ಅಂಕಣ ಬರಹ ಮುಗಿಲ ಪ್ರೇಮದಿ ಕಳೆಗಟ್ಟಿತು ಇಳೆ ನನ್ನ ಅರಳಿದ ಬೊಗಸೆಯೊಳಗೆ ಅವಳು ಸುರಿದ ಹಣದಲ್ಲಿ ಮಡಚಿದ ಹತ್ತು, ಐದು, ಎರಡು, ಒಂದರ ನೋಟುಗಳು. ಅಘ್ರಾಣಿಸಿದರೆ ಅವಳ ಬೆವರು ಹಾಗೂ ಹಸುಗಳ ಉಸಿರನ ಪರಿಮಳ ಬೆರೆತುಬಂದಂತೆ. ಆ ದಿನ ಬೆಳಗ್ಗೆ ನನ್ನಜ್ಜಿ ನನ್ನನ್ನು ಹತ್ತಿರ ಕರೆದು ಕೂರಿಸಿಕೊಂಡಳು “ಬಾಳೀ, ನಿನ್ನ ಶಾಲೆಯಲ್ಲಿ ಇವತ್ತು ಗಮ್ಮತ್ತು ಅಲ್ವಾ. ನೀನು ಕಲಾವಿದೆ. ತಗೋ 100 ರೂಪಾಯಿ. ಇವತ್ತು ಹೊಸ ದಿರಿಸು ತಗೋ. ನಿನ್ನಿಷ್ಟದ್ದು. ಅದನ್ನು ಹಾಕಿಕೊಂಡು ಹೋಗು. ನೋಡು,ನಿನ್ನ ಖುಷಿ ಮತ್ತಷ್ಟು ಜಾಸ್ತಿಯಾಗಲಿ.” ಆಗೆಲ್ಲ ಹೊಸ ವಸ್ತ್ರ ಬರುವುದು ವರ್ಷಕ್ಕೊಮ್ಮೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ. ಈಗ ಸಿಕ್ಕಿದ್ದು ಬೋನಸ್. ಅದು ನನ್ನಜ್ಜಿ ಹಾಲು ಮಾರಿ ಬಂದ ಹಣದಲ್ಲಿ ಉಳಿತಾಯ ಮಾಡಿದ ಕಾಸು. ಅವಳ ಕಣ್ಣಲ್ಲಿ ನನಗಾಗಿ ಬೆಳಗುವ ದೀಪಾವಳಿ. ಅಮ್ರಪಾಲಿ ನಾಟಕದ ಗುಂಗಿನಲ್ಲಿ ನನ್ನ ಶಾಲಾ ದಿನಗಳು ಚಿಗುರುತ್ತಲೇ ಇದ್ದವು. ಶಾಲೆಯ ಪಕ್ಕದಲ್ಲಿ ಕೆರೆ- ದಡ ಆಟಕ್ಕೆ ಮಕ್ಕಳು ಕೈಕೈ ಬೆಸೆದು ನಿಂತಂತೆ ,ರೈಲಿನ ಬೋಗಿಗಳ ಕೊಂಡಿ ಹೆಣೆದಂತೆ ಒಂದೇ ಬಣ್ಣ ಬಳಿದುಕೊಂಡ ಉದ್ದನೆಯ ಸಾಲು ಸಾಕು ಮನೆಗಳು. ಕೊಂಡಿ ಸಿಕ್ಕಿಸಿದಂತೆ ನಡುನಡುವೆ ಹದಿಹರೆಯದ ಪೇರಳೆ ಗಿಡಗಳು. ಒಂದೊಂದು ಮನೆಯ ಕಿಟಕಿ, ಬಾಗಿಲಿಗೆ ಮನಸ್ಸು ಆನಿಸಿದರೆ ಮೆಲ್ಲಮೆಲ್ಲನೆ ಒಂದೊಂದು ಬಗೆಯ, ರುಚಿಯ ಕಥೆಗಳು ಆಕಳಿಕೆ ಮುರಿದು ತೆರೆದುಕೊಳ್ಳುತ್ತವೆ. ಅಲ್ಲಿ ರಂಗಿನೊಡನೆ ಸ್ಪರ್ಧಿಸುವ ಹೂವುಗಳು, ಹೂಗಳನ್ನು ನೇವರಿಸುವ ಹುಡುಗಿಯರು. ಸಂಜೆಯ ಹೊತ್ತು ಮನೆಗಳ ಹಿಂದೆ ಇರುವ ಖಾಲಿ ಜಾಗದಲ್ಲಿ ಹುಡುಗರು, ಗಂಡಸರು ವಾಲಿಬಾಲ್ ಆಟ ಆಡಿದರೆ ಹುಡುಗಿಯರು ಸೇರಿಕೊಂಡು ಕಾಲೇಜಿನಲ್ಲಿ ನಡೆದ ಪ್ರಸಂಗಗಳು, ಹುಡುಗರ ಕೀಟಲೆ, ತಮ್ಮ ಪ್ರತಿಕ್ರಿಯೆ, ಹೀಗೆ ರಾಶಿ ಮಾತುಗಳನ್ನು ಪೇರಿಸಿ ಕೆನ್ನೆ ಕೆಂಪಾಗಿಸಿ ಮನಸ್ಸಿಗೆ ಯಾವು ಯಾವುದೋ ಹೊಸ ಹೊಸ ಕುಡಿಮೀಸೆಯ ಮುಖಗಳನ್ನು ತೂಗು ಹಾಕುತ್ತಿದ್ದರು. ಒಂದು ವಾರ ಬಿಟ್ಟು ನೋಡಿದರೆ ಆ ಮಾತಿನ ಒಂದಿಷ್ಟೂ ಗುರುತು ಸಿಗದಂತೆ ನವನವೀನ ಪ್ರಸಂಗಗಳು, ಜುಳುಜುಳು ನಗೆ, ಗಲಗಲ ಮಾತು ಹರಿಯುತ್ತಿತ್ತು. ಅದೆಷ್ಟು ಹುಡುಗಿಯರು ಮಂಜುಳ, ಕವಿತಾ, ಮೀನಾ,ಸರೋಜ,ಮಲ್ಲಮ್ಮ ಎಲ್ಲರೂ ಆ ಸರಕಾರಿ ವಸತಿಗೃಹಗಳ ಜೀವ ಕುಸುಮಗಳು. ಅವರ ಅಣ್ಣ, ಅಪ್ಪ, ಚಿಕ್ಕಪ್ಪ, ಮಾವ ಹೀಗೆ ಮನೆಯ ಸದಸ್ಯರೊಬ್ಬರು ಸರಕಾರಿ ಹುದ್ದೆಯಲ್ಲಿದ್ದ ಕಾರಣ ಆ ಸರಪಳಿ ಸಿಕ್ಕಿಸಿ ನಿಂತ ಮನೆಗಳಲ್ಲಿ ಇವರಿದ್ದಾರೆ. ನಮ್ಮೂರು ಅವರಿಗೆ ಸಾಕುತಾಯಿ. ಅಲ್ಲೇ ಆ ದೊಡ್ಡ ಬೇಲಿಯ ಗಡಿ ದಾಟಿರಸ್ತೆಗೆ ಬಂದು ನಿಂತರೆ ಆಗಷ್ಟೆ ಸಣ್ಣ ಹಾಡಿಯಂತಿದ್ದ ಜಾಗ ಸಮತಟ್ಟಾಗಿ ಗೆರೆಮೂಡಿಸಿ ಮೂರು ಮನೆಗಳು ತಲೆಎತ್ತಿ ಕೂತಿದೆ. ಅದರಲ್ಲೊಂದು ನಮ್ಮಮನೆ. ಹತ್ತರ ಪಬ್ಲಿಕ್ ಪರೀಕ್ಷೆಯ ಗೇಟು ದಾಟಿ ಬಾಲ್ಯದ ಭಾವಗಳನ್ನು ಕಳಚಿ ಪೀಚಲು ಕನಸಿನ ಜೋಳಿಗೆ ಬಗಲಲ್ಲಿಟ್ಟು ಕಿರಿಯ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಕಣ್ಣಿಗೆ ಕಾಣುವ ಬಣ್ಣಗಳಿಗೆ ನೂರೆಂಟು ತಡೆಗೋಡೆಗಳು. ಆದರೂ ಮೂಲೆ ಮೂಲೆಯ ಕಚಗುಳಿ ಮುಚ್ಚಟೆಯಾಗಿ ಎದೆಗಾನಿಸಿ ಸುಳ್ಳುಪೊಳ್ಳು ನಗೆಯಿಂದ ರಂಗೋಲಿ ಅರಳುತ್ತಿತ್ತು. ಚುಕ್ಕಿಚುಕ್ಕಿಗಳ ಸೇರ್ಪಡೆಯಿಂದ ವಿಸ್ತರಿಸುತ್ತಿತ್ತು. ಈ ಚುಕ್ಕಿಗಳದ್ದೇ ರಾಜ್ಯ ಅಲ್ಲಿ. ಆ ಸಮವಸ್ತ್ರತೊಟ್ಟ ಮನೆಗಳ ಸಾಲಿನಲ್ಲಿತ್ತು. ಅಲ್ಲಿಗೆ ಸಂಜೆಯ ಸಮಯ ಮೆಲ್ಲಡಿಯಿಡುತ್ತ ಹೋಗುವುದು. ಸುಮ್ಮಸುಮ್ಮನೆ ಹೋಗುತ್ತಿರಲಿಲ್ಲ. ಹಾಗೆ ಹೋಗುವುದಕ್ಕೂ ಬಲವಾದ ಕಾರಣ ವೂ ಇತ್ತು. ಆ ಸಮಯ ನನ್ನಜ್ಜ ಅಜ್ಜಿ ಒಂದಷ್ಟು ದನಗಳನ್ನು ಸಾಕುತ್ತಿದ್ದರು. ಆ ದನಗಳು ನಮ್ಮಮನೆಯ ಆರ್ಥಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದವು. ಸಂಜೆ ಕಾಲೇಜಿನಿಂದ ಬಂದ ನನಗೆ ಈ ಬೇಲಿಯೊಳಗಿನ ಮನೆಮನೆಗಳಿಗೆ ಹಾಲು ಸರಬರಾಜು ಮಾಡುವ ಕೆಲಸ. ಇದು ಎರಡು ಮೂರು ಟ್ರಿಪ್ ಆಗುವುದೂ ಇದೆ. ಎರಡೂ ಕೈಗಳಲ್ಲಿ ಹಾಲು ತುಂಬಿದ ತಂಬಿಗೆಯ ಬಾಯಿಗೆ ನನ್ನ ಬೆರಳುಗಳ ಮುಚ್ಚಳ ಸೇರಿಸಿ ಹೋಗುತ್ತಿದ್ದೆ. ಮನೆ ಮನೆಯ ಬಾಗಿಲಲ್ಲಿ ನಿಂತು ” ಹಾಲೂ..” ಎಂದು ಮನೆಯವರನ್ನು ಕೂಗುವುದು. ಅಮ್ಮನಂತವರು,ಅಕ್ಕನಂತವರು ಮಾತ್ರವಲ್ಲ ಅಪರೂಪಕ್ಕೆ ಹುಲಿಕಣ್ಣಿನ ಗಂಡುಗಳೂ ಆ ಮನೆಯ ಗುಹೆಗಳಲ್ಲಿ ಕಂಡಿದ್ದೂ ಇದೆ. ಇಲ್ಲಿಯೇ ಬಿಳೀ ಬಣ್ಣದ ದಪ್ಪ ದೇಹದ ನಳಿನಿ ಆಂಟಿ ನನಗೆ ಬದುಕಿನ ಮೊದಲ ವ್ಯಾನಿಟಿ ಬ್ಯಾಗ್ ಕೊಟ್ಟು ನಕ್ಕಿದ್ದರು. ಎಂತಹ ಖುಷಿಯದು. ಗಾಢ ನೀಲಿ ಬಣ್ಣದ ಜಂಭದ ಚೀಲ. ಅದುವರೆಗೆ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಅದನ್ನು ಎದೆಗಾನಿಸಿಕೊಂಡು ಹೋಗುತ್ತಿದ್ದೆ. ಈಗ ಪುಸ್ತಕಗಳಿಗೂ ವಿಶ್ರಾಂತಿಗೆ, ಪಯಣಕ್ಕೊಂದು ಗೂಡು. ಚಲಿಸುವ ಮನೆ ಸಿಕ್ಕಿತು. ಈ ಬಾಗಿಲು ತಟ್ಟುವ ಕಾಯಕ ಮುಗಿಸಿದ ನಂತರ ಸ್ವಲ್ಪ ಹೊತ್ತು ಹೆಣ್ಮಕ್ಕಳ ಮೀಟಿಂಗ್. ನನಗಿಂತ ಒಂದು, ಎರಡು ವರ್ಷ ಕಿರಿಯರು, ಹಿರಿಯರು ಪಾಲ್ಗೊಳ್ಳುವ ಸಭೆಯದು. ಪ್ರತಿಯೊಂದು ಕುಸುಮ ಕುಸುಮಿಸುವ ಪರಿ ಭಿನ್ನ. ಇಳೆ ಒರತೆ ತುಂಬಿಕೊಳ್ಳುವ ಕಾಲ. ನಮ್ಮ ಶಾಲೆ ಕಾಲೇಜುಗಳೂ ಬೇರೆಬೇರೆ. ನಾವು ಈ ಹುಡುಗರು ವಾಲಿಬಾಲ್ ಆಡುವ ಜಾಗದ ಒಂದು ಮೂಲೆಯಿಂದ ಆಚೀಚೆ ಹೋಗುವ ಪ್ರಸಂಗಗಳೂ ಇದ್ದವು. ಆಗೆಲ್ಲ ಅವ್ಯಕ್ತ ಕಂಪನಕ್ಕೆ ಕಳೆಗಟ್ಟುವ ಎಳೆ ಮನಗಳು ನಮ್ಮವು. ತಲೆಎತ್ತಿ ಅಲ್ಲಿರುವ ಗಂಡುಹುಡುಗರಿಗೆ ದೃಷ್ಟಿ ಕೂಡಿಸುವ ದಾರ್ಷ್ಟ್ಯವು ಆ ನಾಜೂಕು ಹುಡುಗಿಯರಿಗೆ ಇರಲಿಲ್ಲ. ಆ ಹುಡುಗರೂ ಜೋರಾಗಿ ದೂರು ಕೊಡುವ ಮಟ್ಟದ ಕೀಟಲೆ ಮಾಡಿದ್ದೂ ಇಲ್ಲ. ಈ ನಮ್ಮಹುಡುಗಿಯರ ಬೈಠಕ್ ನಲ್ಲಿ ಒಂದು ವಿಶೇಷತೆಯಿತ್ತು. ನಮ್ಮ ಜೊತೆ ಬಿಂದು ಎಂಬ ಒಬ್ಬ ಹುಡುಗನಿದ್ದ. ರಂಗಕ್ಕೆ ಎಳೆದೊಯ್ದರೆ ಕೃಷ್ಣನ ಪಾತ್ರಕ್ಕೆ ಹೊಂದುವಂತಹ ಮುಖ. ನಸುಗಪ್ಪು ಬಣ್ಣ. ನಗುತುಂಬಿದ ಕಣ್ಣುಗಳು. ನಮ್ಮೆಲ್ಲರಿಗೂ ಆತ್ಮೀಯ ಸ್ನೇಹಿತ. ನಮ್ಮ ಹೆಚ್ಚಿನ ಮಾತುಗಳಿಗೆ ನಮ್ಮ ಭಾವ ತುಡಿತಗಳೊಂದಿಗೆ ಒಂದಾಗುವ, ಸಲಹೆ ನೀಡುವ ಗೆಳೆಯ. ಬಲು ಚಿಕ್ಕವನಿರುವಾಗ ಪೋಲಿಯೊದಿಂದ ಒಂದು ಕಾಲು ತುಸು ಎಳೆದಂತೆ ನಡೆದಾಡುತ್ತಿದ್ದ. ಹುಡುಗರ ಆಟಕ್ಕೆ ಅವನು ನಿಷೇದಿಸಲ್ಪಟ್ಟಿದ್ದ. ಆ ಸಮಯದಲ್ಲಿ ನಾನು ಗುಂಪಿನ ಒಳ್ಳೆಯ ಕೇಳುಗಳು. ಜೊತೆಗೆ ಉಳಿದವರಿಗಿಂತ ಚೂರು ಕಮ್ಮಿ ಕಥೆಗಳು ನನ್ನಲ್ಲಿ ಶೇಖರಿಸಲ್ಪಟ್ಡಿದ್ದವು. ಅಲ್ಲದೆ ಕಥೆಯ ಅಂಚಿಗೆ ಬಂದು ಕೂರುವ ಭಾವಗಳೂ ಎದೆಕಡಲಿನಿಂದ ನೆಗೆದು ಹೊರಬರಲು ಹವಣಿಸಿದರೂ ತುಟಿಗಳಿಗೆ ಅದೃಶ್ಯ ಹೊಲಿಗೆ ಹಾಕಿದಂತಾಗಿ ಮೌನದ ನಾದಕ್ಕೆ ಮನ ಜೋಡಿಸಿಕೊಂಡಿದ್ದೆ. ಭಾವನ ತಮ್ಮನೊಂದಿಗಿನ ಒಲವಿನ ಮಾತು, ಕದ್ದು ಕೊಟ್ಟ ಮುತ್ತು, ಸಿಹಿ ಮಾತನಾಡಿ ಬೇರೆ ಹೆಣ್ಣಿನ ಚಿತ್ರ ತೋರಿಸಿದ ಅತ್ತಿಗೆಯ ತಮ್ಮ, ಕಾಲೇಜಿಗೆ ಬಂದ ವಿದೇಶಿ ವಿದ್ಯಾರ್ಥಿ ಅವನೊಂದಿಗೆ ಬದಲಾಯಿಸಿಕೊಂಡ ಪುಸ್ತಕ, ಚಾಕಲೇಟು, ಬಸ್ ನಿಲ್ದಾಣದವರೆಗಿನ ಜೊತೆ ಹೆಜ್ಜೆಗಳು ಹೀಗೇ ಏನೇನೋ ಹಂಚಿಕೆಗಳು ಮಾತಿಗೆ ಕಂಪು ಬೆರೆಸುತ್ತಿದ್ದವು. ಮೊದಲ ವರ್ಷದ ಪಿ.ಯು.ಸಿ ಇರುವಾಗ ಮತ್ತೆ ಬಂದಿತು ವಾರ್ಷಿಕೋತ್ಸವ. ಸಂಭ್ರಮವೋ ಸಂಭ್ರಮ. ನಾನೀಗ ಹಿರಿಯ ವಿದ್ಯಾರ್ಥಿನಿಯರ ಪಟ್ಡಿಯಲ್ಲಿದ್ದೆ. “ಸ್ಕೂಲ್ ಡೇ” ಅಂದರೆ ನಾಟಕವಿದೆ. ನಾಟಕ ಇದ್ದ ಮೇಲೆ ನಾನೂ ಇರಲೇಬೇಕು. ಮನಸ್ಸು ತಕತಕ ಕುಣಿಯುತ್ತಿತ್ತು. “ಬೌಮಾಸುರ” ಎಂಬ ನಾಟಕ. ಬೌಮಾಸುರ ದ್ವಿತೀಯ ಪಿ.ಯು. ವಿದ್ಯಾರ್ಥಿನಿ. ಎತ್ತರಕ್ಕಿದ್ದಳು. ಅವಳ ಸ್ವರವೇ ತುಸು ಗಡಸು. ನನಗೆ ಪ್ರಥ್ವೀದೇವಿ ಪಾತ್ರ. ಸೌಮ್ಯ ಪಾತ್ರ, ಪುಟ್ಟ ದೇಹದ ನಾನು ಭೂತಾಯಿ. ಬೌಮಾಸುರನ ಮಾತೆ. ರಿಹರ್ಸಲ್ ಗಳು ಆರಂಭವಾದವು. ಮೇಘರಾಜನಿಗೆ ಪ್ರಥ್ವೀದೇವಿಯಲ್ಲಿ ಪ್ರೀತಿ ಅಂಕುರಿಸಿ ಜಲಲ ಝಲಲ ಜಲಧಾರೆ. ನೆಲ.ಮುಗಿಲಿನ ಸಂಗಮಕೆ ಜನಿಸಿದ ಅಸುರ ಭೌಮಾಸುರ. ಆಗೆಲ್ಲ ಕಾಲೇಜಿನ ಕಾರಿಡಾರ್ ನಲ್ಲಿ ನಾನು ನಡೆಯುತ್ತಿದ್ದರೆ ನನ್ನ ನಡೆಯ ಶೈಲಿಯೇ ಬದಲಾದಂತೆ ಮನಸ್ಸಿಗೆ ಅನಿಸುತ್ತಿತ್ತು. ನಾನು ಬೇ..ರೆಯೇ, ಇವರೆಲ್ಲರಿಗಿಂತ ಭಿನ್ನ, ನಾನು ಪ್ರಥ್ವೀದೇವಿ. ಕನಸಿನಲ್ಲೇ ನನ್ನ ಇರುವಿಕೆ. ಊಟ, ತಿಂಡಿ, ಓದು ಎಲ್ಲವೂ. ಒಂದು ಸುಂದರ ರಾಗ, ಪಾತ್ರಾನುರಾಗ ನನ್ನ ಜೀವವನ್ನು ತೊನೆದಾಡಿಸುತ್ತಿತ್ತು. ವಾರ್ಷಿಕೋತ್ಸವದ ದಿನ ನಮಗೆ ಸಂಜೆ ಆರುಗಂಟೆಗೆ ಬರುವಂತೆ ಸೂಚನೆ ನೀಡಲಾಗಿತ್ತು. ಹಗಲಲ್ಲೂ ಸಣ್ಣ ಹೆದರಿಕೆಯ ಜೊತೆ ಬೆಸೆದುಕೊಂಡ ದೊಡ್ಡ ಸಂತಸದಲ್ಲಿ ಆಡುತ್ತಿದ್ದೆ. ಮನೆಯಲ್ಲಿ ಯಾರಾದರೂ ಕುಡಿಯಲು ನೀರು ತರಲು ಹೇಳಿದರೂ ಹೋದವಳು ಅಲ್ಲಲ್ಲೇ ಸ್ತಬ್ದಳಾಗಿ ಮನಸ್ಸಿನಲ್ಲಿ ಪ್ರಥ್ವಿದೇವಿಯ ಮಾತುಗಳೇ ಕುಣಿದು, ಮುಖ, ಕಣ್ಣಿನಲ್ಲಿ ಅದರ ಪ್ರತಿಫಲನ. ಮನೆಯವರು ಹತ್ತಿರ ಬಂದು ಎಚ್ಚರಿಸಬೇಕು. ಈ ಸಂದರ್ಭದಲ್ಲಿಯೇ, ನನ್ನ ಉಡುಪಿಗಾಗಿ, ಅಜ್ಜಿ ಮಡಿಲು ಬಸಿದು ಕೊಟ್ಟದ್ದು ನೂರು ರುಪಾಯಿ. ಅದುವರೆಗೂ ನಾನು ಅಂಗಡಿಗೆ ಹೋಗಿ ಡ್ರೆಸ್ ತಗೊಂಡವಳಲ್ಲ. ಏನಿದ್ದರೂ ಮನೆಯಲ್ಲಿ ತಂದದ್ದು, ಇಲ್ಲವಾದರೆ ಬಾಬಣ್ಣನ ಅಂಗಡಿಯಲ್ಲಿ ಮಾವನವರ ಹಳೆಯ ಪ್ಯಾಂಟ್ ಕೊಟ್ಟು ಅದರಲ್ಲಿ ಸ್ಕರ್ಟ್ ಅವರ ಷರ್ಟ್ ನಲ್ಲಿ ಬ್ಲೌಸ್ ಹೊಲಿಸುವುದು ವಾಡಿಕೆ. ” ಅಮ್ಮಾ ಯಾರು ತಂದು ಕೊಡ್ತಾರೆ..”