ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಸ್ತುತ

ಅಪ್ಪ ರಾಘವೇಂದ್ರ ಈ ಹೊರಬೈಲು “ಮಾತೃದೇವೋಭವ ಪಿತೃದೇವೋಭವ ಆಚಾರ್ಯ ದೇವೋಭವ” ಭೂಮಿಯ ಮೇಲೆ ಕಣ್ಣಿಗೆ ಕಾಣುವ, ಜೊತೆಯಲ್ಲಿಯೇ ಇರುವ, ಕಷ್ಟವೆಂದಾಗ ಮರುಗುವ, ದಾರಿಗೆಡದಂತೆ ಮಾರ್ಗದರ್ಶನ ಮಾಡುವ ಮೂರು ದೈವಗಳೆಂದರೆ ತಂದೆ, ತಾಯಿ ಮತ್ತು ಗುರು. ಇಡೀ ಭೂಮಂಡಲದ ಪ್ರತಿಯೊಬ್ಬರಿಗೂ ಇವರೇ ನಿಜವಾದ ತ್ರಿಮೂರ್ತಿಗಳು. ಮಗುವನ್ನು ಸದ್ಗತಿಗೆ ತರುವಲ್ಲಿ ಮೂವರ ಪಾತ್ರವೂ ಬಹುಮುಖ್ಯವಾದುದು. ತಾಯಿಯಾದವಳು ಕರುಣಾಮಯಿಯಾಗಿ, ಮುದ್ದು ಮಾಡುತ್ತಾ, ಸದಾ ಮಗುವಿನ ಹಿತಕ್ಕಾಗಿಯೇ ಬದುಕುವವಳು. ಗುರುವಾದವನು ಮಗುವು ದಾರಿ ತಪ್ಪದಂತೆ ಮಾರ್ಗದರ್ಶನ ನೀಡಿ, ಜಗತ್ತಿನ ಪರಿಚಯ ಮಾಡಿಕೊಡುವವನು. ಆದರೆ ತಂದೆಯಾದವನು ತಾಯಿಯಷ್ಟು ಮುದ್ದು ಮಾಡದೆ ಒರಟೊರಟಾಗಿ ಇದ್ದರೂ, ಹೃದಯದ ತುಂಬಾ ಪ್ರೀತಿಯನ್ನೇ ಹೊದ್ದು, ಮಗುವಿನ ಏಳ್ಗೆಗಾಗಿ ಹಗಲಿರುಳು ಶ್ರಮಿಸುವವನು. ಅಮ್ಮ ಭೂಮಿಯಂತೆ ಸಹಿಷ್ಣುವಾದರೆ, ಅಪ್ಪ ಆಕಾಶದಂತೆ ವಿಶಾಲವಾದವನು. ನನ್ನಪ್ಪಾಜಿಯೂ ಕೂಡಾ ಮಗನಾದ ನನ್ನ ವಿಷಯದಲ್ಲಿ ಒರಟುತನಕ್ಕೆ, ಆಕಾಶದಂತಹ ಮನಸ್ಥಿತಿಗೆ ಹೊರತಾಗದವರು. ಚಿಕ್ಕವನಿದ್ದಾಗ ಅಪ್ಪಾಜಿಯಿಂದ ಕುಳಿತರೂ ಏಟು, ನಿಂತರೂ ಏಟು  ತಿಂದಿದ್ದರಿಂದ ಹಿಟ್ಲರನ ಬಗ್ಗೆ ಶಾಲೆಯಲ್ಲಿ ಓದಿ, ನಮ್ಮಪ್ಪಾಜಿಯನ್ನು ನೋಡಿದಾಗಲೂ ಹಿಟ್ಲರನನ್ನು ಕಂಡಂತೆಯೇ ಹೆದರಿ ಓಡುತ್ತಿದ್ದ ಘಳಿಗೆಗಳಿಗೆ ಲೆಕ್ಕವಿಲ್ಲ. ತೀರಾ ಸಣ್ಣ ತಪ್ಪು ಮಾಡಿದಾಗಲೂ ಬಾರುಕೋಲು ಹಿಡಿದು, ಬೀದಿಯಲ್ಲೆಲ್ಲ ಓಡಾಡಿಸಿ ಹೊಡೆದಿದ್ದರಿಂದ ಅವರಲ್ಲಿರುವ ಒಂದಿಷ್ಟು ಶಿಸ್ತು, ಬದ್ಧತೆ ನನಗೂ ಬಂತೆಂದರೆ ತಪ್ಪಿಲ್ಲ. ತಪ್ಪನ್ನು ಮಾಡಲು ಅವಕಾಶವನ್ನೇ ಕೊಡದಂತೆ ತಪರಾಕಿ ಕೊಡುತ್ತಿದ್ದರಿಂದ, ತಪ್ಪು ಮಾಡುವ ಆಲೋಚನೆಯೇ ಬರದಂತೆ ಮಾಡಿದವರು ನನ್ನಪ್ಪಾಜಿ. ಕೇವಲ ಸದಾ ಬಾರುಕೋಲು ಬೀಸಿ, ಬಡಿದಿದ್ದರೆ ನಾನಿಂದು ಒರಟು ಮನುಷ್ಯನಾಗಿ, ತಂದೆಯ ವಿರುದ್ದವೇ ತಿರುಗಿಬಿದ್ದು, ದಾರಿ ತಪ್ಪಿದ ಮಗನಾಗುತ್ತಿದ್ದೆನೇನೋ? ಆದರೆ ಪ್ರತೀ ಹೊಡೆತದ ಹಿಂದೆ ಅಪ್ಪಾಜಿಯ ಅಂತಃಕರಣ ಕಂಡಿದ್ದೇನೆ. ಹೊಡೆದ ದಿನ ರಾತ್ರಿ ಮಲಗಿ ನಿದ್ರಿಸುವಾಗ ನೋವಾದ ಜಾಗಕ್ಕೆ ಮುಲಾಮು ತಿಕ್ಕಿ, ತಾನೇಕೆ ಮಗನಿಗೆ ಹೊಡೆದುಬಿಟ್ಟೆ ಎಂದು ಮಮ್ಮಲ ಮರಗಿದ್ದನ್ನು ಕಂಡಿದ್ದೇನೆ. ದಾರಿ ತಪ್ಪಲು ಬಿಡದೆ ಹೊಡೆದು ಬುದ್ಧಿ ಕಲಿಸಿದರೆ, ಮುಂದೆ ತನ್ನ ಮಗ ತನ್ನಂತೆ ಅನಕ್ಷರಸ್ಥನಾಗದೇ ದೊಡ್ಡ ವ್ಯಕ್ತಿಯಾಗಬೇಕೆಂದು ಅಮ್ಮನೊಡನೆ ಹೇಳುತ್ತಿದ್ದುದನ್ನು ಮಲಗಿದಲ್ಲಿಂದಲೇ ಆಲಿಸಿದ್ದೇನೆ. ಮನೆಯಲ್ಲಿ ಕಡುಬಡತನವಿದ್ದರೂ ಮಕ್ಕಳಾದ ನಮ್ಮ ಹಂತಕ್ಕೆ ತಾಕದಂತೆ, ಯಾರ್ಯಾರದೋ ಕೈಕಾಲು ಹಿಡಿದಾದರೂ, ನಾವು ಕೇಳಿದ್ದೆಲ್ಲವನ್ನೂ ಅದೆಷ್ಟೆಷ್ಟೋ ಕಷ್ಟಪಟ್ಟಾದರೂ ಒದಗಿಸಿ ನಿಟ್ಟುಸಿರು ಬಿಟ್ಟಿದ್ದನ್ನು ನೋಡಿದ್ದೇನೆ. ಕಾಯಕವೇ ಕೈಲಾಸವೆಂಬ ಬಸವಣ್ಣನ ವಚನ ಗೊತ್ತಿಲ್ಲದಿದ್ದರೂ, ಇರುವ ಒಂದೆಕರೆ ಭೂಮಿಯಲ್ಲೇ ಹಗಲು-ರಾತ್ರಿಗಳ ವ್ಯತ್ಯಾಸವರಿಯದೆ, ಕಾಯಕವೇ ತನ್ನ ಜೀವನವೆನ್ನುವಂತೆ ದುಡಿದು, ಬಂಗಾರದ ಬೆಳೆ ತೆಗೆದು, ಅಕ್ಕಪಕ್ಕದವರು ಹುಬ್ಬೇರಿಸುವಂತೆ ಮಾಡಿದ್ದನ್ನು ಕಂಡಿದ್ದೇನೆ. ಕಾಲಿನಲ್ಲಿ ದೊಡ್ಡ ಹುಣ್ಣಾಗಿ, ನಡೆಯಲೂ ಹರಸಾಹಸಪಡುವಂತಿದ್ದರೂ, ಸುಮ್ಮನೆ ಕುಳಿತರೆ ದುಡಿಯುವರ್ಯಾರು, ಸಂಸಾರ ನಡೆಯುವುದು ಹೇಗೆಂದು ಕಾಲಿಗೆ ಬಟ್ಟೆ ಕಟ್ಟಿಕೊಂಡು, ಕೆಸರಿನಲ್ಲಿಯೇ ದುಡಿದದ್ದನ್ನು ಕಂಡು ಮರುಗಿದ್ದೇನೆ.  ಕಾಯ ವಾಚಾ ಮನಸಾ ಪ್ರತಿಯೊಂದೂ ಶುದ್ಧವಾಗಿರಬೇಕೆಂಬ ಅಪ್ಪಾಜಿಯ ಶುದ್ಧತೆಯ ಬದ್ಧತೆಯನ್ನು ಕಂಡು ನಿಬ್ಬೆರಗಾಗಿದ್ದೇನೆ. ಒಮ್ಮೆ ಮೈಮೇಲೆ ಧರಿಸಿದ ಬಟ್ಟೆಯನ್ನು ಶುಚಿಗೊಳಿಸದೇ ಇನ್ನೊಮ್ಮೆ ಧರಿಸಿದ ಉದಾಹರಣೆಯನ್ನೇ ನಾನು ಕಂಡಿಲ್ಲ. ಹಾಗಂತ ಮನೆಯಲ್ಲಿ ಕೈಗೊಂದು ಕಾಲಿಗೊಂದು ಆಳುಗಳಿದ್ದು, ಬಟ್ಟೆ ತೊಳೆಯುತ್ತಿದ್ದರೆಂದಲ್ಲ. ಹೊಲದಲ್ಲಿ, ಮನೆಯಲ್ಲಿ ಮೈಮುರಿಯುವಂತೆ ದುಡಿದು ಬಂದರೂ, ಅಮ್ಮನಿಗೊಬ್ಬಳಿಗೇ ಎಲ್ಲಾ ಬಟ್ಟೆಗಳನ್ನು ತೊಳೆಯುವುದು ಕಷ್ಟವಾಗುವುದೆಂದು ತನ್ನ ಬಟ್ಟೆಗಳನ್ನು ತಾನೇ ತೊಳೆದುಕೊಂಡಿದ್ದನ್ನು ನೂರಾರು ಬಾರಿ ನೋಡಿ, ತನಗೆಷ್ಟೇ ಕಷ್ಟವಾದರೂ ಬೇರೆಯವರಿಗೆ ನೋವು ಕೊಡಬಾರದೆಂದು ಬದುಕುವ ರೀತಿಯನ್ನು ಕಂಡು, ಮಹಾತ್ಮಾ ಗಾಂಧೀಜಿಯವರನ್ನು ನೆನಪಿಸಿಕೊಂಡಿದ್ದೇನೆ. ಮನೆಯಲ್ಲಿ ಒಂದೊಂದು ರೂಪಾಯಿಗೂ ಕಷ್ಟವೆನ್ನುವ ಪರಿಸ್ಥಿತಿಯಿದ್ದರೂ ಭಿಕ್ಷೆ ಕೇಳಿ ಬರುವವರಿಗೆ ಸೇರುಗಟ್ಟಲೆ ಅಕ್ಕಿಯನ್ನೋ, ಭತ್ತವನ್ನೋ, ಕೆಲವೊಮ್ಮೆ ಕೈಯಲ್ಲಿದ್ದ ಹತ್ತು, ಇಪ್ಪತ್ತು, ಐವತ್ತರ ನೋಟುಗಳನ್ನು ಕೊಟ್ಟಿದ್ದನ್ನು ಗಮನಿಸಿದ್ದೇನೆ. ದೇವ-ದೈವಗಳ ಬಗ್ಗೆ ಅಪಾರ ಭಕ್ತ ಹೊಂದಿ, ಅದೆಷ್ಟೋ ವರ್ಷಗಳಿಂದ ದೂರದೂರದ ದೇವಸ್ಥಾನಗಳಿಗೆ ಎಂದೂ ತಪ್ಪಿಸದೇ ಪ್ರತೀ ವರ್ಷವೂ ಹೋಗಿ, ಕಾಣಿಕೆ ಸಲ್ಲಿಸಿ, ಹರಕೆ ತೀರಿಸಿ ಬಂದಿದ್ದನ್ನು, ಹೋಗಲಾಗದ ಇನ್ನೂ ಕೆಲವು ತೀರ್ಥಕ್ಷೇತ್ರಗಳಿಗೆ ಅಂಚೆಯ ಮೂಲಕ ಹಣ ಕಳುಹಿಸಿ, ಪ್ರಸಾದ ತರಿಸಿಕೊಂಡು ಧನ್ಯತಾಭಾವ ಹೊಂದಿದ್ದನ್ನು ಕಂಡು “ಕೈಯಲ್ಲಿ ಕಾಸಿಲ್ಲದಿದ್ದರೂ ಹೀಗೆ ಸಿಕ್ಕ ಸಿಕ್ಕ ದೇವರಿಗೆಲ್ಲ ಹರಕೆ- ಪೂಜೆ ಯಾಕೆಂದು” ಕೋಪಗೊಂಡು ಅಪ್ಪಾಜಿಯ ವಿರುದ್ಧವೇ ಹರಿಹಾಯ್ದಿದ್ದೇನೆ. ಅದಕ್ಕೂ ಕೋಪಗೊಳ್ಳದೆ “ದೇವರನ್ನು ನಂಬಿದರೆ ಒಳ್ಳೆಯದಾಗೇ ಆಗುತ್ತೆ ಇದು ನನ್ನ ನಂಬಿಕೆ, ನಿನಗೆ ನಂಬಿಕೆಯಿದ್ದರೆ ನಂಬು, ಇಲ್ಲದಿದ್ದರೆ ಬಿಡು, ನಾನಿರುವವರೆಗೆ ನಡೆಸಿಕೊಂಡು ಹೋಗುತ್ತೇನೆ” ಎಂಬ ಅವರ ವಿಶ್ವಾಸವನ್ನು ಕಂಡು ದಂಗಾಗಿದ್ದೇನೆ. ಒಟ್ಟಿನಲ್ಲಿ ಒಂದೆರೆಡು ಮಾತುಗಳಲ್ಲಿ ಅಪ್ಪನನ್ನು ಕುರಿತು ಬರೆದು ಮುಗಿಸಿಬಿಡುವುದು, ಅಪ್ಪನಿಗೆ ಮಾಡುವ ಅವಮಾನ. ಯಾಕೆಂದರೆ ಅವನು ಪದಗಳಿಗೆ, ಶುಷ್ಕ ಪದಗಳ ವರ್ಣನೆಗೆ ನಿಲುಕದ ಎತ್ತರದ ವ್ಯಕ್ತಿತ್ವದವನು. ಅವನು ಅದೆಷ್ಟೇ ಒರಟನಾದರೂ, ಅವನೊಳಗೂ ಒಂದು ಅಂತಃಕರಣವಿರುವದನ್ನು ಮಕ್ಕಳಾದವರು ಮರೆಯಬಾರದು. ಹಾಗಾಗಿ ಅಪ್ಪನನ್ನು ಪ್ರೀತಿಸದವನು ಪಾಪಿಯೇ ಸರಿ. ಏನೇ ಆಗಲಿ ನನಗಾಗಿ ಹಗಲಿರುಳು ದುಡಿದು, ತಾನು ನಂಬಿದಂತೆಯೇ ನಡೆಯುತ್ತಾ, ನನಗೊಂದು ದಾರಿ ತೋರಿದ ನನ್ನಪ್ಪನಿಗೊಂದು ಧೀರ್ಘ ನಮನ. ******************

