ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಮ್ಮ ಕವಿ

ನಮ್ಮ ಕವಿ

ವಿಜಯಕಾಂತ ಪಾಟೀಲ ವಿಜಯಕಾಂತ ಪಾಟೀಲರ ಸಾಹಿತ್ಯ ಕೃಷಿಯೂ..! ಅವರು ಪಡೆದ ಹಲವಾರು ಗೌರವಗಳೂ.!! ವಿಜಯಕಾಂತ ಪಾಟೀಲರು ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದವರು… ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕ್ಯಾಸನೂರು, ಶಕುನವಳ್ಳಿ (ಸೊರಬ)ದಲ್ಲಿ ಓದಿದರು… ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿಯನ್ನು ಧಾರವಾಡದಲ್ಲಿ ಮುಗಿಸಿದರು. ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ ಮಾಡಿದರು… ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿಯಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿದ್ದವರು. ವಿಜಯಕಾಂತ ಪಾಟೀಲರ ಪ್ರಕಟಿತ ಕೃತಿಗಳೆಂದರೆ ೧) ಮಾಸದ ಕಲೆಗಳು (1994), ೨) ಸಲಸಲದ ಪಾಡು (2003), ೩) ನೂರು ಬಣ್ಣದ ಕಣ್ಣು (2012), ೪) ಹೌದು ನಾನು ಕೌದಿ (2013), ೫) ಇಂತಿ ನದಿ (20050) ಕವನ ಸಂಕಲನ… ಅವರ ಪ್ರಬಂಧಗಳು ವಜನುಕಟ್ಟು (2005). ಮಕ್ಕಳ ಸಾಹಿತ್ಯವು ಅಮ್ಮ ಅಂದ್ರೆ ಅಷ್ಟಿಷ್ಟಲ್ಲ-ಕವಿತೆಗಳು (2014). ಹಕ್ಕಿಗಳ ಸ್ವಾತಂತ್ರ್ಯೋತ್ಸವ (2016). ಅವರ ಇತರೆ ಕೃತಿಗಳೆಂದರೆ ಕನಸಿನ ಹೊಸ ಅಧ್ಯಾಯ (ಸಂಪಾದಿತ ಕತೆಗಳು-2005 ), ಒಂದು ಹಿಡಿ ಮುತ್ತು (ಸಂದರ್ಶನ ಲೇಖನಗಳು- 2008), ಸದಾ ಹರಿವು ಕನ್ನಡ (ಭಾವಗೀತೆಗಳ ಧ್ವನಿಮುದ್ರಿಕೆ-2015). ಅವರಿಗೆ ಹಲವಾರು ಪ್ರಶಸ್ತಿ ಬಹುಮಾನ ಹಾಗೂ ಗೌರವ ಪಡೆದರು ವಿಜಯಕಾಂತ ಪಾಟೀಲರು. ಅವುಗಳು ಹೀಗಿವೆ– ಬೇಂದ್ರೆ-ಅಡಿಗೆ ಕಾವ್ಯ ಪ್ರಶಸ್ತಿ, ಕಯ್ಯಾರ ಕಿಞ್ಞಣ್ಣ ರೈ ಕಾವ್ಯ ಪ್ರಶಸ್ತಿ, ಸಂಕ್ರಮಣ, ಸಂಚಯ, ಪ್ರಜಾವಾಣಿ, ಜಿಲ್ಲಾ ಕಸಾಪ ಮೊದಲಾದವುಗಳು ಏರ್ಪಡಿಸಿದ ಕಾವ್ಯ ಸ್ಪರ್ಧೆಯ ಬಹುಮಾನಗಳೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ… ಹಾನಗಲ್ ತಾಲ್ಲೂಕು ಮೊದಲ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷತೆ(2011)ಯನ್ನೂ ವಹಿಸಿದ್ದರು… ಈಗವರ ಕೃತಿಗಳ ಬಗೆಗೆ ನೋಡೋಣ– ಈ ವರೆಗಿನ ವಿಜಯಕಾಂತ ಪಾಟೀಲರ ಕೃತಿಗಳ ಕಿರು ಪರಿಚಯ… ೧.