ಕವಿತೆ
ಬಾಲಕೃಷ್ಣ ದೇವನಮನೆ
ಮುಗುಳು ನಗೆಯಲ್ಲಿ
ಹದಗೊಳಿಸಿದ
ಎದೆಯ ಹೊಲದಲ್ಲಿ
ಒಂದೊಂದೇ
ವಾರೆ ನೋಟದಲಿ
ನಾಟಿ ಮಾಡಿದ ಪೈರು
ತೊನೆದಾಡಿದ ಮಧುರ ಕ್ಷಣ..!
ಪ್ರೀತಿಯನ್ನು
ಮುಲಾಜಿಲ್ಲದ ಹಾಗೆ
ಅವಳು ಒದ್ದು-
ಹೋದ ಎದೆಯ ದಾರಿಯಲ್ಲಿ
ಮೂಡಿದ ನೋವಿನ ಹೆಜ್ಜೆಗಳು
ಯಾವ ಮುಲಾಮಿಗೂ
ಅಳಿಸಲಾಗದೇ ಸೋತರೂ
ಮತ್ತೆ ಮತ್ತೆ
ನೆನಪ ಲೇಪಿಸಿಕೊಂಡು
ಸುಖಿಸುವ ವ್ಯಸನಿ ನಾನು.
ಮನಸ್ಸುಗಳು ಉರಿಯುವ
ಈ ರಾತ್ರಿಯಲ್ಲಿ
ಬೀಸುವ ಗಾಳಿಯೂ
ಬೆಂಕಿ ನಾಲಿಗೆ ಸವರುವಾಗ
ಇಷ್ಟಿಷ್ಟೇ… ಇಷ್ಟಿಷ್ಟೇ…
ಜಾರಿದ ಗಳಿಗೆ
ಸುಟ್ಟ ನಿದಿರೆಯನ್ನೆಲ್ಲಾ
ಹಗಲಿಗೆ ಗುಡ್ಡೆ ಹಾಕಿದ
ಎಚ್ಚರದ ಬೂದಿಯಲ್ಲಿ
ರೆಪ್ಪೆ ಮುಚ್ಚದ ಇರುಳು
ಉದುರಿಸಿದ ಕಂಬನಿ
ಒದ್ದೆ ಮಾಡಿದ
ಎದೆಯ ರಂಗಸ್ಥಳದಲ್ಲಿ
ನಿನ್ನ ನೆನಪುಗಳ ಹೆಜ್ಜೆ ಹೂತು
ಚುಚ್ಚಿ ಚುಚ್ಚಿ ಕೊಲ್ಲುವ ಸಂತಾಪ…!!
ನೀನು
ಹುಕ್ಕುಂ ಕೊಟ್ಟ ಮೇಲೇ
ನಾನು
ನಿನ್ನೊಲವ ಗದ್ದೆಯಲಿ ಹೆಜ್ಜೆ ಊರಿದ್ದು
ಮತ್ಯಾಕೆ ಸುಳ್ಳು ಪ್ರಕರಣ
ನನ್ನ ಮೇಲೆ
ನಾನೇ ಅತಿಕ್ರಮಣ ಮಾಡಿದೆನೆಂದು?
******************************
ಕವಿತೆ ಚೆನ್ನಾಗಿದೆ
Thank you sir
ಒಲವ ನೋವಿನಲ್ಲೂ ಮಧುರ ಭಾವ
ಆಹಾ ಸುಂದರ ಯಾತನೆ ಅಮೋಘ ಕವನ
ಧನ್ಯವಾದ ಮೇಡಂ
ಸೂಪರ್ sir