ಲಹರಿ

ಮಳೆಯಲ್ಲಿ ನೆನೆದ ನೆನಪು

ಪ್ರಮೀಳಾ ಎಸ್.ಪಿ.


” ಮಳೆ”…

ಈ ಪದಕ್ಕೂ ಅದು ಸುರಿಯುವಾಗ ಕೊಡುವ ಅನುಭವಕ್ಕೂ ,ಪ್ರಕೃತಿಯಲ್ಲಿ ,ಉಂಟಾಗುವ ಬದಲಾವಣೆಗೂ ನಮ್ಮ ಬದುಕಿನಲ್ಲಿ ತರುವ ಸ್ಥಿತ್ಯಂತರಕ್ಕೂ ಹೇಳಲಾಗದ ಅವಿನಾಭಾವ ಸಂಬಂಧವಿದೆ.ಮಳೆ ಬರುತ್ತಿದೆ ಎಂದರೆ ಒಬ್ಬೊಬ್ಬರ ಯೋಚನಾ- ಲಹರಿ ಒಂದೊಂದು ರೀತಿ ಹರಿಯುತ್ತದೆ.ಹಿಂದೆಲ್ಲಾ ಹಳ್ಳಿಗಳಲ್ಲಿ ಮಳೆಗಾಲದ ಆರಂಭವಾಗುವ ಮುಂಚೆ ದನಕರುಗಳಿಗೆ ಹುಲ್ಲು ಸೊಪ್ಪು ಹೊಂದಿಸಿಕೊಂಡು;ಮನೆಗೆ ಸೌದೆ,ಬೆರಣಿ ಹಿತ್ತಲಿನಲ್ಲಿ ನೆನೆಯದ ಹಾಗೆ ಇಟ್ಟುಕೊಂಡು, ಹಪ್ಪಳ ಉಪ್ಪಿನಕಾಯಿ,ಹಿಟ್ಟು ಬೇಳೆ ಬೆಲ್ಲ ಕೂಡಿಟ್ಟುಕೊಂಡು,ಹೊಲಕ್ಕೆ ಗೊಬ್ಬರ ಚೆಲ್ಲಿ ,ಉಕ್ಕೆ ಪಾಕವಾಗಿಸಿ ಮಳೆಗಾಗಿ ಕಾಯುತ್ತಿದ್ದರು ನಮ್ಮ ರೈತಾಪಿ ಜನಗಳು.ಈಗಿನ ಕಾಲದ ಚಿಂತನಾ ರೀತಿಯೇ ಬೇರೆ.ಮಕ್ಕಳಿಗಂತೂ ಮಳೆ ಬಂತೆಂದರೆ ದೋಣಿ ತೇಲಿ ಬಿಡುವ,ಮರಳಲ್ಲಿ ಮನೆಕಟ್ಟುವ ಆಸೆ.ಪ್ರೇಮಿಗಳಿಗ ಪಾಲಿಗೆ ಅದು ಯಾವ ಮಳೆಯಾದರು ಮುಂಗಾರು ಮಳೆಯೇ!!.ಮಳೆಯಲಿ ಜೊತೆಯಲಿ ಹಾಡುವ ಆಸೆ.ತೊಪ್ಪೆಯಾಗುತ್ತಾ ನಾಲ್ಕು ಹೆಜ್ಜೆ ಹಾಕುವಾಸೆ.ಮೈ ಮರೆತು ಜಗ ಮರೆತು ಮಳೆಯೊಳಗೆ ಒಂದಾಗುವಾಸೆ. ಹನಿ ಮಳೆಯೋ,ಜಡಿ ಮಳೆಯೋ,ಸುರಿ ಮಳೆಯೋ,ಧಾರಾಕಾರ ಮಳೆಯೋ,ಮುಸಲಧಾರೆಯೋ,ಪ್ರೀತಿಯ ಮಧುರ ಕ್ಷಣಗಳನ್ನು ಮತ್ತೆಮತ್ತೆ ಮನ ಮಿಡಿಸುತ್ತದೆ.