ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ಉಡುಗೊರೆ ಉಡುಗೊರೆ ಅವನ್ಯಾರೋ ನಂಗೆ ಗೊತ್ತಿಲ್ಲ, ಮುಗ್ಧ ನಗುವ ಹೊನಲು ಮುಖದಲ್ಲಿ ಹಾರಾಡ್ತಿರ್ತಿತ್ತು , 100 ಮಕ್ಳ ಕ್ಲಾಸಲ್ಲಿ ವಿಭಿನ್ನ ಇವ್ನು. ಹೊಳೆವ ಕಣ್ಣುಗಳು, ಮುಖದಲ್ಲಿ ಕಾಂತಿ, ಬಾಡಿ ಲ್ಯಾಂಗ್ವೇಜಲ್ಲಿ ಗೌರವ…ನಾನು ನಿತ್ಯ ನನ್ನ ಕೆಲಸ ಮಾಡೋದು- ಪ್ರಶ್ನೆ ಕೇಳೋದು, ಉತ್ತರ ಹೇಳೋದು, ಕೊನೇ ಘಳಿಗೇಲಿ ಸ್ವಲ್ಪ ಹೊತ್ತು ಜೀವನದ ಬೆಲೆ  ಬಗ್ಗೆ ವಿಶ್ಲೇಷಣೆ….        ಹೀಗೆ ದಿನ ಕಳೆದ್ವು, ಎದ್ರು ಬಂದಾಗ್ಲು ಎದುರು ನಿಲ್ಲಲು ಹಿಂಜರಿತಿದ್ದ. ಫಸ್ಟ್ ಪಿಯುಸಿ ಅಲ್ವಾ ಭಯ ಇರ್ಬಹ್ದು ಅಂತ ಸುಮ್ನಾದೆ. ನಂಗೆ ಒಂದು ಹುಚ್ಚು ಕುತೂಹಲ, ಮಕ್ಳನ್ನ ಅವರ ಗುಣಗಳ್ನ ಅನ್ವೇಷಿಸೋದು ಸೈಲೆಂಟಾಗಿ ವೀಕ್ಷಿಸುತ್ತಾ ಹೋದ್ರೆ ಅವರ ಮನಸನ್ನ ಕೂಡ ಶೋಧಿಸ್ಬಹ್ದು ಅಂತ ಗೊತ್ತಿತ್ತು, ಕಲ್ತಿದ್ದೆ. ಸಮಯ ಸಿಕ್ಕಾಗ್ಲೆಲ್ಲಾ ಹುಡುಗನ ಚಟುವಟಿಕೆಗಳನ್ನು ದೂರದಿಂದಲೇ ವೀಕ್ಷಿಸುತ್ತಿದ್ದೆ ಸೋಜಿಗ ಎಂದರೆ ಎಲ್ಲಿದ್ದರೂ ಅಲ್ಲಿ ನಗೆಯ ಹೊನಲಿತ್ತು, ಅನ್ಯೋನ್ಯತೆ ಕಾಣುತ್ತಿತ್ತು. ಆದರೆ ನಾನು ಎದುರಿಗೆ ಹೋಗುವಾಗ ಮೌನ ಮುಗುಳ್ನಗು, ಗೌರವದ ಒಂದು ಸೂಚನೆ, ವಾಹ್! ಅಪರೂಪದ ರತ್ನ, 21ನೇ ಶತಮಾನದಲ್ಲೂ ಇಂಥ ಮಕ್ಕಳು..ಎಂದು ಮನಸ್ಸಲ್ಲೆ ಯೋಚಿಸಿ ಒಳ್ಳೇದಾಗಲಿ ಎಂದು ಆಶೀರ್ವಾದ ಮಾಡಿ ಬಿಡುತ್ತಿದ್ದೆ. ಕಾಲೇಜಿನ ವಾರ್ಷಿಕೋತ್ಸವ ಹೊಸತನದ ಹುಚ್ಚು.. ನನ್ನಲ್ಲಿ, ಮಕ್ಳಲ್ಲಿರುವ ಎಲ್ಲಾ ಗುಣಗಳ್ನ ಹೊರತೆಗಿಬೇಕಂತ ಆಸೆ. ಆ ಕಲೆಗಳ್ಗೆ ಗುರುತು ಕೊಡೋದೇ ನನ್ನ ಹುಚ್ಚು ಹಠ.. ಈ ನಿಟ್ನಲ್ಲಿ ಈ ಬಾರಿ ಕಾವ್ಯ ಕುಂಚ ಗಾನ ಎಂಬ 3 ಕಲೆಗಳ ಸಂಯೋಜನೆ ಮಾಡ್ದೆ-ಒಂದೇ ಸ್ಟೇಜಲ್ಲಿ. ಹಾಡುವವರು, ಹಾಡಿಗೆ ಚಿತ್ರ ಬರೆಯುವವರು, ಅದೇ ಹಾಡಿಗೆ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್ ನುಡ್ಸೋರು…. ಗೊತ್ತಿರ್ಲಿಲ್ಲ ಇವನು ಮ್ಯಾಂಡೊಲಿನ್ ನುಡಿಸ್ತಾನೆ ಅಂತ….. ಅಭ್ಯಾಸ ಶುರುವಾಯ್ತು, ಅಭ್ಯಾಸದೊಂದಿಗೆ ಸರಿ-ತಪ್ಗಳ ವಿಶ್ಲೇಷಣೆ, ರಾಗತಾಳಗಳ ಬಗ್ಗೆ ಸಂಯೋಜನೆ, ಹೆಚ್ ತಿಳ್ದೋರು-ಸ್ವಲ್ಪ ತಿಳ್ದೋರ ಮಧ್ಯದಲ್ಲಿ ಒಂದು ಬ್ಯಾಲೆನ್ಸ್ ತರೋ ಪ್ರಯತ್ನ…. ಸ್ವಲ್ಪ ಹೆಣ್ಣುಮಕ್ಕಳು, ಸ್ವಲ್ಪ ಗಂಡುಮಕ್ಕಳು, ತಬಲ, ಹಾರ್ಮೋನಿಯಂ, ಕೀಬೋರ್ಡ್, ಚಿತ್ರಗಾರರು, ರಾಗತಾಳಗಳು,ಹಿಮ್ಮೇಳಗಳು,ಅವಶ್ಯಕತೆಗಳು, ಕಲ್ಪನೆಗಳು, ಆಲೋಚನೆಗಳು, ಧೋರಣೆಗಳು, ಒಂದರಮೇಲೊಂದು ಸಮಾಗಮಗಳು… ಆ ದಿನ ಕೆಲಸದ ಒತ್ತಡ ಹೆಚ್ಚಾಗಿ, ಬೇರೆ ಸಮಸ್ಯೆಗಳೂ ಸೇರಿ, ಒಂತರಾ ಅಸಹನೆ ಕೂಡಿತ್ತು ನನ್ನಲ್ಲಿ. ರೋಸಿಹೋದ ದೇಹವನ್ನು ಹೊತ್ತು,ಮನಸಲ್ಲಿ ಸಾವಿರ ಪ್ರಶ್ನೆಗಳ ಉತ್ರಾ ಹುಡುಕ್ತಾ ಲ್ಯಾಬ್ನ ಕಡೆ ನಡ್ದೆ.. ಯಾವುದೋ ಸಿಟ್ನಲ್ಲಿ, ವ್ಯವಧಾನ ಕಳ್ಕೊಂಡು ಹೇಳಿದೆ  “ಪ್ರಾಕ್ಟೀಸ್ ಮಾಡಕ್ಕೆ ಏನ್ರೋಗ ನಿಮ್ಗೆ? ದಿನಾ ನಾನೇ ಬಂದು ಹೇಳ್ಬೇಕು! ಇಷ್ಟು ದೊಡ್ಡೋರಾಗಿದೀರ! ಜವಾಬ್ದಾರಿ ಬೇಡ್ವಾ. ಎಲ್ಲಾದುಕ್ಕೂ ನಾನೇ ತಲೆ ಚಚ್ಕೋಬೇಕಾ?” ಆ ಕಡೆಯಿಂದ ಮ್ಯಾಂಡೋಲಿನ್ ನಲ್ಲಿ “ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು” ನುಡಿಯಲಾರಂಭವಾಯಿತು. ನನ್ನ ಅತಿಪ್ರಿಯ ಹಾಡುಗಳಲ್ಲಿ ಒಂದು ಅದು. ನನ್ನ ಮುಖದಲ್ಲಿ ಮುಗುಳ್ನಗೆ ಅರಳಿದ್ದು ನಂಗೇ ಗೊತ್ತಾಗಲಿಲ್ಲ.. ನಕ್ಬಿಟ್ಟೆ..ಆಶ್ಚರ್ಯದಿಂದ ಅವನನ್ನ ಹತ್ರ ಕರ್ದು ಕೇಳ್ದೆ “ಹೇಗೆ ಗೊತ್ತು ಈ ಹಾಡು ನಿಂಗೆ, ಇದನ್ನೇ ಯಾಕ್ ನುಡುಸ್ದೆ ನೀನು?”        ಅದಕ್ಕೆ ಅವನು ಆಡಿದ ಮಾತು ಕೇಳಿ ದಂಗಾದೆ,” ಮಿಸ್,ಅವತ್ತು ಲ್ಯಾಬ್ ರೆಕಾರ್ಡ್ ಇಡಲಿಕ್ಕೆ ಬಂದಾಗ ನೀವು ಕಿಟಕಿಯ ಕಡೆ ನೋಡ್ಕೊಂಡು ಇದೇ ಹಾಡನ್ನು  ಗುನುಗ್ತಾ ಇದ್ರಿ, ಬಹಳ ಹಾಡುಗಳನ್ನು ನೀವುಗುಣ ಗಿದ್ದೀರಿ ಆದರೆ ಈ ಹಾಡಲ್ಲಿ ನಿಮ್ಮ ಮುಗುಳ್ನಗೆ ನಿಜವಾಗಿರುತ್ತೆ ಮಿಸ್”  “ನಿಮಗೆ ಸಂತೋಷವಾಗಲಿ ಎಂದೇ ಇದನ್ನು ನುಡಿಸಿದೆ”……ಇದಾದ್ನಂತ್ರ ದಿನಾ ಲ್ಯಾಬ್ಗೆ ನಾನು ಬಂದು ಕೂರ್ತಿದ್ಹಂಗೆ, ಒಂದು ನಿಮಿಷ ಈ ಹಾಡು.. ನನ್ನ ಮುಗುಳ್ನಗೆ.. ನಂತರ ರೆಗ್ಯುಲರ್ ಪ್ರಾಕ್ಟೀಸ್. ವಾರ್ಷಿಕೋತ್ಸವ ಆಯ್ತು, ಇಷ್ಟ್ರಲ್ಲೇ ನಾನು ಇವ್ನಲ್ಲಿ ಬಹಳ ವಿಶೇಷ ಗುಣಗಳ್ನ ಗುರುತಿಸಿದ್ದೆ..      ಆಟ ಆಡ್ತಾ ನಗ್ ನಗ್ತಾ ಇನ್ನೊಬ್ರ ಬೇಸ್ರಾನ ಗುರ್ತಿಸ್ತಿದ್ದ, ಅದ್ನ ಕಡ್ಮೆ ಮಾಡಕ್ಕೆ ತನಗಾದ ಪ್ರಯತ್ನ ಮಾಡ್ತಿದ್ದ.. ಎಲ್ಲಾ ಸಂಬಂಧಗಳಿಗೂ ಒಂದು ಬೆಲೆ ಇದೆ ಎಂಬ ಔಚಿತ್ಯ ಅರಿತುಕೊಂಡಿದ್ದ. ಬೇರೆಯವರು ಅವರವರ ಸಂಬಂಧಗಳನ್ನು ಹೇಗೆ ಬೆಳೆಸಬೇಕು ಎಂಬ ಸೂಕ್ಷ್ಮವನ್ನು ಹೇಳಿಕೊಡುತ್ತಿದ್ದ…ಸಂಬಂಧಗಳಿಗೆ ಗೌರವ ಪ್ರೀತಿ ವಿಶ್ವಾಸ ತುಂಬಿ ಸಂತೋಷದ ಹೊನಲು ಹಂಚುವ ಗುಣ ಬಹಳ ವಿರಳ… ಇಷ್ಟು ಸಣ್ಣ ವಯಸ್ಸಿಗೆ ಇಷ್ಟೊಂದು ನಿಸ್ವಾರ್ಥ ನಿಷ್ಕಾಮ ಪ್ರಬುದ್ಧ ತೆ ಇದೇ ಮೊದಲ ಬಾರಿ ನೋಡಿದ್ದು..ವಿಪರ್ಯಾಸ ಅಂದ್ರೆ, ಈ ವಿದ್ಯೆ ಯಾವ ಪುಸ್ತಕದಲ್ಲೂ ಹೇಳ್ಕೊಡೊದಿಲ್ಲ, ಅಂಕಪಟ್ಟಿಯ ಸಾಲಿನಲ್ಲಿ ಸೇರೊದಿಲ್ಲ, ಮೆಡಲ್ ಗಳು ಖಂಡಿತಾ ಇಲ್ಲ, ಇದಕ್ಕೆ ಯಾವ Rank ಕೂಡ ಕೊಡೋದಿಲ್ಲ…           ಈ ಸ್ವಾರ್ಥ ಲೋಕದಲ್ಲಿ ನಿಸ್ವಾರ್ಥ ಹಕ್ಕಿಯಾಗಿದ್ದು ಇವನು ಹಾರುವ ಮುನ್ನವೆ ಮುದುಡಿ ಹೋಗಿದ್ದು ತುಂಬಲಾರದ ನಷ್ಟವೇ ಸರಿ…ಸ್ವಾರ್ಥಿಗಳ ಸ್ವಾರ್ಥವೋ? ನಿಸ್ವಾರ್ಥದ ವರ ಶಾಪವೋ? ನಾನರಿಯೆ! ನನ್ನ ಮನಸ್ಸಲ್ಲಿ ಎಂದೂ ಆರದ ದೀಪವಾಗಿ ಆ ಗುಣಗಳನ್ನು ಅಳವಡಿಸಿಕೊಂಡು ಅವನನ್ನು ನನ್ನಲ್ಲಿ ಉಳಿಸಿಕೊಂಡೆ…..ಇರೋದ್ ಮೂರು ದಿನದಲ್ಲಿ ಹಂಚು ಪ್ರೀತಿಯ, ಈ ಉಡುಗೊರೆಗೆ ಸರಿಸಮ ಇನ್ನೇನಿಲ್ಲ

ಅವ್ಯಕ್ತಳ ಅಂಗಳದಿಂದ Read Post »