ಅಂತ ನಾನಂದರೆ,”ನೀನೇ ಪ್ರಭಾವತಿ ಒಟ್ಟಿಗೆ ಹೋಗಿ ತಾ”ಎಂದಳು. ನಮ್ಮ ಮನೆಯ ಹಿಂದೆ ಗೆಳತಿ ಪ್ರಭಾ ಮನೆ. ಓಡಿದೆ. ಅವಳು ಅವಳಮ್ಮನ ಹತ್ತಿರ ಒಪ್ಪಿಗೆ ಪಡೆದು ಇಬ್ಬರೂ ಸೇರಿ ರೆಡೆಮೇಡ್ ಬಟ್ಟೆ ಅಂಗಡಿಗೆ ಹೋದೆವು. ರಾಶಿ ಹಾಕಿದ ಡ್ರೆಸ್ಸಗಳ ನಡುವೆ ಆರಿಸುವುದು ಹೇಗೆ? ಆಗೆಲ್ಲ ಟ್ರಾಯಲ್ ರೂಮ್ ಗೆ ಹೋಗಿ ದಿರಿಸಿನ ಅಳತೆ ಸರಿಯಾಗಿದೆಯೇ ಎಂದು ಪರೀಕ್ಷೆ ಮಾಡಿ ಕೊಳ್ಳಲು ಸಾಧ್ಯ ಎಂಬುದು ನಮ್ಮ ಅರಿವಿನ ಸರಹದ್ದಿಗಿಂತಲೂ ಬಹಳ ದೂರದ ಮಾತು. ಒಟ್ಟಾರೆ ಗೊಂದಲ. ಕೊನೆಗೂ ಕಡುಕೆಂಪು ಬಣ್ಣದ ಚೂಡೀದಾರ ಆರಿಸಿ ಬಹಳ ಸಂಭ್ರಮದಿಂದ ಮನೆಗೆ ಬಂದೆವು. ಮನೆಗೆ ಬಂದು ಹಾಕಿದರೆ ನಾನು, ಪ್ರಭಾವತಿ ಇಬ್ಬರೂ ಅದರ ಬಸಿರಲ್ಲಿ ಆಶ್ರಯ ಪಡೆಯಬಹುದು. ಅಷ್ಟು ಅಗಲದ ಕುರ್ತಾ, ಕೆಳಗೆ ದೊಗಳೆ ಪ್ಯಾಂಟ್. ಬೆರ್ಚಪ್ಪನಿಗೆ ಅಂಗಿ ತೊಡಿಸಿದಂತೆ ಕಾಣುತ್ತಿದ್ದೆ. ಆದರೇನು ಮಾಡುವುದು ಸಂಜೆಯಾಗಿದೆ. ಒಳಲೋಕದಲ್ಲಿ ಪ್ರಥ್ವೀದೇವಿಯ ಗಲಾಟೆ ನಡೆಯುತ್ತಲೇ ಇದೆ. ಗೆಳತಿಯರಿಗೆಲ್ಲ ಬರಲು ಒತ್ತಾಯಿಸಿ ಆಗಿದೆ. “ಬಿಂದು” ನನ್ನ ಜೊತೆಗೆ ನನ್ನ ನಾಟಕದ ಕೆಲವುಸಾಮಾಗ್ರಿಗಳ ಚೀಲ ಹಿಡಿದು ತಯಾರಾದ. ಅವನಿಗೆ ನನಗಿಂತ ಹೆಚ್ಚಿನ ಉತ್ಸಾಹ, ತಳಮಳ. ಗಳಿಗೆ ಗಳಿಗೆಗೆ ನೆನಪಿಸುತ್ತಿದ್ದ. ಚೆಂದ ಮಾಡು ಮಾರಾಯ್ತೀ, ಚೆಂದ ಮಾಡು. ಎಲ್ಲರಿಗಿಂತ ನಿನ್ನ ಆಕ್ಟ್ ಚೆಂದ ಆಗಬೇಕು. ಅಜ್ಜಿಯ ಕಾಲಿಗೆ ವಂದಿಸಿ ನಾವು ಹೊರಟೆವು. ಮಂದ ಕತ್ತಲು ಇಳಿಯುತ್ತಿತ್ತು. ಹೊಸ ಚೂಡೀದಾರದ ಪರಿಮಳ ಹೊಸತನದ ನಶೆ ಬೀರುತ್ತಿತ್ತು. “ತಡವಾಯಿತು.. ಬೇಗ ಬಿಂದೂ”ಎಂದು ವೇಗದ ಹೆಜ್ಜೆ ಹಾಕುತ್ತಿದ್ದೆ. ಮುಖ್ಯರಸ್ತೆಗೆ ಇನ್ನೇನು ತಲುಪಿದೆವು ಅನ್ನುವಾಗ ” ಫಟ್” ಎಂದಿತು. ನಾನು ಥಟ್ಟನೆ ನಿಂತೆ. ಪಾದಗಳು ಒಂದಕ್ಕೊಂದು ಜೋಡಿಸಿದಂತೆ ಇಟ್ಟಿದ್ದೆ. ದೀನಳಾಗಿ ಸ್ನೇಹಿತನ ಮುಖ ನೋಡಿದೆ. ಅವನಿಗೇನೂ ಅರ್ಥವಾಗ ” ಎಂತಾಯ್ತು, ಹೋಗುವ ಮಾರಾಯ್ತಿ” ಎನ್ನುತ್ತಾನೆ. ಎಲ್ಲಿಗೆ ಹೋಗುವುದು. ಹೆಜ್ಜೆ ಮುಂದಿಡುವುದು ಸಾಧ್ಯವೇ ಇಲ್ಲ. ಚೂಡಿದಾರದ ಪ್ಯಾಂಟಿನ ಲಾಡಿ ಒಳಗೇ ತುಂಡಾಗಿ ಬಿಟ್ಟಿದೆ. ಹಾಗೇ ನಿಲ್ಲುವ ಹಾಗಿಲ್ಲ. ಮುಂದೆ ಹೋಗುವ ಹಾಗೂ ಇಲ್ಲ.ಪ್ಯಾಂಟ್ ಕೆಳಗೆ ಬೀಳುವ ಹೆದರಿಕೆ. ವಿಪರೀತ ಭಯದಲ್ಲಿ ಕಣ್ಣು ತುಂಬಿತ್ತು. ” ಬಿಂದೂ..” ಏನು ಹೇಳುವುದು..ಸರಿಯಾಗಿ ಹೇಳಲೂ ಆಗದೇ “ಪ್ಯಾಂಟ್ ತುಂಡಾಯಿತು” “ಬೇಗ ಬೇಗ ನಡೀ ಕಾಲೇಜಿಗೆ ಎಂದ. ನನ್ನ ಸಂಕಟ ಹೆಚ್ಚುತ್ತಿತ್ತು. ಹೊಟ್ಟೆ ನೋವಿನಿಂದ ನರಳುವವರ ಹಾಗೆ ಪ್ಯಾಂಟ್ ಬೀಳದಂತೆ ಹೊಟ್ಟೆ ಹಿಡಿದುಕೊಂಡೆ. ಆದರೆ ನಡೆಯುವುದು ಕಷ್ಟ. ಊರೆಲ್ಲ ನನ್ನನ್ನೇ ನೋಡುವುದು ಎಂಬ ಭಾವದಿಂದ ನಾಚಿಕೆ,ಅವಮಾನದ ಸಂಕಟದಿಂದ ಬಿಕ್ಕಳಿಸತೊಡಗಿದೆ. “ಎಂತಾಯ್ತ..ಎಂತಾಯ್ತಾ” ಕೇಳುತ್ತಿದ್ “ನಡೆಯಲು ಆಗುವುದಿಲ್ಲ” ಎಂದೆ. ಸುತ್ತ ನೋಡಿದ. ಅಲ್ಲಿ ಮೂಲೆಯಲ್ಲಿ ಪಾಳು ಬಿದ್ದ ಚಿಕ್ಕ ಅಂಗಡಿಯಂತಹ ಮನೆಯಿತ್ತು. ಆದರೆ ಅದು ಮುಖ್ಯರಸ್ತೆಯ ಬಳಿಯಲ್ಲೇ.” ಬಾರಾ..ಅಲ್ಲಿ ನಾನು ಅಡ್ಡ ನಿಲ್ತೇನೆ. ನೀನು ಏನಾದರೂ ಸರಿ ಮಾಡು”. ಎಂದ. ಅರೆ ಜಾರಿದ ಡ್ರೆಸ್ ಕುರ್ತಾದ ಮೇಲಿನಿಂದ ಮುಷ್ಠಿಯಲ್ಲಿ ಹಿಡಿದಂತೆ ಹಿಡಿದು
ಅಂಕಣ ಬರಹ ಒಂದು ಹಾವಿನ ಕಥೆ ಮತ್ತು ನಾವು ಕೆಲವು ಒತ್ತಡಗಳು ಹುಟ್ಟಿಕೊಳ್ಳುತ್ತವೆ. ಎಂಥದೋ ಅನಿವಾರ್ಯತೆ ಕಾಡುತ್ತದೆ. ಮಾಡಬೇಕೆಂದುಕೊಂಡದ್ದನ್ನು ಮಾಡಲಾಗುತ್ತಿಲ್ಲ ಎನ್ನುವ ಚಡಪಡಿಕೆ, ನೋವು, ಹತಾಶೆ… ಬೇಕಾದವರನ್ನು ಮನಸಿಗೆ ಹತ್ತಿರವಾದವರನ್ನು ನಾವಾಗೇ ಹಚ್ಚಿಕೊಂಡವರನ್ನು ಎದೆಗೆ ತಬ್ಬುವ ಮನಸಿದ್ದಾಗಲೂ ದೂರ ನಿಲ್ಲಬೇಕಾದ ಸಂಯಮದ ಪ೫ರೀಕ್ಷೆಗೆ ತಯಾರಾಗಬೇಕಾಗಿ ಬರುವ ಪರಿಸ್ಥಿತಿಯನ್ನು ಧ್ವನಿ ತೆಗೆಯದೇ ಬಯ್ದುಕೊಳ್ಳುತ್ತಾ ಒಳಗೊಳಗೇ ಹಟಕ್ಕೆ ಬೀಳುತ್ತೇವೆ. ಅದು ನಮ್ಮ ಮೇಲಿನ ನಮ್ಮ ಹಟ. ಚೌಕಟ್ಟನ್ನು ದಾಟಿದರೆ ನಮಗೆ ನಾವು ದಕ್ಕಿಬಿಡುತ್ತೇವೆಂದು ನಮಗೆ ಗೊತ್ತು. ಆದರೆ ನಮಗೆ ಅದಕ್ಕೆ ಬೇಕಾಗುವ ಒಂದು ಸಣ್ಣ ಸಾಹಸ ಮಾಡುವುದು ಬೇಕಿಲ್ಲ. ಯಾಕಿದ್ದಾತು ಸುಖಾಸುಮ್ಮನೆ ಉಸಾಬರಿ! ಇಂಥ ಮನೋಭಾವವೇ ನಮ್ಮನ್ನು ಆಳಿಬಿಡುತ್ತದೆ. ಅದರಲ್ಲೂ ನಮ್ಮನ್ನು ಹೆದರಿಸಿ ನಿಲ್ಲುವವರು ನಮ್ಮವರೇ ಆದಾಗ ಅವರನ್ನು ಎದುರಿಸುವುದು ಮತ್ತೊಂದೇ ಬಗೆಯ ಸಂಕಟ, ಸಂಕಷ್ಟ. ನನಗೊಂದು ಕತೆ ನೆನಪಾಗುತ್ತದೆ. ಒಮ್ಮೆ ಒಬ್ಬ ಸಾಧು ದಾರಿಯಲ್ಲಿ ಹೋಗುತ್ತಿರುತ್ತಾನೆ. ಅವನನ್ನು ಕಂಡ ಸಮೀಪದ ಊರಿನ ವ್ಯಕ್ತಿಯೊಬ್ಬ ಒಂದು ಕತೆ ಹೇಳಲು ಶುರು ಮಾಡುತ್ತಾನೆ. ಇಲ್ಲೊಂದು ಹಾವಿದೆ, ಆ ಹಾವು ಈ ದಾರಿಯಲ್ಲಿ ಓಡಾಡೋ ಜನರನ್ನ ಕಚ್ಚಿ ಸಾಯಿಸ್ತಿದೆ. ಸಾಧುಗಳೇ ನೀವೇ ಏನಾದ್ರು ಮಾಡಿ ಆ ಹಾವಿಗೆ ಬುದ್ಧಿ ಕಲಿಸ್ಬೇಕು ಅಂತ ಕೇಳ್ಕೊತಾನೆ ಕೊನೆಗೆ. ನಂತ್ರ ಅಲ್ಲಿಂದ ಹೊರಟು ಹೋಗ್ತಾನೆ. ಆಮೇಲೆ ಆ ಸಾಧು ಹಾವಿನ ಬಳಿ ಹೋಗ್ತಾನೆ. ಹಾವು ಸಾಧುವನ್ನೂ ನೋಡಿ ಬುಸುಗುಡುತ್ತದೆ. ಆಗ ಸಾಧು ಅಲ್ಲಾ ನಿನಗೇನಾದ್ರು ಬುದ್ಧಿಗಿದ್ದಿ ಇದೆಯಾ ಇಲ್ವಾ… ಯಾಕ್ ನೀನು ಜನರಿಗೆ ತೊಂದ್ರೆ ಕೊಡ್ತಿದೀಯಾ? ಅದೆಲ್ಲ ತಪ್ಪು ತಾನೇ… ಪಾಪ ಕಣೋ ಬಿಟ್ಬಿಡೋ ಅದನ್ನೆಲ್ಲಾ ಅಂತ ಉಪದೇಶ ಮಾಡ್ತಾನೆ. ಇದರಿಂದ ಮನಃಪರಿವರ್ತನೆಗೆ ಒಳಗಾದ ಹಾವು ತಾನೂ ಸಾಧುವಾಗಿಬಿಡ್ತದೆ. ಸಾಧು ತನ್ನ ದಾರಿ ಹಿಡಿದು ಹೊರಟು ಹೋಗ್ತಾನೆ. ಅಂದಿನಿಂದ ಶುರು ಜನರ ಉಪಟಳ! ತನ್ನ ಪಾಡಿಗೆ ತಾನಿರೋ ಪಾಪದ ಸಾಧು ಹಾವನ್ನ ಮನ ಬಂದ ಹಾಗೆ ಹೊಡೀತಾರೆ, ಬಡೀತಾರೆ, ಕಲ್ಲು ಎಸೀತಾರೆ, ಕೋಲಿನಿಂದ ತಿವೀತಾರೆ… ಒಟ್ನಲ್ಲಿ ಹಣ್ಗಾಯಿ ನೀರ್ಗಾಯಿ ಮಾಡ್ತಾರೆ. ಆದ್ರೆ ಸಾಧುವಾಗಿಬಿಟ್ಟಿದ್ದ ಹಾವು ಮಾತ್ರ ಸುಮ್ಮನೇ ಒದೆ ತಿನ್ನುತ್ತಾ ಸಾಯುವ ಹಾಗಾಗಿಬಿಡ್ತದೆ. ಅದೇ ಮಾರ್ಗವಾಗಿ ಮತ್ತೆ ಅದೇ ಸಾಧು ಬರ್ತಾನೆ. ಹಾವಿನ ಸ್ಥಿತಿ ಕಂಡು ಅವನಿಗೆ ಮರುಕ ಹುಟ್ತದೆ. ಅದನ್ನ ಕರುಣೆಯಿಂದ ಎತ್ತಿಕೊಂಡು ಔಷಧೋಪಚಾರ ಮಾಡ್ತಾನೆ. ಆಮೇಲೆ ಕೇಳ್ತಾನೆ ಯಾಕೋ ಈ ಸ್ಥಿತಿ ನಿಂಗೆ ಅಂತ. ಆಗ ಹಾವು ಹೇಳ್ತದೆ ನೀವೇ ತಾನೆ ಹೇಳಿದ್ದು ನಾನು ಯಾರನ್ನೂ ಕಚ್ಬಾರ್ದು ಅಂತ, ಅದಕ್ಕೆ ನಾನು ಕಚ್ಚೋದನ್ನೇ ಬಿಟ್ಬಿಟ್ಟೆ. ಆದರ ಪ್ರತಿಫಲವೇ ಇದು. ನಾನು ಸುಮ್ನಿರೋದನ್ನ ಕಂಡು ಜನ ಹತ್ತಿರ ಬಂದ್ರು. ನನ್ನನ್ನ ವಿನಾಕಾರಣ ಹೊಡೆದುವಹಿಂಸೆ ಮಾಡಿದ್ರು. ಆದ್ರೂ ನಾನವರಿಗೆ ಏನೂ ಮಾಡ್ಲಿಲ್ಲ ಅನ್ನುತ್ತೆ. ಇದನ್ನು ಕೇಳಿದ ಸಾಧುವಿಗೆ ಅಯ್ಯೋ ಪಾಪ ಅನ್ಸತ್ತೆ. ಮತ್ತೆ “ಅಲ್ಲೋ ಹಾವೇ ನಾನು ನಿನಗೆ ಕಚ್ಬೇಡ, ಜನ್ರನ್ನ ಕೊಲ್ಬೇಡ ಅಂತ ಹೇಳಿದ್ನೇ ಹೊರತು, ಬುಸುಗುಟ್ಟಿ ಹೆದರಿಸ್ಬೇಡ ಅಂತ ಹೇಳಿರಲಿಲ್ಲ ತಾನೇ. ನೀನು ನಿನ್ನನ್ನ ರಕ್ಷಿಸಿಕೊಳ್ಳಲಿಕ್ಕೆ ಬುಸುಗುಟ್ಟಿ ಹೆದರಿಸಿದ್ದರೆ ಸಾಕಿತ್ತು ಅಲ್ವ… ಯಾರೂ ಹತ್ರ ಬರ್ತಿರಲಿಲ್ಲ ತಾನೇ…” ಎನ್ನುತ್ತಾರೆ. ಆಗ ಹಾವಿಗೆ ತನ್ನ ತಪ್ಪಿನ ಅರಿವಾಗ್ತದೆ. ತಾನು ಬುಸುಗುಟ್ಟಿ ಜನರಿಂದ ಪಾರಾಗಬೇಕಿತ್ತು ಮತ್ತು ಯಾರನ್ನೂ ಕಚ್ಚದೆ ಒಳ್ಳೆಯವನೂ ಆಗಬೇಕಿತ್ತು ಅಂತ. ಈ ಕತೆ ನನಗೆ ಬಹಳ ಸಾರಿ ನೆನಪಾಗ್ತಿರ್ತದೆ. ಮತ್ತೆ ಬಹಳಷ್ಟು ಪರಿಸ್ಥಿತಿಯಲ್ಲಿ ನನಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆ ದಾರಿ ತೋರಿಸುತ್ತದೆ. ನಾವು ಯಾರನ್ನೇ ಆಗಲಿ, ಯಾವ ಪರಿಸ್ಥಿತಿಯಲ್ಲೇ ಆಗಲಿ ಎದುರಿಸಲು ಅಂಜಿ ಅವರು ನಮ್ಮ ವಿಷಯದಲ್ಲಿ ಅಡ್ವಾಂಟೇಜ್ ತೆಗೆದುಕೊಳ್ಳಲು ಯಾಕಾದ್ರು ಬಿಡಬೇಕು… ನಂತರ ಅವರು ಶೋಶಿಸುವಾಗ ಸುಮ್ಮನೇ ಯಾಕೆ ನಲುಗಬೇಕು… ಅದಕ್ಕೆ ಬದಲಾಗಿ ನಮ್ಮ ಅಭಿಮಾನ ಅಸ್ಮಿತೆಗೆ ಪೆಟ್ಟಾಗದಂತೆ ಒಂದು ನಿರುಪದ್ರವಿ ಗಟ್ಟಿ ದನಿಯೊಂದನ್ನು ಹೊರಹಾಕುವುದರಿಂದ ಎದುರಿನವರಿಗೆ ಕನಿಷ್ಟ ನಾವು ನಮ್ಮ ಆತ್ಮಾಭಿಮಾನಕ್ಕೆ ಪೆಟ್ಟು ಬೀಳುವಂತಾದರೆ ಸುಮ್ಮನಿರಲಾರೆವು ಎನ್ನುವ ಮೆಸೇಜನ್ನು ಅವರಿಗೆ ತಲುಪಿಸುವ ಕೆಲಸವನ್ನಾದರೂ ಮಾಡಲೇ ಬೇಕು. ಆದರೆ ಅದು ಅಷ್ಟು ಸುಲಭವಲ್ಲ. ಎದುರಿಗಿರುವವರು ಬೇರೆಯವರಾದರೆ ಕತ್ತಿ ಹಿಡಿಯುವುದು ಸುಲಭ. ಆದರೆ ನಿಂತಿರುವವರು ನಮ್ಮವರೇ ಆದಾಗ?! ಇದು ಕಷ್ಟಾತಿಕಷ್ಟ. ಆದರೆ ಖಂಡಿತಾ ಸಾಧ್ಯ. ಅಸಾಧ್ಯವಂತೂ ಅಲ್ಲ. ನಿರಾಶರಾಗದೆ ಪ್ರಯತ್ನಿಸಿದರೆ ನಮ್ಮನ್ನು ನಾವು ದೃಢಗೊಳಿಸಿಕೊಳ್ಳುವುದೂ ಸಾಧ್ಯವಾಗ್ತದೆ. ಆದರೆ ಸುಮ್ಮನೆ ಇರುವುದನ್ನು ಅದೆಷ್ಟು ವ್ಯವಸ್ಥಿತವಾಗಿ ಹೇಳಿಕೊಟ್ಟುಬಿಡುತ್ತೇವೆ ನಾವು! ನನ್ನ ಗೆಳತಿಯೊಬ್ಬರು ಇದ್ದಾರೆ. ಯಾರು ಏನೇ ಅನ್ನಲಿ ತಿರುಗಿ ಮಾತನಾಡುವುದು ಅವರಿಗೆ ಬಹಳಾ ಕಷ್ಟ. ಅವರೇ ಹೇಳುವ ಹಾಗೆ, ನಾಲ್ಕು ಜನ ಗಂಡುಮಕ್ಕಳಿದ್ದ ದೊಡ್ಡ ಮನೆಗೆ ಸೊಸೆಯಾಗಿ ಬಂದ ಅವರು, ಎಲ್ಲಿ ಒಂದು ಮಾತಾಡಿದರೆ ಬೇರೆಯವರಿಗೆ ನೋವಾಗುತ್ತದೋ ಎಂದು ಯೋಚಿಸುತ್ತಲೇ ಹಲ್ಲುಕಚ್ಚಿ ಸಹಿಸುತ್ತಾ ಬದುಕಿದ್ದು ಎನ್ನುತ್ತಾರೆ. ಎಷ್ಟೆಲ್ಲಾ ಮಾಡಿ ಬಡಿಸಿ ಉಣಿಸಿ ಕೊನೆಗೆ ಒಂದು ಕೆಟ್ಟ ಮಾತಾಡಿಬಿಟ್ಟರೆ ಮಾಡಿದ ಕೆಲಸವೆಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದಲ್ಲ ಎಂದು ಸಹಿಸುವುದನ್ನು ಕಲಿತೆ ಎನ್ನುತ್ತಾರೆ. ಇಂಥ ಪಾಠಗಳು ನಮಗೆ ತವರಿನಿಂದಲೇ ಸಿಗುತ್ತಿತ್ತು ಎಂತಲೂ ಹೇಳುವುದನ್ನು ಮರೆಯುವುದಿಲ್ಲ. ಇಂತಹ ಅದೆಷ್ಟು ಸಂಪ್ರದಾಯದ ಹೆಸರಿನ ಪಾಠಗಳು! ಈ ಪಾಠಗಳೆಲ್ಲ ಹೆಣ್ಮಕ್ಕಳಿಗೆ ಮಾತ್ರ ಏಕೆ… ಆ ನನ್ನ ಗೆಳತಿ ಇಂತಹ ಪಾಠಗಳಿಂದಾಗಿ ಅದೆಷ್ಟು ಮೃದು ಎಂದರೆ ಯಾರಾದರೂ ಗಟ್ಟಿಯಾಗಿ ಮಾತನಾಡಿದರೂ ಸಾಕು ಇವರಿಗೆ ಗಂಟಲು ಕಟ್ಟಿ ಅಳುವೇ ಬಂದುಬಿಡುತ್ತದೆ. ಇವರು ಒಂದು ಉದಾಹರಣೆ ಮಾತ್ರ. ಆದರೆ ಇಂತಹ ಅದೆಷ್ಟೋ ಜನ ಹೆಣ್ಮಕ್ಕಳು ನಮಗೆ ಸಿಗುತ್ತಾರೆ. ಮೀಸಲಾತಿ ಇದ್ದರೂ ಹೊರಬರದ, ಸ್ಪರ್ಧಿಸದ, ಸ್ಪರ್ಧಿಸಿ ಗೆದ್ದರೂ ಗಂಡನೇ ಅಧಿಕಾರ ನಡೆಸುವ ಅದೆಷ್ಟೋ ವಾಸ್ತವಗಳು ನಮ್ಮ ಕಣ್ಮುಂದೆಯೇ ಇರುತ್ತವೆ. ಇದೆಲ್ಲ ನೋಡುವಾಗ ನಾವು ನಮ್ಮೊಳಗೇ ಗಟ್ಟಿಯಾಗಿ ಹೊರಬರಬೇಕಾದ ಅಗತ್ಯ ಮತ್ತು ಅನಿವಾರ್ಯತೆಯನ್ನು ಅರಿಯಬೇಕಿದೆ ಅನಿಸುತ್ತದೆ. ಇದಕ್ಕೆ ಯಾವ ಭೇದವಿಲ್ಲ. ಹೆಣ್ಣುಮಕ್ಕಳಿಗೆ ಅದರ ಅಗತ್ಯ ಕೊಂಚ ಹೆಚ್ಚಿರಬಹುದು ಅಷ್ಟೇ. ಹೆಂಗರುಳು, ಹೆಣ್ಣಪ್ಪಿ ಅಂತೆಲ್ಲ ಮೂದಲಿಕೆಗೆ ಒಳಗಾಗುವ ಅದೆಷ್ಟೋ ಗಂಡ್ಮಕ್ಕಳ ಪಾಡೂ ಇದಕ್ಕೆ ಭಿನ್ನವಾಗಿಲ್ಲ ಎನ್ನುವುದೂ ನಿಜವೇ. ಇದಕ್ಕೆಲ್ಲ ಮದ್ದೆಂದರೆ ಮಿತಿಗಳನ್ನು ಮೀರುವುದು. ಯಾವುದು ಗೊಡ್ಡು ಎನಿಸುತ್ತದೋ ಅದನ್ನು ದಿಟ್ಟತನದಿಂದ ನಿರಾಕರಿಸುವುದು. ಕಟ್ಟಳೆಗಳು ಒಳಗಿನದ್ದಾದರೂ ಸರಿ ಹೊರಗಿನದ್ದಾದರೂ ಸರಿ, ಸರಿಸಿ ಹೊರ ಬರುವುದು… ಈ ಮದ್ದು ನಮ್ಮ ಮತಿಗೆ ದಕ್ಕಲಿ… **************************************** –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಚಲನೆಯ ವೇಗ ಜಾಸ್ತಿ ಇರುವುದರಿಂದ ಅಂತರವು ಕೂಡ ಜಾಸ್ತಿಯಾಗ್ತಾ ಹೋಗ್ತಾ ಇದೆ ಆಧುನಿಕತೆ ಸ್ಪರ್ಶ ಹೆಚ್ಚಾಗಿ ನಮ್ಮ ಮೂಲ ಸಂಸ್ಕೃತಿಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಅನಿಸುತ್ತದೆ.
ವಚನಚಳುವಳಿಗೆ ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಸ್ಥಾನವಿದೆ. ವಚನಗಳಲ್ಲಿ ಆಡಿದ, ಸಾರಿದ, ಸಾಧಿಸಿ ತೋರಿಸಿದ ಮೌಲ್ಯಗಳು ಕೇವಲ ಘೋಷಣೆಗಳಾಗದೆ ನಡೆ ನುಡಿಯಲ್ಲಿ ಒಂದಾಗಿ ಏಕವನ್ನು ಸ್ಥಾಪಿಸಿದ ಕಾರಣದಿಂದ ವಚನಕಾರರು ಈ ನೆಲದಲ್ಲಿ ಮಾನ್ಯ ಮತ್ತು ಮುಖ್ಯರಾಗುತ್ತಾರೆ.
