ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಜೀವನ್ಮುಖಿ

ಹೊಸ ವರ್ಷ ಹೊಸ ಹರ್ಷ ಜಯಲಕ್ಷ್ಮಿ ಕೆ. ಹೊಸ ವರ್ಷ -ತರಲಿ ಹರ್ಷ . “ಆದದ್ದು ಆಗಿ ಹೋಯ್ತು, ಮಣ್ಣಾಗಿ ಹೋದ ನನ್ನವರು ತಿರುಗಿ ಬರಲಾರರು. ಇರುವವನು ಇರುವಷ್ಟು ದಿನ ಬದುಕಬೇಕಲ್ಲ? ನನ್ನ ಗಾಡಿ, ನನ್ನ ಎತ್ತುಗಳೂ ಭೂಕಂಪದ ಅಂತರoಗ ಸೇರಿದ್ದರೆ ನನಗೆ ಕಷ್ಟವಾಗುತ್ತಿತ್ತು. ಪುಣ್ಯಕ್ಕೆ ಸ್ವಲ್ಪ ಹೊಲವೂ ಉಳಿದಿದೆ. ಬದುಕಬೇಕಾದ ನನ್ನ ಬದುಕಿಗೆ ಇಷ್ಟು ಸಾಕಲ್ಲ ….ಉಳಲು, ಬಿತ್ತಲು, ಮನೆಕಟ್ಟಲು …..” 1993 ರಲ್ಲಿ ಮಹಾರಾಷ್ಟ್ರದಲ್ಲಿ ಸಂಭವಿಸಿದ್ದ ಭಾರೀ ಭೂಕಂಪದಲ್ಲಿ ತನ್ನವರನ್ನೆಲ್ಲ ಕಳೆದುಕೊoಡಿದ್ದ ವೃದ್ದನೊಬ್ಬ ಪತ್ರಕರ್ತನ ಪ್ರಶ್ನೇಯೊoದಕ್ಕೆ ನೀಡಿದ ಉತ್ತರವಿದು. ಪ್ರಕೃತಿಯ ವಿಕೋಪಕ್ಕೆ ಬಲಿಯಾಗಿ ತತ್ತರಿಸಿ ಹೋಗಿದ್ದ ಲಾತೂರ್-ಉಸ್ಮಾನಾಬಾದ್ಗಳಲ್ಲಿ ಅಳಿದುಳಿದ ಜನರ ಸ್ಥಿತಿ -ಗತಿ ತಿಳಿದುಕೊಳ್ಳಲು ಹೋದ ಪತ್ರಕರ್ತನಿಗೆ ಎತ್ತಿನಗಾಡಿಯಲ್ಲಿ ಹೊಲದತ್ತ ಹೊರಟ ವೃದ್ದನೋರ್ವ ಕಣ್ಣಿಗೆ ಬಿದ್ದ. ತನ್ನ ಪ್ರಶ್ನೆಗಳಿಗೆ ಹತಾಶೆಯ ಶಿಖರದಿoದ ದುಃಖದ ಬುಗ್ಗೆಯನ್ನೇ ಚಿಮ್ಮಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಆತನಿಗೆ ಅಚ್ಚರಿಯಾಗಿತ್ತು! ಭೂತಕಾಲದ ನಶ್ವರತೆ -ಭವಿಷ್ಯದ ಬಗೆಗಿನ ವ್ಯರ್ಥ ಕಾಳಜಿ ಇವೆರಡನ್ನೂ ತೊರೆದು ವರ್ತಮಾನದಲ್ಲಿ ಬದುಕು ಸಾಗಿಸಬೇಕೆoಬ ಸತ್ವವನ್ನರುಹಿದ ಆ ವೃದ್ದ ಅವನಿಗೆ ತತ್ವಜ್ಞಾನಿಯoತೆ ಕಂಡಿದ್ದ. ” ನೆಲ ಕಚ್ಚಿ ನಿಲ್ಲು “ಎನ್ನುವ ಅಡಿಗರ ಸಾಲಿನ ಸಾರ ಇದುವೇ ಇರಬೇಕು. ಅದುವೇ ಜೀವನೋತ್ಸಾಹ. ಜೀವನ ಪ್ರೀತಿ ಅನ್ನೋದು ಒಂದು ಅಪರಾಜಿತ ಶಕ್ತಿ. ತನಗಾಗಿ ತಾನು ಬದುಕಬೇಕು ಎನ್ನುವ ವ್ಯಕ್ತಿಗೆ ಇರಲೇಬೇಕಾದ ಅಮೂಲ್ಯ ಆಸ್ತಿಯದು. ಈ ಉತ್ಸಾಹ-ಉಲ್ಲಾಸ ಅನ್ನೋದು ಎಲ್ಲಿoದಲೋ , ಯಾರಿಂದಲೋ ಪಡೆಯತಕ್ಕoತಹ ಅoಶವಲ್ಲ .ನಮ್ಮೊಳಗೇ ಸುಪ್ತವಾಗಿರುವ ಚೈತನ್ಯ. ಕೆಲವರು ಸದಾ ಕಾಲ ನಗುತ್ತಲೇ ಇರುತ್ತಾರೆ. ಹಾಗೆoದು ಅವರಿಗೆ ಸಮಸ್ಯೆಗಳೇ ಇಲ್ಲವೆoದಲ್ಲ ; ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಆಂತರಿಕ ಶಕ್ತಿ ಅವರಲ್ಲಿದೆ ಎಂದರ್ಥ. ಇನ್ನೈದು ನಿಮಿಷಗಳಲ್ಲಿ ಆಕಾಶವೇ ಕಳಚಿ ಬೀಳುತ್ತೆ ಎಂದರೆ ಆ ಐದು ನಿಮಿಷಗಳಲ್ಲಿ ಒಂದು ಕಪ್ ಕಾಫಿ ಹೀರಬಾರದೇಕೆ ..? ಎನ್ನುವ ಮನೋಭಾವದವರಿವರು. ಮಸಣದಲ್ಲೂ ಸಂತಸದ ಅಲೆಯನ್ನು ಹರಡಿದ “ನಗುವ ಬುದ್ಧ” ಅಥವಾ ಪು -ಟ್ಸೆ ಯ ವ್ಯಕ್ತಿತ್ವವನ್ನು ನಾವಿಲ್ಲಿ ನೆನೆಯಲೇಬೇಕು. ಝೆನ್ ಪದ್ಧತಿಯ ಶವ ಸಂಸ್ಕಾರಕ್ಕೆ ವಿರುದ್ಧವಾಗಿ “ನನ್ನ ಮೃತದೇಹವನ್ನು ಸುಡಬೇಕು ” ಎಂದು ಹೇಳಿದ್ದ ಈ “ನಗುವ ಬುದ್ಧ “ನ ಮಾತಿನಲ್ಲಿ ಒಂದು ವಿನೋದವಿತ್ತು. ಅದೇನೆoದರೆ, ಅವನು ತನ್ನ ಬಟ್ಟೆಯೊಳಗೆ ಪಟಾಕಿಗಳನ್ನು ತುoಬಿಕೊoಡಿದ್ದ. ಅವನ ದೇಹಕ್ಕೆ ಅಗ್ನಿ ಸ್ಪರ್ಶವಾಗುತ್ತಿದ್ದoತೆ ಸಿಡಿ ಮದ್ದು ಸಿಡಿಯಲಾರಂಭಿಸಿ ಸ್ಮಶಾನದಲ್ಲೂ ಹಬ್ಬದ ವಾತಾವಾರಣ ಸೃಷ್ಟಿಯಾಗಿತ್ತು. ಚಿಂದಿ ಬಟ್ಟೆಯ ಚೀಲ ಎನ್ನುವ ಅರ್ಥವನ್ನು ತನ್ನ ಹೆಸರಿನಲ್ಲಿ ಹುದುಗಿಸಿಕೊoಡಿದ್ದ ಪು -ಟ್ಸೆ ತಾನು ಹೋಗುವೆಡೆಗಳಿಗೆಲ್ಲ ಚೀಲ ತುoಬಾ ಸಿಹಿ ತಿoಡಿ ಒಯ್ದು, ಅವನ್ನೆಲ್ಲ ಮಕ್ಕಳಿಗೆ ಹಂಚಿ, ಚೀಲವನ್ನು ಆಗಸದೆತ್ತರಕ್ಕೆ ಎಸೆಯುತ್ತಾ ಜೋರಾಗಿ ನಗುತ್ತಿದ್ದ. ಅವನ ನಗುವಿನಲ್ಲಿ ಇತರರು ಪಾಲ್ಗೊಳ್ಳುವಷ್ಟರಲ್ಲಿ ತನ್ನ ಡೊಳ್ಳು ಹೊಟ್ಟೆಯ ಮೇಲೊಮ್ಮೆ ಕೈಯಾಡಿಸುತ್ತಾ ..ಸದ್ದಿಲ್ಲದೆ ನಗುತ್ತಾ ತನ್ನ ಚೀಲದೊoದಿಗೆ ಮತ್ತೊoದೂರಿಗೆ ಸಾಗುತ್ತಿದ್ದ. ಸಮಸ್ಯೆ ಎಂಬ ಚೀಲವನ್ನು ದೂರಕ್ಕೆಸೆದು ಸದಾ ನಗುತ್ತಿರಬೇಕು ಎನ್ನುವ ಆಶಯ ಅವನದಾಗಿತ್ತು.ತನ್ನ ವಿಚಿತ್ರ ರೂಪ -ವ್ಯಕ್ರಿತ್ವ ಬೇರೆಯವರಲ್ಲಿ ಯಾವ ಭಾವನೆ ಮೂಡಿಸೀತು ಎನ್ನುವ ಕಲ್ಪನೆ ಕೂಡಾ ಆತನಿಗಿರಲಿಲ್ಲ ..ಅದಕ್ಕೇ ಅವ ನಗುವ ಬುದ್ದನಾದ ! ಸೋಲಿಗೆ ಹತಾಶನಾಗದೆ, ಬದುಕಿನ ಏರಿಳಿತಗಳನ್ನು ಒಪ್ಪಿಕೊoಡು ನಡೆವ ವ್ಯಕ್ತಿ ಅನ್ಯರ ಹೊಗಳಿಕೆ -ತೆಗಳಿಕೆಗಳಲ್ಲಿ ತಾನು ಕಳೆದುಹೋಗುವುದಿಲ್ಲ.ಕಷ್ಟಗಳು ಬಂದರೂ ನಿವಾರಿಸಿಕೊoಡು ಮೈ ಕೊಡವಿ ನಿಲ್ಲುತ್ತಾನೆ.ಕೆಲವರು ತಮಗೆ ಬಂದ ಚಿಕ್ಕ -ಪುಟ್ಟ ಸಮಸ್ಯೆಗಳನ್ನೇ ಬೆಟ್ಟವಾಗಿಸಿಕೊoಡು ಅವರಿವರಿoದ ಪರಿಹಾರ ನಿರೀಕ್ಶಿಸುತ್ತಾರೆ. ತನ್ನೊಳಗೆ ತಾನು ಗಟ್ಟಿ ಇಲ್ಲದವನಿಗೆ ಯಾರ ಸಲಹೆಗಳೂ ಪರಿಹಾರವೆನಿಸದು. ಕೊಚ್ಚಿದಷ್ಟು ಹೆಚ್ಚಿ ಬರುವ ಪ್ರಕೃತಿಯoತೆ, ತುಳಿದ ಧೂಳು ಅವಮಾನವನ್ನು ಧಿಕ್ಕರಿಸಿ ನಮ್ಮ ಶಿರವೇರುವoತೆ, ಗೋಡೆಗೆಸೆದ ಚೆoಡು ಪುಟಿದು ಮತ್ತೆ ನಮ್ಮತ್ತ ಬರುವoತೆ ನಮ್ಮೆಲ್ಲರಲ್ಲೂ ಜೀವನೋತ್ಸಾಹ ಪುಟಿಯುತ್ತಿರಲಿ…ಹೊಸ ವರ್ಷ ಹರ್ಷದೊoದಿಗೆ ಆರoಭವಾಗಲಿ . *******

ಜೀವನ್ಮುಖಿ Read Post »

ಇತರೆ

ಬದುಕು

ಬದುಕು ತಂತಿಯ ಆಟ ಡಾ.ಗೋವಿಂದ ಹೆಗಡೆ ಮೊನ್ನೆ ೧೧ರಂದು ಅಪರಾತ್ರಿಯಲ್ಲಿ ಬೇಲೂರು ತಲುಪಿದ್ದು. ನಿನ್ನೆ ಬೆಳಿಗ್ಗೆ (೧೨/೧/೨೦) ಚೆನ್ನಕೇಶವನ ದರ್ಶನ ಮುಗಿಸಿ ಚಪ್ಪಲಿ ಸ್ಟ್ಯಾಂಡ್ ಗೆ ತೆರಳಿದೆ. ನಾಲ್ಕು ಹೆಜ್ಜೆ ಗಳ ದೂರದಲ್ಲಿ ಆ ವೃದ್ಧರು ಕೂತಿದ್ದರು. ಕೈಯಲ್ಲಿ ಮೇಲೆ ತೋರಿಸಿದ ಚಿತ್ರದ ತಂತಿಗಳ ಗೊಂಚಲು ‌‌. “ಯಜಮಾನರೇ ಏನಿದು” ಅಂದೆ. ಇವು ಪಜಲ್ಸ್ ಅಂದರು. ತಮ್ಮ ಕೈಯಲ್ಲಿ ಬಿಡಿಯಾಗಿ ಇರಿಸಿಕೊಂಡಿದ್ದ ತಂತಿಯ ಆಟಿಕೆಯನ್ನು ತೋರಿಸಿ “ನೋಡಿ ಈ ರಿಂಗ್ ಇದೆಯಲ್ಲ, ಇದನ್ನು ಹೊರತೆಗೆಯಬೇಕು” ಅಂತ ತೋರಿಸಿದರು. ಕುತೂಹಲದಿಂದ ಕೈಯಲ್ಲಿ ತೆಗೆದುಕೊಂಡು ನೋಡಿದೆ. ನಮ್ಮ ಬುದ್ಧಿಶಕ್ತಿಯನ್ನು ಕೆಣಕುವ ಸಾಧನಗಳು ಅವು. “ಅಜ್ಜಾ, ನೀವು ತಂದು ಮಾರತೀರಾ ಅಥವಾ ನೀವೇ ತಯಾರು ಮಾಡ್ತೀರಾ?” ಕೇಳಿದೆ.”ನಾನೇ ತಯಾರು ಮಾಡೋದು, ನಾನು ಫಜಲ್ ಮೇಕರ್” ಎಂದು ಉತ್ತರಿಸಿದರು. ಈಗ ಅವರನ್ನು ಮತ್ತಷ್ಟು ಗಮನಿಸಿದೆ. ಹಳೆಯದಾದರೂ ಶುಭ್ರವಾಗಿದ್ದ ಬಟ್ಟೆಗಳ, ಮಿಂಚು ಕಣ್ಣುಗಳ, ಎಪ್ಪತ್ತರ ಆಸುಪಾಸಿನ ವಯಸ್ಸಿನ ಈ ವೃದ್ಧರು ಜೀವನೋಪಾಯಕ್ಕಾಗಿ ಈ ಪಜಲ್ ಗಳನ್ನು ತಯಾರಿಸಿ ಹೀಗೆ ದೇಗುಲದ ಎದುರು ಬಿಸಿಲಿನಲ್ಲಿ ಕೂತು ಮಾರುವ ದೃಶ್ಯ… ಕರುಳು ಹಿಂಡಿತು. ಪ್ರಾಯಶಃ ಹೆಚ್ಚೇನೂ ಓದಿರದ ಅವರ ಬುದ್ಧಿಶಕ್ತಿ,ಕೌಶಲಗಳ ಬಗ್ಗೆ ಮೆಚ್ಚುಗೆ ಕೂಡ. “ಅಜ್ಜಾ, ಹೇಗೆ ಇವು” ಅಂದೆ. “ಒಂದಕ್ಕೆ ಇಪ್ಪತ್ತು ರೂಪಾಯಿ. ಹತ್ತರ ಗೊಂಚಲಿಗೆ ನೂರೈವತ್ತು” ಎಂದರು. ಆ ಗೊಂಚಲಿನ ಚಿತ್ರ ಇದು. ಬೇಲೂರಿಗೆ ಹೋದರೆ ನೀವು, ದೇಗುಲದ ಚಪ್ಪಲಿ ಸ್ಟ್ಯಾಂಡ್ ಬಳಿ ಅವರು ಸಿಕ್ಕರೂ ಸಿಗಬಹುದು. ಇಲ್ಲವೇ ಸ್ಟ್ಯಾಂಡ್ ನಲ್ಲಿನ ಅಶೋಕ್ ಅವರನ್ನು ಕೇಳಿ. ಅವರು ಕೃಷ್ಣಪ್ಪ,ಫಜಲ್ ಮೇಕರ್. ಅವರ ಬಳಿ ಫಜಲ್ ಕೊಂಡು ತನ್ನಿ. ನಿಮ್ಮ ಬುದ್ಧಿಶಕ್ತಿಯನ್ನು ಪರೀಕ್ಷಿಸಿಕೊಳ್ಳಿ. ಜೊತೆಗೆ ಈ ವಯಸ್ಸಿನಲ್ಲೂ ಸಕ್ರಿಯರಾಗಿರುವ ಅವರ ಕಾಯಕ ನಿಷ್ಠೆಗೆ,ಕೌಶಲಕ್ಕೆ, ನಿಮ್ಮದೂ ಒಂದು ಸೆಲ್ಯೂಟ್ ಇರಲಿ. ******* ಚಿತ್ರ-ಬರಹ : ಗೋವಿಂದ ಹೆಗಡೆ

ಬದುಕು Read Post »

ಇತರೆ

ಲಹರಿ

ಬೆಂಗಳೂರು ಬ್ಯಾಚುಲರ್ ಹುಡುಗರ ಡೇ ಡ್ರೀಮು ದೇವರಾಜ್ ಹೆಂಡ್ತಿ ಹೇಗಿರಬೇಕು…? ಹೆಂಡ್ತಿ ಆಗಿದ್ರೆ ಸಾಕ… ಜೀವನದ ಜೋಕಾಲಿಯಲ್ಲಿ ಮಗು ತರ ಇರ್ಬೇಕಲ್ವಾ. ಬ್ಯಾಚುಲರ್ ಜೀವನ ಒಂತರ ಬೋನ್ ಲೆಸ್ ಬೋಟಿ ಆಗೋಗಿದೆ .ಬ್ಯಾಚುಲರ್ ಅಂದ್ರೆ ಭಗವಂತ ಕೇರ್ ತಗೊಳಲ್ಲ. ಊರು ಮನೆ ಅಪ್ಪ ಅಮ್ಮ ತಂಗಿ ತಮ್ಮ ಅಕ್ಕ ನೆಂಟ್ರು ನಿಷ್ಠರು ಎಲ್ಲರನ್ನು ಬಿಟ್ಟು ಬಂದು ಬೆಂಗಳೂರಿನನಲ್ಲಿ ಬಂದು ಸಿಂಹದಂತೆ ಬದುಕವರು ಬ್ಯಾಚುಲರ್ ಹುಡುಗ್ರು. ತಿಂಗಳಿಗೊಂದು ಸಲ ಸಂಬಳ .ಮನೆ ರೆಂಟು ವಾಟರ್ ಬಿಲ್ಲು ಚೀಟಿ ಬಟ್ಟೆ ಅಂತ ನೂರಾರು ಖರ್ಚು .ಎದುರುಗಡೆ ಮನೆ ಆಂಟಿ ಮಗಳು. ಚುಡಾಯ್ಸಿದ್ರೆ ಹುಡ್ಗಿ ಕಡೆಯಿಂದ ಬಿಸಿ ಬಿಸಿ ಕಜ್ಜಾಯ. ಇದೆಲ್ಲ ಮಾಮೂಲು ಬೆಂಗಳೂರು ಅಂದ್ರೆ. ವಯಸ್ಸು ಮೀರುತ್ತ ಇರುತ್ತೆ ಮನೇಲಿ ಮದುವೆ ಮಾಡ್ಕೊ ಅಂತ ಒತ್ತಾಯ.ತಂಗಿ ಮದುವೆಗೂ ದುಡ್ಡು ಬೇಕು ಅಂತ ತಂದೆ ತಾಯಿ ಕೇಳೋದು ಮಾಮೂಲು. ಅದು ನಮ್ಮ ಧರ್ಮ.ಬರೋ ಸಂಬಳ ಕೈಗೆ ಸಿಗಲ್ಲ .ಏನೋ ಸಾಲ ಸೂಲ ಮಾಡಿ ತಂಗಿ ಮದುವೆ ಮಾಡ್ತಾರೆ..ಇನ್ನು ಇವನ ಮದುವೆಗೆ ಹಣಬೇಕು.ಸಾಲ ಮಾಡಲೇಬೇಕು ವಿಧಿ ಇಲ್ಲ.. ಮದುವೆ ಆಗೋ ಹುಡುಗಿ ಮೇಲೆ ಬಾನೆತ್ತರದ ಕನಸುಗಳು.ಬೊಂಬೆ ತರ ಇರ್ಬೇಕು .ಯಾವಾಗ್ಲೂ ನನ್ನ ಜೊತೆ ಇರ್ಬೇಕು. ಮದ್ವೆ ಛತ್ರದಲ್ಲೇ ಮಾಡ್ಕೋಬೇಕು. ಫ್ರೆಂಡ್ಸ್ಗೆಲ್ಲಾ ಪಾರ್ಟಿ ಕೊಡುಸ್ಬೇಕು. ಇದೆಲ್ಲ ಇದ್ದಿದ್ದೇ.ಮದುವೆ ಆದ್ಮೇಲೆ ಬೆಂಗಳೂರಿನಲ್ಲಿ ಚಿಕ್ಕ ಮನೆ ಲೀಜ್ ಹಾಕ್ಕೊಂಡು.ಹೆಂಡ್ತಿನ ಮನೇಲಿ ಇರುಸ್ಬೇಕು ಅಂತ ನೂರೆಂಟು ಚಿಂತನೆಗಳು. ಅತ್ತೆ ಮಗಳು ಆದ್ರೆ ಇರ್ಲಿ ಅಂತ.ಅತ್ತೆ ಮಗಳಿಗೆ ಮದ್ವೆ ಆಗೋಗಿದೆ ಬೇರೆ ಸಂಬಂದ ಆದ್ರು ಓಕೆ. ತೊಂದ್ರೆ ಇಲ್ಲ.ಹುಡ್ಗಿ ಚನಾಗಿ ಇದ್ರೆ ಸಾಕು. ವರದಕ್ಷಿಣೆ ಬೇಕಾದ್ರೆ ನಾವೇ ಕೊಟ್ಟು ಮಾಡ್ಕೊಂಡು ಬರೋಣ ಅಂತ ಹುಡುಗ್ರು.ಹುಡುಗ್ರು ಬಾನೆತ್ತರಕ್ಕೆ ಚಪ್ಪರ ಹಾಕ್ತಾರೆ ಅಂದ್ರೆ ಎರಡು ಮಾತಿಲ್ಲ .ಹು ಅನ್ಬೇಕು ಅಷ್ಟೇ…. ಮದ್ವೆ ಮಾಡ್ಕೊಂಡು ಬಂದ ಮೇಲೆ ಹೆಂಡ್ತಿನ ಮನೇಲಿ ಇರಸಿ ತಾನು ಕೆಲಸಕ್ಕೆ ಹೋಗೋದು… ಕೆಲ್ಸ ಮುಗ್ಸಿ ಬರ್ತಾ ಇದ್ದ ಹಾಗೆ ಒಂದು ಸಿಹಿ ಮುತ್ತು. ಬಿಸಿ ಬಿಸಿ ಕಾಫಿ .ಇಲ್ಲ ಅಂದ್ರೆ ತಣ್ಣನೆ ನೀರು… ಸಂಜೆ ಆದ್ಮೇಲೆ ಹೆಂಡ್ತಿಗೆ ಗೋಬಿ ಇಲ್ಲ ಅಂದ್ರೆ ಪಾನಿ ಪಾನಿಪುರಿ.ಇಲ್ಲ ಅಂದ್ರೆ ಹನಿಕೇಕ್ ಇಷ್ಟೇ ಸಾಕು. ರಾತ್ರಿ ಆದ್ರೆ ಊಟಕ್ಕೆ ಹಪ್ಪಳ ಜೊತೆಗೆ ಉಪ್ಪಿನಕಾಯಿ. ಪರಸ್ಪರವಾಗಿ ತುತ್ತು ತಿನಿಸೋದು. ಮಿಸ್ಸಾಗಿ ಒಂದು ಕಿಸ್ ಕೊಡೋದು ಇದೆಲ್ಲ ಮಾಮೂಲು. ವಾರಕ್ಕೊಂದು ಸಲ ಮಾಲು. ಹಬ್ಬ ಬಂದ್ರೆ ಊರಿಗೆ. ಆರು ತಿಂಗಳಿಗೊಮ್ಮೆ ಟ್ರಿಪ್. ವರುಶಕ್ಕೆ ಒಂದು ಮಗು ಹೆಣ್ಣು ಆದ್ರು ಸರಿ ಗಂಡು ಆದ್ರು ಸರಿ.ಅದರಲ್ಲಿ ವಾದ ಇಲ್ಲ.ದೇವರು ಕೊಟ್ಟ ವರ ಮಗು.ಆ ಮಗುನ ಜೋಕಾಲಿಯಲ್ಲಿ ಇಟ್ಟು ಅತ್ತಾಗ ಜೋಗುಳವಾಡಿ .ನಕ್ಕಾಗ ಮುತ್ತನಿಟ್ಟು ಪೋಷಿಸುವದು.ಸ್ವಲ್ಪ ದಿನದ ನಂತರ ಒಂದು ಚಿಕ್ಕ ಕಾರು.ಹಳ್ಳಿ ರೋಡಲ್ಲಿ ಅವ್ಳು .ಹೈವೇ ರೋಡಲ್ಲಿ ನಾವು ರೈಡ್ ಮಾಡೋದು .ಮಗುನ ಕಾರಿನಲ್ಲಿ ಜೋಕಾಲಿ ಕಟ್ಟಿ ಇಂಪಾದ ಹಾಡು ಹಾಕೋದು. ಅತ್ತಾಗ ಕೈನಲ್ಲಿ ಎತ್ತಿಕೊಂಡು ಮುದ್ಧಾಡೋದು. ಮಗುವಿಗೆ ಹೆಸರು ಸುಹಾಸ್ .ಮಗಳು ಹುಟ್ಟಿದ್ರೆ ಸುಹಾಸಿನಿ .ಬೇಡ ಅಂದ್ರೆ ಬೇರೆ ಹೆಸ್ರು .ಊರಲ್ಲಿ ಅಪ್ಪ ಅಮ್ಮನಿಗೆ ತಿಂಗಳಿಗೊಂದು ಸಲ ಮನೆ ಖರ್ಚಿಗೆ ಸ್ವಲ್ಪ ಹಣ ಕೊಡ್ಲೆಬೇಕು.ನಮ್ಮ ಧರ್ಮ. ಇನ್ನು ಏನೇನೋ ಕನಸುಗಳ ಹೊತ್ತ ಹುಡುಗ್ರು ಬೆಂಗಳೂರಿನಲ್ಲಿ ಬ್ಯಾಚುಲರ್ ಆಗಿ ಉಳಿದವ್ರೆ. *********