ಅಂಕಣ ಸಂಗಾತಿ

ನಾನು ಕಂಡ ಹಿರಿಯರು

ಕೋಟ ಶಿವರಾಮ ಕಾರಂತ್ ಡಾ.ಗೋವಿಂದ ಹೆಗಡೆ “ವಿದ್ಯಾಸಾಗರ’ ಕಾರಂತರು (೧೯೦೨-೧೯೯೭) ಅದು ೧೯೭೭ರ ಬೇಸಿಗೆಯಿದ್ದಿರಬಹುದು. ತುರ್ತುಸ್ಥಿತಿಯನ್ನು ಹಿಂತೆಗೆದುಕೊಂಡು ಚುನಾವಣೆಯನ್ನು ಘೋಷಿಸಲಾಗಿತ್ತು. (ಇವೆಲ್ಲ ತಿಳಿದಿದ್ದು ನಂತರ,ಆಗ ಅಲ್ಲ.) ನಮ್ಮ ಊರಿನ ಬಳಿಯ ಉಮಚಗಿಯಲ್ಲಿ ಒಂದು ಕಾರ್ಯಕ್ರಮ. ಹತ್ತು ಹನ್ನೊಂದರ ಹುಡುಗ ನಾನು ಅಲ್ಲಿದ್ದೆ. ಎತ್ತರದ, ಗೌರವರ್ಣದ, ನೀಳ ಕೇಶದ ಪಂಚೆಯುಟ್ಟ ಹಿರಿಯರು ಮಾತನಾಡಿದರು. ಮುಂದೆ ಕುಳಿತಿದ್ದ ನಾವು ನಾಲ್ಕಾರು ಮಕ್ಕಳು ಕೆಲಹೊತ್ತು ಅವರ ಮಾತು ಕೇಳಿದೆವು ಏನೂ ತಿಳಿಯಲಿಲ್ಲ ; ಬೇಸರ ಬಂತು. ಗುಸುಗುಸು ಪಿಸುಮಾತು ಕೊನೆಗೆ ಜೋರಾಯಿತು. ಅವರು ನಮ್ಮನ್ನು ಗದರಿ ಮಾತು ಮುಂದುವರಿಸಿದರು. ಕೋಟ ಶಿವರಾಮ ಕಾರಂತರನ್ನು ನಾನು ಮೊದಲು ನೋಡಿದ್ದು ಹೀಗೆ. ಮುಂದೆ ಕಾಲೇಜು ದಿನಗಳಲ್ಲಿ ಅವರ ಅನೇಕ ಬರಹಗಳನ್ನು, ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ಓದಿದಾಗ ಕಾರಂತರ ಕಿರು ಪರಿಚಯವಾದದ್ದು. ೧೯೮೫ರಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನ ನೆನಪಿನಲ್ಲಿ ಹಸಿರಾಗಿದೆ. ಉದ್ಘಾಟನೆಯಲ್ಲಿ ಅತಿಥಿ ಯಾಗಿದ್ದ ಕಾರಂತರು”ಬರದ ಕಾರಣ ಸಮ್ಮೇಳನ ನಡೆಯಕೂಡದು “ಎಂಬ ತಾರಕಕ್ಕೇರಿದ್ದ ವಿವಾದವನ್ನು ತಮ್ಮ ಮಾತಿನ ಆರಂಭದಲ್ಲೇ ಪ್ರಸ್ತಾಪಿಸಿದರು. ‘ ಬರ ದ ಕಾರಣಕ್ಕೆ ಮಸಾಲೆದೋಸೆ ತಿನ್ನುವುದನ್ನು ಬಿಟ್ಟಿದ್ದೇವಾ?’ ಎಂಬ ಅವರ ಮಾತು ಇನ್ನೊಂದು ವಿವಾದವನ್ನೇ ಸೃಷ್ಟಿಸಿತ್ತು. ೧೯೯೫/೯೬ ರ ಸುಮಾರಿಗೆ ಶಿರಸಿಯಲಿ ನಡೆದ ‘ಬಿ ಎಚ್ ಶ್ರೀಧರ ಸಾಹಿತ್ಯ ಪ್ರಶಸ್ತಿ’ ಸಮಾರಂಭದಲ್ಲಿ ಕಾರಂತರು ಮುಖ್ಯ ಅತಿಥಿ. ಪ್ರಶಸ್ತಿ ಪುರಸ್ಕೃತರು ದು ನಿಂ ಬೆಳಗಲಿ. ‘ಸ್ನೇಹಿತರೇ’ಎಂದು ಆರಂಭಿಸಿ ಇಪ್ಪತ್ತೈದು ಮೂವತ್ತು ನಿಮಿಷಗಳ ಕಾಲ ಮಾತನಾಡಿದ ಕಾರಂತರ ಒಂದು ಗುಡುಗು ಈಗಲೂ ನೆನಪಿನಲ್ಲಿದೆ. ಶಿರಸಿಯ ಬಳಿಯ ಯಾಣ ಒಂದು ಪ್ರಾಕೃತಿಕ ವಿಸ್ಮಯ. ಅಲ್ಲಿ ಬತ್ತಲೇಶ್ವರ ಎಂಬ ಕವಿ ಇದ್ದನಂತೆ. ಅವನ ಬತ್ತಲೇಶ್ವರ ರಾಮಾಯಣ ಕೃತಿ ಈಗ ಸಿಗುತ್ತಿಲ್ಲ ಎಂದು ವಿಷಾದಿಸಿದ ಕಾರಂತರು ಮರುಗಳಿಗೆಯಲ್ಲಿ ನಮ್ಮ ಜಡ ನಡತೆಯ ಮೇಲೆ ಕೆಂಡವನ್ನೇ ಕಾರಿದರು! “ಇಷ್ಟು ಜನ ಮೇಷ್ಟ್ರುಗಳಿದ್ದೀರಿ,ಕನ್ನಡದ ಹೆಸರಿನಲ್ಲಿ ಅನ್ನ ತಿನ್ನುತ್ತೀರಿ. ಅಂಥದೊಂದು ಪುಸ್ತಕವನ್ನು ಈ ನೆಲದ ಕೊಡುಗೆಯನ್ನು ಪುನರ್ಮುದ್ರಣ ಮಾಡುವ ಯೋಗ್ಯತೆ ಇಲ್ಲವೆ ನಿಮಗೆ?” ಎಂದರು… ಕಾರ್ಯಕ್ರಮದ ಕೊನೆಯಲ್ಲಿ ಮುದ್ದಾದ ಮಗುವನ್ನು ಯಾರೋ ಅವರ ಬಳಿ ತಂದರು. ಮಗುವಿನ ಗಲ್ಲ ನೇವರಿಸಿದ ಕಾರಂತರ ಹೊಳಪುಗಣ್ಣು ಕಲಾವಿದ, ಛಾಯಾಚಿತ್ರಗ್ರಾಹಕ ಜಿ ಎಂ ಹೆಗಡೆ ತಾರಗೋಡ ಅವರ ಕ್ಯಾಮರಾದಲ್ಲಿ ಸೆರೆಯಾದಂತೆ ನೆನಪು. ೧೦-೨-೧೯೦೨ ರಂದು ದಕ್ಷಿಣಕನ್ನಡದ ಕೋಟದಲ್ಲಿ ಜನಿಸಿದ ಕಾರಂತರು ಗಾಂಧೀಜಿಯವರ ಪ್ರಭಾವಕ್ಕೊಳಗಾಗಿ ಕಾಲೇಜು ಶಿಕ್ಷಣವನ್ನು ತ್ಯಜಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ, ಸಮಾಜ ಸುಧಾರಣೆಯಲ್ಲಿ ಸ್ವದೇಶಿ ಆಂದೋಲನದಲ್ಲಿ, ತೊಡಗಿಸಿಕೊಂಡವರು.. ಅವರು ಕಲಿತಿದ್ದು ಜಗದ ಶಿಕ್ಷಣ ಶಾಲೆಯಲ್ಲಿ. ಪತ್ರಿಕೆಯ ಸಂಪಾದಕ,ಪ್ರಕಾಶಕ ಮುದ್ರಣಾಲಯ ಸ್ಥಾಪಕ, ಮುದ್ರಕ, ಕಾದಂಬರಿಕಾರ, ಪ್ರಾಥಮಿಕ ಶಿಕ್ಷಣದಲ್ಲಿ ಪ್ರಯೋಗ ನಿರತ, ಮಕ್ಕಳಿಗಾಗಿ ಬಾಲಪ್ರಪಂಚ ವಿಜ್ಞಾನ ಪ್ರಪಂಚ ಹೀಗೆ ವಿಶ್ವಕೋಶಗಳನ್ನು ಬರೆದಾತ, ಯಕ್ಷಗಾನ ಕಲಿಕೆ ಕಲಿಸುವಿಕೆ ,ಅದರಲ್ಲಿ ಸಂಶೋಧನೆ ಮತ್ತು ಬರಹ, ಸಿನಿಮಾ ನಿರ್ದೇಶನ, ನಿಘಂಟು ಬರಹ, ಪರಿಸರ ಚಳುವಳಿ, ಪ್ರವಾಸ,ಫೋಟೋಗ್ರಫಿ ಹೀಗೆ ಕಾರಂತರ ವ್ಯಕ್ತಿತ್ವಕ್ಕೆ ಹಲವು ಮುಖಗಳು! ೪೩ ಕಾದಂಬರಿಗಳು, ಕವನಸಂಕಲನಗಳು, ಕಥಾಸಂಕಲನ, ಜ್ಞಾನ ವಿಜ್ಞಾನದ ಹಲವು ಶಾಖೆಗಳಲ್ಲಿ ಬರಹ…ಕಾರಂತರ ಬಗ್ಗೆ, ಅವರ ಬರಹಗಳ ಬಗ್ಗೆ ಬರೆದಷ್ಟೂ ಕಡಿಮೆಯೇ. ‘ವಿದ್ಯಾಸಾಗರ ಕಾರಂತರು’.. ಈ ಮಾತು ನನ್ನದಲ್ಲ. ದೇಜಗೌ ಅವರದು. ಪದ್ಮಭೂಷಣ ಪುರಸ್ಕಾರ,ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಹಲವಾರು ಗೌರವ ಡಾಕ್ಟರೇಟ್ ಗಳು, ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹೀಗೆ ಅವರನ್ನು ಅಲಂಕರಿಸಿದ ಪ್ರಶಸ್ತಿ-ಪುರಸ್ಕಾರ, ಗೌರವಗಳು ಹಲವು. ತೊಂಬತ್ತೈದು ವರ್ಷಗಳ ತುಂಬು ಜೀವನ ನಡೆಸಿ ೯-೧೨-೧೯೯೭ರಂದು ನಿಧನರಾದರು ಈ ಕಡಲತಡಿಯ ಭಾರ್ಗವ. ಕನ್ನಡದ ಬದುಕನ್ನು ಹತ್ತು ಹಲವು ರೀತಿಗಳಲ್ಲಿ ಕಟ್ಟಿದ ಕಾರಂತರಿಗೆ ಅವರೇ ಸಾಟಿ. ಅವರ ಮಾತುಗಳನ್ನು ಕೇಳಿದ್ದೆ ಎಂಬುದು ನನ್ನ ಭಾಗ್ಯಗಳಲ್ಲಿ ಒಂದು. ಕೃತಿಗಳು ಕಾದಂಬರಿಗಳು-ಮೂಜನ್ಮ, ಯಾರು ಲಕ್ಷಿಸುವರು?,ಸರಸಮ್ಮನ ಸಮಾಧಿ, ಇದ್ದರೂ ಚಿಂತೆ, ಒಂಟಿ ದನಿ,ಮೈಮನಗಳ ಸುಳಿಯಲ್ಲಿ,ಮರಳಿ ಮಣ್ಣಿಗೆ,ಮೂಕಜ್ಜಿಯ ಕನಸುಗಳು, ಚಿಗುರಿದ ಕನಸು, ಚೋಮನದುಡಿ, ಗೊಂಡಾರಣ್ಯ, ಇಳೆಯೆಂಬ.., ಸ್ವಪ್ನದ ಹೊಳೆ, ಕುಡಿಯರ ಕೂಸು, ಬೆಟ್ಟದ ಜೀವ, ಔದಾರ್ಯದ ಉರುಳಲ್ಲಿ, ಮೊಗ ಪಡೆದ ಮನ, ಉಕ್ಕಿದ ನೊರೆ,ಆಳ ನಿರಾಳ, ಅದೇ ಊರು ಅದೇ ಮರ ,ಇನ್ನೊಂದೇ ದಾರಿ, ಜಗದೋದ್ಧಾರ ನಾ,ಬತ್ತದ ತೊರೆ,ಅಂಟಿದ ಅಪರಂಜಿ, ಗೆದ್ದ ದೊಡ್ಡಸ್ತಿಕೆ, ನಾವು ಕಟ್ಟಿದ ಸ್ವರ್ಗ, ಶನೀಶ್ವರನ ನೆರಳಿನಲ್ಲಿ, ನಂಬಿದವರ ನಾಕ-ನರಕ,ಮುಗಿದ ಯುದ್ಧ,ಧರ್ಮರಾಯನ ಸಂಸಾರ ಇತರ- ಬಾಲ ಪ್ರಪಂಚ, ವಿಜ್ಞಾನ ಪ್ರಪಂಚ, ಯಕ್ಷಗಾನ ಬಯಲಾಟ, ಪ್ರವಾಸ ಸಾಹಿತ್ಯ- ಅಬುವಿನಿಂದ ಬರಾಮಕ್ಕೆ, ಅಪೂರ್ವ ಪಶ್ಚಿಮ,ಅರಸಿಕರಲ್ಲ, ಪಾತಾಳಕ್ಕೆ ಪಯಣ ಆತ್ಮಕಥೆ- ಹುಚ್ಚು ಮನಸ್ಸಿನ ಹತ್ತು ಮುಖಗಳು ಸ್ಮೃತಿಪಟಲದಿಂದ (ಮೂರು ಭಾಗಗಳು) ಮಕ್ಕಳ ಸಾಹಿತ್ಯ- ಓದುವ ಆಟ-ಸಿರಿಗನ್ನಡ ಪಾಠ ಮಾಲಿಕೆ ಹುಲಿರಾಯ ಮೈಲಿಗಲ್ಲಿನೊಂದಿಗೆ ಮಾತುಕತೆಗಳು ನಚಿಕೇತ ಮರಿಯಪ್ಪನ ಸಾಹಸಗಳು ವಿಜ್ಞಾನ ಪ್ರಪಂಚ ಬಾಲ ಪ್ರಪಂಚ ಜೀವನ ಚರಿತ್ರೆ- ಪಂಜೆ ಮಂಗೇಶರಾಯರು ಶ್ರೀ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ ಕಲೆ ಶಿಲ್ಪಕಲೆ ಇತ್ಯಾದಿ- ಕಲಾದರ್ಶನ ಕಲಾಪ್ರಪಂಚ ಚಾಲುಕ್ಯರ ಶಿಲ್ಪಕಲೆ ಭಾರತೀಯ ಚಿತ್ರಕಲೆ ಅರಿವಿನ ಆನಂದ ಜ್ಞಾನ

ನಾನು ಕಂಡ ಹಿರಿಯರು Read Post »

