ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಾಧಕಿಯರ ಯಶೋಗಾಥೆ

ಹನ್ಸಾ ಜೀವರಾಜ್ ಮೆಹ್ತಾರವರು ಒಬ್ಬ ಸಾಮಾಜಿಕ ಕಾರ್ಯಕರ್ತೆ, ಶಿಕ್ಷಣತಜ್ಞೆ, ಸುಧಾರಣಾವಾದಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಸ್ತ್ರೀವಾದಿ ಚಿಂತಕಿ, ಬರಹಗಾರ್ತಿ ಕೂಡ ಆಗಿದ್ದರು

Read Post »

ಅಂಕಣ ಸಂಗಾತಿ, ನೆಲಸಂಪಿಗೆ

ಅಂಕಣ ನೆಲಸಂಪಿಗೆ ಈ ಹಕ್ಕಿ ಮರಳಿ ಕಾಡಿಗೆ ಹೋಗಿ ಬದುಕಲಾರದು…! ಮನೆಗೆ ಬೇಕಾದ ಕೆಲ ಅಗತ್ಯದ ವಸ್ತುಗಳು ಮತ್ತು ಬಟ್ಟೆ ಖರೀದಿಸಲೆಂದು ಆವತ್ತು ಪೇಟೆಗೆ ಹೋಗಿದ್ದೆವು. ಮಾರ್ಚ್ ತಿಂಗಳ ಸುಡುಬಿಸಿಲು, ಧೂಳು. ಬಿಡುವು ಕೊಡದೆ ಧಾವಿಸುವ ವಾಹನಗಳ ಕರ್ಕಶ ಸದ್ದು. ಎಲ್ಲದರ ನಡುವೆ ರೋಸಿ ಹೋಗಿ ಬಟ್ಟೆಯಂಗಡಿಯ ಬಳಿ ತಲುಪಿದಾಗ ಆಗಲೇ ಆಯಾಸವಾಗಿತ್ತು. ಅಂತಹ ಹೊತ್ತಿನಲ್ಲಿ ಗುಬ್ಬಚ್ಚಿಯೊಂದು ಉರಿಬಿಸಿಲಿಗೆ ಕುದಿಯುತ್ತಿದ್ದ ರಸ್ತೆಯಲ್ಲಿ ಏನನ್ನೋ ಹುಡುಕುತ್ತಿತ್ತು. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಅಲ್ಲೇನೂ ಕಾಣಲಿಲ್ಲ. ಅದು ಬಾಯಾರಿಕೆ, ಹಸಿವಿನಿಂದ ಕಂಗೆಟ್ಟಂತೆ ನನಗೆ ಕಂಡಿತು. ಮೊದಲೆಲ್ಲ, ‘ಅಂಗಡಿ ಪಕ್ಕಿ’ ಎಂಬ ಹೆಸರಿಗೆ ಅನ್ವರ್ಥವಾಗಿ ಸಾಲು ಅಂಗಡಿಗಳ ಮುಂದೆ ಗಲಾಟೆ ಎಬ್ಬಿಸುತ್ತ ಚೆಲ್ಲಿದ ಕಾಳು ಆರಿಸುತ್ತಿದ್ದ ಗುಬ್ಬಚ್ಚಿಗಳ ಹಿಂಡು ನೆನಪಾಗಿ ಈ ಒಂಟಿಗುಬ್ಬಿ ಸದ್ಯದ ಪರಿಸ್ಥಿತಿಗೆ ರೂಪಕವಾಗಿ ಕಂಡು ಎದೆಯೊಳಗೆ ನೋವಾಯಿತು. ಬಟ್ಟೆಖರೀದಿಸುವ ಆಸಕ್ತಿ ಉಳಿಯದೆ “ನನಗೀಗ ಏನೂ ಬೇಡ” ಎಂದು ತಿಳಿಸಿ ಮನೆಮಂದಿಯನ್ನು ಅಂಗಡಿಯೊಳಗೆ ಕಳಿಸಿ ಸುಮ್ಮನೆ ಯೋಚಿಸುತ್ತ ನಿಂತುಬಿಟ್ಟೆ… ** ನಮ್ಮ ಆ ಬಾಡಿಗೆ ಮನೆಗೆ ಸಕಾರಣವಾಗಿ ‘ಹಕ್ಕಿ ಮನೆ’ ಎಂದು ಹೆಸರಿಟ್ಟಿದ್ದೆವು. ವಿಶಾಲವಾಗಿದ್ದ ಮನೆಯ ಸುತ್ತ ಒಂದಷ್ಟು ಜಾಗವಿತ್ತು; ಮರಗಿಡಗಳಿದ್ದವು. ತೆಂಗು, ನುಗ್ಗೆ ಮರಗಳು, ಪಪ್ಪಾಯಿ, ಬಾಳೆ, ಕ್ರೋಟನ್ ಗಿಡಗಳು ಅಂದ ಹೆಚ್ಚಿಸಿದ್ದವು. ಅಷ್ಟು ಒಳ್ಳೆಯ ಬಾಡಿಗೆಮನೆ ಸಿಕ್ಕಿದ್ದು ನಮ್ಮಅದೃಷ್ಟವೆಂದೇ ಹೇಳಬೇಕು. ಹಗಲಿನ ವೇಳೆ ಹಕ್ಕಿ ಹಾಡು, ಕೋಳಿಗಳ ಕೂಗು, ಮುಂಗುಸಿ, ಅಳಿಲು, ನಾಯಿ, ಬೆಕ್ಕುಗಳ ಸುಂದರ ಪ್ರಪಂಚವಾದರೆ; ರಾತ್ರಿ ತಾರಸಿಯ ಮೇಲಿನ ಬೆಳದಿಂಗಳ ಲೋಕ, ಇರುಳಹಕ್ಕಿಗಳ ಸವಿಮಾತು!ಇಂತಹ ಮನೆಗೆ ಹೋದ ಸ್ವಲ್ಪ ಸಮಯದಲ್ಲಿ ಮಗ ಮತ್ತು ನಾನು ರಜೆಯ ದಿನ ಒಂದು ಕಿಲಾಡಿತನ ಮಾಡಿದೆವು. ಎರಡುರಟ್ಟಿನ ಪೆಟ್ಟಿಗೆಯನ್ನುತೆಗೆದುಕೊಂಡು, ರಂಧ್ರಕೊರೆದು, ದಾರಕಟ್ಟಿ ಸಿಟೌಟಿನ ಕಂಬಕ್ಕೆ ಬಿಗಿಯಾಗಿ ಬಿಗಿದೆವು. “ಯಾವುದಾದರೊಂದು ಹಕ್ಕಿ ಬಂದು ಅದನ್ನು ತನ್ನ ಗೂಡಾಗಿ ಸ್ವೀಕರಿಸಬಾರದೇ’ ಎಂಬ ಅಸಾಧ್ಯ ಹಂಬಲ, ಕಲ್ಪನೆ ಮಾತ್ರ ನಮ್ಮದಾಗಿತ್ತು. ಆದರೆ ನಾಲ್ಕೈದು ದಿನ ಕಳೆಯುವಷ್ಟರಲ್ಲಿ ಮಡಿವಾಳ ಹಕ್ಕಿ(ಮ್ಯಾಗಿಫೈ ರಾಬಿನ್)ಯೊಂದು ನಮ್ಮಕಲ್ಪನೆಯನ್ನು ವಾಸ್ತವಕ್ಕಿಳಿಸಿ ಔದಾರ‍್ಯ ಮೆರೆಯಿತು! ಆ ಬೆಳಗು ರಟ್ಟಿನ ಪೆಟ್ಟಿಗೆಗೆ ನಾರು ತಂದು ಹಾಕುತ್ತಿದ್ದ ಮಡಿವಾಳವನ್ನು ಕಂಡು ಕನಸೊಂದನ್ನು ಎಡವಿ ಬಿದ್ದಂತೆ ನನಗೆ ಭಾಸವಾಯಿತು! ಮಗನಂತೂ ಹಕ್ಕಿಗಳಿಗೆ ತೊಂದರೆಯಾದೀತೆಂದು ಮೌನವಾಗಿಯೇ ಕುಣಿದು ಖುಷಿಪಟ್ಟ!  ಬದುಕಿನಲ್ಲಿ ಮೊದಲ ಬಾರಿಗೆ ಇಂಥದ್ದೊಂದು ವಿಭಿನ್ನ ಅನುಭವಕ್ಕೆ ತೆರೆದುಕೊಂಡ ಸಂಭ್ರಮ ನನ್ನದಾಗಿತ್ತು. ಹುಲುಮಾನವರಾದ ನಾವು  ಕೊಟ್ಟ ‘ಗೂಡನ್ನುʼಆಕಾಶಲೋಕದ ಕಿನ್ನರರಾದ ಹಕ್ಕಿಗಳು ಸ್ವೀಕರಿಸುವುದೆಂದರೆ ಏನು  ಕಮ್ಮಿಯಮಾತೇ ? ಈ ಪುಳಕವೇ ನನ್ನ ಮುಂದಿನ ದಿನಗಳಿಗೆ ಉತ್ಸಾಹದ ಅಮೃತವೆರೆಯಿತು. ಸಿಟೌಟ್‌ನಲ್ಲಿದ್ದ ಹಕ್ಕಿಗಳಿಗೆ ತೊಂದರೆಯಾಗದಂತೆ ಚೂರೂ ಶಬ್ದ ಮಾಡದೆ ಇಡೀ ಮನೆಯ ಕೆಲಸಗಳನ್ನು ನಿರ್ವಹಿಸುವುದು ನಮ್ಮ ದಿನಚರಿಯ ಭಾಗವಾಯಿತು. ಹಕ್ಕಿಜೋಡಿ ಬೇಕೆಂಬಷ್ಟು ನಾರನ್ನುತಂದು ಗೂಡಿನೊಳಗೊಂದು ಗೂಡು ಮಾಡಿದವು. ನಂತರ ಮೊಟ್ಟೆಯಿಟ್ಟದ್ದು, ಕಾವು ಕೊಟ್ಟದ್ದುಎಲ್ಲವನ್ನೂ ಅವುಗಳ ನಿಶ್ಯಬ್ದ ಚಲನವಲನದಿಂದ ತಿಳಿದುಕೊಂಡೆವು. ಕೆಲವೇ ದಿನದಲ್ಲಿ ಮರಿಯೊಡೆದು ‘ಚೀಂಚೀಂ’ ಎಂಬ ಕಂದಮ್ಮಗಳ ಸದ್ದು ಕೇಳಿಬಂದಾಗ ವ್ಯಕ್ತಪಡಿಸಲಾದ ಸಂತಸ, ಎನರ್ಜಿ ಮನೆಯನ್ನೆಲ್ಲ ತುಂಬಿಕೊಂಡಿತು. ದಿನದ ಕೆಲಸಗಳನ್ನು ಮುಗಿಸಿ ಕತ್ತಲ ನೀರವತೆಯಲ್ಲಿ ಸ್ವಲ್ಪ ಹೊತ್ತು ಕುಳಿತು ನಿಸರ್ಗದ ಸದ್ದುಗಳನ್ನು ಆಲಿಸುವುದು ನನ್ನ ನಿತ್ಯದ ಅಭ್ಯಾಸ. ಇಂಥಾ ಹೊತ್ತಿನಲ್ಲಿ ತಲೆ ಮೇಲೆಯೇ ಇರುತ್ತಿದ್ದ ಹಕ್ಕಿ ಸಂಸಾರದ ಮೆಲುಮಾತು, ಜೀವಂತಿಕೆ ನನ್ನನ್ನು ಹೊಸದೊಂದು ಬೆಚ್ಚನೆಯ ಲೋಕಕ್ಕೆ ಕರೆದೊಯ್ಯುತ್ತಿತ್ತು. ತುಸು ದಿನಗಳಲ್ಲಿ ಮರಿಗಳು ದೊಡ್ಡವಾಗಿ ಕೊನೆಗೊಮ್ಮೆ ಹಾರಿ ಹೋದದ್ದು ತಿಳಿದಾಗ ಸದ್ಯ;  ಎಲ್ಲವೂ ಸರಿಯಾಯಿತಲ್ಲ! ನಮ್ಮರಟ್ಟಿನ ಪೆಟ್ಟಿಗೆಯಿಂದ ಇಷ್ಟಾದರೂ ಸಹಾಯವಾಯಿತಲ್ಲ ಎಂದು ಸಮಾಧಾನದ ನಿಟ್ಟುಸಿರಿಟ್ಟೆವು. ಆದರೆ ಆ ರಟ್ಟಿನ ಪೆಟ್ಟಿಗೆಗೆ ಇನ್ನೂ ಹಲವು ಕರ್ತವ್ಯಗಳಿರಬಹುದೆಂದು ತಕ್ಷಣಕ್ಕೆ ನನಗೆ ಹೊಳೆದಿರಲಿಲ್ಲ. .      