ಕಾವ್ಯಯಾನ

ಗಝಲ್

ದೀಪಾಜಿ

ಮನದಬಾಗಿಲ ಕದಲಿಸಿದರೆ ಏನರ್ಥ ಸಾಕಿ, ಒಳನುಸುಳುವ ಇಚ್ಛೆ ಇಲ್ಲದವರು ಬಯಲ ದಾಟಿ ಬರಬಾರದಿತ್ತು..
ಅಂಗಾತ ಮಲಗಿದ ರಸ್ತೆ ದಾಟಿ ಬಾಗಿಲ ವರೆಗೂ ಬಂದು ಕದತಟ್ಟದೆ ಹಿಂತಿರುಗುತ್ತೇನೆಂದರೆ ಏನರ್ಥ ಸಾಕಿ..

ಮೊಗ ನೋಡಿ ಮಾತನಾಡಲಾಗದವರು ಕಾರ್ಮೋಡದ ಮಧ್ಯದ ಕೊಲ್ಮಿಂಚಿನಂತ ಮಾತು ಆರಂಭಿಸಲು ಬರಬಾರದಿತ್ತು..
ಬಿದಿಗೆ ಚಂದಿರನಂತೆ ಬಂದು ನಿಂತು ಕಾಯ್ದು,ಕದ ತೆರೆಯುವಾಗ ಬೆನ್ನುಮಾಡಿ ಹೊರಟರೆ ಏನರ್ಥ ಸಾಕಿ..

ಬೆರಳಿಗೆ ಬೆರಳ ಕಸಿಮಾಡಿದಾಗ ಹುಸಿ ಮುನಿಸಮಾಡಿ ಕೊಸರಾಡಲು ಬರಬಾರದಿತ್ತು..
ಮರುಳ ಮಾಡಿ ಕರುಳ ಹಿಂಡಿ,ಮಂಡಿ ಹಚ್ಚಿ ಕುಳಿತು ಬೆರಳ‌ ತಾಗಿಸಿ ನಕ್ಕರೆ ಏನರ್ಥ ಸಾಕಿ..

ಪ್ರೇಮರಾಗ ನುಡಿಸಲಾಗದವರು ಕನಸೊಳಗೂ ಲಗ್ಗೆ ಇಟ್ಟು ಒಳನುಗ್ಗಲು ಬರಬಾರದಿತ್ತು..
ಕಣ್ಣಕಪ್ಪು ತೀಡುವ ನೆಪ ತೋರಿ ದೃಷ್ಟಿಗೆ ದೃಷ್ಟಿ ಸೇರಿಸಿ ಮನದ ವೇದನೆ ಕಲಕಿದರೆ ಏನರ್ಥ ಸಾಕಿ..

ಕತ್ತಲೆಯ ಮೋಹಿದುವವರು ದೀಪದ ಬೆಳಕ ಹುಡುಕಲು ಬರಬಾರದಿತ್ತು‌.
ಎದೆಯ ತುಂಬ ಅನುರಾಗದ ಅಲೆಗಳ ತುಂಬಿಕೊಂಡು ವಿರಹದುರಿಯಲಿ ಬೆಂದರೆ ಏನರ್ಥ ಸಾಕಿ..

=================================================

2 thoughts on “ಕಾವ್ಯಯಾನ

Leave a Reply

Back To Top