ಕುರ್ಚಿಗಳು ಅಂಗಿ ತೊಟ್ಟು..

ಕವಿತೆ

ನೂತನ ದೋಶೆಟ್ಟಿ

ಈ ಅಂಗಿಯ ದರ ಸಾವಿರದ ಐದು ನೂರು
ಕೇಳಿ ನೀನು ಕಣ್ಣರಳಿಸುತ್ತಿ
ಬೆಲೆಯಿಂದೇನಾಗಬೇಕು
ತೊಟ್ಟವನು ನೀನಲ್ಲವೇ?
ಕುರ್ಚಿಯ ಲೆಕ್ಕಾಚಾರ ಅದಲ್ಲ.
ನಿನ್ನ ಓಡಾಟದ ಚುರುಕು
ಮುಟ್ಟಿರುತ್ತದೆ ಆ ಅಂಗಿಗೆ
ಹಕ್ಕನ್ನು ಕೊಡಲಾರೆ
ನಡೆ ನಿಧಾನವಿರಲಿ
ಕುರ್ಚಿಯ ಡೊಳ್ಳು ಹೊಟ್ಟೆ ಕನಲುತ್ತದೆ.
ನಿನ್ನದೋ ಯೋಗನಡೆ
ದೀರ್ಘ ಉಸಿರೆಳೆದು
ತುಂಬಿಕೊಂಡ ಕಸರನ್ನು
ಹೊರಹಾಕುತ್ತ ನಿಶ್ವಾಸದಲಿ
ಹಗುರವಾಗುವುದ ಕಲಿತಿದ್ದಿ.
ಕುರ್ಚಿಗೆ ಧಗೆ ಹತ್ತಿದೆ.
ಕುಂತಲ್ಲಿ ಇರುವ ಕುರ್ಚಿಯ
ಬತ್ತಳಿಕೆಯ ತುಂಬ
ಹಸಿರು ಶರಾದ ಬಾಣಗಳು
ನಿನ್ನೆಡೆಗೆ ತೂರಿ ಬಿಡಲು
ಕುರ್ಚಿಯೀಗ ಪಣ ತೊಟ್ಟಿದೆ.
ಮತ್ತೀಗ ಉಚ್ಛ್ವಾಸದಲಿ
ಎದೆಯ ಹುರಿ ಮಾಡುತ್ತಿ
ನಾಟುವುದು ಅಲ್ಲಿಗೇ ತಾನೇ?
ಜಯದ ಬೆನ್ನು ಹತ್ತಿದರೆ
ಅಪಜಯದ ಭಯ
ಕುರ್ಚಿಗೇನು ಗೊತ್ತು ನಿನಗೆ ಸೋಲಿಲ್ಲ.
ತಳವೂರಿ ನಿಂತು ಜಯದ ಅಹಂಕಾರ
ತನ್ನ ಸೋಲಿನ ಭಯ
ಕುರ್ಚಿಯ ಉರುಟು ಮೈ ತುಂಬ
ಹೊಳಪ ಲೇಪನ
ಬಿಂಬ ಕಾಣಿಸುವಷ್ಟು

ನೀನು ದೂರವಾಗುತ್ತಿ
ನಿನಗೆ ಹತ್ತಿರವಾಗುತ್ತಿ
ನಿನ್ನ ಸಾಂತ್ವನಕ್ಕೆ
ಕುರ್ಚಿ ಗುಡುಗುತ್ತದೆ.

ನೀನು ಬಾಗಬೇಕು, ಬೀಗುವುದಲ್ಲ
ನಿನ್ನ ಜಾಗ ಅಲ್ಲಿ
ನೆಲದ ಹಾಸಿರುವಲ್ಲಿ

ನಿನಗೋ ಜಾಗದ ಗರಜಿಲ್ಲ
ನಿನ್ನದು ಬಾನವಿಸ್ತಾರದ ಹಾದಿ
ಪಚ್ಚೆ, ಪೈರುಗಳ ದಾರಿ
ಜಲಪಾತದ ನಡೆ
ಕಾಡತೊರೆಯ ನಿರುಮ್ಮಳತೆ

ಕುರ್ಚಿಗಳೇ ಅಂಗಿ ತೊಟ್ಟು
ಎತ್ತರದ ಪೀಠದಲ್ಲಿರಿ
ನಡೆದಷ್ಟೂ ಇರುವ ದಾರಿ ನನಗಿರಲಿ
ಹಸಿರ ಕೈಯಾಡಿಸುತ್ತ
ಹೂವ ಆಘ್ರಾಣಿಸುತ್ತ
ಬದುಕ ಆಸ್ವಾದಿಸುತ್ತೇನೆ
ನಿಮ್ಮ ಚೌಕಾಸಿ
ನನಗೆ ಒಗ್ಗುವುದಿಲ್ಲ.

**********

3 thoughts on “ಕುರ್ಚಿಗಳು ಅಂಗಿ ತೊಟ್ಟು..

  1. ಕವಿತೆ ಅಷ್ಟು ಸುಲಭಕ್ಕೆ ಅರ್ಥ ಧ್ವನಿ ಬಿಟ್ಟುಕೊಡುವುದಿಲ್ಲ. ಮುಷ್ಟಿಯೊಳಗ ಗುಟ್ಟಿನಂತಿದೆ…

  2. ಪಟ್ಟಭದ್ರರಿಗೆ ಮೊನಚು ಬಾಣವಿದು

Leave a Reply

Back To Top