ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಯಾನ

ಕಥೆ ಪೊಟ್ಟಿ ಶೀಲಾ ಭಂಡಾರ್ಕರ್. ಪೊಟ್ಟಿ. ಪೊಟ್ಟಿ, ಬಂಟ್ವಾಳದ ಬಂಗ್ಲೆ ಗುಡ್ಡೆಯಲ್ಲೊಂದು ಗುಡಿಸಲು ಕಟ್ಟಿ ವಾಸವಾಗಿದ್ದಳು. ಬಂಗ್ಲೆ ಗುಡ್ಡೆಗೆ ಹೋಗುವ ರಸ್ತೆಗೆ ತಾಗಿಯೇ ನಮ್ಮಜ್ಜಿ ಮನೆ ಇದ್ದುದರಿಂದ ಅವಳು ಯಾವುದಕ್ಕಾದರೂ ಓಡಿ ಬರುವುದಿತ್ತು. ಅವಳಿಗೆ ಒಂದಿಷ್ಟು ಜನ ಮಕ್ಕಳು. ಎಷ್ಟು ಎಂದು ಅವಳಿಗೇ ಲೆಕ್ಕ ಇತ್ತೊ ಇಲ್ಲವೊ. ಕೃಶ ಶರೀರದ ಮಧ್ಯಮ ಎತ್ತರದ ಪೊಟ್ಟಿಗೆ ಒಬ್ಬ ಗಂಡ ಅಂತ ಇದ್ದನಂತೆ ಎಂದು ಬಾಪಮಾ ಹೇಳಿದ್ದ ನೆನಪು. ಅದೇನೋ ಆಗಿ ಅವನು ಸತ್ತ ಮೇಲೆ ಒಂದೆರಡು ಮಕ್ಕಳ ಜೊತೆ ಅವಳೊಬ್ಬಳೇ ಬಂಗ್ಲೆ ಗುಡ್ಡೆಯಲ್ಲಿ ವಾಸವಾಗಿದ್ದಳು. ವರ್ಷಕ್ಕೊಮ್ಮೆ ಬಸುರಿ, ವರ್ಷಕ್ಕೊಂದು ಬಾಣಂತನ ಅಂದ ಹಾಗೆ ಸದಾ ಅದೇ ಸ್ಥಿತಿಯಲ್ಲಿರುತಿದ್ದಳು. ಅದ್ಯಾರು ಬರುತಿದ್ದರೋ, ಹೋಗುತಿದ್ದರೋ, ಆ ಬತ್ತಿದ ದೇಹದಲ್ಲಿ ಅದೆಂತ ಅಕರ್ಷಣೆಯಿತ್ತೊ ಅವಳಲ್ಲಿಗೆ ಬರೋ ಗಂಡಸರಿಗೆ, ಹೋಗುವ ಮೊದಲು ಅವಳಿಗೆ, ಅವಳ ಮಕ್ಕಳಿಗೆಂದು ಏನಾದರೂ ಕೊಡಬೇಕೆಂದು ಅನಿಸುತಿತ್ತೋ ಇಲ್ಲವೋ ಒಂದೂ ಸರಿಯಾಗಿ ಯಾರಿಗೂ ತಿಳಿಯುತ್ತಿರಲಿಲ್ಲ. ಯಾಕೆಂದರೆ ಅವಳು ಪೊಟ್ಟಿ. ಪೊಟ್ಟಿ ಅಂದರೆ ಮಾತು ಬಾರದವಳು. ಮೂಕಿ. ಅವಳ ಮಕ್ಕಳಿಗೆ ಮಾತು ಬರುತಿತ್ತೇನೋ ಆದರೆ ಅವರಿಗೆ ಮಾತು ಕಲಿಸಲು ಯಾರಿದ್ದರು? ಅವರ ಬಳಿ ಮಾತನಾಡುವವರು ಬೇಕಲ್ಲ! ನಮ್ಮ ಮನೆಗೆ ಬರುವಾಗ,  ಹಿಂದಿನ ಬಾಗಿಲೆಂದಿಲ್ಲ, ಮುಂದಿನ ಬಾಗಿಲೆಂದಿಲ್ಲ ಎಲ್ಲಿಂದಾದರೂ ಯಾವಾಗಲಾದರೂ ಬರುತಿದ್ದಳು. ಅಂದರೆ ಒಳಗೆ ಬರುತ್ತಿರಲಿಲ್ಲ. ಹೊರಗೆ ನಿಂತು ಅದೇನೋ ವಿಚಿತ್ರ ಸದ್ದು ಮಾಡುತಿದ್ದಳು. ನಮ್ಮ ಬಾಪಮಾ ಅವಳಿಗೆ ಉಳಿದದ್ದು, ಬಳಿದದ್ದು ಅದು ಇದು ಅಂತ ಕೊಡುತಿದ್ದರು. ಆ ಮಕ್ಕಳನ್ನು ನೋಡುವಾಗ ಹೊಟ್ಟೆ ಚುರ್ ಅನ್ನುತ್ತೆ ಅನ್ನುತಿದ್ದರು. ಕಂಕುಳಲ್ಲೊಂದು, ಹೆಗಲ ಮೇಲೆ ನೇತಾಡುವ ಜೋಳಿಗೆಯಲ್ಲೊಂದು, ಹಿಂದೆ ಮುಂದೆ ಹೀಗೆ ಐದಾರು ಮಕ್ಕಳು ಜತೆಗೆ ನಡೆದುಕೊಂಡು ಬರುವಂಥವು. ಇಷ್ಟು ಮಕ್ಕಳನ್ನು ಕರೆದುಕೊಂಡು ಭಿಕ್ಷೆಗೆ ಹೋಗುತಿದ್ದಳು. ಕೆಲಸ ಮಾಡಿ ತಿನ್ನುವ ಸ್ವಾಭಿಮಾನ ಇತ್ತೋ ಇಲ್ಲವೋ, ಅವಳಿರುವ ಸ್ಥಿತಿ ಅವಳನ್ನು ಕೆಲಸ ಮಾಡಲು ಬಿಡಬೇಕಲ್ಲ. ನನ್ನ ಅಪ್ಪನಿಗೆ ಮದುವೆ ಆಗುವ ಮೊದಲಿನಿಂದಲೂ ಅವಳು ಅಲ್ಲಿ ವಾಸಿಸುತಿದ್ದಳು. ಅಪ್ಪನಿಗೆ ಮದುವೆ ಆದ ಹೊಸತರಲ್ಲಿ, ಅಮ್ಮ ಒಂದು ಸಂಜೆ ಒಬ್ಬರೇ ಅಡುಗೆ ಮನೆಯಲ್ಲಿ ಒಲೆ ಮೇಲೆ ಹಾಲಿಟ್ಟು ಅದು ಕಾಯುವುದನ್ನೇ ನೋಡುತ್ತಾ ಕೂತಿದ್ದಾಗ, ಎಂದಿನಂತೆ ಪೊಟ್ಟಿ ಬಂದು ತನ್ನ ವಿಚಿತ್ರ ಧ್ವನಿಯಲ್ಲಿ ಕೂಗಿದಳಂತೆ. ಅಮ್ಮ ಹೆದರಿ ಹೌಹಾರಿ ಒಲೆಯ ಕಟ್ಟಿಗೆ ಮೇಲೆ ಕಾಲಿಟ್ಟು, ಆ ಸೌದೆ ಎಗರಿ ಹಾಲಿನ ಪಾತ್ರೆ ಉರುಳಿ, ಹಾಲೆಲ್ಲ ಚೆಲ್ಲಿ ಹೋಯ್ತು. ಒಂದು ಕಡೆ ಇಷ್ಟೆಲ್ಲ ರಂಪವಾಗಿ ಹೋಯ್ತು. ಮತ್ತೊಂದೆಡೆ ಕಿಟಕಿಯಿಂದ ಹೆದರಿಸಿದ್ದು ಯಾರು ಎನ್ನುವ ಭಯ. ಒಳಗೆ ಇಷ್ಟೆಲ್ಲ ಆದ ಶಬ್ದಕ್ಕೆ ಎಲ್ಲರೂ ಓಡಿಬಂದು ನೋಡಿದರೆ ಪೊಟ್ಟಿ ಇನ್ನೂ ಅಲ್ಲೇ ತನ್ನ ಕೊಳಕಾದ ಹಲ್ಲು ತೋರಿಸಿ ನಗುತ್ತಾ ನಿಂತಿದ್ದಳು. ಅಮ್ಮ ಕಿಟಕಿ ಬಳಿ ಕೈ ತೋರಿಸಿ, ನಡುಗುತ್ತಾ ಅಳುವುದನ್ನು ನೋಡಿ ಬಾಪಮಾ ಪೊಟ್ಟಿಗೆ ಚೆನ್ನಾಗಿ ಬೈದರಂತೆ. ಹೀಗಾ ಹೆದರಿಸೋದು ಅಂತ. ಪೊಟ್ಟಿಗೆ ಹೆಸರೇನಾದರೂ ಇತ್ತೋ ಗೊತ್ತಿಲ್ಲ. ಇದ್ದರೂ ಅವಳ ಬಳಿ ಕೇಳಿದವರ್ಯಾರು? ಕೇಳಿದರೂ ಅವಳು ಹೇಳುವುದಾದರೂ ಹೇಗೆ? ಎಲ್ಲರೂ ಅವಳನ್ನು ಪೊಟ್ಟಿ ಎಂದೇ ಕರೆಯೋದಿತ್ತು. ಯಾರುಯಾರೋ ಕೊಟ್ಟ, ಎಲ್ಲಿ ಸಿಕ್ಕಿದರೂ ಹೆಕ್ಕಿದ ಬಳೆಗಳನ್ನು ಅವಳು ಕೈ ತುಂಬಾ ಸುರಿದುಕೊಳ್ಳುವುದಿತ್ತು. ಒಂದಕ್ಕೊಂದು ಬಣ್ಣ, ಸೈಜ್, ಡಿಸೈನ್ ಯಾವುದೂ ತಾಳೆ ಇರುತ್ತಿರಲಿಲ್ಲ. ಈಗಲೂ ಹಾಗೆ ಬಳೆ ಹಾಕಿಕೊಂಡ ಮಕ್ಕಳನ್ನು ” ಪೊಟ್ಟಿಯ ಹಾಗೆ” ಅನ್ನುವುದುಂಟು. ಅವಳ ಮಕ್ಕಳಲ್ಲಿ ಒಂದು ಮಗು ಎಲ್ಲೋ ಹೋಯ್ತೆಂದು ಬಂದು ಬಾಪಮಾ ಹತ್ತಿರ ಹೇಳುತಿದ್ದಳು ಒಮ್ಮೆ. ಆದರೆ ಅಂಥಾದ್ದೇನೂ ದುಃಖ ಆದ ಹಾಗಿಲ್ಲ. ಅವಳು ಯಥಾಪ್ರಕಾರ ಭಿಕ್ಷೆ ಬೇಡೋದು, ದಾರಿಯಲ್ಲಿ ಹೋಗುವವರನ್ನು ನೋಡಿ ತಲೆ ಕೆರೆದು, ಹಲ್ಲು ಕಿಸಿದು ನಗೋದು ಎಲ್ಲಾ ಮಾಡುತಿದ್ದಳು. ಅವಳಲ್ಲಿ ಏನೂ ಭಾವನೆಗಳಿಲ್ಲವೇನೋ ಎಂದು ನಮ್ಮ ಮನೆಯಲ್ಲಿ ಮಾತನಾಡಿಕೊಂಡದ್ದು ನನ್ನ ಕಿವಿಗೂ ಬಿದ್ದಿತ್ತು‌. ಅಮ್ಮನನ್ನು ಹೆದರಿಸಿದಾಗ ಬೈದದ್ದು ಬಿಟ್ಟರೆ ಬಾಪಮಾ ಮತ್ತು ಅವಳ ನಡುವೆ ಸಂಭಾಷಣೆ ಕೈ ಬಾಯಿ ಸನ್ನೆಯಲ್ಲೇ ನಡೆಯುತಿತ್ತು. ಅವಳಿಗೆಂದು ಏನಾದರೂ ತೆಗೆದಿಟ್ಟರೆ ಅಜ್ಜಿ ಮನೆಯ ಮುಂದಿನ ಸರಳುಗಳ ಜಗಲಿಯಲ್ಲಿ ಮರದ ಮಂಚದ ಮೇಲೆ ಕೂತು ಕಾಯುತಿದ್ದರು. ಅವಳನ್ನು ಕಂಡ ಕೂಡಲೇ ಏಯ್ ಅಂತ ಕರೆದರೆ ಅವಳೂ ಗೊಳ್ಳನೆ ನಕ್ಕು ನೀವು ಕರೆಯುವುದನ್ನೇ ಕಾದಿದ್ದೆ ಅನ್ನುವ ಹಾಗೆ ಕಾಂಪೌಂಡ್ ಒಳಗೆ ಬಂದು ತುಳಸಿ ಕಟ್ಟೆಯ ಬಳಿ ಕೂತು ಮಕ್ಕಳನ್ನೂ ಕೂರಿಸಿಕೊಂಡು ಬಾಪಮಾ ಕೊಟ್ಟ ತಿಂಡಿಯನ್ನು ತಾನೂ ತಿನ್ನುತ್ತಾ ಮಕ್ಕಳಿಗೆ ತಿನ್ನಿಸುತ್ತಾ ಸ್ವಲ್ಪ ಹೊತ್ತು ಇದ್ದು ನೀರು ಕುಡಿದು ಹೊರಡುತಿದ್ದಳು. ಮತ್ತೆ ಸಿಕ್ಕಿದ್ದು ಮದ್ಯಾಹ್ನಕ್ಕೆಂದು ಮನೆಗೆ ಕೊಂಡು ಹೋಗುತಿದ್ದಳು. ಮುಂದೆ ಒಂದು ದಿನ ಭಾರೀ ಸುಸ್ತಾಗಿ ಬಂದು ಅಂಗಳದಲ್ಲಿ ಕೂತಿದ್ದು ನೋಡಿ ಅಜ್ಜಿ ಹುಷಾರಿಲ್ವಾ ಎಂದು ಕೇಳಿದಾಗ ನಸು ನಾಚಿ ನಕ್ಕಳಂತೆ. ಅಜ್ಜಿಗೆ ಅರ್ಥ ಆಗಿ ಅವಳಿಗೆ ಸನ್ನೆಯಲ್ಲೇ ಸಹಸ್ರನಾಮಾರ್ಚನೆ ಮಾಡಿದರೂ ದಿನಾ ಕರೆದು ತಿನ್ನಲು ಕೊಡುತಿದ್ದರು. ಅವಳ ಬಾಣಂತನ ಅವಳೇ ಮಾಡಿಕೊಳ್ಳುತಿದ್ದಳಂತೆ. ಅದನ್ನೂ ಸನ್ನೆಯಲ್ಲೇ ವಿವರಿಸಿ ಹೇಳುತಿದ್ದಳು. ಯಾವ ಸಂಭ್ರಮವಿಲ್ಲದಿದ್ದರೂ, ಸರಿಯಾಗಿ ಹೊಟ್ಟೆಗಿಲ್ಲದಿದ್ದರೂ ಅವಳ ಮಕ್ಕಳು ಮಾತ್ರ ಮೈಕೈ ತುಂಬಿಕೊಂಡು ನೋಡಲು ಲಕ್ಷಣವಾಗಿದ್ದವು. ಹಾಲು, ಬೆಣ್ಣೆ, ತುಪ್ಪ ಸುರಿದು ತಿನ್ನಿಸಿದ್ರೂ ನಮ್ಮ ಮಕ್ಕಳು ಹೊಟ್ಟೆಗೆ ಇಲ್ಲದವರ ಹಾಗಿವೆ ಅಂತ ಬಾಪಮಾ ನಮ್ಮನ್ನು ತೋರಿಸಿ ಹೇಳುವಾಗ ಅಮ್ಮನಿಗೆ ಪಾಪ ಪಿಚ್ಚೆನಿಸುತಿತ್ತು. ಈ ಸಲವೂ ಹೆರಿಗೆಯಾಗಿ ಮೂರು ನಾಲ್ಕು ದಿನಕ್ಕೇ ರಸ್ತೆಗೆ ಇಳಿದಿದ್ದಳು ಪೊಟ್ಟಿ. ಅಷ್ಟೂ ಮಕ್ಕಳ, ತನ್ನ,  ಹೊಟ್ಟೆಗೆ ಏನಾದರೂ ಬೇಕಿತ್ತಲ್ಲ. ಈಗಲೂ ಎಂದಿನಂತೆ ಒಂದು ಜೋಳಿಗೆಯೊಳಗೆ, ಒಂದು ಕಂಕುಳಲ್ಲಿ. ಒಂದು ದಿನ ಮಾತ್ರ ಮದ್ಯಾಹ್ನ ಪೊಟ್ಟಿ ಓಡುತ್ತಾ ಬಂದು ಎದೆ ಬಡಿದುಕೊಳ್ಳುತ್ತಾ ಹೃದಯವಿದ್ರಾವಕವಾಗಿ ತನ್ನ ವಿಚಿತ್ರ ಧ್ವನಿಯಲ್ಲಿ ಅಳುತಿದ್ದಾಗ ಮನೆಯವರೆಲ್ಲ ಗಾಬರಿಯಾಗಿ ಓಡಿ ಬಂದರು. ಜೋಳಿಗೆಯಲ್ಲಿ ಮಗುವನ್ನು ನೇತಾಡಿಸಿದ್ದಾಳೆ. ಮಗು ಜೀವಂತವಾಗಿದೆ. ಇನ್ನೇತಕ್ಕೆ ಅಳುತಿದ್ದಾಳೆಂದು ಯಾರಿಗೂ ತಿಳಿಯದಾಯಿತು. ಆ ಹೊತ್ತು ಗಾಬರಿಯಾದ ನಮ್ಮ ಧೈರ್ಯಸ್ಥೆ ಬಾಪಮಾನ ಮುಖ ನನಗೆ ಇನ್ನೂ ಕಣ್ಣ ಮುಂದಿದೆ. ಬಾಪಮಾ ಅಂದರೆ ಅಜ್ಜಿ. ಅಜ್ಜಿ ಅಂದರೆ ಬಾಪಮಾ ಎರಡೂ ಒಬ್ಬರೇ. ಅಪ್ಪನ ಅಮ್ಮ ಬಾಪಮಾ. ಬಾಪಮಾ ಅಂಗಳಕ್ಕೆ ಇಳಿದು ಹತ್ತಿರ ಹೋಗಿ ಕೇಳಿದರು. ಹೂಂ ಹೂಂ ಅಂತ ಕೈಯಿಂದ ಸನ್ನೆಯಲ್ಲಿ “ಏನಾಯಿತು?” ಎಂದರು. ಅವಳು ಹೊಟ್ಟೆ ಕಿವುಚಿಕೊಳ್ಳುತ್ತಾ ಎದೆ ಬಡಿದು ಕೊಳ್ಳುತ್ತಾ, ಕೂದಲು ಕಿತ್ತು ಕೊಳ್ಳುತ್ತಾ ಅಳುವುದನ್ನು ನೋಡಿ ಅಲ್ಲಿದ್ದವರ ಕಣ್ಣುಗಳು ಒದ್ದೆಯಾದವು. ಅವಳ ಕೈ ಹಿಡಿದು ಅಳಬೇಡ ಎಂದು ಕುಡಿಯಲು ನೀರು ಕೊಟ್ಟು, ಸಮಾಧಾನ ಮಾಡಲು ನಮ್ಮಜ್ಜಿ ಮಡಿ ಮೈಲಿಗೆಯನ್ನೂ ಮರೆತು ಅವಳ ಬೆನ್ನು ಸವರಿದ್ದರು. ಸಮಾಧಾನ ತಂದುಕೊಂಡ ಅವಳು ಅಜ್ಜಿಯ ಕೈ ಹಿಡಿದು ಏನು ನಡೆಯಿತು ಎಂದು ಪಾಪ ಅವಳ ರೀತಿಯಲ್ಲಿ ವಿವರಿಸಿದಾಗ ಅರ್ಥವಾಗಿದ್ದನ್ನು ಬಾಪಮಾ ಉಳಿದವರಿಗೆ ಹೇಳಿದರು. ಬೆಳಿಗ್ಗೆ ಭಿಕ್ಷೆಗೆ ಹೋಗುವಾಗ, ಕಂಕುಳ ಮಗುವಿನ ಕಾಲಿಗೆ ಮತ್ತು ಮನೆಯ ಮಾಡಿನ ಆಧಾರದ ಕೋಲಿಗೆ ದಾರ ಕಟ್ಟಿ ಬಿಟ್ಟು ಹೋಗಿದ್ದಳು. ಮೊದಲೆಲ್ಲ ಇನ್ನೂ ನಡೆಯಲು ಬಾರದ ಮಕ್ಕಳನ್ನು ಹೀಗೆ ಕಾಲಿಗೆ ದಾರ ಕಟ್ಟಿ ಮಂಚಕ್ಕೋ, ಕಂಬಕ್ಕೋ ಕಟ್ಟಿ ಹಾಕಿ ಮನೆ ಕೆಲಸ ಮುಗಿಸುವುದಿತ್ತು. ಆ ದಾರದ ಪರಿಧಿಯಲ್ಲೇ ಓಡಾಡಿ, ಆಟವಾಡಿ, ಸಾಕಾಗಿ ಅಲ್ಲೇ ಕೂತು ಅಳುತಿದ್ದವು ಮಕ್ಕಳು. ಪೊಟ್ಟಿ ಹೀಗೆ ಬಿಟ್ಟು ಹೋಗಿದ್ದಾಗ, ಮನೆಗೆ ಹಿಂತಿರುಗಿ ಬಂದು ನೋಡಿದರೆ ಮಗು ಇಲ್ಲ. ಹುಡುಕಿ, ಹುಡುಕಿ, ಕರೆದು ಸಾಕಾಗಿ, ಕೊನೆಗೆ ನೋಡಿದರೆ ಅಲ್ಲೇ ಹತ್ತಿರದಲ್ಲೇ ಇದ್ದ ನೀರಿಲ್ಲದ ಪೊಟ್ಟು ಸರ್ಕಾರಿ ಬಾವಿಯೊಳಗೆ ಬಗ್ಗಿ ನೋಡಿದರೆ ಅದರೊಳಗೆ ಬಿದ್ದಿದೆ ಮಗು. ತುಂಬಾ ಹಳೆಯ ಬಾವಿ ಅದು ಅದರ ಕಟ್ಟೆಯೂ ಬಿದ್ದು ಹೋಗಿ ಬಾವಿ ಎಂಬ ಹೊಂಡವೊಂದು ಮುಚ್ಚದೇ ಹಾಗೇ ಇತ್ತು. ಬನ್ನಿ ಬನ್ನಿ ಎಂದು ಸನ್ನೆಯಲ್ಲೇ ಕರೆದಾಗ ಎಲ್ಲರೂ ಬಾವಿಯ ಬಳಿ ಹೋಗಿ ನೋಡಿದರೆ ಮಗು ರಕ್ತ ಸಿಕ್ತವಾಗಿ ವಿಕಾರವಾಗಿ ಬಿದ್ದಿತ್ತು. ಕೂಡಲೇ ಅಜ್ಜಿ ಅದರೊಳಗೆ ಯಾರನ್ನೋ ಇಳಿಸಿ ಮಗು ಬದುಕಿದೆಯೋ ಎಂದು ಪರೀಕ್ಷಿಸಲು ಹೇಳಿ ಅಲ್ಲಿಯೇ ಮಣ್ಣು ಹಾಕಿ ಮುಚ್ಚಿಸಿದರು. ಪೊಟ್ಟು ಬಾವಿ ಅರ್ಧ ಮುಚ್ಚಿತು. ಆದರೂ ಅಪಾಯವೆಂದು ಮುನಿಸಿಪಾಲಿಟಿಯವರಿಗೆ ಹೇಳಿ ಪೂರ್ತಿ ಮುಚ್ಚಿಸಲಾಯಿತು. ಮಾತು ಬಾರದಿದ್ದರೂ , ಭಾವನೆಗಳೇ ಇಲ್ಲ ಎಂದು ಕೊಂಡಿದ್ದರೂ ಪೊಟ್ಟಿಗೆ ತನ್ನ ಕೈಯಾರ ಮಗು ಸತ್ತಿತು ಅನ್ನುವ ಅಪರಾಧಿ ಪ್ರಜ್ಞೆ ಕಾಡುತಿತ್ತೇನೋ, ಹೊಟ್ಟೆಗಿಲ್ಲದಿದ್ದರೂ, ಬಟ್ಟೆಗಿಲ್ಲದಿದ್ದರೂ, ಆ ಮಕ್ಕಳನ್ನು ಹುಟ್ಟಿಸಿದವರು ಆಮೇಲೆ ತಿರುಗಿ ನೋಡದಿದ್ದರೂ ಕರುಳವೇದನೆ ಎಂಬುದು ಎಷ್ಟು ತೀವ್ರವಾದುದು.  ಮುಂದಿನ ದಿನಗಳಲ್ಲಿ ಅವಳು ಯಾವ ಗಂಡಸನ್ನೂ ತನ್ನ ಗುಡಿಸಲಿಗೆ ಬರಲು ಬಿಡುತ್ತಿರಲಿಲ್ಲವಂತೆ, ಕಿರುಚಾಡಿ, ಕೈಗೆ ಸಿಕ್ಕಿದುದರಿಂದ ಹೊಡೆದು ಓಡಿಸುತಿದ್ದಳಂತೆ. ಈಗಲಾದರೂ ಬುದ್ಧಿ ಬಂತಲ್ಲ ಎಂದು ಮನೆಯಲ್ಲಿ ಮಾತನಾಡಿಕೊಳ್ಳುತಿದ್ದರು.   *********

ಕಥಾಯಾನ Read Post »

