ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ತೊರೆಯ ಹರಿವು

ಅಂಕಣ ಬರಹ ತೊರೆಯ ಹರಿವು ಅಕ್ಷಯ ವಸ್ತ್ರವೂ.. ಅಕ್ಷೋಹಿಣಿ ಸೈನ್ಯವೂ… ತಂದೆ ಕೊಡಿಸೋ ಸೀರೆ; ಮದುವೆ ಆಗೋವರೆಗೆ. ತಾಯಿ ಕೊಡಿಸೋ ಸೀರೆ; ತಾಯಿ ಆಗೋವರೆಗೆ, ಬಂಧು ಕೊಡಿಸೋ ಸೀರೇ ಬಣ್ಣ ಹೋಗೋವರೆಗೆ, ಗಂಡಾ ಕೊಡಿಸೋ ಸೀರೇೇೇ… ಕುಂಕುಮ ಇರುವವರೆಗೆ, ಹೆಣ್ಣಿನ ಜನುಮ ಕಳೆಯುವವರೆಗೆ, ಮಣ್ಣಿನ ಮಮತೆ ಮರೆಯೋವರೆಗೆ…’ ಹೆಣ್ಣು ಮನಸ್ಸುಗಳನ್ನು ಕಲಕಿ ಬಿಡುವ ಅಣ್ಣಾವ್ರ ದನಿಯಲ್ಲಿ ಬಂದ ಈ ಹಾಡಿಗಿರುವ ವೈಟೇಜೇ ಬೇರೆ…             ಸ್ತ್ರೀವಾದ, ಸ್ವಾಭಿಮಾನ ಮುಂತಾದವೆಲ್ಲಾ ಅರ್ಥವಾಗದ ಮುಗ್ಧೆಯರಿಂದ ಹಿಡಿದು, ಅಪ್ಪಟ ಸ್ತ್ರೀವಾದಿಯವರೆಗೂ ಸೀರೆ ಮೆಚ್ಚುಗೆಯ ಉಡುಪೆಂದರೆ ತಪ್ಪಾಗದು. ವಿದೇಶಿ ಹೆಣ್ಣುಗಳೂ ಸಹ ಮೀಟರುಗಟ್ಟಲೆ ಇರುವ ಬಟ್ಟೆಯನ್ನು ಬಗೆ ಬಗೆ ಶೈಲಿಯಲ್ಲಿ ಉಡುವ ಭಾರತೀಯ ನಾರಿಯರ ಸೌಂದರ್ಯ ಪ್ರಜ್ಞೆಗೆ ಬೆರಗಾಗುತ್ತಾರೆ ಎನ್ನುವುದು ಸೀರೆಯ ಮೆರುಗಿನ ಮುಕುಟಕ್ಕೊಂದು ಹಿರಿಮೆಯ ಗರಿ ಸಿಕ್ಕಿಸುತ್ತದೆ. ಗೊರೂರರ, ‘ಅಮೇರಿಕದಲ್ಲಿ ಗೊರೂರು’ ಪುಸ್ತಕದಲ್ಲಿ ಅವರ ಶ್ರೀಮತಿಯವರು ಉಡುಪಾಗಿದ್ದ ಸೀರೆಯನ್ನು ವಿದೇಶಿಯರು ಅಚ್ಚರಿಯಿಂದ ನೋಡಿ ಪ್ರೀತಿಯಿಂದ ಮೆಚ್ಚಿದ ಪ್ರಸಂಗವನ್ನಿಲ್ಲಿ ನೆನಪಿಸಿಕೊಳ್ಳಬಹುದು.      ಮಿಲಿಂದನೆಂಬ ಸಾರ್ವಕಾಲಿಕ ಸುಂದರಾಂಗನ ತಾಯಿ ಉಷಾ ಸೋಮನ್, ಸೀರೆ ಉಟ್ಟೇ ಮ್ಯಾರಥಾನ್ ಓಡುವ, ನಾನಾ ಬಗೆಯ ಕಸರತ್ತು ಮಾಡುವ ವೀಡಿಯೋಗಳನ್ನು ಸೀರೆಯನ್ನು ತೊಡಕಿನ ಬಟ್ಟೆಯೆಂದು ಹಳಿದು ಮೂಗು ಮುರಿಯುವವರಿಗೆ ತೋರಿಸಬೇಕು. ಗದ್ದೆ ನಾಟಿಯಿಂದ ಹಿಡಿದು, ಕಾರ್ಖಾನೆ, ಕೂಲಿ, ಕಚೇರಿ, ಅಡುಗೆ ಮನೆ, ಮಕ್ಕಳ ಸಂಭಾಳಿಕೆ… ಹೀಗೆ ಎಲ್ಲದಕ್ಕೂ ಸೈ ಎನ್ನುವ ಸೀರೆಗೊಂದು ಜೈ ಎನ್ನದಿರಲಾದೀತೆ?!  ಮನೆಯ ಟ್ರಂಕಿನಲ್ಲಿ, ಬೀರುವಿನಲ್ಲಿ ಸೀರೆಗಳು ರಾಶಿ ತುಂಬಿದ್ದರೂ, ಅಂಗಡಿಯೊಳಗಿನ ಗೊಂಬೆ ಮೈಮೇಲಿನದ್ದು ತನ್ನಲಿಲ್ಲವಲ್ಲಾ! ಬೇರೊಬ್ಬಾಕೆ ಉಟ್ಟ ಬಣ್ಣ, ಕಸೂತಿ, ಡಿಸೈನ್, ಫ್ಯಾಬ್ರಿಕ್ ತನ್ನ ಕಲೆಕ್ಷನ್ ನಲ್ಲಿ ಇಲ್ಲವಲ್ಲಾ!! ಎಂದು ಪೇಚಾಡದ  ಮಹಿಳೆಯರನ್ನು ದುರ್ಬೀನಿನಲ್ಲಿ ಹುಡುಕಬೇಕು.      ಸೀರೆಗೊಂದು ಸೊಗಸು ಬರುವುದೇ ಅದರ ಬಣ್ಣ, ಕಸೂತಿ, ಸೆರಗಿನ ಮೆರುಗು, ಅಂಚಿನ ಸೊಬಗು, ನೆರಿಗೆ ಚಿಮ್ಮುವ ಪರಿಯಿಂದ ಎಂದರೆ ತಪ್ಪಾಗದು. ಒಂದಿಬ್ಬರು ಹೆಂಗಳೆಯರು ಬಿಡುವಿದ್ದು    ಸೀರೆ ಮಳಿಗೆಯೊಂದಕ್ಕೆ ಕಾಲಿಟ್ಟರೆಂದರೆ ನೋಡಿ, ಪ್ರತೀ ಸೀರೆಯ ಗುಣಗಾನ ಮಾಡುತ್ತಾ, ಅಂಚು ಸವರುತ್ತಾ, ಸೆರಗಿನ ವೈಭವ ಬಣ್ಣಿಸುತ್ತಾ, ಉಟ್ಟರೆ ಎಷ್ಟು ನೆರಿಗೆ ಬರಬಹುದೆಂದು ಅಂದಾಜಿಸುತ್ತಾ, ಅದರ ಗುಣಮಟ್ಟ, ಕಸೂತಿ, ಪ್ರಿಂಟ್, ಬಣ್ಣವನ್ನು ವಿಶ್ಲೇಷಿಸುತ್ತಾ… ಇಡೀ ದಿನ ಅಲ್ಲಿಯೇ ಹೊತ್ತು ಕಳೆದು ಬರಬಲ್ಲರು.           ಸೀರೆ ಎಂದರೆ ಕೇವಲ ಒಂದು ಬಗೆಯ ಉಡುಪೆಂದು ಸಾಮಾನ್ಯೀಕರಿಸುವುದು ಸರಿಯಲ್ಲ. ಸೀರೆ ಎಂಬುದು ಹಲವು ಭಾವನೆಗಳ ಸಂಗಮ. ಮೇಲೆ ಉದಾಹರಿಸಿದ ಅಣ್ಣಾವ್ರ ಹಾಡಿನ ಒಳ ದನಿ ಕೂಡ ಇದೇ ಆಗಿದೆ. ಯಾವ ಯಾವ ಕಾರ್ಯಕ್ರಮಗಳಿಗೆ ಯಾವ ಬಗೆ ಸೀರೆ ಉಡಬೇಕೆನ್ನುವುದೂ ರೂಢಿಯಲ್ಲಿದೆ. ಮದುವೆ ಹೆಣ್ಣಿಗೆ ಆರತಕ್ಷತೆಗೆ ಮರೂನ್ ಬಣ್ಣದ ದೊಡ್ಡಂಚಿನ ರೇಷ್ಮೆ, ಧಾರೆಗೆ ಬಿಳಿ/ಕೆನೆ ಬಣ್ಣಕ್ಕೆ ಕೆಂಪಂಚಿನ ರೇಷ್ಮೆ; ಸೀಮಂತಕ್ಕೆ ಹಸಿರು ಬಣ್ಣದ ರೇಷ್ಮೆ, ಬಾಣಂತನದಲ್ಲಿ ಮೆತ್ತನೆಯ ಹತ್ತಿ ಸೀರೆ, ಹಬ್ಬ ಹರಿದಿನಗಳಿಗೆ, ಶುಭ ಕಾರ್ಯಗಳಿಗೆ, ತಿಥಿ- ಅಂತ್ಯಕ್ರಿಯೆಗಳಿಗೆ… ಹೀಗೆ.. ಋತುಮಾನ ಆಧಾರಿತ ಬೆಳೆಗಳಿರುವಂತೆ, ಕಾರ್ಯಕ್ರಮ ಆಧರಿಸಿ ಸೀರೆ ಉಡುವುದಿರುತ್ತದೆ!!. ಭಾರೀ ದಪ್ಪಂಚಿನ ರೇಷ್ಮೆ ಸೀರೆಯುಟ್ಟು ಶೋಕ ಕಾರ್ಯಗಳಿಗೆ ಯಾರೂ ಹೋಗುವುದಿಲ್ಲ. ಹಾಗೇ ಸಾದಾಸೀರೆಯುಟ್ಟು ವೈಭವದ ಮದುವೆ ಇತರೆ ಸಮಾರಂಭಗಳನ್ನು ಮಾಡುವುದಿಲ್ಲ. ಇದು ಜನರ ಔಚಿತ್ಯ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ.       