ಕೆಲಸಕ್ಕೆ ಹೋಗುವ ಹೆಂಗಸರಿಗೆ ಹೊಸ ಛತ್ರಿ,ಜರ್ಕಿನ್ ಕೊಳ್ಳೋ ಯೋಚನೆ.ಅಮ್ಮಂದಿರಿಗೆ ಎಲ್ಲ ರೀತಿಯ ಹಿಟ್ಟು ,ಮೆಣಸಿನ ಪುಡಿ, ಸಂಬಾರ ಪುಡಿ ಡಬ್ಬಿಗೆ ಕೆಡದಂತೆ ತುಂಬೋ ತವಕ.ರೈತರಿಗೆ ಬಿತ್ತನೆ ಬೀಜ ಗೊಬ್ಬರಕ್ಕೆ ಕಾಸು ಹೊಂದಿಸೋ ಚಿಂತೆ.ರೈತ ಮಹಿಳೆಯರಿಗೆ ಯಾವ ಸಂಘದಲ್ಲಿ ಎಷ್ಟು ಸಾಲ ತೆಗೆದುಕೊಡಬಹುದು ಅನ್ನೋ ಯೋಚನೆ,ಗದ್ದೆ ಬಯಲಿನವರಿಗೆ ಈ ಭಾರಿ ಎರೆಡು ಬೆಳೆ ತೆಗೆಯುವ ಆಸೆ, ಸರ್ಕಾರಕ್ಕೆ ಜೋರು ಮಳೆ ಬಂದು ಕಾವೇರಿ ವಿವಾದ ಬಗೆಹರಿಯಲಿ ಅನ್ನೋ ಚಿಂತೆ. ಮುದುಕರಿಗೆ ಈ ಭಾರಿ ಪಿಂಚಣಿ ಹಣದಲ್ಲಿ ಉದ್ದ ಕೊಡೆ ,ಮಳೆಗಾಲದ ಬೂಟು ತರಿಸಿಕೊಳ್ಳೋ ಆಸೆ.ನಂಗೆ ಮಳೆ ಬರಲಿ, ಆದರೆ ರಸ್ತೆ ಬೇಗ ಒಣಗಲಿ ಗಾಡಿ ಓಡಿಸಲು ಸುಲಭವಾಗಲಿ,ಶಾಲೆಗೆ ಯಾವುದೆ ತೊಂದರೆ ಇಲ್ಲದೆ ಸೇರುವಂತಾಗಲಿ ಅನ್ನೋ ಭಾವನೆ,ಶಾಲಾ ಮಕ್ಕಳಿಗೆ ಮಳೆಗಾಲದ ರಜೆ ಸಿಗಬಹುದು…ಎಂಬ ನಂಬಿಕೆ. ಹೀಗೆ ಮಳೆಯೊಂದಿಗೆ ಭಾವನೆಗಳ ಬೆಸುಗೆ…
ನೆನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಮ್ಮ ಮನೆ ಕೆಲಸಕ್ಕೆ ಬಂದ ಸರೋಜಮ್ಮಬಹಳ ಸಪ್ಪಗಿದ್ದರು.ಕಾರಣ ಕೇಳದ ನಾನು ಕೆಲಸಕ್ಕೆ ಹೊರಡುವ ಆತುರದಲ್ಲಿದ್ದೆ. ಅವರೇ ನಿಂತು ಮಾತು ಶುರುಮಾಡಿದರು…”ಅಮ್ಮಾ ರಾತ್ರಿಯ ಮಳೆಗೆ ಮನೆಯಲ್ಲಿ ನೀರು ತುಂಬಿ ಹಾಸಿಗೆ ನೆನೆದು ಹೋಯಿತು.