ಲಹರಿ Read Post »

ಇತರೆ

ಪ್ರಸ್ತುತ

ಕ್ಯಾಂಪಸ್ ಕೋಲಾಹಲ…… ಗಣೇಶ್ ಭಟ್ ಶಿರಸಿ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ (ಜೆಎನ್‍ಯು) ಪುನಃ ಸುದ್ಧಿಯಲ್ಲಿದೆ. ವಿವಿಧ ಶುಲ್ಕಗಳ ಏರಿಕೆಯ ವಿರುದ್ಧ ಪ್ರತಿಭಟನೆ ನಡೆಸಿ, ಕೆಲವು ವಾರಗಳ ಹಿಂದೆ ಮಾಧ್ಯಮಗಳಿಗೆ ಆಹಾರವಾಗಿದ್ದ ಜೆಎನ್‍ಯುನಲ್ಲಿ ಮುಸುಕುಧಾರಿಗಳು ಪ್ರವೇಶಿಸಿ ವಿದ್ಯಾರ್ಥಿಗಳಿಗೆ ಹೊಡೆದು ಬಡಿದಿದ್ದಾರೆಂಬ ವಿಷಯ ಬಿತ್ತರವಾಗುತ್ತಿದೆ. ಕ್ಯಾಂಪಸ್‍ನಲ್ಲೇ ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲವೆಂಬ ವಿಷಯ ದೇಶದಾದ್ಯಂತ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಕೆರಳಿಸಿ, ಪ್ರತಿಭಟನೆ ನಡೆಸಲು ಕಾರಣವಾಗಿದೆ. ನಾಲ್ಕಾರು ದಶಕಗಳ ಹಿಂದೆ ವಿಶ್ವವಿದ್ಯಾಲಯಗಳಲ್ಲಿ ಸೈದ್ಧಾಂತಿಕ ಚರ್ಚೆಗಳು ಇರುತ್ತಿದ್ದವು. ಅಭಿಪ್ರಾಯ ಭೇದಗಳು ಇದ್ದವು. ಆದರೆ ಇಂದಿನ ರೀತಿಯ ಹೊಡೆದಾಟ, ಬಡಿದಾ ಟಗಳು ಇರುತ್ತಿರಲಿಲ್ಲ. ಅಂದು ಸೈದ್ಧಾಂತಿಕ ನಿಲುವುಗಳನ್ನು ತಳೆಯುವ ವೈಯಕ್ತಿಕ ಸ್ವಾತಂತ್ರ್ಯವನ್ನು ಯಾರೂ ಆಕ್ಷೇಪಾರ್ಹವೆಂದು ಪರಿಗಣಿಸುತ್ತಿರಲಿಲ್ಲ. ವಿದ್ಯಾರ್ಥಿಗಳ ನಡುವಿನ ವೈಯಕ್ತಿಕ ಸಂಬಂಧಕ್ಕೆ ಸೈದ್ಧಾಂತಿಕ ಅಭಿಪ್ರಾಯ ಭೇದಗಳು ತೊಡಕುಂಟು ಮಾಡುತ್ತಿರಲಿಲ್ಲ. ಯಾಕೆಂದರೆ ಇಂದಿನಂತೆ ರಾಜಕೀಯ ಪಕ್ಷಗಳು ಕ್ಯಾಂಪಸ್‍ನಲ್ಲಿ ಮೂಗು ತೂರಿಸಿರಲಿಲ್ಲ. ನನ್ನದೇ ಅನುಭವದಿಂದ ಈ ವಿಷಯವನ್ನು ಇಷ್ಟೊಂದು ದೃಢವಾಗಿ ಹೇಳಲು ಸಾಧ್ಯವಾಗುತ್ತಿದೆ. ಎಪ್ಪತ್ತರ ದಶಕದ ಪ್ರಾರಂಭದಲ್ಲಿ ನಾನು ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ನಮ್ಮ ಕ್ಯಾಂಪಸ್‍ನಲ್ಲಿ ಪ್ರಮುಖವಾಗಿ ಮೂರು ಆರ್ಥಿಕ ಸಿದ್ಧಾಂತಗಳ ಕುರಿತು ಚರ್ಚೆ ನಡೆಯುತ್ತಿತ್ತು. ಬಂಡವಾಳವಾದವೇ ಶ್ರೇಷ್ಠ ಎಂದು ನಂಬಿದವರು, ಕಮ್ಯುನಿಸಂ ನಿಂದಲೇ ಸರ್ವ ಸಮಸ್ಯೆಗಳಿಗೂ ಪರಿಹಾರವೆಂದು ನಂಬಿದವರು ಹಾಗೂ ಇವೆರಡನ್ನೂ ಟೀಕಿಸುತ್ತಾ ವಿಕೇಂದ್ರಿಕೃತ ಸಹಕಾರಿ ಅರ್ಥ ನೀತಿಯಿಂದಲೇ ಅಭಿವೃದ್ಧಿಯೆಂದು ವಾದಿಸುವ ಪ್ರಉತವಾದಿಗಳು. ಪ್ರಗತಿಶೀಲ ಉಪಯೋಗ ತತ್ವ (ಪ್ರಉತ)ದನ್ವಯ ಬಂಡವಾಳವಾದ ಮತ್ತು ಕಮ್ಯುನಿಸಂಗಳೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇವೆರಡೂ ಭೌತವಾದಿ ಸಿದ್ಧಾಂತಗಳು. ಮಾನವನ ಅಸ್ತಿತ್ವದ ಸಮಗ್ರತೆಯನ್ನು ಪರಿಗಣಿಸದ ಕೇಂದ್ರೀಕೃತ ಅರ್ಥವ್ಯವಸ್ಥೆಯ ಚಿಂತನೆಗಳು. ಕಮ್ಯುನಿಸಂ ಈ ಜಗತ್ತಿನಿಂದಲೇ ಮಾಯವಾಗಲಿದೆ (ಇದಾಗಲೇ ನಿಜವಾಗಿದೆ) ಬಂಡವಾಳವಾದವು ಪಟಾಕಿಯ ರೀತಿಯಲ್ಲಿ ಸಿಡಿದು ನಿಶ್ಯೇಷವಾಗಲಿದೆ (ನಿಜವಾಗುವ ದಾರಿಯಲ್ಲಿದೆ) ಎಂದು ಪ್ರಉತವಾದಿಗಳು ವಾದಿಸುತ್ತಿದ್ದರು. ಪ್ರಉತ ಎಂಬುದು ಆನಂದ ಮಾರ್ಗ ಸಿದ್ಧಾಂತದ ಒಂದು ಭಾಗ ಮಾತ್ರ. ಆನಂದ ಮಾರ್ಗದ ಕುರಿತು ಹಲವು ವಿಧದ ಅಪಪ್ರಚಾರಗಳು ತಾರಕಕ್ಕೇರಿದ ಸಂದರ್ಭವದು. ಕಾಲೇಜಿನ ಚರ್ಚಾಗೋಷ್ಠಿಗಳಲ್ಲಿ, ಹಾಸ್ಟೆಲ್‍ಗಳಲ್ಲಿ ನಡೆಯುತ್ತಿದ್ದ ಚರ್ಚೆಯ ಸಂದರ್ಭಗಳಲ್ಲಿ ಮೂರು ಸಿದ್ಧಾಂತಗಳ ಅನುಯಾಯಿಗಳು ಒಟ್ಟಿಗೇ ಕುಳಿತು ತಮ್ಮ ತಮ್ಮ ವಿಚಾರಧಾರೆಯನ್ನು ಪ್ರಕಟಿಸುತ್ತಿದ್ದರು. ಆಗಿನ್ನೂ ಪ್ರಾರಂಭವಾಗಿದ್ದ, ಕಮ್ಯುನಿಸಂನ ಉಗ್ರರೂಪವಾದ ನಕ್ಸಲ್‍ವಾದದ ಕುರಿತೂ ಬಹಿರಂಗ ಚರ್ಚೆಯಾಗುತ್ತಿತ್ತು. ಆದರೆ ಈ ಸೈದ್ಧಾಂತಿಕ ಒಲವುಗಳು, ವಿದ್ಯಾರ್ಥಿಗಳ ಅಧ್ಯಯನ ಅಥವಾ ವೈಯಕ್ತಿಕ ಸಂಬಂಧಗಳಿಗೆ ತೊಡಕಾಗಿದ್ದನ್ನು ನಾನು ಕಾಣಲಿಲ್ಲ. ಪ್ರಉತದ ಅನುಯಾಯಿಯಾಗಿದ್ದ ನನ್ನ ಸ್ನೇಹಿತರ ಬಳಗದಲ್ಲಿ ಕಟ್ಟಾ ಎಡಪಂಥೀಯರೂ ಇದ್ದರು. ಬಲಪಂಥೀಯರೂ ಇದ್ದರು. ಗುಂಪು ಅಧ್ಯಯನ ನಡೆಸುವಾಗ, ಗ್ರಂಥಾಲಯ ಬಳಸುವಾಗ ಪುಸ್ತಕ, ನೋಟ್ಸ್‍ಗಳನ್ನು ವಿನಿಮಯ ಮಾಡಿಕೊಳ್ಳುವಂತಹ ಯಾವ ಸಂದರ್ಭದಲ್ಲೂ ಈ ಸೈದ್ಧಾಂತಿಕ ಅಭಿಪ್ರಾಯ ಬೇಧ ನಮ್ಮನ್ನು ಕಾಡಲಿಲ್ಲ. ಅಂದಿನ ದಿನಗಳಲ್ಲಿ ಲಿಖಿತ ರೂಪದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಸೈಕ್ಲೋಸ್ಟೈಲ್ ಮಾಡಿ ಹಂಚುವುದೇ ಸುಲಭದ ದಾರಿಯಾಗಿತ್ತು. ಅವರವರ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ , ಹಾಸ್ಟೆಲ್ ವಾಸಿಗಳ ರೂಂಗಳಿಗೆ ತಲುಪಿಸಲಾಗಿತ್ತಿತ್ತು. ಇಷ್ಟ ಇದ್ದವರು ಓದುತ್ತಿದ್ದರು. ಆದರೆ ಯಾರದೂ ತಕರಾರು ಇರಲಿಲ್ಲ. ಇಂತಹುದೇ ಸನ್ನಿವೇಶ ಇತರ ಹಲವು ವಿಶ್ವವಿದ್ಯಾಲಯಗಳ ಕ್ಯಾಂಪಸ್‍ನಲ್ಲಿದ್ದವು. ಇದರರ್ಥ ಅಂದಿನ ವಿದ್ಯಾರ್ಥಿಗಳು ಪ್ರತಿಭಟಿಸುತ್ತಲೇ ಇರಲಿಲ್ಲವೆಂದಲ್ಲ. ಪ್ರತ್ಯೇಕ ತೆಲಂಗಾಣಕ್ಕಾಗಿ ನಡೆದ ಹೋರಾಟದಲ್ಲಿ ವಿದ್ಯಾರ್ಥಿಗಳು ಬಹುದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದಾಗಿ 1970-71 ರಲ್ಲಿ ಆಂಧ್ರಪ್ರದೇಶದ ಹಲವಾರು ಕಾಲೇಜುಗಳನ್ನು ಸುಮಾರು ಐದಾರು ತಿಂಗಳುಗಳ ಕಾಲ ಮುಚ್ಚಲಾಗಿತ್ತು. 1972-73 ರಲ್ಲಿ ಕೂಡಾ ಈ ಹೋರಾಟದ ಬಿಸಿಯನ್ನು ಮೂರು ತಿಂಗಳುಗಳ ಕಾಲ ವಿದ್ಯಾರ್ಥಿಗಳು ಅನುಭವಿಸಿದರು. ವಿಶೇಷವೆಂದರೆ, ಈ ಹೋರಾಟದಲ್ಲಿ ಧುಮಕಿದವರ ನಡುವಿನ ಸೈದ್ಧಾಂತಿಕ ನಿಲುವುಗಳು ಹೋರಾಟಕ್ಕೆ ಅಡ್ಡಿಯಾಗಲಿಲ್ಲ. ವಿದ್ಯಾರ್ಥಿಗಳ ನಡುವೆ ನಡೆಯುತ್ತಿದ್ದ ಸಂಘರ್ಷಗಳು ವೈಯಕ್ತಿಕ ನೆಲೆಯಲ್ಲಿ ಇರುತ್ತಿದ್ದವು. ಕಾಲೇಜು, ವಿಶ್ವವಿದ್ಯಾಲಯಗಳ ಚುನಾವಣೆಯಲ್ಲಿ ವ್ಯಕ್ತಿ ಕೇಂದ್ರಿತವಾಗಿದ್ದು, ರಾಜಕೀಯ ಪಕ್ಷಗಳ ಒಲವು, ಬೆಂಬಲ ಇರುತ್ತಲೇ ಇರಲಿಲ್ಲ. ಇಡೀ ಭಾರತದ ವಿದ್ಯಾರ್ಥಿಗಳು ದೊಡ್ಡ ಪ್ರಮಾಣದಲ್ಲಿ ಹೋರಾಟದಲ್ಲಿ ಪಾಲ್ಗೊಂಡಿದ್ದು 1974 ರ ಜೆ.ಪಿ.ಚಳುವಳಿಯಲ್ಲಿ. ಉತ್ತರ ಭಾರತದಲ್ಲಿ ತೀವ್ರವಾಗಿದ್ದ ಜೆಪಿ ಚಳುವಳಿಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಅಂದಿನ ರಾಜಕೀಯ ಧುರೀಣರ ಕಣ್ಣು ಕೆಂಪಗಾಗಿಸಲು ಕಾರಣವೆಂದರೆ ಅಧಿಕಾರದ ಗದ್ದುಗೆಯನ್ನು ಅಲುಗಾಡಿಸುವ, ಬದಲಿಸುವ ಹೋರಾಟ ಅದಾಗಿತ್ತು. ಇಂದಿನ ಬಹಳಷ್ಟು ರಾಜಕೀಯ ಧುರೀಣರು ವಿದ್ಯಾರ್ಥಿ ದಿಸೆಯಲ್ಲಿ ಅಂದಿನ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಜೆಪಿ ಆಂದೋಲನದ ಪರಿಣಾಮದಿಂದ 1975 ರ ತುರ್ತು ಪರಿಸ್ಥಿತಿ, 1977ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು ಈಗ ಇತಿಹಾಸ. ವಿದ್ಯಾರ್ಥಿ ಶಕ್ತಿಯನ್ನು ಗಮನಿಸಿದ ರಾಜಕೀಯ ಪಕ್ಷಗಳು, ಕ್ಯಾಂಪಸ್‍ನಲ್ಲಿ ಬೇರೂರುವ ಪ್ರಯತ್ನ ನಡೆಸಿದವು. ವಿದ್ಯಾರ್ಥಿ ಸಂಘದ ಚುನಾವಣೆಗಳಿಗೆ ರಾಜಕಾರಣಿಗಳ ಬೆಂಬಲ ದೊರಕತೊಡಗಿ, ಹಣದ ತೊರೆಯೂ ಹರಿಯ ತೊಡಗಿ, ವಿದ್ಯಾರ್ಥಿಗಳಿಗೂ ಭ್ರಷ್ಟಾಚಾರದ ರುಚಿ ತೋರಿಸುವ ಪ್ರಕ್ರಿಯೆ ಕಾಲೂರ ತೊಡಗಿತು. ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ನಡೆಯುತ್ತಿದ್ದ ಚರ್ಚೆಗಳ ಸ್ಥಾನವನ್ನು ರಾಜಕೀಯ ಪಕ್ಷಗಳ ಒಲವು ಆಕ್ರಮಿಸತೊಡಗಿತು. ವಿದ್ಯಾರ್ಥಿ ಸಂಘಟನೆಗಳು ನೇರವಾಗಿ ರಾಜಕೀಯ ಪಕ್ಷದೊಂದಿಗೆ ಗುರ್ತಿಸಿಕೊಳ್ಳತೊಡಗಿದವು. ಈ ಅಧಃಪತನಕ್ಕೆ ಯಾವುದೇ ಒಂದು ರಾಜಕೀಯ ಪಕ್ಷವನ್ನೂ ದೋಷಿಯಾಗಿಸುವುದು ಅಸಮಂಜಸ. ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಸಮಾನದೋಷಿಗಳು. ರಾಜಕಾರಣಿಗಳ ಅಧಿಕಾರ ದಾಹದ ದಾಳಕ್ಕೆ ವಿದ್ಯಾರ್ಥಿ ಸಮುದಾಯ ಕ್ರಮೇಣ ಬಲಿಯಾಗಿ ಇಂದಿಗೂ ಆ ಬಲೆಯಲ್ಲಿ ಸಿಲುಕಿದೆ. ಸಿದ್ಧಾಂತದ ಸ್ಥಾನವನ್ನು ಭಾವನಾತ್ಮಕ ಅಂಶಗಳು, ವಿನಾಕಾರಣದ ದ್ವೇಷ, ಅಸೂಯೆಗಳು ಆಕ್ರಮಿಸಿವೆ. ಎಡಪಂಥೀಯ ಚಿಂತನೆಯ ನೆಪದಲ್ಲಿ ವಿದ್ಯಾರ್ಥಿಗಳಲ್ಲಿ ದ್ವೇಷ ಹುಟ್ಟಿಸುವ ಕೆಲಸವನ್ನು ಕಮ್ಯುನಿಸ್ಟ್ ಪಕ್ಷಗಳು ಮಾಡುತ್ತಿವೆ. ಜಾತಿ, ಮತ, ಪಂಥ, ಹುಸಿ ದೇಶಾಭಿಮಾನಗಳನ್ನು ವಿದ್ಯಾರ್ಥಿಗಳ ಭಾವನೆ ಕೆರಳಿಸಲು ಬಲಪಂಥೀಯ ಪಕ್ಷಗಳು ಬಳಸುತ್ತಿವೆ. ವಿಶ್ವವಿದ್ಯಾಲಯಗಳು ಮಾತ್ರವಲ್ಲ, ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಕೂಡಾ ವಿಭಜಕ ಕ್ರಮಗಳು ಕಾಲೂರಿವೆ. ವಿದ್ಯಾರ್ಥಿ ಶಕ್ತಿಯ ಅರಿವುಳ್ಳ ಇಂದಿನ ರಾಜಕಾರಣಿಗಳು ತಮ್ಮ ಪಕ್ಷ ಅಥವಾ ತಮಗೆ ವಿದ್ಯಾಸಂಸ್ಥೆಗಳಲ್ಲಿ ಕಾಲೂರುವ ಅವಕಾಶ ಸಿಗದಿದ್ದಾಗ ಗುಂಡಾಗಿರಿಗೆ ಕುಮ್ಮಕ್ಕು ನೀಡುವ ನೀಚ ಕೆಲಸಕ್ಕೂ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಜೆಎನ್‍ಯುದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಕಾರಣ ಸ್ಪಷ್ಟವಾಗುತ್ತದೆ. ಜಾಗತಿಕ ಪ್ರತಿಷ್ಠೆ ಪಡೆದಿರುವ ಭಾರತದ ಕೆಲವೇ ವಿಶ್ವವಿದ್ಯಾಲಯಗಳಲ್ಲಿ ಜೆಎನ್‍ಯು ಕೂಡಾ ಸೇರಿದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ, ಸಂಶೋಧನೆಯಲ್ಲಿ ಆಸಕ್ತಿ ಹುಟ್ಟಿಸುವಲ್ಲಿ ಜೆಎನ್‍ಯು ತನ್ನ ಛಾಪು ಮೂಡಿಸಿದೆ. ಮುಕ್ತ ಚಿಂತನೆಗೆ ಅಲ್ಲಿ ಸಾಕಷ್ಟು ಅವಕಾಶ ಇರುವುದರಿಂದ ಬಲಪಂಥೀಯರನ್ನು ಹಿಂದಿಕ್ಕಿ, ಎಡ ಪಂಥೀಯರು ವಿದ್ಯಾರ್ಥಿಗಳ ಒಲವು ಗಳಿಸುತ್ತಿದ್ದಾರೆ. ಅಭಿಪ್ರಾಯ ಭೇದ, ಭಿನ್ನ ಮತಗಳನ್ನು ಒಪ್ಪಲು ಸಿದ್ಧರಿಲ್ಲದ ಮತೀಯವಾದಿ ಬಲ ಪಂಥೀಯರಿಗೆ ಇದು ಸಹ್ಯವಾಗುತ್ತಿಲ್ಲ. ತಮ್ಮ ಅಭಿಪ್ರಾಯಗಳನ್ನು ಒಪ್ಪದವರನ್ನು ದೇಶದ್ರೋಹಿಗಳೆಂದು ಕರೆಯಲೂ ಹೇಸದ, ದ್ವೇಷದ ಗೋಡೆಗಳ ನಡುವೆ ತಮ್ಮ ಬುದ್ದಿಯನ್ನೇ ಬಂಧಿಸಿಟ್ಟಿರುವ ಜಡವಾದೀ ಚಿಂತಕರು ವಿಶ್ವವಿದ್ಯಾಲಯದಲ್ಲಿ ಪ್ರಾರಂಭವಾಗಿರುವ ಪ್ರತಿಭಟನೆಯನ್ನು ಹಿಂಸಾಚಾರಕ್ಕೆ ತಿರುಗಿಸುತ್ತಿದ್ದಾರೆ. ನಮ್ಮ ಶಿಕ್ಷಣ ಪದ್ಧತಿ, ಸಾಮಾಜಿಕ- ಆರ್ಥಿಕ ವ್ಯವಸ್ಥೆಗಳೂ ವಿಶ್ವವಿದ್ಯಾಲಯಗಳ ಇಂದಿನ ದುಃಸ್ಥಿತಿಯ ಕಾರಣಗಳು. ಪೂರ್ವ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರದವರೆಗೂ ವಿದ್ಯಾರ್ಥಿಗಳ ತಲೆಯಲ್ಲಿ ವಿಷಯಗಳನ್ನು ತುರುಕುವುದೇ ಇಂದಿನ ಶಿಕ್ಷಣ. ಕೆಲವೆಡೆ ತಾವು ಭಿನ್ನವಾಗಿ ಕಲಿಸುತ್ತಿದ್ದೇವೆಂದು ತೋರಿಸಿಕೊಳ್ಳುತ್ತಾರೆ. ಆದರೆ ಭಾರತದ ಇಂದಿನ ಶಿಕ್ಷಣ ವ್ಯವಸ್ಥೆ ಬ್ರಿಟಿಷರು ರೂಪಿಸಿದ ಗುಲಾಮಗಿರಿ ಶಿಕ್ಷಣದ ಮುಂದುವರಿಕೆಯೇ ಆಗಿದೆ. ಕಂದುಚರ್ಮದ ಭಾರತೀಯರಲ್ಲಿ ಒಂದಷ್ಟು ಮೇಲರಿಮೆ ಬೆಳೆಸಿ, ಜನಸಾಮಾನ್ಯರಿಂದ ಪ್ರತ್ಯೇಕಿಸಿ, ಬ್ರಿಟಿಷರ ಗುಲಾಮಗಿರಿ ಮಾಡುವುದನ್ನು ಅಂದು ಕಲಿಸಲಾಗುತ್ತಿತ್ತು. ಬ್ರಿಟಿಷರ ಸ್ಥಾನವನ್ನು ಬಂಡವಾಳಶಾಹಿಗಳಿಗೆ ನೀಡಿರುವುದಷ್ಟೇ ಇಂದಿನ ಬದಲಾವಣೆ. ವಿದ್ಯಾಭ್ಯಾಸ ಮಾಡುವ ಉದ್ದೇಶವೇ ನೌಕರಿ ಪಡೆಯುವುದು; ಬಂಡವಾಳಶಾಹಿಗಳೇ ಉದ್ಯೋಗದಾತರು, ಅವರಿಂದಲೇ ಉದ್ಯೋಗ ಸೃಷ್ಟಿಯೆಂಬ ಮಿಥ್ಯೆಯನ್ನು ವಿದ್ಯಾರ್ಥಿಗಳಲ್ಲಿ ತುಂಬಲಾಗುತ್ತಿದೆ. ಇದರಿಂದಾಗಿ ಪದವಿ ಪಡೆದೊಡನೆ ನೌಕರಿ ಸಿಗಬೇಕೆಂಬ ನಿರೀಕ್ಷೆ ವಿದ್ಯಾರ್ಥಿಗಳಲ್ಲಿದೆ. ಪದವಿ ಪಡೆದು ವರ್ಷಾನುಗಟ್ಟಲೇ ಕಾದರೂ ನೌಕರಿ ಸಿಗದಾಗ ಪದವೀಧರರಲ್ಲಿ ಮಾತ್ರವಲ್ಲ, ವಿದ್ಯಾರ್ಥಿಗಳಲ್ಲೂ ಸಿನಿಕತೆ ಬೆಳೆಯುತ್ತದೆ. ಇದರ ಪರಿಣಾಮವೇ ವಿದ್ಯಾರ್ಥಿ ಮತ್ತು ಯುವಕರಲ್ಲಿ ಅಶಿಸ್ತು , ನಿರಾಶಾವಾದ, ಉದ್ಯೋಗ ಅವಕಾಶ ದೊರಕಿದವರ ಕುರಿತಾದ ಅನಗತ್ಯ ದ್ವೇಷ ಬೆಳೆಯುತ್ತಿದೆ. ಇಂದಿನ ಬಹಳಷ್ಟು ವಿಶ್ವವಿದ್ಯಾಲಯಗಳ ಸಿಲೆಬಸ್‍ಗಳು ಉದ್ಯೋಗಾರ್ಹತೆಯನ್ನು ಬೆಳೆಸುವ ಬದಲಿಗೆ ಅದೇ ಹಳೆಯ ನಿರುಪಯುಕ್ತ ಪಾಠಗಳನ್ನು ಹೇಳುತ್ತಿವೆ. ಸರ್ಕಾರದ ಅನುದಾನಿತ ಶಾಲಾ, ಕಾಲೇಜುಗಳ ಶಿಕ್ಷಕರಲ್ಲಿ ಹೆಚ್ಚಿನವರಿಗೆ ಅಧ್ಯಾಪನ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮೂಡಿಸುವದರಲ್ಲಿ ಆಸಕ್ತಿಯೇ ಇಲ್ಲವಾಗಿದೆ. ಅವರು ವಿದ್ಯಾರ್ಥಿಗಳಿದ್ದಾಗ ಕಲಿತ ವಿಷಯಗಳೇ ದಶಮಾನಗಳ ನಂತರವೂ ಇರುವುದರಿಂದ ತಮ್ಮ ಹಳೆಯ ಟಿಪ್ಪಣಿ, ನೋಟ್ಸ್‍ಗಳನ್ನೇ ಬಳಸಿ, ಕಾಟಾಚಾರದ ಪಾಠ ಮಾಡಿ ತೃಪ್ತರಾಗುತ್ತಾರೆ. ಯಾಕೆಂದರೆ ಅವರು ಮಾಡುವ ಪಾಠದ ಗುಣಮಟ್ಟ, ಅವರ ನಡತೆ, ವಿದ್ಯಾರ್ಥಿಗಳಿಗೆ ಅವರ ಬದುಕಿನ ಸಂದೇಶ ಏನೇ ಇದ್ದರೂ ಪ್ರತಿ ತಿಂಗಳು ಸಂಬಳ ತಪ್ಪುವುದಿಲ್ಲ. ವಿದ್ಯಾರ್ಥಿಗಳಲ್ಲಿ ಸ್ವಾವಲಂಬನಾ ಮನೋಭಾವ ಬೆಳೆಸುವ, ಇತರರ ಕುರಿತಾಗಿ ಪ್ರೀತಿ ಬೆಳೆಸುವ, ಸಹನೆ ಮೂಡಿಸುವ, ಶಿಕ್ಷಣ ವಿಧಾನವೇ ನಮ್ಮಲ್ಲಿ ಇಲ್ಲ. ಇದು ಸ್ಪರ್ಧಾತ್ಮಕ ಜಗತ್ತು ಎಂದೇ ವಿದ್ಯಾರ್ಥಿಗಳಲ್ಲಿ ತಲೆಯಲ್ಲಿ ತುಂಬುತ್ತಾರೆಯೇ ಹೊರತು ಇದು ಸಹಕಾರಾತ್ಮಕ ಜಗತ್ತು ಎಂಬುದನ್ನೇ ಕಲಿಸುವುದಿಲ್ಲ. ಇನ್ನೊಬ್ಬರನ್ನು ನಮ್ಮ ಅವಕಾಶಗಳನ್ನು ಕಸಿಯುವ ಪ್ರತಿಸ್ಪರ್ಧಿ ಎಂದೇ ಪರಿಗಣಿಸಲು ಕಲಿಸುತ್ತಿದ್ದೇನೆ. ವಿದ್ಯಾರ್ಥಿಗಳಲ್ಲಿ ಅಶಿಸ್ತನ್ನು ಗಮನಿಸಿ, ಪ್ರತಿಭಟನೆಗಳಲ್ಲಿ ಅವರು ಪಾಲ್ಗೊಳ್ಳುವುದನ್ನು ನೋಡಿದ ಹಲವರು ಶಿಕ್ಷಣಕ್ಕಾಗಿ ಸರ್ಕಾರ ವೆಚ್ಚ ಮಾಡುವುದನ್ನು ನಿಲ್ಲಿಸಬೇಕೆಂಬ ವಾದ ಮುಂದಿಡುತ್ತಾರೆ. ಅಮೇರಿಕಾ ಮತ್ತು ಇತರ ಹಲವು ದೇಶಗಳಲ್ಲಿ ಇರುವಂತೆ ಕಾಲೇಜು ಶಿಕ್ಷಣದ ವೆಚ್ಚವನ್ನು ವಿದ್ಯಾರ್ಥಿಯೇ ಭರಿಸುವ ಪದ್ಧತಿ ಬರಬೇಕೆಂದು ಸೂಚಿಸುತ್ತಾರೆ. ಆದರೆ ಇಂತಹ ವ್ಯವಸ್ಥೆ ಜಾರಿಗೆ ಬರುವ ಮೊದಲು, ಪಾಲಕರು ಅಥವಾ ವಿದ್ಯಾರ್ಥಿಗೆ ಉದ್ಯೋಗಾವಕಾಶದ ಭದ್ರತೆ ಇರಬೇಕೆಂದು ಅವರು ಯೋಚಿಸುವುದಿಲ್ಲ. ಬೌದ್ಧಿಕ ಶ್ರಮ ಮಾತ್ರ ಶ್ರೇಷ್ಠ, ದೈಹಿಕ ಶ್ರಮ ಕನಿಷ್ಠ ಎಂದು ತಪ್ಪಾಗಿ ಭಾವಿಸಿರುವ ನಮ್ಮ ಸಮಾಜದ ನಂಬಿಕೆ ಬದಲಾಗಬೇಕೆಂದು ಅವರಿಗೆ ಅನಿಸುವುದಿಲ್ಲ. ವ್ಯಕ್ತಿಯ ವಿದ್ಯಾಭ್ಯಾಸದ ಹೊಣೆಯನ್ನು ಸಮಾಜ ಅಥವಾ ಸರ್ಕಾರ ಹೊರದಿದ್ದರೆ, ಆ ವ್ಯಕ್ತಿಯಿಂದ ಸಾಮಾಜಿಕ ಹೊಣೆಗಾರಿಕೆಯನ್ನು ನಿರೀಕ್ಷಿಸುವ ಹಕ್ಕು ನಮಗೆ ಇದೆಯೇ? ಎಂದು ಚಿಂತಿಸಬೇಕಾಗುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಬಸ್ ಪಾಸ್ ನೀಡಿಕೆಯನ್ನು ನಾಗರಿಕರು ಅವಹೇಳನ ಮಾಡುವುದನ್ನು ಕಂಡಾಗ, ಬಸ್ ಕಂಡಕ್ಟರ್ (ಬಹುಶಃ ಅವರೂ ಇದರ ಲಾಭ ಪಡೆದಿರಬಹುದು) ಪಾಸ್ ಹೊಂದಿದ ವಿದ್ಯಾರ್ಥಿಗಳನ್ನು ತಿರಸ್ಕಾರದಿಂದ ನೋಡಿದಾಗ, ಸಮಾಜದ ಕುರಿತು ಒಳ್ಳೆಯ ಭಾವನೆ ಅವರಲ್ಲಿ ಮೂಡಲು ಸಾಧ್ಯವೇ? ಎಂಬ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವುದು ಉತ್ತಮ. ಅಧಿಕಾರ ಗಳಿಸುವುದು, ಅದರಿಂದ ಸಂಪತ್ತು ಗಳಿಸುವುದನ್ನೇ ಗುರಿಯಾಗಿಸಿಕೊಂಡಿರುವ ರಾಜಕಾರಣಿಗಳಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಪರಿವರ್ತನೆಯಾದೀತು, ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲೇ ತೊಡಗುವಂತಾದೀತೆಂದು ನಿರೀಕ್ಷಿಸುವುದು ವ್ಯರ್ಥ. ಸಮಾಜದ ಹಿತ ಚಿಂತಕರು , ಶಿಕ್ಷಣ ತಜ್ಞರು , ಮಾನವ ಪ್ರೇಮಿಗಳು ಮುಂದಾಗಿ ಒತ್ತಡ ಸೃಷ್ಟಿಸಿದಾಗ ಪರಿವರ್ತನೆಯ ಬೆಳಕು ಕಂಡೀತು. ಎಂತಹ ಶಿಕ್ಷಣ ಪದ್ಧತಿ ಬೇಕೆಂಬ ಕುರಿತು ಸಮರ್ಪಕ ತಿಳುವಳಿಕೆ ಇದ್ದಾಗ ಮಾತ್ರ ಸರಿಯಾದ ಶಿಕ್ಷಣ ಪದ್ಧತಿಯ ಅನುಷ್ಠಾನವಾಗುತ್ತದೆ. ತನ್ನನ್ನು ಈ ಬೃಹತ್ ವಿಶ್ವದ ಒಂದು ಭಾಗ, ಸಕಲ ಜೀವರಾಶಿಗಳ ಒಂದು ಕೊಂಡಿ ಎಂದು ಮಗು ಭಾವಿಸತೊಡಗಿದಾಗ ಜೀವನದ ದೃಷ್ಟಿಕೋನವೇ ಬದಲಾಗುತ್ತದೆ. ಪೂರ್ವ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಮನಸ್ಸನ್ನು ವಿಸ್ತಾರಗೊಳಿಸುವ ಶಿಕ್ಷಣ ನೀತಿಯನ್ನು ಪ್ರಾರಂಭಿಸುವುದು ಸೂಕ್ತ. ಯಾಕೆಂದರೆ ಆ ಹಂತದಲ್ಲಿಯೇ ಮಗು ಸರಿಯಾದ ರೀತಿಯಲ್ಲಿ ಯೋಚಿಸುವ ಸಾಮಥ್ರ್ಯ ಹೊಂದಿರುತ್ತದೆ. ಬಾಲ್ಯದಲ್ಲಿಯೇ ಯೋಗ, ಧ್ಯಾನಗಳನ್ನು ಕಲಿತ ಮಗು ಬೆಳೆದಾಗ ಜಾತಿ, ಮತ, ಪಂಥಗಳ ಸಂಕೋಲೆಯಲ್ಲಿ ಸಿಲುಕಿ ಬೀಳುವುದಿಲ್ಲ. ಈ ಪ್ರಪಂಚದಲ್ಲಿ ಎಲ್ಲರಿಗೂ ಬದುಕುವ ಅವಕಾಶವಿದೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳು ಎಲ್ಲರ ಬಳಕೆಗಾಗಿ ಇವೆ. ಇದು ಕೆಲವರದೇ ಸ್ವತ್ತಾಗುವುದು ನಿಸರ್ಗ ವಿರೋಧಿ ಕ್ರಮ; ಸಹಕಾರವೇ ಪ್ರಕೃತಿಯ