ಅಂಕಣ ಸಂಗಾತಿ

ಹೊತ್ತಾರೆ

ಅಮ್ಮನೂರಿನ ನೆನಪುಗಳು @ಅಮೇರಿಕಾದಿಂದ ಅಶ್ವಥ್ ಬರೆಯುತ್ತಿದ್ದಾರೆ ಅಶ್ವಥ್ ತಮ್ಮಪ್ಪಣ್ಣನಸ್ವಾತಂತ್ರ‍್ಯಪ್ರವಚನ.   ಅಂದಿದ್ದೇ ತಡ… ತಮ್ಮಪ್ಪಣ್ಣ ಎದ್ದು ನಿಂತರು… ಅಂದರೆ ತಮ್ಮಪ್ಪಣ್ಣ ಎಂದಿನಂತೆ ಮುಖ್ಯ ಅತಿಥಿ. ನಾನು ಶಾಲೆಗೆ ಸೇರುವುದಕ್ಕಿಂತ ಮೊದಲು, ಶಿಶುವಿಹಾರದಲ್ಲಿದ್ದಾಗಲೂ ಸ್ವಾತಂತ್ರ‍್ಯ ದಿನಾಚರಣೆಗೆ ಶಾಲೆಯ ಮಕ್ಕಳ ಜೊತೆ ಸೇರಿಸುತ್ತಿದ್ದರಿಂದ ತಮ್ಮಪ್ಪಣ್ಣನ ಭಾಷಣದ ಇವೆಂಟ್ ಪರಿಚಯವಾಗಿತ್ತು. ಈಗ ನಾನು ಒಂದನೇ ತರಗತಿ. ಹಾಗಾಗಿ ಚಿಕ್ಕಮಕ್ಕಳ ಮುಂದಿನ ಸಾಲಿನಿಂದ ಬಡ್ತಿ ಪಡೆದು ಶಾಲೆಯ ಮಕ್ಕಳ ಸಾಲಿನಲ್ಲಿ ಕುಳಿತಿದ್ದೇ ಆ ದಿನಾಚರಣೆಯ ವಿಶೇಷ. ಅವನ ಗೊಣಗಾಟ ಮೇಷ್ಟ್ರಿಗೆ ಕೇಳಲಿಲ್ಲ, ತಮ್ಮಪ್ಪಣ್ಣನ ಕಿವಿಗೂ ಬೀಳಲಿಲ್ಲ ಸದ್ಯ! ಕೊಡು, ಲೆಕ್ಕ ಮಾಡಿ ತಂದಿದ್ದೀನಿ” ಅನ್ನುವ ಮೇಷ್ಟರ ಸೂಚನೆಯನ್ನು ಸ್ವೀಕರಿಸಿದ ಸೂರಿ, ಒಬ್ಬರಿಗೆ ಒಂದು ಚಾಕೋಲೇಟು ಒಂದು ಹಾಲ್ಕೋವಾ ಕೈಯಲ್ಲಿರಿಸಿ ಮುಂದುವರಿದ. ಎಲ್ಲರಂತೆ ನಾನೂ ಎರಡೂ ಕೈ ಚಾಚಿದೆ. ಸೂರಿಯ ಕೈಯಿಂದ ಎರಡು ಶ್ಯಾಮಾ ಚಾಕಲೇಟು ಜಾರಿದವು. ಏನೋ ಸಣ್ಣವನು ಅನ್ನುವ ಭಾವದಂತೆ ನಗುವ ಮುಖ ಮಾಡಿ ಸೂರಿ ಮುಂದುವರೆದ. ತಮ್ಮಪ್ಪಣ್ಣ ಕುಳಿತೇ ಇದ್ದರು. ಹೀಗೆ ನಾನು ಏಳನೇ ತರಗತಿ ಮುಗಿಸುವ ತನಕವೂ ತಮ್ಮಪ್ಪಣ್ಣನ ಸ್ವಾತಂತ್ರ‍್ಯ ದಿನದ ಪ್ರವಚನ “ಗಾಂಧಿ ಕಷ್ಟಪಟ್ಟು…. ಅನ್ನ ನೀರು ಬಿಟ್ಟು….. ಉಪವಾಸ ಮಾಡಿ …. ದೇಶ ನಮ್ಮದು ಅನ್ನುವ ಹಾಗೆ ಮಾಡಿದರು” ಅನ್ನುವ ಇದೊಂದೇ ವಿಚಾರವನ್ನು ಏಳು ರ‍್ಷವೂ ಕೇಳಿದ್ದಾಯ್ತು! ತಮ್ಮಪ್ಪಣ್ಣನನ್ನು ಹೊರತುಪಡಿಸಿದರೆ ಬೇರೆ ಯಾರೂ ಅಧ್ಯಕ್ಷರ ಕರ‍್ಚಿ ಅಲಂಕರಿಸಲಾಗಲೇ ಇಲ್ಲ. ಹೈಸ್ಕೂಲು ಸೇರಿದ ನಂತರ ಮೇಷ್ಟರು ಬದಲಾದರು! ಬೇರೆ ಊರಾಗಿದ್ದರಿಂದ ತಮ್ಮಪ್ಪಣ್ಣನ ಪ್ರವಚನ ತರ‍್ಗಡೆಯಾಗದೇ ಊರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಉಳಿಯಿತು. ಸ್ವಾತಂತ್ರ‍್ಯ ಸಂಗ್ರಾಮದ ಹಲವು ವಿಚಾರಗಳು, ಕತೆಗಳು ಉಪಕತೆಗಳು, ಗಾಂಧೀಜಿಯ ಸತ್ಯಾಗ್ರಹಗಳು, ಸಬರಮತಿ ಆಶ್ರಮ, ಸಮಾಜ ಸುಧಾರಣೆಗಳು, ಪತ್ರಿಕೋದ್ಯಮ, ಹೀಗೆ ಗಾಂಧೀ ತತ್ವಗಳ ಒಂದೊಂದೇ ಎಳೆಗಳು ಮನದ ತೆರೆಕಾಣಲಾರಂಭಿಸಿದವು. ಅನಾಹುತಗಳನ್ನು ಸುಮ್ಮನೆ ಜರ‍್ಣಿಸಿಕೊಂಡು ನಾವು ಸ್ವತಂತ್ರರೆಂದುಕೊಂಡುಬಿಡುವುದಾ? ಕುವೆಂಪು ಹೇಳಿದ ಈ ಸಾಲು ನೆನಪು ಮಾಡಿಕೊಳ್ಳಬೇಕು; “ಕತ್ತಿ ಪರಕೀಯವಾದರೆ ಮಾತ್ರ ನೋವೇ? ನಮ್ಮವರೇ ಹದಮಾಡಿ ತಿವಿದರದು ಹೂವೇ?” ಎನ್ನುವುದನ್ನು. ಅಂದಹಾಗೆ ತಮ್ಮಪ್ಪಣ್ಣ ತೀರಿಕೊಂಡು ದಶಕವಾಯ್ತು. ಆದರೂ ಸ್ವಾತಂತ್ರ‍್ಯೋತ್ಸವವೆಂದರೆ ಮೊದಲು ನೆನಪಾಗುವುದು ನಮ್ಮ ತಮ್ಮಪ್ಪಣ್ಣನ ಪ್ರವಚನ, ಉಗಿಬಂಡಿಯ ಉರುವಲಿನಂತೆ ಕೆಂಪಗಿರುತ್ತಿದ್ದ ಅವರ ತಾಂಬೂಲದ ಬಾಯಿಂದ ಹೊರಬೀಳುತ್ತಿದ್ದ ಗಾಂಧೀಜಿಯ ಉಪ್ವಾಸ, ಹೊಟ್ಟೆ ಬಟ್ಟೆ ಕಟ್ಟಿ ದೇಶ ನಮ್ಮದು ಅಂತ ಮಾಡಿಕೊಟ್ಟ ಗಾಂಧೀ ಸಾಧನೆ! “ತಟ್ಟು ಚಪ್ಪಾಳೆ ಪುಟ್ಟಮಗು ತಕೋ ಕೈ, ಇಕೋ ಕೈ, ಗಾಂಧಿಗಿಂದು ಜನುಮದಿನ” ಅಂತ ಮಗಳಿಗೆ ಹೇಳುತ್ತಾ ತಮ್ಮಪ್ಪಣ್ಣನ ಸಾಲು ಸಾಲು ಪ್ರವಚನಮಾಲೆಗಳು ನೆನಪಾದವು.

ಹೊತ್ತಾರೆ Read Post »

ಅಂಕಣ ಸಂಗಾತಿ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

ಡಾ.ಸಣ್ಣರಾಮ (ಹಿಂದಿನ ವಾರದಿಂದ) ಕಳೆದ ಸಂಚಿಕೆಯಿAದ…  ಶಿವಮೊಗ್ಗ ಜಿಲ್ಲೆಯ ಚಳವಳಿಗಳು  ದೈವದ ಪ್ರೇರಣೆ ಎನ್ನುವಂತೆ ಅನಿಮಿಷ ಗುರುಗಳ ದರ್ಶನವನ್ನು ಪಡೆಯುತ್ತಾರೆ. ಅಲ್ಲಮ ಪ್ರಭುವಿನ ಬದುಕಿನಲ್ಲಿ ಕಾಮಲತೆಯ ಪ್ರವೇಶ ಮತ್ತು ಮರಣ, ಅನಿಮಿಷ ಗುರುವಿನ ಸಂದರ್ಶನ ಸಂದರ್ಭಗಳು ಹೊಸ ಸಾಧನೆಯ ದಿಕ್ಕನ್ನು ತೋರಿದವು. ಅವನ ಸಾಧನೆಯಿಂದ ಅದನು ಬಹುದೊಡ್ಡ ಅನುಭಾವಿಯಾಗಿ ಮಾರ್ಪಟ್ಟನು. ಬಸವಣ್ಣನವರ ಕ್ರಾಂತಿಗೆ ಕೈ ಜೋಡಿಸಿದ ಮಹಾ ಸಾಧಕನಾಗಿ ಗುರುತಿಸಿಕೊಂಡು ಕರ್ನಾಟಕದ ಶರಣ ಚಳುವಳಿಯ ಇತಿಹಾಸದಲ್ಲಿ ಮುಖ್ಯ ಸ್ಥಾನವನ್ನು ಪಡೆದುಕೊಂಡನು.  ಅಲ್ಲಮ ಪ್ರಭುವಿನ ಬದುಕು ಕೇವಲ ಚಿಂತನೆ, ವಚನ ರಚನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಲೋಕದ ಜನರ ಬದುಕನ್ನು ತಿದ್ದಿ ಅವರ ಜೀವನ ಸರಿ ದಾರಿ ತೋರಲು ಶ್ರಮಿಸಿದ. ಅಲ್ಲದೆ ಸಾಧಕರು ಇದ್ದಲ್ಲಿಗೆ ಹೋಗಿ ಅವರಲ್ಲಿದ್ದ ಕುಂದು ಕೊರತೆಗಳನ್ನು ತಿದ್ದಿ ಶರಣ ಚಳುವಳಿಗೆ ಪೂರಕ ಶಕ್ತಿಯಾಗುವಂತೆ ಮಾರ್ಪಡಿಸಿದರು. ದೀನ ದಲಿತರನ್ನು ಸಂತೈಸಿ ಸಮಾಜ ಸೇವೆಗೆ ತೊಡಗಿಸಿಕೊಂಡನು. ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಪೂರ್ಣ ಬೆಂಬಲವಾಗಿ ನಿಂತನು. ಅನುಭವ ಮಂಟಪದ ಅಧ್ಯಕ್ಷನಾಗಿ ವೀರಶೈವ ತತ್ವ-ಚಿಂತನಾ ಮಂಥನ ಸಭೆಗಳನ್ನು ನಿಯಂತ್ರಿಸಿ ಮಹಾಶರಣ ನೆನೆಸಿಕೊಂಡನು.  ಅಲ್ಲಮಪ್ರಭು ಚಿಂತಕನೆಂತೋ ಹಾಗೆಯೇ ವಚನ ರಚನಾ ಕೌಶಲ್ಯವನ್ನು ಪಡೆದಿದ್ದನು.ಅಂತೆಯೇ ಬೆಡಗಿನ ವಚನಕಾರನೆಂದೇ ಪ್ರಸಿದ್ದಿಯನ್ನು ಪಡೆದವರು. ಅವರ ವಚನಗಳಲ್ಲಿ ನೀತಿ ಇದೆ. ಕಟು ವಿಡಂಬನೆಯಿದೆ, ತತ್ವವಿದೆ, ಬದುಕಿನ ಪೂರ್ಣತೆಯ ಹುಡುಕಾಟವಿದೆ. ಅನುಭವವಿದೆ, ಅವರ ನಿರಾಕಾರ ತತ್ವವಂತು ಚಿಂತಕರನ್ನು ಚಕಿತಗೊಳಿಸುತ್ತದೆ.  ಸ್ಪಟಿಕದ ದೀಪದಂತೆ ಒಳ ಹೊರಗು ಇಲ್ಲ ನೋಡಾ  ವಿಗಡ ಚರಿತ್ರಕ್ಕೆ ನಾ ಬೆರಗಾದೆನು  ನೋಡಿದರೆ ಕಾಣ ಬರುತ್ತದೆ, ಮುಟ್ಟಿದರೆ ಕೈಗೆ ಸಿಲುಕದು  ಹೊದ್ದಿದರೆ ಸಮೀಪ ಹತ್ತ ಸಾರಿದಡೆ ಅತ್ತತ್ತ ತೋರುತಿದೆ  ಆಕಾರ ನಿರಾಕಾರವೆ ನುಂಗಿ ಬಯಲು ಸಮಾಧಿಯಲ್ಲಿ ಸಿಲುಕಿತ್ತು  ನೋಡಾ ಗುಹೇಶ್ವರಾ  ಈ ವಚನದಲ್ಲಿ ಪ್ರಭುದೇವ ಸೃಷ್ಠಿಯ ಅನಂತತೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಸೃಷ್ಟಿ ನಿತ್ಯ ನೂತನವಾದದು, ನಿರಂತರ ಚಲನಾಶೀಲೆ, ಅದರ ಗಹನತೆಯನ್ನು ಅರ್ಥೈಸಿಕೊಳ್ಳಲು ಸಾಧನವಲ್ಲದೆ ಸಾಮಾನ್ಯನಿಗೆ ಸಾಧ್ಯವಿಲ್ಲ. ಸೃಷ್ಟಿಯ ಆಂತರ್ಯ ಸಂಭವಿಸುವ ವಿದ್ಯಮಾನವನ್ನು ಅಲ್ಲಮನಷ್ಟು ಸಶಕ್ತವಾಗಿ ಕಟ್ಟಿಕೊಟ್ಟವರು ವಿರಳ. ಆಕಾಶ-ನಿರಾಕಾರ ಬಯಲು ಸಮಾಧಿ ಈ ಪದಗಳ ಸಂದರ್ಭೋಚಿತ ಬಳಕೆ ವಿದ್ವಾಂಸರನ್ನು ಬೆರಗುಗೊಳಿಸುತ್ತದೆ.  ಶರಣರು ಇರದ ಲೋಕಕ್ಕೆ ಮಹತ್ವವವನ್ನು ಕೊಟ್ಟವರು, ಪರಲೋಕದ ತಾಪತ್ರಯದಿಂದ ದೂರವಿದ್ದವರು. ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಮೂಢನಂಬಿಕೆ, ಕಂದಾಚಾರವನ್ನು ನೇರ ಮಾತುಗಳಿಂದ ಖಂಡಿಸಿದವರು, ನೇರ ನುಡಿಯ ಅಲ್ಲಮಪ್ರಭು ಅಂತರAಗ ಶುದ್ದಿಗೆ ಅಪಾರ ಮಹತ್ವವನ್ನು ಕೊಟ್ಟವರು.  ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ,  ತುಟ್ಟ ತುದಿಯ ಮೇಲು ಗಿರಿಯ ಮೆಟ್ಟಿ ಕೂಗಿದಡಿಲ್ಲ  ನಿತ್ಯ ನೇಮದಿಂದ ತನುವ ಮುಟ್ಟಿಕೊಂಡಡಿಲ್ಲ  ನಿಚ್ಚಕ್ಕೆ ನಿಚ್ಚ ನೆನೆವ ಮಾನವ ಅಂದAದಿಗೆ ಅತ್ತಲಿತ್ತ ಹರಿವ ಮನದ  ಚಿತ್ತದಲಿ ನಿಲಿಸಬಲ್ಲದೆ  ಬಚ್ಚ ಬರಿಯ ಬೆಳಗು ಗುಹೇಶ್ವರ ಲಿಂಗವು.  ಭಾರತೀಯ ತತ್ವಜ್ಞಾನ ಇಹಕ್ಕಿಂತ ಪರಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತದೆ. ಪರಲೋಕ ಸಾಧಿಸಲು ಅನೇಕ ಬಗೆಯ ದೈಹಿಕ ಕಸರತ್ತನ್ನು ಆಚರಿಸಲು ಹೇಳುತ್ತದೆ. ಪರಲೋಕ ಇದೆಯೋ ಇಲ್ಲವೋ ಎಂಬುದನ್ನು ಪ್ರಮಾಣಿಸಿ ಹೇಳಿದವರು ಯಾರು ಇಲ್ಲ. ಶರಣರು ಇಹಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟವರು. ಅಲ್ಲಮಪ್ರಭು ಇದನ್ನೇ ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ. ಮನಸ್ಸನ್ನು ನಿಯಂತ್ರಿಸದೆ ಎಷ್ಟು ಲೋಕವನ್ನು ಸುತ್ತಿದರೂ ಪೂರ್ಣತ್ವ ಪ್ರಾಪ್ತವಾಗುವುದಿಲ್ಲ ಎಂದು ಅಲ್ಲಮ ತೀಕ್ಷ÷್ಣವಾಗಿ ಪ್ರತಿಪಾದಿಸಿದ್ದಾರೆ. ಅಲ್ಲಮ ಪ್ರಭು ಒಬ್ಬ ದಾರ್ಶನಿಕ ಶರಣ. ತತ್ವಜ್ಞಾನಿಯಾಗಿ, ಸಂಘಟಕನಾಗಿ, ಸಮಾಜ ಸುಧಾರಕನಾಗಿ, ಬೆಡಗಿನ ವಚನ ರಚನಾಕಾರನಾಗಿ ಅವರ ಕೊಡುಗೆ ಅಪಾರ.  ಶಿವಶರಣರ ಚಳವಳಿಯಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಸರಿಸಮಾನ ಸ್ಥಾನಮಾನಗಳಿದ್ದವು. ಎಂದಿಲ್ಲದ ಮಹಿಳೆಯರು ಶರಣ ಚಳವಳಿಯಲ್ಲಿ ಪಾಲ್ಗೊಂಡು ಅಪರೂಪದ ವಚನಗಳನ್ನು ರಚಿಸಿದ್ದೇ ಇದಕ್ಕೆ ಸಾಕ್ಷಿ. ವಚನಗಾರ್ತಿಯರಲ್ಲಿ ಮಂಚೂಣಿಯಲ್ಲಿ ಕಂಡು ಬರುವವಳು ಅಕ್ಕಮಹಾದೇವಿ. ಅದು ಕವಯಿತ್ರಿಯಾಗಿ, ಮಹಿಳಾವಾದಿಯಾಗಿ ಅಕ್ಕಳ ಬದುಕ ಮಾದರಿಯಾದುದು ಹತ್ತನೆ ಶತಮಾನದಲ್ಲಿ ಕಂತಿ ಎಂಬ ಹೆಸರಿನ ಮಹಿಳೆಯೋರ್ವಳು ಕೆಲವು ಸಾಲುಗಳ ಸಾಹಿತ್ಯವನ್ನು ರಚಿಸಿರಬಹುದೆಂಬುದರ ಊಹೆಯ ಹೊರತಾಗಿ ಅಕ್ಕ ಆದ್ಯ ಕವಯಿತ್ರಿಯಾಗಿ ಸಾಹಿತ್ಯ ಲೋಕಕ್ಕೆ ಸ್ಮರಣೀಯ ಕೊಡುಗೆಯನ್ನು ನೀಡಿದ್ದಾಳೆ. ಕೇವಲ ಕರ್ನಾಟಕ ಮಾತ್ರವಲ್ಲ ಭಾರತೀಯ ಚರಿತ್ರೆಯಲ್ಲಿ ಮಹಿಳಾ ವಾದದ ಪ್ರಾಚೀನತೆಯನ್ನು ಹುಡುಕುತ್ತಾ ಹೋಗುವವರಿಗೆ ಮೊಟ್ಟ ಮೊದಲಿಗೆ ಕಂಡು ಬರುವ ಹೆಸರೇ ಅಕ್ಕಮಹಾದೇವಿ. ಆಧುನಿಕ ಮಹಿಳಾ ವಾದದ ಎಲ್ಲಾ ಗುಣ ಸ್ವಭಾವಗಳು, ಹೋರಾಟಗಳು ಅಕ್ಕನಲ್ಲಿ ಕಂಡು ಬರುತ್ತವೆ. ಅಕ್ಕ ಪುರುಷ ಕೇಂದ್ರಿತ ಎಲ್ಲಾ ಕಟ್ಟು ಕಟ್ಟಲೆಗಳನ್ನು ಒಡೆದು ಛೀದ್ರಗೊಳಿಸಿ 12 ನೇ ಶತಮಾನದ ವೇಳೆಗಾಗಲೇ ಮಹಿಳಾ ಸ್ವಾಭಿಮಾನವನ್ನು ಪ್ರತಿಪಾದಿಸಿದವಳು. ಅವಳ ಬದುಕೇ ಅಷ್ಟು ರೋಚಕ ಸಂಕಥನ.  ಆಧುನಿಕ ಮಹಿಳಾವಾದವು ಸ್ತ್ರೀಯ ಮೈ-ಮನಸ್ಸುಗಳ ಮೇಲೆ ಪುರುಷನ ಹಕ್ಕನ್ನು ಧಿಕ್ಕರಿಸುತ್ತದೆ. ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಸಮಾನತೆ ಮುಕ್ತ ಆಯ್ಕೆಯ ಹಕ್ಕುಗಳನ್ನು ಪ್ರತಿಪಾದಿಸುತ್ತದೆ. ಒಂದೊಮ್ಮೆ ಈ ಹಕ್ಕುಗಳು ಲಭ್ಯವಾಗಿದಿದ್ದರೆ ಅದನ್ನು ಪ್ರತಿಭಟನೆಯ ಮೂಲಕ ಪಡೆದುಕೊಳ್ಳುವ ಹಿಂದೇಟು ಹಾಕಕೂಡದೆಂದು ಪ್ರತಿಪಾದಿಸುತ್ತದೆ. ಈ ಎಲ್ಲಾ ಬಗೆಯ ಪ್ರತಿಭಟನೆಯನ್ನು ಅಂದೇ ಅಕ್ಕಮಹಾದೇವಿ ಮಾಡಿ ತೋರಿದ್ದಳು. ಆದ್ದರಿಂದ ಅಕ್ಕ ಮಹಾದೇವಿ ಆಧುನಿಕರಿಗೆ ಆಧುನಿಕ ಮಹಿಳಾ ಹೋರಾಟಗಾರ್ತಿ ಎಂದರೆ ತಪ್ಪಾಗಲಾರದು.  ಮೊದಲ ಮಹಿಳಾವಾದಿ ಅಕ್ಕಮಹಾದೇವಿ ಜನಿಸಿದ್ದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ. ಈಗ ಅದು ಉಡುಗಣಿಯಾಗಿದೆ. ತಂದೆ ನಿರ್ಮಲಶೆಟ್ಟಿ ತಾಯಿ ಸುಮತಿ, ಗುರು ಲಿಂಗದೇವರು ಲಿಂಗಧಾರಣೆ ಮಾಡಿದವರು. ಚಿಕ್ಕಂದಿನಿಂದಲೇ ಶಿವಭಕ್ತಳಾದ ಅಕ್ಕಮಹಾದೇವಿ ಲೌಕಿಕ ಜೀವನದಲ್ಲಿ ನಿರಾಶಕ್ತಿಯನ್ನು ಹೊಂದಿದ್ದಳು. ಯೌವನದ ಹೊಸ್ತಿಲಲ್ಲಿ ಅಕ್ಕ ಅಸಾಧಾರಣ ಸೌಂದರ್ಯವತಿಯಾಗಿದ್ದಳು. ಅನಿರಿಕ್ಷಿತ ಸಂದರ್ಭದಲ್ಲಿ ಅಕ್ಕನನ್ನು ಕಂಡ ಕೌಶಿಕ ಮಹಾರಾಜ ಮದುವೆಯಾಗಲು ಬಯಸುತ್ತಾನೆ. ತಂದೆ-ತಾಯಿಯರಿಗೆ ಕೌಶಿಕನನ್ನು ಮದುವೆ ಮಾಡಲು ಇಷ್ಟವಿಲ್ಲದಿದ್ದರೂ ಅವನಿಂದ ತನ್ನ ತಂದೆ ತಾಯಿಗೆ ಆಗಬಹುದಾದ ಹಿಂಸೆಯನ್ನು ಮನಗಂಡು ಷರತ್ತುಬದ್ದ ಮದುವೆಯಾಗಲು ಒಪ್ಪುತ್ತಾಳೆ. ಕೌಶಿಕ ಅಕ್ಕಳ ಷರತ್ತನ್ನು ಒಪ್ಪಿ ಮದುವೆಯಾಗುತ್ತಾನೆ. ಅಕ್ಕಳ ಷರತ್ತನ್ನು ಪಾಲಿಸದ ಕೌಶಿಕ ಅಕ್ಕ ಶಿವಪೂಜೆಯಲ್ಲಿ ನಿರತಳಾಗಿದ್ದಾಗ ಮುಟ್ಟಲು ಮುಂದಾಗುತ್ತಾನೆ. ಆ ಸಂದರ್ಭದಲ್ಲಿ ಅಕ್ಕಳ ಮುಂದೆ ಎರಡು ಆಯ್ಕೆಗಳಿರುತ್ತವೆ. ಕೌಶಿಕನೊಂದಿಗೆ ಹೊಂದಿಕೊಂಡು ಸಂಸಾರವನ್ನು ಒಪ್ಪಿಕೊಳ್ಳುವುದು, ಇನ್ನೊಂದು ಇಹದ ವೈಭೋಗವನ್ನು ದಿಕ್ಕರಿಸಿ ಸ್ವತಂತ್ರವಾಗಿ ಬದುಕುವುದು. ಅಕ್ಕ ಎರಡನೆಯದ್ದನ್ನೆ ಆಯ್ಕೆ ಮಾಡಿಕೊಳ್ಳುತ್ತಾಳೆ. ಭಕ್ತಿ ಭಂಡಾರಿಯಾಗಿದ್ದ ಅಕ್ಕಮಹಾದೇವಿ ಪರಾಧೀನತೆಯ ಬದುಕನ್ನು ದಿಕ್ಕರಿಸಿ ನಿಲ್ಲುತ್ತಾಳೆ. ಈ ನಿರ್ಧಾರ ಅಕ್ಕಳ ಬದುಕಿನ ಬಹುದೊಡ್ಡ ತಿರುವಾಗಿ ಮಹಿಳೆಯರ ಸ್ವಾಭಿಮಾನದ ಬದುಕಿಗೆ ಮಾದರಿಯಾಗಿ ನಿಂತಿದ್ದಾಳೆ. ಇತಿಹಾಸದ ಪುಟದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದೆ.  ಹಿಡಿಯದಿರು ತಡೆಯದಿರು ಬಿಡು ಬಿಡು ಕೈಯ ಸೆರಗ  ಭಾಷೆಯ ಬರೆದುಕೊಟ್ಟು ಸತ್ಯಕ್ಕೆ ತಪ್ಪಿದರೆ  ಅಘೋರ ನರಕ ವೆಂದರಿಯ- ಎಂದು ಅಕ್ಕಮಹಾದೇವಿ ಪರಿಪರಿಯಾಗಿ ಬೇಡುತ್ತಾಳೆ. ಒಪ್ಪದಿದ್ದಾಗ ತಿರಸ್ಕರಿಸಿ ಉಟ್ಟ ಬಟ್ಟೆಯನ್ನು ಬಿಚ್ಚೊಗೆದು ಕೇಶಾಂಬರಿಯಾಗಿ ಕೂಡಲ ಸಂಗಮಕ್ಕೆ ಹೊರಟು ಬಿಡುತ್ತಾಳೆ. – ಮುಂದುವರೆಯುತ್ತದೆ…