ಕಲಾವಿದರಿಗೆ ಅಷ್ಟೇನು ಗೌರವ ಕೊಡದ ಕಾಲದಿಂದ ಹಿಡಿದು, ಅವರನ್ನು ಆರಾಧಿಸುವ ಕಾಲದವರೆಗೂ ಅವರನ್ನು ಅನುಸ(ಕ)ರಿಸುವ ಸಾಮಾಜಿಕರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಅದರಲ್ಲೂ ನಟಿಯರ ಉಡುಗೆ, ಅಲಂಕಾರ, ಕೇಶ ವಿನ್ಯಾಸ, ನಡಿಗೆಯ ಭಂಗಿ, ಮಾತಿನ ಶೈಲಿ, ಅನುಕರಿಸದವರುಂಟೆ?! ಅದಕ್ಕೆಂದೇ ಅವರನ್ನು ‘ಫ್ಯಾಷನ್ ಐಕಾನ್’ ಎನ್ನುವುದು. ಸೀರೆ ಎಂದರೆ, ಮೋಟು ಸೆರಗಿನಿಂದ ಹಿಡಿದು ಮೈಲುಗಟ್ಟಲೆ ಗಾಳಿಪಟದ ಹಾಗೆ ಬಿಡುವವರೆಗೂ ಸಿನೆಮಾ ಮಂದಿಯನ್ನೇ ಅನುಕರಿಸುತ್ತಾರೆ. ಬೆಳ್ಳಿ ಮೋಡ ಆಪ್ತಮಿತ್ರ, ಹಾಲುಂಡ ತವರು, ಚಂದ್ರಮುಖಿ ಪ್ರಣ ಸಖಿ, ಚಾಂದಿನಿ, ಹಮ್ ಆಪ್ ಕೆ ಹೇ ಕೌನ್, ರಂಗೀಲಾ, ನಾಗಿನ್… ಹೀಗೆ ಆಯಾ ಕಾಲದ ಜನಪ್ರಿಯ ಸಿನೆಮಾಗಳಲ್ಲಿ ನಾಯಕಿ ಉಟ್ಟ ಸೀರೆ ಟ್ರೆಂಡ್ ಆಗಿ, ಅದೇ ಹೆಸರಿನ ಸೀರೆಗಳು ಮಾರುಕಟ್ಟೆಯನ್ನು ಆಳಿರುವುದುಂಟು. ಈಗ ಬಿಡಿ, ಮನೆಮನೆಗಳಲ್ಲಿ ಟಿವಿಗಳಿದ್ದು ಧಾರಾವಾಹಿಗಳು  ವೈವಿಧ್ಯಮಯ ಉಡುಪುಗಳನ್ನು ಅದರಲ್ಲೂ ಕಣ್ಣುಕುಕ್ಕುವ ರಂಗು-ಚಿತ್ತಾರ-ಜರಿಯ ಸೀರೆಗಳನ್ನು ಮಹಿಳೆಯರಿಗೆ ಪರಿಚಯಿಸುತ್ತಿವೆ.     ಇನ್ನು, ಸೀರೆ ಎನ್ನುವ ಹೆಸರು ಒಂದೇ ಆಗಿದ್ದರೂ, ಅದನ್ನು ಉಡುವುದರಲ್ಲಿ, ಸೆರಗು ಹಾಕುವುದರಲ್ಲಿ, ಹಲವು ವಿಧಾನ-ರೀತಿ -ರೂಢಿ ಗಳಿವೆ ಎಂದರೆ ಆಶ್ಚರ್ಯಪಡಬೇಕಿಲ್ಲ. ಗೊಬ್ಬೆ, ಕಚ್ಚೆ, ಕೂರ್ಗ್, ಮರಾಠಿ, ತಮಿಳು, ಬಂಗಾಳಿ, ಮಲೆಯಾಳಿ, ತಮಿಳರ ಶೈಲಿ… ಹೀಗೆ ಪ್ರಾದೇಶಿಕತೆ, ಜನಾಂಗಗಳ  ವೈವಿಧ್ಯವನ್ನು ಸೀರೆಗಳು ಪ್ರತಿನಿಧಿಸುತ್ತವೆ. ಉಡುವ ಮಾದರಿಯಲ್ಲದೆ, ಅವುಗಳ ಫ್ಯಾಬ್ರಿಕ್ಕೂ ಸಹ ಪ್ರಾದೇಶಿಕತೆಯ ಸೊಗಡನ್ನು ಸಾರುತ್ತವೆ. ಮೈಸೂರ್ ಸಿಲ್ಕ್, ಕಲ್ಕತ್ತಾ ಕಾಟನ್, ಕಂಚಿ, ಇಕ್ಕತ್, ಇಳಕಲ್, ಚಂದೇರಿ, ಬಾಂದನಿ, ಜೈಪುರಿ,  ಹ್ಯಾಂಡ್ಲೂಮ್, ಲಂಬಾಣಿ, ಮಹೇಶ್ವರಿ, ಧರ್ಮಾವರಂ, ಕಾಂಚಿಪುರಂ, ಬನಾರಸಿ, ಮೊಳಕಾಲ್ಮೂರು, ಕೊಡಿಯಾಲ, ಸಂಬಾಲ್ಪುರಿ, ಕಲಂಕಾರಿ…. ಶುದ್ಧ ರೇಷ್ಮೆ, ಶುದ್ಧ ಜರಿ, ಶುದ್ಧ ಹತ್ತಿ, ಶುದ್ಧ ಕೈಮಗ್ಗ, ಶುದ್ಧ ಕಸೂತಿ…. ಹೀಗೆ ಪಟ್ಟಿಯನ್ನು ವಿಸ್ತರಿಸುತ್ತಾ ಹೋಗಬಹುದು! ಬೆಂಗಳೂರಿನಂತಹ ಮಹಾನಗರಗಳಲ್ಲಿರುವ ಯಾವುದಾದರೂ ಒಂದು ಸೀರೆ ಅಂಗಡಿಯ ಒಳ ಹೊಕ್ಕರೆ, ಸೀರೆಗಳಲ್ಲಿರುವ ವರ್ಣ ವೈವಿಧ್ಯ, ಪ್ರಾದೇಶಿಕ ವೈವಿಧ್ಯವನ್ನು ಕಣ್ತುಂಬಿಕೊಂಡು ಬರಬಹುದು.      ಹತ್ತಿ ಬಟ್ಟೆಯಿಂದಾದ ನಿಸರ್ಗ ಸ್ನೇಹಿ ಕೈಮಗ್ಗದ ದೇಸಿ ಸೀರೆಗಳಿಗೆ ಆಧುನಿಕರು ಬುದ್ಧಿ – ಭಾವಗಳಿಂದ ಶರಣಾಗಿದ್ದಾರೆ. ದೇಸೀ ಸೀರೆಗಳು ಅವರ ಮನಸ್ಸೂರೆ ಮಾಡಿವೆ. ಶುದ್ಧ ಹತ್ತಿಯ, ನೈಸರ್ಗಿಕ ಬಣ್ಣದ ಈ ಸೀರೆಗಳು ನವತರುಣಿಯರ, ಮಧ್ಯಮ ವಯೋಮಾನದವರ, ವೃದ್ಧರ ಅಚ್ಚುಮೆಚ್ಚಿನ ಆಯ್ಕೆಯಾಗುತ್ತಿವೆ. ಮಗ್ಗವನ್ನೇ ಜೀವನಾಧಾರ ಮಾಡಿಕೊಂಡಿರುವ ಕಾರ್ಮಿಕರ ಜೀವಚೈತನ್ಯಕ್ಕೆ ಟಾನಿಕ್ ನ ಹಾಗೆ ಈ ಒಲವು ಇದ್ದರೂ ಇದು ಹೊಟ್ಟೆ ತುಂಬಿಸುವುದಿಲ್ಲ, ಆರ್ಥಿಕ ಸದೃಢತೆ ನೀಡುವುದಿಲ್ಲ. ಇದು ‘ರಾಕ್ಷಸನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತೆ’ಎನ್ನುವ ಹುಯ್ಯಲು ಆಗಾಗ್ಗೆ ಕೇಳಿಬರುತ್ತದೆ. ಸರ್ಕಾರ ಕೈಮಗ್ಗದ ಕಾರ್ಮಿಕರಿಗೆ ಹಲವು ಯೋಜನೆಗಳನ್ನು ನೀಡುತ್ತಿದೆ. ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸುವ ಅಂಶಗಳನ್ನೂ ರೂಪಿಸುತ್ತಿದೆ.   ಮೈಸೂರು ರಾಜವಂಶದ ಶ್ರೀಕಂಠದತ್ತ ಒಡೆಯರ್ ಹಾಗೂ ಪ್ರಮೋದಾ ದೇವಿ ಅವರು ಮೈಸೂರ್ ಸಿಲ್ಕ್ ಸೀರೆಗಳ ಪ್ಯಾಷನ್ ಶೋ ಮಾಡಿ ಆ ಸೀರೆಗಳ ಜನಪ್ರಿಯತೆಯನ್ನು ವಿಸ್ತರಿಸಿದ್ದನ್ನೂ ಸಹ ನಾವಿಲ್ಲಿ ನೆನಪಿಸಿಕೊಳ್ಳಬಹುದು!! ಭಾರತದ ರಾಯಭಾರಿ ಕಚೇರಿಗಳಲ್ಲಿ, ಭಾರತಕ್ಕೆ ಭೇಟಿ ನೀಡುವ ವಿದೇಶಗಳ ಪ್ರಮುಖ ವ್ಯಕ್ತಿಗಳಿಗೆ ಮೈಸೂರ್ ಸಿಲ್ಕ್ ಸೀರೆಯ ಉಡುಗೊರೆ ನೀಡುವುದೂ ಸಹ ಒಂದು ರೂಢಿ. ಇದು ಕರ್ನಾಟಕ ರಾಜ್ಯದ ಕ್ಲಾಸಿಕಲ್ ಹಿರಿಮೆ..!!       ದಮಯಂತಿಯನ್ನು ಕಾಡಲ್ಲಿ ಬಿಟ್ಟು ಹೋಗುವ ನಳನು ತನ್ನ ಮಾನ ರಕ್ಷಣೆಗೆ ಬಳಸಿಕೊಂಡದ್ದು,  ದ್ರೌಪದಿಯ ಪ್ರಸಂಗ ಕುರುಕ್ಷೇತ್ರ ಯುದ್ಧದ ಭೀಕರತೆಗೆ ಒಂದು ನೆಪವಾದದ್ದು ನೆನಪಿಸಿಕೊಳ್ಳಿ. ಎರಡೂ ಪ್ರಸಂಗಗಳಲ್ಲಿ ಸೀರೆಯೇ ಸಮಾನಾಂಶ. ನಳ ಚರಿತೆಗೆ ದಮಯಂತಿಯ ಅರ್ಧ ಹರಿದ ಸೀರೆ ಕಾರಣವಾದರೆ, ಮಹಾಭಾರತದಲ್ಲಿ ದುಶ್ಯಾಸನ ಸೆಳೆಯಲಾರದೆ ಸುಸ್ತಾದ ದ್ರೌಪದಿಯ ಅಕ್ಷಯ ವಸ್ತ್ರ ಸೀರೆಯು ಅಕ್ಷೋಹಿಣಿ ಸೈನ್ಯದ ಯುದ್ಧಕ್ಕೆ ಪ್ರಬಲ ಕಾರಣ ಎಂದು ಪ್ರತಿಪಾದಿಸಿ ಗೆಲ್ಲಬಹುದು.          