ಪ್ರಸ್ತುತ Read Post »

ಇತರೆ

ಶ್ರದ್ದಾಂಜಲಿ

ನಮ್ಮನ್ನಗಲಿದ ಸಾಹಿತಿ, ಸಂಶೋಧಕ, ಪ್ರೋ. ಎಂ.ಚಿದಾನಂದಮರ್ತಿ..! ಕೆ.ಶಿವು ಲಕ್ಕಣ್ಣವರ ಪ್ರೋ. ಎಂ.ಚಿದಾನಂದಮರ್ತಿ..! ಸಾಹಿತಿ, ಸಂಶೋಧಕ ಪ್ರೋ. ಎಂ.ಚಿದಾನಂದಮೂರ್ತಿ ಅವರ ಬಗೆಗೆ ಇತ್ತೀಚಿನ ಎಡಪಂಥೀಯರ ಏನೇ ತಕರಾರಿದ್ದರು. ಅದನ್ನೆಲ್ಲ ಬದಿಗಿರಿಸಿ ಅವರು ಕೊನೆ ಉಸಿರೆಳದ ಈ ಗಳಿಗೆಯಲ್ಲಿ ಅವರ ಕುರಿತು ಈ ಪುಟ್ಟ ಲೇಖನ ಸ್ಮರಣೆ… ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ಸಂಶೋಧಕ, ಪ್ರೋಫೆಸರ್​ ಚಿದಾನಂದ ಮೂರ್ತಿಯವರು ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇವತ್ತು ಬೆಳಗಿನ ಜಾವ 3.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು… ನಾಡಿನ ಹಿರಿಯ ಸಾಹಿತಿ, ಇತಿಹಾಸಜ್ಞ, ಹೋರಾಟಗಾರ, ವಿಶೇಷವಾಗಿ ಹಂಪೆಯ ಜೊತೆ ಬಹಳ ಆಪ್ತತೆ ಬೆಳೆಸಿಕೊಂಡಿದ್ದ, ಕನ್ನಡ ನಾಡಿನ ನೆಲ-ಜಲ-ಭಾಷೆ-ಸಂಸ್ಕೃತಿಯ ಕಾವಲುಗಾರನಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟದ್ದರು ಎಂ. ಚಿದಾನಂದಮೂರ್ತಿಯವರು… ಇಂದು ನಿಧನರಾದ ಹಿರಿಯ ಸಂಶೋಧಕ, ವಿದ್ವಾಂಸ, ಬರಹಗಾರ ಡಾ. ಎಂ.ಚಿದಾನಂದಮೂರ್ತಿ ಅವರು 1931ರ ಮೇ 10ರಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೆಕೋಗಲೂರಿನಲ್ಲಿ ಜನಿಸಿದ್ದರು. ಡಾ. ಎಂ.ಚಿದಾನಂದಮೂರ್ತಿ ಅವರು‌‌ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಕೋಗಲೂರು, ಸಂತೆಬೆನ್ನೂರಿನಲ್ಲಿ ಪಡೆದಿದ್ದರು. ಇಂಟರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 10ನೇ ಸ್ಥಾನಗಳಿಸಿದ್ದ ಅವರು, ಕನ್ನಡ ಆನರ್ಸ್ ಸೇರಿ 1953ರಲ್ಲಿ ಆಲ್ ಆನರ್ಸ್ ಚಿನ್ನದ ಪದಕ ಪಡೆದಿದ್ದರು… ಬಳಿಕ ಎರಡು ವರ್ಷ ಬೆಂಗಳೂರು, ತುಮಕೂರು, ಕೋಲಾರದ ಪದವಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. 1957ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ಸ್ಥಾನದಲ್ಲಿ ಪಡೆದಿದ್ದರು… ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ತೀ. ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ 1964ರಲ್ಲಿ ಪಿ.ಎಚ್‌ಡಿ ಪದವಿ ಪಡೆದಿದ್ದರು… ವೃತ್ತಿಜೀವನದ ಆರಂಭದ ಕೆಲವು ವರ್ಷ ಪದವಿ ಕಾಲೇಜುಗಳ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಚಿದಾನಂದಮೂರ್ತಿಗಳು 1957ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. 1960ರ ಹೊತ್ತಿಗೆ ಮೈಸೂರಿನ ಮಾನಸಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದ ಪ್ರಾಧ್ಯಾಪಕರಾದರು. 1968ರವರೆಗೆ ಅಲ್ಲಿ ಪ್ರಾಧ್ಯಾಪಕರಾಗಿದ್ದರು. ಬಳಿಕ ಬೆಂಗಳೂರು ವಿಶ್ವವಿದ್ಯಾಲಯ ಸೇರಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. 1990ರ ಅಕ್ಟೋಬರ್ 10ರಂದು ಸ್ವಯಂ ನಿವೃತ್ತಿ ಪಡೆದಿದ್ದರು. ವೀರಶೈವ ಧರ್ಮ, ವಾಗರ್ಥ, ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ, ಪುರಾಣ ಸೂರ್ಯಗ್ರಹಣ ಸೇರಿ ಅನೇಕ ಕೃತಿಗಳನ್ನು ರಚಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಚಿದಾನಂದಮೂರ್ತಿ ಭಾಜನರಾಗಿದ್ದರು… ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರದ್ದರು. ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕೆಂದು ಹೋರಾಟ ನಡೆಸಿದವರ ಪೈಕಿ ಚಿದಾನಂದಮೂರ್ತಿಯವರೂ ಪ್ರಮುಖರು. ಸುಮಾರು 1985ರ ಸಂದರ್ಭದಲ್ಲಿ ಸಾಹಿತಿಗಳ, ಕಲಾವಿದರ ಬಳಗದ ಮೂಲಕ ಆಗಿನ ಮುಖ್ಯಮಂತ್ರಿ, ಸಚಿವ ಸಂಪುಟ, ಶಾಸಕರ ಮೇಲೆ ಒತ್ತಡ ತಂದು ವಿಶ್ವವಿದ್ಯಾಲಯ ಸ್ಥಾಪನೆಗೆ ಓಡಾಡಿದ್ದರು… ಸಂಶೋಧನೆ, ಸಾಹಿತ್ಯ ಸೇವೆ ಜತೆ ಸಮಾಜ ಸೇವೆಯಲ್ಲೂ ಚಿದಾನಂದಮೂರ್ತಿ ಮುಂದಿದ್ದರು. ಬರ, ನೆರೆಯಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ನೆರವಾಗಿದ್ದರು. ಉದಾಹರಣೆಗೆ, 2012ರಲ್ಲಿ ರಾಜ್ಯ ತೀವ್ರವಾಗಿ ಬರ ಎದುರಿಸಿದ್ದಾಗ ‘ಬರ ಪರಿಹಾರ ನಿಧಿ ಬಳಗ’ ಸ್ಥಾಪಿಸಿ ನೆರವಾಗಿದ್ದರು. ತೀವ್ರ ಬರಪೀಡಿತ ಪ್ರದೇಶಗಳಿಗೆ ಹೋಗಿ ಮೇವು ಧಾನ್ಯ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು… ಹೀಗಿದ್ದ ಸಾಹಿತಿ ಎಂ.ಚಿದಾನಂದ ಮೂರ್ತಿ ಈಗ ನಮನ್ನು ಅಗಲಿದ್ದಾರೆ. ಅವರ ಬಗೆಗೆ ಎಡ ಪಂಥೀಯರ ಏನೇ ತಕರಾರು ಇದ್ದರೂ ನಮನ್ನು ಅಗಲಿದ ಎಂ.ಚಿದಾನಂದಮೂರ್ತಿಯವರಿಗಿದೋ ನಮನಗಳು… ***********

ಶ್ರದ್ದಾಂಜಲಿ Read Post »