ಒಂದಷ್ಟು ದಿನ ಕಳೆದ ಅನಂತರ ಒಂದು ದಿನ ಮಡಿವಾಳ ಹಕ್ಕಿಯೊಂದು ಮತ್ತೆ ನಮ್ಮಗೂಡಿಗೆ ನಾರು-ಬೇರು ತಂದು ಹಾಕುತ್ತಿದ್ದುದ್ದನ್ನು ನೋಡಿದೆ! ಅರೇ, ಇದ್ಯಾವ ಹಕ್ಕಿ; ಒಮ್ಮೆಉಪಯೋಗವಾದ ಹಕ್ಕಿಗೂಡು ಮತ್ತೆ ವಾಸಯೋಗ್ಯವಲ್ಲ ಎಂಬುದು ಬಾಲ್ಯದಿಂದಲೂ ಕಂಡ ಹಾಗೆ, ಓದಿದ ಹಾಗೆ ನನ್ನ ತಿಳುವಳಿಕೆ! ಆದರಿಲ್ಲಿ ಆ ‘ಜ್ಞಾನ’ ಉಲ್ಟಾ ಹೊಡೆದಿತ್ತು!  ಹೌದು, ಪುನಃ ಇನ್ನೊಂದು ಹಕ್ಕಿ ನಮ್ಮರಟ್ಟಿನ ಪೆಟ್ಟಿಗೆಯನ್ನುತನ್ನ ಮನೆಯಾಗಿ ಸ್ವೀಕರಿಸಿತ್ತು. ಇದಂತೂ ಬಹಳ ಖುಷಿಯ, ಕುತೂಹಲದ ವಿಷಯ. ಎರಡು, ಮೂರು ದಿನ ತಿರುತಿರುಗಿ ಈ ವಿಷಯವನ್ನೇ ಮಾತಾಡಿದ್ದಾಯಿತು. ಆದರೆ ಅಷ್ಟರಲ್ಲಿ ನಮ್ಮ ಮನೆಯ ಓನರ್‌ ಅವರ ಒತ್ತಡ ಮಿತಿಮೀರಿ ‘ಮನೆ ಬಿಟ್ಟು ಹೊರಡಿ’ ಎಂಬ ಕೊನೆಯ ‘ವಾರ್ನಿಂಗ್’ ಹೊರಬಿದ್ದಿತು! ತಾವೇ ಬಂದು ಅಲ್ಲಿ ನೆಲೆಸುತ್ತೇವೆಂಬ ಅವರ ಮಾತಿಗೆ ನಮ್ಮಲ್ಲಿ ಬದಲಿರಲಿಲ್ಲ. ಆದರೆ ನನಗೆ ಇನ್ನೊಂದು ಮನೆ ಹುಡುಕುವ, ಸಾಮಾನು ಸರಂಜಾಮು ಸಾಗಿಸುವ, ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಎಲ್ಲ ಚಿಂತೆಗಳ ಮಧ್ಯೆ ಹಕ್ಕಿಗಳ ವ್ಯಥೆ ಎಡೆಬಿಡದೆ ಕಾಡುತ್ತಿತ್ತು. ವಿಧಿಯಿಲ್ಲದೆ ಮತ್ತೊಂದು ವಾರದಲ್ಲಿ ನಾವು ಮನೆ ಖಾಲಿ ಮಾಡಿದೆವು. ಕನಸಿನ ಗೂಡುಕಟ್ಟುತ್ತಿರುವ ಹಕ್ಕಿಗಳಿಗೇನು ಹೇಳುವುದು… ಹೊರಟ ಗಳಿಗೆ ಮನ ಭಾರವಾಗಿತ್ತು. ಆದರೆ ಗಟ್ಟಿಮನಸ್ಸು ಮಾಡಿ ನಾನೊಂದು ನಿರ್ಧಾರ ತೆಗೆದುಕೊಂಡೆ. ಮುಂದೆ ಆ ಮನೆಗೆ ಬರುವ ಯಾರೇ ಆದರೂ ಬಾಗಿಲಲ್ಲೇ ಇರುವ ರಟ್ಟಿನ ಪೆಟ್ಟಿಗೆಯನ್ನು ‘ಕಸ’ವೆಂದು ತಿಳಿದು ಆಚೆ ಎಸೆಯುವುದು ಖಾತ್ರಿಯಿತ್ತು. ಹಾಗಾಗಿ, ಐದಾರು ದಿನ ನಾರು ತಂದಿಟ್ಟ ಹಕ್ಕಿಗಳಲ್ಲಿ ಕ್ಷಮೆ ಬೇಡಿ, ನಡುಗುವ ಕೈಗಳಿಂದ ಗೂಡನ್ನು ಬಿಚ್ಚಿ ಜೋಪಾನವಾಗಿ ಹೊಸ ಮನೆಗೆ ಒಯ್ದೆ. ಮುಂದೆ ಕೇಳಿಸಬಹುದಾದ ಮೊಟ್ಟೆ ಮರಿಗಳ ಆಕ್ರಂದನಕ್ಕಿಂತ ಇದು ಉತ್ತಮವೆಂದು ನಾನು ಭಾವಿಸಿದೆ.      ನಮ್ಮʼಹೊಸʼ ಬಾಡಿಗೆಮನೆ ಹಳೆಯ ಮನೆಯೇ ಆದರೂ ನಿಸರ್ಗದ ಮಡಿಲಲ್ಲಿತ್ತು. ಇಲ್ಲಿಯೂ ಮನೆ ಮುಂದೆ ಕಂಬವೊಂದಿತ್ತು. ರಟ್ಟಿನ ಪೆಟ್ಟಿಗೆಯ ಹಕ್ಕಿಗೂಡನ್ನು ಬರೀ ನೆನಪಿಗೆಂದೇ ಬಿಚ್ಚಿಕೊಂಡು ಬಂದದ್ದು ಹೌದಾದರೂ ನೋಡೋಣವೆಂದು ಕಂಬಕ್ಕೆ ಕಟ್ಟಿ, ಮನೆ ಸಾಮಾನು ಜೋಡಿಸುವಲ್ಲಿ, ಶಾಲೆಯ ಕೆಲಸದಲ್ಲಿ ನಿರತಳಾದೆ. ಸುಮಾರು ತಿಂಗಳೊಂದು ಕಳೆದಿತ್ತು. ಒಂದು ದಿನ ವಿನ್ಯಾಸ್‌ ಕರೆದು ತೋರಿಸಿದ; ಇನ್ನೊಂದು ಮಡಿವಾಳ ಹಕ್ಕಿ ಜೋಡಿ ಅದೇ ಪ್ರೀತಿಯ ಗೂಡಿಗೆ ಮತ್ತೆ ನಾರು ತಂದು ಹಾಕುತ್ತಿತ್ತು. ಈ ಸಲವಂತೂ ನಾನು ಭಾವುಕಳಾದೆ. ಕಣ್ಣೀರು ಉಕ್ಕಿ ಮಣ್ಣಿಗೆ ಸೇರಿತು. ಹಕ್ಕಿಗಳು ಮರಿಗಳಿಗೆ ಬೆಚ್ಚನೆಯ ಹಾಸಿಗೆ ಮಾಡಿದವು; ಮೊಟ್ಟೆಯಿಟ್ಟವು, ಮರಿಗಳೂ ಒಡೆದವು. ಆ ಹೊತ್ತಿಗೆ ಬಿರುಬೇಸಗೆ ಕಳೆದು ಮಳೆಗಾಲ ಆರಂಭವಾಗಿತ್ತು. ಜೋರು ಗಾಳಿ ಮಳೆಗೆ ಸಿಬ್ರ್(ಎರಚಲು) ಬಡಿದು ಗೂಡು ಹಾಳಾಗುತ್ತದೇನೋ ಎಂಬ ಭಯ ಕಾಡಿತು. ಈಗಾಗಲೇ ಆ ಪೆಟ್ಟಿಗೆ ಚೂರು ಶಿಥಿಲವಾಗಿತ್ತು. ಆದರೆ ಒಳಗಡೆ ನಾರಿನ ಆಶ್ರಯವಿತ್ತು. ಹಕ್ಕಿಗಳು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ದಿನಚರಿಯಲ್ಲಿ ಮೈಮರೆತಿದ್ದವು. ಈ ಸಂದರ್ಭದಲ್ಲೇ ಒಂದು ದಿನದ ಮಟ್ಟಿಗೆ ನಾವು ಹಾಲಾಡಿಗೆ ಹೋಗಬೇಕಾಯಿತು. ಆದರೆ ಹಾಗೆ ಹೋಗಿ ಬರುವುದರೊಳಗೆ ಇಲ್ಲಿ ನಮ್ಮ ಮೂಡಬಿದ್ರೆಯ ನಿಸರ್ಗದ ಮನೆಯಲ್ಲಿ ದೊಡ್ಡ ಅವಘಡವೇ ನಡೆದಿತ್ತು. ಏನಾಯಿತೋ ಗೊತ್ತಾಗಲಿಲ್ಲ ದೊಡ್ಡ ಹಕ್ಕಿಯ ದಾಳಿಯೋ, ಹಾವಿನ ಕಿತಾಪತಿಯೋ… ಮರಿಗಳು ಮಾಯವಾಗಿದ್ದವು! ಅಪ್ಪ-ಅಮ್ಮ ಹಕ್ಕಿಗಳು ಬಹುಶಃ ಹಾರಿಹೋಗಿದ್ದವು. ಇಂತಹ ನೋವುಗಳಿಗೆ ಪದಗಳಿಲ್ಲ. ಅಂತೂ ಹೇಗೋ ಎಲ್ಲವನ್ನೂ ಮರೆತು ಬದುಕಬೇಕೆಂಬ ಸೂತ್ರ ಅನುಸರಿಸಿ ಕುಂಟುವ ಮನಸ್ಸಿನೊಂದಿಗೆ ದಿನಕಳೆದ್ದಾಯಿತು.     