ಮನೆಯಲ್ಲೇ ಸೀರೆ ವ್ಯಾಪಾರ ಮಾಡುವ ಎಷ್ಟೋ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಗಳಿಸಿ ಮನೆ ನಿಭಾಯಿಸುತ್ತಿರುವುದು ಸುಳ್ಳಲ್ಲ. ಮಕ್ಕಳ ಫೀಸು, ಮನೆಯ ಸಾಲದ ಕಂತು, ತವರಿಗೆ ಒಂದು ಪಾಲು ಕಳಿಸುತ್ತಾ, ಒಂದಷ್ಟು ಇಡಿಗಂಟು ಉಳಿಸುತ್ತಾ ದೇಶದ ಆರ್ಥಿಕತೆಗೆ ತಮ್ಮ ಕೊಡುಗೆಯನ್ನು ನೀಡಿರುತ್ತಾರೆ. ನೇರ ಸೀರೆ ವ್ಯಾಪಾರ ಮಾಡದವರೂ ಸಹ ಸೆರಗಿಗೆ ಕುಚ್ಚು, ಅಂಚಿಗೆ ಫಾಲ್, ಜ಼ಿಗ್ಜ಼್ಯಾಗ್, ಕಸೂತಿ, ಕುಪ್ಪಸ ಹೊಲಿಯುವ ಇತರೆ ಸೀರೆ ಸಂಬಂಧಿ ಕೆಲಸಗಳನ್ನು ಮನೆಯಲ್ಲೇ ಮಾಡುತ್ತಾ ಸಣ್ಣಪುಟ್ಟ ಖರ್ಚಿಗೆ ಸಂಪಾದಿಸಿಕೊಳ್ಳುವವರಿದ್ದಾರೆ. ಇದು ಆರ್ಥಿಕ ಸ್ವಾವಲಂಬನೆಗೆ ಸೀರೆಯ ಕೊಡುಗೆ ಎಂದು ಸೀರೆಯನ್ನು ಪ್ರಶಂಸಿಸಬಹುದು. ಸೀರೆಗೆ ಜೊತೆಯಾಗುವ ಕುಪ್ಪಸದ ವೈವಿಧ್ಯವೇ ಬೇರೆ ಲೋಕ. ಸೀರೆಯ ಒಟ್ಟು ಬೆಲೆಗಿಂತಲೂ ಕುಪ್ಪಸದ ಹೊಲಿಗಯೇ ಐದಾರು ಪಟ್ಟು ಹೆಚ್ಚು ದುಬಾರಿಯಾಗಿರುತ್ತದೆ! ಕುಪ್ಪಸದ ಅಂದವೇ ಸೀರೆಗೆ ಮೆರುಗು ನೀಡುತ್ತದೆ. ಸೀರೆಯ ಸೆರಗಿನ ಚಿತ್ತಾರ, ಕುಚ್ಚಿನ ಅಲಂಕಾರಗಳೂ ಸೀರೆಯನ್ನು ಅಂದಗಾಣಿಸುವಲ್ಲಿ ಅಪಾರ ಕೊಡುಗೆಯನ್ನು ನೀಡುತ್ತವೆ. ಚಿನ್ನ-ಬೆಳ್ಳಿಯ ಎಳೆಗಳನ್ನು, ಮುತ್ತ-ರತ್ನ-ವಜ್ರ -ಪಚ್ಚೆ ಹರಳಿನ ಕುಸುರಿಯನ್ನು ಸೇರಿಸಿಕೊಂಡು ಬಹು ಲಕ್ಷ /ಕೋಟಿ ರೂಪಾಯಿಯಲ್ಲಿ ರೇಷ್ಮೆ ಸೀರೆಗಳು  ತಯಾರಾಗುವುದುಂಟು. ಆಗಾಗ್ಗೆ ಇಂತಹ ಸೀರೆಗಳು ಸುದ್ದಿಗೆ ಗ್ರಾಸವಾಗಿ ವಿಶ್ವದ ಗಮನ ಸೆಳೆಯುತ್ತವೆ.     ಮಗ್ಗದವರ ಜೀವನ ಅಗ್ಗವಾಯ್ತು ಎನ್ನುವ  ಕೊರಗಿನ ಕೂಗಿನ ನಡುವೆಯೂ ಕೈಮಗ್ಗದ ಸೀರೆಗಳ ಗ್ರಾಹಕರು ದೊಡ್ಡದೊಡ್ಡ ಮಂದಿಯೇ ಇರುತ್ತಾರೆ. ನಮ್ಮ ಮಹಿಳಾ ಸಂಸದರು, ಮಹಿಳಾ ಮಂತ್ರಿಗಳು, ಜನಪ್ರಿಯ ರಾಜಕೀಯ ನಾಯಕಿಯರು ಸೀರೆಗಳು ಚರ್ಚೆಯ ಮುನ್ನೆಲೆಗೆ ಬರುವುದುಂಟು. ಮಮತಾ ಬ್ಯಾನರ್ಜಿ, ಸೋನಿಯಾಗಾಂಧಿ, ಮನೇಕಾ ಗಾಂಧಿ, ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆಯವರ ಸೀರೆಗಳಿಂದ ಆಕರ್ಷಿತರಾದವರೂ ಬಹಳ ಮಂದಿ ಇದ್ದಾರೆ. ಹೀಗಾಗಿ ಸೀರೆ ಸಾಮಾನ್ಯ ಮಹಿಳೆಯರ ಉಡುಗೆಯಾಗಿ ಉಳಿದಿಲ್ಲ. ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ನೌಕರರ ಮೆಚ್ಚಿನ ಆಯ್ಕೆಯೂ ಸೀರೆಯೇ….       ಹೆಂಗಸರ ಬಟ್ಟೆಯೆಂದೇ ಜನಪ್ರಿಯವಾಗಿರುವ ಸೀರೆ ಹೆಂಗಸರ ಗೌರವದ ಧಿರಿಸಾಗಿರುವಂತೆ, ಮಾದಕ ಉಡುಪೂ ಆಗಿರುವುದುಂಟು. ನಾಯಕಿಯರ ಸೌಂದರ್ಯವನ್ನು ತೆರೆಯ ಮೇಲೆ ತೋರಿಸಲು ನಿರ್ದೇಶಕರು ಸೀರೆಗೇ ಪ್ರಥಮ ಆದ್ಯತೆ ನೀಡುತ್ತಾರೆ. ಆದರೆ, ಸೀರೆಯನ್ನು ಮೊದಲ ಬಾರಿಗೆ ಉಟ್ಟವರು ಅದನ್ನು ನಿಭಾಯಿಸಿಕೊಂಡು ತೊಡರುಗಾಲು ಇಡುತ್ತಾ ನಡೆದಾಡುತ್ತಾ ಕಾಲ ತಳ್ಳುವುದನ್ನು ನೋಡಿದರೆ ನಗೆ ಉಕ್ಕದಿರುವುದೇ? ಹತ್ತಾರು ಸೇಫ್ಟಿ ಪಿನ್ನುಗಳನ್ನು ಚುಚ್ಚಿಕೊಂಡರೂ ಎಲ್ಲಿ ಕಳಚುವುದೋ ಎಂಬ ಗಾಬರಿಯ ಹೊಸ ಹುಡುಗಿಯರ, ಯಾವುದೇ ಪಿನ್ನುಗಳನ್ನು ಹಾಕದೇ ಸೀರೆ ನಿಭಾಯಿಸುವಷ್ಟು ಪ್ರವೀಣರಾಗುವುದು ಸೀರೆಯ ಗೆಲುವು. ‘ಪುಣ್ಯಕ್ಕೆ ಸೀರೆ ಕೊಟ್ಟರೆ ಹನ್ನೆರಡೇ ಮೊಳ’ ಎಂದು ಕೊಂಕು ಆಡುವವರ ಬಾಯಿ ಮುಚ್ಚಿಸಲಾದೀತೆ? ಕುಪ್ಪಸ ಜೊತೆಯಾಗಿ ಬರುವ ಸೀರೆಗಳು, ಕಾನ್ಟ್ರಾಸ್ಟ್ ಕುಪ್ಪಸ ಹೊಲಿಸುವ ಸೀರೆಗಳು… ನಾನಾ ವಿಧಗಳಿವೆ. ಉದ್ದ, ಗಿಡ್ಡ, ಮಧ್ಯಮ ಎತ್ತರದವರಿಗೆಲ್ಲಾ ಸೀರೆಯೇ ಸೂಕ್ತವಾಗಿ ಒಪ್ಪುವ ಉಡುಗೆ ಎನ್ನುವುದು ಸಾರ್ವಕಾಲಿಕ ಸತ್ಯ.      ಸೀರೆ ಉಡಿಸುವುದೊಂದು ಕಲೆ . ಸೀರೆ ಉಡಿಸುವುದನ್ನೇ ಉದ್ಯೋಗ ಮಾಡಿಕೊಂಡಿರುವ  ಬಹಳ ಜನರಿದ್ದಾರೆ. ಮದುವೆ ಹೆಣ್ಣಿಗೆ ಸೀರೆ ಉಡಿಸಲು ಬರುವವರು ಹೆಣ್ಣಿನ ಅಮ್ಮ, ಅಕ್ಕ,ತಂಗಿ, ನಾದಿನಿ, ಅತ್ತೆ, ಅತ್ತಿಗೆಯರಿಗೂ ಸೀರೆ ಉಡಿಸಲೇ ಬೇಕೆನ್ನುವುದು ಅಲಿಖಿತ ಅಗ್ರಿಮೆಂಟು. ಚಿಕ್ಕ ಹುಡುಗಿಯರಿಗೆ ಸೀರೆ ಉಡಿಸುವುದು ಒಂದು ಸಮಸ್ಯೆಯೇ… ಸೀರೆ ಉದುರಿಹೋಗುವ ಭೀತಿ ಅವರಿಗೆ!! ಹೇಗೋ ಕಷ್ಟಪಟ್ಟು ಉಟ್ಟರೂ ಕಳೆಚಿಟ್ಟ ಮೇಲೆಯೇ ಉಸ್ಸೆಂದು ನಿಟ್ಟುಸಿರು ಬಿಡುತ್ತಾರೆ. ಮರುಕ್ಷಣವೇ ಮತ್ತೆ ಯಾವಾಗ ಸೀರೆ ಉಟ್ಟೇನೆಂದು ಕನವರಿಸುತ್ತಾರೆ!! ಹುಡುಗರಂತೂ ತಾವು ಪ್ರೇಮಿಸುವ ಹುಡುಗಿ ಸೀರೆ ಉಟ್ಟು ಬರಲಿ ಎಂದು ಪರಿತಪಿಸುತ್ತಾರೆ ಎಂದು ಸಿನೆಮಾಗಳಲ್ಲಿ ಹಲವು ಬಾರಿ ತೋರಿಸಿ ಅದೇ ನಿಜವಿರಬಹುದೆನಿಸುತ್ತದೆ. ‘ದೂರದ ಊರಿಂದ ಹಮ್ಮೀರ ಬಂದ ಜರತಾರಮ ಸೀರೆ ತಂದ..’, ‘ಹೆಣ್ಣಿಗೇ ಸೀರೆ ಏಕೆ ಅಂದ..!’, ‘ಸೀರೇಲಿ ಹುಡುಗಿಯ ನೋಡಲೇ ಬಾರದು..’, ‘ಮೊಳಕಾಲ್ ಸೀರೆ ಉಟ್ಕೊಂಡು…’ ಉಫ್..! ಪಟ್ಟಿ ಬೆಳೆಯುತ್ತದೆ ಹೊರತು ಮುಗಿಯುವುದಿಲ್ಲ.       ಸೀರೆ ಖರೀದಿಯು ಗಂಡಸರ ಜೇಬಿಗೆ ಕತ್ತರಿ ಹಾಕುತ್ತದೆ ಎಂದು ಕೊಂಕು ನುಡಿಯುವವರಿಗೇನು ಗೊತ್ತು? ಹಲವು ಕಂತುಗಳಲ್ಲಿ ಹಣಕೊಟ್ಟು ಖರೀದಿಸುವ ದುಬಾರಿ ಬೆಲೆಯ ಸೀರೆಗಳು ಜೇಬಿಗೆ ಕತ್ತರಿ ಹಾಕದೆ,

