ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಸ್ತುತ

ಮಹಾರಾಷ್ಟ್ರದ ಗಡಿ ತಗಾದೆ ಕೆ.ಶಿವು ಲಕ್ಕಣ್ಣವರ ಮತ್ತೆ ಭುಗಿಲೆದ್ದ ಬೆಳಗಾವಿ ಗಡಿ ವಿವಾದವೂ..! ‘ಮಹಾರಾಷ್ಟ್ರ’ ಗಡಿ ಕ್ಯಾತೆ ಕಥೆಯ ಪೂರ್ಣ ಚಿತ್ರಣವೂ..!! ಮಹಾರಾಷ್ಟ್ರಕ್ಕೆ ಏನೋ ಗತಿ ಕಾದಿದೆ. ಅದಕೇ ಅದು ಮೇಲಿಂದ ಮೇಲೆ ಗಡಿ ಕ್ಯಾತೆ ತೆಗೆಯುತ್ತಿದೆ. ಈ ಬಾರಿ ಸಮಗ್ರ ಕರ್ನಾಟಕ ಈ ಗಡಿ ಕ್ಯಾತೆಯ ವಿರುದ್ಧ ಮಹಾರಾಷ್ಟ್ರದ ನೀರು ಇಳಿಸಲು ಸಿದ್ಧವಾಗಿ ಈ ಗಡಿ ಕ್ಯಾತೆ ಹೋರಾಟದಲ್ಲಿ ದುಮುಕಿದೆ… ಮಹಾರಾಷ್ಟ್ರದ ಜತೆಗಿನ ಗಡಿ ವಿವಾದ ಸದಾ ಬೂದಿ ಮುಚ್ಚಿದ ಕೆಂಡದಂತೆ. ಸುಮ್ಮನಿರುವ ಕರ್ನಾಟಕವನ್ನು ಪದೇ ಪದೇ ಕೆಣಕುವುದು ಅದರ ಕಾಯಕವಾಗಿಬಿಟ್ಟಿದೆ. ವಿವಾದ ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಗಡಿ ವಿಚಾರವಾಗಿ ಲಘುವಾಗಿ ಮಾತನಾಡಿ ವಿವಾದ ಎಬ್ಬಿಸಿದ್ದಾರೆ… ಬೆಳಗಾವಿ, ನಿಪ್ಪಾಣಿ, ಕಾರವಾರ ಪ್ರದೇಶಗಳು ‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಪ್ರದೇಶವಾಗಿದೆ’ ಎಂಬ ಉದ್ಧಟತನದ ಹೇಳಿಕೆ ನೀಡಿದ್ದಾರೆ ಉದ್ದವ್ ಠಾಕ್ರೆ. ಬೆಳಗಾವಿ, ಕಾರವಾರ ಪಾಕಿಸ್ತಾನದಲ್ಲಿದೆಯೋ, ಬ್ರಹ್ಮದೇಶದಲ್ಲಿದೆಯೋ? ಅಥವಾ ಭಾರತದಲ್ಲಿದೆಯೋ? ಎಂದು ಉದ್ಧವ್ ಪ್ರಶ್ನೆ ಮಾಡಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ… ಬೆಳಗಾವಿ ಗಡೆ ತಂಟೆ ಭುಗಿಲೆದ್ದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವಾರು ಬಾರಿ ಗಡಿ ವಿವಾದ ಅತಿರೇಕಕ್ಕೇರಿದ ಇತಿಹಾಸವಿದೆ. ಈ ಕುರಿತು ಹಲವು ಸಮಿತಿಗಳು ರಚನೆಯಾಗಿದ್ದರೂ, ವಿವಾದಕ್ಕೆ ಪೂರ್ಣ ವಿರಾಮ ನೀಡಲಾಗಿಲ್ಲ. ಇಂದಿಗೂ ಈ ವಿವಾದ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಎರಡೂ ರಾಜ್ಯಗಳ ನಿರ್ಣಾಯಕ ಗಡಿ ಯುದ್ಧದ ಪೂರ್ಣ ಚಿತ್ರಣವೇ ಆಗಿದೆ… ಇಲ್ಲಿಂದಲೇ ಹುಟ್ಟಿಕೊಂಡಿದ್ದು ಗಡಿವಿವಾದ– ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕದ ಭಾಗಗಳು ಹರಿದು ಹಂಚಿಹೋಗಿದ್ದವು. ಸ್ವಾತಂತ್ರ ಬಂದು 9 ವರ್ಷಗಳ ನಂತರ 1956ರಲ್ಲಿ ಚದುರಿ ಹೋಗಿದ್ದ ಭಾಗಳೆಲ್ಲವನ್ನೂ ಏಕೀಕರಣಗೊಳಿಸಿ ಮೈಸೂರು ರಾಜ್ಯವನ್ನಾಗಿ ಮಾಡಲಾಯಿತು. (1973ರ ನವೆಂಬರ್‌ 1 ರಂದು ಕರ್ನಾಟಕ ಎಂದು ಪುನರ್‌ ನಾಮಕರಣ ಮಾಡಲಾಗಿದೆ) ನೆರೆಹೊರೆಯ ರಾಜ್ಯಗಳ ಆಳ್ವಿಕೆಯಲ್ಲಿದ್ದ ಕನ್ನಡ ಮಾತಾಡುವ ಪ್ರದೇಶಗಳನ್ನೆಲ್ಲಾ ಆಯಾ ಪ್ರದೇಶಗಳಿಂದ ಬಿಡುಗಡೆ ಮಾಡಿ ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ಬಾಂಬೆ ಪ್ರಾಂತ್ಯದಲ್ಲಿದ್ದ ಕೆಲ ಪ್ರದೇಶಗಳೂ ಕರ್ನಾಟಕಕ್ಕೆ ಸೇರಿದವು. ಆದರೆ ನೆರೆ ರಾಜ್ಯಗಳು ಇದಕ್ಕೆ ಸಿದ್ಧವಿರಲಿಲ್ಲ. ಆ ಕಾರಣದಿಂದಲೇ ನ್ಯಾಯವಾಗಿ ಕನ್ನಡ ನೆಲವಾಗಿದ್ದ ಹೊಸೂರು, ಕೃಷ್ಣಗಿರಿ ತಮಿಳುನಾಡಿನಲ್ಲಿಯೇ ಉಳಿದವು. ಅನಂತಪುರ, ರಾಮದುರ್ಗ, ಅದೋಣಿ, ಮಂತ್ರಾಲಯಗಳು ಆಂಧ್ರದಲ್ಲಿ ಉಳಿದವು. ಕಾಸರಗೋಡು ಕೇರಳದ ಪಾಲಾಯಿತು. ಅಕ್ಕಲಕೋಟೆ, ಜತ್ತ, ಸೊಲ್ಲಾಪುರಗಳು ಮಹಾರಾಷ್ಟ್ರದಲ್ಲೇ ಉಳಿದು ಹೋದವು. ಇದಷ್ಟೇ ಅಲ್ಲದೇ ಕರ್ನಾಟಕದ ಭಾಗವಾಗಿದ್ದ ಮತ್ತಷ್ಟು ಪ್ರದೇಶಗಳ ಮೇಲೆ ನೆರೆ ರಾಜ್ಯಗಳು ಹಕ್ಕು ಮಂಡಿಸತೊಡಗಿದವು. ಬೆಳಗಾವಿ ಜಿಲ್ಲೆ, ಬೀದರ್, ಕಾರವಾರ ಜಿಲ್ಲೆಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಕೂಗೆಬ್ಬಿಸಿತು. ಇಲ್ಲಿಂದ ಬೆಳಗಾವಿ ಗಡಿ ವಿವಾದ ಆರಂಭವಾಯಿತು… ಮಹಾರಾಷ್ಟ್ರ ಒತ್ತಾಯಕ್ಕೆ 4 ಸದಸ್ಯರ ಆಯೋಗ ರಚನೆ-– ಮಹಾರಾಷ್ಟ್ರ ಸರಕಾರದ ಒತ್ತಾಯಕ್ಕೆ ಮಣಿದ ಕೇಂದ್ರ ಸರಕಾರ 1960ರ ಜೂನ್ 5 ರಂದು ನಾಲ್ವರು ಸದಸ್ಯರನ್ನೊಳಗೊಂಡ ಆಯೋಗವನ್ನು ರಚಿಸಿತು. ಇದರಲ್ಲಿ ಇಬ್ಬರು ಸದಸ್ಯರನ್ನು ಕರ್ನಾಟಕದಿಂದ ಹಾಗೂ ಇನ್ನಿಬ್ಬರು ಸದಸ್ಯರನ್ನು ಮಹಾರಾಷ್ಟ್ರದಿಂದ ಆಯ್ಕೆ ಮಾಡಲಾಗಿತ್ತು. ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮಹಾಜನ್ ಹಾಗೂ ಇತರೆ ಪರಿಣಿತರ ತಂಡ ಗಡಿ ಭಾಗದ ಅಧ್ಯಯನ ನಡೆಸಿ ಕನ್ನಡ ಭಾಷಿಕರು ಹೆಚ್ಚಿರುವ ಆಧಾರದಲ್ಲಿ ಬೆಳಗಾವಿಯು ಕರ್ನಾಟಕದಲ್ಲೇ ಉಳಿಯಬೇಕೆಂಬ ತೀರ್ಪು ನೀಡಿತು… ಮಹಾಜನ್ ಸಮಿತಿ ರಚನೆ-– ನಾಲ್ಕು ಜನರ ಆಯೋಗ ನೀಡಿದ ತೀರ್ಪನ್ನು ಮಹಾರಾಷ್ಟ್ರ ಒಪ್ಪಲಿಲ್ಲ. ಗಡಿ ವಿವಾದಕ್ಕೆ ಸ್ವತಂತ್ರ ಸಮಿತಿ ರಚಿಸುವಂತೆ ಮಹಾರಾಷ್ಟ್ರದ ನಾಯಕರಾದ ಸೇನಾಪತಿ ಬಾಪಟ್ ಅವರು ಆಮರಣಾಂತ ಉಪವಾಸ ಸತ್ಯಾಗ್ರಹದ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1966 ಅಕ್ಟೋಬರ್‌ 25ರಂದು ಸುಪ್ರಿಂಕೋರ್ಟಿನ ಮುಖ್ಯನ್ಯಾಯಮೂರ್ತಿಗಳಾಗಿ ನಿವೃತ್ತರಾಗಿದ್ದ ಮೆಹರ್ ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದರು. ಮಹಾಜನ್ ಸಮಿತಿಯಲ್ಲಿ ಇಬ್ಬರು ಕನ್ನಡಿಗರು, ಇಬ್ಬರು ಮರಾಠಿಗರು ಇದ್ದು ಸಮಿತಿ ಸಮತೋಲನದಿಂದ ಕೂಡಿತ್ತು. ಈ ಸಮಿತಿಯವರು ಗಡಿಭಾಗದ ಎಲ್ಲ ಊರುಗಳನ್ನು ಭೇಟಿ ಮಾಡಿ ಅಲ್ಲಿನ ಸಂಘ ಸಂಸ್ಥೆಗಳ, ಜನಸಾಮಾನ್ಯರ ಅಭಿಪ್ರಾಯವನ್ನು ಸಂಗ್ರಹಿಸಿದರು. ಒಟ್ಟು 2240 ಮನವಿಗಳನ್ನು ಸ್ವೀಕರಿಸಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು… ಮಹಾಜನ್ ವರದಿ ಏನು?– ಮಹಾಜನ್‌ ಸಮಿತಿ ಸಲ್ಲಿಸಿ ವರದಿಯಲ್ಲಿಯೂ ಬೆಳಗಾವಿ ಕರ್ನಾಟಕ ರಾಜ್ಯದಲ್ಲೇ ಉಳಿಯಬೇಕು ಎಂದು ಶಿಫಾರಸು ಮಾಡಲಾಯಿತು. ಈ ಸಮಿತಿಯ ಪ್ರಮುಖ ಶೀಫಾರಸುಗಳೆಂದರೆ, 1) ಬೆಳಗಾವಿ ಕರ್ನಾಟಕದಲ್ಲೇ ಉಳಿಯಬೇಕು. 2) ಜತ್ತ, ಅಕ್ಕಲಕೋಟೆ, ಸೊಲ್ಲಾಪುರವೂ ಸೇರಿದಂತೆ ಒಟ್ಟು 247 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು. 3) ನಂದಗಡ, ನಿಪ್ಪಾಣಿ, ಖಾನಾಪುರ ಸೇರಿದಂತೆ 264 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು. 4) ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ವರದಿಯನ್ನು ನಿರಾಕರಿಸಿದ ಮಹಾರಾಷ್ಟ್ರ ಮಹಾಜನ್‌ ವರದಿಯನ್ನು ಕರ್ನಾಟಕ ಸ್ವೀಕರಿಸಿತಾದರೂ, 1951ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಟು ಮಹಾರಾಷ್ಟ್ರವು ವರದಿಯ ಶಿಫಾರಸ್ಸನ್ನು ತಿರಸ್ಕರಿಸಿತು. ಜತಗೆ ರಾಜ್ಯಗಳ ಮರುವಿಂಗಡಣಾ ಕಾಯಿದೆ– 1956ರನ್ನು ಶಿಫಾರಸುಗಳು ಉಲ್ಲಂಘಿಸಿವೆ ಎಂಬ ಕಾರಣ ನೀಡಿತು. ಬೆಳಗಾವಿಯಲ್ಲಿ ಶೇ.60ರಷ್ಟು ಜನ ಮರಾಠಿ ಭಾಷಿಕರಿದ್ದಾರೆ. ಹೀಗಾಗಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಕ್ಯಾತೆ ತೆಗೆಯಿತು. ಐವತ್ತು ವರ್ಷಗಳು ಕಳೆದರೂ ಇಂದಿಗೂ ಈ ವರದಿ ಜಾರಿಯಾಗಿಲ್ಲ. ಮಹಾಜನ್ ವರದಿ ಜಾರುಗಿ ಕರ್ನಾಟಕದ ಹೋರಾಟ ಇಂದಿಗೂ ಮುಂದುವರಿದೇ ಇದೆ… 1980ರ ದಶಕದಲ್ಲಿ ಮಹಾರಾಷ್ಟ್ರವಾದಿ ಹೋರಾಟ-– ಧರ್, ನೆಹರು, ಫಜಲ್ ಅಲಿ ಆಯೋಗಗಳು ಸಹ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಹೇಳಿದ್ದು ಎಂಇಎಸ್ ಮಾತ್ರ ಯಾವುದೇ ಆಯೋಗದ ವರದಿಗಳನ್ನು ಪುರಸ್ಕರಿಸದೇ ತನ್ನ ವಾದವನ್ನು ಮುನ್ನಡೆಸುತ್ತ ಬಂದಿದೆ. 80ರ ದಶಕದಲ್ಲಿ ಮಹಾರಾಷ್ಟ್ರವಾದಿ ಹೋರಾಟದ ಒಂದು ಶಕ್ತಿಯಾಗಿ ಬೆಳೆದ ಎಂಇಎಸ್ ಹತ್ತು ಹಲವು ಸ್ವರೂಪಗಳ ಹೋರಾಟ ನಡೆಸುತ್ತ ಬಂತು. ಈ ನಡುವೆ ಎಂಇಎಸ್‌ನ ಹೋರಾಟಗಳು ಹಿಂಸಾಚಾರಕ್ಕೆ ತಿರುಗಿ ಲಾಠಿ ಪ್ರಹಾರ, ಗುಂಡೇಟು, ಜೀವಬಲಿಯವರೆಗೂ ನಡೆದು ಅನಪೇಕ್ಷಿತ ಇತಿಹಾಸದ ಘಟನೆಗಳ ಸೃಷ್ಟಿಗೆ ಕಾರಣವಾಯಿತು… ವಿವಾದಿತ ಮಹಾರಾಷ್ಟ್ರ ಠರಾವು-– 1983ರಲ್ಲಿ ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆ ನಂತರ ಎಂಇಎಸ್ ಚುನಾಯಿತ ಪ್ರತಿನಿಧಿಗಳು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಪ್ರಯತ್ನಕ್ಕೆ ಕೈ ಹಾಕಿದರು. 1986ರ ವೇಳೆ ಖಾನಾಪುರ ಸೇರಿದಂತೆ ಕೆಲವಡೆ ಎಂಇಎಸ್ ಪ್ರಾಬಲ್ಯವುಳ್ಳ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ವಿವಾದಿತ ಠರಾವುವನ್ನು ಅಂಗೀಕರಿಸಲಾಯಿತು. ಎಂಇಎಸ್ ಸದಸ್ಯರ ನಿಲುವನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಲು ಆರಂಭಿಸಿದವು. ಈ ಹೋರಾಟದ ಕಾವು 1990, 1996ರ ಅವಧಿಯಲ್ಲಿ ಉಗ್ರ ರೂಪ ಪಡೆಯಿತು. ಗಡಿ ವಿಚಾರವಾಗಿ ಹೊತ್ತಿಕೊಂಡ ಈ ಕಿಡಿ 9 ಜನರನ್ನು ಬಲಿ ತೆಗೆದುಕೊಂಡಿತು… ಕರ್ನಾಟಕದ ಹೋರಾಟ ಆರಂಭ-– ನಂತರದ ದಿನಗಳಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕನ್ನಡ ಚಳವಳಿಗಾರರ ಸಂಘ ಅಸ್ತಿತ್ವಕ್ಕೆ ಬಂದಿತು. ಬೆಳಗಾವಿ ನಗರದ ಎಲ್ಲ ಸರಕಾರಿ ಕಚೇರಿ ಹಾಗೂ ಅಂಗಡಿಗಳ ಮೇಲೆ ಮರಾಠಿ ಹೆಸರು ಬದಲು ಕನ್ನಡ ಹೆಸರನ್ನು ಬರೆಸಬೇಕು ಎಂದು ಈ ಸಂಘ ಸರಕಾರವನ್ನು ಆಗ್ರಹಿಸಿತು. ಅಲ್ಲದೇ ಅಂದಿನ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರಿಗೂ ಮನವಿ ಸಲ್ಲಿಸಲಾಯಿತು. ಇದಕ್ಕೆ ರಾಜ್ಯ ಸರಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿತು. ಇದಕ್ಕೆ ಮರಾಠಿ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವು. ಹೀಗೆ ಗಡಿ ವಿಚಾರವಾಗಿ ಒಂದಲ್ಲಾ ಒಂದು ಘಟನೆಗೆ ಬೆಳಗಾವಿ ಸಾಕ್ಷಿಯಾಯಿತು. ನಂತರ ಈ ಪ್ರಕರಣ 2004ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು… ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಮಹಾರಾಷ್ಟ್ರ– ಬೆಳಗಾವಿ ಜತೆಗೆ ಅಚ್ಚ ಕನ್ನಡ ಮಾತಾಡುವ 814 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಹಸ್ತಾಂತರಿಸಬೇಕೆಂದು 2004ರಲ್ಲಿ ಮಹಾರಾಷ್ಟ್ರ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅಂದು ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು, ಎಚ್.ಬಿ ದಾತಾರ್ ಅವರ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರಚಿಸಿದ್ದರು. ಗಡಿ ವಿವಾದ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗಲೆಲ್ಲಾ ದಾತಾರ್ ಅವರ ಸಮಿತಿ ಸಲಹೆ ನೀಡುತ್ತಿತ್ತು… 2009ರಲ್ಲಿ ದಾತಾರ್ ನಿಧನರಾದಾಗ ಅಂದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿದ್ದ ನ್ಯಾ. ವಿ.ಎಸ್. ಮಳೀಮಠ ಅವರಿಗೆ ಸಲಹಾ ಸಮಿತಿಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು. ಎರಡು ತಿಂಗಳ ಬಳಿಕ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದ ರಾಮಕೃಷ್ಣ ಅವರನ್ನು ಸಲಹಾ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಸರಕಾರ ನೇಮಿಸಿತ್ತು… ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾ. ಲೋದಾ-– ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿದ್ದ ಆರ್.ಎಂ. ಲೋಧಾ ಅವರು ನಿವೃತ್ತರಾಗುವ ಕೆಲವೇ ದಿನಗಳ ಮೊದಲು, ಮಹಾರಾಷ್ಟ್ರ-ಕರ್ನಾಟಕ ಗಡಿ ವ್ಯಾಜ್ಯದ ವಿಷಯದಲ್ಲಿ ಉಭಯ ರಾಜ್ಯಗಳ ಅಹವಾಲು ಕೇಳಲು, ಎರಡು ರಾಜ್ಯಗಳಲ್ಲಿ ಹಂಚಿಹೋಗಿರುವ ಕನ್ನಡ-ಮರಾಠಿ ಭಾಷಿಕ ಪ್ರದೇಶದ ಜನರ ಅಭಿಪ್ರಾಯ ಪಡೆಯಲು, ಎರಡೂ ಸರಕಾರಗಳ ಬಳಿ ತಮ್ಮ ಪ್ರದೇಶವೆಂದು ಪ್ರತಿಪಾದಿಸಲು ಇರುವ ದಾಖಲೆ, ಸಾಕ್ಷ್ಯಗಳ ಸಂಗ್ರಹಿಸಲು ನ್ಯಾ. ಮನೋಹರ್ ಸರೀನ್ ಅವರ ನೇತೃತ್ವದಲ್ಲಿ ಆಯೋಗ ರಚಿಸಿದ್ದರು. ಆಯೋಗವು ಎರಡೂ ರಾಜ್ಯಗಳಿಗೆ ಭೇಟಿ ನೀಡಿತ್ತು… ಸಾಕ್ಷ್ಯ ಸಂಗ್ರಹಿಸುವ ಆಯೋಗ ರಚಿಸಲು ಸಾಂವಿಧಾನಿಕವಾಗಿ ಅವಕಾಶವಿಲ್ಲ, ಆಯೋಗದ ರಚನೆಯೇ ಸಮಂಜಸವಲ್ಲ ಎಂದು ಪ್ರತಿಪಾದಿಸಿದ ಕರ್ನಾಟಕ ಸರಕಾರ ಸುಪ್ರೀಂಕೋರ್ಟ್‌ನ ಮುಂದೆ ಆಕ್ಷೇಪಣೆ ಸಲ್ಲಿಸಿತು. ಅಲ್ಲದೇ ಆಯೋಗದ ಮುಂದೆ ಅಹವಾಲು ಸಲ್ಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಒಂದು ವೇಳೆ ಆಯೋಗವು, ಸಂಸತ್ತಿನಲ್ಲಿಯೇ ಇದು ತೀರ್ಮಾನವಾಗಲಿ ಎಂದು ಹೇಳಿದಲ್ಲಿ ಕರ್ನಾಟಕ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆ ಕಾರಣದಿಂದಾಗಿ ಆಯೋಗದ ಮುಂದೆ ಸಾಕ್ಷ್ಯ ನುಡಿಯುವುದಿಲ್ಲ ಎಂದು ಕರ್ನಾಟಕ ವಾದಿಸಿತ್ತು… ಈವರೆಗೆ 4 ಪ್ರತ್ಯೇಕ ಅಧ್ಯಯನ– ಈವರೆಗೆ ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ 4 ಪ್ರತ್ಯೇಕ ಅಧ್ಯಯನಗಳು ನಡೆದಿವೆ. 1) ಗಡಿನಾಡು ವರದಿ-2000 (ಡಿ.ಎಂ.ನಂಜುಂಡಪ್ಪ), 2) ಗಡಿನಾಡು ಮಧ್ಯಂತರ ವರದಿ- 2000(ವಾಟಾಳ್ ನಾಗರಾಜ್), 3) ಗಡಿನಾಡು ಅಧ್ಯಯನ ವರದಿ-2002(ಪ್ರೊ. ಬರಗೂರು ರಾಮಚಂದ್ರಪ್ಪ), 4) ಗಡಿಕನ್ನಡಿಗರ ಕಥೆ/ವ್ಯಥೆ-2006 (‘ಮುಖ್ಯಮಂತ್ರಿ’ ಚಂದ್ರು). ಹೀಗೆ ನಾಲ್ಕು ಪ್ರತ್ಯೇಕ ಅಧ್ಯಯನ ನಡೆದವು… ಮಳೀಮಠ ಸಮಿತಿ– ಮಹಾರಾಷ್ಟ್ರದ ಜತೆಗಿನ ಗಡಿ ವಿವಾದ ಸದಾ ಬೂದಿ ಮುಚ್ಚಿದ ಕೆಂಡಂದಂತೆಯೇ ಇರುತ್ತ ಬಂದಿತು. ಸುಮ್ಮನಿರುವ ಕರ್ನಾಟಕವನ್ನು ಪದೇ ಪದೇ ಕೆಣಕುವುದು ಮಹಾರಾಷ್ಟ್ರದ ಕಾಯಕ. ಈ ಬಾರಿ ಈ ವಿವಾದ ಹಿಡಿದು ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಮಹಾರಾಷ್ಟ್ರವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತಾಧಿಕಾರ ಸಮಿತಿ ರಚಿಸಿದೆ, ಇದರ ಗಂಭೀರತೆ ಅರಿತ ಕರ್ನಾಟಕವೂ ಈಗ ನಿವೃತ್ತ ನ್ಯಾಯಮೂರ್ತಿ ವಿ.ಎಸ್.ಮಳಿಮಠ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದೆ. ಇದರೊಂದಿಗೆ ಎರಡೂ ರಾಜ್ಯಗಳು ನಿರ್ಣಾಯಕ ಗಡಿ ಯುದ್ಧಕ್ಕೆ ಸಿದ್ಧತೆ ನಡೆಸಿವೆ. ಇದೀಗ ಮತ್ತೇ ಗಡಿ ವಿವಾದ ಭುಗಿಲೆದ್ದಿದೆ ಬುಗಿಲೆದ್ದಿದೆ..! ಮಹಾರಾಷ್ಟ್ರದ ಉದ್ಧವ ಠಾಕ್ರೆ ಮತ್ತೇ ಕರ್ನಾಟಕವನ್ನು ಕೆಣಕಿದ್ದಾರೆ ಕನ್ನಡ ನಾಡಿನ ಹೋರಾಟಗಾರರೆಲ್ಲ ಒಂದಾಗಿ ತೀವ್ರ ಹೋರಾಟ ಮಾಡುತ್ತಿದ್ದಾರೆ. ಈ ಕ್ಯಾತೆ ಬುಗಿಲೆದ್ದಿದೆ. ಈ ಕನ್ನಡ ಪರ ಹೋರಾಟಗಾರರು ಈ ಬಾರಿ ಮಹಾರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಬೇಕಾಗಿರುವುದು ಇಂದಿನ ತುರ್ತಾಗಿದೆ..! ====================

