ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….8 ನಾನೂ ಶಾಲೆಗೆ ಸೇರಿದೆ… ಅಪ್ಪನಿಗೆ ಅಲಗೇರಿಯಿಂದ ಕುಮಟಾ ತಾಲೂಕಿನ ಹನೇಹಳ್ಳಿ ಶಾಲೆಗೆ ವರ್ಗವಾಯಿತು. ಮತ್ತೆ ನಾವು ನಮ್ಮ ತಾಯಿಯ ತೌರೂರು ನಾಡುಮಾಸ್ಕೇರಿಗೆ ಬಂದು ನೆಲೆಸಬೇಕಾಯಿತು. ನಾಡು ಮಾಸ್ಕೇರಿಯಲ್ಲಿ ಆಗ ನಮ್ಮ ಜಾತಿಯ ಜನಕ್ಕೆ ಸ್ವಂತ ಭೂಮಿಯೆಂಬುದೇ ಇರಲಿಲ್ಲ. ಕೆಲವು ಕುಟುಂಬಗಳು ನಾಡವರ ಜಮೀನಿನ ಒಂದು ಮೂಲೆಯಲ್ಲಿ ಆಶ್ರಯ ಪಡೆದು ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದರು. ನಾಡುಮಾಸ್ಕೇರಿಯಲ್ಲಿ ನಾಡವರು ಇದ್ದುದರಲ್ಲಿಯೇ ಸ್ಥಿತಿವಂತರಾಗಿದ್ದರು. ಎಲ್ಲ ಕುಟುಂಬಗಳಿಗೂ ಅಲ್ಪಸ್ವಲ್ಪ ಬೇಸಾಯದ ಭೂಮಿಯೂ ಇದ್ದಿತ್ತು. ಮಾಸ್ಕೇರಿಯ ಈ ಭಾಗದಲ್ಲಿ ನಾಡವರು ವಾಸ್ತವ್ಯ ಇರುವುದರಿಂದಾಗಿಯೇ ನಾಡು ಮಾಸ್ಕೇರಿ’ ಎಂದು ಕರೆಯುತ್ತಿದ್ದಿರಬೇಕು. ಊರಿನ ಉತ್ತರ ಭಾಗದಲ್ಲಿ ಕೆಲವು ಬ್ರಾಹ್ಮಣರ ಮನೆಗಳಿದ್ದವು. ಹಾರ್ವರು ವಾಸಿಸುವ ಕಾರಣದಿಂದಲೇ ಈ ಭಾಗವನ್ನು ಹಾರೂ ಮಾಸ್ಕೇರಿ’ ಎಂದು ಕರೆಯುತ್ತಿದ್ದರು. ಬ್ರಾಹ್ಮಣರಿಗೆ ಸೇರಿದ ಜಮೀನಿನ ಮೂಲೆಯಲ್ಲಿಯೂ ಒಂದೆರಡು ನಮ್ಮ ಆಗೇರರ ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದವು. ನಮ್ಮ ಅಜ್ಜಿಯ ಕುಟುಂಬ ನಾಡುಮಾಸ್ಕೇರಿ ಭಾಗದಲ್ಲಿ ನಾರಾಯಣ ನಾಯಕ ಎಂಬ ನಾಡವ ಜಾತಿಯ ಜಮೀನ್ದಾರರೊಬ್ಬರ ಗೇರು ಹಕ್ಕಲಿನಲ್ಲಿ ವಾಸವಾಗಿದ್ದಿತ್ತು. ನಮ್ಮ ತಂದೆಯವರು ಇಲ್ಲಿಗೆ ಬಂದ ಬಳಿಕ ಅಜ್ಜಿಯ ಮನೆಯ ಸಮೀಪವೇ ನಾರಾಯಣ ನಾಯಕರ ಅನುಮತಿಯಿಂದ ಒಂದು ಚಿಕ್ಕ ಹುಲ್ಲಿನ ಮನೆ ನಿಮಿಸಿಕೊಂಡರು. ಅಷ್ಟು ಹೊತ್ತಿಗೆ ನನಗೆ ಒಬ್ಬ ತಮ್ಮ (ನಾಗೇಶ) ಒಬ್ಬಳು ತಂಗಿ (ಲೀಲಾವತಿ) ಬಂದಾಗಿತ್ತು. ತಾಯಿಯ ತೌರಿನ ಕಡೆಯಿಂದ ಅಜ್ಜಿಮನೆಯಲ್ಲಿ ಅವ್ವನ ಚಿಕ್ಕಪ್ಪ ರಾಕಜ್ಜ ಮತ್ತು ಅವನ ಹೆಂಡತಿ ಮತ್ತು ರಾಕಜ್ಜನ ಚಿಕ್ಕಮ್ಮ ಜುಂಜಜ್ಜಿ ಎಂಬ ಮುದುಕಿ ವಾಸಿಸುತ್ತಿದ್ದರು. ಆದರೆ ಈ ಪ್ರತ್ಯೇಕತೆ ಬಹಳ ಕಾಲವೇನೂ ಇರಲಿಲ್ಲ. ನನಗೆ ಬುದ್ದಿ ತಿಳಿಯುವ ಹೊತ್ತಿಗೆ ರಾಕಜ್ಜನಿಗೆ ಇದ್ದ ಮೊದಲ ಹೆಂಡತಿ ತೀರಿಕೊಂಡಿದ್ದಾರೆ ಎಂದೂ ಈಗ ಇರುವವಳು ಅವನ ಎರಡನೆಯ ಹೆಂಡತಿ ಎಂದೂ ತಿಳಿದು ಬಂತು. ಆದರೂ ಅವರು ಅನ್ಯೋನ್ಯವಾಗಿ ಇದ್ದಂತೆ ನಮಗೆ ಕಾಣಿಸುತ್ತಿತ್ತು. ಆದರೆ ಮುಂದಿನ ಒಂದೆರಡು ವರ್ಷಗಳಲ್ಲಿಯೇ ರಾಕಜ್ಜನ ಎರಡನೆಯ ಹೆಂಡತಿ ತನ್ನ ತೌರಿಗೆಂದು ಅಂಕೋಲೆಯ ಬಾಸಗೋಡ ಎಂಬ ಊರಿನ ಕಡೆ ಹೋದವಳು ಮತ್ತೆ ಎಂದೂ ತಿರುಗಿ ಬಾರದೇ ಅಲ್ಲಿಯೇ ಯಾರನ್ನೋ ಕೂಡಿಕೆ’ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಬಂದಿತ್ತು. ಆ ಬಳಿಕ ರಾಕಜ್ಜ ಮತ್ತು ಜುಂಜಜ್ಜಿ ನಮ್ಮದೇ ಮನೆಯ ಭಾಗವಾಗಿ ಹೋದರು. ರಾಕಜ್ಜ ಕೂಲಿ ಕೆಲಸಕ್ಕೆ ಹೋಗುತ್ತಿದ್ದರೆ, ಜುಂಜಜ್ಜಿ ಮನೆಯಲ್ಲಿಯೇ ಇದ್ದು ಅವ್ವನಿಗೆ ಮನೆಗೆಲಸದಲ್ಲಿ ನೆರವಾಗುತ್ತ ನಾವು ಮೂವರು ಮರಿಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಾ ಉಳಿದುಕೊಂಡಳು. ಇಷ್ಟೆಲ್ಲ ಪುರಾಣ ಹೇಳಿದ ಕಾರಣವೆಂದರೆ ನನ್ನನ್ನು ಮೊಟ್ಟ ಮೊದಲು ಶಾಲೆಗೆ ಕರೆದೊಯ್ದು ಸೇರಿಸಿದವಳೇ ಈ ಜುಂಜಜ್ಜಿ. ನನ್ನ ಹಠ, ತುಂಟತನ ಎಲ್ಲವನ್ನೂ ನಿರಾಳವಾಗಿ ಹಚ್ಚಿಕೊಂಡಿದ್ದ ಜುಂಜಜ್ಜಿಯೇ ಹಾರೂಮಾಸ್ಕೇರಿ ಭಾಗದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿಸಲು ಕರೆದೊಯ್ದಿದ್ದಳು. ನನಗೆ ಇನ್ನೂ ಸರಿಯಾಗಿ ನೆನಪಿದೆ….. ಒಂದು ಪಾಯಿಜಾಮ, ನೆಹರೂ ಶರ್ಟ ಧರಿಸಿ ನಾನು ತುಂಬಾ ಜಬರ್ದಸ್ತ ಆಗಿಯೇ ಶಾಲೆಗೆ ಹೊರಟಿದ್ದೆ. ಆದರೆ ಅಲ್ಲಿಗೆ ಹೋದ ಬಳಿಕ ಶಾಲೆಯೆಂಬ ಶಾಲೆಯನ್ನು ಅದರೊಳಗಿರುವ ಮಾಸ್ತರರನ್ನೂ ಅಲ್ಲಿರುವ ಮಕ್ಕಳನ್ನೂ ಕಂಡದ್ದೇ ನನಗೆ ಕಂಡಾಬಟ್ಟೆ ಅಂಜಿಕೆಯಾಗಿ ಜುಂಜಜ್ಜಿಯ ಸೀರೆಯನ್ನೇ ಗಟ್ಟಿಯಾಗಿ ಹಿಡಿದುಕೊಂಡು ಅಳುತ್ತ ಶಾಲೆಯೇ ಬೇಡವೆಂದು ಹಠ ಮಾಡತೊಡಗಿದ್ದೆ. ಯಾರೋ ಮಾಸ್ತರರೊಬ್ಬರು ಸಂತೈಸಿ ಕರೆದೊಯ್ಯಲು ಮುಂದೆ ಬಂದಾಗ ಮತ್ತಷ್ಟು ಭಯಗೊಂಡು ಚೀರಾಟ ಮಾಡಿದೆ. ಜುಂಜಜ್ಜಿಗೆ ನನ್ನನ್ನು ಸಂತೈಸುವುದೇ ಕಷ್ಟವಾಗಿ ಒದ್ದಾಡುತ್ತ ನನ್ನನ್ನು ಹೇಗೋ ರಮಿಸಿ ಶಾಲೆಯ ಪಕ್ಕದಲ್ಲೇ ಇರುವ ಗೋವಿಂದ ಶೆಟ್ಟಿ ಎಂಬುವರ ಚಹಾದಂಗಡಿಗೆ ಕರೆತಂದಳು. ಅಂಗಡಿಯ ಮುಂಗಟ್ಟಿನಲ್ಲೇ ಇರುವ ಒಲೆಯಮೇಲೆ ಇರುವ ದೊಡ್ಡದೊಂದು ಪಾತ್ರೆಯಲ್ಲಿ ನೀರು ಕೊತಕೊತ ಕುದಿಯುತ್ತಿತ್ತು. ಅದರ ಮೇಲೆ ಚಹಾಪುಡಿ, ಸಕ್ಕರೆ ಬೆರೆಸಿದ ಕಿಟ್ಲಿ’ ಹೊಗೆಯುಗುಳುತ್ತ ಸುತ್ತೆಲ್ಲ ಚಹಾದ ಗಮ್ಮನೆ ಪರಿಮಳ ಹರಡುತ್ತ ಕುಳಿತಿತ್ತು. ನನಗೆ ಅಚ್ಚರಿ ಹುಟ್ಟಿಸಿದ ಸಂಗತಿಯೆಂದರೆ ಒಲೆಯ ಮೇಲಿಟ್ಟ ಆ ದೊಡ್ಡ ಪಾತ್ರೆಯೊಳಗಿಂದ ಕೇಳಿ ಬರುತ್ತಿದ್ದ ಕಿಣಿ ಕಿಣಿ ಶಬ್ಧ. ಅದೊಂದು ವಿಚಿತ್ರ ಮಾಯಾ ಪೆಟ್ಟಿಗೆಯೆಂಬಂತೆ ಅಚ್ಚರಿಯಿಂದ ನೋಡುತ್ತ ನನ್ನ ಅಳು ಯಾವುದೋ ಕ್ಷಣದಲ್ಲಿ ನಿಂತು ಹೋಗಿತ್ತು. ಚಹದಂಗಡಿ ಚಾಲೂ ಸ್ಥಿತಿಯಲ್ಲಿ ಇದೆ ಎಂಬುದನ್ನು ಗಿರಾಕಿಗಳಿಗೆ ತಿಳಿಸಲು ಪಾತ್ರೆಯಲ್ಲಿ ಒಂದು ತೂತು ಬಿಲ್ಲೆ’ (ಆಗಿನ ಕಾಲದ ಒಂದು ನಾಣ್ಯ) ಯನ್ನು ಹಾಕಿ ಇಡುವರೆಂದೂ ಅದು ನೀರು ಕುದಿಯುವಾಗ ಹಾರಾಡುತ್ತ ಪಾತ್ರೆಯ ತಳಕ್ಕೆ ಬಡಿದು ಲಯಬದ್ಧವಾದ ಕಿಣಿ ಕಿಣಿ ಸಪ್ಪಳ ಹೊರಡುವುದೆಂದೂ ತಿಳಿಯಲು ನಾನು ನನ್ನ ಎರಡನೆಯ ತರಗತಿಯವರೆಗೂ ಕಾಯಬೇಕಾಯಿತು. ಉಸೂಳಿ ಅವಲಕ್ಕಿ’ ಗೋವಿಂದ ಶೆಟ್ಟರ ಸ್ಪೇಶಲ್ ತಿಂಡಿಯಾಗಿತ್ತು. ಚೆನ್ನಾಗಿ ಬೇಯಿಸಿದ ಒಟಾಣೆ ಕಾಳುಗಳಿಗೆ ಒಗ್ಗರಣೆ ಹಾಕಿ ಸಿದ್ಧಪಡಿಸಿದ ಉಸೂಳಿ’ಯನ್ನು ಅವಲಕ್ಕಿ ಶೇವು ಬೆರೆಸಿಕೊಡುತ್ತಿದ್ದ ಶೆಟ್ಟರಿಗೆ ಅವುಗಳನ್ನು ಸಮಪ್ರಮಾಣದಲ್ಲಿ ಬೆರೆಸುವ ಹದ ತಿಳಿದಿತ್ತಂತೆ. ಹಾಗಾಗಿಯೇ ಗೋವಿಂದ ಶೆಟ್ಟರ ಉಸೂಳಿ ಅವಲಕ್ಕಿ ಸುತ್ತಲಿನ ನಾಡವರು, ಹಾಲಕ್ಕಿಗಳು, ನಾಮಧಾರಿಗಳು ಆಗೇರರಿಗೆಲ್ಲ ಮರಳು ಹಿಡಿಸುವಷ್ಟು ಪ್ರಿಯವಾದ ತಿಂಡಿಯಾಗಿತ್ತು. ಜುಂಜಜ್ಜಿ ನನಗೆ ಅಂದು ಉಸೂಳಿ ಅವಲಕ್ಕಿ ಪೊಟ್ಟಣ ಕೊಡಿಸಿದಳು. ಅದನ್ನು ತಿಂದಾದ ಬಳಿಕ ಅದೇ ಅಂಗಡಿಯಲ್ಲಿ ಸಿಗುವ ನಾಲ್ಕು ಚಕ್ಕುಲಿಗಳನ್ನೂ ನನ್ನ ನೆಹರೂ ಶರ್ಟಿನ ಎರಡೂ ಕಿಶೆಗಳಲ್ಲಿ ತುಂಬಿದ ಬಳಿಕವೇ ನಾನು ಶಾಲೆಗೆ ಎಂಟ್ರಿಕೊಟ್ಟಿದ್ದೆ. ನಾಡುಮಾಸ್ಕೇರಿಯವರೇ ಆದ ವೆಂಕಟ್ರಮಣ ಗಾಂವಕರ ಎಂಬುವರು ಶಾಲೆಯ ಮುಖ್ಯಾಧ್ಯಾಪಕರಾಗಿದ್ದರು. ಅಜಾನು ಬಾಹು ವ್ಯಕ್ತಿತ್ವ, ಅಚ್ಚಬಿಳಿಯ ಕಚ್ಛೆ ಪಂಚೆಯುಟ್ಟು ಅಂಥದ್ದೇ ಬಿಳಿಯ ನೆಹರೂ ಶರ್ಟ್ ತೊಟ್ಟ ವೆಂಕಟ್ರಮಣ ಗಾಂವಕರ ಕಟ್ಟುನಿಟ್ಟಿನ ಶಿಸ್ತಿಗೆ ಶಾಲೆಯ ಸಹ ಶಿಕ್ಷಕರೂ ಅಂಜಿ ವಿಧೇಯತೆ ತೋರುತ್ತಿದ್ದರು. ನನ್ನಂಥ ಮಕ್ಕಳು ಅವರ ಮುಂದೆ ಸುಳಿಯಲೂ ಭಯ ಪಡುತ್ತಿದ್ದರು. ಶಾಲೆಯ ವಾತಾವರಣದಿಂದ ಪಾರಾಗಿ ಹೊರಬರುವ ತವಕದಲ್ಲೇ ಇದ್ದ ನನ್ನನ್ನು ಇನ್ನೋರ್ವ ಗುರುಗಳು ಆತ್ಮೀಯವಾಗಿ ಕರೆದು ಪ್ರೀತಿಯಿಂದ ಮಾತನಾಡಿಸುತ್ತ ನನ್ನ ಭಯ ನಿವಾರಿಸಿ ಶಾಲೆಯ ಕುರಿತು ಪ್ರೀತಿ ಹುಟ್ಟಿಸಿದರು. ಅವರು ಕುಚೆನಾಡ ತಿಮ್ಮಣ್ಣ ಮಾಸ್ತರರೆಂದೂ ಅಂಕೋಲಾ ತಾಲೂಕಿನ ಬೇಲೇಕೇರಿ ಊರಿನವರೆಂದೂ ನನಗೆ ಅರಿವಾಗಲು ವರ್ಷಗಳೇ ಕಳೆದಿದ್ದವು… ಅಂತೂ ಜುಂಜಜ್ಜಿಯ ದೇಖರೇಖಿಯಲ್ಲಿ ನಾನೂ ಶಾಲೆಗೆ ಸೇರಿದೆ… ******* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಅಂಕಣಬರಹ ಗೊಂಬೆಗೆ ತೊಡಿಸಿದ ಬಣ್ಣದ ಅಂಗಿ ಅಳು ತಡೆಯದಾದಾಗ ಆಸರೆಯಾಗುತ್ತಿದ್ದದ್ದು ಒಂದೋ ಅಜ್ಜಿಯ ಮಡಿಲು, ಇಲ್ಲವಾದರೆ ಆ ತಾಯಿಯಂತಹ ಮರದ ತಣಿಲು. ದಪ್ಪದಪ್ಪದ ಎರಡು ಕಾಂಡಗಳು ಬುಡವೊಂದೇ,ಹೆಗಲೆರಡು ಎಂಬ ಹಾಗೆ ನಿಂತಿದ್ದ ಆಲದ ಮರ. ಅದನ್ನು ಅಪ್ಪಿ ಹಿಡಿದು ನಿಂತರೆ ಎಂತಹಾ ದುಗುಡ,ಭಯ,ದುಃಖವನ್ನೂ ಅದು ಹೀರಿ ನಾನು ಹಗುರವಾಗುತ್ತಿದ್ದೆ. ಯಾವುದೋ ಜನ್ಮಾಂತರದ ಬಂಧದ ಸಾಕ್ಷಿಯೇನೋ ಎಂಬಂತೆ ಮುಖ್ಯ ರಸ್ತೆಯ ಒಂದು ಬದಿಗೆ ಉದ್ದದ ನೆರಳು ಹಾಸಿ ನಿಂತ ಆಲದ ಮರವದು. ಅದರ ಪಕ್ಕದಲ್ಲೇ ತುಸು ಅಂತರ ಕಾಪಾಡಿಕೊಂಡು ಬಂದಂತೆ ಇರುವ ನೇರಳೆಮರ ಎರಡು ಮರಗಳ ನಡುವೆ ಹಿಂಬದಿಯಲ್ಲಿ ಪುಟ್ಟ ದೇಹದ ನೆಕ್ಕರೆ ಮಾವಿನ ಮರ, ಬಾಲ್ಯದ ನಮ್ಮ ಒಡನಾಡಿಗಳು. ಆ ಆಲದ ಮರದ ಬಿಳಲುಗಳನ್ನು ಹಿಡಿದು ನೇತಾಡುತ್ತಿದ್ದದ್ದು ,ಉಯ್ಯಾಲೆ ಆಡಿದ್ದೂ, ಅಂಗೈ ಗುಲಾಬಿಯಾಗಿ ಫೂ.ಫೂ ಎಂದು ಊದಿ ಉರಿ ಕಡಿಮೆಯಾಗಿಸಿಕೊಂಡದ್ದು..ನೇರಳೆ ಮರದ ಅಡಿಯಲ್ಲಿ ಕಾದು ಕಾದು ನೇರಳೆ ಹಣ್ಣ ಹೆಕ್ಕಿ ತಿಂದು ಬಾಯಿ ಮಾತ್ರವಲ್ಲ ಅಂಗಿ ಕೂಡ ಬಣ್ಣ ಮಾಡಿಕೊಳ್ಳುತ್ತಿದ್ದೆವು. ಮಳೆಗಾಲದಲ್ಲಿ ಜೋರಾಗಿ ಗಾಳಿ ಬೀಸಿ ಮಳೆ ಹನಿಯುವ ಮೊದಲೇ ಡುಮ್ ಡುಮ್ ಎಂದು ಈ ಕುಳ್ಳ ಮಾವಿನ ಮರ ಹಣ್ಣು ಬಿಸಾಕುತ್ತಿತ್ತು. ನಾವು ಒದ್ದೆಯಾಗುವ ಭಯವಿಲ್ಲದೆ ಓಡಿ ಹೋಗಿ ಹೆಕ್ಕುತ್ತಿದ್ದೆವು. ಆಲದ ಮರದ ಬುಡದಲ್ಲಿ ಕುಳಿತು ಮಾವಿನ ಹಣ್ಣು ಚೀಪುತ್ತಿದ್ದೆವು. ಈ ಮರಗಳ ನೆರಳನ್ನು ದಾಟಿ ಮುಂದೆ ಹೋಗುವಾಗ ಲೆಕ್ಕಮಾಡಿ ಮೂರೇ ಮನೆ. ಒಂದು ನನ್ನ ಗೆಳತಿಯ ಮನೆಯಾದರೆ, ಮತ್ತೆ ಪುಟ್ಟದಾದ ಮನೆ ಬೇಬಿಯವರದ್ದು. ಅಲ್ಲಿ ಕಡ್ಡಿ ದೇಹದ,ಎಲುಬಿನ ಹಂದರ ಕಾಣುವಂತೆ ಇರುವ ಅವರ ಐದಾರು ಗಂಡು ಮಕ್ಕಳು.ನಂತರದಲ್ಲಿ ಸಿಗುವುದು ಬೆಂಕಿಯ ಎದುರು ಊದುಗೊಳವೆ ಹಿಡಿದು ಕಬ್ಬಿಣದ ಉದ್ದದ ಕಡ್ಡಿ ಹಿಡಿದು ಕೆಲಸ ಮಾಡುವ ಮಾಧವ ಆಚಾರಿಯವರ ಅಂಗಡಿ. ಅಂಗಡಿ ಅಗಲಕ್ಕೆ ಬಾಯಿ ತೆರೆದು ಕೂತಿದ್ದರೆ ಅದರದ್ದೇ ಹಲ್ಲಿನಂತೆ ಎದುರು ಮೆಟ್ಟಲಿನಲ್ಲೇ ಕೂತುಕೊಳ್ಳುವ ಅವರ ಹೆಂಡತಿ,ಮಗಳು ಕಲಾವತಿ. ಅವರು ನಮಗೆ ಕಲಾವತಿಯಕ್ಕ. ರಜೆ ಬಂದಾಗ ಅಥವಾ ಇಳಿಸಂಜೆಗೆ ಎರಡು ಮನೆಯ ನಡುವಿನ ಓಣಿಯಲ್ಲಿ ನಡೆದು ಅವರ ಮನೆಯ ಕಿಟಕಿ ಬಳಿ ನಿಂತು ಕರೆಯಬೇಕು. ಕಲಾವತಿಯಕ್ಕ ಬಣ್ಣಬಣ್ಣದ ಪುಟ್ಟಪುಟ್ಟ ಬಣ್ಣದ ಬಾಟಲು ಹಿಡಿದು ಬರುತ್ತಾರೆ. ನಾವು ಕಿಟಕಿಯಿಂದ ನಮ್ಮ ಕೈ ಒಳಗೆ ತೂರಿಸಿದರೆ ಚುಮ್ ಅಂತ ತಂಪು ಉಗುರಿಗೆ ಇಳಿದು ಬಣ್ಣ ಕೈ ಬೆರಳಿನ ಉಗುರನ್ನು ತುಂಬಿಕೊಳ್ಳುತ್ತದೆ. ಎಷ್ಟು ಬಗೆಯ ಬಣ್ಣಗಳು. ಹಚ್ಚಿದ ನಂತರ ಅವರ ಎಚ್ಚರಿಕೆ. ” ಅಂಗಿಗೆ ತಾಗಿಸಬಾರದು. ಹಾಳಾದರೆ ಮತ್ತೆ ಹಚ್ಚುವುದಿಲ್ಲ” ಕೆಲವೊಮ್ಮೆ ಅವರ ಅಮ್ಮ ಕಿಟಕಿಯಲ್ಲಿ ಹಣಕಿ ಗದರಿಸುವುದೂ ಇದೆ. ” ಹೋಗಿ, ಹೋಗಿಯಾ..