ಹಾವು ತುಳಿದೇನೇ?

Kannada Newspapers Online| ಕನ್ನಡ ಪತ್ರಿಕೆಗಳು ...

ರಾಜ್ಯಮಟ್ಟದ ಪತ್ರಿಕೆಗಳ ಜಿಲ್ಲಾ ಆವೃತ್ತಿಯ ತುದಿಮೂಲೆಯಲ್ಲಿ ಮುದ್ರಿತವಾಗುವ ಒಂದು ಕಾಲಂ ನನ್ನನ್ನು ಸದಾ ಕಾಡುತ್ತದೆ. ಅದೆಂದರೆ `ಅಪರಾಧ ಸುದ್ದಿ’. ಕೆಲವು ಪತ್ರಿಕೆಗಳು ಈ ಶೀರ್ಷಿಕೆಯನ್ನು ಕೆಂಪಕ್ಷರಗಳಲ್ಲಿಟ್ಟು ಅದರ ಕೆಳಗೆ ವರದಿ ಪ್ರಕಟಿಸುತ್ತವೆ. ಈ ರಕ್ತವರ್ಣವು ಅಪಾಯ ಮತ್ತು ಸಾವನ್ನು ಸಂಕೇತಿಸಲಿ ಎಂಬುದು ಅವುಗಳ ಇರಾದೆಯಿರಬೇಕು. ಅಲ್ಲಿ ಎರಡು ಮಾದರಿಯ ಸುದ್ದಿಗಳಿರುತ್ತವೆ. ಮೊದಲನೆಯವು-ಬೈಕುಗಳ್ಳರ ಬಂಧನ, ಸರಗಳ್ಳತನ, ಮನೆಯ ದರೋಡೆ, ಭೀಕರಕೊಲೆ, ಪ್ರಿಯಕರನೊಂದಿಗೆ ವಿವಾಹಿತ ಸ್ತ್ರೀ ಪರಾರಿ, ಮಣ್ಣುಕುಸಿದು ಕೂಲಿಗಾರನ ಜೀವಂತ ಸಮಾಧಿ, ಜಾತ್ರೆಯಲ್ಲಿ ಗುಂಪು ಘರ್ಷಣೆ, ಬಣವೆ ದಹನ, ಟ್ರಿಪ್ಪರ್ ಡಿಕ್ಕಿಹೊಡೆದು ಕಾರು ನುಜ್ಜುಗುಜ್ಜು, ಎಮ್ಮೆ ಅಡ್ಡಬಂದು ಬೈಕ್ ಸವಾರನಿಗೆ ಪೆಟ್ಟು ಇತ್ಯಾದಿ. ಎರಡನೆಯವು-ಕುರಿಗಳಿಗೆ ಸಿಡಿಲು ಬಡಿದಿದ್ದು, ಹಾವು ಕಚ್ಚಿ ಸತ್ತಿದ್ದು, ರೈತನಿಗೆ ಕಾಡುಹಂದಿ ತಿವಿದಿದ್ದು, ದನಗಾಹಿಗಳ ಮೇಲೆ ಕರಡಿ ಹಲ್ಲೆ, ಭಕ್ತರ ಮೇಲೆ ಜೇನುದಾಳಿ, ನಾಯಿಯನ್ನು ಚಿರತೆ ತಿಂದಿದ್ದು ಮುಂತಾದವು.
ಮೊದಲನೆಯವು ಮಾನನಿರ್ಮಿತ ಅಪರಾಧಗಳಾದರೆ, ಎರಡನೆಯವು ನಿಸರ್ಗವೂ ಪಾಲುಗೊಂಡಿರುವ ದುರಂತಗಳು. ಪ್ರಶ್ನೆಯೆಂದರೆ ಎರಡನೆಯವು ನಿಜಕ್ಕೂ `ಅಪರಾಧ’ಗಳೇ? ಸಾವು ನೋವಿನ ಅಂಶವಿರುವುದರಿಂದಲೂ, ಪೋಲಿಸರು ಮಹಜರು ನಡೆಸುವುದರಿಂದಲೂ ಇವು `ಅಪರಾಧ’ದ ಸುದ್ದಿಗಳು ನಿಜ. ವಾಸ್ತವದಲ್ಲಿ ಇವು ಮನುಷ್ಯರು ಆಹ್ವಾನಿಸಿಕೊಂಡು ಅಥವಾ ಅವರ ಕೈಮೀರಿ ನಡೆದ ದುರಂತಗಳು ಕೂಡ. ಆದರಲ್ಲೂ ಹಾವುಕಚ್ಚುವುದು ಅಪರಾಧ ಎನ್ನುವವರಿಗೆ, ತನ್ನ ಪಾಡಿಗೆ ಹೋಗುತ್ತಿದ್ದ ಹಾವನ್ನು ಜನ ಚಚ್ಚುವುದು ಅಪರಾಧ ಎನಿಸುವುದಿಲ್ಲವೇಕೆ?