ಕಥಾಗುಚ್ಛ

ಕಾರ್ಮಿಕ ದಿನದ ವಿಶೇಷ-ಕಥೆ

ಕಾರ್ಮಿಕ ದಿನದ ವಿಶೇಷ-ಕಥೆ ತಿಥಿ ಟಿ. ಎಸ್.‌ ಶ್ರವಣ ಕುಮಾರಿ. ತಿಥಿ “ನಾಗೂ… ಏ ನಾಗೂ… ಇದಿಯನೇ ಒಳಗೆ…” ಅಡುಗೆಮನೆಯನ್ನಿಸಿಕೊಂಡ ಆ ಮನೆಯ ಮೂಲೆಯಲ್ಲಿ ಹೊಗೆಯೊಂದಿಗೆ ಗುದ್ದಾಡುತ್ತಾ ಹುಳಿಗೆ ಹಾಕಲು ಹುಣಿಸೇಹಣ್ಣು ಕಿವುಚುತ್ತಾ ಕುಳಿತಿದ್ದ ನಾಗುವಿಗೆ ಸುಬ್ಬಣ್ಣನ ದನಿ ಕೇಳಿ ʻಯಾಕ್‌ ಬಂದ್ನೋ ಮಾರಾಯ ಈಗ, ಕೆಲಸಿಲ್ದೆ ಈ ದಿಕ್ಕಿಗ್‌ ಕೂಡಾ ತಲೆಯಿಟ್ಟು ಮಲಗೋನಲ್ಲʼ ಎಂದುಕೊಂಡೇ “ಇದೀನೋ ಇಲ್ಲೇ ಒಲೆಮುಂದೆ ಅಡುಗೆಮಾಡ್ತಾ” ಎಂದುತ್ತರಿಸಿದಳು. ಬಿಸಿಲಿನಿಂದ ಒಳಗೆ ಬಂದವನಿಗೆ ಅಡುಗೆಮನೆಯೆಂದು ಮಾಡಿದ್ದ ಅಡ್ಡಗೋಡೆಯ ಒಳಗಿನ ಕತ್ತಲೆ, ಹೊಗೆಯ ಮಧ್ಯೆ ʻನಾನೂ ಇದೀನಿʼ ಎನ್ನುವಂತೆ ಸಣ್ಣಗೆ ಉರಿಯುತ್ತಿದ್ದ ಬೆಂಕಿಯ ಬೆಳಕಲ್ಲಿ ಅಸ್ಪಷ್ಟವಾಗಿ ಅವಳ ಆಕೃತಿ ಕಂಡಿತು. “ಈ ಹೊಗೇಲಿ ಅದೆಂಗಾರ ಇದಿಯೇ ಮಾರಾಯ್ತಿ, ನಿನ್‌ ಮಖ್ವೇ ಸಮಾ ಕಾಣಲ್ವಲ್ಲೇ” ಎಂದ ಕೆಮ್ಮುತ್ತಾ. “ಕಾಣ್ದಿದ್ರೆ ಬಿಡತ್ಲಾಗೆ, ಮಾತಾಡ್ತಿರದು ಕೇಳ್ತಿದ್ಯಲ್ಲ, ಏನು ಸವಾರಿ ಈ ಕಡೆ” ಎಂದಳು. ಇಷ್ಟು ಹೊತ್ತಿಗೆ ಆ ಕತ್ತಲಿಗೆ ಸ್ವಲ್ಪ ಕಣ್ಣನ್ನು ಹೊಂದಿಸಿಕೊಂಡಿದ್ದವನು ಅಲ್ಲೇ ಎದುರಿನ ಗೋಡೆಗೊರಗಿ ಕೂತು “ಇವತ್ತು ಸೋಮಾರ ಅಲ್ವನೇ, ನಾಳೆ ಬರಾ ಶುಕ್ರಾರ ಅಜ್ಜಿ ಬರ್ತಳೆ. ಈ ಸಲ ʻಮೇ ಡೇʼ ರಜಾದಿನ್ವೇ ಬಂದಿದೆ ನೋಡು. ಕರ್ದೋರೆಲ್ರೂ ಬರ್ತರೆ. ದೊಡ್ಡೋರೆ ಒಂದು ಮೂವತ್ತು ಜನ್ರ ಮೇಲೇ ಆಗ್ತರಪ್ಪ. ಅಮ್ಮಂಗೆ ಒಬ್ಳಿಗೇ ಅಷ್ಟು ಅಡುಗೆ ಮಾಡಕ್ಕೆ ಕೈಲಾಗುಲ್ವಲ್ಲೆ. ಅದ್ಕೇ ನಾಗೂನ ಸಹಾಯಕ್ಕೆ ಬರ್ಬಕಂತೆ ಅಂತ ಹೇಳ್ಬಾ ಅಂದ್ಳು” ಅಂದ.‌ ಅವನ ಕಡೆ ತಿರುಗಿ “ಈ ಶುಕ್ರಾರಾನಾ… ಅವತ್ತೇ ನಾರಣಪ್ಪನೋರ ಮನೇಲಿ ಮಗನ್‌ ಮದ್ವೆ ದೇವರ ಸಮಾರಾದ್ನೆ ಇಟ್ಕಂಡಿದರೆ. ಮದ್ವೆ ಮನೆ ಚಕ್ಲಿ, ಉಂಡೆ ಎಲ್ಲಾ ನಾನೇ ಮಾಡ್‌ಕೊಟ್ಟಿರದು. ನಿನ್ನೇಂದ ಶುರುಮಾಡ್ದೋಳು ಇವತ್ತು ಬೆಳಗ್ಗೆನೂ ಏಳುತ್ಲೇ ಹೋಗಿ ಕೆಲ್ಸ ಮುಗಿಸ್ಕೊಟ್ಟು ಬಂದು ಒಲೆ ಹಚ್ಚಿದೀನಿ. ತಪ್ದೇ ಅವತ್ತು ಸುತ್ತು ಕೆಲ್ಸಕ್ಕೆ ಜತಿಗೆ ಹೂವೀಳ್ಯಕ್ಕೂ ಬರ್ಬೇಕು ಅಂತ ಹೇಳಿಯಾರೆ. ನಾನೂ ಒಪ್ಕಂಡಿದಿನಿ. ತಿಥಿ ಅಡ್ಗೆಗೆ ನಂಗೆ ಬರಕ್ಕಾಗಲ್ಲ” ಅಂದು ಆರುತ್ತಿದ್ದ ಒಲೆಯನ್ನೊಮ್ಮೆ ಊದುಗೊಳವೆಯಿಂದ ಜೋರಾಗಿ ಊದಿದಳು. “ಹಂಗಂದ್ರೆ ಹ್ಯೆಂಗೇ? ವರ್ಷ್ವಷ್ವೂ ಮಾಘ ಶುದ್ಧ ಅಷ್ಟ್ಮಿ ದಿನ ಅಜ್ಜಿ ತಿಥಿ ಅನ್ನದು ನಿಂಗೊತ್ತಲ್ವನೆ. ಪ್ರತಿ ಸಲ್ವೂ ನಿಂಗೇ ಹೇಳುದು ನೀನೇ ಜತಿಗ್‌ ಬರದು. ಮರ್ತೇಂದ್ರೆ ಹ್ಯಂಗೆ?” ಮರೆತು, ಬೇರೆಯ ಕಡೆ ಒಪ್ಪಿಕೊಂಡದ್ದು ಅವಳದೇ ತಪ್ಪು ಅನ್ನೋ ಹಾಗೆ ಸುಬ್ಬಣ್ಣ ದಬಾಯಿಸಿದ. “ನಾನೊಬ್ಳೆನಾ ಇರದು ಅಜ್ಜಿಗೆ ಮೊಮ್ಮಗ್ಳೂಂತ, ಪ್ರತಿಸಲ್ವೂ ಬರ್ತಿರ್ಲಿಲ್ವ. ಈ ಸಲ ನಂಗಾಗಲ್ಲ. ಇನ್ಯಾರಾದ್ರೂ ಮಾಡ್ಲಿ” ಎಂದವಳೇ ಮತ್ತೆ ಆರುತ್ತಿದ್ದ ಒಲೆಯತ್ತ ತಿರುಗಿದಳು. “ನಂಗೊತ್ತಿಲ್ಲಪ್ಪ, ನೀ ಹೀಗಂದಿ ಅಂತ ಅಮ್ಮನ ಹತ್ರ ಹೇಳ್ತಿನಿ. ನೀನುಂಟು, ಅವ್ಳುಂಟು. ಹೇಳ್‌ಬಾ ಅಂದ್ಲು, ಹೇಳಿಯೀನಿ” ಎನ್ನುತ್ತಾ ಕೋಪಿಸಿಕೊಂಡು ಅಲ್ಲಿಂದ ಎದ್ದ. ʻಹೋದ್ರೆ ಹೋಗ್ತಾನೆ. ನಾನೊಬ್ಳು ಸಿಕ್ತೀನಿ ಇವ್ರಿಗೆ ಬಿಟ್ಟಿ ಚಾಕ್ರಿ ಮಾಡಿ ಸಾಯಕ್ಕೆ… ಹಾಳಾದ್ ಈ ಒಲೆ… ಹತ್ಕೊಂಡು ಅಡುಗೆಯಾದ್ರೆ ಸಾಕಾಗಿದೆ. ಮುಲ್ಲಾ ಕೂಗಿ ಎಷ್ಟೊತ್ತು ಆಗೋಯ್ತು. ಇನ್ನರ್ಧ ಗಂಟ್ಗೆ ಹಸ್ಕಂಡು ಬರಾ ಹೊತ್ಗೆ ಆಗಿಲ್ದಿದ್ರೆ ಒಂದು ರಾಮಾಣ್ಯವೇ ಆಗೋಗತ್ತೆ…ʼ ಅಂದುಕೊಂಡು ಮತ್ತೆ ಮತ್ತೆ ಊದಿ ಅಂತೂ ಒಲೆ ಉರಿಸುವುದರಲ್ಲಿ ಗೆದ್ದಳು. ಗಂಡನ ಊಟವಾದ ಮೇಲೆ ತಾನೂ ಒಂದಷ್ಟು ಉಂಡು ಮಿಕ್ಕದ್ದನ್ನ ಸ್ಕೂಲಿಂದ ಬರುವ ಮಕ್ಕಳಿಗೆ ಮುಚ್ಚಿಟ್ಟು ಅಡುಗೆ ಮಾಡಿದ ಜಾಗವೆಲ್ಲಾ ಒರಸಿ ಉಸ್ಸಪ್ಪಾ ಅಂತ ಬಾಗಿಲೆದುರಿಗೆ ಕುಳಿತುಕೊಂಡಳು. ಎದುರಿನ ಹೊಂಗೆಮರದಿಂದ ಬೀಸುತ್ತಿದ್ದ ಗಾಳಿಗೆ ಜೀವವೆಲ್ಲಾ ಹಾಯೆನಿಸಿ ಬಾಗಿಲು ತೆರೆದಿದ್ದಂತೆಯೇ ʻಓಣಿ ಕೊನೇಮನೆ, ಯಾರ್‌ ಹಾಯ್ತಾರಿಲ್ಲಿʼ ಎನಿಸಿ ಚಾಪೆ ಬಿಡಿಸಿ ಉರುಳಿಕೊಂಡಳು. ಬೆಳಗ್ಗೆ ಎದ್ದಾಗಿಂದ ಒಲೆ ಮುಂದೆ ದಣಿದಿದ್ದು ಬೆನ್ನು ನೆಲಕ್ಕೆ ಹಾಕಬೇಕೆನಿಸಿತ್ತು. ʻಪ್ರತಿಸಲವೂ ಜಯತ್ತೆ ನನ್ನೇ ಯಾಕ್ ಕರಿಬೆಕು? ಕೃಷ್ಣವೇಣಿ, ಶಾರದಾ, ವಿಮಲಾ ಯಾರೂ ಅವ್ಳ ಕಣ್ಣಿಗ್ಯಾಕ್ ಕಾಣಲ್ಲ. ಅವ್ರನ್ನ ಕರ್ಯದು, ಅವ್ರೂ ಎಲ್ಲಾ ನನ್ನಂಗೆ ಮಾವನ್‌ ಅಕ್ತಂಗೀರ್ ಮಕ್ಳೇ ಅಲ್ವಾ ಅವರತ್ರ ಕೆಲಸ ತೆಗೆಯೋದು ನನ್ನ ಹತ್ರ ತೆಗೆದಷ್ಟು ಸುಲಭ್ವಾ. ಯಾರೂ ಜಯತ್ತೆ ಜೋರಿಗೆ ಸೊಪ್ಪು ಹಾಕಲ್ಲ, ನೀನೂಂದ್ರೆ ನಿಮ್ಮಪ್ಪ ಅಂತರೆ. ಅವ್ರೆಲ್ಲಾ ಮನೆಕಡೆ ಹಚ್ಚಗೆ, ಬೆಚ್ಚಗೆ ತಕ್ಮಟ್ಟಿಗೆ ಚೆನ್ನಾಗಿದರೆ, ಹಾಗಂದ್ರೆ ತಡಕಳತ್ತೆ. ಅದೇ ನಾನು ಎದುರು ಮಾತಾಡಿದ್ರೆ ಊರಲ್ಲೆಲ್ಲಾ ʻಎರ್ಡೊತ್ತು ನೆಟ್ಗೆ ಊಟ್ಕಿಲ್ದಿದ್ದೂ ಎಷ್ಟು ಸೊಕ್ಕುʼ ಅಂತ ಕತೆಕತೆಯಾಗಿ ಹೇಳ್ಕಂಡು ಬರ್ತಳೆ. ತಥ್‌, ಬಡ್ತನಾ ಅನ್ನೋದು ಬಾಯ್ನೂ ಹೊಲ್ದ್ಬಿಡತ್ತಲ್ಲ…ʼ ಅನ್ನಿಸಿ ಇರುಸುಮುರುಸಾಯ್ತು. ಪಕ್ಕಕ್ಕೆ ತಿರುಗಿಕೊಂಡಳು. ʻಹಾಳಾಗ್ಲಿ ಆ ವಿಷ್ಯ, ಹೇಗೂ ಈ ಸಲ ಬರಲ್ಲʼ ಅಂತ ಹೇಳಾಯ್ತಲ್ಲಾ, ನಾಳೆ ತುಂಗಮ್ನೋರ ಮನೆ ಸಾರಿನ್‌ ಪುಡಿ, ಹುಳಿಪುಡಿ ಕೆಲ್ಸ ಇದೆ.‌ ದುಡ್ಡಿನ್‌ ಜತಿಗೆ ಒಂದು ವಾರ ಹತ್ದಿನಕ್ಕಾಗಷ್ಟು ಪುಡೀನು ಕೊಡ್ತರೆ. ಬುದ್ವಾರ ಲಲಿತಮ್ನೋರಿಗೆ ದೋಸೆಹಿಟ್ಟು ರುಬ್ಬುಕೊಡಕ್ಕೆ ಬರ್ತಿನಿ ಅಂತ ಹೇಳಾಗಿದೆ. ಎರಡ್ಸೇರು ಅಕ್ಕಿ ನೆನ್ಸಿರೂ ಒಂದು ಹೊತ್ಗಾಗೋಷ್ಟು ಹಿಟ್ಟು ತಗಂಡೋಗೆ ಅಂತೇಳಿ ಮೇಲಿಷ್ಟು ದುಡ್ಡೂ ಕೈಗಾಕ್ತಾರೆ. ಗುರ್‌ವಾರ ಬೆಳಗ್ಗೇನೇ ನಾರಣಪ್ಪನೋರ ಮನೆಗೆ ಹೋಗಿ ಮಡೀಲಿ ಚಿಗಳಿ, ತಂಬಿಟ್ಟು ಮಾಡಿಟ್ಟು ಬಂದ್ಬಿಡ್ಬೇಕು. ಶುಕ್ರಾರ ಬೆಳಗ್ಗೆದ್ದು ಕೋಸಂಬ್ರಿ, ಪಾನಕ ಎಲ್ಲಾ ಮಾಡೋ ಹೊತ್ಗೆ ಸರೀ ಹೋಗತ್ತೆ. ಹತ್ತೂವರೆಗೆ ರಾಹುಕಾಲ ಬಂದ್ಬಿಡತ್ತೆ, ಬೇಗ್ನೇ ಶುರು ಮಾಡ್ಕಂಬಿಡಣ ಅಂದ್ರಲ್ಲ ಕಮಲಮ್ಮʼ ಅಂತ ಯೋಚನೆ ಬಂತು. ಕೆಲ್ಸಕ್ಕೆ ನಾನೇನು ಇಂತಿಷ್ಟೂ ಅಂತ ಹೇಳ್ದಿದ್ರೂ ಸೈತಾ ಅವ್ರ ಕೈ ಧಾರಾಳಾನೆ. ʻಹೂವೀಳ್ಯಕ್ಕೆ ಕೊಡಕ್ಕೇಂತ ಐದು ಜನ ಮುತ್ತೈದೇರಿಗೆ ಕಾಟನ್ ಸೀರೆ ತಂದಿದೀನಿ ಕಣೆ. ನಿಂಗೂ ಒಂದು ಕೊಡ್ತಿನಿ. ನೋಡಿಲ್ಲಿʼ ಅಂತ ತೋರ್ಸಿದ್ರು ಬೇರೆ. ಗಳದ ಮೇಲೊಂದು, ಮೈಮೇಲೊಂದು ಅನ್ನೋ ಹಾಗಾಗಿದೆ ನಂಗೀಗ. ಆ ಸೀರೆ ಬಂತೂಂದ್ರೆ ಹೊರಗೆಲ್ಲಾದ್ರೂ ಹೋಗೋವಾಗ ಉಡಕ್ಕಾಗತ್ತೆ. ಆಗದನ್ನ ಪೆಟ್ಗೆಲಿಟ್ಟು ಅಲ್ಲಿರೊ ಇನ್ನೊಂದೇ ಒಂದು ಸ್ವಲ್ಪ ಗಟ್ಟಿಯಾಗಿರೊ ಸೀರೇನ ಹೊರಗೆ ತೆಕ್ಕೋಬೋದುʼ ಅಂದುಕೊಳ್ತಾ ಮತ್ತೆ ಈ ಪಕ್ಕಕ್ಕೆ ತಿರುಗಿದಳು. ʻಜೊತೆಗೆ ಜಾನಕೀನೂ ಕರ್ಕಂಬಾ, ಕನ್ಯಾಮುತ್ತೈದೆಗೆ. ಅವ್ಳಿಗೂ ಎಲಡಿಕೆ ಕೊಡೋದು ಅನ್ಕಂಡಿದೀನಿ ಅಂದ್ರು. ಅವ್ಳ ಕೈಗೂ ಏನಾರ ಕೊಡ್ತರೆನೋ. ಕೊಟ್ಟೇ ಕೊಡ್ತರೆ. ಒಳ್ಳೇ ಊಟ್ವಂತೂ ಸಿಗತ್ತೆ.ʼ ಕಣ್ಣು ತೂಗುವ ಹಾಗಾಯ್ತು ʻಎದ್ದು ಬಾಗಿಲು ಮುಂದೂಡಲೇʼ ಅನ್ನಿಸಿದರೂ ʻಅಯ್ಯೋ ಕೊಳ್ಳೆ ಹೊಡ್ಕಂಡು ಹೋಗಕ್ಕೆ ಏನಿದೆ. ಸ್ವಲ್ಪ ಗಾಳಿಯಾದ್ರೂ ಆಡಲಿʼ ಅಂದುಕೊಂಡು ಮತ್ತೆ ಯೋಚನೆಯಲ್ಲಿ ಮುಳುಗಿರುವಂತೆಯೇ ಒಂದು ಜೋಂಪು ಹತ್ತಿತು… “ಏನೇ ಬಾಗಿಲು ತೆಕ್ಕೊಂಡೇ ಮಲ್ಗಿದೀಯಲ್ಲೇ. ಯಾರಾದ್ರೂ ನುಗ್ಗಿದ್ರೇನು ಗತಿ” ಅಂತ ಕೇಳಿದ ತಕ್ಷಣ ಬೆಚ್ಚಿಬಿದ್ದು ಎದ್ದಳು. ಬಾಗಿಲಿಗಡ್ಡವಾಗಿ ಜಯತ್ತೆ ನಿಂತಿದ್ದಳು. ತಕ್ಷಣವೇ ಎದ್ದು, ಅದೇ ಚಾಪೆಯನ್ನು ಇನ್ನೊಂದು ಗೋಡೆಗೆ ಹಾಕಿ “ಕೂತ್ಕೋತ್ತೆ, ಮಕ ತೊಳ್ಕಂಡು ಬರ್ತಿನಿʼ ಎನ್ನುತ್ತಾ ಹಿತ್ತಿಲಿನ ಬಾಗಿಲಿನ ಪಕ್ಕದಲ್ಲಿದ್ದ ತಗಡಿನ ಮರೆಗೆ ಹೋಗಿ ಕೈಕಾಲು, ಮುಖ ತೊಳೆದುಕೊಂಡು ಬಂದು ಹೊಗೆಹಿಡಿದಿದ್ದ ಕನ್ನಡಿಯಲ್ಲಿ ಮಸಕುಮಸಕಾಗಿ ಕಂಡೂ ಕಾಣದಂತಿದ್ದ ಮುಖವನ್ನು ನೋಡಿಕೊಂಡು ಹಣೆಗಿಟ್ಟುಕೊಂಡು ಅವಳು ಬಂದಿದ್ದೇಕೆಂದು ತಿಳಿದಿದ್ದರೂ, “ಏನತ್ತೆ ಬಂದೆ, ಕೂತ್ಕಾ, ಒಂಚೂರು ಕಾಫಿ ಮಾಡ್ತಿನಿ” ಎನ್ನುತ್ತಾ ಅವಳೆಡೆಗೆ ತಿರುಗಿದಳು. “ಕಾಫೀನೂ ಬೇಡ, ಏನೂ ಬೇಡ, ನೀ ಬಾಯಿಲ್ಲಿ ಮದ್ಲು. ಇಲ್ಲಿ ಬಾ” ಅಂದಳು ಜಯಮ್ಮ ಜೋರಾದ ಅತ್ತೆ ಪಾಪದ ಸೊಸೆಗೆ ಹೇಳುವ ಜರ್ಬಿನಲ್ಲಿ. ಈ ಧಾಳಿಗೆ ಸಿದ್ದವಾಗಿಲ್ಲದ ನಾಗು ಬಂದು ಅಡುಗೆಮನೆಯ ಅಡ್ಡಗೋಡೆಗೆ ಒರಗಿ, ʻಈಗ ಅತ್ತೆ ಏನು ಗಿಲೀಟು ಮಾತು ಹೇಳಿದ್ರು ಸೈತ ಒಪ್ಕಬಾರ್ದುʼ ಅಂತ ನಿರ್ಧರಿಸಿಕೊಂಡವಳಂತೆ ಒರಗಿ ನಿಂತಳು. “ಅಲ್ವೇ, ಬೆಳಗ್ಗೆ ಸುಬ್ಬಣ್ಣನ್‌ ಕೈಲಿ ಹೇಳ್ಕಳಿಸಿದ್ರೆ ಬರಕ್ಕಾಗುಲ್ಲಾ ಅಂದ್ಯಂತೆ. ನಿಮ್ಮಜ್ಜಿ ತಿಥೀನೇ… ತಿಳ್ಕ, ನಿಮ್ಮಮ್ಮನ ಹೆತ್ತವ್ಳಲ್ವಾ… ಸ್ವಲ್ಪ ಸಹಾಯಕ್ಕೆ ಬಾಂದ್ರೆ ಎಷ್ಟು ಜಂಭ ನಿಂದು. ಅಜ್ಜಿ ತಿಥೀಗಿಂತ ಯಾರ್ದೋ ಮನೆ ದೇವ್ರಸಮಾರಾದ್ನೆ ಹೆಚ್ಚಾಯ್ತ ನಿಂಗೆ. ನಾನೇ ಬೇಕಾರೆ ಅವ್ರ ಮನೇಗೆ ಹೇಳಿ ಕಳಿಸ್ತೀನಿ, ʻಹೀಗಿದೆ ನಿಂಗ್ ಬರಕ್ಕಾಗಲ್ಲʼ ಅಂತ. ಬೇಕಾರೆ ನಿನ್‌ ಬದ್ಲು ಶಾರೀನ ಮಗ್ಳನ್‌ ಕರ್ಕಂಡೋಗಕ್ಕೆ ವಪ್ಸಿ, ಕಮಲಮ್ಮಂಗೆ ಹೇಳ್ತಿನಿ. ಹಿಂದಿನ್ದಿನ ಹೋಗಿ ಕೆಲ್ಸ ಮಾಡ್ಕೊಟ್ಟು ಬಾ. ಆವತ್ತು ನಮ್ಮನಿಗೆ ತಪ್ಪಸ್ಬೇಡ. ಎಲ್ಲಿ ಮಡಿಸೀರೇಗೆ ಒಣಗ್‌ಹಾಕಕ್ಕೆ ನಿಂದೊಂದು ಸೀರೆ ಕೊಡು” ಜಬರ್ದಸ್ತಿಯಿಂದ ತಾನೇ ಎಲ್ಲಾ ತೀರ್ಮಾನವನ್ನೂ ಮಾಡಿಬಿಟ್ಟಳು ಜಯಮ್ಮ. “ಹಾಗಲ್ಲತ್ತೇ…” ಏನೋ ಹೇಳಲು ಹೋದ ನಾಗುವನ್ನು ಅಲ್ಲೇ ತಡೆದು “ಹಂಗೂ ಇಲ್ಲ, ಹಿಂಗೂ ಇಲ್ಲ ಮದ್ಲು ಮಡಿಗೆ ಹಾಕಕ್ಕೆ ನಿನ್‌ ಸೀರೆ ಕೊಡು ಅಷ್ಟೇಯ. ನೋಡು, ಪುರೋಹಿತ್ರು ನಮ್ಮನೇ ಕೆಲ್ಸ ಮುಗಿಸ್ಕಂಡು ಮೂರು ಗಂಟೆ ಬಸ್ಸಿಗೆ ತೀರ್ಥಳ್ಳಿಗೆ ಹೋಗ್ಬಕಂತೆ. ಅಡ್ಗೆ ತಡಾಗೋ ಹಾಂಗಿಲ್ಲ. ಅವತ್ತು ಅದೇನೋ ರಜ ಇದ್ಯಂತಲ್ಲ, ಜನ ಬೇರೆ ಜಾಸ್ತಿ, ಬೆಳಗ್ಗೆ ಆರು ಗಂಟ್ಗೇ ಬಂದ್ಬಿಡು. ಈಗ ಮದ್ಲು ಸೀರೆ ಕೊಡು” ಎನ್ನುತ್ತಾ ಅವಳು ಮಾತನಾಡಕ್ಕೆ ಅವಕಾಶವನ್ನೇ ಕೊಡದೆ ʻಇಕಾ ನಾನೆ ತಗಂಡೆʼ ಎನ್ನುತ್ತಾ ಪಕ್ಕದ ಗಳುವಿನ ಮೇಲಿದ್ದ ಸೀರೆ, ರವಿಕೆಯನ್ನು ಎಳೆದು ಸುತ್ತಿಕೊಂಡು ಹೊರಟೇಬಿಟ್ಟಳು ಜಯಮ್ಮ. ಬೆಪ್ಪಾಗಿ ನಿಂತುಬಿಟ್ಟಳು ನಾಗು ʻಅದ್ಹೇಗೆ ನಂಗೆ ಮಾತಾಡಕ್ಕೂ ಬಿಡ್ದೆ ಅತ್ತೆ ಹೀಗ್ಮಾಡ್ಬಿಟ್ಳೂʼ ಅಂತ ತಲೆಮೇಲೆ ಕೈಹೊತ್ತು ಕೂತಿದ್ದ ನಾಗುವನ್ನು ಜಾನಕಿ ಕೂಗಿದ್ದು ಎಚ್ಚರಿಸಿತು. ಸ್ಕೂಲಿನ ಚೀಲವನ್ನು ಮೂಲೆಯಲ್ಲಿಡುತ್ತಾ “ಅದೇನು ಯೋಚ್ನೆ ಮಾಡ್ತ ಕೂತಿದೀಯೇ. ನಂಗೆ ಹಸಿವು. ಬೇಗ ಒಂದಿಷ್ಟು ಕಲ್ಸಿ ಕೊಡು” ಎನ್ನುತ್ತಾ ಕೈಕಾಲು ತೊಳೆಯಲು ಹೋದಳು. ಒಳಗೆ ಮುಚ್ಚಿಟ್ಟಿದ್ದ ಅನ್ನದಲ್ಲಿ ಹುಳಿಯನ್ನ, ಮಜ್ಜಿಗೆಯನ್ನ ಎರಡನ್ನೂ ಕಲಿಸಿ ಸ್ವಲ್ಪ ಸ್ವಲ್ಪವನ್ನು ಜಾನಕಿಯ ತಟ್ಟೆಗೆ ಹಾಕಿ ಕೊಟ್ಟಳು. ಮಿಕ್ಕದ್ದನ್ನು ಇನ್ನೇನು ಬರುವ ಶೇಷಾದ್ರಿಗೆ ಮುಚ್ಚಿಟ್ಟಳು. ಹುಳಿಯನ್ನ ಬಾಯಿಗಿಟ್ಟ ಜಾನಕಿ “ಇವತ್ತೂ ಪಪಾಯ ಕಾಯಿನ ಹುಳೀನೇ ಮಾಡಿದೀಯಾ… ಥೂ ನಂಗಿಷ್ಟ ಇಲ್ಲ” ಎನ್ನುತ್ತಾ ತಟ್ಟೆ ಕುಕ್ಕಿದಳು. ನಾಗುವಿಗೂ ಕೋಪ ಬಂತು. “ಏನ್‌ ನಿಮ್ಮಪ್ಪ ಇಪ್ಪತ್ತುಮೂವತ್ತು ಸಾವ್ರ ಸಂಬಳ ತರೋ ಸರ್ದಾರ. ದಿನದಿನಾನೂ ಅಂಗ್ಡೀಯಿಂದ ತರ್ಕಾರಿ ತಂದು ಮಾಡ್ತೀನಿ. ಮನೆ ಹಿತ್ಲಲ್ಲಿ ಏನು ಬೆಳ್ದಿರತ್ತೋ ಅಷ್ಟೇನೆ. ಹಸಿವಾಗಿದ್ರೆ ತಿನ್ನು ಇಲ್ದಿದ್ರೆ ಅಲ್ಲೇ ಮೂಲೇಲಿ ಮುಚ್ಚಿಟ್ಟು ಹೋಗು. ರಾತ್ರಿ ಹೊಟ್ಟೆ ಕಾದ್ರೆ ತಿನ್ನೋವಂತೆ” ಎನ್ನುತ್ತಾ ಮತ್ತೆ ರಾತ್ರಿಯ ಅಡಿಗೆಗೆ ಒಲೆ ಹಚ್ಚತೊಡಗಿದಳು. ಅಷ್ಟರಲ್ಲಿ ಶೇಷಾದ್ರಿಯೂ ಬಂದ. ಮಾತಿಲ್ಲದೆ ತನ್ನ ತಟ್ಟೆಗೆ ಹಾಕಿಕೊಟ್ಟಿದ್ದನ್ನು ಸ್ವಾಹಾ ಮಾಡತೊಡಗಿದ. ಗುಮ್ಮೆಂದು ಕೂತಿದ್ದ ಜಾನಕಿಯನ್ನು ನೋಡಿ “ತಿನ್ನಲ್ವೇನೆ, ತಿಂದಿದ್ರೆ ನಂಗ್ಹಾಕು” ಎಂದು ತಟ್ಟೆಯನ್ನು ಮುಂದೆ ಚಾಚಿದ. ಮರುಮಾತಿಲ್ಲದೆ ಜಾನಕಿ ತಿನ್ನತೊಡಗಿದಳು. ಒಲೆ ಹೊತ್ತಿದ ತಕ್ಷಣ ಸ್ವಲ್ಪ ನೀರುಕಾಸಿ ತೊಟ್ಟೇತೊಟ್ಟಿದ್ದ ಹಾಲು ಸೋಕಿಸಿ ನಾಗು ಬೆಲ್ಲದ ಕಾಫಿ ಮಾಡಿಕೊಂಡು ರಾತ್ರಿಯ ಊಟಕ್ಕೆ ಎಸರಿಟ್ಟಳು. ತಟ್ಟೆ ತೊಳೆದಿಟ್ಟ ಶೇಷಾದ್ರಿ ಎದ್ದು ಆಟಕ್ಕೆ ಹೊರಗೋಡಿದ. ಹೆದಹೆದರುತ್ತಲೇ ಜಾನಕಿ “ನಂಗೊಂತೊಟ್ಟು ಕಾಫಿನಾದ್ರು ಕೊಡ್ತಿಯೆನೇ?” ಕೇಳಿದಳು. ʻಅಯ್ಯೋʼ ಅನ್ನಿಸಿ “ತಗಾ” ಎನ್ನುತ್ತಾ ತಳಮುಳುಗುವಷ್ಟು ಕಾಫಿಯನ್ನು ಸಣ್ಣಲೋಟಕ್ಕೆ ಬಗ್ಗಿಸಿಕೊಟ್ಟಳು. ಇನ್ನಷ್ಟು ಬಿಸಿನೀರು ಬೆಲ್ಲವನ್ನು ಬೆರಸಿಕೊಂಡು ತನ್ನ ಲೋಟದ ತುಂಬ ಮಾಡಿಕೊಂಡು ನಿಧಾನವಾಗಿ ಕುಡಿಯುತ್ತಾ “ಈ ಕಾಫಿ ಕೊಟ್ಟಿದ್ರೆ ನಿಜ್ವಾಗೂ ಜಯತ್ತೆ ಕುಡಿತಿದ್ಲಾ” ಅಂದುಕೊಳ್ಳುತ್ತಲೇ ಎರಡೂ ಲೋಟ ತೊಳೆದಿಡು ಎಂದು ಜಾನಕಿಗೆ ಕೊಟ್ಟು ಸಿಟ್ಟು ತೀರಿಸಿಕೊಳ್ಳುವಂತೆ ಆರುತ್ತಿದ್ದ ಒಲೆ ಊದಿದಳು… ರಾತ್ರಿ ಎಷ್ಟೋ ಹೊತ್ತು ನಿದ್ರೆ ಬರಲಿಲ್ಲ… ನಂಗ್ಯಾಕೆ ʻನಾ ಬರಲ್ಲಾಂದ್ರೆ ಬರಲ್ಲʼ ಅಂತ ಹೇಳಕ್ಕಾಗ್ಲಿಲ್ಲ… ಹೇಳಕ್ಕೆ ಅವ್ಳು ಬಿಟ್ಟಿದ್ರಲ್ವಾ… ನಾರ್ಣಪ್ಪನೋರ ಮನೆಗ್ಹೋದ್ರೆ ಸೀರೆ, ದಕ್ಷಿಣೆ, ಒಂದಷ್ಟು ಹಣ್ಣು ಎಲ್ಲಾ ಸಿಗತ್ತೆ ಅಂತ ಅವ್ಳಿಗ್‌ ಗೊತ್ತಿಲ್ವಾ. ಹಂಗ್ಸಿ ಮಾತಾಡ್ತಳಲ್ಲ. ಬದ್ಲಿಗೆ ಶಾರೀನ ಕಳಿಸ್ತಿನಿ

