ಕಾಡುವ ನೆನಪು

ನೆನಪು

ವೀಣಾ ನಿರಂಜನ್

ಭೂತದ ಹುತ್ತದಲ್ಲಿ ಅಡಗಿ ಕುಳಿತಿರುವ ನೆನಪುಗಳನ್ನು ಮೆಲುಕು ಹಾಕುತ್ತಾ ಮೊದಲ ಕವಿತೆಯ ರೋಮಾಂಚನವನ್ನು ಅನುಭವಿಸುತ್ತಿದ್ದೇನೆ. ನಾನು ಯಾವ ಗಳಿಗೆಯಲ್ಲಿ, ಯಾಕೆ ಕವಿತೆಯನ್ನು ಹಚ್ಚಿಕೊಂಡೆ ಎನ್ನುವುದೇ ಮೊದಲ ಕವಿತೆಯ ಹುಟ್ಟಿಗೂ ಕಾರಣವಾಯಿತೇನೊ. ನನ್ನಪ್ಪ ನನಗೊಂದು ಅಚ್ಚರಿಯಾಗಿದ್ದ. ಮೇಷ್ಟ್ರಾಗಿದ್ದ ಅಪ್ಪ ಯಾವುದೇ ವಿಷಯದ ಕುರಿತು ತುಂಬ ಸೊಗಸಾಗಿ, ವಿಸ್ತಾರವಾಗಿ, ಪ್ರಭುತ್ವದಿಂದ ಪಾಠ ಮಾಡುತ್ತಿದ್ದ. ಭಾಷಣ ಮಾಡುತ್ತಿದ್ದ. ಮನೆ ತುಂಬ ಪುಸ್ತಕಗಳು. ಅಪ್ಪನ ಭೇಟಿಗೆಂದು ಮನೆಗೆ ಬರುತ್ತಿದ್ದವರು ಕೂಡ ಅಂಥವರೇ. ಸದಾ ಸಾಹಿತ್ಯ, ಕಲೆಯ ಕುರಿತು ಚರ್ಚೆ, ಮಾತುಗಳು. ಚಿಕ್ಕವಳಾಗಿದ್ದ ನಾನು ಇದೆಲ್ಲವನ್ನೂ ವಿಸ್ಮಯದಿಂದ ನೋಡುತ್ತಿದ್ದೆ. ಆದರೆ ದುರದೃಷ್ಟವಶಾತ್ ಅಪ್ಪ ನಾನಿನ್ನೂ ಬದುಕನ್ನು ಬೆರಗಿನಿಂದ ನೋಡುತ್ತಿರುವಾಗಲೇ ಮರಳಿ ಬಾರದ ಲೋಕಕ್ಕೆ ತೆರಳಿ ಬಿಟ್ಟ. ಕಾಯಿಲೆಯಿಂದ ನರಳುತ್ತಿದ್ದ ಅಪ್ಪನ ಸಂಕಟ ಮತ್ತು ಸಾವು ಆಗಲೇ ನನ್ನನ್ನು ಅಕಾಲ ಮುಪ್ಪಿಗೆ ತಳ್ಳಿದಂತೆ ಯೋಚಿಸತೊಡಗಿದ್ದೆ. ಅಪ್ಪ ಇಲ್ಲದೆ ಸೃಷ್ಟಿಯಾದ  ನಿರ್ವಾತದಿಂದ, ಅನಾಥ ಪ್ರಜ್ಞೆಯಿಂದ ಬಿಡುಗಡೆ ಪಡೆಯುವುದಕ್ಕಾಗಿಯೇ ಎಂಬಂತೆ ಓದನ್ನು, ಬರವಣಿಗೆಯನ್ನು ವಿಪರೀತ ಹಚ್ಚಿಕೊಂಡು ಬಿಟ್ಟೆ.