ಪ್ರಸ್ತುತ Read Post »

ಇತರೆ

ಪ್ರಸ್ತುತ

ಶಿಕ್ಷಣದ ಬದಲಾವಣೆ ಅನಿವಾರ್ಯ ರೇಷ್ಮಾ ಕಂದಕೂರ ಶಿಕ್ಷಣದ  ಬದಲಾವಣೆ ಅನಿವಾರ್ಯ ಶಾಲೆ ಎಂಬುದು ಗಾರೆ ತುಂಬಿದ ಕಟ್ಟಡವಲ್ಲ ಜೀವಕೆ ಜೀವನ ನೀಡುವ ಸಂಗ್ರಹಾಗಾರ .ಕಾಲ ಘಟ್ಟದೊಂದಿಗೆ ಸದಾ ಹರಿವ ನೀರಿನಂತೆ ಬದಲಾಗುವ ರೀತಿಯ ಅರಿತು ಮಕ್ಕಳ ಮನವ ಅರಿತು ಬದಲಾಗುವ ಶೈಲಿಯ ರೂಢಿಸಿಕೊಂಡು ಮುಗ್ಧ ಮನಸುಗಳ ವಿಕಾಸಕ್ಕೆ ದಾರಿ ದೀಪವಾಗ ಬೇಕೆ ವಿನಃ ಕಟ್ಟುಪಾಡುಗಳಿಂದ ಚೌಕಟ್ಟಿನಲಿ ಜೋತು ಬೀಳಬಾರದು. ಅಂಕ ಶ್ರೇಣಿಯ ಹೊರತಾಗಿಯೂ ಬದುಕುವ ಜೀವನ ಶೈಲಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಸಾಗಬೇಕು.             ಮಾನವ ಜನಾಂಗದ ಪ್ರಗತಿಗೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ.ಮಾನವ ಶಕ್ತಿಯನ್ನು ರಾಷ್ಟ್ರವನ್ನು ಬೆಳೆಸುತ್ತಿರುವ ಅಮೂಲ್ಯ ಸಂಪನ್ಮೂಲಗಳಿಗೆ ಸರಿಯಾದ ಮಾರ್ಗದರ್ಶನ ನೀಡುತ್ತದೆ ಶಿಸ್ತು ಸಂಯಮ ಮತ್ತು ಉತ್ಪಾದಕ ಮಾನವ ಶಕ್ತಿಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಶಿಕ್ಷಣ ಮಾನವನ ಸಹಜ ಗುಣಗಳನ್ನು ಅಡೆತಡೆಯಿಲ್ಲದ ಮಾರ್ಪಾಡು ಮಾಡಿ ವ್ಯಕ್ತಿತ್ವ ವಿಕಸನಕ್ಕೆ ಎಡೆ ಮಾಡಿ ಕೊಡಬೇಕು.           ದೇಶದ ಕಲ್ಯಾಣಕ್ಕೆ ತಾತ್ವಿಕವಾಗಿ ಆರ್ಥಿಕವಾಗಿ ಸಾಮಾಜಿಕ ವಲಯಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುತ್ತದೆ. ಸಮಾನವಾಗಿ ಸಮನ್ವಯದೊಂದಿಗೆ ವಾಸ್ತವದ ನೆಲೆಗಟ್ಟು ಕಂಡುಕೊಳ್ಳಲು ಸಹಕಾರಿ ಜೀವನೋಪಾಯದ ಹಲವು ಮಜಲುಗಳನ್ನು ತಿಳಿಸುವ ಏಕೈಕ ಮಾರ್ಗ ಶಿಕ್ಷಣ.             ಶಿಕ್ಷಣ ಆಸಕ್ತಿದಾಯಕ ಸೃಜನಶೀಲತೆಗೆ ಹೆಚ್ಚು ಒತ್ತುಕೊಟ್ಟಾಗ ಅವುಗಳ ಅನುಷ್ಠಾನಕ್ಕೆ  ಪ್ರಚೋದಿಸಿ ಸಂತೃಪ್ತ ಮನೋಭಾವ ತುಂಬಿ ಹತಾಷೆ,ನಿರಾಸಕ್ತಿಗಳನ್ನು ತಿದ್ದಿ ಹೊಸತೊಂದು ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ.ಆದರೆ ಇಂದಿನ ಶಿಕ್ಷಣದ ವ್ಯಾಪಾರೀಕರಣ ಮಾಡುವುದು ಸಲ್ಲದು.ಮಾನವ ಇಂದು ವೈಜ್ಞಾನಿಕವಾಗಿ ಪ್ರಗತಿ ಹೊಂದಿದ್ದರೂ ಸುಖಶಾಂತಿಗಳಿಲ್ಲದೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ.ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞ ಡಾ.ರಾಧಾಕೃಷ್ಣನ್ ಹೇಳುವಂತೆ ಮಾನವ ಹಕ್ಕಿಯಂತೆ ಹಾರುವುದನ್ನು ಮೀನಿನಂತೆ ಈಜುವುದನು ಕಲಿತ ಆದರೆ ಮಾನವ ಮಾನವನಾಗಿ ಬಾಳುವುದನು ಮಾತ್ರ ಕಲಿಯಲಿಲ್ಲ.  ಇದರ ಅರ್ಥ ಮಾನವ ಬರೀ ಸಂಪತ್ತು ಗಳಿಕೆಗೆ ಒತ್ತು ಕೊಟ್ಟು ವೈಜ್ಞಾನಿಕ ಸಂಶೋಧನೆ ಮಾಡಿದ. ತಂತ್ರಜ್ಞಾನದಲ್ಲಿ ಕೊಡುಗೆ ನೀಡಿದ ಮಾನವ ಮಾನವನಾಗಿ ಬಾಳಿ ಬದುಕುವುದನು ಮರೆತ.       ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಮೌಲ್ಯಯುತ ಅಂಶಗಳನ್ನು ಕಲಿಸುವುದು ಇಂದಿನ ದಿನಮಾನಕ್ಕೆ ಅವಶ್ಯಕ.ಓದು ಹುದ್ದೇಯೇರುವ ಹಂಬಲ ಹೆಚ್ಚಾದರೆ ಅದನ್ನು ಸಾಧಿಸದಾದಾಗ ಆತ್ಮಹತ್ಯೆ ಎಂಬ ಮಾರಕತೆಗೆ ಒಳಗಾಗಿ ಜೀವ ನಷ್ಟ ವಾಗುತ್ತದೆ.          ಜೀವನ ಮಾಡಲು ದೊಡ್ಡ ಹುದ್ದೆಯೇ ಬೇಕೆಂದಲ್ಲ.ಇನ್ನಿತರ ಮಾರ್ಗಗಳನ್ನು ಇಂದಿನ ಶಿಕ್ಷಣ ನೀಡಬೇಕಾದುದು ಅವಶ್ಯಕ‌        ಸಮಾಜದ ಹಿತಕಾಯ್ದುಕೊಳ್ಳಲು ಆರೋಗ್ಯಕರವಾದ ವಾತಾವರಣವನ್ನು ಸಂರಕ್ಷಿಸುವ ಉದ್ದೇಶ ಹೊಂದಿರಬೇಕಾಗುತ್ತದೆ.ಶಿಕ್ಷಣದ ಗುರಿಗಳು ಶಾರೀರಿಕ ಬೆಳವಣಿಗೆಯೊಂದಿಗೆ ಸಚ್ಛಾರಿತ್ರ್ಯ ಬದುಕುವ ಕೌಶಲಗಳನ್ನು ನೀಡುವುದು ಅವಶ್ಯಕ.        ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕಾಗಿದೆ.  ಇದನ್ನು ಪ್ರತಿಯೊಬ್ಬ ಪ್ರಜೆ ಪಡೆಯಲೇಬೇಕು.        ಶಿಕ್ಷಣ ಉರು ಹೊಡೆದು ಪರೀಕ್ಷೆ ಬರೆದು ಅಂಕ ಪಡೆದರೆ ಸಾಲದು ಅನುಭವ,ಪ್ರಾಯೋಗಿಕವಾಗಿ ಪಡೆದು ಜೀವನ ನಡೆಸುವ ಕೌಶಲ್ಯಗಳನ್ನು ಧಾರೆ ಎರೆಯಬೇಕಾಗಿದೆ.ಸದೃಢ ದೇಹ ಮನಸು,ಮೌಲ್ಯಯುತ ಬದುಕು ಸಾಗಿದಾಗ ಜೀವನಕೊಂದು ಅರ್ಥ ಬರುತ್ತದೆ.  *******

ಪ್ರಸ್ತುತ Read Post »

ಇತರೆ

ಹರಟೆ

ಮರೆವು ಅನುಪಮಾ ರಾಘವೇಂದ್ರ        ಅರಿತೋ…ಮರೆತೋ…ಒಂದೊಮ್ಮೆ ದಾರಿ ತಪ್ಪಿದರೂ ಕೂಡ ಮತ್ತೆ ಎಚ್ಚರಗೊಂಡು ಮೈಕೊಡವಿ ನಿಲ್ಲಬೇಕು. ಆಗ ಮರೆವು ಮರೆಯಾಗಿ ಅರಿವಿನ ಜ್ಯೋತಿ ಬೆಳಗುತ್ತದೆ ಎಂದಿದ್ದಾರೆ ವಿದ್ವಾಂಸರು. ಮರೆವು ದೇವರು ಕೊಟ್ಟ ವರ. ಆದರೆ ಯಾವುದನ್ನು ಮರೆಯಬೇಕು, ಯಾವುದನ್ನು ಮರೆಯಬಾರದು ಎಂಬ ಅರಿವು ನಮ್ಮಲ್ಲಿರಬೇಕು.         ಅದೇನೋ ಸರಿ…….. ಆದರೆ ಮೊನ್ನೆ ನಾನು ಅಡಿಗೆ ಮಾಡುತ್ತಿರುವಾಗ ಬೇರೇನೋ ನೆನಪಾಗಿ ಸ್ಟೋರ್ ರೂಮಿನ ಒಳ ಹೊಕ್ಕಾಗ ಯಾವ ಕಾರಣಕ್ಕೆ ಅಲ್ಲಿಗೆ ಹೋದೆ ಎಂಬುದೇ ಮರೆತು ಹೋಗಿತ್ತು. ಮತ್ತೆ ಮೊದಲಿದ್ದಲ್ಲಿಗೇ ಹೋದ ಕ್ಷಣದಲ್ಲಿ ಸ್ಟೋರ್ ರೂಮಿಗೆ ಹೋದ ಕಾರಣ ನೆನಪಾಗಿತ್ತು. ಇಂತಹ ಘಟನೆಗಳು ಅದೆಷ್ಟೋ……         ಒಲೆಯಲ್ಲಿ ಹಾಲಿಟ್ಟು ಧಾರಾವಾಹಿ ನೋಡುತ್ತಾ ಮೈ ಮರೆತು ಹಾಲು ಉಕ್ಕಿ ಚೆಲ್ಲಿ ಹೋಗುವುದೋ…….. ಫೋನಿನಲ್ಲಿ ಮಾತನಾಡುತ್ತಾ  ಇರುವಾಗ ತಳ ಹಿಡಿದು ಕರಟಿದ ವಾಸನೆ ಮೂಗಿಗೆ ಬಡಿದಾಗಲೇ ಒಲೆಯಲ್ಲಿ ಪಲ್ಯ ಬೇಯಿಸಲು ಇಟ್ಟಿದ್ದೇನೆಂಬ ನೆನಪು ಮರುಕಳಿಸುವುದೋ……. ಇನ್ನೊಂದು ರೀತಿಯ ಮರೆವು.          ಮದುವೆ , ಸಮಾರಂಭಗಳಿಗೆ ಹೋದಾಗ ಯಾರೋ ಬಂದು ನವಿರಾಗಿ ಬೆನ್ನು ತಟ್ಟಿ “ನಮಸ್ಕಾರ .ನನ್ನ ನೆನಪಿದೆಯಾ…?” ಎಂದಾಗ ಅವರನ್ನು ಎಲ್ಲೋ ನೋಡಿದ ನೆನಪು….. ಆದರೆ ಯಾರೆಂಬ ಸ್ಪಷ್ಟತೆ ಇಲ್ಲ….. ನೆನಪಿಲ್ಲವೆಂದು ಹೇಳಿದರೆ ತನಗೇ ಕೊರತೆ ಎಂಬ ಭಾವದಲ್ಲಿ “ಹೋ…. ಏನು ನೆನಪಿಲ್ಲದೆ. ಧಾರಾಳ ನೆನಪಿದೆ.” ಎಂದು ಹಲ್ಲು ಕಿಸಿದು ಮೆಲ್ಲನೆ ಅಲ್ಲಿಂದ ಜಾರಿಕೊಂಡ ಸಂದರ್ಭ ಅದೆಷ್ಟೋ…. ಆದರೆ ಕೆಲವೊಮ್ಮೆಅವರು “ಹಾಗಾದರೆ ನಾನು ಯಾರು ? ಹೇಳು ನೋಡುವ” ಎಂದಾಗ “ಬ್ಬೆ ಬ್ಬೆ ಬ್ಬೆ” ಎಂದು ಹೇಳಿ ಕಕ್ಕಾಬಿಕ್ಕಿಆದದ್ದೂ ಇದೆ. ಅವರ ಪರಿಚಯದ ಒಂದು ಎಳೆ ಸಿಕ್ಕಿದರೂ ಇಡೀ ಜಾತಕವನ್ನು ಜಾಲಾಡುವಷ್ಟು ಮಾಹಿತಿ ಸಂಗ್ರಹ ನಮ್ಮ ಬಳಿ ಇದ್ದರೂ ಆ ಎಳೆ ಸಿಕ್ಕದೆ ಒದ್ದಾಡುವ ಪ್ರಸಂಗ ಯಾರಿಗೂ ಬೇಡಪ್ಪಾ…          ಕೆಲವೊಂದು ವ್ಯಕ್ತಿಗಳ ಕಪಿ ಮುಷ್ಟಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ  ಪರಿಚಯವೇ ಇಲ್ಲದಂತೆ ನಡೆದುಕೊಳ್ಳುವುದನ್ನು ಏನೆನ್ನಬೇಕೋ…..? ಅದು ಜಾಣ ಮರೆವು ತಾನೇ…. ಜೀವನದ ಅನೇಕ ವಿಚಿತ್ರ ಸಂದರ್ಭಗಳಲ್ಲಿ ನಮ್ಮನ್ನು ಪಾರು ಮಾಡುವುದೂ  ಜಾಣ ಮರೆವು.  ಈ ಜಾಣ ಮರೆವಿನಿಂದ ಲಾಭ ಮಾಡಿಕೊಳ್ಳುವ ಕೆಟ್ಟ ಮನಸ್ಸಿನ ದುಷ್ಟ ಜನರೂ ಅದೆಷ್ಟೋ……    ಇವೆಲ್ಲಕ್ಕಿಂತಲೂ ಮುಖ್ಯವಾದ ಮರೆವು ರೋಗ ಅಲ್ಜ಼ೀಮರ್. ತಾನು ಯಾರು…? ತನ್ನವರು ಯಾರು ….? ತನ್ನ ಇರವಿನ ಅರಿವೇ ಇಲ್ಲದ ಪರಿಸ್ಥಿತಿ. ಹಸಿವು , ಬಾಯಾರಿಕೆ ಇಲ್ಲ . ಬಹಿರ್ದೆಸೆಯ ಪರಿಜ್ಞಾನ ಇಲ್ಲ. ಹಗಲು – ರಾತ್ರಿಗಳ ಪರಿವೇ ಇಲ್ಲ. ಉಟ್ಟ ಅರಿವೆಯ ಗೊಡವೆಯೇ ಇಲ್ಲ. ಅಬ್ಬಾ…..! ಕಲ್ಪನೆಯೇ ಭಯಂಕರ. ಮರೆವು ಒಂದು ವರ ಎಂದವರೆಲ್ಲಾ ಈ ಮರೆವು ಎಂಬುದು ದೊಡ್ದ ಶಾಪ ಎನ್ನದಿರುವರೇ……. ********

