ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಮುಖಾಮುಖಿ

ರೇಖಾಚಿತ್ರ ಕಲೆಯ ತಾಯಿ “ಚಿತ್ರಕಲಾ ಅಧ್ಯಾಪಕರ ಆಯ್ಕೆಯಲ್ಲಿ ಪಠ್ಯಕ್ಕೆ ಅನುಗುಣವಾದ ಪ್ರಯೋಗಿಕ ಪರೀಕ್ಷೆ ಮಾನದಂಡವಾಗಬೇಕು” …………………………………. ಹಜರತ್ ಅಲಿ ನಾಡಿನ ಖ್ಯಾತ ಕಲಾವಿದ. ಹರಪನಹಳ್ಳಿ ಬಳಿಯ ಉಚ್ಚಂಗಿ ದುರ್ಗ ಅವರ ಹುಟ್ಟೂರು. ಅವರು ನೆಲೆಸಿರುವುದು ದಾವಣೆಗರೆಯಲ್ಲಿ.  ಕಾರ್ಯ ನಿರ್ವಹಿಸುತ್ತಿರುವುದು ತುಮಕೂರು ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗದಲ್ಲಿ ಉಪನ್ಯಾಸಕರಾಗಿ. ಉತ್ಸವಾಂಬ ಪ್ರೌಢಶಾಲೆಯಲ್ಲಿ ಕಲಿತ ಅವರು , ದಾವಣಗೆರೆಯ ಚಿತ್ರಕಲಾ ಶಾಲೆಯಲ್ಲಿ ಫೈನ್ ಆರ್ಟ ಮತ್ತು ಮಾಸ್ಟರ್ ಆಫ್ ಆರ್ಟ ಪದವಿಗಳಿಸಿದರು. ಹಂಪಿ ಅವರ ನೆಚ್ಚಿನ ತಾಣ. ನಿಸರ್ಗ ಮತ್ತು ಹಳ್ಳಿ ಬದುಕು ಅವರ ಚಿತ್ರಕಲೆಯ ಮೂಲ ನೆಲೆ. ರೇಖಾ ಚಿತ್ರಗಳನ್ನು ಅವರು ಅದ್ಭುತವಾಗಿ ಚಿತ್ರಿಸುತ್ತಾರೆ. ನಾಡಿನ ಹಿರಿಯ ಕಲಾವಿದ ಕೆ.ಕೆ.ಹೆಬ್ಬಾರರ ರೇಖಾ ಚಿತ್ರಗಳನ್ನು ಮೀರಿಸುವಂತೆ  ಬೆಳೆದ ಕಲಾವಿದ ಇವರು. ರೇಖೆಗಳ ಮಾಂತ್ರಿಕ ಹಜರತ್ ಅಲಿ ಅವರ ಚಿತ್ರಗಳಿಗೆ ಸೋಲದ ಚಿತ್ರರಸಿಕರೇ ಇಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಗದಗನಲ್ಲಿ ಕಲಾವಿದ ಗೆಳೆಯ ಹಜರತ್ ಮಾತಿಗೆ ಸಿಕ್ಕಿದ್ದರು. ತುಂಬಾ ಸಂಕೋಚದ, ನಾಚಿಕೆ ಸ್ವಭಾವದ ಹಜರತ್ ಅವರನ್ನು ಮಾತಿಗೆ ಎಳೆದು, ಅವರೊಳಗಿನ ಮೌನವನ್ನು ಮಾತಾಡಿಸಿ, ಸಂದರ್ಶನ ರೂಪದಲ್ಲಿ ಇಲ್ಲಿ ನೀಡಲಾಗಿದೆ. ಹಂಪಿಯ ಅವಶೇಷ ಹಾಗೂ ಅಳಿದುಳಿದ ವೈಭವವನ್ನು  ವಿದ್ಯಾರ್ಥಿಯಾಗಿದ್ದಾಗ, ಕಲಾವಿದ ಅಧ್ಯಾಪಕನಾಗಿದ್ದಾಗ ಹಲವು ಸಲ ಚಿತ್ರಿಸಿದ ಪ್ರೀತಿ ಅವರದ್ದು. ನಾಡಿನ ಶಿಲ್ಪ ಕಲೆಯ ಬಗ್ಗೆ, ರೇಖಾ ಚಿತ್ರ, ಬಣ್ಣದ ಚಿತ್ರಗಳು, ಅವುಗಳ ಬೆರಗು, ವಾಟರ್ ಕಲರ್ ಪೇಯಿಂಟಿಂಗ್ಸ, ಮಣ್ಣಿನ ಕಲಾಕೃತಿಗಳ ಬಗ್ಗೆ, ಲೋಹದ ಕಲಾಕೃತಿಗಳ ಬಗ್ಗೆ ಅವರು ಗಂಟೆಗಟ್ಟಲೆ ಮಾತಾಡಬಲ್ಲರು. ಹಾಗೂ ವಿವಿಧ ಪ್ರಕಾರಗಳಲ್ಲಿ ಚಿತ್ರಗಳನ್ನು ರೂಪಿಸಬಲ್ಲರು. ನಾಡಿನ ಶ್ರೇಷ್ಠ ಕಲಾವಿದರ ಪರಂಪರೆಯಲ್ಲಿ ಹಜರತ್ ಅಲಿ ಅವರನ್ನು ಸಹ ಕಾಣಬೇಕು. ಅಂಥ ಪ್ರತಿಭೆ ಅವರಲ್ಲಿದೆ. …………………………………. “ಸಂದರ್ಶನದಲ್ಲಿ ನಾಡಿನ ಖ್ಯಾತ ಚಿತ್ರ ಕಲಾವಿದ  ಹಜರತ್ ಅಲಿ  ಅವರು ಚಿತ್ರ ಕಲೆಯ ಕುರಿತು ಮಾತಾಡಿದ್ದು ಇಲ್ಲಿದೆ. ……………………………. ನಾಗರಾಜ ಹರಪನಹಳ್ಳಿ :  ಚಿತ್ರ ನಿಮ್ಮ ಉಸಿರು ಎಂದು ಗೊತ್ತು. ಆದರೂ ಈ ಪ್ರಶ್ನೆ ಕೆಣಕಲು ಕೇಳುತ್ತಿರುವೆ. ಚಿತ್ರ, ಬಣ್ಣಗಳ ಜೊತೆ  ಯಾಕೆ ಆಟವಾಡುತ್ತೀರಿ ಅಥವಾ   ಚಿತ್ರ ಬರೆಯುತ್ತೀರಿ ? ಹಜರತ್ ಅಲಿ  :   ಕಲೆ ಮಾನವನ ಆಲೋಚನೆಗಳು ತೀವ್ರಗೊಂಡಾಗ ಸ್ಪೋಟಗೊಳ್ಳುವ ಮೂರ್ತರೂಪದ ಅಥವಾ ದೃಶ್ಯ ರೂಪದ ಭಾವನೆಗಳೇ ಆಗಿರುತ್ತವೆ. ಅದು ಬಣ್ಣ, ರೇಖೆ, ಶಿಲ್ಪ, ಶ್ರಾವ್ಯ,ಅಭಿನಯ, ನೃತ್ಯ ಸಾಹಿತ್ಯ …..ಹೀಗೆ ಹತ್ತುಹಲವು ಬಗೆಗಳಲ್ಲಿ ಅಭಿವ್ಯಕ್ತಿಯಾಗಿರುತ್ತದೆ. ಪ್ರಶ್ನೆ :  ಕಲೆ  ಅಥವಾ ಚಿತ್ರ, ಹುಟ್ಟುವ ಕ್ಷಣ ಯಾವುದು ? ಉತ್ತರ ; ಯಾವುದೇ ಬಗೆಯ ಕಲೆಯ ಹುಟ್ಟಿಗೆ ಮೂಲ ಪ್ರೇರಕ ಶಕ್ತಿ ಪ್ರಕೃತಿಯೇ ಆಗಿರುತ್ತದೆ. ಅದು ಕಾಲ ಮತ್ತು ದೇಶಾತೀತವಾದುದು, ಹಾಗಾಗಿ ಇಂಥದ್ದೇ ಸಮಯದಲ್ಲಿ ಕಲೆ ಹುಟ್ಟುತ್ತದೆ ಎಂದೇನಿಲ್ಲ, ಕಲಾವಿದನಲ್ಲಿ ಭಾವತೀವ್ರಗೊಳಿಸುವ ಯಾವುದೇ ವಿಷಯಯವೂ ಚಿತ್ರರೂಪ ಪಡೆಯಬಲ್ಲದು. ನನ್ನನ್ನು ಹೆಚ್ಚಾಗಿ ಕಾಡುವ ವಸ್ತು ವಿಷಯ ಗ್ರಾಮೀಣ ಪ್ರದೇಶದ ಬದುಕು ಮತ್ತು ನೆಲೆ.  