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಈ ಹೊಸ ಅಂಕಣ ಎರಡು ವಾರಕ್ಕೊಮ್ಮೆ ಪ್ರಕಟವಾಗುತ್ತದೆ. ಅವ್ಯಕ್ತ ಓದುವ ಮುನ್ನ ಮಕ್ಕಳು ಮುಂದಿನ ಸಮಾಜವನ್ನು ಕಟ್ಟುವಂತಹ ಶಿಲ್ಪಿಗಳು ಎಂದು ನಂಬಿರುವವಳು ನಾನು. ನಮ್ಮ ಸುತ್ತ ನೋಡಿದಾಗ ಎರಡು ತರಹದ ವ್ಯಕ್ತಿತ್ವಗಳನ್ನು ಕಾಣಬಹುದು ಎಜುಕೇಶನ್ ಎಂಬುದನ್ನು ಬರೀ ಅಂಕಪಟ್ಟಿಯಲ್ಲಿ ಹೆಚ್ಚಿನ ಅಂಕ ತೆಗೆಯಲು ಸೀಮಿತವಾಗಿರಿಸಿರುವುದು,ಹಣ ಮಾಡುವುದು, ಸ್ವಾರ್ಥ ಜೀವನ ನಡೆಸುವುದು…ಅಥವಾ ಎಜುಕೇಶನ್ ಎಂದರೆ ಒಂದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದು, ಸ್ವಾರ್ಥ ಹಾಗೂ ನಿಸ್ವಾರ್ಥ ಎರಡರನಡುವೆ ಸಮತೋಲನ ತರುವುದು, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು…ಮೊದಲನೆಯ ತರಹದ ವ್ಯಕ್ತಿಗಳು ಹಲವರಿದ್ದರೂ, ಎರಡನೆಯ ತರದವರು ಬೆರಳೆಣಿಕೆಯಷ್ಟು ಈ ನಿಟ್ಟಿನಲ್ಲಿ ನಾನು ನನ್ನ ಹೆಚ್ಚಿನ್ನ ಸಮಯವನ್ನುಮಕ್ಕಳೊಂದಿಗೆ ಕಳೆದಿದ್ದೇನೆ, ಮಕ್ಕಳ ಮನಸ್ಸನ್ನು ಅರಿಯಲು, ತೊಂದರೆಗಳನ್ನು ಪರಿಶೀಲಿಸುವುದುನನ್ನ ದಿನನಿತ್ಯ ಜೀವನದ ಒಂದು ಭಾಗ. ನಾವು ಕಲಿತ ರೀತಿಯಲ್ಲಿ ನಮ್ಮ ಮಕ್ಕಳಿಗೆ ಹೇಳಿ ಕೊಡಲಾಗುವುದಿಲ್ಲ ಏಕೆಂದರೆ ಇಂದಿನ ಸಮಾಜ ಹಾಗೆ ಉಳಿದಿಲ್ಲ… ಈ ನಿಟ್ಟಿನಲ್ಲಿ ನನ್ನ ಮಕ್ಕಳೊಂದಿಗಿನ ಅನುಭವಗಳನ್ನು ಸುಮ್ಮನೆ ಬರೆದಿಡಲು ಪ್ರಾರಂಭಿಸಿದೆ ಒಂದು ನಂಬಿಕೆ ಮನಸ್ಸಿನಲ್ಲಿ ಇತ್ತು ಎಂದಾದರೂಯಾರಾದರೂ ಅನುಭವಗಳನ್ನು ಮುಂದಿಟ್ಟುಕೊಂಡು ಇನ್ನಷ್ಟು ಮಕ್ಕಳಿಗೆ ಒಳ್ಳೆಯದಾಗಲಿ.. ಸಂಗಾತಿ ಪತ್ರಿಕೆಯು ಈ ಮೂಲಕ ನನ್ನ ಅನುಭವ ಹಾಗೂ ಬರವಣಿಗೆಯನ್ನು ಗುರುತಿಸಿಅದನ್ನು ಪ್ರಕಾಶಿಸಲು ಅವಕಾಶ ನೀಡಿದೆ.ಇದರಿಂದ ಹಲವು ಮಕ್ಕಳಿಗೆ, ಮಕ್ಕಳ ಬಗ್ಗೆ ಕಾಳಜಿ ಇರುವವರಿಗೆ ಸಹಾಯವಾಗಬಹುದು ಎಂದು ಆಶಿಸುತ್ತೇನೆ. ಸಮಾಜದ ಬೆಳವಣಿಗೆ ನಮ್ಮ ಜವಾಬ್ದಾರಿಯಾಗಿರುತ್ತದೆ ಒಟ್ಟಾಗಿ ಅದನ್ನು ಚಂದಗೊಳಿಸುವ ಬೆಳೆಸುವ! ಬದಲಾವಣೆ ಇನ್ನೆರಡು ದಿನಗಳಲ್ಲಿ ಶಿಕ್ಷಕರ ದಿನಾಚರಣೆ ಇದ್ದಿದ್ದರಿಂದ ಓದೋದು ಬಿಟ್ಟು ಕುಸುಕುಸು ಪಿಸಿಪಿಸಿ ಮಾತಾಡ್ಕೊಂಡು ಕೂತಿದ್ರು. ನಾನು ಪೀಠಿಕೆ ಹಾಕಿದೆ “ಎಷ್ಟು ದುಡ್ಡು ಕಲೆಕ್ಟ್ ಮಾಡ್ತಾ ಇದ್ದೀರಾ ಎಲ್ರೂ… ಟೀಚರ್ಸ್ ಡೇಗೆ?” ಮ್ಯಾಮ್1000, 500, 1500…ನನಗೆ ಕೇಳಿ ಆಶ್ಚರ್ಯ, ಕಸಿವಿಸಿಯಾಯಿತು ತೋರಿಸ್ಕೊಳ್ಲಿಲ್ಲ. ಎಲ್ರುನ್ನೂ ಸುಮ್ನೆ ಕೇಳ್ದೆ “ನಿಮ್ಮ ಇಷ್ಟದ  ಶಿಕ್ಷಕರ ಬಗ್ಗೆ ಒಬ್ಬೊಬ್ಬರುಎರಡೆರಡು ಸಾಲಿನಷ್ಟು ಹೇಳಿ”.ಎಲ್ಲರೂ ಪುಸ್ತಕ ಮುಚ್ಚಿಟ್ಟು ತಾಮುಂದು ನಾಮುಂದು ಅಂತ ಹೇಳಕ್ಕೆ ಶುರುಮಾಡಿದ್ರು…  ಒಂದು ನಿಮಿಷ ಬಿಟ್ಟು ಸ್ವಲ್ಪಸ್ವರ ಏರಿಸಿ “ಸಾಕು ಈಗ ನನ್ನ ಪ್ರಶ್ನೆಗಳಿಗೆ ಯೋಚಿಸಿ ಉತ್ತರ ಕೊಡಿ”ಅಂದೆ. ಎಲ್ಲರೂ ಅಶಕ್ತವಾಗಿ(ನಿಶ್ಯಬ್ಧವಾಗಿ) ಕೇಳತೊಡಗಿದರು. ನಾನು ಕೇಳಿದೆ “ ನಿಮ್ಮ ಗುರುಗಳು ಯಾವತ್ತಾದ್ರು ಹೀಗ್ ಹೇಳಿದ್ರಾ?“ನೀನು ಹಣವಂತನಾಗಬೇಕು, ನೀನು ನನಗೆ ಬಟ್ಟೆಬರೆ ಇತ್ಯಾದಿ ಕೊಡ್ಸು, ನೀನು ನನ್ನ ಹುಟ್ಟಿದ ಹಬ್ಬ ವಿಜ್ರಂಭಣೆಯಿಂದಆಚರ್ಸು, ನೀನು ನಂಗೆ ತಿಂಡಿ ತಿನಿಸು ಕೊಡ್ಸು, ನೀನು ದೊಡ್ಡ ಮನುಷ್ಯ ಆಗಿ ನನ್ನ ಹೆಸರನ್ನು ಹೊರಗಡೆ ಸಮಾಜಕ್ಕೆ ಹೇಳು, ನನಗೆ ತುಂಬಾ ಕಷ್ಟ ಇದೆ ನನಗೆ ಸಹಾಯ ಮಾಡು…???” ಮಕ್ಕಳು ತಟ್ಟನೆ ಹೇಳಿದ್ರು “ಇಲ್ಲ, ಯಾವತ್ತೂ ಹೇಳಿಲ್ಲ…” ಮನಸಲ್ಲಿನಗಾಡಿಕೊಂಡು “ಹೌದಾsssss! , ಹಾಗಾದ್ರೆ ಹೀಗ್ಹೇಳಿದ್ದಾರಾ?.. ನೀನು ಗುಣವಂತನಾಗು,  ಬೇಕೆಂದವರಿಗೆ ಸಹಾಯ ಮಾಡು, ನಕ್ಕು ನಗಿಸು ಯಾರನ್ನೂನೋಯಿಸ್ಬೇಡ , ಹಿರಿಯರನ್ನು ಪ್ರೀತಿ ಗೌರವದಿಂದ ನೋಡ್ಕೋ, ಕಿರಿಯರ ಮೇಲೆ ಕಾಳಜಿ ಇರ್ಲಿ,  ನಿನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸು, ದೇಶಕ್ಕೆ ಒಳ್ಳೆಯ ಪ್ರಜೆಯಾಗು,ಮನೆಗೆ ಒಳ್ಳೆಯ ಮಗುವಾಗು” ಎಲ್ರೂ “ಹೌದು ಹೌದು!” ಅಂತ ಇನ್ನಷ್ಟು ವಿಚಾರಗಳನ್ನಹಂಚ್ಕೊಂಡ್ರು. ಎರಡು ನಿಮಿಷ ನಿಶ್ಶಬ್ದವಾಗಿ ಇದ್ದು… “ನಿಮ್ಮ ಪ್ರಿಯ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಅತ್ಯಂತ ಒಳ್ಳೆ ಉಡುಗೊರೆ ಎಂದರೆ ಅವರು ಹೇಳ್ಕೊಟ್ಟಿರೋ ವಿಚಾರಧಾರೆನನಿಮ್ಮಲ್ಲಿ ಬೆಳೆಸಿಕೊಳ್ಳೋದಲ್ವೇ ಮಕ್ಳೇ?” “ACTIONS SPEAK my children”…ಅಂದೆ.. ಎಲ್ಲರೂ ಎರಡ್ನಿಮಿಷ ನಿಷಬ್ದರಾದ್ರು. ಅದ್ರಲ್ಲಿ ಒಬ್ಬಳು ಕೇಳಿದ್ಲು”ಈಗಇರೋ ಹಣದಲ್ಲಿ ನಾವು ಹೇಗೆ ಸಹಾಯ ಮಾಡದು? ನನ್ಟೀಚರ್ ಯಾವಾಗ್ಲೂಬೇರೆಯವರಿಗೆ ಸಹಾಯ ಮಾಡಿ, ಅಂತಾರೆ!” ನಾನು ಈ ಪ್ರಶ್ನೆಗೆ ಕಾಯುತ್ತಿದ್ದ್ನೇನೋ ಅನ್ನೋಹಾಗೆ ಥಟ್ಟನೆ ಹೇಳಿದೆ “ಯೋಚಿಸ್ನೋಡು! ನಿಮ್ಮ ಶಾಲೆಯಲ್ಲಿ ಬಡಮಕ್ಕಳಿರ್ಬೌದಲ್ವಾ?… ” ಅವಳು ಸಂಭ್ರಮದಿಂದ “ಹೌದು ಮಿಸ್, ಹಾಗಾದರೆ, ಈ ಸರಿ ನಾವು ಕಲೆಕ್ಟ್ ಮಾಡಿರೋ ಹಣಾದಲ್ಲಿನಾಲ್ಕೆದು ಚಾರ್ಜರ್ ಲೈಟ್ಗಳನ್ನತಂದುಅಕ್ಕನ ಮನೆಯಲ್ಲಿಕರೆಂಟ್ಟ್ಲಿಲ್ವಲ್ಲಾ… ಅವಳಿಗೆಕೊಡೋಣ. ಓದಕ್ಕೆ ಸಹಾಯಆಗುತ್ತೆ.!! “ ನಾನು “ಶಹ್ಬಾಶ್ ಮಗ್ಳ!ಇದು ನಿಜವಾದ ಶಿಕ್ಷಕರ ದಿನಾಚರಣೆ!” ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ರು. ಎಲ್ಲಾ ಮಕ್ಕಳಿಗೆ ಕುರಿತು ಹೇಳಿದೆ  “ಬದಲಾವಣೆಗೆ ಎಂದು ಕಾದು ಕುತ್ಕೋ ಬಾರದು ಮನಸ್ಸು ಮಾಡಿ ಬದಲಾವಣೆ ನಮ್ಮಿಂದಲೇ ಪ್ರಾರಂಭ ಮಾಡ್ಬೇಕು.”