ಪ್ರಸ್ತುತ Read Post »

ಇತರೆ

ಕುವೆಂಪು ಜನ್ಮದಿನ

“ವಿಶ್ವ ಮಾನವ” ಬರಹಗಾರ ಕುವೆಂಪು..! ಕೆ.ಶಿವು ಲಕ್ಕಣ್ಣವರ ಇಂದು ಡಿಸೆಂಬರ್ ೨೯. ಕುವೆಂಪು ಹುಟ್ಟಿದ ದಿನ. ಆ ವಿಶ್ವ ಮಾನವ ನೆನಪಿನಲ್ಲಿ ಈ ಬರಹ ಸ್ಮರಣೆ… ಮಲೆನಾಡಿನ ಹಿಂದುಳಿದ ವರ್ಗದಿಂದ ಹುಟ್ಟಿ ಬಂದ ಕುವೆಂಪು ಅವರು ತಾವೇ ಹೇಳಿಕೊಂಡಂತೆ ಮಲೆನಾಡಿನ ಕವಿ. ಕುವೆಂಪು ಅವರು ಈ ದೇಶದ ಸಮಕಾಲೀನ ಸೃಜನಶೀಲತೆಯ ಉತ್ಕರ್ಷದ ನಿಜವಾದ ಪ್ರತಿನಿಧಿಯಾಗಿದ್ದಾರೆ. ಅವರ ಸಾಹಿತ್ಯದ ಹರಹು, ವೈವಿದ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ “ಪರ್ವತಾರಣ್ಯ ಪ್ರಪಂಚ”ದಂತೆ ಬೆರಗು ಹುಟ್ಟಿಸುತ್ತದೆ. ಅವರ ಮಹಾಕಾವ್ಯ , ಕಾದಂಬರಿ, ನಾಟಕ, ಕವಿತೆ ಈ ಅರಣ್ಯಾನುಭವಗಳೇ ಮೂಲದ್ರವ್ಯದಂತೆ ಸರ್ವವ್ಯಾಪಿಯಾಗಿದೆ. ಅವರ ಬಹುತೇಕ ಎಲ್ಲ ಪಾತ್ರಗಳು ಈ ಅರಣ್ಯ ಸಂಸ್ಕೃತಿಯ ಪ್ರತೀಕಗಳೇ… ಕುವೆಂಪು ಅವರಲ್ಲಿ ಪ್ರಕಟವಾಗುವ ಅದಮ್ಯವಾದ ನಿಸರ್ಗ ಪ್ರೀತಿ ಮೂಲತಃ ಜೀವನಪ್ರೀತಿಯ ವಿಸ್ತರಣೆ. ಈ ನಿಸರ್ಗದ ಕುರಿತ ಉತ್ಕಟವಾದ ಹಂಬಲ ಕೇವಲ ಸೌಂದರ್ಯನಿಷ್ಠವಾದುದು ಮಾತ್ರವಲ್ಲ, ಅದನ್ನು ಮೀರಿದ ಆಧ್ಯಾತ್ಮಿಕ ಅನ್ವೇಷಣೆಯ ಪರಿಣಾಮ ಕೂಡ ಆಗಿದೆ. ಮಲೆನಾಡಿನ ನಿಸರ್ಗದ ಚೆಲುವಿನ ಜೊತೆಗೆ ಅದರ ಒಡಲಿನ ಸಾಮಾಜಿಕ ಬದುಕನ್ನು, ಅದರ ಸಾಮಾಜಿಕ ಸ್ಥಿತ್ಯಂತರಗಳನ್ನು ದಾಖಲಿಸುತ್ತ ಬಂದಿದ್ದಾರೆ ಕುವೆಂಪುರವರು… ಈ ಅರಣ್ಯ ಕೇಂದ್ರಿತ ಸಾಮಾಜಿಕ ಬದುಕಿನ ಮೂಲಕ ಇಡೀ ಭಾರತೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನದ ಪಲ್ಲಟಗಳೂ, ತಲ್ಲಣಗಳೂ ಅವರ ಗ್ರಹಣ ಶಕ್ತಿಯಿಂದ ವ್ಯಕ್ತವಾಗಿದೆ. ಅವರ ಸೃಜನಶೀಲ ಪ್ರತಿಭೆ ಪೂರ್ವ ಪಶ್ಚಿಮಗಳ ಚಿಂತನಗಳಿಂದ ಶ್ರೀಮಂತವಾಗಿದೆ. ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಗೌರವ ಸ್ಥಾನವನ್ನು ತಂದುಕೊಟ್ಟಿದೆ. ರಸಋಷಿಯ ಸಾಹಿತ್ಯವೆಲ್ಲವೂ ಒಂದರ್ಥದಲ್ಲಿ ಸ್ವಾತಂತ್ರ್ಯ ಪೂರ್ವದ ಆಶೋತ್ತರಗಳ ಅಭಿವ್ಯಕ್ತಿಯಾಗಿ ಮತ್ತು ಸ್ವಾತಂತ್ರ್ಯ ಭಾರತದ ವಾಸ್ತವವನ್ನು ಕುರಿತ ವಿಮರ್ಶೆಯಾಗಿ ತೋರುತ್ತದೆ. ಹಾಗೆಯೇ ಸಾಹಿತ್ಯ ನಿರ್ಮಿತಿಯ ನೆಲೆಯಲ್ಲಿ ಈ ದೇಶದ ಪರಂಪರೆಗೆ ಅವರು ತೋರಿದ ಸೃಜನಾತ್ಮಕ ಪ್ರತಿಕ್ರಿಯೆಗಳು ಮತ್ತು ಜಾಗತಿಕ ಪ್ರಜ್ಞೆಯನ್ನು ಅವರನ್ನು ಅರಗಿಸಿಕೊಂಡ ಕ್ರಮಗಳು ಹಾಗೂ ಯುಗ ಪರಿವರ್ತನೆಯ ಸೂಕ್ಷ್ಮತೆಗಳಿಗೆ ಸ್ಪಂದಿಸುತ್ತ ಅವುಗಳನ್ನು ಗುರುತಿಸಿ ತಮ್ಮ ಬರಹದ ಮೂಲಕ ಅದಕ್ಕೆ ಹೊಂದುವಂತೆ ಜನಮನವನ್ನು ಸಜ್ಜುಗೊಳಿಸಿದ ಪ್ರಯತ್ನಗಳು ಕುವೆಂಪು ಅವರನ್ನು ಈ ಯುಗಮಾನದ ಮಹತ್ವದ ಲೇಖಕರನ್ನಾಗಿ ಮಾಡಿವೆ… ಆಧ್ಯಾತ್ಮ, ವ್ಯೆಚಾರಿಕತೆ, ಗಾಢವಾದ ನಿಸರ್ಗ ಪ್ರೀತಿಗಳಲ್ಲಿ ಬೇರೂರಿರುವ ಅವರ ಸಾಹಿತ್ಯ ನಮ್ಮ ಪರಂಪರೆಯನ್ನು, ಸಾಮಾನ್ಯ ಜನರ ಬದುಕನ್ನು ನಿರ್ದೇಶಿಸಿದಂತೆಯೇ ಶೋಷಣೆಗೂ ಒಳಗು ಮಾಡಿದ ಪರಂಪರೆಯನ್ನು ತೀಕ್ಷ್ಣ ಹಾಗು ಚಿಕಿತ್ಸಕ ದೃಷ್ಠಿಯಿಂದ ಕಂಡಿದೆ. ಅಲ್ಲದೆ, ಸರ್ವೋದಯ, ಸಮನ್ವಯ ಮತ್ತು ಪೂರ್ಣ ದೃಷ್ಟಿಯ ಬೆಳಕಿನಲ್ಲಿ ಮನುಷ್ಯನ ವ್ಯಕ್ತಿತ್ವದ ಮುಕ್ತ ಬೆಳವಣಿಗೆಯ ಕಾಳಜಿಯನ್ನೂ ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ. ಕುವೆಂಪು ಅವರ ಚಿಂತನೆ, ಅವರ ಕೊನೆಯ ವರ್ಷದಲ್ಲಿ, ದ್ವೇಷ, ಭಾಷೆ, ಜಾತಿ, ಮತ ಸಿದ್ಧಾಂತಗಳ ಹಾಗೂ ತಮಗೆ ಅತ್ಯಂತ ಪ್ರಿಯವಾದ ಸಾಹಿತ್ಯದ ಮೇರಯನ್ನು ದಾಟಿತ್ತು. ವಿಶ್ವದೃಷ್ಟಿಯನ್ನು ಹೊಂದಿತ್ತು. ಅದರ ಫಲವೇ ವಿಶ್ವಮಾನವ ಸಂದೇಶ, ಇದರ ಗೌರವಾರ್ಥವಾಗಿ ಕುವೆಂಪುರವರಿಗೆ ‘ವಿಶ್ವಮಾನವ’ ಎಂಬ ಬಿರುದಿದ್ದು ಪ್ರಖರ ಬೆಳಕಿನಷ್ಟೇ ಸತ್ಯ… ಕುವೆಂಪು ಅವರ ಕೃತಿಗಳು– ಶ್ರೀ ರಾಮಾಯಣದರ್ಶನಂ-ಮಹಾಕಾವ್ಯ. (ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ) ಕಾನೂರು ಹೆಗ್ಗಡಿತಿ (ಕಾದಂಬರಿ) ಮಲೆಗಳಲ್ಲಿ ಮದುಮಗಳು (ಕಾದಂಬರಿ) ನೆನಪಿನ ದೋಣಿಯಲ್ಲಿ (ಆತ್ಮಚರಿತ್ರೆ) ಕವನ ಸಂಗ್ರಹಗಳು. ನಾಟಕಗಳು. ಕಾವ್ಯ ಮೀಮಾಂಸೆ ಹಾಗೂ ವಿಮರ್ಶಾ ಕೃತಿಗಳು. ವೈಚಾರಿಕ ಲೇಖನಗಳು. ಮಲೆನಾಡಿನ ಚಿತ್ರಗಳು (ಲಲಿತ ಪ್ರಬಂಧಗಳು) ಕಥಾಸಂಕಲನಗಳು. ಜೀವನ ಚರಿತ್ರೆಗಳು. ಕುವೆಂಪುರವರಿಗೆ ಸಂದ ಗೌರವ ಪ್ರಶಸ್ತಿಗಳು ಮಾನವ ಲೆಕ್ಕಕ್ಕೆ ಸಿಗದಷ್ಟು… 1956ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕವಾದರು ಅವರು. 1957ರಲ್ಲಿ ಧಾರವಾಡದಲ್ಲಿ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯ್ಕಕ್ಷ ಪದವಿಯನ್ನು ಅಲಂಕರಿಸಿದರು. 1964ರಲ್ಲಿ ರಾಜ್ಯ ಸರ್ಕಾರದಿಂದ ರಾಷ್ಟ್ರ ಕವಿ ಬಿರುದಿನ ಗೌರವವೂ ಅವರನ್ನು ಹುಡುಕಿಕೊಂಡು ಬಂದಿತು. 1968ರಲ್ಲಿ ಶ್ರೀ ರಾಮಾಯಣದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿವು ಲಭಿಸಿದ್ದು ಸಹಜವಾಗೇ ಇತ್ತು. 1968ರಲ್ಲಿ ರಾಷ್ಟ್ರಪತಿಗಳಿಂದ ಪದ್ಮವಿಭೂಷಣ ಪ್ರಶಸ್ತಿ ಪ್ರದಾನವಾಗಿದ್ದು, ಆ ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿತು. 1988ರಲ್ಲಿ ಕರ್ನಾಟಕ ಸರ್ಕಾರದ ಪ್ರಥಮ ಪಂಪ ಪ್ರಶಸ್ತಿ ಪ್ರದಾನ ಮಾಡಿದ್ದು ಸಹಜವಾಗಿತ್ತು. 1992ರಲ್ಲಿ ಕರ್ನಾಟಕ ಸರ್ಕಾರದ ಪ್ರಥಮ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನವಾಗಿದ್ದು ವಿಶ್ವಮಾನವನ ಸ್ಮರಣೆಯಾಗಿತ್ತು. 1956 ರಿಂದ 95- ೮ ಬೇರೆ-ಬೇರೆ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಬಂದಿದ್ದು ಆ ಡಾಕ್ಟರೇಟ್ ಪ್ರಶಸ್ತಿಗಳ ಘನತೆಯನ್ನು ಎತ್ತಿ ಹಿಡಿದವು. ಕವಿ ಮನೆ– ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಹುಟ್ಟಿ ಬೆಳದದ್ದು ಶಿವಮೊಗ್ಗ ಜಿಲ್ಲೆಯ ತೀಥಹಳ್ಳಿ ತಾಲುಕಿನ ಕುಪ್ಪಳ್ಳಿ ಎಂಬ ಗ್ರಾಮದಲ್ಲಿ. ರಾಷ್ಟ್ರಕವಿ ಹುಟ್ಟಿ ಬೆಳದದ್ದು ಕುಪ್ಪಳ್ಳಿ ಮನೆಯಲ್ಲಿ , ಅದು ಈಗ “ಕವಿ ಮನೆ “ಎಂದೇ ಪ್ರಸಿದ್ದವಾಗಿದೆ. ಕ್ರಿ.ಸ ೨೦೦೧ರಲ್ಲಿ ಕವಿ ಮನೆಯನ್ನು ಪುನರ್ ನಿರ್ಮಿಸಿ ಪ್ರತಿಷ್ಟಾಪಿಸಲಾಯಿತು. ೧೫೦ ವರ್ಷಗಳಿಂದ ಕುವೆಂಪುರವರ ಅಜ್ಜ, ಮುತ್ತಜ್ಜಂದಿರು ಬಾಳಿ ಬದುಕಿದ ಮನೆ,ಇದು ಮಲೆನಾಡಿನ ಹಸಿರಲ್ಲಿ ಕಂಗೊಳಿಸುತ್ತ ಇಂದು ಕೂಡ ಪ್ರವಾಸಿಗರ ಕಣ್ಣು ಸೆಳೆಯುತ್ತಿದೆ… “ಕಾಡು ಮತ್ತು ಕೊಡತಲಿರುವ ಸೊಬಗವೀಡು ನನ್ನ ಮನೆ” -ಕುವೆಂಪು.. ಇಂತಹ ೧೫೦ ವರ್ಷಗಳ ಹಳೆಯ ಮನೆಯನ್ನು ಈಗ ನವೀಕರಿಸಲಾಗಿದೆ. ಎರಡು ಮಹಡಿಗಳು, ಮದ್ಯ ಒಳ ಅಂಗಳ ಇರುವ ಈ ಮನೆ, ಆ ಕಾಲದ ಮಲೆನಾಡಿನ ಜಮೀನುದರರ ಮನೆಯ ಮಾದರಿಯಾಗಿದೆ. ಭೀಮ ಗಾತ್ರದ ಮುಂಡಿಗೆಗಳು ಕೆತ್ತನೆ ಕೆಲಸದಿಂದ ಕೂಡಿದ್ದು, ಮಲೆನಾಡಿನ ಪ್ರಾಚೀನ ಕಾಷ್ಠ ಶಿಲ್ಪ ವೈಭವವನ್ನು ನೆನಪಿಸುವಂತಿದೆ. ಕುವೆಂಪು ಅವರು ಕುಪ್ಪಳ್ಳಿಯಲ್ಲಿದ್ದಾಗ ಬಳಸುತ್ತಿದ್ದ ಅಧ್ಯಯನ ಕೊಠಡಿ, ಅವರು ಸೂರ್ಯೋದವನ್ನು ವೀಕ್ಷಿಸುತ್ತಿದ್ದ ಪೂರ್ವ ದಿಕ್ಕಿಗೆ ತೆರೆದುಕೊಂದಿರುವ ಮಹಡಿ, ‘ಮನೆಯ ಶಾಲೆ’ ನೆಡುಸುತ್ತಿದ್ದ ಸ್ಥಳ, ‘ಅಜ್ಜಯ್ಯನ ಅಭ್ಯಂಜನದ’ ಬಚ್ಚಲು ಮನೆ, ಕೊಳ,ಮನೆಯ ಸಮೀಪದ ಕೆರೆ ಇವು ಸಂದರ್ಶಕರನ್ನು ಭಾವ ಪರವಶವನ್ನಾಗಿಸುತ್ತವೆ. ಕುವೆಂಪು ಅವರ ವಿವಾಹ ನಡೆದ ಮರದ ಮಂಟಪ, ಮೈಸೂರಿನ ಮನೆಯಲ್ಲಿ ಕುವೆಂಪುರವರು ಬಳಸುತ್ತಿದ್ದ ದಿನನಿತ್ಯದ ಬಳುಸುತ್ತಿದ್ದ ವಸ್ತುಗಳು ಮತ್ತು ಅವರಿಗೆ ಬಂದ ಪ್ರಶಸ್ತಿಗಳನ್ನು ಮಹಡಿಯಲ್ಲಿ ಪ್ರದರ್ಶಿಸಲಾಗಿದೆ. ಅವರ ವಸ್ತುಗಳ ಮೊದಲ ಆವೃತ್ತಿಗಳೂ, ಕೆಲವು ಹಸ್ತ ಪ್ರತಿಗಳೂ ಇಲ್ಲಿವೆ. ಕೆಳ ಅಂತಸ್ತಿನ ಹಿಂಬದಿಯ ಹಜಾರದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಸಂಗ್ರಹಿಸಿರುವ ಕುವೆಂಪು ಅವರ ಚಿಕ್ಕವಯಸ್ಸಿನ ಫೋಟೋಗಳು, ಅವರ ಮಕ್ಕಳು, ಮೊಮ್ಮಕ್ಕಳು, ಬಂದುಗಳ ಛಾಯಚಿತ್ರಗಳು, ಕವಿಯ ಬದುಕಿನ ಕೆಲವು ಅವಿಸ್ಮರಣೀಯ ಘಳಿಗೆಗಳ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಕುವೆಂಪು ಅವರ ಕಾಲದಲ್ಲಿ ಮಲೆನಾಡಿನ ಮನೆಗಳಲ್ಲಿ ಬಳಸುತ್ತಿದ್ದ ಗೃಹ ಉಪಯೋಗಿ ವಸ್ತುಗಳನ್ನು, ವ್ಯವಸಾಯದ ಸಲಕರಣೆಗಳನ್ನು ಸಹಾ ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ… ಬಳಸಿದ ಕೆಲವು ವಸ್ತುಗಳು– ಕುವೆಂಪು ಅವರು ಬಳಸುತ್ತಿದ್ದ ಎಲ್ಲಾ ದಿನಚರಿ ವಸ್ತುಗಳನ್ನು ಒಂದು ಮರದ ಶೋಕೇಸಿನಲ್ಲಿ ಇರಿಸಲಾಗಿದೆ. ಇದರಲ್ಲಿ ಕುವೆಂಪು ಅವರು ಉಪಯೋಗಿಸುತಿದ್ದ ಪಂಚೆ, ಚಪ್ಪಲಿ, ಬಿಳಿಯ ನಿಲುವಂಗಿ, ಶಾಲು, ಲೋಟ, ಕೊಡೆ, ಕೊಡೆಯಲ್ಲಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ ಕೊಡೆ. ಆ ಕೊಡೆಯನ್ನು ಊರುಗೋಲಾಗಿ ಕೂಡ ಬಳಸುತಿದ್ದರು. ಜರಿಯ ರುಮಾಲು, ಕೈವಸ್ತ್ರವನ್ನು ಕಾಣಬಹುದು. ಆ ಶೋಕೇಸಿನ ಮೇಲ್ಬಾಗದಲ್ಲಿ ರಸಕವಿಯ ಪುತ್ತಳಿಕೆ, ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆಯುವಾಗ ಧರಿಸಿದ ವಸ್ತ್ರಗಳನ್ನು ಸಂಗ್ರಹಿಸಿ ಇಡಲಾಗಿದೆ. ಈ ಶೋಕೇಸಿನಲ್ಲಿ ಕವಿಯ ಕೂದಲು ಕೂಡ ಇರುವುದು ವಿಶೇಷವಾಗಿದೆ… ಸ್ಮರಣಿಕೆಗಳು ಮತ್ತು ಪ್ರಶಸ್ತಿಗಳು– ಈ ಶೋಕೇಸಿನಲ್ಲಿ ವಿಶ್ವಮಾನವನಿಗೆ ಸಂದ ಪ್ರಶಸ್ತಿಗಳು ಹಾಗೂ ನೆನಪಿನ ಕಾಣಿಕೆಗಳನ್ನು ಪ್ರದರ್ಶಿಸಲಾಗಿದೆ. ಇದು ಕುವೆಂಪುರವರ ಜೀವನಮಾನ ಸಾಧನೆ, ಸಾಹಿತ್ಯ ಕೃಷಿಯಲ್ಲಿ ಸಂದ ಗೌರವಗಳ ಪ್ರತೀಕವಾಗಿದೆ. ಇಲ್ಲಿ ಹಲವು ನೆನಪಿನ ಕಾಣಿಕೆಗಳು ಕರ್ನಾಟಕದ ಉಚ್ಚ ಪ್ರಶಸ್ತಿ ಕರ್ನಾಟಕ ರತ್ನವನ್ನು ಕಾಣಬಹುದು. ಇದು ನೋಡುಗರ ಬಹು ಮುಖ್ಯ ಕೇಂದ್ರ ಬಿಂದು ಎಂದರೆ ತಪ್ಪಾಗಲಾರದು… ಗಲ್ಲಾಪೆಟ್ಟಿಗೆ– ಇದನ್ನು ಓದಲು, ಬರೆಯಲು, ಹಾಗು ಲೆಕ್ಕ ಪತ್ರಗಳನ್ನು ಇಡಲು ಉಪಯೋಗಿಸಲಾಗುತ್ತದೆ. ಇಲ್ಲಿ ಇರುವ ಮರದ ಮೇಜಿನ ಕೆಳಗೆ ಮುಖ್ಯ ಪತ್ರಗಳನ್ನು ಇಡಲು ಅನುಕೂಲವಿದೆ… ಅಡುಗೆ ಪಾತ್ರಗಳು– ಈ ಚಿತ್ರದಲ್ಲಿ ವಿವಿಧ ಅಳತೆಯ ಅನ್ನ ಬಸೆಯುವ ಬಟ್ಟಲನ್ನು ಕಾಣಬಹುದು, ಅದಕ್ಕೆ ಸರಿಯಾಗುವಂತೆ ಬಸೆಯುವ ಕೋಲು ಕೂಡ ಇಡಲಾಗಿದೆ, ಇದನ್ನು ಕೆಲವನ್ನು ಹಬ್ಬ ಹರಿದಿನದಂದು, ಮತ್ತೆ ಕೆಲವನ್ನು ದಿನನಿತ್ಯ ಮಲೆನಾಡಿನಲ್ಲಿ ಬಳಸುತಾರೆ. ಮಲೆನಾಡಿನಲ್ಲಿ ಬಳಸುವ ಅನ್ನದ ಸರಗೋಲುನ್ನು ಕೂಡ ಇಡಲಾಗಿದೆ… ಮಲೆನಾಡಿನ ಶೈಲಿಯ ಪಾತ್ರೆಗಳು– ಇಲ್ಲಿ ಸಾಂಬಾರು ಮಾಡುವ ಪಾತ್ರೆಗಳನ್ನು ಇಡಲಾಗಿದೆ, ಇದರಲ್ಲಿ ಕೆಲವು ಹಿತ್ತಾಳೆಯಿಂದ ಕೂಡಿದ್ದು, ಮತ್ತೆ ಕೆಲವು ಬಳಪದ ಕಲ್ಲಿನ ಹಾಗೂ ಮಣ್ಣಿನ ಪಾತ್ರೆಗಳಾಗಿವೆ… ಮನೆಯ ವಸ್ತುಗಳು– ಈ ಚಿತ್ರದಲ್ಲಿ ಗ್ರಂಥ ಓದುವ ಮರದ ಮೇಜು, ದೂಪದ ಆರ್ತಿ, ವಿವಿಧ ಗಾತ್ರದ ಹೂಬುಟ್ಟಿಗಳು ಹಾಗೂ ಗುಡಿಸುವ ಹಿಡಿಯನ್ನು ಕಾಣಬಹುದು. ಈ ಚಿತ್ರದಲ್ಲಿ ವರನಟ ಡಾ. ರಾಜ್ ಕುಮಾರ್ ಅವರಿಂದ ಕರ್ನಾಟಕ ಅಕಾಡೆಮಿಯ ಪರವಾಗಿ ರಸಋಷಿಗೆ ಗೌರವಾರ್ಪಣೆ. ಚಿತ್ರದಲ್ಲಿ ಅಕಾಡೆಮಿಯ ಗಣ್ಯರನ್ನು ಕೂಡ ಕಾಣ ಬಹುದು. ಮೇಲಿರುವ ಎಲ್ಲ ಚಿತ್ರಗಳು ಕುಪ್ಪಳ್ಳಿಯ ಕುವೆಂಪು ಮನೆಯಲ್ಲಿ ಪ್ರದರ್ಶಿಸಲಾದ ಮಲೆನಾಡಿನ ದಿನಚರಿ ವಸ್ತುಗಳ ಹಾಗೂ ಕುವೆಂಪುರವರಿಗೆ ಸಂಬಂಧಿಸಿದ ಅಪರೂಪದ ಚಿತ್ರಗಳಾಗಿವೆ… ಹೀಗೆ ಕುವೆಂಪು ಅಜರಾಮರ ವಿಶಿಷ್ಟ ಚೇತನ ವಿಶ್ವ ಮಾನವ ಬರಹಗಾರ… –ಕೆ.ಶಿವು.ಲಕ್ಕಣ್ಣವರ