    ಅಪ್ಪ…

    ಇಂದು ನೀವಿದ್ದಿದ್ದರೆ

    ಖಂಡಿತ ಹೀಗಾಗುತ್ತಿರಲಿಲ್ಲ

    ನಾವು ಭೂತದ ಕಡೆಗೆ

    ತಲೆ ತೂರಿಸುತ್ತಿರಲಿಲ್ಲ

    ಭವಿಷ್ಯಕ್ಕೆ ಹೆದರುತ್ತಿರಲಿಲ್ಲ

    ಪದೇ ಪದೇ ಮುಗ್ಗರಿಸಿ

    ಪಶ್ಚಾತ್ತಾಪ ಪಡುತ್ತಿರಲಿಲ್ಲ.

    ಅಂತ ಏನೇನೋ ಹಳಹಳಿಕೆಗಳೇ ಕವಿತೆಯಾಗಿ ಮೂಡಿ ಬರತೊಡಗಿದ್ದವು ಆಗ.

    ಕುವೆಂಪು ಅವರು ನಮ್ಮನ್ನಗಲಿದ ದಿನ ಹೀಗೇ ತೋಚಿದ್ದು ಗೀಚಿದ್ದೆ.

     ಮರೆಯಾಯಿತು

     ಮರೆಯಾಗಿ ಮಲೆನಾಡ ಕಾಡಿನ

     ಭವ್ಯ ರಮಣೀಯತೆಯಲ್ಲಿ

     ರುದ್ರ ಭಯಂಕರ ಮನೋಹರ

     ಶೂನ್ಯದಲ್ಲಿ ಸೇರಿಕೊಂಡಿತು

     ಮರೆಯಾಯಿತು ಕರುನಾಡ ಜ್ಯೋತಿ

     ಅಪ್ಪ ಲಂಕೇಶ್ ಪತ್ರಿಕೆಯ ಕಟ್ಟಾ ಅಭಿಮಾನಿ. ಮನೆಗೆ ತಪ್ಪದೆ ಪತ್ರಿಕೆ ಬರುತ್ತಿತ್ತು. ಅಪ್ಪನ ನಂತರವೂ ಪತ್ರಿಕೆ ಬರುವುದು ನಿಲ್ಲಲಿಲ್ಲ. ಆಗ ಪತ್ರಿಕೆಯಲ್ಲಿ ಪುಂಡಲೀಕ ಶೇಟ್ ಅವರ ಕಾಲಂ ಬರುತ್ತಿತ್ತು. ಅವರು ಉತ್ತರ ಕರ್ನಾಟಕದ ಅಪ್ಪಟ ಜವಾರಿ ಕನ್ನಡದಲ್ಲಿ ಅದನ್ನು ಬರೆಯುತ್ತಿದ್ದುದು ಎಲ್ಲರಿಗೂ ಗೊತ್ತಿದ್ದದ್ದೆ. ನಾನು ಡಿಗ್ರಿ ಓದುತ್ತಿದ್ದಾಗ ಅಕಸ್ಮಾತ್ ಒಂದು ಪುಂಡಲೀಕ ಶೇಟ್ ಅವರು ಅಪಘಾತದಲ್ಲಿ ಹೋಗಿ ಬಿಟ್ಟರು ಎನ್ನುವ ಸುದ್ದಿ ಬಂತು. ಅವರ ಅಭಿಮಾನಿಯಾಗಿದ್ದ ನಾನು ಮತ್ತೊಮ್ಮೆ ಸಾವಿನ ಕುರಿತು ಯೋಚಿಸಿದ್ದೆ. ಅವರ ಅಕಾಲಿಕ ಅಗಲಿಕೆಯ ಕುರಿತು ನಮ್ಮ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿಯೇ ಒಂದು ಕವಿತೆ ಬರೆದೆ ‘ಹ್ಯಾಂಗ ಮರಿಯೂದು’ ಅಂತ. ಆ ಕವಿತೆಯನ್ನು ಒಂದು ಕವಿಗೋಷ್ಠಿಯಲ್ಲಿ ಓದುವ ಅವಕಾಶ ಸಿಕ್ಕಿತು. ಅಳುಕುತ್ತ, ಹಿಂಜರಿಯುತ್ತ ಓದಿ ಬಂದಿದ್ದೆ. ಮೊದಲೇ ಸಂಕೋಚದ ಮುದ್ದೆ ನಾನು. ಓದಿ ಬಂದು ಮೂಲೆಯಲ್ಲಿ ಮುದ್ದೆಯಾಗಿ ಕುಳಿತೆ. ನಂತರ ಅಂದಿನ ಕವಿಗೋಷ್ಠಿಯ ಅಧ್ಯಕ್ಷರು ನನ್ನ ಕವಿತೆಯನ್ನೇ ಪ್ರಧಾನವಾಗಿ ಎತ್ತಿಕೊಂಡು ಭಾಷಣ ಪ್ರಾರಂಭಿಸಿದಾಗ ಪುಳಕದಿಂದ, ಹೆಮ್ಮೆಯಿಂದ ಬೀಗಿದ್ದೆ. ಮುಂದೆ ಆ ಕವಿತೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದಾಗ ಎಲ್ಲ ಕಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಬಂದು ನಾನು ನನಗೆ ತಿಳಿಯದೇ ಕವಿಯತ್ರಿಯ ಪಟ್ಟ ಧರಿಸಿ ಬಿಟ್ಟಿದ್ದೆ. ಆದರೆ ಆ ಕವಿತೆ ಈಗ ನನ್ನ ಬಳಿ ಇಲ್ಲ ಹಾಗೂ ಅದರ ಸಾಲುಗಳು ನೆನಪಿನಲ್ಲಿಲ್ಲ. ನನ್ನ ಬದುಕಿನ ಅಸ್ತವ್ಯಸ್ತ ಅಧ್ಯಾಯದಲ್ಲಿ ಎಲ್ಲೋ ಕಳೆದು ಹೋಗಿದೆ.