ಮಾಸದ ಕಲೆಗಳ ಈ ಮೊದಲ ಸಂಕಲನದ ಮೂಲಕ ಭವಿತವ್ಯದಲ್ಲಿ ಕಾವ್ಯ ಹೊರಳಿಕೊಳ್ಳಬಹುದಾದ ಮಾನವೀಯ,ಸಾಮಾಜಿಕ ನಡೆಯನ್ನು ಕವಿ ಸ್ಪಷ್ಟಪಡಿಸಿಕೊಂಡಿದ್ದಾರೆ. ಬಂಡಾಯ ಮನೋಧರ್ಮಕ್ಕನುಗುಣವಾಗಿ ಅರಳಿಕೊಂಡ ಇಲ್ಲಿನ ಹಿರಿಗವನಗಳು ಮತ್ತು ಕಿರುಗವಿತೆಗಳು ಬದುಕು ಬವಣೆಗಳ ಒಡನೆಯೇ ಪ್ರೀತಿಯೆಡೆಗೂ ತನ್ನ ಚಿತ್ತವನ್ನು ಹರಿಸಿವೆ. ಇಲ್ಲಿ ಕಾವ್ಯಬಂಧದ ಕಡೆಗೂ ಕವಿ ಗಮನ ಹರಿಸಿರುವುದು ಸ್ತುತ್ಯಾರ್ಹ ಸಂಗತಿ ೨. ಸಲಸಲದ ಪಾಡು ಈ ಕೃತಿಯು ಪ್ರಕೃತಿಯ ಪಲ್ಲವಿಸುವಿಕೆ, ಬರದ ಬಸವಳಿಕೆ, ಹಿರಿಯ ತಲೆಮಾರಿನ ಹಳಹಳಿಕೆ, ಹೊಸ ಹರೆಯದ ಹುರುಪು ಹೊಳೆದ ಕೆರಳಿಕೆಗಳ ಸಾಹಿತ್ಯರೂಪ; ಸಾಲು ಸಾಲುಗಳ ನಡುವೆ ಮಿಂಚಿದ ಭಾವ ಗೊಂಚಲು; ಪ್ರಕೃತಿಯಂತೆ ಕವಿಯ ಚಿತ್ತ ಹರಿದಿರುವುದು ಈ ಕಾವ್ಯಗುಚ್ಛದ ಹೆಗ್ಗಳಿಕೆ. ನೆನಪು ಮತ್ತು ಗಾಯದ ಚೆಂದವೂ ಇಲ್ಲಿ ಅನುರಣನಗೊಂಡಿದೆ ೩. ನೂರು ಬಣ್ಣದ ಕಣ್ಣು:ಈ ಸಂಕಲನವು ಮಳೆ ಬಿದ್ದ ನೆಲದಿಂದ ಎದ್ದ ಹುಡಿಯ ಘಮಲು; ಸ್ವಲ್ಪ ಸ್ವಲ್ಪವೇ ಮೂಗಿಗಡರುವ ಅಲ್ಲೆಲ್ಲೋ ಅರಳಿದ ಹೂವಿನ ಪರಿಮಳ; ಅಷ್ಟೂ ನೋವಸಂಕಟವನ್ನು ಒಟ್ಟು ಮಾಡಿ ಹೊರಹಾಕಿ ನಿಡುಸುಯ್ಯುವ ಉಸಿರ್ಗರೆತ; ಎಲ್ಲ ಹೇಳಿಯೂ ಹೇಳದಂತಿರುವ ಒಂದು ಮೌನದ ಜೊತೆಗಿನ ಸಂವಾದವಾಗಿ ಕಾಣುತ್ತದೆ. ನಿಜದ ಬದುಕಿನಿಂದ ವಿಮುಖವಾಗದ ಕವಿತೆಗಳ ಅಪರೂಪದ ಸಂಗ್ರಹ ಈ ನೂರು ಬಣ್ಣದ ಕಣ್ಣು…. ೪. ಹೌದು ನಾನು ಕೌದಿ: ಇಲ್ಲಿ ಕವಿಯು ‘ಸ್ವಕಾವ್ಯ ಹಾದಿ’ಯ ತಿರುವಿನಲ್ಲಿದ್ದಾರೆ. ಪದಗುಣಿತಾರ್ಥ,ಹೊಸ ಅರ್ಥಗಳ ನೆಗೆತ ಹಾಗೂ ಸಂಯೋಜನೆಯ ಒಳದನಿಗಳು ಇಲ್ಲಿ ಓದಿನ ಪುಳಕಕ್ಕೆ ಒಳಮಾಡುತ್ತವೆ. ತಮ್ಮ ಸಹಜಭಾಷಾಸಾಮರ್ಥ್ಯದ ಮೂಲಕ,ಸಮಕಾಲೀನ ಕಾವ್ಯದಬೀಸನ್ನು ಆವಿಷ್ಕರಿಸಿಕೊಂಡು ಬರೆಯುತ್ತಿರುವ ಕವಿಯ ಕಾವ್ಯ ಓದಿನ ಖುಷಿಯ ಜೊತೆಗೆ ಕಾವ್ಯ ನಿಜಾನುಭವದ ಸಂವೇದನೆಗಳನ್ನು ಚಾರ್ಜ್ ಮಾಡುವ ಶಕ್ತಿಯವು. ಸಾಮಾಜಿಕ ಮತ್ತು ಸೌಂದರ್ಯ ಪ್ರಜ್ಞೆಗಳೆರಡನ್ನೂ ಏಕೀಭವಿಸಿ ನೋಡುವ ಪದ್ಯಗಳು ಇಲ್ಲಿವೆ… ೫. ಇಂತಿ ನದಿ ಇಲ್ಲಿ ಕವಿಯದು ಲೋಕವನ್ನು ಒಳಬಿಟ್ಟುಕೊಳ್ಳುವಲ್ಲಿ, ಅದಕ್ಕೆ ಸ್ಪಂದಿಸುವ ಕ್ರಮದಲ್ಲಿ ಮುಕ್ತ ಹಾಗೂ ಘರ್ಷಣಾತ್ಮಕ ಹಾದಿ. ಹಾಗೆಯೇ ಮಾನವೀಯ ಅಂತಃಕರಣದಿಂದ ಸುತ್ತಣ ಸಂಗತಿಗಳನ್ನು ಪರಿಭಾವಿಸುವ ಮತ್ತು ಪಡಿಮಿಡಿವ ಪ್ರಗತಿಪರ ಮನಸ್ಸು ಈ ಕವಿಯದು.ನವ ಬಂಡಾಯದ ಅಸ್ಪಷ್ಟ ಚಹರೆಗಳು ಇಲ್ಲಿನ ಕವಿತೆಗಳಲ್ಲಿ ಗೋಚರಿಸುತ್ತವೆ… ೬. ಬೆವರ ಬಣ್ಣ: ಜೀವಪರ ಧೋರಣೆಯ ಪ್ರತೀಕವಾಗಿ ಬೆವರಿನ ಬಣ್ಣದ ಹುಡುಕಾಟ ಇಲ್ಲಿ ನಡೆದಿದೆ. ಚುರುಕು ಭಾಷೆ, ನಡೆಯ ಜೊತೆ ಹದವರಿತ ಅಭಿವ್ಯಕ್ತಿಯ ಮೂಲಕ ಕಾವ್ಯದೊಟ್ಟಿಗೆ ಕವಿ ಈ ಸಂಕಲನದಲ್ಲೂ ಸಾಗಿದ್ದಾರೆ.ನೆಲಮೂಲ ಸಂಬಂಧವನ್ನು ಗಾಢವಾಗಿ ಉಳಿಸಿಕೊಂಡ ಕವಿಯ ಕಾವ್ಯದ ಧೋರಣೆ ಜೀವಪರ,ನಿಸರ್ಗಪರವಾಗಿ ಇದ್ದಷ್ಟೇ ಆಳದಲ್ಲಿ ಅದು ಜನಪರ ನಿಲುವಿನಲ್ಲಿ ಅರಳಿದೆ… ಹೀಗೆ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ ವಿಜಯಕಾಂತ ಪಾಟೀಲರು… ** –ಕೆ.ಶಿವು.ಲಕ್ಕಣ್ಣವರ