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಒಮ್ಮೆ ಕಾರವಾರದಲ್ಲಿ ‘ಗಂಡಭೇರುಂಡ’ ಚಲನ ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗ ನನ್ನನ್ನು ಕರೆಸಿಕೊಂಡ ಕೃಷ್ಣಮೂರ್ತಿ ಚಿತ್ರತಂಡದ ಭೇಟಿಗೆ ಅವಕಾಶ ಪಡೆದುಕೊಂಡಿದ್ದ. ಅಂದು ಕಾರವಾರದ ಪ್ರತಿಷ್ಠಿತ ಗೋವರ್ಧನ ಹೋಟೆಲಿನಲ್ಲಿ ನಾಯಕ ನಟರಾದ ಶ್ರೀನಾಥ, ಶಂಕರನಾಗ್, ಖಳನಟ ವಜ್ರಮುನಿ ಮತ್ತು ನಾಯಕಿ ಜಯಮಾಲಾ ಅವರ ಜೊತೆಯಲ್ಲಿ ಒಂದೆರಡು ಗಂಟೆಗಳ ಕಾಲ ಸಮಯ ಕಳೆದದ್ದು ಒಂದು ಅವಿಸ್ಮರಣೀಯ ಸಂದರ್ಭವೇ ಆಗಿತ್ತು