       ಹೀಗೆ ಏಕಾಏಕಿ ದೊರಕಿದ ಕವಿಯತ್ರಿ ಎಂಬ ಬಿರುದು ನನ್ನನ್ನು ಮತ್ತೆ ಮತ್ತೆ ಬರೆಯುವಂತೆ ಪ್ರೇರೇಪಿಸಿತು. ಆಕಾಶವಾಣಿ ಧಾರವಾಡ ಕೇಂದ್ರವು ಏರ್ಪಡಿಸಿದ್ದ ಕವನ ಸ್ಪರ್ಧೆಯಲ್ಲಿ ನನ್ನ ಮತ್ತೊಂದು ಕವಿತೆ ಪ್ರಥಮ ಸ್ಥಾನ ಪಡೆದಿತ್ತು. ಸ್ಪರ್ಧೆಯ ತೀರ್ಪುಗಾರರಾಗಿ ಬಂದಿದ್ದ ಹಿರಿಯ ಕವಿ ಚೆನ್ನವೀರ ಕಣವಿಯವರು ಕವಿತೆಯ ಕುರಿತು ಆಡಿದ ಮಾತುಗಳು ನನ್ನನ್ನು ಭಾವುಕಳನ್ನಾಗಿಸಿ ಬಿಟ್ಟಿದ್ದವು. ಆ ಕವಿತೆ

     ಇದೆಂಥ ಊರು!

     ಎಲ್ಲಿಯೋ ಉದಿಸಿ ಎಲ್ಲಿಯೋ ಬೆಳಗಿ

     ಮತ್ತೆಲ್ಲಿಯೋ ಮುಳುಗುವ

     ಸೂರ್ಯ ಕೂಡ

     ಇಲ್ಲಿಯವನೇ ಆಗಿ ಬಿಡುತ್ತಾನಲ್ಲ !

ಅಂತ ಶುರುವಾಗಿ

      ನನ್ನೂರು, ನನ್ನ ಮನೆ, ನನ್ನ ನಾಡು

      ಎಂದೆಲ್ಲ ಹತ್ತಿರವಾದಂತೆ

      ಹರವು ಪಡೆಯುತ್ತ ಬಿಚ್ಚಿ ಕೊಳ್ಳುತ್ತ

      ನಮ್ಮೂರು, ನಮ್ಮ ಮನೆ, ನಮ್ಮ ನಾಡು  

      ಎಂದೆಲ್ಲ ವಿಶಾಲವಾಗಿ ಬಿಡುತ್ತದಲ್ಲ!

      ಒಳಹೊಕ್ಕು ತಡಕಾಡಿದಾಗ

      ತನ್ನೆಲ್ಲವನ್ನೂ ತೆರೆಕೊಂಡು 

      ಈಟೀಟು ಇಡಿ ಇಡಿಯಾಗಿ

      ಬೆರೆತು ಕೊಂಡು ಮತ್ತೆ

      ಆಪ್ತವಾಗಿ ಬಿಡುತ್ತದಲ್ಲ !!     

                             

         ಹೀಗೆ ಕವಿತೆ ನಿಧಾನವಾಗಿ ನನ್ನನ್ನು ನನ್ನ ನೋವುಗಳಿಂದ, ಹಳಹಳಿಕೆಗಳಿಂದ ದೂರ ಮಾಡುತ್ತಾ, ಸಾಂತ್ವನ ಹೇಳುತ್ತ ನನ್ನ ಸುತ್ತ ಹೊಸದೊಂದು ಲೋಕವನ್ನು ನಿರ್ಮಾಣ ಮಾಡತೊಡಗಿತು. ಮುಂದೆ ಕವಿವಿ ಕನ್ನಡ ಅಧ್ಯಯನ ಪೀಠ, ಕ್ರೈಸ್ಟ್ ಕಾಲೇಜು ಸಂಘ, ಜೆ ಎಸ್ ಎಸ್ ಧಾರವಾಡ ಮುಂತಾದವರು ಏರ್ಪಡಿಸಿದ ಕವನ ಸ್ಪರ್ಧೆಗಳಲ್ಲಿ ಸತತವಾಗಿ ಬಹುಮಾನ ಪಡೆದೆ. ಆದರೆ ನಂತರದ ದಿನಗಳಲ್ಲಿ ವೈಯಕ್ತಿಕ ಬದುಕಿನಲ್ಲಿ ಘಟಿಸಿದ ಅನಿರೀಕ್ಷಿತ ಆಘಾತಗಳು, ಅದರಿಂದಾದ ಆರೋಗ್ಯದಲ್ಲಿನ ಏರುಪೇರುಗಳು, ಸಂಸಾರದ ಜವಾಬ್ದಾರಿ ಎಲ್ಲವೂ ಸೇರಿ ಒಂದು ಸುದೀರ್ಘ ಮೌನ… ಕಾವ್ಯ ಸಖಿಯಿಂದ ವಿಮುಖಳಾಗಿ ಬಿಟ್ಟೆ. ಇತ್ತೀಚೆಗೆ ಮತ್ತೆ ಕಾವ್ಯ ನನ್ನನ್ನು ತನ್ನೆಡೆಗೆ ಸೆಳೆಯುತ್ತಿದೆ.  ಈ ಸೆಳೆತವೇ ಒಂದೂ ಸಂಕಲನವಿಲ್ಲದ ನನ್ನನ್ನು ಕೂಡ ಮೊದಲ ಕವಿತೆಯ ಕುರಿತು ಬರೆಯುತವಂತೆ ಪ್ರೇರೆಪಿಸಿದ್ದು. ಎಲ್ಲ ಹಳವಂಡಗಳಿಂದ ನನ್ನ ಮುಕ್ತ ಗೊಳಿಸಿ ಕಾವ್ಯದ ಮೇಲಿನ ಮೋಹ ಮತ್ತೊಮ್ಮೆ ಬದುಕನ್ನು ಪ್ರೀತಿಸುವಂತೆ ಮಾಡಿದೆ.

**********************************

2 thoughts on “ಕಾಡುವ ನೆನಪು

Leave a Reply

Back To Top