ಕುವೆಂಪು ಜನ್ಮದಿನ Read Post »

ಇತರೆ

ಕೃಷಿಬೆಲೆ ಆಯೋಗ

ಕರ್ನಾಟಕ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಕೊಡಿಸಲು….. ಗಣೇಶಭಟ್ ಶಿರಸಿ. ಕರ್ನಾಟಕ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಕೊಡಿಸಲು…… ಕರ್ನಾಟಕದ ರೈತರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ನೇಮಿಸಿರುವ ಕರ್ನಾಟಕ ಕೃಷಿ ಬೆಲೆ ಆಯೋಗವು ಸಕ್ರಿಯವಾಗಿ ಚಿಂತಿಸುತ್ತಿದೆ. ರಾಜ್ಯದ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಮತ್ತು ಸದೃಢ ಮಾರುಕಟ್ಟೆ ಸಿಗಬೇಕೆಂಬ ಉದ್ದೇಶದಿಂದ ಈ ಆಯೋಗವು ಹಲವಾರು ಶಿಫಾರಸ್ಸುಗಳನ್ನು ಮಾಡಿದೆ. ಆಯೋಗ ಮಾಡಿರುವ ಪ್ರತಿಯೊಂದು ಶಿಫಾರಸ್ಸಿನಲ್ಲೂ ರೈತರ, ರೈತಾಬಿಯ ಕುರಿತಾದ ಪ್ರಾಮಾಣಿಕ ಕಾಳಜಿ ಎದ್ದುಕಾಣುತ್ತದೆ. ರಾಜ್ಯಸರ್ಕಾರ ಮನಸ್ಸು ಮಾಡಿದರೆ ಹೆಚ್ಚಿನ ಶಿಫಾರಸ್ಸುಗಳನ್ನು ಬಹು ಸುಲಭದಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯ. ಆದರೆ ಉದ್ಯಮಪತಿಗಳಿಂದಲೇ ದೇಶದ ಉದ್ಧಾರವೆಂದು ನಂಬಿರುವ, ಕೃಷಿ ಎಂಬುದು ಸರ್ಕಾರಿ ಕೃಪಾಕಟಾಕ್ಷಕ್ಕಾಗಿ ಕಾಯಬೇಕಾದ ವೃತ್ತಿಯೆಂದು ಎಲ್ಲ ಪಕ್ಷಗಳ ರಾಜಕಾರಣಿಗಳು ನಂಬಿರುವದರಿಂದಾಗಿ ಕೃಷಿ ಬೆಲೆ ಆಯೋಗದ ಶಿಫಾರಸ್ಸುಗಳು, ಕಡತಗಳು ಹೊರಗೆ ಬರುತ್ತಿಲ್ಲ. ಕೃಷಿ ಬೆಲೆ ಆಯೋಗದ ಶಿಫಾರಸ್ಸುಗಳಲ್ಲಿ ರೈತ ಪರವಾದ ಪ್ರಾಮಾಣಿಕ ಕಾಳಜಿ ಇದ್ದಾಗಿಯೂ ಅವುಗಳ ಅನುಷ್ಠಾನದಿಂದಲೇ ರೈತರ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆಂದು ಭಾವಿಸಲಾಗದು. ಯಾಕೆಂದರೆ ಈ ಶಿಫಾರಸ್ಸುUಳು ಪ್ರಸ್ತುತ ಅರ್ಥವ್ಯವಸ್ಥೆಯ ಅಂದರೆ ಬಂಡವಾಳವಾದದ ಚೌಕಟ್ಟಿಗೆ ಸೀಮಿತವಾಗಿವೆ. ಕೃಷಿಯನ್ನು ಕಚ್ಚಾ ವಸ್ತು ಪೂರೈಸುವ ಒಂದು ವ್ಯವಸ್ಥೆಯನ್ನಾಗಿಯಷ್ಟೇ ಪರಿಗಣಿಸಲಾಗುತ್ತಿದೆ. ಕಚ್ಚಾ ವಸ್ತುಗಳು ಕಡಿಮೆ ಬೆಲೆಗೆ ದೊರಕಿದಷ್ಟು ಉದ್ಯಮ ರಂಗದ ಲಾಭ ಹೆಚ್ಚುತ್ತದೆ. ಉದ್ಯಮಿಗಳ ಲಾಭ ಹೆಚ್ಚಳದ ದಾಹಕ್ಕೆ ಸರ್ಕಾರಗಳು ಪ್ರೋತ್ಸಾಹ ನೀಡುತ್ತಿರುವುದರಿಂದಾಗಿ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳವಾಗುವುದು ಉದ್ಯಮಿಗಳಿಗೆ ಅಪಥ್ಯ. ಕೈಗಾರೀಕರಣದ ಆಧುನಿಕ ರೂಪವು ಅರ್ಥವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು ಪ್ರಾರಂಭವಾದಾಗಿನಿಂದ ಕೃಷಿ ರಂಗವು ಲಾಭದಾಯಕವಾಗಿ ಉಳಿದಿಲ್ಲ. ಭಾರತದ ಸಂಪತ್ತನ್ನು ದೋಚುವ ಬ್ರಿಟಿಷರ ಉದ್ದೇಶ ಮತ್ತು ನೀತಿಯ ಪರಿಣಾಮದಿಂದಾಗಿ ಗ್ರಾಮೀಣ ಭಾರತದ ಸ್ವಾವಲಂಬಿ, ಸಮತೋಲನ ವ್ಯವಸ್ಥೆ ನಷ್ಟವಾಗಿ, ಕೃಷಿ ರಂಗದ ಮೇಲೆ ಅತಿಯಾದ ಅವಲಂಬನೆ ಸೃಷ್ಟಿಯಾಗಿದ್ದು ಇತಿಹಾಸ. ಕೃಷಿ ರಂಗದ ಮೇಲೆ ಶೇ. 70 ರಷ್ಟು ಜನಸಂಖ್ಯೆ ಅವಲಂಬಿತವಾಗಿರುವುದೇ ಗ್ರಾಮೀಣ ಭಾರತದ ಬಡತನಕ್ಕೆ ಕಾರಣವೆಂದು ಶಾಲಾ , ಕಾಲೇಜುಗಳಲ್ಲಿ ಕಲಿಸಲಾಗುತ್ತದೆ. ಆದರೆ ಸರ್ಕಾರದ ನೀತಿಗಳಿಂದಾಗಿ ಕೃಷಿ ಕ್ಷೇತ್ರದ ಮೇಲಿನ ಅವಲಂಬನೆ ಮತ್ತು ಒತ್ತಡ ಹೆಚ್ಚುತ್ತಲೇ ಇದೆ. ಎಲ್ಲರಿಗೂ ಭೂಮಿಯ ಒಡೆತನ ಸಿಗಬೇಕೆಂಬ ಅನಾರ್ಥಿಕ, ಮೂರ್ಖವಾದವನ್ನೇ ಬಳಸಿ ತಮ್ಮ ತಮ್ಮ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳಲು ಪ್ರತಿಯೊಂದು ರಾಜಕೀಯ ಪಕ್ಷವೂ ಪ್ರಯತ್ನಿಸುತ್ತಿದೆ. ಪ್ರತಿ ಪೀಳಿಗೆಯಲ್ಲೂ ಒಡೆಯುತ್ತಿರುವ ಕೃಷಿ ಹಿಡುವಳಿಗಳು ಇಂದು ಚಿಕ್ಕ ಮತ್ತು ಅತಿಚಿಕ್ಕ, ಲಾಭದಾಯಕವಲ್ಲದ ಹಿಡುವಳಿಗಳಾಗಿ ರೂಪುಗೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆಗಳನ್ನು ರೂಪಿಸದ, ಅಸಮರ್ಥ ಸರ್ಕಾರಗಳಿಂದಾಗಿ ಸಾಂಪ್ರದಾಯಿಕ ಕೃಷಿ ಕುಟುಂಬಗಳು ಅನಿವಾರ್ಯವಾಗಿ ಲಾಭದಾಯಕವಲ್ಲದಿದ್ದರೂ ಕೃಷಿಗೆ ಅಂಟಿಕೊಂಡಿದೆ. ಕೃಷಿ ರಂಗದ ಮೇಲೆ ಜನಸಂಖ್ಯೆಯ ಹೆಚ್ಚಿನ ಪ್ರಮಾಣದವರು ಅವಲಂಬಿತರಾದಾಗ ನಿರುದ್ಯೋಗ ಮತ್ತು ಅರೆಕಾಲಿಕ ಉದ್ಯೋಗಾವಕಾಶ ಅರ್ಥಾತ್ ಮುಸುಕಿನ ನಿರುದ್ಯೋಗದ ಸಮಸ್ಯೆ ಕಾಡುತ್ತದೆ. ಇದು ಕೃಷಿರಂಗ ಆಕರ್ಷಕವಾಗದಿರಲೂ ಕಾರಣವಾಗುತ್ತದೆ. ಕೃಷಿ ರಂಗದ ಮೂಲ ಸಮಸ್ಯೆಯಾದ, ಆರ್ಥಿಕವಾಗಿ ಲಾಭದಾಯಕವಲ್ಲದ ಹಿಡುವಳಿಗಳನ್ನು ಲಾಭದಾಯಕ ಹಿಡುವಳಿಗಳಿಗಾಗಿ ಮಾರ್ಪಾಡಿಸಿದಾಗ ಕೃಷಿರಂಗದ ಎಷ್ಟೋ ಸಮಸ್ಯೆಗಳನ್ನು ಸುಲಭದಲ್ಲಿ ಪರಿಹರಿಸಲು ಸಾಧ್ಯ. ಕಾನೂನುಗಳ ಮೂಲಕ ಅಥವಾ ಒತ್ತಾಯದ ಒಗ್ಗೂಡಿಸುವಿಕೆಯ ಮೂಲಕ ಸಣ್ಣ ಹಿಡುವಳಿಗಳನ್ನು ದೊಡ್ಡದು ಮಾಡಲು ಸಾಧ್ಯವಿಲ್ಲ. ಕಳೆದ ಶತಮಾನದಲ್ಲಿ ಕಮ್ಯುನಿಸ್ಟ್ ದೇಶಗಳು ಇಂತಹ ಪ್ರಯತ್ನಕ್ಕೆ ಕೈ ಹಾಕಿ ಸೋತಿರುವ ದೃಷ್ಟಾಂತಗಳು ನಮಗೆ ಪಾಠವಾಗಬೇಕು. ಈ ಸಮಸ್ಯೆಗೆ ಪರಿಹಾರವನ್ನು ಸಹಕಾರಿ ರಂಗದ ಬೇಸಾಯ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮಗಳ ಸ್ಥಾಪನೆಯ ಮೂಲಕ ಉದ್ಯೋಗ ಸೃಷ್ಟಿಸಿ ಪರಿಹರಿಸಲು ಸಾಧ್ಯ. ಸಹಕಾರಿ ಬೇಸಾಯವನ್ನು ಕೈಗೊಳ್ಳಲು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರನ್ನು ಪ್ರೋತ್ಸಾಹಿಸುವ ಕಾರ್ಯಯೋಜನೆಯನ್ನು ರೂಪಿಸಬೇಕು. ಈಗ ಇರುವ ಕಾನೂನುಗಳ ಭಯದಿಂದಾಗಿ ಭೂಮಿಯನ್ನು ಬೇರೆಯವರಿಗೆ ಬೇಸಾಯ ಮಾಡಲು ನೀಡಿದರೆ ಭೂಮಿಯ ಮಾಲಿಕತ್ವವನ್ನೇ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಭೂಮಿ ಪಾಳುಬಿದ್ದರೂ ಪರವಾಗಿಲ್ಲ; ಇನ್ನೊಬ್ಬರಿಗೆ ಬೇಸಾಯಕ್ಕೆ ನೀಡುವುದೇ ಬೇಡವೆಂಬ ಭಾವನೆ ರೈತರಲ್ಲಿ ಬಲವಾಗಿದೆ. ರೈತರು ತಮ್ಮ ಕೃಷಿ ಭೂಮಿಯೊಂದಿಗೆ ಅತಿಯಾದ ಭಾವನಾತ್ಮಕ ನಂಟು ಹೊಂದಿರುವುದು, ‘ಉಳುವವನೇ ಹೊಲದೊಡೆಯ’ ಎಂಬ ಅತಾರ್ಕಿಕ ಕಾನೂನು, ಮತ-ಬ್ಯಾಂಕ್ ರಾಜಕಾರಣಗಳಿಂದಾಗಿ ಸಹಕಾರಿ ಬೇಸಾಯಕ್ಕೆ ರೈತರು ಮುಂದಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಂಬಂಧಿತ ಕಾನೂನುಗಳನ್ನು ತುರ್ತಾಗಿ ಬದಲಿಸಬೇಕಿದೆ. ಸಹಕಾರಿ ಬೇಸಾಯ ಪದ್ಧತಿಗೆ ಒಳಪಡುವ ರೈತರು ಯಾವುದೇ ಕಾರಣಕ್ಕೂ ತಮ್ಮ ಭೂಮಿಯ ಮೇಲಿನ ಮಾಲಿಕತ್ವದ ಹಕ್ಕನ್ನು ಕಳೆದುಕೊಳ್ಳುವಂತಿರಬಾರದು. ಅವರು ನೇರವಾಗಿ ಬೇಸಾಯದಲ್ಲಿ ಪಾಲ್ಗೊಳ್ಳಲಿ ಅಥವಾ ಪರೋಕ್ಷವಾಗಿ ಪಾಲ್ಗೊಳ್ಳಲಿ ಅಂದರೆ ತಮ್ಮ ಭೂಮಿಯನ್ನು ಸಹಕಾರಿ ಬೇಸಾಯಕ್ಕೆ ನೀಡಿ ತಾವು ಬೇರೆ ಉದ್ಯೋಗದಲ್ಲಿ ತೊಡಗಿದ್ದರೂ ಭೂಮಿಯ ಮೇಲಿನ ಅವರ ಹಕ್ಕು ಮೊಟಕುಗೊಳ್ಳಬಾರದು. ಈ ಒಂದು ಬದಲಾವಣೆಯಿಂದ ಹಲವಾರು ಪ್ರಯೋಜನಗಳಾಗುತ್ತವೆ. ಮೊದಲನೆಯದಾಗಿ ಲಾಭದಾಯಕವಲ್ಲದ ಚಿಕ್ಕ ಹಿಡುವಳಿಗಳು ಸೇರಿ ದೊಡ್ಡ ಹಿಡುವಳಿಗಳಾಗುವುದರಿಂದ ಬೆಳೆ ಸಂಯೋಜನೆ, ಯಂತ್ರೋಪಕರಣಗಳ ಬಳಕೆ, ಉತ್ಪಾದನಾ ವೆಚ್ಚದಲ್ಲಿ ಕಡಿತ ಮುಂತಾದ ಲಾಭಗಳು. ಎರಡನೆಯದಾಗಿ ಕೃಷಿಗಿಂತ ಹೆಚ್ಚಿನ ಲಾಭ ಗಳಿಸುವ ಉದ್ದೇಶಕ್ಕಾಗಿ ಬೇರೆ ಉದ್ಯೋಗದಲ್ಲಿ ತೊಡಗಿಕೊಳ್ಳುವವರಿಗೆ ಇದು ವರದಾಯಕ ವ್ಯವಸ್ಥೆ. ತಮ್ಮ ಭೂಮಿ ಕಳೆದುಕೊಳ್ಳುವ ಭಯವಿಲ್ಲದೇ ನಿಶ್ಚಿಂತೆಯಿಂದ ಇರುತ್ತಾರೆ. ಮೂರನೆಯದಾಗಿ ವೈಜ್ಞಾನಿಕ ಭೂ ಬಳಕೆಯ ನೀತಿಯ ಅನುಷ್ಠಾನ ಸುಲಭ. ಬೇಸಾಯದ ನಿರ್ವಹಣೆ, ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಸಾಮಥ್ರ್ಯ, ಮಾನವ ಹಾಗೂ ಇತರ ಸಂಪನ್ಮೂಲಗಳ ಸಮರ್ಪಕ ಬಳಕೆ ಮುಂತಾದ ಹಲವು ಲಾಭದಾಯಕ ಪ್ರಯೋಜನಗಳು ಸಹಕಾರಿ ಬೇಸಾಯದಲ್ಲಿ ಲಭ್ಯವಾಗುತ್ತವೆ. ಈ ದಿಶೆಯಲ್ಲಿ ರೈತರನ್ನು ಪ್ರೋತ್ಸಾಹಿಸಲು ಸರಳ ಕ್ರಮಗಳನ್ನು ಸರ್ಕಾರ ಕೈಗೊಂಡರೆ ಸಾಕು. ಕೃಷಿಕರಿಗೆ ಇಂದಿನ ವ್ಯವಸ್ಥೆಯಲ್ಲಿ ನೀಡುತ್ತಿರುವ ಹಲವು ರಿಯಾಯಿತಿ, ಸಬ್ಸಿಡಿಗಳನ್ನು ಸಹಕಾರಿ ವ್ಯವಸ್ಥೆಯಲ್ಲಿ ಬೇಸಾಯ ಮಾಡುವವರಿಗೆ ಮಾತ್ರ ನೀಡುವ ಶರತ್ತನ್ನು ವಿಧಿಸಿದರೆ, ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ಸಹಕಾರಿ ಬೇಸಾಯಕ್ಕೆ ಮುಂದಾಗುತ್ತಾರೆ. ವೈಯಕ್ತಿಕ ಭೂ ಮಾಲಿಕತ್ವದ ಒಂದು ಪ್ರಮುಖ ದೌರ್ಬಲ್ಯವೆಂದರೆ ಸಮರ್ಪಕ ಭೂ ಬಳಕೆ ನೀತಿಯನ್ನು ಅನುಸರಿಸಲು ಸಾಧ್ಯವಾಗದಿರುವದು. ಪ್ರತಿಯೊಬ್ಬ ರೈತನು ತನ್ನ ಆದಾಯದಲ್ಲಿ ಹೆಚ್ಚಳವಾಗಬೇಕೆಂದು ಬಯಸುತ್ತಾನೆ. ಇದು ಸಹಜ ಕೂಡಾ. ಇದರಿಂದಾಗಿ ಹೆಚ್ಚಿನ ಆದಾಯ ನೀಡುವ ಬೆಳೆಯನ್ನೇ ಎಲ್ಲರೂ ಬೆಳೆಯಬಯಸುತ್ತಾರೆ. ಅದರಿಂದಾಗಿ ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿ, ಬೆಲೆ ಕುಸಿತದ ಅಪಾಯ ಸದಾ ಇರುತ್ತದೆ. ಇದರ ಇನ್ನೊಂದು ಮುಖವೆಂದರೆ ಭೂಮಿಯ ದುರ್ಬಳಕೆ. ಉದಾ: ಭತ್ತ ಬೆಳೆಯುವುದಕ್ಕಿಂತ ಅಡಿಕೆ ಬೆಳೆಯುವುದು ಲಾಭದಾಯಕ ಎಂಬ ಕಾರಣಕ್ಕಾಗಿ ಅಡಿಕೆಗೆ ಸೂಕ್ತವಲ್ಲದ ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಮಾರ್ಪಾಡಾಗುತ್ತಿವೆ ಹಾಗೂ ಹಲವು ರೋಗ, ಕೀಟಬಾಧಿತವಾಗಿವೆ. ಯಾವ ಭೂಮಿಯಲ್ಲಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ಕೃಷಿ ತಜ್ಷರು ಹೇಳಬಲ್ಲರಾದರೂ ಭೂಮಿಯ ಮಾಲಿಕರು ತಮ್ಮ ಇಚ್ಛೆಯನುಸಾರ ಬೆಳೆ ಆಯ್ಕೆ ಮಾಡುತ್ತಿದ್ದಾರೆ. ಸಹಕಾರಿ ತತ್ವದಡಿ ಬೇಸಾಯ ನಡೆದಾಗ ಈ ಸಮಸ್ಯೆಯು ಪರಿಹಾರವಾಗುತ್ತದೆ. ಯಾಕೆಂದರೆ ಸಹಕಾರಿ ಬೇಸಾಯ ಪದ್ಧತಿಯಲ್ಲಿ ಪಾಲ್ಗೊಳ್ಳುವವರಿಗೆ ಎರಡು ರೀತಿಯಿಂದ ಆದಾಯ ಗಳಿಕೆ ಸಾಧ್ಯವಾಗುತ್ತದೆ. ಸಹಕಾರಿ ಬೇಸಾಯ ಪದ್ಧತಿಯಲ್ಲಿ ಪಾಲ್ಗೊಳ್ಳುವ ಭೂ ಮಾಲೀಕರಿಗೆ ಕ್ಷೇತ್ರವಾರು ನಿಗದಿತ ಮೊತ್ತವನ್ನು ನೀಡುವಂತಾಗಬೇಕು. ಆ ಕ್ಷೇತ್ರದಲ್ಲಿ ಯಾವ ಬೆಳೆಯನ್ನು ಬೆಳೆಯಲಾಗುತ್ತದೆ ಎನ್ನುವುದಕ್ಕಿಂತ ಪ್ರತಿ ಎಕರೆಗೆ ಇಂತಿಷ್ಟು ಎಂದು ಮೊತ್ತವನ್ನು ನೀಡಿ ಅದನ್ನು ಬೇಸಾಯದ ಖರ್ಚಿಗೆ ಸೇರಿಸಬೇಕು. ಎರಡನೇಯದಾಗಿ ಕ್ಷೇತ್ರವಾರು ಸಹಕಾರಿ ಶೇರುಗಳನ್ನು ನಿಗದಿಪಡಿಸುವುದು ಅಂದರೆ ಪ್ರತಿ ಎಕರೆಗೆ ಇಂತಿಷ್ಟು ಶೇರುಗಳು ಎಂದು ನಿಗದಿ ಪಡಿಸುವುದು ಹಾಗೂ ನಿವ್ವಳ ಲಾಭದಲ್ಲಿ ಡಿವಿಡೆಂಡ್ ನೀಡುವುದು. ತಮ್ಮ ಭೂಮಿಯನ್ನು ಸಹಕಾರಿ ಬೇಸಾಯಕ್ಕೆ ಒಳಪಡಿಸುವ ಹಿಡುವಳಿದಾರರು ನಿಶ್ಚಿತ ಬಾಡಿಗೆ ರೂಪದಲ್ಲಿ ಹಾಗೂ ಡಿವಿಡೆಂಡ್ ರೂಪದಲ್ಲಿ ಆದಾಯ ಗಳಿಸಲು ಸಾಧ್ಯ. ಬೇಸಾಯದಲ್ಲಿ ನೇರವಾಗಿ ಪಾಲ್ಗೊಳ್ಳುವ ಭೂ ಮಾಲಿಕರು ಹಾಗೂ ಕೃಷಿ ಕಾರ್ಮಿಕರು ತಮ್ಮ ದುಡಿಮೆಯ ಪ್ರತಿಫಲವನ್ನು ಕೂಲಿ ಅಥವಾ ಸಂಬಳದ ರೂಪದಲ್ಲಿ ಪಡೆಯುವ ವ್ಯವಸ್ಥೆ ಇರಬೇಕು. ಕೃಷಿ ಕಾರ್ಮಿಕರನ್ನು ಕೂಡಾ ಈ ಸಹಕಾರಿಗಳ ಶೇರುದಾರರನ್ನಾಗಿಸಲೇಬೇಕು. ಇದರಿಂದಾಗಿ ಅವರಲ್ಲಿ ದುಡಿಯುವ ಹುಮ್ಮಸ್ಸು ಇರುತ್ತದೆ ಮತ್ತು ಉದ್ಯೋಗಾವಕಾಶದ ಭದ್ರತೆಯೂ ಇರುತ್ತದೆ. ಮಾರುಕಟ್ಟೆಯ ಬೇಡಿಕೆ ಹಾಗೂ ಕೃಷಿಯ ಉತ್ಪಾದನೆಗೆ ಇಂದು ವ್ಯವಸ್ಥಿತ ಸಂಬಂಧವೇ ಇಲ್ಲ. ತಮಗೆ ತಿಳಿದ ರೀತಿಯಲ್ಲಿ ಮುಂದಿನ ಬೇಡಿಕೆಯನ್ನು ಊಹಿಸಿ, ರೈತರು ಬೆಳೆಯ ಆಯ್ಕೆ ಮಾಡುತ್ತಿರುವುದು ಇಂದಿನ ಸ್ಥಿತಿ. ಮಾಹಿತಿಯ ಲಭ್ಯತೆಯ ಇಂದಿನ ದಿನಗಳಲ್ಲಿ ಬೇಡಿಕೆ ಆಧರಿಸಿ ಬೆಳೆ ಆಯ್ಕೆ ಮಾಡುವ ವಿಧಾನವನ್ನು ವೈಜ್ಞಾನಿಕವಾಗಿ ನಿರ್ಧರಿಸಲು ಸಾಧ್ಯ. ತಾಲೂಕಾ ಮಟ್ಟದ ವಿವಿಧ ಇಲಾಖೆÉಗಳ, ಅದರಲ್ಲೂ ವಿಶೇಷವಾಗಿ ಕೃಷಿ, ತೋಟಗಾರಿಕೆ, ಪಶು ಸಂಗೋಪನಾ ಇಲಾಖೆಯವರು ಸಮನ್ವಯದಿಂದ ಕಾರ್ಯನಿರ್ವಹಿಸಿ ಯಾವ ಕ್ಷೇತ್ರ, ಯಾವ ಊರಿನಲ್ಲಿ , ಯಾವ ಬೆಳೆ ಬೆಳೆಯಬೇಕೆಂಬ ಸೂಚನೆಗಳನ್ನು ನೀಡಲು ಸಾಧ್ಯವಿದೆ. ಈ ಶಿಫಾರಸ್ಸುಗಳನ್ನು ಪಾಲಿಸುವವರಿಗೆ ಮಾತ್ರ ಬೆಂಬಲ ಬೆಲೆ ಯೋಜನೆಯ ಸೌಲಭ್ಯ ದೊರಕುವಂತಾಗಬೇಕು. ಬೆಳೆ ಸಂಯೋಜನಾ ಶಿಫಾರಸ್ಸುಗಳನ್ನು ಸಹಕಾರಿ ಬೇಸಾಯಗಾರರು ಹಾಗೂ ಇತರ ಕೃಷಿಕರು ಪಾಲಿಸುವಂತೆ ಮಾಡುವ ಸುಲಭ ಉಪಾಯವೆಂದರೆ ಬೆಲೆ ಖಾತರಿ ಯೋಜನೆಯ ಲಾಭ ಪಡೆಯಲು ಅವಕಾಶ ನೀಡುವುದಾಗಿದೆ. ಮನಸ್ಸಿಗೆ ಬಂದ ಬೆಳೆಯನ್ನು ತಮಗೆ ಖುಷಿ ಕಂಡಲ್ಲಿ ಬೆಳೆಯುವ ಪ್ರವೃತ್ತಿಗೆ ತಡೆಯೊಡ್ಡದಿದ್ದಲ್ಲಿ ಭೂಮಿಯ ದುರ್ಬಳಕೆ ಆಗುವುದನ್ನು ತಪ್ಪಿಸಲಾಗದು ಹಾಗೂ ಬೆಂಬಲ ಬೆಲೆ ಯೋಜನೆಯನ್ನು ಅರ್ಥಪೂರ್ಣವಾಗಿ ಅನುಷ್ಠಾನಕ್ಕೆ ತರಲು ಎಂದಿಗೂ ಸಾಧ್ಯವಾಗದು. ಬೆಂಬಲ ಬೆಲೆ ನೀಡುವಿಕೆಯು ರೈತರ ಮೂಗಿಗೆ ತುಪ್ಪ ಸವರುವ ಯೋಜನೆಯಾಗಿಯೇ ಮುಂದುವರಿಯುತ್ತಿರುತ್ತದೆ. ಕೃಷಿ ರಂಗದ ಸಮಸ್ಯೆಗಳ ಪರಿಹಾರದ ಪ್ರಾರಂಭವಾಗಬೇಕಾದುದು ಭೂಬಳಕೆ ನೀತಿಯ ಅನುಷ್ಠಾನ, ಮಾಲಿಕತ್ವದ ಮೂಲ ಅಂಶಗಳನ್ನು ಸಹಕಾರಿಕರಣಗೊಳಿಸುವ ಮೂಲಕ. ಎಲ್ಲಿಯವರೆಗೆ ವೈಯಕ್ತಿಕ ನೆಲೆಯಲ್ಲಿ ಬೇಸಾಯ ನಡೆಯುತ್ತಿರುತ್ತದೋ ಅಲ್ಲಿಯವರೆಗೆ ಬಂಡವಾಳವಾದಿ ವ್ಯವಸ್ಥೆಯಲ್ಲಿ ರೈತರಿಗೆ ಸೋಲೇ ಗತಿ. ಸಹಕಾರಿ ಆರ್ಥಿಕತೆಯೆಂಬುದು ಬರೀ ಕೃಷಿಗೆ ಮಾತ್ರವಲ್ಲ , ಉದ್ಯಮ ಸೇವೆಗಳಿಗೂ ಅನ್ವಯವಾಗುತ್ತದೆ. ಪ್ರತಿ ತಾಲೂಕಿನಲ್ಲಿಯೂ ಕೃಷಿ ಪೂರಕ ಮತ್ತು ಕೃಷಿ ಆಧಾರಿತ ಉದ್ಯಮಗಳು ಪ್ರಾರಂಭವಾಗುವಂತೆ ಮಾಡುವುದು ಅನಿವಾರ್ಯ. ಕರ್ನಾಟಕದ ರೈತರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃಷಿ ಬೆಲೆ ಆಯೋಗವು ಮಾಡಿರುವ ಶಿಫಾರಸ್ಸುಗಳು ಪರಿಣಾಮಕಾರಿಯಾಗಬೇಕೆಂದರೆ ಕೃಷಿ ಹಿಡುವಳಿ ಹಾಗೂ ಭೂ ಬಳಕೆ ನೀತಿಯಲ್ಲಿ ಸಮಗ್ರ ಬದಲಾವಣೆ ಆಗಲೇಬೇಕು. ಅದಿಲ್ಲವಾದಲ್ಲಿ ರೋಗ ಲಕ್ಷಣಗಳ ಚಿಕಿತ್ಸೆಯಾದೀತೆ ಹೊರತೂ ರೋಗದ ಮೂಲ ಕಾರಣಕ್ಕೆ ಅಲ್ಲ. ಇಂಥಹ ಬದಲಾವಣೆ ತರಲು ಯಾವ ಹೊಸ ಸಂಸ್ಥೆಯೂ ಬೇಕಿಲ್ಲ. ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಬ್ಸಿಡಿ ಹಂಚಿಕೆಯಂತಹ ಕಾರಕೂನಗಿರಿಯಲ್ಲಿ ತೊಡಗಿರುವ ಕೃಷಿ ತಂತ್ರಜ್ಞರು ಹಾಗೂ ಪರಿಣತರ ಸಾಮಥ್ರ್ಯವನ್ನು ಸಮರ್ಪಕವಾಗಿ, ಸಮನ್ವಯತೆಯಿಂದ ಬಳಸುವ ಯೋಚನೆ, ಯೋಜನೆಗಳು ಧುರೀಣರಿಗೆ ಅರ್ಥವಾಗಬೇಕು. ಕೃಷಿಗೆ ಉದ್ದಿಮೆಯ ಸ್ಥಾನಮಾನ ನೀಡುವ ಹೆಜ್ಜೆಗಳ ಅನುಷ್ಠಾನ ಪ್ರಾರಂಭವಾಗಬೇಕು. ಇದೆಲ್ಲ ಎಲ್ಲಿ ಸಾಧ್ಯವೆಂಬ ಸಿನಿಕರ ಅನಿಸಿಕೆ, ಟೀಕೆಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಯಾಕೆಂದರೆ ಇಡೀ ವ್ಯವಸ್ಥೆ ಪರಿವರ್ತನೆಯ ಪಥದಲ್ಲಿದೆ. ಸಹಕಾರಿ ತತ್ವದ ಬೇಸಾಯ ಪದ್ಧತಿಯ ಅನುಷ್ಠಾನ ಈ ಮಹತ್ತರ ಬದಲಾವಣೆಯು, ನವ ಸಹಕಾರ ಅರ್ಥವ್ಯವಸ್ಥೆಯ ಭಾಗ ಮಾತ್ರ. ಮಾನವತೆಯ ಪ್ರಗತಿಗೆ ಪೂರಕವಾದ ಈ ಪರಿವರ್ತನೆ ಅನಿವಾರ್ಯ ಕೂಡಾ. ***************************************************

ಕೃಷಿಬೆಲೆ ಆಯೋಗ Read Post »