Read Post »

ಅಂಕಣ ಸಂಗಾತಿ, ತೊರೆಯ ಹರಿವು

‘ಕುರಿಗಳು ಸಾರ್ ಕುರಿಗಳು..’ ಎಂಬಂತಹ ನಾವು ನೀವು ಅವರು ಇವರು…ತಲೆತಗ್ಗಿಸಿಯೇ ಮುನ್ನಡೆಯುವವರಾಗಿರುವುದರಿಂದ ಎದುರಿರುವ ಸತ್ಯ ಕಾಣುವುದು ಹೇಗೆ? ಮರೆ ಮಾಚಿದನ್ನೇ ಮುಂದುವರೆಸಿಕೊಂಡು ಹೋಗುವುದರಲ್ಲಿ ಮಾತ್ರ ಕ್ರಿಯಾಶೀಲರಾಗಿರುತ್ತೇವೆ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಈ ಅಸಹಾಯಕ ಸಂದರ್ಭದಲ್ಲಿ ನನ್ನ ಜೈಹಿಂದ್ ಹೈಸ್ಕೂಲು ಸಹಪಾಠಿ ಪ್ರಭು ಎಂಬಾತ ಸಹಾಯಕ್ಕೆ ನಿಂತ. (ಕ್ಷಮೆ ಇರಲಿ ಅವನ ಹೆಸರು ಮರೆತಿದ್ದೇನೆ). ಅಂಕೋಲೆಯ ಮಠಾಕೇರಿಯ ಜಿ.ಎಸ್.ಬಿ ಸಮುದಾಯದ ಪ್ರಭು ನನಗೆ ಹೈಸ್ಕೂಲು ದಿನಗಳಲ್ಲಿ ತುಂಬಾ ಆತ್ಮೀಯನಾಗಿದ್ದವನು. ಆತ ನನಗೆ ವಾಸ್ತವ್ಯದ ವ್ಯವಸ್ಥೆಯಾಗುವವರೆಗೆ ನಿಜಲಿಂಗಪ್ಪ ಹಾಸ್ಟೆಲ್ಲಿನ ತಮ್ಮ ಕೊಠಡಿಯಲ್ಲಿಯೇ ಉಳಿಯಲು ಅವಕಾಶ ನೀಡಿದ. ಇದಕ್ಕೆ ಅವನ ರೂಮ್‌ಮೇಟ್ ಕೂಡ ಆಕ್ಷೇಪವೆತ್ತದೆ ಸಹಕರಿಸಿದ. ಇಬ್ಬರ ಉಪಕಾರ ಬಹು ದೊಡ್ಡದು

Read Post »

ಅಂಕಣ ಸಂಗಾತಿ, ನೆಲಸಂಪಿಗೆ

ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಕೃಷ್ಣಮೂರ್ತಿ ಹೆಗಡೆ ಪ್ರತಿಷ್ಠಿತ “ಶಿಂತ್ರಿ ಬಿಲ್ಡಿಂಗ್” ನಲ್ಲಿ ಬಾಡಿಗೆ ರೂಮು ಮಾಡಿಕೊಂಡಿದ್ದ. ಇತರ ಬ್ರಾಹ್ಮಣ ಹುಡುಗರು ಸಪ್ತಾಪುರ ಇತ್ಯಾದಿ ಕಡೆಗಳಲ್ಲಿ ರೂಮು ಪಡೆದಿದ್ದರು. ಒಮ್ಮೆಯಂತೂ ಅವರಲ್ಲಿ ಯಾರೋ ತನ್ನ ಕುರಿತು ಸಲ್ಲದ ಮಾತನಾಡಿದರೆಂದು ಕೋಪಗೊಂಡ ಕೃಷ್ಣಮೂರ್ತಿ ಹೆಗಡೆ ರಾತ್ರಿ ವೇಳೆ ಅವರ ರೂಮಿಗೆ ಹೋಗಿ ರಂಪ ಮಾಡಿದ ಸಂಗತಿ ಮರುದಿನ ಕನ್ನಡ ವಿಭಾಗದಲ್ಲಿಯೇ ಚರ್ಚೆಯ ಸಂಗತಿಯಾಗಿತ್ತು!

Read Post »

ಅಂಕಣ ಸಂಗಾತಿ, ತೊರೆಯ ಹರಿವು

ಯಾರ ಬದುಕೂ ಮತ್ತೊಬ್ಬರದರಂತೆ ಇರಲು ಸಾಧ್ಯವಿಲ್ಲ. ನಾವು ಅವರಂತಾಗಬೇಕು, ಇವರಂತಿರಬೇಕೆಂದು ಒದ್ದಾಡುವುದು ಏಕೆ? ನಮಗೆ ದೊರೆತ ಬದುಕನ್ನು ಚೆಂದ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇರುತ್ತದೆ.

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ದಿನ ದಿನವೂ ಏಕವ್ಯಕ್ತಿ, ಬಹಪಾತ್ರ. ನಾಟಕದ ರಂಗದಲ್ಲಿ, ಪ್ರೀತಿ, ನೋವು, ಮಮತೆ, ಕಷ್ಟ, ಸಂಘರ್ಷ ಎಲ್ಲವನ್ನೂ ಅನುಭವಿಸಿ, ಹಣ್ಣಾಗುವ ಹಣ್ಣಿನ ಸಿಹಿ ಮಾತ್ರ ಹಂಚುವ ಸ್ತ್ರೀ ಜನ್ಮಕ್ಕೆ ಮಾತ್ರ ‘ಸಿರಿ’ಯಾಗಲು ಸಾಧ್ಯ. ಅದು ಆಕೆಗೆ ನಿಜಜೀವನದಷ್ಟೇ ಸಹಜ.

Read Post »