ಕಾರ್ಮಿಕ ದಿನದ ವಿಶೇಷ-ಕಥೆ Read Post »

ಕಥಾಗುಚ್ಛ

ಕಾರ್ಮಿಕ ದಿನದ ವಿಶೇಷ-ಕಥೆ

ಕಥೆ ಕರ್ಮ ಮತ್ತು ಕಾರ್ಮಿಕ!  ಪೂರ್ಣಿಮಾ ಮಾಳಗಿಮನಿ ಕರ್ಮ ಮತ್ತು ಕಾರ್ಮಿಕ!  ಎಲ್ಲರ ಮನೆಯ ದೋಸೆಯೂ ತೂತೇ, ಹಾಗಂತ ತೂತಿಲ್ಲದ ದೋಸೆಗಾಗಿ ಹಾತೊರೆಯುವುದನ್ನು ರಾಗಿಣಿ ಬಿಟ್ಟಿರಲಿಲ್ಲ. ಮನೆಯೊಳಗಿನ ಸಣ್ಣ ಪುಟ್ಟ ಜಗಳಗಳಿಗೆ, ಮೂವತ್ತೈದು ವರ್ಷಕ್ಕೇ ಜೀವನವೇ ಸಾಕಾಗಿ ಹೋಗಿದೆ, ಎಂದು ಕೈ ಚೆಲ್ಲಿ ಕುಳಿತ ಹೆಂಡತಿ ರಾಗಿಣಿಯನ್ನು ಮ್ಯಾರೇಜ್ ಕೌನ್ಸಲರ ಬಳಿ ಕರೆದೊಯ್ಯುವ ವಿಚಾರ ಮಾಡಿದ್ದು ಪ್ರಶಾಂತನೇ. ಮಕ್ಕಳೂ ಆಗಿಲ್ಲವೆಂದ ಮೇಲೆ ನಿಮ್ಮ ಹೆಂಡತಿ ಟೈಮ್ ಪಾಸ್ ಮಾಡುವುದಾದರೂ ಹೇಗೆ ಎಂದು  ದಬಾಯಿಸಿ, ಕೌನ್ಸಲರ ಒಂದು ನಾಯಿ ಮರಿ ಸಾಕಿ ಕೊಳ್ಳಿ ಎಂದು ಉಪದೇಶ ಮಾಡಿದ್ದರು.ನಾಯಿ ಮರಿಯನ್ನಾದರೆ ಪದೇ ಪದೇ ಒಂದು, ಎರಡು ಮಾಡಿಸಲು ಮನೆ ಹೊರಗೆ ಕರೆದೊಯ್ಯ ಬೇಕು, ಅದರ ಬದಲು ಬೆಕ್ಕು ಸಾಕಿಕೊಳ್ಳಿ, ಟಾಯ್ಲೆಟ್ ಟ್ರೈನ್ಡ್ ಸಿಗುತ್ತವೆ ಎಂದು ಪಕ್ಕದ ಮನೆ ನಯನ ಹೇಳಿದಾಗ ಫೇಸ್ಬುಕ್ ಮೂಲಕ ಎರಡು ಮುದ್ದಾದ ಬೆಕ್ಕಿನ ಮರಿಗಳನ್ನು ತಂದು ಪ್ರಶಾಂತ ರಾಗಿಣಿ ಮಡಿಲಿಗೆ ಹಾಕಿ, ಇನ್ನಾದರೂ ಶಾಂತಿ ಸಿಗಬಹುದು ಎಂದು ಆಶಿಸಿ, ತನ್ನ ಕೆಲಸದಲ್ಲಿ ಮತ್ತೆ ಮುಳುಗಿ ಬಿಟ್ಟಿದ್ದ. ಹೊಸದಾಗಿ ಸಿಕ್ಕ ಸ್ನೇಹಿತರನ್ನು ಬಹಳ ಹಚ್ಚಿಕೊಂಡ ರಾಗಿಣಿ, ಅವುಗಳ ಆರೈಕೆ, ಊಟ, ವ್ಯಾಕ್ಸೀನ್, ಸ್ನಾನ ಮಾಡಿಸುವುದು, ಹೇನುಗಳಾಗದಂತೆ ಕೂದಲನ್ನು ಬಾಚುವುದು, ದಿನಕ್ಕೊಂದು ಹೊಸ ಸಾಮಾನಿನ ಶಾಪಿಂಗ್, ಎಲ್ಲದರ ಮಧ್ಯೆ ಪ್ರಶಾಂತನೊಂದಿಗೆ ಜಗಳ ಆಡುವುದು ಮರೆತು ಬಿಟ್ಟಳು.  ಹೆಸರುಘಟ್ಟದಲ್ಲಿದ್ದ ಕೃಷಿ ಇಲಾಖೆಯ ಸಾವಿರಾರು ಎಕರೆ ಜಮೀನಿನಲ್ಲಿ ತರಕಾರಿ ಹಣ್ಣು ಹಂಪಲುಗಳ ಕುರಿತು ಸಂಶೋಧನೆ ಮಾಡುವ ವಿಜ್ಞಾನಿಯಾಗಿದ್ದರೂ ಅಪ್ಪಟ ಮಣ್ಣಿನ ಮಗನಾಗಿಬಿಡುತಿದ್ದ  ಪ್ರಶಾಂತನಿಗೆ ತನ್ನ ಕೆಲಸದಲ್ಲಿ ಬಹಳ ಶ್ರದ್ಧೆ ಮತ್ತು ಆಸಕ್ತಿ. ತರಕಾರಿಗಳ ಹೊಸ ಹೊಸ ತಳಿಗಳನ್ನು ಬೆಳೆಸಿ, ಅದಕ್ಕಾಗಿ ಹಗಲಿರುಳೂ ಶ್ರಮಿಸುತ್ತಾ ತನ್ನದೇ ಲೋಕದಲ್ಲಿರುತಿದ್ದ. ಒಮ್ಮೊಮ್ಮೆ ಇಲಾಖೆಯಿಂದ ಅವನಿಗೆ ಒದಗಿಸುತಿದ್ದ ಕೂಲಿ ಆಳುಗಳು ಬರದಿದ್ದರೆ, ತನ್ನ ಆಫೀಸ್ ಕೋಣೆಯಲ್ಲಿ ಇಟ್ಟುಕೊಂಡಿದ್ದ ಒಂದು ಟಿ ಶರ್ಟ್ ಮತ್ತು ಶಾರ್ಟ್ಸ್ ಹಾಕಿಕೊಂಡು ತಾನೇ ಗಿಡಗಳಿಗೆ ಪಾತಿ ಮಾಡುವುದು, ನೀರು ಬಿಡುವುದು ಮಾಡುತ್ತಿದ್ದ. ಮರುದಿನ ಅವರು ಕೈಗೆ ಸಿಕ್ಕಾಗ ನೀರು ಬಿಡದೆ ಗಿಡ ಒಣಗಿಸಿದ್ದಕ್ಕೆ ಚೆನ್ನಾಗಿ ಬೈಯ್ಯ ಬೇಕೆಂದುಕೊಂಡಿದ್ದರೂ, ದಿನಗೂಲಿ ಕಂಟ್ರಾಕ್ಟರ್ ತಿಮ್ಮಾ ರೆಡ್ಡಿ, ತಮ್ಮನ್ನು skilled labour ಅಂತ ಸೇರಿಸಿಕೊಂಡರೂ, unskilled labour ಸಂಬಳವನ್ನೇ ಕೊಡುತ್ತಿದ್ದಾನೆಂದು ಕೂಲಿ ಆಳುಗಳು ದುಃಖ ತೋಡಿಕೊಂಡಾಗ, ಪ್ರಶಾಂತ ತನ್ನ ಥರ್ಮಾಸ್ ನಲ್ಲಿ ತಂದ ಚಹವನ್ನೂ ಅವರಿಗೆ ಬಸಿದುಕೊಟ್ಟು, ಜೇಬಿನಿಂದ ಐದು ನೂರು ಕೊಟ್ಟು ಹಂಚಿಕೊಳ್ಳಿ ಎಂದು ಹೇಳಿ ಹೋಗಿಬಿಡುತಿದ್ದ. ಪ್ರಶಾಂತನ ಸಹೋದ್ಯೋಗಿ, ಅನೂಪ್ ವರ್ಮಾ, ಇದೇ ಕೂಲಿಯಾಳುಗಳು ತಮ್ಮ ಊಟದ ಡಬ್ಬಿಯಲ್ಲಿ ಆರ್ಕಿಡ್, ಕ್ಯಾಕ್ಟಸ್, ಅಣಬೆ, ವಿಭಿನ್ನ ಬಣ್ಣದ ಗುಲಾಬಿ ಮುಂತಾದ ದುಬಾರಿ ಗಿಡಗಳನ್ನು ಬಚ್ಚಿಟ್ಟುಕೊಂಡು ಹೋಗಿ ತಿಮ್ಮಾ ರೆಡ್ಡಿಗೆ ಮಾರಿಕೊಳ್ಳಲು ಕೊಡುತ್ತಿದ್ದುದನ್ನು ತಾನು ಕಣ್ಣಾರೆ ನೋಡಿದ್ದೇನೆ ಎಂದಾಗ, “ಇವರು ಬರೀ ಕಾರ್ಮಿಕರು, ಕರ್ಮದ ಫಲ ಏನೇ ಆಗಿದ್ದರೂ ಅದನ್ನು ಮಾಡಿಸಿದ ರೆಡ್ಡಿ ಅಷ್ಟೇ ಅನುಭವಿಸುತ್ತಾನೆ ಬಿಡಿ.” ಎಂದು ಉಪೇಕ್ಷಿಸಿದ್ದ.   ಪ್ರಶಾಂತನಿಗೆ ಸ್ವಲ್ಪ ಹಣ ಖರ್ಚು ಮಾಡಿದರೆ ಮನಃಶಾಂತಿ ಸಿಗುತ್ತದೆ ಎಂದರೆ ಅದಕ್ಕಿಂತ ಉತ್ತಮ ಒಪ್ಪಂದ ಬೇರೆ ಇಲ್ಲವೆಂದೇ ನಂಬಿಕೆ.  ರೆಡ್ಡಿ ತನ್ನ ಮಾತು ಕೇಳದಿದ್ದರೆ, ಎಂತದ್ದೇ ತುರ್ತು ಪರಿಸ್ಥಿತಿಯಿದ್ದರೂ ಆಳುಗಳಿಗೆ ರಜೆ ಕೊಡುತ್ತಿರಲಿಲ್ಲ. ಎಷ್ಟೋ ಬಾರಿ ಕೆಂಡದಂತೆ ಮೈ ಸುಡುತ್ತಿದ್ದರೂ, ದಿನಗೂಲಿ ಕಳೆದುಕೊಂಡರೆ ಮನೆ ಮಂದಿಯೆಲ್ಲಾ  ಊಟಕ್ಕೆ ಪರೆದಾಡುವಂತಾದೀತು ಎಂದು ಕೂಲಿ ಆಳು ನರಸಯ್ಯ ಕೆಲಸಕ್ಕೆ ಬರುತಿದ್ದುದನ್ನು ಪ್ರಶಾಂತ ನೋಡಿದ್ದ. ಇದ್ದುದರಲ್ಲೇ ಮೈ ಕೈ ತುಂಬಿಕೊಂಡಿದ್ದ ಪುಟ್ಟಮ್ಮ ಮಾತ್ರ ತಿಂಗಳಲ್ಲಿ ನಾಲ್ಕಾರು ಬಾರಿ ರಜೆ ಹಾಕಿ, ಪೂರ್ತಿ ಇಪ್ಪತ್ತಾರು ದಿನಗಳ ಕೂಲಿ ತೆಗೆದುಕೊಳ್ಳುತ್ತಿದ್ದಳು. ಅವಳ ಬಗ್ಗೆ ಮತ್ಸರವಿದ್ದರೂ, ಹೆಂಗಸರಿಗೂ, ಗಂಡಸರಿಗೂ ದಿನಗೂಲಿ ಒಂದೇ ಎಂದು ಹೇಳಿ, ಅವಳಂತೆ ಉಳಿದ ಹೆಂಗಸರಿಗೆ ರೆಡ್ಡಿಯಿಂದ ಆಗುತ್ತಿದ್ದ ಅನ್ಯಾಯವನ್ನೂ ನರಸಯ್ಯನೇ ತಪ್ಪಿಸಿದ್ದ.  ಅದೊಂದು ದಿನ ರಾಗಿಣಿ, “ಈ ಮೂಕ ಪ್ರಾಣಿಗಳಿಗೆ ಆಶ್ರಯ ಕೊಟ್ಟಿದ್ದೇನೋ ಸರಿ. ಆದರೆ ನನಗೆ ಇನ್ನೂ ಏನಾದರೂ ಸಮಾಜ ಸೇವೆ ಮಾಡಬೇಕು ಅನಿಸುತ್ತಿದೆ ಕಣ್ರೀ.” ಎಂದು ರಾಗ ಎಳೆದಾಗ ಪ್ರಶಾಂತ ಆಶ್ಚರ್ಯದಿಂದ ಅವಳನ್ನೇ ಒಂದು ಗಳಿಗೆ ನೋಡಿದ.  “ನಿಜಕ್ಕೂ ಸಮಾಜ ಸೇವೆ ಮಾಡಬೇಕೆಂದಿದ್ದರೆ, ನಮ್ಮ ಕ್ಯಾಂಪಸ್ಸಿಗೆ ಬಂದುಬಿಡು. ನೂರಾರು ಕೂಲಿ ಆಳುಗಳಿರುತ್ತಾರೆ. ಅವರಲ್ಲಿ ಒಂದಿಬ್ಬರಿಗಾದರೂ ಆರೋಗ್ಯ ಸರಿ ಇರುವುದಿಲ್ಲ. ಅಂತವರಿಗೆ ಮರದಡಿ ಮಲಗಲು ಹೇಳಿ, ಅವರ ಕೆಲಸ ನೀನು ಮಾಡು. ಹೇಗೆ?” ಎಂದು ಕೇಳಿ ತನ್ನ ಅದ್ಭುತ ಯೋಚನೆಗೆ ತಾನೇ ತಲೆದೂಗಿ ಕೇಳಿದ.  “ನನಗೆ ಮೊದಲಿನಿಂದಲೂ ಅನುಮಾನ ಇತ್ತು, ನಿಮಗೆ ತಲೆ ಸರಿ ಇಲ್ಲಾಂತ.” ಎಂದು ಬುಸುಗುಡುತ್ತಾ ಹೋದ ರಾಗಿಣಿ ಅಷ್ಟಕ್ಕೇ ಸುಮ್ಮನಾಗಲಿಲ್ಲ.  ‘ಹೆಂಡತಿಗೇ ಕೂಲಿ ಮಾಡಲು ಹೇಳುತ್ತಿದ್ದಾನೆ, ಎಂತಹ ಕ್ರೂರಿ’ ಎಂದು ಅಪ್ಪ ಅಮ್ಮನಿಂದಲೂ ಮತ್ತು ಅತ್ತೆ ಮಾವಂದಿರಿಂದಲೂ ಸರಿಯಾಗಿ ಪೂಜೆ ಮಾಡಿಸಿದಳು. ಪ್ರಶಾಂತ ತೆಪ್ಪನಾದ!  ವಾರ್ಷಿಕ ಕೃಷಿ ಮೇಳಕ್ಕೆ ಇನ್ನು ಎರಡೇ ತಿಂಗಳು ಉಳಿದಿದ್ದುವು. ಸಂಸ್ಥೆಯಲ್ಲಿ ಎಲ್ಲರೂ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ಕಾರ್ಯಾಗಾರ, ಬೋಧನೆ, ಪ್ರದರ್ಶನ ಎಲ್ಲದಕ್ಕೂ ಕೂಲಿ ಆಳುಗಳ ಸಹಕಾರ ಬೇಕೇಬೇಕು. ಆದ್ದರಿಂದ ಪ್ರಶಾಂತ ತನ್ನ ತಂಡದಲ್ಲಿದ್ದ ಕೂಲಿಯವರನ್ನು ಖುಷಿಯಾಗಿಟ್ಟುಕೊಳ್ಳಲು ಪ್ರಯತ್ನಿಸುತಿದ್ದ. ಪ್ರತಿದಿನವೂ ಆರೈಕೆ ಬೇಡುವ ಸಸಿಗಳು ಭಾನುವಾರ ರಜೆ ಎಂದರೆ ಮಾತು ಕೇಳಬೇಕಲ್ಲ? ಒಂದು ದಿನವೂ ಮನೆಯಲ್ಲಿರುವುದಿಲ್ಲ ಎಂದು ರಾಗಿಣಿ ರಂಪ ಮಾಡಿದರೂ ಪ್ರಶಾಂತ ಭಾನುವಾರವೂ ತಪ್ಪದಂತೆ ಆಫೀಸಿಗೆ ಬಂದು ಕೆಲಸ ಮಾಡುತಿದ್ದ. ಇದರ ನಡುವೆಯೇ ದಾವಣಗೆರೆಯಲ್ಲಿದ್ದ ಪ್ರಶಾಂತನ ಅಪ್ಪನಿಗೆ ಇದ್ದಕ್ಕಿದ್ದಂತೆ ರಕ್ತದೊತ್ತಡ ಹೆಚ್ಚಾಗಿ ಬಿಟ್ಟಿತು. “ಬಿಡುವಿದ್ದಿದ್ದರೆ ನಾನೇ ಬರುತ್ತಿದ್ದೆ, ಆದರೆ ಕೆಲಸದೊತ್ತಡ ಬಹಳ ಇರುವುದರಿಂದ ಡ್ರೈವರ ಜೊತೆಯಲ್ಲಿ ಬಂದು ಬಿಡಿ.” ಎಂದು ಕಾರು ಕಳಿಸಿದ. ಬೆಂಗಳೂರಿಗೆ ಬಂದಿಳಿದ ಸಂಜೆಯೇ ಅಮ್ಮನಿಗೆ ಭೇದಿ ಕಿತ್ತುಕೊಂಡಿತು. ಅದಕ್ಕೆ ದಾರಿಯಲ್ಲಿ ಮಾಡಿದ ಹೋಟೆಲು ಊಟವೇ ಕಾರಣ ಎಂದು ಡ್ರೈವರಿಗೆ ಅಮ್ಮ ಹಿಡಿ ಶಾಪ ಹಾಕಿದಾಗ, ಪ್ರಶಾಂತ ಮನದೊಳಗೇ ನಡುಗಿದ. ಏಕೆಂದರೆ ಯಾವ ಹೋಟೆಲಿನಲ್ಲಿ ಊಟಕ್ಕೆ ನಿಲ್ಲಿಸಬೇಕು ಎಂದು ಕೂಡ ಪ್ರಶಾಂತನೇ ಡ್ರೈವರಿಗೆ ಹೇಳಿದ್ದ! ಅಮ್ಮನ ಶಾಪ ಯಾರಿಗೆ ತಗಲುವುದೋ ಎಂದು ಹೆದರುತ್ತಲೇ, ಅವಳ ಆರೈಕೆ ಮಾಡಿದ.  ರಾಗಿಣಿ ಅಪರೂಪಕ್ಕೆ ಬಂದ ಅತ್ತೆ ಮಾವಂದಿರ ಸೇವೆಯನ್ನು ಎರಡು ದಿನ ಪ್ರೀತಿಯಿಂದಲೇ ಮಾಡಿದಳು. ಆದರೆ ಅವರು, ಮನೆ ತುಂಬಾ ರಾಜಾರೋಷವಾಗಿ ಓಡಾಡಿಕೊಂಡಿದ್ದ, ಕೊಬ್ಬಿದ್ದ ಬೆಕ್ಕುಗಳನ್ನು ಸಹಿಸುವುದು ಆಗದು, ಅವುಗಳನ್ನು ಈ ಕೂಡಲೇ ಹೊರಗಟ್ಟಿರಿ, ಎಂದಾಗ ಕೆರಳಿದಳು. ಎಲ್ಲೆಂದರಲ್ಲಿ ಅವುಗಳ ಕೂದಲುಗಳೇ; ಅಡುಗೆ ಮನೆಯಲ್ಲಿ ಎಲ್ಲ ಪಾತ್ರೆಗಳಿಗೂ ಬಾಯಿ ಹಚ್ಚಿ ಬಿಡುತ್ತಿದ್ದುದು ನೋಡಿದಾಗಲಂತೂ ಅಮ್ಮ ತನಗೆ ಊಟವೇ ಬೇಡವೆಂದು ಹಠ ಮಾಡಿದರು. ಆಫೀಸಿನ ಕೆಲಸದ ನಡುವೆ ಅಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆಯಿಂದ ಪ್ರಶಾಂತ ಆಗಲೇ ಚಡಪಡಿಸುತ್ತಿದ್ದ. ಇದರ ನಡುವೆ ಬೆಕ್ಕುಗಳದೇ ದೊಡ್ಡ ತಲೆನೋವಾಗಿ ಬಿಟ್ಟಿತು. ರಾಗಿಣಿ ಅಡುಗೆ ಮಾಡುವುದನ್ನಷ್ಟೇ ಅಲ್ಲದೆ ಮಾತು ಕೂಡ ಬಿಟ್ಟಿದ್ದಳು. ಮನೆಗೆ ಬರುವುದು ಎಂದರೆ ಬಹಳ ಧೈರ್ಯಸ್ಥರ ಕೆಲಸ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾದಾಗ, ಮನೆಮಂದಿಯನ್ನೆಲ್ಲಾ ಕೌನ್ಸಲರ ಬಳಿ ಕರೆದುಕೊಂಡು ಹೋಗಬಾರದೇಕೆ ಎನ್ನುವ ಯೋಚನೆ ಬಂದರೂ ಅದನ್ನು ತಳ್ಳಿ ಹಾಕಿ, ಪ್ರಶಾಂತ ಒಂದು ಉಪಾಯ ಮಾಡಿದ.  “ನೋಡು ರಾಗಿಣಿ, ಅಪ್ಪ ಅಮ್ಮ ಇರುವತನಕ ಬೆಕ್ಕುಗಳನ್ನು ನಮ್ಮ ಇಲಾಖೆಯ ಜಮೀನಿನಲ್ಲಿ ಬಿಟ್ಟಿರುತ್ತೇನೆ. ಅವುಗಳನ್ನು ನೋಡಿಕೊಳ್ಳಲು ಒಬ್ಬ ಕೂಲಿ ಹುಡುಗನಿಗೆ ಹೇಳಿ ಸ್ವಲ್ಪ ದುಡ್ಡು ಕೊಟ್ಟಿರುತ್ತೇನೆ. ಆಮೇಲೆ ಮತ್ತೆ ಕರೆ ತಂದರಾಯಿತು.” ಎಂದು ಹೇಳಿದ.  ಸ್ವಭಾವತಃ ದುರ್ಬುದ್ದಿಯವಳೇನಲ್ಲದ ರಾಗಿಣಿ ಬಹಳ ಹೊತ್ತು ಪುಸಲಾಯಿಸಿದ ಮೇಲೆ ಒಪ್ಪಿದಳು.  “I love you ಕಣೇ” ಎಂದು ಪ್ರಶಾಂತ ಅವಳ ಹಣೆಗೆ ಮುತ್ತಿಟ್ಟು, ಅವಳು ಮನಸ್ಸು ಬದಲಾಯಿಸುವ ಮೊದಲೇ ದೊಡ್ಡ ಬುಟ್ಟಿಯೊಂದರಲ್ಲಿ ಎರಡೂ ಮರಿಗಳನ್ನು ಹಾಕಿಕೊಂಡು ಕಾರಿನತ್ತ ನಡೆದ. ಏನನ್ನೋ ನೆನೆಸಿಕೊಂಡು ಹಿಂದೆಯೇ ಬಂದ ರಾಗಿಣಿ, “ಅಲ್ಲಾ ರೀ, ಇವತ್ತು ತಾರೀಖು ಮೇ, ಒಂದು, ತಾನೇ? ಲೇಬರ್ಸ್ ಡೇ, ರಜೆ ಅಲ್ವಾ?” ಎಂದು ಕೇಳಿ, ಇನ್ನೊಂದು ದಿನ ಬೆಕ್ಕುಗಳನ್ನು ಜೊತೆಯಲ್ಲಿಟ್ಟುಕೊಳ್ಳಬಹುದೇನೋ ಎಂದು ಆಸೆಯಿಂದ ನೋಡಿದಳು.  “ರಜೆ ತಕೊಳ್ಳೋಕೆ ನಾನೇನು ಲೇಬರ್ ಏನೇ? ಸೀನಿಯರ್ ಸೈಂಟಿಸ್ಟ್ ನಾನು. ತಲೆಗೆ ಕೆಲಸ ಕೊಡದೆ ಹೇಳಿದ ಕೆಲಸ ಮಾಡುವವರು ಲೇಬರ್ಸು. ದಡ್ಡಿ.” ಎಂದು ತನ್ನ ಜೋಕಿಗೆ ತಾನೇ ನಗುತ್ತ ಪ್ರಶಾಂತ ಹೊರಟೇ ಬಿಟ್ಟ.  ಅವನೆಣಿಕೆಯಂತೆ ಅಂದೂ ಕೂಡ ದಿನಗೂಲಿ ಆಸೆಗೆ ಸುಮಾರು ಜನ ಕೂಲಿ ಆಳುಗಳು ಬಂದಿದ್ದರು. ಆಗಲೇ ಎಷ್ಟೋ ಜನ ವಿವಿಧ ಖಾನೆಗಳಲ್ಲಿ ಬೆಳೆದ ಗಿಡಗಳಿಗೆ ಗೊಬ್ಬರ ಹಾಕುವುದು, ಔಷದಿ ಹೊಡೆಯುವುದು, ಕುಂಬಳ ಕಾಯಿಗಳಿಗೆ ಪ್ಲಾಸ್ಟಿಕ್ ಕವರು ಕಟ್ಟುವುದು, ಪಾತಿ ಮಾಡುವುದು, ಮಣ್ಣಿಗೆ ನೇರವಾಗಿ ಬಿಸಿಲು ಬಿದ್ದು ಒಣಗದಂತೆ ಕಾಪಾಡಲು ಗಿಡಗಳ ಮಧ್ಯೆ ತಾಡಪಾಲು ಹಾಸುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದರು. ನರಸಯ್ಯನೂ ಅಣತಿ ದೂರದಲ್ಲೇ ಕಂಡಾಗ, ಪ್ರಶಾಂತ ಅವನನ್ನು ಕಾರಿನ ಬಳಿ ಬರುವಂತೆ ಕರೆದ.  “ನರಸಯ್ಯ, ಒಂದು ಸ್ವಲ್ಪ ದಿನ ಈ ಬೆಕ್ಕಿನ ಮರಿಗಳನ್ನು ಇಲ್ಲೇ ಹೊಲದಲ್ಲಿ ಬಿಟ್ಟಿರ್ತೀನಿ, ನೋಡಿ ಕೊಳ್ತೀಯಾ?” ಎಂದು ಕಾರಿನ ಹಿಂದಿನ ಸೀಟಿನಲ್ಲಿ ಬುಟ್ಟಿಯೊಳಗಿಂದ ಒಂದೇ ಸಮನೆ ದೈನ್ಯತೆಯಿಂದ ಕೂಗಿ ಕೊಳ್ಳುತ್ತಿದ್ದ ಬೆಕ್ಕಿನ ಮರಿಗಳನ್ನು ತೋರಿಸಿ, ಒಂದು ಸಾವಿರ ರೂಪಾಯಿಗಳನ್ನು ಕೈಯ್ಯಲ್ಲಿ ಹಿಡಿದು ಚಾಚಿದ.   “ಸಾವಿರಾರು ಎಕರೆ ಜಾಗ ಇದು ಬುದ್ದಿ. ಹಾವು, ನಾಯಿ, ನರಿ ಏನಾದರೂ ಒಂದೇ ದಿನಕ್ಕೆ ಕೊಂದಾಕ್ ಬುಡ್ತಾವೆ.” ಮರುಕದಿಂದ ನರಸಯ್ಯ ಹೇಳಿದ.  ಪ್ರಶಾಂತ ತನ್ನೆದುರೇ ಹಾದು ಹೋದ ಕಾರು ತನ್ನ ಡೈರೆಕ್ಟರದು ಎಂದು ಗುರುತಿಸಿ ಅವಸರ ತೋರಿದ. ಮತ್ತೆ ಜೇಬಿಗೆ ಕೈ ಹಾಕಿ ಇನ್ನೊಂದು ಸಾವಿರ ರೂಪಾಯಿಗಳನ್ನು ಸೇರಿಸಿದ.  “ಕಾಸ್ ಕೊಟ್ ಬುಟ್ಟಿ ಪಾಪ ಎಂಗ್ ಕಳಕಂಡೀರಿ ಬುದ್ದಿ? ನಾನೆಷ್ಟೇ ಆದ್ರೂ ನೀವ್ ಯೋಳಿದ್ ಕೆಲ್ಸ ಮಾಡೋ ಕಾರ್ಮಿಕ ಅಷ್ಟೇಯಾ, ಅಲ್ಲವುರಾ? ಅದರ ಪಾಪ ಪುಣ್ಯ ಎಲ್ಲಾ… ”  ಪ್ರಶಾಂತ ಪೆಚ್ಚಾಗಿ ನರಸಯ್ಯನನ್ನು ನೋಡುತ್ತಲೇ ಇದ್ದ.  “ಇವತ್ತು ಕಾರ್ಮಿಕರ ದಿನ ಅಂತ ನಮ್ಮ ರೆಡ್ಡಿ ಸಾಬು ಸ್ವೀಟ್ ಕೊಡ್ತಾವ್ನೆ ಎಲ್ಲಾರಗುವೆ,” ಎಂದು ಹೇಳಿ ಮೂಕನಾಗಿದ್ದ ಪ್ರಶಾಂತನ ಕೈಯಿಂದ ಹಣ ಪಡೆದುಕೊಂಡು, “ಇವತ್ತೊಂದಿನ ಕಾರ್ಮಿಕನಂಗೆ ಯೋಳಿದ್ ಕೆಲ್ಸ ಮಾಡಾಕಿಲ್ಲ ಬುದ್ದಿ. ಈ ಮರಿಗೋಳ್ನ ಮನೆಗ್ ಎತ್ಗವೋಯ್ತಿನಿ, ಬುಡಿ.” ಎನ್ನುತ್ತಾ ಕಾರಿನ ಹಿಂದಿನ ಬಾಗಿಲು ತೆಗೆದು ಬುಟ್ಟಿಯನ್ನು ಕೈಗೆತ್ತಿಕೊಂಡ.       *******