ಎರಡು ಮೂರು ತಿಂಗಳ ನಂತರ ಒಂದು ದಿನ ಹಕ್ಕಿಗೂಡಿನೊಳಗೆ ದೊಡ್ಡದೊಡ್ಡ ಹುಲ್ಲಿನೆಳೆಗಳು ಕಂಡುಬಂದವು. ಇದನ್ಯಾರು ತಂದಿಟ್ಟರೆಂದು ತಿಳಿಯಲಿಲ್ಲ! ಆ ಸಂಜೆ ಹೊತ್ತು ಮನೆಯೆದುರು ಹುಲ್ಲು ಬೆಳೆದ ಜಾಗದಲ್ಲಿ ಏನೋ ಕೆಲಸ ಮಾಡುತ್ತಿದ್ದ ನನ್ನವರಲ್ಲಿ ಕೇಳಿದೆ; “ನೀವೇನಾದರೂ… ಹುಲ್ಲನ್ನು ಹಕ್ಕಿ ಗೂಡೊಳಗೆ ಹಾಕಿದ್ದೀರಾ?” ಎಂದು! ಏಕೆಂದರೆ ಯಾರೋ ಮನುಷ್ಯರೇ ತುಂಬಿಟ್ಟಂತೆ ಅಸಡಾ ಬಸಡಾ ಇತ್ತದು. ಇವರು ನಗಾಡಿದರು. “ನನಗೇನು  ಬೇರೆ ಕೆಲಸ ಇಲ್ವಾ?” ಎನ್ನುತ್ತಾ! ಹಾಗಾದರೆ ಇದ್ಯಾವುದೋ ಹೊಸ ಹಕ್ಕಿಯ ಕಾರುಬಾರೇ ಇರಬೇಕೆಂದು ಜ್ಞಾನೋದಯ ಹೊಂದಿ ಕಳ್ಳನನ್ನು ಕಂಡುಹಿಡಿಯಲು ಕಾದುಕೂತೆವು. ಅಂತೂ ಕಳ್ಳ ಬೇಗನೆ ಸಿಕ್ಕಿಹಾಕಿಕೊಂಡ; ಅದೊಂದು ‘ಮುನಿಯ’. ಭರದಿಂದ ಹುಲ್ಲನ್ನು ತಂದು ರಟ್ಟಿನ ಪೆಟ್ಟಿಗೆಯೊಳಗೆ  ಒಟ್ಟುತ್ತಿತ್ತು. ಇದಂತೂ ಭಯಂಕರ ಚಟುವಟಿಕೆಯ ಹಕ್ಕಿ. ಎಂಥಾ ಚುರುಕು, ಏನು ಕತೆ!  ನಿಜವಾಗಿಯೂ ಅದೃಷ್ಟಶಾಲಿ ರಟ್ಟಿನಪೆಟ್ಟಿಗೆ ಮತ್ತು ನಾವು. ಈ ಹಕ್ಕಿ ಜೋಡಿಯೂ ಮೊಟ್ಟೆಯಿಟ್ಟು ಕಾವು ಕೊಟ್ಟು ಮರಿಗಳಿಗೆ ತುತ್ತುಣಿಸಿ, ದೊಡ್ಡ ಮಾಡಿ ಒಂದು ದಿನ ತೆರಳಿದವು. ಆದರೆ ಖಾಲಿಯಾದ ಗೂಡು ಹಾಗೇ ಉಳಿಯಲಿಲ್ಲ. ಮತ್ತೆ ಎರಡು ಮುನಿಯ ಹಕ್ಕಿಯ ಸಂಸಾರಗಳು ಬಂದವು. ಯಾವ ಅವಘಡಗಳಿಗೂ ತುತ್ತಾಗದೆ ನೆಮ್ಮದಿಯಿಂದ ಬದುಕಿ ಗೂಡನ್ನು ಖಾಲಿ ಮಾಡಿ ಹೊರಟುಹೋದವು. ಇಷ್ಟೆಲ್ಲಾ ಆಗುವಾಗ ಬಿರುಸಾದ ಮಳೆ ಮತ್ತು ಬಿಸಿಲಿಗೆ ಸ್ವಲ್ಪ ಭಾಗವನ್ನು ಒಡ್ಡಿಕೊಂಡಿದ್ದ ಗೂಡು ಮತ್ತಷ್ಟು ಶಿಥಿಲವಾಗಿತ್ತು. ಕೊನೆಯ ಸಲವಂತೂ ಇನ್ನೇನು ಕಳಚಿ ಬೀಳುತ್ತದೋ ಎಂಬಂತಾಯಿತು. ಆದರೆ ಒಳಗಡೆ ನಾರು, ಬೇರು, ಹುಲ್ಲಿನ ಬಲವಾದ ಮನೆಯೇ ಇದ್ದುದರಿಂದಲೋ ಏನೋ ಮುನಿಯಗಳು ಧೈರ‍್ಯವಾಗಿ ವಾಸಿಸಿದವು. ಲೆಕ್ಕ ಹಾಕಿದರೆ; ಕಾಲಾನುಕಾಲಕ್ಕೆ ಒಟ್ಟು ಆರು ಹಕ್ಕಿ ಸಂಸಾರಗಳು ನಮ್ಮ ಈ ಒಂದೇ ರಟ್ಟಿನ ಪೆಟ್ಟಿಗೆಯನ್ನು ತಮ್ಮಗೂಡಾಗಿ ಸ್ವೀಕರಿಸಿದ್ದವು! ನನ್ನ ಬದುಕಿನ ಪ್ರಮುಖ ಘಟನೆಗಳಲ್ಲಿ ಇದೂ ಒಂದು. ಮುಗ್ಧ ಹಕ್ಕಿಗಳು ಮನುಷ್ಯರಾದ ನಮ್ಮ ಮೇಲಿಟ್ಟ ಪ್ರೀತಿ, ವಿಶ್ವಾಸದ ಕುರುಹು ಇದೆಂದು ಭಾವಿಸಿ ಸದಾ ಕೃತಜ್ಞಳಾಗಿರುತ್ತೇನೆ. ಶಿಥಿಲವಾದ ಗೂಡನ್ನು ಬಿಚ್ಚಿ ನೆನಪಿಗೆಂದು ಇಟ್ಟುಕೊಂಡೆವು. ***     ಮುಂದೆ ಅನಿವಾರ‍್ಯ  ಪರಿಸ್ಥಿತಿಯಲ್ಲಿ ಪ್ಲಾಟೊಂದರಲ್ಲಿ ವಾಸಿಸಲು ಹೊರಟಾಗ ಅಲ್ಲಿಯೂ ಹಕ್ಕಿಗಳು ನಮ್ಮನ್ನು ಹಿಂಬಾಲಿಸಿ ಸಂಧಿಸುತ್ತವೆಂದು ನಾನು ಊಹಿಸಿರಲಿಲ್ಲ! ಆದರೆ ಮಣ್ಣಿನ ಸ್ಪರ್ಶ, ಮರಗಳ ಸೊಗಡು ಇಲ್ಲದ ಫ್ಲಾಟಿನ  ಮನೆಯಲ್ಲಿ ಸೂರಕ್ಕಿಗಳು ಬಂದು ದಿನಗಳನ್ನು ಹಗುರಗೊಳಿಸಿಬಿಟ್ಟವು! ಬಾಲ್ಕನಿಯಲ್ಲಿದ್ದ ಬಟ್ಟೆಯೊಣಗಿಸುವ ದಾರಕ್ಕೆ ಗೂಡು ಕಟ್ಟಿ ಮರಿಗಳನ್ನು ಪೊರೆದವು. ವಿಚಿತ್ರವೆಂದರೆ ಇಲ್ಲಿಯೂ ಕೂಡಾ ಖಾಲಿಯಾದ ಗೂಡು ತಿರಸ್ಕೃತಗೊಳ್ಳದೆ ಮತ್ತೆ ಮತ್ತೆ ಸೂರಕ್ಕಿಗಳು ಬಂದು ಅದರೊಳಗೆ ಹಾಸಿಗೆ ಮಾಡಿ ಮೊಟ್ಟೆಯಿಟ್ಟು ಮರಿಗಳನ್ನು ಪೋಷಿಸಿಕೊಂಡು ಹೋದವು. ಹೀಗೆ ಒಂದು ವರ್ಷದಲ್ಲಿ ನಾಲ್ಕೈದು ಆವರ್ತನವಾದ ನಂತರ ಗೂಡು ಹರಿದು ಹೋಗಿ ಕಾಲು ಭಾಗ ಮಾತ್ರ ಉಳಿದುಕೊಂಡಿತು. ಆದರೂ ಬಿಡದೆ ಮತ್ತೊಂದು ಸೂರಕ್ಕಿ ಬಂದು ಅದೇ ಗೂಡನ್ನು ಪೂರ್ಣಗೊಳಿಸಿ ತನ್ನ ಜೊತೆಗಾತಿಯೊಂದಿಗೆ ಮರಿಗಳನ್ನು ಬೆಳೆಸಿ ಬಾನಿಗೆ ಹಾರಿಸಿತು! ಅಚ್ಚರಿಯೆಂದರೆ ನವೀಕರಣಗೊಂಡ ಈ ಹೊಸ ಗೂಡಿಗೆ ಮತ್ತೆ ಮತ್ತೆ ಹೊಸ ಜೋಡಿ ಬಂದು ಕುಟುಂಬ ಪೊರೆದವು. ನೀರವ ರಾತ್ರಿಗಳಲ್ಲಿ ಕಾವು ಕೊಡಲು ಗೂಡಿನಿಂದ ತಲೆ ಹೊರ ಹಾಕಿ ಕುಳಿತ ಹಕ್ಕಿ ಒಮ್ಮೆ ನನ್ನ ಮಗು ಎನಿಸಿದರೆ, ಇನ್ನೊಮ್ಮೆ ನಮ್ಮನ್ನು ಕಾಯುವ ನಿಸರ್ಗದ ಕಣ್ಣು ಅನ್ನಿಸುವುದು. ಇದಂತೂ  ನಾನು ಬರೆಯುವ ಕುರ್ಚಿಯಿಂದ, ನಿದ್ದೆ ಹೋಗುವ  ಮಂಚದಿಂದ ಬರೀ ಒಂದು  ಮಾರು ದೂರದಲ್ಲಿರುವ  ಗೂಡು. ಅಂದರೆ ಸೂರಕ್ಕಿ ಸಂಗಾತಿಗಳು ಸದಾ ನನ್ನ ಹತ್ತಿರ…..ತೀರಾ ಹತ್ತಿರ!     ಈ ನಡುವೆ ಹೇಳಲೇಬೇಕಾದ ಇನ್ನೊಂದು ವಿಷಯವೆಂದರೆ, ನಮ್ಮ ‘ಹಕ್ಕಿಮನೆ’ಯಲ್ಲಿ ಪಿಕಳಾರ (ಬುಲ್ ಬುಲ್)ಗಳು ಅಂಗಳದ ಕ್ರೋಟನ್ ಗಿಡದಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದವಾದರೂ;  ಬೆಕ್ಕೋ, ಹಾವೋ ತಿಂದು ಹಾಕಿದ್ದರಿಂದ ವ್ಯರ್ಥವಾಗಿತ್ತು. ಬಹುಶಃ ರಟ್ಟಿನ ಪೆಟ್ಟಿಗೆಯನ್ನು ನಾವು ಕಂಬಕ್ಕೆ ಎತ್ತರದಲ್ಲಿ ಕಟ್ಟಿದ್ದು ಈ ದೃಷ್ಟಿಯಿಂದ ಬಹಳ ಸಹಾಯವಾಯಿತು ಮತ್ತು ಹಕ್ಕಿಗಳಿಗೂ ಮೆಚ್ಚುಗೆಯಾಯಿತೆಂದು ಕಾಣುತ್ತದೆ! ಇನ್ನು, ನಮ್ಮ ಫ್ಲಾಟಿನ ಗೋಡೆಗಳ ಸಂದುಗೊಂದುಗಳಲ್ಲಿ ಪಾರಿವಾಳದ ನೆಲೆ, ಅವುಗಳ ಗುಟರ್‌ಗುಟರ್ ಸಂಗೀತ ಸದಾ ಸೆಳೆಯುತ್ತದೆ. ಬಾಲ್ಕನಿಯಲ್ಲಿ ನೀರು, ಕಾಳು, ಬಾಳೆಹಣ್ಣು ಇಡುವ ವ್ಯವಸ್ಥೆ ಮಾಡಿದ್ದೇವೆ.