ಅವ್ಯಕ್ತಳ ಅಂಗಳದಿಂದ Read Post »

ಅಂಕಣ ಸಂಗಾತಿ

ನಾನು ಕಂಡ ಹಿರಿಯರು.

ಪ್ರೋ.ಎ.ಎನ್.ಮೂರ್ತಿರಾವ್ ಡಾ.ಗೋವಿಂದ ಹೆಗಡೆ ಪ್ರೊ ಎ ಎನ್ ಮೂರ್ತಿರಾವ್ (೧೯೦೦-೨೦೦೩) ೧೯೮೭ರ ಒಂದು ದಿನ. ಮೈಸೂರಿನಲ್ಲಿ ನಾನು ಎಂ ಬಿ ಬಿ ಎಸ್ ಓದುತ್ತಿದ್ದ ಸಮಯ. ಅಂದು ಕಾಲೇಜಿನ ವಿದ್ಯಾರ್ಥಿ ಸಂಘದ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದವು. ಉದ್ಘಾಟನೆಗೆ ಬಂದವರು ೮೭ರ ಹರೆಯದ ವಾಮನಮೂರ್ತಿ ಪ್ರೊ.ಎ ಎನ್ ಮೂರ್ತಿರಾವ್. ಬಿಳಿಯ ಪಂಚೆ, ತುಂಬುತೋಳಿನ ಸಾದಾ ಅಂಗಿಯಲ್ಲಿದ್ದರು. ಅವರು ೧೯೮೪ರ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂಬುದನ್ನು ಬಿಟ್ಟರೆ ನನಗೂ ಹೆಚ್ಚು ಗೊತ್ತಿರಲಿಲ್ಲ. ಕಾರ್ಯದರ್ಶಿ ಅವರನ್ನು ಸ್ವಾಗತಿಸಿ ಪರಿಚಯಿಸಿ ಮಾತನಾಡಲು ವಿನಂತಿಸಿದರು. ಒಂದೆರಡು ವಾಕ್ಯಗಳನ್ನು ಅವರು ನುಡಿಯುವಷ್ಟರಲ್ಲಿ ಹಿಂದಿನ ಸಾಲಿನ ಹುಡುಗರ ಗದ್ದಲ, ಶಿಳ್ಳೆ, ಕೇಕೆ. ನಿರುಪಾಯರಾಗಿ ಅವರು ಮಾತು ನಿಲ್ಲಿಸಬೇಕಾಯಿತು. ಹಿರಿಯರನ್ನು ಕರೆದು ಅವಗಣಿಸಿದ ಮುಜುಗರ,ವ್ಯಥೆ ನನಗಂತೂ ಆಯಿತು. ಅವರ ಮಾತುಗಳನ್ನು ಕೇಳಲು ನಾನು ೧೯೯೦ರವರೆಗೂ ಕಾಯಬೇಕಾಯಿತು. ಈ ನಡುವೆ ಅವರ ‘ಅಪರವಯಸ್ಕನ ಅಮೆರಿಕಾ ಯಾತ್ರೆ’, ‘ದೇವರು’ ಮೊದಲಾದ ಪುಸ್ತಕಗಳನ್ನು ಓದಿ ಅವರನ್ನು ತುಸು ಹೆಚ್ಚು ಪರಿಚಯಿಸಿಕೊಂಡಿದ್ದೆ. ೧೯೯೦ರ ಜುಲೈ ಇರಬೇಕು.. ಮಹಾರಾಜಾ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಅವರ ೯೦ನೇ ಜಯಂತಿಯ ಪ್ರಯುಕ್ತ ಸನ್ಮಾನ ಕಾರ್ಯಕ್ರಮವೊಂದು ಏರ್ಪಾಡಾಗಿತ್ತು. ಅಲ್ಲಿ ಅವರ ಬಗ್ಗೆ ಮತ್ತು ಅವರದೇ ನುಡಿಗಳನ್ನು ಕೇಳಿದೆ. ಅವರ ಬರಹಗಳಂತೆಯೇ ಮೆಲುಮಾತು, ತಿಳಿ ಹಾಸ್ಯ ಅವರದು. ಇಂಗ್ಲಿಷ್ ಅಧ್ಯಾಪಕರಾಗಿ,ಮೈಸೂರು ಆಕಾಶವಾಣಿಯ ಎ ಎಸ್ ಡಿ(ಉಪನಿರ್ದೇಶಕರು) ಆಗಿ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಅವರು ಮಾಡಿದ ಕಾರ್ಯಗಳು ಪ್ರಶಂಸನೀಯ. ಚಿತ್ರಗಳು-ಪತ್ರಗಳು,ಅಪರವಯಸ್ಕನ ಅಮೆರಿಕ ಯಾತ್ರೆ, ಅಲೆಯುವ ಮನ, ಸಂಜೆಗಣ್ಣಿನ ಹಿನ್ನೋಟ, ದೇವರು ಮೊದಲಾದವು ಅವರ ಕೃತಿಗಳು. ‘ಚಿತ್ರಗಳು-ಪತ್ರಗಳು’ ಒಂದು ವಿಶಿಷ್ಟ ಕೃತಿ. ಮೊದಲ ಭಾಗದಲ್ಲಿ ತಾವು ಕಂಡ ಅನೇಕ ಹಿರಿಯರ ಚಿತ್ರಣಗಳನ್ನು ಅವರು ಒದಗಿಸಿದ್ದಾರೆ ಎರಡನೆಯ ಭಾಗದಲ್ಲಿ ಸಾಹಿತಿಗಳೊಂದಿಗಿನ ಪತ್ರ ವ್ಯವಹಾರವನ್ನು ದಾಖಲಿಸುತ್ತಾರೆ. ಈ ಪುಸ್ತಕ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದು ಕೊಟ್ಟಿದೆ. ‘ಅಪರವಯಸ್ಕನ ಅಮೆರಿಕ ಯಾತ್ರೆ’ ಕನ್ನಡದಲ್ಲಿ ಬಂದ ಪ್ರವಾಸ ಕಥನಗಳ ಪೈಕಿ ಅಪೂರ್ವವಾದದ್ದು. ಇಂಗ್ಲಿಷ್ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾಗಿ, ಇಂಗ್ಲಿಷ್ ಪ್ರೊಫೆಸರ್ ಆಗಿ ಬದುಕಿದ ರಾಯರು ಬಿಡುಗಣ್ಣಿನ ಮೂಲಕ ತಾವು ಕಂಡ ಅಮೇರಿಕಾದ ನೆನಪುಗಳನ್ನು ದಾಖಲಿಸುತ್ತ, ಜೊತೆಗೆ ತಮ್ಮ ಓದಿನಿಂದ, ನೆನಪುಗಳಿಂದ ಅಪೂರ್ವ ಒಳನೋಟಗಳನ್ನು ನೀಡುತ್ತ ಮೌಲಿಕ ಗ್ರಂಥವನ್ನು ನಮಗೆ ನೀಡಿದ್ದಾರೆ. ‘ಸಂಜೆಗಣ್ಣಿನ ಹಿನ್ನೋಟ’ ಅವರ ಆತ್ಮಕಥನ. ಶತಾಯುಷಿ ರಾಯರು ತಮ್ಮ ನಿಡುಗಾಲದ ಬದುಕಿನಲ್ಲಿ ಕಂಡ ಹಲವು ಏಳುಬೀಳುಗಳನ್ನು ತುಂಬಾ ಸ್ವಾರಸ್ಯಕರವಾಗಿ ನಿರೂಪಿಸಿದ್ದಾರೆ. ‘ದೇವರು’ ಅತ್ಯಂತ ಚರ್ಚೆಗೊಳಗಾದ ವೈಚಾರಿಕ ಕೃತಿ. ನಾಸ್ತಿಕರಾದ ರಾಯರು ತಮ್ಮ ವಿಚಾರಧಾರೆಯನ್ನು ಓದುಗರ ಮೇಲೆ ಹೇರುವುದಿಲ್ಲ. ಬದಲಾಗಿ ದೇವರ ಬಗೆಗಿನ ನಮ್ಮ ಪರಿಕಲ್ಪನೆಗಳನ್ನು ವಿಸ್ತರಿಸುತ್ತಾರೆ, ಪ್ರಶ್ನಿಸುತ್ತಾರೆ. “ದೇವರು ಬೇಕು,ಆದರೆ ಅವನಿಲ್ಲ” ಎಂಬ ಕೊನೆಯ ಅಧ್ಯಾಯ ಅವರ ಮನೋಧರ್ಮದ ಪರಿಪಾಕವಾಗಿದೆ. ಈ ಪುಸ್ತಕ ಅವರಿಗೆ ಪಂಪ ಪ್ರಶಸ್ತಿಯನ್ನು ತಂದುಕೊಟ್ಟಿತು. ಅಲೆಯುವ ಮನ, ಹಗಲುಗನಸುಗಳು, ಮಿನುಗು- ಮಿಂಚು ಮೊದಲಾದ ಲಲಿತ ಪ್ರಬಂಧಗಳ ಸಂಕಲನಗಳಲ್ಲಿ ತಮಗೆ ವಿಶಿಷ್ಟವಾದ ನವಿರಾದ ಹಾಸ್ಯಪ್ರಜ್ಞೆ, ವಿಸ್ತಾರವಾದ ಓದಿನಿಂದ ನೀಡುವ ಮಾಹಿತಿ, ಲವಲವಿಕೆಯ ಶೈಲಿ,ಹೀಗೆ ಮೂರ್ತಿರಾಯರು ಕನ್ನಡ ಲಲಿತ ಪ್ರಬಂಧ ಪ್ರಕಾರದ ಶಿಖರ ಎನ್ನಬಹುದು. ಶೇಕ್ಸ್ಪಿಯರ್, ಬಿ ಎಂ ಶ್ರೀ, ಸಾಕ್ರೆಟೀಸನ ಕೊನೆಯ ದಿನಗಳು, ಪಾಶ್ಚಾತ್ಯ ಸಣ್ಣ ಕಥೆಗಳು ಜನತಾ ಜನಾರ್ದನ, ಯೋಧನ ಪುನರಾಗಮನ, ಗಾನ ವಿಹಾರ, ಪೂರ್ವಸೂರಿಗಳೊಡನೆ, ಆಷಾಡಭೂತಿ- ಹೀಗೆ ಜೀವನ ಚರಿತ್ರೆಗಳು, ನಾಟಕ ,ಅನುವಾದ ವೈಚಾರಿಕ ಬರಹ ಎಲ್ಲದರಲ್ಲೂ ಮೂರ್ತಿರಾಯರು ಪ್ರಥಮ ದರ್ಜೆಯ ವ್ಯವಸಾಯ ಮಾಡಿದ್ದಾರೆ. ಸಹಜವಾಗಿಯೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ೧೯೮೪ರಲ್ಲಿ ಅವರಿಗೆ ಒಲಿದು ಬಂತು. ೨೦೦೩ರಲ್ಲಿ ನಮ್ಮನ್ನು ಅಗಲಿದ ಮೂರ್ತಿರಾಯರು ಸಂಗೀತ ಪ್ರೀತಿ, ಸಾಹಿತ್ಯ ಪ್ರೀತಿ, ಜೀವನಪ್ರೀತಿ ಮುಪ್ಪುರಿಗೊಂಡು ಮಾಗಿದ ಜೀವ. ಮೊದಲ ಸಲ ಅವರನ್ನು ಕಂಡಾಗ ಮಾತು ಕೇಳಿಸಿಕೊಳ್ಳಲು ಆಗದ ಬಗ್ಗೆ ಮೇಲೆ ಬರೆದಿದ್ದೇನೆ. ತಮ್ಮ ಬರಹಗಳ ಮೂಲಕ ಮೂರ್ತಿರಾಯರು ಸದಾ ನಮ್ಮೊಡನೆ ಮಾತನಾಡುತ್ತಾರೆ. ನಾವು ಕೇಳಿಸಿಕೊಳ್ಳಬೇಕು ಅಷ್ಟೇ. ಪ್ರೊ ಎ ಎನ್ ಮೂರ್ತಿರಾವ್ ಅವರ ಕೃತಿಗಳು: ಆಷಾಡಭೂತಿ (ಅನುವಾದ) ದೇವರು ಅಲೆಯುವ ಮನ ಅಪರವಯಸ್ಕನ ಅಮೆರಿಕ ಯಾತ್ರೆ ಸಂಜೆಗಣ್ಣಿನ ಹಿನ್ನೋಟ ಹಗಲುಗನಸುಗಳು ಮಿನುಗು ಮಿಂಚು ಜನತಾ ಜನಾರ್ದನ ಮಹಾಭಾರತದಲ್ಲಿ ಕೇಡು ಎಂಬುದರ ಸಮಸ್ಯೆ ಗಾನ ವಿಹಾರ ಸಾಹಿತ್ಯ ಮತ್ತು ಸತ್ಯ ಹೇಮಾವತಿ ತೀರದ ತವಸಿ ಪೂರ್ವಸೂರಿಗಳೊಡನೆ ಶೇಕ್ಸ್ ಪಿಯರ್ ಬಿ ಎಂ ಶ್ರೀಕಂಠಯ್ಯ ಚಿತ್ರಗಳು- ಪತ್ರಗಳು ಸಾಕ್ರೆಟೀಸನ ಕೊನೆಯ ದಿನಗಳು ಯೋಧನ ಪುನರಾಗಮನ ಮತ್ತು ಅನೇಕ ಪ್ರಬಂಧ ಸಂಕಲನಗಳು.