ನಮ್ಮ ಕವಿ Read Post »

ನಮ್ಮ ಕವಿ

ನಮ್ಮ ಕವಿ

ಬಿದಲೋಟಿ ರಂಗನಾಥ್ ಕವಿ -ವಿಮರ್ಶಕ ಬಿದಲೋಟಿ ರಂಗನಾಥ್ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೋಕಿನ ಒಂದು ಪುಟ್ಟ ಹಳ್ಳಿಯವರು.ತಂದೆ ಮರಿರಂಗಯ್ಯ ತಾಯಿ ಸಿದ್ದಗಂಗಮ್ಮ ಅವರ ಮೊದಲನೇ ಮಗನಾಗಿ ೧೫-೭-೧೯೮೦ ರಂದು ಸ್ವಗ್ರಾಮದಲ್ಲಿ ಜನಿಸಿದ ಅವರಿಗೆ ಬೆಳೆಯುತ್ತಾ ಬೆಳೆಯುತ್ತಾ ಬದುಕು ಕಡಿದಾಗುತ್ತಲೇ ಹೋಯಿತು.ಅವರ ಕಿತ್ತು ತಿನ್ನುವ ಬಡತನ, ಸೋರುವ ಸೂರು ,ಜಾತಿಗೆ ನಲುಗಿದ ಮನಸು,ಅಮ್ಮಳನ್ನು ಆವರಿಸಿದ ಅಸ್ತಮ ಬಿ ರಂ ಅವರನ್ನು ಇನ್ನಿಲ್ಲದಂತೆ ನಲುಗುವಂತೆ ಮಾಡಿ ,ಕೆಂಡ ಹಾಸಿದ ಹಾದಿಯ ಮೇಲೆ ನಡೆಯುವಂತೆ ಮಾಡಿತ್ತು. ಬೆಳಗಿ ಜಾವಕ್ಕೆ ಎದ್ದು ಕಸಮುಸರೆ ಮಾಡಿ ದನದ ಕೊಠಕಿಗೆ ಸೊಪ್ಪು ತಂದಾಕಿ ಇರುವ ಸೊಪ್ಪೊ ಸೆದೆಯೋ ಕಾಳು ಕಡ್ಡಿಯೋ ತಿಂದು ,ಸುಮಾರು ಎರಡು ಮೈಲಿ ಇರುವ ಹೊಳವನಹಳ್ಳಿಗೆ ನಡೆದು ಹೋಗಿ ಶಿಕ್ಷಣ ಪಡೆವ ಅನಿವಾರ್ಯತೆ ಇತ್ತು.ಅಂತಹ ದಿನಗಳನ್ನು ಶಿಕ್ಷಣ ಪಡೆದರು. ಯಾವುದಕ್ಕೂ ಎದೆಗುಂದದೆ ನಡೆದರೂ ಕೂಡ.ಇಂತಹ ಕಷ್ಟ ಕಾರ್ಪಣ್ಯದ ನಡುವೆಯೂ ಅಪ್ಪನಿಗೆ ಮಗನನ್ನು ಓದಿಸಿ ಸಮಾಜಕ್ಕೆ ಒಬ್ಬ ಚಿಕಿತ್ಸಕನನ್ನಾಗಿ ಮಾಡಬೇಕೆಂಬ ಹಂಬಲೂ ಹೆಚ್ಚಿತ್ತು. ಜೊತೆಗೆ ಕವಿಯ ಛಲವೂ ಸೇರಿ ಒಂದು ಸ್ಥಾನಕ್ಕೆ ಬಂದು ನಿಂತರು. .ಬಹುಶಃ ಇವರು ನಲುಗಿದ ಬದುಕು ಕತ್ತಲೆಯ ಕಡಿದಾದ ದಾರಿಯೇ ಇವರು ಕವಿತೆ ಬರೆಯಲು ಪ್ರೇರೆಪಿಸಿರಬೇಕು.ಅವರೊಗೆ ಅಧಮ್ಯ ಕವಿಯೊಬ್ಬ ಜನ್ಮತಾಳಿ, ಯುವ ತಲೆಮಾರಿನ ಸೃಜನಶೀಲ ಕವಿಯೆಂದೇ ಗುರುತಿಸಿಕೊಳ್ಳಲು ಅವರ ಕಾವ್ಯ ಶೈಲಿ ಕಾರಣವಾಗಿರಬಹುದು.ಅವರು ಕಟ್ಟುವ ಕವಿತೆಗಳಲ್ಲಿ ಪ್ರತಿಮೆ, ರೂಪಕ ಶಶಕ್ತವಾಗಿ ಕವಿತೆಯನ್ನು ಆವರಿಸಿರುತ್ತವೆ .ಅವರ ಕವಿತೆಗಳ ಪ್ರವೇಶ ಕಠಿಣವಾದರು ಓದುಗನನ್ನು ಆವರಿಸುವಲ್ಲಿ ಸೋತಿಲ್ಲ ಎಂಬುದು ವಿಶೇಷ. ಅವರು ಇದುವರಿಗೆ “ಮಣ್ಣಿಗೆ ಬಿದ್ದ ಹೂಗಳು ” ಬದುಕು ಸೂಜಿ ಮತ್ತು ನೂಲು ” ಎಂಬ ಎರಡು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.ತಾಲ್ಲೋಕು ಕನ್ನಡ ರಾಜ್ಯೋತ್ಸವ,ಸಂಕ್ರಮಣ ಪುರಸ್ಕಾರ,೨೦೧೫ ರಲ್ಲಿ ತುಮಕೂರು ಜಿಲ್ಲಾ ಕವಿಗೋಷ್ಠಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ನಾಡಿ ಹೆಸರಾಂತ ಪತ್ರಿಕೆಗಳಾದ ಪ್ರಜಾವಾಣಿ,ಕನ್ನಡ ಪ್ರಭ,ಸಂವಾದ ,ಹೊಸತು,ಓ ಮನಸ್ಸೆ ,ಹಾಯ್ ಬೆಂಗಳೂರು ,ಕರ್ಮವೀರ,ಸಂಯುಕ್ತ ಕರ್ನಾಟ ಅಂತರ್ಜಾಲ ಪತ್ರಿಕೆಗಳಾದ,ಅವಧಿ ,ಸಂಗಾತಿ,ಪಂಜು ,ಪಂಜು ಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ. ಶ್ರೀಯುತರು ಮಧುಗಿರಿ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುತ್ತ,ಇಬ್ಬರು ಮಕ್ಕಳು ಮಡದಿಯೊಂದಿಗೆ ಮಧುಗಿರಿಯಲ್ಲಿ ವಾಸವಾಗಿದ್ದಾರೆ. ಇವರ ಕೆಲ ಕವಿತೆಗಳು ನಿಮ್ಮ ಓದಿಗಾಗಿ ನನ್ನೊಳಗಿನ ಬೆಳಕು ದೀಪದ ಬೆಳಕಲ್ಲಿ ನೆಂದ ಸೌದೆಗಳನ್ನು ಒಲೆಗೆ ತುರುಕಿ ಹೊಗೆಯಲ್ಲಿ ಕೆಂಪಾದ ಕಣ್ಣುಗಳ ಉಜ್ಜಿಕೊಳ್ಳುತ ಅವ್ವ ಸುಡುತ್ತಿದ್ದ ರಾಗಿ ರೊಟ್ಟಿ ನನ್ನೊಳಗಿನ ಬೆಳಕು ಗರಿ ತೂತುಗಳಲ್ಲಿ ತೊಟ ತೊಟ ತೊಟ್ಟಿಕ್ಕುವ ಮಳೆ ಹನಿಗಳಿಗೆ ತಪ್ಪಿಸಿಕೊಳ್ಳುತ್ತ ಗೂಡರಿಸಿ ಕೂತು ಒಲೆಯ ಬಾಯಿ ಕೈಯೊಡ್ಡಿ ಬಿಸಿಯಾಗುತ್ತಿದ್ದ ನೆನಪು. ಹೊಲದಲಿ ಕುಪ್ಪೆಮಾಡಿದ ರಾಗಿಕಡ್ಡಿಗಳಲಿ ಅಪ್ಪನಿಟ್ಟ ಜೀವ ಮಂಕರಿಯಲಿ ಹೊತ್ತ ಗೊಬ್ಬರಕೆ ಮೊಳೆತ ಬದುಕಿನ ಪೈರು ಕಣದಲಿ ಅರಳಿದ ಜೀವಂತ ಬದುಕು ಜೇಡಕಟ್ಟಿದ ಬಲೆಯ ಸ್ಪೂರ್ತಿಯಲಿ ಅವ್ವಳ ಎಚ್ಚರದ ನಡಿಗೆ.. ಅಪ್ಪನುಡಿದ ಹಗ್ಗ ಮಿಣಿಗಳೇ ಕಲಿತ ಎರಡಕ್ಷರಕೆ ದಾರಿ ಅಮ್ಮನ ಗೂರಲಲ್ಲೇ ಕರಗಿದ ರಾತ್ರಿಗಳು ಇಂಕಿಲ್ಲದ ಲೇಖನಿಯ ಹಿಡಿದು ಹಾಳೆ ಮೇಲೆ ಬೀಳದ ಅಕ್ಷರಗಳು ಬಡತನದ ಬಡಬಾಗ್ನಿಯು ಬಾಯಾರಿ ಮರಗಟ್ಟಿದ ಜೋಡಿ ಮುರುಕು ಬಟ್ಟೆಗಳು ಬಣ್ಣವಿಲ್ಲದ ಬದುಕಲ್ಲಿ ಒಂಟಿನಿಂತ ಕವೆಗೆ ಜೋಳಿಗೆ ನೇತಾಕುವ ಕೈಗಳು ಎರಗಿದ ತೂಕವ ಹೆಗಲ ಮೇಲೆ ಹೊತ್ತೇ ನಡೆದಳು ನನ್ನೊಳಗಿನ ತೂಕದ ನೋವಿಗೆ ಮರುಗಿದಳು ಬೆವರಲ್ಲೇ ಬೆಂದು ಜೋಪಡಿಗೆ ನೇತಾಕಿದ ಲಾಟೀನು ಬೆಳಕಲ್ಲಿ ನನ್ನವ್ವಳ ನಾಡಿ ಮಿಡಿತ ಅಪ್ಪನ ಕನಸುಗಳಿಗೆ ಬಣ್ಣದ ಲೇಪನ ಗವಾಕ್ಷಿಯ ಬೆಳಕಲ್ಲೇ ಕೋಣೆಯ ಕಣ್ಣುಗಳು ಬೆತ್ತಲಾಗಿ ಹಸಿವಿನ ಮೊಗದ ಕನ್ನಡಿ ಬಯಲಾಗಿದ್ದು ನೋವಿನ ನೆತ್ತರು ಬಿಸಿಯಾಗಿದ್ದು ಸೀಳುಕ್ಕೆಯಲಿ ನೆಂದು ಗಿಡಗೆಂಟೆಗಳ ನಡುವೆ ಉಸಿರಾಡಿ ಜೋಪಡಿ ಕಿಂಡಿಗಳ ಬೆಳಕಿನ ಜೊತೆ ಆಡಿ ಬಯಲ ಬದುಕಲಿ ಬರಿದಾಗಿ ನೆಲದ ನಿಟ್ಟುಸಿರಿಗೆ ದನಿಯಾದವಳು ಕಗ್ಗತ್ತಲ ರಾತ್ರಿಯ ನಡಿಗೆಗೆ ಲೆಕ್ಕವಿಲ್ಲ ಗದ್ದೆಬಯಲಗುಂಟ ಹರಿವ ನೋಟ ಪೆಡೆಗೆ ಹರಿವ ನೀರಿನ ಶಬ್ಧ ಸಂಗೀತ ಅಪ್ಪನ ನಿತ್ಯದ ಕರ್ಣಫಲಾಮೃತ. ಸಾಲು ಸಾಲಿನಲು ನಡೆದು ಹೊತಾರೆ ಬೈಗು ನಡು ಮಧ್ಯಾಹ್ನ ಕನಸುಗಳನು ಹೂ ಕಟ್ಟುವಂತೆ ಕಟ್ಟುತ್ತಲೇ ಅಂಗೈಯೊಳಗೆ ನಕ್ಷತ್ರ ಪುಂಜ ಕಂಡ ಅಪ್ಪನು ನಡೆವ ದಾರಿಯುದ್ದಕ್ಕೂ ಅವ್ವಳ ಹೆಗಲು ಮಾಗಿಯು ಬಾಗಿ ಹುಲುಸು ಸಾಗಿ ಅವ್ವ ನಿಂತ ನಿಲುವಿನಲೇ ನಿಂತು ರೋಣು ಹೊಡೆವಾಗಿನ ಚೈತನ್ಯ ಚಿಲುಮೆಯಲಿ ವರ್ಷದ ಸಂತಸವ ಕಣದಲಿ ಗುಡ್ಡೆ ಮಾಡಿ ಚೀಲ ತುಂಬಿ ಉಗಾದಿಗೆ ಅವ್ವಳ ಹೊಸ ಸೀರೆಯ ನೆರಿಗೆಗಳಲ್ಲಿ ಕನಸುಗಳು ಆಡಿ ಅಪ್ಪನ ಮನದಂಗಳದಲ್ಲಿ ಶುಕ್ರ ಗ್ರಹ ಮಣ್ಣ ಒಸಲಿಗೆ ಅರಿಶಿನ ಕುಂಕುಮ ಅಂಕು ಡೊಂಕಿನ ಸಗಣಿ ಕದರಿನ ಹಟ್ಟಿಯ ಮೇಲೆ ಅವ್ವ ಕಟ್ಟಿ ಹಾಕಿದ ನಗುವ ಪುಡಿ ರಂಗೋಲಿಯ ಗೆರೆಗಳು ಉರಿವ ಒಲೆಯಲಿ ಹಸಿವಿನ ಸಂಕಟವ ಸುಟ್ಟು ಉರಿಯುತ್ತಿದ್ದಳು ಅವ್ವ ಒಳಗೂ ಹೊಲಮಾಳದೊಳಗು ಅವ್ವಳಿಗೆ ಬದುಕೆಂದರೆ ಬೆವರಿ ಬಾಯಾರಿದ ಕಡಲ ಕಿನಾರಿಯ ನೆಲ ತುಂತುರು ಹನಿಯೊಡನೆ ಮಿಲನಗೊಂಡು ತ್ಯಾವಿಸಿ ಮೊಳಕೆ ಇಣುಕಲು ಬಿರಿವ ತಾವು ಬಿರಿದ ನೆಲದ ಬಿಕ್ಕಳಿಕೆ. ಇಟ್ಟ ದಾರಿಯ ಮೇಲಿನ ಹೆಜ್ಜೆಯ ಗುರುತು ತೆವಳುತ ಶಿಖರ ಸೇರುವ ಬಯಕೆ ಗುಡಿಸಲಲಿ ತೂಗುಹಾಕಿದ ತಂತಿಕೊಂಕಿಗೆ ಸಿಕ್ಕಿಸಿದ ವಿದ್ಯುತ್ ಬಿಲ್ಲಿನ ಹಸಿದ ಹೊಟ್ಟೆಯಲಿ ಬಿಚ್ಚಿಕೊಂಡ ಬದುಕಿನ ಸೀಳು ಹಾದಿ ಬೆಣಚಿ ಕಲ್ಲನ್ನು ಒಂದಕ್ಕೊಂದು ತಾಕಿಸಿ ಪೆಕರನಂತೆ ಕಣ್ಣಗಲಿಸುವ ಕದರು ನೆಲಕ್ಕೆ ಕೈ ಊರಿದ ಕಣ್ಣ ಕನಸು ಗಂಟಿನ ಬಟ್ಟೆ ಬಿಚ್ಚಿ ಒಂದೊಂದಾಗಿ ನುಸುಳುವ ಕನಸುಗಳನು ಕೊಡವಿ ಕುಶಲೋಪರಿ ವಿಚಾರಿಸಿ ಮತ್ತೆ ಬಂಧಿಸಿ ಮೌನದ ದಾರಿಯಲಿ ನಿಂತ ಕವಿತೆಯೆಂದರೆ ಅದು ನನ್ನವ್ವ.! ಎದೆಯೊಳಗಿನ ಚಿತ್ರ ನೀನು ನನ್ನ ಎದೆಯನು ಆವರಿಸಿದ ದಿನದಿಂದಲು ನೆಲದಲಿ ಹುದುಗಿದ ಚೂಪು ಕಲ್ಲು- ಮುಳ್ಳುಗಳನು ತುಳಿಯದೆ ಹೆಜ್ಜೆವೂರಿದೆ ದಿನದ ಬೆಳಗು ಕಣ್ಣು ತೆರೆದು ಎದೆಯಿಂದ ಹೊರ ತೆಗೆದು ಮುದ್ದಾಡಿ ಮುತ್ತಿಟ್ಟು ಮೂಗು ಮುಖ ಕಣ್ಣು ಸುಳಿ ಸುದ್ದಗಳು ತೀಡಿ ಮತ್ತೆ ಎದೆಯೊಳಗೇ ಅವಿತಿಟ್ಟು ಧ್ಯಾನಿಸುವ ಖುಷಿಯಲಿ ನನ್ನಾತ್ಮದ ಬೆಳಕಿನ ಚಲನೆ ಕಣ್ಣಬೆಳಕಿನ ಹಾದಿಯುದ್ದಕ್ಕೂ ಶಿಲ್ಪವಾಗೆ ಉಳಿದ ನೀನು ಮಾಸದ ನೆರಳ ಚಿತ್ರ ಅದೊಂದು ಧೂಳು ಧೂಳು ಸಂಜೆ ಸುತ್ತುತಲಿದ್ದೆ ಆ ನೆರಳನು ಬಳಸಿ ಒಳಗೆ ಸಣ್ಣ ನೋವು ನೀರು ಗುಟುಕಿಸಿದೆ ಹೋಗಲಿಲ್ಲ ನೋವು ಎದೆಯೊಳಗಿನ ನಿನ್ನ ಚಿತ್ರ ಹೊರ ತೆಗೆದು ಮುಟ್ಟಿ ನೋಡಿದೆ ಯಾರೋ ಅದರ ಎದೆಗೂಡಿಗೆ ಗುಂಡು ತಾಕಿಸಿದ್ದರು ಅಲ್ಲಿದ್ದಷ್ಟೂ ನನಗೂ ನೋವೆ ಧ್ಯಾನಿಸಿದೆ.. ಎದೆಗೂಡಿನ ಕಣಿವೆ ಮುಚ್ಚಿತು ನೀನು ಚಿಟ್ಟೆಯಾಗಿ ಹೊಡೆದವನ ಗುಂಡಿಗೆಯ ಮೇಲೆ ಕೂತು ಜೀಕಿದೆ ನಾನು ನಡೆದೆ… ಹೃದಯ ಭಾರವೆನಿಸಲಿಲ್ಲ ನನ್ನ ನೆರಳ ಮೇಲೆ ನಡೆದಷ್ಟೂ ಹಾದಿ ತೆರೆದುಕೊಳ್ಳುತ್ತಲೇ ಇತ್ತು.