Read Post »

ಅಂಕಣ ಸಂಗಾತಿ, ಗಜಲ್ ಲೋಕ

ತಮ್ಮ ಹೃದಯದ ಬೆಚ್ಚಗಿನ ಗೂಡಿನಲ್ಲಿ ಗಜಲ್ ಕನಕಾಂಗಿಯನ್ನು ಕಾಪಿಡುತ್ತಿರುವ ಗಜಲ್ ಕಾರರೊಂದಿಗೆ ಪ್ರತಿ ವಾರ ರುಬರು ಆಗುವ ಸದಾವಕಾಶ ದೊರಕಿದೆ. ಪ್ರತಿ ಗುರುವಾರ ಒಬ್ಬ ಗಜಲ್ ಗಾರುಡಿಗರೊಂದಿಗೆ ನಿಮ್ಮ ಮುಂದೆ ಹಾಜರಾಗುವೆ…!!

Read Post »

ಅಂಕಣ ಸಂಗಾತಿ, ಗಾಂಧಿಹಾದಿ

ಹೀಗೆ ಗಾಂಧೀಜಿಯವರಿಗೂ ಕರ್ನಾಟಕಕ್ಕೂ ಒಂದು ಧೃಡವಾದ ನೆಂಟು ಇತ್ತು. ಅವರ ಚಳುವಳಿಗಳಲ್ಲಿ ಕರ್ನಾಟಕದ ಕಾರ್ಯಕರ್ತರೂ ಸಹ ಸಕ್ರೀಯವಾಗಿ ತಮ್ಮ ನೆರವನ್ನು ಕೊಟ್ಟರು.

Read Post »

ಅಂಕಣ ಸಂಗಾತಿ, ತೊರೆಯ ಹರಿವು

‘ಆಡದೇ ಮಾಡುವವ ರೂಢಿಯೊಳಗುತ್ತಮ’ ಎಂದು ಹೇಳುವುದಕ್ಕೂ ಸೀಮಿತಾರ್ಥಗಳೇ ಇರುತ್ತವೆ. ಕರ್ತವ್ಯ, ಜವಾಬ್ದಾರಿ ನಿರ್ವಹಣೆಯ ವಿಚಾರದಲ್ಲಿ; ಮಾನವೀಯತೆ, ಅನುಕಂಪೆ ತೋರುವ ಸಂಗತಿಗಳಲ್ಲಿ; ಸಹಾಯ ಹಸ್ತ ಚಾಚುವ ಸಂದರ್ಭಗಳಲ್ಲಿ ಇದು ಅನ್ವಯಿಸಬಹುದೇ ಹೊರತು ಆಡು, ಮಾತನಾಡು, ಮಾತನಾಡಿದ್ದನ್ನು ಮಾಡು ಎಂಬುದನ್ನು ಎಲ್ಲ ವಿಚಾರಕ್ಕೂ ಪರಿಭಾವಿಸಿ ನಡೆದುಕೊಳ್ಳುವುದು ಅಗತ್ಯವಿಲ್ಲ.