ರಾಜ್ಯ ಮಟ್ಟಕ್ಕೇರದೆ ಎರಡನೇ ಪುಟದ ಸ್ಥಳಿಯ ಸುದ್ದಿಗಳಾಗಿ ಪ್ರಕಟವಾಗುವ ಈ `ಸಣ್ಣ’ ವರದಿಗಳನ್ನು ಮುಂಜಾನೆಯ ಗಡಿಬಿಡಿಯಲ್ಲಿರುವ ವಾಚಕರು ನಿರ್ಲಕ್ಷಿಸಿ, ರಾಜ್ಯ-ರಾಷ್ಟ್ರದ ದೊಡ್ಡ ಸುದ್ದಿಗಳಿಗೆ ಹೋಗಲು ತವಕಿಸುತ್ತಾರೆ. ಹೀಗಾಗಿ ಇವು ನಿರ್ಲಕ್ಷಿತವಾಗಿಯೇ ಉಳಿದುಬಿಡುತ್ತವೆ. ಎಷ್ಟೊ ಸಲ ಇವು ಸ್ಥಳೀಯ ಸ್ಟಿಂಜರನ ಅಸ್ತಿತ್ವದ ಭಾಗವಾಗಿ ಪುಟತುಂಬುವ ಫಿಲ್ಲರುಗಳಾಗಿರುತ್ತವೆ. ಆದರಿವು ನಿರ್ಲಕ್ಷಿಸುವ ಸುದ್ದಿಗಳೇ? ಬಳ್ಳಾರಿ ಜಿಲ್ಲೆಯಲ್ಲೇ ನೂರಾರು ಜನ ಹಾವು ಕಡಿದು ಸಾಯುತ್ತಾರೆಂದ ಮೇಲೆ, ಕರ್ನಾಟಕದ ಲೆಕ್ಕ ಎಷ್ಟಿರಬಹುದು? ವರ್ಷಕ್ಕೆ ಭಾರತದಲ್ಲಿ ಹಾವುಕಚ್ಚಿ ಸಾಯುವವರ ಸಂಖ್ಯೆ 50 ಸಾವಿರವಂತೆ. `ಅಪರಾಧ’ ಸುದ್ದಿಯ ನಮೂನೆಯೊಂದನ್ನು ಇಲ್ಲಿ ಉಲ್ಲೇಖಿಸಬಹುದು:


“ಹಾವುಕಚ್ಚಿ ಇಬ್ಬರ ಸಾವು: ಬುಧವಾರ ರಾತ್ರಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವಕರು ಹಾವಿನ ಕಡಿತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಹೊಸಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನಾಗೇನಹಳ್ಳಿಯಲ್ಲಿ ಮಲಗಿದ್ದ ಮಿನಗಿನಾಗ (15) ಮತ್ತು ಶಿವಪ್ಪ (19) ಎಂಬುವರು ಸಾವನ್ನಪ್ಪಿದರು. ಮಿನಗಿನಾಗನಿಗೆ ಗುಡಿಸಲಿನಲ್ಲಿ ಇದ್ದಾಗ ಹಾವು ಕಚ್ಚಿದರೆ, ಶಿವಣ್ಣನಿಗೆ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚ್ಚಿತ್ತು. ಮಿನಗಿನಾಗ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದರೆ, ಶಿವಣ್ಣ ಸ್ಥಳದಲ್ಲಿಯೇ ಸಾವನಪ್ಪಿದ ಎಂದು ಪೋಲಿಸ್ ಮೂಲಗಳು ತಿಳಿಸಿವೆ.’’
ಗಾಬರಿ ಹುಟ್ಟಿಸುವುದು ಹಾವು ಕಚ್ಚಿದ್ದಲ್ಲ; ಇದು ಮಾಮೂಲಿ ಎಂಬಂತಿರುವ ಬರೆಹದ ನಿರ್ಲಿಪ್ತತೆ. ದಿನಾ ಕೊಲ್ಲುವ ಮತ್ತು ಸಾಯುವ ಈ ಸುದ್ದಿಯನ್ನು ಬರೆಬರೆದು ಬಹುಶಃ ಸ್ಥಳೀಯ ಪತ್ರಕರ್ತರೂ ದಣಿದಿರಬೇಕು. ಯಾಕೆಂದರೆ, ಈ ಹಾವುಗಳು ಸ್ಕೂಲಿಗೆ ಹೋಗಿದ್ದ ಮಗುವಿಗೆ, ಮನೆಯಲ್ಲಿ ಮಲಗಿದ್ದವರಿಗೆ, ಕೆಲವೊಮ್ಮೆ ಒಂದೇ ಮನೆಯಲ್ಲಿದ್ದ ಐದಾರು ಜನರಿಗೆ, ಕೋಳಿ ಇಟ್ಟಿರುವ ಮೊಟ್ಟೆಯನ್ನು ತೆಗೆಯಲು ಬುಟ್ಟಿಯೊಳಗೆ ಕೈಹಾಕಿದ ಮುದುಕಿಗೆ, ಹುಲ್ಲುಕೊಯ್ಯಲು ಹೋದ ತರುಣನಿಗೆ, ರಾತ್ರಿ ಗದ್ದೆಗೆ ನೀರು ಹಾಯಿಸಲು ಹೋದವರಿಗೆ, ಬೆಳೆ ಕೊಯ್ಯುವವರಿಗೆ, ಕೊಯ್ದು ಹಾಕಿದ ಬೆಳೆಯನ್ನು ಸಿವುಡುಗಟ್ಟಲೆಂದು ಬಾಚಿಕೊಂಡವರಿಗೆ ಕಚ್ಚುತ್ತವೆ. ಕಬ್ಬಿನಗದ್ದೆಯನ್ನು ಸರಸಕ್ಕೆ ಆರಿಸಿಕೊಂಡ ಪ್ರೇಮಿಗಳನ್ನೂ ಬಿಟ್ಟಿಲ್ಲ. ಒಮ್ಮೆ ತಮ್ಮ ಮಗಳನ್ನು ವಿಶ್ವವಿದ್ಯಾಲಯಕ್ಕೆ ಸೇರಿಸಲು ಬಂದ ಒಬ್ಬರು ಬಗಲುಕೋಲು ಮೆಟ್ಟಿಕೊಂಡು ಕಷ್ಟಪಟ್ಟು ಕ್ಯಾಂಪಸ್ಸಿನಲ್ಲಿ ಓಡಾಡುತ್ತಿದ್ದರು. ಅವರ ಕಾಲನ್ನು ಕಂಡು ಏನಾಯಿತು ಎಂದು ಕೇಳಿದೆ. ಅವರು ಲೈನ್‍ಮನ್. ಕಂಬಹತ್ತುವಾಗ ಬುಡದಲ್ಲಿದ್ದ ಹಾವು ಕಚ್ಚಿ ಮೊಣಕಾಲತನಕ ಕಾಲನ್ನೇ ಕತ್ತರಿಸಲಾಗಿದೆ. ಹಾವು ಕಚ್ಚಲು ಹೊಲವೇ ಬೇಕಾಗಿಲ್ಲ.
ಮನುಷ್ಯರನ್ನು ಸಾಯುವಂತೆ ಕಚ್ಚುವುದು ಒಂದೊ ನಾಗರ ಇಲ್ಲವೇ ಕನ್ನಡಿ(ವೈಪರ್) ಹಾವು. ಬಳ್ಳಾರಿ ಜಿಲ್ಲೆಯ ಸ್ಥಳೀಯ ಸುದ್ದಿಗಳ ಪ್ರಕಾರ, ಹೆಚ್ಚು ಜನರು ಹಾವಿನಿಂದ ಸತ್ತಿರುವುದು ಹೊಲಗೆಲಸದಲ್ಲಿ. ಅದೂ ಅಪರಾತ್ರಿಯಲ್ಲಿ. ಮೇಲ್ಕಾಣಿಸಿದ ಸುದ್ದಿಯಲ್ಲಿರುವವರ ಹೆಸರಲ್ಲೇ ಸರ್ಪದ ಹೆಸರೂ, ಸರ್ಪವನ್ನು ಒಡವೆಯಂತೆ ಧರಿಸುವ ಶಿವನ ಹೆಸರೂ ಇರುವುದು ಒಂದು ವ್ಯಂಗ್ಯ.
ಈ ಸರ್ಪಸಾವುಗಳಿಗೆ ನಿಜವಾದ ಕಾರಣವೇನು? ಹಾವುಗಳ ಜಾಗದಲ್ಲಿ ಜನ ವಾಸವಾಗಿದ್ದಾರೆಯೊ ಅಥವಾ ಹಾವೇ ಜನರ ಜಾಗಕ್ಕೆ ಹರಿದು ಬರುತ್ತಿವೆಯೊ? ಹಾವಿನಿಂದ ಕಚ್ಚಿಸಿಕೊಳ್ಳದಂತೆ ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲವೆ? ಕಚ್ಚಿದರೆ ಕೂಡಲೇ ಅವರನ್ನು ಬದುಕಿ ಉಳಿಸುವ ಆರೋಗ್ಯದ ಸೌಲಭ್ಯ ಎಷ್ಟರಮಟ್ಟಿಗಿದೆ? ಮೊದಲರಡು ಪ್ರಶ್ನೆಗಳು ಪರಿಸರಕ್ಕೆ ಸಂಬಂಧಪಟ್ಟವು. ಮೂರನೆಯದು ಕೆಲಸಗಾರರ ಎಚ್ಚರಗೇಡಿತನದ್ದು; ಕೊನೆಯದು ವ್ಯವಸ್ಥೆಗೆ ಸಂಬಂಧಿಸಿದ್ದು ಮತ್ತು ಗಂಭೀರವಾದದ್ದು. ಯಾಕೆಂದರೆ, ಹೆಚ್ಚಿನ ಪ್ರಸಂಗಗಳಲ್ಲಿ ಹಾವು ಕಡಿತಕ್ಕೆ ಒಳಗಾದವರು ಆಸ್ಪತ್ರೆ ತಲುಪುವ ಮುನ್ನ ದಾರಿಯಲ್ಲೇ ಕೊನೆಯುಸಿರು ಎಳೆಯುತ್ತಾರೆ; ಇಲ್ಲವೇ ಆಸ್ಪತ್ರೆಗೆ ಹೋದಾಗ ತುರ್ತುಚಿಕಿತ್ಸೆ ಸಿಗದೆ ಸಾಯುತ್ತಾರೆ. ಇಲ್ಲಿ ಅಪರಾಧ ಕೇವಲ ಹಾವಿನದಲ್ಲ; ಕಚ್ಚಿಸಿಕೊಂಡ ಕೆಲಸಗಾರರದ್ದಲ್ಲ; ಅವರನ್ನು ಉಳಿಸಿಕೊಳ್ಳಲಾಗದ ವ್ಯವಸ್ಥೆಯದು ಸಹ. ಸಾವು ವಯೋ ಸಹಜವಾಗಿ ಬಂದರೆ ದೋಷ ಕೊಡಬೇಕಿಲ್ಲ. ಅಸಹಜವಾಗಿ ಅಕಸ್ಮಾತ್ ಬಂದರೆ, ಅದನ್ನು ತಡೆಯುವ ಸಿದ್ಧತೆ ನಾಗರಿಕ ಸಮಾಜದಲ್ಲಿ ಇರಬೇಕು. ಹಾಗಿಲ್ಲದೆ ಇರುವುದೇ ಸಾಮಾಜಿಕ ಅಪರಾಧ.
ಪಶ್ಚಿಮದ ದೇಶಗಳಲ್ಲೂ ಹಾವು ಕಚ್ಚುತ್ತವೆ. ಆದರೆ ಅಲ್ಲಿ ಸಾಯುವವರ ಸಂಖ್ಯೆ ಕಡಿಮೆ. ಕಚ್ಚಿದರೂ ಉಳಿಸಿಕೊಳ್ಳುವ ವ್ಯವಸ್ಥೆ ಅಲ್ಲಿ ಚೆನ್ನಾಗಿದ್ದಂತಿದೆ. ಭೂಕಂಪ, ನೆರೆ, ಸುನಾಮಿ, ಚಂಡಮಾರುತ ಬಂದಾಗ ಅಲ್ಲೂ ಸಂಭವಿಸುವ ಸಾವುನೋವುಗಳ ಪ್ರಮಾಣ ಕಡಿಮೆ. 90ರ ದಶಕದಲ್ಲಿ ಲಾತೂರಿನ ಭೂಕಂಪವಾದಾಗ ಹೆಚ್ಚು ಜನ ಸತ್ತಿದ್ದು ಮನೆಗಳ ಕಚ್ಚಾ ರಚನೆಯಿಂದ. ಬಂಗಾಳ ಕೊಲ್ಲಿಯಲ್ಲಿ ಏಳುವ ಚಂಡಮಾರುತಗಳು ಪೂರ್ವ ಕರಾವಳಿಯಲ್ಲಿ ತಾಂಡವನೃತ್ಯ ಮಾಡಿದಾಗಲೂ ಇದೇ ಕತೆ. ನಾಗರಿಕ ಸಮಾಜವಾಗಿ ನಾವು ಕಟ್ಟಿಕೊಂಡಿರುವ ವ್ಯವಸ್ಥಿತವಲ್ಲದ ವ್ಯವಸ್ಥೆಯಿಂದ ಸಕಾಲಿಕ ನೆರವಿಲ್ಲದೆ ಹೆಚ್ಚು ಜನ ಮರಣಿಸುತ್ತಾರೆ. ಕಣಿವೆಗೆ ಬಿದ್ದ ಹಸುವಿರಲಿ, ನೆರೆಯಲ್ಲಿ ಕೊಚ್ಚಿಹೋಗುವ ವ್ಯಕ್ತಿಯಿರಲಿ, ಮನೆಗೆ ಬೆಂಕಿಬಿದ್ದಾಗ ಸಿಕ್ಕಿಕೊಂಡ ಮಗುವಿರಲಿ, ಯೂರೋಪು ಜಪಾನು ಅಮೆರಿಕಗಳ ವ್ಯವಸ್ಥೆ ಪ್ರಾಣವುಳಿಸಲು ಎಷ್ಟು