ನಮ್ಮ ಕವಿ Read Post »

ನಮ್ಮ ಕವಿ

ನಮ್ಮ ಕವಿ

ಪ್ರತಿ ಎರಡು ವಾರಕ್ಕೊಮ್ಮೆ(ಎರಡನೆ,ನಾಲ್ಕನೇ ಶುಕ್ರವಾರ) ಕನ್ನಡದ ಕವಿಯೊಬ್ಬರು ನಡೆದು ಬಂದ ಹಾದಿ ಮತ್ತು ಸಾಧನೆಯನ್ನು ಇಲ್ಲಿ ಪರಿಚಯಿಸಲಾಗುವುದು. ಈಸರಣಿಯ ಮೊದಲ ಕವಿಯ ಬದುಕು-ಬರಹ ನಿಮ್ಮ ಮುಂದಿದೆ: ಸತ್ಯಮಂಗಲ ಮಹಾದೇವ ಸತ್ಯಮಂಗಲ ಮಹಾದೇವ 1983 ಜೂನ್ 12 ರಂದು ತುಮಕೂರು ಜಿಲ್ಲೆಯ ಸತ್ಯಮಂಗಲಗ್ರಾಮದಲ್ಲಿ, ಬುಟ್ಟಿ  ಹೆಣೆಯುವುದು, ಹಚ್ಚೆಹಾಕುವುದು, ವಿವಿಧ ವೃತ್ತಿಗಳಲ್ಲಿ ತೊಡಗಿದ್ದ ಅಲೆಮಾರಿ ಕುಟುಂಬದ ರಾಜಣ್ಣ ಮತ್ತು ಜಯಮ್ಮ ದಂಪತಿಗಳ ಎರಡನೆಯ ಮಗನಾಗಿ ಜನನ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸ ಸತ್ಯಮಂಗಲದ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಮತ್ತು ಶ್ರೀಶಿವಾನಂದಪ್ರೌಢಶಾಲೆಯಲ್ಲಿ ವ್ಯಾಸಂಗ. ಪದವಿ ವಿದ್ಯಾಭ್ಯಾಸ ಯೂನಿಯನ್ ಕ್ರಿಶ್ಚಿಯನ್ ಕಾಲೇಜು.ಶಿರಾಗೇಟ್ ತುಮಕೂರು. ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆಯಲ್ಲಿ ತುಮಕೂರು ತಾಲ್ಲೂಕು ಅಧ್ಯಕ್ಷರಾಗಿ ಸಕ್ರಿಯವಾಗಿ ಪಾಲ್ಗೊಂಡು ಬಸ್ ಪಾಸ್ ದರ ಹೆಚ್ಚಳದ ವಿರುದ್ಧ ಚಳುವಳಿ, ಜೈಲುವಾಸ.ವಿದ್ಯಾರ್ಥಿ ಸಮಸ್ಯೆಗಳ ಕುರಿತು ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕೆಲಸ. ಪದವಿ ವಿಧ್ಯಾಭ್ಯಾಸದಲ್ಲಿದ್ದಾಗ ಕನ್ನಡ ಪ್ರಾಧ್ಯಾಪಕ ಪ್ರೊ.ಅಜಿತ್ ಕುಮಾರ್ ಗುರುಗಳಲ್ಲಿ ಕಾವ್ಯರಚನೆಯ ಮೊದಲತೊದಲು ಪ್ರಾರಂಭ. ಅನಂತರ ಕಾವ್ಯರಚನೆಯ ಸೂಕ್ಷ್ಮಗಳನ್ನು ಕಲಿತದ್ದು. ಪದವಿಯ ಅಂತಿಮ ವರ್ಷದಲ್ಲಿ ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಆಯೋಜಿಸಿದ್ದ ಡಾ.ದ.ರಾ.ಬೇಂದ್ರೆ ಅಂತರಕಾಲೇಜು ಕವನ ಸ್ಪರ್ದೆಯಲ್ಲಿ ರಾಜ್ಯಮಟ್ಟದ ಕಾವ್ಯಬಹುಮಾನ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿಎಂ.ಎಸ್ಸಿ.ಮನೋವಿಜ್ಞಾನ.ಸಿದ್ಧಲಿಂಗಯ್ಯ, ಕಿರಂನಾಗರಾಜು, ನಟರಾಜ್ ಹುಳಿಯಾರ್, ಇವರಕಾಳಜಿಯಿಂದ ಭಾವತೀರದ ಹಾದಿಯಲ್ಲಿ ಮೊದ ಕವನಸಂಕನ ಬಿಡುಗಡೆ.ಸುಬ್ಬು ಹೊಲೆಯಾರ್ ಅವರಿಂದ ಜೀವಪರ ಮೌಲ್ಯಗಳ ಸೂಕ್ಷ್ಮಸಂವೇದಿ ನೆಲೆಗಳ ಅರಿವು. ಹೊಸತಲೆಮಾರಿನ ಸೂಕ್ಷ್ಮಸಂವೇದಿ ಕವಿಗಳಲ್ಲಿ ಪ್ರಮುಖ ಸ್ಥಾನ. ಮನೋವಿಜ್ಞಾನ ಆಪ್ತಸಮಾಲೋಚಕನಾಗಿ ಕೆಲಸ. ಸಾಮಾಜಿಕ  ಕಾರ್ಯ ಕರ್ತ ಪ್ರೊ.ಕೆ.ಟಿ.ತಿಪ್ಪೇಸ್ವಾಮಿ ಅವರ ಪ್ರೋತ್ಸಾಹ ಮತ್ತು ಜೀವಪ್ರೀತಿಯ ಕಾಳಜಿಯಿಂದ ಹೆಜ್ಜೆಮೂಡಿದಮೇಲೆ ಎರಡನೆಯ ಕವನಸಂಕಲನ ಪ್ರಕಟ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಿಂದ ಕನ್ನಡಎಂ.ಎ.ಯಲ್ಲಿ ಪ್ರಥಮ ಶ್ರೇಣಿ. 2012 ರಿಂದ 2018 ರವರೆಗೆ ಬಿ.ಎನ್.ಇ.ಎಸ್.ಪದವಿಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ. ರಾಷ್ಟ್ರೀಯ ಸೇವಾಯೋಜನೆಯ ಕಾರ್ಯನಿರ್ವಹಣೆ ಅಧಿಕಾರಿ2016-2018 ರವರೆಗೆ. 2017 ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕನ್ನಡ ಪತ್ರಿಕೆಗಳ ಸಂಯೋಜನೆ ಮತ್ತು ಮೌಲ್ಯಮಾಪನ. ಭಾರತ ಚುನಾವಣಾ ಆಯೋಗದ ಕ್ಯಾಂಪಸ್ ರಾಯಭಾರಿ2017 ರಲ್ಲಿ. ಅವಿಭಜಿತ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳ ಆಂತರಿಕ ಸ್ಕ್ವಾಡ್ 2015-2016. 2014 ಆಗಸ್ಟ್ 12 ರಿಂದ 2019 ಮೇ 14 ರವರೆಗೆ ಬೇಂದ್ರೆ ಮತ್ತು ಮಧುರಚೆನ್ನರಕಾವ್ಯಗಳಲ್ಲಿ ಅನುಭಾವ: ತೌಲನಿಕ ಅಧ್ಯಯನ? ಎಂಬ ವಿಷಯದಲ್ಲಿ ರೇವಾ ವಿಶ್ವವಿದ್ಯಾಲಯ ಕನ್ನಡವಿಭಾಗಕ್ಕೆ ಪಿಎಚ್.ಡಿ ಪದವಿಗಾಗಿ ಮಹಾಪ್ರಬಂಧ ಸಲ್ಲಕೆ. 2015 ರಲ್ಲ ‘ಯಾರಹಂಗ್ಲಿಬೀಸುವಗಾಳಿಗೆ’ ಮೂರನೆಯ ಕವನ ಸಂಕಲನವು ಪ್ರೊ.ಮಲ್ಲೇಪುರಂಜಿ.