ಇತರೆ

ಪ್ರಸ್ತುತ

16ನೇಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಕಲ್ಕುಳಿ ವಿಠಲ ಹೆಗಡೆಯವರ ಅಧ್ಯಕ್ಷ ಬಾಷಣ [15:50, 1/10/2020] H C. 2: ನಮ್ಮ ಶೃಂಗೇರಿಯ ಆದಿಕವಿ ಬಾಹುಬಲಿಯನ್ನು ಸ್ಮರಿಸುತ್ತಾ ನನ್ನ ಭಾಷಣವನ್ನು ಪ್ರಾರಂಭಿಸುತ್ತಿದ್ದೇನೆ. ಜಿಲ್ಲಾ ೧೬ನೇ ಕನ್ನಡ ಸಾ ಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪದವಿಯ ಈ ಗೌರವವನ್ನು ನಾನು ಬಯಸಿರಲಿಲ್ಲ; ನಿರೀಕ್ಷಿಸಿಯೂ ಇರಲಿಲ್ಲ. ಆದರೂ ನೀವೆಲ್ಲರೂ ಪ್ರೀತಿಯಿಂದ ಈ ಗೌರವ ನೀಡಿದ್ದೀರಿ. ಇದಕ್ಕಾಗಿ ನಾನು ನಿಮಗೆಲ್ಲರಿಗೂ ಅಭಾರಿಯಾಗಿದ್ದೇನೆ.. ನಾನು ಈ ಮೊದಲು ಸ್ಮರಿಸಿದ ಬಾಹುಬಲಿ ಎಂಬ ಜೈನ ಕವಿಯು, ಶೃಂಗೇರಿಯೂ ಆಡಳಿತಕ್ಕೊಳಪಟ್ಟಿದ್ದ ಕಾರ್ಕಳದ ದೊರೆ ಭೈರವೇಂದ್ರನ ಆಸ್ಥಾನದಲ್ಲಿ ಕವಿಯಾಗಿದ್ದನೆಂದು ಇತಿಹಾಸ ಹೇಳುತ್ತದೆ. ಈತನ ಗ್ರಂಥ ‘ನಾಗಕುಮಾರ ಚರಿತೆ’ಯಲ್ಲಿ ಮುಖ್ಯವಾಗಿ ಕರ್ಮಮಾರ್ಗದ ಪ್ರಸ್ತಾಪ ಬರುತ್ತದೆ. ನನ್ನದೂ ಕರ್ಮಮಾರ್ಗವೇ. ನಮ್ಮ ನೆಲ, ಜಲ ಮತ್ತು ನಮ್ಮ ಜನರಿಗೆ ಸರ್ಕಾರದಿಂದಲೇ ಆಗಲಿ, ಇನ್ಯಾರಿಂದಲೇ ಆಗಲಿ ಸಂಕಷ್ಟ ಬಂದಾಗಲೆ ಧ್ವನಿ ಎತ್ತುವ ಕಾಯಕ ಮಾಡಿದ್ದೇನೆ. ಅಗತ್ಯ ಬಿದ್ದಾಗ ಹೋರಾಟಕ್ಕಿಳಿದಿದ್ದೇನೆ. ಇದು ನನ್ನ ಕರ್ತವ್ಯವಾಗಿದೆ. ಈ ಅಧ್ಯ ಕ್ಷ ಸ್ಥಾನವು ಈ ಹಿಂದಿನ ನನ್ನೆ ಹೋರಾಟಕ್ಕೆ ಸಂದ ಗೌರವ ಎಂದು ಭಾವಿಸಿ ದ್ದೇನೆ . ನನ್ನ ಹೋರಾಟದ ಅನುಭವ ಮತ್ತು ಚಿಂತನೆಗಳು ನನ್ನ ಕೃತಿ, ಪ್ರಬಂಧ, ಲೇಖನಗಳಲ್ಲಿ ಅಭಿವ್ಯಕ್ತಗೊಂಡಿದ್ದು, ಅವೇ ಈ ವೇದಿಕೆಯನ್ನು ತಮ್ಮೆಲ್ಲರ ಅಭಿಮಾನದ ಮೇರೆಗೆ ದೊರಕಿಸಿಕೊಟ್ಟಿತ್ತೆಂದು ಕೊಳ್ಳುತ್ತೇನೆ. ನನ್ನನ್ನು ಆಯ್ಕೆಮಾಡಿದ ಜಿಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ ಕ್ಷರು, ಪದಾಧಿಕಾರಿಗಳಿಗೆ, ಅಭಿಮಾನಿಗಳಿಗೆ, ಸ್ನೇಹಿತರಿಗೆ, ಸಮಸ್ತರಿಗೆ ಮೊದಲಿಗೆ ಅಂತರಾಳದ ನಮಸ್ಕಾರ ತಿಳಿಸುತ್ತೇನೆ. ಶೃಂಗೇರಿ ಎಂದರೆ ಹಾವು ಗರ್ಭಿಣಿ ಕಪ್ಪೆಗೆ ನೆರಳು ನೀಡಿದ ಜಾಗ. ಸೌಹಾರ್ದತೆಯ ಪರಂಪರೆಗೆ ಇದಕ್ಕಿಂತ ದೊಡ್ಡ ಉದಾಹರಣೆ ನನಗಂತೂ ಸಿಕ್ಕಿಲ್ಲ. ಈ ಕಾರಣದಿಂದ ನನಗೆ ನನ್ನೂರಿನ ಬಗ್ಗೆ ಹೆಮ್ಮೆ ಎಲ್ಲರಿಗಿಂತಲೂ ಒಂದು ಹಿಡಿ ಹೆಚ್ಚು. ಇಂತಹ ನನ್ನೂರಿನಲ್ಲಿ ನಡೆಯುತ್ತಿರುವ ಈ ಕನ್ನಡ ಹಬ್ಬದಲ್ಲಿ ಈ ಗೌರವ ಪಡೆಯುತ್ತಿರುವುದರಿಂದ ಆಗುತ್ತಿರುವ ಸಂತೋಷವನ್ನು ಪದಗಳಲ್ಲಿ ಹೇಳಲಾರೆ. ಪ್ರಿಯ ಬಂಧುಗಳೇ, ಇದೊಂದು ಸಾಹಿತ್ಯ ಸಮ್ಮೇಳನ ಎಂಬುದಕ್ಕಿಂತ ಕನ್ನಡಿಗರ ಸ್ವಾಭಿಮಾನದ ಸಮಾವೇಶವಾಗಿ ಇತಿಹಾಸದಲ್ಲಿ ದಾಖಲಾಗಲಿದೆ. ಇದು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನವಾಗಿದ್ದರೂ, ಬುದ್ದಿಗೇಡಿಗಳಿಂದಾಗಿ ಅಖಿಲ ಕರ್ನಾಟಕ ಮಟ್ಟದಲ್ಲಿ ಸುದ್ದಿ ಮಾಡಿ ಪ್ರಚಾರ ಪಡೆದಿದೆ. ಎಷ್ಟೇ ಅಡೆ-ತಡೆಗಳು ಎದುರಾದರೂ ಇದರ ಯಶಸ್ಸಿಗಾಗಿ ಹಲವಾರು ಕನ್ನಡ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ದ್ದಾರೆ. ಅನೇಕರು ತಮ್ಮ ಕೈಯಲ್ಲಾದಷ್ಟು ಆರ್ಥಿಕ ನೆರವು ನೀಡಿದ್ದಾರೆ. ಆ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಎಸೆದ ಸವಾಲನ್ನು ದಿಟ್ಟವಾಗಿ ಎದುರಿಸಿದ್ದಾರೆ. ಇದು ನನ್ನಲ್ಲಿ ಹೋರಾಟದ ಕಾವನ್ನು ಇನ್ನಷ್ಟು ಹೆಚ್ಚಿಸಿದೆ ಎಂದಷ್ಟೇ ನಾನು ಈ ಸಂದರ್ಭದಲ್ಲಿ ಹೇಳಬ ಲ್ಲೆ. ನನ್ನನ್ನು ಈ ಸಮ್ಮೇಳನದ ಅಧ್ಯ ಕ್ಷ ರಾಗಿ ಆಯ್ಕೆ ಮಾಡಲಾಗಿದೆ ಎಂದು ಜಿ ಕಸಾಪ ಅಧ್ಯ ಕ್ಷ ರು ಮಾಹಿತಿ ನೀಡಿದ ಕೂಡಲೇ ನನ್ನ ನೆನಪಿಗೆ ಬಂದವರು, ಪರಂಪರೆಯ ಕಥೆಗಳನ್ನು ಮತ್ತು ಜೀವನಾನುಭವದ ಸಂಗತಿಗಳನ್ನು ಧಾರೆ ಎರೆದು ಪೋಷಿಸಿದ ನನ್ನ ಅಪ್ಪ-ಅಮ್ಮ, ಆನಂತರ ನನ್ನನ್ನು ಬೆಳೆಸಿದ ಪ್ರಗತಿಪರ ಚಳವಳಿ ಗಳು, ಸಾರ್ವಜನಿಕ ಬದುಕಿನ ಬವಣೆಗಳ ಮುಖಾಮುಖಿಗೆ ಬೆನ್ನೆಲುಬಾಗಿ ನಿಂತ ಕುಟುಂಬವರ್ಗ ಮತ್ತು ನನ್ನ ಸಂಗಾತಿಗಳು, ಸ್ನೇಹಿತರು. ಈ ಎಲ್ಲರಿಗೂ ನನ್ನ ನಮನಗಳು ಸಲ್ಲುತ್ತವೆ. ಈ ಆತಂಕದ ಸಂದರ್ಭದಲ್ಲಿಯೂ ದೂರ ದೂರದ ಊರಿನಿಂದ ಬಂದಿರುವ ಮತ್ತು ಇಲ್ಲಿಯ ಕನ್ನಡಾಭಿಮಾನಿಗಳಿಗೆ ನಾನು ಋಣಿ. ಏನನ್ನಾದರೂ ಬರೆದು ಓದಬೇಕೆಂದರೆ ನನಗೆ ಎಲ್ಲಿಲ್ಲದ ಹಿಂಜರಿಕೆ. ನಾನೆಂದೂ ಜನರೆದುರು ನಿಂತನಿಲುವಿನಲ್ಲಿ ಆಲೋಚಿಸುತ್ತಲೇ ಹೊಳೆದಂತೆ ಮಾತಾಡುವವನು. ಇಲ್ಲಿಯೂ ಹಾಗೆ ಮಾಡಬೇಕೆಂಬ ಆಸೆ ನನ್ನದಾಗಿತ್ತು. ಆದರೆ ಸತ್‌ಸಂಪ್ರದಾಯವನ್ನು ಮೀರಬಾರದೆಂಬ ಕಾರಣಕ್ಕೆ ಭಾಷಣವನ್ನು ಓದುತ್ತಿ ದ್ದೇನೆ. ಭಾಷಣ ಮಾಡುವುದಕ್ಕಿಂತ ಭಾಷಣ ಬರೆಯುವುದು ಹೆಚ್ಚು ತ್ರಾಸದ ಕೆಲಸವೆಂಬುದು ನನಗೆ ಕಳೆದ ಒಂದು ತಿಂಗಳಿನಲ್ಲಿ ಅರಿವಾಗಿದೆ. ನಾನು ಈ ಭಾಷಣವನ್ನು ನನ್ನೊಳಗೇ ಅಂದುಕೊಳ್ಳುತ್ತ, ತಿದ್ದಿಕೊಳ್ಳುತ್ತ, ಆಡಬೇಕೆಂದು ಅನ್ನಿಸುವ ಈ ನನ್ನ ಮಾತುಗಳು ಅವಶ್ಯಕವೇ? ಈಗಿನ ವಿದ್ಯಮಾನದಲ್ಲಿ ಎಷ್ಟು ಪ್ರಸ್ತುತವಾದೀತು ಎಂದು ಆಲೋಚಿಸುತ್ತ, ವಿಶ್ಲೇಷಿಸುತ್ತ ಕಾಲಕಳೆದಿ ದ್ದೇನೆ. ಅಧ್ಯ ಕ್ಷ ನಾಗಿ ಆಯ್ಕೆಯಾದದ್ದನ್ನು ತಿಳಿದ ದಿನದಿಂದಲೂ ಈಗ ಇಲ್ಲಿ ನಿಮ್ಮೆದುರು ಮಾತಾಡಲು ನಿಂತಿರುವ ಕ್ಷ ಣವನ್ನು ಆತಂಕದಿಂದ ಊಹಿಸಿಕೊಳ್ಳುತ್ತ ಕಳೆದಿ ದ್ದೇನೆ. ಈ ಹೊತ್ತಲ್ಲಿ ನಿಮ್ಮ ಮುಂದೆ ಆಡಲೇ ಬೇಕಾಗಿರುವ ಹಲವು ಮಾತುಗಳು ನನ್ನ ಮುಂದಿವೆ. ಅವುಗಳಲ್ಲಿ ಕೆಲವು ವಿಷಯಗಳನ್ನು ಮಾತ್ರ ನಾನಿಲ್ಲಿ ಪ್ರಸ್ತಾಪಿಸುತ್ತೇನೆ. ಆತ್ಮೀಯ ಕನ್ನಡ ಪ್ರೇಮಿಗಳೇ, ಸಾಹಿತ್ಯ ಸಮ್ಮೇಳನಗಳು ಕನ್ನಡ ನುಡಿ ಜಾತ್ರೆಗಳಾಗಿವೆಯೇ ಹೊರತು, ಕನ್ನಡಿಗರ ಧ್ವನಿಯಾದ ಉದಾಹರಣೆಗಳು ಬಹಳ ಕಡಿಮೆ. ಇನ್ನು ಸಮ್ಮೆಳನಾಧ್ಯ ಕ್ಷರ ಭಾಷಣದಲ್ಲಿನ ವಿಷಯಗಳನ್ನು ಮುಂದಿಟ್ಟುಕೊಂಡು ಗಂಭೀರ ಚರ್ಚೆ ನಡೆಸಿದ್ದಿಲ್ಲ. ಅಧ್ಯಕ್ಷೀಯ ಭಾಷಣದಲ್ಲಿನ ಬೇಡಿಕೆ, ಅಹವಾಲುಗಳಾಗಲೀ, ಅಥವಾ ಸಾವಿರಾರು ಕನ್ನಡಿಗರ ಸಮ್ಮುಖದಲ್ಲಿ ತೀರ್ಮಾನಿಸಿದ ನಿರ್ಣಯಗಳಾಗಲೀ, ಜಾರಿಗೆ ಬಂದಿದ್ದು, ನಾಡು-ನುಡಿಯ ಸಮಸ್ಯೆಗಳು ಬಗೆಹರಿದಿದ್ದು ಅಪರೂಪ. ನನ್ನ ಹೋರಾಟದ ಅನುಭವದಲ್ಲಿ ಹೇಳುವುದಾದರೆ ನಾನು ತುಮಕೂರಿನಲ್ಲಿ ಮತ್ತು ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ, ರಾಜ್ಯ ಮತ್ತು ಮಲೆನಾಡಿನ ವಿಷಯಗಳನ್ನು ಪ್ರಸ್ತಾಪಿಸಿ ದ್ದೇನೆ. ಇವುಗಳನ್ನು ಸಮ್ಮೇಳನದ ನಿರ್ಣಯಗಳಲ್ಲಿ ಸೇರಿಸಬೇಕೆಂದು ಒತ್ತಾಯ ಮಾಡಿ, ಪ್ರತಿಭಟನೆ ಕೂಡ ಮಾಡಿ, ಅದರಲ್ಲಿ ಯಶಸ್ವಿಯೂ ಆಗಿ ದ್ದೇನೆ. ಆದರೆ ಮುಖ್ಯಮಂತ್ರಿಗಳೇ ಭರವಸೆ ನೀಡಿದ್ದರೂ ಈ ನಿರ್ಣಯಗಳು ಕಾರ್ಯರೂಪಕ್ಕೆ ಬಂದಿಲ್ಲವೆಂಬ ಬಹುದೊಡ್ಡ ವಿಷಾದ ನನ್ನಲ್ಲಿದೆ. ಅಂದ ಮಾತ್ರಕ್ಕೆ ಈ ರೀತಿಯ ಸಮ್ಮೇಳನದಲ್ಲಿ ನ್ಯಾಯಯುತ ಬೇಡಿಕೆಗಳನ್ನು, ಸಮಾಜದ ಸಂಕಟಗಳನ್ನು ಪ್ರಸ್ತಾಪಿಸುವುದು ವ್ಯರ್ಥವೆಂಬುದು ನನ್ನ ಅಭಿಪ್ರಾಯವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮ್ಮ ಅಹವಾಲನ್ನು, ಬೇಡಿಕೆಗಳನ್ನು ಸಲ್ಲಿಸುವುದು ಸಂವಿಧಾನಾತ್ಮಕ ಹಕ್ಕು. ಜನ ಜಾಗೃತರಾದರೆ ಸರ್ಕಾರಗಳು ಇವುಗಳಿಗೆ ಬೆಲೆ ನೀಡಲೇಬೇಕಾಗುತ್ತದೆ. ಆ ದೃಷ್ಟಿಯಿಂದ ಇಂದು ನಾನಿಲ್ಲಿ ಪ್ರಸ್ತಾಪಿಸುವ ವಿಷಯಗಳು ನಾವೆಲ್ಲರೂ ಸೇರಿ ನೀಡುತ್ತಿರುವ ಆದೇಶವೆಂದೂ, ಇದು ನನ್ನ ಜವಾಬ್ದಾರಿಯೂ ಹೌದೆಂದು ತಿಳಿದು ಈ ಭಾಷಣವನ್ನು ಮುಂದುವರೆಸುತ್ತೇನೆ. ಈ ಸಾಹಿತ್ಯ ಸಮ್ಮೇಳನದಲ್ಲಿ ನಾನು ವಿನಮ್ರವಾಗಿ ಒಪ್ಪಿಕೊಳ್ಳುವುದೆಂದರೆ ನಾನು ಮೂಲತಃ ಸಾಹಿತ್ಯವನ್ನು ಶಾಸ್ತ್ರೀಯವಾಗಿ ಕಲಿತವನಲ್ಲ. ತಮಗೆಲ್ಲರಿಗೂ ಗೊತ್ತಿರುವಂತೆ ನಾನು ಪರಿಸರ ಮತ್ತು ಸಾಮಾಜಿಕ ಹೋರಾಟದ ಕಾರ್ಯಕರ್ತ. ಕಳೆದ ಭರ್ತಿ ನಾಲ್ಕು ದಶಕಗಳಿಂದ ಒಂದಿಂದು ಹೋರಾಟಗಳಲ್ಲಿ ತೊಡಗಿಸಿಕೊಂಡು ಬಂದಿದ್ದೇನೆ. ಹಾಗೆ ಹೇಳುವುದಾದರೆ ಯಾರಾದರೂ ನನ್ನ ಇತ್ತೀಚಿನ ಕೃತಿಗಳನ್ನು ಓದಿ ನನ್ನನ್ನು ಸಾಹಿತಿ ಎಂದು ಗುರುತಿಸುವುದಕ್ಕಿಂತ ಹೋರಾಟಗಾರನೆಂದರೆ ನನಗೆ ಹೆಚ್ಚು ಖುಷಿಯಾಗುತ್ತದೆ. ವಾಸ್ತವವೆಂದರೆ ರಾಜ್ಯದಾದ್ಯಂತ ನಡೆದ ಹೋರಾಟಗಳಲ್ಲಿ ಭಾಗವಹಿಸಿದ್ದರಿಂದ ನನಗೆ ಸಿಕ್ಕ ಸ್ನೇಹಿತರು, ಅಭಿಮಾನಿಗಳ ಬೆಂಬಲವೆಷ್ಟೋ ಅಷ್ಟೇ ನನ್ನ ಕೃತಿ ‘ಮಂಗನಬ್ಯಾಟೆ’ಗೂ ವಿಸ್ತತೃತವಾದ ಸ್ಪಂದನೆ ಸಿಕ್ಕಿದೆ. ಇದರ ಅರಿವೂ ನನಗಿದೆ. ಹೋರಾಟ ಸಾಹಿತ್ಯದಿಂದ ಹೊರತಲ್ಲ. ಸಾಹಿತ್ಯವೂ ಹೋರಾಟದಿಂದ ಹೊರತಲ್ಲ. ಅವು ಒಂದಕ್ಕೊಂದು ಪೂರಕವೇ. ಸೈದ್ಧಾಂತಿಕ ಪ್ರೇರಣೆಯಿಲ್ಲದ ಹೋರಾಟಗಳಾಗಲೀ; ಸಾಮಾಜಿಕ ಬದ್ಧತೆಯಿಲ್ಲದ ಸಾಹಿತ್ಯವಾಗಲೀ- ಎರಡೂ ಜೊಳ್ಳು. ಜನಸಮಾನ್ಯರ ಸಂಕಟಗಳನ್ನು ಪರಿಹರಿಸುವಲ್ಲಿ ಹೋರಾಟಗಳಿಗೆ ಎಷ್ಟು ಜವಾಬ್ದಾರಿ ಇರುತ್ತದೋ ಅಷ್ಟೇ ಜವಾಬ್ದಾರಿ ಸಾಹಿತ್ಯಕ್ಕೂ ಇರುತ್ತದೆ. ಮೌಲ್ಯಯುತ ಸಾಹಿತ್ಯ ಸಾಮಾಜಿಕ ಬದ್ಧತೆಯಿಂದ ಕೂಡಿರಬೇಕಾಗುತ್ತದೆ. ಈ ಬದ್ಧತೆಯ ವಿಷಯ ಬಂದಾಗ ನನ್ನ ಆತ್ಮೀಯರಾದ, ಖ್ಯಾತ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ಅವರ ಮಾತು ನೆನಪಿಗೆ ಬರುತ್ತದೆ, ಅವರು ‘ಸಾಹಿತ್ಯ ಮತ್ತು ಬದ್ಧತೆ’ ಲೇಖನದಲ್ಲಿ ಹೀಗೆ ಬರೆಯುತ್ತಾರೆ; ‘ಸಾಮಾಜಿಕ ಕಳಕಳಿಯ ಹಿನ್ನೆಲೆಯುಳ್ಳ ಬದ್ಧತೆ ಈ ಕಾಲದ ಅಗತ್ಯ. ಚರಿತ್ರೆ ಇಚ್ಛಿಸುವ ಸ್ಥಿತಿಯೆಂದರೆ ಸರಿಯಾದೀತು’. ಸಾಹಿತ್ಯ ಒಣ ಹರಟೆ, ಪುಂಡರ ಗೋಷ್ಠಿಯಲ್ಲ. ಅದು ಪ್ರತಿಪಾದಿಸುವುದೇನೆಂದರೆ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವುದು, ಮನಸ್ಸನ್ನು ಅರಳಿಸುವುದು. ಅವನಲ್ಲಿ ಹುದುಗಿರುವ ದುರಾಸೆ, ಕ್ರೌರ್ಯ, ಅಸೂಯೆ, ಆಕ್ರಮಣ ಪ್ರವೃತ್ತಿಗಳನ್ನು ತೊಡೆದು ಉದಾತ್ತತೆಯಿಂದ, ಸುಂದರ ಸುಖಮಯ ನೆಮ್ಮದಿಯನ್ನು ಅಭಿವ್ಯಕ್ತಿಸುವುದು. ಹಾಗೆ ನೋಡಿದರೆ ಈ ಮನುಷ್ಯ ಸಮಾಜವನ್ನು ಆಳುತ್ತಿರುವುದು ಸಾಹಿತ್ಯದ ಮೂಲಕವೇ. ಗೀತೆ, ಬೈಬಲ, ಖುರಾನ್ ನಂತಹ ಮಹಾದ್ ಧರ್ಮಗ್ರಂಥಗಳು ಕೋಟಿ ಕೋಟಿ ಜನರನ್ನು ನಿಯಂತ್ರಿಸುತ್ತಿವೆ. ಒಂದು ಕಾಲದಲ್ಲಿ ಪ್ರಪಂಚದ ಮೂರನೇ ಎರಡರಷ್ಟು ಜನರನ್ನು ಮಾನವತಾವಾದಿ ಕಾರ್ಲ್ ಮಾರ್ಕ್ಸ್ ಸಮಾಜವಾದ ಸಿದ್ಧತಾಂತದ ಕಮ್ಯುನಿಸಂ (ಪ್ರಣಾಳಿಕೆ) ನಿಯಂತ್ರಿಸುತ್ತಿತ್ತು. ಧರ್ಮ- ಸಿದ್ಧಾಂತಗಳು ತಮ್ಮ ತಮ್ಮ ಅನುಯಾಯಿಗಳನ್ನಷ್ಟೇ ನಿಯಂತ್ರಿಸಿದರೆ ಸಾಹಿತ್ಯ ಸಮಾಜದ ಎಲ್ಲರೂ ಮಾನವಂತರಾಗಿ ಬದುಕಲು ಸಹಾಯ ಮಾಡುತ್ತದೆ. ಹುಟ್ಟಿದವರಿಗೆ ಸಾವಿದೆ; ಆದರೆ ಬರೆದ ಸಾಹಿತ್ಯಕ್ಕೆಂದೂ ಅಳಿವಿಲ್ಲ ಎಂಬ ಮಾತಿದೆ. ಈ ಮಾತಿಗೆ ಪುಷ್ಟಿದಾಯಕವಾದ ವಿಚಾರವೆಂದರೆ ಯುಗದಕವಿ, ಜಗದ ಕವಿ, ಮಲೆನಾಡಿನ ಕವಿ, ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ. ಕನ್ನಡ ಜೀವಂತವಿರುವವರೆಗೂ ನಮ್ಮ ಈ ಹೆಮ್ಮೆಯ ಕವಿಯ ಸಾಹಿತ್ಯ ಜೀವಂತವಾಗಿರುತ್ತದೆ. ಕುವೆಂಪು ಎಂದರೆ ಮಲೆನಾಡು. ಅವರು ಈ ನಮ್ಮ ಮಲೆನಾಡಿನ ಪರಿಸರವನ್ನು ರಮ್ಯವಾಗಿ ವರ್ಣಿಸಿ ವಿಜೃಂಭಿಸಿದರು. ‘ಹಕ್ಕಿ ಬಳಗ ಸುತ್ತ ಕೂಡಿ ಬೈಗಂ ಬೆಳಗು ಹಾಡಿ ಹಾಡಿ ಮಲೆನಾಡ ಸಗ್ಗ ಮಾಡಿ’ ಎನ್ನುತ್ತಾ ಅವರು ಬರೆದ ಕವಿತೆ-ಕಾದಂಬರಿಗಳು ನನ್ನನ್ನು, ನನ್ನಂತಹ ಅನೇಕರನ್ನು ಪರಿಸರವಾದಿಯಾಗಿ ರೂಪಿಸಿದೆ ಎಂದರೆ ಸಾಹಿತ್ಯದ ಶಕ್ತಿ ಅಪೂರ್ವವಾದದ್ದು ಎಂದೆನಿಸುವುದಿಲ್ಲವೇ? ನಾನು ಯಾವುದೇ ಸಾಹಿತ್ಯದ ಕೃತಿಯನ್ನಾದರೂ ವ್ಯಸನಕ್ಕಾಗಿಮಾತ್ರ ಓದುವುದಿಲ್ಲ, ಸಂಶೋಧನಾ ದೃಷ್ಟಿಯಿಂದಲೇ ಅಭ್ಯಾಸ ಮಾಡುತ್ತೇನೆ. ಆದ್ದರಿಂದ ನಾನು ಎಂದೆಂದೂ ಸಾಹಿತ್ಯದ ವಿದ್ಯಾರ್ಥಿಯೇ. ನನ್ನ ಹಾಗೂ ನನ್ನಂತಹ ಕೋಟ್ಯಂತರ ಜನರ ಅರಿವನ್ನು ಹೆಚ್ಚಿಸಿದ್ದು, ಹೆಚ್ಚಿಸುತ್ತಿರುವುದು ನಮ್ಮ ಭಾಷೆ ಕನ್ನಡ. ಕನ್ನಡ ಭಾಷೆಯೇ ನಮ್ಮ ಆಸ್ತಿ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಭಾಷೆಯ ಪರಂಪರೆಯೇ ಸೌಹಾದತೆ. ಹತ್ತನೇ ಶತಮಾನದಲ್ಲಿ ಆದಿಕವಿ ಪಂಪ ‘ಮಾನವ ಜಾತಿ ತಾನೊಂದೇ ವಲಂ’ ಎಂದು ಮಾನವತೆಯನ್ನು ಸಾರಿದ. ಸರ್ವಜೀವಿಗಳ ಆತ್ಮದಲ್ಲೂ ಪರಮಾತ್ಮನಿದ್ದಾನೆಂದು ಸಾರಿದ ಶಂಕರಾಚಾರ್ಯರು, ಚಾಂಡಾಲನಲ್ಲಿ ಈಶ್ವರನನ್ನು ಕಂಡರು. ಕನ್ನಡ ನೆಲದ, ವಿಶ್ವಮಾನ್ಯ ಧಾರ್ಮಿಕ ಹೋರಾಟಗಾರ ಬಸವಣ್ಣ ಮನುಷ್ಯ ಮನುಷ್ಯರಲ್ಲಿ ಬೇಧವು ಸಲ್ಲದು ಎನ್ನುವುದನ್ನು ಸರಳವಾಗಿ ಹೇಳಿದ್ದು ಹೀಗೆ; ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ ಇಂತಹ ಭವ್ಯ ಪರಂಪರೆ ಕನ್ನಡಕ್ಕಿದೆ. ಕುವೆಂಪು ಅವರ ವಿಶ್ವದೃಷ್ಠಿ, ವಿಶ್ವಮಾನವ ಸಂದೇಶದ ‘ಅನಿಕೇತನ’ ಕವನ ನಮ್ಮೆಲ್ಲರ ಮಂತ್ರವಾಗಬೇಕು. ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವವೆಲ್ಲ ಮೀರಿ, ನಿರ್ದಿಗಂತವಾಗಿ ಏರಿ, ಓ ನನ್ನ ಚೇತನ, ಆಗು ನೀ ಅನಿಕೇತನ ಈ ಕವನದ ಸಾಲುಗಳು ನಮಗೆ ಬೇಕಾದುದು ಆ ಮತ, ಈ ಮತ ಅಲ್ಲ, ಮನುಜಮತ. ಆ ಪಥ ಈ ಪಥ ಅಲ್ಲ, ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ. ಸರ್ವದ ಸರ್ವಸ್ತರ ಉದಯ ಎಂದು ಸಾರುತ್ತವೆ. ಇದು ಎಂದೆಂದಿಗೂ ಸರ್ವಕಾಲಿಕ ಪ್ರೇರಣೆಯಾಗಿದೆ. “ಕುವೆಂಪು ಅವರು ವಿಶ್ವಮಾನವನಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ತ್ವ ಪ್ರಣಾಳಿಕೆಯನ್ನು ಈ ಕವನದಲ್ಲಿ ಕೊಟ್ಟಿ ದ್ದಾರೆ” ಎಂದು ನಮ್ಮ ತಾಲೂಕಿನವರೇ ಆದ ಖ್ಯಾತ ಕವಿ ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟ (ಎಸ.ವಿ. ಪರಮೇಶ್ವರ ಭಟ್ಟ) ಹೇಳಿರುವುದನ್ನು ನಾನಿಲ್ಲಿ (ಕೃತಿ: ರಸಋಷಿ ಕುವೆಂಪು) ನೆನಪಿಸುತ್ತೇನೆ. ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದ ನಮ್ಮ ತಾಲೂಕಿನ ಈ ಹೆಮ್ಮೆಯ ಸಾಹಿತಿಯನ್ನು ಸ್ಮರಿಸುತ್ತೇನೆ. ಕುವೆಂಪು ಅವರು ‘ಹೋಗುವೆನು ನಾ’ ಕವನದಲ್ಲಿ; ಅಲ್ಲಿ ಇಂತಿರಬೇಕು, ಇಂತಿರಬಾರದೆಂಬುವುದಿಲ್ಲವೈ; ಅಲ್ಲಿ ಹೊರೆ ಹೊಣೆಯಿಲ್ಲ; ಶಾಸ್ತ್ರದ ವಿಧಿ ನಿಷೇಧಗಳಿಲ್ಲವೈ; ಜಾತಿಗೀತಿಯ ವೇದಭೇದದ ಕಟ್ಟುಕಟ್ಟಳೆ ನಿಲ್ಲದೈ: ಅಲ್ಲಿ ಪ್ರೀತಿಯೆ ನೀತಿ; ಧರ್ಮಕೆ ಬೇರೆ