ಇತರೆ

ಲಹರಿ

ಕವಿತೆಯ ಜಾಡು ಹಿಡಿದು  ಸ್ಮಿತಾಅಮೃತರಾಜ್. ಸಂಪಾಜೆ ಈ ಕವಿತೆ ಒಮ್ಮೊಮ್ಮೆ ಅದೆಷ್ಟು ಜಿಗುಟು ಮತ್ತುಅಂಟಂಟು ಅಂದ್ರೆ ಹಲಸಿನ ಹಣ್ಣಿನ ಮೇಣದ ತರ.ಮತ್ತೆ ಮತ್ತೆ ತಿಕ್ಕಿದಷ್ಟೂ ಅಂಟಿಕೊಳ್ಳುತ್ತಾ,ಬಿಡದೇ ಕಾಡುತ್ತಾ ,ಸತಾಯಿಸುತ್ತಾ,ಹಿಂದೆ ಮುಂದೆ ಸುತ್ತಿಸುಳಿದು ಯಾವುದೋ ಭಾವನಾ ತೀರಕ್ಕೆ ಲಗ್ಗೆಯಿಡುತ್ತಾ ತನ್ನನ್ನು ತಾನು ಮರೆವಿಗೆ ನೂಕಿಬಿಡುತ್ತದೆ.ಅರೆ ಕ್ಷಣವೂ  ಬಿಟ್ಟೂ ಬಿಡದ ಆತ್ಮಸಂಗಾತಿಯಂತೆ ಪಕ್ಕಕ್ಕಿರುತ್ತದೆ.ಕವಿತೆ ಯಾವೊತ್ತೂ ನನ್ನ ಕೈ ಬಿಡಲಾರದು ಎಂಬ ಗುಂಗಿನಲ್ಲೇ, ತುಸು ಹೆಚ್ಚೇ ಹಚ್ಚಿಕೊಂಡು,ಯಾವುದಕ್ಕೂವಿನಾಕಾರಣ ತಲೆಕೆಡಿಸಿಕೊಳ್ಳದೇ,ಕವಿತೆಯನ್ನು ನನ್ನ ತೆಕ್ಕೆಯೊಳಗಿಟ್ಟೋ..ಅಥವಾ ಕವಿತೆಯತೆಕ್ಕೆಯೊಳಗೆ ತಾನು ಬಿದ್ದೋ,ಒಟ್ಟಿನಲ್ಲಿ ಕವಿತೆಯ ಸಾಂಗತ್ಯದಲ್ಲಿ ಬದುಕು ಸುಖಿ ಅಂತಗುನುಗಿಕೊಳ್ಳುತ್ತಿರುವಾಗಲೇ..ಹಾದಿಯುದ್ದಕ್ಕೂ ಜತೆಗೂಡಿ ಹೆಜ್ಜೆ ಹಾಕಿದಕವಿತೆ,ಯಾವುದೋ ಇಳಿಜಾರಿನಲ್ಲಿ ಕಳೆದು ಹೋಗಿ ಬಿಟ್ಟಿದೆ.ಅಥವಾ  ಆವರಿಸಿಕೊಂಡ ಯಾವುದೋ ಹಾಳುಮರೆವಿನಲ್ಲಿ,ಕವಿತೆಯ ಕೈಯ ನಾನೇ ಬಿಟ್ಟು ದೂರ ಸಾಗಿ ಬಂದಿರುವೆನೋಅರ್ಥವಾಗುತ್ತಿಲ್ಲ.ಅಂತೂ ಇಂತು ಕವಿತೆ ನಾಪತ್ತೆಯಾಗಿದೆ.ಕವಿತೆ ಈ ಕ್ಷಣ ನನ್ನಜೊತೆಗಿಲ್ಲ.ಹಾಗಂತ ಕವಿತೆ ಇರದ ಊರಿನಲ್ಲಿ ನಾ ಬದುಕಲು ಸಾಧ್ಯವೇ?. ಕವಿತೆ  ಇರದ ಗಳಿಗೆಯನ್ನು ಊಹಿಸಲು ಸಾಧ್ಯವೇ?.ಜೀವಚೈತನ್ಯದಿಂದ ಉಕ್ಕಿ ಹರಿಯುತ್ತಿದ್ದ ಭಾವಗಳೆಲ್ಲಾ ಬರಡು ಬರಡಾಗಿವೆ.ಪ್ರಪಂಚ ಇಷ್ಟೊಂದುನೋವಿನಲ್ಲಿ ತುಂಬಿದೆಯಾ ಅಂತ ಖೇದವಾಗುತ್ತಿದೆ.ಪ್ರತಿದಿನ,ಪ್ರತಿ ಕ್ಷಣ ನೋವಿನಸಂಗತಿಗಳೇ.ಅಲ್ಲಿ ಕೊಲೆ,ರಕ್ತಪಾತ,ಹಾದರ, ಅತ್ಯಾಚಾರ,ಆತ್ಮಹತ್ಯೆ. ಅಯ್ಯೋ..! ಬದುಕುಎಷ್ಟೊಂದು ಕೆಟ್ಟದ್ದು ಮತ್ತು ಘೋರವಾಗಿದೆಯಲ್ಲಾ..?.ಇವರೆಲ್ಲರ ಎದೆಯೊಳಗೆ ಭಾವದಸೆಲೆಗಳೇ ಇರಲಿಲ್ಲವೇ?.ಒಂದೇ ಒಂದು ಗುಟುಕು ಭಾವದೊರತೆ ಸಾಕಿತ್ತಲ್ಲವೇ..? ಅತ್ಯಾಚಾರಿಗೆಆಚಾರ ತುಂಬಿಸಲು,ಆತ್ಮಹತ್ಯೆ ಮಾಡಿಕೊಂಡವರಿಗಚೈತನ್ಯಮರುಕಳಿಸಿಜೀವದಾಯಿನಿಯಾಗಲು, ಬಂದೂಕು ಬಾಂಬು ಹಿಡಿದ ಕೈಗಳಲ್ಲಿ ಪೆನ್ನು ಹಿಡಿದು ಅಕ್ಷರದಹೂವರಳಿಸಲು.ಅಬ್ಭಾ! ಎದೆ ನಡುಗುತ್ತಿದೆ.ಕಣ್ಣೆದುರಿಗೆ ಭಯಾನಕ ಭವಿಷ್ಯದ ನೆರಳುಸೋಕಿ ಹೋದಂತಾಗುತ್ತಿದೆ. ಕವಿತೆ ಇರದ ಊರಿನಲ್ಲಿ ಮಾತ್ರ ಇಂತಹ ಅವಘಡಗಳುಸಂಭವಿಸುತ್ತಿವೆಯಾ..ಅಂತ ಒಂದು ಅನುಮಾನ ಕೂಡ ಸುಳಿದುಹೋಗುತ್ತದೆ.ಯಾಕೆಂದರೆ ಕವಿತೆ ಕಪಟವಿಲ್ಲದ್ದು ಅಂತ ಬಲ್ಲವರು ನುಡಿದಿದ್ದಾರೆ.ಜಗತ್ತಿನಎಲ್ಲಾ ಸಂಕಟಗಳಿಗೆ ಮೂಕ ಸಾಕ್ಷಿಯಾಗುತ್ತಾ ಹೃದಯ ಬಿಕ್ಕಿ ಬಿಕ್ಕಿ ಮೊರೆಯುತ್ತಿದೆ.ಕವಿತೆಪಕ್ಕಕ್ಕಿದ್ದರೆ ಎಲ್ಲವನ್ನೂ ಹೇಳಿಕೊಂಡು ನಿರಾಳವಾಗಿ ಬಿಡುತ್ತಿದ್ದೆನೇನೋ.ಮನೆಯ ಬಾಗಿಲುತೆರೆಯಲೇ ಭಯವಾಗುವಷ್ಟು ಆತಂಕ ಕಾಡುತ್ತಿದೆ.ಅಕ್ಕ ಪಕ್ಕದ ಊರಿನ ಭಯವಿಹ್ವಲಸಂಗತಿಗಳು,ಯಾವ  ಕ್ಷಣ ಎಲ್ಲಿ ಇಲ್ಲಿಗೂಬಂದೆರಗಿ ಬಿಡಬಹುದೆಂಬ ಗುಮಾನಿಯಲ್ಲೇ ಬದುಕು ಕಳೆಯುವಂತಾಗಿದೆ. ಇಷ್ಟಕ್ಕೆಲ್ಲಾಕಾರಣ ಈ ಕವಿತೆ. ಹೇಳದೇ ಕೇಳದೇ ಕಣ್ತಪ್ಪಿಸಿಕೊಂಡು ಪರಾರಿಯಾಗಿ ಬಿಟ್ಟಿದೆ.ಕವಿತೆಯಬಗಲಲ್ಲಿ ನಾನು ಎಷ್ಟು ನಿಶ್ಚಿಂತಳು ಎಂಬುದು ಈಗ ಕವಿತೆಯ ಅನುಪಸ್ಥಿತಿಯಲ್ಲಿ ನನಗೆಮನವರಿಕೆಯಾಗುತ್ತಿದೆ.ಆದರೆ ಒಂದಂತೂ ದಿಟ.ಕವಿತೆಯ ಮೇಲೆ ನಾ ಎಷ್ಟೇ ಹರಿಹಾಯ್ದರೂ,ಕೋಪಗೊಂಡರೂ,ಮುನಿಸಿಕೊಂಡರೂ..ಕವಿತೆ ಮತ್ತೆ ನನ್ನ ಹತ್ತಿರ ಕುಳಿತುತಲೆ ನೇವರಿಸಿ,ಜಗದ ಸಂಕಟಗಳಿಗೆ,ನೋವುಗಳಿಗೆ,ಕಂಬನಿ ಮಿಡಿಯುತ್ತಾ,ಅಕ್ಷರದಮುಲಾಮು ಲೇಪಿಸುತ್ತಾ ನಿರಾಳವಾಗುವುದನ್ನ ತಾಳ್ಮೆಯಿಂದ ಕಲಿಸಿ ಕೊಟ್ಟೆ ಕೊಡುತ್ತದೆ.ಈಗಅದೆಲ್ಲಿಯೋ ಅಳುವ ಮಗುವ ರಮಿಸಲು,ಅವಳ ಕಣ್ಣೀರಿಗೆ ಸಾಂತ್ವಾನವಾಗಲು,ಮತ್ಯಾರದೋಬದುಕಿನ ಸಂಕಟಕ್ಕೆ ಕಿವಿಯಾಗಲು ಕವಿತೆ ತೆರಳಿರಬಹುದೆಂಬ ಬಲವಾದ ನಂಬಿಕೆಯಂತೂನನಗೆ ಇದ್ದೇ ಇದೆ.ಕವಿತೆಯ ಬಲದಿಂದಷ್ಟೇ ಬದುಕು ಚಲಿಸುತ್ತಿದೆಯೆಂಬುದು ನನಗಂತೂಅರಿವಿಗೆ ಬಂದ ಸಂಗತಿ.  ಈ ಚುಮು ಚುಮು ನಸುಕಿನಲ್ಲಿ ಚಳಿ ಕೊರೆಯುತ್ತಿದೆ.ಸಣ್ಣಗೆಬಿಸಿಲೇರುತ್ತಿದೆ.ಹೊರಗೆ ಅಂಗಳದಲ್ಲಿ ಯಾವುದೋ ಕೆಲಸಕ್ಕೆ ಕೈ ಹಚ್ಚಿಕೊಳ್ಳುತ್ತಾ,ಬಿಸಿಲುಬಿದ್ದ ಕಡೆಯೇ ಬೆನ್ನು ಮಾಡಿ ನಿಲ್ಲಬೇಕೆಂದು ಅನ್ನಿಸುತ್ತಿರುವಾಗಲೇ.. ಆ ಹೂ ಬಿಸಿಲಲ್ಲಿ ಸಣ್ಣರೆಂಬೆಯ ಮೇಲೆ ಬಣ್ಣ ಬಣ್ಣದ ರೆಕ್ಕೆಯ ಚಿಟ್ಟೆಯೊಂದು ಮೆಲ್ಲಗೆ ರೆಕ್ಕೆ ಕದಲಿಸುತ್ತಾಹಾಗೇ ಎಷ್ಟೋ ಹೊತ್ತಿನಿಂದ ಅದೇ ಭಂಗಿಯಲ್ಲಿ ಕುಳಿತು ಕೊಂಡಿದೆ.ಅಹಾ! ರೆಕ್ಕೆಯಕದಲುವಿಕೆಯಲ್ಲೇ ನಾ ಅಂದಾಜಿಸಬಲ್ಲೆ.ಕವಿತೆ ಯಾವುದೋ ಭಾವನಾ ತೀರಕ್ಕೆ ಯಾನಕೈಗೊಂಡು,ಕವಿತೆಯೊಂದಿಗೆ ಮೌನ ಸಂವಾದಕ್ಕಿಳಿದಿದೆ ಅಂತ.ಚಿಟ್ಟೆಯ ರೆಕ್ಕೆಯಲ್ಲಿ ಕುಳಿತುಗುನುಗುವ ಕವಿತೆ, ಸಧ್ಯ! ನನ್ನ ಮನೆಯ ಅಂಗಳದವರೆಗೆ ಬಂದುಕುಳಿತ್ತಿದೆಯೆಂಬುದು ನಿಚ್ಚಳವಾಗುತ್ತಿದೆ.ಎಷ್ಟೋ ಹೊತ್ತಿನವರೆಗೂ ನಾನೂ ಇದೇ ಗುಂಗಿನಲ್ಲಿಚಿಟ್ಟೆಯನ್ನು ನೋಡುತ್ತಾ ಕುಳಿತುಕೊಂಡಿರುವೆನಲ್ಲಾ..!.ನನಗೂ ರೆಕ್ಕೆಬಂದಂತೆನ್ನಿಸುತ್ತಿದೆ. ಕವಿತೆಯೊಂದು ಎಲ್ಲರ ಜೀವಗಳಲ್ಲಿ ಮಿಡುಕಾಡುವ ಭಾವವಾಗಲಿ.ಕವಿತೆಬದುಕು ಹಸನುಗೊಳಿಸಬಹುದು ಅಂತ ನೆನೆದುಕೊಳ್ಳುತ್ತಲೇ ಕವಿತೆಯೊಂದಿಗೆಒಳಗಡಿಯಿಡುತ್ತಿರುವೆ.ಬದುಕು ಸುಂದರ ಅಂತ ಅನ್ನಿಸುತ್ತಿದೆ ಈ ಹೊತ್ತಲ್ಲಿ.                                   =============

ಲಹರಿ Read Post »

ಇತರೆ

ರೈತ ದಿನಾಚರಣೆ

ನೇಗಿಲಯೋಗಿ ಎನ್.ಶಂಕರರಾವ್ ರೈತರ ದಿನಾಚರಣೆ ಅಂಗವಾಗಿ ವಿಷಯ. ನೇಗಿಲ ಯೋಗಿ ಸುಮಾರು ಶೇಕಡಾ ೬೦ ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ , ಹಳ್ಳಿ ಹಳ್ಳಿಗಳಲ್ಲಿ ನಮ್ಮ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ದೇಶದ ಆಹಾರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಪರಿಶ್ರಮ ಪಡುತ್ತಿದ್ದಾರೆ. ಡಾ. ಸ್ವಾಮಿನಾಥನ್ ಅವರು ಹಸಿರು ಕ್ರಾಂತಿಯ ಹರಿಕಾರ. ಆಹಾರ ಸಮಸ್ಯೆ ಎದುರಿಸುತ್ತಿರುವ ಕಾಲದಲ್ಲಿ, ಹಸಿರು ಕ್ರಾಂತಿಯಿಂದ ಸುಭಿಕ್ಷವಾಯಿತು. ಭತ್ತ, ಗೋಧಿ ಬೆಳೆಯುವ ಯೋಜನೆ ಜಾರಿಗೆ ಬಂದು, ನಂತರ, ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳುಗಳಿಗೆ ಆಧ್ಯತೆ ನೀಡಲಾಗಿದೆ. ಈಗ ಒಣ ಬೇಸಾಯಕ್ಕೆ ಒತ್ತು ನೀಡಿ, ಜಲಾನಯನ ಅಭಿವೃದ್ಧಿ ಮೂಲಕ, ನಮ್ಮ ರೈತರು, ನೆಲ ಜಲ ಸಂರಕ್ಷಿಸಲು ಮುಂದೆ ಬಂದಿದ್ದಾರೆ. ನಮ್ಮ ನೇಗಿಲ ಯೋಗಿಯ ಜೀವನ ಹೇಗಿದೆ ಎಂದು ಪರಾಮರ್ಶೆ ನಡೆಸುವುದು ನಮ್ಮೆಲ್ಲರ ಹೊಣೆ. ಸ್ವಾವಲಂಬಿಯಾಗಿದ್ದ ರೈತರ ಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪಿದೆ. ವಿವಿಧ ಸುಲಭ ಯೋಜನೆಯ ಮೂಲಕ ಅವರನ್ನು ದೇಹೀ ಎಂಬ ಪರಿಸ್ಥಿತಿಗೆ ತಳ್ಳಿದೆ. ಹಳ್ಳಿಗಳಲ್ಲಿ ಪಟ್ಟಣದ ಸೌಲಭ್ಯ ಒದಗಿಸಲು ಸರ್ಕಾರ ವಿಫಲವಾಗಿದ್ದು, ಯುವಜನರ ಒಲಸೆಗೆ ಕಾರಣವಾಗಿದೆ. ಕೂಲಿಕಾರರ ಅಲಭ್ಯತೆ, ಮಳೆಯ ವೈಪರೀತ್ಯ, ಬೆಳದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಇಲ್ಲದಿರುವುದು, ಗೂಬ್ಬರ ದೊರೆಯದ ಹಿನ್ನೆಲೆಯಲ್ಲಿ, ನೇಗಿಲ ಯೋಗಿಯು, ಸಮಸ್ಯೆ ಎದುರಿಸುತ್ತಿದ್ದಾರೆ. ಬ್ಯಾಂಕ್ ಗಳು ನೀಡಿದ ಸಾಲಬಾಧೆ, ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೆ, ಋಣಭಾರದ ಚಕ್ರವ್ಯೂಹದಲ್ಲಿ ಸಿಲುಕಿ, ಆತ್ಮಹತ್ಯೆಗೆ ಶರಣಾದ ನೇಗಿಲ ಯೋಗಿಯ ವಿಶಾದ ಕಥೆ ಕೇಳಿದ್ದೇವೆ. ಇದಕ್ಕೆಲ್ಲಾ ಪರಿಹಾರ ವಿಲ್ಲವೆ.? ಇದೆ, ಆದರೆ ನಾವೆಲ್ಲರೂ ಮತ್ತು ಸರ್ಕಾರ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಿಲ್ಲ. ಕೆಲವು ದೀರ್ಘಾವಧಿ ಯೋಜನೆ ಜಾರಿಗೆ ತರುವ ಚಿಂತನೆ ಅಗತ್ಯ. ಮಣ್ಣು ಪರೀಕ್ಷೆ, ಪರ್ಯಾಯ ಬೆಳೆಯ ಬಗ್ಗೆ ಮಾಹಿತಿ, ಉತ್ತಮ ತಳಿಯ ಬೀಜಗಳನ್ನು ಕಡ್ಡಾಯವಾಗಿ ನೀಡುವ ಗುರಿ, ಜೈವಿಕ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ, ವೈಜ್ಞಾನಿಕ ಕೃಷಿಯ ಅಳವಡಿಕೆ, ಸಾಲದ ಸದುಪಯೋಗ, ಸೂಕ್ತ ಬೆಲೆ, ಸುಲಭ ಮಾರುಕಟ್ಟೆ, ಇತ್ಯಾದಿ. ಜೈ ಜವಾನ್, ಜೈ ಕಿಸಾನ್ ಕೇವಲ ಶಬ್ದಗಳ ಮೂಲಕ ಇರದೆ, ಮನದಾಳದಿಂದ ಮೂಡಿಬಂದ ಭಾರತೀಯರ ಆಶ್ವಾಸನೆ ಆದರೆ, ನಮ್ಮ ನೇಗಿಲಯೋಗಿಯ ಬದುಕು ಹಸನಾಗುತ್ತದೆ ಮತ್ತು ಕುವೆಂಪು ಅವರು ಹೇಳಿರುವಂತೆ ಉಳುವ ನೇಗಿಲ ಯೋಗಿಯ ನೋಡಲ್ಲಿ ಸಾಕಾರ ವಾಗುತ್ತದೆ.

ರೈತ ದಿನಾಚರಣೆ Read Post »