Read Post »

ಅಂಕಣ ಸಂಗಾತಿ, ಸಾಧಕಿಯರ ಯಶೋಗಾಥೆ

ಅಂಕಣ ಬರಹ

‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌.

ಸಾಧಕಿಯರ ಯಶೋಗಾಥೆ

Read Post »

ಅಂಕಣ ಸಂಗಾತಿ

ಅಂಕಣ ಬರಹ ಗಾಂಧಿ ಹಾದಿ ಸ್ವಾತಂತ್ರ ಮತ್ತು ಸಮಾನತೆಯ : ಗಾಂಧೀಜಿಯ ದೃಷ್ಟಿಕೋನ ದೇಶಾದ್ಯಂತ ಕೋವಿಡ್-೧೯ ಎರಡನೆಯ ಅಲೆ ಮುಗಿದು ಮೂರನೆಯ ಅಲೆಯ ಭೀತಿಯಲ್ಲಿ ಇದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ೧೫ನೇ ಆಗಸ್ಟ್,೨೦೨೧ಕ್ಕೆ ೭೫ ವಸಂತಗಳು ಪೂರ್ಣಗೊಳ್ಳಲಿದೆ. ಇದರ ಸವಿನೆನಪಿಗಾಗಿ ಕೇಂದ್ರ ಸರಕಾರದ ನಿರ್ದೇಶನದಂತೆ ೧೨ನೇ ಮಾರ್ಚ್೨೦೨೧ ರಂದು ದೇಶದ ೭೫ ಐತಿಹಾಸಿಕ ಸ್ಥಳಗಳಲ್ಲಿ ’೭೫ನೇ ಸ್ವಾತಂತ್ರ್ಯೋತ್ಸವದ ಆಜಾದ್ ಕಾ ಅಮೃತ ಮಹೋತ್ಸವ’ ದ ಕಾರ್ಯಕ್ರಮಗಳು ಜರುಗಿತು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವು ಮಹನೀಯರ ತ್ಯಾಗ, ಬಲಿದಾನ ಅಡಗಿದ್ದು, ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಅಹಿಂಸಾತ್ಮಕ ಹೋರಾಟದಿಂದ ೧೫ನೇ ಆಗಸ್ಟ, ೧೯೪೭ರಂದು ಭಾರತವು ಸ್ವತಂತ್ರವಾಯಿತು. ಅದರ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ಮನವರಿಕೆ ಮಾಡುವ, ಅವರಲ್ಲಿ ದೇಶಭಕ್ತಿಯನ್ನು ಬಿತ್ತುವ ಸದುದ್ದೇಶದಿಂದ ದೇಶದ ೭೫ ಐತಿಹಾಸಿಕ ಸ್ಥಳಗಳಲ್ಲಿ ೭೫ ವಾರಗಳ ವರೆಗೆ ರಾಷ್ಟ್ರದಾದ್ಯಂತ ವಿವಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು. ೭೫ ವಾರಗಳ ವರೆಗೆ ರಾಷ್ಟ್ರದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಮೃತ ಮಹೋತ್ಸವದ ಸಂಭ್ರಮಾಚರಣೆಯನ್ನು ಆಚರಿಸಲಾಗುವದು. ಈ ಐತಿಹಾಸಿಕ ಕಾರ್ಯಕ್ರಮ ವಿಶೇಷವಾಗಿರುವದು . ನಮ್ಮ ಗತಕಾಲವನ್ನು ಸ್ಮರಿಸುವದು ಅಗತ್ಯವಾದುದು. ದೇಶದ ಹಿರಿಮೆ- ಗರಿಮೆ , ವೈವಿಧ್ಯತೆ, ಸಾರ್ವಭೌಮತೆ ಹಾಗೂ ಸ್ವಾತಂತ್ರ್ಯದ ಬಗೆಗಿನ ಚರಿತ್ರೆ ಸ್ವಾರಸ್ಯಕರ ಹಾಗೂ ಅರ್ಥಗರ್ಭಿತವಾದುದು. ಪ್ರತಿ ದೇಶದ ಸ್ವಾತಂತ್ರ್ಯ ಚರಿತ್ರೆಯಲ್ಲಿ ಸ್ವಾತಂತ್ರ್ಯ ಪಡೆಯಲು ಹುತಾತ್ಮರಾದವರನ್ನು ತ್ಯಾಗ- ಬಲಿದಾನ ಮಾಡಿದವರನ್ನು ನೆನೆಯುವದು ಹಾಗೂ ಸ್ಮರಿಸುವದು ಹಾಗೂ ದೇಶದ ಸ್ವಾತಂತ್ರ್ಯ ಪ್ರೇಮ, ಪ್ರಜಾಸತ್ತಾತ್ಮಕತೆ ಹಾಗೂ ಸಾರ್ವಭೌಮತೆಯನ್ನು ರಕ್ಷಿಸಿಕೊಂಡು ಹೋಗುವದು ಪ್ರತಿ ಪ್ರಜೆಯ ಆದ್ಯ ಕರ್ತವ್ಯ. ರಾಜಕೀಯ ಸ್ವಾತಂತ್ರ್ಯವು ಗಾಂಧೀಜಿಯವರಿಗೆ ಸ್ವರಾಜ್ಯವಾಗಿತ್ತು. ಸ್ವರಾಜ್ಯವನ್ನು ಕೂಡಾ ಸತ್ಯ ಮತ್ತು ಅಹಿಂಸಾ ಮಾರ್ಗದಿಂದ ಪಡೆಯುವದಾಗಿತ್ತು. ಸತ್ಯವೇ ದೇವರು ಎಂಬುದು ಗಾಂಧೀಜಿಯವರ ಭಾವನೆ ರಾಜಕೀಯ ಸ್ವಾತಂತ್ರ್ಯವೆಂ ದರೇನು, ಸ್ವರಾಜ್ಯ ಎಂಬುದು ಗಾಂಧೀಜಿಯವರ ವಾದ. ಸ್ವರಾಜ್ಯವನ್ನು ಸತತ ಹೋರಾಟ ಮತ್ತು ಪ್ರಯತ್ನದಿಂದ ಪಡೆಯುವುದು ಮತ್ತು ಬ್ರಿಟಿಷ್ ಸರ್ಕಾರದ ವಿರುದ್ಧ ಅತೃಪ್ತಿಯೆಂಬ ದ್ವೇಷದ ಅಲೆಯನ್ನು ಎಬ್ಬಿಸುವುದು, ಪ್ರತಿಯೊಬ್ಬ ಭಾರತೀಯನ ಧರ್ಮಯುತವಾದ ಕಾರ್ಯ ಎಂದು ಹೇಳಿ ಅಂದಿನ ಬಲಿಷ್ಠ ರಾಷ್ಟ್ರಗಳಿಗೆ ಎದುರಾಗಿ ಎದೆ ತಟ್ಟಿ ನಿಲ್ಲುವಂತೆ ಗಾಂಧೀ ಕರೆ ಕೊಟ್ಟರು. ಇದರಿಂದ ಬಲಿಷ್ಠ ರಾಷ್ಟ್ರಗಳ ನೈತಿಕತೆಗೆ ಧಕ್ಕೆ ತರುವದೇ ಅವರ ಉದ್ದೇಶವಾಗಿತ್ತು. ಗಾಂಧೀಜಿಯವರು ತಮ್ಮ ರಾಜಕೀಯದ ಬಗ್ಗೆ ಹೇಳುತ್ತಾ ವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಿ ಯಾವುದೇ ಸಮಾಜ ನಿರ್ಮಾಣವಾಗುವುದು ಸಾಧ್ಯವಿಲ್ಲ. ಇದು ವ್ಯಕ್ತಿ ಸ್ವಭಾವಕ್ಕೆ ವಿರುದ್ದವಾಗಿದೆ. ವ್ಯಕ್ತಿ ತನ್ನದೇ ಆದ ಮನಸ್ಸನ್ನು ಹೊಂದಿರದೆ ವ್ಯಕ್ತಿ ಜೀವಿಸಲು ಸಾಧ್ಯವಿಲ್ಲ. ಸಮಾನವಾದ ಸಾಮಾಜಿಕ ಮತ್ತು ಆರ್ಥಿಕವಾದ ಅವಕಾಶಗಳನ್ನು ಹೊಂದಿರಬೇಕು ಕರ್ತವ್ಯದ ಜೊತೆಗೆ ಸ್ವಾತಂತ್ರ್ಯ ನಿಕಟ ಸಂಬಂಧ ಹೊಂದಿರುತ್ತದೆ. ಮತ್ತು ಪ್ರತಿಯೊಬ್ಬರು ಆ ಬಗೆಯ ಸಮಾನ ಅವಕಾಶಗಳಿಗೆ ಜವಾಬ್ದಾರರಾಗಬೇಕು ಎಂದು ಗಾಂಧೀಜಿಯವರು ಹೇಳಿದರು. ಗಾಂಧೀಜಿಯವರು ಸ್ವಾತಂತ್ರ್ಯದ ಬಗ್ಗೆ ಹೊಂದಿದ್ದ ಅಭಿಪ್ರಾಯಗಳು ಆಂಗ್ಲೋ ಅಮೆರಿಕನ್ ಉದಾರವಾದಿ ಸಾಂಪ್ರದಾಯವಾದಿಗಳು ಸ್ವಾತಂತ್ರ್ಯದ ಬಗ್ಗೆ ಹೊಂದಿದ್ದ ತತ್ವಗಳಿಗಿಂತ ಭಿನ್ನವಾಗಿತ್ತು. ಸಾಂಪ್ರದಾಯಿಕ ಅರ್ಥದಲ್ಲಿ ಹೇಳುವುದಾದರೆ ತಮ್ಮದೇ ಆದ ಆಪೇಕ್ಷೆಗಳನ್ನು ಅಭಿಪ್ರಾಯಗಳನ್ನು ಅಥವಾ ವಿರೋದಗಳನ್ನು ವ್ಯಕ್ತಪಡಿಸಲು ಹೊಂದಿರುವುದೇ ಸ್ವಾತಂತ್ರ್ಯ, ತಮ್ಮ ಹಕ್ಕುಗಳ ಮೂಲಕ ಸ್ವಾಭಾವಿಕವಾಗಿಯೇ ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಕೂಡ ಸ್ವತಂತ್ರರು ಎಂಬ ಅರ್ಥವನ್ನೂಳಗೊಂಡಿದೆ. ಈ ಅರ್ಥದಲ್ಲಿ ಸ್ವಾತಂತ್ರ್ಯವೆಂದರೆ ಪ್ರತಿಯೊಬ್ಬರು ಯಾವುದೇ ಅಡೆತಡೆಯಿಲ್ಲದೆ ತಮ್ಮದೇ ಆದ ಹಿತಾಸಕ್ತಿಗಳನ್ನ ಈಡೇರಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ಸಾಮರ್ಥವನ್ನು ಸ್ವಾತಂತ್ರ್ಯ ಎಂದು ಹೇಳಲಾಗಿದೆ. ಈ ಬಗೆಯ ನಿರ್ಭಂಧ ರಹಿತ ಸ್ವಾತಂತ್ರ್ಯ ಹಾಲ್ಸ್ ಪ್ರತಿಪಾದಿಸಿದ ಸ್ವಾಭಾವಿಕ ರಾಜ್ಯದ ಸ್ಥಿತಿಗೆ ಕೊಂಡೊಯುತ್ತದೆ. ಅಂತಹ ರಾಜ್ಯದಲ್ಲಿ ಅರಾಜಕತೆ, ಅಸ್ಥಿರತೆ, ಕೊಲೆ, ಸುಲಿಗೆ, ದ್ವೇ಼ಷ ಮತ್ತು ಅಸೂಯೆಗಳು ಕಂಡು ಬರುತ್ತದೆ. ಈ ತತ್ಪರಿಣಾಮಗಳಿಂದಲೇ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ದಾರಿಯಾಗುತ್ತದೆ. ಬಹುತೇಕ ಉದಾರವಾದಿ ಬರಹಗಾರರು ಸರಕಾರವು ವ್ಯಕ್ತಿಗಳ ಕೆಲವು ನಿರ್ದಿಷ್ಟವಾದ ಹಕ್ಕುಗಳಲ್ಲಿ ಮಾತ್ರ ಮಧ್ಯಸ್ಥಿಕೆ ವಹಿಸಬೇಕು ಹಾಗೂ ಯಾರು ಹಕ್ಕುಗಳನ್ನು ಉಲ್ಲಂಘಿಸುತ್ತಾರೆಯೋ ಅಂತಹವರ ವಿರುದ್ದ ಬಲತ್ಕಾರವನ್ನು ಕೂಡ ಬಳಸಬಹುದು ಎಂದಿದ್ದಾರೆ.ಈ ಬಗೆಯ ಸ್ವಾತಂತ್ರ್ಯಕ್ಕಾಗಿ ಬಳಸಿರುವ ಮಾರ್ಗಗಳು ಗಾಂಧೀಜಿಯವರ ಅರ್ಥದಲ್ಲಿ ಹಲವಾರು ನ್ಯೂನತೆ ಅಥವಾ ದೋಷಗಳನ್ನೂ ಒಳಗೊಂಡಿದೆ. ಪ್ರಥಮವಾಗಿ ಇದು ಸರಕಾರದಿಂದ ಹಿಂಸೆಯನ್ನು ಅನುಮೋದಿಸುತ್ತದೆ. ಕೆಲವೊಂದು ಹಕ್ಕುಗಳನ್ನು ಆಚರಣೆಗೆ ತರಲು ಬಲಾತ್ಕಾರವನ್ನು ಉಪಯೋಗಿಸಲು ರಾಜ್ಯಕ್ಕೆ ಅಧಿಕಾರವನ್ನು ನೀಡುತ್ತದೆ. ಗಾಂಧೀಜಿಯವರ ಪ್ರಕಾರ ಇದು ವ್ಯಕ್ತಿಯ ನೈತಿಕ ಸ್ವಾಯತ್ತತೆಯನ್ನು ಹಾಳು ಮಾಡುತ್ತದೆ. ಪ್ರಾರಂಭದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ರಾಜ್ಯದಿಂದ ಒದಗಿ ಬಂದಂತಹ ದೊಡ್ಡ ಅಪಾಯವನ್ನು ಉದಾರವಾದ ಕಂಡುಕೊಂಡಿತ್ತು. ಆದರೆ ಗಾಂಧೀಜಿಯವರು ಸ್ವಾತಂತ್ರ್ಯದ ಬಗೆಗಿನ ಅಭಿಪ್ರಾಯವನ್ನು ಒಪ್ಪಲಾದರೂ. ಅವರ ಸ್ವಾತಂತ್ರ್ಯದ ಕಲ್ಪನೆ ಅಪರಿಪೂರ್ಣವಾಗಿತ್ತು. ಸ್ವಾತಂತ್ರ್ಯದ ಬಗ್ಗೆ ಸಾಂಪ್ರದಾಯಿಕ ಆರ್ಥಿಕ ಉದಾರವಾದಿಗಳು ಹೊಂದಿದ್ದ ನಿಲುವಿಗಿಂತ ಭಿನ್ನವಾಗಿ ಗಾಂಧೀಜಿಯವರು ಹೊಂದಿದ್ದರು. ಕೇವಲ ರಾಜ್ಯದಿಂದ ಮಾತ್ರವಲ್ಲದೆ ಸ್ವಾತಂತ್ರ್ಯ ಹಲವಾರು ಶಕ್ತಿಗಳಿಗಿಂತ ಅಘಾತಕ್ಕೊಳಪಟ್ಟಿದೆ. ಆರ್ಥಿಕ ಅಸಮಾನತೆ ಇನ್ನಿತರರ ಮೇಲೆ ಅವಲಂಬಿಸಿರುವಂತೆ ಮಾಡಿರುವುದು ಕೈಗಾರೀಕರಣ, ನಿರುದ್ಯೋಗವನ್ನು ಸೃಷ್ಟಿಸಿರುವುದು ಅನಮ್ಯ ಜಾತಿ ವ್ಯವಸ್ಥೆ ಮತ್ತು ಅಸ್ಫೃಶ್ಯತೆಗಳು ಜನತೆಗೆ ಅವರ ಸ್ವಾಯುತ್ತತೆಯನ್ನು ನಿರಾಕರಿಸಿದೆ. ವಸಾಹತುಶಾಹಿ ವ್ಯವಸ್ಥೆಯೂ ಕೂಡ ಸಮೃದ್ಧ ಅವಕಾಶಗಳನ್ನು ಕನಿಷ್ಠಗೊಳಿಸಿದೆ ಎಂದು ಗಾಂಧೀಜಿಯವರು ನಂಬಿದ್ದರು. ಸ್ವಾತಂತ್ರ್ಯ ಎಂಬುದು ಸಾಮಾಜಿಕ ಸಮಾನತೆಯನ್ನು ಒಳಗೊಂಡಿದ್ದು ಹಲವಾರು ಮೂಲಗಳಿಂದ ಸ್ವಾತಂತ್ರ್ಯಕ್ಕೆ ಅಡೆತಡೆಗಳು ಬರುತ್ತವೆ. ಆದ್ದರಿಂದ ಸ್ವಾತಂತ್ರ್ಯಕ್ಕೆ ಕನಿಷ್ಠ ಪ್ರಮಾಣದ ಅಡೆತಡೆಗಳು ಉಂಟಾಗುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.