ಕಾರ್ಮಿಕ ದಿನದ ವಿಶೇಷ-ಕಥೆ Read Post »

ಕಥಾಗುಚ್ಛ

ಕಥಾಯಾನ

ಈಗೊಂದು ಉತ್ತರ ಸಿಗದಾ ಪ್ರಶ್ನೆ ಸುಮಂತ್ ಎಸ್ ಅದೊಂದು ಸಂಜೆ, ನನ್ನ ಕೈಯಲ್ಲಿ ಆಕೆಯ ಕೈ ಇತ್ತು. ಕಣ್ ಮಿಟುಕಿಸದೆ, ಚಂದ್ರ ನಕ್ಷತ್ರಗಳನು ಎಣಿಸುವ ಹಾಗೆ ಆಕೆ ನನ್ನನ್ನೇ ನೋಡುತ್ತಿದ್ದಳು, ನಾನು ಆಕೆಯನ್ನು.ಸೂರ್ಯಾಸ್ತಮಾನದ  ಮೋಡಗಳಂತಾಗಿದ್ದ ಕಣ್ಣುಗಳು ನನಗೆ ಏನನ್ನೊ ಹೆಳಬೇಕೆಂದು ಚಟಪಡಿಸುತಿದ್ದನ್ನು ಕಂಡೆ. ಇದೇನು ಮೊದಲಬಾರಿಯಲ್ಲ, ಅದೆಷ್ಟೋ ಬಾರಿ ಹೀಗೆ ಏನನ್ನೊ ಹೇಳಬೇಕೆಂದು ಪ್ರಯತ್ನಿಸಿ ಸೂತಿದ್ದು ಗೂತ್ತಿದೆ ನನಗೆ,  ಅದೇ, ಅನಿಶ್ಚಿತತೆ, ನಾಚಿಕೆ,ಭಯ,ಗೂಂದಲ ಇಂದಿಗೂ ಅವಳ ಕಣ್ಣಾ ಪರದೆ ಹಿಂದಿನಿಂದ ಇಣುಕುತ್ತಲೇಯಿತ್ತು. ಎಲ್ಲಾ ನದಿಗಳು ಸೇರಿದರೂ ಒಂದೇತರನಾಗಿರುವ ಸಮುದ್ರ, ಅಲೆಗಳದೆಷ್ಟೇ ಅಬ್ಬರಿಸಿದರೂ ನಂತರ ಪ್ರಶಾಂತವಾಗಿ ಗೂಚರಿಸುವ ಹಾಗೆ ಅವಳ‌ ನಗು. ನನಗೂ ಅದನ್ನು ಕೇಳಬೇಕಂಬ ಹುಚ್ಚು ಕುತೂಹಲವಿದ್ದರೂ ಎಂದಿಗೂ ಒತ್ತಾಯ ಮಾಡಿರಲಿಲ್ಲ. ಬೆವರುತ್ತಿದ್ದ ಕೈಯಿ, ನಡುಗುತ್ತಿದ್ದರೂ ನನ್ನ ಕೈಯನ್ನು ಗಟ್ಟಿ ಹಿಡಿದು ಹೇಳಲೇಬೇಕೆಂದು  ಮೆಲ್ಲನೇ ಒಣಗಿದ ತುಟಿ ಬಿಡಿಸುತ್ತಿದ್ದರೇ ನನಗೆ ಎಲ್ಲಿಲ್ಲದ ಆತಂಕದ ಅನುಭವವಾಗುತ್ತಿತ್ತು..ನನ್ನ ಕಿವಿಗಳಿಗೆ, ನನ್ನ ಎದೆಬಡಿತ ಕೇಳುತ್ತಿತ್ತು.  ಅವಳಿಗೇನು ನನ್ನ ಪ್ರತಿಕ್ರಿಯೆ ಕಾಯಬೇಕೆಂದೆನೂ ಇರುಲಿಲ್ಲಾ, ಬರಿ ಹೇಳಿ  ನಿರುಂಬಳ ಆಗುವ ಹಂಬಲ ಅವಳನ್ನು ಕಾಡಿದಂತೆ ಇತ್ತು…  ಹಾಗಾಗಿ ಮೆಲ್ಲನೆ ಪಿಸುದ್ವನಿಯಲ್ಲಿ ಹೇಳಿಯೇಬಿಟ್ಟಳು. ಆಕಸ್ಮಿಕವೂ  ಏನೋ ಆಗಸದಲ್ಲಿ ಮೋಡ ಅಬ್ಬರಿಸ ತೊಡಗಿತು.. ಆಕೆಯ ಕಣ್ಣಿಂದ ಜಾರಿದ ಮಳೆ ಆಕೆಯ ಕೆನ್ನೆಯ ಮೇಲಿತ್ತು. ಒರೆಸುವ ಮುನ್ನ ಮಳೆ ಹೊತ್ತು ತಂದಿದ್ದ ಆ ಗಾಳಿ ಆಕೆಯ ಶ್ವಾಸಕೋಶವನ್ನು ಕೂನೆಯ ಬಾರಿ ಸ್ಪರ್ಶಿಸಿತು… ಅವಳ ವಾಲಿದ ಕತ್ತು  ನನ್ನ ಕೈಯಲ್ಲಿ ಇತ್ತು…. ತೇಲುತ್ತಿದ್ದಾ ಕಣ್ಣುಗಳು ಮುರಿದ ದೋಣಿಯಂತೆ ಸ್ಥಬ್ದ ಸ್ಥಿತಿ ಅವರಿಸಿತು, ಬಾಗಿಲಿನಲ್ಲಿ ನಿಂತಿದ್ದ, ನನ್ನ ಮಲತಂದೆ ಬಿಕ್ಕಳಿಸುತ್ತಾ ಆಳುತಿದ್ದಾ ನನ್ನಂತೆ…    ಆಕೆಯ ಮೇಲೆ ನನಗೆ ಅಗಾಧ ಪ್ರೀತಿಯಿತ್ತು ಎಂದೇನಲ್ಲ,ಸತ್ಯ ತರ್ಕಿಸಿದರೆ ನಾ ಆಕೆಯನ್ನು ದ್ವೇಷಿಸಿದ್ದೂ ಹೌದು.  ಆದರೂ ಅನುಮತಿ ಕೇಳದೆ ಕಣ್ಣೀರು ಹರಿದ್ದಿತ್ತು. ಚಿಕ್ಕಪ್ಪ ಒಳ್ಳೆಯ ಮನುಷ್ಯ,ನನಗೆ ವೀರ್ಯ ಕೂಟ್ಟ ತಂದೆಯಾಗಿಲ್ಲದೆ ಇದ್ದರು, ನನ್ನನ್ನು ಒಪ್ಪಿಕೂಂಡು , ಅರ್ಜಿಗಳಲ್ಲಿ ಖಾಲಿಯಿದ್ದ ಅಪ್ಪನ ಸ್ಥಾನವನ್ನು ತುಂಬಿ, ನನ್ನ ಹೆಸರಿಗೆ ಆತನ  ಸರ್ ನೇಮ್  ಸೇರಿಸಿದ್ದು ಒಂದಾದರೆ,ನನ್ನ ಅಮ್ಮನನ್ನು ಒಪ್ಪಿಕೊಂಡು ಪ್ಯಾರೀಸ್ ನಲ್ಲಿ ಮದುವೆಯಾಗಿದ್ದು ಇನ್ನೂಂದು, ಆಕೆ ಒಳ್ಳೆಯ ನೃತ್ಯಗಾರ್ತಿ ಎಂದು ಹೇಳುವ ಚಿಕ್ಕಪ್ಪನ ಕಂಗಳಲ್ಲಿ ಇನ್ನೂ ಅದೇ ಮೊದಲ ಬಾರಿಗೆ ಕಂಡ ಹೂಳಪು.  ಆಕೆಯನ್ನು  ಮೊದಲ ಬಾರಿಗೆ ಕಂಡಿದ್ದನ್ನು ವರ್ಣಿಸುವ ಆತ ಮಾವಿನ ಚಿಗುರು ಕಂಡ ಕೂಗಿಲೆಯಂತೆ ಕಾಣುತ್ತಾನೆ. ಓಡಿಬಂದು ಆಕೆಯನ್ನು ಮಡಿಲಿಗೆ ಎಳೆದುಕೊಂಡು ಒದ್ದೆಯಾದ ಕಣ್ಣುಗಳಿಂದ ಆಕೆಯನ್ನು ನೋಡುತ್ತಾ ಹಣೆಗೆ ಮುತ್ತಿಟ್ಟ.      ಹಾಹ್ ಅಷ್ಟೇ ಸಾಕು ಅವಳೆಡೆಗಿನ ಅವನ ಪ್ರೀತಿ ಎಂಥವುದು ಎಂದು ತಿಳಿಯಲು..      ನಿಜ ಸ್ಥಬ್ದವಾಗಿದ್ದು ಅವಳ ದೇಹವಷ್ಟೆ      ಕೊನೇಯಪಕ್ಷ ನನ್ನಿಂದ ಮುಚ್ಚಿಟ್ಟಿದ್ದ ನನ್ನ ತಂದೆಯ ಹೆಸರನ್ನು ಸಹ ಅವಳೂಂದಿಗೆ ಕೊಡ್ಯೊಲಲಿಲ್ಲಾ, ಕೊನೆಗೆ ಹೇಳಿದ್ದು ಆತನದೇ ಹೆಸರು… ನಮ್ಮ ಊರಿಗೆ ಜರ್ಮನ್ ಸೈನಿಕರು ಬರುತ್ತಿದ್ದದ್ದು ಸಾಧಾರಣ ವಿಷಯವೇ…ಹಾಗೆ ಬಂದಿದ್ದ ಆತ,ನನ್ನ ಅಮ್ಮ ಕೆಲಸ ಮಾಡುತ್ತಿದ್ದ ಜಮೀನಿನ ಬದಿಯಲ್ಲಿ ತನ್ನ ಪುಸ್ತಕದಲ್ಲಿ ಏನ್ನನ್ನೋ ಚಿತ್ರಿಸುತ್ತಾ ಅಪ್ಪಟ ಕಲಾವಿದನಂತೆ ನಿಂತಿದ್ದರೆ, ಪಾರಿಜಾತ ಪುಷ್ಪ ಗಮನ ಸೆಳೆದಂತೆ ಎಲ್ಲರ ಗಮನ ಸೆಳೆಯುತ್ತಿದ್ದಾ, ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿದ್ದ ಹೆಂಗಸರೆಲ್ಲಾ ಮಳೆ ಮುಂಚಿನ ಮೋಡ ಕಂಡ ನವಿಲ ಹಾಗೆ ಅವನೆಡೆಗೆ ನೋಡುತ್ತಿದ್ದರೆ ನನ್ನ ಅಮ್ಮ ಮಾತ್ರ ಮೊದಲ  ಮಳೆ ಸ್ವೀಕರಿಸಲು ಕಾಯುತ್ತಿದ್ದ ಮಣ್ಣಿನ ಹಾಗೆ ಆಗಿದ್ದಳು.. ನನ್ನ ಚಿಕ್ಕಪ್ಪ ಯಾವಾಗಲೂ ಹೇಳುವ ಹಾಗೆ ನನ್ನ ಅಮ್ಮ ಬಹಳ ಅಂದದ ಹೆಂಗಸು.ನಿರ್ಲಕ್ಷಿಸಲು ಅಸಾಧ್ಯವಾದ ರೂಪ ಅವಳದು, ಆತನೂ,  ಅವಳನ್ನು ಮೋಹಿಸಿದರೂ ತನ್ನ ಕಾಮನೆಗಳನ್ನು ಮೋಟು ಮೀಸೆಯ ಅಡಿಯಲ್ಲಿ ಬಚ್ಚಿಟ್ಟುಕೊಂಡು ಅವಳನ್ನು ನೋಡಲು ದಿನಾ ಬರುತ್ತಿದ್ದ, ಅವಳು ಕೂಡ ಆತ ಬರುವುದನ್ನು ತಿಳಿದು ದಿನಾ ಚಂದಚಂದದ ಬಟ್ಟೆ ತೊಟ್ಟು  ಕೆಲಸಕ್ಕೆ ಹೋಗುತ್ತಿದ್ದಳು. ಒಬ್ಬರಲ್ಲಿ ಇದ್ದ ಮತ್ತೊಬ್ಬರ ಮೇಲಿನ ಪ್ರೀತಿ ತಿಳಿಸಲು ಎಷ್ಟೇ ಪ್ರಯತ್ನಿಸಿದರೂ ಭಯ ಮತ್ತು ಭಾಷೆ ಎರಡೂ ತಡೆಯುತ್ತಿತ್ತು.ನಂತರ ಕಣ್ಣು ಬೆರೆಯಿತು, ಮುಗುಳುನಗೆ ವಿನಿಮಯ ಆಯಿತು, ಕ್ರಮೇಣ ಸ್ನೇಹ ಮತ್ತು ಪ್ರೀತಿ,ಊರು ಬದಿಯ ಮೈಲಿಗಲ್ಲುಗಳಿಗೆ  ಕಾವು ಕೊಡುವುದರಿಂದ ಶುರುವಾಗಿ ಸಾಯಂಕಾಲ ಒಟ್ಟಿಗೆ ಮದ್ಯಪಾನ ಮಾಡುವವರೆಗೂ ಭೂಮಿ ನೀರನ್ನು ಒಪ್ಪಿಕೊಳ್ಳುವ ಹಾಗೆ ಮಾತಿನಲ್ಲಿ  ಹೇಳಿಕೊಳ್ಳದೆ ಬೆಳೆದಿತ್ತು….. ಎಷ್ಟೇ ಆದರೂ ಆತ ಸೈನಿಕ, ಊರನ್ನು ಬಿಟ್ಟು ಹೋಗಬೇಕಾಗಿ ಬಂತು, ಆತ ಅವರಿಬ್ಬರ ನಡುವೆ ಏನೂ ಆಗೇ ಇಲ್ಲವೇನೋ ಎಂಬಂತೆ ಹೊರಟೆ‌ ಬಿಟ್ಟ…ಅಷ್ಟರಲ್ಲಿ ಅಮ್ಮ ಗರ್ಭಿಣಿಯಾಗಿದ್ದು ನಾನು ಈ ಪ್ರಪಂಚಕ್ಕೆ ಬರಲು ಸಿದ್ಧನಾಗುತ್ತಿದ್ದೆ.ಆಕೆ ದಿನೇ ದಿನೇ ಕೊರಗತೊಡಗಿದಳು, ಒಬ್ಬಳೆ ಕೂತು ಗಂಟೆಗಟ್ಟಲೆ ಅತ್ತಳು‌, ಈಕೆಯನ್ನು ನಡುರಾತ್ರಿಯಲ್ಲಿ ಬಿಟ್ಟು ಹೋದವನಿಗೆ ಮೈಥುನವಷ್ಟೇ ಬೇಕಾಗಿದೆಯೇನೋ  ಎಂಬ ಆಲೋಚನೆ  ಆಕೆಯಲ್ಲಿದ್ದರೂ ಎಂದೂ ಅವನನ್ನು ಬೈದದ್ದಿಲ್ಲ, ಪ್ರೀತಿ ಏನೋ ಹಾಗೆ ಇತ್ತು. ಜರ್ಮನ್ ಸೈನಿಕರು ನಮ್ಮ ಊರಿಗೆ ಬರುತ್ತಿದ್ದದ್ದು ಎಷ್ಟು ಸತ್ಯವೋ ನಮ್ಮ ಊರಿನ ಎಷ್ಟೋ ಮಕ್ಕಳಿಗೆ ಅಘೋಷಿತ ತಂದೆಗಳಿರುವರು ಎಂಬುದು ಅಷ್ಟೇ ಸತ್ಯ.ಆದರೂ ಮರ್ಯಾದೆಗೆ ಅಂಜಿದ ಅಮ್ಮ ನಾನು ಹುಟ್ಟಿದ ಮೇಲೆ, ಅಜ್ಜಿಯ ಬಳಿ ನನ್ನ ಬಿಟ್ಟು ಪ್ಯಾರಿಸ್ ಗೆ ಹೋದವಳು ಅವರ ಸಾವಿನ ನಂತರವೇ ನಾನು ಕಂಡಿದ್ದು, ಅಷ್ಟರಲ್ಲಿ ಆಕೆಗೆ ಮತ್ತೊಂದು ಮದುವೆ ಆಗಿತ್ತು.ಆಕೆ ತನ್ನ ಕನಸಿನ ಜೀವನ ಬದುಕುತ್ತಿದ್ದಳು, ಆದರೆ ನಾನು ಗೋಮುಖ ವ್ಯಾಘ್ರದಂತಹ ತಾತ ಅಜ್ಜಿಯ ಬಳಿ ನರಳುತ್ತಿದ್ದೆ; ಎಷ್ಟರ ಮಟ್ಟಿಗೆ ಎಂದರೆ ನಾನು ಅವರ ಸಾವನ್ನು ಬೇಡದ ದಿನವಿರಲ್ಲಿಲ್ಲ.ಮತ್ತೆ ಕೆಲ ದಿನದ ಮಟ್ಟಿಗೆ  ನನ್ನನ್ನು ಅಮ್ಮನ ತಂಗಿ,ಅವಳ ಗಂಡ ಸಾಕಿದರು… ಕಷ್ಟ ಪಟ್ಟು ಓದಿದೆ, ನಾನು ಪ್ರೀತಿಸಿದವಳನ್ನೇ  ಜೀವನ ಸಂಗಾತಿಯಾಗಿ ಪಡೆದೆ, ಒಂದರ ನಂತರ ಮತ್ತೊಂದೆಂಬಂತೆ ಒಂಬತ್ತು ಮಕ್ಕಳಾಯ್ತು , ಒಳ್ಳೆಯ ವಿದ್ಯಾಭ್ಯಾಸ ಪಡೆದರೂ ಮನಸಿನಲ್ಲಿ ತಂದೆ ಹೆಸರಿನಲ್ಲಿ ಇದ್ದ ನಕಲಿ ಹೆಸರು, ಅಮ್ಮನೆಡೆಗಿನ ಕೋಪ,ಸಮಾಜದೆಡೆಗಿನ ಆಕ್ರೋಶ, ಅಂಜಿಕೆ ನನ್ನನ್ನು ಸದಾ ಕೆಳಗೆ ಎಳೆಯುತ್ತಿತ್ತು. ಅದೆಷ್ಟೋ ಕಡೆ ಕೆಲಸ ಮಾಡಿದೆ.ನನ್ನದೆಯಾದ ಬಿಸ್ನೆಸ್ ಆರಂಭಿಸಿದೆ, ಆದರೂ ನಷ್ಟ ಬೇತಾಳನಂತೆ ಹಿಂಬಾಲಿಸುತ್ತಿತ್ತು, ಏನೂ ತೋಚದೆ ಕೈಚೆಲ್ಲಿ ಕುಳಿತಾಗ ಸೇನೆಗೆ ಸೇರಿದೆ, ಅದು World war ನ ಸಮಯ… ಒಂದೆಡೆ ಇಡೀ ವಿಶ್ವವೇ ಜೀವ ಭಯದಲ್ಲಿ ತತ್ತರಿಸುತ್ತಿದ್ದರೆ ಇನ್ನೊಂದೆಡೆ ನಾನು, ನನ್ನದೇ ತಂದೆಯ ಹೆಸರನ್ನು ಕೇಳಿ ಹಿಡಿ ಮುಷ್ಟಿ  ಉಪ್ಪು ತಿಂದಂತೆ ಆಗಿತ್ತು. ವಿಶ್ವಯುದ್ಧದಲ್ಲಾದರೆ ಸಾವು ಬದುಕಿನ ಹಪಾಹಪಿ ಆದರೆ ಬದುಕಿದ್ದಾಗಲೇ ಸಾಯುವುದು ಇನ್ನೆಷ್ಟು ಭೀಕರ? ನಾನು ಮತ್ತು ನಮ್ಮ ಜನಾಂಗದವರು ಆರಾಧಿಸುತ್ತಿದ್ದ ಆ ಪರಮ ದೇಶಭಕ್ತ, ಎಂಜಲು ಹಾರಿಸುತ್ತಾ ಮಾತಲ್ಲೇ ಮೋಡಿ ಮಾಡುವ ಸಾಮರ್ಥ್ಯವಿದ್ದ ಆ ಮೋಟು ಮೀಸೆಯವ,ನಮ್ಮ ಜನಾಂಗ ಅತೀ ಶುಭ್ರ ಜನಾಂಗವೆಂದು ನಂಬಿ ನಮಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದ ಒಂಟಿ ಸಲಗ, ಆತನೇ ನನ್ನ ತಂದೆ…!!! ಆತನನ್ನು ದೇವರನ್ನಾಗಿ ಒಪ್ಪಿಕೊಳ್ಳಬಹುದಿತ್ತು, ಆದರೆ ತಂದೆಯಾಗಿ?! ತಾಯಿಗೆ ಮೋಸ ಮಾಡಿದವನನ್ನು , ಒಮ್ಮೆಯೂ ನನ್ನ ಕಾಣದಿರುವವನನ್ನು,ಬೆರಳ ಹಿಡಿದು ನಡೆಸದವನನ್ನು, ಹೆಂಡತಿ ಮಕ್ಕಳನ್ನು ದೂರ ಮಾಡಿದವನನ್ನು ಹೇಗೆ ಒಪ್ಪಿಕೊಳ್ಳಲಿ ತಂದೆಯೆಂದು? ಹೇಗೆ ಒಪ್ಪಿಕೊಳ್ಳಲಿ?? ಅವನನ್ನು ಬಿಡಿ ಬರೀ ಆತನ ಹೆಸರೇ ಸಾಕಿತ್ತು ನನ್ನಿಂದ ಎಲ್ಲವನ್ನೂ ಕಬಳಿಸಲು. ತಾಯಿಯಿದ್ದರೂ ಅನಾಥನಾದೆ, ಸಂಸಾರ,ಸ್ನೇಹಿತರಿದ್ದರೂ ಏಕಾಂಗಿಯಾದೆ. ಕೆಲಸವಿದ್ದರೂ ಬಡವನಾದೆ,ಸಮಾಜದ ಕ್ರೂರತ್ವಕ್ಕೆ ಬಲಿ ಪಶುವಾದೆ, ಒಟ್ಟಿನಲ್ಲಿ ಜೀವಂತ ಶವವಾದೆ!! ಹೌದು, ಒಪ್ಪುತ್ತೇನೆ ಆತನಿಗೂ ತಂದೆ ಪ್ರೀತಿಯ ಅರಿವೇ ಇರಲಿಲ್ಲಾ, ತಂದೆ ಏನೋ ಇದ್ದ ಆತನಿಗೆ, ಆದರೆ ತಂದೆ ವಾತ್ಸಲ್ಯ ಎಂದಿಗೂ ಸಿಗಲಿಲ್ಲ ಅವನಿಗೆ.. ಜೀವನದುದ್ದಕ್ಕೂ ಈತನ ಇಚ್ಛೆಯ ವಿರುದ್ಧವೇ ನಡೆಸಿದ ಆತ, ಬಣ್ಣಗಳಿಗೆ ಜೀವ ತುಂಬುವ ಕೈಗಳಿಗೆ ಜೀವ ತೆಗೆಯುವ ಪಿಸ್ತೂಲನಿತ್ತು, ಕಲಾವಿದನ ಕೊಂದು ಕೊಲೆಗಾರನನ್ನಾಗಿಸಿದ… ಸುಖದ ಸುಪ್ಪತ್ತಿಗೆಯಲ್ಲಿ ಇರಬೇಕಾದವನ್ನನ್ನು ಪದೇ ಪದೇ ಶೂನ್ಯಕ್ಕೆ ಉರುಳಿಸಿದ,  ಆತನೂ ನನ್ನ ಹಾಗೆ ಅವರ ಸಾವಿಗೆ ಕಾದ್ದಿದ್ದಿರಬಹುದು? ತಂದೆಯ ಮೇಲಿನ ಆಕ್ರೋಶ,ಇಡಿ ಒಂದು ಜನಾಂಗವನ್ನೇ ನಿರ್ನಾಮ ಮಾಡುವೆಡೆ ತಿರುಗಿತು, ಇಡೀ ವಿಶ್ವವನ್ನೇ ರಣರಂಗ ಮಾಡಿಸಿತು!!  ಆದೆಷ್ಟೋ ಜೀವಗಳನ್ನು  ಇರುವೆಗಳ ಹೊಸಕಿ ಹಾಕಿದಂತೆ  ಹಾಕಿದ ರಕ್ತಾ ಸಾಗರವೇ ಹರಿಯಿತು…. ಆದರೂ ಆತನನ್ನು ಸಮರ್ಥಿಸಿಕೊಳ್ಳುತ್ತೇನೆ!!! ಏಕೆಂದರೆ  ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನಮ್ಮೆಲ್ಲರ  ಒಳಗೆ ಅಡಾಲ್ಫ್ ಹಿಟ್ಲರ್ ಇದ್ದಾನೆ. ಕೆಲವರಲ್ಲಿ ಸ್ವಲ್ಪ, ಇನ್ನೂ ಹಲವರಲ್ಲಿ ಕೊಂಚ ಜಾಸ್ತಿ, ಅಷ್ಟೇ ವ್ಯತ್ಯಾಸ… ಇಡೀ ಜಗತ್ತು ಅವನನ್ನು ಮಾನವ ರೂಪದ ರಾಕ್ಷಸವೆನ್ನಬಹುದು!! ನರಹಂತಕ ಎನ್ನಬಹುದು,ನೀಚ ಎನ್ನಬಹುದು,ರಕ್ತಭಕ್ಷಕ, ಭಕ್ಷಾಸುರ ಎಂದೆಲ್ಲಾ ಎನ್ನಬಹುದು; ಆದರೆ ಅದಕ್ಕೆಲ್ಲಾ ಕಾರಣ!??