ನಾನು ಕಂಡ ಹಿರಿಯರು. Read Post »

ಅಂಕಣ ಸಂಗಾತಿ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

ಡಾ.ಸಣ್ಣರಾಮ ಹಿಂದಿನ ವಾರದ ಮುಂದುವರೆದ ಭಾಗ ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆ ವೈಶಿಷ್ಟ್ಯಪೂರ್ಣವಾದುದು. ಈ ಜಿಲ್ಲೆಯಲ್ಲಿ ಸದ್ಯ ಏಳು ತಾಲ್ಲೂಕುಗಳಿವೆ. ಅವುಗಳಲ್ಲಿ ನಾಲ್ಕು ಅತೀ ಹೆಚ್ಚು ಮಳೆಯಾಗುವ ತಾಲ್ಲೂಕುಗಳಾದರೆ, ಮೂರು  ಸಾಧಾರಣ ಮಳೆಯಾಗುವ ತಾಲ್ಲೂಕುಗಳು. ದಕ್ಷಿಣ ಭಾರತದ ‘ಚಿರಾಪುಂಜಿ’ ಎಂದು ಪ್ರಖ್ಯಾತವಾಗಿರುವ ಆಗುಂಬೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿದೆ. ದಟ್ಟ ಮಲೆನಾಡು ಅರೆಮಲೆನಾಡು ಭಾಗಗಳು ಜಿಲ್ಲೆಗೆ ಪ್ರಾಕೃತಿಕ, ಸಾಂಸ್ಕೃತಿಕ ವೈಶಿಷ್ಟತೆಯನ್ನು ತಂದುಕೊಟ್ಟಿದೆ. ಭಾಷೆಯ ಬಳಕೆಯಲ್ಲಿಯೂ ಈ ಏಳು ತಾಲ್ಲೂಕುಗಳು ಸೂಕ್ಷ್ಮವಾಗಿ ಭಿನ್ನತೆ ಕಂಡು ಬರುತ್ತದೆ. ಈ ಭಿನ್ನತೆ ಮತ್ತು ವೈಶಿಷ್ಟತೆ ಅಲ್ಲಿನ ಜನರಲ್ಲಿ ವೈಚಾರಿಕ ಶಕ್ತಿಯನ್ನು ಜಾಗ್ರತಗೊಳಿಸಿ ಚಿಂತನಾಶೀಲರನ್ನಾಗಿ, ಸಂವೇದನಾಶೀಲರನ್ನಾಗಿ ಮಾಡಿದೆ. ಸಾಹಿತ್ಯ ರಚನೆಯಲ್ಲಿಯೂ ಶಿವಮೊಗ್ಗ ಜಿಲ್ಲೆ ಇತರೆಲ್ಲಾ ಜಿಲ್ಲೆಗಳಿಗಿಂತ ಒಂದು ಕೈ ಮೇಲೆ ಎನ್ನಬಹುದು. ಇದುವರೆಗೆ ಕರ್ನಾಟಕಕ್ಕೆ ಲಭ್ಯವಾಗಿರುವ ಎಂಟು ಜ್ಞಾನಪೀಠಗಳಲ್ಲಿ ಮೂರು ಜ್ಞಾನಪೀಠಗಳನ್ನು ಕೊಟ್ಟ  ಶ್ರೇಯಸ್ಸು ಶಿವಮೊಗ್ಗ ಜಿಲ್ಲೆಯದು. ಈ ಎಲ್ಲಾ ಕಾರಣಗಳಿಂದಾಗಿ ಇಲ್ಲಿ ಜನಪರ ಚಳವಳಿಗಳು ಹುಟ್ಟಿವೆ. ಅಲ್ಲದೆ ಇಂದಿಗೂ ಕ್ರಿಯಾಶೀಲವಾಗಿದೆ.   ಶಿವಮೊಗ್ಗ ಜಿಲ್ಲೆಯ ಚಳವಳಿಗಳಿಗೆ ಸುದೀರ್ಘ ಇತಿಹಾಸವಿದೆ. ಕರ್ನಾಟಕದಲ್ಲಿ ಸಾಮಾಜಿಕ, ಸಾಹಿತ್ಯಕ ಕ್ರಾಂತಿಗೆ ನಾಂದಿ ಹಾಡಿದ ೧೨ನೇ ಶತಮಾನದ ಶರಣ ಚಳವಳಿಯಿಂದಲೇ ಶಿವಮೊಗ್ಗ ಚಳವಳಿಯ ಬೇರನ್ನು ಗುರುತಿಸಬಹುದು. ಶರಣ ಚಳವಳಿಯಲ್ಲಿ ತಮ್ಮ ಮೇರು ಸದೃಶ್ಯ ಚಿಂತನೆಯಿಂದ ಗಮನ ಸೆಳೆದ ಮಹಾಶರಣ ಎಂದರೆ ಅಲ್ಲಮ ಪ್ರಭುಗಳು. ಹರಿಹರನ ಕಾಲದಿಂದಲೂ ಅಲ್ಲಮಪ್ರಭುವಿನ ಜೀವನವನ್ನು  ಆಧರಿಸಿದ ನೂರಾರು ಕೃತಿಗಳು, ನಡುಗನ್ನಡ ಮತ್ತು ಆಧುನಿಕ ಕನ್ನಡ ಸಾಹಿತ್ಯದಲ್ಲಿವೆ. ಅಲ್ಲದೆ ಸ್ವತಃ ಪ್ರಭುದೇವರು ಬರೆದಿರುವ ವಚನಗಳು ಅವರ ಜೀವನ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಸಹಕರಿಸುತ್ತವೆ. ಇಂತಹ ವಿಶ್ವಮಾನ್ಯ ಶರಣ ಶಿವಮೊಗ್ಗ ಜಿಲ್ಲೆಯಲ್ಲಿದ್ದಾನೆಂಬುದು  ಹೆಮ್ಮೆಯ ಸಂಗತಿಯಾಗಿದೆ.    ಅಲ್ಲಮ ಪ್ರಭು ಹುಟ್ಟಿದ್ದು ಶಿವಮೊಗ್ಗ  ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ ಎಂಬ ಗ್ರಾಮದಲ್ಲಿ. ಹನ್ನೆರಡನೆ ಶತಮಾನದಲ್ಲಿ ಬಳ್ಳಿಗಾವಿ “ಬನವಸೆ ಹನ್ನೆರಡು ಸಾವಿರ” ಎಂಬ ಒಂದು ದೊಡ್ಡ ಆಡಳಿತ ವಿಭಾಗದ ಮುಖ್ಯ ಸ್ಥಳವಾಗಿತ್ತು. ವೀರಶೈವರ ಕಾಳಮುಖ ಪಂಥದ ಕೇಂದ್ರ ಸ್ಥಾನವಾಗಿತ್ತು. ಚಾಮರಸ ಹೇಳುವಂತೆ ಅಲ್ಲಮಪ್ರಭುವಿನ ತಂದೆ ತಾಯಿಯರ ಹೆಸರು ‘ನಿರಹಂಕಾರ ಸುಜ್ಞಾನಿ’ ದೇವಸ್ಥಾನದಲ್ಲಿ ಮದ್ದಳೆ ಸೇವೆಯನ್ನು ಸಲ್ಲಿಸುತ್ತಿದ್ದ ಪ್ರಭುಗಳು ಪ್ರಾಯಕ್ಕೆ ಬರುತ್ತಿದ್ದಂತೆ ಮದ್ದಳೆ ನುಡಿಸುವ ಕಲೆಯನ್ನು ತುಂಬಾ ಪ್ರಾವಿಣ್ಯ ಪಡೆದಿದ್ದ. ಅವನ ಮದ್ದಳೆ ಬಾರಿಸುವ ನೈಪುಣ್ಯಕ್ಕೆ ಮನಸೋತು ‘ಕಾಮಲತೆ’ ಎಂಬ ಸುಂದರ ಹೆಣ್ಣು ಮದುವೆಯಾಗುತ್ತಾಳೆ. ಪ್ರಭುವಿನದು ಸುಂದರ ದಾಂಪತ್ಯ, ಪ್ರಭು ದಾಂಪತ್ಯ ಜೀವನದ ರಸಾನಂದವನ್ನು  ಹೆಚ್ಚು ದಿನ ಸವಿಯಲಿಲ್ಲ. ಮದುವೆಯಾದ ಕೆಲವೇ ವರ್ಷಗಳಲ್ಲಿ ಕಾಮಲತೆಯು ಮರಣ ಹೊಂದಿತ್ತಾಳೆ. ಸತಿಯ ಮರಣದಿಂದ ಅಪಾರವೇದನೆ ಪಡುವ ಅಲ್ಲಮಪ್ರಭು ಸಂಸಾರದಲ್ಲಿ ನೊಂದು ಬದುಕಿನಲ್ಲಿ ಜುಗುಪ್ಸೆಯನ್ನು ಹೊಂದುತ್ತಾನೆ. ———————ಮುಂದುವರೆಯುತ್ತದೆ…

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ಅವ್ಯಕ್ತ ಅವರ ಹೊಸ ಅಂಕಣದ ಮೊದಲ ಕಂತು ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಪ್ರಕಟವಾಗಲಿದ್ದು, ತದನಂತರ ಪ್ರತಿ ತಿಂಗಳ ಎರಡನೆ ಮತ್ತು ನಾಲ್ಕನೆ ಬುದವಾರ ಪ್ರಕಟವಾಗಲಿದೆ. ಈಅಂಕಣದ ವಿಶೇಷವೆಂದರೆಬರಹಕ್ಕೆ ಪೂರಕವಾದ ರೇಖಾಚಿತ್ರಗಳನ್ನು ಸ್ವತ: ಮಕ್ಕಳೆ ರಚಿಸಲಿರುವುದು. ಈವಾರ ಅಂಕಣಗಾರರೇ ತಮ್ಮ ಆಶಯವನ್ನುತಮ್ಮ ಮುಂದೆ ತೆರೆದಿಡುತ್ತಿದ್ದಾರೆ ಮಕ್ಕಳು ಮುಂದಿನ ಸಮಾಜವನ್ನು ಕಟ್ಟುವಂತಹ ಶಿಲ್ಪಿಗಳು ಎಂದು ನಂಬಿರುವವಳು ನಾನು. ನಮ್ಮ ಸುತ್ತ ನೋಡಿದಾಗ ಎರಡು ತರಹದ ವ್ಯಕ್ತಿತ್ವಗಳನ್ನು ಕಾಣಬಹುದು ಎಜುಕೇಶನ್ ಎಂಬುದನ್ನು, ಬರೀ ಹೆಚ್ಚಿನ ಅಂಕ ತೆಗೆಯಲು ಸೀಮಿತವಾಗಿರಿಸಿರುವುದು,ಹಣ ಮಾಡುವುದು, ಸ್ವರ‍್ಥ ಜೀವನ ನಡೆಸುವುದು…ಅಥವಾ ಎಜುಕೇಶನ್ ಎಂದರೆ ಒಂದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದು, ಸ್ವಾರ್ಥ ಹಾಗೂ ನಿಸ್ವಾರ್ಥ ಎರಡರ ನಡುವೆ ಸಮತೋಲನ ತರುವುದು, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು, ಇತ್ಯಾದಿ. ಮೊದಲನೆಯ ತರಹದ ವ್ಯಕ್ತಿಗಳು ಹಲವರಿದ್ದರೆ, ಎರಡನೆಯ ತರದವರು ಬೆರಳೆಣಿಕೆಯಷ್ಟು. “ನಾವು ಕಲಿತ ರೀತಿಯಲ್ಲಿ ನಮ್ಮ ಮಕ್ಕಳಿಗೆ ಹೇಳಿ ಕೊಡಲಾಗುವುದಿಲ್ಲ ಏಕೆಂದರೆ ಇಂದಿನ ಸಮಾಜ ಹಾಗೆ ಉಳಿದಿಲ್ಲ…” ಈ ನಿಟ್ಟಿನಲ್ಲಿ ನಾನು ಹಲವಾರು ವರ್ಷಗಳಿಂದ ನನ್ನ ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯುತ್ತಿದ್ದೇನೆ. ಮಕ್ಕಳ ಮನಸ್ಸನ್ನು ಅರಿತು, ಅವರ ತೊಂದರೆಗಳನ್ನು ಪರಿಶೀಲಿಸಿ, ಸರಿ-ತಪ್ಪುಗಳನ್ನು ಬದಿಗೊತ್ತಿ, ಅವರಿಗೆ ಅರಿವಾಗುವ ರೀತಿಯಲ್ಲಿ ತಿಳಿಹೇಳುವುದು, ನನ್ನ ಜೀವನದ ದಿನನಿತ್ಯದ ಒಂದು ಭಾಗ. ನನ್ನ ಮಕ್ಕಳೊಂದಿಗಿನ ಅನುಭವಗಳನ್ನು ಸುಮ್ಮನೆ ಬರೆದಿಡಲು ಪ್ರಾರಂಭಿಸಿದೆ…. ಎಂದಾದರೂ ಯಾರಾದರೂ ಈ ಅನುಭವಗಳನ್ನು ಬಳಸಿಕೊಂಡು, ಇನ್ನಷ್ಟು ಮಕ್ಕಳಿಗೆ ಒಳ್ಳೆಯದಾಗಲಿ ಎಂಬ ಒಂದು ನಂಬಿಕೆ ಮನಸ್ಸಿನಲ್ಲಿ ಇತ್ತು… ಸಂಗಾತಿ ಪತ್ರಿಕೆಯು ಈ ಮೂಲಕ ನನ್ನ ಅನುಭವ ಹಾಗೂ ಬರವಣಿಗೆಯನ್ನು ಗುರುತಿಸಿ “ಅವ್ಯಕ್ತಳ ಅಂಗಳದಿಂದ” ಎಂಬ ಹೆಸರಿನ ಅಂಕಣದ ಮೂಲಕ ಪ್ರಕಟಿಸುತ್ತಿದೆ ಇದರಿಂದ ಹಲವು ಮಕ್ಕಳಿಗೆ, ಮಕ್ಕಳ ಬಗ್ಗೆ ಕಾಳಜಿ ಇರುವವರಿಗೆ ಸಹಾಯವಾಗಬಹುದು ಎಂದು ಆಶಿಸುತ್ತೇನೆ. ಸಮಾಜದ ಬೆಳವಣಿಗೆ ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ನಾವೆಲ್ಲರೂ ಒಟ್ಟಾಗಿ ಅದನ್ನು ಚಂದಗೊಳಿಸುವ… ಬೆಳೆಸುವ…

ಅವ್ಯಕ್ತಳ ಅಂಗಳದಿಂದ Read Post »

ಅಂಕಣ ಸಂಗಾತಿ

ಹೊತ್ತಾರೆ.