ಇತರೆ

ಪ್ರಬಂಧ

ಒಂದು ವಿಳಾಸದ ಹಿಂದೆ ಸ್ಮಿತಾ ಅಮೃತರಾಜ್. ಸಂಪಾಜೆ. ವಿಳಾಸವಿಲ್ಲದವರು ಈ ಜಗತ್ತಿನಲ್ಲಿ ಯಾರಾದರೂ ಇರಬಹುದೇ?. ಖಂಡಿತಾ ಇರಲಾರರು ಅಂತನ್ನಿಸುತ್ತದೆ. ಇಂತಹವರ ಮಗ, ಇಂತಹ ಊರು,ಇಂತಹ ಕೇರಿ,ಇಂತಹ ಕೆಲಸ..ಹೀಗೆ ಇಂತಹವುಗಳ ಹಲವು ಪಟ್ಟಿ  ಹೆಸರಿನ ಹಿಂದೆ ತಾಕಿಕೊಳ್ಳುತ್ತಾ ಹೋಗುತ್ತದೆ.  ವಿಳಾಸವೊಂದು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯೆಂಬ ಮಾತನ್ನು ನಾವ್ಯಾರು ಅಲ್ಲಗಳೆಯುವ ಹಾಗಿಲ್ಲ. ಯಾವುದೇ ಆಮಂತ್ರಣ ಪತ್ರವಾಗಲಿ, ದಾಖಲೆಗಳಾಗಲಿ ವಿಳಾಸವಿಲ್ಲದಿದ್ದರೆ ಅಪೂರ್ಣವಾಗುತ್ತದೆ.  ಪರಿಪೂರ್ಣ ವಿಳಾಸವಂತೂ ಇವತ್ತಿನ ಆಧುನಿಕ ಯುಗದ ಜರೂರು ಕೂಡ.  ನಮಗೆಲ್ಲ ಗೊತ್ತಿರುವಂತೆ  ಅಕ್ಷರಾಭ್ಯಾಸ ಮಾಡಿ ಶಾಲೆ ಮೆಟ್ಟಿಲೇರಬೇಕಾದರೆ ನಮ್ಮ ಪೂರ್ಣ ವಿಳಾಸವೊಂದು ದಾಖಲಿಸಲ್ಪಡುವುದು. ತದನಂತರ ಮುಂದೆ ಎದುರಿಸುವ ಸಂದರ್ಶನಕ್ಕಾಗಲಿ, ಉದ್ಯೋಗಕ್ಕಾಗಲಿ ನಮ್ಮ ಪೂರ್ತಿ ವಿಳಾಸವನ್ನು ಸಂಬಂಧ ಪಟ್ಟವರಿಗೆ ನೀಡಲೇ ಬೇಕು. ನಮ್ಮ ವಿಳಾಸ ಕಟ್ಟಿಕೊಂಡು ಇವರಿಗೇನು?  ನಾವು, ನಮ್ಮ ಕೆಲಸ ಮುಖ್ಯ ತಾನೇ ಅಂತ ನಾವ್ಯಾರು ಉಢಾಪೆಯ ಮಾತುಗಳನ್ನಾಡುವಂತಿಲ್ಲ. ಅದೇನೇ ಇರಲಿ, ನಾವು ಎಲ್ಲೇ ಹೋಗಲಿ, ನೇರವಾಗಿ ನಮ್ಮ ಹೆಸರಿನ ಹಿಂದೆಯೋ, ಯಾರ ಕೇರಾಫಿನೊಳಗೋ ನಮ್ಮ ವಿಳಾಸವೊಂದು ಖುದ್ದು ಇದ್ದೇ ಇರುತ್ತದೆ. ವಿಳಾಸವಿಲ್ಲದಿದ್ದರೆ ಬರಿದೇ ವ್ಯಕ್ತಿತ್ವಕ್ಕೆ ಸಲ್ಲದ ಕಾಲವಿದು.  ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ವಿಳಾಸ ನೇರವಾಗಿ ಬರುವುದು ತೀರಾ ಅಪರೂಪ.  ಕೆಲವು ಅದಕ್ಕೆ ಅಪವಾದಗಳು ಕೂಡ ಇರಬಹುದು. ಎಳವೆಯಿಂದ ಮದುವೆಯಾಗುವ ತನಕ ಇ/ಮ ಅಂತ ನಮೂದಿಸಿ ವಿಳಾಸ ಬರೆಯುತ್ತಾರೆ. ಮದುವೆಯಾದ ಮೇಲಂತೂ ಇ/ಹೆ ಎಂದು ವಿಳಾಸ ಹೊದ್ದ ಟಪಾಲುಗಳು ಬರುತ್ತವೆ. ಮಹಿಳೆಯ ಹೆಸರಿನ ಜೊತೆಗೆ ಮನೆ ಹೆಸರು, ಊರಿನ ಹೆಸರು ಬರೆದು ಹಾಕಿದರೆ ಅದು ಯಾಕೆ ಪತ್ರಗಳು ಬಟಾವಡೆಯಾಗುವುದಿಲ್ಲವೋ ಗೊತ್ತಿಲ್ಲ. ಇದಕ್ಕೊಂದು ಸಂಶೋಧನೆಯ ಅಗತ್ಯವಿದೆ ಅಂತ ಹಲವು ಬಾರಿ ಅನ್ನಿಸಿದ್ದಿದೆ.  ಇತ್ತೀಚೆಗಂತೂ ಬಾಯಿ ಹೇಳಿಕೆಗಳು ನಿಂತು ಹೋಗಿ, ಸಾಕಷ್ಟು ನಮ್ಮ ಶ್ರಮ ಮತ್ತು ಸಮಯವನ್ನು ಉಳಿತಾಯ ಮಾಡೋ ನಿಟ್ಟಿನಲ್ಲಿ ಮದುವೆ, ಮುಂಜಿ, ನಾಮಕರಣ,ನೇಮ, ಜಾತ್ರೆ, ಗೋಷ್ಠಿಯ ಆಮಂತ್ರಣ ಪತ್ರಿಕೆಗಳು ಟಪಾಲು ಗುದ್ದಿಸಿಕೊಂಡು ಬಂದು ಪಡಸಾಲೆಯ ಮೇಜಿನ ಮೇಲೆ ಅಲಂಕರಿಸುತ್ತಲೇ ಇರುತ್ತವೆ. ಬಂದ ಎಲ್ಲ ಕರೆಯೋಲೆಗಳ ಕರೆಗೆ ನಿಯತ್ತಿನಿಂದ ಭಾಗವಹಿಸುವುದಾದರೆ ದಿನದ ಇಪ್ಪತ್ತನಾಲ್ಕು ಗಂಟೆಯೂ, ವರ್ಷದ ಮುನ್ನೂರ ಅರವತ್ತೈದು ದಿನವೂ ಸಾಕಾಗಲಾರದೇನೋ.  ಕೆಲವರು ತುಂಬಾ ಬೇಕಾದವರ ಪಟ್ಟಿಯಲ್ಲಿ ಇರುವುದರಿಂದ ಕೆಲವೊಂದು ಸಮಾರಂಭಗಳಿಗೆ ಹೋಗದೆ ವಿಧಿಯಿಲ್ಲ. ಅದರಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಉಪಾಯದ ದಾರಿಯೆಂದರೆ ನಮಗೆ ಪತ್ರ ತಲುಪಲೇ ಇಲ್ಲವೆಂದು  ಅವರು ಸಿಕ್ಕಾಗ ಸುಖಾ ಸುಮ್ಮಗೊಂದು ಪಿಳ್ಳೆ ನೆವ ಹೇಳಿ ಜಾರಿಕೊಂಡು ಬಿಡುವುದು. ಆಗ ಅತ್ತ ಕಡೆಯವರಿಗೆ ಮಂಡೆ ಬಿಸಿ ಶುರುವಾಗಿ, ಛೆ! ನನ್ನ ಕೈಯಾರೆ ನಾನೇ ಸರಿಯಾದ ವಿಳಾಸ ಬರೆದಿರುವೆನಲ್ಲ? ಅಂತ ಅವರಿಗೆ ಅಂಚೆ ಇಲಾಖೆಯ ಮೇಲೆಯೇ ಗುಮಾನಿ ಶುರುವಾಗಿ ಬಿಡುತ್ತದೆ. ಅದು ಕೆಲವೊಮ್ಮೆ ಎಷ್ಟರ ಮಟ್ಟಿಗೆ ಹೋಗುತ್ತದೆಯೆಂದರೆ ಅಂಚೆಯಣ್ಣ ಸಿಕ್ಕಾಗ ಅವನನ್ನು ನಿಲ್ಲಿಸಿ ನೂರೆಂಟು ಪ್ರಶ್ನೆಗಳನ್ನು ಕೇಳುವಲ್ಲಿಯವರೆಗೆ. ಇಷ್ಟಾಗುವಾಗ ನಮ್ಮ ಉಪಸ್ಥಿತಿ ಅಷ್ಟೊಂದು ಪ್ರಾಮುಖ್ಯ ಇತ್ತಾ? ಅಂತ ಮನದೊಳಗೊಂದು ಸಣ್ಣಗೆ ಬಿಗುಮಾನ ಮೂಡಿ ,ಸುಮ್ಮಗೆ ತಪ್ಪಿಸಿಕೊಂಡದ್ದಕ್ಕೆ ನಮ್ಮನ್ನು ನಾವು ಶಪಿಸಿಕೊಳ್ಳುವಂತಾಗುತ್ತದೆ.   ಮೊನ್ನೆಯೊಂದು ಸಮಾರಂಭದಲ್ಲಿ ಪರಿಚಿತರೊಬ್ಬರು ಪಕ್ಕದಲ್ಲಿದ್ದ ಆಂಟಿಯನ್ನು ಮತ್ತೊಬ್ಬರಿಗೆ ಪರಿಚಯಿಸುತ್ತಾ, ಇವರು ಇಂತಹವರ ಅತ್ತೆ, ಇವರ ಅಳಿಯ ಗೊತ್ತುಂಟಲ್ವಾ..ಭಾರೀ  ಫೇಮಸ್ ಅಂತ ಮತ್ತಷ್ಟು ಒಗ್ಗರಣೆ ಹಾಕಿ ಹೊಗಳುತ್ತಿರುವುದನ್ನು ನಾನು ಕಡೆಗಣ್ಣಿನಿಂದ ನೋಡುತ್ತಾ ಇವರು ಈಗ ಗತ್ತಿನಿಂದ ಬೀಗುತ್ತಾರೇನೋ ಅಂತ ಗಮನಿಸಿದರೆ, ಆಂಟಿಯ ಮುಖದಲ್ಲಿ ಖುಷಿಯ ಇನಿತು ಅಲೆಯೂ ನುಗ್ಗಲಿಲ್ಲ. ಏಕ್ ದಂ ಅವರು ರಾಂಗ್ ಆಗಿ, ಮುಖ ಕೆಂಪಾಗಿ, ಮೂಗಿನ ತುದಿ ಖಾರ ಮೆಣಸಿನಕಾಯಿಯಾಗಿ ಯಾಕ್ರೀ..! ಅವರಿವರ ವಿಳಾಸ ಹೇಳಿಕೊಂಡು ನನ್ನನ್ನು ಪರಿಚಯಿಸ್ತೀರಲ್ಲಾ?, ನನಗೆ ನನ್ನದೇ ಆದ ಪೂರ್ಣ ವಿಳಾಸವಿಲ್ಲಾ? ಅಂತ ರಪ್ಪನೆ ಕೆನ್ನೆಗೆ ಬಾರಿಸಿದಂತೆ ಕೊಟ್ಟ ಖಾರ ಉತ್ತರದ ಘಾಟಿಗೆ ಆ ಮಹಾಶಯರು ಮುಖ ಹುಳ್ಳಗೆ ಮಾಡಿಕೊಂಡು ಅದಾಗಲೇ ಜಾಗ ಖಾಲಿ ಮಾಡಿದ್ದರು. ನೋಡಿದವರಿಗೆ ಇದೊಂದು ಅಧಿಕಪ್ರಸಂಗಿತನದ ಉತ್ತರ ಅಂತ ಅನ್ನಿಸಿದರೂ ನಿಜಕ್ಕೂ ಅವರ ಧೈರ್ಯಕ್ಕೆ ಮತ್ತು ಮನೋಭಾವಕ್ಕೆ ಭೇಷ್ ಅನ್ನಲೇ ಬೇಕು. ಅವರಿವರ ವಿಳಾಸ ಹೇಳಿಕೊಂಡು ನಮ್ಮನ್ನು ಪರಿಚಯಿಸುವ ಅಗತ್ಯವಿದೆಯಾ? ನಮಗೂ ಸ್ವತಂತ್ರ ಅಸ್ಥಿತ್ವ ಇರಬಾರದ? ಅನ್ನುವುದು ಅವರ ವಾದ. ಒಂದು ಸಹಜ ಪ್ರಶ್ನೆಗೆ ರೇಗುವಿಕೆಯ ಹಿಂದೆ ಅದೆಷ್ಟು ನೋವಿತ್ತೋ ಅದು ಅವರಿಗಷ್ಟೇ ಗೊತ್ತು. ಆಗಲೇ ಗೆಳತಿಯೊಬ್ಬಳು ಹೇಳಿದ ಮಾತು ನೆನಪಾದದ್ದು.  ಬಡ ಮನೆತನದ ಹುಡುಗಿಯೇ ಬೇಕೆಂದು ಹಠಕಟ್ಟಿ ಸೊಸೆಯನ್ನಾಗಿಸಿಕೊಂಡ ನಂತರ, ನಮ್ಮಿಂದಾಗಿ ನಿನಗೊಂದು ಪೂರ್ಣ ವಿಳಾಸ ದಕ್ಕಿದೆ ಅಂತ  ಅವಳತ್ತೆ ಮೂದಲಿಸುತ್ತಿದ್ದದ್ದು . ನಿಜಕ್ಕೂ ವಿಳಾಸದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳದ ನಾನು, ಈ ವಿಳಾಸ ಇಷ್ಟೊಂದು ಗಂಭೀರವಾಗಿ ಯೋಚಿಸುವಂತೆ ಮಾಡುತ್ತದೆಯಲ್ಲವಾ ? ಅಂತ ನನಗೆ ಆವತ್ತೇ ಅನ್ನಿಸಿದ್ದು, ಮತ್ತೆ ಹೀಗೇ ವಿಳಾಸದ ಅನೇಕ ಕತೆಗಳು ಬಿಚ್ಚಿಕೊಳ್ಳುತ್ತಾ ಹೋದದ್ದು.   ಈಗೀಗ ವಿಳಾಸದ ಸಂಗತಿಗಳು ಮೊದಲಿನಂತಿಲ್ಲ. ಪಾಸ್ ಪೋರ್ಟ್, ವೀಸಾ ಮುಂತಾದವುಗಳಿಗೆ ದಾಖಲೆ ತೋರಿಸುವಾಗ ಎಲ್ಲಾ ಕಡೆಯಿಂದಲೂ ವಿಳಾಸ ಸಮನಾಗಿ ಕಾಣಬೇಕು. ಒಂದು ಅಕ್ಷರವಾಗಲಿ, ಇನಿಷಿಯಲ್ ಆಗಲಿ , ಹೆಸರಿನ ಹಿಂದೆ ಅಂಟಿಕೊಂಡ ಮನೆತನದ ಹೆಸರುಗಳಾಗಲಿ ಯಾವುದೂ ಬದಲಾವಣೆ ಹೊಂದುವAತಿಲ್ಲ. ಒಂದು ಸಣ್ಣ ಅಕ್ಷರದ ಪ್ರಮಾದದಿಂದ ಅದೆಷ್ಟೋ ದೊಡ್ಡ ಅವಕಾಶಗಳು ಕೈ ತಪ್ಪಿ ಹೋದ ಸಂದರ್ಭಗಳಿವೆ. ಎರಡೇ ಎರಡು ಇನಿಷಿಯಲ್‌ಗಳಿಗೂ ಕೂಡ ಅಷ್ಟೊಂದು ಪ್ರಾಮುಖ್ಯತೆ ಉಂಟಾ ಅಂತ ಅಚ್ಚರಿಯಾಗುತ್ತದೆ. ಹಾಗಾಗಿ ನಮ್ಮ ಹೆಣ್ಮಕ್ಕಳೀಗ ಯಾವುದೇ ಸಬೂಬುಗಳನ್ನು ಕೊಡದೆ ಧೈರ್ಯದಿಂದ ಅಪ್ಪನ ಮನೆಯಿಂದ ಬಳುವಳಿಯಾಗಿ ಬಂದ ಹೆಸರನ್ನೇ ಇಟ್ಟುಕೊಂಡು ನಿಸೂರಾಗಿದ್ದಾರೆ.   