ಗಾಂಧೀಜಿಯವರ ಪ್ರಕಾರ ಉದಾರವಾದಿ ಸ್ವಾತಂತ್ರ್ಯದ ರಚನೆಯು ಕೂಡ ದೋಷ ಪೂರಿತವಾಗಿದೆ. ಸಾಮಾಜಿಕ ಆಧಾರಿತ ಮಾನವೀಯ ಜೀವನದ ಪ್ರಾಮುಖ್ಯತೆಯನ್ನ ಉದಾರವಾದಿ ಸ್ವಾತಂತ್ರ್ಯ ತಿರಸ್ಕರಿಸುತ್ತದೆ. ನಮ್ಮ ಎಲ್ಲಾ ಕ್ರಿಯೆಗಳಿಗೆ ಕೆಲಸಗಳಿಗೆ ಅಥವಾ ಚಟುವಟಿಕೆಗಳಿಗೆ ನಾವೇ ಜವಾಬ್ದಾರಿಯಾಗಿರಬೇಕು. ಹಕ್ಕುಗಳು ಮತ್ತು ಜವಾಬ್ದಾರಿಗಳೆರಡೂ ಪರಸ್ಪರ ಅನ್ಯೋನತೆಯಿಂದ ಕೂಡಿವೆ. ಇವೆರಡರಲ್ಲಿ ಯಾವುದಾದರೂ ಒಂದು ಇಲ್ಲದಿದ್ದಲ್ಲಿ ಅದರ ನಿಜವಾದ ಸತ್ವವನ್ನು ಕಳೆದುಕೊಳ್ಳುತ್ತದೆ, ಹಕ್ಕು ಮತ್ತು ಕರ್ತವ್ಯಗಳೆರಡು ಪರಸ್ಪರ ಅನ್ಯೋನ್ಯತೆಯಿಂದ ಕೂಡಿದ್ದು ನಿರಂತರವಾಗಿರುತ್ತವೆ. ಜನರು ತಾವು ಮಾಡುವ ಪ್ರತಿಯೊಂದು ಕೆಲಸ ಹಾಗೂ ಚಟುವಟಿಕೆಗಳ ಪರಿಣಾಮಗಳೇನು ಎಂಬುದನ್ನು ಚೆನ್ನಾಗಿ ಅರಿತಿರಬೇಕು. ಜವಾಬ್ದಾರಿ ಮತ್ತು ಸ್ವಾತಂತ್ರ್ಯಗಳೆರಡು ಅತ್ಯಂತ ಹೆಚ್ಚಿನ ನಿಕಟ ಸಂಬಂಧವನ್ನು ಹೊಂದಿವೆ. ಜವಾಬ್ದಾರಿಯಿಲ್ಲದ ಸ್ವಾತಂತ್ರ್ಯ ಅರ್ಥ ರಹಿತವಾದದ್ದು.ಗಾಂಧೀಜಿಯವರ ಪ್ರಕಾರ ಪ್ರತಿಯೊಬ್ಬ ನಾಗರಿಕನು ತನ್ನ ಸರ್ಕಾರದ ಪ್ರತಿಯೊಂದು ಜವಾಬ್ದಾರಿಗಳ ಬಗ್ಗೆಯು ತಿಳಿದಿರಬೇಕು. ಎಲ್ಲಿಯ ತನಕ ಸರ್ಕಾರದ ಚಟುವಟಿಕೆಗಳು ಸಮಂಜಸವಾಗಿರುತ್ತವೆಯೋ ಅಲ್ಲಿಯವರೆಗೂ ಸರ್ಕಾರಕ್ಕೆ ಬೆಂಬಲವನ್ನು ಕೊಡಬೇಕು. ವಿಧೇಯತೆಯನ್ನ ವ್ಯಕ್ತಪಡಿಸಬೇಕು. ಆದರೆ ಯಾವಾಗ ಸರಕಾರದ ವ್ಯಕ್ತಿ ಮತ್ತು ರಾಷ್ಟ್ರಕ್ಕೆ ಹಾನಿಯನ್ನುಂಟು ಮಾಡಿದರೆ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ಸು ಪಡೆಯುವುದು ಅವರ ಕರ್ತವ್ಯ ಎuಟಥಿ ೧೯೨೦) ಎಂದು ಹೇಳಿದ್ದಾರೆ. ಗಾಂಧೀಜಿಯವರು ಸತ್ಯಾಗ್ರಹದಿಂದ ಸಾಮಾಜಿಕ ಕ್ರಾಂತಿಯನ್ನ ತಂದರು. ಆಧುನಿಕರ ನೈತಿಕ ಅಧ: ಪತನದಿಂದಲೇ ನಾಗರಿಕತೆಯು ಹಾಳಾಗುತ್ತದೆ ಎಂದರು. ಯುದ್ಧ ತಡೆಯುವ ಅಂತಿಮವಾದ ಉಪಾಯವೆಂದರೆ ಯುದ್ಧ ರಹಿತ ಸಮಾಜ ನಿರ್ಮಾಣ ಆಧ್ಯಾತ್ಮಿಕ ಅಥವಾ ಪಾರಮಾರ್ಥಿಕ ತತ್ವದ ತಳಹದಿಯಿಂದ ಮಾತ್ರ ಶಾಂತ ಸಮಾಜ ಸ್ಥಾಪನೆ ಎಂದರು. ಗಾಂಧೀಜಿಯವರು ವಾಸ್ತವಿಕತೆಯ ಆಧಾರದ ಮೇಲೆ ವ್ಯಕ್ತಿಯನ್ನಾಗಲಿ ವ್ಯಕ್ತಿಯ ಸ್ವಭಾವವನ್ನಾಗಲಿ ರಾಜ್ಯವನ್ನಾಗಲಿ ನೋಡದೇ ಆದರ್ಶದ ಆಧಾರದ ಮೇಲೆಯೇ ಪ್ಲೇಟೊನಂತೆ ನೋಡಿ ಸಿದ್ದಾಂತಗಳನ್ನು ಉಪದೇಶ ರೂಪದಲ್ಲಿ ಕೊಟ್ಟಿದ್ದಾರೆ. ಗಾಂಧೀಜಿ ಮತ್ತು ಪ್ಲೇಟೊ ಇಬ್ಬರು ಇತಿಹಾಸವನ್ನೂ ಆಧ್ಯಾತ್ಮಿಕ ದೃಷ್ಟಿಕೋನದಲ್ಲಿಯೇ ಕಂಡಿದ್ದಾರೆ. ಸ್ವಾತಂತ್ರ್ಯವನ್ನು ಆಂತರಿಕ ಪಾವಿತ್ರದಿಂದ ಮಾತ್ರ ಪಡೆಯಬೇಕೆಂಬುದೇ ಇಬ್ಬರ ವಾದ. ಗಾಂಧೀಜಿ ಮಾನವವತಾವಾದಿಗಳು ಎಲ್ಲ ಜೀವಿಗಳ ಬಗ್ಗೆ ಕಾಳಜಿಯನ್ನೂ ಹೊಂದಿದ್ದರು. ವೈರಿಯನ್ನು ಪ್ರೀತಿಸುವುದು ಎಂಬ ಗುಜರಾತಿ ಗಾದೆಮಾತಿನ ಪ್ರಭಾವ ಅವರ ಮೇಲೆ ಇತ್ತು. ವಿಶ್ವ ಮಾನವರೆಲ್ಲ ಒಂದು. ವಿಶ್ವವೆಲ್ಲ ಒಂದು ಎಂಬ ಅವರ ವೈಚಾರಿಕತೆ ಗ್ರೀನ್ ಮತ್ತು ಬೊಸಂಕ್ಯೂಟ್ (ಃosಚಿಟಿqueಣ) ಅವರನ್ನು ಹೋಲುತ್ತದೆ ಎಂದು ಹೇಳುವರು. “೭೫ನೇ ಸ್ವಾತಂತ್ರ್ಯೋತ್ಸವದ ಆಜಾದ್ ಕಾ ಅಮೃತಮಹೋತ್ಸವ”ದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯ ಕ್ರಮದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಸಂಭ್ರಮದಲ್ಲಿ ಭಾಗವಹಿಸುವ ಮತ್ತು ದೇಶಭಕ್ತಿಯನ್ನು ಆಲಿಸುವ ಉತ್ಸಾಹವನ್ನು ತುಂಬುತ್ತದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರನ್ನು ನಾವು ಕೃತಜ್ಞತೆಯಿಂದ ಸ್ಮರಿಸುತ್ತೇವೆ, ಅವರ ತ್ಯಾಗವು ಸ್ವತಂತ್ರ ರಾಷ್ಟ್ರದಲ್ಲಿ ಬದುಕಲು ನಮಗೆ ಸಹಾಯ ಮಾಡಿದೆ. ಸ್ವಾತಂತ್ರ್ಯ ಹೋರಾಟದ ತತ್ವವು ಆಧುನಿಕ ಭಾರತದ ಅಡಿಪಾಯವನ್ನು ರೂಪಿಸುತ್ತದೆ ಮತ್ತು ದೇಶದ ದೂರದೃಷ್ಟಿಯುಳ್ಳ ನಾಯಕರು ಒಂದು ಸಾಮಾನ್ಯ ರಾಷ್ಟ್ರೀಯ ಮನೋಭಾವವನ್ನು ರೂಪಿಸಲು ವಿಶ್ವ ದೃಷ್ಟಿಕೋನಗಳ ವೈವಿಧ್ಯತೆಯನ್ನು ಒಟ್ಟುಗೂಡಿಸಿದ್ದಾರೆ. ಅವರು ಭಾರತ ಮಾತೆಯನ್ನು ದಬ್ಬಾಳಿಕೆ ವಿದೇಶಿ ಅಡಳಿತದಿಂದ ಮುಕ್ತಗೊಳಿಸಲು ಮತ್ತು ಭವಿಷ್ಯವನ್ನು ಸುಭದ್ರಗೊಳಿಸಲು ಬದ್ದರಾಗಿದ್ದರು. ಅವರ ಆಲೋಚನೆಗಳು ಮತ್ತು ಕಾರ್ಯಗಳು ಭಾರತದ ಆಧುನಿಕ ರಾಷ್ಟ್ರದ ಗುರುತನ್ನು ರೂಪಿಸಿವೆ. ಮಹಾತ್ಮ ಗಾಂಧೀಜಿಯವರು ನಮ್ಮ ಸ್ವಾತಂತ್ರ್ಯ ಚಳುವಳಿಯ ಮಾರ್ಗದರ್ಶಕರಾರು ಎಂದು ನಾವು ಅದೃಷ್ಟವಂತರಾಗಿದ್ದೇವೆ. ಒಬ್ಬ ರಾಜಕೀಯ ನಾಯಕನಾಗಿ, ಅವರು ಕೇವಲ ಭಾರತದಲ್ಲಿ ಮಾತ್ರ ಸಂಭವಿಸಬಹುದಾದ ಒಂದು ವಿದ್ಯಮಾನ. ಸಾಮಾಜಿಕ ಕಲಹ, ಆರ್ಥಿಕ ಸಮಸ್ಯೆಗಳು ಮತ್ತು ಹವಾಮಾನ ಬದಲಾವಣೆಯಿಂದ ತೊಂದರೆಗೊಳಗಾದ ಜಗತ್ತು ಗಾಂಧಿಯ ಬೋದನೆಗಳಲ್ಲಿ ಪರಿಹಾರವನ್ನು ಬಯಸುತ್ತಿದೆ. ಸಮಾನತೆ ಮತ್ತು ನ್ಯಾಯಕ್ಕಾಗಿ ಅವರ ಅನ್ವೇಷಣೆ ನಮ್ಮ ಸ್ವಾತಂತ್ರ್ಯ ಮಂತ್ರವಾಗಿದೆ.—————————— ಡಾ. ಎಸ್.ಬಿ. ಬಸೆಟ್ಟಿ ಡಾ.ಎಸ್.ಬಿ.ಬಸೆಟ್ಟಿಯವರು ದಾರವಾಡದ ಕರ್ನಾಟಕ ವಿ.ವಿ.ಯ ಗಾಂಧೀ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿದ್ದಾರೆ. ಸಾಹಿತ್ಯ ಶ್ರೀ- ರಾಷ್ಟ್ರ ಮಟ್ಟದ ಪ್ರಶಸ್ತಿ, ವಿದ್ಯಾಭೂಷಣ- ಅಂತರಾಷ್ಟ್ರೀಯ ಮಟ್ಟದು, ಕನಕ ಶ್ರೀ, ಸಮಾಜ ರತ್ನ, ರಾಷ್ಟ್ರ ರತ್ನ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದಾರೆಲೋಕಮಾನ್ಯ ಬಾಲಗಂಗಾದರ ತಿಳಕರ ಸ್ವರಾಜ್ಯ ಕಲ್ಪನೆ,ಲೋಕಮಾನ್ಯ ಬಾಲಗಂಗಾದರ ತಿಳಕರ ದೃಷ್ಠಿಯಲ್ಲಿ ರಾಷ್ಟ್ರೀಯತೆ,ಭಾರತದ ರಾಷ್ಟ್ರದ್ವಜ: ವಿಕಾಸ ಹಾಗು ಸಂಹಿತೆ -ಇವರ ಕೃತಿಗಳು.ಗಾಂಧೀ ಕುರಿತು ೨೦ ಲೇಖನ ಅಂತರಾಷ್ಟ್ರೀಯ, ರಾಷ್ಟ್ರೀಯ ನಿಯತಕಾಲಿಕೆ, ಮಾಸಿಕ ಪತ್ರಿಕೆ ಗಳು ಮತ್ತು ದಿನ ಪತ್ರಿಕೆಯಲ್ಲಿ ಪ್ರಕಟವಾಗಿವೆ.ಸಾಹಿತ್ಯ ಶ್ರೀ- ರಾಷ್ಟ್ರ ಮಟ್ಟದ ಪ್ರಶಸ್ತಿ, ವಿದ್ಯಾಭೂಷಣ- ಅಂತರಾಷ್ಟ್ರೀಯ ಮಟ್ಟದು, ಕನಕ ಶ್ರೀ, ಸಮಾಜ ರತ್ನ, ರಾಷ್ಟ್ರ ರತ್ನ ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ

Read Post »

ಅಂಕಣ ಸಂಗಾತಿ, ತೊರೆಯ ಹರಿವು

ಅಂಕಣ ಬರಹ ತೊರೆಯ ಹರಿವು ಆಟಕ್ಕುಂಟು ಲೆಕ್ಕಕ್ಕಿಲ್ಲ ಬಾಲ್ಯದಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಮಾತನ್ನು ಸಾಕಷ್ಟು ಬಾರಿ ಕೇಳಿಸಿಕೊಂಡಿರ್ತೀವಿ ಅಥವಾ ಹೇಳಿರ್ತೀವಿ. ಅದರಲ್ಲೂ, ಸಮಾನ ವಯಸ್ಕ ಗೆಳೆಯರೊಡನೆ ಆಡುವಾಗ, ಚಿಕ್ಕವಯಸ್ಸಿನ ಮಕ್ಕಳು ತಮ್ಮನ್ನೂ ಆಟಕ್ಕೆ ಸೇರಿಸಿಕೊಳ್ಳಿರೆಂದು ಹಠ ಹಿಡಿದಾಗಲೋ ಅಥವಾ ಹಿರಿಯರು ಗದರಿಸಿ ಸಣ್ಣಮಕ್ಕಳನ್ನು ಆಟಕ್ಕೆ ಸೇರಿಸಿ ಹೋದಾಗಲೋ ಈ ಮಾತು ಬಳಕೆಯಾಗಿರುತ್ತೆ. ಎಂದರೆ, ಆಟದ ನಿಯಮಗಳು ಅರ್ಥವಾಗದ, ಅನುಸರಿಸಲಾಗದ ವಯಸ್ಸು ಹಾಗೂ  ಮನಃಸ್ಥಿತಿ ಇರುವವರೊಡನೆ ಗುದ್ದಾಡಿಕೊಂಡು ಆಟದ ಮಜಾ ಹಾಳು ಮಾಡಿಕೊಳ್ಳಲಾರದೆ ,ಅವರೂ ಇದ್ದರೆ ಇರಲಿ ಅವರ ಪಾಡಿಗೆ; ನಾವೂ ಆಡಿಕೊಳ್ಳೋಣ ನಮ್ಮ ಪಾಡಿಗೆ ಎಂಬರ್ಥದಲ್ಲಿ ಈ ಮಾತು ಬಳಕೆ ಆಗಿರುತ್ತದೆ. ಇಲ್ಲಿ ಸಣ್ಣಮಕ್ಕಳಿಗೆ ದೊಡ್ಡವರ ಗುಂಪಿನಲ್ಲಿ ತಾವೂ ಆಡಿದೆವೆಂಬ ಖುಷಿ ಸಿಕ್ಕರೆ, ದೊಡ್ಡವರಿಗೆ ತಮ್ಮ ಆಟದ ನಿಯಮಗಳಿಗೆ ಮಕ್ಕಳಿಂದ ತೊಂದರೆ ಆಗಲಿಲ್ಲ ಎಂಬ ಸಮಾಧಾನ!  ಈ ಖುಷಿ – ಸಮಾಧಾನ ಸ್ಥಾಯಿಯಲ್ಲ. ಯಾರನ್ನು ಆಟಕ್ಕುಂಟು ಲೆಕ್ಕಕ್ಕಿಲ್ ಲವೆಂದು  ಪರಿಗಣಿಸಿ ಹಾಗೆ ನಡೆಸಿಕೊಳ್ಳಲಾಗಿರುತ್ತದೆಯೋ ಅವರಿಗೆ ಸ್ವಲ್ಪ ತಿಳುವಳಿಕೆ ಮೂಡುತ್ತಿದ್ದಂತೆಯೇ, ತನ್ನನ್ನು ಗುಂಪಿನಿಂದ ಪ್ರತ್ಯೇಕಿಸಲಾಗಿದೆ ಎನ್ನುವುದು ಅರ್ಥ ಆಗುತ್ತದೆ. ಆಗ ಮೊದಲಿಗೆ ಅವರ ಮನಸ್ಸಿಗೆ ಘಾಸಿಯಾಗುತ್ತದೆ! ಅನಂತರ ದುಃಖ ಮೂಡಿ; ಕೊನೆಗೆ ಅದು ಸಿಟ್ಟು, ಕೋಪಕ್ಕೆ ಮೂಲವಾಗಿ ದ್ವೇಷ-ರೋಷದ ಕಿಡಿ ಹೊತ್ತಿಸಿ ಇತರರೊಡನೆ ಜಗಳವಾಡಿಕೊಂಡು, ದೂರು ಹೇಳಿ, ಗಲಾಟೆ ಎಬ್ಬಿಸಿ ಆಟದ ಆನಂದವನ್ನೇ ಕೆಡಿಸಬಹುದು ಅಥವಾ ಆಟವನ್ನೇ ಮುಕ್ತಾಯಗೊಳಿಸುವ ಕೊನೆಯ ಹಂತಕ್ಕೆ ಮುಟ್ಟಬಹುದು.    ಇಂಗ್ಲೀಷಿನಲ್ಲಿ ಒಂದು ಮಾತಿದೆ. ‘ಗುಡ್ ಫಾರ್ ನಥಿಂಗ್’ ಎಂದು. ಇದನ್ನೂ ಸಹ ನಮ್ಮ ‘ಆಟಕ್ಕುಂಟು …’ ಎನ್ನುವ ನುಡಿಗಟ್ಟಿನಂತೆಯೇ ಬಳಸುವುದುಂಟು. ಅಪ್ರಯೋಜಕರಿಗೆ, ನಿಷ್ಪ್ರಯೋಜಕರಿಗೆ ಬೆಟ್ಟು ಮಾಡಿ ತೋರಿಸುವಾಗ ಈ ಮಾತು ಹೇಳಲಾಗುತ್ತದೆ. ಎಂದರೆ ಮನುಷ್ಯ ಒಳ್ಳೆಯವರೇ, ಆದರೆ ಏನೂ ಉಪಯೋಗವಿಲ್ಲ! ಉಪಯೋಗಕ್ಕೆ ಬಾರದ ಒಳ್ಳೆಯತನ ಕಟ್ಟಿಕೊಂಡು ಪ್ರಯೋಜನವೇನು? ಎಂದು ಕೇಳಬಹುದಾದ ಪ್ರಶ್ನೆಗೆ, ಒಳ್ಳೆಯದ್ದೇ ಅಪರೂಪ ಆಗುತ್ತಿರುವ ಈ ಸಂದರ್ಭದಲ್ಲಿ ಕಡೇಪಕ್ಷ ಅಂತಹ ಗುಣವನ್ನು ತೋರುವವರಾದರೂ ಇದ್ದಾರಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕೆನ್ನುವ ಉತ್ತರ ನೀಡಬಹುದೇ?   ಆಟ ಎಂದರೆ ಎಷ್ಟೊಂದು ಬಗೆ ನೆನಪಾದರೂ ‘ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆಯೋಕೆ..’ ಸಾಧ್ಯವೇ ಇರೋಲ್ಲ. ನಮ್ಮ ಬಾಲ್ಯ ಕಾಲದ ಆಟಗಳ ಮುಂದೆ ಈಗಿನ ಮಕ್ಕಳ ಇಂಟರ್ನೆಟ್ಟಿನೊಳಗಿನ ವೀಡಿಯೋ ಗೇಮಾಟಗಳನ್ನು ಹೋಲಿಸಲು ಸಾಧ್ಯವೇ ಇಲ್ಲ. ಮಣ್ಣಿನೊಡನೆ ಆಡಿರೆಂದರೆ ಮೂಗು ಮುರಿದುಕೊಳ್ಳುವ ಈ ಮಕ್ಕಳಿಗೆ ಇಂಡೋರ್ ಗೇಮ್ ಎಂದರೆ ಕೇರಂ, ಚೆಸ್, ಪಗಡೆ, ಅಳಿಗುಣಿ ಮನೆ, ಚೌಕಾಬಾರ, ಹಾವು ಏಣಿ  ಮೊದಲಾದವು ನೆನಪಾಗುವುವೇ? ಧರ್ಮರಾಯನೂ ಸಹ ಇಂಡೋರ್ ಗೇಮೆಂಬ ದ್ಯೂತದಲ್ಲಿ ಸೋತವನೇ.. ಸೋತವನು ಅನಂತರ ಗೆದ್ದವನಾದುದೇ ಒಂದು ದೊಡ್ಡ ರಾಮಾಯಣ..! ಅಲ್ಲಲ್ಲ ಮಹಾಭಾರತ.     ‘ದೇವರ ಆಟಾ ಬಲ್ಲವರಾರು…?’ ಎನ್ನುತ್ತಾ  ‘ಎಲ್ಲಾ ವಿಧಿಯ ಲೀಲೆ ನರಮಾನವನ ಕೈಯಲ್ಲಿ ಏನಿದೆ?’ ಎಂದು ಯಾವ ಜವಾಬ್ದಾರಿಯನ್ನೂ ಹೊರಲಾರದವರು ಹೇಳಿ ಕೈ ತೊಳೆದುಕೊಂಡು ಬಿಡುವುದುಂಟು. ಇದು ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿದಂತೆ. ಯುದ್ಧ ಎಂದಾಗ ನೆನಪಾಗುವುದು ನೋಡಿ, ಹೊಡಿಬಡಿಕಡಿ,ಹುಡುಕಿ ಕೊಚ್ಚು, ಅಟ್ಟಾಡಿಸಿ ಕೊಲ್ಲು, ಬಾಂಬ್ ಹಾಕು, ಬಂದೂಕಿನಿಂದ ಗುರಿಹಿಡಿ, ಎದೆ ಸೀಳು, ರಕ್ತ ಬಸಿ ಎನ್ನುವಂತಹ ವೀಡಿಯೋ ಗೇಮ್ ಗಳನ್ನು ಈಗತಾನೇ, ತಾಯ ಮೊಲೆಹಾಲು ಕುಡಿದು ಬಿಟ್ಟ ತುಟಿಗಳಲ್ಲಿ ಹಸಿಹಾಲಿನ ವಾಸನೆ ಆರಿರದ ಕಂದಮ್ಮಗಳು ಆಡುತ್ತಿರುವುದು ಭೀಭತ್ಸಕ್ಕೆ ನೈಜ ಉದಾಹರಣೆ. ಹೀಗೆ ಆಡುವುದೇ ಮಜಾ ಎಂಬಂತೆ, ಬ್ರೈನ್ ವಾಷ್ಗೆ ಒಳಗಾಗುವ ಮಕ್ಕಳ ಕೈಯಲ್ಲಿ ಎಕೆ-೪೭ ರಂತಹ ರಣಮಾರಿಯ ಕೈಯ ಆಯುಧ ಸಿಕ್ಕರೆ ತಮ್ಮ ಖುಷಿಗಾಗಿ ಅನ್ಯ ಸಹಜೀವಿಯನ್ನು ಕೊಂದು ತೀರದಿರರೇ?    ‘…ಆಟ ಊಟ ಓಟ ಕನ್ನಡ ಮೊದಲನೆ ಪಾಠ..’  ಎಂದು ಚಿಕ್ಕಂದಿನಲ್ಲೇ ಕಲಿಯುತ್ತಾ ಬೆಳೆದ ನಾವು ದೊಡ್ಡವರಾದ ಮೇಲೆ ಹೇಳ್ತೀವಿ, ‘ನಿನ್ನಾಟ ನನ್ಹತ್ರ ನಡೀಯಲ್ಲಮ್ಮಾ..’ ಎಂದು. ಆದ್ರೆ ಕೃಷ್ಣನಾಟಕ್ಕೆ ಮಾತ್ರ ಸುಮ್ಮನೆ ಮಾತಿಗೆಂಬಂತೆ, ‘ಬೇಡ ಕೃಷ್ಣಾ ರಂಗಿನಾಟ..’ ಎಂದು ಹುಸಿ ಮುನಿಸು ತೋರಿದರೂ ಒಳಗೊಳಗೆ ಪುಳಕಗೊಂಡು ಸಂಭ್ರಮಿಸ್ತೀವಿ! ಕೃಷ್ಣ ಬರಿಯ ರಂಗಿನಾಟಗಳನ್ನು ಮಾತ್ರ ಆಡಿದವನಲ್ಲ, ರಾಜತಾಂತ್ರಿಕ ನೈಪುಣ್ಯ ಸಾಧಿಸಿದವನು ಎಂದೆಲ್ಲಾ ಕೊಂಡಾಟ ಮಾಡಿದರೂ ನಮಗೆ ಇಷ್ಟವಾಗಿ ಮನಸ್ಸಿಗೆ ಹತ್ತಿರವಾಗೋದು ಗೋಪಬಾಲನ ಬಾಲ್ಯದ ಆಟಗಳ ಸೊಗಸುಗಾರಿಕೆಗಳೇ..    ಒಂದೊಂದು ಪ್ರದೇಶಕ್ಕೂ ವಿಶಿಷ್ಟವಾದ ಸ್ಥಳೀಯ ಆಟಗಳಿರುತ್ತವೆ. ಭಾರತ-ಹಾಕಿ, ಅಮೇರಿಕ- ರಗ್ಬಿ, ಸ್ಪೇನ್- ಗೂಳಿ ಕಾಳಗ, ಆಸ್ಟ್ರೇಲಿಯಾ-  ಕ್ರಿಕೆಟ್, ಬಾಂಗ್ಲಾದೇಶ- ಕಬಡ್ಡಿ, ಚೀನಾ – ಪಿಂಗ್ ಪಾಂಗ್, ಜಪಾನ್- ಸುಮೋ, ಭೂತಾನ್-ಆರ್ಚರಿ…. ಹೀಗೆ ಹಲವು ರಾಷ್ಟ್ರಗಳು ತಮ್ಮ ರಾಷ್ರೀಯ ಕ್ರೀಡೆಗಳನ್ನು ಇವೇ ಎಂದು ಘೋಷಿಸಿಕೊಂಡಿವೆ. ಇದರ ಜೊತೆಗೇ, ಭಾರತದಂತಹ ಸಂಯುಕ್ತ ಒಕ್ಕೂಟ ರಾಷ್ಟ್ರದಲ್ಲಿ ಕಬಡ್ಡಿ, ಕಂಬಳ, ಜಲ್ಲಿಕಟ್ಟು, ಎತ್ತಿನಗಾಡಿ ಸ್ಪರ್ಧೆ, ದೋಣಿ ಸ್ಪರ್ಧೆ, ಮರ ಏರುವುದು, ಬುಗುರಿ, ಚಿನ್ನಿದಾಂಡು, ಅಪ್ಪಾಳೆ ತಿಪ್ಪಾಳೆ, ಮುದ್ದೆ ನುಂಗುವುದು, ಗದ್ದೆ ನಾಟಿ ಮಾಡುವುದು…,  ಹೀಗೆ ಹಲವು ಪ್ರಾದೇಶಿಕ ಆಟಗಳನ್ನು ಹಾಗೂ ಕೆಲವು ಸೀಸನಲ್ ಆಟಗಳನ್ನೂ ಆಡುವುದುಂಟು.     