ಅವಳಿಗೆ ಮನೆಯಲ್ಲಿ ಕೆಲಸ ಇಲ್ಲವಾ” ರಂಗದ ಬಣ್ಣಗಳು ನಮ್ಮನ್ನು ನಮ್ಮಿಂದ ಪಲ್ಲಟಗೊಳಿಸುತ್ತ ಬೇರೇನೇನನ್ನೋ ಸೇರಿಸುತ್ತ ಹೋಗುವಾಗ ಕಲಾವತಿಯಕ್ಕನ ಚಿಕ್ಕಚಿಕ್ಕ ಬಣ್ಣದ ಬಾಟಲುಗಳ ದ್ರವ ನಮ್ಮನ್ನು ಸ್ಪರ್ಶಿಸಿ ಘನವಾಗುತ್ತಿದ್ದ ನೆನಪುಗಳು ಆಪ್ತವೆನಿಸಿಕೊಳ್ಳುತ್ತದೆ. ಕಲಾವತಿಯಕ್ಕನವರ ಅಂಗಡಿ( ಅವರನ್ನೂ) ಸವರಿದಂತೆ ದಾಟಿ ಹೋದರೆ ನಾರಾಯಣಮಾಮನ ಅಂಗಡಿ. ಊರವರಿಗೆ ಅದು ಕಾಮತ್ರ ಅಂಗಡಿಯಾದರೆ ನಮಗೆ ಮಕ್ಕಳಿಗೆ ಮಾತ್ರ ನಾರಾಯಣ ಮಾಮನ ಅಂಗಡಿ. ಅವರು ಆ ಅಂಗಡಿಯಲ್ಲಿ ಕೆಲಸಕ್ಕೆ ಇರುವುದು. ಜಿನಸು ಅಂಗಡಿಯಲ್ಲಿ ತೊಗರಿ,ಉದ್ದು,ಮೆಣಸು ಸಾಸಿವೆ ಕಾಗದದ ಪೊಟ್ಟಣದಲ್ಲಿ ಕೊಡುವುದು ಅಂದಿನ ಕ್ರಮ. ಆಗ ಪ್ಲಾಸ್ಟಿಕ್ ಉಪಯೋಗ ಬಹಳ ಇದ್ದ ನೆನಪಿಲ್ಲ. ಆ ಅಂಗಡಿಗೆ ರಾಶಿ ಪೇಪರ್, ಪುಸ್ತಕಗಳು ಬಂದು ಬೀಳುತ್ತಿತ್ತು. ಬಿಡುವಿನ ವೇಳೆಯಲ್ಲಿ ಇವರಿಗೆ ಅದನ್ನು ಪರಪರಪರ ಹರಿದು ತನಗೆ ಬೇಕಾಗುವ ಅಳತೆಗೆ ತುಂಡು ಮಾಡುವ ಕೆಲಸ. ಪುಸ್ತಕಗಳೂ ಬರುತ್ತಿದ್ದವು. ನಾವು ಅಂಗಡಿಗೆ ಸಾಮಾನು ತರಲು ಹೋಗಿ ಪಟ್ಟಿಯಲ್ಲಿರುವ ಪೊಟ್ಟಣಗಳು ನಮ್ಮ ಚೀಲ ಸೇರಿದರೂ ಚಾಕಲೇಟಿಗೆ ಕಾಯುವ ಹಾಗೆ ಸುಮ್ಮನೆ ಅವರ ಮುಖ ನೋಡುತ್ತಾ ನಿಲ್ಲುವುದು. ಅವರು ಸನ್ನೆಯಲ್ಲೇ ಮೂರು, ಎರಡು, ಆಮೇಲೆ, ಇಲ್ಲ ಹೀಗೆ ಸಂದೇಶ ರವಾನಿಸುವುದು. ನಮ್ಮನ್ನು ಅವರ ರೂಮಿನ ಬಳಿ ಆದಿತ್ಯವಾರ ಬರ ಹೇಳುವುದೂ ಇತ್ತು. ಆದಿತ್ಯವಾರ ಅವರಿಗೆ ರಜೆ. ಅಲ್ಲಿ ಈ ಮಾಮನ ಕೋಣೆಯಲ್ಲಿ ರಾಶಿ ಚಂದಮಾಮ ಮಾತ್ರವಲ್ಲ ಬಗೆಬಗೆಯ ಕಥೆ, ಚಿತ್ರದ ಪುಸ್ತಕಗಳು. ಚಂದಮಾಮ ಪುಸ್ತಕದ ಕಥೆಗಳು, ಜತೆಗೆ ಅದರೊಳಗಿನ ಅನೇಕ ಚಿತ್ರಗಳು ನನಗೆ ಅಚ್ಚುಮೆಚ್ಚು. ಪುಟಪುಟಗಳಲ್ಲೂ ಕಥೆಯ ಮೇಲ್ಗಡೆ, ಎಡಬದಿ ಅಚ್ಚಾದ ಹಲವು ಭಾವಾಭಿನಯದ,ಕತೆಗೆ ಹೊಂದುವ ಚಿತ್ರಗಳು ನೇರ ಇಳಿದುಬಂದು ಮನಸ್ಸಿನೊಳಗೆ ಜಾಗ ಹಿಡಿದು ಕೂರುತ್ತಿದ್ದವು. ಆ ಚಿತ್ರಗಳ ಹಾಗೆಯೇ ಮುಖಾಭಿನಯ ಮಾಡುವ ಹುಚ್ಚು ನನಗೆ. ಹೊಸಹೊಸ, ನವನವೀನ ಪಾತ್ರಗಳು ಭಿತ್ತಿಯಲ್ಲಿ ಆಟವಾಡುತ್ತಿದ್ದವು. ಕಲ್ಪನೆಯ ಲೋಕದ ಅನಿಯಂತ್ರಿತ ದಂಡಯಾತ್ರೆಗೆ ಇವುಗಳು ಸುರಿದು ಕೊಟ್ಟ ಕಪ್ಪ ಕಾಣಿಕೆ ಅಷ್ಟಿಷ್ಟಲ್ಲ. ಈಗಲೂ ವರ್ತಕ, ಬೇತಾಳ, ರಾಜ, ರಾಜಕುಮಾರಿ, ರೈತ ಎಂಬ ಪದದ ಒಳಗಿನ ಆತ್ಮದಂತೆ ಈ ಚಿತ್ರಗಳು ತೆರೆದುಕೊಳ್ಳುವ ಪರಿ, ಆ ವಿಸ್ಮಯ ಅನುಭವಿಸಿದವರಿಗಷ್ಟೇ ವೇದ್ಯ. ರಂಗದಲ್ಲೂ ಹೀಗೇ ತಾನೇ!. ಪುಟಪುಟಗಳನ್ನು ತಿರುಗಿಸಿದಂತೆ ಪಾತ್ರಗಳು ಬದಲಾಗುತ್ತಾ ನಾವು ನಾವಲ್ಲದ ನಾವೇ ಆಗಿ ತೆರೆದುಕೊಳ್ಳುವ ಸೋಜಿಗ. ನನ್ನ ಬಣ್ಣದ ಲೋಕದ ಬಾಗಿಲೇ ಚಂದಮಾಮ. ಅಂತಹ ಚಂದಮಾಮದ ರಾಶಿ ಹಾಕಿ ಕಬ್ಬಿಣದ ತುಂಡನ್ನು ಸೆಳೆಯುವ ಆಯಸ್ಕಾಂತದಂತೆ ನಮ್ಮನ್ನು ಈ ನಾರಾಯಣ ಮಾಮ ಆಟವಾಡಿಸುತ್ತಿದ್ದ. ಕೆಲವೊಮ್ಮೆ ಮಾತ್ರ ವಿಪರೀತ ಸಿಡುಕಿ ಕೋಲು ತೋರಿಸಿ ಹೆದರಿಸುತ್ತಿದ್ದುದೂ ಉಂಟು. ಆದಿತ್ಯವಾರ ನಮಗೆ ಭಾರೀ ಕೆಲಸಗಳು. ಈ ನಾರಾಯಣ ಮಾಮನ ರೂಮಿನ ತಲಾಶ್ ಮುಗಿಸಿ ಒಂದಷ್ಟು ಪುಸ್ತಕ ಕೈ,ಕಂಕುಳಲ್ಲಿಟ್ಟು ಹೊರ ಬಂದರೆ ಮುಖ್ಯರಸ್ತೆ. ರಸ್ತೆಯ ಇನ್ನೊಂದು ಬದಿಯಲ್ಲಿ ಬಾಬಣ್ಣನ ಅಂಗಡಿ. ಉದ್ದದ ಹಾಲ್ ನಂತಹ ಅಂಗಡಿಯ ನಡುವಿನಲ್ಲಿ ಬಾಗಿಲು. ಬಾಬಣ್ಣ ಒಂದು ಮೂಲೆಯಲ್ಲಿ ತನ್ನ ಟೈಲರಿಂಗ್ ಮೆಶಿನ್ ಹಿಂದೆ ಕೂತು ಟಕಟಕ ಶಬ್ದ ಹೊರಡಿಸುತ್ತಾ ಬಟ್ಟೆ ಹೊಲಿಯುತ್ತಿರುತ್ತಾರೆ. ಪಕ್ಕದಲ್ಲಿ ತುಂಡು ಬಟ್ಟೆಗಳ ಸಣ್ಣ ರಾಶಿ. ಇನ್ನೊಂದು ಬದಿಯಲ್ಲಿ ಉದ್ದದ ಒಂದು ಕೋಲು. ಮೂಗಿನ ತುದಿಗೆ ಅಂಟಿಕೊಂಡ ಕಪ್ಪು ಚೌಕಟ್ಟಿನ ದಪ್ಪ ಕನ್ನಡಕ, ಕಪ್ಪು ಬಿಳಿ ಸಂಧಾನ ಮಾಡಿಕೊಂಡಂತೆ ಬೆರೆತಿರುವ ತಲೆಗೂದಲು, ಬಾಯಿಯಲ್ಲಿ ತುಂಬಿಕೊಂಡ ಬೀಡ. ನಮ್ಮ ಧಾಳಿ ಅವರ ಅಂಗಡಿಗೆ ಆಗುವುದನ್ನು ಕನ್ನಡಕದ ಮೇಲಿನಿಂದ ನೋಡಿ ” ಹುಶ್ ಹುಶ್” ಎಂದು ಕಾಗೆ ಓಡಿಸುವಂತೆ ತಾಂಬೂಲ ತುಂಬಿಕೊಂಡ ಬಾಯಿಯಿಂದಲೇ ಗದರಿಸುವಿಕೆ. ನಮಗೆ ಅದೆಲ್ಲ ಒಂದು ಚೂರೂ ಲೆಕ್ಕಕ್ಕಿಲ್ಲ. ನಾವು ಇನ್ನೊಂದು ಮೂಲೆಯಲ್ಲಿ ಬಿದ್ದಿರುವ ಸಣ್ಣ ಸಣ್ಣ ತುಂಡು ಬಟ್ಟೆಗಳ ದೊಡ್ಡ ರಾಶಿಯತ್ತ ಓಡುವುದು. ಪುಸ್ತಕ ಅಲ್ಲೇ ಮೂಲೆಯಲ್ಲಿ ಪೇರಿಸಿಟ್ಟು ಬಟ್ಟೆಗಳ ರಾಶಿಯಲ್ಲಿ ನಮ್ಮದು ಹುಡುಕಾಟ. ಗೋಪುರದಂತಿರುವ ರಾಶಿ ನಮ್ಮ ಹಾರಾಟಕ್ಕೆ ಕುಸಿದು ಆಕಾರ ಬದಲಾದಂತಾಗುವುದೂ, ಕೆಲವೊಮ್ಮೆ ನಾವೇ ಮೇಲೆ ಏರಿ ಕೆಳಗೆ ಹಾರಿ ಬಿದ್ದು ಕೂಗುವುದು ಸಾಮಾನ್ಯ ಸಂಗತಿ. ಆಗ ಬಾಬಣ್ಣ ತನ್ನ ಸ್ವಸ್ಥಾನದಿಂದ ಪಕ್ಕದಲ್ಲಿದ್ದ ಕೋಲು ತಗೊಂಡು ಓಡಿ ಬರುತ್ತಾರೆ. ನಮಗೆ ಅದು ಆಟದ ಎರಡನೇ ಭಾಗ. ನಾವು ಬಟ್ಟೆಯ ರಾಶಿಗೆ ಸುತ್ತು ಬರುವುದು,ಹಾರುವುದು ಮೇಲೇರುವುದು. ಹಿಂಭಾಲಿಸುವ ಬಾಬಣ್ಣ “ಹ್ಹೇ ಹ್ಹೇ” ಬಟ್ಟೆಯ ರಾಶಿಗೆ ತನ್ನ ಕೋಲಿನಿಂದ ಹೊಡೆಯುವುದು. ನಾವು ಬಾಬಣ್ಣನಿಂದ ತಪ್ಪಿಸಿಕೊಂಡು ಓಡುವುದು. ಬಾಯಲ್ಲಿದ್ದ ಕವಳದಿಂದ ಸಲೀಸಾಗಿ ಬಯ್ಯುವುದೂ ಸಾಧ್ಯವಾಗದೆ ಬಾಗಿಲ ಬಳಿ ಓಡಿ ಬೆರಳೆರಡು ತುಟಿಗಳ ಮೇಲಿಟ್ಟು ಬಾಯಿಯಲ್ಲಿದ್ದ ಕೆಂಪು ರಸವನ್ನು ಪುರ್ರೆಂದು ಪಿಚಕಾರಿಯಂತೆ ಉಗುಳಿ ಬರುವಾಗ ನಾವು ಒಳಗೆ ಅಡಗಿಯಾಗುತ್ತಿತ್ತು. ” ಹೊರಗೆಬನ್ನಿ, ಬನ್ನಿಯಾ..” ಅಂತ ಕೂಗಿ ಕೂಗಿ ಮತ್ತೆ ಹೋಗಿ ತನ್ನ ಕುರ್ಚಿಗೆ ಅಂಟುತ್ತಿದ್ದರು. “ಲಗಾಡಿ ಹೋಯ್ತು ಇಡೀ ಅಂಗಡಿ. ಈ ಬಟ್ಟೆಗಳನ್ನು ಸರಿ ಮಾಡುವುದು ಯಾರು? ಇನ್ನೊಮ್ಮೆ ಯಾರಾದರೂ ಬಟ್ಟೆ ರಾಶಿ ಹತ್ತಬೇಕು. ಹೊರಗೆ ಹೋಗಲು ಬಿಡುವುದಿಲ್ಲ. ಇಲ್ಲೇ ಕಟ್ಟಿ ಹಾಕ್ತೇನೆ” ಎನ್ನುತ್ತಿದ್ದರು. ಅಪರೂಪಕ್ಕೊಮ್ಮೆ ಅವರ ಕೈಗೆ ಸಿಕ್ಕಿಬಿದ್ದರೂ ಅವರು ಹೊಡೆದದ್ದಿಲ್ಲ. ನಾವು ಕಿರುಚಿದ್ದಷ್ಟೆ. ಅವರ ಊರು ಯಾವುದು, ಎಲ್ಲಿಂದ ಬರುತ್ತಿದ್ದರು ಗೊತ್ತಿಲ್ಲ. ಅವರೆಂದರೆ ನಮಗೆ ಬಹಳ ಪ್ರೀತಿ. ನಾನೂ ಯಾರೂ ಇಲ್ಲದ ಸಮಯ ಹೋಗಿ ಬಣ್ಣದ ಬಟ್ಟೆ ತುಂಡು ಆರಿಸಿ ಅವರ ಬಳಿ ಹೋಗಿ ” ನನ್ನ ಗೊಂಬೆಗೆ ಅಂಗಿ ಹೊಲಿದು ಕೊಡ್ತೀರಾ” ಎಂದರೆ ಪ್ರೀತಿಯಿಂದ ದಿಟ್ಟಿಸಿ “ಇದು ಚಿಕ್ಕದಾಯಿತು. ತಡಿ, ಬಂದೆ” ಎನ್ನುತ್ತಾ ಆ ಬಟ್ಟೆ ರಾಶಿಯಿಂದ ಬೇರೆ ಬಟ್ಟೆ ಆರಿಸುತ್ತಿದ್ದರು. ಇದು ಬೇಡ ಅಂದರೆ ಇದು, ಇದು ಎಂದು ಕೆಲವು ತುಂಡು ಬಟ್ಟೆ ತೋರಿಸಿ ಒಂದನ್ನು ಆರಿಸಿ ನಾಳೆ ಅಂಗಿ ಮಾಡಿ ಕೊಡ್ತೇನೆ., ಎಂದು ಹೊಲಿದು ಕೊಡುವ ಮಮತಾಮಯಿ. ನಾನು ನನ್ನ ಉಳಿದ ಇಬ್ಬರು ಗೆಳತಿಯರಿಗೆ ತೋರಿಸಿ ಅವರೂ ಬಂದು ಹಠಕ್ಕೆ ಬೀಳುತ್ತಿದ್ದರು. ಆಗ ಕೋಪ ಮಾಡಿ ” ನನ್ನ ಅಂಗಡಿಯೊಳಗೆ ಬಂದರೆ ಜಾಗ್ರತೆ. ಹೋಗಿ ಹೊರಗೆ” ಎಂದು ಗದರಿಸಿದರೂ ಮೂರು ಅಂಗಿಗಳು ನಮ್ಮಲ್ಲಿರುವ ಒಂದು ಗೊಂಬೆಗೆ ತಯಾರಾಗುತ್ತಿದ್ದವು. ಕಿಟಕಿಯ ಬಳಿ ಕುಳಿತುಕೊಳ್ಳುವ ಬಾಬಣ್ಣ ಕಿಟಕಿಯ ದಂಡೆಯಲ್ಲಿ ಒಂದು ರೆಡಿಯೋ ಇಟ್ಟಿದ್ದರು. ಅದರಲ್ಲಿ ಬರುವ ಕಾರ್ಯಕ್ರಮಗಳನ್ನು ಕೇಳುತ್ತ ಕೆಲಸ ಮಾಡುತ್ತಿದ್ದರು. ಶಾಲಾ ಮಕ್ಕಳ ಅಂಗಿ, ಚಡ್ಡಿ. ಪ್ಯಾಂಟ್. ಹುಡುಗಿಯರ ಫ್ರಾಕ್, ಉದ್ದಲಂಗ, ರವಕೆ, ಸ್ಕರ್ಟ್, ಸೀರೆಯ ಬ್ಲೌಸ್. ಬಾಬಣ್ಣನ ಅಂಗಡಿಯಲ್ಲಿ ರೂಪುಗೊಳ್ಳುತ್ತಿದ್ದವು. ಅವರಿಗೆ ಯಾರೂ ಸಹಾಯಕರು ಇಲ್ಲ. ಅವರೇ ಎಲ್ಲವನ್ನೂ ಮಾಡುತ್ತಿದ್ದರು. ತಮ್ಮ ಬಳಿಯ ಟೇಪ್ ಹಿಡಿದು ಅಳತೆ ಮಾಡು, ಬಟ್ಟೆ ಕತ್ತರಿಸು, ಹೊಲಿದು ಕೊಡು. ಹೊಸ ಪಾತ್ರ ಕಟ್ಟಿಕೊಡುವ ನಿರ್ದೇಶಕನಂತೆ ಅವರ ಅಂಗಡಿಯಲ್ಲಿ ಬಗೆಬಗೆಯ ದಿರಿಸುಗಳು ಹುಟ್ಟಿ ಅಲ್ಲಲ್ಲಿ ರಾಶಿ ಬೀಳುತ್ತಿದ್ದವು. ಅವರು ಮಾಡಿಕೊಡುವ ಚೆಂದದ ವಸ್ತೃಗಳನ್ನು ಕಂಡು ಏಕಲವ್ಯನಂತೆ ನಾವೂ ನಮ್ಮ ಗೊಂಬೆಗೆ ದಿರಿಸು ತಯಾರಿಸುತ್ತಿದ್ದೆವು. ನಮ್ಮ ಗೊಂಬೆಗೆ ಪ್ರೀತಿಯಿಂದ ನೇವರಿಸಿ ಮಗ್ಗದ ಸೀರೆಯ ತುಂಡಿನಿಂದ ಸೀರೆ ಮಾಡಿ ಸುತ್ತಿ ಸೆರಗು ತಲೆಯ ಮೇಲಿನಿಂದ ಬರುವಂತೆ ಹಾಕಿದರೆ ಪುಟ್ಟ ಪುಟಾಣಿ ಗೊಂಬೆ ಅಜ್ಜಿಯಾಗಿ ಬಿಡುತ್ತಿದ್ದಳು. ಅವಳನ್ನು ದಪ್ಪ ಮಾಡಲು ಮೊದಲು ಒಂದೆರಡು ಬಟ್ಟೆ ಸುತ್ತಿ ಕೊನೆಗೆ ಮಗ್ಗದ ತುಂಡು ಉಡಿಸುತ್ತಿದ್ದೆವು. ಸಿಲ್ಕ್ ಸೀರೆಯಂತಹ ಹೊಳಪು ಬಟ್ಟೆ ಸಿಕ್ಕಿದರೆ ನಮ್ಮ ಗೊಂಬೆ ರಾಜಕುಮಾರಿ. ತಲೆಯ ಮೇಲಿನಿಂ ದ ಆ ಬಟ್ಟೆ ಎರಡೂ ಬದಿ ಇಳಿಸಿ ಬಿಡುವುದು. .ಮತ್ತೊಂದು ಬಣ್ಣದ ಬಟ್ಟೆ ಅದಕ್ಕೆ ಸುತ್ತಿ ನವೀನ ಮಾದರಿಯ ಬೊಂಬಾಯಿ ವಸ್ತೃ ಶೃಂಗಾರ. ಈಗ ಬೊಂಬೆ, ಮುಂಬಯಿಯ ಷಹರಸುಂದರಿ. ಬೊಂಬೆ ಅಮ್ಮನಾದರೆ ಸಾಧಾರಣ ಸೀರೆ ಚೆಂದ ಮಾಡಿ ಸೆರಗು ಹಾಕಿ ತಯಾರು ಮಾಡುತ್ತಿದ್ದೆವು. ಫ್ರಾಕ್ ಹಾಕಿಸಿದರೆ ಬೊಂಬೆ ಚಂದದ ಶಾಲಾ ಹುಡುಗಿ. ಹೀಗೆ ನಮ್ಮಲ್ಲಿದ್ದ ಒಂದೇ ಒಂದು ಬೊಂಬೆ, ನಮ್ಮ ಬಣ್ಣದ ಚೌಕಿಯೊಳಗಿಂದ ಮೇಕಪ್ ಮಾಡಿಸಿಕೊಂಡು ಹಲವು ಪಾತ್ರಗಳಾಗಿ ಹೊಳೆಯುತ್ತಿತ್ತು. ಬಟ್ಟೆಗಳ ಉದ್ದ ವ್ಯತ್ಯಾಸವಾದರೆ ಪುಟ್ಟ ಹೊಲಿಗೆ ಬೇಕಾದರೆ ಮತ್ತೆ ಗೊಂಬೆಯ ಜೊತೆಗೇ ಹೋಗಿ ಬಾಬಣ್ಣನಿಗೆ ದುಂಬಾಲು ಬೀಳುತ್ತಿದ್ದೆವು. ನಮ್ಮ ಬಳಿ ಪುಟ್ಟದಾದ ಒಂದು ಡಬ್ಬಿ. ಅದರೊಳಗೆ ವೇಷದ ಬಟ್ಟೆಗಳು. ಅದೆಷ್ಟು ಬಗೆಬಗೆ. ಕೆಲವೊಮ್ಮೆ ಪುರುಸೊತ್ತಿದ್ದರೆ ಬಾಬಣ್ಣ ಹೊಸ ರೀತಿಯ ಅಂಗಿ ಹೊಲಿದು ಅವರೇ ಅದಕ್ಕೊಂದು ಹೆಸರಿಟ್ಟು ಕನ್ನಡಕದ ಮೇಲಿನಿಂದ ನಮ್ಮ ಮೇಲೆ ಕಣ್ಣು ಹರಿಸಿ, ಸ್ಥಿರಗೊಳಿಸಿ ನಗುತ್ತಿದ್ದರು. ಚೌಕಿಯಲ್ಲಿ ಬಗೆಬಗೆಯ ಪಾತ್ರಗಳು ಜನ್ಮ ತಾಳುವುದೂ ಹೀಗೇ ತಾನೇ..ಒಬ್ಬ ನಿರ್ದೇಶಕ. ಒಂದು
ಅಂಕಣ ಬರಹ ಸಂಕ್ರಾಂತಿ ಬಂತೋ ರತ್ತೋ ರತ್ತೋ ಸಂಕ್ರಾಂತಿ ಎಂದ ಕೂಡಲೇ ನೆನಪಾಗುವುದೇ ಚಂದದ ರೇಷಿಮೆ ಲಂಗ ತೊಟ್ಟು ಉದ್ದ ಜಡೆ ಹೆಣೆದುಕೊಂಡು, ಘಮ ಘಮ ಮಲ್ಲಿಗೆ ಹೂ ಮುಡಿದು, ಏನೆಲ್ಲ ಸಾಧ್ಯವಿರುತ್ತದೋ ಅಷ್ಟೆಲ್ಲಾ ಅಲಂಕಾರ ಮಾಡಿಕೊಂಡು ನೆರೆಹೊರೆಯವರಿಗೆ ಎಳ್ಳು ಬೆಲ್ಲ ಹಂಚಲು ಹೊರಡುತ್ತಿದ್ದದ್ದು… ಸಂಕ್ರಾಂತಿ ಹಬ್ಬದ ಪ್ರಮುಖ ಆಕರ್ಷಣೆಯೇ ಇದಾಗಿರುತ್ತಿತ್ತಾದರೂ ಸಂಕ್ರಾಂತಿಗಿರುವ ಆಕರ್ಷಣೆಗಳ ದೊಡ್ಡಪಟ್ಟಿಯೂ ಇರುತ್ತಿತ್ತು. ಸಂಕ್ರಾಂತಿ ಹೆಣ್ಣುಮಕ್ಕಳ ಹಬ್ಬ ಎನಿಸಿಬಿಡುತ್ತಿತ್ತು. ಅದೆಷ್ಟೋ ದಿನಗಳ ತಯಾರಿ ಈ ಹಬ್ಬಕ್ಕೆ. ಹದಿನೈದು ದಿನಗಳಿಗೆ ಮುಂಚೆಯೇ ಎಳ್ಳು-ಬೆಲ್ಲ ತಯಾರಿಸಲು ಬೇಕಿರುವ ವಸ್ತುಗಳ ಖರೀದಿಸಿ ತರುತ್ತಿದ್ದೆವು. ಮನೆಯಲ್ಲಿ ಇರುತ್ತಿದ್ದ ಅಚ್ಚುಗಳಿಗೆ ಜೀವ ಬರುತ್ತಿತ್ತು. ನಾನಾ ನಮೂನಿಯ ಸಕ್ಕರೆ ಅಚ್ಚುಗಳು ಕುತೂಹಲ ಮತ್ತು ಬಾಯಲ್ಲಿ ನೀರೂರಿಸುವ ಸಕ್ಕರೆ ಗೊಂಬೆಗಳನ್ನು ನಮ್ಮದುರು ತಂದು ನಿಲ್ಲಿಸುತ್ತಿದ್ದವು. ಅದೆಷ್ಟು ಚಂದದ ಬಣ್ಣಗಳು ಇವುಗಳದ್ದು! ಈ ಗೊಂಬೆಗಳನ್ನು ನೋಡುತ್ತಾ ನೋಡುತ್ತಾ ಚಪ್ಪರಿಸಿ ತಿನ್ನಬಹುದಿತ್ತು ಎನ್ನುವುದೇ ನಮ್ಮ ದೊಡ್ಡ ಅಚ್ಚರಿಯಾಗಿರುತ್ತಿತ್ತು… ಸಕ್ಕರೆ ಗೊಂಬೆಗಳಾದ ಮೇಲೆ ಇನ್ನು ಎಳ್ಳು-ಬೆಲ್ಲದ ತಯಾರಿಕೆ. ಊರೆಲ್ಲ ಎಳ್ಳು ಬೀರಿಯಾದ ಮೇಲೂ ತಿಂಗಳೊಪ್ಪತ್ತಿಗಾಗುವಷ್ಟು ಎಳ್ಳು ಬೆಲ್ಲ ಉಳಿಯಲೇ ಬೇಕಿತ್ತು… ನಾವೆಲ್ಲ ಮಕ್ಕಳಂತೂ ಸಂಕ್ರಾಂತಿ ಮುಗಿದು ಎಷ್ಟೋ ದಿನಗಳಾದರೂ ಸಂಕ್ರಾಂತಿ ಕಾಳು ಕೇಳುವುದನ್ನು