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಮಕ್ಕಳ ಕಥೆ ಗರುಡನ ಆದರ್ಶ ರಾಜ್ಯ ಮಲಿಕಜಾನ ಶೇಖ     ವಿಂದ್ಯ ಪರ್ವತಗಳ ಇಳಿಜಾರು ಭಾಗದಲ್ಲಿ ‘ಸುಂದರಬನ’ ಎಂಬ ಸುಂದರ ಕಾಡು. ಹಚ್ಚ ಹಸಿರಿನ ಸಿರಿ, ಸುತ್ತಲೂ ಪರ್ವತ ಶ್ರೇಣಿ. ಅಲ್ಲಲ್ಲಿ ನೀರಿನ ಹೊಂಡಗಳು, ಜುಳು ಜುಳು ಹರಿಯುವ ನದಿ ಇವೆಲ್ಲವುಗಳಲ್ಲಿ ಹಾರಾಡಿ, ನಲಿದು ನೆಮ್ಮದಿಯಿಂದ ಬದುಕುವ ಪಕ್ಷಿ ಸಂಕುಲ. ಪಕ್ಷಿಗಳೆಲ್ಲಾ ಹಾರಾಡಿಕೊಂಡು ಗೂಡು ಮಾಡಿಕೊಂಡು ಸಂತೋಷವಾಗಿದ್ದವು. ಕಾಲ ಕ್ರಮೇಣ ಅವುಗಳಲ್ಲಿ ಸ್ವಾರ್ಥ ಬೆಳೆದು, ತಂಡ ಕಟ್ಟಿಕೊಂಡು ಕಳ್ಳತನ, ಸುಲಿಗೆ, ಅನ್ಯಾಯ, ಅತ್ಯಾಚಾರದಲ್ಲಿ ನಿರತರಾದವು. ಅದರಲ್ಲಿ ನೆರೆಯ ಕಾಡಿನ ಬರಗಾಲದಿಂದ ಅಲ್ಲಿಯ ಪಕ್ಷಿಗೂ ವಲಸೆ ಬರುವುದು ದೊಡ್ಡ ಸಮಸ್ಯೆಯಾಯಿತು.             ಈ ಬಗ್ಗೆ ಅಲ್ಲಿಯ ಎಲ್ಲ ಪಕ್ಷಿಗಳು ಕೂಡಿಕೊಂಡು ಸಮಾಲೋಚನೆ ಮಾಡಿದವು. ನಮ್ಮ ಪಕ್ಷಿಗಳ ಬದುಕು ನೆಮ್ಮದಿ, ಸಂತೋಷಕ್ಕೆ ಮರಳಬೇಕಾದರೆ ನಮ್ಮ ಕಾಡಿಗೆ ಒಬ್ಬ ಆದರ್ಶ ರಾಜನ ಆಯ್ಕೆ ಮಾಡಬೇಕು. ಶೌರ್ಯ, ಶಕ್ತಿ ಮತ್ತು ಬುದ್ದಿಮತ್ತೆಗೆ  ಹೆಸರಾದ ಗರುಡನನ್ನು ರಾಜನನ್ನಾಗಿ ಮಾಡಿದರೆ ಒಳ್ಳೆಯದೆಂದು ಬಹಳಷ್ಟು ಪಕ್ಷಿಗಳು ಹೇಳಿದವು. ಆ ತೀರ್ಮಾನ ಮಾಡುವುದಿತ್ತು, ಅಷ್ಟರಲ್ಲಿ ಕಾಗೆ ಮತ್ತು ಗೂಬೆ ನಮಗೂ ರಾಜನಾಗುವ ಅವಕಾಶ ಕೊಡಿ ಎಂದು ಬೇಡಿಕೊಂಡವು. ಸಭೆಯ ಮುಂದೆ ಹೊಸ ಪೇಚು ನಿರ್ಮಾಣವಾಯಿತು. ಆಗ ಗರುಡ, ಕಾಗೆ ಮತ್ತು ಗೂಬೆಗಳನ್ನು ಅಭ್ಯರ್ಥಿಗಳನ್ನಾಗಿ ಮಾಡಿ, ಮೂರರಲ್ಲಿ ತಮಗೆ ಇಷ್ಟವಾದ ಪಕ್ಷಿಯ ಮನೆಯ ಮುಂದೆ ಕಾಳು ಹಾಕುವಂತೆ ಹೇಳಲಾಯಿತು. ಇದಕ್ಕಾಗಿ ಎಲ್ಲ ಪಕ್ಷಿಗಳಿಗೆ ಐದು ದಿನಗಳ ಅವಕಾಶ ಕೊಡಲಾಯಿತು.               ಮೂರು ಪಕ್ಷಿ ಕಾಡಿನ ಪಕ್ಷಿಗಳನ್ನು ಒಲಿಸಿಕೊಳ್ಳುವದಕ್ಕೆ ತಮ್ಮ ತಂಡ ಕಟ್ಟಿಕೊಂಡು ಹೊರಟವು. ಗರುಡ ಶಿಸ್ತಿನ ಸಿಪಾಯಿ, ದಿಟ್ಟ ಸ್ವಭಾವ, ಕೆಲಸದ ಬಗ್ಗೆ ಮಾತಾಡಿ ಕಾಡಿನಲ್ಲಿ ಸೇರುವ ವೈರಿಗಳನ್ನು ತಡೆಯಲು ಗಗನ ಯಾತ್ರೆಗೆ ಹಾರಿತು. ಗೂಬೆ ಕನಸು ದೊಡ್ಡದು ಆದರೆ ಹಗಲಿನಲ್ಲಿಯೆ ಡುಸ್ಸೆಂದು ಮಲಗುತಿತ್ತು. ರಾತ್ರಿ ಸ್ವಲ್ಪ ಎಲ್ಲರಿಗೆ ಬಣ್ಣದ ಲೋಕ ತೋರಿಸಿ ಮತ್ತೆ ಮಲಗುತಿತ್ತು. ಆದರೆ ಯಾವ ವಿಶೇಷ ಗುಣವಿಲ್ಲದ, ಹಳಸಿದ ಅನ್ನಕ್ಕೆ ಮತ್ತು ಕೊಳೆತ ಮಾಂಸಕ್ಕೆ ಜಾರುವ ಕಾಗೆಗೆ ಮಾತ್ರ ರಾಜನಾಗುವ ಬಯಕೆ ಬಹಳ. ಎಲ್ಲ ಪಕ್ಷಿಗಳ ಮುಂದೆ ಸತತ ಕಾ.. ಕಾ.. ಮಾಡುತ್ತಾ ಇಲ್ಲ ಸಲ್ಲದ ಮಾತುಗಳನ್ನು ಹೇಳುತಿತ್ತು. ‘ನಾನು ರಾಜನಾದರೆ ಗರುಡನಿಗಿಂತ ಎತ್ತರಕ್ಕೆ ಹಾರಿ, ವರುಣ ದೇವನನ್ನು ಸೋಲಿಸಿ ಕಾಡಲ್ಲಿ ಬರಗಾಲ ಬೀಳದಂತೆ ನೋಡಿಕೊಳ್ಳುತ್ತೇನೆ’ ಎಂದು ಹೇಳುತಿತ್ತು. ಇಂತಹ ಮಾತುಗಳಿಗೆ ಮಾರು ಹೋಗಿ ಪಕ್ಷಿಗಳು ಸಾವಕಾಶ ಕಾಗೆಯತ್ತ ಜಾರಲು ಪ್ರಾರಂಭ ಮಾಡಿದವು. ಕಾಗೆ ತನ್ನ ಗುಂಪನ್ನು ಕರೆದು, ಪ್ರತಿ ಹಕ್ಕಿ ಗೂಡಿಗೆ ಕೊಳೆತ ಮಾಂಸದ ತುಣುಕು ಮತ್ತು ಹಳಸಿದ ಅನ್ನ ಹಾಕಲು ಹೇಳಿತು. ಆಗ ಮಾತ್ರ ದೊಡ್ಡ ಚಮತ್ಕಾರವೇ ಆಯಿತು. ಎಲ್ಲ ಹಕ್ಕಿಗಳು ಕಾಗೆಯೇ ನಮ್ಮ ರಾಜನೆಂದು ಹೇಳತೊಡಗಿದವು.             ಐದು ದಿನಗಳ ನಂತರ ನೋಡಿದರೆ ಕಾಗೆಯ ಮನೆಯ ಮುಂದೆ ಕಾಳಿನ ದೊಡ್ಡ ರಾಶಿಯೇ ಬಿದ್ದಿತ್ತು. ಗೂಬೆಗೆ ಸ್ವಲ್ಪ ಕಾಳು ಬಂದಿದ್ದವು ಆದರೆ ಗರುಡನಿಗೆ ಮಾತ್ರ ಒಂದು ಕಾಳೂ ಹಾಕಿರಲಿಲ್ಲ. ಅದಕ್ಕೆ ಬಹಳ ನೋವಾಯಿತು. ಹಕ್ಕಿಗಳಿಗೆ ‘ಶಿಸ್ತು, ಶೌರ್ಯ, ಶಾಂತಿ, ರಕ್ಷಣೆ’ ಬೇಕಾಗಿಲ್ಲ ಎಂದು ನೊಂದುಕೊಂಡಿತು.              ಅತ್ತ ಕಾಗೆಯ ಮನೆಯ ಮುಂದೆ ಮಾತ್ರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಾಡಿನ ತುಂಬೆಲ್ಲಾ ‘ಕಾ,, ಕಾ,,’ ಕರ್ಕಶ ಧ್ವನಿಯು ಆವರಿಸಿತು. ಮರದಲ್ಲಿ ಹೊಲಸು ಮಾಡುವದರ ಜೊತೆಗೆ ಕಾಗೆ ಕಾರುಬಾರು ಪ್ರಾರಂಭಿಸಿತು. ತನ್ನ ದರಬಾರದಲ್ಲಿ ತಿಪ್ಪೆ ಕೆದರುವ ಕೋಳಿ, ಗೂಬೆ, ಬಾವುಲಿಗಳಂತ ಪಕ್ಷಿಗಳನ್ನು ಮಂತ್ರಿಗಳನ್ನಾಗಿ ಮಾಡಿ ಸಲಹೆ ಪಡೆಯುತಿತ್ತು.                   ಕಾಗೆ ರಾಜನಾದ ನಂತರ ಕಾಡಿನ ತುಂಬೆಲ್ಲಾ ಹೊಲಸುತನ ಪ್ರಾರಂಭವಾಯಿತು. ಹೊಲಸು ತಿಂದು ಹೊಲಸು ಮಾಡುವುದು ಹೆಚ್ಚಾಯಿತು. ಇಷ್ಟು ದಿನ ಗರುಡನಿಗೆ ಅಂಜಿ ಕುಳಿತ ಕಾಗೆಗಳ ಗ್ಯಾಂಗು ಸಕ್ರಿಯವಾದವು. ಎಲ್ಲ ಪಕ್ಷಿಗಳ ಮೇಲೆ ದಬ್ಬಾಳಿಕೆ ಪ್ರಾರಂಭವಾಯಿತು. ಕಾಡಿನಲ್ಲಿ ಒಂದು ರೀತಿಯ ಭಯದ ವಾತಾವರಣ. ಮೊದಲಿದ್ದ ಸ್ವಾತಂತ್ರವು ಇಲ್ಲದಂತಾಯಿತು. ಆದರ್ಶ, ಬುದ್ಧಿಮತ್ತೆ ಮಣ್ಣಾಯಿತು. ಪಕ್ಷಿಗಳಿಗೆ ಪಶ್ಚಾತಾಪ ಆಗುತ್ತಲಿತ್ತು. ಅಂತಹದರಲ್ಲಿ ನೆರೆಯ ಕಾಡಿನ ಪಕ್ಷಿಗಳು ಈ ಕಾಡಿನ ಮೇಲೆ ಯುದ್ಧ ಸಾರಿದವು. ಎಲ್ಲ ಪಕ್ಷಿಗಳಿಗೆ ಮತ್ತಷ್ಟು ಚಿಂತೆಯಾಯಿತು. ‘ಚುಗುಲಿ’ ಮಾಡುವ ಕಾಗೆಗಳೇನು ಯುದ್ಧ ಮಾಡಬೇಕು.                    ಆಗ “ನಮ್ಮ ಕಾಡನ್ನು ರಕ್ಷಣೆ ಮಾಡುವದು ನನ್ನ ಧರ್ಮ” ಎಂದು ಗರುಡ ತನ್ನ ಸ್ನೇಹಿತರ ಸಹಕಾರದಿಂದ ವೀರಾವೇಶದಿಂದ ಕಾದಾಡಿ ಅವುಗಳನ್ನು ಹಿಮ್ಮೆಟ್ಟಿಸಿತು. ಎಲ್ಲ ಪಕ್ಷಿಗಳಿಗೆ ಗರುಡನ ಮೇಲೆ ಗರ್ವ ಎನಿಸಿತು. ಅವೆಲ್ಲವು ಗರುಡನ ಜಯ ಜಯಕಾರ ಹಾಕುತ್ತಾ ಬಂದು ಕ್ಷಮೆ ಕೇಳಿ, “ನೀನೆ ರಾಜನಾಗಬೇಕು ಮತ್ತು ಕಾಗೆಗಳ ಹೊಲಸು ವೃತ್ತಿಗೆ ಕಡಿವಾಣ ಹಾಕಬೇಕು” ಎಂದು ವಿನಂತಿಸಿಕೊಂಡವು. ಅಂದಿನಿಂದ ತ್ಯಾಗ, ಪ್ರಾಮಾಣಿಕ, ನಿಸ್ವಾರ್ಥಗಳಂತಹ ಆದರ್ಶ ಗುಣವುಳ್ಳ; ಶೌರ್ಯ ಮತ್ತು ಚತುರತೆಗೆ ಹೆಸರಾದ, ಪಕ್ಷಿಗಳ ಸ್ವಾತಂತ್ರ್ವವನ್ನು ರಕ್ಷಣೆ ಮಾಡಿ, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಗರುಡ ಪಕ್ಷಿಯು ರಾಜನಾಗುತ್ತದೆ. ಆಗ ಅಲ್ಲಿ ಮತ್ತೆ ಎಲ್ಲ ಪಕ್ಷಿಗಳು ನೆಮ್ಮದಿಯಿಂದ ಬದುಕುತ್ತವೆ. *******

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಸಂತೆಯಲಿ ಕಂಡ ರೇಣುಕೆಯ ಮುಖ ಮಲ್ಲಿಕಾರ್ಜುನ ಕಡಕೋಳ ಸಂತೆಯಲಿ ಕಂಡ ರೇಣುಕೆಯ ಮುಖ ಸಂತೆಯಲಿ ಕಂಡ ರೇಣುಕೆಯ ಮುಖ   ಒಂದಲ್ಲ, ಎರಡಲ್ಲ, ಬರೋಬ್ಬರಿ ಎಂಟು ವರುಷಗಳ ಕಾಲ ಅವಳ ಕಣ್ಣಲ್ಲಿ  ಕಣ್ಣಿಟ್ಟು ನಿರಂತರವಾಗಿ ನೋಡಿದ ನನ್ನ ನೆನಪಿಗೆ ಸಾವಿಲ್ಲ. ಮರೆತೆನೆಂದರೂ  ಮರೆಯಲಾಗದ ಮೃದುಲ ಮುಖವದು.  ಅದೊಂದು ಅನಿರ್ವಚನೀಯ ಮಧುರ ಸ್ಮೃತಿ. ಹೌದು, ಅವಳ ” ಆ ಮುಖ ” ನನ್ನ  ಸ್ಮೃತಿಪಟಲದಲ್ಲಿ ಕಳೆದ ಶತಮಾನದಿಂದ ಹಾಗೇ ಅನಂತವಾಗಿ ಸಾಗಿ ಬರುತ್ತಲೇ ಇದೆ. ನನ್ನ ಪಾಲಿಗೆ ಅದೊಂದು ಬಗೆಯ ಸಂವೇದನಾಶೀಲ ಪ್ರ(ತಿ)ಭೆಯ  ಸುಮಧುರ ಸಮಾರಾಧನೆ. ಅವಳನ್ನು  ಅದೆಷ್ಟು ಬಾರಿ ಭೆಟ್ಟಿ ಮಾಡಿ,  ಅವಳೊಂದಿಗೆ ಮಾತಾಡಿ, ಜೀವಹಗುರ  ಮಾಡಿಕೊಂಡಿದ್ದೇನೆಂಬುದು ಲೆಕ್ಕವಿಟ್ಟಿಲ್ಲ. ಯಡ್ರಾಮಿಯ ಶಾಲಾದಿನಗಳು  ಮುಗಿಯುವ ಮುಜೇತಿ… ಅವಳ ನನ್ನ  ಭೆಟ್ಟಿ. ಅವಳನ್ನು ಮಾತಾಡಿಸುವ ದಿವ್ಯ  ಕುತೂಹಲ ನನಗೆ. ಆದರೆ ಅವಳು  ಹುಂ..ಹೂಂ.. ನನ್ನನ್ನು ಕಣ್ಣೆತ್ತಿಯೂ  ನೋಡುತ್ತಿರಲಿಲ್ಲ. ಆಕೆಗೆ ನಾನ್ಯಾವ ಲೆಕ್ಕ, ಹೇಳಿಕೇಳಿ ನಾನು ‘ಹಸೀಮಡ್ಡ’ ಎಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೆ. ಹೀಗೆ ವರುಷ ನಾಲ್ಕು ಕಳೆದಿರಬಹುದು.   ಅದೊಂದು ಮಟಮಟ ಮಧ್ಯಾಹ್ನ . ದುಡಿದು, ದಣಿದು ಬಂದಿದ್ದಳು. ಕಂದು ಬಣ್ಣದ ಸೀರೆಯುಟ್ಟಿದ್ದಳು. ಕಡಲೇಬೇಳೆ ಬಣ್ಣದ ಹಣೆಯ ಮೇಲಿದ್ದ ಗಂಧ ಕುಂಕುಮದ ಬೊಟ್ಟೆಲ್ಲ ಕರಗಿ ಕಟಿನೀರು ಬಸಿದು ಮೃದುಮಲ್ಲಿಗೆ ಮುತ್ತಿನಂತೆ, ಹವಳದ ತುಟಿದಾಟಿ ಅವಳೆದೆಯ ದಾಸವಾಳಗಳ ಮೇಲೆ ತಟಕು ತಟಕೆಂದು ಹನಿಸುತ್ತಿದ್ದವು. ಬಾವಾಗೋಳ ತೆಕ್ಕೆಯ ಪಕ್ಕದ ಹಣಮಂದೇವರ  ಗುಡಿಯ ಬಾಜೂಕೆ ರುದ್ರಯ್ಯ ಮುತ್ಯಾನ ಹೊಟೇಲ್. ಜೋಡು ಬಸರಿ ಗಿಡದ ದಟ್ಟನೆರಳು : ಪತರಾಸಿನ  ಹೊಟೇಲಿಗೂ ಹಣಮಪ್ಪನ ಗುಡಿಯ  ಪೌಳಿಗೂ.    ಗುಡಿಕಟ್ಟೆಯ ಮೇಲೆ ಕುಂತಿದ್ದಾಕೆ.., ಇನ್ನೇನು ನಾನು ಬಂದು  ” ತನ್ನ  ಮಾತಾಡಿಸಿ ಬಿಡುತ್ತೇನೆಂಬಂತೆ ”  ಕಮಟಾದ ಹರಕು ಸೀರೆಯ ಸೆರಗಿನಿಂದ  ಮುಖದ ಮೇಲಿಂದುದುರುವ ಕಟ್ನೀರು  ಒರೆಸಿಕೊಂಡಳು. ಸೆರಗ ಮರೆಯಲಿದ್ದ  ಅರಿಶಿಣ ಉಂಡೆದ್ದ ಕೆಂಪು ಕುಪ್ಪಸದ  ದಾಸವಾಳಗಳ ಮೇಲೆ ಬಿದ್ದ ಕಟಿನೀರಿನ  ಹಸಿ ಹಸಿ ಗುರುತುಗಳು..!  ಆ ಹಸಿ ಗುರುತುಗಳ  ಮೇಲೆ  ಬಿಸಿ ಬಿಸಿ ಹಾಡಿನ ಚಿದ್ವಿಲಾಸದ ಸಾಲುಗಳನ್ನು  ಬರೆಯಲು  ನನ್ನ ಬರಹಗಣ್ಣು ಕನಸಿದವು. ಅಭಿಜಾತ ಪ್ರೀತಿಯ ಪ್ರಥಮವಾಂಛೆ ಅರಳಿ ನಿಂತ ಕವಿಸಮಯ. ” ಅವು” ನನ್ನ ಕಳ್ಳಗಣ್ಣಿಗೆ ಬಿದ್ದುದು ಗೊತ್ತಾಗಿ ನನ್ನತ್ತ ಮಿಂಚಿನ ಕಣ್ಣುಹಾಯಿಸಿ, ಸೆರಗು ಸರಿಪಡಿಸಿಕೊಂಡಳು. ಆಹಾ..! ಅದೆಂಥ ಮಾಧುರ್ಯದ  ಕಣ್ಣುಗಳವು…! ಒಂದೊಂದು ಕಣ್ಣಲ್ಲೂ  ಪೂರ್ಣಚಂದಿರಿನ ಹಾಲ್ಬೆಳದಿಂಗಳು…   ನನಗೆ ಮಧ್ಯಾಹ್ನವೇ ಮರೆತು ಹೋಗಿತ್ತು.  ಏನಿಲ್ಲವೆಂದರೂ ವಯಸಿನಲ್ಲಿ ನನಗಿಂತ  ಒಂದೆರಡು ವರುಷವಾದರೂ ಹಿರೀಕಳು. ಅದ್ಯಾವುದು ಅಡ್ಡಿಯಾಗಿ  ಇಬ್ಬರನು ಕಾಡಲಿಲ್ಲ, ಕಾಣಲಿಲ್ಲ. ಕಣ್ಣಿಗೆ ಕಾಣದ  ವಯಸು. ಕೊರಳ ಮೋಹದ ಬಲೆಗೆ ಕರುಳಬಳ್ಳಿ ಸುತ್ತಿಕೊಂಡ, ಬ್ರಹ್ಮಾಂಡ ಬೀಜಗಳ ಖಂಡುಗ ಕನಸು. ಹೇಳು, ಕನಸುಗಳಿಗೆ ಒಡತಿಯಾಗುವೆಯಾ…ಎಂದು ಕೇಳುವುದನ್ನ ತಡೆ ಹಿಡಿದು  ಹೆಸರು ಕೇಳಿದೆ. ” ರೇಣುಕ ” ಎಂದಳು. ನಾನು ಈ ಊರಿನವಳಲ್ಲ…ನನ್ನ ಅಪ್ಪ  ಯಾರಂತ ನನಗೇ ಗೊತ್ತಿಲ್ಲ. ಅವ್ವ  ಜೋಗೇರ ಚೆಂಗಳಿ…ದೇವರಿಗೆ  ಬಿಟ್ಟವಳು… ನಾನವಳ ಮಗಳು.  ನಾನು ಪ್ರಶ್ನಿಸದಿದ್ದರೂ ತಾನೇ ಕತೆ  ಹೇಳಿದಂತೆ  ಹೇಳ ತೊಡಗಿದಳು. ” ನಂಗೊತ್ತಿಲ್ಲ… ಅದೇಕೋ ನಿಮ್ಮುಂದೆ  ಎಲ್ಲ ಹೇಳಿಕೊಳ್ಳಬೇಕನಸ್ತಿದೆ ” ಎನ್ನುತ್ತಾ ತನ್ನ ಜೀವದ ಗೆಳತಿ ಲಂಬಾಣಿ ತಾಂಡಾದ  ನಿಂಬೆವ್ವ  ತನಗೆ ಮಾಡಿದ ಸಹಾಯ, ಸಹಕಾರ ಕುರಿತು  ಹೇಳುತ್ತಾ., ಮಠದ ಬೀಜದಹೋರಿ ಯೊಂದು ತನ್ನನ್ನು  ಬೆನ್ನಟ್ಟಿ ದಾಳಿ ಮಾಡಿ, ಹೆಣ್ತನದ ಜೀವಶಿಲ್ಪಕ್ಕೆ ಕೈಹಾಕಲು ಬಂದಾಗ ತನ್ನನ್ನು ಕಾಪಾಡಿದಾಕೆ. ಹೀಗೆ ಲಮಾಣೇರ ನಿಂಬೆವ್ವ ತನ್ನ ಕುಟುಂಬದ “ಜೀವದ ಜೀವ” ಎಂದಳು.    ಅಂದು ಸೋಮವಾರ ಯಡ್ರಾಮಿ ಸಂತೆಯದಿನ,  ಅಮ್ಮನ ಕೊಡ ತುಂಬಿ ತುಳುಕುವಷ್ಟು ರೊಕ್ಕ. ಹಣಮಂದೇವರ ಮುಂದಿಟ್ಟ ತುಂಬಿದ ತಾಮ್ರದ ಕೊಡ, ಬಿಚ್ಚಿಟ್ಟ ತನ್ನ  ಕಾಲ್ಗೆಜ್ಜೆ,  ಭಂಡಾರದ ಚೀಲ  ತೋರಿಸಿದಳು. ಅದು ನನ್ನ  ತಾಯಿಗೇ ಕಡೆಯಾಗಲಿಲ್ಲ. ನನಗೂ  ಕೊಡ ಹೊರಿಸಿದಳು ಗುಡ್ಡದ ಅಮ್ಮ. ಮೂರು ವರುಷಗಳಿಂದ ಗುಡ್ಡಕ್ಕೆ ಹರಕೆ  ತೀರಿಸುತ್ತಿದ್ದೇನೆ. ಅಮ್ಮನ ಶಕ ಸಣ್ಣದಲ್ಲ  ಮತ್ತು ಸುಮ್ಮನಲ್ಲ..  ಡೇಕರಿಕೆ ಶುರುವಾಗಿ., ಕಾಲಿಗೆ ಗೆಜ್ಜೆ  ಕಟ್ಟಿಕೊಂಡಳು. ಕುಣಿಯುತ್ತಾ  ಲೋಕಾಕರ್ಷಣೆಯ ಝಲಕಿನಲಿ  ಹಾಡ ತೊಡಗಿದಳು. ನೋಡ ನೋಡುತ್ತಿದ್ದಂತೆ  ಸಂತೆಯ ಜನ  ಗಿಜಿಗುಡತೊಡಗಿದರು. ರೊಕ್ಕದ ಝಣ ಝಣ. ಕನಸು ಮತ್ತು ಕಣ್ಣೀರು ಬಿಕರಿಯ ಕ್ಷಣ. ಹಾಗನಿಸಿದ್ದು ನನಗೆ. ಎಡ ಬಗಲಿಗೆ ದಾರೂ ತುಂಬಿದ ಸಣ್ಣ ತತ್ರಾಣಿ ಕಟ್ಟಿಕೊಂಡ ಎಣ್ಣೆಗಮಟಿನ ಜಡೆಯ ಮುದುಕನೊಬ್ಬ ತುಂತಣಿ, ಚೌಡಿಕೆ  ನುಡಿಸುತ್ತ ಜನರ ಹಣೆಗೆ ಭಂಡಾರ  ಹಚ್ಚುತ್ತಾ, ಬೇವಿನ ಸೊಪ್ಪಿನ ಸಡಿಲ ಸಿವುಡು ಸವರುತಾ ಉಧೋ..ಉಧೋ..ಉಧೋ.. ಉದ್ಘೋಷಣೆಗಳೊಂದಿಗೆ… ಜನ ಜಂಗುಳಿಯ ನಡುವೆ ಸೇರಿಕೊಂಡ.  ಆರಂಭಕ್ಕೆ ಅದೆಷ್ಟೋ ವರಗಳು  ರೇಣುಕೆಯ ಮದುವೆ ಮಾಡಿಕೊಳ್ಳಲೆಂದು ಮುಂದೆ ಬಂದರೂ, ಗುಡ್ಡದ ಅಮ್ಮ ಹಾಗೂ ತನ್ನ ತಾಯಿಗೋಸ್ಕರ ರೇಣುಕ ಮದುವೆ ನಿರಾಕರಿಸಿದಳು. ಈಗೀಗಂತು ಐಹಿಕ ಸುಖದ ಮಾತುಗಳಿಂದ ವಿಮುಕ್ತಳು. ಅಬ್ಬಾ..! ಆಕೆ ಗೆಜ್ಜೆ ಕಟ್ಟಿಕೊಂಡು ಲಯಬದ್ದವಾಗಿ ಕುಣಿಯುತ್ತಾ  ಹಾಡುತ್ತಿದ್ದರೆ ಉತ್ತರಾದಿಯ ರಾಧೆ -ಕೃಷ್ಣರ ಹಾಡಿನ ಮೋಡಿ..!  ಆಹಾ!! ಮಣ್ಣ ನಾದದಲಿ ಕಲೆತು ಹೋದ ಅವಳೆದೆಗಣ್ಣುಗಳ ಕುಣಿತ. ಅಭಿಜ್ಞಾನ ಪ್ರೀತಿ ಹುಟ್ಟಿಸುವ ಅವಳ ಸಿರಿಕಂಠದ ಲೋಕ ಸಂಗೀತಕೆ ಮಾರು ಹೋಗದವರಿಲ್ಲ. ಅಂದಿನ ಆ ಪಾರಿಜಾತದ ಅಮಲು – ಘಮಲಿನ ಗಂಧರ್ವ ಗುಂಗಿನಿಂದ ನಾನಿನ್ನೂ  ಪಾರಾಗಿ ಬಂದಿಲ್ಲ. ಅದೆಲ್ಲ ಮಹಾ ಸ್ವಪ್ನದಂತೆ ನನ್ನೆದೆಯಲ್ಲಿ ಸ್ಥಾಯಿಗೊಂಡಿದೆ. ಅದೊಂದು ಮರೆಯಲಾಗದ ಸ್ಥಾಯೀಸ್ಮರಣೆ. ***********************