ನಗರದ  ಯಾಂತ್ರಿಕ ಬದುಕಿನ ನಿರ್ಭಾವುಕತೆಗಿಂತಲೂ , ಭಾವುಕ ಜಗತ್ತಿನ ಸ್ವಭಾವ ನನಗೆ ಇಷ್ಟದ ವಿಷಯ. ಪ್ರಶ್ನೆ : ನಿಮ್ಮ ರೇಖಾ ಚಿತ್ರಗಳು ತುಂಬಾ ಕಾಡುತ್ತವೆ. ಹೇಗೆ ಅದರ ಸೆಳೆತ ನಿಮಗೆ  ? ಉತ್ತರ : ಚಿತ್ರಕಲೆಯಲ್ಲಿ ರೇಖಾಚಿತ್ರ ಕಲೆಯ ತಾಯಿ ಎಂದು ಕರೆಯಲಾಗುತ್ತದೆ. ಹಾಗಾಗಿ ರೇಖಾಚಿತ್ರದ ಅಭ್ಯಾಸ ಪ್ರತಿಯೊಬ್ಬ ಕಲಾವಿದ್ಯಾರ್ಥಿಗೆ  ಹಾಗೂ  ಕಲಾವಿದನಿಗೆ ಅತ್ಯಗತ್ಯ. ಪ್ರಶ್ನೆ :  ರೇಖೆಗಳು ಚಿತ್ರ ಕಲೆಯ ಶಾಸ್ತ್ರೀಯ ನೆಲೆ ಅಂತ  ನೀವು ಹೇಳಿದ ನೆನಪು ನನಗೆ. ಬದಾಮಿ-ಬೇಲೂರು ಶಿಲ್ಪಕಲಾ ವೈಭವದ  ವಿಶೇಷತೆ ಏನು ? ಉತ್ತರ : ನಮ್ಮ ಐತಿಹಾಸಿಕ ನೆಲೆಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ, ಬಿಜಾಪುರ, ಬೇಲೂರು ಹಳೇಬೀಡು ಮೊದಲಾದ ಸ್ಥಳಗಳು ಆಯಾಕಾಲದ ಜನಜೀವನದ ಸಾರವನ್ನು ಹೊಂದಿರುವ ಆಕರ ಕೇಂದ್ರಗಳಾಗಿವೆ. ಇವು ಆ ಕಾಲದ ಕಲಾ ಪರಂಪರೆಯನ್ನು ಒಳಗೊಂಡಿದ್ದು ಇಲ್ಲಿ ರಚಿಸಲಾಗಿರುವ ಶಿಲ್ಪಕಲಾಕೃತಿಗಳು ಧಾರ್ಮಿಕ ವಿಷಯಗಳನ್ನಷ್ಟೇ ಅಲ್ಲದೆ, ಆ ಕಾಲದ ಜನರ ಉಡುಗೆ ತೊಡುಗೆಗೆಳು, ವೇಷ ಭೂಷಣಗಳು,ಕ್ರೀಡೆ, ಯುದ್ಧದ, ವೈಭೋಗ ಮುಂತಾದ, ತಮ್ಮ ಕಾಲದ ವರ್ತಮಾನವನ್ನ  ನಮ್ಮ ಕಾಲಕ್ಕೂ ತೆರೆದಿಟ್ಟಿರುವ ಜ್ಞಾನ ಭಂಡಾರಗಳಾಗಿವೆ. ಇಲ್ಲನ ವಾಸ್ತುಶಿಲ್ಪ ಶಿಲ್ಪಕಲೆಗೆ ಮನಸೋಲದವರಾರು ? ಪ್ರಶ್ನೆ : ನಿಮ್ಮ ಚಿತ್ರಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ  ಯಾವುದು  ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ : ಹಂಪಿ ನನ್ನ ನೆಚ್ಚಿನ ಪ್ರಕೃತಿ ತಾಣ, ವಿದ್ಯಾರ್ಥಿಯಾಗಿ, ಅಧ್ಯಾಪಕನಾಗಿ  ಇಲ್ಲಿ ನೂರಾರು ನಿಸರ್ಗ ಚಿತ್ರಗಳನ್ನು ರಚಿಸಿದ್ದೇನೆ. ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಪ್ರಸ್ತುತ ರಾಜಕೀಯ ಸನ್ನಿವೇಶ ತುಂಬಾ ಕಲುಷಿತ ಗೊಂಡಿದೆ . ಜಾತಿ ಜಾತಿಗಳ ಮಧ್ಯೆ ಗೋಡೆಗಳು ನಿರ್ಮಿಸುವುದೇ ಸದ್ಯದ ರಾಜಕೀಯ ಬಂಡವಾಳ.. ಪ್ರಶ್ನೆ :  ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಧರ್ಮ ತೋರಿಕೆಯಾಗಬಾರದು. ಹೊಸ್ತಿಲೊಳಗಿರಬೇಕಾದ ಧರ್ಮ ಬೀದಿಗೆ ಬಂದು ಅಬ್ಬರಿಸುತ್ತಿದೆ. ಮನುಷ್ಯ ಮನುಷ್ಯನ ನಡುವೆ ಮಾನವತೆಯ ಬಿತ್ತದ ಧರ್ಮ ನನ್ನದೃಷ್ಟಿಯಲ್ಲಿ ಅಪ್ರಯೋಜಕ. ಪ್ರಶ್ನೆ :  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಸಾಂಸ್ಕೃತಿಕ ವಲಯವ ಉಳ್ಳವರ ಪ್ರಾಯೋಜಿತ ಕಾರ್ಯಕ್ರಮವಾಗುತ್ತಿದೆ. ಅಕಾಡೆಮಿಯಗಳಲ್ಲಿ  ಬಹುತೇಕ ಜಾತಿ ಮತಗಳ ಪರವಾದ ಸ್ವಾರ್ಥವೇ ಹೆಚ್ಚಾಗಿದೆ. ನಿಜವಾದ ಕಲಾವಿದರಿಗೆ ಗುರುತಿಸಲ್ಪಡುವುದು ಅತಿವಿರಳ. ಪ್ರಶ್ನೆ : ಚಿತ್ರ, ಕಲಾ ಲೋಕ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?  ಉತ್ತರ: ಚಿತ್ರಕಲಾ ಕ್ಷೇತ್ರವೂ ಈ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿಲ್ಲ. ಇಂದು ಕರ್ನಾಟಕದ ಚಿತ್ರಕಲಾ ಶಿಕ್ಷಣ ಬಹುತೇಕ ಸೊರಗಿದೆ. ಇಂದು ಕಾಲೇಜುಗಳಲ್ಲಿ  ಬೋಧನೆ ಮಾಡುವ ಅಧ್ಯಾಪಕರು ಬಹುತೇಕ ಯೂಜಿಸಿ ಮಾನ್ಯತೆಯ ಪದವಿಧರರಿದ್ದಾರೆಯೇ ಹೊರತು,  ಪ್ರತಿಭಾವಂತ ರಿರುವುದು ಕಡಿಮೆಯೆ..  ವಿ.ವಿ.