ಮುತುವರ್ಜಿ ವಹಿಸುತ್ತದೆ ಎಂಬುದನ್ನು ಟಿವಿ ನೋಡುವವರೆಲ್ಲ ಬಲ್ಲರು. ಇದು ಅಲ್ಲಿನ ನಾಗರಿಕ ವ್ಯವಸ್ಥೆ ತನ್ನ ಜನರಿಗೆ ಬದ್ಧವಾಗಿರುವುದರ ಸಂಕೇತ ಮಾತ್ರವಲ್ಲ, ಎಚ್ಚೆತ್ತ ನಾಗರಿಕ ಪ್ರಜ್ಞೆಯುಳ್ಳ ಸಮಾಜ ಆಳುವ ವ್ಯವಸ್ಥೆಗಳನ್ನು ದಕ್ಷವಾಗಿ ಇಟ್ಟುಕೊಂಡಿರುವುದರ ಸಂಕೇತ ಕೂಡ.
ನಾವೊಂದಿಷ್ಟು ಗೆಳೆಯರು, ಉತ್ತರ ಕರ್ನಾಟಕದ ಪ್ರವಾಹದಿಂದ ಶೆಡ್ಡುಗಳಲ್ಲಿ ಬದುಕುತ್ತಿದ್ದವರ ಜತೆ ವಾರಕಾಲ ಇದ್ದೆವು. ಹೆಂಚಿನಂತೆ ಕಾದ ಶೆಡ್ಡುಗಳು. ಜತೆಗೆ ಹಾವು ಹುಪ್ಪಡಿ ಕಾಟ. ವ್ಯವಸ್ಥೆಯ ಬೇಹೊಣೆಯಿಂದ ಕಷ್ಟಪಡುವ ಜನರ ಲೆಕ್ಕ ಬರೆಯಲು ತಕ್ಕ ಕಿರ್ದಿ ಪುಸ್ತಕವೇ ಇಲ್ಲವೆನಿಸಿತು. ಇದೆಲ್ಲ `ಅಪರಾಧ’ದ ವರ್ತುಲದಲ್ಲಿ ಬರುವುದೇ ಇಲ್ಲ. ಕೊಲೆಯೆಂದೂ ಅನಿಸುವುದಿಲ್ಲ. ಭೂಪಾಲದಲ್ಲಿ ಜನರನ್ನು ಕೊಂದಿದ್ದು ವಿಷಾನಿಲವೊ ಜನರನ್ನು ವಿಪತ್ತುಗಳಿಂದ ರಕ್ಷಿಸುವ ಹೊಣೆಹೊರದ ವ್ಯವಸ್ಥೆಯೊ? ನಾಲ್ಕು ದಶಕಗಳಾಗುತ್ತಿದ್ದರೂ ಅಲ್ಲಿನ ಜನಕ್ಕೆ ತಕ್ಕ ಪರಿಹಾರ ಸಿಕ್ಕಿಲ್ಲ. ಎಂಡೋಸಲ್ಫಾನ್ ಪೀಡಿತರು ತಮ್ಮದಲ್ಲದ ತಪ್ಪಿಗೆ ನರಳುತ್ತಲಿದ್ದಾರೆ. ಇವರಿಗೂ ಬೆಂಕಿಬೀಳುವ ನೊರೆಕಾರುವ ಬೆಂಗಳೂರಿನಂಚಿನ ಕೆರೆಗಳಿಗೂ ವ್ಯತ್ಯಾಸವಿಲ್ಲ. ಡ್ಯಾಮಿನ ಕೆಳಗಣ `ಭತ್ತದ ಕಣಜ’ ಎನ್ನಲಾಗುವ ಊರುಗಳಲ್ಲಿ ಸುರಿಯಲಾಗುತ್ತಿರುವ ಕ್ರಿಮಿನಾಶಕಗಳು ಎಷ್ಟು ಜೀವಿಗಳ ಆರೋಗ್ಯವನ್ನು ಹೇಗೆ ಕೆಡಿಸಿವೆಯೊ ಯಾರು ಬಲ್ಲರು? ನಂಜನ್ನು ಎಗ್ಗಿಲ್ಲದೆ ಚೆಲ್ಲಾಡಿ ಸಮೂಹಗಳ ಪ್ರಾಣಕ್ಕೆ ಕುತ್ತಿಡುವ ಕೆಲಸಗಳಿಗಿಂತ ಕಚ್ಚುವ ಹಾವುಗಳು ಕಡಿಮೆ ಅಪಾಯಕಾರಿ.