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಬಣ್ಣಾತೀತ ಅಶ್ವಥ್ ಅವತ್ತೊಂದು ದಿನ ಭಟ್ರಿಗೆ ಶ್ಯಾವಿಗೆ ಪಾಯಸ ಮಾಡುವ ಮನಸ್ಸಾಯಿತು. ಆಹಾ, ಸಿಹಿ… ಎಂಥಾ ಆಲೋಚನೆ, ರುಚಿರುಚಿಯಾದ ಶ್ಯಾವಿಗೆ ಪಾಯಸ, ಮನೆಯೆಲ್ಲ ಘಮಘಮ ಎಂದುಕೊಳ್ಳುತ್ತಲೇ ಪದಾರ್ಥಗಳ ಪಟ್ಟಿ ಮಾಡಿಕೊಳ್ಳುತ್ತಿರುವಾಗ…. ಬೆಲ್ಲ? ಸಕ್ಕರೆ? ಸದ್ಯಕ್ಕೆ ಸಿಗುವಂಥಾದ್ದು ಯಾವುದು? ಅಗ್ಗದ ಬೆಲೆಯಲ್ಲಿ ಸರಳವಾಗಿ ಸಿಗುವಂಥಾದ್ದು ಯಾವುದು? ಅನ್ನುವ ಯೋಚನೆ ಕೊರೆಯತೊಡಗಿತು. ಬೆಲ್ಲವಾದರೆ ಶ್ಯಾವಿಗೆಯ ಮಹತ್ತೇ ಹೊರಟುಹೋಗಿಬಿಡುತ್ತೆ. ಸಕ್ಕರೆಯಾದರೆ ಬಣ್ಣ ಅಷ್ಟಿಲ್ಲದ್ದರಿಂದ ಶ್ಯಾವಿಗೆ ನಳನಳಿಸುತ್ತಾ ರುಚಿಯ ಜೊತೆಗೆ ನೋಟವೂ ಅಂದ… ಹಾಗಾಗಿ ಸಕ್ಕರೆ ಬಣ್ಣಾತೀತ ಅಂದುಕೊಳ್ಳುತ್ತಿರುವಾಗ, ಇಲ್ಲೊಂದು ಕತೆಯೇ ಉಂಟಲ್ಲ ಅನ್ನುವ ವಿಚಾರವೂ ಹೊಳೆಯಿತು! ಹಳೆ ಕಾಲದಲ್ಲಿ ಭಟ್ರ ಪೂರ್ವಜರು ಕಟ್ಟಿದ್ದ ಬೆಲ್ಲದ ಕತೆಯ ನೆನಪು ಮರುಕಳಿಸತೊಡಗಿತು. ಮೆದ್ದವನೇ ಬಲ್ಲ ಬೆಲ್ಲದ ರುಚಿಯ…. ಆದರೆ ಬೆಳೆದವನೇ ಬಲ್ಲ ಬೆಲ್ಲದ ನಿಜಬಂಡವಾಳವ. ಒಂದು ಮಾರಗಲದ ಚೌಕದಲ್ಲಿ ಬೆಳೆದಿರುವ ಎರಡು ಹೊರೆಯಷ್ಟು ಕಬ್ಬನ್ನು ಗಾಣದಲ್ಲಿ ಅರೆದು ಮೂರು ಸೇರು ಕಬ್ಬಿನ ಹಾಲು ಹಿಂಡಿ, ನಾಲ್ಕಡಿ ಬಾಯಗಲದ ಬಾಣಲೆಯೊಳಗೆ ಐದು ಗಂಟೆ ನಿಧಾನದ ಉರಿಯಲ್ಲಿ ಕುದಿಯಿಸಿ ಕುದಿಯಿಸಿ ಕುದಿಸುತ್ತಲೇ ಅರೆದ್ರವಘನರೂಪದ ಪಾಕದ ಹದಕ್ಕೆ ತಂದು ಕಡೆಗೆ ಒಂದಡಿ ಅಗಲದ ಅಚ್ಚಿನ ಮಣೆಯೊಳಗೆ ಸುರಿಯಬಹುದಾದಷ್ಟು ಪಾಕವಷ್ಟೇ… ಒಂದು ವಾರದ ಕಾಫಿಗೆ ಸಾಕಾಗದೆ ಉಳಿಯದಷ್ಟು ಬೆಲ್ಲಕ್ಕಾಗಿ ಎರಡು ದೊಡ್ಡ ಹೊರೆ ಕಬ್ಬನ್ನು ಅರೆಯುವುದರ ಹಿಂದಿನ ನಿಜ ಅರ್ಥ ಪೂರ್ವಜರಿಗೆ ಗೊತ್ತಿತ್ತು. ಖುದ್ದಾಗಿ ಕಬ್ಬಿನ ಜಲ್ಲೆಯನ್ನು ಹಿಡಿದು ಸೀಳುವಾಗ ಒಂದೋ ಅಥವಾ ಅಬ್ಬಬ್ಬಾ ಅಂದರೆ ಎರಡು ಜಲ್ಲೆಯನ್ನು ಜಗಿಯುವಷ್ಟರಲ್ಲಿ ವಸಡುಗಳು ತಡವರಿಸುವಂತಾಗಿ ಕಬ್ಬಿನ ಸಿಹಿಯನ್ನು ಹೀರುವುದರ ಮಹತ್ವದ ಜೊತೆಯಲ್ಲೇ ಅದಕ್ಕೆ ಪಡಬೇಕಾದ ಶ್ರಮದ ಅರಿವೂ ಆಗುತ್ತಿತ್ತು. ಆ ಅರಿವಿನ ಹಿನ್ನೆಲೆಯಲ್ಲಿ ಎರಡು ಹೊರೆ ಕಬ್ಬಿನಿಂದಾದ ಬೆಲ್ಲದ ಅಚ್ಚು ಎಷ್ಟು ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದೆಂದು ಭಟ್ರ ಪೂರ್ವಜರಿಗೆ ಗೊತ್ತಿತ್ತು. ಆದರೆ ಆರೋಗ್ಯದ ವಿಚಾರವನ್ನೇನೂ ಹೇಳದೇ, ಅವರು ಆವಿಷ್ಕರಿಸಿದ ಆಕರ್ಷಕ ಬೆಲ್ಲದ ರುಚಿಯನ್ನಷ್ಟೇ ಮುಂದುವರಿಸಿಕೊಂಡು ಬಂದು ಕಡೆಗೆ ದಾಸರ ಪದವೂ ಸೇರಿ ʼಸಕ್ಕರೆ ತುಪ್ಪದ ಕಾಲುವೆ ಹರಿಸಿ…ʼ. ತನಕವೂ ಬಂದು ಬೆಲ್ಲ ಸಕ್ಕರೆಯೆಲ್ಲವೂ ರುಚಿಯ ಮಾರುಕಟ್ಟೆಯಲ್ಲಿ ಹೊಳೆಯುವಾಗ, ಆರೋಗ್ಯದ ಅರಿವು ಮೂಲೆ ಹಿಡಿದು ಕೂತಿತ್ತು. ಈಗ ಭಟ್ಟರಿಗೆ ಸಕ್ಕರೆಯೇ ಬೇಕೆನಿಸಿದ್ದಕ್ಕೆ ಕಾರಣವಿದೆ. ಮುಖ್ಯವಾಹಿನಿಯಲ್ಲಿ ಸಕ್ಕರೆಯದೇ ಕಾರುಬಾರು. ಈ ಸಕ್ಕರೆ ಬಣ್ಣಾತೀತ. ಪಾನಕ ಮಾಡಿದರೆ ಅದರಲ್ಲಿ ಬಣ್ಣವೇ ಇಲ್ಲ ಹಾಗಾಗಿ ಸಿಹಿಯಲ್ಲಿರುವ ಬೇರೆ ಪದಾರ್ಥಗಳನ್ನು ಹೆಚ್ಚು ಆಕರ್ಷಕವನ್ನಾಗಿಸಬಹುದು. ಸಕ್ಕರೆಯ ಹಿಂದಿನ ಆರೋಗ್ಯದ ಗುಟ್ಟಂತೂ ಬೆಲ್ಲಕ್ಕಿಂತ ಇನ್ನೂ ಅತ್ತತ್ತ. ಯಾಕೆಂದ್ರೆ ಮುಖ್ಯವಾಹಿನಿಗೆ ಸಕ್ಕರೆಯನ್ನು ತರುವುದಕ್ಕೋಸುಗ, ಅದನ್ನು ಕಾರ್ಖಾನೆಗಳಲ್ಲಿ ತಯಾರಿಸಬೇಕಾದ್ದು. ದೊಡ್ಡದೊಡ್ಡ ಕಾರ್ಖಾನೆ, ಅದಕ್ಕಂಟಿಕೊಂಡ ಕುಂಠಿತ ಆಡಳಿತ ವಗೈರೆ ವಗೈರೆ… ಆದರೆ ಈಗ ಭಟ್ರಿಗಿನ್ನೊಂದು ವಿಷಯ ಹೊಳೆಯಿತು. ಪೂರ್ವಜರ ಬೆಲ್ಲದ ಹಿನ್ನೆಲೆಯ ಕತೆ. ಈಗಿರುವ ಮುಖ್ಯವಾಹಿನಿಯ ಬಣ್ಣಾತೀತ ಸಕ್ಕರೆಯ ಕತೆ. ಎರಡನ್ನೂ ಒಮ್ಮೆ ಮಿಲಾಯಿಸಿದರೆ! ಬಣ್ಣರೂಪಾಂತರ… ಕತೆ…ಪೂರ್ವಜರ ಬೆಲ್ಲದ ಪಾಯಸದ ಘಮಲು ಮನೆಯಲ್ಲಷ್ಟೇ ಆವರಿಸದೇ ಊರಿಗೂರೇ ಆವರಿಸುತ್ತಿತ್ತು. ಸಕ್ಕರೆಯವರು ಬಂದು ಸುವಾಸೆಯನ್ನು ಕಡಿಮೆ ಮಾಡಲಾಗಿ, ಸದ್ಯ ಮನೆಯನ್ನಷ್ಟೇ ಆವರಿಸುತ್ತಿದೆ. ಭಟ್ಟರು ಮರೆತ ವಿಚಾರ, ಬೆಲ್ಲವೂ ಸಕ್ಕರೆಯೂ ಅಥವಾ ಮತ್ತೊಂದು ಸಿಹಿಯೂ ಮೂಲದಲ್ಲಿ ಕಬ್ಬಿನ ಹೊರೆಗಳೆಲ್ಲ ಒಂದೇ ಆಗಿದ್ದು, ಅದರ ಹಿಂದಿರುವ ಆರೋಗ್ಯದ ಅರಿವಿನ ಕತೆ ಅತಿ ಮುಖ್ಯವಾದುದೆಂದು. ಹಾಗೆಂದುಬಿಟ್ಟರೆ ಭಟ್ಟರ ಪಾಯಸದ ಕತೆಯ ಗತಿಯೇನು? *******

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಕು.ಸ.ಮದುಸೂದನರವರ ಕಥೆ ಲಾರಿಯಿಂದ ಲಾರಿಗೆ ಯನ್ನು ಪ್ರತಿಲಿಪಿಯವರುಆಡೀಯೊ ರೂಪದಲ್ಲಿ ಹೊರತಂದಿದ್ದಾರೆ ನೀವೂ ಈ ಕಥೆ ಕೇಳಿ ಚಿತ್ರದ ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ಕಥೆ ಕೇಳಿ https://kannada.pratilipi.com/audio/ಲಾರಿಯಿಂದ-ಲಾರಿಗೆ-pdrylv2au9op?utm_campaign=Shared&utm_source=Link ಲಾರಿಯಿಂದ ಲಾರಿಗೆ ಕಥೆ

ಕಥಾಯಾನ Read Post »

