ಕಿಟಕಿ -ಗೋಡೆ
ವಾರದ ಕವಿತೆ(ಪ್ರತಿ ಶುಕ್ರವಾರ)
ವಸುಂಧರಾ ಕದಲೂರು
ನಾನೊಂದು ಕಿಟಕಿ; ಮುಚ್ಚಿಯೇ
ಇದ್ದೇನೆ ಶತಮಾನಗಳಿಂದ
ಗತಕಾಲದ ಗಾಳಿ ಒಳಗೆ
ಸುಳಿದಾಡುತ್ತಾ ಕತ್ತಲ ಘಮಲಿನ
ಅಮಲಲಿ ಉರುಳಾಡುತ್ತಾ
ಎದ್ದೆದ್ದು ಕುಣಿಯುವ
ಆತ್ಮಗಳೂ ಅಸ್ಥಿಪಂಜರಗಳೂ
ನನ್ನೊಳಗಿವೆ.
ವಿಶಾಲ ಬಿಳಲುಗಳ ಆಲದ
ಮರವೊಂದು ಟಿಸಿಲೊಡೆದು
ತೊಗಟೆ ಕಳಚಿಕೊಳ್ಳದೆ ಬೇರೂರಿ
ಮುಚ್ಚಿದ ಕಿಟಕಿಯಾಚೆ
ಸ್ವಚ್ಛ ಗಾಳಿಗೆ ಚಿಗುರು ಚಿಗಿಸಿ
ಹಕ್ಕಿ ಗೂಡಿಗೆ ಟೊಂಗೆ ಚಾಚಿದೆ.
ಒಂದೊಂದು ಟೊಂಗೆಗೂ
ಗೂಡು. ಗೂಡೊಳಗೆ ಕಾವು
ಕೂತ ಹಸಿ ಬಾಣಂತಿ ಹಕ್ಕಿ
ಕಿಟಕಿ ಕುಟುಕಿದ ಸದ್ದು;
ಚಾಚಿದ ಟೊಂಗೆಯೋ
ಚೈತನ್ಯದ ಹಕ್ಕಿಯೋ ತಿಳಿಯದು.
ಪ್ರತೀ ಶಬ್ದ ಮಾಡುವ ಹಕ್ಕಿಗೂ
ಅದೇನು ರಾಗವೋ
ಸುಮ್ಮಗೆ ಬೀಸುವ ಗಾಳಿಗೆ
ತಲೆದೂಗುವ ಟೊಂಗೆಗಳಿಗೂ
ಅದೇನು ಹೊಸ ರಂಗೋ
ನಾನು ಮಾತ್ರ ತೆರೆಯುವುದಿಲ್ಲ.
ಶತಮಾನಗಳಿಂದ ಮುಚ್ಚಿದ
ಕಿಟಕಿ. ನನ್ನಾಚೆ ನನಗೆ ಅರಿವಾಗದೇ
ಒಳಗಿನ ಗವ್ವುಗತ್ತಲೆ
ಕಮಟು ವಾಸನೆ ಕತ್ತು ಹಿಸುಕಿ ಕುತ್ತು
ತರುತ್ತಿವೆ. ಕಾಲದ ಅಲೆ ಉರುಳಿ
ತನ್ನೊಡನೆ ತಂದಿಟ್ಟ ಮರಳುತನಕ್ಕೆ
ಈಗ ಕಿವೂಡೂ ಕುರುಡೂ
ಸಾತ್ ಕೊಡುತ್ತಾ ಕೂಡುತ್ತಿವೆ
ಜತನ ಮಾಡುತ್ತಾ ಗತವನ್ನು.
ನನ್ನ ಚೌಕಟ್ಟಿನಾಚೆ ನಿಂತ
ಗಟ್ಟಿ ಗೋಡೆ ಆಗಾಗ್ಗೆ ಅಪಾರ
ವೇದನೆಯಲಿ ಮುಖ
ಕಿವುಚಿ ನರಳಿ ನುಡಿಯುತ್ತದೆ
ಯಾರೋ ಈಗಷ್ಟೆ ಕೆತ್ತಿ
ಹೋದರೆಂದು ಮೊಳೆ ಜಡಿದು
ಭಾರಗಳನು ತೂಗುಹಾಕಿ
ಭಾವನೆಗಳನು ಹೇರಿದರೆಂದು
ಆಕ್ರಮಿಸಿಕೊಂಡ ಆಕ್ರಂದನದ
ದನಿಯಲಿ..
ನೆಟ್ಟಗೆ ನಿಂತ ಪಾಪದ ಗಟ್ಟಿ
ಗೋಡೆ ; ಹೊಸ ಬಣ್ಣ ಬಳಿದರೂ
ಬದಲಾಗದ ಹಳೆಯ ಹಣೆಬರಹ.
ನವೀನತೆಗೆ ಒಡೆಯಬೇಕು, ಕುಟ್ಚಿ
ಕೆಡವಿ ಪುಡಿಗಟ್ಟಬೇಕು. ಅಸ್ತಿತ್ವದ
ನಿರಾಕರಣೆ ಆಗಲೇಬೇಕು.
ನನಗಾದರೂ ಬಾಗಿಲುಗಳಿವೆ
ತೆರೆಯಬಹುದು
ಒಮ್ಮೆ ಜಗ್ಗನೆ ಹೊಳೆವ ಮಿಂಚು
ಪಕ್ಕನೆ ಹಾರುವ ಹಕ್ಕಿ ಸಾಲನು
ನಾನಾದರೂ ಕಾಣಬಹುದು.
ನಿಧಾನದ ಆಲಾಪಕ್ಕೆ ತೆರೆದು
ತಲೆತೂಗಬಹುದು.
ಯಾರಾದರು ಒಮ್ಮೆ
ನನ್ನೊಳಗೆ ಹಣಕಿ ಈ ಓಲಾಡುವ
ಆತ್ಮಗಳನೂ ಕಿಲುಬುಗಟ್ಟಿದ
ಅಸ್ಥಿಪಂಜರಗಳನೂ ಒಮ್ಮೆ ಜಾಡಿಸಿ
ಓಡಿಸಿ ಬಿಡಬಹುದು.
ಗೋಡೆ ಕೆಡವಲು
ವಿಳಾಸ ಹುಡುಕಿ ಬರುವವರು
ಬಣ್ಣ ಮಾಸಿ ಸಡಿಲಾದ ನನ್ನ
ಬಾಗಿಲುಗಳನು
ದೂಡಲಿ ಪರದೆ ಹರಿದು ಹೊಸ
ಜೇಡ ಮತ್ತೆ ಬಲೆ ಹೆಣೆಯದಂತೆ
ಮಾಡಲಿ ಎಳೆ ಬಿಸಿಲು
ಹೊಸ ಗಾಳಿ ತುಂಬಿ ಬರಲಿ
ನಾನು ತೆರೆದುಕೊಳ್ಳುವ ಕಿಟಕಿ
******************************
- ವಸುಂಧರಾ ಕದಲೂರು
ಮುಚ್ಚಿದ ಕಿಟಿಕಿಯ ಒಳಗೆ ಮತ್ತು ಹೊರಗೆ, ಶತಮಾನದ ಉಸಿರು, ಕವಿತೆಯದ್ದು. ಒಳ್ಳೆಯ ಕವಿತೆ, ವಸುಂಧರಾ ಅವರೇ.
ಬಹಳ ಧನ್ಯವಾದಗಳು.
ಕವಿತೆಯ ಅಂತರಾತ್ಮ ತುಂಬಾನೇ ಚೆನ್ನಾಗಿದೆ.ಒಂದು ಉತ್ತಮ ಕವಿತೆ.
ಬಹಳ ಧನ್ಯವಾದಗಳು.
ಕವಿತೆ ತುಂಬಾ ಚನ್ನಾಗಿ ಮೂಡಿ ಬಂದಿದೆ ನಿಮ್ಮಿಂದ ಇನ್ನೂ ಹೆಚ್ಚು ಹೆಚ್ಚು ಕವಿತೆಗಳನ್ನು ನಿರೀಕ್ಷಿಸಬಹುದು ಅನ್ನುವ ವಿಶ್ವಾಸ ನಮ್ಮದು
ಬಹಳ ಧನ್ಯವಾದಗಳು. ಪ್ರಯತ್ನಿಸುವೆನು.
ಚಂದದ ಕವಿತೆ
ಬಹಳ ಧನ್ಯವಾದಗಳು.
ಒಳ್ಳೆಯ ಕವಿತೆ ವಸುಂಧರಾ