ಒಮ್ಮೆ ಹೀಗಾಗಿತ್ತು, ಮದುವೆಗೆ ಮೊದಲೇ ನನಗೆ ಕವಿತೆ,ಲೇಖನ ಬರೆಯುವ ಹುಚ್ಚು. ಆಗೆಲ್ಲಾ ತವರು ಮನೆಯ ಹೆಸರನ್ನು ನನ್ನ ಹೆಸರಿನ ಹಿಂದೆ ಅಂಟಿಸಿಕೊಂಡಿದ್ದೆ. ಮದುವೆಯಾದ ಮೇಲೂ ಅದೇ ಹೆಸರು ಹಾಕಿ ಕವಿತೆ ವಾಚಿಸಲು ಕರೆಯುವುದು, ಆಮಂತ್ರಣ ಪತ್ರಿಕೆ ಬರುವುದು, ಅನೇಕ ಸಂದರ್ಭಗಳಲ್ಲಿ ಅದೇ ಹೆಸರಿನಿಂದ ಗುರುತಿಸುವಾಗ ಯಾಕೋ ಸಣ್ಣಗೆ ಕಸಿವಿಸಿಯಾಗುತ್ತಿತ್ತು. ಕೊಟ್ಟ ಹೆಣ್ಣು ಕುಲದಿಂದ ಹೊರಗೆ ಅನ್ನುವ ಮಾತನ್ನು ಕೆಲವರು ತಮಾಷೆಗೇನೋ ಎಂಬಂತೆ ಮೆಲ್ಲಗೆ ನನ್ನ ಕಿವಿಯಲ್ಲಿ ಉಸುರಿದ್ದರು ಕೂಡ . ಒಂದೊಮ್ಮೆ ಹಾಗೇ ನನ್ನ ಹೆಸರಿನ ಹಿಂದೆ ತವರು ಮನೆಯ ಹೆಸರು ಅಂಟಿಕೊಂಡು ಬಂದಾಗ, ನಾನು ಸಂಘಟಕರಿಗೊಂದು ಪತ್ರ ಬರೆದು ,ನನಗೆ ಮದುವೆಯಾದ ಕಾರಣ ನನ್ನ ಹೆಸರಿನ ಹಿಂದಿನ ಈಗಿನ ವಿಳಾಸ ಬದಲಾಗಿದೆ, ಇನ್ನು ಮುಂದೆ ಈ ಕೆಳಕಂಡ ವಿಳಾಸದಂತೆ ನಮೂದಿಸಬೇಕೆಂದು ಪತ್ರ ಬರೆದದ್ದು ನೆನೆದರೆ ನಾನು ಅವರಿವರು ಕೇಳುವ ಪ್ರಶ್ನೆಯಿಂದ ಬಚಾವಾಗಲು ಹೀಗೆ ಮಾಡಿದೇನಾ?!. ಅಥವಾ ಇದು ನನ್ನ ಖಾಯಂ ವಿಳಾಸ ಅನ್ನೋ ಮೋಹವಿತ್ತಾ? ನೆನಪಿಗೆ ಸರಿಯಾಗಿ ಒದಗಿ ಬರುತ್ತಿಲ್ಲ.  ಈ ಹೊತ್ತಿನಲ್ಲಿ ಎಳವೆಯ ಕತೆಯೊಂದು ನುಗ್ಗಿ ಬರುತ್ತಿದೆ. ಏಳನೇ ತರಗತಿಯಲ್ಲಿ ನಮ್ಮ ಕನ್ನಡ ಟೀಚರ್ ನಮಗೆ ಪತ್ರ ಲೇಖನ ಕಲಿಸುತ್ತಿದ್ದರು. ಪರೀಕ್ಷೆಗೆ ಇದನ್ನೇ ಕೊಡುವೆನೆಂದು ಕೂಡ ಹೇಳಿದ್ದರು. ಅದೇ ವರ್ಷ ನನ್ನ ತಂದೆ ತೀರಿ ಹೋಗಿ ನಾನು ಯಾವ ವಿಳಾಸಕ್ಕೆ ಪತ್ರ ಬರೆಯಲಿ ಎಂಬುದೇ ನನಗೆ ಬಹು ದೊಡ್ಡ ಚಿಂತೆಯಾಗಿತ್ತು. ಜೊತೆಗೆ ವಿಳಾಸವೇ ಕೊಡದೆ ಹೋದ ಅಪ್ಪನ ಬಗ್ಗೆಅಗಾಧ ದು:ಖವೂ ಸಣ್ಣಗೆ ಅಸಮಾಧಾನವೂ ಆಗಿತ್ತು.  ಯಾಕೆಂದರೆ ನನಗೆ ಮೊದಲು ಪತ್ರ ಬರೆಯುವ ಹುಚ್ಚು ಹಿಡಿಸಿದ್ದೇ ನನ್ನ ಅಪ್ಪ. ಒಳಗಡೆ ನೀಟಾಗಿ ಬರೆಯದಿದ್ದರೂ ತೊಂದರೆಯಿಲ್ಲ, ಆದರೆ  ವಿಳಾಸವೊಂದು ಚಿತ್ತಿಲ್ಲದೆ ಸರಿಯಾಗಿ ಬರೆಯ ಬೇಕೆಂದು ತಾಕೀತು ಮಾಡಿದ್ದರು. ಇಲ್ಲದಿದ್ದರೆ ಪತ್ರ ತಲುಪಬೇಕಾದಲ್ಲಿಗೆ ತಲುಪದೆ ಹಾಗೇ ಡಬ್ಬಿಯೊಳಗೆ ಉಳಿದು ಬಿಡುತ್ತದೆಯೆಂದು ಹೆದರಿಸುವುದರ ಮೂಲಕ ಜಾಗರೂಕತೆಯಿಂದ ವಿಳಾಸ ಬರೆಯುವ ವಿಧಾನವ ಕಲಿಸಿ ಕೊಟ್ಟಿದ್ದರು. ಯಾಕೋ ಇದನ್ನೆಲ್ಲಾ ಟೀಚರಮ್ಮನ ಬಳಿ ಕೇಳೋಕೆ  ಒಂಥರಾ ಭಯ . ಇದೇ ಗೊಂದಲದಲ್ಲಿರುವಾಗಲೇ ಪಕ್ಕದ ಮನೆಯ ಅಣ್ಣನೊಬ್ಬ ನನಗೆ ಪುಕ್ಕಟೆ ಸಲಹೆಯೊಂದನ್ನು ಬಹು ಗಂಭೀರವಾಗಿ ಕೊಟ್ಟಿದ್ದ. ಈ ಸಲದ ಪರೀಕ್ಷೆಗೆ ಅಪ್ಪನ ವಿಳಾಸ ಹಾಕಿ, ಅಪ್ಪನಿಗೊಂದು ಪತ್ರ ಬರೆ ಅಂತ ಕೊಟ್ಟರೆ, ನನಗೆ ಅಪ್ಪನಿಲ್ಲದ ಕಾರಣ ನಾನು ನನ್ನ ಅಮ್ಮನ ವಿಳಾಸಕ್ಕೆ ಅಮ್ಮನಿಗೆ ಪತ್ರ ಬರೆಯುತ್ತಿರುವೆ ಅಂತ ಒಕ್ಕಣೆಯನ್ನು ಲೆಕ್ಕಿಸಿ ಪತ್ರ ಬರಿ ಅಂತ ಹೇಳಿದ್ದ.  ಅವನು ಹೇಳಿದ ಮಾತನ್ನು ಶಿರಸಾವಹಿಸಿ ಪಾಲಿಸಿದ್ದೆ ಕೂಡ. ನನ್ನ ಪತ್ರ ಲೇಖನ ಓದಿದ ಟೀಚರಮ್ಮನ ಕಣ್ಣಲ್ಲಿ ಹನಿಯೊಡೆದು,ಕನಿಕರ ಹುಟ್ಟಿ, ಮುಂದೆ ಬರುವ ದೊಡ್ಡ ಪರೀಕ್ಷೆಯಲ್ಲಿ ಮಾತ್ರ ಹೀಗೆ ಬರಿಬೇಡ ಆಯ್ತಾ ಅಂತ  ಗಟ್ಟಿ ಸ್ವರದ ಮೇಡಂ ತೀರಾ ಮೆತ್ತಗೆ ದನಿಯಲ್ಲಿಯೇ ಅದರ ಉದ್ದೇಶವನ್ನು ಹೇಳಿಕೊಟ್ಟಿದ್ದರು.  ಒಂದಷ್ಟು ವರುಷದ ಹಿಂದೆ ಪತ್ರ ಬರೆಯುವುದು, ಮತ್ತು ಪತ್ರ ಬರುವುದಕ್ಕೂ ಒಂದು ಘನತೆ ಇರುತ್ತಿತ್ತು. ಕ್ಷೇಮವೇ? ಕುಶಲವೇ? ಅಂತ ಶುರುಗೊಳ್ಳುವ ಒಕ್ಕಣೆಯಿಂದ ಹೇಳ ಬೇಕಾದುದ್ದನ್ನೆಲ್ಲ ಅರುಹಿ, ಪತ್ರದ ನಾಲ್ಕು ಬದಿಗೂ ಚೆನ್ನಾಗಿ ಗೋಂದು ಅಂಟಿಸಿ , ವಿಳಾಸ ಸರಿಯಿದೆಯಾ ಅಂತ ಮತ್ತೊಮ್ಮೆ ಕಣ್ಣಾಡಿಸಿ  ಅಂಚೆ ಡಬ್ಬಿಗೆ ಹಾಕಿದ ಮೇಲೇ ಏನೋ ಹಗುರತನದ ಭಾವ. ಈಗ ಇಂಟರ್ನೆಟ್ ಯುಗದಲ್ಲಿ ವಿಳಾಸ  ಬರೆದು ಪತ್ರಿಸುವ ಕಾಯಕ ಕಣ್ಮರೆಯಾದರೂ, ವಿಳಾಸವಂತೂ ಮತ್ತಷ್ಟು ಗಟ್ಟಿಯಾಗಿ ಅಂಟಿಕೊಂಡಿರುವುದು ಮತ್ತು ಇದರಿಂದಾಗುವ ಗಲಿಬಿಲಿ, ಗೊಂದಲ, ಗಂಡಾಂತರಗಳು ಹಲವು. ಇತ್ತೀಚೆಗಂತೂ ದೊಡ್ಡ ದೊಡ್ಡ ಬಡಾವಣೆಗಳಲ್ಲಿ ವಿಳಾಸ ಹುಡುಕಿಕೊಂಡು ಗಲ್ಲಿ ಗಲ್ಲಿ ಅಲೆಯುವುದು ಅದೆಷ್ಟು ತ್ರಾಸದಾಯಕ ಕೆಲಸ ಅನ್ನುವಂತದ್ದು ನಮಗೆಲ್ಲಾ ಗೊತ್ತೇ ಇದೆ. ಇನ್ನು ಆಟೋ ಚಾಲಕರೆಲ್ಲಾ ಒಂದೇ ರೀತಿ ಇರದಿದ್ದರೂ ಕೆಲವೊಮ್ಮೆ ನಮ್ಮ ಕಣ್ಕಟ್ಟು ಮಾಡಿ ನಿಂತ ಜಾಗದಲ್ಲೇ ಸುತ್ತು ತಿರುಗಿಸಿ ದುಪ್ಪಟ್ಟು ಹಣ ಮಸೂಲಿ ಮಾಡುವುದು ಸರ್ವೇ ಸಾಮಾನ್ಯ. ಹಳ್ಳಿ ಬಿಟ್ಟು ನಗರ ಪ್ರದೇಶಕ್ಕೆ ಅಷ್ಟಾಗಿ ಪ್ರವೇಶ ಮಾಡಿರದ ನಾನು, ಒಂದೊಮ್ಮೆ ಹೈದರಬಾದಿಗೆ ಹೋಗಿ ಬೆಂಗಳೂರಿಗೆ ಬಂದಿಳಿದಾಗ, ಸರಿಯಾದ ವಿಳಾಸಕ್ಕೆ ತಲುಪಿಸದೆ ಆಟೊ ಚಾಲಕ ಅಡ್ಡಾಡಿಸಿದ್ದು, ಜೊತೆಯಲ್ಲಿ ಇದ್ದ ಗೆಳತಿಯೊಬ್ಬಳು ಅವನ ಕಷ್ಟ ಸುಖ ವಿಚಾರಿಸುತ್ತಾ ಕುಳಿತ್ತದ್ದು,  ಅದನ್ನು ಕೇಳಿಕೊಂಡೇ ಅವ ನಮ್ಮನ್ನು ಸುಮ್ಮಗೆ ಮತ್ತೊಂದು ಸುತ್ತು ಸುತ್ತಿಸಿದ್ದು, ತದನಂತರ ತಲುಪಿಸಬೇಕಾದಲ್ಲಿಗೆ ನಮ್ಮ ತಲುಪಿಸದೆ ನಾವು ಬೆಪ್ಪು ತಕ್ಕಡಿಯಂತಾಗಿ ಮತ್ತೊಂದು ಆಟೋ ಹತ್ತಿ ಗೆಳತಿಗೆ ತುಟಿ ತೆರೆಯದಂತೆ ಆದೇಶ ಮಾಡಿ ತಲುಪಬೇಕಾದ ವಿಳಾಸ ತಲುಪಿದ್ದು ಎಲ್ಲಾ ಈಗ ಕತೆಯಂತೆ ಸುಳಿದು ಹೋಗುವ ವಿಚಾರ.  ಅದೇನೆ ಇರಲಿ, ಗುರುತು ಪರಿಚಯ ಇರದ ಊರಿಗೆ ಬಂದು  ಗೊತ್ತಿಲ್ಲದ ವಿಳಾಸವೊಂದನ್ನು  ಕೈಯಲ್ಲಿ ಹಿಡಿದು ಕೊಂಡು ಆಟೋ ಹತ್ತಿ ಅಂಡೆಲೆಯುವಾಗ ಪರ್ಸ್ನಲ್ಲಿದ್ದ ಹಣ ಪೂರ ಖಾಲಿಯಾಗುವುದು ಮಾತ್ರ ವಿಳಾಸದ ಮಹಿಮೆಯೇ ಸರಿ.  ಒಮ್ಮೆ ತೀರಾ ಎಳವೆಯಲ್ಲಿ ಸಂಬಂಧಿಕರ ಮನೆಗೆಂದು ಬೆಂಗಳೂರಿಗೆ ಹೋದ ನನ್ನ ಪುಟ್ಟ ತಮ್ಮನಿಗೆ  ನಾವು ಅದೆಷ್ಟು ಭಾರಿ ಜಾಗ್ರತೆ ಹೇಳಿ ಕೊಟ್ಟಿದ್ದರೂ ಝಗಮಗಿಸುವ ರಸ್ತೆ ಬದಿಯ ಗಿಜಿಗುಟ್ಟುವ ಅಂಗಡಿಯನ್ನು ನೋಡುತ್ತಾ ನೋಡುತ್ತಾ ಅದೆಲ್ಲೋ ಕಳೆದು ಹೋದದ್ದು ಗೊತ್ತಾಗಲೇ ಇಲ್ಲ. ತಾನೆಲ್ಲಿರುವೆನೆಂಬ ಅರಿವಾದಾಗ ಸರಿಯಾದ ವಿಳಾಸ ಹೇಳಲು ಗೊತ್ತಿಲ್ಲದೆ ಅಳುತ್ತಾ ನಿಂತವನನ್ನು  ಅದೇಗೋ ಹುಡುಕಿ ಪತ್ತೆ ಹಚ್ಚಿ ಬಿಟ್ಟಿದ್ದಾರೆ. ಈಗ ಅದೇ ಊರಿನಲ್ಲಿ ವಾಸವಾಗಿರುವ ತಮ್ಮ ಯಾವ ವಿಳಾಸ ಕೊಟ್ಟರೂ ಅಲ್ಲಿಗೆ ಹೋಗಿ ಬರುವ ಚಾಕಚಕ್ಯತೆಯನ್ನು ಬೆಳೆಸಿಕೊಂಡಿದ್ದಾನೆ ಅನ್ನುವುದು ಬೆಳವಣಿಗೆಗೆ ಒಡ್ಡಿಕೊಂಡ ಕಾಲದ ಬದಲಾವಣೆ ತಂದಿತ್ತ ಸೋಜಿಗವೇ ಸರಿ.  ಬೆಂಗಳೂರಿಗೆ ಆಗೊಮ್ಮೆ ಈಗೊಮ್ಮೆ ಬಂದಾಗಲೆಲ್ಲಾ ವಿಳಾಸ ಗೊತ್ತಿದ್ದೂ