ಅಂಕಣ ಬರಹ ವಸಂತ ಬಂದ! ರಂಗಕ್ಕೆ ರಂಗು ತಂದ!! ವೈಶಾಲಿ ನಗರದ ಬೀದಿ. ವೈಭವದ ಅರಮನೆ. ಅದು ರಾಜನ ಅರಮನೆಯಲ್ಲ. ನಗರದ ಮುಖ್ಯ ನೃತ್ಯಗಾರ್ತಿ,ರಾಜನರ್ತಕಿ ಆಮ್ರಪಾಲಿಯ ಮನೆ. ಆಮ್ರಪಾಲಿ ಚಿಗುರು ಮಾವಿನ ತಳಿರಂತಹವಳು. ಅವಳ ಸೌಂದರ್ಯದ ಕಥನ ಕೇಳಿ ನೆರೆ ಹೊರೆಯ ರಾಜರೂ, ರಾಜಕುಮಾರರೂ ಬಂದಿದ್ದಾರೆ. ಅವಳ ಪ್ರೇಮ ಭಿಕ್ಷೆಗಾಗಿ ಹೊರಬಾಗಿಲಲ್ಲಿ ಸರದಿಯಲ್ಲಿ ಕಾಯುತ್ತಿದ್ದಾರೆ. ಆಕೆ ಒಳಗಡೆ ಇದ್ದಾಳೆ, ಪ್ರಣಯದ ತುರೀಯದ ಅಮಲಲ್ಲಿ. ಆದರೂ ಅದೇನೋ ಬೇಸರ. ಅವಳನ್ನು ಆವರಿಸಿದೆ. ಎಲ್ಲವೂ ಇದ್ದರೂ ಏನೋ ಕೊರತೆ. ತಳಮಳ. ಬಿಂದುಸಾರನಂತಹ ಮಗಧ ಚಕ್ರವರ್ತಿ ಮಾರುವೇಷದಲ್ಲಿ ಬಂದು ಅವಳ ಪಾದದ ಬಳಿ ಪ್ರೇಮ ಭಿಕ್ಷೆ ಬೇಡುತ್ತಾನೆ. ಆಮ್ರಪಾಲಿ ಪ್ರಣಯ ವೈಭವದಲ್ಲಿರುವಾಗಲೇ ಸಖಿ ಅರಹುತ್ತಾಳೆ. ನಗರಕ್ಕೆ ಗೌತಮ ಬಂದಿದ್ದಾರೆ. ಆಮ್ರಪಾಲಿಯ ಜೀವ, ಜೀವನ ಪಲ್ಲಟಗೊಳ್ಳತ್ತದೆ. ಗೌತಮ ಆಮ್ರಪಾಲಿಯ ಮನೆಗೆ ಬರುತ್ತಾನೆ. ಎಂತಹ ಅದ್ಬುತ ಕಥೆ. ಆಮ್ರಪಾಲಿ..ಗೌತಮ ಬುದ್ದ. ನಾನೂ ಕಥೆಯ ಮೋಹಕ್ಕೊಳಗಾಗಿದ್ದೆ. ಆಮ್ರಪಾಲಿಯ ಕಾಲಕ್ಕೆ ಸಂದುಹೋಗಿದ್ದೆ. ನನಗೆ ಅದರಲ್ಲಿ ರಾಜಕುಮಾರನ ಪಾತ್ರ. ಆಮ್ರಪಾಲಿಯನ್ನು ಕಾಣ ಬೇಕೆಂಬ ತುಡಿತ. ಆಕೆಯ ಎದುರು ಮಣಕಾಲೂರಿ ಬೇಡಿಕೆ. ಅಷ್ಟೆ..ಅಷ್ಟೇ ನನ್ನ ಪಾತ್ರ. ಆಮ್ರಪಾಲಿ, ” ನೀನಿನ್ನೂ ಚಿಕ್ಕ ಬಾಲಕ. ನಿನ್ನ ರಾಜ್ಯಕ್ಕೆ ಹಿಂತಿರುಗು” ಎನ್ನುತ್ತಾಳೆ. ನನಗೆ ನಿಜಕ್ಕೂ ಹಿಂತಿರುಗಲಾಗುತ್ತಿರಲಿಲ್ಲ. ಇನ್ನು ಎರಡು ಮಾತುಗಳಿದ್ದರೆ!. ಆಮ್ರಪಾಲಿಯ ಎದುರು ಇನ್ನೇನಾದರೂ ಹೇಳುವಂತಿದ್ದರೆ..ಆಸೆ. ಅದು ತುಡಿತ. ಮೋಹದಸೆಳೆತ..ಏನಂದರೂ ಒಪ್ಪುವ ಭಾವ ತೀವ್ರತೆ. ನಾಟಕದ ತರಬೇತಿ ನಡೆಯುವಾಗಲೂ ನಾನು ಆಮೃಪಾಲಿಯ ಹಿಂದೆ,ಬಿಟ್ಟ ಕಣ್ಣು ಬಿಟ್ಡಂತೆ ನೋಡುತ್ತಿದ್ದೆ. ನಾಟಕದ ದಿನ ಎಂತಹ ರೋಮಾಂಚನಗಳು. ನನಗೆ ರಾಜಕುಮಾರನ ದಿರಿಸುಗಳು. ಸಿಕ್ಕಿಸಿದ್ದ ಖಡ್ಗ,ಕಿರೀಟ..ಸಂತಸದ ಹೊಳೆಯೊಂದು ಒಳಗಡೆ ಕುಪ್ಪಳಿಸುತ್ತ ಹರಿಯುತ್ತಿತ್ತು. ಆಮ್ರಪಾಲಿ ಎಂತಹ ಸೌಂದರ್ಯ. ಅದೆಷ್ಟು ಆಭರಣಗಳು, ಚೆಂದದ ಸೀರೆ. ನಾಟಕ ಮುಗಿದರೂ ಅದೇ ಗುಂಗು. ಆಮ್ರಪಾಲಿ..ಆಮ್ರಪಾಲಿ ನಾನು ರಾಜಕುಮಾರನ ಪಾತ್ರವೇ ಆಗಿದ್ದೆ. ತಳ್ಳಿಸಿಕೊಂಡು ಹೊರದಬ್ಬಲ್ಪಟ್ಟ ರಾಜಕುಮಾರ. ಕನಸಿನ ಹೂ ನಸು ಬಿರಿದು ಕಂಪು ಸೂಸಲು ಆರಂಭಿಸಿತ್ತು. ಈ ನಾಟಕದ ಪಾತ್ರ ನನಗೆ ಸಿಕ್ಕಿದ್ದರ ಹಿಂದೆ ಬಣ್ಣ ಕಲಸುವ ಕುಂಚದಂತಹಾ ಮನಸ್ಸಿತ್ತು. ಏಳನೇ ತರಗತಿಯ ಶಾಲೆಯ ಅಂಗಳದಿಂದ ಹಿರಿಯಡಕ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಎತ್ತರದ ಕಟ್ಟಡ ಸಮುಚ್ಛಯದೊಳಗೆ ಹೆಜ್ಜೆಯಿಟ್ಟ ಗುಬ್ಬಿ ಮರಿಯ ಪುಕ್ಕ ಬೆಳೆದಿತ್ತು. ಎಂಟನೆಯ ತರಗತಿಯಿಂದ ಪಿಯೂಸಿ ವರೆಗೆ. ವಾರ್ಷಿಕೋತ್ಸವಕ್ಕೆ ಒಂದು ನಾಟಕ. ಉಳಿದಂತೆ ನೃತ್ಯಗಳು. ನನಗೆ ಈ ನೃತ್ಯವೆಂಬುದು ಬಲು ಕಠಿಣ. ಸಂಜೆ ಮನೆಗೆ ಹೋದ ಬಳಿಕ ಮನೆಯ ಹತ್ತಿರದ ಗೆಳತಿಯರಿಗೆ,ತಂಗಿಗೆ ಮನೆಯ ಹಿಂದಿನ ಹಾಡಿಯ ಮರದ ಬುಡದಲ್ಲಿ ನನಗೆ ಕಂಠಪಾಠ ಆಗಿದ್ದ ಅದೆಷ್ಟೋ ಭಕ್ತಿಗೀತೆಗಳಿಗೆ ನೃತ್ಯಸಂಯೋಜನೆ ಮಾಡಿ ನಿರ್ದೇಶಕಿಯಾಗಿದ್ದೆ. ಅದು ಬಲು ಗುಟ್ಡಿನ ತಾಲೀಮು. ನಾನು ತಂಡದಲ್ಲಿ ಸೇರಿಕೊಂಡು ಕುಣಿಯುವುದು.. ಅಬ್ಬಬ್ಬಾ..ಎಂತ ಕಷ್ಟ. ಅದಕ್ಕೆ ಅದನ್ನು ಬಿಟ್ಟು ನನ್ನ ಪರಮ ಪ್ರೀತಿಯ ನಾಟಕದತ್ತ ಹೊಂಚು ಹಾಕಿದ್ದೆ. ಆದರೆ ಅದು ದೊಡ್ಡ ಹುಡುಗಿಯರಿಗೆ ಮೀಸಲಾಗಿತ್ತು. ಪಿಯುಸಿ ಓದುವ ಚೆಂದದ ಸವಿತಾ ಅನ್ನುವವರು ನಾಟಕದ ನಾಯಕಿಯಾಗಿ ಆಯ್ಕೆಯೂ ಆಗಿಯಾಗಿತ್ತು. ನಾಟಕದ ಉಸ್ತುವಾರಿ ತೆಗೆದುಕೊಂಡ ಉಪನ್ಯಾಸಕರ ಬಳಿ ಹೋಗೆ ದೀನಳಾಗಿ ನಿಲ್ಲುತ್ತಿದ್ದೆ. ಹೇಳಲು, ಕೇಳಲು ಸಂಕೋಚ. ಕೊನೆಗೂ ಅವರ ಕೃಪೆ ದೊರಕಿ ಪಿ.ಯು.ಸಿಯವರೇ ತುಂಬಿದ್ದ ನಾಟಕದಲ್ಲಿ ಎಂಟನೆಯ ತರಗತಿಯ ನಾನು ಸೇರ್ಪಡೆಯಾಗಿದ್ದೆ. ಹಾಗೆ ಹದಿಹರೆಯದ ರಾಜಕುಮಾರನ ಪಾತ್ರದ ಕಣ್ಣೊಳಗೆ ಅಮ್ರಪಾಲಿ ರಂಗು ಚೆಲ್ಲಿದ್ದಳು. ಎಂಟನೇ ಕ್ಲಾಸ್ ಎಂದರೆ!. ಅದು ಅಂದ, ಅದು ಚಂದ, ಅದು ಶೃಂಗಾರದತ್ತ ಕಣ್ಣು ತೆರೆಯುವ ಕದ. ಆಟವೆಂಬ ಆಟದಲ್ಲಿ ಮುಳುಗಿದ್ದ ನಮಗೆ ವಿಸ್ಮಯಗಳ ಲೋಕ ತೆರೆದಂತೆ. ಹೊಸತನ್ನು ಹುಡುಕುವ, ಮುಚ್ಚಿದ ಬಾಗಿಲಿನಾಚೆಯೇನಿದೆ ಎಂಬ ಅನ್ವೇಷಕ ಕುತೂಹಲದ, ಗೋಡೆಯಾಚೆಗಿನ ಶಬ್ಧ ಸ್ಪರ್ಶಗಳ, ಹಗಲು ಕನಸುಗಳ ತುಂಬಿದಂಗಳ. ವಿಶಾಲವಾದ ಮೈದಾನ. ಅದಕ್ಕೆ ಬೇಲಿ ಹಾಕಿದಂತೆ ಎರಡು ಬದಿ ಕಟ್ಟಡ ಒಂದು ಬದಿಯಲ್ಲಿ ಸಾಲು ಮರಗಳು. ಮಗದೊಂದು ಬದಿ ರಾಜದ್ವಾರ ತೆರೆದಂತೆ ಇರುವ ಕೆಂಪು ಮಣ್ಣಿನ ರಂಗಸ್ಥಳವದು. ಇಲ್ಲೇ ಎಷ್ಟು ಆಟಗಳು, ಪರೀಕ್ಷೆಗೆ ಕ್ಲಾಸಿಗೆ ಹೋಗುವ ಮುನ್ನ ಕೊನೆಯ ಜೀವದಾನದ ಗುಟುಕಿನಂತೆ ಸಿಗುವ ಓದು, ಸ್ನೇಹಿತರೊಂದಿಗೆ ಹಂಚಿ ತಿಂದ ಜಂಬೂ ನೇರಳೆ ಹಣ್ಣು, ಕಾಗೆ ಎಂಜಲು ಮಾಡಿ ಜೊತೆಗೆ ಮೆಲ್ಲಿದ ಮಾವಿನ ಮಿಡಿ, ಹುಣಿಸೆ ಹಣ್ಣು, ಪೇರಳೆ. ಆ ಎಲ್ಲ ನೆನಪುಗಳಿಗೆ ಈ ಮಣ್ಣಿನ ರುಚಿಯೂ ಇದೆ, ಜತೆಗೆ ವಾಸನೆಯೂ . ಮೈದಾನದ ಪಶ್ಚಿಮಕ್ಕೆ ಮುಖ್ಯರಸ್ತೆ. ರಸ್ತೆಯ ಆ ಬದಿ ಸರಕಾರಿ ಆಸ್ಪತ್ರೆ. ಖಾಸಗಿ ಡಾಕ್ಟರ್ ಗಳು ಇದ್ದರೂ ಆಗೆಲ್ಲ ಊರಿನವರ ಮೊದಲ ಆಯ್ಕೆ ಸರಕಾರಿ ಆಸ್ಪತ್ರೆಯಾಗಿತ್ತು. ಮೆಟ್ಟಲು ಹತ್ತಿ ಒಳಗೆ ಹೆಜ್ಜೆ ಇಟ್ಟರೆ ಕೋಳಿ ಗೂಡಿನೊಳಗೆ ಕೂತಂತೆ ಚೀಟಿ ಬರೆಯುವ, ಮದ್ದು ಕೊಡುವ, ಡಾಕ್ಟರ್ ಬಳಿ ಕಳುಹಿಸುವ ಕಂಪೌಂಡರ್ ನ ಕತ್ತೆತ್ತಿ ಚಾಚಿದ ಮುಖ ಕಾಣಿಸುತ್ತದೆ. ಪ್ರಾಥಮಿಕ ವಿಚಾರಣೆ ನಡೆಯುವುದು ಅವರ ಬಳಿ. ಅಲ್ಲಿಂದ ಎಡಕ್ಕೆ ತಿರುಗಿದರೆ ಬಾಗಿಲಿಗೆ ನೇತು ಬಿದ್ದ ನೀಲಿ ಪರದೆಯ ಸಂದಿನಲ್ಲಿ ಡಾಕ್ಟರ್ ರೂಮಿನ ಮೇಜು, ಸ್ಕೆತಸ್ಕೋಪ್ ನ ಉದ್ದದ ಬಾಕ್ಸ್ ಕಾಣಿಸುತ್ತದೆ. ದಾಟಿ ಹೋದರೆ ಪರೀಕ್ಷಾಕೊಠಡಿ, ನಂತರ ಲೇಡಿ ಡಾಕ್ಟರ್ ರೂಮ್. ಹಿಂದೆ ಬಂದು ಕಾಂಪೌಂಡರ್ ಗೂಡಿನಿಂದ ಮುಂದೆ ನೇರಕ್ಕೆ ಹೋದರೆ ಒಂದು, ಎರಡು, ಮೂ..ರು ಕೊಠಡಿ. ಅದು ಅಲ್ಲಿ ದಾಖಲಾದ ರೋಗಿಗಳಿಗೆ. ನಮ್ಮದು ಬಾಲ್ಯ, ಹರೆಯ ಎರಡೂ ಅಲ್ಲದ, ಎಲ್ಲೂ ಒಪ್ಪದ, ಅಲ್ಲೂ ಇಲ್ಲೂ ಸಲ್ಲುವ ಬದುಕಿನ ಸಂಕ್ರಮಣದ ಕಾಲ. ತರಗತಿಯ ನಡುವಿನ ಬಿಡುವಿನಲ್ಲಿ ನಾವು ಆಸ್ಪತ್ರೆಗೆ ಹೋಗುವುದು. ಅಲ್ಲಿ ಮಲಗಿರುವ ರೋಗಿಗಳನ್ನು ಇಣುಕುವುದು, ಲೊಚಗುಟ್ಟುವುದು, ಕೆಲವೊಮ್ಮೆ ಡಾಕ್ಟ್ರ್, ದಾದಿಯರ ಕಣ್ಣು ತಪ್ಪಿಸಿ ಒಳನುಗ್ಗಿ ಎಲ್ಲದರ ತಪಾಸಣೆ ನಡೆಸಿ ರೋಗಿಯ ರೋಗದ ವಿವರ ಪಡೆದು ಶಾಲೆಗೆ ಓಡುವುದು. ಆ ಕುಟುಂಬದ ಎಲ್ಲರೂ ನಮಗೆ ಪರಿಚಯ. ಆಗ ಗುಂಡುಗುಂಡಗಿದ್ದ ಒಬ್ಬ ಡಾಕ್ಟರ್ ವರ್ಗಾವಣೆ ಗೊಂಡು ಬಂದಿದ್ದರು. ನಮಗೆ ಅವರ ಪರಿಚಯ ಮಾಡಿಸಿಕೊಳ್ಳುವ, ಆತ್ಮೀಯತೆ ಬೆಳೆಸಿಕೊಳ್ಳುವ ಆತುರ. ಜೊತೆಗೆ ಡಾಕ್ಟರ್ ಜೋರಾ, ಪಾಪ ಇದ್ದರಾ..ಚರ್ಚೆ. ಅದಕ್ಕಾಗಿ ನನ್ನನ್ನೂ ಸೇರಿದಂತೆ ಕೆಲವು ಗೆಳತಿಯರಿಗೆ ಅನಾರೋಗ್ಯ ಕಾಡಿತು. ನನಗೆ ಕಿವಿನೋವು, ಒಬ್ಬ ಗೆಳತಿಗೆ ಹೊಟ್ಟೆನೋವು, ತಲೆನೋವು.ಹೀಗೆ ಹಲವು ಬಗೆಯ ಕಾಯಿಲೆಗಳಿಗೆ ತುತ್ತಾಗಿ ನಮ್ಮ ತಂಡವೇ ಆಸ್ಪತ್ರೆಗೆ ಧಾವಿಸಿತು ಅಲ್ಲಿ ಹೊಸ ಡಾಕ್ಟರ್ ಬಳಿ ಹೋಗುವುದು ಒಬ್ಬರನ್ನು ಡಾಕ್ಟರ್ ಪರೀಕ್ಷೆ ಮಾಡುತ್ತಿದ್ದರೆ ಉಳಿದ ಬಾಲೆಯರು ಹೊಸ ಬೆಳಕಿನಲ್ಲಿ ಡಾಕ್ಟರ್ ನ್ನು ನೋಡುವುದು, ಮುಸಿಮುಸಿ ನಗುವುದು. ಅಲ್ಲಿ ಹಲವು ದಾದಿಯರು ಇದ್ದರು. ಬಾನುಮತಿ,ಶಶಿರೇಖಾ,ಸುಮನ ಚಂದ್ರಿಕಾ..ಹೂತೋಟದ ಪರಿಮಳ ಸೂಸುವ ಸೇವಂತಿಗೆ,ಇರುವಂತಿಗೆ,ಗುಲಾಬಿ,ಸಂಪಿಗೆ ಹೂಗಳ ಹಾಗಿದ್ದ ದಾದಿಯರು. ಬಾನುಮತಿ ತುಂಬ ಸುಂದರವಾಗಿದ್ದರು. ಎತ್ತರ ಹಿಮ್ಮಡಿಯ ಚಪ್ಪಲ್, ಸ್ವಚ್ಛ ಬಿಳಿಬಣ್ಣ, ಸುತ್ತಿ ಮೇಲೆ ಕಟ್ಟಿದ ತಲೆಗೂದಲು,ಸುಂದರ ಮೈಕಟ್ಟು. ಬಿನ್ನಾಣದ ನಡುಗೆ. ಅವರು ಹತ್ತಿ, ಕತ್ತರಿ, ಮದ್ದು ಇಟ್ಟ ಟ್ರೇ ಹಿಡಿದು ಆಸ್ಪತ್ರೆಯ ಕಾರಿಡಾರಿನಲ್ಲಿ ನಡೆದಾಡುತ್ತಿದ್ದರೆ ನಾವು ಅಚ್ಚರಿ, ಕುತೂಹಲ, ತುಂಟತನದಿಂದ ಹಿಂಬಾಲಿಸುತ್ತಿದ್ದೆವು. ಅವರು ಡಾಕ್ಟರ್ ಬಳಿ ಕಣ್ಣು, ಬಾಯಿ, ಕೈ ಚಲನೆಗಳೊಂದಿಗೆ ಮಾತನಾಡುತ್ತಿದ್ದರೆ ನಮಗೋ ತಮಾಷೆ, ಕೀಟಲೆ, ಸಣ್ಣ ಹೊಟ್ಟೆಕಿಚ್ಚು!. ತರಗತಿಗೆ ಬಂದರೆ ನಮ್ಮ ಟೀಚರ್ ಗೆ ತಮಾಷೆ ಮಾಡುವ, ಸಲುಗೆ ಬೆಳೆಸುವ ಆಸಕ್ತಿ. ಹುಚ್ಚುಕೋಡಿ ಮನಸ್ಸು. ಆಗ ನಮ್ಮ ಮನೆಯ ಹಿಂದೆ ಬಾಡಿಗೆಗೆ ಒಬ್ಬ ಟೀಚರ್ ಬಂದಿದ್ದರು. ಅವಿವಾಹಿತೆ. ನಾನು ಬೆಳಗ್ಗೆ, ಮಧ್ಯಾಹ್ನ ಸಂಜೆ ಅವರ ಪುಟ್ಟ ಮನೆಯ ಸುತ್ತ ಪ್ರದಕ್ಷಿಣೆ ಹಾಕುವುದಿತ್ತು. ಹಲವಷ್ಟು ಸಲ ಶಾಲೆಗೂ ಅವರ ಜೊತೆಯೇ ಹೋಗುವುದು. ಅವರು ಆಗ ಕೆಲವು ರುಚಿಕರ ವಿಷಯ ತಿಳಿಸುತಿದ್ದರು. ಪಿಯುಸಿ ಹುಡುಗನೊಬ್ಬ ಅವರನ್ನು ಹಿಂಬಾಲಿಸಿದ್ದು, ಕಣ್ಣಲ್ಲಿ ಸನ್ನೆ ಮಾಡಿದ್ದು. ಮನೆಯವರೆಗೂ ಬಂದಿದ್ದು, ಇತ್ಯಾದಿ!. ನಾನು ಬೆಳಗ್ಗೆ ನನ್ನ ಡ್ರೆಸ್ ಸಿಕ್ಕಿಸಿ ಅವರ ರೂಮಿಗೆ ಓಡುವುದು. ಹೆಚ್ಚಾಗಿ ಅವರಿನ್ನೂ ತಯಾರಾಗಿರುವುದಿಲ್ಲ. ಅವರು ಸೀರೆ ಉಟ್ಟು ಸಿಂಗರಿಸುವ ಚೆಂದ ವನ್ನು ನನ್ನ ಬೆರಗುಗಣ್ಣು ಗಮನಿಸುತ್ತಿತ್ತು. ಅವರು ಹಚ್ಚುವ ಕ್ರೀಂ, ಹಣೆಗೆ ಇಡುವ ಬಣ್ಣಬಣ್ಣದ ತಿಲಕ, ಲಿಪ್ ಸ್ಟಿಕ್, ಸೀರೆಯ ಒನಪು, ನೆರಿಗೆ, ನೆರಿಗೆಯ ಬಿನ್ನಾಣ. ಅಲ್ಲಿ ಅಚ್ಚರಿಯನ್ನೂ ಮೀರಿದ ಕುತೂಹಲ. ನಮ್ಮದು ಆಗ ಬಾಲ್ಯಕ್ಕೆ ಟಾಟಾ ಹೇಳಿ ಮುಗಿದಿತ್ತು. ಹರೆಯವಿನ್ನೂ ಪೂರ್ತಿ ಒಳಗೆ ಬಂದಿರಲಿಲ್ಲ. ಎಂತದೋ ಹೊಸತನ. ಮುಸ್ಸಂಜೆ ಯ ಬೇಸರದಂತೆ, ಮರುಳುತನ ಸುರಿದಂತೆ ಕಾಡುವ, ಆವರಿಸಿದ ಕಾಲ. ಅಮ್ಮನ ಸೀರೆಯ ಸೆರಗನ್ನು ಡ್ರೆಸ್ಸಿನ ಮೇಲೆ ಹಾಕಿಕೊಂಡು ಕನ್ನಡಿಯ ಎದುರು ಬಿಂಬವನ್ನೇ ಮೋಹಿಸುವ ಮರುಳುತನ. ಶಾಲೆಯಲ್ಲಿ ಟೀಚರುಗಳಿಗೆ ಅಡ್ಡ ಹೆಸರುಗಳು. ಮಾತ್ರವಲ್ಲ ವಿದ್ಯಾರ್ಥಿಗಳಿಗೂ ನವನವೀನ ನಾಮಕರಣದ ಸಂಭ್ರಮ. ಕಾಲೇಜಿನ ಉಪವನದಲ್ಲಿ ಮೊಗ್ಗುಗಳು ಮೆಲ್ಲನೆ ದಳಗಳನು ಬಿಡಿಸಿ ಬಿರಿಯುವ ಪ್ರಕೃತಿಯ ಜಾದು. ಎಂತದೋ ಸಂಕೋಚ, ಲಜ್ಜೆ, ಅಪರಿಚಿತ ಭಾವಗಳು ತೆವಳಿಕೊಂಡು ಕಾಯವನ್ನು ಆವರಿಸಿ ಕಣ್ಣಿನೊಳಗಿಳಿದು ಹುತ್ತಗಟ್ಟುತ್ತಿದ್ದವು. ಚಂದಮಾಮ,ಬೊಂಬೆಮನೆಗಿಂತ ಸಾಯಿಸುತೆ,ತ್ರಿವೇಣಿ,ಸಿ.ಎನ್. ಮುಕ್ತಾ ,ಈಚನೂರು ಜಯಲಕ್ಷ್ಮಿ, ಎಂ.ಕೆ.