ವೆಂಕಟೇಶ ಹಾಗೂ ಸುಬ್ಬುಹೊಲೆಯಾರ್ ಅವರ ಕಾಳಜಿ ಮತ್ತು ಮುತುವರ್ಜಿಯಿಂದ ಪ್ರಕಟ. ಈ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನವೂ ಸೇರಿದಂತೆ ಒಟ್ಟು ಏಳು ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕಾರಗಳಿಗೆಭಾಜನವಾಗಿದೆ. ಬೆಂಗಳೂರು ಆಕಾಶವಾಣಿಯ ರಸಗಂಗೆ ಕಾರ್ಯಕ್ರಮದಲ್ಲಿ ಕೃತಿಗಳ ಪರಿಚಯ.ದೂರದರ್ಶನ ಚಂದನದಲ್ಲಿ ಕಾವ್ಯವಾಚನ. ಪ್ರಜಾವಾಣಿ, ವಿಜಯವಾಣಿ,ಮಯೂರ, ಸಮಾಹಿತ,ಸಂವಾದ, ಅನಿಕೇತನ, ಅಗ್ನಿ, ಮುಂತಾದ ಪತ್ರಿಕೆಗಳಲ್ಲಿ ಕಾವ್ಯಗಳ ಪ್ರಕಟಣೆ. ಅವಧಿ, ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಗಳಲ್ಲಿಯೂ ಕವಿತೆಗಳ ಪ್ರಕಟಣೆ. 2016 ನೇ ಸಾಲಿನ ತುಮಕೂರು ಜಿಲ್ಲಾ ಸಾಹಿತ್ಯಸಮ್ಮೇಳನದಲ್ಲಿ ಕವಿಗೋಷ್ಠಿಯ ಆಶಯ ಭಾಷಣ. 1000ಕ್ಕೂ ಹೆಚ್ಚು ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಕಾವ್ಯವಾಚನ, ರಾಷ್ಟ್ರ ಹಾಗೂ ರಾಜ್ಯಮಟ್ಟದ ವಿಚಾರಸಂಕಿರಣಗಳ ಆಯೋಜನೆ, ಭಾಗವಹಿಸುವಿಕೆ ಮತ್ತುಪ್ರಬಂಧಮಂಡನೆ. ಶ್ರೀದರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಸಂತ ಲಯೋಲಾ ಕಾಲೇಜುಬೆಂಗಳೂರು, ಸೇರಿದಂತೆ ಅನೇಕ ಕಾಲೇಜುಗಳಲ್ಲಿ ಕಾವ್ಯಕಮ್ಮಟಗಳ ನಿರ್ದೇಶಕಮೈಸೂರು ದಸರಾ ಕವಿಗೊಷ್ಠಿ, ಕೇರಳ-ಕೊಚ್ಚಿ, ಮಹಾರಾಷ್ಟ್ರ-ದಾದರ್, ಅಸ್ಸಾಂ-ಗೌಹಾತಿ,ಪಂಜಾಬ್-ಚಂಡೀಗಡಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಯುವ ಬರಹಗಾರರ ಸಮ್ಮೇಳನಗಳಲ್ಲಿ ಕನ್ನಡವನ್ನು ಪ್ರತಿನಿಧಿಸಿ ಕವಿತೆ ವಾಚನ. ಆಳ್ವಾಸ್ ನುಡಿಸಿರಿ-2018 ರಲ್ಲಿ ಕವಿನಮನದಲ್ಲಿ ಕಾವ್ಯವಾಚನ. ಕಣ್ಣಕಾಡು-ಗೆ ಬೆಳಕು ಸಂಪಾದಿತ ಕೃತಿ, ಪ್ರೊ.ಕೆ.ಈ.ರಾಧಾಕೃಷ್ಣ ವ್ಯಕ್ತಿಚಿತ್ರಕೃತಿ. ಇವರ ಸಾಹಿತ್ಯ ಸೇವೆ ಗುರುತಿಸಿ ತುಮಕೂರು ಜಿಲ್ಲಾ ಯುವಸಬಲೀಕರಣ ಇಲಾಖೆಯು2015ರ ಯುವಜನೋತ್ಸವದಲ್ಲಿ ಸನ್ಮಾನ. ಇವರ ಕಾವ್ಯಕೃತಿಗಳಿಗೆ ದ.ರಾ.ಬೇಂದ್ರೆ ಸ್ಮೃತಿ ಪ್ರಶಸ್ತಿ,ಸಂಚಯ ಸಾಹಿತ್ಯ ಪ್ರಶಸ್ತಿ, ಡಾ.ಶ್ಯಾಮಸುಂದರ ಕಾವ್ಯಪ್ರಶಸ್ತಿ, ಮುಳ್ಳೂರು ನಾಗರಾಜ ಕಾವ್ಯಪ್ರಶಸ್ತಿ,ಡಾ.ಜಿ.ಎಸ್.ಶಿವರುದ್ರಪ್ಪ ಕಾವ್ಯಪ್ರಶಸ್ತಿ, ಶಾ.ಬಾಲೂರಾವ್ ಯುವಪುರಸ್ಕಾರ, ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕಬಹುಮಾನ, ವರ್ದಮಾನ ಉದಯೋನ್ಮುಖ ಕಾವ್ಯಪ್ರಶಸ್ತಿ, ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿಸೇವೆಯಲ್ಲಿ ನಿರತರಾಗಿದ್ದಾರೆ *********************************************************************** ನಿಮ್ಮ ಓದಿಗಾಗಿ ಅವರದೊಂದು ಕವಿತೆ ಜೀನ್ಸುತೊಟ್ಟ ಚಕ್ರವರ್ತಿ ಜೀನ್ಸುತೊಟ್ಟ ಚಕ್ರವರ್ತಿಯ ನೋಡಿದೆ ಆತ ಸಮುದ್ರದ ದಡದಲ್ಲಿ ಕ್ಯಾಮರಾ ಮುಂದೆ ಅಲ್ಲಿ ಹರಡಿದ್ದ ಪ್ಲಾಸ್ಟಿಕ್ ಆಯುತಿದ್ದ ಎತ್ತರದ ದನಿಯಲ್ಲಿ ಮಾತನಾಡುತ್ತಿದ್ದ ಉಕ್ಕಿನ ಮನುಷ್ಯನ ನೋಡಿದೆ ಆತ ಕನಸುಗಳ ಮಾರುತ್ತಿದ್ದ ಕೊಳ್ಳಲು ಹಣವಿರಲಿಲ್ಲ ನರೆ ಬಂದ ನೀರಲ್ಲಿ ನಿಂತಿದ್ದೆ ನಾನು ಸುಂಕದವರ ನೋಡಿದೆ ಸುಖ ದುಃಖ ಕೇಳದೆ ಜಡದಂತಾಗಿ ರಾಜನ ಮುಖವಾಡದಲಿ ಬೆವತು ಬೆಂಡಾಗಿ ಬೆನ್ನುಮೂಳೆಯ ಮಾರಿಕೊಂಡು ಊರೂರು ಅಲೆದವರು ಕೈ ಹಿಡಿದವರು ಈಗ ಕಮಲ ಹಿಡಿದು ಓಡುತ್ತಿದ್ದಾರೆ ಸಾರಥಿ ಹೇಳಿದ ಕಡೆಗೆ ಕುದುರೆಗಳಂತೆ. ಸವಿಮಾತುಗಳ ಉಲಿಯುತಿದ್ದ ಕೋಗಿಲೆಗಳು ಈಗ ಕುರ್ಚಿ ಕುರ್ಚಿ ಎನ್ನುತ್ತಿವೆ ಕಿವಿಯೂ ತಾನು ಕೇಳುವ ಚಾನಲ್ಲುಗಳ ಬದಲಾಯಿಸಿಕೊಳ್ಳುತಿದೆ ಈಗೀಗ ಬೊಗಳುವ ಭಾಷೆಗಳ ವರ್ಣಮಾಲೆಗಳನ್ನು ಬದಲಿಸುತ್ತಿವೆ ಗ್ರಾಮಸಿಂಹಗಳು. ಬೆಂಕಿ ಕಪ್ಪು ಹೊಗೆ ಬಿಳಿ ರೂಪಗಳು ವಿರೂಪದ ರೂಪಾಂತರಗಳಾಗಿ ನವಿಲುಗರಿ ಖಡ್ಗದ ರೂಪಾಗಿ ಎಳನೀರು ಮತ್ತು ತರಿಸುವಂತೆ ಎಲ್ಲವೂ ಎಲ್ಲರೋಳಗೂ ಈಗ ಪರ್ವ ಕಾಲ ಎಲ್ಲವೂ ಸರಿ ಎಂದೊಮ್ಮೆ ಎಲ್ಲವೂ ಸರಿಯಿಲ್ಲ ಎಂದೊಮ್ಮೆ ಮಮ್ಮಲ ಮರುಗುವ ಮನಸು ಮಾಯದ ಮಾಂಸ ಮಜ್ಜೆಯ ಮನೆಯೊಳಗೆ ಧ್ಯಾನಕ್ಕೆ ಕೂರಬೇಕಿದೆ ಆತ್ಮ.. ================== ಸತ್ಯಮಂಗಲ ಮಹಾದೇವ