ಪ್ರಸ್ತುತ Read Post »

ಇತರೆ

ಕುಮಾರವ್ಯಾಸ ಜಯಂತಿ

ಕನ್ನಡ ಸಾಹಿತ್ಯದ ದಿಗ್ಗಜ ಕುಮಾರವ್ಯಾಸ..! ಕೆ.ಶಿವು ಲಕ್ಕಣ್ಣವರ ದಿನಾಂಕ ೯ ಕುಮಾರವ್ಯಾಸನ ಜಯಂತಿ. ಆ ನಿಮಿತ್ತವಾಗಿ ಕುಮಾರವ್ಯಾಸ ಕುರಿತು ಈ ಲೇಖನ… ಕುಮಾರವ್ಯಾಸ (ಕ್ರಿ.ಶ. ೧೩೫೦-೧೪೦೦) ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ. “ಗದುಗಿನ ನಾರಾಯಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ… ಕುಮಾರವ್ಯಾಸನ ಕಾಲದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಆದರೂ ಕವಿ ಚರಿತಾಕಾರರು ಕೆಲವು ಸಾಹಿತ್ಯದ ಹಿನ್ನೆಲೆಯಿಂದ ಕುಮಾರವ್ಯಾಸನ ಕಾಲವನ್ನು ನಿರ್ಣಯಿಸಲು ಪ್ರಯತ್ನಿಸಿದ್ದಾರೆ. ಕುಮಾರವ್ಯಾಸನ ಹೆಸರು ಹೇಳುವ ಉತ್ತರಕಾಲೀನ ಕವಿಗಳಲ್ಲಿ ಮೊದಲಿಗ ತಿಮ್ಮಣ್ಣ ಕವಿ. ಇವನ ಕಾಲ ಸುಮಾರು ಕ್ರಿ.ಶ. ೧೫೧೦. ಇವನು ವಿಜಯನಗರದ ಶ್ರೀಕೃಷ್ಣದೇವರಾಯನ(ಕ್ರಿ.ಶ.೧೫೦೯ ರಿಂದ ೧೫೨೯ರವರೆಗೆ) ಆಜ್ಞಾನುಸಾರ ‘ಕೃಷ್ಣರಾಜ ಭಾರತ’ಎಂಬ ಕೃತಿಯನ್ನು ರಚಿಸಿದ್ದಾನೆ. ಸುಮಾರು ಕ್ರಿ.ಶ. ೧೫೦೦ ರಲ್ಲಿದ್ದ ‘ತೊರವೆ ರಾಮಾಯಣ’ ಬರೆದ ಕುಮಾರ ವಾಲ್ಮೀಕಿ ಅಥವಾ ತೊರವೆ ನರಹರಿ ಮತ್ತು ‘ಕೃಷ್ಣರಾಯ ಭಾರತ’ ಬರೆದ ತಿಮ್ಮಣ್ಣ ಕವಿ ಕುಮಾರವ್ಯಾಸನನ್ನು ಹೊಗಳಿರುವುದರಿಂದ ಕುಮಾರವ್ಯಾಸನು ಆ ಕಾಲಕ್ಕಿಂತ ಹಿಂದಿನವನೆಂದು ಸಿದ್ಧವಾಗಿದೆ. ಜೀವಂಧರ ಚರಿತೆ ಬರೆದ ಕ್ರಿ.ಶ. ೧೪೨೪ ರಲ್ಲಿದ್ದ ಭಾಸ್ಕರ ಕವಿಯು ಕುಮಾರವ್ಯಾಸನ ಅನೇಕ ನುಡಿಕಟ್ಟುಗಳನ್ನು ಬಳಸಿ ಅವನಿಂದ ಪ್ರಭಾವಿತನಾಗಿರುವುದರಿಂದ, ಕುಮಾರವ್ಯಾಸನು ಅವನಿಗಿಂತ ಹಿಂದಿನವನೆಂದು ಸಂಶೋಧಕರು ನಿರ್ಧರಿಸಿದ್ದಾರೆ… ಕುಮಾರವ್ಯಾಸನ ಹೆಸರಿರುವ ಒಂದು ಶಾಸನ ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸೇರಿದ ಬಾವಿಯ ಎಡ ಮಗ್ಗುಲ ಗೋಡೆಯ ಮೇಲಿದೆ. ಇದರ ಕಾಲ ಸುಮಾರು ಕ್ರಿ.ಶ. ೨೬-೮-೧೫೩೯ ರಲ್ಲಿ ಬರೆದ ಶಾಸನದಲ್ಲಿ ಕವಿ ಕುಮಾರವ್ಯಾಸನಿಗೆ ಪ್ರಸನ್ನನಾದ ಗದುಗಿನ ವೀರ ನಾರಾಯಣನ ಸನ್ನಿಧಿಯಲ್ಲಿ. ಎಂದು ಕುಮಾರವ್ಯಾಸನ ಹೆಸರನ್ನು ಉಲ್ಲೇಖಿಸಿರುವುದರಿಂದ ಅವನು ಅದಕ್ಕಿಂತ ಹಿಂದಿನವನೆಂದು ಸ್ಪಷ್ಟವಾಗಿದೆ. ಕುಮಾರವ್ಯಾಸ ಶ್ರೀಕೃಷ್ಣದೇವರಾಯನ ಆಳ್ವಿಕೆಯಲ್ಲಿದ್ದವನೆಂದೂ, ‘ಪ್ರಭುಲಿಂಗಲೀಲೆ’ ಬರೆದ ಚಾಮರಸನ ತಂಗಿಯ ಗಂಡನೆಂದೂ, ಇದರ ಪ್ರಕಾರ ಇವನ ಕಾಲ ಸುಮಾರು ೧೪೩೯ ಆಗುತ್ತದೆಂದು ಕವಿಚರಿತಾಕಾರರು ಅಭಿಪ್ರಾಯ ಪಟ್ಟಿದ್ದಾರೆ… ಆದ್ದರಿಂದ ಅವನ-ಕುಮಾರವ್ಯಾಸನ ಕಾಲವನ್ನು ಕ್ರಿ.ಶ. ೧೩೫೦-೧೪೦೦ ಎಂದು ನಿರ್ಣಯಿಸಿರುತ್ತಾರೆ. (ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ : ಕುಮಾರವ್ಯಾಸ ಭಾರತ ಸಂಗ್ರಹ ಪ್ರ : ಬಿ.ಎಂ.ಶ್ರೀ. ಪ್ರತಿಷ್ಠಾನ)… ಕುಮಾರವ್ಯಾಸನು ‘ಕರ್ಣಾಟ ಭಾರತ ಕಥಾಮಂಜರಿ’ ರಚಿಸಿ, ವ್ಯಾಸರಾಯರಿಗೆ ತೋರಿಸಿದನೆಂಬ ಐತಿಹ್ಯವಿದೆಯೆಂದು ತಿಳಿಸಿರುವ ಪಂಚಮುಖಿ ಎಂಬ ವಿದ್ವಾಂಸರು- “ಹರಿ ಶರಣರೆನ್ನ ಮನೆಯ ಮೆಟ್ಟಲು ಮನೆ ಪರಮಪಾವನವಾಯಿತು” ಎಂಬ ಸುಳಾದಿಯಲ್ಲಿ ಪುರಂದರದಾಸರು ತಮ್ಮ ಮನೆಗೆ ಕುಮಾರವ್ಯಾಸ ಬಂದುದನ್ನು, ಆತ ತನ್ನ ಕೃತಿಗೆ ಶ್ರೀಕೃಷ್ಣನೇ ಕಥಾನಾಯಕನೆಂದು ಶಾಸ್ತ್ರ ಸಮ್ಮತವಾಗಿ ಹೇಳಿದನೆನ್ನಲಾಗಿದೆ… ಈ ದಿಶೆಯಲ್ಲಿ ಕುಮಾರವ್ಯಾಸ ಅತಿ ಪ್ರಾಚೀನನೂ ಅಲ್ಲ, ಅರ್ವಾಚೀನನೂ ಅಲ್ಲ. ಮಧ್ಯಕಾಲದವನೆಂದೂ, ಅವನ ಭಾಷಾಶೈಲಿಯ ದೃಷ್ಠಿಯಿಂದ ನಿರ್ವಿವಾದವಾಗಿ ಹೇಳಬಹುದು… ಹುಟ್ಟೂರು ಹುಬ್ಬಳ್ಳಿಯ ಕುಂದಗೋಳ ತಾಲ್ಲೂಕಿನ ಕೋಳಿವಾಡವೆಂಬ ಗ್ರಾಮವೆಂದೂ ಅವನ ವಂಶಸ್ಥರು ಈಗಲೂ ಅಲ್ಲಿ ವಾಸಿಸುತ್ತಾರೆಂದೂ ಹೇಳಲಾಗಿದೆ. ಈ ಬಗ್ಗೆ ಸಂಶೋಧನೆ ಮಾಡಿದ ಶ್ರೀ ಎ.ವಿ.ಪ್ರಸನ್ನ, ಕೆ.ಎ.ಎಸ್. ಅವರು ಅವರ ಮನೆಗೆ ಹೋಗಿ ವಿಚಾರ ವಿನಿಮಯ ಮಾಡಿ ಅವರಲ್ಲಿರುವ ಕಾಗದ ಪತ್ರಗಳನ್ನೂ ಕುಮಾರವ್ಯಾಸ ಭಾರತದ ಓಲೆಗರಿ ಪ್ರತಿಗಳನ್ನೂ ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಪತ್ರಗಳ ಆಧಾರದ ಮೇಲೆ ಕವಿಯ ವಂಶಸ್ಥರು ತಮ್ಮ ವಂಶದ ಚರಿತ್ರೆಯನ್ನು ಈ ರೀತಿ ತಿಳಿಸುತ್ತಾರೆ… ಕುಮಾರವ್ಯಾಸನ ಪೂರ್ವಿಕರಾದ ಚಿನ್ನದ ಕೈ ಮಾಧವರಸಯ್ಯನು ಹಿರೇಹಂದಿಗೋಳ ಗ್ರಾಮದವನಾಗಿದ್ದು ಕೋಳೀವಾಡ ಗ್ರಾಮವನ್ನು ಕ್ರಯಕ್ಕೆ ಪಡೆದು, ಕೋಳೀವಾಡದಲ್ಲಿಯೇ ನೆಲಸಿದ. ಅವರು ಅದ್ವೈತಿಗಳಾಗಿದ್ದು ಹರಿ-ಹರರಲ್ಲಿ ಅಬೇಧವನ್ನು ಕಾಣುವವರು. ಇವರು ಅಗಸ್ತ್ಯ ಗೋತ್ರಕ್ಕೆ ಸೇರಿದವರು. ಈ ಬಗ್ಗೆ ಗದುಗಿನ ಕುಮಾರವ್ಯಾಸ ಸಂಘದ ಅಧ್ಯಕ್ಷರೂ ಆದ ಶ್ರೀ ಎಂ.ಎಚ್ ಹರಿದಾಸ ಅವರು ರಚಿಸಿರುವ ಮಹಾಕವಿ ಕುಮಾರವ್ಯಾಸ (ಪ್ರ.ವಿಕ್ರಮ ಪ್ರಕಾಶನ ಗದಗ) ಕಿರು ಹೊತ್ತಿಗೆಯಲ್ಲಿ ಹೆಚ್ಚಿನ ವಿಷಯವಿದೆ… ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲರು ಶ್ರೀ ಎ.ವಿ.ಪ್ರಸನ್ನ ಅವರಿಗೆ ಕೊಟ್ಟ ಕುಮಾರವ್ಯಾಸನ ವಂಶಾವಳಿಯನ್ನು ಗಮಕ ಸಂಪದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಟ್ಟಿನಲ್ಲಿ ಕವಿ ನಾರಾಯಣಪ್ಪ ಕೋಳಿವಾಡದ ಶಾನುಭೋಗ. ಗದುಗಿನ ವೀರನಾರಾಯಣ ಇವನ ಆರಾಧ್ಯ ದೈವ. ಇವನಿಗೆ ವೇದವ್ಯಾಸ ಮತ್ತು ಅಶ್ವತ್ಥಾಮರ ಅನುಗ್ರಹವಾಗಿತ್ತೆಂದು ಹೇಳಲಾಗುತ್ತದೆ… ಈ ವಂಶಾವಳಿಯಂತೆ, ವೀರನಾರಾಯಣರೆಂಬ ಹೆಸರಿನವರು ಐದು ಜನ ಬರುತ್ತಾರೆ. ಅದರಲ್ಲಿ ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ನಂತರ ನಾಲ್ಕನೆಯವನಿಗೆ ೧ ನೇ ವೀರನಾರಾಯಣ ಗೌಡ ಎಂದಿದೆ. ಅವನೇ ಕುಮಾರವ್ಯಾಸನೆಂದು ನಿರ್ಧರಿಸಿದ್ದಾರೆ… ಇಲ್ಲಿ ಗೌಡ ಎಂಬ ಪದ ಜಾತಿ ಸೂಚಕವಲ್ಲ. ಅದು ಗ್ರಾಮ ವೃದ್ಧ ಗಾಮುಂಡ ಗೌಡ ಎಂದು ನಿರ್ಣಯಿಸಿದ್ದಾರೆ. ಆನಂತರ ಕೆಲವು ಅದೇ ಮನೆತನದವರು ಅಯ್ಯ, ಪಾಟೀಲ ಎಂದು ತಮ್ಮ ಹೆಸರಿನ ಕೊನೆಗೆ ಸೇರಿಸಿ ಕೊಂಡಿದ್ದಾರೆ. ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ಕಾಲ ಕ್ರಿ.ಶ. ೧೧೪೮. ಇವನ ನಂತರದ ನಾಲ್ಕನೆಯ ತಲೆಮಾರಿನ ಕುಮಾರವ್ಯಾಸ. ಪ್ರತಿ ತಲೆಮಾರಿಗೆ ೨೫ ವರ್ಷವೆಂದು ಹಿಡಿದರೆ, ಕುಮಾರವ್ಯಾಸನ ಕಾಲ ಕ್ರಿ.ಶ. ೧೨೪೮. ಅವನು ಸುಮಾರು ೭೦ ವರ್ಷ ಬದುಕಿದ್ದನೆಂದು ಭಾವಿಸಿದರೂ ಕ್ರಿ.ಶ. ೧೨೪೮ ರಿಂದ ೧೩೧೮ ಎಂದರೆ ೩೦-೪೦ ವರ್ಷ ವ್ಯತ್ಯಾಸ ಬರುತ್ತದೆ… ೧.ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯ. ೨.ತಿರುಮಲಯ್ಯ. ೩.ಲಕ್ಕರಸಯ್ಯ. ೪.ವೀರನಾರಾಯಣ ಗೌಡ.; ಕೃಷ್ಣರಸಯ್ಯ ; ತಂಕರಸಯ್ಯ ; ತಿರುಮಲಯ್ಯ. ಅಶ್ಯತ್ಥಯ್ಯ. ೪-೧ ನೇ ವೀರನಾರಾಯಣನೇ ಕುಮಾರವ್ಯಾಸ ನಂತರ ೧೯೪೧ ಕ್ಕೆ ೧೯ ತಲೆಮಾರಿನ ಪಟ್ಟಿ ಇದೆ… ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟಕ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೇ ಕುಮಾರವ್ಯಾಸ ತನ್ನ ಕಾವ್ಯ ಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರು ಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. (ತಿದ್ದುಪಡಿ:೧೫೨ ಸಂಧಿಗಳು, 8244ಪದ್ಯಗಳು) ‘ಕುಮಾರವ್ಯಾಸ ಭಾರತ’ದ ಭಾಷೆ ನಡುಗನ್ನಡ. (ಕುಮಾರವ್ಯಾಸ ಭಾರತ-ಆದಿಪರ್ವ)… ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗು ಬಡಿಸುತ್ತದೆ. ಅವನ ಕಾವ್ಯ ಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ… “ಬವರವಾದರೆ ಹರನ ವದನಕೆ ಬೆವರ ತಹೆನು” (ಅಭಿಮನ್ಯುವಿನ ವೀರೋಕ್ತಿ!) “ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ” (ಕಿರಾತಾರ್ಜುನೀಯ ಪ್ರಸಂಗದಲ್ಲಿ) “ಜವನ ಮೀಸೆಯ ಮುರಿದನೋ” (ಉತ್ತರನ ಪೌರುಷದಲ್ಲಿ) “ಅರಿವಿನ ಸೆರಗು ಹಾರಿತು” ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವ ಪ್ರಕೃತಿಯ ವರ್ಣನೆ… ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲ ಪಾತ್ರಗಳು ಅವರವರದೇ ರೀತಿಯಲ್ಲಿ ಮಾತನಾಡುತ್ತಾರೆ, ಬೈಯುತ್ತಾರೆ, ನಗುತ್ತಾರೆ, ಹಾಗೂ ಅಳುತ್ತಾರೆ ಸಹ. ಕುಮಾರವ್ಯಾಸ ಅಷ್ಟೇ ಆಳವಾದ ದೈವಭಕ್ತ ಸಹ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. (“ತಿಳಿಯ ಹೇಳುವೆ ಕೃ‍ಷ್ಣ ಕಥೆಯನು”) ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ. ಕುಮಾರವ್ಯಾಸ ಕೃಷ್ಣನ ಭಕ್ತ. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ವರೆಗೆ. ಬರೆದು ದುರ್ಯೋಧನನ ಅವಸಾನದ ನಂತರ, ಕುಮಾರವ್ಯಾಸನು ಮುಂದೆ ಸಂಕ್ಷಿಪ್ತವಾಗಿ, ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ… ಕುಮಾರವ್ಯಾಸನ ಪ್ರತಿಭೆಗೆ ಕನ್ನಡಿಯಾಗಿ ಹಿಡಿದ ಕುವೆಂಪುರವರ ಈ ಸಾಲುಗಳನ್ನು ನೋಡಿ– “ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿವುದು! ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು!” ಕುಮಾರವ್ಯಾಸನ ಇನ್ನೊಂದು ಕೃತಿ ಐರಾವತ. ಇದು ಅಷ್ಟಾಗಿ ಪ್ರಸಿದ್ಧವಾಗಿಲ್ಲ… ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಸಾಕಷ್ಟು ಪ್ರಸಿದ್ಧವಾಗಿದೆ… “ಹಲಗೆ ಬಳಪವ ಪಿಡಿಯದೊಂದ ಗ್ಗಳಿಕೆ ಪದವಿಟ್ಟಳುಪದೊಂದ ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ ಬಳಸಿ ಬರೆಯಲು ಕಂಠಪತ್ರದ ವುಲುಹುಗೆಡದಗ್ಗಳಿಕೆಯೆಂಬೀ ಬಲುಹು ವೀರನಾರಾಯಣನ ಕಿಂಕರಗೆ” “ವೀರನಾರಾಯಣನೆ ಕವಿ ಲಿಪಿ ಕಾರ ಕುಮಾರವ್ಯಾಸ ಕೇಳುವ ಸೂರಿಗಳು ಸನಕಾದಿಗಳು ಜಂಗಮ ಜನಾರ್ಧನರು ಚಾರು ಕವಿತೆಯ ಬಳಕೆಯಲ್ಲ ವಿ ಚಾರಿಸುವಡಳವಲ್ಲ ಚಿತ್ತವ ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ” ಕುಮಾರವ್ಯಾಸನು ತನ್ನ ಕಾವ್ಯದಲ್ಲಿ ಕೆಲವು ಒಗಟು ಪದ್ಯಗಳನ್ನು ಬಳಸಿದ್ದಾನೆ. ಅವಕ್ಕೆ ಮಂಡಿಗೆಗಳೆಂದು ಕರೆಯುತ್ತಾರೆ ಅವು ವ್ಯಾಖ್ಯಾನ ಮಾಡುವವರಿಲ್ಲದಿದ್ದರೆ ಅರ್ಥವಾಗುವುದು ಕಷ್ಟ..! ************

ಕುಮಾರವ್ಯಾಸ ಜಯಂತಿ Read Post »

ಇತರೆ

ವಿಶ್ಲೇಷಣೆ

ಶಬ್ದ-ಅರ್ಥಗಳ ಅನುಸಂಧಾನದಲ್ಲಿ “ಶಬ್ದವೇಧಿ” ಡಾ.ಗೋವಿಂದ ಹೆಗಡೆ ಶಬ್ದ-ಅರ್ಥಗಳ ಅನುಸಂಧಾನದಲ್ಲಿ “ಶಬ್ದವೇಧಿ” ವಸ್ತುವೈವಿಧ್ಯ,ಲಯ-ಛಂದೋ ವೈವಿಧ್ಯಗಳನ್ನು ವಿಪುಲವಾಗಿ ತಮ್ಮ ಕಾವ್ಯ ಕ್ರಿಯೆಯಲ್ಲಿ ತಂದ ನಮ್ಮ ಕವಿಗಳಲ್ಲಿ ಡಾ. ಎಚ್ಎಸ್ ವೆಂಕಟೇಶಮೂರ್ತಿ ಅವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಪರಂಪರೆಯೊಡನೆ ಅನುಸಂಧಾನದ ರೀತಿ ಅವರದು ಎನ್ನುವ ಕೆ ವಿ ತಿರುಮಲೇಶ್ “ಅವರು ಕನ್ನಡದ ಕಾವ್ಯ ಧಾತುವಿಗೆ ಅಂಟಿಕೊಂಡಿರುವ ಕವಿ” ಎಂದು ಗುರುತಿಸುತ್ತಾರೆ. ‘ಈ ಅನುಸಂಧಾನದ ಒಂದು ಎಳೆ ಎಂದರೆ ಛಂದಸ್ಸಿನ ಬಗ್ಗೆ ಅವರಿಗಿರುವ ಮೋಹ.. ಅವರು ಛಂದೋಬದ್ಧವಾಗಿ ಬರೆಯದಿದ್ದರೂ ಛಂದಸ್ಸನ್ನು ಧಿಕ್ಕರಿಸಿಯೂ ಬರೆದಿಲ್ಲ’ ಎಂಬುದು ತಿರುಮಲೇಶರ ಮಾತು. ಸಾನೆಟ್ ಗೆ ಬರೋಣ. ಕನ್ನಡದಲ್ಲಿ ಸಾನೆಟ್ಟನ್ನು ಬಳಸಿ, ಬೆಳೆಸಿದವರಲ್ಲಿ ಮಾಸ್ತಿ ,ಬೇಂದ್ರೆ ,ಕುವೆಂಪು, ಪುತಿನ, ಕಣವಿ ಮೊದಲಾದವರಿದ್ದಾರೆ. ಸಾನೆಟ್ ಅನ್ನು ತಮ್ಮ ಅಭಿವ್ಯಕ್ತಿಯ ಒಂದು ಮಾಧ್ಯಮವಾಗಿಸಿಕೊಂಡು, ಈಗಲೂ ಬರೆಯುತ್ತಿರುವವರಲ್ಲಿ ಎಚ್ಚೆಸ್ವಿ ಪ್ರಮುಖರು.ಹಲವಾರು ವ್ಯಕ್ತಿಚಿತ್ರಗಳನ್ನು ಅಲ್ಲದೆ ಅನೇಕ ಸುಂದರ ನುಡಿಚಿತ್ರಗಳನ್ನು ಅವರು ಸಾನೆಟ್ ಮೂಲಕ ಕಟ್ಟಿಕೊಟ್ಟಿದ್ದಾರೆ. ಕಾವ್ಯದ ಬಗ್ಗೆ ಕಾವ್ಯ ಕ್ರಿಯೆಯ ನಿಗೂಢತೆ ಅದರ ಮಾಂತ್ರಿಕತೆಯ ಬಗ್ಗೆ ಹಲವು ಕವಿಗಳು ಬರೆದಿದ್ದಾರೆ. ಪ್ರತಿಯೊಂದು ಕವನವೂ ಭರವಸೆಯ ವ್ಯವಸಾಯ ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ ಎಂದ ರಾಮಚಂದ್ರ ಶರ್ಮರ ಸಾಲುಗಳು(ಕವನ), ಈ ಮುಖೋದ್ಗತ ನಿನ್ನ ಹೃದ್ಗತವೆ ಆದ ದಿನ ಸುದಿನ. ಆವರೆಗು ಇದು ತಕ್ಕ ಮಣ್ಣಿನ ತೇವಕಾಗಿ ಕಾದೇ ಇರುವ ಬೀಜ. ಎಂದ ಗಂಗಾಧರ ಚಿತ್ತಾಲರ (ಕವನ) ಮಾತುಗಳು ಈ ಕ್ಷಣದಲ್ಲಿ ನೆನಪಿಗೆ ಬರುವ ಉದಾಹರಣೆಗಳು. ಶಬ್ದವೇಧಿ ಈ ಸಾಲಿಗೆ ಸೇರುತ್ತದೆ. ಇದೊಂದು ಸುನೀತ (ಸಾನೆಟ್). ೪-೪-೪-೨ ಸಾಲುಗಳ ಇಂಗ್ಲಿಷ್/ಶೇಕ್ ಸ್ಪಿಯರ್ ನ ಸಾನೆಟ್ ಗಳ ಮಾದರಿಯದು. “ಆಲಿಬಾಬನ ಗವಿ”-ಒಳಗೆ ನಿಧಿಯಿದೆ- ನಾವು ಕೇಳಿರುವ ಕಥೆ. ಕವಿ ಇಲ್ಲಿ ಅದನ್ನು ಒಂದು ರೂಪಕವಾಗಿ ಬಳಸಿದ್ದಾರೆ. “ಅಲಿಬಾಬಾನ ಗವಿಯ ಮುಂದೆ ನಿಂತಿರುವವರು ನಾವು” ಎಂದು ಆರಂಭವಾಗುವ ಕವಿತೆ ಗವಿಗೆ ‘ ಹೆಬ್ಬಂಡೆ ಬಾಗಿಲು’ಎನ್ನುತ್ತದೆ. ಗವಿಯ ಒಳಗಿದೆಯಂತೆ ಕೊಪ್ಪರಿಗೆ ತುಂಬ ನಿಧಿ. ‘ಇದೆಯಂತೆ’ ಯಾಕೆಂದರೆ ನಾವು ಇನ್ನೂ ಅದನ್ನು ಕಂಡಿಲ್ಲ. ಯಾರೋ ಕಂಡವರು ಹೇಳಿದ್ದಾರೆ. ನಮ್ಮ ದುರ್ದೈವ-‘ಹೊರಗೆ ಉರಿಬಿಸಿಲು, ಬಿರುಗಾಳಿ’ಈ ಮಾತು ಗವಿಯ ಹೊರಗಿನ ಸ್ಥಿತಿಯನ್ನು ಸಹಜವಾಗಿ ಚಿತ್ರಿಸಿದರೂ ಶಕ್ತಿಯುತ ಸಂಕೇತವೂ ಹೌದು. ಕವಿತೆಯ ನಿಧಿ ಸಿಗದ ನಮ್ಮ ವಿಧಿ ದುರ್ವಿಧಿ. ಅದರ ಹೊರಗೆ ಉಳಿದವರಿಗೆ ಇರುವುದು ಉರಿಬಿಸಿಲು ಮತ್ತು ಬಿರುಗಾಳಿ ಮಾತ್ರ. ಅಲಿಬಾಬಾನ ಗವಿಯ ರೂಪಕ ಮುಂದುವರೆಯುತ್ತದೆ. ಬಾಗಿಲು ತೆಗೆಯಲು ಸಂಕೇತ ಪದ ಬೇಕು. ನಮ್ಮ ಸ್ಥಿತಿ ಬೇರೆ. ಸಂಕೇತ ಪದ ಮರೆತು, ಬೇರೇನನ್ನೋ ಬಡಬಡಿಸಿ, ಶಬ್ದಕೋಶ ಹಿಡಿದು,ಹಲವು ಪದಗಳನ್ನು ಜಪಿಸಿ ನೋಡುತ್ತಿದ್ದೇವೆ.’ಕಲ್ಲು ಕರಗುವ ಸಮಯ ಕಾಯುತ್ತ ಕಾಯುತ್ತ’ಈ ಕಾಯುವಿಕೆಯ ತಪಸ್ಸನ್ನು ಗಮನಿಸಿ. ಇಂದಲ್ಲ ನಾಳೆ ಬಾಗಿಲು ತೆರೆದೀತೆನ್ನುವ ಆಶಾಭಾವ ಕಾಯುವಿಕೆಯನ್ನು ಮುಂದುವರಿಸಿದೆ. ಬಾಗಿಲಿದೆ. ಬಾಗಿಲಾಚೆಯ ಗವಿಯಲ್ಲಿ ಅರ್ಥವೂ ಇರಬಹುದು. ‘ಅರ್ಥ’ ಪದದ ಶ್ಲೇಷೆ ತುಂಬ ಸಹಜವಾಗಿ, ಸೊಗಸಾಗಿ ಬಂದಿದೆ.ಅಲಿಬಾಬಾನ ಗವಿಯ ರೂಪಕದಿಂದ ಅರ್ಥಕ್ಕೆ ‘ಸಂಪತ್ತು’ ಎಂಬ ಅರ್ಥ, ಅಭಿಪ್ರಾಯ ತಾನಾಗಿ ಒದಗಿ ಬರುತ್ತದೆ. ಒಳಗೆ ಅರ್ಥವಿರಬಹುದು,ಶಬ್ದಗಳು ಹೊರಗಿವೆ ಎನ್ನುತ್ತದೆ, ಕವಿತೆ. ಇವೆರಡರ ಜೋಡಣೆ-ವಾಗರ್ಥಗಳ “ಪ್ರತಿಪತ್ತಿ”-ಹೇಗೆ? ಒಂದೊಂದು ಪದವನ್ನು ಇಟ್ಟು ಅರ್ಥದ ಬಾಗಿಲನ್ನು ತಟ್ಟುವುದು… ಅದು, ಅಷ್ಟು ಮಾತ್ರ ಸಾಧ್ಯ! “ಏಕಾಗ್ರ ನಿಷ್ಠೆಯಲಿ”ಮತ್ತೆ ತಪದ ಮಾತು. ಯಾವುದು ಈ ಪದವಿಟ್ಟು ಅರ್ಥದ ಅಂತರಂಗವನ್ನು ತೆರೆಯಿಸುವ ಕಾರ್ಯವನ್ನು, ಆ ಪ್ರಯತ್ನವನ್ನು ಬಿಡದೆ ನಡೆಸುವುದು? ಸುನೀತದ ಕೊನೆಯ ಕಪ್ಲೆಟ್, ದ್ವಿಪದಿ, ಯಾವುದನ್ನು ಅಡಿಗ, ಶರ್ಮರು “ಭರತವಾಕ್ಯ” ವನ್ನಾಗಿ ನಿಲ್ಲಿಸುತ್ತಾರೆಂದು ತಿರುಮಲೇಶರು ಹಾಸ್ಯ ಮಾಡುತ್ತಾರೋ ಅಂತಹ ಶಕ್ತಿಯುತ ಜೋಡಿಸಾಲು ಈಗ. ಈ ನಿರಂತರ ಶ್ರಮದ ಹಿಂದೆ ಒಂದೇ ಕೆಚ್ಚು: ನಮ್ಮ ಭಾಷೆಯ ಬಗ್ಗೆ ನಮ್ಮ ಆಳದ ನಚ್ಚು! ಈ ಕೊನೆಯ ಸಾಲು ನನಗೆ ಬೆರಗನ್ನು ತಂದಿದ್ದು. ನಿಜ ಭಾಷೆಯಲ್ಲಿ ಎಲ್ಲ ಕಾವ್ಯ ವ್ಯಾಪಾರ. ಅದು ಅರ್ಥ ನೆಲೆಯ ಅರಿವಿನ ನಿಧಿಯ ಬಾಗಿಲನ್ನು ತೆರೆದೇ ತೆರೆಯುತ್ತದೆ-ಈ ದೃಢನಂಬಿಕೆ ಒಂದೇ ಕೆಲಸವನ್ನು ಮಾಡಲು ಮರಳಿ ಯತ್ನವ ಮಾಡಲು ಹಚ್ಚುವುದು. ಆ ನಚ್ಙು ಇದ್ದವ ಮಾತ್ರ ಕವಿಯಾಗುತ್ತಾನೆ. ಶಬ್ದವನ್ನು ನೆಮ್ಮಿ ಅರ್ಥ ಲಾಭ ಪಡೆಯಲು ಕತ್ತಲಲ್ಲೂ ಬಾಣಪ್ರಯೋಗ ಮಾಡುತ್ತಾನೆ. ತುಂಬ ಎಚ್ಚರದಿಂದ, ನಿಷ್ಣಾತ ಶಿಲ್ಪಿಯ ಮಗ್ನತೆಯಿಂದ ತಮ್ಮ ಕವಿತೆಗಳ ಶರೀರ, ಶಾರೀರಗಳನ್ನು ರೂಪಿಸುವ ಕವಿ ಎಚ್ಎಸ್ವಿ. ನಮ್ಮ ಅರಿವನ್ನು, ಸಂವೇದನೆಯನ್ನು ತಣ್ಣಗೆ ವಿಸ್ತರಿಸುವ,ಎತ್ತರಿಸುವ,ಭಾವಪುಷ್ಟಿಯೊದಗಿಸುವ ಕವಿತೆಗಳು ಅವರವು.ಭಾವೋದ್ರೇಕ ಅವರ ರೀತಿಯಲ್ಲ. ‘ಶಬ್ದವೇಧಿ’ ಅಂಥದೊಂದು ಕವಿತೆ. ಎಚ್ಚೆಸ್ವಿಯವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವನ್ನು ಅಲಂಕರಿಸುತ್ತಿರುವ ಈ ಶುಭ ಅವಸರದಲ್ಲಿ,ಅವರು ಶಬ್ದ ,ಸಂಕೇತಗಳನ್ನು ಬಳಸಿ, ಬೆಳೆಸಿ, ಅರ್ಥದ ಬಾಗಿಲುಗಳನ್ನು ತೆರೆಸುತ್ತಲೇ ಇರಲಿ ಎಂದು ಹಾರೈಸುತ್ತೇನೆ. ======

ವಿಶ್ಲೇಷಣೆ Read Post »

ಇತರೆ

ಪ್ರಸ್ತುತ

ಬುದ್ದಿಗೆ  ಹಿಡಿದ  ಗ್ರಹಣದ   ಬಿಡುಗಡೆ  ಎಂತು? ಗಣೇಶಭಟ್ ಶಿರಸಿ ಬುದ್ದಿಗೆ  ಹಿಡಿದ  ಗ್ರಹಣದ   ಬಿಡುಗಡೆ  ಎಂತು?    ಕಳೆದ ವಾರ ಅಂದರೆ 26-12-2019  ರಂದು  ನಡೆದ  ಅಪೂರ್ವ ನೈಸರ್ಗಿಕ ವಿದ್ಯಮಾನ ಸೂರ್ಯಗ್ರಹಣ ಹಲವರ  ಕಣ್ತುಂಬಿಸಿದರೆ,  ಹಲವರು ಭಯದಿಂದ  ಕುಗ್ಗಿ ಹೋದರು. ಸೂರ್ಯನಿಗೆ  ಗ್ರಹಣದಿಂದ  ಬಿಡುಗಡೆ   ದೊರಕಿದರೂ ಜನರ ಬುದ್ಧಿಗೆ  ಹಿಡಿದ  ಗ್ರಹಣ  ಬಿಡುವ ಸೂಚನೆಗಳು ಕಾಣುತ್ತಿಲ್ಲ.   ಆಕಾಶ ಕಾಯಗಳ  ಕುರಿತು,  ಅವುಗಳ ಚಲನೆಯ  ಬಗ್ಗೆ  ಏನೂ ತಿಳಿದಿರದ ಕಾಲಘಟ್ಟದಲ್ಲಿ  ಅಂದರೆ ಸಾವಿರಾರು ವರ್ಷಗಳ ಹಿಂದೆ, ಪ್ರಕೃತಿಯ  ಜೊತೆ ಸಂಘರ್ಷದ  ಜೀವನ ನಡೆಸುತ್ತಿದ್ದ  ಮಾನವರನ್ನು  ಎಲ್ಲಾ ಘಟನೆಗಳೂ ಭಯ ಹುಟ್ಟಿಸುತ್ತಿದ್ದವು.  ಕಾಲ ಸರಿದಂತೆ  ಇಡೀ  ವಿಶ್ವದ  ರಚನೆ, ಆಕಾಶಕಾಯಗಳೂ ಸೇರಿದಂತೆ  ವಿವಿಧ ಅಭಿವ್ಯಕ್ತಿಗಳ ನಡುವಿನ ಸಂಬಂಧವನ್ನು  ಅಂತರ್ಮುಖಿಯಾದ ಮಾನವರು  ಕಂಡುಕೊಂಡರು.  ನೈಸರ್ಗಿಕ  ಆಗು- ಹೋಗುಗಳ ಕುರಿತು  ತಾಳಿದ್ದ  ಅನಗತ್ಯ  ಭಯದಿಂದ  ಹೊರಬಂದು, ಅವಕ್ಕೆ ಕಾರಣಗಳನ್ನು  ಕಂಡು ಹಿಡಿಯಲು  ಪ್ರಯತ್ನಿಸಿದರು.   ಪಾಶ್ಚಾತ್ಯ ದೇಶಗಳು  ಇನ್ನೂ ಅಂಬೆಗಾಲಿಡಲು ಪ್ರಾರಂಭಿಸುವ  ಮೊದಲೇ ಭಾರತದಲ್ಲಿ  ಖಗೋಲಶಾಸ್ತ್ರ ವಿಕಾಸ  ಹೊಂದಿತ್ತು.  ಗಣಿತ ಶಾಸ್ತ್ರವನ್ನು  ಬಳಸಿ ಸೌರಮಂಡಲವೂ ಸೇರಿದಂತೆ  ಉಳಿದ ನಕ್ಷತ್ರಗಳ  ಚಲನೆಯನ್ನು  ನಿರ್ದಿಷ್ಟವಾಗಿ ಊಹಿಸಬಲ್ಲ  ಸಾಮಥ್ರ್ಯ ಭಾರತದಲ್ಲಿ  ಬೆಳೆದಿತ್ತು. ಇಂತಹ ದೇಶದಲ್ಲೇ ಇಂದು  ಅತಿ ಹೆಚ್ಚು ಮೌಢ್ಯ ಪ್ರಚಲಿತವಿರುವುದು ಇತಿಹಾಸದ  ವ್ಯಂಗ್ಯ.    ಗ್ರಹಣ ಕಾಲದಲ್ಲಿ  ಸೂರ್ಯನನ್ನು  ಬರಿಗಣ್ಣಿನಿಂದ  ನೋಡಬಾರದು ಎಂಬುದು  ವಿಜ್ಞಾನ; ಮನೆಯಲ್ಲೇ ಅವಿತುಕೊಂಡು  ಗ್ರಹಣದ  ಪ್ರಭಾವದಿಂದ  ತಪ್ಪಿಸಿಕೊಳ್ಳುತ್ತೇವೆನ್ನುವುದು  ಮೌಢ್ಯ.  ಗ್ರಹಣ ಕಾಲದಲ್ಲಿ  ಊಟ-ತಿಂಡಿ ಮಾಡಬಾರದೆಂಬ ನಂಬಿಕೆ ಇದ್ದವರ ಪಾಡು  ಹೇಳತೀರದ್ದು.  ಗ್ರಹಣ ಪ್ರಾರಂಭವಾಗುವುದಕ್ಕಿಂತ  ಮೊದಲೇ  ತಿನ್ನಬೇಕು ಹಾಗೂ  ಗ್ರಹಣ ಮುಗಿದ  ನಂತರ  ಸ್ನಾನ ಮಾಡಿ,  ತಿಂಡಿ ಸೇವಿಸಬೇಕೆಂದು  ನಂಬುವವರು, ಚಿಕ್ಕಮಕ್ಕಳಿಗೆ , ವೃದ್ಧರಿಗೆ ರಿಯಾಯಿತಿ ನೀಡಿದರೆ  ಅದು ದೊಡ್ಡಸ್ತಿಕೆ.   ನಾಳೆ ಎಷ್ಟೊತ್ತಿಗೆ ತಿಂಡಿ ತಿನ್ನಬೇಕಂತೆ? ಎಷ್ಟೊತ್ತಿಗೆ ಸ್ನಾನ ಮಾಡಬೇಕಂತೆ?  ಎಂದು  ಸುಶಿಕ್ಷಿತರೆನಿಸಿಕೊಂಡವರೂ ಗ್ರಹಣದ ಮೊದಲೇ ಮಾಹಿತಿ ಸಂಗ್ರಹಿಸುತ್ತಿದ್ದರು!   ಗ್ರಹಣದ  ನಂತರ ಮನೆಯಲ್ಲಿ  ಶೇಖರಿಸಿಟ್ಟಿರುವ ನೀರನ್ನು ಚೆಲ್ಲಿ  ಹೊಸ ನೀರು  ತರಬೇಕೆಂದು ನಂಬುವವರು  ಬಾವಿಯ ನೀರನ್ನು  ಬರಿದು  ಮಾಡುತ್ತಾರೆಯೇ?  ನಲ್ಲಿ ನೀರಿಗೆ, ನೀರು  ಪೂರೈಸುವ  ಸಂಗ್ರಹಣಾ ಟ್ಯಾಂಕ್‍ಗಳಿಗೆ  ಈ ನಿಯಮ ಯಾಕೆ ಅನ್ವಯವಾಗದು?   ಮೂಢನಂಬಿಕೆ  ಎಂದರೆ ಹೀಗೆ  ಯಾವುದನ್ನೂ  ತಾರ್ಕಿಕವಾಗಿ   ಯೋಚಿಸದಿರುವುದು. ಗ್ರಹಣದ  ಪರಿಣಾಮದಿಂದ   ಆಗಬಹುದಾದ  ದೋಷಗಳಿಗೆ  ಪರಿಹಾರವೆಂದರೆ  ಬ್ರಾಹ್ಮಣರಿಗೆ  ಧÀನ,  ದಕ್ಷಿಣೆ ನೀಡುವುದು.  ಇದರಿಂದ  ಯಾರದೋ ದೋಷ ಪರಿಹಾರವಾಗುವುದಾದರೆ ಸ್ವೀಕರಿಸಿದವನ ಗತಿ  ಏನಾದೀತು ಎಂದು  ಯೋಚಿಸಬಾರದೇ?     ಬುದ್ದಿಗೆ  ಗ್ರಹಣ  ಹಿಡಿದಾಗ ಸಾರಾಸಾರ ಯೋಚನಾ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಜಗತ್ತಿನ ನಿಯಾಮಕ, ನಿಯಂತ್ರಕನೇ ಭಗವಂತ ಎಂದು ನಂಬುವವರು, ಕಲ್ಲಿನ ಮೂರ್ತಿಯಲ್ಲೂ ಪರಮಾತ್ಮನಿದ್ದಾನೆ ಎಂದು ಪೂಜಿಸುವವರು, ಗ್ರಹಣ ಕಾಲದಲ್ಲಿ  ದೇವಾಲಯಗಳ  ಬಾಗಿಲು  ಮುಚ್ಚುತ್ತಾರೆ.  ಯಾಕೆಂದರೆ  ಗ್ರಹಣದ  ಮೈಲಿಗೆ, ದೋಷಗಳು  ಭಗವಂತನಿಗೆ ತಟ್ಟಬಾರದು ಎಂದು ದೇವರನ್ನೇ ರಕ್ಷಿಸುವ  ಉದ್ದೇಶಕ್ಕಾಗಿ  ದೇವರ ಮೂರ್ತಿಗಳನ್ನು  ನೀರಿನಲ್ಲಿ  ಮುಳುಗಿಸಿಡುವ ಅಥವಾ ಅಕ್ಕಿಯಲ್ಲಿ ಹೂದಿಡುವ  ಸಂಪ್ರದಾಯವೂ  ಕೆಲವೆಡೆ  ಇದೆ.    ದೇವರಿಗೆ  ತಗುಲಿರಬಹುದಾದ ದೋಷಗಳನ್ನು ಸರಿಪಡಿಸುವವರು, ದೇವಾಲಯಗಳನ್ನು ಶುದ್ಧಿಗೊಳಿಸುವವರು  ಪೂಜಾರಿಗಳು.  ಗ್ರಹಣದ   ಬಿಡುಗಡೆಯ ನಂತರ ವಿಶೇಷ  ಕಾರ್ಯಕ್ರಮಗಳು, ಪೂಜೆ, ಹವನಗಳ ಮೂಲಕ ಪೂಜಾರಿಗಳು ದೇವರನ್ನೂ ಶುದ್ಧ್ಧಗೊಳಿಸುತ್ತಾರೆ.  ಇಂಥ  ಅತಾರ್ಕಿಕ ಆಚರಣೆಗಳನ್ನು  ಹಬ್ಬಿಸಿದಷ್ಟೂ  ಪೂಜಾರಿ  ವರ್ಗಕ್ಕೆ ಲಾಭವೋ ಲಾಭ.      ಗ್ರಹಣ  ಕಾಲದಲ್ಲಿ ಮನೆಯೊಳಗಿದ್ದ ನೀರನ್ನು   ಚಲ್ಲುವವರು  ಹಾಲು, ಮೊಸರು, ತುಪ್ಪ, ಅಕ್ಕಿ, ಕಾಳು, ಬೇಳೆಗಳನ್ನು  ಚೆಲ್ಲುವುದಿಲ್ಲ.  ಅವುಗಳ  ರಕ್ಷಣೆಯ  ಸುಲಭದ   ಪರಿಹಾರವೆಂದರೆ  ತುಳಸಿ ಎಲೆ  ಹಾಕಿದರಾಯಿತು.  ಮನೆಯಲ್ಲಿರುವ  ಒಂದೆರಡು  ಬಟ್ಟೆಯನ್ನು ತೊಳೆದರೆ  ದೋಷ  ಪರಿಹಾರವಾಯಿತು.  ಬೀರುವಿನಲ್ಲಿ ರಾಶಿ ಇರುವ  ಬಟ್ಟೆಗಳಿಗೆ  ಬ್ರಾಹ್ಮಣರು ನೀಡಿದ   ಪಂಚಗವ್ಯ ಸಿಂಪಡಿಸಿದರೆ  ಎಲ್ಲಾ ಮೈಲಿಗೆ  ಓಡಿ ಹೋಯಿತೆಂದು  ನಂಬುವವರೂ ಇದ್ದಾರೆ.    ಇಂತಹ  ಹಲವು ಮೌಢ್ಯಗಳನ್ನು ಬೆಳೆಸಿ, ಉಳಿಸಲು ಕಾರಣರಾದವರು ವಿಪ್ರ ಮನೋಭಾವಿಗಳು. ಅರ್ಥಾತ್  ಬುದ್ದಿ ಜೀವಿಗಳು.  ಎಂದೋ  ಒಂದು ಕಾಲದಲ್ಲಿ  ಅಜ್ಞಾನದಿಂದ ಆಚರಣೆಗೆ  ಬಂದ ವಿಧಿ, ವಿಧಾನಗಳನ್ನು  ಜೀವಂತವಾಗಿಟ್ಟುಕೊಳ್ಳುವುದರಿಂದಲೇ ಆದಾಯ ಗಳಿಸುವ  ವರ್ಗಕ್ಕೆ  ಇದು ಮುಂದುವರಿಯಲೇಬೇಕು. ಅಂಧಶೃದ್ಧೆಗೆ ಬಲಿಯಾದ  ಸಮಾಜ, ತನ್ನ ಅಂತಃಶಕ್ತಿಯನ್ನೇ  ಕಳೆದುಕೊಳ್ಳುತ್ತದೆ.  ಎಲ್ಲೆಡೆ  ದೇವರಿದ್ದಾನೆ ಎಂದು ನಂಬುವುದು ವೈಚಾರಿಕತೆ, ದೇವರು ಇಲ್ಲೇ ಇದ್ದಾನೆ,  ಬೇರೆಡೆ ಇಲ್ಲವೆಂದು ವಾದಿಸುವುದು ಮೌಢ್ಯತೆ. ದೇವಾಲಯಗಳಲ್ಲಿ  ಸ್ಥಾಪಿಸಿದ   ಮೂರ್ತಿಗಳು ಕೆಲವು ಕಾಲದ  ನಂತರ  ತಮ್ಮ  ಶಕ್ತಿ ಕಳೆದುಕೊಳ್ಳುತ್ತವೆಂದು  ನಂಬುವವರಿದ್ದಾರೆ.  ಅಂತಹ ಮೂರ್ತಿಗಳಿಗೆ  ಶಕ್ತಿ  ತುಂಬುವ  ಕಾರ್ಯಕ್ರಮಗಳೂ ನಡೆಯುತ್ತವೆ. ಅದಕ್ಕಾಗಿ ಪುನಃ ಪೂಜಾರಿಗಳು, ಬ್ರಾಹ್ಮಣರು  ಬೇಕೇ ಬೇಕು.  ಅವರು  ನಂಬುವ  ದೇವರಿಗೇ  ಶಕ್ತಿ ನೀಡುವುದು ಬ್ರಾಹ್ಮಣರು. ಅಂದರೆ ದೇವರಿಗಿಂತ ಬ್ರಾಹ್ಮಣರೇ ಹೆಚ್ಚು ಶಕ್ತಿಶಾಲಿಗಳೆಂದಾಯಿತು.  ಇಂತಹ ಅಬದ್ಧ , ಅತಾರ್ಕಿಕ ವಿಚಾರಗಳನ್ನು  ಸಹಸ್ರಾರು  ವರ್ಷಗಳಿಂದಲೂ  ಜನರ ತಲೆಯಲ್ಲಿ ತುಂಬಲಾಗಿದೆ.    ಭಾರತದ ಎಲ್ಲಾ ಸಮಸ್ಯೆಗಳಿಗೆ   ಶ್ರೇಣೀಕೃತ  ಜಾತಿ ವ್ಯವಸ್ಥೆಯೇ ಕಾರಣವೆಂದು  ವಾದಿಸುವವರಿದ್ದಾರೆ.  ಅಂಥವರಲ್ಲಿ  ಹಲವರ  ಉದ್ದೇಶ  ಸಮಾಜದಲ್ಲಿ ವೈಮನಸ್ಸು ಬೆಳೆಸಿ, ತಮ್ಮ ಸ್ವಾರ್ಥ ಸಾಧನೆ ಮತ್ತು ಪ್ರತಿಷ್ಠೆ  ಬೆಳೆಸಿಕೊಳ್ಳುವುದೇ ಆಗಿದೆ.  ಯಾಕೆಂದರೆ ಅದರ ಆಕ್ರೋಶ ಬ್ರಾಹ್ಮಣ ಜಾತಿಯ ವಿರುದ್ಧ ಇರುತ್ತದೆಯೇ  ಹೊರತು  ಜನರ ಮನದಲ್ಲಿ  ತುಂಬಿರುವ   ಮೌಢ್ಯವನ್ನು ,  ಮೂಢನಂಬಿಕೆಯನ್ನು ಕಿತ್ತೆಸೆಯುವುದಲ್ಲ.   ಬುದ್ಧಿ ಜೀವಿಗಳೆಂಬವರು ಎಲ್ಲಾ ಜಾತಿಗಳಲ್ಲೂ  ಇದ್ದಾರೆ.  ಅವರಲ್ಲೂ ಒಳ್ಳೆಯವರೂ ಇದ್ದಾರೆ. ಸ್ವಾರ್ಥಿಗಳೂ ಇದ್ದಾರೆ.  ಯಾವುದೇ  ವ್ಯಕ್ತಿಯನ್ನು  ಅಥವಾ ಮನೋಭಾವಿಯನ್ನು 100%  ಒಳ್ಳೆಯವ ಅಥವಾ ಕೆಟ್ಟವ ಎಂದು ವರ್ಗಿಕರಿಸುವುದು ಅವಾಸ್ತವ.  ಶೂದ್ರ, ಕ್ಷತ್ರಿಯ, ವಿಪ್ರ, ವೈಶ್ಯ  ಮನೋಭಾವಿಗಳಲ್ಲಿ (ಭಗವದ್ಗೀತೆಯಲ್ಲಿ ವಿವರಿಸಿರುವ  ಚತುರ್ವಣಗಳು) ಒಳ್ಳೆಯತನವೂ ಇರುತ್ತದೆ.    ಸ್ವಾರ್ಥ, ದುಷ್ಟತನಗಳೂ ಇರುತ್ತವೆ.  ತಮ್ಮ ಪ್ರಭಾವವನ್ನು  ಹೆಚ್ಚಿಸಿಕೊಳ್ಳುವ ಸ್ವಾರ್ಥದಿಂದಾಗಿ, ಅವರೊಳಗಿನ  ದುಷ್ಟ ಬುದ್ಧಿ ಮೆರೆಯುತ್ತದೆ.  ಜನಸಾಮಾನ್ಯರಲ್ಲಿ  ಮೂಢನಂಬಿಕೆ  ಬೆಳೆಸುವ ,  ಅಂಧ  ಶೃದ್ಧೆ ಹೆಚ್ಚಿಸುವ,  ಜನರ ಬುದ್ಧಿಗೆ  ಗ್ರಹಣ  ಹಿಡಿಸುವುದರಿಂದ  ಅವರು ತಮ್ಮ ಸ್ವಾರ್ಥ ಸಾಧಿಸುತ್ತಾರೆ.     ರಾಜನಿಗಾಗಿ  ದುಡಿಯುವುದು, ರಾಜನ ರಕ್ಷಣೆಗಾಗಿ ಕಾದಾಡಿ,  ಪ್ರಾಣ ಕಳೆದುಕೊಳ್ಳುವುದು ಮಹತ್ಕಾರ್ಯವೆಂದು ನಂಬಿಸಿದಾಗ ಸೈನ್ಯದ ಮನೋಬಲ ಹೆಚ್ಚಾಗುತ್ತದೆ. ಆಧುನಿಕ  ಸಮಾಜದಲ್ಲಿ  ರಾಜನ ಸ್ಥಾನದಲ್ಲಿ  ರಾಜಕೀಯ  ನಾಯಕರನ್ನು ಕೂಡ್ರಿಸಲಾಗಿದೆ. ರಾಜ್ಯದ  ಬದಲು ದೇಶ ಬಂದಿದೆ. ದೇಶವನ್ನು  ರಕ್ಷಿಸುತ್ತೇವೆಂದು ನಂಬಿರುವವರು ರಕ್ಷಣೆ  ನೀಡುತ್ತಿರುವುದು, ಜನರನ್ನು  ಆರ್ಥಿಕ  ಶೋಷಣೆಗೆ ಒಳಪಡಿಸುವ ,  ಶ್ರೀಮಂತರಿಗೆ , ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ  ರಾಜಕಾರಣಿಗಳಿಗೆ  ಹಾಗೂ ಅಧಿಕಾರಿಗಳಿಗೇ  ಹೊರತು  ಜನಸಾಮಾನ್ಯರಿಗಲ್ಲ.  ಈ ವಾಸ್ತವ ನಮ್ಮ ಸೈನಿಕರಿಗೆ,  ಪೋಲೀಸರಿಗೆ  ಅರ್ಥವಾದರೆ ,  ಇಡೀ ವ್ಯವಸ್ಥೆಯಲ್ಲಿ  ಮಹತ್ತರ ಬದಲಾವಣೆಯಾಗುತ್ತದೆ.    ಆಂಗ್ಲ ಮಾಧ್ಯಮದಲ್ಲಿ  ಕಲಿತರೆ ಮಾತ್ರ ಬುದ್ಧಿವಂತರಾಗುತ್ತಾರೆ, ಬದುಕಿನಲ್ಲಿ ಉತ್ತಮ ಸ್ಥಾನಮಾನ ಸಿಗುತ್ತದೆ ಎಂಬುದು ಒಂದು  ಮೌಢ್ಯ. ಈ ಮೌಢ್ಯಕ್ಕೆ  ಸಿಲುಕಿದ   ಪಾಲಕರು ತಮ್ಮ ಮಕ್ಕಳ   ನೈಸರ್ಗಿಕ ಸಾಮಥ್ರ್ಯವನ್ನು , ಆತ್ಮವಿಶ್ವಾಸವನ್ನು  ಹಿಸುಕಿ ಹಾಕುತ್ತಿದ್ದಾರೆಂಬುದು  ವಾಸ್ತವ. ಮಾತೃಭಾಷೆಯ ಕುರಿತಾದ  ಅವಜ್ಞೆ, ಅವಹೇಳನ,  ತಿರಸ್ಕಾರಗಳಿಂದ  ವ್ಯಕ್ತಿಯ ಆಂತರಿಕ  ಬೆಳವಣಿಗೆ  ಕುಂಠಿತವಾಗುತ್ತದೆಂದು  ಅರಿಯಲಾರದಷ್ಟು ಅವರ ಬುದ್ಧಿ ಗ್ರಹಣ ಗ್ರಸ್ತವಾಗಿರುತ್ತದೆ.     ಶಿಕ್ಷಣ ವ್ಯವಸ್ಥೆಯ  ಆಧುನೀಕರಣದ ನೆಪದಲ್ಲಿ  ಮಾಹಿತಿ  ತುರುಕುವ , ಆಡಂಬರದ ಶಿಕ್ಷಣ ಪದ್ಧತಿಗಳು, ಸಂಸ್ಥೆಗಳು ಹಾಗೂ ಪದ್ಧತಿಗಳಿಂದಾಗಿ ಮಾನಸಿಕ ಗುಲಾಮರನ್ನು  ತಯಾರಿಸುತ್ತಿದ್ದೇವೆಂಬ ವಾಸ್ತವವನ್ನು ಸಮಾಜ ಗಮನಿಸಿಲ್ಲ.  ಹದಿನೈದು ವರ್ಷಗಳ ಕಾಲ  ಅಧ್ಯಯನ  ನಡೆಸಿ,  ಪದವಿ ಪಡೆದ ನಂತರವೂ ತನ್ನ ಕಾಲ  ಮೇಲೆ ತಾನು ನಿಲ್ಲಬಲ್ಲೆ ಎಂಬ ಆತ್ಮವಿಶ್ವಾಸವೇ  ಇಲ್ಲದ ಯುವ ಜನಾಂಗ  ಈ ದೇಶದಲ್ಲಿ  ರೂಪುಗೊಳ್ಳಲು  ಬುದ್ಧಿಗೆ  ಗ್ರಹಣಗ್ರಸ್ತರಾದ  ಶಿಕ್ಷಣ ತಜ್ಞರೆನಿಸಿಕೊಂಡವರು,  ರಾಜಕಾರಣಿಗಳೇ ಕಾರಣ.    ಇವರೆಲ್ಲರನ್ನೂ ನಿಯಂತ್ರಿಸುವವರು  ಭ್ರಷ್ಟ  ಬಂಡವಾಳಶಾಹಿಗಳು  ಎಂಬುದು  ಸುಲಭದಲ್ಲಿ   ಇವರಿಗೆ ಅರ್ಥವಾಗುವುದಿಲ್ಲ.  ಕಂಪನಿಗಳ ಲಾಭ ಹೆಚ್ಚಳಕ್ಕಾಗಿ ಅಹರ್ನಿಶೆ ದುಡಿಯಬಲ್ಲ ತಂತ್ರಜ್ಞರನ್ನು,  ಪದವಿಧರರನ್ನು    ಉತ್ಪಾದಿಸುವ  ಕೇಂದ್ರಗಳಾಗಿ  ನಮ್ಮ ಶಿಕ್ಷಣ ಸಂಸ್ಥೆಗಳು  ರೂಪುಗೊಂಡಿವೆ.  ಇವಕ್ಕೆ ಸಾರ್ವಜನಿಕ ಬೊಕ್ಕಸದಿಂದಲೇ ಹಣ ನೀಡಲಾಗುತ್ತಿದೆ.  ಸರ್ವರಿಗೂ ಶಿಕ್ಷಣ, ಹೆಚ್ಚೆಚ್ಚು ಜನರಿಗೆ ಉನ್ನತ  ಶಿಕ್ಷಣ  ನೀತಿಯೆಂಬುದು  ಬಂಡವಾಳಶಾಹಿಗಳ  ಬೊಕ್ಕಸ ತುಂಬಲು, ಬೌದ್ಧಿಕ  ದುಡಿಮೆ ಗಾರರನ್ನು  ತಯಾರಿಸುವ  ಕಾರ್ಖಾನೆಗಳಾಗಿವೆ  ಎಂಬುದು  ರಾಜಕೀಯ ಪಕ್ಷಗಳ   ಅಂಧಾಭಿಮಾನಿಗಳಿಗೆ  ಅಂದರೆ ಬುದ್ಧಿ ಗ್ರಹಣಗ್ರಸ್ತರಾದವರಿಗೆ ಅರ್ಥವಾಗುವುದಿಲ್ಲ.   ದೈಹಿಕ  ಶ್ರಮವೆಂದರೆ  ಕನಿಷ್ಠ,  ಬೌದ್ಧಿಕ ಶ್ರಮವೇ ಶ್ರೇಷ್ಠವೆಂಬ ಅತಾರ್ಕಿಕ, ಅಪಾಯಕಾರಿ ಚಿಂತನೆಯಿಂದ  ಪ್ರೇರಿತವಾದ  ಶಿಕ್ಷಣ ಪದ್ಧತಿ, ವೇತನ ನಿಗದಿಪಡಿಸುವ  ನೀತಿಯ ಅನುಕರಣೆಗಳಿಂದಾಗಿ , ಭಾರತೀಯ  ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ ಆಗುತ್ತಿರುವ  ಏರುಪೇರುಗಳನ್ನು ತಿಳಿಯಲಾರದಷ್ಟು,  ಸರಿಪಡಿಸಲಾರದಷ್ಟು ಬೌದ್ಧಿಕ  ಗ್ರಹಣಗ್ರಸ್ತರಾಗಿದ್ದಾರೆ ನಮ್ಮ ನಾಯಕರು ಹಾಗೂ ತಜ್ಞರು.    ದೊಡ್ಡ ಕಂಪನಿಗಳು, ಹೆಸರಾಂತ ಬಂಡವಾಳಶಾಹಿಗಳಿಂದಲೇ ಉದ್ಯೋಗ ಸೃಷ್ಟಿಯಾಗುತ್ತದೆಂದು, ಅವರಿಂದಲೇ ಸಮಾಜದ ಉದ್ಧಾರವೆಂದು  ಹಲವರು ನಂಬಿಕೊಂಡಿದ್ದಾರೆ.  ಇಂತಹ ಕಂಪನಿಗಳು ಅಥವಾ ಅವರ  ಮಾಲೀಕರುಗಳು ಹುಟ್ಟುವ  ಶತಮಾನಗಳ  ಮೊದಲೇ , ಭಾರತ  ಜಗತ್ತಿನ  ಅತಿ  ಶ್ರೀಮಂತ ರಾಷ್ಟ್ರವಾಗಿತ್ತು ಎಂಬುದನ್ನು   ಮರೆಯುವಷ್ಟು ಜನರ ಬುದ್ಧಿಗೆ ಗ್ರಹಣ ಹಿಡಿದಿದೆ.  ಅಭಿವೃದ್ಧಿಯ  ಹೆಸರಿನಲ್ಲಿ   ಶ್ರೀಮಂತಿಕೆಯ  ನಡುಗಡ್ಡೆಗಳು ಸೃಷ್ಟಿಯಾಗುತ್ತಿರುವಾಗ,  ಪ್ರಾಚೀನ ಕಾಲದಿಂದಲೂ ಭಾರತದ ಮೂಲೆ ಮೂಲೆಯೂ ಸಮೃದ್ಧವಾಗಿದ್ದುದಕ್ಕೆ  ಕಾರಣಗಳನ್ನು ಅಧ್ಯಯನ ಮಾಡಲಾರದಷ್ಟು ಮೌಢ್ಯತೆ ಆವರಿಸಿದೆ.     ಜನಾಂಗೀಯ ಶ್ರೇಷ್ಠತೆಯ ಒಣಹಮ್ಮಿನಿಂದ,  ಮತಾಂಧತೆಯ ಭ್ರಮೆಯಲ್ಲಿ,  ಪ್ರಾದೇಶಿಕ  ಸಂಕೋಲೆಯಲ್ಲಿ  ಸಿಲುಕಿದವರಿಂದ ಇಡೀ ಮಾನವ ಕುಲದ ಸುಖ, ಶಾಂತಿಗಳು  ಕದಡಿ ಹೋಗಿವೆ.  ಸಾಮಾಜಿಕ , ಆರ್ಥಿಕ , ಸಾಂಸ್ಕøತಿಕ, ಶೈಕ್ಷಣಿಕ ಎಲ್ಲಕ್ಕೂ  ಮಿಗಿಲಾಗಿ ಆಧ್ಯಾತ್ಮಿಕ  ಕ್ಷೇತ್ರಗಳಲ್ಲಿ  ಸಮಂಜಸವಾಗಿ  ಯೋಚಿಸಲಾರದಷ್ಟು ಗ್ರಹಣಗ್ರಸ್ತರಾದವರೇ  ಬಹಳ. ಬುದ್ಧಿಗೆ  ಹಿಡಿದಿರುವ  ಗ್ರಹಣವನ್ನು  ಬಿಡಿಸಲು ಸಮಗ್ರ ಪರಿವರ್ತನೆಯ   ಸೂತ್ರವೇ ಬೇಕು.     ಪ್ರವಚನ ಅಥವಾ ಭಾಷಣದಿಂದ ಬುದ್ಧಿಗೆ ಹಿಡಿದ ಗ್ರಹಣ ಬಿಡಿಸಲು ಸಾಧ್ಯವಾಗದು. ಪ್ರಾಚೀನ  ಭಾರತದಲ್ಲಿ  ಪ್ರಚಲಿತವಿದ್ದ, ಸುಮಾರು  ಏಳು ಸಾವಿರ  ವರ್ಷಗಳ ಹಿಂದೆ, ಭಗವಾನ್  ಸದಾಶಿವನಿಂದ  ಪರಿಷ್ಕರಿಸಲ್ಪಟ್ಟ ವಿದ್ಯಾ ತಂತ್ರ ಸಾಧನೆಯೇ ಈ ಸಮಸ್ಯೆಗೆ ದಿವ್ಯೌಷಧ. ವಿದ್ಯಾತಂತ್ರವೆಂದರೆ  ಅಂತರ್  ಮುಖಿಯಾಗಿ ಮನಸ್ಸನ್ನು ಏಕಾಗ್ರಗೊಳಿಸಿ, ವಿಶ್ವ ಚೈತನ್ಯದಲ್ಲಿ  ಒಂದಾಗಿಸುವ  ಸರಳ ಕ್ರಿಯೆ.  ವಿದ್ಯಾತಂತ್ರ ಸಾಧನೆ  ಎಂಬುದು ವೈಜ್ಞಾನಿಕ  , ತಾರ್ಕಿಕ,  ಮಾನಸಿಕ ಕ್ರಿಯೆ. ಇದಕ್ಕೆ   ಸ್ತ್ರೀ, ಪುರುಷ ಎಂಬ ಭೇದಭಾವ ಇಲ್ಲ.  ಪ್ರತಿಯೋರ್ವ  ವ್ಯಕ್ತಿಯೂ ತನ್ನ ದೈನಂದಿನ ಬದುಕಿನಲ್ಲಿ  ಪಾಲಿಸ ಬಹುದಾದ ಸರಳ ವಿಧಾನ; ಪ್ರಾಕೃತಿಕ  ವಿಕಾಸಕ್ರಿಯೆಗೆ   ಪೂರಕವಾದ   ಮಾನವ  ಪ್ರಯತ್ನ. ದಾರ್ಶನಿಕರ  ಶಬ್ದಗಳಲ್ಲಿ    ಹೇಳುವುದಾದರೆ ತನ್ನನ್ನು ತಾನು ಅರಿಯುವ , ತನ್ನ ಮೂಲ ಸ್ವರೂಪವನ್ನು ತಿಳಿಯುವ  ಪ್ರಯತ್ನ, ಆಧ್ಯಾತ್ಮ ಸಾಧನೆಯ ಪಥ. ಯಾವುದೇ ಬಾಹ್ಯಾಡಂಬರಗಳಿಲ್ಲದ, ಯಾವ ಬಾಹ್ಯ  ವಸ್ತುವನ್ನೂ ಅವಲಂಬಿಸಿರದ,  ಮನಸ್ಸಿನ ಅಂಧಕಾರವನ್ನು ದೂರೀಕರಿಸುವ ಮಾನಸಿಕ  ಪ್ರಕ್ರಿಯೆಯೇ ವಿದ್ಯಾತಂತ್ರ ಸಾಧನೆ.  ಇದಕ್ಕೆ  ಬೇಕಾದುದು ಮಾನವ  ದೇಹ ಮಾತ್ರ.     ವಿದ್ಯಾತಂತ್ರ ಸಾಧನೆಗಾಗಿ ಬದುಕಿನಿಂದ   ವಿಮುಖರಾಗುವ,  ನಾಡು ಬಿಟ್ಟು ಕಾಡು    ಕಾಣುವ , ಮನೆ ಬಿಟ್ಟು ಮಠ ಸೇರುವ, ಸಂಸಾರ ತ್ಯಜಿಸಿ  ಖಾವಿ ಧರಿಸುವ  ಅಗತ್ಯವೂ ಇಲ್ಲ.  ಬದುಕಿನ  ಭಾಗವಾಗಿಯೇ ತಂತ್ರಸಾಧನೆಯನ್ನು  ಅನುಸರಿಸಲು ಸಾಧ್ಯವಿದೆ.    ಆದರೆ ಒಪ್ಪೊತ್ತಿನ ಊಟಕ್ಕಾಗಿ  ಪರದಾಡುವ  ವ್ಯಕ್ತಿಗೆ  ಆಧ್ಯಾತ್ಮ ಸಾಧನೆಯ  ವಿಚಾರ ಹೇಳುವುದು ಕ್ರೂರ ವ್ಯಂಗವೇ  ಸರಿ.  ಭವಿಷ್ಯದ ಕುರಿತು ಭಯಭೀತನಾದ ವ್ಯಕ್ತಿ ಬದುಕಿನಲ್ಲಿ  ಅಭದ್ರತೆ  ಕಾಡುತ್ತಿರುವಾಗ ಸಹಜವಾಗಿ ಮೂಢನಂಬಿಕೆಗಳ ದಾಸನಾಗುತ್ತಾನೆ/ಳೆ.  ಆದ್ದರಿಂದ ಪ್ರತಿಯೋರ್ವ  ವ್ಯಕ್ತಿಗೂ ಜೀವನದ ಭದ್ರತೆ  ಕಲ್ಪಿಸಬೇಕಾದುದು ಸಮಾಜದ ಹೊಣೆಗಾರಿಕೆ.  ಅರ್ಥಾತ್   ಸರ್ಕಾರದ  ಜವಾಬ್ದಾರಿ.  ಸರ್ಕಾರದ  ಅನುದಾನ ಅಥವಾ  ರಾಜಕೀಯ ಪಕ್ಷಗಳ  ಭರವಸೆಯಿಂದ  ಜೀವನದ  ಭದ್ರತೆ ನೀಡಲು ಸಾಧ್ಯವಾಗದು.  ಪ್ರತಿಯೋರ್ವ  ವ್ಯಕ್ತಿಗೂ  ದುಡಿಮೆಯ ಅವಕಾಶ, ದುಡಿಮೆಯ ಪ್ರತಿಫಲದಿಂದ  ತನ್ನ ಹಾಗೂ ಅವಲಂಬಿತರ  ಜೀವನದ  ಕನಿಷ್ಠ 