ಇಂದಿರಾ ಮುಂತಾದವರ ಕಾದಂಬರಿಗಳ ಮೇಲೆ ಅಕ್ಕರೆ ಹೆಚ್ಚಿತ್ತು. ಅದನ್ನು ಓದಿ ನಾವೇ ಕಥಾನಾಯಕಿಯರಾಗಿ ಪುಳಕಗೊಳ್ಳುತ್ತಿದ್ದೆವು, ಕಣ್ಣೀರು ತುಂಬಿ ಕೊಳ್ಳುತ್ತಿದ್ದೆವು. ಹಾದಿಯಲ್ಲಿ ನಡೆಯುವಾಗಲೂ ಒಬ್ಬೊಬ್ಬರೇ ಮುಸಿಮುಸಿ ನಕ್ಕು ವಸಂತನಿಗೆ ತೆರೆಯುತ್ತಾ ಕೆನ್ನೆಗೆಂಪುಗಟ್ಟುತ್ತಿತ್ತು. ಚಿಗುರು ಮಾವಿನೆಲೆಗಳು ಗೊಂಚಲ ಗೊಂಚಲಾಗಿ ಮರಮರಗಳಲ್ಲಿ ನಮ್ಮ ನೋಡಿ ನಗುತ್ತಿದ್ದವು. ************************************************* ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-10 ಆತ್ಮಾನುಸಂಧಾನ ಬನವಾಸಿಯಲ್ಲಿ ನೋವಿನ ನೆನಪುಗಳು ಬಾಲ್ಯದ ನಾಲ್ಕು ವರ್ಷಗಳನ್ನು ಬನವಾಸಿಯಲ್ಲಿ ಕಳೆಯುವ ಅವಕಾಶ ದೊರೆತದ್ದು ನನ್ನ ಬದುಕಿನಲ್ಲಿ ಒದಗಿ ಬಂದ ಭಾಗ್ಯವೆಂದೇ ನಾನು ಭಾವಿಸಿದ್ದೇನೆ. ಅತ್ಯಂತ ಆಪ್ತ ಸ್ನೇಹಿತರಾಗಿ ದೊರೆತ ಮುಖೇಶ್ ಕುಚಿನಾಡ, ಸೊಮಶೇಖರ ಒಡಿಯರ್, ಅಶೋಕ ಪಾಳಾ, ಸೆಂಟ್ರಲ್ ಕೆಫೆಯ ಸದಾನಂದ ಶೆಟ್ಟಿ, ಕಿರಾಣಿ ಅಂಗಡಿಯ ಸಚ್ಚಿದಾನಂದ ಮೂಡ್ಲಗಿರಿ ಶೆಟ್ಟಿ ಮುಂತಾದ ಗೆಳೆಯರ ಒಡನಾಟದಲ್ಲಿ ಅತ್ಯಂತ ಮಧುರವಾದ ಅನುಭವಗಳು ನನಗೆ ದಕ್ಕಿವೆ. ಈ ಗೆಳೆಯರೆಲ್ಲ ಆಟ ಪಾಠ ವಿನೋದಗಳಲ್ಲಿ ಜೊತೆ ಸೇರುವಾಗ ಜಾತಿಗೀತಿಯ ಯಾವ ಕೀಳರಿಮೆಯೂ ಕಾಡದಂತೆ ನಮ್ಮನ್ನು ನೋಡಿಕೊಂಡರು. ನೋವಿನ ಸಂಗತಿಯೆಂದರೆ ಈ ಯಾವ ಗೆಳೆಯರೂ ಈಗ ನನ್ನ ಸಂಪರ್ಕದಲ್ಲಿ ಇಲ್ಲ. ಅವರೆಲ್ಲ ಹೇಗಿದ್ದಾರೆ? ಎಲ್ಲಿದ್ದಾರೆ? ಎಂಬ ಯಾವ ಸುಳಿವೂ ನನಗಿಲ್ಲ. ಆದರೆ ಅವರೆಲ್ಲ ನನಗಿಂತ ಉತ್ತಮ ಸ್ಥಿತಿವಂತರಾಗಿಯೇ ಇದ್ದಿರಬೇಕು ಎಂದು ನಾನು ಭಾವಿಸಿದ್ದೇನೆ. ಬನವಾಸಿಯ ಬಾಲ್ಯದ ಸಂತಸದ ದಿನಗಳಲ್ಲಿಯೂ ನನ್ನನ್ನು ನೋವಿನ ನೆನಪಾಗಿ ಕಾಡುವ ಒಂದೆರಡು ಸಂದರ್ಭಗಳು ಮತ್ತೆ ಮತ್ತೆ ನನ್ನನ್ನು ಕಾಡುತ್ತಲೇ ಇರುತ್ತದೆ….. ಬನವಾಸಿಯ ವಾಸ್ತವ್ಯದ ಸಂದರ್ಭದಲ್ಲಿ ಹುಟ್ಟಿದವನು ಎಂಬ ಕಾರಣದಿಂದ ಬಹುಶಃ ನನ್ನ ಎರಡನೆಯ ಸಹೋದರನಿಗೆ ಮಧುಕೇಶ್ವರ ಎಂದು ಹೆಸರನ್ನಿಟ್ಟಿರಬೇಕು. ಆಗ ತಾನೆ ಎದ್ದು ನಿಂತು ಹೆಜ್ಜೆಯಿಕ್ಕಲು ಕಲಿಯುತ್ತಿದ್ದ. ಹೆಚ್ಚೂ ಕಡಿಮೆ ಅವನನ್ನು ಎತ್ತಿಕೊಂಡು ಆಡಿಸುವುದೂ, ನಡೆಸುವುದೂ ಮಾಡುತ್ತಿದ್ದೆನಾದ್ದರಿಂದ ನನ್ನೊಡನೆ ವಿಶೇಷ ಸಲುಗೆಯಿಂದ ಇರುತ್ತಿದ್ದ. ನಾನು ಆಟವಾಡಲು ಹೊರಟಾಗ ಹಠಮಾಡಿ ಬೆನ್ನಹಿಂದೆ ಬರುತ್ತಿದ್ದ. ಒಮ್ಮೆ ಅವ್ವ ಒಂದಿಷ್ಟು ರೇಶನ್ ಸಾಮಾಗ್ರಿಗಾಗಿ ನನ್ನನ್ನು ಅಂಗಡಿಗೆ ಕಳುಹಿಸಿದ್ದಳು. ಅಪ್ಪನ ಸೈಕಲ್ ಮನೆಯಲ್ಲಿತ್ತು. ಅದನ್ನು ಹತ್ತಿ ಕೂರಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಒಳ ಪೆಡಲ್ ಮೇಲೆ ಕಾಲಿಟ್ಟು ಹೊಡೆಯುವ ರೂಢಿಮಾಡಿಕೊಂಡಿದ್ದೆ. ನನಗೋ ಇಂಥ ಅವಕಾಶ ಸಿಕ್ಕಾಗ ತುಂಬಾ ಖುಷಿಯಾಗುತ್ತಿತ್ತು. ಅವಸರದಲ್ಲಿ ಸೈಕಲ್ ಏರಿ ಹೊರಟೆ. ಮಧು ನನ್ನ ಬೆನ್ನ ಹಿಂದೆ ಬರುತ್ತಿದ್ದಾನೆ. ಎಂಬುದನ್ನು ಗಮನಿಸಲೇ ಇಲ್ಲ. ಓಣಿಯ ತಿರುವಿನಲ್ಲಿ ನಾನು ಮರೆಯಾಗುವವರೆಗೆ ನನ್ನ ಹಿಂದೆಯೇ ಓಡಿ ಬರುತ್ತಿದ್ದ ಮಧು, ನಾನು ಮರೆಯಾಗುತ್ತಲೇ ಹಿಂದಿರುಗಿದವನು ಬೇರೆ ದಾರಿ ಹಿಡಿದು ಮುಂದೆ ಸಾಗಿದ್ದಾನೆ. ಆಗ ತಾನೆ ಓಡಾಡಲು ಕಲಿತ ಹುಡುಗ ದಾರಿ ತಪ್ಪಿ ಅಳುತ್ತ ಓಡುವಾಗ ಅವರಿವರು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದಷ್ಟು ಅವರಿಂದ ತಪ್ಪಿಸಿಕೊಂಡು ಅಳುತ್ತ ಒಂದು ದಿಕ್ಕು ಹಿಡಿದು ಓಡುತ್ತಲೇ ಇದ್ದಾನೆ. ದಾರಿಯಲ್ಲಿ ನಮಗೆ ಪರಿಚಯವಿದ್ದ ಹೆಂಗಸೊಬ್ಬಳು ಅವನನ್ನು ಗುರುತು ಹಿಡಿದವಳು ಶತಾಯ ಗತಾಯ ತಡೆದು ನಿಲ್ಲಿಸಲು ಪ್ರಯತ್ನಿಸಿದ್ದಾಳೆ. ಆದರೆ ಅವಳು ಮೂಕಿ. ಮಾತು ಸ್ಪಷ್ಟವಿಲ್ಲ. ತನ್ನ ಮೂಕ ಭಾಷೆಯಲ್ಲಿ ವಿಕಾರವಾಗಿ ಅರಚುತ್ತ ಮಧುವನ್ನು ತಡೆಯುವ ಪ್ರಯತ್ನ ಮಾಡಿದ್ದಾಳೆ. ಆದರೆ ಆತ ಇನ್ನಷ್ಟು ಗಾಬರಿಗೊಂಡು ಚೀರುತ್ತ ಓಡಿದ್ದಾನೆ. ಇತ್ತ ಮನೆಯಲ್ಲಿ ಮಧುವನ್ನು ನಾನೇ ಕರೆದೊಯ್ದಿರಬೇಕೆಂದು ನಿರುಮ್ಮಳವಾಗಿದ್ದ ತಾಯಿ, ತಂಗಿಯರೆಲ್ಲ ನಾನೊಬ್ಬನೇ ಮರಳಿ ಬಂದಾಗ ಹೌಹಾರಿ ಹೋದರು. ಮನೆಯಲ್ಲಿ, ನೆರೆಮನೆಗಳಲ್ಲಿ, ಬೀದಿಗಳಲ್ಲಿ ಮಧುವನ್ನು ಅರಸಿ ಕಾಣದೆ ಕಂಗಾಲಾದೆವು. ತಾಸರ್ಧ ತಾಸು ವಾತಾವರಣವೇ ಪ್ರಕ್ಷುಬ್ಧವಾಗಿ ಹೋಯಿತು. ಎಲ್ಲರೂ ನನ್ನ ನಿರ್ಲಕ್ಷ್ಯ ವೇ ಇದಕ್ಕೆ ಕಾರಣವೆಂದು ಆಡಿಕೊಳ್ಳುವಾಗ ನಾನು ಕುಸಿದು ಹೋಗಿದ್ದೆ. ಸುದೈವವೆಂದರೆ ಮಧುವನ್ನು ಗುರುತಿಸಿ ತಡೆದು ನಿಲ್ಲಿಸಲು ಪ್ರಯತ್ನಿಸಿ ವಿಫಲಳಾದ ಮೂಕಜ್ಜಿ ಅಷ್ಟಕ್ಕೆ ನಿಲ್ಲದೆ ನಮ್ಮ ಮನೆಯವರೆಗೆ ಓಡೋಡಿ ಬಂದು ಸಂಗತಿಯನ್ನು ತಿಳಿಸಿ ಉಪಕಾರ ಮಾಡಿದಳು. ಅಪ್ಪ ಅವ್ವ ಪೇಟೆಯಲ್ಲಿ ಸಿಕ್ಕುಬಿದ್ದ ಮಧುವನ್ನು ಹುಡುಕಿ ಕರೆತರುವ ಹೊತ್ತಿಗೆ ಸರಿರಾತ್ರಿಯಾಗಿತ್ತು. ಆದರೆ ಈ ಘಟನೆ ನನ್ನ ನಿರ್ಲಕ್ಷ್ಯ ಕ್ಕೆ ಉದಾಹರಣೆಯಾಗಿ ಈಗಲೂ ನನ್ನನ್ನು ಕಾಡುತ್ತಲೇ ಇದೆ. ಆದರೆ ಅಂದು ಮರಳಿ ಮನೆ ಸೇರಿದ ಮಧು ಇಂದು ಈ ನೆನಪುಗಳನ್ನು ಬರೆಯುವ ಹೊತ್ತಿಗೆ ನಮ್ಮೊಡನಿಲ್ಲ. ವೃತ್ತಿಯಿಂದ ಕಂಡಕ್ಟರನಾದ. ಮದುವೆಯಾಗಿ ಒಂದು ಗಂಡು ಒಂದು ಹೆಣ್ಣು ಮಗುವಿನ ತಂದೆಯಾದ. ತನ್ನ ೫೪ ನೇ ವಯಸ್ಸಿನಲ್ಲಿ ೨೦೧೭ ರ ಮೇ ತಿಂಗಳ ಒಂದು ದಿನ ತೀವೃವಾದ ನಿಮೋನಿಯಾ ಕಾಯಿಲೆಯಿಂದ ಬಳಲಿ ನಮ್ಮನ್ನೆಲ್ಲ ಬಿಟ್ಟು ಹೊರಟು ಹೋದ. ಬನವಾಸಿಯ ನೆನಪುಗಳಲ್ಲಿ ನನ್ನನ್ನು ಈಗಲೂ ಕೀಳರಿಮೆಯಿಂದ ಕಾಡುವ ಇನ್ನೊಂದು ಘಟನೆ ಬಂಕಸಾಣ ಜಾತ್ರೆ. ಅಪ್ಪ ಏಳನೆಯ ತರಗತಿಯ ವಿದ್ಯಾರ್ಥಿಗಳನ್ನು ಬಂಕಸಾಣ ಜಾತ್ರೆಯ ಪ್ರವಾಸಕ್ಕೆ ಕರೆದೊಯ್ದಿದ್ದರು. ಜಾತ್ರೆಯಾದ್ದರಿಂದ ನನ್ನನ್ನು, ನನ್ನ ತಮ್ಮ ನಾಗೇಶನನ್ನು ಜೊತೆಯಲ್ಲಿ ಕರೆದೊಯ್ದರು. ನಮಗಂತೂ ಬಹಳ ಸಂಭ್ರಮವಾಗಿತ್ತು. ಜಾತ್ರೆಯ ಮೋಜು ಮಜಾ ಎಲ್ಲವನ್ನು ಅನುಭವಿಸಿ ತಿರುಗಿ ಹೊರಡುವಾಗ ಅಪ್ಪನ ಕೆಲವು ವಿದ್ಯಾರ್ಥಿಗಳು ಮತ್ತಷ್ಟು ಖರೀದಿಯ ನೆಪದಲ್ಲಿ ಸಂತೆ ಅಂಗಡಿಗಳಲ್ಲಿ ಹೊಕ್ಕು ಚೌಕಾಶಿ ಮಾಡುತ್ತಿದ್ದರು. ಯಾವುದೋ ಹುಡುಗ ಕಾಲಿನ ಸ್ಲಿಪರ್ ಕೊಳ್ಳಲು ಚೌಕಾಶಿ ಮಾಡುತ್ತಿದ್ದಾಗ ಅಪ್ಪ ಮಧ್ಯ ಪ್ರವೇಶಿಸಿ ಒಂದು ರೇಟಿಗೆ ಹೊಂದಿಸಿ ಹುಡುಗನಿಗೆ ಸ್ಲಿಪರ್ ಕೊಡಿಸಿದರು. ಅವರಿಗೆ ಏನನ್ನಿಸಿತೋ… ನನ್ನ ತಮ್ಮ ನಾಗೇಶನಿಗೂ ಒಂದು ಜೊತೆ ಹವಾಯಿ ಚಪ್ಪಲಿ ಕೊಡಿಸಿದರು. ಅಂಗಡಿಯಿಂದ ಹೊರ ಬಂದ ಬಳಿಕ ನಾನು ನಡೆದುಕೊಂಡ ರೀತಿಯನ್ನು ನೆನಪಿಸಿಕೊಂಡರೆ ನನಗೆ ಈಗಲೂ ಸಹಿಸಲಾಗದಷ್ಟು ನಾಚಿಕೆ ಮತ್ತು ಅಸಹ್ಯವುಂಟಾಗುತ್ತದೆ. ತಮ್ಮ ತೊಟ್ಟ ಚಪ್ಪಲಿಗಳನ್ನು ನೋಡಿ ನನ್ನ ಕಾಲುಗಳು ಭಾರವಾದವು ಕಣ್ಣುಗಳಲ್ಲಿ ಕಂಬನಿ ತುಂಬಿ ಬಂತು. ಮುಖ ಊದಿಕೊಂಡಿತು. ಹೆಜ್ಜೆ ಮುಂದಿಡಲಾಗದೆ ತಡವರಿಸುತ್ತಿದ್ದೆ. ಇದನ್ನು ಗಮನಿಸಿದ ಅಪ್ಪ ತುಂಬಾ ನೊಂದುಕೊಂಡರು. ನನಗೂ ಒಂದು ಜೊತೆ ಚಪ್ಪಲಿ ಕೊಡಿಸುವ ಆಸೆ ಅವರಿಗೂ ಇತ್ತಾದರೂ ಅಷ್ಟೊತ್ತಿಗಾಗಲೇ ಅವರ ಕಿಸೆ ಖಾಲಿಯಾಗಿತ್ತು. ಅಸಹಾಯಕತೆಯಿಂದ ಅವರು ಚಡಪಡಿಸುತ್ತಿದ್ದರೆ ಅದನ್ನು ಗ್ರಹಿಸಲಾಗದ ದಡ್ಡತನ ನನ್ನದಾಗಿತ್ತು. ಬೇರೆ ದಾರಿ ಕಾಣದೆ ವಿದ್ಯಾರ್ಥಿಯೊಬ್ಬನಿಂದ ಒಂದಿಷ್ಟು ಹಣವನ್ನು ಸಾಲವಾಗಿ ಪಡೆದ ಅಪ್ಪ ನನಗೆ ಚಪ್ಪಲಿ ಕೊಡಿಸಿದ ಬಳಿಕವಷ್ಟೇ ನನ್ನ ಕಾಲುಗಳು ಮುಂದುವರಿದವು. ಆದರೆ ಬನವಾಸಿಗೆ ಬಂದ ಮರುದಿನವೇ ಮಧುಕೇಶ್ವರ ದೇವಾಲಯದ ಆವರಣದಲ್ಲಿ ಆಟವಾಡಲು ಹೊರಡುತ್ತ ದೇವಸ್ಥಾನದ ಮೆಟ್ಟಿಲ ಮೇಲೆ ಕಳೆದಿಟ್ಟು ಹೋದ ಇಬ್ಬರ ಚಪ್ಪಲಿಗಳನ್ನು ಯಾರೋ ಅಪಹರಿಸಿ ಬಿಟ್ಟಿದ್ದರು…. ಅಪ್ಪನ ದೊಡ್ಡತನಕ್ಕೆ ನನ್ನ ಸಣ್ಣತನಕ್ಕೆ ಈ ಘಟನೆ ಉದಾಹರಣೆಯಾಗಿ ನನ್ನನ್ನು ಈಗಲೂ ಕಾಡುತ್ತಿದೆ. ಬನವಾಸಿಯ ಬದುಕಿನ ಅವಧಿಯಲ್ಲಿ ಒಂದು ಅಚ್ಚಳಿಯದ ನೆನಪು ಮಳ್ಳು ಸುಕ್ರಣ್ಣನದು. ಸುಕ್ರಣ್ಣ ಮೊದಲಿಂದ ಮಳ್ಳನೇನಲ್ಲ. ಬನವಾಸಿಯ ವಿದ್ಯಾರ್ಥಿ ನಿಲಯದಲ್ಲಿ ಅವನು ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಬಹಳ ದೂರದ ಊರಿನಲ್ಲಿ ನಮಗೆ ಸ್ವಜಾತಿಯ ಬಂಧು ಎಂದರೆ ಈತನೊಬ್ಬನೇ ಮೂಲತಃ ನಮ್ಮ ನೆರೆಯ ಅಂಕೋಲಾ ತಾಲೂಕಿನ ಮೊಗಟಾ ಎಂಬ ಊರಿನವನು. ಮದುವೆಯಾಗಿದ್ದ. ಮಕ್ಕಳಾಗಿರಲಿಲ್ಲ. ಹೆಂಡತಿ ಶಿವಮ್ಮನೊಡನೆ ವಿದ್ಯಾರ್ಥಿ ನಿಲಯದ ಪಕ್ಕದಲ್ಲಿ ಒಂದು ಚಿಕ್ಕ ಬಾಡಿಗೆ ಮನೆಯಲ್ಲಿ ಉಳಿದಕೊಂಡಿದ್ದರು. ಹಬ್ಬ ಹುಣ್ಣಿಮೆಯಂಥ ಅಪರೂಪದ ಸಂದರ್ಭದಲ್ಲಿ ನಮ್ಮ ಮನೆಗೂ ಬಂದು ಹೋಗುತ್ತಿದ್ದರಿಂದ ಸಹಜವಾಗಿಯೇ ನಾವೆಲ್ಲ ಅವರನ್ನು ಹಚ್ಚಿಕೊಂಡಿದ್ದೆವು. ನಮಗೆಲ್ಲ ಒಂದು ಹಂತದವರೆಗೆ ಆಪ್ತನಾಗಿಯೇ ಇದ್ದ. ಸುಕ್ರಣ್ಣ ಇದ್ದಕ್ಕಿದ್ದಂತೆ ಕೂಗಾಡುವುದು, ಯಾರ ಯಾರನ್ನೋ ಬಯ್ಯುವುದು, ಹೆಂಡತಿಯೊಡನೆ ಜಗಳವಾಡುತ್ತ ಸಿಕ್ಕ ಸಿಕ್ಕ ವಸ್ತುಗಳಿಂದ ಹೊಡೆಯುವುದು ಮಾಡ ಹತ್ತಿದ. ವಸತಿ ನಿಲಯದಲ್ಲಿ ಆಗ ಏಳನೆಯ ತರಗತಿಯ ವಿದ್ಯಾರ್ಥಿಗಳಲ್ಲಿ ಚಿಗುರು ಮೀಸೆಯ ಹೊಂತಕಾರಿಗಳೂ ಇದ್ದರು. ಅವರಲ್ಲಿ ಯಾರೇ ಆದರೂ ತನ್ನ ಪತ್ನಿಯೆಡೆಗೆ ನೋಡಿದರೆ ಮಾತಾಡಿದರೆ ಅನುಮಾನಗೊಂಡು ಜಗಳ ಕಾಯುತ್ತಿದ್ದನಂತೆ. ಕೆಲವು ಅವಿವಾಹಿತ ಶಿಕ್ಷಕರೂ ಸುಕ್ರಣ್ಣನ ಅನುಮಾನದ ಕಣ್ಣಿಗೆ ಗುರಿಯಾಗಿ ಬೈಸಿಕೊಂಡದ್ದನ್ನೂ, ಅಪ್ಪನೇ ಮುಂದೆ ಹೋಗಿ ಅವನಿಗೆ ಬುದ್ದಿ ಹೇಳಿ ಸಂತೈಸಿದ್ದನ್ನು ಅಪ್ಪ ಮನೆಗೆ ಬಂದಾಗ ಅವ್ವನೊಡನೆ ವಿವರಿಸುವಾಗ ನಾವು ಕೇಳುತ್ತಿದ್ದೆವಾದರೂ ಚಿಕ್ಕವರಾದ ನಮಗೆ ಸಮಸ್ಯೆಯ ಅರಿವಾಗುತ್ತಿರಲಿಲ್ಲ. ಆದರೆ ಮಾತಿನ ಕೊನೆಯಲ್ಲಿ “ಮಳ್ಳ ಸುಕ್ರು … ಜಾತಿ ಮರ್ಯಾದೆನೆಲ್ಲಾ ಕಳೀತಾನೆ…” ಎಂದು ಮುಗಿಸುವುದನ್ನು ಕೇಳುತ್ತಾ ಸುಕ್ರಣ್ಣನಿಗೆ ಮಳ್ಳು ಹಿಡಿದಿದೆ ಎಂದೇ ನಾವು ನಂಬ ತೊಡಗಿದ್ದೆವು . ಸುಕ್ರಣ್ಣನ ಸಂಸಾರದ ನಡುವೆ ಬಿರುಕು ಬೆಳೆಯುತ್ತಾ ಸಾಗಿತು. ಶಿಕ್ಷಕರು, ವಿದ್ಯಾರ್ಥಿಗಳ ಮೇಲೆಲ್ಲಾ ಅನುಮಾನ ಪಡುತ್ತಾ ಶಾಲೆಯ ಆವರಣವನ್ನು ಪ್ರವೇಶಿಸಿ ಅವರನ್ನು ಬಯ್ಯ ತೊಡಗಿದಾಗ ಎಲ್ಲರಿಗೂ ಇವನ ಉಪದ್ರವ ಅಧಿಕವಾಯಿತೆಂದೇ ಅಸಹ್ಯಪಡುತ್ತಿದ್ದರು. ಕೆಲವೊಮ್ಮೆ ಯಾರನ್ನೂ ನೇರವಾಗಿ ಗುರಿಯಾಗಿಸದೇ ಎಲ್ಲರನ್ನೂ ದಿನವಿಡೀ ಬಯ್ಯುತ್ತ ಹುಚ್ಚರಂತೆಯೇ ವರ್ತಿಸತೊಡಗಿದ್ದ. ಕೊನೆ ಕೊನೆಗೆ ಸಾರ್ವಜನಿಕರೂ ಅವನನ್ನು ಮಳ್ಳನೆಂದೇ ಗುರುತಿಸುವ ಹಂತವನ್ನೂ ತಲುಪಿದ. ೧೯೬೨-೬೩ ರ ಅವಧಿ ಎಂದು ನೆನಪು. ಎಲ್ಲೆಡೆ ಭಯಂಕರ ಮಳೆ. ವರದಾ ನದಿ ಉಕ್ಕಿ ಹರಿಯುತ್ತಾ ರಥ ಬೀದಿಯವರೆಗೂ ಪ್ರವಾಹ ಹರಿದು ಬಂದಿತ್ತು. ಶಾಲೆಗಳಿಗೆ ರಜೆ ಘೋಷಣೆಯಾಗಿತ್ತು. ಚಿಕ್ಕವರಾದ ನಾವುಗಳೆಲ್ಲ ಮನೆಯಿಂದ ಹೊರಗೆ ಹೋಗಲೂ ಸಾಧ್ಯವಿಲ್ಲದೆ ಗ್ರಹ ಬಂಧನಕ್ಕೊಳಗಾಗಿದ್ದೆವು. ಅಂಥ ಭಯಾನಕ ಮಳೆಯ ಒಂದು ರಾತ್ರಿ ಸುಕ್ರಣ್ಣ ಇದ್ದಕ್ಕಿದ್ದಂತೆ ನಾಪತ್ತೆಯಾದ. ನಂತರದ ಎರಡು ದಿನ ಶಾಲಾ ಸಿಬ್ಬಂದಿಗಳೂ, ಊರಿನ ಕೆಲವು ಜನರೂ ಸೇರಿ ಊರೆಲ್ಲಾ ಹುಡುಕಾಡಿದರು. ಎಲ್ಲಿಯೂ ಅವನ ಸುಳಿವು ದೊರೆಯಲಿಲ್ಲ. ಭಯಂಕರವಾದ ಬಿರುಗಾಳಿ ಮಳೆಯ ಒಂದು ರಾತ್ರಿ ಮನುಷ್ಯ ಮಾತ್ರರು ಹೊರಬರಲಾಗದ ಕಗ್ಗತ್ತಲೆಯಲ್ಲಿ ಯಾರೋ “ಬೋಲೋ ಭಾರತ್ ಮಾತಾಕೀ….ಜೈ” ಎಂದು ಕೂಗುತ್ತಾ ಹೋದುದನ್ನು ಕೇಳಿದ್ದೇವೆ ಎಂದು ರಸ್ತೆಯಂಚಿನ ಮನೆಗಳ ಕೆಲವರು ಮಾತಾಡಿಕೊಂಡರು. ಅದು ಸುಕ್ರಣ್ಣನೇ ಇರಬಹುದೆಂದೂ ಬಹುತೇಕ ಜನ ಭಾವಿಸಿದರು. ನಾವು ಹಾಗೆಯೇ ಅನುಮಾನ ಪಟ್ಟುಕೊಂಡೆವು. ಮೂರನೆಯ ದಿನ ಶಾಲೆಯ ಶಿಕ್ಷಕರೂ ವಿದ್ಯಾರ್ಥಿ ಗುಂಪಿನೊಡನೆ ಸುಕ್ರಣ್ಣನನ್ನು ಅರಸಲು ಹೋದ ಅಪ್ಪ ನಿರಾಶೆಯಿಂದಲೇ ರಾತ್ರಿ ತಡವಾಗಿ ಮನೆಗೆ ಬಂದರು. ಅಪ್ಪ ಒಳಗೆ ಬಂದದ್ದೇ ನನ್ನ ತಮ್ಮ ನಾಗೇಶ ತುಂಬ ಮುಗ್ಧತೆಯಿಂದ “ಅಪ್ಪ ಸುಕ್ರಣ್ಣ ಸತ್ತೋದ್ನಂತೆ….” ಎಂದು ಹೇಳಿದ. ಅಪ್ಪ ಇದುವರೆಗೆ ತನ್ನ ದುಗುಡವನ್ನು ಹೊಟ್ಟೆಯೊಳಗೇ ತಡೆದಿಟ್ಟುಕೊಂಡಿದ್ದನೆನೋ.. ಒಮ್ಮೆಲೆ ಬಿಕ್ಕಿ ಬಿಕ್ಕಿ ಅಳತೊಡಗಿದ. ಅವ್ವ ಮತ್ತು ನಾವೆಲ್ಲ ಅಪ್ಪನನ್ನು ಸಂತೈಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ****************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಅಂಕಣ ಬರಹ ಕಬ್ಬಿಗರ ಅಬ್ಬಿ ಮೌ..