ಹರಟೆ Read Post »

ಇತರೆ

ಲಹರಿ

ಮಾಸ್ಕಿನ ಮುಸುಕಿನಲಿ ಮುಂಗಾರು ಶಾಲಿನಿ ಆರ್. ಮತ್ತೆ ಮುಂಗಾರು. ಆದರೆ ಇದು ಕೊರೋನಾ ಮುಂಗಾರು. ಜೀವನದಲ್ಲಿ ಮೊದಲ ಬಾರಿ‌ ಮಳೆ ಮತ್ತು ನಾನು, ನನ್ನ ಗಾಡಿ ಮತ್ತೆ ನಿನ್ನ ಮೌನ, ಒಂದಕ್ಕೊಂದು ಸಂಬಂಧ ಇಲ್ಲದ ಹಾಗೆ ಲಾಕ್ ಡೌನ್ ಆಗಿರೋದು.  ಪ್ರತಿ ಸಾರಿ ಕಾಯೋ ಹಾಗೆ ಈ ಸಾರಿ ಮುಂಗಾರು ಅನುಭವಿಸಲಿಕ್ಕೆ ಮನಸ್ಸು ಹಿಂದೆ ಮುಂದೆ ನೋಡ್ತಿದೆ.ಇಳೆಯೇನೋ ತೋಯ್ತಾ, ಅದರ ಸಿರಿ ಸಂಭ್ರಮನ ಅದು ಸಂಭ್ರಮಿಸ್ತಿದೆ. ಯಾಕಂದ್ರ ಬಾಳ ವರುಷದ ಮ್ಯಾಲ ಅದಕ್ಕೆ ತನ್ನದೇ ಆದ ಸಮ್ಮಾನ ಅಭಿಮಾನ ತುಂಬಿ ತುಳುಕುತಿದೆ‌ ಅಲ್ವಾ ಅದಕ್ಕೆ.         ಯಾಕೋ ಮುಂಗಾರು ನನಗೆ ಈ ಬಾರಿ ಮುದ ಕೊಡ್ತಿಲ್ಲ ? ಅಥವಾ ಅನುಭವಿಸಲಿಕ್ಕೆ ಮನಸ್ಸೇ ಆಗ್ತಿಲ್ಲವೋ ?.   ಪ್ರತಿ ಬಾರಿ ಮಳೆಯ ಪ್ರತಿ ಹನಿಯ ಅನುಭವವನ್ನ  ಅನುಭವಿಸೋಕೆ ನಾನೇ ಅವಕಾಶ  ಮಾಡಕೋತಿದ್ದೆ. ಆಗೆಲ್ಲ ಮನಸ್ಸು ನವಿಲಾಗತಿತ್ತು.ವಾವ್ಹ್ ! ಎಂಥ ಸೋಜಿಗದ ಮುದ ಇದು ಅಂತ ಮಳೆನಲ್ಲಿನೇ ಗಾಡಿಲಿ ಹೋಗ್ತಿದ್ದೆ.ಒಂದು ರೇಂಜಿಗೆ ಒದ್ದೆ ಆದ ಮೇಲೆ ಮತ್ತೇನೂಂತ, ಮಳೆನಲ್ಲಿ ನಿಲ್ಲದೇ ಗಾಡಿನಲ್ಲಿ ಹೋಗತ್ತಿದ್ದೆ. ಮನಸ್ಸಲಿ ನೀ ಬೆಚ್ಚಗಿರ್ತಿದ್ಯಲ್ಲ, ಒಂದು ರೀತಿ ಭಂಡ ಧೈರ್ಯ ನಂಗೆ. ಹಾಗೆ ಹೋಗುವಾಗ ತುಟಿ ಬಿಗಿಹಿಡಿದರು ಹನಿಗಳು ನನ್ನೊಡಲಿಗೆ ಕ್ಷಣಮಾತ್ರದಲ್ಲಿ ನೇರವಾಗಿ ಒಳಗೆ ಹೋಗಿರೋದು ಅಮೃತದಂತಹ ಮಳೆಹನಿಗಳು. ಅದನ್ನ ಸವಿತ ನಾನು ನನ್ನ ದ್ವಿಚಕ್ರವಾಹನ ಇಬ್ಬರು ಖುಷಿಯಾಗಿ ಅನುಭವಿಸ್ತಿದ್ವಿ.     ಪ್ರತಿ ಮಳೆಗಾಲಾನು ನೆನಪಿನ ಹೂರಣನೆ. ಎಲ್ಲ ಖುಷಿಯ ಕ್ಷಣಗಳು, ದುಃಖದ ಕರಿಮುಗಿಲು, ಎಲ್ಲ ಈ ಮುಂಗಾರಿನ ಮಳೆಹನಿಲಿ ಬೆರೆತು ಹೋಗ್ತಿತ್ತು  ಅರಿವಿಗೂ ಬಾರದ್ಹಾಂಗೆ.     ಯಾವಾಗಲೂ  ಈ ಮಳೆ ನಂಗೆ ನನ್ನ ಭಾವನೆಗೆ ಸಾಥ್ ಕೊಡ್ತಿತ್ತು.ಎಂಥ ಉತ್ಸಾಹಭರಿತವಾಗಿರತಿತ್ತು. ನಿನ್ನ ನೆನಪ ಕವನ ಕೂಡ, ಮಳೆಗಾಲ ಮುಗಿಯೋದ್ರೊಳಗೆ ಕಾವ್ಯವಾಗಿಬಿಡತಿತ್ತು.ಆ ನೆನಪುಗಳ ಕಚಗುಳಿಗೆ.ಪ್ರತಿ ಭಾರಿ ಅನ್ನಕೊಳ್ಳತಿದ್ದೆ ನಾನು ನೀನು ಈ ಮಳೆ ಜೊತೆ ಜೊತೆಯಲಿ ಇನ್ನುಳಿದೆಲ್ಲ ಮುಂಗಾರೂಂತ.   ಆದರೆ ಈಗ ಬರಿ ಆತಂಕ. ಗಾಡಿಲಿ ಹೋದ್ರು.ಮುಖಕ್ಕೆ ಮಾಸ್ಕ ಇರತ್ತೆ ಅನುಭವಿಸಲಾರದ್ಹಾಂಗ ಈ ಸೋನೆ ಮಳೆನಾ. ಮುಂಗಾರಿನ ಮೋಡದಾಟ ಕೂಡ ಈ ಭಾರಿ ನೋಡೋಕಾಗ್ತಿಲ್ಲ. ನೆಪಗಳಿಗೂ ಕ್ವಾರೆಂಟೈನ್ ಮುಂಗಾರಿನ ಸಂಗಡ ಆಡಲಿಕ್ಕೆ.  ಯಾಕೆಂದರೆ ಪಕ್ಕದ ಏರಿಯಾ ರವಿನಗರದಲ್ಲೇ ಕೊರೋನಾ ಪಾಸಿಟಿವ್ . ನಾವು ಸೀಲ್ ಡೌನ್.     ಬೈ ಛಾನ್ಸ ಇವತ್ತು ಮಾಸ್ಕ ಮರೆತು ಹೋದೆ .ಅರ್ಧ ದಾರಿ ಹೋದ ಮೇಲೆ ನೆನಪಾಯಿತು  ಮಾಸ್ಕ ಹಾಕದೆ ಇರೋದು ನಿಜದ ಆತಂಕ ಮನೆ ಮಾಡ್ತು. ಸೀದ ಕೆಲ್ಸ ಮುಗ್ಸಿ ಅಲ್ಲಿ ಇಲ್ಲಿ ನೋಡದೆ ಮತ್ತೆ ಗೂಡು ಸೇರಿದಾಯ್ತು ನಾನು ಮತ್ತು ನನ್ನ ಗಾಡಿ. ಮಳೆ ಇತ್ತು ಸಣ್ಣಗೆ, ಆದರೆ ಆರಾಧಿಸೋ ಮನಸ್ಸೇ ಇರಲಿಲ್ಲ.ಜೊತೆಗೆ ನೆನೆಪುಗಳು ಈಗ ನಿನ್ನ ಅಡಿಯಾಳಗಿರುವಾಗ , ಪುರುಸೊತ್ತಾದಾಗ ಮಾತ್ರ ನನ್ನ ಬಳಿ ಬರುವ ನೆಪ  ಅವಕ್ಕೆ. ಒಂದು ರೀತಿಲಿ ಅನಾಥ ಭಾವದಂಚು ತಾಗಿದೆ ಗೊತ್ತಾ.      ಇದೆಲ್ಲ ಮತ್ತೊಂದು ಮುಂಗಾರಿನವರೆಗೆ ಮುಂದುವರಿದೆ ಇದ್ರೆ ಸಾಕು . ಎಲ್ಲ ಮೊದಲಿನ ಸಹಜ ಬದುಕು ಮರಳಿ ನಿಲ್ಲಲಿ,  ಅನುವ ಹರಕೆ , ಹಾರೈಕೆ ಈ ಮಾಸ್ಕಿನ ಮುಂಗಾರು ಮಳೆಗೆ…   *********************************

ಲಹರಿ Read Post »

ಇತರೆ

ಶಿಶುಗೀತೆ

ಇರುವೆ ತೇಜಾವತಿ ಹೆಚ್.ಡಿ. ಇರುವೆ ಇರುವೆ ಎಲ್ಲಿರುವೆಎಲ್ಲಾ ಕಡೆಯಲು ನೀನಿರುವೆಶಿಸ್ತಿಗೆ ನೀನೇ ಹೆಸರಾಗಿರುವೆಹೆಚ್ಚಿನ ಭಾರವ ನೀನೊರುವೆ ಇರುವೆ ಇರುವೆ ಕೆಂಬಿರುವೆಕೋಪದಿ ಏಕೆ ನೀನಿರುವೆಅರಿಯದೆ ನಿನ್ನ ಮುಟ್ಟಿದರೆಚುರುಚುರು ಅಂತ ಕಚ್ಚಿರುವೆ ಇರುವೆ ಇರುವೆ ಕಟ್ಟಿರುವೆದಾರಿಲಿ ಏಕೆ ನಡೆದಿರುವೆಅರಿಯದೆ ಪಾದವ ಮೆಟ್ಟಿದರೆಸಾಲನು ಬಿಟ್ಟೇ ಚುಚ್ಚಿರುವೆ ಇರುವೆ ಇರುವೆ ಚಗಳಿರುವೆಕೊಟ್ಟೆಯ ಎಲ್ಲಿ ಕಟ್ಟಿರುವೆಚಟ್ನಿಗೆ ನೀನು ಚಂದಿರುವೆಮಲ್ನಾಡ ಸೀಮೆಲಿ ನೀನಿರುವೆ ಇರುವೆ ಇರುವೆ ಕಪ್ಪಿರುವೆತತ್ತಿಯ ಎಲ್ಲಿ ಬಿಟ್ಟಿರುವೆಬೆಲ್ಲವ ನೀನು ಮುತ್ತಿರುವೆಹಿಡಿಯ ಹೋದ್ರೆ ಬುಳುಗುಡುವೆ ***********

ಶಿಶುಗೀತೆ Read Post »

