ವೃತ್ತಿಯಷ್ಟೇ ಹವ್ಯಾಸ ಮುಖ್ಯ

ಲೇಖನ

ಚಂದಕಚರ್ಲ ರಮೇಶ ಬಾಬು

ವೃತ್ತಿ ಅಂದರೆ ನಾವು ಜೀವನಕ್ಕಾಗಿ ಆರಿಸಿಕೊಂಡ ಕೆಲಸ. ಆ ಕೆಲಸದಲ್ಲಿ ನಮಗಿಷ್ಟವಿಲ್ಲದಿದ್ದರೂ ಹೊಟ್ಟೆ ಹೊರೆಯುವುದಕ್ಕಾಗಿ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಮೇಲಧಿಕಾರಿಯ ದಬ್ಬಾಳಿಕೆ, ಅಲ್ಲಲ್ಲಿ ವರ್ಗಾವಣೆ, ಗ್ರಾಹಕರ ಜೊತೆ ಘರ್ಷಣೆ, ಸಹೋದ್ಯೋಗಿಗಳ ಕಿರುಕುಳ ಇವೆಲ್ಲ ವೃತ್ತಿಯ ಜೊತೆಯಿದ್ದು, ನಾವು ಗಳಿಸುವ ಸಂಬಳದ ಜೊತೆ ಬಂದು ಬೀಳುವ ಅಡ್ಡ ಒತ್ತಡಗಳು. ಇವನ್ನೆಲ್ಲ ತೂಗಿಸಿಕೊಂಡು ಹೋಗಲೇಬೇಕಾದ ಅನಿವಾರ್ಯತೆ. ಆಗ ನಮಗೆ ಗೊತ್ತಿಲ್ಲದೆಯೇ ನಮ್ಮಲ್ಲಿ ಒತ್ತಡ ಜಾಸ್ತಿಯಾಗುತ್ತದೆ. ಮನೆ, ಮಡದಿ, ಮಕ್ಕಳು ಮನೆಯಲ್ಲಿಯ ನೆಮ್ಮದಿ ಸ್ವಲ್ಪ ಮಟ್ಟಿಗೆ ಈ ಒತ್ತಡವನ್ನು ಕಮ್ಮಿ ಮಾಡುವಲ್ಲಿ ಸಹಾಯಕವಾದರೂ, ವೈಯಕ್ತಿಕ ಸ್ತರದಲ್ಲಿ ಯಾವುದಾದರು ಹವ್ಯಾಸ ಇದ್ದಲ್ಲಿ ಅಥವಾ ಬೆಳೆಸಿಕೊಂಡಲ್ಲಿ ಅದು ಒತ್ತಡವನ್ನು ಇನ್ನೂ ಕಮ್ಮಿ ಮಾಡುವ ಸಾಧನವಾಗಬಹುದು. ಈ ನಿಟ್ಟನಲ್ಲಿ ಹವ್ಯಾಸದ ಪಾತ್ರ ಮಹತ್ವವಿರುವುದಾಗುತ್ತದೆ.

ಹವ್ಯಾಸ ಎನ್ನುವುದು ಏನು ಎಂದು ಒಮ್ಮೆ ನೋಡೋಣ.” ಕೇವಲ ಹಣಕ್ಕಾಗಿ ಮಾಡದೆ ಆತ್ಮ ಸಂತೋಷಕ್ಕಾಗಿ ಮಾಡುವ, ದೈನಂದಿನ ಬದುಕಿನ ಆಗುಹೋಗುಗಳ ನಡುವೆ ಮಾನಸಿಕ ಹತಾಶೆಯನ್ನು ಕಳೆದುಕೊಳ್ಳಲು ಮಾಡುವ ಕೆಲಸ’ ಎಂದು ಒಂದು ನಿರ್ವಚನವಿದೆ. ಹವ್ಯಾಸ ತಂತಾನೇ ಬೆಳೆದು ಬಂದಿರಬಹುದು ಅಥವಾ ಬೆಳೆಸಿಕೊಂಡಿರಲೂ ಬಹುದು. ಉದಾ: ಒಬ್ಬರಿಗೆ ಚಿತ್ರಕಲೆ ಸ್ವತಃ ಸಿದ್ಧಿಸಿರಬಹುದು. ಕೆಲವರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು. ಯಾವುದೇ ಇಂಥ ಚಟುವಟಿಕೆಯನ್ನು ನಾವು ಹವ್ಯಾಸವೆನ್ನ ಬಹುದಾಗಿದೆ. ಈ ಅಭ್ಯಾಸಗಳ ಬಗ್ಗೆ ಆಂಗ್ಲ ಭಾಷೆಯ ಒಂದು ಚಿಕ್ಕ ಪ್ರಯೋಗ ನೋಡೋಣ.