ನದ ನಡುವಿನ ಮೌನ ಸುಮಾರು ಮೂವತ್ತು ವರ್ಷಗಳ ಹಿಂದೆ ಕಾಡಿನ ನಟ್ಟ ನಡುವೆ, ಟೆಂಟ್ ನೊಳಗೆ ಮಲಗಿದ್ದೆ. ಚಿಕ್ಕಮಗಳೂರಿನ ಭದ್ರಾ ರಕ್ಷಿತಾರಣ್ಯದಲ್ಲಿ ಸ್ಕೌಟ್ ಕ್ಯಾಂಪ್ ಅದು. ವಿದ್ಯುತ್ ದೀಪಗಳು ಇರಲಿಲ್ಲ, ಕತ್ತಲು ಸುತ್ತಲೂ. ವರ್ಷಗಳ ಹಿಂದೆ ದೂರ ನಕ್ಷತ್ರ ಗಳಿಂದ ಯಾತ್ರೆ ಹೊರಟು ಯಾತ್ರೆಯ ದಣಿವಿನಿಂದ ಮಂದವಾದ ಕಿರಣಗಳು, ತಂಗದಿರನ ಸೌಮ್ಯ ಬೆಳಕು ಮಾತ್ರ ಆ ಕಾಡನ್ನು ತಬ್ಬಿದ್ದವು. ಟೆಂಟು ಸುತ್ತಲೂ ಗಗನಕ್ಕೆ ಗೆಲ್ಲು ಚಾಚಿದ ಬೃಹತ್ ವೃಕ್ಷಗಳು. ಅವುಗಳಿಂದಾಚೆಗೆ ಕತ್ತಲೆ ಅಂದರೆ ಕತ್ತಲೆಯೇ. ಟೆಂಟ್ ನೊಳಗೆ ಕಣ್ಣೆಷ್ಟು ಅರಳಿಸಿದರೂ ಅರಿವಿಗೇ ಎಟುಕದಟಷ್ಟು ಕತ್ತಲೆ. ಅದಕ್ಕಿಂತ ಗಾಢ ಅನುಭೂತಿ ಮೌನದ್ದು. ಎಲ್ಲೋ ದೂರದ ಪ್ರಾಣಿಗಳ ಕೂಗನ್ನು ಬಿಟ್ಟರೆ ಅಲ್ಲಿ ಶಬ್ಧಶೂನ್ಯತ್ವ. ಆ ಮೌನದ ತಂಪಿನಲ್ಲಿ ಮನಸ್ಸು ತಣಿದು ಸೂಕ್ಷ್ಮ ಸಂವೇದನೆಗಳು ಜಾಗೃತವಾಗುತ್ತೆ. ನಮ್ಮ ಎದೆಬಡಿತ ನಮಗೇ ಕೇಳ ತೊಡಗುತ್ತೆ. ಸಾಗರದ ಅಲೆಗಳು ಶಾಂತವಾದಾಗ ಆಳದಲ್ಲಿ ಸದ್ದಿಲ್ಲದೆ ನಡೆಯುವ ಹರಿವಿನ ಅನುಭೂತಿ ಆಗುತ್ತೆ. ಆಳದಲ್ಲಿ ಈಜಾಡುವ ಮೀನುಗಳು, ಬೃಹತ್ ತಿಮಿಂಗಿಲಗಳು, ರಕ್ತಕ್ಕಾಗಿ ಹಸಿದು ಅಸಹನೆಯಿಂದ ಸರಸರನೆ ಈಜುವ ಶಾರ್ಕ್ ಗಳು ಮತ್ತು ಇನ್ನಿತರ ಜಲಚರಗಳು ತಮ್ಮ ಚಲನೆಯಿಂದ ನಡೆಯುವ ತಲ್ಲಣಗಳು ಅರಿವಿಗೂ ಬರುತ್ತವೆ. ಹೃಷೀಕೇಶದ ತಪ್ಪಲಿನಿಂದ, ಹಿಮಾಲಯದ ಏರು ಆರಂಭ. ಹತ್ತಾರು ಕಿಲೋಮೀಟರ್ ಹತ್ತಿದರೆ ವಸಿಷ್ಠ ಗುಹೆ. ಅದರೊಳಗೆ ಕುಳಿತರೂ ಅಷ್ಟೇ, ರಾತ್ರೆಯ ಕತ್ತಲು, ಹಿಮಾಲಯದ ತಂಪಿಗೆ, ಮನಸ್ಸು ಸ್ಪಟಿಕೀಕರಿಸಿ ಮೌನ ಸಂಭವಿಸುತ್ತೆ. ಒಂದು ವಿಷಯ ಗಮನಿಸಿ. ಮೌನ ಎಂದರೆ ನಾಲಿಗೆಯನ್ನು ಸುಮ್ಮನಿರಿಸುವುದಲ್ಲ, ಕಿವಿ ಮುಚ್ಚುವುದೂ ಅಲ್ಲ. ನಮ್ಮ ಇಂದ್ರಿಯಗಳು ಹೊರಗಿನ ಅಲೆಗಳಿಗೆ ಸ್ಪಂದಿಸುತ್ತಲೇ ಇರುತ್ತವೆ. ದೃಶ್ಯ, ಶಬ್ದ, ಸ್ಪರ್ಶ, ರಸಸ್ವಾದ, ವಾಸನೆ ಇವುಗಳನ್ನು ಗ್ರಹಿಸಿ ಪ್ರತಿಕ್ರಿಯೆ ಕೊಡುತ್ತವೆ. ಇವು ದೇಹದ ಚಟುವಟಿಕೆಗಳಿಗೆ ಅಗತ್ಯವೂ ಹೌದು. ಮೌನದ ಮೊದಲನೆಯ ಹಂತದಲ್ಲಿ, ಈ ಇಂದ್ರಿಯಗಳನ್ನು ಸಂಪೂರ್ಣ ಶಾಂತವಾಗಿಸಬೇಕು. ಅದು ಮೌನದ ಮೊದಲ ಹಂತ. ಮೌನದ ಎರಡನೆಯ ಹಂತದಲ್ಲಿ, ಭಾವ ಮತ್ತು ಕಲ್ಪನೆಗಳನ್ನು ಮೌನಕ್ಕೆ ಶರಣಾಗಿಸುವ ಕ್ರಿಯೆ. ಕಣ್ಣು ಮುಚ್ಚಿದರೆ, ಹೊರಗಿನ ದೃಶ್ಯ ಕಾಣದಿರಬಹುದು. ಆದರೆ ಮನಸ್ಸು, ಇಷ್ಟವಾದ, ಹಲವು ದೃಶ್ಯಗಳನ್ನು ಮನ:ಪಟಲದ ಮುಂದೆ ತಂದು ಆನಂದಿಸುತ್ತದೆ. ಹಾಗೆಯೇ ಶಬ್ಧವೂ. ಕಿವಿ ಮುಚ್ಚಿದರೂ, ಮನಸ್ಸಿನೊಳಗೆ ಇಷ್ಟವಾದ ಯಾವುದೋ ಹಾಡು, ಇನಿಯೆಯ ಪ್ರೀತಿಯ ಮಾತುಗಳು, ಮೇಷ್ಟ್ರು ಬೈದ ಮಾತುಗಳು, ಹೀಗೆ ಹತ್ತು ಹಲವು ಶಬ್ಧಗಳು ನಿಃಶಬ್ಧದ ಬಾಗಿಲು ಮುರಿದು ಒಳ ನುಗ್ಗುತ್ತವೆ. ಈ ಕಾನ್ಶಿಯಸ್ ಮೈಂಡ್ ಅನ್ನು ಮೌನವಾಗಿಸುವುದು ಎರಡನೆಯ ಹಂತ. ಮೂರನೆಯ ಹಂತದಲ್ಲಿ, ಧ್ಯಾನಕ್ಕೆ ಮನಸ್ಸನ್ನು ಸಮರ್ಪಿಸಿದರೆ, ಮೌನದ ತುರೀಯಕ್ಕೆ ಪ್ರಜ್ಞೆ ತಲಪುತ್ತೆ. ಇದರ ಬಗ್ಗೆ ಬೇಂದ್ರೆಯವರು ಹೀಗೆ ಹೇಳುತ್ತಾರೆ. “ಮೌನವು ಮಾತಿನ ತಪಸ್ಸು- ಮೊದಲ ಮೆಟ್ಟಿಲು. ಎರಡನೆಯ ಮೆಟ್ಟಿಲಲ್ಲಿ ಅದು ಮೌನದ ಅವಸ್ಥಾ ಶಿಖರ! ನಿಜವಾದ ಉತ್ತಮ ಮೌನವು ಮನದ ಗೌರೀಶಂಕರ, ಧವಲಗಿರಿ” ಅರಬಿಂದೋ ಅವರ ಧ್ಯಾನ ಯೋಗದಿಂದ ಪ್ರೇರಣೆ ಪಡೆದು ೧೯೪೮ರಲ್ಲಿ, ಬೇಂದ್ರೆ ಮತ್ತು ವಿ.ಕೃ. ಗೋಕಾಕ್ ಅವರು, ಇತರ ಸಮಾನ ಮನಸ್ಕ ಗೆಳೆಯರ ಜತೆಗೆ ಮೌನ ಸಪ್ತಾಹ ಆಚರಿಸುತ್ತಾರೆ. ಆ ಮೌನ ಸಪ್ತಾಹದಲ್ಲಿ, ಮೌನಾಚರಣೆಯ ಗರ್ಭದ ಆಳಚಿಂತನೆಯಿಂದ ಅವರು ಬರೆದ ಕವನ ” ಅಸ್ಮಿತಾ” ಅದರ ಕೊನೆಯ ಸಾಲುಗಳು ಹೀಗಿವೆ. “ತಾಯಿ ಕೂಸಿನ ಮುದ್ದು ಮೌನದಲಿ ಮಿಡಿದಾಗ ಶ್ರುತಿಯನ್ನು ಹಿಡಿದಿರುವೆಯಾ ? ಧ್ಯಾನ ಪಕ್ವತೆ ಪಡೆದು ಮೌನ ಬೀಜವು ಸಿಡಿದು ಓಂವೇದ ಪಡೆದಿರುವೆಯಾ ? ಸ್ಮಿತವೆ ವಿಸ್ಮಿತವಾಯ್ತು ಅಸ್ಪರ್ಶ ಸ್ಪರ್ಶದಲಿ ಅಸ್ಮಿತೆಯು ಸ್ಫೂರ್ತಿಸಿತ್ತು ವಿಸ್ಮಿತದ ಸ್ತಿಮಿತದಲಿ ಮೌನವೇ ಧ್ವನಿಸುತಿರೆ ಸ್ಮಿತವಾಗಿ ಮೂರ್ತಿಸಿತ್ತು.” ಮೌನದಾಚೆಗಿನ ಧ್ಯಾನಸ್ಥ ಸ್ಥಿತಿಯಿಂದ, ” ಸ್ಮಿತವೆ ವಿಸ್ಮಿತವಾಯ್ತು, ಅಸ್ಪರ್ಶ ಸ್ಪರ್ಶದಲಿ ಅಸ್ಮಿತೆಯು ಸ್ಪೂರ್ತಿಸಿತ್ತು, ” ಶಬ್ದಗಳ ಶಬ್ಧಕ್ಕೆ ಮೀರಿದ ಸಾಲುಗಳಿವು. ಕಳಿಂಗ ಯುದ್ಧದ ನಂತರದ ರಾತ್ರೆ, ಚಕ್ರವರ್ತಿ ಅಶೋಕ ತಾನೇ ಹರಿಸಿದ ರಕ್ತದ ಕೋಡಿಯನ್ನು ನೋಡಿ ಹಲವು ಚಿಂತನೆಗಳಿಗೊಳಗಾಗುತ್ತಾನೆ. ರಾತ್ರೆಯಿಡೀ ಆತನ ಮೌನ, ಮಾರನೆಯ ದಿನ ತನ್ನ ಬದುಕನ್ನೇ ಅಹಿಂಸೆಗೆ ಸಮರ್ಪಣೆ ಮಾಡುವ ನಿರ್ಧಾರದ ಹಿಂದೆ ಯುದ್ಧಾನಂತರದ ಮೌನವಿದೆ. ಧಾರಾಕಾರವಾಗಿ ಸುರಿದ ಮಳೆ, ಸಿಡಿಲು, ಕೋಲ್ಮಿಂಚು, ನಂತರ ಎಲ್ಲವೂ ಮೌನವಾಗುತ್ತೆ. ತಡೆಯಲಾದ ದುಃಖದಿಂದ ಬಿಕ್ಕಿ ಬಿಕ್ಕಿ ಅತ್ತ ನಂತರವೂ ಒಂದು ಸುದೀರ್ಘ ಮೌನವಿರುತ್ತದೆ. ಗಂಡ ಹೆಂಡತಿಯರ ಜಗಳದ ನಂತರದ ಮೌನಕ್ಕೆ ಔಷಧೀಯ ಗುಣವಿದೆ. ಮೌನ ಖಾಲಿ ಹಾಳೆಯಂತೆ. ಅದರಲ್ಲಿ ನೀವೇನು ಕಾಣ ಬಯಸುತ್ತೀರೋ,ಅದನ್ನು ಬರೆಯಬಹುದು. ಅದಕ್ಕೇ ಮೌನವನ್ನು ಕವಿಗಳು ಕಾಡಿ ಕಂಡು ಹಾಡಿ, ಬಳಸಿದ್ದಾರೆ. ಬೇಂದ್ರೆಯವರ “ಏಲಾಗೀತ” ದಲ್ಲಿ ಮೌನದ ಅಪೂರ್ವ ಸಾಲು ಹೀಗಿದೆ. “ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು. “ ಮೌನ, ಶಬ್ಧಕ್ಕೆ ಹಾಸಿಗೆ ಅನ್ನುತ್ತಾರೆ,ಬೇಂದ್ರೆಯವರು ಗೋಪಾಲಕೃಷ್ಣ ಅಡಿಗರ ಈ ಕೆಳಗಿನ ಕವನ ಆರಂಭವಾಗುವುದೇ ಮೌನದಿಂದ. “ಮೌನ ತಬ್ಬಿತು ನೆಲವ; ಜುಮ್ಮೆನೆ ಪುಳಕಗೊಂಡಿತು ಧಾರಿಣಿ ನೋಡಿ ನಾಚಿತು ಬಾನು; ಸೇರಿತು ಕೆಂಪು ಸಂಜೆಯ ಕದಪಲಿ ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು; ನೆಲವು ತಣಿಯಿತು, ಬೆವರು ಹನಿಯಿತು; ಭಾಷ್ಪ ನೆನೆಸಿತು ಹುಲ್ಲನು ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು, ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು” ಭೂಮಿಯೇ ಮೌನವನ್ನು ಬೆಚ್ಚಗೆ ಅಪ್ಪಿಕೊಂಡು ಪುಳಕಗೊಳ್ಳುವಾಗ, ಆಕೆ ಧಾರಿಣಿಯಾಗುತ್ತಾಳೆ. ಹಿಂದುಸ್ತಾನಿ ಸಂಗೀತದಲ್ಲಿ, ಒಂದು ಸ್ವರವನ್ನ ಬಿಗಿ ಹಿಡಿದು ಕಡಿಯದ ಧಾರೆಯಂತೆ ಮಾಡುವ ಸುದೀರ್ಘ ಆಲಾಪಕ್ಕೆ, ಧಾರಣೆ ಅನ್ನುವುದಿದೆ. ಧಾರಣೆಯಲ್ಲಿ ಸ್ವರಸಮರ್ಪಣೆಯ ಧ್ಯಾನಸ್ಥ ಮನಸ್ಸಿದೆ. “ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು, ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು” ಪ್ರಕೃತಿಯ ಕ್ರಿಯೆಗಳು ಮೌನವನ್ನು ಜತೆ ಜತೆಗೇ ಹೊತ್ತು ತರುತ್ತವೆ. ನಾವು ನಡೆಯುವಾಗ, ಎರಡು ಹೆಜ್ಜೆಗಳ ನಡುವೆ ಮೌನವಿದೆ. ನಾವು ಬರೆಯುವ ವಾಕ್ಯಗಳಲ್ಲಿ ಪದಗಳ ನಡುವೆ ಮೌನವಿದೆ. ಸ್ಫುರಿಸುವ ಭಾವ ವೈವಿಧ್ಯಗಳ ನಡುವೆ ಮೌನವಿದೆ. ನಿತ್ಯಕವಿ ನಿಸಾರ್ ಅಹಮದ್ ಅವರ ಬೇಸರಾಗಿದೆ ಮಾತು ಕವನದ ಕೆಲವು ಸಾಲುಗಳು ಹೀಗಿದೆ ನೋಡಿ. ” ಬೇಸರಾಗಿದೆ ಮಾತು, ಭಾರವಾಗಿದೆ ಮೌನ ನೋವು ಕರಗಿದೆ ಕಣ್ಣಲ್ಲಿ ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೆ ಮುರಿಯದಂತೆ ಭಾವ ಕುಟುಕಿದೆ ಮನದಲಿ ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ ಕನಸುವಂತೆಯೆ ಮೊಳಕೆಗೆ ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ ಹೊಸತು ಬದುಕಿನ ಬಯಕೆಗೆ” ಅಡಿಗೆ ಚುಚ್ಚಿದ ಮುಳ್ಳು, ಒಳಗಡೆಯೆ ಮುರಿದು, ನೋವೇ ಕಣ್ಣೀರಲ್ಲಿ ಕರಗಿದ ದುಃಖದಿಂದ, ಮೌನ ಸಹಜವೂ ಹೌದು, ಆ ಮೌನ ಭಾರವೂ ಹೌದು. ಆದರೆ ಅಂತಹ ಮೌನ ನೋವಿನ ಹಿಂದಿನ ಬಂಧನದ ಅರಿವನ್ನು ತಿಳಿಯಾಗಿಸಲು ದಾರಿಯಾಗುತ್ತೆ. ಎಲ್ಲ ನಂಟನು ತೊರೆದು ನಗ್ನವಾದ ಜೀವ, ಹೊಸ ಬದುಕಿನತ್ತ ಕದ ತೆರೆಯುತ್ತೆ. ಈ ಎಲ್ಲ ನಂಟನು ತೊರೆದು ನಗ್ನವಾಗುವ ಕ್ರಿಯೆಯ ಮೂಲದಲ್ಲಿ ಮೌನ ಸೃಜಿಸಿದ ಮಂಥನವಿದೆ. ಹುಟ್ಟಿದ ನೆಲದಿಂದ ಗಿಡವನ್ನು ಕಿತ್ತು ತೆಗೆದರೆ ಗಿಡಕ್ಕೆಷ್ಟು ನೋವಾಗಬಹುದು. ಹಾಗೆ ಬೇರು ಸಹಿತ ಕಿತ್ತ ಗಿಡವನ್ನು ದೂರದ ಅರಿಯದ ಹೊಲದಲ್ಲಿ ನೆಟ್ಟರೆ?. ಮದುವೆಯಾಗಿ ಪ್ರೀತಿಯ ತನ್ನ ಮನೆ ತವರುಮನೆಯಾಗುವ ಮಾರ್ಪಾಡಿನಲ್ಲಿ, ತಿಳಿಯದ ಇನ್ನೊಂದು ಮನೆ ಸ್ವಂತದ್ದಾಗಿಸಲೇ ಬೇಕಾದ ಟ್ರಾನ್ಸಿಷನ್ ಹೂಮನಸ್ಸಿನ ಹುಡುಗಿಗೆ ಹೇಗನಿಸಬಹುದು?. ಗಂಡನ ಮನೆಯ ಆ ಮೊದಲ ದಿನದ ಮೌನದ ಬಗ್ಗೆ ಬಹುಷಃ ಕೆ ಎಸ್ ನ ಅವರಿಗಿಂತ ಚಂದ ಯಾರೂ ಬರೆಯಲಾರರು. “ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ ಚಿಂತೆ ಬಿಡಿ ಹೂವ ಮುಡಿದಂತೆ ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ ಜೀವದಲಿ ಜಾತ್ರೆ ಮುಗಿದಂತೆ” ಅಂತಹ ತಳಮಳ, ತನ್ನವರ ಅಗಲಿಕೆಯ ದುಃಖ, ಭಾವೋದ್ವೇಗ, ಭಯ, ಎಲ್ಲವನ್ನೂ ಈ ಮೊದಲ ದಿನ ಮೌನ, ಮೌನವಾಗಿಯೇ ಹೇಳಿಬಿಡುತ್ತೆ. ಪು ತಿ ನ ಅವರ “ಯದುಗಿರಿಯ ಮೌನ ವಿಕಾಸ” ಎಂಬ ಕವನವೂ ಮೌನ ಪ್ರತಿಮೆಯ ಸುತ್ತ ಹಲವು ರೂಪಗಳ ಕೆತ್ತಿದೆ.. ಈ ಕವಿತೆಯ ಬಗ್ಗೆ ಬರೆಯಲು ಒಂದು ಪೂರ್ತಿ ಲೇಖನವೂ ಸಣ್ಣದಾದೀತು, ಮುಂದೊಂದು ದಿನ ಬರೆಯುವೆ. “ಅಲೆಯೊಳಗಿನ ಮೌನ” ಎಂಬ ಗಜಲ್ ಸಂಕಲನದಲ್ಲಿ ಶ್ರೀದೇವಿ ಕೆರೆಮನೆ ಅವರ ಕವಿತೆಯೂ ಪ್ರೀತಿ ಸಂವಾದದ ಸಾಲುಗಳಲ್ಲಿ ಮೌನಕ್ಕೆ ಹಲವು ಅರ್ಥಪ್ರಯೋಗ ಮಾಡಿದೆ. “ಯುಗಾಂತರದಿಂದಲೂ ಮೌನಕ್ಕೆ ಜಾರಿದಂತೆ ಮನಸ್ಸು ಹೆಪ್ಪುಗಟ್ಟುತ್ತಿದೆ ನಿನ್ನ ಒಂದು ಮಾತು ನನ್ನ ಬದುಕಿಗೆ ಮರಳುವಂತೆ ಮಾಡುತ್ತಿದೆ ಮೌನದಿಂದ ನನ್ನನ್ನು ಕೊಲ್ಲುವ ಇರಾದೆ ಏಕೆ ನಿನಗೆ ನಿನ್ನ ಮೌನ ನನ್ನನ್ನು ಇರಿದಿರಿದು ಸಾಯಿಸುತ್ತಿದೆ. ಮುಗಿದ ಮಾತುಗಳ ಮೌನದರಮನೆಗೆ ರಾಣಿಯಾಗಲಾರೆ ಅರಮನೆಯ ಸಂಕಲೆ ನನ್ನನ್ನು ದಿಕ್ಬಂಧನಕ್ಕೆ ಒಳಪಡಿಸುತ್ತಿದೆ ಮಾತಿಗೂ ಬರಗಾಲ ತಂದಿಡುವ ಆಶಯವಾದರೂ ನಿನಗೇಕೆ? ಮಾತು ಈಗ ದೂರದಲ್ಲಿ ಸೆಳೆಯುವ ಮೃಗಜಲದಂತೆ ಗೋಚರಿಸುತ್ತಿದೆ. ಸಾಕುಬಿಡು ನಿನ್ನ ಗಾದೆ ಮಾತಿನ ಥಳುಕಿಗಷ್ಟು ಬೆಂಕಿಯಿಡು ಬದುಕಿಸುವ ಮಾತಿನ ಬೆಳ್ಳಿಗಿಂತ ಮೌನದ ಬಂಗಾರ ಕೊಲ್ಲುತ್ತಿದೆ. ಎಂದಾದರೂ ಬದುಕು ಮೌನದ ಕಣಿವೆಯೊಳಗೆ ಜಾರಲೇ ಬೇಕು ‘ಸಿರಿ’ ಒಂದಾಗಿಸುವ ಮೃದು ಮಾತನ್ನಷ್ಟೇ ಬೇಡುತಿದೆ.” ಮೌನ ವಿರಹಸೂಚಕವಾಗಿ, ಮೌನವೇ ಎದೆಗಿರಿಯುವ ಆಯುಧವಾಗಿ, ಮೌನ ಅರಮನೆಯಾಗಿ, ಸಂಕಲೆಗಳಾಗಿ, ಮಾತಿನ ಬರಗಾಲವಾಗಿ, ಮೌನ,ಬದುಕಿನ ಅನಿವಾರ್ಯ ಕಣಿವೆಯಾಗಿ ಚಿತ್ರಿಸಲ್ಪಟ್ಟದ್ದು ಕವಯಿತ್ರಿಯ ಸೃಜನಶೀಲತೆಗೆ ಸಾಕ್ಷಿ. ಅಲೆಯೊಳಗಿನ ಮೌನ ಎಂಬ ಸಂಕಲನದ ಶೀರ್ಷಿಕೆಗೂ ವಿಶೇಷ ಅರ್ಥವಿದೆ. ನಾದ ಎಂಬುದು ಒಂದಕ್ಕೊಂದು ಜೋಡಣೆಯಾಗಿ ಕಾಲಗತಿಯಲ್ಲಿ ಸಂಚರಿಸುವ ಅಲೆಯ ಪ್ರವಾಹ. ಆ ನಾದದೊಳಗೆ, ತರಂಗಾವರ್ತನಗಳೊಳಗೆ ಮೌನ ಕಾಣುವ ಅನನ್ಯ ನೋಟ ಕವಯಿತ್ರಿ ಅವರದ್ದು. ಜನವರಿ ಇಪ್ಪತ್ತಾರು, ಕೆ ಎಸ್ ನ ಅವರ ಮತ್ತು ಮೂವತ್ತೊಂದು ಬೇಂದ್ರೆಯವರ ಜನ್ಮ ದಿನ. ಅವರಿಬ್ಬರ ದಿವ್ಯ ಭವ್ಯ ಚೇತನಗಳಿಗೆ ಶಿರಬಾಗಿ ನಮಿಪೆ. ********************************************************** ಮಹಾದೇವ ಕಾನತ್ತಿಲ ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ
ಅಂಕಣ ಬರಹ ಮಕ್ಕಳು ಮಾತ್ರ ಹೀಗಿರಲು ಸಾಧ್ಯ ಅಲ್ಲವಾ.. ಹೆರಿಗೆ ನೋವು ಶುರುವಾಗುವ ಸೂಚನೆಗಳಿದ್ದವು. ಅಂದು ಬೆಳಗ್ಗೆ ಮಗ್ಗಲು ಬದಲಾಯಿಸುವಾಗಲೇ ಎಂಥದೋ ನೋವಿನ ಸಳುಕು ಚುಳ್ ಎನ್ನಲು ಶುರುಮಾಡಿತ್ತು. ನಿಧಾನ ಎದ್ದು ನೆಲಕ್ಕೆ ಕಾಲು ಊರಿದಾಗ ಪಾದಗಳು ನೋಯುತ್ತಿದ್ದವು. ಇನ್ನು ಈ ದೇಹದ ಭಾರ ಹೊರಲಾರೆ ಎನ್ನುವಷ್ಟು ಊದಿಕೊಂಡಿದ್ದ ಪಾದಗಳು ಇಡಲಾರದೆ ಹೆಜ್ಜೆ ಇಡುತ್ತಿದ್ದವು. ಮೆಲ್ಲಗೆ ಹೋಗಿ ಹಲ್ಲುಜ್ಜಿ, ಮುಖ ತೊಳೆದು ಬಂದೆ. ಹೆರಿಗೆ ನೋವು ಶುರುವಾಗಿಯೇ ಬಿಟ್ಟಿತು… ಸಮುದ್ರದ ಅಲೆಯಂತಹ ನೋವದು. ಬಿಟ್ಟು ಬಿಟ್ಟು ಬರುತ್ತಿತ್ತು. ನಾವು ಆಸ್ಪತ್ರೆಗೆ ಹೊರಡಲು ತಯಾರಾದೆವು. ಆದರೆ ಎಷ್ಟು ಹೊತ್ತಾದರೂ ನೋವು ತೀವ್ರವಾಗಲಿಲ್ಲ. ಒಂಥರಾ ಭಯ ಒಂಥರಾ ಗಾಬರಿ… ಸರಿ ಎಂದು ಆಸ್ಪತ್ರೆಗೆ ಹೊರಟೆವು. ಐದು ವರ್ಷದ ಮಗನನ್ನು ಮನೆಯಲ್ಲಿ ಬಿಟ್ಟು ಹೋಗುವುದು ಎಂದುಕೊಂಡೆವು. ಆದರೆ ಅವನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇರುವುದಿಲ್ಲ ಎಂದು ಹಟ ಹಿಡಿದ. ಗತ್ಯಂತರವಿಲ್ಲದೆ ಅವನನ್ನೂ ಕರೆದುಕೊಂಡು ಹೊರಟೆವು. ಅವನಿಗೋ ದೊಡ್ಡ ಕುತೂಹಲ. ಅಮ್ಮನ ಹೊಟ್ಟೆಯಿಂದ ಪಾಪು ಹೇಗೆ ಬರುತ್ತದೆ, ಪಾಪು ಹೇಗಿರುತ್ತದೆ ಎಂದು. ಸಾಲದ್ದಕ್ಕೆ ಅವನಿಗೆ ತಮ್ಮ ಬೇಕಾಗಿತ್ತು. ನಿನಗೆ ತಂಗಿ ಬೇಕೋ ತಮ್ಮ ಬೇಕೋ ಅಂತ ಯಾವಾಗ ಕೇಳಿದರೂ ನನಗೆ ತಮ್ಮನೇ ಬೇಕು ಎನ್ನುತ್ತಿದ್ದ. ನಾವೇ ಲ್ಲ ನಗುತ್ತಿದ್ದೆವು. ಆಸ್ಪತ್ರೆಗೆ ಹೋದಾಗ ಹೆಚ್ಚು ಕಡಿಮೆ ಸಂಜೆಯಾಗಿತ್ತು. ಹೋಗಿ ಅಡ್ಮಿಟ್ ಆದೆವು. ರಾತ್ರಿ ಹತ್ತಾದರೂ ಹೆರಿಗೆ ಆಗಲಿಲ್ಲ. ಮಗನಿಗೆ ನೀನು ಮಲಗು ಪುಟ್ಟಾ ಬೆಳಗ್ಗೆ ಹೊತ್ತಿಗೆ ಪಾಪು ಬಂದಿರುತ್ತದೆ, ಆಗ ನೋಡುವಿಯಂತೆ ಎಂದು ಎಷ್ಟು ಹೇಳಿದರೂ ಕೇಳುತ್ತಿಲ್ಲ. ಹಟ ಹಿಡಿದು ಕೂತಿದ್ದ. ತಮ್ಮ ಬಂದ ಮೇಲೆಯೇ ಮಲಗುತ್ತೇನೆ ಎಂದು. ನಂತರ ಡಾಕ್ಟರ್ ಬಂದು ಚೆಕಪ್ ಮಾಡಿ ಹೆರಿಗೆ ನಾರ್ಮಲ್ ಆಗುವುದಿಲ್ಲ ಸಿಸೇರಿಯನ್ ಮಾಡಬೇಕು ಎಂದರು. ಸರಿ ಎಲ್ಲ ಸಿದ್ಧವಾಯಿತು. ನನ್ನನ್ನು ಓಟಿ ಗೆ ಕರೆದೊಯ್ಯುತ್ತಿದ್ದರು, ಪಾಪ ಮಗನ ಮುಖ ಇಷ್ಟಾಗಿತ್ತು. ಆ ಕ್ಷಣ ಅವನ ಮುಖ ನೋಡುವಾಗ ಸಧ್ಯ ಎಲ್ಲ ಸುಗಮವಾಗಿ ಆದರೆ ಸಾಕಪ್ಪಾ ಎಂದು ದೇವರಲ್ಲಿ ಬೇಡಿಕೊಳ್ಳಬೇಕೆನಿಸಿತು. ಅಂತೂ ಎಲ್ಲ ಸಸೂತ್ರ ಆಯಿತು. ಆದರೆ ಮಗನ ಆಸೆ ಮಾತ್ರ ಈಡೇರಲಿಲ್ಲ. ತಮ್ಮನ ಬದಲಾಗಿ ತಂಗಿ ಬಂದಳು. ಅನೆಸ್ತೀಶಿಯ ನೀಡಿದ್ದರಿಂದ ದೇಹ ಇನ್ನು ಅದರ ಪ್ರಭಾವದಿಂದ ಹೊರಬಂದಿರಲಿಲ್ಲ. ಅಕ್ಷರಶಃ ಹೆಣದ ರೀತಿಯಲ್ಲಿ ಓಟಿಯಿಂದ ವಾರ್ಡಿಗೆ ಶಿಫ್ಟ್ ಮಾಡಿದರು. ಇದನ್ನೆಲ್ಲ ನೋಡುತ್ತಿದ್ದ ಮಗನಿಗೆ ಎಷ್ಟು ಭಯವಾಯಿತೋ… ಪಾಪ ಕಣ್ಣಲ್ಲಿ ನೀರು ತುಂಬಿತ್ತ. ಬಾರೋ ಇಲ್ಲಿ… ಹತ್ರ ಬಾರೋ… ನೋಡಿಲ್ಲಿ ನಂಗೇನು ಆಗಿಲ್ಲ ಅಂತ ಕರೆದೆ. ಪಾಪ ಪೆಚ್ಚು ಪೆಚ್ಚಾಗಿ ಬಂದು ಕುಳಿತುಕೊಂಡ. ಅವನ ಮೈತಡವಿದೆ, ಮುದ್ದು ಮಾಡಿದೆ. ಆಮೇಲೆ ನೋಡೋ ನಿನ್ನಚತಂಗಿ ಬಂದಿದಾಳೆ ಅಂದೆ. ಎಲ್ಲರೂ ನಗಲು ಶುರು ಮಾಡಿದರು. ಅಯ್ಯೋ ಪಾಪ ಸಿದ್ಧಾಂತನಿಗೆ ತಂಗಿ ಬರಲಿಲ್ಲ…. ಎಂದು ಗೇಲಿ ಮಾಡಿದರು. ಅವನಿಗೂ ನಗು ಬಂತು. ಅವನಿಗೆ ಪಾಪುವನ್ನು ನೋಡುವುದೇ ಸಂಭ್ರಮ ಎನಿಸಿಬಿಟ್ಟಿತ್ತು. ಅವನಿಗಿದ್ದಿದ್ದೆಲ್ಲ ಒಂದೇ ತಂಗಿಯಾದರೆ ನನ್ನವಜೊತೆ ಆಡಲು ಬರುವುದಿಲ್ಲ ತಮ್ಮನಾದರೆ ನನ್ನ ಜೊತೆ ಆಡಲು ಬರುತ್ತಾನೆ ಎಂದು. ಆದರೆ ಹೊಸ ಪಾಪುವುನ ಮುಖ ನೋಡಿದಾಕ್ಷಣ ಅದೆಲ್ಲವೂ ಗಾಳಿಗೆ ತೂರಿ ಹೋಯಿತು. ತಂಗಿಯ ಮುಖ ನೋಡಿಯಾದ ಮೇಲೆಯೇ ಅವ ಮಲಗಿದ್ದು. ಮರುದಿನ ಸರಿ ತಂಗಿ ಬಂದಾಯಿತಲ್ಲ ಮನೆಗೆ ಹೋಗೋಣ ನಡಿಯೋ ಎಂದರೆ ಕೇಳುತ್ತಲೇ ಇಲ್ಲ ನಾನೂ ತಂಗಿಯ ಜೊತೆಯೇ ಇರುತ್ತೇನೆ ಎಂದು ಹಟ ಹಿಡಿದ. ಹಂಗೂ ಹಿಂಗೂ ಮಾಡಿ ಮೂರು ದಿನ ಆಸ್ಪತ್ರೆಯಲ್ಲೇ ಕಳೆದ. ನಾಲ್ಕನೇ ದಿನ ಯಾಮಾರಿಸಿ ಅವನನ್ನು ಮನೆಗೆ ಕಳಿಸಿದ್ದೆವು. ಈಗಲೂ ಅದನ್ನೆಲ್ಲ ನೆನೆದರೆ ವಿಪರೀತ ನಗು ಬರುತ್ತದೆ. ಈಗಂತೂ ಮಗಳಿಗೆ ಮೂರು ವರ್ಷ. ಇಬ್ಬರೂ ಒಮ್ಮೊಮ್ಮೆ ಪರಮಾಪ್ತ ಗೆಳೆಯರು ಒಮ್ಮೊಮ್ಮೆ ಹಾವು ಮುಂಗಸಿಗಳು. ಒಂದಂತೂ ಅಚ್ಚರಿ ನನಗೆ ಮಕ್ಕಳ ಮುಗ್ಧತೆ ಕುತೂಹಲ ಯಾಪರಿ ಇರುತ್ತದಲ್ಲಾ ಎಂದು. ಅಂದು ಮನೆಯಲ್ಲಿ ಹಬ್ಬವಿತ್ತು. ಮಗ ಪದೇ ಪದೇ ಕಿತಾಪತಿ ಮಾಡುತ್ತಿದ್ದ. ತಂಟೆ ಮಾಡುತ್ತಾನೆಂದು ಮಗನನ್ನು ಅದು ಮಾಡಬೇಡ ಇದು ಮಾಡಬೇಡ ಅಂತ ಪದೇ ಪದೇ ಅನ್ನುತ್ತಿದ್ದೆವು. ಇದರಿಂದ ಬಹುಶಃ ಅವನಿಗೆ ಬೇಸರವಾಗಿರಬೇಕು. ನಂತರ ಅಲ್ಲಿಂದ ಅವ ಹೊರಟುಹೋದ. ಸುಮಾರು ಹೊತ್ತಾದರೂ ಅವ ಎಲ್ಲೂ ಕಾಣಿಸಲಿಲ್ಲ. ನಮ್ಮದೆಲ್ಲ ಕೆಲಸ ಆದಮೇಲೆ ಎಲ್ಲಿ ಹೋದ ಅಂತ ನೋಡಿದರೆ ಪಕ್ಕದ ಪ್ಯಾಸೇಜಿನಲ್ಲಿ ಇದ್ದಾನೆ! ನೋಡಿದರೆ ತನ್ನ ಯೂನಿಫಾಮ್ ಶೂಗಳನ್ನು ನೀಟಾಗಿ ತೊಳೆದು ಅದಕ್ಕೆ ವಿಭೂತಿ, ಗಂಧ, ಅರಶಿಣ, ಕುಂಕುಮ ಹಚ್ಚಿ ಉದುಕಡ್ಡಿ ಬೆಳಗುತ್ತಿದ್ದಾನೆ! ಯಪ್ಪಾ ಅವತ್ತಿನಷ್ಟು ನಾವೆಲ್ಲ ಎಂದೂ ನಕ್ಕಿರಲಿಲ್ಲ ಕಾಣುತ್ತದೆ. ತನ್ನ ಪಾದುಕೆಯ ಪೂಜೆಯನ್ನು ತಾನೇ ಮಾಡಿಕೊಂಡ ಮಹಾನುಭಾವ ಅವನು…. ಮೊನ್ನೆ ನನ್ನ ಪುಟ್ಟ ಮಗಳು ನಾನೂ ಅಡುಗೆ ಮಾಡ್ತೀನಿ ಅಂತ ಹೇಳಿ ಹಟ ಮಾಡಿ ಕಿಚನ್ ಸೆಟ್ (ಆಟದ ಕಿಚನ್ ಸೆಟ್) ಕೊಡಿಸಿಕೊಂಡು ತಂದುಕೊಂಡಳು. ಮನೆಗೆ ಬಂದು ಅಡುಗೆ ಮಾಡಿದ್ದೇ ಮಾಡಿದ್ದು… ಮರು ದಿನ ತರಕಾರಿ ತೆಗೆದುಕೊಳ್ಳಲಿಕ್ಕೆಂದು ಫ್ರಿಜ್ ತೆಗೆದ ನನಗೆ ಕಂಡದ್ದು ಮಾತ್ರ ಆಶ್ಚರ್ಯ. ಅದ್ಯಾವಾಗಲೋ ಗೊತ್ತಿಲ್ಲ ಮಗಳು ತನ್ನ ಪ್ಲಾಸ್ಟಿಕ್ ತರಕಾರಿಗಳನ್ನು ತನ್ನ ಪುಟ್ಟ ಪ್ಯಾನ್ ಒಂದಕ್ಕೆ ಹಾಕಿ ಫ್ರಿಜ್ಜಿನಲ್ಲಿ ಇಟ್ಟಿದ್ದಳು. ಅವಳ ಪಪ್ಪನನ್ನೂ ಕರೆದು ತೋರಿಸಿದೆ. ಇಬ್ಬರೂ ನಕ್ಕೆವು. ಅವಳ ಮುಗ್ಧತೆ ಮತ್ತು ಜಾಣ್ಮೆಗೆ ಮುದ್ದುಕ್ಕಿ ಬಂತು… ಮಕ್ಕಳಿಗೆ ಹೇಗೆ ಇವೆಲ್ಲ ಹೊಳೆಯುತ್ತವೆ ಎಂದು ಸದಾ ಆಶ್ಚರ್ಯವಾಗುತ್ತಿರುತ್ತದೆ ನನಗೆ. ಅದರಲ್ಲೂ ಸದಾ ಮಕ್ಕಳ ಜೊತೆಯೇ ಕಾಲ ಕಳೆಯುವ ನಮ್ಮಂಥವರಿಗೆ ಇಂತಹ ಅನುಭವಗಳು ನಿತ್ಯವೂ ಆಗುತ್ತಿರುತ್ತವೆ. ನಾವು ಎಷ್ಟೇ ತಿಳಿದವರಾಗಿದ್ದರೂ ಮಕ್ಕಳ ಮುಗ್ಧತೆಯ ಮುಂದೆ ಸೋತುಬಿಡುತ್ತೇವೆ. ನಮ್ಮ ಗತ್ತು, ಅಹಂಕಾರ, ದೊಡ್ಡತನ…. ಎಲ್ಲವೂ ಮಕ್ಕಳ ಮುಂದೆ ಮಂಡಿಯೂರುತ್ತವೆ. ನಾವು ನಮ್ಮನ್ನು ಕಳೆದುಕೊಂಡುಬಿಡುತ್ತೇವೆ ಅವರ ಮುಂದೆ. ಮಕ್ಕಳು ಮಾತ್ರ ಹೀಗಿರಲು ಸಾಧ್ಯವೇನೋ ಅಲ್ಲವಾ… ಕಲ್ಲುಸಕ್ಕರೆಯಂತಹ ಇಂಥ ಅನುಭವಗಳು ಸದಾ ನಮ್ಮ ಬದುಕಿನ ತಿಜೋರಿಯನ್ನು ತುಂಬಿಕೊಳ್ಳುತ್ತಿರಲಿ ಎನ್ನುವ ಆಸೆಯೊಂದು ಮಾತ್ರ ಸದಾ ಜೀವ ಹಿಡಿದು ಕೂರುತ್ತದೆ… ************* –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಪ್ರಸ್ತುತ ಸಾಂಸ್ಕೃತಿಕ ವಾತಾವರಣದಲ್ಲಿ ಫೇವರಟಿಸಂ, ಜಾತೀಯತೆ, ಧಾರ್ಮಿಕತೆ, ಎಡ-ಬಲ, ವಶೀಲಿ ಎಲ್ಲವೂ ಇವೆ ಡಾ ಪ್ರೇಮಲತ .ಬಿ. ಪರಿಚಯ ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಕಳೆದ 18 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸ.ದಿನಪತ್ರಿಕೆ, ವಾರಪತ್ರಿಕೆ,ಮಾಸಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಲೇಖನಗಳು,ಅಂಕಣ ಬರಹ, ಕಥೆ, ಕವನಗಳು ಮತ್ತು ಪ್ರಭಂದಗಳನ್ನು ಬರೆದಿದ್ದಾರೆ.ತುಷಾರ ಚಿತ್ರಕವನ ಸ್ಪರ್ಧೆಯ ಬಹುಮಾನ, ಪ್ರಜಾವಾಣಿ ಪ್ರೇಮ ಪತ್ರ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಭಂದ ಸ್ಪರ್ದೆಯಲ್ಲಿ ಸಮಾಧಾನಕರ ಬಹುಮಾನ, ಕರ್ನಾಟಕ ಲೇಖಕಿಯರ ಸಂಘದ ಕವನ ಸ್ಪರ್ಧೆಯ ಬಹುಮಾನ, ಸಿಂಗಾಪೂರ್ ನಡೆಸುವ ಕಥಾ ಸ್ಪರ್ಧೆಯಲ್ಲಿ ಪ್ರಥಮ ಮತ್ತು ಕವನ ಸ್ಪರ್ದೆಯಲ್ಲಿ ದ್ವಿತೀಯ ಬಹುಮಾನಗಳನ್ನು ಪಡೆದಿದ್ದಾರೆ. ೨೦೨೦ ರ ಕಹಳೆ ಕಥಾ ಸ್ಪರ್ಧೆಯಲ್ಲಿ ಅವರದೊಂದು ಕಥೆ ಅತ್ಯುತ್ತಮ ಕಥೆಯೆನ್ನುವ ಗೌರವಕ್ಕೆ ಪಾತ್ರವಾಗಿದೆ. ಅವರ ಪ್ರಥಮ ಕಥಾ ಗುಚ್ಛ ’ಛಂದ ಪ್ರಕಾಶನದ’ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು. ಸುಧಾ, ತರಂಗ, ಮಯೂರ, ಕನ್ನಡ ಪ್ರಭಾ ಪತ್ರಿಕೆಗಳಲ್ಲಿ ಕಥೆಗಳು ಪ್ರಕಟವಾಗಿವೆ.’ಬಾಯೆಂಬ ಬ್ರಂಹಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ. ಕನ್ನಡಪ್ರೆಸ್.ಕಾಂ ನಲ್ಲಿ ಆರು ತಿಂಗಳ ಕಾಲ ಅಂಕಣ ಬರಹವಾಗಿ ಪ್ರಕಟಗೊಂಡ ಅವರ ಬರಹಗಳು ಇದೀಗ ಪುಸ್ತಕ ರೂಪದಲ್ಲಿ ಹೊರಬಂದಿದೆ. ’ಕೋವಿಡ್ ಡೈರಿ’ ಎನ್ನುವ ಈ ಬರಹಗಳ ಗುಚ್ಛದ ಈ ಪುಸ್ತಕ ಈ ತಿಂಗಳ ನವಕರ್ನಾಟಕ ನಡೆಸಿದ ಸಮೀಕ್ಷೆಯಲ್ಲಿ ಟಾಪ್-ಟೆನ್ ಪುಸ್ತಕಗಳ ಪಟ್ಟಿಯಲ್ಲಿ ಸೇರಿದೆ.…………………………… ಕವಿತೆ, ಕಥೆಗಳನ್ನು ಯಾಕೆ ಬರೆಯುತ್ತೀರಿ? ಸೃಜನಾತ್ಮಕವಾಗಿ ಯಾವುದೋ ಒಂದು ನಿಮಿಷವನ್ನು ಕಟ್ಟಿಕೊಡುವ ತುಡಿತದಿಂದ. ಅದು ಮನಸ್ಸಿಗೆ ಸಂತೋಷವನ್ನು ನೀಡುವುದರಿಂದ. ಸಾಹಿತ್ಯ, ಕಥೆ, ಕವಿತೆಗಳನ್ನು ಓದುವುದರಿಂದ. ಕವಿತೆ, ಕತೆ ಹುಟ್ಟುವ ಕ್ಷಣ ಯಾವುದು? ಯಾವಾಗ ಬೇಕಾದರೂ ಆಗಬಹುದು. ಆದರೆ ಮನಸ್ಸಿನ ಮೇಲೆ ಯಾವುದೋ ಒಂದು ವಿಚಾರ ಮೋಡಕಟ್ಟಿದ ರೀತಿ ಆವರಿಸಿಕೊಂಡ ನಂತರ ಮಳೆಯಾಗಲೇ ಬೇಕು ಎನ್ನುವ ಧಾವಂತದ ರೀತಿಯಲ್ಲಿ ಬರಹಗಳೂ ಹುಟ್ಟಿ ಬಿಡುತ್ತವೆ. ಅಗಲೇ ತೃಪ್ತಿ ಮತ್ತು ಸಮಾಧಾನ. ಆದರೆ ಇದು ನನಗೆ ಬೇಕೆಂದಾಗ ಆಗುವುದಿಲ್ಲ. ನಿಮ್ಮ ಕವಿತೆ, ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು ? ಕವಿತೆಗಳು ಪ್ರೀತಿ, ಭಾವನೆ ಮತ್ತು ಪರಿಸರದ ಮೇಲೆ ಹೆಚ್ಚಿವೆ. ಪ್ರಚಲಿತ ಸಮಸ್ಯೆಗಳ ಬಗ್ಗೆ ಭಾವನಾತ್ಮಕವಾಗಿ ಬರೆದಿರುವುದು ಕಡಿಮೆ. ಕಾರಣ ಎಂದರೆ ಅಂಥಹ ವಿಚಾರಗಳು ಕವಿತೆಯ ಅಲಂಕಾರ, ರೂಪಕಗಳನ್ನು ನಿರ್ಲ್ಯಕ್ಷಿಸಿ ವಸ್ತುನಿಷ್ಠ ಮತ್ತು ವಾಸ್ತವಕ್ಕೆ ಸಂಭಂದಿಸಿದ ಲೇಖನಗಳೋ ಮತ್ತೊಂದೋ ಆಗಿರುವುದೇ ಹೆಚ್ಚು. ಕಥೆಗಳಲ್ಲಿ ಮನುಷ್ಯನ ಮನೋವ್ಯಾಪಾರದ ಬಗ್ಗೆ ಹೆಚ್ಚು ಬರೆದಿದ್ದೇನೆ. ನನ್ನ ಕಥೆಗಳ ವ್ಯಾಪ್ತಿಯಲ್ಲಿ ಸಮಾಜದ ಶೀತಲ ಕ್ರೌರ್ಯಗಳು ಎದ್ದು ಕಾಣುವಷ್ಟು ಇರುತ್ತವೆ.ಆದರೆ ತೀರ್ಮಾನಗಳಿರುವುದಿಲ್ಲ.ಅತಿಯಾದ ಭಾವುಕತೆ, ಉತ್ಪ್ರೇಕ್ಷೆ ಇರುವುದಿಲ್ಲ. ಆ ಮಟ್ಟಕ್ಕೆ ಮಿತವೂ ಹೌದು.ಪದೇ ಪದೇ ಕಾಡವ ವಿಷಯವೆಂದರೆ ಅದು ಮನುಷ್ಯ ಸಂಬಂಧಗಳ ನಡುವಿನ ಭಾವನಾತ್ಮಕ ಮತ್ತು ವಿನೋದತ್ಮಕ ಮನೋವ್ಯಾಪಾರ. ಕವಿತೆ, ಕತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಖಂಡಿತ. ಹರೆಯವನ್ನಾದರೂ ಹತ್ತಿಕ್ಕಬಹುದು ಆದರೆ ಬಾಲ್ಯದ ನೆನಪುಗಳದ್ದು ಗಾಢ ಬಣ್ಣಗಳು. ಅವು ಬೇರೆ,ಬೇರೆ ಆಯಾಮಗಳಲ್ಲಿ ಮತ್ತೆ ಡಣಾ ಡಾಳಾಗಿ ಇಣುಕುತ್ತವೆ. ಸಮಕಾಲೀನ ಬದುಕಿನ ಸ್ಪಂದನೆಗಳೊಂದಿಗೆ ಉತ್ತಮ ಸಾಥ್ ನೀಡುತ್ತವೆ. ನೀವು ವೃತ್ತಿಯಿಂದ ದಂತ ವೈದ್ಯರು. ಇದು ನಿಮ್ಮ ಸೃಜನಶೀಲತೆಗೆ ನೆರವಾಗಿದಿಯ ಸದಾ ಜನರೊಂದಿಗೆ ಆತ್ಮೀಯವಾಗಿ ಒಡನಾಡಲು ಅವಕಾಶವಿರುವ ನನ್ನ ಕೆಲಸ ಜನರ ಬದುಕಿನ ಬಗ್ಗೆ ಬರೆಯುವ ಅವಕಾಶವನ್ನು ಕೂಡ ಹಿಗ್ಗಿಸುತ್ತದೆ. ದಿನಕ್ಕೆ ಇಪ್ಪತ್ತೈದು ಹೊಸ ಮುಖಗಳನ್ನು ನೋಡುತ್ತ, ಹೊಸ ಕಥೆಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ, ಈ ಅತಿವೃಷ್ಟಿ ಒಮ್ಮೊಮ್ಮೆ ಬರೆಯುವ ಗೀಳನ್ನು ತಗ್ಗಿಸುತ್ತದೇನೋ.ಕೆಲಸಮಾಡುವಾಗ ಇರುವ ಕರ್ತವ್ಯದ ದೃಷ್ಟಿಗೂ, ಬರಹಕ್ಕೆ ಕುಳಿತಾಗ ಬರುವ ಉಮೇದಿಗೂ ಯಾವ ನೇರ ತಾಳೆಯೂ ಇಲ್ಲದಿರಬಹುದು.ಆದರೆ ರೋಗಿಗಳನ್ನು ನಿಭಾಯಿಸಿದಂತೆಯೇ ಕಥೆಯ ಪಾತ್ರಗಳನ್ನು ಕೂಡ ನಿಭಾಯಿಸಲು ಪರೋಕ್ಷವಾದ ಪ್ರಭಾವ ಇದ್ದಿರಬಹುದು. ಬರೇ ಮೇಜು, ಕುರ್ಚಿ, ಕಂಪ್ಯೂಟರಿನ ನಡುವೆ ಕುಳಿತವರು ಕೂಡ ಅದ್ಭತವಾದ ಕಥೆಗಳನ್ನು ಹೆಣೆಯುವುದನ್ನು ಗಮನಿಸಿದ್ದೇನೆ.ಹಾಗಾಗಿ ಯಾರು ಬೇಕಾದರೂ ಬರೆಯಬಲ್ಲರು ಅನ್ನೋದರಲ್ಲಿ ಸಂಶಯವಿಲ್ಲ.