ನೂತನ ನೋಡಿದ ಸಿನೆಮಾ
ವಿದ್ಯಾ ಕಸಂ ಶಕುಂತಲಾ ದೇವಿ ನೂತನ ದೋಶೆಟ್ಟಿ ವಿದ್ಯಾ ಕಸಂ ಈ ಶಬ್ದಗಳು , ಇತ್ತೀಚೆಗೆ ಬಿಡುಗಡೆಯಾದ, ಖ್ಯಾತ ಗಣಿತಜ್ಞೆ , ಸಂಖ್ಯಾ ನಿಪುಣೆ, ಮಾನವ ಕಂಪ್ಯೂಟರ್ ಎಂದೇ ಹೆಸರಾಗಿದ್ದ ಶಕುಂತಲಾ ದೇವಿ ಅವರ ಜೀವನಾಧಾರಿತ ಹಿಂದಿ ಚಲನಚಿತ್ರದಲ್ಲಿ ಬಹಳ ವಿಶೇಷವಾಗಿ ಉಪಯೋಗಿಸಲ್ಪಡುತ್ತವೆ. ಈ ವಿದ್ಯಾ ಕಸಂ ಎಂಬ ಆಣೆ- ಪ್ರಮಾಣ ಚಿತ್ರದುದ್ದಕ್ಕೂ ಬೇರೆ ಬೇರೆ ಸಂದರ್ಭಗಳಲ್ಲಿ ಹೊಸ ತಿರುವನ್ನು ಕೊಡುತ್ತ ಹೋಗುತ್ತದೆ. ಅಮೇಜಾನ್ ಪ್ರೈಂನಲ್ಲಿ ಜುಲೈ 31 ರಂದು ಬಿಡುಗಡೆಯಾದ ಈ ಚಿತ್ರವನ್ನು ನಾನು ನೋಡಿದ್ದು ವಿದ್ಯಾ ಬಾಲನ್ ಎಂಬ ಅನನ್ಯ ಅಭಿನೇತ್ರಿಗಾಗಿ. ಗಣಿತಕ್ಕೂ ನನಗೂ ಎಣ್ಣೆ – ಸೀಗೆಕಾಯಿ ಸಂಬಂಧ. ಹಾಗಾಗಿ ಶಕುಂತಲಾ ದೇವಿಯವರ ಬಗ್ಗೆ ನನಗೆ ಇದ್ದದ್ದು ಅಪಾರ ಭಯ ಮಿಶ್ರಿತ ಗೌರವ. ಅವರ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ ಓದಿ, ಆನಂತರದಲ್ಲಿ ಟಿವಿಯಲ್ಲಿ ನೋಡಿ ಬೆರಗಾಗಿದ್ದಿದೆ. ಸಂಖ್ಯೆಗಳೊಂದಿಗೆ ಅವರ ಸರಸ, ಸಲಿಗೆ ಆಗ ವಿಶ್ವದಾದ್ಯಂತ ಮನೆಮಾತಾಗಿತ್ತು.ಅಂಥ ಶಕುಂತಲಾ ದೇವಿಯವರ ಬಗೆಗಿನ ಚಲನಚಿತ್ರವನ್ನು ಕುತೂಹಲದಿಂದಲೇ ನೋಡಲು ಕುಳಿತೆ. ಆರಂಭದಲ್ಲೇ ನಿರ್ದೇಶಕ ಅನು ಮೆನನ್, ಶಕುಂತಲಾ ದೇವಿಯವರ ಮಗಳು ಅನುಪಮಾ ಬ್ಯಾನರ್ಜಿಯವರು ಹೇಳಿರುವಂತೆ ಚಿತ್ರಿಸಲಾಗಿದೆ ಎಂದು ಹೇಳಿ ತಾವು ಸುರಕ್ಷರಾಗುವುದರೊಂದಿಗೆ ಚಿತ್ರದ ಆಯಾಮವನ್ನು ಸಿದ್ಧಪಡಿಸುತ್ತಾರೆ. ಇಡಿಯ ಚಿತ್ರ ಮಗಳ ಕಣ್ಣೋಟದಲ್ಲೇ ಸಾಗುತ್ತದೆ. ಆರಂಭವಾಗುವುದೇ ಮಗಳು ಅನು, ಶಕುಂತಲಾ ದೇವಿ ಎಂಬ, ಅಪ್ರತಿಮ ಬುದ್ಧಿಮತ್ತೆಗಾಗಿ ವಿಶ್ವಮಾನ್ಯಳಾದ , ತನ್ನ ತಾಯಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕುವ ಮೂಲಕ. ನೋಡುಗರನ್ನು ಅವಾಕ್ಕಾಗಿಸಿ ಸೆರೆ ಹಿಡಿಯುವ ತಂತ್ರ ಇಲ್ಲಿ ಕೆಲಸ ಮಾಡಿದೆ. ಚಿತ್ರ ಮುಂದುವರೆದಂತೆ ‘ದೇವಿ’ಎಂಬ ಹೆಣ್ಣು, ಪತ್ನಿ, ತಾಯಿಯೇ ವಿಜ್ರಂಭಿಸುತ್ತಾಳೆ! ಬಾಲ್ಯದಲ್ಲಿ ತಂದೆಯಿಂದಲೇ ಶೋಷಣೆಗೆ ಒಳಗಾಗಿ ತನ್ನ ಬಾಲ್ಯವನ್ನೇ ಪುಟ್ಟ ದೇವಿ ಕಳೆದುಕೊಳ್ಳುತ್ತಾಳೆ. ಅವಳ ಬುದ್ಧಿಮತ್ತೆಯನ್ನು ತನ್ನ ಮನೆಯ ಹೊಟ್ಟೆ ಹೊರೆಯಲು ಬಳಸಿಕೊಳ್ಳುವ ಕಟುಕ ಹಾಗೂ ಹೀನ ಬುದ್ಧಿಯ ತಂದೆಯಾಗಿ ಪ್ರಕಾಶ್ ಬೆಳವಾಡಿ ಅಭಿನಯಿಸಿದ್ದಾರೆ. ಶಾಲೆ, ಆಟ-ಪಾಠಗಳಿಂದ ವಂಚಿತಳಾಗಿ ಅವುಗಳನ್ನು ಹಂಬಲಿಸುವ ದೇವಿ ಕೊನೆಗೆ ಮನೆಯಲ್ಲಿ ತನ್ನ ಅಂಗವಿಕಲ ಅಕ್ಕನೊಂದಿಗೆ ಕೆಲ ಹೊತ್ತು ನಗುತ್ತ, ತನ್ನಿಷ್ಟದ ಕೊಳಲು ನುಡಿಸುತ್ತ ಕಾಲ ಕಳೆಯುವುದಕ್ಕೂ ತಂದೆ ಅವಕಾಶ ಕೊಡದಾಗ ವ್ಯಗ್ರಳಾಗುತ್ತಾಳೆ. ತಂದೆಯನ್ನು ತುಟಿಪಿಟಕ್ಕೆನ್ನದೆ ಸಹಿಸಿಕೊಳ್ಳುವ ತಾಯಿಯನ್ನು ದ್ವೇಷಿಸಲು ಆರಂಭಿಸುತ್ತಾಳೆ. ಈ ಎಲ್ಲ ರೇಜಿಗೆ ಗಳಿಂದ ಮುಕ್ತಿ ಹೊಂದಲು ಯೌವನದಲ್ಲಿ ಇಂಗ್ಲೆಂಡಿಗೆ ಹಾರಿ ಬಿಡುತ್ತಾಳೆ. 1950 ರ ಆಸುಪಾಸಿನಲ್ಲಿ ಆಕೆ ಹೇಗೆ ಅಲ್ಲಿಗೆ ಹೋದರು ಎಂಬುದರ ಬಗ್ಗೆ ಯಾವ ಮಾಹಿತಿಯೂ ಚಿತ್ರದಲ್ಲಿಲ್ಲ! ಒಬ್ಬಳೇ ಹೆಣ್ಣುಮಗಳು ತನ್ನ ಬದುಕನ್ನು ಅರಸಿ ಮಾಡುವ ಮುಂದಿನ ಪ್ರಯಾಣ ಹಳೆಯ ಹಿಂದಿ ರೊಮ್ಯಾಂಟಿಕ್ ಚಿತ್ರದಂತೆ ಸಾಗಿಬಿಡುತ್ತದೆ. ದೇವಿ ಪುರುಷರೊಂದಿಗೆ ತೀರ ಸಲಿಗೆಯಿಂದಿರುತ್ತಾಳೆ. ಮೊದಲ ಜೊತೆಗಾರ ತನ್ನ ಮದುವೆಯನ್ನೇ ಅವಳಿಂದ ಮುಚ್ಚಿಟ್ಟದ್ದು ತಿಳಿದಾಗ ಅವನದೇ ಬಂದೂಕಿನಿಂದ ಅವನ ಕಿವಿಹಾರಿಸಿ ಓಡಿ ಹೋಗುತ್ತಾಳೆ. ಆನಂತರ ಒಬ್ಬ ಸ್ಪೇನಿಯವನೊಂದಿಗೆ ಸರಸ. ಅವನು ಅವಳ ಪ್ರತಿಭೆಗೆ ಅಪಾರ ಮನ್ನಣೆ ಸಿಗುವಂತೆ ಮಾಡುತ್ತಾನೆ. ದೇವಿ ಹಣವನ್ನು ಎರಡು ಕೈಗಳಲ್ಲಿ ಬಾಚಿ ದುಡಿಯುತ್ತಾಳೆ. ಈ ಹೊತ್ತಿಗೆ ಅವಳು ಪ್ರಖ್ಯಾತರಾಗಿರುತ್ತಾಳೆ. ಅವನು ಅವಳನ್ನು ಬಿಟ್ಟು ತನ್ನ ದೇಶಕ್ಕೆ ಹೊರಡಬೇಕಾದಾಗ ಸ್ವಲ್ಪ ದುಃಖವಾದರೂ ದೇವಿಗೆ ಸಂಬಂಧಗಳ ಬಂಧದಲ್ಲಿ ನಂಬಿಕೆ ಇದ್ದಂತೆ ಕಾಣುವುದಿಲ್ಲ. ತನಗಾಗಿ, ತನ್ನಿಷ್ಟದಂತೆ ಬದುಕುವುದು ಅವಳ ಜೀವನದ ಏಕೈಕ ಗುರಿ. ಅವಳು ಖ್ಯಾತಿಯ ಉತ್ತುಂಗದಲ್ಲಿದ್ದಾಗ ಅವಳ ಜೀವನ ಪ್ರವೇಶಿಸಿದವನು ಪಾರಿತೋಷ್ ಬ್ಯಾನರ್ಜಿ. ಅವನಲ್ಲಿ ಅವಳು ಕೇಳುವುದು ಮಗುವನ್ನು. ಮದುವೆಯನ್ನಲ್ಲ. ಬಾಲ್ಯದಲ್ಲೇ ಗಳಿಕೆಗೆ ಇಳಿದ ಪುಟ್ಟ ಬಾಲಕಿ, ಮನೆಯನ್ನು ನಡೆಸುವ ಒಡತಿಯಾಗಿ, ತಂದೆಯ ಪಾಖಂಡಿತನ, ತಾಯಿಯ ಅಸಹಾಯಕತೆಯನ್ನು ತನಗೆ ಅರ್ಥವಾದಂತೆ ಅರ್ಥೈಸಿಕೊಂಡು ಹಠ, ಮೊಂಡು, ಮಹತ್ವಾಕಾಂಕ್ಷೆ, ಬಂಧನರಹಿತ ಸ್ವಾತಂತ್ರ್ಯ, ಕಟ್ಟುಪಾಡುಗಳಿರದ ಜೀವನಕ್ಕೆ ಹಾತೊರೆಯುವಂತೆ ಚಿತ್ರಿಸಲಾಗಿದೆ. ಹೀಗಿದ್ದರೆ ಶಕುಂತಲಾ ದೇವಿ ಎಂದು ಆಶ್ಚರ್ಯ ವಾಗುತ್ತದೆ. ಅವರದು ಸ್ವಾಭಿಮಾನವೋ ಅಂಹಂಕಾರವೋ ತಿಳಿಯುವುದಿಲ್ಲ. ಒಬ್ಬ ಓವರ್ ಪೊಸೆಸಿವ್ ತಾಯಿಯಾಗಿ ಅವರನ್ನು ತೋರಿಸಲಾಗಿದೆ. ತನ್ನ ಮಗು ತನ್ನಂತೆಯೇ ಆಗಬೇಕು. ತನ್ನ ನೆರಳಿನಲ್ಲೇ ಇರಬೇಕು ಎಂಬ ಹಠದಿಂದ ಮಗು ಅನುಳನ್ನು ತಂದೆಯಿಂದ ದೂರ ಮಾಡುವುದಷ್ಟೇ ಅಲ್ಲ ಅವಳ ಬಾಲ್ಯದಿಂದಲೂ ವಂಚಿಸುತ್ತಾಳೆ. ರಾಷ್ಟ್ರಗಳಿಂದ ರಾಷ್ಟ್ರಕ್ಕೆ ಹಾರುತ್ತ ಹಣ, ಖ್ಯಾತಿ ಗಳಿಸುವ ಗೀಳು ಹೆಣ್ಣಾಗಿ ಅವರು ಕಾಣಿಸುತ್ತಾರೆ. ಸಿಟ್ಟು, ಸ್ವೇಚ್ಛೆ, ಸ್ವಾರ್ಥದ ಮೂರ್ತ ರೂಪವೇ ಆಗಿ ಕಾಣುತ್ತಾರೆ. ವಿದ್ಯಾ ಅವರ ನಟನೆಯಲ್ಲಿ ಶಕುಂತಲಾ ದೇವಿ ಬಹು ಹಗುರವಾಗಿ, ಕೆಲವೊಮ್ಮೆ ಉಡಾಫೆಯಾಗಿ ಕಾಣುತ್ತಾರೆ. ವಿದ್ಯಾ ಅಗತ್ಯಕ್ಕಿಂತ ಹೆಚ್ಚೇ ಗಹಗಹಿಸುತ್ತಾರೆ. ದೇವಿ ನಿಜವಾಗಿಯೂ ಹಾಗಿದ್ದರೆ ಅಥವಾ ಪ್ರೇಕ್ಷಕರಿಗಾಗಿ ಅವರನ್ನು ಹಾಗೆ ಮಾಡಲಾಗಿದೆಯೇ ಗೊತ್ತಿಲ್ಲ. ಆರಂಭದಲ್ಲಿ ಇರುವ ಕುತೂಹಲ, ಗತಿಯ ಬಿಗಿ ಬಂಧ ಅರ್ಧಕ್ಕಿಂತ ಮೊದಲೇ ಕಳೆದು ಹೋಗುತ್ತದೆ. ಒಟ್ಟಿನಲ್ಲಿ ಸಿನಿಮಾ ಅನುಪಮಾ ಬ್ಯಾನರ್ಜಿಯವರ ಏಕಮುಖ ದ್ರಷ್ಟಿಕೋನದಂತೆ ಇದೆ. ಕೊನೆಯಲ್ಲಿ ನಿರಾಸೆಯೂ ಆಗುತ್ತದೆ. ‘ಶಕುಂತಲಾ ದೇವಿ’ ಎಂಬ ಹೆಸರಿನ ಮಾಂತ್ರಿಕತೆ ಚಿತ್ರದಲ್ಲಿ ಒಡಮೂಡಿಲ್ಲ. ಆದರೂ ವಿದ್ಯಾ ಬಾಲನ್ ಅವರ ನಟನೆಯ ಕೆಲ ಸನ್ನಿವೇಶಗಳು, ಅಲ್ಲಲ್ಲಿ ಹಾಯಾಗಿ ಸಾಗುವ ಕೆಲ ಪಾತ್ರಗಳು, ಅನುಪಮಾ ಪಾತ್ರದ ಸನ್ಯಾ ಮಲ್ಹೋತ್ರಾ , ಅವಳ ಗಂಡನ ಪಾತ್ರದಲ್ಲಿ ಅಮಿತ್ ಸಾಧ್ಯ , ಪಾರಿತೋಷ್ ಬ್ಯಾನರ್ಜಿಯ ಪಾತ್ರದಲ್ಲಿ ಜಿಷು ಸೇನ್ ಗುಪ್ತ ಹಿಡಿದು ಕೂರಿಸಿ ಪೂರ್ಣ ಚಿತ್ರ ತೋರಿಸಿ ಬಿಡುತ್ತಾರೆ.ಅಪ್ರತಿಮ ಸಂಖ್ಯಾ ಕುಶಲೆಗೆ ಬಾಲ್ಯದಲ್ಲಿ ಆದ ಆಘಾತ ಆಕೆ ಬೆಳೆದಂತೆ ಮಾನಸಿಕ ತೊಂದರೆಯಾಗಿತ್ತೇ ಎಂಬ ಅನುಮಾನ ಬರುತ್ತದೆ. ಯಾವುದಕ್ಕೂ ಸರಿಯಾದ ಉತ್ತರ ಸಿಗದೆ, ಹಾಗೆಂದು ತೀರ ಗೋಜಲಾಗದಂತೆ ಎಚ್ಚರವಹಿಸಿ ಮಾಡಿದಂತಿದೆ ಈ ಚಿತ್ರ. ಭಾಗ್ ಮಿಲ್ಖಾ ಭಾಗ್, ಎಂ ಎಸ್ ಧೋನಿ ಮೊದಲಾದ ಚಿತ್ರಗಳೆದುರು ಕಳೆಗುಂದುತ್ತದೆ. ನಿರೀಕ್ಷೆ ಹುಸಿಯಾಗುತ್ತದೆ. ಆದರೆ ವಿದ್ಯಾ ಬಾಲನ್ ಇಡಿಯ ಚಿತ್ರವನ್ನು ಅಳುತ್ತಾರೆ. ವಿದ್ಯಾ ಕಸಂ… ಅವರಿಗೆ ಪ್ರಶಸ್ತಿ ಬಂದರೂ ಆಶ್ಚರ್ಯವಿಲ್ಲ. *********************************************
