ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು

ತೊಟ್ಟಿಲು ತೂಗುವ ಕೈ ಜಗತ್ತನ್ನೂ ತೂಗಿದೆ. ದೇಶವನ್ನೂ ಆಳಿದೆ.
ಸೌಟು ಹಿಡಿದ ಕೈ ಲೇಖನಿಯನ್ನೂ ಸಮರ್ಥವಾಗಿ ಬಳಸಿದೆ . ಅಡುಗೆ ಮನೆಯನ್ನು ಸಂಭಾಳಿಸುವ ಮಹಿಳೆ ಕನ್ನಡ ಸಾಹಿತ್ಯ ಪರಿಷತ್ತನ್ನು ನಿಭಾಯಿಸಲಾರಳೇ?

ನಾನಿಲ್ಲಿ ಪುರುಷರು ಸರ್ವಾಧಿಕಾರಿಯಾಗಿದ್ದಾರೆ ಎಂದಾಗಲಿ, ಮಹಿಳೆಯರನ್ನು ತುಳಿದಿದ್ದಾರೆಂದಾಗಲಿ ಹೇಳುತ್ತಿಲ್ಲ. ಅಸಲಿಗೆ, ಮಹಿಳೆಯರೇ ಮನಸ್ಸು ಮಾಡಿರಲಿಕ್ಕಿಲ್ಲ ಎಂದು ಅನಿಸುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ನೂರರ ಮೇಲೆ ಆರು ವರುಷಗಳಾದರೂ ಇದುವರೆಗೆ ಅಧ್ಯಕ್ಷ ಸ್ಥಾನವನ್ನು ಒಬ್ಬ ಮಹಿಳೆ ವಹಿಸಿಲ್ಲ ಎನ್ನುವುದರ ಹಿಂದೆ ಪುರುಷರಿಗಿಂತ ಮಹಿಳೆಯರದೇ ಹೆಚ್ಚಿನ ಪಾಲಿದೆ.

ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ 1915ರ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ 1938ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.

ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸುವ ಕೆಲಸ ಮಾಡುತ್ತಿದೆ.

ವರ್ಷಕ್ಕೊಮ್ಮೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು 1974 ರಲ್ಲಿ ಜಯದೇವಿ ತಾಯಿ ಲಿಗಾಡೆ, 2000 ದಲ್ಲಿ ಶಾಂತಾದೇವಿ ಮಾಳವಾಡ, 2003 ರಲ್ಲಿ ಕಮಲಾ ಹಂಪನಾ, 2010 ರಲ್ಲಿ ಗೀತಾ ನಾಗಭೂಷಣ ವಹಿಸಿಕೊಂಡಿರುವುದು ಬಿಟ್ಟರೆ ಇನ್ನು ಉಳಿದ ಯಾವ ವರ್ಷವೂ ಮಹಿಳೆಯರ ಆಧ್ಯಕ್ಷತೆ ಇಲ್ಲ.

1915 ರಿಂದ 1940 ರವರೆಗೆ ಕಸಾಪ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಬಳಿಕ ಚುನಾವಣಾ ಪದ್ಧತಿ ಜಾರಿಗೆ ಬಂದಿತು.
ಕಸಾಪ ಚುನಾವಣೆಗಳಲ್ಲಿ ಮಹಿಳೆಯರು ಯಾಕೆ ಪ್ರಬಲವಾಗಿ ಸ್ಪರ್ಧಿಸುತಿಲ್ಲ? ಅಥವಾ ಚುನಾವಣೆಯಲ್ಲಿ ಯಾಕೆ ಆಯ್ಕೆಯಾಗುತ್ತಿಲ್ಲ? ಎಂಬುದು ಪ್ರಶ್ನೆ.

ಕನ್ನಡದ ಅನೇಕ ಹೆಸರಾಂತ ಮಹಿಳಾ ಸಾಹಿತಿಗಳು ಈ ಬಗ್ಗೆ ಯೋಚಿಸಬೇಕು.
ಯೋಚಿಸಬೇಕು ಅನ್ನುವ ಮೊದಲು ಅಲ್ಲಿ ಮಹಿಳೆಯರು ಸ್ಪರ್ಧಿಸಲು ಆರೋಗ್ಯಕರ ವಾತಾವರಣ ಇದೆಯೇ ಗಮನಿಸಬೇಕಾಗುತ್ತದೆ.

ಯಾವುದೇ ರಾಜಕೀಯ ಪ್ರಭಾವ, ಜಾತಿ ರಾಜಕಾರಣಗಳಿಂದ ಮುಕ್ತವಾಗಿ ಸಾಹಿತ್ಯದ ಬೆಳವಣಿಗೆ, ಭಾಷಾ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಕಸಾಪಕ್ಕೂ ಇದೆ.

ಮಹಿಳೆಯರು ಅಧ್ಯಕ್ಷರಾಗಲಿ ಎಂದು ಮಹಿಳಾ ಮೀಸಲಾತಿಗೆ ಒತ್ತು ಕೊಡುವ ಬದಲು, ನಮ್ಮ ಮಹಿಳೆಯರು ಸಾಹಿತ್ಯದ ಪ್ರಬಲ ಹಿನ್ನೆಲೆಯಿಂದ ಗಂಡು ಹೆಣ್ಣೆಂಬ ಬೇಧವಿಲ್ಲದೇ ಬಹುಮತದಿಂದ ಆಯ್ಕೆಯಾಗಬೇಕು ಎನ್ನುವುದು ನನ್ನ ಆಶಯ.

ಮುಂಬರುವ ಚುನಾವಣೆಯಲ್ಲಿ ಅಂತಹ ಅರ್ಹತೆ ಉಳ್ಳ ಮಹಿಳೆಯರೇ ಮುಂದೆ ಬಂದು ಸ್ಪರ್ಧಿಸಿ, ಅಧ್ಯಕ್ಷರಾಗಿ ಆಯ್ಕೆಯಾಗುವಂತಾಗಲಿ ಎಂದು ಆಶಿಸೋಣ.

**********************

ಶೀಲಾ ಭಂಡಾರ್ಕರ್

Leave a Reply

Back To Top