ಶಿಶುನಾಳರ `ಹಾವು ತುಳಿದೇನೇ ಮಾನಿನಿ’ ತತ್ವಪದದಲ್ಲಿ ಹಾವು ಆನುಭಾವಿಕ ಅರ್ಥದಲ್ಲಿರುವ ರೂಪಕ. ಸಿದ್ಧಲಿಂಗಯ್ಯನವರ `ಹಾವುಗಳೇ ಕಚ್ಚಿ’ ಕವನದಲ್ಲಿ ಜನರ ಎಚ್ಚೆತ್ತಪ್ರಜ್ಞೆಯ ಸಂಕೇತ. ಹಾವನ್ನು ದಾಸಿಮಯ್ಯ ಹಸಿವಿಗೆ ಹೋಲಿಸಿದರೆ ಅಕ್ಕ ಕಾಮಕ್ಕೆ ಪ್ರತಿಮಿಸುವಳು. ಹಾವನ್ನು ಪ್ರತಿಮೆ ರೂಪಕವಾಗಿಸಿರುವ ಈ ಯಾರೂ ಅದನ್ನು ಕೇವಲ ಹಗೆಯನ್ನಾಗಿ ಪರಿಭಾವಿಸಿಲ್ಲ. ಹಾವನ್ನು ಆರಾಧಿಸುವ ಮತ್ತು ಚಚ್ಚಿಹಾಕುವ ಮನೋಭಾವಕ್ಕಿಂತ ಭಿನ್ನವಾದ ದೃಷ್ಟಿಕೋನವಿದು. ಕಚ್ಚಿಸಿಕೊಳ್ಳದಂತೆ ಒಡನಾಡುವುದು ಸಾಧ್ಯವಾಗುವುದಾದರೆ, ಹಾವಿನ ಸಂಗ ಲೇಸು ಕಾಣಯ್ಯ ಎಂದು ಹೇಳುವಲ್ಲಿ, ದಿಟ್ಟತನ ಮಾತ್ರವಲ್ಲ ವೈರುಧ್ಯಗಳನ್ನು ಸಂಭಾಳಿಸುವ ವಿವೇಕವೂ ಇದೆ.
ಕೊಂದಹರು ಎಂಬುದನರಿಯದ ಹಾವು ತುಳಿದವರನ್ನಷ್ಟೆ ಕಚ್ಚುತ್ತದೆ. ಅದರ ನೆಲೆಯನ್ನು ಆಕ್ರಮಿಸಿಕೊಂಡು, ಉಣಿಸಿನ ಸರಪಣಿಯನ್ನು ಭಗ್ನಪಡಿಸಿರುವ ನಾವು, ದಿಟದ ನಾಗರ ಕಂಡೊಡನೆ ಕೊಲ್ಲುತ್ತಿದ್ದೇವೆ. ಅಧಿಕಾರಸ್ಥರು ರೈತರ ಹೊಲಗದ್ದೆಯನ್ನು ನೀರು ಬೆಟ್ಟವನ್ನು ಕಿತ್ತು ಉದ್ಯಮಿಗಳಿಗೆ ಮಾರುವುದು `ಅಪರಾಧ ಸುದ್ದಿ’ ಆಗುವುದೇ ಇಲ್ಲ. ಈಗ ಜನರನ್ನು ಕೊಲ್ಲಲು ಹಾವುಗಳೇ ಬೇಕಿಲ್ಲ. ಡೆಂಗಿ ಸೊಳ್ಳೆಗಳೇ ಸಾಕು. ಬಳ್ಳಾರಿ ಜಿಲ್ಲೆಯಲ್ಲಿ ಡೆಂಗಿಜ್ವರದಿಂದ ಬಹಳ ಜನ ಜೀವ ಕಳೆದುಕೊಂಡಿದ್ದಾರೆ. ನಾಡಿನಲ್ಲಿ ಜನರ ಜೀವದಷ್ಟು ಅಗ್ಗವಾದ ವಸ್ತು ಬೇರೆಯಿಲ್ಲ. ಇಂತಹ ವ್ಯವಸ್ಥೆಯಲ್ಲಿ, ಆತ್ಮರಕ್ಷಣೆಗಾಗಿ ಕಚ್ಚುವ ಹಾವುಗಳು ಅಪರಾಧಿಗಳಾಗಿ ಬಿಂಬಿತವಾಗುವುದು ಸಹಜವೇ ಆಗಿದೆ.