ಇತರೆ

ಲಹರಿ

ಮಳೆಗಾಲದ ಹಸಿ ಪ್ರೇಮಪತ್ರ… ಆಶಾಜಗದೀಶ್ ಯಾರೋ ಹುಡುಗ ಹೇಳಿದನಂತೆ ತನ್ನ ಹುಡುಗಿಗೆ, “ಹೋಗಿ ಮಳೆಯ ಹನಿಗಳನ್ನು ಎಣಿಸು.. ನಾ ನಿನ್ನನ್ನು ಅಷ್ಟು ಪ್ರೀತಿಸುತ್ತೇನೆ” ಎಂದು. ನನ್ನ ಅದೆಷ್ಟೋ ಸಂದರ್ಭಗಳ ಪ್ರೇಮದ ಉತ್ಕಟತೆಗೆ ಮಾತಾಗಿ ನಿಂತಿತ್ತು ಈ ಕಥೆ. ಏನೊಂದು ಹೇಳದೆಯೂ “ನನ್ನ ಪ್ರೀತಿ ಇದು” ಎಂದು ಹೇಳಿದ ಮೌನ ಮಾತಾಗಿತ್ತು ಈ ಕಥೆ. ಅರೆ… ಆ ಹೆದ್ದಾರಿಯ ಮಗ್ಗುಲ ಕಾಲುದಾರಿಯ ಪೊದೆಗೆ ಎಲ್ಲ ಗೊತ್ತಿದೆ. ನಾವು ಹೃದಯವನ್ನು  ಹಂಚಿಕೊಳ್ಳುತ್ತಾ ನಮ್ಮ ಆತ್ಮಗಳನ್ನು ಒಂದಾಗಿಸಿದ್ದನ್ನು ಕಂಡಿದೆ ಅದು. ನೋಯಿಸುವಷ್ಟು ತೀವ್ರ ಮಳೆಯಲ್ಲಿ ಕಂಗಾಲಾಗಿ ಅಳುತ್ತಾ ನಮ್ಮ ತೆಕ್ಕೆಗಳನ್ನು ಬಿಡಿಸಿಕೊಂಡು ಮನೆದಾರಿ ಹಿಡಿದಿದ್ದಕ್ಕೆ ಸಾಕ್ಷಿಯಾಗಿದೆ ಅದು. ಮತ್ತೆ ಒಂದಾಗುವ ತೀವ್ರ ಭಾವದಲ್ಲಿದ್ದೂ ಇನ್ನೊಂದೇ ಒಂದು ಹೆಜ್ಜೆಯನ್ನು ಬೇಕಂತಲೇ ಮರೆತು ನಡೆದದ್ದು ಅದರ ಮುಂದೆಯೇ. ನನ್ನ ಸಿಂಧೂರ ಹಣೆಯ ಮೇಲಿಂದ ಅತ್ತು ಇಳಿದದ್ದು ಇಂಥದೇ ಒಂದು ಹುಚ್ಚು ಮಳೆಯಲ್ಲಿ. ಹೇಳಲು ಮರೆತ ಮಾತೊಂದನ್ನು ಉಸುರಲು ನಿಂತ ಕಣ್ಣಂಚಿನ ಹನಿಯೊಂದನ್ನು ತೊಳೆದು ಅಳಿಸಿಬಿಟ್ಟಿದೆ ಈ ಮಳೆ. ಮತ್ತೆ ನಮ್ಮ ಕಣ್ಣುಗಳು ಆಡಿಕೊಳ್ಳುತ್ತಿದ್ದ ಮಾತುಗಳೆಷ್ಟೋ ಕೊಚ್ಚಿ ಹೋದದ್ದೂ ಇದೇ ಮಳೆಯಲ್ಲಿ… ಹಾಗಾಗಿ ಸುಮ್ಮನೇ ಮಳೆಯೊಂದರ ಮುಂದೆ ಕೂತು ಬಿಟ್ಟರೂ ಸಾಕು ನಿನ್ನ ಮಿಸುಗಾಟವೂ ನೆನಪಾಗತೊಡಗುತ್ತದೆ ನನಗೆ. ಮತ್ತೆ ಮಳೆಯೆನ್ನುವ ಮಾಯಾವಿಯ ಮುಂದೆ ಮಂಡಿಯೂರಿ ಸೆರಗೊಡ್ಡಿ ನಿನ್ನ ಪ್ರೇಮದ ತುಣುಕೊಂದನ್ನು ಬೇಡಿದ ಘಳಿಗೆ ಮತ್ತೆ ಮತ್ತೆ ನೆನಪ ಮೂಟೆ ಹೊತ್ತು ತರುವ ಮಹಾನ್ ಮಳೆರಾಯನ ಆಗಮನದಿಂದ ಮತ್ತೆ ಮತ್ತೆ ನವೀಕರಣಗೊಳ್ಳುತ್ತಾ ಬಂದಿದೆ… ಆದರೆ ನಮ್ಮ ನಿಲುವುಗಳು ಯಾವ ಗಟ್ಟಿ ಬುನಾದಿಯ ಮೇಲೆ ನಿಂತಿರುತ್ತವೋ, ಅವೇ ನಮ್ಮ ಬದುಕಿನ ದಿಕ್ಕನ್ನು ನಿರ್ಧರಿಸುತ್ತವೆ. ಅಂತಹ ಒಂದು ಗಟ್ಟಿ ನಿಲುವೇ ನಮ್ಮ ಆಯ್ಕೆಗಳ ವಿಷಯದಲ್ಲೂ ಕೆಲಸ ಮಾಡಿರುವುದು. ಪ್ರೀತಿಯೂ ತನ್ನ ನಿಲುವಿನ ಮೇಲೆ ತಾನು ನಿಲ್ಲುತ್ತದೆ. ಹೃದಯದ ಬುನಾದಿಯ ಮೇಲೆ ಸೌಧ ಕಟ್ಟುತ್ತದೆ. ಕೆಸರಿನಲ್ಲಿ ನಾಟಿದ ಭತ್ತದ ಸಸಿಯ ತಪಸ್ಸಿನಷ್ಟೇ ಘೋರ ತಪಸ್ಸೊಂದು ಪ್ರೇಮವನ್ನು ಇನ್ನಿಲ್ಲದಂತೆ ಪೊರೆಯುತ್ತಿರುತ್ತದೆ. ದೈಹಿಕ ಆಸೆಯೊಂದೇ ಇಷ್ಟು ದೂರ ಪೊರೆದು ನಡೆಸಲಿಕ್ಕೆ ಹೇಗಾದರೂ ಸಾಧ್ಯ!  ಜಗತ್ತನ್ನು ಎತ್ತಿ ನಿಲ್ಲಿಸಿರುವ, ಜೀವಿ ಜೀವಿಗಳ ಬೆಸೆವ ಪ್ರೇಮ, ಭೂಮಿಯನ್ನು ತಲುಪದೇ ಪೈರು ಪಚ್ಚೆಯಾಗುವುದಾದರೂ ಹೇಗೆ?! ಜೀವದ ಹಂಗು ತೊರೆದು ಹೆಣೆದ ಹೆಜ್ಜೆಗಳ ಸಾಲು, ಅವನ ಮನೆಯ ಕದ ತಟ್ಟಬೇಕಿದೆ. ಮನೆಯ ಕದದಷ್ಟೇ ಅವನ ಎದೆ ಕದವೂ ಕದಲುವುದನ್ನು ಕಂಡು ಹುಚ್ಚೆದ್ದು ಕುಣಿಯಬೇಕಿದೆ. ಕಾರ್ಮೋಡ ಕಂಡು ಗರಿ ಬಿಚ್ಚಿ ಕುಣಿವ ನವಿಲಿನಂತೆ. ಪ್ರತಿ ಗಂಡೂ ಭೂಮಿಯಂತೆ ಎದೆಸೆಟೆಸಿ ನಿಲ್ಲುತ್ತಾನೆ, ಕಣ್ಣೀರ ನುಂಗಿ ನಸು ನಗುತ್ತಾನೆ. ಪ್ರತಿ ಹೆಣ್ಣೂ ಮಳೆಯಂತೆ ನವಿರಾಗಿ, ಕೋಮಲವಾಗಿ ಸ್ಪರ್ಷಿಸುತ್ತಾಳೆ, ನೋವನ್ನು ಮರೆಸುತ್ತಾಳೆ, ಭೂಮಿಯುದರದಲ್ಲಿ ಜೀವದ ಫಲವಾಗಿ ಫಲಿಸುತ್ತಾಳೆ. ಇಳೆ ಮಳೆಯ ನಂಟು ತನ್ನ ಮಜಲುಗಳನ್ನು ಹಾಯುತ್ತಾ ಸಾಗುತ್ತಲೇ ಹೋಗುತ್ತದೆ. ಬಹುಶಃ ಇದರಿಂದಲೇ ಪ್ರೇಮವೆನ್ನುವುದು ಹುಟ್ಟಿದ್ದಿರಬೇಕು. ಬತ್ತದ ಪ್ರೇಮದ ತಿಳಿಕೊಳವೊಂದು ಪ್ರೇಮಿಗಳ ಉಡಿ ತುಂಬಿ ಕಳಿಸುತ್ತಿರಬೇಕು. ನಾವು ನಮ್ಮ ಕೈಗಳ ಮೇಲೆ ಅಚ್ಚೆ ಹೊಯ್ಸಿಕೊಳ್ಳುವಾಗಲೂ ಹೃದಕ್ಕಿಳಿಯುವ ಬಣ್ಣಕ್ಕಾಗಿ ಹುಚ್ಚು ಮಳೆಯಲ್ಲಿ ಹುಡುಕಾಡಿದ್ದೆವು. ಹುಡುಕಾಟದ ಕೊನೆಯಲ್ಲಿ ಬರಿಗೈ! ಕೊನೆಗೆ ಅರ್ಥವಾದ ಸತ್ಯವೆಂದರೆ ಅವು ಅಗೋಚರ ಬಣ್ಣಗಳು ಎಂದು. ಆದರೆ ಕಾಣುವ ಕಾಮನ ಬಿಲ್ಲಿನ ಚೂರುಗಳು ನಿನ್ನ ಕಾಮನೆಗಳ ಫಲ ಎನಿಸುವಾಗೆಲ್ಲ ನೀನು ನಡುರಸ್ತೆಯಲ್ಲಿ ಕೊಟ್ಟ ಮುತ್ತುಗಳ ಲೆಕ್ಕ ತಪ್ಪುತ್ತಲೇ ಇದೆ. ಮತ್ತೆ ಅವನ್ನೆಲ್ಲ ಈ ಹಸಿ ಮಣ್ಣಿನ ವಾಸನೆಯಲ್ಲಿ ಜೋಪಾನವಾಗಿ ಬಚ್ಚಿಟ್ಟಿದ್ದೇನೆ.  ಮತ್ತೆ ನಿನಗೆ ಗೊತ್ತಾ… ಮಳೆಗಾಲದ ಹಸಿ ನೆಲದಲ್ಲಿ ಇದ್ದಕ್ಕಿದ್ದಂತೆ ಎನ್ನುವ ಹಾಗೆ ಕಾಣಿಸಿಕೊಳ್ಳುವ ನಂಜುಳಗಳು ಆ ಮುತ್ತುಗಳ ಮೇಲೆಲ್ಲಾ ಪುಳುಪುಳು ಓಡಾಡುತ್ತಾ ಕಚಗುಳಿ ಇಡುತ್ತಿವೆಯಂತೆ. ನನಗೆ ಸುಮ್ಮಸುಮ್ಮನೇ ನಗು ಬರುತ್ತದೆ. ಯಾರನ್ನೂ ಕಣ್ಣಿಟ್ಟು ನೋಡಲಾಗದು. ದೃಷ್ಟಿ ನೆಲ ನೋಡುತ್ತದೆ. ಕಾಲ ಹೆಬ್ಬೆರಳ ರಂಗೋಲಿಯಲೂ ನಿನ್ನದೇ ಹೆಸರು. ಚಡಪಡಿಸುವ ಕೈಬೆರಳ ತುದಿಯಲ್ಲಿ ನನ್ನ ಕೂದಲೆಳೆ. ಹಗಲುಗನಸಿಗೆಳೆಸುವ ಕೆಂಪು ನಾಚಿಕೆ. ಹೇಳು ನೀನ್ಯಾರು? ಪ್ರೇಮವೆನ್ನುವುದು ಪ್ರಕೃತಿಗೆಷ್ಟು ಸಹಜವೋ ಅದರದೇ ಭಾಗವಾದ ನಮ್ಮಂತಹ ಹುಲು ಮಾನವರಿಗೂ ಸಹ. ಅದು ನೆನ್ನೆ ಇತ್ತು, ಇಂದು ಇದೆ, ಮತ್ತೆ   ನಾಳೆ ಇರುತ್ತದೆ. ಆದರೆ ಅದನ್ನು ಮೀರಿದವನು ನೀನು. ಹೇಳು ನೀನ್ಯಾರು? ಭಾಷೆಯೊಂದು ನಿನ್ನ ಮುಂದೆ  ಸೋತು ಶರಣಾಗುತ್ತಿದೆ. ಅದಕ್ಕೆ ನಿಲುಕುತ್ತಿಲ್ಲ ನೀನು. ಹೇಳೋ ಪ್ಲೀಸ್ ನೀನ್ಯಾರೋ??? ನಿನ್ನ ಅನಾಮಿಕತನವೂ ಆಪ್ಯಾಮಾನವಾಗಿದೆ. ಮತ್ತು ಸೋಲುವುದರ ರುಚಿ ಉಣಿಸುತ್ತಿದೆ. ಆದರೆ ನನಗೆ ಅಂದು ನೀನು ಬಯಲ ಏಕಾಂತದಲಿ ಮಳೆಯ ಹೊಡೆತಕ್ಕೆ ಎದೆಯೊಡ್ಡಿ ನಿಂತು, ನೀನು ನೀನಾಗಲ್ಲದೆ, ನಿನ್ನನ್ನು ಇಂಚಿಂಚೇ ಕಳೆದುಕೊಳ್ಳುತ್ತಾ ಅತ್ತದ್ದು ನೆನಪಾಗುತ್ತದೆ. ಖಾಲಿ ಇರುವ ನಿನ್ನ ಎದೆಯ ತೋರಿಸುತ್ತಾ ಅಲ್ಲಿ ನನ್ನನ್ನು ಆ ಕ್ಷಣವೇ  ಪ್ರತಿಷ್ಟಾಪಿಸಿ ಆವಾಹಿಸಿಕೊಳ್ಳುವ ನಿನ್ನ ಉಳಿವಿನ ತುರ್ತನ್ನು  ಅಳುವಿನ ಭಾಷೆಯಲ್ಲಿ ಹೇಳುತ್ತಿದ್ದುದ್ದನ್ನು ಕಂಡೂ ಅಸಹಾಕಳಾಗಿ ನಿಂತ ನನಗೆ, ಭೂಮಿ ಬಾಯ್ಬಿಡುವುದೇ ಸೂಕ್ತ ಎನಿಸಿತ್ತು. ಅವತ್ತು ನಾವಿಬ್ಬರೂ ಆಡಿದ್ದ ಮಾತುಗಳಷ್ಟೂ ಸತ್ತು ಹೋಗಿದ್ದವು. ಕಡು ವಿಷಾದ ಮಾತ್ರ ಹೆಪ್ಪುಗಟ್ಟಿತ್ತು. ಆದರೆ ಒಂದಾಗುವ ಸಮಯಕ್ಕೆ ಕಾಯುತ್ತಿದ್ದ ನಮ್ಮ ದಾರಿಗಳು, ಸಧ್ಯ ನಾವು ಮರಳಬೇಕಿರುವ ನಮ್ಮ ನಮ್ಮ ಪ್ರತ್ಯೇಕ ದಿಕ್ಕು ದಿಸೆಗಳನ್ನು ನೆನಪಿಸುತ್ತಿದ್ದವು. ನಾವಿಬ್ಬರೂ ಕ್ಷಣಗಳನ್ನು ಮುಂಗಾರಿನ ಹನಿಗಳಂತೆ ನಮ್ಮ ನಮ್ಮ ಬೊಗಸೆಯಲ್ಲಿ ತುಂಬಿಕೊಂಡು ವಿರುದ್ಧ ದಿಕ್ಕಿನಲ್ಲಿ ಹೊರಟುಹೋಗಿದ್ದೆವು. ಒಮ್ಮೆಯೂ ಹಿಂತಿರುಗಿ ನೋಡದೆ. ಆದರೆ ಬೆನ್ನುಗಳಲ್ಲಿ ಕಣ್ಣು ಮೂಡಿದ್ದು ಇಬ್ಬರಿಗೂ ತಿಳಿದಿದ್ದ ಆದರೆ ಒಬ್ಬರಿಂದೊಬ್ಬರು ಮುಚ್ಚಿಟ್ಟ ವಿಚಾರವಷ್ಟೇ… ಇದೆಲ್ಲವನ್ನೂ ನೆನೆಯುತ್ತ ಕೂತಿರುವ ನನ್ನ ಮುಂದೆ ಏನೊಂದೂ ಕಾಣಿಸದಷ್ಟು ಜೋರು ಸುರಿಯುತ್ತಿದೆ ಮಳೆ. ಮಳೆಯ ನೀಳ ಸಮತಲದ ಮೇಲೆ ನಿನ್ನ ಚಹರೆಯನ್ನೊಮ್ಮೆ ಹುಡುಕುತ್ತೇನೆ. ಕಾಣಿಸದಾಗ ಮಳೆಯ ಬಿರುಸಿನ ನಡುವೆ ನಿನ್ನ ಮುಖವನ್ನು ಕಾಣಲೇ ಬೇಕೆಂದು ರಚ್ಚೆ ಹಿಡಿಯಬೇಕೆನಿಸುತ್ತದೆ. ಹುಚ್ಚಿಯಂತೆ ಅಲೆಯುತ್ತಾ ಹೊರಟುಬಿಡಬೇಕು ಎನಿಸುತ್ತದೆ. ನೀನು ಸಿಕ್ಕಲ್ಲದೇ ಮರಳಲೇ ಬಾರದು ಎನಿಸುತ್ತದೆ. ಮಳೆಯ ಈ ದಿನಗಳು ಮುಗಿಯುವುದರೊಳಗಾಗಿ ನಾವಿಬ್ಬರೂ ಮತ್ತೆ ಯಾಕೆ ಎದುರು ಬದರಾಗಬಾರದು?! ತಬ್ಬಿ ನಿಲ್ಲಬಾರದು?! ಮತ್ತೆ ನಮ್ಮ ಹಾದಿಗಳನ್ನು ದಿಕ್ಕುಗಳನ್ನು ಏಕೆ ಒಂದಾಗಿಸಬಾರದು?! ನಮ್ಮನ್ನು ಸದಾ ಹಿಡಿದಿಡುವ ಸಾಂಗತ್ಯ, ಸಹಚರ್ಯವೊಂದನ್ನು ಮಳೆಯ ಹನಿಗಳಲ್ಲಿ ಏಕೆ ಹರಳುಗಟ್ಟಿಸಬಾರದು?! ಪರಿಣಾಮ ನಿನ್ನ ನಗು ಸಹಜವಾಗುತ್ತದೆ. ನನ್ನ ಒಂದೊಂದು ಸೆಕೆಂಡುಗಳ ಅರ್ಥ ಮರಳುತ್ತದೆ. ನಿನ್ನ ಎದೆ ಸಮಾಧಾನದ ಸಾಗರವಾಗುತ್ತದೆ. ನನ್ನ ಅಂತಃಕರಣ ಹಸಿಯಾಗುತ್ತದೆ. ಮುಂಗಾರು ಕಳೆಯುವುದರೊಳಗಾಗಿ ಅಲ್ಲೊಂದು ಪುಟ್ಟ ಹಾಲು ಗಲ್ಲದ ಸಸಿ ತಂದು ನೆಟ್ಟು ಅದರ ಬೆಳವಣಿಗೆಯಲ್ಲಿ ನಮ್ಮ ಪ್ರೇಮದ ಯಶೋಗಾಥೆ ಬರೆಯೋಣ. ಏನಂತಿ? ಅಲ್ಲ ಕಣೋ ಮಾರಾಯ್ನೇ… ಯಾವ ಬೇಲಿಯೂ ಶಾಶ್ವತವಲ್ಲ. ಬೇಲಿಯನ್ನು ದಾಟುವುದು ಸುಲಭವೂ ಅಲ್ಲ. ಆದರೆ ಪ್ರೇಮಕ್ಕೆ ಬೇಲಿ ಕಟ್ಟಲು ಹೊರಟವರು ಸೋಲಬೇಕಲ್ಲದೆ ಪ್ರೇಮವೆಂದಾದರೂ ಸೋಲುತ್ತದಾ? ಮತ್ತೆ ನಮ್ಮ ಪ್ರೇಮದ ಮುಂದೆ ಬೇಲಿಯೆನ್ನುವ ತೃಣಮಾತ್ರದ ಅಡೆತಡೆಗೆ ನಮ್ಮ ಓಟವನ್ನು ಕಟ್ಟಿಹಾಕುವ ಶಕ್ತಿ ಎಲ್ಲಿಂದಾದರೂ ಬರಬೇಕು?! ದೈಹಿಕ ನೋವಿಗೆ ನಮ್ಮನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಇಲ್ಲ. ನಾವು ಸಾಯುವ ಕೊನೆ ದಿನದವರೆಗೂ ಪ್ರತಿದಿನ ನನ್ನ ಪ್ರೀತಿಯಲ್ಲಿ ನೀನು, ನಿನ್ನ ಪ್ರೀತಿಯಲ್ಲಿ ನಾನು ಬೀಳುವಂಥವರು ಎನ್ನುವುದನ್ನು ಯಾರಿಗಾದಗೂ ಋಜುವಾತು ಮಾಡಿ ತೋರಿಸಬೇಕಿಲ್ಲ. ಜಗತ್ತಿನ ಮುಂದೆ ಅದು ಬಂದು ನಿಂತಾಗ ಯಾರಿಗೇ ಆಗಲಿ ನಂಬದೆ ವಿಧಿ ಇರುವುದಿಲ್ಲ. ಇಂದು… ಈಗ… ಈಗಲೇ… ನಾ ನಿನ್ನ ಮುಂದೆ ಬಂದು ನಿಲ್ಲುತ್ತೇನೆ. ನಿನ್ನ ಬೊಗಸೆಯಲ್ಲಿ ನನ್ನನ್ನು ತೆಗೆದುಕೋ. ಒಂದು ಕ್ಷಣ ತುಂಬಿದ ಕಂಗಳಿಂದ ದಿಟ್ಟಿಸುತ್ತಾ ಮೆಲ್ಲಗೆ ಬೊಗಸೆಯನ್ನು ಮೇಲೆತ್ತಿ, ತುಟಿಗೆ ಸೋಕಿಸಿ, ಒಮ್ಮೆ ಮೆಲುವಾಗಿ ಚುಂಬಿಸಿ, ಬಿಗಿಯಾಗಿ ಕಣ್ಮುಚ್ಚಿ, ಕುಡಿದುಬಿಡು. ಕಪೋಲಗಳ ದಾಟಿ ಕತ್ತಿನ ಗುಂಟ ಹರಿದು ಹೃದಯದ ಮಡುವಿಗೆ ಜಾರಿದ ಕಣ್ಣೀರ ಹನಿಯೊಂದು ನಿನ್ನ ಎದೆಬಡಿತವಾಗಲಿ. ಮತ್ತದರ ಶಬ್ಧ ನನ್ನ ಹೆಸರಾಗಲಿ… ಇದೋ ಬಂದೆ… ನಿನ್ನವಳು ನಿನ್ನವಳು ಮಾತ್ರ… *********

ಲಹರಿ Read Post »

ಇತರೆ

ಲಹರಿ

ಒಂದು ಪತ್ರ ಜಯಶ್ರೀ ಜೆ.ಅಬ್ಬಿಗೇರಿ ಕಾಲೇಜಿನಂಗಳದಿ ಕಾಲಿಟ್ಟ ದಿನದಂದೇ ನೀ ಕಣ್ಣಿಗೆ ಬಿದ್ದೆ. ಸುರಿವ ಸೋನೆ ಮಳೆಗೆ ಹಾಡೊಂದ ಗುಣುಗುಣಿಸುತ ಕಣ್ಮುಂದೆ ನಿಂದೆ. ತುಸುವೇ ತುಸು ದೂರದ ರಸ್ತೆಯಂಚಿನಲ್ಲಿ ನಿಂತು ಹರಿವ ಸಿಹಿ ಝರಿಯಂತೆ ನನ್ನೆಡೆ ಕಣ್ಣೋಟ ಹರಿಸಿದೆ. ಬೀಸುವ ತಂಗಾಳಿಯ ಜತೆ ನಿನ್ನ ಮೈಯ ಸುಗಂಧ ತೇಲಿ ಬಂದು ನನ್ನ ಮೈಯ ಸವರಿದಂತೆನಿಸಿ ನಿಂತಲ್ಲೇ ಒಮ್ಮೆ ನಡುಗಿದೆ.ಒಮ್ಮಿಂದೊಮ್ಮೆಲೇ ಬೀಸಿದ ಜೋರಾದ ಗಾಳಿಗೆ ಬಲು ದೂರದ ತನಕ ಹಾರಿದ ನಿನ್ನೆದೆಯ ಅಂದದ ಆಕಾರ ಮುಚ್ಚಿದ್ದ ದುಪ್ಪಟ್ಟಾ ತಂದು ಕೈಗಿತ್ತೆ.ಕೋಮಲವಾದ ನಿನ್ನ ಬೆರಳುಗಳಿಗೆ ಬೆರಳು ಸೋಕಿ ಪುಳಕಗೊಂಡೆ. ಆ ಹೊಸ ಸ್ಪರ್ಷ ಪ್ರೇಮ ಲೋಕವೊಂದನ್ನು ತೆರೆದಂತಿತ್ತು. ಬಾನಂಗಳದಿ ನೇಸರ ಕಂಗೊಳಿಸುತ್ತ ಇಳಿಯುತ್ತಿದ್ದ. ಸದ್ದಿಲ್ಲದೇ ನೀ ನನ್ನೆದೆಗೆ ಇಳಿಯುತ್ತಿದ್ದೆ. ನೋಟದಲ್ಲಿ ನೋಟ ಬೆರೆಸಿ ಸ್ವಲ್ಪ ದೂರ ನನ್ನೊಡನೆ ನಡೆದು ಬಂದೆ ನೀನು, ನನ್ನೊಡನೆ ಒಂದಾಗಿ ಹೋದಂತೆ ಅನಿಸಿತು. ಇಬ್ಬರೂ ಜೊತೆಗೂಡಿ ರಸ್ತೆ ಬದಿಯಲಿರುವ ಜರ್ಝರಿತವಾದ ಬಂಡೆಗಲ್ಲಿನ ಮೇಲೆ ಕೂತು ಸೂರ್ಯಾಸ್ತ ಸವಿದೆವು.ಕ್ರಮೇಣ ಮಳೆ ನಿಂತಿತು. ಕತ್ತಲೆಯಾಯಿತು.ಮರದಡಿ ನಿಂತವರೆಲ್ಲ ಮನೆಗೆ ಮರಳಿದರು. ಯಾರೋ ನೀನು ಯಾರೋ ನಾನು ಆದರೂ ಕಣ್ಣಲ್ಲೇ ಮಾತನಾಡಿ ಮನದಲ್ಲೇ ಒಂದಾಗಿದ್ದೆವು. ನೋಡು ನೋಡುವಷ್ಟರಲ್ಲಿ ನನ್ನ ಹೃದಯ ಇದ್ದ ಜಾಗದಲ್ಲಿರಲಿಲ್ಲ. ಮರುದಿನ ನಿನ್ನ ವಿಳಾಸ ಹುಡುಕುತ ಗಲ್ಲಿ ಗಲ್ಲಿಗಳನು ದಾಟಿ ನೀನಿದ್ದ ಗಲ್ಲಿ ಹುಡುಕಿದ್ದಾಯಿತು. ದಿನೇ ದಿನೇ ನಿನ್ನ ಮನೆ ಹತ್ತಿರ ಬಂದು ನಿನ್ನ ಮನಸ್ಸಿಗೆ ಹತ್ತಿರವಾದದ್ದೂ ಆಯಿತು. ಪದೇ ಪದೇ ಭೇಟಿಯಾದ್ದರಿಂದ ಸ್ನೇಹ ಪ್ರೀತಿಗೆ ತಿರುಗಿದ್ದೂ ಆಯಿತು.ನಿನ್ನೆ ಮೊನ್ನೆಯವರೆಗೂ ಯಾರೂ ಹೀಗೆ ನನ್ನ ಕಾಡಿರಲಿಲ್ಲ. ಕೂತಲ್ಲೂ ನಿಂತಲ್ಲೂ ನಿನ್ನದೇ ಗುಂಗು.ಒಲವಿನ ರಂಗು ಏನೇನೋ ಆಗ್ತಿದೆ.ನನ್ನ ಸ್ಥಿತಿ ಸವಿ ಬೆಲ್ಲ ತಿಂದ ಮೂಗನ ಸ್ಥಿತಿಯಂತಾಗಿತ್ತು. ಹೇಳಲೂ ಆಗ್ತಿಲ್ಲ ಬಿಡಲೂ ಆಗ್ತಿಲ್ಲ. ಹಿಂದೆಂದೂ ಹೀಗೇನೂ ಆಗಿರಲಿಲ್ಲ. ಮನಸಾರೆ ನಿನಗೆ ಮನಸೋಲುವ ಮನಸಾಗಿತ್ತು. ಅಚ್ಚರಿಯೆನಿಸಿದರೂ ನಿಜ ಕಣೆ. ನೀ ಬರೋ ದಾರಿಯ ಕಾಯುತ ಕುಳಿತು ಕೊಳ್ಳುವುದರಲ್ಲಿಯೂ ಅದೇನೋ ಆನಂದವಿತ್ತು. ನಿನ್ನ ನನ್ನ ಹೆಸರನು ಕೂಡಿಸಿ ಕೂಡಿಸಿ ಬರೆಯುವುದರಲ್ಲಿಯೂ, ಮೆಲ್ಲಗೆ ನಿನ್ನ ಹೆಸರು ಕರೆಯುವುದರಲ್ಲಿಯೂ ಹೇಳ ತೀರದ ಸಂತಸವಿತ್ತು.ಕಣ್ಮುಚ್ಚಿದರೂ ನೀನೇ ತೆರೆದರೂ ನೀನೇ. ನೋಡುವ ಎಲ್ಲ ಹುಡುಗಿಯರಲ್ಲೂ ನಿನ್ನನ್ನೇ ಕಾಣತೊಡಗಿದೆ. ರಾತ್ರಿ ಕನಸುಗಳ ಮಳಿಗೆಯಲ್ಲಿ ಭರಾಟೆಯೂ ನಿನ್ನದೇ.ನೀ ಸನಿಹವಿದ್ದರೆ ಸಾಕು ಹಸಿವಿಲ್ಲ. ನೀರು ನಿದಿರೆ ಬೇಕಿಲ್ಲ. ಇದೆಲ್ಲವೂ ನನಗೆ ಹೊಸತು ಹೊಸತು ಅನುಭವ. ಎಂತೆಂಥ ಚೆಲುವು ಕಣ್ಮುಂದೆ ಸುಳಿದರೂ ಒಲವು ಚಿಗುರಿಕೊಂಡಿರಲಿಲ್ಲ. ನಿನ್ನ ಮೊದಲ ಸಲ ಕಂಡಾಗಲೇ ಮನಸ್ಸು,ಕಣ್ಣು ರೆಪ್ಪೆಯಲ್ಲಿ ಭದ್ರವಾಗಿ ಮುಚ್ಚಿಡಲು ತುಸು ನಾಚುತ್ತಲೇ ಹೇಳಿತ್ತು. ಅಂದಿನಿಂದ ಮನದ ಹಾಡಿಗೆಲ್ಲ ನಿನ್ನುಸಿರೇ ರಾಗವಾಗಿತ್ತು.ರಾಣಿಯಾದೆ ನೀ ನನ್ನೆದೆಗೆ. ನನ್ನೆದೆಗೆ ನಿನ್ನೆದೆ ತಾಕುವ ಸಮಯ ಅದಾವಾಗ ಕೂಡಿ ಬರುವುದೋ ಎಂದು ಮನಸ್ಸು ಲೆಕ್ಕ ಹಾಕುವಾಗ ದೇಹವೆಲ್ಲ ಸಣ್ಣಗೆ ಕಂಪಿಸಿದ ಅನುಭವಹರೆಯದ ಎದೆಯ ಇಣುಕಿ ಹೊರೆಯ ಇಳಿಸುವ ಕಲೆ ನೀನು ಅದ್ಯಾವ ಪಾಠಶಾಲೆಯಿಂದ ಕಲಿತಿಯೋ ಗೊತ್ತಿಲ್ಲ. ಕಾರ್ಮೋಡ ಹೊತ್ತ ಮುಗಿಲಿಗಿಂತ ಮಿಗಿಲು ನಿನ್ನ ಅಮಲು. ಒಂದೇ ಒಂದು ನಿಮಿಷ ನೀ ದೂರವಾದರೂ ತಡೆದುಕೊಳ್ಳುತ್ತಿರಲಿಲ್ಲ ಹೃದಯ. ದೂರವಿರುವ ನಿನ್ನ ಹೃದಯಕ್ಕೆ ದೂರವಾಣಿಯಿಂದ ದೂರನ್ನು ಸಲ್ಲಿಸುತ್ತಿತ್ತು.ಆಗ ನೀನು ತಡ ಮಾಡದೇ ಕಣ್ಣೆದುರಲ್ಲಿ ಹಾಜರಿ ಹಾಕುತ್ತಿದ್ದೆ ಕಳ್ಳ ನೋಟದಲ್ಲಿ. ಮನೆಯಂಗಳದಲ್ಲಿ ರಂಗೋಲಿ ಬಿಡಿಸುವಾಗ ನನ್ನತ್ತ ಒಲವ ಮಿಡಿವ ನಿನ್ನ ಬಟ್ಟಲುಗಣ್ಣು ಕಂಡು ಮೈ ಮರೆತು ನಿಂತು ಬಿಡುತ್ತಿದ್ದೆ. ನಿನ್ನ ಬೆನ್ನ ಹಿಂದೆ ನಿಂತು, ತುಂಬಾ ಮುದ್ದು ಉಕ್ಕಿ ಬಂದು ತೋಳಲ್ಲಿ ಬಳಸಿ ಕೆಂಪು ಕೆನ್ನೆ ಹಿಂಡಿ ಮತ್ತುಷ್ಟು ಕೆಂಪು ಮಾಡಲು ಕಾದು ನಿಂತು ಬಿಡುತ್ತಿದ್ದೆ. ಕದ್ದು ನೋಡುವ ಕಣ್ಣಿಗೆ ಜೇನ ಹನಿ ಸವರುವ ಆಸೆ ಹೊತ್ತು ಸುಮಾರು ಹೊತ್ತು ಕಾಯುತ್ತಿದ್ದೆ. ನಿನ್ನಿಂದ ನೀನೇ ನನ್ನ ಕಾಪಾಡ ಬೇಕು ಇಲ್ಲದಿರೆ ನನಗೆ ಉಳಿಗಾಲವಿಲ್ಲ ಎಂದು ಮನಸ್ಸಲ್ಲೇ ನಿನ್ನ ಬೇಡುತ್ತಿದ್ದೆ. ಹಗಲುಗನಸಿನಲ್ಲಿ ನಾ ಮುಳುಗಿರುವಾಗ ಚೆಂದದೊಂದು ಮುಗುಳುನಗೆ ಚೆಲ್ಲಿ ನೀ ಮಾಯವಾಗಿರುತ್ತಿದ್ದೆ. ಇದು ಪ್ರತಿ ಅರುಣೋದಯದ ಪ್ರೀತಿ. ಕತ್ತಲ ರಾತ್ರಿಯ ಮರೆಸುವ ಚಂದಿರನಂತೆ ನನ್ನೆಲ್ಲ ನೋವ ಮರೆಸಿ ಬದುಕು ಚೆಂದಗಾಣಿಸಿದ ಅಧಿದೇವತೆ.ನಿನಗೆ ನನ್ನದೇನು ಕಾಣಿಕೆ? ಎಂದೆಲ್ಲ ಯೋಚಿಸಿದಾಗೆಲ್ಲ ನಿನ್ನ ಮರೆತ ಮರುಕ್ಷಣವೇ ನಾನಿಲ್ಲ ಎಂದು ಉಸುರುತ್ತಿತ್ತು ಮನವೆಲ್ಲ.ಈಗೀಗ ಹೊಸದೊಂದು ಜನುಮ ಪಡೆದಂಥ ಖುಷಿ ಈ ಪ್ರಾಣ ನಿನ್ನ ಹೆಸರಲ್ಲೇ ಇದೆ. ಈ ದೇಹವೂ ನಿನ್ನದೇ ಕೈ ವಶ. ಪ್ರಾಣ ಹೋದರೂನೂ ನಾ ನಿನ್ನವನು ನೀ ನನ್ನವಳು ಎಂಬುವದಂತೂ ನೂರಕ್ಕೆ ನೂರು ನಿಜ. ನೀನೇ ಬೇಕೆನ್ನುವ ಪ್ರಾಯದ ಒಳಗಾಯ ಮಾಯ ಮಾಡುವ ಮುದ್ದಿನ ಮದ್ದು ನಿನ್ನ ಅಧರದ ಅಂಚಿನಲ್ಲಿ ಬಿಟ್ಟರೆ ಬೇರೆಲ್ಲೂ ಇಲ್ಲ. ನಿನ್ನ ಸಹವಾಸದಲ್ಲಿರುವಾಗ ಸಾವು ಬಂದರೂನೂ ನಿಮಿಷ ಕಾಯದೇ ಹರುಷದಿಂದಲೇ ಅಪ್ಪಿಕೊಂಡು ಬಿಡುವೆ. ಆದರೆ ಕೇಳದಿರು ಇಸಿದುಕೊಂಡ ಹೃದಯವನ್ನು. ಒಲವಲಿ ಒಮ್ಮೆ ಕಸಿ ಮಾಡಿದ ಹೃದಯವನು ಮರಳಿಸು ಅಂದರೆ ಜೀವ ಹಿಂಡಿದಂತಾಗುತ್ತೆ. ಜಾತಿಯ ಹೆಸರಲಿ ನಾವಿಬ್ಬರೂ ಬೇರೆಯಾಗಿ ಬಾಳದೇ ದಾರಿಯಿಲ್ಲ ಅಂದ ನಿನ್ನಣ್ಣ. ಬೀಸುವ ಗಾಳಿಗೆ, ದಾಹ ನೀಗುವ ಗಂಗೆಗೆ, ಬೆಳಕನೀವ ನೇಸರನಿಗೆ ಜಾತಿಯ ಹಂಗಿಲ್ಲ. ಒಲವ ಹಂಚಿಕೊಳ್ಳುವ ಒಲವಿನ ಹೂಗಳಿಗೆ ಅಡ್ಡಲಾಗಿ ಜಾತಿಯ ಮುಳ್ಳುಗಳೇಕೆ? ಮೇಲು ಕೀಳಿಲ್ಲ ಒಲವಿಗೆ. ವಿಶ್ವವೇ ಮಂದಿರ ಒಲವಿನೊಲವಿಗೆ.ಜಾತಿಯ ಬಿಸಾಕಿ ಬಂದು ಬಿಡು ನನ್ನೆಡೆಗೆ. ಐದಂಕಿಯ ಸಂಬಳದಲಿ ಅರಗಿಣಿಯಂತೆ ಸಾಕಿ ಸಲುಹುವೆ.ಕೂಡಿ ಬಾಳೋಣ ನನ್ನವ್ವ ಅಪ್ಪನೊಂದಿಗೆ.ಸರ ಸರ ಸರಸಕೆ ಸಲ್ಲಾಪಕೆ ಬರುವೆ ನಿನ್ನ ಹತ್ತಿರವೆ. ಅವಸರವೇ ಅಪಘಾತಕ್ಕೆ ಕಾರಣವೆನ್ನುತ ನೀ ದೂರ ತಳ್ಳುವೆ.ತಡ ಮಾಡದೇ ಹ್ಞೂಂ ಅನ್ನು ಜೊತೆಗಾತಿಯಾಗಲು. ಸಂದೇಹ ಬೇಡ ಇನ್ನು ಬದುಕೆಲ್ಲ ರಾಣಿಯಂತೆ ಹಾಯಾಗಿ ಬಾಳುವೆ ಸೊಗಸಾಗಿ.ನನ್ನ ಜೊತೆಯಾಗಿ. ಒಳಗೊಳಗೆ ಮನವು ಕಾಡುತಿದೆ. ಮನ ಬಿಚ್ಚಿ ಹೇಳಿ ಬಿಡು ಒಮ್ಮೆ ಮನದಾಸೆಯ ಮನವು ಕೇಳುತಿದೆ. ನಿನ್ನ ತನುವ ಬೇಡುತಿದೆ.ಗಂಟೆಯ ಲೆಕ್ಕವಿಲ್ಲದೆ ಗಂಟೆಗಟ್ಟಲೇ ನಿನ್ನದೇ ಮಾತು ಕತೆ ಗೆಳೆಯರ ಮುಂದೆ. ಇಳಿ ಬಿಟ್ಟ ನಿನ್ನ ನಾಗರ ಹಾವಿನ ಜಡೆಗೆ ತಣ್ಣನೆ ಬೆಳದಿಂಗಳಲಿ ಹೂ ಮುಡಿಸುವಾಸೆ. ತೋರ ಬೆರಳ ತುದಿ ಸಾಕು ನಂಗೆ ನಿನ್ನೊಲವಿನ ಗುಂಗು ಹಿಡಿಸೋಕೆ. ಚಳಿ ತಡೆಯಲಾಗುತ್ತಿಲ್ಲ ಚೆಲುವೆ. ಹೊದ್ದ ಹೊದಿಕೆ ಸರಿಸಿ ನುಗ್ಗಿ ಬಿಡು ಒಳಗೆ. ಹೊದಿಕೆ ಹೊಂದಿಸಿಕೊಳ್ಳುತ್ತೆ ನಿನ್ನ ನನ್ನೊಳಗೆ. ಸತಾಯಿಸದೇ ಬಂದು ಬಿಡು ಬೇಗ.ಕಾಯುತಿರುವೆ ನಿನಗಾಗಿ ಜರ್ಝರಿತ ಬಂಡೆಗಲ್ಲಿನ ಮೇಲೆ ಕೂತು ಅರಿಷಿಣ ಕೊಂಬಿನ ದಾರ ಹಿಡಿದು. ಹೆದರದಿರು ಗೆಳತಿ ಬಿಡದಂತೆ ನಾ ಹಿಡಿವೆ ನಿನ್ನ ಕೈಯನು! ಚೆಲುವೆ ಚೆಲ್ಲುವೆ ಹಿಡಿ ಒಲವನು!!ಇತಿನಿನ್ನೊಲವಿನ ಚೆಲುವ

ಲಹರಿ Read Post »

ಇತರೆ

ಮಕ್ಕಳ ವಿಭಾಗ

ಮಕ್ಕಳ ಗೀತೆ ಮಂಜುಳಾ ಗೌಡ ಬನ್ನಿರಿ ಬನ್ನಿರಿ ಗೆಳೆಯರೆಶಾಲೆಗೆ ಹೊಗೋಣವಿದ್ಯೆಬುದ್ದಿ ಕಲಿತು ನಾವುಜಾಣರಾಗೋಣ. ಹೂವುಗಳಂತೆ ನಾವೆಲ್ಲನಗುತ ಅರಳೋಣಅರಳಿ ನಿಂತು ಕೀರ್ತಿಯಪರಿಮಳ ಹರಡೋಣ. ಪಾಠವ ಕಲಿಯೋಣನಾವು ಆಟವ ಆಡೋಣಪಾಠವ ಕಲಿತು ಆಟವ ಆಡಿನಕ್ಕು ನಲಿಯೋಣ. ಹಕ್ಕಿಯಂತೆ ಹಾರಾಡೋಣದುಂಬಿಯಂತೆ ಝೇಂಕರಿಸೋಣನವಿಲಿನಂತೆ ನರ್ತಿಸೋಣಕೋಗಿಲೆಯಂತೆ ಹಾಡೋಣ. ಕಥೆಗಳ ಹೆಳೋಣ ನಾವುನೀತಿಯ ತಿಳಿಯೋಣ.ರಂಗುರಂಗಿನ ಚಿತ್ರವ ಬಿಡಿಸುತಖುಷಿಯಾಗಿರೋಣ. ಪುಸ್ತಕ ಓದೋಣ ವಿಧವಿಧವಿಷಯವ ಅರಿಯೋಣ.ಜ್ಞಾನವಪಡೆದು ಸುಜ್ಞಾನಿಗಳಾಗಿದೇಶವ ಕಟ್ಟೋಣ. *******

ಮಕ್ಕಳ ವಿಭಾಗ Read Post »

ಇತರೆ

ಲಹರಿ

ನೆನಪುಗಳೇ ಮಧುರ. ಶೀಲಾ ಭಂಡಾರ್ಕರ್ ನೆನಪುಗಳೇ ವಿಚಿತ್ರ. ಒಂದಕ್ಕೊಂದು ಸಂಬಂಧ ಕೂಡಿಸಿ ಎಲ್ಲಿಂದೆಲ್ಲಿಗೋ ಎಳಕೊಂಡು ಹೋಗುವ ಪರಿಯಂತೂ ಅದ್ಭುತ. ನಮ್ಮ ಚಿಕ್ಕಪ್ಪ ಮತ್ತು ಚಿಕ್ಕಮ್ಮ ವಾರಾಂತ್ಯದಲ್ಲಿ ನಮ್ಮನೆಗೆ ಬರುವುದಿತ್ತು. ನಾವು ಚಿಕ್ಕವರಿದ್ದಾಗ ಶನಿವಾರವನ್ನು ಬಹಳ ಕಾತರದಿಂದ ಕಾಯುತಿದ್ದೆವು.ಚಿಕ್ಕಮ್ಮ ಭಾನುವಾರದ ತಿಂಡಿ, ಇಡ್ಲಿ ಅಥವಾ ಖೊಟ್ಟೆಯ ಹಿಟ್ಟನ್ನು ರುಬ್ಬುವ ಕಲ್ಲಿನಲ್ಲಿ ರುಬ್ಬಿ ಕೊಡುತಿದ್ದರು. ಆ ಉದ್ದಿನ ಹಿಟ್ಟು ರುಬ್ಬುತ್ತಾ ಅವರು ನಮಗೆ ಚಂದ ಚಂದದ ರೋಮಾಂಚಕಾರಿ ಕಥೆಗಳನ್ನು ಸೃಷ್ಠಿ ಮಾಡಿ ಹೇಳುವುದಿತ್ತು. ನಮಗದುವೇ ದೊಡ್ಡ ಫ್ಯಾಂಟಸಿಯಾಗಿತ್ತು.ಈಗಲೂ ಚಿಕ್ಕಮ್ಮನ ನೆನಪಾದ ಕೂಡಲೇ, ಹಿಂದೆಯೇ ಅವರು ಹೇಳುವ ಕಥೆಗಳು, ಉದ್ದಿನ ಹಿಟ್ಟಿನ ವಾಸನೆ, ಆ ಅಡುಗೆ ಮನೆ. ಅಲ್ಲಿ ಕೂತ ನಾವು ಎಲ್ಲವೂ ಸಿನೆಮಾ ರೀಲಿನ ಹಾಗೆ. ಹಾಡುಗಳ ಜತೆಯ ನೆನಪುಗಳಂತೂ ನಮ್ಮನ್ನು ಯಾವುದೋ ಲೋಕಕ್ಕೆ ಎಳಕೊಂಡು ಹೋಗುವುದು ಸುಳ್ಳಲ್ಲ. ಹಾಡುಗಳೆಂದರೆ ಜೀವ ನನಗೆ. ಕನ್ನಡ, ಹಿಂದಿ, ಚಿತ್ರಗೀತೆ, ಭಾವಗೀತೆ, ಶಾಸ್ತ್ರೀಯ, ಹಿಂದುಸ್ಥಾನಿ, ಕರ್ನಾಟಕಿ, ಗಜ಼ಲ್, ಠುಮ್ರಿ, ಠಪ್ಪಾ, ಸೂಫಿ, ಖವ್ವಾಲಿ ..ಯಾವುದಾದರೂ ಸರಿ. ಇಡೀ ದಿನ ರೇಡಿಯೋ ಹಾಡುತ್ತಲೇ ಇರುತಿತ್ತು. ಆಮೇಲೆ ಟೇಪ್ ರೆಕಾರ್ಡರ್ ಬಂತಲ್ಲ. ಅದನ್ನು ಹೊತ್ತುಕೊಂಡೇ ತಿರುಗುತಿದ್ದೆ. ನಾನೆಲ್ಲಿ ಹೋಗ್ತೇನೋ ಅಲ್ಲಿ. ಮತ್ತೆ.. ಯಾವುದಾದರೂ ಹಾಡು ಹಾಕುವುದಷ್ಟೇ.. ನಮ್ಮ ಮನೆಯಲ್ಲಿ ಎಲ್ಲರೂ ಸೇರಿ ನಮ್ಮ ನಮ್ಮ ರಾಗದಲ್ಲಿ ಅದಕ್ಕಿಂತ ಜೋರಾಗಿ ಹಾಡುತಿದ್ದೆವು. ಆದರೆ, ಯಾರೊಬ್ಬರೂ, ಯಾರಿಗೂ ಬಾಯಿ ಮುಚ್ಚು ಅಂತಿರಲಿಲ್ಲ. ಅದೇ ಅಭ್ಯಾಸದಂತೆ, ಈಗಲೂ.. ಮಕ್ಕಳು ಯಾವುದಾದರೂ ಹಾಡು ಹಾಕಿದರೆ, ನಾನು ಹಾಡಲು ಹೋಗಿ ಬೈಯಿಸಿಕೊಳ್ಳುತ್ತೇನೆ. ಸಿನ್ಮಾ ಹಾಡನ್ನು ಭಜನೆಯ ಹಾಗೆ ಹಾಡ್ತೇನೆ ಅಂತ ಅವರ ಕಂಪ್ಲೇಂಟ್.ಹಾಗಾಗಿ, ಕಷ್ಟ ಪಟ್ಟು ತಡೆದುಕೊಳ್ಳುತ್ತೇನೆ. ಹಾಡುಗಳ ಜತೆಗಿನ ನೆನಪಿನ ಬಗ್ಗೆ ಹೇಳುವುದಾದರೆ ತುಂಬಾ ಇದೆ. ನಮ್ಮ ಪಕ್ಕದ ಮನೆಯಲ್ಲಿದ್ದ ಲಿಲ್ಲಿಮಾಯಿ.. ಕೆಲಸ ಮಾಡಿ ದಣಿದಾಗ, ನಮ್ಮೂರ ಸೆಕೆಯ ಬೆವರಿಗೆ.. ಅವರ ಹಣೆಯ ಕುಂಕುಮ ಕರಗಿ ಮೂಗಿನ ಮೇಲೆ ಇಳಿಯುತಿತ್ತು. ಹಾಡುಗಳನ್ನು ಕೇಳಿ ಮಾತ್ರ ಗೊತ್ತಿತ್ತು. ಸಿನೆಮಾದ ದೃಶ್ಯ ಹೇಗಿತ್ತೋ ಗೊತ್ತಿಲ್ಲ. “ಕುಂಕುಮ ಹಣೆಯಲಿ ಕರಗಿದೆ” ಎನ್ನುವ ಹಾಡು ರೇಡಿಯೋದಲ್ಲಿ ಬರುವಾಗ.. ನನಗೆ ನೆನಪಾಗುವುದು ಲಿಲ್ಲಿ ಮಾಯಿ. ಮೊನ್ನೆ ತುಂಬಾ ವರ್ಷದ ನಂತರ ಆ ಹಾಡನ್ನು ಕೇಳಿದಾಗ, ಮತ್ತೆ ಲಿಲ್ಲಿ ಮಾಯಿ, ಅವರ ಬಿಡುವಿರದ ಕೆಲಸಗಳು, ಅವರ ಮಕ್ಕಳು, ಅವರ ಅಮ್ಮ. ಎಲ್ಲರೂ ಬಂದರು ಹಿಂದೆ ಹಿಂದೆ. “ಬೆಸುಗೆ .. ಲಲಲಲಾ,… ಬೆಸುಗೆ” ಹಾಡು ತುಂಬಾ ಚಂದ.ಇಷ್ಟದ ಹಾಡು.ಆದರೆ ಒಮ್ಮೆ ಯಾವುದೊ ಪಾತ್ರೆ ತೂತಾಗಿದೆ ಎಂದು ಅಮ್ಮ ಇದಕ್ಕೆ ಬೆಸುಗೆ ಹಾಕಿ ತರಬೇಕು ಅಂದಿದ್ರು.ದೊಡ್ಡ ಹಿತ್ತಾಳೆಯದೋ, ತಾಮ್ರದ ಪಾತ್ರೆ ಅದು‌.ಅಲ್ಲಿಂದ ಆಮೇಲೆ.. ಬೆಸುಗೆ ಹಾಡು ಬಂದರೆ ಸಾಕು.. ನನಗೆ ರಾಶಿ ರಾಶಿ, ದೊಡ್ಡ, ಸಣ್ಣ ಹಿತ್ತಾಳೆ, ತಾಮ್ರ, ಎಲ್ಯೂಮಿನಿಯಮ್ ಪಾತ್ರೆಗಳ ನಡುವೆ ಬೆಸುಗೆ ಹಾಕಲು ಚಿಕ್ಕದೊಂದು ಸ್ಟೂಲ್ ಮೇಲೆ ಕೂತ ಸೋಜ಼ಾ ಮತ್ತು ಅವರ ಅಂಗಡಿಯೇ ಕಣ್ಣ ಮುಂದೆ ಬರುವುದು. ಇನ್ನೊಂದು, ಹಿಂದಿ ಹಾಡು.“ತೇರೆ ಘರ್ ಕೆ ಸಾಮನೆ, ಎಕ್ ಘರ್ ಬನಾವುಂಗಾ..” ನನಗಾಗ ಪ್ರತೀ ಸಲ ಅನಿಸುವುದು. ಯಾರಾದರೂ ಇದೇ ರೀತಿ ನನಗಾಗಿ ಹಾಡಿದರೆ, ನಮ್ಮ ಮನೆಯ ಮುಂದೆ ಎಲ್ಲಿ ಮನೆ ಕಟ್ಟಿಸಬಹುದು? ನಮ್ಮ ಅಂಗಳದೊಳಗೋ?ಎದುರಿಗಿದ್ದಿದ್ದು, ರೈಲ್ವೇ ಹಳಿ. ಏನು ಮಾಡ್ತಾನಪ್ಪಾ ಅವನು?..ಅಥವಾ ಈ ಹಾಡೇ ಬೇಡ ಅಂತ ಬೇರೆ ಯಾವುದನ್ನು ಹುಡುಕಬಹುದು.? ಇತ್ತೀಚೆಗೆ ಊರಿಗೆ ಹೋಗುವಾಗ ಹಳೆ ಹಾಡುಗಳನ್ನು ಒಂದಿಷ್ಟು, ಪೆನ್ ಡ್ರೈವ್‍ಗೆ ಹಾಕಿ ತಗೊಂಡು ಹೋಗಿದ್ದೆ. ಪ್ರತಿಯೊಂದು ಹಾಡು ಕೇಳುವಾಗಲೂ ಹಳೆಯ ನೆನಪುಗಳು ಬಂದು ಆ ಕಾಲಕ್ಕೆ ಕೊಂಡೊಯ್ದವು. **********

ಲಹರಿ Read Post »

ಇತರೆ

ಪ್ರಸ್ತುತ

ಜಪಾನಿನ ಕಾವ್ಯ ಪ್ರಕಾರ ತಂಕಾ, ಕನ್ನಡದ ಅಂಗಳದಲ್ಲಿ ಮನುಷ್ಯ ಭಾವನಾ ಜೀವಿ. ತನ್ನ ಭಾವನೆಗಳ ಅಭಿವ್ಯಕ್ತಿಗೆ ತನಗೆ ಅನುಕೂಲವಾದ ಭಾಷೆಯನ್ನು ಬಳಸಿಕೊಳ್ಳುತ್ತಾನೆ. ಅದುವೇ ಮುಂದೆ ಸಾಹಿತ್ಯದ ರೂಪ ಪಡೆಯಿತು. ಸಹೃದಯರಿಗೆ ಭಾಷೆಯ ಹಂಗು ಇರುವುದಿಲ್ಲ. ಅಂತೆಯೇ ಅವರು ತಮ್ಮ ಹೃದಯಕ್ಕೆ ಸ್ಪಂದಿಸುವ ಸಾಹಿತ್ಯದ ಕಡೆಗೆ ವಾಲುತ್ತಾರೆ. ಅದಕ್ಕೆ ಭಾಷಾಂತರವೂ ಒಂದು ವರವಾಗಿದೆ. ಆ ಕಾರಣಕ್ಕಾಗಿಯೇ ಎಲ್ಲಿಯೊ ಇರುವ ಜಪಾನಿನ ಹಲವು ಸಾಹಿತ್ಯ ಪ್ರಕಾರಗಳು ಕನ್ನಡಿಗರ ಮನಗೆದ್ದು, ಸ್ವತಂತ್ರವಾಗಿ ಕನ್ನಡದಲ್ಲಿಯೆ ಕೃಷಿ ಆರಂಭಿಸಿವೆ. ಅವುಗಳಲ್ಲಿ ಹೈಕು, ತಂಕಾ… ಮುಂಚೂಣಿಯಲ್ಲಿವೆ. ಭಾಷಾಂತರದ ಕಾರಣವಾಗಿ ಸಾಹಿತ್ಯ ಪ್ರಕಾರಗಳನ್ನು ಹಲವು ರೀತಿಯಲ್ಲಿ ಗುರುತಿಸಲಾಗುತ್ತಿದೆ. ಉದಾಹರಣೆಗೆ ತಂಕಾ..ಇದನ್ನು ಟಂಕಾ, ತಾಂಕಾ, ಟ್ಯಾಂಕಾ… ..ಎಂತಲೂ ಕರೆಯಲಾಗುತ್ತಿದೆ. ಇದು ಜಪಾನ್ ದಲ್ಲಿ ಏಳನೆಯ ಶತಮಾನದಲ್ಲಿಯೇ ಪ್ರವರ್ಧಮಾನದಲ್ಲಿತ್ತು. ಇದು ಎಷ್ಟು ಜನಪ್ರಿಯವಾಗಿತ್ತು ಎಂದರೆ ಅಂದಿನ ಜಪಾನಿನ ಇಂಪೀರಿಯಲ್ ನ್ಯಾಯಾಲಯದ ಗಣ್ಯರು ‘ತಂಕಾ’ ಕವನ ಸ್ಪರ್ಧೆಗಳಲ್ಲಿ ಭಾಗವಹಿಸುತಿದ್ದರಂತೆ…!!‘ಚಕಾ’ ಎನ್ನುವ ಉದ್ದನೆಯ ಸಾಹಿತ್ಯ ಪ್ರಕಾರವನ್ನು ತುಂಡರಿಸಿ ‘ತಂಕಾ’ ಸಾಹಿತ್ಯ ಪ್ರಕಾರ ಹುಟ್ಟಿಕೊಂಡಿದೆಯೆಂದು ಜಪಾನಿನ ಕವಿ ಮತ್ತು ವಿಮರ್ಶಕ ಮಸೋಕಾ ಶಿಕಿ ಅವರು ಹೇಳುತ್ತಾರೆ. ಇದು ಮೂವತ್ತೊಂದು ಉಚ್ಚರಾಂಶಗಳನ್ನು ಹೊಂದಿದ್ದು, ಮುರಿಯದ ಒಂದೇ ಸಾಲಿನಲ್ಲಿ ಬರೆಯಲಾಗುತಿತ್ತು. ಮುಂದೆ ಇಂಗ್ಲೀಷ್ ಭಾಷಾಂತರಗಳಲ್ಲಿ ಐದು ಸಾಲಿನ ರೂಪವನ್ನು ಪಡೆಯಿತು. ಮೊದಲನೆಯ ಮತ್ತು ಮೂರನೆಯ ಸಾಲುಗಳು ಐದು ಉಚ್ಚರಾಂಶ/ ಅಕ್ಷರಗಳನ್ನು ಹೊಂದಿರುತ್ತದೆ. ಇನ್ನೂ ಎರಡನೆಯ, ನಾಲ್ಕನೆಯ ಮತ್ತು ಐದನೆಯ ಸಾಲುಗಳು ಏಳು ಉಚ್ಚರಾಂಶ/ ಅಕ್ಷರಗಳನ್ನು ಹೊಂದಿರುತ್ತದೆ. ಇದಕ್ಕೆ ಕೆಲವು ಉದಾಹರಣೆಗಳನ್ನು ನೋಡಬಹುದು.. ಅಕಿ-ಸುಕೆ ಯವರ ಪ್ರಸಿದ್ಧ ತಂಕಾ ಪ್ರಕೃತಿಯ ಸುಂದರ ಚಿತ್ರಣವನ್ನು ನೀಡುತ್ತದೆ.“ನೋಡು, ಮಾಗಿಯ ಮಾರುತ ಹೇಗೆ ಓಡಿಸುತ್ತಿದೆ ಮೋಡಗಳನ್ನು ಎಡ ಬಲಕ್ಕೆ ; ಎಡಕಿನಿಂದ ಚಂದಿರ ಇಣುಕುತ್ತಾನೆ ಕಿರಣಗಳಿಂದ ಓಡಿಸುತ್ತಾ ರಾತ್ರಿಯ ಕತ್ತಲನು”ಕ್ರಿ.ಶ.670 ಮತ್ತು ಕ್ರಿ. ಶ.1235 ರ ಮಧ್ಯದ 565 ವರ್ಷಗಳಲ್ಲಿಯ ಅನುಪಮ ಕವನಗಳನ್ನು ಆಯ್ದು ಕ್ರಿ.ಶ. 1235 ರಲ್ಲಿ ನೂರು ಜನರ, ನೂರು ಕವನಗಳನ್ನು ಸಂಪಾದಿಸಿ ಪ್ರಕಟಿಸಿರುವುದು ಸದೈಯೋ ರುಜಿವಾರ ರವರ ಅಮೋಘ ಸಾಧನೆಯೆಂಬುದು ತಿಳಿದು ಬರುತ್ತದೆ. ಇದನ್ನೇ ಮುಂದೆ ವಿಲಿಯಂ ಪೋರ್ಟರ್ ರವರು ಇಂಗ್ಲೀಷಿಗೆ ತರ್ಜುಮೆ ಮಾಡಿದ್ದಾರೆ. ಈ ಕೃತಿಗಳು ಇಂದಿಗೂ ಓದುಗರನ್ನು ಸೆಳೆಯುತ್ತಿವೆ..!ಪ್ರಣಯದ ಆರಂಭದಲ್ಲಿ ಈ ತಂಕಾಗಳು ಕೋಮಲವಾಗಿರುತ್ತವೆ. ಇಬ್ಬರು ಪ್ರೇಮಿಗಳು ಒಟ್ಟಿಗೆ ಇರಲು ರಾತ್ರಿಯಲ್ಲಿ ನುಸುಳುತ್ತಾರೆ ಮತ್ತು ಮರುದಿನ ಬೆಳಿಗ್ಗೆ ಪರಸ್ಪರ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಈ ತಂಕಾಗಳನ್ನು ಬಳಸುತಿದ್ದರು.ಜಪಾನಿನ ಸಂಸ್ಕೃತಿಯಲ್ಲಿ ತಂಕಾ ಪ್ರಮುಖ ಸಾಹಿತ್ಯ ರೂಪವಾಗಿದೆ. ಈ ತಂಕಾಗಳು ಭಾವನಾತ್ಮಕವಾಗಿ ಓದುಗನ ಕಲ್ಪನೆಗೆ ಗರಿ ಕಟ್ಟುವಂತೆ ಇರುತ್ತವೆ. ಪ್ರಾಸ, ಲಯ ಇಲ್ಲಿ ಇರುವುದಿಲ್ಲವಾದರೂ ಶ್ಲೇಷೆ ಇರುತ್ತದೆ. ಪದಗಳ ಪರ್ಯಾಯ ಅರ್ಥಗಳೊಂದಿಗಿನ ಆಟಗಳು ಇಲ್ಲಿ ಇರುತ್ತವೆ. ಇದರಲ್ಲಿ ಚೀನಿ ಪದಗಳ ಪ್ರಭಾವವಿಲ್ಲ, ಅಪ್ಪಟ ಜಪಾನಿನ ಭಾಷೆಯ ಬಳಕೆಯಾಗಿದೆ. ಜನಜೀವನದ ಸಣ್ಣಪುಟ್ಟ ದೃಶ್ಯಗಳು ತಂಕಾಗಳಾಗಿವೆ. ಇಲ್ಲಿ ರಕ್ತಪಾತ, ಅಂಧಕಾರ, ಅಪರಾಧ, ಭೂಗತ ಜಗತ್ತು, ಮೋಸ, ಕಪಟತನ, ಅತಿರೇಕದ ಭಾವ, ವಿಜೃಂಭಣೆ… ಯಾವುದು ಇರುವುದಿಲ್ಲ. ಹೃದಯಕ್ಕೆ ಮುದ ನೀಡುವಂತಿರುತ್ತವೆ. ಕವಿತೆಯ ಶಕ್ತಿ ಇರುವುದು ಕಾವ್ಯದ ನಿರ್ವಾತದಲ್ಲಿ. ಶೂನ್ಯದಿಂದ ಸಂಪಾದನೆಯೆಡೆಗೆ ಸಾಗುತ್ತಿರುತ್ತದೆ. ಇಬ್ಬರು ವ್ಯಕ್ತಿಗಳ ಅಥವಾ ಎರಡು ಚಿತ್ರಗಳು ಒಂದಕ್ಕೊಂದು ಭೇಟಿಯಾದಾಗ ಮೂಡುವ ಒಂದು ಕ್ಷಣದ ಭಾವವೇ ‘ತಂಕಾ’ ಕ್ಕೆ ಜನ್ಮ ನೀಡುತ್ತದೆ. ಮೌನದ ಘಳಿಗೆಯಲ್ಲಿ ಉದಯಿಸಿದ ಕವಿತೆಯೊಂದು ಹೀಗಿದೆ.“ಎರಡು ಎ.ಎಂನಾನು ನನ್ನ ಮಲಗುವ ಕೋಣೆ ಬಾಗಿಲು ತೆರೆದಿದ್ದೇನೆಬಿಳಿ ಬೆಕ್ಕು ಓಡಿ ಹೋಯಿತುಕ್ಲಾಂಗಿಂಗ್ ಪತನದಿಂದ ಬೆಚ್ಚಿ ಬಿದ್ದಿದೆಸತ್ಕಾರದ ಜಾರ್ನ್ ಲೋಹದ ಮುಚ್ಚಳದಲ್ಲಿ”ಇದು ತುಂಬಾ ಪ್ರಮುಖವಾದ ತಂಕಾ. ಇದರಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವಿದೆ. ಇಲ್ಲಿಯ ಮೂರನೆ ಸಾಲನ್ನು “ಪಿವೋಟ್” ಎನ್ನುವರು. ಅಂದರೆ ಮಹತ್ವದ ತಿರುವು ಎಂದಾಗುತ್ತದೆ. ಇದು “ತಂಕಾ” ವನ್ನು ಎರಡು ವಿಭಿನ್ನ ವಿಭಾಗಗಳಾಗಿ ವಿಂಗಡಿಸುತ್ತದೆ. ಈ ತಂಕಾದಲ್ಲಿ ‘ಬಿಳಿ ಬೆಕ್ಕು ಓಡಿ ಹೋಯಿತು’ ಎಂಬ ಮೂರನೆಯ ಸಾಲು ತಂಕಾವನ್ನು ವಿಭಾಗಿಸಿ ಪ್ರತ್ಯೇಕ ಅರ್ಥವನ್ನು ನೀಡುತ್ತದೆ..!ಇಷ್ಟೆಲ್ಲ ಗಮನಿಸಿದಾಗ ನಮಗೆ ಒಂದು ಅಂಶ ತುಂಬಾ ಕಾಡುತ್ತದೆ. ‘ಈ ತಂಕಾ ಎಂಬ ಜಪಾನಿನ ಕಾವ್ಯ ಪ್ರಕಾರ ನಮಗೆ ಇಷ್ಟವಾಗುತ್ತಿರುವುದು ಯಾಕೆ’ ಎಂಬ ಪ್ರಶ್ನೆ. ಅದಕ್ಕೆ ನಾವು ಹಲವು ಕಾರಣಗಳನ್ನು ಹುಡುಕಬಹುದು. ನಮ್ಮ ಗೌತಮ ಬುದ್ಧ ಅವರನ್ನು ಜಪಾನಿನ ಜನರು ಸ್ವೀಕರಿಸಿದ್ದು, ಭಾರತೀಯರಂತೆ ಅವರೂ ಕೈ ಜೋಡಿಸಿ ನಮಸ್ಕರಿಸುವುದು, ನಮ್ಮಂತೆಯೇ ಅವರೂ ಕೂಡ ಸಂಪ್ರದಾಯಿಕ ಮನಸ್ಥಿತಿ ಹೊಂದಿರುವುದು… ಇವೆಲ್ಲ ಕಾರಣಗಳು ಆಗಿರಬಹುದು…!!ಇಲ್ಲಿಯವರೆಗೆ ನಾವು ಜಪಾನಿನ ತಂಕಾಗಳ ಬಗ್ಗೆ ಮಾಹಿತಿ ಹಂಚಿಕೊಂಡೆವು. ಇನ್ನೂ ಕನ್ನಡದ ಕೆಲವು ತಂಕಾಗಳನ್ನು ಅಧ್ಯಯನಕ್ಕಾಗಿ ಗಮನಿಸಬಹುದು. ಸ್ಮಶಾನದಲ್ಲಿಪಿಂಡ ತಿನ್ನೋರ ನೋಡಿಗೋರಿಯಲ್ಲಿಯಶವ ವೇದನೆಯಲ್ಲಿಕಿಲ ಕಿಲ ನಗ್ತಿತ್ತು .. ಸಾವಿಗೆ ಎಲ್ಲಿಮಾನದಂಡ, ಜೀವಕ್ಕೆಎಲ್ಲಿದೆ ನ್ಯಾಯ;ಬಾಳ ತಕ್ಕಡಿಯಲ್ಲಿಎಲ್ಲವೂ ಅಯೋಮಯ..! ಬುದ್ಧಿವಂತರುಸಾಕಷ್ಟು ಇರುವರುಸಮಾಜದಲ್ಲಿ ;ಹೃದಯವಂತರಿಗೆಹುಡುಕುತಿದೆ ಇಂದು ಬಿಡುವು ಇಲ್ಲಎನ್ನುವ ವ್ಯಕ್ತಿಗಳಸ್ವತ್ತಲ್ಲ ಕಾಲಪಾದರಸದಂತದ್ದುಚಲನೆಗೆ ಸ್ವಂತದ್ದು ನಂಬಿಕೆ ಜೀವತೆಗೆಯುವ ಸಾಧನಆಗಬಾರದುಬಾಳು ಮುನ್ನಡೆಸುವದಾರಿದೀಪ ಆಗಲಿ ಗೌರವಿಸುವಕಲೆ ಹೃದಯದಲ್ಲಿಮೂಡಿರುತ್ತದೆ;ಪಡೆದವರಿಗಿಂತಕೊಟ್ಟವರು ತೃಪ್ತರು.. ಕತ್ತಲೆಂದಿಗೂಅಮಂಗಳವಲ್ಲಯ್ಯನಮ್ಮ ಬಾಳಿಗೆಅದುವೇ ದೀಪವಾಗಿಮುನ್ನಡೆಸುವುದಯ್ಯ ಮಹಾಭಾರತಓದಿ ನೋಡಿ, ಬದುಕಿನಏರಿಳಿತವುಹೃದಯದಿ ಇಳಿದುದಾರಿ ತೋರಿಸುತ್ತದೆ.. ******* ಡಾ. ಮಲ್ಲಿನಾಥ ಶಿ. ತಳವಾರ

ಪ್ರಸ್ತುತ Read Post »

You cannot copy content of this page

Scroll to Top