ಪ್ರಬಂಧ Read Post »

ಇತರೆ

ಅನಿಸಿಕೆ

ಸಿಂಪಿ’ಲ್ಲಾಗ್ ಒಂದು ಲವ್ ಸ್ಟೋರಿ ಶ್ರೀವತ್ಸ ಜೋಶಿ ಅದು ಸ್ವಾತಿ ಮಳೆಯೇ ಇರಬೇಕು! ನಿನ್ನ ಎದೆಯಿಂದ ಜಾರಿದ ಹನಿಯೊಂದು ನನ್ನ ತುಟಿ ಸಿಂಪಿಯ ಸೇರಿ ಈಗ- ಮುತ್ತಾಗಿದೆ ! @ಡಾ.ಗೋವಿಂದ ಹೆಗಡೆ ‘ಸಿಂಪಿ’ಲ್ಲಾಗ್ ಒಂದು ಲವ್ ಸ್ಟೋರಿ ಹುಬ್ಬಳ್ಳಿಯಲ್ಲಿ ಅರಿವಳಿಕೆ ತಜ್ಞರಾಗಿರುವ ಡಾ. Govind Hegdeಯವರು ಒಬ್ಬ ಸೂಕ್ಷ್ಮಮನಸ್ಸಿನ, ಕವಿಹೃದಯದ ಕವಿ. ಪ್ರಚಾರ ಬಯಸದ ಪ್ರತಿಭಾವಂತ. ಕನ್ನಡದಲ್ಲಿ ಹನಿಗವನಗಳನ್ನು, ಕಬೀರನ ‘ದೋಹಾ’ಗಳಂತಿರುವ ದ್ವಿಪದಿಗಳನ್ನು, ಪೂರ್ಣಪ್ರಮಾಣದ ಕವಿತೆಗಳನ್ನೂ ಬರೆಯುತ್ತಿರುತ್ತಾರೆ. ನೂರಕ್ಕೂ ಹೆಚ್ಚು ಕನ್ನಡ ಗಜ಼ಲ್‌ಗಳನ್ನು ಬರೆದಿದ್ದಾರೆ. ಅವುಗಳನ್ನು ಯಾರಾದರೂ ಉತ್ತಮ ಗಾಯಕ/ಗಾಯಕಿಯರು ಹಾಡಿದರೆ ಶ್ರೇಷ್ಠ ಮಟ್ಟದ ಧ್ವನಿಸಂಪುಟ ಆಗಬಲ್ಲದು. ‘ರಾಧೆಯೊಲವಲಿ ಮಗ್ನ ನೀನು ಪ್ರೇಮರೂಪಿ ಮಾಧವ’ ಎಂಬ ಕವಿತೆಯ ಸಂದರ್ಭದಲ್ಲಿ ಡಾ. ಗೋವಿಂದ ಹೆಗಡೆಯವರನ್ನು ತಿಳಿರುತೋರಣ ಅಂಕಣದಲ್ಲಿಯೂ ಒಮ್ಮೆ ಪರಿಚಯಿಸಿದ್ದೆ. ಇದು, ಡಾ.ಗೋವಿಂದ ಹೆಗಡೆಯವರು (ನಾನವರನ್ನು “Dr.G” ಎಂದು ಕರೆಯುತ್ತೇನೆ) ಇವತ್ತು ಈಗಷ್ಟೇ ರಚಿಸಿ ಹಂಚಿಕೊಂಡಿರುವ honeyಗವನ. ಇದಕ್ಕೆ “ಸಿಂಪಿಲ್ಲಾಗ್ ಒಂದು ಲವ್ ಸ್ಟೋರಿ” ಎಂಬ ಶೀರ್ಷಿಕೆ ನನ್ನ ಕಡೆಯಿಂದ ಮೆಚ್ಚುಗೆಯ ರೂಪದಲ್ಲಿ. “ಈ ಲವ್ ಸ್ಟೋರಿಗೆ ಹೆತ್ತವರಿಂದ/ಸಮಾಜದಿಂದ ವಿರೋಧ ಬಂದರೆ, ‘ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ’ ಎಂದು ಸುಮ್ಮನಾಗಬೇಕಾದರೆ, ಸಿಂಪಿ ಸಿಂಪಿಗನಾಗಬೇಕಾಗುತ್ತದೆ!” ಎಂದು ತಮಾಷೆ ಪ್ರತಿಕ್ರಿಯೆಯನ್ನೂ ಸೇರಿಸಿದ್ದೆ. ಸಿಂಪಿ (ಮೂಲ ಮರಾಠಿ ‘ಸಿಂಪೀ’) = ಸಮುದ್ರ ತೀರದಲ್ಲಿ ದೊರೆಯುವ ಗಟ್ಟಿ ಕವಚವುಳ್ಳ ಒಂದು ಪದಾರ್ಥ, ಶುಕ್ತಿ. ಸಿಂಪಿಗ = ಬಟ್ಟೆ ಹೊಲಿಯುವವನು, ದರ್ಜಿ.

ಅನಿಸಿಕೆ Read Post »

ಇತರೆ

ಚರ್ಚೆ

ಶ್ರೀ ಬಸವರಾಜ ಕಾಸೆ ಅವರ ಪಲುಕುಗಳು ಝಲಕುಗಳು ಲೇಖನಕ್ಕೆ ಡಾ.ಗೋವಿಂದ ಹೆಗಡೆಯವರ ಪ್ರತಿಕ್ರಿಯೆ ಶ್ರೀ ಬಸವರಾಜ ಕಾಸೆ ಅವರ ಪಲುಕುಗಳು ಝಲಕುಗಳು ಲೇಖನಕ್ಕೆ ಸಂಬಂಧಿಸಿ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ಶ್ರೀ ಕಾಸೆ ಅವರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಸುಮಾರು ಎರಡು ವರ್ಷಗಳಿಂದ ಬಲ್ಲೆ. ಅವರೊಬ್ಬ ಉತ್ಸಾಹಿ. ತುಂಬ ಬರೆಯುವ, ಏನಾದರೂ ಸಾಧಿಸಬೇಕೆಂಬ ತಹತಹವುಳ್ಳ ಲೇಖಕ. ಆದರೆ ಈ ಸಂದರ್ಭದಲ್ಲಿ ಅವರು ತಮ್ಮ ಮನೆಗೆಲಸವನ್ನು- ಹೋಂವರ್ಕ್-ಸರಿಯಾಗಿ ಮಾಡಿದಂತಿಲ್ಲ. ಮೊದಲನೆಯದಾಗಿ ಅವರು ಹೇಳುವ ಈ “ಫಲಕುಗಳು- ಝಲಕುಗಳು” ಪದಪುಂಜವನ್ನು ನೋಡೋಣ. ಕನ್ನಡದಲ್ಲಂತೂ ಫಲಕು ಎಂಬ ಪದವಿಲ್ಲ ಅದು ಪಲುಕು ಆಗಬೇಕು. ಪಲುಕು ಶಬ್ದಕ್ಕೆ ನುಡಿ, (ಧ್ವನಿಯ) ಬಳುಕು, ಹಾಡು ಹೇಳುವಿಕೆ, ಅಂತರಾರ್ಥ ಕಲ್ಪನೆ, (ಸಂಗೀತದಲ್ಲಿ) ಧ್ವನಿಯ ಬಳುಕು ಎಂಬ ಅರ್ಥಗಳನ್ನು ನಿಘಂಟು ಕೊಡುತ್ತದೆ. ಇನ್ನು ಝಲಕ್ ಎಂದರೆ ಲಹರಿ ,ಹೊಳಹು, (ಆಲೋಚನೆಯ)ಮಿಂಚು ಇಂದು ಅನುವಾದಿಸಿ ಕೊಳ್ಳಬಹುದು ಎಂದು ತೋರುತ್ತದೆ. ಆಂಗ್ಲದಲ್ಲಿ ಝಲಕ್ ಪದಕ್ಕೆ flash, gleam, Dawn, flavour ಮೊದಲಾದ ಪದಗಳನ್ನು ಅರ್ಥವಾಗಿ ನೀಡಲಾಗಿದೆ. ಕಾಸೆ ಅವರು ಈ ಪಲುಕಗಳು ಮತ್ತು ಝಲಕುಗಳು ಯಾವ ಮೂಲದವು ಎಂಬುದನ್ನು ಸ್ಪಷ್ಟಪಡಿಸಿಲ್ಲ.”ಕನ್ನಡದಲ್ಲಿ ಇವು ಹೆಚ್ಚಾಗಿ ಬಂದಿಲ್ಲ”,”ಪೂರ್ಣಪ್ರಮಾಣದ ಕೃತಿ ಇನ್ನೂ ಬರಬೇಕಿದೆ”ಎನ್ನುತ್ತಾರೆ.ಅಲ್ಲಿಗೆ ಇದು ಕನ್ನಡಕ್ಕೆ ಆಮದಾದ ಪ್ರಕಾರ ಎಂದು ತಿಳಿಯಬೇಕೇ? ಎಲ್ಲಿಂದ ಅವರು ಇದನ್ನು ತಂದಿದ್ದಾರೆ? ಆ ಭಾಷೆಯಲ್ಲಿ ಇದು ಎಷ್ಟರಮಟ್ಟಿಗೆ ಪ್ರಾಚುರ್ಯ ಪಡೆದಿದೆ? ಅಲ್ಲಿ ಯಾವ ಮಹತ್ವದ ಕವಿಗಳು ಈ “ಪ್ರಕಾರ”ದಲ್ಲಿ ಕೃಷಿ ಮಾಡಿದ್ದಾರೆ? ಎಷ್ಟು ಪುರಾತನವಾದ ಕಾವ್ಯ ಪ್ರಕಾರ ಇದು? ಈ ಯಾವ ವಿವರಗಳನ್ನೂ ಅವರು ನೀಡಿರುವುದಿಲ್ಲ. ಇನ್ನು ಅವರು ಈ ಪ್ರಕಾರ ದ ನಿಯಮ ಗುಣಲಕ್ಷಣಗಳನ್ನು ವಿವರಿಸಿದ್ದಾರೆ. ನಾಲ್ಕೈದು ಸಾಲುಗಳ ಲಹರಿಗಳು, ಅಂತಹ ಲಹರಿಗಳನ್ನು -ಝಲಕ್ ಗಳನ್ನು-ಹತ್ತಕ್ಕೆ ಕಡಿಮೆ ಇಲ್ಲದಂತೆ ಹೊಂದಿರಬೇಕು ಎನ್ನುವುದನ್ನು ಅವರು ಪ್ರಮುಖವಾಗಿ ಹೇಳಿದ್ದಾರೆ. ವಸ್ತು ಯಾವುದೇ ಇರಬಹುದು ಎಂಬುದು ಅವರ ಮಾತು. ಆದರೆ ಸಾಲುಗಳ ಬಂಧಕ್ಕೆ ಸಂಬಂಧಿಸಿ ಅವರು ಏನನ್ನೂ ಹೇಳಿಲ್ಲ ಎನ್ನುವುದು ಗಮನಾರ್ಹ. ಅಂದರೆ ಆ ಲಹರಿಗಳು ನಮ್ಮ ಹನಿಗವನಗಳಂತೆ, ಮುಕ್ತಕಗಳಂತೆ, ಛಂದೋಮುಕ್ತವಾಗಿ ಬರೆಯುವ ಅವಕಾಶ ಇರುವಂತೆ ತೋರುತ್ತದೆ. ಇಂದಿನ ಮಾತುಗಳಲ್ಲಿ ಇಂತಹ ಮುಕ್ತಕಗಳನ್ನು “ಶಾಯರಿ” ಎನ್ನುವುದಿದೆ. ಆ ದೃಷ್ಟಿಯಲ್ಲಿ ಇದನ್ನು ಶಾಯರಿಗಳ ಮಾಲಿಕೆ ಎನ್ನಬಹುದು. ಇರಲಿ. ಕಾಸೆ ಅವರು ಹೇಳಿದ ಈ ಲಕ್ಷಣಗಳಿಂದಲೇ ಇದೊಂದು ವಿಭಿನ್ನವಾದ ಕಾವ್ಯಪ್ರಕಾರವಾಗುತ್ತದೆ ಎಂದು ನನಗನಿಸುತ್ತಿಲ್ಲ. ಗಜಲ್, ನಜಮ್, ರುಬಾಯಿ, ಫರ್ದ್, ಹಾಯ್ಕುಗಳಂತೆ ಸ್ವತಂತ್ರ ಕಾವ್ಯಪ್ರಕಾರ ಇದು ಎಂದು ಕಾಸೆಯವರು ವಿವರಿಸಿದ ನಿಯಮ ಲಕ್ಷಣಗಳಿಂದಷ್ಟೇ ಹೇಳಲಾಗದು. ಒಂದು ವಿಷಯ ವಸ್ತುವನ್ನು ಹಲವಾರು ಹನಿಗಳ/ಕಿರು ಕವನಗಳ ಮೂಲಕ ಕಟ್ಟುವ ಕ್ರಮ ಕನ್ನಡದಲ್ಲಿ ಹಲವಾರು ವರ್ಷಗಳಿಂದ ಇದೆ. ಜಯಂತ ಕಾಯ್ಕಿಣಿಯವರ ಕೊಡೈ: ಕೆಲವು ಪದ್ಯಗಳು ಮತ್ತು ರಾಮಚಂದ್ರ ಶರ್ಮರ ಬೀದರ್: ಕೆಲವು ಭಗ್ನ ಪ್ರತಿಮೆಗಳು ಈಗ ನನಗೆ ನೆನಪಿಗೆ ಬರುತ್ತಿರುವ ಎರಡು ಉದಾಹರಣೆಗಳು. ಪಲುಕುಗಳು ಝಲಕುಗಳು ಕೂಡ ಅಂತಹ ಒಂದು ಪ್ರಯತ್ನ, ಪ್ರಯೋಗ ಅಷ್ಟೇ ಎಂದು ನನಗನಿಸುತ್ತದೆ. ಕಾಸೆಯವರು ತಮ್ಮ ಈ ಲೇಖನಕ್ಕೆ ಬೇರೆ ಭಾಷೆಯಲ್ಲಿನ ಈ ಪ್ರಕಾರದಲ್ಲಿನ ಕೃಷಿಯನ್ನು ಆಕರವಾಗಿ, ಆಧಾರವಾಗಿ ಹೊಂದಿದ್ದರೆ ಅದನ್ನು ಅವರು ವಿವರಿಸಬೇಕೆಂದೂ, ಉಲ್ಲೇಖಿಸಬೇಕೆಂದೂ ಕೋರುತ್ತೇನೆ. ಆಗ ಈ ಸಂಗತಿಯನ್ನು ಇನ್ನೂ ಹೆಚ್ಚು ವಿವರವಾಗಿ, ಆಳವಾಗಿ ಗಮನಿಸಲು ಸಾಧ್ಯವಾದೀತು. ಕೊನೆಯ ಟಿಪ್ಪಣಿ: ಅವರು ಇಲ್ಲಿ ಉಲ್ಲೇಖಿಸಿದ ಪಲುಕಿಗೆ ಸಂಬಂಧಿಸಿದಂತೆ. “ಬಿತ್ತಿ ಉತ್ತಿದ ಬೀಜದ ಫಲ” ಎಂಬ ಸಾಲಿದೆ. ಅದು “ಉತ್ತು ಬಿತ್ತಿದ” ಎಂದಾಗಬೇಕು ಅಂತ ಅನಿಸುತ್ತಿದೆ. ಉಳುಮೆ ಮಾಡಿದ ಮೇಲೆ, ಉತ್ತಮೇಲೆ ಬಿತ್ತುವುದು. ಉಲ್ಟಾ ಅಲ್ಲ.