ಗಳ ಅಧಿಕಾರಿಗಳಿಗೆ ಚಿತ್ರಕಲಾ(ದೃಶ್ಯ ಕಲಾ) ಶಿಕ್ಷಣದ ಅರಿವಿನ ಕೊರತೆ ಇದೆ. ಪಠ್ಯಕ್ರಮದಲ್ಲಿ ಏನನ್ನು ಕಲಿಸಲಾಗುತ್ತದೆ ಎಂಬುವುದು ಅವರಿಗೆ ತಿಳಿದಿರುವುದಿಲ್ಲ. ಅಧ್ಯಾಪಕರ ಆಯ್ಕೆ ಯಲ್ಲಿ ಸರ್ಟಿಫಿಕೇಟ್ ಅಷ್ಟೇ ಮುಖ್ಯ,  ಅಧ್ಯಾಪಕ ನ ಪ್ರತಿಭೆ ನಗಣ್ಯ. ಚಿತ್ರಕಲಾ ಶಿಕ್ಷಣ ಪ್ರಾಯೋಗಿಕ ಆಧಾರಿತ ಶಿಕ್ಷಣ ವಾಗಿರುವುದರಿಂದ ಅಧ್ಯಾಪಕರ ಆಯ್ಕೆಯಲ್ಲಿ ಅಥವಾ ಸಂದರ್ಶನದಲ್ಲಿ ಪಠ್ಯಕ್ಕೆ ಅನುಗುಣವಾದ ಪ್ರಯೋಗಿಕ ಪರೀಕ್ಷೆ ಮಾನದಂಡವಾದರೆ ಶಿಕ್ಷಣದ ಗುಣಮಟ್ಟ ಸುಧಾರಿಸಬಹುದು.. ಪ್ರಶ್ನೆ :  ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ :  ಸದ್ಯ ದೇಶಕ್ಕೆ ಮನುಷ್ಯ ಮನುಷ್ಯರನ್ನು ಬೆಸೆಯುವ ಧರ್ಮ ಧರ್ಮ ಗಳನ್ನ ಬೆಸೆಯುವ ಸೌಹಾರ್ದ ಸಂತನ ಅಗತ್ಯವಿದೆ. ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯಲ್ಲಿ ರಾಜಕಾರಣಿಗಳು, ಧಾರ್ಮಿಕ ಮುಖಂಡರು ಯುವಜನತೆಯಲ್ಲಿ ಪ್ರಜ್ಞೆ ಮೂಡಿಸಬೇಕು. ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿರುವ ಸಂವಿಧಾನದ ಘನತೆ ನಮ್ಮಲ್ಲಿ ಎಚ್ಚರಗೊಳ್ಳಬೆರಕು.. ಪ್ರಶ್ನೆ : ಆರ್ಟ ,ಪೇಯಿಂಟಿಂಗ್ಸ   ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ಮನುಷ್ಯನ ಬದುಕು ಅರಾಜಕವಾದಲ್ಲಿ ಕಲೆ ಮತ್ತು ಸಂಸ್ಕ್ರತಿಗಳು ಅವಸಾನದ ಹಾದಿ ಹಿಡಿಯುತ್ತವೆ. ದೇಶ ಸುಭಿಕ್ಷುವಾಗಿದ್ದರೆ ಮಾತ್ರ ಕಲೆ, ಕಲಾವಿದರ ಅಸ್ತಿತ್ವ. ಇದಕ್ಕೆ ಪೂರಕವಾದ ಸಮಾಜ ನಮ್ಮದಾಗಲಿ. …………… ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಅಂಕಣ ಸಂಗಾತಿ, ಮುಖಾಮುಖಿ

ಅಕ್ಷರದ ಬಂಡಾಯ ತಲ್ಲಣಗಳಿಗೆ ಪ್ರತಿಕ್ರಿಯೆ ಬೇಕಾದ ಅನಿವಾರ್ಯತೆಯಲ್ಲಿ ಬರೆಯಲು ಮನಸ್ಸು ಮಾಡಿದೆ’ ಡಾ.ರಾಮಕೃಷ್ಣ ಗುಂದಿ ಡಾ.ರಾಮಕೃಷ್ಣ ಗುಂದಿ ಕನ್ನಡದ ಅತ್ಯಂತ ಪ್ರಭಾವಶಾಲಿ ಕತೆಗಾರರಲ್ಲಿ ಒಬ್ಬರು. ಅವಾರಿ ಅವರ ಪ್ರಸಿದ್ಧ ಕತೆ. ಅವರ ಮೊದಲ ಕಥಾ ಸಂಕಲನ ಅವಾರಿ ಹೆಸರಲ್ಲೇ ಪ್ರಕಟವಾಯಿತು. ಕಡಲ ಬೆಳಕಿನ ದಾರಿಯಲ್ಲಿ, ಸೀತೆದಂಡೆ ಹೂವೆ ಅವರ ಕಥಾ ಸಂಕನಲಗಳು. ಪ್ರಾಂಜಲ ಅವರು ವಿವಿಧ ಲೇಖಕರಿಗೆ ಬರೆದ ಮುನ್ನುಡಿಗಳ ಸಂಗ್ರಹ. ಆಗೇರರ ಬದುಕು ಮತ್ತು ಸಂಸ್ಕೃತಿ ಕುರಿತು ಅವರು ಸಂಶೋಧನಾ ಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಅವರ ಆತ್ಮಕತೆ ಸಹ ಪ್ರಕಟವಾಗಿದೆ. ಯಕ್ಷಗಾನ ಕಲಾವಿದರೂ ಆಗಿರುವ ಡಾ.ಗುಂದಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಕ್ಷಗಾನ ಅಕಾಡಮಿಯ ಸದಸ್ಯರಾಗಿಯೂ ಕಾರ‍್ಯ ನಿರ್ವಹಿಸಿದ್ದಾರೆ. ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸುಧೀರ್ಘ ಅವಧಿ ಕಾರ‍್ಯ ನಿರ್ವಹಿಸಿದ ಅವರು, ಕಾರವಾರದ ದಿವೇಕರ ಕಾಲೇಜಿನಲ್ಲಿ ಕೆಲ ವರ್ಷ ಪ್ರಾಂಶುಪಾಲರಾಗಿ ಕಾರ‍್ಯ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಅವರು ಅಂಕೋಲಾದ ನಾಡು ಮಾಸ್ಕೇರಿ ಬಳಿಯ ಗ್ರಾಮದವರು. ಈಗ ನೆಲಸಿರುವುದು ಅಂಕೋಲಾದಲ್ಲಿ. ಅವಾರಿ, ಕಡಲ ಬೆಳಕಿನ ದಾರಿಯಲ್ಲಿ, ಸೀತೆ ದಂಡೆ ಹೂವೆ, ಮಾನಿನಿ ಮಣಿಯೆ ಬಾರೆ ಅವರ ಬರೆದ ಅತ್ಯುತ್ತಮ ಕತೆಗಳ ಸಾಲಿಗೆ ಸೇರುವಂತಹವು. ಬಂಡಾಯ ಮತ್ತು ದಲಿತ ಸಾಹಿತ್ಯದ ಓದು ಅವರ ಕತೆಗಳನ್ನು ಪ್ರಭಾವಿಸಿದೆಯಾದರೂ, ಕರಾವಳಿಯಲ್ಲಿ ಶೋಷಣೆ, ಜಾತಿಯ ಮುಸುಕು, ಕಾಣುವ ದೌರ್ಜನ್ಯ ಕತೆಗಳಲ್ಲಿ ಅನಾವರಣಗೊಳ್ಳುವ ಬಗೆ ವಿಶಿಷ್ಟ. ಅವರ ಕತೆಗಳಲ್ಲಿ ಮಾನವೀಯ ಅನುಕಂಪ ಮತ್ತು ಮನುಷ್ಯನ ಸೂಕ್ಷ್ಮ ಪ್ರತಿಸ್ಪಂದನಗಳು ಎದ್ದು