ವೃತ್ತ ಪರಿಜ್ಞಾನ ಮತ್ತು ಬರಹದ ಭಾವುಕಥೆಯ ಜೊತೆಗೆ ವೃತ್ತಿಯ ಪ್ರಭಾವದಿಂದ ಬರುವ ಸ್ಥಿತಪ್ರಜ್ಞತೆಯನ್ನಂತೂ ನನ್ನ ಬರಹದಲ್ಲಿ ಖಂಡಿತ ನೋಡಬಹುದು. ಕೆಲವೊಮ್ಮೆ ಅದನ್ನು ಕಳೆದು ಬರೆಯುವುದು ಕೂಡ ತೊಡಕಾಗಿದೆಯೆನ್ನಬಹುದು. ವೃತ್ತಿ ಹಾಗೂ ಸೃಜನಶೀಲತೆ ಮತ್ತು ಅಪ್ತ ಬದುಕನ್ನು ನಿಭಾಯಿಸುವ ಕೌಶಲ್ಯ ಹೇಗದು? ದಿನದಲ್ಲಿ ಎಲ್ಲರಿಗೂ ಇರುವ ಅವೇ ೨೪ ಗಂಟೆಗಳನ್ನು ಪ್ರೀತಿಪಾತ್ರವಾದ ಮೂರಕ್ಕೂ ಹಂಚಲು ಇರುವ ಒಂದೇ ವಿಧಾನ ಎಂದರೆ, ಬರೇ ಎರಡರಲ್ಲಿ ಅಥವಾ ಒಂದರಲ್ಲೇ ತೊಡಗಿದವರಿಗಿಂತ ಹೆಚ್ಚು ಕಷ್ಟಪಟ್ಟು ಕೆಲಸಮಾಡುವುದು. ಜಾಣತನದಿಂದ ಸಮಯ ಪೋಲಾಗದಂತೆ ನೋಡಿಕೊಳ್ಳುವುದು. ಅಲಂಕಾರ, ಕಾಡು ಹರಟೆ, ಗಾಸಿಪ್, ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದೂರವಿದ್ದು ಏಕಾಂತದ ಸಮಯವನ್ನು ಉಳಿಸಿಕೊಳ್ಳುವುದು. ಕೆಲಸಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು. ಅತಿಯಾದ ನಿಯಮಗಳನ್ನು ಹಾಕಿಕೊಳ್ಳದೆ, ಅತಿಯಾಗಿ ಯಾವುದನ್ನೂ ಹಚ್ಚಿಕೊಳ್ಳದೆ ನಮ್ಮತನವನ್ನು ಕಾಪಾಡಿಕೊಳ್ಳುವ ಉಪಾಯಗಳನ್ನು ಪಾಲಿಸುವುದು.ಮಲ್ಟಿ ಟಾಸ್ಕಿಂಗ್ ಮೊದಲಿಂದಲೂ ಇತ್ತು.ಕಾಲ ಕ್ರಮೇಣ ಬದುಕು ಅವುಗಳನ್ನು ನಿಭಾಯಿಸುವ ಕಲೆಯನ್ನು ಕಲಿಸಿತು ಎನ್ನಬಹುದು. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಅದೊಂದು ಅವಿರತ ಚಕ್ರ. ಹಿಂದೊಮ್ಮೆ ಏಕತ್ವದ ಸಂಕುಚಿತ ಲೋಕವಿತ್ತು. ಅದು ಜಾಗತೀಕರಣದೊಂದಿಗೆ ಬಹುತ್ವಕ್ಕೆ ತೆರೆದುಕೊಂಡಿತು. ಅದಕ್ಕೆ ಬಹಳ ಸಮಯ ಹಿಡಿಯಿತು. ಅದು ಪೂರ್ಣವಾಗುವ ಮೊದಲೇ ನ್ಯಾಷನಲಿಸ್ಟಿಕ್ ಮೂವ್ ಮೆಂಟ್ ಗಳು ಶುರುವಾಗಿವೆ. ಅದು ಪೂರ್ಣವಾಗುವ ಮಾತಂತು ಖಂಡಿತ ಸಾಧ್ಯವಿಲ್ಲ. ಏಕೆಂದರೆ ಈ ಪ್ರಪಂಚ ವೈವಿಧ್ಯಮಯ. ಅದರಲ್ಲು ವೈಜ್ಞಾನಿಕ ಆವಿಷ್ಕಾರಗಳೊಂದಿಗೆ ಪ್ರಪಂಚ ಈಗ ಮುಷ್ಠಿಗಾತ್ರಕ್ಕೆ ತಿರುಗಿದೆ.ಸಾಮಾಜಿಕ ಮತ್ತು ಸಾಂಸ್ಕೃತಿಕ ಒಡನಾಟಗಳು, ವಾಣಿಜ್ಯ ವಿಚಾರಗಳು,ಜಾಗತಿಕ ಮಾರುಕಟ್ಟೆ , ಪ್ರವಾಸ, ಮಾಹಿತಿ ತಂತ್ರಜ್ಞಾನ ಇವೆಲ್ಲವೂ ಅಗಾಧವಾಗಿ ಜಾಗತಿಕ ಮಟ್ಟದಲ್ಲಿ ಬೆಳೆದಿರವ ಈ ಕಾಲದಲ್ಲಿ ಒಂದು ದೇಶದ ಜನರು ಹಲವು ದೇಶಗಳಲ್ಲಿ ಹಂಚಿಹೋಗಿದ್ದಾರೆ. ಇವೆಲ್ಲ ಸಾವಿರಾರು ವರ್ಷಗಳ ಕಾಲ ನಡೆದ ಸಂಘರ್ಷಗಳ, ಪರಿವರ್ತನೆಗಳ ಪರಿಣಾಮವೂ ಹೌದು. ಹಾಗಿರುವಾಗ ಅದನ್ನೆಲ್ಲ ಇಲ್ಲವಾಗಿಸಿ ಏಕತ್ವ ಅಥವಾ ಸ್ವ-ಹಿರಿಮೆಯ ಸಂಕುಚಿತ ಲೋಕಕ್ಕೆ ಹಿಂತಿರುಗಿ ಹೋಗುವ ಪ್ರಯತ್ನ ಅಪಹಾಸ್ಯದ್ದು. ಸ್ವಾರ್ಥಕ್ಕಾಗಿ ದೇಶವನ್ನು ಆಳವಾಗಿ ಒಡೆದು ಒಂದು ಬಣದ ಶ್ರೇಷ್ಠತೆಯನ್ನು ಮಾತ್ರ ಮೆರೆಸಲು ಮಾಡುವ ಪ್ರಯತ್ನ ಅಮೆರಿಕಾದಲ್ಲಾದಂತಹ ಅರಾಜಕತೆಯನ್ನು, ಅಧೀರತೆಯನ್ನು ಸೃಷ್ಠಿಸಬಲ್ಲದು.ಅದನ್ನು ಹೊರಗಿಟ್ಟು ಇಡೀ ದೇಶ ಒಂದು ಎನ್ನುವ ಒಗ್ಗಟ್ಟಿನ ಭಾವಕ್ಕೆ ಪುಷ್ಟಿ ಕೊಟ್ಟು ದೇಶದ ಏಳ್ಗೆಯ ಬಗ್ಗೆ ಯೋಚಿಸುವ ರಾಜಕಾರಣದ ಅಗತ್ಯವಿದೆ.ಪ್ರಪಂಚವೆಂಬ ಮನೆಯಲ್ಲಿ ಮನಸ್ಸನ್ನು ತೆರೆದಿಟ್ಟು ಬದುಕುವಲ್ಲಿನ ವೈವಿಧ್ಯತೆ, ವೈರುದ್ಧ್ಯತೆ, ಸಾಮ್ಯತೆ ಸೃಜನಶೀಲ ಮನಸ್ಸುಗಳ ವಿಕಸನಕ್ಕೆ ಅತ್ಯಗತ್ಯ. ಸ್ವಾರ್ಥದ ರಾಜಕೀಯ ಬೇರೆ ಬೇರೆ ರೂಪಗಳಲ್ಲಿ ಇದ್ದೆ ಇರುತ್ತದೆ. ದೊಡ್ಡ ಪ್ರಜಾ ಪ್ರಭುತ್ವದ ದೇಶಗಳಲ್ಲು ಸಹ. ಅದನ್ನು ಹಿತ ಮಿತವಾಗಿಡುವಲ್ಲಿ ಎಲ್ಲೆಡೆಯ ರಾಜಕೀಯ ಹೋರಾಟಗಳು ಸಮತೋಲನ ಸಾಧಿಸಬೇಕಷ್ಟೆ. ಎಡ-ಬಲಗಳ ತಿಕ್ಕಾಟ ಅಗತ್ಯವಿಲ್ಲದ ಸ್ವಾರ್ಥದ ರಾಜಕೀಯ ಮಾತ್ರ. ದೇಶ ಭಕ್ತಿಯೆನ್ನುವುದು ಎಡ-ಬಲಗಳ ರಾಜಕೀಯ ದಿಂದ ಹೊರತಾದ ವಿಚಾರ. ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ದೇವರನ್ನು ನಂಬುತ್ತೇನೆ. ನಾಸ್ತಿಕಳೇನಲ್ಲ. ಆದರೆ ಧರ್ಮದ ವಿಚಾರ ಬಂದಾಗ ಸಂಪ್ರದಾಯಸ್ಥಳಲ್ಲ. ಬೇರೆಲ್ಲ ಧರ್ಮಗಳನ್ನು ನಾನು ಗೌರವಿಸುತ್ತೇನೆ. ಆ ಬಗ್ಗೆ ನಾನು ಸಹಿಷ್ಣು. ದ್ವೇಷವನ್ನು ಬಿತ್ತುವ ನಂಜಿನ ಮಾತುಗಳು ನನಗೆ ಸಹ್ಯವಲ್ಲ.ನನಗೆ ಬೇಕಾದ ರೀತಿಯಲ್ಲಿ ಬದುಕುವ ಹಿಂದೂ ಆಗಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಅದರ ಭಾವ ವೈಶಾಲ್ಯತೆಯ ಬಗ್ಗೆ ಪ್ರೀತಿಯಿದೆ. ಶಾಂತಿಯುತವಾಗಿ ಬದುಕಬೇಕಿದ್ದಲ್ಲಿ ನಾವು ಇತರರ ಬಗ್ಗೆ ಸಹಿಷ್ಣುತೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ.ಹಾಗೆ ಹಿಂದೂ ಧರ್ಮಕ್ಕೆ ’ಅಸಹಿಷ್ಣು’ ಎನ್ನುವ ಹಣೆ ಪಟ್ಟಿಯನ್ನು ಅಂಟಿಸುವ ಕೆಲಸ ನಡೆಯದಿರಲಿ.ಅವರವರ ಧರ್ಮ ಅವರವರಿಗೆ ದೊಡ್ಡದು. ಇನ್ನೊಂದು ಧರ್ಮವನ್ನು ಗೌರವಿಸದ ಎಲ್ಲರೂ ತಪ್ಪಿತಸ್ಥರೇ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ? ಇದು ಜಾಗತಿಕ ಯುಗ. ತೊರೆ-ಹಳ್ಳಗಳು ಹರಿದು ನದಿಯಾಗಿರುವ ಕಾಲ. ಅದರಲ್ಲಿ ರಾಜಕೀಯದ , ಸ್ವಾರ್ಥದ ಕಶ್ಮಲಗಳನ್ನು ಸೇರಿಸದಿದ್ದಲ್ಲಿ ಅದು ಹಲವು ಜೀವಗಳನ್ನು, ಸೃಜನಶೀಲತೆಯನ್ನು ಸಮೃದ್ಧವಾಗಿ ಬೆಳೆಸಬಲ್ಲದು. ಸಾಂಸ್ಕೃತಿಕ ಅರಿವು-ಆಳಗಳು ಹಿಗ್ಗಿಸಬಲ್ಲವು.ಪ್ರಸ್ತುತ ಸಾಂಸ್ಕೃತಿಕ ವಾತಾವರಣದಲ್ಲಿ ಫೇವರಟಿಸಂ, ಜಾತೀಯತೆ, ಧಾರ್ಮಿಕತೆ, ಎಡ-ಬಲ, ವಶೀಲಿ ಎಲ್ಲವೂ ಇವೆ. ಅದು ತಿಳಿಗೊಳ್ಳಬೇಕು. ಹೃದಯ ವೈಶಾಲ್ಯತೆ ಹೆಚ್ಚಾಗಬೇಕು.ಇವೆಲ್ಲ ಮೊದಲಿಂದಲೂ ಇದ್ದವಾದರೂ ಈಗೀಗ ’ಅತಿ ’ ಎನ್ನುವ ಮಟ್ಟಕ್ಕೆ ಬೆಳೆಯುತ್ತಿದೆ. ಒಳ್ಳೆಯ ವಿಚಾರ ಎಂದರೆ ಇವೆಲ್ಲದರಿಂದ ದೂರವಿರುವ, ಮುಕ್ತರಾಗಿರುವ ಜನರೂ ಇರುವುದು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಮೇಲಿನ ಮಾತೇ ಅನ್ವಯವಾಗುತ್ತದೆ. ಅದರಲ್ಲೂ ಹೊಸತಿನ ನಿರೀಕ್ಷೆಯಲ್ಲಿ ಸದಾ ತುಡಿಯುವ ಕನ್ನಡ ಸಾಹಿತ್ಯಕ್ಕೆ ದಡ ಕಟ್ಟಬಾರದು. ತಮಗೆ ತಿಳಿದ, ತಮ್ಮೂರಿನ, ತಮ್ಮ ಪ್ರಪಂಚದ ಬಗ್ಗೆ ಬರೆದದ್ದಷ್ಟೆ ಸಾಹಿತ್ಯ ಆಗಬಾರದು. ರಾಜಕೀಯ ಘೋಷಣೆಗಳು ಸಾಹಿತ್ಯಕ್ಕೆ ಅಗತ್ಯವಿಲ್ಲ. ಅರಿವೇ ಇಲ್ಲದೆ ಎಡ-ಬಲ ಎಂದು ಹಣೆಪಟ್ಟಿ ಹೊರುವ ಭಯದಲ್ಲಿ ಹಲವರು ವೈಚಾರಿಕ ಸಾಹಿತ್ಯರಚನೆಯನ್ನು ಮಾಡಲು ಹಿಂಜರಿಯಬೇಕಾದ ಕಾಲ ಘಟ್ಟವಿದು. ಇದು ನಿಜಕ್ಕೂ ವಿಶಾದನೀಯ.ವಿಮರ್ಶಕನೊಬ್ಬ ’ನಮ್ಮೂರಿನ ಬರಹಗಾರ” ಎಂಬ ಮೊಳ ಹಿಡಿದು ಸಾಹಿತ್ಯವನ್ನು ಅಳೆವಾಗ ಅತ್ಯಂತ ಬೇಸರವಾಗುತ್ತದೆ. ಪ್ರಾಂತೀಯತೆಯ ಸೊಗಡು ಸುಂದರವಾದರೂ ಮುಖ್ಯವಾಹಿನಿಯಲ್ಲಿ ಸೇರಿದಾಗ ಬರಹಗಳನ್ನು ಅವುಗಳ ತಂತ್ರ, ಸರಾಗತೆ, ವೈಚಾರಿಕತೆ, ಭಿನ್ನತೆ, ಪ್ರಾಮಾಣಿಕತೆ, ಕುಶಲತೆ, ನವಿರು, ಸೂಕ್ಷ್ಮತೆ ಮತ್ತು ಹೊಸತನ ಇನ್ನೂ ಮುಂತಾದ ಅಳತೆಗೋಲಿನಿಂದ ಅಳೆಯುವುದು ಸಾಹಿತ್ಯದ ಬೆಳವಣಿಗೆಗೆ ಅಗತ್ಯವೆನಿಸುತ್ತದೆ.ನಿಜವಾದ ವಿಮರ್ಶಾ ಸಾಹಿತ್ಯವೂ ವಿರಮಿಸಿ ಕುಳಿತಿರುವ ಕಾಲವಿದು. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ನಾನು ಅನಿವಾಸಿ ಭಾರತೀಯಳಾದ ಕಾರಣ, ಭಾರತದ ಚಲನೆಯನ್ನು ಅದರದ್ದೇ ಆದ ಚೌಕಟ್ಟಿನಿಂದ ಹೊರಗೆ ನಿಂತು ನೋಡಬಲ್ಲೆ.ಭಾತರ ಎಂತಹ ಅಗಾಧ ಮತ್ತು ಹೇಗೆ ಇತರೆ ದೇಶಗಳಿಗಿಂತ ಭಿನ್ನ ಎಂಬುದನ್ನು ಕಾಣಬಲ್ಲೆ.ತನ್ನದೇ ಸುಳಿಗಳ ಸೆಳೆತಕ್ಕೆ ಸಿಲುಕಿ ಚಲಿಸುವ ದೇಶ ನಮ್ಮದು. ಅದರ ಶಕ್ತಿ ಅಗಾಧವಾದ್ದು. ಹಿಂದೂಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಏಕೈಕ ದೇಶವಾಗಿ ಭಾರತ ನೂರಾರು ಭಾಷೆ, ಸಂಸ್ಕೃತಿಗಳನ್ನು ಒಡಲಲ್ಲಿಟ್ಟುಕೊಂಡು ಸದಾ ಚೈತನ್ಯಮಯಿಯಾಗಿ ಮಿಡಿಯುವಂತದ್ದು. ಅಪಾರವಾದ ಜನಶಕ್ತಿಯನ್ನು ಪಡೆದ ಶಕ್ತಿಶಾಲಿ ದೇಶವಿದು. ಪ್ರತಿಭೆಗಂತೂ ಇಲ್ಲಿ ಕೊರತೆಯೇ ಇಲ್ಲ.ಆದರೆ ವ್ಯವಸ್ಥೆಗಳು ಒಟ್ಟಾಗಿ ದುಡಿಯಲು ಹೆಣಗುತ್ತವೆ. ಅತಿಯಾದ ಧಾರ್ಮಿಕತೆ ನಮ್ಮ ದೇಶದ ಅತ್ಯಂತ ದೊಡ್ಡ ತೊಡಕಾಗಿದೆ. ಅದರಿಂದ ಹೊರತಾಗಿ ಜಗತ್ತನ್ನು ನೋಡಲು ಬಹಳ ಜನರು ಅಶಕ್ತರಾಗುತ್ತಾರೆ. ಕಾನೂನು, ಪೋಲೀಸರು ಮತ್ತು ಭದ್ರತೆ ಇವು ಜನಸಾಮಾನ್ಯರ ಪರವಾಗಿ ಕೆಲಸಮಾಡಬೇಕಾಗಿರುವ ಅತ್ಯಂತ ಮುಖ್ಯ ವಿಚಾರಗಳು. ಅವುಗಳನ್ನು ಭದ್ರಪಡಿಸುವ,ಎಲ್ಲರಿಗೂ ಸಮಾನ ಸವಲತ್ತನ್ನು ನೀಡಬಲ್ಲ ರಾಜಕಾರಣ ಅತ್ಯಂತ ಮುಖ್ಯ.ಇಂತಹ ದೊಡ್ಡ ದೇಶ ಸಾಧ್ಯವಾದಷ್ಟು ಒಟ್ಟಾಗಿ ತುಡಿಯಬೇಕೆಂದರೆ ಒಗ್ಗಟ್ಟಿನ ಮಂತ್ರ ಪಠಣೆ ಅತ್ಯಂತ ಮುಖ್ಯ. ಒಡಕಿನ ಮಾತುಗಳು ಈ ದೇಶದ ಚಲನೆಗೆ ಮಾರಕ. ಕಾಲಚಕ್ರದ ಹೊಡೆತಕ್ಕೆ ಸಿಕ್ಕ ಭಾರತ ನಗರ ಪ್ರದೇಶಗಳಲ್ಲಿ ಬಹಳ ಬದಲಾಗುತ್ತ ನಡೆಯುತ್ತಿದೆ ಎನ್ನುವುದು ಕೂಡ ಸುಳ್ಳಲ್ಲ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಸಾಹಿತ್ಯ ನನ್ನ ಅಂದಂದಿನ ತೃಪ್ತಿ.ಇನ್ನೂ ಬರೆಯಬೇಕನ್ನುವ ಹಂಬಲವಿದೆ. ಅದಕ್ಕಿಂತ ಹೆಚ್ಚೇನು ಕನಸೇನಿಲ್ಲ.ಸವಾಲುಗಳಿಗೆ ತೆರೆದುಕೊಂಡು ಸೃಜನಶೀಲವಾದದ್ದೇನನ್ನೋ ರಚಿಸಬೇಕೆನ್ನುವ ತುಡಿತ ಇರುವವರೆಗೆ ಸಾಹಿತ್ಯ ರಚನೆ ನಡೆಯುತ್ತಿರುತ್ತದೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ನಾನು ಸಾಹಿತ್ಯವನ್ನು ಅಗಾಧವಾಗಿ ಓದಿಕೊಂಡವಳಲ್ಲ.ಸಾಹಿತ್ಯದ ವಿದ್ಯಾರ್ಥಿಯಲ್ಲ. ಸಾಹಿತ್ಯದ ವಾತಾವರಣದಲ್ಲಿ ಬೆಳೆದವಳಲ್ಲ. ವಶೀಲಿಯಂತೂ
ಅಂಕಣ ಬರಹ ಅಗ್ಘವಣಿಯ ಹಂಪಯ್ಯನ ವಚನವೊಂದರ ಐತಿಹಾಸಿಕ ವಿವೇಚನೆ ಅಗ್ಘವಣಿಯ ಹಂಪಯ್ಯನ ವಚನವೊಂದರ ಐತಿಹಾಸಿಕ ವಿವೇಚನೆ ಹಂಸಪತಿ ಗರುಡಪತಿ ವೃಷಭಪತಿ ರ‍್ವಜೀವಾಧಿಪತಿ ದೇವರಾಯ ಮಹಾರಾಯನ ಅರಸುತನ ಹೊಸತು ಓಲಗಕ್ಕೆ ಬಾರ; ಸಿಂಹಾಸನದಲ್ಲಿ ಕುಳ್ಳಿರ; ಸ್ತ್ರೀಲಂಪಟನಾಗಿ ಅಂತಃಪುರ ಬಿಟ್ಟು ಹೊರವಡ; ಕಪ್ಪಕಾಣಿಕೆಯನೊಪ್ಪಿಸಿಕೊಂಬವರಿಲ್ಲ. ಗುರುವೆಂಬ ತಳವಾರನಾಜ್ಞೆ ಕೆಟ್ಟಿತ್ತು. ತರೆದ ಬಾಗಿಲ ಮುಚ್ಚುವರಿಲ್ಲ; ಮುಚ್ಚಿದ ಬಾಗಿಲ ತೆರೆವರಿಲ್ಲ; ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು ಭಕ್ತರೆಂಬುವವರಿನ್ನು ಬದುಕಲೆಬಾರದು ೧ ಅಗ್ಘವಣಿಯ ಹಂಪಯ್ಯ ವಚನ ಚಳುವಳಿಯ ಕೊನೆಯ ಹಂತದಲ್ಲಿ ಬಂದವನು. ವಿಜಯನಗರದ ದೇವರಾಯ (ಕ್ರಿ.ಶ. ೧೨೮೬-೧೩೨೮) ನೆಂಬ ಅರಸನ ಕಾಲದಲ್ಲಿ ಇದ್ದವನೆಂದು, ರಾಘವಾಂಕ ಕವಿಯು ತನ್ನ ಹರಿಶ್ಚಂದ್ರ ಚಾರಿತ್ರ‍್ಯವನ್ನು ಈ ರಾಜನ ಆಸ್ಥಾನದಲ್ಲಿ ಓದಿದ್ದೆಂದೂ ತಿಳಿದುಬರುತ್ತದೆ ಎಂದು ಡಿ. ಎಲ್. ನರಸಿಂಹಾಚರ‍್ಯರು ಹೇಳಿದ್ದಾರೆ.೨ ಪ್ರಕೃತ ವಚನಕ್ಕೆ ಪಾಠಾಂತರವೂ ಇದ್ದು ಡಿ ಎಲ್ ಎನ್ ಶಕಟರೇಫೆಯನ್ನು ಎರಡು ಕಡೆ ಬಳಸಿದ್ದರೆ, ಎಂ. ಎಂ. ಕಲಬರ‍್ಗಿಯವರು ಸಾಮಾನ್ಯರಿಗಾಗಿ ಸಂಪಾದನೆ ಮಾಡುತ್ತಿರುವ ಕಾರಣದಿಂದ ರೇಫೆಯನ್ನು ಉಳಿಸಿಕೊಂಡು, ಶಕಟರೇಫೆಯನ್ನು ತೆಗೆದು ಹಾಕಲಾಗಿದೆ ಎಂದು ಸಂಪಾದಕೀಯದಲ್ಲಿ ಹೇಳಿದ್ದಾರೆ. ಜನಪ್ರಿಯ ಪ್ರತಿಯದನ್ನೇ ಈ ಲೇಖನಕ್ಕೆ ಬಳಸಿಕೊಳ್ಳಲಾಗಿದೆ. ಕುಂತಳದೇಶದಲ್ಲಿನ ಶಿವಭಕ್ತನಾದ ಹಂಪಯ್ಯನು, ಹದಿನಾರು ದಿಕ್ಕಿಗೂ ಹೋಗಿ ಪತ್ರಪುಷ್ಪಗಳನ್ನು ತಂದು ಶಿವನಿರ‍್ಪಿಸುವ ನಿಯಮವನ್ನು ಪಾಲಿಸುತ್ತಿದ್ದ. ಅದಲ್ಲದೆ ಶೀಲವಂತರಿಗೆ ಚಿಲುಮೆಯ ಅಗ್ಘವಣಿಯನ್ನು ತಂದುಕೊಡುವ ಕಾಯಕವನ್ನು ನಡೆಸುತ್ತಿದ್ದನೆಂದು ಇವನ ಶಿವಭಕ್ತಿಯ ಬಗೆಗೆ ಶಾಂತಲಿಂಗ ದೇಶಿಕನು ತನ್ನ ಭೈರವೇಶ್ವರ ಕಥಾಸೂತ್ರ ರತ್ನಾಕರ ಕೃತಿಯಲ್ಲಿ ತಿಳಿಸಿದ್ದಾನೆ.೩ ಅಗ್ಘವಣಿ ಹಂಪಯ್ಯನ ವಚನಗಳ ಅಂಕಿತ ‘ಹಂಪೆಯ ವಿರುಪಯ್ಯ’ ನೆಂದು ಎಲ್ಲ ವಿದ್ವಾಂಸರೂ ಹೇಳಿದ್ದಾರೆ. ಅವನ ನಾಲ್ಕು ವಚನಗಳು ಇದುವರೆವಿಗೂ ದೊರೆತಿವೆ.೪ ಡಾ. ಆರ್. ಚಲಪತಿಯವರು ‘ಪಂಚಾಕ್ಷರಿ, ಗುರು ಪಂಚಾಕ್ಷರಿ’ ಎಂಬೆರಡು ಹೊಸ ಅಂಕಿತಗಳನ್ನೂ ತಮ್ಮ ಕೃತಿಯಲ್ಲಿ ಅಗ್ಘವಣಿಯ ಹಂಪಯ್ಯನದೆಂದು ಸೂಚಿಸಿದ್ದಾರೆ.