳ್ಳುತ್ತಿದ್ದವು. ಕೆಸರಿನ ಬಣ್ಣಕ್ಕಿರುವ ಅವು ಫಕ್ಕನೆ ಕಾಣುತ್ತಿರಲಿಲ್ಲ. ಹತ್ತಿರ ಹೋದಾಗ ಚಂಗನೆ ಹಾರಿ ಹೆದರಿಸುತ್ತಿದ್ದವು! ಅವು ಕೂಗುವುದೂ ‘ಗ್ವಾಂಕ್ರ್ ಗ್ವಾಂಕ್ರ್ ‘ ಎಂಬ ದೊಡ್ಡ ಶಬ್ದದಲ್ಲಿ! ಬೇಸಗೆ ಕಳೆದು ಮೊದಲ ಮಳೆ ಬೀಳುವ ಸಮಯದಲ್ಲಿ ಸೂಚನೆ ಕೊಡುವುದು ಈ ಗ್ವಾಂಕ್ರ ಕಪ್ಪೆಗಳೇ! ಎಲ್ಲೋ ದೂರದಲ್ಲಿ ಮಳೆ ಬರುವಾಗಲೇ ಅಥವಾ ಮಳೆ ಬರುವ ವಾತಾವರಣ ಉಂಟಾದಾಗಲೇ ಇವುಗಳಿಗೆ ಗೊತ್ತಾಗುತ್ತೆಂದು ಕಾಣುತ್ತದೆ. ಒಂದೇ ಸಮನೆ ಕೂಗಲು ಶುರು ಮಾಡುತ್ತಿದ್ದವು. ಹಾಗೆ ಕಪ್ಪೆಗಳು ಕೂಗಿದಾಗ ‘ಹೋ ಮಳೆ ಬರುತ್ತದೆ’ ಎಂಬ ಖುಷಿ ಜನರಲ್ಲಿ ಮೂಡುತ್ತಿತ್ತು. ಇವಲ್ಲದೆ ಇತರ ಸಣ್ಣ ಸಣ್ಣ ಕಪ್ಪೆಗಳೂ ಇದ್ದವು. ಇವು ಆಗಾಗ ನೇರ ಮನೆಯೊಳಗೇ ಪ್ರವೇಶಿಸುತ್ತಿದ್ದವು. ಹಿಡಿಕಟ್ಟಿನಲ್ಲಿ ಓಡಿಸಿ ಹೊರಹಾಕಲು ಪ್ರಯತ್ನಿಸಿದರೆ ಛಲಬಿಡದೆ ಜಗಲಿಯಿಂದ ಚಾವಡಿಗೆ, ಪಡಸಾಲೆಗೆ, ಅಲ್ಲಿಂದ ಒಳಕೋಣೆಗೆ ಹೀಗೆ ಮನೆಯೊಳಗೇ ಹಾರುತ್ತ ಪಜೀತಿ ಮಾಡುತ್ತಿದ್ದವು. ಹಾಗಾಗಿ ರಾತ್ರಿ ಇವು ಒಳಗೆ ಬಂದಾಗ ಹಾರದಂತೆ ಒಂದು ಪಾತ್ರೆ ಮುಚ್ಚಿಟ್ಟು ಮರುದಿನ ಬೆಳಿಗ್ಗೆ ಹೊರಗೆ ಓಡಿಸುತ್ತಿದ್ದುದೂ ಇದೆ. ಈ ಕಪ್ಪೆಗಳ ಒಂದು ದುರ್ಗುಣವೆಂದರೆ ಉಚ್ಚೆ ಹಾರಿಸುವುದು. ಓಡಿಸಲು ಹೋದ ಕೂಡಲೇ ಉಚ್ಚೆ ಹಾರಿಸಿ ತಪ್ಪಿಸಿಕೊಳ್ಳುತ್ತಿದ್ದವು! ಬೆಕ್ಕು ನಾಯಿಗಳು ಇವನ್ನು ಮುಟ್ಟಲು ಹೋದರೆ ಕಣ್ಣಿಗೋ, ಮೂಗಿಗೋ, ಬಾಯಿಗೋ ಇವು ಹಾರಿಸಿದ ಉಚ್ಚೆ ಕುಡಿದುಕೊಂಡು ಸಪ್ಪೆ ಮುಖ ಹಾಕಿ ವಾಪಸ್ಸು ಬರುತ್ತಿದ್ದವು! ಆದರೆ ಇವು ಎಷ್ಟೇ ಉಪದ್ರ ಕೊಟ್ಟರೂ ಯಾರೂ ಕೊಲ್ಲುತ್ತಿರಲಿಲ್ಲ. “ಕಪ್ಪೆಕೊಂದ್ರೆ ಪಾಪ” ಎಂಬ ಆಡುಮಾತನ್ನುಎಲ್ಲರೂ ನಂಬುತ್ತಿದ್ದರು. ವಿಜಿಯ ಮನೆಯಲ್ಲಿ ಯಾರೂ ಯಾವತ್ತೂ ಒಂದೇ ಒಂದು ಕಪ್ಪೆಯನ್ನು ಹೊಡೆದದ್ದು, ಕೊಂದದ್ದನ್ನು ಅವಳು ನೋಡಿಲ್ಲ, ಇನ್ನು ಮರಕಪ್ಪೆಗಳೆಂದರೆ ವಿಜಿಗೆ ಭಾರೀ ಹೆದರಿಕೆ. ಇವು ಒಳಗೆ ಬಂದರೆ ಹೊರಹಾಕಲು ಸಾಧ್ಯವೇ ಇಲ್ಲ! ಕಡ್ಡಿಯಲ್ಲಿ ಮುಟ್ಟಲು ಹೋದರೆ ತಿರುಗಿ ಮುಖದ ಕಡೆಗೇ ಹಾರುತ್ತವೆ. ಇವುಗಳಿಗೆ ಮನುಷ್ಯರಂತೆ ಬುದ್ಧಿ ಗಿದ್ದಿ ಇದೆಯೇನೋ ಎಂದು ಸಂಶಯವಾಗುತ್ತಿತ್ತು ಅವಳಿಗೆ! ವಿಚಿತ್ರವಾಗಿ ವರ್ತಿಸುವ ಇವುಗಳು ಮೈಮೇಲೆ ಹಾರಿ ಕುಳಿತುಕೊಳ್ಳಲು ಮನುಷ್ಯನ ಕಡೆಗೇ ಹಾರುತ್ತವೆ. ಅದಲ್ಲದೆ ಮನೆಯ ಆಯಕಟ್ಟಿನ ಯಾವುದಾದರೂ ಜಾಗದಲ್ಲಿ ಕುಳಿತು ಅಶರೀರವಾಣಿ ಹೊರಡಿಸುತ್ತವೆ. ಮನೆಯೊಳಗೇ ಅವಿತುಕೊಂಡಿದ್ದರೂ ಇವುಗಳನ್ನು ಹುಡುಕುವುದು ಕಷ್ಟ. ಕಾಲುಗಳನ್ನು ಅಗಲವಾಗಿ ಹರಡಿಕೊಂಡು ಗೋಡೆಯ ಮೇಲೆ ಚಲಿಸುವ ಮರಕಪ್ಪೆಯನ್ನು ಕಂಡರೆ ಭಯವಾಗಿ ಆ ಜಾಗದಿಂದಲೇ ದೂರ ಓಡಿಹೋಗುತ್ತಿದ್ದಳು ವಿಜಿ. ಒಮ್ಮೊಮ್ಮೆ ಬಚ್ಚಲು ಮನೆಯೊಳಗೆ, ಕೋಣೆಯೊಳಗೆ ಕುಳಿತು ಇವು ಅಣಕಿಸುವಾಗ ಏನು ಮಾಡಬೇಕೆಂದೇ ತಿಳಿಯುತ್ತಿರಲಿಲ್ಲ! ಆವಾಗೆಲ್ಲ ಎಷ್ಟೊಂದು ಗ್ವಾಂಕ್ರ ಕಪ್ಪೆ, ಮರಕಪ್ಪೆ, ಸಣ್ಣ ಚಿಲ್ಟಾರಿ ಕಪ್ಪೆಗಳು ಇದ್ದವು! ವಿಜಿ ಹೈಸ್ಕೂಲಿಗೆ ಹೋಗುತ್ತಿದ್ದ ಎಂಬತ್ತು-ತೊಂಬತ್ತರ ದಶಕದಲ್ಲಿ ಹಾವು-ಕಪ್ಪೆ ಹಿಡಿಯುವವರು ಬರಲಾರಂಭಿಸಿದರು. ಗದ್ದೆ ಬದಿ, ತೋಡಿನ ಬದಿ ಚೀಲಗಳನ್ನು ಹಿಡಿದುಕೊಂಡು ಅವರು ತಿರುಗಾಡುತ್ತಿದ್ದರು. `ಗೋಂಕ್ರಕಪ್ಪೆ ಮತ್ತು ಹಾವಿನ ಚರ್ಮಕ್ಕಾಗಿ ಅವುಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಯಾವುದೋ ಕಂಪನಿಯವರು ಇದನ್ನೆಲ್ಲ ಮಾಡಿಸುತ್ತಾರೆ’ ಎಂದು ಅಣ್ಣ ಹೇಳುತ್ತಿದ್ದ. ಹಳ್ಳಿಯ ಜನ ಎಷ್ಟು ಅಮಾಯಕರಾಗಿದ್ದರೆ, ತಮ್ಮಗದ್ದೆ ಬಯಲುಗಳಿಂದ ಅವುಗಳನ್ನು ಹಿಡಿದೊಯ್ಯಬಾರದೆಂದು ಗುರುತು ಪರಿಚಯವಿಲ್ಲದ ಆ ಮನುಷ್ಯರಿಗೆ ತಾಕೀತು ಮಾಡಬೇಕೆಂದೂ ಅವರಿಗೆ ತಿಳಿದಿರಲಿಲ್ಲ…! ಹೀಗೆ ಹಾವು, ಕಪ್ಪೆಗಳನ್ನು ಹಿಡಿದು ಕೊಂದ ಅಂದಿನ ಆ ಕೆಲಸ ಪರಿಸರಕ್ಕೆ ದೊಡ್ಡ ನಷ್ಟ. ಆಮೇಲೆ ಗ್ವಾಂಕ್ರ ಕಪ್ಪೆಗಳು ಮೊದಲಿನಷ್ಟು ಕಾಣ ಸಿಗಲೇ ಇಲ್ಲ! ಓತಿಕ್ಯಾತಕ್ಕೆ ವಿಜಿಯ ಊರಿನಲ್ಲಿ ‘ಕಾಯ್ಕಳ್ಳ’ ಎಂದು ಕರೆಯುತ್ತಿದ್ದರು. ಈ ಹೆಸರು