ನಮ್ಮ ಕವಿ Read Post »

ನಮ್ಮ ಕವಿ

ಕಾವ್ಯನಮನ

ಕೆ.ಬಿ.ಸಿದ್ದಯ್ಯ ನಮ್ಮನ್ನು ಅಗಲಿದ ಕವಿ ಮತ್ತು ಅದ್ಭುತ ಸಂಘಟನಾಕಾರರಾದ ಹಿರಿಯ ಚೇತನ ಶ್ರೀ ಕೆ.ಬಿ.ಸಿದ್ದಯ್ಯನವರಿಗೆ ಸಂಗಾತಿ ಬಳಗ ಶ್ರದ್ದಾಂಜಲಿ ಸಲ್ಲಿಸುತ್ತಿದೆ ಕವಿಮಿತ್ರ ಶ್ರೀಬಿದಲೋಟಿರಂಗನಾಥ್ ಅವರ ಕವಿತೆಯ ನುಡಿ ನಮನ ಹೊಳೆದು ಉರುಳಿದ ನಕ್ಷತ್ರ ಕೆ ಬಿ ಸಿದ್ದಯ್ಯ ಕತ್ತಲೊಡನೆ ಮಾತಾಡುತ್ತ ದಕ್ಲದೇವಿ ಕಥೆಗಳನ್ನು ಹೇಳುತ್ತ ಗಲ್ಲೆಬಾನಿಯಲಿ ನೆನಪುಗಳ ಕಲೆಸಿದ ಬಕಾಲ ಮುನಿಯೇ… ನಿಮ್ಮದು ಚಿಟ್ಟೆಗೆ ಜೀವ ತುಂಬಿದ ಜೀವ. ಮೌನದಲಿದ್ದು ನಲುಗಿ ಒಂದು ಮಾತೂ ಹೇಳದೆ ಎದ್ದೋದ ಕರುಳು ಬಂಧುವೇ… ಇಷ್ಟು ಬೇಗ ಹೋಗಬೇಕಿತ್ತೆ ? ನಿಮ್ಮ ಖಾಲಿಯಾದ ಪೆನ್ನಿಗೆ ಇಂಕನ್ನು ತುಂಬದೇ.. ಅನಾಥವಾಗಿ ಮಾಡಿ.. ನಿಮ್ಮ ಕರುಳು ಕಲೆತ ಮಾತುಗಳಲ್ಲಿ ಎಷ್ಟೊಂದು ಆತ್ಮೀಯ ಭಾವ ತುಂಬಿತ್ತು ಕಣ್ಣುಗಳಲ್ಲಿ ಎಷ್ಟೊಂದು ಕವಿತೆಗಳು ಮರಿಹಾಕಿ ಹೊಳಪಿನ ಕನ್ನಡಿಯಾಗಿತ್ತು ನನ್ನ ಸಂಕಲನಕ್ಕೆ ಮುನ್ನುಡಿ ಗೀಚುತ್ತೇನೆಂದು ಹೇಳುತ್ತಲೇ ಖಾಲಿ ಉಳಿದವು ನೀವು ಬರೆಯಬೇಕಿದ್ದ ಆ ಪುಟಗಳು ! ಆತ್ಮ ಅನಾತ್ಮದೊಡನೆ ಸೆಣಸಾಡಿ ದುಃಖಾತ್ಮದ ನಂಜು ನಸಿರಾಡಿ ನೆಲದ ಬೆವರಿಗೆ ಕವಿಯಾದೆ ಕರುಳ ನೋವಿಗೆ ಧ್ವನಿಯಾದೆ.. ನುಡಿವ ತಮಟೆಯ ಸದ್ದಿಗೆ ಕಿವಿಯಾಗುತ ಊರೂರು ಸುತ್ತಿ ಜಾತಿಯೆಂಬ ಬೆನ್ನಮೂಳೆಯ ಕಾವ್ಯಬಿತ್ತುತ ಮುರಿದೆ ದಹನದ ಕಥೆಗೆ ಕರುಳ ನುಡಿಗಳ ನುಡಿದು ಈ ನಾಡ ಮಣ್ಣಿನಲಿ … ಮಣ್ಣಾದವರ ಕಥೆ ಹೇಳುತ್ತಲೇ.. ಮಣ್ಣಾಗಿ ಹೋದಿರಿ … ಹೊಳೆದು ಉದುರಿದ ನಕ್ಷತ್ರದಂತೆ ಸಾಹಿತ್ಯದ ಬಾನಿನಲಿ ಕತ್ತಲು ತುಂಬಿ ನೆಲದ ಬಾಯಲ್ಲಿ ಬಿರುಕು ಮೂಡಿ ಜನಾಂಗದ ಕಣ್ಣಲ್ಲಿ ಹಾರಿದ ಬೆಳಕು ಹೋಗಿ ಬನ್ನಿ … ನೀವೆ ಬಿತ್ತಿದ ಅಕ್ಷರ ಬೀಜದ ಮೊಳಕೆಗಳು ಇಣುಕುತ್ತಿವೆ ನೆಲದ ತುಂಬಾ.. =========================== ಬಿದಲೋಟಿ ರಂಗನಾಥ್

ಕಾವ್ಯನಮನ Read Post »

You cannot copy content of this page

Scroll to Top