ಅಂಕಣ ಸಂಗಾತಿ, ತೊರೆಯ ಹರಿವು

ಹೀಗೆ ಆಸೆ ಮಾಡುವ ಅನಾಹುತಗಳು ಒಂದೇ ಎರಡೇ? ಸಾಯೋ ಮುಂಚೆ ಮಕ್ಕಳ-ಮೊಮ್ಮಕ್ಕಳ ಮದುವೆ ನೋಡ್ಬೇಕು ಅನ್ನುವ ಹಿರಿಯರ ಕ್ಷುಲ್ಲಕ ಆಸೆ ಎಷ್ಟೋ ಮಕ್ಕಳ ಭವಿಷ್ಯವನ್ನೇ ಬದಲಿಸಿರುತ್ತೆ. ಬೇರೆಯವರ ಪ್ರಾಣಕ್ಕೆ ಕಂಟಕ ತರುವಂತಹ ಆಸೆಗಳನ್ನು ಆ ಹೆಸರಿನಿಂದ ಕರೆಯೋದು ಹೇಗೆ? ಅದು ಆಸೆಯಲ್ಲ, ಪಾಶ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—34 ಆತ್ಮಾನುಸಂಧಾನ ಹಾಸ್ಟೆಲ್ ಊಟದಲ್ಲಿ ಮೈತುಂಬಿಕೊಂಡೆ ‘ಶಾಲ್ಮಲಾ ಹಾಸ್ಟೆಲ್‌ನ ಊಟದ ವ್ಯವಸ್ಥೆ ತುಂಬ ಸೊಗಸಾಗಿತ್ತು. ದಿನವೂ ಒಂದೊಂದು ಬಗೆಯ ಕಾಳು-ಕಡಿಯ ಬಾಜಿ, ಸೊಪ್ಪಿನ ಪಲ್ಯ, ಹಸಿ ತರಕಾರಿಯ ಕೋಸಂಬರಿ, ದಿನಕ್ಕೊಂದು ವಿಧದ ಚಟ್ನಿ, ಕೆನೆ ಮೊಸರು, ರೊಟ್ಟಿ ಇಲ್ಲವೆ ಚಪಾತಿ, ಬಯಸಿದಷ್ಟೂ ಅನ್ನ…. ಇತ್ಯಾದಿಗಳಿಂದ ಊಟವು ಸಮೃದ್ಧವಾಗಿರುತ್ತಿತ್ತು. ರವಿವಾರದಂದು ವಿಶೇಷ ಸಿಹಿ ತಿನಿಸು ಪೂರೈಕೆಯಾಗುತ್ತಿತ್ತು.                 ಇತರ ವಿದ್ಯಾರ್ಥಿಗಳ ಮಾತು ಅಂತಿರಲಿ, ನನಗೂ ನನ್ನಂಥ ಹಲವಾರು ವಿದ್ಯಾರ್ಥಿಗಳಿಗೆ ಇಲ್ಲಿನ ಊಟದ ವ್ಯವಸ್ಥೆ ಅದ್ಭುತವಾಗಿಯೇ ತೋರುತ್ತಿತ್ತು. ನಾನಂತೂ ಯಾವ ಸಂಕೋಚವೂ ಇಲ್ಲದೇ ಸಂತೃಪ್ತಿಯ ಊಟ ಮಾಡತೊಡಗಿದೆ. ಆರಂಭದ ಒಂದೆರಡು ತಿಂಗಳು ತರಗತಿಯ ಪಾಠಕ್ಕಿಂತ ಹಾಸ್ಟೆಲ್ಲಿನ ಊಟವೇ ನನ್ನ ಮೊದಲ ಆದ್ಯತೆಯಾಯಿತು. ಕೆಲಸವೇ ಇಲ್ಲದೇ ದುರ್ಬಲವಾಗಿದ್ದ ನನ್ನ ಜೀರ್ಣಾಂಗಗಳಿಗೆ ಪೂರ್ಣ ಪ್ರಮಾಣದ ಕೆಲಸ ದೊರೆತಂತಾಗಿ ಅವು ಚೇತರಿಸಿಕೊಂಡು ಕ್ರಿಯಾಶೀಲವಾದವು.                 ವಿಶ್ವವಿದ್ಯಾಲಯವು ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂಬ ಸಾಮಾನ್ಯ ಅಭಿಪ್ರಾಯವು ನನ್ನ ಪಾಲಿಗೆ ಹುಸಿಯಾಗುತ್ತ ನನ್ನ ದೈಹಿಕ ಸಾಮರ್ಥ್ಯ ಮತ್ತು ಚಹರೆಗಳು ಸಂಪೂರ್ಣ ಬದಲಾಗಿ ತೇಜಸ್ವಿಯಾಗತೊಡಗಿದ್ದೆ. ವಿಶ್ವವಿದ್ಯಾಲಯಕ್ಕೆ ಬರುವಾಗ ಮುಖ, ಮೈಗಳಲ್ಲಿ ಮೂಳೆಗಳೇ ಎದ್ದು ಕಾಣುವ ಸ್ಥಿತಿಯಲ್ಲಿದ್ದ ನಾನು ಎರಡೇ ತಿಂಗಳಲ್ಲಿ ಮೈಕೈ ತುಂಬಿಕೊಂಡು ಚಂದವಾಗಿದ್ದೆ.                 ಮೊದಲ ಮೂರು ತಿಂಗಳ ಓದು ಮುಗಿಸಿ ಗಣೇಶ ಹಬ್ಬದ ರಜೆಯಲ್ಲಿ ನಾನು ಊರಿಗೆ ಬಂದಾಗ ಎಲ್ಲರಿಗೂ ಅಚ್ಚರಿಯಾಗುವಷ್ಟು ನನ್ನ ಆಳ್ತನದಲ್ಲಿ ಬದಲಾವಣೆ ಎದ್ದು ಕಾಣುತ್ತಿತ್ತು. ನನ್ನ ಗೆಳೆಯರು “ಧಾರವಾಡದ ಹವಾ ನಿನಗೆ ಹಿಡಿಸಿದೆ…” ಎಂದು ಅಲ್ಲಿಯ ಹವಾಮಾನವನ್ನು ಕೊಂಡಾಡಿದರು. ಸ್ವತಃ ನನ್ನ ಅವ್ವನ ಕಣ್ಣುಗಳಲ್ಲಿಯೂ ಒಂದು ಸಂತೃಪ್ತಿಯ ಮಿಂಚು ಹೊಳೆದದ್ದನ್ನು ನಾನು ಗಮನಿಸಿದ್ದೆ.                 ಎಂ.ಎ. ಮೊದಲ ವರ್ಷದ ಓದು ಮುಗಿಯುತ್ತ ಬಂದಿತ್ತು. ಅದೇ ಸಮಯಕ್ಕೆ ಸರಿಯಾಗಿ ಅಂದಿನ ಕರ್ನಾಟಕ ರಾಜ್ಯ ಸರಕಾರದ ಉನ್ನತ ಶಿಕ್ಷಣ ಸಚಿವರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವ ಮಹತ್ವದ ಕಾರ್ಯಕ್ರಮವೊಂದು ನಿಗದಿಯಾಯಿತು. ಇಡಿಯ ವಿಶ್ವವಿದ್ಯಾಲಯವೂ ಸುಣ್ಣ ಬಣ್ಣಗಳಿಂದ ಅಲಂಕಾರಗೊಳ್ಳುವ ಕೆಲಸಗಳು ಭರದಿಂದ ನಡೆದವು. ಕನ್ನಡ, ಇಂಗ್ಲಿಷ್, ಹಿಂದಿ ಇತ್ಯಾದಿ ಭಾಷಾ ವಿಭಾಗಗಳನ್ನು ಹೊಂದಿದ ವಿಶ್ವಚೇತನ ಕಟ್ಟಡವೂ ಇಂಥ ಅಲಂಕಾರ ಗಳಿಂದ ಸಿಂಗಾರ ಗೊಂಡಿತು.                 ಒಂದು ದಿನ ನಮ್ಮ ಗುರುಗಳಾದ ಡಾ. ಕಲ್ಬುರ್ಗಿಯವರು ತರಗತಿಗೆ ಬಂದವರು “ನಿಮ್ಮಲ್ಲಿ ಚಂದವಾಗಿ ಕನ್ನಡ ಅಕ್ಷರ ಬರೆಯಬಲ್ಲವರು ಯಾರಿದ್ದೀರಿ?” ಎಂದು ವಿಚಾರಿಸಿದರು. ಯಾರೋ ಒಂದಿಬ್ಬರು ಸಹಪಾಠಿಗಳು ನೇರವಾಗಿ ನನ್ನತ್ತ ಬೆರಳು ಮಾಡಿ ತೋರಿದರು. ಗುರುಗಳು “ಫಾಲೋ ಮಿ…” ಎಂದು ಅಪ್ಪಣೆ ಮಾಡಿ ತರಗತಿಯಿಂದ ಹೊರ ನಡೆದರು. ಅನ್ಯದಾರಿ ಕಾಣದೆ ನಾನು ಗುರುಗಳನ್ನು ಹಿಂಬಾಲಿಸಿದೆ.                 