ಹವ್ಯಾಸ ವೃತ್ತಿಯಾಗಲೂ ಬಹುದು. ಚೆನ್ನಾಗಿ ಬರೆಯುವ ಕಲೆ ಇರುವವನು ಪತ್ರಿಕಾ ಕಛೇರಿಗೆ ಸೇರಿ ಅದರಿಂದ ಹಣ ಗಳಿಸಿದರೆ ಅದು ವೃತ್ತಿಯಾಗಿಬಿಡುತ್ತದೆ. ಆದಕಾರಣ ಯಾವುದು ಹವ್ಯಾಸ ಅಥವಾ ಯಾವುದು ವೃತ್ತಿ ಎಂದು ವಿಂಗಡನೆ ಮಾಡುವುದು ಪರಿಸ್ಥಿತಿಗಳ ಮೇಲೆ ಅವಲಂಬಿಸಿರುತ್ತದೆ.

ಕೆಲ ಹವ್ಯಾಸಗಳು ಮನುಷ್ಯನ ಅವನತಿಗೀಡು ಮಾಡುವುವೂ ಆಗಿವೆ. ಇವುಗಳನ್ನು ಹವ್ಯಾಸವೆನ್ನಲಾಗುವುದಿಲ್ಲ. ಆದರೆ ಇವುಗಳನ್ನು ಬೆಳೆಸಿಕೊಳ್ಳುವರು ಹವ್ಯಾಸವೆಂದಲೇ ಬೆಳೆಸಿಕೊಂಡು ಅವುಗಳು ಅಭ್ಯಾಸವಾಗಿ ಬಿಡಲಾರದಾಗುತ್ತವೆ. ಉದಾ: ಜೂಜು, ಕುಡಿತ ಮೊದಲಾದವು. ಇವುಗಳಿಂದ ಹಣ ಪೋಲಾಗುವುದಲ್ಲದೆ ಆರೋಗ್ಯ ಕೆಡುತ್ತದೆ. ಈ ದುರಭ್ಯಾಸಗಳ ಬಗ್ಗೆ ಆಂಗ್ಲ ಭಾಷೆಯಲ್ಲಿ ತಮಾಷೆಗೆ ಹೀಗೆ ಹೇಳುತ್ತಾರೆ. ಆಂಗ್ಲದಲ್ಲಿ ಅಭ್ಯಾಸ ಅಥವಾ ಚಟಕ್ಕೆ habit ಎನ್ನುತ್ತಾರೆ. ನಿದಾನವಾಗಿ  ಬಿಡುವ ಪ್ರಯತ್ನದಲ್ಲಿ ಅದರಲ್ಲಿಯ ಐದು ಅಕ್ಷರಗಳಲ್ಲಿ ಮೊದಲನೆಯ ಅಕ್ಷರ ತೆಗೆದರೆ ಉಳಿಯುವದು a bit . ಅಂದರ ಅದರ ಶೇಷ ಉಳಿಯುತ್ತದೆ. ಮತ್ತೊಂದು ಅಕ್ಷರ ಅಂದರೆ a ತೆಗೆದರೂ ಒಂಚೂರು bit ಉಳಿಯುತ್ತದೆ. ಮುಂದುವರೆದು ಮತ್ತೊಂದು ತೆಗೆದರೂ  ಅದು it ಉಳಿಯುತ್ತದೆ. ಅಷ್ಟು ಜಿಡ್ಡಾಗಿ ಹತ್ತಿಕೊಂಡಿರುತ್ತದೆ ಎಂದು ಉದಾಹರಿಸುತ್ತಾರೆ. ದುರಭ್ಯಾಸ ವ್ಯಸನವಾಗುವ ಮುಂಚೆಯೇ ಅದನ್ನು ಗುರ್ತಿಸಿ ಬಿಟ್ಟುಬಿಡಬೇಕು.