ಚರ್ಚೆ Read Post »

ಇತರೆ

ಅಭಿನಂದನೆ

ಕೆ.ಶಿವು.ಲಕ್ಕಣ್ಣವರ ಸಾಹಿತಿ, ರಂಗಭೂಮಿ ಕಲಾವಿದೆ, ಪತ್ರಕರ್ತೆ ಡಾ.ವಿಜಯಮ್ಮನವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದ್ದು ಸಮಂಜಸವಾಗೇ ಇದೆ..! ಸಾಹಿತಿ, ಲೇಖಕಿ, ರಂಗಭೂಮಿ ಕಲಾವಿದೆ ಡಾ.ವಿಜಯಾ (ವಿಜಯಮ್ಮ) ಅವರಿಗೆ 2019 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಾನ್ ಪಿಕ್ಸನ್ ನ ಕನ್ನಡ ಭಾಷಾ ವಿಭಾಗದಲ್ಲಿ ಅವರ ‘ಕುದಿ ಎಸರು’ ಆತ್ಮಕಥೆಗೆ ಈ ಪ್ರಶಸ್ತಿ ಸಂದಿದೆ… ಕೇಂದ್ರ ಸಾಹಿತ್ಯ ಅಕಾಡೆಮಿಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದೆ. ಇವರ ಜೊತೆ ದೇಶದ 21 ಭಾಷೆಯ 23 ಲೇಖಕರು, ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೂಲತಃ ದಾವಣಗೆರೆ ಜಿಲ್ಲೆಯವರಾದ ವಿಜಯಮ್ಮ ಅವರು ಬೆಂಗಳೂರಿನಲ್ಲಿ ನೆಲಸಿದ್ದಾರೆ. ಇಳಾ ಎಂಬ ಪುಸ್ತಕ ಪ್ರಕಾಶನ ಮೂಲಕ 200 ಕ್ಕೂ ಹೆಚ್ಚು ಲೇಖಕರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ… ಶ್ರೀರಂಗರ ನಾಟಕಗಳ ಕುರಿತು ಪಿ ಎಚ್ ಡಿ ಪಡೆದಿರುವ ವಿಜಯಮ್ಮ, ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವರು… ಈಗ ದೊರೆತಿರುವ ಈ ಪ್ರಶಸ್ತಿಯೂ 1 ಲಕ್ಷ ರುಪಾಯಿ ನಗದು ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ. ಫೆಬ್ರುವರಿ 25, 2020 ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಸದ್ಯ ಕನ್ನಡಿಗ, ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ… ಡಾ.ವಿಜಯಾ(ವಿಜಯಮ್ಮ)ರ ಬದಕು-ಬರಹದ ಬಗೆಗೆ ನೋಡೋಣ… ಡಾ.ವಿಜಯಾರವರು ಸಾಮಾಜಿಕ ಅಸಮಾನತೆ, ಶೋಷಣೆ, ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ದನಿ ಎತ್ತುವ, ಮಹಿಳೆಯರ ಸಮಸ್ಯೆಗಳು, ಭಾಷಾ ಚಳವಳಿ ಮುಂತಾದ ಚಳವಳಿಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುವ ದಿಟ್ಟ ಪರ್ತಕರ್ತೆ. ಡಾ.ವಿಜಯಾರವರು ಹುಟ್ಟಿದ್ದು ದಾವಣಗೆರೆಯಲ್ಲಿ ೧೯೪೨ರ ಮಾರ್ಚ ೧೦ರಂದು. ಇವರ ತಂದೆ ಶಾಮಣ್ಣ, ತಾಯಿ ಸರೋಜ. ಪ್ರಾರಂಭಿಕ ಶಿಕ್ಷಣ ದಾವಣಗೆರೆ, ಹೊಸಪೇಟೆಯ ಅಮರಾವತಿ ನಂತರ ಬೆಂಗಳೂರಿನಲ್ಲಿ ಬಿ.ಎ.ಪದವಿ ಮುಗಿಸಿದರು. ಹಾಗೂ ‘ಶ್ರೀರಂಗರ ನಾಟಕಗಳು: ಒಂದು ಅಧ್ಯಯನ’ ಕುರಿತು ಪ್ರೌಢ ಪ್ರಬಂಧ ಮಂಡಿಸಿ ಪಡೆದ ಪಿಎಚ್‌ಡಿ ಪದವಿ ಪಡೆದರು… ಹದಿನಾರರ ಹರೆಯದಲ್ಲಿಯೇ ವಿವಾಹಬಂಧನಕ್ಕೊಳಗಾದರೂ ಕುಟುಂಬದ ಕರ್ತವ್ಯಗಳಿಗಷ್ಟೇ ಸೀಮಿತಗೊಳಿಸಿಕೊಳ್ಳದೆ, ಅರ್ಥಪೂರ್ಣ ಬದುಕನ್ನು ತಮ್ಮದಾಗಿಸಿಕೊಳ್ಳುವ ಛಲದಿಂದ ಸಾಧನೆಯಲ್ಲಿ ತೊಡಗಿಸಿಕೊಂಡು ಪದವಿ ಮತ್ತು ಡಾಕ್ಟರೇಟ್‌ಗಳನ್ನು ಪಡೆದದ್ದು ವಿವಾಹದ ನಂತರವೇ… ಪತ್ರಕರ್ತೆಯಾಗಿ ವೃತ್ತಿ ಪ್ರಾರಂಭಿಸಿದ್ದು ಪ್ರಜಾಮತ ಪತ್ರಿಕೆಯಲ್ಲಿ. ಪತ್ರಿಕೋದ್ಯಮಿಯಾದವರು ೧೯೬೮ರಲ್ಲಿ. ನಂತರ ಮಲ್ಲಿಗೆ, ತುಷಾರ, ರೂಪತಾರ ಪತ್ರಿಕೆಗಳ ಸಹಾಯಕ ಸಂಪಾದಕಿಯಾಗಿ ಹೊತ್ತ ಜವಾಬ್ದಾರಿಗಳು. ಚಲನಚಿತ್ರ ಸುದ್ದಿಗಳಿಗಷ್ಟೇ ಸೀಮಿತವಾಗಿದ್ದ ‘ರೂಪತಾರ’ ಪತ್ರಿಕೆಯಲ್ಲಿ ಅನೇಕ ಪ್ರಖ್ಯಾತ ಸಾಹಿತಿಗಳ ಸಾಹಿತ್ಯಕ ವಿಚಾರಗಳನ್ನು ಪ್ರಕಟಿಸಿ ಪತ್ರಿಕೆಗೊಂದು ಸಾಹಿತ್ಯಕ ಮೌಲ್ಯವನ್ನು ತಂದು ಕೊಟ್ಟವರು ಡಾ.ವಿಜಯಮ್ಮನವರು… ಉದಯವಾಣಿ ಪತ್ರಿಕೆಯ ಅಂಕಣ ಬರಹಗಳ ಮೂಲಕ ತಮ್ಮ ಸೃಜನಾತ್ಮಕ ಬರವಣಿಗೆಯಿಂದ ಬಹಳ ಬುದ್ಧಿಜೀವಿಗಳ ಗಮನ ಸೆಳೆದರು. ‘ಅರಗಿಣಿ’ ಚಲನಚಿತ್ರ ಪತ್ರಿಕೆಯ ಸಾಪ್ರಾಹಿಕದ ಗೌರವ ಸಂಪಾದಕಿಯಾಗಿ, ‘ಬೆಳ್ಳಿಚುಕ್ಕಿ’ ವಿಡಿಯೋ ಮ್ಯಾಗಜಿನ್ ಸಮಾಲೋಚಕ ಸಂಪಾದಕಿಯಾಗಿ, ‘ನಕ್ಷತ್ರಲೋಕ’ ಚಲನಚಿತ್ರ ಸಾಪ್ತಾಹಿಕದ ಸಂಪಾದಕಿಯಾಗಿ, ಪ್ರತಿಷ್ಠಿತ ‘ಕರ್ಮವೀರ’ ಪತ್ರಿಕೆಯ ಸಾಪ್ತಾಹಿಕದ ಸಲಹೆಗಾರ್ತಿಯಾಗಿ, ‘ನಮ್ಮಮಾನಸ’ ಮಹಿಳಾ ಪತ್ರಿಕೆಯ ಸಲಹೆಗಾರ್ತಿಯಾಗಿ ‘ಹೊಸತು’ ಮಾಸ ಪತ್ರಿಕೆಯ ಸಲಹಾಮಂಡಲಿಯ ಸದಸ್ಯೆಯಾಗಿ – ಹೀಗೆ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದಲೂ ಪತ್ರಿಕೋದ್ಯಮದಲ್ಲಿದ್ದು ಆಗಾಗ್ಗೆ ಬರೆದ ತಮ್ಮ ವಿಶಿಷ್ಟ ರೀತಿಯ ಬರಹಗಳಿಂದ ಜನಪ್ರಿಯ ಲೇಖಕಿ ಎನಿಸಿದ್ದಾರೆ ಡಾ.ವಿಜಯಮ್ಮ… ೧೯೭೦ರಲ್ಲಿ ಸ್ಥಾಪಕ ಸದಸ್ಯೆಯಾಗಿ ಎ.ಎಸ್.ಮೂರ್ತಿ, ಎ.ಎಲ್. ಶ್ರೀನಿವಾಸಮೂರ್ತಿ ಮುಂತಾದವರುಗಳೊಡನೆ ಸೇರಿ ಸ್ಥಾಪಿಸಿದ್ದು ‘ಪಪೆಟ್ ‌ಲ್ಯಾಂಡ್’ ಹೆಣ್ಣು ಮಕ್ಕಳೇ ಬೊಂಬೆಗಳನ್ನು ತಯಾರಿಸಿಕೊಂಡು, ವಿಶಿಷ್ಟ ರೀತಿಯ ಚಲನಗತಿಯನ್ನು ಕೊಟ್ಟು ಹಲವಾರು ಘಟನೆಗಳಿಗೆ ಹಿನ್ನೆಲೆಯಲ್ಲಿ ಧ್ವನಿಮೂಡಿಸಿ, ನಡೆಸಿಕೊಟ್ಟ ಬೊಂಬೆಯಾಟದ ಪ್ರದರ್ಶನಗಳು ಕರ್ನಾಟಕದಾದ್ಯಂತ ಮನೆ ಮಾತಾಗಿತ್ತು. ಇದಕ್ಕೆ ಅಂದು ಪ್ರಜಾವಾಣಿಯಲ್ಲಿದ್ದ ಟಿ.ಎಸ್.ರಾಮಚಂದ್ರರಾವ್ ರವರು ಆಸಕ್ತಿ ತೋರಿಸಿದ್ದರಿಂದ ರಾಷ್ಟ್ರಾದ್ಯಂತ ಪ್ರಚಾರ ಸಿಕ್ಕಿ ಚಂದ್ರಶೇಖರ ಕಂಬಾರರ ‘ಕಿಟ್ಟಿಕತೆ’, ಗಿರೀಶ್‌ಕಾರ್ನಾಡರ ‘ಮಾನಿಷಾದ’, ಚಂದ್ರಶೇಖರ ಪಾಟೀಲರ ‘ಟಿಂಗರ ಬುಡ್ಡಣ್ಣ’ ಮತ್ತು ಗಿರಡ್ಡಿ ಗೋವಿಂದ ರಾಜರ ‘ಕನಸು’ಗಳನ್ನು ಬೊಂಬೆಯಾಟಕ್ಕೆ ಅಳವಡಿಸಿ ಪಡೆದ ಪ್ರಸಿದ್ಧಿ ಪಡೆದರು… ನಾಟಕ ಗೃಹಗಳಿಗೆ ಸೀಮಿತವಾಗಿದ್ದ ನಾಟಕಗಳನ್ನು ಜನ ಸಾಮಾನ್ಯರ ಬಳಿಗೆ ಕೊಂಡೊಯ್ಯುವಲ್ಲಿ ಕ್ರಾಂತಿಕಾರಕ ಬದಲಾವಣೆ ತಂದು, ‘ಚಿತ್ರ ಗೆಳೆಯರ ಗುಂಪು’ ೧೯೭೩ರಲ್ಲಿ ಪ್ರಾರಂಭಿಸಿದ್ದು ಬೀದಿ ನಾಟಕಗಳ ಪ್ರದರ್ಶನ… ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ ಚಳವಳಿಯ ರೂಪ ಪಡೆದು ಇವರು ರಚಿಸಿದ ತೀಕ್ಷ್ಣ ವಿಡಂಬನೆಯ ನಾಟಕಗಳು ‘ಬಂದರೋ ಬಂದರು’, ‘ಉಳ್ಳವರ ನೆರಳು’, ‘ಕೇಳ್ರಪ್ಪೋ ಕೇಳ್ರೀ…’, ಮುಖವಿಲ್ಲದವರು, ಕುವೆಂಪುರವರ ‘ಧನ್ವಂತರಿ ಚಿಕಿತ್ಸೆ’ (ರೂಪಾಂತರ) ನಾಟಕಗಳು ರಾಜ್ಯಾದ್ಯಂತ ಪ್ರದರ್ಶನಗೊಂಡು ಪುಸ್ತಕರೂಪದಲ್ಲಿಯೂ ಪ್ರಕಟವಾಗಿವೆ… ಇವರ ಮತ್ತೊಂದು ಸಾಹಸದ ಕೆಲಸವೆಂದರೆ ಕಲೆಗಾಗಿಯೇ ಪ್ರಾರಂಭಿಸಿದ ಪತ್ರಿಕೆ. ಕಲೆಯ ಎಲ್ಲ ಕ್ಷೇತ್ರಗಳು, ಇತರ ಶಾಸ್ತ್ರಗಳು ಒಬ್ಬಾಗಿ ಕೆಲಸಮಾಡುವ ಪ್ರಕ್ರಿಯೆಯ ಶೋಧ ಮತ್ತು ಅವುಗಳನ್ನು ಅನುಭವಿಸುವ, ಅರ್ಥೈಸುವ ಮಾರ್ಗಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ೧೯೯೩ರ ನವಂಬರ್‌ನಲ್ಲಿ ದ್ವೈಮಾಸಿಕವಾಗಿ ಪ್ರಾರಂಭಿಸಿದ ಡಾ.ವಿಜಯಮ್ಮ ‘ಸಂಕುಲ’ ಪತ್ರಿಕೆಯು ಆಯಾಯ ಕ್ಷೇತ್ರದ ವಿದ್ವಾಂಸರುಗಳ ಸಲಹೆ, ಸಹಕಾರಗಳಿಂದ ಹಲವಾರು ಆಕರ ವಿಷಯಗಳ ಸಮೃದ್ಧ ಮಾಹಿತಿಯ ಪ್ರೌಢ ಲೇಖನಗಳಿಂದ ಕೂಡಿದ್ದು, ಕಲೆಗಾಗಿಯೇ ಮೀಸಲಾಗಿದ್ದ ಪತ್ರಿಕೆಯು ಐದು ವರ್ಷಗಳ ನಂತರ ಕಾರಣಾಂತರದಿಂದ ನಿಂತು ಹೋದದ್ದು ಕಲಾಪ್ರಿಯರಿಗಾದ ನಷ್ಟವಾಯಿತು ಆಗ… ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿರುವ ವಿಜಯಾರವರು ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷೆಯಾಗಿ; ಕಲಾಮಂದಿರ ಕಲಾ ಶಾಲೆ, ಸುಚಿತ್ರ ಫಿಲಂ ಅಕಾಡಮಿ ಮುಂತಾದವುಗಳ ಉಪಾಧ್ಯಕ್ಷೆಯಾಗಿ, ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಿತಿ, ರಾಷ್ಟ್ರೀಯ ಚಲನಚಿತ್ರ ತೀರ್ಪುಗಾರರ ಮಂಡಲಿ, ಕೇಂದ್ರ ಸಾಹಿತ್ಯ ಅಕಾಡಮಿ ಸಲಹಾ ಮಂಡಳಿ, ಕರ್ನಾಟಕ ಸರಕಾರದ ಪುಟ್ಟಣ ಕಣಗಾಲ್ ಪ್ರಶಸ್ತಿ ಆಯ್ಕೆ ಸಮಿತಿ, ಬೆಂಗಳೂರು ದೂರದರ್ಶನ ಚಲನಚಿತ್ರ ಸೆನ್ಸಾರ್‌ ಸಮಿತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮ ಪ್ರಶಸ್ತಿ ಆಯ್ಕೆ ಸಮಿತಿ, ಮೈಸೂರು ವಿಶ್ವವಿದ್ಯಾಲಯದ ಮಹಿಳಾ ವಿಷಯಕ ಅಧ್ಯಯನ ಕೇಂದ್ರ ಸಲಹಾ ಮಂಡಲಿ ಮುಂತಾದ ಸಮಿತಿಗಳ ಸದಸ್ಯೆಯಾಗಿ – ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಿತಿಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದರು ಡಾ.ವಿಜಯಮ್ಮನವರು… ಕನ್ನಡ ಪುಸ್ತಕ ಪ್ರಕಾಶನದಲ್ಲಿ ಮುದ್ರಣದ್ದೇ ದೊಡ್ಡ ಸಮಸ್ಯೆಯ ಎನಿಸಿದಾಗ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ‘ಇಳಾ’ ಪ್ರಕಾಶನವು ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾಗಿ ರೂಪಗೊಂಡು ಪ್ರಖ್ಯಾತ ಬರಹಗಾರರದಷ್ಟೇ ಅಲ್ಲದೆ ಅನೇಕ ಉದಯೋನ್ಮುಖ ಬರಹಗಾರರನ್ನು ಬೆಳಕಿಗೆ ತಂದರು. ಸುಮಾರು ೨೦೦ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಪ್ರಕಟಿಸಿದರು… ಆಗಾಗ್ಗೆ ಪತ್ರಿಕೆಗೆ ಬರೆದ ಲೇಖನಗಳು, ಕಾಲಂ ಬರಹಗಳು ಎಲ್ಲವೂ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿಲ್ಲದಿದ್ದರೂ ‘ಮಾತಿನಿಂದ ಲೇಖನಿಗೆ’, ‘ಸುದ್ದಿ ಕನ್ನಡಿ’, ‘ನಿಜ ಧ್ಯಾನ’ – ಲೇಖನಗಳ ಸಂಗ್ರಹ; ಸತ್ಯಜಿತ್ ರಾಯ್ ಮತ್ತು ಅ.ನ.ಸುಬ್ಬರಾವ್ – ವ್ಯಕ್ತಿ ಚಿತ್ರಣ; ಶ್ರೀರಂಗ-ರಂಗ-ಸಾಹಿತ್ಯ-ಸಂಪ್ರಬಂಧ; ನೇಮಿಚಂದ್ರ – ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ – ಹೀಗೆ ಹಲವಾರು ಕೃತಿಗಳ ಪ್ರಕಟಣೆಯ ಜೊತೆಗೆ ಬಹಳಷ್ಟು ಕೃತಿಗಳನ್ನು ಸಂಪಾದಿಸಿದ್ದಾರೆ ಡಾ.ವಿಜಯಮ್ಮ… ಪರ್ವ – ಒಂದು ಸಮೀಕ್ಷೆ, ಇನಾಂದಾರ್‌, ಇಂದಿನ ರಂಗ ಕಲಾವಿದರು, ಕನ್ನಡ ಸಿನಿಮಾ ಸ್ವರ್ಣ ಮಹೋತ್ಸವ, ಮಕ್ಕಳ ಸಿನಿಮಾ, ಕಿರಿಯರ ಕರ್ನಾಟಕ, ಪದ್ಮಾತರಂಗ (ಆಕಾಶವಾಣಿ ಕಲಾವಿದೆ ಎಸ್.ಕೆ. ಪದ್ಮಾದೇವಿಯವರ ಜೀವನ-ವೃತ್ತಿ) ‘ಅಕ್ಕರೆ’ (ವ್ಯಾರಾಯ ಬಲ್ಲಾಳರ ಅಭಿನಂದನ ಗ್ರಂಥ), ಕನ್ನಡ ಚಲನಚಿತ್ರ ಇತಿಹಾಸ, ಸ್ವಾತಂತ್ಯ್ರೋತ್ತರ ಕನ್ನಡ ಸಾಹಿತ್ಯ-ಸಂಸ್ಕೃತಿ, ಬೆಂಗಳೂರು ದರ್ಶನ, ಕರ್ನಾಟಕ ಕಲಾದರ್ಶನ ಮುಂತಾದವು ಪ್ರಮುಖವಾದವುಗಳು… ಹೀಗೆ ಚಲನಚಿತ್ರ, ನಾಟಕ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಸಂದ ಪ್ರಶಸ್ತಿಗಳು ಹಲವಾರು. ಬಂದರೋ ಬಂದರು (ಬೀದಿನಾಟಕ) ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸಂಕುಲ (ಲೇಖನ ಸಂಕಲನ) ಕೃತಿಗೆ ಗೀತಾ ದೇಸಾಯಿ ಪ್ರಶಸ್ತಿ; ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಆರ್‌.ಎನ್.ಆರ್‌. ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, ಲೋಕ ಶಿಕ್ಷಣ ಟ್ರಸ್ಟ್ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೊಶಿಪ್, ಮಾಸ್ತಿ ಪ್ರಶಸ್ತಿ, ಹಾರ್ನಳ್ಳಿ ಟ್ರಸ್ಟ್ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಡಾ.ವಿಜಯಮ್ಮನವರಿಗೆ ದೊರೆತವು… ಈ ಪ್ರಶಸ್ತಿಗಳ ಜೊತೆ ಬಂದ ಹಣವನ್ನು ಅನೇಕ ಸಂಘ ಸಂಸ್ಥೆಗಳಿಗೆ ಕೊಡುಗೆಯಾಗಿ ನೀಡಿದಂತೆ ಹಾರ್ನಳ್ಳಿ ರಾಮಸ್ವಾಮಿ ಟ್ರಸ್ಟ್ ಪ್ರಶಸ್ತಿಯ ಜೊತೆಗೆ ಕೊಡ ಮಾಡಿದ ಒಂದು ಲಕ್ಷ ರೂ. ಹಣವನ್ನು ನಾಲ್ಕು ಜನ ಲೇಖಕರು ತರಲು ಉದ್ದೇಶಿಸಿರುವ ನಾಲ್ಕು ಗ್ರಂಥಗಳ ಪ್ರಕಟಣೆಗೆ ನೆರವು ನೀಡಿರುವುದಲ್ಲದೆ ಮಾಸ್ತಿ ಪ್ರಶಸ್ತಿಯಿಂದ ಬಂದ ೨೫೦೦೦ ರೂಪಾಯಿಗಳನ್ನು ಗಾರ್ಮೆಂಟ್ಸ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್‌ಗೆ ನೀಡಿ ಶ್ರಮ ಜೀವಿಗಳ ಹೋರಾಟದ ಬದುಕಿಗೆ ಬೆನ್ನೆಲುಬಾಗಿದರು ಡಾ.ವಿಜಯಮ್ಮನವರು..! ಹೀಗೆಯೇ ತಮ್ಮನ್ನು ತಾವು ಬರಹ, ನಾಟಕ, ಹಲವಾರು ಕೆಲಸಗಳಲ್ಲಿ ತೊಡಗಿಸಿಕೊಂಡರು ಡಾ.ವಿಜಯಮ್ಮ. ಈಗ ಈ ವಿಜಯಮ್ಮನವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ದೊರೆತಿದ್ದು ಸಮಂಜಸವಾಗೇ ಇದೆ..! ‌‌ ————– ಡಾ.ವಿಜಯಮ್ಮ ಬದುಕು-ಬರಹ

ಅಭಿನಂದನೆ Read Post »

You cannot copy content of this page

Scroll to Top