******************************************************

ಲೇಖಕರ ಬಗ್ಗೆ:

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

4 thoughts on “ಹಾವು ತುಳಿದೇನೇ?

  1. ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ಮಾನವೀಯ ತುಡಿತದ ಲೇಖನ ತರೀಕೆರೆ ಸರ್ ಗೆ ವಂದನೆಗಳು

  2. ಒಂದು ಸಣ್ಣ ಪ್ರಸಂಗ ಎಂದು ನಿರ್ಲಕ್ಷಿಸಿಬಿಡುವ ಸುದ್ದಿಗಳನ್ನು ಅತ್ಯಂತ ಕಕ್ಕುಲಾತಿಯಲ್ಲಿ ವಿಶ್ಲೇಷಿಸಿರುವ ಈ ಲೇಖನ ಸರ್ ಅವರ ಆರ್ದ್ರ ಅಂತಃಕರುಣೆಯನ್ನು ಪರಿಚಯಿಸುತ್ತದೆ. ದಿನಾ ಸಾಯೋರಿಗೆ ಅಳೋರು ಯಾರು ಎಂಬಂತಿದ್ದೀವಿ ನಾವೀಗ.

  3. ನಾಡಿನಲ್ಲಿ ಜನರ ಜೀವದಷ್ಟು ಅಗ್ಗವಾದ ವಸ್ತು ಬೇರೊಂದಿಲ್ಲ…ಈ‌ ಮಾತು ಸಾಕು , ಲೇಖಕರ ಅಂತಃಕರಣ‌ ಗುರುತಿಸಲು… ಪತ್ರಿಕೆಗಳಲ್ಲಿ ಸಹ ಜನ ಸಾಮಾನ್ಯನ ಸಾವು ಹೇಗೆ ನಿರ್ಲಕ್ಷಿಸಲ್ಪಡುತ್ತದೆ ಎಂಬುದಕ್ಕೆ ಈ ಬರಹ ಸಾಕ್ಷಿ.ಲೇಖನದ ಧ್ವನಿ ನಾವು ಗ್ರಹಿಸಬೇಕಷ್ಟೇ…

  4. ನಮ್ಮ ವ್ಯವಸ್ಥೆ ರಿಪೇರಿ ಆಗಲಾರದಷ್ಟು ಹಾಳಾಗಿದೆ..ಭ್ರಷ್ಟಾಚಾರ ದೇಶದ ನರಮಂಡಲ ವ್ಯವಸ್ಥೆ ಯಾಗಿಬಿಟ್ಟಿದೆ…. ನಲುಗು ತ್ತಿರುವುದು ಮಾತ್ರ ಜನಸಾಮಾನ್ಯರ ಬದುಕು..

Leave a Reply

Back To Top