ಬಿಡುತ್ತಿರಲಿಲ್ಲ. ಅದೆಷ್ಟು ಸವಿ… ಅದೆಂತಹಾ ಸವಿ…ಎಳ್ಳು ಸಂಬಂಧವನ್ನು ವೃದ್ಧಿಸುತ್ತದೆ ಮತ್ತು ಬೆಲ್ಲ ಆ ಸಂಬಂಧವನ್ನು ಮಧುರವಾಗಿಸುತ್ತದೆ ಎನ್ನುವ ನಂಬಿಕೆ ಇದೆ ಈ ಎಳ್ಳು-ಬೆಲ್ಲದ ಹಿಂದೆ. ಅದಕ್ಕೆ ಬಣ್ಣ ಬಣ್ಣದ ಜೀರಿಗೆ ಪೆಪ್ಪರಮೆಂಟು, ಬಣ್ಣ ಬಣ್ಣದ ಸಕ್ಕರೆಯ ಸಂಕ್ರಾಂತಿ ಕಾಳು, ಹುರಿದ ಶೇಂಗಾ, ಪುಟಾಣಿ, ಒಣ ಕೊಬ್ಬರಿ, ಸಣ್ಣಗೆ ತುಂಡು ಮಾಡಿದ ಬೆಲ್ಲ ಎಲ್ಲವನ್ನೂ ಬೆರೆಸಿಯಾದ ಮೇಲೆಯೇ ಎಳ್ಳು-ಬೆಲ್ಲ ತಯಾರಾಗುತ್ತಿದ್ದದ್ದು. ಚಳಿಗಾಲದ ಈ ಹಬ್ಬ ವಾತಾವರಣಕ್ಕೆ ಅನುಗುಣವಾಗಿ ಆಚರಿಸಲ್ಪಡುತ್ತಿದ್ದ ರೀತಿಯಿಂದಲೂ ಖುಷಿಯ ಹಬ್ಬ. ಚಳಿಯ ದಿನಗಳಲ್ಲಿ ಮನುಷ್ಯನ ದೈಹಿಕ ಚಟುವಟಿಕೆಗಳು ನಿಧಾನಗತಿಯಲ್ಲಿರುತ್ತವೆ. ಅಂತಹ ಸಮಯದಲ್ಲಿ ಹಬ್ಬದ ನೆವದಲ್ಲಿ ದೇಹವನ್ನು ತಣಿಸುವ ಒಂದಷ್ಟು ಆಚರಣೆಗಳು ಮೈ ಮನಸಿಗೆ ಮುದನೀಡುತ್ತದೆ. ಎಳ್ಳು, ಕೊಬ್ಬರಿಗಳಲ್ಲಿ ಎಣ್ಣೆಯ ಅಂಶವಿರುತ್ತದೆ. ಇವು ಶೀತ, ವಾತವನ್ನು ದೂರ ಮಾಡುತ್ತವೆ. ಕಬ್ಬು ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಎಳ್ಳು, ಕಡಲೆ ಬೀಜಗಳಿಂದ ಕ್ಯಾಲ್ಶಿಯಂ ದೊರೆತರೆ ಬೆಲ್ಲದಿಂದ ಕಬ್ಬಿಣಾಂಶ ದೊರೆಯುತ್ತದೆ. ಮತ್ತೆ ಪೊಂಗಲ್ ತಯಾರಿಸಲು ಬಳಸುವ ಹೆಸರು ಬೇಳೆಯಲ್ಲಿ ವಿಟಮಿನ್ ಸಿ ಇರುತ್ತದೆ ಮತ್ತು ಮಣಸು-ಜೀರಿಗೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಇವೆಲ್ಲವನ್ನೂ ಗಮನಿಸಿದಾಗ ನಮ್ಮ ಪೂರ್ವಿಕರು ಧಾರ್ಮಿಕವಾಗಿ ರೂಪಿಸಿದ ಆಚರಣೆಗಳ ಹಿಂದೆ ಒಂದಲ್ಲ ಒಂದು ವೈಜ್ಞಾನಿಕ ತಳಹದಿ ಅಡಗಿರುವುದು ಕಂಡುಬರುತ್ತದೆ. ಎಲ್ಲವನ್ನೂ ಮೂಢನಂಬಿಕೆ ಎಂದು ತಳ್ಳಿಹಾಕುವ ಮೊದಲು ಯಾವುದನ್ನು ಅನುಸರಿಸಬೇಕು, ಯಾವುದನ್ನು ಬಿಡಬೇಕು ಎನ್ನುವುದನ್ನು ಅರಿಯಬೇಕಿದೆ. ಮತ್ತು ನಮ್ಮ ಸಂಸ್ಕೃತಿಯ ಉಳಿವೂ ಇಂತಹ ಆಚರಣೆಗಳಲ್ಲಿಯೇ ಇರುತ್ತದೆ ಎನ್ನುವುದನ್ಬು ನಾವು ಮರೆಯಬಾರದು. ಪಥವ ಬದಲಿಸಿದ ಸೂರ್ಯ ಮೊಳಗಿ ಸಂಕ್ರಾಂತಿ ತೂರ್ಯ ಸವೆದಿದೆ ದಾರಿ ಕವಿದಿದೆ ಮಂಜು ಬದಲಾವಣೆ ಅನಿವಾರ್ಯ -ಬಿ.ಆರ್.ಲಕ್ಷ್ಮಣ ರಾವ್ ಸೂರ್ಯ ತನ್ನ ಇಷ್ಟು ದಿನದ ಪಥವನ್ನು ಬದಲಿಸಿ ಮತ್ತೊಂದು ಪಥದಲ್ಲಿ ತಿರುಗಲು ಶುರು ಮಾಡುತ್ತಾನೆ. ಹಿಂದೂ ಪಂಚಾಂಗದ ಪ್ರಕಾರ ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಎಂದು ಮೇಷ ರಾಶಿ ಪ್ರವೇಶಿಸಿದಾಗ ಸೌರಮಾನ ಯುಗಾದಿ ಎಂದು ತುಲಾ ರಾಶಿ ಪ್ರವೇಶಿಸಿದ ದಿನವನ್ನು ಕಾವೇರಿ ತೀರ್ಥೋದ್ಭವ ತುಲಾ ಸಂಕ್ರಮಣ ಎಂದು ಆಯಾನಾಧಾರದ ಮೇಲೆ ಆಚರಿಸಲಾಗುತ್ತದೆ ಮತ್ತು ಈ ದಿನ ಪೌರಾಣಿಕ ಹಿನ್ನೆಲೆಯಲ್ಲಿ ಊರ್ಧ್ವ ಲೋಕಗಳಾದ ಬುವರ್ಲೋಕ(ತಪಸ್ಸಿನಲ್ಲಿ ಮಗ್ನರಾದ ಮುನಿಗಳು ವಾಸ ಮಾಡುವ ಲೋಕ) ಸ್ವರ್ಗಲೋಕದಲ್ಲಿ(ಇಂದ್ರಾದಿ ಅಷ್ಟದಿಕ್ಪಾಲಕರು, ನವಗ್ರಹಗಳು,ಅನೇಕ ಪ್ರತ್ಯಧಿದೇವತೆಗಳು ವಾಸಮಾಡುವ ಲೋಕ) ಸೂರ್ಯೋದಯ ವಾಗುವ ಕಾಲವನ್ನು ನಾವು ಉತ್ತರಾಯಣದ ಸಂಕ್ರಾಂತಿ ಹಬ್ಬ ಎಂದು ಆಚರಿಸುವ ವಾಡಿಕೆ. ಈ ದಿನವನ್ನು ಒಂದು ಪವಿತ್ರ ದಿನ ಎಂದು ಭಾವಿಸಲಾಗಿದೆ ಕಾರಣ ಲೋಕಕಲ್ಯಾಣ ಕರ್ತರಾದ ದೇವತೆಗಳು ಎಚ್ಚರಗೂಳ್ಳುವ ದಿನ ಇದು ಎನ್ನುವ ಧಾರ್ಮಿಕ ನಂಬಿಕೆ. ಆದರೆ ಅವರು ಸ್ನಾನ ಸಂಧ್ಯಾವಂದನೆ ಮುಗಿಸಿ ಕಾರ್ಯಮಗ್ನರಾಗುವುದು ಮುಂದಿನ ರಥಸಪ್ತಮಿಯ ದಿನ ಎಂಬ ಪ್ರತೀತಿಯೂ ಇದೆ. ಮಹಾಭಾರತದ ಭೀಷ್ಮಾಚಾರ್ಯರು ಯುದ್ದಮುಗಿದು ಶರಶಯ್ಯೆಯಲ್ಲಿ ಪವಡಿಸಿದ್ದರೂ, ದೇಹ ಬಾಣಗಳ ಇರಿಯುವಿಕೆಯಿಂದ ನೋಯುತ್ತಿದ್ದರೂ ಪ್ರಾಣಬಿಡಲು ಉತ್ತರಾಯಣದ ಪುಣ್ಯಕಾಲಕ್ಕಾಗಿ ಕಾದರಂತೆ ಎಂದು ಮಹಾಭಾರತ ನಮಗೆ ತಿಳಿಸಿಕೊಡುತ್ತದೆ. ಉತ್ತರಾಯಣ ಪುಣ್ಯಕಾಲದ ಈ ಹಬ್ಬ ಸುಗ್ಗಿಯನ್ನು ಸಾರುವ ಹಬ್ಬವಾಗಿದೆ. ಈ ದಿನ ಹೊಸ ಅಕ್ಕಿಯಲ್ಲಿ ಪೊಂಗಲ್ ಮಾಡಿ ದೇವರಿಗೆ ನೈವೇದ್ಯ ಮಾಡುತ್ತಾರೆ. ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂದೇ ಕರೆಯಲಾಗುತ್ತದೆ. ರೈತರು ಹೊಲದಲ್ಲಿ ಬೆಳೆದ ಧಾನ್ಯಗಳನ್ನು ಕಟಾವು ಮಾಡುವ ಸಮಯವಿದು. ದನಕರುಗಳನ್ನು ತೊಳೆದು, ಅಲಂಕರಿಸಿ, ಮೇವನ್ನು ಉಣಿಸಿ ಮೆರವಣಿಗೆ ಮಾಡುತ್ತಾರೆ. ಹೊಸ ಧಾನ್ಯಗಳಿಂದ ಹುಗ್ಗಿ ಮಾಡಿ ನೈವೇದ್ಯವಾಗಿ ಅರ್ಪಿಸಿ, ಎಳ್ಳನ್ನು ದಾನ ಮಾಡುವ ಪದ್ಧತಿ ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಈ ದಿನ ಸಣ್ಣ ಮಕ್ಕಳನ್ನು ಮಣೆಯ ಮೇಲೆ ಕೂರಿಸಿ, ಎಳ್ಳು, ಎಲಚಿಹಣ್ಣು(ಬಾರೀ ಹಣ್ಣು), ಕಾಸು, ಬಾಳೆಹಣ್ಣಿನ ತುಂಡುಗಳು, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಕಬ್ಬುಗಳನ್ನು ಬೆರೆಸಿ ತಲೆಯ ಮೇಲಿಂದ ಎರೆದು ಆರತಿ ಮಾಡುತ್ತಾರೆ. ಇದಕ್ಕೆ ಕರಿ ಎರೆಯುವುದು ಎನ್ನುತ್ತಾರೆ. ಹಬ್ಬದ ಸಂತಸದೊಂದಿಗೆ ಮಕ್ಕಳ ಹಟಮಾರಿತನ, ತುಂಟತನ ಕಡಿಮೆಯಾಗುತ್ತದೆ ಎನ್ನುವ ನಂಬಿಕೆ ಇದೆ ಇದರ ಹಿಂದೆ. ಸೃಜನಾತ್ಮಕವಾಗಿರುವವರು ಸಕ್ಕರೆಯಿಂದ ತಯಾರಿಸಿದ ಕುಸುರು ಕುಸುರಾಗಿರುವ ಎಳ್ಳನ್ನು (ಕುಸುರೆಳ್ಳು) ರಟ್ಟಿನ ಮೇಲೆ ಅಂಟಿಸಿ, ಬಳೆ, ಕಿರೀಟ, ಸೊಂಟದಪಟ್ಟಿ, ಕಾಲಿಗೆ ಗೆಜ್ಜೆ, ಕೊಳಲು, ಸರ ಹೀಗೆ ಎಲ್ಲವನ್ನೂ ತಯಾರಿಸಿ ಮಕ್ಕಳಿಗೆ ತೊಡಿಸಿ ರಧಾಕೃಷ್ಣರನ್ನಾಗಿ ತಯಾರು ಮಾಡಿ ಹಬ್ಬದ ಮೆರುಗನ್ನು ಹೆಚ್ಚಿಸುತ್ತಾರೆ. ಅಂದು ಬೆಳಗ್ಗೆ ತಲೆಸ್ನಾನ ಮಾಡಿ, ದೇವರ ಪೂಜೆ ನೆರವೇರಿಸಿ ಪಿತೃಗಳಿಗೆ ತರ್ಪಣ ಕೊಡುತ್ತಾರೆ. ಅನುಕೂಲವಿದ್ದರೆ ನದಿ ಸ್ನಾನ ಮಾಡುತ್ತಾರೆ. ಮಕರ ಸಂಕ್ರಂತಿಯಂದು ತೀರ್ಥಸ್ನಾನ ಮಾಡಿದರೆ ಪುಣ್ಯ ಫಲವಿದೆಯೆಂಬ ನಂಬಿಕೆ ಇದೆ. ಸಂಜೆ ಹೆಂಗಳೆಯರು ತಟ್ಟೆಯಲ್ಲಿ ಎಳ್ಳು, ಕಬ್ಬಿನ ತುಂಡು, ಬಾಳೆಹಣ್ಣು, ಸಕ್ಕರೆ ಅಚ್ಚು, ತಾಂಬೂಲ ಸಹಿತ ಮನೆ ಮನೆಗೂ ಹಂಚಿ ಬರುತ್ತಾರೆ. ಭಾಗವತದಲ್ಲಿ ಕೃಷ್ಣ ಬಲರಾಮರು ಈ ದಿನ ಮಥುರಾಕ್ಕೆ ಬಂದು ಕಂಸನನ್ನು ಕೊಂದರು ಎಂಬುದಾಗಿ ಬರುತ್ತದೆ. ನಿರಂತರ ಸೃಷ್ಟಿಯ ತಿಗುರಿ ಸೂರ್ಯ ಆಡಿಸುವ ಬುಗುರಿ ಭ್ರಮಣಲೋಲೆ ಸಂಕ್ರಮಣಶೀಲೆ ನಿತ್ಯನೂತನೆ ಧರಿತ್ರಿ -ಬಿ.ಆರ್.ಲಕ್ಷ್ಮಣ ರಾವ್ ವೈಜ್ಞಾನಿಕವಾಗಿ ನೋಡುವುದಾದರೆ ಇಂದಿನ ಈ ದಿನ ಕ್ರಾಂತಿವೃತ್ತದಲ್ಲಿ ಸೂರ್ಯನು ತನ್ನ ಪಥವನ್ನು ಬದಲಿಸುವ ದಿನ. ಆಧುನಿಕ ವಿಜ್ಞಾನಿಗಳ ಪ್ರಕಾರ ಸೂರ್ಯ ಒಂದು ನಕ್ಷತ್ರ. ಅವನಿಗೆ ಪರಿಭ್ರಮಣ ಇಲ್ಲ. ಆದರೆ ಅಕ್ಷ ಪರಿಭ್ರಮಣ ಇದೆ. ಈಗ ನಮ್ಮ ವಿಜ್ಞಾನ ಇಡೀ ಸೌರಮಂಡಲವೇ ನಿಧಾನವಾಗಿ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಸರಿಯುತ್ತಿದೆ ಎಂದು ಸಾಧಿಸಿ ತೋರಿಸಿಕೊಟ್ಟಿದೆ. ಒಟ್ಟಿನಲ್ಲಿ ವಿಶ್ವದ ಪ್ರತಿಯೊಂದು ಕಾಯಕ್ಕೂ ಚಲನೆ ಇದೆ. ಬದಲಾವಣೆ ಜಗದ ನಿಯಮ, ನಿರಂತರ ಚಲನೆ ವಿಶ್ವದ ನಿಯಮ… ಜಡತೆ ನಿರಾಸೆಯ ತೊಡೆದು ಭರವಸೆಯಲಿ ಮುನ್ನಡೆದು ಹೊಸ ವಿಕ್ರಮಗಳ ಮೆರೆಯಲೀ ನಾಡು ನಗೆ ನೆಮ್ಮದಿಯನ್ನು ಹರಿಸಿ -ಬಿ.ಆರ್.ಲಕ್ಷ್ಮಣ ರಾವ್ ಎನ್ನುವ ಬಿ.ಆರ್.ಲಕ್ಷ್ಮಣರ ಮಾತಿನಂತೆ ನಮ್ಮ ಬದುಕು ಹೊಸ ಭರವಸೆಯ ದಿಕ್ಕಿನೆಡೆಗೆ ತಿರುಗಲಿ… ಪ್ರಪಂಚವನ್ನೇ ತಲ್ಲಣಗೊಳ್ಳುವಂತೆ ಮಾಡಿರುವ ಕೊರೋನಾವನ್ನು ಸೂರ್ಯನ ಹೊಸ ಪ್ರಭೆ ಸಂಹರಿಸಲಿ. ಬದುಕು ಮತ್ತೊಮ್ಮೆ ಹಳಿಗೆ ಬಂದು ಪ್ರಯಾಣ ಸಸೂತ್ರವಾಗಲಿ ಎನ್ನುವ ಆಸೆ ಮತ್ತು ಹಾರೈಕೆಯೊಂದಿಗೆ ನಾವೆಲ್ಲ “ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡೋಣ” ಅಲ್ಲವಾ… ಈ ಭುವಿಯಾಗಲಿ ಸ್ಪೂರ್ತಿ ನಮ್ಮ ನಾಡಿಗೆ ಮರಳಲಿ ಗತ ಕೀರ್ತಿ ನಮ್ಮ ನಾಡಿಗೆ ಹೊಸ ನಡೆನುಡಿ ಬರಲಿ ನಮ್ಮ ಹಾಡಿಗೆ ಹೊಸಹುರುಪನು ತರಲಿ ನಮ್ಮ ನಾಡಿಗೆ -ಬಿ.ಆರ್.ಲಕ್ಷ್ಮಣರಾವ್ ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಸಂಕ್ರಾಂತಿ ಕಾವ್ಯ ಸುಗ್ಗಿ ನಂದಿನಿ ಹೆದ್ದುರ್ಗ ನನ್ನದೆಯ ಗಾಯಗಳಾವೂ ನನ್ನವಲ್ಲ..ನೀನದರ ಒಡೆಯ..ನನ್ನ ವಾಸ್ತವ ,ಭ್ರಮೆ, ಕಲ್ಪನೆಗಳೂನಿನ್ನವೇ ಕೊಡುಗೆ..ನೊಂದು ನೋಯಿಸಿದ್ದಾದ ಮೇಲೆಒಂದು ಅಂತರದಲಿ ನೀ ನಿಂತು ನೋಡುವೆ.ಈ ಕ್ರೂರ ಮೌನದೊಳಗೆಎಷ್ಟೊಂದು ಪ್ರಶ್ನೆಗಳು.. ಬಗೆದು ತೋರಬಹುದೇ ಒಲವ ಈ ಬಗೆಯನ್ನು?ಹಗಲು ಹೊಳೆಯುವುದೆ ಇರುಳ ಈ ಹುಣ್ಣಿಮೆಗೆ?ಎದೆಯೊಳಗೆ ನೋವು ಉಲಿಯುವ ಹಕ್ಕಿಗೆ ಹೆಸರಿದೆಯೇ?ನಾನು ಬರುವ ಮೊದಲು ಎಷ್ಟೊಂದು ಸುಖಿ ನೀನು!! ಮಾತು ಮಹಲುಗಳಿಗಿಲ್ಲಿ ನೋವ ಅಡಿಪಾಯಹೊರಡಲೇ ಎನುವಾಗಷ್ಟೇ ನರಳು ನಿಟ್ಟುಸಿರುಎರಡು ಹೂವೆಸಳು,ಬೆಳುದಿಂಗಳು,ಎದೆಯ ಆಲಾಪಕ್ಕೂಬಿಡುವಿಲ್ಲ ನಿನಗೆ ಶೂನ್ಯ ಹುಟ್ಟಿಸಿದ್ದೂ ನೀನೇ.ಕೋಲಾಹಲಕ್ಕೆ ಕಾರಣವೂ ನೀನೇನಾನು ಅಮಾವಾಸ್ಯೆ ಇರುಳು…ನೀನು ನಡುರಾತ್ರಿ ಎರಗುವ ನೋವುಒಲವೂ ಅಲೌಕಿಕ…!!!ದಯಮಾಡಿ ನಿನ್ನ ಬರಡು ದೇವರಿಗೆ ತಿಳಿಹೇಳು.__—————————–
ಅಂಕಣ ಬರಹ ಮಹಿಳೆಯರು ಹೊರ ಜಗತ್ತಿಗೆ ತೆರೆದುಕೊಂಡಾಗಿದೆ ದೀಪ್ತಿ ಭದ್ರಾವತಿ ಪರಿಚಯ: ದೀಪ್ತಿ ಭದ್ರಾವತಿ ಕನ್ನಡದ ಕತೆಗಾರ್ತಿ. ಮೂಲತಃ ದಕ್ಷಿಣ ಕನ್ನಡದವರಾದರು, ದೀಪ್ತಿ ನೆಲೆ ನಿಂತದ್ದು ಭದ್ರಾವತಿಯಲ್ಲಿ. ಆರೋಗ್ಯ ಇಲಾಖೆಯಲ್ಲಿ ನೌಕರಿ. ಕವಿತೆ ಬರೆಯುತ್ತಿದ್ದ ದೀಪ್ತಿ ಆರಂಭದಲ್ಲಿ ಕಾಗದದ ಕುದುರೆ, ಗ್ರೀನ್ ರೂಂನಲ್ಲಿ ಎಂಬ ಎರಡು ಕವಿತಾ ಸಂಕಲನ ಪ್ರಕಟಿಸಿದರು. ಆ ಬದಿಯ ಹೂ, ಗೀರು ಇವರ ಕಥಾ ಸಂಕಲನಗಳು. ಆ ಬದಿಯ ಹೂ ಸಂಕಲನಕ್ಕೆಕತೆಗಳಿಗೆ ಮಾಸ್ತಿ ಕಥಾ ಪ್ರಶಸ್ತಿ ಪಡೆದವರು, ಗೀರು ಕಥಾ ಸಂಕಲನಕ್ಕೆ ಪಾಟೀಲ ಪುಟ್ಟಪ್ಪ ಪ್ರಶಸ್ತಿ ಲಭಿಸಿದೆ. ಕನ್ನಡ ಸಾಹಿತ್ಯ ಪರಿಷತ್ತನ ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಸಹ ಈಚಿಗೆ ದಕ್ಕಿದೆ.ಬಸವರಾಜ ಕಟ್ಟೀಮನಿ ಪ್ರಶಸ್ತಿ, ಗೀತಾ ದೇಸಾಯಿ ದತ್ತಿನಿಧಿ ಪ್ರಶಸ್ತಿ , ದೇವಾಂಗನ ಶಾಸ್ತ್ರಿ ಪ್ರಶಸ್ತಿ ಸಹ ಇವರಿಗೆ ಒಲಿದಿವೆ ರಂಗಭೂಮಿ ಸಹ ಇವರ ಆಸಕ್ತಿ. ಕಲಾವಿದೆ. ಜೀವಪರ ಮನಸ್ಸುಳ್ಳವರು.ಕಷ್ಟಕ್ಕೆ ಮುಖಕೊಟ್ಟು ಮಾತಾಡಿಸುವವರು. ಬಡತನ ಮತ್ತು ಅಸಹಾಯಕತೆಯ ಜೊತೆ ಕುಳಿತು ಮಾತಾಡುವ ತಾಳ್ಮೆ ಕಾರಣ ಕತೆ ಬರೆದ ದೀಪ್ತಿ, ಬದುಕಿನ ವಿಶಾಲತೆಯ ಹುಡುಕಿ ಹೊರಟ ಕತೆಗಾರ್ತಿ. ನಿರ್ಲಕ್ಷ್ಯ ಎಂಬುದರ ಕಡೆಗೆ ತುಡಿದು ಅದನ್ನು ಅಕ್ಷರಗಳಲ್ಲಿ ಹಿಡಿದವರು. ಸೂಕ್ಷ್ಮ ಗ್ರಹಿಕೆ ಇವರ ಕತೆಗಳ ಜೀವಾಳ.…………….. ಸಂದರ್ಶನ ಕತೆ -ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಕತೆ ಕವಿತೆ ಬರೆಯುವುದು ನನಗೆ ಬಿಡುಗಡೆಯಂತೆ ಕಾಣಿಸುತ್ತದೆ. ಆ ಕ್ಷಣಗಳಲ್ಲಿ ನಾನು ನಾನಾಗಿರುತ್ತೇನೆ. ಕವಿತೆ ಕತೆ ಹುಟ್ಟುವ ಕ್ಷಣ ಯಾವುದು ? ಇಂತದ್ದೇ ಎನ್ನುವ ಕ್ಷಣ ಇರುವುದಿಲ್ಲ. ಅದು ಯಾವಾಗ ಬೇಕಿದ್ದರೂ ನಮ್ಮೊಳಗೆ ಬಂದು ಕೂತು ಬಿಡುತ್ತದೆ. ಒಂದು ನಿರ್ದಿಷ್ಟ ಕಾಲದಲ್ಲಿ ಬರೆಸಿಕೊಳ್ಳುತ್ತದೆ. ನಿಮ ಕತೆ ಕವಿತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಯಾವುದಕ್ಕು ಸೀಮಿತಗೊಂಡಿಲ್ಲ. ಆದರೂ ನನಗೆ ನೋವು, ಬಡತನ, ಸ್ತ್ರೀಯರ ಸಮಸ್ಯೆಗಳು ಹೆಚ್ಚು ಕಾಣಿಸುತ್ತದೆ. ಮಾನವೀಯ ನೆಲಗಟ್ಟುಗಳು ಮುಖ್ಯ ಎನ್ನಿಸುತ್ತವೆ. ನೀವು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವುದು. ಇದು ನಿಮ್ಮ ಸೃಜನಶೀಲತೆಗೆ ನೆರವಾಗಿದೆಯೇ ? ಹೌದು. ಆಸ್ಪತ್ರೆ ಎನ್ನುವುದು ಸಂತನ ಹಾಗೆ ನನಗೆ ಕಾಣಿಸುತ್ತದೆ. ಇಲ್ಲಿ ಹುಟ್ಟು ಮತ್ತು ಸಾವು ಎರಡೂ ಮುಖಾಮುಖಿಯಾಗುತ್ತಲೆ ಇರುತ್ತದೆ. ನನಗೆ ವಿನಯತೆ, ಮನುಷ್ಯತ್ವ ಮತ್ತು ಮನುಷ್ಯರನ್ನು ನಿಷ್ಕಾರಣವಾಗಿ ಪ್ರೀತಿಸುವುದನ್ನು, ಬದುಕಿನ ಮತ್ತೊಂದು ಮಗ್ಗಲನ್ನು ಅರಿವುದಕ್ಕೆ ಮತ್ತು ನಿರ್ಲಿಪ್ತವಾಗಿ ಎಲ್ಲವನ್ನು ನೊಡುವುದು ಸಾಧ್ಯವಾಗಿರುವುದು ನನ್ನ ವೃತ್ತಿಯಿಂದಲೆ. ವೃತ್ತಿ ಮತ್ತು ಸೃಜನಶೀಲತೆ ಹಾಗೂ ಅಪ್ತ ಬದುಕನ್ನು ನಿಭಾಯಿಸುವ ಕೌಶಲ್ಯ ಹೇಗದು ? ಹೇಗೆ ನಿಭಾಯಿಸುವಿರಿ? ನನಗಿದು ಸವಾಲಿನದ್ದೆ. ಆದರೆ ಅನಿವಾರ್ಯ. ಎಷ್ಟೋ ಖಾಸಗಿ ಕಾರ್ಯಕ್ರಮವನ್ನು, ಸಾಹಿತ್ಯದ ಚಟುವಟಿಕೆಗಳನ್ನು ತಪ್ಪಿಸಿಕೊಂಡಿದ್ದೇನೆ. “ಎಲ್ಲೂ ಬರಲ್ಲ” ಎನ್ನುವ ದೂರನ್ನು ಕೇಳಿಸಿಕೊಂಡಿದ್ದೇನೆ. ಕೋವಿಡ್ನ ಕಾರಣಕ್ಕೆ ಕಳೆದ ಒಂಭತ್ತು ತಿಂಗಳಿಂದ ಹೆಚ್ಚು ಓದಿಲ್ಲ ಬರೆದಿಲ್ಲ. ಹೇಗೆಲ್ಲ ಸಮಯ ಸಿಗುತ್ತದೆಯೋ ಹಾಗೆ ಹೊಂದಿಸಿಕೊಳ್ಳುವ ಯತ್ನದಲ್ಲಿರುತ್ತೇನೆ. ನಿಮ್ಮ ಕತೆಗಳಲ್ಲಿ ಪಾತ್ರ ಹಾಗೂ ವಸ್ತು ನಿರ್ವಹಣೆಯಲ್ಲಿ ಪ್ರಜ್ಞಾಪೂರ್ವಕ ನಿರೂಪಣೆ ಇದೆಯಾ? ಇಲ್ಲ. ನಾನು ಕತೆಗಳನ್ನು ಪ್ರಜ್ಞಾಪೂರ್ವಕವಾಗಿ ಬರೆಯುವುದಿಲ್ಲ. ಕತೆ ಹೇಗೆ ತನ್ನ ದಾರಿಯನ್ನು ಹುಡುಕಿಕೊಳ್ಳುತ್ತದೆಯೋ ಅದನ್ನು ಕುತೂಹಲದಿಂದ ಗಮನಿಸುತ್ತೇನೆ. ಪಾತ್ರಗಳ ಆಯ್ಕೆಯೂ ಹಾಗೆಯೇ ಕತೆಗೆ ತಕ್ಕಂತಹ ಪಾತ್ರಗಳು ಅವಾಗಿಯೇ ರೂಪುಗೊಳ್ಳುತ್ತವೆ. ಕೆಲವೊಂದು ಕತೆ ಬರೆದಾಗ ಈ ಕತೆ ನನ್ನೊಳಗೆ ಎಲ್ಲಿತ್ತು ಅಂತ ಅಚ್ಚರಿ ಪಟ್ಟಿದ್ದೇನೆ. ಕನ್ನಡ ವಿಮರ್ಶಾಲೋಕ ನಿಮ್ಮ ಕತೆಗಳನ್ನು ಗಮನಿಸಿದೆಯಾ ? ನನ್ನ ಮೊದಲ ಕಥಾ ಸಂಕಲನ ಬಂದಾಗ ಅಂತಹ ಯಾವ ಗುರುತಿಸುವಿಕೆಯೂ ಸಿಗಲಿಲ್ಲ. ಆದರೆ ಓದಿದ ಎಲ್ಲರೂ ಹಿರಿಯರನ್ನು ಸೇರಿದಂತೆ ಒಳ್ಳೆಯ ಮಾತಾಡಿದ್ದರು. ಎರಡನೇ ಸಂಕಲನಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂತು. ಬಹಳಷ್ಟು ಜನ ಇಲ್ಲಿನ ಕತೆಗಳ ಬಗ್ಗೆ ಮಾತಾಡಿದ್ರು. ಬರೆದ್ರು. ಅದು ಖುಷಿ ಕೊಟ್ಟಿದೆ. ಮಹಿಳಾ ಬರಹಗಾರ್ತಿಯಾಗಿ ನೀವು ಎದುರಿಸಿದ ಸಮಸ್ಯೆ, ಸವಾಲುಗಳೇನು ? ನಾನೊಬ್ಬಳೆ ಅಲ್ಲ, ಬಹುತೇಕ ಎಲ್ಲಾ ಬರಹಗಾರ್ತಿಯರ ಸಮಸ್ಯೆಯೂ ಕೂಡ ಇದೆ ಆಗಿರುತ್ತದೆ. ಬರಹದೊಳಗೆ ಬರಹಗಾರ್ತಿಯರನ್ನೆ ಹುಡುಕುವ ಮನಸ್ಥಿತಿಯೊಂದು ಬೆಳೆದು ಬಂದಿದೆ. ಪುರುಷರ ಬರವಣಿಗೆ ಲೋಕಕ್ಕೆ ಸಂಬಂಧಿಸಿದ್ದು ಮಹಿಳೆಯರು ಬರೆದರೆ, ಅದು ಸ್ವಂತದ್ದು ಎನ್ನುವ ಪರಿಸ್ಥಿತಿ ಇದೆ. ಹೀಗಾಗಿ ಆ ಎಚ್ಚರದಲ್ಲಿಯೇ ಬರೆಯಬೇಕಾಗುತ್ತದೆ. ಮನೆ, ಸಂಸಾರ ಸಮಾಜದ ಚೌಕಟ್ಟುಗಳು ಒಮ್ಮೊಮ್ಮೆ ಹೇಳಬೇಕಾದದ್ದು ಹೇಳುವಲ್ಲಿ ತಡೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಹೀಗಾಗಿ ಹೇಳಬೇಕಾದ್ದು ಕೆಲವೊಮ್ಮೆ ಉಳಿದು ಬಿಡುವ ಸಾಧ್ಯತೆಗಳು ಹೆಚ್ಚು. ನನ್ನ ಮೊದಲ ಕಥಾ ಸಂಕಲನ ಬಂದಾಗ ಅದರಲ್ಲಿ ಸ್ತ್ರೀ ಕೇಂದ್ರಿತ ಕತೆಗಳು ಇರಲಿಲ್ಲ. ಕವನ ಸಂಕಲನದಲ್ಲಿಯೂ ಕೂಡ . ಆಗ ಕೆಲವೊಬ್ಬರು ನೀವು ಮಹಿಳೆಯಾಗಿ ಮಹಿಳೆಯರ ನೋವು ಬರೆಯಲ್ವಾ ಎಂದಿದ್ದರು. ನೀವು ಈ ರೀತಿ ಯಾರದ್ದೋ ಕತೆಯನ್ನು ಹೇಳಿದ್ರೆ ಅದರಲ್ಲಿ ಪ್ರಾಮಾಣಿಕತೆ ಎಲ್ಲಿರತ್ತೆ ಎಂದಿದ್ರು. ಮಹಿಳೆ ವೈಯಕ್ತಿಕ ನೋವು, ದಾಂಪತ್ಯ, ಲೈಂಗಿಕತೆಯ ಬಗ್ಗೆ ಬರೆದರೆ ಮಾತ್ರ ಅದು ಪ್ರಾಮಾಣಿಕ ಬರಹ ಅಂದುಕೊಳ್ಳುವುದು ತಪ್ಪು. ಮಹಿಳೆಯರಿಗೆ ಹೊರ ಪ್ರಪಂಚದ ಅರಿವು ಇರುವುದಿಲ್ಲ ಎಂದುಕೊಳ್ಳುವುದೇ ಮಿತಿ. ಮಹಿಳೆಯರು ಹೊರ ಜಗತ್ತಿಗೆ ತೆರೆದುಕೊಂಡಾಗಿದೆ ಮತ್ತು ಆಕೆ ಕಾಣುವ ಲೋಕವನ್ನು ದಾಖಲಿಸುವುದು ಕೂಡ ಇಂದಿನ ತುರ್ತು. ಸಾಹಿತ್ಯ ಲೋಕದಲ್ಲಿ ಮಹಿಳಾ ಬರಹಗಾರ್ತಿಯಾಗಿ ಲಿಂಗ ಅಸಮಾನತೆಯನ್ನು ನೀವು ಎಂದಾದರೂ ಎದುರಿಸಿದ್ದೀರಾ ? ಇಲ್ಲ ಹಾಗೇನು ಇಲ್ಲ. ಬಹುತೇಕರು ಗೌರವದಿಂದಲೇ ನಡೆಸಿಕೊಳ್ಳುತ್ತಾರೆ. ಆದರೆ ಕೆಲವು ಸಂಘ ಸಂಸ್ಥೆಗಳಲ್ಲಿ ಅನುಭವಿಸಿದ್ದೇನೆ. ಪುರುಷರೆಲ್ಲ ವೇದಿಕೆಯಲ್ಲಿ ಕೂರುವ ಮತ್ತು ಮಹಿಳೆಯರನ್ನು ಹೂ ಗುಚ್ಛ ನೀಡುವುದಕ್ಕೆ ನಿಲ್ಲಿಸುವ ಕ್ರಮವನ್ನು ವಿರೋಧಿಸಿದ್ದೇನೆ. ಕೆಲವೊಂದು ಕಡೆ ಬಿಟ್ಟು ಬಂದಿದ್ದೇನೆ. ಎಡ ಪಂಥೀಯ, ,ಬಲ ಪಂಥೀಯ ತಿಕ್ಕಾಟದ ಗುಂಪುಗಳ ಬಗ್ಗೆ ನಿಮ್ಮ ಅನಿಸಿಕೆ ಏನು? ಎರಡು ಕಲ್ಲು ಉಜ್ಜಿದಾಗ ಬೆಳಕು ಬರತ್ತೆ ಅಲ್ವಾ. ಎಡ ಮತ್ತು ಬಲದ ನಡುವೆ ತಿಕ್ಕಾಟವಿದ್ದಾಗಲೇ ಹೊಸದಾದ ಮೈಲಿಗಲ್ಲೊಂದು ಎದುರಾಗತ್ತೆ. ಅದಿಲ್ಲದಿದ್ದರೆ ಹರಿವು ಎನ್ನೋದು ಎಲ್ಲಿರತ್ತೆ. ಆದರೆ ಯಾವುದು ಅತಿಯಾದರೆ, ಪ್ರಶ್ನಾತೀತವಾದರೆ ಅದರಿಂದ ಹೊಸದೇನು ಉದ್ಭವಿಸುವುದಿಲ್ಲ. ಬದಲಾಗಿ ಅವನತಿ ಶುರುವಾಗತ್ತೆ. ಯಾವುದರಿಂದ ಮನುಷ್ಯರ ಬದುಕು ಹಸನಾಗತ್ತೊ ಅದಾಗಲಿ ಬಿಡಿ. ಅದರಲ್ಲೇನಿದೆ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಅಭಿಪ್ರಾಯವೇನು? ರಾಜಕೀಯದ ಕುರಿತು ಏನನ್ನು ಹೇಳಲಾರೆ. ಧರ್ಮ ಮತ್ತು ದೇವರ ವಿಷಯದಲ್ಲಿ ನಿಮ್ಮ ನಿಲುವೇನು? ಧರ್ಮ ಯಾವತ್ತು ಮನುಷ್ಯನನ್ನು ರೂಪಿಸುವ ಮಾರ್ಗವಾಗಬೇಕು. ಅದು ಹೇರಿಕೆಯಾಗಬಾರದು. ಯಾವುದೇ ಧರ್ಮಕ್ಕು ಮನುಷ್ಯತ್ವ ಎನ್ನುವುದು ಮೂಲ ರೂಪವಾಗಬೇಕು. ಮತ್ತದು ಮನುಷ್ಯರ ಬದುಕನ್ನು ಹಸನುಗೊಳಿಸಲು ಯತ್ನಿಸಬೇಕೆ ಹೊರತು ಸಂಘರ್ಷ ಹುಟ್ಟು ಹಾಕಬಾರದು. ದೇವರು ಕೂಡ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹುಟ್ಟು ಹಾಕಿಕೊಂಡಿರುವಂತದ್ದು. ನಾನು ದೇವರನ್ನು ನಂಬುವುದಿಲ್ಲ. ಆದರೆ ನಂಬುವವರನ್ನು ನಿರಾಕರಿಸುವುದಿಲ್ಲ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಬದಲಾವಣೆ ಎನ್ನುವುದು ಎಲ್ಲ ಕಾಲಘಟ್ಟದ ಸಹಜ ಕ್ರಿಯೆ. ಪ್ರತಿಯೊಂದಕ್ಕು ಒಂದೊಂದು ಹೊರಳು ಇದ್ದೇ ಇರುತ್ತದೆ. ಅದೇ ಸ್ಥಿತಿಯಲ್ಲಿ ಇವತ್ತು ಸಾಂಸ್ಕೃತಿಕ ವಾತಾರವಣ ಇದೆ. ಪುಸ್ತಕಕ್ಕೆ ಮೀಸಲಾದ ಸಾಹಿತ್ಯ, ಆಡಿಯೋ, ವಿಡಿಯೋಗಳಾಗಿ, ವೆಬಿನಾರ್ಗಳು ಹೆಚ್ಚಿ ಎಲ್ಲೆಲ್ಲೋ ಇರುವವರನ್ನ ತಲುಪುತ್ತಿದೆ. ಜಗತ್ತು ಕೈಗೆಟುಕುತ್ತಿದೆ. ಸಾಹಿತ್ಯ ತಲುಪುವ ವ್ಯಾಪ್ತಿ ಹೆಚ್ಚಾಗುತ್ತಿದೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ತುಸು ಹೆಚ್ಚೇ ಇದೆ ಎಂದು ಕೆಲವು ವಿದ್ಯಮಾನಗಳನ್ನು ನೋಡಿದಾಗ ಅನ್ನಿಸೋದಕ್ಕೆ ಶುರುವಾಗಿದೆ. ಮತ್ತು ಮನುಷ್ಯರು ಇದ್ದಲ್ಲಿ ಇವೆಲ್ಲ ಸಹಜ ಕೂಡ. ಬೇಕಾದವರಿಗೆ ಅತೀ ಒತ್ತು ಕೊಡುವ. ಅಲ್ಲದವರನ್ನು ಗಮನಿಸದಂತೆ ನಟಿಸುವ ಪ್ರಕ್ರಿಯೆಗಳು ಇದ್ದೇ ಇವೆ. ಬಹುಶ: ಹಿಂದೆಯು ಹೀಗೆ ಇದ್ದಿರಬಹುದು. ನಾವು ಏನೆಲ್ಲ ಸರ್ಕಸ್ ಮಾಡಿದರೂ ಕೊನೆಗೆ ಉಳಿಯುವುದು ಸಾಹಿತ್ಯ ಮಾತ್ರ ಎನ್ನುವುದಷ್ಟನ್ನೆ ಮನಗಂಡಿದ್ದೇನೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ ? ಚಲನೆ ಸ್ವಾಭಾವಿಕ ಪ್ರಕ್ರಿಯೆ. ಯಾವುದನ್ನು ಅಡಗಿಸಲಾಗಿರುತ್ತದೆಯೊ ಅದು ಒಂದು ಕಾಲಕ್ಕೆ ಮುನ್ನೆಲೆಗೆ ಬರುತ್ತದೆ. ಯಾವುದು ಮುಂಚೂಣಿಯಲಿ ನಿಂತಿರುತ್ತದೆಯೋ ಅದು ಹಿಂಸರಿಯುತ್ತದೆ. ದೇಶದ, ದೇಶಿಗರ ಮನಸ್ಥಿತಿಯು ಈಗ ಹೀಗೆ ಇದೆ. ಕುಸಿದಿರುವ ಆರ್ಥಿಕತೆ, ನಿರುದ್ಯೋಗ, ರೈತರ ಸಮಸ್ಯೆಗಳು, ಈ ಕುರಿತು ಹೆಚ್ಚು ಹೆಚ್ಚು ಆಲೋಚಿಸಬೇಕಾದ ಅವಶ್ಯಕತೆ ಇದೆ. ದೇಶ ಸ್ವಾವಲಂಬಿಯಾದಾಗ ಮಾತ್ರ ಜನರ ಮತ್ತು ದೇಶದ ಅಭಿವೃದ್ಧಿ ಸಾಧ್ಯ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಕನಸು ಅಂತೇನು ಇಲ್ಲ. ಸಾಹಿತ್ಯದ ಮೂಲಕ ಎಲ್ಲರನ್ನು ಪ್ರೀತಿಸುವಂತಾದರೆ ಅದಕ್ಕಿಂತ ಬೇರೇನು ಬೇಕು?. ನಿಮ್ಮ ಇಷ್ಟದ ಲೇಖಕರು ಯಾರು ? ಬೇಂದ್ರೆ, ಮಹಾಶ್ವೇತಾದೇವಿ, ಓ ಹೆನ್ರಿ. ನೀವು ಈಚೆಗೆ ಓದಿದ ಕೃತಿಗಳು ಯಾವವು? ಈಚೆಗೆ ಬಂದ ಹೊಸಬರ ಕೃತಿಗಳು. ಈಗ ದುರ್ಗಾಸ್ತಮಾನದ ಮರು ಓದು ನಿಮಗೆ ಇಷ್ಟದ ಕೆಲಸ ಯಾವುದು ? ಏಕಾಂಗಿ ಸುಮ್ಮನೆ ಅಲೆಯುವುದು ನಿಮಿಗೆ ಇಷ್ಟವಾದ ಸ್ಥಳ ಯಾವುದು? ಕಡಲಿರುವ ಯಾವುದೇ ಊರು ನಿಮ್ಮ ಪ್ರೀತಿಯ ಸಿನಿಮಾ ,ಇಷ್ಟದ ಸಿನಿಮಾ ಯಾವುದು ? ಕಾನೂರು ಸುಬ್ಬಮ್ಮ ಹೆಗ್ಗಡತಿ, ತಮಿಳಿನ ಪ್ರಕಾಶ್ ರೈ ಅಭಿನಯದ ಕಾಂಜೀಪುರಂ ನೀವು ಮರೆಯಲಾರದ ಘಟನೆ ಯಾವುದು ? ನನ್ನ ಮೊದಲ ಕಥಾ ಸಂಕಲನಕ್ಕೆ ಮಾಸ್ತಿ ಪ್ರಶಸ್ತಿ ಪಡೆದ ಕ್ಷಣ ಕನ್ನಡದಲ್ಲಿ ಬರೆಯುವವರಿಗೆ ಏನು ಹೇಳಲು ಬಯಸುವಿರಿ ? ಹೇಳುವುದು ಅಂತೇನು ಇಲ್ಲ. ಎಲ್ಲ ಹಿರಿಯರ ಹೇಳಿದ್ದನ್ನೇ ಹೇಳುವೆ. ಬರಹಗಾರರಿಗೆ ಒಂದು ಸ್ಪಷ್ಟತೆ ಇರಬೇಕು. ಪರಂಪರೆಗಳ ಅರಿವು ಇರಬೇಕು. ಮುಖ್ಯವಾಗಿ ಕನ್ನಡದ ಕುರಿತಾಗಿ ಗೌರವದ ಜೊತೆಗೆ ಮಮತೆ ಇರಬೇಕು. ಇದು ನನ್ನದು ಎನ್ನುವ ಆಪ್ತತೆ ಇರಬೇಕು. ಸದಾ ಹೀಗಳೆಯುತ್ತ ಕೂತರೆ ಯಾವುದು ಸಾಧ್ಯವಾಗುವುದಿಲ್ಲ. ಬರಹ ಮತ್ತು ಬದುಕು ಬೇರೆ ಬೇರೆ ಅಂದುಕೊಂಡು ಬದುಕುವುದಾದರೆ ಮತ್ತೊಬ್ಬರಿಗೆ ಬೋಧಿಸುವ ಅಗತ್ಯ ಏನಿದೆ?. ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅಂಕಣ ಬರಹ ವಸಾಹತುವಿನಿಂದ ಬಿಡುಗಡೆಗೆ ಭಾಷೆ ಕೊಟ್ಟವ ( ಬಸವಣ್ಣನವರ ಒಂದು ವಚನದ ಭಾಷಿಕ ವಿವೇಚನೆ ) ಕನ್ನಡ ಸಾಹಿತ್ಯ ಸಂಸ್ಕೃತದ ಪ್ರಭಾವಕ್ಕೆ ಸಿಕ್ಕು ವಸ್ತು, ರೂಪ, ಅಭಿವ್ಯಕ್ತಿಯ ಕ್ರಮದಲ್ಲಿ ಬೆಳವಣಿಗೆ ಹೊಂದಿ ಜನಸಾಮಾನ್ಯರಿಂದ ಬಹುದೂರ ನಿಂತಿದ್ದುದು ಎಲ್ಲಕಾಲದಲ್ಲಿಯೂ ಸತ್ಯವೇ ಸರಿ. ಹನ್ನೆರಡನೆಯ ಶತಮಾನದ ವಚನ ಚಳುವಳಿಯ ಸಾಹಿತ್ಯ ರೂಪ ಮತ್ತು ಅದರೊಳಗಿನ ಸಂವೇದನೆಗಳು ನೆಲದ ಬೇಡಿಕೆ, ಸದ್ಯದ ತುರ್ತಿಗೆ ಸ್ಪಂದಿಸಿ ಜನಸಾಮಾನ್ಯರ ನಾಡಿಮಿಡಿತಕ್ಕೆ ಸ್ಪಂದಿಸಿದ್ದು. ಸಂಸ್ಕೃತದ ಮಾರ್ಗ ಸಂಪ್ರದಾಯಕ್ಕೆ, ಮಹಾಕಾವ್ಯ ಪರಂಪರೆಗೆ ವಿರುದ್ಧವಾಗಿ ತನ್ನದೇ ಆದ ಕ್ರಮವನ್ನು ಕಟ್ಟಿಕೊಂಡಿರುವುದು ತಿಳಿದೇ ಇದೆ. ವಚನಗಳು ಸಾಮಾನ್ಯರಿಗೆ ಅರ್ಥವಾಗುವ ಮಟ್ಟದಲ್ಲಿರುವುದು ಅದರ ಬಹು ಮುಖ್ಯ ಅಂಶ. ಇದೇ ಮೊದಲ ಬಂಡಾಯ. ಮತ್ತು ಸಂಸ್ಕೃತಭೂಯಿಷ್ಟ ಮಾರ್ಗ ಪರಂಪರೆಗೆ ಕೊಟ್ಟ ಛಾಟಿ ಏಟಾಗಿದೆ. ವಿಷಯ ಹಸ್ತಾಂತರಕ್ಕೆ ಕಂಡುಕೊಂಡ ಸಾಹಿತ್ಯ ರೂಪ, ಬಳಸಿದ ಭಾಷೆ, ಸೂಕ್ಷ್ಮವಾದ ಪರ್ಯಾಯ ದಾರಿಯನ್ನು ನಾಡಿಗರಲ್ಲಿ ಇಂದಿಗೂ ಜಾಗೃತಗೊಳಿಸಿ ನಿಲ್ಲಿಸಿವೆ. ಪರ್ಯಾಯ ದಾರಿಯನ್ನು ಹುಟ್ಟುಹಾಕುವಲ್ಲಿ ಬಸವಣ್ಣನವರ ಪಾತ್ರ ಬಹುಮುಖ್ಯವಾದದ್ದು ಮತ್ತು ಆ ಕಾರ್ಯದ ಯಶಸ್ವಿಗೆ ಮಾರ್ಗಕ್ಕೆ ವಿರುದ್ಧವಾದ ಭಾಷೆಯನ್ನು ಬಳಸುವ ದಾರಿ ಬಸವಣ್ಣನವರ ಹಾದಿ ಓದುಗರನ್ನು ಬೆರಗಾಗಿಸುತ್ತದೆ. ಈ ವಚನವನ್ನು ಮತ್ತೊಮ್ಮೆ ಗಮನಿಸಿ. ಉಳ್ಳವರು ಶಿವಾಲಯ ಮಾಡುವರು ; ನಾನೇನ ಮಾಡವೆ ? ಬಡವನಯ್ಯಾ. ಎನ್ನ ಕಾಲೇ ಕಂಭ, ದೇಹವೇ ದೇಗುಲ, ಸಿರ ಹೊನ್ನ ಕಳಸವಯ್ಯಾ. ಕೂಡಲಸಂಗಮದೇವ, ಕೇಳಯ್ಯ; ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ! ೧ ಈ ವಚನ ಪ್ರಖ್ಯಾತವಾಗಿರುವುದು ‘ದೇವಾಲಯ’ಗಳ ವಿರುದ್ಧವಾಗಿ, ದೇಹವೇ ‘ದೇಗುಲ’ ಎನ್ನುವ ಗ್ರಹಿಕೆಯಿಂದ. ಸ್ಥಾವರಕ್ಕಿಂತ ಜಂಗಮ ಬಹುದೊಡ್ಡದು ಮತ್ತು ಕ್ರಿಯಾಶೀಲ, ಚಲನಶೀಲವಾದುದು ಎಂಬುದರಿಂದ. ಆ ಕಾಲದ ಪುರೋಹಿತಶಾಹಿ ಸೃಷ್ಟಿಸಿದ್ದ ವಸಾಹತುವಿನಿಂದ ಬಿಡಿಸಿಕೊಳ್ಳಲು ತಮ್ಮನ್ನು ತಾವು ಕಟ್ಟಿಕೊಳ್ಳಲು ನಿರ್ಮಿಸಿಕೊಂಡಿರುವ ಮಾರ್ಗದಿಂದ. ಇದೊಂದು ಮಹಾಮಾರ್ಗವಾಗಿ ಇಂದಿಗೂ ಜೀವಂತವಾಗಿದೆ. ಪ್ರತೀ ಕ್ಷೇತ್ರಗಳಲ್ಲಿಯೂ ಜ್ಞಾನವೆಂಬುದು ಅಮೂರ್ತ ಮತ್ತು ಸೀಮಾತೀತ. ಈ ಜ್ಞಾನವು ಭಾಷೆಯ ಮೂಲಕ ಬರುವುದೆನ್ನುವುದು. ವಸಾಹತೀಕರಣಕ್ಕೆ ಒಳಪಟ್ಟಾಗ ‘ಭಾಷೆ’ ಎನ್ನುವುದರ ಮೇಲೂ ಬಹುಸೂಕ್ಷ್ಮವಾಗಿ ಯಜಮಾನ್ಯ ಸಂಸ್ಕೃತಿಯು ಬಹುದೊಡ್ಡ ಪ್ರಭಾವ ಬೀರುತ್ತದೆ. ಕೊಟ್ಟ ಭಾಷೆಯಿಂದ ಬಿಡಿಸಿಕೊಳ್ಳುವುದು ಅಥವಾ ಅದಕ್ಕೆ ಪರ್ಯಾಯವಾದ ಭಾಷೆಯನ್ನು ಕಟ್ಟುವುದು, ಹುಟ್ಟಿಸಿಕೊಳ್ಳುವುದು ವಸಾಹತುವಿನಿಂದ ಮುಕ್ತಿರಾಗಲು ಪ್ರಮುಖವಾದ ದಾರಿಯಾಗಿದೆ. ಈ ಕೆಲಸವನ್ನು ಬಹು ಯಶಸ್ವಿಯಾಗಿ ಮತ್ತು ನೆಲದ ಕಣ್ಣಾಗಿ ಮಾಡುವಲ್ಲಿ ಬಸವಣ್ಣನವರ ಈ ವಚನ ಮಹತ್ತರವಾದ ಕಾರ್ಯ ನಿರ್ವಹಿಸಿದೆ. ಪ್ರಕೃತ ವಚನದಲ್ಲಿ ಬಸವಣ್ಣನವರಿಗಿದ್ದ ಅತೀ ಸೂಕ್ಷ್ಮ ಭಾಷಾ ಜ್ಞಾನ ಮತ್ತು ವಸಾಹತುವಿನಿಂದ ಮುಕ್ತರಾಗುವ ಹಂಬಲವಿರುವುದು ತಿಳಿಯುತ್ತದೆ. ಅವರಲ್ಲಿದ್ದ ಭಾಷಾ ಪ್ರಜ್ಞೆಯೇ ಇನ್ನೂ ಜೀವಂತವಾಗಿ ನಮ್ಮ ನಡುವೆ ಅವರನ್ನಿಟ್ಟಿರುವುದು. ವಚನದಲ್ಲಿನ ಕೆಲವು ಪದಗಳು ವಿಭಿನ್ನ ಮತ್ತು ಸೂಕ್ಷö್ಮ ಓದನ್ನು ಕೇಳುತ್ತದೆ. ಸಾಮಾನ್ಯವಾಗಿ ಎಲ್ಲರೂ ಬಳಸುವ – ಅತೀ ಮೆಚ್ಚಿರುವ ಬಸವಣ್ಣನವರ ವಚನವಿದಾದ್ದರಿಂದ ಇದರಲ್ಲಿ ವಿಶಿಷ್ಟ ಮತ್ತು ಜಾಗೃತ ಪ್ರಜ್ಞೆ ಮಾಡಿರುವ ಕಾರ್ಯವನ್ನು ನೋಡಲೇಬೇಕೆನಿಸುತ್ತದೆ. ‘ಉಳ್ಳವರು ಶಿವಾಲಯ ಮಾಡುವರು’ ಸಾಲಿನಲ್ಲಿ ಅಧಿಕಾರದ ಮೂಲಾಂಶವಾದ ಹಣವನ್ನು ಹೋಂದಿರುವ ಉಳ್ಳವರು ಮತ್ತು ಪೌರೋಹಿತ್ಯದ ಕೇಂದ್ರವಾದ ‘ದೇವಾಲಯ’ದ ಬಗೆಗೆ ನೇರವಾಗಿಯೇ ಮಾತುಬಂದಿದೆ. ‘ಆಲಯ’ ಎನ್ನುವುದು ಸಂಸ್ಕೃತದ ಪದವಾಗಿದ್ದು, ಸಾಮಾನ್ಯ ಸರಳ ವಾಕ್ಯದಲ್ಲಿಯೇ ಹೇಳಿದ್ದಾರೆ. ‘ನಾನೇನ ಮಾಡವೆ? ಬಡವನಯ್ಯಾ.’ ಸಾಲು ಅಸಹಾಯಕತೆಯನ್ನು ತೋಡಿಕೊಳ್ಳುವ ಹಾಗೆ ಬಂದಿದ್ದರೂ, ಕೊನೆಯ ಪದ ವಾಸ್ತವವನ್ನು ಉಳ್ಳವರ ಎದುರು ನಿಲ್ಲಿಸುವಾಗ ‘ಬಡವ’ ಎನ್ನುವ ಕನ್ನಡ ಪದವನ್ನು ಬಳಸಿದ್ದಾರೆ. ಮಾರ್ಗದ ಸಂಸ್ಕೃತ ಪದಕ್ಕೆ ವಿರುದ್ಧವಾದ ಕನ್ನಡ ಪದ ಬಳಸುವ ಮೂಲಕ ಮುಂದಿನ ಮಾತುಗಳನ್ನು ಆಡುತ್ತಿರುವುದು ಅಸಹಾಯಕತೆಯೊಂದಿಗೇ ಅದರಲ್ಲಿನ ಅನನ್ಯತೆಯನ್ನು ಸಾದರಪಡಿಸುವ ಕ್ರಮವಾಗಿದೆ. ‘ಆಲಯ’ ಪದವು ಸಂಸ್ಕೃತದ್ದಾಗಿದ್ದು ಅದಕ್ಕೆ ಪರ್ಯಾಯವಾಗಿ ಕನ್ನಡದ ‘ದೇಗುಲ’ ಎನ್ನುವುದನ್ನು, ಮತ್ತದರ ವಿನ್ಯಾಸವನ್ನು ‘ಕಾಲು’ ‘ಕಂಭ’ ‘ದೇಹ’ ಎನ್ನುವ ಕನ್ನಡ ಪದವನ್ನು ಬಳಸಿರುವುದೇ ವಿಶೇಷವಾಗಿದೆ. ಸಂಸ್ಕೃತದ ‘ಶಿರ’ ಕ್ಕೆ ವಿರುದ್ಧವಾಗಿ ಕನ್ನಡದ ‘ಸಿರ’ ಎನ್ನುವುದನ್ನೂ, ‘ಕಳಶ’ ಕ್ಕೆ ಪರ್ಯಾಯವಾಗಿ ‘ಕಲಸ’ ಎನ್ನುವ ಪದವನ್ನು ಬಳಸಿ ಕಟ್ಟಿರುವ ಪ್ರತಿಮೆ ಏಕಕಾಲದಲ್ಲಿ ಭಾಷಿಕವಾಗಿಯೂ-ಆಚರಣೆಯಲ್ಲಿಯೂ ಯಜಮಾನ್ಯ ಸಂಸ್ಕೃತಿಗೆ ವಿರುದ್ಧವಾಗಿ ಕಟ್ಟಿರುವ ಸಂಕಥನವನ್ನು ಒಡೆಯುತ್ತಿರುವ ಮಹತ್ತರವಾದ ಹಾದಿಯನ್ನು ತಿಳಿಸುತ್ತಿದೆ. ಬಸವಣ್ಣನವರ ಅಂಕಿತದಲ್ಲಿಯೂ ಮೊದಲ ಪದ ‘ಕೂಡಲ’ ಎನ್ನುವುದು ಕನ್ನಡ ಪದವೇ ಆಗಿದ್ದು ‘ದೇವ’ ಎನ್ನುವುದನ್ನು ಹೇಳುತ್ತ ಹಿಂದಿನ ‘ನಾನೇನ ಮಾಡಲಿ ಬಡವನಯ್ಯಾ’ ಎನ್ನುವುದನ್ನು ತಳ್ಳಿಹಾಕುವ ಹಾಗೆ ಅನಿಸುತ್ತದೆ. ಪರ್ಯಾಯ ಸಂಸ್ಕೃತಿಯ ವಕ್ತಾರರಂತಿರುವ ಬಸವಣ್ಣನವರು ಏನು ಮಾಡಬೇಕಿತ್ತೋ ಯಶಸ್ವಿಯಾಗಿ ಮೊದಲು ಭಾಷೆಯ ಮೂಲಕವೇ ಮಾಡಿಬಿಟ್ಟಿದ್ದಾರೆ. ಇಲ್ಲಿನ ‘ನಾನೇನ ಮಾಡಲಿ ಬಡವನಯ್ಯಾ’ ಎನ್ನುವ ಸಾಲು ಒಂದರ್ಥದಲ್ಲಿ ವಚನದ ವ್ಯಂಗ್ಯಧ್ವನಿಯನ್ನು ಹೊರಹೊಮ್ಮಿಸಿ ಬಸವಣ್ಣ ಹುಸಿನಗುವಂತೆನಿಸುತ್ತಿದೆ. ‘ಬಡವನಯ್ಯಾ’ ಪದವು ತನ್ನ ಅರ್ಥ ಸಾಧ್ಯತೆಯನ್ನೇ ಕುಗ್ಗಿಸಿಕೊಂಡು ಹಿನ್ನಲೆಗೆ ಉಳಿಯುವಂತೆನಿಸುತ್ತದೆ. ಕೊನೆಯ ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!’ ಸಾಲಿನಲ್ಲಿ ತಮ್ಮ ಉದ್ದೇಶವನ್ನು ವಾಚ್ಯವಾಗಿ ಸ್ಪಷ್ಟಪಡಿಸುವಲ್ಲಿ ಮತ್ತು ಯಜಮಾನ್ಯಕ್ಕೆ ನೇರವಾಗಿ ಉತ್ತರಿಸುವಲ್ಲಿ ಬಸವಣ್ಣ ಬಳಸಿರುವ, ಅನುಸರಿಸಿದ್ದ ‘ಜಂಗಮ’ ಸ್ಥಿತಿಯನ್ನು ‘ಸ್ಥಾವರ’ ಕ್ಕೆ ವಿರುದ್ಧವಾಗಿ ನಿಲ್ಲಿಸಿ ಬೆರಗಾಗಿಸುತ್ತಾರೆ. ‘ಉಂಟು’ ಮತ್ತು ‘ಇಲ್ಲ’ ಎನ್ನುವ ಎರಡು ವೈರುಧ್ಯಗಳು ಏಕಕಾಲದಲ್ಲಿ ಮತ್ತು ಒಂದಾದನಂತರ ಮತ್ತೊಂದು ಸಮಾನಾಂತರವಾಗಿ ಬಂದಿದ್ದು, ಕೊನೆಗೆ ಇಲ್ಲ ಎನ್ನುವುದು ಓದಿನ ಕೊನೆಯಲ್ಲಿ ಉಳಿಯುತ್ತದೆ. ಮತ್ತದ ಶಾಶ್ವತವಾದ ಸತ್ಯದ ಅವರ ಗ್ರಹಿಕೆಯನ್ನು ಸಾದರಪಡಿಸುತ್ತಿದೆ. ಸಂಸ್ಕೃತದ ಶಬ್ಧಗಳನ್ನೇ ಜಾಗಗಳಲ್ಲಿ ಬಳಸಿದ್ದರೆ ಪರ್ಯಾಯ ಸಂಸ್ಕೃತಿಯ ಅನಾವರಣದ ದಾರಿ ಎನ್ನುವುದನ್ನು ಮಾತನಾಡುವುದಾಗುತ್ತಲೇ ಇರಲಿಲ್ಲ. ಮತ್ತು ಇಷ್ಟೆಲ್ಲಾ ಸೂಕ್ಷ್ಮತೆ ವಚನಕ್ಕೆ ಬರುತ್ತಿರಲಿಲ್ಲವೆಂದೇ ಹೇಳಬಹುದು. ಬರಹಗಾರನೊಬ್ಬನಿಗೆ ಪ್ರಮುಖವಾದ ಎರಡು ನೆಲೆಯೆನಿಸುವುದು ‘ಆಯ್ಕೆ’ ‘ಪ್ರತ್ಯೇಕತೆ’ಗಳನ್ನು ಶೋಧಿಸುವ ಮತ್ತು ಸೃಜಿಸಿಕೊಳ್ಳುವ ಸ್ಥಿತಿ. ‘ಆಯ್ಕೆ’ಯೆನ್ನುವುದು ‘ಅಸ್ಥಿತ್ವ’ದ ಸ್ಥಿತಿ ಮತ್ತು ದಾರಿ, ಜೀವಂತವಾಗಿಡುವಲ್ಲಿ ಸ್ಥಿತಿ. ಇದನ್ನು ಕೈಗೊಳ್ಳುವ ಸಮಯದಲ್ಲಿ ಚಳುವಳಿಯ ಮುನ್ನೆಲೆಯಲ್ಲಿರುವ ನೇತಾರನೊಬ್ಬ ಅನುಸರಿಸಬೇಕಾದ ‘ಜಾಗೃತತೆ’ ಮತ್ತು ‘ನಿಖರತೆ’ ಬಸವಣ್ಣವರಲ್ಲಿದೆ. ಮತ್ತೊಂದು ‘ಪ್ರತ್ಯೇಕತೆ’ಯ ಪ್ರಶ್ನೆ ವಸಾಹತು ಸೃಜಿಸುವ ‘ಸಂಸ್ಥೆ’ಯಿಂದ ತಮ್ಮನ್ನು ಹೊರಗಿಟ್ಟು ನೋಡಿಕೊಳ್ಳುವ ಮತ್ತು ಅಂತರ ಕಾಯ್ದುಕೊಳ್ಳುವ, ಈ ಎರಡು ಕೆಲಸಗಳಿಂದ ನೇತಾರನಾಗಿ ಗುಂಪಿನ ಅಸ್ಥಿತ್ವಕ್ಕೆ ಹಾಕಿಕೊಟ್ಟ ದಾರಿಯಾಗಿ ಅವರ ಎಲ್ಲ ಉದ್ದೇಶಗಳನ್ನು ಏಕಕಾಲದಲ್ಲಿ ವಚನವು ತಿಳಿಸುತ್ತಿದೆ. ಆಳುವ ಮತ್ತು ಗಾಢ ಪ್ರಭಾವ ಇರುವ ಸಂಸ್ಕೃತಿ, ಭಾಷೆಗಳು ಒಂದು ಭ್ರಮೆಯಲ್ಲಿ ನಿಲ್ಲಿಸಿರುವುದು ಇಂದಿಗೂ ಸತ್ಯವೇ ಆಗಿದೆ. ಆದರೆ ಸೂಕ್ಷ್ಮಾವಾಗಿ ಮತ್ತು ಜಾಗೃತನಾಗಿರುವ ಲೇಖಕ, ಬರಹಗಾರ, ಚಿಂತಕ, ಸಾಮಾಜಿಕ ಹೋರಾಟಗಾರ ಆ ಭಾಷೆಗೆ ಪರ್ಯಾಯವಾಗಿ ಮತ್ತೊಂದನ್ನು ಅದೇ ಜಾಗದಲ್ಲಿ ನಿಲ್ಲಿಸುತ್ತಾನೆ. ಈ ಕಾರ್ಯವನ್ನು ಸೈದ್, ಫೂಕೋ, ಡೆರಿಡಾರೇ ಬಂದು ಕನ್ನಡದ ನೆಲದಲ್ಲಿ ಹೇಳಬೇಕಾಗಿಲ್ಲ. ಆ ಕೆಲಸವನ್ನು ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಪ್ರಮಾಣದಲ್ಲಿ ಕನ್ನಡದ ನೆಲದ ಪ್ರಜ್ಞೆ ಸಾಧಿಸಿ ತೋರಿಸಿದೆ ಎನ್ನುವುದು ಅಚ್ಚರಿಯ ಜೊತೆಗೆ ಸತ್ಯವೂ ಆಗಿದೆ. ಭಾಷೆಯೊಂದನ್ನು ಬಳಸಿ ‘ಸಂಸ್ಥೆ’ಗಳು ಭ್ರಮೆಯನ್ನು ಸೃಜಿಸಿ, ಆ ಭ್ರಮೆಯಲ್ಲಿ ಸಿಲುಕಿದವರು ಕೊನೆಗೆ ಅಲ್ಲಿಯೂ ಸಲ್ಲದ – ಇಲ್ಲಿಯೂ ನಿಲ್ಲಲಾರದ ಅತಂತ್ರ ದ್ವಂದ್ವಸ್ಥಿತಿಯನ್ನು ಸೃಷ್ಟಿಸಿ ಹಾಳುಮಾಡಿಬಿಡುತ್ತವೆ. ಸಮಾಜಿಕ ಹೋರಾಟಗಾರ, ಬರಹಗಾರ, ಲೇಖಕ ಮತ್ತು ಚಿಂತಕನ ಜೀವದ ಮತ್ತು ಅವನ ನಡೆ, ಉದ್ದೇಶಗಳನ್ನು ಪ್ರಕೃತ ವಚನವು ಶಾಶ್ವತವಾಗಿ ಸಾರುತ್ತಿದೆ. ಒಂದು ಹೋರಾಟದ ಮುನ್ನೆಲೆಯಲ್ಲಿರುವ ವ್ಯಕ್ತಿ ‘ಜೀನಿಯಸ್’ (ತಕ್ಷಣದಲ್ಲಿ ಇದಕ್ಕೆ ಪರಿಣಾಮದ ದೃಷ್ಟಿಯಿಂದ ಪರ್ಯಾಯ ಪದವನ್ನು ಬೇಕೆಂದೇ ಬಳಸುತ್ತಿಲ್ಲ) ಎನಿಸುವುದು ವಸಾಹತು ಸೃಜಿಸಿರುವ ಅಥವಾ ಕೊಟ್ಟ ಭಾಷೆಯನ್ನೇ ಬಳಸಿ ಹೋರಡುವವರನ್ನಲ್ಲ–ಅದಕ್ಕೆ ಪ್ರತಿಸ್ಪರ್ಧಿಯಾಗಿ-ವಿರುದ್ಧವಾಗಿ ಮತ್ತೊಂದನ್ನು ತನ್ನಿಂದಲೇ ತನ್ನೊಳಗಿನಿಂದಲೇ ಸೃಜಿಸುವವರನ್ನು ಮತ್ತು ಪರಿಣಾಮಕಾರಿಯಾಗಿ ಬಳಸುವವರನ್ನು ಎನ್ನುವುದನ್ನು ತಳಿದರೆ ಕನ್ನಡದ ನೆಲದ ಅಸ್ಥಿತ್ವ ಮತ್ತು ಹೋರಾಟ ಹೆಚ್ಚು ಉಜ್ವಲವಾದದ್ದು ಎನಿಸದೆ ಇರದು. ಸಮಕಾಲೀನದಲ್ಲಿ ‘ಆಯ್ಕೆ’ ಮತ್ತು ‘ಪ್ರತ್ಯೇಕತೆ’ ಯ ಸಮಸ್ಯೆಗೆ ಬಸವಣ್ಣನವರಲ್ಲಿ ಉತ್ತರ ಸಿಕ್ಕಬಹುದೆನ್ನುವುದಂತೂ ಸತ್ಯವೇ ಆಗಿದೆ. ಈ ವಚನಕ್ಕೆ ಬೇರೆ ಪಾಂಠಾಂತರಗಳು ಎಂ. ಆರ್. ಶ್ರೀನಿವಾಸಮೂರ್ತಿ ಯವರ ‘ವಚನ ಧರ್ಮಸಾರ.೨ಬಸವನಾಳ ಶಿವಲಿಂಗಪ್ಪನವರ ‘ಬಸವಣ್ಣನವರ ಷಟ್ ಸ್ಥಲದ ವಚನಗಳು.೩ಡಾ. ಎಸ್. ವಿದ್ಯಾಶಂಕರರ ಸಂಪಾದನೆಯ ‘ಎನ್ನ ನಾ ಹಾಡಿಕೊಂಡೆ.೪ಮತ್ತು ಡಾ. ಎಂ. ಎಂ. ಕಲಬುರ್ಗಿ ಯವರ ಸಂಪಾದನೆಯ ‘ಬವಸಯುಗದ ವಚನ ಮಹಾಸಂಪುಟ’.೫ ಪುಸ್ತಕಗಳಲ್ಲಿದೆ. ಆದರೆ ಸಂ. ಶಿ. ಭೂಸನೂರುಮಠರ ಸಂಪಾದನೆಯಲ್ಲಿರುವ ಈ ಮೇಲಿನ ವಚನದ ಪಾಠಾಂತರವು ಬಸವಣ್ಣನವರ ವ್ಯಕ್ತಿತ್ವ ಮತ್ತು ಅವರ ಹೋರಾಟದ ಬದುಕನ್ನು ಸಂಪಾದಕ ಬಹುಸೂಕ್ಷ್ಮವಾಗಿ ಗಮನಿಸಿರುವುದು ತಿಳಿದುತ್ತದೆ. ಪರಾಮರ್ಶನ ಗ್ರಂಥ : ೧. ವಚನ ಸಾಹಿತ್ಯ ಸಂಗ್ರಹ. ಸಂ. ಶಿ ಭೂಸನೂರು ಮಠ. ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್. ಮೈಸೂರು. ಪು ೬೨೬ (೧೯೬೫) ೨. ವಚನಧರ್ಮಸಾರ. ಎಂ. ಆರ್. ಶ್ರೀನಿವಾಸಮೂರ್ತಿ. ಪ್ರಸಾರಾಂ, ಮೈಸೂರುವಿಶ್ವವಿದ್ಯಾನಿಲಯ. ಪು ೨೪೯ (೧೯೪೪) ೩. ಬಸವಣ್ಣನವರ ಷಟ್ ಸ್ಥಲದ ವಚನಗಳು. ಬಸವನಾಳ ಶಿವಲಿಂಗಪ್ಪ. ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ. ಧಾರವಾಡ. ವ. ಸಂ ೮೨೦. ಪು ೨೧೬ (೧೯೫೪) ೪. ಎನ್ನ ನಾ ಹಾಡಿಕೊಂಡೆ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ಬೆಂಗಳೂರು. ವ. ಸಂ ೮೨೦. ಪು ೬೪೮ (೨೦೧೨) ೫. ಬವಸಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು. ವ. ಸಂ ೮೨೧. ಪು ೭೪ (೨೦೧೬) ************************************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.
ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….7 ಅಲಗೇರಿಯಲ್ಲಿ ಬೆಂಕಿ ಮತ್ತು ಮೊಲ ನಾಗಮ್ಮಜ್ಜಿಯ ಅಂತ್ಯಸಂಸ್ಕಾರ ಅನಿವಾರ್ಯವಾಗಿ ಕಾರವಾರದಲ್ಲಿ ನಡೆದುಹೋಯಿತು. ಕ್ರಿಯಾ ಕರ್ಮಗಳನ್ನು ಪೂರ್ಣಗೊಳಿಸುವವರೆಗೆ ಊರಿಗೆ ಮರಳುವ ಹಾಗೆಯೂ ಇರಲಿಲ್ಲ. ತಾತ್ಕಾಲಿಕವಾಗಿ ನಮ್ಮ ಪರಿವಾರ ಕಾರವಾರ ತಾಲೂಕಿನ ಅರಗಾ ಎಂಬಲ್ಲಿ ಶಾನುಭೋಗಿಕೆಯಲ್ಲಿರುವ ನಾರಾಯಣ ಆಗೇರ ಎಂಬ ಜಾತಿ ಬಂಧುವೊಬ್ಬರ ಮನೆಯಲ್ಲಿ ವಾಸ್ತವ್ಯ ಮಾಡಬೇಕಾಯಿತು. ಶಾನುಭೋಗರ ಪತ್ನಿ (ಅವಳ ಹೆಸರೂ ನಾಗಮ್ಮ) ನನ್ನ ಯೋಗಕ್ಷೇಮಕ್ಕೆ ನಿಂತಳು. ತಬ್ಬಲಿ ತನದಲ್ಲಿ ನೊಂದು ಹಾಸಿಗೆ ಹಿಡಿದ ಅವ್ವ, ತರಬೇತಿಯ ಜವಾಬ್ದಾರಿಯಲ್ಲಿ ದಿಕ್ಕು ತೋಚದಂತಿದ್ದ ಅಪ್ಪ ಮತ್ತು ಹಸುಳೆಯಾದ ನನಗೆ ಅಂದು ನಾರಾಯಣ ಶಾನುಭೋಗ ದಂಪತಿಗಳು ನೀಡಿದ ಆಶ್ರಯ, ಮಾಡಿದ ಉಪಕಾರಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದು ಅವ್ವ ಈಗಲೂ ನೆನಪಿಸಿಕೊಳ್ಳುತ್ತಾಳೆ. ಆದರೆ ಅವರಿಗೆ ಕೃತಜ್ಞತೆ ಹೇಳಲು ಇಬ್ಬರೂ ಬದುಕಿ ಉಳಿದಿಲ್ಲ ಎಂಬುದು ನಮ್ಮ ದೌರ್ಭಾಗ್ಯ! ಮರಳಿ ಮಾಸ್ಕೇರಿಯ ತೌರಿಗೆ ಬಂದು ಸೇರುವಾಗ ಅವ್ವನಿಗೆ ತಾಯಿಯಿಲ್ಲದ ತೌರುಮನೆಯಾಗಿತ್ತು ಅದು. ಹಾಗೆಂದು ಅವ್ವ ನೊಂದುಕೊಂಡಿದ್ದರೂ ಮಾಸ್ಕೇರಿಯ ಜಾತಿ ಬಂಧುಗಳೆಲ್ಲರೂ ತಾಯಿ ತಂದೆಯರ ಹಾಗೆ ಅಕ್ಕರೆ ತೋರಿದರಂತೆ. ಅದರಲ್ಲಿಯೂ ಸಾಕವ್ವ ಎಂಬ ಮುದುಕಿ ಸರಿಯಾದ ಬಾಣಂತನವಿಲ್ಲದೆ ಅವ್ವನ ಮುಖ ಸೊರಗಿದುದನ್ನು ಗ್ರಹಿಸಿ ಎರಡು ತಿಂಗಳು ಕಟ್ಟು ನಿಟ್ಟಿನ ಬಾಣಂತನ ಮಾಡಿದಳಂತೆ. ತನ್ನ ಮನೆಯಿಂದ ಹತ್ತಾರು ಮಾರು ಅಂತರದಲ್ಲಿದ್ದ ನಮ್ಮ ಮನೆಗೆ ಮುಂಜಾನೆ ಸಂಜೆ ತಪ್ಪದೇ ಬರುತ್ತ ಅರಶಿನ ಎಣ್ಣೆ ತಿಕ್ಕಿ, ಅಡಕಲ ತುಂಬ ಬಿಸಿನೀರು ಹೊಯ್ದು, ಧೂಪದ ಹೊಗೆ ಹಾಕಿ ತಾಯಿ ಮಗುವನ್ನು ಉಪಚರಿಸಿದ ಸಾಕವ್ವ ಅವ್ವನಿಗೆ ಹದವಾದ ಕಾಳು ಮೆಣಸಿನ ಚಟ್ನಿಯನ್ನು ಮಾಡಿ ಉಣ್ಣಿಸುತ್ತಿದ್ದಳಂತೆ. ಸಾಕವ್ವನ ಅಂಥ ಕಟ್ಟುನಿಟ್ಟಿನ ಬಾಣಂತನದಿಂದಾಗಿಯೇ ಮುಂದೆ ಮತ್ತೆ ಐದು ಜನ ಮಕ್ಕಳನ್ನು ಹೆತ್ತರೂ ತನ್ನ ದೇಹದ ಚೈತನ್ಯ ಉಡುಗದೆ ಉಳಿಯುವುದು ಸಾಧ್ಯವಾಯಿತು ಅನ್ನುತ್ತಾಳೆ ಅವ್ವ. ಬೆಳ್ಳಗೆ ಎತ್ತರದ ನಿಲುವಿನ ಸಾಕವ್ವ’ ಅವ್ವನಿಗೆ ಮಾತ್ರ ಸಾಕವ್ವನಾಗಿರದೆ ಕೇರಿಗೇ ಅಕ್ಕರೆಯ ಅವ್ವನಾಗಿದ್ದಳಂತೆ. ಶುಚಿಯಾಗಿ ಅಡಿಗೆ ಮಾಡುವ ಅವಳು, ಕೇರಿಯಲ್ಲಿ ಯಾರಿಗೇ ಕಾಯಿಲೆಯಾದರೂ ನಾರುಬೇರುಗಳ ಕಷಾಯ ಮಾಡಿ ಕುಡಿಸಿ ಕಾಯಿಲೆಗಳನ್ನು ಗುಣ ಪಡಿಸುತ್ತಿದ್ದಳಂತೆ. ೧೯೬೧-೬೨ ರ ಸುಮಾರಿಗೆ ನಾವೆಲ್ಲ ಬನವಾಸಿಯಲ್ಲಿರುವಾಗ ಊರಲ್ಲಿ ಹಬ್ಬಿದ ಆಮಶಂಕೆ’ ಕಾಯಿಲೆ ನಮ್ಮಕೇರಿಯ ಒಂದಿಷ್ಟು ಪ್ರಾಯದ ಮತ್ತು ಎಳೆಯ ಮಕ್ಕಳನ್ನು ಬಲಿತೆಗೆದುಕೊಂಡಿತ್ತು. ಸಾಕವ್ವಜ್ಜಿ ಕೂಡ ಇದೇ ಕಾಯಿಲೆಯಲ್ಲಿ ಸಾವು ಕಂಡಿದ್ದಳು. ಕಾರವಾರದ ಶಿಕ್ಷಕ ತರಬೇತಿಯ ಬಳಿಕ ಕೆಲವು ವರ್ಷಗಳಲ್ಲಿ ಅಪ್ಪನಿಗೆ ಅಂಕೋಲಾ ತಾಲೂಕಿನ ಅಲಗೇರಿ’ ಎಂಬ ಹಳ್ಳಿಯ ಸರಕಾರಿ ಶಾಲೆಗೆ ವರ್ಗವಾಯಿತು. ನನಗೆ ಮೂರೋ ನಾಲ್ಕೋ ವರ್ಷ ತುಂಬಿರಬಹುದು. ಆಗಿನ್ನೂ ಬಾಲವಾಡಿ, ಅಂಗನವಾಡಿ ಇತ್ಯಾದಿ ವ್ಯವಸ್ಥೆ ಇರಲಿಲ್ಲ. ನಾನು ಮನೆಯಲ್ಲೇ ಆಡಿಕೊಂಡಿದ್ದೆ. ನಮಗೆ ನಮ್ಮ ಜಾತಿಯ ಜನರ ಕೇರಿಯಲ್ಲೇ ವಾಸ್ತವ್ಯಕ್ಕೆ ಒಂದು ಚಿಕ್ಕ ಹುಲ್ಲಿನ ಮನೆ ವ್ಯವಸ್ಥೆಯಾಗಿತ್ತು. ಅಪ್ಪ ಅದಾಗಲೇ ಹಳ್ಳಿಯ ಜನರ ಯಕ್ಷಗಾನ ಬಯಲಾಟಗಳಿಗೆ ಅರ್ಥಬರೆದುಕೊಡುವುದೂ, ಕುಣಿತ ಕಲಿಸುವುದೂ ಇತ್ಯಾದಿ ಮಾಡುತ್ತಿದ್ದ. ಇದರಿಂದ ಇತರ ಸಮಾಜದ ಜನರು ಅಪ್ಪನನ್ನು ವಿಶೇಷ ಗೌರವದಿಂದ ಕಾಣುತ್ತಿದ್ದರು. ಸಮಯಕ್ಕೊದಗಿ ಸಹಾಯವನ್ನು ಮಾಡುತ್ತಿದ್ದರು. ಹೆಚ್ಚಾಗಿ ಅಲ್ಲಿನ ಹಾಲಕ್ಕಿಗಳು ಮನೆಯವರೆಗೂ ಬಂದು ಹೆಚ್ಚಿನ ಪ್ರೀತಿ, ವಿಶ್ವಾಸ ತೋರಿಸುತ್ತಿದ್ದರು. ತಾವು ಬೆಳೆದ ತರಕಾರಿಗಳನ್ನು ಪುಕ್ಕಟೆಯಾಗಿ ತಂದು ಕೊಡುತ್ತಿದ್ದರು. ಒಬ್ಬ ಹಾಲಕ್ಕಿ ಗೌಡನಂತೂ ಒಂದು ಮೊಲವನ್ನು ಜೀವಂತ ಹಿಡಿದು ತಂದು ಅಪ್ಪನಿಗೆ ಕಾಣಿಕೆಯಾಗಿ ಒಪ್ಪಿಸಿದ್ದ. ಅಪ್ಪ ಅದಕ್ಕೊಂದು ಪಂಜರ ಮಾಡಿ ಸೊಪ್ಪು ಸದೆ ತಿನ್ನಿಸಿ ಅಕ್ಕರೆ ತೋರುತ್ತಿದ್ದರೆ, ನನಗೋ ಅದು ಜೀವಂತ ಆಟಿಗೆಯ ವಸ್ತುವಾಗಿತ್ತು. ಒಂದೆರಡು ತಿಂಗಳಲ್ಲೇ ನಮಗೆ ಹೊಂದಿಕೊಂಡ ಮೊಲ ಪಂಜರದ ಹೊರಗೂ ಅಷ್ಟೇ ನಿರಾಳವಾಗಿ ಓಡಾಡತೊಡಗಿತು. ಅಪ್ಪ ಶಾಲೆಗೆ ಹೊರಟರೆ ಹತ್ತು ಹೆಜ್ಜೆಯಾದರೂ ಅವನೊಟ್ಟಿಗೆ ಕುಪ್ಪಳಿಸಿ ನಡೆದು ಮತ್ತೆ ಆಚೀಚೆ ಬೆಕ್ಕು ನಾಯಿಗಳ ಸದ್ದು ಕೇಳಿದರೆ ಮರಳಿ ಬಂದು ಗೂಡು ಸೇರುತ್ತಿತ್ತು. ಯಾವ ಊರಿನಲ್ಲಾದರೂ ಸಜ್ಜನರ ನಡುವೆಯೇ ಒಂದಿಬ್ಬರಾದರೂ ನಯವಂಚಕ ಜನ ಇದ್ದೇ ಇರುತ್ತಾರೆ ಎಂಬ ಸರಳ ಸತ್ಯದ ಅರಿವು ನಮ್ಮ ಮುಗ್ಧ ತಾಯಿ ತಂದೆಯರ ಗಮನಕ್ಕೆ ಬರಲೇ ಇಲ್ಲ. ಮೊಲವನ್ನು ಕಾಣಿಕೆ ನೀಡಿದ ಅದೇ ಜಾತಿಯ ಮನುಷ್ಯನೊಬ್ಬ ಮೆತ್ತಗಿನ ಮಾತನಾಡಿ, “ಮೊಲಕ್ಕೆ ಹುಲ್ಲು ಮೇಯಿಸಿ ತರುವೆ” ಎಂದು ಸುಳ್ಳು ಹೇಳಿ ಕೊಂಡೊಯ್ದವನು ಅದನ್ನು ಕೊಂದು ತಿಂದು ವಂಚನೆ ಮಾಡಿದ. ಅಪ್ಪ-ಅವ್ವ ಮತ್ತು ನಾನು ಮೊಲದ ಸಾವಿಗಾಗಿ ಮರುಗುವುದನ್ನು ಬಿಟ್ಟರೆ ಬೇರೆ ಏನನ್ನೂ ಮಾಡುವಂತಿರಲಿಲ್ಲ. ಅಲಗೇರಿಯಲ್ಲಿ ನನ್ನನ್ನು ಆಡಿಸುವುದಕ್ಕೂ ಆಯಿತು ತಾನು ಶಾಲೆ ಕಲಿಯುವುದಕ್ಕೂ ಆಯಿತು ಎಂಬ ಉದ್ದೇಶದಿಂದ ಅವ್ವನ ಚಿಕ್ಕಪ್ಪನ ಮಗ (ನನ್ನ ಸೋದರ ಮಾವ) ರಾಮ ಎಂಬ ಹುಡುಗ ಬಂದು ನಮ್ಮ ಜೊತೆಗೆ ಉಳಿದುಕೊಂಡಿದ್ದ. ಅಗ್ಗರಗೋಣದ ನಮ್ಮ ಸೋದರತ್ತೆಯ (ನಮ್ಮ ತಂದೆಯವರ ಅಕ್ಕ) ಮಗ ನಾರಾಯಣ ಎಂಬುವವನೂ ಕೆಲವು ದಿನ ನಮ್ಮೊಡನೆಯೇ ಇದ್ದ. ಇಬ್ಬರೂ ನನ್ನನ್ನು ಮುದ್ದು ಮಾಡುತ್ತ, ಹಟ ಮಾಡಿದರೆ ಬಡಿದು ತಿದ್ದುತ್ತ ಅಕ್ಕರೆಯಿಂದ ಆಟವಾಡಿಸುತ್ತಿದ್ದರು. ನಮಗೆ ಇಂಥಹುದೇ ಆಟಿಗೆ ವಸ್ತು ಎಂಬುದೇನೂ ಇರಲಿಲ್ಲ. ಮುರಿದ ತೆಂಗಿನ ಹೆಡೆ, ಗರಟೆ ಚಿಪ್ಪು, ಬಿದಿರಿನ ಕೋಲು, ಹುಲ್ಲಿನ ಬಣವೆ ಇತ್ಯಾದಿ ನಿಸರ್ಗ ಸಹಜ ವಸ್ತುಗಳೇ ನಮಗೆ ಆಟಿಕೆಯಾಗಿದ್ದವು. ಒಂದು ಮುಸ್ಸಂಜೆಯ ಹೊತ್ತು. ಅವ್ವ ಮೀನು ಕೊಯ್ಯುತ್ತಾ ಅಂಗಳದ ಆಚೆ ಕುಳಿತಿದ್ದಳು. ಬದಿಯ ಮನೆಯವಳು ಕತ್ತಲಾಯಿತೆಂದು ನಮ್ಮ ಮನೆಯ ದೀಪದ ಬುರುಡಿಯನ್ನು ತನ್ನ ಮನಗೊಯ್ದು ಎಣ್ಣೆ ಹಾಕಿ ಹೊತ್ತಿಸಿ ತಂದ… ************************************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಅಂಕಣ ಬರಹ ಶಾಲಾರಂಗದೊಳಗೊಂದು ಕೋಲಾಟ ಠಣ್…ಠಣ್… ಠಣ್.. ಗಂಟೆಯ ಸದ್ದು ಒಂಭತ್ತು ಸಾರಿ ಕೇಳಿಸಿತಾ! ಹಾಂ!! ಅದು ನಮ್ಮ ಶಾಲೆಯ ಬೆಳಗಿನ ಗಂಟೆ. ನನ್ನಜ್ಜಿಯ ಹಣೆಯ ನಡುವಿನ ಕುಂಕುಮದ ಬೊಟ್ಟಿನಂತೆ ನಮ್ಮ ಊರಿನ ಕೇಂದ್ರ ಭಾಗದಲ್ಲಿ ಆಧಾರ ಸ್ತಂಭದಂತೆ ಕೂತಿತ್ತು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಹೌದು ಅದು ನಮ್ಮ ಶಾಲೆ. ನಮ್ಮ ಹಳ್ಳಿಯ ಶಾಲೆ. ಬಲಗಾಲಿಟ್ಟು ಒಳಗೆ ಬರಬೇಕು. ಮೊದಲು ಕಾಣಿಸುವುದೇ ಬಿಳೀ ಕಂಬದ ಧ್ವಜಸ್ತಂಭ. ಅದರ ಬುಡದಲ್ಲಿ ಕಟ್ಟೆ . ಅದರ ಹಿಂದೆ, ತೆರೆದ ಎದೆ ಮತ್ತು ಅಕ್ಕ ಪಕ್ಕದ ಭುಜಗಳಂತೆ, ಮುರ ಕಲ್ಲಿನ ಗೋಡೆಯ, ಹೆಂಚಿನ ಮಾಡಿನ ಶಾಲೆಯ ಕಟ್ಟಡ ನೆಲೆ ಕಂಡಿದೆ ಈ ಧ್ವಜಸ್ವಂಭದ ಎದುರು ವಾರಕ್ಕೆ ಎರಡು ಸಲ ಡ್ರಿಲ್ ಮಾಡುವುದು, ಸೋಮವಾರ ಹಾಗೂ ಶುಕ್ರವಾರ. ಆಗ ಪ್ರತಿಯೊಬ್ಬರಿಗೂ ಸಮವಸ್ತ್ರ ಕಡ್ಡಾಯ. ಒಂದು ಗಂಟೆ ಬಾರಿಸಿದ ಕೂಡಲೇ ಶಾಲೆಯ ಮಡಿಲಿಂದ ಹೊರಕ್ಕೆ ಜಂಪ್ ಮಾಡಿ ಮಕ್ಕಳು ಓಡುವುದು. ಸಾಲಾಗಿ ತರಗತಿ, ವಿಭಾಗದ ಪ್ರಕಾರ ಸಾಲು ಜೋಡಿಸಲ್ಪಡುತ್ತದೆ. ಹುಡುಗಿಯರಿಗೆ ನೀಲಿ ಸ್ಕರ್ಟ್ ಬಿಳಿ ಅಂಗಿ. ಹುಡುಗರಿಗೆ ನೀಲಿ ಚಡ್ಡಿ ಬಿಳಿ ಅಂಗಿ. ತಪ್ಪಿದರೆ ಬಿಸಿಲಲ್ಲಿ ನಿಲ್ಲುವ ಶಿಕ್ಷೆ ಮಾತ್ರವಲ್ಲ ಜೊತೆಗೆ ಕೈಗೆ ಬಿಸಿ ಬಿಸಿ ಪೆಟ್ಟು ಹಾಗೂ ಬಸ್ಕಿ ಇಪ್ಪತ್ತೈದು. ಅದೆಷ್ಟೋ ಸಲ ಯುನಿಫಾರ್ಮ್ ಮರೆತು ಬಣ್ಣದ ಫ್ರಾಕ್,ಉದ್ದಲಂಗ ಹಾಕಿ ಬಂದು ಶಂಕಿಬಾಯಿ ಟೀಚರ್ ಹತ್ತಿರ ಪೆಟ್ಟು ತಿಂದದ್ದು, ಚುರ್ ಚುರ್ ಎನ್ನುವ ಚೂಪು ನೆನಪು. ಆ ಧ್ವಜಸ್ತಂಭ ನೋಡಿದಾಗೆಲ್ಲ ಚಿತ್ತದಲ್ಲಿ ಅದರ ಎದುರು ಸಾಲಾಗಿ ಒಂದೇ ಬಗೆಯ ದಿರಿಸು ತೊಟ್ಟ ವಿಧ್ಯಾರ್ಥಿಗಳ ಚಿತ್ರವೇ ತುಂಬಿಕೊಳ್ಳುವುದು. ಅದೆಷ್ಟು ಅಂದ- ಚೆಂದ. ಒಬ್ಬರು ಬಟ್ಟೆಯ ಬಣ್ಣ ಬೇರೆಯಾದರೂ ಬಿಳಿ ಅಂಗಿಗೆ ಶಾಹಿ ಕಲೆಯಾದಂತೆ, ನೂರು ಸರಿಗಳ ನಡುವೆ ತಪ್ಪೊಂದು ಎದ್ದು ನಿಂತಂತೆ ಕಾಣಿತ್ತಿತ್ತು. ನಮ್ಮ ಶಂಕಿ ಟೀಚರ್, ಶೇಖರ ಮಾಸ್ಟ್ರು ಧ್ವಜಸ್ತಂಭದ ಬಳಿಯಿಂದಲೇ ಅಂತಹ ಅಂಗಿಗಳ ಲೆಕ್ಕ ಹಾಕಿ ಬಿಡುತ್ತಿದ್ದರು. ನಮ್ಮ ಅ ಡ್ರಿಲ್ ಗೆ ಅನುಪಮ ಸೌಂದರ್ಯವಿತ್ತು. ಬೆಳಗ್ಗಿನ ಬಿಸಿಲೂ ಹೆಗಲು,ಕೆನ್ನೆ,ತಲೆ ಸವರಿ ಸಣ್ಣಗೆ ಬೆವರುತ್ತಿದ್ದೆವು. ಜೊತೆಜೊತೆಗೆ ನಡೆಸುತ್ತಿದ್ದ ಕವಾಯತ್. ಇರಲಿ. ಇಲ್ಲಿಂದ ಮುಂದೆ ಬಂದರೆ ನಮಗೆ ಕಾಣಿಸುವುದು ಬೆಳಗ್ಗೆ ಯಾವಾಗಲೂ ನಮಗಿಂತಲೂ ಬೇಗ ಬರುತ್ತಿದ್ದ ಗೌರಿ ಟೀಚರ್ . ಇವರು ಬೆಳ್ಳನೆ ಉದ್ದಕ್ಕಿದ್ದು ಸೀರೆ ಸ್ವಲ್ಪ ಮೇಲೆ ಉಡುತ್ತಿದ್ದರು. ಉರೂಟು ಕಣ್ಣು, ಬೈತಲೆ ತೆಗೆದು ಎಣ್ಣೆ ಹಾಕಿ ಬಾಚಿದ ದಪ್ಪ ಮೋಟು ಜಡೆ,.ಕೈಯಲ್ಲಿ ಎರಡು ಪುಸ್ತಕದ ಜೊತೆ ಒಂದು ಸಪೂರ ಕೋಲು. ಆದರೆ ಅವರ ಕೋಲಿಂದ ಪೆಟ್ಟು ತಿಂದವರು ಬಹಳ ಕಡಿಮೆ. ಇವರು ನಮ್ಮ ಇಷ್ಟದ ಟೀಚರ್. ಅವರದ್ದು ಮೂಲೆಯ ಕ್ಲಾಸ್. ಅಲ್ಲಿ ಕೊಂಚ ಸಪೂರ ಜಗಲಿ. ಶಾಲೆಯ ವರಾಂಡಾದ ಎದುರು ಹೂವಿನ ಹಾಗೂ ಬಣ್ಣದೆಲೆಗಳ ಕ್ರೋಟಾನ್ ಗಿಡಗಳು. ವಾರಕ್ಕೆ ಒಂದು ದಿನ ಗಿಡಗಳ ಬಳಿ ಬೆಳೆದ ಕಳೆ ಕೀಳುವ, ಕಸ ಹೆಕ್ಕುವ ಕೆಲಸ ಮಕ್ಕಳಿಗೆ ಅಂದರೆ ನಮಗೆ. ನಾವು ಕುಕ್ಕರುಗಾಲಲ್ಲಿ,ಮೊಣಕಾಲೂರಿ, ಬಗ್ಗಿ ಬೇಡದ ಹುಲ್ಲು ಕೀಳುತ್ತಿದ್ದೆವು. ಕೆಲಸಕ್ಕಿಂತ ಮಾತೇ ಹೆಚ್ಚು. ಟೀಚರ್ ಬಂದು ” ಎಂತ ಪಂಚಾತಿಗೆ ಕೂತು ಕೊಂಡದ್ದಾ. ಬೇಗಬೇಗ” ಎಂದು ಗದರಿಸಿದಾಗ ಕಪ್ಪೆ ಹಾರಿದಂತೆ ಹಾರಿ ಹಾರಿ ದೂರವಾಗುತ್ತಿದ್ದೆವು. ಟೀಚರ್ ಬೆನ್ನು ಹಾಕಿದೊಡನೆ ಮತ್ತೆ ನಮ್ಮ ಮಾತು. ಗಂಡು ಹೆಣ್ಣು ಭೇದವಿಲ್ಲ. ಅದೂ ನಮ್ಮಲ್ಲಿ ಕ್ಲಾಸ್ ಲೀಡರ್ ಹುಡುಗಿಯರಾದರೆ ನಮಗೆ ಹುಡುಗರತ್ರ ಕೆಲಸ ಮಾಡಿಸುವುದೇ ಬಹಳ ಖುಷಿ!. ಜಗಳವಾದರೆ ಮರು ಕ್ಷಣದಲ್ಲಿ ಕೈ ಕೈ ಹಿಡಿದು ಜಿಗಿದೋಡುವ ಕಲೆ ಕಲಿತದ್ದೇ ಹೀಗೆ. ಪಠ್ಯೇತರ ಚಟುವಟಿಕೆಗಳು ಬದುಕನ್ನು ರೂಪಿಸುವ, ಟೀಂವರ್ಕ್ ನಲ್ಲಿ ಹೊಂದಿ ನಡೆಯುವ, ಎಲ್ಲಾ ಕೆಲಸಗಳನ್ನು ಗೌರವಿಸುವ, ರೀತಿ ಕಲಿಸಿತು. ನಾಟಕದಲ್ಲೂ ಅಷ್ಟೇ, ಪಾತ್ರಗಳು ಹೊಂದಿ ನಡೆದರೇ ಛಂದವೂ ಚಂದವೂ. ರಂಗಸ್ಥಳದಲ್ಲಿ ಪಾತ್ರಪೋಷಣೆ ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ಮುಖ್ಯ ಚೌಕಿಯಲ್ಲಿ ಬೆರೆಸುವ ಬಣ್ಣಗಳು, ನಟ ನಟಿಯರ ನಡುವಿನ ಕೆಮಿಸ್ಟ್ರಿ. ಆಗೆಲ್ಲ ಇಡೀ ಊರಿನ ಮಕ್ಕಳೆಲ್ಲ ಈ ಶಾಲೆಯಲ್ಲೇ ಓದುವುದು. ಒಂದು ಮನೆಯ ಹುಡುಗಿ ಮಾತ್ರ ಆಂಗ್ಲ ಮಾಧ್ಯಮ ಶಾಲೆಗೆ ಊರಿನಿಂದ ಹೊರ ಹೋಗುತ್ತಿದ್ದ ನೆನಪು. ನಮಗೆ ಅವಳು ಅಸ್ಪೃಶ್ಯ ಳು. ಆದರೆ ನಮ್ಮ ಮಾತುಕತೆಯ ಕೇಂದ್ರ ಆಕೆಯಾಗಿರುತ್ತಿದ್ದಳು. ಇಂಗ್ಲೀಷಿನಲ್ಲೇ ಎಲ್ಲ ಪಾಠವಂತೆ!. ಅದು ನಮಗೆ ವಿಸ್ಮಯ, ಅದ್ಭುತ. “ಒಂದನೇ ಕ್ಲಾಸಿನಲ್ಲಿ ABC’D ಕಲಿಸ್ತಾರಂತೆ, ಇಂಗ್ಲೀಷ್ ಮಾತನಾಡುದಂತೆ, ವಿಜ್ಞಾನ, ಗಣಿತ,ಸಮಾಜ ಎಲ್ಲವೂ ಇಂಗ್ಲೀಷ್. ಅಲ್ಲಿ ಹೋದವರು ಮಾತನಾಡುವುದು ಹೇಗೆ ಗೊತ್ತುಂಟಾ..