(ಅಮ್ಮನೂರಿನ ನೆನಪುಗಳು) ಅಮೇರಿಕಾದಿಂದ ಅಶ್ವಥ್ ಬರೆಯುತ್ತಿದ್ದಾರೆ….. ಅಶ್ವಥ್ ಮೂಗು ಹಿಡಿದುಕೆನ್ನೆಗೆ ಹೊಡಿ! ಕಾನ್ವೆಂಟೆನ್ನುವಶಾಲೆಯನ್ನು ಸೇರಿಯೂ ಆಯ್ತು, ಮೂರ್ನಾಲ್ಕು ತಿಂಗಳು ಉರುಳಿದ್ದೂ ಆಯ್ತು. ಈ ಸಮಯದಲ್ಲಿ ಯಾವುದೇ ನೆಪ ಹೇಳಿ ತಪ್ಪಿಸಿಕೊಳ್ಳಲಾಗುವುದಿಲ್ಲ; ಒಂದು ವರ್ಷ ಪೂರೈಸಲೇ ಬೇಕು. ಹಾಗಾಗಿ ಕೆಜಿ ಕ್ಲಾಸು ಯಾಂತ್ರಿಕವಾಗಿ ಸಾಗುತ್ತಿತ್ತು. ಹೊಸದೇನೂ ಕಲಿಯಲು ಇಲ್ಲದೇ ಬೋರು ಹೊಡೆಯುತ್ತಿತ್ತು. ಶಾಲೆ ಮುಗಿದ ಮೇಲೆರಾಣಿ ಮೇಡಮ್ ಮನೆಯೂ ಬಂದ್ ಆಗಿದ್ದರಿಂದ ಒಂದು ದಿನ ಮಧ್ಯಾಹ್ನ ಶಾಲೆ ಮುಗಿಸಿ ನಿತ್ಯವೂ ಕರೆತರುತ್ತಿದ್ದ ಅಕ್ಕನ ಶಾಲೆಯ ಬಗ್ಗೆ ಅಲ್ಲೇ ರಸ್ತೆಯಲ್ಲಿ ನಿಂತಿದ್ದವರ ಬಳಿ ಕೇಳುತ್ತಾ ಅವಳ ಶಾಲೆಯ ಕಾಂಪೌಂಡಿನೊಳಗೆ ಬಂದು ಹುಡುಕುತ್ತಿದ್ದೆ. ಸೈಕಲ್ ಮೇಷ್ಟ್ರು ಅವರ ಹೆಸರು, ಪಕ್ಕಾ ನೆನಪಿದೆ. ಅವರ ಹೆಸರು ಶೇಖರ್ ಮೇಷ್ಟ್ರಂತೆ, ಸೈಕಲ್ಲೇರಿ ಬರುತ್ತಿದ್ದರಿಂದ ಸೈಕಲ್ ಮೇಷ್ಟ್ರು ಅಂತಲೇ ಅವರ ಹೆಸರನ್ನು ಬದಲಾಯಿಸಿಬಿಟ್ಟಿದ್ದರಂತೆ. ಹಿರಿಯ ಪ್ರಾಥಮಿಕ ಶಾಲೆಯ ಮೇಷ್ಟರು ಇನ್ನೂ ಕಿರಿಯ ಪ್ರಾಥಮಿಕವೂ ಆಗಿಲ್ಲದ ನನ್ನನ್ನು ಕಂಡು, ʼಯಾರೋ ನೀನು? ಇಲ್ಲೇನ್ ನೋಡ್ತಿದ್ದೀಯಾ?ʼ ಅನ್ನುತ್ತಾ ಹತ್ತಿರ ಬಂದರು. ನನ್ನ ಅಕ್ಕನನ್ನು ಹುಡುಕುತ್ತಿದ್ದೇನೆಂದಾಗ ಒಳಗೆ ಕರೆದುಕೊಂಡು ಹೋಗಿ ಯಾರು ಅಕ್ಕ? ಅಂದಿದ್ದಕ್ಕೆ ಅಕ್ಕನೇ ಎದ್ದು, ʼನಮ್ ಚಿಕಪ್ಪನ ಮಗ ಸಾʼ ಅನ್ನುತ್ತಾ ನನ್ನ ಮತ್ತು ನನ್ನ ಕೆಜಿಸ್ಕೂಲಿನ ವಿವರ ತಿಳಿಸಿದಳು. ಸರಿ ಅಂದು ಅವಳ ಪಕ್ಕದಲ್ಲಿ ಕೂತ್ಕೊಳ್ಳಲು ನನಗೆ ಅವಕಾಶ ಕೊಟ್ಟ ಸೈಕಲ್ ಮೇಷ್ಟರು, ಮಕ್ಕಳಿಗೆ ಕಾಗುಣಿತ ಹೇಳಿಸುವಾಗ, ನಾನೂ ಹೇಳ್ತೀನಿ ಅಂದೆ. ಹೇಳು ನೋಡನಾ, ಅಂದು ಕಾಗುಣಿತ ಶುರು ಮಾಡಿ ಹಾಗೇ ನನಗೆ ಗೊತ್ತಿದ್ದ ಎಲ್ಲವನ್ನೂ ಕೆದಕುತ್ತಾ ಕೇಳಿ, ಮಗ್ಗಿಯನ್ನೂ ಹೇಳಿಸಿ, ನೋಡಿಲ್ಲಿ ಇವ್ರಿಗೆಲ್ಲಮಗ್ಗಿ ಕಾಗುಣಿತ ಹೇಳೋದಿಕ್ಕೇ ಬರೋದಿಲ್ಲ ಅಂದಿದ್ದೇ, ಮೂಗು ಹಿಡಿದು ಕೆನ್ನೆಗೆರೆಡು ಬಾರಿಸೋ ಮರಿ ಅಂದರು. ಗೊತ್ತಾಗದೇ ಸುಮ್ಮನೇ ನಿಂತಿದ್ದವನಿಗೆ ಮೇಷ್ಟರೇ ಪಕ್ಕದಲ್ಲಿದ್ದ ಅಕ್ಕನನ್ನು ತೋರಿಸಿಕೊಡಲು ಹೇಳಿದರು. ಎಡಗೈಯಲ್ಲಿ ಅವರ ಮೂಗು ಹಿಡಿದು ಬಲಗೈಯಿಂದ ಆಕಡೆ ಕೆನ್ನೆಗೊಂದು ಈ ಕಡೆ ಕೆನ್ನೆಗೊಂದು, ಹಾಂ ಹಂಗೇ!! ಎಲ್ಲರಿಗೂ ಬಾರಿಸು ನೋಡಾಣಾ ಅಂದರು. ಅವತ್ತು ಶಾಲೆಯ ಬೇಸರವೆಲ್ಲ ಹೋಗಿ ಎಲ್ಲರಿಗೂ ಮೂಗು ಹಿಂಡಿ ಒಂದು ಸುತ್ತು ಕೆನ್ನೆ ಸವರಿ ಬಂದಿದ್ದಾಯ್ತು. ನನ್ನ ಎರಡುಪಟ್ಟು ಎತ್ತರವಿದ್ದ ಮಾಧ್ಯಮಿಕ ಶಾಲೆಯ ಎಲ್ಲರೂ ಸ್ವಯಂಪ್ರೇರಣೆಯಿಂದ ತಲೆಬಾಗಿಸಿ ನಾನು ಮೂಗು ಹಿಂಡುವುದಕ್ಕೂ, ಕೆನ್ನೆ ಸವರುವುದಕ್ಕೂ ಸಹಾಯ ಮಾಡಿದ್ದರು. ದೊಡ್ಡಪ್ಪನ ಮಗಳು ಈಗಲೂ ಆ ಸ್ಕೂಲಿನ ಘಟನೆಯನ್ನು ಮರೆತಿಲ್ಲ! ದಿನಾ ಹೊತ್ಕಂಡ್ ಹೋಗದಲ್ಲದೇ ಕೆನ್ನೆಗೆ ಏಟೂ ಕೊಟ್ಟಿದ್ದ ಗುಂಡೂರಾಯ ಅಂತಾಳೆ ಸಿಕ್ಕಾಗಲೆಲ್ಲಾ.   ದಿನವಿಡೀ ನನಗೆ ಶಾಲೆಯಲ್ಲಿ ಉಪ್ಪಿಟ್ಟಿನದೇ ನೆನಪು. ಅದೇ ನೆನಪನ್ನು ಉಳಿಸಿಕೊಂಡು ಸಂಜೆ ಖುಷಿಯಾಗಿ ಮನೆಗೆ ಬಂದೆ. ಎಲ್ಲಿ ಉಪ್ಪಿಟ್ಟು? ಅಕ್ಕನನ್ನು ಕೇಳಿದರೆ ತಕ್ಷಣ ಬಂದು ರಾಗಿ ಮುದ್ದೆಯನ್ನು ಮುಂದೆ ಹಿಡಿದು ತುತ್ತು ತಿನಿಸಲು ಪ್ರಯತ್ನಿಸಿದರು. ʼಅದಿರಲಿ, ಉಪ್ಪಿಟ್ಟು ಎಲ್ಲಿ?ʼ ನನ್ನ ಪ್ರಶ್ನೆ.  ತಿಂದು ನೋಡು ಇದನ್ನ ಅನ್ನುತ್ತಾ ಅಕ್ಕ ಒಂದು ತುತ್ತು ಬಾಯಲ್ಲಿ ಇರಿಸಿಯೇ ಬಿಟ್ಟರು. ರಾಗಿ ಮುದ್ದೆಯೇ ಆದರೂ ಬರೀ ಮುದ್ದೆಯಲ್ಲ. ಅದಕ್ಕೆ ಉಪ್ಪು ಮೆಣಸಿನಕಾಯಿ, ಹುಣಸೆ, ಜೀರಿಗೆ ಬೆಳ್ಳುಳ್ಳಿ ಸೇರಿಸಿ ಅಡುಗೆ ಮನೆಯ ಒರಳುಗಲ್ಲಿನಲ್ಲಿ ಕುಟ್ಟಿ ಪುಡಿ ಮಾಡಿ ಅದಕ್ಕೆ ಬೆಳಿಗ್ಗೆಯೇ ಮಾಡಿಟ್ಟು ತಣ್ಣಗಾಗಿದ್ದ ತಂಗುಳು ಮುದ್ದೆಯನ್ನೂ ಸೇರಿಸಿ ರುಬ್ಬಿದ್ದರು. ಹೊಸ ರುಚಿ ಅನಿಸಿದ್ದರಿಂದ ಅದನ್ನೇ ತಿನ್ನುತ್ತಾ ಮುಂದುವರಿದೆ. ʼಮತ್ತೆ ಉಪ್ಪಿಟ್ಟು?ʼ ಅಂದೆ.  ಈಗ ತಿಂದಿದ್ದೇ ಉಪ್ಪಿಟ್ಟು, ಹಿಂದೆಲ್ಲಾ ರಾತ್ರಿ ಅಡುಗೆ ಮಾಡುವಾಗಲೇ ಜಾಸ್ತಿ ಮುದ್ದೆ ಮಾಡಿಟ್ಟು, ಬೆಳಗಿನ ಹೊತ್ತು ಹಿಂಗೇ ಉಪ್ಪಿಟ್ಟು ಮಾಡ್ತಿದ್ದರು, ಅದೇ ಆಗೆಲ್ಲಾ ತಿಂಡಿ, ಗೊತ್ತಾ?  ಹಿಟ್ಟು ತಿಂದವರು ಗಟ್ಟಿಯಾಗ್ತಾರಂತೆ ಅಂದರು ಅಕ್ಕ. ಅದು ಹೇಗೋ ಆ ಒಂದು ಶೈಕ್ಷಣಿಕ ವರ್ಷ ಕಳೆಯಿತು. ಸೋದರ ಮಾವ ಒಬ್ಬರು ಬಂದು ಮತ್ತೆ ಅಮ್ಮನ ಊರಿಗೆ ಕರೆದುಕೊಂಡು ಬಂದರು. ಆಮೇಲೆ ಅಕ್ಕನೂರಿನ ಕೆಜಿ ಕ್ಲಾಸು ಬೇಡವೇ ಬೇಡವೆಂದು ನನ್ನದೇ ಸ್ವಂತದ್ದಾಗಿದ್ದ ಅಮ್ಮನೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೇ ಸೇರಿಕೊಂಡೆ. ಅಕ್ಕನ ಊರಿನಲ್ಲಿ ಎಲ್ ಕೆಜಿ ಕ್ಲಾಸಿಗೆಂದು ಇದ್ದ ಒಂದು ವರ್ಷದಲ್ಲಿ ಹೆಚ್ಚು ಹಿತವೆನಿಸಿದ್ದು ರಾಣಿ ಮೇಡಮ್ ಮತ್ತೆ ಅಕ್ಕನ ಈ ಉಪ್ಪಿಟ್ಟು ಎರಡೇ! ಈಗ ಮಗಳಿಗೆ ಇವತ್ತು ಅಡುಗೆ ಏನ್ ಮಾಡೋದಮ್ಮಾ ಅಂತ ಕೇಳಿದರೆ ಸಾಕು. ತಕ್ಷಣ “ಮುದ್ದೆ!” ಅಂತ ಏರುದನಿಯಲ್ಲಿ ಚೀರುತ್ತಾ ಒತ್ತಾಯಿಸ್ತಾಳೆ. ರಾಗಿಹಿಟ್ಟಿನ ಸರಬರಾಜು ಇರದೇ, ಅವಳಿಗೆ ಅಡುಗೆಗೆ ಏನು ಅಂತ ಕೇಳುವುದನ್ನೇ ಕಡಿಮೆ ಮಾಡಿಬಿಟ್ಟಿದ್ದೇವೆ. ಇಲ್ಲಾಂದ್ರೆ  ತಿಂಗಳಿಗೆ ಮೂರು ಟ್ರಿಪ್ಪು ಪಿಟ್ಸ್ ಬರ್ಗಿಗೊ, ನ್ಯೂಯಾರ್ಕಿಗೋ ಇಂಡಿಯನ್ ಸ್ಟೋರ್ ಹುಡುಕಿ ಪ್ರಯಾಣ ಮಾಡಬೇಕಾಗುತ್ತೆ! ****** (ಮುಂದುವರಿಯುವುದು)

ಹೊತ್ತಾರೆ. Read Post »