ಸೊಸೈಟಿ ಇಂದ ತಂದ ಅಕ್ಕಿ ಪೂರ್ತಿ ನೀರೊಳಗೆ ಮುಳುಗಿತು.ಇನ್ನೊಮ್ಮೆ ಅಕ್ಕಿ ಕೊಡೋವರೆಗೆ ಏನು ಮಾಡೋದು ?ಅದು ಅನ್ನ ಮಾಡಲು ಬರಲ್ಲ ..ತಿಂಡಿಗೆ ಆಗುತ್ತೆ,ಎಂದರು.ಗಂಡನಿಲ್ಲದ ಅವರು ವಿಧವೆ ಮಗಳನ್ನು ಮತ್ತು ಮೊಮ್ಮೊಗುವನ್ನು ಸಾಕಿಕೊಂಡು ಬದುಕು ನಡೆಸುತ್ತಿರುವುದು ನನಗೆ ಗೊತ್ತಿದ್ದ ವಿಷಯವಾಗಿತ್ತು.ಬಾಡಿಗೆ ಮನೆ ,ಕೂಲಿ ಕೆಲಸ, ಮದುವೆಯಾದರು ಮಗುವಿನೊಂದಿಗೆ ಮನೆಗೆ ಬಂದ ಮಗಳು.ಬಿ ಪಿ ಎಲ್ ಕಾರ್ಡಿನ ಅಕ್ಕಿ.ನನ್ನ ಯೋಚನೆ ಮುಂದುವರೆಯಿತೇ ಹೊರತೂ ಅವರಿಗೆ ಸಮಾಧಾನ ಹೇಳದೆ ಚಪಾತಿ ಲಟ್ಟಿಸಲು ಮುಂದಾದೆ. ನನ್ನನ್ನು ಸರೋಜಮ್ಮನ ಸ್ಥಾನದಲ್ಲಿ ಕಲ್ಪಿಸಿಕೊಂಡೆ. ಕಣ್ಣುಗಳು ಒದ್ದೆಯಾದವು.ಕವಿಗಳ ಕಲ್ಪನೆಯ ಮಳೆಗೂ ,ಕೊಡಗಿನಲ್ಲಿ ಧಾರಾಕಾರ ಸುರಿದು ಮನೆ ಮನ ಬಯಲು ಬೆಟ್ಟಗಳನ್ನೆಲ್ಲ ಕೊಚ್ಚಿ ಹಾವಳಿ ತಂದ ಮಳೆಗೂ,ಉತ್ತರ ಕರ್ನಾಟಕದಲ್ಲಿ ಅಬ್ಬರಿಸಿ ಹಾಳುಗೆಡವಿದ ಮಳೆಗೂ, ಸರೋಜಮ್ಮನ ಮನೆಯ ಹಾಸಿಗೆ ಅಕ್ಕಿ ನೆನೆಸಿ ಉಣ್ಣಲು ಉಡಲು ಮಲಗಲು ಇಲ್ಲದಂತೆ ಬದುಕನ್ನು ಚೆಲ್ಲಾಪಿಲ್ಲಿಯಾಗಿಸಿದ ಮಳೆಗೂ…ಯಾವ ಭಾವ ಬೆಸೆಯಬಹುದೆಂದು ತಿಳಿಯದೆ ಶೂನ್ಯಮನಸ್ಕಳಾಗಿ ಕೊರಗುತ್ತಾ ಕುಳಿತೆ. ಮತ್ತೆ ಮತ್ತೆ ಹುಚ್ಚು ಮಳೆ ಹೊಯ್ದು ಬದುಕು ಮೂರಾಬಟ್ಟೆಯಾಗದಿರಲಿ.ಬಡಜನರ ಬದುಕು ಕೊಚ್ಚಿ ಹೋಗದಿರಲಿ ದೇವರೆ ಎಂದು ಮೊರೆಯಿಟ್ಟೆ .

ಇಲ್ಲಿಗೆ ಇಪ್ಪತ್ತೆರಡು ವರ್ಷಗಳ ಹಿಂದೆ ನನ್ನ ಗೆಳತಿಯರು ಒಂದಿಬ್ಬರು ಪ್ರೀತಿಯ ಮಳೆಯಲ್ಲಿ ತೊಪ್ಪೆಯಾದರಲ್ಲ.ಅಪ್ಪ ಅಮ್ಮನ ವಿರೋಧವಿದ್ದರೂ ತಾವು ಒಪ್ಪಿದವನೊಡನೆ ಹೆಜ್ಜೆ ಹಾಕಿದರಲ್ಲ.ಸುತ್ತಲಿನ ಸಮಾಜಕ್ಕೆ ಸೊಪ್ಪುಹಾಕದೆ,ತಪ್ಪನ್ನೇ ತಬ್ಬಿ ನಡೆದರಲ್ಲ.ಆಗಿನ್ನೂ ಈ “ಮುಂಗಾರು ಮಳೆ” ಯ ಪ್ರಭಾವ ಇಷ್ಟು ದಟ್ಟವಾಗಿ ಇರಲಿಲ್ಲ.” ಚಳಿ ಚಳಿ ತಾಳೆನು” ಹಾಡಿಗೆ ನಮ್ಮಂಥ ಸಾವಿರಾರು ಯುವಜನರು ಮಾರುಹೋಗಿದ್ದ ಕಾಲವದು.ಪ್ರೀತಿಯ ಬಲೆಯಲ್ಲಿ ಬಿದ್ದರೂ ಬಲಿಷ್ಠ ಪರಿಸರವನ್ನು ಎದುರಿಸಲಾಗದೆ ಎದೆಯೊಳಗೆ ಮುಚ್ಚಿಟ್ಟು ,ದಿಂಬಿನಲ್ಲಿ ಮುಖವಿಟ್ಟು ಕೋಣೆಯೊಳಗೆ ಬಿಕ್ಕಳಿಸುತ್ತಿದ್ದ ದಿನಗಳು ನೆನಪಾಗ ಹತ್ತಿವೆ.ಬಿಟ್ಟೂ ಬಿಡದಂತೆ ಟಪಟಪನೆ ಸುರಿವ ಮಳೆ ಹನಿಗಳ ನಿನಾದ ನೆನಪ ಸಾಲುಗಳಿಗೆ ಶ್ರುತಿ ಹಿಡಿದಿದೆ.ಮಾಗಿದ ಮನವನ್ನು ನೆಲದಂತೆ ಮೆದುವಾಗಿಸಿದೆ.ಹೊರಗೆ ಕಾಲಿಟ್ಟರೆ ಜಿಡಿಮಳೆ ಬೇಸರ ತರುತ್ತದೆ.ಹಳೆಯ ಪ್ರೇಮದ ಬೆಸುಗೆ ನೆನೆಯದಂತೆ ಮುಸುಕೆಳೆದಿದೆ.ಹೆದರಿ ಒಳಗೆ ಕೂರುವಂತಿಲ್ಲ.ಬದುಕನ್ನು ಕಟ್ಟಿಕೊಳ್ಳಬೇಕು.ರಾಶಿ ರಾಶಿ ಕೆಲಸಗಳು ಕಾಯುತ್ತಿವೆ.ಹೌದು ನನ್ನವರಿಗೀಗ ಧುಮ್ಮಿಕ್ಕುವ ಧಳಧಳನೆ ಸುರಿವ ಆರ್ಭಟ ಕಡಿಮೆಯಾಗಿದೆ.ಉತ್ತರೆ ಮಳೆಯಂತೆ ತತ್ತರಿಸುತ್ತಿದ್ದ ರೀತಿ ಸೌಮ್ಯವಾಗಿದೆ.ಮಕ್ಕಳಾದ ಮೇಲಂತೂ ಪ್ರೀತಿಯಲ್ಲಿ ಏನೋ ಕೊರತೆ ಕಾಡತೊಡಗಿದೆ.ಒರತೆ ಹಂಚಿಕೆಯಾಗಿದೆ.ಎಲ್ಲರಿಗೂ ಹೀಗೇನಾ?.ಸೊಲ್ಲು ಸೊಲ್ಲಿಗೂ ನನ್ನ ಹೆಸರನ್ನೇ ಜಪಿಸುತ್ತಾ ಸುತ್ತಲೇ ಸುಳಿಯುತ್ತಿದ್ದ ನಲ್ಲನಿಗೇನಾಗಿದೇ ?.ಒಲ್ಲೆನೆಂದರೂ ಬಿಡದೆ ಮೊಲ್ಲೆ ಮೊಗ್ಗುಗಳ ರಾಶಿ ಪೇರಿಸುತ್ತಿದ್ದ ಇನಿಯನೆಲ್ಲಿ ಕಳೆದು ಹೋದ?!.ಛೇ ಈ ಪ್ರೀತಿಯೊಂದು ಹುಚ್ಚು.ಬದುಕಿನ ವಸಂತಗಳು ಮುಗಿದು ಹೇಮಂತ ಬಂದರೂ ಮಳೆ ಮಾತ್ರ ನಿಲ್ಲುತಿಲ್ಲ .ಸವಿಜೇನಿನ ಇನಿದನಿಯಲಿ ಕೂಗುತಿದ್ದ ಕೋಗಿಲೆ ಗಾನ ನಿಲ್ಲಿಸಿಬಿಟ್ಟಿತೆ ?ಮಳೆ ತಂದ ಶೀತಲ ಮಾರುತಗಳಿಗೆ ಗಂಟಲು ಬಿಗಿಯಿತೆ?.ನೆನೆದ ಪುಕ್ಕಗಳಲಿ ಚಳಿ ಧಾಳಿಯಿಟ್ಟಿತೆ?. ಹೌದು ನಾವು ಈಗ ಮೊದಲಿನಂತಿಲ್ಲ.ಎಷ್ಟೊಂದು ಸುಧೀರ್ಘಕಾಲ ಸುಳಿವು ನೀಡದೇ ಸರಿದೇ ಹೋಯಿತಲ್ಲ.ವೈಶಾಖನಾಗಲೇ ಅಡಿಯಿಟ್ಟಿದ್ದಾನೆ.ಗಿಡಮರಗಳು ಬೋಳಾಗಿವೆ.ಬಿಸಿಯುಸಿರು ಬುಸುಗುಡುತ್ತಿದೆ.ಮತ್ತೆ ಮಳೆ ಬೇಕೆನಿಸುತ್ತಿದೆ…

Leave a Reply

Back To Top