ಟುಸ್ ಟುಸ್ ವಾಸ್ ಶ್ ಸು !!” ಎಂದು ಚಿತ್ರ ವಿಚಿತ್ರವಾಗಿ ಬಾಯಿಯ ಚಲನೆ ಹೊಂದಿಸಿ ಮಾತಾಡಿ ಅಣಕಿಸಿ ಹೊಟ್ಟೆ ಬಿರಿಯೆ ನಗುತ್ತಿದ್ದೆವು. ನಮ್ಮಸಂಜೆಯ ಮನೆಯಾಟದಲ್ಲಿ ಒಂದು ಪಾತ್ರ ಅದೇ ಆಗಿರುತ್ತಿತ್ತು. ಆಗಿನ ಊರ ಶ್ರೀಮಂತರ ಮನೆಯ ಮಕ್ಕಳೂ ಸರಕಾರಿ ಶಾಲೆಯಲ್ಲೇ ಓದುವುದು. ಈ ಕಳೆ ಕೀಳುವ ಕೆಲಸಕ್ಕೆ ಒಂದಷ್ಟು ಬಡ್ತಿ ದೊರಕಿದ ನಂತರ ನಾವು ಆ ಮಕ್ಕಳ ಬಳಿ ಹೋಗಿ ” ಹೇ ಸಂದೀಪ ಸರಿ ಕಿತ್ತು ತೆಗೆ ಹುಲ್ಲು. ರಾಜೇಶ ಕಡ್ಡಿ, ಪೇಪರ್ ಹೆಕ್ಕು” ಎಂದು ಅವರಿಂದ ಚೂರು ಹೆಚ್ಚು ಕೆಲಸ ಮಾಡಿಸುವ ಖುಷಿ ಹೆಕ್ಕಿದ್ದೂ ಇದೆ. ಮುಗ್ದ ಮನಸ್ಸಿನ ದ್ವೇಷರಹಿತ ಕಾರ್ಯವದು. ಇಲ್ಲಿ ನೋಡಿ! ಓಡಿಕೊಂಡು ಬಂದಂತೆ ಬರುತ್ತಿದ್ದಾರಲ್ವಾ!, ಅವರೇ ಸುಮನ ಟೀಚರ್. ತುಸು ಸಿಟ್ಟಿನ ಮುಖ. ಇವರು ಐದನೆಯ ಕ್ಲಾಸಿಗೆ ಇಂಗ್ಲೀಷ್ ಪಾಠ ಮಾಡುವುದು. ನಮಗೆ ಇವರೆಂದರೆ ಬಹಳ ಭಯ. ಅವರ ಬಳಿ ಒಂದು ಹಳದಿ ಬಣ್ಣದ ಸೀರೆಯಿದೆ. ಅದನ್ನು ಉಟ್ಟು ಬಂದ ದಿನ ಅವರಿಗೆ ಹೆಚ್ಚು ಕೋಪ ಬರುತ್ತದೆ ಎಂಬುದು ನಮ್ಮಗಟ್ಟಿ ನಂಬಿಕೆ. ನಾವು ಬೆಳಗ್ಗೆ ಅವರು ಬರುವುದನ್ನೇ ಒಂದಷ್ಟು ಭಯದಿಂದ ಕಾಯುತ್ತಿದ್ದೆವು. ಒಬ್ಬರಿಗೆ ಅದೇ ಕೆಲಸ ವಹಿಸಿಕೊಟ್ಟಿದ್ದೆವು. ದೂರದಿಂದ ಅವರು ಓಡಿ ಬರುವಾಗ ಹಳದಿ ಬಣ್ಣ ಕಂಡರೆ ನಮ್ಮ ಭಯ ವಿಪರೀತ ಹೆಚ್ಚಿ ಕೂಡಲೇ ಗುಪ್ತ ಸಮಾಲೋಚನೆ ಆರಂಭಿಸುತ್ತಿದ್ದೆವು. ಯಾವ ಪಾಠದ ಪ್ರಶ್ನೆ ಕೇಳಬಹುದು. ಎಣ್ಣೆ ತಾಕಿದರೆ ಪೆಟ್ಟು ಹೆಚ್ಚು ನೋವಾಗುವುದಿಲ್ಲವಂತೆ. ಅಂಗೈಗಳನ್ನು ಎಣ್ಣೆ ಹಾಕಿದ ತಲೆಗೆ ತಿಕ್ಕಿ ತಿಕ್ಕಿ ಪರೀಕ್ಷಿಸುವುದು. ಕೆಲವು ಹುಡುಗಿಯರ ತಲೆತುಂಬ ಎಣ್ಣೆ. ನಮ್ಮ ಕ್ಲಾಸಿನಲ್ಲಿ ಮಮತಾ ಎಂಬ ಹುಡುಗಿಯ ತಲೆ ಕೂದಲಲ್ಲಿ ಬಹಳ ಎಣ್ಣೆ. ನಾವೆಲ್ಲ ಅವಳ ತಲೆಗೆ ನಮ್ಮ ಅಂಗೈ ತಿಕ್ಕಿ ಪೆಟ್ಟು ತಿನ್ನಲು ಮಾನಸಿಕವಾಗಿ ಸಿದ್ದಗೊಳ್ಳುತ್ತಿದ್ದೆವು. ಜೊತೆಗೆ ಪುಸ್ತಕ ತೆಗೆದು ವೇಗವಾಗಿ ಓದುವ ತಾಲೀಮು. ಹೀಗೆ ಬನ್ನಿ! ಇಲ್ಲಿದ್ದಾರೆ ನಮ್ಮ ಶಂಕಿ ಟೀಚರ್. ಅವರಲ್ಲಿ ಪೆಟ್ಟಿನ ಖಾರವೂ ಇದೆ, ಜೊತೆಗೆ ಪ್ರೀತಿಯ ಸಿಹಿಯೂ ಉಂಟು. ಅಗಲಹಣೆಯ ಮುಖ, ವಾತ್ಸಲ್ಯ ಅವರ ಕಣ್ಣಿನಲ್ಲಿ ಒಸರುತ್ತದೆ. ಸ್ವಲ್ಪ ವಯಸ್ಸಾಗಿದೆ. ದೊಡ್ಡ ಸೂಡಿ ಕಟ್ಟಿ ಹೂ ಮುಡಿದು ಬರುತ್ತಿದ್ದರು. ನಾವು ಅವರಿಗಾಗಿ ಹೂವಿನ ಮಾಲೆ ತರುವಲ್ಲಿ ಪೈಪೋಟಿ ನಡೆಸುತ್ತಿದ್ದೆವು. ನನ್ನ ಪಕ್ಕ ಕೂತುಕೊಳ್ಳುವ ಶಾಲಿನಿ ಮನೆಯಲ್ಲಿ ರಾಶಿ ಅಬ್ಬಲಿಗೆ. ಹಾಗೆ ಅವಳಿಗೆ ನಾನೆಂದರೆ ಮೆಚ್ಚು. ಆಗಾಗ ಮನೆಯಿಂದ ಚಿಕ್ಕ ಮಾಲೆ ಪಾಟೀ ಚೀಲದೊಳಗೆ ಹಾಕಿ ನನಗೆ ತಂದು ಕೊಡುತ್ತಿದ್ದಳು. ಕೆಲವಷ್ಟು ಸಲ ನನ್ನಜ್ಜಿ ಜಾಜಿ ಮಲ್ಲಿಗೆ ದಂಡೆಯನ್ನು ಕೊಡುತ್ತಿದ್ದಳು. ಶಾಲಿನಿ “ನೀನು ಮುಡಿ” ಎನ್ನುತ್ತಿದ್ದಳು. ಅವಳಿಗೆ ನನ್ನ ಉದ್ದದ ಎರಡು ಜಡೆ ಕಂಡರೆ ಇಷ್ಟ. ಆದರೆ ನಾನು ಕ್ಲಾಸಿನ ಹೊರಗೆ ಬಾಗಿಲ ಬಳಿ ಕೈಯಲ್ಲಿ ಹೂವನ್ನು ಹಿಡಿದು ಬಲು ಆಸೆಯಿಂದ ಶಂಕಿ ಟೀಚರ್ ಗೆ ಕೊಡಲು ಕಾಯುತ್ತಿದ್ದೆ. ನಮ್ಮ ಶಾಲೆಗೆ ಒಂದು ದಿನಪತ್ರಿಕೆಯೂ ಬರುತ್ತಿತ್ತು. ಅದನ್ನು ದಿನಕೊಬ್ಬರಂತೆ ಓದಿ ಮುಖ್ಯ ವಿಷಯಗಳನ್ನು ಬೋರ್ಡಿನಲ್ಲಿ ಕ್ರಮಪ್ರಕಾರ ಬರೆಯಬೇಕಿತ್ತು. ನಾವೆಲ್ಲ ಆಕಾಶವಾಣಿಯ ವಾರ್ತಾವಾಚಕರಿಗಿಂತಲೂ ಹೆಚ್ಚಿನ ಚೆಂದದಲ್ಲಿ ನಮ್ಮದೇ ಶೈಲಿಯಲ್ಲಿ ಓದುವುದು, ಕೆಲವೊಮ್ಮೆ ಹಿಂದಿನಿಂದ ಬಂದ ಟೀಚರ್ ಕೈಯಲ್ಲಿ ಪೆಟ್ಟು ತಿಂದು ನಮ್ಮ ಬೆಂಚ್ ಗೆ ಓಡುವುದೂ ಆಗಾಗ ಚಾಲ್ತಿಯಲ್ಲಿದ್ದ ವಿಷಯ. ಆಗ ನಾಲ್ಕನೆಯ ಎ ತರಗತಿಗೆ ರಾಘವ ಮೇಷ್ಟ್ರು , ಅವರು ಆಗಾಗ ಮಧ್ಯಾಹ್ನ ಎರಡೂ ತರಗತಿ ಸೇರಿಸಿ ಪಾಠ ಮಾಡುತ್ತಿದ್ದರು. ಜೊತೆಗೆ ಹಾಡು ಹಾಡುವಂತೆ ಪ್ರತಿಯೊಬ್ಬರಿಗೂ ತಾಕೀತು. ನನಗೆ ಅಂಜಿಕೆ,ನಾಚಿಕೆ. ಆದರೆ ಅಜ್ಜಿ ಹೇಳಿದ್ದಾಳೆ ದಂಡನಾಯಕಿಯಾಗಬೇಕು. ಆಗ ಒಂದು ಹಾಡು ಕಂಠಪಾಠ. ನನ್ನ ಕೆಲವು ಗೆಳತಿಯರೂ ಒಂದೊಂದು ಹಾಡು ಹಾಡುತ್ತಿದ್ದರು. ಈ ಒಂದೊಂದು ಹಾಡು ಎಂದರೆ ನಮಗೆ ಆ ವರ್ಷ ಪೂರ್ತಿಯಾಗಿ ಅದನ್ನು ಉಪಯೋಗಿಸಿ ಮುಂದಿನ ತರಗತಿಯಲ್ಲೂ ಹಾಡಲು ಹೇಳಿದರೆ ಅದೇ ಪದ್ಯ ಅಷ್ಟೇ ಚೆಂದದಲ್ಲಿ ಹಾಡುತ್ತಿದ್ದೆವು. ನನ್ನದು ಧರ್ಮಸೆರೆ ಚಿತ್ರದ ” ಕಂದಾ ಓ ನನ್ನ ಕಂದ..” ಎಂಬ ಹಾಡು. ನನಗೆ ಆ ಹಾಡಿನ ಮೇಲೆ ಎಂತಹ ಅಭಿಮಾನವೆಂದರೆ ಅಷ್ಟು ಉತ್ತಮವಾದ ಹಾಡು ಬೇರೊಂದಿಲ್ಲ. ನಾನು ಎದ್ದ ತಕ್ಷಣ ಎಲ್ಲ ಗಂಡು,ಹೆಣ್ಣೂ ಮಕ್ಕಳೂ “ಕಂದಾ..” ಎಂಬ ಆಲಾಪ ಶುರು ಮಾಡುತ್ತಿದ್ದರು. ಆದರೆ ಇದು ನನ್ನ ಒಬ್ಬಳದೇ ಸಮಸ್ಯೆಯಲ್ಲ. ಎಲ್ಲರ ಒಳಗೂ ಒಂದೊಂದು ಹಾಡಿನ ಮುದ್ರಿಕೆ ಅಚ್ಚಾಗಿ ಬಿಟ್ಟಿತ್ತು. ನನಗೆ ನನ್ನ ಈ ಹಾಡಿನ ವೃತ್ತದಿಂದ ಮೇಲೆದ್ದು ಹೊಸತೊಂದು ಹಾಡು ಹಾಡಬೇಕು ಎಂಬ ಯೋಚನೆ, ಹಠದಿಂದ ಬೇರೆ ಹಾಡನ್ನೂ ಕಲಿತಿದ್ದೆ. ಅದನ್ನು ಹಾಡಿ ಭೇಷ್ ಎನಿಸಿಕೊಳ್ಳಬೇಕು. ಈ ಹುಡುಗರ ” ಕಂದಾಆಆಅ” ಎಂಬ ಲೇವಡಿಯಿಂದ ಬಚಾವಾಗಬೇಕು. ನನಗೆ ಸಿಕ್ಕಿತು ಹೊಸ ಹಾಡು. ಹಾಡಲೂ ತಯಾರಾದೆ. ಹೊಸ ಹಾಡು. ಹಾಡಿನ ಸರದಿ ಆರಂಭ ಆಗುತ್ತಿದ್ದಂತೆ ಮನಸ್ಸಿನೊಳಗೆ ವೇಗವಾಗಿ,ನಿಧಾನವಾಗಿ ಶ್ರುತಿಬದ್ದವಾಗಿ ಹಾಡಿ ಅನುವಾದೆ. ಹೊಸದರ ಪುಳಕ. ನನ್ನ ಹೆಸರು ಬಂದಾಗ ಎದ್ದು ಮನದೊಳಗೆ ಮತ್ತೆ ಹೊಸ ಹಾಡು ಉರು ಹೊಡೆಯುತ್ತ ಎದುರು ಹೋದೆ. ಏಕ ಚಿತ್ತದಲ್ಲಿ ನಿಂತು ಶುರು ಮಾಡಿದರೆ ಕಂಠದಿಂದ ಮೈಕೊಡವಿ ಎದ್ದು ಹೊರಬಂದದ್ದು “ಕಂದಾ..ಓ ನನ್ನ..” ಇಂತಹ ಒಂದೆರಡು ಪ್ರಯತ್ಮ ಮತ್ತೆ ಮಾಡಿ ಕೊನೆಗೆ ನನ್ನ ಈ ಹಾಡಿನೊಂದಿಗೆ ಜೊತೆಯಾಗಿ ಇರುವ ಸಂಕಲ್ಪವನ್ನೇ ಗಟ್ಟಿ ಮಾಡಿದ್ದೆ. ಈಗಲೂ ನಮ್ಮ ಕ್ಲಾಸಿನ ಸಹಪಾಠಿ ಗಳು ಸಿಕ್ಕರೆ ಅವರು ಹಾಡುತ್ತಿದ್ದ ಹಾಡು ನೆನಪಾಗುತ್ತದೆ. ಅದು ಉಳಿದವರಿಗೂ ಕಂಠಪಾಠ. ಬೆಲ್ಲದ ಸವಿ. ನಮ್ಮ ಶಾಲೆಯಲ್ಲಿ ಆಗ ಫ್ಯಾನ್ ಗಳು ಇರಲಿಲ್ಲ. ಹಾಗಾಗಿ ಬೇಸಿಗೆ ಸಮಯದಲ್ಲಿ ಮಧ್ಯಾಹ್ನದ ತರಗತಿ ಸೆಖೆ. ಅದು ನಮಗೇನೂ ಆಗ ಭಾದೆ ಎಣಿಸುತ್ತಿರಲಿಲ್ಲ. ಮಾಸ್ಟರ್ರು ಮಾತ್ರ ಕೆಲವು ಸಲ ಶಾಲೆಯ ಹೊರಗೆ ಹಿಂಬದಿಯ ದೇಗುಲದ ತೋಪಿನಲ್ಲಿ ಪಾಠ ಮಾಡುತ್ತಿದ್ದರು.ಅಲ್ಲಿ ಹಳೆಯ ಹುಣಿಸೆ, ಮಾವು, ದೇವದಾರು ಮರಗಳಿದ್ದವು. ನಮಗದು ಬಹಳ ಮೋಜಿನ ತರಗತಿ. “ಸರ್, ಸಾರ್..ಇವತ್ತು ಕ್ಲಾಸ್ ಹೊರಗೆ ಮಾಡುವ. ಸಾರ್..ಅಲ್ಲಿ ಪಾಠ ಮಾಡಿ” ನಮ್ಮದು ಗೋಗರೆತ. ಅವರು ” ಆಯಿತು” ಎಂದದ್ದೇ ತಡ ಹುಡುಗರು ಅವರು ಕುಳಿತುಕೊಳ್ಳುವ ಕುರ್ಚಿ ಎತ್ತಿ ಹಿಡಿದು ಓಡುತ್ತಿದ್ದರು. ನಾವು ಬೇಗ ಓಡಿ ಮೊದಲು ಹುಣಿಸೆ ಹಣ್ಣು ಬಿದ್ದಿದೆಯಾ ಎಂದು ಹುಡುಕಾಡಿ ಹೆಕ್ಕುತ್ತಿದ್ದೆವು. ಸಿಕ್ಕಿದರೆ ಸ್ವಲ್ಪ ಪಾಟಿ ಚೀಲದಲ್ಲಿ ಅಡಗಿಸಿ, ನಂತರ ಸಿಗದವರಿಗೆ ತೋರಿಸಿ ಹಂಚಿ ತಿನ್ನುವ ಗಮ್ಮತ್ತು. ನಮ್ಮ ಮೇಸ್ಟರಿಗೆ ಮಾತ್ರ ಕುರ್ಚಿ. ನಾವು ಅಲ್ಲಿ
ಅಂಕಣ ಬರಹ ಅರಿವಿನ ನಾವೆಯ ಮೇಲೆ ಸುಖ ಪಯಣ… “Every human being lives in a perpetual state of insuffiency. No matter who you are or what you have achieved, you still want a little more than what you have right now…“ -Sadhguru (Inner Engineering) ಕೊರತೆಯ ಶಾಶ್ವತ ಸ್ಥಿತಿಯೊಂದು ನಮ್ಮೊಳಗೆ ಸದಾ ಜಾಗೃತ ಮತ್ತು ಜೀವಂತ ಇಲ್ಲದೆ ಹೋಗಿದ್ದಿದ್ದರೆ ನಾವೆಲ್ಲ ಬಹುಶಃ ಕೈಕಟ್ಟಿ ಮೂಲೆಹಿಡಿದುಬಿಡುತ್ತಿದ್ದೆವು ಅನಿಸುತ್ತದೆ. ನನಗಂತೂ ಬಲೇ ಸೋಜಿಗವೆನಿಸಿಬಿಡುತ್ತದೆ ಒಮ್ಮೊಮ್ಮೆ. ಅರೆ ನನಗ್ಯಾಕೆ ಸುಮ್ಮನಿರಲಾಗುವುದಿಲ್ಲ ನನ್ನ ಪಾಡಿಗೆ. ಎಲ್ಲರೂ ಮನೆ, ಗಂಡ , ಮಕ್ಕಳು, ನೌಕರಿ, ಸಂಬಳ, ಚಂದದ ಬಟ್ಟೆ, ಮದುವೆ ದಿಬ್ಬಣ…. ಅಂತೆಲ್ಲ ಖುಷಿ ಎನ್ನುವುದು ಕಾಲು ಮುರಿದುಕೊಂಡು ಅವರ ಕಾಲ ಬುಡದಲ್ಲೇ ಬಿದ್ದಿದೆ ಎನ್ನುವಷ್ಟು ನೆಮ್ಮದಿಯಾಗಿರುವಾಗ ನಾವಾದರೂ ಹೀಗೆಲ್ಲ ಮನಸಿನ ಹುಚ್ಚಿಗೆ ಬಲಿಯಾಗಿ ಕಣ್ತುಂಬ ನಿದ್ದೆ ಮತ್ತು ನೆಮ್ಮದಿಯನ್ನು ಕಳೆದುಕೊಂಡು ಪರಿತಪಿಸುತ್ತಿರುತ್ತೇವಲ್ಲ ಏಕೆ… ಒಂದು ಕವಿತೆಯೋ, ಒಂದು ಕತೆಯೋ ಅಥವಾ ಒಂದು ಸಣ್ಣ ಬರಹದ ತುಣುಕೋ ಈ ಬೆರಳುಗಳ ಕುಟ್ಟುವಿಕೆಯಿಂದ ಹುಟ್ಟಿಬಿಟ್ಟರೆ ಸಿಗುವ ಸಂತೋಷ ಇದೆಯಲ್ಲ ಇನ್ಯಾವುದರಲ್ಲೂ ಅದು ಸಿಗಲಾರದು ಎನಿಸಿಬಿಡುತ್ತದೆ. “ಈ ಓದು ಬರಹ ಅಂತೆಲ್ಲ ಏನೇನೋ ಮಾಡೋದು ಬಿಟ್ಟು ಮನೆ, ಮಕ್ಕಳು, ಸಂಸಾರ ಅಂತ ಜವಾಬ್ದಾರಿಯಿಂದ ಬದುಕೋದನ್ನ ಕಲಿ…” ಎನ್ನುವ ಈ ಮಾತನ್ನ ನನ್ನಮ್ಮ ಅದೆಷ್ಟು ಬಾರಿ ಹೇಳಿದ್ದಾರೋ… “ಅಲ್ಲ ನಿಮ್ಗೆ ಟೈಮ್ ಎಲ್ಲಿಂದ ಸಿಗುತ್ತೆ ಇದನ್ನೆಲ್ಲ ಮಾಡೋಕೆ… ಮೋಸ್ಟ್ಲಿ ನೀವು ಮನೇಲಿ ಬರಿ ಬರೆಯೋದೆ ಕೆಲ್ಸ ಮಾಡ್ತೀರೇನೋ ಅಲ್ವ… ನಮ್ಗಂತು ಹಾಗಲ್ಲಪ್ಪಾ… ಮನೆಗ್ಹೋದ್ರೆ ಎಪ್ಪತ್ತಾರು ಕೆಲ್ಸ… ಇಂಥವೆಲ್ಲ ಮಾಡೋಕೆ ಟೈಮೇ ಸಿಗಲ್ಲ ಗೊತ್ತಾ…” ಅಂತೆಲ್ಲ ಮಾತಾಡುವ ಗೆಳೆಯರು, ಸಹೋದ್ಯೋಗಿಗಳು… ಇವೆಲ್ಲ ಸುಳ್ಳೂ ಅಲ್ಲ. ಹಾಗಂತ ಪೂರ್ಣ ಸತ್ಯವೂ ಅಲ್ಲ. ಎಲ್ಲರ ತೃಪ್ತಿಗೂ ಕಾರಣ ಒಂದೇ ಆಗಿರಲು ಸಾಧ್ಯವಿಲ್ಲ. ಹಕ್ಕಿಗೆ ಹಾರಾಟದಲ್ಲಿ ಖುಷಿ, ಮೀನಿಗೆ ಈಜಾಟದಲ್ಲಿ ಖುಷಿ. ಹಾರುವುದು ಹಕ್ಕಿಗೆ ಸಹಜ ಕ್ರಿಯೆ, ಈಜುವುದು ಮೀನಿಗೆ ಸಹಜ ಕ್ರಿಯೆ. ಹಾಗಯೇ ತನ್ನ ಮೆದುಳು ಮತ್ತು ಬುದ್ಧಿಶಕ್ತಿಯಿಂದ ಭಿನ್ನವಾಗಿ ನಿಲ್ಲುವ ಮನುಷ್ಯನಿಗೆ ಹಲವಾರು ಆಸಕ್ತಿ ಮತ್ತು ಅಭಿರುಚಿಗಳು. ಅಂತೆಯೇ ಅವನ ತೃಪ್ತಿಯ ಕಾರಣಗಳೂ ಸಹ. ನನಗೂ ಒಂದು ಬರೆಹ ಹುಟ್ಟಿದ ಕ್ಷಣ ಸಿಗುವ ಆನಂದ ಮತ್ಯಾವುದರಲ್ಲೂ ಸಿಗುವುದಿಲ್ಲ. ಇನ್ನು ಸಮಯದ ವಿಚಾರಕ್ಕೆ ಬಂದರೆ ಒಂದು ದಿನದಲ್ಲಿ ನಿರಂತರ ಕೆಲವು ಘಂಟೆಗಳು ಒಟ್ಟಾಗಿ ಸಿಗುವುದಿಲ್ಲ. ಆದರೆ ಸಿಗುವ ಸಣ್ಣ ಸಣ್ಣ ಸಮಯವನ್ನು ಪೋಣಿಸಿಟ್ಟುಕೊಂಡು ಪ್ರೀತಿಯಿಂದ ಬರಹ ಕಟ್ಟುವುದೂ ಒಂದು ಸವಾಲು. ಆದರೆ ಅದೊಂದು ಸುಖವಾದ ಸವಾಲು. ಪ್ರತಿ ಬಾರಿಯೂ ಆ ಸವಾಲನ್ನು ಗೆದ್ದು ಬರೆಯುವಾಗ ಸಿಗುವ ಖುಷಿ ಅನನ್ಯ. ಹಾಗಾಗಿ ಸಮಯ ಸಿಗುವುದಿಲ್ಲ, ಸಮಯವಿಲ್ಲ ನನಗೆ ಎನ್ನುವುದು ಸಮಸ್ಯೆಯಾಗಿ ಇದುವರೆಗೂ ಕಾಡಿಯೇ ಇಲ್ಲ. ಹಾಡು ಹಸೆ ಸಂಗೀತ ನೃತ್ಯದಂತೆ ಬರೆಹವೂ ಒಂದು ಆಸಕ್ತಿಕರ ಕ್ಷೇತ್ರ. ಮತ್ತದು ಬಹಳವೇ ಪರಿಣಾಮಕಾರಿ ಕ್ಷೇತ್ರವೂ ಹೌದು. ಬರೆಹ ಎನ್ನುವುದು ನಮ್ಮೊಳಗಿನ ಗ್ರಹಿಕೆಯನ್ನು ಹೊರ ಬರುವಂತೆ ಮಾಡುತ್ತದೆ. ಅದು ಮತ್ತೊಬ್ಬರ ಮನದ ಭಾವಕ್ಕೆ ಸಂತೈಕೆಯಾಗಿಯೂ, ಅವರ ಮನದ ಮಾತಿಗೆ ದನಿಯಾಗಿಯೂ ಸಮಾಧಾನ ಕೊಡುತ್ತದೆ. ಓದು ನಮ್ಮನ್ನು ಪ್ರಬುದ್ಧ ವ್ಯಕ್ತಿಗಳನ್ನಾಗಿ ಬದಲಾಯಿಸುತ್ತದೆ, ನಮ್ಮ ಅಹಂಕಾರವನ್ನು ಕಳೆಯುತ್ತದೆ. ಭಾವಗಳ ಹೊರಹೊಮ್ಮುವಿಕೆಗೆ ಮಾಧ್ಯಮವಾಗುವ ಬರೆಹ ನಮ್ಮ ದುಗುಡದ ಮೋಡಗಳನ್ನು ಕರಗಿಸಿ ತಿಳಿ ನೀಲ ಆಗಸವನ್ನಾಗಿ ಮಾರ್ಪಾಟು ಮಾಡುತ್ತದೆ. ಬರಹ ನನ್ನ ಜೀವನದ ಭಾಗವಾದ ಮೇಲೆ, ನನ್ನ ವ್ಯಕ್ತಿತ್ವದಲ್ಲಾಗಿರುವ ಬದಲಾವಣೆಯನ್ನು ಗಮನಿಸುವಾಗ, ಹಾದು ಬರಹ ನಮ್ಮನ್ನು ಗಟ್ಟಿಯಾಗಿಸುತ್ತದೆ. ಎಂತಹ ಸಮಸ್ಯೆ ಬಂದರೂ ಧೈರ್ಯ ಮತ್ತು ತಿಳುವಳಿಕೆಯಿಂದ ಎದುರಿಸುವ ಆತ್ಮವಿಶ್ವಾಸವನ್ನು ತಂದುಕೊಡುತ್ತದೆ. ಬರೀ ಓದುವ ಹವ್ಯಾಸವನ್ನು ತಮ್ಮದಾಗಿಸಿಕೊಂಡ ಅದೆಷ್ಟೋ ಜನ ಇದ್ದಾರೆ. ಆದರೆ ಬರೆಹಗಾರನಿಗೆ ಮಾತ್ರ ಎರಡೆರಡು ಉಪಯೋಗ. ಒಂದು ಓದಿದ್ದು, ಮತ್ತೊಂದು ಬರೆದದ್ದು. ಯಾವ ಕಲೆಯೇ ಆಗಿರಲಿ ತನಗೆ ಬೇಕಾದವರಿಂದ ತನ್ನ ಕ್ಷೇತ್ರಕ್ಕೆ ಬೇಕಾದ ಸೇವೆಯನ್ನು