ಅಂಕಣ ಸಂಗಾತಿ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

 (ಶಿವಮೊಗ್ಗ ಜಿಲ್ಲೆ ಹಲವಾರು ಚಳವಳಿಗಳ ಉಗಮಸ್ಥಾನವಾಗಿದೆ. ಇವತ್ತಿಗೂ ಶಿವಮೊಗ್ಗ ಜಿಲ್ಲೆಯ ಜನರ ಮನಸ್ಸುಗಳು ಪ್ರಗತಿಪರವಾಗಿಯೇ ಆಲೋಚಿಸುತ್ತಿವೆ. ಈ ಪ್ರಗತಿಪರ ಮನಸ್ಸುಗಳ ಮೂಲ ಬೇರು ಜಿಲ್ಲೆಯಲ್ಲಿ ಹುಟ್ಟಿದ ಚಳವಳಿಗಳಲ್ಲಿ ಅಡಗಿದೆ. ಈ ಕುರಿತು “ ಶಿವಮೊಗ್ಗ ಜಿಲ್ಲೆಯ ಚಳವಳಿಗಳು” ಎಂಬ ಹೆಸರಿನಲ್ಲಿ ಡಾ.ಸಣ್ಣರಾಮರವರು ಸವಿಸ್ತಾರವಾಗಿ ಪತ್ರಿಕೆಗೆ ಬರೆಯಲಿದ್ದಾರೆ.) ಡಾ.ಸಣ್ಣರಾಮ ಭಾಗ-ಒಂದು.     ಮನುಷ್ಯ ವಿಕಾಸದ ಹಂತದಿಂದಲೇ ಒಬ್ಬ ಮತ್ತೊಬ್ಬನಂತಿಲ್ಲ, ಆಲೋಚನ ರೀತಿ, ಗ್ರಹಿಕೆ, ಪ್ರತಿಕ್ರಿಯೆ, ದೈಹಿಕ ಸ್ವರೂಪ, ಬಣ್ಣ ಹೀಗೆ ಎಲ್ಲಾ ಬಗೆಯಲ್ಲಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಇರುತ್ತದೆ. ಒಂದೇ ತಂದೆ-ತಾಯಿಯ ಮಕ್ಕಳು ಸಹ ಒಬ್ಬ ಮತ್ತೊಬ್ಬನಂತಿರುವುದಿಲ್ಲ. ಭಿನ್ನತೆಯೇ ಮನುಷ್ಯನ ವೈಶಿಷ್ಟವೂ ಹೌದು. ಮನುಷ್ಯನ ಭಿನ್ನ ಆಲೋಚನಾ ಕ್ರಮಗಳೇ ಭಿನ್ನ ಅಭಿಪ್ರಾಯ, ಭಿನ್ನ ಸಿದ್ದಾಂತಗಳ ಉಗಮಕ್ಕೆ ಕಾರಣ. ಒಂದು ಅಂದಾಜಿನ ಪ್ರಕಾರ ಜಗತ್ತಿನಲ್ಲಿ ದಿನ ಒಂದಕ್ಕೆ ೬೦೦ ಸಿದ್ದಾಂತ ಹುಟ್ಟುತ್ತವೆ ಮತ್ತು ಸಾಯುತ್ತಿವೆಯಂತೆ. ಭಿನ್ನತೆಯೇ ವ್ಯಕ್ತಿ ವ್ಯಕ್ತಿಯ ನಡುವೆ ಪೈಪೋಟಿ ಘರ್ಷಣೆಗಳು ಏರ್ಪಡಲು ಕಾರಣವಾಗಿದೆ. ಮನುಷ್ಯನಲ್ಲಿರುವ ಭಿನ್ನ ಆಲೋಚನಾ ಕ್ರಮಗಳೇ ಜಗತ್ತಿನಾದ್ಯಂತ ಚಳವಳಿಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.     ಮನುಷ್ಯ ಗುಹ ವಾಸಿಯಿಂದ ಗ್ರಾಮ ವಾಸಿ, ನಗರ ವಾಸಿಯಾಗುತ್ತಾ ಬಂದಂತೆ ಆತನ ಸಾಮಾಜಿಕ ರೂಪುರೇಷಗಳು ಬದಲಾಗುತ್ತಾ ಬಂದಿವೆ. ಜಗತ್ತಿನ ಯಾವ ಸಮಾಜವು ಒಂದು ಮತ್ತೊಂದರಂತಿಲ್ಲ. ಸಾಮಾಜಿಕ ರಚನಾ ವಿನ್ಯಾಸವೂ ಭಿನ್ನವೇ ಆಗಿರುತ್ತದೆ. ಅಂತೆಯೇ ಸಾಮಾಜಿಕ ವ್ಯವಸ್ಥೆಯೂ ಸಹ ಭಿನ್ನವೇ ಆಗಿರುತ್ತದೆ. ಯಾವುದೇ ಸಮಾಜ ರೂಪಿತ ವ್ಯವಸ್ಥೆಯನ್ನು  ಆ ಸಮಾಜದ ಸಮಸ್ತ ಜನರು ಒಪ್ಪಿಕೊಂಡಿರುತ್ತಾರೆಂದು ಹೇಳಲಾಗುವುದಿಲ್ಲ. ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ವ್ಯವಸ್ಥೆಯ ರೂಢಿಗತ ವಿಚಾರಧಾರೆಯನ್ನು ಒಪ್ಪದ ಜನರು ಒಟ್ಟಾಗಿ ಪ್ರಶ್ನಿಸಲು ಪ್ರಾರಂಭಿಸಿದಾಗ ಚಳವಳಿ ಸ್ಪೋಟಗೊಳ್ಳುತ್ತದೆ.    ಚಳವಳಿ ಎಂದರೇನು? ಎಂಬುದನ್ನು ವ್ಯಾಖ್ಯಾನಿಸುವುದು, ನಿರ್ಧಿಷ್ಟವಾಗಿ ಹೇಳುವುದು ಸುಲಭವಲ್ಲ, ಏಕೆಂದರೆ ಚಳವಳಿ ಎಂಬುದು ತುಂಬಾ ಸಂಕೀರ್ಣವಾದ ಅಷ್ಟೇ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಪ್ರಕ್ರಿಯೆ. ‘ಸಾಮಾಜಿಕ ವ್ಯವಸ್ಥೆಯ ವೈರುಧ್ಯಗಳ ಘರ್ಷಣೆಯನ್ನು ವ್ಯವಸ್ಥೆಯ ಸಮಗ್ರ ಬದಲಾವಣೆಗಾಗಿ ಬಳಸಲು ನಡೆಸುವ ನಿರಂತರ ರಾಜಕೀಯ ಪ್ರಕ್ರಿಯೆಯೇ ಚಳವಳಿ’ (ಕನ್ನಡ ಸಾಹಿತ್ಯ ಮತ್ತು ಜನಪರ ಚಳವಳಿ; ಸಂ;ರಂಗರಾಜ ವನದುರ್ಗ, ಲೇಖನ; ಬಿ.ಎಂ.ಪುಟ್ಟಯ್ಯ ಪು-೫) ಎಂದಿದ್ದಾರೆ. ಚಳವಳಿಯನ್ನು ಕುರಿತು ಆಧಾರ ಸಹಿತ ಚರ್ಚಿಸುವ ಲೇಖಕರು ಸರಿಯಾಗಿಯೇ ವ್ಯಾಖ್ಯಾನಿಸಿದ್ದಾರೆ. ಈ ವ್ಯಾಖ್ಯಾನವನ್ನು ವಿಸ್ತರಿಸಿ ಹೇಳುವುದಾದರೆ ಚಳವಳಿ ಎಂದರೆ ‘ವ್ಯವಸ್ಥೆಯೊಂದು ಸಾಮಾಜಿಕ, ರಾಜಕೀಯ, ಆರ್ಥಿಕ ವಿಚಾರಗಳನ್ನು ಆಚರಣೆಗೆ ತಂದಾಗ ಅವು ಬಹು ಸಮುದಾಯಗಳ ಹಿತಕ್ಕೆ ದಕ್ಕೆಯನ್ನುಂಟು ಮಾಡುವಂತಿದ್ದರೆ ಆ ಸಮುದಾಯಗಳ ಆಂತರ್ಯದಲ್ಲಿ ನಿರಂತರವಾಗಿ ಗುಪ್ತಗಾಮಿನಿಯಂತೆ ಪ್ರವಹಿಸುತ್ತಿರುವ ಶಕ್ತಿಯು ಒಮ್ಮೆಲೆ ಜ್ವಾಲಾಮುಖಿಯಂತೆ ಸ್ಪೋಟಗೊಂಡು ನಿರ್ದಿಷ್ಟ ಗುರಿಯತ್ತ ಚಲಿಸುವ ಪ್ರಕ್ರಿಯೆ’ ಎಂದು ಹೇಳಬಹುದು. ಚಳವಳಿಯಲ್ಲಿ ಬಹುಸಮುದಾಯಗಳು ಒಗ್ಗೂಡುವಿಕೆ ಮತ್ತು ಅವುಗಳ ಆಂತರ್ಯದಲ್ಲಿ ಮಡುಗಟ್ಟಿದ ಪ್ರಶ್ನಿಸುವ ನಿರಂತರ ಚಲನೆಯು ಮುಖ್ಯವಾಗುತ್ತದೆ. ಆದ್ದರಿಂದಲೇ ಚಳವಳಿ ಅಪಾರವಾದ ಶಕ್ತಿಯ ಸಂಚಯವೂ ಆಗಿರುತ್ತದೆ     ಚಳವವಳಿ ಸಮುದಾಯಗಳ ಆಂತರ್ಯದಲ್ಲಿ ನಿರಂತರ ಚಲನಶೀಲೆಯಾಗಿರುವುದರಿಂದ ಇಂದು ಹುಟ್ಟಿ ನಾಳೆ ಅಂತ್ಯಗೊಳ್ಳುವ ಕ್ರಿಯೆಯಲ್ಲ. ಭಾರತೀಯ ಸಮಾಜವನ್ನೇ ಅನುಲಕ್ಷಿಸಿ ಹೇಳುವುದಾದರೆ ಭಾರತದಲ್ಲಿ ಆದಿಮ ಕಾಲದಲ್ಲಿ ರೂಪಿತಗೊಂಡಿರುವ ವಿಚಾರಧಾರೆಯನ್ನೇ ಒಪ್ಪುವ ಸಮುದಾಯಗಳು ಒಂದೆಡೆ ಇದ್ದರೆ ಅವುಗಳನ್ನು ಪ್ರಶ್ನಿಸುವ ಮನಸ್ಸುಗಳಿಗೂ ಅಷ್ಟೇ ಪ್ರಾಚೀನತೆ ಇದೆ. ಸನಾತನ ವಾದವನ್ನು ಪ್ರಶ್ನಿಸುತ್ತಿದ್ದ ಪಂಥವನ್ನು ಪ್ರಕೃತಿವಾದಿಗಳಿಗೂ ಅಷ್ಟೇ ಪ್ರಾಚೀನತೆ ಇದೆ. ಮುಂದೆ ಚಾರ್ವಾಕ ಪಂಥವೆಂದು ಪ್ರಸಿದ್ದವಾಗಿತ್ತು. ಸನಾತನ ವಾದವನ್ನು ಧಿಕ್ಕರಿಸುವ ಮನಸ್ಸುಗಳೇ ಚಳವಳಿಗಳಿಗೆ ಮೂಲ ಪ್ರೇರಣೆ. ಮನುಷ್ಯ ಆಂತರ್ಯದಲ್ಲಿ ಅಂತರ್ಗತವಾಗಿರುವ ಪ್ರಶ್ನಿಸುವ ಗುಣ ಎಲ್ಲಿವರೆಗೂ ಇರುತ್ತದೆಯೋ ಅಲ್ಲಿಯವರೆಗೆ ಚಳವಳಿಯು ನಿರಂತರವಾಗಿರುತ್ತದೆ. ಆ ಗುಣ ಮಾನವನ ಉಗಮದಷ್ಟೆ ಪ್ರಾಚೀನ. ಆದ್ದರಿಂದಲೇ ಚಳವಳಿಗೆ ಆದಿ-ಅಂತ್ಯಗಳಿಲ್ಲ ಎಂದು ಹೇಳಲಾಗಿದೆ.     ಯಾವುದೇ ಚಳವಳಿ ಎಲ್ಲಾ ಕಾಲದಲ್ಲಿ ಏಕ ಪ್ರಕಾರವಾಗಿರುವುದಿಲ್ಲ. ಹಾಗೆಯೇ ಇರಲು ಸಾಧ್ಯವೂ ಇಲ್ಲ. ಚಳವಳಿ ಒಂದು ರೀತಿಯಲ್ಲಿ ಜ್ವಾಲಾಮುಖಿಯಂತೆ, ಜ್ವಾಲಾಮುಖಿ ಭೂಮಿಯ ಒಳಗೆ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದು, ಒಮ್ಮಿಂದೊಮ್ಮೆಲೆ ಸ್ಪೊÃಟಗೊಂಡು ಆಕಾಶಕ್ಕೆ ಲಾವಾರಸವನ್ನು ಚಿಮ್ಮಿ ತನ್ನ ತೆಕ್ಕೆಗೆ ಸಿಕ್ಕಿದಷ್ಟನ್ನು ನುಂಗಿ ನೊಣೆಯುವಂತೆ ಚಳವಳಿ ಸಮುದಾಯದ ಒಳಗೆ ಗುಪ್ತಗಾಮಿನಿಯಾಗಿದ್ದು ತಮ್ಮ ಮೇಲಿನ ದೌರ್ಜನ್ಯಗಳು ಉಗ್ರ ರೂಪ ತಳೆದಾಗ ಉಗ್ರ ರೂಪವನ್ನು ತಾಳುತ್ತದೆ. ಗುರಿ ಮುಟ್ಟಿದ ಮೇಲೆ ಮತ್ತೆ ತಟಸ್ಥವಾಗುತ್ತದೆ. ಚಳವಳಿಯ ಆದಿ ರೂಪ ಗ್ರಹಿಕೆ ಹೇಗೆ ಸಿಗುವುದಿಲ್ಲವೋ ಹಾಗೆಯೇ ಅದು ಸ್ಪೊÃಟಗೊಂಡಾಗ ತಳೆಯ ರೂಪಗಳನ್ನು ಹೇಳಲಾಗುವುದಿಲ್ಲ. ಸ್ವಾತಂತ್ರö್ಯ ಚಳವಳಿ, ದಲಿತ ಚಳವಳಿ, ಭಾಷಾ ಚಳವಳಿ, ರೈತ ಚಳವಳಿ ಈ ಎಲ್ಲಾ ಚಳವಳಿಗಳ ಹಿನ್ನಲೆಯು ಹಾಗೆಯೇ. movement ಇಂಗ್ಲಿಷಿನ ಪದ. ಇದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಚಳವಳಿ ಪದವನ್ನು ಬಳಸುತ್ತೇವೆ.. movement ಎಂದರೆ ಇಂಗ್ಲಿಷಿನಲ್ಲಿ an act the process of moving, a group of people who share same aims or ideas a trend or development ಇತ್ಯಾದಿ ಅರ್ಥಗಳಿವೆ. ಕನ್ನಡದಲ್ಲಿ movement ಪದಕ್ಕೆ ಚಲನೆ ಅಲುಗಾಟ ಚಲಿಸುವುದು, ಸ್ಥಳದಿಂದ ಸ್ಥಳಕೆ ಹೋಗುವುದು, ಮುಂದುವರಿಕೆ, ಸಾಗುವುದು ಇತ್ಯಾದಿ ಅರ್ಥಗಳಿವೆ. ‘ಚಳವಳಿ’ ಪದಕ್ಕೆ ಕನ್ನಡದಲ್ಲಿ ಆಂದೋಲನ ವಿಶೇಷ ಉ್ದೇಶಕ್ಕಾಗಿ ಒಟ್ಟುಗೂಡಿದ ಜನಗಳ ತಂಡ, ಆ ತಂಡ ಕೈಗೊಳ್ಳುವ ಕಾರ್ಯಗಳು ಹಾಗೂ ಚಟುವಟಿಕೆಗಳು ಇತ್ಯಾದಿ ಅರ್ಥಗಳಿವೆ. ಕನ್ನಡದ ಚಳುವಳಿ ಪದವು ಇಂಗೀಷ್ನ movement ಪದ ಅರ್ಥವ್ಯಾಪ್ತಿಯನ್ನು ಹೊಂದಿರುವುದರಿಂದ ಚಳವಳಿ ಪದದ ಬಳಕೆ ಸೂಕ್ತವಾಗಿದೆ. ಇಷ್ಟು ವ್ಯಾಪಕ ಅರ್ಥವ್ಯಾಪ್ತಿಯನು ಹೊಂದಿರುವ ಚಳವಳಿ ಪದವನು ಇಂದು ನಮ್ಮ ನಡುವೆ ತುಂಬಾ ಸಂಕೂಚಿತವಾಗಿ ಬಳಕೆ ಮಾಡಲಾಗುತ್ತಿದೆ. ಯಾವ ಗೊತ್ತು ಗುರಿ ಇಲ್ಲದೆ ಯಾರದೊ ಹಿತಕಾಗಿ ನಡೆಯುವ ಪತಿಭಟನೆ, ಹೋರಾಟ, ಸಂಘರ್ಷ, ಆಕ್ರೊÃಶ, ಜಗಳ ಇವೆಲ್ಲವನ್ನು ಚಳವಳಿ ಎಂದು ಕರೆಯುವುದು ಸಾಮಾನ್ಯವಾಗಿದೆ. ಈ ಪದಗಳ ಅರ್ಥ ವ್ಯಾಪ್ತಿ ಕಡಿಮೆ. ಇಲ್ಲಿ ಸಾರ್ವಜನಿಕರ ಹಿತಾಶಕ್ತಿ ಇರುವುದಿಲ್ಲ. ನಿರ್ದಿಷ್ಟ ಗೊತ್ತು ಗುರಿ ಇರುವುದಿಲ್ಲ. ಯಾರೋ ಒಬ್ಬ ವ್ಯಕ್ತಿಯ ಪರೋಕ್ಷ ಅಥವಾ ಪ್ರತ್ಯಕ್ಷ ಸ್ವಾರ್ಥತೆ ಮುಖವಾಗಿರುತ್ತದೆ. ಕ್ಷÄಲ್ಲಕÀ ವಿಚಾರವನ್ನಿಟ್ಟುಕೊಂಡು ನಡೆಯುವ ಹೋರಾಟ, ಪ್ರತಿಭಟನೆಗಳು ಚಳವಳಿ ಹೇಗಾದೀತು. ಚಳುವಳಿ ಸ್ಪೊÃಟಗೊಂಡು ವಿಶ್ವವ್ಯಾಪಿಯಾಗಬಹುದು, ರಾಷ್ಟç-ರಾಜ್ಯ ಅಥವಾ ಜಿಲ್ಲೆಯ ವ್ಯಾಪ್ತಿಗೆ ಸೀಮಿತವಾಗಿರಬಹುದು. ಅದೇನೇ ಇದ್ದರು ಅವುಗಳ ಅಧ್ಯಯನ ನಡೆಯುವುದು ಸೂಕ್ತವಾದುದು. ಏಕೆಂದರೆ ಕಳೆದ ತಲೆಮಾರುಗಳ ವಿದ್ಯಮಾನಗಳು ಮುಂದಿನ ತಲೆಮಾರಿಗೆ ತಲುಪುವ ಅಗತ್ಯವಿರುತ್ತದೆ. ಆದರೆ ಚಳವಳಿಗಳ ಅಧ್ಯಯನ ಮಾಡುವುದು ತುಂಬಾ ಕಷ್ಟ. ಚಳವಳಿಯ ನಡೆ ತುಂಬಾ ಸಂಕೀರ್ಣವಾಗಿರುತ್ತದೆ. ಎಲ್ಲೆಲ್ಲಿ ಯಾರ ಯಾರ ನೇತೃತ್ವದಲ್ಲಿ ಚಳವಳಿ ನಡೆಯಿತು, ಆದರ ರೂಪ ರೇಷೆಗಳೇನು ಎಂಬುವುದನು ಕ್ಷೆÃತ್ರಕಾರ್ಯದ ಮೂಲಕವೇ ಸಂಗ್ರಹಿಸಿ ದಾಖಲಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಚಳವಳಿಗಳ ತವರೂರಾದ ಶಿವಮೊಗ್ಗ ಜಿಲೆಯನ್ನು ಕೇಂದ್ರಿಕರಿಸಿಕೊಂಡು ಇಲ್ಲಿ ಜನತಳೆದ ಚಳವಳಿಗಳನ್ನು ಕುರಿತ ಕೃತಿ ರಚನೆ ಮಾಡುತ್ತಿದೇನೆ. ಈ ಕೃತಿ ಕಾಲಿಕವಾಗಿದ್ದರಿಂದ ಇದರ ವ್ಯಾಪ್ತಿಯೂ ಸೀಮಿತವಾಗಿದೆ. (ಮುಂದುವರೆಯುತ್ತದೆ)    ============== ಪರಿಚಯ: ಡಾ.ಸಣ್ಣರಾಮ ಅವರು ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಪ್ರಾದ್ಯಾಪಕರು.ಇದೀಗ ಶಿವಮೊಗ್ಗೆಯ್ಲಿ ನೆಲೆಸಿದ್ದಾರೆ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು Read Post »

You cannot copy content of this page

Scroll to Top