ಪ್ರಸ್ತುತ Read Post »

ಇತರೆ

ಅಕ್ಷರದ ಅವ್ವ

ಸಾವಿತ್ರಿಬಾಯಿ ಪುಲೆ ಕೆ.ಶಿವು ಲಕ್ಕಣ್ಣವರ ಶೈಕ್ಷಣಿಕ, ಸಾಮಾಜಿಕ ಕ್ರಾಂತಿಯ ‘ಅಕ್ಷರದ ಅವ್ವ’ ಸಾವಿತ್ರಿಬಾಯಿ ಪುಲೆ..! ಇಂದು ಶೈಕ್ಷಣಿಕ, ಸಾಮಾಜಿಕ ಕ್ರಾಂತಿಯ ‘ಅಕ್ಷರದ ಅವ್ವ’ ಸಾವಿತ್ರಿಬಾಯಿ ಪುಲೆ ಹುಟ್ಟಿದ ದಿನ. ಆ ಕಾರಣವಾವಾಗಿ ಈ ಲೇಖನ ಸ್ಮರಣೆ… ಸಾವಿತ್ರಿಬಾಯಿ ಫುಲೆ(೧೮೩೧-೧೮೯೭)ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ. ಭಾರತದ ಮೊಟ್ಟ ಮೊದಲ ಶಿಕ್ಷಕಿ. ದಣಿವರಿಯದ ಸತ್ಯಶೋಧಕಿ. ಆಧುನಿಕ ಶಿಕ್ಷಣದ ತಾಯಿ. ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ ಅವರು ಧರಿಸುತ್ತಿದ್ದರು ಅವರು… ಸಾವಿತ್ರಿಬಾಯಿ ಫುಲೆ ೧೮೩೧ರ ಜನೆವರಿ ೩ರಂದು ಮಹಾರಾಷ್ಟ್ರದ ಸತಾರ ಜಿಲ್ಲೆಯ ‘ನೈಗಾಂನ್’ನಲ್ಲಿ ಹುಟ್ಟಿದರು. ತಂದೆ ನೇವಸೆ ಪಾಟೀಲ. ಬಾಲ್ಯದಲ್ಲಿಯೇ ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿಬಾ ಫುಲೆಯವರನ್ನು ಲಗ್ನವಾದರು. ಸಾವಿತ್ರಿಬಾಯಿ ಅವರ ಯಶಸ್ಸು, ಶ್ರೇಯಸ್ಸಿನ ವಿಕ್ರಮಪಾಲು ಜ್ಯೋತಿಬಾ ಫುಲೆ ಅವರದಾಗಿತ್ತು. ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾಫುಲೆ ಅವರಿಗೆ ಸಲ್ಲಬೇಕು… ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಮದುವೆಯಾದಾಗ ಅವರಿಗೆ ೮ ವರ್ಷ ವಯಸ್ಸು, ಜ್ಯೋತಿಬಾಫುಲೆ ಅವರಿಗೆ ೧೩ ವರ್ಷ ವಯಸ್ಸಾಗಿತ್ತು. ಸಾವಿತ್ರಿಬಾಯಿ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು. ೧೮೪೭ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಭೇತಿ ಪಡೆದರು. ಆಗ ಅವರಿಗೆ ೧೭ ವರ್ಷ. ಹೀಗಾಗಿ ಮಹಾರಾಷ್ಟ್ರದಲ್ಲಿ ತರಭೇತಾದ ಮೊದಲ ಶಿಕ್ಷಕಿಯಾದರು… ಸಾವಿತ್ರಿಬಾಯಿ ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿಯಾದರು. ಆ ಕಾಲದಲ್ಲಿ ಹಿಂದೂ ಸ್ರ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂಬ ನಿಯಮವಿತ್ತು. ಅವರು ಪಾಠಶಾಲೆಗೆ ಹೋರಟಾಗ ಕೆಲವರು ಕೇಕೇ ಹಾಕಿ ನಗುತ್ತಿದ್ದರು. ಅವರ ಮೇಲೆ ಕೆಸರು, ಸಗಣಿ ಎರಚಿ, ಕಲ್ಲನೂ ತೂರುತ್ತಿದ್ದರು. ಇದರಿಂದ ಧೃತಿಗೆಡದ ಸಾವಿತ್ರಿಬಾಯಿಯವರು ಯಾವಾಗಲೂ ಒಂದು ಸೀರೆಯೊಂದನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ದಾರಿಯಲ್ಲಿ ಕೆಸರು, ಸಗಣಿ ಎರಚಿಸಿಕೊಂಡಾಗ, ಬೇಸರ ಗೊಳ್ಳದೆ- ನಮ್ಮ ಮೇಲೆ ಎರಚುವ ಸೆಗಣಿ, ತೂರುವ ಕಲ್ಲುಗಳನ್ನು ಹೂಗಳೆಂದು ಪರಿಭಾವಿಸಿ, ಶಾಲೆಯಲ್ಲಿ ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿ ಇಟ್ಟುಕೊಂಡಿರುತ್ತಿದ್ದ ಮತ್ತೊಂದು ಸೀರೆಯನ್ನು ಉಟ್ಟುಕೊಂಡು ಪಾಠಕ್ಕೆ ಅಣಿಯಾಗುತ್ತಿದ್ದರು. ೧೮೪೮ರಿಂದ ೧೮೫೨ರ ಅವಧಿಯಲ್ಲಿ ೧೮ ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದರು. ಈ ಪಾಠಶಾಲೆಗಳ ಆಡಳಿತದ ಜವಾಬ್ದಾರಿಯನ್ನು ಸಾವಿತ್ರಿಬಾಯಿ ನಿರ್ವಹಿಸಬೇಕಾಗಿತ್ತು. ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಮುಂತಾದ ಕೆಲಸಗಳನ್ನು ಇವರು ಸಮರ್ಪಕವಾಗಿ ನಿಭಾಯಿಸುವುದರ ಮೂಲಕ ಜ್ಯೋತಿಬಾಫುಲೆ ಅವರಿಗೆ ನೆರವಾದರು. ಬ್ರಿಟಿಷ್ ಸರ್ಕಾರದವರು ಅವರ ಕೆಲಸ ಕಾರ್ಯಗಳನ್ನು ಕೂಲಂಕುಷವಾಗಿ ಅವಲೋಕಿಸಿ ಮೆಚ್ಚುಗೆ ಸೂಸಿದ್ದರು. ಇಂದು ಭಾರತದ ಮಹಿಳೆಯರ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣರಾದವರು ಮಾತೆ ಸಾವಿತ್ರಿಬಾಯಿ ಪುಲೆ. ಇವರು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ದ ಹೋರಾಟ ಮಾಡಿ, ಮಹಿಳೆಯರಿಗೋಸ್ಕರ ಪ್ರ ಪ್ರಥಮವಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದ ಕೀತಿ೯ ಇವರಿಗೆ ಸಲ್ಲುತ್ತದೆ. ಇವರು ಒಟ್ಟು 14 ಶಾಲೆಗಳನ್ನು ಸ್ಥಾಪನೆ ಮಾಡುತ್ತಾರೆ. ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ,‌ ಬ್ರಿಟಿಷ್ ಸರಕಾರ ಇವರಿಗೆ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂದು ಬಿರುದು ಕೂಡ ಕೊಟ್ಟಿತು. ಸ್ತ್ರೀಯರು ಕೂಡ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ – ಕಾರ್ಪಣ್ಯಗಳನ್ನು ಲೆಕ್ಕಿಸದೇ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿಯನ್ನು ತೋರಿಸಿದರು ಸಾವಿತ್ರಿಬಾಯಿ ಪುಲೆ… ೧೮೫೪ರಲ್ಲಿ ಸಾವಿತ್ರಿಬಾಯಿಯವರು ‘ಕಾವ್ಯಫೂಲೆ'(ಕಾವ್ಯ ಅರಳಿದೆ)ಎನ್ನುವ ಕವನಸಂಕಲನವನ್ನು ಪ್ರಕಟಿಸಿದರು. ಈ ಕಾವ್ಯವು ೧೯ನೇ ಶತಮಾನದ ಸಮಾಜವನ್ನು ದಾಖಲಿಸುವಲ್ಲಿ ಮೈಲಿಗಲ್ಲಾಗಿದೆ. ಇವರು ಈ ಕೃತಿಯನ್ನು’ಅಭಂಗ್’ ಶೈಲಿಯಲ್ಲಿ ರಚಿಸಿದ್ದಾರೆಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಕೃತಿಯಿಂದಾಗಿ ಸಾವಿತ್ರಿಬಾಯಿಯವರನ್ನು ಮರಾಠಿ ಕಾವ್ಯದ ಪ್ರವರ್ತಕಿ ಎಂದು ಕರೆಯಲಾಗಿದೆ. ಅವರ ಎರಡನೇಯ ಕೃತಿ ‘ಭವನಕಾಶಿ ಸುಬೋಧ ರತ್ನಾಕರ್'(ಅಪ್ಪಟ ಮುತ್ತುಗಳ ಸಾಗರ) ೧೮೯೧ರಲ್ಲಿ ಪ್ರಕಟವಾಯಿತು. ಇದು ಜ್ಯೋತಿಬಾ ಅವರನ್ನು ಒಳಗೊಂಡಂತೆ ಬರೆದ ಒಂದು ಬಯೋಗ್ರಫಿ. ಮೂರನೆಯದು ಜ್ಯೋತಿಬಾ ಅವರ ಭಾಷಣಗಳ ಸಂಪಾದಿತ ಕೃತಿಯನ್ನು ೧೮೯೨ರಲ್ಲಿ ಸಂಪಾದಿಸಲಾಯಿತು. ನಾಲ್ಕನೇ ಕೃತಿ- ಕರ್ಜೆ(ಸಾಲ) ಎಂಬುದಾಗಿದೆ. ಸಾಮಾಜಿಕ ಕಳಕಳಿಯುಳ್ಳ ಕೃತಿಗಳಾಗಿವೆ… ೧) ಕಾವ್ಯಫೂಲೆ (ಕಾವ್ಯ ಅರಳಿದೆ)-೧೮೫೪. ೨) ಆತ್ಮಕಥೆ. ೩) ಭವನಕಾಶಿ ಸುಬೋಧ ರತ್ನಾಕರ್ (ಮುತ್ತುಗಳ ಸಾಗರ)-೧೮೯೧. ೪) ಜ್ಯೋತಿಬಾ ಅವರ ಭಾಷಣಗಳು -೧೮೯೨. ೫) ಕರ್ಜೆ(ಸಾಲ). ಹೀಗೆ ಸಾಗುತ್ತದೆ ಇವರ ಪುಸ್ತಕ ಪ್ರಕಟಣೆಗಳು… ಜ್ಯೋತಿಬಾ ಅವರ ತತ್ವ್ತ ಮತ್ತು ಪ್ರಗತಿಪರ ದೃಷ್ಟಿಕೋನವನ್ನು ತಮ್ಮದಾಗಿಸಿಕೊಳ್ಳುವ ಸಾವಿತ್ರಿಬಾಯಿಯವರು ಜೀವಮಾನವಿಡೀ ಪತಿಯೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಿಲ್ಲುತ್ತಾರೆ. ಇವರಿಬ್ಬರ ನಡುವೆ ಒಂದು ಮಧುರವಾದ ಬಾಂಧವ್ಯ ಮತ್ತು ವೈಯಕ್ತಿಕ ಭಾವನೆಗಳನ್ನು ಗೌರವಿಸಿಕೊಳ್ಳುವ ಗುಣವಿತ್ತು. ಅವರಿಗೆ ಮಕ್ಕಳಿರದಿದ್ದರು ಸಂತೋಷವಾಗಿದ್ದರು. ಪತ್ನೀಯ ಮೇಲೆ ಅಗಾಧ ಪ್ರೀತಿ ಹೊಂದಿದ್ದ ಜ್ಯೋತಿಬಾ ಫುಲೆ ಅವರು ಮಕ್ಕಳಿಗಾಗಿ ಮರುಮದುವೆಯಾಗಲಿಲ್ಲ. ಮುಂದೆ ಫುಲೆ ದಂಪತಿಗಳು ೧೮೭೪ರಲ್ಲಿ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತು ತೆಗೆದುಕೊಂಡು ತೆಗೆದುಕೊಂಡರು. ಆತ ಸಮಾಜದಲ್ಲಿ ಸತ್ಪ್ರಜೆಯಾಗುವ ಅವಕಾಶವನ್ನು ಕಲ್ಪಿಸುತ್ತಾರೆ. ೧೮೬೩ರಲ್ಲಿ ಅನಾಥ ಮಕ್ಕಳಿಗಾಗಿ ಶಿಶು ಕೇಂದ್ರವನ್ನು ತೆರೆಯುತ್ತಾರೆ. ಆ ಅನಾಥ ಮಕ್ಕಳೊಂದಿಗೆ ಪ್ರಾಂಜಲ ಮನಸ್ಸಿನಿಂದ ಬೆರೆಯುತ್ತಾರೆ… ಶಿಕ್ಷಣದ ಹಕ್ಕು, ಸರ್ವಶಿಕ್ಷಣ ಅಭಿಯಾನ ಬಿಸಿಯೂಟದ ಯೋಜನೆಗಳನ್ನು ಕ್ರಾಂತಿಕಾರಿ ಯೋಜನೆಗಳೆಂದು ಕೊಂಡಾಡಲಾಗುತ್ತಿದೆ. ೧೫೦ಕ್ಕೂ ಹೆಚ್ಚು ವರ್ಷಗಳ ಹಿಂದಿಯೇ ಸಾವಿತ್ತಿಬಾಯಿ ಶಾಲೆಯನ್ನು ತೊರೆದ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಯೋಜನೆ ತಂದಿದ್ದರು. ಶಿಕ್ಷಣದಲ್ಲಿ ವೈವಿಧ್ಯತೆ ತಂದಿದ್ದರು. ೧೮೬೦ರ ದಶಕದಲ್ಲಿ ವಿಧವೆಯರ ತಲೆ ಬೋಳಿಸುವ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು. ವಿಧವೆಯರಿಗೆ, ವಿವಾಹ ಬಾಹಿರವಾಗಿ ಗರ್ಭಿಣಿಯರಾಗುವ ಮಹಿಳೆಯರಿಗಾಗಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದರು. ವಿವಾಹ ಬಾಹಿರ ಸಂಬಂಧದಿಂದ ಹುಟ್ಟಿದ ಮಕ್ಕಳಿಗಾಗಿ ಭಿನ್ನವಾದ ಶಿಶು ಕೇಂದ್ರಗಳನ್ನು ಸ್ಥಾಪಿಸಿದರು. ಈ ಬಗೆಯ ಸಾಮಾಜಿಕ ಸಂಘಟನೆಗಳ ಮೂಲಕ ನೂರಾರು ಮಹಿಳೆಯರ ಮತ್ತು ಮಕ್ಕಳ ಬದುಕಿಗೊಂದು ನೆಲೆ ಕೊಟ್ಟರು. ಸಾವಿತ್ರಿಬಾಯಿ ‘ಸತ್ಯೋಧಕ’ ಸಮಾಜದ ಅಧ್ಯಕ್ಷೆಯಾಗಿದ್ದರು. ೧೯ನೇ ಶತಮಾನದ ಇತಿಹಾಸದಲ್ಲಿ ಹಿಂದೂ ಧಾರ್ಮಿಕ ಮದುವೆಗಳನ್ನು ಪೂಜಾರಿಗಳಿಲ್ಲದೇ ನೆರವೇರಿಸಿದ್ದುದು ಒಂದು ಕ್ರಾಂತಿಕಾರಿ ಹೋರಾಟವಾಗಿದೆ. ಈ ಸಂದರ್ಭದಲ್ಲಿ ಬ್ರಾಹ್ಮಣರ ಅಧಿಪತ್ಯವಿಲ್ಲದ ಮದುವೆಗಳನ್ನು ಏರ್ಪಡಿಸುತ್ತಿದ್ದರು. ಅಲ್ಲದೇ ಮೊಟ್ಟ ಮೊದಲ ಬಾರಿ ಕಾನೂನಿನ ನೆರವನ್ನು ಪಡೆದು ಮದುವೆ ನೆರವೇರಿಸಿದ್ದು ಇಂದಿಗೂ ಇತಿಹಾಸದಲ್ಲಿ ದಾಖಲಾಗದೆ ಉಳಿದಿರುವ ಸಂಗತಿಯಾಗಿದೆ… ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳುವಳಿ ಸಂಘಟನೆಗಳನ್ನು ಸಂಘಟಿಸಿದರು… ೧೮೪೮ ರಲ್ಲಿ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸೇರಿ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ೧೮೫೫ ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿ ಪಾಳೆಯದ ಶಾಲೆ ಸ್ಥಾಪನೆ. ೧೮೬೮ ರಲ್ಲಿ ದಲಿತರಿಗಾಗಿ ಮನೆಯ ಕುಡಿಯುವ ನೀರಿನ ಟ್ಯಾಂಕನ್ನು ಬಿಟ್ಟು ಕೊಟ್ಟರು. ಬ್ರಾಹ್ಮಣ ವಿಧವೆಯ ಮಗುವೊಂದನ್ನು ದತ್ತು ತೆಗೆದುಕೊಂಡುದದ್ದು. ಪಶ್ಚಿಮ ಮಹಾರಾಷ್ಟ್ರದ ಕ್ಷಾಮ ಪ್ರದೇಶಗಳಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದಿದ್ದು ಸಾವಿತ್ರಿಬಾಯಿಯವರ ಹಿರಿದು ಸಮಾಜ ಸೇವೆಯಾಗಿದೆ… ಶಿಕ್ಷಣ ಕೇತ್ರದಲ್ಲಿನ ಸಾಧನೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಫುಲೆ ದಂಪತಿಗಳಿಗೆ ಸನ್ಮಾನಗಳು ನಡೆದವು. ಬ್ರಿಟಿಷ್ ಸರಕಾರ ಇವರಿಗೆ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂದು ಬಿರುದು ಕೂಡ ಕೊಟ್ಟಿತು… ಈ ಗಣ್ಯರ ದೃಷ್ಠಿಯಲ್ಲಿ ಸಾವಿತ್ರಿಬಾಯಿ ಫುಲೆಯವರು ಹೀಗೆ ಕಂಡರು– ಥಾಮ್ ವುಲ್ಫ್ ಮತ್ತು ಸುಜನ ಆಂಡ್ರಡೆ– ಸಾವಿರಾರು ದೀಪಗಳನ್ನು ಹಚ್ಚಿದ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆಗೆ ನೀನು ಚಿರಋಣಿಯಾಗಿರಬೇಕು. ಇಂದಿನ ಅಕ್ಷರಸ್ಥ ಭಾರತೀಯ ಪ್ರತಿಯೊಬ್ಬ ಮಹಿಳೆಯ ಮನದಲ್ಲೂ ಸಾವಿತ್ರಿಬಾಯಿ ಫುಲೆ ಇದ್ದಾರೆ. ಮುಖೇಶ್ ಮಾನಸ್ – ಶಿಕ್ಷಣದ ಕ್ಷೇತ್ರಕ್ಕೆ ಯಾವ ಬಗೆಯ ಕಾಣಿಕೆಯನ್ನೂ ನೀಡದಂತಹ ವಿದ್ವಾಂಸರ ಹೆಸರಿನಲ್ಲಿ ಇಂದೂ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿ, ಕ್ರಾಂತಿಕಾರಿ ಚಳುವಳಿ ಮಾಡಿದ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ? ಮೃದುವರ್ಮ– ೧೫೦ ವರ್ಷಗಳ ಹಿಂದೆ ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ ಅದನ್ನು ನನಸಾಗಿಸಲು ಸಾವಿತ್ರಿಬಾಯಿ ಫುಲೆ ಶ್ರಮಿಸಿದ್ದಾರೆ. ಆದರಿಂದು ಸ್ತ್ರೀ ವಿಮೋಚನೆ ಫ್ಯಾಷನ್ ಆಗಿದೆ. ಗೋವಂಡೆ – ಫುಲೆ ದಂಪತಿಗಳ ಪ್ರಕಾರ ಹುಟ್ಟುವ ಪ್ರತಿಯೊಂದು ಮಗುವು ವಿಶೇಷವಾದುದು. ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು ಎಂದಿದ್ದಾರೆ. ಅವರ ಈ ಮಾತುಗಳಲ್ಲಿ ಎಷ್ಟೊಂದು ಸತ್ಯ ಅಡಗಿದೆ..! ಹೀಗೆ ಕಂಡರು ಗಣ್ಯರು… ಇಂತಹ ಸಾವಿತ್ರಿಬಾಯಿ ಪುಲೆಯವರು ೧೮೯೭ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ಸಾವಿತ್ರಿಬಾಯಿ ಫುಲೆ ಅವರೇ ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ತೀರಿಕೊಂಡರು… ಹೀಗೆಯೇ ಸಾವಿತ್ರಿಬಾಯಿ ಪುಲೆಯವರ ಶಿಕ್ಷಣ ಕ್ರಾಂತಿ ಮತ್ತು ಸಾಮಾಜಿಕ ಕ್ರಾಂತಿ ನಡೆದಿತ್ತು ಆಗಲೇ… ********

ಅಕ್ಷರದ ಅವ್ವ Read Post »

You cannot copy content of this page

Scroll to Top