ಕಥಾಗುಚ್ಛ

ಮಹಿಳಾದಿನದ ವಿಶೇಷ

ಮುಖಾಮುಖಿ ಟಿ.ಎಸ್.ಶ್ರವಣಕುಮಾರಿ ಮುಖಾಮುಖಿ ಸುಜಾತ ಊರಿಗೆ ಬಂದು ನಾಲ್ಕು ದಿನವಾಗಿತ್ತಷ್ಟೆ.  ಅವಳ ಗಂಡನಿಗೆ ಕಲ್ಕತ್ತೆಗೆ ವರ್ಗವಾಗಿ ಹೋದಮೇಲೆ ಇದೇ ಮೊದಲಸಲ ತವರಮನೆಗೆ ಬಂದಿರುವುದು. ಬೆಂಗಳೂರಿನಲ್ಲಿದ್ದಾಗ ವರ್ಷದಲ್ಲಿ ಮೂರ್ನಾಲ್ಕು ಸಲವಾದರೂ ಬಂದು ಹೋಗುತ್ತಿದ್ದವಳಿಗೆ ಈಗೆರಡು ವರ್ಷದಿಂದ ಬರಲು ಆಗಿರಲಿಲ್ಲ. ಮಕ್ಕಳೂ ಅಮ್ಮ ವಾಪಸ್ಸು ಹೋಗುವುದಕ್ಕೆ ವಾರದ ಮುಂಚೆ ಬಂದು ಸೇರಿಕೊಳ್ಳುತ್ತೇವೆ, ಅಲ್ಲಿಯವರೆಗೆ ಏನೇನೋ ಕ್ಲಾಸುಗಳಿವೆ ಎಂದು ಹೇಳಿ ಇವಳೊಂದಿಗೆ ಬರುವುದನ್ನು ತಪ್ಪಿಸಿಕೊಂಡಿದ್ದರು. ದೊಡ್ಡ ಹುಡುಗರಾದ್ದರಿಂದ ಇವಳೂ ಒತ್ತಾಯಿಸಲು ಹೋಗಿರಲಿಲ್ಲ. ಎಷ್ಟೇ ಫೋನಲ್ಲಿ ಅಮ್ಮನ ಹತ್ತಿರ ಮಾತಾಡುತ್ತಿದ್ದರೂ ಎದುರೆದುರು ಕೂತು ಸಮಯದ ಪರಿವೆಯಿಲ್ಲದೆ, ಯಾವುದೇ ನಿರ್ದಿಷ್ಟ ವಿಷಯವಿಲ್ಲದೆ, ನಿರಾತಂಕವಾಗಿ ಹರಟುತ್ತಾ ಕುಳಿತುಕೊಳ್ಳುವ ಸೊಬಗೇ ಬೇರೆ.  ಜೊತೆಯಲ್ಲಿ ಮಧ್ಯೆ ಮಧ್ಯೆ ಕುರುಕುಲು ತಿಂಡಿಯೋ, ಕಾಫಿಯೋ, ಮಜ್ಜಿಗೆಯೋ, ಪಾನಕವೋ ಏನೋ ಒಂದನ್ನು ಸ್ವಾಹಾಮಾಡುತ್ತಾ ಮಾತನಾಡುವ ಮಜಾನೇ ಬೇರೆ.  ಎರಡು ವರ್ಷದಲ್ಲಿ ಊರಲ್ಲಿ ಎಲ್ಲೆಲ್ಲಿ ಏನಾಯಿತು; ಗುರುತು ಪರಿಚಯದವರ ಯಾರ ಯಾರ ಮನೆಯಲ್ಲಿ ಏನೇನು ನಡೆಯಿತು ಅದಕ್ಕೆ ಅಮ್ಮನ ಟಿಪ್ಪಣಿಗಳೇನು.. ಎಲ್ಲವೂ ಪುರಸೊತ್ತು ಇಲ್ಲದಂತೆ ಬರಬೇಕು. ಹೀಗೇ ಮಾತಾಡುತ್ತಿರುವಾಗ ಇವರು ಮೊದಲು ಇದ್ದವಠಾರದ ಮನೆಯ ಪಕ್ಕದಮನೆಯ ಮೇಷ್ಟ್ರು ರಾಮಾಜೋಯಿಸರ ವಿಷಯವೂ ಬಂತು.  “ಆತಂಗೆ 90.. 92.. ವರ್ಷವಾಗಿತ್ತೇನೋ ಕಣೆ, ಈ ದಸರಾ ಹಬ್ಬದ ಮಹರ್ನಮಮಿಯ ದಿನ ಹೋಗಿ ಬಿಟ್ಟರಂತೆ.” ಅಂದರು. “ಅವರ ಹೆಂಡತಿ ಅಹಲ್ಯಾಬಾಯಿ ಇನ್ನೂ ಚಿಕ್ಕವರಲ್ವಾ” ಸುಜಾತ ಕೇಳಿದಳು. “ಹ್ಞೂಂ.. ನನಗಿಂತ ಎಂಟು ಹತ್ತು ವರ್ಷವೇ ಚಿಕ್ಕವರು.  ನನಗೀಗ 60 ದಾಟಿತು. ಆಕೆಗಿನ್ನೂ 50ರ ಸುಮಾರೇನೋ” ಅಮ್ಮ ಅಂದರು. “ಆಕೆ ಇನ್ನೂ ಅಲ್ಲೇ ಇದಾರಾ?” “ಇಲ್ಲ; ಆತ ಹೋದ್ಮೇಲೆ ಅಷ್ಟು ಬಾಡಿಗೆ ಕೊಡಕ್ಕೆ ಆಗ್ದೆ ಅವರ ಸೋದರಮಾವನ ಮನೆ ಒಂದು ದೊಡ್ಡ ಬ್ರಾಹ್ಮಣರ ಬೀದಿಯಲ್ಲಿ ಇದೆಯಂತೆ. ಹಳೇಮನೆ. ಎಷ್ಟೋ ವರ್ಷದಿಂದ ಯಾರೂ ಆ ಮನೇನಲ್ಲಿ ವಾಸವಾಗಿರ್ಲಿಲ್ಲವಂತೆ; ಯಾರೋ ಅದನ್ನ ಸ್ವಲ್ಪ ಕ್ಲೀನ್ ಮಾಡಿಸಿ ಕೊಟ್ಟಿದಾರಂತೆ. `ಇರೋಷ್ಟು ಕಾಲ ಇದ್ಗೊಂಡು ಹೋಗು’ ಅಂತ. ಅಲ್ಲೇ ಇದಾರೇಂತ ಕೇಳ್ದೆ.  ಪಾಪ ಏನು ಜೀವನವೋ ಆಕೇದು. ಸುಖಾ ಅನ್ನೋದನ್ನ ಕೇಳಿಕೊಂಡೇ ಬರ್ಲಿಲ್ಲ” ನಿಟ್ಟುಸಿರಿಟ್ಟರು ಅಮ್ಮ.  “ಯಾಕಮ್ಮಾ, ಅದೇನು ಜೋರಿದ್ರಲ್ವಾ ಆಕೆ.  ಮೇಷ್ಟ್ರನ್ನ ಹುರಿದು ಮುಕ್ಕಿ ತಿಂತಾ ಇದ್ರು. ದಿನ ಬೆಳಗಾದ್ರೆ ಓನರ್ ಕಿಟ್ಟಣ್ಣ ಇಲ್ಲಾ ಅವ್ರ ಹೆಂಡ್ತಿ ಪದ್ದಕ್ಕನ ಜೊತೆ ಅವ್ರ ರಗಳೆ ತಪ್ಪಿದ್ದೇ ಇಲ್ಲ ಎಷ್ಟೋ ಸಲ ಕೊಡ ಕೊಡಾನೇ ಹಿಡ್ಕೊಂಡು ಹೊಡದಾಡ್ಕೋತಾ ಇದ್ರಲ್ಲ. ಅವ್ರಿಗೆ ಅಯ್ಯೋ ಅಂತಿದೀಯಲ್ಲ” ಅಚ್ಚರಿಯಿಂದ ಕೇಳಿದಳು ಸುಜಾತ.  “ಅಲ್ಲಾ ತನ್ಗಿಂತ ಸುಮಾರು ಹತ್ರ ಹತ್ರ ನಲವತ್ತು ವರ್ಷ ದೊಡ್ಡ ಗಂಡನ್ನ ಕಟ್ಟಿಕೊಂಡು ಆಕೆ ಏನು ಕಮ್ಮಿ ಅನುಭವಿಸಿದ್ರಾ.  ಏನೇನು ಸಂಕಟಾ ಇತ್ತೋ ಆಕೆ ಮನಸ್ನಲ್ಲಿ.  ಜಗಳದಲ್ಲಿ ತೀರಿಸ್ಕೋತಾ ಇದ್ರು” ಅಮ್ಮ ಕಳಕಳಿಯಿಂದ ಅಂದರು.  “ಅದೂ ಸರಿಯೇ ಆದ್ರೆ ನಮ್ಮೇಲೆಲ್ಲಾ ಸುಮ್ಸುಮ್ನೆ ರೇಕ್ಕೊತಿದ್ರು. ಪಾಠ ಹೇಳಿಸ್ಕೊಳ್ಳೋಕೆ ಅವ್ರ ಮನೇಗೆ ಹೋಗ್ತಿದ್ವಲ್ಲ; ಒಂದೊಂದ್ಸಲ ಅದ್ಹೇಗೆ ಬೈಯೋರು ಗೊತ್ತಾ. `ಬಂದ್ಬುಟ್ವು ಪಿಶಾಚಿಗಳು; ಹೊತ್ತಿಲ್ಲ-ಗೊತ್ತಿಲ್ಲ; ಎದ್ದ್ಹೋಗ್ರೆ’ ಅಂತ ಕೋಲು ತೆಗೆದುಕೊಂಡೇ ಬಂದು ಬಿಡೋರಲ್ಲ.  ಮೇಷ್ಟ್ರು ಅವ್ರನ್ನ ಗದರಿಸಿಕೊಂಡು ನಮಗೆ ಸಮಾಧಾನ ಹೇಳ್ತಿದ್ರು.  ದೇವ್ರಂತ ಮೇಷ್ಟ್ರು ನಿಜವಾಗ್ಲೂ. ರಾತ್ರಿ ಮನೇ ಹೊರಗೆ ಹಾಸಿಕೊಂಡು ನಮ್ಮನ್ನೆಲ್ಲಾ ಪಕ್ಕಕ್ಕೆ ಕೂರಿಸ್ಕೊಂಡು ನಕ್ಷತ್ರ ತೋರಿಸ್ತಾ ಎಷ್ಟು ಚೆನ್ನಾಗಿ ಕತೆ ಹೇಳ್ತಿದ್ರು. ಆಗ ಆಕೇಗೆ ಎಷ್ಟು ರೇಗೋದು. ವಟವಟಾಂತ ಅಂತಿರೋವ್ರು.” ಸುಜಾತ ಮಾತು ಮುಗಿಸುವಷ್ಟರಲ್ಲಿ ಅಪ್ಪ ಬಂದಿದ್ದರಿಂದ ಊಟಕ್ಕೆ ತಟ್ಟೆ ಹಾಕಲು ಅಮ್ಮ ಎದ್ದರು. ಆ ಮಾತು ಅಲ್ಲಿಗೇ ನಿಂತಿತು…. ಮನೆಯಲ್ಲಿ ಆಡಬಹುದಾದ ಮಾತಿನ ಒಂದು ಹಂತದ ಸರಕೆಲ್ಲಾ ಮುಗಿದ ಮೇಲೆ ಅಂದು ತನ್ನ ಬಾಲ್ಯದ ಗೆಳತಿ, ರಾಮದೇವರ ಗುಡಿಯ ಹತ್ತಿರದಲ್ಲಿರೋ ಗಾಯಿತ್ರಿಯನ್ನು ಮಾತನಾಡಿಸಿಕೊಂಡು ಬರೋಣವೆಂದು ಸುಜಾತ ಊಟಕ್ಕೆ ಮುಂಚೆಯೇ ಹೊರಟಳು.  ಅವರ ಮನೆಗೆ ಯಾವಾಗ ಹೋದರೂ ಹಾಗೆ.  ಊಟಕ್ಕೆ ಮುಂಚೆ ಒಂದಷ್ಟು ಹರಟಿ, ಗಂಟೆಗಟ್ಟಲೇ ಮಾತಾಡುತ್ತಲೇ ಊಟ ಮಾಡಿ, ಅದಾದ ನಂತರ ಹಾಲ್ನಲ್ಲಿ ಚಾಪೆಯ ಮೇಲೆ ಉರುಳಿಕೊಂಡು ಆ ಮಾತಿನ ವರಸೆಯನ್ನು ಮುಂದುವರೆಸುತ್ತಾ ಪ್ರೈಮರಿ ಸ್ಕೂಲಿನಿಂದ ಹಿಡಿದು ಡಿಗ್ರಿವರೆಗಿನ ಎಲ್ಲ ದಿನಗಳನ್ನು, ಜನಗಳನ್ನು, ಸ್ನೇಹಿತರನ್ನೂ, ಮೇಷ್ಟ್ರು, ಲೆಕ್ಚರರ್ಸ್ ಎಲ್ಲರೂ ಒಂದು ಮೆರವಣಿಗೆ ಬಂದು ಹೋಗಬೇಕು. ನಂತರ ಕಾಫಿ ಜೊತೆಗೊಂದಷ್ಟು ಕುರುಕುಲು ಮೆಲ್ಲುತ್ತಾ ಇಂದು ಏನೂ ಮಾತಾಡಿದ ಹಾಗೆ ಆಗಲಿಲ್ಲ ಎನ್ನುತ್ತಾ ಇನ್ನೊಂದು ದಿನ ತನ್ನ ಮನೆಗೆ ಬಂದು ಮಾತು ಮುಂದುವರೆಸಲು ಆಹ್ವಾನವಿತ್ತು ಬರುತ್ತಿದ್ದಳು ಸುಜಾತ.  ಹೀಗೆ ಅವಳು ವಾಪಸ್ಸು ಹೋಗುವಷ್ಟರಲ್ಲಿ ಕನಿಷ್ಟ ಪಕ್ಷ ಇವಳೆರಡು ಸಲ, ಅವಳೆರಡು ಸಲ ಒಬ್ಬರೊಬ್ಬರ ಮನೆಗೆ ಬಂದು ಹೋಗುವುದು ಸಾಮಾನ್ಯ ನಡಾವಳಿಯಾಗಿತ್ತು.  ಹೀಗೇ ದೀಪ ಹಚ್ಚುವ ಹೊತ್ತಾದಾಗ “ಅಯ್ಯಯ್ಯೋ ಅಮ್ಮ ಹೇಳಿದ್ರು, ದೀಪ ಹಚ್ಚೋ ಹೊತ್ತೊಳಗೆ ಬಂದ್ಬಿಡು ಅಂತ. ಹೊರಡ್ತೀನಿ ಕಣೆ” ಎನ್ನುತ್ತಾ ಗಡಬಡಿಸಿಕೊಂಡು ಎದ್ದಳು. *** ಅದೆಲ್ಲಿದ್ದವೋ ಅಷ್ಟೊಂದು ಮೋಡಗಳು.. ಒಮ್ಮೆಲೇ ಕವಿಯತೊಡಗಿ ಮಳೆ ಬರುವುದರೊಳಗೆ ಆಟೋ ಹಿಡಿಯಬೇಕು ಎಂದು ದಾಪುಗಾಲು ಹಾಕುತ್ತಾ ನಡೆದಳು.  ಆ ಸರ್ಕಲ್ಲಿನಲ್ಲಿ ಒಂದೂ ಆಟೋ ನಿಂತಿರಲಿಲ್ಲ.  ಹೋಗುವಷ್ಟು ದೂರ ಹೋಗುತ್ತಿರೋಣ, ಆಟೋ ಸಿಕ್ಕ ತಕ್ಷಣ ಹತ್ತಿಕೊಂಡರಾಯಿತು ಎಂದುಕೊಂಡು ಗಾಂಧೀಬಜಾರಿನಲ್ಲಿ ನಡೆಯಲೂ ಕಷ್ಟ ಎಂದುಕೊಂಡು ದೊಡ್ಡ ಬ್ರಾಹ್ಮಣರ ಕೇರಿಯ ಕಡೆ ತಿರುಗಿದಳು.  ಅಲ್ಲಿ ಲಕ್ಷ್ಮೀನಾರಾಯಣ ದೇವಸ್ಥಾನದ ಹತ್ರ ಯಾವುದಾದರೂ ಸಿಗಬಹುದು ಎನ್ನುವ ಆಸೆಯಿಂದ ಇನ್ನೂ ಒಂದು ಅರ್ಧ ಫರ್ಲಾಂಗ್ ಕೂಡಾ ನಡೆದಿದ್ದಳೋ ಇಲ್ಲವೋ ಧಡಧಡನೆಂದು ಮಳೆ ಶುರುವಾಗೇ ಹೋಯಿತು. ಮಳೆಯಿಂದಾಗಿ ಕತ್ತಲೂ ಕವಿಯತೊಡಗಿತು.  ಎಲ್ಲಾದರೂ ನಿಲ್ಲಲು ಜಾಗ ಸಿಗುವುದೇನೋ ಎಂದು ಅಕ್ಕ ಪಕ್ಕ ನೋಡಿ ಒಂದು ಜಗಲಿಯ ಮನೆಯ ಮುಂದೆ ಅವಳು ನಿಲ್ಲುವ ಹೊತ್ತಿಗೆ ಕರೆಂಟೂ ಹೋಗಿ ಪೂರ್ಣವಾಗಿ ಕತ್ತಲಾಯಿತು.  ಇನ್ನೇನು ಮಾಡಲೂ ತೋಚದೆ ಜಗಲಿಯ ಒಪ್ಪಾರದ ಒಳಗೆ ಹೋಗಿ ನಿಂತಳು. ಮಳೆ ಧಾರಾಕಾರವಾಗಿ ಸುರಿಯತೊಡಗಿ ಭಯವೂ ಶುರುವಾಯಿತು.  ಅಮ್ಮ ಹೇಳಿದ ಹಾಗೆ ಹೊತ್ತಿಗೆ ಮುಂಚೆಯೇ ಮನೆ ಸೇರಿಕೊಳ್ಳಬೇಕಿತ್ತು ಎಂದು ಸಲಸಲವೂ ಹೇಳಿಕೊಂಡಳು.  ಕಡಿಮೆಯಾಗುವ ಲಕ್ಷಣವೇ ಕಾಣುತ್ತಿಲ್ಲ.  ಜೋರಾಗಿ ಮಿಂಚು, ಗುಡುಗು ಅಬ್ಬರಿಸಿತು.  ಆ ಬೆಳಕಲ್ಲಿ ಅವಳಿಗೆ ಆ ಮನೆಯ ಬಾಗಿಲು ತೆಗೆದೇ ಇದೆ ಎಂದು ತಿಳಿಯಿತು. ಇದ್ಯಾರು ಪುಣ್ಯಾತ್ಮರು ಈ ಮಳೆಯಲ್ಲಿ ಹೀಗೆ ಮನೆಬಾಗಿಲು ಹಾರುಹೊಡೆದುಕೊಂಡು ಕೂತಿದಾರಲ್ಲ; ಒಂದು ಸಪ್ಪಳವೂ ಒಳಗಿಂದ ಕೇಳುತ್ತಿಲ್ಲ.  ಯಾರಾದರೂ ಇದ್ದಾರೋ ಇಲ್ಲಾ ಪಾಳು ಬಿದ್ದ ಮನೆಯೋ ಎಂದು ಅವಳಿನ್ನೂ ಅಂದುಕೊಳ್ಳುತ್ತಿರುವಾಗಲೇ ಒಳಗಿಂದ ಒಂದು ಗೊಗ್ಗರು ದನಿ ಕೇಳಿಸಿತು… “ಯಾರಲ್ನಿಂತಿರೋದು?..” ಹೆದರಿಕೆಯಿಂದಲೂ, ಮಳೆಯಿಂದಲೂ ಮುದ್ದೆಯಾಗಿ ಹೋಗಿದ್ದ ಸುಜಾತ ನಡುಗುತ್ತಾ “ತುಂಬಾ ಮಳೆ ಬರ್ತಿದೆಯಲ್ಲಾ.. ಅದಕ್ಕೆ ನಿಂತಿದೀನಿ.  ನಿಮಗೇನೂ ತೊಂದರೆ ಮಾಡಲ್ಲ.  ಮಳೆ ನಿಂತ ತಕ್ಷಣ ಹೊರಟು ಹೋಗ್ತೀನಿ” ತಡವರಿಸಿದಳು. “ಅದ್ಸರೀ.. ಅಲ್ಲೇ ನಿಂತಿದ್ರೆ ಎರಚಲು ಬಡಿದು ಇನ್ನು ಒದ್ದೆಯಾಗ್ತೀಯಮ್ಮ. ಒಳಗೆ ಬಂದು ಕೂತ್ಕೋ ಬಾ” ಕರೆಯಿತು ಒಳಗಿನ ಕಂಠ.  ಇನ್ನೂ ಸುಜಾತ ಅನುಮಾನಿಸುತ್ತಿರುವುದನ್ನು ನೋಡಿದ ಆಕೆ “ಪರವಾಗಿಲ್ಲ ಬಾಮ್ಮ.  ನಾನು ಒಬ್ಳೇ ಇರೋದು.” ಭಂಡ ಧೈರ್ಯ ಮಾಡಿಕೊಂಡು `ಬಾಗಿಲ ಬಳಿಯೇ ಕೂತರಾಯಿತು. ಏನಾದರೂ ಹೆಚ್ಚು ಕಡಿಮೆಯಾದರೆ ಓಡಿಬಿಡಬಹುದು’ ಎಂದುಕೊಳ್ಳುತ್ತಾ ಮನೆಯೊಳಗೆ ಹೆಜ್ಜೆಯಿಟ್ಟಳು.  “ಅಲ್ಲೇ ಒಂದು ಪೆಟ್ಟಿಗೆ ಇದೆ. ಕೂತ್ಕೋ.  ಸ್ವಲ್ಪ ಕೈಚಾಚಿದ್ರೆ ಪಕ್ಕದಲ್ಲಿರೋ ಬುಟ್ಟೀನಲ್ಲಿ ಒಂದು ಒಣ ಸೀರೆ ತುಂಡಿದೆ. ತೊಗೊಂಡು ತಲೆ ಒರಸ್ಕೋ” ಎಂದಿತು ಮುದುಕಿ. ಇಷ್ಟು ಹೊತ್ತಿಗೆ ಸ್ವಲ್ಪ ಧೈರ್ಯ ಬಂದಿದ್ದರಿಂದ ಅಲ್ಲಿ ಕೂತುಕೊಂಡು ಒಣಬಟ್ಟೆಯ ತುಂಡಿನಿಂದ ತಲೆಯನ್ನೂ ಕೈಯನ್ನೂ ಒರಸಿಕೊಂಡಳು.  “ನೀನ್ಯಾರು? ಎಲ್ಲಿ ನಿಮ್ಮನೆ?” ಕೇಳಿತು ಮುದುಕಿ.  ಈ ಊರಿನಲ್ಲಿ ಹೆಚ್ಚುಕಡಿಮೆ ಹಳಬರೆಲ್ಲರಿಗೂ ಒಬ್ಬರಿಗೊಬ್ಬರು ತಿಳಿದೇ ಇರ್ತಾರೆ ಎಂದುಕೊಂಡ ಸುಜಾತ ಹೇಳಿದಳು “ಆಯಿಲ್ ಮಿಲ್ ಶಿವರಾಮಯ್ಯನವರ ಮಗಳು…” “ಓ.. ನೀನೇ.. ಪಂಕಜಮ್ಮನ ಮಗಳು ಸುಜಾತ ಅಲ್ವೇ. ಅಥವಾ ಸುನೀತಾನೋ… ನಿಮ್ಮಣ್ಣ ಸುರೇಶ ಅಲ್ವಾ” ಸಂಭ್ರಮದಿಂದ ಕೇಳಿತು ಆ ಕಂಠ. `ಇಷ್ಟು ಚೆನ್ನಾಗಿ ನಮ್ಮ ಇಡೀ ಕುಟುಂಬವನ್ನೇ ಜ್ಞಾಪಕ ಇಟ್ಟುಕೊಂಡಿರೋವ್ರು ಈ ಬೀದೀನಲ್ಲಿ ಯಾರಿದಾರೆ?’ ಅವಾಕ್ಕಾಗಿ ಹೋದಳು ಸುಜಾತ. “ಹಾ! ನಾನು ಸುಜಾತಾನೇ… ನೀವು ಯಾರೂಂತ ಗೊತ್ತಾಗಲಿಲ್ಲ..” ಸಧ್ಯ ಯಾರೋ ಗೊತ್ತಿರೋರ ಮನೆಯಲ್ಲೇ ಕೂತಿದೀನಿ ಎಂದು ಸ್ವಲ್ಪ ಧೈರ್ಯ ತಂದುಕೊಳ್ಳುತ್ತಾ ನುಡಿದಳು.  “ನಾನು ಯಾರೂಂತ ಗೊತ್ತಾಗ್ಲಿಲ್ವೇನೇ ಪುಟ್ಟಿ; ನಿಮ್ಮನೇ ಪಕ್ಕದಲ್ಲಿದ್ವಲ್ಲ.. ಮೇಷ್ಟ್ರ ಹೆಂಡ್ತಿ ಅಹಲ್ಯಾಬಾಯಿ” ಎಂದಾಗ ಸುಜಾತ `ಹಾ!‘ಎನ್ನುತ್ತಾ ಧ್ವನಿ ಬಂದ ಮೂಲೆಯನ್ನೇ ನೋಡಿದಳು. ಏನೂ ಕಾಣಲಿಲ್ಲ.  ಅವರೊಂದಿಗಿನ ಮುಖಾಮುಖಿಗೆ ತಯಾರಿದ್ದಿಲ್ಲದ ಸುಜಾತ ಈಗ ಮಾತನ್ನು ಮುಂದುವರೆಸಲೇ ಬೇಕಿತ್ತು.  “ನೀವೊಬ್ರೇ ಇದೀರೀಂತ ಹೇಳಿದ್ಳು ಅಮ್ಮ, ಮತ್ತೆ ಮನೆ ಬಾಗಿಲು ಇಷ್ಟು ಹೊತ್ತಿನಲ್ಲಿ ತೆಕ್ಕೊಂಡು ಕೂತಿದೀರಲ್ಲ.  ಯಾರಾದ್ರೂ ನುಗ್ಗಿದ್ರೆ?”  “ನುಗ್ಗಿ ಏನ್ಮಾಡ್ತಾರೆ? ಏನು ನಗವಾ, ನಾಣ್ಯವಾ? ಏನಿದೆ ಕೊಳ್ಳೇ ಹೊಡೆದು ತೊಗೊಂಡು ಹೋಗೋಕೆ ಈ ಮುದಿಗೂಬೆ ಪ್ರಾಣ ಒಂದು ಬಿಟ್ಟು.  ಅದ್ಯಾರಿಗೂ ಬೇಕಾಗಿಲ್ಲ.. ಯಮನಿಗೂ..” ಕಹಿಯಾಗಿ ಹೇಳಿದಳು ಅಹಲ್ಯಾಬಾಯಿ.  “ಅಟ್ಟದ ಮೇಲೆ ಯಾವ ಕಾಲದಿಂದಲೋ ಒಟ್ಟಿರೋ ಕಟ್ಟಿಗೇಗಾದ್ರೂ ಒಂದಿಷ್ಟು ಬೆಲೆಯಿದೆಯೇನೋ.. ಈ ಮುದಿಕೊರಡಿಗೆ ಏನೂ ಇಲ್ಲ.. ನನ್ನ ಪ್ರಾಣ ತೊಗೊಂಡು ಯಾವನು ಏನು ಮಾಡ್ತಾನೆ ಹೇಳು”.  “ಛೇ, ಹಾಗನ್ಬೇಡಿ. ನೋವಾಗತ್ತೆ.” ನೋವಿನಿಂದ ನುಡಿದಳು ಸುಜಾತ “ಮೇಷ್ಟ್ರು ದಸರಾ ಹಬ್ಬದ ದಿನಗಳಲ್ಲಿ ಹೋಗಿಬಿಟ್ಟರೂಂತ ಅಮ್ಮ ಹೇಳಿದ್ಳು.  ಜೀವನಕ್ಕೆ ಏನು ಮಾಡ್ತಿದೀರಿ?”  “ಅವರಿದ್ದಾಗ ಏನು ಮಾಡ್ತಿದ್ವೋ ಅದೇ, ಪಿಂಚಣೀ ಅಂತ ಆಗ ಸಾವಿರ ರೂಪಾಯಿ ಬರ್ತಿತ್ತು; ಈಗ ಮುನ್ನೂರು ರೂಪಾಯಿ ಬರತ್ತೆ.  ಆಗ ಇವ್ರನ್ನ ಹುಡುಕ್ಕೊಂಡು ಯಾರೋ ಶಿಷ್ಯರು ಆಗ-ಈಗ ಬಂದು ಏನಾದ್ರೂ ಸ್ವಲ್ಪ ಕೈಯಲ್ಲಿ ಹಾಕಿ ಹೋಗ್ತಿದ್ರು.  ಈಗ ಯಾರೂ ಈ ಕಡೆ ತಿರಗಲ್ಲ.  ಏನೋ ಇರೋಕೆ ಈ ಮನೆ ಕೊಟ್ಟಿರೋದೆ ದೊಡ್ಡ ಪುಣ್ಯ” ನಿಟ್ಟುಸಿರಿಟ್ಟಳು ಆಕೆ. ಮಳೆ ಜೋರಾಗುತ್ತಲೇ ಇತ್ತು.. ಮೌನ ಮಾತಾಗಿತ್ತು.. ಇದ್ದಕ್ಕಿದ್ದಂತೇ “ನಿಮ್ಮಮ್ಮ ಬಹಳ ಒಳ್ಳೆಯ ಹೆಂಗಸು.  ವಠಾರದವ್ರೆಲ್ಲಾ ನನ್ನ ವಿರುದ್ಧವಾಗಿದ್ದಾಗ ಒಂದಿನಾನೂ ಆಕೆ ಒಂದು ಕೆಟ್ಟ ಮಾತು ಅಂದವರಲ್ಲ.  ಏನೋ.. ಅವರೊಬ್ರಿಗೇ ನನ್ನ ನೋವು, ಕಷ್ಟ ಅರ್ಥವಾಗಿತ್ತೇನೋ… “ ಅಂದಳು. ಆಕೆ ಅಳುತ್ತಿದ್ದಳೇ.. ಕತ್ತಲಲ್ಲಿ ಗೊತ್ತಾಗಲಿಲ್ಲ.. ಸ್ವಲ್ಪಹೊತ್ತು ತಡೆದು ಕೇಳಿದಳು “ನಾನೇನಾದ್ರೂ ಮಾತಾಡಿದ್ರೆ ನಿಂಗೆ ಬೇಜಾರಾಗತ್ತಾ.  ಯಾಕೋ ಈ ಮಳೆ ಬಂತೂಂದ್ರೆ ನಂಗೆ ಹಳೆಯದೆಲ್ಲಾ ನೆನಪಿಗೆ ಬರತ್ತೆ.  ಹೇಳ್ಕೊಳಕ್ಕೂ ಯಾರೂ ಇಲ್ಲ; ಈಗ ನಿನ್ಮುಂದೆ ಹೇಳ್ಳಾ..” “ಖಂಡಿತಾ ನಂಗೆ ಬೇಜಾರಾಗಲ್ಲ; ನಿಮಗೆ ನೋವಾಗತ್ತೇನೋ ಅಂತ ನಾನೇನೂ ಕೇಳಲಿಲ್ಲ ಅಷ್ಟೆ.  ನಾವು ಚಿಕ್ಕವ್ರಿದ್ದಾಗ ನಿಮ್ಮನ್ನ ಕಂಡ್ರೆ ಭಯ ಪಡ್ತಾ ಇದ್ವಿ.  ಆದ್ರೆ ನೀವು ಯಾಕೆ ಹಾಗಿದ್ರೀ ಅಂತ ಯೋಚ್ನೆ ಮಾಡೋ ವಯಸ್ಸು ನಮ್ಮದಲ್ವಲ್ಲಾ.  ಈಗ ನೀವು ಏನು ಹೇಳಿದ್ರೂ ನಂಗರ್ಥವಾಗತ್ತೆ. ನಿಮ್ಮ ಮನಸ್ಸು ಹಗುರಾಗೋ ಹಾಗಿದ್ರೆ ಹೇಳಿ.” ಕಕ್ಕುಲತೆಯಿಂದ ನುಡಿದಳು ಸುಜಾತ.  ಏನನ್ನೋ ನೆನಪಿಸಿಕೊಳ್ಳುತ್ತಿರುವಂತೆ ಸ್ವಲ್ಪ ಹೊತ್ತು ಮೌನವಾಗಿದ್ದ ಆಕೆ ಕನಸಿನಲ್ಲಿರುವಂತೆ ಎಂದೋ ನಡೆದದ್ದನ್ನು ಹೇಳತೊಡಗಿದಳು… “ನಮ್ಮಮ್ಮಂಗೆ ನಮ್ಮಣ್ಣ, ಮತ್ತೆ ನಾವಿಬ್ರು ಹೆಣ್ಣು ಮಕ್ಕಳು.  ನಾನೇ ಕಡೆಯವಳು. ನನಗೂ, ನಮ್ಮಕ್ಕನಿಗೂ ಹದಿನೈದು ವರ್ಷಗಳ ಅಂತರ. ಆ ಕಾಲಕ್ಕೆ ಹೆಣ್ಣು ಮಕ್ಕಳಿಗೆ 13, 14 ವರ್ಷಕ್ಕೆಲ್ಲಾ ಮದುವೆ ಮಾಡಿ ಬಿಡ್ತಿದ್ರು. ನಾನು ಹುಟ್ಟಕ್ಮುಂಚೇನೆ ಅಕ್ಕನ್ನ ಕೇಳಿಕೊಂಡು ಬಂದು ಮದುವೆ ಮಾಡಿಕೊಂಡು ಹೋಗಿದ್ರಂತೆ.  ಹಾಗಾಗಿ ಅವಳು ಯಾವತ್ತೂ ನಂಗೆ ಹತ್ತಿರ ಆಗ್ಲೇ

ಮಹಿಳಾದಿನದ ವಿಶೇಷ Read Post »