ಆಟವನ್ನು ಆಟ ಎಂದರೆ, ಏನೋ ಲಘುತ್ವ ಭಾವ. ಹಾಗಾಗಿ, ಕ್ರೀಡೆ ಎಂದು ಕರೆದು ಅದಕ್ಕೆ ಗಾಂಭೀರ್ಯವನ್ನು ಆರೋಪಿಸಲಾಗುತ್ತದೆ. ಹೌದಲ್ಲವೇ? ಆಡುವಾಗ ಗಂಭೀರವಾಗಿಲ್ಲದಿದ್ದರೆ, ಏಕಾಗ್ರತೆ ಕಳೆದುಕೊಂಡು ಬಹುಮಾನ ವಂಚಿತರಾಗಬಹುದು. ಸ್ಥಳೀಯ ಕ್ರೀಡೆಗಳು ಮನೆಯ ಒಳಾಂಗಣದಿಂದ ಪ್ರಾರಂಭವಾಗಿ, ಅಂಗಳ ಮುಟ್ಟಿ, ಬಯಲಿಗೆ ಸಾರಿರುವುದು ಮಾನವನ ನಾಗರಿಕತೆಯ ವಿಕಾಸವಾದದಷ್ಟೇ ಇತಿಹಾಸ ಉಳ್ಳದ್ದು. ಶಾಲೆ- ಕಾಲೇಜು ಹಂತಗಳಲ್ಲಿ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ ಉನ್ನತ ವ್ಯಾಸಂಗಕ್ಕೆ ವಿಫುಲ ಮೀಸಲಾತಿಯ ಅವಕಾಶಗಳನ್ನು ಸರ್ಕಾರ ಮಾಡಿಕೊಡುತ್ತದೆ. ಕೇವಲ ವಿದ್ಯಾಭ್ಯಾಸವಷ್ಟೇ ಅಲ್ಲ, ಸರ್ಕಾರಿ ಉದ್ಯೋಗದಲ್ಲೂ ಗೌರವ ಸ್ಥಾನಮಾನಗಳನ್ನು ಕಲ್ಪಿಸಲಾಗುತ್ತದೆ.  ಕ್ರೀಡಾ ಸಾಧಕರದ್ದು ವೈಯಕ್ತಿಕ ಸಾಧನೆ, ಅವರಿಗೇಕೆ ಈ ಬಗೆಯ ವಿಶೇಷ ಗೌರವ ಎನ್ನುವವರಿಗೆ, ತಿಳಿ ಹೇಳಬೇಕಾದುದು ಜವಾಬ್ದಾರಿ  ಹೊಂದಿರುವ ನಾಗರಿಕರ ಕರ್ತವ್ಯ.    ಕೆಲವೊಮ್ಮೆ ಆಟಗಳನ್ನು ಸಾಂಪ್ರದಾಯಿಕ ಎಂದೋ ಹ್ಂದಿನಿಂದ ನಡೆದು ಬಂದ ರೂಢಿ- ಪರಂಪರೆ ಎಂದೋ ಆಡುವುದು ಕಡ್ಡಾಯ. ಕೃಷ್ಣ ಜನ್ಮಾಷ್ಠಮಿಗೆ ಮೊಸರಿನ ಗಡಿಗೆ ಒಡೆಯುವುದು, ಗಾಳಿಪಟ ಬಿಡುವುದು, ಎತ್ತಿನ ಬಂಡಿ ಓಡಿಸುವುದು, ಭಾರದ ಗುಂಡು ಎತ್ತುವುದು, ದಸರಾ ಹಬ್ಬದಲ್ಲಿ ಪೈಲ್ವಾನ್ಗಳಿಂದ ಕುಸ್ತಿ ಕಾಳಗ, ಹುಂಜದ ಅಂಕಣ, ಕೋಳಿ ಜಗಳ, ಹೋರಿ- ಟಗರು ಕಾಳಗ, ಯುಗಾದಿ ಹಬ್ಬದ ಮಾರನೆ ದಿನ ಇಸ್ಪೀಟಾಟ…. ಇವೆಲ್ಲಾ ಒಂದು ಪುರಾಣದ್ದೋ ಇತಿಹಾಸದ್ದೋ ಎಳೆಯನ್ನು ಇಟ್ಟುಕೊಂಡು  ನಾಮಕಾವಾಸ್ತೆಗೆ ಇರಲಿ ಎಂದಾದರೂ ಆಡುವಂತಿರುತ್ತವೆ!!     ಕ್ರೀಡೆ ಎಂದರೆ ಕೇವಲ ದೈಹಿಕ ಆಟವಲ್ಲ. ಅದು ಮಾನಸ್ಥಿಕ ಸ್ಥಿತಿಯೂ ಕೂಡ. ‘ಕ್ರೀಡಾ ಮನೋಭಾವ’ ಹೊಂದಿರಬೇಕೆಂದರೆ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದು ಎಂದರ್ಥ. ಸೋತ ಕಾರಣಕ್ಕೆ ಹತಾಶರಾಗಿ ಕೈ ಚೆಲ್ಲದೇ, ಮರಳಿ ಯತ್ನವ ಮಾಡುತ್ತಿರಬೇಕೆನ್ನುವ ಸಂಕಲ್ಪ ಶಕ್ತಿಯನ್ನು ಸದಾಕಾಲ ಜಾಗೃತವಾಗಿ ಇಟ್ಟುಕೊಳ್ಳುವುದೇ ಕ್ರೀಡಾ ಮನೋಭಾವ. ಇದು ವೈಯಕ್ತಿಕ ಸ್ವಾಸ್ಥ್ಯದೊಡನೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗುತ್ತದೆ.          ಒಲಂಪಿಕ್ಸ್, ಕಾಮನ್ವೆಲ್ತ್, ಫಿಫಾ, ಟೆನ್ನಿಸ್ ನ ವಿವಿಧ ಗ್ಯ್ರಾಂಡ್ ಸ್ಲ್ಯಾಮ್ ಗಳು, ಚೆಸ್, ಕ್ರಿಕೆಟ್, ರಗ್ಬಿ, ಕುದುರೆ ಸವಾರಿ, ಅಥ್ಲೆಟಿಕ್ಸ್ ನ ರಾಷ್ಟ್ರೀಯ- ಅಂತಾರಾಷ್ಟ್ರೀಯ ಕ್ರೀಡೆಗಳು ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುತ್ತವೆ. ಯಾವುದೋ ದೇಶದ ಕ್ರೀಡಾ ತಾರೆ, ಮತ್ಯಾವುದೋ ದೇಶದ ಗಾಡ್ ಆಫ್ ಅರ್ಥ್ ಆಗುವುದೇ ಒಂದು ಸೋಜಿಗ. ಇದು ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಹುಚ್ಚುತನ ಎನಿಸುತ್ತದೆ. ಕೆಲವೊಂದು ಕ್ರೀಡೆಗಳು ಸಮುದಾಯವನ್ನೇ ಸಮೂಹ ಸನ್ನಿಗೆ ಒಳಪಡಿಸುತ್ತವೆ. ಕ್ರೀಡೆಗಳನ್ನು ಅನುಸರಿಸಿ ಬರುವ ಪ್ರಾಯೋಜಕರು, ಜಾಹೀರಾತುಗಳು ಕೋಟ್ಯಾಂತರ ರೂಪಾಯಿಯ ವ್ಯವಹಾರ ನಡೆಸುತ್ತವೆ. ವೇಶ್ಯಾವಾಟಿಕೆಗೆ, ಡ್ರಗ್ಸ್ ದಂಧೆಗೆ, ಮಾನವ ಸಾಗಾಣಿಕೆ, ರಾಜಕೀಯ ಸ್ಥಿತ್ಯಂತರಕ್ಕೆ, ಆಟಗಳೂ ಪ್ರಮುಖ ಕಾರಣ ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟವೇ…    ಸರಿಯಾದ ತರಬೇತಿ, ಅನುಕೂಲಕರ ವ್ಯವಸ್ಥೆ ಒದಗಿಸಿದರೆ ಗ್ರಾಮೀಣ ಪ್ರತಿಭೆಗಳು ಸಾಧನೆ ಯಾವ ಎತ್ತರದಲ್ಲಿರುತ್ತದೆ ಎಂಬುದಕ್ಕೆ ನಮ್ಮ ಮುಂದೆ ಉದಾಹರಣೆಯ ಸಾಲು ಸಾಲು ಮಾದರಿಗಳೇ ಇವೆ. ಆದರೆ, ಲಿಂಗ-ಜಾತಿ- ವರ್ಗ- ವರ್ಣ ತಾರತಮ್ಯಗಳು ಅಂಥ ಸಾವಿರಾರು ಪ್ರತಿಭೆಗಳನ್ನು ಅವಕಾಶವಂಚಿತರನ್ನು ಸೃಷ್ಟಿಸಿರುವುದು ಉಂಟು. ವಶೀಲಿಭಾಜಿ ನಡೆಸಿ, ಕ್ರಿಕೆಟ್, ಅದರಲ್ಲೂ ಪುರುಷರ ಕ್ರಿಕೆಟ್ ಒಂದೇ ನಿಜವಾದ ಆಟವೆಂದು ಪರಿಗಣಿಸುವ ಭಾರತದಂಥ ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಎರಡಂಕಿ ಮೇಲೆ ಪದಕ ನಿರೀಕ್ಷಿಸುವುದು ಮೂರ್ಖತನ.     ನಾವು ಎಂಜಿನಿಯರ್, ವೈದ್ಯಕೀಯ ಬಿಟ್ಟ ಓದು ಓದಲ್ಲ ಎಂದೂ, ಕ್ರಿಕೆಟ್ ಬಿಟ್ಟ ಇತರೆ ಆಟ ಆಟವಲ್ಲ ಎಂದೂ ಎಂದೋ ಪರಮ ದಡ್ಡತನದ ನಿರ್ಧಾರ ಮಾಡಿಬಿಟ್ಟಿರುವಂತಿದೆ. ಶಾಲಾ ಹಂತದಲ್ಲಿ ದೈಹಿಕ ಚಟುವಟಿಕೆಗಳಿಗೂ ಮಹತ್ವ ನೀಡುತ್ತಿದ್ದ ಶಿಕ್ಷಣ ವ್ಯವಸ್ಥೆ ಬರಬರುತ್ತಾ, ಓದಿನ ಕಾರ್ಖಾನಗಳಂತೆ ಆಗುತಿರುವುದು ದೈಹಿಕ – ಮಾನಸಿಕ ಹಾಗೂ ಆ ಮೂಲಕ ಸಾಮಾಜಿಕ ಸ್ವಾಸ್ಥ್ಯದ ಹದವನ್ನು ಹಾಳುಗೆಡವುತ್ತಿದೆ.       ಬೆಕ್ಕಿನ ಕೈಗೆ ಸಿಕ್ಕಿ ಬೀಳುವ ಇಲಿಯನ್ನು ಅದು ಒಂದೇ ಏಟಿಗೆ ಕೊಂದು-ತಿಂದು ಮುಗಿಸುವುದಿಲ್ಲ. ಬಿಟ್ಟ ಹಾಗೆ ಮಾಡಿ, ಮತ್ತೆ ಮೇಲೆ ಹಾರಿ ಅದನ್ನು ಸತಾಯಿಸಿ ಸುಸ್ತು ಮಾಡಿಸಿ ಅದು ಗಾಬರಿ ಬಿದ್ದು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಮುಟ್ಟಿರುತ್ತದೆ. ಹೀಗೆ, ಒಬ್ಬರ ಆಟ ಮತ್ತೊಬ್ಬರಿಗೆ ಪ್ರಾಣ ಕಂಟಕ ಆಗಬಾರದು ಎಂದೇ ‘ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ’ ಎಂಬ ಗಾದೆ ಟಂಕಿಸಲಾಗಿದೆ. ‘ಆಟ ಆಡಿದ್ರೆ ಅರಗಿಣಿ; ಕಾಟ ಕೊಟ್ರೆ ನಾಗಪ್ಪ’ ಅಂತಾನೂ ಮನೋಆಟದ ಕುರಿತ ಗಾದೆ ಇದೆ. ಇದು ಮಾನವರ ನಡವಳಿಕೆಯು ಹೇಗೆ ಪ್ರಾಣಿಗಳ ನಡವಳಿಕೆಗೆ ಹೋಲಿಕೆಯಾಗುವುದು ಎಂಬ ಬಗ್ಗೆ  ಇರುವಂತಹದ್ದು. ಹಿಂದಿನ ರಾಜಮಹಾರಾಜರು, ಹಣವಂತರು ಶಿಕಾರಿಯನ್ನೂ ಆಟವೆಂದೇ ಭಾವಿಸಿದ್ದರೆನ್ನುವುದು ಓದಿನಿಂದ ತಿಳಿಯಬಹುದು. ಈಗ ಕಾನೂನು ಶಿಕಾರಿಯನ್ನು ಅಮಾನ್ಯ ಮಾಡಿದೆ. ಸರ್ಕಸ್ ನಲ್ಲಿ ಹಿಡಿದು ಪಳಗಿಸಿದ ಕಾಡುಪ್ರಾಣಿಗಳಿಂದ ಕೆಲವಾರು ಆಟ ಆಡಿಸಿ ಕಾಸು ಮಾಡುವುದು ಈ ಮನುಷ್ಯ ಜಾತಿಯವರ ಆಸೆಬುರಕತನವೋ ಅಥವಾ ಚಾಣಾಕ್ಷತನವೋ ನಿರ್ಧರಿಸುವುದು ಹೇಗೆ?      ‘ಪರಮಾತ್ಮ ಆಡಿಸಿದಂತೆ ಆಡುವೆ ನಾನು’ ಎನ್ನುವ ಆಸ್ತಿಕವಾದಿಗಳು, ತಮ್ಮ ನಿರ್ಧಾರಗಳಿಗೂ ಬೇರೆಯ ಧಾತುವನ್ನು ಹೊಣೆಗಾರಿಕೆ ಮಾಡುವುದು ಬೇಜವಾಬ್ದಾರಿತನ ಅವಲ್ಲದೆ ಮತ್ತೇನಲ್ಲ ಎಂದು ಖಂಡಿತವಾಗಿ ಹೇಳಬಹುದು. ಒಟ್ನಲ್ಲಿ ‘ಆಟ ಕೆಟ್ಟರೆ ದೀವಟಿಗೆಯವನ ಸುತ್ತ’ ಎಂದಂತೆ, ಜೀವನದ ಆಟದಲ್ಲಿ ಭಾಗವಹಿಸಿರುವ ಎಲ್ಲರೂ ಒಂದಲ್ಲಾ ಒಂದು ಪಾತ್ರ ನಿರ್ವಹಿಸವೇ ಬೇಕು. ಹಾಗೂ  ‘…. ನಿಂತಾಗ ಬುಗುರಿಯ ಆಟ ಎಲ್ಲಾರೂ ಒಂದೇ ಓಟ…’ ಎಂದು ಆಟ ಮುಗಿಸಿ ‘ಸಾಯೋ ಆಟ’ ಆಡಲು ಗಂಟುಮೂಟೆ ಕಟ್ಟಲೇಬೇಕು… ******************** – ವಸುಂಧರಾ ಕದಲೂರು. ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

Read Post »

You cannot copy content of this page

Scroll to Top