ಕನ್ನಡ ವಿಭಾಗದಲ್ಲಿ ಧಾರ್ಮಿಕ ಚಳುವಳಿಯ ಕಾರಣದಿಂದ ರಚನೆಗೊಂಡ ಸಾಹಿತ್ಯದ ಆಧಾರದಿಂದ “ಜೈನ ಸಾಹಿತ್ಯ”, “ವೀರಶೈವ ಸಾಹಿತ್ಯ”, “ವೈದಿಕ-ಸಾಹಿತ್ಯ” ಇತ್ಯಾದಿ ಶಾಖೆಗಳನ್ನು ಗುರುತಿಸಿದ್ದರು. ವಿವಿಧ ಶಾಖೆಗಳಿಗೆ ಪ್ರತ್ಯೇಕವಾದ ಪುಸ್ತಕ ಸಂಗ್ರಹ, ಅಧ್ಯಾಪಕರ ಕೋಣೆಗಳು ಇದ್ದವು. ಅವುಗಳನ್ನೆಲ್ಲ ಗುರುತಿಸುವಂತೆ ಎಲ್ಲ ಶಾಖೆಗಳ ವಿವರಗಳನ್ನು ಭಿತ್ತಿ ಪತ್ರದಲ್ಲಿ ಬರೆದು ಸಜ್ಜುಗೊಳಿಸುವ ಕಾರ್ಯಗಳನ್ನು ಕಲ್ಬುರ್ಗಿ ಸರ್ ಕೈಗೆತ್ತಿಕೊಂಡಿದ್ದರು.                 ನನ್ನನ್ನು ತಮ್ಮ ಕೋಣೆಗೆ ಕರೆದ ಕಲ್ಬುರ್ಗಿಯವರು ನಾನು ಬರೆದು ಸಿದ್ಧಪಡಿಸಬೇಕಾದ ಭಿತ್ತಿ ಪತ್ರಗಳ ವಿವರಗಳನ್ನು ನನಗೆ ನೀಡಿ, ಅದಕ್ಕೆ ಬೇಕಾದ ಡ್ರಾಯಿಂಗ್ ಪೇಪರ್ಸ  ,ಕಲರ್  ಮತ್ತು  ಬ್ರಶ್‌ಗಳನ್ನು ಪೂರೈಸಿ ನನಗಾಗಿ ಒಂದು ಪ್ರತ್ಯೇಕ ಕೋಣೆಯನ್ನು ಅಣಿಗೊಳಿಸಿ ಕಾರ್ಯಾರಂಭ ಮಾಡಲು ಅಪ್ಪಣೆ ಮಾಡಿದರು.                 ಮುಂದಿನವಾರದಲ್ಲಿ ಮಾನ್ಯ ಮಂತ್ರಿಗಳ ಆಗಮನದ ಮುನ್ನ ಎಲ್ಲವೂ ಸಿದ್ಧವಾಗಬೇಕೆಂಬ ಕರಾರಿನೊಂದಿಗೆ ನಾನು ಭಯ ಆತಂಕದಿಂದಲೇ ಭಿತ್ತಿ ಪತ್ರಗಳನ್ನು ಬರೆಯಲು ಆರಂಭಿಸಿದೆ. ಕಲ್ಬುರ್ಗಿ ಸರ್ ಸಮಯ ಸಿಕ್ಕಾಗ ನಡುನಡುವೆ ಬಂದು ಸಲಹೆ ಸೂಚನೆ ನೀಡಿ ಹೋಗುತ್ತಿದ್ದರು. ನಾನು ಬರೆದದ್ದು ಮೆಚ್ಚುಗೆಯಾದಾಗ ಇತರ ಅಧ್ಯಾಪಕರನ್ನೂ ಕರೆತಂದು ತೋರಿಸಿ ಅವರಿಂದಲೂ ಮೆಚ್ಚುಗೆ ಮತ್ತು ಅಗತ್ಯವಾದ ಸಲಹೆಯನ್ನು ಪಡೆಯುವ ಅವಕಾಶ ನನಗೆ ದೊರೆಯುವಂತೆ ನೋಡಿಕೊಳ್ಳುತ್ತಿದ್ದರು.                 ಊಟ ಉಪಹಾರಗಳನ್ನು ಹೊರತು ಪಡಿಸಿ ನಾನು ನನ್ನ ತರಗತಿಯ ಪಾಠಕ್ಕಾಗಿಯೂ ಮತ್ತೆ ಹೊರಗೆ ಹೋಗುವಂತೆ ಇರಲಿಲ್ಲ. ಸಂಜೆ ಕತ್ತಲಾಗುವ ಹೊತ್ತಿನಲ್ಲಿ ಗುರುಗಳು ಸ್ವತಃ ಬಂದು ನೋಡಿ ಅಂದು ಸಿದ್ಧಗೊಂಡ ಭಿತ್ತಿಪತ್ರಗಳನ್ನು ಪರಿಶೀಲಿಸಿ ಒಪ್ಪಿತವಾದ ಬಳಿಕವೇ ನಾನು ಹಾಸ್ಟೆಲ್ಲಿಗೆ ಹೋಗಲು ಅನುಮತಿ ನೀಡುತ್ತಿದ್ದರು.                 ಹೀಗೆಯೇ ಎರಡು ದಿನಗಳು ನಾನು ಭಿತ್ತಿ ಪತ್ರ ಬರಹದಲ್ಲಿ ಸಂಪೂರ್ಣವಾಗಿಯೇ ತೊಡಗಿಕೊಂಡಿದ್ದೆ.                 ಮೂರನೆಯದಿನ ನನ್ನ ವೈಯಕ್ತಿಕವಾದ ಸಮಸ್ಯೆಯೊಂದು ಎದುರಾಯಿತು. ಅದು ನನ್ನ ವಾರ್ಷಿಕ ಪರೀಕ್ಷೆಯ ಫಾರ್ಮ್ ತುಂಬಿ ನಿಗದಿತ ಶುಲ್ಕದೊಂದಿಗೆ ಪರೀಕ್ಷಾ ವಿಭಾಗಕ್ಕೆ ಸಲ್ಲಿಸಬೇಕಾದ ಕೊನೆಯದಿನ. ದಂಡ ಸಹಿತವಾಗಿ ಮತ್ತೆ ಕೆಲವು ದಿನಗಳ ಅವಕಾಶವಿದೆಯಾದರೂ ದಂಡದ ಹೊರೆ ಹೊರುವುದು ಬೇಡವೆಂದು ನಾನು ಅಂತಿಮ ದಿನದ ಕಾಲಾವಕಾಶದಲ್ಲಿ ಫಾರ್ಮ್ ತುಂಬಿಕೊಂಡು ಸಂಬಂಧಿಸಿದ ದಾಖಲೆಗಳೊಂದಿಗೆ ಫೀ ತುಂಬಲೆಂದು ಅಕೌಂಟ್ ಸೆಕ್ಶನ್ನಿನಲ್ಲಿ ಸರತಿಯ ಸಾಲಿನಲ್ಲಿ ಸೇರಿಕೊಂಡು ನಿಂತೆ.                 ಒಂದರ್ಧ ಗಂಟೆಯಲ್ಲಿ ಮುಗಿಸಬಹುದಾದ ಕೆಲಸವೆಂಬ ನಂಬಿಕೆಯಲ್ಲಿ ಗುರುಗಳಿಗಾಗಲೀ, ನನ್ನ ಸಹಪಾಠಿಗಳಿಗಾಗಲೀ ನಾನು ವಿಷಯ ತಿಳಿಸಿರಲಿಲ್ಲ. ಆದರೆ ನನ್ನ ದುರ್ದೈವದಿಂದ ನನ್ನಂತೆಯೇ ಕೊನೆಯ ದಿನವೇ ಈ ಕೆಲಸ ಪೂರೈಸಿಕೊಳ್ಳಲು ಬಂದ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕವಾಗಿ ಸರತಿಯ ಸಾಲಿನಲ್ಲಿದ್ದ ನನಗೆ ಅವಕಾಶ ದೊರೆವ ಮುನ್ನವೇ ಮುಂಜಾನೆಯ ಕಾಲಾವಧಿ ಮುಗಿದು ಹೋಯಿತು!                 ಮಧ್ಯಾಹ್ನದ ಊಟದ ಬಿಡುವಿನ ಬಳಿಕ ಕೌಂಟರ್ ಮತ್ತೆ ಆರಂಭವಾಗುವ ಮುನ್ನ ಸರತಿಯಲ್ಲಿ ಸೇರಿಕೊಳ್ಳುವ ಉದ್ದೇಶದಿಂದ ಬೇಗ ಊಟ ಮುಗಿಸಿ ಬರಲೆಂದು ಸಮೀಪದ “ಮೆಸ್” ಕಡೆ ನಡೆಯತೊಡಗಿದೆ.                 