ಕಥಾಗುಚ್ಛ

ಕಥಾಯಾನ

ಆಕಾಂಕ್ಷಿ ಅಶ್ವಥ್ ವ್ಯಾಪಾರಿ ಬುದ್ಧಿಯಿಲ್ಲದ ಬೀದಿವ್ಯಾಪಾರಿ ರಾಮು, ಬಂದಿರುವ ಬೀದಿಯ ಗ್ರಾಹಕರಿಗೆ ಏನು ಬೇಕೆಂದು ಕೇಳುವುದು, ಅದಕ್ಕೆ ಹಣ ಎಷ್ಟು  ಎಂದು ಹೇಳಿ ಹೆಚ್ಚಿಗೆ ಹಣ ಕೊಟ್ಟವರಿಗೆ ಚಿಲ್ಲರೆ ಕೊಡುವುದರ ಹೊರತಾಗಿ ಒಂದೇ ಒಂದು ಹೆಚ್ಚಿನ ಮಾತನ್ನೂ ಆಡುವವನಲ್ಲ. ಇನ್ನು ಗಿಲೀಟಿನ ಮಾತು ಅಂದರೆ ಅವನಿಗೆ ಪರದೇಶೀ ಭಾಷೆಯೇನೋ ಅನ್ನುವಷ್ಟು ದೂರವೆನಿಸುವುದು.          ನಿತ್ಯವೂ ಬಿಳಿಕೆರೆ ಸರ್ಕಲ್ಲಿನ ರಾಯರ ಮಠದ ಹಿಂಭಾಗದಲ್ಲಿ, ಬೆಳಿಗ್ಗೆ ತಳ್ಳುವ ಗಾಡಿಯಲ್ಲಿ ಇಡ್ಲಿ ಮಾರುತ್ತಾ, ಸಂಜೆ ಹೊತ್ತಿನಲ್ಲಿ  ಬೇಲ್ ಪೂರಿ, ಚುರುಮುರಿ ಮಸಾಲೆ ಸೌತೆಕಾಯಿ ಮಾರುತ್ತಾ ನಿಂತಿರುತ್ತಿದ್ದ ರಾಮು, ದೂರದ ಸಕಲೇಶಪುರದಿಂದ ಬಂದಿದ್ದ ಸಂದೇಶನಿಗೆ ಆಪತ್ಬಾಂಧವನಾಗಿದ್ದ. ಸಂದೇಶ್ ಓದುವುದಕ್ಕೆಂದು ಬೆಂಗಳೂರಿಗೆ ವಲಸೆ ಬಂದವನು, ಬಿಳಿಕೆರೆ ಏರಿಯಾದ ಬಾಡಿಗೆಯ ಮನೆಯಲ್ಲಿ ವಾಸವಾಗಿದ್ದ  ದಿನಗಳಿಂದಲೂ, ರೂಮಿನಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದ. ಬೆಳಿಗ್ಗೆ ಎಚ್ಚರವಾಗುವುದು ತಡವಾದಾಗ, ಪರೀಕ್ಷೆಗಳಿದ್ದ ಸಮಯದಲ್ಲಿ, ಅಡುಗೆಗೆ ಸಮಯ ಹೊಂದಿಸಲಾಗದೇ, ರಾಮುವಿನ ಗಾಡಿ ಮುಂದೆ ಹಾಜರಾಗಿ, ತಿಂಡಿ ಪ್ಯಾಕ್ ಮಾಡಿಸಿಕೊಂಡು ಬರುತ್ತಿದ್ದ. ಎಂಜಿನಿಯರಿಂಗ್ ಕಾಲೇಜಾಗಿದ್ದರಿಂದ ಲ್ಯಾಬ್ ಗಳಿದ್ದು ಸಂಜೆ ತಡವಾಗಿ ಮನೆಗೆ ಬರುವಂತಹ ದಿನಗಳಲ್ಲಿ  ಬೇಲ್ ಪೂರಿಯನ್ನೋ, ಮಂಡಕ್ಕಿಯ ಚುರುಮುರಿಯನ್ನೋ ಕಟ್ಟಿಸಿಕೊಂಡು ಮನೆ ಸೇರಿಕೊಳ್ಳುತ್ತಿದ್ದ. ಮೂರು ವರ್ಷಗಳ ತನಕ ರೂಮಿನಲ್ಲಿ ಅಡುಗೆ ಮಾಡಲಾಗದ ಬಹುತೇಕ ದಿನಗಳಲ್ಲಿ ರಾಮುವಿನ ತಳ್ಳುವ ಗಾಡಿಯ ತಟ್ಟೆಇಡ್ಲಿ, ಮಸಾಲೆ ವಡೆ, ಸಂಜೆಯ ಸ್ನ್ಯಾಕ್ ಗಳು ಸಂದೇಶನಿಗೆ ಒಂದು ರೀತಿಯ ಕಡಿಮೆ ಖರ್ಚಿನ, ಶ್ರಮರಹಿತ ಹೊಟ್ಟೆಪಾಡು ಎನ್ನುವಂತಾಗಿದ್ದವು. ರಾಮುವಿನ ತಿನಿಸುಗಳ್ಯಾವೂ ಆರೋಗ್ಯದ ಮೇಲೆ ವಕ್ರದೃಷ್ಟಿಬೀರದೇ ಇದ್ದುದರಿಂದ ಬೇರೆ ಜಾಗಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲದಾಯಿತು.          ರಾಮು ಸಂಕೋಚದ ಸ್ವಭಾವದವನಾಗಿದ್ದರೂ ಅವನ ಸಣ್ಣ ವಯಸ್ಸು, ಮುಗ್ಧತೆಯನ್ನು ಕಂಡು ಜನರಿಲ್ಲದಿದ್ದ ಸಮಯದಲ್ಲಿ ಸಂದೇಶನು ತಾನೇ ಮಾತಿಗಿಳಿಯುತ್ತಿದ್ದ. “ ಏನೋ ಹುಡುಗಾ, ಇಡ್ಲಿ ವ್ಯಾಪಾರ ಮಾಡಿ ಸ್ಕೂಲ್ ಗೆ ಎಷ್ಟೊತ್ತಿಗೆ ಹೋಗ್ತೀಯೋ?” ಅಂದರೆ, ‘ಯಾಪಾರ ಮುಗಿಸಿದ್ಮೇಲೆ’ ಅಂದು ಸುಮ್ಮನಾಗಿಬಿಡುತ್ತಿದ್ದ.  ಕೆಲವೊಮ್ಮೆ ಇವನ ವ್ಯಾಪಾರವೆಲ್ಲ ಮುಗಿದ ಮೇಲೆ ಗಾಡಿಗೆ ಸಾಮಾನು ತುಂಬಿಕೊಂಡು ಹೋಗಲು ಅಪರೂಪಕ್ಕೊಮ್ಮೆ ಹೆಂಗಸರೊಬ್ಬರು ಬರುತ್ತಿದ್ದುದನ್ನು ಗಮನಿಸಿದ್ದ ಸಂದೇಶ, ಹುಡುಗನ ಅಮ್ಮ ಎಂಬುದನ್ನು ತಿಳಿದು ‘ಸ್ಕೂಲ್ ಗೆ ಹೋಗುವ ವಯಸ್ಸಿನ ಹುಡುಗನ್ನ ವ್ಯಾಪಾರಕ್ಕೆ ನಿಲ್ಲಿಸಿದೀರಿ, ಸಂಜೆಯೂ ವ್ಯಾಪಾರದಲ್ಲೇ ಇರ್ತಾನೆ. ಸರಿಯಾಗಿ ಓದ್ತಾನಾ ಏನು?’ ಎಂದು ಕೇಳಿದ್ದಕ್ಕೆ  ಅಮ್ಮ ಮಗ ಇಬ್ಬರೂ ಮುಖ ನೋಡುತ್ತಾ  ಹೌದೆನ್ನುವಂತೆ ಕತ್ತು ಅಲ್ಲಾಡಿಸಿದ್ದರು. ಸಂದೇಶನಿಗೆ ಯಾಕೋ ಅನುಮಾನವೆನಿಸಿತು.        ಒಂದು ಸಂಜೆ ಚುರುಮುರಿ ತೆಗೆದುಕೊಂಡು ಬೇರೆ ಗ್ರಾಹಕರಾರೂ ಇಲ್ಲದ್ದನ್ನು ಕಂಡ ಸಂದೇಶ, ರಾಮುವಿನ ಬಗ್ಗೆ ಸ್ವಲ್ಪ ವಿಚಾರಿಸಿದ. ಅಷ್ಟರಲ್ಲಿ ರಾಮುವೂ ಸಹ ಸಂಕೋಚ ಸರಿಸಿ ಸಂದೇಶನೊಂದಿಗೆ ಮಾತನಾಡುವಷ್ಟು ಹೊಂದಿಕೊಂಡಿದ್ದ.  “ಹೇ ರಾಮು, ನೀನ್, ನನ್ನ ಸೋಮಾರಿ ಮಾಡ್ತಿದ್ದೀಯೇನೋ ಅನಿಸ್ತಿದೆ ಕಣೋ”  ಇನ್ನೂ ಎರಡು ವರ್ಷ ಕಾಲೇಜು ಇದೆ, ಅಷ್ಟರಲ್ಲಿ ನಾನು ಅಡುಗೆ ಮಾಡಿಕೊಳ್ಳೋದೇ ನಿಲ್ಲಿಸಿಬಿಡ್ತೀನೇನೋ ಅನ್ಸತ್ತೆ, ಕೆಲವು ಸಾರ್ತಿ”  ಅನ್ನುತ್ತಾ ಹಾಗೆಯೇ ಪಕ್ಕದಲ್ಲಿ ನಿಂತು ಮೊಣಕೈಯಿಂದ ಮೆಲ್ಲನೆ ನೂಕಿದ. “ಓ, ನೀವೇನ್ ಸಂದೇಶಣ್ಣ ಅಪರೂಪಕ್ಕೆ ಬರೋವ್ರು, ಬಸ್ಸಿಗೆ ಹೋಗುವ ಎಷ್ಟೊಂದ್ ಜನ ರೆಗ್ಯುಲರ್ ಕಸ್ಟಮರಿದಾರೆ ಗೊತ್ತಾ? ಸಂಜೆನೂ ಪರಾಠ, ರಾಗಿಮುದ್ದೆ ತರ ಅಡುಗೆ ಮಾಡಿದ್ರೆ ಅವರಿಗೆ ಅನುಕೂಲ ಅಂತಾರೆ” ಅಂದು ತನ್ನ ಕೆಲಸದಲ್ಲಿ ತೊಡಗಿದ. “ಹೌದೇನೋ, ವ್ಯಾಪಾರ ಜೋರಾಗಿ ಆಗ್ತಿದೆ ಅನ್ನು ಮತ್ತೆ… ಹಂಗಂತ ಓದೋ ಕಡೆ ಗಮನ ಬಿಟ್ಟು ಬರೀ ದುಡ್ಡು ನೋಡೋ ತರ ಆಗಬೇಡ ಮತ್ತೆ” ಎಂದಿದ್ದಕ್ಕೆ ರಾಮು, “ಎಲ್ಲಣ್ಣಾ, ಆರನೇ ಕ್ಲಾಸಿಗೇ ಸ್ಕೂಲ್ ನಿಲ್ಸಾಯ್ತು, ಈ ಕೆಲಸದಲ್ಲಿ  ನಿಲ್ಲೋಕೇಂತ” ಅಂದ. ಸಂದೇಶನ ಅನುಮಾನ ನಿಜವಾಗಿತ್ತು. ಏನೆಂದು ವಿಚಾರಿಸಿದರೆ, ಅವರ ಅಮ್ಮನ ಮನೆಯಲ್ಲಿ ಬಡತನ, ಕನಕಪುರದ ಕಡೆ ದಿನಗೂಲಿ ಕೆಲಸ ಮಾಡಿಕೊಂಡು ಕಾಲೋನಿಯೊಂದರ ಸಣ್ಣ ಮನೆಯಲ್ಲಿ ವಾಸವಾಗಿದ್ದವರು. ಅಪ್ಪ ಹೊಸೂರಿನ ಕಡೆಯಿಂದ  ಕೆಲಸಕ್ಕೆಂದು ಬಂದಿದ್ದು, ರಾಮುವಿನ ಅಜ್ಜನಿಗೆ ಸ್ವಲ್ಪ ಪರಿಚಯವಾದ್ದರಿಂದ ಮಗಳನ್ನು ಮದುವೆ ಮಾಡಿದ್ದನಂತೆ. ರಾಮು ಆನಂತರ ಒಬ್ಬಳು ತಂಗಿ ಇದ್ದು, ಮದುವೆಯಾಗಿ ಹತ್ತು ವರ್ಷವಾಗುವಷ್ಟರಲ್ಲಿ ಅಪ್ಪ ಎಲ್ಲಿಯೋ ಹೋಗಿ ವಾಪಸಾಗಲಿಲ್ಲವಂತೆ. ಸಂಸಾರದ ಜವಾಬ್ದಾರಿ ಹೊತ್ತ ಅಮ್ಮ, ಸರ್ಕಾರಿ ಶಾಲೆಯಲ್ಲಿದ್ದ ರಾಮುವನ್ನೂ ತಂಗಿಯನ್ನೂ ಕರೆದುಕೊಂಡು ಬೆಂಗಳೂರು ಸೇರಿದರೆಂದು ಹೇಳಿದ.            ರಾಯರ ಮಠದ ಸ್ವಲ್ಪ ದೂರದಲ್ಲಿದ್ದ  ಸಣ್ಣ ಬೀದಿಯಲ್ಲಿ ಕಡಿಮೆ ಬಾಡಿಗೆಯ ಮನೆ ಹಿಡಿದು, ಕೆಲಸಕ್ಕೆಂದು ಹುಡುಕುವಾಗ ಮಠದ ಆವರಣವನ್ನು ಗುಡಿಸುವ, ನಿತ್ಯ ಮುಂಬಾಗಿಲು ತೊಳೆಯುವ ಕೆಲಸವಾಗಿ, ಆನಂತರ ಮೂರ್ನಾಲ್ಕು ಮನೆ ಕೆಲಸಗಳನ್ನೂ ಮಾಡಿಕೊಳ್ಳುತ್ತಿದ್ದ ಅಮ್ಮ ಹೇಗೋ ದಿನ ದೂಡುತ್ತಿದ್ದರು. ಮಠದ ಹಿಂದಿನ ಬಸ್ ನಿಲ್ದಾಣದಲ್ಲಿ ತರಕಾರಿ ಮಾರಾಟ ಮಾಡುವ ಹೆಂಗಸರೊಬ್ಬರ ಸಲಹೆಯಂತೆ, ಬಸ್ ಸ್ಟಾಂಡಿಗೆ ಬರುವ ಅನೇಕರಿಂದ ಬೆಳಗಿನ ತಿಂಡಿಯ ವ್ಯಾಪಾರ ಹೊಳೆದಿತ್ತಂತೆ.  ತಕ್ಕಮಟ್ಟಿಗೆ ಅಡುಗೆ ಗೊತ್ತಿದ್ದ ರಾಮುವಿನ ಅಮ್ಮ ತಟ್ಟೆಇಡ್ಲಿ ವ್ಯಾಪಾರಕ್ಕೆ ಮುಂದಾಗಿ,  ಆವರಣ ಗುಡಿಸುವ ಹೆಂಗಸಿನ ಅಡುಗೆ ವ್ಯಾಪಾರವನ್ನು ಯಾರಾದರೂ ಮೆಚ್ಚಿಯಾರೇ ಎಂದುಕೊಂಡು, ವ್ಯಾಪಾರ ನಿಭಾಯಿಸುವ ಹೊಣೆ ರಾಮುವಿಗೆ ಬಂದಾಯಿತು. ಆ ಬಗ್ಗೆ ನೋವು ಬಚ್ಚಿಕೊಂಡು ಅಭಿಮಾನದಲ್ಲಿ, ಅಮ್ಮನ ಸಂಪಾದನೆಗೆ ಕಡಿಮೆಯಿಲ್ಲದಂತೆ ಬೆಳಗಿನ ಹಾಗೂ ಸಂಜೆಯ ಮೂರ್ನಾಲ್ಕು ಗಂಟೆಗಳಲ್ಲಿ ಸಂಪಾದಿಸಿಕೊಂಡು ತಂಗಿಯನ್ನು ಓದಲು ಕಳಿಸ್ತಿದ್ದಾರೆ. ಸಂದೇಶನಿಗೆ ಕೇಳಿದ್ದು ಪಿಚ್ಚೆನಿಸಿದರೂ ಬದುಕಿನ ಅನಿವಾರ್ಯತೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಎಂದುಕೊಂಡು ಸಣ್ಣ ಬೇಸರದಿಂದಲೇ ಬೆನ್ನುತಟ್ಟಿದ. ‘ನಮ್ಮಮ್ಮ “ಬೆಟ್ಟದ ಹೂವು” ಸಿನಿಮಾ ನೋಡಿ ನನಗೆ ರಾಮು ಅಂತ ಹೆಸರಿಟ್ಟಿದ್ದಂತೆ ಸಂದೇಶಣ್ಣಾ’ ಅನ್ನುತ್ತಾ ಪುನೀತ್ ರಾಜಕುಮಾರರ ಬಾಲ್ಯದ ಚಿತ್ರವೊಂದನ್ನು ಗಾಡಿಯ ತುದಿಯಲ್ಲಂಟಿಸಿರುವುದು ತೋರಿಸಿಸುವಾಗ ಅವನ ಕಣ್ಣುಗಳ ಹೊಳಪು, ಕಷ್ಟದ ಬದುಕಾದರೂ ಚೈತನ್ಯಕ್ಕೆ ಕುಂದಿಲ್ಲ ಎನಿಸುವಂತಿತ್ತು.        ಸಂದೇಶನ ಮೂರನೇ ವರ್ಷದ ಕಾಲೇಜು ಮುಗಿದು ರಜೆಗೆ ಊರಿಗೆ ಹೋಗಿದ್ದಾಗ, ಬಿಳಿಕೆರೆ ಸರ್ಕಲ್ಲಿನಲ್ಲೊಂದು ಹೊಸ ಫಲಹಾರ ಭವನ ತಲೆಯೆತ್ತಿತ್ತು. “ಶ್ರೀ ರಾಘವೇಂದ್ರ ಭವನ, ಸಸ್ಯಾಹಾರಿ” ಎನ್ನುವ ಸಣ್ಣ ಅಕ್ಷರಗಳ ನಾಮಫಲಕದಲ್ಲಿ, ಬಾಳೆ ಎಲೆಗಳ ದೊಡ್ಡ ಚಿತ್ರದಲ್ಲಿ ತಟ್ಟೆಇಡ್ಲಿ, ಉದ್ದಿನ ವಡೆಗಳು ತಾಜಾತನವನ್ನು ಹೊರಹೊಮ್ಮುತ್ತಿರುವಂತೆ ಕಾಣುತ್ತಿದ್ದವು. ರಾಯರ ಮಠದ ಹಿಂಭಾಗದ ಬಿಳಿಕೆರೆ ಬಸ್ ಸ್ಟಾಂಡಿಗೆ ಕಾಣುವಂತೆ ಹೊಸ ಎಸ್ಆರ್ ಬಿ ಮಳಿಗೆಯು, ರಾಮುವಿನ ತಳ್ಳುವ ಗಾಡಿಯ ನಿಲ್ದಾಣಕ್ಕೆ ನೂರು ಅಡಿಯಷ್ಟು ದೂರದಲ್ಲಿದ್ದಿತ್ತು. ಅಲ್ಲಿಯತನಕ ಅಷ್ಟೇನೂ ಜೋರು ವ್ಯಾಪಾರವಿಲ್ಲದಿದ್ದರೂ, ನಿತ್ಯವೂ ತಪ್ಪದಂತೆ ವ್ಯಾಪಾರಕ್ಕೆ ಬರುತ್ತಿದ್ದ ರಾಮುವಿಗೆ  ಈಗ ಹೊಚ್ಚ ಹೊಸ ಎಸ್ ಆರ್ ವಿ ಭವನದ ಅಡುಗೆ ಕೋಣೆಯಿಂದ ಬರುವ ತಾಜಾ ಚಟ್ನಿಯ ಘಮಲು, ಉದ್ದಿನ ವಡೆ ಕರಿಯುವ, ನರುಗಂಪಿನ ಡಿಕಾಕ್ಷನ್ ಕಾಫಿಯ  ಸುವಾಸನೆ, ಮಿರುಗುವ ಹೊಸ ಟೇಬಲ್ಲುಗಳು, ಬಾಳೆ ಎಲೆಯ ಹಸಿರು ಹಿನ್ನೆಲೆಯಲ್ಲಿ ಬಿಳಿಯ ತಟ್ಟೆಇಡ್ಲಿಯ ಮೇಲೆ ಹೊಂದಿಕೆಯಾಗುವಂತಹ ತಿಳಿ ಕೇಸರಿ ಬಣ್ಣದ ಚಟ್ನಿ, ಇವೆಲ್ಲಾ ಆಕರ್ಷಣೆಗಳನ್ನೂ ಎದುರಿಸಬೇಕಾದ ಸವಾಲು ಕಾದಿತ್ತು. ಯಾವಾಗಲೋ ಬಣ್ಣ ಬಳಿದಂತೆ ಕಾಣುವ ನಾಲ್ಕು ಸೈಕಲ್ ಚಕ್ರದ ತಳ್ಳುವ ಗಾಡಿಯ ಮೇಲೆ  ಹಬೆಯನ್ನು ಹೊಮ್ಮುವ ಒಂದು ಪಾತ್ರೆ, ಇಡ್ಲಿ ಬಡಿಸುವ ಪ್ಲಾಸ್ಟಿಕ್ ತಟ್ಟೆ ಅದರ ಮೇಲೊಂದು ಒಣಗಿದ ಮುತ್ತುಗದ ಎಲೆ, ಕುಡಿಯುವ ನೀರು ತುಂಬಿರಿಸಿದ್ದ  ಮೂರು ಪ್ಲಾಸ್ಟಿಕ್ ಜಗ್ಗುಗಳು, ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುವ ಮೈಸೂರು ಅರಮನೆಯ ಮುಂದೆ ಝೀರೋ ವ್ಯಾಟ್ ಬಲ್ಬಿನಂತಾಯಿತು.          ಆದರೂ ಧೃತಿಗೆಡದವನಂತೆ ತನ್ನ ಪಾಡಿಗೆ ತಾನು ಮಾಮೂಲಿನ ಜಾಗದಲ್ಲಿ ನಿಂತು ವ್ಯಾಪಾರ ಮಾಡುತ್ತಿದ್ದ ರಾಮುವಿಗೆ  ಒಂದೆರಡು ವಾರಗಳಲ್ಲಿ ಎಸ್.ಆರ್ ಬಿ ಯ ವತಿಯಿಂದ ಒಂದು ನೋಟೀಸ್ ಬಂತು. ವ್ಯಾಪಾರದ ಪ್ರಮಾಣ ಕ್ಷೀಣಿಸಿದ್ದಕ್ಕೆ ತಕ್ಕಂತೆ ತಟ್ಟೆಇಡ್ಲಿ, ಮಸಾಲೆ ವಡೆಗಳ ಪ್ರಮಾಣವನ್ನೂ ಕಡಿಮೆ ಮಾಡಿಕೊಂಡಿದ್ದ ರಾಮು ಮೊದಲಿನಂತೆ ಹತ್ತೂವರೆಯ ಬಸ್ಸು ಹೊರಡುವ ತನಕ ಕಾಯದೇ ಮಾರಾಟವಾಗುವ ಇಡ್ಲಿಯ ಪ್ರಮಾಣದ ಆಧಾರದ ಮೇಲೆ ಜಾಗ ಖಾಲಿ ಮಾಡುತ್ತಿದ್ದನು. ಸ್ವಸಹಾಯ ಪದ್ಧತಿಯ ಎಸ್ ಆರ್ ವಿ ಯ ಮಳಿಗೆಯಲ್ಲಿ ತಿಂಡಿ ಸರಬರಾಜು ಮಾಡುತ್ತಾ ಗಲ್ಲಾಪೆಟ್ಟಿಗೆಯನ್ನೂ ನಿಭಾಯಿಸುವ ನಲವತ್ತು ದಾಟಿರಬಹುದಾದ ಮಧ್ಯವಯಸ್ಸಿನ ಭಟ್ಟರು, ಹಣೆಗೆ ಮಠದ ಚಂದನ, ಕುಂಕುಮವನ್ನು ಹಣೆಗೆ ಧರಿಸಿ, ಒಳಗಿನ ಜನಿವಾರ ಕಾಣುವಂತಹ ತೆಳುವಾದ ಬನಿಯನ್ನು ಧರಿಸಿ ನೀಟಾಗಿರುತ್ತಿದ್ದರು.  ಕಪ್ಪಗೆ ಕುಳ್ಳಗೆ ಇದ್ದ, ಇನ್ನೂ ಹೈಸ್ಕೂಲಿಗೆ ಹೋಗುವ ವಯಸ್ಸಿನ ರಾಮುವಿನಿಂದ ಅವರಿಗೇನೂ ಉಪಟಳವಾಗುವಂತಿರಲಿಲ್ಲ. ಆದರೂ ರಾಯರ ಮಠದ ಆವರಣಕ್ಕೆ ತಕ್ಕನಾಗಿದ್ದ ಉಪಹಾರ ಭವನದ ಕಣ್ಣಳತೆಯ ದೂರದಲ್ಲಿ ರಾಮುವಿನ ಗಾಡಿಯನ್ನು ಕಾಣುವುದೆಂದರೆ ಅವರಿಗೆ ಅಷ್ಟಾಗಿ ಸರಿಕಾಣಲಿಲ್ಲ. ಮಠದ ಮೂಲಕ ಪರಿಚಯವಾಗಿದ್ದ ಸ್ಥಳೀಯರೊಬ್ಬರಿಗೆ ಈ ವಿಚಾರವನ್ನು ನಯವಾಗಿ ಹೇಳಿದ ಭಟ್ಟರು ಬೇರೆ ಎಲ್ಲಾದರೂ ಜಾಗ ನೋಡಿಕೊಳ್ಳುವಂತೆ ನೋಟೀಸು ಕಳಿಸಿಕೊಟ್ಟಿದ್ದರು. ರಾಮು ಹೆಚ್ಚೇನೂ ಮಾತನಾಡದೇ ‘ನಾಲ್ಕು ವರ್ಷದಿಂದ ಇಲ್ಲೇ ಬತ್ತೀನಿ, ಇಲ್ಲಿ ತರಕಾರಿ ಮಾರುವ ಕೆಲವರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಬಸ್ ಸ್ಟಾಂಡಿಗೆ ಬರೋವ್ರು ಯಾಪಾರ ಮಾಡ್ತಾರೆ ಅಂತ ಇಲ್ಲಿದಿನಿ; ಈಗ ಒಂದೇ ಸಲ ಬೇರೆ ಜಾಗ ಅಂದರೆ” ಎಂದು ಮೆಲುದನಿಯಲ್ಲೇ ಹೇಳುತ್ತಾ “ಏನ್ ಕೊಡ್ಲಿ ಸಾರ್” ಎಂದು ಕೇಳಿದ.  “ನಿನ್ನ ಪುರಾಣ ಕೇಳೋಕೆ ಟೈಮಿಲ್ಲ, ಹೇಳ್ದಷ್ಟು ಮಾಡೋದುಕಲಿ” ಎಂದು ಭಟ್ಟರ ನೋಟೀಸುದಾರರು ಹೊರಟು ಹೋಗಿದ್ದರು. ವ್ಯಾಪಾರದ ಈ ಹೊಸ ಸ್ಪರ್ಧಾತ್ಮಕತೆಯ ಬಗ್ಗೆ ಏನೂ ಮಾತನಾಡದಿದ್ದರಿಂದ, ತಾನಾಗಿಯೇ ಕೆದಕಿ ಕೇಳದೇ ಸಂದೇಶನೂ ತನ್ನಷ್ಟಕ್ಕಿದ್ದು ಮಾಮೂಲಾಗಿ ತಿಂಡಿ ಕಟ್ಟಿಸಿಕೊಂಡು ಹಿಂತಿರುಗುತ್ತಿದ್ದನು. ಅಂತಿಮ ವರ್ಷದಲ್ಲಿ ಪ್ರಾಜೆಕ್ಟ್ ಕೆಲಸಗಳ ಪ್ರಯುಕ್ತ ಕಾಲೇಜಿಗೆ ಲೇಟಾಗಿ ಹೋಗುತ್ತಿದ್ದಾಗ ವಾರದ ಕೆಲವು ದಿನಗಳು, ದಾರಿಯಲ್ಲಿ ರಾಮುವಿನ ಗಾಡಿಯ ಗೈರುಹಾಜರಿಯನ್ನು ಸಂದೇಶ ಗಮನಿಸಿದ್ದ. ಆನಂತರ ಶಾಶ್ವತವೆನಿಸುವಂತೆ, ರಾಮು  ಒಂದು ದಿನ ಇದ್ದಕ್ಕಿದ್ದ ಹಾಗೆ ಹೇಳದೇ ಕೇಳದೇ ಮಾಯವಾಗಿಬಿಟ್ಟಿದ್ದ. ಹಾಗಾಗಿ ತಿಂಡಿಗೆ ಅನಿವಾರ್ಯವೆನಿಸಿದಾಗ ಎಸ್ ಆರ್ ಬಿ ಯನ್ನೋ ಅಥವಾ ಕಾಲೇಜು ಕ್ಯಾಂಟೀನನ್ನೋ ಅವಲಂಬಿಸತೊಡಗಿದ. ಮುಖ ನೋಡುತ್ತಲೇ ತಿಂಡಿ ಪ್ಯಾಕ್ ಮಾಡದೇ,  ಕೌಂಟರ್ ಗೆ ಹೋಗಿ ಆರ್ಡರ್ ಮಾಡಿ ಹಣಕೊಟ್ಟು, ಮಾಣಿಗೆ ಟೋಕನ್ ತಲುಪಿಸುವಾಗ  ಬೆಟ್ಟದ ಹೂವಿನ ನಾಯಕನಂತಹ ಮಹತ್ವಾಕಾಂಕ್ಷಿ ರಾಮು ನೆನಪಾಗುತ್ತಿದ್ದ.        ಕಾಲೇಜು ಮುಗಿಸಿ ಕೆಲಸ ಪ್ರಾರಂಭಿಸಿದ್ದ ಸಂದೇಶನು ನಿತ್ಯ ಬಿಳಿಕೆರೆಯಿಂದ ಬನ್ನೇರುಘಟ್ಟ ರಸ್ತೆಗೆ ಪ್ರಯಾಣಿಸುವುದು ದೂರವೆನಿಸಿ, ಆಫೀಸಿನ ಒಂದು ಶಾಖೆ ಜಯನಗರದಲ್ಲೂ ಇದ್ದುದರಿಂದ ಎರಡೂ ಬ್ರಾಂಚುಗಳಿಗೆ ಸಮಾನ ದೂರವೆನಿಸುವಂತೆ ಪುಟ್ಟೇನಹಳ್ಳಿಯಲ್ಲಿ ಬಾಡಿಗೆ ಮನೆ ಹಿಡಿದಿದ್ದ. ಕಾಲೇಜಿಗೆ ಹೋಗುವಾಗಿನ ಸೆಕೆಂಡ್ ಹ್ಯಾಂಡ್ ಸ್ಪ್ಲೆಂಡರ್ ಬೈಕ್ ಬದಲಾಯಿಸಿ ಹೊಸ ಬುಲೆಟ್ಟ್ ಖರೀದಿಸಿದ್ದ. ಒಂದು ದಿನ ಸೌತ್ಎಂಡ್ ಸರ್ಕಲ್ಲಿನ ಟ್ರಾಫಿಕ್ ಲೈಟ್ ಕಾಯುತ್ತಾ ನಿಂತಿದ್ದಾಗ, ಅಚಾನಕ್ಕಾಗಿ ಅಪರಿಚಿತ ದನಿಯೊಂದು “ಸಂದೇಶಣ್ಣ” ಎಂದು ಕೂಗಿದಂತಾಗಿ ಸುತ್ತ ನೋಡುವಾಗ ಆಟೋ ಒಂದರಿಂದ ಮೆಲ್ಲನೆ ತಲೆ ಹೊರಗೆ ಬಂದಿದ್ದು ಕಂಡ. ದೃಷ್ಟಿಯಿಟ್ಟು ಗಮನಿಸಿ ಇಡ್ಲಿರಾಮು ಎಂದು ಗೊತ್ತುಮಾಡಿಕೊಂಡು ಅವನತ್ತ ಬರುವಂತೆ ಸೂಚಿಸಿ ಸಿಗ್ನಲ್ ನೋಡಿದ. ಅಷ್ಟರಲ್ಲಿ ಆಟೋ ಗೆ ಹಣಕೊಟ್ಟು ಇಳಿದುಬಂದ ರಾಮುವನ್ನು ಕೂರಿಸಿಕೊಂಡು ಮುಂದಿನ ರಸ್ತೆಯ ಕ್ಯಾಂಟೀನಿನತ್ತ ನಿಲ್ಲಿಸಿ ವಿಚಾರಿಸತೊಡಗಿದ-         “ಏನೋ ರಾಮು, ಧಿಡೀರನೆ ಮಾಯವೂ ಆಗ್ತೀಯ, ಮತ್ತೆ ಹೀಗೇ ಪ್ರತ್ಯಕ್ಷನೂ ಆಗ್ತೀಯಾ, ಹೇಗಿದ್ದೀಯಾ” ಎಂದು ವಿಚಾರಿಸುತ್ತಲೇ ತನ್ನ ಓದು ಮುಗಿಸಿ ಕೆಲಸ ಶುರುಮಾಡಿ ಹೊಸ ಏರಿಯಾದಲ್ಲಿರುವುದನ್ನೂ ಹೇಳಿದ. ಬಿಳಿಕೆರೆಯ ತಳ್ಳುವ ಗಾಡಿಗೆ ಒಂದು ದಿನ ಪೊಲೀಸ್ ಪೇದೆಯೊಬ್ಬರು ಬಂದು ಹೆದರಿಸಿ ಗಾಡಿ ಸೀಝ್ ಮಾಡ್ತೀವಿ ಅಂದಿದ್ದನ್ನೂ, ಅದಾಗಿ ಒಂದು ವಾರದಲ್ಲಿ ಸ್ಥಳೀಯ ದಾಂಡಿಗರಿಬ್ಬರು ಗಾಡಿಯ ಚಕ್ರವನ್ನು ಜಖಂಗೊಳಿಸಿದರೆಂದೂ ನಂತರ ಬಾಡಿಗೆಯ ತಳ್ಳುವ ಗಾಡಿಯೂ

ಕಥಾಯಾನ Read Post »

You cannot copy content of this page

Scroll to Top