ಕಾಣುವಂತಹವು. …………………………. ನಾಗರಾಜ ಹರಪನಹಳ್ಳಿ : ಕತೆಗಳನ್ನು ಯಾಕೆ ಬರೆಯುತ್ತೀರಿ? ರಾಮಕೃಷ್ಣ ಗುಂದಿ : ನನ್ನ ಊರು ಕುಮಟಾ ತಾಲೂಕಿನ ನಾಡು ಮಾಸ್ಕೇರಿ ಎಂಬ ಪುಟ್ಟ ಗ್ರಾಮ. ನನ್ನ ಬಾಲ್ಯ ಮತ್ತು ಹರೆಯದ ಬಹುಪಾಲು ಅಲ್ಲಿಯೇ ಕಳೆದವು. ಅಂದಿನ ಅಲ್ಲಿಯ ಸಾಮಾಜಿಕ ಪರಿಸರ, ಜಾತಿ ವ್ಯವಸ್ಥೆ, ಮುಖಾಮುಖಿಯಾದ ವಿಕ್ಷಿಪ್ತ ಮತ್ತು ಉದಾತ್ತ ವ್ಯಕ್ತಿತ್ವಗಳು, ನನ್ನೊಳಗೆ ಉಂಟು ಮಾಡಿದ ತಲ್ಲಣಗಳಿಗೆ ಪ್ರತಿಕ್ರಿಯೆ ನೀಡಲೇ ಬೇಕಾದ ಅನಿವಾರ‍್ಯತೆಯಲ್ಲಿ ನಾನು ಬರೆಯಲು ಮನಸ್ಸು ಮಾಡಿದೆ ಮತ್ತು ಅದಕ್ಕೆ ಕಥೆಯೇ ಸೂಕ್ತವಾದ ಮಾಧ್ಯಮ ಅನ್ನಿಸಿತು. ಅದೇ ಸಮಯ ಆರಂಭವಾದ ದಲಿತ-ಬಂಡಾಯ ಚಳುವಳಿಯಿಂದಲೂ ಪ್ರಭಾವಿತನಾಗಿ ಕತೆ ಬರೆಯಲು ತೊಡಗಿದೆ. ಪ್ರಶ್ನೆ : ಕಥೆ ಹುಟ್ಟುವ ಕ್ಷಣ ಯಾವುದು? ಉತ್ತರ : ಸಂವೇದನಾ ಶೀಲತೆ ಇದ್ದರೆ ಬರಹಗಾರನಿಗೆ ಇಂಥಹುದೇ ಕ್ಷಣ ಎಂಬುದೇನಿಲ್ಲ. ಅಥವಾ ಅದು ನಿಜವೂ ಇರಬಹುದೇನೋ. ತೀರ ಮನಸ್ಸನ್ನು ಕಾಡುವ ಕ್ಷಣವೊಂದು ಅಭಿವ್ಯಕ್ತಿಯ ಉದ್ದೀಪನಕ್ಕೆ- ಪ್ರೇರಣೆಯಾಗುವ ಸಾಧ್ಯತೆಗಳೂ ಇಲ್ಲದಿಲ್ಲ. ನಮ್ಮೂರಿನ ಬಂಡಿಹಬ್ಬ ನೋಡಲು ನೂರಾರು ಜನರ ನಡುವೆ ನಿಂತಿದ್ದೆ, ಆಗ ದೇವರ ಮೋಕ್ತೇಸರ ಭಕ್ತ ಜಂಗುಳಿಯತ್ತ ತೆಂಗಿನ ಕಾಯಿ ಎಸೆಯುತ್ತಾನೆ. ಅದು ಯಾರ ಕೈಗೆ ಸಿಗುತ್ತದೋ ಅವರು ಬಂಡಿ ಕಟ್ಟೆಗೆ ಒಡೆಯುವ ಅವಕಾಶ ಪಡೆಯುತ್ತಾರೆ. ಅಲ್ಲಿ ಆಕಸ್ಮಿಕವಾಗಿ ದಲಿತ ಯುವಕನೋರ‍್ವನ ಕೈಗೆ ಕಾಯಿ ಸಿಕ್ಕಾಗ ಅದನ್ನು ಒಡೆಯಲು ಆತನಿಗೆ ಅವಕಾಶ ನೀಡದೆ ಸವರ್ಣೀಯನೊ  ಬ್ಬನ ಕೈಗೆ ನೀಡಿ ಕಾಯಿ ಒಡೆಯಲಾಯಿತು. ಈ ದೃಶ್ಯ ನನಗೆ ಆ ಕ್ಷಣದಲ್ಲಿ ತುಂಬ ಕಾಡಿತು. ಮತ್ತು ಅಂದೇ ನಾನು ‘ಚಾಚುದಾರರು’ ಎಂಬ ಕಥೆ ಬರೆಯಲೇ ಬೇಕಾಯಿತು. ದಲಿತನಾದ ನನಗೆ ಅಸ್ಪ್ರಶ್ಯತೆಯ ಕಾರಣದಿಂದ ನೋವು ನೀಡಿದ ಕ್ಷಣಗಳೇ ನನ್ನ ಹಲವು ಕಥೆಗಳ ಹುಟ್ಟಿಗೆ ಕಾರಣವೂ ಆಗಿದೆ. ಪ್ರಶ್ನೆ : ನಿಮ್ಮ ಕಥೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಉತ್ತರ : ನಾನು ಆಗಲೇ ಹೇಳಿರುವಂತೆ ನನ್ನೂರಿನ ದಲಿತ ಕೇರಿಯ ಬಡತನ, ಹಸಿವು, ಅಸ್ಪ್ರಶ್ಯತೆಯ ಅವಮಾನಕರ ಪ್ರಸಂಗಗಳು ಇದೇ ಕಾರಣದಿಂದ ಅನಿವಾರ‍್ಯವಾಗಿ ಅನುಭವಿಸುವ ಶೋಷಣೆ ಮುಂತಾದವುಗಳೇ ನನ್ನ ಕಥೆಗಳಿಗೆ ವಸ್ತುವಾದವು. ಮುಖ್ಯವಾಗಿ ಒಂದು ಉಪೇಕ್ಷಿತ ದಲಿತ ಸಮುದಾಯವಾಗಿ ಇಂದಿಗೂ ನಿರೀಕ್ಷಿತ ಪ್ರಗತಿ ಕಾಣದ ನಮ್ಮ ‘ಆಗೇರ’ ಜನಾಂಗದ ಧ್ವನಿಯಾಗಬೇಕೆಂಬ ಉತ್ಕಟ ಹಂಬಲವೇ ನನ್ನ ಬಹುತೇಕ ಕಥೆಗಳ ಪ್ರೇರಣೆ ಅನ್ನಬಹುದು. ಹಾಗಾಗಿ ನನ್ನ ಕಥೆಗಳ ವಸ್ತು ವ್ಯಾಪ್ತಿ ಅದರಾಚೆಗೆ ವಿಸ್ತರಿಸಿದ್ದು ಬಹಳ ಕಡಿಮೆಯೇ ಎಂದು ಒಪ್ಪಿಕೊಳ್ಳುವೆ. ಈಗಲೂ ಜಾತಿ-ಮತ-ಧರ‍್ಮದ ಕಾರಣದಿಂದಲೇ ನಿರ್ಧಾರಿತವಾಗುತ್ತಿರುವ ‘ಮನುಷ್ಯ ವ್ಯಕ್ತಿತ್ವ’ ನನ್ನನ್ನು ಯಾವಾಗಲೂ ಕಾಡುತ್ತದೆ. ಪ್ರಶ್ನೆ : ಕಥೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಉತ್ತರ : ಖಂಡಿತವಾಗಿ. ಬಹುಶಃ ಯಾವುದೇ ವ್ಯಕ್ತಿತ್ವ ಬೆಳೆದು ಬರುತ್ತಲೇ ಬಾಲ್ಯ-ಯೌವನಗಳ ಅನುಭವಗಳು ಗಾಢವಾಗಿ ಪ್ರಭಾವಿಸಿರುತ್ತವೆ. ನನ್ನ ಬಹುತೇಕ ಕಥೆಗಳು ನನ್ನ ಬಾಲ್ಯದ ಅನುಭವಗಳಿಂದಲೇ ಸಾಕಷ್ಟು ವಸ್ತುಗಳನ್ನು ದೊರಕಿಸಿಕೊಂಡಿವೆ. ಹರೆಯದ ಅನುಭವಗಳ ಹಿನ್ನಲೆಯಲ್ಲಿ ಕೆಲವು ಕಥೆಗಳನ್ನು ನಿರೂಪಿಸಿದ್ದೇನೆ. ನನ್ನ ‘ಅವಾರಿ’, ‘ಇರಿತ’, ‘ಉಲ್ಕಾಪಾತ’, ‘ಅತಿಕ್ರಾಂತ’ ಮುಂತಾದ ಕಥೆಗಳು ನನ್ನ ಬಾಲ್ಯದ ಹಸಿ ಹಸಿ ನೆನಪುಗಳ ಹಿನ್ನೆಲೆಯಿಂದಲೇ ರೂಪುಗೊಂಡವು. ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು? ಉತ್ತರ : ರಾಜಕೀಯ ವಿದ್ಯಮಾನಗಳ ಕುರಿತು ಮಾತೇ ಆಡದಿರುವುದು ಒಳಿತು ಎಂಬಂಥ ಸ್ಥಿತಿಯಲ್ಲಿ ಈಗ ನಾವಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ ಎನ್ನುವುದು ಕೇವಲ ಬಾಯಿ ಮಾತಿಗೆ ಅಷ್ಟೇ. ಎಲ್ಲರಿಗೂ ಅಧಿಕಾರ-ಗದ್ದುಗೆ ಮತ್ತು ಸ್ವಾರ‍್ಥವೇ ಮುಖ್ಯವಾಗಿರುವಾಗ ಪ್ರಜಾಹಿತವೆಂಬುದು ಒಂದು ಚರ್ಚಿತ ವಿಷಯವಾಗಿ ಅಷ್ಟೇ ಉಳಿದುಕೊಂಡಿದೆ. ರೈತರ, ನಿರುದ್ಯೋಗಿಗಳ, ಸಂತ್ರಸ್ತರ ಕುರಿತು ಆಲೋಚಿಸಬೇಕಾದ ರಾಜಕಾರಣಿಗಳು ಕೇವಲ ಅಧಿಕಾರಕ್ಕಾಗಿ ಕಚ್ಚಾಡುವುದು, ಪರಸ್ಪರ ಕಾಲೆಳೆಯುವ, ಕೆಸರೆರಚುವ ಹುಡುಗಾಟದಲ್ಲಿ ಮಗ್ನರಾಗಿರುವುದು ರಾಜಕೀಯದ ಶೋಚನೀಯ ಸ್ಥಿತಿಗೆ ದೃಷ್ಟಾಂತಗಳಾಗಿ ತೋರುತ್ತಿವೆ. ಪ್ರಶ್ನೆ: ಧರ‍್ಮ ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ಉತ್ತರ : ನನಗೆ ‘ವಚನ ಸಾಹಿತ್ಯ’ ತುಂಬಾ ಪ್ರಭಾವಿಸಿದ ಪ್ರಕಾರ ಅಲ್ಲಿಯೂ ಬಸವಣ್ಣನಂಥವರ ಧರ‍್ಮ ಮತ್ತು ದೇವರ ಕುರಿತಾದ ನಿಲುವು ಪರಿಕಲ್ಪನೆಗಳೇ ಹೃದಯದಿಂದ ಒಪ್ಪಿತವಾದವುಗಳು. ನನ್ನ ಬಾಲ್ಯ, ತಾರುಣ್ಯದ ಬಹು ಮುಖ್ಯ ಜೀವಿತಾವಧಿಯಲ್ಲಿ ನನಗೆ ಜಾತಿಯ ಕಾರಣದಿಂದ ದೇವಾಲಯ ಪ್ರವೇಶ ನಿಷಿದ್ಧವಾಗಿತ್ತು. ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಗೋಕರ‍್ಣದ ಶಿವರಾತ್ರಿಯಲ್ಲಿ ಮಹಾಬಲೇಶ್ವರ ದೇವಸ್ಥಾನ ಪ್ರವೇಶಕ್ಕೆ ಅರ‍್ಚಕರು ತಡೆದಾಗ ನಮ್ಮ ತಂದೆಯವರು ಅರ‍್ಚಕರೊಡನೆ ಜಗಳಕ್ಕೇ ನಿಂತಿದ್ದು ನನಗೆ ನೆನಪಿದೆ. ಇಂಥ ಸನ್ನಿವೇಶಗಳಿಂದಾಗಿ ‘ದೇವಾಲಯಗಳಿಗೆ ಹೋಗದಿದ್ದರೆ ಆಗುವ ನಷ್ಟವೇನು?’ ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡು ಅವುಗಳಿಂದ ದೂರವೇ ಉಳಿದೆ. ಹಾಗೆಂದು ನಾಸ್ತಿಕನೇನಲ್ಲ. ನಾನು ದೇವರನ್ನು ಆರಾಧಿಸುವ ಕ್ರಮ-ಪರಿಕಲ್ಪನೆಗಳು ಬೇರೆ ಅಷ್ಟೇ. ಮನುಷ್ಯನನ್ನು ಮನುಷ್ಯನಾಗಿ ನೋಡದ, ಮನುಷ್ಯ ಮನುಷ್ಯರ ನಡುವೆ ಭೇದ ಕಲ್ಪಿಸುವ ಯಾವ ದೇವರು ಧರ‍್ಮದ ಕುರಿತಾಗಿಯೂ ನನ್ನ ದಿಕ್ಕಾರವೇ. ಸೌಹಾರ್ದತೆ-ಶಾಂತಿ – ಪ್ರೀತಿಯ ನೆಲೆಯ ಯಾವ ಧರ‍್ಮವೇ/ದೇವರೇ ಆದರೂ ನಾನು ಆತ್ಮಸಾಕ್ಷಿಯಾಗಿ ಆರಾಧಿಸುವೆ. ದೇವಾಲಯ ಪ್ರವೇಶ, ಕ್ಷೇತ್ರದರ್ಶನ ಇತ್ಯಾದಿ ನನಗೆ ನಂಬಿಕೆಯಿಲ್ಲ. ಪ್ರಶ್ನೆ: ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕುರಿತು ನಿಮಗೆ ಏನನ್ನಿಸುತ್ತದೆ? ಉತ್ತರ : ಸಾಂಸ್ಕೃತಿಕ ವಾತಾವರಣ ತಕ್ಕಮಟ್ಟಿಗೆ ಆಶಾದಾಯಕವಾಗಿಯೇ ಇದೆ ಅನಿಸುತ್ತದೆ. ಅಲ್ಲಿಯೂ ಆಗಾಗ ಪ್ರವೇಶ ಪಡೆಯುವ ರಾಜಕಾರಣ, ಸ್ವಜನಪಕ್ಷಪಾತ ಇತ್ಯಾದಿಗಳು ಸ್ವಲ್ಪಮಟ್ಟಿನ ಆತಂಕಕ್ಕೆ ಕಾರಣವಾಗುತ್ತದೆ ಎಂಬುದು ನಿಜವಾದರೂ ಒಟ್ಟಾರೆಯಾಗಿ ಸಾಂಸ್ಕೃತಿಕ ವಾತಾವರಣ ಸಹನೀಯವಾಗಿದೆ ಎನ್ನಬಹುದು. ಪ್ರಶ್ನೆ: ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ : ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿಯೂ ರಾಜಕಾರಣ ತನ್ನ ಕಬಂಧ ಬಾಹುಗಳನ್ನು ಚಾಚುತ್ತಲೇ ಇರುತ್ತದೆ. ಸಾಹಿತ್ಯ ವಲಯ ಕೂಡ ಇದರಿಂದ ಹೊರತಾಗಿಲ್ಲ. ಇಲ್ಲಿಯೂ ಮತ್ತೆ ಅದೇ ಪ್ರಶ್ನೆ. ಮತ ಧರ‍್ಮಗಳಿಗೆ ಸೇರಿದ, ಸೇರದ ಎಂಬ ಗುಂಪುಗಾರಿಕೆ, ಅಕಾಡೆಮಿ, ಸಾಹಿತ್ಯ ಪರಿಷತ್ತು, ಮತ್ತಿತರ ಸಾಹಿತ್ಯ ಸಂಘಟನೆಗಳಲ್ಲಿನ ಗದ್ದುಗೆಯ ಗುದ್ದಾಟ ಇತ್ಯಾದಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವುದು ಅಸಹನೀಯವೆನಿಸುತ್ತದೆ. ಸಾಹಿತ್ಯದ ಓದು-ಬರಹಗಳು ಭಾವನಾತ್ಮಕವಾಗಿ ನಮ್ಮನ್ನು ಒಂದುಗೂಡಿಸಲು ವಿಫಲವಾದರೆ ಅದರಿಂದ ಶ್ರೀಸಾಮಾನ್ಯನಿಗಾಗುವ ಪ್ರಯೋಜನವಾದರೂ ಏನು? ಪ್ರಶ್ನೆ: ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ? ಉತ್ತರ : ಅಂತರಾಷ್ಟ್ರೀಯ ಮಟ್ಟದ ಸ್ನೇಹ-ಬಾಂಧವ್ಯ, ಸ್ವಚ್ಛತೆಯ ಕುರಿತಾದ ರಾಷ್ಟ್ರಮಟ್ಟದ ಅರಿವು ಮುಂತಾದ ಸಂಗತಿಗಳು ಹೆಮ್ಮೆಯೆನಿಸುವಂತಿವೆ. ದಿನದಿಂದ ದಿನಕ್ಕೆ ಗಾಬರಿ ಹುಟ್ಟಿಸುವಂತೆ ಬೆಳೆಯುತ್ತಿರುವ ಆರ್ಥಿಕ ಹಿಂಜರಿತ, ನಿರುದ್ಯೋಗದ ತೀವ್ರ ಸಮಸ್ಯೆ, ರೈತರು ಮತ್ತು ಮದ್ಯಮ ವರ‍್ಗದ ಜನಸಾಮಾನ್ಯರ ಸಮಸ್ಯೆಗಳು ಆತಂಕ ಹುಟ್ಟಿಸುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದೊಂದಿಗೆ ಪ್ರಬಲ ವಿರೋಧಿ ಪಕ್ಷವೂ ಸಕ್ರಿಯವಾಗಿರಬೇಕಾಗುತ್ತದೆ. ರಾಜ್ಯದಲ್ಲಿಯೇ ಇರಲಿ ರಾಷ್ಟ್ರಮಟ್ಟದಲ್ಲಿಯೇ ಇರಲಿ ಧ್ವನಿ ಕಳೆದುಕೊಳ್ಳುತ್ತಿರುವ ವಿರೋಧ ಪಕ್ಷಗಳ ಸ್ಥಿತಿಯನ್ನು ಗಮನಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆ ಭವಿಷತ್ತಿನಲ್ಲಿ ಸಾಧ್ಯವೆ? ಸಂವಿಧಾನ ನಿಷ್ಠೆಯ ಕುರಿತು ಗಂಭೀರ ಚಿಂತನೆ ತುರ್ತು ಅಗತ್ಯವೆನಿಸುತ್ತದೆ. ಪ್ರಶ್ನೆ: ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಸಾಹಿತ್ಯ ರಚನೆ ಆಶಾದಾಯಕವಾಗಿ ಅಭಿವೃದ್ಧಿ ಹೊಂದುತ್ತಿರುವುದು ಸಂತೋಷ ತರುತ್ತಿದೆ. ಆದರೆ ಅದೇ ಪ್ರಮಾಣದಲ್ಲಿ ಓದುಗರ ಸಂಖ್ಯೆ ಬೆಳೆಯುವಂತೆ ತೋರುತ್ತಿಲ್ಲ. ಸಾಹಿತ್ಯ ವೇದಿಕೆಗಳು, ಸಂಘ-ಸಂಸ್ಥೆಗಳು ಯುವ ಓದುಗರನ್ನು ಹೆಚ್ಚಿಸುವ ಕುರಿತು ಯೋಜನೆಗಳನ್ನು ರೂಪಿಸಬೇಕು, ಪ್ರಯತ್ನಿಸಬೇಕು. ವೈಯುಕ್ತಿಕವಾಗಿ ಇನ್ನಷ್ಟು ಬರಹಗಳಲ್ಲಿ ತೊಡಗಿಕೊಳ್ಳುವ, ಪ್ರಕಟನೆಯ ಕನಸುಗಳಿವೆ ನೋಡಬೇಕು. ಪ್ರಶ್ನೆ: ಕನ್ನಡ ಮತ್ತು ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಕಾಡಿದ ಕತೆಗಾರ ಸಾಹಿತಿ ಯಾರು? ಕನ್ನಡದಲ್ಲಿ ಬಹುತೇಕ ಎಲ್ಲ ಹಿರಿಯ ಸಾಹಿತಿಗಳೂ ಕವಿಗಳೂ ನನ್ನ ನೆಚ್ಚಿನವರೇ. ದೇವನೂರು, ತೇಜಸ್ವಿ, ಕುಂ. ವೀರಭದ್ರಪ್ಪ ನನ್ನ ಬಹುಮೆಚ್ಚಿನ ಲೇಖಕರು. ಮುಖ್ಯವಾಗಿ ಕಥೆ ಬರೆಯುವ ನಿಟ್ಟಿನಲ್ಲಿ ಕುಂ.ವೀ. ನನ್ನ ಇಷ್ಟದ ಮತ್ತು ನನ್ನನ್ನು ತುಂಬ ಪ್ರಭಾವಿಸಿದ ಕತೆಗಾರ. ಇಂಗ್ಲೀಷ ಸಾಹಿತ್ಯ   ಶ್ರದ್ಧೆಯ ಓದು ನನ್ನದಲ್ಲ ಹೆಮಿಂಗ್ವೇ, ಗಾರ್ಕಿ ಟಾಲ್ಸ್ಟಾಯ್ರಂಥವರ ಪ್ರಾಸಂಗಿಕ ಬೀಸು ಓದು ಮಾತ್ರವೇ ನನಗೆ ಸಾಧ್ಯವಾಗಿದೆ. ಯಾವ ಬಗೆಯ ಪ್ರಭಾವಕ್ಕೆ ದಕ್ಕುವ ಲೇಖಕರನ್ನು ಹೆಸರಿಸಲಾರೆ ಕ್ಷಮಿಸಿ. …. ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಅಂಕಣ ಸಂಗಾತಿ, ಮುಖಾಮುಖಿ

ಬಣ್ಣ-ರೇಖೆಗಳ ಜೊತೆಯಾಟ ಪಕ್ಷಾತೀತ ಕಲಾವಿದ ಅನಾಥ ಶಿಶುವಿನಂತೆ’ ಎಂ.ಎಲ್.ಸೋಮವರದ ಎಂ.ಎಲ್.ಸೋಮವರದ ದೇಶ ಕಂಡ ಉತ್ತಮ ಕಲಾವಿದರಲ್ಲಿ ಒಬ್ಬರು. ಮಂಡ್ಯದ ವಿ.ವಿ.ನಗರದ ಕಲ್ಲಹಳ್ಳಿ ನಿವಾಸಿ. ತುಂಬಾ ನಿಷ್ಠುರ ವ್ಯಕ್ತಿತ್ವದ ಸೋಮವರದ , ಜೀವನದಲ್ಲಿ ಕಷ್ಟಗಳನ್ನೇ ಹೆಚ್ಚು ಹೊದ್ದವರು. ನ್ಯಾಯ, ನೈತಿಕ ಮತ್ತು ವೈಚಾರಿಕ ನಿಲುವಿನ ಕಲಾವಿದ. ವೈಚಾರಿಕ ಮನೋಭಾವದಿಂದ ಅನೇಕ ಅವಕಾಶಗಳನ್ನು ಕಳೆದುಕೊಂಡವರು. ಎಂ.ಎಲ್.ಸೋಮವರದ ಬೆಂಗಳೂರಿನ ಕೆನ್ ಕಲಾ ಶಾಲೆಯಿಂದ 1987ರಲ್ಲಿ ಡಿ.