ಅಷ್ಟರಲ್ಲೇ ಓಡೋಡಿ ಬಂದ ನನ್ನ ಸಹಪಾಠಿಗಳಿಬ್ಬರು ಆಚೀಚೆ ನಿಂತು ನನ್ನ ಕೈ ಹಿಡಿದುಕೊಳ್ಳುತ್ತ “ಏ ಮಹಾರಾಯ… ಇಲ್ಲಿದ್ದೀಯೇನ್ಲೆ….. ಮುಂಜಾನಿಂದ ಕಲ್ಬುರ್ಗಿ ಸರ್ ನಿನ್ನ ಹುಡುಕ್ಲಾಕ ಹತ್ಯಾರ ನಡೀಲೇ…” ಎನ್ನುತ್ತ ಅಕ್ಷರಶಃ ನನ್ನನ್ನು ಎಳೆದೊಯ್ಯುವವರಂತೆಯೇ ಕನ್ನಡ ವಿಭಾಗದತ್ತ ಕರೆದೊಯ್ದರು.                 ನಾನು ಯಾರಿಗೂ ತಿಳಿಸದೆ ಬಂದು ತಪ್ಪು ಮಾಡಿ ಈಗ ಸಿಕ್ಕಿಹಾಕಿಕೊಂಡಿದ್ದೆ. ಕಲ್ಬುರ್ಗಿ ಸರ್ ಮುಂಜಾನೆ ಹನ್ನೊಂದರಿಂದಲೇ ನನ್ನನ್ನು ಹುಡುಕಲು ಆರಂಭಿಸಿದ್ದಾರೆ. ಹಾಸ್ಟೆಲ್ ಕೋಣೆಯಲ್ಲೂ ನಾನಿಲ್ಲವೆಂಬುದು ತಿಳಿದ ಮೇಲೆ ಒಂದಿಬ್ಬರನ್ನು ಸಿನಿಮಾ ಟಾಕೀಸನತ್ತಲೂ ಕಳುಹಿಸಿ ಯಾವುದಾದರೂ ಸಿನಿಮಾ ನೋಡಲು ಹೋದನೇನೋ ಎಂದು ಪರಿಶೀಲನೆ ಮಾಡಿಸಿದ್ದಾರೆ. ಅಲ್ಲಿಯೂ ಕಾಣಸಿಕ್ಕದ ಬಳಿಕ ಸಹಜವಾಗಿಯೇ ಮತ್ತಿಬ್ಬರು ಕ್ಯಾಂಪಸ್ಸಿನಲ್ಲಿಯೇ ಬೇರೆ ಬೇರೆ ವಿಭಾಗಗಳತ್ತ ಅಲೆದಲೆದು ಹುಡುಕಿ ಬಂದಿದ್ದಾರೆ. ಕೊನೆಗೂ ನಾನು ವಿಶ್ವವಿದ್ಯಾಲಯದ ಅಕೌಂಟ್ ಸೆಕ್ಶನ್ನಿನಲ್ಲಿ ಇಬ್ಬರ ಕೈಗೆ ಸಿಕ್ಕು ಬಿದ್ದು ಗುರುಗಳ ಕೋಪವನ್ನು ಹೇಗೆ ಎದುರಿಸುವುದೆಂಬ ಆತಂಕದಲ್ಲಿ ಕನ್ನಡ ವಿಭಾಗದತ್ತ ಹೆಜ್ಜೆ ಹಾಕುತ್ತಿದ್ದೆ.                 ಕಲ್ಬುರ್ಗಿ ಸರ್ ಕೊಠಡಿಯನ್ನು ನಾನು ಪ್ರವೇಶಿಸಿದಾಗ ನಾನು ನಿರೀಕ್ಷಿಸಿದಂತೆ ಅವರು ನನ್ನ ಮೇಲೆ ಸಿಡಿಮಿಡಿಗೊಳ್ಳಲಿಲ್ಲ. ಶಾಂತರಾಗಿಯೇ ನನ್ನನ್ನು ವಿಚಾರಿಸಿಕೊಂಡರು. ನಾನು ಪರೀಕ್ಷೆಯ ಫೀ ಕಟ್ಟಲೆಂದು ‘ಕ್ಯೂ’ ನಿಂತ ವಿವರಗಳನ್ನು ಕೇಳಿದ ಬಳಿಕ “ನೀನು ನನಗೆ ತಿಳಿಸಿದ್ದರೆ ಅದಕ್ಕೆ ನಾನು ಬೇರೆ ವ್ಯವಸ್ಥೆ ಮಾಡುತ್ತಿದ್ದೇನಲ್ಲ….” ಎಂದಷ್ಟೇ ನುಡಿದು ಕೆಲಸ ಮುಂದುವರಿಸಿ ಆದಷ್ಟು ಬೇಗ ಮುಗಿಸುವಂತೆ ಸೂಚನೆ ನೀಡಿ ಕಳುಹಿಸಿದರು.                 ನಾನು ಮತ್ತದೇ ಕೊಠಡಿಗೆ ಹೊರಟು ಬರೆಯಲು ಆರಂಭಿಸಿದೆ. ಹಸಿವು ಹಿಂಸೆ ನೀಡುತ್ತಿತ್ತು. ಉಪಾಯ ಕಾಣದೆ ಕೆಲಸ ಮುಂದುವರಿಸಿದ್ದೆ. ಒಂದು ಅರ್ಧಗಂಟೆ ಕಳೆಯುವುದರಲ್ಲಿ ನನ್ನನ್ನು ಕ್ಯಾಂಪಸ್ಸಿನಲ್ಲಿ ಪತ್ತೆ ಹಚ್ಚಿ ಗುರುಗಳ ಬಳಿಗೆ ಕರೆತಂದ ನನ್ನ ಸಹಪಾಠಿಗಳಿಬ್ಬರೂ ನನಗಾಗಿ ಊಟ ತೆಗೆದುಕೊಂಡು ಬಂದರು. ಗುರುಗಳೇ ಈ ವ್ಯವಸ್ಥೆ ಮಾಡಿದ್ದು ತಿಳಿದು ಅಚ್ಚರಿಯಾಯಿತು.                 ಊಟ ಆರಂಭಿಸಿದೆ ಗುರುಗಳು ಕೊಠಡಿಗೆ ಬಂದರು. ನನ್ನ ಊಟ ಮುಗಿಯುವವರೆಗೂ ನಿಂತುಕೊಂಡೇ ಮಾತನಾಡಿದರು….                 ಅವರ ಮಾತಿನುದ್ದಕ್ಕೂ ಇದ್ದ ಉಪದೇಶವೆಂದರೆ, ಕರ್ತವ್ಯ ನಿಷ್ಠೆ ಮತ್ತು ಅದಕ್ಕಾಗಿ ನಾವು ಬೆಳೆಸಿಕೊಳ್ಳಬೇಕಾದ ಶೃದ್ಧೆಯ ಕುರಿತಾದ ವ್ಯಾಖ್ಯಾನಗಳು ಮಾತ್ರ!                 ಸಂದರ್ಭ ಸುಖ್ಯಾಂತವಾಗುವುದರೊಂದಿಗೆ ನನಗೆ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವಂಥ ದೃಷ್ಟಾಂತಗಳನ್ನು ಗುರುಗಳಿಂದ ಕೇಳಿದಾಗ ಇದು ನನಗೊದಗಿ ಬಂದ ಭಾಗ್ಯವೆಂದೇ ಭಾವಿಸಿದೆ.                 ಅಲ್ಲಿಂದ ಗುರುಗಳು ಹೊರಗೆ ಹೋದರೂ ನನ್ನ ಕಾರ್ಯಗಾರ ಕೊಠಡಿಗೆ ಹೊರಗಿನಿಂದ ಬೀಗ ಹಾಕುವ ಹೊಸ ವ್ಯವಸ್ಥೆ ಜಾರಿಯಾಯಿತು. ಮುಂದಿನ ಎರಡು ದಿನಗಳೂ ಇದೇ ವ್ಯವಸ್ಥೆ ಮುಂದುವರಿಯಿತು. ಕಾಲಕಾಲಕ್ಕೆ ನನ್ನ ಊಟ ತಿಂಡಿಯ ವ್ಯವಸ್ಥೆಯಾಗುತ್ತಿದ್ದರೂ ನಾನು ಬಯಸಿದಾಗ ಹೊರಗೆ ಹೋಗುವ ಸ್ವಾತಂತ್ರ್ಯವಿರಲಿಲ್ಲ.                 ಹೀಗೆ ಮತ್ತೆ  ಎರಡು ದಿನಗಳ ಕಾಲ ನಿಷ್ಠೆಯಿಂದ ಭಿತ್ತಿಪತ್ರ ಬರಹಳನ್ನು ಮುಗಿಸಿದೆ. ಕಲ್ಬುರ್ಗಿ ಗುರುಗಳು “ಅಂದು ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ” ಕಾಯಕ ನಿಷ್ಠೆಯ ಅರಿವು ಮೂಡಿಸಿದ ಪರಿ ಅದ್ಭುತವೆಂದೇ ಈಗಲೂ ಅನಿಸುತ್ತದೆ. ********************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

You cannot copy content of this page

Scroll to Top