ಹವ್ಯಾಸದ ನಿರ್ವಚನದಲ್ಲೇ “ ಕೇವಲ ಹಣಕ್ಕಾಗಿ ಮಾಡದೆ, ಆತ್ಮ ಸಂತೋಷಕ್ಕಾಗಿ “ ಮಾಡುವ ಚಟುವಟಿಕೆ ಎಂದು ಹೇಳಲಾಗಿದೆ. ಇದು ಏಕೆ ಮುಖ್ಯ ಎಂದು ಒಮ್ಮೆ ನೋಡೋಣ. ಇತ್ತೀಚಿನ ಹಲವಾರು ಸಂದರ್ಶನಗಳಲ್ಲಿ ಅಭ್ಯರ್ಥಿಗಳಿಗೆ ಅವರ ವೃತ್ತಿಪರವಾದ ಪ್ರಶ್ನೆಗಳನ್ನೇ ಅಲ್ಲದೆ ನಿಮ್ಮ ಹವ್ಯಾಸವೇನು ಎಂದು ಕೇಳುತ್ತಿರುವುದು ನಮಗೆಲ್ಲ ಕೇಳಿಬಂದಿದೆ. ಆಯ್ಕೆ ಮಾಡುವಾಗ ಈ ಅಂಶವನ್ನೂ ಪರಿಗಣನೆಗೆ ತೆಗೊಳ್ಳುವುದು ಮುಖ್ಯ ಎಂದು ಮಾನವ ಸಂಪನ್ಮೂಲದ ಅಧಿಕಾರಿಗಳು ಅಭಿಪ್ರಾಯ ಪಡುತ್ತಿದ್ದಾರೆ. ವೃತ್ತಿಯ ಒತ್ತಡ ಮತ್ತು ಹವ್ಯಾಸಗಳೆರಡರನ್ನೂ ಸಮತೋಲನೆ ಮಾಡಬೇಕಾಗಿರುವ ಅವಶ್ಯಕತೆ ಎಲ್ಲ ಕ್ಷೇತ್ರಗಳಲ್ಲೂ ಕಂಡು ಬಂದಿದೆ. ಹವ್ಯಾಸ  ಮನಸ್ಸಿಗೆ ಹಿತವೆನಿಸಿದ್ದು ಮಾಡುವಂಥದ್ದಾಗಿದೆ. ಹಾಗಾಗಿ ಮನಸ್ಸು ಪ್ರಫುಲ್ಲವಾಗುತ್ತದೆ. ಅದರಲ್ಲೂ ಒಂದು ಸ್ತರದ ಪರಿಣಿತಿ ಸಾಧಿಸಿದರೆ ಅದು ಇನ್ನೂ ಹುಮ್ಮಸ್ಸು ತುಂಬುತ್ತದೆ. ಧನಾತ್ಮಕ ಶಕ್ತಿ ಹೆಚ್ಚುತ್ತದೆ. ನಮ್ಮ ಮೈಯಲ್ಲಿ ಬಿಡುಗಡೆಯಾಗುವ ತತ್ಸಂಬಂಧೀ ಹಾರ್ಮೋನುಗಳಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ. ಆದಕಾರಣ ಮೈ ಮತ್ತು ಮನಗಳ ಹಿತಕ್ಕಾಗಿ ಹವ್ಯಾಸ ಅವಶ್ಯಕವಾಗಿದೆ.