ಪಡೆಯುತ್ತದೆ. ಬರೆಹ ಕಲಿತವರೆಲ್ಲ, ಬರೆಯುವ ಶಕ್ತಿ, ಸಾಮರ್ಥ್ಯವಿದ್ದವರೆಲ್ಲ ಬರೆಯುವುದು ಸಾಧ್ಯವಾಗುವುದಿಲ್ಲ. ಬಹಳಷ್ಟು ಸಾರಿ ಬರೆಹವೇ ಬರೆಹಗಾರನ ಕೈಲಿರುವುದಿಲ್ಲ. ಆದರೆ ಅದರ ಮೇಲೆ ತನ್ನ ಹಕ್ಕು ಚಲಾಯಿಸಲು ಹೊರಡುವುದು ಯಾರಿಗೇ ಇರಲಿ ಹರಿವಿಗೆ ವಿರುದ್ಧವಾಗಿ ಈಜುವ ಹಾಗೆ ದುಸ್ಸಾಹಸವೇ ಸರಿ. ಶಿಕ್ಷಕನನ್ನು ಚಿರಂತನ ವಿದ್ಯಾರ್ಥಿ ಎನ್ನುವ ಹಾಗೆ ಬರೆಹಗಾರ ಚಿರಂತನ ಓದುಗನಾಗಿರಬೇಕಾಗಿರುತ್ತದೆ. ಬರೆಹಗಾರ ಇತಿಹಾಸಕಾರನೂ ಆಗುತ್ತಾನೆ, ಕಾಲಜ್ಞಾನಿಯೂ ಆಗುತ್ತಾನೆ. ಅದಕ್ಕೇ ಅವನಿಗೆ ಎಷ್ಟೊಂದು ಮಾನ್ಯತೆ! ಮಾನ್ಯತೆಗಾಗಿ ಬರೆಯ ಹೊರಟರೆ ಬಹಳ ಬೇಗ ಎದುಸಿರು ಹೆಚ್ಚಿ, ಸುಸ್ತಾಗಿಬಿಡುತ್ತದೇನೋ. ಆದರೆ ಎಷ್ಟೇ ಅದು ಬೇಡ ಎನ್ನುವ ಪ್ರಜ್ಞಾವಂತಿಕೆ ಇದ್ದರೂ ಅದನ್ನು ಮೀರಿ ನಿರ್ಲಿಪ್ತತೆಯನ್ನು ಸಾಧಿಸಿಕೊಳ್ಳುವುದು ಬಹಳ ಕಷ್ಟ. ಅದು ನಮ್ಮನ್ನು ನಾವು ಮೀರುವುದು. ಆದರೆ ಅದು ಯಾರೇ ಆಗಿರಲಿ, ನಮ್ಮಲ್ಲಿ ಎಷ್ಟೇ ಇರಲಿ, ಏನೇ ಇರಲಿ, ಇದ್ದುದರಲ್ಲಿ ತೃಪ್ತಿ ಪಡದಿರುವ ಕೊರತೆಯ ಶಾಶ್ವತ ಸ್ಥಿತಿಯೊಂದು ನಮ್ಮಲ್ಲಿ ತಲ್ಲಣದ ಸುಳಿ ಸೃಷ್ಟಿಸಿ ತೃಪ್ತಿಯನ್ನು ಕಿತ್ತುಕೊಳ್ಳುತ್ತದೆ. ಸಾಧನೆಗಳು, ಪ್ರಶಸ್ತಿಗಳು, ಕೀರೀಟ ಏರಿ ನಿಂತ ತುರಾಯಿಗಳ ಸಂಖ್ಯೆ ಹೆಚ್ಚಿದಷ್ಟೂ ಈ ಅತೃಪ್ತಿಯೂ ದಿನೇ ದಿನೇ ಬೆಳೆಯುತ್ತಲೇ ಹೋಗುತ್ತದೆ. ಮತ್ತೆ ಅದರೊಂದಿಗೆ ಸಹಜವಾಗಿ ಬರುವ ಒತ್ತಡಕ್ಕೂ ಈಡಾಗಲೇ ಬೇಕು ಸಹ. ಇನ್ನಿದು ಸಾಕು ಎಂದು ಬುದ್ದಿ ಹೇಳಿದರೂ ನಮ್ಮ ಅತೃಪ್ತಿ ನಮ್ಮನ್ನು ಸುಮ್ಮನಿರಲು ಬಿಡುವುದಿಲ್ಲ. ಆದರೆ ಹಕ್ಕಿಗೆ ಹಾರುವಿಕೆ, ಮೀನಿಗೆ ಈಜುವಿಕೆ ಸಹಜವಾದಷ್ಟೇ ಬರಹಗಾರನಿಗೂ ಬರಹ ಸಹಜವಾಗಬೇಕು. ಹಾರುತ್ತದೆ ಎಂದು ಹಕ್ಕಿಗಾಗಲಿ, ಈಜುತ್ತದೆ ಎಂದು ಮೀನಿಗಾಗಲೀ ಯಾರಾದರೂ ಪ್ರಶಸ್ತಿ ಕೊಡುತ್ತಾರಾ?! ಹಾಗೇ ಬರೆಹಗಾರನಿಗೆ ಬರೆಹ ಸಹಜವಾಗಬೇಕು. ಮನುಷ್ಯ ತನ್ನ ಬುದ್ಧಿ ಮತ್ತು ದೇಹವನ್ನು ಅದರ ಸಹಜ ಶಕ್ತಿಯನ್ನು ಮೀರಿ ಪಳಗಿಸಿ ಬಳಸಬಲ್ಲ. ಅದಕ್ಕೆ ಒಂದು ಅಭಿನಂದನೆ ಸಲ್ಲಲೇ ಬೇಕು ಅವನಿಗೆ. ಆದರೆ ಅದು ಅವನ ಬಲಹೀನತೆಯಾಗಬಾರದು. ಅತೃಪ್ತಿಯನ್ನು ಒಂದು ಹಂತದಲ್ಲಿಟ್ಟು ನಮ್ಮ ಯಶಸ್ಸಿಗೆ ಮೆಟ್ಟಿಲಾಗಿಸಿಕೊಳ್ಳುವುದರಲ್ಲಿ ನಿಜವಾದ ಬುದ್ಧಿವಂತಿಕೆ ಇದೆ. ಅದಕ್ಕೆ ದಾಸರಾಗುವುದರಲ್ಲಿ ಅಲ್ಲ. ಅದೂ ಒಂದರ್ಥದಲ್ಲಿ ಸಾಧನೆಯೇ. “ಇಂದು ನಾ ಹಾಡಿದರೂ, ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?” -ಜಿ.ಎಸ್.ಶಿವರುದ್ರಪ್ಪ ಎನ್ನುವ ಜಿಎಸ್ಸೆಸ್ ರ “ಎದೆ ತುಂಬಿ ಹಾಡಿದೆನು” ಕವಿತೆಯ ಈ ಸಾಲುಗಳು ಯಾವಾಗಲೂ ನೆನೆದಾಗಲೊಮ್ಮೆ ಕಣ್ಮುಂದೆ ತೇಲಿ ಬರುತ್ತವೆ. ಅರಿವಿನ ನಾವೆಗೆ ಹತ್ತಿಸಿ ಸುಖವಾದ ಪ್ರಯಾಣಕ್ಕೆ ಹೊರಡಿಸುತ್ತವೆ. ********************************************** ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ನಿರ್ಮಲಾ ಶೆಟ್ಟರ್ ಕಥೆಯ ಕೇಂದ್ರ ಒಳಮನದಲ್ಲಿ ಬೇರುಬಿಟ್ಟರೂ ಅದರ ವ್ಯಾಪ್ತಿ ಜಗದಗಲ ಪರಿಚಯ: ನಿರ್ಮಲಾ ಶೆಟ್ಟರ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಧಾರವಾಡ ಜಿಲ್ಲೆಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಅತ್ಯುತ್ತಮ ಬೋಧನೆಯಿಂದ ತಾಲೂಕಾಮಟ್ಟದ ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಈ ವರೆಗೂ ‘ಬೆಳಕಿನೊಡನೆ ಪಯಣ’ ಮತ್ತು ‘ನಿನ್ನ ಧ್ಯಾನಿಸಿದ ಮೇಲೂ’ ಎನ್ನುವ ಎರಡು ಪುಸ್ತಕಗಳು ಪ್ರಕಟಗೊಂಡಿರುತ್ತವೆ. ಅದರಲ್ಲಿ ಒಂದು ಕಾವ್ಯಸಂಕಲನವಾದರೆ, ಇನ್ನೊಂದು ಗಜಲ್ ಸಂಕಲನವಾಗಿದೆ. ಸಧ್ಯ, ‘ಸರಹದ್ದುಗಳಿಲ್ಲದ ಭೂಮಿಯ ಕನಸು’ ಕಾವ್ಯಸಂಕಲನ ಬಿಡುಗಡೆಗೊಳ್ಳಲಿದೆ. ೨೦೧೭ರಲ್ಲಿ ಅನುಪಮಾ ನಿರಂಜನ ಕಥಾಬಹುಮಾನ, ೨೦೧೯ರ ಪ್ರಜಾವಾಣಿ ಸಂಕ್ರಾಂತಿ ಲಲಿತಪ್ರಬಂಧ ಬಹುಮಾನ ಪಡೆದಿರುತ್ತಾರೆ. ಕಥೆ ಮತ್ತು ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಉತ್ತರ ತುಸು ಕಷ್ಟ ಆದರೂ ಹೇಳಬೇಕೆಂದರೆ, ಹೇಳಲಾಗದ ನೋವುಗಳನ್ನು, ಬಿಚ್ಚಿಡಲಾಗದ ಗುಟ್ಟುಗಳನ್ನು ಹೇಳಲು ಕವಿತೆ ಮತ್ತು ಕಥೆ ಒಳ್ಳೆಯ ಮಾಧ್ಯಮ. ಎಲ್ಲ ನೋವುಗಳಿಗೆ ಧ್ವನಿಯಾಗಿ ಕಥೆಗಳನ್ನು ಮತ್ತು ಕವಿತೆಗಳನ್ನು ಬರೆಯುತ್ತೇನೆ. ಕಥೆ,ಕವಿತೆ ಹುಟ್ಟುವ ಕ್ಷಣ ಯಾವುದು? ಇಂಥದೇ ಘಳಿಗೆ ಅಥವಾ ಸಮಯ ಅದಕ್ಕಾಗಿ ನಿಗದಿಯಾಗಿರುವುದಿಲ್ಲ. ಒಮ್ಮೊಮ್ಮೆ ಕಾಡಿದ ಮತ್ತು ಕಾಡಿಸಿಕೊಂಡ ವಿಷಯ, ಘಟನೆಗಳು, ಚಿತ್ರಗಳು ಸರೋರಾತ್ರಿಯಲ್ಲಿ ಬರೆಯಲು ಹಚ್ಚುತ್ತವೆ. ನಿಮ್ಮ ಕಥೆ/ಕವಿತೆಯ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೆ-ಪದೆ ಕಾಡುವ ವಿಷಯ ಯಾವುದು? ಕವಿತೆ, ಕಥೆಗೆ ಇಂಥವೇ ವಸ್ತುವಾಗಬೇಕೆಂದು ನನಗನಿಸುವುದಿಲ್ಲ. ಯಾಕೆಂದರೆ, ಇಲ್ಲಿ ಎಲ್ಲವೂ ಮುಖ್ಯ ಆದರೆ, ಎದುರಿರುವ ವಸ್ತು,ವ್ಯಕ್ತಿ ನನ್ನೊಳಗೆ ಇಳಿದು ಬರೆಯಲು ಪ್ರೇರೇಪಿಸಿ ವಿಸ್ತಾರಗೊಳ್ಳುತ್ತಾ ಹೋದಂತೆ ಕಥೆ/ಕವಿತೆಯಾಗುತ್ತದೆ. ಕಥೆಯ ಕೇಂದ್ರ ಒಳಮನದಲ್ಲಿ ಬೇರುಬಿಟ್ಟರೂ ಅದರ ವ್ಯಾಪ್ತಿ ಜಗದಗಲ. ಪದೇ ಪದೇ ಕಾಡುವ ವಿಷಯ ಯಾವುದೇ ಆಗಿರಲಿ, ಅದು ಕೊನೆಗೆ ಕನೆಕ್ಟ್ ಆಗುವುದು ಮಾತ್ರ ಸಾಮಾಜಿಕ ಆಗುಹೋಗುಗಳೊಂದಿಗೆ ಎನ್ನುವುದಂತೂ ಸತ್ಯ.ಕಥೆ/ಕವಿತೆಯಲ್ಲಿ ಬಾಲ್ಯ, ಹರೆಯ ಇಣುಕಿದೆಯೆ?ಅರೆ, ಅವುಗಳಿಲ್ಲದ ಕಥೆ/ಕವಿತೆ ಬಾಲಂಗೋಚಿ ಇಲ್ಲದ ಪಟಗಳಂತೆ. ಆ ದಟ್ಟ ಅನುಭವ ಬೇರೆ-ಬೇರೆ ರೂಪಗಳಲ್ಲಿ ಬರವಣಿಗೆಯನ್ನು ಸಮೃದ್ಧಗೊಳಿಸುತ್ತವೆ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ರಾಜಕೀಯ ತನ್ನ ಮೂಲ ಆಶೋತ್ತರಗಳನ್ನು ಗಾಳಿಗೆ ತೂರಿದೆ. ಹಾಗಾಗಿ ನಮ್ಮಂಥವರು ಕುರುಡುಗಣ್ಣಲ್ಲಿ ಮೆಳ್ಳೆಗಣ್ಣು ಲೇಸು ಎಂಬಲ್ಲಿಗೆ ಬಂದು ತಲುಪಿದ್ದೇವೆ. ಇತ್ತೀಚೆಗಂತೂ ರಾಜಕೀಯ ಸನ್ನಿವೇಶ ಅಸಹ್ಯಕರ ಎನ್ನಿಸುವಷ್ಟು ಬೇಸರ ಹುಟ್ಟಿಸಿದೆ. ಧರ್ಮ ದೇವರ ವಿಷಯದಲ್ಲಿ ನಿಮ್ಮ ನಿಲುವೇನು? ಮಾನವತೆಯೆ ಧರ್ಮ. ಅದನ್ನು ಪ್ರತಿಯೊಬ್ಬರಲ್ಲಿ ಮೂಡಿಸಿ ಸಾಮಾಜಿಕ ಸ್ವಾಸ್ಥö್ಯವನ್ನು ಮತ್ತು ಸಾಮರಸ್ಯವನ್ನು ಉಂಟುಮಾಡುವ ಅರಿವೆ ದೇವರು.ಪ್ರಸ್ತುತ ಸಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತದೆ?ಮನುಷ್ಯನಲ್ಲಿರುವ ಸೃಜನಶೀಲತೆಯ ಸಂಕೇತವೆ ಆತನೊಳಗಿನ ಸಾಂಸ್ಕೃತಿಕ ಪ್ರಜ್ಞೆ. ಅದು ಅವನನ್ನು ಹೊಸ-ಹೊಸ ಅನ್ವೇಷಣೆಯತ್ತ ಚಲಿಸುವಂತೆ ಮಾಡುತ್ತದೆ. ಆ ಮುಖಾಂತರ ಸಾಮಾಜಿಕ ಶ್ರೀಮಂತಿಕೆಯನ್ನು ಕಂಡುಕೊಳ್ಳಲು ಸಾಧ್ಯ. ಆದರೆ, ಅಲ್ಲಿ ಜಾತಿ ಮತಗಳು ರಾಜ್ಯಬಾರ ನಡೆಸಿ ಎಲ್ಲವನ್ನು ಕುಂಠಿತಗೊಳಿಸುತ್ತಿದೆ. ಸಾಹಿತ್ಯವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವುರು? ಸಾಹಿತ್ಯ ಮತ್ತು ರಾಜಕಾರಣ ವಿಭಿನ್ನ ವಿಚಾರಗಳಿಂದ ಕೂಡಿವೆ. ಅಲ್ಲದೆ ಎರಡೂ ಬೇರೆ ಬೇರೆ ಕ್ಷೇತ್ರಗಳು. ಅವೆರಡು ಪೂರಕವಾಗಿರಬೇಕು. ಹಾಗಾದಾಗ ಮಾತ್ರ ಸಮಾಜದ ಬೇಡಿಕೆ ಹಾಗೂ ಸ್ವಸ್ಥತೆಯನ್ನು ಪೂರ್ಣಗೊಳಿಸಲು ಸಾಧ್ಯ. ಆದರೆ, ಇಂದಿನ ರಾಜಕಾರಣ ತನ್ನ ಹಸ್ತಕ್ಷೇಪವನ್ನು ಸಾಹಿತ್ಯವಲಯದಲ್ಲಿ ಯಾವ ಮಟ್ಟದಲ್ಲಿ ಮಾಡುತ್ತಿದೆ ಎಂದರೆ, ಸರಿಯಾದ ನ್ಯಾಯವನ್ನು ಸಾಹಿತ್ಯಕ್ಷೇತ್ರದಿಂದ ಸಮಾಜಕ್ಕೆ ಒದಗಿಸಲಾಗುತ್ತಿಲ್ಲ. ಇದರಿಂದ ಓದುಗರ ವಲಯವು ದಾರಿ ತಪ್ಪುತ್ತಿದೆ ಎಂದೆನಿಸುತ್ತಿದೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ? ದೇಶದ ಚಲನೆ ಎನ್ನುವುದು, ವಿಸ್ತಾರವಾದ ವಿಷಯ. ಕೇವಲ ಯಾವುದೋ ಒಂದು ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಅದನ್ನು ನಿರ್ಧರಿಸಲಾಗದು. ಆದಾಗ್ಯೂ ನಾವು ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ವಿಭಿನ್ನತೆಯಲ್ಲಿ ಏಕತೆಯನ್ನು ಕಂಡುಕೊಳ್ಳುವ ನಮ್ಮ ನಾಡು-ನುಡಿಯ ಹರವು ದೊಡ್ಡದು. ಅದು ದೇಶದಲ್ಲಿಯೇ ತನ್ನನ್ನು ಗುರುತಿಸಿಕೊಂಡಿದೆ. ಅಲ್ಲದೇ ಸಾಹಿತ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಹೀಗೆ ಇನ್ನೂ ಅನೇಕ ವಿಚಾರಗಳಲ್ಲಿ ನೀಡಿದ ಕೊಡುಗೆ ಅಪಾರ. ಅದರಿಂದ ದೇಶವು ತನ್ನನ್ನು ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ, ದೇಶವನ್ನು ಸಮೃದ್ಧವಾಗಿ ಮುನ್ನೆಡೆಸುತ್ತಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಸಾಹಿತ್ಯದ ಯಾವುದೇ ಪ್ರಕಾರದ ರಚನೆಗೆ ಸಂಬಂಧಿಸಿದ ವಿಷಯ ಬಂದಿತೆಂದರೆ, ಅಲ್ಲಿ ಪ್ರಥಮ ಆದ್ಯತೆ ರಚನಾಕಾರನ ಓದಾಗಿರಬೇಕು.ಇದರಿಂದ ಸತ್ವಯುತ ಬರವಣಿಗೆ ಸಾಧ್ಯ. ಮತ್ತೆ ಅಂತಹ ಬರವಣಿಗೆ ಬರಹಗಾರ ಹಾಗೂ ಓದುಗನ ನಡುವೆ ಸಂವಾದಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಒಂದು ಓದುಗವಲಯವೇ ನಿರ್ಮಾಣ ಆಗುತ್ತದೆ. ಅಂತಹ ವಾತಾವರಣವು ರಾಜಕೀಯ, ದಾರ್ಮಿಕ, ಸಂಕುಚಿತತೆಯನ್ನು ದೂರಮಾಡಿ ಸಾಹಿತ್ಯವನ್ನು ವಿಶ್ವವ್ಯಾಪಿಯನ್ನಾಗಿಸುತ್ತದೆ. ಕನ್ನಡ ಹಾಗೂ ಆಂಗ್ಲಭಾಷಾಸಾಹಿತ್ಯದಲ್ಲಿ ನಿಮ್ಮ ಇಷ್ಟದ ಮತ್ತು ನಿಮ್ಮನ್ನು ಕಾಡಿದ ಸಾಹಿತಿ ಯಾರು? ಕನ್ನಡದಲ್ಲಿ ಇಷ್ಟವಾದ ಕವಿಗಳೆಂದರೆ, ಪ್ರತಿಭಾ ನಂದಕುಮಾರ ಹಾಗೂ ವಾಸುದೇವ ನಾಡಿಗ. ನನ್ನದು ಹಿಂದಿ ಸಾಹಿತ್ಯದ ಓದಾಗಿರುವುದರಿಂದ, ನಿರಾಲಾ ಮತ್ತು ಮಹಾದೇವಿ ವರ್ಮಾ ನನ್ನ ನೆಚ್ಚಿನ ಕವಿಗಳು. ಕತೆಯ ವಿಚಾರಕ್ಕೆ ಬಂದರೆ, ಲಂಕೇಶ, ಕೇಶವರೆಡ್ಡಿ ಹಂದ್ರಾಳ, ಸುನಂದಾ ಕಡಮೆ ಅನೇಕ ಹಿರಿಯರ ಕತೆಗಳು ನನಗಿಷ್ಟ. ಇತ್ತೀಚೆಗೆ ಓದಿದ ಕೃತಿಗಳಾವುವು? ಶಶಿಕಲಾ ವಸ್ತ್ರದ ರವರ ಆತ್ಮಕತೆಯಾದ, ‘ಇದ್ದೆನಯ್ಯಾ ಇಲ್ಲದಂತೆ’ ಮತ್ತುಲಕ್ಷ್ಮಣ ಕೊಡಸೆ ಅವರು ಬರೆದ ‘ನಾರಾಯಣ ಗುರುಗಳ ಆಪ್ತ ಪದ್ಮನಾಭನ್ ಪಲ್ಪು’ ಇತ್ತೀಚೆಗೆ ಓದಿದ ಪುಸ್ತಕಗಳು. ನಿಮಗೆ ಇಷ್ಟವಾದ ಕೆಲಸಗಳಾವುವು? ಓದುವುದು, ಬರೆಯುವುದು. ನಿಮಗೆ ಇಷ್ಟವಾದ ಸ್ಥಳ ಯಾವುದು? ಪ್ರಕ್ರತಿಯ ಯಾವುದಾದರೂ ಸ್ಥಳವಿರಲಿ, ಇಷ್ಟವಾಗುತ್ತದೆ. ವಿಶೇಷವಾಗಿ ಲಕ್ಷ್ಮೀಶ್ವರದ ಸೋಮನಾಥ ದೇವಸ್ಥಾನದ ಪ್ರಾಂಗಣ. ನಿಮ್ಮ ಪ್ರೀತಿಯ, ತುಂಬಾ ಇಷ್ಟಪಡುವ ಸಿನಿಮಾ ಯಾವುದು? ಗುರು-ಶಿಷ್ಯರು ನೀವು ಮರೆಯಲಾರದ ಘಟನೆ ಯಾವುದು? ಸಹೋದರನ ಅಕಾಲಿಕ ಸಾವು ಮರೆಯಲಾರದ ಘಟನೆ. ಬಹುಷಃ ಬದುಕಿನ ಕೊನೆಯವರೆಗೂ ಅವನನ್ನು ಯಾರಾರಲ್ಲೋ ಹುಡುಕುತ್ತಿರುತ್ತೇನೆ.ಇನ್ನು ಕೆಲ ಹೇಳಲೇಬೇಕಾದ ಸಂಗತಿಗಳಿದ್ದರೆ, ಹೇಳಿ…ಯಾರೋ ಗೊತ್ತಿರದ, ಪರಿಚಯವಿರದ ವ್ಯಕ್ತಿಗೆ ನೋವಾಗುವುದನ್ನು ಕಂಡರೆ, ಸಹಿಸಲಾಗುವುದಿಲ್ಲ. ಬಹುಷಃ ಅದೇ ನನ್ನೊಳಗಿನ ಮಾನವತೆ ಅನಿಸುತ್ತದೆ. ಹಾಗಾಗಿ ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು, ಸುಂದರವಾಗಿಸಬಹುದು ಎಂದು ನಂಬಿರುವವಳು ನಾನು. ಆದರೆ, ಮಾನವನಿಂದ ಮಾನವಪ್ರೀತಿ ಸಾಧ್ಯವಾಗದಷ್ಟು ನಾಗರೀಕತೆಯ ಹಮ್ಮಿನಲ್ಲಿರುವ ನಾವು ತುಸುವಾದರೂ ಮಾನವರಾಗಬೇಕಾದ ತುರ್ತಿನಲ್ಲಿದ್ದೇವೆ. ನಡೆಯಂತೆ ನುಡಿಯಿರದ, ನುಡಿದಂತೆ ನಡೆಯದ ವಾತಾವರಣವು ಕೊನೆಯಾಗುವುದನ್ನು ಯಾವಾಗಲೂ ಹಂಬಲಿಸುತ್ತೇನೆ. ******************************************************************* ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ









