ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಥಾಂಕ್ಸ್ ಎಂದರೆ ಸಾಕೇ

ಲೇಖನ ಥಾಂಕ್ಸ್ ಎಂದರೆ ಸಾಕೇ ಶಾಂತಿವಾಸು ನನಗೆ ನಮ್ಮಪ್ಪ (ನಾವು ನಮ್ಮಪ್ಪನನ್ನು ಅಣ್ಣ ಅಂತಾನೇ ಕರೀತಿದ್ದಿದ್ದು) ಏನು ಅಂತ ಅರ್ಥವಾಗಿದ್ದು, ನಾನು ಮದುವೆ ಆದ ಮೇಲೇನೆ. ನನ್ನ ಮದುವೆಯಾದ ನಂತರ ಮೊದಲ ಸಲ ಅತ್ತೆ ಮನೆಗೆ ಹೊರಡಿಸಲು ಕೆಲವರು ಹಾಗೂ ಕರೆದುಕೊಂಡು ಹೋಗಲು ಬಂದ ನೆಂಟರು ಮನೆ ತುಂಬಾ ತುಂಬಿರುವಾಗ, ನಮ್ಮಪ್ಪ ಬಚ್ಚಲುಮನೆಯ ಒಳಗೆ ಸೇರಿಕೊಂಡು ಚಿಲಕ ಜಡಿದು ಕಿರಿಚಿ ಕಿರಿಚಿ ಅತ್ತಿದ್ದನ್ನು ಕಂಡು ಎಲ್ಲರಿಗೂ ಪರಮಾಶ್ಚರ್ಯ. ನಮ್ಮಪ್ಪನ ಹೃದಯದಲ್ಲಿಯೂ ಪ್ರೀತಿ ಎಂಬ ಒರತೆ ಜಿನುಗುತ್ತದೆ ಎಂದು ಎಲ್ಲರಿಗೂ ಗೊತ್ತಾಗಿದ್ದೇ ಆಗ. ಪಟಪಟ ಮಾತು, ಹಠ ಹಾಗೂ ಅತಿ ಶುದ್ಧತೆಯಿದ್ದ ನಾನು ನಮ್ಮಪ್ಪನ ಕಣ್ಣಲ್ಲಿ “ಸಾಧಕಿ”. ಅತೀ ಕೋಪ ಇದ್ದ ನಮ್ಮಪ್ಪ ಬಹಳ ಶಿಸ್ತಿನ ಸಿಪಾಯಿಯಾಗಿದ್ದರು. ಮನೆಗೆ ಯಾರೇ ಬಂದರೂ ಯಾರೂ ಮುಖ ಹೊರಹಾಕುವಂತಿರಲಿಲ್ಲ. ನನಗೊಬ್ಬಳಿಗೆ ಮಾತ್ರ ಅದರಲ್ಲೆಲ್ಲ ಸ್ವಲ್ಪ ಸಡಿಲತೆಯಿತ್ತು. ಬಂದವರೆದುರು ಮಾತು, ಡಾಕ್ಟರ್ ರಾಜ್ ಕುಮಾರ್ ಪರ ವಾದ, ಚರ್ಚೆ ಮಾಡುವುದಕ್ಕೂ ಮತ್ತು ಅವರಿಗೆಲ್ಲಾ ತಿಂಡಿ ಕಾಫಿ ಕೊಡುವುದಕ್ಕೂ ನನಗೆ ಮಾತ್ರ ಅವಕಾಶವಿತ್ತು. ನಾವು ನಾಲ್ಕು ಜನ ಅಕ್ಕತಂಗಿಯರು ಕೂರವ, ನಿಲ್ಲುವ ಭಂಗಿಗಳೆಲ್ಲ ಅವರು ಮಾಡಿದ ನಿಯಮಗಳ ಪಟ್ಟಿಯಲ್ಲಿದ್ದವು. ಮಕ್ಕಳು ಕೂರುವಂಥ ಪುಟ್ಟ ಪುಟ್ಟ ಕಬ್ಬಿಣದ ಕಟ್ಟಿನಲ್ಲಿ ಬಿಗಿದ ಪ್ಲಾಸ್ಟಿಕ್ ವೈರಿನ ಮೂರು ಖುರ್ಚಿಗಳನ್ನು ತಂದು ಅದರಲ್ಲಿಯೇ ಕೂರಲು ನಿರ್ಭಂಧ ಹೇರಿದ್ದರು. ನನಗೆ ಬುದ್ದಿ ಬಂದ ಮೇಲೆ (ನನಗೆ ಪ್ರಶ್ನೆ ಕೇಳುವಷ್ಟು ಬುದ್ದಿ ಬಂದದ್ದು ನನ್ನ 20 ವರ್ಷ ವಯಸ್ಸಿನ ನಂತರ) ಕೇಳಿದ್ದೆ “ಯಾಕಣ್ಣ ನಮ್ಮನ್ನ ಯಾವಾಗಲೂ ಪುಟ್ಟ ಖುರ್ಚಿ ಮೇಲೆ ಕೂರಿಸ್ತಿದ್ದೆ” ಅಂತ. ಅದಕ್ಕವರು “ಜಾಗ ದೊಡ್ಡದಿದ್ರೂ ಚಿಕ್ಕದಾಗಿ ಕೂತ್ಕೋಳ್ಳೋದನ್ನು ಕಲಿಸೋಕ್ಕೆ” ಎಂದಿದ್ದರು. ಯಾರಿಗೂ ಏನೂ ಅಲ್ಲವೆನಿಸುವ, ಅಷ್ಟು ಸಣ್ಣ ವಿಷಯ ಕೂಡಾ ನನ್ನ ತಂದೆಯ ಜೀವನದಲ್ಲಿ ಶಿಸ್ತಿನ ಭಾಗವಾಗಿತ್ತು. ನನ್ನ ತಂದೆಯ ಕೊನೇ ದಿನ ನನ್ನನ್ನು ಮನೆಗೆ ಕರೆಸಿಕೊಂಡು, ಪಕ್ಕದಲ್ಲೇ ರಾತ್ರಿ ಪೂರ್ತಿ ಕೂಡಿಸಿಕೊಂಡು ತಾನು ನಿದ್ದೆ ಮಾಡಿದ್ದರು. ಕೊನೆಯ ಊಟ ನನ್ನ ಕೈಯಿಂದ ಮಾಡಿ, ತಲೆಮೇಲೆ ಕೈಯಿಟ್ಟು ಆಶೀರ್ವಾದ ಮಾಡಿ, ದೀರ್ಘವಾದ ಉಸಿರಿನೊಂದಿಗೆ ಹಾಗೇ ಹೊರಟುಬಿಟ್ಟರು. ನಾನು ತಣ್ಣಗಾದ್ರೆ ತಿನ್ನಲ್ಲ ಅಂತ ಪ್ರತಿದಿನ ಬೇಸರ ಮಾಡದೆ, ಎರಡು ಕಿಲೋಮೀಟರ್ ದೂರವಿದ್ದ ನನ್ನ ಶಾಲೆಯ ತನಕ ನಡೆದು ಊಟ ತಂದುಕೊಟ್ಟು, ಮತ್ತೆರಡು ಕಿಲೋಮೀಟರ್ ವಾಪಸ್ ಮನೆಗೆ ಬರುತ್ತಿದ್ದ ನನ್ನಪ್ಪನಿಗೋ, ತಾತನಿಗೋ ನಾನೆಂದೂ ಥಾಂಕ್ಸ್ ಹೇಳೇ ಇಲ್ಲ. ನನಗೆ ಊಟದ ಡಬ್ಬಿ ಕೊಟ್ಟುಬಂದು ನಮ್ಮಪ್ಪ, ಊಟ ಮಾಡಿ ಎರಡು ಕಿಲೋಮೀಟರ್ ದೂರದ ಕಾರ್ಖಾನೆಗೆ ಎರಡನೇ ಪಾಳಿಯ ಕೆಲಸಕ್ಕೆ ನಡೆದು ಹೋಗಬೇಕಿತ್ತು. ಅಲ್ಲಿ ಮೆಷಿನಿನ ಮುಂದೆ ನಿಂತು ಕೆಲಸ ಮಾಡಿ, ಮಧ್ಯರಾತ್ರಿ 12.30ಗೆ ಮನೆಗೆ ನಡೆದು ಬರುತ್ತಿದ್ದ ನನ್ನಪ್ಪನ ಕಷ್ಟಗಳು, ಪ್ರೀತಿ ನನಗೆ ತಿಳಿದದ್ದು ಮಾತ್ರ ಗಂಡನ ಮನೆ ಮೆಟ್ಟಿದ ನಂತರವೆ. ನಾಲ್ಕು ಹೆಣ್ಣು ಮಕ್ಕಳಿಗೂ 8 ಗಂಟೆ ಒಳಗೆ ಸ್ನಾನ, ಸೀಮೆಎಣ್ಣೆ ಸ್ಟವ್ವಿನಲ್ಲಿ ತಿಂಡಿ, ಬ್ಯಾಗು ಏನೇನೋ ಅವಸ್ಥೆ ಜೊತೆಗೆ ಎಂಟು ಜಡೆ ಹೆಣಿದ ಅಮ್ಮನಿಗೂ ನಾನೆಂದೂ ಥಾಂಕ್ಸ್ ಹೇಳಲಿಲ್ಲ. ಎಳವೆಯಲ್ಲಿ ಅಂದರೆ ಇಲ್ಲಿಗೆ 45 ವರ್ಷಗಳ ಹಿಂದೆ ಬೇನೆ ಬಂದು, ಮುಚ್ಚಿಹೋದ ಕಣ್ಣಿಗೆ ಹಾಕಲು, ಕಳ್ಳರ ಕೂಪವಾಗಿದ್ದ, ಆಗಿನ ಬೆಂಗಳೂರು ಹೊರವಲಯದಲ್ಲಿದ್ದ (ಈಗ ಈ ಜಾಗವನ್ನೂ ದಾಟಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಿಕೊಂಡಿದೆ) 40 ಕ್ಯಾಂಡಲ್ ಬ್ರಿಡ್ಜ್ ಹತ್ತಿರವಿದ್ದ ಸೀಗೇ ಬೇಲಿಯ ಕೊರಡನ್ನು, ನನ್ನ ಸೋದರಮಾವನೊಡನೆ ನಡೆದೇ ಹೋಗಿ ತಂದು, ಪ್ರಾಣ ಹಾರಿಹೋಗುವಂತೆ ಊದಿದರೆ, ಬರುವ ಎಣ್ಣೆಯನ್ನು ಹಾಕಿ ಕಣ್ಣುಳಿಸಿದ ನನಪ್ಪನನ್ನು ಕಣ್ಣುಮುಚ್ಚುವ ತನಕ ಮಗುವಂತೆ ಕಾಯ್ದಿದ್ದೇನೆ. ಗಂಡ್ಯಾಕೆಂದು ಇಂದು ನಿಡುಸುಯ್ವ ಇದೇ ಜನ, ಅಂದು “ನಾಲ್ಕೂ ಹೆಣ್ಣು ಬೋಕಿಗಳೆಂದೂ, ಕೊಳ್ಳಿ ಇಡಲು ಒಬ್ಬ ಗಂಡು ಹೆರಲು ಯೋಗ್ಯತೆಯಿಲ್ಲದವಳು, ಕೊನೇ ಕಾಲದಲ್ಲಿ ನಿನಗ್ಯಾರು ಆಸರೆ” ಎನ್ನುತ್ತಾ ಮೂದಲಿಸಿ, ಹೆದರಿಸಿದಾಗೆಲ್ಲ, ಕೊರಗುತ್ತಿದ್ದ ನಮ್ಮಮ್ಮನ ಮನಸ್ಸನ್ನು ಮಾತ್ರ, ಅವರಿರುವ ತನಕವೂ ಬದಲಾಯಿಸಲಾಗದೆ ಸೋತಿದ್ದೇನೆ… ಇದುವೇ ಅಲ್ಲವೇ “ಸಹಜ ಜೀವನ” ಮಾತುಮಾತಿಗೆ ಥಾಂಕ್ಸ್ ಥಾಂಕ್ಸ್ ಅನ್ನುವುದು, ಮತ್ತು ನಮ್ಮ ಮಕ್ಕಳಿಗೆ ನಾವು ಮಾಡಲೇಬೇಕಾದ ಕರ್ತವ್ಯಕ್ಕೂ ಥಾಂಕ್ಸ್ ನಿರೀಕ್ಷಿಸುವ ಇಂದಿನ ಮನಃಸ್ಥಿತಿ ಖಂಡಿತ ಅಸಹಜ. ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ನನ್ನ ತಂದೆತಾಯಿಯರಿಗೋ ಮತ್ತು ಅವರ ಸಮವಯಸ್ಕರಿಗೋ ಈ ವಿಷಯದಲ್ಲಿ ಖಿನ್ನತೆ ಇರಲಿಲ್ಲ. ಯಾಕೆಂದ್ರೆ ಎಲ್ಲರೂ ಮಾಡುವ ಕೆಲಸವನ್ನೇ ನಾವು ಮಾಡುವುದೆಂಬ ಭಾವನೆಯಿತ್ತು. ಕುಟುಂಬಕ್ಕಾಗಿ ನಾನೇನೂ ವಿಶೇಷವಾದದ್ದನ್ನು ಮಾಡುತ್ತಿಲ್ಲ ಅನ್ನೋ ಹಾಗೆ ಹೇಳದೆ ಬದುಕಿಬಿಟ್ಟರು. ಮುಖ್ಯವಾಗಿ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ನಿರೀಕ್ಷೆಗಳೆ ಇರಲಿಲ್ಲ. ಬದಲಾದ ಪರಿಸ್ಥಿತಿಗಳು ಜೀವನದ ಸಹಜತೆಯನ್ನು ನುಂಗಿ ಖಿನ್ನತೆಯನ್ನು ಹುಟ್ಟುಹಾಕುತ್ತಿವೆ. ******************************************

ಥಾಂಕ್ಸ್ ಎಂದರೆ ಸಾಕೇ Read Post »

ಇತರೆ, ಪುಸ್ತಕ ಸಂಗಾತಿ

ವಿಮರ್ಶಾ ಲೋಕದ ದಿಗ್ಗಜ, ಜಿ.ಎಸ್. ಆಮೂರ..!

ಲೇಖನ ವಿಮರ್ಶಾ ಲೋಕದ ದಿಗ್ಗಜ ಜಿ.ಎಸ್. ಆಮೂರ..! ಜಿ.ಎಸ್. ಅಮೂರರು ನಮನಗಲಿದ್ದಾರೆ ಈಗ. ಆದರೆ ಅವರ ಸಾಹಿತ್ಯ ಕೃತಿಗಳು ಮತ್ತು ಮಾಡಿದ ಪಿ.ಎಚ್.ಡಿಯ ಸಾಹಿತ್ಯ ಸೌರಭ ನಮ್ಮ ಜೊತೆಯಲ್ಲಿ ಇದೆ. ಆಗಲಿ, ಜಿ.ಎಸ್.ಅಮೂರರಿಗೆ ಅನಂತಾನಂತ ನಮನಗಳು… ೦೮.೦೫.೧೯೨೫ ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ೪-೫ ದಶಕಗಳಿಂದಲೂ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ೧೯೨೫ ರ ಮೇ ೮ ರಂದು. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಮನೆಗೆ ತರುತ್ತಿದ್ದ ಸದ್ಭೋಧ ಚಂದ್ರಿಕಾ, ಕರ್ಮವೀರ ಮುಂತಾದ ಪತ್ರಿಕೆಗಳ ಸಂಗ್ರಹವೇ ಇದ್ದು ಇದನ್ನೂ ಓದುತ್ತಾ ಬಂದಂತೆಲ್ಲಾ ಆಮೂರರಿಗೆ ಸಾಹಿತ್ಯದಲ್ಲಿ ಆಸ್ಥೆ ಬೆಳೆಯ ತೊಡಗಿತು. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ ಆಯಿತು. ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ಕರ್ನಾಟಕ ಕಾಲೇಜಿನಿಂದ ಪಡೆದ ಬಿ.ಎ.ಆನರ್ಸ್ ಪದವಿ (೧೯೪೭) ಮತ್ತು ಮುಂಬಯಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಎಂ.ಎ. ಪದವಿ (೧೯೪೯) ಪ್ರತಿ ವರ್ಷವೂ ರ‍್ಯಾಂಕ್‌ ಪಡೆದ ವಿದ್ಯಾರ್ಥಿ ಜಿ.ಎಸ್‌ ಅಮೂರರು. ೧೯೬೧ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ `THE CONCEPT OF COMEDY’ ಮಹಾ ಪ್ರಬಂಧ ಮಂಡಿಸಿ ಪಡೆದ ಪಿ.ಹೆಚ್‌.ಡಿ. ಪದವಿ ಪಡೆದರು. ಗದುಗಿನ ತೋಂಟದಾರ್ಯ ಕಾಲೇಜಿನಲ್ಲಿ ಇಂಗ್ಲಿಷ್‌ ಅಧ್ಯಾಪಕರಾಗಿ (೧೮೬೪-೬೮) ಸೇರಿ ನಂತರ ೧೯೬೮ರಲ್ಲಿ ಔರಂಗಾಬಾದ್‌ನ ಮರಾಠವಾಡ ವಿದ್ಯಾಪೀಠದಲ್ಲಿ ಇಂಗ್ಲಿಷ್‌ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿಯೂ ನಿವೃತ್ತರಾಗುವವರೆವಿಗೂ (೧೯೮೫) ಕಾರ್ಯ ನಿರ್ವಹಿಸಿದರು..! ಮುರಾಡವಾಡ ವಿದ್ಯಾಪೀಠದಲ್ಲಿದ್ದಾಗಲೇ ೧೯೭೨-೭೩ರಲ್ಲಿ ಫುಲ್‌ಬ್ರೈಟ್‌ ಫೆಲಿಶಿಪ್‌ ಪಡೆದು ಅಮೆರಿಕದ ಕೆಲಫೋರ್ನಿಯಾ (ಸಾಂಟಾಬಾರ್ಬರ) ಹಾಗೂ ಯೇಲ್ಸ್‌ ವಿಶ್ವವಿದ್ಯಾಲಯಗಳಲ್ಲಿ ಮತ್ತು ೧೯೭೩ರಲ್ಲಿ ಬ್ರಿಟಿಷ್‌ ಕೌನ್ಸಿಲ್‌ ಸಹಾಯದಿಂದ ಇಂಗ್ಲೆಂಡ್‌ನಲ್ಲಿ – ಹೀಗೆ ಎರಡುಬಾರಿ ಸಂಶೋಧನೆಯಲ್ಲಿ ನಿರತರಾಗಿದ್ದರು. ಇವರು ಪ್ರಾಧ್ಯಾಪಕರಾಗಿದ್ದಾಗ ೧೪ ವಿದ್ಯಾರ್ಥಿಗಳು ಪಿ.ಹೆಚ್‌.ಡಿ. ಹಾಗೂ ೩ ಎಂ.ಫಿಲ್‌. ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಿಂದ ಪದವಿ ಪಡೆದಿದ್ದಾರೆ. ಇವರ ಕನ್ನಡದ ಮೊದಲ ಕೃತಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾದುದು ಮಿಲ್ಟನ್‌ ಕವಿಯ ಮೇಲೆ ಬರೆದ ‘ಮಹಾಕವಿ ಮಿಲ್ಟನ್‌’ (೧೯೬೬). ನಂತರ ಮೊದಲ ವಿಮರ್ಶಾ ಪ್ರಬಂದಗಳ ಕೃತಿ ‘ಕೃತಿ ಪರೀಕ್ಷೆ’ಯಲ್ಲಿ ಕನ್ನಡದ ಪ್ರಮುಖ ಕಾದಂಬರಿಗಳಾದ ರಾವಬಹದ್ದೂರರ ‘ಗ್ರಾಮಾಯಣ’. ಅನಂತಮೂರ್ತಿಯವರ ಸಂಸ್ಕಾರ, ಶೌರಿ; ರಾಮಾನುಜನ್‌ರವರ ‘ಹಳದಿಮೀನು’, ಶಿವರಾಮ ಕಾರಂತರರ ಬೆಟ್ಟದ ಜೀವ ಮತ್ತು ಮರಳಿಮಣ್ಣಿಗೆ ಮುಂತಾದವುಗಳ ವಿಶ್ಲೇಶಣಾತ್ಮಾಕ ಲೇಖನಗಳಿಂದ ಕೂಡಿದೆ. ಇದಲ್ಲದೆ ಹಾಸನ ರಾಜಾರಾಯರು, ಶ್ರೀರಂಗರ ಕೃತಿಗಳ ಬಗ್ಗೆ, ಕೈಲಾಸಂರವರ ಇಂಗ್ಲಿಷ್‌ ನಾಟಕಗಳ ಬಗ್ಗೆಯೂ ಇದರಲ್ಲಿ ಲೇಖನಗಳಿವೆ. ಸಮಕಾಲೀನ ಕಥೆ-ಕಾದಂಬರಿ, ಕನ್ನಡ ಕಾದಂಬರಿಯ ಬೆಳವಣಿಗೆ, ಅ.ನ. ಕೃಷ್ಣರಾಯ, ಅರ್ಥಲೋಕ ಮುಂತಾದ ಕೃತಿಗಳಲ್ಲದೇ ಬೇಂದ್ರೆಯವರ ಗಂಗಾವತರಣವನ್ನೂ ಮಧ್ಯಬಿಂದುವಾಗಿಟ್ಟುಕೊಂಡು ಕಾವ್ಯ ಹಾಗೂ ಕಾವ್ಯೇತರ ಬರಹಗಳನ್ನೂ ವಿವೇಜಿಸುವ ‘ಭುವನದ ಭಾಗ್ಯ’ ಕೃತಿ, ವ್ಯವಸಾಯ, ಕನ್ನಡ ಕಥನ ಸಾಹಿತ್ಯ: ಕಾದಂಬರಿ, ವಿರಾಟಪುರುಷ, ಸಾತ್ವಿಕ ಪಥ, ಕಾದಂಬರಿ ಸ್ವರೂಪ, ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮುಂತಾದ ೩೯ ಕೃತಿಗಳಲ್ಲದೇ ಚಿತ್ತಾಲರ ಆಯ್ದ ಕಥೆಗಳು, ಕೆ ಸದಾಶಿವ ಅವರ ಕಥಾ ಸಾಹಿತ್ಯ, ಅವಳ ಕಥೆಗಳು, ಬೇಂದ್ರೆ ಕಾವ್ಯ, ಕನ್ನಡ ಕಥಾಲೋಕ, ಶ್ರೀರಂಗ ಸಾರಸ್ವತ, ಹುಯಿಲಗೋಳ ನಾರಾಯಣರಾಯರ ಸಮಗ್ರ ಸಾಹಿತ್ಯ ಮುಂತಾದವುಗಳನ್ನು ಸಂಪಾದಿಸಿದ್ದಾರೆ. ಇಂಗ್ಲಿಷ್‌ನಲ್ಲಿ ರಚಿಸಿರುವ ಕೃತಿಗಳು– ದಿ ಕಾನ್ಸೆಪ್ಟ್‌ ಆಫ್‌ ಕಾಮಿಡಿ, ಮನೋಹರ ಮಳಗಾಂವ್‌ಕರ್, ಆದ್ಯರಂಗಾಚಾಯ್, ದಿ ಕ್ರಿಟಿಕಲ್‌ ಸ್ಪೆಕ್ಟ್ರಮ್‌, ಇಮೇಜಸ್‌ ಅಂಡ್‌ ಇಂಪ್ರೆಷನ್ಸ್‌, ಎ.ಎನ್‌. ಕೃಷ್ಣರಾವ್‌, ಕ್ರಿಯೇಷನ್ಸ್‌ ಅಂಡ್‌ ಟ್ರಾನ್ಸ್‌ ಕ್ರಿಯೇಷನ್ಸ್‌, ದತ್ತಾತ್ರೇಯ ರಾಮಚಂದ್ರಬೇಂದ್ರೆ, ಪರ್ಸೆಷನ್ಸ್‌ ಆಫ್‌ ಮಾಡರ್ನ್ ಲಿಟರೇಚರ್, ಮೊದಲಾದ ೧೪ ಕೃತಿಗಳ ಜೊತೆಗೇ ಕ್ರಿಟಿಕಲ್‌ ಎಸ್ಸೆಸ್‌ ಹ್ಯಾನ್‌ ಇಂಡಿಯನ್‌ ರೈಟಿಂಗ್‌ ಇನ್‌ ಇಂಗ್ಲಿಷ್‌, ಕಾಲೊನಿಯಲ್‌ ಕೌನ್ಷಿಯಸ್ ನೆಸ್‌ ಇನ್‌ ಕಾಮನ್‌ವೆಲ್ತ್ ಲಿಟರೇಚರ್ ಮುಂತಾದ ಆರು ಕೃತಿಗಳನ್ನೂ ಸಂಪಾದಿಸಿದ್ದಾರೆ. ಹೀಗೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿರುವುದಲ್ಲದೇ ಬೆಂಗಳೂರು, ಕರ್ನಾಟಕ ವಿಶ್ವವಿದ್ಯಾಲಯ, ಬೆನಾರಸ್‌ ಹಿಂದೂ ವಿಶ್ವವಿದ್ಯಾಲಯ, ಮೈಸೂರಿನ ಧ್ವನ್ಯಾಲೋಕ ಮುಂತಾದೆಡೆಗಳಲ್ಲಿ ಉಪನ್ಯಾಸಗಳನ್ನೂ ನೀಡಿದ್ದಾರೆ..! ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯೂ ಗೌರವಗಳಿಸಿದ್ದಾರೆ. ಇವರ ‘ಅರ್ಥಲೋಕ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಸ.ಸ.ಮಾಳವಾಡ ಪ್ರಶಸ್ತಿ; ಭುವನದ ಭಾಗ್ಯ ಕೃತಿಗೆ ಭಾರತೀಯ ಭಾಷಾ ಪರಿಷತ್‌-ಕೊಲ್ಕತ್ತಾ, ಪ್ರೊ.ವಿ.ಎಂ. ಇನಾಂದಾರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ; ಕನ್ನಡ ಕಥನ ಸಾಹಿತ್ಯ: ಕಾದಂಬರಿ ಕೃತಿಗೆ ಬಿ.ಎಚ್‌. ಶ್ರೀಧರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಇವರಿಗೆ ಸಂದಿವೆ. ಇವಲ್ಲದೆ ರಾಜ್ಯೋತ್ಸವ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ವಿಮರ್ಶಕ ರತ್ನ ಪ್ರಶಸ್ತಿ, ಅಖಿಲ ಭಾರತ ಮಾಧ್ವ ಮಹಾ ಮಂಡಲದಿಂದ ಕನ್ನಡ ಭಾಷಾ ಭೂಷಣ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ಸಂದೇಶ್‌ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ, ಪಂಪ್ರಶಸ್ತಿ, ಮಾಸ್ತಿ ಪ್ರಶಸ್ತಿಗಳು ದೊರೆತಿವೆ. ಒಂದು ಕೃತಿಯನ್ನೂ ವಿಮರ್ಶಿಸುವಾಗ ಕೃತಿಯಲ್ಲಿ ಏನಿದೆ? ಏಕಿದೆ? ಎಂದು ವಿಮರ್ಶಿಸಬೇಕೇ ವಿನಃ ಏನಿಲ್ಲ, ಏನಿರಬೇಕಿತ್ತು ಎಂದು ಹುಡುಕುವುದು ವಿಮರ್ಶಕನ  ಕೆಲಸವಾಗಬಾರದು ಮತ್ತು ವಿಮರ್ಶಕನಾದವನು ಅಂತಃ ಚಕ್ಷುಗಳನ್ನೂ ತೆರೆದು ಪೂರ್ವಾಗ್ರಹ ಪೀಡಿತನಾಗದೇ ಕೃತಿಯೊಡನೆ ಅನುಸಂಧಾನ ಮಾಡಬೇಕೆನ್ನುವುದೇ ಇವರ ಖಚಿತ ಅಭಿಪ್ರಾಯವಾಗಿದ್ದು, ವಿಮರ್ಶೆಯ ಕ್ಷೇತ್ರದಲ್ಲಿ ಹೊಸಹೊಸ ಅನ್ವೇಷಣೆಗಳನ್ನು ಮಾಡಿ ಹೊಸಹೊಸ ವಿಸ್ತೃತ ವಿಮರ್ಶಾ ವಿಧಾನಗಳನ್ನೂ ರೂಪಿಸತೊಡಗಿದ್ದರು..! ಇಂತಹ ಜಿ.ಎಸ್. ಅಮೂರ ಈಗ ನಮ್ಮನ್ನು ಅಗಲಿದ್ದಾರೆ. ಅವರಿಗಿದೋ ‘ನಮನ’ಗಳು… ************************************* ಕೆ.ಶಿವು.ಲಕ್ಕಣ್ಣವರ ***************************************************

ವಿಮರ್ಶಾ ಲೋಕದ ದಿಗ್ಗಜ, ಜಿ.ಎಸ್. ಆಮೂರ..! Read Post »

ಇತರೆ, ಜೀವನ

ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ

ಅನುಭವ ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ             ಪ್ರತಿ ಡಿಸೆಂಬರ್ ೨೨ಕ್ಕೆ ನಮ್ಮ ಶಾಲೆಯ ವಾರ್ಷಿಕೋತ್ಸವ, ಯಾವಾಗಲು ವಾರ್ಷಿಕೋತ್ಸವ ಮುಗಿದ ಬಳಿಕ ನಮಗೆ ಕ್ರಿಸ್ಮಸ್ರಜೆ. ರಜೆ ಕಳೆಯಲೆಂದೇ ಅಜ್ಜನ ಮನೆಗೆ ಹೋದೆವು. ನಮ್ಮ ಹಾಗೆ ಕ್ರಿಸ್ಮಸ್ ರಜೆ ಕಳೆಯಲು ನಮ್ಮಜ್ಜನ ದಾಯಾದಿಗಳ ಮನೆಮಕ್ಕಳೂ ಬಂದಿದ್ದರು. ಒಂದು ರೀತಿ ಮಕ್ಕಳ ಸೈನ್ಯವೇ ಸರಿ. ನಿಮ್ಮ ಶಾಲೆ ಹೇಗೆ? ನಿಮ್ಮ ಶಾಲೆಯಲ್ಲಿ ಏನೇನು ಕಲಿಸುತ್ತಾರೆ? ನಿಮಗೆ ಯಾವ ಟೀಚರ್ ಇಷ್ಟ? ಯಾರು ಹೇಗೆ ಬಯ್ಯುತ್ತಾರೆ? ಇತ್ಯಾದಿಗಳ ಚರ್ಚೆ ಮಾಡುತ್ತಿದ್ದೆವು. ರಜೆಗೆಂದು ಹೋದ ದಿನ ನಮಗೆ ಅಲ್ಲಿ ಭರ್ಜರಿ ಸ್ವಾಗತ. ನಮ್ಮಜ್ಜ ಅಜ್ಜಿಯಂತೂ ಬಸ್ ಬಳಿಯೇ ಬಂದು ನಮ್ಮ ಹೆಗಲ ಮೇಲೆ ಕೈಹಾಕಿ, ತಲೆನೇವರಿಸಿ ಕರೆದುಕೊಂಡು ಹೋದರು. ಇಂದು ನೆನಪಿಸಿಕೊಂಡರೆ ಕಣ್ಣಂಚಿನಲ್ಲಿ ನೀರು ತುಳುಕುತ್ತದೆ. ಅಣ್ಣನ ಮಕ್ಕಳು ಬರುತ್ತಾರೆಂಬ ಖುಷಿಯಲ್ಲಿ ನಮ್ಮತ್ತೆ (ಆಗಿನ್ನು ಲಗ್ನವಾಗಿರಲಿಲ್ಲ) ಗಸಗಸೆ ಪಾಯಸ ಮಾಡಿ ತಣಿಸಿ ನಮಗಾಗಿ ಕಾಯುತ್ತಿದ್ದರು. ಭರ್ಜರಿ ತಿಂಡಿತಿನಿಸುಗಳು ಅವುಗಳನ್ನು ತಿಂದ ನಮಗೆ ಊಟ ಬೇಡ ಅನ್ನಿಸಿ ಹಾಗೆ ಮಲಗಿಕೊಂಡೆವು. ನನ್ನಜ್ಜಿ ನಾವೆಲ್ಲ ಮಲಗಿದ ಮೇಲೆ ಬಂದು ಸರಿಯಾಗಿ ಹೊದಿಸಿ ತಾನೂ ಪಕ್ಕದಲ್ಲೆ ಕುಳಿತುಕೊಂಡು ಹೂ ಕಟ್ಟುತ್ತಾ “ಇವತ್ತೇನೊ ಹೊಸದು ಏನು ಗಲಾಟೆಯಿಲ್ಲ, ನಾಳೆಯಿಂದ ಇವರ ಜಗಳ ಬಿಡಿಸುವುದೇ ನನಗೊಂದು ಕೆಲಸ” ಎಂದರು. ಅದಕ್ಕೆ ಪ್ರತಿಯಾಗಿ “ಅವರು ಹೇಳಿದ್ದಕ್ಕೆಲ್ಲ ನಾನು ಹೂ ಅನ್ನಬೇಕು ಅದೊಂದು ನನಗೆ ತಾಪತ್ರಯ” ಎಂದು ಅತ್ತೆ ನಗುತ್ತಿದ್ದರು.              ಡಿಸೆಂಬರ್ ಅಂದರೆ ಚಳಿಗಾಲ ಜೊತೆಗೆ ಸುಗ್ಗಿಯ ಕಾಲವೂ ಹೌದು, ಭತ್ತ ಕೊಯ್ದು ಹೊರೆ ಕಟ್ಟಿ ಬಣವೆಗಳನ್ನು ಒಟ್ಟುತ್ತಿದ್ದ ಸೀಸನ್ ಅದು. ನಮಗೆ ಅದನ್ನು ಹೇಗೆ ಜೋಡಿಸುತ್ತಾರೆ ಎಂಬ ಕುತೂಹಲ, ಅಜ್ಜನ ಬಳಿಗೆ ಹೋಗಿ ಮೆಲ್ಲನೆ “ನಾವೂ ಬರ್ತೀವಿ ನಿಮ್ಮ ಜೊತೆಗೆ ಗದ್ದೆಹತ್ರ” ಅಂದೆವು ಒಂದೇ ಬಾರಿಗೆ “ಬನ್ನಿ ಅದಕ್ಕೇನಂತೆ” ಎಂದರು. ಆದರೆ ಅಜ್ಜಿ “ನೀವುಗಳು ಬಂದು ಅಲ್ಲೇನು ಮಾಡ್ತೀರಿ ಮನೆಲ್ಲೇ ಇರಿ” ಎಂದರು. ಪುರುಸೊತ್ತಿಲ್ಲದ ಕೆಲಸದ ನಡುವೆ ಈ ಮಕ್ಕಳ ತುಂಟಾಟ ತಡೆಯಲಾಗದು ಎಂಬ ಭಾವ ಆಕೆಯದ್ದು. ನಾವು ಅವರ ಬಳಿ ಇವರ ಬಳಿ ಹೇಳಿಸಿ ಶಿಫಾರಸ್ಸು ಮಾಡಿಸಿ ಕಡೆಗೆ ಗದ್ದೆ ಬಯಲಿಗೆ ಪ್ರಯಾಣ ಬೆಳೆಸಿದೆವು. ದಾರಿಯಲ್ಲಿ ಹೋಗುವಾಗ ನಮ್ಮ ಕೂಗಾಟ ಸ್ವಲ್ಪ ಹೆಚ್ಚೇ ಇತ್ತು ಅಜ್ಜಿ  ಆ ಕೂಗಾಟವನ್ನು ತನ್ನ ಕಣ್ಣುಗಳಿಂದಲೇ ನಿಯಂತ್ರಿಸುತ್ತಿದ್ದರು. ಭತ್ತವನ್ನು ಕಟಾವು ಮಾಡಿದ್ದರಿಂದ ಆ ಗದ್ದೆ ಬಯಲಿನಲ್ಲಿ ಬರಿಗಾಲಲ್ಲಿ ಹೋಗಲಿ ಚಪ್ಪಲಿ ಧರಿಸಿದ ಕಾಲುಗಳಿಂದಲೂ ಆಗುತ್ತಿರಲಿಲ್ಲ.             ಸ್ವಲ್ಪ ಹೊತ್ತು ನೋಡಿ ಪಕ್ಕದವರ ತೋಟಕ್ಕೆ ನಮ್ಮ ಪ್ರವೇಶವಾಯಿತು. ರಜೆಗೆ ಮಕ್ಕಳು ಬಂದಿದ್ದಾರೆ ಎಂದು ಎಳನೀರು, ಸೀಬೆಕಾಯಿ, ಗಣಿಕೆ ಹಣ್ಣು ಇತ್ಯಾದಿಗಳನ್ನು ಕೊಟ್ಟರು. ಹೆಣ್ಣುಮಕ್ಕಳಿಗೆಲ್ಲ ಆ ಪಕ್ಕದ ತೋಟದ ಅಜ್ಜಿ “ಕಾಕಡ, ಕನಕಾಂಬರ, ದವನ, ಮರುಗ ಎಲ್ಲಾ ಇವೆ ಎಲ್ಲಾ ಕೊಯ್ದುಕೊಂಡು ಕಟ್ಟಿ ಮುಡಿದುಕೊಳ್ಳಿ” ಎಂದು ಎಲ್ಲೊ ಸಿಕ್ಕಿಸಿ ಇಟ್ಟಿದ ದಾರವನ್ನು ನಮ್ಮೆಡೆಗೆ ಎಸೆದರು. ಅಭ್ಯಾಸವಿಲ್ಲದ ನಮಗೆ ಹೂ ಬಿಡಿಸಲು ಗೊತ್ತಾಗುತ್ತಿರಲಿಲ್ಲ ತರಚಿ ಹಾಳು ಮಾಡುತ್ತಿದ್ದೆವು ಅದನ್ನು ಕಂಡ ಅವರು “ಉಪಯೊಗಕ್ಕೆ ಬಾರದ್ಹಾಗೆ ಮಾಡ್ತೀರಲ್ಲ”  “ಓದೋ ಮಕ್ಕಳೇ ಹಿಂಗೆ ಹೂ ಬಿಡಿಸೋಕ್ಕು ಬರಲ್ವೆ?” ಎಂದು ಅವರೆ ಬಿಡಿಸಿ ಅಲ್ಲೆ ಒಂದು ಮುತ್ತುಗದ ಎಲೆ ಕೊಯ್ದು ಪೊಟ್ಟಣಕಟ್ಟಿ ನಯವಾಗಿ ಬೀಳ್ಕೊಟ್ಟರು ಇನ್ನು ಹೆಚ್ಚಿನ ನಷ್ಟವಾಗಬಾರದೆಂದು.             ನನ್ನಜ್ಜನಿಗೆ ಮೊಮ್ಮಕ್ಕಳನ್ನು ಪರಿಚಯ ಮಾಡಿಕೊಳ್ಳುವುದೇ ಖುಷಿ. ಆದರೆ ನಮ್ಮಜ್ಜಿಗೆ ಬೇರೆಯವರ ಬಳಿ ದೂರು ಹೇಳಿ ಬಯ್ಯವುದರಲ್ಲೆ ಖುಷಿ. ಅಜ್ಜ ನನ್ನನ್ನು ತೋರಿಸಿ “ಇವಳು ಕಾನ್ವೆಂಟ್ ಶಾಲೆಗೆ ಹೋಗ್ತಾಳೆ ಅಕ್ಷರವಂತೂ ಮುತ್ತು ಪೋಣಿಸಿದ ಹಾಗೆ ಬರಿತಾಳೆ” ಅಂದರೆ ಅಜ್ಜಿ ಮಧ್ಯೆ ಪ್ರವೇಶಿಸಿ “ಹೌದು ಮನೆಯಲ್ಲಿ ಒಂದೇ ಒಂದು ಕೆಲಸ ಮಾಡಲ್ಲ ಲಕ್ಷಣವಾಗಿ ಉದ್ದಲಂಗ ಹಾಕ್ಕೋಳದ್ ಬಿಟ್ಟು ಎನೋ ಹಿಜಾರ ಸಿಕ್ಕಿಸಿಕೊಂಡಿದ್ದಾರೆ ನೋಡಿ ಮೆರೆಯೋ ದೇವರುಗಳು ಇದ್ದ ಹಂಗೆ” ಎಂದರು. ನಮಗೆ ಆ ಮಾತುಗಳನ್ನು ಕೇಳಿ ನಗುಬಂತು, ತಕ್ಷಣ ಪಕ್ಕದ ಮನೆಯ ನೆಂಟರ ಹುಡುಗಿ “ ಇಲ್ಲ ನಿನ್ನ ತರ ಉದ್ದನೆ ಪಂಚೆ ಸುತ್ತೊಕಬೇಕ ಅಜ್ಜಿ” ನಮ್ಮ ಹಾಗೆ  ನೀವೂ ಹಾಕೊಳಿ ಎಷ್ಟು ಆರಾಮ್ ಫೀಲ್ ಆಗುತ್ತೆ ಗೊತ್ತ” ಎಂದೆ ಬಿಟ್ಟಳು ಎಲ್ಲರು ನಕ್ಕುಬಿಟ್ಟರು ಪಾಪ ಅಜ್ಜಿ ಬೇಜಾರು ಮಾಡಿಕೊಳ್ಳಲಿಲ್ಲ ನಕ್ಕು ಸುಮ್ಮನಾದರು. ಹೊತ್ತು ಕಳೆದ್ದು ಗೊತ್ತಾಗಲಿಲ್ಲ.             ದೊಡ್ಡ ದೊಡ್ಡ ಬಾಕ್ಸ್ಗಳಲ್ಲಿ ಊಟ ಮನೆಯಿಂದ ಬಂತು. ಗದ್ದೆ ಕೆಲಸಕ್ಕೆ ಬಂದವರೊಬ್ಬರು ಸೈಕಲ್ ಮೇಲೆ ಊಟ ಇರಿಸಿಕೊಂಡು ಬಂದರು ಅವರ ಜೋತೆಗೆ ಅತ್ತೆಯೂ ಬಂದರು. ಗದ್ದೆ ಬಯಲಿನಲ್ಲಿ ಕುಳಿತು ಊಟ ಮಾಡುವ ಖುಷಿಯೇ ಬೇರೆ ಎಲ್ಲಾ ಸೇರಿ ಊಟ ಮಾಡಿದೆವು. ನನ್ನಜ್ಜನಿಗೆ ಎಲೆಯಲ್ಲಿ ಊಟ ಬಿಡುವಂತಿರಲಿಲ್ಲ ಹಾಗೆ ಉಳಿಸಿದರೆ ಬಹಳ ಕೋಪಮಾಡಿಕೊಂಡು ಬಡಿಸಿದವರಿಗೂ, ಊಟಕ್ಕೆ ಕುಳಿತವರಿಗೂ ಬಯ್ದುಬಿಡುತ್ತಿದ್ದರು. ಗದ್ದೆ ಕೆಲಸಕ್ಕೆಂದು ಬಂದಿದ್ದ ಅಳು ಸೈಕಲ್ನಲ್ಲಿ ಊಟ ತಂದಿದ್ದರಲ್ಲ ಅದಕ್ಕೆ ಪ್ರತಿಫಲವೆಂಬಂತೆ “ಇಲ್ಲೇ ಒಂದು ನಿಮಿಷ” ಎಂದು ಹೋದವರು ಒಂದು ಗಂಟೆಯಾದರು ಪತ್ತೆಯಿರಲಿಲ್ಲ. ಕೆಲಸ ಸಾಗುತ್ತಿಲ್ಲ ಎಂದು ಅಜ್ಜ ಸಿಟ್ಟು ಮಾಡಿಕೊಂಡು ನಾವಿದ್ದ ಜಾಗ ಬಿಟ್ಟು ಮುಂದೆ ಹೋದರು. ಹಾಗೆ ಮುಂದೆ ಹೋದರು. ಹಾಗೆ ಮುಂದೆ ಹೋಗುತ್ತಾ ಹೋಗುತ್ತಾ ಇದ್ದಂತೆ ಏನೋ ಸದ್ದಾಯಿತು. ಅದನ್ನು ಗಮನಿಸಿದ ನಮ್ಮ ಸೋದರ ಅತ್ತೆ “ಅದೇನೂ ಅಲ್ಲ ಸಮಯ ಬಂದರೆ ಇರಲಿ ಅಂತ ಒಂದು ಮಡಚುವ ಚಾಕು, ಅರ, ಬೀಗದ ಕೀ ಇತ್ಯಾದಿಗಳನ್ನು ಇಟ್ಟುಕೊಂಡಿದ್ದಾರೆ”. “ಹಾಗಿದ್ದರೆ ಅಜ್ಜಿ” ಎಂದರೆ ಅವರು  “ಚಿಮ್ಮಟ, ಹೂಕಟ್ಟುವ ನೂಲು, ಸೇಪ್ಟಿಪಿನ್, ಹರಶಿಣ ಕೊಂಬು, ಅರ್ಚನೆ ಪ್ರಸಾದ ಇತ್ಯಾದಿ ಇತ್ಯಾದಿ ಅಂದರು ಅದೆಲ್ಲ ಸರಿ ನೀವು………….” ಎಂದಾಗ ಅತ್ತೆಗೆ ಕೋಪ ಬಂದು ಕೈ ಎತ್ತಿದಾಗ ನಾವೆಲ್ಲ ಚೆಲ್ಲಾಪಿಲ್ಲಿಯಾದೆವು.             ಸ್ವಲ್ಪ ಹೊತ್ತಿನ ಬಳಿಕ ನಮ್ಮಜ್ಜಿ ಮತ್ತು ಅತ್ತೆ ಹೂಕಟ್ಟುತ್ತಾ ಕುಳಿತರು ನಾವು ಹೋಗಿ ಕುಳಿತುಕೊಂಡು ಅದೇನು ಮ್ಯಾಜಿಕ್ ಎಂಬಂತೆ ಕಣ್ಣುಬಾಯಿ ಬಿಟ್ಟು ನೋಡುತ್ತಿದ್ದೆವು. ಏನೋ ದೂರಕ್ಕೆ ಕಣ್ಣು ಹಾಯಿಸಿದರೆ ಎದರೊಂದು ಬೆಟ್ಟ ಅದರ ಮೇಲೊಂದು ಗುಡಿಕಾಣಿಸುತ್ತಿತ್ತು. ಕುತುಹಲ ತಡೆಯಲಾಗಲಿಲ್ಲ ಏನು?ಏನು?  ಎಂದು ಕೇಳಿದೆವು “ಇರಿ ಸ್ವಲ್ಪ ಪಕ್ಕದ ತೋಟದವರು ನಾವು ಕೇಳಿದ್ರೆ ಇಷ್ಟೊಂದು ಹೂ ಕೊಡ್ತಾ ಇರಲಿಲ್ಲ ಎನೋ ನೀವು ಹೋಗಿದಿರ ಅಂತ ಅಪ್ಪಿ ತಪ್ಪಿ ಕೊಟ್ಟಿದ್ದಾರೆ, ಬಾಡಿ ಹೋಗುತ್ತವೆ ಹೂಗಳು ಕಟ್ಟಣ ಇರಿ ಎಂದರು” ನಾವು ಬಿಡಲಿಲ್ಲ ನಮ್ಮ ಬಲವಂತಕ್ಕೆ “ಅದು ರಂಗನಾಥಸ್ವಾಮಿ ಬೆಟ್ಟ” ಅಂದೇ ಬಿಟ್ಟರು. ಹೋಗೋಣ!  ಹೋಗೋಣ! ಅಂದೆವು.             ಅತ್ತೆ “ಈಗ ………..” ಎಂದರೆ ನಾವು “ಹೌದು ಈಗ್ಲೆ………… ಈ ಕ್ಷಣವೇ” ಎಂದು ಅತ್ತೆಗೆ ಬಲವಂತ ಮಾಡಿದೆವು. ಇವರುಗಳು ಸುಮ್ನೆ ಇರಲ್ಲ ಎಂದು ಅಜ್ಜಿಯ ಕಡೆಗೆ ಕಣ್ಸನ್ನೆ ಮಾಡಿದರು. ಹೊ………. ಇರಲಿ ಇರಲಿ ಬನ್ನಿ ಎಂದೆವು. ನಾವು ಇನ್ಯಾವಾಗ  ಬರ್ತೀವೋ ?ಬಂದರೂ ನೀವು ಮದುವೆಯಾಗಿ ಹೋಗಿರ್ತೀರ ಬನ್ನಿ! ಬನ್ನಿ!  ಪ್ಲೀಸ್! ಪ್ಲೀಸ್! ಅಂದೆವು ಕಡೆಗೂ ಒಪ್ಪಿಗೆ ಕೊಟ್ಟೇ ಬಿಟ್ಟರು. ನಾವುಗಳು ಉತ್ಸಾಹದಿಂದ ಹೊರೆಟೆವೂ. ಹಾಗೆ ಬೆಟ್ಟದ ಕಡೆಗೆ ಹೋಗುವಾಗ ನಾವು ನಮ್ಮ ದೊಡ್ಡಜ್ಜನ ಗದ್ದೆಬಯಲು ಧಾಟಿಕೊಂಡು ಹೋಗಬೇಕಾಗಿತ್ತು ಏನೋ ಮರ ಅದರ  ಹೆಸರು ಗೊತ್ತಿಲ್ಲ  ಆ ಮರದ ಕೆಳಗೆ ಪಾರ್ಕಲ್ಲಿ ವೃತ್ತಾಕಾರದಲ್ಲಿ ಬೆಳೆದ ಸಸ್ಯಗಳಂತೆ ಪೊದೆಪೊದೆಯಾಗಿ ಕಡ್ಡಿಕಡ್ಡಿಯಾಗಿ ಕೆಲವು ಸಸ್ಯಗಳು ಬೆಳೆದಿದ್ದವು. ಅ ಗಿಡಗಳನ್ನು ನೋಡುತ್ತಲೇ “ನನಗೆ ಈ ಗ್ರೀನ್ಶೇಡ್ ಎಂದರೆ ಬಹಳ ಇಷ್ಟ” ಎಂದೆ ಇನ್ನೊಬಳು “ನನಗೆ ಆ ಡೀಪ್ ಗ್ರೀನ್” ಎಂದಳು. ಅತ್ತೆ ನಮ್ಮನ್ನು ಕರೆದು “ಇಂಗ್ಲೀಷ್ ಇಲ್ಲಲ್ಲ ಯಾವ ಗಿಡ? ಅಂತ ಹೇಳಿ” ಎಂದರು ನಮಗೆ ಗೊತ್ತಿದ್ರೆ ಅಲ್ವೆ! ಹೇಳೋದು? ಗೊತ್ತಾಗಲಿಲ್ಲ ಸ್ವಲ್ಪ ಪೊದೆಯಾಗಿ  ತಿಳಿ ಹಸಿರಿನಿಂದ ಇದ್ದ ಸಸ್ಯ ತೋರಿ ಇದು ಹರಿಶಿಣ ಎಂದರು. ಚೂಪಾದ ಗಾಡ ಹಸಿರಿನ ಚೂಪಾದ ಎಲೆ ತೋರಿಸಿ ಇದು ಶುಂಠಿ ಎಂದರು.             ಅಷ್ಟರಲ್ಲಿ ಅತ್ತೆಗೆ ನಾವು ಅದನ್ನು ನೋಡುತ್ತಿರುವ ಕ್ರಮ ಕಂಡು ಅದನ್ನು ಕಿತ್ತು ತೋರಿಸಬೇಕೆನಿಸಿತು. ಕೀಳಲು ಮುಂದಾದರೆ ಬುಡ ಗಟ್ಟಿಯಾಗಿತ್ತು. ಆಗವರು “ನಿಮ್ಮಜ್ಜಿ ಹತ್ತಿರ ಹೋಗಿ ಕೂಡುಗೋಲು ತೆಗೆದುಕೊಂಡು ಬನ್ನಿ” ಎಂದರು. ಕಣ್ಣು ಮುಚ್ಚಿ ಬಿಡುವುದರಲ್ಲಿ ತಂದು ಕೊಟ್ಟೆವು. ಅತ್ತೆ ಚೂಪಾದ ಕೂಡಗೋಲಿನಿಂದ ನಯವಾಗಿ ಗಿಡಗಳಿಗೆ ಹಾನಿಯಾಗದಂತೆ ಹರಿಶಿಣ, ಶುಂಠಿಯನ್ನು ತೆಗೆದು ತೋರಿಸಿದರು. “ಇನ್ನು ಸ್ವಲ್ಪ ತೋರಿಸಿ” ಎಂದಾಗ “ನಿಮ್ಮ ದೊಡ್ಡಜ್ಜಿ ಬಂದರೆ ಕೋಲಲ್ಲೇ ತೋರಿಸ್ತಾರೆ” ಅಂದರು. ಆದರೆ ಯಾಕೋ ಏನೋ ಅವರ ಮನಸ್ಸಿನಲ್ಲಿ ಎನನ್ನಿಸಿತೋ ಊಟ ಖಾಲಿಯಾಗಿ ತೊಳೆದು ಇಟ್ಟಿದ್ದೀವಲ್ಲ ಆ ಬಾಕ್ಸ್ ತೆಗೆದುಕೊಂಡು ಬನ್ನಿ ಎಂದರು. ನಾವೆಲ್ಲ ಹೊರೆಟೆವು. ಅತ್ತೆ ನಮ್ಮನ್ನು ಕಂಡು “ಈ ಮೆರವಣಿಗೆ ಬೇಕಾ ಯಾರದರು ಒಬ್ಬರು ಹೋಗಿ” ಅಂದರು. ಆ ಮಾತಿನ ಧಾಟಿಗೆ ಅದರಿ ಅಲ್ಲಾಡಿದಂತೆ ನಾವಿದ್ದರೂ ನಮಗೆ ಮನಸ್ಸಿನಲ್ಲಿ ತಡೆಯಲಾಗದ ನಗು ನಗು. ಅತ್ತೆ ಹರಿಶಿಣವನ್ನು, ಶುಂಠಿಯನ್ನು ಬಗೆದು ಬಗೆದು ಬಾಕ್ಸ್ನಲ್ಲಿ ತುಂಬಿಸುತ್ತಿದ್ದರೆ  ನಮಗೆ ನಗು ಮತ್ತು ಹೆದರಿಕೆ ಒಟ್ಟೊಟ್ಟಿಗೆ ಆಗುತ್ತಿತ್ತು. ಮರು ಮಾತನಾಡದೆ ಅತ್ತೆ ಬಾಕ್ಸ್ ತುಂಬಿದ ಮೇಲೆ ಎತ್ಲಾರದಂತೆ ತೆಗೆದುಕೊಂಡು ಹೋಗಿ ಅಜ್ಜಿಯ ಬಳಿ ಕುಕ್ಕರಿಸಿ ಬಂದರು.             ಹಾಗೆ ನಮ್ಮ ಬಳಿಗೆ ಬಂದವರೆ “ಹರಿಶಿಣ ಫ್ರೆಶ್ ಆಗಿದೆ ಹಾಲಲ್ಲಿ ಅರೆದು ಹಚ್ಚಿಕೊಂಡರೆ ಮುಖ  glove ಆಗುತ್ತೆ  ಗೊತ್ತ” ಎಂದರು. “ಶುಂಠಿನೂ ಹಾಗೆ ಮಾಡಬೇಕ?” ಎಂದು ಇನ್ನೊಬ್ಬರಿಂದ ಮರು ಪ್ರಶ್ನೆ ಬಂತು. ಅತ್ತೆ ಅದೆಲ್ಲ ಇರಲಿ ಬೆಟ್ಟಕ್ಕೆ ಹೋಗ್ಬೇಕೋ ಬೇಡ್ವೋ ಎಂದರು. ಹೂ ಸರಿ ಸರಿ ಎಂದು ಬೇಗನೆಹೆಜ್ಜೆ ಹಾಕಿದೆವು. ನಮಗೆ  ಆ ಗದ್ದೆ ಬಯಲಿನಲ್ಲಿ ತೆಂಗಿನ ಅಡಿಕೆ ತೋಟಗಳ ನಡುವೆ ಅಜ್ಜನ ಮನೆಗೆ ಬಂದ ಕಾರಣಕ್ಕೆ ಹಾಕಿಕೊಂಡಿರುವ ಕಾಲುಗೆಜ್ಜೆ, ಪುಟ್ಟ ಹ್ಯಾಂಗಿಗ್ಸೆಗಳನ್ನು ಕುಣಿಸಿಕೊಂಡು ಅಲುಗಾಡಿಸಿಕೊಂಡು ವೇಲ್ಗಳನ್ನು ಮತ್ತೆ ಮತ್ತೆ ಸರಿಮಡಿಕೊಂಡು ಹೋಗುವುದೇ ಸಂಭ್ರಮವಾಗಿತ್ತು. ದೂರಕ್ಕೆ ಚಿಕ್ಕದಾಗಿ ಕಾಣುತ್ತಿದ್ದ ಅ ಬೆಟ್ಟ ಹತ್ತಿರ ಹೋದಂತೆ ದೊಡ್ಡದು, ದೊಡ್ಡದು ಅನ್ನಿಸುತ್ತಿತ್ತು.             ಬೇಗ ಬೇಗ ಹತ್ತಿ ಮನಗೆ ಹೋಗಿ ಮತ್ತೆ ಕೆಲಸ ಇದೆ ಧನುರ್ಮಾಸದ ಪೂಜೆ ಬೇರೆ ಬನ್ನಿ ಎಂದರು. ಹೊರಟಾಗ ಇದ್ದ ಖುಷಿ ಬೆಟ್ಟ ಹತ್ತುವಾಗ ಇರಲಿಲ್ಲ. ಆದರೂ ಹೇಗೊ ಸಾಹಸದ ದಂಡಯಾತ್ರೆ ಎಂಬಂತೆ ಗುಡಿಯ ಮುಂಭಾಗ ತಲುಪಿದೆವು. ಬಾಗಿಲು ಕಡೆ ನೋಡಿದರೆ ಎರಡೆರಡು ಬೀಗ ಹಾಕಿದ್ದರು. ಅತ್ತೆ ಇದೇ ಬೆಟ್ಟ  ರಂಗನಾಥಸ್ವಾಮಿ ಬೆಟ್ಟ ನೋಡಿದ್ರಾ ಇಳಿರಿ ಎಂದರು. ನಮಗೆ ಕುತೂಹಲ ಗರ್ಭಗುಡಿಯ ಸುತ್ತು ಬಂದರೆ ಗುಡಿಯ ಪೂರ್ವಕ್ಕೆ ನಮ್ಮ ಹಳ್ಳಿ ಹುಲಿಕಲ್ ಕಾಣುತ್ತಿತ್ತು. ಜೊತೆಗೆ ಶ್ರೀನಿವಾಸ ದೇವಾಲಯದ ರಾಜ ಗೋಪುರ. ಸುಮ್ಮನೆ ಎಲ್ಲಿ? ಎಲ್ಲಿ? ಹುಡುಕೋಣ! ಎಂದು ನಿಂತೆವು. ಅತ್ತೆ ಬಿಡಲಿಲ್ಲ ಈಗ ಕೋಲು ತೆಗೆದುಕೊಂಡು ತೋರಿಸುತ್ತೇನೆ ಎಂದರು. ನಮ್ಮಗಲ್ಲಿ ಕಂಡಿದ್ದು ಕಾಗೆಗಳು ತಿನ್ನಲಾರದ ಮೆಣಸಿನ ಕಾಯಿ, ಕರೀಬೇವು, ಕಡಲೇಬೀಜ, ಉದ್ದನೆಯ ಕೊಬ್ಬರಿ ತುರಿ ಇತ್ಯಾದಿ ಎಲ್ಲ ಪುಳಿಯೋಗರೆಯ ಅವಶೇಷ.             ಹತ್ತುವಾಗ ಆದ ಕಷ್ಟ ಇಳಿಯುವಾಗ ಆಗಲಿಲ್ಲ. ಬೇಗನೆ ಬಂದರೂ ಮುಸ್ಸಂಜೆ ಅವರಿಸಿದ ಕಾರಣ ಅಜ್ಜಿ ನಮಗಲ್ಲ ಅತ್ತೆಯನ್ನು ಬಯ್ಯಲು ಪ್ರಾರಂಭಿಸಿದರು. “ನೀನು ಅವರುಗಳ ಜೊತೆ ಕುಣಿಯುತ್ತಾ ಇದ್ದೀಯಲ್ಲ”

ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ Read Post »

ಇತರೆ, ಜೀವನ

ಮದ್ಯಪಾನ ಮತ್ತು ಮಾದಕ ದ್ರವ್ಯಗಳ ನಿಷೇಧ

ಪ್ರಸ್ತುತ       ಮದ್ಯಪಾನ ಮತ್ತು ಮಾದಕ ದ್ರವ್ಯಗಳ ನಿಷೇಧದ ಕುರಿತು ಮಹಾತ್ಮ ಗಾಂಧೀಜಿ ಡಾ.ಎಸ್.ಬಿ. ಬಸೆಟ್ಟಿ ಮಹಾತ್ಮ ಗಾಂಧೀಜಿಯವರು ಜನರು ಬಯಸುವ ಹಾನಿಕಾರಕ ಮತ್ತು ಅನಾವಶ್ಯಕ ಮಾದಕ ವಸ್ತುಗಳನ್ನು  ವಿರೋಧಿಸುತ್ತಿದ್ದರು. ಗಾಂಧೀಜಿಯವರು ತಂಬಾಕು ಮತ್ತು ಮಧ್ಯವನ್ನು ಜನರ ಆರೋಗ್ಯಕ್ಕೆ ಅತ್ಯಂತ ಹಾನಿ ಕಾರಕ ವಸ್ತುಗಳೆಂದು ಪರಿಗಣಿಸಿದ್ದರು ಜೊತೆಗೇ ಚಹಾ ಮತ್ತು ಕಾಫಿಯನ್ನು ಕೂಡಾ ಅನಾವಶ್ಯಕ ವಸ್ತುಗಳೆಂದು ಭಾವಿಸಿದ್ದರು. “ಬೆಂಕಿ ದೇಹವನ್ನು ನಾಶ ಮಾಡಿದರೆ, ಮದ್ಯ ಮತ್ತು ಮಾದಕ ವಸ್ತು ದೇಹ  ಮತ್ತು ಆತ್ಮ ಎರಡನ್ನೂ ನಾಶ ಮಾಡುತ್ತದೆ” ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದಾರೆ. ವೈದ್ಯರು, ಮದ್ಯಪಾನಿಯಗಳು ಮತ್ತು ಅಫೀಮು ವ್ಯಸನಿಗಳನ್ನು ಈ ಶಾಪದಿಂದ ಹೊರತರುವ ದಾರಿಗಳನ್ನು ಕಂಡುಹಿಡಿಯಬೇಕು. ಪ್ರೀತಿಯಿಂದ ಈ ವ್ಯಸನಿಗಳನ್ನು ತಮ್ಮ ಮಾತು ಕೇಳುವಂತೆ ಮಾಡಿ ಅದರ ಸೇವನೆಯಿಂದಾಗುವ ಕೆಡಕನ್ನು ಅವರಿಗೆ ಮನದಟ್ಟು ಮಾಡಿ ಕೆಟ್ಟ ಚಟವನ್ನು ಬಿಡುವಂತೆ ಮನವರಿಕೆ ಮಾಡಬೇಕು ಎಂದಿದ್ದರು. ಮಾದಕ ವಸ್ತುಗಳಲ್ಲಿ ಹೊಗೆಸೊಪ್ಪು, ಭಂಗಿ, ಗಾಂಜಾ, ಅಫೀಮು, ಬ್ರಾಂದಿ, ವಿಸ್ಕಿ, ರಮ್ಮ, ಜಿನ್, ವೈನ್, ಶೇಂದಿ, ಸಾರಾಯಿ ಹೀಗೆ ಇನ್ನೂ ಹತ್ತು ಹಲವಾರು ಬಗೆಯ ವಸ್ತುಗಳು ಸೇರಿವೆ. ಇವುಗಳ ಅವಶ್ಯಕತೆ ನಮ್ಮ ಶರೀರಕ್ಕೆ ಖಂಡಿತಾ ಇಲ್ಲ. ಇವುಗಳಿಂದ ಶರೀರದ ಆರೋಗ್ಯ ಹಾಳಾಗಿ ಆರ್ಥಿಕವಾಗಿ ಸಂಸಾರ  ಸರ್ವನಾಶವಾಗುತ್ತದೆ. ಅಗೌರವಯುತ ಬಾಳು ದಕ್ಷತೆಗೆ ಕುಂದು ಮತ್ತು ದೇಶದ ಗೌರವಕ್ಕೆ ಚ್ಯುತಿ ತರುತ್ತದೆ. ಇದಕ್ಕೆ ದಾಸನಾದವನು ತನ್ನ ಮತ್ತು ಸಂಸಾರದ ಮಾನ ಮರ್ಯಾದೆಯನ್ನು  ಬೀದಿ ಬೀದಿಗಳಲ್ಲಿ ಹರಾಜು ಹಾಕುತ್ತಾನೆ.  ಈ ಮಾದಕ ವಸ್ತುಗಳನ್ನು ದೇಶದಿಂದ ಸಂಪೂರ್ಣವಾಗಿ ಪ್ರತಿಬಂಧಿಸಬೇಕೆಂಬುದು ಗಾಂಧೀಜಿಯವರ ಅದಮ್ಯ ಕನಸು. ಆದರೆ ಇಂದಿನ ಸರಕಾರಗಳು ಬದುಕಿರುವುದೇ ಅಬಕಾರಿ ಬಾಬ್ತಿನ ವರಮಾನದಿಂದ ಯಾವ ಪಕ್ಷದ ಸರ್ಕಾರಗಳಿದ್ದರೂ ಇದರ ಬಗೆ ಗಮನ ಹರಿಸಲು ಹಿಂಜರಿಯುತ್ತವೆ. ಗಾಂಧೀಜಿಯವರ ಪರಿಕಲ್ಪನೆಯ ಸಂಪೂರ್ಣ ಪಾನನಿಷೇದ ಎಂದೆಂದಿಗೂ ಸಾಧ್ಯವಾಗದಿರಬಹುದು. ಆದರೆ ಗುಜರಾತ್ ನಂತರ ಇತ್ತೀಚಿನ ವರ್ಷಗಳಲ್ಲಿ ಬಿಹಾರದಲ್ಲಿ   ಪಾನ ನಿಷೇದ ಜಾರಿಗೆ ಬಂದಿದೆ. ತಮಿಳುನಾಡು ಮೊದಲು ನಂತರ ಕರ್ನಾಟಕ ರಾಜ್ಯಗಳು ಸರಾಯಿ ನಿಷೇಧಿಸಿದವು. ಆದರೆ ಆ ನಂತರ ಹೆಚ್ಚೆಚ್ಚು ವೈನಶಾಪ ತೆರೆಯಲು ಅನುಮತಿ ನೀಡಿದವು. ಒಂದು ಅವಿವೇಕದ ವಾದವನ್ನು ಪ್ರತಿಪಾದಿಸುವವರು ಇದ್ದಾರೆ.  ಸ್ವಲ್ಪ (ಅತೀಕಡಿಮೆ) ಮಧ್ಯಪಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಸರ್ವರೋಗಕ್ಕೂ ಸರಾಯಿ ಮದ್ದು ಎನ್ನುತ್ತಾರೆ. ಇಂದಿನ ಜಗತ್ತಿಗೆ ಸವಾಲಾಗಿರುವ ಮಹಾಮಾರಿ ಕೋವಿಡ-೧೯ ರೋಗಕ್ಕೂ ಸರಾಯಿ ಮದ್ದು ಎನ್ನುವವರಿದ್ದಾರೆ. ಆದರೆ ಈ ವಾದಕ್ಕೆ ಹುರುಳಿಲ್ಲ. ಪಾರ್ಸಿ ಜನಾಂಗದವರು ಹೆಂಡ ಕುಡಿಯುವುದನ್ನು ಒಳ್ಳೆಯದೆಂದು ಪ್ರತಿಪಾದಿಸುತ್ತಿದ್ದರು. ಇದು ಮಾದಕ ವಸ್ತುವಾದರೂ ಆಹಾರವೂ ಸಹ ಆಗಬಲ್ಲದು ಎಂದು ಹೇಳುತ್ತಿದ್ದರು. ಆದರೆ ತಜ್ಞರ ಪ್ರಕಾರ ಇದು ಸತ್ಯವಲ್ಲ. ‘ನೀರಾ’ ಭಟ್ಟಿ ಇಳಿಸಿದ ತಕ್ಷಣ ಮದ್ಯವಲ್ಲ. ನಿಜ ಅದು ಒಂದು ಆಹಾರ. ಇದನ್ನು ಕುಡಿದರೆ ಮಲಬದ್ಧತೆ ಇರುವುದಿಲ್ಲವೆಂದು ಕೇಳಿ ಗಾಂಧೀಜಿಯವರೇ ಕೆಲವು ದಿನಗಳ ಕಾಲ  ‘ನೀರಾ’ ಕುಡಿಯಲು ಪ್ರಾರಂಭಿಸಿದಾಗ ಅವರಿಗೆ ಅದರ ಉಪಯುಕ್ತತೆಯ ಅರಿವಾಗುತ್ತದೆ. ಪಾಮ್ ಜಾತಿಗೆ ಸೇರಿದ ತೆಂಗು, ಈಚಲು, ಖರ್ಜೂರ ಇತ್ಯಾದಿ ಇವುಗಳಲ್ಲಿ ಕಾಂಡ ಕೊರೆದು ತೆಗೆಯುವ ಬಣ್ಣವಿಲ್ಲದ ನೀರಿನಂತಹ ರಸಕ್ಕೆ ಅಥವಾ ಹಾಲಿಗೆ ‘ನೀರಾ’ ಎಂದು ಕರೆಯುತ್ತಾರೆ. ತೆಗೆದ ಕೆಲವೇ ನಿಮಿಷಗಳಲ್ಲಿ ಈ ‘ನೀರಾ’ ಹುಳಿ ಬಂದು ಜನರಿಗೆ ಅಮಲೇರಿಸಿ ಹುಚ್ಚೆಬ್ಬಿಸುತ್ತದೆ. ಮಹಾತ್ಮಾ ಗಾಂಧೀಜಿಯವರು ಮಧ್ಯಪಾನವನ್ನು ಒಂದು ಘೋರ ಖಾಯಿಲೆ ಎಂಬುದಾಗಿ ಕರೆಯುತ್ತಾರೆ. ಆದರೆ ವೈದ್ಯಕೀಯ ಉದ್ದೇಶಕ್ಕೆ ಮದ್ಯ ಬಳಸುವುದನ್ನು ಗಾಂಧೀಜಿಯವರು ಆಕ್ಷೇಪಿಸುವುದಿಲ್ಲ. ಕುಡಿತದ ಬಗ್ಗೆ ಗಾಂಧೀಜಿಯವರು ಹೀಗೆ ಹೇಳಿದ್ದಾರೆ, “ಕುಡಿತ ಎನ್ನುವುದು ದುರಾಚಾರ ಎನ್ನುವುದಕ್ಕಿಂತಲೂ ಹೆಚ್ಚಾಗಿ ಅದನ್ನು ಕಾಯಿಲೆ ಎಂದು ಕರೆಯಬಹುದು. ಬಹಳ ಮಂದಿ ಸಾಧ್ಯವಾಗುವುದಾದರೆ ಸಂತೋಷದಿಂದ ಕುಡಿತವನ್ನು ಬಿಟ್ಟುಬಿಡುವರು ಎಂದು ನನಗೆ ಗೊತ್ತಿದೆ. ಪ್ರಲೋಭನೆಗೆ ಒಳಗಾಗಿರುವ ಕೆಲವರು ಅದನ್ನು ದೂರವಿರಿಸಬಹುದು ಎಂದು ನನಗೆ ಗೊತ್ತಿದೆ. ನಿರ್ದಿಷ್ಟ ಪ್ರಸಂಗದಲ್ಲಿ ಆ ಪ್ರಲೋಭನೆಯನ್ನು ದೂರವಿರಿಸುವವರು  ಕಳ್ಳತನದಲ್ಲಿ ಕುಡಿಯುತ್ತಾರೆ ಎಂದು ನನಗೆ ಗೊತ್ತಿದೆ. ಆದ್ದರಿಂದ ಪ್ರಲೋಭನೆಯನ್ನು ಕಿತ್ತು ಹಾಕುವುದು ತಪ್ಪು ಎಂದು ನಾನು ಭಾವಿಸುವುದಿಲ್ಲ. ಕಾಯಿಲೆಯಾಗಿರುವ ವ್ಯಕ್ತಿಗಳು ಅವರಷ್ಟಕ್ಕೆ ಅವರೇ ಸಹಾಯ ಮಾಡಿಕೊಳ್ಳಬೇಕು”.( ಯಂಗ ಇಂಡಿಯಾ – ೧೨-೧-೧೯೨೮) ಗಾಂಧೀಜಿಯವರು “ನಾನು ನನ್ನನ್ನು ಶ್ರಮಿಕರ ಜತೆಯಲ್ಲಿ ಗುರುತಿಸಿಕೊಂಡಿರುವುದರಿಂದ ಕುಡಿತದ ಚಟಕ್ಕೆ ಅಂಟಿಕೊಂಡಿರುವ ಶ್ರಮಿಕರ ಮನೆಗಳಿಗೆ ಕುಡಿತವು ಎಂತಹ ಹಾನಿಯನ್ನುಂಟು ಮಾಡಿದೆ ಎಂದು ನನಗೆ ಗೊತ್ತಿದೆ. ಅವರಿಗೆ ಸುಲಭವಾಗಿ ದೊರೆಯುವಂತಿಲ್ಲದಿದ್ದರೆ ಅವರು ಮಧ್ಯವನ್ನು ಮುಟ್ಟುವುದಿಲ್ಲ ಎಂದು ನನಗೆ ಗೊತ್ತಿದೆ. ಅನೇಕ ಪ್ರಸಂಗಗಳಲ್ಲಿ ಕುಡುಕರೇ ಸ್ವತಃ ಪಾನನಿರೋಧಕ್ಕೆ ಕೋರಿಕೆ ಸಲ್ಲಿಸಿದ್ದಾರೆ ಎಂಬುದಕ್ಕೆ ನಮ್ಮ ಬಳಿ ಸಮಕಾಲೀನ ಸಾಕ್ಷ್ಯಗಳಿವೆ” (ಹರಿಜನ ಪತ್ರಿಕೆ -೩-೬-೧೯೩೯)  ಎಂದು ಹೇಳಿದ್ದಾರೆ. “ಆರ್ಥಿಕ ನಷ್ಟಕ್ಕಿಂತ ಯಾವಾಗಲೂ ನೈತಿಕ ನಷ್ಟ ಹೆಚ್ಚಿನದು” ಎಂಬುದು ಗಾಂಧೀಜಿಯವರ ವಾದ. ಏಕೆಂದರೆ ಅವರು ಹೀಗೆ “ಕುಡಿತದ ಚಟವು ಮನುಷ್ಯನ ಆತ್ಮವನ್ನು ಹಾಳು ಮಾಡುತ್ತದೆ ಮತ್ತು ಅವನನ್ನು ಮೃಗವಾಗಿ ಪರಿವರ್ತಿಸುತ್ತದೆ. ಹೆಂಡತಿ, ತಾಯಿ ಮತ್ತು ಸಹೋದರಿಯ ನಡುವಣ ಬೇಧವನ್ನು ಗ್ರಹಿಸಿಕೊಳ್ಳಲಾರದಷ್ಟು ಅಸಮರ್ಥವಾಗುತ್ತಾನೆ. ಮಧ್ಯದ ಪ್ರಭಾವದಡಿಯಲ್ಲಿ ಈ ಬೇಧವನ್ನು ಮರೆಯುವವರನ್ನು ನಾನು ಕಂಡಿದ್ದೇನೆ. ಮತ್ತು ಅಮಲೇರದೆ ಶಾಂತಚಿತ್ತನಾಗಿರುವ ಸಮಯದಲ್ಲಿ ತನ್ನ ಹೀನ ಕೃತ್ಯಗಳಿಗೆ ನಾಚಿಕೆಪಟ್ಟುಕೊಳ್ಳುತ್ತಾನೆ. ಆದುದರಿಂದ ಕುಡಿತ ಅತ್ಯಂತ ನೀಚತನದ ಕೆಲಸ” (ಹರಿಜನ ಪತ್ರಿಕೆ- ೯-೩-೧೯೩೪) ಎಂದಿದ್ದಾರೆ. ಕುಡುಕರ ಪತ್ನಿಯರ ಬಗ್ಗೆ ಗಾಂಧೀಜಿಯವರು ಕನಿಕರ ವ್ಯಕ್ತಪಡಿಸುತ್ತಾರೆ. ಅವರು ಕೊಡುವ ಎರಡು ಉದಾಹರಣೆಗಳು ಕುಡಿತದ ದುಷ್ಪರಿಣಾಮಗಳನ್ನು ತಿಳಿಸುತ್ತದೆ. ಹಡುಗುಗಳ ಕ್ಯಾಪ್ಟನ್ಗಳು ಪಾನಮತ್ತರಾಗಿದ್ದಲ್ಲಿ. ಅವರಿಗೆ ಯಾವ ರೀತಿಯಿಂದಲೂ ಹಡಗನ್ನು ನಿಯಂತ್ರಿಸಲು ಸಾಧ್ಯವಾಗದು. ಅವರ ಕುಡಿತದ ಅಮಲು ಇಳಿದು ಅವರು ಯಥಾಸ್ಥಿತಿಗೆ ಬಂದ ನಂತರ ಮಾತ್ರ ಸಾಧ್ಯವಾಗಬಹುದು. ಅದೇ ರೀತಿ ಓರ್ವ ವಕೀಲ ಪಾನಮತ್ತನಾಗಿ ನಡೆಯಲಾಗದೆ ಚರಂಡಿಯಲ್ಲಿ ಉರುಳಿ ಬಿದ್ದಲ್ಲಿ ಪೋಲಿಸರು ಆತನನ್ನು ಹೊತ್ತೊಯ್ದು ಆತನ ಮನೆ ತಲುಪಿಸಬೇಕಾಗಬಹುದು. “ಕುಡಿತದಿಂದ ಸರ್ವನಾಶ” ಕುಡಿತವು ಆತನ ಸಂಸಾರದ ಮತ್ತು ಸಮಾಜದ ಸ್ವಾಸ್ಥವನ್ನು ಕೆಡಿಸುತ್ತದೆ. ಗಾಂಧೀಜಿಯವರು ಹೀಗೆ “ಕುಡಿತ ಮತ್ತು ಮಾದಕವಸ್ತುವಿನ ಚಟದ ಕೆಡಕು ಅನೇಕ ರೀತಿಗಳಲ್ಲಿ ಮಲೇರಿಯಾ ಮತ್ತು ಅದರಂತಹ ಕಾಯಿಲೆಗಳಿಂದ ಉಂಟಾಗುವ ಕೆಡುಕಿಗಿಂತಲೂ ಅಪಾರವಾಗಿ ಹಾನಿಯನ್ನುಂಟು ಮಾಡುವುದಾಗಿರುತ್ತದೆ. ಏಕೆಂದರೆ ಕಡೆಯದು ದೇಹಕ್ಕೆ ಅಪಾಯವನ್ನುಂಟು ಮಾಡಿದರೆ ಕುಡಿತ ಮತ್ತು ಮಾದಕ ವಸ್ತುಗಳು ದೇಹ ಮತ್ತು ಆತ್ಮ ಜೀವ ಎರಡನ್ನು ಹಾಳು ಮಾಡುತ್ತದೆ” (ಯಂಗ್ ಇಂಡಿಯಾ – ೩-೩-೧೯೨೭)  ಎಂದಿದ್ದಾರೆ. ದೇಶ ದಿವಾಳಿಯಾದರೂ ಚಿಂತೆಯಿಲ್ಲ ನಮ್ಮ ಮಧ್ಯೆ ಸಾವಿರಾರು ಮಂದಿ ಕುಡುಕರು ಇರುವ ಸಮಾಜವನ್ನು ನೋಡಲು ನಾನು ಇಷ್ಟಪಡುವದಿಲ್ಲವೆನುತ್ತಿದ್ದರು. ಅಬಕಾರಿ ಸುಂಕದಿಂದ ಬರುವ ಆದಾಯದಿಂದ ನಾವು ಶಿಕ್ಷಣ ಕೊಡುತ್ತೇವೆಂದಾದರೆ ಅಂತಹ ಶಿಕ್ಷಣವೇ ನಮಗೆ ಬೇಡವೆನ್ನುತ್ತಿದ್ದರು. ಗಾಂಧೀಜಿಯವರು ಹೀಗೆ ಹೇಳಿದ್ದಾರೆ, “ಕುಡಿತದ ಚಟಕ್ಕೆ ಬಲಿಯಾಗಿರುವ ರಾಷ್ಟ್ರದ ಮುಖದಲ್ಲಿ ವಿನಾಶವಲ್ಲದೇ ಬೇರೆನೂ ಕಣ್ಣಿಗೆ ಹೊಳೆಯುವಂತಿರುವುದಿಲ್ಲ. ಆ ಚಟದ ಮೂಲಕ ಸಾಮ್ರಾಜ್ಯಗಳು ಹಾಳಾಗಿವೆ ಎಂದು ಇತಿಹಾಸ ದಾಖಲಿಸಿದೆ. ಶ್ರೀ ಕೃಷ್ಣ ಸೇರಿದ್ದ ಪ್ರಸಿದ್ಧ ಸಮುದಾಯವೊಂದು ಆದ್ದರಿಂದ ಪತನಗೊಂಡಿತು ಎಂದು ಭಾರತದ ಇತಿಹಾಸದಲ್ಲಿ ದಾಖಲಾಗಿದೆ. ರೋಮ್ನ ಪತನಕ್ಕೆ ನೇರವಾಗಿ   ಈ ಭಯಾನಕ ಮಧ್ಯವೇ ಕಾರಣವಾಗಿತು”್ತ.( ಯಂಗ್ ಇಂಡಿಯಾ- ೪-೪-೧೯೨೯) ಗಾಂಧೀಜಿಯವರು ಹೀಗೆ ಹೇಳಿದ್ದಾರೆ, ‘ಇಡೀ ಭಾರತಕ್ಕೆ ನನ್ನನ್ನು ಒಂದು ಗಂಟೆ ಕಾಲ ಸರ್ವಾಧಿಕಾರಿಯೆಂದು ನೇಮಿಸಿದರೆ ನಾನು ಮಾಡಲಿರುವ ಮೊದಲ ಕೆಲಸವೆಂದರೆ ಪರಿಹಾರ ನೀಡದೇ ಎಲ್ಲ ಮಧ್ಯದಂಗಡಿಗಳನ್ನು ಮುಚ್ಚಿಸುವುದು ಮತ್ತು ಖಾರಕಾನೆ ಮಾಲೀಕರುಗಳಿಗೆ ಅವರ ಕೆಲಸಗಾರರುಗಳಿಗೆ ಮಾನವೀಯ ಸೌಲಭ್ಯಗಳನ್ನು ಒದಗಿಸಲು ಬಲವಂತಪಡಿಸುವುದು ಮತ್ತು ಈ ಶ್ರಮಿಕರುಗಳು ಪರಿಶುದ್ಧ ಪಾನೀಯಗಳನ್ನು ಮತ್ತು ಮನರಂಜನೆಗಳನ್ನು ಪಡೆಯುವಂತಹ ಆಹಾರ ಪಾನೀಯಗಳ ಮತ್ತು ಮನರಂಜನಾ ರೂಮುಗಳನ್ನು ತೆರೆಯುವಂತೆ ಸೂಚನೆ/ಸಲಹೆ ನೀಡುತ್ತಾರೆ’ .(ಯಂಗ್ ಇಂಡಿಯಾ-೨೫-೬-೧೯೩೧) ರಷ್ಯಾ ದೇಶದ ಲಿಯೋ ಟಾಲ್ಸ್ಟಾಯ್ ಎಂಬ ಮಹಾಶಯ ತಾನೇ ಈ ಚಟಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಬಲಿಯಾಗಿ ನಂತರ ತ್ಯಜಿಸಿ, ಹೊಗೆಸೊಪ್ಪಿನ ಯಾವುದೇ ರೂಪದ ಸೇವನೆ ಎಲ್ಲಾ ಚಟಗಳಿ ಗಿಂತ ಅತ್ಯಂತ ದುಷ್ಟ ಚಟವೆಂದಿದ್ದನು. ಈ ಚಟ ‘ದುಶ್ಚಟಗಳ ರಾಜ’ ‘ತಂಬಾಕು ಅತ್ಯಂತ ಹೀನ ಮಾದಕ ವಸ್ತು ಎಂದು ಆ ಮಹಾನುಭಾವ ಹೇಳಿದ್ದ. ಸಾಮಾನ್ಯವಾಗಿ ಹದಿಹರೆಯದವರು ಎರಡು ರೀತಿಯ ದುಶ್ಚಟಗಳಿಗೆ ಸಿಲುಕಿಕೊಳ್ಳುತ್ತಾರೆ. ಕೆಲವರು ಸಿಗರೇಟ, ಮದ್ಯಪಾನದ ಸುಳಿಗೆ ಬಿದ್ದರೆ, ಇನ್ನೂ ಕೆಲವರು ಮಾದಕ ದ್ರವ್ಯಗಳ ದಾಸರಾಗುತ್ತಾರೆ. ಸಿಗರೇಟ, ಮದ್ಯಪಾನದ ಸುಳಿಯಲ್ಲಿ ಬಿದ್ದವರು ಚಟವನ್ನು ತುಂಬ ದಿನ ರಹಸ್ಯವಾಗಿ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಸಿಗರೇಟ ಸೇದುವುದು ಒಂದು ಬೇಜವಾಬ್ದಾರಿಯುತ ವರ್ತನೆಯ ಪ್ರತೀಕ ಬಸ್ಸ್,  ರೈಲು, ಟ್ಯಾಂಗಾ, ಮನೆಯಲ್ಲಿ ಅಕ್ಕಪಕ್ಕದವರ ನಿಂದನೆಯನ್ನು ಲೆಕ್ಕಿಸದೇ ಮಾಡುವ ಒಂದು ಅನಾಗರಿಕ ವರ್ತನೆ ಹೊಗೆಸೊಪ್ಪು ಪಾತಕ ಕೃತ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆಂದು ತಜ್ಞರು ಸಾಬೀತುಪಡಿಸಿದ್ದಾರೆ. ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇದಿಸಿದ್ದರೂ. ಸಿಗರೇಟ ಸೇವನೆ ಕಡಿಮೆಯಾಗಿಲ್ಲ. ಧೂಮಪಾನ ಮಾಡುವವನು ಪ್ರಜ್ಞೆ ಇಲ್ಲದೆ ಸುತ್ತಲೂ ಹೊಗೆ ಮತ್ತು ವಾಸನೆ ಹರಡಿ ಪಕ್ಕದವರಿಗೆ ಅಸಹ್ಯ ಹುಟ್ಟಿಸುತ್ತಾನೆ. ಆದರೆ ಮಾದಕ ದ್ರವ್ಯದ  ವ್ಯಸನ ಹಾಗಲ್ಲ. ಮಕ್ಕಳು ಡ್ರಗ್ ದಾಸರಾಗಿ ಅತಿರೇಕಕ್ಕೆ ಹೋಗುವವರೆಗೂ ಪೋಷಕರಿಗೆ ತಮ್ಮ ಮಗ ಮಾದಕ ವ್ಯಸನಿ ಎಂಬ ಸಣ್ಣ ಸುಳಿವು ಕೂಡ ಸಿಕ್ಕಿರುವುದಿಲ್ಲ. ಸೈಲೆಂಟ ಕಿಲ್ಲರ್ನಂತೆ ತನ್ನ ಚಟಕ್ಕೆ ಬಿದ್ದವರನ್ನು ಅಪೋಶನ ತೆಗೆದುಕೊಂಡಿರುತ್ತದೆ. ಹಾಗಾಗಿ ಯುವಸಮುದಾಯದ ಪಾಲಿಗೆ ಮಾದಕದ್ರವ್ಯ ಯಾವತ್ತಿಗೂ ಅತಿಘೋರ ಶಾಪವಿದ್ದಂತೆ. ವಾಸ್ತವವಾಗಿ ಮದ್ದು ಎಂದರೇನು? ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಯಾವುದೇ ಪದಾರ್ಥವನ್ನು ಜೀವಿಯೊಂದು ಸೇವಿಸಿದಾಗ ಅದರ ಸ್ವಾಭಾವಿಕ ಕ್ರಿಯೆಗಳಲ್ಲಿ ವ್ಯತ್ಯಾಸ ಉಂಟುಮಾಡುವ ಸಾಮರ್ಥ್ಯ ಹೊಂದಿದ್ದರೆ. ಅದನ್ನು ಮದ್ದು ಎಂದು ಕರೆಯಲಾಗುತ್ತದೆ. ‘ನಾರ್ಕೋಟಿಕ್ ಡ್ರಗ್ಸ್’ ಇಂದು ಬಹಳಷ್ಟು ಚರ್ಚೆಗೆ ಗ್ರಾಸವಾಗುತ್ತಿರುವ ವಿಷಯವಾಗುತ್ತಿವೆ. ಸುಂಕದ ಇಲಾಖೆಯವರು ವಿಮಾನ ನಿಲ್ದಾಣಗಳಲ್ಲಿ ಅವುಗಳನ್ನು ವಶಪಡಿಸಿಕೊಂಡ ಸುದ್ಧಿ ಸಮಾಚಾರಗಳನ್ನು ಪತ್ರಿಕೆಗಳಲ್ಲಿ ಆಗಾಗ್ಗೆ ಓದುತ್ತೇವೆ. ಹೆಚ್ಚೆÀಚ್ಚ್ಚು ಯುವಜನರು ಅದರ ಕಪಿಮುಷ್ಟಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಮದ್ದುಗಳ ಕಳ್ಳ ಸಾಗಾಣಿಕೆ ಮತ್ತು ಅವುಗಳ ದುರ್ಬಳಕೆಯ ಅವಳಿ ಸಮಸ್ಯೆ ಇಂದು ನಮ್ಮೆದುರಿಗೆ ಬೃಹದಾಕಾರವಾಗಿ ತಲೆಯೆತ್ತಿ ನಿಂತಿದೆ. ಭೌಗೋಳಿಕವಾಗಿ ನಮ್ಮ ದೇಶ ಮದ್ದುಗಳನ್ನು ಕದ್ದು ಸರಬರಾಜು ಮಾಡುವ ಎರಡು ಪ್ರಮುಖ ವಲಯಗಳ ನಡುವೆ ನೆಲೆಯಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ, ಆಗ್ನೇಯ ಏಷ್ಯಾದ ರಾಷ್ಟ್ತಗಳಾದ ಬರ್ಮಾ, ಥೈಲ್ಯಾಂಡ, ಮತ್ತು ಲಾವೋಸ್ (ಸುವರ್ಣ ತ್ರಿಕೋಣ) ಮತ್ತು ಸನಿಹದ ಮದ್ಯಪೂರ್ವ ದೇಶಗಳಾದ ಪಾಕಿಸ್ತಾನ, ಅಪಘಾನಿಸ್ಥಾನ ಮತ್ತು ಇರಾನ್ (ಬಂಗಾರದ ಅರ್ಧಚಂದ್ರ) ಕೇಂದ್ರ ಕಾರ್ಯಸ್ಥಾನಗಳಾಗಿದ್ದು ಭಾರತ ಅವುಗಳ ನಡುವೆ ಸ್ಯಾಂಡವಿಜ್ ನಂತೆ ಸೇರಿಕೊಂಡಿವೆ. ಹೀಗಾಗಿ ಭಾರತ ಮದಕ ವಸ್ತುಗಳ ಕಳ್ಳ ಸಾಗಾಣಿಕೆಯ ಪ್ರಮುಖ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ. ಜೊತೆಗೆ ಮರಿಜುವಾನ ಮತ್ತು ಹಶೀಶಗಳನ್ನು ವಿಶ್ವದ ಮಾರುಕಟ್ಟೆಗಳಿಗೆ ಸರಬರಾಜು ಮಾಡುವ ನೇಪಾಳ ನಮ್ಮ ಉತ್ತರಕ್ಕಿದೆ. ಸದ್ಯ ಬಾಲಿವುಡ್ ನಟ ಸುಶಾಂತಸಿಂಗ್  ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಮದ್ದಿನ ವಿರಾಟ್ ಸ್ವರೂಪ ಬಯಲಾಗಿಬಿಟ್ಟಿದೆ. ಎನ್ಸಿಬಿ ಅಧಿಕಾರಿಗಳು ರಾಜ್ಯದ  ಡ್ರಗ್ಸ್  ದಂಧೆಯಲ್ಲಿ, ಬಾಲಿವುಡ್, ಹಾಗೂ ಕನ್ನಡ ಚಿತ್ರರಂಗದ ನಟ-ನಟಿಯರು ನಂಟು ಬೆಸೆದುಕೊಂಡಿರುವುದನ್ನು ಪತ್ತೆ ಮಾಡಿದ್ದಾರೆ. ಇದು ಪ್ರಕರಣಕ್ಕೆ ಇನ್ನಷ್ಟು ರೋಚಕತೆ ತಂದುಕೊಟ್ಟಿದೆ. ಜೊತೆಗೆ ರಾಜಕೀಯ ಕೆಸರೆರಚಾಟಕ್ಕೂ ಈ ಪ್ರಕರಣ ಹಾದಿ ಮಾಡಿಕೊಟ್ಟಿದೆ. ರಾಜಕೀಯ ಆರೋಪ ಪ್ರತ್ಯಾರೋಪಗಳಿಂದ ಡ್ರಗ್ ವಿರುದ್ಧದ ಹೋರಾಟ ಹಾದಿ ತಪ್ಪುತ್ತಿದೆ. ಈಗ ರಾಜಕೀಯ ಮಾಡುತ್ತಾ ಕುಳಿತುಕೊಳ್ಳುವ ಬದಲು ಅತ್ಯಂತ ಕೆಟ್ಟ ಪಿಡುಗಾಗಿರುವ ಈ ದಂದೆಯನ್ನು ಮಟ್ಟಹಾಕುವ ಬಗ್ಗೆ ಆರೋಗ್ಯಕರವಾಗಿ ಚಿಂತಿಸುವ ಕಾಲ ಸನ್ನಿಹಿತನಾಗಿದೆ. ಇಂದು

ಮದ್ಯಪಾನ ಮತ್ತು ಮಾದಕ ದ್ರವ್ಯಗಳ ನಿಷೇಧ Read Post »

ಇತರೆ

ಚಪ್ಪರದ ಗಳಿಕೆ

ಅನುಭವ ಚಪ್ಪರದ ಗಳಿಕೆ ಶಾಂತಿವಾಸು ನಮ್ಮ ಮನೆಗೆ ಹೊದ್ದಿಸಿದ ಸಿಮೆಂಟ್ ಶೀಟ್ ಮೇಲೆ ಹತ್ತಿ ನಡೆಯಲಾರಂಭಿಸಿದರೆ ಸುಮಾರು ಇಪ್ಪತ್ತು ಮನೆಗಳನ್ನು ದಾಟಬಹುದಿತ್ತು.  ನಲವತ್ತು ವರ್ಷಗಳ ಮೊದಲು ನಮ್ಮ ರಸ್ತೆಯಲ್ಲಿ ಯಾವುದೇ ಮಹಡಿ ಮನೆ ಇರಲಿಲ್ಲ. ನೆರಳಿಗಾಗಿ ನಮ್ಮ ಮನೆಯ ಹೊಸ್ತಿಲಿನ ನಂತರ ಹತ್ತು ಅಡಿಗಳಷ್ಟು ಮುಂದಕ್ಕೆ, ಮೇಲೆ ಕವಲುಹೊಡೆದ ಉದ್ದದ ಊರುಗೋಲುಗಳನ್ನು ನಿಲ್ಲಿಸಿ ಮೇಲೆ ಚೌಕಟ್ಟು ಮಾಡಿ  ಇಪ್ಪತ್ತು ಅಡಿಗಳಷ್ಟು ಅಗಲಕ್ಕೆ ತೆಂಗಿನ ಗರಿಗಳನ್ನು ಹೊದಿಸಿದ್ದರು. ನಮ್ಮ ಮನೆ ಬಿಟ್ಟು ಎಡಗಡೆಗೆ ಬಾಡಿಗೆ ಮನೆಗಳು ಹಾಗೂ ಬಲಗಡೆಗೆ ಗಿಡಮರಗಳು (ಮಾವು ಹಾಗೂ ಸೀಬೆ), ಬಟ್ಟೆ ಒಗೆಯುವ ಕಲ್ಲು ಹಾಗೂ ಬಾಡಿಗೆ ಮನೆಯವರಿಗಾಗಿ ಒಂದು ನೀರಿನ ತೊಟ್ಟಿ ಇದ್ದಿತು.  ಬೆಳಗ್ಗೆ ಸಂಜೆ ಕಾಫೀ ಕುಡಿಯಲು ಚಪ್ಪರದ ನೆರಳು ಒಳ್ಳೆಯ ಜಾಗವಾಗಿತ್ತು.    ನಮ್ಮ ಮನೆಯಲ್ಲಿ ಮೊದಲೇ ಬಾಡಿಗೆಗಿದ್ದ ತಮ್ಮನ ಸಂಸಾರದೊಡನೆ ಸೇರಿಕೊಳ್ಳಲು ಆಂಧ್ರದ ಒಂದು ಹಳ್ಳಿಯಿಂದ ಇಪ್ಪತ್ತು ವರ್ಷ ವಯಸ್ಸಿನ ಮಗನೊಡನೆ ಬಂದ ಕುಂಟಮ್ಮನಿಗೆ (ಶಾಂತಮ್ಮ ಇವರ ಹೆಸರು) ಒಂದು ಕಾಲು ಚಿಕ್ಕದಾದ್ದರಿಂದ ಕುಂಟುತ್ತಾ ಸ್ವಲ್ಪ ದೂರವೂ ನಡೆಯಲಾಗುತ್ತಿರಲಿಲ್ಲ. ಅಲ್ಲದೆ ಒಂದೇ ಕಡೆ ಗಂಟೆಗಟ್ಟಲೆ ಕುಳಿತಿರುತ್ತಿದ್ದರಿಂದ ತುಂಬಾ ದಪ್ಪಗಾಗಿದ್ದರಲ್ಲದೆ   ಸೋರುವಂತೆ ತಲೆಗೆ ಹಚ್ಚುತ್ತಿದ್ದ ಎಣ್ಣೆ, ಕಪ್ಪಾಗಿದ್ದ ಮುಖವನ್ನು ಫಳಫಳನೆ ಹೊಳೆಯುವಂತೆ ಮಾಡಿತ್ತು. ವಿಧವೆಯಾದ್ದರಿಂದ ಕುಂಕುಮವಿರದ ಬೋಳು ಹಣೆ, ಕೈಗಳಿಗೊಂದೊಂದು ಮಾಸಿದ ಹಿತ್ತಾಳೆಯ ಬಳೆ, ಕಿವಿಗಳಿಗೆ  ತೆಳುವಾದ ಪುಟ್ಟ ಚಿನ್ನದ ಓಲೆ, ಏಳುಕಲ್ಲಿನ ಮೂಗುತ್ತಿ ಧರಿಸಿದ್ದಾಕೆಗೆ ಬೇರೆ ಒಡವೆಗಳಿರಲಿಲ್ಲ.  ಬೆಳಗ್ಗೆ ಎಂಟು ಗಂಟೆಗೆಲ್ಲಾ ಚಪ್ಪರದ ಕೆಳಗೆ ಕುಳಿತು ಮುತ್ತುಗದ ಎಲೆಗಳನ್ನು ಒಪ್ಪ ಮಾಡಿ, ಊಟದ ಎಲೆಗಳನ್ನು ಕಡ್ಡಿಗಳಿಂದ ಹೊಲಿಯುತ್ತಿದ್ದರು. ಮಗ ಎಲೆಗಳು ಹಾಗೂ ಅವನ್ನು ಹೊಲಿಯಲು ಕಡ್ಡಿಗಳನ್ನು ತಂದು ಕೊಟ್ಟು ಹೊಲಿದ ಎಲೆಗಳನ್ನು ತೆಗೆದುಕೊಂಡು ಹೋಗಿ ಅಂಗಡಿಗಳಿಗೆ  ಮಾರಿ ಬರುತ್ತಿದ್ದ. ಅದರಲ್ಲಿಯೇ ಅಮ್ಮ ಮಗನ ಜೀವನ  ನಡೆಯುತ್ತಿತ್ತು. ಅಲ್ಲದೆ ಮತ್ತೊಂದು ಜೊತೆ  ಬಿಳಿಕಲ್ಲಿನ ದೊಡ್ಡ ಓಲೆ ಕೊಳ್ಳುವ ಉದ್ದೇಶದಿಂದ ಕಷ್ಟಪಟ್ಟು ಹಣ ಕೂಡಿಡುತ್ತಿದ್ದರು. ನಾವು ಯಾರೇ ಮನೆಯಲ್ಲಿರಲಿ ಬಿಡಲಿ ಕುಂಟಮ್ಮ ಮಾತ್ರ ತಮ್ಮ ವಸ್ತುಗಳೊಡನೆ ನಿಶ್ಚಿತ ಸ್ಥಳದಲ್ಲಿ ಇದ್ದೇ ಇರುತ್ತಿದ್ದರು. ಆರು ಗಂಟೆಯ ನಂತರ ಅವರ ಎಲ್ಲ ವಸ್ತುಗಳನ್ನು ಸುಣ್ಣಬಳಿದ ಗೋಡೆಗೊತ್ತಿ ಬಿಟ್ಟು ಹೋಗುತ್ತಿದ್ದರು. ನಮ್ಮ ಮನೆಗೆ ಬರುವವರಾಗಲಿ ಅಥವಾ ಅವರ ಮನೆಗೆ ಬರುವವರಾಗಲಿ ಚಪ್ಪರದ ಕೆಳಗೆ ಕುಳಿತುಕೊಳ್ಳುತ್ತಿದ್ದರು. ಗಂಡಸರಾದರೆ ಹಲಗೆ ಮುಚ್ಚಿದ ತೊಟ್ಟಿಯ ಮೇಲೆ ಇಬ್ಬರು ಹಾಗೂ ಕಬ್ಬಿಣದ ಮಡಚುವ ಖುರ್ಚಿಯಲ್ಲಿ ಒಬ್ಬರು ಕೂರಬಹುದಿತ್ತು. ಹೆಂಗಸರು ಮಕ್ಕಳೆಲ್ಲಾ ಸಗಣಿಯಿಂದ ಸಾರಿಸಿದ ನೆಲದ ಮೇಲೆ ಕೂರುವುದು ಸಾಮಾನ್ಯವಾಗಿತ್ತು. ಬಂದವರೊಡನೆ ಮಾತನಾಡುತ್ತಲೇ ಪ್ಲಾಸ್ಟಿಕ್ ಬುಟ್ಟಿಗಳನ್ನು ಹೆಣಿಯುತ್ತಿದ್ದ ನಮ್ಮ ತಾಯಿ, ಕೇಳಿದವರಿಗೆ ಮಾರುತ್ತಿದ್ದರು. ನಮ್ಮಮ್ಮ, ಚಪ್ಪರದಾಚೆ ಬಲಗಡೆ ಮಣ್ಣು ಅಗೆದು ಗೊಬ್ಬರ ಹಾಕಿ ಮನೆಯ ಸಿಮೆಂಟ್ ಶೀಟಿನ ಮೇಲೆ ಬರುವಂತೆ ಸಿಹಿಗುಂಬಳ, ಬೂದುಗುಂಬಳ, ಪಡವಲ, ಹೀರೆ, ತುಪ್ಪೀರೆಕಾಯಿಗಳನ್ನು (ಇವ್ಯಾವುದನ್ನೂ ನಮ್ಮ ಮನೆಯಲ್ಲಿ ಯಾರೂ ತಿನ್ನುತ್ತಿರಲಿಲ್ಲ) ಹಾಗೂ ಚಪ್ಪರದ ಮೇಲೆ ಹವಾಮಾನಕ್ಕೆ ತಕ್ಕಂತೆ ಚಪ್ಪರದ ಅವರೆ ಅಥವಾ ಹಾಗಲಕಾಯಿ ಹಾಗೂ ಮನೆಯ ಮುಂದಿನ ಮಣ್ಣಿನ ಜಾಗದಲ್ಲಿ ಹಲವು ಬಗೆಯ ಹೂವುಗಳು, ಟೊಮ್ಯಾಟೋ, ಬೆಂಡೆಕಾಯಿಗಳನ್ನು ಬೆಳೆದು, ಅಗತ್ಯವಿರುವಷ್ಟನ್ನು ಉಪಯೋಗಿಸಿ ಮಿಕ್ಕಿದ್ದನ್ನು ಮಾರುತ್ತಿದ್ದರು. ಇವುಗಳಿಂದ ಬರುವ ವರಮಾನ ನಮ್ಮಮ್ಮನದು. ಮಧ್ಯಾನ್ಹದವರೆಗೂ ಕೆಲಸ, ಊಟ ಮುಗಿಸಿ ಬರುವ ಅಕ್ಕಪಕ್ಕದ ಮನೆಯ ನಮ್ಮಮ್ಮನ ಗೆಳತಿಯರು ಶಾಂತಮ್ಮನ ಊಟದೆಲೆ ಹಾಗೂ ನಮ್ಮಮ್ಮನ ಬುಟ್ಟಿ, ಹೂವು ಹಾಗೂ ತರಕಾರಿಗಳ                      ಗ್ರಾಹಕರುಗಳಾಗಿದ್ದರು. ನಮ್ಮ ತಾತ ಸ್ವಂತದ ಸೌದೆ ಡಿಪ್ಪೋ ಹೊಂದಿದ್ದರು. ವಯಸ್ಸಾದ ನಂತರ ಅದನ್ನು ಮಾರಿ ಮನೆಯಲ್ಲಿಯೇ ಇರುತ್ತಿದ್ದರು. ಮೂರು ಜನರು ಕೂರಬಹುದಾದ ಮರದ ಬೆಂಚೊಂದನ್ನು ಬೆಳಗ್ಗಾದರೆ ಮನೆಯೊಳಗಿನಿಂದ ಚಪ್ಪರದ ಕೆಳಗೆ ಹಾಕಿಸಿಕೊಂಡು ಕೂರುತ್ತಿದ್ದರು, ಸೊಂಟ ನೋಯುವಾಗ ಮಲಗುತ್ತಿದ್ದರು. ಹಲವಾರು ಮನೆಯ ಪಂಚಾಯಿತಿಗಳು, ಮದುವೆಯ ಮಾತುಕತೆ, ಪಂಚಾಂಗ(ತೆಲುಗು) ನೋಡಿ ಮದುವೆ ದಿನ ಗೊತ್ತು ಮಾಡುವುದೆಲ್ಲವೂ ಈ ಚಪ್ಪರದ ಕೆಳಗೇ ನಮ್ಮ ತಾತನ ಮೇಲುಸ್ತುವಾರಿಯಲ್ಲಿ ನಡೆಯುತ್ತಿತ್ತು. ತಾತನನ್ನು ನೋಡಲು ಬರುವವರು ಕಡಲೆಕಾಯಿ, ಗೆಣಸು, ತೆಂಗಿನಕಾಯಿಗಳನ್ನು ತಂದುಕೊಡುತ್ತಿದ್ದರು.   ನಮ್ಮ ತಂದೆ ಆಂಧ್ರದ ಕಡೆಯವರು, ತಾಯಿ ತಮಿಳುನಾಡಿನ ತೆಲುಗು ಭಾಷಿಕರು. ಹೀಗಾಗಿ ಎರಡೂ ಕಡೆಯ ನೆಂಟರಿಂದ ಸದಾ ತುಂಬಿರುತ್ತಿದ್ದ ಮನೆ ನಮ್ಮದು. ಬಂದವರು ಎರಡು ಮೂರು ದಿನ ತಂಗಿ ವಾಪಸ್ಸು ಹೊರಟರೆ, ಈ ಚಪ್ಪರದ ಕೆಳಗೆ ಒಲೆ ಬಾಣಲೆ ಇಟ್ಟು, ಚೆಕ್ಕುಲಿ ಇಲ್ಲದಿದ್ದರೆ ಕರ್ಜಿಕಾಯಿ ಮಾಡಿ ಊರಿಗೆ ಕೊಟ್ಟುಕಳಿಸುವ ದೃಶ್ಯ ಆಗಾಗ ನೆನನಾಗುತ್ತದೆ. ಯಾಕೆಂದರೆ ಅಪ್ಪಿತಪ್ಪಿ ಹುಷಾರಿಲ್ಲದೆಯೋ ಅಥವಾ ಸಮಯ ಒದಗಿ ಬರದೆ ಕುರುಕಲು ಮಾಡಿಕೊಡಲಿಲ್ಲವೆಂದರೆ  ಮುಖ ತಿರುವಿ ಹೋದ ನೆಂಟರನ್ನು ಮರೆಯಲಾದೀತೇ??  ದೀಪಾವಳಿ ಹಬ್ಬದ ಹಿಂದಿನ ದಿನ ನಮ್ಮ ಸೋದರಮಾವಂದಿರು ಬಂದು, ಇದೇ ಚಪ್ಪರದ ಕೆಳಗೆ ಕಲ್ಲುಗಳನ್ನು ಪೇರಿಸಿ,  ತಲೆಯಮೇಲೆ ಗರಿಕೆ ಹುಲ್ಲು ಸಿಕ್ಕಿಸಿದ ಸಗಣಿಯ ಗಣಪನನ್ನು ಪ್ರತಿಷ್ಠಾಪಿಸಿ, ಪೂಜೆ ಮಾಡಿ, ಒಲೆ ಹಚ್ಚಿ, ಸುತ್ತ ಕುಳಿತು ರಾಶಿರಾಶಿ ಕಜ್ಜಾಯ ಮಾಡುತ್ತಿದ್ದ ಸಂಭ್ರಮವನ್ನು ಎಲ್ಲರೂ ನೆನಪಿಸಿಕೊಳ್ಳುವುದುಂಟು.    ನಮ್ಮಲ್ಲಿಯ ಹೆಣ್ಣು ಮಕ್ಕಳು ದಾಟದ ಹತ್ತನೇ ತರಗತಿಯನ್ನು ನಮ್ಮಕ್ಕ ಪಾಸು ಮಾಡಿಬಿಟ್ಟಿದ್ದರು. ನಮ್ಮಪ್ಪ ಹಾಗೂ ತಾತನ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ. ಸಂತೋಷ ಹಂಚಿಕೊಳ್ಳಲು ಲಾಡು ಮಾಡುವವರನ್ನು ಕರೆಸಿ, ಇನ್ನೂರು ಲಾಡುಗಳನ್ನು  (ಚಪ್ಪರದ ಕೆಳಗೆ) ಮಾಡಿಸಿ, ಮನೆಗೆ ಬಂದವರಿಗೆ, ರಸ್ತೆಯಲ್ಲಿ ಓಡಾಡುವ ಪರಿಚಯದವರಿಗೆ,  ಕೆಲವು ಮನೆಗಳಿಗೆ ನಡೆದು ಮತ್ತು ಬಸ್ಸಿನಲ್ಲಿಯೂ ಹೋಗಿ ಕೊಟ್ಟು ಬಂದರು ನಮ್ಮ ತಂದೆ. ನಮ್ಮ ಚಪ್ಪರದ ಊರುಗೊಲಿಗೆ ಬಾಡಿಗೆ ಮನೆಯ ನಾಗಮ್ಮ ತಮ್ಮ ಒಂದೂವರೆ ವರ್ಷದ ಮಗ, ರಾಜನ ಒಂದು ಕಾಲು ಕಟ್ಟಿಹಾಕಿ ಮನೆಗೆ ಹೋಗಿಬಿಡುವರು. ಅವರು ಕೆಲಸ ಮುಗಿಸಿ ಬರುವವರೆಗೂ  ಅಳುತ್ತಲೋ, ಅರಚುತ್ತಲೋ ಉಚ್ಛೆಹುಯ್ದುಕೊಂಡು ಅದರಲ್ಲಿಯೇ ಒದ್ದಾಡಿಕೊಂಡು ಅವನು ಕುಳಿತಿರುತ್ತಿದ್ದ ಕೆಲವೊಮ್ಮೆ ಅಲ್ಲಿಯೇ ನಿದ್ರಿಸಿಯೂ ಬಿಡುತ್ತಿದ್ದ. ರಜಾ ದಿನಗಳಲ್ಲಿ ನಾನು, ನನ್ನ ತಂಗಿ ಉಮಾ ಕೆಲವು ಗೆಳತಿಯರೊಡನೆ ಸೇರಿ ಚಪ್ಪರಕ್ಕೆ ಸೀರೆಗಳನ್ನು ಪರದೆಯಂತೆ ಸಿಕ್ಕಿಸಿ ಒಳಾಂಗಣವನ್ನು ವೇದಿಕೆಯನ್ನಾಗಿಸಿ, ಐದೈದು ಪೈಸೆ ವಸೂಲಿ ಮಾಡಿ ವಿಧವಿಧವಾದ ನಾಟಕಗಳನ್ನಾಡಿ, ಬಂದ ಹಣವನ್ನು ಹಂಚಿ ಕಮ್ಮರ್ಕಟ್ಟು ತಿಂದುಬಿಡುತ್ತಿದ್ದೆವು. ಇಂಥ ಬಹುಪಯೋಗಿ ಚಪ್ಪರವು ನೋಡಲು ಬಹು ಸುಂದರವಾಗಿತ್ತು. ಮೇಲೆ ಬೀಳುವ ಮುಂಜಾವಿನ ಬಿಸಿಲಿನ ತೆಳುಕಿರಣಗಳು ಚಪ್ಪರಕ್ಕೆ ಹಾಸಿದ್ದ ಗರಿಗಳ ಸಂದುಗಳಿಂದ  ಓರೆಯಾಗಿ ಬಿದ್ದು ನೆಲವನ್ನು ಒಂದು ತೆರನಾಗಿ ಅಂದಗೊಳಿಸಿದರೆ, ಬೇಸಿಗೆಯಲ್ಲಿ ನೆಲದ ಮೇಲೆ ಮೂಡುವ ದಟ್ಟ ಕಪ್ಪು ನೆರಳಿನೊಂದಿಗಿನ ಬೆಳಕು ವರ್ಣನಾತೀತವಾದದ್ದು. ಮಳೆಗಾಲದಲ್ಲಿ ಪಟಪಟನೆ ಸದ್ದು ಮಾಡಿ ನೀರು ಸೋರುತ್ತಿದ್ದ ಚಪ್ಪರವು, ಚಳಿಗಾಲದ ಬೆಳಗು ಹಾಗೂ ಸಂಜೆ ಕಣ್ಣಿಗೆ ಕಾಣದಷ್ಟು ದಟ್ಟವಾದ ಹಿಮದಿಂದ ಮುಚ್ಚಿ ಹೋಗಿರುತಿತ್ತು. ಈ ಹಿಮದ ಮದ್ಯೆ ಬುಟ್ಟಿ ಹೊತ್ತು ಬಂದ ಹೂವಿನವಳು ಮೊಳ ಹಾಕುತ್ತಿದ್ದ ಮಲ್ಲಿಗೆ ಹೂವಿನ ವಾಸನೆಯ ಅಮಲು, ನೆನೆದಾಗಲೆಲ್ಲಾ ನನ್ನನ್ನು ಸ್ವರ್ಗದಲ್ಲಿ ತೇಲಿಸುತ್ತದೆ. ಇಷ್ಟೆಲ್ಲಾ ಮೇರು ಮಹಿಮೆಯುಳ್ಳ ಚಪ್ಪರದ ಕೆಳಗೆ, ಬೆಳದಿಂಗಳ ಚಂದ್ರನು ಮೂಡಿಸಿದ ಅಂದದ ಚಿತ್ತಾರದ ಮೇಲೆ ಕುಳಿತು  ನನ್ನಮ್ಮ ಬೇಳೆ, ಒಣಮೆಣಸಿನಕಾಯಿ  ಜೊತೆಗೆ ಟೊಮ್ಯಾಟೋ, ಈರುಳ್ಳಿ, ಬೆಳ್ಳುಳ್ಳಿ, ಹುಣಸೆಹಣ್ಣು, ಉಪ್ಪು ಹಾಕಿ ಬೇಯಿಸಿ ಮಸೆದ ಸಾರು, ನೆಂಚಿಕೊಳ್ಳಲು ಒಂದು ಅಥವಾ ಎರಡು ವರ್ಷ ಹಳೆಯದಾದ ಒಣಗಿಸಿದ ಮಾವಿನಕಾಯಿಯಿಂದ ಮಾಡಿದ ಉಪ್ಪಿನಕಾಯಿ ರುಚಿಯನ್ನು ಬಾಯಿಚಪ್ಪರಿಸುತ್ತಾ ಅಕ್ಕತಂಗಿಯರೊಂದಿಗೆ ಊಟವನ್ನು ಹಂಚಿ ತಿಂದ ನನ್ನ ಭಾಗ್ಯಕ್ಕೆ ಮಿತಿಯೇ ಇಲ್ಲ… *******************************************

ಚಪ್ಪರದ ಗಳಿಕೆ Read Post »

ಇತರೆ, ಜೀವನ

ಲೆಕ್ಕಕ್ಕೊಂದು ಸೇರ್ಪಡೆ

ಲೇಖನ ಲೆಕ್ಕಕ್ಕೊಂದು ಸೇರ್ಪಡೆ ಶಾಂತಿ ವಾಸು ಚೀನಿಯರ ಕೆಟ್ಟ ಮನಸ್ಥಿತಿಯ ಕನ್ನಡಿ ಕೊರೊನ, ಭಾರತವನ್ನು ಪ್ರವೇಶಿಸುವ ಮೊದಲೇ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ, ಸಂಪೂರ್ಣ ದೇಹವನ್ನು ಅದೇನೋ ಹೊಸತರಹದ ದಿರಿಸಿನಿಂದ ಮುಖಸಹಿತ ಮುಚ್ಚಿಕೊಂಡ ಜನರು ಪ್ಲಾಸ್ಟಿಕ್ ಚೀಲದಲ್ಲಿ ಬಿಗಿಯಾಗಿ ಸುತ್ತಿದ ನೂರಾರು ಜನರ ಮೃತದೇಹಗಳನ್ನು ಒಟ್ಟೊಟ್ಟಿಗೇ, ಆಳವಾದ ಒಂದೇ ಹಳ್ಳದಲ್ಲಿ ಹಾಕಿ ಮಣ್ಣು ಮುಚ್ಚುವುದು ಹಾಗೂ ಪೆಟ್ರೋಲ್ ಸುರಿದು ಸಾಮೂಹಿಕವಾಗಿ ಸುಡುವುದನ್ನು ನೋಡಿಯೇ ಪ್ರಪಂಚವು ನಡುಗಿಹೋಗಿತ್ತು. ಇದೇನು?? ಹೊಸದಾಗಿ ನಡೆದದ್ದೇ? ಅಥವಾ ಯಾವುದಾದರೂ ಸಿನಿಮಾಗಾಗಿ ಇರಬಹುದೇನೋ ಎಂದು ಗೊಂದಲಗೊಂಡ ಕೋಟ್ಯಂತರ ಭಾರತೀಯರಲ್ಲಿ ನಾನೂ ಒಬ್ಬಳು. ನಂತರದ ದಿನಗಳಲ್ಲಿ ಗುಂಪುಗುಂಪಾಗಿ ಚೀನೀ ಜನರು ನಿಂತಲ್ಲಿಯೇ ಹುಳುಗಳಂತೆ ಮುದುರಿ ಬೀಳುವ ದೃಶ್ಯವನ್ನು ಮಾಧ್ಯಮಗಳಲ್ಲಿ ತೋರಿಸಲಾಯಿತು. ಇದನ್ನು ಕಂಡ ನಮ್ಮನ್ನು ಹೆಚ್ಚಾಗಿ ಕಾಡಿದ್ದೆಂದರೆ, ಬಿದ್ದವರನ್ನು ಗಮನಿಸುವುದಾಗಲೀ ಏನಾಯಿತೆಂದು ತಿರುಗಿಯೂ ನೋಡುವ ವ್ಯವಧಾನವೋ ಕರುಣೆಯೋ ಇಲ್ಲದವರಂತೆ ಭಾವನಾರಹಿತರಾಗಿ ಓಡಾಡುತ್ತಿದ್ದ ಮಾಸ್ಕ್ ಧರಿಸಿದ ಚೀನಾ ಜನರ ಹೃದಯಹೀನತೆ. ಆಸ್ಪತ್ರೆಯ ದೃಶ್ಯಗಳಲ್ಲಿ ವೆಂಟಿಲೇಟರ್ ಹಾಕಿದ್ದರೂ ಉಸಿರಾಡಲು ಕಷ್ಟಪಡುವ ರೋಗಿಗಳ ನರಳಾಟ ಎಂಥಹವರ ಕಣ್ಣಲ್ಲೂ ನೀರು ತರಿಸುವಂತಿತ್ತು. ಕೊರೊನ ಎಂಬ ಹೊಸ ಖಾಯಿಲೆಯಿಂದ ಸಾವಿರಾರು ಸಂಖ್ಯೆಯ ಜನರು ಬೀದಿ ಹೆಣಗಳಾಗುತ್ತಿದ್ದಾರೆಂದೂ ಅವರನ್ನೆಲ್ಲಾ ಸಾಮೂಹಿಕವಾಗಿ ಹೂಳುತ್ತಿದ್ದಾರೆಂಬುದನ್ನೂ ನಾವೆಲ್ಲಾ ಅರಗಿಸಿಕೊಳ್ಳುವಷ್ಟರಲ್ಲಿ ನಮ್ಮೆಲ್ಲರ ಮಧ್ಯೆ ತನ್ನ ಕದಂಬಬಾಹುಗಳನ್ನು ಚಾಚಲು ಪ್ರಾರಂಭಿಸಿಯೇ ಬಿಟ್ಟಿತ್ತು ಅದೇ ಚೀನಾದ ಅನಾಮಿಕ ವೈರಸ್.. ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯರ ಜೀವನದಲ್ಲೂ ಪ್ರಬಲ ಬದಲಾವಣೆ ತಂದ ಈ ವೈರಸ್ ಇಲ್ಲಿಯ ತನಕ ಲಕ್ಷಾಂತರ ಮಂದಿಯ ಪ್ರಾಣವನ್ನು ಬಲಿ ಪಡೆದಿದೆ. ಹಾಗೂ ಇನ್ನೂ ಮುಂದುವರೆಯುವ ಲಕ್ಷಣಗಳು ನಿಚ್ಚಳವಾಗಿವೆ.. ಪ್ರತಿ ಧರ್ಮದವರೂ ಅವರವರದೇ ರೀತಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಿ ಮೃತರ ಆತ್ಮವನ್ನು ಅಂತರಾತ್ಮನಲ್ಲಿ ವಿಲೀನಗೊಳಿಸುವ ಶ್ರೇಷ್ಠಪದ್ಧತಿಯನ್ನು ರೂಢಿಸಿಕೊಂಡು ಬಂದ ನಮ್ಮ ಭಾರತದಂತಹ ಪುಣ್ಯಭೂಮಿಯಲ್ಲಿ ಬದುಕಿದ ಮನುಷ್ಯರು ಬೀದಿ ಹೆಣಗಳಾಗಿಸುವುದನ್ನೂ, ಸತ್ತವರನ್ನು ದರದರನೇ ಎಳೆದೊಯ್ದು ಎತ್ತಿ ಹಳ್ಳಕ್ಕೆ ಬಿಸಾಡುವುದನ್ನು ಎಂದಿಗೂ ಯಾರೂ ಕಲ್ಪಿಸಿಯೂ ಇರಲಾರರು. ನಮ್ಮ ಸಂಸ್ಕೃತಿಯಲ್ಲಿಲ್ಲದ ಅನೇಕ ವಿಷಯಗಳಲ್ಲಿ ಅನ್ಯರನ್ನು ಅನುಸರಿಸುತ್ತಿರುವ ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನುಷ್ಯರ ಸಂಸ್ಕಾರವನ್ನೂ ಅಮಾನುಷ್ಯವಾಗಿ ನಡೆಸಿಬಿಟ್ಟೆವು. ತನ್ನ ದೇಹಕ್ಕೆಂಥಹ ಅವಮಾನವಾಗುತ್ತಿದೆ ಎಂದು ಮೃತರಿಗೆ ತಿಳಿಯುವುದಿಲ್ಲವಾಗಲೀ, ಹತ್ತಿರ ಸುಳಿಯಲು ಅವಕಾಶವಿಲ್ಲದೆ ದೂರದಲ್ಲಿ ನಿಂತು ನೋಡುತ್ತಿರುವ ಸಂಬಂಧಿಕರು ಅಥವಾ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದ ಸಾರ್ವಜನಿಕರಲ್ಲಿ ಎಂಥ ಭಾವನೆ ಹಾಗೂ ಭಯ ಹುಟ್ಟಿಸುತ್ತಿವೆ ಎಂದು ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಮೋದಿ ಬೇಕಾ ಮನಮೋಹನ್ ಸಿಂಗ್ ಬೇಕಾ ಎಂದು ಕೇಳಿ, ಒಂದನ್ನು ಒತ್ತಿ ಎರಡನ್ನು ಒತ್ತಿ ಎನ್ನುತ್ತಾ, ಮುಂದಿನ ಪ್ರಧಾನಿ ಯಾರೆಂಬ ದೊಡ್ಡ ಸಮೀಕ್ಷೆಯನ್ನು ಸರಳವಾಗಿ ಸದ್ದಿಲ್ಲದೇ ನಡೆಸಿ ನಿಂತಗಳಿಗೆಯಲ್ಲಿಯೇ ಮುಂದಿನ ಪ್ರಧಾನಿ ಯಾರೆಂದು ನಿಖರತೆ ಸಾರುವ ಆಪ್ಗಳು(app), ಕೇವಲ ಒಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳು ಉಳಿದಿವೆ, ಕೋವಿಡೇತರ ರೋಗಿಗಳು ಯಾವ ಆಸ್ಪತ್ರೆಯನ್ನು ಎಡತಾಕಬೇಕು ಎಂಬ ವಿವರ ಒದಗಿಸುವುದನ್ನು ನಿರಾಕರಿಸುತ್ತಿವೆ ಏಕೆ?? ಪ್ರಮಾದಗಳನ್ನು ತಡೆಯಲಾಗದ ಇಚ್ಚಾಶಕ್ತಿಯ ಕೊರತೆ, ಕೊರೊನಾದಿಂದ ಧಿಡೀರನೆ ವ್ಯಕ್ತಿಯನ್ನು ಕಳೆದುಕೊಂಡ ದುಃಖ, ಮುಂದೇನು ಎಂದು ದಿಕ್ಕುತೋರದೆ ಚಿಂತೆಗೊಳಗಾದ ಕುಟುಂಬಸ್ಥರಿಗೆ, ಕೊನೆಪಕ್ಷ ಮೃತರ “ಮರ್ಯಾದಾ ಶವಸಂಸ್ಕಾರ”ದ ಭರವಸೆ ನೀಡುವಲ್ಲಿ ವಿಫಲವಾಯಿತು. ಸಾರ್ವಜನಿಕರಾದ ನಾವು ಅರಿತಿರಲೇಬೇಕಾದ ವಿಷಯವೆಂದರೆ ಯಾವುದೇ ಪಕ್ಷವಾಗಲಿ ಪ್ರಜಾಪ್ರಭುತ್ವದಲ್ಲಿ ಹಲವರು ಆಶಿಸಿದಂತೆ ಆಳಲು ಬರುವ ಜನನಾಯಕರ ಪ್ರಭುತ್ವವನ್ನೇ, ಆಯ್ಕೆ ಮಾಡದವರೂ ಸಹಾ ಒಪ್ಪಿಕೊಳ್ಳಬೇಕಾಗುತ್ತದೆ. ನಾವು ಆರಿಸಿದ ವ್ಯಕ್ತಿಯು ನಮ್ಮನ್ನು ಅವರಾಯ್ಕೆಯ ಹಲವರ ಅಧೀನಕ್ಕೆ ತಳ್ಳಿಬಿಡುವ ಸತ್ಯವನ್ನು ನಾವು ಅರಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಕೊರೊನಾದಂತಹ ಲೋಕವ್ಯಾಪಿ ಸಮಸ್ಯೆಯ ಸನ್ನಿವೇಶವನ್ನೆದುರಿಸಿದ ಯಾವುದೇ ಜನರು ನಮ್ಮ ಮಧ್ಯೆ ಇಲ್ಲ. ನಮ್ಮ ದೇಶದ್ದಲ್ಲದ ಹಂತಕ ವೈರಸ್ಸಿನ ದಮನ ಮಾಡುವ ಔಷಧ ಬರುವ ತನಕ ಸಾರ್ವಜನಿಕರಾದ ನಮ್ಮ ಜವಾಬ್ದಾರಿಯೂ ದೊಡ್ಡದಿದೆ. ಆದರೆ ಅದನ್ನು ಸರಳಗೊಳಿಸಿಕೊಂಡು,ಆದಷ್ಟು ಮನೆಯಲ್ಲಿರುವುದು, ಹೊರಹೋಗುವಾಗ ಮೂಗುಬಾಯಿ ಮುಚ್ಚುವ ಮಾಸ್ಕ್ ಧರಿಸುವುದು, ಸೋಪಿನಿಂದ ಆಗಾಗ ಕೈಗಳನ್ನು ತೊಳೆಯುವುದರಿಂದ ಕೊರೊನ ತಡೆಯಬಹುದೆಂದಾದರೆ, ಇವೆಲ್ಲವನ್ನು ಅನುಸರಿಸಿ ಹೊಸ ಔಷದಕ್ಕೆ ಪ್ರಯೋಗ ಶಿಶುವಾಗುವುದನ್ನು ಹಾಗೂ ಸರ್ಕಾರೀ ಲೆಕ್ಕ ಪುಸ್ತಕದ ಖಾಯಿಲೆಗೋ ಅಥವಾ ಸಾವಿಗೋ ನಾವು ಒಂದು ಸಂಖ್ಯೆಯಾಗುವುದನ್ನು ತಪ್ಪಿಸಬಹುದು. ***********************

ಲೆಕ್ಕಕ್ಕೊಂದು ಸೇರ್ಪಡೆ Read Post »

ಇತರೆ, ಗಾಂಧಿ ವಿಶೇಷ

ಉತ್ತರ ಕನ್ನಡ ಜಿಲ್ಲೆ ದಾರಿಯಲ್ಲಿ ಗಾಂಧಿ ಬಂದು ಹೋಗಿದ್ದರು….

ಗಾಂಧಿ ವಿಶೇಷ  ಉತ್ತರ ಕನ್ನಡ ಜಿಲ್ಲೆ ದಾರಿಯಲ್ಲಿ  ಗಾಂಧಿ  ಬಂದು ಹೋಗಿದ್ದರು…. ಗಾಂಧಿಜೀ ಉತ್ತರ ಕನ್ನಡ ಜಿಲ್ಲೆಯ ಪ್ರವಾದ ನನಗೆ  ಮುಖ್ಯವಾಗುವುದು ಮೂರು ಕಾರಣಗಳಿಗೆ. ಒಂದನೇ ಕಾರಣ ಗಾಂಧಿಜೀ ಅಸ್ಪೃಶ್ಯತೆಯನ್ನು ಜನರ ಮನದಿಂದ ಕಿತ್ತೊಗೆಯಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಎರಡನೇ ಕಾರಣ ದೇವಸ್ಥಾನದಲ್ಲಿನ ಪ್ರಾಣಿ ಬಲಿ ನಿಲ್ಲಿಸಲು ಯತ್ನಿಸಿದರು ಹಾಗೂ ಇದರಲ್ಲಿ ಯಶಸ್ವಿಯಾದರು. ಮೂರನೇ ಕಾರಣ  ಬಾಲವಿಧವೆಯರ ಕೇಶ ಮುಂಡನೆಯಂಥ ಸಂಪ್ರದಾಯವನ್ನು ನಿಲ್ಲಿಸಿದರು. ವಿಶೇಷವೆಂದರೆ ಈ ಮೂರು ಘಟನೆಗಳು ನಡೆದದ್ದು ೧೯೩೪ ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದಾಗ ಎಂಬುದು ಗಮನಾರ್ಹ.   ಇದಕ್ಕೆ ಭಾರತದಲ್ಲಿ ಆಗ ಪ್ರಕಟವಾಗುತ್ತಿದ್ದ ದಿನ ಪತ್ರಿಕೆ ವರದಿಗಳೇ ಸಾಕ್ಷಿ. ಅಲ್ಲದೇ  ಗಾಂಧಿಜೀಯೇ ಹೊರ ತರುತ್ತಿದ್ದ ಪತ್ರಿಕೆಯಲ್ಲಿ ಈ ಸಂಗತಿಗಳು ದಾಖಲಾಗಿವೆ.  ಮುಂಬೈ ಪ್ರಾವಿಜೆನ್ಸಿಯಲ್ಲಿದ್ದ ಅಂದಿನ ಕೆನರಾ ಜಿಲ್ಲೆ, ಇಂದಿನ ಕಾರವಾರ ಜಿಲ್ಲೆಯನ್ನು ಸುಬ್ರಾಯ್  ರಾಮಚಂದ್ರ ಹಳದೀಪುರ  ಪ್ರಜಾಪ್ರತಿನಿಧಿಯಾಗಿ ಪ್ರತಿನಿಧಿಸುತ್ತಿದ್ದರು. ಅಲ್ಲದೇ ಗಾಂಧಿಜೀಯನ್ನು ಮುಂಬಯಿನಲ್ಲಿ ಭೇಟಿಯಾಗಿ ಕಾರವಾರಕ್ಕೆ ಬರುವಂತೆ ಆಹ್ವಾನಿಸಿದ್ದರು. ೧೯೩೪ರಲ್ಲಿ ಅಸ್ಪೃಶ್ಯತೆಯ ವಿರುದ್ಧ ಜಾಗೃತಿಗಾಗಿ ಗಾಂಧಿಜೀ ಭಾರತ ಪ್ರವಾಸ ಕೈಗೊಂಡಿದ್ದರು. ೨೩ ಫೆಬ್ರುವರಿ ೧೯೩೪ರಲ್ಲಿ ಮಂಗಳೂರು ಪ್ರವಾಸ ಮುಗಿಸಿ, ಫೆ.೨೮ ರಂದು ಕುಮಟಾ ತಲುಪಿದ ಗಾಂಧಿಜೀ, ಕುಮಟಾ ಹಾಗೂ  ಅಂಕೋಲಾದಲ್ಲಿ ಅಸ್ಪೃಶ್ಯತೆಯ ಅನಿಷ್ಠದ ವಿರುದ್ಧ ಮಾತನಾಡಿದ್ದರು.  ಗಾಂಧೀಜಿ ಸಂಜೆ ಕಾರವಾರಕ್ಕೆ ಬಂದರು. ಅವರನ್ನು ಸುಬ್ಬರಾವ್ ಆರ್. ಹಳದೀಪುರ ಸ್ವಾಗತಿಸಿದರು. ಕಾರವಾರ ನಗರಸಭೆಯಿಂದ ಆಗ ಗಾಂಧಿಜೀಯನ್ನು  ಸನ್ಮಾನಿಸಲಾಗಿತ್ತು.  ಗಾಂಧಿಜೀಗೆ ನೀಡಿದ ಸ್ಮರಣಿಕೆಯನ್ನು ಗಾಂಧೀ ಸಾರ್ವಜನಿಕ ಸಭೆಯಲ್ಲಿ ಹರಾಜು ಮಾಡಿದರು. ಅದನ್ನು ಶಾಸಕ ಸುಬ್ಬರಾಯ ಹಳದೀಪುರ ಅವರು ಹರಾಜಿನಲ್ಲಿ ಪಡೆದು ಸಾವಿರ ರೂ. ಮೊತ್ತವನ್ನು ನೀಡಿದರು. ಆ ಹಣವನ್ನು  ಅಸ್ಪೃಶ್ಯತಾ ನಿವಾರಣ ಕಾರ್ಯಕ್ರಮಕ್ಕೆ ಬಳಸುವುದಾಗಿ ಗಾಂಧೀಜಿ ಹೇಳಿದರು. ಇಲ್ಲಿ ಪ್ರಮುಖವಾದುದು  ಅಸ್ಪೃಶ್ಯತೆ ವಿರುದ್ಧ ಜನ ಜಾಗೃತಿಗಾಗಿ ದೇಶದ ಹಲವು ರಾಜ್ಯ ಸುತ್ತಿದ ಗಾಂಧೀಜಿ ಅಸ್ಪೃಶ್ಯತಾ ನಿವಾರಣಾ  ನಿಧಿ ಸಂಗ್ರಹದ ಮೂಲಕ ದೇಶದ ಜನತೆಯಲ್ಲಿ ಮನುಷ್ಯ ಸಣ್ಣತನಗಳನ್ನು ಬಿಡಿಸಲು ಯತ್ನಿಸಿದರು. ಆಸ್ಪೃಶ್ಯತೆ ನಮಗೆ ಲಜ್ಜಾಸ್ಪದವಾದುದು. ಅದನ್ನು  ನಾವು ತೊಲಗಿಸಬೇಕು ಎಂದಿದ್ದರು. ಕಾರವಾರದ ಸಭಾ ಕಾರ್ಯಕ್ರಮದಲ್ಲಿ  ಜನತೆಯನ್ನು ಉದ್ದೇಶಿಸಿ ಮಾತನಾಡಿದ  ಗಾಂಧೀಜಿ ಕರ್ನಾಟಕದ ಜನತೆ ಅಸ್ಪೃಶ್ಯತೆಯನ್ನು ಕಿತ್ತೊಗೆಯುವತ್ತ ಸಜ್ಜಾಗಿರುವುದನ್ನು ನಾನು ಕಾಣುವಂತಾದುದಕ್ಕಾಗಿ, ನನಗೆ ಬಹಳ ಸಂತೋಷವಾಗಿದೆ. ಅಸ್ಪೃಶ್ಯತೆ ನಿವಾರಣೆಗೆ ಅನುಕೂಲವಾಗಿ ಜನರಲ್ಲಿ ಪರಿವರ್ತನೆ  ದಿನಾಲು ಬೆಳೆಯುತ್ತಿರುವ ಸಂತೋಷ. ಈ  ಭಾವನೆಯನ್ನು ಕ್ರಿಯೆಯ ರೂಪದಲ್ಲಿ ಮಾರ್ಪಡಿಸಿಕೊಳ್ಳುವ ಸತ್ಯನಿಷ್ಠ ಮತ್ತು ಉತ್ಸಾಹ ಶಾಲಿ ಕಾರ್ಯಕರ್ತರನ್ನು ಅಭಿನಂದಿಸುವೆ.  ಅಸ್ಪೃಶ್ಯರ ಬಗ್ಗೆ ಎಲ್ಲೆಲ್ಲೂ ಸಹಾನುಭೂತಿ ಇದೆ. ಸರಿಯಾದ ವಾತಾವರಣ ಇದೆ. ಆದರೆ ಆ ನಂಬಿಕೆಯನ್ನು ಸಾರ್ಥಕಗೊಳಿಸುವ ಜ್ಞಾನಬೇಕು. “ ಎಲ್ಲಿ ಶ್ರದ್ಧೆ ಮಾಯಾವಾಗುತ್ತದೆಯೋ, ಅಲ್ಲಿ  ಆರಂಭಶೂರರಾಗಿ ಉಳಿಯುತ್ತೇವೆ” ಎಂದರು. ಹಿಂದೂಗಳು ನಾವು ಅಸ್ಪೃಶ್ಯರನ್ನು ಕೀಳಾಗಿ ಕಾಣುತ್ತೇವೆ. ಅವರನ್ನು ಮುಟ್ಟಿದರೆ ಪಾಪ ಎಂದು ತಿಳಿದಿದ್ದೇವೆ. ಇದು ದೇವರೆದುರು ಮಾಡಿದ ಮಹಾಪಾಪ. ಭಗವಂತ ಮಾನವಕುಲದ ಒಂದು ಭಾಗವನ್ನು ಅಸ್ಪೃಶ್ಯ ಎಂದು ಬೇರೆ ಮಾಡಿದ ಎಂಬ ಮಾತು ದೈವದ್ರೋಹ. ಹಿಂದೂಗಳಿಗೆ ನಾನು ಎಚ್ಚರಿಕೆ ಕೊಡಬಯಸುತ್ತೇನೆ. ಅಸ್ಪೃಶ್ಯತಾ ನಿವಾರಣೆ ಒಂದು ಪ್ರಾಯಶ್ಚಿತ್ತ. ಸವರ್ಣ ಹಿಂದೂಗಳು ತಮಗೂ ಹಿಂದೂಧರ್ಮಕ್ಕೂ ಪ್ರಾಯಶ್ಚಿತ್ತ ಮೂಲಕ ಋಣಮುಕ್ತರಾಗಬೇಕು. `ಹೊಲಸು’ ರಾಷ್ಟ್ರಗಳಿಗೆ ಹೇಗೋ,  ಧರ್ಮಗಳಿಗೂ ಹಾಗೆಯೇ. ದೇವರ ಅನುಗ್ರಹ, ದೇವರ ಸಾಕ್ಷಾತ್ಕಾರವು ಯಾವ ಜಾತಿಗೂ ಯಾವ ರಾಷ್ಟçಕ್ಕೂ ಗುತ್ತಿಗೆಯಲ್ಲ. ಯಾವ ರಾಷ್ಟ,ಯಾವ ಮತ, ಅನ್ಯಾಯಕ್ಕೆ, ಅಸತ್ಯಕ್ಕೆ, ಹಿಂಸೆಗೆ ಮಡಿಲು ಕಟ್ಟುತ್ತದೆಯೋ ಅದು ಈ ಭೂಮಿಯಿಂದ ಮಾಯವಾಗುತ್ತದೆ. ಅಸ್ಪಶ್ಯತೆಯು ಹಿಂದೂ ಧರ್ಮಕ್ಕೆ ಒಂದು ಕಳಂಕ ಮತ್ತು ಮಾನವೀಯತೆಗೆ ಎಸಗಿದ ಅಪರಾಧ ಎಂದು ಗಾಂಧಿ ಸಮಾವೇಶದಲ್ಲಿ ನೆರೆದಿದ್ದ ಜನತೆಗೆ ವಿವರಿಸಿದರು. ೧೯೩೪ ಮಾರ್ಚ ೧ ರಂದು ಗಾಂಧಿ ಶಿರಸಿ ತಲುಪಿದರು.  ಗಾಂಧೀಜಿ ಶಿರಸಿಯಲ್ಲಿ ಅವರು ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿದರು.   ಕುರಿ, ಕೋಣ, ಕೋಳಿಗಳನ್ನು ಬಲಿ ಕೊಡಬಾರದು ಎಂದು ಹೇಳಿದ್ದರು. ಆಗ ಶಾಸಕರೂ ಮತ್ತು ದೇವಾಲಯದ ಧರ್ಮದರ್ಶಿಗಳೂ ಆಗಿದ್ದ ಎಸ್.ಎಸ್.ಕೇಶವ್ವಾನ್ ಗಾಂಧೀಜಿ ಕರೆಯನ್ನು ಅನುಸರಿಸಿ, ಕೋಣ ಬಲಿ ನಿಲ್ಲಿಸಿದರು. ಅದು ಈಗಲೂ ಮುಂದುವರಿದಿದೆ. ೧೯೪೨ ಮಾರ್ಚ ೨೬  ಹರಿಜನ ಪತ್ರಿಕೆಯ ಸಂಚಿಕೆಯಲ್ಲಿ ಶಿರಸಿಯ ಮಾರಿಕಾಂಬ ಜಾತ್ರೆ ಕುರಿತಂತೆ ನೆನಪುಗಳನ್ನು ಗಾಂಧಿಜೀ ದಾಖಲಿಸಿದ್ದಾರೆ. ಶಿರಸಿ ಭೇಟಿಯ ನಂತರ  ಗಾಂಧಿಜೀ ಸಿದ್ದಾಪುರಕ್ಕೆ ತೆರಳಿದರು.  ಮಹಾದೇವಿ ತಾಯಿ ರಾಮಕೃಷ್ಣ ಹೆಗಡೆ ಅವರ ಅಕ್ಕ. ಸಿದ್ದಾಪುರದ ದೊಡ್ಮನೆ ಹೆಗಡೆ ಅವರ ಮಗಳು. ಮಹಾದೇವಿ ಅವರಿಗೆ ಬಾಲ್ಯವಿವಾಹವಾಗಿತ್ತು. ಅಪ್ರಾಪ್ತ ವಯಸ್ಸಿನಲ್ಲಿ ಆಕೆಯ ಗಂಡ ತೀರಿಹೋಗಿದ್ದರು. ಬ್ರಾಹ್ಮಣ ಸಂಪ್ರದಾಯದಂತೆ ಆಕೆಯ ತಲೆಯ ಕೇಶ ಮುಂಡನ ಮಾಡಿಸಲಾಗಿತ್ತು. ಇದನ್ನು ಸಿದ್ದಾಪುರಕ್ಕೆ ಗಾಂಧೀಜಿ ಬಂದಾಗ ಗಮನಿಸಿದರು. ಮಹಾದೇವಿ ಅವರ ತಂದೆಯ  ಜೊತೆ ಗಾಂಧೀಜಿ ಮಾತನಾಡಿದರು. ಕೇಶ ಮುಂಡನಕ್ಕೆ ವಿರೋಧ ವ್ಯಕ್ತಪಡಿಸಿದರು. ಇದು ಸಂಪ್ರದಾಯ ಎಂದು ಮಹಾದೇವಿ ತಂದೆ ಪ್ರತಿಕ್ರಿಯಿಸಿದಾಗ `ನಿಮ್ಮ ಮಗಳಿಂದಲೇ ಕೇಶ ಮುಂಡನಾ ಪದ್ಧತಿ ನಿಲ್ಲಲಿ.  ಹೊಸ ಪದ್ಧತಿ ಆರಂಭವಾಗಲಿ. ಏಕೆ ಆಗಬಾರದು? ಎಂದು ಗಾಂಧೀಜಿ ಮರು ಪ್ರಶ್ನಿಸಿದರು. `ವರ್ದಾ ಆಶ್ರಮಕ್ಕೆ ತೆರಳಲು ಆಕೆ ಇಚ್ಚೆಸುತ್ತಾಳೆ. ನಿಮ್ಮ ಅನುಮತಿ ಇದೆಯೇ’ ಎಂದು ಗಾಂಧೀಜಿ ಮತ್ತೆ ಪ್ರಶ್ನಿಸಿದರು. `ಅವಳು ಪ್ರಬುದ್ಧಳು. ಮನಸ್ಸಿಗೆ ಬಂದಲ್ಲಿ ಹೋಗಲು ಸ್ವತಂತ್ರಳು’ ಎಂದರು ದೊಡ್ಮನೆ ಹೆಗಡೆ. ಹೀಗೆ ಗಾಂಧಿಜೀ ಉತ್ತರ ಕನ್ನಡ ಪ್ರವಾಸ ಮೂರು ಮುಖ್ಯ ಸಂದೇಶಗಳನ್ನು ನೀಡಿತ್ತು. ಅವು ಈಗಲೂ ನಮಗೆ , ಸಮಾಜಕ್ಕೆ ದಾರಿ ದೀಪವಾಗಿವೆ ಎಂಬುದನ್ನು ಮರೆಯಲಾಗದು. ……….. ಮಹಾತ್ಮಾ ಗಾಂಧಿಜೀ ಅವರ ೧೫೧ ನೇ ಜನ್ಮದಿನ ವಾರ್ಷಾಚರಣೆಯ ಈ ಸಂದರ್ಭದಲ್ಲಿ ದೇಶ ಅವರನ್ನು ಈಗ ಸ್ಮರಿಸುತ್ತಿದೆ. ರಾಷ್ಟ್ರಪಿತನನ್ನು  ಪುನಃ ಪುನಃ ಸ್ಮರಿಸಿಕೊಳ್ಳುತ್ತಿದೆ. ಗ್ರಾಮೀಣ ಭಾರತದ ಪುನಶ್ಚೇತನಕ್ಕೆ ಗಾಂಧಿಜೀ ಕೆಲ ಸಿದ್ಧ ಸರಳ ಮಾದರಿಗಳನ್ನು ಬಿಟ್ಟುಹೋಗಿದ್ದರು. ಸರಳತೆ ಮತ್ತು ಕೃಷಿ ಆಧಾರಿತ ಬದುಕು ಗ್ರಾಮೀಣ ಭಾರತವನ್ನು ಪುನಃ ಕಟ್ಟಬಲ್ಲದು ಎಂಬುದು ಗಾಂಧಿಜೀ ಆಶಯವಾಗಿತ್ತು. ಗ್ರಾಮೀಣ ಗುಡಿಕೈಗಾರಿಕೆಗಳನ್ನು ಉಳಿಸಿಕೊಳ್ಳುವುದು, ಯಂತ್ರಗಳ ನೆರವಿನಿಂದ ಸಾಧ್ಯವಾದಷ್ಟು ದೂರ ಇರುವುದು ಗಾಂಧಿಜೀ ತಿಳಿ ಹೇಳಿದ ಸರಳ ಸಂಗತಿಗಳು. ಸತ್ಯ, ಅಹಿಂಸೆ, ಸಹನೆ ಮಾರ್ಗ ಗಾಂಧಿಜೀ ನಡೆ ನುಡಿಯಲ್ಲೇ ಇತ್ತು. ಅದಕ್ಕಾಗಿ ಗಾಂಧಿ ಹೇಳಿದ್ದು ನನ್ನ ಜೀವನವೇ ನನ್ನ ಸಂದೇಶ ಎಂದು. ತುಂಬಾ ಪ್ರಯೋಗಶೀಲರಾಗಿದ್ದ ಗಾಂಧಿಜೀ ಜೀವನದುದ್ದಕ್ಕೂ ಅಧಿಕಾರ ದಿಂದ ದೂರ ಉಳಿದರು. ಆದರೆ ಅಧಿಕಾರ ಕೇಂದ್ರವನ್ನು ನಿರ್ದೇಶಿಸಿದರು.ತ ಬ್ರಿಟಿಷರನ್ನು ಗಾಂಧಿ ಬದಲಿಸಿದರು, ಮನವೊಲಿಸಿದರು, ಅವರಿಂದ ಸ್ವಾತಂತ್ರ್ಯವನ್ನು ಪಡೆದರು ಎಂಬುದು ಸ್ಮರಣಿಯ. ..************************************ ನಾಗರಾಜ ಹರಪನಹಳ್ಳಿ.

ಉತ್ತರ ಕನ್ನಡ ಜಿಲ್ಲೆ ದಾರಿಯಲ್ಲಿ ಗಾಂಧಿ ಬಂದು ಹೋಗಿದ್ದರು…. Read Post »

ಇತರೆ, ಜೀವನ

ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..!

ಲೇಖನ ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..! ಕೆ.ಶಿವು ಲಕ್ಕಣ್ಣವರ ಹಿಂದಿ ಹೇರಿಕೆಯು ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..! ಕರ್ನಾಟಕದಲ್ಲಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಅಣತಿ ಮೇರಗೆ ಬೆಂಗಳೂರು ಮೆಟ್ರೋ ಆಡಳಿತ ಮಂಡಳಿ ಇಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆಯಲ್ಲಿ ಫಲಕಗಳನ್ನು ಹಾಕಿದಾಗಲೇ ಸ್ಥಳೀಯ ಕನ್ನಡಪರ ಹೋರಾಟಗಾರರು ಹಿಂದಿ ಫಲಕಗಳಿಗೆ ಬಣ್ಣ ಬಳಿದು ಪ್ರತಿಭಟಿಸಿದ್ದರು. ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಯಾವ ಭಾಷೆಗೂ ರಾಷ್ಟ್ರಭಾಷೆ ಎಂಬ ವಿಶೇಷ ಸ್ಥಾನಮಾನ ನೀಡಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು. ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು; ಹಿಂದಿ ಹೇರಿಕೆಯ ವಿರುದ್ಧ ರಾಜ್ಯ ನಾಯಕರು ಕೆಂಡಾಮಂಡಲವಾಗಿದ್ದರು. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ತಣ್ಣಗಾಗಿದ್ದ ಹಿಂದಿ ಹೇರಿಕೆಯ ಪರ-ವಿರೋಧದ ಚರ್ಚೆ ಇದೀಗ ಮತ್ತೆ ಕಾವು ಪಡೆದುಕೊಂಡಿದೆ. ಇದಕ್ಕೆ ಕಾರಣ  ಕೇಂದ್ರ ಸರ್ಕಾರ ಹೇರಲು ಮುಂದಾಗಿರುವ ತ್ರಿಭಾಷಾ ನೀತಿ. ಕೇಂದ್ರ ಸರ್ಕಾರದ ಈ ನೀತಿಯ ವಿರುದ್ಧ ಇದೀಗ ಕರ್ನಾಟಕ ಮಾತ್ರವಲ್ಲ, ಇಡೀ ದಕ್ಷಿಣ ಭಾರತ ಸಿಡಿದೆದ್ದು ನಿಂತಿದ್ದು ರಾಜ್ಯ ನಾಯಕರು ಟೀಕಾಪ್ರಹಾರ ನಡೆಸಿದ್ದಾರೆ. ಪರಿಣಾಮ ಮುಂದಿನ ದಿನಗಳಲ್ಲಿ ಇದು ದೊಡ್ಡ ಹೋರಾಟವಾಗಿ ರೂಪಗೊಳ್ಳುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿದೆ. ಕರ್ನಾಟಕದಲ್ಲಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಅಣತಿ ಮೇರಗೆ ಬೆಂಗಳೂರು ಮೆಟ್ರೋ ಆಡಳಿತ ಮಂಡಳಿ ಇಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆಯಲ್ಲಿ ಫಲಕಗಳನ್ನು ಹಾಕಿದಾಗಲೇ ಸ್ಥಳೀಯ ಕನ್ನಡಪರ ಹೋರಾಟಗಾರರು ಹಿಂದಿ ಫಲಕಗಳಿಗೆ ಬಣ್ಣ ಬಳಿದು ಪ್ರತಿಭಟಿಸಿದ್ದರು. ಈ ಸಂದರ್ಭದಲ್ಲಿ ಹಿಂದಿ ರಾಷ್ಟ್ರಭಾಷೆ ಎಂದು ಬಿಂಬಿಸಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಯೇ ನಡೆದಿತ್ತು. ಆದರೆ, ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಯಾವ ಭಾಷೆಗೂ ರಾಷ್ಟ್ರಭಾಷೆ ಎಂಬ ವಿಶೇಷ ಸ್ಥಾನಮಾನ ನೀಡಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು.  ಹೀಗಿದ್ದ ಮೇಲೆ ಕೇಂದ್ರ ಸರ್ಕಾರ ಮತ್ತೇ ದಕ್ಷಿಣ ರಾಜ್ಯಗಳ ಮೇಲೆ ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆಗೆ ಮುಂದಾಗಿದೆ. ಇದಕ್ಕೆ ರಾಜ್ಯದಲ್ಲೂ ಸಹ ಪರ-ವಿರೋಧ ಚರ್ಚೆಗಳು ಶುರುವಾಗಿದೆ. ಹಾಗಾದರೆ ಏನಿದು ತ್ರಿಭಾಷಾ ನೀತಿ? ಇದಕ್ಕೆ ದಕ್ಷಿಣ ರಾಜ್ಯಗಳ ವಿರೋಧವೇಕೆ?..?– ಏನಿದು ತ್ರಿಭಾಷಾ ಸೂತ್ರ?— ಬಹುಭಾಷಾ ಸಂವಹನ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 1968 ರಲ್ಲೇ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಲಾಗಿತ್ತು. 1986 ರ ನೀತಿಯಲ್ಲಿಯೂ ಇದನ್ನು ಪುನರುಚ್ಚರಿಸಲಾಗಿತ್ತು. ಇದರಂತೆಯೇ ದೇಶದಾದ್ಯಂತ ಶಾಲಾ ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಿಂದಲೇ ಅಲ್ಲಿನ ಸ್ಥಳೀಯ ಮಾತೃಭಾಷೆಯ ಜೊತೆಗೆ ಇಂಗ್ಲೀಷ್​ ಹಾಗೂ ತೃತೀಯ ಭಾಷೆಯಾಗಿ ಹಿಂದಿಯನ್ನೂ  ಕಲಿಸುವುದು ಈ ನೀತಿಯ ಉದ್ದೇಶವಾಗಿತ್ತು. ಆದರೆ, ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಭಾಷಾ ಹೇರಿಕೆಯಿಂದ ಒಂದು ಭಾಷೆ ಒಂದು ಸಂಸ್ಕೃತಿ ನಿರ್ಮಾಣವಾಗುತ್ತದೆ. ಇದರಿಂದ ದ್ರಾವಿಡ ಭಾಷೆಗಳ ಅಸ್ಮಿತೆಗೆ ಕೊಡಲಿ ಪೆಟ್ಟು ಬಿದ್ದಂಗಾಗುತ್ತದೆ. ಇದರಿಂದ ಮುಂದೊಂದು ದಿನ ದ್ರಾವಿಡ ಭಾಷೆಗಳು ಕಣ್ಮರೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದ ಈ ನೀತಿಯನ್ನು 1969 ರಿಂದಲೂ ತೀವ್ರವಾಗಿ ವಿರೋಧಿಸುತ್ತಾ ಬಂದಿತ್ತು. ಒಂದು ಹಂತದಲ್ಲಿ ಸ್ವತಂತ್ರ್ಯ ದ್ರಾವಿಡ ರಾಷ್ಟ್ರದ ಪರಿಕಲ್ಪನೆಯನ್ನೂ ಮುಂದಿಟ್ಟಿತ್ತು. ಕೊನೆಗೆ ಕೇಂದ್ರದ ನೀತಿಗೆ ಬೆನ್ನು ತೋರಿಸಿದ್ದ ತಮಿಳುನಾಡು ಈವರೆಗೆ ದ್ವಿಭಾಷಾ ಸೂತ್ರವನ್ನು ಮಾತ್ರ ಅನುಸರಿಸುತ್ತಿದೆ. ತಮಿಳುನಾಡಿನಲ್ಲಿ ಕಳೆದ 6 ದಶಕದಿಂದ ಹಿಂದಿ ಕಲಿಕೆ ಕಡ್ಡಾಯವಲ್ಲ. ಇದರಂತೆ ಅಲ್ಲಿನ ಮಕ್ಕಳು ತಮಿಳು ಹಾಗೂ ಆಂಗ್ಲ ಭಾಷೆಯನ್ನು ಮಾತ್ರ ಕಲಿಯುತ್ತಿದ್ದಾರೆ. ಆದರೆ, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮಾತ್ರ ಹಿಂದಿಯನ್ನು ಸಾಮಾನ್ಯವಾಗಿ ಕಲಿಸಲಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ತಮಿಳುನಾಡನ್ನು ಗುರಿಯಾಗಿಸಿಕೊಂಡು ಮತ್ತೇ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸಲು ಮುಂದಾಗಿತ್ತು. ಆದರೆ, ಕೇಂದ್ರದ ಈ ನೀತಿಗೆ ಇದೀಗ ಕರ್ನಾಟಕ ಸೇರಿದಂತೆ ಉಳಿದೆಲ್ಲಾ ದಕ್ಷಿಣ ರಾಜ್ಯಗಳು ಒಮ್ಮೆಲೆ ತಿರುಗಿಬಿದ್ದಿವೆ. ರಾಜ್ಯದ ನಾಯಕರು ಹಿಂದಿ ಹೇರಿಕೆಯ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವುದು ಕೇಂದ್ರಕ್ಕೆ ನುಂಗಲಾರದ ತುತ್ತಾಗಿದೆ..! ಕೇಂದ್ರ ಸರ್ಕಾರ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸುವ ತೀರ್ಮಾನ ಹೊರಬೀಳುತ್ತಿದ್ದಂತೆಯೇ ರಾಜ್ಯ ನಾಯಕರು ಇದನ್ನು ಸಾರಾಸಗಟಾಗಿ ಖಂಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹೊರಡಿಸಿದ ಶಿಕ್ಷಣ ಕರಡು ಕಾರ್ಯನೀತಿಯಲ್ಲಿ ಹಿಂದಿ ಹೇರಿಕೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ. 3-ಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರಕ್ಕೆ ತಿಳಿಸಲಾಗುವುದು’ ಎಂದಿದ್ದರು. ಕುಮಾರಸ್ವಾಮಿ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಇದೀಗ ಬಹುತೇಕ ರಾಜ್ಯದ ಎಲ್ಲಾ ನಾಯಕರು ಹಿಂದಿ ಹೇರಿಕೆಯ ವಿರುದ್ಧ ಕೂಗೆತ್ತಿದ್ದಾರೆ. ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯ ವಿರುದ್ಧ ಟ್ವೀಟ್ ಮಾಡುವ ಮೂಲಕ ಗುಡುಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಸಹಿಸಲಾಗದು. ಕನ್ನಡ ನಮ್ಮ ಅಸ್ಮಿತೆ. ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ರಾಜ್ಯದ ಜನಪ್ರತಿನಿಧಿಗಳೆಲ್ಲರೂ ಪಕ್ಷಾತೀತವಾಗಿ ಚಿಂತನೆ ಮಾಡಬೇಕೆಂದು ನನ್ನ ಮನವಿ’ ಮಾಡಿದ್ದಾರೆ ಅವರು. ಮತ್ತೊಂದು ಟ್ವೀಟ್​ನಲ್ಲಿ, ‘ಶಿಕ್ಷಣದಲ್ಲಿ ಮಾತೃಭಾಷೆಯಲ್ಲದ ಭಾಷೆ ಐಚ್ಛಿಕವಾಗಿರಬೇಕೇ ಹೊರತು ಕಡ್ಡಾಯವಾಗಬಾರದು. ಇದು ಇನ್ನೊಂದು ಭಾಷೆಯ ಒತ್ತಾಯಪೂರ್ವಕ ಹೇರಿಕೆಯಂತಾಗಿದೆ. ಮಗುವಿನ ಕಲಿಕೆಯ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಹಿಂದಿ ಭಾಷಿಗರಲ್ಲದವರ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟಿರುವುದು ಭಾರತ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಅವರು, ‘ಕೇಂದ್ರ ಸರ್ಕಾರ ಏಕಮುಖ ನಿರ್ಧಾರ ಕೈಗೊಳ್ಳುತ್ತಿದೆ. ನಾವೇನಾದರೂ ಹಿಂದೆ ಭಾಷೆಬೇಕೆಂದು ಕೇಳಿದ್ದೇವೆಯೇ? ಕೇಂದ್ರ‌ ಇದಕ್ಕೆ‌ ನೀತಿ ಜಾರಿಗೆ ತರುತ್ತಿರುವುದು ಕನ್ನಡಿಗರ ಮೇಲೆ ಬಲವಂತದ ಹಿಂದಿ ಹೇರಿಕೆಯಾಗಿದೆ. ನೆಲ‌, ಜಲ‌, ಭಾಷೆ ವಿಚಾರದಲ್ಲಿ ರಾಜಿ ಇಲ್ಲ. ಬಲವಂತವಾಗಿ ಯೋಜನೆ ಜಾರಿಗೆ ಮುಂದಾರೆ ನಾವು ತಮಿಳುನಾಡು ಮಾದರಿಯ ಹೋರಾಟ ಮಾಡಲೂ ಸಿದ್ಧ’ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ ಅವರು. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು, ‘ಕೇಂದ್ರ ಸರ್ಕಾರದ ಈ ನೀತಿ ರಾಜ್ಯಗಳ ಸಂವೇದನೆ ಹಾಗೂ ಉತ್ತಮ ಹಿತಾಸಕ್ತಿಗಳನ್ನು ಪ್ರತಿಬಿಂಬಿಸುವಂತಿರಬೇಕು. ಆದರೆ, ಈ ಭಾಷಾ ನೀತಿ ನಮ್ಮ ಹಿತಾಸಕ್ತಿಗೆ ಅನುಗುಣವಾಗಿಲ್ಲ. ಹೀಗಾಗಿ ನಮ್ಮ ರಾಜ್ಯದ ಮೇಲಿನ ಯಾವುದೇ ಭಾಷಾ ಹೇರಿಕೆಯನ್ನು ನಾವು ವಿರೋಧಿಸುತ್ತೇವೆ’ ಎಂದು ತಿಳಿಸಿದ್ದಾರೆ. ಒಟ್ಟಾರೆ ಕೇಂದ್ರದಲ್ಲಿ ಹೊಸ ಎರಡನೇ ಅವಧಿಗೆ ಬಿಜೆಪಿ ಸರ್ಕಾರ ಮತ್ತೇ ಅಧಿಕಾರ ಹಿಡಿದ ಕೇವಲ ಮೂರು ದಿನಗಳಲ್ಲಿ ದಕ್ಷಿಣ ಭಾರತದ ಮೇಲೆ ಹಿಂದಿ ಭಾಷೆ ಹೇರಿಕೆಗೆ ಮುಂದಾಗಿದೆ. ಈ ಹಿಂದೆಯೂ ಹಲವು ಬಾರಿ ಕೇಂದ್ರ ಸರ್ಕಾರ ಹಿಂದಿ ಹೇರಿಕೆಗೆ ಮುಂದಾದಾಗಲು ದಕ್ಷಿಣ ರಾಜ್ಯಗಳು ಅದರಲ್ಲೂ ಮುಖ್ಯವಾಗಿ ತಮಿಳುನಾಡು ಪ್ರಬಲವಾಗಿ ವಿರೋಧಿಸಿತ್ತು. ಇದೀಗ ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶ ಸಹ ಒಟ್ಟಾಗಿ ಕೇಂದ್ರದ ವಿರುದ್ಧ ಹಿಂದಿ ಹೇರಿಕೆ ವಿರೋಧದ ಹೋರಾಟಕ್ಕೆ ದನಿಗೂಡಿಸಿರುವುದು ಮುಂದಿನ ದಿನಗಳಲ್ಲಿ ದೊಡ್ಡ ಚಳುವಳಿಯಾಗಿ ರೂಪಗೊಂಡರೂ ಅಚ್ಚರಿ ಇಲ್ಲ. ಹೀಗಿರುವಾಗ ಹಿಂದಿ ಹೇರಿಕೆಯನ್ನು ಕೈಬಿಟ್ಟರೇ ಒಳಿತು..! *****************************************************************

ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..! Read Post »

ಇತರೆ

ನಂದ ಗೋಕುಲ

ಅನುಭವ ನಂದ  ಗೋಕುಲ ಮಾಲಾ ಕಮಲಾಪುರ್ ನಾನು  ಸರ್ಕಾರಿ ಶಾಲೆಯಲ್ಲಿ  ಶಿಕ್ಷಕಿ ಯಾಗಿ ಕೆಲಸ ನಿರ್ವಹಿಸುವಾಗ ನಡೆದ ಘಟನೆ. ಒಂದು ದಿನಾ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದ ಹೆಣ್ಣು ಮಗು ತರಗತಿಯಲ್ಲಿಯೇ ಮೊದಲು ಆಕಿಗೆ ಕಲಿಕೆಯಲ್ಲಿ ಆಸಕ್ತಿ. ಮನೆಯಲ್ಲಿ ತಾಯಿ ಸಹ ಕೂಲಿ ನಾಲಿಮಾಡಿ ಓದಿಸುತ್ತಿದ್ದಳು ತಂದೆಗೆ ಇದಾವ ಪರಿವೇ ಇಲ್ಲದೆ ಸದಾ ಕುಡಿದುಕೊಂಡು ಮನೆಗೆ ಬಂದು ಹೆಂಡತಿ ಮಗುವಿಗೆ ಹೊಡೆದು ಬಡೆದು ಮನೆ ಬಿಟ್ಟು ಹೋಗುವದು ಇದೆಲ್ಲದರ ನಡುವೆ ಮಗು ಗುಡಿಸಿಲಿನಲ್ಲಿ ಓದುವುದು ರಜೆಯದಿನ ಹೊಲದಲ್ಲಿ ತಾಯಿಗೆ ಸಹಾಯ ಮಾಡೋದು ಎಲ್ಲೋ ಹೋಗಿ ನೀರು ತರುವದು ಹೀಗೆ ಎಲ್ಲದರಲ್ಲೂ ತನ್ನದೇ ಛಾಪು ಮೂಡಿಸಿ ಸೈ ಅನಿಸಿಕೊಂಡ ಮಗು. ದಿನಾಲೂ ಶಾಲೆಗೆ ಬರುವಾಗ ಕಣ್ಣು ಒರೆಸುತ್ತಾ ಓಡೋಡಿ ಪ್ರಾರ್ಥನೆ ಸಮಯಕ್ಕೆ ಬರುತ್ತಿದ್ದಳು. ಆದರೆ ಒಂದು ದಿನ ಮಾತ್ರ ಶಾಲೆಗೆ ಒಂದು ತಾಸು ತಡವಾಗಿ ಬಂದು ಹೊರಗಡೆಯೇ ಅಳುತ್ತ ನಿಂತಿದ್ದು ನೋಡಿ ನಾನು ಒಳಗೆ ಕರೆದೆ ಏನಾಯಿತು ಯಾಕೆ ಅಳುತ್ತಿರುವೆ ಬಾ ತರಗತಿ ಯೊಳ್ಗೆ ಅಂದೆ. ಅದಕ್ಕೆ ಆ ಮಗು ಹೆದರುತ್ತ ಗಾಬರಿಯಾಗಿ ಬಲಕೈಯನ್ನು ತನ್ನ ಡ್ರೆಸ್ನಲ್ಲಿ ಮುಚ್ಚಿಕೊಂಡು ಅಳುತ್ತ ನಾನು ಮನೆಗೆ ಹೋಗಿ ಬರುವೆ ಅಂದಳು. ಕೈನಡುಗತ್ತ ಬೆವರುತ್ತ ಹೇಳಿದಳು ಏನು ಇದೆ? ನಿನ್ನ ಕೈಯಲ್ಲಿ ಅಂದೆ. ಅದಕ ಆ ಮಗು ಸ್ಕರ್ಟ್ನಲ್ಲಿ ಮುಚ್ಚಿದ ಕೈ ತೆಗೆದು ಸರಾಯಿ ಬಾಟಲಿ ತೋರಿಸಿ ಇದು ನಮ್ಮ ಅಪ್ಪ ತೆಗೆದುಕೊಂಡು ಬರಲು ನಂಗೆ ಹೇಳಿದ. ನಾನು ತರೋಲ್ಲ ಅಂದರೆ ನಂಗೆ ಮೈಯಲ್ಲ ಬರೇ ಬೀಳುವಂತೆ ಹೊಡಿದಿರುವ ಅಂದಳು ಅದಕ್ಕೆ ನನಗೆ ಶಾಲೆಗೆ ಬರುವುದು ತಡ ವಾಯಿತು ಮೇಡಂ ಅಂದಾಗ ನನ್ನ ಕಣ್ಣಿಂದ ನೀರು ಜಾರಿತು. ಅಯ್ಯೋ ಎಂಥ ತಂದೆ ಮಗಳು ಅನ್ನುವದನ್ನು ಮರೆತು ತನ್ನ ಹುಚ್ಚು ವ್ಯಸನಕ್ಕೆ ಏನೆಲ್ಲಾ ಮಾಡುತ್ತಾರಲ್ಲ ಅನಿಸಿತು. ಎಲ್ಲಿಯವರೆಗೆ ದುಶ್ಟಟದ ವ್ಯಸನಿಗಳು ಅದರಿಂದ ದೂರವಾಗುವುದಿಲ್ಲವೋ ಅಲ್ಲಿಯವರೆಗೂ ಇಂಥ ಹೆಣ್ಣು ಮಕ್ಕಳ ಗೋಳು ತಪ್ಪಿದ್ದಲ್ಲ. ಅದಕ್ಕೆ ಹೇಳೋದು ಮನೆಯಲ್ಲಿ ಸಂಸ್ಕಾರ ಕೊಡುವ ತಂದೆ ತಾಯಿ ಮೊದಲು ಸರಿ ಇರಬೇಕು ಆಗ ಮನೆಯ ಮಕ್ಕಳು ಅದನ್ನೇ ನೋಡಿ ಅನುಸರಿಸುವರು. ಮನೆಯಲ್ಲಿ ಸುಂದರ ವಾತಾವರಣ ಇದ್ದರೆ ಅಲ್ಲಿ ಸುಖ ನೆಮ್ಮದಿ ಶಾಂತಿ ಕಾಣಲು ಸಾದ್ದ್ಯ ಮನೆ ನಂದ ಗೋಕುಲವಾದರೆ ಮಕ್ಕಳ ಭವಿಷ್ಯ ಅದೆಷ್ಟು ಚಂದ. ಮನೆಯೊಂದು  ನಂದ ಗೋಕುಲವಾದರೆ ಅಲ್ಲಿರುವ ಸುಂದರ ಮೊಗ್ಗುಗಳನೋಟ ಅದೆಷ್ಟು ಚಂದ. ಆ  ಮೊಗ್ಗುಗಳಿಗೆ ಚಿವಟಿಹಾಕದೆ ಅರಳುತ್ತಿರುವ ಹೂವು ಆಗುವುದನ್ನು ನೋಡೋಣ  ಆ ಹೂವು ಜ್ಞಾನ ವೆಂಬ ಪರಿಮಳ ಬೀರಿ ತನ್ನ ಕೀರ್ತಿ ಪತಾಕೆಯನ್ನು ಹಾರಿಸುವುದಲ್ಲವೇ.. *********************************

ನಂದ ಗೋಕುಲ Read Post »

ಇತರೆ, ಲಹರಿ

ಹರಟೆ ಕಟ್ಟೆ

ಲಹರಿ ಹರಟೆ ಕಟ್ಟೆ ಮಾಲಾ  ಕಮಲಾಪುರ್   ನಾನು  ಹೇಳುವ ಮಾತು ಇದು  ಮೂವತ್ತು ವರ್ಷ ಗಳ ಹಿಂದು ಮುಂದಿನ ಮಾತು ಆಗಿನ ಜನರು ಗಂಡಾಗಲಿ ಹೆಣ್ಣಾಗಲಿ  ಭೇದ  ಭಾವ ಇಲ್ಲದೆ ತನ್ನವರು ನನ್ನವರು ಎನ್ನುವ ಭಾವನೆ ಯೊಂದಿಗೆ ಬೆರೆತು ಹರಟೆ ಹೊಡಿಯುತ್ತಿದ್ದರು. ತಮಗೆ ಬಿಡುವಾದಾಗ ಒಬ್ಬರಿಗೊಬ್ಬರು ಸಂಜೆಗೆ ಹರಟೆ ಕಟ್ಟೆಗೆ ಬಂದು ಹರಟೆ ಹೊಡೆದು ಹೋಗುತ್ತಿದ್ದರು. ಅಷ್ಟೇ ಅಲ್ಲ  ಸುಖ ದುಃಖ ದಲ್ಲಿ ಪಾಲ್ಗೊಂಡು  ತಮ್ಮ ಮನೆಯವರಂತೆ  ಹಚ್ಚಿಕೊಂಡು ಕೆಲಸ ಮಾಡುತ್ತಿದ್ದರು. ಮನೆಯ ಯಜಮಾನಿಯಂತೂ ತನ್ನ ಊಟ ಕೆಲಸ ವಾದಮೇಲೆ ಹೊಟ್ಟಿಯೊಳಗಿನ ಮಾತು ತನಗೆ ಬೇಕಾದವರೊಡನೆ ಕಟ್ಟಿ ಮೇಲೆ ಕುಳಿತು ಹರಟೆ ಹೊಡೆದು ಮನಸು ಹಗುರ ಮಾಡಿಕೊಳ್ಳುತ್ತಿದ್ದರು.ಬಾಜು ಮನೆಯವರಿಗೆ  ಯಾವತ್ತೂ ಹೆಸರು ಹಿಡಿದು ಕರೆಯದೆ ಮಾಮಾ, ಮಾಮಿ, ಕಾಕಾ, ಕಾಕು , ವೈನಿ ಅಂತ ಸಂಬೋಧಿಸುವ ವಾಡಿಕೆಯೂ ಇತ್ತು ಇದರಿಂದ ಅನ್ನ್ಯೋನ್ಯತೆ ಬೆಳೆಯುತ್ತಿತ್ತು. ಒಬ್ಬರಿಗೊಬ್ಬರು ಸಹಾಯ ಮಾಡೋದು ಮತ್ತು ಕಡಾ ಕೇಳೋದು ಜೋಳದ ಹಿಟ್ಟು ಮುಗಿದರೆ ಕೇಳಿ ತಂದು ಬೀಸಿ ಕೊಡೋದು ಮತ್ತ ತಿರುಗಿ ಹೀಗೆಲ್ಲ ನಡೆಯೋದರಲ್ಲಿ ಭಾಂದವ್ಯ ಇತ್ತು. ಒಬ್ಬರಿಗೊಬ್ಬರು ಬೆಳದಿಂಗಳಲ್ಲಿ ಪಂಕ್ತಿ ಊಟ ಮಾಡೋದು ಹಂಚಿ ತಿನ್ನೋದು ಒಂದು ತರಹ ಮಜಾನೇ ಇತ್ತು. ದೀಪಾವಳಿಯಲ್ಲಿ ಪಗಡೆ ಆಟ ಅಂತೂ ಬಹಳ ವಿಶೇಷ ಅದರಲ್ಲೂ ಬಳಗದವರಿಗಿಂತ ಓಣಿ ಮಂದಿ ಗಂಡಸರು ಮತ್ತು ಹೆಣ್ಣು ಮಕ್ಕಳು ಕೂಡಿ ಪಗಡಿ ಆಟ ಆಡಿ ಅದರಲ್ಲಿ ನಡುವ ಬ್ರೇಕ್ ಚಹಾ  ಆಹ ಅದೆಂಥ ದಿನ ಅಂತೀರಾ ಈಗ ನೆನಿಸಿದರೆ ಗತ ಕಾಲದ ನೆನಪು ಮಾತ್ರ  ಸಂಡಗಿ, ಹಪ್ಪಳ, ಶಾವಗಿ, ಉಪ್ಪಿನಕಾಯಿ ಮಾಡೋದು ಓಣಿ ಜನ ಸೇರಿ. ಅದೆಂಥ ಸಹಾಯ, ಪ್ರೀತಿ ನೆನೆಸುವುದಾಗಿದೆ ಆಗಿನ ಜನರ ಅನ್ನ್ಯೋನ್ಯ ವಿಚಾರಗಳು ನಗೆ ಮಾತುಗಳು. ಹರಟೆ ಕೇವಲ ಹರಟೆಯಾಗದೆ ಅದ್ದ್ಭುತ ವಿಚಾರಗಳನ್ನು ಹಂಚಿಕೊಳ್ಳುವುದು. ಯಾರದೇಮನೆಯಲ್ಲಿ ಕಾರ್ಯಕ್ರಮ ಆದರೂ ಮನೆಯಲ್ಲಿ ಓಡಾಡಿ ಸಹಾಯ ಮಾಡುವುದು ಇದು ಒಂದು ತರಹ ನಾವೆಲ್ಲರೂ ಒಂದು ಅನ್ನುವ ವಿಚಾರ ತೋರಿಸುತ್ತಿತ್ತು ಕಷ್ಟದಲ್ಲಿ ಸುಖದಲ್ಲಿ ಭಾಗಿಯಾಗಿ ತಮ್ಮ ಹಿರಿಮೆಯನ್ನು ತೋರಿಸುತ್ತಿದ್ದರು. ಇದೆಲ್ಲ ಈಗಿನ ಕಾಲದಲ್ಲಿ ಶೇಕಡಾ 99ರಷ್ಟು ಇಲ್ಲ. ತಾವಾಯಿತು ತಮ್ಮ ಮನೆ ಆಯಿತು ಎಲ್ಲ ಹಾಯ್ ಬಾಯ್ ಅಷ್ಟೇ ಯಾರಿಗೂ ಇದರ ಅವಶ್ಯಕತೆ ಇಲ್ಲ ಎಲ್ಲರದ್ದೂ ಬ್ಯುಸಿ ಲೈಫ್. ಬಾಜು ಮನೆಯಲ್ಲಿ ಏನು ಆದ್ರೂ ಗೊತ್ತಾಗದೆ ಇರುವ ಪರಿಸ್ಥಿತಿ ಈಗ. ಯಾಕೆಂದರೆ ಆ ನಂಬಿಕೆ ವಿಶ್ವಾಸವು ಯಾರಲ್ಲೂ ಉಳಿದಿಲ್ಲ ಉಳಿದವರು ಬೆರಳೆಣಿಕೆ ಯಲ್ಲಿ. ಮನೆಯಲ್ಲಿ ಹಿರಿಯರು ಮಕ್ಕಳು ಹೇಳಿದಂತೆ ಮೌನ ತಾಳಿ ಹೊಂದಿಕೊಂಡು ಮನೆಯಲ್ಲಿಯೇ ಉಳಿಯುತ್ತಾರೆ ಈಗಿರುವ ಪರಿಸ್ಥಿತಿ ಹೀಗೆ. ಈಗ ಪ್ರತಿಮನೆಯಲ್ಲಿ ಗಂಡ ಹೆಂಡತಿ ಮಕ್ಕಳು ಅತ್ತಿ ಮಾವ ಇಷ್ಟು ಮಾತ್ರ. ಹೀಗೆ ಕಾಲಮಾನ ವಿಚಾರ ಆಚಾರ ಕೆಲಸದ ಒತ್ತಡ ಅಂತಾನೆ ಇಟ್ಟುಕೊಳ್ಳರಿ ಆದರ ಆಗಿನ ಜನರ ರೀತಿನೀತಿ ಹಂಚಿಕೊಳ್ಳುವ ಮಾತು ತೀರಾ ಕಡಿಮೆ. ಎಲ್ಲವೂ ತೋರಿಕೆಯ ಜೀವನ ಈಗಿನದು ಯಾವುದರಲ್ಲಿಯೂ ಸಮಾಧಾನವು ಇಲ್ಲ ಎಲ್ಲವೂ ಇದೆ ಆದ್ರೆ ಮನ್ಸಿಗೆ ನೆಮ್ಮದಿ ಇಲ್ಲ ಯಾಕೆಂದರೆ ಎಲ್ರಿಗೂ ಒಂದಿಲ್ಲ ಒಂದು ಒತ್ತಡ ಟೆನ್ಷನ್.  ಜೀವನವೇ ಟೆನ್ಷನ್. ಆಗ ಈ ಟೆನ್ಷನ್ ಪದಬಳಿಕೆ ಇರಲಿಲ್ಲ ಹಾಗಂತ ಅವರು ತುಂಬಾ ಕಾಲ ಬದುಕಿ ಬಾಳಿದರು. ನಾವು ಸಹ ಸ್ವಲ್ಪ ನಮ್ಮ ಹತ್ತಿರದವರೊಡನೆ ಒಂದು ಘಳಿಗೆ ಪ್ರೀತಿಯ ಮಾತುಗಳನ್ನು ಹಂಚಿಕೊಂಡು ನಮ್ಮ ಒತ್ತಡ ಕಡಿಮೆಮಾಡಿಕೊಳ್ಳೋಣ ಇದು ವಾಟ್ಸಪ್ ಯುಗ ಯಾರಿಗೂ ಮಾತು ಬೇಡ ಕಣ್ಣಿಗೆ ಕೆಲಸ, ಮತ್ತು ಕೈ ಕೆಲಸ ಅಷ್ಟೇ.  ಮನಸಿನ ಒತ್ತಡ ಕಡಿಮೆ ಮಾಡಿಕೊಳ್ಳಲು  ಬಿಡುವಿನ ವೇಳೆಯಲ್ಲಿ ನಮ್ಮ ಹಿತೈಷಿ ಗಳೊಂದಿಗೆ  ಹಾಸ್ಸ್ಯ ಹರಟೆ, ಸಂಗೀತ, ಆಧ್ಯಾತ್ಮ ವಿಚಾರ,  ಸಾಹಿತಿಕ ವಿಚಾರ  ಚಿಂತನೆ ಮಾಡಿದಾಗ ನಮ್ಮ ಮನಸು ಪ್ರಫುಲ್ಲ ವಾಗುವುದಲ್ಲವ *******************************************

ಹರಟೆ ಕಟ್ಟೆ Read Post »

You cannot copy content of this page

Scroll to Top