೫ ಶಿವಶರಣರ ವಚನ ಚಳುವಳಿಯಿಂದ ಗಾಢವಾಗಿ ಪ್ರಭಾವಿತನಾಗಿದ್ದ ಅಗ್ಘವಣಿಯ ಹಂಪಯ್ಯ, ಕಲ್ಯಾಣಕ್ರಾಂತಿಯ ನಂತರ ಪಲ್ಲಟವಾದ ಒಟ್ಟೂ ಚಳುವಳಿಯ ಉದ್ದೇಶ, ಅಧೋಗತಿಗೆ ಇಳಿದ ಸಾಮಾಜದ ಸ್ಥಿತಿಗತಿ ಮತ್ತು ರಾಜಪ್ರಭುತ್ವದ ನಡೆ ನುಡಿಗಳನ್ನು ತನ್ನ ವಚನದಲ್ಲಿ ಖೇದ, ಸಿಟ್ಟು ಮತ್ತು ವ್ಯಂಗ್ಯದಲ್ಲಿ ಹೊರಹಾಕಿದ್ದಾನೆ. ಅಗ್ಘವಣಿಯ ಹಂಪಯ್ಯನ ವಚನದ ‘ದೇವರಾಯ ಮಹಾರಾಯನ ಅರಸುತನ ಹೊಸತು’ ಸಾಲಿನ ಓದಿನಿಂದ ಅವನ ಕಾಲದ ಬಗೆಗೆ ಕೆಲವು ಅನುಮಾನಗಳು ಮೂಡುತ್ತವೆ. ಡಿ. ಎಲ್. ನರಸಿಂಹಾಚರ‍್ಯರು ವಚನಕಾರರ ನಂತರದವನು ಎಂದೂ, ಅವನ ಕಾಲವನ್ನು ಕ್ರಿಶ ೧೩೦೦ ಎಂದು ಹೇಳಿದ್ದಾರೆ.೬ ಕವಿಚರಿತಾಕಾರರು ಮತ್ತು ಇತರರು ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ.೭ ಹಂಪಯ್ಯ ತನ್ನ ವಚನದಲ್ಲಿ ನೇರವಾಗಿ ಸಂಬೋಧಿಸುವ ‘ದೇವರಾಯ’ ಕರ್ನಾಟಕವನ್ನಾಳಿದ ಪ್ರಖ್ಯಾತ ರಾಜಮನೆತನವಾದ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿ ಆಳಿದ ನಾಲಕ್ಕು ವಂಶಗಳಾದ ಸಂಗಮ, ಸಾಳುವ, ತುಳುವ ಮತ್ತು ಅರವೀಡು ವಂಶಗಳಲ್ಲಿನ ಮೊದಲನೆಯ ವಂಶವಾದ ಸಂಗಮ ವಂಶದ ದೊರೆ ೧ ನೇ ದೇವರಾಯ. ಸಂಗಮ ವಂಶದಲ್ಲಿಯೂ ಇಬ್ಬರು ದೇವರಾಯರ ಎಂಬ ಹೆಸರಿನ ರಾಜರು ಬೇರೆ ಬೇರೆ ಕಾಲಘಟ್ಟದಲ್ಲಿ ಆಳ್ವಿಕೆ ಮಾಡಿದ್ದಾರೆ. ೧ ನೇ ದೇವರಾಯ ಸಾ.ಶ ೧೪೦೬ – ೧೪೧೨-೧೩ ವರೆವಿಗೂ, ೨ ನೇ ದೇವರಾಯ ಸಾ.ಶ ೧೪೧೪ ರಿಂದ ೧೪೪೪ ರ ವರೆವಿಗೂ ವಿಜಯನಗರವನ್ನು ಆಳ್ವಿಕೆಯನ್ನು ಮಾಡಿದ್ದಾರೆ.೮ ದೇಸಾಯಿ ಪಾಂಡುರಂಗರಾಯರು ಇದೇ ಶತಮಾನದಲ್ಲಿಯೇ ದೇವರಾಯನ ಕಾಲವನ್ನು ತಿಳಿಸಿದರೂ ಸ್ವಲ್ಪ ಭಿನ್ನವಾದ ಕಾಲವನ್ನು ಕೊಟ್ಟಿದ್ದಾರೆ.೯ ೧ ನೇ ದೇವರಾಯನು ಸಿಂಹಾಸನಾರೂಢನಾದ ಕಾಲವನ್ನು ಸಾ.ಶ ೧೪೦೬ ಎಂದು ಕೊಟ್ಟಿದ್ದಾರೆ.೧೦ ಅಗ್ಘವಣಿಯ ಹಂಪಯ್ಯನ ವಚನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮತ್ತು ವಿಜಯನಗರದ ಅರಸರ ಇತಿಹಾಸವನ್ನು ಅವಲೋಕಿಸಿದರೆ, ಹಂಪಯ್ಯನು ೧ ನೇ ದೇವರಾಯನ ಆಸ್ಥಾನವನ್ನು ನೋಡಿರುವ, ಅವನ ಆಡಳಿತದಿಂದ ಬೇಸರವಾಗಿರು ಸಾಧ್ಯತೆಯೇ ಹೆಚ್ಚೆನಿಸುತ್ತದೆ. ಕವಿಚರಿತಾಕಾರರರು ಮಿ. ರ‍್ಬೌ ರವರು ಹೇಳುವ ದೇವರಾಯ ಇವನೇ ಆಗಿದ್ದಲ್ಲಿ ಇವನ ಕಾಲ ಸಾ.ಶ ೧೨೮೬-೧೩೨೮ ಆಗುತ್ತದೆ ಎಂದು ಕಾಲವನ್ನು ಆವರಣ ಚಿಹ್ನೆಯಲ್ಲಿ ಸೂಚಿಸಿದ್ದಾರೆ ಮತ್ತು ಡಿ ಎಲ್ ನರಸಿಂಗಾಚರ‍್ಯರೂ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ.೧೧ ಅದರಂತೆ ಮತ್ತಿನ್ನೊಂದು ದಾರಿಯಲ್ಲಿ ಅವಲೋಕಿಸುವುದಾದರೆ, ವಚನದಲ್ಲಿ ಬರುವ ‘ದೇವರಾಯ’ಎಂಬ ಪದವು ಸಾಂಕೇತಿಕವಾಗಿ ಪುರಾಣಪ್ರತೀಕವಾಗಿ ಬಳಕೆಯಾಗಿದ್ದು ಎಂದಿಟ್ಟುಕೊಂಡರೆ ದೇವತೆಗಳ ರಾಜನಾದ ‘ಇಂದ್ರ’ನ ಬಗೆಗಿನ ರ‍್ಥವನ್ನೂ ಧ್ವನಿಸುತ್ತದೆ. ಆದರೆ ಎರಡನೆಯದನ್ನ ಒಪ್ಪುವುದು ಕಷ್ಟ ಮತ್ತು ವಾಸ್ತವವಾಗಿ ಬದುಕಿದ ವಚನಕಾರರಿಗೆ ಮಾಡಿದ ದ್ರೋಹವಾಗುವ ಸಾಧ್ಯತೆ ಇರುವುದರಿಂದ ಮೊದಲನೆಯದನ್ನೇ ಒಪ್ಪಬಹುದು. ರಾಜರ ಎದುರಿಗೇ ಅವರ ಮತ್ತವರ ಪ್ರಭುತ್ವದ ಸಮಸ್ಯೆಗಳನ್ನು ಎತ್ತಿ ಮಾತನಾಡಿರುವುದಕ್ಕೆ ವಚನಕಾರರಲ್ಲಿ ಬಹಳಷ್ಟು ಸಾಕ್ಷಿಗಳು ದೊರೆಯುತ್ತವೆ. ಬಸವಾದಿ ಪ್ರಮಥರ ಪ್ರಭಾವದಿಂದ ಕೇವಲ ಪುರಾಣಪ್ರತೀಕವಾಗಿ ಮೇಲಿನ ‘ದೇವರಾಯ’ ಎಂಬುದನ್ನು ಅಗ್ಘವಣಿಯ ಹಂಪಯ್ಯ ಬಳಸಿರಲಾರನು. ಹಂಪಯ್ಯನ ಕಾಲದ ಬಗೆಗೆ ನಿಖರ ಮಾಹಿತಿ ನೀಡದಿದ್ದರೂ ಕವಿಚರಿತಾಕಾರರು ಮತ್ತು ಡಿ ಎಲ್ ನರಸಿಂಹಾಚರ‍್ಯರು ಊಹಿಸಿರುವ ‘ದೇವರಾಯನ ಕಾಲದವನು’ ಎನ್ನುವ ಮಾತನ್ನು ಹಾಗೂ ಸದ್ಯ ವಚನವೇ ಸ್ಪುರಿಸುವ ‘ದೇವರಾಯ ಮಹಾರಾಯನ ಆಸ್ಥಾನ ಹೊಸತು’ ಎನ್ನುವ ಸಾಲಿನ ‘ಆಸ್ಥಾನ ಹೊಸತು’ ಎನ್ನುವ ಪದದ ಮೂಲಕ ೧ ನೇ ದೇವರಾಯನ ಆರಂಭಿಕ ಕಾಲವನ್ನು ಸ್ಪಷ್ಟವಾಗಿ ಈ ವಚನ ಸೂಚಿಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಮತ್ತು ಪಠ್ಯದ ಬಹುಮುಖ್ಯ ಪದಗಳ ಆಧಾರದ ಮೇಲೆ ಅಗ್ಘವಣಿಯ ಹಂಪಯ್ಯನು ವಿಜಯನಗರ ಸಾಮ್ರಾಜ್ಯವನ್ನು ಆಳಿದ ಸಂಗಮ ವಂಶದ ದೊರೆ ೧ ನೇ ದೇವರಾಯನ ಕಾಲದಲ್ಲಿ ಅಂದರೆ ಸಾ.ಶ ೧೪೦೬ – ೧೪೧೨-೧೩ ರಲ್ಲಿ ಇದ್ದನೆಂದು ಹೇಳಬಹುದು. ಇವನು ೧ ನೇ ದೇವರಾಯನ ನೈತ್ತಿಕ ಅಧಃಪತನವನ್ನು ಗಮನಿಸಿದ್ದನೆಂದು ವಚನದಲ್ಲಿನ ‘ಸ್ತ್ರೀಲಂಪಟನಾಗಿ ಅಂತಃಪುರ ಬಿಟ್ಟು ಹೊರವಡ’ ‘ತರೆದ ಬಾಗಿಲ ಮುಚ್ಚುವರಿಲ್ಲ; ಮುಚ್ಚಿದ ಬಾಗಿಲ ತೆರೆವರಿಲ್ಲ’ ಸಾಲುಗಳಿಂದ ತಿಳಿದು ಬರುತ್ತದೆ. ಇದೇ ವಿಷಯವನ್ನೂ ಇತಿಹಾಸಕಾರ ರಾಬರ್ಟ್ ಸಿವಿಲ್ಲರು ಫರಿಸ್ತಾ ಹೇಳಿದನೆಂದು ತಮ್ಮ ಕೃತಿಯಲ್ಲಿ ರಾಯನು ಹೆಣ್ಣಿಗಾಗಿ ಇಳಿದ ಅಧಃಪತನವನ್ನು ಕುರಿತು ಪ್ರಸ್ತಾಪಮಾಡಿದ್ದಾರೆ.೧೨ ಮೇಲಿನ ಅಭಿಪ್ರಾಯವನ್ನು ಭಾರತೀಯ ಇತಿಹಾಸಕಾರರಾದ ನೀಲಕಂಠ ಶಾಸ್ತ್ರಿಗಳೂ ದಾಖಲಿಸಿದ್ದಾರೆ.೧೩ ರಾಬರ್ಟ್ ಸಿವಿಲ್ಲರು ಫೆರಿಸ್ತಾ ಬರೆದಿರುವುದನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಿರುವಂತೆ ರಾಯನು ಹುಡುಗಿಯನ್ನು ಪಡೆಯಲೋಸುಗ ನಡೆಸಿದ ಹುಚ್ಚುತನದ ಯಾತ್ರೆಯಲ್ಲಿ ಸಿಕ್ಕಿಹಾಕೊಕೊಂಡ ‘ರೈತ’ ಮನೆತದ ಹುಡುಗಿಯೆಂದು ಹೇಳಿದ್ದರೆ, ನೀಲಕಂಠ ಶಾಸ್ತ್ರಿಗಳು ‘ಚಿನ್ನಗೆಲಸ ಮಾಡುವ ಅಕ್ಕಸಾಲಿಗ’ ನ ಮಗಳೆಂದು ಹೇಳಿದ್ದಾರೆ. ಉಳಿದ ಅಭಿಪ್ರಾಯಗಳಲ್ಲಿ ಸಮಾನತೆಯಿದೆ. ನೈತ್ತಿಕತೆಯನ್ನೇ ಬುನಾದಿಯಾಗಿಟ್ಟು ಸಮಾಜವನ್ನ ಕಟ್ಟುವ ಕರ‍್ಯ ನರ‍್ವಹಿಸಿದ ವಚನಕಾರರ ಮರ‍್ಗವನ್ನು ಅಗ್ಘವಣಿಯ ಹಂಪಯ್ಯ ಮೆಚ್ಚಿದ್ದದ್ದನೆಂದು ಅವನ ವಚನದ ಗುರುವೆಂಬ ತಳವಾರನಾಜ್ಞೆ ಕೆಟ್ಟಿತ್ತು ಸಾಲಿನಿಂದಲೂ, ವಚನಕಾರರ ನಡೆ ನುಡಿಗೆ ವಿರುದ್ಧವಾದದ್ದನ್ನೂ ತನ್ನ ಕಣ್ಣಾರೆ ಕಂಡುದರ ಬಗೆಗೆ ಬೇಸರ, ಹಿಂಸೆಯಲ್ಲಿ ವಚನದ ‘ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು, ಭಕ್ತರೆಂಬುವವರಿನ್ನು ಬದುಕಲೆಬಾರದು’ ಎಂಬ ಮಾತುಗಳು ಬಂದಿವೆ. ಪ್ರಭುತ್ವದ ಮೇಲಿನ ಬೇಸರ, ಸಿಟ್ಟು, ವ್ಯಂಗ್ಯ ಅಭಿವ್ಯಕ್ತಿಯೇ ಪ್ರಸ್ತುತ ವಚನದ ಭಾವಕೇಂದ್ರವಾಗಿದೆ. ವಚನಕಾರರ ನಂತರ ವೈಶ್ಣವಪಂಥ ಬಂದ ನಂತರವು ವಚನಗಳು ರಚನೆಯಾಗುತ್ತಿದ್ದುದಕ್ಕೆ ಪ್ರಸ್ತುತ ವಚನವು ಸಾಕ್ಷಿಯಾಗಿದೆ. ಬದಲಾದ ಪ್ರಭುತ್ವ ಅದರ ನಾಯಕನಾದವನ ವೈಯುಕ್ತಿಕ ತರ‍್ತಿಗೆ ಅನುಗುಣವಾಗಿ ಪಲ್ಲಟವಾಗುವ ಸಾಮಾಜಿಕ ಉದ್ದೇಶ, ಮೌಲ್ಯಗಳ ಪಲ್ಲಟತೆಯ ಬಹುದೊಡ್ಡ ಸ್ಥಿತಿಯನ್ನ ವಾಚ್ಯವಾಗಿಯೇ ವಚನದಲ್ಲಿ ತಿಳಿಸುತ್ತಿದ್ದಾನೆ. ‘ಹಂಸಪತಿ’, ‘ಗರುಡಪತಿ’, ‘ವೃಷಭಪತಿ’ ಎಂದು ವಾಹನದ ಮೇಲೆ ಆರೂಢರಾಗುವ ಬ್ರಹ್ಮ, ವಿಷ್ಣು ಮತ್ತು ಶಿವನನ್ನ ಹೇಳುತ್ತಲೇ-ಪ್ರಭುತ್ವದಲ್ಲಿನ ಸೃಷ್ಟಿ, ಸ್ಥಿತಿ ಮತ್ತು ಲಯವನ್ನ ಹೇಳುತ್ತಿದೆ. ವಚನದ ನಂತರದ ಸಾಲಾದ ‘ರ‍್ವಜೀವಾಧಿಪತಿ’ ಪದವು ಬಹುದೊಡ್ಡ ವ್ಯಂಗ್ಯವಾಗಿ ರ‍್ವಹಿಸುತ್ತಿದೆ. ಮಾನವ ಜಾತಿಯನ್ನು ಒಂದೆಂದು ಬಗೆದ ವಚನಕಾರರ ಅನಂತರ ಪ್ರಭುತ್ವವು ತನ್ನ ಇರುವಿಕೆಯನ್ನು ರ‍್ಪಡಿಸುತ್ತಿರುವಾಗ ಹಂಪಯ್ಯ ವ್ಯಂಗ್ಯವಾಡುತ್ತಲೇ ಪ್ರಭುತ್ವಕ್ಕೆ ವಿರುದ್ಧವಾಗಿ ತನ್ನ ಅಭಿಪ್ರಾಯವನ್ನು ತಿಳಿಸುತ್ತಿದ್ದಾನೆ. ‘ದೇವರಾಯನ ಆಸ್ಥಾನ ಹೊಸತು’ ಎನ್ನುವಾಗ ಆಗತಾನೆ ಪ್ರಾರಂಭದ ಹಂತದಲ್ಲಿದ್ದ ಸಾಮ್ರಾಜ್ಯವನ್ನ ಅಥವಾ ಸಿಂಹಾಸನಾರೂಢನಾದ ೧ ನೇ ದೇವರಾಯನ ಬಗೆಗೆ ನೇರವಾಗಿಯೆ ಮಾತನಾಡುತ್ತಿದ್ದಾನೆ. ‘ಬಾರ’ ‘ಕುಳ್ಳಿರ’ ಅನ್ನುವ ನಿಧಿಷ್ಟ ಕ್ರಿಯಾಪದಗಳು ಮುಂದಿನ ಸಾಲು ಅತೀವ್ಯಂಗ್ಯವಾಗಿ ಕೆಲಸ ಮಾಡುತ್ತ, ರಾಜನಲ್ಲಿದ್ದ ‘ಸ್ತ್ರೀಲಂಪಟತೆ’ ಯ ಬಗೆಗೆ ನೇರವಾಗಿ ಹೇಳಿ ‘ಅಂತಃಪುರಬಿಟ್ಟು ಹೊರವಡ’ ಎನ್ನುವ ಪದವನ್ನ ಬಳಸಿ ಸ್ಪಷ್ಟವಾಗಿ ಆ ಕಾಲಘಟ್ಟದ ೧ ನೇ ದೇವರಾಯನ ರಾಜನ ಬಗೆಗೆ ಹೇಳುತ್ತಿದ್ದಾನೆ. ರಾಜ್ಯದ ಪ್ರಮುಖ ಆದಾಯದ ಹೊಣೆಯನ್ನೂ ನಿಭಾಯಿಸಲಾರದ ರಾಯನ ಹೀನಸ್ಥಿತಿಯನ್ನ ‘ಕಪ್ಪ ಕಾಣಿಕಯನ್ನೊಪ್ಪಿಸಿಕೊಂಬವರಿಲ್ಲ’ ಎನ್ನುವುದನ್ನ ಹೇಳಿದಾಗಲೇ, ರಾಜ್ಯ ಮತ್ತದರಲ್ಲಿನ ಪ್ರಭುತ್ವ ನೈತ್ತಿಕವಾಗಿ ಮತ್ತು ರ‍್ಥಿಕವಾಗಿ ದಿವಾಳಿತನಕ್ಕೆ ಮುಖಮಾಡಿರುವುದನ್ನ ಕಾಣಿಸುತ್ತಿದ್ದಾನೆ. ನಂತರದ ‘ಗುರುವೆಂಬ ತಳವಾರನ ಆಜ್ಞೆ ಕೆಟ್ಟಿತ್ತು’ ಸಾಲಿನ ಮೂಲಕ ಬಹುಮುಖ್ಯವಾದ ಒಂದು ಅಂಶದ ಬಗೆಗೆ ಗಮನ ಸೆಳೆಯುತ್ತಾನೆ. ತನ್ನ ಹಿಂದಿನ ವಚನ ಚಳುವಳಿಯಲ್ಲಿನ ಗುರುವಿನ ಮಹತ್ವದ ಬಗೆಗೆ, ‘ಅರಿವೇ ಗುರು’ ವಾದ ಸ್ಥಿತಿಯಿಂದ ಕೆಳಗಿಳಿದಿರುವುದರಿಂದಲೇ ಆದ ಬಹುದೊಡ್ಡ ಸಂಚಲನದ ಬಗೆಗೆ ಗಮನವಿದ್ದೇ ‘ಕೆಟ್ಟಿತ್ತು’ ಎನ್ನುವಾಗ ನಿದಿಷ್ಟ ರ‍್ತಮಾನ ಕ್ರಿಯಾಪದಗಳನ್ನ ಬಳಸಿದ್ದಾನೆ. ‘ತೆರೆದ ಬಾಗಿಲ’ ಅನ್ನುವ ಪದ ದೇಹದ ಅರಿಷಡ್ರ‍್ಗಗಳನ್ನ ತಿಳಿಸುತ್ತಿದೆ (ಗಮನಿಸಿ- ದೇಹವೇ ದೇಗುಲ ಅನ್ನುವುದರ ಪ್ರಭಾವವಿದೆ.) ‘ಮುಚ್ಚುವರಿಲ್ಲ’ ಅನ್ನುವ ಪದವೂ ಸಹಾ ನಿದಿಷ್ಟ ಕ್ರಿಯಾ ಪದವಾಗಿದ್ದು ಇದರಲ್ಲಿ ಒಂದು ವ್ಯಥೆಯ ಧ್ವನಿ ಹೊಮ್ಮುತ್ತಿದೆ. ‘ಮುಚ್ಚಿದ ಬಾಗಿಲ’ ಅನ್ನುವುದು ಜ್ಞಾನವನ್ನ, ನೈತ್ತಿಕತೆಯ ಪ್ರಜ್ಞೆಯನ್ನ ಸಂಕೇತಿಸುತ್ತಲೇ ಇಲ್ಲೂ ರ‍್ಧಿಷ್ಟ ಕ್ರಿಯಾಪದವನ್ನ ತಿಳಿಸುತ್ತಲೇ ‘ತೆರೆವರಿಲ್ಲ’ ಅನ್ನುವಾಗ ತನ್ನ ಅಸಹಾಯಕತೆಯನ್ನ ಜೊತೆಗೆ ಪ್ರಭುತ್ವದ ಅಧೋಗತಿಯನ್ನ ತಿಳಿಸುತ್ತಲೇ ಮುಂದಿನ ಕೆಟ್ಟಿರುವ ‘ಅರಸುತನ’ ವನ್ನ ಹೇಳುತ್ತಿದ್ದಾನೆ. ಅದರಲ್ಲಿಯೂ ಆ ಸಾಲಿನ ಬಹುಮುಖ್ಯ ಪದವೂ ‘ಕೆಟ್ಟಿತ್ತು’ ಇಂದಿಗೆ ಓದಿದರೆ ಭೂತಕಾಲ ಕ್ರಿಯಾಪದ ಮತ್ತೆ ರ‍್ತಮಾನಕಾಲದಲ್ಲಿಯೂ ಸ್ಪಷ್ಟವಾದ ಕೆಲಸ ಮಾಡುತ್ತ ‘ಕೆಟ್ಟ ಅರಸುತನ’ ವನ್ನ ಧ್ವನಿಸಿ, ಕೊನೆಗೆ ಈ ಹೀನಾವಸ್ಥೆಯನ್ನ ಕಂಡು ತನ್ನ ಒಟ್ಟೂ ಉದ್ದೇಶವಾದ ಬದುಕಿಯೂ ಪ್ರಯೋಜನವಿಲ್ಲವೆಂಬುದನ್ನ ಹೇಳುತ್ತಿದ್ದಾನೆ. ಕೊನೆಯ ಸಾಲಿನಲ್ಲಿನ ‘ಬದುಕಲೆ’ ಅನ್ನುವಾಗ ಅವನಲ್ಲಿನ ಒಳಗುದಿಯ ಕಾವನ್ನ ಹೇಳುವಲ್ಲಿ ಸಾಮಾನ್ಯವಾದ ಇಂದಿನ ದುಖಃದ ಸ್ಥಿತಿಯನ್ನೂ ಧ್ವನಿಸುವ ಹಾಗೆ ಮಾಡುತ್ತಿದೆ. ಆಶ್ಚರ್ಯದ ಸಂಗತಿ ಎಂದರೆ ರಾಜನ ಅಥವಾ ಪ್ರಭುತ್ವದ ವಿರುದ್ಧ ಆ ಕಾಲದಲ್ಲಿಯೇ ಬಹಳ ನೇರವಾಗಿ ಖಂಡಿಸುವ ಗುಣ ಮೆಚ್ಚಲೇಬೇಕಾದುದು. ಅದೇ ರಾಜ್ಯದಲ್ಲಿದ್ದು. ಈ ಗುಂಡಿಗೆಗೆ ಪ್ರಭಾವ ಬಸವಣ್ಣನ ನಡೆ ಇದ್ದರೂ ಇರಬಹುದು (ಊರಮುಂದೆ ಹಾಲಹಳ್ಳ ಹರಿಯುತಿರಲು ಬಿಜ್ಜಳನ ಭಂಡಾರವೆನಗೇಕಯ್ಯಾ, ನೆಲನಾಳ್ದನ ಹೆಣನೆಂದೊಡೆ ಒಂದಡಿಕೆಗೆ ಕೊಂಬರಿಲ್ಲ … ಇತ್ಯಾದಿ ಬಸವಣ್ಣನ ವಚನ ಮತ್ತು ನಡೆಯ ಪ್ರಭಾವ ಇದ್ದರೂ ಇರಬಹುದು) ಎಲ್ಲಕಾಲದಲ್ಲಿಯೂ ಬಂಡಾಯವನ್ನ ನಡೆಸುವವನ ಒಳ ಹೊರ ಸ್ಥಿತಿಯ ಶುಚಿತ್ವದ ದ್ಯೋತಕವಾಗಿ ಈ ವಚನ ನಿಂತಿದೆ. ಅಧಿಕಾರದಲ್ಲಿರುವವನ ನೈತ್ತಿಕ ಅಧಃಪತನ ಮತ್ತು ಅವನನ್ನಾಶ್ರಯಿಸಿರುವ ಎಲ್ಲರ ಪತನಕ್ಕೂ ನಾಂದಿ. ಕೊನೆಗೆ ಅದರ ಪರಿಣಾಮ ಸಮಾಜದಲ್ಲಿ ಕ್ಷುದ್ರತೆಯ ಅನಾವರಣಕ್ಕೆ ನಾಂದಿ. ವಚನಕಾರರಿಗೆ ಇದ್ದ ಭಾಷೆಯ ಬಳಕೆಯಲ್ಲಿನ ಬಹುಸೂಕ್ಷ್ಮತೆ ಬೆರಗಾಗಿಸುತ್ತದೆ. ಒಂದು ಕ್ರಿಯಾಪದವನ್ನ ಬಳಸುವಾಗಲಂತೂ ಅವರಲ್ಲಿನ ಸದ್ಯ-ಶಾಶ್ವತವನ್ನ ಹಿಡಿದಿಡುವಲ್ಲಿ ಅನುಭವ-ಅನುಭಾವ ಅಥವಾ ಭವಿಷ್ಯವನ್ನು ನುಡಿಯುವ ಮುಂಗಾಣ್ಕೆ, ಎಲ್ಲ ಕಾಲದಲ್ಲಿಯೂ ಅವರನ್ನು ಸಲ್ಲುವಂತೆ ಮಾಡಿದೆ. ಅಡಿಟಿಪ್ಪಣಿ ೦೧. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ ಎಂ ಕಲಬುರಗಿ. ಪು ೯೭೩ ಮತ್ತು ೯೭೪ (೨೦೧೬) ೦೨. ಪೀಠಿಕೆಗಳು ಲೇಖನಗಳು. ಡಿ ಎಲ್ ನರಸಿಂಹಾಚಾರ್. ಪುಟ ೪೬೯. (೧೯೭೧) ೦೩. ಶಿವಶರಣ ಕಥಾರತ್ನಕೋಶ. ತ ಸು ಶಾಮರಾಯ. ಪುಟ ೦೪. (೧೯೬೭) ೦೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ ಎಂ ಕಲರ‍್ಗಿ. ಪು ೯೩೫. (೨೦೧೬) ೦೫. ಪ್ರಾಚೀನ ಕನ್ನಡ ಸಾಹಿತ್ಯದ ಸಮಗ್ರ ಸೂಚಿ-೧. ಡಾ. ಆರ್.