ಎಂ.ಸಿ. ಪದವಿ ಪಡೆದವರು. 2008 ರಲ್ಲೇ ಮೈಸೂರು ಮುಕ್ತ ವಿ.ವಿ.ಯಿಂದ ಬಿ.ಎಫ್.ಎ. ಅಧ್ಯಯನ ಮಾಡಿದರು. ಮಂಡ್ಯ, ಮೈಸೂರು, ಶ್ರೀರಂಗ ಪಟ್ಟಣ, ಕಾರವಾರ ಸೇರಿದಂತೆ ಹತ್ತು ಹಲವು ಕಡೆ ಚಿತ್ರಕಲಾ ಶಿಬಿರಗಳಲ್ಲಿ ಭಾಗವಹಿಸಿ, ತಮ್ಮ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಚಿತ್ರಗಳನ್ನು ಶಿಬಿರಗಳಲ್ಲಿ ಬಿಡಿಸಿದ್ದಾರೆ. ಕಲಾ ಜಾತ್ರೆ, ಚಿತ್ರ ಸಂತೆ, ಜಪಾನ್ ಮಾದರಿ ಗದ್ದೆಚಿತ್ರ, ಬಹುರೂಪಿ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. 2014ರಲ್ಲಿ ಟ್ಯಾಗೋರ್ ಚಿತ್ರ ಕಲಾಶಾಲೆ ಕಾರವಾರದಲ್ಲಿ ಚಿತ್ರಕಲಾ ಪ್ರದರ್ಶನ ಮಾಡಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಗುಟ್ಟು ಹೇಳಿಕೊಟ್ಟಿದ್ದಾರೆ. 2019ರಲ್ಲಿ ಲಲಿತಾ ಕಲಾ ಅಕಾಡೆಮಿ ಏರ್ಪಡಿಸಿದ್ದ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಸೋಮವರದ ಇಲ್ಯುಸ್ಟ್ರೈಷನ್ ,ಅಕ್ಷರ ವಿನ್ಯಾಸ ಮಾಡುವುದರಲ್ಲಿ, ರೇಖಾಚಿತ್ರ ಬಿಡಿಸುವುದರಲ್ಲಿ ಪಳಗಿದವರು. ಇವರ ಚಿತ್ರಗಳು ಮಯೂರದಲ್ಲಿ ಕತೆ, ಕವಿತೆ. ಲೇಖಕರ ಪರಿಚಯದ ವಿಭಾಗಗಳಲ್ಲಿ ಪ್ರಕಟವಾಗಿವೆ. ಅಲ್ಲದೇ ಪ್ರಜಾವಾಣಿ, ಭಾವನಾ, ಸುಧಾ, ಕಸ್ತೂರಿ, ಅನ್ವೇಷಣೆ,ಪೈರು ಪಚ್ಚೆ, ವಿಜಯಕರ್ನಾಟಕ, ಚಂದ್ರಿಕೆ ಹೀಗೆ ಹಲವು ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ, ತ್ರೈಮಾಸಿಕ ಪತ್ರಿಕೆಗಳಲ್ಲಿ ಅವರ ಚಿತ್ರಗಳು ಪ್ರಕಟವಾಗಿವೆ. ಸೋಮವರದ ವೈಚಾರಿಕ ಪ್ರಜ್ಞೆಗೆ ಚಿತ್ರಕಲೆಯನ್ನು ಬಳಸಿದ ಕಲಾವಿದರೂ ಹೌದು. ನಾಡಿನ ವಿವಿಧ ಲೇಖಕರ ಕಥಾ, ಕವಿತಾ, ಪ್ರಬಂಧ ಸಂಕಲನಗಳಿಗೆ ಮುಖಪುಟ ರಚಿಸಿದ್ದಾರೆ. “ಕಡಲ ದಂಡೆಗೆ ಬಂದ ಬಯಲು” ಕಥಾ ಸಂಕಲನ ಹಾಗೂ “ಬಿಸಿಲ ಬಯಲ ಕಡಲು” ಕವನ ಸಂಕಲನಕ್ಕೆ ಮುಖಪುಟವನ್ನು ಸಹ ಕಲಾವಿದ ಎಂ.ಎಲ್.ಸೋಮವರದ ಮಾಡಿದ್ದಾರೆ. ಅಮೆರಿಕಾದಲ್ಲಿನ ಕೆಲ ಕನ್ನಡಿಗರು ಸೋಮವರದ ಅವರ ಚಿತ್ರಗಳನ್ನು ಕೊಂಡು ಅವರ ಮನೆಗಳನ್ನು ಅಲಂಕರಿಸಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಸಾವಯವ ಸಮ್ಮೇಳನಕ್ಕೆ ಬಂದಿದ್ದ ಮಲೇಷಿಯಾದ ಓರ್ವ ಮಹಿಳೆ, ಇವರು ಸೀರೆ ಮೇಲೆ ರೂಪಿಸಿದ ವಿನ್ಯಾಸ ಇಷ್ಟಪಟ್ಟು ಖರೀದಿಸಿದ್ದರು. ಜರ್ಮನಿಯ ಪ್ರಜೆ ಇವರ ಒಂದು ಕಲಾಕೃತಿಯನ್ನು ಸಹ ಕೊಂಡುಕೊಂಡಿದ್ದರು.…………………………………………………………………….. ಪ್ರಶ್ನೆ : ನೀವು ಚಿತ್ರಗಳನ್ನು ಏಕೆ ಬರೆಯುತ್ತೀರಿ? ಉತ್ತರ : ನನ್ನ ಮತ್ತು ನನ್ನಕುಟುಂಬದ ಅನಿವಾರ್ಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಚಿತ್ರ ಮತ್ತು ಬಣ್ಣಗಳ ಜೊತೆ ಆಟವಾಡಿ ಹಣ ಸಂಪಾದಿಸುತ್ತೇನೆ. ಪ್ರಶ್ನೆ :ಚಿತ್ರ ಹುಟ್ಟುವ ಕ್ಷಣಯಾವುದು? ಉತ್ತರ: ಕಲೆ ಮತ್ತು ಚಿತ್ರ ಗ್ರಾಹಕರ , ಚಿತ್ರಗಳ ಖರೀದಿಸುವವರ ಅವಶ್ಯಕತೆಯ ಅಪೇಕ್ಷೆಯ ವಿನ್ಯಾಸಗಳಾದುದರಿಂದ , ಹೆಚ್ಚಿನ ಪಾಲು ಹಣ ಸಂಪಾದನೆಯ ಕ್ಷಣವಾಗಿರುತ್ತದೆ. ಪ್ರಶ್ನೆ : ನಿಮ್ಮ ಚಿತ್ರಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ : ನನ್ನ ಚಿತ್ರಗಳ ವಸ್ತು ಹೆಚ್ಚಿನ ಪಾಲು ಗ್ರಾಹಕರ ಇಚ್ಛೆಗನುಸಾರವಾಗಿರುತ್ತದೆ. ವೈಯಕ್ತಿಕ ಕಲಾಪ್ರದರ್ಶನದ ಉದ್ದೇಶದ ಸಂದರ್ಭದಲ್ಲಿ ನನ್ನ ಸುತ್ತಲಿನ ಜಗತ್ತಿನ ಅನುಭವಗಳನ್ನು ನನ್ನದೇ ರೀತಿಯಲ್ಲಿ ಅಭಿವ್ಯಕ್ತಿಗೊಳಿಸುತ್ತೇನೆ. ಪದೇ ಪದೇ ಕಾಡುವ ವಿಷಯ ಮನುಷ್ಯನ ಸ್ವಾರ್ಥ ಮತ್ತು ಭ್ರಷ್ಟಾಚಾರ. ಪ್ರಶ್ನೆ : ಕವಿತೆಗಳಲ್ಲಿ ಬಾಲ್ಯ,ಹರಯಇಣುಕಿದೆಯೇ? ಉತ್ತರ : ನನ್ನರೇಖಾ ಚಿತ್ರಗಳಲ್ಲಿ ಬಾಲ್ಯಕ್ಕಿಂತ ಹೆಚ್ಚಾಗಿ ಹರೆಯ ಇಣುಕಿದೆ. ಪ್ರಶ್ನೆ : ರೇಖೆಗಳು ಕಲೆಯ ಶಾಸ್ತ್ರೀಯ ನೆಲೆ ಅಂತಾರೆ , ಈ ಬಗ್ಗೆ ಏನು ಹೇಳುವಿರಿ ? ಉತ್ತರ : ರೇಖೆಗಳು ಚಿತ್ರಕಲೆಯ ಜೀವಾಳ. ಒಟ್ಟು ಚಿತ್ರಕಲೆಯೇ ಶಾಸ್ತ್ರೀಯ. ಪ್ರಶ್ನೆ : ಬೇಲೂರು ಹಳೇಬೀಡು ಮತ್ತು ಬಾದಾಮಿ, ಪಟ್ಟದಕಲ್ಲಿನ ಶಿಲ್ಪಗಳಲ್ಲಿನ ವಿಶೇಷತೆ ಏನು ? ಉತ್ತರ : ಬೇಲೂರು, ಹಳೇಬೀಡಿನ ಶಿಲಾಬಾಲಕಿಯರಲ್ಲಿ ಬೆಡಗು, ಬಿನ್ನಾಣ, ಸೂಕ್ಷ್ಮಕುಸುರಿ ಇದ್ದು ಕೌಶಲ್ಯವೇ ಮೇಲುಗೈ ಸಾಧಿಸಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲಿನ ಶಿಲಾಬಾಲಿಕೆಯರಲ್ಲಿ ಕಲಾತ್ಮಕತೆ ಮೇಲುಗೈ ಸಾಧಿಸಿದೆ. ಪ್ರಶ್ನೆ: ಪ್ರಸ್ತುತರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಉತ್ತರ : ಪ್ರಸ್ತುತ ರಾಜಕೀಯ ಸನ್ನಿವೇಶ ಪ್ರಜಾಪ್ರಭುತ್ವದ ಬೇರುಗಳನ್ನು ಕತ್ತರಿಸುತ್ತಾ ಸಮಾಜ ಸುಧಾರಣೆಯ ಮುಖವಾಡತೊಟ್ಟು ಕೇಕೆ ಹಾಕಿ ವಿಜೃಂಭಿಸುತ್ತಿದೆ. ಪ್ರಶ್ನೆ: ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವು ಏನು? ಉತ್ತರ :ಧರ್ಮ ಬೇಕಿಲ್ಲ. ದೇವರೂ ಬೇಕಿಲ್ಲ. ಮನುಷ್ಯತ್ವವಿರುವ ಮನುಷ್ಯರು ಬೇಕು. ಪ್ರಕೃತಿ ಸಹಜವಾಗಿರಬೇಕು. ಪ್ರಶ್ನೆ: ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನು ಹೇಳಬೇಕು ಅನಿಸುತ್ತಿದೆ ? ಉತ್ತರ : ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಭ್ರಷ್ಟಾಚಾರದಿಂದ ಬದುಕುತ್ತಿದೆ. ನಿಜವಾದ ಸಂಸ್ಕೃತಿ ಕೊನೆಯುಸಿರೆಳೆಯುತ್ತಿದೆ. ಪ್ರಶ್ನೆ: ಚಿತ್ರಕಲಾ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಉತ್ತರ :ಚಿತ್ರ, ಕಲಾಲೋಕವೇ ರಾಜಕಾರಣದಲ್ಲಿ ಮುಳುಗಿ ತೇಲುತ್ತಿದೆ. ಯಾವ ಪಕ್ಷಕ್ಕೆ ಯಾವ್ಯಾವ ಕಲಾವಿದರು ಎಷ್ಟೆಷ್ಟು ನಿಷ್ಠರೋ , ಅಷ್ಟರ ಮಟ್ಟಿಗೆ ಫಲಾನುಭವಿಗಳು.ಪಕ್ಷಾತೀತ ಕಲಾವಿದ ಮಾತ್ರ ಅನಾಥ ಶಿಶುವಿನಂತೆ. ಪ್ರಶ್ನೆ: ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತಿದೆ? ಉತ್ತರ : ದೇಶದ ಚಲನೆ ಬುಲ್ಡೋಜರ್ ನಂತಾಗಿದೆ. ಪ್ರಶ್ನೆ: ಚಿತ್ರಕಲೆಯ ಬಗ್ಗೆ ನಿಮ್ಮ ಕನಸುಗಳು ಏನು? ಉತ್ತರ :ಆರ್ಟ್ ಪೈಂಟಿಂಗ್ಸ್ ನನ್ನನ್ನು ಪೋಷಿಸುವುದರ ಜೊತೆಗೆ ನನ್ನ ಭಾವನೆಗಳ ಅಭಿವ್ಯಕ್ತಿ ಮಾಧ್ಯಮವಾಗಿ ದೃಶ್ಯ ಸಂಪುಟವಾಗಬೇಕು. ಪ್ರಶ್ನೆ: ನಿಮ್ಮಇಷ್ಟದ ಸ್ವದೇಶಿ ಚಿತ್ರಕಲಾವಿದರು ಯಾರು ? ಉತ್ತರ :ಕರ್ನಾಟಕದ ಆರ್.ಎಂ.ಹಡಪದ್, ಎಂ.ಬಿ.ಪಾಟೀಲ್, ವಿ.ಬಿ.ಹಿರೇಗೌಡರ್, ಯೂಸುಫ್ ಅರಕ್ಕಲ್, ಕೆ.ಕೆ.ಹೆಬ್ಬಾರ್ ಹಾಗೆಯೇ ದೇಶದ ಹೆಸರಾಂತ ಕಲಾವಿದರಾದ ಎಂ.ಎಫ್.ಹುಸೇನ್, ಜಾಮಿನಿರಾಯ್, ಕೆ.ಜಿ.ಸುಬ್ರಹ್ಮಣ್ಯಮ್, ರವಿವರ್ಮ ಇವರು ನನ್ನ ಕಾಡಿದ ಕಲಾವಿದರು. ಪ್ರಶ್ನೆ: ನಿಮ್ಮಇಷ್ಟದ ವಿದೇಶಿ ಚಿತ್ರಕಲಾವಿದರು ಯಾರು ? ಉತ್ತರ : ವಿದೇಶದ ಕಲಾವಿದರಾದ ಮೈಕೆಲ್ ಏಂಜೆಲೋ, ಲಿಯೋನಾರ್ಡ್ ಡಾವಿಂಚಿ, ರೆಂಬ್ರಾಂಟ್, ಸಾಲ್ವೆಡರ್ಡಾಲಿ, ವ್ಯಾನ್ಗಾಗ್, ಪಿಕಾಸೋ. ———–. ಕಲಾವಿದರ ಕೃತಿಗಳ ಫೋಟೊ ಆಲ್ಬಂ *********** ನಾಗರಾಜ ಹರಪನಹಳ್ಳಿ ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

You cannot copy content of this page

Scroll to Top