ನಾವು ಇದುವರೆಗೆ ನೋಡಿದಂತೆ ಹವ್ಯಾಸಗಳು ಸ್ವತಃ ಬೆಳೆದಿರಬಹುದು. ಲಲಿತ ಕಲೆಗಳು ಇದರ ಕೆಳಗೆ ಬರುತ್ತವೆ. ಇವೆಲ್ಲ ಬಹುತೇಕ ಸ್ವತಃ ಸಿದ್ಧಗಳೇ. ಬರವಣಿಗೆ, ಹಾಡುಗಾರಿಕೆ, ಚಿತ್ರಕಲೆ ಇವೆಲ್ಲ ದೈವದತ್ತ ಪ್ರತಿಭೆಗಳು. ಇವುಗಳಿಗೆ ಮೆರಗನ್ನು ಕೊಟ್ಟು ಬೆಳೆಸಿ ಹವ್ಯಾಸಗಳನ್ನಾಗಿ ಮಾಡಿಕೊಂಡರೆ ಇತರೆ ಹವ್ಯಾಸಗಳಿಗಾಗಿ ಹುಡುಕಬೇಕಾಗುವುದಿಲ್ಲ. ಹಲವಾರು ಮಹನೀಯರು ಈ ತರದ ತಮ್ಮ ಪ್ರತಿಭೆಗಳನ್ನು ಅನುಸರಿಸಿ ಅವುಗಳಲ್ಲಿ ಸಹ ಹೆಸರು ಗಳಿಸಿದ್ದಾರೆ. ನಮ್ಮ ಮಾಜೀ ಪ್ರಧಾನಿ ಶ್ರೀ ವಾಜಪೇಯಿ ಅವರು ಕವಿಗಳಾಗಿದ್ದರು. ಮಾಜೀ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಮ್ ಅವರು ಅತ್ಯುತ್ತಮ ಬರಹಗಾರರಾಗಿದ್ದರು. 

ಇನ್ನು ಹವ್ಯಾಸವನ್ನು ಬೆಳೆಸಿಕೊಳ್ಳುವುದರ ಕಡೆಗೆ ಗಮನ ಹರಿಸೋಣ. ಪುಸ್ತಕ ಓದುವುದು, ದೇಶ ಸುತ್ತುವುದು, ತೋಟಗಾರಿಕೆ, ಪರ್ವತಾರೋಹಣ, ಯೋಗ ಮತ್ತು ಪ್ರಾಣಾಯಾಮ ಹೀಗೆ ಕೆಲವು ರೂಢಿ ಮಾಡಿಕೊಳ್ಳಬಹುದು. ಇವುಗಳಲ್ಲಿ ಸಹ ನಮ್ಮ ಮನಸ್ಸಿಗೆ ಯಾವುದು ಹಿತವೆನಿಸುತ್ತದೋ ಅದನ್ನು ಆಯ್ದುಕೊಂಡು ಅವುಗಳಲ್ಲಿ ತೊಡಗಬಹುದು. ತಾಂತ್ರಿಕ ವಿಸ್ಫೋಟದ ಈ ಯುಗದಲ್ಲಿ ಈ ದಿಕ್ಕಿನಲ್ಲಿ ತುಂಬಾ ಆಯ್ಕೆಗಳು ಸಿಗುತ್ತಿವೆ.     ಬರೀ ಯುವ ಪೀಳಿಗೆಯಲ್ಲದೆ ವಯಸ್ಸಾದವರು ಸಹ ಇವುಗಳ ಲಾಭ  ಪಡೆಯುತ್ತಿದ್ದಾರೆ. ಉದಾ: ವಾಟ್ಸಪ್, ಫೇಸ್ಬುಕ್, ಕರೊಕೆ ಹಾಡುಗಾರಿಕೆ ಮುಂತಾದವು.  ಲಾಕ್ ಡೌನ್ ಸಮಯದಲ್ಲಂತೂ ಇವುಗಳ ಉಪಯೋಗ ಜಾಸ್ತಿಯಾಗಿ ಹವ್ಯಾಸಗಳ ಹೊಸ ಬಾಗಿಲನ್ನೇ ತೆರೆದಿದೆ.

ಟಿವಿ, ಅಂತರ್ಜಾಲ, ಚರವಾಣಿ ಇವೆಲ್ಲವೂ ಇಲ್ಲದ ಸಮಯದಲ್ಲಿ ಸ್ನೇಹಿತರೆಲ್ಲ ಒಟ್ಟಾಗಿ ಹರಟೆ ಹೊಡೆಯುತ್ತಿದ್ದುದ್ದು ಸಹ ಉಲ್ಲಾಸಕ್ಕಾಗಿ ಮಾಡಿಕೊಂಡ ಹವ್ಯಾಸವೇ. ನಾಟಕಗಳು, ಸಂಗೀತ ಕಚೇರಿಗಳು, ಸಾಹಿತ್ಯ ಕಾರ್ಯಕ್ರಮಗಳು, ಕವಿಗೋಷ್ಠಿ, ಬಯಲು ನಾಟಕ, ಯಕ್ಷಗಾನ  ಇವೆಲ್ಲ ಮನೋಲ್ಲಾಸದ ದಾರಿಗಳು. ಪಾತ್ರಧಾರಿಗಳೇ ಆಗಬೇಕಾಗಿಲ್ಲ, ಪ್ರೇಕ್ಷಕರಾಗುವ ಹವ್ಯಾಸವನ್ನು ಸಹ ಹಾಕಿಕೊಳ್ಳ ಬಹುದು.

ಹವ್ಯಾಸಗಳಿಗಾಗಿ ಸಮಯವಿಲ್ಲ ಎಂದು ಹೇಳುವುದು ಬೇಡ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಹವ್ಯಾಸ ಬೆಳೆಸಿಕೊಳ್ಳುವುದು ಬರೀ ಒಳಿತೇ ಅಲ್ಲ ಅನಿವಾರ್ಯವು ಸಹ ಈಗ. ಹಾಗಂತ ಯಾವುದೇ ಹವ್ಯಾಸ ಚಟವಾಗಬಾರದು. ಅದರಿಂದ ನಮ್ಮ ಮಾನಸಿಕ ಅಥವಾ ದೈಹಿಕ ಸ್ವಾಸ್ಥ್ಯ ಕೆಡಬಾರದು. ಹಣ ಪೋಲಾಗಬಾರದು. ಒಂದು ಒಳ್ಳೆಯ ಹವ್ಯಾಸ ನಮ್ಮ ವೃತ್ತಿ ಜೀವನದ ಒತ್ತಡವನ್ನು ಕಮ್ಮಿಮಾಡಿದರೆ, ಚಟವಾದಾಗ ಅದು ಸಹ ಒತ್ತಡ ಕೊಟ್ಟು ನಮ್ಮ ಸ್ಥಿತಿಯನ್ನು ಹದಗೆಡಿಸುತ್ತದೆ. ಮಿತಿ ಅರಿತು ಅಭ್ಯಾಸ ಮಾಡಿಕೊಂಡು ಹವ್ಯಾಸದ ಲಾಭ ಪಡೆಯುವುದೇ ವಿಜ್ಞರ ಜಾಣತನ.

*********************************

8 thoughts on “ವೃತ್ತಿಯಷ್ಟೇ ಹವ್ಯಾಸ ಮುಖ್ಯ

  1. ರಮೇಶ್…. ತುಂಬಾ ಚೆನ್ನಾಗಿ ಬರೆದಿದ್ದೀರಿ….

  2. ಏನೂ ಭಾವೋದ್ವೇಗವಿಲ್ಲದೇ ವಿಷಯವನ್ನು ನಿರೂಪಿಸುವ ಜಾಣ್ಮೆ ಇವರ ಎಲ್ಲ ಬರಹಗಳಲ್ಲಿ ಕಾಣುತ್ತದೆ.
    ಪ್ರೇಕ್ಷಕರಾಗುವ ಹವ್ಯಾಸ ಬೆಳೆಸಿಕೊಳ್ಳುವುದು, ಹವ್ಯಾಸ ವ್ಯಸನವಾಗದಂತೆ ಜಾಗ್ರತೆ ವಹಿಸುವುದು ಎರಡೂ ಒಳ್ಳೆಯ ಸಲಹೆಗಳು

    1. ಧನ್ಯವಾದ ಮೇಡಂ.‌ನಿಮ್ಮ ಮೆಚ್ಚುಗೆ ಬರೆಯಲು ಹುಮ್ಮಸ್ಸು ತುಂಬುತ್ತದೆ.

  3. ತುಂಬಾ ಚೆನ್ನಾಗಿ ಬರೆದಿದ್ದೀರಿ ಅಣ್ಣಾ. ಮಿತಿ ಅರಿತು ಅಭ್ಯಾಸವನ್ನು ಮಾಡಬೇಕು. ಹವ್ಯಾಸದ ಲಾಭ ಪಡೆಯಬೇಕು. ಒಳ್ಳೆಯ ಸಲಹೆಗಳು.. ಅಣ್ಣಾ.

  4. ಉತ್ತಮ ಉಪಯುಕ್ತ ಬರವಣಿಗೆ. ಸಮಯದ ಅಗತ್ಯತೆ. ಶುಭಾಶಯ.

Leave a Reply

Back To Top